General

ಶ್ರೀಮ. ನಿ.ಪ್ರ. ಶ್ರೀ ಶಿವಬಸವಸ್ವಾಮಿಗಳು ಹೊಸಮಠ,

ಅಕ್ಕಿಹೊಂಡ, ಹುಬ್ಬಳ್ಳಿ

ಹನ್ನೆರಡನೆಯ ಶತಮಾನವು ವೀರಶೈವರ ಕ್ರಾಂತಿಯ ಕಾಲ. ವೀರಶೈವವನ್ನು ಅಂಗೀಕರಿಸಿದ ಅನೇಕರು ಈ ಕಾಲದಲ್ಲಿ ಈ ಮಾರ್ಗವನ್ನು ಹಿಡಿದು ಮಹಾಮಹಿಮರೆನಿಸಿದ್ದಾರೆ. ಅವರು ಶರಣರೆಂದು ಪ್ರಮಥರೆಂದೂ ಪ್ರಸಿದ್ಧಿ ಪಡೆದಿರುವರು. ಪ್ರಮಥ ಎಂಬುದು ಅಲೌಕಿಕ ಪದವಿ. ಈ ಪದವಿಯನ್ನು ಪಡೆದವರಿಗೆಲ್ಲ ಶ್ರೀ ಬಸವೇಶ್ವರರು ಪ್ರಮುಖರು. ಅಂತೆಯೇ ಬಸವಾದಿ ಪ್ರಮಥರು ಎಂದು ಕರೆಯುವ ರೂಢಿ ಬಂದಿದೆ.

ಶ್ರೀ ಚನ್ನಬಸವೇಶ್ವರರೂ ಪ್ರಮಥರಲ್ಲಿ ಮುಂದುವರೆದವರೇ ಆಗಿದ್ದರು. ಬಸವೇಶ್ವರರು ದಂಡನಾಯಕರೆನಿಸಿದ್ದರೆ, ಚನ್ನಬಸವೇಶ್ವರರು ಚಿಕ್ಕದಂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇವರು ಷಟ್‌ಸ್ಥಲ ಚಕ್ರವರ್ತಿಗಳೂ ಆಗಿದ್ದಾರೆ. ಆದುದರಿಂದಲೆ ಅನುಭವ ಮಂಟಪದ ಮಹಾಸಭೆಯಲ್ಲಿ ಚನ್ನಬಸವೇಶ್ವರರ ಸ್ಥಾನ ಇನ್ನೂ ಹಿರಿದು. ಇವರು ಅನೇಕ-ಸಲ ಬಸವೇಶ್ವರರಿಗೂ ಹಿತನುಡಿಗಳನ್ನು ತಿಳಿಸಿ ಎಚ್ಚರಿಸಿದ್ದಾರೆ. ಅಂತೆಯೇ ಇವರು ಲೌಕಿಕ-ಪಾರಮಾರ್ಥಿಕಗಳೆರಡರಲ್ಲಿಯೂ ಮುಂದುವರೆದು ಮಹಾಮುತ್ಸದ್ದಿಗಳೂ, ಮೇಧಾವಿಗಳೂ, ಆಗಿದ್ದಾರೆ. ಈ ಚನ್ನಬಸವೇಶ್ವರರು ಜನನದ ಬಗ್ಗೆ ಈಗೀಗ ಅಪಸ್ವರಗಳು ಕೇಳಿಬರಹತ್ತಿದೆ. ಈ ಅಪಸ್ವರಗಳು ಸಮಾಜದಲ್ಲಿಯ ಜನರ ಮನಸ್ಸುಗಳನ್ನು ಕದಡಿವೆ.

ಚನ್ನಬಸವೇಶ್ವರರು ಪ್ರಸಾದದಿಂದ ಜನಿಸಿದರು ಎಂದು ಒಬ್ಬ ಕವಿಗಳು ತಿಳಿಸಿದ್ದರೆ, ಕಕ್ಕಯ್ಯನವರ ಪ್ರಸಾದದಿಂದ ಜನಿಸಿದರೆಂದು ಇನ್ನು ಕೆಲವರು ತಿಳಿಸುತ್ತಾರೆ. ಶಿವಪ್ರಸಾದದಿಂದ ಜನಿಸಿದರೆಂದು ವಿರೂಪಾಕ್ಷ ಪಂಡಿತರು ತಿಳಿಸುತ್ತಾರೆ. ಅಂತು

ಇವರೆಲ್ಲರ ಅಭಿಪ್ರಾಯಗಳೂ ಚನ್ನಬಸವೇಶ್ವರರ ಜನನವು ಪ್ರಸಾದದಿಂದ ಆಯಿತೆಂದು ಇರುತ್ತವೆ. ಆದರೆ ಸಿಂಗಿರಾಜನು ಮಾತ್ರ ಚನ್ನ ಬಸವೇಶ್ವರರು ಶಿವದೇವನ ಮಗನೆಂದು ತಿಳಿಸಿದ್ದಾರೆ. ಕರ್ನಾಟಕ ಕವಿಚರಿತೆಯ ಅಭಿಪ್ರಾಯದ ಪ್ರಕಾರ ಇವರೆಲ್ಲ ಹದಿನೈದು, ಹದಿನಾರು, ಹದಿನೇಳನೆಯ ಶತಮಾನದವರಾಗಿದ್ದಾರೆ. ಹನ್ನೆರಡನೆಯ ಶತಮಾನದ  ಸ೦ಗತಿಯನ್ನು ಮೂರ್ನಾಲ್ಕೈದು ನೂರು ವರ್ಷಗಳ ನಂತರ ತಿಳಿಸುವಾಗ ನಾಲಿಗೆಯಿಂದ ನಾಲಿಗೆಗೆ ಸೇರಿ ಕಿವಿಯಿಂದ ಕಿವಿಗಳಿಗೆ ತಲ್ಪುವಾಗ ಅನೇಕ ವ್ಯತ್ಯಾಸಗಳು ಆಗುವ ಸಂಭವವು ಸಹಜವಾದುದು.

ಇಂಗಳೇಶ್ವರ ಬಾಗೇವಾಡಿಯ ನಾಡಿನ ಮಾದರಸ ಮಾದಲಾಂಬಿಕೆ ಎಂಬ ದಂಪತಿಗಳಿಗೆ ಅನೇಕ ವರುಷಗಳ ವರೆಗೆ ಮಕ್ಕಳಾಗದಿರಲು ಇವರು ಕಂದನನ್ನು ಪಡೆಯಲು ನಂದೀಶ್ವರ ವ್ರತವನ್ನಾಚರಿಸಿದರು. ಈ ಸಮಯದಲ್ಲಿ ವೀರಶೈವದ ಮೇಲೆ

ಬೇರೆಯವರ ಅಘಾತದಿಂದ ಕೆಟ್ಟ ಪರಿಣಾಮವು ಆಗುತ್ತಲಿತ್ತು ಇದನ್ನು ಸರಿಪಡಿಸುವ ಸಲುವಾಗಿ ಒಬ್ಬ ಮಹಾವಿಭೂತಿಯ ಉದಯವು ಆಗಬೇಕಾದ ಅವಶ್ಯಕತೆಯೂ ಬಹಳವಾಗಿತ್ತು. ಅಂತೆಯೇ ಶಿವಮತದ ಮೇಲೆ ಆಗುತ್ತಿರುವ ಅಘಾತವನ್ನು ನಿವಾರಣೆಮಾಡಲು ಈ ದಂಪತಿಗಳು ನಡೆಸುತ್ತಿರುವ ನಂದಿ ವ್ರತದ ಫಲವಾಗಿ ಶಿವನ ಅಪ್ಪಣೆಯಿಂದ ನಂದಿಕೇಶ್ವರನು ಇವರ ಮಗುವಾಗಿ ಜನಿಸಿದನು. ಮುಂದೆ ಈ ಮಗುವಿಗೆ ಬಸವೇಶ್ವರ ಎಂಬ ಹೆಸರು ಬಂದಿದೆ. ಈ ಬಸವೇಶ್ವರರಿಗೆ ನಾಗಮ್ಮ ಎಂಬ ಅಕ್ಕನೂ ಇದ್ದಾಳೆ. ಇವಳಿಗೆ ಅಕ್ಕನಾಗಮ್ಮ ಎಂಬ ಹೆಸರು ರೂಢವಾಗಿ ಬಂದಿದೆ.

 ಬಸವೇಶ್ವರರು ಎಂಟನೆಯ ವರ್ಷದವರಾದರು. ಆಗ ಅವರ ತಂದೆ ಅವರ ವಂಶಪರಂಪರೆಯ ಸಾಂಪ್ರದಾಯಕ-ಧಾರ್ಮಿಕ-ಸಂಸ್ಕಾರವಾದ ಉಪನಯನವನ್ನು ಮಾಡಿಸಬೇಕಾಯಿತು. ಬಸವೇಶ್ವರರಿಗೆ ಇದು ಒಪ್ಪಿತವಾಗಲಿಲ್ಲ ಕೇವಲ ಬ್ರಾಹ್ಮಣ್ಯವನ್ನುಂಟು ಮಾಡುವ ಈ ಸಂಸ್ಕಾರಕ್ಕಿಂತ ಮಾನವನನ್ನು ಮಾನವ ಧರ್ಮದ ಕಡೆಗೆ ಕರೆದೊಯ್ಯುವ ವಿಧಾಯಕ ಕ್ರಿಯೆಗಳನ್ನು ಹೊಂದಿದ ಯಾವುದಾದರೂ ಹೆದ್ದಾರಿಯಿರುವುದೇ ? ಎಂಬ ವಿಚಾರಮಾಡಿ ಈ ಹೆದ್ದಾರಿಯನ್ನು ಹಿಡಿಯಬೇಕೆಂಬ ಯೋಚನೆಯನ್ನು ಮಾಡಿದರು. ಈ ಬಗ್ಗೆ ತಂದೆ ಮಕ್ಕಳ ನಡುವೆ ವಿವಾದವೂ ಆಯಿತು. ಕೊನೆಗೆ ಬಸವೇಶ್ವರರು ತತ್ವದ ಸಲುವಾಗಿ ತಂದೆಯನ್ನಗಲುವ ಪ್ರಸಂಗವೂ ಪ್ರಾಪ್ತವಾಯಿತು. ಎಲ್ಲಿಗೆ ಹೋಗಬೇಕು ಎಂದು ಯೋಚಿಸುತ್ತಿರುವಾಗ ತಮ್ಮ ಸಮೀಪದಲ್ಲಿಯೇ ಪ್ರಸಿದ್ಧಿ ಪಡೆದ ಕೂಡಲಸಂಗಮ ಕ್ಷೇತ್ರದಲ್ಲಿರುವ ಅಧ್ಯಾತ್ಮಿಕ ಕೇಂದ್ರಕ್ಕೆ ಹೊರಡುವ ನಿರ್ಧಾರಮಾಡಿದರು. ಈ ನಿರ್ಧಾರವನ್ನು ತನ್ನ ಅಕ್ಕನಾದ ನಾಗಮ್ಮನಿಗೂ ತಿಳಿಸಿದರು. ನಾಗಮ್ಮನವರು ಇದಕ್ಕೊಪ್ಪಿದರಲ್ಲದೆ ತಾವು ಸಹ ತಮ್ಮನ ಸಂಗಡ ಹೊರಡಲು ತಯಾರಾದರು. ಮಾನವನು ಬ್ರಾಹ್ಮಣನಾಗಿ ಬ್ರಹ್ಮಜ್ಞಾನಮಾಡಿಕೊಳ್ಳುವದಷ್ಟೇ ಮಾನವಧರ್ಮವಲ್ಲ, ಆ ಜ್ಞಾನವನ್ನು ಕ್ರಿಯೆಯಲ್ಲಿ ತಂದು ದೇವರ ಲೋಕಕ್ಕೆ ಹೋಗಬೇಕು. ದೇವರ ಬಳಿಯಲ್ಲಿರಬೇಕು. ದೇವರ ರೂಪವನ್ನು ಹೊಂದಬೇಕು, ದೇವರೊಡನೆ ಹೊಂದಿಕೊಳ್ಳಬೇಕು, ಕೊನೆಗೆ ದೇವನೇ ತಾನಾಗಬೇಕು. ಇದುವೆ ಮಾನವಧರ್ಮ ಎಂದು ಪ್ರತಿಪಾದಿಸುತ್ತ ಲಿಂಗಭೇದವಿಲ್ಲದೆ ಸ್ತ್ರೀಯರೂ ಈ ದಾರಿಯನ್ನು ಹಿಡಿಯಲು ಬರುತ್ತದೆ. ಎಂದು ತಿಳಿಸುತ್ತಿರುವ ತಮ್ಮನ ಪ್ರತಿಪಾದನೆಯಿಂದ ಅಕ್ಕನು ಪ್ರಭಾವಿತಳಾದುದು ಸಹಜವೇ ಆಗಿದೆ. ಅಂತೆಯೇ ಅವಳು ತಂದೆ ತಾಯಿಗಳನ್ನಗಲುವ  ಸಾಹಸಕ್ಕೆ ಮುಂದಾದಳು. ಅಲ್ಲದೆ ಅವಳು ಇವರಲ್ಲಿಯೇ ಮದುವೆಯಾಗಿ ಕೂಸುಳ್ಳವಳಾಗಲಿ ಗರ್ಭವತಿಯಾಗಲಿ ಇರಬಹುದಾಗಿದೆ. ಸಂಸಾರ ಭ್ರಾಂತಿಯಿಲ್ಲದ ಪತಿದೇವನಾದ ಶಿವಸ್ವಾಮಿ ಇದ್ದುದರಿಂದಲೂ ಅವಳ ಅಧ್ಯಾತ್ಮಜೀವನವನ್ನು ಸಾಗಿಸಲು  ಪ್ರೇರಕವಾಗಿದೆಯೆನ್ನುಬಹುದು.

ಕೂಡಲಸಂಗಮಕ್ಷೇತ್ರಕ್ಕೆ ತಲುಪಿದ ಈ ಅಕ್ಕತಮ್ಮಂದಿರು ಆಗ ಅಲ್ಲಿ ಪ್ರಸಿದ್ಧವಾಗಿರುವ ಮಠಕ್ಕೆ ಬಂದರು. ಅಲ್ಲಿ ಜಾತವೇದರೆಂಬ ಗುರುಗಳು ಇದ್ದರು. ಇವರು ಮುಮುಕ್ಷುಗಳಿಗೆ ಮಾನವಧರ್ಮವನ್ನು ಬೋಧಿಸುತ್ತಿದ್ದರು. ಅನೇಕ ಜನ್ಮಗಳನ್ನು ಕಳೆದು ಅವುಗಳಲ್ಲಿ ಮಾಡಿದ ಪುಣ್ಯವಿಶೇಷದಿಂದ ಈಗ ಮಾನವನಾದವನು ಕೇವಲ ಮಾನವನಾಗಿಯೇ ಉಳಿಯಬಾರದು. ಹೀಗೆ ಉಳಿದರೆ ಇವನಿಗೆ ಈ ಜನನ ಮರಣರೂಪವಾದ ಭವರೋಗವು ತಪ್ಪುವುದಿಲ್ಲ. ಮಾನವನು ತನಗೆ ದೊರೆತ ಈ ಶರೀರವನ್ನು ಲಿಂಗವನ್ನಾಗಿ ಮಾಡಿಕೊಳ್ಳಬೇಕು. ಈ ಅಂಗವು ಸಾಧನೆಯಿಂದ ಲಿಂಗವಾಗುವದು. ಹೀಗೆ ಲಿಂಗವಾಗುವುದೇ ಮೋಕ್ಷ ಎಂದು ಅವರು ಮುಮುಕ್ಷುಗಳಾದ ಭಕ್ತಿ-ಭಾವುಕರಿಗೆ ಬೋಧಿಸುತ್ತಿದ್ದರು. ಲಿಂಗವೆಂದರೇ ಶಿವ. ಈ ಶಿವನನ್ನು ಅನುಭವದಿಂದ ಅರಿಯುವದೇ ಶಿವಾನುಭವ. ಈ ಶಿವಾನುಭವ ಸಾಧನೆಯಿಂದಲೇ ಮೋಕ್ಷ ಸಾಧ್ಯ ಇಲ್ಲವಾದರೆ ಇಲ್ಲ. ಇದನ್ನು ಸಾಧಿಸಿದವರಿಗೆ ಪುನರ್ಜನ್ಮವೆಂಬ ಭವರೋಗವು ಸೋಂಕುವುದಿಲ್ಲ ಎಂದು ಶಿವಾನುಭವವನ್ನು ಗುರುಗಳು ಅವರಿಗೆಲ್ಲ ತಿಳಿಸುತ್ತಿದ್ದರು.

 ಬಸವೇಶ್ವರರು ಕುಶಾಗ್ರಮತಿಗಳು, ಶ್ರೀಗುರುಗಳು ಬೋಧಿಸುತ್ತಿರುವ ಸಂಗತಿಗಳನ್ನೆಲ್ಲ ಗ್ರಹಿಸಿದರು. ಶರೀರವು ಸ್ಥೂಲವಾಗಲಿ, ಸೂಕ್ಷ್ಮವಾಗಲಿ, ಕಾರಣವೇ ಆಗಲಿ; ಅದು ಶರೀರವೇ. ಶರೀರವೆಂದರೆ ಹಳೆಯ ಅ೦ಗಿಯಂತೆ ಹರಿದುಹೋಗುವದೇ ಆಗ ಹೊಸ

ಅಂಗಿಯನ್ನು ತರಿಸಿ ತೊಡುವಂತೆ ಮತ್ತೊಂದು ಶರೀರವು ಬರಲೇಬೇಕು. ಮತ್ತೆ ಕಳೆಯಬೇಕು. ಮತ್ತೆ ಹೊಸದನ್ನು ತರಬೇಕು. ಈ ಕ್ರಮದಿಂದ ಶರೀರವು ಇರುವವರೆಗೂ ಅದಕ್ಕೆ ಜನನ ಮರಣಗಳು ತಪ್ಪಲಾರವು. ಆದುದರಿಂದ ಈ ಶರೀರಗಳನ್ನು ಲಿಂಗ

ಸಂಬಂಧದಿಂದ ಅಂಗಗಳನ್ನಾಗಿ ಮಾರ್ಪಡಿಸಬೇಕು. ಈ ಅಂಗಗಳು ಅಂಗತನವನ್ನು ಮೀರಿ ಲಿಂಗತನವನ್ನು ಸಂಪಾದಿಸಬೇಕು. ಮುಂದೆ ಈ ಅಂಗಲಿಂಗವೆಂಬ ಜ್ಞಾನವು ಸಹ ಶೂನ್ಯವಾಗಬೇಕು. ಎಂಬ ಉಪದೇಶವನ್ನು ಸಾಧನ ಮಾರ್ಗದಿಂದ ಸಿದ್ಧಿಯನ್ನು ಪಡೆದರು. ಈ ಬಗೆಯ ಶಿವಾನುಭವದ ಅಭ್ಯಾಸವನ್ನು ಮಾಡಿಮುಗಿಸಲು ಅವರಿಗೆ ಹನ್ನೆರಡು ವರ್ಷಗಳೂ ನಂತರ ಅದರ ಸಿದ್ಧಿಯನ್ನು ಪಡೆಯಲು ಆರು ವರ್ಷಗಳೂ ಕಳೆದಿರಬೇಕು. ಉಪನಯನವನ್ನು ತೊರೆದು ಬಂದ ಇವರಿಗೆ ಇಷ್ಟು ಅವಧಿಯನ್ನು ಕಳೆದ ಮೇಲೆ ಶ್ರೀ ಬಸವೇಶ್ವರರಿಗೆ ಇಪ್ಪತ್ತೈದು ವರ್ಷಗಳು ಆಗಿರಬೇಕಾಗುತ್ತದೆ. ಕೂಡಲ ಸಂಗಮ ಕ್ಷೇತ್ರದಲ್ಲಿ ಅವರು ತಮ್ಮ ಸಾಧನೆಯನ್ನು ಸಾಗಿಸಿ ಸಿದ್ಧಿ ಪಡೆದ ಸಲುವಾಗಿ ತಮ್ಮ ಅಂಗಯ್ಯಲ್ಲಿಯ ಲಿಂಗದೇವನಿಗೆ ಕೂಡಲಸಂಗಯ್ಯನೆಂದು ಕರೆದಿರುವದನ್ನು ಅವರ ವಚನಗಳಲ್ಲಿರುವ ಮುದ್ರಿಕೆಯಿಂದ ಸ್ಪಷ್ಟವಾಗಿ ತಿಳಿಯುತ್ತಿದ್ದೇವೆ.

 ಅಕ್ಕನಾಗಮ್ಮ ಶಿವದೇವ ದಂಪತಿಗಳ ಮಗುವಾದ ಚನ್ನಬಸವೇಶ್ವರರು ಸಹ ಈಗ ಈ ಮಹಾನುಭಾವಿಗಳಾದ ಬಸವೇಶ್ವರರ ಜೊತೆಗೆ ಇರಬೇಕು. ಅಂತೆಯೇ ಚನ್ನಬಸವೇಶ್ವರರು ಸಹ ಈ ಕೂಡಲ ಸಂಗಮನಾಥನ ಹೆಸರನ್ನೇ ನಡುವೆ ಚನ್ನ’ ಎಂದು ಸೇರಿಸಿ ‘ಕೂಡಲಚನ್ನಸಂಗಮದೇವ’ ಎಂದು ತಮ್ಮ ಲಿಂಗದೇವನಿಗೆ ಹೆಸರಿಸಿದ್ದಾರೆ. ಸಂಗಮನಾಥನ ಸ್ಥಲದ ಪ್ರಭಾವವು ಬಸವೇಶ್ವರರ ಮೇಲೆ ಪರಿಣಮಿಸಿದಂತೆ ಚನ್ನಬಸವೇಶ್ವರರ ಮೇಲೆಯೂ ಪರಿಣಮಿಸಿರಬೇಕು ಎಂಬುದನ್ನು ಇವರ ಈ ವಚನ ಮುದ್ರಿಕೆಗಳು ತಿಳಿಸುತ್ತವೆ.   

 ಬಸವೇಶ್ವರರು ಹಾಗೂ ಚನ್ನಬಸವೇಶ್ವರರು ಇಬ್ಬರೂ ಕೂಡಲ ಸಂಗಮದ ಪರಿಸರದಲ್ಲಿ ವ್ಯಾಸಂಗ ಮಾಡುತ್ತ ಸಾಧನೆಯ ಮಾರ್ಗದಲ್ಲಿದ್ದರೆಂಬುದನ್ನು ನಾವು ಗ್ರಹಿಸಿದ ಬಳಿಕ ಕಲ್ಯಾಣದಲ್ಲಿ ನಡೆಯಿತೆಂದು ತಿಳಿಸುವ ಕಕ್ಕಯ್ಯನವರ ಪ್ರಸಾದದಿಂದ ಆದ

ಚನ್ನಬಸವೇಶ್ವರರ ಜನನಕ್ಕೂ ಈ ಕೂಡಲ ಸಂಗಮದಲ್ಲಿ ಇವರು ವಾಸ ಮಾಡಿದ ಸಂಗತಿಗೂ ಸಂಬಂಧವು ಬರುವುದೇ ಇಲ್ಲ, ಏಕೆಂದರೆ ಕೂಡಲಸಂಗಮದಲ್ಲಿ ವಾಸ ಮಾಡಿ ಪ್ರಸಿದ್ಧಿಯನ್ನು ಪಡೆದ ನಂತರವೇ ಇವರು ಕಲ್ಯಾಣದ ಕಡೆಗೆ ಹೋದರು ಎಂಬುದು ಎಲ್ಲರೂ ಅರಿತ ಸಂಗತಿಯಾಗಿದೆ. ಅಂದ ಬಳಿಕ ಕಕ್ಕಯ್ಯನವರ ಪ್ರಸಾದದಿಂದ ಚನ್ನಬಸವೇಶ್ವರರ ಜನನವಾಯಿತೆಂಬ ಮಾತಿಗೆ ಪುಷ್ಟಿ ದೊರೆಯಲಾರದು.

 ಗಂಡು-ಹೆಣ್ಣುಗಳೆರಡೂ ಸೇರಿದಾಗ ಈ ಎರಡು ಶಕ್ತಿಗಳಿಂದ ಮಗುವು ಜನಿಸುತ್ತಿದೆ ಎಂಬ ಸಂಗತಿಯನ್ನು ಜಗತ್ತಿನಲ್ಲಿರುವ ಸಾಮಾನ್ಯರೂ ಅರಿತಿದ್ದಾರೆ. ಈ ಮಾತನ್ನು ನಮ್ಮ ಶರಣರು ಸಹ “ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ” ಎಂದು ತಿಳಿಸಿದ್ದಾರೆ. ಹೀಗಿದ್ದು ಚನ್ನಬಸವೇಶ್ವರರು ಜನನವಾದ ಬಗ್ಗೆ ತಿಳಿಸುತ್ತಿರುವ ಈ ಸಂಗತಿಗಳು ವ್ಯತ್ಯಾಸಗೊಂಡಿರಬಹುದೆಂದು ಸ್ಪಷ್ಟವೇ ಇದೆ. ಚನ್ನಬಸವೇಶ್ವರರು ಕಲ್ಯಾಣದಲ್ಲಿ ಶರಣರೊಳಗೆಲ್ಲ ಜ್ಞಾನನಿಧಿಯಾದ ಮಹಿಮಾ ಶಾಲಿಗಳಾಗಿದ್ದಾರೆ. ತಂದೆಯು ಚಿಕ್ಕಂದಿನಲ್ಲಿ ತೀರಿ ಹೋದುದರಿಂದ ಅವರ ಹೆಸರು ಪ್ರಸಿದ್ಧವಾಗಿಲ್ಲವಾದುದರಿಂದಲೂ ಚನ್ನಬಸವೇಶ್ವರರ ಮಹಿಮೆ ಘನವಾಗಿ ಕಂಡ ಕಾರಣದಿಂದಲೂ ಈ ಸಂಗತಿಯು ನಡೆದ ಮೂರುನೂರು ವರ್ಷಗಳ ನಂತರ ಇವರ ಚರಿತ್ರೆಗಳು ರಚನೆಗೊಂಡುದರಿಂದಲೂ ಇವರು ಚನ್ನಬಸವೇಶ್ವರ ಅಯೋನಿಜತನವನ್ನು ಮುಂದು ಮಾಡಿ ಅವರ ಹಿರಿಮೆ ಗರಿಮೆಗಳನ್ನು ತಿಳಿಸಲು ಮಾಡಿದ ಪ್ರಯತ್ನವಾಗಿರಬಹುದೆಂದು ಈ ಚರಿತೆಗಳಿಂದ ಅನಿಸದೆ ಇರಲಾರದು. ಆದರೆ ಶಿವಸ್ವಾಮಿಯೆಂಬ ತಂದೆಯು ಇವರಿಗಿದ್ದನೆ೦ಬ ಸಂಗತಿಯು ಎಲ್ಲರೂ ಒಪ್ಪುವ ಸಂಗತಿಯಾಗಿದೆ.

 ಚಿಕ್ಕದಣ್ಣಾಯಕರೆನಿಸಿಕೊಂಡ ಚನ್ನಬಸವೇಶ್ವರರು ಅನುಭವ ಮಂಟಪದಲ್ಲಿ ಮಹಾಜ್ಞಾನಿಗಳೆನಿಸಿ ಷಟ್‌ಸ್ಥಲಗಳ ಅರಿವನ್ನು ಸರ್ವಾತ್ಮನಾ ಹೊಂದಿದವರಾಗಿದ್ದರು. ಅಂತೆಯೇ ಅವರು ಅಲ್ಲಮಪ್ರಭುದೇವರ ತರುವಾಯ ಶೂನ್ಯ ಸಿಂಹಾಸನವನ್ನಲಂಕರಿಸಿದ ಪೀಠಾಧಿಕಾರಿಗಳಾಗಿ ಜಗದ್ಗುರು ಎಂಬ ಅತ್ಯುಚ್ಚ ಪದವಿಯನ್ನು ಪಡೆದು ಷಟ್‌ಸ್ಥಲ  ಚಕ್ರವರ್ತಿಗಳು ಎನಿಸಿದ ಸಂಗತಿಯೂ ಪ್ರಸಿದ್ಧವೆ ಇದೆ. ಹೀಗೆ ಷಟ್ ಸ್ಥಲ ಚಕ್ರವರ್ತಿಗಳಾದ ಇವರು ಗುರುಕರಸಂಜಾತರಾದುದರಿಂದಲೂ ಪೂರ್ವಾಶ್ರಯದ ನಿರಸನವಾದುದರಿಂದಲೂ, ತಂದೆಯ ಹೆಸರು ಪ್ರಸಿದ್ಧವಿಲ್ಲದುದರಿಂದಲೂ, ಚರಿತೆಕಾರರು ಇವರ ಅಯೋನಿಜತನವನ್ನು ಮೂರುನೂರು ವರ್ಷಗಳ ನಂತರ ತಿಳಿಸಿರುವದು ಒಂದು ಬಗೆಯಿಂದ ಯುಕ್ತವಾಗುತ್ತದೆ. ಈಗ ಇವರು ಗುರುಪ್ರಸಾದ, ಶಿವಪ್ರಸಾದ, ಶರಣರ ಪ್ರಸಾದ ಅ೦ದರೆ ಕಾರುಣ್ಯದಿಂದ ಈ ಬಗೆಯಾಗಿ ಷಟ್‌ಸ್ಥಲ ಚಕ್ರವರ್ತಿಗಳಾದರೆಂದು ತಿಳಿಸುವದೂ ಜನತೆ ತಿಳಿದುಕೊಳ್ಳುತ್ತಿರುವುದೂ ಸಮಂಜಸವಾಗಿದೆ.

 ಈ ಬಗೆಯಾಗಿ ಶ್ರೀ ಚನ್ನಬಸವವೇಶ್ವರರ ಚರಿತೆಯು ಸ್ಪಷ್ಟವಾಗಿರುವಾಗ ಇತಿಹಾಸ ಸಂಶೋಧನೆಯ ಬಗೆಗೆ ವ್ಯಾಸಂಗ ಮಾಡಿ ಶಾಸನಗಳ ಸಂಶೋಧಕರಾಗಿ ಮಹಾಪಾಂಡಿತ್ಯವನ್ನು ಸಂಪಾದಿಸಿದ ಮಹಾನುಭಾವರೊಬ್ಬರು ಒಂದು ತರ್ಕಬದ್ಧಊಹೆಯನ್ನೂ ಮಾಡಬಹುದು’ ಎಂಬ ಸಂಶಯದ ಕಡೆಗೇಕೆ ಕೈ ಚಾಚಿದರೋ ತಿಳಿಯದು. ಶರಣ ಮಾರ್ಗದಲ್ಲಿ ವಿಜಾತೀಯ ವಿವಾಹದಷ್ಟೇ ಏಕೆ ಬಳಿಕೆಗಳು ಇರುವದಿಲ್ಲ. ಅವರ ಬಳಕೆ ಭಕ್ತರೊಡನೆ ಅಲ್ಲದೆ ಭವಿಗಳ ಸಂಗಡ ಅಲ್ಲ, ಯಾರೇ ಇರಲಿ ಲಿಂಗವಂತಿಕೆಯನ್ನು ಪಡೆದು ಶಿವಭಕ್ತನಾದ ಮೇಲೆ ಅವರ ಪೂರ್ವಾಶ್ರಮವು ಕಳೆದು ಹೋಗುವದೆಂಬುದನ್ನು ಶರಣ ಮಾರ್ಗಾವಲಂಬಿಗಳು ಒಪ್ಪುತ್ತಿರುವಾಗ “ಅಕ್ಕನಾಗಮ್ಮನನ್ನು ಡೋಹರ ಕಕ್ಕಯ್ಯನಿಗೆ ಮದುವೆ ಮಾಡಿಸಿರುವದು ಹೆಚ್ಚು ಸಂಭವನೀಯವಾಗಿ ತೋರುತ್ತದೆ’ ಎಂಬ ಮಾತು ಅಪಸ್ವರವಾಗಿ ಪರಿಣಮಿಸುತ್ತದೆ.

ಕಕ್ಕಯ್ಯನವರು ಜಾತಿಯಿಂದ ಡೋಹರರೋ ? ಅಥವಾ ಶರಣ ಮಾರ್ಗದಲ್ಲಿ ಡೋಹರರ ಕಾಯಕವನ್ನು ಕೈಕೊಂಡು ಡೋಹರರೆನಿಸಿದರೋ? ಎಂಬ ಅಂಶವು ಸಹ ವಿಚಾರಣೀಯವಾಗಿದೆ. ಕಾಶ್ಮೀರದ ಅರಸು ಮಹಾದೇವ ಭೂಪಾಲನು ಆಗ ತನ್ನ ಕಾಯಕದಿ೦ದ ಮೋಳಿಗೆ ಮಾರುವ ಸಲುವಾಗಿ ಮೋಳಿಗೆಯ ಮಾರಯ್ಯನೇ  ಆಗಿರುವದನ್ನು ಶರಣರ ಚರಿತೆಯಲ್ಲಿ ನಾವು ಕಾಣುತ್ತೇವೆ. ಇದರಂತೆ ಶರಣರಿಗಾಗಿ ಆಯಾ ಕಾಯಕಗಳಲ್ಲಿ ನಿರತರಾದವರಿಗೆ ಆಯಾ ಹೆಸರು ಬಂದಿರುವುದೇನೂ ಅಸಂಭವನೀಯವಲ್ಲ. ಬಸವೇಶ್ವರರು ಒಂದು ವಚನದಲ್ಲಿ ಕಕ್ಕಯ್ಯನವರಿಗೆ ಡೋಹರ ಎಂದು ಪ್ರಯೋಗಿಸಿರುವದನ್ನು ಡೋಹರನೆಂಬೆನೆ ಕಕ್ಕಯ್ಯನ ಎಂಬ ಮಾತಿನಿಂದ ಉದ್ಧರಿಸಿದ್ದಾರೆ. ಇದರಿಂದ ಅವರು ಕಕ್ಕಯ್ಯನವರ ಡೋಹರತನವನ್ನು ಆ ಕಾಲದಲ್ಲಿಯೇ ಅಲ್ಲಗಳೆದಿರುವಾಗ ಈಗಲೂ ನಾವು ಅವರಿಗೆ ಜಾತೀಯಭಾವನೆಯಿಂದ ಆ ಮಾತನ್ನು ಬಳಿಸಿ ಅವರ ಪವಿತ್ರ ಕಾಯಕಕ್ಕೆ ಜಾತೀಯ ಕಲಂಕವನ್ನು ಬಳಿದಂತಾದೀತು.

 ಬಸವೇಶ್ವರರು ಕಕ್ಕಯ್ಯನವರೊಡನೆ ನಡೆದುಕೊಂಡ ರೀತಿಯನ್ನು ನೋಡಿದರೆ ಕಕ್ಕಯ್ಯನವರು ಬಸವೇಶ್ವರರಿಗಿಂತ ಎಷ್ಟೋ ಹಿರಿಯ ವಯಸ್ಸಿನವರಾಗಿ ತೋರುತ್ತಿದೆ. ಬಸವೇಶ್ವರರು ಒಂದು ವಚನದಲ್ಲಿ ಅಪ್ಪ ನಮ್ಮ ಮಾದರ ಚನ್ನಯ್ಯ ಬೊಪ್ಪನು ನಮ್ಮ

ಡೋಹರ ಕಕ್ಕಯ್ಯ’ ಎಂದು ನುಡಿವಲ್ಲಿ ಕಕ್ಕಯ್ಯನವರು ಬಸವೇಶ್ವರರ ಅಜ್ಜನ ಸ್ಥಾನವನ್ನು ಹೊಂದುವ ವಯಸ್ಸಿನಲ್ಲಿದ್ದಾರೆ. ಅಲ್ಲದೆ ಬಸವಾದಿಗಳಿಗಿಂತಲೂ ಹಿಂದಿನವರಾದ ದೇವರ ದಾಸಿಮಯ್ಯನವರು ಸಹ ತಮ್ಮ ವಚನದಲ್ಲಿ ‘ಕೀಳು ಮಾದರ ಚೆನ್ನಯ್ಯ, ಕೀಳು

ಡೋಹರಕಕ್ಕಯ್ಯ ಎಂದು’ ಪ್ರಯೋಗಿಸಿರುವದನ್ನು ಕಾಣುತ್ತೇವೆ. ಇದರಿಂದ ಕಕ್ಕಯ್ಯನವರು ವಯಸ್ಸಿನಿಂದ ಬಹಳ ಹಿರಿಯರು ಎಂಬುದು ತೋರುತ್ತದೆ. ಅಲ್ಲದೆ ವಿಜಾತಿಯ ವಿವಾಹಕ್ಕೆ ಬಸವೇಶ್ವರರ ಕ್ರಾಂತಿಗಿಂತ ಹಿಂದೆ ನಡೆದ ಸಂಗತಿಯು ಚರಿತೆಗಳಲ್ಲಿ

ತೋರುವದಿಲ್ಲ. ಆದುದರಿಂದ ಈ ವಿಜಾತೀಯ ವಿವಾಹವು ಅದರಲ್ಲಿಯೂ ವಯೋಮಾನದಿ೦ದ ತೀರ ಹಿರಿಯರಾದವರೊಡನೆ ನಡೆದ ವಿಷಮ ವಿವಾಹವು ನಡೆಯಿತೆಂದು ಹೇಳುವದು ಕೂಡ ವ್ಯವಹಾರಿಕವಾಗಿ ಒಪ್ಪದ ಸಂಗತಿಯಾಗಿಲ್ಲ.

 ಕಕ್ಕಯ್ಯನವರಿಗೆ ಮದುವೆಯಾದ ಸಂಗತಿಯು ಬೇರೆ ಕಡೆಗೆ ದೊರೆಯುತ್ತದೆ. ಅವರ ಧರ್ಮಪತ್ನಿ ನಲಿನಿದೇವಿ ಮಗ ಧೂರಯ್ಯ ಎಂಬುವರಿದ್ದರೆಂದೂ, ಮಲ್ಲದೇವಿಯೆಂಬ ಸತಿಯು ಕಕ್ಕಯ್ಯನವರಿಗಿದ್ದಳೆಂದೂ ತಿಳಿಯುತ್ತದೆ. ಹೀಗೆ ಅವರ ದಾಂಪತ್ಯ ಜೀವನವು

ಸಕಲವಾಗಿ ಸಾಗಿರುವಾಗ ಅಕ್ಕನಾಮ್ಮನ ಸಂಗಡ ಡೋಹರ ಕಕ್ಕಯ್ಯನವರ ಮದುವೆ ಮಾಡಿಸಿದ ಸಂಗತಿಯು ಹೆಚ್ಚು ಸಂಭವನೀಯವು ಹೇಗೆ ಆದೀತು ? ಆದುದರಿಂದ ಮದುವೆಯ ವಿಚಾರದಲ್ಲಿ ಅಕ್ಕನಾಗಮ್ಮ ಹಾಗೂ ಕಕ್ಕಯ್ಯನವರ ನಡುವೆ ಯಾವದೇ ಬಗೆಯ ಸಂಬಂಧ ಉಳಿಯುವದಿಲ್ಲ ಎಂಬುದು ಚರಿತೆಯಿಂದಲೇ ಸ್ಪುಟವಾಗಿ ಕಾಣುತ್ತಿದೆ.

ಕಕ್ಕಯ್ಯನವರು ಜಾತಿ ಡೋಹರರಾಗಿದ್ದು ಮಹಾನುಭಾವರೊಬ್ಬರು ಕಲ್ಪಿಸಿದ ಮದುವೆಯು ಅಕ್ಕನಾಗಮ್ಮನ ಸಂಗಡ ಆದುದೇ ನಿಜವಾಗಿದ್ದರೆ,-ಹರಳಯ್ಯ ಮಧುವರಸರ ಮಕ್ಕಳ ಮದುವೆ ನಡೆದಾಗ ಆ ಕೂಡಲೇ ನಡೆಯಿತೆಂದು ತಿಳಿಯುವ ಘನಘೋರ ಪ್ರಸ೦ಗವು ಆಗಲೇ ನಡೆದು ಹೋಗುತ್ತಿತ್ತು. ಅಲ್ಲದೆ ಅಂತಹ ಸಂಕರವನ್ನು ಒಪ್ಪದ ಆಗಿನ ರಾಜಕೀಯವು ಇದಕ್ಕೆ ಕಾರಣವಾದ ಬಸವೇಶ್ವರರನ್ನು ದಂಡನಾಯಕ ಪದವಿಗೆ ತರುತ್ತಲೇ ಇದ್ದಿಲ್ಲ. ಹೀಗೆ ಜನಿಸಿದ ಚನ್ನಬಸವೇಶ್ವರರನ್ನು ಚಿಕ್ಕದಂಡನಾಯಕರನ್ನಾಗಿ ಮಾಡುತ್ತಲೇ ಇರಲಿಲ್ಲ. ಇಷ್ಟೇ ಅಲ್ಲ ಕಲ್ಯಾಣದ ಶರಣರ ಕ್ರಾಂತಿಯೇ ಆಗುತ್ತಿರಲಿಲ್ಲವಾಗಿ ಈಗ ದೊರೆಯುವ ಇತಿಹಾಸವೂ ದೊರೆಯದೆ ಬೇರೆ ಸ್ವರೂಪದಲ್ಲಿ ಬರುತ್ತಿತ್ತು.

ಸಿಂಗಿರಾಜರು ತಿಳಿಸಿದಂತೆ ನಾಗಮ್ಮನವರಿಗೆ ಶಿವಸ್ವಾಮಿ ಎಂಬ ಪತಿಯಿದ್ದನೆಂಬುದನ್ನು ಒಪ್ಪಿಕೊಳ್ಳಬೇಕು. ಇವರು ಆರಾಧ್ಯ ಬ್ರಾಹ್ಮಣರಾಗಿದ್ದರು. ಜನಾಂಗವು ವೀರಶೈವರಾಗಿದ್ದ ಬ್ರಾಹ್ಮಣರ ಜೋಕಾಲಿಯೊಳಗೆ ಕುಳಿತು ಜನಿವಾರವನ್ನು ಹೊಂದಿದ್ದರು. ಇಂತಹ ಪವಿತ್ರ ದಾಂಪತ್ಯದಿಂದ ಚನ್ನಬಸವೇಶ್ವರರು ಜನಿಸಿದರೆಂಬುದು ಸ್ಪಷ್ಟವೇ ಇದೆ. ಇದರಂತೆಯೇ ಕಕ್ಕಯ್ಯನವರು ಸಹ ತಮ್ಮ ಧರ್ಮಪತ್ನಿಯೊಡನೆ ದಾಂಪತ್ಯ ಜೀವನವನ್ನು ಸಾಗಿಸಿ ಮಗುವನ್ನು ಪಡೆದಿದ್ದರೆಂಬುದು ಸಹ ಚರಿತೆಯಲ್ಲಿ ತಿಳಿಯುತ್ತದೆ. ಹೀಗಿದ್ದೂ ಇತಿಹಾಸ ವಿಷಯದಲ್ಲಿ ವ್ಯಾಸಂಗ ಮಾಡಿ ಮಹಾ ಪಾಂಡಿತ್ಯವನ್ನು ಪ್ರಕಟಿಸಿದ ಮಹಾನುಭಾವರೊಬ್ಬರು ‘ಸಂಭವನೀಯ ನಿರ್ಣಯಗಳನ್ನು ಭಾವಿಸಬೇಕು’ ಎಂಬ ಭಾವನಾ ಪ್ರಪಂಚಕ್ಕೆ ಏಕೆ ಮರಳಿದರೋ ? ಎಂಬುದು ತಿಳಿಯದಂತಿದೆ.

ಎಂಟನೂರು ವರ್ಷಗಳ ಹಿಂದಿನ ಸಂಗತಿಯನ್ನು ಇಂದು ವಿಚಾರಿಸುವಾಗ ಲಭ್ಯವಿರುವ ಸಂಗತಿಗಳನ್ನು ಆಧರಿಸಿ ಅವುಗಳಿಗೆ ಹೊಂದಿಕೆಯಾಗುವ ಒಳ್ಳೆಯ ರೂಪವನ್ನೂ ಕೊಡುವದು ವಿಹಿತವಲ್ಲದೆ, ಕಲ್ಪನಾ ಪ್ರಪಂಚಕ್ಕೆ ಮರುಳಾಗಿ ಸಾಮಾಜಿಕರ ಒಳ್ಳೆಯ ಭಾವನೆಯ ಮೇಲೆ ಗೆರೆಯೆಳೆಯುವದು ಪಂಡಿತರಾದವರಿಗೆ ವಿಹಿತವಲ್ಲ.

ಇವರು ಮಹಾ ಪ೦ಡಿತರೆಂದು ಗ್ರಹಿಸಿ ಇವರು ನುಡಿದ ನುಡಿಯನ್ನು ಪ್ರಮಾಣಿಸಿಕೊಂಡು ಕೊಟ್ಟ ಹೇಳಿಕೆಯೊಂದರಿಂದ ಸಾಮಾಜಿಕರ ಚಿತ್ತ ಭಿತ್ತಿಯ ಮೇಲೆ ವಿರೂಪದ ಚಿತ್ರವನ್ನು ಮೂಡುವಂತೆ ಮಾಡಿದುದು ಸಹ ಈ ಮಹಾಪಂಡಿತರೇ ಹೊಣೆಯಾಗಬಹುದಾದ ಅನ್ಯಾಯವಾಗಿದೆ. ಏನೇ ಆಗಲಿ ಆ ಮಾತನ್ನು ಈಗ ಮರೆತು ಬಿಡೋಣ.

ಶಿವಸ್ವಾಮಿ ಅಕ್ಕನಾಗಮ್ಮ ಎಂಬ ದಂಪತಿಗಳ ಪವಿತ್ರದಾಂಪತ್ಯದಿಂದ ಚನ್ನಬಸವೇಶ್ವರರು ಜನಿಸಿದರು. ತೀರ ಎಳೆತನದಲ್ಲಿಯೇ ಶಿವಸ್ವಾಮಿಯು ತೀರಿಹೋದನು. ಆದುದರಿಂದ ಅವರ ಹೆಸರು ಜನತೆಗೆ ಹೆಚ್ಚಾಗಿ ಪರಿಚಯವಾಗಲಿಲ್ಲ. ಚನ್ನಬಸವೇಶ್ವರರು ಮುಂದೆ ತಮ್ಮ ಅಧ್ಯಾತ್ಮಿಕ ತೇಜದಿಂದ ಶೂನ್ಯಪೀಠದ ಅಧಿಕಾರಿಗಳಾಗಿ ಷಟ್‌ಸ್ಥಲ ಚಕ್ರವರ್ತಿಗಳೂ ಆದರು. ಈ ಪ್ರಸಂಗದಲ್ಲಿ ಪ್ರಮಥ ಪುಂಗವರಾದ ಬಸವೇಶ್ವರರ ಅನುಭವ ಮಂಟಪದ ಮಹಾಶರಣರ ಹಾಗೂ ಶಿವನ ಕಾರುಣ್ಯದ ಕಂದರಾದುದರಿಂದ ಈ ಸಂಗತಿಯು ಮೂರುನೂರು ವರ್ಷಗಳ ನಂತರ ಚರಿತೆಯನ್ನು ಬರೆಯುವ ಕವಿಗಳಿಗೆ ನಾಲಿಗೆಯಿಂದ ನಾಲಿಗೆಯ ಮೇಲೆ ಬಂದು ಕಿವಿಯಿಂದ ಕಿವಿಗೆ ತಲ್ಪುತ್ತ ವ್ಯತ್ಯಾಸಗೊಂಡು ದೊರಕಿದೆ. ಆದ್ದರಿಂದ ಅವರೆಲ್ಲ ಪವಿತ್ರಭಾವನೆಗಳಿಗಾಗಿ ಪ್ರಸಾದದಿಂದ ಜನಿಸಿದರೆಂದು ತಿಳಿಸಿರಬಹುದಾಗಿದೆ. ಈ ಪವಿತ್ರ ಭಾವನೆಯು ಈಗಲೂ ಜನತೆಯಲ್ಲಿರುವಾಗ ಅವನ್ನು ಕೆಡಿಸದಂತೆ ಉಳಿಸುವುದೇ ಸರಿಯಾಗುವದು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

೧. ಪ್ರಸ್ತಾವನೆ

ಎಂಬತ್ತು ನಾಲ್ಕು ಲಕ್ಷ ಜೀವ ರಾಶಿಗಳಲ್ಲಿ ಮಾನವ ಜೀವಿ ಶ್ರೇಷ್ಠ. ಮಾನವನಿಗೆ ಮಹಾದೇವನು ತನು-ಮನ-ಭಾವಗಳನ್ನು ದಯಪಾಲಿಸಿದ್ದಾನೆ. ಉಳಿದೆಲ್ಲ ಪ್ರಾಣಿಗಳಿಗೆ ತನುವನ್ನು ಮಾತ್ರ ನೀಡಿದ್ದಾನೆ. ಮಾನವನಿಗೆ ತನುವಿನಲ್ಲಿ ವಾಕ್‌ಶಕ್ತಿಯನ್ನು ಧೀಶಕ್ತಿಯನ್ನು ಮತ್ತು ಕೃತು ಶಕ್ತಿಯನ್ನು ಕರುಣಿಸಿದ್ದಾನೆ. ಈ ತ್ರಿವಿಧ ಶಕ್ತಿಗಳಿಂದ ಮಾನವ ಶ್ರೇಷ್ಠತೆಯನ್ನು ಮೆರೆಯುತ್ತಾನೆ. ವಾಕ್‌ಶಕ್ತಿಯ ಪ್ರಭಾವದಿಂದ ಭಾವನೆಗಳನ್ನು ವ್ಯಕ್ತ ಮಾಡುವನು. ಧೀಶಕ್ತಿಯಿಂದ ಜಾಣ್ಮೆಯನ್ನು ತೋರುವನು. ಕೃತುಶಕ್ತಿಯಿಂದ ಧೀಶಕ್ತಿಯ ಪ್ರಭಾವವನ್ನು ಬೀರಬಲ್ಲನು.

ಮನುಷ್ಯನ ದೇಹವು ಯಂತ್ರವಿದ್ದಂತಿದೆ. ಬ್ರಹ್ಮಾಂಡವು ಬೃಹತ್ತಾದ ವಿಜ್ಞಾನವಾಗಿದೆ. ಪಿಂಡಾಂಡವು ಬ್ರಹ್ಮಾಂಡದ ಪ್ರತಿರೂಪವೇ ಆಗಿದೆ. ಪಿಂಡಾಂಡವೆಂದರೇನೆ ದೇಹ, ತನು, ಶರೀರ, ಕಾಯ ಇತ್ಯಾದಿ ಅನೇಕ ನಾಮಗಳಿವೆ. ನಿಜಗುಣರು – ‘ತನುವಿದನುಳಿದಿಂದ್ರ ಜಾಲವದುಂಟೆ ?’ ಎಂದಿರುವುದು ಯಥಾರ್ಥವಾಗಿದೆ. ಇಂದ್ರಜಾಲ ಮನುಷ್ಯನನ್ನು ಆಶ್ಚರ್ಯಗೊಳಿಸುವಂತೆ, ತನುವನ್ನು ಕುರಿತು ಚಿಂತಿಸಿದರೆ ಅತ್ಯಾಶ್ಚರ್ಯವೇ ಉಂಟಾಗುವದು. ಆದರೆ ಅದರ ಚಿಂತನ ಮಾಡುವವರು ವಿರಳ.

ತನ್ನ ತನು ಸುಂದರವಾಗಿರಬೇಕು; ಗಟ್ಟಿಯಾಗಿರಬೇಕು. ದಷ್ಟ ಪುಷ್ಟವಾಗಿರಬೇಕೆನ್ನುವವರು ಬಹಳ. ಶರೀರ ಬೆಳವಣಿಗೆಯತ್ತ ಗಮನ ಹರಿಸುವವರೆ ಹೆಚ್ಚು. ಕವಿರತ್ನ ಕಾಲಿದಾಸನು-ʼʼಶರೀರಮಾದ್ಯಂ ಖಲು ಧರ್ಮಸಾಧನʼʼ ಧರ್ಮಾಚರಣೆಗೆ ಶರೀರವೆ ಮೊದಲಿನ ಸಾಧನ ವಾಗಿದೆಯೆಂದಿದ್ದಾನೆ. ಶರೀರವಿಲ್ಲದೆ ಯಾವ ಧರ್ಮಕಾರ್ಯಗಳು ಘಟಿಸುವುದಿಲ್ಲ. ಆದರೆ ತನುವಿನಲ್ಲಿ ನೆಣವಿದ್ದಾಗ ಮಾತ್ರ ಧರ್ಮಕಾರ್ಯಗಳಾಗಲಿ, ಪರೋಪಕಾರ್ಯಗಳಾಗಲಿ ನಡೆಯಬಲ್ಲವು. ಶರೀರವಿದ್ದು ರೋಗಗ್ರಸ್ಥವಾದರೆ ಏನನ್ನು ಮಾಡಲಾಗದು. ಅದಕ್ಕಾಗಿ ದೇಹ ಸ್ವಸ್ಥವಿರುವಾಗಲೆ ಭಗವಚ್ಛಿಂತನೆ, ಆತ್ಮಚಿಂತನೆ; ಪರೋಪಕಾರ ಮಾಡಬೇಕು. ಅಂತೆಯೇ ಬಸವ   ಮಹಾನುಭಾವರು ”ಕೂಡಲ ಸಂಗಮದೇವರನೊಲಿಸಲು ಬಂದ ಪ್ರಸಾದಕಾಯವ ಕೆಡಿಸಲಾಗದು” ಎಂದು ಹಿತನುಡಿದಿರುವರು. ಕಾಯ ಪ್ರಸಾದಕಾಯವಾಗಬೇಕು, ಧರ್ಮಕಾರ್ಯಕ್ಕೆ ಸಾಧನವಾಗಿರಬೇಕು. ಪರೋಪಕಾರಕ್ಕೆ ಮುಂದಾಗಬೇಕಲ್ಲದೆ ಪರಪೀಡನೆಗೆ ಕಾರಣವಾಗಬಾರದು.

 ಶರೀರ ಆರೋಗ್ಯಪೂರ್ಣವಾಗಿದ್ದರೇನೆ ಮನಸ್ಸು ಬುದ್ಧಿಗಳು ಸ್ವಸ್ಥವಾಗಿರಬಲ್ಲವು.ಶರೀರದ ಆರೋಗ್ಯವನ್ನು, ಮಾನಸಿಕ ಸ್ವಾಸ್ಥ್ಯವನ್ನು ಬುದ್ಧಿಯ ವಿಕಾಸವನ್ನು, ಆತ್ಮದ ಚಿಂತನವನ್ನು ಕಾಪಾಡಿಕೊಳ್ಳಲು ಮಾನವ ಪ್ರಯತ್ನಿಸಬೇಕಾಗುವದು. ಈ ದಿಶೆಯಲ್ಲಿ ಯಾವುದನ್ನು ಅಲಕ್ಷಿಸುವಂತಿಲ್ಲ. ಶಾರೀರಿಕ ಆರೋಗ್ಯ, ಮಾನಸಿಕ ಸ್ವಾಸ್ಥ್ಯ, ಬುದ್ಧಿಯ ವಿಕಾಸ, ಆತ್ಮದ ಚಿಂತನಗಳೊಂದಿಗೆ ಭೌತಿಕ ಜಗತ್ತಿನ ಸಂಬಂಧ ಹಾಗೂ ಜಗತ್‌ಸೃಷ್ಟಿಗೆ ಕಾರಣಕರ್ತನಾದ ಪರಮಾತ್ಮನನ್ನು ಅರಿಯುವ ಕಾರ್ಯ ಬಹುಕಾಲದಿಂದ ಬೆಳೆದುಬಂದಿತು. ಭೌತಿಕ ಜಗತ್ತಿನ ಬೆಳವಣಿಗೆಯ ಬಗೆಗೆ ಅನೇಕ ಅನುಮಾನಗಳು, ಪ್ರಶ್ನೆಗಳು ಉಂಟಾದರೆ, ವಿಜ್ಞಾನ ಪರಿಹಾರಗಳನ್ನು ಒದಗಿಸಿರಲು ಸಾಕು. ದೈಹಿಕ ಬೆಳವಣಿಗೆಯನ್ನು ಸಹ ವಿಜ್ಞಾನ ವಿಶ್ಲೇಷಿಸಬಹುದು. ಆದರೆ ದೇಹಾತೀತ ಅನುಭವಗಳನ್ನು ವಿಜ್ಞಾನ ತಿಳಿಸಲಾರದು. ವಿಜ್ಞಾನ ತಿಳಿಸದುದನ್ನು ಅಧ್ಯಾತ್ಮತಿಳಿಸಬಲ್ಲುದು. ಅಧ್ಯಾತ್ಮಿಕ ವಿಜ್ಞಾನ ಅನುಭವ- ಅನುಭೂತಿ-ಆತ್ಮಾನಂದವನ್ನು ತಿಳಿಸುವದು. ಇವೆಲ್ಲದಕ್ಕೂ ಸ್ವಸ್ಥ ಶರೀರವೇ ಸಾಧನ ಮಾತ್ರ.

 ಆತ್ಮಜ್ಞಾನದ ಅರಿವು ಉಂಟಾಗಲು, ಆನಂದಮಯ ಜೀವನ ಸಾಗಿಸಲು ಶಾರೀರಿಕ ಆರೋಗ್ಯ ಅವಶ್ಯ. ಅದಕ್ಕಾಗಿ ಶರೀರ ವಿಜ್ಞಾನವನ್ನು ತಿಳಿದುಕೊಳ್ಳಬೇಕಾಗುವದು. ಅಧಿ+ಆತ್ಮಪದಗಳೇ ಅಧ್ಯಾತ್ಮವೆನಿಸುವದು. ಕೇವಲ ದೈಹಿಕವಾಗಿ ವಿಚಾರಿಸದೆ ದೇಹಕ್ಕೆ ಚೈತನ್ಯ ನೀಡುವ ಆತ್ಮನ ಬಗೆಗೆ ಚಿಂತಿಸುವುದು ಅಧ್ಯಾತ್ಮವೆನಿಸುವದು. ಕೇವಲ ಪರಚಿಂತೆಯನ್ನು ಮಾಡದೆ ನಮ್ಮ ಚಿಂತೆಯನ್ನು ಮಾಡುವುದು ಅಧ್ಯಾತ್ಮವೆನಿಸುವುದು. ನಮ್ಮ ಚಿಂತೆಯೆಂದರೆ ನಮ್ಮ ಹೊಟ್ಟೆಪಾಡಿನ, ಹೆಂಡರು ಮಕ್ಕಳ ಚಿಂತನೆಯಲ್ಲ. ನಾನಾರು ? ನಾನು ಏಕೆ ಹುಟ್ಟಿದೆ ? ಹುಟ್ಟಿಗೆ ಕಾರಣವೇನು ? ಹುಟ್ಟಿದವನು ಸಾಯುವುದೇಕೆ ? ಸಾವು ಎಂದರೇನು ? ಏಕೆ ? ಸತ್ತನಂತರ ಎಲ್ಲಿಗೆ ಹೋಗುತ್ತೇವೆ ? ಶರೀರ ಮತ್ತು ಆತ್ಮನಿಗಿರುವ ಸಂಬಂಧವೇನು ? ಸತ್ತನಂತರ ಮತ್ತೆ ಹುಟ್ಟುತ್ತದೆಯೋ ? ಸಾವಿಗೂ ಮರು ಹುಟ್ಟಿಗೂ ಮಧ್ಯದಲ್ಲಿ ಎಲ್ಲಿರುತ್ತೇವೆ ? ಹೋಗುವುದೆಲ್ಲಿಗೆ ? ಬರುವುದಾದರೂ ಎಲ್ಲಿಂದ ? ಮತ್ತೆ ಮತ್ತೆ ಹುಟ್ಟಲೇಬೇಕೆ ? ಹುಟ್ಟದಂತಾಗಲು ಸಾಧ್ಯವೇ ? ಹುಟ್ಟದಂತಾಗಲು ನಾವೇನು ಮಾಡಬೇಕು ? ಹುಟ್ಟು-ಸಾವಿನ ನಡುವೆ ಸಾಗಿಸುವ ಜೀವನ, ಜೀವನದಲ್ಲಿ ಬರುವ ಸುಖ- ದುಃಖ, ನೋವು-ನಲಿವು, ಆಟ-ಪಾಠ, ಸೋಲು – ಗೆಲುವು, ಸಿರಿತನ – ಬಡತನ, ರೋಗ – ರುಜಿನಗಳು ಏಕೆ ? ಕೆಲವರೇಕೆ ಬಡವರು ? ಹಲವರು ಸಿರಿವಂತರೇಕೆ ? ಯಾರಿಗೂ ಕೆಟ್ಟದ್ದನ್ನು ಮಾಡದಿದ್ದರೂ ಬರುವ ಯಾತನೆಗಳೇಕೆ ? ಜೀವನದಲ್ಲಿ ನಡೆಯುವ ಘಟನೆಗಳಿಗೂ,  ವಿಜ್ಞಾನ ಉತ್ತರಿಸದು.  

 ಸಾಮಾನ್ಯ ವಿಜ್ಞಾನ ಉತ್ತರಿಸಲಾಗದ ವಿಷಯಗಳನ್ನು ತಿಳಿಸಬಲ್ಲುದು ಅಧ್ಯಾತ್ಮ. ಸಾಮಾನ್ಯ ವಿಜ್ಞಾನ ವಿವರಿಸಲಾಗದ ನಿಗೂಢ ವಿಶ್ವ ಸತ್ಯಗಳನ್ನು ವಿವರಿಸಬಲ್ಲದು ಅಧ್ಯಾತ್ಮ. ಸಾಮಾನ್ಯ ವಿಜ್ಞಾನ ನಿಯಂತ್ರಿಸಲಾಗದ ಚೈತನ್ಯದ ಸ್ತರಗಳೇ ಅಧ್ಯಾತ್ಮ. ಮಾನವನ ಬುದ್ಧಿವಂತಿಕೆಯ ಜಾಣ್ಮೆಯನ್ನು ಮೀರಿದ ವಿಚಾರಗಳನ್ನು ನಿರೂಪಿಸುವುದು ಅಧ್ಯಾತ್ಮ ಮಾನವನ ದೇಹಾತೀತ ಅನುಭವಗಳೇ ಅಧ್ಯಾತ್ಮ. ಮಾನವನ ಅತೀಂದ್ರಿಯ ಅನುಭವಗಳೇ ಆಧ್ಯಾತ್ಮ. ಸಾಮಾನ್ಯ ವಿಜ್ಞಾನವನ್ನು ಮೀರಿದ ಜ್ಞಾನವೇ ಅಧ್ಯಾತ್ಮಿಕ ವಿಜ್ಞಾನ. ಇಂಥ ಅಧ್ಯಾತ್ಮ ಜ್ಞಾನದಿಂದ ಮೇಲಿನ ಪ್ರಶ್ನೆಗಳಿಗೆ ಪರಿಹಾರ ದೊರೆಯುವದು. ಶಾಂತಿ-ಸಮಾಧಾನಗಳು ಲಭಿಸುವವು.

ವೇದಾಂತಿಗಳು ಶರೀರದ ಅನಿತ್ಯತೆಯನ್ನು, ಕ್ಷಣಭಂಗುರತೆಯನ್ನು ಹೇಳಿದರೆ, ಶರಣರು ದೇಹ ದೇಗುಲವೆಂದರು, ಪ್ರಸಾದಕಾಯವೆಂದು ಕೊಂಡಾಡಿದರು. ವಸ್ತುತಃ ಶರೀರವು ಷದ್ಭಾವವಿಕಾರವುಳ್ಳುದು. ಬಾಲ್ಯ- ಯೌವ್ವನ ವಾರ್ಧಕ್ಯಾದಿಗಳಿಂದ ವಿಕಾರಗೊಳ್ಳುವದು. ಕೆನ್ನೆಯ ಕೂದಲು ನೆರೆಯೊಡೆದು, ಗಲ್ಲಗಳು ಒಳಸೇರಿ ಹಲ್ಲು ಹೋಗಿ, ಬೆನ್ನುಬಾಗಿ, ಕಾಲ ಮೇಲೆ ಕೈಯೂರಿ ಅನ್ಯರ ಹಂಗಿನಲ್ಲಿ ಬಾಳಬೇಕಾದ ಶರೀರದ ಯಥಾರ್ಥತೆಯನ್ನರಿತು ಸಾರ್ಥಕ ಬದುಕಿಗಾಗಿ ಬಳಸಿಕೊಳ್ಳಬೇಕು. ಪಾರಮಾರ್ಥಕ್ಕಾಗಿ ಉಪಯೋಗಿಸಿಕೊಳ್ಳಬೇಕು. ಹುಟ್ಟಿದವನುಸಾಯಲೇಬೇಕು; ಶರೀರ ಗಟ್ಟಿಯಾಗಿರುವಾಗಲೇ ಸದುಪಯೋಗವಾಗಬೇಕು.

ತನುವೆಂಬುದೊಂದು ಇಂದ್ರಜಾಲವೆಂದು ಬಣ್ಣಿಸಿದಂತೆ ಈ ಶರೀರದಲ್ಲಿ ಅದೆಷ್ಟು ಇಂದ್ರಿಯಗಳು, ಅದೆಷ್ಟು ವಾಯುಗಳು, ಅದೆಷ್ಟು ಕರಣಗಳು, ಅದೆಷ್ಟು ತತ್ವಗಳು, ಅದೆಷ್ಟು ನಾಡಿಗಳು, ಅದೆಷ್ಟು ಆತ್ಮಗಳು ಇವೆಯೆಂಬುದನ್ನು ಆಲೋಚಿಸಬೇಕು. ಕಾಣುವ ಶರೀರವೊಂದೆನಿಸಿದರೂ ಅದರೊಳಗೆ ಮತ್ತೆಷ್ಟು ತನುಗಳಡಗಿವೆಯೆಂಬುದು ವಿಚಾರಣೀಯ. ಈ ಶರೀರದಲ್ಲಿ ಅದೆಷ್ಟು ಮದಗಳು, ಅದೆಷ್ಟು ಅನಿಮಿತ್ತ ವೈರಿಗಳು, ಅದೆಷ್ಟು ಧಾತುಗಳು, ಅದೆಷ್ಟು ವ್ಯಸನಗಳು, ಅದೆಷ್ಟು ತೆರೆಗಳು, ಅದೆಷ್ಟು ಭ್ರಮೆಗಳು, ಅದೆಷ್ಟು ಕೋಶಗಳು, ಅದೆಷ್ಟು ಕ್ಲೇಶಗಳು, ಅದೆಷ್ಟು ಗುಣಗಳು, ಅದೆಷ್ಟು ಅಹಂಕಾರಗಳು, ಅದೆಷ್ಟು ತಾಪತ್ರಯಗಳು, ಅದೆಷ್ಟು ಜೀವಗಳು, ಅದೆಷ್ಟು ಅವಸ್ಥೆಗಳು,ಅದೆಷ್ಟು ಭಾವಗಳು, ಅದೆಷ್ಟು ಮನಗಳು, ಅದೆಷ್ಟು ಅಗ್ನಿಗಳು ಅಡಿಗಿವೆಯೆಂಬುದನ್ನು ತಿಳಿದರೆ ಅಬ್ಬಬ್ಬಾ ಶರೀರವೆಂಬುದೊಂದು ಅದ್ಭುತವಾದ ಆಶ್ಚರ್ಯಕಾರಕ ಯಂತ್ರವೆಂಬುದರ ಅರಿವಾಗದಿರದು. ಇವೆಲ್ಲವುಗಳ ವಿಶ್ಲೇಷಣೆಯನ್ನು ಮಹಾಜ್ಞಾನಿ ಕಿರಿವಯದ ಹಿರಿಯ ಅನುಭಾವಿ ಷಟ್‌ಸ್ಥಲ ಚಕ್ರವರ್ತಿ ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ವಿವರವಾಗಿ ನಿರೂಪಿಸಿರುವರು.

ಭಾರತೀಯ ದರ್ಶನಗಳಲ್ಲಿ ಆಸ್ತಿಕ ದಾರ್ಶನಿಕರಿಗಿಂತ ನಾಸ್ತಿಕ ದಾರ್ಶನಿಕರಾದ ಲೋಕಾಯತ ಸಂಪ್ರದಾಯದವರು, ಅರ್ಥಾತ್ ಚಾರ್ವಾಕರು ದೇಹದ ಯಥಾರ್ಥತೆಯನ್ನು ಅರಿತಿದ್ದಾರೆ. ದೇಹಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದವರು. ‘ಋಣಂ ಕೃತ್ವಾ ಘೃತಂ ಪಿಬೇತ್ ʼ ಸಾಲ ಮಾಡಿಯಾದರೂ ತುಪ್ಪವನ್ನು ಕುಡಿಯಬೇಕು. ಅ೦ದರೆ ಸಾಲವಾದರೂ ಸರಿ, ಸುಖವಾಗಿ ಇರಬೇಕೆನ್ನುವರು. ಕಾಣದ ಆತ್ಮವನ್ನು ಮನ್ನಿಸದೆ, ಕಾಣುವ ಕಾಯಕ್ಕೆ ಪ್ರಾಶಸ್ತ್ಯ ಕೊಟ್ಟರು.ʼ ‘ಚೈತನ್ಯ ವಿಶಿಷ್ಟ ಕಾಯಃ ಪುರುಷಃ ʼʼ ಎಂಬ ಸೂತ್ರವನ್ನು ಲೋಕಾಯತ ಮತದ ಮೂಲ ದಾರ್ಶನಿಕನಾದ ಬೃಹಸ್ಪತಿಯ ಪ್ರತಿಪಾದಿಸಿದರು. ಆದರೆ ಆಸ್ತಿಕ ದಾರ್ಶನಿಕರು ಶರೀರ ಅನಿತ್ಯವೆಂದು ಹೇಳಿದರೂ “ಮುಕ್ತಿಗೆ ಪರಮೋಪಾಯವೆನಿಸಿದ ಆತ್ಮ ಜ್ಞಾನವು ದೇಹವಿರುವಾಗಲೇ ಸಾಧ್ಯವಾಗುವದೆಂದೂ’ ನಿರೂಪಿಸಿದರು.

 ಆತ್ಮಜ್ಞಾನಕ್ಕೆ ಆಶ್ರಯವಾದುದು ಕಾಯ. ಅದರಂತೆ ಪ್ರಾಣಕ್ಕಾಶ್ರಯವೆನಿಸಿದ್ದು ಕಾಯ, ಧರ್ಮಸಾಧನಗಳಿಗೆ ಪ್ರೇರಣೆ ನೀಡುವದು ಕಾಯ. ಅವಿರಳಜ್ಞಾನಿ ಚನ್ನಬಸವಣ್ಣನವರು-““ತಿಳಿಯುವದೇ ಜ್ಞಾನ, ತಿಳಿದಂತೆ ನಡೆಯುವದೇ ಕ್ರಿಯೆ. ಅರಿತು ನಡೆಯದಿದ್ದರೆ ಅದೇ ಅಜ್ಞಾನ’ ವೆಂದು ಜ್ಞಾನ ಕ್ರಿಯೆಗಳ ಸ್ವರೂಪವನ್ನು ಮಾರ್ಮಿಕವಾಗಿಯೇ ಹೇಳಿದ್ದು ದಾರ್ಶನಿಕರಿಗೂ ಅಚ್ಚರಿಯಾಗಿರಲು ಸಾಕು. “ದೇಹವಿಲ್ಲದಿದ್ದೊಡೆ ಪ್ರಾಣಕ್ಕಾಶ್ರಯವುಂಟೆ ?” ಎಂದೂ ಪ್ರಶ್ನಿಸಿದ್ದರಲ್ಲಿ ದೇಹದ ಅವಶ್ಯಕತೆ ವ್ಯಕ್ತವಾಗುತ್ತದೆ. ಜ್ಞಾನವನ್ನು ಸಂಪಾದಿಸಲು ಸ್ವಸ್ಥಕಾಯಬೇಕು. ಜ್ಞಾನದ ಸಾಕಾರರೂಪ ವ್ಯಕ್ತವಾಗಲು ಕ್ರಿಯೆಬೇಕು. ತಿಳಿದಂತೆ ಕಾರ್ಯಗೈದಾಗ ಜ್ಞಾನ ಪ್ರತ್ಯಕ್ಷವಾಗುವದು. ಪರಸ್ತ್ರೀಯನ್ನು ಭೋಗಿಸಬಾರದೆಂಬ ಜ್ಞಾನ. ಅದರಂತೆ ನಡೆದಾಗ ಆ ಜ್ಞಾನಕ್ಕೆ ಬೆಲೆಯಿದೆ. ಇಲ್ಲದಿದ್ದರೆ ಅದೇ ಅಜ್ಞಾನವೆಂಬ ನುಡಿಯಲ್ಲಿ ಔಚಿತ್ಯವಿದೆ. ದೇಹವನ್ನು ಹೇಯವೆಂದವರಿಗೆ ಶರಣರು ಎಚ್ಚರಿಕೆ ಕೊಟ್ಟರು. ದೇವರ ನೊಲಿಸಬಂದ ಪ್ರಸಾದಕಾಯವನ್ನು ಕೆಡಿಸಲಾಗದೆಂದರು. ಬೀಜವು ಚೆನ್ನಾಗಿ ಫಲಿಸಬೇಕಾದರೆ ಉತ್ತಮವಾದ ಭೂಮಿಯ ಅವಶ್ಯಕತೆಯಿರುವಂತೆ; ಜಲ, ಬೆಳಕು ಹಾಗೂ ಗಾಳಿಗಳೂ ಬೇಕು. ಅದರಂತೆ ಮಾನವನ ಆತ್ಮಶಕ್ತಿಯು ವಿಕಾಸಗೊಳ್ಳಬೇಕಾದರೆ ದೇಹ ಮತ್ತು ಅದಕ್ಕೆ ಪೋಷಕವಾದ ಅನ್ನ-ನೀರು- ಪರಿಸರಗಳು ಮುಖ್ಯ, ದೇಹ ಸದೃಢವಾಗಿರದಿದ್ದರೆ ಯಾವುದನ್ನೂ ಸಾಧಿಸಲಾಗದು. ಅಂತೆಯೇ ಅನುಭಾವಿ ಚನ್ನಬಸವಣ್ಣನವರು-

ಕಾಯದಿಂದ ಲಿಂಗ ದರುಶನ,

 ಕಾಯದಿಂದ ಜಂಗಮ ದರುಶನ,

 ಕಾಯದಿಂದ ಪ್ರಸಾದ ಸಂಪತ್ತು,

 ಕೂಡಲ ಚನ್ನಸಂಗಯ್ಯಾ ಈ ಕಾಯದಿಂದ

 ನಿಮ್ಮವನು ಕಂಡೆನಯ್ಯಾ.

 ಕಾಯದ ಮಹತ್ವವನ್ನು ಬಿತ್ತರಿಸಿರುವರು. ಮಾನವನು ಕಾಯದಿಂದ ಕಾಯಕ ಮಾಡಿ ಸಕಲ ಪದಾರ್ಥಗಳನ್ನು ಪಡೆಯುವನು, ಗುರುಸೇವೆ ಮಾಡಿ ಲಿಂಗವನ್ನು ಹೊಂದುವನು. ನಿತ್ಯ ಲಿಂಗದರ್ಶನವಾಗುವದು. ಲಿಂಗ ಪೂಜೆಯ ಫಲ ಜಂಗಮ ದರುಶನ. ಜಂಗಮನ ಅನುಗ್ರಹದಿಂದ ಪ್ರಸಾದ ಸಂಪತ್ತು ಲಭಿಸುವದು. ಅಷ್ಟೇ ಅಲ್ಲ,  ಲಿಂಗವನ್ನು ಪೂಜಿಸಿ ಲಿಂಗಗಳನ್ನು ಸರ್ವಾಂಗದಲ್ಲಿ ಸಂಬಂಧಗೊಳಿಸಿ ಸರ್ವಾಂಗಲಿಂಗ ಮಯನೆನಿಸುವ ಸಾಮರ್ಥ್ಯ ಲಭಿಸುವುದು ಸಂಸ್ಕಾರಗೊಂಡ ಕಾಯದಿಂದ.

ಕಾಯಕ್ಕೆ ದೇಹ, ತನು, ಶರೀರ, ಭೋಗಾಯತನ ಇತ್ಯಾದಿ ಹಲವು ನಾಮಗಳಿದ್ದರೆ ವೀರಶೈವರು ಅಂಗವೆಂದು ಕರೆದಿರುವರು. ಕಾಯ ಕಷ್ಟಗಳನ್ನು ಮಾಡಬಲ್ಲುದು ಕಾಯವೆನಿಸಿದರೆ, ಸಾಂಸಾರಿಕ ಚಿಂತಾಗ್ನಿಯಲ್ಲಿ ಸುಡಲ್ಪಡುವುದರಿಂದ ಇದು ದೇಹವೆನಿಸಿತು. ಶಿವನ ಶಕ್ತಿಗಳು ಸಂಕೋಚಗೊಂಡು ಜೀವನಾಗುತ್ತಾನೆ. ಮತ್ತು ಜೀವಾತ್ಮನು ತನುವೆನಿಸುವನು. ತನುವೆಂದರೆ ಚಿಕ್ಕದು, ಜೀವಿಯ ಶಕ್ತಿ ಚಿಕ್ಕದು. ಕಾರ್ಯಕ್ಷಮತೆ ಸಣ್ಣದು. ಮನಸ್ಸು ಅಲ್ಪ; ಭಾವ ಸಹ ಸಂಕೋಚಗೊಂಡುದು. ಅದಕ್ಕಾಗಿ ಇದು ತನುವೆನಿಸಿದೆ. ಶರೀರವೆಂದರೆ ಸಣ್ಣಾಗುವದು, ಸೊರಗುವದು. ಬಾಲ್ಯದಿಂದ ಯೌವನಾವಸ್ಥೆಯಲ್ಲಿ ದೊಡ್ಡದಾದ ಶರೀರವು ವಾರ್ಧಕ್ಯಕ್ಕೆ ಸೊರಗುತ್ತ ಹೋಗುವುದಿಲ್ಲವೇ? ಲೋಕಾಯತರು ಶಾರೀರಿಕ ಭೋಗಕ್ಕೇನೆ ಮಹತ್ವ ನೀಡಿದ ಕಾರಣ ಇದಕ್ಕೆ ಭೋಗಾಯತನವೆಂದು ಕರೆದರು. ಶರೀರವು ಎಲ್ಲ ಭೋಗಗಳಿಗೆ ಆಶ್ರಯ ಸ್ಥಾನವಾಗಿದೆ. ಜ್ಞಾನ-ಕ್ರಿಯೆಗಳಲ್ಲಿ ಸಮಸಮುಚ್ಚಯವನ್ನು ಪ್ರತಿಪಾದಿಸುವ ವೀರಶೈವರು ತನುವಿಗೆ ಅಂಗವೆಂದು ಕರೆದರು. ‘ಅಂ’ ಎಂದರೆ ಪರಮಾತ್ಮ, ಆ ಪರಶಿವನನ್ನು ಕೂಡುವ ಕಾಯವು ಅಂಗವೆನಿಸಿತು. ಭಾರತೀಯ ಎಲ್ಲ ದಾರ್ಶನಿಕರು- ʼʼಜನ್ಮನಾ ಜಾಯತೇ ಶೂದ್ರಃ, ಕರ್ಮಣಾ ದ್ವಿಜ ಉಚ್ಯತೇ”  ಪ್ರಾಕೃತಿಕವಾಗಿ ಹುಟ್ಟವ ಜೀವಿಗಳು ಶೂದ್ರರಾಗಿಯೇ ಜನಿಸಿ ಉಪನಯನ ಸಂಸ್ಕಾರದಿಂದ ದ್ವಿಜರೆನಿಸುವರು, ಅರ್ಥಾತ್ ಸಂಸ್ಕಾರ ಹೊಂದಿ ಬ್ರಾಹ್ಮಣತ್ವವನ್ನು ಹೊಂದುವರು. ಆದರೆ ವೀರಶೈವರು ತಾಯಿಯ ಗರ್ಭದಲ್ಲಿರುವ ಶಿಶುವಿಗೆ ೮ನೇ ತಿಂಗಳಲ್ಲಿ ಲಿಂಗಸಂಸ್ಕಾರ ಮಾಡುವದರಿಂದ ಈ ಮಗು ಶೂದ್ರನಾಗದೆ ಲಿಂಗ ಸಂಬಂಧವುಳ್ಳದಾಗಿ ಜನಿಸುವದು. ಲಿಂಗೋದ್ಭವನಾಗಿಯೇ ಮರ್ತ್ಯಕ್ಕೆ ಬರುವದು. ಲಿಂಗಧಾರಿಯಾಗಿ ಲಿಂಗವನ್ನೇ ಪ್ರಾಣವಾಗಿಸಿಕೊಳ್ಳುವನು. ಪ್ರಾಣಲಿಂಗಿಯೆನಿಸುವನು. ವೀರಶೈವರು ಜಗತ್ತನ್ನು ಮಿಥ್ಯವೆಂದು ಭಾವಿಸಲಿಲ್ಲ. ಎಲ್ಲವೂ ಶಿವಮಯವೆಂದು ಭಾವಿಸಿ ಶಿವನಿತ್ತ ಪದಾರ್ಥಗಳನ್ನು ಲಿಂಗಮುಖವಾಗಿ ಭೋಗಿಸುವರು. ಸ್ಥೂಲ ಶರೀರವು ತ್ಯಾಗಾಂಗವಾದರೆ, ಸೂಕ್ಷ್ಮ ಶರೀರವು ಭೋಗಾಂಗವೆನಿಸುವದು. ಲಿಂಗಭೋಗೋಪಭೋಗಿಗಳಾಗಿ, ಲಿಂಗದಲ್ಲಿ ಬೆರೆಯುವ ಯೋಗವನ್ನು ಸಾಧಿಸುವರು. ಅದಕ್ಕಾಗಿ ಕೊನೆಯದು ಯೋಗಾಂಗವೆನಿಸಿತು. ತ್ಯಾಗಾಂಗದಲ್ಲಿ ಜೀವಗುಣಗಳ ತ್ಯಾಗವಿದೆ. ಸಾಂಸಾರಿಕ ವ್ಯಾಮೋಹದ ತ್ಯಾಗವಿದೆ. ಜಡಗುಣಗಳ ತ್ಯಾಗವಿದೆ. ತನುಗುಣಗಳ ತ್ಯಾಗವಿದೆ. ಲಿಂಗಭೋಗೋಪಭೋಗಿಯಾಗಿ ಎಲ್ಲ ಭೋಗಗಳನ್ನು ಭೋಗಿಸಿ ಲಿಂಗದೊಡನೆ ಬೆರೆಯುವ ಶಿವಯೋಗ ಸಾಧನೆಯಿರುವುದರಿಂದ ಯೋಗಾಂಗವೆನಿಸುವದು. ಲಿಂಗವೆ ತಾನಾಗುವ ಯೋಗವನ್ನು ಹೊಂದುವನು.

ಇಂಥ ಕಾಯದ ಅರಿವನ್ನು ಯಥಾರ್ಥವಾಗಿ ನಿರೂಪಿಸಿದ ‘ಕರಣ ಹಸಿಗೆ’ ಯು ಶಿವಾನುಭವಿಗಳ ಪಠ್ಯವೇ ಆಗಿರುವದು. ಚಿನ್ಮಯಾನುಗ್ರಹವನ್ನು ಹೊಂದುವವರು ಅವಶ್ಯವಾಗಿ ಕರಣಹಸಿಗೆಯನ್ನು ಅಧ್ಯಯನ ಮಾಡಲೇಬೇಕು. ಅನುಗ್ರಹ ಮಾಡುವ  ಪೂರ್ವದಲ್ಲಿ ಕರಣ ಹಸಿಗೆಯನ್ನು ಕುರಿತು ಚಿಂತನ ಮಾಡುತ್ತಿದ್ದರು. ನಂತರ ಧಾರ್ಮಿಕ ಸಂಸ್ಕಾರ ಸಂಪನ್ನವಾಗುತ್ತಿತ್ತು, ಸಂಸ್ಕಾರಕ್ಕೆ ಪೂರಕವಾಗಿ ಅಧ್ಯಾತ್ಮದ ಚಿಂತನ ನಡೆಯಬೇಕು. ಶರೀರವಿಜ್ಞಾನದ ವಿವೇಚನೆಗೈಯ್ಯುವದರಿಂದ ಆತ್ಮಜ್ಞಾನಕ್ಕೆ ಅನುವಾಗುವದು. ಅಧ್ಯಾತ್ಮಸಿದ್ಧಿ ಲಭಿಸುವುದು.

 ‘ಕರಣ ಹಸಿಗೆ’ಯ ವಿಷಯಗಳನ್ನು ಪರಶೀಲಿಸಿದರೆ ಇದು ವೀರಶೈವರಿಗೇನೇ ಮೀಸಲಾದ ಕೃತಿಯಲ್ಲ. ಮಾನವ ಮಾತ್ರರಿಗೇನೇ ಸಂಬಂಧಿಸಿದ ಮಹತ್ವದ ಕೃತಿಯಾಗಿದೆ. ಮಾನವ ಶರೀರವನ್ನು ವಿಶ್ಲೇಷಿಸುವ ಗ್ರಂಥವಾಗಿರುವದರಿಂದ ಸಕಲ ಮಾನವರು ಇದನ್ನು ಓದಿ ಅರ್ಥೈಸಿಕೊಳ್ಳ ಬಹುದು. ಶರೀರದ ರಚನೆಯ ಸಿದ್ದಾಂತ ಇದಾಗಿರುವುದರಿಂದ ಇದರ ವಿಶೇಷತೆಯನ್ನು ಸಕಲರೂ ಅರಿಯಬೇಕು. ವೀರಶೈವರ ಸಿದ್ಧಾಂತವು ತತ್ವ ತ್ರಯಗಳಲ್ಲಿ ಅಡಗಿರುವದರಿಂದ ಆ ವಿಚಾರ ಇದರಲಿಲ್ಲ. ಇದು ವಾದ- ವಿವಾದಗಳಿಗೂ ಕಾರಣವಾಗಿಲ್ಲ. ಮತ ಧರ್ಮದ ಚರ್ಚೆ ಇದರಲ್ಲಿಲ್ಲ. ಭಾರತೀಯ ಸನಾತನ ಧರ್ಮದ ಅರಿವನ್ನು ಮಾಡಿಕೊಳ್ಳಬಹುದಾದ ವಿಶಿಷ್ಟ ಕೃತಿಯಿದು. ವೇದಾಂತಿಗಳು ಚಿಂತಿಸಿದ ಪಂಚೀಕರಣದ ವಿಚಾರ ಇಲ್ಲಿದೆ. ಪಂಚಭೂತಗಳ ಗುಣ-ಕರ್ಮ-ವರ್ಣ-ಧರ್ಮಗಳ ಅಧಿದೇವತೆ ಚಿಂತನ ಇಲ್ಲಿದೆ. ಇಂದ್ರಿಯಗಳ ವಿಶ್ಲೇಷಣೆಯೊಂದಿಗೆ ಹಲವಾರು ವಿಷಯಗಳ ವಿವೇಚನೆಯಿದೆ.

 ಆಧುನಿಕ ಶರೀರ ವಿಜ್ಞಾನಿಗಳು ಚಿಂತಿಸಿರುವುದಕ್ಕಿಂತಲೂ ಹೆಚ್ಚಿನ ವಿಷಯ ವಿವೇಚನೆ ಇಲ್ಲಿ ಲಭಿಸುವುದು. ಆದರೆ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಶಾರೀರಿಕ ಕ್ರಿಯೆಗಳ ಬಗೆಗೆ, ಶಾರೀರಿಕ ರೋಗಗಳ ಬಗೆಗೆ, ಮತ್ತು ರೋಗ ಚಿಕಿತ್ಸೆ ಬಗೆಗೆ ಬಹಳಷ್ಟು ಸಂಶೋಧನೆ, ಚಿಂತನಗಳು ಬೆಳೆದು ಬಂದಿವೆ. ಯಾಂತ್ರೀಕರಣಗಳ ಆವಿಷ್ಕಾರವೂ ಆಗಿದೆ. ಹಲವಾರು ಮುಖ್ಯ ಅವಯವಗಳ ಜೋಡಣೆಯೂ ಆಗುತ್ತಿದೆ. ಇದೂ ಇಂದಿನ ಅದ್ಭುತ ಸಾಧನೆಯೇ ಎನ್ನಬೇಕು.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಎಲ್ಲ ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತಾರೆ. ಶರೀರ ರಚನೆಯನ್ನು ತಿಳಿಸಿ ಕೊಡಲು ಶರೀರ ವಿಜ್ಞಾನ ಶಾಸ್ತ್ರ (Anatomy) ವನ್ನು ಆಮೂಲಾಗ್ರವಾಗಿ ಕಲಿಸುತ್ತಾರೆ. ಶರೀರ ಉತ್ಪತ್ತಿಗೆ ಸ್ತ್ರೀಯಳ ಅಂಡಾಣು ಪುರುಷನ ವೀರ್ಯಾಣು ಕಾರಣ. ಅದನ್ನೇ ಬಸವಣ್ಣನವರೂ “ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ’ʼ ಎಂದು ವಚನಿಸಿದ್ದುಂಟು. ಗರ್ಭಧಾರಣೆಯಾಗಬೇಕಾದರೆ ಸ್ತ್ರೀಯಳು ರಜಸ್ವಲೆಯಾದಾಗ ಪುರುಷನ ಸಂಯೋಗವೂ ಅವಶ್ಯವೆಂಬುದನ್ನು ಸ್ಪಷ್ಟಪಡಿಸಿರುವರು. ಗರ್ಭಧಾರಣೆಯಾದಂದಿನಿಂದ ಮಗು ಜನನವಾಗುವ ವರೆಗಿನ ವಿವರವನ್ನು ಕರಣ ಹಸಿಗೆ ಪ್ರತಿಪಾದಿಸಿದ್ದಕ್ಕಿಂತ ಮಿಗಿಲಾಗಿ ವೈದ್ಯಕೀಯ ವಿಜ್ಞಾನ ಅವಗತ ಮಾಡಿಸುತ್ತದೆ. ಗರ್ಭಧರಿಸಿ ಶರೀರದ ಅಂಗಗಳು ಬೆಳೆದ ೨೮೦ನೆ ದಿನ ಮಗು ಈ ಮರ್ತ್ಯಲೋಕಕ್ಕೆ ತಲೆಕೆಳಗಾಗಿ ಬರುವದು. ಜೀವಿಯ ಆರೋಗ್ಯ ರಕ್ಷಣೆ ಕಾಪಾಡಲು ರೋಗಕಾರಣ ಹಾಗೂ ರೋಗ ನಿಧಾನವನ್ನು ಹುಡುಕಲು ಸೂಕ್ಷ್ಮವಾದ ಅಧ್ಯಯನ  ನಡೆದಿರುವುದು. ಮಾನವನ ಕೈಕಾಲುಗಳ ಬಗೆಗೆ ಆರು ತಿಂಗಳ ಚಿಂತನ ನಡೆದರೆ; ಕುತ್ತಿಗೆಯಿಂದ ಮೇಲೆ ಕಿವಿ, ಮೂಗು, ತಲೆ ಬರುಡೆಗಳ ಬಗೆಗೆ ಅಧ್ಯಯನ ಮುಂದುವರೆವುದು. ಹೀಗೆ ಚಿಂತನ ಮಂಥನ ನಡೆದಂತೆ, ಹೊಟ್ಟೆಯಲ್ಲಿಯ ಅಂಗಾಂಗಗಳ ಸಂಶೋಧನೆಯೂ ಮುಖ್ಯವಾಗುವದು. ದೇಹದ ಬಿಡಿಭಾಗಗಳನ್ನು ಕುರಿತು ಸೂಕ್ಷ್ಮವಾದ ಅನ್ವೇಷಣೆ ಜರುಗುತ್ತದೆ. ಶರೀರದಲ್ಲಿಯ ಕೈಕಾಲುಗಳ, ಹೊಟ್ಟೆಯಲ್ಲಿ ಪುಪ್ಪಸ, ಯಕೃತ್ತು ಮೊದಲಾದವುಗಳನ್ನು ಚನ್ನಾಗಿ ಪರಿಶೀಲಿಸುತ್ತಾರೆ. ನರನಾಡಿಗಳ-ಅಸ್ಥಿಗಳ ಬೆಳವಣಿಗೆ, ರಕ್ತ ಪ್ರಸರಣ ರಕ್ತಶುದ್ದೀಕರಣ ಇವೆಲ್ಲವುಗಳ ವ್ಯವಸ್ಥಿತ ಅಧ್ಯಯನ ಇಂದಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲಭಿಸುತ್ತದೆ.

ಆಧುನಿಕ ವೈದ್ಯ ವಿಜ್ಞಾನಿಗಳು ಮಾನವರ ಗುಣಾವಗುಣಗಳ ರೋಗಾದಿಗಳನ್ನು ಅರಿಯಲು ವಂಶವಾಹಿನಿ (ಜೀನ್ಸ)ಯ ಅಧ್ಯಯನಕ್ಕೆ ಮಹತ್ವ ಕೊಟ್ಟಿರುವರು. ಆದರೆ ಸೃಷ್ಟಿಕರ್ತನಾದ ಜಗನ್ನಿಯಾಮಕತ್ವದ ವ್ಯವಸ್ಥೆ ಕುರಿತು ಇಂದಿಗೂ ಉತ್ತರಿಸಿಲ್ಲವೆಂಬುದನ್ನು ಸಂಶೋಧಕರೂ ಒಪ್ಪುತ್ತಾರೆ. ೮೫೦ ವರುಷಗಳ ಹಿಂದೆಯೇ ಶಿವಶರಣರ ಅನುಭಾವ ಅನುಭೂತಿಗಳು ಬಹು ಎತ್ತರಕ್ಕೆ ತಲುಪಿವೆ. ಆತ್ಮನನ್ನು ಕುರಿತು ಚಿಂತಿಸಿದ್ದಾರೆ. ಅಲ್ಲದೆ ಮಾನವನ ಹುಟ್ಟು ಬೆಳವಣಿಗೆಯ ಬಗೆಗೂ ಆಲೋಚಿಸಿದ್ದಾರೆ. ಇಂದು ಸೂಕ್ಷ್ಮದರ್ಶಕ ಯಂತ್ರಗಳ ಸಹಾಯದಿಂದ ಗುರುತಿಸಬಹುದಾದ ಸಂಗತಿಗಳನ್ನು ಸಾಧನ-ಸಾಮಗ್ರಿಗಳಿಲ್ಲದ ಪೂರ್ವದಲ್ಲೂ ಹಿಂದಿನವರು ಸಾಧಿಸಿದ ಸಾಧನೆಯೂ ಅಲ್ಪವಲ್ಲ. ಗರ್ಭ ಬೆಳವಣಿಗೆ ಶರೀರದಲ್ಲಿ ಅವಯವಗಳ ಕ್ರಿಯೆಗಳೊಂದಿಗೆ ಆಂತರಿಕ ಗುಣಾವಗುಣಗಳ ವಿಚಾರವನ್ನು ನಿರೂಪಿಸಿದ್ದು ಮಹತ್ವದ ಅಂಶಗಳಲ್ಲವೇ ?

ಕರಣಹಸಿಗೆಯ ವ್ಯಾಖ್ಯಾನಗಳು ಸಾಕಷ್ಟು ಕಾಣಬರುವುದಿಲ್ಲ. ಒಂದೆರಡು ವೇದ್ಯವಾದರೂ ಅರ್ಥೈಸುವುದು ಸುಲಭವೆನಿಸವು. ಇನ್ನು ಬೇರೆ ಬೇರೆ ರೀತಿಯ ಮೂಲ ಪ್ರಕಟನೆಗಳು ಮಾತ್ರ ಕೆಲಮಟ್ಟಿಗೆ ಆಗಿವೆ. ಇತ್ತೀಚೆಗೆ ಡಾ. ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಸಂಪಾದಿಸಿದ ಚನ್ನಬಸವಣ್ಣನವರ ಕರಣ ಹಸಿಗೆಯು ಸುಂದರ ಆವೃತ್ತಿಯಲ್ಲಿ ಬೆಳಕು ಕಂಡಿದೆ. ಅನೇಕ ನ್ಯೂನ್ಯತೆಗಳನ್ನು ಸರಿಪಡಿಸಿ ಪ್ರಕಟಿಸಿದ್ದಾರೆ. ಆದರೂ ಮೂಲ  ಕೃತಿಗಿಂತಲೂ ಟೀಕಾಕಾರನ ವಿವರಣೆ ಸರಳವೆನಿಸುವುದಿಲ್ಲ. ಭಾಷೆ ಶಬ್ದಗಳು ಸುಲಭ ಗ್ರಾಹ್ಯವೆನಿಸುವುದಿಲ್ಲ, ಸಂವಾದ ರೂಪದಲ್ಲಿ ದೀರ್ಘವಾದ ಟೀಕೆ ಬಂದಿದ್ದರೂ ಇಂದಿನ ದಿನಮಾನಗಳಲ್ಲಿ ಕಾಲಾವಕಾಶಕ್ಕೆ ಅನುಗುಣವಾಗಿ ಅರ್ಥೈಸಿಕೊಳ್ಳಲು ಸುಲಭವಾಗಲೆಂದು ಈ ಕೃತಿಯ ವ್ಯಾಖ್ಯಾನವನ್ನು ಕೈಕೊಳ್ಳ ಬೇಕಾಯಿತು.

 “ಕರಣ ಹಸಿಗೆ’ ಇಲ್ಲಿ ಎರಡು ಪದಗಳಿವೆ. ಕರಣ ಮತ್ತು ಹಸಿಗೆ; ಕರಣವೆಂದರೆ ಸಾಧನ, ಇಲ್ಲಿ ಕರಣ ಪದಕ್ಕೆ ತತ್ತ್ವಂಗಳು ಎಂದು, ಹಸಿಗೆ ಯೆಂದರೆ ವಿಭಾಗ; ಶರೀರದಲ್ಲಿ ಬರುವ ತತ್ತ್ವಗಳನ್ನು ಬೇರೆ ಬೇರೆಯಾಗಿ ವಿಭಾಗಿಸಿ ತೋರುವುದೇ ಈ ಕರಣ ಹಸಿಗೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕೊಂದು ದೃಷ್ಟಾಂತವನ್ನು ಸಹ ನೀಡಿರುವರು.

 ಒಬ್ಬ ಒಕ್ಕಲಿಗನು ತನ್ನ ಹೊಲದಲ್ಲಿ ಹದವಾದ ಮಳೆಯಾದರೆ ಎತ್ತುಗಳ ಸಹಾಯದಿಂದ ಉಪಕರಣಗಳನ್ನು ಉಪಯೋಗಿಸಿ ಹೊಲವನ್ನು ಹಸನುಮಾಡಿ ಹಲವಾರು ರೀತಿಯ ಬೀಜಗಳನ್ನು ಬಿತ್ತುತ್ತಾನೆ. ಕಾಲಕಾಲಕ್ಕೆ ಕಳೆ ಕಸಗಳನ್ನು ತೆಗೆದು ಬೆಳೆಯನ್ನು ಬೆಳೆಸುವನು. ಬೆಳೆ ಮಾಗಿದ ಬಳಿಕ, ಅದನ್ನು ಕಟಾವು ಮಾಡಿ ಕೂಡಿ ಹಾಕುತ್ತಾನೆ. ಶುಭಮುಹೂರ್ತದಲ್ಲಿ ಕಣಮಾಡಿ ಒಕ್ಕೂವನು. ಒಕ್ಕಿ ತೂರಿ ರಾಶಿಯನ್ನು ಸಿದ್ಧಗೊಳಿಸುವನು. ಪೂಜಿಸಿ ಗೋಣಿಚೀಲಗಳಲ್ಲಿ ಸಂಗ್ರಹಿಸುವನು. ಚಕ್ಕಡಿಯಲ್ಲಿ ಮನೆಗೆ ಒಯ್ದು ವ್ಯವಸ್ಥೆಗೊಳಿಸುವನು. ಎಲ್ಲ ಧಾನ್ಯಗಳ ಲೆಕ್ಕಾಚಾರ ಮಾಡುವನು. ಜೋಳ ಇಷ್ಟಾ ಯಿತು. ಹೆಸರು, ಮಡಕೆ, ತೊಗರಿ, ಉದ್ದು, ಅಲಸಂದಿ ಇಷಿಷ್ಟಾದವು. ಭತ್ತ, ಗೋದಿ, ಕಡಲೆ ವಗೈರೆ ಕಾಳುಗಳು ಇಷ್ಟಿಷ್ಟಾದವು ಎಂದು ಎಲ್ಲವನ್ನು ಅಳೆದಳೆದು ಭಾಗ

ಮಾಡುವನು. ಇದುವೆ ಹಸಿಗೆಯೆನಿಸುವದು.

ಇದರಂತೆ ಬ್ರಹ್ಮಾಂಡವೆಂಬ ಜಗತ್ತಿನ ಕ್ಷೇತ್ರಕ್ಕೆ ಒಡೆಯನಾದ ಪರಶಿವನೆಂಬ ಮಹಾ ಒಕ್ಕಲಿಗನು- ಜಗತ್ತಿನ ನಿರ್ಮಾಣ ಮಾಡಿದನು. ಮೊಟ್ಟ ಮೊದಲು ತನ್ನ ಪಂಚಮುಖಗಳಿಂದ ಪಂಚಭೂತಗಳನ್ನು ನಿರ್ಮಿಸಿದನು. ಅವುಗಳ ತಾರತಮ್ಯದಿಂದ ಇಪ್ಪತ್ತೈದು ತತ್ತ್ವಗಳನ್ನು ಹುಟ್ಟಿಸಿ ಶರೀರ ರಚನೆಯೊಂದಿಗೆ ತನ್ನ ಗೋಪ್ಯಮುಖದಲ್ಲಿ ಆತ್ಮನನ್ನು ಸೃಜಿಸಿದನು. ಆ ಆತ್ಮನು ದೇಹವೆ ನಾನೆಂಬ ಭಾವದಿಂದ ತನ್ನ ನಿಜದರಿವನ್ನು ಮರೆಯುವನು. ಅಜ್ಞಾನಿಯಾಗಿ ಅನೇಕ ಜನ್ಮ-ಜನ್ಮಾಂತರಗಳನ್ನು ಹೊಂದುತ್ತಲಿರುವನು. ಪುಣ್ಯವಶದಿಂದ ದೇವತಾ ಜನ್ಮವನ್ನು, ಪಾಪದಿಂದ ಸ್ಥಾವರ ಜನ್ಮವನ್ನು ಪುಣ್ಯ-ಪಾಪಗಳ ಸಮ್ಮಿಶ್ರಣದಿಂದ ಮಾನವ ಜನ್ಮವನ್ನು ಪಡೆಯುವನೆಂದು ಅನುಭಾವಿಗಳು ನಿರೂಪಿಸುವುದುಂಟು. ಈ ಮಾನವ ಶರೀರದಲ್ಲಿಯೂ ಶಾರೀರಿಕ ಹಸಿಗೆಯನ್ನು ವಿವರಿಸುವದೇ ಈ ಕೃತಿಯ ಮೂಲ ಗುರಿಯಾಗಿದೆ.

 ಶಿವಶರಣರು ವೇದ-ಉಪನಿಷತ್ತುಗಳನ್ನು, ಆಗಮ-ತಂತ್ರಗಳನ್ನು, ಯೋಗ-ಪುರಾಣಗಳನ್ನು ಚೆನ್ನಾಗಿ ಅಧ್ಯಯನ ಮಾಡಿದವರು. ಅವರಲ್ಲಿ ಚನ್ನಬಸವಣ್ಣನವರು ಸಂಸ್ಕೃತ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಭ್ಯಾಸ ಮಾಡಿದವರು. ಈ ”ಕರಣ ಹಸಿಗೆ’ ಕೃತಿಯಲ್ಲಿ ವಿಜಯ ಭೈರವಾಗಮ’ದ ಉಲ್ಲೇಖ ಮಾಡಿದ್ದಾರೆ. ಈ ಆಗಮವು ಪಾರಮೇಶ್ವರಾಗಮದ ಶಾಖಾಗಮ ವಿಜಯ ಭೈರವಿ ಆಗಮ. ತಂತ್ರ ಸಂಗ್ರಹ ಹಾಗೂ ವಾತುಲ ಶುದ್ಧಾಗಮಬಗಳೂ ಈ ಕೃತಿಗೆ ಸಹಕಾರಿಯೆನ್ನಬಹುದು. ವೇದದ ಅಂತಿಮ ಭಾಗವಾದ ಉಪನಿಷತ್ ಪ್ರತಿಪಾದ್ಯ ವಿಷಯವೇ ವೇದಾಂತವೆನಿಸಿದೆ. ವೇದಾಂತದಲ್ಲಿಯೂ ಪಂಚೀಕರಣದ ವಿಚಾರ ಮಾಡಲಾಗಿದೆ. ದೇಹೋತ್ಪತ್ತಿಗೆ ಪಂಚೀ ಕರಣವೇ ಮುಖ್ಯ.  ಸಾ೦ಖ್ಯರು ಮೊಟ್ಟ ಮೊದಲು ತತ್ತ್ವಗಳನ್ನು ಪರಿಗಣಿಸಿದವರು. ೨೫ ತತ್ತ್ವಗಳನ್ನು ಪ್ರತಿಪಾದಿಸಿದವರು ಸಾಂಖ್ಯರು. ಅಹಂಕಾರ, ದಶನಾಡಿ, ದಶವಾಯು, ಪಂಚೀಕರಣ,ತ್ರಿಗುಣಗಳು,ತಾಪತ್ರಯ ಮುಂತಾದವುಗಳನ್ನು ವಿವರಿಸುವಲ್ಲಿ ಅತ್ಯಂತ ಪ್ರಾಚೀನ ಪರಂಪರೆ ಸಾಂಖ್ಯರಲ್ಲಿದೆ. ಆದರೆ ಸಾಂಖ್ಯರ ಪದ್ದತಿಗಿಂತ ʼಕರಣಹಸಿಗೆʼಯು ಭಿನ್ನವಾಗಿದೆಯೆಂಬುದನ್ನು ನೋ

ಪೂಜ್ಯ ಜಗದ್ಗುರು ಡಾ.ಶ್ರೀ ಸಿದ್ದರಾಮ ಸ್ವಾಮಿಗಳು ತೋಂಟದಾರ್ಯಮಠ  ಗದಗ

ಸಂಸಾರದ ಕಷ್ಟಕೋಟಲೆಗಳಲ್ಲಿ ಸಿಕ್ಕು ಘಾಸಿಯಾದ ಮನುಷ್ಯನು ಶಿವಪಥವನ್ನು ಅರಿತು ನಿತ್ಯಸುಖಿಯಾಗಬೇಕೆಂದು ಬಯಸುತ್ತಾನೆ. ಶಿವಪಥವೆಂದರೆ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ. ತಾನು ಶಿವನ ಅಂಗವಾದ ಆತ್ಮ ಎಂಬ ಜ್ಞಾನ

ಪಡೆದು ಪುನಃ ಶಿವನೊಂದಿಗೆ ಸಾಮರಸ್ಯ ಪಡೆಯುವುದು. ಇದುವೆ ಮೋಕ್ಷಮಾರ್ಗ. ಶಿವಪಥದಲ್ಲಿ ಮುನ್ನಡೆಯಬೇಕೆಂಬ ವ್ಯಕ್ತಿಗೆ ಗುರುವಿನ ಮಾರ್ಗದರ್ಶನ(ಗುರುಪಥ)ದ ಆವಶ್ಯಕತೆ ಇದೆ.  ವೇದ, ಆಗಮ, ಶಾಸ್ತ್ರ, ಪುರಾಣಗಳು ಕಾಣಲರಿಯದ ಶಿವಪಥವನ್ನು

ಕಂಡವನು ಗುರುಮಾತ್ರ. ಶಿವಪಥವನ್ನು ತೋರಲು ಆತನೇ ಸಮರ್ಥ. ಗುರು ತನ್ನಲ್ಲಿರುವ ಅಪಾರ ಕರುಣೆಯಿಂದ ಮೋಕ್ಷಾಪೇಕ್ಷಿಯಾದ ವ್ಯಕ್ತಿಯ ಅಜ್ಞಾನವನ್ನು ಕಳೆದು ಸುಜ್ಞಾನಿಯಾಗಿಸುತ್ತಾನೆ. ಭವಿತನವನ್ನು ಕಳೆದು ಭಕ್ತನಾಗಿಸುತ್ತಾನೆ. ಹೀಗೆ

ಗುರುಕರುಣೆ ಪಡೆದ ಭಕ್ತನೆ ಶಿವಪಥಕ್ಕೆ ಅರ್ಹನಾಗುತ್ತಾನೆ.

 ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ. ಗುರುವಿಗಿಂತ ಅಧಿಕವಾದುದು ಯಾವುದೂ ಇಲ್ಲ. ಗುರೋರಧಿಕಂ ನ ಗುರೋರಧಿಕಂ’ ಎಂಬುದು ಶೃತಿವಾಕ್ಯ. ‘ಗುರುದೈವಾತ್ಪರಂ ನಾಸ್ತಿ’ ಗುರುವಿಗಿಂತಲೂ ಶ್ರೇಷ್ಠನಾದ ದೇವರಿಲ್ಲ. ಅವನು ಬ್ರಹ್ಮನ್ನರಿತ ಪರಬ್ರಹ್ಮ. ನಿಜವನರಿದ ನಿಶ್ಚಿಂತ, ಅವನೇ ಶಿವಪಥದರ್ಶಕ. ಶಿಲೆಯೊಳಗಣ ಬೆಂಕಿಯಂತೆ, ಬೀಜದೊಳಗಣ ವೃಕ್ಷದಂತೆ ದೃಷ್ಟಿಗೆ ಅಗೋಚರನಾದ ಶಿವನನ್ನು ತೋರುವವನೇ ಶ್ರೀಗುರು. ಇಂಥ ಗುರುವಿನ  ಉಪದೇಶವನ್ನು ಹೊಂದಿದಾಗಲೇ ನರರಿಗೆ ಮುಕ್ತಿ. ಗುರುವಚನದಿಂದ ಅಂಗ ಮನ ಪ್ರಾಣಗಳು ಪರಿಶುದ್ಧವಾಗಿ ಸದ್ಭಕ್ತಿ ನೆಲೆಗೊಳ್ಳುವುದು. ಭವಪಾಶ ಹರಿದು ನಿಜಮುಕ್ತಿಯ ದರ್ಶನವಾಗುವುದು.

ಗುರೂಪದೇಶ, ಗುರುವಿನ ಮಾರ್ಗದರ್ಶನವಿಲ್ಲದೆ ಕೇವಲ ತಪಸ್ಸಿನಿಂದ ಮೋಕ್ಷವನ್ನು ಪಡೆಯಬೇಕೆಂಬ ಛಲದಿಂದ ಯುವಕ್ರೀತನೆಂಬ ಋಷಿಕುಮಾರ ಕಾಡಿಗೆ ತೆರಳಿದ. ಕಾಡಿನಲ್ಲಿ ಆಗಲೇ ತಪೋನಿರತರಾಗಿದ್ದ ಹಿರಿಯ ಋಷಿಮುನಿಗಳೆಲ್ಲರೂ

ಗುರೂಪದೇಶ ಹೊಂದಿ ಸಾಧನೆ ಮುಂದುವರಿಸಲು ಪರಿಪರಿಯಾಗಿ ಹೇಳಿದರೂ ಆತ ತನ್ನ ನಿರ್ಧಾರಕ್ಕೆ ಅಚಲನಾಗಿದ್ದ. ಒಂದು ದಿನ ಯುವಕ್ರೀತ ಗಂಗಾನದಿಯ ತೀರದಲ್ಲಿ ನಡೆದು ಹೋಗುವಾಗ ನದಿಯಲ್ಲಿ ಮಳಲನ್ನು (ಉಸುಕು) ಎಸೆಯುತ್ತ ಕುಳಿತಿದ್ದ ಮುದುಕನೊಬ್ಬನನ್ನು ಕಂಡ. ಆಶ್ಚರ್ಯಚಕಿತನಾಗಿ ‘ಎಷ್ಟು ದಿನಗಳಿಂದ ಹೀಗೆ ನದಿಯಲ್ಲಿ ಮಳಲನ್ನು ಎಸೆಯುತ್ತ ಕುಳಿತಿರುವೆ? ಮಳಲನ್ನು ನದಿಗೆ ಎಸೆಯುತ್ತಿರುವ ಕಾರಣವೇನು?’ ಎಂದು ಕೇಳಿದ. ಆಗ ಮುದುಕನು ‘ಕಳೆದ ಎಂಬತ್ತು ವರ್ಷಗಳಿಂದ ತುಂಬಿ ಹರಿಯುತ್ತಿರುವ ಈ ನದಿಗೆ ಮಳಲಿನಿಂದ ಸೇತುವೆ ನಿರ್ಮಿಸುತ್ತಿರುವೆ’ ಎಂದು ಉತ್ತರಿಸಿದ. ಅಯ್ಯಾ! ಎಂದಾದರೂ ಈ ಮಳಲಿನಿಂದ ಸೇತುವೆ ನಿರ್ಮಾಣ ಸಾಧ್ಯವೇ? ವ್ಯರ್ಥವಾಗಿ ಸಮಯವನ್ನೇಕೆ ಕಳೆಯುತ್ತಿರುವೆ! ಎಂದು ಯುವಕ್ರೀತ ಮರಳಿ ಮುದುಕನನ್ನು ಪ್ರಶ್ನಿಸಿದ. ಪ್ರಶಾಂತ ಮುದ್ರೆಯಲ್ಲಿದ್ದ ಆ ಮುದುಕ ‘ಅಪ್ಪಾ ಯುವಕ್ರೀತ! ಗುರೂಪದೇಶ, ಗುರುಕರುಣೆ, ಗುರುವಿನ

ಮಾರ್ಗದರ್ಶನವಿಲ್ಲದೆ ನೀನು ಮೋಕ್ಷವನ್ನು ಸಂಪಾದಿಸುವುದಾದರೆ ಈ ಹಿಡಿ ಮಳಲಿನಿಂದ ಜನ ಸಂಚಾರಕ್ಕೆ ಸೇತುವೆ ನಿರ್ಮಾಣವೂ ಸಾಧ್ಯ’ ಎಂದು ಉತ್ತರಿಸಿದಾಗ ತನ್ನ ತಪ್ಪಿನ ಅರಿವಾಗಿ ಶಿವಜ್ಞಾನ ಸಿದ್ಧಿಯುಳ್ಳ ಗುರುವಿನಿಂದ ಶಿವಪಥವನ್ನರಿಯುತ್ತಾನೆ.

 ಅಧ್ಯಾತ್ಮ ಸಿದ್ಧಿಯನ್ನು ಪಡೆದ, ನಿಜದ ನಿಲವನ್ನರಿತ, ಅಪಾರ ಕರುಣೆಯುಳ್ಳ ಗುರುವಿನ ಮಾರ್ಗದರ್ಶನದಲ್ಲಿ ಮಾತ್ರ ಶಿವಪಥದ ಅರಿವು ಸಾಧ್ಯವಾಗುವುದು. ಅಂತೆಯೇ ಬಸವಣ್ಣನವರು ‘ಶಿವಪಥ ಅರಿವೊಡೆ ಗುರುಪಥ ಮೊದಲು’ ಎಂದು ಹೇಳಿರುವುದು. ಆದ್ದರಿಂದ ಮೋಕ್ಷಾಪೇಕ್ಷಿಯಾದ ಮನುಷ್ಯನು ಶ್ರದ್ಧೆಯಿಂದ, ಕಿಂಕರಭಾವದಿಂದ ಗುರುಸೇವೆ ಮಾಡಿ ಗುರುಕರುಣೆ, ಗುರುಪಥ ಹೊಂದುವುದೇ ಸೂಕ್ತ.

ಕರಣ ಹಸಿಗೆ ಅರ್ಥಾತ್ ದೇಹಾತ್ಮ ವಿಜ್ಞಾನ

ಲೇಖಕರು ಡಾ.ಸ. ಜ. ನಾಗಲೋಟಿಮಠ

MBBS.DCP.MD.FIC Path.

President Karnataka Rajya Vijnan Parishat.

Chairman Indian College of Pathologists

ಇದರಲ್ಲಿ ಚೆನ್ನಬಸವಣ್ಣನವರು ಹಲವಾರು ಸಂಗತಿಗಳನ್ನು ವಿವರಿಸಿದ್ದಾರೆ. ಜಗತ್ತಿನಲ್ಲಿ ಮೊಟ್ಟ ಮೊದಲು ಹುಟ್ಟಿದ್ದು ಪ್ರಣವ; ಅದು ಓಂಕಾರ. ಓಂಕಾರದಿಂದ ಜನ್ಮತಾಳಿದ್ದು ಎಂದರೆ ಪಂಚಮಹಾಭೂತಗಳು ಭಾರತೀಯರಾದ ನಾವು ಇದನ್ನು ನಂಬುತ್ತೇವೆ. ಪಂಚಮಹಾಭೂತಗಳೆಂದರೆ ಪೃಥ್ವಿ, ಅಪ್, ತೇಜ, ವಾಯು ಹಾಗೂ ಆಕಾಶ, ಈ ಪಂಚಭೂತಗಳನ್ನು ಬೇರೆ ದೇಶದವರು, ಸಂಸ್ಕೃತಿಯವರು ಮಾನ್ಯ ಮಾಡಿದಂತಿಲ್ಲ. ಈ ಸಂಗತಿಯನ್ನು ಭಾರತೀಯ ವಿಜ್ಞಾನಿಗಳು ಒರೆಗೆ ಹಚ್ಚಿ ಸ್ಪಷ್ಟ ಪಡಿಸಬೇಕು. ಜೀವ ಜಗತ್ತು ಹುಟ್ಟಿದುದು ಪಂಚಮಹಾಭೂತಗಳಿಂದ ಎಂದು ವರ್ಣಿಸುತ್ತೇವೆ. ಇದನ್ನೂ ಸಹ ಸಂಶೋಧಿಸಿ ಜಗತ್ತಿನ ವಿಜ್ಞಾನಿಗಳಿಗೆ ವಿವರಿಸಬೇಕು. ಓಂಕಾರವಾಗಲಿ, ಪಂಚ ಮಹಾಭೂತಗಳಾಗಿ ಸುಳ್ಳು ಎಂದು ಹೇಳಲು ಬರುವದಿಲ್ಲ. ಯಾಕಂದರೆ ಮುಂದೆ ವರ್ಣಿಸಲ್ಪಡುವ ಪಿಂಡಸ್ಥಲದಲ್ಲಿಯ ವಿವರಣೆ ಎಷ್ಟು ಖಚಿತವಾಗಿದೆ ಎಂದರೆ ಅಚ್ಚರಿ ಎನಿಸುತ್ತದೆ. ಬರಿಗಣ್ಣಿಗೆ ಕಾಣಲು ಸಾಧ್ಯವಿರದ ವಸ್ತುಗಳನ್ನು ಕರಾರುವಕ್ಕಾಗಿ ವರ್ಣಿಸಿದ್ದಾರೆ. ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಬೆಳವಣಿಗೆಯನ್ನು ದಿನದಿನಕ್ಕೆ ವಾರದಿಂದ ವಾರಕ್ಕೆ ವಿವರಿಸಿದ್ದಾರೆ. ಪ್ರಥಮ ದಿನದಿಂದ ಪ್ರಾರಂಭಿಸಿ ಪ್ರಸವವಾಗುವವರೆಗೆ ಸರಿಯಾಗಿ ವರ್ಣನೆ ಬರುತ್ತದೆ. ಇಂದಿನ ವೈದ್ಯಶಾಸ್ತ್ರದ ವಿವರಗಳು ಹಾಗೂ ಕರಣ ಹಸಿಗೆಯಲ್ಲಿ ಉಲ್ಲೇಖಿತ ಸಂಗತಿಗಳು ಒಂದೇ ಆಗಿವೆ. (ಈ ವಿವರಗಳು ನಮಗೆ ದೊರೆಯುವದು ವಿರುಪಾಕ್ಷ ಪಂಡಿತರು ಬರೆದ ಚೆನ್ನಬಸವ ಪುರಾಣದಲ್ಲಿ )ಈ ಸಂಗತಿಗಳು ನಮ್ಮ ಜನರಿಗೆ ತಿಳಿಯಲೆಂದು  ನಾನು ಕೆಲವು ಮೆಡಿಕಲ್ ಕಾಲೇಜುಗಳ ಪ್ರಸವ ವಿಭಾಗಗಳಲ್ಲಿ ಇವನ್ನು ಬರೆಸಿ ತೂಗುಬಿಟ್ಟಿದ್ದೆ.  ಗ್ರಂಥದಲ್ಲಿ ಹೇಳಲ್ಪಡುವ ವಿಷ್ಣುವಾಯು ಹಾಗೂ ಸೂತಿಕಾವಾಯುಗಳು ಸತ್ಯವೇ ? ಎಂಬುದು ಚರ್ಚಿಸಲ್ಪಡಬೇಕು. ಇದಾಗಿಲ್ಲ, ಇದೆಲ್ಲ ಜರುಗಬೇಕಾಗಿದೆ. ನಮ್ಮ ವೈದ್ಯವಿಜ್ಞಾನಿಗಳು ಸಂಶೋಧಿಸಬೇಕು. ಇನ್ನೂ ಮುಂದೆ ಹೋಗಿ ಕರಣ ಹಸಿಗೆಯಲ್ಲಿ ಸಂಭೋಗದ ವೇಳೆ ದಿನಗಳ ಆಧಾರದ ಮೇಲೆ ಹುಟ್ಟುವ ಕೂಸಿನಲ್ಲಿ ಗುಣಗಳು ಮೂಡುತ್ತವೆ ಎನ್ನುತ್ತಾ, ಹುಟ್ಟುವ ಮಗುವಿನ ಲಿಂಗ ನಿರ್ಣಯಿಸಲ್ಪಡುತ್ತದೆ ಎನ್ನುತ್ತಾರೆ. ಇಂಥ ಸಂಗತಿಗಳನ್ನು ನಾವು ವಿಚಾರಿಸಬೇಕು. ಗರ್ಭದಲ್ಲಿಯ ಕೂಸಿಗೆ ಕಿವಿ ಕೇಳುವದು ಎಂದಿನಿಂದ ಎಂಬ ಪ್ರಶ್ನೆಗೆ ಇಲ್ಲಿ ಸೂಚನೆ ಇದೆ. ನಾವು ಅದನ್ನು ನಿರ್ಲಕ್ಷಿಸಿ ಬಿಟ್ಟೆವು. ಈ ಸಂಗತಿಯನ್ನು ಖಚಿತಗೊಳಿಸಲು ಬ್ರಿಟೀಷ ವೈದ್ಯ ವಿಜ್ಞಾನಿಗಳು ಮಾನವ ಪ್ರಯೋಗಗಳನ್ನು ನಡೆಸಿದರು. ಆರು ತಿಂಗಳ ಗರ್ಭವಾದಾಗ ಗರ್ಭದಲ್ಲಿರುವ ಶಿಶುವಿಗೆ ಕಿವಿ ಕೇಳಿಸುತ್ತದೆ ಎಂದು ಜಗತ್ತಿಗೆ ತೋರಿಸಿದರು.    ಇಂಥ ಘಟನೆಗಳು ನಮ್ಮನ್ನು ಬಡಿದೆಬ್ಬಿಸಬೇಕಾಗಿದೆ. ಮೂಲ ಕರಣ ಹಸಿಗೆ ಓದಲು ಸುಲಭವೆನಿಸುತ್ತಿರಲಿಲ್ಲ. ಮುಂಡರಗಿಯ ಸನ್ನಿಧಿಯವರು ಈ  ಗ್ರಂಥವನ್ನು ಬರೆದು ವಿಜ್ಞಾನಿಗಳಿಗೆ ಸಂಶೋಧನೆಯ ಮಹಾದ್ವಾರವನ್ನೇ ತೆರೆದಿದ್ದಾರೆ. ಮುಂದಿನ ಕಾರ್ಯವನ್ನು ವೈದ್ಯರೂ ವಿಜ್ಞಾನಿಗಳೂ ಎತ್ತಿಕೊಳ್ಳಬೇಕು.

ಕರಣಹಸಿಗೆ ಕೇವಲ ಧರ್ಮ ಗ್ರಂಥವಲ್ಲ ಅದು ವೀರಶೈವರಿಗೆ ಅವರ ತತ್ವಗಳನ್ನು ತಿಳಿಸುವ ಗ್ರಂಥವಲ್ಲ. ಇದು ವೈಜ್ಞಾನಿಕ ಗ್ರಂಥ. ಇಡೀ ಜಗತ್ತಿನ ಜನರು ಪಠಣ ಮಾಡುವ ಗ್ರಂಥ ಸಂಶೋಧನೆಗಳ ಬೀಜಗಳಿಂದ ಕೂಡಿ ಇಟ್ಟಿರುವ ಕಣಜವಾಗಿದೆ.

ಈ ಪುಸ್ತಕವನ್ನು ವಿರಕ್ತಸ್ವಾಮಿಗಳ ಬೆನ್ನಿಗೆ ಕಟ್ಟುವ ಪದ್ಧತಿ ಇದೆ. ಅದನ್ನು ಮುಂದುವರೆಸುವದಲ್ಲದೆ ವೈದ್ಯವಿಜ್ಞಾನಿಗಳ ಬೆನ್ನಿಗೆ ಕಟ್ಟಬೇಕೆಂಬುದು ನನ್ನ ಅನಿಸಿಕೆ.

ಲೇಖಕರು :ಷಣ್ಮುಖಯ್ಯ ಅಕ್ಕೂರಮಠ

(ಷಣ್ಮುಗಯ್ಯ ಅಕ್ಕೂರಮಠ ಅವರು ಗದಗ ಜಿಲ್ಲೆ, ಶಿರಹಟ್ಟಿ ತಾಲ್ಲೂಕು, ಬೂದಿಹಾಳ ಗ್ರಾಮದಲ್ಲಿ 1939 ಆಗಸ್ಟ್‌ 23ರಂದು ಜನಿಸಿದರು. ತಂದೆ ವೀರಪ್ಪಯ್ಯ ಶಾಸ್ತ್ರಿ ಅಕ್ಕೂರಮಠ, ತಾಯಿ ಬಸವಲಿಂಗಾಂಬೆ. ಸಂಸ್ಕೃತದಲ್ಲಿ ಅಪಾರ ಆಸಕ್ತಿ ತಳೆದಿದ್ದರು. ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ, ತರ್ಕ ಮೊದಲಾದ ವಿಷಯಗಳ ಅಧ್ಯಯನ ಮಾಡಿದರು. ಸ್ನಾತಕೋತ್ತರ ಪದವೀಧರರು. 1970ರಲ್ಲಿ ಪ್ರಯಾಗ ವಿಶ್ವವಿದ್ಯಾನಿಲಯದ (ಉತ್ತರ ಪ್ರದೇಶ)ದಿಂದ ಸಾಹಿತ್ಯರತ್ನವನ್ನೂ ಪಡೆದರು. 1983ರಲ್ಲಿ ಮೈಸೂರು ರೀಜನಲ್ ಕಾಲೇಜ್ ಆಫ್ ಎಜುಕೇಷನ್ ಸಂಸ್ಥೆಯಿಂದ ಬಿ.ಎಡ್., ಪದವೀಧರರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.

ಆರೂಢ ಸಂಪ್ರದಾಯದ ಸದ್ಗುರು ಬಾಬಾ ಪ್ರಶಸ್ತಿ, ಶಿವಕಮಲ ಸಾಹಿತ್ಯ ಪ್ರಶಸ್ತಿ, ಶ್ರೀಮತಿ ಶಾಂತ ಶ್ರೀ ಬಿ.ವಿ. ಗೌಡ ಫೌಂಡೇಶನ್‍ನಿಂದ ಪಂಚಾಚಾರ್ಯ ಪ್ರಶಸ್ತಿ, ಶಿವಲಿಂಗ ಪ್ರಶಸ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಶಕುಂತಳ ಜಯದೇವ ಶರಣ ಪ್ರಶಸ್ತಿ, ಕಾಶಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜ್ಞಾನ ಸಿಂಹಾಸನದಿಂದ `ಸಾಹಿತ್ಯ ವಿಶಾರದ’ ಹಾಗೂ `ಆರ್ಯಭಟ’ ಪ್ರಶಸ್ತಿಗಳು ಸಂದಿವೆ.)

ಭಾರತೀಯ ತತ್ತ್ವಶಾಸ್ತ್ರಚಿಂತನೆಯ ಹಾದಿಯಲ್ಲಿ ಜೀವಾತ್ಮ-ಪರಮಾತ್ಮರ ಸ್ವರೂಪ ಸಂಬಂಧಗಳ ಬಗೆಗೆ ಪ್ರಾಚೀನ ಕಾಲದಿಂದಲೂ ಜಿಜ್ಞಾಸೆ ನಡೆದು ಬಂದಿದೆ. ದಾರ್ಶನಿಕರ ಅಭಿಪ್ರಾಯಗಳೂ ಬೇರೆ ಬೇರೆಯಾಗಿವೆ.

ಅದ್ವೈತಿಗಳು-ಜೀವಾತ್ಮ-ಪರಮಾತ್ಮ ಬೇರೆ ಅಲ್ಲ; ‘ಸರ್ವಂ ಖಲ್ವಿದಂ ಬ್ರಹ್ಮ’ ಎಂದು ಬ್ರಹ್ಮತತ್ತ್ವವೊಂದನ್ನೇ ಒಪ್ಪುತ್ತಾರೆ. ದ್ವೈತಿಗಳು-ಜೀವಾತ್ಮ ಪರಮಾತ್ಮರಲ್ಲಿ, ಜೀವ-ಜೀವರಲ್ಲಿ ಭೇದವಿದೆ ಎಂದು ಮನ್ನಿಸುತ್ತಾರೆ. ವಿಶಿಷ್ಟಾದ್ವೈತಿಗಳು ಚಿತ್- ಆಚಿತ್-ಈಶ್ವರ ಎಂಬುದಾಗಿ ಮೂರು ತತ್ತ್ವಗಳಿವೆ ಎಂದು ಹೇಳುತ್ತಾ ಇವು, ಪ್ರತ್ಯೇಕವಾಗಿಲ್ಲ; ದಾಳಿಂಬ ಹಣ್ಣಿನ ಕಾಳಿನಂತೆ ಈಶ್ವರನಲ್ಲಿ ಸೇರಿವೆ. ಪರಮಾತ್ಮ ಒಂದೇ ಆಗಿದೆ, ಎಂದು ಸಮನ್ವಯಗೊಳಿಸುತ್ತಾರೆ. ಬೌದ್ಧ ದಾರ್ಶನಿಕರಲ್ಲಿ ಜೀವಾತ್ಮ-ಪರಮಾತ್ಮ ಶಬ್ದಗಳ ಪ್ರಯೋಗವಿಲ್ಲ. ಬುದ್ಧನದು ಅನಾತ್ಮವಾದ. ದೇವರ ಕಲ್ಪನೆ ಇಲ್ಲ. ಜೈನ ದಾರ್ಶನಿಕರು-ಮೂರು ಪ್ರಕಾರದ ಆತ್ಮಗಳನ್ನು ಒಪ್ಪುತ್ತಾರೆ. ಆದರೆ ಪ್ರತ್ಯೇಕ ಪರಮಾತ್ಮನ ಕಲ್ಪನೆ ಇಲ್ಲ. ಲೋಕಾಯುತ (ಚಾರ್ವಾಕ) ದರ್ಶನದಲ್ಲಿ ಆತ್ಮ-ಪರಮಾತ್ಮರ ವಿಚಾರವೇ ಇಲ್ಲ, ಮೀಮಾಂಸಕರ ಪ್ರಕಾರ ಆತ್ಮಗಳು ಆನೇಕ. ಆದರೆ, ಅವರಿಗೆ ದೇವರಲ್ಲಿ ನಂಬಿಕೆ ಇಲ್ಲ.

ವೀರಶೈವ (ಶಕ್ತಿ ವಿಶಿಷ್ಟಾದ್ವೈತ) ದಾರ್ಶನಿಕರು ಪರಶಿವನಿಗೆ ‘ಶಿವ’ ‘ಲಿಂಗ’ ‘ಸ್ಥಲ’ವೆಂಬ ಪದಗಳಿಂದ ಕರೆದಿದ್ದಾರೆ. ಜೀವಾತ್ಮನಿಗೆ ‘ಅಂಗ’ ವೆಂಬ ವಿಶಿಷ್ಟ ಪದ ಪ್ರಯೋಗ ಮಾಡಿದ್ದಾರೆ. ಹೀಗೆ ದಾರ್ಶನಿಕರಲ್ಲಿ ಜೀವಾತ್ಮ-ಪರಮಾತ್ಮರ ಬಗೆಗೆ ವಿಭಿನ್ನ ವಿಚಾರಗಳಿದ್ದರೂ, ಎಲ್ಲ ಧರ್ಮಗಳ ಧೈಯ ಆತ್ಮ-ಪರಮಾತ್ಮರ ಏಕತೆ. ಜೀವ-ದೇವನಾಗುವ, ಮಹೋನ್ನತ ನಿಲುವನ್ನೇ ಸಾರುತ್ತವೆ. ವೀರಶೈವ ದಾರ್ಶನಿಕರು ಪರವಸ್ತುವಿನ (ಲಿಂಗ) ಒಂದು ಅಂಶವಾಗಿರುವ ಜೀವಾತ್ಮ (ಅಂಗ) ಶಿವಯೋಗ ಸಾಧನೆಯ ಮೂಲಕ ಷಟ್‌ಸ್ಥಲದ ಮಾರ್ಗದಲ್ಲಿ ಕ್ರಮಿಸಿ, ಮತ್ತೆ ಅಂಗ-ಲಿಂಗದಲ್ಲಿ ಒಂದಾಗುವುದು. ಇದು, ವೀರಶೈವ ಪರಿಭಾಷೆಯಲ್ಲಿ ಲಿಂಗಾಂಗ ಸಾಮರಸ್ಯ’, ‘ಬಯಲು’, ‘ಶೂನ್ಯ’ ಎನ್ನುವ ಪದಗಳಿಂದಲೂ ಕರೆಯುತ್ತಾರೆ. ಲಿಂಗಾಂಗ ಸಾಮರಸ್ಯವೇ ವೀರಶೈವ ಸಿದ್ಧಾಂತದ ಪರಮ ಧೈಯ’.

ಜಾಗತಿಕ ಧರ್ಮಗಳು ಜೀವ-ದೇವನಾಗುವ ಪರಿಯನ್ನು ವಿವರಿಸುತ್ತವೆ. ವೀರಶೈವದ ಉದ್ದೇಶವೂ ಇದೇ ಆಗಿದೆ. ವೀರಶೈವ ಧರ್ಮ-ಪ್ರಾಚೀನ ಶೈವ ಧರ್ಮ ಮಹಾವೃಕ್ಷದ ಪ್ರಧಾನ ಶಾಖೆಯಾಗಿದೆ. ಆಚಾರ ಭೇದ ಹಾಗೂ ಅನುಭವ ಭೇದಗಳಿಂದಾಗಿ ಅನಾದಿಶೈವ, ಆದಿಶೈವ, ಅನುಶೈವ, ಮಹಾಶೈವ, ಯೋಗಶೈವ, ಜ್ಞಾನಶೈವ, ವೀರಶೈವ ಎಂಬ ಏಳು ಪ್ರಭೇದಗಳನ್ನು ಶಿವಾಗಮಗಳು ವಿವರಿಸುತ್ತವೆ.

 ಭಾರತೀಯ ಅಧ್ಯಾತ್ಮ ಚಿಂತನೆಯ ಪರಂಪರೆಯಲ್ಲಿ ಲಿಂಗ-ಅಂಗಗಳ ಪರಿಕಲ್ಪನೆ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ. ಉಪನಿಷತ್ತುಗಳಲ್ಲಿ ಜೀವಾತ್ಮ-ಪರಮಾತ್ಮ ಬ್ರಹ್ಮ ಎನ್ನುವ ಪದಗಳ ಪ್ರಯೋಗವಿದೆ. ಭಾರತೀಯ ತತ್ತ್ವಶಾಸ್ತ್ರದ ಸೌಧಕ್ಕೆ ಜೀವಾತ್ಮ-ಪರಮಾತ್ಮ ಎಂಬ ಎರಡು ಆಧಾರ ಸ್ಥಂಭಗಳಾದಂತೆ, ವೀರಶೈವ ಸಿದ್ಧಾಂತಕ್ಕೆ ಅಂಗ-ಲಿಂಗ ತತ್ತ್ವಗಳು ಅಡಿಗಲ್ಲು ಗಳಾಗುತ್ತವೆ.

ಲಿಂಗದ ಪರಿಕಲ್ಪನೆ :

 “ಲಿಂಗ’ ಪದ ವೀರಶೈವ ಧರ್ಮದಲ್ಲಿ ವಿಸ್ತಾರವಾದ ಅರ್ಥವನ್ನೊಳಗೊಂಡಿರುತ್ತದೆ. ‘ಲಿಂಗ’ ವೀರಶೈವ ಧರ್ಮದ ಕೇಂದ್ರ ಬಿಂದು ಆರಾಧ್ಯ ದೈವ, ಲಿಂಗಕ್ಕೆ, ಪರತತ್ತ್ವ, ಪರಶಿವ, ಪರಶಿವನ ಒಂದು ಸಂಕೇತ. ಇತ್ಯಾದಿ- ಅರ್ಥಗಳಿವೆ. (ವೀ.ಪಾ.ಪ.ಕೋ.ಶ.ಪು.೪೪೮) ಲೀನಮರ್ಥಂಗಮಯತಿ ಇತಿಲಿಂಗಂ’ʼ ಎನ್ನುವ ವ್ಯುತ್ಪತ್ತಗನುಗುಣವಾಗಿ, ಈ ಪ್ರಪಂಚ ಯಾವುದರಿಂದ ಸೃಷ್ಟಿಯಾಗಿ, ರಕ್ಷಿತವಾಗಿ ಪುನಃ ಯಾವುದರಲ್ಲಿ ಲಯವಾಗುವುದೋ ಅಂತಹ ಸರ್ವಾಧಾರವಾದ ವಸ್ತುವೇ ಲಿಂಗ.  ‘ಯತೋವಾ ಇಮಾನಿ ಭೂತಾನಿ

ಜಾಯಂತೇ’ ಎನ್ನುವ ತೈತ್ತರೀಯ ಉಪನಿಷತ್ತು ಇದೇ ಅರ್ಥವನ್ನು ಸೃಷ್ಟಿಕರಿಸುತ್ತದೆ. ‘ಲಿಂಗಂ ತದ್ಬ್ರಹ್ಮ ಶಾಶ್ವತಂ’  ‘ಲಿಂಗಂ ಬ್ರಹ್ಮ ಸನಾತನಂ’ ಎನ್ನುವ ವಾಕ್ಯಗಳು, ‘ಲಿಂಗ’ ವನ್ನು ಶಿವನೆಂದೂ, ಬ್ರಹ್ಮನೆಂದು ಕರೆಯುತ್ತವೆ. ‘ಶೇತೇ ಅಸ್ಮಿನ್ ಸರ್ವಮಿತಿ ಶಿವಃ’ ಎನ್ನುವ ನಿರುಕ್ತಿಯು, ಚರಾಚರ ಜಗತ್ತೆಲ್ಲ-ಇವನಲ್ಲಿ  ಅಡಗಿರುವುದರಿಂದ ಶಿವನೆಂದು ಹೆಸರಾಗಿದೆ.

ಲೀಯತೆ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |

ತಸ್ಮಾಲ್ಲಿಂಗಂ ಪರಂ ಬ್ರಹ್ಮ ಕಾರಣಂ ನಿತ್ಯಮವ್ಯಯಂ ||

ಎಂದು ಸಿದ್ಧಾಂತ ಶಿಖಾಮಣಿ ಮೇಲಿನ ವಿಷಯವನ್ನೇ ಸಮರ್ಥಿಸುತ್ತದೆ.

ಶಿವ ಏವ ಸ್ವಯಂ ಲಿಂಗಂ ಇತಿ ಲಿಂಗಸ್ಯ ವೈಭವಮ್ (ಅನುಭವ ಸೂತ್ರ ೩-೭)

ಶಿವನೇ ಸ್ವಯಂ ಲಿಂಗವೆಂದು ಅನುಭವಸೂತ್ರ ತಿಳಿಸುತ್ತದೆ.

ಆಕಾಶಂ ಲಿಂಗ ಮಿತ್ಯಾಹುಃ ಪೃಥ್ವೀ ತಸ್ಯ ಪೀಠಿಕಾ |

ಆಲಯಂ ಸರ್ವಭೂತಾನಾಂ, ಲಯನಾ ಲಿಂಗಮುಚ್ಯತೇ ||   (ಚಂದ್ರಜ್ಞಾನಾಗಮ ಕ್ರಿಯಾಪಾದ, ೩೫೧)

ವಿಶಾಲವಾದ ಆಕಾಶವೇ ಲಿಂಗ, ವಿಸ್ತಾರವಾದ ಭೂಮಿ ಪೀಠಿಕೆ, ಜಗತ್ತಿಗೆ ಆಧಾರವಾಗಿ ಆಲಯವಾಗಿದೆ ಎನ್ನುವ ಲಿಂಗದ ಸ್ವರೂಪ ಕಲ್ಪನೆ ಆಗಮದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಲಿಂಗದ ವಿರಾಟ್ ಸ್ವರೂಪವನ್ನು ಬಸವಣ್ಣನವರು ಹೀಗೆ ಬಣ್ಣಿಸಿದ್ದಾರೆ ;

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ

ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ

ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ

ಅಗಮ್ಯ, ಅಗೋಚರ ಅಪ್ರತಿಮ ಲಿಂಗವೇ ಕೂಡಲಸಂಗಮದೇವಯ್ಯ

ಎನ್ನ ಕರಸ್ಥಲಕ್ಕೆ ಬಂದು, ಚುಳುಕಾದಿರಯ್ಯ

ಎನ್ನುತ್ತಾರೆ. ವೀರಶೈವ ಧಾರ್ಮಿಕ ಸಾಹಿತ್ಯದಲ್ಲಿ ಲಿಂಗದ ಪರಿಕಲ್ಪನೆ ಮಹೋನ್ನತವಾಗಿದೆ. ಲಿಂಗವನ್ನು ಶರೀರದಲ್ಲಿ ಧರಿಸಿ, ಕರಪೀಠದಲ್ಲಿ ಅರ್ಚಿಸಬೇಕೆಂಬ ವಿಶೇಷ ನಿಯಮವಿದೆ. ಲಿಂಗವು ಸ್ಥಾವರ, ಇಷ್ಟಲಿಂಗವೆಂದು ಎರಡು ವಿಧ. ದೇವಾಲಯಗಳಲ್ಲಿ ಸ್ಥಾಪಿತವಾದ ಲಿಂಗ ಸ್ಥಾವರ, ಗುರುಗಳಿಂದ ದೀಕ್ಷೆ ಪಡೆದು ಶರೀರದ ಮೇಲೆ ಧರಿಸುವುದು ಇಷ್ಟಲಿಂಗ. ಸ್ಥಾವರಲಿಂಗವನ್ನು ಅನೇಕರು ಸಾಮೂಹಿಕವಾಗಿ ಪೂಜಿಸಬಹುದು; ಆದರೆ ಇಷ್ಟಲಿಂಗವನ್ನು ಯಾವ ಸಾಧಕನು ಧರಿಸುತ್ತಾನೋ ಆತನು ಮರಣ ಪರ್ಯಂತ ನಿತ್ಯವೂ ಪೂಜಿಸಬೇಕೆಂಬ ನಿಯಮವಿದೆ. ಸಾಧಕನ ದೇಹ ತ್ಯಾಗದ ನಂತರವೂ ಲಿಂಗ ಅವನೊಡನೆ ವಿಲೀನವಾಗುತ್ತದೆ. ಆದ್ದರಿಂದ ಇದು ಇಷ್ಟಲಿಂಗ. ಈ ಲಿಂಗ ಪೂಜಾ ವ್ರತವನ್ನು ಶಾಂಭವ ವ್ರತ, ಪಾಶುಪತ ವ್ರತ, ಶಿರೋವ್ರತವೆಂದು, ಆಗಮಗಳು ಬಣ್ಣಿಸುತ್ತವೆ.

ಅಂಗದ ಪರಿಕಲ್ಪನೆ : 

ವೀರಶೈವರಲ್ಲಿ ಜೀವಾತ್ಮ ಎಂಬ ಪದಕ್ಕೆ ಪರ್ಯಾಯವಾಗಿ- ‘ಅಂಗ’ ಪದ ಪ್ರಯೋಗವಾಗಿದೆ. ಶ್ರೀ ಗುರುವಿನಿಂದ ದೀಕ್ಷೆಯನ್ನು ಪಡೆದು ಪರಿಶುದ್ಧ ಜೀವ ಎಂದೂ, ‘ಅಂ’ ಎಂದರೆ ಪರಶಿವಲಿಂಗ, ‘ಗಂ’ ಎಂದರೆ- ಗಮಿಸಲು, ಹೊಂದಲು, ಸನ್ನದ್ಧವಾದ ಜೀವ ಎಂದೂ-

ಅಮಿತಿ ಬ್ರಹ್ಮ ಸನ್ಮಾತ್ರಂ ಗಚ್ಛತೀತಿ ಗಮುಚ್ಛ್ಯತ”   (ಅನುಭವ ಸೂತ್ರ)

ಅಂಗವು, ಲಿಂಗದೆಡೆಗೆ ಸಾಗುವ ತತ್ತ್ವ. ಇದು ಅಂಗದ ನಿರುಕ್ತಿ ತನ್ನೊಳಗಿರುವ ಲಿಂಗಕ್ಕೆ ಅಂಗವಾಗುವ ಕಾರಣ ಅಂಗನೆಂಬ ನಾಮ’ ಮೂಲ ಚಿನ್ನವಿದ್ದಂತೆ ಲಿಂಗ, ಆ ಚಿನ್ನದಿಂದಾದ ಆಭರಣ ಅಂಗ. ನಾಮರೂಪಗಳು ಅಳಿದರೆ ಅಂಗವೇ ಲಿಂಗ ಇತ್ಯಾದಿ, ಅಂಗ ಶಬ್ದಕ್ಕೆ ದಾರ್ಶನಿಕರು ಶರಣರು, ಅತ್ಯಂತ ಮೌಲಿಕವಾದ ಅರ್ಥ ವಿವರಣೆ ನೀಡಿದ್ದಾರೆ. ʼಅಜ್ಞಾನದಿಂದ ಆವೃತವಾದ ಜೀವ

ಎಚ್ಚರಗೊಂಡು-ಅಧ್ಯಾತ್ಮಿಕ ಜಾಗೃತಿಯಿಂದ ಮುಮುಕ್ಷುವಾಗಿ ‘ಅಂಗ’ ಎನಿಸಿಕೊಳ್ಳುತ್ತಾನೆ ಎನ್ನುವ ಉದಾತ್ತ ಕಲ್ಪನೆ ಇದೆ.

ಇನ್ನು ವೀರಶೈವ ಪಾರಿಭಾಷಿಕ ಪದಕೋಶದಲ್ಲಿ ಅಂಗ ಶಬ್ದಕ್ಕೆ ಒಡಲು, ದೇಹ, ದೀಕ್ಷೆ ಹೊಂದಿದ ದೇಹ, ದೇಹದ ಒಂದು ಭಾಗ, ಅವಯವ, ಶಿವಾಂಶವುಳ್ಳ ಚೇತನ, ಶುದ್ಧ ಜೀವಾತ್ಮ ಇತ್ಯಾದಿ ಅರ್ಥಚ್ಛಾಯೆಗಳಿವೆ. ಆದರೂ ಅಂಗ, ಬರೀ ದೇಹವಲ್ಲ, ಬರೀ ಜೀವಾತ್ಮನಲ್ಲ, ದೇಹಾತ್ಮ ಅಥವಾ ಅಂಗವೆನ್ನುವುದೇ ಸೂಕ್ತವಾಗಿ ಕಾಣುತ್ತದೆ. ದೇಹ, ಜೀವಾತ್ಮಎನ್ನುವ ಅರ್ಥಗಳಿದ್ದರೂ ಅವು ಬೇರೆ-ಬೇರೆ ಅಲ್ಲ ʼʼಲಿಂಗವೆಂದರೆ ಶಿವ, ಅಂಗವೆಂದರೆ ಜೀವ, ಜೀವನಿಗೆ ಅಧಿಷ್ಠಾನವಾದ ದೇಹ-ಜೀವನಿರುವಷ್ಟು ಕಾಲ ಈ ದೇಹವೂ ಶಿವ, ಅವನಿಲ್ಲದಾಗ ಬರೀ ಶವ” ಎನ್ನುವ ಅನುಭವಿಗಳ ಮಾತು ಸತ್ಯ. ದೇಹ, ಪ್ರಸಾದ ಕಾಯ, ಚೈತನ್ಯದ ದೇಗುಲ ಅದು ಬೇರೆ ಅಲ್ಲ. ಒಂದೆಡೆ, ದೇಹಾತ್ಮ ವಿಚಾರವಾಗಿ ಓಷೋ ಹೇಳುತ್ತಾರೆ.

“Do not divide them. They are not two. They are already one. They have always been one. Where the energy becomes conscious it is the soul. When it becomes unconscious it becomes the body…… Body and conscious are two poles of one phenomenon”.

(The great challenge p. 167)

ಈ ವಿವರಣೆಯನ್ನು ಗಮನಿಸಿದರೆ, ವೀರಶೈವ ದಾರ್ಶನಿಕರು ದೇಹಾತ್ಮನಿಗೆ ‘ಅಂಗ’ ವೆಂದೂ ಕರೆದಿರುವುದು ಅರ್ಥಪೂರ್ಣ ಎನಿಸುತ್ತದೆ. ಕಾರಣ ಮಾನವ ದೇಹದಲ್ಲಿ ಬರೀ ಆತ್ಮವೊಂದೇ ಇಲ್ಲ. ಪಂಚಜ್ಞಾನೇಂದ್ರಿಯಗಳು (ಕಣ್ಣು-ಕಿವಿ-ಮೂಗು-ನಾಲಗೆ ಚರ್ಮ) ಪಂಚ ಕರ್ಮೇಂದ್ರಿಯಗಳು (ವಾಕ್-ಪಾಣಿ-ಪಾದ, ಪಾಯು-ಉಪಸ್ಥೆ) ಪಂಚಭೂತಗಳು (ಪೃಥ್ವಿ, ಅಪ್, ತೇಜ, ವಾಯು, ಆಕಾಶ) ಪಂಚತನ್ಮಾತ್ರಗಳು(ಶಬ್ದ-ಸ್ಪರ್ಶ-ರೂಪ-ರಸ-ಗಂಧ) ಹೀಗೆ ದೇಹ ಇವೆಲ್ಲವುಗಳನ್ನೊಳಗೊಂಡ ವಿಶಾಲ ಸಂಗ್ರಹಾಲಯವಾಗಿದೆ.

ತ್ರಿವಿಧ ಶರೀರ :

ಮನುಷ್ಯನಿಗೆ ತ್ರಿವಿಧ ಶರೀರಗಳಿವೆ ಎಂದು ಯೋಗಶಾಸ್ತ್ರ ಹೇಳುತ್ತದೆ. ಅವು ಸ್ಥೂಲ-ಸೂಕ್ಷ್ಮ-ಕಾರಣ ಶರೀರಗಳು.

 ಸ್ಥೂಲ ಶರೀರ ಪಂಚೂಭೂತಗಳಿಂದಾಗಿ, ಆಹಾರದಿಂದ ರಕ್ಷಿತವಾಗಿದೆ.  ಸೂಕ್ಷ್ಮ ಶರೀರ, ಇದು ಸ್ಥೂಲ ದೇಹದ ಒಳಭಾಗದಲ್ಲಿದೆ, ಪ್ರತ್ಯೇಕವಾಗಿದೆ. ಇಲ್ಲಿ ಮನುಷ್ಯನ ಚಿತ್ತ ವೃತ್ತಿಗಳು, ಆಲೋಚನೆಗಳು ಎಂಬ ಅಲೆಗಳು-ವ್ಯಕ್ತವಾಗುತ್ತವೆ. ಬುದ್ಧಿ-ಅಹಂಕಾರ, ಮನಸ್ಸು ಪ್ರಾಣ ಪಂಚತನ್ಮಾತ್ರಗಳು ಇಲ್ಲಿವೆ. ಕಾರಣ ಶರೀರ, ಇದು ಅತ್ಯಂತ ಒಳಗೆ ಇರುವುದು. ಇಲ್ಲಿಯೇ ಅವಿದ್ಯೆಯ ಬೀಜ, ಮಾಯೆಯ ಭಾವನೆ ಬೇರೂರುವುದು. ಇವುಗಳ ಹಿಂದೆ ಆತ್ಮವಿದೆ ಎಂದು ಯೋಗ ಶಾಸ್ತ್ರದ ನಿರೂಪಣೆ.

 ಇವುಗಳಲ್ಲದೆ, ದೇಹದಲ್ಲಿ ಪಂಚಕೋಶಗಳು ಇವೆ. ಕತ್ತಿಯ ಒರೆಯಲ್ಲಿರುವಂತೆ, ಆತ್ಮ ಪಂಚಕೋಶಗಳೊಳಗಿದ್ದಾನೆ, ಎನ್ನುವ ಪರಿಕಲ್ಪನೆ ಇದೆ.

ಅನ್ನಮಯ ಕೋಶ-ಸ್ಥೂಲ ಶರೀರ, ಪ್ರಾಣಮಯ ಕೋಶ ಇದು ಕರ್ಮೇಂದ್ರಿಯ ಮೂಲಕ ವ್ಯಕ್ತವಾಗುತ್ತದೆ. ಮನೋಮಯ ಕೋಶ-ಪಂಚ ಜ್ಞಾನೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ. ವಿಜ್ಞಾನಮಯಕೋಶ ಬುದ್ಧಿ ಜ್ಞಾನೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ. ಪ್ರಾಣಮಯ ಮನೋಮಯ-ವಿಜ್ಞಾನಮಯ ಕೋಶಗಳಲ್ಲಿ ಸೂಕ್ಷ್ಮ ಶರೀರ ಕೆಲಸ ನಿರ್ವಹಿಸುತ್ತದೆ. ಐದನೆಯದು ಆನಂದಮಯ ಕೋಶ ಇದೇ ಕಾರಣ ಶರೀರ. ಇದು ಜೀವಾತ್ಮನಿಗೆ, ತೀರಾ ನಿಕಟವಾಗಿರುವ ಕೋಶ. ಜಾಗ್ರದಾವಸ್ಥೆಯಲ್ಲಿ ನಾವು ಸ್ಥೂಲ ದೇಹದಲ್ಲಿರುತ್ತೇವೆ. ಕನಸಿನಲ್ಲಿ ಸೂಕ್ಷ್ಮ ಶರೀರಕ್ಕೆ ಹೋಗುತ್ತೇವೆ. ಸುಷುಪ್ತಿಯಲ್ಲಿ ಕಾರಣ ಶರೀರಕ್ಕೆ ಹೋಗುತ್ತೇವೆ-ಈ ಮೂರು ಅವಸ್ಥೆಗಳಲ್ಲೂ ಸಾಕ್ಷೀ ಭಾವ ಇದೆ. ಅದೇ ಆತ್ಮ ಎಂದು ಯೋಗಶಾಸ್ತ್ರದ ವಿವರಣೆ.

ಯೋಗದರ್ಶನ :

ಭಾರತೀಯ ದರ್ಶನಗಳಲ್ಲಿ ಯೋಗ ಶಾಸ್ತ್ರಕ್ಕೆ ಮಹತ್ವದ ಸ್ಥಾನವಿದೆ. ಯೋಗ ದರ್ಶನ ಪ್ರಾಚೀನವಾದುದು. ಎಲ್ಲರಿಗೂ ಬೇಕಾದುದು. ಯೋಗ ಯುಜ್-ಸಂಗತ ಕರಣೇ=ಘಟಿಸು, ಕೂಡುವಿಕೆ, ಒಂದಾಗುವಿಕೆ ಎನ್ನುವ ಅರ್ಥಗಳಿವೆ. ಯುಜ್ ಧಾತುವಿನಿಂದ ಯೋಗ ಪದವು ನಿಷ್ಪನ್ನಗೊಳ್ಳುತ್ತದೆ. ಪತಂಜಲಿ ಹಠಯೋಗ, ಲಯಯೋಗ-ಮಂತ್ರಯೋಗ, ರಾಜಯೋಗ ಎಂಬ ಯೋಗ ಪ್ರಭೇದಗಳನ್ನು ಹೇಳಿ, ಅವುಗಳ ಪ್ರಯೋಜನವನ್ನು ತಿಳಿಸಿದ್ದಾನೆ.

ರಾಜಯೋಗ-ಹಠಯೋಗದಿಂದ, ಶರೀರಶುದ್ಧಿ; ಲಯಯೋಗದಿ೦ದ ಪ್ರಾಣಶುದ್ಧಿ; ಮಂತ್ರಯೋಗದಿಂದ ಮನಶುದ್ಧಿ ಈ ಯೋಗಗಳ ಸಾಧನೆಯಿಂದ ಜೀವನ ಶುದ್ಧಿ ಎಂದು ವಿವರಿಸುತ್ತಾನೆ. ‘ಯೋಗ’ ವನ್ನು ಕುರಿತು ವಿವಿಧ ವ್ಯಾಖ್ಯಾನಗಳಿವೆ.  

ಪತಂಜಲಿ ಯೋಗ ದರ್ಶನದಲ್ಲಿ ಯೋಗಶ್ಚಿತ್ತ ವೃತ್ತಿನಿರೋಧಃ’, ಅಂದರೆ ಮನಸ್ಸಿನ ಚಂಚಲ ವೃತ್ತಿಗಳ ನಿರೋಧವೇ ಯೋಗವೆನ್ನುತ್ತಾನೆ. ಭಗವದ್ಗೀತೆಯಲ್ಲಿ ‘ಯೋಗಃ ಕರ್ಮಸು ಕೌಶಲಂ’ ‘ಸಮತ್ವಂ ಯೋಗಮುಚ್ಚತೇ’ ಅಂದರೆ ಕರ್ಮದಲ್ಲಿ ಕುಶಲತೆ, ಚಿತ್ತ ಸಮತೆಯೇ ಯೋಗವೆನ್ನುವ ವ್ಯಾಖ್ಯೆ ಇದೆ. ʼʼಮನಃ ಪ್ರಶಮನೋಪಾಯ ಯೋಗ ಇತ್ಯಭಿಧೀಯತೆ’ ಮನಸ್ಸನ್ನು ಪ್ರಶಾಂತಗೊಳಿಸುವ ಉಪಾಯವೇ ಯೋಗ ಎನ್ನುತ್ತದೆ- ಯೋಗವಾಶಿಷ್ಟ.

”ತಾಂ ಯೋಗಮಿತಿಮನ್ಯತೇ ಸ್ಥಿರಾಂ ಇಂದ್ರಿಯ ಧಾರಣಂ” ಇಂದ್ರಿಯಗಳು ಮತ್ತು ಮನಸ್ಸಿನ ಮೇಲೆ ಸ೦ಪೂರ್ಣ ಹತೋಟಿ ಹೊಂದಿರುವ ಸ್ಥಿತಿ ಎಂದು ಕಠೋಪನಿಷತ್ತು ತಿಳಿಸುತ್ತದೆ. ಹೀಗೆ ಯೋಗವನ್ನು ಕುರಿತು ವಿವಿಧ ವ್ಯಾಖ್ಯಾನಗಳಿದ್ದರೂ ಅವುಗಳ ಆಶಯ ಒಂದೇ ಆಗಿದೆ. ಅದು ಮನಸ್ಸಿನ ಏಕಾಗ್ರತೆ, ನಿಗ್ರಹ ಹಾಗೂ ವಿಕಾಸದ ವಿಧಾನ.

ಅತ್ತ ಇತ್ತ ಹರಿವ ಮನವ ಒಂದು ಕಡೆ

ನಿಲ್ಲಿಸಬಲ್ಲರೆ ಗುಹೇಶ್ವರ ಲಿಂಗದ ಬೆಳಗು

ಅಂತರಂಗದಲ್ಲಿಯೇ ಗೋಚರಿಸುತ್ತದೆ ಎನ್ನುತ್ತಾರೆ ಅಲ್ಲಮಪ್ರಭು.

Yoga literally means connection or union with the supreme spirit. What unites us with the supreme spirit is yoga. There is only one in the universe”.

 “Yoge for its true understanding depends not on words but on Experience”.

ಜೀವ ದೇವನೊಂದಿಗೆ ಸೇರುವುದೇ ಯೋಗ, ಜೀವ-ದೇವ ಸಂಬಂಧವು ಯೋಗ ಸಾಧನೆಯ ವಿಷಯ. ಅನುಭವಕ್ಕೆ ತಂದುಕೊಳ್ಳುವ ವಿಷಯವೇ ವಿನಃ ಅದನ್ನು ಕುರಿತು, ಚರ್ಚಿಸುವ, ವರ್ಣಿಸುವ ವಿಷಯವಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. (Common Sense About Yoga P. 75)

ಯೋಗ ಸಾಧನೆಯ ಹಾದಿಯಲ್ಲಿ ಮನಃಶುದ್ಧಿ ಏಕಾಗ್ರತೆ, ಅತ್ಯವಶ್ಯ. ಮನಸ್ಸಿನ ಏಕಾಗ್ರತೆಗೆ ಅನೇಕ ಯೋಗಗಳ ಪ್ರಯೋಗಗಳಿವೆ. ಮನೋದೇಹಿಯಾದ ಮಾನವನ ಮನಸ್ಸು ಮರ್ಕಟ. ಮನಸ್ಸೇ ಮನುಷ್ಯ ಜಗತ್ತಿನ ಆಗು-ಹೋಗು, ಕಲ್ಪನೆ-ಪರಿಕಲ್ಪನೆಗಳಿಗೆಲ್ಲ ಕಾರಣ. ಮನಶ್ಯಾಸ್ತ್ರದ ವ್ಯಾಖ್ಯಾನಗಳಲ್ಲಿ ವಿಜ್ಞಾನದ ಪ್ರಯೋಗಗಳಲ್ಲಿ ಇಂದಿನವರೆಗೆ ನಿಖರವಾಗಿ ಮನಸ್ಸು ಎಂದರೆ ಇದೇ ಎಂದು ತೀರ್ಮಾನವಾಗಿಲ್ಲ.   ನಮ್ಮ ಅಸ್ತಿತ್ವವನ್ನು ನಿರ್ಧರಿಸುವ ಮನಸ್ಸು ನಮ್ಮ ಜೀವನದ ಭಾಗವಾಗಿದ್ದರೂ, ನಮಗೆ ಅಪರಿಚಿತವಾಗಿದೆ. ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ಅದನ್ನು ನಿಗ್ರಹಿಸುವ, ಏಕಾಗ್ರತೆಗೆ ತರುವ ವಿಧಾನಗಳಿವೆ. ಮಾನವ ದೇವರೊಂದಿಗೆ ಜಗತ್ತಿನೊಂದಿಗೆ ಸಂಬಂಧ ಬೆಳಸುವುದು ಮನಸ್ಸಿನ ಮೂಲಕವೆ, ಇದೇ ಯೋಗ ! ಇದೇ ಭಾರತೀಯ ಅಧ್ಯಾತ್ಮಿಕ ಇತಿಹಾಸ.

 ಯೋಗ ಸಾಧನೆ ದುರ್ಗಮ ಮಾರ್ಗ, ಸರ್ವಜ್ಞನ ವಚನವೊಂದು ಹೀಗಿದೆ :

ದಾಸಿಯ ಕೊಡದಂತೆ ಸೂಸುತಿಪ್ಪುದು ಯೋಗ

ದಾಸಿ ಪರ ಪುರುಷನಾಶಿಸಲದು |

ಬೀಸಿ ಬಿದ್ದಂತೆ ಸರ್ವಜ್ಞ ||

ಯೋಗವು ದಾಸಿಯ ತಲೆಯ ಮೇಲಿನ ತುಂಬಿದ ಕೊಡದಂತೆ, ಮನಸ್ಸು ಅತ್ತಿತ್ತ ಹೊರಳಿದರೆ, ಕೊಡವು ಬಿದ್ದು, ಚೂರಾಗುತ್ತದೆ ಎಂದು ಮನಸ್ಸಿನ ಏಕಾಗ್ರತೆ, ಯೋಗ ಮಹತ್ವವನ್ನು ತಿಳಿಸುತ್ತಾನೆ.

 ಯೋಗ ಸಾಧನೆಯಲ್ಲಿ ಅಧ್ಯಾತ್ಮಿಕ ಆದರ್ಶದಲ್ಲಿ ನಂಬಿಕೆ ಇರಬೇಕು. ಅಧ್ಯಾತ್ಮಿಕ ಜೀವನದ ಪ್ರಥಮ ಅರ್ಹತೆ, ನೈಜ ಆತ್ಮವನ್ನು ಅರಿಯುವ ಸಾಮರ್ಥದಲ್ಲಿ ಅತೀವ ಶ್ರದ್ಧೆ ಬೇಕು, ತಾನು ಚಿಂತಿಸುವ, ಅದೇ ತಾನಾಗುವ ದೈವದ ಬಗ್ಗೆ ನಂಬಿಕೆ ಬೇಕು. ನಂಬಿಕೆಗೆ ಅಗಾಧ ಶಕ್ತಿ ಇದೆ. ಸಾಧಕ ಏನನ್ನು ಅರಸಿಕೊಂಡು ಬಂದನೋ, ಅದೇ ತಾನು ಎಂದು, ಅರಿವಾಗುವ ಸ್ಥಿತಿ, ಈ ಸ್ಥಿತಿ ಇನ್ನೊಬ್ಬರಿಗೆ ವಿವರಿಸಲುಬಾರದು. ಇಂತಹ ಸ್ಥಿತಿಗೇರಿದ ಯೋಗಿಗಳ ಸಾನಿಧ್ಯದಲ್ಲಿ ಕ್ರೂರ ಪ್ರಾಣಿಗಳು ತಮ್ಮ ಕ್ರೌರ್ಯವನ್ನು ಮರೆತು ಪ್ರೇಮವನ್ನು ಮೆರೆಯುತ್ತವೆ ಎಂದು ಪತಂಜಲಿ ಹೇಳುತ್ತಾನೆ. ನಂಬಿಕೆ- ದೃಢವಾದ ನಂಬಿಕೆ ಇರವಲ್ಲಿ ವಿಚಾರ ವಿಮರ್ಶೆಗೆ ಸ್ಥಾನವಿಲ್ಲ. ಕಾರಣ Reason is the great enemy that faith has ಎನ್ನುವ ಮಾತಿನಂತೆ, ವಿಚಾರ ನಂಬಿಕೆಯ ಪ್ರಬಲ ಶತ್ರು. ಯೋಗ ಸಾಧನೆಯಲ್ಲಿ ನಂಬಿಕೆಗೆ ಪ್ರಾಧಾನ್ಯ.

ವೀರಶೈವ-ಶಿವಯೋಗ : ಪರಿಕಲ್ಪನೆ

ವೀರಶೈವ ಧರ್ಮದ ಶಿವಯೋಗ, ಇತರ ಯೋಗಗಳಿಗಿಂತ, ವಿಭಿನ್ನವಾಗಿ ಭಾರತೀಯ ಯೋಗ ಪರಂಪರೆಯಲ್ಲಿ ವೈಶಿಷ್ಟ್ಯ ಪೂರ್ಣವಾಗಿದೆ. ಇದರ ನೆಲೆ-ಹಿನ್ನೆಲೆ ಶಿವಾಗಮಗಳಲ್ಲಿ ಪಾರಮೇಶ್ವರ- ಸೂಕ್ಷ್ಮ-ಚಂದ್ರಜ್ಞಾನ ಆಗಮಗಳಲ್ಲಿ ಶಿವಯೋಗದ ವಿಚಾರವಿದೆ. ವೀರಶೈವ ತತ್ತ್ವಜ್ಞಾನದ ಮೂಲ, ವಿಚಾರಗಳ ಸ್ರೋತ ಆಗಮಗಳಲ್ಲಿರುವುದರಿಂದ, ಅಲ್ಲಿ ಬರುವ ಷಟ್‌ಸ್ಥಲ ಸಿದ್ಧಾಂತವು ಶಿವಯೋಗವನ್ನೇ ಪ್ರತಿಪಾದಿಸುತ್ತದೆ. ಷಟ್‌ಸ್ಥಲದಲ್ಲಿ ಬರುವ ಪ್ರಾಣಲಿಂಗದ ಸ್ಥಲದಲ್ಲಿ ಬರುವ ವಿಚಾರಗಳು ಸಂಪೂರ್ಣ ಶಿವಯೋಗಮಯವಾಗಿವೆ.

ಚರಾಚರಾತ್ಮಕಂ ಸರ್ವಂ ಜಗದೇತಚ್ಛವಾತ್ಮಕಂ |

ಭಾವಯನ್ನಾತ್ಮ ತಾದಾತ್ಮ್ಯಂ ಯೋಗ ಶೈವಮಿತಿಸ್ಮೃತಃ | (ಪಾ.ಅ.ಪ. ಶ್ಲೋ ೨೫)

ಜಗತ್ತನ್ನು ಶಿವಸ್ವರೂಪವೆಂದು, ಭಾವಿಸಿ, ಅದರಲ್ಲಿ ಅಧ್ಯಾತ್ಮ ಭಾವ ಹೊಂದುವುದು ‘ಯೋಗಶೈವ’ ಎಂದು ಪಾರಮೇಶ್ವರಾಗಮ ತಿಳಿಸುತ್ತದೆ.

ಶಿವಜ್ಞಾನ ಶಿವೇಭಕ್ತಿ: ಶಿವಾಚಾರ: ಶಿವವ್ರತಮ್ |

ಶಿವಲಿಂಗಾರ್ಚನಾಜ್ಞಪ್ತಿಃ ಶಿವಯೋಗೋಹಿ ಪಂಚಧಾ ||

ಎಂದು ಐದು ವಿಧ ಶಿವಯೋಗಗಳನ್ನು ವೀರಾಗಮ ವಿವರಿಸುತ್ತದೆ. ಮತ್ತೆ ಚಂದ್ರಜ್ಞಾನಾಗಮದಲ್ಲಿ ಇಷ್ಟಲಿಂಗದಲ್ಲಿ ದೃಷ್ಟಿಯೋಗ, ಪ್ರಾಣಲಿಂಗದಲ್ಲಿ ಮನೋಯೋಗ, ಭಾವಲಿಂಗದಲ್ಲಿ ಭಾವಯೋಗಗಳನ್ನು, ಏಕಕಾಲದಲ್ಲಿ ಸಾಧಿಸಿದ ಸಾಧಕರು ಮುಕ್ತರು. ಈ ಮೂರರ ಸಮನ್ವಯವೇ ಶಿವಯೋಗ ಎಂದು ತಿಳಿಸುತ್ತದೆ. (ಪಾ.ಆ.ಕ್ರ.ಪಾ. ೩-೩೯-೪೦). ವ್ಯಕ್ತಿ ತನ್ನ ಬಾಹ್ಯ ಸ್ವರೂಪವನ್ನು ಅರಿಯಲು ಕನ್ನಡಿಯ ಅಗತ್ಯವಿರುವಂತೆ ಆಂತರಿಕ ಆತ್ಮ ಸ್ವರೂಪವನ್ನು ಅರಿಯಲು ಕನ್ನಡಿಯಂತಹ ಒಂದು ಪವಿತ್ರ ವಸ್ತು (ಇಷ್ಟಲಿಂಗ) ವನ್ನು ವೀರಶೈವ ಸಾಧಕರು ಸ್ವೀಕರಿಸಲೇಬೇಕಾಯಿತು. ಸ್ಥಾವರ ಮೂರ್ತಿಗಳ ಬದಲಾಗಿ ಆತ್ಮನ ಕುರುಹಾದ

ಇಷ್ಟಲಿಂಗವನ್ನು, ಸ್ವೀಕರಿಸಿ ಅಹಂ ಗ್ರಹೋಪಾಸನೆಯಿಂದ ಸಾಧನೆ ಮಾಡುತ್ತಾರೆ. ತನ್ನನ್ನು ಹಾಗೂ ಹೊರಗಿನ ಪ್ರಪಂಚವನ್ನು ಮರೆತು ಮನಸ್ಸಿನ ಸಮಾಧಿ ಸ್ಥಿತಿ ಹೊಂದಲು, ಒಂದು ವಸ್ತುವಿನ ಅಗತ್ಯವಿದೆ, ಎಂಬುದು ಮನಶ್ಯಾಸ್ತ್ರಜ್ಞರ ಅಭಿಮತ. ಬಹುಪಾಲು ಸಾಮಾನ್ಯ ಜನರಿಗೆ ಧ್ಯಾನ ಮಾಡಲು ಒಂದು ಕುರುಹು (ಪ್ರತೀಕ) ಬೇಕೇ ಬೇಕು. ಅದು ಇಲ್ಲದಿದ್ದರೆ, ಮನಸ್ಸು ಅಲೆದಾಡುತ್ತದೆ. ಹಾರುವ ಪಟದಂತಿರುವ ಮನಸ್ಸಿಗೆ ಒಂದು ಸೂತ್ರ ಬೇಕು. ಮನಸ್ಸಿನ ಏಕಾಗ್ರತೆಗೆ ಕುರುಹಿನ ಮೂಲಕ ದೇವರನ್ನು ಧ್ಯಾನಿಸುತ್ತಾನೆ. ಏಕಾಗ್ರತೆಗೆ ಓಂಕಾರ ಜಪ ಸಾಕು ಎಂದು ಪತಂಜಲಿ ತಿಳಿಸುತ್ತಾನೆ. (ಯೋಗಸೂತ್ರ ೧-೨೭-೨೯), ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ, ಯಾವುದೇ ವಸ್ತು ದೇವರ ಪ್ರತೀಕವಾಗಬಹುದು. ಕುರುಹೇ ದೇವರಲ್ಲ. ಆದರೆ ಕುರುಹಿನ ಮೂಲಕ ಅರಿವು ಪಡೆದು ಅದರ ಹಿಂದಿರುವ ಪರಮ ಸತ್ಯವನ್ನು ಗ್ರಹಿಸಬೇಕಾಗುತ್ತದೆ.

ತಂತ್ರಸಾರದ ಶ್ಲೋಕವೊಂದು ಹೀಗಿದೆ :

ಪ್ರಥಮಾ ಪ್ರತಿಮಾ ಪೂಜಾ | ಜಪಸ್ತೋತ್ರಾದಿ ಮಧ್ಯಮಾ |

ಉತ್ತಮಾ ಮಾನಸೀ ಪೂಜಾ ಸೋಹಂ ಪೂಜೋತ್ತಮೋತ್ತಮಾ |

ಮೊದಲನೆಯದು ಪ್ರತಿಮಾ ಪೂಜೆ, ಜಪಸ್ತೋತ್ರಗಳು ಮಧ್ಯಮ, ಉತ್ತಮವಾದದ್ದು ಮಾನಸ ಪೂಜೆ. ಇವುಗಳಿಗಿಂತ ಶ್ರೇಷ್ಠವಾದುದ್ದು. ‘ಸೋಹಂ’ ಪೂಜೆ. ಈ ಸೋಹಂ ಪೂಜೆ ಅಥವಾ ಅಹಂ ಗ್ರಹೋಪಾಸನೆ ವೀರಶೈವರದು. ಇಷ್ಟಲಿಂಗ ಆತ್ಮನ ಪೂಜೆ, ಉಪಾಸಕ ಉಪಾಸ್ಯ ವಸ್ತು (ಇಷ್ಟಲಿಂಗ) ವಿನೊಂದಿಗೆ ತನ್ನನ್ನು ಒಂದಾಗಿಸಿಕೊಂಡು, ತನ್ನ ಆತ್ಮನ ಮೇಲೆ ಧ್ಯಾನ ಮಾಡುತ್ತಾನೆ. ಅಲ್ಲಿ ಉಪಾಸ್ಯ-ಉಪಾಸಕರ ಏಕತೆ ಸಾಮರಸ್ಯವಾಗುತ್ತದೆ. ಇದೇ ಪ್ರಾಣಲಿಂಗ ಪೂಜೆ, ಅಧ್ಯಾತ್ಮಿಕ ಜೀವನ,

ಒಂದು ಏಣಿ ಇದ್ದಂತೆ, ಹಂತ ಹಂತವಾಗಿ ಮುಂದುವರಿಯಬೇಕು.

ಇಷ್ಟಲಿಂಗ ದೀಕ್ಷೆ : ಪರಿಕಲ್ಪನೆ

ಶಿವಯೋಗ ಪಥದಲ್ಲಿ ಸಾಗಿ ಲಿಂಗಾಂಗ ಸಾಮರಸ್ಯದ ಗುರಿ ತಲುಪಲು ಸಾಧಕನಿಗೆ ಇಷ್ಟಲಿಂಗ ದೀಕ್ಷೆ ಅತ್ಯಾವಶ್ಯಕ. ದೀಕ್ಷೆಯಿಂದಲೇ ಅವನು ವೀರಶೈವನಾಗಿ ಅರ್ಹತೆ ಪಡೆಯುತ್ತಾನೆ. ಸಾಧಕನಿಗೆ ಶಿವಯೋಗ ಪಥದಲ್ಲಿ ಸಾಗಿದಂತೆ ಅವನ ಮನಸ್ಸು ಕ್ರಮೇಣ ಪ್ರಾಪಂಚಿಕ ವಿಷಯಗಳಲ್ಲಿ ಅನಾಸಕ್ತಿ ಉಂಟಾಗಿ, ಅಧ್ಯಾತ್ಮದ ಮಾರ್ಗದರ್ಶನಕ್ಕಾಗಿ, ಗುರುವನ್ನು ಆಶ್ರಯಿಸುತ್ತಾನೆ.  ಗುರೂಪದೇಶ ಮಹತ್ವದ್ದಾಗಿದೆ.

ಗುರೂಪದೇಶತೋಜ್ಞೇಯಂ ನಜ್ಞೇಯಂ ಶಾಸ್ತ್ರಕೋಟಿಭಿಃ

ಎನ್ನುವಂತೆ ಶಾಸ್ತ್ರದ ಕೋಟಿ-ಕೋಟಿ ಗ್ರಂಥಗಳಿಗಿಂತ ಗುರೂಪದೇಶ ಮಿಗಿಲಾದದ್ದು, ಶ್ರೀಗುರು ಶಿಷ್ಯನನ್ನು ಪರೀಕ್ಷಿಸಿ ಶಿವದೀಕ್ಷೆಯನ್ನು ಅನುಗ್ರಹಿಸುತ್ತಾನೆ. ಶಿಷ್ಯನ ಸ್ಥೂಲ-ಸೂಕ್ಷ್ಮ-ಕಾರಣ ದೇಹಗಳಲ್ಲಿರುವ ಆಣವ ಮಾಯಾ-ಕಾರ್ಮಿಕಗಳೆಂಬ, ಮಲತ್ರಯಗಳನ್ನು ವೇಧಾ-ಮನು-ಕ್ರಿಯೆಗಳೆಂಬ ದೀಕ್ಷೆಗಳಿಂದ ಪರಿಹರಿಸಿ ತನುತ್ರಯಗಳಲ್ಲಿ ಇಷ್ಟ-ಪ್ರಾಣ- ಭಾವಲಿಂಗಗಳನ್ನು ಸ್ಥಾಪಿಸಿ ಹಸ್ತ-ಮಸ್ತಕ ಸಂಯೋಗದಿಂದ ಶಿಷ್ಯನ ಚಿತ್‌ಕಲೆಯನ್ನು ಶಿವಲಿಂಗದಲ್ಲಿ ನಿಯೋಜಿಸಿ ಶಿವಕ್ಕೂ- ಜೀವಕ್ಕೂ ಸಾಮರಸ್ಯ ಮಾಡಿ ಇಷ್ಟಲಿಂಗವನ್ನು ಶಿಷ್ಯನ ಹಸ್ತದಲ್ಲಿರಿಸಿ ಪಂಚಾಕ್ಷರಿ ಮಹಾ ಮಂತ್ರವನ್ನು ಉಪದೇಶಿಸಿ ಇದು ನಿನ್ನ ಪ್ರಾಣಲಿಂಗ, ದೇಹದಿಂದ ಎಂದೂ ಅಗಲಿಸಬಾರದೆಂದು ಉಪದೇಶ ಮಾಡುತ್ತಾನೆ. ʼʼಪ್ರಾಣವದ್ಧಾರಣೀಯ ತತ್ ಪ್ರಾಣಲಿಂಗಮಿದಂ ತವʼʼ(ಸಿ.ಶಿ.) ಎಂಬುದಾಗಿ, ಲಿಂಗ ದೀಕ್ಷೆಗೆ ಅರ್ಥಪೂರ್ಣ ವ್ಯಾಖ್ಯೆ ಇದೆ. “ದೀಯತೇ ಪರಮಂಜ್ಞಾನಂ ಕ್ಷೀಯತೇ ಪಾಶಬಂಧನಂʼʼ (ಸಿ.ಶಿ). ‘ಇಷ್ಟಾವಾಸ್ತಿಕರಂ ಸಾಕ್ಷಾತ್ ಅನಿಷ್ಟ ಪರಿಹಾರಕಂ (ಅನುಭವ ಸೂತ್ರ) ಇತ್ಯಾದಿ ವಾಕ್ಯಗಳೂ ದೀಕ್ಷೆಯ ಮಹತ್ವವನ್ನೇ ಸಾರುತ್ತವೆ. ದೀಕ್ಷಾಬದ್ಧನಾದ ಸಾಧಕನು ಕ್ರಿಯಾ ಪ್ರಧಾನ ಅಷ್ಟಾವರಣ; ನೀತಿ ಪ್ರಧಾನ ಪಂಚಾಚಾರ; ಜ್ಞಾನ ಪ್ರಧಾನ ಷಟ್‌ಸ್ಥಲಗಳ ಸಾಧನೆಯಿಂದ ಲಿಂಗಾಂಗ ಸಾಮರಸ್ಯ ಪಡೆಯುತ್ತಾನೆ. ವೀರಶೈವರ ಈ ದೀಕ್ಷಾ ಕ್ರಮ ಬರೀ ಪೂಜಾ ವಿಧಾನವಲ್ಲ: ಸಾಧಕನ ದೈವೀ ಶಕ್ತಿಯನ್ನು ಬೆಳಗಿಸಿ, ಅದನ್ನು ಪರಿಪೂರ್ಣಗೊಳಿಸುವ ಪರಮ ಸಾಧನವಾಗಿದೆ.

ದೀಕ್ಷೆಯನ್ನು ಕುರಿತು ಬಸವಣ್ಣನವರು.

ಅಯ್ಯಾ ಎನ್ನ ಹೃದಯದಲ್ಲಿ ನ್ಯಸ್ತವಾಗಿರುವ

ಪರಮ ಚಿದ್ಬೆಳಗ ಹಸ್ತ-ಮಸ್ತಕ ಸಂಯೋಗದಿಂದೊಳಗೂಡಿ

ಮಹಾ ಬೆಳಗ ಮಾಡಿದಿರಲ್ಲ

ಅಯ್ಯಾ ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗು ತಂದು

ಭಾವದೊಳಗಿಂಬಿಟ್ಟಿರಲ್ಲಾ

ಅಯ್ಯಾ ಎನ್ನ ಭಾವದೊಳಗೂಡಿದ ಮಹಾಬೆಳಗು ತಂದು

ಮನಸ್ಸಿನೊಳಗಿಂಬಿಟ್ಟಿರಲ್ಲಾ

ಅಯ್ಯಾ ಎನ್ನ ಮನಸಿನೊಳು ಕೂಡಿಹ ಮಹಾಬೆಳಗು ತಂದು

ಎನ್ನ ಕಂಗೊಳೊಳಗಿಂಬಿಟ್ಟಿರಲ್ಲಾ

ಅಯ್ಯಾ ಎನ್ನ ಕರಸ್ಥಲದಲ್ಲಿ ಥಳಥಳಸಿ ಬೆಳಗಿ ಹೊಳೆಯುತ್ತಿಪ್ಪ ಅಖಂಡ

ತೇಜವನೆ, ಇಷ್ಟಲಿಂಗವೆಂಬ, ದೃಷ್ಟಿ ತೋರಿ ನಿಶ್ಚಯದ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ

ಅಯ್ಯಾ ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ ನೀವು ನಿಮ್ಮ ಮಹತ್ವವ

ಹುದುಗಿದಿರಲ್ಲಾ ಅಯ್ಯಾ ಎನ್ನ ಆರಾಧ್ಯ ಕೂಡಲ ಸಂಗಮದೇವಾ

ಎನ್ನೊಳಗೆ ನಿಮ್ಮಿರವ, ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾʼʼ

ಬಸವಣ್ಣನವರ ಈ ವಚನ ಸರಳವಾಗಿ, ದೀಕ್ಷೆಯ ರಹಸ್ಯವನ್ನು ಬಿಚ್ಚಿ ತೋರಿಸುತ್ತದೆ.

ದೀಕ್ಷೆಯ ಪರಿಣಾಮ ಸಾಧಕನಿಗೆ ಹೇಗಾಗುತ್ತದೆ ಎಂದು ಚನ್ನಬಸವಣ್ಣನವರ ವಚನ ಹೀಗೆ ಹೇಳುತ್ತದೆ.

ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ, ಜಿಹ್ವೆಯಲ್ಲಿ ರುಚಿ,

ಶ್ರೋತ್ರದಲ್ಲಿ ಕುಶಬ್ದ, ನಾಸಿಕದಲ್ಲಿ ದುರ್ಗಂಧ, ನೋಟದಲ್ಲಿ ಕಾಮ,

ಶಬ್ದದಲ್ಲಿ ವಿರೋಧ ಇಂತೀ ಭವಿಯ ಕಳೆದು ಭಕ್ತನ ಮಾಡಿದ ಪರಿ….

ಇಂತು ಪೂರ್ವ ಗುಣವಳಿದು, ಪುನರ್ಜಾತನಾದ, ಕಾರಣ ಕೂಡಲ ಚನ್ನಸಂಗಾ

ನಿಮ್ಮ ಶರಣ ಸರ್ವಾಂಗಲಿಂಗಿಯಾದ.

ಎನ್ನುತ್ತಾನೆ. ಯೋಗ್ಯ ಗುರುವಿನಿಂದ ಯೋಗ್ಯ ಶಿಷ್ಯನಿಗೆ ಲಭಿಸಿದ ದೀಕ್ಷೆ ಸಾರ್ಥಕವಾಗುತ್ತದೆ. ಗುರುವಿಗೆ ತಕ್ಕ ಶಿಷ್ಯ ಅಧ್ಯಾತ್ಮ ಕ್ಷೇತ್ರದಲ್ಲಿ ಸಿಗುವುದು ಒಂದು ಮಂಗಳದ ಘಟನೆ. ಅನರ್ಹ ಶಿಷ್ಯನಿಗೆ ನೀಡುವ ದೀಕ್ಷೆ ವ್ಯರ್ಥ, “ಹಸನಮಾಡಿ ಹರಗಿದ ಹೊಲದಲ್ಲಿ ಕಸವ ಬಿತ್ತುವ ಮರುಳತನ’ವಾಗುತ್ತದೆ. ಎಂದು ತೋಂಟದ ಸಿದ್ಧಲಿಂಗರು ಎಚ್ಚರಿಸಿದ್ದಾರೆ. ರಾಮಕೃಷ್ಣ ಪರಮಹಂಸರು ಹೇಳುವಂತೆ-

ಸದ್ಗುರು ಉರಿಯುತ್ತಿರುವ ಪಂಜನಂತಿರಬೇಕು ಯೋಗ್ಯನಾದ ಶಿಷ್ಯ-ಒಣಗಿದ ಸೌದೆಯಂತಿರಬೇಕು. ಒಣಗಿದ ಸೌದೆ ಬೆಂಕಿ ಸ್ಪರ್ಶವಾದ ಕೂಡಲೇ ಹತ್ತಿಕೊಳ್ಳುತ್ತದೆ. ಹಸೀ ಸೌದೆಯಾದರೆ, ಹತ್ತುವುದಿಲ್ಲ. ಶಿಷ್ಯ ಒಣಗಿದ ಸೌದೆಯಂತಿರಬೇಕು. ಅಂದರೆ ಗುರುವಿನ ಉಪದೇಶದ ಜ್ಞಾನದ ಕಿಡಿ ಅವನಲ್ಲಿ ಹೊತ್ತಿಕೊಳ್ಳುತ್ತದೆ” ಎಂದು ಅವರು ಕೊಡುವ ದೃಷ್ಟಾಂತಗಳು ದೀಕ್ಷೆ-ಗುರು-ಶಿಷ್ಯರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ.

ಶಿವಯೋಗ ಸಾಧಕ ಗುರೂಪದೇಶವನ್ನು, ಒಬ್ಬ ವಿಜ್ಞಾನಿ ಪ್ರಯೋಗ ಶಾಲೆಯಲ್ಲಿ ವಿಜ್ಞಾನವನ್ನು ಪರೀಕ್ಷೆ ಮಾಡುವಂತೆ, ತನ್ನ ಸಾಧನೆಯ ಪ್ರಯೋಗ ಶಾಲೆಯಲ್ಲಿ ಪರೀಕ್ಷೆ ಮಾಡಬೇಕು, ಅಧ್ಯಾತ್ಮದ ದಾರಿ ಸಾಹಸದ ದಾರಿ, ಅಲ್ಲಿ ಜಾರುವ ಸಂಭವವೇ ಹೆಚ್ಚು. ಅದಕ್ಕೆ ಅಖಂಡ ತಾಳ್ಮೆಬೇಕು. ಆದರ್ಶಗಳನ್ನು ಪಾಲಿಸ ಬೇಕಾದರೆ ಅವಿಶ್ರಾಂತ ಶ್ರಮಬೇಕು. ದೀಕ್ಷೆ ದುರ್ಬಲರಿಗೆ, ಸೋಮಾರಿಗಳಿಗೆ ಸಲ್ಲದು. ಬರೀ ಗುರೂಪದೇಶ ಪಡೆದು ಕುಳಿತರೆ ಸಾಲದು. ಜೀವನದಲ್ಲಿ ಸತತ ಸಾಧನೆಯಿಂದ, ಅಳವಡಿಸಿಕೊಂಡಾಗ ಮಾತ್ರ ಉಪದೇಶ ಸಫಲವಾಗುತ್ತದೆ. “ಕೈದುವ ಕೊಡಬಹುದಲ್ಲದೆ ಕಲಿತನವ ಕೋಡಬಹುದೇ? ಸದ್ಗುರು

ಕಾರುಣ್ಯವಾದರೂ, ಸಾಧಿಸಿದವನಿಲ್ಲ, ಸಕಲೇಶ್ವರಾ” ಎಂದು ಎಚ್ಚರಿಸಿದ್ದಾನೆ- ಸಕಲೇಶ ಮಾದರಸ.   

ವೀರಶೈವ ಸಿದ್ಧಾಂತದಲ್ಲಿ ಶಿವ, ಬ್ರಹ್ಮವನ್ನು ‘ಸ್ಥಲ’ ವೆಂದು ಕರೆದಿದ್ದಾರೆ. ಲಿಂಗ ಶಬ್ದ ಇದಕ್ಕೆ ಪರ್ಯಾಯವಾಗಿದೆ. “ಸ್ಥಿಯತೇ ಲೀಯತೇ ಯತ್ರ ಜಗದೇತಚ್ಚರಾಚರಂ ತದ್ಬ್ರಹ್ಮಸ್ಥಲಮಿತ್ಯುಕ್ತಂ ಸ್ಥಲತತ್ತ್ವ ವಿಶಾರದೈಃʼʼ ಎನ್ನುವ ಆಗಮ ಪ್ರಮಾಣದಂತೆ ಯಾವುದರಿಂದ ಎಲ್ಲಾ ಬಂದಿದೆಯೋ, ಯಾರಲ್ಲಿ ಎಲ್ಲಾ ಜೀವಿಸಿದೆಯೋ, ಎಲ್ಲಿಗೆ ಕೊನೆಗೆ ತೆರಳುವುದೋ ಅದೇ ಬ್ರಹ್ಮ ಅಥವಾ ಲಿಂಗ. ಇದನ್ನೇ ಸ್ಥಲವೆಂದು ಕರೆದಿದ್ದಾರೆ.

ಈ ‘ಸ್ಥಲ’ ಪರಶಿವ ಸ್ವಲೀಲೆಯಿಂದ ಅಂಗಸ್ಥಲ ಲಿಂಗಸ್ಥಲವೆಂದು ಎರಡು ವಿಧವಾಗುತ್ತದೆ. ‘ಲಿಂಗವು’ ಭಕ್ತನ ಅನುಗ್ರಹಾರ್ಥವಾಗಿ ಸ್ಥೂಲ-ಸೂಕ್ಷ್ಮ-ಕಾರಣ ಶರೀರಗಳ ಸ್ಥಾನ ಭೇದದಿಂದ ಇಷ್ಟ-ಪ್ರಾಣ-ಭಾವ ಲಿಂಗಗಳೆಂದು, ಮೂರು ವಿಧವಾಗುತ್ತವೆ. ಮತ್ತೆ ಇಷ್ಟಲಿಂಗದಲ್ಲಿ ಆಚಾರಲಿಂಗ, ಗುರುಲಿಂಗವೆಂದೂ, ಪ್ರಾಣ-ಲಿಂಗದಲ್ಲಿ ಶಿವಲಿಂಗ-ಜಂಗಮ ಲಿಂಗವೆಂದೂ, ಭಾವಲಿಂಗದಲ್ಲಿ-

ಪ್ರಸಾದಲಿಂಗ-ಮಹಾಲಿಂಗವೆಂದೂ ಆರು ಪ್ರಕಾರಗಳಾಗುತ್ತವೆ. ಪರಶಿವನ ಮತ್ತೊಂದು ರೂಪವೇ ‘ಅಂಗ’ (ಜೀವ) ಇದರಲ್ಲೂ ಯೋಗಾಂಗ-ಭೋಗಾಂಗ-ತ್ಯಾಗಾಂಗ ಎಂದು ಮೂರು ವಿಧ-ಇವುಗಳನ್ನು ಅನುಸರಿಸಿ, ಬೇರೆ-ಬೇರೆ ಸ್ಥಲಗಳೂ ಉಂಟಾಗುತ್ತವೆ.

ತ್ಯಾಗಾಂಗದಲ್ಲಿ ಭಕ್ತ-ಮಹೇಶ ಎಂದೂ; ಭೋಗಾಂಗದಲ್ಲಿ ಪ್ರಸಾದಿ- ಪ್ರಾಣಲಿಂಗಿ ಎಂದೂ ಯೋಗಾಂಗದಲ್ಲಿ-ಶರಣ-ಐಕ್ಯವೆಂದು, ಆರು ಪ್ರಕಾರಗಳಾಗುತ್ತವೆ.

 ಹೀಗೆ ಇನ್ನೂ ಉಪಾಂಗಗಳೊಂದಿಗೆ ಅಂಗಸ್ಥಲ ೪೪ ಭಾಗಗಳಾಗಿ ಲಿಂಗಸ್ಥಲ ೫೯ ಭಾಗಗಳಾಗಿ ವಿಭಾಗಿಸಲ್ಪಟ್ಟಿರುತ್ತವೆ. ಅಂಗಸ್ಥಲವು ೪೪ ಲಿಂಗಸ್ಥಲವು ೫೭ ಒಟ್ಟು ೧೦೧ ಸ್ಥಲಗಳಾಗುತ್ತವೆ.

ಅಂಗಸ್ಥಲದ

ತ್ಯಾಗಾಂಗದಲ್ಲಿ ಭಕ್ತಸ್ಥಲ ಮಹೇಶ ಸ್ಥಲ ಶ್ರದ್ಧಾಭಕ್ತಿ-ನಿಷ್ಠಾಭಕ್ತಿಗಳು,

ಭೋಗಾಂಗದಲ್ಲಿ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಅವಧಾನ ಭಕ್ತಿ- ಅನುಭಾವ ಭಕ್ತಿಗಳು,

ಯೋಗಾಂಗದಲ್ಲಿ ಶರಣಸ್ಥಲ ಐಕ್ಯಸ್ಥಲ ಆನಂದಭಕ್ತಿ-ಸಮರಸ ಭಕ್ತಿ.

ಲಿಂಗಸ್ಥಲದ

ಇಷ್ಟಲಿಂಗದಲ್ಲಿ ಆಚಾರಲಿಂಗ-ಗುರುಲಿಂಗ, ಕ್ರಿಯಾಶಕ್ತಿ-ಜ್ಞಾನಶಕ್ತಿಗಳು,

ಪ್ರಾಣಲಿಂಗದಲ್ಲಿ ಶಿವಲಿಂಗ-ಜಂಗಮಲಿಂಗ, ಇಚ್ಛಾಶಕ್ತಿ-ಆದಿಶಕ್ತಿಗಳು,

ಭಾವಲಿಂಗದಲ್ಲಿ ಪ್ರಸಾದಲಿಂಗ-ಮಹಾಲಿಂಗ, ಪರಾಶಕ್ತಿ-ಚಿತ್‌ಶಕ್ತಿಗಳು ಪ್ರಧಾನ

ಹೀಗೆ ವೀರಶೈವ ಶಿವಯೋಗಿಯು ೧೦೧ ಸ್ಥಾನಗಳ ಜ್ಞಾನವನ್ನು ಪಡೆದು ಹಂತ ಹಂತವಾಗಿ ಮುಂದುವರಿದು ಶಿವಯೋಗ ಸಿದ್ಧಿಯನ್ನು ಪಡೆಯಬೇಕಾಗುತ್ತದೆ. ಭಾರತೀಯ ಯೋಗಶಾಸ್ತ್ರ ಪರಂಪರೆಯಲ್ಲಿ ವೀರಶೈವ ಶಿವಯೋಗದ ಪರಿಕಲ್ಪನೆ, ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ. ಸ್ಥಲಗಳ ಪರಿಕಲ್ಪನೆಯಲ್ಲಿ ಒಂದು-ಎರಡಾಗಿ, ಮೂರಾಗಿ, ಆರಾಗಿ ಮುವತ್ತಾರೂ ಆಗಿ; ಕೊನೆಗೆ ೧೦೧ ಆಗುವ ಸಾಧನಾ ಪಥದ ಹೆಜ್ಜೆಗಳು ಕೇವಲ ಸಂಖ್ಯಾ ಚಮತ್ಕಾರವಲ್ಲ: ಶಿವಯೋಗಿಗಳು ಸಾಧಿಸಬಹುದಾದ ಶಿವಯೋಗದ ಅಂಕಗಣಿತ; ಜೀವಂತ ಪ್ರಕ್ರಿಯೆ. ಯಾವ ಏಕ(ಸ್ಥಲ) ದಿಂದ ಅನೇಕ (೧೦೧) ವಾಗಿದೆಯೋ, ಯಾವ ಏಕ, ಅನೇಕದಂತಿದೆಯೋ, ಆ ಏಕವನ್ನು ಕಂಡು ಹಿಡಿದು ಅದರಲ್ಲಿ ಐಕ್ಯವಾಗುವುದೇ, ಶಿವಯೋಗದ ಪರಿ, ಲಿಂಗಾಂಗ ಸಾಮರಸ್ಯದ ಗುರಿ. ಶಿವನ ಪೂಜೆ, ಶಿವನ ಕ್ರಿಯೆ, ಶಿವಜಪ, ಶಿವಧಾನ್ಯ, ಶಿವಜ್ಞಾನಗಳ ಯೋಗಶಾಸ್ತ್ರ ಇಲ್ಲಿಯ ೧೦೧ ಸ್ಥಲಗಳು ಶಿವಯೋಗ ಸಾಧನೆಯ ಸೋಪಾನಗಳು. ಸೋಪಾನಗಳು ಶಿಖರಗಳಲ್ಲಿ ಬೆಟ್ಟದ ತುದಿಯಲ್ಲಿರುವ ದೇಗುಲಕ್ಕೆ, ಒಂದೊಂದೇ ಮೆಟ್ಟಿಲನ್ನು ಏರಿ, ಮನಸ್ಸಿನ ಎಲ್ಲ ಆತ೦ಕಗಳನ್ನು ಹಿಂದಕ್ಕೆ ತಳ್ಳಿ, ಮುಂದೆ ಸಾಗುವ ಯಾತ್ರಿಕನಂತೆ ಅಂಗನು ಲಿಂಗದೇವನ ಯಾತ್ರೆಗೆ ಸಾಗುವ ಮಹಾಯಾತ್ರೆ (Long Journey). ಇದು ಶಿವಯೋಗ, ವಿಜ್ಞಾನ, ಪರವ ಮಾನಸಶಾಸ್ತ್ರ, ವ್ಯಕ್ತಿಯ ಮಾನಸಿಕ ವಿಕಾಸದ ಪರಿಪೂರ್ಣತೆ.

ಷಟ್ ಸ್ಥಲಗಳ ಸಾಧನಾಕ್ರಮ : ಪರಿಕಲ್ಪನೆ

ಶಿವನಲ್ಲಿರುವ ಶಕ್ತಿಯು, ಪ್ರವೃತ್ತಿ ಮಾರ್ಗದಲ್ಲಿ ಶಕ್ತಿರೂಪದಿಂದಿದ್ದು ನಿವೃತ್ತಿ ಮಾರ್ಗದಲ್ಲಿ ಭಕ್ತಿ ಸ್ವರೂಪವನ್ನು ತಾಳುತ್ತದೆ. ಅದೇ ಭಕ್ತಿ

ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯವೆಂಬ ಆರು ಸ್ಥಲಗಳಲ್ಲಿ ಕ್ರಮವಾಗಿ ಶ್ರದ್ಧಾ-ನಿಷ್ಕಾ-ಅವಧಾನ-ಅನುಭವ, ಆನಂದ-ಸಮರಸ ಭಾವವನ್ನು ಆಶ್ರಯಿಸುತ್ತವೆ.

ಸಾಧಕ (ಅಂಗ)ನು ಭಕ್ತಸ್ಥಲದಲ್ಲಿ ಅಷ್ಟಾವರಣ ಸಂಪನ್ನನಾಗಿ, ಪಂಚಾಚಾರ ಶೀಲನಾಗಿ, ಅವುಗಳನ್ನು ಅನುಷ್ಠಾನ ಮಾಡುವ ಪ್ರವೃತ್ತಿ ಬೆಳೆದು ಅವನಿಗೆ ‘ಶ್ರದ್ಧಾʼ ಭಾವನೆ ಬೆಳೆಯುತ್ತದೆ. ‘ಬೀಜ-ವೃಕ್ಷ’ ನ್ಯಾಯದಂತೆ, ಈ ಹಂತದಲ್ಲಿ ಬೀಜ ಪರಿವರ್ತನೆಗೊಂಡು, ವೃಕ್ಷ ಬೆಳೆಯುವಂತೆ, ದೇಹಾದಿ ಅಭಿಮಾನ ನಷ್ಠವಾಗಿ, ದೈವೀ ಶ್ರದ್ಧೆ ಬೆಳೆಯುತ್ತದೆ. 

ಮಹೇಶ ಸ್ಥಲದಲ್ಲಿ ಶ್ರದ್ಧೆ-ಕ್ರಮೇಣ ನಿಷ್ಠೆಯಾಗಿ, ಪರಿಣಮಿಸುತ್ತದೆ. ಸಾಧಕ ತನ್ನ ಆಚಾರ ವಿಚಾರಗಳಲ್ಲಿ ವ್ರತ ನಿಷ್ಠನಾಗುತ್ತಾನೆ. ದಾರ್ಶನಿಕರು ಈ ಸ್ಥಲವನ್ನು ‘ಸಲಿಲ-ಮುಕ್ತ ನ್ಯಾಯ’ಸ್ಥಲವೆಂದು ಕರೆದಿದ್ದಾರೆ. ಸಮುದ್ರದ ಮುತ್ತಿನ ಚಿಪ್ಪಿನಲ್ಲಿ ಬಿದ್ದ ಸ್ವಾತಿಯ ಮಳೆಯ, ನೀರು ಕಾಲಾನಂತರದಲ್ಲಿ ಗಟ್ಟಿಗೊಂಡು ಮುತ್ತು ಆಗವಂತೆ ಅಂಗನಲ್ಲಿ (ಸಾಧಕ) ಶ್ರದ್ಧೆ ನಿಷ್ಠೆಯಾಗಿ ಪರಿಣಮಿಸುತ್ತದೆ.

ಪ್ರಸಾದಿ ಸ್ಥಲದಲ್ಲಿ ಸಾಧಕನ ಭಕ್ತಿಯು ಚಿತ್ತಶುದ್ಧಿಯ ಮೂಲಕ ಅವಧಾನ ಭಕ್ತಿ ಎನಿಸುತ್ತದೆ. ಈ ಹಂತದಲ್ಲಿ ಸಾಧಕನಿಗೆ ಜಾಗ್ರತ, ಎಚ್ಚರ ಮೂಡುತ್ತದೆ. ಇದನ್ನು ‘ಅನಲ ಕಾಷ್ಠ ನ್ಯಾಯ’ ಸ್ಥಲವೆಂದು ಕರೆಯುತ್ತಾರೆ. ಅಗ್ನಿ ಸಂಪರ್ಕಕ್ಕೆ ಬಂದ ಕಾಷ್ಠ ತನ್ನ ಗುಣಗಳನ್ನು ಕಳೆದುಕೊಳ್ಳುವಂತೆ, ಸಾಧಕನಲ್ಲಿ ಶಿವಭಕ್ತಿ ಎಚ್ಚರಗೊಂಡು ಅವನ, ಮನಸ್ಸಿನ ದೋಷಗಳು, ಕಷಾಯಗಳು ಭಸ್ಮವಾಗಿ, ಚಿತ್ತ ಪ್ರಸನ್ನವಾಗಿ, ಪ್ರಸಾದ ಕಾಯನಾಗುತ್ತಾನೆ.

ಪ್ರಾಣಲಿಂಗಿ ಸ್ಥಲದಲ್ಲಿ ಸಾಧಕನ ಭಾವನೆ ಇನ್ನೂ ತೀವ್ರವಾಗಿ ಬೆಳೆದು ಅನುಭಾವ ಉಂಟಾಗುತ್ತದೆ.  ಇದನ್ನು ದಾರ್ಶನಿಕರು ‘ಭ್ರಮರ-ಕೀಟ ನ್ಯಾಯ’ ಎಂದು ಕರೆದಿದ್ದಾರೆ. ಕೀಟವೊಂದು ಭ್ರಮರವನ್ನು  ನೆನೆದು-ನೆನೆದು, ಭ್ರಮರವೇ ಆಗುವಂತೆ, ಅಂಗನು ಲಿಂಗವನ್ನು ನೆನೆದು-ನೆನೆದು, ಲಿಂಗವಾಗುವ ಹಂತಕ್ಕೆ ಏರುತ್ತಾನೆ. ʼʼಕೀಟ ಭ್ರಮರ ಯೋಗೇನ ಭ್ರಮರೋ ಭವತಿ ಧ್ರುವಂʼ’- ಶಿವಭಕ್ತ ಶಿವಯೋಗೇನ ʼʼಶಿವೋ ಭವತಿ ನಿಶ್ಚಿತಂ” ಎನ್ನುವ ಪ್ರಮಾಣ ವಾಕ್ಯದಲ್ಲಿ, ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾಗಿ, ಶಿವಾನುಭವದ ನೆಲೆಗೆ ಏರುತ್ತಾನೆ.

ಶರಣಸ್ಥಲ ಈ ಸ್ಥಲದಲ್ಲಿ ಸಾಧನಕಲ್ಲಿ ಆನಂದ ಭಕ್ತಿ ಉಂಟಾಗುತ್ತದೆ. ಶಿವನಲ್ಲಿ ಅಚಲ ನಂಬಿಕೆ ಬಂದು ಆನಂದವಾಗುತ್ತದೆ. ಈ ಸ್ಥಲವನ್ನು ʼʼಸತಿ-ಪತಿ ನ್ಯಾಯ’ ಸ್ಥಲವೆಂದು ಕರೆಯುತ್ತಾರೆ. ಇಲ್ಲಿ ಸಾಧಕನಿಗೆ ತಾನು ಶರಣನೆಂಬ ಅಭಿಮಾನ ಉಂಟಾಗುತ್ತದೆ. ತಾನು ಸತಿ-ಲಿಂಗಪತಿ ಎಂಬ ಭಾವನೆ ಬೆಳೆದು ಸಾಧನೆ ಮುಂದುವರಿಯುತ್ತದೆ.

ಐಕ್ಯಸ್ಥಲ-ಈ ಸ್ಥಲದಲ್ಲಿ ಸಾಧಕನಿಗೆ ಸಮರಸ ಭಾವ ಬೆಳೆಯುತ್ತದೆ. ಈ ಹಂತದಲ್ಲಿ ಜೀವ ಭಾವವಳಿದು, ಪರಮಾತ್ಮನಲ್ಲಿ ಅಂಗ ಭಾವವಳಿದು, ಲಿಂಗದಲ್ಲಿ ಬೆರೆಯುತ್ತಾನೆ. ಈ ಸ್ಥಲವನ್ನು ದಾರ್ಶನಿಕರು “ಶಿಖಿ-ಕರ್ಪೂರ ನ್ಯಾಯ’ವೆಂದು ಗುರುತಿಸುತ್ತಾರೆ. ಬೆಂಕಿ-ಕರ್ಪುರ ಸಂಯೋಗದಿಂದ ಉರಿದು ಕಡೆಗೆ, ಎರಡೂ ಇಲ್ಲವಾಗುವಂತೆ, ನೀರು-ನೀರಿನಲ್ಲಿ, ಬೆಂಕಿ-ಬೆಂಕಿಯಲ್ಲಿ ಬೆರೆಯುವಂತೆ, ನದಿಯು  ಸಮುದ್ರವನ್ನು ಸೇರುವಂತೆ, (ಜಲೇ-ಜಲಮಿವನ್ಯಸ್ತಂ ವಹ್ನೌವಹ್ನಿರಿವಾರ್ಪಿತಂ | ಪರಬ್ರಹ್ಮಣಿ ಲೀನಾತ್ಮ ವಿಭಾಗೇನ ಸದೃಕತ್ ಸಿದ್ಧಾಂತ ಶಿಖಾಮಣಿ). ಇದೇ ಲಿಂಗಾಂಗ – ಸಾಮರಸ್ಯ.

ಷಟ್‌ಸ್ಥಲಗಳ ಮಾರ್ಗದಲ್ಲಿ-ಭಕ್ತ-ಮಹೇಶ-ಪ್ರಸಾದಿ ಸ್ಥಲಗಳು- ಶಿವಯೋಗದ ಬಹಿರ್ ಸಾಧನೆಗಳಾದರೆ; ಪ್ರಾಣಲಿಂಗಿ-ಶರಣ-ಐಕ್ಯಸ್ಥಲಗಳು ಅಂತರಂಗ ಶಿವಯೋಗದ ಸಾಧನೆಗಳು   

ಯೋಗ-ಶಿವಯೋಗ :

ಪತಂಜಲಿಯ ಯೋಗಶಾಸ್ತ್ರಕ್ಕೂ ಶಿವಯೋಗಕ್ಕೂ ತುಂಬಾ ಸಾಮ್ಯತೆಯನ್ನು ಗುರುತಿಸಬಹುದಾಗಿದೆ. ದೇಹದ ಅಂತರ್- ಬಹಿರ್‌ ಶುದ್ಧಿಗಾಗಿ ಪತಂಜಲಿ ಹೇಳುವ ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರಗಳು ಬಹಿರ್ಯೊಗ, ಸಾಧನೆಗಳು, ಧಾರಣ ಧ್ಯಾನ-ಸಮಾಧಿಗಳು ಅಂತರಂಗದ ಯೋಗ ಸಾಧನೆಗಳು. ಯಮ-ನಿಯಮ ಪರಿಪಾಲನೆ ಶಿವಯೋಗದ ಭಕ್ತಸ್ಥಲದಲ್ಲಿ ಆಗುತ್ತದೆ. ಪ್ರತ್ಯಾಹಾರ- ಪ್ರಸಾದಿ ಸ್ಥಲದಲ್ಲೂ; ಧ್ಯಾನ-ಧಾರಣ, ಪ್ರಾಣಲಿಂಗಿ ಸ್ಥಲದಲ್ಲೂ; ಸಮಾಧಿ-ಐಕ್ಯಸ್ಥಲದಲ್ಲೂ, ಶಿವಯೋಗಿಯ ಆಚರಣೆಯ ಅನುಭವಕ್ಕೆ ಬರುತ್ತವೆ.

ಲಿಂಗಾಂಗ ಸಾಮರಸ್ಯವನ್ನು ಸಾಧಿಸಲು, ಶಿವಯೋಗಿಗಳು ಸಾಧಿಸಿದ ಯೋಗ- ಶಿವಯೋಗ. ಹಠ-ಲಯ-ಮಂತ್ರ-ರಾಜ ಯೋಗಗಳು ಶರೀರ, ಪ್ರಾಣ, ಮನ, ಬುದ್ಧಿಗಳನ್ನು ಶುದ್ದೀಕರಿಸಿ, ಅವುಗಳ ವಿಕಾಸಕ್ಕೆ ಕಾರಣವಾದರೆ ಶಿವಯೋಗ, ಈ ಎಲ್ಲಾ ಶಕ್ತಿಗಳನ್ನು ವಿಕಾಸಗೊಳಿಸಿ, ಲಿಂಗಾಂಗ ಸಾಮರಸ್ಯಕ್ಕೆ ಕಾರಣವಾಗುತ್ತದೆ. ಶರೀರ- ಇಂದ್ರಿಯ, ಮನ, ಪ್ರಾಣ, ಬುದ್ಧಿಗಳಲ್ಲಿ ಲಿಂಗ ಕಿರಣಗಳನ್ನು ಬೆಳಗಿಸಿ, ಶಿವಾತ್ಮಕವಾಗಿ ರೂಪಾಂತರಗೊಳಿಸುವುದೇ, ಶಿವಯೋಗ. ದೇಹಕ್ಕೆ ಸ್ಥಿರತೆ ನೀಡುವ ಆಸನ, ವಾಯುವಿಗೆ ಸ್ಥಿರತೆ ನೀಡುವ ಪ್ರಾಣಾಯಾಮ ಇವು ಇಷ್ಟಲಿಂಗದ ದೃಷ್ಟಿಯೋಗದಿಂದ ಸಂಭವಿಸುತ್ತವೆ. ಇಂದ್ರಿಯಗಳ ಬಯಕೆಗಳನ್ನು, ಹಿಂದಿರುಗಿಸುವ, ಪ್ರತ್ಯಾಹಾರವು ಪ್ರಸಾದಿ ಸ್ಥಲದಲ್ಲೇ ಅನುಭವಕ್ಕೆ ಬರುತ್ತದೆ. ಇಂದ್ರಿಯಗಳ ವಿಷಯಗಳನ್ನು ಪದಾರ್ಥರೂಪದಿಂದ ಗ್ರಹಿಸದೇ ಪ್ರಸಾದ ರೂಪದಿಂದ ಗ್ರಹಿಸುವ ಕಾರಣ, ಪ್ರತ್ಯಾಹಾರವನ್ನು ಪ್ರತ್ಯೇಕವಾಗಿ ಆಚರಿಸುವ ಅಗತ್ಯವಿಲ್ಲ. ಧ್ಯಾನ-ಸಮಾಧಿಗಳು, ಐಕ್ಯಸ್ಥಲದಲ್ಲಿ ಅನುಭವಕ್ಕೆ ಬರುತ್ತವೆ. ಕಣ್ಣಿಗೆ ಕಾಣುವುದು, ಇಷ್ಟಲಿಂಗ, ಮನಸ್ಸಿಗೆ ಕಾಣುವುದು ಪ್ರಾಣಲಿಂಗ, ಭಾವದಲ್ಲಿ ಕಾಣುವುದು ಭಾವಲಿಂಗ, ಪತಂಜಲಿಯೂ ಸಮಾಧಿಗಳಲ್ಲಿ ಸಂಪ್ರಜ್ಞಾತ ಅಸಂಪ್ರಜ್ಞತವೆಂದು  ಎರಡು ವಿಧವೆಂದು ಹೇಳುತ್ತಾನೆ.

ಭಾವದಲ್ಲಿ ಮನಸ್ಸು ಮಗ್ನವಾಗುವುದು ಸಂಪ್ರಜ್ಞಾತ ಸಮಾಧಿ, ಭಾವದಲ್ಲೇ ಮನಸ್ಸು ನಿಮಗ್ನ (ಮುಳುಗು) ವಾಗುವುದು, ಅಸಂಪ್ರಜ್ಞಾತ ಸಮಾಧಿ ಇದಕ್ಕೊಂದು ದೃಷ್ಟಾಂತ ಹೀಗಿದೆ. ಒಂದು ತೊಟ್ಟಿಲಲ್ಲಿ ಮಗು ಆಡುತ್ತಾ ಮಲಗಿದೆ. ಅದನ್ನು ಮಲಗಿಸಲು ತಾಯಿ ಜೋಗುಳ ಹಾಡುತ್ತಾ ತೂಗುತ್ತಿದ್ದಾಳೆ ಆಕೆ ಹಾಡುತ್ತಿದ್ದಾಳೆ, ಕಾಲ ಸರಿಯುತ್ತದೆ. ತಾಯಿಯ ಹಾಡು ಕೇಳುತ್ತಾ ಕೇಳುತ್ತಾ ಮಗು ಮೌನವಾಗುತ್ತದೆ. ಮಲಗಿ ಆನಂದಿಸುತ್ತದೆ. ತೂಗುತ್ತಾ-ತೂಗುತ್ತಾ ತಾಯಿ ತನಗರಿವಿಲ್ಲದಂತೆ, ನಿಶ್ಯಬ್ದ ನಿದ್ರೆಯಲ್ಲಿ ಪ್ರವೇಶಿಸುತ್ತಾಳೆ. ಆ ಸಮಯದಲ್ಲಿ ಮಗುವಿಲ್ಲ; ತಾಯಿಯಿಲ್ಲ; ತೊಟ್ಟಿಲಲ್ಲಿ ತೂಗುವಿಕೆಯೂ ಇಲ್ಲ. ಆನಂದ ಸಮರಸಗೊಂಡಿದೆ. ಅಲ್ಲಿ ವ್ಯಕ್ತಿ ಪ್ರಜ್ಞೆಯೂ ಇಲ್ಲ. ಇದು ಅಸಂಪ್ರಜ್ಞಾತ ಸಮಾಧಿಯೋಗ.

ಲಿಂಗವು ಪೂಜ್ಯವಸ್ತು; ಅಂಗ ಪೂಜಕ, ಶರೀರದಲ್ಲಿ ಆರು ಚಕ್ರಗಳಿವೆ. ಎಂದು ಯೋಗಿಗಳು ಹೇಳುತ್ತಾರೆ. ಮೂಲಾಧಾರ (ಮಲಸ್ಥಾನ) ಸ್ವಾಧಿಷ್ಠಾನ (ಜಲಸ್ಥಾನ) ಮಣಿಪುರ (ಅಗ್ನಿಸ್ಥಾನ) ಅನಾಹತ (ವಾಯು ಸ್ಥಾನ) ವಿಶುದ್ಧಿ (ಶಬ್ದ) ಆಜ್ಞಾ (ಮನಸ್ಸು) ಇವು ಶಕ್ತಿಯ ಜಾಗೃತ ಸಾಧನೆಯ ಅಂಶಗಳು, ಈ ಆರು ಚಕ್ರಗಳಲ್ಲಿ ಒಂದೊಂದರಂತೆ ಆರು ಲಿಂಗಗಳಿದ್ದು, ಪ್ರತಿಯೊಂದು ಚಕ್ರದಲ್ಲೂ ಲಿಂಗ- ಅಂಗಗಳ ಸಾಮರಸ್ಯವನ್ನು, ಶಿವಯೋಗಿಯು, ಇಷ್ಟಲಿಂಗದ ಮೂಲಕ ಸಾಧಿಸಬೇಕು. ಮೂಲಾಧಾರದಲ್ಲಿ ಆಚಾರಲಿಂಗ, ಸ್ವಾಧಿಷ್ಠಾನದಲ್ಲಿ ಗುರುಲಿಂಗ, ಮಣಿಪುರದಲ್ಲಿ ಶಿವಲಿಂಗ : ಅನಾಹತ ಚಕ್ರದಲ್ಲಿ ಜಂಗಮ ಲಿಂಗ, ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗ; ಆಜ್ಞಾಚಕ್ರದಲ್ಲಿ ಮಹಾಲಿಂಗ. ಹೀಗೆ ಶಿವಯೋಗ ಸಾಧಕನ ಇಡೀ ದೇಹವೇ, ಲಿಂಗಮಯ ಎನ್ನುವ ಅದ್ಭುತ ಕಲ್ಪನೆ ಶಿವಯೋಗದಲ್ಲಿದೆ. ಭ್ರೂಮಧ್ಯದ, ಮೇಲು ಭಾಗದಲ್ಲಿ ಬ್ರಹ್ಮರಂಧ್ರವಿದೆ. ಅಲ್ಲಿ ಸಾವಿರಾರು ದಳದ ಕಮಲ ಮಧ್ಯದಲ್ಲಿ ಚಂದ್ರಮಂಡಲ-ಕೈಲಾಸ. ಅಲ್ಲಿ ಮೂವತ್ತಾರು ತತ್ತ್ವಗಳಿಗೆ, ಅತೀತವಾದ ಸ್ವಪ್ರಕಾಶವಿದೆ. ಅಲ್ಲಿ ಹಂಸರೂಪಿ ಲಿಂಗವನ್ನು ಅವನೇ ನಾನು (ಸೋಹಂ) ಎನ್ನುವ ಭಾವನೆಯಿಂದ ಧ್ಯಾನಿಸುತ್ತಾನೆ ಇದೇ ಶಿವ ಜೀವೈಕ್ಯ ಸಿದ್ಧಿ. ಇದೇ ಲಿಂಗಾಂಗ ಸಾಮರಸ್ಯದ ಪರಿಕಲ್ಪನೆ. ಇದೇ ಶಿವಯೋಗ ಸಮಾಧಿ. ಶಿವಯೋಗದಲ್ಲಿ ಭಕ್ತಸ್ಥಲ ದಿಂದ-ಐಕ್ಯಸ್ಥಲದ ವರೆಗೆ ಸಾಧಕ ಬೆಳೆಯುತ್ತಾ ಬಂದಂತೆ, ಲಿಂಗೋಪಾಸನೆಯಿಂದ, ಭಕ್ತಿಯೂ ವಿಕಾಸಗೊಳ್ಳುತ್ತಾ ಬರುತ್ತದೆ. ಆಯಾ ಲಿಂಗಗಳ ಕ್ರಿಯಾ ಶಕ್ತಿಯೂ, ವಿಕಾಸವಾಗುತ್ತದೆ. ವೀರಶೈವ ಶಿವಯೋಗದ ವಿಭಾಗ ವಿಫುಲ ವೈವಿಧ್ಯವನ್ನು ಪಡೆದಿದೆ. ಷಟ್‌ಸ್ಥಲಗಳಲ್ಲಿ ೧೮ ವಿಭಾಗ ; ೩೬ ವಿಭಾಗ ಕೆಲವೆಡೆ ೨೧೬ ರವರೆಗೂ ಹಬ್ಬಿ ಹರಡಿದೆ. ಇವುಗಳಲ್ಲಿ ಏಕೋತ್ತರ ಶತಸ್ಥಲದ ಪರಿಕಲ್ಪನೆ ಪ್ರಸಿದ್ಧವಾಗಿದೆ. ೧೦೧ ಸ್ಥಲಗಳ ವಿಭಾಗ ಕ್ರಮದಲ್ಲಿ ಅಧ್ಯಾತ್ಮಿಕ ವಿಕಾಸದ ಆಶಯ ವ್ಯಕ್ತವಾಗಿದೆ. ಲಿಂಗ ಸ್ವರೂಪ-ಉಪಾಸನಾ ವಿಧಾನ, ಶಕ್ತಿ-ಭಕ್ತಿಗಳ ಪರಿಕಲ್ಪನೆಯನ್ನು ಅರ್ಥಪೂರ್ಣವಾಗಿ ತಿಳಿಸುತ್ತವೆ. ಶಿವಯೋಗ ಸಾಧನೆಗೆ ಇದು ಒಂದು ಮನಶ್ಯಾಸ್ತ್ರದ ಕೈಪಿಡಿ. ಇಲ್ಲಿ ಭಕ್ತಿ-ಜ್ಞಾನ-ಕ್ರಿಯೆ-ಧ್ಯಾನ-ಉಪಾಸನೆ ಎಲ್ಲವೂ ಸಂಮಿಲಿತವಾಗಿದೆ. ವೀರಶೈವ ಧರ್ಮದ ತಾತ್ವಿಕ ಭಾಗ ಸಿದ್ಧಾಂತವಾದರೆ ಶಿವಯೋಗ ಅದರ ಪ್ರಯೋಗ. ಲಿಂಗಾಂಗ ಸಾಮರಸ್ಯ ಅದರ ಸಿದ್ಧಿ Science and applied science ಎಂದು ಹೇಳಬಹುದು. ಒಟ್ಟಿನಲ್ಲಿ ವೀರಶೈವದ ಶಿವಯೋಗ ಸಾಧನಾ ರಂಗವು ಲಿಂಗಾಗ ಸಾಮರಸ್ಯ ಯೋಗ ವಿಜ್ಞಾನದ ಮಹಾ ಪ್ರಯೋಗ ಶಾಲೆ ಎಂದು ಹೇಳಬಹುದಾಗಿದೆ.

ಅವಲೋಕಿಸಿದ ಕೃತಿಗಳು :

೧. ಶಿವಯೋಗ ಪ್ರದೀಪಿಕಾ : ಚನ್ನಸದಾಶಿವಯೋಗಿ

೨. ಯೋಗದರ್ಶನ : ಪತಂಜಲಿ

೩. ಯೋಗಾಂಕ : ಗೀತಾ ಪ್ರೆಸ್ ಗೋರಖಪುರ

೪. ಶಕ್ತಿವಿಶಿಷ್ಟಾದ್ವೈತ : ವೈ. ನಾಗೇಶ ಶಾಸ್ತ್ರಿ

೫.ಶಿವಾದ್ವೈತ ದರ್ಶನ; ಡಾ .ಜ.ಚ.ನಿ

೬. ಶಕ್ತಿವಿಶಿಷ್ಟಾದ್ವೈ ತ ತತ್ತ್ವತ್ರಯ ವಿಮರ್ಶೆ : ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು.

೭.ಭಾರತೀಯ ತತ್ತ್ವಶಾಸ್ತ್ರ : ಡಾ. ಎಂ. ಪ್ರಭಾಕರ ಜೋಷಿ, ಪ್ರೊ. ಹೆಗಡೆ ಸಿದ್ದಾಪುರ

೮.ಮಹಾಯಾತ್ರೆ : ಡಾ. ಆರ್. ಸಿ. ಹಿರೇಮಠ .

೯.ವಚನಗಳಲ್ಲಿ ವೀರಶೈವ ಧರ್ಮ : ಡಾ. ಹೆಚ್. ತಿಪ್ಪೇರುದ್ರಸ್ವಾಮಿ

೧೦. ವಚನ ಶಾಸ್ತ್ರ ರಹಸ್ಯ : ರಂ. ರಾ. ದಿವಾಕರ

೧೧. ವೀರಶೈವ ಸಂಹಿತೆ : ಷಣ್ಮುಖಯ್ಯ ಅಕ್ಕೂರಮಠ

೧೨. ಸೂಕ್ಷ್ಮಾಗಮ : ಅನು : ಷಣ್ಮುಖಯ್ಯ ಅಕ್ಕೂರಮಠ

೧೩. ಶಕ್ತಿ ವಿಶಿಷ್ಟಾದ್ವೈತ ದರ್ಶನ : ಡಾ. ಟಿ. ಜಿ. ಸಿದ್ಧಪ್ಪಾರಾಧ್ಯ

೧೪. ದರ್ಶನ : ದಿಗ್ದರ್ಶನ : ಮಹಾಪಂಡಿತ ರಾಹುಲ ಸಾಂಕೃತ್ಯಾಯನ

೧೫. ಧ್ಯಾನ ಮತ್ತು ಆಧ್ಯಾತ್ಮಿಕ ಜೀವನ : ಸ್ವಾಮಿ ಯತೀಶ್ವರಾನಂದ

.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಆಧಾರಚಕ್ರ – ಮೂರ್ತಿಬ್ರಹ್ಮ (ಆಚಾರಲಿಂಗ)

ತೋರ್ತಿರ್ಪಾಧಾರದಾ | ವರ್ತಿ ಗುದ ಮಂದಿರದ

ಮೂರ್ತಿ ಬ್ರಹ್ಮವನು-ಅರ್ಥಿಯಿಂ ಕರಕಿತ್ತ

ಕೀರ್ತಿಮಯ ಗುರುವೆ ಕೃಪೆಯಾಗು  ||೯೧)

ಇದು ಒಂಭತ್ತನೆಯ ಆಧಾರಚಕ್ರ ಇದರ ವಿವರ ಇಂತಿದೆ-

ಗುದಸ್ಥಾನದಲ್ಲಿ ಆಧಾರಚಕ್ರ ಪೃಥ್ವಿಯೆಂಬ ಮಹಾಭೂತ

ಆ ಭೂತ ಪೀತವರ್ಣ ಚತುಷ್ಕೋಣ ಚೌದಳಪದ್ಮ

ಸುವರ್ಣವರ್ಣ ಆ ದಳದಲ್ಲಿ ವ, ಶ, ಷ, ಸ, ಎಂಬ ನಾಲ್ಕಕ್ಷರ

ಆ ಕರ್ಣಿಕಾಮಧ್ಯದಲ್ಲಿ ನಕಾರವೆಂಬ ಬೀಜಾಕ್ಷರ

ಆ ನಕಾರ ಪೀತವರ್ಣ ಅದು ಪೆಣ್ದುಂಬಿಯನಾದ

ರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ

ಅಲ್ಲಿ ಆಚಾರಲಿಂಗ, ಅದಕ್ಕೆ ಪೀತವರ್ಣವನುಳ್ಳ ಸದ್ಯೋಜಾತಮುಖ

ನಿವೃತ್ತಿ ಕಲಾಪರ್ಯಾಯ ನಾಮವನುಳ್ಳ ಕ್ರಿಯಾಶಕ್ತಿ

ಆ ಶಕ್ತಿ ಪೀತವರ್ಣ, ಅಲ್ಲಿ ಕರ್ಮಸಾದಾಖ್ಯ

ಪರ ಎಂಬ ಸಂಜ್ಞೆ, ಪೂರ್ವದಿಕ್ಕು

ಅಲ್ಲಿ ಋಗ್ವದವನುಚ್ಚರಿಸುತ್ತ ಸುಚಿತ್ತವೆಂಬ ಹಸ್ತದಿಂದ

ಸುಗಂಧ ದ್ರವ್ಯವನು ಘ್ರಾಣವೆಂಬ ಮುಖಕ್ಕೆ

ಶ್ರದ್ಧಾಭಕ್ತಿಯಿಂದ ಅರ್ಪಿಸುವಳಾ ಶಕ್ತಿ

ಬ್ರಹ್ಮಪೂಜಾರಿ ಶಕ್ತಿ ಡಾಕಿನಿ ಬ್ರಹ್ಮ (ಭವ) ನಧಿದೇವತೆ

 ಇಂತಿವೆಲ್ಲನ್ನು ಮಾತೃಸ್ಥಾನವಾಗಿಹುದು ನಕಾರವೆಂಬ ಬೀಜಾಕ್ಷರ

ಅದು ಪ್ರಣವದ ತಾರಕಾಕೃತಿಯಲ್ಲಿಹುದು

ಓಂ ಓಂ ಓಂ ನಾಂ ನಾಂ ನಾಂ ಎಂಬ ಬ್ರಹ್ಮನಾದ

ಮಂತ್ರ ಮೂರ್ತಿ ಪ್ರಣವಕ್ಕೆ ನಮಸ್ಕಾರವು ಇದು ಭಕ್ತಸ್ಥಲವು.

ಆಧಾರ ಚಕ್ರವು ಗುದೇಂದ್ರಿಯದ ಸ್ಥಾನದಲ್ಲಿದ್ದು ನಾಲ್ಕುದಳದ ಪದ್ಮವಾಗಿದೆ. ಇಲ್ಲಿರುವ ಬ್ರಹ್ಮನು ಮೂರ್ತಿಬ್ರಹ್ಮನು ಸದ್ಗುರುವು ಈ ಮೂರ್ತಿ ಬ್ರಹ್ಮವನ್ನು ತನ್ನ ಶಿಷ್ಯನ ಕರದಿಷ್ಟ ಲಿಂಗದಲ್ಲಿ ಆಚಾರಲಿಂಗವನ್ನಾಗಿಸಿ ಪ್ರೀತಿಯಿಂದ ಕರುಣಿಸುತ್ತಾನೆ. ನವಬ್ರಹ್ಮರನ್ನೂ ಕರದಿಷ್ಟಲಿಂಗದಲ್ಲಿ ಅಳವಡಿಸಿದ ಮಹಾಶ್ರೇಯಸ್ಸು ಗುರುವಿನದು. ಅದುಕಾರಣವೇ ಶ್ರೀಗುರುವು ಕೀರ್ತಿಮಯನಾಗಿದ್ದಾನೆ.

ಘ್ರಾಣೇಂದ್ರಿಯವು ಪೃಥ್ವಿತತ್ತ್ವದಿಂದಾದಂತೆ ಗುದಸ್ಥಾನವು ಪಂಚೀಕೃತ ಪೃಥ್ವಿಯ ಅರ್ಧಸ್ವರೂಪವುಳ್ಳುದಾಗಿದೆ. ಅಂದರೆ ಗುದೇಂದ್ರಿಯದಲ್ಲಿ ಪೃಥ್ವಿಯ ತತ್ತ್ವವು ಅತ್ಯಧಿಕವಾಗಿ ಕಾಣುವದು. ಈ ಇಂದ್ರಿಯದಲ್ಲಿಯೂ ಗಂಧ ಪದಾರ್ಥವು ವಿಶೇಷವಾಗಿದೆ. ಅನಾಚಾರದಿಂದ ಗುದವು ದುರ್ಗಂಧವನ್ನು ವ್ಯಕ್ತಗೊಳಿಸುವದು. ಗುದಸ್ಥಾನದ ಕಾರ್ಯವು ಮಲವಿಸರ್ಜನ. ಇಲ್ಲಿ ಅಪಾನವಾಯು ಮತ್ತು ಧನಂಜಯ ವಾಯುಗಳು ವಾಸಿಸುತ್ತವೆ. ಮಲವಿಸರ್ಜನ ಕಾರ್ಯವು ಯಥೋಚಿತವಾಗಿ ನಡೆದರೆ ದೇಹಿಗೆ ಆನಂದವೆನಿಸುವದು. ಅದು ಆರೋಗ್ಯಕ್ಕೆ ಮೂಲವಾದ ಕ್ರಿಯೆ. ದೇಹದ ಇರುವಿಕೆಗೆ ಆಧಾರವಾದುದು. ಗುದೇಂದ್ರಿಯ. ಇಲ್ಲಿರುವದು ಆಧಾರಚಕ್ರ. ಇವುಗಳು ತಾತ್ವಿಕವಾಗಿ ಒಂದಕ್ಕೊಂದು ಸಂಬಂಧ ಹೊಂದಿವೆ. ಕಾರಣ ಶಿವಕವಿಯು ಗುದೇಂದ್ರಿಯವು ಆಧಾರದ ತೊತ್ತು ಎಂದು ಬಣ್ಣಿಸಿ ಆಧಾರ ಚಕ್ರಕ್ಕೆ ಗುದವೇ ಮಂದಿರವೆಂತಲೂ ಹೇಳಿದ್ದಾನೆ. ಇಂಥ ಗುದಮಂದಿರದ ಆಧಾರಚಕ್ರದಲ್ಲಿಯ ಮೂರ್ತಿಬ್ರಹ್ಮವನ್ನು ಇಷ್ಟಲಿಂಗದಲ್ಲಿ ಆಚಾರಲಿಂಗವನ್ನಾಗಿ ಪರಿಭಾವಿಸಬೇಕು. ಸುಗಂಧಪ್ರಸಾದವನ್ನು ಆಚಾರಲಿಂಗಕ್ಕೆ ಅರ್ಪಿಸಬೇಕು. ಆ ಲಿಂಗವನ್ನು ಸಾವಧಾನ ದಿಂದ ಅರಾಧಿಸಿ ಆನಂದಿಸಬೇಕು.

ನವಚಕ್ರ ಹಾಗೂ ನವಬ್ರಹ್ಮರ ; ಉಪಸಂಹಾರ

ನವ ಚಕ್ರದೊಳಗಿರ್ದ| ನವ ಬ್ರಹ್ಮವನು ತೆಗೆದು

ಶಿವಲಿಂಗ ವಿಗ್ರ-ಹವ ಮಾಡಿ ಕರುಣಿಸಿದ

ಸುವಿವೇಕಿ ಗುರುವೆ ಕೃಪೆಯಾಗು   ||೯೨||

 ಶಿವಕವಿಯು ಪ್ರವೃತ್ತಿ ಕ್ರಮದಿಂದ ನವಚಕ್ರಗಳಲ್ಲಿ ನವಬ್ರಹ್ಮರನ್ನು ನಿರೂಪಿಸಿ, ಇಲ್ಲಿ ಉಪಸಂಹಾರ ಮಾಡುತ್ತಾನೆ. ಶ್ರೀಗುರು

೧ ಪಶ್ಚಿಮಚಕ್ರ ೨. ಶಿಖಾಚಕ್ರ ೧. ಬ್ರಹ್ಮರಂದ್ರ (ಸಹಸ್ರದಳ) ೪. ಆಜ್ಞಾಚಕ್ರ ೫. ವಿಶುದ್ಧಿಚಕ್ರ ೬. ಅನಾಹತ ಚಕ್ರ * ಮಣಿಪೂರಕ ಚಕ್ರ ೮. ಸ್ವಾಧಿಷ್ಠಾನಚಕ್ರ ೯. ಆಧಾರಚಕ್ರವೆಂಬ ಈ ನವಚಕ್ರಗಳಲ್ಲಿ ಕ್ರಮವಾಗಿ ೧. ನಿರಂಜನ (ಸರ್ವಶೂನ್ಯ) ಬ್ರಹ್ಮ

 ೨. ನಿಃಶೂನ್ಯ ಬ್ರಹ್ಮ  ೩. ನಿಷ್ಕಳ ಬ್ರಹ್ಮ ೪. ನಿಸ್ಸಿಮಬ್ರಹ್ಮ ೫. ವಿಜ್ಞಾನಬ್ರಹ್ಮ೬. ಆನಂದಬ್ರಹ್ಮ ೭. ಸತ್ಕಲೆಯ ಬ್ರಹ್ಮ

 ೮. ಪಿಂಡಬ್ರಹ್ಮ ೯. ಮೂರ್ತಿಬ್ರಹ್ಮರೆಂಬ ನವಬ್ರಹ್ಮರನ್ನು ತನ್ನ ಸುವಿವೇಕದಿಂದ ಶಿಷ್ಯನ ವರರತ್ನವೆನಿಸಿದ ಕರಕಮಲದಲ್ಲಿ ಶೋಭಿಸುವ ಇಷ್ಟಲಿಂಗದಲ್ಲಿ ೧. ಭಾವಲಿಂಗ ೨. ಪ್ರಾಣಲಿಂಗ ೩. ಇಷ್ಟಲಿಂಗ ೪. ಮಹಾಲಿಂಗ ೫. ಪ್ರಸಾದ ಲಿಂಗ ೬. ಜಂಗಮಲಿಂಗ ೬. ಶಿವಲಿಂಗ ೮. ಗುರುಲಿಂಗ ೯. ಆಚಾರಲಿಂಗಗಳೆಂಬ ನವಶಿವಲಿಂಗ ಮೂರ್ತಿಗಳನ್ನು ಮೂರ್ತಗೊಳಿಸುತ್ತಾನೆ. ಮಹಾಜ್ಞಾನಿಯಾದ ಸದ್ಗುರುವು ಸಾಮಾನ್ಯನಲ್ಲ. ಇವನು ಪರಮಗುರುವು. ಗುರುವಿನ ಗುರು ನಿರಾಭಾರಿಗಳು. ಆತನ ಕೃಪೆಯಿಂದಲೆ ಅಂತರಂಗದ ನವಚಕ್ರಗಳಲ್ಲಿಯ ನವಬ್ರಹ್ಮರು ಕರಕಮಲದಲ್ಲಿ ಕಾಣಿಸಿಕೊಂಡರು. ಇಷ್ಟಲಿಂಗ ಚಿಕ್ಕದಾದರೂ ಅದರ ಕೀರ್ತಿ ಬಹುದೊಡ್ಡದು. ಈ ಲಿಂಗ ಹೊರಗಿನಂತೆ ಕೇವಲ ಸ್ಥೂಲವಲ್ಲ. ಮಸ್ತಕದಲ್ಲಿಯ ಚಿಚ್ಛೈ ತನ್ಯವು ಈ ಇಷ್ಟಲಿಂಗದಲ್ಲಿ ಚುಳುಕಾಗಿದೆ. ಬೆಳಕಾಗಿದೆ ; ಆಂತರಂಗದ ಅಮೂರ್ತರಾದ ನವಬ್ರಹ್ಮರು ಇಷ್ಟಲಿಂಗದಲ್ಲಿ ಮೂರ್ತ ಗೊಂಡು ಇಷ್ಟಾರ್ಥಫಲವನ್ನೀಯುವ ಕಾಮಧೇನು ಕಲ್ಪವೃಕ್ಷಗಳಂತೆ ಮೆರೆದಿದ್ದಾರೆ.

 ಈ ನವಚಕ್ರಗಳ ವಿಷಯವನ್ನು ನಿಜಗುಣಾರ್ಯರು ಸಂಗ್ರಹರೂಪದಲ್ಲಿ ತಮ್ಮ “ವಿವೇಕಚಿಂತಾಮಣಿ’ಯ ದ್ವಿತೀಯ ಪರಿಚ್ಛೇದ (ಪುಟ ೧೩೪)ದಲ್ಲಿ ಪ್ರತಿಪಾದಿಸಿದ್ದಾರೆ. ಇಲ್ಲಿ ನಿವೃತ್ತಿಕ್ರಮ ನೆಲೆನಿಂತಿದೆ.

“ಮತ್ತಮಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ ಆಗ್ನೇಯವೆಂಬ ಷಟ್ಚಕ್ರಂಗಳುಂ ಕ್ರಮದಿಂದವಕೆ ದೇಹಮಧ್ಯ (ಗುದ) ಲಿಂಗ, (ಗುಹ್ಯ) ನಾಭಿ, ಹೃದಯ, ಕಂಠ, ಭೂಮಧ್ಯವೆಂಬಾರು ಸ್ಥಾನಂಗಳುಂ ಚತುರಸ್ರ, ಅರ್ಧಚಂದ್ರಾಕಾರ, ತ್ರಿಕೋಣ, ಷಟ್ಕೋಣ, ವೃತ್ತ, ವಿಚಿತ್ರ ಮಾದಾರಾಕಾರಂಗಳುಂ ಪೃಥಿವ್ಯಾದಿ ಮಾನಸಾಂತಮಾದಾರು ಭೂತಂಗಳುಂ, ಪೀತ, ಶ್ವೇತ, ರಕ್ತ, ನೀಲ, ಸ್ಫಟಿಕ, ಮಾಣಿಕ್ಯವೆಂಬಾರು ವರ್ಣಂಗಳಂ, ಚತುರ್ದಳ, ಷಡ್ದಳ, ದಶದಳ, ಪೋಡಶದಳ, ದ್ವಿದಳಂಗಳುಳ್ಳಾರು ಕಮಲಂಗಳುಂ, ವಾದಿಸಾಂತ, ಬಾದಿಲಾಂತ, ಡಾದಿಫಾಂತ,ಕಾದಿಠಾಂತ, ಆದಿವಿಸರ್ಗಾಂತ, ಹಕಾರ ಕ್ಷಕಾರಂಗಳೆಂಬಾರು ವರ್ಗದಳಾಕ್ಷರಂಗಳುಂ ನಕಾರಾದಿ ಪ್ರಣವಾಂತಮಾದಾರು ಕರ್ಣಿಕಾಕ್ಷರಂಗಳುಂ, ಬ್ರಹ್ಮಾದಿ ಜೀವಾತ್ಮಾಂತಮಾದಾರು ಅಧಿದೇವತೆಗಳುಂ, ಮತ್ತೆ ಬ್ರಹ್ಮಚಕ್ರ, ಶಿಖಾಚಕ್ರ, ಪಶ್ಚಿಮಚಕ್ರವೆಂಬ ಚಕ್ರತ್ರಯಂಗಳುಂ ಕ್ರಮದಿಂದವಕ್ಕೆ ಮಸ್ತಕ ಶಿಖಿ,   ಶಿಖಾಂತವೆಂಬ ಸ್ಥಾನತ್ರಯಂಗಳುಂ ಸಹಸ್ರದಳ ತ್ರಿದಳ, ಏಕದಳ ಪದ್ಮತ್ರಯಂಗಳುಂ   ಜ್ಯೋತಿರ್ವರ್ಣ, ಮಹಾಜ್ಯೋತಿರ್ವರ್ಣ, ಅಪ್ರದರ್ಶವರ್ಣ, ಎಂಬ ವರ್ಣ ತ್ರಯಂಗಳುಂ, ಅಕ್ಷರಾತ್ಮಕನಾದ ಅನಕ್ಷರಾತ್ಮಕನಾದ, ನಿಃಶಬ್ದಮೆಂಬ ನಾದ ತ್ರಯಂಗಳುಂ   ಅಂತರಾತ್ಮ ಪರಮಾತ್ಮ, ಪರಬ್ರಹ್ಮವೆಂದು ಅಧಿದೇವತಾ ತ್ರಯಂಗಳುಂʼʼ

ಎಂದು ನವಚಕ್ರಗಳನ್ನು ಅವುಗಳ ವಿವರವನ್ನು ಸಂಗ್ರಹರೂಪವಾಗಿ ಬೋಧಿಸಿದ್ದಾರೆ. ಇಲ್ಲಿಯವರೆಗೆ ಹಿಂದಿನ ತ್ರಿಪದಿಗಳಲ್ಲಿ ಪ್ರತ್ಯೇಕವಾಗಿ ತಿಳಿದುಕೊಂಡ ಪ್ರವೃತ್ತಿ ಕ್ರಮದ ನವಚಕ್ರಗಳನ್ನು ನಿವೃತ್ತಿ ಕ್ರಮದಲ್ಲಿ ಅರಿಯಲು ಅನುಕೂಲವಾಗಿದೆ.

 ಶಿವಪೂಜಾ ಸಮಯದಲ್ಲಿ ಸ್ತೋತ್ರ (ಧ್ಯಾನ) ರೂಪವಾಗಿ ಷಟ್‌ಚಕ್ರಗಳನ್ನು ತಿಳಿದುಕೊಳ್ಳಲು ಕೆಳಗಿನ ಶ್ಲೋಕವು ಅತ್ಯಂತ ಸುಂದರವಾಗಿದೆ.

ಆಧಾರ ಲಿಂಗನಾಭೌ ಹೃದಯ-ಸರಸಿಜೇ ತಾಲು ಮೂಲೇ ಲಲಾಟೇ

 ದ್ವೇ ಪತ್ರೇ ಷೋಡಶಾರೇ ದ್ವಾದಶ-ದಳದಳೇ ದ್ವಾದಶಾರ್ಧೇ– ಚತುಷ್ಕೇ

ವಾಸಾಂತೇ ಬಾದಿಲಾಂತೇ ಡಫ ಕಠಸಹಿತೇ ಕಂಠ ಮೂಲೇ ಸ್ವರಾಢ್ಯೇ

 ಹಂ ಕ್ಷಂ ತತ್ತ್ವಾರ್ಥಯುಕ್ತಂ ಸಕಲದಳಗತಂ ವರ್ಣರೂಪಂ ನಮಾಮಿ

ಇದರಿಂದ ಚಕ್ರಗಳನ್ನು ಅವುಗಳ ಸ್ಥಾನ-ದಳ ಹಾಗೂ ಅಕ್ಷರ ರೂಪಾದ ಪರಶಿವನನ್ನು ಸ್ತುತಿಸಲು ಮತ್ತು ಸ್ಮರಣೆಯಲ್ಲಿಡಲು ಸಹಾಯವಾಗುವದು.

ಇಂಥ ಅಗಮ್ಯ, ಅಗೋಚರ, ಅನುಪಮವಾದ ನವಚಕ್ರಗಳ ನವಲಿಂಗಗಳನ್ನು ತಿಳುಹಿ ಕರಕಮಲದಲ್ಲಿ ತಂದಿರಿಸುವ ಸುವಿವೇಕಿಯಾದ ಸದ್ಗುರುವೆ ! ಎನ್ನ ಮೇಲೆ ಅನವರತ ಕರುಣಾಮೃತವನ್ನು ಸಿಂಚಿಸಿ ನವಲಿಂಗಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಶಕ್ತಿಯನ್ನಿತ್ತು ಕಾಪಾಡು.

ಅಷ್ಟಾಂಗಯೋಗ ನಿರಸನ

೧. ಯಮ ನಿರಸನ

ಯಮಯೋಗ ಪಾಪದಾ | ಕ್ರಮವೆಂದು ತೊಲಗಿಸುತ

ಸುಮನ ಸತ್ಕ್ರಿಯಾಕ್ರಮದ ಲಿಂಗವನಿತ್ತ

ವಿಮಲ ಶ್ರೀಗುರುವೆ ಕೃಪೆಯಾಗು   ||೯೩||

ಬ್ರಹ್ಮಾಂಡಗತನಾದ  ಪರಶಿವನು ಪಿಂಡಾಂಡದಲ್ಲಿಯೂ ವ್ಯಾಪಿಸಿಕೊಂಡಿದ್ದಾನೆ. ಆ ಪಿಂಡಾಂಡರೂಪ ಶರೀರದ ಅಂತರಂಗದ ಪರವಸ್ತುವನ್ನು ಸದ್ಗುರುವು ತನ್ನ ಶಿವಯೋಗ ಶಕ್ತಿಯಿಂದ ಶಿಷ್ಯನ ಕರಕಮಲಕ್ಕೆ ಇಷ್ಟಲಿಂಗವನ್ನಾಗಿ ಕರುಣಿಸುತ್ತಾನೆ.  ಶಿಷ್ಯನು ಶ್ರೀಗುರುವಿನಿಂದ ಆಯತ (ಬರಮಾಡಿ) ಮಾಡಿಕೊಂಡ ಇಷ್ಟಲಿಂಗವನ್ನು ಸ್ವಾಯತ (ಸ್ವಸ್ವರೂಪವನ್ನಾಗಿ) ಗೊಳಿಸಿಕೊಂಡು ಸನ್ನಿಹಿತ (ಸಮರಸ) ಮಾಡಿಕೊಳ್ಳುವದು ಅವಶ್ಯ. ಈ ಸಮರಸ ಅಥವಾ ಮಿಲನ (ಯೋಗ)ಕ್ಕೆ ಶಿವಯೋಗವೆಂದು ಕರೆಯುವರು. ಅಂಗ-ಲಿಂಗಗಳ ಯೋಗವು ಶಿವಯೋಗದಿಂದ ಸಾಧ್ಯವಾಗುವದು.

ಅಧ್ಯಾತ್ಮ ಪಥದಲ್ಲಿ ಮುನ್ನಡೆಯಲಿಚ್ಛಿಸುವ ಜೀವನು ಶಿವನೊಡನೆ ಬೆರೆಯುವದೇ ಅವನ ಧ್ಯೇಯವಾಗಿರುವದು. ಅದಕ್ಕಾಗಿ ದರ್ಶನ ಶಾಸ್ತ್ರಗಳು ಜೀವ-ಶಿವರ ಜೀವಾತ್ಮ-ಪರಮಾತ್ಮರ ಅಥವಾ ಜೀವಬ್ರಹ್ಮರ ಸಂಗಮವಾಗುವ ಪರಿಗೇನೆ ಯೋಗ ವೆ೦ದೂ ಯೋಗಮಾರ್ಗವೆಂತಲೂ ಕರೆದಿವೆ. ಯೋಗ ಮಾರ್ಗಗಳು ವಿಭಿನ್ನವಾಗಿವೆ. ಇಂಥ ಯೋಗಗಳು ಸುಲಭಸಾಧ್ಯವಲ್ಲವೆಂದರಿತ ಶಿವಕವಿಯು ಕೇವಲ ಯೋಗ ಕಡುಕಷ್ಟಕರವಾದುದೆಂದು ಕ್ರಮವಾಗಿ ಖಂಡಿಸುತ್ತಾನೆ. ಶಿವಯೋಗವನ್ನು ಸಾಧಿಸುವ ಸುಲಭತೆಯನ್ನು ಸಿದ್ಧಿಸಿ ತೋರಿಸುತ್ತಾನೆ.

ಯೋಗ ವಿಚಾರವು ಬಹುಪುರಾತನಕಾಲದಿಂದಲೂ ಬೆಳೆದು ಬಂದಿದೆ. ಜೀವಾತ್ಮಾ-ಪರಮಾತ್ಮಾ ಇವರು ಬೆರೆಯುವ ಸಾಧನಕ್ಕೆ ಯೋಗವೆಂದು ಹೆಸರು. ಪರಮಾತ್ಮನ ದರ್ಶನವನ್ನು ಮಾಡಹೊರಟ ಅನೇಕ ಶಾಸ್ತ್ರಗಳು ವಾದ-ವಿವಾದಗಳ ತೊಳಲಾಟದಲ್ಲಿ ಮುಮುಕ್ಷುವನ್ನು ಕಂಗೆಡಿಸಿದವು. ಆದರೆ ಈ ಯೋಗ ದರ್ಶನವು ಮೋಕ್ಷೋಪಾಯಕ್ಕೆ ಸರ್ವೋತ್ತಮ ಸಾಧನಾಯಿತು. ಅಂತೆಯೇ ಯೋಗದ ವಿಚಾರವು ನಾಸ್ತಿಕವಾದಿಗಳೆನಿಸಿದ ಬೌದ್ಧ, ಜೈನ ಮತಗ್ರಂಥಗಳಲ್ಲಿಯೂ ಕಂಡು ಬರುವದು. ಇನ್ನುಳಿದ ದರ್ಶನಗಳಲ್ಲಿಯಂತೂ ಯೋಗದ ವಿಚಾರ ಧಾರಾಳವಾಗಿ ತಿಳಿದು ಬರುತ್ತದೆ. ಕೆಲವರು ಯೋಗದರ್ಶನವನ್ನು ಪತಂಜಲಿ ಮಹರ್ಷಿಯು ಸೃಜಿಸಿದನೆಂದು ಪ್ರತಿಪಾದಿಸುತ್ತಾರೆ. ಪಂಡಿತರ ವಿಚಾರದಂತೆ ಈ ಮುನಿಯು ಯೋಗ ಶಾಸ್ತ್ರದ ಪ್ರವರ್ತಕನಾಗದೇ ಪ್ರಚಾರಕ ಅಥವಾ ಸಂಶೋಧಕನಾಗಿದ್ದಾನೆ. ಅವನು ಯೋಗದ ಅನುಶಾಸನಗೊಳಿಸಿದನು. ಅರ್ಥಾತ್ ಕ್ರಮಬದ್ಧವಾಗಿ ಉಪದೇಶಿಸಿದನು. ಪತಂಜಲಿ ಮಹರ್ಷಿಯು ತನ್ನ ಯೋಗದರ್ಶನದಲ್ಲಿ ೧೯೫ ಸೂತ್ರಗಳನ್ನು ರಚಿಸಿ ಅವುಗಳಲ್ಲಿ

ಸಮಾಧಿಪಾದ, ಸಾಧನಪಾದ, ವಿಭೂತಿಪಾದ, ಕೈವಲ್ಯಪಾದವೆಂದು ನಾಲ್ಕು ಭಾಗಗಳನ್ನು ಮಾಡಿದನು.

 ಯೋಗವು ಸಮಾಧಿರೂಪವಾದ ‘ಯುಜ್ ಸಮಾಧೌ” ಎಂಬ ಧಾತುವಿನಿಂದ ಉತ್ಪನ್ನವಾಗಿದ್ದು ಸಮಾಧಿಗೆ ಮೂಲವಾದ ಚಿತ್ತವನ್ನು (ಚಿತ್ತ-ವೃತ್ತಿಗಳನ್ನು) ನಿಗ್ರಹಿಸುವದೇ ಯೋಗವೆಂದು ಪತಂಜಲಿಮುನಿಯು ವ್ಯಾಖ್ಯಾನ ಮಾಡಿದನು

 “ಯೋಗಶ್ಚಿತ್ತ ವೃತ್ತಿನಿರೋಧಃ’ | ೧-೨ |

ಅಂತಃಕರಣ ವೃತ್ತಿಗಳನ್ನು ಸಂಪೂರ್ಣವಾಗಿ ನಿಗ್ರಹಿಸುವದೇ ಯೋಗವೆನಿಸುವದು. ಮನಸ್ಸೇ ಬಂಧ ಮತ್ತು ಮೋಕ್ಷಕ್ಕೆ ಕಾರಣವಾಗಿದ್ದರಿಂದ ಮನೋನಿಗ್ರಹವು ಮೋಕ್ಷಕ್ಕೆ ಮೂಲಸಾಧನವಾಗಿದೆ. ಅದಕ್ಕಾಗಿ ಮುನಿಯು ಮೊದಲನೆಯ ಸಮಾಧಿ ಪಾದದಲ್ಲಿ ಚಿತ್ತವೃತ್ತಿಗಳ ವರ್ಣನೆ ಮಾಡಿ ಎರಡನೆಯ ಸಾಧನಪಾದದಲ್ಲಿ ಕ್ರಿಯಾ ಯೋಗವನ್ನು ಸಾಧನೆಗಳ ಮುಂಖಾತರ ಹೇಳುತ್ತಾನೆ .ಅಷ್ಟಾಂಗಗಳಲ್ಲಿ ಪಂಚಾಂಗಗಳ ವಿವರ ಈ ಕ್ರಿಯಾಪಾದದಲ್ಲಿ ಬರುತ್ತದೆ. ಮೂರನೆಯ ವಿಭೂತಿಪಾದದಲ್ಲಿ ಧಾರಣ ಧ್ಯಾನ ಸಮಾಧಿಗಳ ಸ್ವರೂಪವನ್ನು ಮತ್ತು ಸಾಧನೆಯ ನಂತರ ಜೀವನು ಪಡೆಯುವ ವಿಭೂತಿತ್ವ (ಫಲ)ವನ್ನು ತಿಳಿಸಿದ್ದಾನೆ. ಮೋಕ್ಷರೂಪ ಸಮಾಧಿಯ ಸ್ವರೂಪವನ್ನು ಕೊನೆಯ ಪಾದವಾದ ಕೈವಲ್ಯ ಪಾದದಲ್ಲಿ ನಿರೂಪಿಸಿದ್ದಾನೆ. ಮೋಕ್ಷರೂಪ ಸಮಾಧಿಯು ಇಬ್ಬಗೆಯಾಗಿದೆ. ಮೊದಲು ಧ್ಯಾತಾ-ಧ್ಯಾನ ಮಾಡುವ ವ್ಯಕ್ತಿ, ದ್ಯೇಯ = ಧ್ಯಾನ ಗಮ್ಯವಾದ ಪರವಸ್ತು, ಧ್ಯಾನ-ಧ್ಯಾನಮಾಡುವ ಕ್ರಿಯೆಗಳೆಲ್ಲ ಅಡಗಿ ಕೇವಲ ಧ್ಯೇಯದ ಅರಿವು ಸಂಪ್ರಜ್ಞಾತ ಸಮಾಧಿಯಲ್ಲಿ ವ್ಯಕ್ತವಾಗುವದು. ಅಸಂಪ್ರಜ್ಞಾತ

ಸಮಾಧಿಯಲ್ಲಿ ಧ್ಯೇಯವೇ ತಾನಾಗುವನು. ಯಾವುದರ ಅರಿವೂ ಇಲ್ಲಿ ನಿಲ್ಲುವದಿಲ್ಲ. ಇದುವೆ ಯೋಗದ ಸಾಧ್ಯ ಅಥವಾ ಯೋಗ ಸಾಧನೆಯ ಫಲವಾಗಿದೆ.

 ಎರಡನೆಯ ಪಾದದಲ್ಲಿ ಬರುವ ಅಷ್ಟಾಂಗಗಳ ವಿವರವನ್ನೇ ಇಲ್ಲಿ ಶಿವಕವಿಯು ಒಂದೊಂದಾಗಿ ವಿವೇಚಿಸುತ್ತಾನೆ.

ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-

ಧಾರಣ-ಧ್ಯಾನ-ಸಮಾಧಯೋಽಷ್ಟಾವಂಗಾನಿ” ||೨-೨೯ ||

೧. ಯಮ ೨. ನಿಯಮ ೩. ಆಸನ ೪. ಪ್ರಾಣಾಯಾಮ ೫, ಪ್ರತ್ಯಾಹಾರ ೬. ಧಾರಣ ೭ ಧ್ಯಾನ ೮. ಸಮಾಧಿಗಳೆಂದು ಯೋಗಸಾಧನೆಯ ಎಂಟು ಅಂಗಗಳನ್ನು ಯೋಗ ಸೂತ್ರದಲ್ಲಿ ಪ್ರತಿಪಾದಿಸಿದ್ದಾರೆ. ಇವು ಶರೀರ ಮನಸ್ಸು ಹಾಗೂ ಇಂದ್ರಿಯಗಳ

ಶುದ್ಧಿಗಾಗಿ ಹೇಳಿದ ಸಾಧನೆಗಳು. ಇವುಗಳು ಸುಲಭ-ಸಾಧ್ಯವಾದವುಗಳಲ್ಲ. ಅತ್ಯಂತ ಕಠಿಣತರವಾಗಿವೆ. ಅದಕ್ಕಾಗಿ ಶಿವಾದ್ವೈತಿ (ವೀರಶೈವರು)ಗಳು ಕಷ್ಟಸಾಧ್ಯವಾದ ಅಷ್ಟಾಂಗಗಳನ್ನು ಶಿವಯೋಗದಲ್ಲಿಯೇ ಸುಲಭವಾಗಿ ಅಳವಡಿಸಿಕೊಂಡಿದ್ದಾರೆ. ಇದೇ ವಿಚಾರವು ಈ ಪ್ರಕರಣದಲ್ಲಿ ಪ್ರತಿಪಾದಿತವಾಗಿದೆ. ಪ್ರಸ್ತುತ ತ್ರಿಪದಿಯಲ್ಲಿಯಮಾಂಗದ ವಿವರ ಬಂದಿದೆ.

ಅಷ್ಟಾಂಗಗಳಲ್ಲಿ ಮೊದಲನೆಯ ಅಂಗ ‘ಯಮ’, ಯಮವೆಂದರೆ ನಿಯಂತ್ರಿಸುವದು, ನಿಗ್ರಹಿಸುವದು, ಹತ್ತಿಕ್ಕುವದು, ಈ ಅರ್ಥ ಕೊಡುವ ‘ಯಮ್’ ೧ನೇ ಗಣ ಧಾತುವಿನಿಂದ ಯಮಶಬ್ದವು ಸಿದ್ಧವಾಗಿದೆ. ‘ಯಮ’ ಶಬ್ದಕ್ಕೆ ನಾನಾರ್ಥಗಳಿವೆ. ‘ಯಮ’ ವೆಂದಾಕ್ಷಣ ಭಯಂಕರನಾದ ಯಮಧರ್ಮನ ಅರ್ಥವೂ ಗೋಚರಿಸುತ್ತದೆ. ಮುಖ್ಯವಾಗಿ ಇಲ್ಲಿ ಯಮವೆಂದರೆ ಆತ್ಮ ಸಂಯಮನ ಅಥವಾ ಬಹಿರಿಂದ್ರಿಯಗಳನ್ನು ನಿಗ್ರಹಿಸುವದು. ಈ ಯಮವು

ಅಹಿಂಸಾ-ಸತ್ಯಾಸ್ತೇಯ-ಬ್ರಹ್ಮಚರ್ಯಾುಪರಿಗ್ರಹಾ ಯಮಾಃ ||

ಅಹಿಂಸಾವೃತ, ಸತ್ಯ ಪರಿಪಾಲನೆ, ಅಸ್ತೇಯ ಸಾಧನೆ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳೆಂದು ಐದು ತೆರನಾಗುತ್ತದೆ. ತನು-ಮನ-ವಚನದಿಂದ ಪರರನ್ನು ನೋಯಿಸದೇ ವಿನಯದಿಂದಿರುವದು ಅಹಿಂಸೆಯು. ಮನ-ವಚನಗಳು ಯಥಾರ್ಥ ವಾಗಿರುವದೇ ಸತ್ಯವೆನಿಸುವದು. ತ್ರಿಕರಣಗಳಿಂದಲೂ ಪರದ್ರವ್ಯವನ್ನು ಕದಿಯದಿರುವದು ಅಥವಾ ಆಶಿಸದಿರುವದು ಆಸ್ತೇಯವೆನಿಸುವದು. ವೀರ್ಯವನ್ನು ರಕ್ಷಿಸುವದು ಬ್ರಹ್ಮಚರ್ಯ (ಗುಪ್ತೋಂದ್ರಿಯ ಸಂಯಮನ) ಅಥವಾ ವನಿತೆಯರ ವಿಲಾಸವನ್ನು ಕಂಡು, ಕೇಳಿದಲ್ಲಿ ಆ ಸ್ತ್ರೀಯಳನ್ನು ಮನೋವಾಕ್ಕಾಯಗಳಿಂದ ತಾಯಿಯೆಂದು ಅನುಭವಿಸುವದೇ ಬ್ರಹ್ಮಚರ್ಯವು. ತನ್ನ ಅವಶ್ಯಕತೆಗಿಂತ ಹೆಚ್ಚಾಗಿ ಧನ-ಧಾನ್ಯಾದಿ ವಿಷಯಗಳನ್ನು ಸಂಗ್ರಹಿಸದಿರುವದು ಹಾಗೂ ರಕ್ಷಿಸಿ ಇಡದಿರುವದು ಅಪರಿಗ್ರಹ ವೆನಿಸುವದು. ಈ ಎಲ್ಲ ಯಮಾಂಗಗಳನ್ನು ಆಚರಿಸುವಲ್ಲಿ ಭಯಾನಕತೆ, ಭಯಂಕರತೆಯೆನಿಸದಿರದು.

ಈ ಯಮದ ವಿಚಾರವನ್ನು ”ಶಿವಯೋಗಪ್ರದೀಪಿಕೆ’ ಯಲ್ಲಿ

ಆಹಾರ ನಿದ್ರೇಂದ್ರಿಯ ದೇಹ ಸರ್ವ

ವ್ಯಾಪಾರ ಶೀತಾತಪಸಂಜ್ಞಕಾನಾಂ |

ಜಯಶ್ಚ ಶಾಂತಿಶ್ಚ ಭವೇದ್ಯಮಾಂಗಃ

ಶನೈಃಶನೈಃ ಸಾಧಯಿತುಂ ಸಯೋಗ್ಯಃ   | ೪/೪ |

ಭಕ್ಷ್ಯ-ಭೋಜ್ಯಾದಿ ಷಡ್ಚಿಧಾಹಾರ, ತಮೋಗುಣಾತ್ಮಕ ನಿದ್ರೆ, ಶ್ರೋತ್ರಾದಿ  ಜ್ಞಾನೇಂದ್ರಿಯಗಳು, ದೇಹದ ಕರ್ಮರೂಪ ವಾಗಾದಿ ಕರ್ಮೇಂದ್ರಿಯಗಳ ಸಮಸ್ತ ವ್ಯಾಪಾರದಿಂದಾಗುವ ಶೀತ-ಉಷ್ಣ ಅಂದರೆ ಸುಖ-ದುಃಖಗಳನ್ನು ಗೆಲ್ಲುವ ಯೋಗ್ಯತೆ ಮತ್ತು ಅದರಿಂದ ಶಾಂತಿ ದೊರೆಯುವದೇ ಯಮವೆನಿಸುವದು. ಇದನ್ನು ಸಾವಕಾಶವಾಗಿ ಸಾಧಿಸಬೇಕೆಂದು ತಿಳಿಸಿದ್ದಾರೆ.

ಈ ಯಮಸಾಧನೆಯಿಂದ ತನು-ಮನ-ಮಾತುಗಳಿಂದ ಇತರರನ್ನು ನೋಯಿಸದಂತಿರುವ ದಯಾಗುಣ ಬೆಳೆಯುವದು. ಹಿಂಸಾಭಾವ ದೂರವಾಗುವದು. ಮನ ಮಾತುಗಳ ಯಥಾರ್ಥವಾಗುವದರಿಂದ ವಾಕ್ (ವಾಣಿ) ಪರಿಶುದ್ಧವಾಗುವದಲ್ಲದೆ ವಾಕ್‌ಸಿದ್ಧಿಯೂ ಸಾಧ್ಯವಾಗುವದು. ಅಸ್ತೇಯ ಸಾಧನೆಯಿಂದ ಸ್ವಾರ್ಥಪರತೆ ದೂರಾಗುವದು. ತನ್ನಂತೆ ಇತರರನ್ನು ಕಾಣುವ ಮನೋಭಾವ ಬೆಳೆಯುವದು. ಬ್ರಹ್ಮಚರ್ಯ ಪಾಲನೆಯಿಂದ “ಮಾತೃವತ್ ಪರದಾರೇಷು” ಇತರ ಸ್ತ್ರೀಯರಲ್ಲಿ ತನ್ನ ತಾಯಿಯೆಂಬ ಭಾವ ಬಲಗೊಳ್ಳುವದು. ಶಕ್ತಿಯುತನೂ, ಆತ್ಮಶಕ್ತಿ ಸಂಪನ್ನನೂ ಆಗುವನು. ಅಪರಿಗ್ರಹದಿಂದ ಆಶೆಯು ದೂರವಾಗಿ ವೈರಾಗ್ಯವು ವ್ಯಕ್ತವಾಗುವದು. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ರೂಪಾದ ಯಮ ಸಾಧನೆಯು ಸರ್ವರಿಗೂ ಅತ್ಯುತ್ತಮವಾದುದು. ಆದರೆ ಅದರ ಅನುಷ್ಠಾನವು ಅತ್ಯಂತ ಶ್ರಮದಾಯಕವೂ, ಕಷ್ಟಸಾಧ್ಯವೂ ಆಗಿದೆ. ಪ್ರತ್ಯಕ್ಷ ವಿಷಯಗಳನ್ನು ಗ್ರಹಿಸುವ ಬಹಿರಿಂದ್ರಿಯಗಳನ್ನು ನಿಗ್ರಹಿಸುವದು ಸುಲಭವಲ್ಲ.

೪೪ನೆಯ, ಕಾಮನ ವಿಷಯಕವಾದ ತ್ರಿಪದಿಯಲ್ಲಿ ವಿವರಿಸಿದಂತೆ ಬಹಿರ್ಮುಖಗಳಾದ ಇಂದ್ರಿಯಗಳನ್ನು ಸ್ಥಿಮಿತದಲ್ಲಿರಿಸುವಲ್ಲಿ ಸುಕೃತವೇ ಬೇಕು. ಗುರುಕೃಪೆ ಅವಶ್ಯಬೇಕು. ಮನೋವಿಜ್ಞಾನಿಗಳಾಗಲ್ಲಿ, ಶರಣರಾಗಲಿ ಇಂದ್ರಿಯ ನಿಗ್ರಹವನ್ನು ಮನ್ನಿಸುವದಿಲ್ಲ. ಇಂದ್ರಿಯ ನಿಗ್ರಹವ ಮಾಡಿದರೆ ದೋಷಂಗಳೇ ಉಂಟಾಗುವದಲ್ಲದೆ ಶಾಂತಿ ಸಿಗುವದಿಲ್ಲ. ಯಮದ ಅರ್ಥ ಭಯಂಕರತೆಯನ್ನು ಸೂಚಿಸುತ್ತದೆಂದಮೇಲೆ ಅವುಗಳನ್ನೇ ಪರಿಪಾಲಿಸುವದು ಕಷ್ಟ ಸಾಧ್ಯವೇ ಸರಿ. ಅದನ್ನರಿತ ಶರಣರು ಯಮಯೋಗದ ಕ್ರಮವನ್ನು ಬದಿಗಿರಿಸಿ ಇಂದ್ರಿಯಗಳನ್ನು ಪರಿವರ್ತಿಸುವ ಪರಿಪಕ್ವಗೊಳಿಸುವ ಅರ್ಥಾತ್ ಉದಾತ್ತೀಕರಿಸುವ ವಿನೂತನ ತತ್ತ್ವವನ್ನು ಮನನ ಮಾಡಿಕೊಂಡರು. ಭಕ್ತಿ-ಜ್ಞಾನ ಕ್ರಿಯೆಗಳಿಂದ ಮನವನ್ನು ಸುಮನವನ್ನಾಗಿಸುವ ಗುರು ಕರುಣಿಸಿದ ಇಷ್ಟಲಿಂಗಾರಾಧನೆಯಲ್ಲಿ ತೊಡಗಿಸಿದರು. ಲೀನಗೊಳಿಸಲು ಹಚ್ಚಿದರು. ಬಹಿರಿಂದ್ರಿಯಗಳನ್ನು ಲಿಂಗಪೂಜೆಯ ಸಾಧನ ಸಾಮಗ್ರಿಗಳಲ್ಲಿ ವಿನಿಯೋಗಿಸಿದರು.

ಯಾವುದಕ್ಕಾದರೂ ಬಂಧನ ಮಾಡಿದರೆ ಅದು ವಿಮೋಚನೆಗಾಗಿ ಆತುರ ಪಡುವದು ಸ್ವಾಭಾವಿಕ. ಇದು ಪ್ರಕೃತಿ ನಿಯಮ. ಸಹಜದಲ್ಲಿ ಸುಜ್ಞಾನ ಯುಕ್ತ ಕ್ರಿಯೆಗಳಿಂದ ಅಗಾಧವಾದ ಪರಿಣಾಮ ತೋರಿಬರುವುದು. ಇಂದ್ರಿಯಗಳಿಗೆ ಗೋಚರಿಸುವ ವಿಷಯಗಳು ಶಿವನಸೊತ್ತು. ತನಗೆ ಬಂದುದರಲ್ಲಿ ತಾನು ತೃಪ್ತನಾಗಿರಬೇಕೆಂಬ ಮನೋಭಾವ, ಶಿವಮಯಾತ್ಮಕವಾದ ಪ್ರಪಂಚದಲ್ಲಿ ಯಾವುದೇ ಜೀವಿಗೆ ನೋವು ಮಾಡಿದರೆ ಶಿವನಿಗೇನೇ ಆಗುವದೆಂಬ ವಿಚಾರ ಸರಣಿ: ಮತ್ತು ಮಾಡುವ-ನುಡಿಯುವ ಕ್ರಿಯೆಗಳು ಲಿಂಗಮೆಚ್ಚಬೇಕೆಂಬುವ ಅನುಭವಿಗಳ ಉಕ್ತಿ; ಲಿಂಗಪೂಜೆಯನ್ನು ಮಾಡಲು ಬೇಕಾದ ಜಲ ಹೂವು ಪತ್ರಿಗಳನ್ನು ತರುವಾಗಲು ಅವುಗಳನ್ನು ವಿನಂತಿಸಿ ಅನುಮತಿ ಕೋರಿಕೊಳ್ಳುವ ವಿಧಾನ, ಲಿಂಗದ ಪ್ರಾಣನಾದ ಜಂಗಮತೃಪ್ತಿಗೆ ಬೇಕಾದ ಪ್ರಸಾದವನ್ನು ಸ್ವತಃ (ದುಡಿದು) ಕಾಯಕ ಮಾಡಿ ದಾಸೋಹ ಮಾಡಬೇಕೆಂಬುವ ವಿಶಾಲ ತಳಹದಿಯುಳ್ಳ ಶಿವಭಕ್ತನಿಗೆ ಯಮದ ಅವಶ್ಯಕತೆಯಿಲ್ಲ. ಅವನು ಆಚರಿಸುವ ಪ್ರತಿಯೊಂದು ಕ್ರಿಯೆಗಳು ಸತ್‌ಕ್ರಿಯೆಗಳು; ಲಿಂಗ ಕ್ರಿಯೆಗಳು. ಆದ್ದರಿಂದ ಮನಸ್ಸು ಸುಮನವಾಗುತ್ತದೆ. ಭಾವ ಪರಿಶುದ್ಧವಾಗುವದು. ಯಮಾಚರಣೆಯು ಸಹಜವಾಗುವದು. ಮತ್ತು ಯಮಾಂಗಗಳನ್ನು ಪಾಲಿಸದಿದ್ದರೆ ಪಾಪವೆಂಬ ಭೀತಿ ಬಯಲಾಗುವದು. ಓ ಮಲರಹಿತನೆನಿಸಿದ ಪರಮ ಗುರುವೆ ! ನನ್ನ ತ್ರಿಮಲಗಳನ್ನು ನಾಶ ಮಾಡಿದವನೆ ! ಎನ್ನ ಕ್ರಿಯೆಗಳೆಲ್ಲ ಸತಕ್ರಿಯೆಗಳಾಗುವಂತೆ ಕರುಣಿಸು.    

ನಿಯಮಾಂಗ ನಿರಸನ

ನಿಯಮಯೋಗವೆ ಭವದಾ | ಲಯವೆಂದು ತೊಲಗಿಸುತ

ಸ್ವಯಲಿಂಗ ಪೂಜೆಯ….ನಿಯಮವನು ಕರುಣಿಸಿದ

ಭಯಹರ್ತ ಗುರುವೆ ಕೃಪೆಯಾಗು   ||೯೪ ||

ಅಷ್ಟಾಂಗ ಯೋಗದ ಎರಡನೆ ಅಂಗ ನಿಯಮ. ಈ ನಿಯಮವೂ ಐದು ತೆರನಾಗಿದೆ. ಯೋಗ ದರ್ಶನದಲ್ಲಿ

ಶೌಚ-ಸಂತೋಷ-ತಪಃ-ಸ್ವಾಧ್ಯಾಯೇಶ್ವರ-

ಪ್ರಣಿಧಾನಾನಿ ನಿಯಮಾಃ”   ||೨-೩೨ ||

ನಿಯಮಗಳಲ್ಲಿ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನಗಳೆಂಬ ಐದು ಭಾಗಗಳು. ಯಮವು ಬಹಿರಿಂದ್ರಿಯ ನಿಗ್ರಹ ಸಾಧನವಾದರೆ ನಿಯಮವು ಅಂತರಿಂದ್ರಿಯ ನಿಗ್ರಹವಾಗಿದೆ. ಅಂತರಂಗಶುದ್ಧಿಗಾಗಿ ಹೇಳಿದ ವಿಧಾನಂಗಳೇ ನಿಯಮಂಗಳು. ಮಣ್ಣು ನೀರಿನಿಂದಾಗುವ ಶುದ್ಧತೆಯೆ ಬಾಹ್ಯ ಶೌಚವು. ಭಾವಶುದ್ಧಿಯಿಂದಾಗುವದು ಅಂತಃಶೌಚವು. ಮನೆಯನ್ನು ಒಳಹೊರಗೂ ಸ್ವಚ್ಛವಾಗಿರಿಸುವಂತೆ ಶಿವನ ವಾಸಸ್ಥಾನವಾದ ದೇಹ ದೇವಾಲಯಗಳನ್ನು ಒಳಹೊರಗೂ ಪವಿತ್ರಗೊಳಿಸುವ ಸಾಧನೆಯೇ ಶೌಚ ವೆನಿಸುವದು. ತನ್ನ ಉದ್ಯೋಗ (ಕಾಯಕ) ದಿಂದ ಬಂದುದರಲ್ಲಿ ತೃಪ್ತನಾಗಿರುವದೇ ಸಂತೋಷವು, ದೊರೆತುದಕ್ಕಿಂತ ಹೆಚ್ಚಿನ ಆಸೆ ಮಾಡದಿರುವದೂ ಸಂತೋಷವೇ. ತಪಸ್ಸೆಂದರೆ ಚಾಂದ್ರಾಯಣಾದಿ ಕಠಿಣ ವ್ರತಗಳಿಂದ ತನ್ನ ಶರೀರೇಂದ್ರಿಯಗಳನ್ನು ನಿಗ್ರಹಿಸುವದು; ಶೀತೋಷ್ಣ, ಸುಖ- ದುಃಖ, ಹಸಿವು-ನೀರಡಿಕೆ ಮೊದಲಾದ ದ್ವಂದ್ವಗಳನ್ನು ತಡೆಯುವದೂ ತಪವು. ಆರಾಧ್ಯದೇವತೆಯ ಮಂತ್ರವನ್ನು ಜಪಿಸುವದು; ಮೋಕ್ಷದಾಯಕ ಶಾಸ್ತ್ರಗಳ ಅಭ್ಯಾಸ ಮಾಡುವದು ಸ್ವಾಧ್ಯಾಯವೆನಿಸುವದು. ಗುರುಗಳಲ್ಲಿ, ದೇವರಲ್ಲಿ ಸರ್ವ ಕರ್ಮಗಳನ್ನು ಅರ್ಪಣಮಾಡುವ ಬುದ್ಧಿ ಅರ್ಥಾತ್ ಸಮರ್ಪಣ ಭಾವವೇ ಈಶ್ವರ ಪ್ರಣಿಧಾನವೆನಿಸುವದು. ಹೀಗೆ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನಗಳಿಂದ ಕೂಡಿದುದೇ ನಿಯಮವು, ನಿಜಗುಣ ಶಿವಯೋಗಿಗಳು ತಮ್ಮ “ಪಾರಮಾರ್ಥ ಪ್ರಕಾಶಿಕೆ’ ಯಲ್ಲಿ

ಶ್ರೀ ಗುರುವಿನಲ್ಲಿ ಭಕ್ತಿಯು, ಷಡಧ್ವಾತೀತವಾಗಿ ಸ್ವಪರ

ಪ್ರಕಾಶದಿಂ ನಿಜಮುಕ್ತಿ ಸ್ಥಾನಮಾನದ ಪರಮಪದದಲ್ಲಿ ಪ್ರೀತಿಯು

ಜನಸಂಗಕ್ಕೆ ದೂರವಾಗಿಹ ತನುವು. (ಇದು ಶೌಚವು)

ಅಪ್ರಯತ್ನವಾಗಿ ಅನಿಚ್ಛಾಪ್ರಾರಬ್ಧದಿಂ ಬಂದ ಯಥಾಲಾಭ

ಸಂತೋಷವು ಬಾಧಾರಹಿತವಾಗಿ ಮನೋರಮ್ಯವಾದೇಕಾಂ

ತಾಶ್ರಯದಲ್ಲಿಯ ತಾತ್ಪರ್ಯವು, ಮನಮಂ ಬಹಿರ್ಮುಖ

ವಾಗಲೀಯದಿಹುದು, ವಿಚಿತ್ರ ವಿಷಯಂಗಳಲ್ಲಿಯ ವಿರತಿಯು

ಎಂಬಿವೆಲ್ಲುಂ ನಿಯಮವೆಂಬಂಗಮಕ್ಕುಂ

ಎಂದು ನಿಯಮದ ವಾಖ್ಯೆಯನ್ನು ಮಾಡಿರುವರು. ಇದಕ್ಕೂ ಸರಳವಾಗಿ ದ್ವಿತೀಯ ಪರಿಚ್ಛೇದದಲ್ಲಿ ನಿಯಮವನ್ನು ಹತ್ತು ತೆರನಾಗಿ ವಿಂಗಡಿಸಿರುವರು

ಬಳಿಕ ಭೋಗ್ಯ ವಸ್ತುಗಳ ಲಬ್ದಿ-ನಾಶಂಗಳಲ್ಲಿ ಸಮಾನ

ಬುದ್ದಿಯೆನಿಪ ಸಂತೋಷವು. ಶಿವಾಗಮೋಕ್ತಂಗಳಾದ ವಿಧಿನಿಷೇಧಂ

ಗಳಿಂ ಪುಣ್ಯಪಾಪಂಗಳಪ್ಪವೆಂಬ ವಿಶ್ವಾಸವು, ತನಗಾಚಾರ್ಯೋ

ಪದೇಶದಿಂದಾದ ಸತ್ಕೃತ್ಯದೇಕತೆಯು, ಯೋಗಾರ್ಥಮಾಗಿ

ದೇಹಶೋಷಣರೂಪ ತಪವು. ಮೇಣು ನಾನಾರು ಮೋಕ್ಷವೆಂ

ತಪ್ಪುದೆಂಬಿವು ಮೊದಲಾದಲೋಚನರೂಪ (ಸ್ವಾಧ್ಯಾಯ ತಪವು)

ಭಸ್ಮನಿಷ್ಠತ್ವಾದಿ ವ್ರತವು. ಧ್ಯಾನಸ್ತೋತ್ರಾಭಿಷೇಕತ್ವಾದಿಗಳಿಂ

ದೀಶ್ವರಾರ್ಚನವು ಮಾನಸೋಪಾಂಶು ವಾಚಕಂಗಳಿಂ ಪ್ರಣವ

ಪಂಚಾಕ್ಷರಾದಿ ಮಂತ್ರಜಪವು. ಲೋಕವಿರು ಶಾಸ್ತ್ರವಿರುದ್ಧ

ಮಾದ ಮಾರ್ಗಂಗಳಲ್ಲಿ ಮನವೆರಗದಿಹುದು. ಯೋಗಶಾಸ್ತ್ರಂ

ಗಳಂ ಕೇಳುವುದು ಸತ್ಪ್ರಾತ್ರದಾನವು ಎಂಬ ಹತ್ತು ನಿಯಮಂ

ಗಳಕ್ಕುಂ (೨೯ನೇ ಪುಟ)

ಮೊದಲಿನ ಐದರ ಭಾವವು ಈ ಹತ್ತು ನಿಯಮಗಳಲ್ಲಿ ಬಂದಿದೆ. ಆದರೆ ಇವುಗಳಲ್ಲಿ ಕೆಲವು ಶಿವಾದೈತ ಸಿದ್ಧಾಂತಕ್ಕೂ ಸಮನ್ವಯಗೊಂಡಿವೆ. ಯೋಗ ದರ್ಶನಕಾರರು ಹೇಳುವ ನಿಯಮಗಳು ಕಠಿಣತರವಾಗಿವೆ. ಪುಣ್ಯ ಸಂಗ್ರಹಕ್ಕಾಗಿ ಮಾಡುವ ಶೌಚ-ತಪಾದಿಗಳು ಪುನರ್ಜನ್ಮಕ್ಕೆ ಕಾರಣವಾಗಿವೆ. ಚಾಂದ್ರಾಯಣ ವೃತದಲ್ಲಿ ಪ್ರತಿಪದೆಯಿಂದ ಒಂದೊಂದು ತುತ್ತು ಪ್ರಸಾದವನ್ನು ಹೆಚ್ಚಿಸಿ ಸ್ವೀಕರಿಸುತ್ತ ಹೋಗಿ, ಪುನಃ ಹುಣ್ಣಿಮೆಯಿಂದ ಚಂದ್ರ ಕುಂದಿದಂತೆ ಒಂದೊಂದು ತುತ್ತನ್ನು ಕಡಿಮೆ ಮಾಡುವರು. ಹೀಗೆ ಕಾಯವನ್ನು ಶೋಷಿಸಿದರೆ ಶಿವಕೊಟ್ಟ ಪ್ರಸಾದ ಭೋಗ ತಪ್ಪಿಹೋಗಿವದು. ಅಲ್ಲದೆ ಕೂಡಲ ಸಂಗನನ್ನು ಒಲಿಸಲು ಬಂದ ಪ್ರಸಾದಕಾಯ ಕಂದಿ ಹೋಗುವದೆಂದು ಶರಣರು ಸಾರಿದ್ದಾರೆ.

ಧರ್ಮ ಸಾಧನೆಗೆ ಮೂಲವಾದ ಶರೀರವು ಕೃಶವಾಗಿ ಪೂರ್ಣಜ್ಞಾನವನ್ನು ಸಂಪಾದಿಸದೇ ಭವಕ್ಕೆ ಪುನಃ ಪುನಃ ಬರಬೇಕಾಗುವದು.

ಅದು ಕಾರಣ ಶರಣನಿಗೆ (ಶಿಷ್ಯನಿಗೆ) ಗುರುವು ಶರೀರೇಂದ್ರಿಯಗಳನ್ನು ಶೋಷಿಸುವ ನಿಯಮವನ್ನು ಕಡೆಗಣಿಸಿ ಸ್ವಯಲಿಂಗ ಪೂಜಾ ನಿಯಮಗಳನ್ನು ನಿರೂಪಿಸುತ್ತಾನೆ. ಆಯತ ಮಾಡಿಕೊಂಡ ಲಿಂಗವು ಸ್ವಯವಾಗುವ (ಸ್ವಾಯತ) ಸಾಧನವೇ ಲಿಂಗಾರ್ಚನೆ. ಆದರೆ ದೇಹೇಂದ್ರಿಯಾದಿಗಳನ್ನು ಶೋಷಿಸುವ ನಿಯಮ ಪಾಲಕನಿಗೆ ಪರಿಪೂರ್ಣ ಸಂತೋಷಸಿಕ್ಕದು. ವಿಷಯಾದಿಗಳನ್ನು ನೋಡಿದ ಮನದಲ್ಲಿ ಕಾಮನೆ ಬರುವುದು ಸಹಜ. ಇದನ್ನು ಲಿಂಗಪೂಜಕನು ಲಿಂಗೋಪಭೋಗಿ (ಲಿಂಗಭೋಗೋಪಭೋಗಿ) ಯಾಗಿ ಉದಾತ್ತೀಕರಿಸಿಕೊಂಡು ಸದಾ   ಸಂತೋಷಿಯಾಗುವನು.

ಗುರುಮುಖದಿಂದ ಬಾರದ, ಸ್ವಾನುಭಾವದಲ್ಲಿ ಅಳವಡದ ಜಪಾದಿಗಳು, ವಾದ-ವಿವಾದದಿಂದ ಕೂಡಿದ ಮೋಕ್ಷ (ಅದ್ವೈತ) ಗ್ರಂಥಗಳ ಸ್ವಾಧ್ಯಾಯವು ಶಿವಾನುಭವದಂತೆ ತೃಪ್ತಿಯನ್ನು ಕೊಡಲಾರದು. ಗುರು-ದೇವರಲ್ಲಿ ಅರ್ಪಿಸುವ ಈಶ್ವರಪ್ರಣಿಧಾನಕ್ಕಿಂತ ಗುರು-ಲಿಂಗ-ಜಂಗಮಕ್ಕರ್ಪಿಸುವ ತ್ರಿವಿಧ ದಾಸೋಹವು ಮಿಗಿಲಾಗಿದೆ. ತನು-ಮನ-ಧನಗಳ ಸಮರ್ಪಣೆಯಾಗಿ ಭೃತ್ಯಾಚಾರವು ಅಳವಡುತ್ತದೆ. ಭೃತ್ಯಾಚಾರವನ್ನು ಕಲಿಸಿ ಸ್ವಯಲಿಂಗ ಪೂಜೆಯ ನಿಯಮವನ್ನು ಕರುಣಿಸುವ ಗುರುವು ಭವ-ಭಯವನ್ನು ಹರಣ ಮಾಡುವನು. ಗುರು, ಲಿಂಗ, ಜಂಗಮ ಭಕ್ತನಾದವನಿಗೆ ಭವ-ಭಯವಿಲ್ಲ. ಮರಣವೇ ಮಹಾನವಮಿಯಾದ ಮೇಲೆ ಭಯವೆಂಬುದೇ ಇರುವದಿಲ್ಲ. ನಿಷ್ಕಾಮಕರ್ಮವೆನಿಸಿದ ಲಿಂಗಾರ್ಚನೆಯು ಭವ (ಪುನರ್ಜನ್ಮ) ವನ್ನು ನೀಗುತ್ತದೆ.

ಇಲ್ಲಿ ಶಿವಕವಿಯು ಪ್ರಯೋಗಿಸಿದ ”ಸ್ವಯಲಿಂಗಪೂಜೆ” ಪದವು ಅತ್ಯಂತ ಅರ್ಥಪೂರ್ಣವೂ ತಾತ್ವಿಕವೂ ಆಗಿದೆ. ಇಷ್ಟಲಿಂಗವು ಸ್ವಯಲಿಂಗವೆನಿಸಿದೆ. ಇದು ಅಂಗನಿಗೆ ಭಿನ್ನವಾದುದಲ್ಲ, ಅಂಗನ ಸ್ವಸ್ವರೂಪವೇ ಇಷ್ಟಲಿಂಗವಾಗಿರುತ್ತದೆ. ತನ್ನ ಚಿತ್ಕಳೆಯೇ ಲಿಂಗವಾಗಿ ಬಂದಿದೆ. ತನಗಿಂದ ಅನ್ಯವಾದುದಲ್ಲ. ತಾನೇ ಲಿಂಗ, ಅದುವೇ ತಾನು. ಮತ್ತು

*”ಮುನ್ನನಾದಿಯ ಪರಾತ್ಪರ ನಿರಂಜನ ಶರಣ

ತನ್ನ ಹೃತ್ಕಮಲದ ಪರಂಜ್ಯೋತಿ ಲಿಂಗವನು

ಭಿನ್ನವಿಲ್ಲದೆ ವಾಮಕರಕಂಜದೊಳ್ ಪಿಡಿದು ತನ್ನ ತಾನರ್ಚಿಸುತಿಹ” ||

ನೆಂದು- ಸ್ವಯಲಿಂಗಪೂಜೆಯ ಅರ್ಥವನ್ನು ಸ್ಪಷ್ಟವಾಗಿ ಈ ಕವಿಯು ಬೇರೆಡೆ ತಿಳಿಸಿದ್ದಾನೆ. ಹಿಂದೆ ಪ್ರತಿಪಾದಿಸಿದ ಗುರುಕರುಣೆಯ ವಿವರದಿಂದಲೂ ಈ ಮಾತು ಯಥಾರ್ಥವಾಗಿ ವೇದ್ಯವಾಗದೇ ಇರದು.

ಇಷ್ಟಲಿಂಗ ಪೂಜೆಯಲ್ಲಿ ಪೂಜ್ಯಪೂಜಕ ಭಾವವಿರುವದಿಲ್ಲ.ʼʼ ರುದ್ರೋ ಭೂತ್ವಾ ರುದ್ರಂ ಯಜೇತ್ʼʼ ಶಿವನಾಗಿ ಶಿವನನ್ನು ಪೂಜಿಸಬೇಕೆಂದೇ ಶ್ರುತಿ ಸಾರುತ್ತಿದೆ. ಲಿಂಗಭಕ್ತನು ಸ್ವಸ್ವರೂಪದ ಅನುಸಂಧಾನ ಮಾಡುತ್ತಾನೆ. ಆದರೆ ಸ್ಥಾವರಲಿಂಗ ಪೂಜಕನ ಪರಿ ಬೇರೆ. ಲಿಂಗ ಬೇರೆ-ತಾನು ಬೇರೆಂದು ಆರಾಧಿಸುತ್ತಾನೆ. ಇಲ್ಲಿ ಸ್ಥಾವರ ಲಿಂಗವು ಉಪಾಸ್ಯವಾದರೆ ತಾನು ಉಪಾಸಕನೆನಿಸುವನು. ಇದು ಇದಿರಿಟ್ಟು ಮಾಡುವ ಪೂಜೆಯಾಗುವದು. ಈ ದೇವರು ದೇವಾಲಯದಲ್ಲಿಯೇ ಲಭ್ಯವಾಗುತ್ತಿದ್ದರೆ ಇಷ್ಟಲಿಂಗವು ಸದಾ ಶರೀರವನ್ನು ಹೊಂದಿಕೊಂಡಿರುತ್ತದೆ. ಸ್ಥಾವರ ಲಿಂಗವನ್ನು ಸ್ವತಃ ಅರ್ಚಿಸುವ ಅವಕಾಶ ಕಡಿಮೆ. ಪೂಜಾರಿಯು ಮಧ್ಯಸ್ಥನಾಗುವನು. ಅಲ್ಲಿ ಮನದಣಿಯುವಂತೆ ಪೂಜೆಗೈಯುವ ಪರಿಸರವಿಲ್ಲ. ಇಷ್ಟಲಿಂಗವನ್ನು ತನಗಾನಂದನಾಗುವ ವರೆಗೂ ತನ್ನಾಲಯದಲ್ಲಿ ಪೂಜಿಸಬಹುದು. ಗುರೂಪದಿಷ್ಟ ಷಡಕ್ಷರ ಮಂತ್ರಾನುಷ್ಠಾನವು ಲಿಂಗಭಕ್ತನನ್ನು ಲಿಂಗವನ್ನಾಗಿಸುತ್ತದೆ. ಲಿಂಗ ಪೂಜಿಸುವಲ್ಲಿ ಸ್ವಾನುಭಾವವು ಓತಪ್ರೋತವಾಗಿರುತ್ತದೆ. ಗುರುವಿಗೆ ತನುವಿನ ಸೇವೆಯನ್ನು ಲಿಂಗದಲ್ಲಿ ಮನವನ್ನು ಜಂಗಮನಿಗೆ ಧನವನ್ನು ಅರ್ಪಿಸುವ ಭಕ್ತನಲ್ಲಿ ವಿಷಯವಾಸನೆಯು ಅಳಿಯುತ್ತ ಹೋಗುತ್ತದೆ. ಅಂದ ಮೇಲೆ ನಿಯಮ ಯೋಗವನ್ನು ಸಾಧಿಸಿ ಪುನಃ ಪುನಃ ಹುಟ್ಟಿ ಬರುವದಕ್ಕಿಂತ ನಿತ್ಯಮುಕ್ತನನ್ನಾಗಿಸುವ ಸ್ವಯಲಿಂಗ ಪೂಜೆಯ ನಿಯಮ ಅಸದೃಶವಾದುದು. ಅಮೋಘವಾದುದು. ಓ ಸದ್ಗುರುವೆ ! ಭವಭಯಹರನೆ ! ಸ್ವಯಲಿಂಗ ಪೂಜೆಯ ನಿಯಮವು ಚೆನ್ನಾಗಿ ಎನ್ನಲ್ಲಿ ಅಳವಡು ವಂತೆ ಕರುಣಿಸಿ ಕಾಪಾಡು.

೩. ಆಸನದ ಆಯಾಸ

ಆಸನದ ಯೋಗದ | ಭ್ಯಾಸವಾಯಸವೆಂದು

ಓಸರಿಸಿ ಕರಕಂ – ಜಾಸನ ಲಿಂಗವಿತ್ತು

ಲ್ಲಾಸ ಶ್ರೀ ಗುರುವೆ ಕೃಪೆಯಾಗು ೯೫ ||

ಯೋಗದ ಮೂರನೆಯ ಅಂಗ ಆಸನವು. “ಸ್ಥಿರ-ಸುಖಮಾಸನಮ್” ಸ್ಥಿರವಾಗಿ ಹಾಗೂ ಸುಖವಾಗಿ ಮಂಡಿಸುವ ಶಕ್ತಿಯನ್ನು ಪಡೆಯುವದಕ್ಕೇನೆ ಆಸನವೆಂದು ಯೋಗಶಾಸ್ತ್ರ ಪ್ರತಿಪಾದಿಸಿದೆ. ಹಠಯೋಗ ಸಾಧನೆಯಲ್ಲಿ ಆಸನದ ಸ್ಥಾನವು ಬಹುಮುಖ್ಯವಾಗಿದೆ. ದೈಹಿಕ ಆರೋಗ್ಯ ಹಾಗೂ ಮಾನಸಿಕ ಶಾಂತಿಗಾಗಿ ಈ ಆಸನಗಳು ಅವಶ್ಯ. ಆಯಾಸ ಮಾಡಬಲ್ಲ ಆಸನಗಳಿಂದ ಲಾಭವಾಗುವದಿಲ್ಲ. ದೈಹಿಕ ಶ್ರಮ ಜೀವಿಗಳಿಗೆ ಆಸನಗಳ ಅಗತ್ಯವಿರದಿದ್ದರೂ ಬುದ್ದಿ ಜೀವಿಗಳಿಗೆ ಆಸನಗಳು

ಬೇಕು. ಟಿ. ಕೃಷ್ಣಮಾಚಾರ್ಯರು-ತಮ್ಮʼʼ ಯೋಗಾಸನಗ್ರಂಥದಲ್ಲಿ ಆಸನವು ಶರೀರ ಮಾಂಸ, ಮನಸ್ಸು ಇವುಗಳನ್ನು ಆಯಾ ವಯಸ್ಸಿಗೆ ತಕ್ಕಂತೆ ಸಮತೂಕ ಕ್ರಿಯಾಶಕ್ತಿಗಳೊಂದಿಗೆ ವೃದ್ಧಿಪಡಿಸಿ ಆಯುರ್ವೃದಿ, ರೋಗನಿವಾರಣೆ ಮತ್ತು ಮನಸ್ಸಿನ ಸ್ಥೈರ್ಯ, ಸೂಕ್ಷ್ಮವಸ್ತುತ್ತ್ಚ ಗ್ರಾಹಕ ಶಕ್ತಿಗಳೊಂದಿಗೆ ಆತ್ಮಾನಾತ್ಮ ವಿವೇಕವನ್ನು ಕೊಡುವ ಕಲ್ಪವೃಕ್ಷದಂತಿರುತ್ತೆ’ ಎಂದು ಆಸನದ ಮಹತ್ವವನ್ನು ಬಿತ್ತರಿಸಿದ್ದಾರೆ.

ಶಾರೀರಿಕ ತಾಲೀಮು ಮಾಡುವವನ ಶರೀರವು ಘಟ್ಟಿಯಾಗಿ ಜಟ್ಟಿಯೆನಿಸ ಬಹುದು, ಆದರೆ ಅವನ ಬುದ್ದಿ ಬೆಳವಣಿಗೆಯು ಆಗುವದಿಲ್ಲ. ಆಸನದಿಂದ ಶರೀರಕ್ಕೆ ಬೇಕಾದಷ್ಟೇ ಕೊಬ್ಬು ಉಳಿದು ಹೆಚ್ಚಿನ ಬೊಜ್ಜು ಬೆಳೆಯಲು ಅವಕಾಶ ಬರುವದಿಲ್ಲ. ಅದರಿಂದ ದೈಹಿಕ ಉತ್ಸಾಹವೂ ಬುದ್ದಿಯ ತೀಕ್ಷತೆಯೂ ಬೆಳೆಯುವದು. ಶ್ವಾಸೋಚ್ಛ್ವಾಸದಗತಿ ಸಮನಾಗುವದು. ಸರಳವಾದ ವ್ಯಾಯಾಮವು ಶರೀರಕ್ಕೆ ಬೇಕೇಬೇಕು. ʼʼ ದಿನಾಲು ತಪ್ಪದೆ ನಿಯಮಿತ ವ್ಯಾಯಾಮವನ್ನು ತಕ್ಕೊಂಡರೆ ತನುಮನಗಳೆರಡೂ ಸುದೃಢವೂ ಸುಂದರವೂ, ಶಾಂತವೂ, ಪ್ರಸನ್ನವೂ ಮತ್ತು ರೋಗ ರಹಿತವೂ ಆಗುವವು. ಮತ್ತು ನಿದ್ದೆಯಾದರೂ ಚೆನ್ನಾಗಿ ಹತ್ತುವದು‘ ಎಂದು ಸ್ವಾಮಿ ಶಿವಾನಂದರು ತಮ್ಮʼʼ ಬ್ರಹ್ಮಚರ್ಯವೇ ಜೀವನ, ವೀರನಾಶವೇ ಮೃತ್ಯುʼ’ ಎಂಬ ಗ್ರಂಥದಲ್ಲಿ ಸರಳ ವ್ಯಾಯಾಮ ಹಾಗೂ ಆಸನದಿಂದಾಗುವ ಸ್ವಾನುಭಾವದ ಸುಧೆಯನ್ನು ಸುರಿಸಿದ್ದಾರೆ. ಕಾಮಾತುರವಾದ ಮನವೂ ವ್ಯಾಯಾಮ ಅಥವಾ ಆಸನಗಳಿಂದ ಹಿಡಿತದಲ್ಲಿ ಉಳಿಯುವದೆಂದೂ ತಿಳಿಸಿದ್ದಾರೆ.

ಆಸನಗಳ ಸಾಧನೆಯಿಂದ ಆಂತರಿಕ ರೋಗಗಳೂ ಸಹ ಹೇಳ ಹೆಸರಿಲ್ಲದಂತಾಗುತ್ತವೆ. ಪ್ರತಿನಿತ್ಯ ಕೆಲವು ಮುಖ್ಯವಾದ ಹಾಗೂ ಸುಲಭವಾದ ಶೀರ್ಷಾಸನ, ಮಯೂರಾಸನ, ಪಶ್ಚಿಮತಾನಾಸನ, ಸಿದ್ಧಾಸನ, ಪದ್ಮಾಸನ ಮೊದಲಾದವು ಗಳನ್ನಾದರೂ ತಪ್ಪದೇ ಹಾಕುವದರಿಂದ ಶರೀರಕ್ಕೆ ಬಹಳಷ್ಟು ಲಾಭವಾಗುವದು. ಶೀರ್ಷಾನದಿಂದ ತಲೆನೋವು ದೂರಾಗುವದಲ್ಲದೆ ಕಣ್ಣಿನ ಶಕ್ತಿ ಬೆಳೆಯುವದು. ಸರ್ವಾಂಗಾಸನದಿಂದ ಹೊಟ್ಟೆಯಲ್ಲಿ ಆಹಾರ ವ್ಯತ್ಯಾಸದಿಂದಾಗುವ ಸಾಮಾನ್ಯ ನೋವು ಬರುವದಿಲ್ಲ. ಮಲಬದ್ಧತೆ ಹೋಗುವದಲ್ಲದೆ ಹೊಟ್ಟೆ ತೆಳ್ಳಗಾಗುವದು. ಬೆನ್ನಿನ ಹುರಿ ಗಟ್ಟಿಗೊಳ್ಳುವದು. ಮಯೂರಾಸನದಿಂದ ಯಕೃತ್ ಸಶಕ್ತವಾಗುವದು. ಕೈಗಳಲ್ಲಿ ಬಲಬರುವದು. ಬೆನ್ನು ಹುರಿಯ ಜಡತೆ ದೂರವಾಗುವದು. ಪಶ್ಚಿಮತಾನಾಸನ ದಿಂದ ಹೊಟ್ಟೆಯ ಎಲ್ಲಾ ಬಗೆಯ ರೋಗಗಳು ಮಾಯವಾಗುವವು. ಹಠಯೋಗ ಸಾಧನೆಯಲ್ಲಿ ಅನೇಕ ಆಸನಗಳನ್ನು ಹೇಳಿದ್ದಾರೆ. ಅವುಗಳಲ್ಲಿ ೮೪ ಆಸನಗಳನ್ನು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಆಯ್ಕೆ ಮಾಡಿದ್ದರು. ಇವುಗಳಲ್ಲಿ ಮೇಲಿನವು ಪ್ರಮುಖವಾದವುಗಳು. ಇನ್ನು ಕೆಲವು ಆಸನಗಳು ಬಹು ಕಠಿಣವಾಗಿವೆ. ಅವುಗಳನ್ನು ಹಾಕುವದರಿಂದ ಶರೀರಕ್ಕೆ ಆಯಾಸವೂ ಆಗುವದು. ಇವುಗಳನ್ನು ಗುರುಮುಖದಿಂದ ಅರಿತು ಆಚರಿಸಬೇಕು. ಅಂದರೆ ಶರೀರದ ಎಲ್ಲಾ ಅವಯವಗಳಿಗೆ ವ್ಯಾಯಾಮವೆನಿಸುವದು

ಶಿವಯೋಗ ಮಂದಿರದಲ್ಲಿ ಇಂದಿಗೂ ಸಾಧಕರು ಯೋಗಾಸನಗಳನ್ನು ತಪ್ಪದೆ ಹಾಕುತ್ತಾರೆ. ಇಲ್ಲಿ ಆಸನಗಳ ಜೊತೆಗೆ ಮುದ್ರೆಗಳನ್ನು ದೃಷ್ಟಿಗಳನ್ನು ಸಹ ಅನುಸರಿಸುತ್ತಾರೆ. ಈ ಪರಂಪರೆ ಬೇರೆಡೆ ಕಾಣ ಬರುವದಿಲ್ಲ. ದೃಷ್ಟಿ ಹಾಗೂ ಮುದ್ರೆಗಳು ಅತ್ಯಂತ ಉಪಯುಕ್ತವಾಗಿವೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟು ಲಿಂ, ಸಖರಾಯ ಪಟ್ಟಣದ (ಗಿರಿಯಾಪೂರ) ಸದಾಶಿವಾಚಾರ್ಯರು ‘ಯೋಗಾ ಸನಗಳು’ ಎಂಬ ಗ್ರಂಥದಲ್ಲಿ ವಿವೇಚಿಸಿದ್ದಾರೆ. ಪ್ರಾಮಾಣಿಕವಾಗಿ ಸಂಗ್ರಹಿಸಿದ್ದಾರೆ.

ಸಾಮಾನ್ಯವಾದ ಆಸನಗಳನ್ನು ಸ್ತ್ರೀಪುರುಷರಿಬ್ಬರೂ ಅಭ್ಯಾಸಮಾಡಿ ಆರೋಗ್ಯ ಪಡೆಯಬಹುದು.

ಯೋಗಾಸನಗಳು ಶರೀರಕ್ಕೆ ಉಪಯುಕ್ತವಾದ ಮೇಲೆ ಅವುಗಳ ನಿರಾಕರಣೆ ಏಕೆಂಬ ವಿಚಾರ ಬರುತ್ತದೆ. ಶಿವಕವಿಯು ಪ್ರಸ್ತುತ ತ್ರಿಪದಿಯಲ್ಲಿ ಆಸನದ ಅಭ್ಯಾಸ ಆಯಾಸಕರವೆಂದು ಏಕೈಕ ದೃಷ್ಟಿಯಿಂದ ಮಾತ್ರ ವಿವರಿಸಿದ್ದಾನೆ. ಶರೀರದ ಬಲವರ್ಧನೆಗಾಗಿಯೇ ಆಸನಾಭ್ಯಾಸವಾದರೆ ಪ್ರಯೋಜನವಿಲ್ಲವೆಂಬುದು ಆತನ ಅಭಿಪ್ರಾಯ. ಕಾಯಬಲಿತರೆ ಮಾಯೆ ಬಲಿವುದೆಂಬ ಭಯವೂ ಇದೆ. ಕಠಿಣವಾದ ಆಸನಗಳಿಂದ ಶರೀರವನ್ನು ದಣಿಸುವದು ಬೇಡ. ಶಿವಪೂಜೆಯಲ್ಲಿಯೇ ಆಸನ

ಯೋಗವು ಸಹಜವಾಗಿ ಘಟಿಸುತ್ತದೆಂದ ಮೇಲೆ ಪ್ರತ್ಯೇಕವಾದ ಆಸನದ ಅಭ್ಯಾಸ ಅವಶ್ಯವಿಲ್ಲ. ಆಸನಗಳಲ್ಲಿ ಬರುವ ಷಟ್ಕರ್ಮಗಳನ್ನು ಬಹು ಆಯಾಸದಿಂದಲೇ ಸಾಧಿಸಬೇಕಾಗುತ್ತದೆ.

ಶಿವಪೂಜೆಗೆ ಕುಳಿತುಕೊಳ್ಳಲು ಸುಖಾಸನ, ಸಿದ್ಧಾಸನ, ಪದ್ಮಾಸನ, ಸ್ವಸ್ತಿ ಕಾಸನಗಳಾದರೆ ಸಾಕು. ಇವುಗಳಲ್ಲಿ ಒಂದನ್ನು ಹಾಕಿ ಲಿಂಗ ನಿರೀಕ್ಷಣೆ (ದೃಷ್ಟಿ)ಯೇ ಮುಖ್ಯ ಸಾಧನವಾಗಿರುವದರಿಂದಲೂ ಶಿವಮಂತ್ರ ಧ್ಯಾನದಿಂದಲೂ ಅದೆಷ್ಟೋ ಸಮಯ ಸುಖವಾಗಿ ಕುಳಿತುಕೊಳ್ಳಬಹುದು. ಲಿಂಗಯೋಗವು ಆಸನದಿಂದಾಗುವ ಆಯಾಸಕ್ಕೆ ಕಾರಣವಾಗುವದಿಲ್ಲ. ಸಿದ್ಧಾಸನ ಹಾಕಿ ಕುಳಿತುಕೊಂಡರೆ ಪೂಜಿಸುವವನಿಗೆ ಮೂಲವ್ಯಾಧಿಯು ಬರುವದಿಲ್ಲವೆಂಬುದು ಅನುಭವದ ಮಾತು. ಕಾರಣ ಆಯಾಸವಾಗುವ ಆಸನಗಳನ್ನು ಬದಿಗಿರಿಸಿ ಲಿಂಗಾರ್ಚನೆಗೆ ಅವಶ್ಯವಾದ ಆಸನವನ್ನು ಹಾಕಿ ಗುರುಕರುಣಿಸಿದ ಇಷ್ಟ, ಪ್ರಾಣ, ಭಾವಲಿಂಗಗಳನ್ನು ಪೂಜಿಸಬೇಕು.

ಉಪಯುಕ್ತವಾದ ಆಸನಗಳನ್ನು ಸಿದ್ಧಿಸಿ ನಿತ್ಯೋಲ್ಲಾಸಿಯಾದ, ಸತತೋತ್ಸಾಹಿ ಯಾದ ಗುರುವು ಶಿಷ್ಯನ ಕರಕಮಲವನ್ನೇ ಲಿಂಗತಂದೆಗೆ ಆಸನವನ್ನಾಗಿ ಪವಿತ್ರ ಗೊಳಿಸಿರುತ್ತಾನೆ. ಲಿಂಗಪೂಜಕನು ಆಸನವುಳ್ಳವನಾದರೆ ಅವನ ಹಸ್ತವೇ ಲಿಂಗ ದೇವನಿಗೆ ಆಸನವಾಗುತ್ತದೆ. ಲಿಂಗಪೂಜಾ ಸಮಯದಲ್ಲಾಚರಿಸುವ ಆಸನವು ಶರೀರಕ್ಕೆ ಕಂಪನ, ಭಯ ಮೊದಲಾದ ಆಯಾಸವನ್ನು ಹುಟ್ಟಿಸುವದಿಲ್ಲ. ದೇಹಕ್ಕೆ ಯಾವ ಬಾಧೆಯೂ ಆಗುವದಿಲ್ಲ. ಇಲ್ಲಿ ಗುರುವು ಸ್ವತಃ ತಾನು ಈ ಲಿಂಗ ಯೋಗದ

ಆಸನದ ಅನುಭವವನ್ನು ಅನುಭವಿಸಿ ಹೇಳುತ್ತಿರುವದರಿಂದಲೇ ಅವನು ಉಲ್ಲಸಿತ ನಾಗಿರುತ್ತಾನೆಂಬುದನ್ನು ಶಿವಕವಿಯು ಸ್ಪಷ್ಟಿಕರಿಸಿದ್ದಾನೆ.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ಸಂಸ್ಕೃತಿ ಮತ್ತು ನಾಗರಿಕತೆ ಇವುಗಳ ಮುಖ್ಯ ಉದ್ದೇಶ ಮನುಷ್ಯನಿಗೆ ಸುಖ ಸಂತೋಷವನ್ನುಂಟು ಮಾಡುವುದು. ಮೇಲ್ನೋಟಕ್ಕೆ ಇವು ಒಂದೇ ಎಂಬಂತೆ ಕಂಡು ಬಂದರೂ ಸೂಕ್ಷ್ಮದೃಷ್ಟಿಯಿಂದ ಅವಲೋಕಿಸಿದಾಗ ಇವೆರಡರ ವ್ಯತ್ಯಾಸ ಕಂಡು ಬರುತ್ತದೆ. ಆದರೆ ಒಂದು ಇನ್ನೊಂದಕ್ಕೆ ಪೂರಕ ಎಂಬುದನ್ನು ಮಾತ್ರ ಮರೆಯಲಾಗದು. ಸಂಸ್ಕಾರ ಸಂಪನ್ನ ಜೀವನಕ್ಕೆ ನಾವು ಸಂಸ್ಕೃತಿ ಎಂದು ಕರೆಯುತ್ತೇವೆ. ಒಳ್ಳೆಯದನ್ನು ಬಯಸುವುದು, ಒಳ್ಳೆಯದನ್ನು ಪ್ರೀತಿಸುವುದು, ನುಡಿದಂತೆ ನಡೆಯುವುದು, ಶೀಲ ಚಾರಿತ್ರ್ಯಗಳನ್ನು ಹೊಂದುವುದು ಇವೇ ಮುಂತಾದ ಸಂಸ್ಕಾರಗಳು ಸಂಸ್ಕೃತಿಯ ಹೆಗ್ಗುರುತುಗಳು. ಇವು ವ್ಯಕ್ತಿಯ ಲೌಕಿಕ ಹಾಗು ಪಾರಲೌಕಿಕ ಉನ್ನತಿಗೆ ಸಹಕಾರಿಯಾಗಿವೆ. ತನ್ಮೂಲಕ ಸಮಾಜದ ಸರ್ವಾಂಗೀಣ ವಿಕಾಸಕ್ಕೆ ಕಾರಣವಾಗುತ್ತವೆ.

ಸಂಸ್ಕೃತಿ ಯಾವುದೇ ಜನಾಂಗ ಅಥವಾ ದೇಶದ ಆತ್ಮ, ಜನರ ಊಟ- ಉಪಚಾರ, ಉಡುಗೆ-ತೊಡುಗೆ, ಆಟ-ಪಾಠ, ನಡೆ-ನುಡಿ, ಧರ್ಮ-ಆತ್ಮಜ್ಞಾನ ಇವು ಅವರ ಬದುಕಿನ ಸಾರಸರ್ವಸ್ವ. ಅನೇಕ ಶತಮಾನಗಳಿಂದ ಆ ಜನಜೀವನ ನಡೆದು ಬಂದುದರ ಫಲಶೃತಿ ಇದು. ಇದನ್ನೇ ನಾವು ಸಂಸ್ಕೃತಿ ಎನ್ನುತ್ತೇವೆ. ಇದು ವ್ಯಕ್ತಿಗೆ ಸಂಸ್ಕಾರವನ್ನು ಕೊಡುವ ಶಕ್ತಿ. ಸಂಸ್ಕಾರ ಸಂಪನ್ನ ವ್ಯಕ್ತಿಗಳ ವಿಚಾರ, ಮಾತು ಮತ್ತು ಕೃತಿಗಳಲ್ಲಿ ಇದು ಅಭಿವ್ಯಕ್ತಗೊಳ್ಳುತ್ತದೆ. ವ್ಯಕ್ತಿಯ ಅಂತರಂಗದ ಜೀವರಸವಾಗಿರುವ ಸಂಸ್ಕೃತಿಯು ಅವನ ಧರ್ಮ, ದರ್ಶನ, ಸಾಹಿತ್ಯ, ಸಂಗೀತ, ಕಲೆ, ಶಿಲ್ಪ, ನೃತ್ಯ ಮುಂತಾದವುಗಳಲ್ಲಿ ನಿರಂತರ ಪ್ರವಹಿಸುತ್ತಿರುತ್ತದೆ.

 ನಾಗರಿಕತೆ ವ್ಯಕ್ತಿಯ ಬಹಿರಂಗ ಜೀವನಕ್ಕೆ ಸಂಬಂಧಿಸಿದೆ. ವಿಜ್ಞಾನ-ತಂತ್ರಜ್ಞಾನಗಳ ಪರಿಣಾಮವಾಗಿ ವ್ಯಕ್ತಿಯ ಜೀವನ ಇಂದು ಎಚ್ಚು ಸುಖಮಯವಾಗಿದೆ. ಲೌಕಿಕ ಸುಖ ಸೌಲಭ್ಯಗಳನ್ನು ಪಡೆಯುವ ಸಾಧನೆಗಳೆಲ್ಲವೂ ನಾಗರಿಕತೆಯ ಅಂಗ ಪ್ರತ್ಯಂಗಗಳು. ನಾಗರಿಕತೆ ಮುಖ್ಯತಃ ಪ್ರಯೋಜನಾತ್ಮಕವಾದುದು. ಅದು ವ್ಯಕ್ತಿಯ ಬಾಹ್ಯ ಹಾಗೂ ಭೌತಿಕ ವಿಕಾಸಕ್ಕೆ ಸಹಕಾರಿಯಾದುದು. ಆದರೆ ಸಂಸ್ಕೃತಿ ವ್ಯಕ್ತಿಯ ಆಂತರಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಾರಣವಾಗಿದೆ. ಅಂತೆಯೇ ಅದು ಆನಂದಾತ್ಮಕವಾದುದು.

 ಸಂಸ್ಕೃತಿ ಮತ್ತು ನಾಗರಿಕತೆಗಳೆರಡಕ್ಕೂ ವಿಶೇಷ ಸಂಬಂಧವಿದೆ. ಅದು ತುಪ್ಪದಲ್ಲಿರುವ ಕಂಪು, ಹೂವಿನಲ್ಲಿರುವ ಸುವಾಸನೆಯಂತಹ ಸಂಬಂಧ, ಸಂಸ್ಕೃತಿ ಆತ್ಮವೆನಿಸಿದರೆ ನಾಗರಿಕತೆ ದೇಹದಂತಿದೆ. ಇವೆರಡೂ ಒಂದಕ್ಕೊಂದು ಪೂರಕವಾಗಿದ್ದು, ಪರಸ್ಪರ ಪ್ರಭಾವ ಬೀರುತ್ತ ಮುನ್ನಡೆಯುತ್ತವೆ. ನಾಗರಿಕತೆಗೆ ಬೆಲೆ ಬರುವುದು ಸಂಸ್ಕೃತಿಯ ಸ್ಪರ್ಶದಿಂದ, ಯಾವುದೇ ಜನಾಂಗ ಅಥವಾ ದೇಶ ಸಂಸ್ಕೃತಿಯ ಸ್ಪರ್ಶವಿಲ್ಲದೇ ನಾಗರಿಕತೆಯ ಬಗ್ಗೆ ಹೆಮ್ಮೆ ಪಡಲಾರದು. ಅಂಥ ಸಂಸ್ಕೃತಿಯನ್ನು ಅರಿತು ಆಚರಿಸುವ, ಸಮೃದ್ಧವಾಗಿ ಬೆಳೆಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಸಂಸ್ಕೃತಿಯ ವಿವಿಧ ಮುಖಗಳನ್ನು ಪರಿಚಯಿಸುವ ಗ್ರಂಥಾಲಯ, ವಸ್ತುಸಂಗ್ರಹಾಲಯ, ಆರ್ಟ್‌ಗ್ಯಾಲರಿ ಮುಂತಾದವುಗಳನ್ನು ನಿರ್ಮಿಸಬೇಕು. ಸಂಸ್ಕೃತಿಯ ಸೊಬಗನ್ನು ಜನಗಳಿಗೆ ತಿಳಿಸುವ ನಿರಂತರ ಪ್ರಯತ್ನವೇ ಆಯಾ ಜನಾಂಗದ ಅಭಿವೃದ್ಧಿಯ ಹಾಗು ಚಲನಶೀಲತೆಯ ಪ್ರತೀಕ.

ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ

ಈ ಜಗತ್ತೆಂಬ ರಂಗಭೂಮಿಗೆ ಬಂದವರು, ತಾವು ಹೋಗುವಾಗ ತಮ್ಮದೊಂದು ಚರಿತ್ರೆಯನ್ನು ಅನ್ಯರಿಗಾಗಿ ಬಿಟ್ಟುಹೋಗಬೇಕಾಗುತ್ತದೆ. ಬಾಳಿದವರ ಸಚ್ಚರಿತ್ರೆ ಮುಂದೆ ಬಾಳುವವರಿಗೆ ಆದರ್ಶಮಯವಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಬದುಕಿ ಸತ್ತವರಿಗಿಂತಲೂ ಸತ್ತು ಬದುಕಿದವರು ಮೇಲು, ಇಂತಹ ಆದರ್ಶವ್ಯಕ್ತಿಗಳ ಮಾಲಿಕೆಯಲ್ಲಿ ಮಧ್ಯಸ್ಥಾನವು ಹಾನಗಲ್ಲ ಶ್ರೀಗಳವರಿಗೆ ದೊರೆಯುವುದೆಂಬ ಹೇಳಿಕೆ ನಿಸ್ಸಂದೇಹವಾದುದು.

ಹನ್ನೆರಡನೆಯ ಶತಮಾನದ ಶ್ರೀ ಬಸವ ಮಹಾನುಭಾವರಂತೆ ಸಮಾಜದ ಧಾರ್ಮಿಕ, ನೈತಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳವರು ಹೊಸದೊಂದು ವಾತಾವರಣವನ್ನೇ ನಿರ್ಮಿಸಿ, ಇಪ್ಪತ್ತನೆಯ ಶತಮಾನದ ಬಸವನೆನಿಸಿಕೊಂಡರು. ಇವರು ಕೇವಲ ಮುಖಕ್ಕೆ ಹಾಕಿದ ಮುಸುಕಿನ ಮರೆಯಲ್ಲಿ ಮಣಿಗಳನ್ನೆಣಿಸುತ್ತ ದೇವರನ್ನು ಹುಡುಕಲಿಲ್ಲ; ಅದರ ಜೊತೆಗೆ, ಜಗವ ತುಂಬಿದ ಶಿವತತ್ವವನ್ನು ಕಂಡು ನಲಿದು-ಸೇವಿಸುವ ಮಹಾಸ್ವಾಮಿಗಳಾಗಿದ್ದರು. ಹಿಂದೊಮ್ಮೆ ಸರ್ವಾಂಗ ಸುಂದರವಾಗಿ ಮೆರೆದ ಲಿಂಗಾಯತ ಸಮಾಜವು ಇಂದು, ಧಾರ್ಮಿಕ, ನೈತಿಕ ಅಧಃಪತನದಿಂದ ರುದ್ರರೂಪವನ್ನು ಧರಿಸಿ ಹುಚ್ಚೆದ್ದು ಕುಣಿಯುವುದನ್ನು ಕಂಡು ಮಮ್ಮಲ ಮರುಗಿ ಕರಗಿದರು. ಅದರ ಉಳಿಮೆಗಾಗಿ, ಉನ್ನತಿಗಾಗಿ ತಮ್ಮ ತನು ಮನಧನವನ್ನೇ ಅರ್ಪಿಸಿದರು; ಅದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಇದೇ ನಿಜವಾದ ಸ್ವಾಮಿಯ ಕುರುಹು ಅಲ್ಲವೆ? ಇಂತಹ ಸ್ವಾಮಿಗಳಿಂದಲೇ ಜಗದೋದ್ಧಾರ ಕಾರ್ಯವು ನೆರವೇರಬೇಕಾದುದು ಸಹಜ. ಆದರೆ ಭಕ್ತರ ಪ್ರಸಾದದಿಂದ  ಪುಷ್ಟಗೊಂಡು ಬೆಳೆಯುತ್ತರಲಿರುವ ಸ್ವಾಮಿಗಳು ಶ್ರೀಗಳವರಿಂದ ಪಾಠ ಕಲಿಯುವುದು ಅವಶ್ಯವಲ್ಲವೆ? ಸ್ವಾಮಿಗಳಾದವರು ಸಮಾಜಕ್ಕೆ ಹೆತ್ತ ತಾಯಿಯಂತೆ ಇರಬೇಕು. ಅವರು ಸನ್ಮಾರ್ಗದ ಶಿಕ್ಷಣವನ್ನು ಪಡೆದು, ಸಮಾಜ ಬಂಧುಗಳಿಗೆ ಆಸರದ ಕೈಯನ್ನು ನೀಡಬೇಕಾದುದು ಅತ್ಯಾವಶ್ಯಕ.

ಹಾನಗಲ್ಲ ಶ್ರೀಗಳವರ ಜೀವಿತ ಕಾಲದಲ್ಲಿ ಒದಗಿದ ಸಮಾಜ ಸನ್ನಿವೇಶಗಳು ಅವರ ಎದೆಯೊಳಗಿನ ಬತ್ತಿಯನ್ನು ಹೊತ್ತಿಸದೇ ಇರಲಿಲ್ಲ. ಬಂದ ಪರಿಸ್ಥಿತಿಯನ್ನು ಸಮಾಜದ ನಡತೆಯಲ್ಲಿ ಮೈಗೂಡಿಸುವ ಜಾಣ್ಮೆಯು ಶ್ರೀಗಳವರಲ್ಲಿ ಸ್ವಾಭಾವಿಕವಾಗಿತ್ತು. ಎಂತೆಂತಹ ಭೀಷ್ಮಸನ್ನಿವೇಶಗಳು ಒದಗಿದರೂ ‘ಸಾಕು ಮಾಡೋ ದೇವಾ’ ಎಂದು ಕೂಗದೆ, ಹಣೆಗೆ ಕೈಹಚ್ಚಿಕೊಂಡು ಕೂಡ್ರದೆ,

ಶಾಸ್ತ್ರೀಯವಾದ, ಸರ್ವಸಮ್ಮತವಾದ, ವ್ಯವಹಾರಿಕ ಉಪಾಯವನ್ನು ಹುಡುಕಿ ತೆಗೆಯುತ್ತಿದ್ದರು. ಅವರ ನಿರ್ಮಲವಾದ ಅಂತಃಕರಣವ್ಯಾಪ್ತಿಯು ನೇಸರನ ಬೆಳಗಿನಂತೆ ಧನಿಕ-ದರಿದ್ರ, ಜಾಣ ಮೂಢ, ಉಚ್ಚ-ನೀಚ, ಸ್ತ್ರೀ-ಪುರುಷ ಎಂಬ ಭೇದಭಾವನೆಯಿಲ್ಲದೆ ಸರ್ವರಿಗೂ ಜ್ಞಾನಾಮೃತವನ್ನು ನೀಡಬಯಸುತ್ತಿತ್ತು. ಅವರು ಸುಖವನ್ನು ಕಾಣುತ್ತಿದ್ದುದು ಸ್ವಾರ್ಥಮಯ ಕ್ರಿಮಿಜೀವನದಲ್ಲಲ್ಲ, ನಿಸ್ವಾರ್ಥಮಯವಾದ ಘನಜೀವನದಲ್ಲಿ. ಇಂತಹ ಘನಜೀವಿಗೆ ಮಠಮಾನ್ಯಗಳು ಹಕ್ಕಿಯ ಗೂಡಿನಂತೆ ಸಣ್ಣವಾಗಿ ಕಂಡದ್ದೂ ಆಶ್ಚರ್ಯವೇನಲ್ಲ. ಶ್ರೀಗಳವರು ಲಿಂಗಾಯತ ಸಮಾಜದ ಒಳಬೇನೆಯನ್ನರಿತು, ಅದರ ನಿವಾರಣೆಗೆ ಗುರು

ಜಂಗಮರ ಸುಧಾರಣೆಯ ಜೀವನವೇ ಮುಖ್ಯವಾದದ್ದೆಂದು ಗ್ರಹಿಸಿದರು. ಕೇವಲ ಪುರುಷರಲ್ಲಿ ಧರ್ಮಜಾಗ್ರತೆಯಾದರೆ ಸಾಲದು; ಸ್ತ್ರೀ ವರ್ಗದಲ್ಲಿಯೂ ಕರ್ತವ್ಯಜ್ಞಾನದ ಉದಯವಾಗಲೆಂದು ಹಾರೈಸಿದರು. ಇಷ್ಟಲ್ಲದೆ, ಆಗಿನ ಕಾಲಕ್ಕೆ ಅಗತ್ಯವೆನಿಸಿಕೊಂಡ ಅಸ್ಪೃಶ್ಯರ ಶಿಕ್ಷಣದ ಕಡೆಗೂ ಅವರ ಲಕ್ಷ್ಯ ಹರಿದಿತ್ತು. ಚಲವಾದಿಗಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸಿ, ಸರಿಯಾದ ಶಿಕ್ಷಣ ಕೊಟ್ಟರು; ಅವರಿಂದಲೂ ಸಮಾಜ ಸುಧಾರಣೆಯಾಗಲಿದೆಯೆಂದು ಮೇಲಿಂದ ಮೇಲೆ ಹೇಳುತ್ತಿದ್ದರು. ಪ್ರಯತ್ನವೇ ಅವರಿಗೆ ಸಹಜಗುಣವಾಗಿತ್ತು.

ಅಡಿಯ ಮುಂದಿಡೆ ಸ್ವರ್ಗ | ಅಡಿಯ ಹಿಂದಿಡೆ ನರಕ

ಅಡಿಗಶ್ವಮೇಧಫಲವಕ್ಕು ಸ್ವಾಮಿ ಕಾರ್ಯಕೆ

ದುಡಿಯಲೆ ಬೇಕು ಸರ್ವಜ್ಞ

ಈ ಪದ್ಯದ ಭಾವ ಅವರ ಜೀವನದ ಉಸಿರಾಗಿತ್ತು. ಪ್ರಯತ್ನದಲ್ಲಿ ಸೋತರೂ ಅವರಿಗೊಂದು ಹೆಮ್ಮೆ! ಮಹತ್ಕಾರ್ಯಕ್ಕಾಗಿ, ಲೋಕಸೇವೆಗಾಗಿ ಸಮಸ್ತ ಜೀವಮಾನವನ್ನೇ ತೇದು, ತುದಿಯಲ್ಲಿ ಸಿರಿಸೊಬಗಿಲ್ಲದೆ ಒಣಗಿಹೋಗುವುದರಲ್ಲಿಯೂ ಒಂದು ಆನಂದವನ್ನು ಶ್ರೀಗಳವರು ಅನುಭಾವಿಸುತ್ತಿದ್ದರು. ಈ ರೀತಿಯಿಂದ ಬಹುಮುಖ ಪ್ರಯತ್ನ ಮಾಡಿ, ಲಿಂಗಾಯತ ಸಮಾಜದ ಏಳ್ಗೆಗಾಗಿ ದುಡಿದರು; ಸಮಾಜ ಬಂಧುಗಳಲ್ಲಿ ನವಜಾಗೃತಿಯನ್ನುಂಟು ಮಾಡಿದರು.

ಶ್ರೀಗಳವರು ಹಮ್ಮಿಕೊಂಡ ಕಾರ್ಯಕ್ರಮವು ವಿಶಾಲವೂ ಬಹುಮುಖವುಳ್ಳುದೂ ಆಗಿದೆ. ಅವುಗಳಲ್ಲಿ ಶಿವಯೋಗಮಂದಿರ ಮತ್ತು ವೀರಶೈವ ಮಹಾಸಭೆಗಳು ಬಹುಮುಖ್ಯವಾದವು. ಇವೆರಡೂ ಅವಳಿಜವಳಿ ಸಂಸ್ಥೆಗಳು. ಒಂದರಲ್ಲಿ ಲೌಕಿಕ ಮುಖ್ಯವಾದರೆ ಇನ್ನೊಂದರಲ್ಲಿ ಪಾರಮಾರ್ಥ ಗಣ್ಯವಾಗಿದೆ. ಇವೆರಡೂ ನಾಣ್ಯದ ಎರಡು ಮಗ್ಗುಲದಂತೆ ಇವೆ. ಇವೆರಡಕ್ಕೂ ಮೂಲಕಾರಣರು ಶ್ರೀ ಶಿವಯೋಗಿಗಳು. ಸಮಾಜದ ಹಿತಕ್ಕಾಗಿ ನಿರ್ಮಿಸಲ್ಪಟ್ಟ ಈ ಎರಡೂ ಶ್ರೀಗಳವರ ಬುದ್ದಿ, ಸಾಹಸ, ತಪಸ್ಸು ಮನೆ ಮಾಡಿಕೊಂಡಿವೆ. ಅವರ ಪ್ರಬುದ್ಧಾವಸ್ಥೆಯ ಘಟನೆಗಳನ್ನು ಕಣ್ಣಿಟ್ಟು ಅವಲೋಕಿಸಿದರೆ ಅವರು ಅತಿಮಾನವರೆಂಬ ಮಾತು ದಿಟಪುಟವಾಗಿ ನಿಲ್ಲುವುದು. ಲಿಂಗಾಯತ ಸಂಸ್ಕೃತಿಯ ಸಂಸ್ಥೆಗಳಲ್ಲಿ ಪುನರುದ್ಧಾರಕ್ಕಾಗಿ, ಸಾಮಾನ್ಯ ಜನತೆಯ ಉದ್ಧಾರಕ್ಕಾಗಿ ಇವೆರಡೂ ಸಂಸ್ಥೆಗಳನ್ನು ಕಟ್ಟಿ, ಅವು ಸರಿಯಾಗಿ ನಡೆಯಲೆಂದು ತಮ್ಮ ಶರೀರವನ್ನು ಚಂದನದಂತೆ ಸವೆಸಿ ದುಡಿದರು. ತಮ್ಮ ಜೀವನವನ್ನು ದೀವಿಗೆಯಂತೆ ಉರಿಸಿ, ಸಮಾಜದ ಕತ್ತಲೆಯನ್ನು ಹೋಗಲಾಡಿಸಲು ಯತ್ನಿಸಿದರು. ಬತ್ತಿ ತಾನು ಸುಟ್ಟುಕೊಂಡಾಗಲ್ಲವೆ ಇನ್ನೊಬ್ಬರಿಗೆ ಬೆಳಕಿನ ಸಹಾಯ ಸಿಗುವುದು? ಮಠಾಧಿಪತಿಗಳು ಲೋಕ ಸೇವೆಯನ್ನು ಕೈಕೊಂಡು, ತಮ್ಮ ಉದ್ದಾರದೊಡನೆ ಜಗತ್ತನ್ನು ಸಹ ಉದ್ಧಾರ ಮಾಡಬಲ್ಲವರೆಂಬುದನ್ನು ಶ್ರೀಗಳು ತಮ್ಮ ಕರ್ತವ್ಯದಕ್ಷತೆಯಿಂದ ಸಿದ್ಧ ಮಾಡಿ ತೋರಿಸಿದರು. ಅರ್ಧ ಶತಮಾನದ ಹಿಂದೆ ಲಿಂಗಾಯತರು, ತಾವು ಲಿಂಗಾಯತರೆಂದು ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಿಂದೂ ಧರ್ಮದಲ್ಲಿ ತಮ್ಮ ಸ್ಥಾನವಾವುದು? ತಮ್ಮ ತತ್ವ ಸಂಸ್ಕೃತಿಗಳ ನೆಲೆಬೆಲೆಯೇನು? ತಮ್ಮ ಸಮಾಜ

ಎತ್ತ ಸಾಗಿದೆ? ತಮ್ಮ ಭವ್ಯಭವಿಷ್ಯವೇನು?- ಎಂಬ ಕಲ್ಪನೆಯಿಲ್ಲದೆ ಸಮಾಜಬಂಧುಗಳು ಅರೆನಿದ್ರೆಯಲ್ಲಿದ್ದಾಗ, ಬಡಿದೆಬ್ಬಿಸಿ ಕಣ್ಣು ತೆರೆಯಿಸಿದವರು ಪೂಜ್ಯ ಹಾನಗಲ್ಲ ಶ್ರೀಗಳವರು. ಸಮಾಜದ ಯಾವ ಭಾಗದಲ್ಲಿಯೇ ಆಗಲಿ, ಕೊರತೆಯಾದುದನ್ನು ಕಂಡರೆ, ಅದು ತಮ್ಮ ಶರೀರದಲ್ಲಿಯ ನೋವೆಂದು ಅವರು ಬಗೆಯುತ್ತಿದ್ದರು. ತಮ್ಮ ಶರೀರದ ಪಂಚಪ್ರಾಣಗಳ ಪ್ರಯೋಜನವು ಸಮಾಜದ ಸ್ವಾಸ್ಥ್ಯಕ್ಕೆ ಆಗಲೆಂದು ಬಗೆದು, ತಮ್ಮ ಆತ್ಮಬಲವನ್ನು ತಪೋನಿಗ್ರಹದಿಂದ ಬೆಳೆಯಿಸಿಕೊಂಡರು. ಪಾವನತಮವಾದ ಶಂಭುಲಿಂಗನ ಬೆಟ್ಟದಲ್ಲಿ ಬಹುಕಾಲ ಅನುಷ್ಠಾನ ಮಾಡಿದರು. ಮುಂದೆ ಮಧುಕರ ವೃತ್ತಿಯನ್ನು ತಳೆದು, ಮಹಾತ್ಮರಿದ್ದೆಡೆಗೆ ಹೋಗಿ, ಅವರಿಂದ ಅನುಭಾವ ಸಂಪತ್ತನ್ನು ಪಡೆದರು. ತಪೋಭೂಮಿಯಾದ ಶ್ರೀ ಎಡೆಯೂರು ಕ್ಷೇತ್ರಕ್ಕೆ ಹೋಗಿ ಪ್ರಸಾದ ಸಿದ್ಧಿಯನ್ನು ಪಡೆದುಕೊಂಡರು.

ಇಷ್ಟಕ್ಕೆ ತೃಪ್ತರಾಗಲಿಲ್ಲ ಶ್ರೀ ಹಾನಗಲ್ಲ ಶ್ರೀಗಳು; ಲೋಕಸೇವೆ ಒಬ್ಬ ವ್ಯಕ್ತಿಯಿಂದ ಪರಿಪೂರ್ಣವಾಗಿ ನಡೆಯಲಾರದೆಂದು ಬಗೆದು, ಚರ ತಿಂಥಿಣಿಯೊಂದನ್ನು ತಮ್ಮ ವಲಯವನ್ನಾಗಿರಿಸಿಕೊಂಡು, ಸಮಾಜದ ಅಭ್ಯುದಯ ಕಾರ್ಯಕ್ಕೆ ಕೈಹಾಕಿದರು. ಧರ್ಮಾಚರಣೆಯಲ್ಲಿಯೇ ಸತ್ಯ ಸೌಂದರ್ಯಗಳ ಸ್ವಾರಸ್ಯವಿದೆಯೆಂದು ಬೋಧೆ ಮಾಡುತ್ತ ಜನಾಂಗದಲ್ಲಿ ಆಸ್ತಿಕ್ಯ, ಔತ್ಸುಕ್ಯಗಳನ್ನು ಹುಟ್ಟಿಸಿದವರು. ಶ್ರೀಗಳವರ ಪ್ರಯತ್ನದಿಂದ ಲಿಂಗಾಯತರು ಲಿಂಗಧಾರಣದ ಮಹತಿಯನ್ನು ತಿಳಿದರು; ಉಪಟಳದಿಂದ ಪಾರಾದರು. ವೀರಶೈವ ಮಹಾಸಭೆಯನ್ನು ಶ್ರೀಗಳವರು ಕೂಡಿಸಿ ಧರ್ಮಪ್ರಸಾರ ಮಾಡಿದರು. ಶಿವಯೋಗ ವಿದ್ಯೆಯ ಪ್ರಸಾರಕ್ಕಾಗಿ ಶಿವಯೋಗಮಂದಿರವನ್ನು ಭದ್ರಗೊಳಿಸಿದರು. ಅವರ ಧಾರ್ಮಿಕ ಆಂದೋಲನವು ಸಾರ್ವಜನಿಕ ಪ್ರೇಮ ಮತ್ತು ಹಿರಿಯರ ಬುದ್ಧಿವಂತಿಕೆಯಿಂದ ಸಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಅವರ ಪರಿಶ್ರಮದ ಫಲವಾಗಿ, ಅಲ್ಪದಿನಗಳಲ್ಲಿಯೇ ಅಲ್ಲಲ್ಲಿ, ಕೀರ್ತನಕರಿಗಳು, ಧರ್ಮಬೋಧಕರು, ಸಂಗೀತ ಕಲಾವಿದರು ನಿಸ್ವಾರ್ಥ ಬುದ್ಧಿಯಿಂದ ಸಮಜ ಸೇವೆ ಮಾಡುತ್ತಿರುವುದು ಗೋಚರವಾಯಿತು. ಶಾಸ್ತ್ರೋಕ್ತ  ರೀತಿಯಲ್ಲಿ ನಿರ್ಮಿತವಾದ ಲಿಂಗಭಸ್ಮಗಳು ಶಿವಯೋಗಮಂದಿರದ ಮುಖಾಂತರ ಸದ್ಭಕ್ತರ ನಿಜಾಚರಣೆಗೆ ದೊರೆಯತೊಡಗಿದವು. ಈ ಮಂದಿರದಲ್ಲಿ ನುರಿತ ಯೋಗಸಾಧಕರು ಶಿವಯೋಗದಲ್ಲಿ ಮಹಾಸಿದ್ಧಿಯನ್ನು ಪಡೆದರು. ಇಲ್ಲಿ ಸಾಧನೆ ಮಾಡಿದ ಹರಗುರು ಚರಮೂರ್ತಿಗಳು ನಾಡಿನಲ್ಲಿ ಹಬ್ಬಿ, ಬೀಳು ಬಿದ್ದಿರುವ ಮಠಗಳನ್ನಾಶ್ರಯಿಸಿ ಧರ್ಮಬೋಧೆಗೆ ಸಿದ್ಧರಾದರು. ನಾಡು ಚೇತರಿಸಿಕೊಂಡಿತು; ನುಡಿ ಮೈಮುರಿಯ ತೊಡಗಿತು. ಶಿವಯೋಗಮಂದಿರದ ದೀಪಗಳು ಎಲ್ಲೆಡೆಯಲ್ಲಿ ಪಸರಿಸಿ ನಾಡು ಬೆಳಗುವಂತಾಯಿತು. ಶ್ರೀಗಳವರ ಉನ್ನತ ದೃಷ್ಟಿ, ಉನ್ನತ ಧ್ಯೇಯಗಳ ಸಮನ್ವಯದಿಂದ ಅವರ ಜೀವನದ ದಾರಿ ಹೆದ್ದಾರಿಯಾಯಿತು. ಆನೆ ನಡೆದುದೇ ದಾರಿಯಲ್ಲವೆ?

ಹೀಗೆ, ಬಹುಮುಖದ ವ್ಯಕ್ತಿತ್ವವನ್ನು ಪಡೆದ ಶ್ರೀಗಳವರು ಲಿಂಗಾಯತ ಸಮಾಜವನ್ನು ಆದರ್ಶಪ್ರಾಯವಾಗಿ ಮೂಡಿಸುವ ಕಾರ್ಯದಲ್ಲಿದ್ದಾಗಲೇ ಸಂಜೆಯಾಯಿತು. ಕರ್ಮಸಾಕ್ಷಿಯಾದ ಆತ್ಮರವಿಯು ಕಣ್ಮರೆಯಾದನು. ಗುರುವು ಅಗೋಚರನಾದನು. ಅವನು ಇನ್ನೆಲ್ಲಿ ದರ್ಶನ ನೀಡುವನು? ಅವನ ಪ್ರಯತ್ನರೂಪೀ ಸಂಧ್ಯಾಕಿರಣಗಳು ನಮಗೆ ಮಾರ್ಗದರ್ಶನ ಮಾಡಿಸುತ್ತಲಿವೆ. ಅಂತಹ ಕಾರಣಪುರುಷನು ಇನ್ನೊಮ್ಮೆ ಮೂಡಿ ಬಾರದೆ ಇರನೆಂದು ನಮ್ಮ ನಂಬಿಗೆ

(ಆಕರ : ನುಡಿಲಿಂಗ-ಲೇ: ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು, ನವಲಗುಂದ)

ಡಾ. ಎಸ್. ವಿ. ಅಯ್ಯನಗೌಡರ.

ಪೀಠಿಕೆ

ಕನ್ನಡ ಸಾಹಿತ್ಯದಲ್ಲಿ ವಿನೂತನ ಹಾಗೂ ಪ್ರಯೋಗ ಯುಗ ನಿರ್ಮಿಸಿದ ನಿರ್ಮಾತೃಗಳಲ್ಲಿ ಶಿವಶರಣರ ಹಿರಿಮೆ-ಅವರಿಂದ ರಚಿತವಾದ ಸಾಹಿತ್ಯದ ಹಿರಿಮೆ- ಮಹೋನ್ನತವಾದುದು. ಮನುಕುಲವು ಹೊಂದಬಹುದಾದ ಅತ್ಯುನ್ನತ ನಿಲುವನ್ನು ಹೊಂದಿದ ಶರಣರು ಮತ, ಕುಲ, ವರ್ಣ, ಜಾತಿ, ವಯಸ್ಸು ಅಂತಸ್ತುಗಳಲ್ಲಿ ಮೇಲು ಕೀಳೆನ್ನದೆ ಸರ್ವರೂ ಸಮಾನರು ಎಂಬ ಧೋರಣೆಯಿಂದ ಬದುಕಿ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವವನ್ನು ಎತ್ತಿ ಹಿಡಿದು, ಅದರಂತೆ ಮುಂದಿನವರು ಬದುಕಲೆಂಬಮಾರ್ಗ ನಿರ್ಮಿಸಿದವರು; ಅವರ ಮಾರ್ಗವೇ ಶರಣ ಮಾರ್ಗ- ಅನುಭಾವಮಾರ್ಗ- ಶಿವಮಾರ್ಗ-ಪ್ರಸಾದಮಾರ್ಗ. ಬಸವಾದಿ ಪ್ರಮಥರಿಂದ ಉದ್ದಂಡವಾಗಿ ಮುನ್ನಡೆಯುತ್ತಿರುವ ಈ ಪರಂಪರೆ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯ ಪ್ರಶಿಷ್ಯರಲ್ಲಿ, ಷಣ್ಮುಖ ಶಿವಯೋಗಿ, ಸರ್ಪಭೂಷಣ ಶಿವಯೋಗಿ, ನಿಜಗುಣ ಶಿವಯೋಗಿ ಮೊದಲಾದ ಕೈವಲ್ಯಕಾರರಲ್ಲಿ ಸಾಗಿ ಮೈಲಾರ ಶಿವಯೋಗಿ-ಮುಂತಾದವರ ಭಾವನೆಗಳಲ್ಲಿ ಪಸರಿಸಿ, ಇಂದಿನವರೆಗೂ ಹೆಜ್ಜೆಹಾಕುತ್ತಲಿದೆ. ಇಂಥ ಶರಣ-ಅನುಭಾವಿಗಳಿಂದ ರಚಿತವಾದ ಸಾಹಿತ್ಯ ಮೂರು ವಿಧದಲ್ಲಿ ಲಭ್ಯವಾಗುವುದು.

( ೧. ವಚನ ೨. ಸ್ವರವಚನ ೩. ಇತರ ಸಾಹಿತ್ಯ

೧. ವಚನ:

‘ವಚ’ (To speak) ಎಂಬ ಶಬ್ದದಿಂದ ನಿಷ್ಪನ್ನಗೊಂಡ ಈ ಪದ ಅನೇಕ ಸಂದರ್ಭಜನ್ಯವಾದ ಅರ್ಥವ್ಯಾಪ್ತಿ ಪಡೆದ ರಚನೆಯಾಗಿದೆ. ಭಾಷೆ-ರೂಪ- ಅನುಭಾವ-ನಡೆನುಡಿ, ಅಭಿವ್ಯಕ್ತಿ-ಆಣೆ (Oath), ಸೂಳ್ನುಡಿ ಮುಂತಾದ ಅರ್ಥವ್ಯಾಪ್ತಿಯಲ್ಲಿ ಬಳಕೆಗೊಂಡಿದೆ. ಚನ್ನಬಸವಣ್ಣನವರು ತಮ್ಮ ವಚನವೊಂದರಲ್ಲಿ ವಚನ-ರಚನೆ-ಅನುಭಾವ ಕುರಿತು ವ್ಯಾಖ್ಯೆ ನೀಡಿದ್ದಾರೆ. ವಚನ ಎಂದರೆ ʼʼಆತ್ಮತೃಪ್ತಿಯ ನರಿಯ ಬಲ್ಲಡೆ ವಚನʼʼ ಎಂದು ಅರ್ಥೈಸಿದ್ದುಂಟು. ಕೆಲ ವಿದ್ವಾಂಸರು ಗುರುತಿಸಿದಂತೆ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಒಂದು ವಿಶಿಷ್ಟ ರೂಪ (Form) ಎಂದು ಹೇಳಿದ್ದಾರೆ. ಇನ್ನು ಕೆಲವೆಡೆ “ಶುದ್ಧ ನಡತೆಯವನ ನೇರ ನುಡಿʼʼ – ವಚನ ಎಂದು ಗುರುತಿಸಿರುವರು. ವಚನವನ್ನು ತ್ರಿಪದಿ, ಗೀತೆಗಳಿಗೂ ಅನ್ವಯಿಸಿ ʼʼಸರ್ವಜ್ಞನ ವಚನ (ತ್ರಿಪದಿ), ಷಡಕ್ಷರಿಯ ವಚನ, ಕೋಡೆಕಲ್ಲು ಬಸವಣ್ಣನ ವಚನ, ಗುರುಕರುಣ ತ್ರಿಪದಿ ವಚನ ಪ್ರಾರಂಭʼʼ ಎಂಬ ಪ್ರಯೋಗಗಳು ನಡೆ-ನುಡಿಯನ್ನೇ ಅತಿಕರಿಸಿಕೊಂಡವರ ಬದುಕು ಮತ್ತು ಅದರಿಂದ  ಅಭಿವ್ಯಕ್ತಗೊಂಡ ಸಾಹಿತ್ಯ ಎಂಬರ್ಥದಲ್ಲಿ ಬಳಸಿದುದು ಲಭ್ಯವಾಗುತ್ತದೆ. ‘ವಚನʼ ಎಂಬುದು ಗದ್ಯ ಪದ್ಯ ಮಾದರಿಗೆ, ನಡೆ-ನುಡಿಗೆ ಅಭಿವ್ಯಕ್ತಿಗೆ, ಸಾಹಿತ್ಯದ ಭಾಷೆ-ರೂಪಗಳಿಗೆ, ಚಳುವಳಿಗೆ ಅನ್ವಯವಾಗುವುದು. ವಿವಿಧ ಶಿವಶರಣ-ಶರಣೆಯರು ಬಿಡಿಬಿಡಿಯಾದ ಮುಕ್ತಕಗಳನ್ನು ತಮ್ಮ ತಮ್ಮ ಆರಾಧ್ಯ ದೈವದ ಅಂಕಿತದೊಂದಿಗೆ ಮುಕ್ತ ಛಂದಸ್ಸಿನಲ್ಲಿ ರಚಿಸಿದ ಕೃತಿಗಳೇ ಈ ವಚನಗಳು. ಅವರ ಆತ್ಮ ಮಥನದಿಂದ ಅನುಭಾವದಿಂದ ಹೊರಹೊಮ್ಮಿದ ಸಾಹಿತ್ಯವಿದು. ಆರಂಭದ ಜೇಡರ ದಾಸಿಮಯ್ಯನ ವಚನಗಳು ಕಿರಿದಾಗಿದ್ದು ತ್ರಿಪದಿಯಂತಿರುವುದನ್ನು ವಿದ್ವಾಂಸರು ಗುರುತಿಸಿದುದು ಇಲ್ಲಿ ಗಮನಾರ್ಹ. ಒಟ್ಟಿನಲ್ಲಿ ವಚನಗಳು ಸರಳ-ಬೆಡಗು ಶಾಸ್ತ್ರವಚನಗಳನ್ನು ಪ್ರತಿನಿಧಿಸುವ ವಿವಿಧ ಪ್ರಕಾರಗಳಾಗಿ ಗುರುತಿಸಲ್ಪಡುತ್ತವೆ.

೨. ಸ್ವರವಚನ

ಕನ್ನಡ ಸಾಹಿತ್ಯವು ಅನೇಕ ಹೊಸ ಪರಿಭಾಷೆಗಳನ್ನು ಹೊತ್ತು ಬಂದಿದೆ, ಬರುತ್ತಲಿದೆ. ಅಂಥವುಗಳಲ್ಲಿ ‘ಸ್ವರವಚನ ಪರಿಭಾಷೆ ಒಂದಾಗಿದೆ. ಕನ್ನಡ ಸಾಹಿತ್ಯದ ಅಪ್ರಕಟಿತ-ಪ್ರಕಟಿತ ಸಾಹಿತ್ಯದ ಹುಲುಸಾದ ಜನಪದ ಸಾಹಿತ್ಯಪ್ರಕಾರ ಸ್ವರವಚನ ಸಾಹಿತ್ಯ. ಇದು ‘ಗೀತ’ ‘ಹಾಡು’ ‘ಪದ’ ಎಂಬ ಪದಗಳಿಗೆ ಪರ್ಯಾಯವಾಚಿಯಾಗಿ ಬಳಕೆಗೊಳ್ಳುತ್ತ ಆಯಾ ಕಾಲಘಟ್ಟದ ಸಂದರ್ಭಗಳಲ್ಲಿ ನಾಮ ನಿರ್ದೇಶನದಿಂದ ಬಳಕೆಗೊಂಡಿದೆ. ‘ಸ್ವರವಚನ’ ‘ಸ್ವರಪದ’ ‘ಪದ ವಚನ’ ‘ವಚನದ ಪದಂಗಳು ʼಬೆಡಗಿನ ಸ್ವರ ಪದಂಗಳು’, ‘ಸ್ಥಲ ನಿರ್ದೇಶನ ಪದ’- ಎಂಬಂಥ ಸಂದರ್ಭ ಜನ್ಯ ಪದಗಳು ವಿವಿಧ ಸಂದರ್ಭಗಳಲ್ಲಿ, ವಿವಿಧ ಸ್ವರವಚನಕಾರರಿಂದ ಅಭಿವ್ಯಕ್ತಗೊಂಡು ಜನಪ್ರಿಯ ಸಾಹಿತ್ಯಪ್ರಕಾರವಾಗಿ ಬೆಳೆದು ನಿಂತಿದೆ. ಭಾಷೆ ಮತ್ತು ಗೇಯ ಮಾಧ್ಯಮಗಳೇ ಪ್ರಮುಖ ಗುರಿಯಾದ ಇವನ್ನು ಶರಣರು -ದಾಸರು (ಕೀರ್ತನೆ) ಕೈವಲ್ಯಕಾರರು-ಅನುಭಾವಿಗಳು-ಮುಂತಾದ ವಾಗ್ಮೇಯಕಾರರು ಇವುಗಳ ವಾಹಕರಾಗಿ ನಿಂತಿದ್ದಾರೆ. ಮುಂದೆ ಬಂದ ಸಂಕಲನ ಸಂಪಾದನಾಕಾರರು ವಿವಿಧ ಸ್ವರವಚನಕಾರರ ಪದಗಳನ್ನು ಬಳಸಿಕೊಂಡಿದ್ದಾರೆ; ಟೀಕೆ ಬರೆದು ಅರ್ಥೈಸಿದ್ದಾರೆ. ತತ್ವಪದಕಾರರು- ಕೈವಲ್ಯಕಾರರು- ವಾಗ್ಮೇಯಕಾರರು -ಸ್ವರವಚನಕಾರರು-ಕೀರ್ತನಕಾರರು ಅವರನ್ನು ಗುರುತಿಸಿ, ಶತಮಾನಗಳಡಿಯಲ್ಲಿ ವಿಭಜಿಸಿ ಅಧ್ಯಯನ ನಡೆಸಿದ್ದು ನಡೆಸುತ್ತಿರುವುದು ಗಮನಾರ್ಹ ಸಂಗತಿಗಳಾಗಿವೆ. ಇಂಥ ಸ್ವರವಚನ ಸಾಹಿತ್ಯದ ಲಕ್ಷಣ-ಸ್ವರೂಪ- ಉದ್ದೇಶ-ಆಶಯಗಳನ್ನು ಹೀಗೆ ಗುರುತಿಸಬಹುದು:

  1. ʼಸ್ವರವಚನ’ ಎಂದರೆ ನಾಲ್ಕಡಿಗಳಿಂದ ಒಪ್ಪಲ್ಪಟ್ಟ ವಚನಂಗಳು ಎಂದು ನೂರೊಂದು ಸ್ಥಲ ಟೀಕೆಯಲ್ಲಿ ಟೀಕಾರ್ಥ ಬರೆಯುತ್ತಾನೆ- ಶ್ರೀ ಗಿರೀಂದ್ರ. ಪ್ರತಿಯೊಂದು ಪದಗಳ ತಲೆಬರಹದಡಿಯಲ್ಲಿ ರಾಗ-ತಾಳಗಳ ನಿರ್ದೇಶನಗಳಿವೆ (ಕೆಲವು ಹಾಡುಗಳಿಗೆ ವಿರಳವಾಗಿ ತಾಳ ನಿರ್ದೇಶನ ಉಂಟು) ಪ್ರಾದೇಶಿಕ ವಿಭಿನ್ನತೆಯಲ್ಲಿ ವಿವಿಧ ತಾಳ ನಿರ್ದೇಶನಗಳು ಒಂದೇ ಹಾಡಿಗೆ ಲಭ್ಯ . ಉದಾಹರಣೆಗೆ ತಾಳ-ರೂಪಕ-ಎಂದಿದ್ದ ಒಂದೇ ಹಾಡಿಗೆ ಪರಾಯವಾಗಿ ಝಂಪೆ, ಅಟ್ಟಹಾಸ ಎಂದು ಸೂಚಿಸಿದ ಉದಾಹರಣೆಗಳಿವೆ.
  2. ಸ್ವರವಚನಗಳು ಪಲ್ಲವಿ ಅನುಪಲ್ಲವಿಯಿಂದ ಕೂಡಿವೆ. ಶ್ರೀ ಗಿರೀಂದ್ರ ‘ಪಲ್ಲವಿ’ ಎಂಬ ಪದಕ್ಕೆ ʼʼಮುಂದೆ ಬಹ ಪದಗಳ ಅರ್ಥಾಭಿಪ್ರಾಯಂಗಳನ್ನು ಪದಾಂತ್ಯ ಪರಿಯಂತರ ಸೂಚನಾರ್ಥವಾಗಿ ವೊಳಕೊಂಡೊಪ್ಪುವದೀಗ ಪಲ್ಲವ’ ಎಂದು ಅರ್ಥೈಸಿದ್ದುಂಟು. ಈ ‘ಪಲ್ಲವಿ’ ಗಳಿಗೆ ಒಂದು ಸಾಲಿನಿಂದ ನಾಲೈದು ಸಾಲುಗಳವರೆಗೆ ವ್ಯಾಪ್ತಿ ಇದೆ. ಎರಡು ಚರಣಗಳ ಪಲ್ಲವಿ ಬೆಳೆವ ವೃಕ್ಷವನ್ನು ಗರ್ಭಿಕರಿಸಿಕೊಂಡಿರುವಂತೆ ಸಮಗ್ರ ಪದ್ಯದ ಭಾವವನ್ನು ಹುದುಗಿಸಿಕೊಂಡಿದೆ.
  • ಹಾಡಿನ ಕೊನೆಯಲ್ಲಿ ಅಂಕಿತ ರೂಪದ ಮುದ್ರಿಕೆ ಇರುವುದು ಉದಾ: ಸೋಮನಾಥ, ಗುಹೇಶ್ವರ, ಚನ್ನಮಲ್ಲಿಕಾರ್ಜುನ-ಚೆನ್ನವೀರ ಇತ್ಯಾದಿ ೫ ಕನಿಷ್ಟ ಮೂರು ನುಡಿಯಿಂದ ೩೦-೩೫ ನುಡಿಗಳವರೆಗೆ (ಕೆಲವೆಡೆ ಮಿಕ್ಕಿ) ಒಂದೊಂದು ಪದ್ಯದ ವ್ಯಾಪ್ತಿ ಇದೆ.
  • ಪ್ರಾಚೀನ ಸ್ವರವಚನವಾದ (ಲಭ್ಯ) ಸಕಳೇಶ ಮಾದರಸನ ಸ್ವರ ವಚನ ರಾಗ-ಶಂಕರಾಭರಣದಿಂದ ಕೂಡಿದ್ದು ಅದರಲ್ಲಿ ʼʼಕೈವಲ್ಯಕ್ಕೆ ದೃಷ್ಟವಾದ ಹೆಮ್ಮರನೇ..ʼ’ ಎಂಬ ಪದ ಪ್ರಯೋಗಗೊಂಡಿದ್ದು ಕೈವಲ್ಯ ಸಾಹಿತ್ಯದ ಮೂಲಕ್ಕೆ ಇದು ಪ್ರಚೋದನೆ ನೀಡಿದಂತಿದೆ.
  • ಷಟ್ಪದಿಯಲ್ಲಿ ರಚನೆಗೊಂಡ ಸ್ವರವಚನಗಳ ಆರಂಭದಲ್ಲಿ ಪಲ್ಲವಿಯ ಬದಲಾಗಿ ʼʼಸೂಚನೆʼʼ ಎಂಬ ಪ್ರಯೋಗ ಬಳಕೆಗೊಂಡಿದೆ.
  • .ಶಿವದಾಸರ ಗೀತೆಗಳು-ಹರಿದಾಸರ ಕೀರ್ತನೆಗಳು-ಕೈವಲ್ಯಕಾರರ ಪದಗಳು ಸ್ವರವಚನದ ಬೆಳವಣಿಗೆಯ ಘಟ್ಟದ ವಿವಿಧ ಮುಖಗಳಾಗಿವೆ.
  • ಶರಣರ ಪದಗಳು ಕನ್ನಡದ ಮೊದಲ ಕೀರ್ತನೆಗಳು,
  • ಸ್ವರವಚನಗಳಲ್ಲಿ ಅನುಕರಣೆ ಕಂಡುಬರುವುದು.
  • .ಮಾತ್ರಾ ಛಂದಸ್ಸು ಅಂಶಛಂದಸ್ಸುಗಳ ಮಿಶ್ರಣದಿಂದ ಕೂಡಿದ ಇವು ದೇಸಿ ಸಾಹಿತ್ಯದ ಛಂದೋರೂಪಗಳಾದ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಸಾಂಗತ್ಯ, ಕಿರುಸೀಸ-ಬಳಸಿಕೊಂಡಿವೆ. ಉತ್ಸಾಹ-ಮಂದಾನಿಲ-ಲಲಿತ ಲಯಗಳನ್ನು ದುಡಿಸಿಕೊಂಡುದುಂಟು.
  • ವೃತ್ತಶ್ಲೋಕ-ಕಂದ ಮಾದರಿಗಳು ಚೌಪದಿಯಲ್ಲಿದ್ದು ಗಣಪರಿವೃತ್ತಿ ಅವುಗಳಲ್ಲಿ ಕಾಣುವುದು.
  •  ಬೆಡಗಿನ ಸ್ವರಪದಗಳು, ಕಾಲಜ್ಞಾನ, ಕಾರಣಿಕ, ಕಣಿ ಸ್ವರೂಪಗಳಲ್ಲಿಯೂ ಲಭ್ಯ,
  •  ಕೆಲವು ಸ್ವರವಚನ ಕೃತಿಗಳು ವಿವಿಧ ಸ್ಥಲಗಳಡಿಯಲ್ಲಿ ವಿಭಜನೆಗೊಂಡಿವೆ.
  •  ಸಾಹಿತ್ಯ- ಸಂಗೀತ-ತತ್ತ್ವಗಳ ಮುಪ್ಪರಿಯಿಂದ ಕೂಡಿಕೊಂಡಿವೆ.
  • ಅನೇಕ ಜಾನಪದ ಸಾಹಿತ್ಯ ಪ್ರಕಾರಗಳು, ಸ್ವರವಚನಗಳ ಮೂಲಕ ಸಾಹಿತ್ಯ ವೇದಿಕೆಯನ್ನೇರಿವೆ. ಉದಾ:- ಪರಾಕು, ಲಾಲಿಕಣಿ ಚಂದಮಾಮ, ಕೋಲುಪದ, ಹೋಳಿಪದ, ದುಂದುಮೆ, ಬುಡಬುಡಕ್ಯಾ ಮುಂತಾದವು.
  •  ಸ್ವರವಚನಗಳನ್ನು ಸ್ತುತಿ-ಪೂಜೆ-ಗೋಷ್ಠಿ ಸಂದರ್ಭಗಳಲ್ಲಿ ಹಾಡುತ್ತಲಿದ್ದ ಉಲ್ಲೇಖವಿದೆ.
  • ಭಜನೆ-ಸಭೆ-ಸಮಾರಂಭಗಳಲ್ಲಿ-ಮಠಮಾನ್ಯಗಳಲ್ಲಿ ಇವು ಜನಸಮೂಹದಲ್ಲಿ ಹೆಚ್ಚು ಪ್ರಚುರತೆ ಪಡೆದಿವೆ.
  •  ಪ್ರಾಸ, ಅನುಪ್ರಾಸಗಳ ಜೋಡಣೆ ಇವುಗಳಲ್ಲಿದೆ.
  • .ಕೀರ್ತನೆ, ಸ್ವರಪದ, ಸ್ವರವಚನಗಳು ಕರ್ನಾಟಕ ಸಂಗೀತದ ಪ್ರತಿನಿಧಿಗಳಾಗಿವೆ; ಗಮಕ ಮತ್ತು ಪ್ರವಚನಕ್ಕೆ ಸಹಕಾರಿಗಳು.
  1.  ನೀತಿಬೋಧೆ-ತತ್ವನಿರೂಪಣೆ ಇವುಗಳ ಪ್ರಮುಖ ಗುರಿ.
  2.  ಹಾಡುಗಬ್ಬಗಳೆಂದು ಪ್ರಸಿದ್ಧಿಪಡೆದ ಇವು ಜಾತಿ-ಭೇದವಿಲ್ಲದೆ ಜನಸಾಮಾನ್ಯರನ್ನೂ ವ್ಯಾಪಿಸಿದ ಸಾಹಿತ್ಯ ಪ್ರಕಾರಗಳಾಗಿವೆ.
  3. ಗಾಯಕ- ಶ್ರಾವಕರ ಚಿತ್ಛಲಕದಲ್ಲಿ ವಸ್ತು ತತ್ವ್ತಾರ್ಥ ಚಿರಸ್ಥಾಯಿಗೊಳ್ಳುವವು.

ಇತರ ಸಾಹಿತ್ಯ:

ವಚನ- ಸ್ವರವಚನಗಳಲ್ಲದೆ ಮಂತ್ರಗೋಪ್ಯ, ದಂಡಕ, ಬೊಲ್ಲಿ ಅಷ್ಟಕ, ತಾರಾವಳಿ, ಮಿಶ್ರಾರ್ಪಣ, ಕರಣಹಸಿಗೆ, ಉಯ್ಯಾಲೆ, ಶತಕ, ತ್ರಿಪದಿ, ಪೀಠಿಕೆ, ನಾಂದ್ಯ- ಮೊದಲಾದ ಪರಿಭಾಷೆಗಳು ಶರಣರ ಕೃತಿಗಳಲ್ಲಿ ಬಳಕೆಗೊಂಡು ಶರಣ ಸಾಹಿತ್ಯದ

ವೈಶಾಲ್ಯತೆಗೆ ವೈವಿಧ್ಯತೆಗೆ ಕಾರಣಗಳಾಗಿವೆ.

ಹೀಗೆ ವಚನ- ಸ್ವರವಚನ- ಇತರ ಸಾಹಿತ್ಯ ಪ್ರಕಾರದಲ್ಲಿ ಮೈದೋರಿದ ಶರಣ ಸಾಹಿತ್ಯ ಅನುಭಾವ ಗೋಷ್ಠಿಗಳ ಮೂಲಕ ಹೊರಹೊಮ್ಮಿದೆ. ಭಾವೈಕ್ಯತೆಗೆ ಸಹಕಾರಿಯಾಗಿ ನಿಂತ ಈ ಸಾಹಿತ್ಯದ ಹರವು ಹಲವಾರು ಮಹಾಪ್ರಬಂಧಗಳ ಅಧ್ಯಯನಕ್ಕೆ ಸ್ವರವಚನ ಪರಿಭಾಷಾ ಕೋಶಗಳ ಸಿದ್ಧತೆಗೆ ವಸ್ತುವಾಗಬಲ್ಲ ಸಾಮರ್ಥ್ಯ ಹೊಂದಿದೆ. ಸ್ವರವಚನ ಸಾಹಿತ್ಯವು ಬಿಡಿಬಿಡಿ ಸ್ವರವಚನಗಳಲ್ಲಿ ಸ್ವತಂತ್ರ ಕೃತಿಗಳಲ್ಲಿ ಸಂಪಾದನಾ- ಸಂಕಲನ ಕೃತಿಗಳಲ್ಲಿ ಲಭ್ಯವಾಗುತ್ತವೆ.

೧೨ನೆಯ ಶತಮಾನದಲ್ಲಿ ಸಕಲೇಶ ಮಾದರಸ, ಸೊಡ್ಡಳ ಬಾಚರಸ, ಬಸವ, ಅಲ್ಲಮ, ಚನ್ನಬಸವ, ನಿಜಗುಣ, ನಿಜಲಿಂಗ ಚಿಕ್ಕಯ್ಯ, ಆದಯ್ಯ, ಅಕ್ಕಮಹಾದೇವಿ, ನೀಲಮ್ಮ ಮೊದಲಾದವರ ಸ್ವರವಚನ ಲಭ್ಯವಾದರೆ, ಹರಿಹರ-ರಾಘವಾಂಕರಲ್ಲಿ ಅವುಗಳನ್ನು ಹಾಡುತ್ತಿದ್ದ ಸಂದರ್ಭಜನ್ಯವಾಗಿ ಬಳಸುತ್ತಿದ್ದ ಕ್ರಮವನ್ನು ಸೂಚಿಸಿರುವುದುಂಟು. ೧೫ನೆಯ ಶತಮಾನದಿಂದ ಮುಂದೆ ಕರಸ್ಥಲದ ನಾಗಿದೇವ-ಗುರುಬಸವ ಗುರುಪುರದ ಮಲ್ಲಯ್ಯ-ನಿಜಗುಣ ಶಿವಯೋಗಿ ಕೆಸ್ತೂರದೇವ ಮುಪ್ಪಿನ ಷಡಕ್ಷರಿ- ಸರ್ಪಭೂಷಣ ಶಿವಯೋಗಿ- ಬಾಲಲೀಲಾ ಮಹಂತ ಶಿವಯೋಗಿ- ಘನಮಠಾರ್ಯ- ರಥೋದ್ಧರಣೆಯ ಸಂಗನ ಬಸವೇಶ್ವರ- ಮೈಲಾರ ಬಸವಲಿಂಗ ಶರಣ- ಮುಂತಾದವರಲ್ಲಿ ಸ್ಥಲ ನಿರ್ದೆಶನ, ಸ್ಥಲ ನಿರ್ದೇಶನವಿಲ್ಲದೆ ಒಂದೊಂದು ಕೃತಿಯಲ್ಲಿ ಲಭ್ಯವಾಗಿ ಸ್ವರವಚನ ಸಾಹಿತ್ಯದ ಸುಗ್ಗಿಯ ಹಿಗ್ಗನ್ನೇ ಒದಗಿಸಿ, ಅದರ ಹುಲುಸಿಗೆ ಸಾಕ್ಷಿಗಳಾಗುತ್ತವೆ. ಮುಂದೆ ಬಂದ ಕೂಡಲೂರು ಬಸವಲಿಂಗ ಶರಣ, ಕಡಕೋಳ ಮಡಿವಾಳಪ್ಪ ಶಿವಯೋಗಿ, ಕರಿವೃಷಭೇಂದ್ರರು, ಶಿಶುನಾಳ ಶರೀಫ ಶಿವಯೋಗಿ, ಮುಂತಾದ ಅನುಭಾವಿಗಳಲ್ಲಿ ಸ್ಪಂದಿಸಿ ಹೊರಹೊಮ್ಮಿದೆ. ಜೊತೆ ಜೊತೆಯಲ್ಲಿ ಹರಿದಾಸರ ಕೀರ್ತನೆಗಳಿಗೆ ಪ್ರಚೋದನೆ ನೀಡಿದೆ. ಸ್ವರ ಏಕೋತ್ತರ ಶತಸ್ಥಲ, ಶೂನ್ಯಸಂಪಾದನೆ ಗ್ರಂಥದ ಸಂಕಲನಕಾರರಿಗೆ ಆಕರ ಸಾಮಗ್ರಿಯಾಗಿ ನಿಂತಿದೆ. ವಚನ ಸ್ವರವಚನ-ಇತರ ಸಾಹಿತ್ಯ ರಚನೆಯ ಮೈಲಾರ ಬಸವಲಿಂಗ ಶರಣರಿಗೆ ವೀರಶೈವ ತತ್ವ್ತಾಚರಣೆಯನ್ನು ಪರಿಶುದ್ಧವಾಗಿ ನಿರೂಪಿಸುವ ಅವರ ಜೀವನ ಕೃತಿಗಳ ಅವಲೋಕನವನ್ನು ಲಭ್ಯ ಸಾಹಿತ್ಯದ ಆಧಾರದಲ್ಲಿ ಹಿಂದೆ ಸೂಚಿಸಿದ ವಚನ- ಸ್ವರವಚನ- ಇವರ ಸಾಹಿತ್ಯ ಪ್ರಕಾರಗಳ ಹಿನ್ನೆಲೆಯಲ್ಲಿ ಅವಲೋಕಿಸುತ್ತ ಅವರ ಕೊಡುಗೆ ಏನೆಂಬುದನ್ನು ಬೆಲೆಕಟ್ಟಬಹುದು.

ಮೈಲಾರ ಬಸವಲಿಂಗ ಶರಣರು ಎಂದ ಕೂಡಲೇ ನಮ್ಮೆದುರು ಬಂದು ನಿಲ್ಲುವುದು. ಅವರು ಶರಣರಾಗಲು ಅವರಿಗಿದ್ದ ಪರಿಸರ ಎಂಥದು? ಯಾವ ಶಿವಾನುಭವ ಗರಡಿಯಲ್ಲಿ ಗುರುಗಳಲ್ಲಿ ತಯಾರಾದವರು ಎಂಬುದು. ಆ ಗರಡಿಯೇ (ಕೇಂದ್ರವೇ) ಬಳ್ಳಾರಿ ಜಿಲ್ಲೆಯ ಲಿಂಗನಾಯಕನಹಳ್ಳಿಯ ಪರಿಸರದಲ್ಲಿ ಮೈವೆತ್ತು ನಿಂತ. ಹಾಲವರ್ತಿ ಚೆನ್ನವೀರರ ಗುರುಕುಲದ ಶಿವಾನುಭವ ಕೇಂದ್ರದ ದೃಶ್ಯ. ಈ ಕೇಂದ್ರದ ಚಾಲಕರಾದ ಗುರು ಚೆನ್ನವೀರರು ʼʼಪರತತ್ತ್ವಮೂರ್ತಿ ನಿಜದಿರವೆ ರೂಪಾಗಿ ಧರೆಯೊಳಗೆ ಚರಿಸಿ, ಮೆಟ್ಟಿದ ಧರೆ ಸುಕ್ಷೇತ್ರವೆನಿಸಿ,  ಜಲವ ಪಾವನ ತೀರ್ಥವಾಗಿಸಿ, ಜೀವಚರಗಳೊಳಗೆ ಆವನಾದೊಡೆ ಅವನ ಕೈವಿಡಿದು ಪಾವನಾತ್ಮಕವಾಗಿಸುವ ಉದ್ದೇಶ ಹೊತ್ತು ಬಂದವರು. ಲಿಂಗನಾಯಕನಹಳ್ಳಿಯ ಶಿವಾನುಭವ ಕೇಂದ್ರದ ರೂವಾರಿಗಳಾಗಿದ್ದ ಚೆನ್ನವೀರರು ಸೋಮಶೇಖರ ದೊರೆ ಅವನರಸಿ ಬಸವಮ್ಮಾಜಿಯರನ್ನು, ಹರವಿ ಪುಂಗ ಪುರಾಣ ಮಠದಯ್ಯನಂಥವರನ್ನು, ಹರಚರ ಗುರು ಮೂರ್ತಿಗಳನ್ನು ಮೂರ್ತಗೊಳಿಸಿದ ಚಿತ್ರ. ಹಾಗೆಯೇ ಅವರಿಂದ ದೀಕ್ಷಿತರಾಗಿ ಲಿಂಗಮೂರ್ತಿಗಳಾಗಿ ಹೊರಬಂದ- ಬಾಲಲೀಲಾ ಮಹಾಂತ ಶಿವಯೋಗಿಗಳು, ಹೊಳಲು ಲಿಂಗಪ್ಪ ಶರಣರು, ಬನ್ನಿಮಟ್ಟಿ ಚೆನ್ನಪ್ಪನವರು, ಶಾಂತವೀರರು, ರಾಚೋಟಿ ಸ್ವಾಮಿಗಳು-ಇನ್ನೂ ಅನೇಕರು ಇವರ ಪರುಷ ಸದೃಶ   ವ್ಯಕ್ತಿತ್ವಕ್ಕೆ ಮಾರುಹೋಗಿ ಅವರ ಕೃಪಾವಲಯದಲ್ಲಿ ಬೆಳೆದು ನಾಡಿನುದ್ದಗಲಕ್ಕೂ ಅವರ ಪ್ರಭಾವ ಬೀರಿದವರು. ಇವರಲ್ಲಿ ಮೈಲಾರ ಬಸವಲಿಂಗ ಶರಣರೂ ಒಬ್ಬರೆಂಬುದನ್ನು ಮರೆಯುವಂತಿಲ್ಲ.  

ಬಸವಲಿಂಗ ಶರಣರು -ಬದುಕು:

ಕನ್ನಡ ನಾಡಿಗೆ ಮಬ್ಬುಕವಿದು ಕತ್ತಲಾವರಿಸಿದ ೧೮-೧೯ನೆಯ ಶತಮಾನಗಳ ಅಂತ್ಯ ಹಾಗೂ ಆದಿ ಭಾಗಗಳಲ್ಲಿ ಉದಯಿಸಿ ದಿವ್ಯ ಕಿರಣದಿಂದ ಪ್ರಕಾಶಿಸಿದ ಮಹಾತ್ಮರಲ್ಲಿ ಒಬ್ಬರು ಮೈಲಾರ ಶರಣರು. ಕ್ರಿಯಾ-ಜ್ಞಾನ ಸಮಾಯುಕ್ತ ಸಮತೋಲನದ ವೀರಶೈವವೇ ಅವರ ಬದುಕು ಬರಹಗಳು. ಬಸವ ಜ್ಯೋತಿಯ ದಿವ್ಯ ಕಿರಣ ಜ್ಯೋತಿಯಾದ ಮೈಲಾರ ಬಸವಲಿಂಗ ಶರಣರು ಏತಿಹಾಸಿಕ ಪ್ರಸಿದ್ಧಿ ಪಡೆದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಶೆಟ್ರ ಮನೆತನದ ಬಸವಪ್ಪನೆಂಬಭಿದಾನದಿಂದ ಜನ್ಮ ತಳೆದವರು. ಮನೆಕೊಂಡು ಬದುಕಿದವರು. ಅವರ ಮನೆ ಚಿಕ್ಕದಾದರೂ ಘನಮನದಿಂದ ಬೆಳೆವ ಪ್ರವೃತ್ತಿಯವರೆಂಬುದು, ಅವರ ಜೀವನ ಸಾಧನೆಗಳ ಬೆಳವಣಿಗೆಯಿಂದ ತಿಳಿದು ಬರುವುದು. ಶರಣತ್ವ ಸಿದ್ಧಿ ಪಡೆದ ಬಸವಪ್ಪನವರು ತಮ್ಮ ಬಾಲ್ಯದ ಬಗೆಗಾಗಲಿ ತಂದೆ ತಾಯಿಗಳ ಬಗೆಗಾಗಲಿ, ಹೇಳಿಕೊಳ್ಳದಿರುವುದು, ಗುರುವನ್ನು ಗುರು ಪರಂಪರೆಯನ್ನು ಹೇಳಿಕೊಂಡುದು ವೀರಶೈವ ತತ್ತ್ವಕ್ಕನುಗುಣವಾಗಿಯೇ ಇರುವುದು. ಹೀಗಾಗಿ ಗುರುದರ್ಶನದ ನಂತರದ ಬದುಕಿನ ಜೀವನ ಸಾಧನೆಯನ್ನು ಅವರ ಕೃತಿಗಳ ಮೂಲಕ ಗುರುತಿಸಿದಂತೆ ಬಾಲ್ಯದ ಬದುಕಿನ ಚಿತ್ರಣ ಮಸುಕು-ಮಸುಕು. ಆದರೂ ಜನತೆಯಲ್ಲಿ ಬಾಯಿಂದ ಬಾಯಿಗೆ ಕೊಡುತ್ತ ಜನ ಮನದಲ್ಲಿ ಅಚ್ಚಳಿಯದೆ ನಿಂತುಕೊಂಡು ಬಂದ ಅವರ ಬಾಲ್ಯ ಜೀವನವೂ ಮೈಲಾರದಲ್ಲಿಯೇ ಕಳೆದುದು ವಿದಿತವಾಗುತ್ತದೆ. ಅಯ್ಯನವರ ಪಾಠಶಾಲೆಯಲ್ಲಿ ಓದಿದ ಓದು ಅವರ ಜ್ಞಾನದಾಹ ತೀರಿಸದಾದಾಗ ನೆರೆಹೊರೆಯ ಊರುಗಳಲ್ಲಿಯ ಕೀರ್ತನೆ ಪ್ರವಚನಗಳಲ್ಲಿ ಭಾಗಿಗಳಾಗಿ ಕೇಳುವುದು, ಅದರಿಂದ ಪ್ರಚೋದನೆಗೊಂಡು ಶರಣರ ಜೀವನ ತತ್ತ್ವಗಳ ಬಗೆಗೆ ಅವರ ಕೃತಿಗಳತ್ತ ಗಮನಹರಿಸಿ ಸ್ವಾಧ್ಯಾಯ ಸಿದ್ಧರಾಗಿ ಓದಿಕೊಂಡು ದಿನನಿತ್ಯದ ವ್ಯಾಪಾರದ ಕಾಯಕದಲ್ಲಿ ತೊಡಗುವುದು ಅವರ ದಿನನಿತ್ಯದ ಬದುಕಾಗಿದ್ದಿತು.

ವಿವೇಕದಿಂದೆಚ್ಚತ್ತು ಸಂಸಾರ ಜಂಜಡವನ್ನು ಬಿಡಿಸುವ ಅನುಭಾವವನ್ನು ಬೋಧಿಸುವ ಗುರು ತಂದೆಯನ್ನು ನೆನೆಯುತ್ತ ‘ನಗುರೋರಧಿಕಂ ನಗುರೋರುಧಿಕಂ’’ ಪಥವನರಿವೊಡೆ ಗುರು ಪಥವೇದ ಮೊದಲು’’ ಎಂಬ ವಾಕ್ಯಗಳನ್ನು ಮೆಲುಕು ಹಾಕುತ್ತ ಶಿವಾನುಭವದ ನಿಲವನ್ನರಿಯಬೇಕೆಂಬ ಹೃದಯದ ಭೂಮಿಯನ್ನು ಹದಗೊಳಿಸಿಕೊಂಡು ಗುರುದರ್ಶನದ ಕಾತರದ ಕಳವಳದಲ್ಲಿ ಮಗ್ನರಾದವರು. ಹೀಗಿರುವಾಗಲೇ ವ್ಯಾಪಾರ ಕಾಯಕದಲ್ಲಿ ಜಾಣ್ಮೆಯನ್ನು ಮೆರೆದ ಬಸವಪ್ಪನವರು ಸಮೀಪದ ಅನೇಕ ಕುಹಕಿಗಳಿಂದ ಪರೀಕ್ಷೆಗೊಳಪಡುವರು. ಮೈಲಾರಕ್ಕೆ ಬಂದ ಅಧಿಕಾರಿಗಳಿಗೆ ‘ವಿಷ್ಣು ನಿಂದಕʼನೆಂಬ ಆಪಾದನೆ ಹೊರಿಸಿ ಅವರಿಂದ ಪ್ರಶ್ನೆಗಳಿಗೊಳಪಟ್ಟು ಪರೀಕ್ಷಿಸಿ ವಿಷ್ಣುನಿಂದಕನಲ್ಲನೆಂಬ ತಮ್ಮ ಅಭಿಪ್ರಾಯವನ್ನು ಪದಮೂಲಕ ಸ್ಪಷ್ಟಪಡಿಸಿದರು.

 ಹರಿಯ ಬ್ರಹ್ಮಾಂಡ ಪಿಂಡಾಂಡ ದಶದಿಗ್‌ಭರಿತ

 ಮರಿಯೆ ತ್ರೈಭುವನಮಟ್ಟುಂಬ ಸಕಲಕ್ಕಾದಿ

ಹರಿಯ ಬಿಟ್ಟರಗಳಿಗೆ ಜೀವಿಸುವರಾರಿಲ್ಲ. ಲೋಕದೊಳಗದು ಕಾರಣಂ

 ಹರಿಭಕ್ತನಹುದು ಹರಭಕ್ತನಲ್ಲ ನಾನೂಂ

ನರಸಿಂಹ ಮಧುಸೂದನಂ ಮತ್ತಮಾ

 ಸಿರಿಯರಸ ವಾಸುದೇವ ಯದುಪತಿಯಾದಿ ಪ್ರಣವ ಸ್ಮರಣೆಯೊಳಗಿರ್ಪೆಂಸದಾ||

ಈ ಪದ್ಯದಲ್ಲಿ ಬರುವ ‘ಹರಿ’ ಪದವನ್ನು ‘ವಾಯು’ ಎಂಬರ್ಥದ ಶ್ಲೇಷೆಯಿಂದ ಬಳಸಿ ಕುಹಕಿಗಳ ಮುಖಭಂಗ ಮಾಡಿದವರು. ಮತ್ತೊಂದು ಸನ್ನಿವೇಶದ ಸಂದರ್ಭಕ್ಕಾಗಿ ಕಾಯ್ದು ಬಸವಪ್ಪನವರನ್ನು ಪರೀಕ್ಷೆಗೊಳಪಡಿಸಿದಾಗ

ಗೋವಿಂದನಾದಿ ಗೋವಿಂದ ನಮ್ಮ

ಗೋವಿಂದಲಾವ ಪಾವನ ಪಾಂಡುರಂಗ ||ಪಲ್ಲ||

ಶ್ರೀ ವಿಭೂತಿಯ ಪಂಚ ಗೋವಿಂದ | ವೀರ

ಶೈವಾಗಮೋಕ್ತವು ಗೋವಿಂದ

ಪೀವ ಪಂಚಾಮೃತ ಗೋವಿಂದ| ಜಗ

ಜ್ಜೀವ ಸಂತೃಪ್ತಿಯು ಗೋವಿಂದ….

ವಿಭೂತಿಯಿಂದಾಗುವ ವಿಭೂತಿಯ ಮಹತಿಯನ್ನು ಎತ್ತಿ ಹೇಳಿ ಗೋವಿಂದ ‘ಪಡೆದ ಶ್ಲೇಷೆಯ ಮೂಲಕ ಅವರ ಮನವನ್ನು ಸಂತೃಪ್ತಪಡಿಸಿದವರು; ಅಗ್ನಿ ದಿವ್ಯ ಗೆದ್ದು ತಮ್ಮ ಸಾಹಿತ್ಯ ನಿರ್ಮಾಣದ ಮೊದಲ ಹಾದಿ ತುಳಿದವರು; ಗುರು ನಿರೀಕ್ಷೆಗಾಗಿ

ಕಾಯ್ದು ಕುಳಿತವರು.

ಮೊದಲೇ ಸೂಚಿಸಿದಂತೆ ಲಿಂಗನಾಯಕನಹಳ್ಳಿಯಲ್ಲಿ ಶಿವಾನುಭವ ಕೇಂದ್ರದ, ರೂವಾರಿಗಳಾದ ಗುರು ಚೆನ್ನವೀರರ ತಪಃಪ್ರಭಾವದ ಸುದ್ದಿ ಪವನ ವೇಗದಿಂದ ಹರಡಿ ತಿಳಿದು ಸರ್ವರನ್ನೂ ಆಕರ್ಷಿಸಿದಂತೆ ಬಸವಪ್ಪನವರನ್ನೂ ಆಕರ್ಷಿಸಿ ಶಿವಯೋಗ ಸಂಪದದ ಹಬ್ಬದೂಟದ ವಾರ್ತೆ ಮಾತಾಯಿತು. ಅರಸುವ ಬಳ್ಳಿ ಕಾಲ್ ತೊಡಕಿದಂತಾಗಿ ಮುಂದೆ ಗುರು ಚೆನ್ನವೀರರನ್ನು ಬಸವಪ್ಪನವರು-

 ಪರಮ ಪಾವನ ಪರಬ್ರಹ್ಮ ಸ್ವರೂಪನೆ, ಚೆನ್ನವೀರ

ನಿರುಪಮ, ನಿರಘ ನಿರ್ದ್ವಂದ್ವ ನಿರ್‌ಲೇಪನೆ| ಚೆನ್ನವೀರ ||ಪಲ್ಲ||

ಶರಣ ಮಂದಿರಧಿಕಾರನೆ ಚನ್ನವೀರ…

ವಿನಮಿತ ಜನರ ಭವದ ಬೇರ ಕೀಳ್ವೆನೆ |

ಎಂದು ಭಾವ ತುಂಬಿ ಹಾಡುತ್ತ ʼʼಈತನುನ್ನತವ ತನ್ನ ಪೊಗಳುವಡಾರು ಬಲ್ಲ ಚತುರಾಸ್ಯ ಬ್ರಹ್ಮಗಳವಲ್ಲʼʼ ಎಂದು ತಮ್ಮ ವಿನಯ ಮೆರೆದವರು. ಗುರು ದರ್ಶನ ಪಡೆದು ʼʼಎಲ್ಲ ದೈವಕೆ ನಿಮ್ಮ ಮೆಲ್ಲಡಿಯೆ ಘನವೆಂದು.. ಭಾವಿಸಿದ ಅವರು ಮಾಯೆಯ ಬಲೆಯಿಂದ, ಆಶೆ-ರೋಷಗಳ, ಹಮ್ಮು ಬಿಮ್ಮುಗಳ ಕಾಟದಿಂದ, ಮರ್ಕಟ ಮನದಿಂದ, ಮೂರರ ಮಲಗಳಿಂದ, ಅರಿಷಡ್ವರ್ಗಗಳ ಉಪಟಳದಿಂದ, ಕಾಯಕರ್ಮಗಳೆಂಬ ಮಾಯಾ ಸಂಸಾರದಿಂದ ಹೇಯವ ಮಾಡಿ ಪ್ರಿಯದಿಂದ ಪಾಲಿಸು ತಂದೆಯೆಂದು

ಬಿನ್ನವಿಸಿದವರು.

ಶಿಷ್ಯನ ಮೊರೆ ಕೇಳಿದ ಚನ್ನವೀರನು, ನೀನು ನರನಲ್ಲ ಪರವಸ್ತುವೆಂದು, ಲಿಂಗ ಸಜ್ಜೀವಿಯೆಂದು, ಚತುರ್ವಿಧ ಸಾರಾಯನೆಂದು ಬೋಧಿಸಿ

ಭವಿತನವ ಕಳೆದು ಭಕ್ತನ ಮಾಡಿ ತನುತ್ರಯಕೆ

ತ್ರಿವಿಧ ದೀಕ್ಷೆಯನ್ನಿತ್ತು ತ್ರಿವಿಧ ಗುಣಗಳ ಕಳೆದು

ತ್ರಿವಿಧ ತನುವಿಗೆ ತ್ರಿವಿಧ ಲಿಂಗಮಂ ನೆಲೆಗೊಳಿಸಿ ತ್ರಿವಿಧಿವಾಚಾರವರುಹಿ

ತ್ರಿವಿಧ ಪೂಜೆಯ ಪೇಳಿ ತ್ರಿವಿಧಾರ್ಪಣವ ತಿಳುಹಿ

ತ್ರಿವಿಧ ಶೇಷವೆಂಬ ತ್ರಿವಿಧಸುಖ ಸಮರತಿಯ

ನವಿರತಂ ದೆಯೆಗೆಯ್ದು… ಗುರುವಿಗೆ ಶರಣೆಂದು….

ಪೊರೆಮಡುವರು. ಹಾಗೆಯೇ ಲಿಂಗ ದೀಕ್ಷಿತರಾದ ಗುರುಕರೋದ್ಭವರಾದ ವಿವರವನ್ನು

ಪಾವನಾತ್ಮಕ ಸುಪುತ್ರನ ಮಸ್ತಕದೊಳು ಗುರು

ದೇವ ಕರವಾಂತು ಸಾಸಿರದಳದ ಚಿತ್ಕಳೆಯ

ಭ್ರಾವದಿಂ ಮನ ಮನದಿನೇತ್ರ ನೇತ್ರಗಳಿಂ ತೆಗೆದಿಷ್ಟರೂಪುಗೊಳಿಸಿ

ತೀವಿ ತಚ್ಚಿಷ್ಯನಂಗದ ಮೇಲೆ ಧರಿಸಿ ಸಂ

ಜೀವಷಣ್ ಮಂತ್ರಲಿಂಗವಿದೆಂದು ತಿಳುಹೆ…..”

ಎಂದು ಹೇಳಿಕೊಂಡಿರುವರು.

ಗುರುಸೇವೆ- ಲಿಂಗಪೂಜೆ- ಜಂಗಮ ದಾಸೋಹ-ಜಲತೀರ್ಥ ಸೇವನೆ- ಪ್ರಸಾದ ಭೋಗದಿಂದ ಅಖಂಡ ಭಕ್ತಿಯುಳ್ಳ ಭಕ್ತಕಾಯನಾಗೆಂದು ಷಟ್‌ಸ್ಥಲ – ಪಂಚಾಚಾರಗಳ ಬೋಧೆ ನೀಡಿ ಅಷ್ಟಾವರಣಾಂಗಿಯಾಗಿ ಪರಿಪೂರ್ಣ ಮಂತ್ರಶರೀರಿಯಾಗೆಂದು ನಡೆಸಿದವರು.

 ಹರಣ ಹೋಗದ ಮುನ್ನ ಶರಣನಾಗಬೇಕೆಂಬ, ವೀರಶೈವವೆನಿಸುವ ಚರ್ತುರ್ವಿಧ ಸಾರಾಯ ಸಂಪತ್ತಿನ ಪರಿಪೂರ್ಣ (ಅಖಂಡ) ಭಕ್ತನೆನಿಸಬೇಕೆಂಬ ಹಂಬಲದಿಂದ ಗುರು ಬೋಧಿಸಿದ ಮಾರ್ಗದಲ್ಲಿ ನಡೆದು ಅಹಂಮಮತೆ-ಅಹಂಕಾರ ತ್ಯಜಿಸಿ, ಪರವಸ್ತುವಾಗಿ “ಶರಣಸತಿ – ಲಿಂಗಪತಿ”ಯಾಗಿ ನರಸುಮನಾಗದೆ ಗುರುಸುತನಾಗಿ, ಭವಿಯಾಗದೆ-ಭಕ್ತನಾಗಿ, ಅವಶೈವನಾಗದೆ-ಜಪದರ್ಥವೆನಿಸಿಪ ಶಿವನಾಗಿ ಬದುಕಲು ಸಾಧನೆಗೈದವರು.

 “ಭಕ್ತಿಯೇ ಮುಕ್ತಿಯ ಜನನಿ” ಎಂದರಿತ ಬಸವಪ್ಪನವರು ಷಟ್‌ಸ್ಥಲ ಮೂಲಕ ಭಕ್ತಿಶಕ್ತಿಯಿಂದೊಡಗೂಡಿ ಅಂಗ-ಲಿಂಗ-ಶಕ್ತಿ-ಭಕ್ತಿ, ಕರ-ಮುಖ, ಪದಾರ್ಥ-ಪ್ರಸಾದಗಳ ಸಕೀಲವಿಡಿದು, ಅರ್ಚಿನ -ಅರ್ಪಣ ಅನುಭವದಿಂದ ಅಷ್ಟಾಂಗ ಯೋಗ ತ್ಯಜಿಸಿ  ಶಿವಯೋಗದಲ್ಲಿ ಧ್ಯಾನದಿಂದ ಮನದ ಲಿಂಗವಾಗಿಸಿ ತನುವನು ಲಿಂಗವಾಗಿಸಿ ಧಾರಣ ಮಾಡಿ ಅನಿಮಿಷದೆ ಸಮಾಧಿಯಲ್ಲಿ ಲಿಂಗಲೋಲುಪರಾದವರು.

ನಯನವ ನಂದಾದೀವಿಗೆ, ಭಯಭಕ್ತಿ ಭೃತ್ಯ ಕಿಂಕರ

ಚೌಮಣಿ ಮಂಚವಾಗಿಸಿ, ತನ್ನ ತಾನೆನಿಪಲಿಂಗಮಂ

ಭಿನ್ನವಿಲ್ಲದೆ ಪೂಜಿಸಿ ಷಣ್ಮಂತ್ರ ಮೂರ್ತಿಸ್ವರೂಪರಾಗಿ

ಸಾರಾಯದಿಂದ ಪ್ರಸಾದಕಾಯರಾದವರು ಭಕ್ತರಾದವರು.

ಗುರುವೇ ಪರಬ್ರಹ್ಮವಾಗಿ, ಗುರುವಿನ ವಿಗ್ರಹವೇ ಲಿಂಗವಾಗಿ, ಹರಣ ಜಂಗಮವಾಗಿ, ಆನಂದ ಪದಜಲವಾಗಿ, ಪ್ರಸನ್ನತೆ ಪ್ರಸಾದವಾಗಿ, ಶಾಂತಿ ಭಸಿತವಾಗಿ, ಚಿದ್ಘನ ರುದ್ರಾಕ್ಷಿಯಾಗಿ, ಅಭಿದಾನವೇ ಮಂತ್ರವಾಗಿ, ಭಕ್ತಿಯ ಸ್ಪರ್ಶದಿಂದ ಬಾಹ್ಯದೈವಂಗಳಿಗೆರಗದೆ ಏಕಲಿಂಗ ನಿಷ್ಠಾಪರರಾಗಿ ʼʼಅನುಭಾವವೆಂಬುದೈವಾಚಾರದಿರವು’ ಎಂದರಿತು ಆತ್ಮ ಸಾಕ್ಷಾತ್ಕಾರ ಪಡೆದವರು, ನಡೆ- ನುಡಿಯನೇಕೀಕರಿಸಿಕೊಂಡವರು.

ಬಸವಪ್ಪ ಬಸವಲಿಂಗ ಶರಣರಾದುದು:

ಗುರು ಚೆನ್ನವೀರರಡಿಯಲ್ಲಿದ್ದ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಮಠದ ಉತ್ತರಾಧಿಕಾರಿಯನ್ನು ನಿಯಮಿಸುವ ಸಂದರ್ಭದಲ್ಲಿ ಅಂಗಹೀನ ವಟುವನ್ನು ಉತ್ತರಾಧಿಕಾರಿಯಾಗಿ ಮಾಡಬಾರದೆಂಬ ಶರಣರ ಆಕ್ಷೇಪಣೆಯಿಂದಾಗಿ ಗುರುವಿನ

ಅವಕೃಪೆಗೆ ತುತ್ತಾಗಿ ‘ಮುಸವಪ್ಪ’ ನಾದರು. “ಹರ ಮುನಿದರೆ ಗುರು ಕಾಯ್ವ ಗುರು ಮುನಿದರೆ ಹರ ಕಾಯ’ನೆಂಬುದಕ್ಕೆ ಸಾಕ್ಷಿಯಾಯಿತು. ಈ ಘಟನೆ ಈ ಘಟನೆಯಿಂದ ನೊಂದು ಬೆಂದು ಬಸವಪ್ಪನವರು ಸಹಪಾಠಿಗಳಲ್ಲೊಬ್ಬರಾದ ಬಾಲಲೀಲಾ ಮಹಾಂತ ಶಿವಯೋಗಿಗಳ ಸಲಹೆಯಂತೆ ಗುರುಸ್ತುತಿಸಿ “ಗುರು ಕರುಣ ತ್ರಿವಿಧಿ” ರಚಿಸಿ ಗುರು ಕೃಪಾ ಪೋಷಕರಾಗಿ ಬಸವಲಿಂಗರಾದರು. ಅದನ್ನೇ ಅವರು

 ಬಸವ ಬಾರೆಂದನೆಗೆ ಅಸಮಲಿಂಗವೇ ನೀನೆಂ

ದುಸುರಿದ ಬಳಿಕ ಬಸವಲಿಂಗನೆಂದು

ಪೆಸರಿಟ್ಟ ಗುರುವೆ ಕೃಪೆಯಾಗುʼʼ ಎಂದು ಹಾಡಿಕೊಂಡಿದ್ದಾರೆ.

ಪರೀಕ್ಷೆಗಾಗಿ ಬೋಧಕರಾಗಿ:

ಲಿಂಗನಾಯಕನ ಹಳ್ಳಿಯ ಶಿವಾನುಭವ ಕೇಂದ್ರದಲ್ಲಿ ಗುರು ಮತದಂತೆ ಪರೀಕ್ಷಕರಾಗಿ, ಬೋಧಕರಾಗಿ ಹುಸಿಲಾಂಛನ ಖಂಡಿಸಿದ ಶರಣರುʼʼ ಛೀ ಹೆಡ್ಡ ನೀವೆಂಥ ಶಿವಭಕ್ತರು, ಶಿವಯೋಗಿಗಳುʼʼ ಎಂದು ಅವರ ಕಪಟ ವೇಷಗಳನ್ನು ತೆಗೆಸಿ, ವೀರಶೈವ ತತ್ತ್ವಾಚರಣೆಗಳನ್ನು ನಿರೂಪಿಸಿ, “ತೂಗಿರೇ ಶರಣ ಸತಿಯರು ಶಿವಯೋಗ ಸಂಪದದೊಳು” ಎಂದು ಬೋಧಿಸಿದವರು ಪುನಃ ಅವರನ್ನು ಪರೀಕ್ಷೆಗೊಳಪಡಿಸಿ, ಪರೀಕ್ಷಿಸಿ, ಈಗ ನೀವು ಮಠಾಧಿಕಾರಿಗಳಾಗಲಿ, ಬೋಧಕರಾಗಲು ಸಿದ್ಧರಾದಿರಿ, ಹೋಗಿ ಬನ್ನಿʼ’ ಎಂದು ನಮಸ್ಕರಿಸಿ ಕಳಿಸಿಕೊಡುವಲ್ಲಿ ಅವರಿಗೆ ತತ್ವಬೋಧಕರನ್ನು ಸಿದ್ಧಪಡಿಸುವ, ಅವರ ಮೂಲಕ ಸಮಾಜವನ್ನು ತಿದ್ದಬೇಕೆಂಬ ಹಂಬಲದ ಕಳಕಳಿಯನ್ನು ಹೊಂದಿದವರಾಗಿದ್ದರು.

 ಹಲವು ವರ್ಷಗಳವರೆಗೆ ಕಾರ್ಯತತ್ಪರರಾದ ಬಸವಲಿಂಗ ಶರಣರು ಒಂದು ಕಡೆಗೆ ಸಾಧಕರನ್ನು ಸಾಧನೆಗೊಳಪಡಿಸುವುದು, ಇನ್ನೊಂದೆಡೆಗೆ ದಿನ ನಿತ್ಯ ೫ ಆಣೆ ದುಡ್ಡನ್ನು ಸಂಪಾದಿಸುವ ವ್ಯಾಪಾರ ಕಾಯಕದೊಂದಿಗೆ ದಾಸೋಹಂಭಾವ ಎಂದು ವಸ್ತು ತೂಗುವದರ ಜೊತೆ ತತ್ತ್ವ ತೂಗಿ ಕೊಡುವುದು ಇವರ ಇನ್ನೊಂದು ಮುಖದ ಸಾಧನವಾಗಿ ಬೆಳೆದವರು; ಶರಣ ತತ್ತ್ವವನ್ನು ಕೃತಿಗಳ ಮೂಲಕ ಉಳಿಸಿದವರು.

 ಇವರು ರಚಿಸಿದ ಕೃತಿಗಳ ‘ವಸ್ತು’ ವೀರಶೈವ ತತ್ತ್ವಾಚರಣೆ ಒಂದೇ ಆದರೂ ಜನತೆಗೆ ಮುಟ್ಟಬೇಕೆಂಬ ಅವರ ಕಳಕಳಿ ಹಲವಾರು ಕೃತಿ ರಚನೆಗೆ ಪ್ರಚೋದನೆ ನೀಡಿರುವುದು. ೧) ಗುರುಕರುಣ ತ್ರಿವಿಧಿ ೨). ಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ ೩). ಷಟ್‌ಸ್ಥಲ ಜ್ಞಾನಾನುಭವ ೪). ಶಿವಾನುಭವ ದರ್ಪಣ ೫). ಲಿಂಗಪೂಜಾ ವಿಧಾನ ೬). ಭಕ್ತಿ ಬಿನ್ನಹ ದಂಡಕ- ಹೀಗೆ ಆರು ಕೃತಿಗಳ ಮೂಲಕ ತತ್ತ್ವಾಚರಣೆಯ ಸೌಗಂಧವನ್ನು ಸೂಸಿ ಸಾಹಿತ್ಯಕ್ಕೆ ತಮ್ಮ ಭಕ್ತಿಮಣಿ ಸಲ್ಲಿಸಿದವರು.

 ಒಟ್ಟಿನಲ್ಲಿ ಸಂಸಾರಿಗಳಾಗಿ ಸಂಸಾರ ಬಂಧನದಿಂದ ಬಿಡುಗಡೆ ಹೊಂದಿ ಭಕ್ತರಾಗಿ-ಕಾಯಕ ಯೋಗಿಗಳಾಗಿ, ಶಿವಾನುಭವ ಬೋಧಕರಾಗಿ ಮಾಹೇಶ ನಿಷ್ಠೆಯುಳ್ಳವರಾಗಿ ಕೃತಿ ರಚನಕಾರರಾಗಿ ಅನುಭಾವಿಗಳಾಗಿ ಹೀಗೆ ಹಲವಾರು ಸಾಧನೆಯ ಹಂತಗಳಿಂದ ವ್ಯಕ್ತಿತ್ವವನ್ನರಳಿಸಿಕೊಂಡವರು. ಮೈಲಾರ ಶರಣರು. ಗುರು ಚೆನ್ನವೀರರ ವಿಯೋಗದ ನಂತರ ಮೈಲಾರದಲ್ಲಿಯೇ ಲಿಂಗದೊಳಗಾದರೆಂದು ತಿಳಿದುಬರುವುದು.

 ಇನ್ನು ಅವರಿಂದ ರಚಿತವಾದ ಕೃತಿಗಳನ್ನು ಅವು ಒಳಗೊಳ್ಳುವ ವಿಷಯವನ್ನು ನೋಡಬಹುದು. ಸ್ವರವಚನ ಸಂಪುಟ ಕೃತಿ ʼʼಶಿವಾನುಭವದರ್ಪಣವನ್ನುʼʼ ದೀರ್ಘವಾಗಿ ಅವಲೋಕಿಸುತ್ತ ಸ್ವರವಚನ ಸಂಪುಟಗಳಲ್ಲಿ ಕೈವಲ್ಯಕಾರರಲ್ಲಿ ಅದಕ್ಕಿರುವ ಮಹತಿಯನ್ನು ನೋಡಬಹುದು.

೧. ಗುರುಕರುಣ ತ್ರಿವಿಧಿ:

ಕನ್ನಡ ಸಾಹಿತ್ಯದಲ್ಲಿ ತ್ರಿಪದಿ ಸಾಹಿತ್ಯಕ್ಕೆ ತನ್ನದೇ ಆದ ಹಾಸುಬೀಸು ಇದೆ. ಆಕಾರದಲ್ಲಿ ವಾಮನನಂತಿದ್ದ ತ್ರಿಪದಿ ಅರ್ಥದಲ್ಲಿ ತ್ರಿವಿಕ್ರಮನಂತಿದೆ. ಜನಪದರ ಪ್ರಾಣವಾದ ಈ ಪ್ರಕಾರ ಅನುಭಾವಿಗಳ ಕೈಯಲ್ಲಿ ದುಡಿದು ಇನ್ನೂ ವ್ಯಾಪಕ ನಿಲುವು ಪಡೆದಿದೆ.

ಪಂಡಿತರ ಪಾಮರರ ಬದುಕನ್ನು ಎತ್ತಿಕಟ್ಟಲು ಉಪಯುಕ್ತಗೊಂಡ ಈ ತ್ರಿಪದಿ ಮಾಧ್ಯಮ ೧೨ನೆಯ ಶತಮಾನದ ಶರಣ-ಶರಣೆಯರಲ್ಲಿ ತ್ರಿವಿಧಿಯಾಗಿ ಬಳಕೆಗೊಂಡಂತೆ ಮೈಲಾರ ಬಸವಲಿಂಗ ಶರಣರಲ್ಲಿ “ಗುರುಕರುಣ ತ್ರಿವಿಧಿ” ಹೆಸರು ಪಡೆದು ಮುಂದಿನ ಪೀಳಿಗೆಯ ಶರಣರಿಗೆ ಪಾರಾಯಣ ಗ್ರಂಥವಾಗಿದೆ. “ವಚನ” ಪದ ಪ್ರಯೋಗಾರ್ಥದಲ್ಲಿ ʼʼಗುರುಕರುಣ ತ್ರಿವಿಧಿ ವಚನ ಬರೆಯುವುದಕ್ಕೆ ಪ್ರಾರಂಭ” ಎಂಬ ವಾಕ್ಯ ಕೃತಿ ಆರಂಭದಲ್ಲಿ ಬಳಕೆಗೊಂಡು ಮೈಲಾರ ಶರಣರ ನಡೆ -ನುಡಿಯನ್ನೇಕೀಕರಿಸಿ ಕೊಂಡ ಬದುಕು-ಅವರು ಗುರುವಿನಿಂದ ಪಡೆದ ಅನುಭವ ತ್ರಿಪದಿರೂಪದ ವಚನ ತೊಟ್ಟು ಹೊರಹೊಮ್ಮಿದೆ ಸಾರ್ಥಕತೆ ಪಡೆದಿದೆ. ೩೩೩ ತ್ರಿಪದಿಯಿಂದ ಕೂಡಿದ ಇದು ಗುರು ಸ್ತೋತ್ರ ರೂಪದಲ್ಲಿ ಗುರು ಮಹತ್ವಪೂರ್ಣ ಮಹಿಮೆ ಪಡೆದಿದೆ. ತೋರಿಸಿದ ವೀರಶೈವ ಸಿದ್ಧಾಂತದ ಸರ್ವ ಮಗ್ಗಲುಗಳನ್ನು ಪರಿಚಯಿಸಿಕೊಡುವ

ಎಲ್ಲ ಕೈವದೈ ನಿಮ್ಮ ಮೆಲ್ಲಡಿಯ ಘನವೆಂದು

ಸೊಲ್ಲಿಗೊಮ್ಮೊಮ್ಮೆ ನುತಿಪೆ ನಾಂ ಗುರುರಾಯ

ಸಲ್ಲೀಲೆಯಿಂದೆನಗೆ ಕೃಪೆಯಾಗುʼʼ

ಎಂಬ ಶರಣ ಶಿಷ್ಯರ ಮೇಲೆ ಗುರುಕರುಣೆಯಿಂದ ಅರಳಿ ವೀರಶೈವ ಸಿದ್ಧಾಂತದ ಅನುಭವದ ವಿವಿಧ ಮುಖಗಳನ್ನು ಹೊತ್ತು ಸರಳವಾಗಿ ಶಾಸ್ತ್ರ ವಿಷಯವನ್ನು ಪರಿಚಯಿಸಿಕೊಡುವಲ್ಲಿ ಅದಕ್ಕೆ ವಿಶೇಷತೆಯಿದೆ; ಮನ್ನಣೆಯಿದೆ.

‘ತ್ರಿವಿಧ’ವೆಂದರೆ ಮೂರುವಿಧವೆಂದರ್ಥ. ಸೃಷ್ಟಿಯಲ್ಲಿ ಮೂಲೋಕ, ಸೃಷ್ಟಿ ತತ್ತ್ವ ಮೂರು ಬಗೆ, ತನು ತ್ರಿವಿಧ, ಚೇತನ ತತ್ತ್ವ- ತ್ರಿವಿಧ, ಅಂಗಮೂರು, ಲಿಂಗಮೂರು, ಜಂಗಮ ಮೂರು, ಗುರು ಮೂರು, ಭಕ್ತಿ ಮೂರು, ಶಕ್ತಿಮೂರು, ಪಾದೋದಕ-ಪ್ರಸಾದ ಮೂರು ಹಾಗೆಯೇ ವಿಭೂತಿ ರುದ್ರಾಕ್ಷಿ-ಮಂತ್ರ-ಮೂರು, ಮೂರು. ಕೃತಿ ಎತ್ತಿಕೊಂಡ ತತ್ತ್ವಗಳಾದರೂ ಅಷ್ಟಾವರಣ-ಪಂಚಾಚಾರ- ಷಟ್‌ಸ್ಥಲ ಮೂರೇ ಮೂರು. ಹೀಗೆ ಸಮಗ್ರ ಕೃತಿ ತನ್ನ ಸಕಲ ಅವಯುವ, ಸಕಲಾರ್ಥಂಗಳಲ್ಲಿ ತ್ರಿವಿಧಕ್ಕೆ ಸಂದು, ತ್ರಿವಿಧವನ್ನು ಧರಿಸಿ, ತ್ರಿವಿಧಕ್ಕೆ ಕೈಚಾಚಿದ್ದು ಮೂರು ಮೂರು ಚರಣಗಳ ೩೩೩ ನುಡಿಗಳನ್ನೊಳಗೊಂಡಿರುವುದರಿಂದ ಈ ಕೃತಿಗೆ ʼʼಗುರು ಕರುಣ ತ್ರಿವಿಧಿʼ’ಯೆಂದು ಕರೆದುದು ಅರ್ಥಪೂರ್ಣವಾಗಿದೆ. ಮಾತ್ರಾಗಣ-ಅಂಶಗಣಗಳ ಸಮ್ಮಿಶ್ರದಿಂದ ಪರಿಣಾಮ ತೀವ್ರತೆ ತಂದ ಕೃತಿಯಾಗಿದೆ.

 “ಸರ್ವಜ್ಞನ ವಚನಗಳು” ಎಂದಂತೆ ಈ ಕೃತಿಯ ಆರಂಭದಲ್ಲಿ “ಶ್ರೀಗುರು ಪ್ರಸನ್ನ! ಗುರುಕರುಣ ತ್ರಿವಿಧಿ ವಚನ ಪ್ರಾರಂಭ’ ಎಂಬ ತ್ರಿಪದಿ ರೂಪದ ಇದನ್ನು “ವಚನ” ಎಂಬರ್ಥದಲ್ಲಿ ಗ್ರಹಿಸಿ ನಡೆನುಡಿಯ ನೇಕೀಕರಿಸಿಕೊಂಡ ಬದುಕು, ಅವರಿಂದ ಅಭಿವ್ಯಕ್ತವಾದ ಸಾಹಿತ್ಯ ಎಂಬರ್ಥ ಇಲ್ಲಿ ಪ್ರಮುಖವಾಗುತ್ತದೆಂಬುದನ್ನು ಮರೆಯುವಂತಿಲ್ಲ.

೨. ಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ:  

ವೀರಶೈವವು ಶೈವದ ಪರಿಪಕ್ವ ಫಲ. “ಲಿಂಗವಂತ, ವೀರಶೈವ, ನಿರಾಭಾರ ವೀರಶೈವ -ಅಜಾತ ಶೈವ’ ಎಂಬ ಪ್ರಯೋಗಗಳು ವಚನಕಾರರಲ್ಲಿ ಬಳಕೆಗೊಂಡಿದೆ.

೧ ಚತುರ್ವರ್ಣತಿತನೆ ವೀರಶೈವ ನೋಡಾ’ʼ, ಕುಲದಲ್ಲಿ ಶೂದ್ರನಾದಡೇನು ? ಮನದಲ್ಲಿ ಮಹದೇವ ನೆಲೆಗೊಂಡವನೇ ವೀರಶೈವ ನೋಡಾʼʼ ʼʼತಿಳಿದನುಭಾವಿಯೇ, ಸಂಸ್ಕಾರಿಯೇ ಪರಮ ವೀರಶೈವ ನೋಡಾ”, ತನ್ನ ತಾ ತಿಳಿದವ ವೀರಶೈವ

“ಶಿವಯೋಗದಲ್ಲಿರುವಾತ ಲಿಂಗವಂತನೆಂಬೆನಯ್ಯಾ? ಎಂಬಂಥ ಪ್ರಯೋಗಗಳು ವಚನಕಾರರಲ್ಲಿ ಸ್ಪಷ್ಟತೆ ಪಡೆದಿವೆ. ಅಕ್ಕಮಹಾದೇವಿಯು “ಬಸವ ಮೊದಲಾದ ಸಮಸ್ತ ಪ್ರಮಥ ಗಣಂಗಳೆಲ್ಲ ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದವರು ನೋಡಾʼʼ, ಅಜಾತಿ ಶೈವರು ಗುರುಲಿಂಗ ಜಂಗಮಕ್ಕೆ ತನುಮನಧನವ ನಿವೇದಿಸಿ

 ಸರ್ವಸೂತಕರಹಿತರಾಗಿಹರಯ್ಯಾ”-ಎಂಬಂಥ ಪದಗಳ ಒಟ್ಟು ಧೋರಣೆಗಳು ಮಥನವನ್ನೇ ಮಥಿಸಿ ಮೈಲಾರ ಬಸವಲಿಂಗ ಶರಣರು ʼʼಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತʼʼವನ್ನು ರಚಿಸಿದ್ದಾರೆ. ವೀರಶೈವಾಚರಣೆಯ ಒಟ್ಟು ನೋಟವನ್ನು ಅಷ್ಟಾವರಣ ಪಂಚಾಚಾರ ಧರ್ಮಾಚಾರ ಎಂಬ ೩ ಪ್ರಕರಣಗಳಲ್ಲಿ ೧೨೧ ವಾರ್ಧಕ ಷಟ್ಪದಿಯಲ್ಲಿ ರಚಿಸಿರುವರು.

ಮೈಲಾರ ಶರಣರು ಸ್ವರವಚನದಲ್ಲಿ ಬರುವ ‘ಪಲ್ಲವಿ’ಯಂತೆ ಒಂದೊಂದು ಪ್ರಕರಣದ ಆದಿಯ ‘ಸೂಚನಾ’ ಪದ್ಯದಲ್ಲಿ ಸಂಕ್ಷೇಪಿಸಿ ವಿವರಿಸಿದುದು ಅವರ ‘ಗಣಾಚಾರ’ ನಿಷ್ಠೆಗೆ ಸಾಕ್ಷಿಯಾಗಿದೆ. ಆದಯ್ಯ, ಬಸವ, ಚೆನ್ನಬಸವ, ಅಲ್ಲಮ ಮುಂತಾದವರ ಸಿದ್ಧರಾಮ ಅಕ್ಕಮಹಾದೇವಿ ಸಾಹಿತ್ಯದಿಂದ ಮಥಿಸಿ ಬಂದ ವೀರಶೈವ ಹೂರಣ ಈ ಕೃತಿ. ಮೂರೂ ಪ್ರಕರಣಗಳನ್ನು ಷಟ್‌ಸ್ಥಲಾತ್ಮಕವಾಗಿ ಎತ್ತಿ ಕಟ್ಟಿದುದು “ಧರ್ಮಾಚಾರ” ಎಂಬ ಪುಟ್ಟ ಪ್ರಕರಣದ ಮೂಲಕ ನಿಜ ವೀರಶೈವ ಸಿದ್ಧಾಂತದ ನಿಲುಮೆಯನ್ನು ಸಂಗ್ರಹಿಸಿ-ಸಂಕ್ಷೇಪಿಸಿದುದು ಈ ಕೃತಿಗಿರುವ ಮಹತಿಯಾಗಿದೆ.

ಆಷ್ಟಾವರಣ ಪಂಚಾಚಾರ ಪ್ರಕರಣಗಳು ಷಟ್‌ಸ್ಥಲಾತ್ಮಕ ಧೋರಣೆಯ ಶಿವಯೋಗದ ಹಿನ್ನೆಲೆಯಲ್ಲಿ ನಿರೂಪಿತಗೊಂಡ ಕೃತಿಗಳು. ಪಂಚಾಚಾರಗಳನ್ನು ಷಟ್‌ಸ್ಥಲಾತ್ಮಕವಾಗಿ ಸಮನ್ವಯೀಕರಿಸಿರುವ ವಿಶೇಷತೆ ಮೈಲಾರ ಶರಣರದು. ‘ಧರ್ಮಾಚಾರ’ ಪ್ರಕರಣದಲ್ಲಿ ಭಕ್ತನ ಧರ್ಮಾಚಾರ, ಮಾಹೇಶನ ಧರ್ಮಾಚಾರ, ಪ್ರಸಾದಿಯ ಧರ್ಮಾಚಾರ, ಪ್ರಾಣಲಿಂಗಿಯ ಧರ್ಮಾಚಾರ, ಶರಣನ ಧರ್ಮಾಚಾರ, ಐಕ್ಯನ ಧರ್ಮಾಚಾರ.

 ಧರೆ ಕೈಲಾಸ, ಭಕ್ತಿಯ ಮಹತಿ, ಭವಿ-ಭಕ್ತ, ಅಧಃಸೃಷ್ಟಿ-ಊರ್ಧೃ ಸೃಷ್ಟಿ ಅಷ್ಟಾಂಗಯೋಗ-ಶಿವಯೋಗಗಳ ನಿಲುವನ್ನು ಚರ್ಚಿಸಿ ವೀರಶೈವದ ಕೇಂದ್ರ ತತ್ತ್ವಾಚರಣೆಗಳನ್ನೇ ಬಿತ್ತರಿಸಿದ ಕೃತಿ.

ಯೋಗವೆಂಬುದು ಶಿವಶಕ್ತಿ ಸಂಪುಟ. ಶಿವಯೋಗವು ಅಷ್ಟಾಂಗಯೋಗಗಳಲ್ಲಿ ಧಾರಣ-ಧ್ಯಾನ ಸಮಾಧಿಗಳನ್ನು ಮಾತ್ರ ಸ್ವೀಕರಿಸಿರುವುದನ್ನು ಖಚಿತಪಡಿಸಿ ವಿವರ ನೀಡಿ “ಅಷ್ಟಾಂಗ ಯೋಗ ಶರಣನಿಗೆ ಸಲ್ಲ’ ಎನ್ನುವರು. ಷಟ್‌ಸ್ಥಲಯೋಗ ಲಿಂಗಾಂಗಯೋಗ, ಪರಮಾನಂದಯೋಗ, ಅಳಿಯದೆ ಕೂಡುವ ಯೋಗ, ಹಠಯೋಗ, ಆನಂದಯೋಗ, ನಿಷ್ಕಲಯೋಗ, ಶಾಂಭವೀಯೋಗ, ಪರಿಣಾಮಯೋಗ, ಮಹಾಯೋಗ, ದಿವ್ಯಯೋಗ, ಶಿವಶಕ್ತಿ ಸಂಪುಟ ಯೋಗ, ಪರಮಾತ್ಮ ಯೋಗ, ಅನಿಮಿಷ ಯೋಗ-ಮುಂತಾದ ಪರಿಭಾಷೆಗಳಲ್ಲಿ ಬಳಕೆಗೊಂಡುದು ಶಿವಯೋಗ. ಶಿವಯೋಗ ಸಾಧನೆಯೇ ಷಟ್‌ಸ್ಥಲ ನಿರಾಭಾರ ಸಿದ್ಧಾಂತದ ನಿಲುವೆಂಬುದನ್ನು ಶೈವ ವೀರಶೈವಗಳಿಗಿರುವ ಭಿನ್ನತೆಯನ್ನು ಎತ್ತಿ ತೋರಿಸಿದ ಮಹತ್ವಪೂರ್ಣ ಕೃತಿಯಿದು.

 ೩. ಷಟ್‌ಸ್ಥಲ ಜ್ಞಾನಾಮೃತ:

“ಸದ್ಧರ್ಮ ದೀಪಿಕೆʼʼ ಸಂಪಾದಕರಾದ ಚೆನ್ನಮಲ್ಲಿಕಾರ್ಜುನವರಿಂದ “ಶಿವಾನುಭಾವ ದೀಪಿಕೆ “ಯೆಂಬ ಭಿನ್ನ ಹೆಸರಿನಲ್ಲಿ ತಲೆಬರಹದಲ್ಲಿ ಪ್ರಕಟಗೊಂಡ ಈ ಕೃತಿ ಅನ್ಯ ಕೃತವಾದುದಲ್ಲ. ಈ ಕೃತಿಯ ತಲೆಬರಹ ‘ಶಿವಾನುಭವ ದೀಪಿಕೆ’ ಎಂದಿರದೆ “ಷಟ್‌ಸ್ಥಲ ಜ್ಞಾನಾನುಭವ” ಅಥವಾ “ಷಟ್‌ಸ್ಥಲ ಜ್ಞಾನಾಮೃತ” ಎಂದಿದ್ದು ೩೦೩ ಕಂದ ಪದ್ಯಗಳು ಇಲ್ಲಿವೆ. ಪ್ರತಿಯೊಂದು ಕಂದ ಪದ್ಯಗಳು, ಬಸವಲಿಂಗ ಪ್ರಭುವೆ ಎಂದು ಮುಕ್ತಾಯಗೊಳ್ಳುವವು. ಕೊನೆಗೆ ಎಲ್ಲ ಕೃತಿಗಳಿರುವಂತೆ ʼʼಗುರು ಚನ್ನವೀರಾʼʼ ಎಂಬ ಅಂಕಿತ ಇದಕ್ಕಿದೆ. ಕೃತಿಯ ಆರಂಭದಲ್ಲಿ ಮೈಲಾರ ಬಸವಪ್ಪನವರು ವಿರಚಿಸದ ʼಷಟ್‌ಸ್ಥಲ ಜ್ಞಾನಾನುಭಾವ’ ಎಂಬ ವಾಕ್ಯ ಕರ್ತೃ-ಕೃತಿನಾಮಗಳ ಸ್ಪಷ್ಟತೆ ಕೊಡುವುದು.

 ಶಿವನಾರು !ಜೀವಿಯಾರು! ವೀರಶೈವವೆಂದರೇನು! ಕರಣಹಸಿಗೆಗಳ ವೈವಿಧ್ಯಗಳೇನು ? ಕೃತಿ ತತ್ತ್ವಗಳಾವವು! ಪಂಚಾಕ್ಷರದ ಸಂಚುಗಳ ನಿಲುವೇನು ?  ಮಿಶ್ರಾರ್ಪಣವೆಂದರೇನು! ಮುಂತಾದ ಮೂಲಭೂತ ತತ್ತ್ವಗಳನ್ನು ಕೊಂಡುಗುಳಿ  ಕೇಶಿರಾಜ ಬಳಸಿದ ಕಂದ ಛಂದೋಲಯದಲ್ಲಿ ಸರಳವಾಗಿ ಬಿಗಿಯಾದ ಶಾಸ್ತ್ರರೂಪದ ತತ್ತ್ವಗಳನ್ನು ಸರ್ವಜನತೆಗೆ ತಿಳಿಸಿಕೊಡುವ ಈ ಕೃತಿಗೆ ವೀರಶೈವ ಸಾಹಿತ್ಯ ಧರ್ಮ ತತ್ತ್ವಗಳ ಅಧ್ಯಯನದಲ್ಲಿ ಮಹತ್ತರವಾದ ಸ್ಥಾನವಿದೆ.

ವೀರಶೈವ ತತ್ತ್ವಗಳನ್ನರಿವ ಕೈಪಿಡಿಯಂತಿರುವ ಈ ಕೃತಿ

ಶೈವ ಸುಮಾರ್ಗದೊಳೆಲ್ಲಂ

ಶ್ರೀ ವೀರಶೈವ ಷಟ್‌ಸ್ಥಲ ಮಾರ್ಗವಿದಧಿಕಂ

ಈ ವೀರಶೈವವೊಂದನೆ ನೀವರುಹಿ ಪಾಲಿಸೆನ್ನಂ ಬಸವ ಪ್ರಭುವೆʼʼ

 ಎಂದು ಹೇಳುವಲ್ಲಿ ಸ್ಪಷ್ಟವಾಗುತ್ತ ಶಿವ ಶಕ್ತಿ, ಶಿವನೇ ಬಸವ ಬಸವನೇ ಶಿವ, ಮಾಯಾ ಸಂಸಾರ ನಿರಸನ, ಪಂಚವಿಷಯ, ಅಷ್ಟಮದ, ಅರಿಷಡ್ವರ್ಗ ನಿರಸನ, ನವಪ್ರಣವ, ಜಗತ್ ಸೃಷ್ಟಿಕ್ರಮ, ಪಂಚಭೂತಗಳ ಪಂಚೀಕರಣ, ಮಿಶ್ರಪಂಚೀಕರಣ, ಪಂಚವಿಂಶತಿ ತತ್ತ್ವ, ಪಂಚಾಕ್ಷರದ ಸ್ವರೂಪ, ಭಕ್ತನ ಅಂಗ ಲಿಂಗಮಯ, ಮಿಶ್ರಅಂಗ-ಲಿಂಗ ಸಂಗ, ಎಂಟಹ ಸಕೀಲ ಆರಕ್ಷರದ ರೂಪ, ಷಣ್ಮಂತ್ರದ ೪೮ ವಿಧ, ಎಂಟಹ ಆವರಣವೇ ಷಣ್ಮಂತ್ರ, -ಇದಕ್ಕಿರುವ ಅಧಿಕಾರ, ಅನಧಿಕಾರ, ಶಿವಸರ್ವಗತ-ನಿರಸನ ಷಟ್‌ಸ್ಥಲದಿರವೇ ಮಹಾದೇವ, ಜೀವನದ ಸದುಪಯೋಗ-ತತ್ತ್ವಮಸಿ ಪದಕ್ರಮ, ಲಿಂಗಾಂಗ ಕೂಟ, ನಾದಬಿಂದು ಕಲೆ ಹೀಗೆ ಅನೇಕ ವಿಷಯಗಳನ್ನು ಈ ಕೃತಿ ನಿರೂಪಿಸುವುದು.

 ೩೦೩ ಕಂದ ಪದ್ಯಗಳ ಈ ಕೃತಿಯ ವಿವರಣೆಯಲ್ಲಿ ಒಂದು ಕ್ರಮಬದ್ಧತೆ ಇದೆ. ವೀರಶೈವರಿಗೆ ಬೇಕಾಗುವ ಅನುಭವದ ಜ್ಞಾನಾಮೃತವನ್ನು ಒದಗಿಸುವ ಕೃತಿ “ಷಟ್‌ಸ್ಥಲ ಜ್ಞಾನಾನುಭವ” ಎಂಬ ತಲೆಬರೆಹ ಸಾರ್ಥಕತೆಗೆ ಸಮರ್ಥತೆ ಒದಗಿಸುವುದು, ಬಸವ ಅಲ್ಲಮ ಚೆನ್ನಬಸವಣ್ಣನವರ ಕೃತಿಗಳ ಆಳವಾದ ಜ್ಞಾನ ಇವರಿಗಿತ್ತೆಂಬುದಕ್ಕೆ ನಿದರ್ಶನ ಈ ಕೃತಿ.

 , ಲಿಂಗಪೂಜಾ ವಿಧಾನ :

೫೭. ಕಂದ ಪದ್ಯಗಳ ಚಿಕ್ಕ ಕೃತಿಯಿದು, ಮಾನವನ ಜೀವನವು ಕೇವಲ ಇಂದ್ರಿಯ ಲಾಲಸೆಗಳ ಪೂರೈಕೆಯ ಯತ್ನವಲ್ಲ., ಜನನ ಮರಣಗಳ ಮಧ್ಯದ ಅನುಭವವೂ ಅಲ್ಲ. ಈ ಹುಟ್ಟು ಸಾವುಗಳ ಎಲ್ಲೆ ಮೀರಿ ಮಾನವನು ಅಮೃತತ್ತ್ವ ಪಡೆಯಬಹುದು. ಪ್ರಪಂಚದ ವಿಶಿಷ್ಟ ಆಗು ಹೋಗುಗಳಲ್ಲಿ ಮಾನವನಿಗೆ ಮೀರಿದ ಇನ್ನೊಂದು ಶಕ್ತಿ ಇದೆ. ಅದು ಎಲ್ಲವನ್ನೂ ನಡೆಸುತ್ತದೆ. ಅದೇ ಪರಮ ಸತ್ಯ. ಅದನ್ನೇ ನಾವು ದೇವರೆಂದು ‘ಪರವಸ್ತುʼ ಎಂದು, ಪರಮಾತ್ಮವೆಂದು, ಪರಬ್ರಹ್ಮವೆಂದು ಕರೆಯುತ್ತೇವೆ. ಅಂಥ ಪರವಸ್ತುವನ್ನು ವೀರಶೈವರು ತಮ್ಮ ಪರಿಭಾಷೆಯಲ್ಲಿ ‘ಲಿಂಗ’ ವೆಂದು ಕರೆದರು. ‘ಲಿಂಗ’ ಪದಕ್ಕೆ ಸ್ಥಲ, ದೇವರು, ಪರಶಿವ, ಪರಬ್ರಹ್ಮ ಶೂನ್ಯ, ಪರವಸ್ತು, ಅನು, ಘನ, ಮುಂತಾದ ಪರ್ಯಾಯ ಪದಗಳನ್ನುಪಯೋಗಿಸಿರುವರು. ಜಗದುತ್ಪತ್ತಿ-ಸ್ಥಿತಿ- ಲಯಗಳಿಗೆ ಕಾರಣೀಭೂತವಾದುದು ಯಾವುದೋ ಅದೇ ಲಿಂಗ, “ಲಿಂಗ ಮಧ್ಯೆ ಜಗತ್ ಸರ್ವಂʼ’ ಇಂಥ ವ್ಯಾಪಕವಾದ ಲಿಂಗದ ಆರಾಧನೆ, ಅರ್ಚನೆ, ಅರ್ಪಣ, ಅನುಭವಗಳಿಂದ ಪ್ರಕಟಿಸಬೇಕು. ಅದಕ್ಕಾಗಿ ಲಿಂಗಪೂಜೆ ಅಗತ್ಯ ಸಾಧನ. “ಪಶುಭಾವದ ನಿಮ್ಮ ಸ್ಥಿತಿಯಿಂದ ದೇವಭಾವದ ಸರ್ವೋತ್ಕೃಷ್ಟ ಸ್ಥಿತಿಗೇರಿ ನಿಂತುಕೊಳ್ಳಲು ಬಯಸುವರು ಅನುಸರಿಸಬೇಕಾದ ಸಾಧನಗಳಲ್ಲಿ ಲಿಂಗಪೂಜೆ ಮಹತ್ವದ್ದು.

ಮುನ್ನನಾದಿಯ ಪರಾತ್ಪರ ನಿರಂಜನ ಶರಣ

ತನ್ನ ಹೃತ್ಕಮಲದ ಪರಜ್ಯೋತಿ ಲಿಂಗವನ್ನು

ಭಿನ್ನವಿಲ್ಲದೆ ವಾಮ ಕರಕಂಜದೊಳು ಪಿಡಿದು

ತನ್ನ ತಾನರ್ಚಿಸುತಿಹ…ʼʼ

ಇದರ ಆರಾಧಕನು ಅಷ್ಟವಿಧಾರ್ಚನೆ-ಷೋಡಷೋಪಚಾರಗಳ ಮೂಲಕ ಆರಾಧಿಸಿ ಲಿಂಗಾಂಗಿಯಾಗುವ ನಿಲುವನ್ನು ೫೭ ಕಂದ ಪದ್ಯಗಳಲ್ಲಿ ಸುಲಭವಾಗಿ ನಿರೂಪಿಸಿದ ಕೃತಿ “ಲಿಂಗಪೂಜಾ ವಿಧಾನ”. ಆಹ್ವಾನ-ಆಸನ-ಧ್ಯಾನ-ಅರ್ಘ್ಯ-ಪಾದ್ಯ, ಅಚಮನ,

ಮಿಶ್ರಪಂಚಾಮೃತ, ಸಾಲಭಿಷೇಕ, ವಸ್ತ್ರ-ಪುಷ್ಪ-ಪತ್ರಿ -ನೈವೇದ್ಯ, ಘಂಟಾನಾದ, ಪ್ರದಕ್ಷಿಣೆ, ನಿರಾಜನ ಮುಂತಾದ ಆಚರಣೆಗಳಲ್ಲಿ ಈ ಕೃತಿ ವೀರಶೈವ ಪರಿಭಾಷೆಯ ಅರ್ಥದಲ್ಲಿ ಅದ್ದಿ ತೆಗೆದ ವೀರಶೈವಾಚರಣೆಯ ನಿಲುವನ್ನೇ ಪ್ರತಿಪಾದಿಸುವ ಶಕ್ತಿ ಪಡೆದಿದೆ.

೫. ಭಕ್ತಿ ಬಿನ್ನಹ ದಂಡಕ:

“ದಂಡಕ” ವಿಶಿಷ್ಟ ಸಾಹಿತ್ಯ ಪ್ರಕಾರ. “ಭಕ್ತ ಬಿನ್ನಹ ದಂಡಕʼʼವು ಮೈಲಾರ ಶರಣರಿಂದ ಅಗಲಿ ನಿಂತ ಕುಸುಮ. ೫-೫ ಮಾತ್ರೆಗಳಂತೆ ಮುನ್ನಡೆವ ಈ ದಂಡಕವ ಪಾದವಿಭಾಗವಿಲ್ಲದೆ ನಿಯತವಾದ ಗಣಗಳಿಂದ ಕೂಡಿ ದಂಡಕವು ಸ್ವರೂಪದಲ್ಲಿ ಬೆಳೆದು ನಿಂತ ಕೃತಿ. ಶರಣರು ಗುರು ಚೆನ್ನವೀರರಲ್ಲಿ ಭಕ್ತಿ ಬಿನ್ನಹದ ವಿಜ್ಞಾಪನೆಗೈದು ಅವರ ಕೃಪಾನುಗ್ರಹಕ್ಕೆ ಸಿಲುಕಿ ದೀಕ್ಷೆಪಡೆದು ಶುದ್ಧಾಂತಃಕರಣರಾಗಿ, ಲಿಂಗ ಭಕ್ತರಾಗಿ ನಿಂತ ನಿಲವೇ ಇಲ್ಲಿಯ ವಸ್ತು. ಶಿಷ್ಯನ ನಿರ್ಮಲಾಂತಃಕರಣದ ಭಕ್ತಿಯ

ಹೊನಲೇ  ಮೂಲ ಪ್ರೇರಕಶಕ್ತಿಯಾಗಿ ಕೃತಿರೂಪ ತಾಳಿದೆ. ಜನತೆಯಲ್ಲಿ ಪ್ರಮುಖಜ್ಞಾನವನ್ನರಳಿಸುವುದೇ ಬಸವಲಿಂಗ ಶರಣರ ಕೃತಿಗಳ ಗುರಿ ಆಗಿರುವುದರಿಂದ ಚಿಕ್ಕದಾದ ಈ ಕೃತಿ ಅಂಥ ಕ್ರಿಯಾಚರಣೆಯಲ್ಲಿ ಮಗ್ನರಾಗಬೇಕೆಂದು ಪ್ರೇರೇಪಿಸುವ ದಂಡಕ ಕೃತಿ, ದಂಡಕ ಸಾಹಿತ್ಯಕ್ಕೆ ಒಂದು ಕೊಡುಗೆ, ನಿದರ್ಶನ ಗದ್ಯದ ಮಾದರಿಗೆ ನಿದರ್ಶನ ಕೃತಿ.

೬. ಶಿವಾನುಭವ ದರ್ಪಣ:

ವೈವಿಧ್ಯಮಯವಾದ ವ್ಯಾಪಕವಾದ ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ವೃತ್ತಗಳಲ್ಲಿ ರಚನೆಗೊಂಡು ಪ್ರೌಢಭಾಷೆಯಿಂದೊಡಗೂಡಿದುದನ್ನು ʼಓದುಗಬ್ಬ’ ಎಂದೂ ಸುಲಭವಾದ ಸರಳಗನ್ನಡದ ದೇಸಿ ಮಟ್ಟುಗಳಲ್ಲಿ ರಾಗ-ತಾಳ-ನಿರ್ದೆಶನದೊಂದಿಗೆ ಹಾಡಲು ಬರುವಂಥವುಗಳನ್ನು ಹಾಡುಗಬ್ಬ’ – ಸ್ವರವಚನಗಳೆಂದು ವಿಭಜಿಸಬಹುದು. ಇದರಲ್ಲಿ ೨ನೆಯದಾದ ಸ್ವರವಚನಗಳು, ಶಿವಶರಣರಲ್ಲಿ ಹರಿದಾಸರಲ್ಲಿ, ಕೈವಲ್ಯಕಾರರಲ್ಲಿ, ಅನುಭಾವಿ ಕವಿಗಳಲ್ಲಿ ಕಾಲಕಾಲಕ್ಕೆ ರಚನೆಗೊಂಡು ಒಂದೊಂದು ಪರಪರೆಯನ್ನೇ ನಿರ್ಮಿಸಿದೆ. ಶಿವದಾಸ-ಹರಿದಾಸರಿಂದ ಹೊರಹೊಮ್ಮಿದ ಇದು ಮುಂದೆ ಕೈವಲ್ಯಕಾರರಲ್ಲಿ ಸಂಗೀತದ ಸ್ಪರ್ಶದಿಂದ ವ್ಯಾಪ್ತಿಗೊಂಡಿದೆ. “ಕೈವಲ್ಯ ಪದ್ಧತಿ” ಯೆಂಬ ಹೆಸರನಲ್ಲಿಯೂ ರಚನೆಗೊಂಡಿದೆ.

 ಸ್ವರವಚನ-ಕೀರ್ತನ-ಕೈವಲ್ಯ ಸಾಹಿತ್ಯವಾಹಿನಿಯಲ್ಲಿ ಮಿಂದು ತಮ್ಮದೇ ಆದ ಸ್ವತಂತ್ರ ಪ್ರತಿಭೆಯಲ್ಲಿ ಮೆರೆದ ಮೈಲಾರ ಬಸವಲಿಂಗ ಶರಣರ ಆತ್ಮಾನುಭವದಿಂದ ಹೃದಯ ತುಂಬಿ ಹೊರಹೊಮ್ಮಿದ ಹಾಡುಗಳನ್ನು ಸಂಗ್ರಹಿಸಿ-ಸಂಕಲಿಸಿ “ಶಿವಾನುಭವದರ್ಪಣ” ವೆಂಬ ಅಭಿದಾನದಿಂದ ಸಂಪಾದಿಸಿದ ಗೀತೆಗಳ ಪುಂಜವೇ ಈ ಕೃತಿ. ಸಾಹಿತ್ಯ-ತತ್ತ್ವ ಸಂಗೀತಗಳಿಂದ ಮುಪ್ಪುರಿಗೊಂಡ ಈ ಕೃತಿಯಲ್ಲಿಯ ಹಾಡುಗಳ ರಾಗ ವೈವಿಧ್ಯ ವಿಷಯ ವೈವಿಧ್ಯಗಳ ಮಜಲುಗಳು ಮೈಲಾರ ಶರಣರ ವೈದುಷ್ಯ ಮತ್ತು ಅನುಭಾವಗಳಿಗೆ ಸಾಕ್ಷಿಗಳಾಗಿವೆ.

 ಭಕ್ತಿ-ಜ್ಞಾನ-ಕ್ರಿಯೆಗಳ ತ್ರಿವೇಣಿ ಸಂಗಮವೇ ಶಿವಾನುಭವದ ಕೇಂದ್ರ. ಇವುಗಳ ನಿಜವಾದ ಅನುಭವವೇ ಶಿವಾನುಭವ. ಈ ಶಿವಾನುಭವ ಸಂಪಾದನೆಯೇ ಶೂನ್ಯಸಂಪಾದನೆ. ಇದನ್ನು ಸಾಧಿಸುವುದೇ ವೀರಶೈವರ ಪರಮ ಗುರಿ. ಇದರ ಸಾಧನೆಗೆ ಅಷ್ಟಾವರಣ-ಪಂಚಾಚಾರ-ಷಟ್‌ಸ್ಥಲಗಳೇ ಮೂಲ ತಳಹದಿ. ಸಾಧಕನು ಇವುಗಳನ್ನು ನಿಜಾಚರಣೆಗೆ ತಂದಾಗ ಅನುಭವಿಯೆನಿಸುವನು; ಈ ಅನುಭವ ಉಳ್ಳವನೇ ಶಿವಾನುಭವಿ. ಶಿವಾನುಭವಿಯಾಗಬೇಕಾದ ತತ್ತ್ವಾಚರಣೆಗಳನ್ನು ಪರಿಚಯಿಸಿಕೊಡುವ ಗ್ರಂಥ “ಶಿವಾನುಭವದರ್ಪಣ”.

ಶಿವಾನುಭವ ದರ್ಪಣವು ಮಹದರಿವಿನ ಕುರುಹು. ಶಿವಾನುಭವ ಪಡೆಯಲು ಅರಿವು ಸತ್ಯಸಾಧನ. ದರ್ಪಣವಿಲ್ಲದೆ ತನ್ನ ನಿಲುವನ್ನು ಕಾಣಲು ಹೇಗೆ ಅಸಾಧ್ಯವೋ ಹಾಗೆ ಶಿವಾನುಭವದ ಮಹದರಿವಿಲ್ಲದೆ ಸ್ವಸ್ವರೂಪದ ಪರಿಪೂರ್ಣತೆ ಅಳವಡುವಂತಿಲ್ಲ. ಪರಿಪೂರ್ಣತೆ ಅಳವಡಲು ‘ಶಿವಾನುಭವ ದರ್ಪಣ ʼಕೃತಿ ಮಾರ್ಗದರ್ಶಕ.

ಡಾ.ಫ.ಗು.ಹಳಕಟ್ಟಿ, ಪ್ರೊ.ಶಿ.ಶಿ.ಬಸವನಾಳ ಅವರಿಂದ ಸಂಪಾದಿತ ಈ ಕೃತಿ ಈಗ ನನ್ನಿಂದ “ಮೈಲಾರ ಬಸವಲಿಂಗ ಶರಣರ ಸಮಗ್ರ ಸಾಹಿತ್ಯ’ ಎಂಬ ಗ್ರಂಥದಡಿಯಲ್ಲಿ ಹೆಚ್ಚು ಪದ್ಯಗಳು ಸೇರಿ ೭೫ ಪದ್ಯಗಳ ಸಂಕಲನ ಸಂಗ್ರಹದಲ್ಲಿ ಪ್ರಕಟಗೊಂಡಿದೆ.

ಫ.ಗು.ಹಳಕಟ್ಟಿ, ಶಿ.ಶಿ. ಬಸವನಾಳ ಅವರಲ್ಲಿ ವಿಭಜನೆಗೊಳಪಡಿಸದೆ ಸಂಪಾದಿಸಿದರೆ, ನಾನು ಸಂಪಾದಿಸಿದ ಕೃತಿಯಲ್ಲಿ ೮ ವಿಭಜನೆಗಳನ್ನು ಸಂಕಲಿಸಿ ಪ್ರಕಯಿಸಿದೆ. ಅವು- 

೧. ಅಷ್ಟಾವರಣ-| ೨. ಅಷ್ಟಾವಣ – ೩. ಪಂಚಾಚಾರ ೪. ಷಟ್‌ಸ್ಥಲ ೫, ನರಸುತ – ಗುರುಸುತ, ಭವಿ-ಭಕ್ತ ಇತ್ಯಾದಿ ೬. ಬೆಡಗಿನ ಪದಗಳು ೭. ಚರಿತ್ರೆ ೮. ಮಂಗಳಾರತಿ.

ಅಷ್ಟಾವರಣ ಭಾಗ -೧ ರಲ್ಲಿ ಗುರು-ಲಿಂಗ- ಜಂಗಮ- ಪಾದೋದಕ-ಪ್ರಸಾದ- ವಿಭೂತಿ-ರುದ್ರಾಕ್ಷಿ-ಮಂತ್ರಗಳನ್ನು ಕುರಿತಂತೆ ೮ ವಿಧಗಳಿಗೆ ಅನ್ವಯಿಸಿ ಪದ್ಯಗಳನ್ನು ಮೀಸಲಾಗಿರಿಸಿ ಪದ್ಯ ೧ರಿಂದ ೩೮ರವರೆಗೆ ವಿವಿಧ ರಾಗ-ತಾಳ-ನಿರ್ದೇಶನದಡಿಯಲ್ಲಿ

“ಗುರು ಚೆನ್ನವೀರ” ಅಂಕಿತದಿಂದ ಪಲ್ಲವಿ-ಅನುಪಲ್ಲವಿಗಳ ಮೂಲಕ ೩ ನುಡಿಯಿಂದ ೧೫-೨೦ ನುಡಿಗಳವರೆಗೆ ಒಂದೊಂದು ತತ್ತ್ವದ ವಿವರಣೆ ನೀಡಿದ್ದಾರೆ, ಮೈಲಾರ ಬಸವಲಿಂಗ ಶರಣರು.

ಮೈಲಾರ ಬಸವಲಿಂಗ ಶರಣರು ಅಷ್ಟಾವರಣ ಭಾಗ-೨ರಲ್ಲಿ ಪದ್ಯ ೩೯ರಿಂದ ಪದ್ಯ ೪೮ರವರೆಗೆ ಒಂದೊಂದು ಪದ್ಯಾಂತರ್ಗತದಲ್ಲಿ ಒಂದೊಂದು ನುಡಿಯಲ್ಲಿ ಒಂದೊಂದು ಅಷ್ಟಾವರಣ ಪರಿಕಲ್ಪನೆಗಳ ವಿವರ ನೀಡಿದ್ದಾರೆ. ಪದ್ಯ ೨೬, ಮಲ್ಲಿಕಾಮಾಲಾವೃತ್ತ ಪದ್ಯ ೪೪ ಚಿತ್ರಪದವೃತ್ತ, ಪದ ೪೫ ವಜ್ರನಾಮವೃತ್ತ ಪದ್ಯ ೪೬ ಸುಲಭ ನಾಮವೃತ್ತ (೨ ಸಾಲು), ಪದ್ಯ ೪೭ ವಿದ್ಯುನ್ಮಾಲಾವೃತ್ತ (೪ ಸಾಲು)ಗಳಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ತಿರುಗಿಸಿ ಪರಿವರ್ತಿಸಿದ ಕ್ರಿಯೆ ಇಲ್ಲಿದೆ. ಕೆಲವೊಂದು ಪದ್ಯಗಳಲ್ಲಿ ತತ್ತ್ವ ಮತ್ತು ಛಂದೋರೂಪಗಳ ಸಮನ್ವಯದೊಂದಿಗೆ ಪದ್ಯ ಕಟ್ಟಿ ರಚಿಸಿದುದು ಅವರ ವಿಶೇಷತೆಯನ್ನು ಸೂಚಿಸುವುದು. ಉದಾ:- (ಪದ) ಅಷ್ಟಾವರಣ ವಾರ್ಧಕ (ಪರತತ್ತ್ವಮೂರ್ತಿಯಷ್ಟಾವರಣ) (ಪಲ್ಲವಿ) ಇಂಥ ವಾರ್ಧಕ ಷಟ್ಪದಿಯ ಆರಂಭದ ಪದ್ಯಗಳು ‘ಸೂಚನೆ’ ಎಂಬ ಸ್ವರೂಪದ ಪಲ್ಲವಿಯನ್ನು ಹೊಂದಿ ಷಟ್ಪದಿಗಿರುವ ಮಾತ್ರಾ ಅಂಥ ಛಂದಗಳೆರಡರ ಮಿಶ್ರಣವನ್ನು ಕಾಣುತ್ತೇವೆ. ಕೆಲವೆಡೆ ಶೈವನಿರಸನ ಸ್ಥಲ, ಗುರುಕರುಣ ಸ್ಥಲ, ವಿಭೂತಿ ಸ್ಥಲ(ಪದ್ಯ೩೩), ರುದ್ರಾಕ್ಷಿ ಸ್ಥಲ (ಪದ್ಯ -೩೭) ಪಂಚಾಕ್ಷರಿ ಸ್ಥಲ (ಪದ್ಯ ೩೮) ಎಂಬ ತಲೆಬರಹದಡಿಯಲ್ಲಿ ಅಷ್ಟಾವರಣ ವಿವರಣೆ ನೀಡಿದ್ದಾರೆ.

“ಅಷ್ಟಾವರಣವೆ ಅಂಗ, ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮ’ ಎಂಬುದು ವೀರಶೈವಾನುಭವಿಗಳ ನುಡಿ.ಅಂಗಸ್ವರೂಪವಾದ ಅಷ್ಟಾವರಣಗಳಿಗೆ ಪ್ರಾಣಸ್ವರೂಪವಾದ ಪಂಚಾಚಾರಗಳು ಮುಖ್ಯ. ಅವುಗಳಿಗಿರುವ ಅವಿನಾಭಾವ ಸಂಬಂಧವನ್ನರಿತ ಮೈಲಾರ ಬಸವಲಿಂಗ ಶರಣರು ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರಗಳ ನಿಲುವನ್ನು ೨ ಪದ್ಯಗಳಲ್ಲಿ ಹುದುಗಿಸಿದ್ದಾರೆ. ಆದರೆ ಒಂದು ಪದ್ಯದಲ್ಲಿ ಪಂಚಾಚಾರಗಳ ಜೊತೆ “ಧರ್ಮಾಚಾರ ಸೇರಿಸಿ ವೀರಶೈವಾಚರಣೆಯ ಕೇಂದ್ರಬಿಂದುವನ್ನು ಧರ್ಮಾಚಾರ ಎಂಬ ಆಚಾರದಲ್ಲಿ ವಿವರ ನೀಡಿದುದು ಅವರಿಗಿರುವ ವಿಶೇಷತೆಯೂ ಆಗಿದೆ. ಅದು   ಹೀಗಿದೆ:

ಗುರುಭಕ್ತಿ ಲಿಂಗಪೂಜೆಯು ಜಂಗಮ ದಾಸೋಹ

ತೀರ್ಥ ಸೇವನೆ ಪ್ರಸಾದ ಭೋಗ

ನಿರುಪಮಖಂಡ ಭಕ್ತಿಯನುಳ್ಳ ಭಕ್ತಿಗೆ

ಹರಣ ಕಿರಣವಾಗೊಪ್ಪುವುದೆ ಧರ್ಮಾಚಾರʼʼ

“ಪಂಚಾಚಾರ ಸುಮಾರ್ಗದೊಳು” ಎಂಬ ಪದ್ಯದಲ್ಲಿ ೫ ಆಚಾರ ಲಿಂಗಸಂಬಂಧಗಳೊಂದಿಗೆ ವಿವರಿಸಿ ಪರಿಶುದ್ಧ ಆಚರಣೆಯಿಂದಾಗುವ ಶರಣ ಬದುಕನ್ನು ಕಾಯಕ ದಾಸೋಹ, ನಿರಹಂಕಾರ, ಕಿಂಕರತ್ವ, ವ್ಯಷ್ಟಿ- ಸಮುಷ್ಟಿಗಳ ನಿಲುವನ್ನು

ಪ್ರದರ್ಶಿಸಿ ಮಾರ್ಗ ತೋರಿಸಿದ್ದಾರೆ.

೪. ಷಟ್ ಸ್ಥಲಗಳು: ಧರ್ಮ-ನೀತಿ-ತತ್ತ್ವಗಳ ಪ್ರತಿನಿಧಿಗಳಾದ ಅಂಗ, ಪ್ರಾಣ, ಆತ್ಮ ಸ್ವರೂಪಗಳಾದ ಅಷ್ಟಾವರಣ-ಪಂಚಾಚಾರ-ಷಟ್‌ಸ್ಥಲಗಳು ವೀರಶೈವ ಸಿದ್ಧಾಂತದ ಕೇಂದ್ರಬಿಂದುಗಳು. ಇವುಗಳಲ್ಲಿ ಷಟ್‌ಸ್ಥಲಗಳ ಭಾಗ ಒಂದು. ವೀರಶೈವ ಸಿದ್ಧಾಂತವಾದ “ಷಟ್‌ಸ್ಥಲ ಸಿದ್ಧಾಂತ” ವನ್ನು ಶಿವಯೋಗದ ಮೂಲಕ ಹೇಗೆ ಸಾಧನಾಕ್ರಮ ಕೈಗೊಳ್ಳಬೇಕೆಂದು ಪ್ರತಿಪಾದಿಸಿದ್ದಾರೆ. ಸಾಧಕ ಅಷ್ಟಾವರಣವನ್ನು ಅಂಗವಾಗಿಸಿ, ಪಂಚಾಚಾರವನ್ನೇ ಪ್ರಾಣವಾಗಿಸಿ, ಷಟ್‌ಸ್ಥಲವನ್ನೇ ಆತ್ಮವಾಗಿಸಿ ನಡೆವುದು ಮುಖ್ಯ. ಚಕ್ರದಳ-ಮುಖಲಿಂಗ-ಪ್ರಸಾದ-ಜಪಾಂತರ್ಗತ ಷಟ್‌ಸ್ಥಲವನ್ನು ತತ್ತ್ವ ಹಾಗೂ ಛಂದಸ್ಸಿನ ಅವಿನಾಭಾವದಿಂದ ಪರಿವರ್ಧಿನಿ ಷಟ್ಪದಿಯಲ್ಲಿ ರಚನೆಗೊಂಡ “ಸಾಲು ಚಕ್ರದಳ ಕುಳದ ಸುಹಂಸನ” ಎಂಬುದು “ಷಟ್‌ಚಕ್ರ ಪರಾಗ ಪರಿವರ್ಧಿನಿ” ಅಥವಾ ‘ಷಟ್ ಸ್ಥಲ ನಿರ್ಣಯ ಪದ” ಎಂಬ ಅಭಿದಾನದಿಂದ ಸೂಚಿಸಿದುದು ಶರಣರ ಆಧ್ಯಾತ್ಮವಿದ್ಯೆಯ

ಚಮತ್ಕಾರಕ್ಕೆ ನಿದರ್ಶನ.

ವೀರಶೈವ ಸಿದ್ಧಾಂತವನ್ನು ಶಿವಶರಣರು ʼಷಟ್‌ಸ್ಥಲ ನಿರಾಭಾರಿ ವೀರಶೈವʼʼ ಎಂದು ಕರೆದಂತೆ ಇವರುʼʼ ಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತʼʼದ ಮೂಲಭೂತ ತತ್ತ್ವಗಳನ್ನು ಚಿಕ್ಕ ಚಿಕ್ಕ ಪದ್ಯಗಳಲ್ಲಿ ರಚಿಸಿದ್ದಾರೆ. ಎರಡು ಕೃತಿಗಳನ್ನೂ ಮೀಸಲಾಗಿರಿಸಿ ವೀರಶೈವ ವೆಂದರೇನು ? ಶಿವನಾರು ಜೀವನಾರು ? ಅವನ ಕೊನೆಯ ನಿಲುವೇನು ? ಎಂಬಂಥ ಮೂಲಭೂತ – ಪ್ರಶ್ನೆಗಳನ್ನೊಡ್ಡಿ ಅರ್ಥೈಸುತ್ತ ಹೋದುದು “ವೀರಶೈವ ದ ಸ್ಪಷ್ಟ ಹೆಜ್ಜೆಗಳನ್ನು ನಿಚ್ಚಳವಾಗಿ ಶೈವ ಮಿಶ್ರಮಾಡದೆ ನಿರೂಪಿಸುತ್ತಾರೆ. ʼʼಖಚಿತತೆ ಸಂಕ್ಷಿಪ್ತತೆ-ಸ್ಪಷ್ಟತೆʼʼ ಇವರ ಕೃತಿಗಳ ಒಟ್ಟು ಸಾರವಾಗಿದೆ. ವಿಜ್ಞಾನ ಧೋರಣೆಯ ಬುದ್ಧಿ ಇವರಿಗಿರುವುದು ಇವರ ಕೃತಿಗಳ ಅವಲೋಕನದಿಂದ ಸಾಧ್ಯವಾಗುತ್ತದೆ.

ವೀರಶೈವದಲ್ಲಿ ತುಂಬಾ ಪ್ರಚುರತೆ ಪಡೆದ ಮೈಲಾರ ಬಸವಲಿಂಗ ಶರಣರ ಕೃತಿಗಳು ಶಿವಾನುಭವ ಬೋಧಕ ಪಠ್ಯಗಳಂತೆ, ಕೀರ್ತನೆಕಾರರಿಗೆ ಮಂಗಲಪದ್ಯಗಳಂತೆ ಪಾರಾಯಣ, ಮಾಡುವವರಿಗೆ ಕೈಪಿಡಿಗಳಂತೆ ಉಪಯುಕ್ತವಾಗಿದೆ. ಮಠಗಳಲ್ಲಿ ಪ್ರಾರ್ಥನಾಗೀತೆಗಳಾಗಿ, ಭಜನೆಪದಗಳಾಗಿ, ವೀರಶೈವದ ಖಚಿತ ವಿವರ ನೀಡುವ ವಿದ್ವಾಂಸರಿಗೆ ಉಲ್ಲೇಖನೀಯ ಪದ್ಯಗಳಾಗಿ ನಿಂತಿರುವುದು ಅವರ ಕೃತಿಗಳಿಗಿರುವ ನೆಲೆ-ಬೆಲೆಯನ್ನು ಅವರಿಗಿರುವ ಸ್ಥಾನವನ್ನು ಸೂಚಿಸುವಂತಿವೆ. ಒಟ್ಟು ಶರಣ ಸಾಹಿತ್ಯ

ಮುಂದೆ ರಚಿತವಾದ ಸರ್ವಮತಧರ್ಮದವರ ಮೇಲೆ, ಸಾಹಿತ್ಯದ ಮೇಲೆಪ್ರಭಾವ ಬೀರಿದ್ದನ್ನು ಮರೆಯುವಂತಿಲ್ಲ.

.- ಶ್ರೀ ನಿರಂಜನ ಪ್ರಭು ಡಾ.ಚೆನ್ನಮಲ್ಲ ಮಹಾಸ್ವಾಮಿಗಳು ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ

ಭಾರತ ಅನ್ನುವುದು ಕೇವಲ ಒಂದು ಹೆಸರಲ್ಲ, ಅದು ಕೇವಲ ಒಂದು ದೇಶ ಮಾತ್ರವಲ್ಲ, ಅದೊಂದು ಸಂಸ್ಕೃತಿ, ಸತ್ಯದ ಪ್ರತೀಕವಾಗಿ, ತ್ಯಾಗಕ್ಕೆ ಪೂರಕವಾಗಿ, ಅಹಿಂಸೆಯ ಮುಖವಾಗಿ, ಆಧ್ಯಾತ್ಮದ ನೆಲೆಯಾಗಿ ಸನಾತನ ಸತ್ಯದ ಮೌಲ್ಯಗಳನ್ನು ಒಳಗೊಂಡು, ಜೀವನ ಸಿದ್ಧಾಂತವನ್ನು ತಿಳಿಸುವುದೇ ಭಾರತ.

ಭಾರತವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಭಾರತದ ಅಂತರಾತ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿನ ಆಧ್ಯಾತ್ಮವನ್ನು, ಭಾರತದಲ್ಲಿನ ಸಂಸ್ಕೃತಿಯನ್ನು, ಭಾರತದ ಜೀವನ ಮೌಲ್ಯಗಳನ್ನು ಹಾಗೂ ಭಾರತದ ಆದರ್ಶ ಇತಿಹಾಸವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಭಾರತದ ಪರಿಚಯ ನಮಗಾಗುತ್ತದೆ. ಭಾರತವೆಂದರೆ ಕೇವಲ ಭವ್ಯವಾದ ದೇವಾಲಯಗಳು, ಹಿಮಾಲಯ, ಗೌರಿಶಂಕರ ಶಿಖರ, ತಾಜ್ ಮಹಲ್, ಕೆಂಪುಕೋಟೆ, ಕಾಶಿ, ರಾಮೇಶ್ವರ, ಶ್ರೀಶೈಲ, ಗಂಗಾ ನದಿ ಇವು ನಿಜವಾದ ಭಾರತವಲ್ಲ. ನಿಜವಾಗಿಯು ಭಾರತ ಅರ್ಥವಾಗುವುದು ಇಲ್ಲಿರುವ ಸನಾತನವಾಗಿ ಉಳಿದು, ನಡೆದುಕೊಂಡು ಬಂದಿರುವ “ವಸುಧೈವ ಕುಟುಂಬಕಂʼʼ ಎಂಬ ಉದಾತ್ತವಾದ, ವಿಶಾಲವಾದ ಸಿದ್ಧಾಂತದಿಂದಾಗಿ ಎಂದರೆ ತಪ್ಪಾಗಲಾರದು. ʼʼತಿರಕೊಂಡ ತಂದು ಕರಕೊಂಡು ಉಣಬೇಕು” ಎಂಬ ಸಂಸ್ಕೃತಿಯಿಂದಾಗಿ ನಮ್ಮ ಭಾರತವನ್ನು ಪೂಜಿಸಲಾಗುತ್ತಿದೆ. ಇಲ್ಲಿರುವ ಮಾನವೀಯ

ಮೌಲ್ಯಗಳ ಪಾಲನೆಯಿಂದಾಗಿ ಹಾಗೂ ತಾನು ಯಾರು? ಎಂಬುದನ್ನು ತಿಳಿದುಕೊಳ್ಳುವ ಕಲೆಯನ್ನು ತಿಳಿಸಿಕೊಡುವುದೆ ಭಾರತ.

ಧರ್ಮ-ಆಧ್ಯಾತ್ಮದ ತಾಯೊಡಲು

 ಯೋಗ-ಶಿವಯೋಗದ ಮೇಲೊಡಲು

 ತತ್ತ್ವ-ಸಿದ್ಧಾಂತಗಳ ಹಾಲ್ಗಡಲು

ಸಂತ-ಶರಣರ ಸಿರಿಗಡಲು

 ಜಗಕೆ ಜಗದ್ಗುರುವಾದ ಪುಣ್ಯಭೂಮಿ

ಚೆನ್ನನ ಅಭಿಮಾನ, ಸ್ವಾಭಿಮಾನದ ಭರತಭೂಮಿ

ಭಾರತ ಆಧ್ಯಾತ್ಮದ ನೆಲೆವೀಡು. ಇಲ್ಲಿ ಅನೇಕ ಧರ್ಮಗಳು ಸಹಬಾಳ್ವೆಯಿಂದ ಇವೆ. ‘ಅನೇಕತೆಯಲ್ಲಿ ಏಕತೆ’ ಎಂಬುದು ಭಾರತದ ಹೆಮ್ಮೆಯಾಗಿದೆ. ಧರ್ಮ ಮತ್ತು ಆಧ್ಯಾತ್ಮ ಭಾರತದ ನಿಜವಾದ ಮೂಲ ಸತ್ವವಾಗಿದೆ. ಭಾರತದಲ್ಲಿ ಹುಟ್ಟಿರುವ ಸಂತರು, ಮಹಾಂತರು, ಮಹಾಪುರುಷರು, ಋಷಿಗಳು ಈ ಭೂಮಂಡಲದ ಬೇರೆ ಯಾವ ಪ್ರದೇಶದಲ್ಲ ಅವತರಿಸಿರುವುದಿಲ್ಲ. ಇಲ್ಲಿ ಕೃಷ್ಣ-ರಾಮ, ಬುದ್ಧ-ಬಸವ, ನಾನಕ-ಮಹಾವೀರ- ವಿವೇಕಾನಂದರಂತಹ ಅನೇಕ ವಿಭೂತಿ ಪುರುಷರು ಅವತರಿಸಿದ್ದಾರೆ. ಅದಕ್ಕಾಗಿಯೇ  ಇದನ್ನು ಎಲ್ಲರೂ ‘ಭಾರತ ಮಾತೆ’ ಎಂದು ಗೌರವಿಸುತ್ತಾರೆ. ವಿವೇಕಾನಂದರು ವಿದೇಶ ಪ್ರವಾಸವನ್ನು ಮುಗಿಸಿ ಭಾರತದ ನೆಲದಲ್ಲಿ ಕಾಲಿಡುವ ಮೊದಲು ಈ ತಾಯ್ ನೆಲವನ್ನು ಹಣೆ ಹಚ್ಚಿ ನಮಸ್ಕರಿಸುತ್ತಾರೆ. ಇದೊಂದು ಘಟನೆ ಸಾಕು ಭಾರತ ಪವಿತ್ರ ಭೂಮಿ ಎಂದು ತಿಳಿಯಲು. ಈ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಭಾರತವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು.