• ಡಾ. ಬಸವರಾಜ ಪುರಾಣಿಕ

 

 

೧೯ನೇ ಶತಮಾನದ ಉತ್ತರಾರ್ಧದಲ್ಲಿ ಭಾರತವು ಪುನಶ್ಚೇತನಗೊಳ್ಳುವ ಪ್ರಕ್ರಿಯೆಯಲ್ಲಿತ್ತು ಪರಕೀಯರ ಶತಮಾನಗಳ ದಾಸ್ಯದ ದಾಳಕ್ಕೆ ಸಿಕ್ಕು ದೇಶ ನರಳುತ್ತಿತ್ತು. ಆಳರಸರ ಅಡಿಯಾಳಾಗಿ ಮೈಮನಗಳನ್ನು ಕುಗ್ಗಿಸಿ, ಬಗ್ಗಿಸಿ, ತಗ್ಗಿಸಿ ಅವರು ಎಸೆಯುತ್ತಿದ್ದ ಹಿಡಿಯಷ್ಟು ಹಣಕ್ಕೆ ಜೊಲ್ಲು ಸುರಿಸುತ್ತ ಬಾಲ ಆಡಿಸುತ್ತಿದ್ದ ನಡೆವೆಣಗಳು, ನುಡಿವೆಣಗಳು, ಬೀಳುವೆಣಗಳು ಹಾಗೂ ಬಾಳುವೆಣ”ಗಳಿಗೆ ನಡೆ ಕಲಿಸಬೇಕು ನುಡಿ ಕಲಿಸಬೇಕು, ಬೀಳದಂತೆ ಆಸರೆ ನೀಡಬೇಕು ಎಂಬ ಹಂಬಲವಿದ್ದವರಿಗೆ ಬಲವಿರಲಿಲ್ಲ, ಬೆಂಬಲವಿರಲಿಲ್ಲ. ಬಲವಿದ್ದವರಿಗೆ ತನ್ನ ಕುಲ ಉದ್ಧಾರವಾದರಾಯಿತು, ಈ ನೆಲ, ಈ ಜಲ ಯಾರದಾದರು ಏನು ? ಎಂಬ ಲಜ್ಜಹೀನತೆ ಇತ್ತು. ತಮ್ಮ ಅಸಹಾಯಕತೆಯನ್ನು, ಅಸಮರ್ಥತೆಯನ್ನು ದೈವದತ್ತವೆಂದು ಹೊಣೆಯನ್ನು ಹಾರಿಸಿಕೊಂಡು ಹರಣ ಕಳೆದುಕೊಳ್ಳುತ್ತಿದ್ದವರಿಗೆ ಕೆಲವು ಮಹಾಚೈತನ್ಯಗಳು ಹುಟ್ಟಿಬಂದು ಅವರನ್ನು ಕತ್ತಲೆಯಿಂದ ಬೆಳಕಿನತ್ತ ಕರೆದೊಯ್ಯುವ ಕೆಲಸ ಮಾಡಿದರು.

 

ರಾಜಾರಾಮಮೋಹನ ರಾಯ U.N.O. ಹುಟ್ಟುವದಕ್ಕೆ ನೂರಕ್ಕಿಂತ ಹೆಚ್ಚು ವರ್ಷ ಮೊದಲೇ ಭವಿಷ್ಯದ ಸಾಂಸ್ಕೃತಿಕ ಸಂಯೋಜನೆ ಹಾಗೂ ರಾಷ್ಟ್ರ ಸೌಹಾರ್ದದ ಮೂಲಕ ಅಂತರ್‌ರಾಷ್ಟ್ರೀಯ ಸೌಹಾರ್ದ ಮೊದಲಾದವುಗಳನ್ನು ನಿರ್ದಿಷ್ಟ ರೂಪದಲ್ಲಿ ಆಲೋಚಿಸಿದ್ದರು. ಶ್ರೀ ಅರವಿಂದರ ಶಬ್ದಗಳಲ್ಲಿ ‘ಬೆಳಕಿನ ಸೈನಿಕ’ರಾಗಿದ್ದ ಸ್ವಾಮಿ ದಯಾನಂದರು ವೇದಗಳ ಸನಾತನ ತತ್ತ್ವಗಳ ಮೇಲೆ ಪುನರ್ನಿರ್ಮಿರಸಿದ ಜಗತ್ತನ್ನು ಕಂಡರು. ರಾಮಕೃಷ್ಣ ಪರಮಹಂಸ ಅವರು ದೇವರನ್ನು ತಾಯಿಯಾಗಿ ಕಂಡರು ಹಾಗೂ ಆಕೆಯ ಬೆಳಕನ್ನು ಮನುಷ್ಯನಲ್ಲಿ ಕಂಡರು, ತಾಯಿಯ ದೀಪ್ತ ವಿಶ್ವದಲ್ಲಿ ಮಾನವತೆಯ ಹಾಗೂ ಎಲ್ಲ ಧರ್ಮಗಳ ಏಕತೆಯನ್ನು ಕಂಡರು. ಈ ವಿಶಿಷ್ಟ ದರ್ಶನವನ್ನು ವೇದಾಂತದ ಪರಿಭಾಷೆಯಲ್ಲಿ ಜಗತ್ತಿಗೆ ಸಾರಿದರು. ದೇವಾಂಶಭೂತರಾದ ಜಾಗ್ರತಿಕರ್ತೃ ಸ್ವಾಮಿವಿವೇಕಾನಂದರು ಸರಕುಗಳ ವಿನಿಮಯಕ್ಕೆಂದು ಭಾರತಕ್ಕೆ ಬಂದಿದ್ದ ಇಂಗ್ಲಿಷರು ಕೊನೆಗೆ ಭಾರತವನ್ನೇ ಆಳತೊಡಗಿದಾಗ ವಿಚಾರಗಳ ವಿನಿಮಯವನ್ನು ಪ್ರಾರಂಭಿಸಿದರು ಸ್ಕೂಲು, ಕಾಲೇಜು, ವಿಶ್ವವಿದ್ಯಾಲಯಗಳ ಮೂಲಕ, ಆ ಪಾಶ್ಚಾತ್ಯ ವಿಚಾರಗಳ ವಿನಿಮಯದ ಲಾಭ ಪಡೆದ ಕೆಲ ಸುಸಂಸ್ಕೃತರು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿದರು. ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸತೊಡಗಿದರು. ಅವರು ಹುಟ್ಟು ಹಾಕಿದ ಶಿಕ್ಷಣ ಸಂಸ್ಥೆಗಳಲ್ಲಿ ದಿ ಹಿಂದೂ ಕಾಲೇಜು ಉಲ್ಲೇಖನೀಯ. ಅದು “ಬೌದ್ಧಿಕ ಕ್ರಾಂತಿಯ ಕೇಂದ್ರ, ಶಿಕ್ಷಣ, ಸಂಸ್ಕೃತಿ, ಸಮಾಜ ಹಾಗೂ ರಾಜಕೀಯಗಳ ಪರಿವರ್ತನೆಗಾಗಿ ಹೊಸ ವಿಚಾರಗಳ ಉಗಮ ಹಾಗೂ ಹಂಚಿಕೆಗಳ ಪೋಷಣ ಮಂದಿರ’ವಾಗಿತ್ತು. ರಾಜಕೀಯ ಕ್ಷೇತ್ರದಲ್ಲಿ ಭಾರತೀಯರ ಪ್ರವೇಶ, ಅವರ ಹೋರಾಟ ಹಾಗೂ ಸಾಧನೆ ಹಲವು ದಿಕ್ಕುಗಳಲ್ಲಿ ನಡದೇ ಇತ್ತು. ಇದೇ ಪ್ರಕಾರದ ಚಟುವಟಿಕೆಗಳು ದೇಶದ ಇತರ ಪ್ರದೇಶಗಳಲ್ಲಿ ನೆಲೆಯೂರಿ, ಕೆಲವು ಕಡೆಗೆ ಹೆಚ್ಚು ಫಲಪ್ರದವಾಗಿ ಬೆಳೆಯತೊಡಗಿದವು. ಕಸವು ಕಳೆದುಕೊಂಡಿದ್ದ ಜನಕ್ಕೆ ಒಂದಿಷ್ಟು ಮುನ್ನುಗ್ಗಲು ಒಂದಿಷ್ಟು ಮುಂದುವರಿಯಲು ಅಸುವನ್ನು

ನೀಡುವ ಕೆಲಸವನ್ನು ತುಸು ಜನರೇ ಮಾಡಿದರೂ ಒಂದು ಪುನರೋದಯವಾಗತೊಡಗಿತು. ರಾಷ್ಟ್ರ

ಪುನಶ್ವೇತನ ಪಡೆಯುವ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇಡತೊಡಗಿತು.

 

ದೇಶ ಪುನಶ್ಚೇತನಗೊಳ್ಳುವ ಕಾಲದಲ್ಲಿ ೧೮೫೬-೧೮೭೨ – ಈ ೧೬ ವರ್ಷದ ಅವಧಿಯು ಆಶ್ಚರ್ಯಕರ ವಿಷಯವನ್ನು ಬೆಳಕಿಗೆ ತರುತ್ತದೆ. ಶ್ರೀ ಅರವಿಂದರ ಅಧಿಕೃತ ಜೀವನ ಚರಿತ್ರೆಕಾರರಾದ ಶಿಶಿರಕುಮಾರ ಮಿತ್ರಾ ಒಂದು ಪುಸ್ತಕ ಬರೆದಿದ್ದಾರೆ. ಅದು Resurgent India, ಅದರಲ್ಲಿ ಈ ೧೬ ವರ್ಷದ ಅವಧಿಯಲ್ಲಿ ೩೬ ಮಹಾನ್ ವ್ಯಕ್ತಿಗಳು ಜನಿಸಿರುವರು. ಅವರು ಕವಿಗಳು, ಕಲಾವಿದರು ಅನುಭಾವಿಗಳು, ದ್ರಷ್ಟಾರರು, ವಿಜ್ಞಾನಿಗಳು, ಇತಿಹಾಸಕಾರರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಇರುವರು. ಅವರ ವಿಸ್ಮಯಕಾರಿ ಸಾಧನೆಗಳು ಮಾನವ ಸಂಸ್ಕೃತಿಯನ್ನು ಅಳೆಯಲಸಾಧ್ಯ ರೀತಿಯಲ್ಲಿ ಶ್ರೀಮಂತಗೊಳಿಸಿದೆ, ಭಾರತದ ಆದರ್ಶವನ್ನು ಪುನರ್ಧೃಢೀಕರಿಸಿದರು ಹಾಗೂ ಆದರ್ಶವನ್ನು ಸಾಕಾರಗೊಳ್ಳುವ ಮಾರ್ಗವನ್ನು ತೋರಿಸಿದರು. ಅವರಿಗೆ ಮೊದಲು ಆಧುನಿಕ ಕಾಲದಲ್ಲಿ ಪುನಶ್ಚೇತನಗೊಳಿಸುವುದನ್ನು ಆರಂಭಿಸಿದ ಪ್ರವರ್ತಕರಾಗಿದ್ದರು. ಆ ೩೬ ಮಹನೀಯರಲ್ಲಿ ಕೆಲವು ಜಗಜ್ಜನಿತ ಹೆಸರುಗಳು ಇಂತಿವೆ. ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕ, ಜಗದೀಶಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ, ಲಾಲಾ ಲಜಪತರಾಯ್, ಮೋಹನದಾಸ ಕರಮಚಂದ ಗಾಂಧಿ, ಜಾದೂನಾಥ ಸರ್ಕಾರ, ಅಭಿನೀಂದ್ರನಾಥ ಟ್ಯಾಗೋರ ಹಾಗೂ ಶ್ರೀ ಅರವಿಂದರು.

 

ಮೇಲಿನ ಅತ್ಯಂತ ಸೃಜನಶೀಲ ಅವಧಿ (೧೮೫೬-೧೮೭೨) ಯಲ್ಲಿಯೇ ಕ್ರಿ. ಶ. ೧೮೬೭ರಲ್ಲಿ ಕನ್ನಡ ನಾಡಿನಲ್ಲಿ ಜನಿಸಿದ ವೀರಸನ್ಯಾಸಿಯೊಬ್ಬ, ಮೇಲೆ ಉಲ್ಲೇಖಿತರಾದವರಷ್ಟು ಜಗಜ್ಜನಿತನಾಗಿರದಿದ್ದರೂ ಕರ್ನಾಟಕದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಮೂಡಿಸಿದ ಜಾಗ್ರತಿ, ಹೂಡಿದ ಯೋಜನೆ, ಸಾಧಿಸಿದ ಪ್ರಯೋಜನ ಹಾಗೂ ಸಿದ್ಧಿಸಿದ ಫಲಶೃತಿಯು ಬೆರಗುಗೊಳಿಸುವಂಥವು, ಹೆಮ್ಮೆಪಡುವಂಥವು ಹಾಗೂ ಯಾವ ಕಾಲಕ್ಕೂ ಪ್ರೋತ್ಸಾಹಕ, ಪ್ರಚೋದಕ ಹಾಗೂ ಮಾರ್ಗದರ್ಶಕವಾಗಿವೆ.

ಈ ವೀರಸನ್ಯಾಸಿ ಹುಟ್ಟಿದ್ದು ಕರ್ನಾಟಕದ ಧಾರವಾಡ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ‘ಜೋಯಿಸರ ಹರಳಳ್ಳಿ’ ಎಂಬ ಗ್ರಾಮದಲ್ಲಿ, ನೀಲಮ್ಮ ಮತ್ತು ಬಸವಯ್ಯ ಆತನ ತಾಯಿ-ತಂದೆ. ಆತನ ಹೆಸರು ಹಾಲಯ್ಯ, ಗ್ರಾಮದ ಮಕ್ಕಳಿಗೆ ಶಾಲೆ ಕಲಿಸುವ ಕಾಯಕದಿಂದಾಗಿ ‘ಸಾಲಿಮಠ’ ಎಂಬ ಅಡ್ಡ ಹೆಸರಿತ್ತು ಅವರಿಗೆ ಹಾಸಿದರೂ ಹೊದೆದರೂ ಇನ್ನೂ ಮಿಕ್ಕುತ್ತಿದ್ದ ಬಡತನದ ಬಾಳನ್ನು ಬದುಕುತ್ತಿದ್ದ ಆ ಸಂಸಾರ ಹಾಲಯ್ಯನಿಗೆ ಪರಂಪರೆಯ ಜೋಳಿಗೆಯು ಆಧಾರ ನೀಡಿತು. ಒಂದು ದಿನ ಅದೇ ಜೋಳಿಗೆ ಹಿಡಿದು ಭಿಕ್ಷೆಗೆ ಹೋದಾಗ, ಒಬ್ಬ ಯಜಮಾನ ಆತನ ಕಣ್ಣು ತೆರೆಯಿಸಿದ, ದುಡಿದು ಉಣ್ಣು ವಿದ್ಯೆ ಕಲಿತು ಮರ್ಯಾದೆಯಿಂದ ಬಾಳು. ಇಷ್ಟೇ ಸಾಕಾಯಿತು ಹಾಲಯ್ಯನಿಗೆ, ವಿದ್ಯೆಯ ದಾಹ ನೀಗಿಸಿಕೊಳ್ಳಲು ಅಲೆದದ್ದು ಯೋಗ್ಯ ಗುರುವನ್ನು ಹುಡುಕಿದ್ದು, ಸ್ವಭಾವತಃ ಬಂದಿದ್ದ ಅಧ್ಯಾತ್ಮದ ಒಲವು ತಣಿಸಲು ಸೂಕ್ತ ಅಧ್ಯಯನ ಮಾರ್ಗದರ್ಶನಕ್ಕಾಗಿ ಶೋಧಿಸಿದ್ದು, ಒಂದು ಹೋರಾಟವೇ ಆಯಿತು. ಕುಶಾಗ್ರಮತಿಯೆಂದು ಹೆಸರು ಪಡೆದಿದ್ದ. ‘ಮುಲ್ಕಿ’ ಪರೀಕ್ಷೆ ಪಾಸಾಗಲಿಲ್ಲ. ಎಲ್ಲರಿಗೂ ಮನಸ್ಸಿಗೆ ಆಘಾತವಾಯಿತು.

 

ʼʼನರಮಾನವರಿಗೊಮ್ಮೆ ಕರವೊಡ್ಡಿ ಬೇಡುವಾಚರಣೆಯನೆ ಉಳಿದು” ಹಾಲಯ್ಯ ಮಕ್ಕಳಿಗೆ ಪ್ರಾಥಮಿಕ ಶಾಲೆ ಆರಂಭಿಸಿದನು. ಮಗ ದುಡಿಯತೊಡಗಲು ತಾಯಿಗೆ ಮೊದಲು ಹೊಳೆಯುವುದು ಅವನ ಮದುವೆ. ಅದರಂತೆ ಮಗನ ಮನ ಒಲಿಸಲು ಬಂದ ತಾಯಿಗೆ ಇನ್ನೊಂದು ವರ್ಷದ ಬಳಿಕ ಬಾ ಎಂದು ಹೇಳಿ ಕಳಿಸಿದ. ತನ್ನ ಅಂತರಂಗದಲ್ಲಿ ಆಧ್ಯಾತ್ಮ ಬಹಿರಂಗದಲ್ಲಿ ಮಕ್ಕಳಿಗೆ ಅಧ್ಯಾಪನ ಮಾಡುತ್ತಲಿದ್ದ ಹಾಲಯ್ಯನಿಗೆ ತನ್ನ ಜೀವನದ ಗುರಿ ಸ್ಪಷ್ಟವಾಗತೊಡಗಿತು. ಸಮಾಜವನ್ನು ನುಂಗಿ ನೀರು ಕುಡಿಯುತ್ತಿರುವ ಬಡತನ-ಅವಿದ್ಯೆಗಳ ನಿವಾರಣೆ, ಆಸ್ತಿಕತೆಯಲ್ಲಿ ದೃಢ ವಿಶ್ವಾಸ ಕುದುರಿಸುವುದು, ಒಂದು ವರ್ಷದ ಬಳಿಕ ಬಂದ ತಾಯಿಯ ಕೈಗೆ, ತನ್ನ ಮೂರು ವರ್ಷದ ಗಳಿಕೆಯಾದ ಮುನ್ನೂರು ರೂಪಾಯಿಗಳನ್ನು ಇತ್ತನು.’ “ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಈ ಹಣವನ್ನೇ ಸ್ವೀಕರಿಸಿ ಸಂತೋಷಳಾಗು. ಇನ್ನು ಮುಂದೆ ನಮ್ಮ ಸ೦ಬಂಧ ಇರುವದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದನು.

 

ಮೇಲೆ ಉಲ್ಲೇಖಿಸಿದ ಮೂರು ಪ್ರಸಂಗಗಳು ಹಾಲಯ್ಯನ ಜೀವನದ ದೃಷ್ಟಿಕೋನಕ್ಕೆ ತಿರುವು ನೀಡಿದವು. ಧಾರ್ಮಿಕ ರಂಗದಲ್ಲಿ ಭಿಕ್ಷೆಗೆ ಎಂತಹದೇ ಗೌರವವಿರಲಿ, ಯಾಚನೆ ಎಂದೂ ಸಲ್ಲದು. ತನ್ನ ಆತ್ಮಗೌರವವನ್ನೇ ಬಲಿ ತೆಗೆದುಕೊಳ್ಳುವ ಈ ವೃತ್ತಿ ಸಾಕು. ಕುಶಾಗ್ರಮತಿಯೆಂದು ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದರೂ ಧಾರವಾಡದವರೆಗೆ ಕಾಲ್ನಡಿಗೆಯಿಂದ ಹೋಗಿ ತನ್ನ ಶಕ್ತ್ಯಾನುಸಾರ ಮುಲ್ಕಿ ಪರೀಕ್ಷೆ ಬರೆದು ಬಂದರೂ ತಾನು ನಪಾಸಾದದ್ದು ಹಾಲಯ್ಯನ ಜೀವನದಲ್ಲಿ ಇನ್ನೊಂದು ತಿರುವು. ಬಂದದ್ದನ್ನು ಯಾವುದೇ ವಿಶ್ಲೇಷಣೆಯಿಲ್ಲದೆ ಸ್ವೀಕರಿಸಿ ತನ್ನ ದಾರಿ ತಾನು ಹುಡುಕಿಕೊಳ್ಳುವುದು. ಲೌಕಿಕ ಜೀವನದತ್ತ ಎಳೆದು ಒಯ್ಯಬಹುದಾಗಿದ್ದ ಮುಲ್ಕಿ ಪರೀಕ್ಷೆಯ ಯಶಸ್ಸು ತನಗೆ ತಪ್ಪಿದಾಗ ಆತ ತನ್ನ ಜ್ಞಾನದಾಹಕ್ಕೆ ಹೊಸ ತಿರುವು ನೀಡಿ ಲೋಕ ಶಿಕ್ಷಕನಾದ. ಜನ್ಮದೊಂದಿಗೆ ಅಂಟಿಕೊಂಡು ಬರುವ ತಾಯಿ-ತಂದೆಯರ ಋಣವು ಅದೆ೦ದೂ ತೀರಿಸಲು ಸಾಧ್ಯವಿಲ್ಲದ್ದು, ಅದು ಸಂಕೋಲೆಯಾದೀತೆಂದು, ವ್ಯಾವಹಾರಿಕವಾಗಿ ಆದರೆ ಅಷ್ಟೇ ಭಾವನಾತ್ಮಕವಾಗಿ ತನ್ನ ತಾಯಿಗೆ ತಿಳಿ ಹೇಳಿ ಸಂಸಾರದ ಬಂಧನದಿಂದ ಹೊರಬಂದ ಹಾಲಯ್ಯನ

ಆತ್ಮಸ್ಥೆರ್ಯ ಅಪೂರ್ವ. ಈ ಮೂರು ಗುಣಗಳೇ ಮುಂದೆ ಹಾಲಯ್ಯನ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ನೀರನ್ನು ಎರೆದೆವು.

 

ಹಾಲಯ್ಯ ಒಂದು ದೃಷ್ಟಿಯಿಂದ ಪುಣ್ಯವಂತ, ಸಾಧಕ ಅವಸ್ಥೆಯಲ್ಲಿಯೇ ಅವರಿಗೆ ಮೂವರು ಪುಣ್ಯ ಪುರುಷರ ನೇರ ಸಂಪರ್ಕ ಬಂದಿತು. ಶ್ರೀ ಸಿದ್ಧಾರೂಢರು, ಎಮ್ಮಿಗನೂರು ಜಡೆಯಸಿದ್ದರು ಹಾಗೂ ಎಳಂದೂರು ಬಸವಲಿಂಗ ಮಹಾಸ್ವಾಮಿಗಳು, ಒಬ್ಬೊಬ್ಬರ ಸಂಗದಿಂದ ಒಂದು ಮಾರ್ಗವನ್ನು ಅರಿತು ತಮ್ಮ ಮನೋಭಾವಕ್ಕೆ ತಕ್ಕುದಾದ ದಾರಿಯಲ್ಲಿ ಮುಂದುವರಿಯುತ್ತಿದ್ದಾಗಲೂ ಸಮಾಜದ ನಿರ್ಜಿವತೆ ಅವರ ಮನವನ್ನು ಕಲುಕುತ್ತಿತ್ತು. ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುತ್ತ ಬೆಳೆಯುತ್ತಿರುವಾಗ ಹಾನಗಲ್ಲ ವಿರಕ್ತಮಠದ ಅಧಿಕಾರ ವಹಿಸಿಕೊಳ್ಳಲು ಆಗ್ರಹದ ಮೇಲೆ ಆಗ್ರಹಗಳ ಮಹಾಪೂರವೇ ಬಂದಿತು. ಒಲ್ಲೆ ಒಲ್ಲೆ ಎಂದು ನಿರಾಕರಿಸಿದರೂ ಕೊನೆಗೆ ಎಲ್ಲರ ಆಗ್ರಹಕ್ಕೆ ತಲೆಬಾಗಿ ಹಾನಗಲ್ಲ ವಿರಕ್ತಮಠದ ಚರಪಟ್ಟಾಧಿಕಾರವನ್ನು ವಹಿಸಿಕೊಳ್ಳಬೇಕಾಯಿತು. ಇಲ್ಲೂ ಶ್ರೀಗಳು ಭಾಗ್ಯವಂತರು. ಪೂಜ್ಯ ಬೀದರಿ ಕುಮಾರಸ್ವಾಮಿಗಳ ಘನ ಆಶೀರ್ವಾದದೊಂದಿಗೆ ಶ್ರೀ ಸದಾಶಿವ ಸ್ವಾಮಿಗಳೆಂಬ ನೂತನ ಅಭಿದಾನ ಪಡೆದರೂ ಸಹ ಶ್ರೀ ಕುಮಾರಸ್ವಾಮಿಗಳೆಂದೇ ಪ್ರಸಿದ್ಧರಾದರು. ಹಾಲಯ್ಯ ಶ್ರೀ ಕುಮಾರಸ್ವಾಮಿಗಳಾಗಿ ಜನರಿಗೆ ಲಭಿಸಿದರು.

 

ಶ್ರೀ ಮಠವು ವೈಭವಪೂರ್ಣವಾಗಿದ್ದರೂ ಶ್ರೀಗಳ ಮನಸ್ಸು ಸುಖಕ್ಕೆ ಎಳಸಲಿಲ್ಲ. ಭಕ್ತರು ಶ್ರೀ ಮಠಕ್ಕೆ ಅರ್ಪಿಸಿದ ಸೊತ್ತನ್ನು ಜನಹಿತ ಕಾರ್ಯಕ್ಕೆ ಬಳಸಿದರು. ಭಕ್ತರ ಮನಗೆದ್ದರು. ಹಳ್ಳಿಹಳ್ಳಿಗೆ ಸಂಚರಿಸಿ ನಿಜಜಂಗಮತ್ವದಲ್ಲಿ ಮೆರೆದರು. ಹಿಂದಿನ ಗುರುಗಳು ಸಂಗ್ರಹಿಸಿಟ್ಟಿದ್ದ ೮೦೦ ಚೀಲ ಭತ್ತವನ್ನು ಮೂರುಸಾವಿರ ಬೆಳ್ಳಿ ರೂಪಾಯಿಗಳನ್ನು ಬರಗಾಲದಲ್ಲಿ ದಾಸೋಹಕ್ಕೆ ಎರೆದರು. ಬಡವರ ಸಂಕಷ್ಟವನ್ನು ನಿವಾರಿಸಿದರು. ಹರಡಿದ್ದ ರೋಗ ರುಜಿನಗಳನ್ನು ತಮ್ಮ ಆಯುರ್ವೇದದ ಜ್ಞಾನದಿಂದ ನಿವಾರಿಸಿದರು. ಜೊತೆ ಜೊತೆಯಾಗಿ ಧರ್ಮಬೋಧೆ ನಡೆಯುತ್ತಲೇ ಇತ್ತು. ನಿಜ ಅರ್ಥದಲ್ಲಿ ಧರ್ಮವನ್ನು ತಿಳಿದುಕೊಂಡು ಸ್ವತಃ ಆಚರಿಸಿ ಜನರಿಗೆ ಬೋಧಿಸುವವರ ಕೊರತೆ ಬಹಳ ಕಂಡುಬಂದಿತು. ಇದರಿಂದ ಜನರಲ್ಲಿ ಸರಿಯಾದ ಧರ್ಮಜ್ಞಾನ ಲಭಿಸದೆ, ಅವರು ದಾರಿತಪ್ಪಿದ್ದರು. ಅದನ್ನು ಹೋಗಲಾಡಿಸಲು ಧರ್ಮಬೋಧಕರನ್ನು ತರಬೇತುಗೊಳಿಸಲು ಸಂಸ್ಕೃತ ಪಾಠಶಾಲೆಗಳನ್ನು ಪ್ರಾರಂಭಿಸಿದರು. ಕನ್ನಡ ಹಾಗೂ ಸಂಸ್ಕೃತ ವ್ಯಾಸಂಗವೊಂದೆ ಸಾಲದು, ಲೌಕಿಕ ಶಿಕ್ಷಣವು ಬೇರೆ ಬೇಕು ಎಂಬುದನ್ನು ಮನಗಂಡು ವಿದ್ಯಾರ್ಥಿಗಳಿಗೆ ಅನುಕೂಲತೆ ಒದಗಿಸಿದರು. ಪ್ರಸಾದ ನಿಲಯಗಳನ್ನು ತೆರೆಯುವಂತೆ ಪ್ರೇರಣೆ ಕೊಟ್ಟರು.

 

ಹೀಗೆ ಸೀಮಿತ ಸಂಪನ್ಮೂಲಗಳಿಂದ ಸೀಮಿತ ಕ್ಷೇತ್ರದಲ್ಲಿ ಶ್ರೀಗಳ ಕಾರ್ಯಕ್ಷಮತೆ ಮೀಸಲಿದ್ದವರನ್ನು ಗಮನಿಸಿದ ಆ ಕಾಲದ ನ್ಯಾಯನಿಷ್ಠುರ, ದಾಕ್ಷಿಣ್ಯಪರವಲ್ಲದ ವೀರವಿರಾಗಿ ಬಾಗಿಲುಕೋಟೆಯ ವೈರಾಗ್ಯದ ಮಲ್ಲಣಾರ್ಯರು ಹಾನಗಲ್ಲಿಗೆ ಧಾವಿಸಿ ಬಂದರು. ಮಲ್ಲಣಾರ್ಯರು ತಮ್ಮ ವ್ಯಂಗ್ಯ ಹಾಗೂ ಚುಚ್ಚು ಮಾತುಗಳಿಂದ ಶ್ರೀಗಳಲ್ಲಿ ಅಡಗಿದ್ದ ಕರ್ತೃತ್ವ ಶಕ್ತಿಯನ್ನು ಎಚ್ಚರಿಸಿದರು. ಶ್ರೀಗಳು ಸಮಾಜದ ಉದ್ಧಾರಕ್ಕೆ ಧುಮ್ಮಿಕ್ಕಬೇಕು. ಆತ್ಮವಿಶ್ವಾಸದಿಂದ ಧೈರ್ಯದಿಂದ ಮುಂದುವರೆದರೆ ನೀಗದ ಕಾರ್ಯವುಂಟೆ ? ಎಂದು ಹುರಿದುಂಬಿಸಿದರು. ತಮ್ಮ ಸಂಪೂರ್ಣ ಬೆಂಬಲವನ್ನು ಶ್ರೀಗಳಿಗೆ ವ್ಯಕ್ತಪಡಿಸಿದರು. ಶ್ರೀಗಳಲ್ಲಿ ಹೊಸ ಹುಮ್ಮಸ್ಸು ಹೊರಹೊಮ್ಮಿತು. ತಾವು ಮಾಡಲು ಯೋಚಿಸುತ್ತಿದ್ದ ಕಾರ್ಯಗಳನ್ನು ಮಲ್ಲಣಾರ್ಯರ ಜೊತೆ ಆಳವಾಗಿ ಚರ್ಚಿಸಿ ಒಂದು ಕಾರ್ಯಕ್ರಮವನ್ನು ಯೋಜಿಸಿಕೊಂಡರು. ಆದರೆ ಶ್ರೀಗಳಿಗೆ ಪ್ರೇರಣೆಯ

ಸೆಲೆಯಾಗಿದ್ದ ಮಲ್ಲಣಾರ್ಯರು ಕೆಲ ವರ್ಷಗಳಲ್ಲಿಯೇ ಶಿವಾಧೀನರಾದರು. ಆದರೆ ಮಲ್ಲಣಾರ್ಯರ

ಸಾಮಾಜಿಕ ಕಳಕಳಿಯನ್ನು ಕೈಗೂಡಿಸಲು ಕಂಕಣಬದ್ಧರಾದರು.

 

ಶ್ರೀಗಳು ಸಾಮಾಜಿಕ ಕ್ಷೇತ್ರವನ್ನು ಅದರ ಸುಧಾರಣೆ, ಉನ್ನತಿಗಳಿಗಾಗಿ ಪ್ರವೇಶಿಸಿದಾಗ ಸಮಾಜ ಯಾವ ಸ್ಥಿತಿಯಲ್ಲಿ ಇತ್ತು ಎಂಬುದನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ ಪ್ರೊ, ಶಿ. ಶಿ. ಬಸವನಾಳರು.

 

“ಕ್ರಿ. ಶ. ೧೯ನೇ ಶತಮಾನದ ಉತ್ತರಾರ್ಧದಲ್ಲಿ ವೀರಶೈವ ಸಮಾಜಕ್ಕೆ ಒಂದು ಸಂಧಿಕಾಲ ಒದಗಿದ್ದಿತು. ಸಮಾಜದಲ್ಲಿ ಪರಂಪರಾಗತವಾದ ಸಾಮಾಜಿಕ, ಧಾರ್ಮಿಕ ಕಟ್ಟುಗಳೂ ಕಾಲವಶದಿಂದ ಸಡಿಲಾಗಿದ್ದವು. ಪ್ರಬಲವಾದ ನೂತನವಾದ ಪಾಶ್ಚಾತ್ಯ ಸಂಸ್ಕೃತಿಯ ಆಘಾತವು ಉಳಿದ ಸಮಾಜಗಳ ಮೇಲೆ ಆದಂತೆ ಈ ಸಮಾಜದ ಮೇಲೂ ಆಗತೊಡಗಿದ್ದಿತು. ಅದರಿಂದ ಪೂರ್ವದ ವಿದ್ಯಾ ಸಂಪ್ರದಾಯವು ಹೊಸ ಮನ್ವಂತರಕ್ಕೆ ನಿರುಪಯೋಗಿಯಾಗಿ ಪರಿಣಮಿಸತೊಡಗಿತು. ಆದರೆ, ನವೀನ ಸಂಪ್ರದಾಯವು ಇನ್ನೂ ರೂಢವಾಗಿರಲಿಲ್ಲ. ವೀರಶೈವ ಸಮಾಜವು ಸುದೈವದಿಂದ ಕರ್ಣಾಟಕ ಪ್ರಾಂತದಲ್ಲಿಯೇ ಹೆಚ್ಚಾಗಿ ಪಸರಿಸಿದ್ದರೂ ಆಂಗ್ಲ ಪ್ರಭುತ್ವದಲ್ಲಿ ಆ ಪ್ರಾಂತದ ಬೇರೆ ಬೇರೆ ಭಾಗಗಳೂ ಬೇರೆ ಬೇರೆ ಆಡಳಿತಗಳಿಗೆ ಒಳಪಟ್ಟುದುದರಿಂದ ಅವುಗಳಲ್ಲಿ ಪರಸ್ಪರ ಬಳಕೆ ಅಷ್ಟೊಂದು ಗಾಢವಾಗಿರಲಿಲ್ಲ. ವ್ಯಾಪಾರ ಉದ್ಯಮಗಳು ವೀರಶೈವರ ಕೈಬಿಟ್ಟು ಸಾಹಸಿಗಳಾದ ಪರಕೀಯರ ಕೈಸೇರತೊಡಗಿದ್ದವು. ಮೇಲಾಗಿ ಸಮಾಜ ನಾಯಕರ ಅಭಾವವೂ ಅಧಿಕವಾಗಿದ್ದಿತು. ನವೀನ ಯುಗದ ಲಾಭವನ್ನು ಹೊಂದಲು ಮುಂದೋಡುತ್ತಿದ್ದ ಇತರ ಸಮಾಜಗಳ ಜೊತೆಗೆ ಈ ಸಮಾಜವು ಹೆಜ್ಜೆ ಹಾಕಲಾರದಾಗಿದ್ದಿತು.” (ಬೆಳಗು : ಪು. ೭೧)

ಇದೇ ಮಾತುಗಳನ್ನು ವಿಶದೀಕರಿಸಿ ಹೀಗೆ ಬರೆಯಬಹುದು;

 

ವೀರಶೈವರು ಮೈಸೂರು ಸಂಸ್ಥಾನ, ಮುಂಬೈ ಪ್ರಾಂತ್ಯದ ಮಹಾರಾಷ್ಟ್ರ ಪ್ರದೇಶ, ಮದ್ರಾಸ ಪ್ರಾಂತ್ಯದ ಬಳ್ಳಾರಿ ಮುಂತಾದ ಪ್ರದೇಶದಲ್ಲಿ ಕುಂಭಕೋಣಂ, ಕೊಯಿಮತ್ತೂರು ಮೊದಲಾದ  ಜಿಲ್ಲೆಗಳಲ್ಲಿ ಕೇರಳದಲ್ಲಿ ಹಾಗೂ ನಿಜಾಮ ಸಂಸ್ಥಾನದಲ್ಲಿ ಹಂಚಿ ಹೋಗಿದ್ದರು. ಸನ್ ೧೯೦೧ರ ಜನಗಣತಿಯ ಪ್ರಕಾರ ೧೪ ಲಕ್ಷ ವೀರಶೈವರು ಇದ್ದರೆಂದು ಅಂದಾಜು. ಒಳಪಂಗಡಗಳ ಪಿಡುಗು ಹೆಚ್ಚಿತ್ತು.  ಆಚಾರ-ವಿಚಾರಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನರೂಪದಲ್ಲಿದ್ದವು. ಮೇಲು-ಕೀಳು ಎಂಬ ಅಂತರ ಜಾಗ್ರತ ವಾಗಿತ್ತು. ಲಿಂಗಧಾರಿಗಳಾಗಿದ್ದರೂ ಆಚರಣೆಯಲ್ಲಿ ಭಿನ್ನತೆ ಎದ್ದುಕಾಣುತ್ತಿತ್ತು. ಲಿಂಗೀಬ್ರಾಹ್ಮಣ ಎಂಬ ವಿಶೇಷ ಗುಂಪು ಮೆರೆಯುತ್ತಿತ್ತು, ಧಾರ್ಮಿಕ ಗ್ರಂಥಗಳು ಸಂಸ್ಕೃತದಲ್ಲಿಯೇ ಹೆಚ್ಚು ಇದ್ದುದರಿಂದ ಜನಸಾಮಾನ್ಯರಿಗೆ ತತ್ವಗಳ ಪರಿಚಯ ಕೇವಲ ಪ್ರವಚನಗಳಲ್ಲಿ ಆಗಾಗ ದೊರೆತಷ್ಟು, ವಚನ ಸಾಹಿತ್ಯ ಇನ್ನೂ ಜಗಲಿಯ ಮೇಲೆ ಪೂಜೆಗೊಳ್ಳುತ್ತಿದ್ದ ಕಾಲವಿದು. ಹಲಕೆಲವು ಸ್ವಾಮಿಗಳು ಪಂಡಿತರು ಪ್ರಕಟಿಸಿದರೂ ಫ. ಗು. ಹಳಕಟ್ಟಿಯವರು ೧೯೨೦ ಮೊದಲ ವರ್ಷಗಳಲ್ಲಿ ಪ್ರಕಟಿಸುವವರೆಗೆ ಲಭ್ಯವಿರಲಿಲ್ಲ, ಹಾನಗಲ್ಲ ಶ್ರೀಗಳ ಕೃಪಾಶೀರ್ವಾದದಿಂದ ‘ಶಿವಾನುಭವ’ ಪತ್ರಿಕೆಯನ್ನು ಅವರು ಸಂಪಾದಿಸಿ ಪ್ರಕಟಿಸಿರುವವರೆಗೆ ವಚನ ಅಧ್ಯಯನಕ್ಕೆ ಬೇರೆ ವಿಧಾನವಿರಲಿಲ್ಲ. ಧರ್ಮ ರಕ್ಷಕರಾಗಿದ್ದ ಬಹುಜನ ಗುರು-ವಿರಕ್ತರು ಸೂಕ್ತ ಶಿಕ್ಷಣವಿಲ್ಲದೆ ಕರ್ತವ್ಯಚ್ಯುತರಾಗಿದ್ದರು. ಸಂಸ್ಕಾರವಿಲ್ಲದೆ ಆಶ್ರಮ ಸ್ವೀಕರಿಸಿದ ಸಾಕಷ್ಟು ಸ್ವಾಮಿಗಳು ದಾರಿತಪ್ಪಿದ್ದರು; ಹಾಗೂ ಜನತೆಯನ್ನು ಅಂಧಶ್ರದ್ಧೆಯಲ್ಲಿಟ್ಟು ದಾರಿ ತಪ್ಪಿಸಿದ್ದರು.

 

ಬಡತನವನ್ನೇ ಬಳುವಳಿ ಪಡೆದ ವೀರಶೈವ ಸಮಾಜಕ್ಕೆ ಹೊಟ್ಟೆ ತುಂಬಿಕೊಳ್ಳುವುದೇ ಪ್ರಯಾಸಕರ ವಾಗಿದ್ದಾಗ ವಿದ್ಯೆಯ ಗಂಧ ತಗಲುವುದಾದರೂ ಹೇಗೆ ? ವಿದ್ಯೆ ಕಲಿತು ಸ್ಥಿತಿಗತಿಗೆ ಬಂದದ್ದವರಿಗೆ ಬಡವರ ಬಗ್ಗೆ ಸದಾ ಘೋಷಣೆ, ಮೇಲು-ಕೀಳಿನ ಮನೋಭಾವ, “ಸಕಲ ಜೀವರಿಗೆ ಲೇಸನೇ ಬಯಸುವದು ನಮ್ಮ ಸಮಾಜವೆಂದು ಹೇಳಿಕೊಳ್ಳುತ್ತಿದ್ದವರಲ್ಲಿಯ ಈ ಉಚ್ಚ ನೀಚದ ಹಾವಳಿಯನ್ನು ಕಂಡು ಪರಸಮಾಜದವರು ಚಪ್ಪಾಳೆಯನಿಕ್ಕಿ ನಗೆಯಾಡುತ್ತಿದ್ದರು.

 

 

 

 

 

 

ಗುರು-ವಿರಕ್ತರಲ್ಲಿ ಶ್ರೇಷ್ಠತೆಯ ಶೀತಲ ಯುದ್ಧ ಸದಾ ನಡೆಯುತ್ತಲೇ ಇತ್ತು ಅದು ಕೆಲವೊಮ್ಮೆ ಉಲ್ಬಣಗೊಂಡು ಭಕ್ತಾದಿಗಳಲ್ಲಿ ವಿಭಜನೆಗೆ ಕಾರಣವಾಗುತ್ತಿತ್ತು, ಅನೈಕ್ಯತೆಗೆ ದಾರಿಯಾಗುತ್ತಿತ್ತು ಅದನ್ನು ತಡೆಯಲು ಹಾನಗಲ್ಲ ಶ್ರೀಗಳು ಮಾಡಿದ ಪ್ರಯತ್ನಗಳು ತಾಪ್ಪೂರ್ತಿಕವಾಗಿಯಾದರೂ ಇಬ್ಬರ ನಡುವೆ ಸೌಹಾರ್ದವನ್ನು ಒಳ್ಳೆಯ ಸಂಬಂಧವನ್ನು ಏರ್ಪಡಿಸಿದವು. ಆದರೂ ಶ್ರೀಗಳು ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. ಇನ್ನು ವಿರಕ್ತರಲ್ಲಿ ‘ಸಮಯ ಭೇದ’ ಒಂದು ಜಟಿಲವಾದ ಸಮಸ್ಯೆಯಾಗಿತ್ತು. ಒಂದು ಸಮಯದ ಸ್ವಾಮಿಗಳು ಇನ್ನೊಂದು ಸಮಯದ ಸ್ವಾಮಿಗಳ ಕೂಡ ಸಂಪರ್ಕ ಸಹಕಾರಗಳನ್ನು ಸಹ ಮಾಡುತ್ತಿರಲಿಲ್ಲ. ಒಬ್ಬರು ಇನ್ನೊಬ್ಬರನ್ನು ನೋಡುವುದು ಸಹ ಪಾಪವೆಂದು ಭಾವಿಸುತ್ತಿದ್ದರು. ಇಂಥ ಸನ್ನಿವೇಶವನ್ನು ಎದರು ಕಂಡ ಶ್ರೀಗಳಿಗೆ ಪರಿಹಾರ ಹಗುರಾಗಿ ತೋರಲಿಲ್ಲ, ವಿರಕ್ತರಲ್ಲಿಯ ಈ ಸಮಯಭೇದವು ಶಾಸ್ತ್ರ ಸಮ್ಮತವೆ ? ಅಥವಾ ಕಾಲಾನುಗತವಾಗಿ ಬಂದಿರುವ ಒಂದು ರೀತಿಯ ಮೂಢ ಭಾವುಕತನವೆ ? ಎಂಬ ವಿಚಾರದಲ್ಲಿ ಶ್ರೀಗಳು ಮಗ್ನರಾದರು. ತಮ್ಮ ಸಂಚಾರದಲ್ಲಿ ಅಲ್ಲಲ್ಲಿ ಸಭೆಗಳನ್ನು ಕರೆದು ಪಂಡಿತರನ್ನು ಕೂಡಿಸಿ ಸಮಯಭೇದದ ಬಗ್ಗೆ ವಿಚಾರ ವಿನಿಮಯ ಮಾಡತೊಡಗಿದರು. ಅವರ ಸತತ ಪ್ರಯತ್ನದಿಂದ “ಸಮಯಭೇದ’ ದಲ್ಲಿ ಎಷ್ಟೋ ಪಾಲಿನ ಸೌಹಾರ್ದ ಕಂಡುಬಂದಿತು. ಆದರೂ ಅವರಿಗೆ ಗುರುವಿರಕ್ತರಲ್ಲಿಯ ಭೇದ ನೀಗಿಸುವುದು ಹಾಗು ಸಮಯಭೇದವನ್ನು ಹೊಡೆದು ಹಾಕುವುದು ಸದಾ ಯೋಚನೆಯಲ್ಲಿರುತ್ತಿತ್ತು. ಈ ಮಹತ್ಕಾರ್ಯಕ್ಕಾಗಿ ಬಾಗಿಲುಕೋಟೆಯಲ್ಲಿ ಆದಷ್ಟು ಬೇಗ ಒಂದು ‘ಧರ್ಮ ಪರಿಷತ್ತನ್ನು ಕರೆಯಬೇಕೆಂದು ಗುರುವಿರಕ್ತರನ್ನು ಕೂಡಿಸಬೇಕೆಂದು ಯೋಚಿಸಿದರು. ಅವರ ಜೀವನದ ಕೊನೆಯ ಆಶೆ ಈಡೇರಲಿಲ್ಲ ಎಂಬುದು ವಿಷಾದನೀಯ.

 

ಮುಸಲ್ಮಾನರು, ಪೇಶ್ವೆಯರು ಹಾಗೂ ನಂತರ ಬ್ರಿಟಿಶರ ಆಳಿಕೆಗಳಲ್ಲಿ ವೀರಶೈವ ಸಮಾಜಕ್ಕೆ ಹಿನ್ನಡೆಯುಂಟಾಯಿತು. ದೇಶಿ ಭಾಷೆಗಳ ಮಹತ್ವವು ಬಹುಮಟ್ಟಿಗೆ ಕಡಿಮೆಯಾಗಿ ಇಂಗ್ಲಿಷ್ ಭಾಷೆಗೆ ಹೆಚ್ಚು ಪ್ರಶಸ್ತಿಯು ಲಭಿಸಲಾರಂಭಿಸಿತು. ಪೇಶ್ಚೆಯವರ ಆಳಿಕೆಯ ಉಡುಗರೆಯೆಂದು ಮರಾಠಿಯು ಕನ್ನಡವನ್ನು  ಮೂಲಿಗುಂಪು ಮಾಡಿತ್ತು. ವೀರಶೈವರ ಸಮಾಜ ರಚನೆಯಲ್ಲಿ ಸ್ವತಂತ್ರ ಉದ್ಯೋಗಗಳಿಗೆ ಅವಕಾಶ ವಿದ್ದುದರಿಂದ ಅವರಿಗೆ ಕನ್ನಡ ಓದು ಬರಹ ಬಂದರೆ ಸಾಕಾಗಿತ್ತು. ಆದುದರಿಂದ ಇಂಗ್ಲಿಷ್ ಭಾಷೆಯ ಮಹತ್ವವು ಅವರಿಗೆ ಗೊತ್ತಾಗಲು ಹೆಚ್ಚು ಕಾಲ ಬೇಕಾಯಿತು.. ರಾಜಕೀಯ ದೃಷ್ಟಿಯಿಂದ ಇಂಗ್ಲಿಷದ ಉಪಯೋಗವು ಬಹಳವಿದೆಯೆಂದು ವೀರಶೈವರಿಗೆ ತಿಳಿಯುವಷ್ಟರಲ್ಲಿಯೇ ಕರ್ಣಾಟಕದಲ್ಲಿಯ ಇತರ ಪ್ರಾಗತಿಕ ಸಮಾಜಗಳು ಅದರ ಲಾಭವನ್ನು ತೆಗೆದುಕೊಂಡುಬಿಟ್ಟಿದ್ದವು. ಮುಂದೆ ಕೆಲವು ದಿವಸಗಳಲ್ಲಿ ಇಂಗ್ಲಿಷ್ ಭಾಷಾಜ್ಞಾನದ ಅಭಾವದ ಕಾರಣ ಅವರಿಗೆ ಸರಕಾರದಲ್ಲಿ ಯೋಗ್ಯ ಮಾರ್ಯದೆ ದೊರೆಯುವುದಿಲ್ಲ ಎಂಬುದು ಅರಿವಾಗತೊಡಗಿತು. ಇಂತಹ ಪ್ರಸಂಗದಲ್ಲಿ ಆಂಗ್ಲ ಭಾಷೆಯ ಜ್ಞಾನವನ್ನು ವೀರಶೈವ ಜನತೆಯೊಳಗೆ ಬಿತ್ತಲಾರಂಭಿಸಿದವರಲ್ಲಿ ಧಾರವಾಡದ, ಡೆಪ್ಯೂಟಿ ಚೆನ್ನಬಸಪ್ಪ ಎಜ್ಯುಕೇಶನಲ್ ಇನ್ಸಪೆಕ್ಟರ್, ಗುರುಸಿದ್ದಪ್ಪಣ್ಣ ಗಿಲಗಂಚಿ, ಡೆಪ್ಯುಟಿ ಕಲೆಕ್ಟರ ಹಾಗೂ ರಾವಬಹಾದ್ದೂರ ರುದ್ರಗೌಡ ಚೆನ್ನವೀರಗೌಡ

ಅರಟಾಳ ಡಿ.ಎಸ್.ಪಿ, ಇವರು ಮೊದಲಿಗರೆಂದು ಹೇಳಬಹುದು. ಇವರೆಲ್ಲರು ಆಂಗ್ಲ ಭಾಷೆಯಲ್ಲಿ ವಿಶ್ವವಿದ್ಯಾಲಯದ ಪದವೀಧರರಾಗಿಲ್ಲದಿದ್ದರೂ ಉಚ್ಚ ಶಿಕ್ಷಣ ಪಡೆದವರಾಗಿದ್ದರು. ದೊಡ್ಡ ದೊಡ್ಡ ಸರಕಾರಿ ಉದ್ಯೋಗಗಳಲ್ಲಿದ್ದರು, ಇಂಗ್ಲಿಷ್ ಭಾಷೆಯ ಮಹತ್ವವನ್ನು ತಿಳಿದವರಾಗಿದ್ದು ಅದರ ಅಭ್ಯಾಸಕ್ಕೆ ವೆಚ್ಚವು ಬಹಳವಾಗುತ್ತಿದುದರಿಂದ ಅದಕ್ಕೆ ತಕ್ಕ ಸೌಕರ್ಯಗಳನ್ನು ಕಲ್ಪಿಸಿಕೊಡುವ ಹಂಬಲವನ್ನು ಹೊಂದಿದ್ದರು.

 

ಶಿಕ್ಷಣ ಖಾತೆಯಲ್ಲಿಯೇ ಕೆಲಸ ಮಾಡುತ್ತಿದ್ದ ಡೆಪ್ಯುಟಿ ಚೆನ್ನಬಸಪ್ಪನವರು ಚಿತ್ರದುರ್ಗದ ಶ್ರೀ ಜಗದ್ಗುರು ಶ್ರೀ ಮನ್ನಿರಂಜನ ಮಹಾಲಿಂಗಸ್ವಾಮಿಗಳ ಉದಾರಾಶ್ರಯದಿಂದ ವೀರಶೈವ ವಿದ್ಯಾರ್ಥಿಗಳಿಗಾಗಿ ಉಚಿತ ಭೋಜನಾಲಯವನ್ನು ಕ್ರಿ. ಶ. ೧೮೬೯ ಬೆಳಗಾವಿಯಲ್ಲಿ ಸ್ಥಾಪಿಸಿದರು. ಐವತ್ತು ಜನ ವಿದ್ಯಾರ್ಥಿಗಳಿದ್ದರು. ವೀರಶೈವ ವಿದ್ಯಾರ್ಥಿ ವೃದ್ಧಿಗಾಗಿ ಮಾಡಿದ ಸೌಕರ್ಯಗಳಲ್ಲಿ ಇದೇ ಮೊದಲನೆಯದೆನ್ನಬಹುದು. ಡೆಪ್ಯೂಟಿ ಚೆನ್ನಬಸಪ್ಪನವರು ಕ್ರಿ. ಶ. ೧೮೮೧ ಜನೆವರಿ ೪ನೇ ತಾರೀಖಿನ ದಿನ ಪರಲೋಕವಾಸಿಯಾದರು. ಆದುದರಿಂದ ಮುಂದೆ ಆ ಭೋಜನಶಾಲೆ ಅಷ್ಟು ಚೆನ್ನಾಗಿ ಸಾಗಲಿಲ್ಲವೆಂದು ತೋರುತ್ತದೆ. ಆಗ ಹಾನಗಲ್ ಕುಮಾರ ಸ್ವಾಮಿಗಳಿಗೆ (ಆಗ ಹಾಲಯ್ಯ) ಹದಿನಾಲ್ಕು ವರ್ಷ.

 

ಕಾಲಕ್ರಮದಲ್ಲಿ ಬೆಳಗಾವ, ಧಾರವಾಡ ಮೊದಲಾದ ಊರುಗಳಲ್ಲಿಯೂ ಹೈಸ್ಕೂಲುಗಳಲ್ಲಿಯೂ ಹಾಗೂ ಪುಣೆಯ ಕಾಲೇಜಗಳಲ್ಲಿಯೂ ವೀರಶೈವ ವಿದ್ಯಾರ್ಥಿಗಳ ಸಂಖ್ಯೆ ಬೆಳೆಯಲಾರಂಭಿಸಿತು. ಈ ಎಲ್ಲ ಸ್ಥಳಗಳಲ್ಲಿ ಉಚಿತ ಭೋಜನ ಶಾಲೆಗಳನ್ನು ಸ್ಥಾಪಿಸುವುದು ಅಸಾಧ್ಯವೆಂದು ತಿಳಿದು ವಿದ್ಯಾರ್ಥಿಗಳ ಶಿಷ್ಯವೃತ್ತಿ (Scholorship) ಕೊಡುವ ಯೋಜನೆಯು ವೀರಶೈವ ಮುಖಂಡರಲ್ಲಿ ಮೂಡಿತು. ಅದಕ್ಕನುಗುಣವಾಗಿ ಗುರುಸಿದ್ದಪ್ಪ ಗಿಲಗಂಜಿ ಹಾಗೂ ರುದ್ರಗೌಡರು ಅರಟಾಳ ಈ ಉಭಯ ಮಹನೀಯರು ವೀರಶೈವರ ಹಾಗೂ ಕನ್ನಡಿಗರ ಕೇಂದ್ರವಾದ ಧಾರವಾಡದಲ್ಲಿ ತಾ. ೩೦ ಸೆಪ್ಟೆಂಬರ್ ೧೮೮೩ನೇ ದಿವಸ ವೀರಶೈವ ಪ್ರಮುಖ ಜನರ ಸಭೆಯನ್ನು ಕೂಡಿಸಿದರು ಆಗ “ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ” ಎಂಬ ಹೆಸರಿನ ಸಂಸ್ಥೆಯು ಸ್ಥಾಪಿತವಾಯಿತು. ಇಂಗ್ಲೀಷ್ ಹಾಗೂ ಸಂಸ್ಕೃತಗಳ ಅಭ್ಯಾಸಕ್ಕೆ ಉತ್ತೇಜನ ಕೊಡುವುದೇ ಈ ಸಂಸ್ಥೆಯ ಮುಖ್ಯೋದ್ದೇಶವಾಗಿತ್ತು ಮುಂದೆ ಅದೇ ವರ್ಷದ ಅಕ್ಟೋಬರ್ ತಿಂಗಳು ೨೦ನೇ ತಾರೀಖಿನ ಒಳಗೆ ೩೦೦೦ ರೂಪಾಯಿಗಳು, ಮುಂದೆ ಒಂದು ವರ್ಷದೊಳಗೆ ೨೦,೦೦೦ ರೂಪಾಯಿಗಳು ಸಂಸ್ಥೆಯ ಧನರಾಶಿಯಾಗಿ ಕೂಡಿದವು. ಇವುಗಳಲ್ಲಿ ಬಹುಭಾಗವು ನರಗುಂದ ವರ್ತಕರಿಂದ ಬಂದುದೆಂಬುದು ನೆನಪಿನಲ್ಲಿಡ ಬೇಕಾದ ಸಂಗತಿಯಾಗಿದೆ. ಮುಂದೆ ೧೮೮೪ರಲ್ಲಿ ಮುಂಬಯಿ ಸರಕಾರದ GRED ೩೬೯ನೇ ಠರಾವಿನ ಪ್ರಕಾರ ಈ ಕೂಡಿದ ಹಣವನ್ನು ಮುಂಬಯಿ ಸರಕಾರದ ಔರಂಗಾಬಾದ ಟ್ರಸ್ಟದಲ್ಲಿ ಇಟ್ಟುಕೊಂಡು ಆ ಸಂಸ್ಥೆಗೆ ಧಾರವಾಡ ಕಲೆಕ್ಟರರು ಕಾಯಂ ಪ್ರೆಸಿಡೆಂಟ ಆಗಿರಬೇಕೆಂಬ ಸಂಸ್ಥೆಯ ಪ್ರಾರ್ಥನೆಯನ್ನು ಒಪ್ಪಿಕೊಂಡರು. ಇಷ್ಟರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಹಣ ಕೂಡಿ ಅಲ್ಲಿಯ ಕಲೆಕ್ಟರ ಆ ಜಿಲ್ಲೆಗೆ ಪ್ರೆಸಿಡೆಂಟ ಆಗಿರತಕ್ಕದೆಂದು ಕೆಲಸ ನಡೆದಿತ್ತು, ಆದರೆ ಆ ಸಂಸ್ಥೆಯೂ ಉದ್ದೇಶವೂ ಒಂದೇ ಆಗಿದ್ದರಿಂದಲೂ, ಧಾರವಾಡದಲ್ಲಿಯೇ ಮೊದಲು ಈ ವಿಚಾರ ಹುಟ್ಟಿದ್ದರಿಂದಲೂ ಎರಡು ಬೇರೆ ಶಾಖೆಗಳನ್ನು ಮಾಡುವ ಅವಶ್ಯಕತೆಯಿಲ್ಲ ಎಂದೂ ಧಾರವಾಡದ ಮುಖ್ಯ ಕಚೇರಿಯಲ್ಲಿರಬೇಕೆಂದು

ನಿರ್ಣಯಿಸಲಾಯಿತು.

 

ಕ್ರಿ. ಶ. ೧೮೮೬ರಲ್ಲಿ ಲೀ ವಾರ್ನರ ಎಂಬುವರು ಮುಂಬೈ ಪ್ರಾಂತ್ಯದ ಶಾಲಾ ಖಾತೆಯ ಡೈರೆಕ್ಟರ ಆಗಿದ್ದಾಗ ಸರಕಾರಿ ಶಾಲೆಗಳಲ್ಲಿ ಕಾಯ್ದಿಟ್ಟ ‘ಮಾಫಿ’ ಜಾಗಗಳನ್ನು (free scholorships) ಎರಡು ಭಾಗ ಮಾಡಿ ಒಂದು ಭಾಗವನ್ನು ಬ್ರಾಹ್ಮಣ ಮೊದಲಾದ ಪ್ರಾಗತಿಕ ಸಮಾಜಗಳಿಗಾಗಿ ಇನ್ನೊಂದು ಭಾಗವನ್ನು ಹಿಂದುಳಿದ ಇತರ ಸಮಾಜಗಳಿಗಾಗಿ ಉಪಯೋಗ ಮಾಡತಕ್ಕದ್ದೆಂದು ನಿರ್ಧರಿಸಿದರು. ಅದಕ್ಕೆ ಪುಣೆಯ ಕೆಲವು ಪತ್ರಕರ್ತರು ಕುತ್ಸಿತ ಟೀಕೆಗಳನ್ನು ಮಾಡಲಾರಂಭಿಸಿದರು. ಆದರೆ ಲಿಂಗಾಯತ ವಿದ್ಯಾಭಿವೃದ್ಧಿ ಸಭೆಯು ಸರಕಾರದ ಯೋಜನೆಯನ್ನು ಪುಷ್ಟಿಕರಿಸಿತು. ವೀರಶೈವರ ಹಿತಸಂಬಂಧವಾಗಿಯೇ ಈ ಸಂಸ್ಥೆ ಸ್ಥಾಪಿತವಾಗಿದ್ದರೂ ಸಹ ಬೇರೆ ಹಿಂದುಳಿದ ಜಾತಿಗಳ ಹಿತವನ್ನು ಸಾಧಿಸುವುದಕ್ಕಾಗಿ ಯಾವಾಗಲೂ ಹೆಣಗುತ್ತಿತ್ತು ಎಂಬುದು ಅದರ ವಿಶೇಷತೆ.

 

ಕ್ರಿ. ಶ. ೧೮೮೭ರಲ್ಲಿಯೇ ಈ ಸಂಸ್ಥೆಯ ಉತ್ಪಾದಕರಾದ ಗಿಲಗಂಚಿ ಸಾಹೇಬರೂ ಹಾಗೂ ಅರಟಾಳ ಸಾಹೇಬರು ಶಿವಲಿಂಗಪ್ಪ ಹೊಸಳ್ಳಿ ಎಂಬ ವಿದ್ಯಾರ್ಥಿಯನ್ನು ಇಂಗ್ಲೆಂಡಕ್ಕೆ ಐ.ಸಿ.ಎಸ್. (I.C.S.) ಪರೀಕ್ಷೆಗೆ ಕಳಿಸಬೇಕೆಂದು ನಿಶ್ಚಯಿಸಿ ನವೆಂಬರ ತಿಂಗಳಲ್ಲಿ ನವಲಗುಂದ ಮತ್ತು ಗದಗ ಎರಡು ತಾಲೂಕುಗಳಲ್ಲಿಯೇ ಪ್ರತ್ಯೇಕವಾಗಿ ಫಂಡು ಕೂಡಿಸಲಾರಂಭಿಸಿದರು. ೨೪ ದಿವಸಗಳಲ್ಲಿ ೨೦೩ ಮಂದಿ ವರ್ಗಣದಾರರಿಂದ ೧೫, ೨೯೪ ರೂಪಾಯಿಗಳು ಕೂಡಿದವು. ಆ ಧನನಿಧಿಯ ಸಹಾಯದಿಂದ ಶ್ರೀ ಹೊಸಳ್ಳಿಯವರು ವಿಲಾಯತಿಗೆ ಹೋದರು. ಆದರೆ ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಬ್ಯಾರಿಷ್ಟರಾಗಿ ಹಿಂದೂಸ್ಥಾನಕ್ಕೆ ಮರಳಿ ಬಂದರು.

 

ಸನ್ ೧೯೦೩ರ ಪ್ರಾರಂಭದಲ್ಲಿ ಧಾರವಾಡದ ವೀರಶೈವ ಬಾಂಧವರು ವಾರಕ್ಕೊಮ್ಮೆ ಧರ್ಮೋಪದೇಶ ಮಾಡುವ ಉದ್ದೇಶಕ್ಕಾಗಿ ವೀರಶೈವ ಮತಪ್ರಚಾರಕ ಸಂಘವನ್ನು ಸ್ಥಾಪಿಸಿದರು. ಅದರ ಮೂಲಕ ಧಾರ್ಮಿಕ ಚಟುವಟಿಕೆಗಳನ್ನು ಕೈಕೊಳ್ಳುವ ಇಚ್ಛೆ ಅವರಿಗಿತ್ತು ಪರಸ್ಥಳದ ವಿದ್ಯಾರ್ಥಿಗಳಿಗೆ ಉಚಿತ ಭೋಜನಾಲಯಗಳ ಅನುಕೂಲ ಮಾಡಿಕೊಟ್ಟರು. ಜನರ ಆಚಾರ ವಿಚಾರಗಳ ಪ್ರಗತಿಯನ್ನು ಪಡೆಯಲು ಮತಪ್ರಚಾರಕರಾದ ಶಾಸ್ತ್ರಿಗಳನ್ನು ತಯಾರಿಸಲು ಸಂಸ್ಕೃತ ಪಾಠಶಾಲೆ ಸ್ಥಾಪಿಸಲಿಕ್ಕೆ ಹೂಲಿಮಠದ ಶಿವಮೂರ್ತಯ್ಯನವರು ೨೭ ಎಕರೆ ೨೪ ಗುಂಟೆ ಹೊಲವನ್ನು ಹಾಗೂ ಒಂದು ಮನೆಯನ್ನು ದಾನ ಮಾಡಿದರು. ಇದನ್ನನುಸರಿಸಿ ಅಲ್ಲಲ್ಲಿ ಸಂಸ್ಕೃತ ಪಾಠಶಾಲೆಗಳು ಹಾಗೂ ಗ್ರಂಥ ಸಂಶೋಧನ ಕೆಲಸ ಪ್ರಾರಂಭವಾಯಿತು.

 

ಲಿಂಗಾಯತ ವಿದ್ಯಾಭಿವೃದ್ಧಿ ಫಂಡಿಗೆ ಒಂಟಮೂರಿ ಶ್ರೀ ಲಕಮನಗೌಡ ಬಸವಪ್ರಭು ದೇಸಾಯಿಯವರು ೫೦ ಸಾವಿರ ರೂಪಾಯಿಗಳ ದೇಣಿಗೆ ನೀಡಿದರು. ನವಲಗುಂದ ಸಂಸ್ಥಾನದ ಶಿರಸಂಗಿ ದೇಸಾಯಿಯವರು ವಿದ್ಯಾದಾನಕ್ಕೆ ದೊಡ್ಡ ಆಸ್ತಿಯನ್ನೇ ನೀಡಿದರು.

 

ಸೊಲ್ಲಾಪುರದಲ್ಲಿ ವಾರದ ಮಲ್ಲಪ್ಪನವರ ಆಶ್ರಯದಲ್ಲಿ ಸಂಸ್ಕೃತ ಪಾಠಶಾಲೆ ಹಾಗೂ ಗ್ರಂಥ ಸಂಶೋಧನೆ ಕೆಲಸ ನಡೆದಿತ್ತು ಮೈಸೂರಿನ ಮರಿಮಲ್ಲಪ್ಪನವರ ಸಂಸ್ಕೃತ ಪಾಠಶಾಲೆಗಳೂ ಕಾರ್ಯ ನಡೆಸಿದ್ದವು. ವೀರಶೈವ ಮಹಾಸಭೆ ಹಾಗೂ ಶಿವಯೋಗ ಮಂದಿರಗಳ ಸ್ಥಾಪನೆಯಾದ ಕೂಡಲೇ ವೀರಶೈವರಲ್ಲಿ ಜಾಗ್ರತಿಯುಂಟಾಗಿ ಬಾಗಲಕೋಟೆ, ವಿಜಾಪುರ ಮೊದಲಾದ ನಗರಗಳಲ್ಲಿ ವಿದ್ಯಾಸಂಸ್ಥೆ ಪ್ರಾರಂಭಗೊಂಡವು. ಬೆಳಗಾಂವಿಯಲ್ಲಿ ಕೆ.ಎಲ್.ಇ. ಸೊಸೈಟಿ ಪ್ರಾರಂಭವಾದದ್ದು ಅದು ಸಾಧಿಸಿದ್ದು ಒಂದು ಇತಿಹಾಸವೇ ಆಗಿದೆ.

 

ಹೀಗೆ ಶತಮಾನಗಳ ಆಳಿಕೆಯ ಕ್ರೂರ ಹಿಡಿತಕ್ಕೆ ಸಿಕ್ಕು ಚೂರು ಚೂರಾಗಿದ್ದ ವೀರಶೈವ ಸಮಾಜವು ತಾನು ಕಳೆದುಕೊಂಡಿದ್ದ ಕೆಚ್ಚನ್ನು ಪುನರಪಿ ಸಂಪಾದಿಸಲು ಆಶಾದಾಯಕವಾಗಿ ಹಲವು ಕಾರ್ಯಗಳನ್ನು ಕೈಕೊಂಡು ಮುಂದೆ ಮುಂದೆ ನಿಧಾನವಾಗಿ ಸಾಗುತ್ತಿತ್ತು. ಸಮಾಜದಲ್ಲಿ ಒಗ್ಗಟ್ಟನ್ನು ಭದ್ರವಾಗಿ ನೆಲೆಯೂರಿಸಿ, ಎಲ್ಲರೊಂದಿಗೆ ತಾನು ಎಂದು ಭರವಸೆಯನ್ನು ಮೂಡಿಸಿ, ಮುಂದೊಯ್ಯಬಲ್ಲ ನೇತಾರನ ನಿರೀಕ್ಷೆಯಲ್ಲಿತ್ತು. ನಾಡು-ನುಡಿಯಲ್ಲಿ ಕಳಕಳಿಯಿದ್ದ ವಿಚಾರ-ಆಚಾರವಂತರ ಸ್ತೋಮ. ಆಗ ಹಾನಗಲ್ಲ ಶ್ರೀಗಳು ಪ್ರವೇಶ ಮಾಡಿದ್ದು ಎಷ್ಟು ಸಮಯೋಚಿತವಾಗಿತ್ತು ಎಂಬುದನ್ನು ಶಿ.ಶಿ. ಬಸವನಾಳರು ಹೀಗೆ ಬರೆದಿದ್ದಾರೆ.

 

ʼʼವೀರಶೈವ ಸಮಾಜದಲ್ಲಿ ನವಚೈತನ್ಯವನ್ನು ಹುಟ್ಟಿಸುವುದಕ್ಕೂ ಒಕ್ಕಟ್ಟನ್ನುಂಟು ಮಾಡುವದಕ್ಕೂ ಇತರ ಸಮಾಜಗಳಲ್ಲಿಯೂ ಸರಕಾರದಲ್ಲಿಯೂ ತನ್ನ ಗೌರವವನ್ನು ಕಾಯ್ದುಕೊಳ್ಳಲಿಕ್ಕೂ ಏಕಮೇವ ಸಾಧನವಾದ ಅಖಿಲ ಭಾರತ ವೀರಶೈವ ಮಹಾಸಭೆಯ ಕಲ್ಪನೆಗೆ ಮಹಾಸ್ವಾಮಿಗಳವರೇ ಕಾರಣೀಭೂತರಾಗಿದ್ದಂತೆ ಮೊದಲಿನ ಹಲವು ಸಭೆಗಳು ಸುಸೂತ್ರವಾಗಿ ಜರುಗುವುದಕ್ಕೂ ಅವರೇ ಕಾರಣರಾಗಿದ್ದರು.ʼʼ(ಬೆಳಗು’ ಪು. ೨)

ವೀರಶೈವ ಮಹಾಸಭೆಯ ಸ್ಥಾಪನೆಯನ್ನು ಕುರಿತು ಹರ್ಡೆಕರ ಮಂಜಪ್ಪನವರು ಈ ಮಾತುಗಳು ಮನನೀಯ ಹಾಗೂ ಉಲ್ಲೇಖನೀಯವಾಗಿವೆ

ʼʼ ಇಂತಹ ಸಮರ್ಥ ಮಹಾಸಭೆಯನ್ನು ಪಾಶ್ಚಾತ್ಯ ಶಿಕ್ಷಣ ವಿಶಾರದರು ಅಥವಾ ಆಧುನಿಕ ರಾಜಕಾರಣದಲ್ಲಿ ನುರಿತವರು ಸ್ಥಾಪಿಸಿದ್ದರೆ ಅದೇನೂ ಕೌತುಕಾಸ್ಪದವೆನಿಸುತ್ತಿರಲಿಲ್ಲ. ಈಗಿನಂತೆ ಜನಜಾಗ್ರತಿಯುಂಟಾದ ಕಾಲದಲ್ಲಿ ಅದನ್ನು ಯಾರಾದರೂ ಏರ್ಪಡಿಸಿದ್ದರೆ ಅದೇನೂ ಆಶ್ಚರ್ಯಕರವಾಗಿ ತೋರುತ್ತಿರಲಿಲ್ಲ.

“ಆದರೆ, ಪಾಶ್ಚಾತ್ಯ ಶಿಕ್ಷಣದ ಗಾಳಿಯನ್ನು ಕೂಡ ಸೋಂಕಿಸಿಕೊಂಡಿರದ ಮತ್ತು ಆಧುನಿಕ ರಾಜಕಾರಣದ ಸಂಬಂಧವಿಲ್ಲದ ಪರಮಪೂಜ್ಯ ಹಾನಗಲ್ಲ ಮಹಾಸ್ವಾಮಿಗಳವರು ಕರ್ಣಾಟಕದಲ್ಲಿಯೇ ಯಾವ ಸಮಾಜದವರ ಯಾವ ವಿಧವಾದ ಸಾರ್ವಜನಿಕ ಸಮ್ಮೇಲನಗಳು ಜರುಗದಿದ್ದ ಕಾಲದಲ್ಲಿ ಜನಾಂಗವು ನಿದ್ದೆ ಹೋಗಿದ್ದ ಕಾಲದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದುದು ನಿಜವಾಗಿಯೂ ಕೌತುಕಾಸ್ಪದವಾದುದು;ಆ ಮಹಾಸ್ವಾಮಿಗಳವರಲ್ಲಿದ್ದ ಅದ್ವಿತೀಯವಾದ ಮುಂದಾ ಲೋಚನೆಯ ದ್ಯೋತಕವಾದುದು.’ʼ

 

 

“ಕ್ರಿ. ಶ. ೧೯೦೪ರಲ್ಲಿ ಮಹಾಸಭೆಯನ್ನು ಧಾರವಾಡದಲ್ಲಿ ಸ್ಥಾಪಿಸುವ ಮುಂಚೆಯೇ ೧೯೦೩ರಲ್ಲಿ

ಒಂದು ಆಲೋಚನಾ ಸಭೆಯನ್ನು ಕೂಡಿಸಿ ಸಮಾಜದ ಪ್ರಮುಖರ ಸಲಹೆ ಸೂಚನೆಗಳನ್ನು

ತಿಳಿದುಕೊಂಡುದು ಸ್ವಾಮಿಗಳವರಲ್ಲಿದ್ದ ಅಸಾಧಾರಣವಾದ ಕಾರ್ಯ-ಚಾತುರ್ಯವನ್ನು ವ್ಯಕ್ತಗೊಳಿಸುತ್ತದೆ.” (ಬೆಳಗು : ಪು. ೨೪)

 

ಅಖಿಲ ಭಾರತ ವೀರಶೈವ ಮಹಾಸಭೆಯ ಸ್ಥಾಪನೆ :

ಅಖಿಲ ಭಾರತ ವೀರಶೈವ ಮಹಾಸಭೆಯ ಉಗಮಕ್ಕೆ ೧೯೦೩ ನೆಯ ಮೇ ತಿಂಗಳಲ್ಲಿ ಸವದತ್ತಿ

ಕಲ್ಮಠದಲ್ಲಿ ಜರುಗಿದ ಬಸವ ಪುರಾಣ ಮಹಾಮಂಗಲ ಪ್ರಸಂಗವೇ ಕಾರಣ ಎನ್ನಲಾಗಿದೆ. ಅಲ್ಲಿಗೆ

ಧಾರವಾಡದ ‘ವೀರಶೈವ ಮತ ಪ್ರಚಾರಕ ಸಂಘ’ದವರು ಬಂದಿದ್ದರು. ಅಥಣಿಯ ಶ್ರೀ ಮುರುಘಂದ್ರ

ಶಿವಯೋಗಿಗಳು, ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಜಗದ್ಗುರು ಗಂಗಾಧರ ಸ್ವಾಮಿಗಳು ಮತ್ತಿತರ ಹರ-ಗುರು-ಚರಮೂರ್ತಿಗಳು, ನೆರೆದಿದ್ದರು. ಈ ಕಾರ್ಯಕ್ರಮ ಬಿದರಿಯ ಮಹಾತಪಸ್ವಿಗಳ ಸತ್ಸಂಕಲ್ಪದಂತೆ ನಡೆಯಿತು. ಹಾನಗಲ್ಲ ಶ್ರೀಗಳವರ ನೇತೃತ್ವದಲ್ಲಿ ಕಾರ್ಯಕ್ರಮ ಸಾಂಗವಾಯಿತ್ತು. ಈ ಶುಭ ಸಂದರ್ಭದಲ್ಲಿ ವೀರಶೈವ ಮತ ಪ್ರಚಾರಕ ಸಂಘದ ಸಮಾಜೋನ್ನತಿಯ ಚಿಂತನ ಮಂಥನಗಳು ನಡೆದವು. ಅವುಗಳನ್ನು ಮೆಚ್ಚಿದ ಶ್ರೀ ಕುಮಾರಸ್ವಾಮಿಗಳು ಪ್ರಥಮತಃ ೧೦೧ ರೂಪಾಯಿಗಳನ್ನು ಆಶೀರ್ವದಿಸಿದರು. ನೆರೆದ ಮಹಾಜನಗಳೆಲ್ಲ ೨೦೦ ರೂಪಾಯಿಗಳನ್ನು ದಾನವಿತ್ತರು. ಪ್ರಮುಖರು ಒಲವನ್ನು ಅರಿತುಕೊಂಡು ಶ್ರೀಗಳು ಸಮಾಜ ಸಂಘಟನೆಯ ಕಾರ್ಯಕ್ಕೆ ಮುಂದಾದರು. ಜನರನ್ನು ಎಚ್ಚರಗೊಳಿಸಿದರು.

 

ಈ ವಿಚಾರವು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರುಗಳ ಪಲ್ಲಕ್ಕಿ ಉತ್ಸವಕ್ಕೆಂದು ನೆರೆದಿದ್ದ ವೀರಶೈವ ಮಹನೀಯರೊಂದಿಗೆ ನಡೆದ ಸಮಾಲೋಚನೆಯ ಸಭೆಯಲ್ಲಿ ಚರ್ಚೆಗೆ ಬಂದಿತು. ಅದಕ್ಕೆ ಒಂದು ಸಾಕಾರ ಕೊಡಲು ವೀರಶೈವ ಮಹಾಸಭೆಯನ್ನು ವರ್ಷಕ್ಕೊಮ್ಮೆ ಬೇರೆ ಬೇರೆ ಪ್ರಸಿದ್ಧ ಪಟ್ಟಣಗಳಲ್ಲಿ ನೆರವೇರಿಸಬೇಕೆಂತಲೂ ಮೊದಲನೆಯ ಮಹಾಸಭೆಯನ್ನು ಧಾರವಾಡದಲ್ಲಿ ೧೯೦೩ನೇ ಡಿಸೆಂಬರ ತಿಂಗಳಲ್ಲಿ ಕೂಡಿಸಬೇಕೆಂತೆಲೂ ಹಾನಗಲ್ಲಿನ ಶ್ರೀಗಳ ಸಮ್ಮುಖದಲ್ಲಿ ನಿಶ್ಚಯಿಸಿದರು. ಆಮೇಲೆ ಈ ಮಹಾಸ್ವಾಮಿಗಳವರು ಧಾರವಾಡಕ್ಕೆ ಕೂಡಲೇ ದಯಮಾಡಿಸಿ ಭಕ್ತ ಜನರನ್ನು ಕರೆಸಿಕೊಂಡು ಅವರಿಗೆ ಉತ್ತೇಜನ ಕೊಟ್ಟು ಧನವನ್ನು ಕೂಡಿಸಿದರು.” (ಅ.ಭಾ.ವೀ. ಮಹಾಸಭೆಯ ೧ನೇ ರಿಪೋರ್ಟ) ಅದರಂತೆ ಮೊದಲನೆಯ ಮಹಾಸಭೆಯ ಪ್ರಚಾರ, ಸಿದ್ಧತೆಗಳು ತೀವ್ರವಾಗಿ ನಡೆದವು. ನಂತರ ಸರಕಾರದ ಆದೇಶದಂತೆ ಜನಗಣತಿಯನ್ನು ನಿರ್ವಹಿಸುವ ಹೊಣೆ ಅರಟಾಳ ರುದ್ರಗೌಡರದಾಗಿತ್ತು. ಅದನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಅದರ ಖರ್ಚಿಗೂ ಶ್ರೀಗಳು ಧನ ಸಂಗ್ರಹ ಮಾಡಿಕೊಟ್ಟರು. ಆದರೆ ಡಿಸೆಂಬರ ತಿಂಗಳಲ್ಲಿ ಪ್ಲೇಗಿನ ಹಾವಳಿ ಧಾರವಾಡದಲ್ಲಿ ವಿಶೇಷವಾದ್ದರಿಂದ ಈ ಮಹಾಸಭೆಯನ್ನು ಕ್ರಿ. ಶ. ೧೯೦೪ನೇ ಮೇ ತಿಂಗಳಲ್ಲಿ ನೆರವೇರಿಸಬೇಕೆಂಬ ನಿರ್ಣಯ ಮಾಡಲಾಯಿತು. ಅದರಂತೆ ಪ್ರಚಾರ, ಧನಸಂಗ್ರಹ, ಸಿದ್ಧತೆಯ ಕಾರ್ಯಗಳು ಭರದಿಂದ ಸಾಗಿದವು.

 

ದಿನಾಂಕ ೧೩-೫-೧೯೦೪ನೆಯ ಶುಕ್ರವಾರ ದಿವಸ ೧ ಗಂಟೆಗೆ ವೀರಶೈವ ಮಹಾಸಭೆಯು ದರ್ಬಾರ ಹಾಲ್ (ಆಗಿನ ಕಲೆಕ್ಟರ ಮೆ. ಎಂ. ಸಿ. ಗಿಬ್ ಸಾಹೇಬರ ಸೌಜನ್ಯದಿಂದ ಪಡೆದುಕೊಳ್ಳಲಾಗಿತ್ತು) ಈಗಿನ ಲಿಂಗಾಯತ ಟೌನ ಹಾಲಿನಲ್ಲಿ ಸಮಾವೇಶಗೊಂಡಿತು. ಶ್ರೀಯುತ ಲಿಂಗಪ್ಪ ಜಾಯಪ್ಪ ಸರದೇಸಾಯಿ ಸಂಸ್ಥಾನ ನವಲಗುಂದ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಸಮಾಜದಲ್ಲಿ ಹುಮ್ಮಸ್ಸು ಹೊರಹೊಮ್ಮಿತು. ʼʼಹಾನಗಲ್ಲ ಮಹಾಸ್ವಾಮಿಗಳವರು ಎಲ್ಲದಕ್ಕೂ ಮೂಲಕರ್ತೃಗಳೆನಿಸಿದರೂ ಕೇವಲ ಸಾಕ್ಷಿ ಚೈತನ್ಯರಾಗಿ ಮಾರ್ಗದರ್ಶನ ನೀಡಿದರು. ಕೊನೆಗೆ ಎಲ್ಲ ಮಹನೀಯರಿಗೆ ಆಶೀರ್ವದಿಸಿದರು. ತುಂಬು ಹೃದಯದಿಂದ ಹುರಿದುಂಬಿಸಿದರು. ಕಾರ್ಯ ಪ್ರವೃತ್ತರನ್ನಾಗಿಸಿದರು. ಮಲಗಿದವರನ್ನು ಎಚ್ಚರಿಸಿದರುʼʼ ಎಂಬ ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳ ಮಾತುಗಳು ಶ್ರೀ ಕುಮಾರಸ್ವಾಮಿಗಳ ಕಾರ್ಯಕ್ಷಮತೆ, ಕಾರ್ಯ ನಿರ್ವಹಣೆ, ಕಾರ್ಯದಲ್ಲಿಯ ನಿಷ್ಕಾಮತೆ ಕಾರ್ಯತತ್ಪರತೆಗಳನ್ನು ಸೂಕ್ಷ್ಮವಾಗಿ ಸೂಚಿಸುತ್ತವೆ (ಕಾರಣಿಕ ಯುಗಪುರುಷ, ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳು, ಪು. ೩೮),

“ಮಲಗಿದವರನ್ನು ಎಚ್ಚರಿಸುವದು, ಅವರನ್ನು ಕಾರ್ಯತತ್ಪರರನ್ನಾಗಿಸುವುದು” ಶ್ರೀಗಳ ಕಾರ್ಯ

ವಿಧಾನವಾಗಿತ್ತು.

ಶ್ರೀ ಶಿವಯೋಗಮಂದಿರ ನಿರ್ಮಾಣ :

ಗುರು-ವಿರಕ್ತರಾಗುವ ವಟುಗಳಿಗೆ ಶಿಕ್ಷಣ ಕೊಡುವ ವ್ಯವಸ್ಥಿತ ಶಾಲೆಯೊಂದನ್ನು ಸ್ಥಾಪಿಸಬೇಕೆಂಬ ಮಲ್ಲಣಾರ್ಯರ ಬಯಕೆಗೆ ಸಾಕಾರಕೊಡಬೇಕೆಂಬ ಇಚ್ಛೆ ಶ್ರೀಗಳಲ್ಲಿ ಸದಾ ಕಾರ್ಯಶೀಲವಾಗಿತ್ತು ಧಾರ್ಮಿಕ ಕ್ಷೇತ್ರದಲ್ಲಿ ಕವಿದಿರುವ ಗ್ಲಾನಿಯನ್ನು ಹೋಗಲಾಡಿಸಲು ಧರ್ಮಾಧಿಕಾರಿಗಳು ಯೋಗಿಗಳು ಶಿಕ್ಷಣವೇತ್ತರು ಆಗಿರಬೇಕೆಂಬುದನ್ನು ಸಮಾಜದ ಮುಂದಾಳುಗಳು ಅರಿತಿದ್ದರು. ಈ ವಿಚಾರಕ್ಕೆ ಸಾಕಷ್ಟು ಪುರಸ್ಕಾರ ಸಿಕ್ಕಿತ್ತು ಪ್ರೋತ್ಸಾಹ ದೊರೆತಿತ್ತು ಇದಕ್ಕೆ ಹೆಚ್ಚು ಪ್ರಚೋದನೆ ನೀಡುವಂತೆ ಆರ್ಯ ಸಮಾಜದವರು ಒಂದು ಗುರುಕುಲವನ್ನು ಉತ್ತರ ಭಾರತದಲ್ಲಿ ಸ್ಥಾಪಿಸಿ ಅದಕ್ಕೋಸ್ಕರ ಅದ್ಭುತವಾಗಿ ಪ್ರಯತ್ನ ಮಾಡುತ್ತಿರುವ ವಾರ್ತೆಗಳು ವೃತ್ತ ಪತ್ರಿಕೆಗಳಲ್ಲಿ ಪ್ರಸಿದ್ಧವಾಗಹತ್ತಿದವು. ೧೯೦೭ನೇ ಇಸ್ವಿಯಲ್ಲಿ ಸೊಲ್ಲಾಪುರದಲ್ಲಿ ವೀರಶೈವ ಮಹಾಸಭೆಗಳ ಅಧಿವೇಶ ಜರುಗಿತು. ಈ ಸಭೆಗೆ ಹಾನಗಲ್ಲ ಮಹಾಸ್ವಾಮಿಗಳವರು ಕಾಲು ಮಾರ್ಗದಿಂದ ಸೊಲ್ಲಾಪುರ ಪಟ್ಟಣಕ್ಕೆ ಆಗಮಿಸಿದರು. ಮಹಾತ್ಮಾ ಗಾಂಧಿಯವರು ಜನತೆಯಲ್ಲಿ ಒಂದು ಮಹತ್ವದ ಸಂದೇಶವನ್ನು ಬೀರಲು ಪಾದಚಾರಿಗಳಾಗಿ ಹೇಗೆ ಮಾರ್ಗ ಕ್ರಮಣ ಮಾಡುತ್ತಿದ್ದರೋ ಅದೇ ಮೇರೆಗೆ ಹಾನಗಲ್ಲ ಕುಮಾರ ಸ್ವಾಮಿಗಳವರು ತಾವು ಇಳಿದ ಗ್ರಾಮಗಳಲ್ಲೆಲ್ಲ ವೀರಶೈವರಿಗೋಸ್ಕರ ಒಂದು ಗುರುಕುಲವನ್ನು ಒಂದು ಕಡೆಗೆ ಸ್ಥಾಪಿಸಬೇಕೆಂಬ ವಿಚಾರವನ್ನು ವಿಶದಪಡಿಸುತ್ತಲೇ ಬಂದರು” ಎಂದು ಫ. ಗು. ಹಳಕಟ್ಟಿಯವರು ಮನೋಜ್ಞವಾಗಿ ಹೇಳಿದ್ದಾರೆ. (ಬೆಳಗು ಪು. ೬೪)

ವೀರಶೈವ ಮಹಾಸಭೆಯ ಮೂರು ಅಧಿವೇಶನಗಳು ಕಳೆದು ನಾಲ್ಕನೆಯ ಅಧಿವೇಶನದಲ್ಲಿ ಶಿವಯೋಗ ಮಂದಿರ ನಿರ್ಮಾಣವನ್ನು ಕಾರ್ಯರೂಪಕ್ಕೆ ತರುವ ಪ್ರೇರಣೆಯನ್ನು ಶ್ರೀಗಳು ದಯಪಾಲಿಸಿದರು. ಬಾಗಲಕೋಟೆಯಲ್ಲಿ ಜರುಗಿದ ನಾಲ್ಕನೆಯ ಅಧಿವೇಶನದ ಸ್ವಾಗತ ಸಮಿತಿಯ ಚೇರಮನ್ನರಾಗಿದ್ದ ಶ್ರೀ ಜಿ. ಎಲ್. ಮೋಟಗಿಯವರು ತಮ್ಮ ಸ್ವಾಗತ ಭಾಷಣದಲ್ಲಿ ಹೀಗೆ ನುಡಿದರು. “ಶ್ರೀ ನಿರಂಜನ ಹಾನಗಲ್ಲ ಕುಮಾರ ಸ್ವಾಮಿಗಳೂ ಹಾಗೂ ನಮ್ಮ ಮತದ ಕೆಲವು ಜನ ಮಹನೀಯರೂ ಕೂಡಿ ಈ ಮತದ ಗುರುವರ್ಗದಲ್ಲಿ ಶಿವಯೋಗ ನಿರತರಾದವರು ವಿರಳರಿದ್ದು, ಈ ಕೊರತೆಯನ್ನು ದೂರ ಮಾಡುವ ಸದುದ್ದೇಶದಿಂದ ಶಿವಯೋಗ ಮಂದಿರವೆಂಬ ಸಂಸ್ಥೆಯನ್ನು ಸ್ಥಾಪಿಸುವ ಕುರಿತು ಆಲೋಚನಾ ಸಭೆಯನ್ನು ಇದೇ ಸ್ಥಳದಲ್ಲಿ ಕೂಡಿಸಬೇಕೆಂದು ಶ್ರೀಯುತ ಪ್ರಭಪ್ಪ ಮಾಳಗಿ ವಕೀಲ ಹುಬ್ಬಳ್ಳಿ ಇವರ ಮುಖಾಂತರ ಸೂಚನೆ ಕಳುಹಿಸಿದ್ದರ ಮೇರೆಗೆ ನಾವು ಆಲೋಚನಾ ಸಭೆಯನ್ನು ಹೋದ ಕಾರ್ತಿಕ ಶುದ್ಧ ದ್ವಾದಶಿಯಂದು ಕೂಡಿಸಬೇಕೆಂದು ನಿಶ್ಚಯಿಸಿ ಪ್ರಸಿದ್ಧ ಪತ್ರಿಕೆಗಳಿಗೆ ಸುತ್ತೋಲೆ ಕಳುಹಿಸಿದೆವು.” (ಬೆಳಗು ೪೧-೪೨) ಅಂದರೆ ಶಿವಯೋಗ ಮಂದಿರವನ್ನು ಸ್ಥಾಪಿಸುವ ನಿರ್ಧಾರವು ಅಲ್ಪ ಕಾಲದಲ್ಲಿಯೇ ನಿರ್ಣಯಗೊಂಡಿತೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ʼವೀರಶೈವ ಮಹಾಸಭೆಯ ೪ನೇ ಅಧಿವೇಶನವು ೨೮-೧೨-೧೯೦೮, ಸೋಮವಾರದಂದು ಬಾಗಲಕೋಟೆಯಲ್ಲಿ ಶ್ರೀಮಂತ ರಾಜಾ ಲಖಮನಗೌಡ ಸರದೇಸಾಯಿ ವಂಟಮುರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ಶಿವಯೋಗ ಮಂದಿರವನ್ನು ಸ್ಥಾಪಿಸುವ ಎರಡನೆಯ ಗೊತ್ತುವಳಿಯನ್ನು ಕೆಳಗಿನಂತೆ ಸ್ವೀಕರಿಸಲಾಯಿತು.

 

“ವೀರಶೈವ ಸಮಾಜದಲ್ಲಿ ಸದ್ಯಃ ದುರ್ದೈವದಿಂದ ಧರ್ಮಗ್ಲಾನಿಯುಂಟಾಗಿರುತ್ತಿದ್ದು ಅದನ್ನು ಹೋಗಲಾಡಿಸುವುದಕ್ಕೂ, ಶೂನ್ಯ ಸಿಂಹಾಸನಾಧ್ಯಕ್ಷರು, ಪಂಚಸಿಂಹಾಸನಾಧೀಶ್ವರರು, ಪಟ್ಟಚರಮೂರ್ತಿಗಳು ಮೊದಲಾದ ಪೂಜ್ಯರಾದ ಸ್ವಾಮಿಗಳಿಗೆ ಯೋಗ್ಯವಾದ ಶಿಕ್ಷಣವನ್ನು ಕೊಟ್ಟು, ಅವರಿಂದ ಸಮಾಜದಲ್ಲಿ ಭಕ್ತ-ಮಾಹೇಶ್ವರಿಬ್ಬರಿಗೂ ಶಿವಾನುಭವ ಶಾಸ್ತ್ರಜ್ಞಾನ ಪ್ರಸಾರಗೊಳಿಸಲಿಕ್ಕೂ ‘ಶಿವಯೋಗಮಂದಿರ’ ವೆಂಬ ಹೆಸರಿನಿಂದ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಈ ಮಹಾಸಭೆಯವರು ನಿರ್ಣಯ ಮಾಡುತ್ತಾರೆ.’ (ಬೆಳಗು, ಪು. ೪೨)

 

ಆ ಮಹಾಸಭೆಯಾದ ಮರುದಿನವೇ ಶಿವಯೋಗ ಮಂದಿರದ ಆಲೋಚನಾ ಕಮೀಟಿಯವರು ಮಹಾಸಭೆಯ ಮಂಟಪದಲ್ಲಿಯೇ ಶ್ರೀಮಂತ ಮಲ್ಲಪ್ಪಾ ವಾರದ ಊರ್ಫ ಅಪ್ಪಾಸಾಹೇಬರ ಅಧ್ಯಕ್ಷತೆಯಲ್ಲಿ ಕೆಳಗೆ ಕೂಡಿ, ಶಿವಯೋಗ ಮಂದಿರದ ಆಲೋಚನೆಗಳನ್ನೆಲ್ಲಾ ಪ್ರಾರಂಭಿಸಿದ ಬಳಿಕ, ಶಿವಯೋಗ ಮಂದಿರವನ್ನು ಎಲ್ಲಿ ಸ್ಥಾಪಿಸಬೇಕೆಂಬ ಬಗ್ಗೆ ವಿಚಾರ ಮಾಡಿ, ಕಡೆಗೆ ಮಹಾಮಹಿಮರೂ ಪರಮಪೂಜ್ಯರೂ ಶಿವಾನುಭವ ಚರವರ್ಯರೂ ಆದ ಚಿತ್ತರಗಿ ಇಲಕಲ್ಲ ಮಹಾಂತ ಶಿವಯೋಗಿ ಸ್ವಾಮಿಗಳು ಅಪ್ಪಣೆ ಕೊಡಿಸಿದ ಮೇರೆಗೆ ಯೋಗ್ಯವಾದ ಸ್ಥಳಗಳಲ್ಲಿ ಅದನ್ನು ಸ್ಥಾಪಿಸಬೇಕೆಂದು ನಿರ್ಣಯಿಸಿದರು. (ಶ್ರೀಮದ್ವೀರಶೈವ ಶಿವಯೋಗ ಮಂದಿರದ ಪ್ರಥಮ ರಿಪೋರ್ಟ ೧೯೧೧)

 

ವಿಸ್ತೃತ ಆಲೋಚನೆ ಮಾಡಿ ಕೈಗೊಂಡ ನಿರ್ಧಾರವನ್ನು ಮುಂದೆ ಹಾಕುವುದು ಶ್ರೀಗಳವರ ಸ್ವಭಾವವಾಗಿರಲಿಲ್ಲ. ಹದಿನೈದು ದಿವಸಗಳೊಳಗೆ ಇಲಕಲ್ಲಿಗೆ ಹೋಗಿ ಶ್ರೀ ಮಹಾಂತ ಸ್ವಾಮಿಗಳನ್ನು ಹೊರಡಿಸಿ ಶಿವಯೋಗ ಮಂದಿರದ ಸ್ಥಾನವನ್ನು ತೋರಿಸಬೇಕೆಂದು ಆಗ್ರಹ ಮಾಡಿದರು. ಆ ಪ್ರಕಾರ ಶ್ರೀ ಮಹಾಂತ ಸ್ವಾಮಿಗಳು ತಮ್ಮ ಪರಿವಾರದೊಂದಿಗೆ, ಸಮಾಜದ ಪ್ರಮುಖರೊಂದಿಗೆ ಮಲಪ್ರಭಾ ನದಿಯ ದಡದಲ್ಲಿ ಒಂದು ವಿಶಿಷ್ಟ ಸ್ಥಳವನ್ನು ತೋರಿಸುತ್ತಾರೆ. ಅದು ಕಾಡಿನಂತಿತ್ತು ಬಹಳಷ್ಟು ಭಕ್ತರಿಗೆ ಇಷ್ಟವಾಗಲಿಲ್ಲ. ಕೊನೆಗೆ ಹಾನಗಲ್ ಶ್ರೀಗಳವರ ಅಚಲ ನಿರ್ಣಯಕ್ಕೆ ಎಲ್ಲರೂ ಸಮ್ಮತಿಸಿದರು. ಅಪಾರ ಸಾಹಸಪಟ್ಟು ಶ್ರೀ ಮದ್ವೀರಶೈವ ಶಿವಯೋಗ ಮಂದಿರವನ್ನು ಶ್ರೀ ಮನೃಪ ಶಾಲಿವಾಹನ ಶಕೆ ೧೮೩೦ ಕೀಲಕನಾಮ ಸಂವತ್ಸರದ ಮಾಘಮಾಸ ಕೃಷ್ಣಪಕ್ಷ ಸಪ್ತಮಿ ಮಿತಿಗೆ ಸರಿಯಾಗಿ ಸನ್ ೧೯೦೯ನೆಯ ಫೆಬ್ರವರಿ ತಿಂಗಳ ೭ನೇ ತಾರೀಖಿಗೆ ವಿದ್ಯುಕ್ತವಾಗಿ ಪ್ರತಿಷ್ಠಾಪಿಸಲಾಯಿತು.

 

ಏನೊಂದು ಸೌಕರ್ಯವಿಲ್ಲದ ಕಾಡಾರಣ್ಯದಲ್ಲಿ ಸ್ಥಾಪಿಸಲಾದ ಶಿವಯೋಗ ಮಂದಿರದ ಅಭಿವೃದ್ಧಿಗೆ ಅನೇಕ ಸ್ವಾಮಿಗಳು ಹಲವಾರು ಭಕ್ತರು ಸ್ಮರಣಾರ್ಹ ಸೇವೆಯನ್ನು ಸಲ್ಲಿಸಿದರು. ಶಿಕ್ಷಣಕ್ಕೆ, ಶಿವಯೋಗ ಸಾಧನೆಗೆ, ದಾಸೋಹಕ್ಕೆ, ಅತಿಥಿಗಳಿಗೆ, ಗೋಶಾಲೆಗೆ ಮುಂತಾದ ಉದ್ದೇಶಗಳಿಗಾಗಿ ಕಟ್ಟಡಗಳನ್ನು ನಿರ್ಮಿಸುವ ಕೆಲಸ, ಶುದ್ಧ ನೀರಿಗಾಗಿ ಭಾವಿಯನ್ನು ತೊಡಿಸುವ ಕಾರ್ಯ ಭರದಿಂದ ಸಾಗಿತು. ಸುಗಮವಾದ ದಾರಿಯಿಲ್ಲದ, ವಾಹನ ಸಂಚಾರವಿಲ್ಲದ ಕಾಲದಲ್ಲಿ ಭಕ್ತರನ್ನು ಒಲಿಸಿ ಅವರ ಸಹಕಾರದಿಂದ ಮಾಡಲಾದ ಈ ಕಾರ್ಯ ಅನುಪಮ, ಶ್ರೀಗಳ ಕರ್ತೃತ್ವ ಶಕ್ತಿಗೆ ಭವ್ಯ ನಿದರ್ಶನ.

 

ಶ್ರೀಗಳು ವೀರಶೈವ ಮಹಾಸಭೆಯನ್ನು, ಶಿವಯೋಗ ಮಂದಿರವನ್ನು ಸ್ಥಾಪಿಸಿದರೂ ಸಹ ಭಕ್ತ ಮಹನೀಯರಿಂದಲೇ ಎಲ್ಲ ಚಟುವಟಿಕೆಗಳನ್ನು ನೆರವೇರಿಸುತ್ತಿದ್ದರು, ಪ್ರೇರಣೆ ಹಾಗೂ ಮಾರ್ಗದರ್ಶನಗಳನ್ನು ಸದಾ ನೀಡುತ್ತಿದ್ದರು. ಶಿವಯೋಗ ಮಂದಿರವನ್ನು ಸ್ಥಾಪಿಸಿದ ಕೂಡಲೇ ಮಹಾಸಭೆಯ ಸದಸ್ಯರಲ್ಲಿ ೬೦ ಜನ ಸದಸ್ಯರ ಸಮಿತಿಯನ್ನು ರಚಿಸಿ ಶ್ರೀಮಂತ ವಾರದ ಮಲ್ಲಪ್ಪನವರನ್ನು ಮೊದಲನೆಯ ಅಧ್ಯಕ್ಷರನ್ನಾಗಿ ಚುನಾಯಿಸುತ್ತಾರೆ. ಇದರಿಂದ ಆಡಳಿತ ನಿರ್ವಹಣೆಗೆ ಶಿಸ್ತು ಸಂಘಟಿತ ಮನೋಭಾವ ಲಭ್ಯವಾದವು.

ವೀರಶೈವ ಮಹಾಸಭೆಯಿಂದ ೩-೪ ವರ್ಷಗಳಲ್ಲಿಯೇ ಆದ ಮಹಾಪ್ರಯೋಜನಗಳನ್ನು ಶ್ರೀಗಳು ನೋಡಿ ಮಹಾಸಭೆಯ ವಿಷಯದಲ್ಲಿ ವಿಶೇಷವಾದ ಪ್ರೇಮಾದರಗಳುಳ್ಳವರಾಗಿದ್ದರು. ಈ ಮಹಾಸಭೆಯನ್ನು ಸಮಾಜಕ್ಕೆ ಅತ್ಯಂತ ಹಿತಕಾರಿಯಾದುದೆಂದು ದೃಢವಾಗಿ ನಂಬಿದ್ದರು. ಅಂತೆಯೇ ಅದಕ್ಕೆ ಲೋಪ ಉಂಟಾಗುವುದು ಅವರಿಗೆ ವಿಶಾದಕರವಾಗುತ್ತಿತ್ತು.   ಕ್ರಿ. ಶ. ೧೯೦೯ರಲ್ಲಿ ಬಳ್ಳಾರಿಯಲ್ಲಿ ಜರುಗಿದ ಮಹಾಸಭೆಯ ೫ನೇ ಅಧಿವೇಶನಕ್ಕೆ ಉಂಟಾದ ವಿಘ್ನದಿಂದ ಶ್ರೀಗಳು ಪೂಜಾದಿ ಕ್ರಿಯೆಗಳನ್ನು ಬಿಟ್ಟು ವಿಷಾದಪಟ್ಟರು. ವೀರಶೈವ ಸಮಾಜವು ಸಕಲ ಸಂಗತಿಗಳಲ್ಲಿಯೂ ಅಭಿವೃದ್ಧಿ ಹೊಂದಬೇಕೆಂಬ ವಿಷಯದಲ್ಲಿ ಅವರಲ್ಲಿದ್ದ ಅಭಿಮಾನ ಆಕಾಂಕ್ಷೆ ಪರಿಶ್ರಮಗಳು ಅಸಾಧಾರಣವಾಗಿದ್ದವು. ಅಂತೆಯೇ ಬಳ್ಳಾರಿ ಮಹಾಸಭೆಯನ್ನು ಶ್ರೀಗಳು ಕೊನೆಗೆ ಸಮಾಧಾನಕರವಾಗಿ ಜರುಗಿಸಲು ಸಮರ್ಥರಾದರು.

 

ಮುಂದೆ ಮಹಾಸಭೆಯ ಕಾರ್ಯಕಲಾಪಗಳ ರೀತಿ ನೀತಿಗಳು ಶ್ರೀಗಳಿಗೆ ತೃಪ್ತಿಕರವಾಗಿ ತೋರದಿದ್ದುದರಿಂದ “ವೀರಶೈವ ಧರ್ಮೋತ್ತೇಜಕ ಸಭೆ”ಯನ್ನು ಸ್ಥಾಪಿಸಿ ಆ ಮೂಲಕ ಧಾರ್ಮಿಕ ಜಾಗೃತಿಯನ್ನು ಮಾಡಲುಪಕ್ರಮಿಸಿದರು. ತಾವು ಧಾರ್ಮಿಕ ಚಟುವಟಿಕೆಗಳಿಗೆ ಅದೊಂದು ಬೇರೆ ಸಂಸ್ಥೆಯನ್ನು ಮಾಡಿಕೊಂಡರೆ ವಿನಃ ಲೌಕಿಕ ಸುಧಾರಣೆಗಳಿಗೆ ಮಹಾಸಭೆಯು ಅಗತ್ಯವೆಂದೆ ಅವರು ತಿಳಿದಿದ್ದರು.

ಭವ್ಯ ಪರಂಪರೆಯುಳ್ಳ ವೀರಶೈವ ಧರ್ಮವು ಕಾಲ ವೈಚಿತ್ಯದಿಂದ ಅದರ ವಿಚಾರ-ಆಚಾರಗಳ ವಿಷಯಗಳ ಬಗ್ಗೆ ಜನರಲ್ಲಿ ಅಸ್ಪಷ್ಟತೆ, ಅನಾದರ, ಉಪೇಕ್ಷೆ ಕಂಡು ಬರುತ್ತಿರುವುದು ದುರ್ದೈವ. ಸರಳ ಸಂಪದ್ಭರಿತ ವಿಚಾರ ಆಚಾರಗಳ ಅರಿವನ್ನು ಜನರಲ್ಲಿ ಮೂಡಿಸಿ, ತಮ್ಮ ಪರಂಪರೆಯ ಭವ್ಯತೆ ಕಲ್ಪನೆಗಳನ್ನು, ಹಿನ್ನೆಲೆಯನ್ನು ಪುನರುಚ್ಚರಿಸಿ, ಲೌಕಿಕದೊಂದಿಗೆ ಧಾರ್ಮಿಕ ಜೀವನವನ್ನು ಹೇಗೆ ಸಾಧಿಸಲು ಸಾಧ್ಯವೆಂಬುದನ್ನು ಮನಗಾಣಿಸಿ ಅವರಲ್ಲಿ ಧರ್ಮವನ್ನು ಉತ್ತೇಜನಗೊಳಿಸುವ ಉದ್ದೇಶದಿಂದ ಶ್ರೀಮದ್ವೀರಶೈವ ಧರ್ಮೊತ್ತೇಜಕ ಸಭೆಯು ರೂಪುಗೊಂಡಿತು. ಅದರ ಆಶಯವನ್ನು ಆಲೋಚನೆಯನ್ನು ಧಾರವಾಡ ಜಿಲ್ಲೆಯ ಬಂಕಾಪುರ ಗ್ರಾಮದಲ್ಲಿ ಸ್ಪಷ್ಟಪಡಿಸಲಾಯಿತು.

 

ವೀರಶೈವ ಧರ್ಮೊತ್ತೇಜಕ ಸಭೆಯು ಸನ್ ೧೯೧೦ನೇ ಮೇ ತಿಂಗಳ ೧೧/೧೨/೧೩ ಈ ಮೂರು ದಿನಗಳಲ್ಲಿ ಹುಬ್ಬಳ್ಳಿಯ ಶ್ರೀ ಮೂರುಸಾವಿರ ಮಠಾಧ್ಯಕ್ಷ ಶ್ರೀಮನ್ನಿರಂಜನ ಜಗದ್ಗುರು ಶ್ರೀ ಗಂಗಾಧರ ಮಹಾಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಸಭೆಯು ತಾನು ಹಮ್ಮಿಕೊಂಡ ಉದ್ದೇಶವನ್ನು ಕಾರ್ಯಗತಗೊಳಿಸಲು ಕ್ರಮಬದ್ಧ ರೀತಿಯಲ್ಲಿ ಕಾರ್ಯಾನ್ವಯಗೊಳ್ಳುವ ನಿರ್ಣಯಗಳನ್ನು ತೆಗೆದುಕೊಂಡಿತು. ಜನತೆಯಲ್ಲಿ ಧರ್ಮದ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಅದರ ಆಚಾರ-ವಿಚಾರಗಳಲ್ಲಿ ಶ್ರದ್ಧೆಯನ್ನು ಗಟ್ಟಿಗೊಳಿಸುವಲ್ಲಿ ಉತ್ತೇಜಕ ಕ್ರಮಗಳನ್ನು ಕೈಗೊಂಡಿತು.

 

ವೀರಶೈವ ಧರ್ಮೊತ್ತೇಜಕ ಸಭೆಯ ಎರಡನೆಯ ಅಧಿವೇಶನವು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ನಡೆಯಿತು. ಅದರ ಮೂರನೆಯ ಅಧಿವೇಶನವು ಸನ್ ೧೯೧೨ರಲ್ಲಿ ಶಿವಯೋಗ ಮಂದಿರದಲ್ಲಿ ಶಿವರಾತ್ರಿ ಯಾತ್ರಾಮಹೋತ್ಸವ ಸಂದರ್ಭದಲ್ಲಿ ನಡೆಯಿತು.

ವೀರಶೈವ ಸಮಾಜದ ಮೂರು ಅಂಗಗಳಾದ ನಿರಾಭಾರಿಗಳು, ಸ್ಥಿರಚರ ಪಟ್ಟಾಧ್ಯಕ್ಷರು ಹಾಗೂ ಗೃಹಸ್ಥಾಶ್ರಮಿಗಳು, ಧರ್ಮೊತ್ತೇಜಿತರಾಗಿ ಸ್ವಕರ್ತವ್ಯದಲ್ಲಿ ದಕ್ಷರಾದರೆ ಮತಕ್ಕುಂಟಾಗುವ ಮಂಗಲಕ್ಕೆ ಎಣಿಯೇ ಇಲ್ಲ, ಸಭೆಯ ಪ್ರತಿಯೊಂದು ನಿರ್ಣಯವು ಸತ್ವಶಾಲಿ ಆಚರಣೆಯಿಂದ ಪ್ರಚಾರವಾಗಬೇಕು. ಇದು ಪ್ರತಿಯೊಬ್ಬರ ಆದ್ಯ ಕರ್ತವ್ಯವೆಂದು ಮನದಟ್ಟಾಗಬೇಕು. ಒಂದರ್ಥದಲ್ಲಿ ಸಭೆಗಳು ನಿರ್ಣಾಯಕ ಕೇಂದ್ರಗಳಾದರೆ ಶಿವಯೋಗ ಮಂದಿರವು ಪ್ರಯೋಗಶಾಲೆಯಾಗಿಸಬೇಕೆಂಬುದು ಶ್ರೀಗಳ ಹಿರಿಯ ಆಶಯವಾಗಿತ್ತು. ಈ ದಿಶೆಯಲ್ಲಿ ಅವರು ಅನವರತ ಶ್ರಮಿಸಿದರು.

 

ಈ ಅಧಿವೇಶನದಲ್ಲಿ ಕಂಡುಬಂದ ಗಮನೀಯ ಅಂಶವೆಂದರೆ ವೀರಬಸಪ್ಪ ಶ್ರೇಷ್ಠಿಯವರ ವಕ್ತೃತ್ವ ಕಲೆಯನ್ನು ಕಂಡು ಮನನೀಯವಾಗಿ ಪ್ರೋತ್ಸಾಹಿಸಿದ್ದು, ಇನ್ನೊಂದು ಮಹತ್ವದ ನಿರ್ಣಯವೆಂದರೆ, ಬ್ರಹ್ಮಚರ್ಯಾಶ್ರಮ ಪಾಲನ, ಸ್ವಧರ್ಮ ಜ್ಞಾನ, ನೈತಿಕೋನ್ನತಿ ಮುಂತಾದವುಗಳ ಬೆಳವಣಿಗೆಯ ಬಗ್ಗೆ ಶಿವಯೋಗ ಮಂದಿರದಲ್ಲಿ ಶ್ರೀಮನ್ನಿರಂಜನ ಚಿತ್ತರಗಿ ಮಹಾಂತ ಸ್ವಾಮಿಗಳ ಸ್ಮಾರಕಕ್ಕಾಗಿ “ಶ್ರೀ ಮಹಾಂತ ಶಿವಯೋಗಿ ಇನ್ಸ್‌ಟಿಟ್ಯೂಶನ್” ಎಂಬ ಆಂಗ್ಲ ಪ್ರೌಢ ವಿದ್ಯಾಲಯ (ಇಂಗ್ಲಿಷ್ ಹೈಸ್ಕೂಲ)ವನ್ನು ಶಿವಯೋಗ ಮಂದಿರ ಸಂಸ್ಥೆಯಿಂದ ಸ್ಥಾಪಿಸಬೇಕೆಂದುದು.

 

ಶ್ರೀಗಳು ವೀರಶೈವ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕೈಕೊಂಡ ಕಾರ್ಯಗಳು ಬಹುಮುಖಿ ಯಾಗಿದ್ದವು. ಅವುಗಳನ್ನು ಸಂಗ್ರಹಿಸಿ ಹೀಗೆ ತಿಳಿಯಬಹುದು.

 

 ೧. ಶಿಕ್ಷಣ : ಲೌಕಿಕ-ಪಾರಮಾರ್ಥಿಕ ಶಿಕ್ಷಣಗಳೆರಡೂ ಶ್ರೀಗಳ ಪ್ರೇರಣೆ ಹಾಗೂ ಮಾರ್ಗ ದರ್ಶನಗಳಲ್ಲಿ ರೂಪುಗೊಂಡವು. ಮಕ್ಕಳು ಮೊದಲು ಮಾತೃಭಾಷೆಯಾದ ಕನ್ನಡವನ್ನು ಕಲಿಯಬೇಕು. ಅದಕ್ಕಾಗಿ ಅನೇಕ ಪ್ರಾಥಮಿಕ ಶಾಲೆಗಳ ಸ್ಥಾಪನೆಯಾದವು. ಸಂಸ್ಕೃತ ಅಧ್ಯಯನವು ಆವಶ್ಯಕವೆಂದು ಶ್ರೀಗಳು ಹಲವಾರು ಪಾಠಶಾಲೆಗಳನ್ನು ನಾಡಿನಲ್ಲಿ ಮೊದಲಿಗೆ ಸ್ಥಾಪಿಸಿದರು. ಸಂಸ್ಕೃತದ ಪ್ರೌಢ ಶಿಕ್ಷಣ ಪಡೆಯಲು ಕಾಶಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದರು, ಪ್ರೋತ್ಸಾಹಿಸಿದರು. ಇದರಿಂದ ವೀರಶೈವರಲ್ಲಿ ಪಂಡಿತ ಮತ್ತು ಶಾಸ್ತ್ರಿ ವರ್ಗಗಳನ್ನು ಮುಂದೆ ತಂದರು.

ಲೌಕಿಕಕ್ಕೆ ಇಂಗ್ಲಿಷ್ ಭಾಷೆಯ ಜ್ಞಾನದ ಅನಿವಾರ್ಯತೆಯನ್ನು ಮನಗಂಡು ಆ ಭಾಷೆಯ ಅಧ್ಯಯನಕ್ಕೆ ಉತ್ತೇಜನ ನೀಡಿದರು. ಧರ್ಮನಿಷ್ಠರಾದ ಇಂಗ್ಲಿಷ್ ವಿದ್ಯಾವಂತರು ಪರದೇಶಗಳಿಗೆ ಹೋಗಿ ವೀರಶೈವ ಧರ್ಮದರ್ಶನಗಳ ಪ್ರಚಾರ ಮಾಡಬೇಕೆಂಬುದು ಅವರ ಉದ್ದೇಶವಾಗಿತ್ತು ಅದಕ್ಕಾಗಿ ವೀರಬಸಪ್ಪ ಶ್ರೇಷ್ಠಿ ಎಂಬ ವಕ್ತೃವನ್ನು ಗುರುತಿಸಿ ಆತನಿಗೆ ಎಲ್ಲ ವಿಧದ ಸೌಕರ್ಯ ಕಲ್ಪಿಸಿಕೊಟ್ಟರು. ಆದರೆ ಅದು ಈಡೇರಲಿಲ್ಲ.

ಶ್ರೀಗಳ ಪ್ರೇರಣೆಯಿಂದ ಶಿರಸಂಗಿ ಲಿಂಗರಾಜರು ತಮ್ಮ ಆಸ್ತಿಯನ್ನೆಲ್ಲ ಸಮಾಜದ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಅನುಕೂಲತೆಗಾಗಿ ಧಾರೆಯೆರೆದರು. ಅವರ ಮೃತ್ಯುಪತ್ರದ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ನಡೆದಾಗ ಹಾನಗಲ್ಲ ಶ್ರೀಗಳವರೇ ಅದಕ್ಕಾಗಿ ಆರ್ಥಿಕ ಸಹಾಯವನ್ನು ದಯಪಾಲಿಸಿದರಲ್ಲದೆ ಅಭಿಮಾನಿ ಭಕ್ತರಿಂದ ಕೊಡಿಸಿದರು ಮತ್ತು ಶಿವಯೋಗ ಮಂದಿರ ಸಂಸ್ಥೆಯಿಂದ ಎರಡು ಸಾವಿರ ರೂಪಾಯಿಗಳನ್ನು ಕೊಡಮಾಡಿದರು. ಶ್ರೀಗಳ ಪರಿಶ್ರಮ ಹಾಗೂ ಸದಿಚ್ಛೆಯ ಫಲವಾಗಿ ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ‘ಲಿಂಗಾಯತ ಫಂಡಿ’ಗೆ ಅನುಕೂಲವಾಗುವಂತೆ ಆಯಿತು. ಮುಂದೆ ಉತ್ತರ ಕರ್ಣಾಟಕದಲ್ಲಿ ಶ್ರೀಗಳು ದಯಮಾಡಿಸಿದಲ್ಲೆಲ್ಲ ಎ. ವ್ಹಿ ಸ್ಕೂಲುಗಳಿಗೆ ಧನ ಸಹಾಯ ಒದಗಿಸುತ್ತಲೇ ಇದ್ದರು. ಶ್ರೀಗಳ ಮಹತ್ತರ ಕೊಡುಗೆ ಎಂದರೆ ಅವರು ಸಂಗೀತ ಶಿಕ್ಷಣಕ್ಕೆ ನೀಡಿದ ಪ್ರೇರಣೆ ಹಾಗೂ ಪ್ರೋತ್ಸಾಹಗಳು ಒಬ್ಬ ಪಂಚಾಕ್ಷರ ಗವಾಯಿಗಳನ್ನು ಸೃಷ್ಟಿಸಿದ ಶ್ರೀಗಳ ಕರ್ತೃತ್ವ ಧೀಶಕ್ತಿ ಇಂದು ನಾಡಿನಾದ್ಯಂತ ಸಂಗೀತ ಸಾಧನೆಯಲ್ಲಿ ಪ್ರಕಟವಾಗುತ್ತದೆ.

 

೨. ಪ್ರಕಟನ-ಪ್ರಸಾರ : ವೀರಶೈವ ಸಾಹಿತ್ಯ ಧರ್ಮ ಹಾಗೂ ಸಂಸ್ಕೃತಿಗಳು ಪ್ರಸಾರವಾಗ ಬೇಕೆಂಬುದು ಶ್ರೀಗಳ ಕಳಕಳಿ, ಪ್ರಸಾರಕ್ಕೆ ಪತ್ರಿಕೆಗಳು ಬೇಕು. ವೀರಶೈವ ವಾಙ್ಮಯವನ್ನು ಸಣ್ಣ ಸಣ್ಣ ಪುಸ್ತಕಗಳ ರೂಪದಲ್ಲಿ ಪ್ರಕಟಿಸಬೇಕು. ಅವು ಜನರ ಕೈ ಸೇರಬೇಕು. ಶ್ರೀಗಳ ನೆರವಿನಿಂದ ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿದ್ದ ಮುದ್ರಣ ಯಂತ್ರವು ಧಾರವಾಡದ ಶ್ರೀ ಶಿವಲಿಂಗ ಶಾಸ್ತ್ರಿಗಳಿಗೆ ದೊರೆಯಿತು. ಶ್ರೀಗಳ ಕೃಪಾಬಲದಿಂದ ಶಾಸ್ತ್ರಿಗಳು ‘ಧರ್ಮತರಂಗಿಣಿ’ ಎಂಬ ಧಾರ್ಮಿಕ ಮಾಸಿಕವನ್ನು ಸಂಪಾದಿಸಿ ಸೇವೆ ಸಲ್ಲಿಸಿದರು. ಗದಗಿನಲ್ಲಿ ಶ್ರೀ ಸಿದ್ದಲಿಂಗ ವಿಜಯ ಮುದ್ರಣಾಲಯವನ್ನು ಸ್ಥಾಪಿಸುವುದು ಶ್ರೀಗಳ ಹರಸಾಹಸದಿಂದ ಮಾತ್ರ ಸಾಧ್ಯವಾಯಿತು. ಜೊತೆ ಜೊತೆಗೆ ಧರ್ಮಪ್ರಸಾರಕ್ಕಾಗಿ ಕೀರ್ತನಕಾರರು, ಪುರಾಣಿಕರು, ಶಾಸ್ತ್ರಿಗಳನ್ನು ಸಿದ್ಧಮಾಡಿದರು.

೩. ವೀರಶೈವ ಸಾಹಿತ್ಯ ಧರ್ಮಸಂಸ್ಕೃತಿಗಳ ಜೀವಾಳವಾದ ಓಲೆಗರಿ, ಕೋರಿಕಾಗದದ ಹೊತ್ತಿಗೆಗಳು ಮನೆ ಮಠಗಳಲ್ಲಿ ಮೂಲೆಗುಂಪಾಗಿದ್ದವು. ಎಷ್ಟೋ ಹಾಳಾಗಿದ್ದವು. ಶ್ರೀಗಳು ದಯಮಾಡಿಸಿದಲ್ಲೆಲ್ಲ ಈ ಅಮೂಲ್ಯ ಸಂಪತ್ತನ್ನು ಹುಡುಕಿ ಸಂಗ್ರಹಿಸಿದರು. ಅದನ್ನು ಜೋಪಾನವಾಗಿ ಶಿವಯೋಗ ಮಂದಿರದಲ್ಲಿ ಕೂಡಿಟ್ಟರು. ಒಂದು ಗ್ರಂಥಾಲಯ ಹುಟ್ಟಿತು. ಸಂಶೋಧನ ಕೇಂದ್ರ ಮಾಡುವದು ಶ್ರೀಗಳವರ ಆಶಯವಾಗಿತ್ತು.

 

. ಶ್ರೀಗಳು ಸಂಪದಭಿವೃದ್ಧಿಗೆ ಮೂಲವಾದ ಆಧುನಿಕ ಉದ್ಯೋಗಗಳತ್ತ ಗಮನ ನೀಡಿದರು. ಶಿವಯೋಗ ಮಂದಿರದ ಆರ್ಥಿಕ ಭದ್ರತೆಗೆಂದು ಬಾಗಿಲಕೋಟೆಯಲ್ಲಿ ಶಿವಾನಂದ ಜಿನ್ನಿಂಗ ಮತ್ತು

ಪ್ರೆಸ್ಸಿಂಗ ಫ್ಯಾಕ್ಟರಿಯನ್ನು ಆಗ ಎರಡು ಲಕ್ಷ ರೂಪಾಯಿಗಳ ದೊಡ್ಡ ಬಂಡವಾಳ ಹಾಕಿ ಸ್ಥಾಪಿಸಿದರು. ಅದು ಶಿವಯೋಗ ಮಂದಿರದ ಆರ್ಥಿಕ ಬಲಕ್ಕೆ ಬೆನ್ನಲವಿನಂತೆ ಇದೆ. ಬಾಗಿಲುಕೋಟೆಗೆ ಬಂದ ಸ್ವಾಮಿಗಳಿಗೆ ಒಂದು ಅನುಕೂಲವಾದ ನಿವಾಸವಾಗಿದೆ. ಅದರ ಜೊತೆಗೆ ಒಂದು ಚಲನಚಿತ್ರ ಮಂದಿರವೂ ಇದೆ. ಶ್ರೀಗಳವರ ಬುದ್ದಿವೈಭವ, ದೂರದೃಷ್ಟಿ, ಚಾಣಾಕ್ಷತನಗಳು ಅಪರಿಮಿತ ಹಾಗೂ ಅಸಾಧಾರಣವಾಗಿದ್ದವು. ಅವರು ತೋರಿದ ಉದ್ಯೋಗ ಸೃಷ್ಟಿಯ ಪಾಠವನ್ನು ಸಮಾಜ ಅನುಸರಿಸಿದ್ದರೆ…ಏನೆಲ್ಲ ಎಟುಕುತ್ತಿತ್ತು,

 

. ವ್ಯವಹಾರ-ವ್ಯಾಪಾರ ದ್ರೋಹಚಿಂತನವಾಗಿರಬಾರದು. ಅದು ಬಸವಣ್ಣನವರ ಮಹದೇವ ಶೆಟ್ಟಿಯ ವ್ಯಾಪಾರದಂತೆ ನಡೆದರೆ ಶಿವನಿಗೆ ಸಲ್ಲುವದು. ಇದು ಶ್ರೀಗಳ ಧೋರಣೆಯಾಗಿತ್ತು ಬಾಗಿಲುಕೋಟೆಯ ಶಿವಾನಂದ ಜಿನ್ನಿಂಗ್ ಫ್ಯಾಕ್ಟರಿಯ ಅಂಗವಾಗಿ ಒಂದು ಕಬ್ಬಿಣದ ಅಂಗಡಿಯನ್ನು

ಇಡಿಸಿದರು. ವ್ಯಾಪಾರವನ್ನು ಸಹ ಸತ್ಯಶುದ್ಧ ಕಾಯಕವನ್ನಾಗಿ ಮಾಡಿಕೊಳ್ಳಲು ಸಾಧ್ಯ ಎಂಬುದಕ್ಕೆ

ನಿದರ್ಶನವಾಗಿತ್ತು ಈ ಪ್ರಯೋಗ.

 

೬. ಭೂರಕ್ಷಣೆ ಹಾಗೂ ಗೋಮಾತೆಯ ಪಾಲನೆ ಶ್ರೀಗಳವರ ಆಸಕ್ತಿಯ ಕಾರ್ಯಕ್ರಮ ಗಳಾಗಿದ್ದವು. ಪ್ರತಿ ವರ್ಷ ಶಿವಯೋಗ ಮಂದಿರದ ಜಾತ್ರೆಯಲ್ಲಿ ಒಕ್ಕಲುತನ ಹಾಗೂ ದನಗಳ ಪ್ರದರ್ಶನಗಳನ್ನು ಏರ್ಪಡಿಸಿ ಒಕ್ಕಲಿಗರಿಗೆ ಪ್ರೇರಣೆ ನೀಡುತ್ತಿದ್ದರು. ಶಿವಯೋಗ ಮಂದಿರದಲ್ಲಿ ಶುದ್ಧವಾದ ಭಸ್ಮಗಳನ್ನು ತಯಾರಿಸುವುದನ್ನು ಆರಂಭಿಸಿ ಮಹದುಪಕಾರ ಮಾಡಿದರು.ʼʼಶಿವಕಲ್ಪ ಭಸ್ಮʼ’ ತಯಾರಿಸಿದ್ದು ಶ್ರೀಗಳ ಮಹಾನ್ ಪ್ರಯೋಗ.

ಈ ಸರ್ವಾಂಗೀಣ ಕಾರ್ಯಕ್ರಮಗಳಲ್ಲಿ ಎದ್ದುಕಾಣುವ ಒಂದು ಕಾರ್ಯವೆಂದರೆ ಶ್ರೀಗಳು ಪರಳಿಯ

ವೈಜನಾಥ ದೇವಾಲಯವನ್ನು ಕುರಿತು ಉಂಟಾದ ಸುಪ್ರಸಿದ್ಧ ವ್ಯಾಜ್ಯದಲ್ಲಿ ಪ್ರಮುಖತ್ವವನ್ನು ವಹಿಸಿ,

ಪ್ರಕರಣದಲ್ಲಿ ಕೊನೆಗೆ ವೀರಶೈವರಿಗೆ ಜಯ ದೊರೆಯಲು ಕಾರಣೀಭೂತರಾದದ್ದು

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪರಳಿಯ ವೈಜನಾಥ ದೇವಾಲಯದ ಪೂಜಾದಿ ವ್ಯವಸ್ಥೆಯು ವೀರಶೈವ ಜನಾಂಗದ ಆಡಳಿತೆಯಲ್ಲಿ ನಡೆದು ಬಂದಿತ್ತು, ಆದರೆ ಕೆಲವರು ವೀರಶೈವರು ಶೂದ್ರರು; ಅವರಿಗೆ ವೈಜನಾಥನ ಆರಾಧನೆ ಮಾಡುವ ಅಧಿಕಾರವಿಲ್ಲವೆಂದು ಶ್ರಾವಣ ಮಾಸದ ವಿಶೇಷ ರುದ್ರಾಭಿಷೇಕದ ಪೂಜೆಗೆ ಆಂತಕವನ್ನುಂಟು ಮಾಡಿದರು. ಈ ವಿವಾದ ಕೋರ್ಟಿಗೆ ಹೋಯಿತು. ತಾಲೂಕು ಜಿಲ್ಲೆಗಳ ಕೋರ್ಟುಗಳಲ್ಲಿ ಯಾವ ನಿರ್ಣಯವೂ ಆಗದೆ ನಿಜಾಮರ ಹೈದರಾಬಾದು ಸ್ಟೇಟಿನ ‘ಉಮರ ಮಜಹಬಿ’ ಎಂಬ ಉಚ್ಚ ನ್ಯಾಯಾಲಯದಲ್ಲಿ ಈ ವ್ಯಾಜ್ಯದ ನಿರ್ಣಯವಾಗಬೇಕಾಗಿತ್ತು. ಅದಕ್ಕೆ ಅಪಾರವಾದ ಆರ್ಥಿಕ ಸಹಾಯ ಮತ್ತು ಸಂಸ್ಕೃತ ವಿದ್ವಾಂಸರ ಸಹಕಾರ ಅಗತ್ಯವಾಗಿ ಬೇಕಾಗಿದ್ದಿತು. ವೀರಶೈವ ಸಮಾಜದ ಮಾನರಕ್ಷಣೆಗಳು ಕಾಲ ಒದಗಿ ಬಂದಿತು. ಆಗ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಈ ಪ್ರಕರಣದಲ್ಲಿ ವಿಜಯ ಗಳಿಸುವ ದೃಢ ವಿಶ್ವಾಸದಿಂದ ಟೊಂಕ ಕಟ್ಟಿ ನಿಂತರು.

 

ಪರವಾದಿಗಳು ಪುಣೆ ಮೊದಲಾದ ನಗರಗಳಿಂದ ಪ್ರಸಿದ್ಧ ಸಂಸ್ಕೃತ ಪಂಡಿತರನ್ನು ಕರೆಯಿಸಿದ್ದರು. ಶ್ರೀಗಳವರು ಸಮಾಜದಲ್ಲಿರುವ ಪಂಡಿತರು ಹಾಗೂ ಶಾಸ್ತ್ರಿಗಳಿಗೆ ಅಭಿಮಾನದ ಕರೆಯಿತ್ತರು. ಒಂದು ಪಂಡಿತರ ಮಂಡಲಿಯನ್ನೇ ಶ್ರೀಗಳು ಕರೆತಂದರು. ಅದಕ್ಕೆ ತಗಲುವ ವೆಚ್ಚವನ್ನು ಪೂರೈಸಲು ಶ್ರೀಗಳು ಮಾಡಿದ ಪ್ರಯತ್ನ ಅಸಾಧ್ಯವಾದದ್ದು. ದೇವಾಲಯವಿರುವ ಊರಿನ ಜನರೇ ಹಿಂದಕ್ಕೆ ಸರಿದರು. ಮೊದಮೊದಲು ಅಭಿಮಾನ ತೋರಿದ ಪ್ರಮುಖರೆಲ್ಲ ಕೈಕೊಟ್ಟರು. ಎಲ್ಲ ಭಾರ ಶ್ರೀಗಳ ಮೇಲೆಯೇ ಅವಲಂಬಿಸಿತು. ಅವರಿಗೆ ಅನುಕೂಲರಾಗಿ ಬಾರ್ಸಿಯ ದೇಶಮುಖರು ಕೆಲಸ ಮಾಡುತ್ತಿದ್ದರು.

 

ಶ್ರೀಗಳವರು ಈ ಕಾರ್ಯಕ್ಕಾಗಿ ೬ ತಿಂಗಳು ಹೈದರಾಬಾದಿನಲ್ಲಿದ್ದು ಹಗಲಿರುಳು ಶ್ರಮವಹಿಸಿದರು. ಅವರ ಶ್ರಮಕ್ಕೆ ಸರಿಯಾದ ಪ್ರತಿಫಲ ವಿಜಯ ದೊರೆಯಿತು.

 

ಮೂರು ಜನ ಜಡ್ಜಗಳ ಸಹಿಯಿಂದ ೪೦೦ ಪುಟದ ಜಜ್ಡಮೆಂಟ ಹೊರಬಿದ್ದಿತು. ಅದರಲ್ಲಿ ವೀರಶೈವರು ಉತ್ತಮ ವರ್ಣದವರು, ಅವರದು ಸ್ವತಂತ್ರ ಸಮಾಜ. ಈ ಸಮಾಜದವರಿಗೆ ರುದ್ರಾಭಿಷೇಕ ಮಾಡುವ ಹಕ್ಕಿದೆ. ಆದ್ದರಿಂದ ಪರಳಿಯ ವೈಜನಾಥ ಲಿಂಗಕ್ಕೆ ಮಾಡುವ ರುದ್ರಾಭಿಷೇಕಕ್ಕೆ ಯಾರೂ ಅಡ್ಡಿ ಮಾಡಕೂಡದು. ಆ ಕಾರಣ ಪರಳಿಯ ವಾದಿಗಳ ಈ ದಾವೆಗಳನ್ನು ಕಿತ್ತು ಹಾಕುತ್ತೇವೆಂದು ನಿಜಾಮರ ಸಹಿಯಿಂದ ಕೊನೆಗೆ ಸರಕಾರದ ಗೆಜೆಟಿನಲ್ಲಿ ಪ್ರಕಟಿಸಿದರು.

 

೧೯೨೫ರಲ್ಲಿ ನಡೆದ ಈ ವ್ಯಾಜ್ಯಕ್ಕೆ ಇಂದಿನ ಕಾಲಮಾನದಲ್ಲಿ ಮಹತ್ವವಿಲ್ಲದಿರಬಹುದು. ಆದರೆ ಸಮಾಜದ ದೃಷ್ಟಿಯಿಂದ ಪರವಾದಿಗಳನ್ನು ಎದುರಿಸಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲೇಬೇಕಾಗುತ್ತದೆ. ಶ್ರೀಗಳವರು ತಮ್ಮ ಅಪ್ರತಿಮ ಸಾಹಸದಿಂದ ಪರವಾದಿಗಳನ್ನು ನಿಗ್ರಹಿಸಿ ಸಮಾಜಕ್ಕೆ ಬಂದಿದ್ದ ದೊಡ್ಡ ಕಲಂಕವನ್ನು ತೊಳೆದು ಹಾಕಿ ಅದು ಮತ್ತಷ್ಟು ಉಜ್ವಲವಾಗಿ ಬೆಳಗುವಂತೆ ಮಾಡಿದರು. ನಮ್ಮಲ್ಲಿಯೂ ಜೀವವಿದೆ, ಸತ್ತ್ವವಿದೆ, ಬುದ್ಧಿ ಸಾಮರ್ಥ್ಯವಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಶ್ರೀಗಳು ವೀರರು ಹಾಗೂ ಧೀರರು.

 

ಹೀಗೆ ಶ್ರೀ ಕುಮಾರ ಶಿವಯೋಗಿಗಳ ಕಾಲವು ವೀರಶೈವ ಸ್ಥಿತಿಗತಿಗಳ ಶೋಚನೀಯ ಕಾಲವೂ ಹೌದು, ಸೌಭಾಗ್ಯದ ಕಾಲವೂ ಹೌದು ಎಂದೆನಬೇಕಾಗುತ್ತದೆ. ಹಲವಾರು ಆಂತರಿಕ ಹಾಗೂ ಬಾಹ್ಯ ಕಾರಣಗಳಿಂದಾಗಿ ಸಮಾಜವು ಒಮ್ಮೆಲೇ ಮೈಕೊಡವಿಕೊಂಡು ಎಚ್ಚತ್ತು ವಿವೇಕಯುತವಾಗಿ ವರ್ತಿಸಿ ಸಮಾಜದ ನಿಶ್ಚಿತ ಗತಿ ಗಮನಗಳನ್ನು ಗುರುತಿಸಿಕೊಂಡುದು, ಸಕ್ರಿಯವಾಗಿ, ಸಾಂಘಿಕವಾಗಿ ಸಾಗಿ ಬಂದು ಸಾರ್ಥಕತೆಯ ನೆಲೆ ತಲುಪಿದುದನ್ನು ಇತಿಹಾಸವಿಂದು ತಿಳಿಯಪಡಿಸುತ್ತದೆ.

ಈ ಕಾಲ ಸಂದರ್ಭದ ವೀರಶೈವ ಸಮಾಜದಲ್ಲಿ ಅನೇಕ ಮಹನೀಯರು ಕಂಡುಬರುತ್ತಾರೆ. ಗ್ರಂಥ ಪ್ರಚಾರ ಮಾಡಿದ ಮಹನೀಯರು ಕೆಲವರು, ವಿದ್ಯಾಪ್ರಚಾರ ಮಾಡಿದ ಪುಣ್ಯಾತ್ಮರು ಕೆಲವರು, ತತ್ತ್ವೋಪದೇಶ ಮಾಡಿದವರು ಕೆಲವರು, ಪಾಠಶಾಲೆಗಳನ್ನು ಸ್ಥಾಪಿದವರು ಕೆಲವರು, ಯೋಗವಿದ್ಯೆಯನ್ನು ಕಲಿಸಿದವರು ಕೆಲವರು, ಪರವಾದಿಗಳ ನಿಗ್ರಹ ಮಾಡಿದವರು ಕೆಲವರು, ಸದಾಚಾರಕ್ಕೆ ಮಾರ್ಗದರ್ಶಕ ರಾದವರು ಕೆಲವರು, ಸಮಾಜದ ಸಂಘಟನೆಗಾಗಿ ಪ್ರಯತ್ನಿಸಿದವರು ಕೆಲವರು, ಸರ್ವಾರ್ಪಣ ಮಾಡಿದವರು ಕೆಲವರು, ಜನರನ್ನು ಸಂಘಟಿಸಿ ಒಂದು ಧೈಯಕ್ಕೆ ಒಡ್ಡಿದವರು ಕೆಲವರು. ಈ ಎಲ್ಲರನ್ನೂ ಇವೆಲ್ಲವನ್ನೂ ಸಾಧಿಸಿದ ಸಿದ್ಧಿಸಿದ ಏಕೈಕ ವ್ಯಕ್ತಿ ಎಂದರೆ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು.

ಶ್ರೀಗಳು ಕೀರ್ತಿಯನ್ನು ತಿರಸ್ಕರಿಸಿದರು. ಆದರೆ ಕೀರ್ತಿ ಅವರನ್ನು ಎಡಬಿಡದೆ ಪುರಸ್ಕರಿಸಿತು. ಅವರು ಪಲ್ಲಕ್ಕಿಯನ್ನೇರಲಿಲ್ಲ. ಆದರೆ ಪಲ್ಲಕ್ಕಿಯನ್ನೇರಿದವರು ಇವರ ಸನ್ನಿಧಿಗೆ ಎರಗದಿರಲಿಲ್ಲ.

 

ಪರಮಾಶ್ಚರ್ಯದ ಸಂಗತಿಯೆಂದರೆ, ಶ್ರೀಗಳ ೬೩ ವರ್ಷದ ಈ ಜೀವನ ಯಾತ್ರೆಯಲ್ಲಿ ಅವರು

ಸಾರ್ವಜನಿಕ ರಂಗಕ್ಕೆ ಪ್ರವೇಶಿಸಿದ್ದು ತಮ್ಮ ೩೬ನೆಯ ಪ್ರಾಯಕ್ಕೆ, ಮುಂದಿನ ೨೭ ವರ್ಷದ ಆಯುಷ್ಯದ ಪ್ರತಿ ಕ್ಷಣವೂ ಅವರ ಪ್ರಾಣವೀಣೆ ಸಮಾಜೋನ್ನತಿಯ ರಾಗವನ್ನು ಹಾಡುತ್ತಿತ್ತು ಸಮಾಜದ ಏಳ್ಗೆಯ ಬಯಕೆಯು ಅವರ ಹಸ್ತವು ಅವರ ಸನಿಹಕ್ಕೆ ಬರುತ್ತಿದ್ದ ಸಮರ್ಥ ವ್ಯಕ್ತಿ ತಂತಿಗಳನ್ನು ಮೀಟುತ್ತಿತ್ತು’ ಎಂಬ ಜಚನಿಯವರ ಮಾತುಗಳು ಕಾವ್ಯಮಯವಾಗಿದ್ದರೂ ಶ್ರೀಗಳ ಅಂತಶ್ವೇತನದ ಚಿತ್ರವನ್ನೇ ನೀಡುತ್ತವೆ.

 

ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ 94 ನೆಯ ಪುಣ್ಯಸ್ಮರಣೆಯ ನಿಮಿತ್ತ  ಒಂದು ವಿಶೇಷ ಡಾ. ಬಸವರಾಜ ಪುರಾಣಿಕ ಅವರ ಉತ್ಕೃಷ್ಠ ಲೇಖನ ಪ್ರಕಟಿಸುತ್ತಿದ್ದೇವೆ.

ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ ಮತ್ತು ಕರ್ನಾಟಕ ಅರ್ಪಣೆಯ  ವೆಬಸೈಟ ಗಳ

ವಿನ್ಯಾಸ ಪ್ರಕ್ರಿಯೆ ಮಹಾಶಿವರಾತ್ರಿ ೦೮-೦೩-೨೦೨೪ ಪವಿತ್ರ ದಿನದಂದು ಆರಂಭಗೊಂಡಿರುವದನ್ನು ತಿಳಿಸಲು ಹರ್ಷವೆನಿಸುತ್ತದೆ.

ಲೋಕಾರ್ಪಣೆ  ಬಸವ ಜಯಂತಿ ೧೦-೦೫-೨೦೨೪ ಯ ಪವಿತ್ರ ದಿನದಂದು ಅನಾವರಣಗೊಳ್ಳುವುದು..

 

ಶ್ರೀಕುಮಾರ ತರಂಗಿಣಿ  ೨೦೨೪ ಮಾರ್ಚ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೩ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಮಠಾಧಿಪತ್ಯ-ಪಾಠಶಾಲಾ ಕೃತ್ಯ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. ಆಹಾರ-ವಿಹಾರ;ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
  5. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಡಾ. ಬಸವರಾಜ ಪುರಾಣಿಕ

 

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣ ತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

 

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

 

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

ಪರ ಶಿವಯೋಗದ ಸಾರ |

ಕರುಣ ವಿಹಾರ | ತೋಂಟದಾರ್ಯ ಹೋ || 1 ||

 

ಮನವು ನೇತ್ರವು ಸುಷುಮ್ನದಿ ಕೂಡಿ |

ತನುವನು ಮೀರಿ ಶಿವಸುಭಾನುತೋಷ |

ಆನಂದಸಕ್ತ ಗುಹದಲಿ ನೀ

ಅನನ್ಯ ವಿಲಾಸ ಹೋ                                   || 2 ||

 

ಶರಣಲೋಕ ಮುನ್ನ ಪರಿದು ಬಂದು ನಿನ್ನ |

ಮರೆಯೊಳು ಸಾರೆ ವರವಿಜ್ಞಾನವನ್ನು |

ಪರಂಪರಾನಂದಭ್ಧಿಯಾ ಕರುಣಿಸಿ |

ಪರಿಪಾಲಿಸೆನ್ನ ಹೋ                                || 3 ||

 

ಸಿದ್ಧಲಿಂಗ ಭೂಷ ಬದ್ಧಜೀವ ಪಾಶ |

ವಿದ್ದುರೆ ಸಾರೆ ಸಿದ್ಧ ಶಿವಯೋಗ ವಾಸ |

ಸಿದ್ಧಾಂತ ಶೇಖರಾವೇಶ ಮುದದೊಳು ನೀ

ಪರಿಪಾಲಿಸೇಶ ಹೋ                              || 4 ||

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

 

 

 

ಮಿನುಗುವ ದ್ವಾದಶ ಪತ್ರ | ದನಹತ ಚಕ್ರದೊಳು ವಾ

ಮನು ಘನ ವಿಗ್ರಹಚಿನುಮಯದ ಚರಲಿಂಗ

ವನು ತೋರ್ದ ಗುರುವೆ ಕೃಪೆಯಾಗು   ||೧೪೨||

 

ನಾಭಿಸ್ಥಾನದ ಮೇಲಿರುವುದು ಹೃದಯ. ಈ ಹೃದಯವೇ ಅನಾಹತ ಅಥವಾ ಅನಹತ ಚಕ್ರಕ್ಕೆ ತಾಣ. ಇದು ಹನ್ನೆರಡು ದಳಗಳಿಂದ ಮಿನುಗುತ್ತದೆ.  ಹೃದಯ ಕಮಲದಲ್ಲಿ ಎಂಟುದಳಗಳು ಸ್ಫುಟವಾಗಿಯೂ ನಾಲ್ಕು ದಳಗಳು ಗೋಪ್ಯಾವಾಗಿರುತ್ತವೆಂಬುದಲ್ಲಿ ಎಂಬತ್ತೆಂಟುನೆಯ ತ್ರಿಪದಿಯ ವ್ಯಾಖ್ಯಾನದಲ್ಲಿ ಅರಿತಿದ್ದೇವೆ. ಜಿವಾತ್ಮನು ಕೇವಲ ಕೆಳಮುಖಗಳಾದ ಎಂಟು ದಳಗಳಲ್ಲಿ ಸಂಚರಿಸುವನು. ಆ ದಳಕ್ರಮದಂತೆ ವಿಭಿನ್ನ ವೃತ್ತಿಯುಳ್ಳವನಾಗುವವನಲ್ಲದೆ ಊರ್ಧದಳದ ಮಧ್ಯದ ಮಹಾದೇವನನ್ನು ಮರೆಯುವನು. ಇಲ್ಲಿಯೇ ʼವಾʼ ಕಾರ ಮಂತ್ರ ಮೂರ್ತಿಯಾದ ಚಿನ್ಮಯರೂಪಿ ಚರಲಿಂಗವಿರುವದು. ಈ ಜಂಗಮಲಿಂಗವು ಮಾಂಜಿಷ್ಟವರ್ಣದ ಸುಮನ ಪದ್ಮದಲ್ಲಿ ಅರ್ಧಚಂದ್ರಾಕೃತಿಯುಳ್ಳದು. ಸದ್ಗುರುನಾಥನು ಇಂಥ ಅನುಪಮ ಜಂಗಮ ಲಿಂಗವನ್ನು ತೋರಿಸಿ ಉದ್ದರಿಸುವನು. ಭಕ್ತನು ಲಿಂಗವನ್ನು ಪೂಜಿಸಿ ಜಂಗಮನ ಬರುವಿಕೆಗಾಗಿಯ ಹಾರೈಸಬೇಕಾದುದು ಅವನ ಕರ್ತವ್ಯವಲ್ಲವೆ.

 

ʼʼನವಲಿಂಗ ಸಾಹಿತ್ಯ’ʼ ದಲ್ಲಿ ಜಂಗಮಲಿಂಗದ ವಿವರ ಕೆಳಗಿನಂತಿದೆ –

ಜಂಗಮಲಿಂಗ : ಇದಕ್ಕೆ ಅನಾಹತವೆ ನೆಲೆ; ಯಜನವೆ ಕಲೆ, ತ್ವಙ್ಮುಖ ಅರ್ಧಚಂದ್ರಾಕೃತಿ, ನಿತ್ಯರೂಪು, ಅಷ್ಟಮಿಯ ಚಂದ್ರನಿಗೆ ಅರ್ಧಚಂದ್ರವೆಂದು ಹೆಸರು. ಅಷ್ಟಕಲೆಗಳಿಂದ ಕೂಡಿ ಅಷ್ಟಮದಗಳ ಕಳೆದು ಅಷ್ಟವಿಧ-ಪೂಜೆಗೊಳ ಪಡುವದೆ ಜಂಗಮಲಿಂಗ. ಇದು ದ್ವಾದಶ-ದಳದ ಸುಮನ ಪದ್ಮದಲ್ಲಿ  ಮಂಡಿಸಿರುತ್ತದೆ’. (ಪುಟ ೭೪ರಲ್ಲಿ)

 

ಹೃದಯ ಕಮಲದ ಆನಂದ ಬ್ರಹ್ಮವೇ ಇಷ್ಟಲಿಂಗದಲ್ಲಿ ಜಂಗಮಲಿಂಗವಾಗಿ ಕೂಡಿಕೊಂಡಿರುವದು. ಅಂದರೆ ಆನಂದಮಯನೇ ಜಂಗಮನು. ಅಲ್ಲದೆ ಭಕ್ತರನ್ನು ಆನಂದಗೊಳಿಸುವವನು ಜಂಗಮನು ಜ್ಞಾನಮೂರ್ತಿಯು. ಅದುಕಾರಣ ಜಂಗಮ ಲಿಂಗವನ್ನು ಅನಾಹತ ಚಕ್ರದಲ್ಲಿ ಸಂದರ್ಶಿಸಿ ಪೂಜಿಸುವವನಿಗೆ ಆನಂದಕ್ಕೆ ಕುಂದೇ ಇಲ್ಲ.  ಇಂಥ ಕುಂದು ಕೊರತೆಗಳಿಗೆ ಇಂಬಿಲ್ಲ . ಚಿನುಮಯರೂಪಿ ಚರಲಿಂಗವನ್ನು ತೋರಿ ಅನುಸಂಧಾನ ಮಾಡಹಚ್ಚಿದ ಪರಮ ಗುರುವೇ ನಿನಗೆ ವಂದನೆ.

 

 

ಹದಿನಾರು ಳದಾ ವಿ | ಶುದ್ಧಿ ಚಕ್ರದೊಳಿರ್ಪ

ಸದಮಲ  ಪ್ರಣವ –ದು ಶೇಷಲಿಂಗ ವೆಂ

ಬುದ ಪೇಳ್ದ ಗುರುವೆ ಕೃಪೆಯಾಗು     || ೧೪೩||

 

ಹೃದಯ ಕಮಲವನ್ನು ಮೇಲೇರಿ ಬರಲು ವಿಶುದ್ವಿ ಚಕ್ರವು ಸಿಕ್ಕುವದು.  ಇದು ಹದಿನಾರು ದಳಗಳಿಂದ ಶೋಭಿಸುತ್ತದೆ. ವಿಶುದ್ಧಿ ಚಕ್ರಕ್ಕೆ ಕಠವೇ ಆಶ್ರಯ ಸ್ಥಾನ.  ಕೆಳಗಿನ ನಾಲ್ಕು ಪದ್ಮಗಳಲ್ಲಿ ೩೨ ವ್ಯಂಜನಗಳೇ ದಳಾಕ್ಷರಗಳಾದರೆ ಶುದ್ಧಿಚಕ್ರದಲ್ಲಿ ೧೬ ಸ್ವರಗಳು ದಳಗತಾಕ್ಷರಗಳಾಗಿ ಶೋಭಿಸುತ್ತವೆ. ಈ ಪದ್ಮ ಮಧ್ಯದಲ್ಲಿ ಮುಹೂರ್ತಮಾಡಿದುದು ʼಯ’ಕಾರ ಮಂತ್ರಾಕ್ಷರ ಮೂರ್ತಿಯಾದ ಪ್ರಸಾದಲಿಂಗವು.  ಇದು ಕಪ್ಪು ಬಣ್ಣದ ಸುಜ್ಞಾನ ಪದ್ಯದಲ್ಲಿ ದರ್ಪಣಾಕೃತಿಯಿಂದ ವಿರಾಜಿಸುವದು. ವಿಶುದ್ಧಿ ಚಕ್ರದ ವಿಸ್ತಾರವಾದ ವಿವರವು ಎಂಬತ್ತೇಳನೇ ತ್ರಿಪದಿಯಲ್ಲಿ ಬಂದಿದೆ.

ಪ್ರಸಾದಲಿಂಗ : ಈ ಲಿಂಗಕ್ಕೆ ವಿಶುದ್ಧಿಯ ನೆಲ; ಈಳನವೆ ಕಲೆ, ಶ್ರೋತ್ರವೆ ಮುಖ, ದರ್ಪಣಾಕಾರ, ಪರಿಪೂರ್ಣರೂಪು. ಷೋಡಶದಳದ ಸುಜ್ಞಾನ  ಪದ್ಮದಲ್ಲಿ ಮಂಡಿಸಿರುತ್ತದೆ. ಇದು ಶ್ರೋತ್ರಕ್ಕೆ ಶ್ರೋತ್ರವಾಗಿದೆ. ‘ʼ ಶ್ರೋತ್ರಸ್ಯ ಶ್ರೋತ್ರಂ” ಎಂದು ನವಲಿಂಗ ಸಾಹಿತ್ಯಕಾರರು ವಿವರಿಸಿದ್ದಾರೆ.

 

ಪರಿಶುದ್ಧವಾದ ಈ ವಿಶುದ್ಧಿ ಚಕ್ರಕ್ಕೆ ಆಧಾರವಾದ ಕಂಠದೇಶವು ಸುಂದರ ಅವಯವವಾಗಿದೆ.  ಕಂಠವು ಶಿರ ಮತ್ತು ದಡವನ್ನು ವಿಭಾಗಿಸುತ್ತದೆ. ಈ ಕಂಠದಿಂದ ಮೇಲೆಯೇ ಎಲ್ಲ ಜ್ಞಾನೇಂದ್ರಿಯಗಳಿವೆ. ಅವುಗಳಿಗೆ ಅದು ಸಹಕಾರಿಯಾಗಿದೆ. ಮತ್ತು ಕರ್ಮೇಂದ್ರಿಯವಾದ ಬಾಯಿಗೆ ಉಪಕಾರಿಯಾಗಿದೆ. ಕಂಠವು ಸರಿಯಿದ್ದರೇನೆ ಮುಖದಲ್ಲಿರಿಸಿದ ಪ್ರಸಾದವು ಮಹಾಲಿಂಗಕ್ಕೆ ಸಮರ್ಪಿತವಾಗುವದು. ಪ್ರಸಾದವನ್ನು  ಪಡೆಯುವ ಈ ಕಂಠವು ಪ್ರಸಾದಲಿಂಗಕ್ಕೆ ನೆಲೆಯಾಗಿದೆ. ನಿರ್ಮಲವಾದ ಪ್ರಸಾದವನ್ನು ಸ್ವೀಕರಿಸುತ್ತಿದ್ದರೇನೆ ಪ್ರಸಾದಲಿಂಗದ ಅರಿವು ಉಂಟಾಗುವದು. ಇಂಥ ಪ್ರಸಾದಲಿಂಗವನ್ನು ಪ್ರಸನ್ನತೆಯಿಂದ ತಿಳಿಸಿಕೊಟ್ಟ ಗುರುವೆ ! ಕೃಪೆಯಾಗು, ನಿನ್ನ ಕೃಪೆಯಲ್ಲಿಯೇ ಪ್ರಸಾದಲಿಂಗವು ಪ್ರಸನ್ನವಾಗುವದು.

ಜ.ಚ.ನಿ

ಅದೇ ಕಾಲಕ್ಕೆ ಸಮಾಜದ  ವಿರಕ್ತ ಮುಖ್ಯ ಮಠಗಳಲ್ಲಿ ಒಂದಾದ  ಚಿತ್ರದುರ್ಗ ಮಠಕ್ಕೆ  ಮೂರ್ತಿಗಳಿಲ್ಲದಿತ್ತು.  ಆ ಭಾಗದ ಪ್ರಮುಖರನೇಕರು ಯೋಚಿಸಿ ಯೋಗ್ಯ ಮೂರ್ತಿಗಾಗಿ ಹೆಸರುವಾಸಿಯಾದ ಸದಾಶಿವಸ್ವಾಮಿಗಳವರ ಬಳಿಗೆ  ಬಂದರು; ಬಿನ್ನವಿಸಿಕೊಂಡರು. ಆದರೆ ಸಮಾಜಸೇವೆಗಾಗಿ ತ್ರಿಕರಣಗಳನ್ನು ಮೀಸಲಾಗಿರಿಸಿದ ಸ್ವಾಮಿಗಳು ಆ ಜಗದ್ಗುರು  ಮಠಾಧಿಪತ್ಯಕ್ಕೆ ಮನಸ್ಸು ಮಾಡಲಿಲ್ಲ. ಬಂದವರು  ಆಗ್ರಹ ಅತಿಶಯವಾಯಿತು. ಅದಕ್ಕೆ ಸ್ವಾಮಿಗಳು ತಮಗೆ ಪರಿಚಯವಿದ್ದ ಮತ್ತೊಬ್ಬರ ಹೆಸರನ್ನು ಸೂಚಿಸಿದರು. ಅವರೇ ಈಗ ಬೃಹನ್ಮಠದಲ್ಲಿ ಮಿರಾಜಿಸುತ್ತಿರುವ ಶ್ರೀ ಮ.ನಿ.ಪ್ರ.ಜ. ಜಯದೇವ  ಮುರುಘರಾಜೇಂದ್ರ ಸ್ವಾಮಿಗಳವರು. ಇವರು ಆಗ ಕಾಶಿಯಲ್ಲಿ ಓದುತ್ತಿದ್ದರು. ಸ್ವಾಮಿಗಳುವರ  ಸಹಾಯಕ್ಕೆ ಭಾಗಿಗಳಾಗಿದ್ದರು. ಇವರನ್ನು ಅಲ್ಲಿಂದ ಕರೆಯಿಸಿ ಬೃಹನ್ಮಠದ ಅಧಿಕಾರಕ್ಕೆ ಭಾಗಿಗಳನ್ನಾಗಿ ಮಾಡಿದರು.

 

ʼʼಲೌಕಿಕ ಮತ್ತು ಪಾರಮಾರ್ಥಿಕ ವಿದ್ಯಾಭ್ಯಾಸಗಳನ್ನು ಮಾಡುತ್ತಿದ್ದ ನಮ್ಮ ಜನಾಂಗದವರಿಗೆ ಕೈಲಾದ ಮಟ್ಟಿಗೆ ಮೊದಲಿನಿಂದಲೂ ಸಹಾಯ ಮಾಡುತ್ತಿದ್ದರೆಂಬುದಕ್ಕೆ ಕಾಶಿಯಲ್ಲಿ ಅಭ್ಯಾಸ ಮಾಡುವಾಗ ನಮಗೂ ಇನ್ನಿತರರಿಗು ಸಹಾಯ ಮಾಡಿದುದೇ ನಿದರ್ಶನವಾಗಿದೆ.

ನಮ್ಮನ್ನು ಶ್ರೀ ೧೦೮ ಜಗದ್ಗುರು ಪಿಠಾಧಿಕಾರಕ್ಕೆ ಬರಮಾಡಿದವರು ಇವರೇ.

ಎಂದು ಶ್ರೀ ಹಾನಗಲ್ಲ  ಕುಮಾರ ಸ್ವಾಮಿಗಳವರ ಸ್ಮಾರಕ ಚಂದ್ರಿಕೆಗೆ ಸಂದೇಶ ಬರಿಯುತ್ತ ಈ ಮೇಲೆ ಕಂಡ ಮಾತುಗಳನ್ನು ಸ್ವತಃ ಚಿತ್ರದುರ್ಗದ ಮಹಾಸ್ವಾಮಿಗಳವರು ಬರೆದಿದ್ದಾರೆ. ಇದರಿಂದ ಸ್ವಾಮಿಗಳವರ ನಿರಾಶೆ ಪರಹಿತಾಭಿಲಾಷೆ ಎಷ್ಠಿದ್ದವೆಂಬುದು ವ್ಯಕ್ತವಾಗುತ್ತದೆ.

 

ಬಂದೊದಗಿದ ಈ ಪೀಠಾಧಿಪತ್ಯವನ್ನು ಈ ರೀತಿ ತಪ್ಪಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಮಠಾಧಿಪತ್ಯವು ಇವರನ್ನು ನಿರೀಕ್ಷಿಸಿಕೊಂಡು ಬಂದಿತು. ಅದೇ ಹಾನಗಲ್ಲ ಮಠಾಧಿಪತ್ಯ. ಆ ಮಠಾಧಿಕಾರಿಗಳಾದ ಶ್ರೀ ಮ.ನಿ.ಫಕೀರಸ್ವಾಮಿಗಳವರು ತೀರ ಮುಪ್ಪಿನವರಾಗಿದ್ದರು. ವೀರ ವಿರತಿ ಸಂಪನ್ನರು ವಾಕ್‌ ಸಿದ್ದಿಸಮನ್ವಿತರು ಆಗಿದ್ದರು. ತಮ್ಮ ವೃದ್ಧಾಪ್ಯ ಕಾಲವಾದ್ದರಿಂದ ಉತ್ತರಾಧಿಕಾರವನ್ನು ಮತ್ತೊಬ್ಬ ಸಮರ್ಥ ವಟುವಿನ ಹೆಗಲ  ಮೇಲಿರಿಸಲು ಮನಸ್ಸು ಮಾಡಿದರು. ಮಂತ್ರಾಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದರು. ಆ ಕ್ಷಣದಲ್ಲಿಯೇ ಅದೇ ಸೊರಬ ಪ್ರಾಂತದ ಪ್ರಮುಖರಾದ ಮತ್ತು ಸದಾಶಿವಸ್ವಾಮಿಗಳಂತೆ ತಮಗೂ ಆಪ್ತಶಿಷ್ಯರಾಗಿದ್ದ ಶ್ರೀ ಉಳವಿ ಗುರುಬಸವಯ್ಯ ನವರಿಗು ಕೆಂಡಪ್ಪಗೌಡರಿಗು ಸಹ ಸ್ವಾಮಿಗಳವರನ್ನು ಹೇಗಾದರೂ ಮಾಡಿ ಕರೆದುಕೊಂಡು ಬರಲು ಕಾಗದ ಬರೆಯಿಸಿದರು. ಅದರಂತೆ ಈ ಇಬ್ಬರು ಆಪ್ತಶಿಷ್ಯರು ಸದಾಶಿವಸ್ವಾಮಿಗಳವರ ಹತ್ತಿರಕ್ಕೆ ಬಂದು ಮಹಾಸ್ವಾಮಿ, ತಮ್ಮ ತಪಸ್ಸಾಧನೆಗೆ ಸಮಾಜಸೇವೆಗೆ ವಾಕ್‌ಸಿದ್ಧಿಯುಳ್ಳ ಹಾನಗಲ್ಲ ಫಕೀರ ಮಹಾಸ್ವಾಮಿಗಳವರ ಕೃಪೆಯಾದರೆ ಇನ್ನೂ ಚೆನ್ನಾಗಿರುತ್ತದೆ. ಆದ ಕಾರಣ ಅಲ್ಲಿಗೆ ಹೋಗಿ ದರ್ಶನ ಪಡೆಯುವುದು ಒಳಿತಲ್ಲವೆ? ಎಂದು ಬಿನ್ನವಿಸಿಕೊಂಡು ಉಪಾಯವಾಗಿ ಹಾನಗಲ್ಲಿಗೆ ಕರೆದುಕೊಂಡು ಹೋದರು. ಸ್ವಾಮಿಯ ದರ್ಶನವಾಯಿತು. ಫಕೀರಸ್ವಾಮಿಗಳವರು ತಮ್ಮ ಮಠದ ಉತ್ತರಾಧಿಕಾರದ ವಿಷಯವನ್ನು ಅಪ್ಪಣೆಮಾಡಿದರು. ಸ್ವಾಮಿಗಳವರು ಒಪ್ಪದೆ ನಾನೊಬ್ಬ ಸಮಾಜ ಸೇವಕ ನನಗೇಕೆ ಈ ಬೃಹನ್ಮಠದ ಅಧಿಪತ್ಯ. ಅಪ್ಪಣೆಯಾದರೆ ಹೋಗಿಬರುವೆನು. ಎಂದು ಹೇಳಿ ಹೊರಡಹತ್ತಿದರು. ನಿಲ್ಲಿಸಿ ತಮ್ಮಾ! ನಿನಗೆ ತಿಳಿಯದು. ಸಮಾಜ ಸೇವೆಗೆ ಬರೀ ಒಂದು ವ್ಯಕ್ತಿತ್ವ ಸಾಲದು. ಅಧಿಪತ್ಯದಿಂದ ಆಗುವಷ್ಟು ಆಗದು. ಮಠಾಧಿಕಾರವಹಿಸಿದರೆ ವ್ಯಕ್ತಿತ್ವಕ್ಕು ವಕ್ತೃತ್ವಕ್ಕು ಬೆಲೆಬರುತ್ತದೆ. ಅದರಿಂದ ಸಮಾಜ ಸೇವೆಯನ್ನು ಯಥೇಪ್ಸಿತವಾಗಿ ಮಾಡಬಹುದು. ಮಠಾಧಿಪತ್ಯವನ್ನು ವಹಿಸುವುದು ಸಮಾಜ ಸೇವೆಗಾಗಿಯೇ ಹೊರತು ಸ್ವಾರ್ಥಕ್ಕಾಗಿಯಲ್ಲ. ಆದ್ದರಿಂದ ಗುರುವಚನವನ್ನು ಮೀರಬೇಡ. ಅಧಿಕಾರಕ್ಕೆ ಅಂಗೀಕರಿಸು ಎಂದು ಅಪ್ಪಣೆಕೊಡಿಸಿದ್ದನ್ನು ಸ್ವಾಮಿಗಳು ಆಲೋಚಿಸುತ್ತಿರುವಾಗಲೆ ಪಕ್ಕದಲ್ಲಿದ್ದ ಪ್ರಮುಖರ ಒತ್ತಾಯವೂ ವಿಶೇಷವಾಯಿತು. ಈ ಎರಡೊಂದು ಕಾರಣದಿಂದ ವಿಧಿಯಿಲ್ಲದೆ ಒಪ್ಪಬೇಕಾಯಿತು.

 

ಒಪ್ಪುವ ಮೊದಲು ಒಂದು ವಿಜ್ಞಾಪನೆಯನ್ನು ಸ್ವಾಮಿಗಳವರು ಸಲ್ಲಿಸಿದರು. ಏನೆಂದರೆ ಸುಮ್ಮನೆ ಬಂದ ಮಾತ್ರಕ್ಕೆ ಮಠಾಧಿಕಾರಕ್ಕೆ ನನ್ನ ಮನಸ್ಸು ಒಪ್ಪದು. ಕೆಲವುದಿನ ತಮ್ಮ ಸೇವೆ ಸಲ್ಲಿಸಿದ ನಂತರ ಆಗಬಹುದು ಎಂದು. ಇದಕ್ಕೆ ಫಕೀರಸ್ವಾಮಿಗಳವರೂ ಒಪ್ಪಿದರು.

 

ಮಠದಲ್ಲಿರುವ ದಾಸೋಹದಿಂದಲೆ ಸದಾಶಿವಸ್ವಾಮಿಗಳ ತೃಪ್ತಿತೀರದೆ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅದರ ಪುರೋಭಿವೃದ್ಧಿಗಾಗಿ ಮಲೆನಾಡ ಭಾಗಕ್ಕೆ ಬಹುದೂರ ಭಿಕ್ಷಕ್ಕೆ ದಯಮಾಡಿಸಿದ್ದರು. ಆ ಸಂದರ್ಭದಲ್ಲಿ ಫಕೀರಸ್ವಾಮಿಗಳವರಿಗೆ ಕಾಹಿಲೆಯಾಗಿ ಅವರು ಆ ಸಮಯಕ್ಕೆ ತಮ್ಮಲ್ಲಿಗೆ ಬಂದಿದ್ದ ಬಿದರಿ ಕುಮಾರಸ್ವಾಮಿಗಳವರಿಗೆ ಅಧಿಕಾರವಹಿಸಿ ಲಿಂಗೈಕ್ಯರಾದರು.

 

ಈ ಸಮಾಚಾರ ತಿಳಿದು ಮಲೆನಾಡಿನಿಂದ ಸದಾಶಿವಸ್ವಾಮಿಗಳವರು ಬಂದರು ಬಿದರಿ ಕುಮಾರ ಶ್ರೀಗಳವರು ಉತ್ತರಾಧಿಕಾರವನ್ನು ಬಹುವೈಭವದಿಂದ ಸದಾಶಿವ ಸ್ವಾಮಿಗಳವರಿಗೆ ಮಾಡಿದರು. ಹಾನಗಲ್ಲ ಕುಮಾರ ಸ್ವಾಮಿಗಳೆಂದು ಹೆಸರನ್ನಿಟ್ಟರು. ಏಕಕಾಲದಲ್ಲಿಯ ಸದಾಶಿವ ಸ್ವಾಮಿಗಳವರು ಹಾನಗಲ್ಲ ಮಠಾಧಿಪತ್ಯವನ್ನು ಪಾಠಶಾಲಾಕೃತ್ಯವನ್ನು ವಹಿಸಿದರು ನಿರ್ವಹಿಸಲನುವಾದರು.

ಹೀಗೆ ಪಾಠಶಾಲಾಕೃತ್ಯವನ್ನು ನೆರವೇರಿಸುತ್ತ ಮಠದ ಅಧಿಪತ್ಯವನ್ನು ನಿರ್ವಹಿಸುವುದು ಸ್ವಾಮಿಗಳವರ ಕಾರಣಿಕತನದ ಒಂದು ಕುರುಹು ಅಲ್ಲವೆ ?

 

ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಆಹಾರ-ವಿಹಾರಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಿತಮಿತವಾದ, ಸಾತ್ವಿಕವಾದ ಆಹಾರವನ್ನು ಸೇವಿಸುವವರು, ಯಥಾಯೋಗ್ಯ ವಿಹಾರ ಮಾಡುವವರು ಸದಾ ಪ್ರಸನ್ನಚಿತ್ತರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ ಮತ್ತು ಆರೋಗ್ಯವನ್ನು ಲಕ್ಷಿಸದೆ ಅತೀ ತಿರುಗಾಟ, ವ್ಯಾಯಾಮಾದಿಗಳು ನಮ್ಮ ಶರೀರದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತವೆ. ಶರೀರ ಮನಸ್ಸುಗಳೆರಡೂ ಒಂದಕ್ಕೊಂದು ಸಂಬಂಧಿಸಿರುವುದರಿಂದ ಶರೀರದ ಪರಿಣಾಮ ಮನಸ್ಸಿನ ಮೇಲಾಗುವುದು. ಮನಸ್ಸು ನಮ್ಮ ಎಲ್ಲ ಬಾಹ್ಯ ಹಾಗು ಅಂತರಿಂದ್ರಿಯಗಳ ವ್ಯವಹಾರಕ್ಕೆ ಆಧಾರವಾಗಿರುವುದರಿಂದ ಶಾರೀರಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದು ಅತ್ಯವಶ್ಯ. ಅತಿಯಾದ ಆಹಾರ ಸೇವನೆ, ಅತಿಯಾದ ಉಪವಾಸ ಮತ್ತು ಮಿತಿಮೀರಿದ ದೈಹಿಕಶ್ರಮದಿಂದ ದೇಹ ದುರ್ಬಲಗೊಳ್ಳುತ್ತದೆ. ಶರೀರಮಾದ್ಯಂ ಖಲು ಧರ್ಮಸಾಧನಂ’, ಕೂಡಲಸಂಗಮದೇವರ ಒಲಿಸಬಂದ ಪ್ರಸಾದ ಕಾಯವ ಕೆಡಿಸಲಾಗದು’ ಎಂಬಿತ್ಯಾದಿ ವಾಕ್ಯಗಳು ಧರ್ಮಸಾಧನೆಗಾಗಿ, ಮಾನಸಿಕ ನೆಮ್ಮದಿಗಾಗಿ ಆರೋಗ್ಯಪೂರ್ಣ ಶರೀರದ

ಆವಶ್ಯಕತೆಯನ್ನು ಎತ್ತಿ ಹೇಳುತ್ತವೆ

 

“ಆಹಾರ ಶುದ್ಧೌ ಸತ್ವಶುದ್ಧಿಃ ಸತ್ವಶುದ್ಧೌ ಧ್ರುವಾಸ್ಮೃತಿಃ’ ಅಂದರೆ ಆಹಾರ ಶುದ್ಧಿಯಿಂದ ಅಂತಃಕರಣಗಳು ಶುದ್ಧವಾಗುವವು. ಅಂತಃಕರಣಗಳು ಶುದ್ಧವಾದರೆ ಮನಸ್ಸಿನಲ್ಲಿ ಪರಮಾತ್ಮನ ಸ್ಮರಣೆ ನಿರಂತರವಾಗಿ ಉಳಿಯುವುದು ಎಂದು ಹೇಳಲಾಗಿದೆ. ನಮ್ಮ ಕಣ್ಣು, ನಾಲಿಗೆ, ಕಿವಿ ಇತ್ಯಾದಿ ಇಂದ್ರಿಯಗಳಿಗೆ ಆಹಾರವಾದ ರೂಪ, ರಸ, ಶಬ್ದಾದಿ ವಿಷಯಗಳು ಹಾಗೆಯೇ ದೇಹಪೋಷಣೆಗೆ ಪೂರಕವಾದ ಅನ್ನ, ಜಲಾದಿಗಳು ಪರಿಶುದ್ಧವಾಗಬೇಕು. ಆಗ ಮಾತ್ರ ಮನಸ್ಸು ಮತ್ತು ಹೃದಯಗಳೆರಡೂ ನಿರ್ಮಲಗೊಳ್ಳುವವು. ನಾವು ದಿನನಿತ್ಯ ಸ್ವೀಕರಿಸುವ ಆಹಾರವು ಜಾತಿ, ಆಶ್ರಯ, ನಿಮಿತ್ತಗಳೆಂಬ ಮೂರು ಮುಖ್ಯ ದೋಷಗಳಿಂದ ದೂಷಿತವಾಗುವ ಸಾಧ್ಯತೆ ಇರುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಪದಾರ್ಥಗಳು ‘ಜಾತಿಗತ’ ದೋಷದಿಂದ, ದುರಾಚಾರಿಗಳ ಸಂಪರ್ಕ ಅಥವಾ ದುರಾಚಾರಿಗಳಿಂದ ಅರ್ಜಿತವಾದ ಆಹಾರವು ‘ಆಶ್ರಯ’ ದೋಷದಿಂದ ಮತ್ತು ನೊಣ, ಜಿರಲೆ ಇತ್ಯಾದಿ ಕೀಟಗಳ ಸಂಪರ್ಕದಿಂದ ಆಹಾರ ಪದಾರ್ಥಗಳು ನಿಮಿತ್ತ ದೋಷದಿಂದ ದೂಷಿತವಾಗುತ್ತವೆ. ಆದ್ದರಿಂದ ನಾವು ಸ್ವೀಕರಿಸುವ ಆಹಾರವು ಸಾತ್ವಿಕವೂ, ದೋಷರಹಿತವೂ, ಪವಿತ್ರವೂ ಆಗಿರಬೇಕು. ಮಾಂಸ, ಮದ್ಯ ಇತ್ಯಾದಿ ತಾಮಸಿಕ ಆಹಾರ ಸೇವನೆಯಿಂದ ಮನುಷ್ಯನಲ್ಲಿ ತಾಮಸ ಪ್ರವೃತ್ತಿ ಉಂಟಾಗುತ್ತದೆ. ಆಗ ಮನುಷ್ಯ ಮನೋವಿಕಾರದಿಂದ ಬಳಲುತ್ತಾನೆ.ಆಹಾರದಂತೆಯೆ ಮನಸ್ಸು ಮತ್ತು ಮನಸ್ಸಿನಲ್ಲಿಯ ವಿಚಾರಗಳು  ನಿರ್ಮಾಣಗೊಳ್ಳುತ್ತವೆ. ಗ್ರೀಕ್ ತತ್ವಜ್ಞಾನಿ ಪೈಥಾಗೋರಸನು- ‘ಯಾವ ಮನುಷ್ಯ ಏನು ತಿನ್ನುತ್ತಾನೆ ಎಂಬುದನ್ನು ನೀವು ನನಗೆ ಹೇಳಿದರೆ ಅವನು ಏನು ವಿಚಾರ ಮಾಡುತ್ತಿರುತ್ತಾನೆ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ’ ಎನ್ನುತ್ತಾನೆ. ಈ ಆಹಾರಕ್ಕೆ ಸಂಬಂಧಿಸಿದ ಮಹಾಭಾರತದ ಕತೆಯೊಂದು ಹೀಗಿದೆ:

 

ಮಹಾಭಾರತ ಯುದ್ಧದ ಕೊನೆಯ ದಿನಗಳಲ್ಲಿ ಅರ್ಜುನ ನಿರ್ಮಿಸಿದ ಶರಶಯ್ಯೆಯಲ್ಲಿ ಪಿತಾಮಹ ಭೀಷ್ಮರು ಧರ್ಮೋಪದೇಶದಲ್ಲಿ ನಿರತರಾಗಿದ್ದರು. ಆಗ ದ್ರೌಪದಿಯು ‘ಮಹಾರಾಜ ನಾನೊಂದು ಪ್ರಶ್ನೆ ಕೇಳುವೆ, ನನ್ನ ಪ್ರಶ್ನೆ ತಮ್ಮ ಮನ ನೋಯಿಸುವುದರಿಂದ ನಾನು ಮೊದಲೇ ಕ್ಷಮೆ ಯಾಚಿಸುತ್ತೇನೆ. ತಮಗೆ ಕೆಡುಕೆನಿಸಿದರೆ ದಯಮಾಡಿ ಸಿಟ್ಟಾಗಬೇಡಿ’ ಎನ್ನುತ್ತಾಳೆ, ಶಾಂತಚಿತ್ತರಾದ ಭೀಷ್ಮರು ‘ನಾನೆಂದೂ ಸಿಟ್ಟಾಗಲಾರೆ, ನೀನು ಏನು ಬೇಕಾದರೂ ಕೇಳು’ ಎಂದಾಗ, ದ್ರೌಪದಿಯು- ‘ಪಿತಾಮಹ’ ದುರ್ಯೋಧನನು ತುಂಬಿದ ಸಭೆಯಲ್ಲಿ ನನ್ನನ್ನು ಬೆತ್ತಲೆಗೊಳಿಸುತ್ತಿರುವಾಗ ಮಾನರಕ್ಷಣೆಗಾಗಿ ಅತ್ತು ಕರೆದು ಗೋಳಿಡುತ್ತಿದ್ದೆ. ಕಂಡ ಕಂಡವರ ಕಾಲಿಗೆ ಬಿದ್ದೆ. ತಾವೂ ಆ ಸಭೆಯಲ್ಲಿ ವಿರಾಜಮಾನರಾಗಿದ್ದೀರಿ, ನಾನು ತಮ್ಮ ಕಾಲಿಗೂ ಬಿದ್ದೆ.  ಪರಿಪರಿಯಾಗಿ ಪ್ರಾರ್ಥಿಸಿದೆ. ಇಂದು ಧರ್ಮದ ಬಗ್ಗೆ ದೊಡ್ಡ ದೊಡ್ಡ ಮಾತು ಹೇಳುತ್ತಿರುವ ತಾವು ಅಂದು ಒಬ್ಬ ಅಬಲೆಯ ಮಾನಹಾನಿಯನ್ನು ಹೇಗೆ ಸಹಿಸಿಕೊಂಡಿರಿ? ಅವಳ ಆರ್ತಧ್ವನಿ ತಮಗೇಕೆ ಕೇಳಲಿಲ್ಲ? ಆಗ ನಿಮ್ಮ ಧರ್ಮ ಎಲ್ಲಿ ಹೋಗಿತ್ತು?’ ಎಂದು ಪ್ರಶ್ನಿಸುತ್ತಾಳೆ. ಶಾಂತಮುದ್ರೆಯಲ್ಲಿದ್ದ ಭೀಷ್ಮರು- ‘ಮಗಳೆ ನೀನು ಹೇಳುವುದು ನಿಜ, ಆ ಸಮಯದಲ್ಲಿ ನಾನು ದುರ್ಯೋಧನನ ಪಾಪಯುಕ್ತ ಆಹಾರವನ್ನು ಸೇವಿಸುತ್ತಿದ್ದೆ. ಆ ಪಾಪ ನನ್ನ ಶರೀರವನ್ನೆಲ್ಲ ವ್ಯಾಪಿಸಿತ್ತು. ಅದು ರಕ್ತವಾಗಿ ನನ್ನ ನರನಾಡಿಗಳಲ್ಲೆಲ್ಲ ಹರಿದಾಡುತ್ತಿತ್ತು. ಅಂದು ನಾನು ಬಯಸಿದರೂ ಧರ್ಮದ ಮಾತು ಹೇಳಲು ಸಾಧ್ಯವಾಗಲಿಲ್ಲ. ಇಂದು ಅರ್ಜುನನ ಬಾಣಗಳು ನನ್ನ ರಕ್ತವನ್ನೆಲ್ಲ ಹೊರತೆಗೆದಿವೆ. ಪಾಪದ ಅನ್ನ ಶರೀರದಿಂದ ಹೊರಹೋಗಿದೆ. ಆದ್ದರಿಂದ ಇಂದು ಧರ್ಮದ ಬಗ್ಗೆ ವಿಸ್ತಾರವಾಗಿ ಹೇಳುತ್ತಿರುವೆ.’ ಎಂದು ಉತ್ತರಿಸುತ್ತಾರೆ. ನೋಡಿ ಹೇಗಿದೆ ಆಹಾರದ ಪ್ರಭಾವ?

 

ನಾವು ನಮ್ಮ ಆಹಾರವನ್ನು ಯಾವ ಭಾವನೆಯಿಂದ, ಯಾವ ಮೂಲದಿಂದ ಸಂಗ್ರಹಿಸುತ್ತೇವೆಯೋ ಮತ್ತು ತಯಾರಿಸುತ್ತೇವೆಯೋ ಅದರ ಪ್ರಭಾವ ಮನಸ್ಸಿನ ಮೇಲಾಗುವುದು ಸಹಜ, ಆದ್ದರಿಂದ ಸತ್ಯ ಮತ್ತು ನ್ಯಾಯದಿಂದ ಅರ್ಜಿತವಾದ, ಪವಿತ್ರವಾದ ಭಾವನೆಯಿಂದ ತಯಾರಿಸಲಾದ, ಸಾತ್ವಿಕವಾದ ಆಹಾರವನ್ನು ಹಿತಮಿತವಾಗಿ ಸೇವಿಸುತ್ತ ಯೋಗ್ಯ ರೀತಿಯ ವಿಹಾರಾದಿಗಳನ್ನು ಕೈಕೊಂಡಲ್ಲಿ ಮನಸ್ಸು ಪ್ರಸನ್ನವಾಗಿ ನಮ್ಮ ನಿಯಂತ್ರಣಕ್ಕೊಳಪಡುತ್ತದೆ. ಆಗ ಸುಖ ಹಾಗು ನೆಮ್ಮದಿಯ ಜೀವನ

ನಡೆಸಲು ಸಾಧ್ಯವಾಗುತ್ತದೆ.