ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಪಂಚೇಂದ್ರಿಯಗಳ ಪಂಚವಿಷಯ
೧. ಶ್ರೋತ್ರೇಂದ್ರಿಯ – ಶಬ್ದವಿಷಯ
ಸವಣರಾ ಪೇಟೆಯೊಳು | ದಿವಸ ಸಂತೆಯ ಶಬ್ದ
ನಿವಹ ಪೂರೈಸಿ- ದನೇಕಾಂತದೊಳೆನ್ನ
ನವಧರಿಸು ಗುರುವೆ ಕೃಪೆಯಾಗು ||೬೬ ||
ಹರಭಕ್ತನಾದ ಶಿವಕವಿಯು ವೃತ್ತಿಯಲ್ಲಿ ಹರದನಾಗಿದ್ದನು. ಅಂತೆಯೇ ಅವನಿಗೆ ದೇಶದ ಅನೇಕ ವ್ಯಾಪಾರಿ ಸ್ಥಳಗಳ ಅನುಭವವಿತ್ತು. ಆ ಸ್ಥಳಗಳ ನಾಮ. ನಿರ್ದೆಶಮಾಡುತ್ತ ದ್ವಂದ್ವಾರ್ಥದಲ್ಲಿ ಪಂಚೇಂದ್ರಿಯಗಳ ಪಂಚ ವಿಷಯಗಳನ್ನು ಪ್ರತಿಪಾದಿಸಿದ್ದಾನೆ
ಶ್ರೋತ್ರ, ತ್ವಕ್, ನೇತ್ರ, ಜಿಹ್ವಾ, ಘ್ರಾಣಗಳೆಂಬ ಪಂಚಜ್ಞಾನೇಂದ್ರಿಯಗಳಿಗೆ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ಪಂಚತನ್ಮಾತ್ರೆಗಳೇ ಪಂಚವಿಷಯ ಗಳಾಗುತ್ತವೆ. ಈ ಪಂಚಜ್ಞಾನೇಂದ್ರಿಯಗಳು ಪಂಚವಿಷಯಗಳಿಗಾಗಿ ಬಯಸಿ ಜೀವನನ್ನು ಕಾಮ, ಕಾಲರ ಬಲೆಗೆ ಬೀಳಿಸುತ್ತವೆ. ತನ್ನ ಇಂದ್ರಿಯಗಳೇ ತನ್ನನ್ನು ಆ ಮಾಯಾಬಲೆಯಲ್ಲಿ ಸಿಕ್ಕಿಸುವ ಮಾತು ವಿಚಾರಣೀಯವಾಗಿದೆ. ಇದು ಲೋಕದ ವೈಚಿತ್ರ್ಯ.. ಬ್ರಹ್ಮಸೃಷ್ಟಿಯ ಚಾರಿತ್ರ. ಶಿವಕವಿಯು ಒಂದೊಂದು ವಿಷಯದ ವಿವರಣೆಯನ್ನು ಅಸಾಧಾರಣ ಬುದ್ಧಿ ಶಕ್ತಿಯಿಂದಲೇ ವಿವರಿಸಿದ್ದಾನೆ. ಪ್ರಥಮದಲ್ಲಿ ಶ್ರೋತ್ರೇಂದ್ರಿಯ ಗ್ರಾಹ್ಯವಾದ ‘ಶಬ್ದ’ ವಿಷಯವನ್ನು ಕುರಿತು ಹೇಳಿದ್ದಾನೆ. ಈ ತ್ರಿಪದಿಯಲ್ಲಿ ಶಬ್ದಶ್ಲೇಷವೂ ಇದೆ. ಮತ್ತು ಪರಮತ ಖಂಡನಾಪೂರ್ವಕ ಸ್ವಮತ ಸಮರ್ಥನೆಯೂ ಆಗಿದೆ.
ಮೊದಲನೆಯ ಅರ್ಥ ಸವಣೂರಿನ ಪರವಾಗಿದೆ. ಈ ಶರಣಕವಿಯ ಸಮ ಕಾಲದಲ್ಲಿ ಇಂದಿನ ಧಾರವಾಡ ಜಿಲ್ಲೆಯ ಸವಣೂರು ನವಾಬನ ಸಂಸ್ಥಾನವಾಗಿತ್ತು. ಅದು ವ್ಯಾಪಾರಕ್ಕೆ ಪ್ರಸಿದ್ಧ ಸ್ಥಳವೂ ಆಗಿತ್ತು. ದಿನನಿತ್ಯದ ವ್ಯವಹಾರಕ್ಕಿಂತಲೂ ಸಂತೆಯ ವ್ಯವಹಾರವು ವಿಶೇಷವಾಗಿತ್ತು. ಸುತ್ತಲಿನ ಜನರು ನಿಶ್ಚಿತ ದಿನ ಸಂತೆಯನ್ನು ಮಾಡಲು ಸೇರುತ್ತಾರೆ. ಸಂತೆಯೆಂದ ಮೇಲೆ ಕೇಳುವದೇನು ? ಗದ್ದಲವೇ ಗದ್ದಲ ! ಶಬ್ದಗಳ ಸುರಿಮಳೆ ; ಕೂಗಾಟಗಳ, ಕಿರುಚಾಟಗಳ, ಅಬ್ಬರ ! ಒಂದೆಡೆ ಖರೀದಿ ಮಾಡುವವರ ಚೌಕಸಿ, ಇನ್ನೊಂದೆಡೆ ಮಾರುವವರ ವಸ್ತುವಿನ ಬಣ್ಣನೆ. ಹೀಗೆ ಅನೇಕ ರೀತಿಯ ವ್ಯಾವಹಾರಿಕ ಮಾತುಗಳು ಕೇಳುವವರಿಗೆ ಬಲು ಬೇಜಾರು. ಆದರೇನು ಮಾಡುವದು ?
“ಸಂತೆಯಲ್ಲಿ ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ ?”
ಎನ್ನುವ ಅಕ್ಕನ ಮಾತಿನಂತೆ ಹೆದರದೆ, ಬೆದರದೆ, ಬೇಸರಗೊಳ್ಳದೆ ಧೈರ್ಯದಿಂದ ಸ್ಥಿರತೆಯನ್ನು ಕಾಯ್ದುಕೊಂಡು ತನ್ನ ಸಂತೆಯ ವ್ಯವಹಾರವನ್ನು ಮುಗಿಸಿಕೊಳ್ಳ ಬೇಕಾದುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.
ಇನ್ನೊಂದರ್ಥದಲ್ಲಿ ಸವಣರೆಂದರೆ ಜೈನ ಸನ್ಯಾಸಿಗಳು, ಆ ಸನ್ಯಾಸಿಗಳಿರುವ ಸ್ಥಾನಕ್ಕೇನೇ ‘ಸವಣರಾಪೇಟೆ’ಯೆನ್ನುವರು. ಶ್ರವಣ ಶಬ್ದದ ತದ್ಭವವೇ ‘ಸವಣ’. ಶ್ರವಣವೆಂದರೆ ಕೇಳುವದು. ಕಿವಿಯಿಂದ ಕೇಳುವ ಕೆಲಸವೇ ಮುಖ್ಯವಾಗಿಯುಳ್ಳವನು ಸವಣನೆನಿಸಿಕೊಳ್ಳುತ್ತಾನೆ. ಇವನು ಸವಣನೆನಿಸಿದರೂ ಲೌಕಿಕ ವ್ಯಾವಹಾರಿಕ ಶಬ್ದ ಬಳಕೆಯಿಂದ ಏಕತೆಯನ್ನು ಸಾಧಿಸುವದಕ್ಕಾಗುವದಿಲ್ಲ. ಅವರದು ಅನೇಕಾಂತ ಸಿದ್ಧಾಂತ. ಕಾರಣ ಶಿವಕವಿಯು ಸವಣರ ಅನೇಕಾಂತತೆಯನ್ನು ಪರಿಹರಿಸಿ ಏಕಾಂತತೆಯನ್ನು ಸದ್ಗುರುವಿನಲ್ಲಿ ಕೇಳಿದ್ದಾನೆ. ಏಕಾಂತತೆಯಿಂದ ಶಬ್ದಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ.
ಈ ಬಸವಲಿಂಗ ಶರಣರ ಕಾಲಕ್ಕೆ ಜೈನಮತದ ಪ್ರಭಾವ ಎದ್ದು ಕಾಣುತ್ತದೆ. ಆ ಜೈನ ದರ್ಶನದಲ್ಲಿ ‘ಸ್ಯಾದ್ವಾದ’ ಅಥವಾ ಅನೇಕಾಂತವಾದವೆಂಬುದು ಪ್ರಸಿದ್ಧವಾಗಿದೆ. ಇವರು ನಾಸ್ತಿಕ ಮತದವರು. ದೇವನ ಅಸ್ತಿತ್ವವನ್ನು ಒಪ್ಪುವದಿಲ್ಲ. ಮತ್ತು ವೇದಗಳನ್ನು ಮನ್ನಿಸುವದಿಲ್ಲ. ಲೌಕಿಕ ವ್ಯವಹಾರದಲ್ಲಿ ಪ್ರತಿಯೊಂದು ವಸ್ತುವಿನ ಅನಂತ ಧರ್ಮವನ್ನು ಕಾಣುತ್ತಾರೆ. ಹೇಗೆಂದರೆ ಬಹು ಭ್ರಾಂತಿಗಳಿಂದ ಕೂಡಿದ ಮನುಷ್ಯನಿಗೆ ಪ್ರತಿಯೊಂದು ವಸ್ತುವಿನ ಸಮಸ್ತ ಧರ್ಮಗಳ ಯಥಾರ್ಥ ಜ್ಞಾನವನ್ನು ಹೊಂದುವ ಸಾಮರ್ಥ್ಯವಿರುವದಿಲ್ಲ. ಅವನಲ್ಲಿ ಕೇವಲ ಆಂಶಿಕ ಜ್ಞಾನವಿರಬಹುದು. ಆದರೆ ಮುಖ್ಯವಾಗಿ ಕೈವಲ್ಯ ಜ್ಞಾನವಾಗುವವರೆಗೆ ಅವನಲ್ಲಿ ಅನೇಕಾಂತತೆಯೇ ಇರುವದು.
ಉದಾಹರಣಾರ್ಥವಾಗಿ ಒಂದು ವಸ್ತುವಿನ ಬಗ್ಗೆʼʼ ಸ್ಯಾತ್ ಸತ್” ಇದು ಸತ್ ಆಗಿರಬಹುದೆಂಬ ವಿಚಾರ ಪ್ರಾರಂಭವಾಗುವದರಿಂದ ಇದಕ್ಕೆ ‘ಸ್ಯಾದ್ವಾದ’ವೆಂಬ ಹೆಸರು ಬಂದಿದೆ. ಈ ತತ್ತ್ವವನ್ನು ಪಂಡಿತ ಬಲದೇವ ಉಪಾಧ್ಯಾಯರ *ಭಾರತೀಯ ದರ್ಶನ” ದಲ್ಲಿ ಸ್ಪಷ್ಟವಾಗಿ ಕಾಣಬಹುದು. “ವರ್ತಮಾನ ದೇಶ ಮತ್ತು ಕಾಲವನ್ನು ವಿಚಾರ ಮಾಡುವರಿಂದ ನಾವು ಘಟದ ಸತ್ ಅನ್ನು ಅನುಭವಿಸುತ್ತೇವೆ. ಆದರೆ ಈ ಸತ್ ತ್ರೈಕಾಲಿಕ ಸತ್ಯವಲ್ಲ. ಆದರೆ ಸಾಪೇಕ್ಷಿಕ ಸತ್ಯವಾಗುತ್ತದೆ. ಅಂದರೆ ಸದ್ಯ ಇದ್ದ ಕೊಡವು ಇನ್ನೊಂದು ಕ್ಷಣದಲ್ಲಿ ಇರಲಿಕ್ಕಿಲ್ಲ ಅಥವಾ ಹೊರಗಿದ್ದುದು ಒಳಗೆ ಹೋಗಿರಬಹುದು. ಮತ್ತು ಅದು ಇದೂ ಅದರ ಆಕಾರದ ಬಗ್ಗೆ ಸರಿಯಾಗಿ ತಿಳಿದಿರಲಿಕ್ಕಿಲ್ಲ. ಇತ್ಯಾದಿ ರೂಪದಿಂದ ಯಥಾರ್ಥ ಜ್ಞಾನವಾಗುವದಿಲ್ಲವೆಂಬುದು ಸವಣರ ಮತ. ಈ ಸ್ವರೂಪವನ್ನೇ ಏಳು ತೆರನಾಗಿ ವಿವರಿಸುತ್ತಾರೆ.
೧) ಸ್ಯಾದಸ್ತಿ – ಯಾವದೋ ಪ್ರಕಾರದಲ್ಲಿದೆ.
೨) ಸ್ಯಾನ್ನಾಸ್ತಿ – ಯಾವದೋ ಪ್ರಕಾರದಲ್ಲಿ ಇಲ್ಲ.
೩) ಸ್ಯಾದಸ್ತಿಚ ನಾಸ್ತಿ ಚ – ಹೇಗೋ ಇದೆ ಮತ್ತು ಇಲ್ಲ.
೪)ಸ್ಯಾದವಕ್ತವ್ಯಂ – ಹೇಗೋ ವರ್ಣನಾತೀತವಾಗಿದೆ.
೫)ಸ್ಯಾದಸ್ತಿ ಚ ಅವಕ್ತವ್ಯಂಚ – – ಹೇಗೋ ಇದೆ. ಮತ್ತು ವರ್ಣನಾತೀತವಾಗಿದೆ.
೬)ಸ್ಯಾನ್ನಾಸ್ತಿಚ ಅವಕ್ತವ್ಯಂ ಚ – ಹೇಗೋ ಇಲ್ಲ. ಮತ್ತು ವರ್ಣನಾತೀತವಾಗಿದೆ.
೭)ಸ್ಯಾದಸ್ತಿಚ ಸ್ಯಾನ್ನಾಸ್ತಿಚ ಅವಕ್ತವ್ಯಂ ಚ – ಹೇಗೋ ಇದೆ, ಇಲ್ಲ ಮತ್ತು ವರ್ಣನಾ ತೀತವಾಗಿದೆ. ಹೀಗೆ ಸಪ್ತಪ್ರಕಾರದ ನ್ಯಾಯದಿಂದ ಅನೇಕಾಂತತೆಯನ್ನು ಸಿದ್ಧಿಸಿ ತೋರುತ್ತಾರೆ. ಅನೇಕಾಂತತೆಯನ್ನು ಹೇಳುವ ಸವಣರು ಸ್ಥಿರತೆಯಿಲ್ಲದೆ ಲೋಕ ವ್ಯವಹಾರದ ತೊಳಲಾಟದಲ್ಲಿ ಬೀಳಬೇಕಾಗುವದು. ಶಾಂತಿ-ಸಮಾಧಾನ ಗಳ-ಸ್ಥಿರತ್ವಗಳ ಸುಳಿವು ಇಲ್ಲದಾಗುವದು.
ಆತ್ಮ ತತ್ತ್ವವನ್ನು ತಿಳಿಯಲು ಶ್ರವಣವು ಮುಖ್ಯ ಸಾಧನವಾಗಿದೆ. ಯಾಜ್ಞವಲ್ಕ್ಯರು ಮೈತ್ರಾದೇವಿಗೆ –
ಆತ್ಮಾವಾರೇ ದ್ರಷ್ಟವ್ಯಃ
ಶ್ರೋತವ್ಯೋ ಮಂತವೋ ನಿಧಿಧ್ಯಾಸಿತವ್ಯಃ|
ಆತ್ಮನನ್ನು ಕಾಣುವ (ಪ್ರತ್ಯಕ್ಷ ಮಾಡಿಕೊಳ್ಳುವ) ಸಾಧನಗಳೆಂದರೆ ೧ ಶ್ರವಣ ೨ ಮನನ ೩ ನಿಧಿಧ್ಯಾಸನಗಳೆಂದು ತ್ರಿವಿಧ ಸಾಧನೆಗಳನ್ನು ತಿಳಿಸಿದ್ದಾರೆ. ಈ ಮೊದಲನೆಯ ಶ್ರವಣ ಕ್ರಿಯೆಗೆ ಸಾಧನವಾದುದು ಶ್ರೋತ್ರೇಂದ್ರಿಯವಾಗಿದೆ. ಶ್ರೋತ್ರವು ಆಕಾಶ ತತ್ತ್ವದ ಅಗ್ನಿಯಿಂದ ಉತ್ಪನ್ನವಾಗಿದ್ದು ಅದಕ್ಕೆ ದಶದಿಕ್ಕುಗಳೇ ಅಧಿದೇವತೆಗಳಾಗಿವೆ. ಶ್ರೋತ್ರಕ್ಕೆ ಶಬ್ದವೇ ವಿಷಯ. ಅಕ್ಷರಾತ್ಮಕ, ಅನಕ್ಷರಾತ್ಮಕವೆಂದು ಎರಡು ಶಬ್ದದ ಭೇದಗಳು, ಅಕ್ಷರಾತ್ಮಕವಾದ ಶಬ್ದವು ಮಂತ್ರರೂಪವಾಗಬೇಕು. ಲೌಕಿಕ ಶಬ್ದಗಳಿಂದ ಜೀವನದಲ್ಲಿ ಸಮಾಧಾನವಿಲ್ಲ. ಶ್ರೋತ್ರೇಂದ್ರಿಯಕ್ಕೆ ಅಧ್ಯಾತ್ಮಿಕ ಶಬ್ದ ಶ್ರವಣವೇ ಭೂಷಣವು. ಇಂಥ ಶ್ರವಣವು ನವವಿಧ ಭಕ್ತಿಗಳಲ್ಲಿ ಮೊದಲನೆಯದಾಗಿದೆ. ಆತ್ಮತತ್ತ್ವವನ್ನು ತಿಳಿಸುವ ಶಬ್ದವು ಅಧ್ಯಾತ್ಮಿಕವಾದರೆ ಆತ್ಮನನ್ನು ತಿಳಿಸುವ ಶಬ್ದವು ಮಂತ್ರವಾಗಿದೆ. ಅಂಥ ಮಂತ್ರವು ಸದ್ಗುರುವಿನಿಂದ ದೊರೆಯಲು ಸಾಧ್ಯ. ಸದ್ಗುರು ಕೃಪೆಯಿಂದ ದೊರೆತ ಮಂತ್ರವು ಜೀವನವನ್ನೇ ಪಾವನಗೊಳಿಸಿ ದೇವರನ್ನಾಗಿಸುತ್ತದೆ.
ಲೌಕಿಕ ವ್ಯಾವಹಾರಿಕ ಶಬ್ದಗಳಿಂದ ಅನೇಕಾಂತತೆಯನ್ನು ದೂರ ಮಾಡಲು ಮಂತ್ರಾನುಸಂಧಾನದಿಂದ ಮಾತ್ರ ಸಾಧ್ಯವಾಗುವದು. ಇದರಿಂದಲೇ ಏಕಾಂತತೆ ದೊರೆಯುವದು. ಶಿವನಲ್ಲಿ ಏಕನಿಷ್ಠೆಯೂ ಬೆಳೆಯುವದು. ಇಂತಾದರೆ ಜ್ಞಾನೇಂದ್ರಿಯ ವಾದ ಈ ಶ್ರೋತ್ರೇಂದ್ರಿಯವು ಸಾರ್ಥಕವಾಗುವದು
. ಮಾನವನ ಉಪಯೋಗಕ್ಕಾಗಿ ಲಭ್ಯಗಳಾದ ಪಂಚ ಜ್ಞಾನೇಂದ್ರಿಯಗಳು ಶಿವನ ಮಹಾ ಕೊಡುಗೆಯೆನಿಸಿವೆ. ಇವುಗಳಲ್ಲೊಂದು ಇಂದ್ರಿಯವು ಊನವಾದರೆ ಜೀವನವೇ ಅಸ್ತವ್ಯಸ್ತವಾಗುವದು. ಈ ಜ್ಞಾನೇಂದ್ರಿಯಗಳನ್ನು ಕೇವಲ ಲೌಕಿಕ ವಿಷಯಗಳತ್ತ ಬಳಸಿದರೆ ಜೀವನಿಗೆ ಬಂಧನವು ನಿಶ್ಚಿತ. ಕಾರಣ, ಇಂದ್ರಿಯಗಳ ವಿಷಯವು ಮೇಲೆ ವಿವರಿಸಿದಂತೆ ಅಧ್ಯಾತ್ಮಿಕವಾಗಬೇಕು. ಒಂದೊಂದು ಇಂದ್ರಿಯದ ವಿಷಯವೇ ಒಂದೊಂದು ಜೀವಿಯ ಹಾನಿಗೆ ಕಾರಣವಾಗಿರುವಾಗ ಐದಿಂದ್ರಿಯಗಳ ಭೋಗವನ್ನು ಹೊಂದುವ ಜೀವನು ಬಾಳಿ ಉಳಿಯುವ ಬಗೆಯೆಂತು.
…….. ಶ್ರವಣೇಂದ್ರಿಯ ವಿಷಯದಿಂದೆ
ಎರಳೆ ಕೆಡುವದು ಬೇಟೆಗಾರನ ಸರಳಿನಲ್ಲಿ;
ಇಂತೀ ಪ್ರಾಣಿಗಳು ಒಂದೊಂದು ವಿಷಯದಿಂದೆ
ಬಂಧನಕ್ಕೊಳಗಾದವು,
ಇಂತಪ್ಪ ಪಂಚೇಂದ್ರಿಯ ವಿಷಯ ವ್ಯಾಪಾರದಲ್ಲಿ
ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯ ಅಖಂಡೇಶ್ವರ”
ಎಂದು ಷಣ್ಮುಖ ಶಿವಯೋಗಿಗಳು ಹೇಳಿದ ಮಾತು ಮಾರ್ಮಿಕವಾಗಿದೆ. ಇಲ್ಲಿ ಶ್ರವಣೇಂದ್ರಿಯ ಪ್ರಬಲವಾದ ಜಿಂಕೆಯು ಬೇಟೆಗಾರನ ಕೊಳಲಿನ ನಾದಕ್ಕೆ ಮರುಳಾಗಿ ಅವನ ಬಾಣಕ್ಕೆ ಆಹುತಿಯಾಗುತ್ತದೆ. ಪಂಚೇಂದ್ರಿಯಗಳ ಸ್ಫುರಣವುಳ್ಳ ಜೀವಾತ್ಮನು ಪಂಚ ವಿಷಯಗಳ ಬಲೆಯಲ್ಲಿ ಬಿದ್ದರೆ ಸಾಯುವದು ಖಂಡಿತ. ಅದು ಕಾರಣ ಜ್ಞಾನೇಂದ್ರಿಯಗಳನ್ನು ಆಜ್ಞಾನದಿಂದ ವಿಷಯಗಳಲ್ಲಿ ಬಂಧಿಸುವದು ಸರ್ವಥಾ ವಿಹಿತವಲ್ಲ.
ಶಿವಕವಿಯು ಪ್ರಥಮತಃ ಇಲ್ಲಿ ಶ್ರೋತ್ರೇಂದ್ರಿಯಕ್ಕೆ ಕಾರಣವಾದ ಲೌಕಿಕ ಸಂತೆಯ ಶಬ್ದಗಳನ್ನು ಕೇಳಿ ಕೇಳಿ ಏಕಾಂತತೆಯನ್ನು ಕಳೆದುಕೊಳ್ಳುವದು ಬೇಡವೆಂದಿದ್ದಾನೆ. ಸಂತೆಯ ಶಬ್ದಗಳು ಎಷ್ಟು ನಿಷ್ಪ್ರಯೋಜಕಗಳೋ ; ಅದರಿಂದ ದೊರೆಯುವ ಅನೇಕಾಂತತೆಯೂ ನಿರುಪಯುಕ್ತವಾದುದು. ಉಪಯೋಗವಿಲ್ಲದ ವ್ಯವಹಾರಿಕ ಮಾತುಗಳನ್ನಾಡಿ ಮತ್ತು ಅಂಥವುಗಳನ್ನು ಕೇಳುವದೂ ಜೀವನದಲ್ಲಿ ವ್ಯರ್ಥಸಮಯ ಇದೆಲ್ಲವನ್ನು ಜ್ಞಾನೇಂದ್ರಿಯವಾದ ಕರ್ಣಕ್ಕೆ ಶ್ರೀ ಗುರುವಿನ ಕೃಪೆಪಡೆದು ಶಬ್ದವನ್ನೇ ಮಂತ್ರಮಯ ವಾಗಿಸಿಕೊಳ್ಳುವ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾನೆ.
ಪರಮಗುರುವೆ ! ಮಂತ್ರೋಪದೇಶವನ್ನು ಮಾಡಿ ಶ್ರವಣೇಂದ್ರಿಯವನ್ನು ಸಾರ್ಥಕಗೊಳಿಸು. ಸಕಲ ನಿರರ್ಥಕ ಶಬ್ದಗಳನ್ನು ತ್ಯಜಿಸಿ ಆತ್ಮೋದ್ಧಾರದ ನುಡಿಗಳನ್ನು ಓಂಕಾರನಾದವನ್ನು ಶಬ್ದ ಪ್ರಸಾದವನ್ನಾಗಿ ಭೋಗಿಸುವ ಕಲೆಯನ್ನು ಕಲಿಸಿ ಉದ್ಧರಿಸು.
೨. ತ್ವಗಿಂದ್ರಿಯ – ಸ್ಪರ್ಶವಿಷಯ
ಗಾಳಿ ಪೂಜೆಯ ಗುಡ್ಡ | ವಾಳುಮಟ್ಟಿಹುದು ಈ
ರೇಳು ಲೋಕವನು – ತಾಳಿಕೊಂಡಿಹುದೆಂದು
ಹೇಳುವರು ಗುರುವೆ ಕೃಪೆಯಾಗು ||೬೭||
ವಾಯುತತ್ತ್ವದ ಜ್ಞಾನೇಂದ್ರಿಯ ತ್ವಕ್, ಅದಕ್ಕೆ ಗೋಚರಿಸುವ ವಿಷಯ ಸ್ಪರ್ಶನ. ಅಲ್ಲಿ ಚಂದ್ರನು ಅಧಿದೇವತೆಯಾಗಿದ್ದಾನೆ. ಸ್ಪರ್ಶವಿಷಯವು ಶೀತ, ಉಷ್ಣ, ಮೃದು, ಕಠಿಣವೆಂದು ನಾಲ್ಕು ತೆರನಾಗುತ್ತದೆ. ಎಲ್ಲ ವಸ್ತುಗಳ ವಿವಿಧ ಸ್ಪರ್ಶವು ತ್ವಗಿಂದ್ರಿಯಕ್ಕೆ ಗೊತ್ತಾಗುತ್ತದೆ. ಹೀಗೆ ಗಾಳಿ ಮತ್ತು ಸ್ಪರ್ಶ ವಿಷಯದ ವಿವೇಚನೆ ಈ ತ್ರಿಪದಿಯಲ್ಲಿ ಬಂದಿದೆ. ಇಲ್ಲಿಯೂ ಶ್ಲೇಷಾರ್ಥವಿದೆ. ಶ್ಲೇಷವೆಂದರೆ ಕೂಡಿದ್ದು, ಎರಡು ಅಥವಾ ಅನೇಕಾರ್ಥಗಳಿಂದ ಕೂಡಿದೆಯೆಂದರ್ಥ.
ಭಾರತೀಯ ಧಾರ್ಮಿಕ ಜೀವನದಲ್ಲಿ ಬಹು ಭಾವುಕ ಪರಂಪರೆಗಳು ಬೆಳೆದು ಬಂದಿವೆ. ಕೆಲವು ತಾತ್ವಿಕವಾಗಿಯೂ, ಹಲವು ಅಧ್ಯಾತ್ಮಿಕವಾಗಿಯೂ, ಇನ್ನಷ್ಟು ಮೂಢನಂಬಿಕೆಯುಳ್ಳವುಗಳೂ ಆಗಿವೆ. ಆದಿಮಾನವನಿಗೆ ದೈವತ್ವದ ಕಲ್ಪನೆ ಬಂದಾಗಿನಿಂದಲೂ ಬಹುಶಃ ಪಂಚಭೂತಗಳನ್ನು ದೇವರೆಂದು ನಂಬಿ ಪೂಜಿಸುವ ಇತಿಹಾಸವುಂಟು. ಅದು ಇಂದಿಗೂ ಹೊರತಾಗಿಲ್ಲ. ಭೂಮಿಯನ್ನು ಭೂತಾಯಿ ಯೆಂತಲೂ ; ಜಲವನ್ನು ಗಂಗಾಮಾತೆಯೆಂತಲೂ ; ಅಗ್ನಿಯನ್ನು ಅಗ್ನಿ ದೇವನೆಂದೂ, ಯಜ್ಞದ ದೂತನೆಂತಲೂ; ಗಾಳಿಯನ್ನು ಮತ್ತು ಆಕಾಶವನ್ನು ಪೂಜಿಸುವ ರೂಢಿ ಬೆಳೆದುಬಂದಿದೆ. ಇಲ್ಲಿ ಪ್ರಸ್ತುತ ವಿಷಯ ಗಾಳಿಗೆ ಸಂಬಂಧಿಸಿದೆ.
ಗಾಳಿಯು ಸಕಲ ಪ್ರಾಣಿಗಳಿಗೂ ಪ್ರಾಣಸ್ವರೂಪವಾಗಿದೆ. ಇದು ಕಣ್ಣಿಗೆ ಕಾಣದಿದ್ದರೂ ಸ್ಪರ್ಶದಿಂದ ಮಾತ್ರತಿಳಿದು ಬರುತ್ತದೆ. ಇದರ ಶಕ್ತಿ ಅದ್ಭುತವಾದುದು. ಆದರೆ ಗಾಳಿಯನ್ನು ತಡೆಯುವ ಶಕ್ತಿ ಪರ್ವತಕ್ಕೆ ಮಾತ್ರವುಂಟು. ಪರ್ವತದ ಮೇಲೆ ಹೋದಾಗ ಗಾಳಿಯ ಹೆಚ್ಚಿನ ಅನುಭವ ಬರುವದು. ಅಂತೆಯೇ ಪರಮಪೂಜ್ಯ ಗುರುವರರಾದ ಶ್ರೀ ಜಗದ್ಗುರು ಅನ್ನದಾನಿ ಮಹಾಶಿವಯೋಗಿಗಳು ಮೇಲಕ್ಕೆ ಹೋದಂತೆ ಗಾಳಿ ಬಹಳ’ ಎಂದು ಅಧ್ಯಾತ್ಮಿಕವಾಗಿಯೂ, ಲೌಕಿಕವಾಗಿಯೂ ಅಪ್ಪಣೆ ಮಾಡುತ್ತಿದ್ದರು. ಪರ್ವತಶಿಖರದಲ್ಲಿ ಗಾಳಿಬಹಳವಾದಂತೆ ಮೇಲ್ಮಟ್ಟದ ಜೀವನದಲ್ಲಿ ವಿಪತ್ತುಗಳೂ ಬಹಳ.
ವ್ಯಕ್ತವಾದ ಗಾಳಿಯನ್ನು ಪೂಜಿಸಲು ಗುಡ್ಡವು ಅನುಕೂಲಕರವಾಗುವದರಿಂದ ಅದನ್ನೇ ಜನರು ಅವಲಂಬಿಸುತ್ತ ಬಂದಿದ್ದಾರೆ. ಗಾಳಿಗೆ ವ್ಯವಹಾರದಲ್ಲಿ ದೆವ್ವ ಮತ್ತು ಭೂತ-ಪಿಶಾಚವೆಂತಲೂ ಕರೆಯುತ್ತಾರೆ. ಈ ಭೂತ-ಪಿಶಾಚಗಳ ಬಗ್ಗೆಯೂ ಬಹುರಂಜಕ ಕಥಾನಕಗಳುಂಟು. ಅವುಗಳು ಸ್ಮಶಾನಗಳಲ್ಲಿ ಪರ್ವತಗಳ ಗುಹೆಗಳಲ್ಲಿ ವಾಸಮಾಡುತ್ತವೆಂತಲೂ ಕೆಲವರ ನಂಬಿಕೆ. ಯಥಾರ್ಥಜ್ಞಾನವಿಲ್ಲದ, ಆತ್ಮಜ್ಞಾನ ರಹಿತರಾದ ಜನರು ಅವು ನಮ್ಮನ್ನು ಕಾಡಬಾರದೆಂದು ಪೂಜಿಸುವ ರೂಢಿಯೂ ಬಂದಿದೆ. ಈ ಮಾತಿಗೆ ಭೂಮಂಡಲದ ಬಹುಜನರು ಭಯಗ್ರಸ್ತರಾಗುತ್ತ (ಅವುಗಳಿಗೆ) ಮಾರುಹೋಗಿದ್ದಾರೆ. ಇಂಥ ಹದಿನಾಲ್ಕು ಭೂಮಂಡಲಗಳನ್ನು ಪರ್ವತಗಳು ಧರಿಸಿರುತ್ತವೆಂಬುದನ್ನು ಅನುಭವಿಗಳು ಉಸುರುತ್ತಾರೆ. ಅಮರ ಕೋಶಕಾರನು
ಮಹೀಧ್ರೇ ಶಿಖರಿಕ್ಷ್ಮಬೃತ್ ಅಹಾರ್ಯಧರ ಪರ್ವತಾ : 1 (೨-೨-೧)
ಎಂದಿದ್ದಾನೆ ಮಹೀಧರ, ಕ್ಷ್ಮಬೃತ್, ಅಥವಾ ಭೂಭ್ರತ್ ಪದಗಳು ಮೇಲಿನ ಮಾತನ್ನೇ ವಿಶದೀಕರಿಸುತ್ತವೆ. ಪರ್ವತವು ಭೂಮಿಯನ್ನು ಹೊತ್ತುಕೊಂಡಿರುವು ದೆಂದರ್ಥವಾಗುವದು.
ಇನ್ನೊಂದರ್ಥದಲ್ಲಿ ಗುಡ್ಡವೆಂದರೆ ದೇಹ, ಅದರಲ್ಲಿ ವಾಯುವಿಕಾರಗಳುಂಟು. ಮಾನವರಿಗೆ ಗಾಳಿಯು ಪ್ರಾಣದಾಯಕವಾಗಿರುವಂತೆ ಬಾಹ್ಯದಲ್ಲಿ ಸೌಮ್ಯವಾದ ಉಷ್ಣ ಮತ್ತು ತಂಪು ಸ್ಪರ್ಶದಿಂದ ಸಂತಸದಾಯಕವಾಗಿದೆ. ಶರೀರದಲ್ಲಿ ವಾಯು ವಿಕಾರಗಳಾಗಿ ದುಃಖದಾಯಕವೂ ಆಗುವದು. ಒಮ್ಮೊಮ್ಮೆ ಗಾಳಿಯ (ಭೂತ-ಪಿಶಾಚಗಳ) ಪ್ರವೇಶವೂ ಕೆಲವರಿಗೆ ಆಗುವದುಂಟು. ಇಂಥ ಭೂತಗಳಿಂದ ಕೂಡಿದ ದೇಹ ವೆಂತಲೂ ಇಲ್ಲಿ ಅರ್ಥೈಸಬೇಕಾಗುವದು. ಶರೀರದಲ್ಲಿ ಗಾಳಿಯ ಪೂಜೆಯೆಂದರೆ ವಿಷಯ ವಾಸನಾರಾಧನೆಯ ಗೌರವವೆಂದಾಗುವದು. ವಿಷಯ ವಾಸನೆಯನ್ನು ಇರಿಸಿಕೊಳ್ಳದ ದೇಹಗುಡ್ಡ ಅಪರೂಪ. ಈ ದೇಹಗುಡ್ಡದ ಎತ್ತರ ಒಂದೇ ಆಳಿನ ಪ್ರಮಾಣದಲ್ಲಿದೆ. ಹೊರಗಿನ ಆಕಾರ ಚಿಕ್ಕದಾದರೂ ಅಂತರಂಗದ ವಿಸ್ತಾರ ಅಪಾರ. ಆದ್ದರಿಂದ ಈ ಆಳುಮಟ್ಟದ ದೇಹಪರ್ವತದಲ್ಲಿ ಈರೇಳು (ಹದಿನಾಲ್ಕು) ಲೋಕಗಳು ತಾಳಿಕೊಂಡು ಬಂದಿವೆ. ಅಂದರೆ ಬ್ರಹ್ಮಾಂಡದಂತೆ ಪಿಂಡಾಂಡದಲ್ಲಿಯೂ ಹದಿನಾಲ್ಕು ಭುವನ ಗಳಿರುತ್ತವೆಂಬ ಮಾತನ್ನು ೧೮ ನೇ ತ್ರಿಪದಿಯಲ್ಲಿ ಅರಿತಿದ್ದೇವೆ. ಚನ್ನಬಸವಣ್ಣನವರು –
“ಈರೇಳು ಲೋಕವನು ಒಡಲೊಳಗಿಟ್ಟುಕೊಂಡು
ಲಿಂಗರೂಪಾಗಿ ಭಕ್ತನ ಕರಸ್ಥಲಕ್ಕೆ ಬಂದು
ಪೂಜೆಗೊಂಡಿತ್ತು ನೋಡಾ….
ಎಂದಿದ್ದಾರೆ. ಲಿಂಗ ಮತ್ತು ಅಂಗಕ್ಕೆ ಅಭೇದವಿಲ್ಲವೆ ?
ಶರೀರಿಯು ಪ್ರಾಣವಾಯುವಿನಿಂದಲೇ ಬದುಕುತ್ತಿರುವದರಿಂದ ಅದನ್ನು ಗೌರವಿಸಬೇಕಾದ್ದು ಯೋಗ್ಯವೇ ಇದೆ. ಕೇವಲ ಗಾಳಿಯನ್ನು ಪೂಜಿಸಿ ಸ್ಪರ್ಶಸುಖಕ್ಕಾಗಿ ಆಶೆಪಟ್ಟರೆ ಅಧ್ಯಾತ್ಮಸಾಧನೆ ಸಿದ್ಧಿಸಲಾರದು. ಗಾಳಿಯ ಚಂಚಲತೆಯನ್ನು ನೀಗಿಸಿ ಸ್ಥಿರತೆಯನ್ನು ಸಾಧಿಸಿದರೆ ಮಾತ್ರ ಪ್ರಾಣಲಿಂಗಾನುಸಂಧಾನವು ಸಮನಿಸುವದು. ೫೯ನೇಯ ತ್ರಿಪದಿಯ ತಿರುಳಿನಲ್ಲಿ ಪ್ರಸ್ತಾಪಿಸಿದಂತೆ ಈ ವಾಯುವು ಶರೀರ ತುಂಬೆಲ್ಲ ಹರಿದಾಡಿ ಕಾಯವನ್ನು ಕಂಗೆಡಿಸುತ್ತದೆ. ಭಕ್ತಿಯ ಬಟ್ಟೆಯನ್ನು ಬಯಲಾಗಿಸುತ್ತಿದೆ. ತ್ವಕ್ಕು (ಚರ್ಮವು) ದೇಹವನ್ನೆಲ್ಲ ವ್ಯಾಪಿಸಿರುತ್ತದೆ. ಇದು ಜೀವನ ತೊಗಲಿನ ಚೀಲದಂತಾಗಿದೆ. .. ಈ ತ್ವಗಿಂದ್ರಿಯವು ಸ್ಪರ್ಶ ಸುಖಕ್ಕಾಗಿ ಆಶಿಸುತ್ತದೆ. ಜೀವಾತ್ಮನು ಸ್ಪರ್ಶಸುಖ ಬಯಸಿ ಬಂಧನದಲ್ಲಿ ಸಿಲುಕುತ್ತಾನೆ.
ನಿಜಗುಣರು –
”ತೊಗಲತಿತ್ತಿಗೆ ಸಮನಾದ ಕಾಯದೊಳು ಕಂ-
ಡಿಗಳು ತೆಗದಿರೆ ಪಲವವರೊಳಗೆ |
ಸಂಗತಿಯನುಳ್ಳ ಮಾರುತನಿರ್ದು ತೊಗಲದೆ |
ಸೊಗಸುದೋರುವ ಸೋಜಿಗವನು ಕಂಡು || ಜೀವ. ಸಂ. ಸ್ಥಳ – ೧೯ |
“ಕೈವಲ್ಯಪದ್ಧತಿ’ಯಲ್ಲಿ ”ತೊಗಲಿನ ಚೀಲದಂತೆ ಇರುವ ದೇಹಕ್ಕೆ ಕೆಲವು ತೂತು ಗಳನ್ನು ಮಾಡಿ ಅದರಲ್ಲಿ ವಾಯು ಧಾರಾಳವಾಗಿ ಸಂಚಾರಮಾಡುತ್ತಿರುವವರಿಗೆ ಅನೇಕ ಸೋಜಿಗಳನ್ನು ಕಾಣುವಿ’ಯೆಂದು ತೊಗಲಿನ ಚೀಲವಾದ ದೇಹಕ್ಕೆ ಗಾಳಿಯು ಆಧಾರವೆಂದು ಅಭಿಪ್ರಾಯ ಪಟ್ಟಿರುವರು. ಗಾಳಿಯ ಸ್ಪರ್ಶ ಒಳ-ಹೊರಗೂ ಹಿತವಾಗುತ್ತದೆ. ಆದರೆ ಅತಿಯಾದರೆ ತೊಂದರೆದಾಯಕವೇ ಆಗುವದು. ಹೊರ ಚರ್ಮದ ಬಣ್ಣವನ್ನು ಕಂಡು( ಇನ್ನೊಂದು) ಆ ಚರ್ಮವನ್ನು ಸ್ಪರ್ಶಿಸುವ ಆಶೆಯನ್ನು ಪ್ರಕೃತಿಯು ಹುಟ್ಟಿಸುತ್ತದೆ. ಷಣ್ಮುಖಶ್ರೀಗಳು –
ಬಣ್ಣದ ಚರ್ಮದ ಹೆಣ್ಣಿನಂಗದ ಕೂಟಸುಖ ಸವಿಯೆಂದು
ಮನವೆಳಸುವ ಕಣ್ಣಗೆಟ್ಟಣ್ಣಗಳು ನೀವು ಕೇಳಿರೊ !
ಹೆಣ್ಣಿನಿಂದೇನು ಸುಖವುಂಟು ಎಡ್ಡಪ್ರಾಣಿಗಳಿರಾ !
ಹೇಸಿಕೆಯ ಕಿಸುಕುಳದ ಕೀವು ತುಂಬಿ ಒಸರುವ,
ಹಸಿಯ ಘಾಯದಲ್ಲಿ ವಿಷಯಾತುರತೆಯಿಂದ ಬಿದ್ದು
ಮತಿಮಸಳಿಸಿ, ಮುಂದುಗಾಣದೆ ಮುಳುಗಾಡು
ತಿಪ್ಪುದು ನೋಡಾ ಮೂಜಗವೆಲ್ಲ ಅಖಂಡೇಶ್ವರ.
ಎಂದು ಬಹುಮಾರ್ಮಿಕವಾಗಿ ಸ್ಪರ್ಶವಿಷಯ ಸುಖವನ್ನು ವಿಡಂಬಿಸಿದ್ದಾರೆ. ಮತ್ತು ಇನ್ನೊಂದೆಡೆ ಕೇವಲ ಸ್ಪರ್ಶಸುಖಕ್ಕೆ ಆಶಿಸಿ ಕೆಡುವ ಪ್ರಾಣಿ ‘ಗಜ’ದ ಗತಿಯನ್ನು ಅವಲೋಕಿಸಿ –
”ತ್ವಗಿಂದ್ರಿಯ ವಿಷಯದಿಂದ ಗಜವು
ಕೆಡುವದು ರಾಜನ ಕೃತಕದಲ್ಲಿ
ಎಂದು ಮರುಗಿದ್ದಾರೆ. ರಾಜರು ತಮ್ಮ ಉಪಯೋಗಕ್ಕಾಗಿ ಆನೆಗಳನ್ನು ಹಿಡಿಯಲು ಅಡವಿಯಲ್ಲಿ ತಗ್ಗು ತೆಗೆದು ಮೇಲೆ ಚಪ್ಪರಹಾಕಿ ಹುಲ್ಲನ್ನು ಬೆಳೆಯಿಸುವರು. ಎಳೆಯ ಹಸುರಾದ ಹುಲ್ಲಿಗಾಗಿ ಆಶಿಸಿದ ಗಜವು ತಗ್ಗಿನಲ್ಲಿ ಬೀಳುವದು. ಜ್ಞಾನಿಯಾದ ಮಾನವನು ಒಂದೊಂದು ಇಂದ್ರಿಯದ ಸುಖಕ್ಕಾಗಿ ಬಯಸದೆ ಆತ್ಮದ ಅರಿವನ್ನು ಮಾಡಿಕೊಳ್ಳಬೇಕು. ಅಂದರೆ ತ್ವಕ್ಕಿನ ಜಡತ್ವವು ನಾಶನಾಗಬೇಕಾದರೆ ಆ ತ್ವಗಿಂದ್ರಿಯವನ್ನು ಜಂಗಮಲಿಂಗವನ್ನಾಗಿಸಬೇಕು. ಆಗ ಸ್ಪರ್ಶ ವಿಷಯವು ಪ್ರಸಾದವಾಗುವದು. ತ್ವ ಕ್ಕು ಜಂಗಮಲಿಂಗಕ್ಕೆ ಮುಖನಾಗಬೇಕು. ಸ್ಪರ್ಶವನ್ನು ಸ್ಪರ್ಶಪ್ರಸಾದವನ್ನಾಗಿ ಭೋಗಿಸಬೇಕು. ಇಂಥ ಶಕ್ತಿಯು ಶ್ರೀಗುರು ಕರುಣೆಯಿಂದ ಮಾತ್ರ ಪಡೆಯಲು ಬರುತ್ತದೆ.
ಗುರುವಿಗೆ ನಮ್ಮ ತನುವನ್ನರ್ಪಿಸಬೇಕು. ಶರೀರದಿಂದ ಗುರುವಿನ ಸೇವೆಯನ್ನು ತಪ್ಪದೆ ಮಾಡಬೇಕು. ಅದರಿಂದ ಗುರುಕೃಪೆಯಾಗುವದು. ಗುರುಕರುಣೆಯಿಂದ ವಾಯುವನ್ನು ನಿಲ್ಲಿಸಿ ಮನವನ್ನು ಮಹಾಲಿಂಗದಲ್ಲಿ ನೆಲೆಗೊಳಿಸಿ ಸ್ಪರ್ಶವನ್ನು ಸ್ಪರ್ಶಪ್ರಸಾದವನ್ನಾಗಿಸಿ ಶೀತ-ಉಷ್ಣ ಮೃದು-ಕಠಿಣಗಳ ತಾರತಮ್ಯವನ್ನು ಸಮನ್ವಯಗೊಳಿಸುವ-ಶಕ್ತಿಯನ್ನು ಸಂಪಾದಿಸ ಬೇಕು ಪರಮಗುರುವೆ ! ನೀನು ಕರುಣೆದೋರು. ಅದರಿಂದ –
“ಎನ್ನ ತ್ವಕ್ಕದು ಚಲುವ ನಿನ್ನ ಚರಣವ ತೊಳೆವ
ಮನ್ನಣೆಯ ತೊತ್ತಾಗಿ ಇರ್ಪ್ಪುದಯ್ಯ’ʼ
ಎಂದು ಷಡಕ್ಷರಿ ಕವಿಗಳು ಹಾಡಿಹರಿಸಿದಂತೆ ಸಫಲತೆಯನ್ನು ಪಡೆಯಲಾಗುವದು.
೩. ನೇಂದ್ರಿಯ – ರೂಪ ವಿಷಯ
ಹುಬ್ಬಳ್ಳಿ ಪೇಟೆಯೊಳು | ಕಬ್ಬಿನ ಕೈಮಾರಾಟ
ಇಬ್ಬರೊಂದಾಗಿ – ಉಬ್ಬಿಮಾರಲು ಲಾಭ
ಹಬ್ಬಿತೈ ಗುರುವೆ ಕೃಪೆಯಾಗು ||೬೮||
ಅಗ್ನಿತತ್ತ್ವದ ನೇಂದ್ರಿಯಕ್ಕೆ ಸೂರ್ಯನೇ ಅಧಿದೇವತೆ. ಕಣ್ಣಿನ ವಿಷಯ ರೂಪು. ಶ್ವೇತ (ಬಿಳಿ) ಪೀತ (ಹಳದಿ) ಹರಿತ (ಹಸಿರು) ಕಪೋತ (ಮಾಸ) ಮಾಂಜಿಷ್ಟ (ಕಂದು, ಕೆಂಪು) ಕೃಷ್ಣ (ಕಪ್ಪು) ಗಳೆಂದು ರೂಪಿನಲ್ಲಿ ಆರು ವಿಧ. ಈ ತ್ರಿಪದಿಯಲ್ಲಿ ನೇತ್ರದ ವ್ಯವಹಾರ ಹಾಗೂ ರೂಪ ವಿಷಯದ ವಿಚಾರ ಸುಂದರವಾಗಿ ಬಂದಿದೆ.
ಹಿಂದೆ ತಿಳಿಸಿದಂತೆ ಶಿವಕವಿಯು ವ್ಯಾಪಾರಿಯಾಗಿದ್ದುದರಿಂದ ಪೇಟೆಗಳ ಪರಿಚಯ ವ್ಯಾಪಕವಾಗಿದೆ. ಹುಬ್ಬಳ್ಳಿ ಪೇಟೆ ಬಹುದಿನಗಳಿಂದಲೂ ಪ್ರಸಿದ್ಧ. ಅದರ ಪರಿಚಯವಿಲ್ಲದವನು ತೀರ ವಿರಳ. ಆಗ ಸಕ್ಕರೆಯ ಕಾರಖಾನೆಗಳಿಲ್ಲದ ಕಾಲ. ಕೇವಲ ತಿನ್ನುವ ಬಿಳೆ ಕಬ್ಬುಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದರು. ಸಣ್ಣ ಸಣ್ಣ ಸಂತೆಗಳಲ್ಲಿಯೂ ಕಬ್ಬಿನ ಮಾರಾಟ ನಡೆಯುತ್ತಿತ್ತು. ಹುಬ್ಬಳ್ಳಿಯೆಂದ ಮೇಲೆ ಕೇಳಬೇಕೆ ? ಕಬ್ಬಿನ ಮಾರಾಟ ಕೈ ಮೇಲೆಯೇ ನಡೆಯುತ್ತಿತ್ತು. ಕೈ ಮಾರಾಟವೆಂದರೆ ಮಾರುವವನು ತನ್ನ ಸಾಮಾನುಗಳನ್ನು ಹೊರತೆಗೆದು ಕೈಯಲ್ಲಿ ಹಿಡಿಯುತ್ತಲೇ ಮಾರಾಟವಾಗುವದು. ಗಿರಾಕಿಗಳಿಗಾಗಿ ಕಾಯ್ದು ನಿಲ್ಲುವ ಅವಸರವಿರುವದಿಲ್ಲ. ಗ್ರಾಹಕರು ಹೇರಳವಾಗಿರುವ ದರಿಂದ ತಡವಿಲ್ಲದೆ ಸರಕು ಮಾರಾಟವಾಗುತ್ತಿತ್ತು. ಅದರಿಂದ ಕೊಡುವವನಿಗೂ, ಕೊಳ್ಳುವವನಿಗೂ ತೀರದ ಉತ್ಸಾಹವಾಗುವದು ಸಹಜ. ಇದು ಹೊರನೋಟದ ಕಬ್ಬಿನ ವ್ಯಾಪಾರವಾದರೆ ಅಧ್ಯಾತ್ಮಿಕ ಕಬ್ಬಿನ ವ್ಯಾಪಾರ ಬಹು ಮಾರ್ಮಿಕವಾಗಿದೆ.
ಹುಬ್ಬಳಿಯೆಂದರೆ = ಹುಬ್ಬಿನ ಬಳ್ಳಿ (ಹುಬ್+ಬಳ್ಳಿ), ಬಳ್ಳಿಯಂತಿರುವ ಹುಬ್ಬು. ಈ ಹುಬ್ಬುಗಳ ವ್ಯವಹಾರವೇ ಹುಬ್ಬಳ್ಳಿಯ ಪೇಟೆ, ಎರಡು ಹುಬ್ಬುಗಳ ಮೂಲಕ ನಡೆಯುವ ವ್ಯಾಪಾರ ಕಾಮಕೇಳಿ. ೪೪ನೆಯ ತ್ರಿಪದಿಯಲ್ಲಿ ವಿವರಿಸಿದಂತೆ ಕಾಮನಿಗೆ ಹುಬ್ಬುಗಳೇ ಬಿಲ್ಲು, ಅರಳುಗಂಗಳೇ ಬಾಣವೆಂದು ಅರಿತಿದ್ದೇವೆ. ಕಾಮಿಗಳು ಹುಬ್ಬುಗಳನ್ನು ಕುಣಿಸಿ (ಹಾರಿಸಿ) ಕುಡಿನೋಟಗಳನ್ನು ಬೀರಿ ಎಂಥ ಧೀರನ ಮನವನ್ನಾದರೂ ಸೆಳೆಯುತ್ತಾರೆ. ಹುಬ್ಬು ಮತ್ತು ಕಣ್ಣುಗಳ ಕಾಮ ಚೇಷ್ಟೆ ಕಬ್ಬಿನಂತೆ ರಸಿಕರಿಗೆ ರುಚಿಯಾಗಿರುತ್ತದೆ. ಈ ವ್ಯಾಪಾರದಲ್ಲಿ ಬಾಹ್ಯ ಪ್ರಪಂಚವನ್ನೇ ಮರೆಯುತ್ತಾರೆ. ಪರಸ್ಪರ ಪ್ರೇಮಿಗಳಲ್ಲಿ ಈ ಮನಸಿಜನ ವ್ಯಾಪಾರವು ಹೆಚ್ಚಿದರೆ. ಭೋಗದ ಲಾಭ ಬೆಳೆಯುವದು. ಅದು ಅತಿಯಾಗಿ ಬೆಳೆದರೆ ವೈಷಯಿಕವಾಸನೆ ವ್ಯಾಪಿಸುವದು
ಹಿಂದೀ ಸಾಹಿತ್ಯದ ರಸಿಕ ಚಕ್ರವರ್ತಿಯೆನಿಸಿದ ಶೃಂಗಾರ ಕವಿಯೆಂದು ಪ್ರಖ್ಯಾತಿ ಪಡೆದ ‘ಬಿಹಾರಿಯು’ ತನ್ನ ‘ಸತಸಯಿ’ಯಲ್ಲಿ ಪ್ರಣಯಿಗಳ ನಯನ ಮತ್ತು ಹುಬ್ಬುಗಳ ವ್ಯಾಪಾರದ ವರ್ಣನೆಯನ್ನು ಸುಂದರವಾಗಿ ಮಾಡಿದ್ದಾನೆ .
*”ಕಹತ ನಟತ, ರೀಝತ, ಖಜತ, ಮಿಲತ, ಖಿಲತ, ಲಜಿಯಾತ |
ಭರೆ ಭೌನಮೇಂ ಕರತ ಹೈ ನೈನನ ಹೀ ಸೋಂ ಬಾತ. ||
‘ಕಾಮಾತುರಾಣಾಂ ನ ಭಯಂ ನ ಲಜ್ಜ್ಯಾʼʼಕಾಮಾತುರರಾದ ಕಾಮಿಗಳಿಗೆ ಭಯವೆಲ್ಲಿ? ಯಾವುದೂ ಇರುವದಿಲ್ಲ. ಪ್ರೇಮಿಗಳು ಜನನಿಬಿಡವಾದ ಸಭಾ ಭವನದಲ್ಲಿಯೂ ಸಹ ತಮ್ಮ ಪ್ರೇಮಾಲಾಪವನ್ನು ಮಾಡುತ್ತಾರೆ. ಇವರ ಸಂಭಾಷಣೆ ಶಬ್ದಗಳಿಂದಲ್ಲ. ಕೇವಲ ಕಣ್ಣೋಟಗಳಿಂದ, ಸಂಭಾಷಣೆಗಳಲ್ಲಿಯೂ ಆಕರ್ಷಣೆಯಿದೆ, ರಸಿಕತೆಯಿದೆ. ನಾಯಕನು ಕಣ್ಣು ಸನ್ನೆಯಿಂದ ಪ್ರಿಯತಮಳನ್ನು ಕೇಳುತ್ತಾನೆ. ಅವಳು ಕೃತ್ರಿಮ ನಟನೆಯಿಂದ ಅನುಮತಿ ನೀಡುವದಿಲ್ಲ. ಇದು ಅವನಿಗೆ ಸಂತಸಪಡಿಸುತ್ತದೆ. ಆದರೆ ಆಕೆಗೆ ಸಿಟ್ಟು ಬರುತ್ತದೆ. ಆಗ ಒಬ್ಬರಿಗೊಬ್ಬರು ನೋಡುವದರಿಂದ ಇಬ್ಬರ ನೇತ್ರಗಳು ಒಂದಾಗುತ್ತವೆ. ಮುಖ ಅರಳುತ್ತದೆ. ಜನತೆಯ ಕಲ್ಪನೆ ಬಂದು ಅವಳು ತಕ್ಷಣ ನಾಚಿಕೊಳ್ಳುತ್ತಾಳೆ. ಹೀಗೆ ಕಾಮಿಗಳು ಯಾವ ಪರವೆಯಿಲ್ಲದೆ ತಮ್ಮ ಚೇಷ್ಟೆಯನ್ನು ಆಡುತ್ತಿರುತ್ತಾರೆ.
ಕನ್ನಡದ ಮಹಾಕವಿ ಚಾಮರಸನೂ ಸಹ ಕಾಮಿನಿಯರಿಗೆ ಕಂಗಳ ಮಾತು ಸಹಜವೆಂದು ಬಣ್ಣಿಸಿದ್ದಾನೆ. ”ಪ್ರಭುಲಿಂಗಲೀಲೆ’ಯಲ್ಲಿ –
ಕಂಗಳಲಿ ಮಾತುಗಳು ತಿಳಿವೊಡೆ
ಕಂಗಳಲಿ ಮಾಟಗಳು ಬಗೆವೊಡೆ
ಕಂಗಳಲಿ ಸಮ್ಮೋಹಗಳು ಕಂಗಳಲಿ ನೇಹಗಳು |
ಕಂಗಳಲಿ ಸರ್ವಪ್ರಪಂಚುಗ –
ಳಂಗನೆಯರಿಗೆ ಸಹಜವೆಂದೆನೆ
ಕಂಗಳಿಂದಾ ವಿಮಳೆ ಸೂಚಿಸಲರಿದಳಾ ಮಾಯೆ
ವಿಮಳೆ ಮತ್ತು ಮಾಯಾದೇವಿಯರ ಮಾತು ಕಂಗಳ ಸಂಜ್ಞೆಯಿಂದ ನಡೆದ ಪ್ರಸಂಗವನ್ನು ಇಲ್ಲಿ ವರ್ಣಿಸಲಾಗಿದೆ.
ಕಣ್ಣುಗಳ ಕಾಮಚೇಷ್ಟೆಯು ಉಚ್ಚೃಂಖಲತೆಯನ್ನು ಹೊಂದಿದರೆ ಸಾಮಾಜಿಕ ಜೀವನವೇ ವ್ಯತ್ಯಸ್ತವಾಗುವದು. ಇಂದಿನ ಸ್ಟೇಚ್ಛಾ ಮನೋಭಾವವುಳ್ಳವರಲ್ಲಿ ಮತ್ತು ನಾಟಕ-ಚಲನಚಿತ್ರಗಳಲ್ಲಿ ಈ ವ್ಯವಹಾರ ಅತಿಯಾಗಿ ಕಾಣುತ್ತದೆ. ಇದರ ಪರಿಣಾಮ ಊಹಿಸಲಸಾಧ್ಯವಾಗಿದೆ.
*ವಿಶ್ವಾಮಿತ್ರ – ಪರಾಶರ ಪಭೃತಯೋ ವಾತಾಂಬುಪರ್ಣಾಶನಾಃ |
ತೇSಪಿ ಸ್ತ್ರೀ ಮುಖ ಪಂಕಜಂ ಸುಲಲಿತಂ ದೃಷ್ಟ್ವೈ ಮೋಹಂ ಗತಾಃ |
“ಕೇವಲ ಒಣಗಿದ ಎಲೆ ನೀರುಗಳನ್ನು ತಿಂದ ವಿಶ್ವಾಮಿತ್ರ ಪರಾಶರ ಮೊದಲಾದ ಮುನಿಗಳು ಸಹ ಸುಂದರವಾದ ಸ್ತ್ರೀಯರ ಮುಖಕಮಲವನ್ನು ಕಂಡು ಮೋಹಿತರಾದರೆಂದು ಭರ್ತೃಹರಿಯು ಹೇಳಿರುವಾಗ ಇನ್ನುಳಿದ ಸಾಮಾನ್ಯ ಮಾನವರ ಪಾಡೇನು
ನೇತ್ರವು ಸುಂದರ ರೂಪಕ್ಕಾಗಿ ಕಾತುರ ಪಡುತ್ತಿದೆ. ಚರ್ಮದ ಚೀಲವೆನಿಸಿದ ದೇಹದ ಬಣ್ಣ, ಹಾಗೂ ಯೌವನದ ಉಬ್ಬುಗಳನ್ನು ನಿರೀಕ್ಷಿಸ ಬಯಸುತ್ತದೆ. ಈ ರೂಪ ಸ್ಥಿರವಾದುದಲ್ಲ. ಮಹಾಪೂರವಿಳಿದ ನದಿಯಂತೆ ಯೌವನವು ಜಾರಿಹೋದ ಮೇಲೆ ರೂಪ ವಿರೂಪವಾಗುವದು. ಇದು
ಕಿಸುಕುಳದ, ಕೀವುರಕ್ತದ, ಒಸೆದು ತುಂಬಿದ
ಮಲಮೂತ್ರದ ರಂಜನ ಮುಸುಕಿದ
ಮಾಂಸ ಅಸ್ತಿಗಳ ಸುತ್ತಿನ ಹಸನಾದ ಚರ್ಮದ ಹೊದಿಕೆಯ
ಹುಸಿಯ ತನುವ ಮೆಚ್ಚಿ ಪಶುಪತಿ ನಿಮ್ಮ ನಾನು ಮರೆದೆನಯ್ಯ
ಅಖಂಡೇಶ್ವರಾ
ಸುಡು ಸುಡು ಈ ದೇಹದ ರೂಪು
ನೋಡಿದಡೇನೂ ಹುರುಳಿಲ್ಲವಯ್ಯ
ಎಲುವು ಚರ್ಮ ನರ ಮಾಂಸ ಮಲ ಮೂತ್ರಯುಕ್ತವಾದ
ಅನಿತ್ಯ ದೇಹವ ನಚ್ಚಿ ನಿಮ್ಮ ನಿಜವ ಮರೆದು
ಭವಭಾರಿಯಾದೆನಯ್ಯ ಅಖಂಡೇಶ್ವರಾ
ಎಂದು ಷಣ್ಮುಖ ಶಿವಯೋಗಿಗಳು ದೈಹಿಕ ರೂಪದ ಅಸಾರತೆಯನ್ನು ಭವದ ಮೂಲವನ್ನು ತಿಳಿಸಿದ್ದಾರೆ. ಉಡುತಡಿಯ ನವಯೌವನವತಿಯಾದ ಅಕ್ಕನ ಸುಂದರ ರೂಪವನ್ನು ಮೋಹಿಸಿದ ಕೌಶಿಕರಾಜನಿಗೆ ಅಕ್ಕನು ದೇಹದ ಯಥಾರ್ಥ ರೂಪವನ್ನು ಬಿತ್ತರಿಸಿ ಮಾಯಾ ಪರೆಯನ್ನೇ ಹರಿಯುತ್ತಾಳೆ –
ಅಮೇಧ್ಯದ ಹಡಿಕೆ, ಮೂತ್ರದ ಕುಡಿಕೆ,
ಎಲುವಿನ ತಡಿಕೆ, ಕೀವಿನ ಹಡಿಕೆ,
ಸುಡಲೀ ದೇಹವ ಒಡಲುವಿಡಿದು ಕೆಡದಿರು
ಚನ್ನಮಲ್ಲಿಕಾರ್ಜುನನರಿ ಮರುಳೆ !
ಎಂದು ಹೇಳಿ ಸ್ವತಃ ತಾನೂ ದಿಗಂಬರೆಯಾಗಿ ವೀರವೈರಾಗ್ಯಶಾಲಿನಿಯಾಗಿ ಕೀರ್ತಿಕಾಯಳಾಗುತ್ತಾಳೆ. ದೀಪದ ರೂಪಕ್ಕಾಗಿ ಮೋಹಿಸುವ ಪತಂಗವು ಸುಟ್ಟು ಸಾಯುವಂತೆ ಮಾನವನು ನಾರಿಯರ ಹೊರಗಿನ ರೂಪಕ್ಕಾಗಿ ಮರುಳಾಗಿ ಮನುಷ್ಯತ್ವವನ್ನು ಮಾರಿಕೊಳ್ಳುತ್ತಾನೆ.
“ಸರ್ವೆಂದ್ರಿಯಾಣಾಂ ನಯನಂ ಪ್ರಧಾನಂ ‘
ಪಂಚ ಜ್ಞಾನೇಂದ್ರಿಯಗಳಲ್ಲಿ ನೇತ್ರವೇ ಮುಖ್ಯವಾಗಿದೆ. ಉಳಿದ ನಾಲ್ಕರಲ್ಲಿ ಯಾವುದಾದರೂ ಕೊರತೆಯಾದರೆ ನಡೆಯಬಹುದು.. ಕಣ್ಣಿಲ್ಲದಿದ್ದರೆ ಪರಾಧೀನನಾಗ ಬೇಕಾಗುವದು. ಶಿವನು ತನ್ನ ಸೃಷ್ಟಿಯ ಸೌಂದರ್ಯವನ್ನು ಸವಿಯಲು ನೇತ್ರವನ್ನಿತ್ತಿದ್ದಾನೆ. ಶಿವಲಿಂಗದಲ್ಲಿ ದೃಷ್ಟಿಯನ್ನಿರಿಸಲು ಕಣ್ಣಿರಿಸಿದ್ದಾನೆ (ಜೀವನಿಗೆ) ಆ ಕಣ್ಣೋಟ ಕಾಮುಕ ದೃಷ್ಟಿಯುಳ್ಳುದಾಗಬಾರದು. ನೇತ್ರದೃಷ್ಟಿಯನ್ನು, ಲಿಂಗಕಲೆಯನ್ನು ನೋಡಿ ಶಿವಮಯಗೊಳಿಸಬೇಕು. ಅಂದರೆ ಮಾತ್ರ ನೇತ್ರವು ಶಿವಲಿಂಗವಾಗುವದು. ನೋಡುವ ರೂಪವೆಲ್ಲ ಶಿವಸ್ವರೂಪವಾಗುವದು. ಈ ದೃಷ್ಟಿಯ ವಿಷಯದಲ್ಲಿ ಜ್ಞಾನಿಯಾದ ಚನ್ನಬಸವಣ್ಣನವರ ಕೆಳಗಿನ ಒಂದೇ ವಚನ ಸಾಕು –
ಲಿಂಗದ ಕಲೆ ಅಂತರಂಗಕ್ಕೆ ವೇಧಿಸುವ
ಹಲವು ಸಾಧನಂಗಳಲ್ಲಿ
ಒಂದು ಸಾಧನವನಿಲ್ಲಿ ಹೇಳಿಹೆನು ಕೇಳಿರಯ್ಯ.
ಕರದಿಷ್ಟ ಲಿಂಗದಿ, ತೆರೆದಿಟ್ಟ ದೃಷ್ಟಿ ಎವೆಹಳಚದಂತಿರ್ದಡೆ
ಆ ಲಿಂಗವು ಕಂಗಳಲ್ಲಿ ವ್ಯಾಪಿಸುತ್ತಿಹುದು.
ಆ ಮಂಗಲಮಯವಾದ ಕಂಗಳಲ್ಲಿ ಮನವನಿರಿಸಿ
ಲಿಂಗ ನಿರೀಕ್ಷಣೆಯಿಂದ ನೆನೆಯಲು
ಆ ಲಿಂಗಮೂರ್ತಿ ಮನವನಿಂಬುಗೊಂಡು
ಪ್ರಾಣಲಿಂಗವಾಗಿ ಪರಿಣಮಿಸುತಿಪ್ಪುದು
ಬಳಿಕ ಮನೋಮಯ ಲಿಂಗವನು –
ಭೇದವಿಲ್ಲದ ಸುವಿಚಾರದಿಂದ ಪರಿಭಾವಿಸಲು,
ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು
ಭಾವಲಿಂಗವಾಗಿ ಕಂಗೊಳಿಸುತಿಪ್ಪುದು.
ಆ ಭಾವಲಿಂಗವನು ಎಡೆಬಿಡದೆ ಭಾವಿಸುತ್ತ
ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು,
ಶರಣನು ನಿತ್ಯ ತೃಪ್ತನಾಗಿ ವಿರಾಜಿಸುತಿಪ್ಪನು.
ಇದೇ ನಮ್ಮ ಕೂಡಲ ಚನ್ನಸಂಗಯ್ಯನೊಡನೆ
ಕೂಡುವ ಪರಮೋಪಾಯವು.
ನೋಡಿದಿರಾ ! ದೃಷ್ಟಿಯ ಮಹತ್ವ ಅದೆಷ್ಟು ಅಪಾರವಾಗಿದೆ. ಪರಶಿವನ ಕೂಡುವ ಸಾಧನವೇ ದೃಷ್ಟಿ, ಶಿವನೇ ತಾನಾಗುವ ಸಾಧನವೂ ದೃಷ್ಟಿ, ಮೊಗ್ಗೆಯ ಮಾಯಿದೇವರೂ ಮಹದೈಪುರೀಶ್ವರ ಶತಕದಲ್ಲಿ –
“ಲಿಂಗದೊಳಿಟ್ಟ ದೃಷ್ಟಿ ನಿಜದೃಷ್ಟಿಯೊಳಿರ್ದ ಮನಂ ಮನಸ್ಸಿನೊ |
ಳ್ಪಿಂಗದ ನಿಂದಭಾವಮದರೊಳ್ನೆಲೆಗೊಂಡ ಶಿವಾತ್ಮಲಿಂಗವಾ ।
ಲಿಂಗದೊಳಿರ್ದು ನಿತ್ಯಸುಖಿಯಾಗಿ ವಿರಾಜಿಸುವಂಗೆ ಬಾಹ್ಯ ಕ |
ರ್ಮಂಗಳವೇತಕಯ್ಯ ಪರಮ ಪ್ರಭುವೇ ಮಹದೈಪುರೀಶ್ವರಾ || ೫೨ |
ಇಷ್ಟ ಲಿಂಗದಲ್ಲಿ ದೃಷ್ಟಿ-ಮನ-ಭಾವಗಳು ನೆಲೆನಿಂತರೆ ಶರಣನು ಚಿರ ಪರಿಣಾಮಿಯೆನಿಸುವನು. ನಿತ್ಯಸುಖಿಯಾಗುವನು. ಇಂಥವನಿಗೆ ಬಾಹ್ಯ ಕರ್ಮಗಳ ಅವಶ್ಯಕತೆಯೇ ಇಲ್ಲ. ಅಂದಮೇಲೆ ಪರಶಿವನು ದಯಪಾಲಿಸಿದ ನೇತ್ರವನ್ನು ಗುರು-ಲಿಂಗ-ಜಂಗಮರ ದರ್ಶನಕ್ಕಾಗಿ ಮೀಸಲಾಗಿಡಬೇಕು. ಶಿವಲಿಂಗ ನೋಡುವ ಕಣ್ಣಿನಲ್ಲಿ ಪರ ಸತಿಯ ನೋಡಿದಡೆ ಅಲ್ಲಿ ಲಿಂಗವಿಲ್ಲ. ಲಿಂಗವಿಲ್ಲದೆ ಸಂಯೋಗವಿಲ್ಲ. ಸಮರಸವಿಲ್ಲ. ಅದುಕಾರಣ ನೇತ್ರದ ನಿಜವನರಿದಾಚರಿಸಬೇಕು.
ಎಡ ನೇತ್ರದ ಈಡಾ ನಾಡಿಯೇ ಸತಿಯಾಗಿ ಬಲನೇತ್ರವಾದ ಪಿಂಗಳನಾಡಿಯು ಶಿವಲಿಂಗರೂಪಪತಿಯಾಗಿ ಸುಷುಮ್ನಾನಾಳವಾದ ಭ್ರೂ ಮಧ್ಯ (ಹುಬ್ ಬಳ್ಳಿ) ಪೇಟೆಯಲ್ಲಿ ಕೂಡಿದರೆ ಸಮರಸದ ನಿತ್ಯ ಸುಖಪ್ರಾಪ್ತಿಯಾಗಿ ನಿತ್ಯತೃಪ್ತತೆ ಲಭ್ಯವಾಗು ವದು. ಇಂಥ ತೃಪ್ತಿಗೆ ನಾಶವೆಂಬುದಿಲ್ಲ. ಈ ನಿತ್ಯತೃಪ್ತಿ ನೇತ್ರದ ದೃಷ್ಟಿಯೋಗದಿಂದ ಸಾಧ್ಯವೆಂಬುದನ್ನು ಮರೆಯದಿರಬೇಕು. ಓ ಗುರುವೆ ! ಎನ್ನ ನೇತ್ರದಲ್ಲಿ ಶಿವಲಿಂಗವನ್ನು ನೆಲೆಗೊಳಿಸಿ ರೂಪುಗಳನ್ನು ಶಿವಮಯಗೊಳಿಸಿ ಭ್ರೂಮಧ್ಯದ ಅಜ್ಞಾಚಕ್ರದ ಎರಡೆಸಳಿನ ಕಮಲಮಧ್ಯದ ಮಹಾಲಿಂಗ ದರ್ಶನವನ್ನು ಮಾಡಿಸಿ ನಿತ್ಯ ಸುಖಿಯನ್ನಾಗಿಸು.
*
೪. ರಸನೇಂದ್ರಿಯ – ರಸ ವಿಷಯ
ಶಿರಹಟ್ಟಿಯೊಳಗೊಂದು | ಕರುವಿಲ್ಲದಾಕಳಿಗೆ
ಕರೆವ ಮೊಲೆಯಿಲ್ಲ ಕರೆದುಂಬುತಿದೆ ಗೋವು
ಕರಚೋದ್ಯ ಗುರುವೆ ಕೃಪೆಯಾಗು || ೬೯ ||
ಇಲ್ಲಿ ರಸವಿಷಯದ ನಿರೂಪಣೆ ಬಂದಿದೆ. ರಸವನ್ನು ಗ್ರಹಿಸುವದು ಜಿಹ್ವೇಂದ್ರಿಯವು. ಇದಕ್ಕೆ ಅಪ್ಪುವೇ ಮಹಾಭೂತ. ವರುಣನೇ ಅಧಿದೇವತೆ. ಈ ಜಿಹ್ವೆ (ನಾಲಿಗೆ)ಗೆ ರಸವೇ ವಿಷಯವು. ಮಧುರ (ಸಿಹಿ) ಆಮ್ಲ (ಹುಳಿ) ತಿಕ್ತ (ಕಹಿ) ಕಟು (ಖಾರ) ಕಷಾಯ (ಒಗರು) ಲವಣ (ಉಪ್ಪು) ಗಳೆಂಬ ಆರು ರಸದ ಭೇದಗಳು. ಈ ತ್ರಿಪದಿಯಲ್ಲಿ ಪ್ರತಿಪಾದಿಸಿದ ರಸದ ವ್ಯಾಖ್ಯಾನವು ಅತ್ಯಂತ ನಿಗೂಢವಾಗಿದೆ. ಆಳವಾಗಿ ವಿಚಾರಿಸುವಂಥಹದೂ ಅಹುದು.
ಶಿರಹಟ್ಟಿಯೆಂಬುದು ಒಂದು ಊರಿನ ಹೆಸರಿರಬಹುದು. ಹಟ್ಟಿಯೆಂದರೆ ದನ ಕಟ್ಟುವ ಸ್ಥಳ, ಶಿರಪದವನ್ನು ಸಿರಿಯೆಂದುದಾಗಿ ತಿಳಿದರೆ ಸಂಪದ್ಯುಕ್ತವೆಂತಲೂ ಅರ್ಥವಾಗುವದು. ಶಿರಹಟ್ಟಿ-ಸಂಪದ್ಯುಕ್ತವಾದ ದನಗಳ ಸ್ಥಾನವು. ಹಿಂದಿನ ಕಾಲದಲ್ಲಿ ಗೋಧನವನ್ನು ಪ್ರಮುಖ ಸಂಪತ್ತನ್ನಾಗಿ ಪರಿಗಣಿಸುತ್ತಿದ್ದರು. ಪುರಂದರದಾಸರು ಹಾಡಿದ –
“ನೀನಾರಿಗಾದೆಯೋ ಎಲೆಮಾನವ”
ಎನ್ನುವ ಪದದಿಂದ ಗೋವಿನ ಮಹತ್ವ ತಿಳಿಯದೇ ಇರದು. ಗೋವು ಪವಿತ್ರ ಪ್ರಾಣಿ, ಅದರ ಸೇವೆಗಾಗಿ ಅನೇಕ ಮಹಾನುಭಾವಿಗಳು ತಮ್ಮ ಜೀವನವೇ ಸವೆಸಿದ್ದಾರೆ. ರಘುಕುಲದ ದಿಲೀಪ ಮಹಾರಾಜನು ವಶಿಷ್ಠ ಮುನಿಗಳ ಅಪ್ಪಣೆಯಂತೆ ನಂದಿನಿಯ ಸೇವೆ ಮಾಡಿ ಪುತ್ರ ಫಲವನ್ನು ಪಡೆಯಲಿಲ್ಲವೆ ? ಇಂಥ ಗೋವುಗಳಿರುವ ಸ್ಥಳ ಶಿರಹಟ್ಟಿಯೇ ಸರಿ.
ಪೂಜ್ಯ ಗುರುಗಳವರು ದನದ ಮನೆಗೆʼʼ ದ್ರವ್ಯದ ಮನೆ”ಯೆಂತಲೂ ಅಪ್ಪಣೆ ಮಾಡುತ್ತಿದ್ದರು. ಒಕ್ಕಲುತನ ಪ್ರಧಾನವಾದ ನಮ್ಮ ಭಾರತ ದೇಶವು ದನಗಳಿಗಾಗಿ ಪ್ರಾಶಸ್ಯ ನೀಡಿದೆ. ನೀಡಲೇಬೇಕು. ಬಸವನನ್ನು (ಎತ್ತನ್ನು) ದೇವರನ್ನಾಗಿ ಪೂಜಿಸುವ ಪರಂಪರೆಯೂ ಇದೆ. ಒಕ್ಕಲಿಗನನ್ನು ಮೇಲಕ್ಕೆತ್ತಿ ನಿಲ್ಲಿಸುವ ಎತ್ತು ಧರ್ಮ ಮೂರುತಿಯೂ ಆಗಿದೆ. ಕೃಷಿಕನಿಗೆ, ಸಾಧು-ಸತ್ಪರುಷರಿಗೆ, ಸತ್ಕಾರ್ಯಗಳಿಗೆ ಅತ್ಯುಪಯುಕ್ತವಾದ ಪ್ರಾಣಿ ಆಕಳು. ಅದರ ಹಾಲು ಭೂಲೋಕದ ಅಮೃತ ಅಂತೆಯೇ ಅನುಭವಿಗಳು ಪಾಲುಂಡು ಮೇಲುಂಬರೆ” ? ಎಂದು ವರ್ಣಿಸಿದ್ದಾರೆ. ಇಂಥ ಅಮೃತ ದೊರೆಯುವದು ಶಿರಹಟ್ಟಿಯಿಂದಲ್ಲವೇ ?
ಶಿವಕವಿ ಚಿತ್ರಿಸಿದ ನಮ್ಮ ಆಕಳು ವಿಚಿತ್ರವಾಗಿದೆ. ಇದಕ್ಕೆ ಕರುವಿಲ್ಲ. ಹಾಲು ಕರೆವ ಮೊಲೆಗಳಿಲ್ಲ. ಆದರೂ ತನ್ನ ಹಾಲು ಕರೆದು ತಾನೇ ಉಂಬುತ್ತಿದೆ. ಅಂದ ಮೇಲೆ ಕರಚೋದ್ಯವಲ್ಲದೆ ಮತ್ತೇನು ? ಆದರೆ ಬರಡಾಕಳವ ಕರೆದು ಚರತತಿಗಿತ್ತರು ನಮ್ಮ ಶರಣರು ಭಕ್ತಿಯ ಪ್ರಭಾವದಿಂದ” ವೆಂದಿದ್ದಾರೆ ವಚನಕಾರರು. ಇಂಥ ಶರಣರ ನಾಡಿನಲ್ಲಿ ಮೊಲೆಯಿಲ್ಲದೆಯೂ ಹಾಲು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ.
ಲೌಕಿಕದಲ್ಲಿ ರಸವನ್ನು ಗ್ರಹಿಸುವ ರಸನೆಯು ಕೇವಲ ಭೌತಿಕ ರಸಗಳನ್ನು ಮಾತ್ರ ಅಸ್ವಾದಿಸುತ್ತದೆ .ಅದರೆ ಕವಿಯ ಅಭಿಪ್ರಾಯ ರಹಸ್ಯವಾಗಿದೆ . ಜಲತತತ್ತ್ವದ ಪಧಾರ್ಥಗಳೆಲ್ಲ ರಸಗಳೆನಿಸುತ್ತವೆ .ಈ ರಸಗಳಿಗಿಂತಲೂ ಭಿನ್ನವಾದ ಎರಡು ರಸಗಳನ್ನು ಅನುಬವಿಗಳು ತಿಳಿಸಿಸ್ಸಾರೆ .ಒಂದು ಕಾವ್ಯತ್ಮಕವಾದ ರಸ ,ಇನ್ನೊಂದು ಬ್ರಹ್ಮಾನಂದ ರಸ; “ರಸೋ ವೈ ಸಃ” ಆ ಪರಬ್ರಹ್ಮ ವಸ್ತುವೂ ರಸ ಸ್ವರೂಪವೆಂದು ಶೃತಿ ಸಾರಿದೆ. ಕಾವ್ಯವಿಮಾಂಸಕರು ಕಾವ್ಯರಸಕ್ಕೆ ಬ್ರಹ್ಮಾನಂದ ಸಹೋದರವೆಂದು ಕರೆದಿದ್ದಾರೆ. ಕಾವ್ಯರಸವು ಪಾಠಕನನ್ನು ತನ್ಮಯತೆಯಲ್ಲಿ ಮುಳುಗಿಸುತ್ತದೆ. ಇದರಂತೆ ಯೋಗಿ ಮತ್ತು ಶಿವಯೋಗಿಗಳು ಸಮಾಧಿ ಸ್ಥಿತಿಯಲ್ಲಿ ಲಿಂಗಾನಂದ ರಸವನ್ನು ಅನುಭವಿಸುತ್ತಾರೆ. ಇವರಿಗೆ ದೊರೆತ ರಸವು ಸಾಕ್ಷಾತ್ ಅಮೃತ ರಸ, ಈ ರಸದ ರುಚಿಯನ್ನೇ ಶಿವಕವಿಯು ರಚಿಸಿದ್ದಾನೆ.
ಶಿರಹಟ್ಟಿಯೆಂದರೆ ಶಿರಸ್ಸು (ತಲೆ); ಮಸ್ತಕದಲ್ಲಿ ಸಹಸ್ರದಳ ಕಮಲವಿದೆ. ದೊಡ್ಡ ಮಿದುಳು ಮತ್ತು ಸಣ್ಣ ಮಿದುಳು ಕಡಗೋಲಿನ ಮುದ್ದೆಯಂತೆ ಅನಂತನಿರಿಗೆ (ಮಡಿಕೆ)ಗಳಿಂದ ಕೂಡಿದೆಯೆಂಬ ಮಾತನ್ನು ಇಂದಿನ ಶಾರೀರಿಕ ತಜ್ಞರೂ ಒಪ್ಪಿದ್ದಾರೆ. ಅದಕ್ಕಾಗಿ ಇದನ್ನು ಸಾವಿರದಳ ಕಮಲವೆಂದು ಶಾಸ್ತ್ರಕಾರರು ಕರೆದುದು ತರ್ಕಬದ್ಧ ವಾಗಿದೆ. ಮನುಷ್ಯನ ಜ್ಞಾನದ ವ್ಯವಹಾರವೆಲ್ಲ ಇಲ್ಲಿಂದಲೇ ನಡೆಯುತ್ತದೆ. ಶಿವಯೋಗದಲ್ಲಿ ಬಲ್ಲಿದನಾದ ಸದ್ಗುರುವು ಶಿಷ್ಯನ ಈ ಪಶ್ಚಿಮ ಶಿಖಾಚಕ್ರ ಮಧ್ಯದ ಮಹಾ ಚೈತನ್ಯವನ್ನು ಹೊರತೆಗೆದು ಅಂಗೈಯಲ್ಲಿ ಲಿಂಗವನ್ನಾಗಿ ಕರುಣಿಸುತ್ತಾನೆ. ಶಿರಸ್ಸಿನಲ್ಲಿ ಒಟ್ಟು ಮೂರು ಚಕ್ರಗಳನ್ನು ಕಂಡು ಹಿಡಿದಿದ್ದಾರೆ. ನಡುದಲೆಯಲ್ಲಿ ಬ್ರಹ್ಮ ಅಥವಾ ಸಹಸ್ರಚಕ್ರವೆಂದೂ ಮಸ್ತಕಾಗ್ರದಲ್ಲಿ ಶಿಖಾಚಕ್ರವೆಂದೂ, ತಲೆಯ ಹಿಂಭಾಗದಲ್ಲಿ ಪಶ್ಚಿಮಚಕ್ರವೆಂದೂ ಗುರುತಿಸಿದ್ದಾರೆ. ಶಿವಯೋಗ ರಹಸ್ಯ’ವೆಂಬ ಗ್ರಂಥದಲ್ಲಿ ನವಕಲ್ಯಾಣ ಮಠದ ಶ್ರೀಗಳವರು (ಪುಟ ೩೧ರಲ್ಲಿ) ಸಹಸ್ರಾರದಲ್ಲಿ ಅಮೃತಲಿಂಗವಿಹುದು. ಯೋಗಿಯು ಅದನ್ನು ಲಕ್ಷಿಸಿ ಅಮೃತರಸ ಪಾನಮಾಡಿ ಜನನ-ಮರಣಗಳನ್ನು ನೀಗುವನು. ಎಂದು ತಿಳಿಸಿದ್ದಾರೆ. ಅಲ್ಲಮಪ್ರಭುದೇವರು
“ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲೆ ಸಹಸ್ರದಳ ಪದ್ಮ
ಅಲ್ಲಿ ಅಮೃತವಿಹುದು.
. ಅಲ್ಲಿ ಓಂಕಾರ ಸ್ವರೂಪನಾಗಿ ಗುಹೇಶ್ವರ ಲಿಂಗವು ಸದಾ ಸನ್ನಿಹಿತನು”
ಎಂದು ಅಪ್ಪಣೆ ಮಾಡಿರುವರು
ಆಧುನಿಕ ಶರೀರ ವಿಜ್ಞಾನಿಗಳು ತಲೆಬುರುಡೆಯನ್ನು ಎರಡು ಭಾಗಗಳಲ್ಲಿ ವಿಭಾಗಿಸುತ್ತಾರೆ. ಮುಂಭಾಗದಲ್ಲಿ “ ಪಿಟ್ಯುಟರಿ ಗ್ರಂಥಿʼ’ಯೆಂದೂ ಹಿಂಭಾಗದಲ್ಲಿ “ಪೀನಿಯಲ್‌ಗ್ರಂಥಿ”ಯೆಂತಲೂ ಪರಿಶೋಧಿಸಿದ್ದಾರೆ. ಈ ಪೀನಿಯಲ್ ಗ್ರಂಥಿಯು
ಒಂದು ಸಣ್ಣ ಉದ್ದಿನ ಬೇಳೆಯಷ್ಟು ಎಂದರೆ ಇಂಚಿನ ಎಂಟನೆಯ ಒಂದು ಭಾಗದಷ್ಟಿದ್ದು ನೆರೆ ಬಣ್ಣದ್ದಿರುತ್ತದೆ. ‘ಪಿಟ್ಯುಟರಿ’ ಗ್ರಂಥಿಯು ಮಾಗಿದ ಒಂದು ಸಣ್ಣ ಕವಳೆಹಣ್ಣಿನ ಗಾತ್ರದ್ದಿದ್ದು ಮಿದುಳಿಗೆ ಜೋಡಿಸಲ್ಪಟ್ಟಿರುತ್ತದೆ. ಪೀನಿಯಲ್ ಗ್ರಂಥಿ ಮತ್ತು ಪಿಟ್ಯುಟರಿ ಗ್ರಂಥಿಗಳಲ್ಲಿ ಹುದುಗಿರುವ ಸಾಮರ್ಥ್ಯದ ವಿಕಾಸದ ಮುಖಾಂತರವಾಗಿ ಹೊಸ ಹೊಸ ಮತ್ತು ಅತಿ ಉಚ್ಚವಾದ ಜ್ಞಾನವು ಎಂದರೆ ಸ್ವಯಂ ಪ್ರಭೋಧವು, ಸ್ವಾನುಭಾವವು ಒಡಮೂಡುವದೆಂದು ಆಧುನಿಕ ವಿಜ್ಞಾನವು ಒಪ್ಪಿಕೊಳ್ಳುತ್ತಿದೆ” (ಶಿವಯೋಗ ರಹಸ್ಯದ ೪-೫ ಪುಟ) ಇಂಥ ಸಣ್ಣ ಮೆದುಳಿಗೆ ಆಕಸ್ಮಿಕವಾಗಿ ಪೆಟ್ಟು ಬಿದ್ದರೆ ಜ್ಞಾನ ಶೂನ್ಯವಾಗುವದು. ಇದು ಸಕಲರಿಗೂ ಅನುಭವ ಗಮ್ಯವಾಗಿದೆ.
ಸಣ್ಣ ಮೆದುಳಿಗೆ ಎಲ್ಲ ಜ್ಞಾನತಂತುಗಳು ಜೋಡಿಸಲ್ಪಟ್ಟಿರುತ್ತವೆ. ಈ ಜ್ಞಾನ ತಂತು (ನಾಡಿ)ಗಳೆಂಬ ಆಕಳುಗಳನ್ನು ಕಟ್ಟಿದ (ಹಟ್ಟಿ ಕೇಂದ್ರ) ಸ್ಥಾನ ಸಹಸ್ರಾರ ಅಥವಾ ಸಹಸ್ರದಳಕಮಲ. ಇಲ್ಲಿ ಇನ್ನೊಂದು ಗಮನಿಸಬೇಕಾದ ಯೌಗಿಕ ವಿಚಾರವೆಂದರೆ ಶರೀರದಲ್ಲಿ ಕುಂಡಲಿನೀ ಶಕ್ತಿಯಿರುತ್ತದೆ. ಇದು* ಬೆನ್ನು ಹುರಿಯ ಕೆಳಗಿನ ತುದಿಯಲ್ಲಿ ಸುಪ್ತವಾಗಿ ಸುರುಳಿಯಾಗಿ ಅವಿತುಕೊಂಡಿರುತ್ತದೆ. ಈ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿದರೆ ನವಚೈತನ್ಯವು ಸ್ಪುರಿಸುವದು. ಜಾಗ್ರತವಾದ ಕುಂಡಲಿನೀ ಶಕ್ತಿಯು ಮೇರುದಂಡದ ಅಥವಾ ಬೆನ್ನು ಹುರಿಯ ಮುಖಾಂತರವಾಗಿ ಮಾರ್ಗಕ್ರಮಣ ಮಾಡಿ ಎರಡು ಹುಬ್ಬುಗಳ ನಡುವಿನ ಅಜ್ಞಾ ಚಕ್ರಕ್ಕೆ ಬಂದು ನಿಲ್ಲುವದು. ಇದಕ್ಕೇನೇ ಕುಂಡಲಿನೀ ಶಕ್ತಿಯ ಊರ್ಧ್ವಗಮನವೆನ್ನುವರು.” ಅದಕ್ಕೆ ಉನ್ಮನವೆಂತಲೂ ಇನ್ನೊಂದು ಹೆಸರು. ಇಂಥ ಕುಂಡಲಿನಿಯೇ ಇಲ್ಲಿಯ ಗೋವು. ಇದಕ್ಕೆ ಅದಾವ ಕರುವಿಲ್ಲ. ಕರೆವ ಮೊಲೆಯೂ ಇಲ್ಲ. ಆದರೂ ಸಹಸ್ರಾರದಲ್ಲಿ ಅಮೃತ ಬಿಂದುವನ್ನು ಸುರಿಸುವದು. ಅಂದರೆ ಅಂಗನು ಲಿಂಗದ ಶಕ್ತಿಯನ್ನರಿತು ದೃಷ್ಟಿಯೋಗದಿಂದ ಸಮರಸದ ಕೂಟದಲ್ಲಿ ಆನಂದಭರಿತನಾಗುವನು.
ಇಂಥ ಅಮೃತವನ್ನು ಸವಿಯುವದು ಸಾಮಾನ್ಯವಾದ ಮಾತಲ್ಲ. ಅಲ್ಪರ ಶಕ್ತಿಯೂ ಅಲ್ಲ. ಇದು ಸಕಲರಿಗೆ ಸಾಧ್ಯವಾಗುವದೂ ಇಲ್ಲ. ಅಂದಮೇಲೆ ಆಶ್ಚರ್ಯ ವಲ್ಲದೆ ಮತ್ತೇನು ? ಸಹಸ್ರಾರದ ಸವಿಯನ್ನು ಸವಿಯಬಲ್ಲವನು ಐಕ್ಯಾಂಗನು. ಶರಣಸತಿಯು ಮಹಾಲಿಂಗಪತಿಯ ಸಮರಸದಲ್ಲಿ ಐಕ್ಯನಾಗಿ ನಿತ್ಯಮುಕ್ತನಾಗುವನು.
ಮುಂಡರಗಿಯ ಮೂಲಕರ್ತೃಗಳಾದ ಅನ್ನದಾನೀಶ್ವರರು ಹಾಗೂ ಎಡೆಯೂರ ತೋಂಟದ ಸಿದ್ಧಲಿಂಗರು ಸಹಸ್ರಾರದ ಸವಿಯನ್ನು ಸವಿದು ಅನಂತಕಾಲ ತಪಗೈದ ಉದಾಹರಣೆಗಳಿವೆ.
ಸದ್ಗುರು ಕರುಣೆಯಿಂದ ಶಿವಲಿಂಗವನ್ನು ಪಡೆದು ‘ಕರಣ ಹಸಿಗೆ’ಯನ್ನು ಅರಿತು ಕುಂಡಿಲಿನಿ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಹಸ್ರದಳ ಪದ್ಮದ ಮಹಾಲಿಂಗವನ್ನು ಕಂಡು ಅಕ್ಷಯವಾದ ಅಮೃತರಸವನ್ನು ಸವಿಯುವದು (ಜೀವಾತ್ಮನ) ಸದ್ಭಕ್ತನ ಪರಮ ಕರ್ತವ್ಯವಾಗಿದೆ. ಇದೆಲ್ಲವೂ ಗುರುಕೃಪೆಯಿಲ್ಲದೆ ಆಗದು. ಓ ಗುರುವೆ ! ಅಂಥ ಅಮೃತವನ್ನು ಸವಿಯುವ ಸೌಭಾಗ್ಯವನ್ನು ಅನುಗ್ರಹಿಸಿ ಸಲಹು.
*
೫. ಫ್ರಾಣೇಂದ್ರಿಯ – ಗಂಧವಿಷಯ
ಪಂಪಾಕ್ಷೇತ್ರದೊಳೊಂದು | ಸಂಪಿಗೆಯ ನನೆಯುಂಟು
ಕಂಪುಂಟು ಗಾಳಿ ತಂಪುಂಟೊಳಗಿಂಚಿನ**
ಗುಂಪುಂಟು ಗುರುವೆ ಕೃಪೆಯಾಗು II ೭೦ II
ಪಂಚಜ್ಞಾನೇಂದ್ರಿಯದ ಪಂಚವಿಷಯಗಳಲ್ಲಿ ಕೊನೆಯದು ಗಂಧತತ್ತ್ವ; ಗ೦ಧವಿಷಯ. ಗಂಧವನ್ನು ಗ್ರಹಿಸುವ ಇಂದ್ರಿಯ ನಾಶಿಕ. ಇದಕ್ಕೆ ಪೃಥ್ವಿಯೇ ಮಹಾಭೂತ. ಅಶ್ವಿನಿ ಅಧಿದೇವತೆ ; ಅಲ್ಲಿ ಗಂಧವಿಷಯವು ಸುಗಂಧ, ದುರ್ಗಂಧ ವೆಂದು ಇಬ್ಬಗೆಯಾಗುತ್ತದೆ.
ಶಿವಕವಿಯು ಪ್ರತಿಯೊಂದು ವಿಷಯವನ್ನು ಚಮತ್ಕಾರಿಕ ರೀತಿಯಲ್ಲಿ ಪ್ರತಿಪಾದಿಸಿದಂತೆ ; ಇಲ್ಲಿ ತನ್ನ ಶಿವಕ್ಷೇತ್ರ ದರ್ಶನದ ಪರಿಚಯವನ್ನು ಮಾಡಿಸುತ್ತ ಗಂಧ ವಿಷಯವನ್ನು ಮತ್ತು ಘ್ರಾಣೇಂದ್ರಿಯದ ತತ್ತ್ವವನ್ನು ಬಿತ್ತರಿಸಿದ್ದಾನೆ. *
ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಸಿದ್ಧವಾದುದು ಪಂಪಾಕ್ಷೇತ್ರ. ಅಲ್ಲಿ ವಿರೂಪಾಕ್ಷನ ದರ್ಶನ, ಆ ಕ್ಷೇತ್ರದಲ್ಲಿ ಪಂಪಾಸರೋವರ, ಉದ್ಯಾನಗಳು ಎದ್ದು ಕಾಣುತ್ತಿವೆ. ಇದು ರಾಜನಿರ್ಮಿತ ಮತ್ತು ರಾಜರಕ್ಷಿತವಾದ ಮೇಲೆ ಕೇಳಬೇಕೇನು ? ಇದರ ವರ್ಣನೆಯನ್ನು ಅಷ್ಟಭಾಷಾ ಕವಿಯೆನಿಸಿದ ಚಂದ್ರಶೇಖರ ವಿರಚಿತ ಪಂಪಾಸ್ಥಾನ ವರ್ಣನೆಯ ಚಂಪೂ ಕಾವ್ಯವನ್ನು ಓದಿಯೇ ಆನಂದಪಡಬೇಕು. ಹಂಪೆಯ ಕ್ಷೇತ್ರದಲ್ಲಿರುವದು ಪಂಪಾಸರೋವರ. ಅದರ ಸುತ್ತಲಿನ ವನದಲ್ಲಿ ಸಂಪಿಗೆಯ ಮರಗಳ ಸಮೂಹ. ಅವುಗಳ ಸಂಪಿಗೆ ಪುಷ್ಪದ ಮಕರಂದ ಸುತ್ತಲೂ ಪಸರಿಸಿದೆ. ಆ ಸುಗಂಧವು ಗಾಳಿಯನ್ನಾವರಿಸಿ ಸರೋವರದ ತಂಪಿನೊಡನೆ, ಗಿಳಿ ವಿಂಡುಗಳ ಇಂಚರದೊಡನೆ ಸಮರಸವಾಗಿ ಕಂಪನ್ನು ಬೀರುತ್ತಿದೆ.. ವಿರೂಪಾಕ್ಷೇಶ್ವರನ ದರ್ಶನ ಮಾಡಿಕೊಳ್ಳುವವರಿಗೆ ಆ ಕಂಪು ತನ್ಮಯತೆಯನ್ನು ಹುಟ್ಟಿಸುತ್ತದೆ. ಸಂಪಿಗೆಯ ಪುಷ್ಪವು ಬಲುಸುಗಂಧ. ಅದು ಮೊಗ್ಗಾದಾಗಿನಿಂದ ಮಾಗುವವರೆಗೆ ತನ್ನ ಸೌಗಂಧವನ್ನು ಸೂಸುತ್ತದೆ. ಕನ್ನಡಾಂಬೆಯ ಸಿರಿಮುಡಿಗೆ ಸಂಪಿಗೆಯ ಸುಗಂಧ ಸೌಂದರ್ಯವನ್ನೀಯುತ್ತ ಬಂದಿದೆ. ಇದೆಲ್ಲವೂ ಬಾಹ್ಯ ಸೌಗಂಧದ ಪರಿ.
ಇನ್ನು ಅಂತರಂಗದ ಸುಗಂಧದ ಸೌರಭ ಹೀಗಿದೆ. ಪಂಪಾಕ್ಷೇತ್ರವೆಂದರೆ ಶರೀರ. ಈ ಕ್ಷೇತ್ರದಲ್ಲಿರುವ ಮಹಾಚೈತನ್ಯವೇ ಪಂಪಾಪತಿ ವಿರೂಪಾಕ್ಷ. ಇಲ್ಲಿರುವ ಸರೋವರ ಸದ್ಗುರುವಿನ ಕಾರುಣ್ಯರಸರೂಪಾದುದು. ಈ ಕಾರುಣ್ಯರಸದ ಸರಸ್ಸಿನ ಪರಿಸರದಲ್ಲಿರುವ ವನವೇ ಜ್ಞಾನೇಂದ್ರಿಯಗಳ ಗುಂಪು. ಅದರಲ್ಲಿ ಸಂಪಿಗೆಯ ಮೊಗ್ಗಿನಂತಿರುವದು ಘ್ರಾಣೇಂದ್ರಿಯವು. ಇದು ಗಂಧಗ್ರಾಹಕವಾಗಿರುವದರಿಂದ ಸಂಪಿಗೆಯ ಸಾದೃಶ್ಯವನ್ನು ಹೊಂದಿದೆ. ನಾಶಿಕವು ಪೃಥ್ವಿಯ ತತ್ತ್ವದಿಂದಾದ ಕಾರಣ ಭಕ್ತಾಂಗವೆನಿಸುವದು. ಭಕ್ತನು ನಡೆದು (ಆಚರಿಸಿ)ತೋರುವ ಸದಾಚಾರವೇ ಸುಗಂಧದ ಕಂಪು. ಮೂಗಿನಲ್ಲಿ ಚಂದ್ರನಾಡಿಯಿರುವದರಿಂದ ತಂಪೂ ಇದೆ. ಈ ದೇಹ ಕ್ಷೇತ್ರವಾದ ಮೇಲೆ ಪಂಚಾಚಾರಗಳ ಕಂಪೂ ಹಬ್ಬಿ ಶಿವನ ಸಾಕ್ಷಾತ್ಕಾರಕ್ಕೆ ಕಾರಣವಾಗುವದು.’’ ಎನ್ನ ಸದ್ಗುಣ ಗಂಧ’’ವೆಂದು ಮುಪ್ಪಿನಾರ್ಯರು ಹಾಡಿದ್ದು ಅರ್ಥಪೂರ್ಣವಾಗಿದೆ. ಇಲ್ಲಿ ‘ಗಿಂಚಿನ ಪದಕ್ಕಿಂತಲೂ ‘ಗಿಂಪಿನ’ ಪದ ಶೋಭಾಯ ಮಾನವೂ ಸಮಂಜಸವೂ ಆಗುವದು.
ವೀರಶೈವರ ಷಟ್‌ಸ್ಥಲ ಸಿದ್ಧಾಂತದಲ್ಲಿ ಶಿವಜ್ಞಾನ ಶಿವಕ್ರಿಯೆಗಳ ಸಮನ್ವಯವಿದೆ. ಇದಕ್ಕೆ ಜ್ಞಾನ ಕ್ರಿಯೆಗಳ ಸಮ-ಸಮುಚ್ಛಯ ತತ್ತ್ವವೆಂತಲೂ ಕರೆಯುವರು. ವೀರಶೈವನಿಗೆ ಅಷ್ಟಾವರಣವೇ ಅಂಗವಾದರೆ ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮವಾಗಿವೆ. ಈ ಅಷ್ಟಾವರಣಾಂಗನು ಪಂಚಾಚಾರಗಳನ್ನು ಪ್ರಾಣವನ್ನಾಗಿಸಿದರೇನೇ ಆತ್ಮನ ಸಂದರ್ಶನವಾಗುವದು. ಮೊದಲು ಆಚಾರ ಅಳವಡಬೇಕು. ಕ್ರಿಯೆ ನಡೆಯಲ್ಲಿ ಬರಬೇಕು. ಅನುಭಾವಿಗಳು –
“ಆಚಾರಃ ಪರಮೋ ಧರ್ಮ: ಆಚಾರಃ ಪರಮಂ ತಪಃ ।
ಆಚಾರವೇ ಶ್ರೇಷ್ಠ ಧರ್ಮ ಹಾಗೂ ತಪಸ್ಸೆಂದು ಪ್ರತಿಪಾದಿಸಿದ್ದಾರೆ. ಪಂಚಾಚಾರದ ಸ್ವರೂಪವನ್ನು, ಮತ್ತು ಅದರ ಮಹತ್ವವನ್ನು ಚನ್ನಬಸವಣ್ಣನವರು~
ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ
ನೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ ;
ಲಿಂಗವನಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ,
ಸಜ್ಜನ ಕಾಯಕದಲ್ಲಿ ತಂದು ಗುರುಲಿಂಗ ಜಂಗಮಕ್ಕೆ ನೀಡಿ
ಸತ್ಯ-ಶುದ್ಧನಾಗಿಹುದೆ ಸದಾಚಾರ,
ಶಿವಭಕ್ತರಲ್ಲಿ ಕುಲಗೋತ್ರ ಜಾತಿವರ್ಣಾಶ್ರಮವನರಸದೆ
ಅವರೊಕ್ಕುದ ಕೊಂಬುದೆ ಶಿವಾಚಾರ
ಶಿವಾಚಾರದ ನಿಂದೆಯ ಕೇಳದಿಹುದೆ ಗಣಾಚಾರ
ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ
ಭಕ್ತಿಯಿಂದ ಆಚರಿಸುವದೆ ಭೃತ್ಯಾಚಾರ
ಇಂತೀ ಪಂಚಾಚಾರವುಳ್ಳ ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ
ಪ್ರಭುವೇ ! ಕೂಡಲ ಚನ್ನಸಂಗಮದೇವಾ’ (೧೧೫೯)
ಇದಕ್ಕೂ ಸ್ಪಷ್ಟವಾದ ರೀತಿಯಲ್ಲಿ – ಮತ್ತೊಂದು ವಚನ.
ಅಯ್ಯಾ ! ಶ್ರೀಗುರು ಕರುಣಿಸಿಕೊಟ್ಟ ಲಿಂಗ ಜಂಗಮವಲ್ಲದೆ
ಅನ್ಯದೈವಂಗಳ ತ್ರೈಕರಣದಲ್ಲಿ ಅರ್ಚಿಸದಿರ್ಪುದೆ ಲಿಂಗಾಚಾರವೆಂಬೆನಯ್ಯಾ
ಭಕ್ತನಾದಡೆ ಸತ್ಯ ಶುದ್ಧ ಕಾಯಕವ ಮಾಡಿ,
ಮಾಹೇಶನಾದಡೆ ಸತ್ಯ ಶುದ್ಧ ಭಿಕ್ಷವ ಬೇಡಿ
ಸಮಸ್ತ ಪ್ರಾಣಿಗಳಲ್ಲಿ ಪಾತ್ರಾಪಾತ್ರವ ತಿಳಿದು
ಹಸಿವು ತೃಷೆ ಶೀತಕ್ಕೆ ಪರಹಿತಾರ್ಥಿಯಾಗಿರ್ಪುದೆ ಸದಾಚಾರ ವೆಂಬೆನಯ್ಯಾ
ಗುರು-ಮಾರ್ಗಾಚಾರದಲ್ಲಿ ನಿಂದ ಶಿವಲಾಂಛನಧಾರಿಗಳೆಲ್ಲಾ,
ಪರಶಿವಲಿಂಗವೆಂದು ಭಾವಿಸಿ,
ಅರ್ಥಪ್ರಾಣಾಭಿಮಾನವನರ್ಪಿಸುವುದೆ ಶಿವಚಾರವೆಂಬೆನಯ್ಯಾ
ಅಷ್ಟಾವರಣಂಗಳ ಮೇಲೆ ಅನ್ಯರಿಂದ ಕುಂದು-ನಿಂದೆಗಳು
ಬಂದು ತಟ್ಟದಲ್ಲಿ ಗಣಸಮೂಹವನೊಡಗೂಡಿ
ಆ ಸ್ಥಲವ ತ್ಯಜಿಸುವದೆ ‘ಗಣಾಚಾರ’ವೆಂಬೆನಯ್ಯ
…………ಷಟ್‌ಸ್ಥಲ ಮಾರ್ಗದಲ್ಲಿ ನಿಂದ
ಭಕ್ತಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ,
ಅವರಿದ್ದ ಸ್ಥಳಕ್ಕೆ ಹೋಗಿ, ತನು-ಮನ-ಧನಂಗಳ ಸಮರ್ಪಿಸಿ
ಅವರೊಕ್ಕುಮಿಕ್ಕುದ ಹಾರೈಸಿ ಹಸ್ತಾಂಜಲಿತರಾಗಿ
ಪ್ರತ್ಯುತ್ತರವ ಕೊಡದಿರ್ಪುದೆ ‘ಭೃತ್ಯಾಚಾರ’ವೆಂಬೆನಯ್ಯಾ?
ಎಂದು ಪಂಚಾಚಾರದ ಸೂಕ್ಷ್ಮತೆಯನ್ನು ಸಾರಿದ್ದಾರೆ. ಇಂತಹ ಪ್ರಾಣಸ್ವರೂಪವಾದ ಪಂಚಾಚಾರಗಳನ್ನು ಅಳವಡಿಸಿಕೊಳ್ಳುವದೇ ಭಕ್ತತನದ ಪರಮ ಸೌಗಂಧ ಎನಿಸುವದು.
ಲಿಂಗಾಚಾರದಿಂ ತನುಶುದ್ಧವಾಗಿತ್ತು ನೋಡಾ !
ಸದಾಚಾರದಿಂ ಮನಶುದ್ದವಾಯಿತ್ತು ನೋಡಾ
ಶಿವಚಾರದಿಂ ಧನಶುದ್ಧವಾಯಿತ್ತು ನೋಡಾ |
ಗಣಾಚಾರದಿಂ ನಡೆ ಶುದ್ಧವಾಗಿತ್ತು ನೋಡಾ !
ಭೃತ್ಯಾಚಾರದಿಂ ನುಡಿ ಶುದ್ಧವಾಯಿತ್ತು ನೋಡಾ !
ಪಂಚಾಚಾರಗಳಿಂದ ಜೀವನು ಶಿವನಾಗುವನು ನೋಡಾ !
ಮೃಡಗಿರಿಯ ಅನ್ನದಾನೀಶ (ಸ.ವ.ಸಂ. ೪೨೦)
ಪಂಚಾಚಾರಗಳಿಂದ ತನು-ಮನ-ಧನ-ನಡೆ-ನುಡಿಗಳು ಶುದ್ಧವಾಗಿ ಶಿವನಾಗು ವದರಲ್ಲಿ ಸಂದೇಹವಿಲ್ಲ. ಪುಷ್ಪಪರಿಮಳ ಅಭಿನ್ನವಾಗಿರುವಂತೆ ಅಂಗಲಿಂಗಗಳ ಸಮರಸವಾಗುವದು. ಸದ್ಗುಣಾಚಾರದ ಸೌಗಂಧ ಎಲ್ಲೆಡೆಯೂ ಪಸರಿಸಬಲ್ಲುದು.
ಪೃಥ್ವಿಯು ಪಂಚತನ್ಮಾತ್ರೆಗಳಿಂದ ಕೂಡಿದ್ದರೂ ಗಂಧ ಪ್ರಧಾನವಾಗಿದೆ. ಗಂಧವಿಲ್ಲದ ವಸ್ತು ನಿರರ್ಥಕ. ಪ್ರತಿಯೊಂದಂಶದಲ್ಲಿಯೂ ತನ್ನದೇ ಆದ ಗಂಧವಿರುತ್ತದೆ. ಗಂಧವಿರಹಿತವಾದರೆ ಆ ವಸ್ತುವಿಗೆ ಬೆಲೆಯಿಲ್ಲದಾಗುವದು. ಮತ್ತು ಗಂಧ ವಿಕೃತವಾದರೂ ಸರಿಯಲ್ಲ. ಗಂಧ ಪದಾರ್ಥವು ಜೀವನಕ್ಕೆ ಅತ್ಯವಶ್ಯಕವಾಗಿದೆ. ಪೂಜೆಯ ಸಾಮಗ್ರಿಯಲ್ಲಿ ಗಂಧವೂ ಒಂದು.
“ಸುಗಂಧಂ ಪುಷ್ಟಿ ವರ್ಧನಮ್”
ಸುಗಂಧವು ಶರೀರಕ್ಕೆ ಪುಷ್ಟಿಯನ್ನು, ತುಷ್ಟಿಯನ್ನು ಕೊಡುತ್ತದೆ. ಈ ಗಂಧವು
ಸೌಮ್ಯವಾಗಿರಬೇಕು. ಅದರಲ್ಲಿ ತೀವ್ರತೆಯಿರಬಾರದು. ಪ್ರಾಕೃತಿಕ ಗಂಧವು ಪ್ರಕೃತಿಗೆ ಹಿತಕರವಾಗುತ್ತದೆ. ಕೃತ್ರಿಮ ಗಂಧದಿಂದ ವಿಕಾರ ಬೆಳೆಯುತ್ತದೆ. ಇದರಿಂದ ನಾಶಿಕಕ್ಕೂ ಕುಂದು. ಅತಿಸುಗಂಧವನ್ನು ವಾಸಿಸುವ ಘ್ರಾಣವು ತನ್ನ ಶಕ್ತಿಯನ್ನು ಕಳೆದುಕೊಳ್ಳುವದು. ಮೋಹಕಗಂಧವು ಜೀವನವನ್ನೇ ಕೆಡಿಸುತ್ತದೆ.
“ಘ್ರಾಣೇಂದ್ರಿಯ ವಿಷಯದಿಂದ ಭ್ರಮರ ಕೆಡುವದು
ಸಂಪಿಗೆಯ ಪುಷ್ಪದಲ್ಲಿ”
ಸಂಪಿಗೆಯ ಸೌಗಂಧವನ್ನು ಮೋಹಿಸಿ ಭ್ರಮರವು ಕಷ್ಟಕ್ಕೀಡಾಗುತ್ತದೆಂದು ಷಣ್ಮುಖ ಶಿವಯೋಗಿಗಳು ಉಪದೇಶಿಸಿದ್ದಾರೆ. ಗಂಧ ಸುಗಂಧವಾಗಬೇಕೇ ವಿನಾ ಅತಿಗಂಧ ವಾಗಲಿ, ದುರ್ಗಂಧವಾಗಲಿ ಆಗಬಾರದು. ಮೋಹಕ ಗಂಧವನ್ನು ವಾಸಿಸುವ ನಾಶಿಕಕ್ಕೆ ನೆಗಡಿಯಾಗಲೆಂದು ಷಡಕ್ಷರಿಗಳು ಮಾರ್ಮಿಕವಾಗಿ ಹಾಡಿದ್ದಾರೆ.
ಅಂಗನೆಯರು ತೊಡೆದು ಸೂಡಿ
ದಂಗಪುಷ್ಪ ವಾಸಿಸುವೊಡೆ
ಹಿಂಗದೆನ್ನ ನಾಸಪುಟಕೆ ನೆಗಡಿಯಾಗಲಿ |
ಮಂಗಳಾತ್ಮ ಷಡಕ್ಷರಿಯ
ಲಿಂಗದಂಘ್ರಿಗಿತ್ತ ಕುಸುಮ
ಹಾಂಗೆ ವಾಸಿಸುವರೆ ಘ್ರಾಣವಿಕಸವಾಗಲೆ
ಅಂಗನೆಯರು ಪೂಸಿಕೊಂಡ ಗಂಧದಿಂದ ವಿಕಾರವಾದರೆ ಮಂಗಳಾತ್ಮಕ ಮಹಾಲಿಂಗಕ್ಕರ್ಪಿಸಿದ ಪುಷ್ಪ ಪರಿಮಳವು ಜೀವನ ವಿಕಾಸಕ್ಕೆ ಕಾರಣವೆಂಬುದನ್ನು ಅರಿಯಬೇಕು. ಮೋಹಕ ಗಂಧವನ್ನು ಮೋಹಿಸುವ ನಾಸಿಕದ ಕ್ರಿಯೆಯನ್ನು ಶಿವನತ್ತ ತಿರುಗಿಸಬೇಕು ನಾಶಿಕದಲ್ಲಿ ಆಚಾರಲಿಂಗವಿರುವದರಿಂದ ಸದ್ಭಾವನೆಯಿಂದ ಸದಾಚಾರದಲ್ಲಿ ಗಂಧವನ್ನು ಸುಗಂಧ ಪ್ರಸಾದವಾಗಿ ಸ್ವೀಕರಿಸುವದನ್ನು ಕಲಿತರೆ ತುಷ್ಟಿ-ಪುಷ್ಟಿಗಳೆರಡೂ ಲಭಿಸುತ್ತವೆ. ಓ ಗುರುವೆ ! ಇಂಥ ಗಂಧದ ಕಂಪನ್ನು ಸ್ವೀಕರಿಸಿ ಆನಂದಿಸುವ ಅನುವನ್ನು ನೀಡು