ಕುಮಾರ ಮಹಾಸ್ವಾಮಿಗಳು : ಮಹಿಳೆಯರ ಹಿತಚಿಂತಕರು

• ಡಾ. ಗುರುದೇವಿ ಹುಲೆಪ್ಪನವರಮಠ

‘ಹೆಣ್ಣು ಮನುಕುಲಕ್ಕೆ ಕಕುಲಾತಿ ನೀಡಿರುವ ಮಧುರ ಹಣ್ಣು’ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಮುದ್ದಾಗಿ ಉದ್ಗರಿಸಿರುವಂತೆ ಹೆಣ್ಣು ತನ್ನ ಕೈಹಿಡಿದವರನ್ನು, ಒಡಲಕುಡಿಗಳನ್ನು, ಒಡಲು ನೀಡಿದವರನ್ನು ಅನುನಯದಿಂದ ಕಂಡು, ಅಂತಃಕರುಣೆ ಅನುಕಂಪದ ಸಿಂಚನೆ ಮಾಡಿಸುತ್ತ,  ಅವರ ನರಳಿಕೆಗೆ ಕೊರಳು ನೀಡಿ, ನೋವ ನೆವರಿಕೆಗೆ ಬೆರಳು ನೀಡಿ ತನ್ನೆಲ್ಲವನ್ನೂ ತ್ಯಾಗಮಾಡುವ ಕ್ಷಮಯಾಧರಿತ್ರಿ, ಮನುಕುಲದ ಕಕುಲಾತಿಯ ಸಾಂದ್ರ ಕೇಂದ್ರ, ಅವಳಿಲ್ಲದ ಜಗತ್ತು, ಜೀವನ ಅರ್ಥಹೀನ ಅಲ್ಲದೆ ಭಯಂಕರ. ಅದನ್ನೇ ಸರ್ವಜ್ಞ ಕವಿ ‘ಹೆಣ್ಣಿಲ್ಲದವನ ಸಂಸಾರ ಮಳಲೊಳಗೆ ಎಣ್ಣೆ ಹೊಯ್ದಂತೆ’ ಎಂದು ತೀರ್ಪು ನೀಡಿದ್ದುಂಟು.

ಈ ಭುವನದ ಸಮಸ್ತ ಬೆಳಕೇ ಆದ, ಭಾಗ್ಯವೇ ಆದ ಮಹಿಳೆಯನ್ನು ಕ್ರೈಸ್ತ ಧರ್ಮ ಈ ಭೂಮಿಗೆ ಪಾಪವನ್ನು ಹೊತ್ತು ತಂದವಳು ಎಂದು ಆರೋಪಿಸಿತು. ಶ್ರೇಷ್ಠ ತತ್ವಜ್ಞಾನಿ ಪ್ಲೇಟೋ ಒಂದು ಸಂದರ್ಭದಲ್ಲಿ ‘ಥ್ಯಾಂಕ ಗಾಡ್’ ನಾನು ಹೆಣ್ಣಾಗಿ ಹುಟ್ಟಲಿಲ್ಲ, ಎಂದುದ್ಧರಿಸಿ ತಾನು ಗಂಡಾಗಿ ಜನ್ಮತಳೆದದ್ದಕ್ಕೆ ಅಭಿಮಾನ ಆನಂದ ಪಟ್ಟ, ಭಗವಾನ್ ಬುದ್ಧ, ಮೊದಮೊದಲು ಮಹಿಳೆಯರನ್ನು ಬೌದ್ಧ ಸಂಘಗಳಿಗೆ ನಿರಾಕರಿಸಿ ಅವರು ಮೋಕ್ಷ ಸಾಧನೆಗೆ ತೊಡಕು ಸೇರಿಸಿಕೊಳ್ಳಲು ಎಂದು ಕಾರಣ ನೀಡಿ ತಾನೇ ಸ್ವತಃ ಮನೆ, ಮಡದಿ, ಮಗುವನ್ನು ತೊರೆದು ನಡೆದ. ಜೈನ ಧರ್ಮದ ನಯಸೇನ, ಕಾವ್ಯದಲ್ಲಿ ಬಳಸುವ ಭಾಷೆಯ ಬಗೆಗೆ ಕ್ರಾಂತಿಕಾರಿ ಮನೋಭಾವ ವ್ಯಕ್ತಪಡಿಸಿದವ ಸ್ತ್ರೀ ಕುರಿತು ತನ್ನ ಅಂದರೆ ಜೈನಧರ್ಮದ ನಿಲುವನ್ನು ಸ್ಪಷ್ಟ ಪಡಿಸುವಾಗ ಮಾತ್ರ ಮೂಢನಂತೆ.

ಎನಿಸುಜ್ವಳ ಮಾದೊಡೆಂ

ರವಿಯ ತೇಜಂ ಚಂದ್ರನ ಗೆಲ್ಲುಮೆ

ಪೆಣ್ಣಿನಿತೊಳ್ಳಿದಳಾದೊಡೆ ಪುರುಷನೊಳಾದ

ಮಹಾಗಣಂಗಳು ಸೋಲ್ತಪಳೆ?

ಗಂಡಾಗಿ ಹುಟ್ಟಿದಾಗಲೇ ಹೆಣ್ಣಿಗೆ ಮುಕ್ತಿ, ಅವಳೆಷ್ಟೇ ಒಳ್ಳೆಯವಳಾದರೂ ಪುರುಷನನ್ನು ಸರಿಗಟ್ಟಲಾರಳು ಎಂದೆಲ್ಲ ಸಾರಿದ.

 ‘ನಸ್ತ್ರೀ ಸ್ವಾತಂತ್ರ್ಯಮರ್ಹತಿ’ ಸ್ತ್ರೇಗೆ ಯಾವುದೇ ಸ್ವಾತಂತ್ರ್ಯ ಇಲ್ಲ ಅವಳು ಯಾವಾಗಲೂ ಪುರುಷನ ಆಶ್ರಯದಲ್ಲೇ ಇರತಕ್ಕವಳು, ಧಾರ್ಮಿಕ ಸ್ವಾತಂತ್ರ್ಯವಂತೂ   ಮೊದಲು ಇಲ್ಲ ಎಂದು ಸಾರಿದ ಮನು-ಅತ್ರಿಯಂತಹ ಶಾಸ್ತ್ರಕಾರರು ವೈಷ್ಣವ ಧರ್ಮದ ನಿಲುವನ್ನು ಸ್ಪಷ್ಟಪಸಿದರು. ಹೆಣ್ಣಿನ ಮೇಲೆ ತನಗೆ ಜನ್ಮ ಜನ್ಮಾಂತರದ ದ್ವೇಷವಿರುವವರ ಹಾಗೆ ಮನು, ಪುರುಷ ಎದುರಿನಲ್ಲಿರುವಾಗ ಹೆಣ್ಣು ‘ಮಲಗಬಾರದು, ಆಕಳಿಸಬಾರದು, ನಗಬಾರದು ಮೈಮುರಿಯಬಾರದು, ಇತ್ಯಾದಿ ಪಟ್ಟಿಯನ್ನೆ ನೀಡಿ ಅವಳ ಪ್ರತಿಯೊಂದು ಚಲನವಲನಗಳನ್ನು ನಿಯಂತ್ರಿಸಿದ.

ಯಾರು ಧರ್ಮಗುರುಗಳ, ಸಮಾಜಸುಧಾರಕರ ಸ್ಥಾನದಲ್ಲಿದ್ದು ಜನರ ರೀತಿ ನಡವಳಿಕೆಗಳನ್ನು ತಿದ್ದಬೇಕಾಗಿತ್ತೋ, ಜನಮನದಲ್ಲಿ ಸ್ತ್ರೀ ಕುರಿತಾಗಿ ಗೌರವದ ಭಾವ ತುಂಬಬೇಕಾಗಿತ್ತೋ ಅಂಥವರೇ ಸ್ತ್ರೀ ಕುರಿತಾಗಿ ಇಂಥ ಅಸಂಬದ್ಧ, ಅನುಚಿತ ಹೇಳಿಕೆಗಳನ್ನು ನೀಡತೊಡಗಿದಾಗ ಅಂದಿನ ಸಮಾಜ ಮಹಿಳೆಯನ್ನು ಹೇಗೆ ನಡೆಸಿಕೊಂಡಿರಬೇಕು? ಧರೆಯೇ ಹತ್ತಿ ಉರಿಯತೊಡಗಿದಾಗ, ಕಾಪಾಡಬೇಕಾದ ಕೈಗಳೇ ಕೊಲ್ಲತೊಡಗಿದಾಗ ಅಮೃತವೇ ವಿಷವಾಗತೊಡಗಿದಾಗ ಮಹಿಳೆ ಎಷ್ಟು ಎಂಥ ನೋವನ್ನು ಅನುಭವಿಸರಬೇಡ? ಯಾವ ತಪ್ಪನ್ನೂ ಮಾಡದೇ ವಿನಾಕಾರಣ ಇಂಥ ಅಪವಾದ ಆರೋಪಗಳ ಪಟ್ಟಿಯನ್ನಂಟಿಸಿಕೊಂಡು ಗಾಸಿಗೊಂಡಿದ್ದು ಎಷ್ಟು ದುರದೃಷ್ಟಕರ!

ಮಹಿಳೆಯರ ಅಂತರಂಗದ ಈ ನೋವ ದನಿ ಕೇಳಿಸಿತೋ ಏನೋ, ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಪ್ರಮಥರು ಈ ನಾಡಿನಲ್ಲಿ ಅವತಾರವೆತ್ತಿದರು. ಅನೇಕ ಆರೋಪ, ಅಪವಾದಗಳ ಕೊಳೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ಅವಳನ್ನು ಪ್ರೀತಿಯಿಂದ ಕೈ ಹಿಡಿದು ಮೇಲೆತ್ತಿ, ಅವಳಲ್ಲಿ ಸ್ವಾತಂತ್ರ್ಯ ಸಮಾನತೆಯ ಉಸಿರು ತುಂಬಿದರು. ಕಲ್ಯಾಣ ಪಟ್ಟಣದ ಅನುಭವ ಮಂಟಪದಲ್ಲಿ ತಮ್ಮ ಸರಿಸಮಾನ ಸ್ಥಾನಮಾನಗಳನ್ನು ನೀಡಿ, ಅವಳ ಸಾಧನೆಯನ್ನು ನಿಬ್ಬೆರಗಾಗಿ ನೋಡಿ ಮನವಾರೆ ಮೆಚ್ಚಿಕೊಂಡು, ಹೃದಯಾರೆ ಅಭಿಮಾನಪಟ್ಟು ಕೈಮುಗಿದರು. ಶರಣರ ಗುರುವಾಗಿದ್ದ ಅಲ್ಲಮಪ್ರಭುಗಳು ಸ್ತ್ರೀ ಕುಲವನ್ನು ಪ್ರತಿನಿಧಿಸಿದ ಮಹಾದೇವಿಯಕ್ಕನ ಪಾದಗಳಿಗೆ ನಮೋ ನಮೋ ಎಂದುದ್ಗರಿಸಿ ಗೌರವ ಸೂಚಿಸಿದರು. ಜೇಡರ  ದಾಸಿಮಯ್ಯನಂತಹ ಶರಣರು-

ಮೊಲೆ ಮುಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ

ಎಂದು ಸಾರಿ ವ್ಯಕ್ತಿಯ ಬಾಹ್ಯಸ್ವರೂಪಕ್ಕಾಗಲೀ, ಜಾತಿ ಲಿಂಗಗಳಿಗಾಗಲೀ ಮಹತ್ವವನ್ನಂಟಿಸದೇ ಆತ್ಮಿಕ ಅಸ್ತಿತ್ವಕ್ಕೆ ಸ್ಥಾನ ಮಾನ ನೀಡಿದರು. ಭಗವಂತನ ಮಹತ್ವದ ಸೃಷ್ಟಿಯಾದ ಮಹಿಳೆಯನ್ನು ಕಾಣುವ, ನಡೆಸಿಕೊಳ್ಳುವ ರೀತಿಗೆ, ನೀತಿಗೆ, ಜಗತ್ತಿಗೆ ಮಾದರಿಯಾದರು. ಮಹಿಳಾ ಕುಲದವರ ಗೌರವ ಕೃತಜ್ಞತೆಗಳಿಗೆ ನಿತ್ಯ ನಿರಂತರವೂ ಪಾತ್ರರಾದರು.

ಇಂಥ ಉದಾತ್ತ ಮನೋಸಂಸ್ಕೃತಿಯ ಶರಣರ ಮುಡಿಗೆ ಹೂ ತಂದ ಶ್ರೇಷ್ಠ ಸಂತತಿ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳು. ಅವರು ಮಹಿಳೆಯರ ನೇರ ಮುಖಾವಲೋಕನ ಮಾಡಿರದಿದ್ದರೂ ತಮ್ಮ ಒಳಗಣ್ಣಿನಿಂದ ಅವರ ಬದುಕಿನ ಎಲ್ಲಾ ಮಗ್ಗಲುಗಳ ಸಮಸ್ಯೆ-ಚಿಂತೆಗಳನ್ನು ಅರಿತ ಪ್ರಜ್ಞಾವಂತ ಶಿವಯೋಗಿಗಳು. ಒಂದು ಜನಾಂಗದ ಮುಂದುವರಿಕೆಯಲ್ಲಿ, ಜನಾಂಗದುನ್ನತಿಯಲ್ಲಿ, ಕೌಟುಂಬಿಕ ಶಾಂತಿ, ಸುಖ, ನೆಮ್ಮದಿಯ ಸ್ಥಾಪನೆಯಲ್ಲಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ, ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆ ಆಡಬಹುದಾದ ಪಾತ್ರದ ಪರಿಪೂರ್ಣ ಕಲ್ಪನೆ ಅವರಿಗಿತ್ತು. ಅವರ ಸಮಾಜೋನ್ನತಿ, ಜಾಗ್ರತಿಯ ಮಹಾಮಣಿಹದ ಹಿಂದೆ ಸಮಾಜದ ಒಂದು ಕಣ್ಣಾದ ಮಹಿಳೆಯ ಉದ್ಧಾರವೂ, ಜಾಗೃತಿಯೂ ಅಡಗಿತ್ತೆಂಬುದನ್ನು ಮರೆಯುವಂತಿಲ್ಲ.

ಸಮಾಜದ ನೆಮ್ಮದಿಗೆ ಕೌಟುಂಬಿಕ ನೆಮ್ಮದಿ ಅತ್ಯವಶ್ಯ-ಕೌಟುಂಬಿಕ ನೆಮ್ಮದಿಗೆ ಪತಿಪತ್ನಿಯರಿಬ್ಬರೂ ಅನ್ನೋನ್ಯವಾಗಿ, ಸಮರಸದಿಂದ ಇರಬೇಕಾದದ್ದು ಅನಿವಾರ್ಯ ಎಂದರಿತಿದ್ದ ಅವರು ತಾವು ವಾಯು ಸಂಚಾರದಲ್ಲಿದ್ದಾಗ ಯಾವುದಾದರೂ ಮನೆಯಿಂದ ಸ್ತ್ರೀಯ ಅಳುವ ನರಳುವ ದನಿ ಕೇಳಿ ಬಂದಿತೆಂದರೆ ಪುರುಷನ ದಬ್ಬಾಳಿಕೆ, ಕ್ರೌರ್ಯದ ನಡವಳಿಕೆಯ ಶಬ್ದ ಕೇಳಿತೆಂದರೆ ಕಂದನ ರಕ್ಷಣೆಗೆ ಧಾವಿಸುವ ತಾಯಿಯೋಪಾದಿಯಲ್ಲಿ ಅಂಥ ಮನೆಯೊಳಕ್ಕೆ ಧಾವಿಸಿ  ಸತಿಪತಿಗಳಿಬ್ಬರೂ ಹೀಗೆಲ್ಲ ಕಿತ್ತಾಡಬಾರದು, ಇಬ್ಬರೂ ಸಮರಸದಿಂದ ಇರ್ಬೇಕು.

ಕೇಳಿರಯ್ಯ ಮಾನವರ

ಗಂಡ ಹೆಂಡಿರ ಮನಸ್ಸು ಒಂದಾದರೆ

ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ

ಗಂಡ ಹೆಂಡಿರ ಮನಸ್ಸು ಬೇರಾದರೆ

ಗಂಜಳದೊಳಗೆ ಹಂದಿ ಹೊರಳಾಡಿ

ಒಂದರ ಮೇಲೊಂದು ಬಂದು ಮೂಸಿದ ಹಾಗೆ

ಎಂದು ನಮ್ಮ ಅಂಬಿಗರ ಚೌಡಯ್ಯನವರು ಅಪ್ಪಣೆ ಕೊಡಿಸಿದ್ದುಂಟು. ಪತ್ನಿ ಮಾಡಿದ ತಪ್ಪು ಮಾತ್ರ ತಪ್ಪೆ? ಅವಳಿಗೆ ಮಾತ್ರ ಶಿಕ್ಷೆಯೆ? ನೀನು ಮಾಡುವ ತಪ್ಪಿಗೆ ಶಿಕ್ಷೆ ಕೊಡುವವರು ಯಾರು?

ಸತಿಯ ಗುಣವ ಪತಿ ನೋಡಬೇಕಲ್ಲದೆ

ಪತಿಯ ಗುಣವ ಸತಿ ನೋಡಬಹುದೇ ಎಂಬರು

ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?

ಪತಿಯಿಂದ ಬಂದು ಸೋಂಕು ಸತಿಗೆ ಕೇಡಲ್ಲವೇ?

ಎಂದು ಢಕ್ಕೆಯ ಬೊಮ್ಮಯ್ಯನವರು ಬಹಳ ಹಿಂದೆಯೇ ಕೇಳಿದ್ದಾರೆ. ಪತ್ನಿ ಮಾಡುವ ತಪ್ಪನ್ನಷ್ಟೇ ನೋಡಿ ಶಿಕ್ಷಿಸುವುದು ಅನ್ಯಾಯ. ಯಾರೇ ತಪ್ಪ ಮಾಡಿದರೂ ಅದರಿಂದಾಗುವ ಕೆಡಕು ಇಬ್ಬರನ್ನೂ ತಟ್ಟುತ್ತದೆ. ಸತಿ ಮಾತ್ರ ತಪ್ಪ ಮಾಡದೇ ಪರಿಶುದ್ಧಳಾಗಿರಬೇಕು, ಪತಿ ಏನು ಮಾಡಿದರೂ ನಡೆಯುತ್ತದೆ. ಅವನು ಕೊಡುವ ಕಷ್ಟಗಳನ್ನೆಲ್ಲ ಆಕೆ ಸಹಿಸಿಕೊಂಡು ತೆಪ್ಪಗಿರಬೇಕು ಎನ್ನುವ ಸಂಪ್ರದಾಯವಾದಿ ನಿಲುವಿನ ವಿರೋಧಿಯಾಗಿದ್ದರು. ಪ್ರಗತಿಪರ ವಿಚಾರಧಾರೆಯ, ಮಹಿಳಾ ಕುಲ ಹಿತಚಿಂತಕರಾಗಿದ್ದ ಹಾನಗಲ್ಲ ಪೂಜ್ಯರು ಶರಣರಂತೆ ಸಮಾಜದಲ್ಲಿ ಸ್ತ್ರೀ ಪುರುಷರಿಬ್ಬರಿಗೂ ಸರಿ ಸಮಾನವಾದ ಸ್ಥಾನಮಾನಗಳಿರಬೇಕು. ಮಹಿಳೆಯ ಶೋಷಣೆ ಯಾರಿಂದಲೂ ನಡೆಯಬಾರದು ಅನ್ನುವ ಅಭೀಪ್ಸೆ ಹಾನಗಲ್ಲ ಶ್ರೀಗಳದಾಗಿತ್ತು.

ಅಂದಿನ ಸಮಾಜದಲ್ಲಿ ಹಳೆಯ ತಲೆಮಾರಿನ ಸಂಪ್ರದಾಯ ಶರಣರು ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯಕ್ಕೆ ಲಕ್ಷ ನೀಡಿರಲಿಲ್ಲ. ಅವರ ಸರ್ವತೋಮುಖ ಬೆಳವಣಿಗೆಗೆ ಅವಕಾಶಗಳನ್ನು ಕಲ್ಪಿಸಿರಲಿಲ್ಲ. ಬಸವಾದಿ ಪ್ರಮಥರು ಧರ್ಮವನ್ನು ಒಳಗೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಗೆ ಪುರುಷನ ಸರಿಸಮಾನ ಸ್ಥಾನ ಮಾನ ನೀಡಿದ್ದನ್ನು ಮನಗಂಡ ಹಾನಗಲ್ಲ ಕುಮಾರೇಶ್ವರರು ೧೯೦೪ರಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಅಧ್ಯಕ್ಷತೆಯಲ್ಲಿ ಲಿಂಗಾಯತ ಸಮಾಜದ ಸಂಘಟನೆಗಾಗಿ “ಅಖಿಲ ಭಾರತ ವೀರಶೈವ ಮಹಾಸಭೆ’ಯನ್ನು ಒಂದು ಲಕ್ಷ ರೂಪಾಯಿ ನಿಧಿ ಸಂಗ್ರಹಿಸಿ ‘ಲಿಂಗಾಯತ ಎಜ್ಯುಕೇಶನ್ ಫಂಡನ್ನು ನಿರ್ಮಿಸಿ ಮಹಾಸಭೆಯ ಅಂಗವಾಗಿ ಮಹಿಳೆಯ ಕಲ್ಯಾಣ ಸಾಧನೆಗೆ ‘ಅಖಿಲ ಭಾರತ ವೀರಶೈವ ಮಹಿಳಾ ಪರಿಷತ್ತನ್ನು ಸ್ಥಾಪಿಸಿದರು. ಮಹಿಳೆ ಸಮಾಜದ ಒಂದು ಪ್ರಮುಖ ಘಟಕ. ಅವಳ ಕ್ಷೇಮಾಭಿವೃದ್ಧಿಯಲ್ಲಿ ಸಮಾಜದ ಕ್ಷೇಮಾಭಿವೃದ್ಧಿ ಅಡಗಿದೆ ಎನ್ನುವ ಮಹತ್ವದ ಅಂಶವನ್ನು ಮನಗಂಡ ಪೂಜ್ಯರು ಮಹಿಳೆಯರ ಶಿಕ್ಷಣಕ್ಕೂ ಏರ್ಪಾಡು ಮಾಡಿದರು.

ಶಿವಯೋಗಮಂದಿರದಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಅದ್ದೂರಿಯಿಂದ ಜರುಗುತ್ತಿದ್ದ ಯಾತ್ರಾ ಮಹೋತ್ಸವದ ಹಲವಾರು ಸಭೆಗಳಲ್ಲಿ ಪೂಜ್ಯರು ‘ಮಹಿಳಾ ಸಭೆ’ಗಳನ್ನು ಪ್ರತ್ಯೇಕವಾಗಿ ಏರ್ಪಡಿಸಿ ಸಮಾಜದ ಮಹಿಳೆಯರು ಭಾಗಿಗಳಾಗಲು ಅವಕಾಶ ಕಲ್ಪಿಸಿದರು. ಸಂಸ್ಥೆಯ ಪ್ರಶಾಂತವಾದ ತಪೋವನದಲ್ಲಿ ವರ್ಷದ ಹನ್ನೆರಡು ತಿಂಗಳುಗಳಲ್ಲಿ ತಮ್ಮ ಪಾಲಿಗೆ ಬಂದ ೨- ೩ ದಿನಗಳನ್ನು ಮಹಿಳೆಯರು ಅಂದು ವ್ಯರ್ಥವಾಗಿ ಕಳೆಯದೇ ಸಮಾಜದ ಉನ್ನತಿಯಲ್ಲಿ ಮಹಿಳೆ ಆಡಬಹುದಾದ ಪಾತ್ರದ ಕುರಿತು ಚರ್ಚೆ, ಗೋಷ್ಠಿ, ಭಾಷಣಗಳನ್ನು ಏರ್ಪಡಿಸಿ ವಿಚಾರ ವಿನಿಮಯ ಮಾಡಿದರು. ೧೯೧೪ರಲ್ಲಿ ಶ್ರೀಮತಿ ಶಾಂತಮ್ಮ ಕಣಬರಗಿಮಠ ಅನ್ನುವ ಶರಣೆಯರ ಅಧ್ಯಕ್ಷತೆಯಲ್ಲಿ ಲಿಂಗಾಯತ ಮಹಿಳಾ ಪರಿಷತ್ತು ಕೂಡಿತ್ತು ಇದರಲ್ಲಿ ಸುಮಾರು ೨೦೦ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.

 ಆ ಸಂದರ್ಭದಲ್ಲಿ ಸೇರಿದ್ದ ಮಹಿಳೆಯರು ನಾಡಿನ ಧರ್ಮ, ಶಿಕ್ಷಣ, ಪಶುಸಂಗೋಪನ, ಕೃಷಿ ಮುಂತಾದ ವಿಷಯಗಳ ಕುರಿತು ಮಹಿಳೆ ಈ ಕ್ಷೇತ್ರಗಳಲ್ಲಿ ಆಡಬಹುದಾದ ಪಾತ್ರದ ಕುರಿತು ವ್ಯಾಪಕವಾಗಿ ಚರ್ಚಿಸಿದರು. ಯಾತ್ರಾ ಸಂದರ್ಭದಲ್ಲಿ ಏರ್ಪಡುತ್ತಿದ್ದ ಮಹಿಳಾ ಸಭೆಗಳು ವಿಶೇಷವಾಗಿ ಸೊಲ್ಲಾಪುರದ ಶ್ರೀಮತಿ ಭಾಗೀರಥಿಬಾಯಿ ಪಾಟೀಲ ಅವರ ನೇತೃತ್ವ, ಅಧ್ಯಕ್ಷತೆಯಲ್ಲಿ ಜರುಗುತ್ತಿದ್ದವು. ಪ್ರತ್ಯೇಕವಾಗಿ ಮಹಿಳೆಯರಿಗೆ ಶಿವಭಜನೆ, ಶಿವಕೀರ್ತನೆಗಳ ಏರ್ಪಾಡೂ ಇರುತ್ತಿತ್ತು. ಮಹಿಳೆಯರ ಸಾಂಸ್ಕೃತಿಕ ಬೆಳವಣಿಗೆಗೆ ಇಲ್ಲಿ ವಿಶೇಷ ಪುರಸ್ಕಾರ ಇತ್ತು. ಇಂಥ ಸಭೆಗಳು ಮೂರ್ನಾಲ್ಕು ವರ್ಷ ಮಾತ್ರ ವ್ಯವಸ್ಥಿತವಾಗಿ ಜರುಗಿದರೂ ಸಮಾಜದಲ್ಲಿ ಸಾಕಷ್ಟು ಪ್ರಗತಿಯ ಚಿಹ್ನೆಗಳು ಕಾಣಿಸಿಕೊಂಡವು.

ಕಾವ್ಯದಲ್ಲಿ ನಾಟಕ ರಮ್ಯ ಎಂದುಸುರಿದ ಕಾಳಿದಾಸನ ವಾಣಿಯಂತೆ ರಮ್ಯ ಕಾವ್ಯವೆಂದು ಗುರುತಿಸಲ್ಪಡುವ ನಾಟಕ ಮಾಧ್ಯಮವನ್ನು ಜೀವನೋಪಾಯಕ್ಕಾಗಿ ಬಳಸದೇ ಜ್ಞಾನದಾಸೋಹ ಮಾದ್ಯಮವನ್ನಾಗಿ ಬಳಸಿದರೆ ಸಮಾಜ ಪರಿಶುದ್ಧವಾಗಬಲ್ಲುದು ಜಾಗೃತವಾಗಬಲ್ಲುದು ಎಂಬ ನಿಲುವು ಹಾನಗಲ್ಲ  ಪೂಜ್ಯರದಾಗಿದ್ದರಿಂದ ‘ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಸ್ಥೆ’ ತಲೆಯೆತ್ತುವಂತೆ ಮಾಡಿದರು. ನಮ್ಮ ನಾಡಿನ ಮಹಿಳೆಯರಲ್ಲಿ ಬೋಧಕ ವರ್ಗ ತಯಾರಾಗಬೇಕು, ಮಹಿಳೆಯರು ಶರಣೆ ನೀಲಾಂಬಿಕೆ, ಲಕ್ಕಮ್ಮ, ಕಲ್ಯಾಣಮ್ಮ, ಗಂಗಾಂಬಿಕೆಯರ ಆದರ್ಶ ನಡೆ-ನುಡಿಗಳಿಂದ ಪ್ರಭಾವಿತರಾಗಬೇಕು. ಹೇಮರೆಡ್ಡಿ ಮಲ್ಲಮ್ಮನಂತೆ ಸತಿ ಸಾಧ್ವಿಯರಾಗಬೇಕು ಎಂಬ ಹಂಬಲದಿಂದ ಶರಣೆಯರ ಜೀವನ ಸಾಧನೆಗಳನ್ನಾಧರಿಸಿದ ಸಂಗೀತ ರೂಪಕ ನಾಟಕಗಳನ್ನು ಪ್ರದರ್ಶಿಸುವಂತೆ ಪಂ. ಪುಟ್ಟರಾಜ ಗವಾಯಿಗಳವರಿಗೆ ಪ್ರೇರಣೆ ನೀಡಿದರು. ಪುಟ್ಟರಾಜ ಗವಾಯಿಗಳು ಪೂಜ್ಯರ ಅಭೀಷ್ಟೆಯನ್ನು ಈಡೇರಿಸಿದರು.

ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ

ಕಾಮಿನಿ ನಿನ್ನವಳಲ್ಲ ಅವು ಜಗಕಿಕ್ಕಿದ ವಿಧಿ

ನಿನ್ನೊಡವೆಯೆಂಬುದು ಜ್ಞಾನರತ್ನ

ಎಂದ ಅಲ್ಲಮರ ವಾಣಿಯನ್ನು ಅಚ್ಚುಕಟ್ಟಾಗಿ ಆಚರಣೆಯಲ್ಲಿ ತಂದು ಆದರ್ಶ ಕಲ್ಪಿಸಿದವರು ಹಾನಗಲ್ಲ ಶ್ರೀಗಳು, ‘ಕಾಮವೇ ನಿಲ್ಲು, ಕ್ರೋಧವೇ ನಿಲ್ಲು ಚೆನ್ನಮಲ್ಲಿಕಾರ್ಜುನನ ಒಲುಮೆಯ ಸಂದೇಶ ಒಯ್ಯುತ್ತಿದ್ದೇನೆ’ ಎಂದಕ್ಕನಂತೆ ಪೂಜ್ಯರು ಲೌಕಿಕ ಆಕರ್ಷಣೆಗಳನ್ನೆಲ್ಲ ತಡೆದು ನಿಲ್ಲಿಸಿ, ಸಮಾಜೋದ್ಧಾರದಂತಹ ಪರಮ ಪವಿತ್ರ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಸಮಷ್ಟಿ ಕಲ್ಯಾಣಕ್ಕೆ ಅರ್ಪಿಸಿಕೊಂಡವ, ವಿಶ್ವಕುಟುಂಬಿಯಾದವ, ಮನುಷ್ಯನನ್ನು ಸ್ವಾರ್ಥಿಯನ್ನಾಗಿ ಸಂಕುಚಿತ ಮತಿಯನ್ನಾಗಿ ಮಾಡುವ ವ್ಯಷ್ಟಿ ಸುಖದ ಮೂಲಗಳು ಲಕ್ಷ್ಯವೀಯಬಾರದು ಎನ್ನುವ ಉದಾತ್ತ ತಿಳಿವಳಿಕೆ ಅವರದಾಗಿತ್ತು. ವಿರಾಗದ ವಿಂದ್ಯರಾಗಿದ್ದ ಪೂಜ್ಯರು ‘ಹರಿವ ಹಾವಿಗಂಜೆ, ಉರಿವ ನಾಲಗೆಗಂಜೆ, ಒಂದಕ್ಕಂಜುವೆ ಒಂದಕ್ಕಳುಕುವೆ ಪರಸ್ತ್ರೀ ಪರಧನವೆಂಬ ಜೀಜಿಗಂಜುವೆ’ ಎಂದ ಶರಣರ ವಾಣಿಯೇ ತಾವಾಗಿದ್ದರು, ಜನತಾ ಜನಾರ್ಧನನ ಸೇವೆಗೆ ತಮ್ಮನ್ನರ್ಪಿಸಿಕೊಂಡಿದ್ದ ಪೂಜ್ಯರು ಸಂಸಾರ ವಿಷಯಗಳಿಗೆ ಸಂಬಂಧಿಸಿದ ರೂಪ, ರಸ, ಗಂಧ ಸ್ಪರ್ಶಗಳಿಗೆ ಕಿವುಡರಾಗಿದ್ದರು. ಕುರುಡರಾಗಿದ್ದರು. ತಾವು ಆಯ್ದುಕೊಂಡ ಬದುಕಿನ ಬಟ್ಟೆಯ ದಾರಿಯ ಬಗೆಗೆ ಅವರಲ್ಲಿ ಅಪಾರ ನಿಷ್ಠೆ, ಪ್ರೀತಿ ಇತ್ತು.

ಸಮಷ್ಟಿ ಸುಖವನ್ನು ಸಾಧಿಸುವವ ಯಾವ ಸಂದರ್ಭದಲ್ಲಿಯೂ ವ್ಯಷ್ಟಿ ಸುಖದ ಮೂಲಗಳಿಗೆ ಮಾರುಹೋಗಬಾರದು ಎನ್ನುವ ಇಂಗಿತದ ಪೂಜ್ಯರು ಶಿವಯೋಗಮಂದಿರದಲ್ಲಿ ಸಾಧಕ ವಟುಗಳನ್ನು ಶಿಸ್ತು ಸಂಯಮದಿಂದ ಬೆಳೆಸಿದರು. ಒಮ್ಮೆ ಶಿವಯೋಗ ಮಂದಿರ ನೋಡಬಂದ ಸ್ತ್ರೀ ಸಮೂಹವನ್ನು ವಟುಗಳು ಸಾಧನೆ ಮಾಡುತ್ತಿದ್ದ ಕಟ್ಟಡದತ್ತ ಹೋಗಲು ಅವಕಾಶ ನೀಡಲಿಲ್ಲ. ವಟುಗಳ ಮನಸ್ಸು ವಿಚಲಿತರಾಗಿ ಅವರು ತಮ್ಮ ಘನಸಾಧನೆಯ ಪಥದಿಂದ ಹಿಂತೆಗೆಯಬಾರದು ಅವರ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆಗೆ ಆಕರ್ಷಣೆಗಳು ಮಾರಕ ಎನ್ನುವ ತಿಳಿವಳಿಕೆ ಅವರದಾಗಿತ್ತು. ತಾವು ವಾಯು ಸಂಚಾರದಲ್ಲಿದ್ದಾಗ ಪತಿಪತ್ನಿಯರ ಜೋಡಿ ಕಣ್ಣಿಗೆ ಬಿದ್ದರೆ ಅವರು ಮರೆಯಾಗುವವರೆಗೆ ನಿಂತು ಮುಂದೆ ಸಾಗುತ್ತಿದ್ದರು. ಸರ್ವೇಂದ್ರಿಯ ವಿಜಯಿಯಾಗಿದ್ದರೂ ಪೂಜ್ಯರು ವ್ಯಕ್ತಿಗತ ಮೋಹ-ಮಾಯೆಗಳ ಎಳೆತ ಸೆಳೆತಗಳಿಂದ ದೂರವಿರುತ್ತಿದ್ದರು.

ಎಲ್ಲ ವಿಜಯಗಳಲ್ಲಿ ಶ್ರೇಷ್ಠವಾದ ವಿಜಯ, ಇಂದ್ರಿಯ ವಿಜಯ ಎಂದು ಬೈಬಲ್‌ನಲ್ಲಿ ಹೇಳಿರುವಂತೆ ‘ಇಂದ್ರ ವಿಜಯಿಗುಂ ಇಂದ್ರಿಯ ವಿಜಯಿ ಮೇಲಲ್ತೆ? ಎಂದು ಕೇಳಿದ ಮಹಾಪತಿವ್ರತೆ ಮಂಡೋದರಿಯ ಅನುಭವವಾಣಿಯಂತೆ ಪೂಜ್ಯರು ತಮ್ಮ ಇಂದ್ರಿಯಗಳ ಮೇಲೆ ಅತ್ಯದ್ಭುತ ವಿಜಯ ಸಾಧಿಸಿದ್ದರು. ಅಂತೆಯೇ ಅವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ಇಡಿಯಾಗಿ ಸಮರ್ಪಿಸಿಕೊಳ್ಳುವುದು ಸಾಧ್ಯವಾಯಿತು.

ಅದಕ್ಕೇ ಬ್ರಹ್ಮಾಂಡ ಯುದ್ಧದಲ್ಲಿ ಗೆದ್ದ ವೀರರು ಅಧಿಕ ಆದರೆ ಪಿಂಡಾಂಡ ಯುದ್ಧದಲ್ಲಿ ಗೆದ್ದ ಕಡುಗಲಿಗಳು ಸಿಕ್ಕುವುದು ಅಪರೂಪ. ಸುತ್ತಲೂ ಅಬೇಧ್ಯವಾದ, ಅಜೇಯವಾದ ಸಂಯಮದ ಕೋಟೆಯನ್ನು ಕಟ್ಟಿಕೊಂಡು ಅನ್ವರ್ಥಕ ಬದುಕು ಬದುಕುವ ವೀರವಿರಾಗಿಗಳು ಕೈಬೆರಳಿನಿಂದ ಎಣಿಸುವಷ್ಟು ಅಂಥವರಲ್ಲಿ ಹಾನಗಲ್ಲ ಶ್ರೀಗಳು ಅದ್ವಿತೀಯರು.

ಎಳೆವಯದಲ್ಲೇ ತಾಯಿಯ ಮೋಹ ಮಮತೆಯನ್ನು, ಯೌವ್ವನದಲ್ಲಿ ಸಂಸಾರದ ಮಾಯೆಯನ್ನು ತಿರಸ್ಕಾರದಿಂದಲ್ಲ, ಆಳವಾದ ತಿಳುವಳಿಕೆಯಿಂದ, ಸಂಯಮದಿಂದ ಗೆದ್ದ ಹಾನಗಲ್ಲ ಕುಮಾರೇಶ್ವರರು ಅರಿಷಡ್ವರ್ಗಗಳನ್ನು ನಿಜವಾಗಿಯೂ ಸುಟ್ಟು ಕೆಂಡಮಾಡಿದ ಸಂಕೇತವಾಗಿ ಕಾವಿಯನ್ನು ಹೊದ್ದಿದ್ದರು. ಕಾವಿಯ ಬಟ್ಟೆಯ ಮೇಲ್ಮೆಯನ್ನು ಮೆರೆದವರು. ಸ್ತ್ರೀಯರಿಂದ ದೂರವಿದ್ದರೂ ಅವರ ಸರ್ವತೋಮುಖ ಕಲ್ಯಾಣದ ಕುರಿತು ಹಗಲಿರುಳು ಚಿಂತಿಸಿದರು. ಕ್ರಿಯಾತ್ಮಕವಾಗಿ ಶ್ರಮಿಸಿದರು. ಹೆಣ್ಣಿನಲ್ಲಿ ಹರನನ್ನು ಕಂಡು ಕೈ ಮುಗಿದರು. ಸಾಧಕ ವರ್ಗಕ್ಕೆ ಆದರ್ಶವನ್ನು ತೋರಿಸಿಕೊಟ್ಟವರು. ಮಹಿಳೆಯರ ಸರ್ವತೋಮುಖ ಉದ್ಧಾರಕ್ಕೆ ಚಿಂತಿಸಿದ ಕಳಕಳಿ ತೋರಿದ ಮಾಯೆಯನ್ನು ಗೆದ್ದ ಮಹೇಶ್ವರರು ಲಿಂ, ಹಾನಗಲ್ಲ ಕುಮಾರ ಮಹಾಸ್ವಾಮಿಗಳು.

Related Posts