ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು
ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
ಭಾರತೀಯ ತತ್ವಶಾಸ್ತ್ರದಲ್ಲಿ ಪರಮಾತ್ಮನ ಸ್ವರೂಪವನ್ನು ಕುರಿತು ವ್ಯಾಪಕವಾಗಿ ಚಿಂತನೆ ನಡೆಸಲಾಗಿದೆ. ಸತ್ ಚಿತ್ ಆನಂದ ಸ್ವರೂಪನೂ, ನಿತ್ಯಪರಿಪೂರ್ಣನೂ ಆಗಿರುವ ಪರಮಾತ್ಮ ಸಗುಣನೋ, ನಿರ್ಗುಣನೋ, ಸಾಕಾರನೋ, ನಿರಾಕಾರನೋ ಎಂಬ ಜಿಜ್ಞಾಸೆ ನಮ್ಮನ್ನು ಸದಾ ಕಾಡುತ್ತದೆ. ಜಗತ್ತಿನ ಅನೇಕ ಶ್ರೇಷ್ಠತತ್ವಜ್ಞಾನಿಗಳು, ಅನುಭಾವಿಗಳು ಮರಮಾತ್ಮನ ಸ್ವರೂಪವನ್ನು ಕುರಿತು ಹೇಳುವಾಗ ಕೆಲವರು ಪರಮಾತ್ಮನು ನಿರಾಹಾರ, ನಿರ್ಗುಣನೆಂದೂ ಇನ್ನು ಕೆಲವರು ಪರಮಾತ್ಮನು ಸಗುಣ, ಸಾಕಾರನೆಂದು ಹೇಳುವ ಮೂಲಕ ನಮ್ಮ ಜಿಜ್ಞಾಸೆಯನ್ನು ಇನ್ನೂ ಹೆಚ್ಚಿಸುತ್ತಾರೆ.
ಸತ್ ಚಿತ್ ಆನಂದ ಸ್ವರೂಪನಾದ ಪರಮಾತ್ಮನಿಗೆ ಯಾವುದೇ ಆಕಾರವಿಲ್ಲವಾದ್ದರಿಂದ ಅವನು ನಿರಾಕಾರ, ಯಾವುದೇ ಗುಣಗಳು ಇಲ್ಲದುದರಿಂದ ಅವನು ನಿರ್ಗುಣ ಕಣ್ಣಿಗೆ ಕಾಣಲಾರ, ಮನಸ್ಸಿಗೆ ನಿಲುಕಲಾರ. ಆದ್ದರಿಂದ ಅವನು ಆಗೋಚರ, ಅವ್ಯಕ್ತ, ಹೀಗೆ ಅವ್ಯಕ್ತನಾಗಿರುವ ಪರಮಾತ್ಮನು ವಿಶ್ವವನ್ನು ವ್ಯಾಪಿಸಿಕೊಂಡಿದ್ದರೂ ವಿಶ್ವಾತೀತನಾಗಿದ್ದಾನೆ. ವಿಶ್ವವನ್ನು ಸೃಷ್ಟಿಸುವ, ರಕ್ಷಿಸುವ ಮತ್ತು ಸಂಹರಿಸುವ ಶಕ್ತಿ ಪರಮಾತ್ಮನಿಗಿದೆ.
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ।
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ
ಎಂಬ ಗೀತೋಕ್ತಿಯಂತೆ ಜನರನ್ನು ಅವರವರ ಕರ್ಮಾನುಸಾರ ಶಿಕ್ಷಿಸುವ ಮತ್ತು ರಕ್ಷಿಸುವ ಶಕ್ತಿಯೂ ಪರಮಾತ್ಮನಿಗಿದೆ. ಹೀಗೆ ಅವನಲ್ಲಿ ಶಕ್ತಿ ಎಂಬ ವಿಶೇಷ ಗುಣವಿರುವುದರಿಂದ ಅವನು ಸಗುಣ ಎಂದು ಹೇಳಲಾಗಿದೆ.
‘ಲೀಲೆಯಾದೊಡೆ ಉಮಾಪತಿ, ಲೀಲೆ ನಿಂದೊಡೆ ಸ್ವಯಂಭು’ ಎಂಬುದು ಅನುಭಾವಿ ಅಲ್ಲಮನ ಸ್ಪಷ್ಟ ಅಭಿಪ್ರಾಯ. ನಮ್ಮ ಕಣ್ಣಿಗೆ ಕಾಣುವ ವಿಶ್ವವು ಪರಮಾತ್ಮನಲ್ಲಿ ಮೊದಲು ಅವ್ಯಕ್ತವಾಗಿ ಇತ್ತು. ಅವನ ಸಂಕಲ್ಪ ಹಾಗು ಇಚ್ಛೆಯ ಕಾರಣದಿಂದಾಗಿ ಚರಾಚರ ಪ್ರಪಂಚವು ನಮಗೆ ಕಾಣುತ್ತಿದೆ. ವಿಶ್ವದ ಈ ಅಭಿವ್ಯಕ್ತಿಯೇ ಪರಮಾತ್ಮನ ಲೀಲೆಯಾಗಿರುವುದರಿಂದ ಅವನು ‘ಉಮಾಪತಿ’ ವ್ಯಕ್ತವಾದ ಸಮಸ್ತವೂ ಅವನಲ್ಲಿ ಅಡಗಿಹೋದಾಗ ಲೀಲೆ ನಿಂತು ಅವನು ‘ಸ್ವಯಂಭು’ ಎನಿಸುತ್ತಾನೆ. ಹೀಗೆ ವಿಶ್ವವೆಲ್ಲ ಪರಮಾತ್ಮನ ಲೀಲೆಗೆ ಒಳಗಾಗಿದ್ದರೂ ಅವನು ಮಾತ್ರ ನಿರಾಳ, ವಿಶ್ವದ ಎಲ್ಲ ಇತಿ ಮಿತಿಗಳಿಂದ ಆಕಾರಗಳಿಂದ, ಜೀವಿಗಳ ಹುಟ್ಟು-ಸಾವು, ಸುಖ-ದುಃಖಾದಿಗಳಿಂದ ಅವನು ನಿರ್ಮುಕ್ತ, ಅಪರಿಣಾಮಿಯಾದ ಚೈತನ್ಯ ‘ಪದ್ಮಪತ್ರ ಜಲದಂತೆ ಹೊದ್ದಿಯೂ ಹೊದ್ದದಂತಿಹನು’ ಎಂದು ಅನುಭಾವಿಯೊಬ್ಬರು ಉದ್ಗರಿಸುತ್ತಾರೆ. ನೀರ
ತಾವರೆಯಂತಿರುವ ಪರಮಾತ್ಮನು ಶೂನ್ಯಸ್ಥಿತಿಯಲ್ಲಿರುವಾಗ ನಿರಾಕಾರ, ನಿರ್ಗುಣ; ಶೂನ್ಯಸ್ಥಿತಿಯನ್ನು ತೊರೆದು ತಾನೇ ಜಗತ್ತಾಗಿ ಪರಿಣಮಿಸಿದಾಗ ಸಾಕಾರ, ಸಗುಣ. ಆದರೆ ಜಗತ್ತೆ ಅವನ ನಿತ್ಯ ಆಕಾರವಲ್ಲ. ಹೀಗೆ ಪರಮಾತ್ಮನು ಜಗವಾಗಲೂ ಬಲ್ಲ ಜಗವಾಗದಿರಲೂ ಬಲ್ಲ. ಆದ್ದರಿಂದಲೇ ಬಸವಣ್ಣನವರು- ‘ಸಾಕಾರ ನಿರಾಕಾರ ಏಕೋದೇವ ನಮ್ಮ ಕೂಡಲಸಂಗಮದೇವ’ ಎಂದು ಹೇಳಿರುವುದು.
ಪರಮಾತ್ಮ ‘ನಿರ್ಗುಣ’ ಎಂದು ಹೇಳುವವರು ನಿರ್ಗುಣಪಂಥಿಗಳು. ಅವರು ಮೂರ್ತಿಪೂಜೆಯನ್ನಾಗಲಿ, ಆವೇಶಯುಕ್ತವಾದ ಭಕ್ತಿಯನ್ನಾಗಲಿ ಒಪ್ಪುವುದಿಲ್ಲ. ದೈವತ್ವವು ಮೂರ್ತಿಗಳನ್ನು ಮೀರಿನಿಂತಿರುವುದರಿಂದ ಅಂತರ್ಮುಖಿಯಾಗಿ ಅದನ್ನು ಅನುಭವಿಸಬೇಕು ಎನ್ನುತ್ತಾರೆ. ಆದರೆ ಪರಮಾತ್ಮ ‘ಸಗುಣ’ ಎಂದು ಹೇಳುವವರು ದೈವತ್ವವನ್ನು ಸಾಕಾರಗೊಳಿಸಿ ಅದರೊಡನೆ ವಿವಿಧ ಮಾನವೀಯ ಸಂಬಂಧಗಳನ್ನು ಕಲ್ಪಿಸಿ ಪ್ರೇಮಿಸುತ್ತಾರೆ. ಆ ಭಕ್ತಿಯ ಆನಂದವನ್ನು ತಾವು ಬೇರೆಯಾಗಿಯೇ ನಿಂತು ಸವಿಯುತ್ತಾರೆ. ಯಾರು ಯಾವ ರೂಪದಿಂದ ದೈವತ್ವವನ್ನು ಆರಾಧಿಸುವರೋ ಅದೇ ಸಗುಣ ಸಾಕಾರರೂಪದಲ್ಲಿ ದೈವತ್ವವು ಮೈದೋರುತ್ತದೆ. ಒಟ್ಟಾರೆ ಪರಮಾತ್ಮನು ಸಗುಣ-ನಿರ್ಗುಣನೂ, ಸಾಕಾರ ನಿರಾಕಾರನೂ ಆಗಿದ್ದಾನೆಂಬುದು ಅನುಭಾವಿಗಳ ವಿವಿಧ ದೃಷ್ಟಿಕೋನಗಳಿಂದ ನಮಗೆ ಸ್ಪಷ್ಟವಾಗುತ್ತದೆ.