ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಬದುಕು ಮತ್ತು ಸವಿಸುವ ದಾರಿಯಲ್ಲಿ ಸಂಚರಿಸುವಾಗ ಜರಗುವ ಪ್ರಕ್ರಿಯೆಗಳು ನಮಗೊಂದು ದೊಡ್ಡ ಪಾಠವಾಗಿ ಮಾರ್ಪಾಡುತ್ತವೆ ಎನ್ನುವದರ ಕುರಿತು ಚಿಂತಿಸುವಾಗ,
ಹನ್ನೆರಡನೆಯ ಶತಮಾನದಲ್ಲಿ ಬರೆದಿಟ್ಟಿರುವ ಬಸವಣ್ಣನವರ ಈ ವಚನ ಬದುಕಿನ ಕರಾಳ ಮುಖದ ವಿರಾಟದರ್ಶನ ಮಾಡಿಸಿತು

ಮಾಡಿದೆನೆಂಬುದು ಮನದಲ್ಲಿ ಹೊಳೆದರೆ,

ಏಡಿಸಿ ಕಾಡಿತ್ತು ಶಿವನ ಡಂಗುರ!

ಮಾಡಿದೆನೆನ್ನದಿರಾ ಲಿಂಗಕ್ಕೆ,

ಮಾಡಿದೆನೆನ್ನದಿರಾ ಜಂಗಮಕ್ಕೆ.

ಮಾಡಿದೆನೆಂಬುದು ಮನದಲ್ಲಿಲ್ಲದಿದ್ದರೆ,

ಬೇಡಿತ್ತನೀವ ಕೂಡಲಸಂಗಮದೇವ

If it flashes across the mind that one is performing service,

the drum of Lord Shiva warns with a harsh sound.

Never say that you served the Lord!

Never say that you served His wandering (mobile) devotees!

If the thought that you served does not occur in your mind,

the Lord Kudala Sangama will grant you whatever you aspire for.

ಭಕ್ತನು ಸೇವಕ, ಶಿವನು ಯಜಮಾನ. ಸೇವಕನು ಯಜಮಾನನ ಕೆಲಸವನ್ನು ಮಾಡಿ-ಮಾಡಿಸಿದವನು ಯಜಮಾನನೆಂದು-ಅವನ ಹೆಸರನ್ನು ಮುಂದುಮಾಡದೆ ತಾನೇ ಮಾಡಿದವನೆಂದು-ಒಳಗೊಳಗೇ ಆದರೂ ಬಡಿವಾರ ಮಾಡಿದರೆ ಯಜಮಾನನು ಗಮನಿಸಿ ಶಿಕ್ಷಿಸುತ್ತಾನೆ.

ಹಾಗೆಯೇ ಭಕ್ತನು ತನ್ನ ಯಜಮಾನನಾದ ಶಿವನಿಗಾಗಲಿ, ಅವನ ಪ್ರತಿನಿಧಿಯಾದ ಜಂಗಮಕ್ಕಾಗಲಿ ಮಾಡಿ ನೀಡಿ ದಾಸೋಹಂಭಾವದಿಂದಿರದೆ ಅಹಂಭಾವಿಯಾದರೆ ಸವಾಲೆಸೆದು ಕಾಡುತ್ತಾನೆ. ಮಾಡುವವನು ನೀನೆ ಮಾಡಿಸುವವನು ನೀನೆ ಎಂದು ಶಿವನಿಗೆ ವಿನಮ್ರವಾಗಿ ನಡೆದರೆ ಅವನನ್ನು ಶಿವನು ತನ್ನ ಅರ್ಧಾಸನದಲ್ಲಿ ತೊಡೆಯಲ್ಲಿ ತಲೆಯಲ್ಲಿ ಮೆರೆಸುತ್ತಾನೆ.

– ವ್ಯಾಖ್ಯಾನಕಾರರು

ಡಾ.ಎಲ್. ಬಸವರಾಜು

ಶ್ರೀಕುಮಾರ ತರಂಗಿಣಿ  ೨೦೨೩ ಎಪ್ರಿಲ್ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ ದೇವ ಕಾಯೋ ನೀ ಮಾಯಾತೀತನೆ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೩ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ನಾನು ಕಂಡ ಕುಮಾರ ಯೋಗಿ: ಲೇಖಕರು: ಪೂಜ್ಯ ಜ.ಚ.ನಿ
  4. ಷಟ್‌ಸ್ಥಲ : ಪರಿಕಲ್ಪನೆ :• ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  5. ದೃಷ್ಟಿ- ಸೃಷ್ಟಿ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  6. ವಚನ ವಾಙ್ಮಯದ ಮಹತ್ವ :ಫ. ಗು. ಹಳಕಟ್ಟಿ, ವಿಜಾಪೂರ
  7. ಅಪ್ಪ ಹಾನಗಲ್ಲ ಕುಮಾರೇಶ : ರಚನೆ:ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
  8. ಆಡಿಯೋ೧ : ವಿಶೇಷ ಉಪನ್ಯಾಸ
  9. ಶ್ರೀಕುಮಾರೇಶ್ವರರ ಶಿಷ್ಯ ಸಂಪತ್ತು” ಪರಮಪೂಜ್ಯ
  10. ಶ್ರೀ ಮ.ನಿ.ಪ್ರ. ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ
  11. ಶ್ರೀ ಅನ್ನದಾನೇಶ್ವರ ದೇವಮಂದಿರಮಠ.ಸುಕ್ಷೇತ್ರ ಮಣಕವಾಡ
  12. ಆಡಿಯೋ ೨ : ದೇವ..ದೇವಾ..ಶ್ರೀಕುಮಾರೇಶ
  13. ಗಾಯನ: ಶ್ರೀಸಿದ್ಧೇಂದ್ರಕುಮಾರ ಹಿರೇಮಠ
  14. ರಚನೆ : ಶ್ರೀಕಂಠ. ಚೌಕೀಮಠ

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

(ರಾಗ – ಕೇದಾರ ಗೌಳ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ದೇವ | ಕಾಯೋ ನೀ ಮಾಯಾತೀತನೆ || ಪ ||

ವೀರಶೈವವ ಸಾರಿ ತೋರುವ |

ಭೂರಿ ಭಕ್ತಿಯುಕ್ತರ ಪಾರುಗೊಳಿಸುತೆ || 1 ||

ಶಿಷ್ಟ ಮತವಿದು ನಷ್ಟಗೊಳ್ವುದು |

ತುಷ್ಟಿಗೊಳಿಸುವೆನೆಂದ ಭೀಷ್ಟ ವೀಯುತೆ || 2 ||

ಮತವೆ ನಿನ್ನದು ಪತಿಯೆ ಕಾಯ್ವುದು |

ಗತಿಯ ಕಾಣದಿರ್ಪರ ಜತಿಯಗೂಡುತೆ || 3 ||

ಇಂತು ಸಭೆಯೊಳು ಕುಂತು ಜನಗಳು |

ಪಂಥಗಾರರಾಗಿರುವಂತೆ ಮಾಡುತೆ || 4 ||

ಬೇಡಿಕೊಂಬೆನು ಮಾಡು ಕೃಪೆಯನು |

ಮೂಢರಾದ ಜನಗಳ ನೋಡಿ ಮರೆಯದೆ || 5 ||

ವೇದವೆಂಬುದು ಭೇದವೀವುದು |

ಬೋಧಿಸೈಕ್ಯ ಮತದ ಹಾದಿ ತೋರಿಸಿ || 6 ||

ಮತವು ನಿನ್ನಯ ಹಿತದ ಸೀಮೆಯ |

ಗತಿಯೊಳೈಕ್ಯಗೊಳ್ಳುವ ಮತಿಯ ಕೊಡುತೆ || 7 ||

ಸ್ವಂತಪರರಿಗೆ ಸಂತ ಜನರಿಗೆ |

ಅಂತರ್ಯಾಮಿಯಾಗಿ ಹಂತೆ ತೊಲಗಿಸಿ || 8 ||

ಸಿದ್ಧಲಿಂಗನೆ  ಪೊದ್ದಿರ್ದದವರನೆ |

ಶುದ್ಧರಾಗಿರುವಂತೆ ತಿದ್ದಿ ತೋರುತೆ || 9 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಷ್ಟಾಂಗಯೋಗ ಬಲು | ಕಷ್ಟವೆಲೊ ಮಗನೆ ಎಂ

ದಿಷ್ಟ ಲಿಂಗವನು. ಸೃಷ್ಟಿಸುತ ಕರಕಿತ್ತ

ಶ್ರೇಷ್ಠ ಶ್ರೀಗುರುವೆ ಕೃಪೆಯಾಗು   ||೧೦೧||

ಇಲ್ಲಿಯವರೆಗೆ ಅಷ್ಟಾಂಗಯೋಗದ ವಿಚಾರವನ್ನು ವಿವರವಾಗಿ ಆಲೋಚಿಸಿದ್ದೇವೆ. ಅಷ್ಟಾಂಗಯೋಗದಲ್ಲಿ ಪ್ರತಿಯೊಂದು ಯೋಗಾಂಗವನ್ನು ಅನಂತಾನಂತ ನಿಯಮ ಪೂರ್ವಕ ಅನೇಕ ವ್ರತಗಳನ್ನು ಆಚರಿಸುತ್ತ ಬಾಹ್ಯಯೋಗಗಳನ್ನು ಸಿದ್ಧಿಸಿ ವಿವೇಕ ಖ್ಯಾತಿಗಳೆನಿಸಿದ ಧ್ಯಾನ ಧಾರಣ ಸಮಾಧಿಗಳನ್ನು ಸಾಧಿಸುವದು ಕೊನೆಗೆ ನಿರ್ವಿಕಲ್ಪಕ (ಅಸಂಪ್ರಜ್ಞಾತ) ಸಮಾಧಿಯನ್ನು ಸಿದ್ಧಿಸುವುದು ಸುಲಭವಲ್ಲ. ಸಿದ್ಧರಾದವರೂ ವಿರಳ. ಆದರೆ ಯೋಗಭ್ರಷ್ಟರಾಗುವವರ ಸಂಖ್ಯೆಯೇ ಬಹಳ. ಯೋಗಭ್ರಷ್ಟರಾದವರು ಪುನಃ ಪುನಃ ಹುಟ್ಟಿ ಯೋಗವನ್ನು ಸಾಧಿಸಬೇಕಾಗುವದು. ಅದು ಕಾರಣವೆ ಸಮಾಧಿಯು ತಾಮಸವೆಂದು ಹಿಂದಿನ ತ್ರಿಪದಿಯಲ್ಲಿ ಉಕ್ತವಾಗಿದೆ. ಇಂಥ ಅಷ್ಟಾಂಗಯೋಗವು ಕಷ್ಟಕರವಲ್ಲದೆ ಮತ್ತೇನು |

ಈ ಅಷ್ಟಾಂಗಯೋಗದ ಕಷ್ಟತತಿಯನ್ನು ಅರಿತ ಗುರುನಾಥನು ದಯೆಯಿಂದಲೂ ಪ್ರೀತಿಯಿಂದಲೂ ಇಷ್ಟಲಿಂಗವನ್ನು ಶಿರದರಮನೆಯಲ್ಲಿಂದ ಸೃಷ್ಟಿಸಿ ಕರಕಮಲಕ್ಕೆ ಕೊಟ್ಟಿದ್ದಾನೆ. ಈ ಕರದಿಷ್ಟಲಿಂಗಯೋಗ ಸುಲಭಯೋಗ, ಸಹಜ ಯೋಗ, ಶಿವಯೋಗ. ಅಂತೆಯೇ ಅದು ಮಂಗಲಕರಯೋಗವೆನಿಸಿದೆ.

 ಅಷ್ಟಾಂಗಯೋಗವು ಕ್ರಮಸಾಧನೆಯುಳ್ಳುದು. ಒಂದೊಂದನ್ನೇ ಆಚರಿಸುತ್ತ ಅಳವಡಿಸಿಕೊಳ್ಳುತ್ತ ಸಾಧಿಸಬೇಕಾಗುವದು. ಶಿವಯೋಗದಲ್ಲಿ ಅಥವಾ ಲಿಂಗಾಂಗ ಯೋಗದಲ್ಲಿ ಯೋಗದ ಎಂಟೂ ಅಂಗಗಳೂ ಏಕಕಾಲಕ್ಕೆ ಸಮಾವೇಶಗೊಳ್ಳುತ್ತವೆ. ಲಿಂಗಾಂಗ ಸಾಮರಸ್ಯ ಜ್ಞಾನವುಳ್ಳ ಶಿವಭಕ್ತನಿಗೆ ಸುಮನ-ಸತ್ಕ್ರಿಯೆಗಳಿಂದ ಯಮವು ಲಿಂಗಪೂಜೆಯ ನಿಯಮವು, ಶಿವಪೂಜೆಗೆ ಕುಳಿತುಕೊಳ್ಳುವ ಆಸನವು, ಪ್ರಾಣ ಲಿಂಗಾನುಸಂಧಾನದಲ್ಲಿ ಪ್ರಾಣಾಯಾಮವು, ಪ್ರಸಾದ ಶುದ್ಧಿಯಲ್ಲಿ ಪ್ರತ್ಯಾಹಾರವು, ಉಪಾಂಶು-ಮಾನಸಿಕ ಜಪಗಳೇ ಲಿಂಗಧ್ಯಾನವು, ಭಾವದಲ್ಲಿ ಭಾವಲಿಂಗವನ್ನು ಹೊಂದುವದೇ ಧಾರಣವು. ಐಕ್ಯಸ್ಥಿತಿಯಲ್ಲಿ ಸಮಾಧಿ. ಹೀಗೆ ಇವೆಲ್ಲವೂ ಶಿವಯೋಗದಲ್ಲಿ ಸಮತ್ವಗೊಳ್ಳುತ್ತವೆ.

ಅಷ್ಟಾಂಗಯೋಗದಲ್ಲಿ ಆಯಾಸವಿದೆ, ಕರ್ಮಜಡತೆಯಿದೆ. ಲಿಂಗಾಂಗ  ಯೋಗದಲ್ಲಿ ಯಾವ ಆಯಾಸವಿಲ್ಲ, ಕರ್ಮಜಡತೆಯ ಸೋಂಕಿಲ್ಲ, ನವನಾಥರಲ್ಲಿ ಪ್ರಸಿದ್ಧನಾದ ಗೋರಕ್ಷನಾಥನು ಹಠಯೋಗಸಾಧನೆಯಿಂದ ವಜ್ರದೇಹಿಯಾಗಿದ್ದರೂ, ಶಿವಯೋಗ ಸಿದ್ಧನೆನಿಸಿ ವೋಮಕಾಯನಾದ ಅಲ್ಲಮಪ್ರಭುವಿನ ಸಿದ್ಧಿಗೆ ಶರಣಾಗತ ನಾದ ಎಂಬ ಆಖ್ಯಾನಕ ರೋಚಕವೂ ತಾತ್ವಿಕವೂ ಆಗಿದೆ. ಇದರಿಂದ ಅಷ್ಟಾಂಗ ಯೋಗಕ್ಕಿಂತಲು   ಶಿವಯೋಗವೇ ಮಿಗಿಲೆಂದು ತಿಳಿಯದಿರದು.

ಅಷ್ಟಾಂಗ ಯೋಗವು ಬಹು ಕ್ರಿಯೆಗಳಿಂದ ಕೂಡಿ ಅಲ್ಪ ಫಲ ಕೊಟ್ಟರೆ ಶಿವಯೋಗವು ಅಲ್ಪ ಕ್ರಿಯೆ, ಬಹು ಫಲದಾಯಕವಾಗಿದೆ. ಸಾಮಾನ್ಯಾಧಿಕಾರಿಯೂ ಸಹ ಲಿಂಗಪೂಜೆಯ ಮರ್ಮವನ್ನು ಅರಿತು ಆಚರಿಸಬಹುದು. ಅಳವಡಿಸಿಕೊಳ್ಳ  ಬಹುದು. ಆದರೆ ಯೋಗವು ಹಾಗಲ್ಲ. ಇದನ್ನೆಲ್ಲ ತಿಳಿದ ಮಹಾಗುರುವು ಶಿಷ್ಯೋದ್ಧಾರಕ್ಕಾಗಿ ಇಷ್ಟಲಿಂಗವನ್ನು ಹುಟ್ಟಿಸಿ ಕರುಣಿಸಿದುದು ಮಹಾಕರುಣೆಯೇ ಸರಿ. ಸುಲಭದಲ್ಲಿ ಸಿಕ್ಕುವ ಮುಕ್ತಿದಾಯಕನಾದ ಗುರುವರನು ಶ್ರೇಷ್ಠವಲ್ಲದೆ ಮತ್ತೇನು ! ಅವನು ಪರಮಶ್ರೇಷ್ಠನೆನಿಸಿದ್ದಾನೆ.

ಶಾಂಬವಿಯ ಮುದ್ರೆಯ ವಿ | ಡಂಬಿಸುತಲೆನಗೆ ಸ್ವ-

ಯಂಭು ಲಿಂಗವ ಕ-ರಾಂಬುಜದೊಳಿತ್ತ ಕರು

ಣಾಂಬುನಿಧಿ ಗುರುವೆ ಕೃಪೆಯಾಗು   | ೧೦೨ |

ಶಿವಕವಿಯು ಅಷ್ಟಾಂಗಯೋಗದ ವಿಚಾರಗಳನ್ನು ಸೂಕ್ಷ್ಮವಾಗಿ ನಿರಸನ ಮಾಡಿ ಹಠಯೋಗಕ್ಕಿಂತಲೂ ಶಿವಯೋಗವೇ (ಲಿಂಗಾಂಗಯೋಗ) ಮಿಗಿಲಾದುದೆಂದು ಪ್ರತಿಪಾದಿಸಿದ ಮೇಲೆ ಯೋಗ ಮಾರ್ಗದ ಇನ್ನೊಂದು ಪ್ರಭೇದವೆನಿಸಿದ ತಾಂತ್ರಿಕ ಮಾರ್ಗದ ಮುದ್ರೆಗಳನ್ನು ಸೂಕ್ತವಾಗಿ ವಿಡಂಬಿಸುತ್ತಾನೆ.

ಮುದ್ರೆಯೆಂದರೆ ಮುದ್ರಿಕೆಯಿಂದ ಹೇಳಬಹುದು. ಅಂದರೆ ಸಂಕೇತವನ್ನು ಕೆತ್ತಿರುವ ಉಂಗುರ ಅಥವಾ ಸಾಧನವೆಂತಲೂ ಅರ್ಥ ಮಾಡಬಹುದು. ವೈಷ್ಣವರು ದೇಹ ಶುದ್ದಿಗಾಗಿ ಮತಾಚಾರ್ಯರಿಂದ ಭಗವಂತನ ಚಿನ್ಹೆಯನ್ನು (ಅಚ್ಚು) ಮುದ್ರಿಸಿಕೊಳ್ಳುವದಕ್ಕೂ ಮುದ್ರೆಯೆಂಬುದಾಗಿ ಹೆಸರಿದೆ. ಇನ್ನು ತಾಂತ್ರಿಕ ಮಾರ್ಗದಲ್ಲಿಯೂ ಈ ಮುದ್ರೆಗಳ ವಿಚಾರ ಬರುತ್ತದೆ. ತಂತ್ರವು ಆಗಮದ ಒಂದು ಭಾಗವು, ಆಗಮವು ವೇದದ ಸಮಕಾಲೀನವೆಂತಲೂ, ಕೆಲವರು ಅದಕ್ಕೂ ಮೊದಲಿನದೆಂತಲೂ ಪ್ರತಿಪಾದಿಸುತ್ತಾರೆ. ಕೆಲವು ಕಾರಣಗಳಿಂದ ಇತ್ತೀಚಿನದೆಂಬುದಾಗಿಯೂ ಹೇಳುತ್ತಾರೆ. “ಶ್ರೀಮೃಗೇಂದ್ರೋತ್ತರಾಗಮ” ದಲ್ಲಿ ೨೮ ಶಿವಾಗಮಗಳು ಶಿವನ ಸದ್ಯೋಜಾತಾದಿ-ಪಂಚಮುಖದಿಂದ ಸೃಷ್ಟಿಯ ಕಾಲಕ್ಕೇನೆ ಹುಟ್ಟಿದವೆನ್ನುವ ಸಬಲ ಪ್ರಮಾಣದಿಂದ ಆಗಮಗಳ ಬಹಪ್ರಾಚೀನತೆ ಕಂಡುಬರುತ್ತದೆ. ಉಪಾಗಮಗಳು ಅಧಿಕ ಸಂಖ್ಯೆಯಲ್ಲಿವೆ. ಆಗಮಗಳಲ್ಲಿ ಶಿವನು ಶಿವೆ (ಪಾರ್ವತಿ)ಗೆ ಕ್ರಿಯಾ- ಜ್ಞಾನವನ್ನು ಆಚಾರ-ವಿಚಾರಗಳನ್ನು, ಯೋಗ-ಶಿವಯೋಗವನ್ನು, ಏನೆಲ್ಲ  ವಿಷಯವನ್ನು ಬೋಧಿಸಿದ್ದಾನೆ. ಶಿವಾದ್ವೈತ ಸಾಹಿತ್ಯ ಕರ್ತೃಗಳೆನಿಸಿದ ಜ.ಚ.ನಿ. ಯವರು ಸೂಕ್ಷ್ಮ ತಂತ್ರಸಾರ’ದ ಮುಮ್ಮಾತಿನಲ್ಲಿ ಆಗಮದ ವಿಷಯ ವ್ಯಾಪ್ತಿ ಯನ್ನು ಪ್ರಸ್ತಾಪಿಸುತ್ತ-ಚಿತ್ತಶುದ್ಧಿಗೆ ಬೇಕಾದ ಧರ್ಮಗಳು; ಕಾಯಶುದ್ಧಿಗೆ  ಬೇಕಾದ ಕ್ರಿಯೆಗಳು, ಪ್ರಾಣಶುದ್ಧಿಗೆ ಬೇಕಾದ ಯೋಗಗಳು; ಬುದ್ಧಿವಿಕಾಸಕ್ಕೆ ಬೇಕಾದ ಜ್ಞಾನ-ವಿಜ್ಞಾನಗಳು, ಶಿಲ್ಪ ಸಂಗೀತ ಚಿತ್ರ ಮೊದಲಾದ ಮನೋಲ್ಲಾಸಕ ಕಲೆಗಳು ಆಗಮಗಳಲ್ಲಿವೆ. ಹುಟ್ಟು-ಸಾವಿನ, ಬಾಳು-ಬದುಕಿನ, ಆಗುಹೋಗುಗಳ ವಿಚಾರ ನಿಗಮಗಳಲ್ಲಿದೆ. ಉಪಾಸನೆಯ ವಿಧಿ-ವಿಧಾನಗಳು ನಿರೂಪಿತವಾಗಿವೆ. ಹೆಸರಾದ ಅರವತ್ತು ನಾಲ್ಕು ಕಲೆಗಳನ್ನು ವಿವರಿಸುತ್ತವೆ ಆಗಮಗಳು” ಎಂದುದಾಗಿ ವರ್ಣಿಸಿದ್ದಾರೆ.

 ದೇವತೆಯ ಧ್ಯಾನ ಮತ್ತು ಉಪಾಸನೆಯ ಐದಂಗಗಳಾದ ಪಟಲ, ಪದ್ಧತಿ, ಕವಚ, ಸಹಸ್ರನಾಮ, ಸ್ತೋತ್ರಗಳಿಂದ ಕೂಡಿದ ಗ್ರಂಥವು ಆಗಮದಲ್ಲಿ ತಂತ್ರ ಸಾಹಿತ್ಯವೆನಿಸುವದು. ಆಗಮಗಳಲ್ಲಿ ಸೃಷ್ಟಿ, ಪ್ರಲಯ, ದೇವತಾರ್ಚನೆ, ಸರ್ವ ಸಾಧನ ಪುರಶ್ಚರಣ, ಷಟ್‌ಕರ್ಮ (ಶಾಂತಿ-ವಶೀಕರಣ ಸ್ತಂಭನ ವಿದ್ವೇಷಣ, ಉಚ್ಚಾಟನ ಮತ್ತು ಮಾರಣಗಳು), ಮತ್ತು ಧ್ಯಾನಯೋಗ ಹೀಗೆ ಏಳು ವಿಷಯಗಳು ಉಕ್ತವಾಗಿವೆ. ಶಾಕ್ತ್ಯಾಗಮದ ವಾಮಾಚಾರ ಹಾಗೂ ಹೈಯ ಪೂಜಾಪದ್ಧತಿಗಳಿಂದ ತಾಂತ್ರಿಕವಿಧಿ-ವಿಧಾನಗಳು ನಿಂದಾಸ್ಪದವಾದವು. ಕೌಲಾಚಾರ ಅಥವಾ ಸಮಯಮಾರ್ಗಿಗಳಲ್ಲಿ ಪಂಚತತ್ತ್ವ ಸಾಧನೆಯು ಬರುತ್ತದೆ. ಕುಲವೆಂದರೆ ಆಧಾರಾದಿ ಚಕ್ರಗಳು, ಅವುಗಳನ್ನು ಅರಿಯಲು ಶ್ರೀ ಚಕ್ರದ ಪೂಜೆ ಮಾಡುವವನು ಕೌಲನೆನಿಸುವನು. ಅಥವಾ ಸಮಯಮಾರ್ಗಿಯೆಂತಲೂ ಕರೆಯಲ್ಪಡುತ್ತಾನೆ.

ಕಾಲಾಂತರದಲ್ಲಿ ಶ್ರೀಚಕ್ರದ ಕಲ್ಪನೆಯು ಸ್ತ್ರೀಯೋನಿಯ ಪೂಜೆಗೆ ಮಾರ್ಪ ಟ್ಟಿತು. ಶ್ರೀಚಕ್ರದ ಸಾಧನೆಯಲ್ಲಿ ಸಿದ್ಧಿ ಸಾಧಿಸಿದ ಮಂದಾಧಿಕಾರಿಗಳು ವಾಮ ಚಾರಿಗಳಾಗಿ ವರ್ತಿಸಹತ್ತಿದರು. ಶ್ರೀಚಕ್ರದ ಸಾಧನೆಗೆ ಪಂಚತತ್ತ್ವ ಸಾಧನೆಯೂ ಪೋಷಕವಾದುದು. ಈ ಪಂಚತತ್ತ್ವ ಸಾಧನೆಯ ಪಂಚ ಮಕಾರಗಳು. ಕೇವಲ ಬಾಹ್ಯವಾಚ್ಯಾರ್ಥದಲ್ಲಿ ಪರಿವರ್ತನಗೊಂಡವು. ಪಂಚ ಮಕಾರಗಳೆಂದರೆ- ೧) ಮಧ್ಯ ೨) ಮಾಂಸ ೩) ಮತ್ಸ ೪) ಮುದ್ರಾ ಮತ್ತು ೫) ಮೈಥುನಗಳು. ಇವುಗಳ ತಾತ್ವಿಕ ವಿಚಾರ ಅರ್ಥಪೂರ್ಣವಾಗಿದೆ.

ʼ’ಧ್ಯಂ ಮಾಂಸಂ ಚ ಮೂನಂ ಚ

ಮುದ್ರಾ ಮೈಥುನಮೇವ ಚ |

ಮಕಾರಪಂಚಕಂ ಪ್ರಾಹುಃ

ಯೋಗೀನಾಂ ಮುಕ್ತಿದಾಯಕಮ್ ”

ಪಂಚಮಕಾರಗಳು ಯಥಾರ್ಥತಃ ಯೋಗಿಗಳಿಗೆ ಮುಕ್ತಿದಾಯಕವಾಗಿವೆ ಎನ್ನುವ ಮಾತಿನ ಮಥಿತಾರ್ಥ ಹೀಗಿದೆ-ಮಧ್ಯವೆಂದರೆ ಹೊರಗಿನ ಮದವೇರಿಸಿ ಬುದ್ಧಿ  ಶೂನ್ಯನನ್ನಾಗಿಸುವ ಮಧ್ಯವಲ್ಲ. ೬೯ನೆಯ ತ್ರಿಪದಿಯಲ್ಲಿ ವಿವರಿಸಿದಂತೆ ಶಿರದಲ್ಲಿಯ ಬ್ರಹ್ಮರಂಧ್ರ ಅಥವಾ ಸಹಸ್ರದಳ ಕಮಲದಲ್ಲಿ ಸ್ರವಿಸುವ ಅಮೃತವನ್ನು ಯೋಗಿಗಳು ಮಧ್ಯವೆಂದು ಕರೆದಿದ್ದಾರೆ. ಇದಕ್ಕೆ ಕುಲಾರ್ಣವತಂತ್ರ ಹಾಗೂ ಗಂಧರ್ವತಂತ್ರಗಳಲ್ಲಿ ಮತ್ತು ಯೋಗಚೂಡಾಮಣ್ಯುಪನಿಷತ್ತಿನಲ್ಲಿ ಪ್ರಮಾಣಗಳು ಉಪಲಬ್ಧವಾಗುತ್ತವೆ. ಸಹಸ್ರಾರದ ಸುಧೆಯನ್ನು ಖೇಚರೀ ಮುದ್ರೆಯ ಸಾಧನೆಯಿಂದ ಸಾಧಿಸಲು ಬರುವದು. ಇದನ್ನು ಮುಂದೆ ವಿಚಾರಿಸುವಾ

 ತಂತ್ರಸಾಧಕನು ಪುಣ್ಯ ಹಾಗೂ ಪಾಪರೂಪಿಯಾದ ಜೀವಾತ್ಮನ ಪಶು (ವಿಷಯ) ಗಳನ್ನು ಜ್ಞಾನರೂಪೀ ಖಡ್ಗದಿಂದ ಸಂಹರಿಸಿ ತನ್ನ ಮನಸ್ಸನ್ನು ಬ್ರಹ್ಮದಲ್ಲಿ ಲೀನಗೊಳಿಸುವವನು ಮಾಂಸಹಾರಿಯೆನಿಸುವನು. ಶರೀರದಲ್ಲಿರುವ ಈಡಾ (ಇಡಾ) ಮತ್ತು ಪಿಂಗಳಾ ನಾಡಿಗಳಲ್ಲಿ ಪ್ರವಹಿಸುವ ಶ್ವಾಸ-ನಿಃಶ್ವಾಸಗಳೇ ಮತ್ಸ್ಯಗಳು. ಅವುಗಳನ್ನು ಕುಂಭಕದಿಂದ ಪ್ರಾಣ ವಾಯುವನ್ನು ಸುಷುಮ್ಮಾನಾಡಿಯಲ್ಲಿ ಸಂಚಾಲನೆ ಗೊಳಿಸುವುದಕ್ಕೆ ಮತ್ಸ್ಯಸಾಧನೆಯೆನಿಸುವದು. ಅಸತ್‌ಸಂಗದಿಂದ ಬಂಧನ ವಾಗುವದನ್ನು ಅರಿತು ಸತ್ಸಂಗವನ್ನು ಮಾಡಿ ಮುಮುಕ್ಷುವೆನಿಸಿ ಅಸತ್‌ಸಂಗವನ್ನು ಸಂಪೂರ್ಣ ತ್ಯಜಿಸುವದೇ ಮುದ್ರೆಯೆನಿಸುವದು. ಇನ್ನು ಮೈಥುನವೆಂದರೆ- ಸೇರಿಸುವುದು ಅಥವಾ ಕೂಡಿಸುವದು ಎಂದರ್ಥ. ಸಹಸ್ರಾರದಲ್ಲಿರುವ ಶಿವನೊಡನೆ ಕುಂಡಲಿನಿಯನ್ನು ಜಾಗೃತಗೊಳಿಸುವದು ಅಥವಾ ಸುಷಮ್ಮಾ ನಾಡಿಯಲ್ಲಿ ಪ್ರಾಣವನ್ನು ಮಿಳನಗೊಳಿಸುವದು ಎಂಬುದಾಗಿ ಅನುಭವಿಗಳು ತಿಳಿಸುತ್ತಾರೆ

.ಸಾಂಸಾರಿಕ ಸುಖಕ್ಕಿಂತ ಸಾವಿರ ಪಾಲು ಅಧಿಕವಾದ ಸುಖವು ಸುಷುಮ್ಮಾ ನಾಡಿಯಲ್ಲಿ ಪ್ರಾಣವಾಯುವನ್ನು ಸ್ಥಿರಗೊಳಿಸುವದರಿಂದ ಉಂಟಾಗುವದು. ಇದೇ ನಿಜವಾದ ಮೈಥುನವೆಂದು ತಂತ್ರವೇತ್ತರು ಪ್ರತಿಪಾದಿಸಿದ್ದಾರೆ. ತಂತ್ರ ಪ್ರಮಾಣವೂ ಉಂಟು. ನಿಜವಾದ ತತ್ತ್ವವನ್ನರಿಯದ ವಾಮಮಾರ್ಗಿಗಳು ಸ್ವೇಚ್ಛಾಚಾರದಿಂದ ವರ್ತಿಸಿ, ಸಿದ್ಧಾಂತಕ್ಕೇನೆ ಕಲಂಕವನ್ನುಂಟು ಮಾಡಿರುವರು. ಆದರೆ ನಾಥ ಸಂಪ್ರದಾಯದ ಗೋರಕ್ಷನಾಥನೇ ಮುಂತಾದ ಹಠಯೋಗಿಗಳು ಪಂಚತತ್ತ್ವ ಶುದ್ದಿಯಿಂದ ಮುದ್ರೆಗಳ ಸಾಧನೆಯಿಂದಲೂ ವಜ್ರಕಾಯರಾದ ಇತಿಹಾಸ ಯೋಗ ಶಾಸ್ತ್ರದಿಂದ ತಿಳಿದು ಬರುತ್ತದೆ.

 ಯೋಗಮುದ್ರೆಗಳಲ್ಲಿ ಮುಖ್ಯವಾದವುಗಳು ಮೂರು ಖೇಚರೀ ಶಾಂಭವೀ, ಷಣ್ಮುಖೀ ಎಂದು  ಅಂತರಾತ್ಮನ ಅರಿವಿಗಾಗಿ ನಯನ-ಮನ-ಪ್ರಾಣಗಳ ಸಂಯಮನಕ್ಕಾಗಿ ಸಾಧಿಸುವ ಬಾಹ್ಯ ಕ್ರಿಯೆಗಳೇ ಮುದ್ರೆಗಳು, ತ್ರಿಪದಿಯ ಶಿವಕವಿಯು ಮೊದಲನೆಯದಾಗಿ ಶಾಂಭವೀ ಮುದ್ರೆಯನ್ನು ವಿಡಂಬಿಸುತ್ತಾನೆ.

 ಈ ಮುದ್ರೆಯ ಲಕ್ಷಣವನ್ನು ಶಿವಯೋಗ ಪ್ರದೀಪಿಕೆಯ ಟೀಕಾಕಾರರು-

ಮೋಚಯತಿ, ದ್ರಾವಯತೀತಿ ಮುದ್ರಾ’

 ಅಜ್ಞಾನಾಂಧಕಾರವನ್ನು ತೊಲಗಿಸಿ ಶಿವಾನಂದ ಪ್ರವಾಹವನ್ನು ನಿರಾಯಾಸದಿಂದ ಸುರಿಸುವದೇ ಮುದ್ರೆಯೆನಿಸುವದು” ಎಂದು ಪ್ರತಿಪಾದಿಸಿದ್ದಾರೆ. ನಿಜಗುಣ ಶಿವಯೋಗಿಗಳು-

ಹೃದಯಾಕಾಶಮಧ್ಯದ ದಿವ್ಯಲಿಂಗ ಸ್ಥಲದಂತರ್ಲಕ್ಷ್ಯಮಂ

ಕಾಣ್ಬುದಕ್ಕೆ ಪರಮೋಪಾಯಮಾದ ಮುದ್ರಾಲಕ್ಷಣ

ವೆಂದು ಪಾರಮಾರ್ಥ ಪ್ರಕಾಶಿಕೆ”ಯಲ್ಲಿ ಮುದ್ರೆಯ ಸ್ವರೂಪವನ್ನು ತಿಳಿಸಿದ್ದಾರೆ. ಮುದ್ರೆಗಳು ರಾಜಯೋಗಾಂತರ್ಗತವಾಗಿವೆ. ಖೇಚರೀ ಮುದ್ರೆ ಮತ್ತು ಶಾಂಭವೀ  ಮುದ್ರೆಗೆ ಹೆಚ್ಚಿನ ಅಂತರವಿಲ್ಲ. ಈ ಶಾಂಭವೀ ಮುದ್ರೆಯ ವಿವರವು ಕೆಳಗಿನಂತಿದೆ

ಅಂತರ್ಲಕ್ಷ್ಯವಿಲೀನ ಚಿತ್ತಪವನೋ ಯೋಗೀ ಯದಾ ವರ್ತತೇ |

ದೃಷ್ಟ್ಯಾ ನಿಶ್ಚಲತಾರಯಾ ಬಹಿರಧಃ ಪಶ್ಯನ್ನಪಶ್ಯನ್ನಪಿ ||

ಮುದ್ರೆಯಂ ಖಲು ಶಾಂಭವೀ ಭವತಿ ಸಾ ಲಬ್ಧಾ ಪ್ರಸಾದಾದ್ಗುರೋಃ ||

ಅಂದರೆ ಹೃದಯದ ಅನಾಹತ ಚಕ್ರಗತ ಮಹಾಚೈತನ್ಯದಲ್ಲಿ ಲಕ್ಷ ಪ್ರಾಣ ಮತ್ತು ನಿಶ್ಚಲವಾದ ದೃಷ್ಟಿಗಳನ್ನು ಇರಿಸಿ, ಹೊರಗೆ ಕೆಳಗೆ ನೋಡುತ್ತಿದ್ದರೂ ನೋಡದಂತಿರುವದೇ ಶಾಂಭವೀ ಮುದ್ರೆಯೆನಿಸುವದು. ಈ ಮುದ್ರೆಯು ಸದ್ಗುರುವಿನ ಕೃಪಾಪ್ರಸಾದದಿಂದಲ್ಲದೇ ಅರಿವಿಗೆ ಬರುವದಿಲ್ಲ, ಶಾಂಭವ ಸ್ವರೂಪವನ್ನಾಗಿಸುವ ಸಾಧನೆಯೇ ಶಾಂಭವೀಯು

ನಾಶಿಕಾಗ್ರದಲ್ಲಿರಿಸಲ್ಪಟ್ಟ ನಿಮೇಷೋನ್ಮೇಷಂಗಳಿಲ್ಲದ

ಲೋಚನಂಗಳ ದಿವ್ಯಾಲೋಕನದಿಂದೆ ಲಕ್ಷಿಸಲು ಯೋಗ್ಯ-

ಮಾದ ಹೃದಯದಲ್ಲಿ ನಿಶ್ಚಲವಾದ ಜ್ಯೋತಿರ್ಮ೦ಡಲವನು

ಕಾಂಬುದೇ ಶಾಂಭವೀ ಮುದ್ರೆಯೆನಿಸುವದು.

ಎಂದು ಶಾಂಭವೀ ಮುದ್ರಾ ಸ್ವರೂಪವನ್ನು ನಿಜಗುಣರು ವಿವರಿಸಿದ್ದಾರೆ. ಇದನ್ನೇ ಶಿವಯೋಗ ಪ್ರದೀಪಿಕೆಯ ಐದನೆಯ ಪಟಲ ೭ನೆಯ ಶ್ಲೋಕದಲ್ಲಿ ನೋಡಿ-

ಅಂತಶ್ಚಿತ್ತಂ ಬಹಿಶ್ಚಕ್ಷುರ್ನಿಮೇಷೋನ್ಮೇಷವರ್ಜಿತಂ ||

ಏಷಾ ಸಾ ಶಾಂಭವೀ ಮುದ್ರಾ ಸರ್ವತಂತ್ರೇಷು ಗೋಪಿತಾ |

ಶಾಂಭವೀ ದ್ವಿವಿಧಾ ಪ್ರೋಕ್ತಾ ಪೂರ್ವೋತ್ತರವೀಭೇದತಃ ||

ಚಿತ್ತವು ಅಂತರ್ಲಕ್ಷ್ಯವುಳ್ಳದ್ದಾಗಿ ಚಕ್ಷುಗಳು ನಿಮೇಷ (ರೆಪ್ಪೆ ಮುಚ್ಚುವದು) ಉನ್ಮೇಷ (ರೆಪ್ಪೆ ತೆರೆಯುವದು) ಗಳಿಲ್ಲದಂತಿರುವದೇ ಶಾಂಭವೀ ಮುದ್ರೆಯು. ಇದು ಎಲ್ಲ ತಂತ್ರಗಳಲ್ಲಿ ರಹಸ್ಯವಾಗಿ ಹೇಳಲ್ಪಟ್ಟಿದೆ. ಮತ್ತು ದಿವ್ಯ ಹೃದಯಲಿಂಗಾನುಸಂಧಾನಕ್ಕೆ  ಶಾಂಭವೀಯೆನಿಸುವದು. ಇದು ನಾಸಿಕಾಗ್ರದೃಷ್ಟಿಯ ದ್ವಾರಾ ನಾದನುಸಂಧಾನವನ್ನು ಮಾಡುವ ಮನದೊಳು ಕೂಡಲು ಪೂರ್ವಶಾಂಭವೀ” ಯೆನಿಸುವದು. ಆ ನಾಸಿಕಾಗ್ರದೃಷ್ಟಿಯೂ ಮನವೂ ನಾದಬ್ರಹ್ಮದಲ್ಲಿ ಮುಳುಗಲು (ಬೆರೆಯಲು) ‘ಉತ್ತರ ಶಾಂಭವೀ’ ಯೆನಿಸುವದು. ಹೀಗೆ ಇದು ಎರಡು ತೆರನಾಗಿರುವದು. ಈ ಎರಡೂ ವಿಧದಿಂದಲೂ ಯೋಗಿಗಳು ನಾದಾನುಸಂಧಾನವನ್ನು ಮಾಡುವರೆಂದು ಟೀಕಾಕಾರರು ವಿವರಿಸಿದ್ದಾರೆ.

ಮನವು ಅಂತರ್ಮುಖಗೊಂಡು ದೃಷ್ಟಿಯು ನಾಶಿಕದ ತುದಿಯಲ್ಲಿದ್ದು ನಾದಬ್ರಹ್ಮನು ಅನುಸಂಧಾನ ಮಾಡುವ ಈ ಶಾಂಭವೀ ಮುದ್ರೆಯು ಉತ್ತಮ ಗುರುವಿನ ಮಾರ್ಗದರ್ಶನದಿಂದಲೂ ಸುಲಭವಾಗಿ ಸಿದ್ಧಿಸುವದಿಲ್ಲ. ಅಂತರ್ಮುಖವಾದ ಮನಸ್ಸಿನಲ್ಲಿ ವಿಷಯಗಳ ಸುಳಿದಾಟವು ನಿಲ್ಲಬೇಕು. ಬಹಿರ್ಗತವಾದ ದೃಷ್ಟಿಗೆ ಯಾವುದನ್ನೂ ಕಾಣದಂತಿರಿಸುವದು ಸಹಜವಲ್ಲ. ಮನ-ನೇತ್ರಗಳ ಅಂತರದಿಂದ ಪ್ರಾಣವೂ ವಿಷಯವ್ಯಾಮೋಹದಿಂದ ದೂರವಾಗಲಾರದು. ಕಾರಣ ಇಂಥ ಶಾಂಭವೀ ಮುದ್ರೆಯಿಂದ ಸುಲಭ ಪ್ರಯೋಜನವೆನಿಸುವದಿಲ್ಲ ಎಂಬುದನ್ನು ಮನಸಾ ಅರಿತ ಶರಣರು ಈ ಶಾಂಭವೀ ಮುದ್ರೆಯನ್ನು ವಿಡಂಬಿಸಿದರು.

 ಶಾಂಭವಿಯ ಮುದ್ರೆಯಲ್ಲಿ ಬಾಹ್ಯ ದೃಷ್ಟಿ ಅಂತಃ ಸಂಯಮನವಿರುವದು ಸಮಂಜಸ ಹಾಗೂ ಸಹಜವೆನಿಸುವದಿಲ್ಲ. ಸಮರಸಕ್ಕೆ ಸಾಧನವಾಗಲಿಕ್ಕಿಲ್ಲವೆಂದು ಮನಗಂಡು ಕರುಣಾನಿಧಿಯಾದ ಸದ್ಗುರುವು ಸ್ವಸ್ವರೂಪವಾದ ಸ್ವಯಲಿಂಗವನ್ನು ಶಿಷ್ಯನ ಕರಕಮಲಕ್ಕೆ ತ೦ದಿರಿಸಿದುದು ಅನುಪಮ ಪವಾಡವೇ ಆಗಿದೆ. ಕರದಿಷ್ಟ ಲಿಂಗದಲ್ಲಿ ದೃಷ್ಟಿಯನ್ನು ಮನವನ್ನು ಪ್ರಾಣವನ್ನು ಬೆರೆಸಿ ಲಿಂಗವೇ ತಾನಾಗುವ ಶಾಂಭವ ಪದವನ್ನು ಪಡೆಯಲು ಉಪದೇಶಿಸಿದ್ದಾನೆ. ಧ್ಯಾನದ ವಿಷಯದಲ್ಲಿ ಹಿಂದೆ ಪ್ರತಿಪಾದಿಸಿದಂತೆ ಲಿಂಗಯೋಗದಲ್ಲಿ ದೃಷ್ಟಿಯೋಗದ ಮಹತ್ವವು ಅಗಣಿತವಾಗಿದೆ. ಅಂಥ ಶಿವಲಿಂಗಯೋಗದಿಂದಾಗುವ ಶಾಂಭವ (ಶಿವ) ಸ್ವರೂಪವು ಸಹಜವಾಗಿ ಪ್ರಾಪ್ತವಾಗುವದು. *ಇಷ್ಟಲಿಂಗವಿಲ್ಲದೆ ಮಾಡುವ ಶಾಂಭವೀ ಮುದ್ರೆಗಿಂತ ಇಷ್ಟಲಿಂಗದಲ್ಲಿರಿಸುವ ನಯನ-ಮನ-ಹರಣಗಳನ್ನು ಕೇಂದ್ರೀಕರಿಸುವ ಈ ಸ್ವಯಂಭುಲಿಂಗ ಮುದ್ರೆ ಮಹತ್ತಾದುದು. ಇದುವೆ ನಿಜವಾದ ಶಿವಯೋಗದ ಶಾಂಭವೀ ಮುದ್ರೆ. ಕ್ರಿಯಾಶಾಂಭವೀ ಮುದ್ರೆ, ಇದಕ್ಕೆ ಸರಿಸಮವಾದುದು ಬೇರೊಂದಿಲ್ಲ”

ಣ್ಮೂಗು ಕಿವಿ ಬಲಿವ | ಷಣ್ಮುಖಿಯ ಮುದ್ರೆ ಬಹು

ತಿಣ್ಣೆಂದು ಬಿಡಿಸಿ – ಷಣ್ಮಂತ್ರಲಿಂಗ ತೋ-

ರ್ದಾಣ್ಮ ಶ್ರೀಗುರುವೆ ಕೃಪೆಯಾಗು   ||೧೦೩ ||

ಆಗಮಗಳಲ್ಲಿ ಶಿವನು ಪಾರ್ವತಿಗೆ ಬೋಧಿಸಿದಂತೆ ಪುತ್ರನಾದ ಷಣ್ಮುಖನಿಗೂ ಉಪದೇಶಿಸಿದ್ದಾನೆ. ಕೆಲವು ಆಗಮಗಳಲ್ಲಿ ಪಾರ್ವತಿದೇವಿಯು ಶ್ರೋತೃವಾಗಿದ್ದರೆ ಕೆಲವೊಂದರಲ್ಲಿ ಕುಮಾರ ಷಣ್ಮುಖಸ್ವಾಮಿಯು ಶಿಷ್ಯತ್ವವನ್ನು ವಹಿಸಿದ್ದಾನೆ. ಶಾಂಭವೀ ಮುದ್ರೆಯನ್ನು ಶಂಭುವು (ಶಿವನು) ತನ್ನ ಅರ್ಧಾಂಗಿನಿಯಾದ ಶಾಂಭವಿಗೆ ತಿಳಿಯಪಡಿಸಿದ್ದರೆ ಷಣ್ಮುಖಿಯ ಮುದ್ರೆಯನ್ನು ಷಣ್ಮುಖನಿಗೆ ಬೋಧಿಸಿರುವನು. ಕುಮಾರನು ಆರು ಮುಖವುಳ್ಳವನಾಗಿರುವಂತೆ ಈ ಷಣ್ಮುಖೀ ಮುದ್ರೆಯಲ್ಲಿಯೂ ಅದನ್ನು ಮುದ್ರಿಸುವ (ಮುಚ್ಚುವ) ವಿಷಯವು ಪ್ರತಿಪಾದಿತವಾಗಿದೆ. ಸಾಂಕೇತಿಕ ಅರ್ಥವುಳ್ಳದ್ದಾಗಿದೆ. ಖೇಚರೀ ಮತ್ತು ಶಾಂಭವೀ ಮುದ್ರೆಗಳು ಉತ್ತಮ ಅಧಿಕಾರಿಗಳಿಗೆ ಸಾಧ್ಯವಾದರೆ, ಷಣ್ಮುಖೀ ಮುದ್ರೆಯು ಕನಿಷ್ಠಾಧಿಕಾರಿಗೂ ಸಾಧ್ಯವೆಂದು ನಿಜಗುಣರು ತಿಳಿಸಿದ್ದಾರೆ.

 ಷಣ್ಮುಖೀ ಮುದ್ರೆಯ ಲಕ್ಷಣವನ್ನು ಶಿವಯೋಗ ಪ್ರದೀಪಿಕೆಕಾರರು-

“ವಕ್ತ್ರೇ ಚಾಪೂರ್ಯವಾಯುಂ ಹುತವಹನಿಲಯೇ ಅಪಾನಮಾಕೃಷ್ಯ ಧೃತ್ಯಾ |

ಸ್ವಾಂಗುಷ್ಠಾದ್ಯಂಗುಲೀಭಿರ್ನಿಜಕರತಲಯೋಃ  ಷಡ್ಭಿರೇವಂ ನಿರುಧ್ಯ  ||

ಶ್ರೋತ್ರೇ ನೇತ್ರೇ ಚ ನಾಸಾಪುಟಯುಗಳಮ್ ಅಥಾನೇನ ಮಾರ್ಗೆಣ ಧೀರಾಃ |

ಪಶ್ಯಂತಿ ಪ್ರತ್ಯಯಾನ್ ಸತ್ಪ್ರಣವಬಹುವಿಧ- ಧ್ಯಾನಸಂಲೀನಚಿತ್ತಾಃ    || ೫-೧೭ ||

ಮುಖದ ಏಕದೇಶಮಾದ ನಾಸಾಪುಟದಲ್ಲಿ ಪ್ರಾಣವಾಯುವನ್ನು ಪೂರಿಸಿ ಅಗ್ನಿ ಸ್ಥಾನವೆನಿಸುವ ಅಧಃಕುಂಡಲಿನೀ ಸ್ಥಲದ ತ್ರಿಕೋಣಾಕಾರಮಾದ ಮೂಲಾಧಾರದಲ್ಲಿಯ ಅಪಾನವಾಯುವನ್ನು ಆಕುಂಚನಗೊಳಿಸಿ ತನ್ನ ಕರತಲವೆರಡರಲ್ಲಿಯ ಅಂಗುಷ್ಠ-ತರ್ಜನೀ-ಮಧ್ಯಮ (ಅಂಗುಷ್ಠ=ಹೆಬ್ಬೆರಳು, ತರ್ಜನೀ=ತೋರಬೆರಳು; ಮಧ್ಯಮ=ನಡುವಿನ ಬೆರಳು) ಗಳೆಂಬ ಆರೂ ಬೆರಳುಗಳಿಂದ ಶ್ರೋತ್ರ, ನೇತ್ರ, ನಾಸಾಪುಟಯುಗಳವನ್ನು ತಡೆದು ಈ ಷಣ್ಮುಖೀಕರಣ ಮಾರ್ಗದಿಂದ ನಿಶ್ಚಲ ತತ್ತ್ವಚಿತ್ತರಾದ ಯೋಗೀಶ್ವರರು ಪ್ರಣವದ ದಶವಿಧನಾದಲ್ಲಿ ಲೀನಚಿತ್ತರಾಗಿ ದಶವಿಧ ಬಿಂದು ಸಾಕ್ಷಾತ್ಕಾರರೂಪವಾದ ಪ್ರತ್ಯಯಗಳನ್ನು ಕಾಣುತ್ತಿಹರು” ಎಂದು ಬಸವಾರಾಧ್ಯರು ಟೀಕೆಯಲ್ಲಿ ವಿವರಿಸಿರುವರು.

 ಈ ಷಣ್ಮುಖೀ ಮುದ್ರೆಯಲ್ಲಿ ಸಾಧಕನು ತನ್ನ ಕಿವಿಯೆರಡು, ಕಣ್ಣೆರುಡು ಮತ್ತು ಮೂಗಿನ ರಂಧ್ರಗಳೆರಡು ಸೇರಿ ಆ ಆರನ್ನು ತನ್ನ ಕೈಗಳ ಹೆಬ್ಬೆರಳು, ತೋರಬೆರಳು, ನಡುವಿನ ಬೆರಳುಗಳಿಂದ ಮುಚ್ಚುವನು. ಮುಖದ ಷಣ್ಮುಖಗಳನ್ನು (ಆರು ರಂಧ್ರಗಳ ಬಾಯಿಯನ್ನು) ಬಂದು ಮಾಡಿ ಬಾಯಿಯಿಂದ ಗಾಳಿಯನ್ನು ಒಳಗೆಳೆದು ತುಂಬಿ ಹೃದಯದಲ್ಲಿ ನಿಲ್ಲಿಸಿ ಅಗ್ನಿಸ್ಥಾನವಾದ ನಾಭಿಮಂಡಲದ ಅಧಃ ಕುಂಡಲಿನಿಯಲ್ಲಿ ಸಂಬಂಧವುಳ್ಳ ಮೂಲಾಧಾರದ ಅಪಾನವಾಯುವನ್ನು ಮೇಲೇರಿಸಿ ಹೃದಯಗತ ತುರ್ಯಾವಸ್ಥೆಯನ್ನು ಹೊಂದಿದ ಪ್ರಾಣವಾಯುವಿನೊಡನೆ ಸುಷುಮ್ಮಾನಾಡಿಯ ದ್ವಾರಾ ಮೇಲಕ್ಕೇರಿಸಿ ಸಹಸ್ರಾರದಲ್ಲಿ ಧೀರರಾದ ಯೋಗಿಗೆ ಅನಾಹತನಾದವು ಉತ್ಪನ್ನವಾಗಿ ದಶವಿಧನಾದಗಳು ಗೋಚರಿಸುವವು. ಮತ್ತು ದೃಷ್ಟಿಯಲ್ಲಿ ದಶವಿಧ ಬಿಂದುಗಳನ್ನು ಕಾಣುವರು. ಇದುವೆ ಷಣ್ಮುಖೀ ಮುದ್ರೆಯ ಮಹಾ ಸಾಧನವೆಂದು ಅನುಭವಿಗಳು ವಿವರಿಸಿದ್ದಾರೆ.

ಶಿವಯೋಗ ಪ್ರದೀಪಿಕೆಯಲ್ಲಿ ಟೀಕಾಕಾರರು ಷಣ್ಮುಖೀ ಮುದ್ರೆಯಿಂದ ಗೋಚರಿಸುವ ಬಿಂದು ಪ್ರಕಾರವನ್ನು ಈ ರೀತಿ ತಿಳಿಸಿದ್ದಾರೆ- “ಭ್ರೂಮಧ್ಯದಲ್ಲಿ ಬೆಳಗುವ ನಯನ ದೀಪ್ತಿಯೇ ಬಿಂದು ದೇವನ ಮಹಾಸ್ಥಾನವಪ್ಪುದರಿಂದೆ ೧) ಧೂಮ್ರ ವರ್ಣದಂತೆ, ೨) ಮೇಘಪಟಲದಂತೆ ಕಾಣ್ಬುದು ಶುದ್ಧತಮೋಗುಣಾತ್ಮಕವಾದ ಸ್ಥೂಲಬಿಂದುವೆನಿಸುವದು. ೩) ಕುಂಕುಮ ವರ್ಣದಂತೆ, ೪) ಖದ್ಯೋತಗಳಂತೆ ಕಾಣ್ಬುದು ಶುದ್ಧರಜೋಗುಣಾತ್ಮಕವಾದ ಮಧ್ಯಬಿಂದುವೆನಿಸುವುದು. ೫) ಶುದ್ಧಸ್ಪಟಿಕ ದಂತೆ. ೬) ನಿರ್ಮಲಾಕಾರದಿಂದ ಕಾಣ್ಬುದು ಶುದ್ಧಸಾತ್ವಿಕವಾದ ಪರಮಬಿಂದು ವೆನಿಸುವದು”.

 ಷಣ್ಮುಖೀಮುದ್ರೆಯಲ್ಲಿ ಶ್ರವಣೇಂದ್ರಿಯ, ನೇತ್ರಂದ್ರಿಯ ಮತ್ತು ಘ್ರಾಣೇಂದ್ರಿಯಗಳ ವಿಷಯಗಳಾದ ಶಬ್ದ, ರೂಪ, ಗಂಧಗಳ ವಿಕಾರವು ದೂರವಾಗುವದು ಮತ್ತು ೧) ಚಿಣ್‌ನಾದ, ೨) ಚಿಣ್ ಚಿಣ್‌ನಾದ, ೩) ಘಂಟಾನಾದ, ೪) ಶಂಖನಾದ, ೫) ತಂತಿಯನಾದ, ೬) ತಾಳಗಳನಾದ, ೭) ಕೊಳಲಿನನಾದ, ೮) ಭೇರಿಯನಾದ ೯) ಮೃದಂಗನಾದ, ೧೦) ಮೇಘನಾದಗಳೆಂಬ

ದಶವಿಧನಾದವಾಗಿ ಪರಿವರ್ತನೆ ಹೊಂದಿ ತನ್ಮಯನನ್ನಾಗಿಸುವದು. ಮತ್ತು ಆತ್ಮದ ಅರಿವೂ ಆಗಬೇಕಾದರೆ ಕಷ್ಟಸಾಧ್ಯವಾಗುವದು.

 ಇಂಥ ಷಣ್ಮುಖೀ ಮುದ್ರೆಯು ಕಣ್ಮಗು ಕಿವಿಗಳನ್ನು ಬಂಧಿಸಿ ಆಯಾಸಪಡಿಸುವದು. ಮತ್ತು ಅದು ಸುಸಾಧ್ಯವೂ ಅಲ್ಲ.  ಅದಕ್ಕಿಂತ ಷಣ್ಮಂತ್ರ ಲಿಂಗಾರಾಧನೆಯು ಸುಲಭವೆಂದು ಶಿವಕವಿಯು ಒತ್ತಿ ಹೇಳುತ್ತಾನೆ. ಸದ್ಗುರುವು ಎನ್ನೊಡೆಯನಾದುದ ರಿಂದ ನನ್ನ ಚಿಂತೆ ಅವನಿಗಿದೆ. ಆತನು ಈ ಷಣ್ಮುಖೀ ಮುದ್ರೆಯು ಶಿಷ್ಯನಿಗೆ ಬಹುತಿಣ್ಣೆಂದು ತಿಳಿದು ಅದರ ಗೋಜನ್ನು ಬಿಡಿಸುತ್ತಾನೆ. ಅಂದರೆ ಈ ಮುದ್ರೆಯು ಬಾಹುಭಾರವೂ ಆಯಾಸಕರವೂ ಎಂದು ತಿಳಿದು ಅದನ್ನು ಪರಿಹರಿಸಿ   ಷಣ್ಮಂತ್ರವೆನಿಸಿದ ಷಡಕ್ಷರ ಮಹಾಮಂತ್ರ ಭರಿತವಾದ ಇಷ್ಟಲಿಂಗವನ್ನು ಕರುಣಿಸಿದ್ದಾನೆ. ಲಿಂಗದಲ್ಲಿ ಷಣ್ಮುಂತ್ರದ ಕಲೆಯು ಪಸರಿಸಿರುವಂತೆ ಅಂಗದಲ್ಲಿಯೂ ತುಂಬುತ್ತಾನೆ. ಮೂಗಿನಲ್ಲಿ ನಕಾರ ಪ್ರಣವವನ್ನು, ಬಾಯಿಯಲ್ಲಿ ಮಕಾರ ಮಂತ್ರವನ್ನು, ಕಣ್ಣಿನಲ್ಲಿ ಶಿಕಾರವನ್ನು, ತ್ವಕ್ಕಾದ ಗಲ್ಲಗಳಲ್ಲಿ ವಾಕಾರ ಬೀಜಾಕ್ಷರವನ್ನು, ಕಿವಿಯಲ್ಲಿ ಯಕಾರವನ್ನು, ಹೃದಯದಲ್ಲಿ ಹಾಗೂ ಭ್ರೂಮಧ್ಯದಲ್ಲಿ ಓಂಕಾರ ಪ್ರಣವನ್ನು ಸಂಬಂಧಗೊಳಿಸಿ ಮಾಂಸಮಯ ಕಾಯವನ್ನು ಮಂತ್ರಮಯ ವನ್ನಾಗಿಸಿದ್ದಾನೆ.

ಜ್ಞಾನೇಂದ್ರಿಯಗಳಲ್ಲಿ ಆಯಾ ಮಂತ್ರಗಳನ್ನು ನೆಲೆಗೊಳಿಸಿ ಲಿಂಗವನ್ನು ಸಂಬಂಧ ಮಾಡಿದ್ದರಿಂದ ನನ್ನ ಸರ್ವಾಂಗವೆಲ್ಲ ಲಿಂಗಮಯವಾಗಿದೆ. ಶಿವಲಿಂಗವನ್ನು ನಿರೀಕ್ಷಣ ಮಾಡುವ ನೇತ್ರಗಳು ಶಿವಲಿಂಗವೇ ತಾವಾಗಿ ಮಹಾಮಂತ್ರದ ಜಪಾನುಷ್ಠಾನದಿಂದ ಪ್ರಣವನಾದವು ಶ್ರವಣೇಂದ್ರಿಯದಲ್ಲಿ ನಿಜಲಿಂಗಾನಂದದಲ್ಲಿ ತನ್ಮಯನಾಗುವ ಅವಕಾಶ ಈ ಷಣ್ಮಂತ್ರ ಲಿಂಗಮುದ್ರೆಯಲ್ಲಿ ಓತಪ್ರೋತವಾಗಿದೆ.

ಓ ಗುರುವೆ ! ಬಹುಭಾರವಾದ ಇಂಥ ಷಣ್ಮುಖೀ ಮುದ್ರೆಯ ಜಡತ್ವವನ್ನು ಪರಿಹರಿಸಿ ಸುಲಭ ಸಾಧ್ಯವಾದ ಷಣ್ಮಂತ್ರ ಲಿಂಗಮುದ್ರೆಯನ್ನು ಸಾಧಿಸುವ ಶಕ್ತಿಯನ್ನು ಕರುಣಿಸಿ ಕಾಪಾಡು.

ಖೇಚರಿಯ ಮುದ್ರೆ ನೀ | ನಾಚರೀಸಲೇನುಂಟು

ಗೋಚರಿಪ ಲಿಂಗ-ದಾಚರಣೆ ಘನವೆಂದು

ಸೂಚಿಸಿದ ಗುರುವೆ ಕೃಪೆಯಾಗು   ||೧೦೪||

ಯೋಗಿಗಳು ಖೇಚರೀ ಮುದ್ರೆಯನ್ನು ಉತ್ತಮ ಅಧಿಕಾರಿಗೆ, ಶಾಂಭವೀ ಮುದ್ರೆಯನ್ನು ಮಧ್ಯಮಾಧಿಕಾರಿಗೆ, ಷಣ್ಮುಖೀ ಮುದ್ರೆಯನ್ನು ಮಂದಾಧಿಕಾರಿಗೆಂದು ಹೇಳುತ್ತಾರೆ. ರಾಜಯೋಗದಲ್ಲಿ ಖೇಚರೀ ಮುದ್ರೆಯು ರಾಜಮುದ್ರೆಯೆನಿಸಿದೆ. ಇದರ ಮಹತ್ವವು ಉಪನಿಷತ್ತಿನಲ್ಲಿ ಧಾರಾಳವಾಗಿ ಬಂದಿದೆ. ಯೋಗ ಚೂಡಾಮಣ್ಯು-ಪನಿಷತ್ತಿನಲ್ಲಿ ಖೇಚರೀ ಮುದ್ರೆಯ ಮಹತ್ವವನ್ನು ಬಹುವಾಗಿ ಬಣ್ಣಿಸಿದ್ದಾರೆ. ಆಕಾಶದಲ್ಲಿ ಸಂಚರಿಸುವ ಶಕ್ತಿಯನ್ನು ಈ ಖೇಚರೀ ಮುದ್ರೆಯಿಂದ ಸಾಧ್ಯವೆಂದು ಕೆಲವರು ಪ್ರತಿಪಾದಿಸಿದ್ದಾರೆ. ಈ ಮುದ್ರೆಯನ್ನು ಭ್ರೂಮಧ್ಯದಲ್ಲಿ ಊರ್ಧ್ವ ದೃಷ್ಟಿಯಿಂದ ಸಾಧಿಸುವ ಕಾರಣ ಇದಕ್ಕೆ ಖೇಚರೀ ಎಂಬ ಸಾರ್ಥಕ ನಾಮ ಬಂದಿದೆ.

 ಯೋಗ ಚೂಡಾಮಣ್ಯುಪನಿಷತ್ಕಾರರು ಖೇಚರೀ ಮುದ್ರೆಯ ಲಕ್ಷಣವನ್ನು

ಕಪಾಲಕುಹರೇ ಜಿಹ್ವಾ ಪ್ರವಿಷ್ಟಾ ವಿಪರೀತಗಾ |

ಭ್ರುವೋರಂತರ್ಗತಾ ದೃಷ್ಟಿರ್ಮುದ್ರಾ ಭವತಿ ಖೇಚರೀ || ೫೨ ||

ನಾಲಗೆಯನ್ನು ಕೆನ್ನೆಗಳ ನಡುವಿರುವ ಸಂಧಿಯಲ್ಲಿ ವಿಪರೀತವಾಗಿ (ನಾಲಿಗೆಯಲ್ಲಿ ಎರಡು ಹೋಳು ಮಾಡಿ ಒಳಹೊರಗೆ ಹೊರಳಿಸಿ) ಸೇರಿಸಬೇಕು. ದೃಷ್ಟಿಯನ್ನು ಹುಬ್ಬುಗಳ ಮಧ್ಯದಲ್ಲಿರಿಸಬೇಕು. ಆಗ ಖೇಚರೀ ಮುದ್ರೆಯೆನಿಸುವದು. ಫೇರಂಡ ಸಂಹಿತೆಯೂ ಇದೇ ತೆರನಾಗಿ ಖೇಚರಿಯ ಚರಿತ್ರೆಯನ್ನು ಬಿತ್ತರಿಸಿದೆ. ಶಿವಯೋಗ ಪ್ರದೀಪಿಕೆಯಲ್ಲಿ ಖೇಚರೀ ಮುದ್ರೆಯನ್ನು ಎರಡು ಪ್ರಕಾರವಾಗಿ ವಿಂಗಡಿಸಿದ್ದಾರೆ. ಒಂದು ಬಾಹ್ಯದಲ್ಲಿ ಖೇಚರೀ ಇನ್ನೊಂದು ಅಂತಃ ಖೇಚರೀ ಎಂದು ಇಬ್ಬಗೆಯಾಗಿದೆ.

ಮೇಲೆ ವಿವರಿಸಿದ ಲಕ್ಷಣವು ಬಾಹ್ಯಖೇಚರಿಯಾಗಿದೆ. ಅಂತಃಖೇಚರಿಯ ಲಕ್ಷಣವು ಕೆಳಗಿನಂತಿದೆ

ಲಕ್ಷ್ಯಲೀನ ಮನಸಾನಿಲೇನ ಯೋ ವರ್ತತೇ ಅಚಲಿತತಾರಯಾ ಭವೇತ್ |

ಖೇಚರೀ ಯಾಥ ಸೈವ ಶಾಂಭವೀಮುದ್ರಯಾ ಸ ತು ತಯಾ ಜಗದ್ಗುರುಃ    II ಶಿ.ಪ್ರ. ೫-೩||

ಯಾವ ಯೋಗಿಯು ಹೃತ್ಕಮಲದ ದಿವ್ಯಲಿಂಗವೆಂಬ ಅಂತರ್ಲಕ್ಷ್ಯದಲ್ಲಿ ಮನಸ್ಸು, ಮನಸ್ಸಿನೊಡನೆ ಬೆರೆತ ವಾಯುವಿನಿಂದ ನಿಶ್ಚಲವಾದ ತಾರಕಮಂಡಲ (ಕಣ್ಣಿನಲ್ಲಿಯ ಗುಡ್ಡೆಗಳು) ವುಳ್ಳವನಾಗುವನೋ ಈ ಸ್ಥಿತಿಯು ಅಂತಃ ಖೇಚರೀಯೆನಿ ಸುವದು. ಈ ಖೇಚರೀಮುದ್ರೆಯೇ ನಾಸಿಕಾಗ್ರದೃಷ್ಟಿಯಿಂದ ಶಾಂಭವೀ ಮುದ್ರೆಯೆನಿಸುವದು. ಈ ಹಿಂದೆ ಇದರ ವ್ಯಾಖ್ಯಾನವನ್ನು ಅವಲೋಕಿಸಲಾಗಿದೆ.

 ಖೇಚರೀ ಮುದ್ರೆಗಳನ್ನು ಸಾಧಿಸಿದ ಯೋಗೀಶ್ವರನು ಜಾಗ್ರ-ಸ್ವಪ್ನ-ಸುಷುಪ್ತಿ ಗಳ ಜಯಗಳಿಸಿ ಜಗದ್ಗುರುವೆನಿಸುವನು. ಅಂದರೆ ಲೋಕ ಪೂಜ್ಯವೆನಿಸುವನು. ಇವನಿಗಿಂತಲೂ ಪೂಜ್ಯನು ಬೇರೊಬ್ಬನೆನಿಸನು. ಇದೇ ಮಾತನ್ನು ನಿಜಗುಣರೂ ಸಹ ಪಾರಮಾರ್ಥ ಪ್ರಕಾಶಿಕೆಯಲ್ಲಿ ಸ್ಪಷ್ಟವಾಗಿ ಕನ್ನಡದಲ್ಲಿ ಪ್ರತಿಪಾದಿಸಿದ್ದಾರೆ.

ಖೇಚರೀಮುದ್ರೆಯ ದೃಷ್ಟಿ ಮನೋಮಾರುತಂಗಳ

ನಿಶ್ಚಲತ್ವದಿಂ ಕ್ರಮದಿಂ ಜಾಗ್ರ-ಸ್ವಪ್ನ-ಸುಷುಪ್ತಿಗಳೆಂಬ-

 ವಸ್ಥಾತ್ರಯಂಗಳಂ ಗೆಲಿದಾತನೇ ಜಗದ್ಗುರುವಪ್ಪಂ

 ಜಗದ್ಗುರುತ್ವದ ಲಕ್ಷಣ ಇಷ್ಟು ಗಹನವಾಗಿದೆ. ಶಿವಯೋಗಸಾಧನೆಯಲ್ಲಿಯೂ ಪರಜಂಗಮನೆನಿಸಿ ಶಿವಸಾಮ್ರಾಜ್ಯವನ್ನೇ ಕವಡಿಗೆ ಸಮಮಾಡಿ ಅವಸ್ಥಾತ್ರಯಗಳನ್ನು ಮೀರಿ ಮಹಾಮಹಿಮನೆನಿಸಿದಲ್ಲಿ ಜಗದ್ಗುರುತ್ವವು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೇವಲ ವೃತ್ತಿ ಗುರುತ್ವವಾದೀತು, ಯೋಗಿಗಳು ಖೇಚರೀ ಮುದ್ರೆಯ ಮಹಾ ಸಾಧನೆಯಿಂದ ಅವರ್ಣನೀಯವಾದ ಯೋಗ್ಯತೆಯನ್ನು ಪಡೆದಿದ್ದಾರೆ. ಈ ಮುದ್ರೆಯ ಅಗಣಿತವಾದ ಮಹತ್ವಕ್ಕೆ ಯೋಗ ಚೂಡಾಮಣ್ಯುಪನಿಷತ್ತಿನ ಕೆಲವು ಪ್ರಮಾಣಗಳನ್ನು  ಅವಲೋಕಿಸಿ-

ನ ರೋಗೋ ಮರಣಂ ನಾಸ್ತಿ ನ ನಿದ್ರಾ ನ ಕ್ಷುಧಾ ತೃಷಾ |

ನ ಚ ಮೂರ್ಛಾ ಭವೇತ್ತ ಸ್ಯ ಯೋ ಮುದ್ರಾಂ ವೇತ್ತಿ ಖೇಚರೀಮ್ ||

ಪೀಡ್ಯತೇ ನ ಚ ರೋಗೇ  ಲಿಪ್ಯತೇ ನ ಸ ಕರ್ಮಭಿಃ |

ಬಾಧ್ಯತೇ ನ ಚ ಕೇನಾಪಿ ಯೋ ಮುದ್ರಾಂ ವೇತ್ತಿ ಖೇಚರೀಮ್ ||

ಖೇಚರ್ಯಾ ಮುದ್ರಿತಂ ಯೇನ ವಿವರಂ ಲಂಬಿಕೋರ್ಧ್ವತಃ |

ನ ತಸ್ಯ ಕ್ಷೀಯತೇ ಬಿಂದುಃ ಕಾಮಿನ್ಯಾಲಿಂಗಿತಸ್ಯ ಚ ||

ಯಾವದ್ಬಿಂದುಃ ಸ್ಥಿತೋ ದೇಹೇ ತಾವನ್ಮೃತ್ಯುಭಯಂ ಕುತಃ ||

ಯಾವದ್ಬದಾ ನಭೋಮುದ್ರಾ ತಾವಂದ್ಬಿಂದುರ್ನ ಗಚ್ಛತಿ ॥

ಕಥಿತೇಯಂ ಮಹಾಮುದ್ರಾ ಮಹಾ ಸಿದ್ಧಿಕರೀ ನೃಣಾಮ್ |

ಗೋಪನೀಯಾ ಪ್ರಯತ್ನೇನ ನ ದೇಯಾ ಯಸ್ಯ ಕಸ್ಯಚಿತ್ |

“ಈ ಖೇಚರೀ ಮುದ್ರೆಯನ್ನು ಸಾಧಿಸಿದ ಸಾಧಕನಿಗೆ ರೋಗ, ನಿದ್ರೆ, ಹಸಿವು ನೀರಡಿಕೆ, ಮೂರ್ಛಗಳು ಹೋಗುವವಲ್ಲದೆ ಮರಣವೂ ಇಲ್ಲದಾಗುವದು. ಅವನನ್ನು ರೋಗಗಳು, ಕರ್ಮಗಳು ಪೀಡಿಸಲಾರವು. ಈ ಮುದ್ರಾಸಾಧನೆಯ ಪ್ರಭಾವದಿಂದ ವೀರ್ಯವನ್ನು ಊರ್ಧ್ವಮುಖಗೊಳಿಸಿದವನು ಸ್ತ್ರೀಯಳನ್ನು ಅಲಂಗಿಸಿದರೂ ಅವನಿಗೆ ವೀರ್ಯಪಾತವಾಗುವದಿಲ್ಲ.  ನಭೋಮುದ್ರೆ (ಖೇಚರೀ) ಯನ್ನು ಸಾಧಿಸುತ್ತಿರುವವನಿಗೆ ವೀರ್ಯಪಾತ ನಿಂತು ಹೋಗುವದು. ದೇಹದಲ್ಲಿ ವೀರ್ಯವು ಘಟ್ಟಿಗೊಂಡರೆ ಅವನಿಗೆ ಮರಣವೆಂಬುದೇ ಇಲ್ಲ. ಇಂಥ ಸರ್ವಸಿದ್ದಿ ದಾಯಕವಾದ ಈ ಮಹಾಮುದ್ರೆಯನ್ನು ಸಿಕ್ಕ ಸಿಕ್ಕ ಮನುಷ್ಯನಿಗೆ ಹೇಳಬಾರದು. ರಹಸ್ಯವಾಗಿರಬೇಕು’, ಎಂದಿದ್ದಾರೆ ಉಪನಿಷತ್ಕಾರರು. ಕೆಲವು ಸಾಧಕ ಯೋಗಿಗಳು ಅಂತಃಖೇಚರಿಯನ್ನು ಅರಿಯದೆ ಬಹುಪ್ರಯಾಸವುಳ್ಳ ಲಂಬಿಕಾ ಯೋಗವೆನಿಸುವ ಬಾಹ್ಯ ಖೇಚರಿಯನ್ನು ಆಶ್ರಯಿಸಿ ನಾಲಿಗೆಯನ್ನು ಸೀಳುವ ವಿಷಯದಲ್ಲಿ ಆತುರ ಪಡುತ್ತಾರೆಂದು ಚನ್ನ ಸದಾಶಿವಯೋಗಿಗಳು ಹೇಳಿದ್ದಾರೆ.

ಅಂತೂ ಖೇಚರೀ ಮುದ್ರೆಯ ಬಾಹ್ಯ ಸ್ವರೂಪವು ಅತ್ಯಂತ ಆಯಾಸಕರವಾಗಿದೆ. ಅಂತಃಖೇಚರೀಯ ಅಲ್ಪವಾದ ಅನುಸಂಧಾನವು ಶಿವಯೋಗದಲ್ಲಿಯೂ ಸುಲಭವಾಗಿ ಸಮಾವೇಶವಾಗುವದು. ಅದನ್ನರಿತ ಸದ್ಗುರುವು ಖೇಚರೀ ಮುದ್ರೆ ಯನ್ನು ಆಚರಿಸುವದಕ್ಕಿಂತ ಘನವಾದ ಮತ್ತು ಪ್ರತ್ಯಕ್ಷ ಕಾಣುವ ಲಿಂಗದಾಚರಣೆಯನ್ನು ಸೂಚಿಸಿರುವನು. ಇದು ಸುಲಭ ಸಾಧ್ಯವಾದುದು. ಆದರೆ ನಾಲಗೆಯನ್ನು (ಸೀಳಿ ಒಂದು ಭಾಗವನ್ನು ಗಂಟಲೊಳಗೆ ಇನ್ನೊಂದನ್ನು) ಮುಂದಕ್ಕೆಳೆದು ಭ್ರೂ ಮಧ್ಯಭಾಗಕ್ಕೆ ಮುಟ್ಟಿಸಿ ದೃಷ್ಟಿ ನಿಲ್ಲಿಸುವ ಈ ಕಡು ಕಷ್ಟಕರವಾದ ಖೇಚರೀ  ಮುದ್ರೆಯನ್ನು ಬದಿಗಿರಿಸಿ ಅಂಗೈಯಲ್ಲಿ ಗೋಚರಿಸುವ ಮಂಗಲಮಯ ಶಿವಲಿಂಗದಲ್ಲಿ ಕಂಗಳ ದೃಷ್ಟಿಯನ್ನಿಡಲು ಕಲಿಸಿ ನಾಲಿಗೆಯಿಂದ ಷಡಕ್ಷರ ಮಂತ್ರವನ್ನು ಜಪಿಸುತ್ತ ಮನ-ಭಾವಗಳನ್ನು ಆ ಲಿಂಗದಲ್ಲಿ ಬೆರೆಯಿಸುವ ಲಿಂಗಧಾರಣೆ ಶ್ರೇಷ್ಠ ತರವಾದುದು.  ಲಿಂಗಪೂಜೆಯೆಂಬ ಘನವಾದ ಸತ್ಕ್ರಿಯೆಯಿಂದ ಕಾಮ-ಕಾಲ- ಮಾಯೆಯನ್ನು ಗೆಲ್ಲಲು ಬರುವದು. ಐಕ್ಯನೆನಿಸಿ ಬಯಲಾತ್ಮನಾಗುವ ಸಾಧನೆಗೆ ಖೇಚರಿಯ ನಿಲವು ನಿಲ್ಲಲಾರದು.

 ಶೂನ್ಯವನ್ನು ಸಂಪಾದಿಸಿ ನಿರಂಜನನಾದ ಅಲ್ಲಮನ ನಿಲುವಿಗೆ ಹಠಯೋಗವನ್ನು ಸಾಧಿಸಿ ವಜ್ರಕಾಯನಾದ ಗೋರಕ್ಷನ ವ್ಯಕ್ತಿತ್ವವು ಹಾರಿಹೋಯಿತೆಂಬುದನ್ನು ಹಿಂದೆಯೂ ತಿಳಿಸಿದೆ. ಬಯಲಾತ್ಮನಾದವನಿಗೆ ಯಾವ ಉಪಾಧಿ ತಾಗೀತು ! ಕಾರಣ ಗುರುಕುರಣೆಯಿಂದ ಕಾಣಬರುವ ಇಷ್ಟಲಿಂಗದಾಚರಣೆಗೆ ಯೋಗಮುದ್ರೆಗಳು ಸರಿಗಾಣವು, ಓ ಗುರುವೆ, ಅಂಥ ನಿಜಲಿಂಗೈಕ್ಯನನ್ನು ಮಾಡುವ ಘನವಾದ ಲಿಂಗದನಿಲವನ್ನು ಎನ್ನಲ್ಲಿ ನೆಲೆಗೊಳಿಸು. ಕೃಪೆಮಾಡಿ ಕಾಪಾಡು.

ಹಠಯೋಗಮಾರ್ಗ ಸಂ | ಕಟದಿನಾಗುವ ಮೋಕ್ಷ

ಸಟೆಯೆಂದು ಬಿಡಿಸಿ-ಘಟದ ಸಂಗದ ಲಿಂಗ

ದಿಟವೆಂದ ಗುರುವೆ ಕೃಪೆಯಾಗು    ||೧೦೫||

ಇಲ್ಲಿಯವರೆಗೆ ವಿಚಾರಿಸಿದಂತೆ ಯೋಗಮಾರ್ಗವಾಗಲಿ ತಾಂತ್ರಿಕಮಾರ್ಗವಾಗಲಿ  ಸುಲಭಸಾಧ್ಯವಲ್ಲವೆಂಬುದು ವೇದ್ಯವಾಗಿದೆ. ಯೋಗದಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳು-ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ ವೆಂದು. ಇಷ್ಟದೇವತಾರೂಪ ಮಂತ್ರ ಜಪವೇ ಮಂತ್ರಯೋಗವಾದರೆ ಇಷ್ಟದೇವತಾ ಮೂರ್ತಿಯಲ್ಲಿ ಪ್ರಣವಾತ್ಮಕನಾದದಲ್ಲಿ ಮನೋಮಾರುತಂಗಗಳನ್ನು ಒಡಗೂಡಿಸಿ ಬೆರೆಯುವದೇ ಲಯಯೋಗವೆನಿಸುವದು. ಯಮಾದ್ಯಷ್ಟಾಂಗಯೋಗವು, ಮಹಾ ಮುದ್ರೆಗಳು, ಬಂಧಗಳು, ಧೌತಿ, ಬಸ್ತಿ, ನೇತಿ, ತ್ರಾಟಕ, ನೌಲಿ, ಕಪಾಲಭಾತಿ ಗಳೆಂಬ ಷಟ್‌ಕರ್ಮಗಳು, ಮೊದಲಾದ ಕಷ್ಟತರ ಸಾಧನೆಗಳಿಂದ ದೇಹ-ಮನ ಜೀವವನ್ನು ಪರಿಶುದ್ಧಗೊಳಿಸುವ ಯೋಗವೇ ಹಠಯೋಗವೆನಿಸುವದು. ಈ ಹಠ ಯೋಗದ ಕೆಲವು ಅಂಗಗಳು ಮಂತ್ರಯೋಗ ಮತ್ತು ಲಯಯೋಗಕ್ಕಾದರೂ ಪೋಷಕವಾಗಿವೆ. ಹಠಯೋಗದಿಂದ ಶುದ್ಧನಾದ ಜೀವನು ಅಂತರ್ಲಕ್ಷ್ಯವುಳ್ಳವನಾಗಿ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವದು ರಾಜಯೋಗವೆನಿಸುವದು.

ʼʼ ಶಬ್ದಾತ್ಮಕ ಮಂತ್ರಯೋಗ ಸಾಧನೆಗಿಂತ ನಿಶ್ಯಬ್ದಾತ್ಮಕವಾದ ಮನೋಲಯ ವೆನಿಸುವ ಲಯಯೋಗವು ವಿಶೇಷವಾದುದು. ಪ್ರಾಣಾಯಾಮದ ಸಾಧನದಿಂದ ವಾಯುಜಯವನ್ನು ಪಡೆದು ಮನಸ್ಸಿನ ಸ್ಥಿರತೆ ಹೊಂದುವ ಹಠಯೋಗವು ಲಯಯೋಗಕ್ಕಿಂತ ಮಿಗಿಲಾಗಿದೆ. ಮನಸ್ಸು ಮತ್ತು ಅನಿಲಗಳನ್ನು ನಿರಾಯಾಸದಿಂದ ನಿಲಿಸಿ ನಿಜವಸ್ತು ಸಾಕ್ಷಾತ್ಕಾರವನ್ನು ಮಾಡಿಸುವ ರಾಜಯೋಗವು ಎಲ್ಲವುಗಳಿಗಿಂತ ಹೆಚ್ಚಿನದು ಎಂದು ನಿಜಗುಣ ಶಿವಯೋಗಿಗಳು ಯೋಗಮಾರ್ಗದ ಕ್ರಮಿಕತೆಯನ್ನು ಸಾರಿದ್ದಾರೆ. ಅಧಿಕ ಶ್ರಮ ಸಾಧ್ಯವಾದ ಯೋಗಫಲವನ್ನು ಶರಣರು ಒಪ್ಪಲಿಲ್ಲ. ಹಠಯೋಗವು ಹೆಸರಿಗೆ ತಕ್ಕಂತಿದೆ. ಅನ್ವರ್ಥಕತೆಯನ್ನು ಹೊಂದಿದೆ. ಹಟವೆಂದರೆ ಜೋರಾವರಿ ಅಥವಾ ಬಲಾತ್ಕಾರ. ಇಲ್ಲಿ ಸಹಜತೆಯಿರುವದಿಲ್ಲ.  ಬಲಾತ್ಕಾರದಿಂದ ಇಂದ್ರಿಯಗಳನ್ನು, ಮನಸ್ಸನ್ನು, ವಾಯುವನ್ನು, ಬುದ್ಧಿಯನ್ನು ನಿಗ್ರಹಿಸುವ, ನಿರೋಧಿಸುವ ಯೋಗದಿಂದ ಸಂಕಟವಾಗದೆ ಇರದು.

 ಇಂಥ ಸಂಕಷ್ಟದಿಂದಾಗುವ ಮೋಕ್ಷವೂ ದಿಟವಾದುದಲ್ಲ. ಅದು ಸಟೆಯಾದು ದೆಂದರೆ ಅನೇಕ ದುಃಖಗಳನ್ನು ಅನುಭವಿಸಿ ತನು-ಮನ-ಇಂದ್ರಿಯಗಳನ್ನು ಬಳಲಿಸಿ ಶಿವನ ಕೃಪಾಪ್ರಸಾದವನ್ನು ತ್ಯಜಿಸಿ ಯೋಗಿಯೆನಿಸಿ ಶರೀರ ನಾಶವಾದ ಮೇಲೆ ಮೋಕ್ಷವನ್ನು ಹೊಂದುವನು. ಅಣಿಮಾದಿ ಸಿದ್ಧಿಗಳನ್ನು ಪಡೆಯಬಹುದು. ಆದರೆ ಪುಣ್ಯಕ್ಷಯವಾದರೆ ಪುನಃ ಯೋಗಿಯು ಭವಕ್ಕೆ ಬರುವನು. ಅಲ್ಲದೆ ಯೋಗ ಭ್ರಷ್ಟರಾಗಿ ಜನ್ಮಾಂತರಗಳನ್ನು ಅನುಭವಿಸುವವರೇ ಹೆಚ್ಚು. ಇದು ಕಾರಣ ಸಂಕಷ್ಟ ದಿಂದ ಸಾಧ್ಯವೆನಿಸುವ ಹಠಯೋಗ ಮಾರ್ಗದಲ್ಲಿ ಲಭ್ಯವಾಗುವ ಮೋಕ್ಷವೂ ಸಟೆ ಯಾಗುವದು. ಅಂದರೆ ಸ್ಥಿರ (ಶಾಶ್ವತ) ಮೋಕ್ಷವಾಗುವುದಿಲ್ಲ.

ಇದನ್ನರಿತು ಸದ್ಗುರುವು ಕಾಯಘಟವನ್ನು ಸಂಸ್ಕರಿಸಿ ಶುದ್ಧಗೊಳಿಸಿ ಮಂತ್ರ ಮಯವಾಗಿಸಿ ಇಷ್ಟಲಿಂಗವನ್ನು ಸಂಗತ ಮಾಡುವನು. ಗುರೂಪದೇಶದಂತೆ ಸಾರ್ಥಕತೆಯನ್ನು ಪಡೆದ ಭಕ್ತನ ಕಾಯವು ಪಂಚಭೂತಗಳಲ್ಲಿ ಅಡಗುವಾಗ (ದೇಹಾವಸಾನದಲ್ಲಿ) ಲೂ ಶಿಷ್ಯನ ಸಂಗ ಬಿಡದ ಲಿಂಗವೇ ದಿಟವಾದುದು. ಈ  ಲಿಂಗೈಕ್ಯನಾಗುವ ಮೋಕ್ಷವೇ ಸತ್ಯವಾದುದು. ಲಿಂಗ ಕಳೆಯಲ್ಲಿ ಅಂಗಕಳೆಯು ಬೆರೆತು ಮಹಾಕಳೆಯಾದ ಮೇಲೆ ಸ್ಥೂಲ ಕಾಯದೊಂದಿಗೆ ಹೋಗುವ ಇಷ್ಟಲಿಂಗವು ಸತ್ಯವಾಗಿಯೂ ಸಮರಸದ ಲಿಂಗವಾಗಿದೆ.  ಕಾಯವಿಡಿದು ಕೈವಲ್ಯಕ್ಕೇರುವ ಕಷ್ಟವಿಲ್ಲದ ಯೋಗ ಲಿಂಗಾಂಗಯೋಗ. ಇದು ಕ್ರಿಯಾ-ಜ್ಞಾನಗಳ ಸಮನ್ವಯಯೋಗ, ಯೋಗಿಗಳ ಯೋಗದಲ್ಲಿ ಕ್ರಿಯೆ ಯಳಿದು ಕೇವಲ ಜ್ಞಾನ ಮಾರ್ಗದಿಂದ ಸಂತೃಪ್ತಿ ಸಮನಿಸಲಾರದು. ಸಕ್ಕರೆಯು ಸಿಹಿಯೆಂಬುವದು ಕೇವಲ ಜ್ಞಾನದಿಂದ ತಿಳಿಯದು. ಅದು ಕಾರಣ ಗುರುವು ಕರಣೇಂದ್ರಿಯಗಳನ್ನು ಸಂತೃಪ್ತಿಯಿದೆ. ನಿತ್ಯತೃಪ್ತತೆಯಿಂದ ಸತ್ಯಮುಕ್ತಿಯನ್ನು ಪಡೆಯಲು ಸಾಧ್ಯವಿದೆ. ಶಿವಯೋಗಸಾಧಕನಿಗೆ. ಆದ್ದರಿಂದ ಲಿಂಗಾಂಗಯೋಗವು ದಿಟವಾದುದು. ಅಂಥ ದಿಟಯೋಗದಲ್ಲಿ ಧೀರನಾಗುವ ಧೈರ್ಯವನ್ನು ದಯಪಾಲಿಸು ಗುರುತಂದೆಯೆ

ಜ.ಚ.ನಿ

೧೯೨೪ ಇದ್ದಿರಬೇಕು. ನವಿಲುಗುಂದ ತಾಲೂಕು ಅಣ್ಣಿಗೆರೆಯ  ತೋಂಟದಾರ್ಯರ ಶಾಖಾಮಠ. ಒಂದು ದಿನ ಮುಂಜಾವು. ಷಟ್‌ಸ್ಥಲಮೂರ್ತಿ ಸುಖಾಸನದಲ್ಲಿ ಕುಳಿತಿತ್ತು. ನಿರಂಜನ ಮೂರ್ತಿ ನಿರಾಡಂಬರ ವೇಷದಲ್ಲಿ ಮೂರ್ತಮಾಡಿತ್ತು. ನಿರಾಭಾರಿ ಸ್ವಾಮಿ ನಿರ್ಮಲ ಮನಸ್ಸಿನಿಂದ ಮಂಡಿಸಿತ್ತು. ಪ್ರಣವ ಸ್ವರೂಪಿ ಪ್ರಶಾಂತ ಕಲೆಯಿಂದ ಆಸೀನವಾಗಿತ್ತು. ಷಟ್‌ಶಾಸ್ತ್ರ ಶಿವಾನುಭಾವಿ ಉಜ್ವಲ ಓಜದಿಂದ ಒಡರಿತ್ತು. ಕೂತುಕೊಳ್ಳುವುದರಲ್ಲಿ ಅವರದೇ ಒಂದು ಠೀವಿ. ಅದು ಯೋಗ ಠೀವಿ, ಆರ್ಜವ ದೇಹ ಅಜಾನುಬಾಹು, ವಿಶಾಲವಾದ ಹಣೆ, ಎವೆಯಿಕ್ಕದ ಕಣ್ಣು, ಜಗತ್ತನ್ನೇ ಜರಿದಿದ್ದರು. ಸಮಾಜದ ಪ್ರಗತಿ ವಿಚಾರ ಭಾವರೇಖೆ ನೀಳವಾದ ಮೊಗದಲ್ಲಿ ಆಳವಾಗಿ ಮೂಡಿ ತೋರುತ್ತಿತ್ತು. ಅನುಭವದ ಆಗರವಾಗಿದ್ದರೂ ಅದರ ಕ್ಷೀಣತೆಯ ನೆನೆದು ಅಭಿವೃದ್ಧಿಯ ಹಂಬಲ ಹೆಚ್ಚಿ ಹೊಮ್ಮುತ್ತಿತ್ತು. ಯೋಗ ಬಲ್ಲಿದರಾಗಿದ್ದರೂ ಯೋಗದ ಏಳ್ಗೆಗಾಗಿ ಪಡುತ್ತಿದ್ದ ಚಾಕಚಕ್ಯತೆ ಚಿಮ್ಮುತ್ತಿತ್ತು. ಸ್ವತಃ ಸಾಹಿತಿಗಳಾಗದಿದ್ದರೂ ಪ್ರಾಚೀನ ಸಾಹಿತ್ಯ ಸಂಗ್ರಹದ ಆಸಕ್ತಿ ಆಸೇಚನವಾಗಿತ್ತು. ವಿದ್ಯೆಯನ್ನು ವಿಶೇಷ ಕಲಿಯದಿದ್ದರೂ ವಿಚಾರ ಪ್ರೌಢಿಮೆಯಿಂದ ವಿದ್ವಾಂಸರನ್ನು ನಿಬ್ಬೆರಗುಗೊಳಿಸುತ್ತಿದ್ದ ಪ್ರಕಾಂಡ ಪ್ರಭಾವವಿತ್ತು. ಸಂನ್ಯಾಸಿಗಳಾಗಿದ್ದರೂ ಸ್ತ್ರೀಯರ

ಸತ್ಕರ್ಮ-ಸದ್ಧರ್ಮಗಳ ಉಳಿಮೆಗೆ ಹೆಣಗುತ್ತಿದ್ದ ಹೆಚ್ಚಳದ ಪೆಂಪಿತ್ತು. ನಿಷ್ಕಾಮಿಗಳಾಗಿದ್ದರೂ ಲೋಕಕಲ್ಯಾಣ ಕ್ರಿಯಾಪ್ರೇಮ

ಕೌಶಲ್ಯವಿತ್ತು. ವಿರಕ್ತಶಿಖಾಮಣಿಯಾಗಿದ್ದರೂ ವಿನಯಶೀಲಶ್ರೀ ವಿರಾಜಿಸುತ್ತಿತ್ತು. ಜೀವನ ನಿರ್ವಹಣದ ಯಾವ ಯೋಚನೆಯಿಲ್ಲದಿದ್ದರೂ ವೈದ್ಯದ ಶೋಧ-ಪ್ರಯೋಗಗಳ ಸಂಭ್ರಮ ಸೂರೆಗೊಂಡಿತ್ತು. ದೀನ ದರಿದ್ರರಲ್ಲಿದ್ದ ದಯಾಂತಃಕರಣ ದಿವ್ಯವಾಗಿತ್ತು. ಪ್ರಗತಿಶೀಲರಿಗೆ ಪ್ರೋತ್ಸಾಹದಾಯಕ ಗುಣ ಪ್ರಭೂತವಾಗಿತ್ತು. ಬರಿ ದಯೆ-ಪ್ರೋತ್ಸಾಹ ಮಾತ್ರವಲ್ಲ ಆಶ್ರಯ- ಪೋಷಣಗಳನ್ನು ಕೊಡುತ್ತಿದ್ದ ಒಮ್ಮನದ ಔದಾರ್ಯವಿತ್ತು. ಮಂದಮತಿ ಶಿಷ್ಯರಿಗೆ ಸ್ವಂತ ಪಾಠ ಪ್ರವಚನ ಹೇಳಿ ಕೇಳಿ ಪಳಗಿಸುತ್ತಿದ್ದ ಪ್ರತಿಭೆಯಿತ್ತು.  ಅಂತಹ ಅನುಪಮ ಜಗಜ್ಯೋತಿಯೊಂದನ್ನು ಕಂಡೆ. ಅವರೆ ನಾ ಕಂಡ ಕಾರಣಿಕ ಕುಮಾರ

ಯೋಗಿಗಳು. ಅವರು ಆಗಳೆ ಸಮಾಜ ಬಾಂದಳದಿ ಕ್ರಿಯಾ ಕಿರಣಗಳನ್ನು ನೀಡಿ, ಜ್ಞಾನಬೆಳಗನು ಹರಡಿ, ಜಗಚ್ಛಕ್ಷುವಿನಂತೆ ಜಗಜಗಿಸಿದ್ದರು. ಅಂದು ಆ ಬಿಂಬವ ಕಂಡೆ.

ಕಂಡೆನ್ನ ಕಂಗಳು ಧನ್ಯವಾದವು. ಜನ್ಮ ಸಾರ್ಥಕವಾಯಿತು. ಇದಕ್ಕೆ ಮೂಲಕಾರಣರು ಅಡ್ನೂರಿನ ಶ್ರೀಮಂತ ಮಲ್ಲಿಕಾರ್ಜುನಗೌಡರು. ಇವರನ್ನಿಲ್ಲಿ ನೆನೆಯದಿದ್ದರೆ ಲೋಪವಾದೀತು, ಲೌಕಿಕ ವಿರೋಧವಾದೀತು!

ಇಂದು ಅದೇ ಆ ಮಹಾಕಾರಣಿಕ ಕುಮಾರ ಯೋಗಿಯ ಐತಿಹಾಸಿಕ ಭಾವಚಿತ್ರವನ್ನು ಬಲ್ಲಂತೆ ಚಿತ್ರಿಸಿ ಕಾಣುವ ಭಾಗ್ಯವು ಶ್ರೀ ಮ.ಲಿಂ.ಚ. ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಸತ್ಪ್ರೇರಣೆಯಿಂದ ಮತ್ತೆ ಒದಗಿ ಬಂದಿದೆ; ಒಂದುಗೂಡಿನಿಂತಿದೆ. ಇದಕ್ಕಾಗಿ ಶ್ರೀ ಸದಾಶಿವ ಶಿವಾಚಾರ್ಯರಲ್ಲಿ ಧನ್ಯವಾದಗಳು.

 ಆ ಲೋಕೋತ್ತರ ಮಹಾಮೂರ್ತಿಯನ್ನು ಎಷ್ಟು ಸಲ ಎಷ್ಟು ಬಗೆಯಲ್ಲಿ ನೋಡಿದರೂ ಬರ ಹಿಂಗದು, ಬೇಸರ ಬಾರದು.

ನಿಮ್ಮ ನೋಟವನಂತ ಸುಖ

 ನಿಮ್ಮ ಕೂಟ ಪರಮ ಸುಖವಯ್ಯ

 ಅಷ್ಟಕೋಟಿ ರೋಮಂಗಳೆಲ್ಲ ಕಂಗಳಾಗಿ

ನೋಡುತ್ತಿದ್ದೆನಯ್ಯ

 ಕುಮಾರ ಯೋಗೀಶ್ವರ ನಿಮ್ಮ ನೋಡಿ

 ನೋಡಿ ಮನದಲ್ಲಿ

 ರತಿಹುಟ್ಟಿ ನಿಮಿರ್ದವೆನ್ನ ಕಂಗಳು

 ಎಂದು ಅಣ್ಣನ ಅಮೃತವಾಣಿಯಲ್ಲಿ ಹಾಡಿ, ನಟ್ಟ ನೋಟದಿಂದ ನೋಡಿ, ನಲಿಯಲು ಮುಂದುವರಿಯಲಾಗಿದೆ, ಉಲಿಯಲು ಮೊದಲು ಮಾಡಲಾಗಿದೆ.

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಪ್ರಾಸ್ತಾವಿಕ :

ಷಟ್‌ಸ್ಥಲ ಅಧ್ಯಯನಶೀಲವಲ್ಲ. ಅದು ಅನುಷ್ಠೇಯವಾದುದು. ಆಚಾರ ವಿಚಾರಗಳ ಸಮನ್ವಯದಲ್ಲಿ ಆಚರಣೆಗೆ ಅನುಕೂಲವಾದುದು. ಷಟ್‌ಸ್ಥಲವು ಸಂಸಾರಿಕ ಜೀವನದಲ್ಲಿ ಭಕ್ತಿ (ಪ್ರೇಮ) ಯನ್ನು, ನಿಶ್ಯಕ್ತ ಜೀವನದಲ್ಲಿ ನಿಜ ಶಕ್ತಿಯನ್ನು, ನಿಷ್ಕ್ರಿಯ ಬದುಕಿನಲ್ಲಿ ಸತ್ಕ್ರಿಯೆಯನ್ನು, ಆಲಸ್ಯದ ಬಾಳಿಗೆ ಸ್ವಾವಲಂಬನೆಯನ್ನು, ಅಜ್ಞತನದ ಬದುಕಿಗೆ ಸುಜ್ಞತೆಯನ್ನು ಅಧ್ಯಾತ್ಮದ ಸಾಧನೆಯಲ್ಲಿ ಸ್ವಾನುಭವವನ್ನು, ಸಾಮರಸ್ಯವನ್ನು ಅನುಗ್ರಹಿಸಬಲ್ಲದು. ಈ ಷಟ್‌ಸ್ಥಲ ಸಾಧನೆಯಿಂದ ದೇಹೇಂದ್ರಿಯಗಳು, ಮನ ಪ್ರಾಣಗಳು, ಭಾವ ಜೀವಗಳು ವಿಕಾಸ ಹೊಂದುತ್ತವೆ. ಮಲಿನತೆಯನ್ನು ಮಾಣಿಸಿ ಮೌಲ್ಯವುಳ್ಳವುಗಳಾಗುತ್ತವೆ. ಆಚಾರ ವಿಚಾರಗಳಿಂದ, ಶ್ರದ್ಧೆ-ನಿಷ್ಠೆ-ಅವಧಾನ-ಅನುಭವ-ಆನಂದ-ಅವಿರಳತೆಯನ್ನು ಪಡೆದು ಘನಮನ ಸಂಪನ್ನತೆಯನ್ನು ಸಂಪಾದಿಸಿಕೊಳ್ಳಲು ಸಾಧ್ಯ. ಇದು ಜೀವನ ಸಿದ್ಧಾಂತವೂ ಅಹುದು. ವೀರಶೈವ ಧರ್ಮದ ಸಾಧನ ಪಥವೂ ಅಹುದು.

ವೀರಶೈವ ಧರ್ಮವು ವಿಶಿಷ್ಟವಾದುದಲ್ಲದೆ, ಅನಾದಿ ಸಂಸಿದ್ಧವಾದುದು. ಜಾಗತಿಕ ಧರ್ಮಗಳಲ್ಲಿ ವಿಶ್ವಮಾನ್ಯ ವೈಚಾರಿಕ ಮೌಲ್ಯಗಳನ್ನು ಹೊಂದಿದೆ. ಜಾಗತಿಕ ಬಹುತೇಕ ಧರ್ಮಗಳು ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಟ್ಟಿಗೆ ಪ್ರಯತ್ನಿಸಿದರೆ : ವೀರಶೈವವು ನಿತ್ಯದಲ್ಲಿ ಪರಮಾತ್ಮ (ಲಿಂಗ) ನೊಡನೆ ಸಾಲೋಕ್ಯ- ಸಾಮೀಪ್ಯ-ಸಾರೂಪ್ಯ-ಸಾಯುಜ್ಯಗಳೆಂಬ ಚತುರ್ವಿಧ ಮುಕ್ತಿಗಳನ್ನು ಅನುಭವಿಸುವ ಮಹಾನ್ ಧರ್ಮ; ಕೇವಲ ಅನುಭವಿಸುವದಲ್ಲ, ಅನುಭವದಲ್ಲಿ ಆನಂದ ಪಡೆದು ಸಾಮರಸ್ಯವನ್ನು ಹೊಂದುವ ಸಾಧ್ಯತೆಯುಳ್ಳುದು. ಆನಂದದ ಅನುಭೂತಿಯಲ್ಲಿ ಸಾಮರಸ್ಯದ ಸೊಂಪಿದೆ, ಕಂಪಿದೆ, ಪೆಂಪಿದೆ.

ವೀರಶೈವವು ವ್ಯಾವಹಾರಿಕ-ಸಾಮಾಜಿಕ ವ್ಯವಸ್ಥೆಯೊಂದಿಗೆ ಧಾರ್ಮಿಕ ವ್ಯವಸ್ಥೆಯಲ್ಲಿ ರೂಪಗೊಂಡಿದೆ. ವೀರಶೈವ ಸಿದ್ಧಾಂತದಲ್ಲಿ ಧರ್ಮ-ಸಂಸ್ಕೃತಿ-ಆಚಾರ-ವಿಚಾರ-ಸಾಧನೆ-ಸಿದ್ಧಿಗಳ ಸಮ್ಮಿಲನವಿದೆ. ಯಾವುದನ್ನು ಈ ದರ್ಶನ ಪ್ರತಿಪಾದಿಸುವದೋ ಅದನ್ನು ಆಚರಿಸಲು ಅವಕಾಶವಿದೆ, ಆಚರಿಸಿದಂತೆ ಅಳವಡಿಸಿಕೊಳ್ಳುವ ಯೋಗ್ಯತೆಯಿದೆ. ವೀರಶೈವವು ಪ್ರಾಯೋಗಿಕ ಸಿದ್ಧಾಂತವೆನಿಸಿದೆ. ಇದು ವ್ಯಕ್ತಿನಿಷ್ಠವಲ್ಲ, ಆತ್ಮನಿಷ್ಟವಾದುದು. ತತ್ತ್ವಗಳನ್ನು ಅರಿತು ಆಚರಿಸಿ ತತ್ತ್ವ ರೂಪಿಯಾಗುವ ವೈಶಿಷ್ಟ್ಯ ಇಲ್ಲಿದೆ. ಅಂತೆಯೇ ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ ಸೂತ್ರವನ್ನು ಪ್ರತಿಪಾದಿಸಿದ್ದಾರೆ.

ನಾಸ್ತಿಕ ದರ್ಶನಗಳಾದ ಜೈನ ಬೌದ್ಧರು ವೇದಾಗಮಗಳನ್ನು ಅಪೌರುಷೇಯವೆಂದು ಅವುಗಳ ಬಗೆಗೆ ಅಶ್ರದ್ಧೆ ಬೆಳಸಿದರಲ್ಲದೆ, ಶೂನ್ಯವಾದವನ್ನು ಪ್ರಾಸ್ತಾಪಿಸಿದ್ದರಿಂದ, ದೈವವನ್ನು ಪರಂಪರೆಯಾಗಿ ನಂಬಿದ ಭಾರತೀಯರಿಗೆ ಈ ಧರ್ಮದಲ್ಲಿ ನಿರಾಸಕ್ತಿ ಬೆಳೆಯಿತು. ನಿರ್ಬಲರಾದರು. ದೈವಭಕ್ತಿ-ಶಕ್ತಿ ಶೂನ್ಯರಾದರು. ಮುಂದೆ ಶಂಕರಾಚಾರ್ಯರು ಬ್ರಹ್ಮಸತ್ಯವನ್ನು ಸ್ಥಾಪಿಸಿ ಆತ್ಮಬಲವನ್ನೇನೋ ತುಂಬಿದರೂ ಜೊತೆಗೆ ಜಗನ್ಯಿಥ್ಯವೆಂದು ಸಂಸಾರದ ಅಸಾರತೆಯನ್ನು ಸಾರಿದರು. ಇದರಿಂದ ಜನರಲ್ಲಿ ಕರ್ತವ್ಯಚ್ಯುತಿ ತಲೆದೋರಿತು. ಆದರೆ ವೀರಶೈವ ಧರ್ಮವು ಶ್ರದ್ಧೆಯನ್ನೇ ಮೂಲವಾಗಿರಿಸಿ, ಸಂಸಾರದ ಅಸಾರತೆಯನ್ನು ಬದಿಗಿರಿಸಿ, ಸ್ವಾವಲಂಬನೆಯ ಮಾರ್ಗವನ್ನು ಕಲಿಸಿ ಲಿಂಗಾಂಗ ಸಾಮರಸ್ಯದ ಉನ್ನತ ಸ್ಥಿತಿಯನ್ನು ಗುಪ್ತವಾಗಿ ಸಾಧಿಸಲು ಕಲಿಸಿತು. ಈ ದಿಶೆಯಲ್ಲಿ ತತ್ವತ್ರಯಗಳು ಮಹತ್ವಪೂರ್ಣವಾಗಿವೆ. ಜೀವನ ಸಿದ್ಧಾಂತವನ್ನು ತಿಳಿಸುವ ಈ ತತ್ವತ್ರಯಗಳು ವಾಸ್ತವಿಕ ಸತ್ಯವನ್ನು ಬೋಧಿಸುವ ಅಧ್ಯಾತ್ಮಿಕ ಸಾಧನಗಳಷ್ಟೇ ಅಲ್ಲ, ನಿರಂತರ ಬಾಳಿ ಬದುಕುವ ಸಹಜ- ಸುಲಭ ಮಾರ್ಗಗಳೂ ಆಗಿವೆ.   

ವಾಸ್ತವಿಕ ಸ್ಥಿತಿಯನ್ನರಿಯದೆ ಅಷ್ಟಾವರಣ ಹಾಗೂ ಪಂಚಾಚಾರಗಳು ವೀರಶೈವ ಸಾಧಕನಿಗೆ ಲಿಂಗಾಂಗ ಸಾಮರಸ್ಯದ ಸಿದ್ಧಿಯಾಗಲು ನೇರವಾಗಿ ಕಾರಣವಾಗದೇ ಪರಂಪರಾ ಕಾರಣಗಳಾಗಿವೆಯೆನ್ನುವುದು ಸರಿಯಲ್ಲ. ಅಷ್ಟಾವರಣ- ಪಂಚಾಚಾರಗಳ ಪರಿಯಿಲ್ಲದೆ ಕೇವಲ ಷಟ್‌ಸ್ಥಲಕ್ಕೆ ಬೆಲೆಯಿಲ್ಲವೆನ ಬೇಕು. ಅಷ್ಟಾವರಣವು ಜೀವನದ ಅವಿಭಾಜ್ಯ ಅಂಗ. ದೇಹ ರಚನೆಗೆ ಅಷ್ಟ ತತ್ವಗಳು ಅವಶ್ಯ ಮತ್ತು ದೇಹ ಪೋಷಣೆಗೂ ಅಷ್ಟ ತತ್ವಗಳು ನಿತ್ಯಬೇಕು. ನಮ್ಮವರು ಈ ಬ್ರಹ್ಮಾಂಡಗತ ತತ್ವಗಳಿಗೆ ಸಂಸ್ಕಾರ ನೀಡಿದ್ದೆ ಅಷ್ಟಾವರಣದ ಪರಿಕಲ್ಪನೆಯಾದರೆ, ಜೀವಾತ್ಮನಿಗೆ ಪಂಚಪ್ರಾಣಗಳೂ ಮುಖ್ಯ. ಹಾಗೆ ವೀರಶೈವನಿಗೆ ಪಂಚಾಚಾರಗಳು ಪ್ರಾಣದಂತೆ ಮುಖ್ಯ ಗುರಿಗಳಾಗಿವೆ, ಧ್ಯೇಯವೂ ಅಹುದೆನ್ನುವುದು ಸತ್ಯ. ಶಿವಪೂಜೆಗೆ ಕುಳಿತು ವಾಮಕರದಲ್ಲಿ ಲಿಂಗವನ್ನು ಪೂಜಿಸುವ ಸಾಧಕ ಸದ್ಭಕ್ತನ ಸ್ವರೂಪವೇ ವಾಮಕರಪೀಠದಲ್ಲಿ ಭಸ್ಮದಿಂದ ಬರೆಯುವ ಪಂಚಕೋನದ ಉದ್ಧರಣೆಯಾಗಿರುವದು. ಇದು ಸ್ವಸ್ವರೂಪ. ಪಂಚಕೋನದ ಮೇಲಿನ ಭಾಗ ಶಿರಸ್ಸು, ಕೆಳಗಿನ ಎಡಬಲದ ಕೋನಗಳೆರಡು ಭುಜಗಳು, ಅದರ ಕೆಳಗಿನ ಎರಡು ಕೋನಗಳು ತೊಡೆಗಳು, ಮಧ್ಯದ ಆರನೆಯ ಭಾಗವು ಹೃದಯವೆನಿಸುವದು. ಈ ಆರರ ಕಲ್ಪನೆ ಷಟ್‌ಸ್ಥಲಕ್ಕೆ ನಾಂದಿಯಾಗಿದೆ. ಈ ತೆರನಾಗಿ ತತ್ತ್ವತ್ರಯಗಳು ಒಂದಕ್ಕೊಂದು ಅವಿನಾಭಾವ ಸಂಬಂಧವುಳ್ಳವುಗಳು. ಗುರುವಿಲ್ಲದೆ ತತ್ವ ತಿಳಿಯದು, ಅವನಿಲ್ಲದೆ ಲಿಂಗ ಲಭಿಸದು. ಲಿಂಗದ ಪ್ರಾಣ ಜಂಗಮ, ಈ ಮೂವರು ವೀರಶೈವರಿಗೆ ಪೂಜ್ಯರು, ಆರಾಧ್ಯರು. ಪೂಜ್ಯ ವಸ್ತುಗಳನ್ನು ಪೂಜಿಸುವ ಸಾಧನಗಳು ಭಸ್ಮ-ರುದ್ರಾಕ್ಷಿ ಮಂತ್ರಗಳು, ಪೂಜೆಯ ಪ್ರತ್ಯಕ್ಷಫಲ ಪಾದೋದಕ- ಪ್ರಸಾದಗಳು ವೀರಶೈವ ದರ್ಶನದಲ್ಲಿ ದೇಹ-ಪ್ರಾಣ-ಆತ್ಮರ ವಿಕಾಸವೆ ತತ್ತ್ವತ್ರಯಗಳ ಪರಿಕಲ್ಪನೆಯಾಗಿದೆ. ಆದ್ದರಿಂದ ಇವು ಅಭಿನ್ನ, ಅವಿಭಾಜ್ಯ

 ಲಿಂಗಧಾರಣವಾಗದೆ ಲಿಂಗಾಚಾರ ಅಳವಡದು, ಲಿಂಗವಿಲ್ಲದೆ ಏಕೇಶ್ವರ ಪೂಜೆಯಾಗಲಿ, ಧಾರ್ಮಿಕ ಸ್ವಾತಂತ್ರ್ಯ ವಾಗಲಿ ಲಭಿಸುವದಿಲ್ಲ. ಲಿಂಗಧಾರಿಯಾದ ಬಳಿಕ ಸಚ್ಛಾರಿತ್ರ್ಯವನ್ನು, ವ್ಯಕ್ತಿತ್ವ ವಿಕಸನವನ್ನು ರೂಪಿಸಿಕೊಳ್ಳಲೇಬೇಕು. ಲಿಂಗವನ್ನು ಪೂಜಿಸುವ ಕೈ ಯಾರನ್ನು ಬೇಡುವಂತಿಲ್ಲ. ಕಾಯಕ ಮಾಡಲೇಬೇಕು. ಕಾಯಕದೊಂದಿಗೆ ದಾಸೋಹಿಯಾಗುವದು ಸದಾಚಾರದ ಉದ್ದೇಶ. ಮೂರನೆಯ ಶಿವಾಚಾರವು ಸಹೋದರತೆಯನ್ನು, ಸಮಾನತೆಯನ್ನು ಭಾವೈಕ್ಯತೆಯನ್ನು ಬಿಂಬಿಸುವದು. ಗಣಾಚಾರವು ಧರ್ಮನಿಷ್ಠೆ, ತನ್ನ ತತ್ವಗಳ ಸಂರಕ್ಷಣೆಯ ಹೊಣೆಯನ್ನು ಬದ್ಧತೆಯನ್ನು ಕಲಿಸುವದು. ಕೊನೆಯ ಭೃತ್ಯಾಚಾರವು ವ್ಯಕ್ತಿ ಗೌರವವನ್ನು ತಿಳಿಸುವದು. ಕಿಂಕರತ್ವವವನ್ನು ಕಲಿಸುವದು. ವ್ಯಕ್ತಿ ಗೌರವದಿಂದ  ಸಮಾಜದಲ್ಲಿ ಸಾಮರಸ್ಯ ಬೆಳೆಯುವದು. ಹೀಗೆ ಪಂಚಾಚಾರಗಳು ವೀರಶೈವನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಮರ್ಥವಾಗಿರುವಾಗ ಇವು ನೇರ ಕಾರಣವಾಗದೆ ಪರಂಪರಾ ಕಾರಣವೆನ್ನುವ ವಿಚಾರವನ್ನು  ಪರಿಹರಿಸುವದು. ಆಂತರಿಕ ಸಾಧನೆಗೆ ಬಾಹ್ಯ ಆಚರಣೆ ಅವಶ್ಯ.

 ಷಟ್‌ಸ್ಥಲದ ಪರಿಕಲ್ಪನೆ :

 ಷಟ್‌ಸ್ಥಲದ ಪರಿಕಲ್ಪನೆ ಪಂಚಸೂತ್ರ ಲಿಂಗದ ಪರಿಕಲ್ಪನೆಯೊಂದಿಗಿದೆ. ಲಿಂಗವು ಪ್ರಣವದ ಸ್ವರೂಪವೂ ಆಗಿರುವದು.  ಪ್ರಣವವು ತಾರಕ-ದಂಡಕ ಕುಂಡಲ-ಅರ್ಧಚಂದ್ರ-ದರ್ಪಣ ಜ್ಯೋತಿಗಳೆಂಬ ಆರವಯವವುಳ್ಳಂತೆ, ವೃತ್ತ-ಕಟಿ-ವರ್ತುಳ-ನಾಳ-ಗೋಮುಖ-ಪೀಠವೆಂಬ ಆರು ಲಕ್ಷಣವುಳ್ಳದು ಲಿಂಗವು ಮತ್ತು ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣ-ಅಖಂಡ ಸ್ವರೂಪನು, ಪರಶಿವನು. ವೀರಶೈವ ಸಿದ್ದಾಂತದಂತೆ ತತ್ತ್ವವಿಕಾಸ ಕ್ರಮದಲ್ಲಿ ಸಹಜ-ನಿರಾಲಂಬ ನಿರಮಯ (ನಿರ್ಮಲ) ನಿಷ್ಕಲ-ನಿರ೦ಜನ-ನಿರವಯಗಳೆಂಬ ತತ್ವಗಳನ್ನು ಪ್ರತಿಪಾದಿಸಿರುವರು. ಸರ್ವಜ್ಞತ್ವ -ನಿತ್ಯತೃಪ್ತತ್ವ – ಅನಾದಿ ಬೋಧಕ ಶಕ್ತಿ, ಸ್ವತಂತ್ರ ಶಕ್ತಿ, ಆಲುಪ್ತ ಶಕ್ತಿ, ಅನಂತಶಕ್ತಿಗಳೆಂಬ ಷಟ್‌ಶಕ್ತಿ ಸಂಪನ್ನನು, ಪರಶಿವನು. ಕರ್ತೃ-ಕರ್ಮ-ಮೂರ್ತ-ಅಮೂರ್ತ-ಶಿವ-ಮಹಾಸಾದಾಖ್ಯಗಳೆಂಬ ಆರು ಸಾದಾಖ್ಯಗಳ ಮೂಲಕ ಪರಶಿವತತ್ವ ಗೋಚರವಾಗುವದು. ಈ ತೆರನಾಗಿ ಷಟ್‌ಸ್ಥಲದ ಪರಿಕಲ್ಪನೆ ರೂಪುಗೊಂಡಿರಲು ಸಾಕು. ಷಟ್‌ಸ್ಥಲವು ತಾತ್ವಿಕವಾಗಿ ಸೈದ್ಧಾಂತಿಕವಾಗಿ ವೈಚಾರಿಕವಾಗಿ ವೈಶಿಷ್ಟ್ಯಪೂರ್ಣವಾಗಿ ಪರಿಕಲ್ಪಿತ ವಾದುದು. ಅಂತೆಯೇ ಈ ಷಟ್‌ಸ್ಥಲದ ಘನತೆಯನ್ನು ಡಾ.ಜ.ಚ.ನಿ. ಯವರು ಮಾರ್ಮಿಕವಾಗಿ ಜೀವನ ಸಿದ್ಧಾಂತ’ ದಲ್ಲಿ ನಿರೂಪಿಸಿರುವರು. ದೇಹೇಂದ್ರಿಯಗಳು, ಮನ-ಪ್ರಾಣಗಳು, ಭಾವ-ಜೀವಗಳು ನುಲಗಬಾರದು. ನೋಯಬಾರದು, ಮಲೆಯಬಾರದು, ಮಲಿನವಾಗಬಾರದು, ಮೌಲ್ಯವುಳ್ಳವುಗಳು ಆಗಬೇಕು, ಮೆರಗುಳ್ಳವುಗಳಾಗಬೇಕು. ಆಚಾರ-ವಿಚಾರವುಳ್ಳವುಗಳೂ ಶ್ರದ್ಧೆ-ನಿಷ್ಠೆ- ಅವಧಾನ ಅನುಭವ-ಆನಂದ-ಅವಿರಳತೆಯುಳ್ಳವುಗಳೂ, ಅಧ್ಯಾತ್ಮಿಕ ಘನತೆಯುಳ್ಳವುಗಳೂ ಆಗಿರಬೇಕೆಂಬುದೆ ಈ ಕೃತಿಯ ಕಲಾದೃಷ್ಟಿ. ಸಕಲೇಂದ್ರಿಯ ಪ್ರಭುತ್ವ ಬರಬೇಕು. ಆತ್ಮ ತತ್ವ ಅಳವಡಬೇಕು. ಅಂತಃಕರಣಗಳಲ್ಲಿ ಮಹಾಂತತೆ ಮೂಡಬೇಕು ಎಂಬುದೇ ಷಟ್‌ಸ್ಥಲ ಸಿದ್ಧಾಂತ ತತ್ವ. ಸತ್ಯ-ತತ್ವ ಷಡಂಗಗಳಲ್ಲಿಯೂ ಷಡ್ಲಿಂಗ (ದೃಕ್ರಿಯಾ ಚೈತನ್ಯ) ಗಳ ಸಂಪೂರ್ಣ ಲೀಲಾ ವಿಲಾಸ ಸಮನಿಸಬೇಕೆಂಬುದೇ ಷಟ್‌ಸ್ಥಲದ ಧ್ಯೇಯ. ಜಡಕರ್ಮ ಜೀವನವು ಕಳಚಿ ಮೂಢ ಜೀವನವು ಹಳಚಿ ಜೀವಕಳಾ ಜೀವನವು ಒಡಮೂಡಬೇಕು. ಸಕಲ ಕ್ರಿಯಾ ಕಲಾಪಗಳು ನಂದನವನವಾಗಬೇಕು. ಸಮ್ಯಗ್‌ಜ್ಞಾನ ಜ್ಯೋತಿರ್ಮಂಡಲವಾಗಬೇಕುʼ’ ಎಂಬುದೇ ಷಟ್‌ಸ್ಥಲ ರಹಸ್ಯವೆಂದು ಷಟ್‌ಸ್ಥಲದ ಮರ್ಮವನ್ನು ಬಿತ್ತರಿಸಿರುವರು.

 ಷಟ್‌ಸ್ಥಲದ ಪ್ರತಿಪಾದನೆ ಹನ್ನೆರಡನೆಯ ಶತಮಾನದಿಂದ ಪ್ರಾರಂಭವಾಯಿತೆನ್ನುವರು. ಆದರೆ ಅವಿರಳ ಜ್ಞಾನಿ ಶ್ರೀ ಚನ್ನಬಸವಣ್ಣನವರು ಶ್ರೀಗುರು ವಾದಾತನು ಸಕಲಾಗಮಂಗಳ ಹೃದಯವನರಿದು ಆಚರಿಸಲು ಮತ್ತು ಬೋಧಿಸಲು ನಿರೂಪಿಸಿದ್ದುಂಟು. ಈ ಮಹಾನುಭಾವರು ಹನ್ನೆರಡನೆಯ ಶತಮಾನದಲ್ಲಿ ಷಟ್‌ಸ್ಥಲವನ್ನು ವ್ಯವಸ್ಥಿತವಾಗಿ ಶರಣ ಸಮುದಾಯಕ್ಕೆ ತಿಳಿಸಿದ ಕಾರಣ ಅವರು “ಷಟ್‌ಸ್ಥಲ ಚಕ್ರವರ್ತಿ’ ಗಳೆನ್ನಿಸಿದ್ದು ಪ್ರಸಿದ್ಧ. ಪರಶಿವನು ಮಕುಟಾಗಮದ ಕ್ರಿಯಾಪಾದದ ದ್ವಿತೀಯ ಪಟಲದಲ್ಲಿ-

“ಷಟ್‌ಸ್ಥಲೋಕ್ತ ವಿಧಾನೇನ ಮಹಾಪೂಜಾಂ ಸಮಾಚರೇತ್‌” (೨/೪೧) ಇಷ್ಟಲಿಂಗ ಪೂಜೆಯನ್ನು ಷಟ್‌ಸ್ಥಲ ಕ್ರಮದಲ್ಲಿ ತಿಳಿಸಿದ ವಿಧಾನದಂತೆ ಆಚರಿಸಬೇಕೆಂದು ಹೇಳಿ, ಭಕ್ತಾದಿ ಸ್ಥಲಗಳಲ್ಲಿ ಮಾಡಬೇಕಾದ ಕ್ರಮವನ್ನು ತಿಳಿಸುತ್ತ, ಭಕ್ತಾದಿ ಸ್ಥಲಗಳಲ್ಲಿ ಆಚರಿಸುವ ಅರ್ಪಣ ಕ್ರಮವನ್ನು ಸಹ ನಿರೂಪಿಸಿರುವನು.  ಶರಣ ಸಾಹಿತಿಗಳಾದ ಡಾ. ಹೆಚ್. ತಿಪ್ಪೇರುದ್ರಸ್ವಾಮಿಯವರು “ವಾತುಲಾಗಮದ ಉತ್ತರ ಭಾಗದಲ್ಲಿರುವ ತಂತ್ರೋತ್ತರ ಪ್ರದೀಪವೆಂಬ ಹೆಸರಿನ ಶಿವಸಿದ್ಧಾಂತ ತಂತ್ರದಲ್ಲಿ ಈಶ್ವರನು ಪಾರ್ವತಿಗೆ ಷಟ್‌ಸ್ಥಲ ನಿರ್ಣಯವನ್ನು ನಿರೂಪಿಸಿರುವದಾಗಿ ಹೇಳುತ್ತಾರೆ. ಇದನ್ನು ನೋಡಿದರೆ ಬಹುಶಃ ವಚನಕಾರರಿಗಿಂತ ಮೊದಲೇ ಷಟ್‌ಸ್ಥಲ ಸಿದ್ಧಾಂತ ಉಗಮಗೊಂಡು ಆಗಮಾದಿಗಳಲ್ಲಿ ಬೆಳೆಯುತ್ತಾ ಬರುತ್ತಿದ್ದಿತೆಂದು ಹೇಳಬಹುದು. ಬಸವಾದಿ ಶರಣರ ಕಾಲಕ್ಕೆ ಅದು ಪರಿಪೂರ್ಣತೆಯನ್ನು ಪಡೆಯಿತು. ಕೇವಲ ಸಿದ್ಧಾಂತವಾಗಿ ಉಳಿಯದೇ ಶರಣರ ಉಜ್ವಲ ಸಾಧನೆಯಿಂದ ಜೀವಂತ ಶಕ್ತಿಯಾಗಿ ಪರಿಣಮಿಸಿತು.” ಎಂದು ತಮ್ಮ ಸಂಶೋಧನಾ ಗ್ರಂಥದಲ್ಲಿ ಉಲ್ಲೇಖಿಸಿರುವುದು ಯಥೋಚಿತವಾಗಿದೆ.

ಬಸವಾದಿ ಶಿವಶರಣರು ವಿಶೇಷವಾಗಿ ಚನ್ನಬಸವಣ್ಣನವರು ಆಗಮ ಪ್ರತಿಪಾದಿತ ಸಿದ್ಧಾಂತವನ್ನು ಜನ ಭಾಷೆಯಲ್ಲಿ ಜನತೆಗೆ ತಿಳಿಯುವಂತೆ ಕನ್ನಡ ವಚನ ಸಾಹಿತ್ಯದ ಮೂಲಕ ಪ್ರತಿಪಾದಿಸಿದರು. ತತ್ವ ನಿರೂಪಣೆಯೊಂದಿಗೆ ಷಟ್‌ಸ್ಥಲದ ಆಚರಣೆಯನ್ನು ಕ್ರಮಗೊಳಿಸಿದರು.

ಈ ಷಟ್‌ಸ್ಥಲ ಸಾಧನವು ಜೀವನ ಸಿದ್ದಾಂತವೆನಿಸಿದಂತೆ ವ್ಯಾವಹಾರಿಕ ಬದುಕಿನಲ್ಲೂ ಜೀವಾತ್ಮನು ಕೈಕೊಳ್ಳುವ ಪ್ರತಿಯೊಂದು ಕಾರ್ಯಗಳಲ್ಲಿ ಆರು ಹಂತಗಳು ಕಾಣಿಸಿಕೊಳ್ಳುತ್ತವೆ. ೧) ಮೊದಲು ಯಾವುದೊಂದು ಕೆಲಸವನ್ನು ಬಯಸಿ ಮಾಡಹತ್ತುತ್ತಾನೆ. ೨) ಕೆಲಸ ಮಾಡಿ ಫಲವನ್ನು ಪಡೆಯುತ್ತಾನೆ. ೩) ಪಡೆದುದನ್ನು ಸಂತಸದಿಂದ ಭೋಗಿಸುವನು 9) ಭೋಗಿಸಿದುದನ್ನು ಜೀರ್ಣಿಸಿಕೊಂಡು ಪ್ರಾಣವಾಗಿಸಿಕೊಳ್ಳುವನು ೫) ಪ್ರಾಣವಾಗಿಸಿಕೊಂಡುದುದಕ್ಕೆ ಶರಣಾಗುವನು ೬) ಶರಣಾದುದಕ್ಕೆ ಅದರೊಡಗೂಡುವನು.

 ಉದಾಹರಣೆಗೆ ಮಾವಿನ ಹಣ್ಣನ್ನು ತಿನ್ನಬಯಸುವದು ಬಯಸಿದುದನ್ನು ಪ್ರಯತ್ನಿಸಿ ಪಡೆಯುವದು, ಪಡೆದ ಹಣ್ಣನ್ನು ತಿನ್ನುವದು, ತಿಂದುದನ್ನು ರಕ್ತವನ್ನಾಗಿ ಪ್ರಾಣವಾಗಿಸಿಕೊಳ್ಳುವದು. ಅದರ ಆನಂದವನ್ನು ಅನುಭವಿಸುವದು. ಆ ಆನಂದದಲ್ಲಿ ಸಮರಸಗೊಳ್ಳುವದು. ಅರ್ಥಾತ್ ದೊರೆತ ಫಲವನ್ನು ಪಡೆದು ಸಂತೃಪ್ತಿಯನ್ನು ಹೊಂದುವದು. ಈ ತೆರನಾಗಿ ಪ್ರತಿಯೊಂದು ಜೀವನ ಕ್ರಿಯೆಯಲ್ಲಿ ಆರು ತೆರನಾಗುವಿಕೆಯು ಕಾಣಬರುವದರಿಂದ ಷಟ್‌ಸ್ಥಲವು ಜೀವನ ಸಿದ್ದಾಂತವೆಂಬುದು ಸ್ಪಷ್ಟವಾಗುತ್ತದೆ. ನಾಗಲಿಂಗದ ಪುಷ್ಪಗಳನ್ನು ಪರೀಕ್ಷಿಸಿದರೆ ಎಲ್ಲ ಹೂಗಳು ಆರಾರು ದಳಗಳುಳ್ಳುದಾಗಿ ಕಾಣ ಬಂದಿತು. ಷಟ್‌ಸ್ಥಲವು ವೀರಶೈವ ಪಾರಿಭಾಷಿಕ ಪದ. ತಾತ್ವಿಕ ಹಿನ್ನೆಲೆಯುಳ್ಳುದು ತಾತ್ವಿಕವಾಗಿರುವಂತೆ, ವೈಜ್ಞಾನಿಕವೂ ವ್ಯಾವಹಾರಿಕವೂ ಆಗಿದೆ.

 ಸ್ಥಲದ ವ್ಯಾಖ್ಯಾನ :

ವೈಜ್ಞಾನಿಕವಾಗಿ ಸೃಷ್ಟಿಯ ವಿಸ್ತಾರದ ವಿಚಾರದಲ್ಲಿ ‘’ಮಹಾಸ್ಪೋಟ’’ ಸಿದ್ಧಾಂತವನ್ನು ವಿವರಿಸುತ್ತಾರೆ. ಅದಕ್ಕೆ ಬಿಗ್ ಬ್ಯಾಂಗ್ ಥೇರಿ’ ಎನ್ನುವರು. ವೀರಶೈವರು ಪ್ರಕೃತಿಯ ಪ್ರಾದುರ್ಭಾವವನ್ನು ಪ್ರಣವದಿಂದ ನಿರೂಪಿಸಿರುವರು. ಪ್ರಣವದ ನಾದಬಿಂದು ಕಲೆಗಳ ವಿಸ್ತಾರದಲ್ಲಿ ಸೃಷ್ಟಿಯು ಮೈದೋರಿದೆ. ನಾದ- ಬಿಂದು-ಕಲೆಗಳಿಂದ ನಕಾರಾದಿ ಪ್ರಣವಾಕ್ಷರಗಳು ಉದಿಸುವವು. ಈ ವಿಚಾರವಾಗಿ ಜಂಗಮ ಪುಂಗವರಾದ ಶ್ರೀ ಅಲ್ಲಮಪ್ರಭು ದೇವರ ವಚನ ಇಂತಿದೆ.

ಆದಿ ಅನಾದಿ ಇಲ್ಲದಂದು ಹಮ್ಮು ಬಿಮ್ಮುಗಳಿಲ್ಲದಂದು

ಸುರಾಳ-ನಿರಾಳವಿಲ್ಲದಂದು, ಶೂನ್ಯ-ನಿಶೂನ್ಯವಿಲ್ಲದಂದು,

ಸಚಾರಚರವೆಲ್ಲ ರಚನೆಗೆ ಬಾರದಂದು

ಗುಹೇಶ್ವರನೊಬ್ಬನೆ ಇದ್ದೆಯಲ್ಲ ಇಲ್ಲದಂತೆ

 ಜಗತ್ ಸೃಷ್ಟಿಯ ಮುನ್ನ ಸೃಷ್ಟಿಕರ್ತ ಹೇಗಿದ್ದನೆಂಬುದನ್ನು ವಿವೇಚಿಸಿದ್ದರೆ : ಇಂಥ ನಿಃಕಲ ಅಥವಾ ನಿಶ್ಶೂನ್ಯದಿಂದಲೇ ಮಹಾಲಿಂಗ ಆವಿರ್ಭಾವವಾಗುವುದು. ಅದರಿಂದಲೇ ಜಗದುತ್ಪತ್ತಿಯಾಗುವುದೆಂದೂ   ತತ್ವಗಳ ವಿಸ್ತಾರವಾಗುವದೆನ್ನುವ ತೋಂಟದ ಸಿದ್ಧಲಿಂಗೇಶ್ವರರು-

ನಿಃಕಲ ಶಿವತತ್ವದಲ್ಲಿ ಜ್ಞಾನಚಿತ್ತು ಉದಯವಾಯಿತು

ಆ ಚಿತ್ತಿನಿಂದ ಕಾರ ಉಕಾರ ಮಕಾರಗಳೆಂಬ ಅಕ್ಷರತ್ರಯಂಗಳಾದವು

ಅಕಾರವೇ ನಾದ, ಉಕಾರವೇ ಬಂದು, ಮಕಾರವೆ ಕಳೆ

ಇಂತೀ ತ್ರಿವಿಧಕ್ಕೆ ತಾಯಿ ಒತ್ತು

ಇಂತಿ ನಾಲ್ಕು ಒಂದಾದಲ್ಲಿ ಓಂಕಾರವೆಂಬ ಪ್ರಣವದುತ್ಪತ್ತಿಯಾಯಿತ್ತು

ಆ ಓಂಕಾರವೆಂಬ ಪ್ರಣವೇ

ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿಯಪ್ಪ

ಮಹಾಲಿಂಗ ನೋಡಾ. ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ

ಎಂದು ನಿರೂಪಿಸಿರುವರು. ಆ ಓಂಕಾರ ಪ್ರಣವವೇ ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ ಮಹಾಲಿಂಗವೆನಿಸುವದು. ಅದುವೆ ಷಟ್‌ಸ್ಥಲದ ‘ಸ್ಥಲ’ ಶಬ್ದಕ್ಕೆ ವಾಚ್ಯವೆನಿಸುವದು.

 ‘ಸ್ಥಲ’ ವೆಂದರೆ ಶಬ್ದಕೋಶವು(ನಾ) ೧. ನೆಲ, ಭೂಮಿ, ೨. ಸ್ಥಲ ೩. ಜಮೀನು ಹೊಲ ೪, ಗ್ರಂಥದ ಒಂದು ಭಾಗ, ಪರಿಚ್ಛೇದ

 ೫. ಮೆಟ್ಟಿಲು, ಹಂತ, ಎಂದು ಅರ್ಥೈಸಿದೆ. ಈ ಅರ್ಥಗಳು ವ್ಯಾವಹಾರಿಕವಾಗಿವೆ. ಆದರೆ ವೀರಶೈವ ಧಾರ್ಮಿಕ ಪರಂಪರೆಯಲ್ಲಿ ಸ್ಥಲ ಶಬ್ದಕ್ಕೆ ಮೇಲಿನ ಅರ್ಥಗಳು ಅನ್ವಯಿಸುವುದಿಲ್ಲ. ಇಲ್ಲಿ ‘ಸ್ಥಲ’ ಪದದ ಅರ್ಥ ಭಿನ್ನವಾಗಿದೆ. ಸ್ಥಲ ಶಬ್ದದ ಪಾರಿಭಾಷಿಕತೆಯನ್ನು ಶಾಸ್ತ್ರಕಾರರು-

ಏಕಮೇವ ಪರಂ ಬ್ರಹ್ಮ ಸಚ್ಚಿದಾನಂದ ಲಕ್ಷಣಂ |

ಶಿವತತ್ತ್ವಂ ಶಿವಾಚಾರ್ಯಃ  ಸ್ಥಲಮಿತ್ಯಾಹುರಾದರಾತ್ ||

ಸರ್ವೇಷಾಂ ಸ್ಥಾನಭೂತತ್ವಾಲ್ಲಯಭೂತತ್ವತಸ್ತತಃ |

ತ್ವಾನಾಂ ಮಹದಾದೀನಾಂ ಸ್ಥಲ ಮಿತ್ಯಭಿದೀಯತೇ

ಎಂದು ವಿಸ್ತರವಾಗಿ ನಿರೂಪಿಸಿದ್ದಾರೆ. ಜಗತ್ತಿನಲ್ಲಿ ʼʼಏಕಮೇವಾದ್ವಿತೀಯಂ ಬ್ರಹ್ಮʼʼ ವೆಂಬ ಶ್ರುತಿ ಪ್ರಮಾಣದಂತೆ ತನ್ನಂತೆ ಅನ್ಯವಿಲ್ಲದುದು, ತಾನೊಂದೇ ಒಂದಾದುದು, ಅದುವೆ ಪರಬ್ರಹ್ಮವೆನಿಸಿದೆ. ಸತ್-ಚಿತ್-ಆನಂದ ಸ್ವರೂಪ ಲಕ್ಷಣದಿಂದ ಕೂಡಿದೆ. ಇದನ್ನೇ ನಮ್ಮವರು ಶಿವತತ್ತ್ವವೆಂದು ಗುರುತಿಸಿದರು. ಇದುವೆ ಪರಮಶಿವತತ್ವವೂ ಅಹುದು. ಇದನ್ನೆ ‘ಸ್ಥಲʼ ವೆಂದೂ ಹೇಳುವರು. ಆ ಶಿವತತ್ತ್ವವು ಮಹತ್ ತತ್ವವೇ ಆದಿಯಾದ ಸಕಲ ತತ್ವಗಳಿಗೆ ಆಧಾರಭೂತ (ಆಶ್ರಯಭೂತ) ವೂ ಲಯಭೂತವೂ ಆಗಿರುವದರಿಂದ ಸ್ಥಲವೆಂದು ಕರೆಯಲ್ಪಟ್ಟಿತು. ಒಟ್ಟಿನಲ್ಲಿ ಈ ಜಗತ್ತು ಮೊದಲು ಸ್ಥಿತಿಯನ್ನು ನಂತರದಲ್ಲಿ ಲಯವನ್ನು ಯಾವ ತತ್ವದಲ್ಲಿ ಹೊಂದುವುದೋ ಅದೇ ಸ್ಥಲವೆಂದು ಹೇಳಲ್ಪಡುವದು’. ಈ ವಿಚಾರದಲ್ಲಿ ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ-

ಏಕಏವ ಶಿವಸಾಕ್ಷಾಚ್ಛಿದಾನಂದಮಯೋ ವಿಭುಃ

ನಿರ್ವಿಕಲ್ಪೊ ನಿರಾಕಾರೋ ನಿರ್ಗುಣೋ ನಿಷ್ಟ್ರಪಂಚಕಃ

ಶಿವನೆಂದರೆ ಕೈಲಾಸಪತಿ ಎಂದು ವೀರಶೈವರು ಹೇಳುವದಿಲ್ಲ. ಇವನು ಪಾರ್ವತಿ ಪತಿಯೂ ಅಲ್ಲ. ಪೌರಾಣಿಕ ಶಿವನ ಸಂಬಂಧ ಇಲ್ಲಿಲ್ಲ. ಏಕೇಶ್ವರ ಅರ್ಥಾತ್ ಸರ್ವೇಶ್ವರನಾದವನು ಪರಶಿವನು. ಅವನೇ ಅದ್ವಿತೀಯನು. ಅವನಂತೆ ಬೇರಾರು ಇಲ್ಲದವನು, ಶಾಸ್ತ್ರಕಾರರು ಪ್ರತಿಪಾದಿಸಿದಂತೆ ಪರಶಿವನು ಸ್ವಗತ ಸಜಾತೀಯ- ವಿಜಾತಿಯಗಳೆಂಬ ಮೂರು ಭೇದಗಳಿಂದ ದೂರಾದವನು. ಸ್ವಗತವೆಂದರೆ ತನ್ನಲ್ಲಿಯದು. ಮಾನವನ ಶರೀರದಲ್ಲಿರುವ ಕೈ ಕಾಲು-ಬಾಯಿ-ಮೂಗು ಮುಂತಾದ ಅವಯವಗಳು ಒಂದರಂತೆ ಇನ್ನೊಂದಿಲ್ಲ. ಎಲ್ಲವೂ ಭಿನ್ನವಾಗಿವೆ. ಹಾಗೆ ಗಿಡಮರಗಳಲ್ಲಿ, ಪ್ರಾಣಿಗಳಲ್ಲಿ ಭೇದವನ್ನು ಗುರುತಿಸಬಹುದು. ಇನ್ನು ಎರಡನೆಯದು ಸಜಾತೀಯ ಭೇದ, ರಾಮ-ಲಕ್ಷ್ಮಣರು ಸಹೋದರರಾದರೂ ಇಬ್ಬರಲ್ಲಿ ಭಿನ್ನತೆಯಿರುತ್ತದೆ. ಗಿಡ ಮರಗಳು ಸಜಾತೀಯವಾದರೂ ಬೇರೆ ಬೇರೆಯಾಗಿ ಕಾಣಬರುತ್ತವೆ. ವಿಜಾತೀಯವೆಂದರೆ ಬೇರೆ ಬೇರೆ ಜಾತಿಗಳು, ಮಾನವರದು ಒಂದು ಜಾತಿಯಾದರೆ ಪ್ರಾಣಿಗಳದು ಮತ್ತೊಂದು ಜಾತಿ, ಹಾಗೆ ಪಕ್ಷಿಗಳದು ಅನ್ಯ ಜಾತಿ, ಇವು ಪರಸ್ಪರ ವಿಜಾತಿಯವೆನಿಸುತ್ತವೆ. ಇವು ಮೂರು ಜಾತಿಗಳು ಪರಶಿವನಲ್ಲಿ ಕಾಣುವದಿಲ್ಲ. ಅವನು ನಿರಾಕಾರನಾದ್ದರಿಂದ ಅವಯವಾದಿಗಳಿಲ್ಲ, ಅದಕ್ಕಾಗಿ ಸ್ವಗತ ಭೇದವಿಲ್ಲ. ಅವನಿಗೆ ಸಮನಾದವ ಮತ್ತೊಬ್ಬನಿಲ್ಲವಾದ್ದರಿಂದ ಸಜಾತೀಯ ಭೇದವೂ ಇಲ್ಲ. ಆತ ಅದ್ವಿತೀಯನು. ವಿಜಾತೀಯ ಭೇದವೂ ಇಲ್ಲಿ ಬರುವುದಿಲ್ಲ. ಶಿವನು ಸಚ್ಚಿದಾನಂದ ಸ್ವರೂಪನಾಗಿರುವ ದರಿಂದಲೇ ‘ಪ್ರಭು’ ಎನಿಸುತ್ತಾನೆ. ವಿಭುವೆಂದರೆ ವ್ಯಾಪಕನಾದವನು. ಸರ್ವಾಂತರ್ಯಾಮಿ ಪರಶಿವನು. ಪ್ರಪಂಚಕ್ಕೆ ಅವಕಾಶವಿತ್ತುದು ಆಕಾಶವಾದರೆ, ಈ ಆಕಾಶಕ್ಕೂ ಅವಕಾಶಕೊಟ್ಟ ಪರಮಾತ್ಮನು ಮಹಾವ್ಯಾಪಕನು. ಅವನಿಗೆ ಮತ್ತಾವುದೂ ಅವಕಾಶ ಕೊಟ್ಟಿಲ್ಲ. ಅವನೇ ಸಕಲಕೆಲ್ಲ ವ್ಯಾಪಕನಾದ ಕಾರಣ ಅವನು ವಿಭುವೆನಿಸಿದ್ದಾನೆ. ನಿರಾಕಾರ ಪರಶಿವನ ಅಸ್ತಿತ್ವವನ್ನು ಮನ್ನಿಸುವುದಾದರೆ ಅವನು ಕಾಣುವದಿಲ್ಲವೇಕೆ ? ಎಂಬ ಪ್ರಶ್ನೆ ಸಹಜವಾದುದು. ನಿರಾಕಾರವೆಂದರೆ ಆಕಾರವಿಲ್ಲದವನು. ಅವಯವವುಳ್ಳವನಿಗೆ ಸಾಕಾರವೆನ್ನುವರು. ಅವಯವಗಳು ಸಹಜ ಬರುವುದಿಲ್ಲ. ಇವು ಜನ್ಯವಾದವುಗಳು.  ತಾಯಿಯ ಗರ್ಭದಲ್ಲಿಯೇ ಅವಯವಗಳು ಮೂಡಿ ಬರುತ್ತವೆ. ಪರಮಾತ್ಮನು ಜನಿಸುವದಿಲ್ಲವಾದುದರಿಂದ ಅವನಿಗೆ ಅವಯವವಿಲ್ಲ. ಆತ ನಿರಾಕಾರ, ಆತನು ಜನಿ(ಹುಟ್ಟಿ)ಗೆ ಒಳಗಾಗಿದ್ದರೆ, ಒಂದು ದಿನ ಮರಣವನ್ನು ಹೊಂದಬೇಕಾಗುತ್ತಿತ್ತು ಜನಿಮೃತಿಗಳಿಗೆ ಹೊರಗಾದವನು. ಅವನು ಅವಿನಾಶಿಯಾಗಿದ್ದಾನೆ. ಸಾವಯವಿ ಸಾಕಾರ ವ್ಯಕ್ತಿಯಲ್ಲಿ ಸೌಂದರ್ಯವೂ ಇರಬಹುದು. ಕುರೂಪವೂ ಇರಬಹುದು. ಶಿವನು ನಿರವಯವಿ, ನಿರಾಕಾರನು. ಆದರೆ ಅವನು ಕೇವಲ ಸೌಂದರ್ಯಭರಿತನು.ʼʼ ಸತ್ಯಂ ಶಿವಂ ಸುಂದರಂʼ’ ಎಂದು ವೇದವು ವರ್ಣಿಸಿದೆ. ನಿರಾಕಾರ ಪರಶಿವನ ಅನುಪಮ ಸೌಂದರ್ಯಕ್ಕೆ ಆತ್ಮಜ್ಞಾನಿಗಳು ಮಾರು ಹೋಗುತ್ತಾರೆ. ಆತ್ಮ ಸೌಂದರ್ಯವೇ ಮುಖ್ಯವಾಗಿರುವದು. ವೀರವೀರಾಗಿಣಿ ಅಕ್ಕಮಹಾದೇವಿಯು ವರಿಸಿದ ಪತಿಯ ವರ್ಣನೆ ಹೀಗಿದೆ.

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವಂಗೆ ನಾನೊಲಿದೆ

ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ

ಚಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ

ಭವವಿಲ್ಲದ ಭಯವಿಲ್ಲದ ನಿರ್ಭಯ ಚಲುವಂಗೊಲಿದೆ ನಾನು

ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು

ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆ

ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ

ಹೀಗೆ ನಿರಾಕಾರದ ಚಲುವ ಚನ್ನಿಗ ಚನ್ನಮಲ್ಲಿಕಾರ್ಜುನನಿಗೆ ಮಾರು ಹೋದವಳು ಅಕ್ಕಮಹಾದೇವಿ. ಸಾಮಾನ್ಯವಾಗಿ ರೂಪಿದ್ದರೆ ಕೆಡಕುಂಟು, ತೊಡಕುಂಟು, ಕೊನೆಗೆ ಸಾವುಂಟು. ಆದರೆ ಈ ಚನ್ನಿಗ ಚಲುವ ರೂಪಿಲ್ಲದ ರೂಪವಂತ, ಕುರುಹಿಲ್ಲದ ಕಲಾವಂತ, ಆ ವೀರವಿರಾಗಿಣಿ ಮಹದೇವಿ ಅಕ್ಕನ ಮನವನ್ನು ಸೂರೆಗೊಂಡಿದ್ದಾನೆ, ಪರಶಿವ, ಕೊನೆಗೆ ಅವಳಿಗೆ ಭವದ ಭಯವಿಲ್ಲ; ಆತನು ನಿರ್ಭಯ ಚೆಲುವನು, ಸೀಮೆಯಿಲ್ಲದ ನಿಸ್ಸೀಮನು. ಲೌಕಿಕದಲ್ಲಿ ರೂಪಿನ ಚಿಲುವು ಚರ್ಮ ಚಕ್ಷುಗಳಿಗೆ ಮಾತ್ರ ಗೋಚರವಾಗುತ್ತದೆ. ಈ ಪರಶಿವನು ಕೇವಲ ಜ್ಞಾನ ನೇತ್ರಕ್ಕೆ ಅನುಭಾವ ಭಕ್ತಿಗೆ ಮಾತ್ರ ವೇದ್ಯವಾಗುವನು. ಶಿವನು ನಿರ್ಗುಣನೂ ಆಗಿರುವದರಿಂದ ಸದ್ಗುಣ ಶೀಲರಿಗೆ ತೋರವನು.

 ವೀರಶೈವ ದಾರ್ಶನಿಕ ಸಿದ್ಧಾಂತದಲ್ಲಿ ಪ್ರತಿಪಾದಿಸಲ್ಪಡುವ ‘ಸ್ಥಲ’ ಪದವು ಪರಶಿವ ವಾಚ್ಯವಾಗಿರುವಂತೆ ಅವನು ಶಕ್ತಿ ವಿಶಿಷ್ಟನೆಂಬುದನ್ನು ವಿವರಿಸಲಾಗಿದೆ. ಪರಶಿವನಿಗೂ ಶಕ್ತಿಗೂ ಅವಿನಾಭಾವ ಸಂಬಂಧವಿದೆ. ಅದಕ್ಕಾಗಿ ‘ನ ಶಿವೇನ  ವಿನಾಶಕ್ತಿರ್ನಶಕ್ತಿ ರಹಿತಃ ಶಿವಃʼʼ ಶಿವನನ್ನು ಹೊರತುಪಡಿಸಿ ಶಕ್ತಿ ಇಲ್ಲ. ಶಕ್ತಿಯನ್ನು ಬೇರ್ಪಡಿಸಿ ಶಿವನಿಲ್ಲ. ಶಿವನಲ್ಲಿಯ ಶಕ್ತಿಯನ್ನು ಬೇರೆ ಮಾಡಿದರೆ ಶವನೆನಿಸುವನು. ವೀರಶೈವ ಸಿದ್ಧಾಂತವು ಶಕ್ತಿವಿಶಿಷ್ಟಾದ್ವೈ ತ” ವೆನಿಸಿದೆ. ಶಕ್ತಿವಿಶಿಷ್ಟನಾದ ಪರಶಿವನು ಲೀಲೆಗಾಗಿ ʼʼಏಕೋಹಂ ಬಹುಸ್ಯಾಂ ಪ್ರಜಾಯೇಯ” ಎಂಬ ಉಪನಿಷನ್ಮಂತ್ರದಂತೆ ತಾನೊಬ್ಬನೇ ಇರುವದು ಸರಿಯಲ್ಲ ; ನಾನು ಬಹಳ ವಿಸ್ತಾರವಾಗಬೇಕೆಂಬ ಸಂಕಲ್ಪ ಮಾಡಲಾಗಿ ಉಪಾಸ್ಯ ಮತ್ತು ಉಪಾಸಕ ಭೇದದಿಂದ ಲಿಂಗ ಹಾಗೂ ಅಂಗವೆಂದು ಎರಡು ತೆರನಾಗುವದು. ಇಲ್ಲಿ ಲಿಂಗವು ಉಪಾಸ್ಯವಾದರೆ, ಅಂಗವು ಉಪಾಸಕವೆನಿಸುವದು. ಉಪಾಸ್ಯವೆಂದರೆ ಪೂಜ್ಯ ವಸ್ತು, ಉಪಾಸಕನೆಂದಾದರೆ ಪೂಜ್ಯ ವಸ್ತುವನ್ನು ಪೂಜಿಸುವವನು. ಈ ವಿಚಾರವನ್ನು ಸಿದ್ಧಲಿಂಗ ಯತಿಗಳು ವಿಸ್ತಾರವಾಗಿ ತಮ್ಮ ವಚನದಲ್ಲಿ ವಿವರಿಸಿರುವರು.

ಷಟ್ ಸ್ಥಲದ ವಿಕಾಸ :

ಆ ನಿಃಕಲ ಶಿವತತ್ವ ತಾನೊಂದೆ

ತನ್ನ ಶಕ್ತಿಯ ಚಲನೆ ಮಾತ್ರದಿಂದ

ಒಂದೆರಡಾಯಿತು ನೋಡಾ.

ಅದರೊಳಗೆ ಒಂದು ಲಿಂಗಸ್ಥಲ ಮತ್ತೊಂದು ಅಂಗಸ್ಥಲ

ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕವೆಂದು

ವರ್ತಿಸುತ್ತಿಹುದು ನೋಡಾ.

ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು

ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು

ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು.

ಶಕ್ತಿಯೇ ಪ್ರವೃತ್ತಿಯೆನಿಸಿತ್ತು

ಭಕ್ತಿಯೇ ನಿವೃತ್ತಿಯೆನಿಸಿತ್ತು

ಶಕ್ತಿ-ಭಕ್ತಿಯೆಂದೆರೆಡು ಪ್ರಕಾರವಾಯಿತ್ತು ಶಿವನ ಶಕ್ತಿ

ಲಿಂಗವಾರು ತೆರನಾಯಿತು, ಅಂಗವಾರು ತೆರನಾಯಿತ್ತು

ಶಕ್ತಿಯಾರು ತೆರನಾಗಿತ್ತು, ಭಕ್ತಿಯಾರು ತೆರನಾಗಿತ್ತು

ಅದು ಹೇಂಗೆಂದಡೆ

 ಮೊದಲಲ್ಲಿ ಲಿಂಗ ಮೂರು ತೆರನಾಗಿತ್ತು

ಅದು ಹೇಂಗೆಂದಡೆ

 ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು

ಮೂರು ತೆರನಾಗಿತ್ತು

ಅಂಗವೂ ಮೂರು ತೆರನಾಯಿತ್ತು, ಅದು ಹೇಂಗೆಂದಡೆ

ಯೋಗಾಂಗವೆಂದು, ಭೋಗಾಂಗವೆಂದು, ತ್ಯಾಗಾಂಗವೆಂದು

ಅಂಗವು ಮೂರು ತೆರನಾಯಿತು

ಈ ತೆರನಾಗಿ ಷಟ್‌ಸ್ಥಲದ ವಿಕಾಸವು ವಿಸ್ತಾರವಾದುದನ್ನು ಅವಲೋಕಿಸಬಹುದು. ಪರಶಿವ ಲೀಲಾವಿಲಾಸಕ್ಕಾಗಿ ಉಪಾಸ್ಯ ಲಿಂಗವೆಂದು ಉಪಾಸಕ ಅಂಗವೆಂದು ಎರಡಾಯಿತು. ಎರಡಾದುದು ಮೂರು ಮೂರು ತೆರನಾಗುವದು. ಪ್ರತಿಯೊಬ್ಬ ಮಾನವನಿಗೆ ದೇಹವು ಸ್ಥೂಲ, ಸೂಕ್ಷ್ಮ, ಕಾರಣವೆಂದು ಮೂರರ ಅನುಭವವಾಗುವದು. ಕಾಣುವ ಶರೀರವೆ ಸ್ಥೂಲವು ನಿದ್ರಾವಸ್ಥೆಯಲ್ಲಿ ವ್ಯಕ್ತವಾಗುವದೇ ಸೂಕ್ಷ್ಮ ಶರೀರ, ಸುಷುಪ್ತ್ಯಾವಸ್ಥೆಯಲ್ಲಿ ಗೋಚರವಾಗುವದೇ ಕಾರಣ ಶರೀರ. ಮೂರು ಶರೀರಗಳಲ್ಲಿ ಅಂಟಿಕೊಂಡ ಕಾರ್ಮಿಕ ಮಲ, ಮಾಯಾಮಲ, ಆಣವ ಮಲಗಳೆಂಬ ಮೂರು ದೋಷಗಳು ಮೂರು ಶರೀರದಲ್ಲಿ ಮನೆ ಮಾಡಿರುವುದನ್ನು ಸದ್ಗುರುನಾಥನು ಮೂರು ದೀಕ್ಷೆಗಳಿಂದ ಪರಿಹರಿಸಿದಾಗ ಜೀವಾತ್ಮನು ಅಂಗನೆನಿಸುವನು. ಸ್ಥೂಲ ಶರೀರವು ತ್ಯಾಗಾಂಗವಾದರೆ, ಸೂಕ್ಷ್ಮ ಶರೀರ ಭೋಗಾಂಗವೆನಿಸುವದು. ಕಾರಣ ಶರೀರವು ಯೋಗಾಂಗವೆನಿಸುವದು. ಈ ಮೂರು ಅಂಗಗಳಿಗೆ ಕ್ರಮವಾಗಿ ಇಷ್ಟಲಿಂಗ-ಪ್ರಾಣಲಿಂಗ- ಭಾವಲಿಂಗಗಳನ್ನು ಗುರು ಕರುಣಿಸುತ್ತಾನೆ. ಮೂರಂಗಗಳು ಎರಡೆರಡು ಭಾಗವಾಗಿ ಭಕ್ತ ಮಹೇಶ-ಪ್ರಸಾದಿ-ಪ್ರಾಣಲಿಂಗಿ- ಶರಣ-ಐಕ್ಯವೆಂದು ಆರಾದರೆ, ಮೂರು ಲಿಂಗಗಳು ಆಚಾರಲಿಂಗ- ಗುರುಲಿಂಗ-ಶಿವಲಿಂಗ- ಜಂಗಮಲಿಂಗ ಪ್ರಸಾದಲಿಂಗ-ಮಹಾಲಿಂಗಗಳೆ೦ದು ಆರು ತೆರನಾಗುವದೇ ಷಟ್‌ಸ್ಥಲದ ವಿಕಾಸವಾಗುವುದು. ಇದರಂತೆ ಲಿಂಗಗತ ಕಲೆ ಹಾಗೂ ಶಕ್ತಿಯು ನಿವೃತ್ತಿ ಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆಗಳೆಂದು ಆರು ಕಲೆಗಳೆನಿಸುವವು. ಶಕ್ತಿಯು- ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ, ಆದಿಶಕ್ತಿ, ಪರಾಶಕ್ತಿ-ಚಿಚ್ಛಕ್ತಿಗಳೆಂದು ಆರು ತೆರನಾಗುವದು. ಅದರಂತೆ ಅಂಗಗತ ಭಕ್ತಿಯು ಶ್ರದ್ಧಾ-ನಿಷ್ಠಾ ಅವಧಾನ-ಅನುಭವ-ಆನಂದ ಸಮರಸವೆಂದು ಷದ್ವಿಧವಾಗುವದು.

 ವೀರಶೈವ ಸಿದ್ಧಾಂತವು ಪ್ರಾಯೋಗಿಕ ದರ್ಶನ’ ವೆಂಬ ವಿಚಾರವನ್ನು ಈ ಮೊದಲು ನಿರೂಪಿಸಲಾಗಿದೆ. ಮಹಾಲಿಂಗದಿಂದ ಆಚಾರ ಲಿಂಗದ ವಿಕಾಸವನ್ನು ಯೋಗಾಂಗದಿಂದ ತ್ಯಾಗಾಂಗ ವಿಚಾರವನ್ನು ಮಾಡುವದು ಪ್ರವೃತ್ತಿ ಮಾರ್ಗವೆನಿಸಿದರೆ ಭಕ್ತನು ನಿವೃತ್ತಿ ಕಲೆಯುಳ್ಳ ಕ್ರಿಯಾಶಕ್ತಿಯುಕ್ತ ಆಚಾರ ಲಿಂಗವನ್ನು ಶ್ರದ್ಧಾಭಕ್ತಿಯಿಂದ ಅರ್ಚಿಸುವ ಮಾರ್ಗವು ನಿವೃತ್ತಿ ಪಥವೆನಿಸುವದು. ಷಟ್‌ಸ್ಥಲವು ಹಂತ ಹಂತವಾಗಿ ಸೋಪಾನಗಳನ್ನು ಹತ್ತುವದೇ ಆಗಿದೆ. ಭಕ್ತಾದಿ ಸ್ಥಲಗಳಲ್ಲಿ ಆಚಾರಾದಿ ಲಿಂಗಗಳ ಆರಾಧನೆಗೆವುದೇ ಷಟ್‌ಸ್ಥಲ ಸಾಧನವೆನಿಸುವದು. ಪ್ರವೃತ್ತಿಯಿಂದ ನಿವೃತ್ತಿಯತ್ತ ಸಾಗುವುದೇ ಷಟ್‌ಸ್ಥಲದ ಮಣಿಹ. ಅಷ್ಟೇ ಅಲ್ಲ ಸಾಧನೆಯಿಂದ ಸಾಮರಸ್ಯವನ್ನು ಸಾಧಿಸುತ್ತಾ ಅಂಗವೇ ಲಿಂಗ, ಲಿಂಗವೇ ಅಂಗ, ಲಿಂಗವೇ ತಾನಾಗುವುದು ಷಟ್‌ಸ್ಥಲದ ಮುಖ್ಯ ಧ್ಯೇಯ.

೧. ಭಕ್ತಸ್ಥ

ಪರಶಿವನ ಷಟ್‌ಶಕ್ತಿಗಳ ಸಂಕೋಚದಿಂದ ಜೀವಿಗಳಾಗಿ ಪರಿಣಮಿಸಿದರೆ; ಆ ಷಟ್‌ಶಕ್ತಿಗಳ ವಿಕಾಸವೇ ಷಟ್‌ಸ್ಥಲದ ಸಾಧನೆ. ಪರಮಾತ್ಮನ ಶಕ್ತಿ ಸಂಕೋಚತನವುಳ್ಳ ಜೀವಾತ್ಮನು ಷಟ್‌ಶಕ್ತಿಗಳ ಆವಿಷ್ಕಾರ ಮಾಡಿಕೊಳ್ಳುತ್ತಾ ಸಾಧನೆಯನ್ನು ಪ್ರಾರಂಭಿಸುವನು. ಈ ಜೀವಾತ್ಮನು ಶ್ರೀಗುರು ಕೃಪೆಯಿಂದ ಇಷ್ಟಲಿಂಗವನ್ನು ಪಡೆದಾಗ ಪ್ರಾಣಸ್ವರೂಪವೆನಿಸಿದ ಪಂಚಾಚಾರಗಳು ಮುಹೂರ್ತಗೊಳ್ಳುವವು. ಇಷ್ಟಲಿಂಗ ಧಾರಣೆಯಿಂದ ಲಿಂಗಾಚಾರವು ಅಳವಡುವುದು. ಲಿಂಗಾಚಾರಿಯಾದ ಭಕ್ತನು ಸದಾಚಾರಗಳನ್ನು ತಪ್ಪದೆ ಆಚರಿಸಬೇಕು. ಸಾಮಾನ್ಯವಾಗಿ ಯಾವುದೊಂದು ಕಾರ್ಯಪ್ರವೃತ್ತನಾಗುವ ಮಾನವನ ಉದ್ದೇಶ ಸಂತೃಪ್ತಿಯನ್ನು ಪಡೆಯುವುದೇ ಆಗಿರುವಂತೆ; ಸಾಗರದಿಂದ ಆವಿಯಾಗಿ ಬೇರ್ಪಟ್ಟ ನೀರಿನ ಹನಿಯು ಪುನಃ ಸಾಗರ ಸೇರುವವರೆಗೆ ಸಮಾಧಾನವಿಲ್ಲದೆ ಚಂಚಲವಾಗಿರುತ್ತದೆ. ಆವಿಯಾಗಿ ಮೇಲೆ ಹೋಗಿ ಮೋಡವಾದರೂ ಅದಕ್ಕೆ ಸಮಾಧಾನವಿರುವುದಿಲ್ಲ. ಇತ್ತಿಂದತ್ತ ಅತ್ತಿಂದಿತ್ತ ಸಂಚರಿಸುತ್ತಲೇ ಇರುವದು. ಗುಡುಗುಡಿಸಿ ಅರ್ಭಟಿಸುವದು ಮಳೆಯ ಹನಿಯಾಗಿ ಭೂಮಿಯತ್ತ ಧಾವಿಸುವಾಗ ಮತ್ತಷ್ಟು ತೀವ್ರತೆಯಿರುತ್ತದೆ. ಆ ತೀವ್ರತೆ ಮುಂದುವರೆದು ಹಳ್ಳಕೊಳ್ಳವಾಗಿ ನದಿಯ ಮೂಲಕ ಸಾಗರ ಸೇರಿ ಶಾಂತಿಯನ್ನು ಹೊಂದುವದು. ನಿರಂತರ ಚಲನಶೀಲವಾದ ನೀರು ಸ್ವಚ್ಛವಾಗಿರುವಂತೆ ಸಾಧನ ಶೀಲನಾದ ಸದ್ಭಕ್ತನು ಅತ್ಯಂತ ಶುದ್ಧನೂ ಪವಿತ್ರನೂ ಆಗಿ ಪರಿಣಮಿಸುವನು.

 ಷಟ್‌ಸ್ಥಲದಲ್ಲಿ ಪ್ರಥಮ ಸ್ಥಲವೇ ಭಕ್ತಸ್ಥಲ. ಇದು ತ್ಯಾಗಾಂಗದ ಪ್ರಥಮ ಹಂತವೆನಿಸಿದೆ. ತ್ಯಾಗಾಂಗದಲ್ಲಿ ಭಕ್ತಸ್ಥಲ ಮತ್ತು ಮಹೇಶ್ವರ ಸ್ಥಲಗಳೆಂದು ವಿಭಾಗವಾಗಿವೆ. ಆದಯ್ಯ ಶರಣನು “ತನುಗುಣವಳಿದಲ್ಲಿ ತ್ಯಾಗಾಂಗ” ಎಂದು ತ್ಯಾಗಾಂಗದ ವ್ಯಾಖ್ಯಾನ ಮಾಡಿರುವನು. ತನುವಿನಲ್ಲಿ ಅನಂತ ಗುಣಗಳು-ದುರ್ಗುಣಗಳು ಸಂಭವಿಸುತ್ತವೆ.

 ಅವಿರಳ ಜ್ಞಾನಿ ಶ್ರೀ ಚನ್ನಬಸವಣ್ಣನವರು “ಕರಣಹಸಿಗೆ’ ಯಲ್ಲಿ ತನುವಿನಲ್ಲಿ ಉದ್ಭವಿಸುವ ಅಷ್ಟಮದಗಳನ್ನು, ಸಪ್ತವ್ಯಸನಗಳನ್ನು, ಷಡೂರ್ಮಿಗಳನ್ನು, ಅರಿಷಡ್ ವೈರಿಗಳನ್ನು, ಷಡ್‌ ಭ್ರಮೆಗಳನ್ನು ಷದ್ಭಾವ ವಿಕಾರಗಳನ್ನು, ತ್ರಿದೋಷಗಳನ್ನು, ಸದ್ಭಾವ-ದುರ್ಭಾವತ್ರಯ ಇತ್ಯಾದಿ ವಿಷಯಗಳನ್ನು ವಿವರಿಸಿರುವರು. ಇವೆಲ್ಲವುಗಳಿಗೆ ಮೂಲವಾದುದು ಅಹಂಭಾವ, ತಾನಲ್ಲದ್ದನ್ನು ತಾನೆಂದು ಭಾವಿಸಿ ಅಭಿಮಾನ ಪಡುವ ಚಿತ್ತವೃತ್ತಿಗೆ ಅಹಂಕಾರವೆನ್ನುವರು. ಕುಲ-ಛಲ ಧನ-ರೂಪ-ಯೌವನ- ವಿದ್ಯೆ-ರಾಜ್ಯ-ತಪಸ್ಸುಗಳೆಂಬ ಅಷ್ಟಮದಗಳು, ಮದವೆಂದರೆ ಮತ್ತು, ಅಮಲು, ಸೊಕ್ಕು, ಗರ್ವವೆಂದು ಕೋಶಕಾರರು ತಿಳಿಸಿರುವರು. ನಾವು ಉತ್ತಮ ಕುಲದಲ್ಲಿ ಜನಿಸಿದವರೆಂಬುದು, ಉಳಿದವರು ನಮಗೆ ಸರಿಯಲ್ಲವೆ೦ಬ ಭಾವವೇ ಮದ, ಛಲವೆ೦ದರೆ ಹಟ, ಯಾವುದೇ ವಿಷಯದಲ್ಲಾದರೂ ನನ್ನದೇ ಮೇಲೆಂಬ ಹಟವೇ ಛಲ ಮದ, ಶ್ರೀಮಂತಿಕೆ ಹೆಚ್ಚಾದಾಗ ಧನಮದ ಆವರಿಸುವದು. ನನ್ನ ರೂಪ ಲಾವಣ್ಯಕ್ಕೆ ಯಾರೂ ಸರಿಯಿಲ್ಲವೆಂಬುದು ರೂಪಮದ, ವಯಸ್ಸಿಗೆ ಬಂದವನಲ್ಲಿ ಯೌವನಮದ ಸಹಜವಾಗುವದು. ನನ್ನ ಪಾಂಡಿತ್ಯಕ್ಕೆ ಬೇರಾರೂ ಸಮಾನರಲ್ಲವೆಂಬುದು ವಿದ್ಯಾಮದ, ಇಂದಿನ ದಿನಮಾನಗಳಲ್ಲಿ ಪ್ರಜಾಪ್ರಾತಿನಿಧ್ಯದ ಅಧಿಕಾರವೇ ರಾಜ್ಯಮದ, ಸನ್ಯಾಸಿಗಳಿಗೆ ತಪಸ್ಸು, ಅನುಷ್ಠಾನದ ಮದ ಆವರಿಸುವದು.  ಅಭಕ್ಷ್ಯಭಕ್ಷಣ, ಅಪೇಯಪಾನ ಜೂಜಾಟ, ವೇಶ್ಯಾಗಮನ, – ಕಠೋರ ಮಾತನಾಡುವದು, , ಬೇಟೆಯಾಡುವದು, ಕಳವು ಮಾಡುವದು, ಇವೆಲ್ಲವೂ ತನುವಿನಿಂದಲೇ ನಡೆಯುತ್ತವೆ. ಹಸಿವು, ನೀರಡಿಕೆ, ದುಃಖ, ವ್ಯಾಮೋಹ, ಮುಪ್ಪು- ಮರಣಗಳೆ ದೇಹಕ್ಕೆ ಆವರಿಸುವ ತೆರೆಗಳು. ಕಾಮ, ಕ್ರೋಧ, ಲೋಭ, ಮೋಹ, ಮದ-ಮತ್ಸರಗಳು ಅನಿಮಿತ್ತವಾಗಿ ತನುವಿನಲ್ಲಿ ಉದ್ಭವಿಸುವ ವೈರಿಗಳು, ಜಾತಿ-ವರ್ಣ- ಆಶ್ರಮ-ಕುಲ-ಗೋತ್ರ-ನಾಮಗಳೆಂಬ ಆರು ವಿಕಾರಗಳಿಂದ ತನು ಕೂಡಿದೆ. ತಾಯಿ ಹೊಟ್ಟೆಯಲ್ಲಿ ಗರ್ಭವುಂಟಾಗುವದು, ಗರ್ಭಾವಾಸದಿಂದ ಹೊರ ಬರುವದು, ಕ್ರಮೇಣ ಪರಿಣಾಮ ಹೊಂದುವದು, ಬಹಳವಾಗಿ ಬೆಳೆಯುವದು, ಮುಪ್ಪಿನಿಂದ ಕುಸಿಯುವದು, ಕೊನೆಗೆ ಸಾಯುವದು. ಅವಿದ್ಯೆ-ಅಸ್ಮಿತೆ- ರಾಗ-ದ್ವೇಷ-ಅಭಿನಿವೇಶಗಳೆಂಬ ಪಂಚಕ್ಲೇಶಗಳಿಂದ ಕೂಡಿದೆ. ಸತ್ವ-ರಜ-ತಮಸ್ಸಗಳೆಂಬ ಗುಣತ್ರಯಗಳಿವೆ. ಈ ಮೂರು ಗುಣಗಳಿಂದ ಮೂರಹಂಕಾರಗಳುಂಟಾಗುತ್ತವೆ. ಅಧ್ಯಾತ್ಮಿಕ-ಆದಿಭೌತಿಕ, ಆದಿದೈವಿಕಗಳೆಂಬ ತಾಪತ್ರಯಗಳು ಬರುತ್ತವೆ. ಜಾಗ್ರ-ಸ್ವಪ್ನ-ಸುಷುಪ್ತಿಗಳೆಂಬ ಮೂರವಸ್ಥೆಗಳು ಜರುಗುತ್ತವೆ. ಶರೀರವು ವಾತ-ಪಿತ್ತ-ಶ್ಲೇಷಗಳೆಂಬ ಅನೇಕ ರೋಗಗಳಿಗೆ ತುತ್ತಾಗುವದು. ಸದ್ಭಾವನೆಗಳು- ದುರ್ಭಾವನೆಗಳು ಶರೀರದಲ್ಲಿ ಕಾಣಬರುತ್ತವೆ. ಹೀಗೆ ಅನೇಕ ಗುಣಗಳಿಗೆ ಆಕರವಾಗಿರುವ ದೇಹದ ಗುಣಗಳನ್ನು ಭಕ್ತನಾದವನು ಕಳೆದುಕೊಳ್ಳಬೇಕಾಗುವದು. ಸ್ಪಟಿಕದ ಘಟದಂತೆ ಒಳಹೊರಗೂ ಶುದ್ಧನಾದರೆ ಮಾತ್ರ ಭಕ್ತತನ ಬರುವದು. ಬಸವಣ್ಣನವರು-

 ಒಳಗೆ ಕುಟಿಲ, ಹೊರಗೆ ವಿನಯವಾಗಿ

 ಭಕ್ತರೆನಿಸಿಕೊಂಡವರ ಬಲ್ಲನೊಲ್ಲನಯ್ಯಾ ಲಿಂಗವು,

ಅವರು ಸತ್ಪಥಕ್ಕೆ ಸಲ್ಲರು ಸಲ್ಲರಯ್ಯಾ,

ಒಳಹೊರಗೊಂದಾಗದವರಿಗೆ

ಅಳಿಯಾಶೆದೋರಿ ಬೀಸಾಡುವನವರ

ಜಗದೀಶ ಕೂಡಲಸಂಗಮದೇವಾ

ಎಂಬುದಾಗಿ ಭಕ್ತನ ಲಕ್ಷಣವನ್ನು ನಿರೂಪಿಸಿರುವರು. ಭಕ್ತನಾದವನು ಒಳಹೊರಗೆ ಶುದ್ಧನಾಗಿರಬೇಕು. ಬಾಹ್ಯದಲ್ಲಿ ವಿನಯವ೦ತಿಕೆ ತೋರಿ ಅಂತರಂಗದಲ್ಲಿ ಕುಟಿಲ ಕುಹಕತನ ದುರ್ವ್ಯಸನಗಳನ್ನಿರಿಸಿಕೊಂಡರೆ ಭಕ್ತನೆನಿಸುವದಿಲ್ಲ. ಎಲ್ಲವನ್ನು ಬಲ್ಲ ಲಿಂಗತಂದೆಯು ಇಂಥವನಿಗೆ ಕೃಪೆ ತೋರುವುದಿಲ್ಲ. ಇವರು ಸನ್ಮಾರ್ಗಕ್ಕೆ ಸಲ್ಲುವುದೂ ಇಲ್ಲ. ಭಕ್ತನು ಒಳಗೂ ಹೊರಗೂ ಒಂದಾಗಬೇಕು. ಇಲ್ಲದಿದ್ದರೆ ಲೌಕಿಕ ಆಶಾಪಾಶದಲ್ಲಿ ಮುಳುಗಿಸಿ ಶಿವನು ಭವ ಬಂಧನಕ್ಕೆ ನೂಕುವನು. ಶಿವಾನುಭವಿ ಮೈಲಾರ ಬಸವಲಿಂಗ ಶರಣರು ಸೂತ್ರ ಬದ್ಧವಾಗಿ ಭಕ್ತನ ಲಕ್ಷಣವನ್ನು ನಿರೂಪಿಸಿದ್ದಾರೆ.

ಗುರುಸೇವಾ ಭೃತ್ಯತ್ವ-ಚಿರಲಿಂಗದೇಕತ್ವ

ವರಸತ್ಕಾಯಕ ಉರೆ ದಾಸೋಹವೆ ಭಕ್ತ-

ನಿರವೆಂದ ಗುರುವೆ ಕೃಪೆಯಾಗು

ಭಕ್ತನ ಹೊರಬಾಳು ಇಲ್ಲಿದೆ. ಭಕ್ತನು ಗುರುಸೇವೆ, ಕಿಂಕರ ಭಾವನೆ, ಗುರು-ಲಿಂಗ- ಜಂಗಮರಲ್ಲಿ ಅಭಿನ್ನತೆ, ಕಾಯಕ ನಿಷ್ಠೆ ಮತ್ತು ದಾಸೋಹಂಭಾವಗಳನ್ನು ಮೈಗೂಡಿಸಿಕೊಳ್ಳಬೇಕಾಗುವದು. ಭಕ್ತನು ಕಾಯಕ ನಿಷ್ಠನಾಗಿ ದಾಸೋಹಂಭಾವಿಯಾಗಬೇಕು. ಕಾಯಕವಿಲ್ಲದ ಕೈಯಿಂದ ಲಿಂಗವನ್ನು ಪೂಜಿಸಲು ಯೋಗ್ಯವಾಗುವದಿಲ್ಲ. ಅಂತೆಯೇ ಬಸವ ಮಹಾನುಭಾವರು ಇನ್ನೊಂದಡೆ

ಮಾಡುವ ನೀಡುವ ಭಕ್ತನ ಕಂಡಡೆ

ನಿಧಿನಿಧಾನವ ಕಂಡಂತಾಯಿತ್ತು

ಪಾದೋದಕ-ಪ್ರಸಾದ ಜೀವಿಯ ಕಂಡಡೆ

ಹೋದ ಪ್ರಾಣ ಬಂದಂತಾಯಿತ್ತು

ಎಂದು ಭಕ್ತನ ಕರ್ತವ್ಯ ಕರ್ಮವನ್ನು ಚನ್ನಾಗಿ ನಿರೂಪಿಸಿರುವರು. ಕಾಯಕ ಮಾಡುತ್ತಾ ದಾಸೋಹ ಗೈಯುವುದೆ ಭಕ್ತತನಕ್ಕೆ ಭೂಷಣವೆಂತಲೂ, ಆತನೇ ಸಮಾಜದಲ್ಲಿ ನಿಧಿ-ವಿಧಾನ, ಗುರುಲಿಂಗ ಜಂಗಮರ ಪಾದೋದಕ ಪ್ರಸಾದಕ್ಕಾಗಿ ಭಕ್ತನು ಸದಾ ಬಯಸುವಂತಾಗಬೇಕು.

ಷಟ್‌ಸ್ಥಲದಲ್ಲಿ ಮೊದಲನೆಯ ಮೆಟ್ಟಿಲು ಭಕ್ತಸ್ಥಲ, ಎಲ್ಲ ಸ್ಥಲಗಳಿಗೆ ಅದುವೇ ಆಧಾರಭೂತವಾದುದು. ಷಟ್‌ಸ್ಥಲವು ಕೇವಲ ತಾತ್ವಿಕ ಬೋಧನೆಯನ್ನಷ್ಟೇ ಕಲ್ಪಿಸುವದಿಲ್ಲ, ಭೌತಿಕದಲ್ಲಿ ಬಾಳುವ ಕಲೆಯನ್ನು ಸಹ ತಿಳಿಸುತ್ತದೆ. ಭಕ್ತನಿಗೆ ಆಚಾರ ಲಿಂಗವೇ ಆರಾಧ್ಯ ವಸ್ತು, ಶ್ರದ್ಧಾಭಕ್ತಿಯೇ ಮೂಲ ದ್ರವ್ಯವಾಗಬೇಕು. ಭಕ್ತಸ್ಥಲದಲ್ಲಿ ದ್ವೈತಾದ್ವೈ ತವಿದೆ. ಆತ್ಮ-ಪರಮಾತ್ಮರ ದರ್ಶನವಿದೆ. ಪೂಜ್ಯ-ಪೂಜಕ ಭಾವವಿದೆ. ಶಕ್ತಿ-ಭಕ್ತಿಗಳ ಸಮ್ಮಿಲನವಿದೆ. ಸಾಧನೆ-ಸಿದ್ಧಿಗೆ ಅವಕಾಶವಿದೆ. ಕ್ರಿಯಾಶಕ್ತಿ ಜಾಗ್ರತವಾಗಿ ನಿವೃತ್ತಿ

ಕಲೆಯುಳ್ಳ ಆಚಾರ ಲಿಂಗವನ್ನು ಅತ್ಯಂತ ಶ್ರದ್ಧೆಯಿಂದ ಆರಾಧಿಸಬೇಕು. ಮೇಲೆ ವಿವರಿಸಿದ ಕಾಯಗುಣಗಳಳಿದು ಶಿವಗುಣಗಳು ಮೈಗೂಡಬೇಕು, ಆಚಾರವೇ ಸ್ವರ್ಗ, ಅನಾಚಾರವೇ ನರಕವೆಂಬ ಭಾವ ಗಟ್ಟಿಗೊಳ್ಳಬೇಕು.

 ಕಂಡಭಕ್ತರಿಗೆ ಕೈಮುಗಿವಾತನೇ ಭಕ್ತ

ಮೃದು ವಚನವೇ ಸಕಲ ಜಪಂಗಳಯ್ಯಾ

ಮೃದು ವಚನವೇ ಸಕಲ ತಪಂಗಳಯ್ಯಾ

ಸದುವಿನಯವೇ ಸದಾಶಿವನ ಒಲುಮೆಯಯ್ಯಾ

ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ

ಲಿಂಗ ಧರಿಸಿದ ಭಕ್ತನು ಅಂಗದ ಮೇಲೆ ಲಿಂಗವುಳ್ಳ ಭಕ್ತರನ್ನು ಕಂಡರೆ ಕೈಮುಗಿಯಬೇಕು. ಬಡವ ಶ್ರೀಮಂತನೆನ್ನದೆ ವ್ಯಕ್ತಿ ಗೌರವ ನೀಡುವದೇ ಭೃತ್ಯಾಚಾರ, ಮೃದು ವಚನಗಳಿಂದ ಮಾತನಾಡುವದೆ ಜಪ-ತಪವೆನಿಸುವದು, ಸದುವಿನಯವೇ ಸದಾಶಿವನ ಕೃಪೆಗೆ ಕಾರಣವಾಗುವದು. ಹೀಗೆ ಸಾಧಕನು ಭಕ್ತಸ್ಥಲವನ್ನು ಆಚಾರನಿಷ್ಠನಾಗಿ ಶ್ರದ್ಧೆಯಿಂದ ಕಾಯಕ-ದಾಸೋಹದಲ್ಲಿ ತೊಡಗಿಸಿಕೊಳ್ಳಬೇಕು.

೨. ಮಾಹೇಶ್ವರ ಸ್ಥಲ

ಶ್ರದ್ಧಾಭಕ್ತಿಯುಳ್ಳ ಭಕ್ತನು ಆಚಾರ ಲಿಂಗದಲ್ಲಿ ನಿಷ್ಠೆಯನ್ನು ಬೆಳೆಸಿಕೊಳ್ಳುವದರಿಂದ ಮಾಹೇಶ್ವರ ಸ್ಥಲವನ್ನು ಪ್ರವೇಶಿಸುವನು. ಇದು ಷಟ್‌ಸ್ಥಲದ ಎರಡನೇ ಹಂತ. ನೆಲತತ್ತ್ವಾಂಗನಾದ ಭಕ್ತನು ಭೂಮಿಯ ಸಹನಶೀಲತೆ, ತಾಳ್ಮೆ, ಕಿಂಕರತ್ವ ಗುಣಗಳನ್ನು ಸಂಪಾದಿಸಿಕೊಂಡಂತೆ; ಜಂಗಮವಾದ ಮಹೇಶ್ವರನು ನೀರಿನಂತೆ ಪರಿಶುದ್ಧತೆಯನ್ನು ಮತ್ತು ಸಚ್ಛಾರಿತ್ರ್ಯವನ್ನು ತನ್ನದಾಗಿಸಿಕೊಳ್ಳಬೇಕಾಗುವದು. ಇಲ್ಲಿ ಸದಾಚಾರ ಸುವಿಚಾರಗಳು ಪ್ರಾಮುಖ್ಯವಾಗುವವು. ಇದರಿಂದ ಸದ್ಭಕ್ತನಲ್ಲಿ ವ್ಯಕ್ತಿತ್ವ ವಿಕಸನವಾಗುವದು. ವ್ಯಕ್ತಿತ್ವದ ಹಿರಿಮೆ-ಗರಿಮೆಗಳನ್ನು ಬೆಳೆಸಿಕೊಳ್ಳುತ್ತ ಗುರುಲಿಂಗದ ಆರಾಧಕನಾಗಬೇಕಾಗುವದು.

 ಷಟ್‌ಸ್ಥಲ ಸಿದ್ಧಾಂತದಲ್ಲಿ ವಿಶೇಷವಾಗಿ ಭಕ್ತಿಯೇ ಜೀವಾಳವೆನಿಸುತ್ತದೆ. ಷಟ್‌ಸ್ಥಲಾತ್ಮಕ ಭಕ್ತಿಯ ವಿಕಾಸವಾಗುವದರಿಂದ ಭಕ್ತನಲ್ಲಿ ಶಕ್ತಿಯ ಸಂಚಯವಾಗುವದು. ಸ್ಥಲಪದ ವಾಚ್ಯನಾದ ಪರಶಿವನು ಸ್ವವಿಮರ್ಶಾರೂಪ ಶಕ್ತಿ ವಿಶಿಷ್ಟವಾಗಿ ಸ್ವಲೀಲೆಯಿಂದ ಶಿವ+ಶಕ್ತಿಗಳೆಂದು ಎರಡಾದಂತೆ, ಶಿವನು ಲಿಂಗ ಅಂಗವೆಂದು ಎರಡಾದುದನ್ನು ಅವಲೋಕಿಸಲಾಗಿದೆ. ಅದರಂತೆ ಶಕ್ತಿಯೂ ಶಕ್ತಿ ಭಕ್ತಿಗಳೆಂದು ಎರಡಾಗುವದು. ಶಿವನೊಡನೆ ತಾದಾತ್ಮ ಸಂಬಂಧವುಳ್ಳ ಶಿವನ ಸಹಧರ್ಮಿಣಿ ಶಕ್ತಿಯು ಭಕ್ತನ ಹಿತಕ್ಕಾಗಿ ಲಿಂಗಸ್ಥಲವನ್ನಾಶ್ರಯಿಸಿ, ಕಲೆಯೆನಿಸಿದರೆ ಅಂಗಸ್ಥಲವನ್ನಾಶ್ರಯಿಸಿ ಭಕ್ತಿಯೆನಿಸುವದು. ಷಟ್‌ಸ್ಥಲ ಮಾರ್ಗದಲ್ಲಿ ಭಕ್ತಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಸಾಹಿತ್ಯದಲ್ಲಿ ಸ್ಥಾಯಿಭಾವಗಳಿಗೆ ಪ್ರಾಮುಖ್ಯತೆಯಿದ್ದಂತೆ ಷಟ್‌ಸ್ಥಲದ ಸ್ಥಾಯಿಭಾವವೇ ಭಕ್ತಿಯು. ಷಟ್‌ಸ್ಥಲ ಸೋಪಾನಗಳನ್ನು ಮೇಲೇರಿಸುವ ಆಧಾರ ಸ್ಥಂಭವೇ ಭಕ್ತಿ, ಈ ಭಕ್ತಿ ಶಕ್ತಿಯು ಸಂಸಾರದ ತೊಡಕಿನ ಬಂಧನಗಳನ್ನು ನಾಶಗೊಳಿಸುವದು. ಅಜ್ಞಾನ ಕತ್ತಲೆಯನ್ನು ಹೊಡೆದೊಡಿಸುವದು. ಭಕ್ತಿ ಮಾರ್ಗವು ಪುರಾತನವಾದುದು. ನಾರದ ಮುನಿಯು ಭಕ್ತಿಯನ್ನು ಕುರಿತು “ಭಲ್ತಿಃ  ಸಾ ಪ್ರೇಮ ರೂಪಾʼʼ ಪ್ರೇಮರೂಪವಾದುದೇ ಭಕ್ತಿ ಅರ್ಥಾತ್ ಪ್ರೇಮವೇ ಭಕ್ತಿಯು. ಪ್ರೇಮವೇ ಸಂಬಂಧವನ್ನು ಕಲ್ಪಿಸುತ್ತದೆ. ಸಂಬಂಧವು ಎರಡು ತೆರನಾಗಿದೆ. ಒಂದು ರಕ್ತಗತವಾದುದು. ಇದು ಸ್ವಾರ್ಥಪರವಾದುದು. ಇನ್ನೊಂದು ಭಾವ ಸಂಬಂಧ. ಇದು ಆತ್ಮೀಯವಾದುದು. ರಕ್ತಸಂಬಂಧದಲ್ಲಿ ತಂದೆ-ತಾಯಿ-ಅಕ್ಕ-ತಮ್ಮ-ಅಣ್ಣ-ತಂಗಿ-ಅತ್ತೆ-ಮಾವ-ಮೈದುನ ಇತ್ಯಾದಿ ರಕ್ತ ಸಂಬಂಧವು ಶಾರೀರಿಕ ಸಂಬಂಧವಾದರೆ, ದೇವ-ಭಕ್ತ, ಗುರು-ಶಿಷ್ಯ-ಸ್ನೇಹಿತ-ಇವೆಲ್ಲವೂ ಭಾವ ಸಂಬಂಧಗಳು, ಭಕ್ತ ಭಗವಂತರ ನಡುವೆ ಭಕ್ತಿಯು ಅತ್ಯಂತ ಆತ್ಮೀಯ ಭಾವವನ್ನು ಉಂಟು ಮಾಡುವದು. ಶ್ರವಣ

ಕೀರ್ತನಾದಿ ನವವಿಧ ಭಕ್ತಿಗಳಾದಂತೆ ಷಡ್ವಿಧ ಭಕ್ತಿಯು ವಿಶಿಷ್ಟವಾದುದು. ಲಿಂಗದ ಹೊರತು ಬೇರಾವ ದೇವರಿಲ್ಲವೆಂದು ಶ್ರದ್ಧೆಯು ನಿಷ್ಟೆಯು ಕರಿಗೊಳ್ಳುವದು. ಮಾಹೇಶ್ವರನಿಗೆ ನಿಷ್ಟಾಭಕ್ತೆಯೆ ಸ್ಥಾಯಿಭಾವ. ಈ ಸ್ಥಲದ ವ್ಯಾಖ್ಯಾನವನ್ನು ಮೈಲಾರ ಬಸವಲಿಂಗ ಶರಣರು-

ಗುರು ಲಿಂಗ ನಿಷ್ಠೆಯಿಂ |

ಪರದೈವ ಮೊದಲಾದ

ದುರಿತ ಪಂಚಕವು –

ನಿರಸನವಾಗೆ ಮಾಹೇಶ್ವರನೆಂದ ಗುರುವೆ ಕೃಪೆಯಾಗು

ಎಂಬುದಾಗಿ ಸೂತ್ರಬದ್ಧವಾಗಿ ಮಾಡಿರುವರು. ಆಚಾರ ಲಿಂಗದಲ್ಲಿ ಶ್ರದ್ಧೆಯು ಬೆಳೆದರೆ ಗುರುಲಿಂಗದಲ್ಲಿ ನಿಷ್ಠಾಭಕ್ತಿಯು ದೃಢವಾಗಬೇಕು. ಇಷ್ಟಲಿಂಗವನ್ನಲ್ಲದೆ ಅನ್ಯ ದೈವಗಳ ಆಸಕ್ತಿಯನ್ನು ಸಂಪೂರ್ಣವಾಗಿ ತೊರೆಯಬೇಕು. ಅಂದರೆ ಲಿಂಗನಿಷ್ಠೆಯು ಕರಿಗೊಳ್ಳುವದು. ಪರಸ್ತ್ರೀಯರಲ್ಲಿ ರತಿ, ಪರನಿಂದೆ, ಪ್ರಾಣಿಗಳ ಹಿಂಸೆ, ಪರದ್ರವ್ಯಾಪೇಕ್ಷೆ ಮತ್ತು ತನಗಿಂತ ಭಿನ್ನವಾಗಿ ದೇವರಿದ್ದಾನೆಂಬ ಈ ಐದು ಪಾತಕಗಳನ್ನು ಸಂಪೂರ್ಣವಾಗಿ ಮನಸ್ಸಿನಿಂದ ದೂರ ತಳ್ಳಬೇಕು. ಪಂಚಪಾತಕಗಳಿಂದ ಮುಕ್ತನಾದ ಮಾಹೇಶ್ವರನ ಜೀವನ ಪರಿಶುದ್ಧವಾಗುವದು. ತೋಂಟದ ಸಿದ್ಧಲಿಂಗರು ಈ ಸ್ಥಲದ ಮರ್ಮವನ್ನು ಕೆಳಗಿನಂತೆ ವಿವರಿಸಿರುವರು.

ಅನೃತ, ಅನಾಚಾರ, ಅನ್ಯ ಹಿಂಸೆ,

ಪರಧನ, ಪರಸ್ತ್ರೀ, ಪರನಿಂದೆ ಇವ ಬಿಟ್ಟು

ಲಿಂಗನಿಷ್ಠೆಯಿಂದ ಶುದ್ಧಾತ್ಮನಾಗಿರಬಲ್ಲಡೆ

ಮಾಹೇಶ್ವರ ಸ್ಥಲವೆಂಬೆನಯ್ಯಾ

ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೆ

ಇದೇ ರೀತಿ ಮಹಾಜ್ಞಾನಿ ಚನ್ನಬಸವಣ್ಣನವರು ಹಾಗೂ ವೈರಾಗ್ಯನಿಧಿ ಮಹಾದೇವಿಯಕ್ಕನವರೂ ಮಾಹೇಶ್ವರ ಬಗೆಯನ್ನು ಬಣ್ಣಿಸಿರುವರು.

ಶಿವನ ಇಚ್ಛಾ ಶಕ್ತಿಯ ಸಂಕೋಚತನದಿಂದ ಜೀವನಲ್ಲಿ ಆಣವಮಲವೆನಿಸಿದರೆ, ಜ್ಞಾನಶಕ್ತಿಯ ಸ೦ಕೋಚತನದಿಂದ ಮಾಯಾಮಲ ಆವರಿಸುವದು. ಕ್ರಿಯಾಶಕ್ತಿಯ ಸಂಕೋಚತನದಿಂದ ಕಾರ್ಮಿಕ ಮಲವು ಅಂಟಿಕೊಳ್ಳುವದು. ಶಿವದೀಕ್ಷೆಯ ಕಾಲದಲ್ಲಿ ಶ್ರೀಗುರು ಶಿಷ್ಯನ ಮಲತ್ರಯಗಳನ್ನು ಉಪದೇಶದಿಂದ ಕಳೆದುಕೊಳ್ಳಲು ಬೋಧಿಸುವರು. ಕ್ರಿಯಾಶಕ್ತಿ, ಜ್ಞಾನಶಕ್ತಿಗಳನ್ನು ಜಾಗೃತಗೊಳಿಸಿ ಕೊಳ್ಳುವದು ಸಾಧಕನ ಸಾಧನೆಯಾಗಬೇಕು. ಕ್ರಿಯಾಶೀಲನಾಗಿ ಪ್ರವೃತ್ತಿ ಪಥದಿಂದ ನಿವೃತ್ತಿ ಕಲೆಯತ್ತ ಮುನ್ನಡೆಯುವದೆ ಷಟ್‌ಸ್ಥಲದ ಮಾರ್ಗ.

 ರಕ್ತ ಸಂಬಂಧಿಗಳಾದ ಬಂಧುಗಳು ವಿಶೇಷ ಸಂದರ್ಭಗಳಲ್ಲಿ ಬಂದುಂಡು ಹೋಗುವರಲ್ಲದೆ ಭವ ಬಂಧನವನ್ನು ಕಳೆಯಲಾರರು. ಆದರೆ ದೇವ ಸಂಬಂಧದಿಂದ ಬಂಧನವನ್ನು ಬಿಡಿಸಿಕೊಳ್ಳಬಹುದು. ವಸ್ತುತಃ ಜೀವ ಪರಮಾತ್ಮರ ಸಂಬಂಧವು ಪರಮಾರ್ಥತಃ ಅಭಿನ್ನವಾದುದೂ ಜೀವನಿಗೆ ಶಕ್ತಿಗಳ ಸಂಕೋಚತನದಿಂದ ಅಜ್ಞಾನ ಮತ್ತು ಮಲತ್ರಯಗಳು ಅಂಟಿಕೊಂಡ ಕಾರಣ ವಾಸ್ತವಿಕ ಸತ್ಯವನ್ನು ಮರೆತು ಹೋಗಿರುತ್ತಾನೆ. ಸುಜ್ಞಾನದಿಂದ ಮಲತ್ರಯಗಳನ್ನು ನಿವಾರಿಸಿಕೊಂಡು ದೇವನೊಡನೆ ಘನಿಷ್ಠ ಸಂಬಂಧವನ್ನು ಬೆಳೆಸಿಕೊಳ್ಳುವದೇ ಮಾಹೇಶ್ವರನ ಮಣಿಹ. ಇಷ್ಟಲಿಂಗವೇ ತನ್ನ ಸರ್ವಸ್ವವೆಂದರಿತು ಲಿಂಗದಲ್ಲಿ ನಿಷ್ಠೆಯನ್ನು ಬೆಳೆಸಿಕೊಳ್ಳುವದರೊಂದಿಗೆ ಸಚ್ಚಾರಿತ್ರ್ಯವನ್ನು ಸಂಪಾದಿಸಿಕೊಂಡರೆ ಗರಿಮೆ ಹೆಚ್ಚುವದು. ಲೌಕಿಕದಲ್ಲಿ ದೈಹಿಕ ಸಂಬಂಧಗಳು ಪ್ರಾರಂಭವಾಗಿ ಅಲ್ಲಿಯೇ ಕೊನೆಗೊಂಡರೆ ಅಧ್ಯಾತ್ಮಿಕವಾಗಿ ಮಾಹೇಶ್ವರನಲ್ಲಿ ಅನ್ನೋನ್ಯ ಆತ್ಮೀಯ ಸಂಬಂಧ ಬೆಳೆಯುವದು. ಅದು ಶಾಶ್ವತವೆನಿಸುವದು. ಲೌಕಿಕರು ಯಾಂತ್ರಿಕ ಜೀವನ ನಡೆಸಿ ಸಂಬಂಧಗಳಲ್ಲಿ ಏರಿಳಿತವಾಗಿ ದುಃಖಿಗಳಾಗುವರು. ಇಲ್ಲಿ ಹಾಗಲ್ಲ, ಪವಿತ್ರ ಭಾವನೆಗಳು ಬೆಳೆದು ನಿತ್ಯ ಸಂಬಂಧವನ್ನು ಪಡೆಯುವನು. ಎಲ್ಲರೂ ನನ್ನವರೆಂಬ ಭಾವನೆ ಬೆಳೆಯುವದು. ದೇವನೆ ಸರ್ವಸ್ವವೆಂಬ ಭಾವದಿಂದ ನಡೆದು ತನ್ನ ನಿಷ್ಠೆಯನ್ನು ಗಟ್ಟಿಗೊಳಿಸಿಕೊಳ್ಳುವನು. ಸ್ವಾಧಿಷ್ಠಾನ ಚಕ್ರದಲ್ಲಿ ಗುರುಲಿಂಗವನ್ನು ಜಿಹ್ವಾ ಮುಖದಲ್ಲಿ ಸುಬುದ್ಧಿ ಹಸ್ತದಿಂದ ಶ್ರದ್ಧಾ ಭಕ್ತಿಯಿಂದ ಅರ್ಚಿಸುವವನೆ ಮಾಹೇಶ್ವರನು.

೩. ಪ್ರಸಾದಿಸ್ಥಲ

ಭಕ್ತ-ಮಾಹೇಶ್ವರ ಸ್ಥಲಗಳೆರಡೂ ಒಂದುಗೂಡಿ ತ್ಯಾಗಾಂಗವೆನಿಸಿದರೆ, ಪ್ರಸಾದಿ ಮತ್ತು ಪ್ರಾಣಲಿಂಗಿಸ್ಥಲಗಳೆರಡು ಭೋಗಾಂಗದ ಭಾಗಗಳು. ಸ್ಥೂಲ ತನುವಿಗೆ ತ್ಯಾಗಾಂಗವೆಂತಲೂ, ಸೂಕ್ಷ್ಮ ತನುವಿಗೆ ಭೋಗಾಂಗವೆಂದುದು ವೀರಶೈವ ಪರಿಭಾಷೆ, ಭಕ್ತನದು ನೆಲತತ್ವ, ಮಾಹೇಶ್ವರನದು ಜಲತತ್ವ, ನೆಲತತ್ತ್ವದ ಸ್ಥೂಲ ಶರೀರದಲ್ಲಿ ಕಾಣಿಸುವ ಅಸ್ಥಿ-ಮಾಂಸ-ಚರ್ಮ-ನಾಡಿ ಮತ್ತು ರೋಮಗಳ ಪರಿಶುದ್ಧಿಯನ್ನು ಭಕ್ತನು ಸದಾಚಾರ-ಸತ್ಕ್ರಿಯೆಗಳಿಂದ ಸಾಧಿಸಿದರೆ; ಜಲತತ್ತ್ವದಿಂದಾಗುವ ರಸ-ರಕ್ತ ಮೂತ್ರ-ಸ್ವೇದ ಮತ್ತು ಶುಕ್ಲಗಳು ಮಾಹೇಶ್ವರ ಸ್ಥಲದಲ್ಲಿ ಶುದ್ಧವಾಗುತ್ತವೆ. ಸಾಮಾನ್ಯ ವೀರಶೈವನು ಜಂಗಮದೇವನಿಂದ ಅನುಗ್ರಹ ಪಡೆದು ವಿಶೇಷ ವೀರಶೈವನೆನಿಸುವನು. ವಸ್ತುತಃ ಚಿನ್ಮಯಾನುಗ್ರಹದಿಂದ ಷಟ್‌ಸ್ಥಲಾಧಿಕಾರವು ಪ್ರಾಪ್ತವಾಗುವದು. ಜಂಗಮಾನುಗ್ರಹ ಹೊಂದುವದರಿಂದ ಸ್ಥೂಲಕಾಯವು ಪ್ರಸಾದಕಾಯವೆನಿಸುವದು. ಪ್ರಸಾದಕಾಯನಾಗುವದರಿಂದ ತ್ಯಾಗಾಂಗ ಶುದ್ಧಿಯಾಗುವದು. ಇದಕ್ಕೆ ಭಕ್ತ ಮಾಹೇಶ್ವರ ಸ್ಥಲದ ಆಚರಣೆ ಅತ್ಯವಶ್ಯವಾದುದು. ಇದರಿಂದ ಪ್ರಸಾದಿ ಸ್ಥಲವು ಪ್ರಸಾದಕಾಯನಾಗಲು ಸಹಕಾರವಾಗುವದು.

 ಸತ್ಕ್ರಿಯಾಚರಣೆಗಳಿಂದ ಪ್ರತಿಯೊಬ್ಬ ವ್ಯಕ್ತಿಯು ಕಾರ್ಯಶೀಲನಾಗುವನು. ಕರ್ತವ್ಯ ದಕ್ಷತೆಯನ್ನು ಪಡೆಯುವನು. ಈ ಸಾಧಕನು ಕ್ರಿಯಾಶಕ್ತಿಯೊಡನೆ ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಂಡು ನಿವೃತ್ತಿ ಪಥದಲ್ಲಿ ಮುನ್ನಡೆದು ಪ್ರತಿಷ್ಠಾ ಕಲೆಯನ್ನು ತನ್ನದನ್ನಾಗಿಸಿಕೊಳ್ಳುವನು. ಹೀಗೆ ಷಟ್‌ಸ್ಥಲ ಸಿದ್ಧಾಂತವು ಮೆರಗು ಪಡೆಯುವದು. ಕ್ರಿಯಾಶಕ್ತಿ-ಜ್ಞಾನಶಕ್ತಿಗಳ ಸಮ್ಮಿಲನದಿಂದ ಇಚ್ಛಾಶಕ್ತಿಯು ಸಫಲವಾಗುವದು. ಕ್ರಿಯೆ ಮತ್ತು ಜ್ಞಾನಗಳು ಮೈಗೂಡಿದಾಗ ಅಂಥ ಸಾಧಕನ ಇಚ್ಛೆಗಳೆಲ್ಲ ಕೈಗೂಡುವವು. ಅವೆರಡು ಶಕ್ತಿಗಳು ಜಾಗ್ರತವಾಗದಿದ್ದರೆ ಅವನಲ್ಲಿಯ ಇಚ್ಛಾ ಶಕ್ತಿಯು ಬರಿ ಕನಸಿನಂತಾಗುವದು. ಇಚ್ಛಾಶಕ್ತಿಯಲ್ಲಿ ಸಂಕಲ್ಪ ಸಿದ್ಧಿಯು ಮೈದೋರುವದು. ಅದಕ್ಕಾಗಿ ವೀರಶೈವರು ಕ್ರಿಯಾ-ಜ್ಞಾನಗಳನ್ನು ಸಮಸಮುಚ್ಚಯದಿಂದ ಅಳವಡಿಸಿಕೊಂಡಿರುವರು. ಅವಿರಳ ಜ್ಞಾನಿ ಚನ್ನಬಸವಣ್ಣನವರು ಕ್ರಿಯಾ-ಜ್ಞಾನಗಳ ವಿವರಣೆಯನ್ನು ತಿಳಿಯುವಂತೆ ವಚನಿಸಿರುವರು.

ಕ್ರಿಯೆಯೆ ಜ್ಞಾನ, ಆ ಜ್ಞಾನವೇ ಕ್ರಿಯೆ

ಜ್ಞಾನವೆಂದಡೆ ತಿಳಿಯುವದು

ಕ್ರಿಯೆಯೆಂದಡೆ ತಿಳಿದಂತೆ ಮಾಡುವದು

ಪರಸ್ತ್ರೀಯ ಭೋಗಿಸಬಾರದೆಂಬುದೇ ಜ್ಞಾನ

ಅದರಂತೆ ಆಚರಿಸುವದೇ ಕ್ರಿಯೆ

ಅರಿತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ

ಕೂಡಲ ಚನ್ನಸಂಗಮದೇವ

ಜ್ಞಾನ ಕ್ರಿಯೆಗಳು ಸಮನ್ವಯಗೊಳ್ಳುವದರಿಂದ ವ್ಯಕ್ತಿತ್ವ ವಿಕಸನವಾಗುವದು. ಮುಖ್ಯವಾಗಿ ಕ್ರಿಯೆ ಜರುಗಬೇಕಾದರೂ ಜ್ಞಾನ ಬೇಕು. ಜ್ಞಾನ ಲಭಿಸಲು ಕ್ರಿಯೆಯನ್ನು ಮಾಡಬೇಕಾಗುವದು. ಯಾವುದೇ ನಿಷೇಧಿತ ಕಾರ್ಯವನ್ನು ಮಾಡಬಾರದೆಂಬ ಜ್ಞಾನದಂತೆ ನಡೆದರೆ ಆ ಕ್ರಿಯೆಗೆ ಅರ್ಥ ಬರುವದು. ತಿಳಿದು ತಪ್ಪು ಮಾಡುವದರಿಂದ ಅಜ್ಞಾನವು ಆವರಿಸುವದು.

 ಮಾಹೇಶ್ವರ ಸ್ಥಲದಲ್ಲಿ ನಿಷ್ಠೆಯು ಗಟ್ಟಿಗೊಳ್ಳಬೇಕು. “ನಿಶ್ಚಯೇನ ತಿಷ್ಠತೀತಿ ನಿಷ್ಠಾ” ನಿಶ್ಚಯವಾಗಿ ನಿಲ್ಲುವ ಜ್ಞಾನ ನಿಷ್ಠೆಯೆನಿಸುವದು. ಅಚಲವಾದ ಭಕ್ತಿಭಾವವೇ ನಿಷ್ಠೆಯಾಗುವದು. ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯನ್ನಾಗಿ ನಿಶ್ಚಯಿಸಿದ್ದಳು. ಯಶೋಧೆಯು ಕೃಷ್ಣನನ್ನೇ ತನ್ನ ಮಗನೆಂದು ದೃಢವಾಗಿ ನಂಬಿದ್ದಳು. ತುಳಿಸಿದಾಸನೂ ಅವನನ್ನೇ ತನ್ನ ಪುತ್ರನೆಂದು ವಾತ್ಸಲ್ಯದಿಂದ ಆರಾಧಿಸಿದನು. ಹೀಗೆ ಅನೇಕರು ಪರಮಾತ್ಮನಲ್ಲಿ ನಿಷ್ಠಾಭಕ್ತಿಯಿಂದ ಆರಾಧಿಸಿದಂತೆ ಮಾಹೇಶ್ವರನು ಗುರುಲಿಂಗವನ್ನು ನಿಷ್ಠಾಭಕ್ತಿಯಿಂದ ಅರ್ಚಿಸಿದರೂ ಪ್ರಸಾದಿ ಸ್ಥಲದಲ್ಲಿ ಅವಧಾನವಿರಬೇಕಾಗುವದು. ಅವಧಾನವೆಂದರೆ ಜಾಗ್ರತೆ, ಎಚ್ಚರ, ಯಾವುದೊಂದು ಕಾಯಕವನ್ನು ಶ್ರದ್ಧೆಯಿಂದ ಪ್ರಾರಂಭಿಸಿ ನಿಷ್ಠೆಯಿಂದ ಮುಂದುವರೆಸಿ ಬಹಳ ಜನರು ಅವಧಾನವನ್ನು ಕಳೆದುಕೊಳ್ಳುವದರಿಂದ ಆ ಕಾಯಕ ಯಶಸ್ವಿಯಾಗುವದಿಲ್ಲ. ಲಾಭಕ್ಕಿಂತ ಹಾನಿಯೇ ಆಗುವದು.

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ

ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ

ಇದ್ದರೇನು ಶಿವ ಶಿವಾ ಹೋದಡೇನೊ

ಕೂಡಲ ಸಂಗಮದೇವಯ್ಯ

ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ

ಇಲ್ಲಿ ಬಸವಣ್ಣನವರು ನಿಷ್ಠಾಭಕ್ತಿಯನ್ನು ವಿಶ್ಲೇಷಿಸಿರುವರು. ಗೊಡ್ಡಾಕಳಿಗೆ ದೊಡ್ಡದಾದ ಕರುವ ಬಿಟ್ಟರೆ ಯಾವ ಪ್ರಯೋಜನವಾಗುವದಿಲ್ಲ, ಚನ್ನಬಸವಣ್ಣನವರು

ಭಕ್ತಿಗೆ ಅನುಭಾವವೆ ಬೀಜ ಕಾಣಿರೋ

ಭಕ್ತಿಗೆ ಅನುಭಾವವೆ ಆಚಾರ ಕಾಣಿರೋ

ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತು

ಷಡ್ವಿಧ ಭಕ್ತಿಯಲ್ಲಿ ಅನುಭಾವವೇ ಬೀಜ, ಅದುವೆ ಆಚಾರವಾಗಬೇಕೆಂದೂ ಅನುಭಾವವಿಲ್ಲದವನ ಭಕ್ತಿಯಲ್ಲಿ ಹೊಯ್ದಾಟವಿರುವದೆಂದು ಎಚ್ಚರಿಸಿರುವರು. ಈ ಹೊಯ್ದಾಟ ನಿಲ್ಲಬೇಕಾದರೆ ಅವಧಾನ ಅವಶ್ಯ ಬೇಕಾಗುವದು.

 ಈ ಅವಧಾನದಿಂದಲೇ ಭಕ್ತನ ಮನಸ್ಸು ಪ್ರಸನ್ನವಾಗುವದು. ಪ್ರಸನ್ನ ಮನಸ್ಸಿನಲ್ಲಿ ಯಾವ ಚಿಂತೆಗಳು ಕಾಡುವದಿಲ್ಲ. ಅವನ ಮನಸ್ಸು ನಿರ್ಮಲವಾಗಿರುತ್ತದೆ. ನಿರ್ಮಲ ಮನಸ್ಸಿದ್ದರೆ ಮಾತ್ರ ಪ್ರಸನ್ನತೆಯಿರುವದು. ಇದುವೆ ಪ್ರಸಾದಿಯ ಪ್ರಬುದ್ಧತೆ, ತಪ್ಪು ಮಾಡುವವನ ಮನಸ್ಸು ಕಳವಳದಿಂದಲೇ ಇರುವದು. ಅವನಿಗೆ ಚಿಂತೆಯು ಸದಾ ಕಾಡುತ್ತಿರುತ್ತದೆ. ಮೈಲಾರ ಬಸವಲಿಂಗ ಶರಣರು-

ರೂಪು ರುಚಿ ತೃಪ್ತಿಯ ನಿರ್ಲೇಪ ತ್ರೈಲಿಂಗಕ್ಕೆ

ಅರ್ಪಿಸಲು ತಾನೇ ದೀಪ್ತ ಪ್ರಸಾದಿಯೆಂ

ದಾ ಪರಮಗುರುವೇ ಕೃಪೆಯಾಗು

ಎಂದು ಪ್ರಸಾದಿಯ ಲಕ್ಷಣವನ್ನು ನಿರೂಪಿಸಿರುವರು. ಪ್ರಸಾದಿಸ್ಥಲ ಮೂರನೆಯದು. ಇವನು ಶಿವಲಿಂಗ ಪೂಜಕನು ಶಿವಲಿಂಗವು ನೇತೇಂದ್ರಿಯದಲ್ಲಿದೆ. ಈ ಲಿಂಗವು ಇಚ್ಛಾಶಕ್ತಿ ವಿದ್ಯಾಕಲೆಯಿಂದ ಕೂಡಿದೆ. ಪ್ರಸಾದಿಯು ಸದಾ ಸಾವಧಾನದಿಂದ ಶಿವನಿಚ್ಛೆಯಿಂದ ದೊರೆತುದನ್ನು ನಿರಹಂಕಾರ ಹಸ್ತದಲ್ಲಿ ರೂಪು ಪದಾರ್ಥಗಳನ್ನು ಸುರೂಪು ಪ್ರಸಾದಗೊಳಿಸಿ ಶಿವಲಿಂಗಕ್ಕೆ ಅರ್ಪಿಸಿ ಭೋಗಿಸಬೇಕು. ಈ ಸ್ಥಲವು ಭೋಗಾಂಗದ ಅಂಗವೆಂದಿದೆ. ಕರಣೇಂದ್ರಿಯಗಳಿಗೆ ಪ್ರೇರಕವಾದ ಮನಸ್ಸಿನಲ್ಲಿ ದೃಢತೆ ಹೆಚ್ಚಾಗಿ ಶಾಂತನೂ ಸಾವಧಾನವುಳ್ಳವನಾಗುವದೇ ಪ್ರಸಾದಿಯ ಮುಖ್ಯ ಕರ್ತವ್ಯವಾಗಿದೆ. ಹೊಯ್ದಾಟವುಳ್ಳ ಮನಸ್ಸನ್ನು ನಿಶ್ಚಲಗೊಳಿಸಿ ಪ್ರಾಕೃತಿಕ ಭೋಗ ಭವದ ಬೀಜವೆಂದರಿದು ಶಿವಾರ್ಪಿತಭೋಗವನ್ನು ಪಡೆಯುವದರಿಂದ ಭವದ ಬೀಜವನ್ನೇ ಹುರಿದು ಹಾಕುವ ಶಕ್ತಿ ಪ್ರಸಾದಿಯಲ್ಲಿ ಗಟ್ಟಿಗೊಳ್ಳುವದು.

೪. ಪ್ರಾಣಲಿಂಗಿ ಸ್ಥಲ

ಭಕ್ತ-ಮಹೇಶ-ಪ್ರಸಾದಿ ಈ ಮೂರು ಸ್ಥಲಗಳನ್ನು ಪೂರ್ವಯೋಗವೆಂದೂ ಪ್ರಾಣಲಿಂಗಿ- ಶರಣ ಐಕ್ಯ ಸ್ಥಲಗಳನ್ನು ಉತ್ತರಯೋಗವೆಂದು ಶಿವಾನುಭವಿಗಳು ನಿರೂಪಿಸಿರುವರು. ಪ್ರಸಾದಿ ಸ್ಥಲದಲ್ಲಿ ಪ್ರಾಣಲಿಂಗಾರ್ಚನೆ ಪ್ರಾರಂಭವಾಗಿ ಪ್ರಾಣಲಿಂಗಿಸ್ಥಲದಲ್ಲಿ ಅದು ಪೂರ್ಣವಾಗುವದು. ಪ್ರಸಾದಿಯು ಅಗ್ನ್ಯಾಂಗನಾದರೆ, ಪ್ರಾಣಲಿಂಗಿಯು ವಾಯ್ವಂಗನೆನಿಸುವನು. ಪ್ರಾಣಲಿಂಗಿಯು ವಾಯು ತತ್ವದ ಜಂಗಮ ಲಿಂಗವನ್ನು ಆರಾಧಿಸಿ ವಾಯುಮಯ ಪ್ರಾಣವು ಲಿಂಗಸ್ವರೂಪವೆನಿಸುವುದೇ ಪ್ರಾಣಲಿಂಗಿಯ ಪ್ರಾಮುಖ್ಯತೆಯೆನ್ನಬೇಕು. ಬಯಸಿ ಬಂದ ಅಂಗ ಭೋಗವನ್ನು ತ್ಯಜಿಸಿ, ಬಯಸದೆ ಬಂದ ಪ್ರಸಾದವನ್ನು ಲಿಂಗಭೋಗೋಪಭೋಗಿಯಾಗಿಸುವದರಿಂದ ಪ್ರಸಾದ ಕಾಯನಾಗುವನು. ಪ್ರಸಾದ ಕಾಯನಾದ ಪ್ರಸಾದಿಯು ಕ್ರಿಯಾ- ಜ್ಞಾನ-ಇಚ್ಛಾ ಶಕ್ತಿಗಳ ಸಹಾಯದಿಂದ ಆದಿಶಕ್ತಿಯನ್ನು ಸಾಕ್ಷಾತ್ಕರಿಸಿಕೊಂಡು ಸಾವಧಾನತೆಯಿಂದ ಅನುಭವ ಪಡೆಯುವಲ್ಲಿಯೇ ಪ್ರಕಾಶಕಾಯ ಮೈಗೂಡುವದು ಪ್ರಕಾಶಕಾಯವೆಂದರೆ ಜ್ಞಾನ, ಜ್ಞಾನವೇ ಬೆಳಕು. ಪ್ರಾಣಲಿಂಗದ ಪೂಜೆ ನಡೆಯುವಲ್ಲಿ ಜ್ಞಾನವೇ ಮುಖ್ಯವಾಗುವದು.

 ಮಾನವನು ಅನ್ನ ನೀರಿಲ್ಲದೆ ಬದುಕಬಹುದು ಆದರೆ ಪ್ರಾಣವಾಯುವಿಲ್ಲದೆ ಬದುಕಲು ಆಗದು. ಪ್ರಾಣವಾಯು ಎಲ್ಲರಿಗೂ ಅವಶ್ಯ. ಪ್ರಾಣಿಗಳಿಗೆ, ಗಿಡ-ಮರ ಬಳ್ಳಿಗಳಿಗೆ ಪ್ರಾಣವಾಯು ಬೇಕೇಬೇಕು. ಜೀವನಕ್ಕೆ ಜೀವಾಳವಾದುದು ಪ್ರಾಣ ಜೀವನದ ಅಮೃತವದು, ಆಯುಷ್ಯವದು. ಅರಸವೆಂದೂ ಅನುಭವಿಗಳು ವರ್ಣಿಸಿರುವಲ್ಲಿ ಔಚಿತ್ಯವಿದೆ. ಪ್ರಾಣವು ಮಾನವನಿಗೆ ಹೇಗೆ ಜೀವಾಳವೋ ಹಾಗೆ ಪ್ರಾಣಲಿಂಗಿಗೆ ಪ್ರಾಣಲಿಂಗವು ಮುಖ್ಯವಾಗಬೇಕು. ಲಿಂಗವೇ ಪ್ರಾಣವಾಗಬೇಕು. ಎಲ್ಲವೂ ಲಿಂಗಮಯವಾಗಬೇಕು.

ವಸ್ತುತಃ ವಾಯು ಒಂದೇಯಾಗಿದ್ದರೂ ವಿಭಿನ್ನ ಸ್ಥಾನ ಹಾಗೂ ಕೆಲಸಗಳಿಂದ ಐದು ತೆರನಾಗುವದು. ಹೃದಯದಲ್ಲಿ ಪ್ರಾಣವಾಯುವೆನಿಸಿದರೆ ಮೂಲಾಧಾರದಲ್ಲಿ ಅಪಾನವಾಯುವೆನಿಸುವದು, ನಾಭಿಯಲ್ಲಿ ಸಮಾನವಾಯು, ಕಂಠದಲ್ಲಿ ಉದಾನವಾಯು, ವ್ಯಾನವಾಯು ದೇಹದ ತುಂಬೆಲ್ಲ ಹರಡಿಕೊಂಡಿರುತ್ತದೆ. ಪ್ರಾಣವಾಯು ಹೃದಯದಲ್ಲಿದ್ದುಕೊಂಡು ಮೂಗಿನ ಮೂಲಕ ಶ್ವಾಸೋಚ್ವಾಸಗಳನ್ನು ನಡೆಸುವದು. ಈ ವಾಯುವಿನ ಮೂಲಕವೇ ಶರೀರವು ಚೈತನ್ಯಯುತವಾಗಿರುವದು. ಅಪಾನವಾಯು ಮಲಮೂತ್ರಗಳನ್ನು ಹೊರಹಾಕುವ ಕಾರ್ಯವನ್ನು ಮಾಡುವದು. ನಾಭಿಯಲ್ಲಿರುವ ಸಮಾನವಾಯು ಮಾನವನು ಉಣ್ಣುವ ಅನ್ನದ ರಸದಿಂದಾದ ರಕ್ತವನ್ನು ಎಲ್ಲ ಅವಯವಗಳಿಗೆ ಸಮನಾಗಿ ಹಂಚುತ್ತದೆ. ಉದಾನವಾಯು ಕಂಠಸ್ಥಾನದಲ್ಲಿದ್ದು ಸೀನು, ಡೇಕರಿಕೆ ಮುಂತಾದ ಕ್ರಿಯೆಗಳಿಂದ ದೂಷಿತ ಅಂಶವನ್ನು ಹೊರಹಾಕುತ್ತದೆ. ವ್ಯಾನವಾಯು ಶರೀರದ ನರನಾಡಿಗಳಲ್ಲಿ ಸಂಚರಿಸಿ ರಕ್ತ ಸಂಚಾರವನ್ನು ಸಮನಾಗಿ ಮಾಡಿಸುವದು. ಈ ವಾಯು ವಿಕಾರಗೊಂಡರೆ ಸಂಧಿವಾತ ಅರ್ಧಾಂಗವಾಯುವಿಗೆ ಕಾರಣವಾಗುವದು. ಈ ಎಲ್ಲ ವಿಚಾರಗಳನ್ನು ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ಚನ್ನಾಗಿ ನಿರೂಪಿಸಿರುವರು. ಪ್ರಾಣಾಯಾಮದಿಂದ ಪ್ರಾಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹೆಚ್ಚಿನ ಪ್ರಾಣಾಯಾಮದಿಂದ ಅಪಾಯವೂ ಸಂಭವಿಸುವದೆಂದು ಬಸವಲಿಂಗ ಶರಣರು ಗುರುಕರಣ ತ್ರಿವಿಧಿಯಲ್ಲಿ ಅಷ್ಟಾಂಗ ಯೋಗದ ನಿರಸನಮಾಡಿ ಪ್ರಾಣಲಿಂಗದ ಆರಾಧನೆಯನ್ನು ಮಾನಸಿಕವಾಗಿ ಸಾಧಿಸಬೇಕೆಂದು ಪ್ರತಿಪಾದಿಸಿರುವರು. ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಪ್ರಾಣಲಿಂಗದ ಆಂತರಿಕ ಅರ್ಚನೆಯ ವಿಧಿಯನ್ನು ತಿಳಿಸಿರುವರು. ಕ್ಷಮಾ ಗುಣವೇ ಅಭಿಷೇಕ ಜಲ, ವಿವೇಕವೆ ವಸ್ತ್ರ, ಸತ್ಯವೆ ಆಭರಣ, ವೈರಾಗ್ಯವೆ ಪುಷ್ಪಮಾಲಿಕೆ, ಸಮಾಧಿ ಸಂಪತ್ತೆ ದಂಡ, ನಿರಹಂಕಾರವೇ ಅಕ್ಷತೆ, ಶ್ರದ್ಧೆಯ ಧೂಪ, ಮಹಾಜ್ಞಾನವೇ ಜಗತ್ತನ್ನು ಬೆಳಗುವ ದೀಪ, ಭ್ರಾಂತಿರಾಹಿತ್ಯವೇ ನೈವೇದ್ಯ, ಮೌನವೇ ಘಂಟಾನಾದ, ನಿರ್ವಿಷಯವೇ ತಾಂಬೂಲ, ವಿಷಯ ಭ್ರಾಂತಿ ಇಲ್ಲದಿರುವಿಕೆಯೇ ಪ್ರದಕ್ಷಿಣೆ, ಬುದ್ಧಿ ಭಾವಗಳ ತಾದಾತ್ಮ್ಯ ಭಾವವೇ ನಮಸ್ಕಾರ. ಹೀಗೆ ಆಂತರಿಕವಾದ ಉಪಚಾರಗಳಿಂದ ಮನೋ ಹಸ್ತದಲ್ಲಿ ಪ್ರಾಣಲಿಂಗದ ಅರ್ಚನೆಯನ್ನು ಪ್ರಾಣಲಿಂಗಿಯು ಮೊದಲು ಸಾಧಿಸಬೇಕು. ಇಂಥ ಉತ್ಕೃಷ್ಟ ಗುಣಗಳಿಂದ ಮಾತ್ರ ಪ್ರಾಣಲಿಂಗದ ಪೂಜೆಯು ಪ್ರಾಪ್ತವಾಗುವದು. ಪ್ರಾಣಲಿಂಗಿಯ ಸ್ವರೂಪ ಚಿತ್ರಣವನ್ನು ಸ್ವತಂತ್ರ ಸಿದ್ಧಲಿಂಗರ ವಚನದಲ್ಲಿ ನೋಡಬಹುದು.

ಲಿಂಗದಲ್ಲಿ ಪ್ರಾಣವ ನಿಲಿಸಿ ಪ್ರಾಣದಲ್ಲಿ ಲಿಂಗವ ನಿಲ್ಲಿಸಿ

ನೆನೆವುತ್ತಿದ್ದ ಕಾರಣ ಪ್ರಾಣಲಿಂಗವಾಯಿತು.

ಈ ಲಿಂಗ ಸರ್ವಕರಣಂಗಳ ವೇಧಿಸಿ

 ಕರಣಂಗಳು ಲಿಂಗ ಕಿರಣಂಗಳಾದ ಕಾರಣ

 ಒಳಗೆ ಕರತಳಾಮಳಕದಂತೆ

ಲಿಂಗ ನೆಲೆಗೊಂಡಿತ್ತಾಗಿ ಹೊರಗೆನೆಂದರಿಯೆನು

 ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ನೀವು ಪ್ರಾಣಲಿಂಗವಾಗಿ

ಅಲ್ಲಮಪ್ರಭುದೇವರು ಸಹ ಪ್ರಾಣಲಿಂಗ ಸಾಧನೆಯಿಂದ ಮನ ಉನ್ಮನಗೊಂಡು ಅಮೃತವನ್ನು ಪಡೆಯುವುದಾಗಿ ಹೇಳಿರುವರು.

 ವ್ಯಾವಹಾರಿಕ ಬದುಕಿನಲ್ಲಿ ಅನೇಕರು ವಿಭಿನ್ನ ವಸ್ತುಗಳಲ್ಲಿ ತಮ್ಮ ಪ್ರಾಣವನ್ನಿರಿಸಿ ಕೊಂಡಿರವದನ್ನು ಕಾಣುತ್ತೇವೆ. ಆಯಾ ವಸ್ತುಗಳು ಅವರಿಂದ ದೂರವಾದರೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸಂದರ್ಭಗಳನ್ನು ಸಹ ನೋಡುತ್ತೇವೆ. ಉದಾಹರಣೆಗಾಗಿ ಕೆಲವರು ಹೆಂಡತಿಯಲ್ಲಿ ಪ್ರಾಣವಿರಿಸಿದಂತೆ, ಹಲವರು ಮಕ್ಕಳಲ್ಲಿ ಪ್ರಾಣವನ್ನಿರಿಸುತ್ತಾರೆ. ಮತ್ತಿತರರು ತಂದೆ-ತಾಯಿಗಳಲ್ಲಿ ಪ್ರಾಣವನ್ನು ಕೇಂದ್ರೀಕರಿಸಿರುತ್ತಾರೆ. ಅದರಂತೆ ಬಸವ ಮಹಾನುಭಾವರು ಜಂಗಮನನ್ನೆ ತಮ್ಮ ಪ್ರಾಣವೆಂದು ಭಾವಿಸಿದ್ದು, ಜಂಗಮಮೂರುತಿ ಮಹಾಮನೆಗೆ ಬಂದು ಮರಳಿ ಹೋದ ಸಂದರ್ಭದಲ್ಲಿ ಪ್ರಾಣವನ್ನೇ ಕಳೆದುಕೊಂಡ ಸಂಗತಿಯಿದೆ. ಹಾಗೆ ಪ್ರಾಣಲಿಂಗಿಯು ತನ್ನ ಪ್ರಾಣಲಿಂಗವನ್ನೆ ಸರ್ವಸ್ವವೆಂದರಿದು ಅನುಸಂಧಾನ ಮಾಡಬೇಕು. ಪ್ರಾಣಲಿಂಗಿಯು ಅನಾಹತ ಚಕ್ರದ ಜಂಗಮಲಿಂಗವನ್ನು ತ್ವಗಿಂದ್ರಿಯ ಮುಖದಲ್ಲಿ ಅನುಭವ ಭಕ್ತಿಯಿಂದ ಸುಮನೋಹಸ್ತದಿಂದ ಆರಾಧಿಸಿ ಅನುಭವವನ್ನು ಪಡೆಯುವನು.

೫. ಶರಣ ಸ್ಥಲ

 ಕಾರಣಶರೀರವೆನಿಸಿದ ಯೋಗಾಂಗದಲ್ಲಿ ಶರಣಸ್ಥಲ ಹಾಗೂ ಐಕ್ಯಸ್ಥಲಗಳು ಬಂದಿವೆ. ತ್ಯಾಗಾ೦ಗದಿಂದ ಲಿಂಗಭೋಗ ಪಡೆದು ಶಿವಯೋಗ ಸಿದ್ದಿಯನ್ನು ಹೊಂದಲು ಶರಣನು ಅರ್ಹನಾಗುವನು. ವಿಶುದ್ಧಿಚಕ್ರದ ಪ್ರಸಾದಲಿಂಗದ ಆರಾಧಕನು ಶರಣನು, ಭಕ್ತನು ನೆಲತತ್ವವನ್ನು ಪ್ರತಿನಿಧಿಸಿದರೆ, ಶರಣನು  ಆಕಾಶತತ್ವದ ಪ್ರತಿನಿಧಿಯೆನಿಸುವನು. ಭಕ್ತನ ಬಾಳು ಬದುಕಿಗೂ ಶರಣನ ಬಾಳು ಬೆಳಕಿಗೂ ಅದೆಷ್ಟು ಅಂತರ ಮತ್ತೊಂದು ಬಗೆಯಲ್ಲಿ ಅದೆಷ್ಟು ಹತ್ತಿರ. ನೆಲ- ಮುಗಿಲುಗಳಂತೆ ಹತ್ತಿರ. ಆತ್ಮನಿಗೆ ಶರಣನು ಅತ್ಯಂತ ಸಮೀಪದವನಾದ ಕಾರಣವೇ ಯೋಗಾಂಗ ಕಾಯನು. ಶಿವಯೋಗ ಸಿದ್ಧನೆನಿಸುವನು.

ತ್ಯಾಗಾಂಗದ ಭಕ್ತನು ಕ್ರಿಯಾಶೀಲವಾಗಿ ನಿವೃತ್ತಿ ಕಲೆಯನ್ನಾಶ್ರಯಿಸಿ ಆಚಾರಲಿಂಗದ ಅರ್ಚಕನಾದರೆ, ಶರಣನು ಮೀರಿದ ಕ್ರಿಯಾಶೀಲನು. ಪರಾಶಕ್ತಿಸಮನ್ವಿತ ಪ್ರಸಾದಲಿಂಗದ ಪೂಜಕನು. ಸದಾ ಪ್ರಸನ್ನಚಿತ್ತನೆನಿಸುವನು. ಪ್ರಸಾದಲಿಂಗವು ಶಾಂತ್ಯತೀತ ಕಲಾಪೂರ್ಣವಾದುದು. ಅದಕ್ಕಾಗಿ ಶರಣನ ಜೀವನವು ಪರಿಪೂರ್ಣ ಜೀವನ. ಭಕ್ತ ಸಹಜ ದಾನಿಯಾದರೆ, ಶರಣನು ಸುಯ್ದಾನಿ, ಸುಯ್ದಾನವೆಂದರೆ ಎಚ್ಚರ ಹಾಗೂ ತೃಪ್ತಿ. ಅದು ಸಂತೃಪ್ತಿ, ಅದಕ್ಕಾಗಿ ಆತನು ಪರಿಪೂರ್ಣ ಜೀವಿ. ಪರಿಪೂರ್ಣ ಬದುಕುಳ್ಳವನು. ಸದಾ ಆನಂದಭರಿತನು, ಸವೆಯದ ಸಾಕೆನಿಸದ ಮತ್ತೊಂದನ್ನು ಬಯಸದ ಲಿಂಗಾನಂದದಲ್ಲಿ ಲೋಲಾಡುವನು ಶರಣನು.

ವೀರಶೈವ ಸಿದ್ಧಾಂತದಲ್ಲಿ ವಿಚಾರಿಸಲಾಗಿ ನೆಲತತ್ವದ ಭಕ್ತನಿಗೂ ಆಕಾಶತತ್ವದ ಶರಣನಿಗೂ ಒಂದು ರೀತಿಯ ಮಹದಂತರ ಕಂಡರೂ ಷಟ್‌ಸ್ಥಲ ಸಾಧಕನು ಯಾವುದೇ ಸ್ಥಲದಲ್ಲಿದ್ದರೂ ಭಕ್ತಸ್ಥಲಕ್ಕೆ ಬರಲೇ ಬೇಕಾಗುವದು. ಆಧಾರವನ್ನು ಆಶ್ರಯಿಸಿಯೇ ಆಕಾಶಕ್ಕೇರುವುದು ನಿವೃತ್ತಿ. ಆಕಾಶವಾದರೂ ನೆಲದ ನೆಲೆಯನ್ನು ಬಿಟ್ಟಿಲ್ಲ. ಭಕ್ತನು ನೆಲತತ್ವದ ಗಂಧ ಪ್ರಸಾದವನ್ನು ಆಚಾರಲಿಂಗಕ್ಕೆ ಅರ್ಪಿಸುತ್ತಿದ್ದರೆ; ಶರಣನು ಪಂಚತತ್ವಗಳ ಪಂಚ ಪ್ರಸಾದಗಳನ್ನು ಪ್ರಸಾದಲಿಂಗಕ್ಕೆ ಸಮರ್ಪಿಸುವನು. ಶರಣನ ಜೀವನವು ಆಗಸದಂತೆ ಎತ್ತರವಾದುದು, ಬಿತ್ತರವಾದುದು. ಆಕಾಶಕ್ಕೆ ಬಯಲು ಎಂಬ ಉಪನಾಮವಿರುವಂತೆ ಶರಣನು ಪ್ರಾಪಂಚಿಕ ವ್ಯವಹಾರ- ವ್ಯಾಮೋಹಗಳಿಂದ ಮುಕ್ತನಾಗಿ ಬಟ್ಟಬಯಲನ್ನು ಮುಟ್ಟಲು ಸಿದ್ಧನಾದವನು. ಆತನು ನಿತ್ಯ ನಿರ್ಮಲನೂ ಆಗಿದ್ದಾನೆ. ಶರಣನು ಸಕಲ ಜೀವಿಗಳ ಲೇಸ ಬಯಸುವವನು ವಿಶ್ವಪ್ರೇಮ ಅವನಲ್ಲಿ ಮೈಗೂಡಿರುತ್ತದೆ.

ತ್ಯಾಗಾಂಗದ ಭಕ್ತನು ಕ್ರಿಯಾಶೀಲವಾಗಿ ನಿವೃತ್ತಿ ಕಲೆಯನ್ನಾಶ್ರಯಿಸಿದ ಆಚಾರಲಿಂಗದ ಅರ್ಚಕನಾದರೆ, ಶರಣನು ಕ್ರಿಯಾ-ಜ್ಞಾನ-ಇಚ್ಛಾ-ಆದಿ-ಪರಾಶಕ್ತಿಗಳು ಮೈಗೂಡಿದ ಪ್ರಸಾದಲಿಂಗದ  ಅರ್ಚಕನೆನಿಸುವನು.  ಡಾ.ಜ.ಚ.ನಿ.ಯವರು ಜೀವನ ಸಿದ್ಧಾಂತದಲ್ಲಿ ಶರಣಸ್ಥಲದ ಬಗೆಗೆ “ಆತ್ಮಾನುಭವವನ್ನು ಆತ್ಮಾನಂದವನ್ನು ಪಡೆದವನು ಅಚ್ಚಶರಣ. ಪಂಚಭೂತಗಳಿಂದ ಪಂಚಕೋಶಗಳಲ್ಲಿ ಉಂಟಾದ ಪ್ರಾಕೃತಿಕ ಶಕ್ತಿ ಸಾಮರ್ಥ್ಯಗಳನ್ನು ಯುಕ್ತಿ-ವಿಚಾರಗಳನ್ನು ಭಕ್ತಿಯಿಂದ ಮಾರ್ಪಡಿಸಿ ಆತ್ಮಾನಂದಕ್ಕೆ ಸಾಮರಸ್ಯಕ್ಕೆ ಅವನ್ನು ಅಣಿಮಾಡಿಕೊಂಡ ಅನುಭಾವಿ.  ವಿಶಾಲ ಮನೋಭಾವವನ್ನು  ಬೆಳೆಸಿಕೊಂಡ ವಿಮರ್ಶಾ ಶಕ್ತಿಸಂಪನ್ನ, ಚಿತ್ತ-ಬುದ್ಧಿ-ಪ್ರಾಣ- ಮನ-ಹಮ್ಮುಗಳಲ್ಲಿರುವ ದೋಷಗಳನ್ನುದೂರಮಾಡಿ ಶಿವಜ್ಞಾನದ ಶುಭ್ರ ಪ್ರಕಾಶದಲ್ಲಿ ಪರಮ ಪ್ರಸನ್ನತೆಯನ್ನು ನಿರ್ದೇಶ ನಿಷ್ಪತ್ತಿಗಳನ್ನು ಪಡೆದ ಪ್ರಗತಿಶೀಲ.  ಮಹಾನಂದವನ್ನು ಮಹಾಪ್ರಕಾಶವನ್ನು ಪಡೆದ ಪೂರ್ಣ ಜೀವಿ.  ಮರ್ತ್ಯಲೋಕದ ಮಣಿಹವನ್ನೆಲ್ಲ ಮಾಡಿ ಮುಗಿಸಿದ ತುಂಬು ಬಾಳು ಶರಣನದು. ವಿಯತ್ತಕ್ಕಿಂತಲೂ ವಿಶೇಷವಾದ ವಿಶಾಲ ಮನೋಭಾವವನ್ನು ವಿಕಾಸಗೊಳಿಸಿಕೊಂಡು ಪ್ರಕಾಶಪಡಿಸಿದ ಪೂರ್ಣಜೀವಿ ಶರಣ” ಎಂದು ಶರಣನ ಮಹತ್ವವನ್ನು ಅನುಭವಪೂರ್ಣವಾಗಿ ಪ್ರತಿಪಾದಿಸಿರುವರು.

ಶರಣನು ಪ್ರಾಕೃತನಲ್ಲ; ಅಪ್ರಾಕೃತನು. ಪ್ರಾಕೃತಿಕ ಜಡತ್ವವನ್ನು ಮೀರಿದವನು. ಅದಕ್ಕಾಗಿ ಅವನು ಬಯಲಮೂರ್ತಿಯು. ಆತನ ವಿದ್ಯಾಬುದ್ಧಿಯಿಂದ ಬ್ರಹ್ಮಾದಿಗಳು ಉದಿಸಿದರೆಂದು ಚನ್ನಬಸವಣ್ಣನವರು ವಚನಿಸಿದ್ದುಂಟು. ಶರಣ ಪದದ ಅರ್ಥ= ರಕ್ಷಣೆ, ರಕ್ಷಕ, ಮನೆ, ಮೊರೆ, ಕಾಪಾಡುವವನು ಎಂದಿದೆ. ಆದರೆ  ಷಟ್‌ಸ್ಥಲಾಂತರ್ಗತ ಶರಣ ಪದ ವಿಶಿಷ್ಟವಾದುದು. ಲಿಂಗಪತಿಗೆ ಶರಣ ಹೊಕ್ಕವನೆ ಶರಣ, ಇಂಥ ಪದವನ್ನು ಸಾಮಾನ್ಯರಿಗೂ ಬಳಸಿ ಇಂದು ಅತಿವ್ಯಾಪ್ತಿಗೊಳಿಸುತ್ತಿರುವದು ಉಚಿತವಲ್ಲ. ಶರಣ ತತ್ವಕ್ಕೆ ಅಪಚಾರ ಮಾಡಿದಂತಾಗುವದು. ಶರಣನು ಆನಂದಭಕ್ತಿಯುಳ್ಳವನಾಗಿ ತಾನೆ ಸತಿಯಾಗಿ ಲಿಂಗ ಪತಿಯನ್ನು ವರಸಿದವನು. ಪರಾಶಕ್ತಿಯುಕ್ತ ಶಾಂತ್ಯತೀತ ಕಲಾಪೂರ್ಣ ಪ್ರಸಾದಲಿಂಗವನ್ನು ಶ್ರೋತ್ರ ಮುಖದಲ್ಲಿ ಸುಜ್ಞಾನ ಹಸ್ತದಿಂದ ಸುಶಬ್ದ ಪ್ರಸಾದವನ್ನು ಅರ್ಪಿಸಿ ಧನ್ಯನಾದವನು. ಈತನ ಇರುವನ್ನು ಅಲ್ಲಮಪ್ರಭುಗಳು-

ಹರಿವ ನದಿಗೆ ಮೈಯಲ್ಲ ಕಾಲು,

ಉರಿವ ಅಗ್ನಿಗೆ ಮೈಯಲ್ಲ ನಾಲಿಗೆ,

ಬೀಸುವ ಗಾಳಿಗೆ ಮೈಯಲ್ಲ ಕೈ(ಮುಖ),

ಗುಹೇಶ್ವರ ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯವಯ್ಯಾ

ಎಂಬುದಾಗಿ ಶರಣನ ಸರ್ವಾರ್ಪಣ ಭಾವವನ್ನು ನಿರೂಪಿಸಿರುವರು. ಶರಣನ ಅರ್ಚನ, ಅರ್ಪಣ ಅನುಭಾವ ಕ್ರಿಯೆಗಳನ್ನು ಮನಂಬುಗುವಂತೆ ವಿವರಿಸಿರುವರು. ಶರಣನು ಸರ್ವಾಂಗ ಲಿಂಗಮಯನು.

೬. ಐಕ್ಯ ಸ್ಥಲ

ಐಕ್ಯಸ್ಥಲ ಷಟ್‌ಸ್ಥಲದಲ್ಲಿ ಕೊನೆಯದು. ಯೋಗಾಂಗದಲ್ಲಿ ಎರಡನೆಯದು. ಐಕ್ಯನಿಗೆ ಆತ್ಮನೆ ಅಂಗ, ಆತ್ಮಾಂಗನಾದ ಐಕ್ಯನು ಚಿಚ್ಛಕ್ತಿ-ಶಾಂತ್ಯತೀತೋತ್ತರ ಕಲೆಯುಳ್ಳ ಮಹಾಲಿಂಗದೊಡನೆ ಸಮರಸವಾಗುವ ಸಾಮರ್ಥ್ಯವನ್ನು ಸಾಧಿಸುವವನು. ಡಾ|| ಜ.ಚ.ನಿ.ಯವರು ಐಕ್ಯಸ್ಥಲದ ವಿವರಣೆಯನ್ನು ಮನನೀಯವಾಗಿ ನೀಡಿದ್ದಾರೆ- ʼʼಆತ್ಮ ಬೇರಿಲ್ಲ, ದೂರಿಲ್ಲ. ಆತ್ಮ ತಾನೇ; ತನ್ನನ್ನು ಅರಿತಿಲ್ಲ. ಅನುಭವ ಪಡೆದಿಲ್ಲ. ತನ್ನರಿವಿಗಿಂತ ಬೇರಿಲ್ಲ ಭಾಗ್ಯ. ತನ್ನೊಳಗೆ ತಾನಿರುವದಕ್ಕಿಂತ ಬೇರಿಲ್ಲ ಸೌಖ್ಯ ತನ್ನ ಗಳಿಕೆಯೇ ಗಳಿಕೆ. ಆ ಗಳಿಕೆಯಿಂದ ಮನೆ ತುಂಬುವುದಿಲ್ಲ. ಮನ ತುಂಬುತ್ತದೆ. ಅಂತೆಯೇ ‘ಶೂನ್ಯ” ಸಂಪಾದನವೆಂದರು. ಮನದುಂಬುವುದೆಂದರೆ ಮನವರಿಕೆಯಾಗುವಿಕೆ. ಮತ್ತು ಮಹದನುಭವವುಂಟಾಗುವಿಕೆ, ಆತ್ಮ ವಿಕಾಸ ವಾಗುವಿಕೆ, ಸರ್ವಾತ್ಮಭಾವದಿಂದ ಸತ್ಯದತ್ತ ಸಾಗುವಿಕೆ, ಪೂರ್ಣಖಂಡಭಾವವನ್ನು ತೋರುವಿಕೆ, ಕ್ರಿಯಾಘನತೆಯನ್ನು ಜ್ಞಾನಪೂರ್ಣತೆಯನ್ನು ಸಂಪಾದಿಸುವಿಕೆ, ಸಮದರ್ಶಿಯಾಗಿ ಬಾಳುವಿಕೆ. ಇವು ಐಕ್ಯನ ಸಾಧನೆ ಸಿದ್ಧಿಯೆನಿಸುವವು.”

ಷಟ್‌ಸ್ಥಲವು ಶ್ರದ್ಧಾಭಕ್ತಿಯಿಂದ ಪ್ರಾರಂಭವಾಗಿ ಅದು ಘಟ್ಟಗೊಂಡಾಗ ನಿಷ್ಠೆಯಾಗಿ ಪರಿಣಮಿಸುವದು. ನಿಷ್ಠೆಯು ಮೂಢನಂಬಿಕೆಯಿಂದ ಕೂಡದೆ ಕ್ರಿಯಾ-ಜ್ಞಾನಶಕ್ತಿಗಳ ಸಮನ್ವಯದಲ್ಲಿ ಸಾವಧಾನತೆ ಸಾಧಿಸುವುದರಿಂದ ಅನುಭವ ಅಳವಡುವದು. ಅನುಭವದಲ್ಲಿ ಅಮೃತತ್ವವಿರುವಂತೆ ಆನಂದವುಂಟು. ಅದು ಕೇವಲಾನಂದವಾಗದೆ ಅಮಿತಾನಂದವೆನಿಸುವದು.  ಆನಂದ ಲಭಿಸುತ್ತಿದ್ದ ಹಾಗೆ ಲಿಂಗಾಂಗ ಸಾಮರಸ್ಯ ಲಭಿಸುವದೆ ಐಕ್ಯನ ಸಾಧನೆ.

ಶರಣ ಸ್ಥಲವನ್ನು ದಾಟಿದ ಐಕ್ಯನು ಆತ್ಮಲಿಂಗವೆನಿಸುವನು. ಅವನು ಚಿಚ್ಛಕ್ತಿಯುಕ್ತ ಶಾಂತ್ಯತೀತೋತ್ತರ ಕಲಾಪೂರ್ಣ ಮಹಾಲಿಂಗವನ್ನು ಸದ್ಭಾವ ಹಸ್ತದಿಂದ ಆಜ್ಞಾಚಕ್ರದಲ್ಲಿ ಹೃದಯಮುಖವಾಗಿ ಸಂದರ್ಶಿಸುವನು. ತೃಪ್ತಿ ಪದಾರ್ಥಗಳನ್ನು ಸುತೃಪ್ತಿ ಪ್ರಸಾದವಾಗಿಸಿ ಮಹಾಲಿಂಗಕ್ಕೆ ಸಮಿರ್ಪಿಸಿ ಅಮಿತಾನಂದದಿಂದ ಸಮರಸ ಭಕ್ತಿಯಲ್ಲಿ ತೇಲಾಡುವನು.  ಶರಣನು ತನ್ನೆಲ್ಲ ವ್ಯಾವಹಾರಿಕ ಬದುಕನ್ನು ಹಾಗೂ ಅಧ್ಯಾತ್ಮಿಕ ಬದುಕನ್ನು ಭಗವಂತನಿಗೆ ಸಮರ್ಪಿಸಿದ ಕಾರಣ ಶಿವನೇ ಆತನ ಯೋಗಕ್ಷೇಮವನ್ನು ನೋಡುತ್ತಾನೆ. ಅದಕ್ಕಾಗಿ ಶರಣನಿಗೆ ಯಾವುದೇ ಅಡ್ಡಿ ಆತಂಕಗಳು ಬರುವದಿಲ್ಲ. ಆತನು ನಿತ್ಯಾನಂದವನ್ನೇ ಪಡೆಯುವನು. ವ್ಯಾವಹಾರಿಕ ಸುಖಕ್ಕೂ ಆತ್ಮಾನಂದಕ್ಕೂ ಮಹದಂತರವಿದೆ. ಬಾಹ್ಯ ಸುಖ ಕ್ಷಣಿಕ, ಆತ್ಮಾನಂದ ನಿತ್ಯ ಸುಖ. ಶರಣನು ಬಾಹ್ಯ ವಿಷಯಗಳಲ್ಲಿ ಅನಾಸಕ್ತವಾಗಿ ಆತ್ಮಸುಖವನ್ನು ಅನುಭವಿಸುತ್ತ ಐಕ್ಯಸ್ಥಿತಿಯಲ್ಲಿ ಸಮರಸವನ್ನು ಸಾಧಿಸುವನು. ಪರಶಿವನ ಷಟ್‌ಶಕ್ತಿಗಳೆಲ್ಲ ಜಾಗ್ರತಗೊಂಡು ಶರಣನಲ್ಲಿ ಪ್ರತ್ಯಕ್ಷವಾಗುವವು. ಶಿವಯೋಗ ಸಾಧನೆಯಿಂದ ಕಾಮಾದಿ ಅನಿಮಿತ್ತ ವೈರಿಗಳು ಹಸಿವು ತೃಷೆಗಳೆಂಬ ಷಡೂರ್ಮಿಗಳು ಮಾಯವಾಗಿ ಲಿಂಗದ ಬಾಹ್ಯ ಉಪಚಾರಗಳೂ ಇಲ್ಲವಾಗುವವು. ಹಿಮ ಕರಗಿ ನೀರಾಗುವಂತೆ ಕರ್ಪುರ ಕರಗಿ ಬೆಂಕಿಯಾಗುವಂತೆ ಐಕ್ಯನು ಮಹಾಲಿಂಗದಲ್ಲಿ ಒಂದಾಗುವನು. ಮಹಾಲಿಂಗವೇ ತಾನಾಗುವನು.

 ಶರಣ ನಿದ್ರೆಗೈದಡೆ ಜಪಕಾಣಿರೊ

 ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ

 ಶರಣ ನಡೆದುದೆ ಪಾವನ ಕಾಣಿರೊ

 ಶರಣ ನುಡಿದುದೆ ಶಿವತತ್ವ ಕಾಣಿರೂ

 ಕೂಡಲಸಂಗನ ಶರಣನ ಕಾಯವೇ ಕೈಲಾಸ ಕಾಣಿರೋ

 ಬಸವಣ್ಣನವರ ಸಂದೇಶದಂತೆ ಶರಣನ ಕಾಯವು ಕೈಲಾಸವಾಗುವದು. ಆತನ ನಡೆ-ನುಡಿಗಳು ಪಾವನ, ಅವನೇ ಶಿವತತ್ವ, ಆತನು ಸದಾ ಜಾಗ್ರತನು, ಆತ ನಿದ್ದೆ ಮಾಡಿದನೆಂದರೆ ಜಪವನ್ನೇ ಮಾಡುವನು. ಜಾಗ್ರತನೆಂದಡೆ ಶಿವರಾತ್ರಿಯ ಸಂಕೀರ್ತನವಿದ್ದಂತಾಗುವದು. ಶರಣನು ಪರಮಾತ್ಮ ಸ್ವರೂಪನೇ ಆಗುವನು. ವಸ್ತುತಃ ಹಾಲು-ನೀರುಗಳು ವಿಭಿನ್ನ ಗುಣಧರ್ಮಗಳನ್ನು ಹೊಂದಿದ್ದರೂ ಅವೆರಡನ್ನು ಬೇರ್ಪಡಿಸಲಾಗದು. ಆದರೆ ಒಂದಾದಾಗ ಹಂಸಪಕ್ಷಿ ಬೇರ್ಪಡಿಸುತ್ತದೆಂಬ ವದಂತಿಯಿದೆ. ಆದರೆ ಬೆಂಕಿಯ ಮೇಲಿಟ್ಟರೆ ನೀರು ಸುಟ್ಟು ಹೋಗುತ್ತದೆ. ಹಾಲು ಗಟ್ಟಿಯಾಗುತ್ತ ಹೋಗುತ್ತದೆ. ಹಾಲು ಹಾಲಿನಲ್ಲಿ ಬೆರತಂತೆ ಶರಣನು ಮಹಾಲಿಂಗದಲ್ಲಿ ಒಂದಾಗಿ ಪರಮಾತ್ಮನಲ್ಲಿ ಬೇರಿಲ್ಲದಂತೆ ಸಮರಸ ಹೊಂದುವನು. ಶಿವಶಕ್ತಿಗಳನ್ನು ಸಂಪಾದಿಸಿ ಪರಶಿವನಲ್ಲಿ ಒಂದಾಗುವದೇ ಐಕ್ಯನ ಮಹಾಮಣಿಹ ವೆನಿಸುವದು.

ಉಪಸಂಹಾರ

ಷಟ್‌ಸ್ಥಲ ಸಿದ್ಧಾಂತಕ್ಕೆ ಅಷ್ಟಾವರಣ-ಪಂಚಾಚಾರಗಳು ಪೂರಕವಾದವುಗಳು. ಅಂಗ-ಪ್ರಾಣಗಳು ಗಟ್ಟಿಯಾದರೆ ಆತ್ಮಚೈತನ್ಯವು ಸಶಕ್ತವಾಗುವದು. ಧಾರ್ಮಿಕ ಸ್ವಾತಂತ್ರ್ಯ, ಸಚ್ಚಾರಿತ್ರ್ಯ ದಿಂದ ವ್ಯಕ್ತಿತ್ವ ವಿಕಾಸಗೊಂಡು ಗುರಿಸಾಧನೆಯ ಮಾರ್ಗ ಸುಸೂತ್ರವೆನಿಸುವದು. ವೀರಶೈವ ಸಿದ್ಧಾಂತದಲ್ಲಿ ತತ್ವಗಳ ಅವತರಣ ಜೀವಾತ್ಮನ ಕಲ್ಯಾಣಕ್ಕಾಗಿದೆಯೆಂಬುದನ್ನು ನಂಬಬೇಕು. ಈ ಶ್ರದ್ಧೆಯು ಸಮರಸಕ್ಕೆ ಕಾರಣವಾಗುವದು. ತತ್ವಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯೇ ಷಟ್‌ಸ್ಥಲದ ವಿಕಾಸ ಮಾರ್ಗ. ಇದು ಕೇವಲ ಪರಿಕಲ್ಪನೆಯಲ್ಲ, ಅನುಷೇಯವಾದುದು. ಅದಕ್ಕಾಗಿ ಷಟ್‌ಸ್ಥಲವು ಜೀವನ ಸಿದ್ಧಾಂತವೆನಿಸಿದೆ.

ಷಟ್‌ಸ್ಥಲದಲ್ಲಿ ಅವತರಣ ಕ್ರಿಯೆಗೆ ಪ್ರವೃತ್ತಿ ಮಾರ್ಗವೆಂದರೆ, ಆರೋಹಣ ಪ್ರಕ್ರಿಯೆಗೆ ನಿವೃತ್ತಿ ಪಥವೆನ್ನುವರು. ನಿವೃತ್ತಿ ಕಲೆಯನ್ನು ಗ್ರಹಿಸಿದ ಆಚಾರಲಿಂಗದ ಅನುಸಂಧಾನದಿಂದ ಕ್ರಿಯಾಶೀಲತೆ ಪ್ರಾರಂಭವಾಗಿ ಮೀರಿದಾಚರಣೆಯತ್ತ ಸಾಗುವದೇ ಶರಣನ ಮಹಾಮಣಿಹವೆನ್ನಬೇಕು.

ಕೊನೆ ಟಿಪ್ಪಣಿಗಳು

೧. ಷಟ್‌ಸ್ಥಲ ಚಿಂತನ-ಲೇ. ಡಾ. ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಪ್ರಕಾಶಕರು, ಕಾರಂಜಿಮಠ ಪ್ರಕಾಶನ,  ಬೆಳಗಾವಿ, ೨೦೦೩,

೨. ಜೀವನ ಸಿದ್ಧಾಂತ-ಭಕ್ತ ಸಂಪುಟ-ಡಾ. ಜ.ಚ.ನಿ. ಪುಟ ೪ ಮೊದಲ ಮಾತು

೩.  ಚನ್ನಬಸವಣ್ಣನವರ ವಚನಗಳು- ಸಂ. ಡಾ. ಆರ್. ಸಿ. ಹಿರೇಮಠ ವ-೬೩೩,

೪.  ವಚನಗಳಲ್ಲಿ ವೀರಶೈವ ಧರ್ಮ-ಲೇ. ಎಚ್. ತಿಪ್ಪೇರುದ್ರಸ್ವಾಮಿ

೫.   ಅಲ್ಲಮಪ್ರಭು ದೇವರ ವಚನಗಳು ಸಂ. ಆರ್. ಸಿ. ಹಿರೇಮಠ

೬.   ಷಟ್‌ಸ್ಥಲ ಜ್ಞಾನಸಾರಾಮೃತ-ವ-೩೩

೭.   ಶಿವಾನುಭವ ಸೂತ್ರಂ-ಮೊಗ್ಗೆಯ ಮಾಯಿದೇವರು ೨-೩

೮.   ಸಿದ್ಧಾಂತ ಶಿಖಾಮಣಿ-೫-೩೪.

೯.   ಶಿವಶರಣೆಯರ ವಚನಗಳು ಸಂ.ಆರ್‌.ಸಿ.ಹಿ. ವ-೨೫೦.

೧೦.  ಷಟ್‌ಸ್ಥಲ ಜ್ಞಾನ ಸಾರಾಮೃತ – ವಚನ ೩೯.

೧೧.  ಆದಯ್ಯ ಶರಣನ ವಚನಗಳು

೧೨.   ಬಸವಣ್ಣನವರ ವಚನಗಳು  ವ-೯೬

೧೩.   ಗುರುಕರುಣ ತ್ರಿವಿಧಿ ಪದ್ಯ  -೨೨೬

೧೪.   ಬಸವಣ್ಣನವರ ವಚನಗಳು – ವ-೭೫೮.

೧೫.   ಬಸವಣ್ಣನವರ ವಚನಗಳು.

೧೬.   ನಾರದ ಭಕ್ತಿಸ್ತೋತ್ರ-೧

೧೭.   ಗುರುಕರಣ ತ್ರಿವಿಧಿ   ೨೨೭

೧೮.   ಷಟ್‌ಸ್ಥಲ ಜ್ಞಾನ ಸಾರಾಮೃತ- ವ-೨೬೪.

೧೯.   ಚನ್ನಬಸವಣ್ಣನವರ ವಚನಗಳು – ಸಂ. ಆರ್.ಸಿ.ಹಿ. ವ-೧೦೮೭.

೨೦.   ಬಸವಣ್ಣನವರ ವಚನಗಳು – ಸಂ.ಆರ್.ಸಿ.ಹಿ, ವ-೧೦೯.

೨೧.   ಚ.ಬ. ವಚನಗಳು – ೮೧೬.

೨೨.   ಗುರುಕರುಣ ತ್ರಿವಿಧಿ – ಪದ್ಯ – ೨೨೮.

೨೩.   ಸ್ವತಂತ್ರ ಸಿದ್ಧಲಿಂಗೇಶ್ವರ ವಚನ

೨೪.    ಜೀವನ ಸಿದ್ಧಾಂತ-ಶರಣಸ್ಥಲ-ಡಾ. ಜ.ಚ.ನಿ.

೨೫.   ಅಲ್ಲಮಪ್ರಭುದೇವರ ವಚನಗಳು ವ-೧೨೬೫

೨೬.   ಜೀವನ ಸಿದ್ಧಾಂತ-ಐಕ್ಯಸ್ಥಲ.

೨೭.   ಬಸವಣ್ಣನವರ ವಚನಗಳು ವ-೮೭೨,

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ದೃಷ್ಟಿ ಎಂದರೆ ಕಣ್ಣಿನ ನೋಟ ಅಥವಾ ನೋಡುವ ಕ್ರಿಯೆ. ನೋಡುವ ನೋಟದಲ್ಲಿ ನಮ್ಮ ಕಣ್ಣಿಗಿಂತಲೂ ಮನಸ್ಸಿನ ಪಾತ್ರ ಪ್ರಮುಖವಾದುದು. ಕಣ್ಣಿನಿಂದ ಯಾವುದೇ ವಸ್ತುವನ್ನು ನೋಡಿದರೂ ಮನಸ್ಸು ಅದರ ಮೇಲೆ ಕೇಂದ್ರೀಕೃತವಾಗದ ಹೊರತು ಆ ವಸ್ತುವಿನ ಜ್ಞಾನ ನಮಗೆ ಸಾಧ್ಯವಾಗುವುದಿಲ್ಲ. ನಾವು ಒಂದು ವಸ್ತುವನ್ನು ನೋಡಿದಾಗ ಮೊದಲು ನಮ್ಮ ಮನಸ್ಸು ಆ ವಸ್ತುವಿನ ಮೇಲೆ ಕೇಂದ್ರೀಕೃತವಾಗುತ್ತದೆ. ಬುದ್ದಿಯು ಇದು ಇಂಥ ವಸ್ತುವೆಂದು ನಿರ್ಧರಿಸುತ್ತದೆ. ನಾನು ಈ ವಸ್ತುವನ್ನು ನೋಡುತ್ತಿದ್ದೇನೆ ಎಂಬುದು ಅಹಂಕಾರ. ಹಾಗೆಯೇ ಕಾಮಕ್ರೋಧಾದಿ ಸಂವೇಗಗಳಿಗೆ ಒಳಗಾಗುವುದು ಚಿತ್ತ , ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ ಇವು ನಮ್ಮ ಅಂತಃಕರಣಗಳು. ‘ಕರಣಂಗಳ ಚೇಷ್ಟೆಗೆ ಮನವೇ ಬೀಜ’ ಎನ್ನುತ್ತಾಳೆ ಅಕ್ಕಮಹಾದೇವಿ.

ಅಂತಃಕರಣಗಳ ವ್ಯವಹಾರವೆಲ್ಲವೂ ಮನಸ್ಸಿನಿಂದ ಮೊದಲ್ಗೊಳ್ಳುತ್ತದೆ. ಹಾಗೆಯೇ  ಕಣ್ಣು ಕಿವಿ ಇತ್ಯಾದಿ ಜ್ಞಾನೇಂದ್ರಿಯಗಳ ವ್ಯವಹಾರಕ್ಕೂ ಮನಸ್ಸೇ ಕಾರಣ. ಆದ್ದರಿಂದ ನಾವು ನೋಡುವ ನೋಟ ಅಥವಾ ನಮ್ಮ ಕಣ್ಣಿನ ದೃಷ್ಟಿ ಪವಿತ್ರವಾಗಿರಲು ಮನಸ್ಸು ಪವಿತ್ರವಾಗಿರಬೇಕಾದುದು ಹಾಗೆಯೇ ನಿರ್ಮಲವಾಗಿರಬೇಕಾದುದು ಅತ್ಯವಶ್ಯ. ʼ ಎಲ್ಲಿ ನೋಡಿದಡಲ್ಲಿ ಮನವೆಳೆಸಿದರೆ ಆಣೆ ನಿಮ್ಮಾಣೆ ನಿಮ್ಮ ಪ್ರಮಥರ ಆಣೆ’ ಎಂದು ಬಸವಣ್ಣನವರು ಮನಸ್ಸಿನ ಹೀನ ದೃಷ್ಟಿಗೆ ಕಡಿವಾಣ ಹಾಕುತ್ತಾರೆ. ಸದಾಭೌತಿಕ

ಸುಖಕ್ಕಾಗಿ ಹಾತೊರೆಯುವ ಹಾಗು ವಿಷಯಾದಿಗಳಿಗೆ ಹರಿಯುವ ಮನಸ್ಸಿಗೆ ಜ್ಞಾನಿಗಳಾದವರು ಸಂಸ್ಕಾರಕೊಟ್ಟು ದೃಷ್ಟಿಯನ್ನು ಪವಿತ್ರವಾಗಿರಿಸಿಕೊಳ್ಳುತ್ತಾರೆ.

 ಮಾತೃವತ್ ಪರದಾರೇಷು ಪರದ್ರವ್ಯೇಷು ಲೋಷ್ಠವತ್!

ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸಃ ಪಂಡಿತಃ!!

 ಎಂಬುದು ಸುಭಾಷಿತೋಕ್ತಿ, ಪರಸ್ತ್ರೀಯರನ್ನು ತಾಯಿಯಂತೆ, ಪರಧನವನ್ನು ಮಣ್ಣಿನ ಹೆಂಟೆಯಂತೆ ಎಲ್ಲ ಜೀವಿಗಳನ್ನು ತನ್ನಂತೆ ಕಾಣುವುದು ಜ್ಞಾನಿಗಳ ಲಕ್ಷಣ. ಇಂಥ ಜ್ಞಾನಿಗಳ ದೃಷ್ಟಿಯೇ ನಿರ್ಮಲದೃಷ್ಟಿ, ಪವಿತ್ರ ದೃಷ್ಟಿಯುಳ್ಳವರಿಗೆ ಎಲ್ಲವೂ ಸುಂದರವಾಗಿ, ಪವಿತ್ರವಾಗಿ ಕಾಣುತ್ತದೆ.

 ಹಚ್ಚ ಹಸಿರಿಬಿಂದ ಕೂಡಿದ ದಟ್ಟ ಕಾಡಿನ ಮಧ್ಯದಲ್ಲಿ ಸುಂದರವಾದ ಒಂದು ಮನೆ ಇತ್ತು. ಅದನ್ನು ಕಂಡ ಸಾಧು ಸತ್ಪುರುಷರೊಬ್ಬರು ‘ಎಷ್ಟು ಸುಂದರವಾದ ಪ್ರಶಾಂತವಾದ ಸ್ಥಳವಿದು! ಇಲ್ಲಿಯೇ ಇದ್ದು ಸದಾ ಭಗವಂತನ ಧ್ಯಾನ ಮಾಡಬೇಕು’ ಎಂದು ಯೋಚಿಸಿದರು. ಅದೇ ಮನೆಯನ್ನು ನೋಡಿದ ಕಳ್ಳನೊಬ್ಬನು ಎಂತಹ ಗುಪ್ತವಾದ ಸ್ಥಳದಲ್ಲಿರುವ ಮನೆ ಇದು! ನಾನು ಕಳವು ಮಾಡಿ ಸಂಗ್ರಹಿಸಿದ ವಸ್ತುಗಳನ್ನು ಇಲ್ಲಿ ಇಟ್ಟರೆ ಅವು ಯಾರ ಕಣ್ಣಿಗೂ ಬೀಳಲಾರವು ಎಂದು ಯೋಚಿಸಿದ. ದುರಾಚಾರಿ ದುರ್ವ್ಯಸನಿಯೊಬ್ಬ ಆ ಮನೆಯನ್ನು ಕಂಡು ನನ್ನ ದುರಾಚಾರಕ್ಕಾಗಿ ಇದಕ್ಕಿಂತಲೂ ಉತ್ತಮವಾದ ಏಕಾಂತ ಸ್ಥಳ ಮತ್ತೊಂದಿಲ್ಲ ಎಂದು ನಿರ್ಧರಿಸಿದ. ಹಾಗೆಯೇ ಮನೆಯನ್ನು ನೋಡಿದ ಜೂಜುಗಾರನೊಬ್ಬ ಜೂಜಾಟವಾಡಲು ಅತ್ಯಂತ ಯೋಗ್ಯವಾದ ಮನೆ ಇದು. ನನ್ನ ಗೆಳೆಯರನ್ನೆಲ್ಲ ಇಲ್ಲಿ ಕರೆ ತಂದು ಜೂಜಾಟವಾಡುವ ಎಂದು ಯೋಚಿಸಿದ. ಹೀಗೆ ಒಂದೇ ಮನೆಯನ್ನು ಬೇರೆ ಬೇರೆ ದೃಷ್ಟಿಕೋನ ಹೊಂದಿದ ವ್ಯಕ್ತಿಗಳು ಬೇರೆ ಬೇರೆ ರೂಪದಲ್ಲಿ ನೋಡಿದರು. ನಮ್ಮ ನೋಟದ ಹಿಂದಿನ ಮನಸ್ಸಿನ ಪಾವಿತ್ರ್ಯತೆ ಬಹಳ ಮಹತ್ವದ್ದು. ಆಶೆ-ಆಮಿಷಗಳಿಂದ, ಕಾಮ ಕ್ರೋಧಾದಿ ಮನೋವಿಕಾರಗಳಿಂದ ಮನಸ್ಸು ಮುಕ್ತವಾಗಿರಬೇಕು. ಆಗ ನಮ್ಮ ದೃಷ್ಟಿ ಹಾಗು ಅಂತಃಕರಣಗಳೆಲ್ಲವೂ ಒಳ್ಳೆಯದಾಗುತ್ತವೆ. ದೃಷ್ಟಿಯಂತೆ ಸೃಷ್ಟಿ ಅಲ್ಲವೇ?

ಫ. ಗು. ಹಳಕಟ್ಟಿ, ವಿಜಾಪೂರ

ಶರಣರ ನಡೆ ನುಡಿ ಆಚಾರ ವಿಚಾರಗಳಂತೆ ವರ್ತಿಸುವದೇ ತಮ್ಮ ಜೀವಿತದ ಕರ್ತವ್ಯವೆಂದು ತಿಳಿದು ಹಾಗೆ ನಡೆಯುವ ಜನರು ಕೆಲವು ವರ್ಷಗಳ ಹಿಂದೆ ಬಹು ಜನರು ದೊರಕುತ್ತಿದ್ದರು. ಇವರು ವಚನ ಶಾಸ್ತ್ರ ಗ್ರಂಥವನ್ನು ಯಾವಾಗಲೂ ಅತಿ ಭಕ್ತಿಯಿಂದ ಓದುತ್ತಿದ್ದರು ಮತ್ತು ಶಕ್ತ್ಯಾನುಸಾರ ಹಾಗೆ ನಡೆಯುತ್ತಲೂ ಇದ್ದರು. ಆದರೆ ಇಂಥ ಜನರು ವೀರಶೈವ ಸಮಾಜದಲ್ಲಿ ಈಗ ಬಹು ವಿರಳರಾಗುತ್ತಲಿದ್ದಾರೆ. ಇಷ್ಟೇ ಅಲ್ಲ, ವಚನ ಶಾಸ್ತ್ರವೆಂದರೆ ವೀರಶೈವರ ಒಂದು ಮಹತ್ವದ ಧಾರ್ಮಿಕ ವಾಙ್ಮಯವೆಂಬ ತಿಳುವಳಿಕೆಯು ಸಹ ಜನರಲ್ಲಿ ಹಾರಿ ಹೋಗಿರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ವರ್ತಿಸಿದವರೆಂದರೆ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೇ ಇದ್ದಾರೆ. ಈ ಮಹಾನುಭಾವರು ಶಿವಶರಣರ ನಡೆ ನುಡಿಗಳಲ್ಲಿ ಬಹು ಶ್ರದ್ಧೆಯನ್ನು ವಹಿಸಿದವರಾಗಿದ್ದರು ಮತ್ತು ಅವರು ವಚನ ಶಾಸ್ತ್ರ ತತ್ವಗಳನ್ನು ಬಲ್ಲವರು ಎಲ್ಲಾದರೂ ಇದ್ದಾರೆಂದು ತಿಳಿದ ಕೂಡಲೆ ಅವರಲ್ಲಿಗೆ ಹೋಗಿ ಅವುಗಳ ತತ್ವಗಳ ಬಗ್ಗೆ ವಿಚಾರ ಮಾಡಲು ಮುಂದುವರೆಯುತ್ತಿದ್ದರು. ಈ ದೃಷ್ಟಿಯಿಂದ ಶ್ರೀ ಸ್ವಾಮಿಗಳವರ ಮೇಲು ಪಂಕ್ತಿಯನ್ನು ಪ್ರತಿ ಒಬ್ಬ ವೀರಶೈವನು ಈ ಕಾಲಕ್ಕೆ ಅನುಸರಿತಕ್ಕದ್ದಾಗಿದೆ.

ಷಟ್ಸ್ಥಲ ಸಿದ್ಧಾಂತದ ತತ್ವಗಳನ್ನು ಅರಿಯಲು ವಚನ ಗ್ರಂಥಗಳೇ ಬಹು ಸಹಾಯಕಾರಿಗಳು. ಆದರೆ ಸಮಾಜದ ದುರ್ದೈವದಿಂದ ಇದರ ತತ್ವಗಳು ಹಿಂದುಸ್ಥಾನದಲ್ಲಿ ಇನ್ನೂ ಅಪರಿಚಿತವಾಗಿ ಉಳಿದಿವೆ. ಅವುಗಳನ್ನು ಹೊರಗೆಡುಹುವ ಪ್ರಯತ್ನಗಳು ಇನ್ನೂ ಆಗಿರುವದಿಲ್ಲ. ಷಟ್ಸ್ಥಲ ಶಾಸ್ತ್ರವು ವೀರಶೈವ ಧರ್ಮದ ಒಂದು ಮುಖ್ಯ ವೈಶಿಷ್ಟ್ಯವೆಂದು ಹೇಳಬಹುದು. ಈ ಸಮಾಜದಲ್ಲಿ ಆಗಿ ಹೋದ ಅನೇಕ ಧರ್ಮ ಪ್ರಚಾರಕ್ಕೂ ತತ್ವವೇತ್ತಿಗಳೂ, ಸಾಧು ಸತ್ಪುರುಷರೂ ಇದರ ತತ್ವಗಳನ್ನೇ ಸಾರಿರುವರು. ಷಟ್ಸ್ಥಲದ ಉದ್ದೇಶವು ಮನುಷ್ಯನ ಶಕ್ತಿಗಳನ್ನೂ ಅವನ ಗುಣ ಧರ್ಮಗಳನ್ನೂ ಸರಿಯಾದ ರೀತಿಯಿಂದ ವಿಕಾಸಗೊಳಿಸುವದೇ ಇರುತ್ತದೆ. ಈ ರೀತಿಯನ್ನು ಅವರು ಗೊತ್ತುಪಡಿಸಿ ಅವನ್ನು ಈ ಶಾಸ್ತ್ರದ ಮೂಲಕ ಪ್ರಚುರ ಪಡಿಸಿರುತ್ತಾರೆ. ಆಗಮ ಧರ್ಮಗಳು ಅನೇಕವಿದ್ದು ಅವುಗಳಲ್ಲಿ ಷಟ್ಸ್ಥಲವನ್ನು ವಿಸ್ತಾರವಾಗಿ ಬೋಧಿಸುವ ಧರ್ಮವೆಂದರೆ, ವೀರಶೈವವೇ ಇರುತ್ತದೆ. ವೀರಶೈವರಲ್ಲಿ ಈ ಧರ್ಮದ ಮರ್ಮಗಳನ್ನು ಅರುಹತಕ್ಕ ಗ್ರಂಥಗಳು ಕನ್ನಡ, ಸಂಸ್ಕೃತ, ತಮಿಳು, ತೆಲಗು, ಭಾಷೆಗಳಲ್ಲಿ ಅನೇಕವಿವೆ. ಆದರೆ ಅವುಗಳಲ್ಲಿ ಷಟ್ಸ್ಥಲದ ತತ್ವಗಳನ್ನು ಬಹು ವಿಶದವಾಗಿ ಅರಹುವ ಗ್ರಂಥಗಳೆಂದರೆ ವಚನಗಳೇ ಇವೆ. ಈ ದೃಷ್ಟಿಯಿಂದ ಇವುಗಳ ಮಹತ್ವವು ಬಹಳ ಇರುತ್ತದೆ.

ಈ ಪ್ರಕಾರ ವಚನ ಶಾಸ್ತ್ರವು ಷಟ್ಸ್ಥಲಗಳ ಅಭ್ಯಾಸ ದೃಷ್ಟಿಯಿಂದ ಅಷ್ಟೇ ಅಲ್ಲ,‌ ಇದು ಒಂದು ಕಾಲಕ್ಕೆ ಕರ್ನಾಟಕದಲ್ಲಿ ರಾಜಕೀಯ ಸಾಮಾಜಿಕ ಮತ್ತು ವಾಙ್ಮಯಾತ್ಮಕ ಸ್ಥಿತಿಯಲ್ಲಿ ಬಹು ಮಹತ್ವದ ಬದಲಾವಣೆಗಳನ್ನು ಮಾಡಿರುತ್ತದೆ. ಈ ದೃಷ್ಟಿಯಿಂದಲೂ ಈ ಶಾಸ್ತ್ರ ಗ್ರಂಥಗಳು ಪಠನೀಯವಾಗಿರುತ್ತವೆ.

 ವೀರಶೈವ ಧರ್ಮವು ೧೧-೧೨ನೇ ಶತಮಾನಗಳಲ್ಲಿ ಕರ್ನಾಟಕದಲ್ಲಿ ಪ್ರಸಾರ ಹೊಂದಲಿಕ್ಕೆ ಈ ವಚನಗ್ರಂಥಗಳೇ ಮುಖ್ಯ ಕಾರಣವಾದವೆಂದು ಹೇಳಬಹುದು. ಅವುಗಳ ಮೂಲಕವಾಗಿಯೇ ಆಗಿನ ವೀರಶೈವ ಧರ್ಮ ಪ್ರವರ್ತಕರು ಧರ್ಮ ತತ್ವಗಳನ್ನು ದೇಶಮಧ್ಯದಲ್ಲಿ ಪ್ರಸಾರಗೊಳಿಸಿದರು. ಆ ಕಾಲಕ್ಕೆ ಬಸವಾದಿ ಶಿವಶರಣರು ಕಲ್ಯಾಣ ಪಟ್ಟಣದಲ್ಲಿ ಶಿವಾನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಶಿವಾನುಭವದ ತತ್ವಗಳನ್ನು ಚರ್ಚಿಸಿ ಅವುಗಳನ್ನು ಈ ವಚನಗಳ ಮೂಲಕವಾಗಿಯೇ ಸಾಮಾನ್ಯ ಜನರಿಗೆ ಸಹ ತಿಳಿಯುವಂತೆ ಬೋಧಿಸಿದರು. ಈ ಪ್ರಕಾರ ಆ ಕಾಲಕ್ಕೆ ಹಲಕೆಲವು, ಶಿವಶರಣರಷ್ಟೇ ಅಲ್ಲ, ಅಸಂಖ್ಯಾತ ಶಿವಶರಣರು ಬೇರೆ ಬೇರೆ ಭಾಗಗಳಲ್ಲಿ ಉದ್ಭವಿಸಿ ತಮ್ಮ ತಮ್ಮ ವಿಚಾರಸರಣೆಗೆ ಅನುಸಾರವಾಗಿ ನಾನಾವಿಧವಾಗಿ ಇವುಗಳ ಮೂಲಕ ಧರ್ಮತತ್ವಗಳನ್ನು ಬೋಧಿಸಿದ್ದಾರೆ. ಹೀಗೆ ಈ ಗ್ರಂಥಗಳು ಅಸಂಖ್ಯವಾಗಿ ಹೊರಟು ಒಂದು ವಾಙ್ಮಯ ಸ್ವರೂಪವನ್ನೇ ಹೊಂದಿವೆ. ಹಾಗೆ ಈ ವಾಙ್ಮಯವು ಕೃತ್ರಿಮ ರೀತಿಯಿಂದ ಹೊರಟಿರುವದಿಲ್ಲ. ಅದು ಒಂದು ಧರ್ಮಕ್ರಾಂತಿಯ ಕಾಲಕ್ಕೆ ಹೊರಟಿರುತ್ತದೆ. ಆದುದರಿಂದ ಇದು ಒಂದು ನಿಸ್ಸಾರವಾದ ವಾಙ್ಮಯ ವಾಗಿರುವದಿಲ್ಲ. ಅದರಲ್ಲಿ ಒಂದು ಬಗೆಯ ಚೈತನ್ಯವು ಇರುತ್ತದೆ. ಅದರಲ್ಲಿ ಓಜಸ್ಸು ಇದೆ, ಬಲವು ಇದೆ, ಇಂಥ ವಾಙ್ಮಯವು ವೀರಶೈವರಲ್ಲಿ ಹುಟ್ಟಿದುದಕ್ಕಾಗಿ ಅವರು ಅಭಿಮಾನಪಡತಕ್ಕದ್ದಾಗಿದೆ.

 ವಚನ ಗ್ರಂಥಗಳಲ್ಲಿ ಈ ಬಗೆಯ ಓಜಸ್ಸು ಮತ್ತು ಬಲವು ಉಂಟಾಗಲಿಕ್ಕೆ ಕಾರಣಗಳಾವವು ? ಅವುಗಳ ರಚನೆಯಲ್ಲಿ ಅಂಥದೇನು ಇದೆ ? ಎಂಬುದನ್ನು ನಾವು ವಿಚಾರ ಮಾಡುವದು ಬಹಳ ಮಹತ್ವದ್ದಿರುತ್ತದೆ. ಈ ಬಗ್ಗೆ ನಾವು ಕೆಲವು ಮುಖ್ಯವಾದ ಕಾರಣಗಳನ್ನು ಕೆಳಗೆ ವಿವರಿಸುತ್ತೇವೆ.

 ವಚನ ಗ್ರಂಥಗಳಲ್ಲಿ ನಿರ್ದಾಕ್ಷಿಣ್ಯವಾಗಿ ನುಡಿದ ಸತ್ಯ ಮಾತುಗಳಿವೆ. ಈ ಸಂಗತಿಯೇ ಅವುಗಳ ಓಜಸ್ಸಿಗೆ ಕಾರಣವಾಗಿರುತ್ತದೆ. ಸತ್ಯ ಮಾತುಗಳಲ್ಲಿ ಯಾವಾಗಲೂ ಒಂದು ಬಲವು ಇರುತ್ತದೆ. ತತ್ವವೇತ್ತಿಗಳು ತಮ್ಮ ಸಿದ್ಧಾಂತವನ್ನು ಸ್ಥಾಪಿಸಲು ನಾನಾ ಬಗೆಯ ಯುಕ್ತಿ ಪ್ರಯುಕ್ತಿಗಳನ್ನು ಯೋಜಿಸುವದುಂಟು. ಇಂಥವರ ಗ್ರಂಥಗಳಲ್ಲಿ ಸೂಕ್ಷ್ಮ ಜಾಙ್ಮಯು ಬೇಕಾದಷ್ಟು ಇರಬಹುದು. ಆದರೆ ಅವುಗಳಲ್ಲಿ ಜೀವಕಳೆಯು ಮಾತ್ರ ಸ್ಫುರಿಸಲಾರದು. ಆದರೆ ಸತ್ಯಭಾಷೆಯ ವಿಧವು ಬೇರೆ. ಅದು ತಟ್ಟನೆ ಮನಸ್ಸಿಗೆ ಹೊಳೆಯುತ್ತದೆ. ಅದರಲ್ಲಿ ಸರಳತೆಯುಂಟು; ಓಜಸ್ಸುಂಟು, ವಚನಗ್ರಂಥಗಳೆಲ್ಲ ಹೀಗೆಯೇ ಇವೆ. ಅವುಗಳನ್ನು ಓದಿದೊಡನೆಯೇ ಅವುಗಳಲ್ಲಿಯ ತತ್ವಗಳ ನಿಜತ್ವವು ಮನಸ್ಸಿನಲ್ಲಿ ಕೂಡಲೇ ಪ್ರಕಾಶಿಸಹತ್ತುತ್ತದೆ. ಅವುಗಳ ಕೂಡ ವಾದವಿವಾದ ಮಾಡಲು ಮನಸ್ಸು ಮುಂದಾಗುವದಿಲ್ಲ. ಒಂದುದಿನ ಸ್ವಾಮಿ ವಿವೇಕಾನಂದರವರು ಸತ್ಯವನ್ನು ತಿಳಿಯಲುದ್ದೇಶಿಸಿ ಶ್ರೀ ರಾಮಕೃಷ್ಣ ಪರಮಹಂಸರಿದ್ದೆಡೆಗೆ ಹೋದರು. ಅವರೊಡನೆ ವಾದವಿವಾದ ಮಾಡುವ ಉದ್ದೇಶದಿಂದಲೇ ಹೋದರು. ಆದರೆ ರಾಮಕೃಷ್ಣರವರ ನುಡಿಗಳನ್ನು ಕೇಳಿದೊಡನೆಯೇ ಅವರೊಡನೆ ವಾದವಿವಾದ ಮಾಡುವ ಅವರ ಮನಸ್ಸು ಹಾರಿಹೋಯಿತು. ಪ್ರತಿ ಒಬ್ಬ ಮಹಾಪುರುಷನ ನುಡಿಯ ರೀತಿಯು ಹೀಗೆಯೇ ಇರುತ್ತದೆ. ಅವನ ಮಾತುಗಳಲ್ಲಿ ಸತ್ಯತೆಯ ಪ್ರಭಾವವು ಸ್ವತಃ ಸಿದ್ಧವಾಗಿಯೇ ಹರಿಯುತ್ತಿರುತ್ತದೆ. ಅದು ಕೂಡಲೇ ಮನಸ್ಸಿನಲ್ಲಿ ಬಿಂಬಿಸುತ್ತದೆ. ವಚನಗಳ ರೀತಿಯಾದರೂ ಹಾಗೆಯೇ ಇದ್ದು

ಅವುಗಳಲ್ಲಿರುವ ಶಕ್ತಿಗೆ ಇದೇ ಮುಖ್ಯ ಕಾರಣವೆಂದು ಹೇಳಬಹುದು.

ವಚನಗಳಲ್ಲಿ ಮೋಹಕತನವು ಇದೆ. ಯಾಕೆಂದರೆ ಅವುಗಳಲ್ಲಿ ಕಾಪಟ್ಯ ಕುಹಕತನ ಕುತಂತ್ರದ ವಿಚಾರಗಳಿಲ್ಲ. ಅಂದರೆ ವಚನಕಾರನು ತನ್ನ ಮನಸ್ಸಿನಲ್ಲಿ ಇದ್ದದ್ದನ್ನು ಇದ್ದಕ್ಕಿದ್ದ ಹಾಗೆಯೇ ನುಡಿಯುವನು. ಚಿಕ್ಕ ಮಗುವಿನ ನುಡಿಯಲ್ಲಿ ಮೋಹಕತನವು ಏಕೆ ಇರುತ್ತದೆಂಬುದನ್ನು ನಾವು ವಿಚಾರಿಸಿದರೆ ಅದು ತನ್ನ ಮನಸ್ಸಿನಲ್ಲಿ ಹೊಳೆದದ್ದನ್ನು ಇದ್ದಕ್ಕಿದ್ದ ಹಾಗೆಯೇ ನಿರ್ವ್ಯಾಜವಾಗಿ ನುಡಿಯುವದು. ಇದೇ ಮಗುವಿನ ಮಾತಿನ ಮೋಹಕತನಕ್ಕೆ ಕಾರಣವು. ವಚನ ಗ್ರಂಥಗಳು ಹಾಗೆಯೇ ಇರುತ್ತವೆ. ಒಬ್ಬ ಮನುಷ್ಯನು ಅತ್ಯಂತ ವಕೃತ್ವ ಶಕ್ತಿಯುಳ್ಳವನಾಗಿರಬಹುದು. ಇಂಥವರು ಸಮಾಜದಲ್ಲಿ ಹೇರಳವಾಗಿ ದೊರೆಯುವದುಂಟು. ಆದರೆ ಅವರು ಇಷ್ಟರಿ೦ದಲೇ ಸಮಾಜದ ಚಾಲಕರಾದದ್ದು ತೋರಿಬರುವದಿಲ್ಲ. ಇದಕ್ಕೆ ಕಾರಣವೆಂದರೆ ಇವರು ನಡೆದಂತೆ ನುಡಿಯುವದಿಲ್ಲ. ನುಡಿದಂತೆ ನಡೆಯುವುದಿಲ್ಲ . ಆದ್ದರಿಂದ ಇಂಥವರ ಮಾತಿನಲ್ಲಿ ಬಲವಿರುವದಿಲ್ಲ. ಮ. ಗಾಂಧಿಯವರ ವಿಚಾರಗಳು ಸಮ್ಮತವಾಗದೆ ಇದ್ದಂತವರು ನಮ್ಮ ದೇಶದಲ್ಲಿ ಅನೇಕರಿರಬಹುದು. ಆದರೆ ಅವರ ಮಾತಿನಲ್ಲಿ ಕಪಟಭಾವವಿರುವದಿಲ್ಲಾದ್ದರಿಂದ ಅವುಗಳಲ್ಲಿ ಒಂದು ಬಲವುಂಟಾಗಿರುತ್ತದೆ. ಇದೇ ಮೇರೆಗೆ ವಚನಗಳ ಸ್ಥಿತಿಯು ಇರುತ್ತದೆ. ಆದ್ದರಿಂದ ಅವುಗಳಲ್ಲಿ ಒಂದು ಅತರ್ಕ್ಯವಾದ ಶಕ್ತಿಯು ಉತ್ಪನ್ನವಾಗಿರುತ್ತದೆ.

 ವಚನಗಳಲ್ಲಿಯ ಮತ್ತೊಂದು ವೈಶಿಷ್ಟ್ಯವೆಂದರೆ ಅವುಗಳಲ್ಲಿ ಒಂದು ಅಸಾಧಾರಣ ವಾದ ಧೈರ್ಯಭಾಗವು ತುಂಬಿ ತುಳುಕುತ್ತದೆ. ಅಂದರೆ ಅವುಗಳಲ್ಲಿ ಅಂಜಿ ನುಡಿದ ಮಾತುಗಳಿಲ್ಲ. ಹೀಗೆ ವರ್ತಿಸಬೇಕಾದರೆ ಅತ್ಯಂತ ಮನೋಧೈರ್ಯವು ಬೇಕು. ಸತ್ಯವನ್ನು ಹೇಳಲು  ಜನರು ಯಾವಾಗಲೂ ಹಿಂಜರಿಯುವದುಂಟು. ಹೆರವರ ಇಚ್ಛೆಯಂತೆ ನುಡಿಯುವವರೇ ಬಹಳ. ಆದರೆ ವಚನಕಾರರಲ್ಲಿ ಈ ಬಗೆಯ ಸ್ಥಿತಿಯು ಇರುವದಿಲ್ಲ. ಅವರು ಸಮಾಜದ ದೋಷಗಳನ್ನೂ ಮನುಷ್ಯನ ಕುಂದುಗಳನ್ನೂ ಹೊರಗೆಡವಲು ಎಂದೂ ಹಿಂಜರಿದಿಲ್ಲ. ಇದರಿಂದ ವಚನಕಾರರು ನಿಜವಾದ ಸಮಾಜ ಸುಧಾರಕರಾಗಿರುವರು. ಅವರು ಜ೦ಗಮರು ಮತ್ತು ಮಠಾಧಿಪತಿಗಳ ದುರ್ವೃತ್ತಿಗಳನ್ನೂ ದುಷ್ಟರ ದುರ್ನಡತೆಗಳನ್ನೂ ಎಷ್ಟು ಕಠೋರವಾಗಿ ನಿಂದಿಸಿದರೋ ಅಷ್ಟು ಈಗಿನ ಸಮಾಜ ಸುಧಾರಕರಾರೂ ನಿಂದಿಸಿರಲಿಕ್ಕಿಲ್ಲ. ಸಮಾಜವನ್ನು ಸುಧಾರಿಸಲಪೇಕ್ಷಿಸುವವರು ಸಮಾಜದ ದೋಷಗಳನ್ನು ಹೊರಗೆಡವಲು ಹಿಂಜರಿದರೆ ಅವರ ಉದ್ದಿಶ್ಯ ಕಾರ್ಯಗಳು ಹೇಗೆ ನೆರವೇರಬಹುದು? ಇಂಥವರು ಸಮಾಜದ ರೋಷವನ್ನು ಸಹಿಸಲು ಸಿದ್ಧರಾಗಿರತಕ್ಕದ್ದು. ವಚನಕಾರರ ಚರಿತ್ರೆಗಳನ್ನು ನಾವು ನೋಡಿದರೆ ಅವರು ಹೀಗೆಯೇ ವರ್ತಿಸಿದಂತೆ ತೋರಿಬರುವದು. ಅವರು ತಮ್ಮ ಇಷ್ಟ ಕಾರ್ಯದಲ್ಲಿ ಧನ ಸಂಪತ್ತನ್ನು ಸೂರೆಮಾಡಿರುವರು, ರಾಜ್ಯವೈಭವವನ್ನು ತ್ಯಜಿಸಿರುವರು, ತಮ್ಮ ಪ್ರಾಣವನ್ನು ಕೂಡ ನೀಗಿರುವರು. ಇಂಥವರು ನುಡಿದ ಮಾತುಗಳಲ್ಲಿ ಭೀರುತನವು ಇರುವ ಬಗೆ ಹೇಗೆ ? ಇದರ ಸತ್ಯತೆಯನ್ನು ವಾಚಕರು ನೋಡಬೇಕಾದರೆ ಬಸವಣ್ಣನವರ ಮಾಹೇಶ್ವರ ಸ್ಥಲಕ್ಕೆ ಸಂಬಂಧಿಸಿದ ವಚನಗಳನ್ನಾಗಲಿ ಇಲ್ಲವೆ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನವರ ವಚನಗಳನ್ನಾಗಲಿ ನೋಡಬೇಕು. ಅಂದರೆ ವಚನಕಾರರಲ್ಲಿ ಎಂಥ ಅಸದೃಶ್ಯವಾದ ಮನೋಧೈರ್ಯ ವಿದೆಂಬುದು ತಿಳಿದುಬರುತ್ತದೆ. ಇದರಿಂದಲೇ ವಚನ ವಾಙ್ಮಯಗಳಲ್ಲಿ ಒಂದು ವಿಲಕ್ಷಣ ಜೀವಕಳೆಯು ಉತ್ಪನ್ನವಾಗಿರುತ್ತದೆ.

ವಚನ ಗ್ರಂಥಗಳಲ್ಲಿ ಪಕ್ಷಪಾತದ ಮಾತುಗಳಿಲ್ಲ. ಇದು ಅವುಗಳಲ್ಲಿಯ ಮತ್ತೊಂದು ವಿಶಿಷ್ಟತ್ವವು. ವಚನಕಾರರು ಇವರು ನನ್ನವರು, ಇವರು ನನ್ನ ಬಂಧುಗಳು, ಇವರು ನನ್ನ ಜಾತಿಯವರು, ನನ್ನ ವರ್ಗದವರೆಂದು ತಿಳಿದು, ಯಾರನ್ನೂ ಎತ್ತಿ ನುಡಿದಿಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಸದ್ಗುಣಗಳು ಎಲ್ಲಿದ್ದರೂ ಅವಕ್ಕೆ ಮನ್ನಣೆ ಕೊಡುವಂಥವರು ಮತ್ತು ದುರ್ಗುಣಗಳು ಇದ್ದಲ್ಲಿ ಸಮೀಪದ ಬಂಧುಗಳಾಗಿದ್ದರೂ ಕೂಡ ಅವರನ್ನು ನಿಂದಿಸುವಂಥವರು ಇರುತ್ತಾರೆ. ಈ ಪ್ರಕಾರ ಅವರು ಎಲ್ಲರೊಡನೆ ಸಮಭಾವದಿಂದ ವರ್ತಿಸಿರುತ್ತಾರೆ. ಒಬ್ಬ ಹೊಲೆಯನಿರಲಿ, ಬ್ರಾಹ್ಮಣನಿರಲಿ, ಶ್ರೀಮಂತನಿರಲಿ, ಬಡವನಿರಲಿ, ಅವನ ಶೀಲಗಳನ್ನು ನೋಡಿ ಅವು ಸರಿಯಾಗಿದ್ದರೆ ಅವನನ್ನು ಕೇವಲ ಸಹೋದರನಂತೆ ಅವರು ಕಾಣುವವರಾಗಿರುವರು. ಈ ಅಭಿಪ್ರಾಯದ ಉಕ್ತಿಗಳು ವಚನಗ್ರಂಥಗಳಲ್ಲಿ ತುಂಬಿ ಹೋಗಿವೆ. ಹೀಗೆ ಅವರು ಬರೇ ನುಡಿಯಲ್ಲಷ್ಟೇ ಅಲ್ಲ, ಹಾಗೆ ನಡೆದೂ ತೋರಿಸಿದರು. ಅಸ್ಪೃಶ್ಯರೊಡನೆ ಅವರು ಸಹಭೋಜನ ಮಾಡಿರುವರು. ಲಗ್ನಾದಿ ವ್ಯವಹಾರಗಳನ್ನು ನಡೆಸಿರುವರು. ಇದರಲ್ಲಿ ಅವರು ಸಮಾಜದ ರೋಷವನ್ನು ಲೆಕ್ಕಿಸಲಿಲ್ಲ. ಈ ಪ್ರಕಾರ ವಚನಗಳೆಂದರೆ, ಅವು ನಡೆದು ತೋರಿಸಿ ನುಡಿದ ಮಾತುಗಳಾಗಿವೆ. ಆದ್ದರಿಂದ ವಚನವಾಙ್ಮವು ವೀರಶೈವರಲ್ಲಿ ಬಹು ಮಹತ್ವದ ಸ್ಥಾನವನ್ನು ಹೊಂದಿರುವದು.

 ವಚನಗಳನ್ನು ಹೇಳುವ ರೀತಿಯಾದರೂ ಅವುಗಳ ಬಲವನ್ನು ಹೆಚ್ಚಿಸಿರುತ್ತದೆ. ಆತ್ಮನಿರೀಕ್ಷಣೆಯಿಂದ ತಮ್ಮ ದೋಷಗಳನ್ನು ತಾವು ತಿಳಿದುಕೊಂಡು ಅವುಗಳನ್ನು ದೂರಮಾಡಿಕೊಳ್ಳುವ ಉದ್ದಿಶ್ಯವಾಗಿ ತಮಗೆ ತಾವೇ ಹೇಳಿಕೊಳ್ಳುವ ಶಬ್ದಗಳು ಇವಾಗಿರುತ್ತವೆ. ವಚನಕಾರರ ಉದ್ದೇಶವು ಪ್ರಥಮದಲ್ಲಿ ತಮ್ಮ ಸುಧಾರಣೆ ಅಂದರೆ ತಮ್ಮ ಉಚ್ಚ ಧ್ಯೇಯದಂತೆ ತಾವು ಮೊದಲು ನಡೆದು ತೋರಿಸುವುದು ಇರುತ್ತದೆ. ಹೀಗೆ ನಡೆದು ತೋರಿಸಿ ಆ ಮೇಲೆ ತಮಗೆ ಉಂಟಾದ ಅನುಭವವನ್ನು ಜನರಿಗೆ ಹೇಳುವದು ಇರುತ್ತದೆ. ಇದೇ ಅವರ ಪದ್ಧತಿಯಾಗಿದೆ. ವಚನಕಾರರು ಎರಡನೆಯವರಿಗೆ ಬರೇ ಉಪದೇಶ ಮಾಡುವ ಕಾರ್ಯವನ್ನು ಕೈಗೊಂಡಿಲ್ಲ. ಮೊದಲು ತಾವು ನಡೆದು ಆಮೇಲೆ ಹೇಳುವವರಾಗಿರುವರು. ನಿಜವಾಗಿ ಇದೇ ಶಿವಾನುಭವವೆನಿಸಿಕೊಳ್ಳುತ್ತದೆ. ಇಂಥವರ ಮಾತುಗಳಲ್ಲಿ ಸಾರವಿರುತ್ತದೆ. ಚೈತನ್ಯವಿರುತ್ತದೆ. ವಚನಶಾಸ್ತ್ರವು ಈ ರೀತಿಯದಾಗಿರುತ್ತದೆ.

ಈಗಿನ ಕಾಲಕ್ಕೆ ಅನೇಕರು ಸಮಾಜ ಚಾಲಕರಾಗಲು ಬಗೆಯುತ್ತಾರೆ. ಸಮಾಜವನ್ನು ಸುಧಾರಿಸಲು ಅಪೇಕ್ಷಿಸುತ್ತಾರೆ. ಆದರೆ ಇವರು ವಚನಕಾರರ ಮಾರ್ಗವನ್ನು ಹಿಡಿದಿದ್ದಾದರೆ ಅವರು ಈ ಸ್ಥಿತಿಯನ್ನು ನಿಸ್ಸಂದೇಹವಾಗಿ ಹೊಂದಬಹುದು. ಅಂದರೆ ವಚನಕಾರರಂತೆ ಅವರು ಸತ್ಯಭಾಷಿಗಳಾಗಿರಬೇಕು. ಅವರಲ್ಲಿ ಯಾವ ಬಗೆಯ ಕಾಪಟ್ಯ ಭಾವವಿರಬಾರದು, ತಾವು ಹಿಡಿದ ಕಾರ್ಯದಲ್ಲಿ ಅತ್ಯಂತ ಧೈರ್ಯಶಾಲಿಗಳಾಗಿರಬೇಕು, ಪಕ್ಷಪಾತವಿರಕೂಡದು ಮತ್ತು ಆತ್ಮ ಸುಧಾರಣೆಯಲ್ಲಿ ತೊಡಗಿರಬೇಕು. ಹೀಗೆ ಇವರು ಆಚರಿಸಿದ್ದಾದರೆ ಅವರು ಮೇಲ್ತರದ ಸ್ಥಿತಿಯನ್ನು ಅವಶ್ಯವಾಗಿ ಹೊಂದುವರು. ವಚನ ಕಾರರಲ್ಲಿ ಈ ಬಗೆಯ ಭಾವವು ತುಂಬಿತುಳುಕುತ್ತದೆ. ಆದ್ದರಿಂದಲೇ ಅವರು ವೀರಶೈವ ಸಮಾಜದಲ್ಲಿ ಒಂದು ಮಹತ್ವದ ಕ್ರಾಂತಿಯನ್ನುಂಟುಮಾಡಲು ಶಕ್ತರಾದರು.

ನಾವು ಯಾವ ವಾಙ್ಮಯವನ್ನು ತೆಗೆದುಕೊಂಡರೂ ಅದು ಎರಡು ವರ್ಗದ ಜನರಿಂದ ಬೆಳೆದದ್ದು ತೋರಿಬರುತ್ತದೆ. ಇವರಲ್ಲಿ ಒಂದು ವರ್ಗದವರಿಗೆ ನಾವು ತತ್ವವೇತ್ತಿಗಳೆಂದು ಹೇಳಬಹುದು. ಇವರು ನಾನಾಬಗೆಯ ಬುದ್ಧಿ ಕುಶಲತೆಗಳನ್ನು ಉಪಯೋಗಿಸಿ ತಮ್ಮ ಮತವನ್ನು ಸಿದ್ಧಪಡಿಸಿರುತ್ತಾರೆ. ಇಂಥ ವರ್ಗದವರಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯ ಇಂಥ ತತ್ವಜ್ಞರು ಬರುತ್ತಾರೆ. ಈ ವರ್ಗವಲ್ಲದೆ ಇನ್ನೊಂದು ವರ್ಗವಿದ್ದು ಇವರಿಗೆ ನಾವು ಧರ್ಮಸುಧಾರಕರೆಂದು ಹೇಳಬಹುದು. ಇವರಿಂದಲೂ ಮಹತ್ವದ ವಾಙ್ಮಯವುಂಟಾಗುತ್ತದೆ. ಇಂಥವರಲ್ಲಿ ಗೌತುಮ್ ಬುದ್ಧ, ಕ್ರೈಸ್ತ ಕನಪ್ಯೂಶಿಯಸ್, ಉಪನಿಷತ್ಕಾರರು, ಬಸವೇಶ್ವರ ಮೊದಲಾದ ಧರ್ಮ ಸ್ಥಾಪಕರೂ ಧರ್ಮ ಪ್ರವರ್ತಕರೂ ಸಾಧು ಸತ್ಪುರುಷರೂ ಬರುತ್ತಾರೆ. ಇವರು ತಮ್ಮ ಉಕ್ತಿಗಳಿಂದ ಜನಾಂಗದ ಹೃದಯವನ್ನು ತಲ್ಲಣಿಸಿ ಅದನ್ನು ಉಚ್ಚಸ್ಥಿತಿಗೆ ತಂದಿರುತ್ತಾರೆ. ಇವರು ಮೊದಲನೆಯ ವರ್ಗದವರಂತೆ ಕೇವಲ ಬೌದ್ಧಿಕ ತತ್ವವಿಚಾರಗಳನ್ನು ಹೇಳುತ್ತ ಕೂಡದೆ, ತಾವು ನುಡಿದಂತೆ ಆಚರಿಸಿ ಜಗತ್ತಿನಲ್ಲಿ ಪ್ರಸಿದ್ಧರಾಗಿರುವರು. ಇವರಿಂದ ಉಂಟಾದ ವಾಙ್ಮಯವು ಸಾಮಾನ್ಯವಾದುದಲ್ಲ. ಈ ವಾಙ್ಮಯವು ಇತರ ತತ್ವವೇತ್ತಿಗಳ ಬೌದ್ಧಿಕ ವಾಙ್ಮಯಕ್ಕೆ ಕಾರಣವಾಗಿರುವದು. ಉದಾ: ಉಪನಿಷದ್‌ ಗ್ರಂಥಗಳ ನುಡಿಗಳ ಮೇಲೆ ಹಿಂದುಗಡೆ ಪ್ರಸಿದ್ಧರಾಗಿರುವ ತತ್ವವೇತ್ತಿಗಳು ತಮ್ಮ ಸಿದ್ಧಾಂತಗಳನ್ನು ಕಲ್ಪಿಸಿರುವರು. ಇದರಂತೆಯೇ ಕ್ರೈಸ್ತರ ಬೈಬಲ್, ಮಹ್ಮದೀಯರ ಕುರಾನ, ಬೌದ್ಧರ ಧಮ್ಮಪದ ಇವುಗಳು ಇರುತ್ತವೆ. ಈ ಗ್ರಂಥಗಳ ಮೂಲಕ ಹಿಂದುಗಡೆ ಅನೇಕಾನೇಕ ತತ್ವಗ್ರಂಥಗಳು ಆಯಾಯ ಮತಗಳಲ್ಲಿ ಉತ್ಪನ್ನವಾಗಿರುತ್ತವೆ. ವಚನ ವಾಙ್ಮಯವು ಇದೇ ಬಗೆಯ ವಾಙ್ಮಯದಲ್ಲಿ ಬರುತ್ತದೆ. ಅದರಲ್ಲಿಯ ವಿಚಾರಗಳು ಹಿಂದುಗಡೆ ವೀರಶೈವ ತತ್ವ ಗ್ರಂಥಗಳನ್ನು ಹೆಚ್ಚಿಸಲು ಕಾರಣವಾಗಿವೆ. ವಚನಕಾರರ ಪ್ರತಿ ಒಂದು ವಚನದ ಮೇಲೆ ದೊಡ್ಡ  ದೊಡ್ಡ ಗ್ರಂಥಗಳನ್ನು ಸಹ ಬರೆಯಬಹುದಾಗಿದೆ. ಇಷ್ಟು ಅವು ಪ್ರಫುಲ್ಲಿತ ವಿಚಾರಗಳಿಂದ ತುಂಬಿ ಹೋಗಿವೆ. ಇದೇ ಸಜೀವ ವಾಙ್ಮಯದ ಕುರುಹು.

ಆದರೆ ವೀರಶೈವ ಸಮಾಜದ ಅದೃಷ್ಟದಿಂದ ಇಂಥ ಮಹತ್ತರವಾದ ವಾಙ್ಮಯವನ್ನು ದೂಷಿಸುವ ಕೆಲ ಮಹಾನುಭಾವರು ಇದರಲ್ಲಿ ಉತ್ಪನ್ನರಾಗಿದ್ದಾರೆ. ಇನ್ನೂ ಕೆಲವರು ಸಂಸ್ಕೃತದ ಮೋಹಕ್ಕೆ ಒಳಗಾಗಿ ಈ ಸಜೀವ ಕನ್ನಡ ವಾಙ್ಮಯವನ್ನು ನಿರಾಕರಿಸುವದುಂಟು. ಈ ಸ್ಥಿತಿಯನ್ನು ತೀವ್ರವಾಗಿ ಹೋಗಲಾಡಿಸುವದು ವೀರಶೈವ ಸಮಾಜದ ಅದ್ಯ ಕರ್ತವ್ಯವಾಗಿದೆ. ಆದ್ದರಿಂದ ಅವರು ತಾವು ಸ್ಥಾಪಿಸಿದ ಶಾಲೆಗಳಲ್ಲಿಯೂ ಧರ್ಮ ಪಾಠಶಾಲೆಗಳಲ್ಲಿಯೂ ಈ ಗ್ರಂಥಗಳನ್ನು ಅಭ್ಯಾಸಿಸುವ ಯೋಜನೆ ಮಾಡುವದು ಅವಶ್ಯವಿದೆ. ಇಷ್ಟೇ ಅಲ್ಲ, ಪ್ರತಿ ಒಬ್ಬರು ತಮ್ಮ ಮನೆಯಲ್ಲಿ ಮತ್ತು ಸಭಾ ಸ್ಥಳಗಳಲ್ಲಿ ವಚನಗಳ ತತ್ವಗಳನ್ನು ಪ್ರಸಂಗಿಸಿ ಅವುಗಳನ್ನು ಬಹು ಜನರ ಸಮಾಜಕ್ಕೆ ತಿಳಿಯಪಡಿಸಲು ಯತ್ನಿಸುವದು ಅವಶ್ಯವಿದೆ. ಈ ಪ್ರಕಾರ ಅವರು ವರ್ತಿಸಲೆಂದು ನಾನು ನಮ್ರ ಪೂರ್ವಕವಾಗಿ ಸೂಚಿಸಿ ಈ ನನ್ನ ಲೇಖನವನ್ನು ಮುಗಿಸುತ್ತೇನೆ.

ರಚನೆ:ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ತೆಳ್ಳನೆಯ ಮೈಕಟ್ಟು,

ತಿಳಿಯ ಕಾವಿಯ ತೊಟ್ಟು,

ಬಂಧನಗಳ ಮೋಹವ ಬಿಟ್ಟು,

ಆತ್ಮನಲಿ ಮನಸನು ಇಟ್ಟು,

ನಿಜಗುರುವಿನ ಅರಸುತ ಹೊರಟು,

ದಿವ್ಯತೆಯ ಭಾವವ ತೊಟ್ಟು,

ಗುರುಪದದಲಿ ಶಿರವನು ಇಟ್ಟು,

ಸಮಾಜೋನ್ನತಿಯ ದೀಕ್ಷೆಯ ತೊಟ್ಟು,

ನಾಡಿಗೆ ಧಾರ್ಮಿಕ ಕೇಂದ್ರವ ಕೊಟ್ಟು,

ಶಿವಮಂದಿರವೆಂಬ ನಾಮವ ಇಟ್ಟು,

ಬಾಲವಟುಗಳ ಪೋಷಿಸ ಹೊರಟು,

ದೈವೀಶಕ್ತಿಯ ಕುರುಹನು ಇಟ್ಟು,

ದುರಿತ ಗುಣಗಳ ದೂಡುತ ಹೊರಟು,

ಕಲ್ಯಾಣ ರಾಜ್ಯವ ಕಟ್ಟುತ ಹೊರಟ

ದ್ವಿತೀಯ ಬಸವ ಅಪ್ಪ ಹಾನಗಲ್ಲ ಕುಮಾರೇಶ