ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

ಸಹೃದಯ ಓದುಗರಿಗೆ ,

ಕಳೆದ ತಿಂಗಳು ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ೧೫೭ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮ ನಾಡಿನಾದ್ಯಂತ,ದೇಶದ ವಿವಿಧ ಭಾಗಗಳಲ್ಲಷ್ಟೆ ಅಲ್ಲ ಚಿಕ್ಯಾಗೋ ಮತ್ತು ಜರ್ಮನಿಯಲ್ಲೂ  ಸಡಗರ ಸಂಭ್ರಮ ಗಳಿಂದ ನೆರವೇರಿದವು

ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು,ಅವರು ಕೇವಲ ನುಡಿದು ಮರೆಯಾಗಲಿಲ್ಲ.

ನಡೆದು ಬದುಕಿದವರು

ನಡೆಗಳ ಕಾರ್ಯಕ್ಕೆ ತಮ್ಮ ೬೩ ವರ್ಷಗಳ ಸಮಗ್ರ ಬದುಕನ್ನೇ  ಸಮಾಜಕ್ಕೇ ಅರ್ಪಿಸಿದ ಮಹಾತ್ಮರು

ಅವರ ಬದುಕು ,ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು  ಕತ್ತಲು ಕವಿದ ಸಮಾಜಕ್ಕೆ ನೀಡಿದ ಬೆಳಕುಗಳು . ಅವರ ದೂರ ಯೋಚನೆಗಳ “ಯೋಜನೆ” ಗಳು ಶಿವಯೋಗ ಸಂಪನ್ನದ ಅಡಿಪಾಯಗಳಿಂದ ಇಂದು ಹಲವು ಸಂಸ್ಥೆಗಳು  ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ,ಸಮಾಜ ಸೇವೆಯಲ್ಲಿ ಅವಿಛಿನ್ನವಾಗಿ ಶತಮಾನಗಳಿಂದ  ಮುನ್ನೆಡೆಯುತ್ತಿವೆ.

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅವರ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳ ಜೊತೆಗೆ ಅವರು ಯಶಸ್ವಿಯಾಗಿ ನಿರ್ವಹಿಸಿದ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಗಳು ೧೨೦ ವರ್ಷ ಗಳ ನಂತರವೂ ಅವ್ಯಾಹತವಾಗಿ ಮುಂದುವರೆದುಕೊಂಡು ಬರುತ್ತಿರುವದು ಪೂಜ್ಯರ  ಅರ್ಥಪೂರ್ಣ ಯೋಚನೆ ಮತ್ತು ದೃಡ ಯೋಜನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ

ಶ್ರೀಕುಮಾರ ತರಂಗಿಣಿ  ಅಕ್ಟೋಬರ  ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಮಾನವಾ ! ನೀನಾರೋ |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: ಸ್ತ್ರೀಸುಧಾರಣೆ -ಲೇಖಕರು-ಜ.ಚ.ನಿ
  4. ಸತಿ-ಪತಿ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು. ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
  5. ಕಾವ್ಯ: ಪರಮೇಶ್ವರಿಯ ಪುಣ್ಯನಾಮವನು ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು
  6. ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ ಪೂಜ್ಯ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು:ಲೇಖಕ: ಶ್ರೀಕಂಠ.ಚೌಕೀಮಠ.

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳು ರಚಿಸಿದ ಪದ್ಯ

ರಾಗ-ದರ್ಬಾರಿ ಕಾನಡಾ)

 

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || ೧||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ ||೨||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || ೩ ||

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

  

 ಜಡಸಂಸಾರದ ತೆಕ್ಕೆ| ಸಡಲಿ ಲಿಂಗವ ದೃಢದಿ

ಪಿಡಿವ ಪಾಣಿಯು ತಾ ಒಡೆಯ ಜಂಗಮಲಿಂಗ

ದೊಡಲೆಂದ ಗುರುವೆ ಕೃಪೆಯಾಗು   ||೧೫೪||

 ನಾಲ್ಕನೆಯ ಕರ್ಮೇಂದ್ರಿಯ ಪಾಣಿ, ಪಾಣಿಗೆ ಕರ, ಕೈ, ಹಸ್ತಗಳೆಂದು ಪರ್ಯಾಯಪದಗಳು.  ವಸ್ತುಗಳ ಆದಾನ ಪ್ರದಾನ ಕಾರ್ಯಗಳನ್ನು ಮಾಡುವದು ಕೈಯ ಕೆಲಸ. ಅರ್ಥಾತ್  ತಕ್ಕೊಳ್ಳುವದು (ಗೃಹಿಸುವದು) ಮತ್ತು ಕೊಡುವದನ್ನು ಕರದಿಂದಲೇ ಮಾಡುತ್ತೇವೆ. ಕಾಯಕಕ್ಕೆ ಕರವೇ ಮೂಲವಾಗಿದೆ. ದುಡಿದ ಕೈಗಳಿಂದ ಫಲವನ್ನು ಗ್ರಹಿಸುತ್ತೇವೆ. ಇನ್ನಿತರರಿಗೆ ದಾನವನ್ನು ಕೊಡುತ್ತೇವೆ. ಆದರೆ ಕೊಡುವ ಕೈಗಳಿಂದ ಭಿಕ್ಷೆ ಬೇಡಬಾರದು.

ಶಿವನು ಅನಂತ ಕರಗಳಿಂದ ಕೊಟ್ಟ ಇಳೆ-ಮಳೆ ಬೆಳೆಗಳನ್ನು ಅನುಭವಿಸುವ ಮಾನವನು ಅಹಂಕಾರಿಯಾಗಿ ನಾನು ಮಾಡುತ್ತೇನೆ. ನಾನು ನೀಡುತ್ತೇನೆ. ನಾನೇ ಕೊಡುತ್ತೇನೆಂದು ಅಭಿಮಾನ ಪಡುತ್ತಾನೆ. ನಾನೆಂಬ ಗರ್ವದಿಂದ ಜಡವಾದ ಸಂಸಾರ ಬಂಧನದಲ್ಲಿ ಸಿಲುಕುತ್ತಾನೆ. ಅಜ್ಞಾನದಿಂದ ಸಂಸಾರವು ಜಡವಾಗುವದು. ಈ ಅಜ್ಞಾನದಿಂದಲೇ ಮಹಾದಾನಿ ಮಹದೇವನನ್ನು ಮರೆತು ಅಭಿಮಾನಿಸಿ ಅಹಂಕಾರಪಡುತ್ತಾನೆ.

ಶರಣನಾದವನು ಅಹಂಕರ್ತೃತ್ವವನ್ನು ಸಂಪೂರ್ಣವಾಗಿ ಮರೆತು ಶಿವಕರ್ತೃತ್ವವನ್ನು ನೆನೆಯುತ್ತಾನೆ. ಎಲ್ಲವೂ ಶಿವ (ಲಿಂಗದೇವ) ನ ಪ್ರೇರಣೆಯಿಂದಲೇ ಘಟಿಸುತ್ತದೆಂದು ಭಾವಿಸುತ್ತಾನೆ. ಅದರಂತೆ ಆಚರಿಸುತ್ತಾನೆ. ಸದ್ಗುರೂಪದೇಶದಿಂದ ಜಡಸಂಸಾರದ ತೆಕ್ಕೆಯನ್ನು ಸಡಲಿಸಿ ಬಿಟ್ಟುಬಿಡುತ್ತಾನೆ. ಅರ್ಥಾತ್ ಸಂಸಾರದಲ್ಲಿ ಇದ್ದೂ ಇಲ್ಲದಂತೆ ಶಿವ ಸಂಸಾರದಲ್ಲಿ ಬಾಳುತ್ತಾನೆ. ಗುರುವಿತ್ತ ಇಷ್ಟಲಿಂಗವನ್ನು ಘಟ್ಟಿಯಾಗಿ ಹಿಡಿದುಕೊಳ್ಳುವನು. ಅಂದರೆ ದೃಢಮನಸ್ಸಿನಿಂದ ಲಿಂಗದೇವನನ್ನು ನೆನೆಯಬೇಕು. ನೆರೆನಂಬಬೇಕು. ದೃಢನಂಬಿಗೆಯಿಂದ ಲಿಂಗವನ್ನು ಆರಾಧಿಸುವ

ಮತ್ತು ಗುರು-ಲಿಂಗ-ಜಂಗಮಕ್ಕಾಗಿ ಕಾಯಕ ಮಾಡುವ ಕೈಗಳೇ ”ಗುರುವಿನ ಗುರು ಜಂಗಮವಿಂತೆಂಬುದು ಕೂಡಲ ಸಂಗಯ್ಯನ ವಚನ”ವೆಂದ ಅಣ್ಣನ ವಾಣಿಯಂತೆ ಮೃಡ ಜಂಗಮ ಸ್ವರೂಪಿಗಳಾಗುತ್ತವೆ. ಕರಗಳು ಜಂಗಮಲಿಂಗದ ಒಡಲಾಗುತ್ತವೆ.   ತನುಸೇವೆ ಗುರುವಿಗೆ, ಮನಸೇವೆ ಲಿಂಗಕ್ಕೆ ಸಲ್ಲುವಂತೆ, ಧನಸೇವೆ ಜಂಗಮಕ್ಕೆ ಸಲ್ಲಬೇಕು. ಅರ್ಥಾತ್ ಕೈಗಳಿಂದ ಜಂಗಮಕ್ಕೆ ವಂಚನೆಯಿಲ್ಲದೆ ನೀಡಿದರೆ ಕರಗಳು ಜಂಗಮ ಲಿಂಗದ ಒಡಲಾಗುವವು. ದಾನವೇ ಹಸ್ತಕ್ಕೆ ಭೂಷಣವೆಂದು ಅನುಭವಿಗಳೂ ನುಡಿದಿದ್ದಾರೆ. ಕರದ ಯಥಾರ್ಥತೆಯನ್ನು ೧೨೮ನೆಯ ತ್ರಿಪದಿಯಲ್ಲಿಯೂ ನೋಡ ಬಹುದು.

ಹೇ ಗುರುದೇವ ! ಸಂಸಾರದ ತೆಕ್ಕೆಯನ್ನು ಬಿಡಿಸಿ ಎಂದೆಂದಿಗೂ ಲಿಂಗವನ್ನು ಪಿಡಿಯುವ ಶಕ್ತಿಯನ್ನು ಕರಗಳಿಗೆ ಕೊಡು. ಅಂದರೆ ಈ ಕೈಗಳು ಜಂಗಮಲಿಂಗ ವಾಗಬಲ್ಲವು.

ಶಿವಕವಿಯು ಇಲ್ಲಿ ವೀರಶೈವ ಸಿದ್ಧಾಂತವನ್ನೇ ತುಂಬಿದ್ದಾನೆ. ಲಿಂಗಭಕ್ತನಾದವನು ಲಿಂಗಪೂಜೆಯನ್ನು ಮಾಡುವದು, ಜಂಗಮನ ಬರುವಿಗಾಗಿ ಹಾರೈಸುವದು, ಮತ್ತು ಲಿಂಗದ ಮುಖ ಜಂಗಮವೆಂದು ಅರಿತು ಆತನ ಸಂತೃಪ್ತಿಗೊಳಿಸಬೇಕೆಂಬುದನ್ನು ಮನನ ಮಾಡಿಕೊಳ್ಳಬೇಕು. ನಾನು ಕಾಯಕ ಮಾಡುವದೆಲ್ಲ ಜಂಗಮನ ಸೊತ್ತೆಂದು ಭಾವಿಸಬೇಕು. ಅರ್ಥಾತ್ ಕಾಯಕ ಮಾಡಿದ ಫಲವೆಲ್ಲ ಜಂಗಮನದೆಂದು ನಂಬಬೇಕು. ಯಾಕಂದರೆ ದಾಸೋಹಂಭಾವದಿಂದ ದೊರೆತ ಶೇಷವೇ

ಪ್ರಸಾದವಾಗುವದು. ತ್ಯಾಗಪೂರಿತವಾದ ಭೋಗವೇ ಲಿಂಗಭೋಗೋಪವೆನಿಸುವದು. ಅದಕ್ಕಾಗಿಯೇ ಕೈಗಳು ಜಂಗಮಲಿಂಗವನ್ನು ತೃಪ್ತಿಪಡಿಸಬಲ್ಲವುಗಳೆಂದು ನಿರೂಪಿಸಲ್ಪಟ್ಟಿವೆ.

ಕಾಕು ಸಟೆ ಮಾತುಗಳ | ನಿಃಕರಿಸಿ ನಿಜ ಸತ್ಯ

ವಾಕ್ಕೇ ಸುಪ್ರಸಾ-ದಾಖ್ಯ ಲಿಂಗವಿದು ಬಹು

ಜೋಕೆಂದ ಗುರುವೆ ಕೃಪೆಯಾಗು   ||೧೫೫||

ಐದನೆಯ ಕರ್ಮೇಂದ್ರಿಯ ವಾಣಿಯು, ಐದು ಕರ್ಮೇಂದ್ರಿಯಗಳಲ್ಲಿ ಇದು ಬಹು ಮುಖ್ಯವಾದುದು. ಇದಕ್ಕೆ ಮುಖವೆಂತಲೂ ಹೇಳಬಹುದು. ಬಾಯಿಯಿಂದಲೇ ಮಾತು ವ್ಯಕ್ತವಾಗುವದಲ್ಲದೆ; ಗುರುಲಿಂಗಕ್ಕೂ ಪೋಷಕವಾಗಿದೆ. ಮತ್ತು ಬಾಯಿಯೇ ದೇಹವನ್ನು ಸಂರಕ್ಷಿಸುವ ಪ್ರಮುಖ ಸಾಧನವೂ ಹೌದು. ವಾಣಿಯಿಂದ ತನ್ನ ಭಾವಾಭಿವ್ಯಕ್ತಿಯನ್ನು ಇತರರಿಗೆ ತಿಳಿಸಲು ಸಾಧ್ಯವಾಗುವದು.

ಮಾತು ಯಥಾರ್ಥವಾಗಿರಬೇಕು. ಮಾತಿನಲ್ಲಿ ಕಾಕುತನ, ಸಟೆಗಳಿರಬಾರದು. ಅನ್ಯರಿಗೆ ಕೊಂಕುನುಡಿಯುವದು ಸುಳ್ಳು ಹೇಳುವದು ದೊಡ್ಡ ಅಪರಾಧ. ಶರಣರು ಸುಳ್ಳುನುಡಿಗೆ ಸೇರುವದಿಲ್ಲ. ಸುಳ್ಳುನುಡಿ ಪಾಪಕಾರಕವೆಂದು ನುಡಿದಿರುವರು. ಸತ್ಯಾಸತ್ಯತೆಯ ವಿಚಾರವನ್ನು ಈಗಾಗಲೇ ೧೩೨ನೆಯ ತ್ರಿಪದಿಯ ವ್ಯಾಖ್ಯಾನದಲ್ಲಿ ಮಾಡಲಾಗಿದೆ. ಮಾತಿನಲ್ಲಿ ಪಾವಿತ್ರ್ಯತೆ ಇರಬೇಕು. ನಿಜವಾದ ಸತ್ಯವಿರಬೇಕು. ಆ ಮಾತು ಸಾರ್ಥಕವಾಗುವದು. ಅಣ್ಣ ಬಸವಣ್ಣನವರು –

ನುಡಿದರೆ ಮುತ್ತಿನ ಹಾರದಂತಿರಬೇಕು,

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,

ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು,

ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು,

ನುಡಿಯೊಳಗಾಗಿ ನಡೆಯದಿದ್ದರೆ,

ಕೂಡಲ ಸಂಗಮದೇವನೆಂತೊಲಿವನಯ್ಯಾ.

ಮಹಾಜ್ಞಾನಿ ಅಲ್ಲಮ ಪ್ರಭುಗಳು –

ಮಾತೆಂಬುದು ಜ್ಯೋತಿರ್ಲಿಂಗ

ಸ್ವರವೆಂಬುದು ಪರತತ್ವ

ತಾಳೋಷ್ಟ್ರ ಸಂಪುಟವೆಂಬುದೇ ನಾದಬಿಂದುಕಳಾತೀತ

ಗುಹೇಶ್ವರನ ಶರಣರು ನುಡಿದು

ಸೂತಕಿಗಳಲ್ಲ ಕೇಳಾ ಮರುಳೆ !

ಮಾತು ಮುತ್ತಿನಹಾರದಂತೆ, ಸ್ಪಟಿಕದಂತೆ, ಮಾಣಿಕ್ಯದ ಪ್ರಭೆಯಂತೆ ಮಹತ್ವವುಳ್ಳದ್ದಾಗ ಬೇಕು. ಮಾತಿಗೆ ಮಹಾಲಿಂಗನೂ ತಲೆದೂಗಬೇಕು. ಇಂಥ ಮಾತೇ ಜ್ಯೋತಿರ್ಲಿಂಗ ವಾಗುವದು. ಜ್ಯೋತಿರ್ಲಿಂಗದ ದರ್ಶನ ಮಾಡಿಸಬಲ್ಲ ಶರಣರು ಸೂತಕಿಗಳಲ್ಲ. ಶಿವಶರಣರ ಸೂಳ್ನುಡಿಗಳಲ್ಲಿ ಶಿವಸಾಕ್ಷಾತ್ಕಾರ ನಿಚ್ಚಳವಾಗಿ ತೋರುವದು. “ಕೂಡಲಸಂಗನ ಶರಣರು ಮನದರದು ಮಾತನಾಡಿದರೆ ಲಿಂಗವ ಕಾಣಬಹುದು” ಎಂಬ ಅಣ್ಣನ ವಾಣಿಯಲ್ಲಿ ಅಮೃತ ತೊಟ್ಟು ಧಾರೆಗಟ್ಟಿದೆ. ಅಂತೆಯೇ ಮಹಾನುಭಾವಿಗಳು ನುಡಿದುದು ಪ್ರಸಾದವಾಣಿ, ನಡೆದುದು ಲಿಂಗನಡೆ, ಪ್ರಸಾದವಾಣಿಯಲ್ಲಿಯೇ ಪ್ರಸಾದಲಿಂಗದ ಸಾನಿಧ್ಯ ವೇದ್ಯವಾಗುವದು.

ಪ್ರಸಾದಲಿಂಗನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಬೇಕಾದ ಮುಖದಿಂದ ವ್ಯರ್ಥನುಡಿಗಳನ್ನು ಆಡಬಾರದು. ಜೊಳ್ಳು ಮಾತಿಗೆ ಮನವೆಳಸಬಾರದು. ಗೊಳ್ಳು ಹರಟೆಗೆ ಕಾಲಹರಣ ಮಾಡಬಾರದು. ಅದಕ್ಕಾಗಿ ಬಹು ಜೋಕೆ (ಎಚ್ಚರಿಕೆ) ಯಿಂದ ಮಾತನಾಡಬೇಕೆಂದು ಗುರುರಾಯನು ಎಚ್ಚರಿಕೆಯಿತ್ತಿದ್ದಾನೆ. ಒಳ್ನುಡಿ ಒಳಿತನ್ನೇ ಮಾಡಬಲ್ಲುದು. ಗೊಳ್ಳು ಮಾತು ಜಗಳಕ್ಕೆ ಅವಕಾಶವಾಗುವದು. “ಮಾತು ಬಲ್ಲವ ಮಾಣಿಕ ತಂದ, ಮಾತನರಿಯದವ ಜಗಳವ ತಂದ’ ಎಂಬ ಲೋಕವಾಣಿ ಪ್ರಸಿದ್ಧವಿದೆ. ಕಾರಣ ಮಾತನ್ನು ಎಚ್ಚರಿಕೆಯಿಂದಲೇ ಬಳಸಬೇಕು. ವೈಖರಿಯ ಶಕ್ತಿಯನ್ನು ಸಂಪಾದಿಸಲು ಮೌನವೇ ಉತ್ತಮ ಸಾಧನ. ಅಂತೆಯೇ ಮಾತಿಗಿಂತಲೂ ಮೌನಶ್ರೇಷ್ಠವೆಂದು ಅನುಭವಿಗಳು ಅನುಭವದ ನುಡಿಯನ್ನು ನುಡಿದಿರುವರು.

ಗಾಂಧಿಜಿಯವರು  ಆತ್ಮಶಕ್ತಿಯನ್ನು ಹಾಗೂ ವಾಣಿಶಕ್ತಿಯನ್ನು ಬೆಳೆಸಿಕೊಳ್ಳಲು ಆಗಾಗ್ಗೆ ಮೌನಿಗಳಾಗುತ್ತಿದ್ದುದು ಅವರ ಆತ್ಮಚರಿತೆಯಿಂದ ತಿಳಿದುಬರುತ್ತದೆ. ಜ್ಞಾನಿಗಳು ಬಹುಶಃ ಮೌನಿಗಳಾಗಿಯೇ ಇರುತ್ತಾರೆ. ‘ಮಾತು ಬೆಳ್ಳಿ, ಮೌನ ಬಂಗಾರ”ವೆಂಬುದು ಸತ್ಯವಾಗಿದೆ. ಓ ಗುರುವೇ ! ಎನ್ನ ಮಾತು ಮಂತ್ರವಾಗಿಸಲು ಕೃಪೆಮಾಡು. ಶಿವ ನಾಮವನ್ನು ನೆನೆಯುವ ವಾಣಿಯಲ್ಲಿ ಪ್ರಸಾದಲಿಂಗದ ಪ್ರಸನ್ನತೆಯುಂಟಾಗುವಂತೆ ಹರಸು.

 

ಜ.ಚ.ನಿ

 ನೀರಿಂಗೆ ನೈದಿಲೆಯೆ ಶೃಂಗಾರ

ಸಮುದ್ರಕ್ಕೆ ತೆರೆಯೆ ಶೃಂಗಾರ

ಗಗನಕ್ಕೆ ಚಂದ್ರಮನೆ ಶೃಂಗಾರ

ನಾರಿಗೆ ಗುಣವೆ ಶೃಂಗಾರ….”

 ಕುಮಾರ ಸ್ವಾಮಿಗಳವರು ಸ್ತ್ರೀಯರ ಮುಖಗಳನ್ನು ಈ ಕಣ್ಣುಗಳಿಂದ ನೋಡದಿದ್ದರು ಅವರ ಜೀವನ ಮುಖವನ್ನು ತಮ್ಮ ಜ್ಞಾನನೇತ್ರದಿಂದ ನಿರೀಕ್ಷಿಸುತ್ತಿದ್ದರು. ಬರೀ ನಿರೀಕ್ಷಣೆ ಮಾತ್ರವಲ್ಲ ಸುಧಾರಣೆಗಾಗಿ ಸರ್ವತೋಮುಖದಲ್ಲಿ ಪರೋಕ್ಷವಾಗಿ ಪರಿಶ್ರಮಿಸುತ್ತಿದ್ದರು.

ಪ್ರತಿವರ್ಷ ಶಿವಯೋಗಮಂದಿರ ಜಾತ್ರೆಯ ಸಮಯದಲ್ಲಿ ಮಹಿಳಾ ಸಭೆಯನ್ನು ಕರೆಯುತ್ತಿದ್ದರು. ಮಹಿಳೆಯರನ್ನೆ ಕಾರ್ಯಕರ್ತರನ್ನಾಗಿ ಮಾಡುತ್ತಿದ್ದರು. ಭಾಷಣಕರ್ತರನ್ನಾಗಿ ಏರ್ಪಡಿಸುತ್ತಿದ್ದರು. ಸುಧಾರಣೆಯ ಜೀವಂತ ಪ್ರಶ್ನೆಗಳನ್ನು ತಾವೇ ಕಳುಹಿಸಿ ಚರ್ಚಿಸಹಚ್ಚುತ್ತಿದ್ದರು.

ಸ್ವಾಮಿಗಳವರ ವ್ಯಕ್ತಿತ್ವಕ್ಕೆ ಹೆಣ್ಣಿನ ಅಗತ್ಯವಿಲ್ಲದಿದ್ದರು ಸಮಾಜಕ್ಕೆ ಹೆಚ್ಚು ಅಗತ್ಯವಿದೆಯೆಂಬುದನ್ನು ಚೆನ್ನಾಗಿ ಗ್ರಹಿಸಿದ್ದರು. ಸಮಾಜ ರಥಕ್ಕೆ ಹೆಣ್ಣು ಗಂಡು ಎರಡು ಚಕ್ರಗಳೆಂದು ಸಮಾಜ ಪುರುಷನ ಒಳಮ್ಮೆ, ಹೊರಮೈ ಎಂದು ಇವುಗಳಲ್ಲಿ ಯಾವುದಾದರೊಂದು ಊನವಾದಲ್ಲಿ ಸಮಾಜ ಸುಸೂತ್ರವಾಗಿ ಸಾಗದೆ ಕುಂಟುತ್ತದೆಯೆಂದು  ಒಮ್ಮಿಲ್ಲೊಮ್ಮೆ ಪ್ಪಪಾತಕ್ಕೆ ಬೀಳುತ್ತದೆಯೆಂದು ಅಪ್ಪಣೆ ಕೊಡಿಸುತ್ತಿದ್ದರು. ಪುರುಷರ ಸುದಾರಣೆಯಂತೆ ಸ್ತ್ರೀ ಯರ ಸುಧಾರಣೆಯು ಅತ್ಯಗತ್ಯ ಅನಿವಾರ್ಯ.

ಸ್ವಾಮಿಗಳವರು ಪ್ರಯಾಣದಲ್ಲಿರುವಾಗ ತಂಗಿದ ಹಳ್ಳಿಯಲ್ಲಿ ಯಾರಾದರು ತಮ್ಮ ಮನೆ ಹೆಂಗಸರನ್ನು  ಚನ್ನಾಗಿ ಹೊಡೆದದ್ದು ಅವರ ಕಿವಿಗೆ ಬದ್ದರೆ ಅವರನ್ನು ಕರೆಯಿಸಿ ಏನಪ್ಪ ಯಾತಕ್ಕೆ ಹೆಂಡತಿಯನ್ನು ಹೊಡೆದೆ ? ತಪ್ಪು ಮಾಡದ ಮನುಷ್ಯನಿರುವನೆ ? ತಪ್ಪಿಗೆ ತಕ್ಕ ಶಿಕ್ಷೆ ಇದೆಯೆ ? ನೀನು ತಪ್ಪು ಮಾಡಿದರೆ ನಿನ್ನನ್ನು ಯಾರು ಹೊಡೆಯಬೇಕು ? ಬುದ್ಧಿವಾದವನ್ನು ಹೇಳಿ ತಪ್ಪನ್ನು ತಿದ್ದಬೇಕು. ಹೆಂಡತಿಯೆ ಮನೆಯ ಭಾಗ್ಯದೇವತೆ ! ಮನೆ ಮ್ಕಳ ಪಾಲನೆ ಅವಳ ಪಾಲಿನದು. ಹೆಂಡತಿಯನ್ನು ಹಿಂಸಿಸುವರಿಗೆ ಹರನು ಮೆಚ್ಚಲಾರ.ಘೋರ ನರಕ ತಪ್ಪದು. ನೀನು ನಿನ್ನ ಹೆಂಡತಿಯು ಪರಸ್ಪರ ಪ್ರೇಮ ಸಂತೋಷಗಳಿಂದ ಇದ್ದರೆ ಸುಖ ಸಿಗುತ್ತದೆ. ಸಂಸಾರ ಸುಸೂತ್ರ  ಸಾಗುತ್ತದೆ. ಒಂದು ಕಾಲು ಕುಂಟಾದರೆ ಚೆನ್ನಾಗಿರುತ್ತದೆಯೊ, ಹೇಳು ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂದು ಶಿವಶರಣರು ಅಪ್ಪಣೆಕೊಡಿಸಿದ್ದಾರೆ. ನಿಮ್ಮಿಬ್ಬರ ದೇಹಗಳು ಎರಡಾಗಿದ್ದರು ಮನಸ್ಸು ಒಂದಾಗಿರಬೇಕು. ಹೃದಯ ಒಂದಾಗಿರಬೇಕು. ತಿಳಿಯಿತೆ ? ಇನ್ನು ಮೇಲೆ ಹೀಗೆಲ್ಲ ಹುಚ್ಚುಹುಚ್ಚಾಗಿ ಹೊಡೆಯಬೇಡ ಎಂದು ಹೇಳಿ ಕಳಿಸುತ್ತಿದ್ದರು. ಆದರೂ ಸ್ವಾಮಿಗಳ ಮನಸ್ಸು ಸ್ತ್ರೀಯರ ಅಜ್ಞಾನ ಅನಾಚಾರಗಳಿಗಾಗಿ ತುಂಬಾ ನೋಯುತ್ತಿತ್ತು. ಅವುಗಳ ನಿವಾರಣೆಗಾಗಿ ಸದಾ ಆಲೋಚಿಸುತ್ತಿತ್ತು.

ಸ್ವಾಮಿಗಳವರು ಸಿದ್ಧರಾಗಿಯು ಸ್ತ್ರೀಯರ ಮುಖಾವಲೋಕನ ಮಾಡದಿರಲು ಕಾರಣವೇನು ಎಂದು ಕೆಲವರು ಕೇಳದಿರಲಿಲ್ಲ. ಅದಕ್ಕೆ ಹನ್ನೆರಡನೆಯ ಶತಮಾನದಲ್ಲಿ ನಿರ್ವಾಣೆಯಾಗಿ ಅನುಭವ ಮಂಟಪಕ್ಕೆ ಬಂದ ಮಹಾದೇವಿಯಕ್ಕಗಳನ್ನು ‘ಕೇಶದ ಮರೆಯೇಕೆ’ ? ಎಂದು ಕೇಳಿದ ಅಲ್ಲಮಪ್ರಭುವಿಗೆ ‘ನಿಮ್ಮ ಶರಣರಿಗೆ ನೋವಾದೀತೆಂದು’ ಅಕ್ಕಗಳು ಉತ್ತರಿಸಿದಂತೆಯೆ ಇಲ್ಲಿ ಉತ್ತರಿಸಬೇಕಾಗಿದೆ. ಸ್ವಾಮಿಗಳವರಿಗೆ ನಿಜವಾಗಿಯೂ ಮನೋವಿಕಾರವಿರಲಿಲ್ಲ. ಅದರಲ್ಲಿ ಅವರು

ಸಂಪೂರ್ಣ ಸಿದ್ಧಿಯನ್ನು ಪಡೆದಿದ್ದರು. ಆದರೂ ಅವರು ತಮ್ಮ ಅಪರ ವಯಸ್ಸಿನಲ್ಲಿಯು ಆ ವ್ರತವನ್ನು ನಡೆಸಿದರು. ಕಾರಣ ಹಿರಿಯರ ಅನುಕರಣ ಕಿರಿಯರು ಮಾಡಿಯಾರು. ಅದರಲ್ಲಿಯು ಇಂತಹ ವಿಷಯಗಳಲ್ಲಿ ಅನುಕರಣ ಮಾಡುವುದು ವಿಶೇಷ. ನಾವೇ ನೋಡತೊಡಗಿದರೆ ಶಿವಯೋಗ ಮಂದಿರ ಸಾಧಕರು ನೋಡತೊಡಗುವರು. ನಮ್ಮಂತೆ ಅವರ ಮನಸ್ಸಿರುವದಿಲ್ಲ. ಮನಸ್ಸಿನ ಸೆಳೆತಕ್ಕೆ ಮಾರುಹೋದಾರು ಎಂಬುದೇ ಅವರ ಉದ್ದೇಶ. ಹೀಗೆ ಸಾಧಕರ ಶಿಕ್ಷಣಕ್ಕಾಗಿ ಇನ್ನೂ ಅನೇಕ ವ್ರತಗಳನ್ನು ಕೈಬಿಡದೆ ಅವರು ಆಚರಿಸುತ್ತಿದ್ದರು ಅವರಿಗಾಗಿ ಅವರಿದ್ದಿಲ್ಲ.

ಒಂದು ದಿನ ಗಚ್ಚಿನಮಠದಲ್ಲಿ ಎಲ್ಲ ಸಾಧಕರಿದ್ದರು. ಕಲ್ಲುಮಠದ ಮುಂಭಾಗದಲ್ಲಿ ಸ್ವಾಮಿಗಳೊಬ್ಬರೆ ಮೂಹೂರ್ತ ಮಾಡಿದ್ದರು. ಬೆಳಗಿನ ಒಂಭತ್ತು ಗಂಟೆಯ ಸಮಯ. ಯಾರೋ ಪ್ರಯಾಣಿಕರಾದ ಹೆಂಗಸರು ದ್ವಾರದಿಂದ ಸ್ತ್ರೀ ಸಹಜವಾದ ಗಲಾಟೆಯೊಡನೆ ಒಳನುಗ್ಗಿದರು. ಸ್ವಾಮಿಗಳವರು ಸುಮ್ಮನೆ ಇದ್ದರು. ಹೆಂಗಸರು ಎದುರಿಗಿರುವ ಸ್ವಾಮಿಗಳವರನ್ನು ನೋಡಿದ ಮೇಲೆಯು ಹಿಂದಿರುಗಲಿಲ್ಲ. ಬಳಸಿಕೊಂಡು ಗಚ್ಚಿನಮಠದತ್ತ ಹೋಗಹತ್ತಿದರು. ಆಗ ಸ್ವಾಮಿಗಳವರು ತಾವೇ ಎದ್ದು ಅವರನ್ನು ತಾಯಿಗಳೆ, ಎಂದು ನಯವಾಗಿ ಕರೆದು ಅಲ್ಲಿ ಶಿವಯೋಗಿಗಳಿದ್ದಾರೆ. ಅವರು ನಿಮ್ಮನ್ನು ನೋಡುವದಿಲ್ಲ. ನಿಮ್ಮೊಡನೆ ಮಾತೂ ಆಡುವದಿಲ್ಲ. ಅಷ್ಟಕ್ಕು ನೀವು ಅಲ್ಲಿ ನೋಡತಕ್ಕದು ಏನೂ ಇಲ್ಲ. ನೀವು ಹೀಗೆಯೆ ಹೊರಟು ಹೋಗಿರೆಂದು ಹೇಳಿಕಳುಹಿಸಿದರು. ಇದನ್ನು ಕಣ್ಣಾರೆ ಕಂಡಿದ್ದೇನೆ. ಕಿವಿಯಾರೆ ಕೇಳಿದ್ದೇನೆ. ಹೀಗಿರುವಾಗ ಅವರ ಉದ್ದೇಶ ಅವರ ಪ್ರತಾಚರಣೆ ಸಾಧಕರ ನಿಮಿತ್ತವಾಗಿ ಇತ್ತೆಂಬುದು ಸ್ಪಷ್ಟವಾಗುವುದಿಲ್ಲವೆ ?

ವ್ಯಷ್ಟಿ ಜೀವನದ ಸಾಧನ ಕ್ಷೇತ್ರ, ಸಣ್ಣ ಕುಟುಂಬವಾಗಿದ್ದರೆ ಸಮಷ್ಟಿ ಜೀವನದ ಸಾಧನಕ್ಷೇತ್ರ, ವಿಶಾಲವಾದ ವಿಶ್ವಕುಟುಂಬವಾಗಿದೆ. ಈ ವಿಶ್ವಕುಟುಂಬವನ್ನು ಮೀರಿ ಯಾವನೂ ವಿಶ್ವವ್ಯಕ್ತಿಯಾಗಲಾರನು, ವಿಶ್ವಶಾಂತಿ ಕಾರಣನಾಗನು. ಹಾಲಾದರು ಮಧುರ ಪಾಕವಾಗಬೇಕಾದರೆ ಸಕ್ಕರೆಯ ಬೆರಕೆ ಬೇಕೇ ಬೇಕು. ಪ್ರೇಮವೆ ಹಾಲು ಸದ್ಗುಣಗಳೆ ಸಕ್ಕರೆ. ಪ್ರೇಮ ಐಂದ್ರಿಕವಾಗಬಾರದು. ಆಧ್ಯಾತ್ಮಿಕವಾಗಬೇಕು. ಅದರ್ಶಾಕಾಂಕ್ಷೆಯಾಗಬೇಕು. ಸದ್ಗುಣ ಸಂವರ್ಧಿಯಾಗಬೇಕು.

ಬೌದ್ಧಿಕ ಆಧ್ಯಾತ್ಮಿಕ ಜೀವನೋನ್ನತಿಗೆ ಹೆಣಗುವ ವ್ಯಕ್ತಿಗೆ ಹೆಣ್ಣು ಗಂಡೆಂಬ ಭೇದವಿಲ್ಲ. ಬುದ್ಧಿ ಆತ್ಮಗಳು ಉಭಯ ವ್ಯಕ್ತಿತ್ವದಲ್ಲಿ ಸರಿಸಮಾನವಾದವುಗಳು. ಏರುಪೇರುಗಳ ಕವಲಿಲ್ಲ. ಕೊಂಕಿಲ್ಲ. ಆದರು ಸ್ತ್ರೀ ಸಮಾಜೋನ್ನತಿಗೆ ಹೆಣಗಿ ಮುಖದ ಮೇಲೆ ಕಪ್ಪುಕಲೆಯನ್ನು ತಂದುಕೊಳ್ಳದ ವ್ಯಕ್ತಿ ಇತಿಹಾಸದಲ್ಲಿ ಕಾಣುವುದು ವಿರಳ. ಸ್ವಾಮಿಗಳವರು ಈ ವಿಷಯದಲ್ಲಿ ನಿಷ್ಕಳಂಕ ಚರಿತರಾಗಿ ಹುಣ್ಣಿಮೆಯ ಚಂದ್ರನಂತೆ ಬೆಳಗಿದರು. ಉತ್ತರಾಯಣದ ಪ್ರಭಾಕರನಂತೆ ಪ್ರಜ್ವಲಿಸಿದರು.

ಸ್ವಾಮಿಗಳವರು ಹೆಂಗಸರ ಮುಖವನ್ನು ನೋಡದೆ ಇದ್ದುದು ಹೇಳನ ಭಾವದಿಂದಲ್ಲ. ಸತೀತ್ವ ಸ್ವಾಮಿತ್ವ ಧರ್ಮಗಳೆರಡರ ಪರಿಪಾಲನದ ಹೆಚ್ಚಳಿಕೆಯಿಂದ, ಸಾಂಸಾರಿಕ ಜೀವನದಲ್ಲಿದ್ದು ಉರಿಯ ನಾಲಗೆಗಂಜೆ, ಸುರಿಗೆಯ ಮೊನೆಗಂಜೆ ಪರಸ್ತ್ರೀ ಪರಧನವೆಂಬ ಜೂಜಿಂಗಂಜುವೆ” ಎಂದು ಉಸುರಿದ ಬಸವಣ್ಣನ ಬಂಧುರೋಕ್ತಿಯನ್ನು ಸನ್ಯಾಸಜೀವಿಯು ಅದೆಷ್ಟು ಎಚ್ಚರದಿಂದ ಕಾಪಾಡಬೇಕೆಂಬ ಹೊಣೆಗಾರಿಕೆಯನ್ನು ಹೆಚ್ಚಾಗಿ ತಿಳಿದು ಆಚರಣೆಯಲ್ಲಿ ತಂದು ಆ ಉಕ್ತಿಯನ್ನು  ಸಾರ್ಥಕಪಡಿಸಿದ ಸನ್ಮಾನ್ಯರು ಸ್ವಾಮಿಗಳವರು, ಆವ್ರತಶೀಲರಾಗಿಯೇ ಸ್ತ್ರೀ ಸುಧಾರಣೆಯ ಕಾರ್ಯವನೆಸಗಿದ ಕಾರಣಿಕರು ಕುಮಾರಯೋಗಿಗಳವರು.

ಸ್ತ್ರೀಯರಲ್ಲೆ ಬೋಧಕ ವರ್ಗ ತಯಾರಾಗಬೇಕೆಂಬ ಹೆಬ್ಬಯಕೆ  ಸ್ವಾಮಿಗಳವರದಾಗಿತ್ತು. ಅಕ್ಕ ಲಕ್ಕಮ್ಮ, ನೀಲಾಂಬೆ ಮುಂತಾದ ಶರಣೆಯರಂತೆ ಆತ್ಮವೀರರಾಗಿ ಬಾಳಬೇಕೆಂಬ ಮೈತ್ರೇಯಿಯಂತೆ ಪತಿವ್ರತೆಯರಾಗಿ ಪರವಸ್ತು ಪ್ರೇಮಿಗಳಾಗಿ ಬದುಕಬೇಕೆಂಬ ಮಹತ್ವಾಕಾಂಕ್ಷೆ ಸ್ವಾಮಿಗಳವರಲ್ಲಿ ಬಲವಾಗಿ ಬೇರೂರಿತ್ತು. ಚಿಗುರು ಹಾಕಿತ್ತು. ಫಲ ನೋಡುವ ಅನುಭವಿಸುವ ಅವಕಾಶ ಅವರಿಗಿಲ್ಲದೆ ಹೋಯಿತು.

ಪೂಜ್ಯ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಭಾರತೀಯ ಸಂಸ್ಕೃತಿಯಲ್ಲಿ ವಿವಾಹವೊಂದು ಪವಿತ್ರ ಬಂಧನ. ವಿವಾಹೇತರ ಸಂಬಂಧಗಳು ಧರ್ಮಬಾಹಿರವಾಗಿದ್ದು, ಸಮಾಜದ ಮನ್ನಣೆಗೆ ಪಾತ್ರವಾಗುವುದಿಲ್ಲ. ಇಂಥ ಸಂಬಂಧಗಳಿಗೆ ನೆಮ್ಮದಿ, ಸುಖ ಶಾಂತಿಗಳು ಗಗನಕುಸುಮವಾಗಿರುವುದರಿಂದ ನೆಮ್ಮದಿಯ ಜೀವನಕ್ಕೆ ವಿವಾಹ ಅನಿವಾರ್ಯ. ವಿವಾಹದಲ್ಲಿ ಬಂಧಿತರಾದ ಸತಿ- ಪತಿಗಳು ಸಮರಸದಿಂದ ಕೂಡಿ ಬಾಳಿದರೆ ನೆಮ್ಮದಿಯೆಂಬುದು ಅಂಗೈಫಲ. ಸರಸ ದಾಂಪತ್ಯವೆಂಬುದು ಸತಿಪತಿಗಳ ಜೀವನಕ್ಕೆ ಸೀಮಿತವಾಗಿರದೆ ಅದು ಕುಟುಂಬದ ನೆಮ್ಮದಿಗೂ ಕಾರಣವಾಗುತ್ತದೆ. ವಿರಸ ದಾಂಪತ್ಯ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಆಗ ಜೀವನ ಮೃತ್ಯುವಿಗೆ ಸಮವಾಗುತ್ತದೆ.

ಸತಿಪತಿಗಳಿಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡು ಸಂಸಾರ ರಥವನ್ನು ಮುನ್ನಡೆಸಬೇಕು. ಸುಖ-ದುಃಖ, ನೋವು-ನಲಿವು, ಸೋಲು-ಗೆಲವುಗಳನ್ನು ಸಮನಾಗಿ ಹಂಚಿಕೊಳ್ಳಬೇಕು. ಆಚಾರ-ವಿಚಾರ, ಬೇಕು-ಬೇಡ, ನೋಟ-ಮಾಟಗಳಲ್ಲಿ ಇಬ್ಬರೂ ಒಂದಾಗಿರಬೇಕು. ಆಗ ಆ ದಾಂಪತ್ಯದಲ್ಲಿ ಯೋಗದ ಕಳೆ ಬೆಳಗುತ್ತದೆ. ಅದೊಂದು ಅನುಪಮ ಆದರ್ಶದ ಬಾಳೆನಿಸುತ್ತದೆ. ಇಂಥ ಬಾಳನ್ನು ಕಂಡ ನಿಜಗುಣರು- ‘ಸತಿಪತಿಗಳಿವರ ಸಮರತಿಯ ಬಾಳುವೆಗೆ ಪ್ರತಿಯುಂಟೆ ಲೋಕದೊಳು’ ಎಂದು ಉದ್ಗರಿಸುತ್ತಾರೆ.

ಆದರ್ಶ ಕುಟುಂಬದ ಸತಿಪತಿಗಳು ತಮ್ಮಲ್ಲಿರುವ ದೌರ್ಬಲ್ಯಗಳನ್ನು ಪರಸ್ಪರ ತಿದ್ದಿಕೊಳ್ಳುವ ಮತ್ತು ಕ್ಷಮಿಸುವ ಔದಾರ್ಯ ಹೊಂದಿರುತ್ತಾರೆ. ಅವರಲ್ಲಿ ಪರಿಶುದ್ಧವಾದ ನಿಷ್ಕಾಮ ಪ್ರೀತಿಯೊಂದು ಮನೆಮಾಡಿಕೊಂಡಿರುತ್ತದೆ. ಬಡತನ-ಸಿರಿತನಗಳಿಗೆ ಅಲ್ಲಿ ಸ್ಥಾನವಿಲ್ಲ. ಬಡವಿಯಾದ ಸತಿಯೂ ನಿಷ್ಕಾಮ ಮತ್ತು ನಿರ್ವ್ಯಾಜ ಪ್ರೀತಿಯಲ್ಲಿ ಸ್ವರ್ಗವನ್ನು ಕಾಣುತ್ತಾಳೆ. ‘ನಾನು ಬಡವಿ ಆತ ಬಡವ; ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎಂಬ ಕವಿವಾಣಿಯಿಂದ

ಪ್ರೀತಿಯ ಹರವು, ಶ್ರೀಮಂತಿಕೆ ನಮ್ಮರಿವಿಗೆ ಬರುತ್ತದೆ.

ಜೇಡರದಾಸಿಮಾರ್ಯ ಒಬ್ಬ ಶರಣ. ದುಗ್ಗಳೆ ಅವನ ಆದರ್ಶ ಸತಿ. ವ್ಯಕ್ತಿಯೊಬ್ಬ ಸನ್ಯಾಸ ಶ್ರೇಷ್ಠವೋ? ಸಂಸಾರ ಶ್ರೇಷ್ಠವೋ? ಎಂದು ಪ್ರಶ್ನಿಸಿದಾಗ ದಾಸಿಮಾರ್ಯರು ಸಾಕಷ್ಟು ಬೆಳಕಿದ್ದರೂ ‘ನಾನೀಗ ಓದಬೇಕು ದೀಪ ತಗೆದುಕೊಂಡು ಬಾ’ ಎಂದು ಸತಿ ದುಗ್ಗಳೆಗೆ ಹೇಳಿದರೆ ದೀಪ ತಂದು ಮುಂದಿರಿಸುತ್ತಾಳೆ. ಊಟದ ಸಮಯದಲ್ಲಿ ಬಟ್ಟಲಿನಲ್ಲಿರುವ ಅಂಬಲಿ ಆರಿ ತಣ್ಣಗಾಗಿದ್ದರೂ ಬೀಸಣಿಕೆಯ ಗಾಳಿಯಿಂದ ಅಂಬಲಿಯನ್ನು ಆರಿಸಲು ಹೇಳುತ್ತಾರೆ. ದುಗ್ಗಳೆ ಅನ್ಯಮಾತಿಲ್ಲದೆ ಆರಿದ ಅಂಬಲಿಗೆ  ಗಾಳಿ ಬೀಸುತ್ತಾಳೆ. ಆಗ ಪ್ರಶ್ನಿಸಿದ ವ್ಯಕ್ತಿಯು ಇಂಥ ಸತಿ ಸಿಕ್ಕರೆ ಸಂಸಾರ ಶ್ರೇಷ್ಠ, ಸಿಗದಿದ್ದರೆ ಸನ್ಯಾಸ ಶ್ರೇಷ್ಠವೆಂದು ಅರಿಯುತ್ತಾನೆ. ಸಾದ್ವಿಯೂ, ಪ್ರಿಯವಾದಿನಿಯೂ ಆದ ಸತಿ ತನ್ನ ಪ್ರೀತಿ, ತ್ಯಾಗ, ಸಹನೆಗಳಿಂದ ಸದಾ ಪತಿಯ ಮನಸ್ಸನ್ನು ಗೆಲ್ಲುತ್ತಾಳೆ. ಸತಿಪತಿಗಳ ದಾಂಪತ್ಯ ಜೀವನ ಶಾರೀರಿಕ ಸಂಬಂಧವನ್ನು ಮೀರಿ ಆಧ್ಯಾತ್ಮಿಕ ಹಂತಕ್ಕೇರಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧಫಲ ಪುರುಷಾರ್ಥಗಳ ಪ್ರಾಪ್ತಿಗೆ ಕಾರಣವಾಗಬೇಕು. ಪರಸ್ಪರ ಅರಿತು ಬಾಳಬೇಕು. ಬಾಳು ಬೆಳಗಬೇಕು. ಇಂಥ ಸತಿಪತಿಗಳು ಕೂಡಿ ಮಾಡುವ ಭಕ್ತಿ, ಏಕೋಭಾವ ಶಿವನಿಗೂ ಪ್ರಿಯವಾಗುತ್ತದೆ.

ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು

 

ಪರಮೇಶ್ವರಿಯ ಪುಣ್ಯನಾಮವನು ಪಗಲಿರುಳು

ಸರಸಾನುರಾದಿಂದೋದಿ ಕೇಳಿದವರ್ಗೆ

ದುರಿತಕಂಟಕವಳಿದು ಕೈಸಾರುತಿಹವಮಳತರ ಭೋಗಮೋಕ್ಷಂಗಳು ||ಪ||

 

ಹ್ರೀಂಕಾರಿ ವಾಣಿ ಕಲ್ಯಾಣಿ ರುದ್ರಾಣಿ ರಮೆ

ಓಂಕಾರರೂಪಿಣಿ ಗಣಾನಿ ಗಾನಪ್ರೀತೆ

ಹ್ರೈಂಕಿಲಾಮಾಲಿನಿ ಮಹಾಮಾಯೆ ಮಾತಂಗಿ ಕ್ಲಿಂಕಲೇ ವರವರೇಣ್ಯೆ

 

ಸೌಂಕಾರಸದನೆ  ಶರ್ವಾಣಿ ಶಾರದೆ ಸತ್ಯೆ

ಕ್ರೌಂಕವಚಮುಖ್ಯೆ   ಮಂತ್ರಾಧಿದೇವತೆ ದೇವಿ

ಶ್ರೀಂಕಿಲಾಕಾರೆ  ವಿದ್ಯಾಂಗಿ ಮಾತೃಕೆ ಮಾನ್ಯೆ ಶಾಂಕರೀಶಾನಿಯೆಂದು         ||೧|

 

ಗಿರಿಜೆ ಗೀರ್ವಾಣಪೂಜಿತೆ ಗೌರಿ ಗುಹಜನನಿ

ಪರನಾದಬಿಂದುಮಂದಿರೆ ಮನೋಂಬುಜಹಂಸೆ

ವರದೆ ವೈಭವೆ ನಿತ್ಯಮುಕ್ತೆ  ನಿರ್ಮಲೆ ನಿರಾವರಣೆ ಶಿವೆ ಶಾಂತೆ ಕಾಂತೆ

 

ಧರಣಿ ಧರ್ಮಾನುಗತೆ ಸಾವಿತ್ರಿ ಗಾಯತ್ರಿ  

ವಿರಜೆ ವಿಶ್ವಾತ್ಮಕೆ  ವಿಧೂತಪಾಪವ್ರಾತೆ

 ಶರಣಹಿತೆ ಸರ್ವಮಂಗಳೆ ಸಚ್ಚಿದಾನಂದೆ ಪರಸುಧಾಕಾರಿಯೆಂದು          ||೨||

 

ಚಂಡೆ ಚಂಡೇಶ್ವರಿ ಚತುರೆ ಕಾಳಿ ಕೌಮಾರಿ

 ಕುಂಡಲೆ ಕುಟಿಲೆ ಬಾಲೆ ಭೈರವಿ ಭವಾನಿ ಚಾ-

ಮುಂಡಿ ಮೂಲಾಧಾರೆ ಮನುವಂದೆ ಮುನಿಪೂಜ್ಯೆ ಪಿಂಡಾಂಡಮಯೆ ಚಂಡಿಕೆ

 

 

ಮಂಡಲತ್ರಯನಿಲಯೆ ದಂಡಿ ಜಯೆ  ದುರ್ಗಿ ಫಣಿ

 ಕುಂಡಲೆ ಮಹೇಶ್ವರಿ ಮನೋನ್ಮನಿ ಜಗನ್ಮಾತೆ

ಖಂಡಶಶಿಮಂಡನೆ ಮೃಡಾಣಿ ಪಾರ್ವತಿ ಪರಮ ಚಂಡಕರಮೂರ್ತಿಯೆಂದು      ||೩||

 

ವಿಮಲೆ ವಿಖ್ಯಾತೆ ಮಧುಮತಿಮುಖ್ಯೆ  ಮಹನೀಯೆ

 ಸುಮತಿ ಸುಲಲಿತ ಹೈಮವ ಭಾವೆ ಭೋಗಾರ್ಥಿ

ಕಮಲೆ ಕಾತ್ಯಾಯನಿ ಕರಾಳೆ ತ್ರಿಪುರವಿಜಯೆ ದಮೆ ದಯಾರಸಪೂರಿತೆ

 

ಅಮೃತೆ ಅಂಬಿಕೆ ಅನ್ನಪೂರ್ಣೆ ಅಶ್ವಾರೂಢೆ

ಶಮೆ ಶುದ್ಧ ಸಿಂಹವಾಹಿನಿ ಶುಭಕಲಾಪೆ ಸು

ಪ್ರಮದೆ ಪಾವನೆ ಪದ್ಯೆ ಪಾಶದೆ ಪರಬ್ರಹ್ಮ ಉಮೆ ಸಹಜ ಸುಮುಖಿಯೆಂದು     ||೪||

 

ಇಂತು ಗುರು ಶಂಭುಲಿಂಗದ ಶಕ್ತಿ ಸೌಭಾಗ್ಯ

ಸಂತತಶರೀರಸಮ್ಯಜ್ಞಾನಸತ್ಕ್ರಿಯೆ

ಸಮಂತು ಕರುಣಾಸನಾಭರಣಾಯುಧಾದಿ  ಸುಗುಣಾಂತರಾದಿಗಳಾಗುತ

 

ಸಂತಸವನೀವ ಶಾಂಭವಿಯ ನೂರೆಂಟು ಶುಭ

ವಾಂತ ನಾಮಂಗಳು ಜಪಿಸಿದೊಡೆ ಸತಿಪುತ್ರ

ಸಂತಾನಸಕಲಸಂಪದಸಿದ್ದಿಯಪ್ಪುದೋರಂತೆ ನಿಶ್ಚಯಮಿದೆಂದು      ||೫|

ಲೇಖಕ: ಶ್ರೀಕಂಠ.ಚೌಕೀಮಠ

(ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಮಹಾ ಸ್ವಾಮಿಗಳ ೧೫೭ ನೆಯ ಜಯಂತಿ ಮಹೋತ್ಸವದ ನಿಮಿತ್ತ ಸ್ಮರಣೆ)

 ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು (೧೮೬೭-೧೯೩೦) ಈ ನಾಡುಕಂಡ ಮಹಾನುಭಾವರು .ಅವರು ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿದ್ದು ಅಂದಿನ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ,ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಶೊಚನೀಯ ಸ್ಥಿತಿ ಯಲ್ಲಿದ್ದ ವೀರಶೈವ -ಲಿಂಗಾಯತ ಧರ್ಮೀಯರನ್ನ ತಮ್ಮ ಸಮಾಜೋದ್ಧಾರ ಯೋಜನೆ ಮತ್ತು ಕಾರ್ಯಗಳಿಂದ ಎತ್ತಿನಿಲ್ಲಿಸಿದವರು.

ಅವರಿಗೆ “ ಕಾರುಣಿಕ ಯುಗ ಪುರುಷ” ,”ಸಮಾಜ ಸಂಜೀವಿನಿ” ಎಂಬೆಲ್ಲ ಬಿರುದು ಉಪಮೆಗಳಿಂದ ಗೌರವಿಸಲಾಗುತ್ತಿದೆ.ಅವರ ೧೫೭ನೆಯ ಜಯಂತಿ ಮಹೋತ್ಸವ ಕರ್ನಾಟಕ ಮತ್ತು ದೇಶ -ವಿದೇಶಗಳ ವಿವಿಧ ಸ್ಥಳಗಳಲ್ಲಿ ಕಳೆದ ತಿಂಗಳನಿಂದ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಅವರು ಕೇವಲ ನುಡಿದು ಮರೆಯಾಗಲಿಲ್ಲ.

ನಡೆದು ಬದುಕಿದವರು

ನಡೆಗಳ ಕಾರ್ಯಕ್ಕೆ ತಮ್ಮ ೬೩ ವರ್ಷಗಳ ಸಮಗ್ರ ಬದುಕನ್ನೇ  ಸಮಾಜಕ್ಕೇ ಅರ್ಪಿಸಿದ ಮಹಾತ್ಮರು

ಅವರ ಬದುಕು ,ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು  ಕತ್ತಲು ಕವಿದ ಸಮಾಜಕ್ಕೆ ನೀಡಿದ ಬೆಳಕುಗಳು . ಅವರ ದೂರ ಯೋಚನೆಗಳ “ಯೋಜನೆ” ಗಳು ಶಿವಯೋಗ ಸಂಪನ್ನದ ಅಡಿಪಾಯಗಳಿಂದ ಇಂದು ಹಲವು ಸಂಸ್ಥೆಗಳು  ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ,ಸಮಾಜ ಸೇವೆಯಲ್ಲಿ ಅವಿಛಿನ್ನವಾಗಿ ಶತಮಾನಗಳಿಂದ  ಮುನ್ನೆಡೆಯುತ್ತಿವೆ.

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅವರ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳ ಜೊತೆಗೆ ಅವರು ಯಶಸ್ವಿಯಾಗಿ ನಿರ್ವಹಿಸಿದ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಗಳು ೧೨೦ ವರ್ಷ ಗಳ ನಂತರವೂ ಅವ್ಯಾಹತವಾಗಿ ಮುಂದುವರೆದುಕೊಂಡು ಬರುತ್ತಿರುವದು ಪೂಜ್ಯರ  ಅರ್ಥಪೂರ್ಣ ಯೋಚನೆ ಮತ್ತು ದೃಡ ಯೋಜನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಓದಿದ್ದು ಕೇವಲ ಏಳನೆಯ ತರಗತಿ.ಅವರು ಏಳನೆಯ ತರಗತಿಯ ಮುಲ್ಕಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು.ಅವರು ಅನುತ್ತೀರ್ಣರಾಗಿದ್ದು- ಅವರು ದಡ್ಡರೆಂದು ಅಲ್ಲ.

ಅವರು ಅನುತ್ತೀರ್ಣರಾದ ಕಾರಣ, ಪರೀಕ್ಷೆಯ ಹಿಂದಿನ ನಾಲ್ಕೈದು ದಿನಗಳ ಕಾಲ  120 ಕಿ.ಮಿ. ದೂರದ ಕಾಲ್ನೆಡಿಗೆಯ ಪ್ರವಾಸ.  ರಾಣೆಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಿಂದ ಧಾರವಾಡದ ವರೆಗೂ ನಡೆದು ಮುಲ್ಕಿ (ಏಳನೆಯ ತರಗತಿ) ಪರೀಕ್ಷಾ ಕೇಂದ್ರಕ್ಕೆ ಬಂದು ಜ್ವರ ದಿಂದ ಬಳಲಿದ್ದು ಹೊರತು ಅವರು ಅನುತ್ತೀರ್ಣರಾಗುವಂತಹ ದಡ್ಡರಲ್ಲ. ಅವರೊಬ್ಬ ಸ್ವಾಭಿಮಾನಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದವರು. ಅನುತ್ತೀರ್ಣರಾದರೂ ಮರಳಿ ತಮ್ಮ ತಾಯಿಯ ತೌರುಮನೆಯ ಊರು ಲಿಂಗದಹಳ್ಳಿಗೆ ಬಂದು ಗಾವಟಿ ಶಾಲೆ ತೆರೆದು ಊರ ಮಕ್ಕಳಿಗೆ ಪಾಠ ಹೇಳಿದ ಮಹಾನುಭಾವರು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

-ಮೃಡಗಿರಿ ಶ್ರೀ ಜಗದ್ಗುರುಗಳು

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು (ತ್ರಿವಿಧ ಜಂಗಮಲಿಂಗಸ್ಥಲಗಳು: ಸ್ವಯ, ಚರ, ಪರ)

(ಸೌಜನ್ಯ :ಹಾನಗಲ್ಲ ಕುಮಾರಸ್ವಾಮಿಗಳ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ : ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳಗದಗ ಲೇಖನದ ಆಯ್ದ ಭಾಗ)

ವೀರಶೈವ-ಲಿಂಗಾಯತ ಧರ್ಮದಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಜಂಗಮ ತತ್ವದಲ್ಲಿ ಕರ್ತವ್ಯ ಭೇದದಿಂದ ಸ್ವಯ , ಚರ ಮತ್ತು ಪರ ಎಂಬುದಾಗಿ ಮೂರು ಭೇದಗಳಿವೆ .

  1. ಸ್ವಯ ಜಂಗಮನು ಸದಾ ಮಠದಲ್ಲಿಯೇ ವಾಸಿಸುವವನು . ಹಾಗೆ ಅವನು ಮಠದಲ್ಲಿರುವಾಗ ಅನೇಕ ಸದ್ಭಕ್ತರು ದರ್ಶನಾರ್ಥಿಗಳಾಗಿ ಭಕ್ತಿಯಿಂದ ಮಠಕ್ಕೆ ಬರುತ್ತಾರೆ . ಬಂದ ಭಕ್ತರನ್ನು ಕುರಿತು ಉಪದೇಶ ಪರ ಮಾತುಗಳನ್ನು ಹೇಳುತ್ತ ಅವರು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವನು , ಮಠಕ್ಕೆ ಬಂದ ಭಕ್ತರಿಗೆ ದಾಸೋಹ ಏರ್ಪಡಿಸಿ ಅವರನ್ನು ಪ್ರಸಾದದಿಂದ ತೃಪ್ತಿಪಡಿಸುವನು . ಇಷ್ಟೆಲ್ಲ ಮಾಡಿಯೂ ವ್ಯವಹಾರದಲ್ಲಿ ಇದ್ದೂ ಇಲ್ಲದಂತೆ ಇದ್ದು ಏಕಾಂತದ ಆನಂದಾನುಭೂತಿಯನ್ನು ಯೋಗಮುಖವಾಗಿ ಅರಿತು ಅನುಭವಿಸಿ ಅನುಷ್ಠಾನಿಸುವ ಶಿವಸ್ವರೂಪಿ ಜಂಗಮನೆ ಸ್ವಯ ಜಂಗಮನೆನಿಸುವನು .
  2. ಜಂಗಮದ ಎರಡನೆಯ ಭೇದವನ್ನು ಚರಜಂಗಮವೆಂದು ಕರೆಯಲಾಗಿದೆ . ತನ್ನನ್ನು ನಂಬಿದ ಸಜ್ಜನ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮನಿಸಿ ಅವರನ್ನು ಉದ್ಧರಿಸಿ ನಿರ್ಗಮನಿಯಾಗಿ ಸುಳಿಯುವವನು ಚರ ಜಂಗಮನೆನಿಸುವನು. ಭಕ್ತರಿರುವಲ್ಲಿಗೆ ಹೋಗಿ ಅವರ ಭಕ್ತಿಯನ್ನು ಸ್ವೀಕರಿಸುತ್ತ ಉಪದೇಶವನ್ನು ಮಾಡುವ ಮೂಲಕ ಶಿಷ್ಯರನ್ನು ಮತ್ತು ಭಕ್ತರನ್ನು ಉದ್ಧಾರ ಮಾಡುವವನು ಚರಜಂಗಮ.

ವಾಸ್ತವವಾಗಿ ಚರಜಂಗಮನು ಲೋಕದೆಲ್ಲೆಡೆ ಸಂಚರಿಸಿ ಜನರಿಗೆ ಶಾಂತಿಯ ಮಾರ್ಗವನ್ನು ತೋರುವ ಮೂಲಕ ಲೋಕಪೂಜ್ಯನೆನಿಸುತ್ತಾನೆ . ವಸಂತದ ಗಾಳಿಯಂತೆ ಸುಳಿಯುವ ಅವನ ನಡೆ ನುಡಿಗಳಲ್ಲಿ ಸಾಮರಸ್ಯ ಕಂಡು ಬರುತ್ತದೆ . ಅಮೂರ್ತ ಪರಶಿವನ ಸಾಕಾರ ಚರಮೂರ್ತಿಯಾಗಿರುವ ಅವನು ಚಲಿಸಿದಲ್ಲಿ ಭಕ್ತಿಯಬೆಳಸು , ಜ್ಞಾನದ ಬೆಳಕು ಹೊರಹೊಮ್ಮುತ್ತದೆ . ಆದ್ದರಿಂದ ಅವನು ವಿಶ್ವ ಪರಿಪೂರ್ಣನೂ , ಜಗದ್ಭರಿತನೂ ಆಗಿರುವನು . ಇನ್ನೂ ಮೂರನೆಯದಾಗಿ ಪರಜಂಗಮವನ್ನು ಕುರಿತು- ‘ ಕೋಪ ತಾಪಮಂ ಬಿಟ್ಟು , ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೋ ‘ ಎಂದು ಶರಣರು ಹೇಳುವ ಮೂಲಕ ಪರಜಂಗಮದ ಲಕ್ಷಣವನ್ನು ತಿಳಿಸಿದ್ದಾರೆ . ಪರಜಂಗಮನು ಸ್ವಯ ಮತ್ತು ಚರ ಜಂಗಮರಿಗಿಂತಲೂ ಶ್ರೇಷ್ಠನೆನಿಸುವನಲ್ಲದೆ ಅವರಿಗೆ ಮಾರ್ಗದರ್ಶನವನ್ನೂ ಮಾಡುವನು . ಮುಖ್ಯವಾಗಿ ಅವನು ಅನುಭಾವಿ , ಪರಶಿವನೊಡನೆ ಬೆರೆದು ಬೇರಾಗದಂತಿರುವವನು , ಸದಾ ಲಿಂಗಾಂಗ ಸಾಮರಸ್ಯ ಸುಖದಲ್ಲಿರುವವನು .

 

  1. ಪರ ಜಂಗಮನು ಪಾಪ ಪುಣ್ಯಗಳ ಎಲ್ಲೆಯನ್ನು ಮೀರಿದವನು . ಕಾಮ , ಕ್ರೋಧ , ಲೋಭ ಮೋಹಾದಿ ದುರ್ಗುಣಗಳನ್ನು ನಾಶ ಮಾಡಿದವನು . ಅಂದರೆ ಅವುಗಳ ವಿಕಾರಕ್ಕೆ ಒಳಗಾಗದವನು . ಜಗತ್ತಿನ ಜಂಜಡವನ್ನು ಧಿಕ್ಕರಿಸಿದವನು , ಹಾಗೆಯೆ ಮೋಸ ವಂಚನೆಗಳಿಂದ ಮುಕ್ತನಾಗಿ ಶಿವನೇ ತಾನಾದವನು ಪರ ಜಂಗಮನೆನ್ನುತ್ತಾರೆ . ವಾಸ್ತವವಾಗಿ ತಥ್ಯಮಿಥ್ಯ , ರಾಗ ದ್ವೇಷ ಅಳಿದವನು , ಸ್ತುತಿ ನಿಂದೆಗಳನ್ನು ಸಮನಾಗಿ ಕಂಡವನು , ದ್ವೈತಾದ್ವೈತಗಳಿಂದ ಮುಕ್ತನಾದವನು , ಸತ್ಯ ಸದಾಚಾರವೇ ಅಂಗವಾಗಿರುವವನು , ಭಕ್ತಿ , ಜ್ಞಾನ – ವೈರಾಗ್ಯಗಳನ್ನು ಆಭೂಷಣಗಳನ್ನಾಗಿಸಿಕೊಂಡವನು ಪರಜಂಗಮನೆನಿಸುವನು . ಅವನು ತನ್ನ ಅಂಗ , ಮನ , ಪ್ರಾಣ , ಸಕಲ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಲೀಯವಾಗಿಸಿ ಅಂದರೆ ಸ್ಪಟಿಕ ಘಟದಲ್ಲಿ ಜ್ಯೋತಿಯನ್ನಿರಿಸಿದಂತೆ ಒಳಗೂ ಹೊರಗೂ ಮಹಾಜ್ಞಾನದ ಬೆಳಕೇ ತುಂಬಿದಂತೆ ತೊಳಗಿ ಬೆಳಗುವ ಮಹಾಚೈತನ್ಯ ಮೂರ್ತಿಯಾಗಿರುವನು

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು ಎಂಬುದಕ್ಕೆ ಸಾಕ್ಷಿಯಾಗಿ  ಅವರು ತಮ್ಮ ಜೀವಿತಾವಧಿಯಲ್ಲಿ ಕಾರ್ಯಗತಗೊಳಿಸಿದ ಎಲ್ಲ ಯೋಜನೆಗಳ ಯಶೋಗಾಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಮುಂದಾಲೋಚನೆ, ಯೋಜನೆ,ಸಂಪಲ್ಮೂನಗಳ ಕ್ರೋಢಿಕರಣ ಮತ್ತು ದೃಡ ಸಂಕಲ್ಪಗಳು ಮಹಾಶಕ್ತಿಗಳಾಗಿ ಅತ್ಯಧ್ಬುತವಾಗಿ ಗೋಚರಿಸುತ್ತವೆ.

ಅವುಗಳಲ್ಲಿ ಅತ್ಯಂತ ಮಹತ್ವವಾದ ಕೊಡುಗೆಗಳು ಹೀಗಿವೆ

  1. ೧೮೮೧-೮೩ ಪೂಜ್ಯರ ೧೪ನೆಯ ವರ್ಷದಲ್ಲಿಯೇ ಲಿಂಗದಹಳ್ಳಿಯಲ್ಲಿ ಗಾವಟಿ ಶಾಲೆ ಸ್ಥಾಪನೆ
  2. ೧೮೯೭ ನಾಡಿನಲ್ಲಿ ಬರಗಾಲ ಹಾನಗಲ್ಲಿನಲ್ಲಿ ಬರಪೀಡಿತರಿಗೆ ದಾಸೋಹ ಕೇಂದ್ರ ಸ್ಥಾಪನೆ.
  3. ೧೮೯೮ ಹಾನಗಲ್ಲ ಶ್ರೀ ಮಠದಲ್ಲಿ ಪಾಠಶಾಲೆ ಆರಂಭ.
  4. ೧೯೦೧ ಕಾಡಶೆಟ್ಟಿಹಳ್ಳಿಯಲ್ಲಿ ಗದಿಗೆಯ್ಯ ನೆಂಬ ಅಂಧ ಬಾಲಕನನ್ನು ಸಂಗೀತ ಶಿಕ್ಷಣ ವ್ಯವಸ್ಥೆ ಮಾಡಿದ್ದು ಮುಂದೆ ಅದೇ ಬಾಲಕ ಪಂಚಾಕ್ಷರಿ ಗವಾಯಿಗಳಾಗಿ ಪ್ರಸಿದ್ದಿ ಹೊಂದಿದ್ದು
  5. ೧೯೦೪ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ. ಇಲ್ಲಿಯವರೆಗೆ ೨೫ ಅಧ್ಯಕ್ಷರುಗಳ ಸೇವೆ ಪಡೆದು ಸಾಮಾಜಿಕ ಕ್ಷೇತ್ರದ ಸೇವೆಯಲ್ಲಿ ಮಹಾಸಭೆ ತನ್ನದೇ ಆದ ಗೌರವಾದರಗಳನ್ನು ಹೊಂದಿದೆ.
  6. ೧೯೦೯ ಧಾರ್ಮಿಕ ಮತ್ತು ಅಧ್ಯಾತ್ಮಿಕ ಅಭ್ಯುದಯಕ್ಕೆ ಶ್ರೀ ಶಿವಯೋಗಮಂದಿರ ಸ್ಥಾಪನೆ ಶ್ರೀ ಶಿವಯೋಗಮಂದಿರದ ಮೂಲಕ ಸಹಸ್ರಾರು ಸ್ವಾಮಿಗಳು ಅಧ್ಯಾತ್ಮಿಕ ,ಧಾರ್ಮಿಕ ಮತ್ತು ಶೈಕ್ಷಣಿಕ ಶಿಕ್ಷಣ ಪಡೆದು ಶಿವಯೋಗ ಸಂಪನ್ನರಾಗಿ ನಾಡಿನಾದ್ಯಂತ ಸಮಾಜ ಸೇವೆ ಯನ್ನು ವಿವಿಧ ರಂಗಗಳಲ್ಲಿ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು.

ಶತಮಾನದಿಂದ ಹಲವು ಶಾಸ್ತ್ರಿಗಳು ,ಕೀರ್ತನಕಾರರು,ಪುರಾಣಿಕರು,ಸಾಹಿತಿಗಳು ,ಶಿಕ್ಷಣ ತಜ್ಞರು , ಸಂಗೀತಗಾರರು ಶ್ರೀ ಶಿವಯೋಗಮಂದಿರದಿಂದ ಶಿಕ್ಷಣ ಕಲಿತು ಆಯಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು

  1. ೧೯೦೯ ನಾಡಿನ ಪ್ರಪ್ರಥಮ ಗೋಶಾಲೆ ಆರಂಭ
  2. ೧೯೧೦ಪ್ರಪ್ರಥಮ ಶಾಸ್ತ್ರೋಕ್ತ ವಿಭೂತಿ ನಿರ್ಮಾಣ ಕೇಂದ್ರ ಆರಂಭ
  3. ೧೯೧೧ ಯೋಗ ಪಾಠ ಶಾಲೆ ಆರಂಭ
  4. ೧೯೧೨ ಆಯುರ್ವೇದ ಚಿಕಿತ್ಸಾ ಕೇಂದ್ರ ಆರಂಭ
  5. ಪ್ರಪ್ರಥಮ ಮಹಿಳಾ ವಿದ್ಯಾಲಯ ಆರಂಭ
  6. ೧೯೧೦ ಗ್ರಂಥಾಲಯ ಸ್ಥಾಪನೆ .ವಚನಕಟ್ಟುಗಳ ಸಂಗ್ರಹ ,ತಾಳೆಯೋಲೆಗಳ ಸಂಗ್ರಹ
  7. ೧೯೧೦ ಬಳ್ಳಾರಿ ವೀರಶೈವ ವಿದ್ಯಾವರ್ದಕ ಸಂಸ್ಥೆ ಸ್ಥಾಪನೆಗೆ ಚಾಲನೆ
  8. ೧೯೧೧ ಬಾಗಲಕೋಟೆ ಯಲ್ಲಿ ಶಿವಾನಂದ ಜಿನ್ನಿಂಗ ಮಿಲ್ಲ ಸ್ಥಾಪನೆ
  9. ೧೯೧೧ ಗದುಗಿನ ವೀರೇಶ್ವರ ಪುಣ್ಯಾಶ್ರಮ-ಸರ್ವ ಧರ್ಮ ಗಳ ಅಂಧ-ಅನಾಥ ಮಕ್ಕಳ ಶಿಕ್ಷಣ ಕೇಂದ್ರಕ್ಕೆ ಪಂ.ಪಂಚಾಕ್ಷರಿ ಗವಾಯಿಗಳ ಮೂಲಕ ಚಾಲನೆ.ಪಂ. ಮಲ್ಲಿಕಾರ್ಜುನ ಮನಸೂರ,ಪಂ. ಬಸವರಾಜ ರಾಜಗುರು ಅವರಿಂದ ಹಿಡಿದು ಪಂ. ವೆಂಕಟೇಶ್‌ ಕುಮಾರ ಅವರವರೆಗೂ ಸಹಸ್ರಾರು ಖ್ಯಾತನಾಮ ಸಂಗೀತ ಗಾರರ ಸಂಗೀತ ಶಿಕ್ಷಣ ನೀಡಿದ ಹೆಗ್ಗಳಿಕೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ್ದು.

ಗದುಗಿನ ವೀರೇಶ್ವರ ಪುಣ್ಯಾಶ್ರಮ ಕೇವಲ ಸಂಗೀತ ಕ್ಷೇತ್ರಕ್ಕೆ ಮೀಸಲಾಗಲಿಲ್ಲ. ನಾಟಕ ರಂಗಕ್ಕೂ ಪ್ರೋತ್ಸಾಹ ನೀಡಿ .ನಾಡಕ ಸಂಘಗಳನ್ನೂ ಸ್ಥಾಪಿಸಿತು.

  1. ೧೯೧೨ ಬಾಗಿಲಕೋಟೆಯಲ್ಲಿ ಶ್ರೀಗುರುಸಿದ್ದೇಶ್ವರ ಚಿತ್ರಮಂದಿರ ಸ್ಥಾಪನೆ.ಉತ್ತರ ಕರ್ನಾಟಕದ ಪ್ರಪ್ರಥಮ ಚಲನಚಿತ್ರ ಮಂದಿರ ಮೂಲಕ ಆಧುನಿಕ ಕಲೆಗೆ ಪ್ರೋತ್ಸಾಹ.
  2. ೧೯೧೩ ರಲ್ಲಿ ಅಸ್ಪೃಶ್ಯರು ಎಂಬ ಭೇದಭಾವ ಸವರ್ಣಿಯರಿಂದ ಉಂಟಾದಾಗ ಸ್ವಾಭಿಮಾನದ ಪ್ರಕ್ರಿಯೆಯಾಗಿ ಅಸ್ಪೃಶ್ಯರು ಎಂದು ಕರೆಯಿಸಿಕೊಂಡವರಿಗಾಗಿಯೇ ಶಿವಯೋಗಮಂದಿರದ ಸಮೀಫ ಮಂಗಳೂರು ಎಂಬ ಗ್ರಾಮದಲ್ಲಿ ಶಾಲೆಯನ್ನು ತೆರೆದಿದ್ದು
  3. ೧೯೧೪ ನಿಡುಗುಂದಿಕೊಪ್ಪ ಸೇರಿ ನಾಲ್ಕು ಶಾಖಾ ಶಿವಯೋಗಮಂದಿರಗಳ  ಸ್ಥಾಪನೆ
  4. ೧೯೧೫ ಶಿರಸಂಗಿ ಲಿಂಗರಾಜರ ಆಸ್ತಿ ಸಮಾಜಕ್ಕೇ ಸಲ್ಲಲು ಮುಂಬೈ ಹೈಕೋರ್ಟನಲ್ಲಿ ಸಾಂಘಿಕ ಕಾನೂನು ಹೋರಾಟಕ್ಕೆ ಹಣಕಾಸು ಸಹಾಯ ಮತ್ತು ಗೆಲವು.ಈ ಗೆಲವು ಬೆಳಗಾವಿಯ ಕೆ.ಎಲ್.ಇ ಸೋಸೈಟಿಯ ಅಭಿವೃದ್ಧಿಗೆ ಸುಭದ್ರ ಅಡಿಪಾಯವಾಯಿತು
  5. ೧೯೧೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕಾಳೇನಹಳ್ಳಿನಲ್ಲಿ ಶಾಖಾ ಶಿವಯೋಗ ಮಂದಿರ ಸ್ಥಾಪನೆ
  6. ೧೯೧೭ ಕಾಳೇನಹಳ್ಳಿ ಯ ನಾಲ್ಕು ನೂರು ಎಕರೆ ಭೂಮಿಯಲ್ಲಿ ಆಧುನಿಕ ಕೃಷಿಗೆ ಚಾಲನೆ ಪ್ರಪ್ರಥಮ ಬಾರಿಗೆ ಟ್ರಾಕ್ಟರ ಖರೀಧಿ ಕೃಷಿಗೆ ಉತ್ತೇಜನೆ
  7. ೧೯೧೭ ಗದುಗಿನಿಂದ ಯಡೆಯೂರು ಕ್ಷೇತ್ರ ಪಾದಯಾತ್ರೆ ಮಾಡಿ ಧಾರ್ಮಿಕ ಸಂಚಲನೆಯನ್ನುಂಟು ಮಾಡಿದ್ದು.
  8. ೧೯೨೦ ವಚನಪಿತಾಮಹ ಫ.ಗು.ಹಳಕಟ್ಟಿಯವರಿಗೆ ವಚನ ಸಂಗ್ರಹಕ್ಕೆ ಆರ್ಥಿಕ ಸಹಾಯ ಮಾಡಿಸಿ ಶಿವಯೋಗಮಂದಿರದಲ್ಲಿ ಸಂಗ್ರಹವಾಗಿದ್ದ ವಚನ ಕಟ್ಟುಗಳನ್ನು ನೀಡಿ ಪ್ರೋತ್ಸಾಹಿಸಿದ್ದು. ಕೃತಜ್ಞತೆ-ಗೌರವಕ್ಕೆ ಶ್ರೀ ಫ.ಗು.ಹಳಕಟ್ಟಿಯವರು ತಮ್ಮ ಗ್ರಂಥ ”ವಚನಶಾಸ್ತ್ರಸಾರ”ದ ಮೊದಲ ಭಾಗವನ್ನು ಬೆಳಗಾವಿಯಲ್ಲಿ ಮುದ್ರಿಸಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ  ಅರ್ಪಿಸಿದ್ದು
  9. ೧೯೨೯ ಮಹಾರಾಷ್ಟ್ರದ ಪರಳಿ ದೇಗುಲದ ಪ್ರವೇಶ ಕುರಿತು ಹೈದ್ರಾಬಾದ ನಿಜಾಮ ಕೋರ್ಟನಲ್ಲಿ ವೀರಶೈವರಿಗೂ ಹಕ್ಕು ಎಂದು ಸತತ ಐದು ವರ್ಷಗಳ ಕಾನೂನು ಹೋರಾಟ ನಡೆಯಿಸಿ  ಜಯಗಳಿಸಿದ್ದು
  10. ೧೯೦೪ ರಿಂದ ೧೯೩೦ ರ ವರೆಗೆ ಕರ್ನಾಟಕ-ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಒಟ್ಟು ೧೦ ಅಖಿಲ ಭಾರತ ವೀರಶೈವ ಮಹಾಸಭೆ ಮಹಾ ಅಧಿವೇಶನಗಳ ಆಯೋಜನೆ ಕರ್ನಾಟಕ ಏಕೀಕರಣದ ಹೋರಾಟಕ್ಕೆ ವೀರಶೈವ ಮಹಾಸಭೆಯ ಅಧಿವೇಶನಗಳು ಗುಪ್ತಗಾಮಿನಿಯಾಗಿ ಕೆಲಸ ಮಾಡಿದವು
  11. ಹರಿದು ಹಂಚಿಹೋಗಿದ್ದ,ಕರ್ನಾಟಕ, ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯ ಸಾಂಸೃತಿಕವಾಗಿ ಒಂದುಗೂಡುವದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.ಆದರೆ ಈ ನಾಲ್ಕೂ ಭಾಗಗಳಲ್ಲಿದ್ದ ಕರ್ನಾಟಕದ ಬಹುಸಂಖ್ಯಾತ ಸಮಾಜ ಬಾಂಧವರಾದ ವೀರಶೈವ-ಲಿಂಗಾಯತರು ಒಂದಾಗಿದ್ದರ ಪರಿಣಾಮ ಕರ್ನಾಟಕದ ಏಕೀಕರಣಕ್ಕೆ ಆನೆಬಲ ತಂದುಕೊಟ್ಟಿತು

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

 

ಲೇಖಕ: ಶ್ರೀಕಂಠ.ಚೌಕೀಮಠ

ಅಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ.

ಅಧ್ಯಕ್ಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ