ಜ.ಚ.ನಿ
“ನೀರಿಂಗೆ ನೈದಿಲೆಯೆ ಶೃಂಗಾರ
ಸಮುದ್ರಕ್ಕೆ ತೆರೆಯೆ ಶೃಂಗಾರ
ಗಗನಕ್ಕೆ ಚಂದ್ರಮನೆ ಶೃಂಗಾರ
ನಾರಿಗೆ ಗುಣವೆ ಶೃಂಗಾರ….”
ಕುಮಾರ ಸ್ವಾಮಿಗಳವರು ಸ್ತ್ರೀಯರ ಮುಖಗಳನ್ನು ಈ ಕಣ್ಣುಗಳಿಂದ ನೋಡದಿದ್ದರು ಅವರ ಜೀವನ ಮುಖವನ್ನು ತಮ್ಮ ಜ್ಞಾನನೇತ್ರದಿಂದ ನಿರೀಕ್ಷಿಸುತ್ತಿದ್ದರು. ಬರೀ ನಿರೀಕ್ಷಣೆ ಮಾತ್ರವಲ್ಲ ಸುಧಾರಣೆಗಾಗಿ ಸರ್ವತೋಮುಖದಲ್ಲಿ ಪರೋಕ್ಷವಾಗಿ ಪರಿಶ್ರಮಿಸುತ್ತಿದ್ದರು.
ಪ್ರತಿವರ್ಷ ಶಿವಯೋಗಮಂದಿರ ಜಾತ್ರೆಯ ಸಮಯದಲ್ಲಿ ಮಹಿಳಾ ಸಭೆಯನ್ನು ಕರೆಯುತ್ತಿದ್ದರು. ಮಹಿಳೆಯರನ್ನೆ ಕಾರ್ಯಕರ್ತರನ್ನಾಗಿ ಮಾಡುತ್ತಿದ್ದರು. ಭಾಷಣಕರ್ತರನ್ನಾಗಿ ಏರ್ಪಡಿಸುತ್ತಿದ್ದರು. ಸುಧಾರಣೆಯ ಜೀವಂತ ಪ್ರಶ್ನೆಗಳನ್ನು ತಾವೇ ಕಳುಹಿಸಿ ಚರ್ಚಿಸಹಚ್ಚುತ್ತಿದ್ದರು.
ಸ್ವಾಮಿಗಳವರ ವ್ಯಕ್ತಿತ್ವಕ್ಕೆ ಹೆಣ್ಣಿನ ಅಗತ್ಯವಿಲ್ಲದಿದ್ದರು ಸಮಾಜಕ್ಕೆ ಹೆಚ್ಚು ಅಗತ್ಯವಿದೆಯೆಂಬುದನ್ನು ಚೆನ್ನಾಗಿ ಗ್ರಹಿಸಿದ್ದರು. ಸಮಾಜ ರಥಕ್ಕೆ ಹೆಣ್ಣು ಗಂಡು ಎರಡು ಚಕ್ರಗಳೆಂದು ಸಮಾಜ ಪುರುಷನ ಒಳಮ್ಮೆ, ಹೊರಮೈ ಎಂದು ಇವುಗಳಲ್ಲಿ ಯಾವುದಾದರೊಂದು ಊನವಾದಲ್ಲಿ ಸಮಾಜ ಸುಸೂತ್ರವಾಗಿ ಸಾಗದೆ ಕುಂಟುತ್ತದೆಯೆಂದು ಒಮ್ಮಿಲ್ಲೊಮ್ಮೆ ಪ್ಪಪಾತಕ್ಕೆ ಬೀಳುತ್ತದೆಯೆಂದು ಅಪ್ಪಣೆ ಕೊಡಿಸುತ್ತಿದ್ದರು. ಪುರುಷರ ಸುದಾರಣೆಯಂತೆ ಸ್ತ್ರೀ ಯರ ಸುಧಾರಣೆಯು ಅತ್ಯಗತ್ಯ ಅನಿವಾರ್ಯ.
ಸ್ವಾಮಿಗಳವರು ಪ್ರಯಾಣದಲ್ಲಿರುವಾಗ ತಂಗಿದ ಹಳ್ಳಿಯಲ್ಲಿ ಯಾರಾದರು ತಮ್ಮ ಮನೆ ಹೆಂಗಸರನ್ನು ಚನ್ನಾಗಿ ಹೊಡೆದದ್ದು ಅವರ ಕಿವಿಗೆ ಬದ್ದರೆ ಅವರನ್ನು ಕರೆಯಿಸಿ ಏನಪ್ಪ ಯಾತಕ್ಕೆ ಹೆಂಡತಿಯನ್ನು ಹೊಡೆದೆ ? ತಪ್ಪು ಮಾಡದ ಮನುಷ್ಯನಿರುವನೆ ? ತಪ್ಪಿಗೆ ತಕ್ಕ ಶಿಕ್ಷೆ ಇದೆಯೆ ? ನೀನು ತಪ್ಪು ಮಾಡಿದರೆ ನಿನ್ನನ್ನು ಯಾರು ಹೊಡೆಯಬೇಕು ? ಬುದ್ಧಿವಾದವನ್ನು ಹೇಳಿ ತಪ್ಪನ್ನು ತಿದ್ದಬೇಕು. ಹೆಂಡತಿಯೆ ಮನೆಯ ಭಾಗ್ಯದೇವತೆ ! ಮನೆ ಮ್ಕಳ ಪಾಲನೆ ಅವಳ ಪಾಲಿನದು. ಹೆಂಡತಿಯನ್ನು ಹಿಂಸಿಸುವರಿಗೆ ಹರನು ಮೆಚ್ಚಲಾರ.ಘೋರ ನರಕ ತಪ್ಪದು. ನೀನು ನಿನ್ನ ಹೆಂಡತಿಯು ಪರಸ್ಪರ ಪ್ರೇಮ ಸಂತೋಷಗಳಿಂದ ಇದ್ದರೆ ಸುಖ ಸಿಗುತ್ತದೆ. ಸಂಸಾರ ಸುಸೂತ್ರ ಸಾಗುತ್ತದೆ. ಒಂದು ಕಾಲು ಕುಂಟಾದರೆ ಚೆನ್ನಾಗಿರುತ್ತದೆಯೊ, ಹೇಳು ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂದು ಶಿವಶರಣರು ಅಪ್ಪಣೆಕೊಡಿಸಿದ್ದಾರೆ. ನಿಮ್ಮಿಬ್ಬರ ದೇಹಗಳು ಎರಡಾಗಿದ್ದರು ಮನಸ್ಸು ಒಂದಾಗಿರಬೇಕು. ಹೃದಯ ಒಂದಾಗಿರಬೇಕು. ತಿಳಿಯಿತೆ ? ಇನ್ನು ಮೇಲೆ ಹೀಗೆಲ್ಲ ಹುಚ್ಚುಹುಚ್ಚಾಗಿ ಹೊಡೆಯಬೇಡ ಎಂದು ಹೇಳಿ ಕಳಿಸುತ್ತಿದ್ದರು. ಆದರೂ ಸ್ವಾಮಿಗಳ ಮನಸ್ಸು ಸ್ತ್ರೀಯರ ಅಜ್ಞಾನ ಅನಾಚಾರಗಳಿಗಾಗಿ ತುಂಬಾ ನೋಯುತ್ತಿತ್ತು. ಅವುಗಳ ನಿವಾರಣೆಗಾಗಿ ಸದಾ ಆಲೋಚಿಸುತ್ತಿತ್ತು.
ಸ್ವಾಮಿಗಳವರು ಸಿದ್ಧರಾಗಿಯು ಸ್ತ್ರೀಯರ ಮುಖಾವಲೋಕನ ಮಾಡದಿರಲು ಕಾರಣವೇನು ಎಂದು ಕೆಲವರು ಕೇಳದಿರಲಿಲ್ಲ. ಅದಕ್ಕೆ ಹನ್ನೆರಡನೆಯ ಶತಮಾನದಲ್ಲಿ ನಿರ್ವಾಣೆಯಾಗಿ ಅನುಭವ ಮಂಟಪಕ್ಕೆ ಬಂದ ಮಹಾದೇವಿಯಕ್ಕಗಳನ್ನು ‘ಕೇಶದ ಮರೆಯೇಕೆ’ ? ಎಂದು ಕೇಳಿದ ಅಲ್ಲಮಪ್ರಭುವಿಗೆ ‘ನಿಮ್ಮ ಶರಣರಿಗೆ ನೋವಾದೀತೆಂದು’ ಅಕ್ಕಗಳು ಉತ್ತರಿಸಿದಂತೆಯೆ ಇಲ್ಲಿ ಉತ್ತರಿಸಬೇಕಾಗಿದೆ. ಸ್ವಾಮಿಗಳವರಿಗೆ ನಿಜವಾಗಿಯೂ ಮನೋವಿಕಾರವಿರಲಿಲ್ಲ. ಅದರಲ್ಲಿ ಅವರು
ಸಂಪೂರ್ಣ ಸಿದ್ಧಿಯನ್ನು ಪಡೆದಿದ್ದರು. ಆದರೂ ಅವರು ತಮ್ಮ ಅಪರ ವಯಸ್ಸಿನಲ್ಲಿಯು ಆ ವ್ರತವನ್ನು ನಡೆಸಿದರು. ಕಾರಣ ಹಿರಿಯರ ಅನುಕರಣ ಕಿರಿಯರು ಮಾಡಿಯಾರು. ಅದರಲ್ಲಿಯು ಇಂತಹ ವಿಷಯಗಳಲ್ಲಿ ಅನುಕರಣ ಮಾಡುವುದು ವಿಶೇಷ. ನಾವೇ ನೋಡತೊಡಗಿದರೆ ಶಿವಯೋಗ ಮಂದಿರ ಸಾಧಕರು ನೋಡತೊಡಗುವರು. ನಮ್ಮಂತೆ ಅವರ ಮನಸ್ಸಿರುವದಿಲ್ಲ. ಮನಸ್ಸಿನ ಸೆಳೆತಕ್ಕೆ ಮಾರುಹೋದಾರು ಎಂಬುದೇ ಅವರ ಉದ್ದೇಶ. ಹೀಗೆ ಸಾಧಕರ ಶಿಕ್ಷಣಕ್ಕಾಗಿ ಇನ್ನೂ ಅನೇಕ ವ್ರತಗಳನ್ನು ಕೈಬಿಡದೆ ಅವರು ಆಚರಿಸುತ್ತಿದ್ದರು ಅವರಿಗಾಗಿ ಅವರಿದ್ದಿಲ್ಲ.
ಒಂದು ದಿನ ಗಚ್ಚಿನಮಠದಲ್ಲಿ ಎಲ್ಲ ಸಾಧಕರಿದ್ದರು. ಕಲ್ಲುಮಠದ ಮುಂಭಾಗದಲ್ಲಿ ಸ್ವಾಮಿಗಳೊಬ್ಬರೆ ಮೂಹೂರ್ತ ಮಾಡಿದ್ದರು. ಬೆಳಗಿನ ಒಂಭತ್ತು ಗಂಟೆಯ ಸಮಯ. ಯಾರೋ ಪ್ರಯಾಣಿಕರಾದ ಹೆಂಗಸರು ದ್ವಾರದಿಂದ ಸ್ತ್ರೀ ಸಹಜವಾದ ಗಲಾಟೆಯೊಡನೆ ಒಳನುಗ್ಗಿದರು. ಸ್ವಾಮಿಗಳವರು ಸುಮ್ಮನೆ ಇದ್ದರು. ಹೆಂಗಸರು ಎದುರಿಗಿರುವ ಸ್ವಾಮಿಗಳವರನ್ನು ನೋಡಿದ ಮೇಲೆಯು ಹಿಂದಿರುಗಲಿಲ್ಲ. ಬಳಸಿಕೊಂಡು ಗಚ್ಚಿನಮಠದತ್ತ ಹೋಗಹತ್ತಿದರು. ಆಗ ಸ್ವಾಮಿಗಳವರು ತಾವೇ ಎದ್ದು ಅವರನ್ನು ತಾಯಿಗಳೆ, ಎಂದು ನಯವಾಗಿ ಕರೆದು ಅಲ್ಲಿ ಶಿವಯೋಗಿಗಳಿದ್ದಾರೆ. ಅವರು ನಿಮ್ಮನ್ನು ನೋಡುವದಿಲ್ಲ. ನಿಮ್ಮೊಡನೆ ಮಾತೂ ಆಡುವದಿಲ್ಲ. ಅಷ್ಟಕ್ಕು ನೀವು ಅಲ್ಲಿ ನೋಡತಕ್ಕದು ಏನೂ ಇಲ್ಲ. ನೀವು ಹೀಗೆಯೆ ಹೊರಟು ಹೋಗಿರೆಂದು ಹೇಳಿಕಳುಹಿಸಿದರು. ಇದನ್ನು ಕಣ್ಣಾರೆ ಕಂಡಿದ್ದೇನೆ. ಕಿವಿಯಾರೆ ಕೇಳಿದ್ದೇನೆ. ಹೀಗಿರುವಾಗ ಅವರ ಉದ್ದೇಶ ಅವರ ಪ್ರತಾಚರಣೆ ಸಾಧಕರ ನಿಮಿತ್ತವಾಗಿ ಇತ್ತೆಂಬುದು ಸ್ಪಷ್ಟವಾಗುವುದಿಲ್ಲವೆ ?
ವ್ಯಷ್ಟಿ ಜೀವನದ ಸಾಧನ ಕ್ಷೇತ್ರ, ಸಣ್ಣ ಕುಟುಂಬವಾಗಿದ್ದರೆ ಸಮಷ್ಟಿ ಜೀವನದ ಸಾಧನಕ್ಷೇತ್ರ, ವಿಶಾಲವಾದ ವಿಶ್ವಕುಟುಂಬವಾಗಿದೆ. ಈ ವಿಶ್ವಕುಟುಂಬವನ್ನು ಮೀರಿ ಯಾವನೂ ವಿಶ್ವವ್ಯಕ್ತಿಯಾಗಲಾರನು, ವಿಶ್ವಶಾಂತಿ ಕಾರಣನಾಗನು. ಹಾಲಾದರು ಮಧುರ ಪಾಕವಾಗಬೇಕಾದರೆ ಸಕ್ಕರೆಯ ಬೆರಕೆ ಬೇಕೇ ಬೇಕು. ಪ್ರೇಮವೆ ಹಾಲು ಸದ್ಗುಣಗಳೆ ಸಕ್ಕರೆ. ಪ್ರೇಮ ಐಂದ್ರಿಕವಾಗಬಾರದು. ಆಧ್ಯಾತ್ಮಿಕವಾಗಬೇಕು. ಅದರ್ಶಾಕಾಂಕ್ಷೆಯಾಗಬೇಕು. ಸದ್ಗುಣ ಸಂವರ್ಧಿಯಾಗಬೇಕು.
ಬೌದ್ಧಿಕ ಆಧ್ಯಾತ್ಮಿಕ ಜೀವನೋನ್ನತಿಗೆ ಹೆಣಗುವ ವ್ಯಕ್ತಿಗೆ ಹೆಣ್ಣು ಗಂಡೆಂಬ ಭೇದವಿಲ್ಲ. ಬುದ್ಧಿ ಆತ್ಮಗಳು ಉಭಯ ವ್ಯಕ್ತಿತ್ವದಲ್ಲಿ ಸರಿಸಮಾನವಾದವುಗಳು. ಏರುಪೇರುಗಳ ಕವಲಿಲ್ಲ. ಕೊಂಕಿಲ್ಲ. ಆದರು ಸ್ತ್ರೀ ಸಮಾಜೋನ್ನತಿಗೆ ಹೆಣಗಿ ಮುಖದ ಮೇಲೆ ಕಪ್ಪುಕಲೆಯನ್ನು ತಂದುಕೊಳ್ಳದ ವ್ಯಕ್ತಿ ಇತಿಹಾಸದಲ್ಲಿ ಕಾಣುವುದು ವಿರಳ. ಸ್ವಾಮಿಗಳವರು ಈ ವಿಷಯದಲ್ಲಿ ನಿಷ್ಕಳಂಕ ಚರಿತರಾಗಿ ಹುಣ್ಣಿಮೆಯ ಚಂದ್ರನಂತೆ ಬೆಳಗಿದರು. ಉತ್ತರಾಯಣದ ಪ್ರಭಾಕರನಂತೆ ಪ್ರಜ್ವಲಿಸಿದರು.
ಸ್ವಾಮಿಗಳವರು ಹೆಂಗಸರ ಮುಖವನ್ನು ನೋಡದೆ ಇದ್ದುದು ಹೇಳನ ಭಾವದಿಂದಲ್ಲ. ಸತೀತ್ವ ಸ್ವಾಮಿತ್ವ ಧರ್ಮಗಳೆರಡರ ಪರಿಪಾಲನದ ಹೆಚ್ಚಳಿಕೆಯಿಂದ, ಸಾಂಸಾರಿಕ ಜೀವನದಲ್ಲಿದ್ದು ಉರಿಯ ನಾಲಗೆಗಂಜೆ, ಸುರಿಗೆಯ ಮೊನೆಗಂಜೆ ಪರಸ್ತ್ರೀ ಪರಧನವೆಂಬ ಜೂಜಿಂಗಂಜುವೆ” ಎಂದು ಉಸುರಿದ ಬಸವಣ್ಣನ ಬಂಧುರೋಕ್ತಿಯನ್ನು ಸನ್ಯಾಸಜೀವಿಯು ಅದೆಷ್ಟು ಎಚ್ಚರದಿಂದ ಕಾಪಾಡಬೇಕೆಂಬ ಹೊಣೆಗಾರಿಕೆಯನ್ನು ಹೆಚ್ಚಾಗಿ ತಿಳಿದು ಆಚರಣೆಯಲ್ಲಿ ತಂದು ಆ ಉಕ್ತಿಯನ್ನು ಸಾರ್ಥಕಪಡಿಸಿದ ಸನ್ಮಾನ್ಯರು ಸ್ವಾಮಿಗಳವರು, ಆವ್ರತಶೀಲರಾಗಿಯೇ ಸ್ತ್ರೀ ಸುಧಾರಣೆಯ ಕಾರ್ಯವನೆಸಗಿದ ಕಾರಣಿಕರು ಕುಮಾರಯೋಗಿಗಳವರು.
ಸ್ತ್ರೀಯರಲ್ಲೆ ಬೋಧಕ ವರ್ಗ ತಯಾರಾಗಬೇಕೆಂಬ ಹೆಬ್ಬಯಕೆ ಸ್ವಾಮಿಗಳವರದಾಗಿತ್ತು. ಅಕ್ಕ ಲಕ್ಕಮ್ಮ, ನೀಲಾಂಬೆ ಮುಂತಾದ ಶರಣೆಯರಂತೆ ಆತ್ಮವೀರರಾಗಿ ಬಾಳಬೇಕೆಂಬ ಮೈತ್ರೇಯಿಯಂತೆ ಪತಿವ್ರತೆಯರಾಗಿ ಪರವಸ್ತು ಪ್ರೇಮಿಗಳಾಗಿ ಬದುಕಬೇಕೆಂಬ ಮಹತ್ವಾಕಾಂಕ್ಷೆ ಸ್ವಾಮಿಗಳವರಲ್ಲಿ ಬಲವಾಗಿ ಬೇರೂರಿತ್ತು. ಚಿಗುರು ಹಾಕಿತ್ತು. ಫಲ ನೋಡುವ ಅನುಭವಿಸುವ ಅವಕಾಶ ಅವರಿಗಿಲ್ಲದೆ ಹೋಯಿತು.