ಶ್ರೀಕಂಠ.ಚೌಕೀಮಠ.ವ್ಯವಸ್ಥಾಪಕ -ಸಂಪಾದಕ.

ಸಹೃದಯರಿಗೆ ನನ್ನ ನಮಸ್ಕಾರಗಳು.

ಬಸವ ಜಯಂತಿಯ ಪವಿತ್ರ ದಿನದಂದು (೧೪ -೦೫-೨೦೨೧) “ ಸುಕುಮಾರ” ಶ್ರೀ ಶಿವಯೋಗಮಂದಿರ ಬ್ಲಾಗ್‌ , ಅಂತರ್ಜಾಲದ ಮೂಲಕ ಹಂಪಿ ಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಶ್ರೀ ಸನ್ನಿಧಿ ಯವರ ಅಮೃತ ಹಸ್ತದಿಂದ ,ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ ಯಲ್ಲಿ ಲೋಕಾರ್ಪಣೆಗೊಂಡಿತು.

“ ಸುಕುಮಾರ” ಶ್ರೀ ಶಿವಯೋಗಮಂದಿರ ಬ್ಲಾಗ್‌ ನ್ನು ಅಂತರ್ಜಾಲದ ಮೂಲಕಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಶ್ರೀ ಸನ್ನಿಧಿ ಯವರ ಅಮೃತ ಹಸ್ತದಿಂದ ,ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ ಯಲ್ಲಿ ಲೋಕಾರ್ಪಣೆಗೊಂಡಿತು.
ಅಪೂರ್ವ ಸಂದರ್ಭದಲ್ಲಿ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ , ಪೂಜ್ಯ ಕೊಟ್ಟೂರು ದೇಶಿಕರು ದರೂರ, ಪೂಜ್ಯ ನಾಗಭೂಷಣ ದೇವರು ಅಡವಿಅಮರೇಶ್ವರ ಪೂಜ್ಯರು ಉಪಸ್ಥಿತರಿದ್ದರು .

 

ಸುಕುಮಾರ ಬ್ಲಾಗ್‌ ನ ಪ್ರಥಮ ಸಂಚಿಕೆಯನ್ನು ಬಿಡುಗಡೆ ಮಾಡಿ ,ಸಲಹೆ ,ಪ್ರತಿಕ್ರಿಯೆ ,ಪ್ರಶಂಸೆ ಮತ್ತು ಪ್ರೋತ್ಸಾಹದಾಯಕ ಸಂದೇಶಗಳ ಮಹಾಪೂರದಲ್ಲಿ ಮಿಂದೆದ್ದು,ತಪ್ಪುಗಳನ್ನುತಿದ್ದಿಕೊಳ್ಳುತ್ತ ,ಹೊಸ ರೂಪದ ಸುಕುಮಾರ ಬ್ಲಾಗ್‌ ನ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸುತ್ತಿದ್ದೇನೆ.

ಪ್ರಸ್ತುತ ೨೦೨೧ನೇ ವರ್ಷ, ಪರಮ ಪೂಜ್ಯ ಲಿಂ.ಅಥಣಿ ಮುರುಘೇಂದ್ರ ಶಿವಯೋಗಿಗಳ ಪುಣ್ಯತಿಥಿ ಶತಮಾನೋತ್ಸವ .ತಮ್ಮ ಭೌತಿಕ ಶರೀರದ ಅಂತಿಮ ದಿನವನ್ನು “ಶಿವರಾತ್ರಿ” ಎಂದು ಸ್ವತಃ ಶಿವಯೋಗಿಗಳೇ ಮುನ್ಸೂಚನೆ ನೀಡಿದ ಪವಿತ್ರ ದಿನ ಕ್ಕೆ ನೂರು ವಸಂತಗಳ ಸಂಸ್ಮರಣೆ ಯಾಗಿರುತ್ತದೆ.

ಪೂಜ್ಯರ ಸ್ಮರಣೆ  ಮತ್ತು ಸುಕುಮಾರ ಬ್ಲಾಗ್‌ ನ ವಿಶೇಷ ಸಂಚಿಕೆಯ ಅರ್ಪಣೆ  ಪೂಜ್ಯದ್ವಯರ ಅವಿನಾಭಾವ ಸಂಬಂಧದ ಫಲಶೃತಿಗಳು.

ಪರಮ ಪೂಜ್ಯ ಲಿಂ.ಅಥಣಿ ಮುರುಘೇಂದ್ರ ಶಿವಯೋಗಿಗಳು ,ಪೂಜ್ಯ ಹಾನಗಲ್ಲ ಕುಮಾರಶಿವಯೋಗಿಗಳಿಗೆ  ಆದರ್ಶಪ್ರಾಯವಾದವರು . ಅಥಣಿ ಶಿವಯೋಗಿಗಳ ಮೇಲಿನ ಶ್ರೀ ಕುಮಾರ ಶಿವಯೋಗಿಗಳ ಗೌರವಕ್ಕೆ ಒಂದು ಘಟನೆಯನ್ನು  ಸ್ಮರಿಸಿಕೊಳ್ಳುತ್ತೇನೆ. ಕವಿರತ್ನ ದ್ಯಾಂಪುರ ಚೆನ್ನ ಕವಿಗಳು ಒಂದೊಮ್ಮೆ ಶ್ರೀ ಕುಮಾರ ಶಿವಯೋಗಿಗಳನ್ನು ಹೊಗಳಿ ಬರೆದ ಪದ್ಯವನ್ನು ಶ್ರೀ ಕುಮಾರ ಶಿವಯೋಗಿಗಳ ಮುಂದೆ ವಾಚನ ಮಾಡಿದರು.ಹೊಗಳಿಕೆಯ ಹಾಡನ್ನು ಕೇಳಿ ಪ್ರಚಾರ ಪ್ರಿಯರಲ್ಲದ ಶ್ರೀ ಕುಮಾರ ಶಿವಯೋಗಿಗಳು ಕೋಪಿಸಿಕೊಂಡು “ಚೆನ್ನಯ್ಯ !! ಇದೇ ಎನು ನಿನ್ನ ಕವಿತ್ವದ ಸದುಪಯೋಗ ? ಸಾಮಾನ್ಯ ವ್ಯಕ್ತಿಯನ್ನು ಹೊಗುಳುವುದೆ? ಕೀರ್ತಿಸಲು ನಿನಗೆ ಶಿವಶರಣರಿಲ್ಲವೆ ? ಅಥಣಿ ಶಿವಯೋಗಿಗಳಂತಃ ಮಹಾತ್ಮರಿಲ್ಲವೆ ?  ಎಂದು ನುಡಿದ ಸನ್ನಿವೇಶ .ಕವಿಗಳು “ಎನ್ನೊಡೆಯ ತಪ್ಪಾಯ್ತು ಮನ್ನಿಸಬೇಕೆಂದು ಎಂದು ಕ್ಷಮೆಯಾಚಿಸಿದ ಪ್ರಸಂಗ ವನ್ನು ಸ್ವತಃ ದ್ಯಾಂಪುರ ಚೆನ್ನ ಕವಿಗಳು ೫-೩-೧೯೪೬ರಂದು ಶಿವಯೋಗಮಂದಿರದ ಜಾತ್ರೆಯ ಸಮಾರಂಭದಲ್ಲಿ ಭಾಷಣ ಮಾಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ  ಪ್ರಾಣ ಬಿಡುವ ಕೊನೆಯ ಕ್ಷಣದಲ್ಲಿ ಹೇಳಿದ ಮಾತುಗಳು.

ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದ ವಾತಾವರಣದಲ್ಲಿ ಬೆಳೆಯುವ ಪ್ರತಿಯೊಬ್ಬ ಸಾಧಕರಲ್ಲಿ ಅಥಣಿ ಶಿವಯೋಗಿಗಳ ವೈರಾಗ್ಯ ಮತ್ತು ಶಿವಯೋಗ ಸಾಧನೆ ಯನ್ನು ಕಾಣಲು ಅಪೇಕ್ಷೆಪಟ್ಟವರು ಮತ್ತು ಆ ಅಪೇಕ್ಷೆಯನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದೂ ಉಂಟು.

ಪೂಜ್ಯ ಅಥಣಿ ಶಿವಯೋಗಿಗಳು ಲಿಂಗೈಕ್ಯರಾದ (೧೯೨೧)ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಹಾಡಿದ ಮಂಗಳಾರತಿ ಹಾಡು  “ಕಂಗಳಾಲಯ ಸಂಗಗೆ “ ಹೃದಯದ ಹಾಡಾಗಿ ಪ್ರಸಿದ್ಧಿಯಾಗಿದೆ .

೧೯೨೮  ರಲ್ಲಿ ಧಾರವಾಡ ಮುರುಘಾಮಠ ದ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಸಮಯ-ಸಮನ್ವಯದ ಸಂಕೇತವಾಗಿ ಶಿವಯೋಗಮಂದಿರದಿಂದ  ಶ್ರೀ ಕುಮಾರ ಶಿವಯೋಗಿಗಳನ್ನು ಆಮಂತ್ರಿಸಿ ಶ್ರೀ ಕುಮಾರ ಶಿವಯೋಗಿಗಳ ಹಸ್ತದಿಂದ ಪೂಜ್ಯ ಅಥಣಿ ಶಿವಯೋಗಿಗಳ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿದ್ದು ಒಂದು ಐತಿಹಾಸಿಕ ಘಟನೆ.

 

( ಧಾರವಾಡ ಮುರುಘಾಮಠದಲ್ಲಿರುವ  ಪೂಜ್ಯ  ಅಥಣಿಯ ಶಿವಯೋಗಿಗಳ ಶಿಲಾಮೂರ್ತಿ )

ಇಂದಿಗೂ ಧಾರವಾಡದ ಶ್ರೀ ಮುರುಘಾಮಠ ದಲ್ಲಿ ಪೂಜ್ಯ ಅಥಣಿ ಶಿವಯೋಗಿಗಳು ಜಪ ಮಾಡಲು ಬಳಸಿದ ರುದ್ರಾಕ್ಷಿ ಸರದ ಜೊತೆಗೆ ,ಚಿತ್ರದುರ್ಗದ ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಧರಿಸಿದ ವಿಭೂತಿ ಮತ್ತು ಶ್ರೀ ಕುಮಾರ ಶಿವಯೋಗಿಗಳು ಧರಿಸಿದ ವಿಭೂತಿಯನ್ನು ಸಂಗ್ರಹಿಸಿ ಜತನದಿಂದ ಕಾಪಾಡಿಕೊಂಡು ಬಂದಿರುವದು ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳೆಂದೇ ಎಂದು ಭಾವಿಸುತ್ತೇನೆ

 

.

(ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳು)

ಪೂಜ್ಯ ಅಥಣಿ ಶಿವಯೋಗಿಗಳ ಸ್ಮರಣೋತ್ಸವ ವಿಶೇಷ ಸಂಚಿಕೆಗೆ ತಮ್ಮ ಅಮೂಲ್ಯ ಲೇಖನಗಳನ್ನು ಕೊಟ್ಟ

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ.

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಪರಮಪೂಜ್ಯ .ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ (ಸಂಗ್ರಹ ಸಹಾಯ: ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮುರುಘಾಮಠ ಚಿತ್ರದುರ್ಗ ಲೇಖನ).

ಪೂಜ್ಯ ಪ್ರಭು ಚೆನ್ನಬಸವ ಸ್ವಾಮಿಗಳು ಮೋಟಗಿ ಮಠ ಅಥಣಿ

ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ

ಶ್ರೀ  ಡಾ.ಪಂಚಾಕ್ಷರಿ ಹಿರೇಮಠ  (ಗ್ರಂಥ ಋಣ : ಕೈವಲ್ಯ ಶ್ರೀ ಸರ್ಪಭೂಷಣ ಶಿವಯೋಗಿಗಳ  ಸ್ಮರಣ ಸಂಪುಟ)

ಶ್ರೀ ಲಿಂ. ಬಿ.ಡಿ.ಜತ್ತಿ  ಮಾಜಿ ರಾಷ್ಟ್ರಪತಿ ಗಳು ಭಾರತ ಸರಕಾರ  ಅವರ ಆತ್ಮ ಕಥೆ “ನನಗೆ ನಾನೇ ಮಾದರಿ”  ಪುಸ್ತಕ ದಿಂದ ಆಯ್ದ ಬರಹ

ಶ್ರೀ ಡಾ . ಬಿ . ಆರ್ . ಹಿರೇಮಠ (ಸುಕುಮಾರ : ಅಗಸ್ಟ ೨೦೦೨)

ಶ್ರೀ  ಡಾ . ಸಿದ್ದಣ್ಣ .ಬ . ಉತ್ನಾಳ (ಗ್ರಂಥ ಋಣ :ಚಿನ್ಮಯ ಚೇತನ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳು)

ಶ್ರೀ ಪ್ರಕಾಶ ಗಿರಿಮಲ್ಲನವರ,

ಭಕ್ತಿಗೀತೆಯನ್ನು ಸಮರ್ಪಿಸಿದ ಚಿತ್ರದುರ್ಗದ ಕುಮಾರಿ ಚಿನ್ಮಯಿ ರೇವಣಸಿದ್ದಪ್ಪ ಹೆಗಡಾಳ ಹಾಗು ಮಂಗಳಾರತಿ ಯನ್ನು ಸಮರ್ಪಿಸಿದ ಶ್ರೀ ಸಿದ್ಧೇಂದ್ರಕುಮಾರ ಹಿರೇಮಠ ತುಮುಕೂರ ಅವರಿಗೆ,

ಪೂಜ್ಯರಿಗೆ ಮತ್ತು ಮಹನಿಯರಿಗೆ ತುಂಬು ಹೃದಯದ ಕೃತಜ್ಞತೆಗಳು.

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

 

 

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ .

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ      ॥ ಪ ॥

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

 ಚೆಂದವನರಿದನುಷ್ಠಾನಿಪ ಶಿವಸ್ವಯಗೆ    ॥ ೧ ॥

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ  ॥ ೨ ॥

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ .

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ    ॥ ೩ ॥

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ   ॥ ೪ ॥

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‌ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರಘ ಶಿವಯೋಗಿಗೆ    ॥ ೫ ॥

 

   

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಜೂನ ೨೦೨೧ ರ ಸಂಚಿಕೆ

೨. ಸದ್ಗುರುವಿನ ಸ್ವರೂಪ

ಗುರುವೆ ಭಕ್ತರ ಕಲ್ಪ | ತರುವೆ ಸಜ್ಜನ ಮನೋ

ಹರವೆ ನಿಜ ಭಕ್ತಿ – ಜ್ಞಾನ ವೈರಾಗ್ಯ ಮಂ

ದಿರವೆ ಮದ್ಗುರವೆ ಕೃಪೆಯಾಗು || ||

ಶಿವಕವಿಯು ಇಲ್ಲಿಂದ ನಾಲ್ಕು ನುಡಿಗಳಲ್ಲಿ ಅಷ್ಟಾವರಣದಲ್ಲಿ ಮೊದಲನೆಯ ದೇವರೆನಿಸಿದ ಸದ್ಗುರು ಸ್ವರೂಪವನ್ನು ಬಣ್ಣಿಸಿದ್ದಾನೆ . ಶಿಷ್ಯನ ಹೃತ್ತಾಪವನ್ನು ಹರಣಮಾಡಿ ಬೇಡಿದ ಬಯಕೆಗಳನ್ನು ಪೂರ್ಣಗೊಳಿಸಬಲ್ಲವನೇ ಸದ್ಗುರು . ಈ ಲೋಕದಲ್ಲಿ ಅನಂತ ಗುರುಗಳಿದ್ದಾರೆ . ಅವರೆಲ್ಲರೂ ಸದ್ಗುರುಗಳಲ್ಲ . ಎಲ್ಲರೂ ಶಿಷ್ಯನ ಹೃತ್ತಾಪವನ್ನು ಕಳೆಯಲು ಸಮರ್ಥರಲ್ಲ .

ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ |

ಗುರವೋ ವಿರಲಾಃ ಸಂತಿ ಶಿಷ್ಯ ಹೃತಾಪಹಾರಕಾಃ ||

ಶಿಷ್ಯರ ಧನವನ್ನು ಸೂರೆಮಾಡುವ ಗುರುಗಳೇ ಬಹಳ . ಭಕ್ತರ ತಾಪತ್ರಯ ಗಳನ್ನು ದೂರಮಾಡಿ ಸದ್ಗತಿಯನ್ನು ದಯಪಾಲಿಸಬಲ್ಲ ಸದ್ಗುರುಗಳು ವಿರಳವಾಗಿದ್ದಾರೆ . ಅಂತೆಯೇ ಶರಣಕವಿಯು ಪ್ರಥಮತಃ ಸದ್ಗುರುವಿನ ಸ್ವರೂಪವನ್ನು ಕಂಡುಕೊಂಡಿದ್ದಾನೆ . ಸಾಧಕರಿಗೆ ಮಾರ್ಗದರ್ಶನವನ್ನು ಮಾಡಿದ್ದಾನೆ . ಸದ್ಗುರುವಾದವನು ಸಾಮಾನ್ಯನಲ್ಲ , ಸದ್ಗುರುವಿನಲ್ಲಿ ಶಿಷ್ಯರನ್ನು ಉದ್ಧರಿಸುವ ಮಹಾಕಾಂಕ್ಷೆ ಮನೆ ಮಾಡಿಕೊಂಡಿರುತ್ತದೆ . ಭಕ್ತರನ್ನು ಲೌಕಿಕ ಹಾಗೂ ಪಾರಮಾರ್ಥಿಕ ಸಿರಿಸಮನ್ವಿತರನ್ನಾಗಿ ಮಾಡಬಲ್ಲನು . ತನಗಾಗಿ ಯಾವುದನ್ನೂ ಬಯಸದ ಮಹಾತ್ಯಾಗಿ ಯಾಗಿರುತ್ತಾನೆ . ಅದಕ್ಕಾಗಿ ಗುರುವರನು ಭಕ್ತ ಸಮುದಾಯಕ್ಕೆ ಕಲ್ಪತರುವಾಗಿದ್ದಾನೆ . ಸಾಮಾನ್ಯ ತರು ಕಟ್ಟಿಗೆಯ ಕೊರತೆಯನ್ನು ಮಾತ್ರ ನೀಗಿಸಬಲ್ಲುದು ಕಲ್ಪತರು ಬೇಡಿದ ಬಯಕೆಯನ್ನೆಲ್ಲ ನಿವಾರಿಸುತ್ತದೆ . ಸದ್ಗುರುವು ಭಕ್ತನಿಗೆ ಸತ್ಕಾಯಕವನ್ನು ನಿರೂಪಿಸಿ ಸಕಲೈಶ್ವರ್ಯವನ್ನು ದಯಪಾಲಿಸುತ್ತಾನೆ . ಸುಜ್ಞಾನವನ್ನು ಉಪದೇಶಿತ ಲಿಂಗಾಂಗಸಮರಸಾನಂದದ ಸವಿಯನ್ನು ಕರುಣಿಸುತ್ತಾನೆ . ಇಂಥ ಸದ್ಗುರುದೇವನೇ ಸದ್ಭಕ್ತರ ಮನವನ್ನು ಆಕರ್ಷಿಸುವಲ್ಲಿ ಸಮರ್ಥನಾಗುತ್ತಾನೆ . ಸದ್ಗುರುವು ಬಾಹ್ಯ ಮತ್ತು ಆಂತರಿಕವಾಗಿಯೂ ಮನೋಹರನಾಗಿರುತ್ತಾನೆ . ಸೌಂದರ್ಯಕ್ಕೆ ತಕ್ಕ ಶಿವತ್ವವೂ ತುಂಬಿ ತುಳುಕುತ್ತದೆ . ಮಂಗಲ ಮಯವಾದ ಸುಂದರತೆಯಲ್ಲಿ ಅವಶ್ಯವಾಗಿ ಸತ್ಯವಿರುತ್ತದೆ . “ ಸತ್ಯಂ ಶಿವಂ ಸುಂದರಂ ‘ ತತ್ತ್ವ ಓತಪ್ರೋತವಾಗಿರುತ್ತದೆ . ಅದುಕಾರಣ ಸದ್ಗುರುನಾಥನು ನೈಜವಾದ ಭಕ್ತಿ – ಜ್ಞಾನ – ವೈರಾಗ್ಯಗಳಿಗೆ ಆಶ್ರಯ ಸ್ವರೂಪನಾಗಿರುತ್ತಾನೆ . ಸದ್ಗುರುವಿನ ಭಕ್ತಿ – ಜ್ಞಾನ – ವೈರಾಗ್ಯಗಳಲ್ಲಿ ಅಸಹಜತೆಯಿರುವದಿಲ್ಲ . ಮೂರೂ ಸತ್ಯ ಸ್ವರೂಪವಾಗಿರುತ್ತವೆ . ಯಥಾರ್ಥವಾಗಿ ಸದ್ಗುಣಭರಿತನಾದವನೇ ಇನ್ನಿತರರಿಗೆ ಸದ್ಗುಣಗಳನ್ನು ಕಲಿಸಬಲ್ಲನು . ಡಾಂಭಿಕ ಮನೋಭಾವದವನಿಂದ ನೈಜ ಭಕ್ತಿ – ಜ್ಞಾನವೈರಾಗ್ಯಗಳು ಹರಿದು ಬರಲಾರವು . ಭಕ್ತರ ಮನೋಭೂಮಿಕೆಯಲ್ಲಿ ಬೆಳೆದು ಫಲ ನೀಡಲಾರವು . ಸದ್ಗುರುವು ನಿರ್ವಂಚನೆಯಿಲ್ಲದೆ ಭಕ್ತಿಯಿಂದ ಬಂದ ಭಕ್ತರಿಗೆ ಕಲ್ಪತರುವಿನಂತೆ ಭಕ್ತಿ – ಜ್ಞಾನ ವೈರಾಗ್ಯಗಳನ್ನು ನೀಡುತ್ತಿದ್ದರೆ ಆತ್ಮೀಯತೆ ಬೆಳೆದು ಬರುತ್ತದೆ . ಬಸವಲಿಂಗ ಶರಣರಿಗೆ ಇಂಥ ಸದ್ಗುರುಗಳು ದೊರೆತಿದ್ದರೆಂಬುದು ಸ್ಪಷ್ಟವಾಗುತ್ತದೆ . ಅವರು ಆತ್ಮೀಯವಾಗಿ ಮದ್ಗುರುವೆ ! ಕೃಪೆಯಾಗಬೇಕೆಂದು ಪ್ರಾರ್ಥಿಸಿದ್ದಾರೆ . ಶಿಷ್ಯನು ಗುರುವನ್ನು ತನ್ನವನನ್ನಾಗಿ ಮಾಡಿಕೊಂಡರೆ ಗುರುವು ತನ್ನವರ್ಗೆ ತಾನು ಅವಶ್ಯವಾಗಿ ಸುಖವನ್ನು ಕರುಣಿಸುತ್ತಾನೆ .

**********

  ದೇಶಿಕನೆ ಅನುಭಾವೋ | ಲ್ಲಾಸಕನೆ ಸಂಕಲ್ಪ

 ನಾಶಕನೆ ಣವಾದಿ  ತ್ರೈಮಲದೊಳ್ನಿ

 ರಾಶಕನೆ ಎನಗೆ ಕೃಪೆಯಾಗು || ||

“ಆಣವಾದಿ  ತ್ರೈಮಲಮಂ ನಿರಾಶಕನೆ “ ಎನ್ನುವ ಪಾಠಾಂತರವೂ ಇದೆ . ಗೋವು ಅಡವಿಯಲ್ಲಿ ಚೆನ್ನಾಗಿ ಹುಲ್ಲು ಮೇಯ್ದು ತೃಪ್ತವಾಗಿ ತನ್ನ ಕರುವಿಗೆ ಹಾಲುಣಿಸಲು ಹಾತೊರೆಯುವಂತೆ ; ಸದ್ಗುರುವಾದವನು ಸದ್ಭಕ್ತ ಶಿಶುಗಳಿಗೆ ಅನುಭವಾಮೃತವನ್ನು ನೀಡಿ ತಣಿಸುತ್ತಿರಬೇಕು . ಇದು ಸದ್ಗುರುವಿನ ಕರ್ತವ್ಯವನ್ನು ಸೂಚಿಸುತ್ತದೆ . ಅದಕ್ಕಾಗಿ ಶಿವಕವಿಯು ದೇಶಿಕನೇ ಎಂಬ ಸಂಬೋಧನೆಯನ್ನು ಮಾಡಿದ್ದಾನೆ .

ನಿತ್ಯಲಿಂಗಾರ್ಚನೆಯನ್ನು ಮಾಡಿ ಭಕ್ತರ ಕಲ್ಯಾಣಕ್ಕಾಗಿ ದೇಶವನ್ನು ಸಂಚರಿಸುವ ಗುರುವರನೇ ದೇಶಿಕನೆನಿಸಿಕೊಳ್ಳುವನು . ಅವನು ಶಿವಾನುಭವಾನಂದದಲ್ಲಿ ತಲ್ಲೀನನಾಗಿ ತನ್ನ ಅನುಭವೋಪದೇಶದಿಂದ ಶಿಷ್ಯರನ್ನು ಉಲ್ಲಾಸಗೊಳಿಸುವನು . ಮನಸ್ಸಿನ ಸಂಕಲ್ಪ – ವಿಕಲ್ಪಗಳನ್ನು ನಾಶಮಾಡುವನು . ಫಲಾಪೇಕ್ಷೆಯಿಂದ ಮಾಡುವ ಕಾರ್ಯ ಗಳು ಸಂಕಲ್ಪಿತಗಳೆನಿಸುವವು . ಅಂಥ ಸಂಕಲ್ಪಗಳನ್ನು ನಾಶಮಾಡಿ ನಿಷ್ಕಾಮಭಕ್ತಿ ಯನ್ನು ಬೆಳೆಸುವನು . ನಿಷ್ಕಾಮ ಭಕ್ತಿಯು ಅಳವಡಲೆಂದು ಶಿಷ್ಯನ ಆಣವಮಲ , ಮಾಯಾಮಲ , ಕಾರ್ಮಿಕಮಲಗಳೆಂಬ ತ್ರಿದೋಷಗಳನ್ನು ಕಳೆದು ತನು – ಮನ – ಧನ ಗಳನ್ನು ಪರಿಶುದ್ಧಗೊಳಿಸುವನು . ಸ್ವತಃ ತಾನು ಹೊನ್ನು ಹೆಣ್ಣು – ಮಣ್ಣುಗಳೆಂಬ . ತ್ರಿಮಲಗಳನ್ನು ನಿರಾಕರಿಸುವಲ್ಲಿ ಯೋಗ್ಯತೆಯುಳ್ಳವನಾಗಿರುವನೆಂಬುದು ಶರಣ ಕವಿಯ ಆಶಯವಾಗಿದೆ . ಯಾರು ಹೊನ್ನು – ಹೆಣ್ಣು – ಮಣ್ಣುಗಳಲ್ಲಿ ನಿರಾಶೆಯುಳ್ಳವರಾಗಿ ಮಲತ್ರಯ ವನ್ನು ದೂರಮಾಡಿಕೊಂಡಿರುತ್ತಾರೆಯೋ ಅಂಥವರು ಮಾತ್ರ ಭಕ್ತರ ಸಂಕಲ್ಪ ವಿಕಲ್ಪಗಳನ್ನು ದೂರಮಾಡಿ ಮಲತ್ರಯಗಳಿಂದ ಮುಕ್ತರನ್ನಾಗಿ ಮಾಡಬಲ್ಲರು . ಓ ಗುರುವೇ ! ನೀನು ಸಮರ್ಥನಾಗಿರುವಿ . ಕಾರಣ ನನ್ನ ತ್ರಿಮಲಗಳನ್ನು ನಿವಾರಿಸಿ ಕೃಪೆದೋರು

***********

ಕಾರ್ಯ ಕಾರಣ ಭಕ್ತಿ | ತುರ್ಯ ತಾಮಸದ ಚಿತ್

ಸೂರ್ಯ ಎಡರಿಂಗೆ ಧೈರ್ಯವಾಗಿಹ ಗುರು

ರ್ಯ ನೀನೆನಗೆ ಕೃಪೆಯಾಗು  || ||

 ಗುರುದೇವರು ಗುರುವರನಾಗಬೇಕಾದರೆ ಗುರುತ್ವದ ಗರಿಮೆಯನ್ನು ಹೊಂದಿರಬೇಕಾಗುವುದು . ಕಾರಣತ್ವ , ತುರ್ಯತ್ವ , ಚಿತ್ಸೂರ್ಯತ್ವ ಮತ್ತು ಧೈರ್ಯಗಳಿಗೆ ಆಶ್ರಯನಾದವನೇ ಗುರುವರನು .

 ಸಕಲ ಶುಭಕಾರ್ಯಗಳಿಗೆ ಗುರುವರನೇ ಕಾರಣ . ಗುರುವಿಲ್ಲದೆ ಸಂಸ್ಕಾರ ಕಾರ್ಯಗಳು ಘಟಿಸಲಾರವು . ಶಿಷ್ಯನಲ್ಲಿಯ ತ್ರಿಮಲಗಳನ್ನು ಕಳೆದು ತ್ರಿವಿಧಾಂಗಗಳಲ್ಲಿ ಲಿಂಗಗಳ ಸಂಬಂಧವೆಂಬ ಶುಭಕಾರ್ಯಗಳಿಗೆ ಗುರುವೇ ಮೊದಲಿಗನು , ವಿವಾಹಾದಿ ಲೌಕಿಕ ಕಾರ್ಯಗಳಿಗೂ ಗುರು ಬೇಕು . ಗುರುವಿಲ್ಲದೆ ಅವು ಫಲಿಸಲಾರವು . ಗುರುವಾದರೂ ಭಕ್ತಿಯಲ್ಲಿ ಮಿಗಿಲಾಗಿರಬೇಕು . ಭಕ್ತಿಯೇ ಮುಕ್ತಿಯ ಸಾಧನ . ಭಕ್ತಿಯೇ ಷಟ್‌ಸ್ಥಲಾಚರಣೆಯ ಕೀಲು , ಭಕ್ತಿಯ ಪರಾಕಾಷ್ಠತೆಯನ್ನು ಸಾಧಿಸಿದ ಸದ್ಗುರು ಭಕ್ತರಿಗೆ ಕಿಂಕರತನವನ್ನು ಕಲಿಸಬಲ್ಲನು . ಅಂದರೆ ಅಹಂಕಾರವು ಎಳ್ಳಿನ ಮೊನೆಯಷ್ಟಾದರೂ ಇರಕೂಡದು ಅಹಂಕಾರವು ನಾಶವಾದರೇನೇ ಭಕ್ತಿಯು ನೆಲೆಸುವದು , ಭಕ್ತಿಯ ಸೌಜನ್ಯತೆಯಿಂದಲೇ ಸದ್ಗುರುನಾಥನು ಉನ್ನತ ಸ್ಥಾನದಲ್ಲಿರು ತಾನೆ , ಮತ್ತು ಭಕ್ತಿಯುಳ್ಳ ಭಕ್ತರ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವಲ್ಲಿ ಜ್ಞಾನ ಸೂರ್ಯನಾಗಿರುತ್ತಾನೆ . ಅದಕ್ಕಾಗಿ ಅನುಭವಿಗಳು,

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅಜ್ಞಾನ ಕತ್ತಲೆಯಿಂದ ಕುರುಡನಾದವನ ಕಣ್ಣುಗಳು ಜ್ಞಾನವೆಂಬ ಕುಂಚಿನಿಂದ ಯಾವಾತನಿಂದ ತಗೆಯಲ್ಪಡುವವೋ ಅವನೇ ಸದ್ಗುರು . ಅಂಥ ಸದ್ಗುರುವಿಗೆ ಶರಣು ಮಾಡಿರುವರು , ಗುರುವರನು ಎಡರು ಕಂಟಕಗಳನ್ನು ನಿವಾರಿಸುವಲ್ಲಿ ಧೈರ್ಯದ ಮೂರ್ತಿಯೇ ಆಗಿರುತ್ತಾನೆ . ಎಲ್ಲ ಭೀತಿಗಳಲ್ಲಿ ಭವಭೀತಿ ಬಲುದೊಡ್ಡದು . ಇದನ್ನು ನಿವಾರಿಸುವವನೇ ಸದ್ಗುರುವು . ಗುರುಕೃಪೆಯಿಂದಲೇ ಭಕ್ತನಲ್ಲಿ ಧೃತಿ ದೃಢವಾಗುತ್ತದೆ . ಧೈರ್ಯ ವಂತನಿಗೆ ಸಕಲಕಾರ್ಯಗಳಲ್ಲಿ ಜಯ ಖಂಡಿತ ಸಿಕ್ಕುವದು , ಗುರುಕೃಪೆಯಿಂದ ಧೃತಿವಂತ ನಾಗಿ ಶಿವಸಂಸ್ಕಾರಗಳನ್ನು ಪಡೆದು ಭಕ್ತಿಯಿಂದ ಸುಜ್ಞಾನವನ್ನು ಪಡೆಯಬೇಕು . ಇದೆಲ್ಲವೂ ಸದ್ಗುರುಕೃಪೆಯಿಂದ ಸಾಧ್ಯ , ಓ ಗುರುವೇ !

ಅಸತೋ ಮಾ ಸದ್ಗಮಯ

ತಮಸೋ ಮಾ ಜ್ಯೋತಿರ್ಗಮಯ

ಮೃತ್ಯೋರ್ಮಾ ಅಮೃತಂ ಗಮಯ

ಅಸತ್ಯದಿಂದ ಸತ್ಯದೆಡೆಗೆ , ಕತ್ತಲೆಯಿಂದ ಬೆಳಕಿನೆಡೆಗೆ , ಮೃತ್ಯುವಿನಿಂದ ಅಮೃತತ್ವದೆಡೆಗೆ ಕರೆದೊಯ್ದು ಕಾಪಾಡು . ಅಮರತ್ವವನ್ನು ಸಾಧಿಸಬಲ್ಲ ಶಕ್ತಿಯನ್ನು ದಯಪಾಲಿಸು .

***********

ಸಾಧ್ಯ ಸದ್ಭಕ್ತರ್ಗೆ | ವೇದ್ಯ ಲಿಂಗೈಕ್ಯರ್ಗೆ

ಭೇದ್ಯ ಸತ್ಪ್ರಮಥ ಗಣನಿಕರವೆಲ್ಲಕ್ಕಾ

ರಾಧ್ಯ ನೀನೆನಗೆ ಕೃಪೆಯಾಗು || ||

ಮೇಲಿನ ಮೂರು ನುಡಿಗಳಲ್ಲಿ ಸದ್ಗುರುವಿನ ಸ್ವರೂಪವನ್ನು ವರ್ಣಿಸಿ ಅಂಥ ಗುರುವನ್ನು ಅರಿಯಲು ಯೋಗ್ಯರಾದ ಶಿಷ್ಯರನ್ನೂ ನಿರೂಪಿಸಿದ್ದಾನೆ . ಇಲ್ಲಿ ಭಕ್ತನ ಯಥಾರ್ಥತೆಯ ಅರಿವೂ ಕಾಣಬರುತ್ತದೆ . ಸದ್ಗುರುನಾಥನು ಕಾರಣತ್ವ , ತುರ್ಯತ್ವ , ಚಿತ್ಸೂರ್ಯತ್ವ , ಧೈರ್ಯತ್ವಗಳನ್ನು ಸಾಕ್ಷಾತ್ಕರಿಸಿಕೊಂಡಂತೆ , ಶಿಷ್ಯನು ಸದ್ಭಕ್ತನೂ , ಲಿಂಗೈಕ್ಯ ಸ್ಥಿತಿಗೇರಿದವನೂ ಸತ್ಪ್ರ ಮಥರಿಗೆ ಮಾನ್ಯನೂ ಆಗಬೇಕಾಗುತ್ತದೆ . ನೈಜಭಕ್ತಿಯುಳ್ಳ ಸದ್ಭಕ್ತರಿಗೆ ಮಾತ್ರ ಗುರುವು ಸಾಧಿಸಲು ಯೋಗ್ಯನಾಗುವನು . ಅಂದರೆ ನಿಜವಾದ ಭಕ್ತಿಯಿಂದ ಮಾತ್ರ ಗುರು ಸಾಕ್ಷಾತ್ಕಾರವಾಗುವದು .

 ಲಿಂಗದ ನೆಲೆಕಲೆಗಳನ್ನು ಗುರುಮುಖದಿಂದ ಅರಿತು ತನ್ನ ಅಂಗಾಂಗಗಳಲ್ಲಿ ಅಳವಡಿಸಿಕೊಂಡಾಗ ಲಿಂಗಮಯನಾಗುವನು . ಲಿಂಗೈಕ್ಯನೆನಿಸುವನು . ಇಂಥವನು ಮಾತ್ರ ಗುರುಮಹತಿಯನ್ನು ಗುರುತಿಸಬಲ್ಲನು . ಲಿಂಗಾಂಗ ಸಾಮರಸ್ಯ ಸುಖವನ್ನು ಅನುಭವಿಸಬಲ್ಲ ಪ್ರಮಥ ಪುಂಗವರು ಗುರುತತ್ವದ ಆಳವನ್ನು ಅಳೆಯಬಲ್ಲರು . ಮಹಿಮಾಶೀಲನಾದ ಸದ್ಗುರು ಯೋಗ್ಯತೆಯುಳ್ಳ ಎಲ್ಲರಿಂದಲೂ ಪೂಜೆಗೊಳ್ಳಲು ಇಲ್ಲಿ ಸಾಧಕ , ಸಿದ್ಧ , ಪರಿಪೂರ್ಣ ( ಸ್ವತಃಸಿದ್ದ ) ಈ ಮೂವರ ಅರಿವಾಗುತ್ತದೆ . ಸಾಧಕನಾದ ಭಕ್ತನಿಗೆ ಗುರು ಲಿಂಗವನ್ನು ಕರುಣಿಸುತ್ತಾನೆ . ಭಕ್ತನಾಗಿ ಲಿಂಗವನ್ನು ಆಯತ ಮಾಡಿಕೊಳ್ಳುವವನೇ ಸಾಧಕನು , ಲಿಂಗ ಗುಣಗಳನ್ನು ಸ್ವಾಯತ್ತೀಕರಿಸಿ ಕೊಂಡವನೇ ಲಿಂಗೈಕ್ಯನು . ಅವನೇ ಸಿದ್ಧನು . ಲಿಂಗವನ್ನು ಸನ್ನಿಹಿತಮಾಡಿ ಕೊಂಡು ತಾನೇ ಲಿಂಗನಾದವನು ; ಪರಿಪೂರ್ಣನು ಅಥವಾ ಸ್ವತಃಸಿದ್ಧನೆನ್ನಬಹುದು . ಅವನೇ ಪ್ರಮಥ ಪುಂಗವ , ಲಿಂಗ ಪರಿಪೂರ್ಣ , ಶಿವಪಥವನರಿಯಲು ಗುರುಪಥ ಮುಮ್ಮೊದಲು ಶಿವಪಥವನರಿಯಲು ಶಿವಶರಣರ ಸಂಗ ಮುಖ್ಯವಾಗಿದೆ .

 ಶ್ರೀ ಚನ್ನಬಸವೇಶ್ವರ ದೇವರು ತಮ್ಮ ಮಂತ್ರಗೋಪ್ಯದಲ್ಲಿ ಶಿವನ ಸಾಕಾರ ಮೂರ್ತಿಯೇ ಸದ್ಗುರುವೆಂದು ಗುರುಸ್ತೋತ್ರವನ್ನು ಮಾಡಿದ್ದಾರೆ .

 ಗುರುವೆ ಪರಶಿವನೆ | ಸಕಲಾಗಮಂಗಳ ಮೂರ್ತಿ

 ಗುರುವೆ ಅಜ್ಞಾನ ತಿಮಿರಕ್ಕಂಜನ

ಗುರುವಿಗೂ ಪರಶಿವನಿಗೂ ಭಿನ್ನತೆಯಿಲ್ಲ . ಶಿವನ ಸಾಕಾರ ಮೂರ್ತಿಯೇ ಸದ್ಗುರುವು . ಗುರುಸಾಕ್ಷಾತ್ಕಾರವೇ ಶಿವಸಾಕ್ಷಾತ್ಕಾರವಾಗಿದೆ . ಅದುಕಾರಣ ಗುರು ದೇವನು ಸದ್ಭಕ್ತರ್ಗೆ ಸಾಧ್ಯನಾಗುತ್ತಾನೆ . ಲಿಂಗೈಕ್ಯರ್ಗೆ ವೇದ್ಯನಾಗುತ್ತಾನೆ . ಸತ್ಪ್ರಮಥರಿಗೆ ಭೇದ್ಯನೂ , ಬೋಧ್ಯನೂ ಆಗುತ್ತಾನೆ . ಅಂಥ ಸದ್ಗುರು ಸರ್ವರಿಗೆ ಆರಾಧ್ಯನಾಗುವದ ರಲ್ಲಿ ಸಂಶಯವೇನಿದೆ ? ಭೋ ಗುರುವೆ ! ನಿನ್ನ ಕೃಪೆ ಬಯಸಿ ಬಂದ ನನಗೂ ಆಶ್ರಯನೀಡೆಂದು ಪ್ರಾರ್ಥಿಸಿದ್ದಾರೆ .

ಲೇಖಕರು : ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮುರುಘಾಮಠ ಚಿತ್ರದುರ್ಗ.

ಸಂಗ್ರಹ ಸಹಾಯ : ಪರಮಪೂಜ್ಯ .ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ

ಸತ್ಯ-ಶುದ್ಧ-ಸಾಧನೆಯ ಸೂತ್ರವಿಡಿದು, ಪರಮಾರ್ಥದಲ್ಲಿ ಯಥಾರೀತಿಯಾಗಿ ನಡೆದು, ಷಟ್‌ಸ್ಥಲ ಸಿದ್ಧಿಯನ್ನು ಪಡೆದ, ಮಾನವತೆಯ ಪರಮಾವಧಿ ವಿಕ್ರಮದ ಮಹಾನುಭಾವರ ಮಾಲಿಕೆಯಲ್ಲಿ, ಮಹಾಮಹಿಮರಾದ ಶ್ರೀಮದಥಣಿ ತಪಸ್ವಿಗಳವರು

ಒಂದು ದಿವ್ಯ ತೇಜೋರತ್ನ! ಅವರ ಲೋಕೋತ್ತರ ವ್ಯಕ್ತಿತ್ವವು, ಅನೇಕ ವಿಧದಲ್ಲಿ ವ್ಯಕ್ತವಾಗಿ, ಮಾನವ ಕೋಟಿಯನ್ನು ಪಾವನಗೊಳಿಸಿದೆ. ಲೋಕ-ಲೌಕಿಕರ ಸಂಪರ್ಕವನ್ನು ಕೋರದೆ, ನಿರಾಭಾರಿ ಜೀವನದ ಏಕಾಂತದಲ್ಲಿ, ಆತ್ಮಸಾಧನೆಯ ಮುಖವಾಗಿ ಅವರು ಸಾಧಿಸಿದ ಲೋಕ ಸಾಧನೆಯು ಅನ್ಯಾದೃಶವಾಗಿದೆ; ಅಸದೃಶವಾಗಿದೆ. ಪರಮಾರ್ಥವೇ ಪ್ರಾಣವಾಗಿದ್ದ ಅವರು, ನೋಟದಲ್ಲಿ, ಮಾಟ-ಕೂಟದಲ್ಲಿ, ಪರಮಾರ್ಥವನ್ನೇ ತುಂಬಿಕೊಂಡರು; ಪರಮಾರ್ಥವನ್ನೇ ಪ್ರಸಾದವೆಂದು ನಂಬಿಕೊಂಡರು.

ಪ್ರಪಂಚದ ಯೋಗ-ಕ್ಷೇಮಗಳು, ಸುಖ-ಶಾಂತಿ-ಸಮೃದ್ಧಿಗಳು ಪರಮಾರ್ಥ ಪ್ರವಣತೆಯನ್ನೇ ಅವಲಂಬಿಸಿದೆ. ಪರಮಾರ್ಥವೆಂದರೆ ಪ್ರಪಂಚದ ತಿರುಳು. ಪ್ರಪಂಚ ಪ್ರೇಮಿಗಳು ಪರಮಾರ್ಥನಿಷ್ಠೆಯನ್ನು ಮರೆಯಲಾಗದು, ತೊರೆಯಲಾಗದು-ಎಂಬೀ ವಿಚಾರವನ್ನು ಅವರು ತಮ್ಮ ಸಹಜ ವರ್ತನೆಯಿಂದ ಜನತೆಗೆ ನಿರೂಪಿಸಿದರು. ಅವರ ಆತ್ಮಶಕ್ತಿಯನ್ನು, ಗುಣ-ಶೀಲ-ಸ್ವಭಾವಗಳನ್ನು ಬಲ್ಲವರು ಅವರನ್ನು ಶಿವಯೋಗಿಗಳೆಂದು ಕರೆದರು. ಅದು ಅವರಿಗೆ ಸಲ್ಲುವ ಹೆಸರಾಯಿತು; ಅವರ ಅಂತರಂಗವನ್ನು ಹೇಳುವ ಹೆಸರಾಯಿತು! ಸರ್ವರೂ ಅದನ್ನು ಶ್ರದ್ಧೆಯಿಂದ ಉಚ್ಚರಿಸಿದರು; ‘ಶಿವಯೋಗಿ ಕೃಪೆಮಾಡು’ ಎಂದು ಶಿರಬಾಗಿ, ಕರಮುಗಿದು ಕೋರಿದರು.

ಅಮೃತಾಂಕುರದ ಬೆಳಕು ಬೆಳವಣಿಗೆ :

ಮಾವಿನ ಸಸಿಯು ಮಾವಿನ ಮರವಾಗುವಂತೆ, ಬೇವಿನ ಸಸಿಯು ಮಾವಿನ ಮರವಾಗಲಾರದು. ರಸ-ರುಚಿಗಳಿಂದಾಗಿ ಹೀಚು ಹಣ್ಣೆನಿಸುವುದು. ಆದರೆ, ಹೀಚಿನಲ್ಲಿ ಹಣ್ಣಾಗುವ ಶಕ್ತಿ ಮೊದಲು ಅಗತ್ಯ. ಶಿವಯೋಗಿಗಳು ಬಾಲ್ಯದಲ್ಲಿಯೇ ಶಿವಶಕ್ತಿಯ

ಸಂಕೇತವಾಗಿದ್ದರು; ಪರಿಪೂರ್ಣತೆಯ ಸಂಕ್ಷೇಪವಾಗಿದ್ದರು.

ಬಾಲಕ ಗುರುಲಿಂಗದೇವ, ಗುರುಕೃಪೆಯಾಂತು, ಮುರುಘದೇವನಾಗಿ, ನಿಜಾಚರಣೆಯಿಂದ ಶಿವಯೋಗಿಯಾದುದು ಸರಿಯಷ್ಟೆ? ಗುರುಲಿಂಗದೇವನಿಗೆ,ತೆಲಸಂಗದ ಶಿವಬಸವದೇಶಿಕರು ವಿಶ್ವಾಸದಿಂದ ಅಕ್ಷರಾಭ್ಯಾಸವನ್ನು ಮಾಡಿಸಿ, ದುರ್ಧರವಾದ, ದುಃಸಾಧ್ಯವಾದ ತಮ್ಮ ಕುಷ್ಠರೋಗವನ್ನು ನೀಗಿದರು. ಗುರುಗಳ ಆರೋಗ್ಯ, ಶಿವಯೋಗಿಗಳ ಪವಾಡಗಳಿಗೆ ನಾಂದಿಯಾಯಿತು! ಮಹಾತ್ಮರು ಕರುಣಿಸುವ ಪ್ರತಿಫಲವು ಎಂತಹುದು ಎಂಬುದನ್ನು ನಾವು ಇಲ್ಲಿ ನೋಡಬಹುದು. ಶಿವಯೋಗಿಗಳು ಗುರುಗಳ ರೋಗವನ್ನು ಕಳೆದರು; ಅನೇಕರ ಮನದ ಮಲಿನತೆಯನ್ನು ತೊಳೆದರು.ಭವರೋಗ ವೈದ್ಯನಿಗೆ ಅಸಾಧ್ಯವೇನಿದೆ? ಅವರ ಪ್ರಸನ್ನತೆಯು, ಸಮಸ್ತ ಆಧಿ-ವ್ಯಾಧಿಗಳಿಗೆ ಸಿದ್ಧೌಷಧ! ಅವರು ಅಮೃತವಾಗಿ ಬೆಳೆದರು; ಸಂಜೀವನವಾಗಿ ಸಮಾಜವನ್ನು ಬೆಳೆಯಿಸಿದರು.

ಜಂಗಮದ ಸುಳಿವು ವಸಂತದ ತಂಗಾಳಿ:

ಶಿವಯೋಗಿಗಳಿಗೆ ೫ ವರ್ಷದ ಬಾಲ್ಯ, ತಾಯಿ ತಂದೆಗಳು ಅಥಣಿಗೆ ಬಂದು,ಮರುಳ ಶಂಕರಸ್ವಾಮಿಗಳಿಗೆ ಅವರನ್ನು ಒಪ್ಪಿಸಿದರು. ಅಂದು ಗಚ್ಚಿನಮಠದ ಭಾಗ್ಯೋದಯವಾಯಿತು! ಮುಂದೆ ಸುಮಾರು ೧೫ ವರುಷ, ಶಿವಯೋಗಿಗಳು ವಿದ್ಯಾಭ್ಯಾಸದಲ್ಲಿ ಕಳೆದರು. ವಿವಿಧ ದರ್ಶನಗಳನ್ನು, ಶಿವಾನುಭವ ಸಾಹಿತ್ಯವನ್ನು ಆಮೂಲವಾಗಿ ಪರಿಶೀಲಿಸಿದರು. ೨೦ನೆಯ ವರುಷದಲ್ಲಿ ಅನುಗ್ರಹಗುರುಗಳಾದ ಗುರುಶಾಂತಸ್ವಾಮಿಗಳವರಿಂದ ಅಪ್ಪಣೆ ಪಡೆದು, ದೇಶಾಟನೆಗೆ ಹೊರಟರು. ನಿಯತ-ಭಿಕ್ಷಾನ್ನದಿಂದ ೨೦ ವರುಷ, ಅವ್ಯಾಹತವಾಗಿ, ಪಾದಚಾರಿಯಾಗಿ ಸಂಚರಿಸಿದರು.ಆಧ್ಯಾತ್ಮಿಕ ಆರೋಗ್ಯ ಸಂವರ್ಧನೆಗಾಗಿ, ಹಲವು ತೀರ್ಥಕ್ಷೇತ್ರಗಳನ್ನು, ಶಿವಶರಣರ ನಿವಾಸಗಳನ್ನು, ನಿಸರ್ಗಸುಂದರ-ನಿವಾಹತ ಪ್ರದೇಶಗಳನ್ನು ನಿರೀಕ್ಷಿಸಿದರು; ಅಲ್ಲಿಯ ಪವಿತ್ರ, ಪರಮಾಣುಗಳನ್ನು, ಅನುಭವ ವಿಶೇಷಗಳನ್ನು, ವಿಪುಲವಾಗಿ ಹೃದಯದಲ್ಲಿ ಶೇಖರಿಸಿದರು.

ಶಿವಯೋಗಿಗಳು ದೇಶಸಂಚಾರವನ್ನು ಪೂರೈಸಿದಾಗ ನಲವತ್ತು ವರುಷದವರಾಗಿದ್ದರು. ಸಂಚಾರದಲ್ಲಿ ಚರಜಂಗಮದ ಆಚರಣೆಯನ್ನು, ಅವರು ಬಹು ಜಾಗರೂಕತೆಯಿಂದ ಸಾಗಿಸಿದರು. ತ್ರಿಕಾಲ ಲಿಂಗಪೂಜೆ, ಶಿವಭಕ್ತರ ಒಂದು ಮನೆಯ ಭಿಕ್ಷಾನ್ನ, ಒಂದು ಸಲ ಪ್ರಸಾದ, ಶಿವಾನುಭವ ಸಂಪಾದನೆ, ಜಿಜ್ಞಾಸುಗಳಿಗೆ ಮಾರ್ಗದರ್ಶನ ಸಾಮಾನ್ಯವಾಗಿ ಇದುವೇ ಶಿವಯೋಗಿಗಳ ದಿನಚರಿ, ಶಿವಯೋಗಿಗಳು,ದಾರಿಯಲ್ಲಿ ಭಕ್ತರು ನೀಡಬಯಸಿದ ಸುಖ-ಸೌಕರ್ಯಗಳನ್ನು, ಎಷ್ಟು ಪ್ರಾರ್ಥಿಸಿದರೂ ಸ್ವೀಕರಿಸಲಿಲ್ಲ. ತಾರುಣ್ಯದ ಭರದಲ್ಲಿ, ತನು-ಮನಗಳನ್ನು ತಣಿಸುವುದಾಗಲಿ,ಕೋಮಲಗೊಳಿಸುವುದಾಗಲಿ ಸ೦ಯಮಿಗಳಿಗೆ ಸೇರುವ ವಿಷಯವಲ್ಲ.ಶಿವಯೋಗಿಗಳು ನೆಟ್ಟನೆ ಜಂಗಮವಾಗಿ ಸುಳಿದರು; ಜನಜೀವನವು ಪರಿಮಳ ಪೂರ್ಣವಾಗಿ ಅರಳುವಂತೆ, ತಂಗಾಳಿಯಾಗಿ ತೀಡಿದರು.

ಸೃಷ್ಟಿಯಲ್ಲಿ ಕಂಡುದನ್ನು ದೃಷ್ಟಿಯಲ್ಲಿ ಉಂಡರು :

ಗುಹೇಶ್ವರನ ಗಡ್ಡೆ, ಪ್ರಶಾಂತ ವಾತಾವರಣದ ಒಂದು ಪರಮ ಪಾವನ ತಪೋವನ, ಶಿವಯೋಗಿಗಳು ಆತ್ಮಚಿಂತನೆಯ ವಿಶ್ರಾಂತಿಯ ಆತುರದಲ್ಲಿ ಅಲ್ಲಿಗೆ ದಯಮಾಡಿದರು. ಅಲ್ಲಿ ಅವರು ಬಹುಕಾಲ ಅಂತರ್ಮುಖವಾಗಿದ್ದು, ಶಿವಯೋಗ ಬಲದಿಂದ ಪಿಂಡದಲ್ಲಿ ಪರವಸ್ತುವನ್ನು ಕಂಡು, ಪ್ರಸಾದಪಿಂಡವಾದರು; ಪ್ರಕಾಶಪಿಂಡವಾದರು. ವಿಶ್ವಚೇತನವು ವ್ಯಕ್ತಿಯಲ್ಲಿ ಹೇಗೆ ಅನುಗತವಾಗಿದೆ ಅಂತರ್ಗತವಾಗಿದೆ ಎಂಬುದನ್ನು ಅವರು ಅನುಭವದಲ್ಲಿ ತಂದುಕೊಂಡರು. ಅವರ  ದೃಷ್ಟಿ ಶಿವದೃಷ್ಟಿಯಾಯಿತು; ಶುಭದೃಷ್ಟಿಯಾಯಿತು.

ಇಂತು ಜಂಗಮ ಜ್ಯೋತಿಯಾಗಿ, ಪರತತ್ತ್ವದ ಅಧಿಕೃತ ಪ್ರತಿನಿಧಿಯಾಗಿ,೨೬ ವರುಷಗಳ ಸುದೀರ್ಘ ಪ್ರವಾಸ ಮತ್ತು ಏಕಾಂತವಾಸದಿಂದ ಮತ್ತೆ ಅಥಣಿಗೆಆಗಮಿಸಿದರು. ನಾಡಿನ ಸುಕೃತವೇ ನಡೆದು ಬಂದಿತೆಂದು ಜನರು ಕೊಂಡಾಡಿದರು.ಮೂರನೆಯ ಗುರುಗಳಾದ ಚೆನ್ನಬಸವಸ್ವಾಮಿಗಳಿಗೆ ಅತ್ಯಂತ ಸಂತೋಷವಾಯಿತು.ಗುರುಗಳು ತಮ್ಮ ಮನೋಗತವನ್ನು ವಿವರಿಸಿದರು. ಶಿವಯೋಗಿಗಳು ‘ಶಿವನಾಣತಿ’ಎಂದು ಇನ್ನು ಗಚ್ಚಿನಮಠದಲ್ಲಿಯೇ ನೆಲೆಸುವುದಾಗಿ ಆಶ್ವಾಸನವಿತ್ತರು. ಅಂದಿನಿಂದ ಗಚ್ಚಿನಮಠದ ಯೋಗಮಂಟಪದಲ್ಲಿ, ಕೇವಲ ನಿರ್ಲಿಪ್ತರಾಗಿ, ನಿಸ್ಪೃಹರಾಗಿ ಲಿಂಗ ಲೀಲಾವಿಲಾಸದಲ್ಲಿದ್ದು, ಲೋಕೋದ್ಧಾರದ ಅನೇಕ ಕಾರ್ಯಗಳನ್ನು ಜರುಗಿಸಿದರು.ನಡೆನುಡಿಗಳಲ್ಲಿ ಮೃಡನು, ಪವಾಡಗಳಿಗೆ ಒಡೆಯನು.

ಸಾತ್ವಿಕ-ತಾತ್ವಿಕ ವೃತ್ತಿಯ ಸಂಯಮಶೀಲರು, ಲೋಕೋದ್ಧಾರದ ಉದಾರ ಬುದ್ಧಿಯಿಂದ, ತಮ್ಮ ತಪಃಶಕ್ತಿಯನ್ನು ಪವಾಡಗಳ ರೂಪದಲ್ಲಿ ವ್ಯಕ್ತಗೊಳಿಸುವರು.ಪ್ರತಿಷ್ಠೆ, ಪೌರುಷ, ಪ್ರತಿಶೋಧ ಈ ಮೊದಲಾದ ವಿಕಾರಗಳಿಂದ ಕೂಡಿದ ಪವಾಡಗಳು,ಹಠಯೋಗದ ಚಮತ್ಕಾರಗಳಲ್ಲದೆ, ಶಿವಯೋಗದ ಸಿದ್ಧಿಗಳಲ್ಲ. ನಿರಹಂಭಾವ ನಿರೀಹಂಭಾವದ ಶಿವಯೋಗ ಸಿದ್ಧಿಗಳು, ಉಳಿದ ಸಿದ್ಧಿಗಳಂತೆ, ಆತ್ಮ ಸಾಕ್ಷಾತ್ಕಾರದಲ್ಲಿ ಬಾಧಕವಲ್ಲ; ಬಂಧನವಲ್ಲ.

ಶಿವಯೋಗಿಗಳು ಸಿದ್ಧಪುರುಷರು; ಶಿವಯೋಗಸಿದ್ಧರು. ಅವರ ಮಹಿಮೆಗಳು ಅನಂತ; ಅನುಪಮ, ಚರಿತ್ರೆಯಲ್ಲಿ ಸಂಕ್ಷೇಪವಾಗಿ ಕೆಲವು ಬಂದಿವೆ:

ಶಿವಯೋಗಿಗಳ ಸನ್ನಿಧಿಯಲ್ಲಿ ಸರ್ಪ ಸೌಮ್ಯವಾಯಿತು, ಹುಲಿಯು ಹುದ್ದೆಯಾಯಿತು, ಅವರು ಪಕ್ಷಿಗಳಲ್ಲಿ ಗುರುದರ್ಶನ ಮಾಡಿದರು, ಧಾರಾಕಾರವಾಗಿ ಸುರಿವ ಅಕಾಲ ವೃಷ್ಟಿಯನ್ನು ಪರುಷ ದೃಷ್ಟಿಯಿಂದ ತಡೆದು, ಗಣ ಸಂತರ್ಪಣವನ್ನು ಸಾಂಗಗೊಳಿಸಿದರು; ಸಂಗಮನಾಥನಿಗೆ ಇಚ್ಛಾಭೋಜನ ಮಾಡಿಸಿದರು; ಶರಣಾಗತರಿಗೆ,ಸಿದ್ಧಿಗಳು, ಶಿವಯೋಗಿಗಳ ಸಮೃದ್ಧ ಜೀವನದ ಸಂಕೇತಗಳಾಗಿವೆ.ಶ್ರದ್ಧಾಜೀವಿಗಳಿಗೆ ಅವರವರ ಬಯಕೆಗಳನ್ನು ದಯಪಾಲಿಸಿದರು. ಈ ತೆರನಾದ ಎಲ್ಲ ವಸ್ತುತಃ ಶಿವಯೋಗಿಗಳವರ ಜೀವನವೇ ಒಂದು ಮಹಾಸಿದ್ದಿ, ಶಿವಯೋಗಿಗಳ ಪವಾಡಗಳು; ಪವಾಡಗಳೇ ಶಿವಯೋಗಿಗಳಲ್ಲ! ಪವಾಡಗಳಿಂದಾಚೆ, ನಿತ್ಯ ಜೀವನದ ನಡೆನುಡಿಗಳಲ್ಲಿ, ಎಲ್ಲರಿಗೂ ಅರ್ಥವಾಗುವಂತೆ, ಶಿವಯೋಗಿಗಳ ವ್ಯಕ್ತಿತ್ವವು ಆದರ್ಶಪೂರ್ಣವಾಗಿ ವಿಜೃಂಭಿಸಿದೆ.

ವೀರವಿರತಿಯ ಮಹಂತ, ನೃತ್ಯಾಚಾರದ ಭಗವಂತ :

ಸಂಕಲ್ಪ-ವಿಕಲ್ಪಗಳ ಬಲೆಯಲ್ಲಿ ಬಿದ್ದವರನ್ನು, ಆಶೆ-ಆಮಿಷಗಳು, ಲಾಭ-ಲೋಭಗಳು, ಮಾನ-ಸನ್ಮಾನಗಳು, ಕೀರ್ತಿ-ವಾರ್ತೆಗಳು ಅತಿ ತೀವ್ರವಾಗಿ ಪರಾಧೀನಗೊಳಿಸುವವು. ಪರತಂತ್ರನಿಗೆ ಸತ್ಯವಿದೆಯೆ? ಶಾಂತಿಯಿದೆಯೆ? ಲೌಕಿಕ ರೀತಿ-ನೀತಿಯಾದರೂ ಇದೆಯೆ? ಅವನಿಗೆ ಏನೂ ಇಲ್ಲ; ತಾನೂ ಇಲ್ಲ! ಶಿವಯೋಗಿಗಳು ಸಂಕಲ್ಪ-ವಿಕಲ್ಪಶೂನ್ಯರು; ಸರ್ವಥಾ ಸಮರ್ಥರು; ಸ್ವತಂತ್ರರು.ಆಶೆಗೆ ದಾಸರಾಗಿ ಅವರು ಏನನ್ನೂ ಬೇಡಲಿಲ್ಲ; ಬಯಸಲಿಲ್ಲ, ಆಶೆಯೇ ದಾಸಿಯಾಗಿ ತಮ್ಮೆಡೆಗೆ ಬಂದರೂ ಅವಕಾಶನೀಡಲಿಲ್ಲ. ಹೊನ್ನು-ಹೆಣ್ಣು-ಮಣ್ಣುಗಳಿಗೆ ಎಂದೂ ಹಣ್ಣಾಗದ ನಿರ್ವಿಷಯ-ನಿರ್ವಿಕಾರ ಚಿತ್ತರು ಅವರು. ವಾಸನೆಗಳನ್ನೆಲ್ಲ ಸಮೂಲವಾಗಿ ನಾಶಗೊಳಿಸಿದ ವೈರಾಗ್ಯದ ಸೀಮಾಪುರುಷರು ಅವರು. ಅವರಿಗೆ ದೇಹಭಾವದ ಮಮತೆ-ಮೋಹಗಳಿಲ್ಲ; ಜೀವಭಾವದ ದುಃಖ-ದುಮ್ಮಾನಗಳಿಲ್ಲ. ಅವರ ವಿರಕ್ತಿಯ ದೇಹದಲ್ಲಿ ಭಕ್ತಿಯೇ ಪ್ರಾಣ, ಸೇವೆ-ಸದಾಚಾರಗಳೇ ಪಾದಗಳು, ನಿಗ್ರಹಾನುಗ್ರಹಗಳೇ ಹಸ್ತಗಳು, ಪ್ರಸನ್ನತೆ-ಪವಿತ್ರತೆಗಳೇ ನೇತ್ರಗಳು, ಇದು ಶಿವಯೋಗಿಗಳವರ ದಿವ್ಯ ದೇಹ! ನಿತ್ಯಾಚರಣೆಯಲ್ಲಿ ನೃತ್ಯಾಚಾರವನ್ನು ಪಾಲಿಸಿದ ಪರಮಾತ್ಮನ ಪುಣ್ಯರೂಪ! ವಿರಕ್ತಿಯ ಪೂರ್ಣರೂಪ!!!

ಸಮಾಜ ಜೀವನದಲ್ಲಿ ಸಾಂಸ್ಕೃತಿಕ ನವಚೇತನ :

ಸಾಹಿತ್ಯ ಸಂಸ್ಕೃತಿಗಳ ಉದಾತ್ತ ಪರಂಪರೆಯ ಪರಿಚಯವಿಲ್ಲದ ಜನಾಂಗ ಸಮಾಜವಲ್ಲ; ಅದೊಂದು ಜನಜಂಗುಳಿ ಮಾತ್ರ ಸಾಹಿತ್ಯದ ಒಲವೂ, ಸಂಸ್ಕೃತಿಯ ನಿಲವೂ, ಸಮಾಜಜೀವನದಲ್ಲಿ ಅಗತ್ಯ. ಆ ದಿಶೆಯಲ್ಲಿ ಅಜ್ಞ ಜನತೆಯನ್ನು ರೂಪಿಸುವುದು ಮಹಾಪುರುಷರ ಆದ್ಯ ಕರ್ತವ್ಯ ಅವರ ಅವತಾರ ಕಾರ್ಯವೂ ಅದೇ.ಬಸವಾದಿ ಪ್ರಮಥರ ಜೀವನ ಸಾಹಿತ್ಯ ಸಂಸ್ಕೃತಿಯ ಕೋಶವಾಗಿದೆ.ಜೀವನಸಾಹಿತ್ಯವೆಂದರೆ ಸಾಮಾನ್ಯವಾಗಿ ವಚನ ಸಾಹಿತ್ಯ ಮತ್ತು ಪುರಾಣಸಾಹಿತ್ಯ ತನ್ಮೂಲಕ, ಸಂಸ್ಕೃತಿಯು ಸರ್ವರಿಗೂ ಸುಲಭ ಸಾಧ್ಯ. ಈ ಕಾರಣದಿಂದಲೇ ಪುರಾಣಪ್ರವಚನಗಳು ಇಂದಿಗೂ ನಡೆಯುತ್ತಲಿವೆ.

ಶಿವಯೋಗಿಗಳು ಅನುಭವದ ಅಕ್ಷಯನಿಧಿಯಾಗಿದ್ದರೂ, ಬಸವಣ್ಣನವರ ವಚನಗಳನ್ನು ನಿತ್ಯದಲ್ಲಿ ಓದುತ್ತಿದ್ದರು; ಬರೆಯುತ್ತಿದ್ದರು. ಅಪ್ಪನವರ ವಚನಗಳೆಂದರೆ ಅವರಿಗೆ ಅಚ್ಚುಮೆಚ್ಚು ಅನುಭವ ಸಂಪಾದನೆಯಲ್ಲಿ ‘ಸಾಕು’ ಎನ್ನುವ ಭಾವನೆ ಅವರಿಗೆ ಬರಲಿಲ್ಲ! ಅವರ ಸನ್ನಿಧಿಯಲ್ಲಿ ಪುರಾಣ, ಪ್ರವಚನ, ಕೀರ್ತನ, ಭಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ತೆರಪಿಲ್ಲದೆ ಜರುಗುತ್ತಿದ್ದವು. ಅನುಭವದ ಅಮೃತಾನ್ನವು ಎಲ್ಲರಿಗೂ ಯಥೇಷ್ಟವಾಗಿ ದೊರೆಯುತ್ತಿದ್ದಿತು. ಅನುಭವಿಗಳು, ಶಾಸ್ತ್ರಜ್ಞರು, ಕುಶಲಕಲಾವಿದರು ಎಲ್ಲರೂ ಅಲ್ಲಿಗೆ ಬಂದು ಸೇವೆ ಸಲ್ಲಿಸುತ್ತಿದ್ದರು. ಬಾಗಲಕೋಟೆ ಮಲ್ಲಣಾರ್ಯರು, ದಾವಣಗೆರೆ ಚಂದ್ರಶೇಖರಶಾಸ್ತ್ರಿಗಳು ಮೊದಲಾದವರು ಪುರಾಣಪ್ರವಚನಗಳನ್ನು ಒಳ್ಳೆ ಹೃದಯಂಗಮವಾಗಿ ಹೇಳಿದರು. ಗಚ್ಚಿನಮಠವು ಅನುಭವಮಂಟಪವಾಗಿ ಮಾರ್ಪಟ್ಟಿತು. ಅನ್ನದಾಸೋಹದ ಜೊತೆಯಲ್ಲಿ ಜ್ಞಾನದಾಸೋಹವೂ ತಪ್ಪದೆ ಅಲ್ಲಿ ನಡೆಯಿತು. ಬಸವಪುರಾಣಮಹೋತ್ಸವ, ಏಕಾದಶ ರುದ್ರ ಪೂಜೆ, ಅರವತ್ತುಮೂರು ಪುರಾತನರ ಪೂಜೆ ಇನ್ನೂ ಎಷ್ಟೋ ವಿಶಿಷ್ಟ ಸಮಾರಂಭಗಳು, ಅತ್ಯಂತ ಯಶಸ್ವಿಯಾಗಿ, ಅತೀವ ಆದರ್ಶವಾಗಿ ಜರುಗಿದವು. ಈ ಎಲ್ಲ ಸಮಾರಂಭಗಳ ಫಲವಾಗಿ ಭಕ್ತ ವೃಂದದಲ್ಲಿ ಒಂದು ಅಪೂರ್ವ ಚೇತನ ಜಾಗೃತವಾಯಿತು! ಸಮಾರಂಭದ ವಿತರಣ ವಿನಿಯೋಗದ ವಿಚಾರವಾಗಿ, ಯಾರೂ ಯಾರನ್ನೂ ಕಾಡಲಿಲ್ಲ; ಬೇಡಲಿಲ್ಲ. ಶಿವಯೋಗಿಯ ತಪಃಪ್ರಭಾವದಿಂದ, ಎಲ್ಲ ಅನುಕೂಲತೆಗಳು ಎಲ್ಲಿಂದಲೋ ಬಂದು, ಎಲ್ಲವೂ ಸರಾಗವಾಗಿ ಸಾಗುತ್ತಿದ್ದಿತು.ಸಂಕಲ್ಪಸಿದ್ಧಿ-ಸಂಕಲ್ಪಶುದ್ಧಿ-ಸಂಕಲ್ಪ ಶೂನ್ಯತೆಯಿದ್ದಲ್ಲಿ ಕೊರತೆಯೆಲ್ಲಿಯದು?

ಜ್ಯೋತಿ ಮುಟ್ಟಿದ ಬತ್ತಿ ಜ್ಯೋತಿಯಪ್ಪುದು :

ಶಿವಯೋಗಿಗಳ ವ್ಯಕ್ತಿತ್ವದಲ್ಲಿ, ಚುಂಬಕದ ಆಕರ್ಷಣ ಗುಣವೂ, ಪರುಷದ ಪರಿವರ್ತನಗುಣವೂ, ಪ್ರದೀಪದ ಸ್ವರೂಪ ನಿರ್ಮಾಣಗುಣವೂ ಮಿಲಿತವಾಗಿದ್ದವು.ಅವರು ಚುಂಬಕವಾಗಿ ಸಮಾಜವನ್ನು ಆಕರ್ಷಿಸಿದರು; ಪರುಷವಾಗಿ ಹಲವರನ್ನು ಪರಿವರ್ತನಗೊಳಿಸಿದರು; ಪ್ರದೀಪವಾಗಿ ಕೆಲವರನ್ನು ಪ್ರಕಾಶಗೊಳಿಸಿದರು. ಅವರ ಪ್ರಸಾದವಾಣಿಯ ಪ್ರಭಾವದಿಂದ, ಆದರ್ಶಗುರುಗಳಾಗಿ ಅಪಾರಕೀರ್ತಿಯನ್ನು ಗಳಿಸಿದ,ಲಿಂಗೈಕ್ಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು,ಒಂದು ಚಿರಸ್ಮರಣೀಯ ಇತಿಹಾಸವಾಗಿ ಪರಿಣಮಿಸಿದರು. ಅವರ ವಾತ್ಸಲ್ಯದಲ್ಲಿ ಬೆಳೆದ ಶ್ರೀ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಶಾಂತಮನೋವೃತ್ತಿಯ ಜನಪ್ರಿಯ ಜಗದ್ಗುರುಗಳಾಗಿ ಕಂಗೊಳಿಸುತ್ತಿರುವರು. ಅವರ ಕಾರುಣ್ಯದ ಮೂರ್ತಿ, ಪೂಜ್ಯಪಾದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು,ಶರಣಸಂಸ್ಕೃತಿಯ ಅಮೃತ ಕಿರಣವಾಗಿ ಸಮಾಜವನ್ನು ತಣಿಸುತ್ತಿರುವರು.

ಪ್ರಾತಃಸ್ಮರಣೀಯರಾದ ಶ್ರೀ ಸಿದ್ಧಲಿಂಗಸ್ವಾಮಿಗಳು ಹಾಗೂ ಬೀಳೂರು ಗುರುಬಸವಸ್ವಾಮಿಗಳು ಶಿವಯೋಗಿಗಳ ಅಧ್ಯಾತ್ಮ ಜೀವನದ ಬಾಹ್ಯರೂಪವಾಗಿದ್ದರು.ಪರಮಪೂಜ್ಯ ಬಿದರಿ ಕುಮಾರ ಸ್ವಾಮಿಗಳು ಮತ್ತು ಹಾನಗಲ್ಲ ಕುಮಾರಸ್ವಾಮಿಗಳು ಶಿವಯೋಗಿಗಳ ಜೀವನ ವೈಖರಿಯನ್ನು ನೋಡಿ, ಶಿವಯೋಗದ ಸ್ಫೂರ್ತಿಯನ್ನು ಪಡೆದರು. ಅಥಣಿ, ಐನಾಪುರ, ತೆಲಸಂಗ, ಕೋಹಳ್ಳಿ ಮೊದಲಾದ ಗ್ರಾಮದ ತತ್ವನಿಷ್ಠರಾದ ಪಟ್ಟಾಧ್ಯಕ್ಷರೆಲ್ಲರೂ ಶಿವಯೋಗಿಗಳಲ್ಲಿ ಕೇವಲ  ವಿಶ್ವಾಸವುಳ್ಳವರಾಗಿದ್ದರು.

ಶಿವಯೋಗಿಗಳು, ಅನೇಕ ಜನ ಗುರು ವಿರಕ್ತಮೂರ್ತಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು; ಗುರು-ವಿರಕ್ತರಲ್ಲಿ, ವಿರಕ್ತ-ವಿರಕ್ತರಲ್ಲಿ ಪರಸ್ಪರ ಸಹಕಾರವನ್ನು ಕುದುರಿಸುವ, ಪಕ್ಷಾತೀತ ಪ್ರವೃತ್ತಿಯ ಮಹಾಚೇತನವಾಗಿದ್ದರು. ಅವರು ಪರಂಜ್ಯೋತಿಯಾಗಿ, ಅನೇಕ ಜ್ಯೋತಿಗಳನ್ನು ನಿರ್ಮಾಣ ಮಾಡಿದರು;ಮಹಾಸಿಂಧುವಾಗಿ, ಅನೇಕ ಜೀವನ ಬಿಂದುಗಳನ್ನು ನಿರ್ಮಾಣ ಮಾಡಿದರು!ಇಪ್ಪತ್ತನೆಯ ಶತಮಾನದ ಆದಿಭಾಗ, ಶಿವಯೋಗಿಗಳ ಸಹಸ್ರ ಕಿರಣಗಳಿಗೆ ಆಗರವಾಗಿದ್ದಿತು!

ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು :

ಶಿವಯೋಗಿಗಳು, ಶಾಲಿವಾಹನ ಶಕ ೧೭೫೮ ರಲ್ಲಿ ಜನಿಸಿ, ೧೮೪೩ರ ವರೆಗೆ (ಕ್ರಿ. ಶ.೧೮೩೬-೧೯೨೧), ಅಂದರೆ ೮೫ ವರುಷ, ಮಿತವಾಗಿ, ಹಿತವಾಗಿ ಬಾಳಿದರು. ಈ ಅವಧಿಯಲ್ಲಿ ಅವರು ಏನು ಸಾಧಿಸಿದರು? ಎಂತು ಸಾಧಿಸಿದರು?ಎಷ್ಟು ಸಾಧಿಸಿದರು? ಎಂಬುದನ್ನು ಅವರ ಚರಿತ್ರೆಯಿಂದ ಚೆನ್ನಾಗಿ ಮನಗಾಣಬಹುದು.ಅವರು ಸಾಧನೆಯ ಬಲದಿಂದ, ತನು-ಮನ-ಭಾವಗಳಲ್ಲಿ ಲಿಂಗವಾಗಿದ್ದರು. ಅವರ ಕರಣಹರಣಗಳು ಲಿಂಗದ ಕಿರಣಗಳು. ಅವರ ಹೃದಯ ಅನುಭವದ ನಿಲಯ.ಅವರು ಪ್ರಭುವಿನ ಅಪರಾವತಾರ; ಪೂರ್ಣಾವತಾರ! ತಮ್ಮ ಅವತಾರ ಕಾರ್ಯವನ್ನು,ಅವರು ತಮ್ಮದೇ ಆದ ರೀತಿಯಲ್ಲಿ ಪೂರೈಸಿದರು.

ಶಾಲಿವಾಹನ ಶಕ ೧೮೪೨ನೆಯ (ಕ್ರಿ. ಶ. ೧೯೨೦) ರೌದ್ರಿ ಸಂವತ್ಸರದ ಕಾರ್ತಿಕ ಮಾಸ ಶಿವಯೋಗಿಗಳಿಗೆ ತುಂಬ ವೃದ್ಧಾಪ್ಯ. ಒಂದು ದಿನ ಪ್ರಾತಃಕಾಲ ಎಂದಿನಂತೆ ಅವರು, ಶಿವಾರ್ಚನೆಗೆ ಪುಷ್ಪಗಳನ್ನು ಮೆಲ್ಲನೆ ಎತ್ತುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಸ್ವಲ್ಪ ಜೋಲಿ ಹೋಯಿತು. ಅಂದಿನಿಂದ ಅವರು, ಶಿವನ ಕಡೆಗೆ ಇನ್ನೂ ವಿಶೇಷವಾಗಿ ವಾಲಿದರು. ‘ಶಿವನ ಅಪ್ಪಣೆಯಾಗಿದೆ; ಇನ್ನು ಆರು ತಿಂಗಳಿಗೆ ಮಹಾಪ್ರಯಾಣ’ ಎಂದು ನೆರೆಯವರಿಗೆ ತಿಳಿಸಿದರು. ಆ ಬಳಿಕ ಅವರ ತುರೀಯಾ ವಸ್ಥೆಯ ಪರಜಂಗಮಲೀಲೆಗಳು ಪ್ರಾರಂಭವಾದುವು. ಅವರು ಒಂದೊಂದು ಸಲ ಮಕ್ಕಳಂತೆ ಮುದ್ದುಮಾತುಗಳನ್ನಾಡುತ್ತ, ಬಾಲಲೀಲೆಗಳನ್ನು ಮಾಡುತ್ತಿದ್ದರು; ಮುಗ್ಧ ಮನೋವೃತ್ತಿಯನ್ನು ತಾಳುತ್ತಿದ್ದರು. ಕತ್ತಲೆ ಕವಿದ ರಾತ್ರಿಗಳಲ್ಲಿ, ಆ ಪರವಸ್ತುವಿನ ಪ್ರಕಾಶವನ್ನೇ ನೋಡುತ್ತ, ನಲಿಯುತ್ತ, ಏನು ಬೆಳಕು! ಏನು ಹೊಳಪು! ಎಷ್ಟು ಬೆಳ್ಳಗಿದೆ’ ಎಂದು ನುಡಿಯುತ್ತಿದ್ದರು. ಅರಳಿದ ಹೂಗಳನ್ನು ನೋಡಿದಾಗ, ಅವರ ಹೃದಯವೂ ಅರಳುತ್ತಿದ್ದಿತು; “ಆಹಾ! ಲಿಂಗಪೂಜೆ ಎಷ್ಟು ಚೆನ್ನಾಗಿ ನಡೆದಿದೆ’ ಎಂದು ಅವುಗಳಿಗೆ ಕೈ ನೀಡುತ್ತಿದ್ದರು. ಪರಿಚಿತರನ್ನು ಸಹ, ನೀವು ಯಾರು? ಎಲ್ಲಿಂದ ಬಂದಿರಿ? ಎಂದು ವಿಚಾರಿಸುತ್ತಿದ್ದರು. ತಮ್ಮ ಪೂಜಾಗೃಹವಾದ ಯೋಗ ಮಂಟಪವನ್ನು ನೋಡಿ, ಇದು ಯಾರ ಮನೆ? ಯೋಗಮಂಟಪ ಎಲ್ಲಿದೆ? ಎಂದು ಕೇಳುತ್ತಿದ್ದರು.ಈ ತೆರನಾದ ಸ್ಥಿತಿಯು ಯೋಗಿಗಳಿಗೆ ಅರ್ಧಪ್ರಜ್ಞಾವಸ್ಥೆಯಲ್ಲಿ ಬರುವುದುಂಟು.ಶಿವಯೋಗಿಗಳು, ಅಂತಃಪ್ರಜ್ಞಾವಸ್ಥೆಯ ನಿರ್ವಿಕಲ್ಪ ಸಮಾಧಿಯಿಂದ ಅರ್ಧ ಪ್ರಜ್ಞಾವಸ್ಥೆಗೆ ಬಂದು, ನಿಮಿಷಾರ್ಧದಲ್ಲಿ ಪ್ರಜ್ಞಾವಸ್ಥೆಗೆ ಬರುತ್ತಿದ್ದರು. ಅವರು ಪ್ರಜ್ಞಾವಸ್ಥೆಯಲ್ಲಿ ಸಹಜವಾಗಿಯೂ, ಅರ್ಧ ಪ್ರಜ್ಞಾವಸ್ಥೆಯಲ್ಲಿ ಲೋಕವಿಲಕ್ಷಣವಾಗಿಯೂ, ಅಂತಃಪ್ರಜ್ಞಾವಸ್ಥೆಯಲ್ಲಿ ನಿಸ್ತರಂಗ ಸಮುದ್ರದಂತೆ ನಿಶ್ಚಲವಾಗಿಯೂ ತೋರುತ್ತಿದ್ದರು.ಅವರ ಲಿಂಗಾನಂದದ ಕೊನೆಯ ದಿನಗಳನ್ನು ಶಬ್ದಗಳಿಂದ ತಿಳಿಯಲು ಸಾಧ್ಯವಿಲ್ಲ! ಅವರು ಕುಳಿತರೂ, ನಿಂತರೂ, ನಡೆದರೂ, ಮಲಗಿದರೂ ಯಾವಾಗಲೂ ಲಿಂಗಪೂಜೆಯ ವಿಚಾರದಲ್ಲಿರುತ್ತಿದ್ದರು. ‘ಲಿಂಗ ಪೂಜೆಗೆ ಹೊತ್ತಾಯಿತು, ಸ್ನಾನಕ್ಕೆ ಹೋಗಬೇಕು’ ಎನ್ನುತ್ತಿದ್ದರು. ಅವರ ಕ್ರಿಯೆಗಳೆಲ್ಲವೂ ಲಿಂಗದಲ್ಲಿ ಎರಕವಾಗಿದ್ದವು.ಬಲವತ್ತರವಾದ ಸಂಸ್ಕಾರವೇ ಪೂಜಾಪದಾರ್ಥವಾಗಿ, ಅವರ ಲಿಂಗಪೂಜೆ ನಿರಾತಂಕವಾಗಿ ನಡೆಯುತ್ತಿದ್ದಿತು. ಇಷ್ಟೊಂದು ಪರಿಪಕ್ವ ಸ್ಥಿತಿಯನ್ನು ಸಂಪಾದಿಸಿ,ಅವರ ಸಾಧನೆ ಸಫಲವಾಯಿತು. ಈಗ ಅವರು ಸದೇಹ ಮುಕ್ತಿಯಿಂದ ವಿದೇಹ ಮುಕ್ತಿಗೆ ಸಾಗಿದ್ದರು; ಪ್ರಕಾಶದಿಂದ ಲೋಕ ಚೇತನವನ್ನು ಜಾಗೃತಗೊಳಿಸಿ,ಅಸ್ತಂಗತನಾಗುವ ಸೂರ್ಯನಂತೆ, ತಮ್ಮ ಸ್ಥಾನವನ್ನು ಕುರಿತು ಪ್ರಯಾಣೋನ್ಮುಖ ರಾಗಿದ್ದರು.

ಶಿವಯೋಗಿಗಳು ಲಿಂಗೈಕ್ಯರಾಗುವ ಸಮಯ ಸನ್ನಿಹಿತವಾಯಿತು. ಮಠದ ಮೂರ್ತಿಗಳಾದ ಶ್ರೀ ಸಿದ್ಧಲಿಂಗಸ್ವಾಮಿಗಳಿಗೆ, ದಾಸೋಹಂಭಾವದ ಕೊನೆಯ ಸಂದೇಶವನ್ನು ದಯಪಾಲಿಸಿದರು ಮತ್ತು ತಮ್ಮ ಉತ್ತರಕ್ರಿಯೆಗಳನ್ನು ನಿರಾಡಂಬರವಾಗಿ,ಯಥಾರೀತಿ ಜರುಗಿಸಬೇಕೆಂದು ಕಟ್ಟಪ್ಪಣೆ ಮಾಡಿದರು. ಶಾ.ಶ.೧೮೪೩ನೆಯ (ಕ್ರಿ.ಶ. ೧೯೨೧) ದುರ್ಮತಿ ಸಂವತ್ಸರದ ಚೈತ್ರ ಬಹುಳ ಪಾಡ್ಯ ಶನಿವಾರ ಸಂಜೆ ೪ ಘಂಟೆಗೆ, ಶಿವಯೋಗಿಗಳು ಕೊನೆಯ ಸಾರೆ ಶಿವಾರ್ಚನೆಗೆಂದು ಸ್ನಾನ ಮಾಡಿದರು;ಪೂಜಾಗೃಹಕ್ಕೆ ಬಂದರು; ಲಿಂಗಪೂಜೆಗೆ ಕುಳಿತರು; ಪದ್ಧತಿಯಂತೆ ಲಿಂಗಪೂಜೆಯನ್ನುಮಾಡಿದರು; ಕಣ್ತುಂಬ ಲಿಂಗವನ್ನು ನೋಡಿದರು; ಲಿಂಗದಲ್ಲಿ ಕೂಡಿದರು; ಲಿಂಗವಾದರು!ಬ್ರಹ್ಮರಂಧ್ರದ ಊರ್ಧ್ವಮಾರ್ಗದಿಂದ, ಅವರ ದಿವ್ಯಾತ್ಮವು ಪರಮಾತ್ಮನನ್ನು ಸೇರಿ ಸಮರಸವಾಯಿತು. ಒಡಲುಗೊಂಡು, ಒಡಲುವಿಡಿಯದೆ, ಒಡಲಿಲ್ಲದ ನಿಜವ ಬೆರಸಿ ಅವರು ಬಯಲಾದರು! ನಿಜವನರಿದ ನಿಶ್ಚಿಂತನೂ, ಮರಣವ ಗೆಲಿದ ಮಹಂತನೂ, ಘನವ ಕಂಡ ಮಹಿಮನೂ, ಪರವನೊಳಕೊಂಡ ಪರಿಣಾಮಿಯೂ, ಬಯಲ ಒದಗಿದ ಭರಿತನೂ, ನಿರಾಳವನೊಳಕೊಂಡ ಸಹಜನೂ ಆದ ಮುರುಘ ಮಹಾಶಿವಯೋಗಿಯು ಬಯಲಾದನು! ಭರಿತನಾದನು!! ಆ ಮಹಾವಿಭೂತಿಯ ಅಸಾಧಾರಣ ಸತ್ವವನ್ನು ನೋಡಿ ಕೃತಾರ್ಥನಾದ ಸೂರ್ಯದೇವನು, ಅಸ್ತಾಚಲಕ್ಕೆ ನಡೆದನು .

ಶಿವಯೋಗಿಗಳ ಚರಿತ್ರೆ, ಕಲ್ಪನಾ ವಿಲಾಸದ ಕಟ್ಟು ಕತೆಯಲ್ಲ; ಅದೊಂದು ಪರಿಪೂರ್ಣಜೀವನದ ಬೃಹದ್ದರ್ಶನ, ಪ್ರತ್ಯಕ್ಷದರ್ಶನ. ಅದನ್ನು, ಎಲ್ಲರೂ ತಮ್ಮ ತಮ್ಮ ಅಂತರಂಗದ ಆರೋಗ್ಯವನ್ನು ಸರಿಗೊಳಿಸಲು ಓದುವುದು ಅವಶ್ಯವಿದೆ. ಮಹಾತ್ಮರ ಚರಿತ್ರೆಗಳು, ಮಾನವನ ಅಂತರಂಗವನ್ನು ತಿದ್ದಿ, ಆರೋಗ್ಯವೃದ್ಧಿಯನ್ನುಂಟು ಮಾಡುವ ಅಮೂಲ್ಯ ಸಾಧನಗಳು, ಅಂತರಂಗದಲ್ಲಿ ಆರೋಗ್ಯವಿಲ್ಲದ ನರನು ಪಶುಪ್ರಾಣಿ.ಅಂತರಂಗದ ಆರೋಗ್ಯವೇ ಅಂತರಂಗದ ಕಾಂತಿ ಮತ್ತು ಶಾಂತಿ. .

ಸಂಗ್ರಹ ಸಹಾಯ : ಪರಮಪೂಜ್ಯ .ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮರುಘಾಮಠ ಧಾರವಾಡ

 

ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಸಮಾಜದ ಅಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸಿದ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ನಮ್ಮ ನಾಡಿನ ಶ್ರೇಷ್ಠ ಪದಕಾರರಲ್ಲಿ ಒಬ್ಬರಾಗಿದ್ದರು . ಸಮಾಜದ ಸೇವೆಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿದ್ದ ಅವರು ಬರೆದುದು ತುಂಬ ಕಡಿಮೆ. ನಂತರದ ಪೀಳಿಗೆಯವರು ಅವುಗಳನ್ನು  ಸಂಗ್ರಹಿಸಿ ಉಳಿಸಿಕೊಂಡಿರುವುದು ಇನ್ನೂ ಕಡಿಮೆ.  ಆದರೆ ಬರೆದಷ್ಟು ಮಾತ್ರ ಅರ್ಥಪೂರ್ಣ ಹಾಗು ಸತ್ವಪೂರ್ಣ . ಅವರು ಬರೆದ, ಪದ್ಯಗಳಲ್ಲಿ ಪ್ರಮಥರನ್ನು ಮಹಾತ್ಮರನ್ನು ಕುರಿತು ಬರೆದ ಸ್ತುತಿ ಪರ ಪದ್ಯಗಳೇ ಅಧಿಕ . ಶಿವಯೋಗ ಅಥವಾ ಶಿವಯೋಗಿ ಅಂಕಿತದಲ್ಲಿ ತಮ್ಮ ಪದ್ಯಗಳನ್ನು ನಾಡಿಗೆ ನುಡಿಕಾಣಿಕೆಯಾಗಿ ಸಮರ್ಪಿಸಿದ್ದ ಅವರು ಆಶು ಕವಿತ್ವ ಹೊಂದಿದ್ದರು . ಹಾಗೆಯೇ ಅವರು ತಮ್ಮ ಪದ್ಯಗಳಲ್ಲಿ ಬಸವಾದಿ ಪ್ರಮಥರ ತತ್ವ ಮತ್ತು ಮೌಲ್ಯಗಳನ್ನು ತುಂಬಿ ಅವುಗಳನ್ನು ಸತ್ವಪೂರ್ಣವಾಗಿಸಿರುವುದು ಬಹು ವಿಶೇಷ. ಪ್ರಸ್ತುತ ಅವರ ಆಶು ಕವಿತ್ವದ ನಿಷ್ಪತ್ತಿಯಾಗಿರುವ ಒಂದು ಪದ್ಯವನ್ನು ಕುರಿತು ಇಲ್ಲಿ  ವಿವೇಚಿಸಲಾಗಿದೆ . ಜಂಗಮ ಶ್ರೇಷ್ಠರು , ಶಿವಯೋಗಿ ನಾಮಾಂಕಿತರೂ ಆಗಿದ್ದ  ಅಥಣಿ ಗಚ್ಚಿನಮಠದ ಪೂಜ್ಯ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಲಿಂಗದೇಹಕ್ಕೆ ಮಂಗಳ ಸ್ತುತಿ – ಗೈದ ಸಂದರ್ಭದ ಪದ್ಯವಿದು .

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ .

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ      ॥ ಪ ॥

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

 ಚೆಂದವನರಿದನುಷ್ಠಾನಿಪ ಶಿವಸ್ವಯಗೆ    ॥ ೧ ॥

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ  ॥ ೨ ॥

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ .

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ    ॥ ೩ ॥

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ   ॥ ೪ ॥

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‌ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರಘ ಶಿವಯೋಗಿಗೆ    ॥ ೫ ॥

ನಾಲ್ಕು ನಾಲ್ಕು ಸಾಲುಗಳ ಒಂದು ಪಲ್ಲವಿ ಮತ್ತು ಐದು ನುಡಿಗಳ ಒಟ್ಟು ಇಪ್ಪತ್ನಾಲ್ಕು ಸಾಲುಗಳಲ್ಲಿ ರಚಿತವಾದ ಈ ಪದ್ಯದ ಪ್ರತಿಯೊಂದು ನುಡಿಯಲ್ಲಿರುವ ಸಾಲುಗಳ ಎರಡನೆಯ ಅಕ್ಷರ ಪ್ರಾಸದಿಂದ ಕೂಡಿದೆ . ಹಾಗೆಯೇ ಇಡೀ ಪದ್ಯವು ಛಂದೋಲಯ ಬದ್ಧವಾಗಿದೆ . ಪದ್ಯದ ಪಲ್ಲವಿಯಲ್ಲಿ ದೃಷ್ಟಿಯೋಗದ ಮೂಲಕ ಶಿವಯೋಗವನ್ನು ಸಾಧಿಸಿದ ಪರಮ ಶಿವಯೋಗಿಗೆ ಮಂಗಲವಾಗಲಿ ಎಂದು ಹೇಳುತ್ತಾ ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಾಮಹಿಮರು ಪೂಜ್ಯಶ್ರೀ ಮುರುಘೇಂದ್ರ ಶಿವಯೋಗಿಗಳು ಎಂಬ ತಮ್ಮ ಭಾವವನ್ನು ಅಭಿವ್ಯಕ್ತಗೊಳಿಸಿದ್ದಾರೆ . ನಂತರದ ಮೂರು ನುಡಿಗಳಲ್ಲಿ ಸ್ವಯ , ಚರ ಮತ್ತು ಪರ ಜಂಗಮದ ಲಕ್ಷಣಗಳನ್ನು ವಿವರಿಸುತ್ತ ನಾಲ್ಕು ಮತ್ತು ಐದನೆಯ ನುಡಿಗಳಲ್ಲಿ ಅಥಣಿಯ ಶಿವಯೋಗಿಗಳು ಲಿಂಗಾಯತ ಧರ್ಮದ ಮತ್ತು ಬಸವಾದಿ ಪ್ರಮಥರು ಆಚರಿಸಿ ತೋರಿದ ಅಷ್ಟಾವರಣ , ಪಂಚಾಚಾರ , ಷಟ್‌ಸ್ಥಲಗಳನ್ನು ಸಾಧಿಸಿ ತಮ್ಮಲ್ಲಿರುವ ಅನುಪಮ ಸದ್ಭಕ್ತಿಯ ಫಲವಾಗಿ ಜಂಗಮ ಶ್ರೇಷ್ಠರಾದ ಬಗೆಯನ್ನು , ಎಲ್ಲದಕ್ಕೂ ರಾಮಬಾಣದಂತಿರುವ ಬಸವಾದಿ ಪ್ರಮಥರ ನಾಮವನ್ನು ಪರಮ ಪ್ರೇಮದಿಂದ ಉಚ್ಚರಿಸುತ್ತ ಗೆಲ್ಲಲು ಕಷ್ಟ   ಸಾಧನವಾದ ಮಾಯೆಯನ್ನು ಗೆಲಿದ ಬಗೆಯನ್ನು ಹೃದಯಂಗಮವಾಗಿ  ಬಣ್ಣಿಸಿದ್ದಾರೆ .ಭಕ್ತಾದಿ ಐಕ್ಯ ಸ್ಥಲ ದ ವರೆಗಿನ ಅಧ್ಯಾತ್ಮ ಸಾಧನೆಯನ್ನು ಪೂರ್ಣಗೊಳಿಸಿ ಷಟ್ಸ್ಥಲ ಬ್ರಹ್ಮಿ ಗಳೇ ತಾವಾದ ಮತ್ತು ಪರಶಿವನಲ್ಲಿ ಬೆರೆಸಿ ಬೇರಾಗದ ಸ್ಥಿತಿ ಯನ್ನು   ಹೊಂದಿದ ಮುರುಘ ಶಿವಯೋಗಿಗೆ . ಮಂಗಲವಾಗಲಿ ಎಂದು ಪದ್ಯವನ್ನು ಪೂರ್ಣಗೊಳಿಸಿದ್ದಾರೆ .

ಪ್ರಸ್ತುತ ನಾವು ಇಲ್ಲಿ ವಿವರಿಸಬೇಕಾಗಿರುವುದು ಪೂಜ್ಯಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ ಎಂಬ ವಿಷಯವನ್ನು ಕುರಿತು , ಜಂಗಮ ತತ್ವದ ಸ್ವಯ , ಚರ ಮತ್ತು ಪರ ಎಂಬ ಪ್ರಮುಖ ಭೇದಗಳು ಪ್ರಸ್ತುತ ಪದ್ಯದ ಮೊದಲಿನ ಮೂರು ನುಡಿಗಳಲ್ಲಿ ಸುಭಗ ಸುಂದರವಾಗಿ , ಅರ್ಥಪೂರ್ಣವಾಗಿ ಮೂಡಿಬಂದಿವೆ . ಈ ಮೂರು ಭೇದಗಳನ್ನು ಅರಿಯುವ ಮತ್ತು ವಿಶ್ಲೇಷಿಸುವ ಮೊದಲು ಲಿಂಗಾಯತ ಧರ್ಮದ ತತ್ವವಾಚಕ ಪದಗಳಲ್ಲಿ ಒಂದಾಗಿರುವ ‘ ಜಂಗಮ’ದ ಬಗ್ಗೆ ಸ್ಕೂಲವಾಗಿಯಾದರೂ ತಿಳಿದುಕೊಳ್ಳುವುದು ಅತ್ಯವಶ್ಯವೆನಿಸುತ್ತದೆ .

ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಕ್ಕೆ ವಿಶಿಷ್ಟ ಸ್ಥಾನವಿದೆ . ಗುರು , ಲಿಂಗ ,  ಜಂಗಮ , ವಿಭೂತಿ , ರುದ್ರಾಕ್ಷಿ , ಮಂತ್ರ , ಪಾದೋದಕ ಮತ್ತು ಪ್ರಸಾದ ಎಂಬ   ಎಂಟು ತತ್ವಗಳೇ ಅಷ್ಟಾವರಣಗಳು . ಇವುಗಳಲ್ಲಿ ‘ ಗುರು , ಲಿಂಗ , ಜಂಗಮ ‘ ಗಳು ಲಿಂಗಾಯತ ಉಪಾಸಕನ ಉಪಾಸ್ಯ ಮೂರ್ತಿಗಳು , ವಿಭೂತಿ , ರುದ್ರಾಕ್ಷಿ ಮತ್ತು ಮಂತ್ರ ಇವು ಉಪಾಸನೆಯ ಸಾಧನಗಳಾದರೆ ಪಾದೋದಕ , ಪ್ರಸಾದಗಳು ಉಪಾಸನೆಯ ಫಲಗಳೆಂದು ಕೀರ್ತಿತವಾಗಿವೆ . ಇವು ಕೇವಲ ಬಹಿರಾಡಂಬರದ ವಸ್ತುಗಳಲ್ಲ , ಲಿಂಗಾಯತ ಸಾಧಕನನ್ನು ಲೌಕಿಕ ವಿಷಯ ವ್ಯಾಮೋಹಗಳಿಂದ ರಕ್ಷಿಸುವ ಕವಚ ( ಆವರಣ ) ಗಳಾಗಿವೆ . ಇವುಗಳಲ್ಲಿ ಗುರು ಲಿಂಗ ಜಂಗಮ ಈ ಮೂರು ಒಬ್ಬನೇ ಪರಶಿವನ ಭೇದಗಳೇ ಆಗಿದ್ದರೂ ಕರ್ತವ್ಯ ಭೇದದಿಂದ ಪ್ರತ್ಯೇಕತೆಯನ್ನು ಹೊಂದಿದ ವಿಶಿಷ್ಟ ತತ್ವಗಳಾಗಿವೆ . ಗುರು ಸಾಧಕನ ಅಜ್ಞಾನವನ್ನು ಕಳೆದು , ಅವನದೇ ಚೈತನ್ಯವಾದ ಪರಶಿವ ಕಳೆಯನ್ನು ಇಷ್ಟಲಿಂಗ ರೂಪದಲ್ಲಿ ಸಾಧಕನ ಕೈಗಿತ್ತು ಮಾರ್ಗದರ್ಶಕನೆನಿಸುತ್ತಾನೆ . ಕರಸ್ಥಲದಲ್ಲಿ ವಿರಾಜಮಾನವಾದ ಇಷ್ಟಲಿಂಗ ( ಲಿಂಗ ) ವು ದೃಷ್ಟಿಯೋಗ ಮತ್ತು ಶಿವಯೋಗದ ಸಾಧನವಾಗಿ ಅದರಲ್ಲೂ ವಿಶೇಷವಾಗಿ ಸಾಧಕನ ಆರಾಧ್ಯ ಮೂರ್ತಿಯಾಗಿ ಪೂಜೆಗೊಳ್ಳುತ್ತದೆ . ಇನ್ನು ಜಂಗಮದ ಕರ್ತವ್ಯ ತುಂಬ ವಿಶಿಷ್ಟ.‌ “ ಗುರುವಿನ ಗುರು ಜಂಗಮ ಇಂತೆಂದುದು ಕೂಡಲಸಂಗನ ವಚನ “  ಎಂದು ಧರ್ಮಗುರು ಬಸವಣ್ಣನವರು ಹೇಳುವ ಮೂಲಕ ಜಂಗಮದ ಸ್ಥಾನವನ್ನು ನಿರ್ದೇಶಿಸಿದ್ದಾರೆ . ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡುವುದು , ಭಕ್ತರ ಭಕ್ತಿಯನ್ನು ಪರೀಕ್ಷಿಸಿ ತಪ್ಪಿದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಸುವುದು ಜಂಗಮನ ಕರ್ತವ್ಯ , ಜಂಗಮ ಎಂಬುದು ಮಾರ್ಗದರ್ಶನ ಮಾಡುವುದು , ಸಂದರ್ಭ ಬಂದರೆ ದಂಡಿಸಿಯಾದರೂ ಸನ್ಮಾರ್ಗದಲ್ಲಿ ಮುನ್ನೆಡೆಸುವದು ಜಂಗಮನ ಕರ್ತವ್ಯ. ಜಂಗಮ ಎಂಬುದು ಇಂದಿನ ಜಾತಿವಾಚಕ ಪದವಲ್ಲ , ಅದೊಂದು ಆಧ್ಯಾತ್ಮಿಕ ನಿಲವು , ಅನುಭಾವದ ಉನ್ನತಾವಸ್ಥೆ ಎಂದು ಹೇಳಬಹುದು . ಜಾತಿ , ಕುಲ , ದೇಶ , ಕಾಲಗಳ ಯಾವ ಪರಿಮಿತಿಗೂ ಸೀಮಿತವಾಗದೆ ತನ್ನ ಸಾಧನೆಯಿಂದ ಜಗದ್ಭರಿತನಾಗಿ ಬೆಳೆದ ಚೇತನವೇ ಜಂಗಮ , ಭಕ್ತೋದ್ದಾರ ಮತ್ತು ಸಮಾಜ ಕಲ್ಯಾಣ ಇವು ಜಂಗಮನ ಕಾಯಕಗಳು . ಚಲನಶೀಲತೆ ಅರ್ಥಾತ್ ಕ್ರಿಯಾಶೀಲತೆ ಜಂಗಮನ ಪ್ರಮುಖ ಲಕ್ಷಣಗಳಲ್ಲೊಂದು . ಅವನಿಗೆ ಅಂಗವಿದ್ದರೂ ಅಂಗದ ಬಯಕೆಗಳಿಲ್ಲ . ಆಶೆ ಆಮಿಷಗಳಿಲ್ಲ . ಅವನು ಜ್ಞಾನ ಆನಂದಗಳ ಮೂರ್ತಿಯಾಗಿರುವನು . ಕೇವಲ ಕಾವಿಬಟ್ಟೆ , ವಿಭೂತಿ , ರುದ್ರಾಕ್ಷಿಮಾಲೆ ಧರಿಸಿದವರು , ಕೈಯಲ್ಲಿ ಜೋಳಿಗೆ ದಂಡ ಹಿಡಿದವರು ಜಂಗಮರಲ್ಲ . ಅವರು ಕೇವಲ ವೇಷಧಾರಿಗಳಷ್ಟೆ, ದೇಹಭಾವವನ್ನಳಿದು ಪರಮಾತ್ಮನಲ್ಲಿ ಸಾಮರಸ್ಯ ಹೊಂದಿದವನು , ಲಿಂಗಮೂರ್ತಿಯೇ ತಾನಾಗಿ ನಿಂದವನು , ನಡೆ ನುಡಿಗಳಲ್ಲಿ ಸತ್ಯವನ್ನೂ , ಅಂತರಂಗದಲ್ಲಿ ಶಿವಭಾವವನ್ನೂ ಹೊಂದಿದವನು ಮಾತ್ರ ಜಂಗಮನೆನಿಸಿಕೊಳ್ಳಲು ಅರ್ಹನಾಗುತ್ತಾನೆ . ಸಚ್ಚಿದಾನಂದ ನಿತ್ಯ ಪರಿಪೂರ್ಣನಾಗಿರುವ ಇಂತಹ ಜಂಗಮದ ಸುಳುಹು ಜಗತ್ಪಾವನ , ಅವನ ನುಡಿ ಪರಮ ಬೋಧೆ , ದರ್ಶನ ಸ್ಪರ್ಶನ ಮಹಾಪುಣ್ಯ . ಇಂತಹ ಜಂಗಮನನ್ನು ಪ್ರಾಣವಾಗಿಸಿಕೊಂಡ ಭಕ್ತನ ಸರ್ವಾಂಗವೆಲ್ಲವೂ ಶುದ್ಧವಾಗುತ್ತದೆ . ಕಾರಣವೆಂದರೆ ಜಂಗಮನು ಭಕ್ತನ ಭವರೋಗವನ್ನು ಕಳೆದು ಅವನನ್ನು ಮುಕ್ತನನ್ನಾಗಿಸುತ್ತಾನೆ . ` ಭವರೋಗವ ಕಳೆವ ಪರಿಯ ನೋಡಾ ಮಡಿವಾಳನ ಕಾಯಕದಂತೆ ‘ ಎಂದು ವಚನಗಳಲ್ಲಿ ಉಕ್ತವಾಗಿರುವುದು ಯಥೋಚಿತವಾಗಿದೆ . ಏಕೆಂದರೆ ಮಡಿವಾಳನು ಬಟ್ಟೆಗಳನ್ನು ಎತ್ತಿ ಎತ್ತಿ ಒಗೆದು ಹಿಂಡಿ ಅದರ ಕೊಳೆಯನ್ನು ತೆಗೆಯುವಂತೆ ಜಂಗಮನು ಭಕ್ತನ ಭವರೋಗದ ಕೊಳೆಯನ್ನು ತೆಗೆದು ಪರಿಶುದ್ಧವಾಗಿಸುತ್ತಾನೆ . ಒಟ್ಟಾರೆ ಸಮಾಜ ಕಲ್ಯಾಣವನ್ನೇ ಗುರಿಯಾಗಿಸಿಕೊಂಡ ಜಂಗಮನು ಸಮಾಜ ಕಲ್ಯಾಣಕ್ಕಾಗಿ ಧನಧಾನ್ಯಗಳನ್ನು ಸಂಗ್ರಹಿಸಬಹುದು . ಆದರೆ ಅಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ . ಆದ್ದರಿಂದ ಭಕ್ತನಾದವನೂ ಕೂಡ ಇಂತಹ ಜಂಗಮವೇ ತನ್ನ ಪ್ರಾಣವೆಂದರಿದು ತನು ಮನ ಧನಗಳನ್ನು ಸಮರ್ಪಿಸಬೇಕು . ‘ ಜಾಣನು ಜಾಣನು ಆತ ಜಾಣನು ಜಂಗಮಕ್ಕೆ ಸವೆಸುವಾತ ಜಾಣನು ‘ , ಕನ್ನಡಿಯ ನೋಡುವ ಅಣ್ಣಗಳಿರಾ , ಜಂಗಮವ ನೋಡಿರೆ , ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ , ಜಂಗಮವಾಪ್ಯಾಯನವಾದೊಡೆ ಲಿಂಗ ಸಂತುಷ್ಟಿ ಮುಂತಾದ ಶರಣರ ವಚನಗಳನ್ನು ಗಮನಿಸಿದರೆ ಜಂಗಮಸೇವೆ ಇಲ್ಲದೆ ಭಕ್ತನ ಆಧ್ಯಾತ್ಮ ಸಾಧನೆ ಅಪೂರ್ಣವೆನಿಸುತ್ತದೆ . ಅಗ್ನಿಯಾಧಾರದಲ್ಲಿ ಕಬ್ಬಿಣ ನೀರುಂಬುವಂತೆ , ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುವಂತೆ ಲಿಂಗದ ಮುಖ ಜಂಗಮವೆಂದು ತಿಳಿದು ಜಂಗಮಕ್ಕೆ ಸಕಲ ಪಡಿಪದಾರ್ಥಗಳನ್ನು ಸಮರ್ಪಿಸಬೇಕೆಂಬುದು ಧರ್ಮಗುರು ಬಸವಣ್ಣನವರ ಆದೇಶ . ಆದರೆ ಇಲ್ಲಿ ‘ ಬೇಡುವಾತ ಜಂಗಮನಲ್ಲ , ಬೇಡಿಸಿಕೊಂಬಾತ ಭಕ್ತನಲ್ಲ ‘ ನಿಯಮವು ಭಕ್ತ ಜಂಗಮರಲ್ಲಿ ಪರಿಪಾಲನೆಯಾಗಬೇಕಾದುದು ಮಾತ್ರ ಅತ್ಯವಶ್ಯವಾಗಿದೆ . ‘ ಜಂಗಮದರಿವು     ಬೇಡಿದಲ್ಲಿ ಹೋಯಿತು ‘ ಎಂಬಂತೆ ಜಂಗಮ  ಬೇಡಿ ಹಾಳಾದರೆ ಭಕ್ತನು ಬೇಡಿಸಿಕೊಂಡು ತನ್ನ ಸಾಧನೆಯಿಂದ ಚ್ಯುತನಾಗುತ್ತಾನೆ . ಆದ್ದರಿಂದ ಭಕ್ತನು

ಬೇಡಿಸಿಕೊಳ್ಳದೆ   ಸರ್ವಾರ್ಪಣ ಭಾವದಿಂದ ಜಂಗಮಕ್ಕೆ ಸಮರ್ಪಿಸಬೇಕು . ಜಂಗಮನಾದರೂ ಸಮಾಜ ಕಲ್ಯಾಣಕ್ಕಾಗಿ ಅದನ್ನು ನಿಸ್ವಾರ್ಥ ಮನೋಭಾವದಿಂದ ಸ್ವೀಕರಿಸಿ ತೃಪ್ತಿ ಹೊಂದಬೇಕು . ಹೀಗೆ ಜಂಗಮ ತೃಪ್ತಿ ನಡೆದರೆ ಜಗತ್ತಿನ

ತೃಪ್ತಿಯಾಗುವುದು .

ಶಿವಯೋಗಿನಿ ಸಂತೃಪ್ತೇ   ತೃಪ್ತೋಭವತಿ ಶಂಕರ : |

 ತತ್‌ ತೃಪ್ತ್ಯಾ ತನ್ಮಯಂ ವಿಶ್ವಂ ತೃಪ್ತಿಮೇತಿ ಚರಾಚರಂ

ಎಂಬಂತೆ ಶಿವಸ್ವರೂಪಿ , ಶಿವಯೋಗಿಯಾಗಿರುವ ಜಂಗಮನು ತೃಪ್ತನಾದರೆ ಪರಶಿವನೇ ತೃಪ್ತನಾದಂತೆ . ಪರಶಿವನ ತೃಪ್ತಿಯಾದರೆ ಅವನ ಅಂಶದಿಂದ ಕೂಡಿ ಸಕಲ ಚರಾಚರಗಳಿಂದ ಯುಕ್ತವಾಗಿರುವ ವಿಶ್ವವೂ ತೃಪ್ತಿಯಾದಂತೆಯೆ ,

ಹೀಗೆ ಲಿಂಗಾಯತ ಧರ್ಮದಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಜಂಗಮ ತತ್ವದಲ್ಲಿ ಕರ್ತವ್ಯ ಭೇದದಿಂದ ಸ್ವಯ , ಚರ ಮತ್ತು ಪರ ಎಂಬುದಾಗಿ ಮೂರು ಭೇದಗಳಿವೆ . ಹಾನಗಲ್ಲ ಕುಮಾರ ಸ್ವಾಮಿಗಳವರು ಮೇಲೆ ಉಲ್ಲೇಖಿಸಿದ ಪದ್ಯದ ಮೊದಲನೆಯ ನುಡಿಯಲ್ಲಿ ಸ್ವಯ ಜಂಗಮದ ಲಕ್ಷಣವನ್ನು ಹೀಗೆ ಹೇಳುತ್ತಾರೆ ಸ್ವಯ ಜಂಗಮನು ಸದಾ ಮಠದಲ್ಲಿಯೇ ವಾಸಿಸುವವನು . ಹಾಗೆ ಅವನು ಮಠದಲ್ಲಿರುವಾಗ ಅನೇಕ ಸದ್ಭಕ್ತರು ದರ್ಶನಾರ್ಥಿಗಳಾಗಿ ಭಕ್ತಿಯಿಂದ ಮಠಕ್ಕೆ ಬರುತ್ತಾರೆ . ಬಂದ ಭಕ್ತರನ್ನು ಕುರಿತು ಉಪದೇಶ ಪರ ಮಾತುಗಳನ್ನು ಹೇಳುತ್ತ ಅವರು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವನು , ಮಠಕ್ಕೆ ಬಂದ ಭಕ್ತರಿಗೆ ದಾಸೋಹ ಏರ್ಪಡಿಸಿ ಅವರನ್ನು ಪ್ರಸಾದದಿಂದ ತೃಪ್ತಿಪಡಿಸುವನು . ಇಷ್ಟೆಲ್ಲ ಮಾಡಿಯೂ ವ್ಯವಹಾರದಲ್ಲಿ ಇದ್ದೂ ಇಲ್ಲದಂತೆ ಇದ್ದು ಏಕಾಂತದ ಆನಂದಾನುಭೂತಿಯನ್ನು ಯೋಗಮುಖವಾಗಿ ಅರಿತು ಅನುಭವಿಸಿ ಅನುಷ್ಠಾನಿಸುವ ಶಿವಸ್ವರೂಪಿ ಜಂಗಮನೆ ಸ್ವಯ ಜಂಗಮನೆನಿಸುವನು . ಜಂಗಮದ ಎರಡನೆಯ ಭೇದವನ್ನು ಚರಜಂಗಮವೆಂದು ಕರೆಯಲಾಗಿದೆ . ತನ್ನನ್ನು ನಂಬಿದ ಸಜ್ಜನ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮನಿಸಿ ಅವರನ್ನು ಉದ್ಧರಿಸಿ ನಿರ್ಗಮನಿಯಾಗಿ ಸುಳಿಯುವವನು ಚರ ಜಂಗಮನೆನಿಸುವನು . ಅದನ್ನು ಹಾನಗಲ್ಲ ಕುಮಾರಸ್ವಾಮಿಗಳವರು ತಮ್ಮ ಪದ್ಯದ ಎರಡನೆಯ ನುಡಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ . ಭಕ್ತರಿರುವಲ್ಲಿಗೆ ಹೋಗಿ ಅವರ ಭಕ್ತಿಯನ್ನು ಸ್ವೀಕರಿಸುತ್ತ ಉಪದೇಶವನ್ನು ಮಾಡುವ ಮೂಲಕ ಶಿಷ್ಯರನ್ನು ಮತ್ತು ಭಕ್ತರನ್ನು ಉದ್ಧಾರ ಮಾಡುವವನು ಚರಜಂಗಮನೆಂದು ಹೇಳುತ್ತ ಅಂತಹ ಚರ ಜಂಗಮ ಸಮೂಹದಲ್ಲಿ ಗುರುಸ್ಥಾನವನ್ನು ಅಥಣಿಯ ಶಿವಯೋಗಿಗಳು ಹೊಂದಿದ್ದರು ಎಂಬುದನ್ನು ಅವರು ಸ್ಮರಿಸಿಕೊಳ್ಳುತ್ತಾರೆ . ಲಿಂಗಾಯತ ಧರ್ಮದಲ್ಲಿ ಚರಜಂಗಮನ ಸ್ಥಾನ ಬಹಳ ಮಹತ್ವದ್ದು .

ಸರ್ವಲೋಕೋಪಕಾರಾಯ ಯೋ ದೇವಃ ಪರಮೇಶ್ವರಃ |

ಚರತ್ಯತಿಥಿ ರೂಪೇಣ ನಮಸ್ತೇ ಜಂಗಮಾತ್ಮನೇ  ॥

ಎಂಬ ಮಾತಿನಲ್ಲಿಯೂ ಕೂಡ ಸಾಕ್ಷಾತ್ ಪರಶಿವನೇ ಜನಕಲ್ಯಾಣ ದೃಷ್ಟಿಯಿಂದ ಚರಜಂಗಮನಾಗಿ ಲೋಕದಲ್ಲಿ ಸುಳಿಯುತ್ತಾನೆ ಎಂಬುದನ್ನು ಸ್ಪಷ್ಟ ಪಡಿಸಲಾಗಿದೆ . ವಾಸ್ತವವಾಗಿ ಚರಜಂಗಮನು ಲೋಕದೆಲ್ಲೆಡೆ ಸಂಚರಿಸಿ ಜನರಿಗೆ ಶಾಂತಿಯ ಮಾರ್ಗವನ್ನು ತೋರುವ ಮೂಲಕ ಲೋಕಪೂಜ್ಯನೆನಿಸುತ್ತಾನೆ . ವಸಂತದ ಗಾಳಿಯಂತೆ ಸುಳಿಯುವ ಅವನ ನಡೆ ನುಡಿಗಳಲ್ಲಿ ಸಾಮರಸ್ಯ ಕಂಡು ಬರುತ್ತದೆ . ಅಮೂರ್ತ ಪರಶಿವನ ಸಾಕಾರ ಚರಮೂರ್ತಿಯಾಗಿರುವ ಅವನು ಚಲಿಸಿದಲ್ಲಿ ಭಕ್ತಿಯಬೆಳಸು , ಜ್ಞಾನದ ಬೆಳಕು ಹೊರಹೊಮ್ಮುತ್ತದೆ . ಆದ್ದರಿಂದ ಅವನು ವಿಶ್ವ ಪರಿಪೂರ್ಣನೂ , ಜಗದ್ಭರಿತನೂ ಆಗಿರುವನು . ಇನ್ನೂ ಮೂರನೆಯದಾಗಿ ಪರಜಂಗಮವನ್ನು ಕುರಿತು- ‘ ಕೋಪ ತಾಪಮಂ ಬಿಟ್ಟು , ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೋ ‘ ಎಂದು ಶರಣರು ಹೇಳುವ ಮೂಲಕ ಪರಜಂಗಮದ ಲಕ್ಷಣವನ್ನು ತಿಳಿಸಿದ್ದಾರೆ . ಪರಜಂಗಮನು ಸ್ವಯ ಮತ್ತು ಚರ ಜಂಗಮರಿಗಿಂತಲೂ ಶ್ರೇಷ್ಠನೆನಿಸುವನಲ್ಲದೆ ಅವರಿಗೆ ಮಾರ್ಗದರ್ಶನವನ್ನೂ ಮಾಡುವನು . ಮುಖ್ಯವಾಗಿ ಅವನು ಅನುಭಾವಿ , ಪರಶಿವನೊಡನೆ ಬೆರೆದು ಬೇರಾಗದಂತಿರುವವನು , ಸದಾ ಲಿಂಗಾಂಗ ಸಾಮರಸ್ಯ ಸುಖದಲ್ಲಿರುವವನು . ಇದೇ ಭಾವವನ್ನು ಇದಕ್ಕಿಂತಲೂ ಸ್ಪಷ್ಟವಾಗಿ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರು ಮೇಲಿನ ಪದ್ಯದ ಮೂರನೆಯ ನುಡಿಯಲ್ಲಿ ತಿಳಿಯಪಡಿಸುತ್ತಾರೆ . ಅವರ ದೃಷ್ಟಿಯಲ್ಲಿ ಪರ ಜಂಗಮನು ಪಾಪ ಪುಣ್ಯಗಳ ಎಲ್ಲೆಯನ್ನು ಮೀರಿದವನು . ಕಾಮ , ಕ್ರೋಧ , ಲೋಭ ಮೋಹಾದಿ ದುರ್ಗುಣಗಳನ್ನು ನಾಶ ಮಾಡಿದವನು . ಅಂದರೆ ಅವುಗಳ ವಿಕಾರಕ್ಕೆ ಒಳಗಾಗದವನು . ಜಗತ್ತಿನ ಜಂಜಡವನ್ನು ಧಿಕ್ಕರಿಸಿದವನು , ಹಾಗೆಯೆ ಮೋಸ ವಂಚನೆಗಳಿಂದ ಮುಕ್ತನಾಗಿ ಶಿವನೇ ತಾನಾದವನು ಪರ ಜಂಗಮನೆನ್ನುತ್ತಾರೆ . ವಾಸ್ತವವಾಗಿ ತಥ್ಯಮಿಥ್ಯ , ರಾಗ ದ್ವೇಷ ಅಳಿದವನು , ಸ್ತುತಿ ನಿಂದೆಗಳನ್ನು ಸಮನಾಗಿ ಕಂಡವನು , ದ್ವೈತಾದ್ವೈತಗಳಿಂದ ಮುಕ್ತನಾದವನು , ಸತ್ಯ ಸದಾಚಾರವೇ ಅಂಗವಾಗಿರುವವನು , ಭಕ್ತಿ , ಜ್ಞಾನ – ವೈರಾಗ್ಯಗಳನ್ನು ಆಭೂಷಣಗಳನ್ನಾಗಿಸಿಕೊಂಡವನು ಪರಜಂಗಮನೆನಿಸುವನು . ಅವನು ತನ್ನ ಅಂಗ , ಮನ , ಪ್ರಾಣ , ಸಕಲ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಲೀಯವಾಗಿಸಿ ಅಂದರೆ ಸ್ಪಟಿಕ ಘಟದಲ್ಲಿ ಜ್ಯೋತಿಯನ್ನಿರಿಸಿದಂತೆ ಒಳಗೂ ಹೊರಗೂ ಮಹಾಜ್ಞಾನದ ಬೆಳಕೇ ತುಂಬಿದಂತೆ ತೊಳಗಿ ಬೆಳಗುವ ಮಹಾಚೈತನ್ಯ ಮೂರ್ತಿಯಾಗಿರುವನು . ಹೀಗೆ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಮೂರು ರೀತಿಯ ಭೇದಗಳಿಂದ ಕೂಡಿದ ಜಂಗಮ ತತ್ವದ ಸ್ವರೂಪವನ್ನು ಮೂರು ನುಡಿಗಳಲ್ಲಿ ಕರಿಯು ಕನ್ನಡಿಯೊಳಡಗಿದಂತೆ ಹಿಡಿದಿರಿಸಿದ ಪರಿ ತುಂಬ ಮನೋಜ್ಞವಾಗಿದೆ .

ಲೇಖಕರು : ಪೂಜ್ಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮೋಟಗಿಮಠ, ಅಥಣಿ

ಶಿವಯೋಗಿಗಳ ಶಿವಾವತಾರ ಅದು ಮನುಕುಲ ಸೂರ್ಯನ ಅವತಾರ. ಬದುಕು ವಿರಕ್ತಿಯ ಸಂವಿಧಾನ; ಬಾಳು ಸಮತೆಯ ಸುವಿಧಾನ! ನೆನಹು ಶರಣ ಜೀವನ, ನಡೆ ಬಸವಭಾವ, ಹೊರಗೆ ಬಯಲಬಿಂಬ. ಒಳಗೆ ಲಿಂಗಾಂಗಯೋಗ. ಮಾತು ವಚನದ ಒಲವಿನೋಂಕಾರ! ಈ ಅವತಾರ ಅಲ್ಲಮನ ಪೂರ್ಣಾವತಾರ!! ಶಿವಯೋಗಿ ಎಂದರೆ ಶಿವಯೋಗ. ಶಿವಯೋಗ ಎಂದರೆ; ಅಥಣಿಯ ಮುರುಘೇಂದ್ರ ಶಿವಯೋಗಿ!!

                              ಧರ್ಮಗುರು ಬಸವಣ್ಣನವರು ಶರಣರನ್ನು ಅಪ್ಪ ಬೊಪ್ಪ-ಅಯ್ಯ ಎಂದು ಅಪ್ಪಿ ಒಪ್ಪಿಕೊಂಡರು. ಅಂತಹ ಶರಣರ ಸೇವೆಯನ್ನು ಪೂರೈಸುವುದೇ ನನ್ನ ಕಾಯಕವೆಂದು ಭಾವಿಸಿಕೊಂಡಿದ್ದರು ಶಿವಯೋಗಿಗಳವರು. ಹೀಗಾಗಿ ಅವರು ಪ್ರೀತಿ ಅಂತಃಕರಣದಿಂದ ಈ ಹಾಡು ಹಾಡುತ್ತ ತಮ್ಮ ದೈನಂದಿನ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದರು.

ಶಿವಯೋಗ ಶಿವನಿಧಿ

               ಭಾರತದ ಋಷಿ-ಮುನಿಗಳ ಅನಂತಯೋಗ, ಅಲ್ಲಮನ ಅನಿಮಿಷಯೋಗ, ಅರವಿಂದರ ಪೂರ್ಣಯೋಗ, ರಮಣರ ಭಾವಯೋಗ, ಚಿನ್ಮಯಾನಂದರ ಧ್ಯಾನಯೋಗ, ನಾಥಪಂಥೀಯರ ಸಿದ್ಧಿಯೋಗ, ಸಿದ್ಧರ ಸಂತರ ಶಾಂಭವೀಯೋಗ, ತೋಂಟದ ಸಿದ್ಧಲಿಂಗರ ಮಹಾಲಿಂಗಯೋಗ, ಚಿತ್ತರಗಿ, ಮಲೆಯ ಮಹಾದೇಶ್ವರ, ಬಿದರಿ, ಬೀಳೂರು, ಹಾನಗಲ್ಲ ಯತಿವರ್ಯರ ಸಮಾಜಯೋಗ-ಹೀಗೆ ಎಲ್ಲ ಯೋಗಗಳ ಯೌಗಿಕ ಸತ್‍ಕ್ರಿಯೆಗಳ ಸಂಗಮವಾಗಿದ್ದರು ‘ಶಿವಯೋಗ’ ಶಿವನಿಧಿ ಶ್ರೀ ಮುರುಘೇಂದ್ರ ಶಿವಯೋಗಿಗಳು.

ಗುರುಲಿಂಗದೇವ

               ಅಥಣಿ ತಾಲೂಕು ನದಿ ಇಂಗಳಗಾವಿ ಭಾಗೋಜಿಮಠದ ಆದರ್ಶ ಶರಣ ದಂಪತಿಗಳಾದ ಶ್ರೀ ರಾಚಯ್ಯನವರು ಮಾತೋಶ್ರೀ ನೀಲಮ್ಮತಾಯಿಯವರ ಪುಣ್ಯಗರ್ಭದಲ್ಲಿ(ಶಾ.ಶ. 1758 ದುರ್ಮುಖಿ ಸಂವತ್ಸರ ವೈಶಾಖಮಾಸ) ಕ್ರಿ.ಶ. 1836ರಂದು ಅಪ್ಪಗಳು ಜನ್ಮ ತಾಳಿದರು. ಶಿವಯೋಗಿಗಳ ಜನ್ಮದಾತೆ ನೀಲಮ್ಮನವರು ಮೈಗೂರು(ಜಮಖಂಡಿ ತಾಲೂಕು) ಹಿರೇಮಠದ ಮಗಳು (ಮೈಗೂರು ಹಿರೇಮಠ ನಾಡಿಗೆ ಅನೇಕ ಜನ ಸ್ವಾಮಿಗಳನ್ನು, ತಪಸ್ವಿಗಳನ್ನು ನೀಡಿದ ಒಂದು ಶ್ರೇಷ್ಠ ಮನೆತನವಾಗಿದೆ. ಈ ಮನೆತನದಲ್ಲಿ ಜನಿಸಿದ ಐದು ಜನರು ಮೋಟಗಿಮಠದ ಪೀಠಾಧಿಪತಿಗಳಾಗಿರುವುದು ವಿಶೇಷ). ರಾಚಯ್ಯನವರು ರಾಮದುರ್ಗ ತಾಲೂಕು ಭಾಗೋಜಿ ಊರಿನಿಂದ ಪಾದಯಾತ್ರೆಯ ಮೂಲಕ ಇಂಗಳಗಾವಿಗೆ ಆಗಮಿಸಿ, ಗ್ರಾಮಸ್ಥರಿಗೆ ಗುರುಗಳಾಗಿ ಇಂಗಳಗಾವಿಯಲ್ಲಿ ನೆಲೆ ನಿಂತರು. ಇಂತಹ ಆದರ್ಶ ದಂಪತಿಗಳ ಸತ್ಪುತ್ರರೇ ಈ ಯೋಗಿ. ಹುಟ್ಟಿದ ಮಗುವಿಗೆ ‘ಗುರುಲಿಂಗಯ್ಯ’ ಎಂದು ನಾಮಕರಣ ಮಾಡಿದರು. ಇಂಗಳಗಾವಿ ಭಾಗೋಜಿಮಠದ ಪೂರ್ವಾಶ್ರಮ ಬಂಧುಗಳಾದ ಅಥಣಿ ಮೋಟಗಿಮಠದ ಯಜಮಾನರಾದ ಮುರುಘೇಂದ್ರ ಅಪ್ಪಗಳ ಹತ್ತಿರ ‘ಗುರುಲಿಂಗ ದೇವರ’ನ್ನು ಕರೆದುಕೊಂಡು ಬಂದರು. ಗುರುಗಳು ಗುರುಲಿಂಗಯ್ಯನನ್ನು ಹರಸಿ ಹಾರೈಸಿದರು. ಅವರ ಪ್ರೇರಣೆಯಂತೆ ಗಚ್ಚಿನಮಠದಲ್ಲಿ ಈರ್ವರು ಪೂಜ್ಯರು ಅದಾಗಲೆ ಅನೇಕ ಸಾಧಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ಅಧ್ಯಾತ್ಮದ ಬಳ್ಳಿಯೊಳಗೆ ಸೇರಿಕೊಂಡ ಗುರುಲಿಂಗರು ಕೆಲವೇ ದಿನಗಳಲ್ಲಿ ಅಪರೂಪದ ಸಾಧಕರಾದರು.

               ತೆಲಸಂಗ ಪಟ್ಟದ್ದೇವರು, ಮಮದಾಪುರ ಶ್ರೀಗಳಿಂದ ಅಧ್ಯಯನ ಪೂರೈಸಿ ಗುರುಲಿಂಗಾರ್ಯರಾದರು. ಅಥಣಿ ಗಚ್ಚಿನಮಠದ ಶ್ರೀ ಮರುಳಶಂಕರ ಸ್ವಾಮಿಗಳು, ಶ್ರೀ ಗುರುಶಾಂತ ಮಹಾಸ್ವಾಮಿಗಳವರಿಂದ ಅನುಗ್ರಹ ಆಶೀರ್ವಾದ ಪಡೆದರು. ಮುಂದೆ ಶ್ರೀ ನಿರಂಜನಪ್ರಭು ಮುರುಘೇಂದ್ರ ಶಿವಯೋಗಿಗಳು ಎನ್ನುವ ನೂತನ ಅಭಿದಾನ ದಯಪಾಲಿಸಿದರು.

               1852ರಿಂದ ಶಿವಯೋಗದ ಅನುಸಂಧಾನ ಆರಂಭವಾಗಿ ಸತತ 20 ವರ್ಷಗಳ ಕಾಲ ಇಷ್ಟಲಿಂಗಯೋಗದ ಶಿವಯೋಗ ಸಾಧನೆ ಕೈಗೊಂಡರು. ಜಮಖಂಡಿ ತಾಲೂಕಿನ ಗುಹೇಶ್ವರ ಗಡ್ಡಿಯಲ್ಲಿ, ಯೋಗಮಂಟಪ, ಹಲವು ಕಡೆ ಏಕಾಂತ ಧ್ಯಾನ ಕೈಕೊಂಡು ಅಪ್ಪಗಳು ಸಿದ್ಧಿಯ ಶೃಂಗವನ್ನೇರಿದರು.

               ಲೋಕಸಂಚಾರ ಕೈಗೊಂಡು ಮರಳಿ ಮಠಕ್ಕೆ ಬಂದರು. ಹಿರಿಯ ಗುರುಗಳು ಅಧಿಕಾರ ಸ್ವೀಕರಿಸಿಕೊಳ್ಳಲು ಹೇಳಿದಾಗ, ನನಗೆ ಯಾವ ಅಧಿಕಾರಿಗಳೂ ಬೇಡ. ನಾನು ಈ ಮಠದ ಸೇವಕ ಎಂದರು. ಮಠದೊಳಗಿದ್ದೂ ಮಠಾಧಿಪತಿಯಾಗಲಿಲ್ಲ. ಒಮ್ಮೆಯೂ ಪೀಠ-ಪಲ್ಲಕ್ಕಿ ಹತ್ತಲಿಲ್ಲ. ಬಂಗಾರ ಧರಿಸಲಿಲ್ಲ. ಬೇಕೆಂದು ಏನನ್ನೂ- ಯಾರನ್ನೂ ಕೈ ಒಡ್ಡಲಿಲ್ಲ. ಇದ್ದೂ ಇಲ್ಲದಂತೆ ಮೌನಿಯಾಗಿದ್ದರು ಶಿವಯೋಗಿಗಳು.

               ಶ್ರೀಮಠದ ಹಿರಿಯ ಗುರುಗಳಾದ ಗುರುಶಾಂತ ಮಹಾಸ್ವಾಮಿಗಳು ಇರುವಾಗಲೇ ಶಿವಯೋಗಿಗಳು ತಮ್ಮ ಉತ್ತರಾಧಿಕಾರಿಯನ್ನು ಬಹುಬೇಗನೇ ಸ್ವೀಕರಿಸಿದರು. ಅವರಿಗೆ ‘ಮಠಾಧಿಪತಿ ಆಗುವ ಅಂತಹ ಯಾವ ಕರ್ಮಠ ಮಠೀಯ ವ್ಯವಸ್ಥೆಯಲ್ಲಿ ಮುಂದುವರಿಯುವ ಆಸೆ ಇರಲೇ ಇಲ್ಲ. ಹೀಗಾಗಿ ಅಥಣಿಯ ಬಣಜಿಗ ಮನೆತನದ ‘ಸಿದ್ಧಲಿಂಗ ದೇವರ’ನ್ನು ಉತ್ತರಾಧಿಕಾರಿಯನ್ನು ಸ್ವೀಕರಿಸಿ ಅವರಿಗೆ ಎಲ್ಲ ಜವಾಬ್ದಾರಿ ವಹಿಸಿ ನಿರ್ಲಿಪ್ತರಾದರು.

ಬಂಗಾರದ ತಂಬಿಗೆ

               ಒಮ್ಮೆ ಶ್ರೀಮಂತ ವಾರದ ಮಲ್ಲಪ್ಪನವರು ಸೊಲ್ಲಾಪುರದಲ್ಲಿ ಬಂಗಾರದ ಬಿಂದಿಗೆ ಅರ್ಪಿಸಿದರು. ಆಗ ಶಿವಯೋಗಿಗಳು ಬೇಡ ಎಂದು ಅಲ್ಲಿಯೇ ಬಿಟ್ಟು ಬಂದಿದ್ದರು. ಆದರೆ ಅವರಿಗೆ ಗೊತ್ತಿಲ್ಲದಂತೆ ಸೇವಕರು ಅದನ್ನು ತೆಗೆದುಕೊಂಡು ಬಂದಿದ್ದರು. ಈ ವಿಷಯ ತಿಳಿದು ನಾಲ್ಕು ದಿನಗಳ ಕಾಲ ಪ್ರಸಾದ ಸ್ನಾನ ಎಲ್ಲವನ್ನೂ ಬಿಟ್ಟು ಮೌನಿಯಾಗಿದ್ದರು. ‘ಯಾಕ್ರೀ ಬುದ್ಧಿ ಹೀಗ್ಯಾಕ ಮಾಡತೀರಿ’ ಎಂದು ಸೇವಕರು ಕೇಳಿದಾಗ ‘ಮಲವು ಸಂಗಡವಿರಲು ಸ್ನಾನ ಯಾಕಯ್ಯಾ?’ ಎಂದರು. ಬಂಗಾರದ ತಂಬಿಗೆಯನ್ನು ಮರಳಿ ವಾರದ ಮಲ್ಲಪ್ಪನವರಿಗೆ ಕೊಟ್ಟು ಬಂದು ಸೇವಕ ತಪ್ಪಾಯಿತು, ಎಂದಾಗ ಮಾತ್ರ ಶಿವಯೋಗಿಗಳು ಸ್ನಾನ ಪೂಜೆ ಪೂರೈಸಿದರು.

               ಭಕ್ತರೋರ್ವರು ಮಠದ ಜಗುಲಿಗೆ(ಹೊರಸಕ್ಕೆ) ಬೆಳ್ಳಿನಾಣ್ಯ ಬಡಿದಾಗ ಯಾರೋ ಖುಷಿಯಿಂದ ಓಡಿ ಬಂದು ಹೇಳಿದರು. ಶಿವಯೋಗಿಗಳು ಸುಮ್ಮನಿದ್ದರು. ಮರಳಿ ಮರುದಿನ ಗಾಬರಿಯಿಂದ ಭಕ್ತನೋರ್ವ ‘ಅಪ್ಪಾವರೇ… ಬೆಳ್ಳಿ ನಾಣ್ಯ ಯಾರೋ ಕಿತಗೊಂಡ ಹೋಗ್ಯಾರೀ’ ಅಂದಾಗ ‘ಇದ್ದವನು ಬಡದ, ಇಲ್ಲದವನು ವೈದಾನ, ನೀ ಯಾಕ ಇಷ್ಟ ಚಿಂತಿ ಮಾಡಾಕಹತ್ತೀ’ ಅಂದರು.

ಹರ್ಡೇಕರ ಮಂಜಪ್ಪನವರಿಗೆ ದೀಕ್ಷೆ

               ನಾನೊಬ್ಬ ದಾಸಿಪುತ್ರ. ನನಗೆ ಲಿಂಗದೀಕ್ಷೆ ನೀಡಿ ಅನುಗ್ರಹಿಸಬೇಕೆಂದು ಒಬ್ಬ ಸಮಾಜಸೇವಾಸಕ್ತ ವ್ಯಕ್ತಿ ಬಂದು ಕೇಳಿದಾಗ, ತುಂಬು ಅಂತಃಕರಣದಿಂದ ಯಾರೂ ಆ ನಿಟ್ಟಿನಲ್ಲಿ ಆಲೋಚಿಸದ ಸಂದರ್ಭದಲ್ಲಿ(1918ರಲ್ಲಿ) ಲಿಂಗದೀಕ್ಷೆ ನೀಡಿ ಆಶೀರ್ವದಿಸಿದರು. ‘ತಮ್ಮಾ ನೀನು ‘ಕರ್ನಾಟಕ ಗಾಂಧಿ’ ಆಗುತಿ’ ಎಂದು ಮನಸಾರೆ ಹಾರೈಸಿದರು. ಅವರು ಅದರಂತೆ ಕರ್ನಾಟಕ ಗಾಂಧಿಯಾಗಿ ಶರಣ ಶ್ರೇಷ್ಠರಾಗಿ ಬದುಕಿದರು, ಅವರೇ ‘ಹರ್ಡೇಕರ ಮಂಜಪ್ಪನವರು’. ಶಿವಯೋಗಿಗಳ ಮೇಲಿನ ಭಕ್ತಿ ಗೌರವಕ್ಕಾಗಿ ‘ಪ್ರಮಥಾಚಾರ ದೀಪಿಕೆ’ ಎಂಬ ಕೃತಿಯನ್ನು ಬರೆದು ಪ್ರಕಟಿಸಿದರು. ಮುಂದೆ ಇದೇ ಮಂಜಪ್ಪನವರು 1911ರಲ್ಲಿ ಬಸವ ಜಯಂತಿ ಆಚರಣೆಯನ್ನು ಪ್ರಥಮವಾಗಿ ಆಚರಿಸಿದ ಸತ್ಕೀರ್ತಿಗೆ ಭಾಜನರಾದರು.

ಲಿಂಗರಾಜರಿಗೆ ಮಾರ್ಗದರ್ಶನ

               ದಾನವೀರ ಶಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಸಂಸ್ಥಾನವನ್ನು ಶಿವಯೋಗಿಗಳ ಪದತಲಕ್ಕೆ ಅರ್ಪಿಸಲು ಬಂದಾಗ, ಶಿವಯೋಗಿಗಳು ‘ಇದನ್ನು ಸಮಾಜಕ್ಕೆ ಬಳಸಿರಿ, ನಿಮ್ಮ ಸಂಪತ್ತು ತೆಗೆದುಕೊಂಡು ನಾನೇನು ಮಾಡಲಿ’ ಎಂದು ಹೇಳಿ, ಲಿಂಗರಾಜರಿಗೆ ಮಾರ್ಗದರ್ಶನ ಮಾಡಿದರು. ಶಿವಯೋಗಿಗಳ ಆಶಯದಂತೆ  1906ರಲ್ಲಿ ಲಿಂಗರಾಜರು ತಮ್ಮ ಸಮಸ್ತ ಸಂಪತ್ತನ್ನು ಸಮಾಜಕ್ಕೆ ಅರ್ಪಿಸಿ, ಕರ್ನಾಟಕದ ತ್ಯಾಗವೀರ ಎಂಬ ಖ್ಯಾತಿಗೆ ಪಾತ್ರರಾದರು. ಲಿಂಗರಾಜರ ಉದಾರ ದಾನದ ಫಲವಾಗಿ ಶಿಕ್ಷಣ ವಂಚಿತರು ವಿದ್ಯಾವಂತರಾಗಿ ಬದುಕು ಕಟ್ಟಿಕೊಂಡರು. 1916ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಲಭಿಸಿತು. ಸಾವಿರಾರು ಕಲಿಕಾಸಕ್ತರಿಗೆ ಅದರಿಂದ ಅನುಕೂಲವಾಯಿತು.

ಲೋಕಮಾನ್ಯರೊಂದಿಗೆ

               5 ಜನವರಿ 1917ರಂದು ಲೋಕಮಾನ್ಯ ಬಾಲಗಂಗಾಧರ ಟಿಳಕರು ಅಥಣಿಗೆ ಬಂದು ಶಿವಯೋಗಿಗಳ ದರ್ಶನ ಪಡೆದರು, ‘ಭಾರತಕ್ಕೆ ಸ್ವಾತಂತ್ರ್ಯ ಲಭಿಸುವಂತೆ ಆಶೀರ್ವದಿಸಿರಿ’ ಎಂದು ಕೇಳಿಕೊಂಡರು. ಆಗ ಶಿವಯೋಗಿಗಳು ‘ಖಂಡಿತ ಸ್ವಾತಂತ್ರ್ಯ ಲಭಿಸುತ್ತದೆ, ಆದರೆ ಅದರ ಫಲವನ್ನು ನಾವು ನೀವು ಪಡೆಯುವುದಿಲ್ಲ, ಮುಂದಿನವರು ಶ್ರೀಫಲ ಪಡೆಯುತ್ತಾರೆ’ ಎಂದರು. ಶಿವಯೋಗಿಗಳ ತ್ಯಾಗ ಹಾಗು ಘನವ್ಯಕ್ತಿತ್ವದ ಕುರಿತು ಟಿಳಕರು ತಮ್ಮ ಚರಿತ್ರೆಯಲ್ಲಿ ಬರೆಯುತ್ತಾರೆ.

ಬಸವ ಬೆಳಗು

               ಬಿದರಿ ಕುಮಾರ ಶ್ರೀಗಳು, ಬಿಳ್ಳೂರು ಗುರುಬಸವರು, ಬಂಥನಾಳ ಸಂಗನಬಸವರು, ಬಬಲೇಶ್ವರ ಶಾಂತವೀರರು, ಗರಗದ ಮಡಿವಾಳೇಶ್ವರರು, ಧಾರವಾಡ ಮುರುಘಾಮಠದ ಮೃತ್ಯುಂಜಯಪ್ಪಗಳು, ಮೋಟಗಿಮಠದ ಚನ್ನಬಸವರು, ಹಾವೇರಿ ಶಿವಬಸವ ಸ್ವಾಮಿಗಳು, ಚಿತ್ರದುರ್ಗದ ಜಯದೇವ ಜಗದ್ಗುರುಗಳು ಹೀಗೆ ಅನೇಕ ಯತಿಪುಂಗವರಿಗೆ ಶ್ರೀಹರಕೆ ನೀಡಿದರು. ಶಿವಯೋಗಿಗಳು ಎನ್ನುವ ಪರುಷ ಸೋಂಕಲು ಅಧ್ಯಾತ್ಮದ ಬಂಗಾರದ ಭುವಿಯು ತುಂಬಿತು.

ಪೊಡಮಡುವೆ

ಅಣ್ಣನ ಭಕ್ತಿ, ಅಕ್ಕನ ವಿರಕ್ತಿ, ಪ್ರಭುವಿನ ಪರಮಜ್ಞಾನ

ಸಂಗಮಿಸಿದುವಿಲ್ಲಿ ನಡೆಯಲ್ಲಿ ನುಡಿಯಲ್ಲಿ

ಇಡಿಯ ಬೆಳಕಿನ ಬಾಳಿನಲ್ಲಿ ದೃಷ್ಟಿ ಕೃಪಾದೃಷ್ಟಿ;

ವಾಣಿ ಶುಭಸೃಷ್ಟಿ; ಅಮೃತಸ್ಮಿತ, ಕಂಡವ ಪುನೀತ;

ಸರ್ವಾಂಗಲಿಂಗ ಮಂಗಲ ತರಂಗ; ಮಹಾಜೀವನ,

ಭುವನ ಪಾವನ, ನಿತ್ಯನೂತನ ಶಿವಚೇತನ;

ಅರ್ಚನವಾವುದೊ ಅರ್ಪಿತವಾವುದೊ ಎಲ್ಲ ಅನುಭಾವ

ಜಾಗೃತವಾವುದೊ ಸ್ವಪ್ನವಾವುದೊ ಎಲ್ಲ ತುರೀಯ

ಇಹವಾವುದೊ ಪರವಾವುದೊ ಎಲ್ಲ ಜೀವನ್ಮುಕ್ತಿ

ಜನನವಾವುದೊ ಮರಣವಾವುದೊ ಎಲ್ಲ ಶಿವಶಕ್ತಿ!

ತೆರೆದೆದೆಗಳ ಸಿಂಪುಗಳಿಗೆ ಶಿವ-ಸ್ವಾತಿ

ಪರಂಜ್ಯೋತಿ ದಿವ್ಯ ಪ್ರೀತಿ ಆತ್ಮ ದಿಧೀತಿ

ಪೊಡಮಡುವೆನು ನಿನ್ನ ಅಡಿಗೆ ಅದರ ಹುಡಿಗೆ

ಧರ್ಮ ಮೂರುತಿ ದೇಹ ಧರಿಸಿ ಮೆರೆದ ಪರಮ ಶರಣ ಸಂಸ್ಕೃತಿ

                                             -ಡಾ. ಸಿದ್ಧಯ್ಯ ಪುರಾಣಿಕ

ಅಪ್ಪನ ವಚನಗಳು

               ಶಿವಯೋಗಿಗಳಿಗೆ ಬಸವಣ್ಣನವರು ಎಲ್ಲ ವಿಧದಲ್ಲಿಯೂ ಮೇಲ್ಪಂಕ್ತಿ ಆಗಿದ್ದರು. ಶರಣರ ವಿಚಾರಗಳನ್ನು ಹೇಳುವುದು ಸರಳ, ಆದರೆ ಆಚರಿಸುವುದು ಕಷ್ಟ. ಆದರೆ ಶಿವಯೋಗಿಗಳಿಗೆ ಬಸವತತ್ವ ಆಚರಣೆ ಕಷ್ಟವಾಗಿರಲಿಲ್ಲ. ಇಷ್ಟವಾಗಿತ್ತು. ಕಾಶಿಯಿಂದ ಬಂದ ಸಂಸ್ಕೃತ ಪಂಡಿತ ಬೃಹತ್ತಾದ ಸಂಸ್ಕೃತ ಗ್ರಂಥ ತಂದುಕೊಟ್ಟ. ತಾವು ಇದನ್ನು ಓದಬೇಕೆಂದು ಒತ್ತಾಯಿಸುತ್ತಾನೆ. ನಾನು ಈಗಾಗಲೇ ಒಂದು ಗ್ರಂಥ ಓದುತ್ತಿದ್ದೇನೆ. ನಿಮ್ಮ ಹತ್ತಿರವೇ ಇರಲಿ ಎಂದು ನಯವಾಗಿ ಗುರುಗಳು ನಿರಾಕರಿಸಿದರು. ಮತ್ತೆ ಆ ಪಂಡಿತ ಬುದ್ಧೀ ಅದು ಮುಗಿದ ಮೇಲಾದರೂ ಇದನ್ನು ಓದಲೇಬೇಕೆಂದು ಒತ್ತಾಯಿಸಿದಾಗ, ‘ಈ ಜನ್ಮ ಮುಗಿಯುವವರೆಗೆ ಅದು ಸಾಧ್ಯವಿಲ್ಲಪ್ಪಾ ಅದು ಮುಗಿಯದ ಮಾಣಿಕ್ಯದೀಪ್ತಿ’ ಎನ್ನುತ್ತಾರೆ. ಯಾವುದದು ಬುದ್ಧಿ ಎಂದ. ಅದು ಶರಣರ ‘ವಚನ ಸಾಹಿತ್ಯ ದರ್ಶನ’. ನಮಗೆಲ್ಲ ಅದೇ ದಾರಿದೀಪ ಶಾಸ್ತ್ರಿಗಳೆ ಎಂದು ವಚನಗಳ ಮನ್ನಣೆಯನ್ನು ಎತ್ತಿ ತೋರಿಸುತ್ತಾರೆ.

               ಮೈಸೂರಿನ ಕಡ್ಲಿಪುರಿ ನಂಜುಂಡಪ್ಪನವರು ಸೊಗಸಾದ ಮಂಚ ತಂದು, ಗಾದಿ-ಕುತನಿ ಅರಿವೆ ಹಾಸಿ, ಅಪ್ಪಾ„ ತಾವು ಇದರ ಮೇಲೆ ನಿತ್ಯವೂ ಪವಡಿಸಬೇಕು ಎಂದು ಪ್ರಾರ್ಥಿಸುತ್ತಾರೆ. ‘ಹೌದಪ್ಪಾ„„ ಇದು ನಮ್ಮ ಅಪ್ಪನ ವಚನಗಳು ಇರಬೇಕಾದ ಸ್ಥಳ’ ಎಂದು ಬಸವಣ್ಣನವರ ವಚನಗ್ರಂಥಗಳನ್ನು ಇಟ್ಟು ಸಾಷ್ಟಾಂಗವೆರಗುತ್ತಾರೆ. ಎಂತಹ ಸೇವಾಭಾವ ಶಿವಯೋಗಿಗಳದು.

               ‘ಈಶನ ಮೀಸಲಪ್ಪ ಭಕ್ತ’ ಎಂದು ಹರಿಹರ ಬಸವಣ್ಣನವರನ್ನು ಬಣ್ಣಿಸುತ್ತಾನೆ. ಅದರಂತೆ ಬಸವಣ್ಣನವರ ಮೀಸಲು ಭಕ್ತಿ ಶಿವಯೋಗಿಗಳದು. ಬಸವಣ್ಣನವರನ್ನು ಅಪ್ಪಾ ಎಂದೇ ಕರೆಯುತ್ತಿದ್ದರು. ಅಪ್ಪನ ವಚನಗಳು ಎಂದೇ ಸಂಬೋಧಿಸುತ್ತಿದ್ದರು. ಅವರಿಗೆ ವಚನಗಳೇ ಮಂತ್ರಗಳು, ಬಸವಣ್ಣನೇ ಬಾಳಜ್ಯೋತಿ, ಸಮತೆಯೇ ಕಂತೆ, ದಾಸೋಹವೇ ದೀಪ್ತಿ, ಸಹಜ-ಸರಳ ಜೀವನವೇ ಶಿವಯೋಗದ ಶಿವಸಿದ್ಧಿ ಯಾಗಿತ್ತು.

ಬದುಕು ಪವಾಡಗಳ ಪರುಷಮಣಿ!

               ಜಮಖಂಡಿ ತಾಲೂಕಿನ ‘ಗುಹೇಶ್ವರಗವಿ’(ಗಡ್ಡಿ)ಯೊಳಗೆ ಅನುಷ್ಠಾನನಿರತರಾದ ಶಿವಯೋಗಿಗಳು ಹತ್ತು ವರುಷಗಳ ಕಾಲ ಏಕಾಂತದೊಳಗೆ ತಪಸ್ಸನ್ನಾಚರಿಸಿದರು. ನದಿ, ಪ್ರಕೃತಿ, ಬಿಲ್ವ-ಬನ್ನಿ, ಹೂವು ಮತ್ತು ಸಂಕುಲಜೀವಿಗಳೇ ಸಂಗಾತಿಗಳಾದವು. ನಾಗರಾಜ(ಸರ್ಪ)ವು ನಿತ್ಯವು ಗುರುಗಳ ಮಂಗಲದ ಸಂದರ್ಭ ಬಂದು ತಲೆದೂಗುತ್ತ ಇರುತ್ತಿದ್ದ. ಮುಂಗೂಸಿ ಕೂಡಾ ಮುಂದೆ ಕುಳಿತಿರುತ್ತಿತ್ತು.  ಪರಸ್ಪರ ದ್ವೇಷ ಸಾಧಿಸುವ ಪ್ರಾಣಿಗಳು ಒಂದಾಗಿರುತ್ತಿದ್ದವು.

               ಅಂಕಲಗಿಯ ಅಡವಿಸಿದ್ಧೇಶ್ವರರ ದರ್ಶನಕ್ಕೆ ಹೊರಟಾಗ ಕಾಡಿನೊಳಗೆ ಹುಲಿ ಬಂದು ಶರಣಾಯಿತು. ಅದಕ್ಕೆ ಉತ್ತತ್ತಿ ನೀಡಿದರು. ಕ್ರೂರ ಪ್ರಾಣಿ ಯೌಗಿಕ ಶಕ್ತಿಗೆ ತಲೆಬಾಗಿತು.

               ಅಥಣಿಯಲ್ಲಿರುವಾಗ ಲಿಂಗಾರ್ಚನೆ ಮುಗಿಸಿ ಬಕುಲವೃಕ್ಷದ ಮುಂದೆ ಬಂದು ಕುಳಿತಾಗ ನಿತ್ಯವೂ ಎರಡು ‘ಶ್ವೇತವರ್ಣದ ಪಕ್ಷಿಗಳು’ ಬಂದು ದರ್ಶನ ನೀಡುತ್ತಿದ್ದವು. ‘ಬುದ್ಧೀ, ಏನಿದರ ಅರ್ಥ’ ಎಂದು ಭಕ್ತರು ಕೇಳಿದಾಗ, ‘ನನ್ನ ಈರ್ವರು ಗುರುವರ್ಯರು ದರ್ಶನ ನೀಡುತ್ತಾರೆ’ ಎಂದರು. ಪ್ರತಿನಿತ್ಯ ಆ ಪಕ್ಷಿಗಳಿಗೆ ಮೌನಿಗಳಾಗಿ ಶರಣು ಸಲ್ಲಿಸುತ್ತಿದ್ದರು.

               ಸಕಲಜೀವ ಸಂಕುಲಗಳಲ್ಲಿ ಶಿವನಿದ್ದಾನೆ ಎಂದು ಪರಿಭಾವಿಸುತ್ತಿದ್ದ ಶಿವಯೋಗಿಗಳು, ಪತ್ರಿಯ ಗಿಡದಿಂದ ಒಂದು ದಿನವೂ ದಳಗಳನ್ನು ಹರಿಯದೆ ಕೆಳಗೆ ನೆಲವನ್ನು ಸಾರಣಿ ಮಾಡಿ, ಕೆಳಗೆ ಬಿದ್ದ ಪತ್ರಿಗಳನ್ನು ಲಿಂಗಕ್ಕೆ ಧರಿಸುತ್ತಿದ್ದರು.

               ಗುರುಗಳ ಬದುಕು ಮೌಲ್ಯಗಳ ಮುತ್ತಿನ ಹಾರವಾಗಿತ್ತು. ಹೆಜ್ಜೆ-ಹೆಜ್ಜೆಗೂ ನೂರೊಂದು ಪವಾಡಗಳು ಜರುಗುತ್ತವೆ. ಅವುಗಳೆಲ್ಲ ಸಹಜವಾಗಿ ಜರುಗಿದ ಲೀಲಾಯೋಗ!

ಶಿವಯೋಗಿ

               ಹುಬ್ಬಳ್ಳಿಯ ಕೈಲಾಸ ಮಂಟಪದಲ್ಲಿ ಕುಳಿತು ಜಗದ್ಗುರು ಸಿದ್ಧಾರೂಢರು ಭಕ್ತಿ, ಹಠ, ರಾಜ, ಮಂತ್ರಯೋಗಗಳ ಕುರಿತು ಪ್ರವಚನ ನೀಡುತ್ತಾರೆ. ಓರ್ವ ಭಕ್ತ ಕೇಳುತ್ತಾನೆ. ನಾಲ್ಕು ಯೋಗಗಳ ಕುರಿತು ಹೇಳಿದಿರಿ. ‘ಶಿವಯೋಗ’ ಕುರಿತು ತಾವು ಹೇಳಲೇ ಇಲ್ಲ ಎಂದರು. ಆಗ ಅವರು ‘ಅದನ್ನು ಹೇಳುವುದಲ್ಲ, ನೋಡಿ ತಿಳಿಯಬೇಕು, ಅರಿತು ಆಚರಿಸಬೇಕು. ಅದನ್ನು ನೋಡಲು ನೀವು ಅಥಣಿಗೆ ಹೋಗಿರಿ. ಅಲ್ಲಿ ಗಚ್ಚಿನಮಠದಲ್ಲಿ ಮುರುಘೇಂದ್ರ ಶಿವಯೋಗಿಗಳಿದ್ದಾರೆ. ಅವರ ‘ಶಿವಯೋಗ’ ಸಾಧನೆ ನೋಡಿದರೆ ಎಲ್ಲವನ್ನೂ ತಿಳಿದಂತೆ ಎಂದು ಅಪ್ಪಣೆ ಕೊಡಿಸುತ್ತಾರೆ. ಅಂತಹ ಅಪರೂಪದ ‘ಶಿವಯೋಗ ಸಾಧನೆಯ’ ಸೀಮಾಪುರುಷರು ಶಿವಯೋಗಿಗಳು.

               ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಅಪ್ಪನ ವಚನಗಳೆಂದು ಅಪ್ಪಿ-ಒಪ್ಪಿ ಬಸವತತ್ವದಲ್ಲಿಯೇ ಬದುಕಿದರು. ಬಯಸಿ ಬಂದುದು ಅಂಗಭೋಗ, ಬಯಸದೇ ಬಂದುದು ಲಿಂಗಭೋಗ ಎಂದು ಬಾಗಿದ ತಲೆ, ಮುಗಿದ ಕೈಯಾಗಿ ಬಾಳಿದ ಯುಗಪುರುಷರು. ಶಿವನ ಆಜ್ಞೆ ಆಗಿದೆ ನಾನು ಬರುತ್ತೇನೆ. ನೀವೆಲ್ಲ ಬಸವ ಭಕ್ತಿ ಮಾರ್ಗದಲ್ಲಿ ನಡೆಯಿರಿ ಎಂದು ಅಪ್ಪಣೆ ಮಾಡಿ 23-4-1921ರಂದು ಶನಿವಾರ ಶಿವಯೋಗದ ಬಯಲಿನಲ್ಲಿ ಬಯಲಾದರು.

ಲೇಖಕರು :ಪೂಜ್ಯ ಮುಪ್ಪಿನ ಬಸವಲಿಂಗ ದೇವರು, ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ

‘ಸುಕುಮಾರ ಶಿವಯೋಗ ಮಂದಿರ ಬ್ಲಾಗ್’ ಸಂಚಿಕೆ-2 ಅಥಣಿ ಮುರುಘೇಂದ್ರ ಶಿವಯೋಗಿಗಳ  ಪುಣ್ಯತಿಥಿ ಯ ಶತಮಾನೋತ್ಸವದ ವಿಶೇಷ ಸಂಚಿಕೆಯಾಗಿ ಹೊರಬರುತ್ತಿರುವುದು ಸಂತಸದ ಸಂಗತಿ.

       ಶ್ರೀ ಕುಮಾರ ಮಹಾಸ್ವಾಮಿಗಳು ಸಮದರ್ಶಿತ್ವದ ಪೂರ್ಣ ರೂಪ. ಶಿವಯೋಗ ಮಂದಿರ ಸಂಸ್ಥೆಯಲ್ಲಿ ಗುರು-ವಿರಕ್ತ ಪೀಠಗಳ ಯೋಗ್ಯ ಉತ್ತರಾಧಿಕಾರಿಗಳಿಗೆ ಶಿಕ್ಷಣ ಕೊಟ್ಟು, ಪರಸ್ಪರರಲ್ಲಿ ಸೌಹಾರ್ದ, ಪ್ರೀತಿ, ಐಕ್ಯತೆ ಬೆಳೆಯುವಲ್ಲಿ ಬಹು ಶ್ರಮಿಸಿದರು.

       ಗುರು ಪೀಠಗಳಲ್ಲಿ ಆದರದ ಭಾವನೆಗಳನ್ನಿಟ್ಟುಕೊಂಡಿದ್ದ ಶ್ರೀಗಳು ಉಜ್ಜಯನಿ ಪೀಠದ ಕಲಹವನ್ನು ಬಗೆಹರಿಸುವಲ್ಲಿ ಬಹಳ ಶ್ರಮಪಟ್ಟರು. ಉಜ್ಜಯಿನಿ ಶ್ರೀ ಸಿದ್ಧಲಿಂಗ ಜಗದ್ಗುರುಗಳು ಶ್ರೀಗಳವರನ್ನು ಗೌರವಾಭಿಮಾನದಿಂದ ಕಂಡು ಶ್ರೀ ಶಿವಯೋಗ ಮಂದಿರಕ್ಕೆ ಆರ್ಥಿಕ ಸಹಾಯ ಮಾಡಿದ್ದನ್ನು ಕಾಣುತ್ತೇವೆ, ಮೇಲಾಗಿ ಹಲವು ಬಾರಿ ಶಿವಯೊಗ ಮಂದಿರಕ್ಕೆ ದಯಮಾಡಿಸಿದ್ದು ದಾಖಲೆಯಲ್ಲಿದೆ. ಶ್ರೀಗಳವರು ಬಸವಾದಿಶರಣರ ವಿಚಾರಗಳನ್ನು ಬಹುವಿಧವಾಗಿ ಒಪ್ಪಿ, ಅಪ್ಪಿರುವಂಥವರು.

 

ಲಿಂಗೈಕ್ಯ ಮಹಾತಪಸ್ವಿ ಶ್ರೀ ಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು

       ವಿರಕ್ತರಲ್ಲಿರುವ ಸಮಯ ಭೇದಗಳಿಗೆ ಶ್ರೀಗಳು ಅವಕಾಶ ಕೊಡಲಿಲ್ಲ. ಎಲ್ಲ ವಿರಕ್ತ ಪೀಠಗಳಿಗೆ ಪ್ರಭು ಸಂಪ್ರದಾಯವೆ ಮೂಲವೆಂದು ಹಾನಗಲ್ಲ ಪೀಠಕ್ಕೆ ಬೇಕಾದಷ್ಟು ಬಿರುದಾವಳಿಗಳಿದ್ದರೂ ಸ್ವಪ್ರತಿಷ್ಠೆ ನಿರಪೇಕ್ಷಿತರಾದ ಶ್ರೀಗಳು ತಮ್ಮ ಬರವಣಿಗೆಗಳಲ್ಲಿ, ಪತ್ರಗಳಲ್ಲಿ ‘ಶ್ರೀನಿರಾಭಾರಿ ದೇಶಿಕವರೇಣ್ಯ ಶ್ರೀ ಅಲ್ಲಮಪ್ರಭು ಸ್ವಾಮ್ಯನ್ವಯಗತ ಹಾನಗಲ್ಲ ಕುಮಾರ ಸ್ವಾಮಿಗಳು’ ಎಂದು ಬರೆದು; ಬರೆಯಿಸುತ್ತಿದ್ದನ್ನು ಕಾಣುತ್ತೇವೆ.

       ಮದನಾದಿ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ತರುವಾಯ ಅವರ ಏಳನೇಯ ಪರಂಪರೆಯ ಬಾಚನಹಳ್ಳಿ ಕೌದಿ ಮಹಾಂತ ಸ್ವಾಮಿಗಳು ಶ್ರೀ ಅರ್ಧನಾರೀಶ್ವರರೆಂಬುವವರಿಗೆ ಅಧಿಕಾರ ಅನುಗ್ರಹವನ್ನು ನೀಡಿ ಬಾಚನಹಳ್ಳಿಯಲ್ಲಿ ಲಿಂಗೈಕ್ಯರಾಗುವರು. ಅವರಲ್ಲಿದ್ದ ಚರಮೂರ್ತಿಗಳಿಂದ ಕುಮಾರ, ಮುರುಘ, ಚಿಲ್ಲಾಳ, ಕೆಂಪಿನ ಎಂಬ ಶಾಖೆಗಳು ಸಮಯಭೇದಗಳಾಗುವವು. ಸಮಯಗಳೆಂದರೆ ಗುರುಗಳ ಆಚಾರ ಭೇದದಿಂದ ಈ ಕಲ್ಪನೆ ಉಂಟಾಯಿತೆ ಹೊರತು ತಾತ್ವಿಕ ಆಧಾರದಿಂದಲ್ಲ. ಒಂದು ಸಮಯದ ಸ್ವಾಮಿಗಳು ಇನ್ನೊಂದು ಸಮಯದ ಸ್ವಾಮಿಗಳನ್ನು ಕಂಡರೆ, ಸಂಪರ್ಕಿಸಿದರೆ ಮಹಾ ಮೈಲಿಗೆ ಎಂಬ ಭಾವ ಎಲ್ಲರಲ್ಲಿಯು ಮೂಡಿ, ಒಂದು ಸಮಯದ ಸ್ವಾಮಿಗಳು ಇನ್ನೊಂದು ಸಮಯದ ಮಠಕ್ಕೆ ಬಂದರೆ ಮಠ ತೊಳೆಯುವ ಪದ್ಧತಿ ಜಾರಿಯಲ್ಲಿತ್ತು.

‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದಡೆ ನಿಲಬಹುದೆ’  ಮರ್ತ್ಯದ ಮೈಲಿಗೆ ತೊಳೆಯಬೇಕಾದವರಲ್ಲಿಯೇ ಈ ಭಾವವಿದ್ದರೆ ಹೇಗೆ? ಹೀಗಾದಲ್ಲಿ ಸಮಾಜ ಅಭಿವೃದ್ದಿ ಕಾಣುವುದೆಂತು? ಎಂದು ವಿಚಾರಿಸಿ; ಮನನೊಂದರು. ಸಮಾಜದಲ್ಲಿರುವ  ಅಸ್ಪೃಶ್ಯತೆ ನಿವಾರಣೆಗೆ ಮಹತ್ಮಾ ಗಾಂಧೀಜಿಯವರು

ಹೋರಾಡಿದಂತೆ ಶ್ರೀಗಳವರು ಶಾಸ್ತ್ರಸಮ್ಮತವಲ್ಲದ, ಸಮಾಜದ ಸಮಗ್ರತೆಗೆ ಮಾರಕವಾದ ಈ ಸಮಯಭೇದ ನಿವಾರಣೆಗೆ ಅಷ್ಟೆ ಪರಿಣಾಮಕಾರಿಯಾದ ಯೋಜನೆ ಮಾಡಿ ಹೋರಾಟ ಮಾಡಿದರು.

ಸಮಯಭೇದದ ನಿವಾರಣೆಯ ಕುರಿತು ಮಲ್ಲನಕೆರೆ ಶ್ರೀಗಳೊಂದಿಗೆ ಚರ್ಚಿಸಿ,ಮದನಾದಿ ನಿರಂಜನ ತೋಂಟದ ಸಿದ್ಧಲಿಂಗ ಶಿವಯೋಗಿಗಳ ದರ್ಶನ ಮಾಡಬೇಕೆಂದು ತಿರ್ಮಾನಿಸಿದರು. ಗದುಗಿನ ತೋಂಟದ ಜಗದ್ಗುರುಗಳನ್ನು ಶಿವಯೋಗಮಂದಿರಕ್ಕೆ ವೈಭವದಿಂದ ಬರಮಾಡಿಕೊಂಡರು. ಶ್ರೀ ಶಿವಯೋಗ ಮಂದಿರದ ಎಲ್ಲ ಪರಿವಾರದೊಂದಿಗೆ ಯಡಿಯೂರಿಗೆ ದಯಮಾಡಿಸಿದಾಗ ಗದುಗಿನ ತೋಂಟದ ಜಗದ್ಗುರುಗಳು ಅಷ್ಟೇ ಪ್ರಿತ್ಯಾದಾರದಿಂದ ಬರಮಾಡಿಕೊಂಡರು. ಶ್ರೀಗಳವರು ಶಿವಯೋಗ ಸಾಮ್ರಾಟ್ ತೋಂಟದ ಸಿದ್ಧಲಿಂಗ ಗುರುಗಳಲ್ಲಿ ಧ್ಯಾನಸ್ಥ ರಾಗಿ ತಮಗಿರುವ ಸಂಶಯಕ್ಕೆ ಪರಿಹಾರ ಕಂಡುಕೊಂಡರು.

ಲಿಂ. ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಜೊತೆಗೆ  ಪಾದಯಾತ್ರೆ ೧೯೧೨ ರಲ್ಲಿ ಪೂಜ್ಯ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು ಸುಕ್ಷೇತ್ರ ಯಡೆಯೂರು

ಲಿಂ. ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಜೊತೆಗೆ  ಪಾದಯಾತ್ರೆ ೧೯೧೨ ರಲ್ಲಿ ಪೂಜ್ಯ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು ಸುಕ್ಷೇತ್ರ ಯಡೆಯೂರು         ಶ್ರೀಗಳವರು ನಾಲ್ಕು ಸಮಯದ ಜಗದ್ಗುರುಗಳು ಇದ್ದಲ್ಲಿಯೇ ದಯಮಾಡಿಸಿ ಐಕ್ಯಮತ ತರುವಲ್ಲಿ ಬಹು ಹೆಣಗಾಡಿದರು

ಲಿಂ.ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಚಿತ್ರದುರ್ಗ

ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರಿಗೆ ಕಾಶಿಯಲ್ಲಿ ಅಧ್ಯಯನ ಮಾಡುವಾಗ ಆರ್ಥಿಕ ಸಹಾಯ ಮಾಡಿ; ಬೃಹನ್ಮಠ ಚಿತ್ರದುರ್ಗದ ಜಗದ್ಗುರು ಪೀಠಕ್ಕೆ ಶ್ರೀಗಳವರೇ ಬರಮಾಡಿಕೊಂಡಿದ್ದು ಇತಿಹಾಸ. ಅನಂತಪುರದ ಬೆಕ್ಕಿನಕಲ್ಮಠದ ಲಿಂಗಮಹಾಸ್ವಾಮಿಗಳನ್ನು ಶಿವಯೋಗ ಮಂದಿರದ ಪ್ರಥಮ ಜಾತ್ರಾಮಹೋತ್ಸವಕ್ಕೆ ಬರಮಾಡಿಕೊಂಡರು.

ಅನಂತಪುರದ ಬೆಕ್ಕಿನಕಲ್ಮಠದ ಪೂಜ್ಯ ಜಗದ್ಗುರು ಶ್ರೀ ಲಿಂಗಮಹಾಸ್ವಾಮಿಗಳ ಜೊತೆಗೆ ಪೂಜ್ಯ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು

.  ಪೂಜ್ಯರ ಸಮಾಜ ಪ್ರೇಮ ಕಂಡ ಲಿಂಗಮಹಾಸ್ವಾಮಿಗಳು ಮಲೆನಾಡಿನಲ್ಲಿ ಶಾಖಾ ಶಿವಯೋಗ ಮಂದಿರವಾಗ ಬೇಕೆಂಬ ಇಚ್ಛೆಯಂತೆ   ಕಪನಹಳ್ಳಿ (ಕಾಳೇನಹಳ್ಳಿ) ಶಾಖಾಶಿವಯೋಗ ಮಂದಿರ ಸ್ಥಾಪನೆಮಾಡಿದರು. ಕುಮಾರಸಮಯದ ಮೂರುಸಾವಿರ ಮಠದ ಗಂಗಾಧರ ಜಗದ್ಗುರುಗಳನ್ನು ಆದರದಿಂದ ಕಂಡು ಅವರ ಸಾನಿಧ್ಯದಲ್ಲಿ ಬಂಕಾಪುರದಲ್ಲಿ ಧರ್ಮೋತ್ತೇಜಕ ಸಭೆಯನ್ನು ಸ್ಥಾಪಿಸಿ ಹಲವು ಸಮಾಜೋಧಾರ್ಮಿಕ ಕಾರ್ಯಗಳನ್ನು ಕೈಕೊಂಡು ಸಮಯಭೇದ ಜಗದ್ಗುರುಗಳಿಗೆಲ್ಲಾ ಆದರ್ಶರಾದರು.

         ಪೂಜ್ಯ ಶ್ರೀಗಳವರು ಅಥಣಿ ಮುರುಘೇಂದ್ರ ಶಿವಯೋಗಿಗಳನ್ನ ಬಹಳ ಗೌರವಿಸುತ್ತಿದ್ದರು. ಮಂದಿರದ ವಟುಗಳನ್ನ, ಸಾಧಕರನ್ನ, ಸ್ವಾಮಿಗಳನ್ನ ಶಿವಯೋಗಿಗಳ ಸಾತ್ವಿಕ ತಪಶಕ್ತಿಯ ದರ್ಶನ ಪಡೆಯಲು ಕಳುಹಿಸುತ್ತಿದ್ದರು.

ಪೂಜ್ಯ ಲಿಂ. ಅಥಣಿ  ಮುರುಘೇಂದ್ರ ಶಿವಯೋಗಿಗಳು

         ನಾನು ಶಿವಯೋಗ ಮಂದಿರದಲ್ಲಿ ಓದುವಾಗ ಸಂಸ್ಥೆಯ ಅಧ್ಯಕ್ಷರಾದ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಅಪ್ಪಣೆ ಪಡಿಸಿದ್ದು ನೆನಪುಂಟು ‘ ಒಮ್ಮೆ ಜಯದೇವ ಜಗದ್ಗುರುಗಳು ಶ್ರೀಗಳವರ ಬೇಟಿ ಸಂದರ್ಭದಲ್ಲಿ ಶಿವಯೋಗ ಮಂದಿರದ ಕಾರ್ಯೋದ್ಯೇಶಗಳ ಪ್ರಗತಿಯ ಕುರಿತು ಮಾತನಾಡುತ್ತಿರುವಾಗ ಶ್ರೀಗಳವರು ನಮ್ಮ ಶಿವಯೋಗ ಮಂದಿರ ಸಂಸ್ಥೆಯಲ್ಲಿ ಅಥಣಿ ಶಿವಯೋಗಿಗಳಂಥ ಶಿವಯೋಗಿಗಳು ತಯಾರಾಗಬೇಕು ಇದೆ ನಮ್ಮ ಘನ ಉದ್ದೇಶವೇಂದರಂತೆ ಆಗ ಜಯದೇವ ಜಗದ್ಗುರುಗಳು ನಮ್ಮ ಬೃಹನ್ಮಠದ ಪರಂಪರೆಯಲ್ಲಿ ತಮ್ಮಂಥ ಸಮಾಜ ಕಳಕಳಿಯುಳ್ಳ ಸಮಾಜಪ್ರೇಮಿ ಸ್ವಾಮಿಗಳು ಬರಬೇಕು’ ಎಂದು ಪರಸ್ಪರ ಗೌರವ ಮಾತುಗಳಾಡಿದ್ದನ್ನ ಸ್ಮರಿಸಬಹುದು.

ಪೂಜ್ಯ ಶ್ರೀಗಳು ಅಥಣಿ ಶಿವಯೋಗಿಗಳಲ್ಲಿ ಬಹು ಭಕ್ತಿಯಿಂದ

                  ಮಂಗಳಾರತಿ ದೇವಗೆ ಶಿವಯೋಗಿಗೆ | ಕಂಗಳಾಲಯ ಸಂಗಗೆ |

                 ಜಂಗಮಲಿಂಗಬೇದದ   ಸ್ವಯಚರಪರ |

                 ದಿಂಗಿತವರುಪಿದರಿತಾಚರಿಸಿದ ಮಹಿಮಗೆ           ಎಂದು ಭಾವ ತುಂಬಿ ಸ್ಮರಿಸಿರುವರು. ಶ್ರೀಗಳವರು ಶಿವಯೋಗ ಮಂದಿರದ ಪರಿಸರದಲ್ಲಿ ಗುರು-ವಿರಕ್ತ ಮತ್ತು ವಿರಕ್ತರಲ್ಲಿನ ಸಮಯಭೇದದ ಸಂಕುಚಿತ ಭಾವನೆಗೆ ಅವಕಾಶಕೊಡದೆ ಸಮದರ್ಶಿತ್ವವನ್ನು ಮೆರೆದಿರುವರು

ಲೇಖಕರು : ಲಿಂ. ಬಿ.ಡಿ.ಜತ್ತಿ  ಮಾಜಿ ರಾಷ್ಟ್ರಪತಿ ಗಳು ಭಾರತ ಸರಕಾರ  ಅವರ ಆತ್ಮ ಕಥೆ “ನನಗೆ ನಾನೇ ಮಾದರಿ”  ಪುಸ್ತಕ ದಿಂದ ಆಯ್ದ ಬರಹ

“…… ಈ ಮೊದಲು ಹೇಳಿದಂತೆ ನಾನು ನನ್ನ ತಂದೆತಾಯಿಗಳಿಗೆ ಮೊದಲನೆಯ ಮಗ , ನಾನು ನಮ್ಮ ಊರಲ್ಲಿಯೇ ಇರುವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ , ಆ ಕಾಲಕ್ಕೆ ನನ್ನ ತಂದೆ ವ್ಯಾಪಾರದ ಸಲುವಾಗಿ ಅಥಣಿಗೆ ಪದೇ ಪದೇ ಹೋಗುತ್ತಿದ್ದರು . ಅಲ್ಲಿಗೆ ಹೋದಾಗ ತಪ್ಪದೇ ಅಲ್ಲಿಯ ಗಚ್ಚಿನ ಮಠಕ್ಕೆ ಹೋಗಿ ಅಲ್ಲಿ ಇದ್ದ ಶಿವಯೋಗಿ  ಶ್ರೀ ಮುರುಘೇಂದ್ರ ಸ್ವಾಮಿಗಳ ದರ್ಶನ ತೆಗೆದುಕೊಂಡು ತಮ್ಮ ಕೆಲಸಕ್ಕೆ ಹೋಗುತ್ತಿದ್ದರು . ಒಂದು ಸಲ ಶಿವಯೋಗಿಗಳು ಪೂಜಾವಿಧಿಗಳನ್ನು ಮುಗಿಸಿ ಕುಳಿತಿದ್ದರು . ಆಗ ಅವರು ನನ್ನ ತಂದೆಗೆ ಮಕ್ಕಳು ಎಷ್ಟು ? ಎಂದು ಕೇಳಿದರು . ಅದಕ್ಕೆ ನನ್ನ ತಂದೆಯವರು ಒಬ್ಬಾಕೆ ಮಗಳು , ಒಬ್ಬ ಮಗ ಎಂದು ಹೇಳಿದರು . ಆಗ ಶಿವಯೋಗಿಗಳು ಅವನ ಹೆಸರು ಏನು ? ಅವನು ಹೇಗಿದ್ದಾನೆ ? ಎಂದು ಕೇಳಿದುದ್ದಕ್ಕೆ ಅವನ ಹೆಸರು ಬಸಪ್ಪ , ಸ್ವಲ್ಪ ತುಂಟ , ಹಿಡಿಯುವುದು ಕಷ್ಟವಾಗಿದೆ ” ಎಂದು ಹೇಳಿದರು . ಅದಕ್ಕೆ ಶಿವಯೋಗಿಗಳು “ ಹಾಗೆ ಹೇಳಬೇಡಪ್ಪ , ಮುಂದೆ ಅವನು ರಾಜನಾಗುತ್ತಾನೆ ” ಎಂದು ಹೇಳಿದರು . ಇಷ್ಟು ಶಿವಯೋಗಿಗಳ ಆಶೀರ್ವಾದ ಕೇಳಿಕೊಂಡು ತಮ್ಮ ಕೆಲಸಕ್ಕೆ ತೆರಳಿದರು “

ಮಾನ್ಯ ಶ್ರೀ ಬಿ,ಡಿ,ಜತ್ತಿ ಪ್ರಮಾಣವಚನ

ಲೇಖಕರು ಡಾ . ಪಂಚಾಕ್ಷರಿ ಹಿರೇಮಠ

(ಗ್ರಂಥ ಋಣ : ಕೈವಲ್ಯ ಶ್ರೀ ಸರ್ಪಭೂಷಣ ಶಿವಯೋಗಿಗಳ  ಸ್ಮರಣ ಸಂಪುಟ)

ಮೊಗ್ಗೆಯ ಮಾಯಿದೇವರು ‘ ಶಿವಾನುಭವಸೂತ್ರ’ದಲ್ಲಿ

ಉಪಾಸನೈವ ಸುಯೋಗಃ  ಸಂಯೋಗೋದ್ಯ್ವತ ಸಂಲಯಃ

ದ್ವ್ಯತಸ್ಯ ವಿಲಶ್ಚೈ ವ ನಿವೃತ್ತಿಃ  ಪರಿಕೀರ್ತಿತಾ |

ನಿವೃತ್ತಿರೇವ ವಿಶ್ರಾಂತಿಃ , ವಿಶ್ರಾಂತಿಃ  ಪರಮಂ ಪದಂ  ||

ಲಿಂಗೋಪಾಸನೆಯೇ ಲಿಂಗಾಂಗಗಳ ಸಂಯೋಗವೆಂದೆನಿಸುವುದು . ಆ ಸಂಯೋಗವೇ ದ್ವ್ಯತವಿಲಯವು , ಆ ದ್ವ್ಯತವಿಲಯವೇ ನಿವೃತ್ತಿ ( ಶಿವತ್ವದ ಪ್ರಾಪ್ತಿಯಿಂದ ಉಂಟಾದ ಜೀವತ್ವದ ಬಿಡುಗಡೆ ) ಆ ನಿವೃತ್ತಿಯೇ ವಿಶ್ರಾಂತಿಯು , ಈ ವಿಶ್ರಾಂತಿಯೇ ವೀರಶೈವರ ಮೋಕ್ಷರೂಪವಾದ ಪರಮಪದವು – ಎಂದು ಅಪ್ಪಣೆ ಕೊಡಿಸಿದ್ದಾರೆ . ಇಲ್ಲಿ ಉಪಾಸನೆಯ ಅರ್ಥ ಸ್ವಸ್ವರೂಪಾನುಸಂಧಾನವೆಂದೇ ಅರ್ಥ .

 ಇಂಥ ಶಿವಯೋಗಸಿದ್ದರು ಹೇಗೆ ಬರುತ್ತಾರೆ ; ಹೇಗೆ ಶಿವನಲ್ಲಿ ಅಂದರೆ ಲಿಂಗದಲ್ಲಿ ಒಂದಾಗುತ್ತಾರೆಂಬುದನ್ನು ಉರಿಲಿಂಗಪೆದ್ದಿಗಳ ಈ ವಚನ ವಿವರಿಸುತ್ತದೆ-

 ಲೋಕದಂತೆ ಬಾರರು , ಲೋಕದಂತೆ ಇರರು

 ಲೋಕದಂತೆ ಹೋಗರು  ನೋಡಯ್ಯ

ಪುಣ್ಯದಂತೆ ಬಪ್ಪರು , ಜ್ಞಾನದಂತೆ ಇಪ್ಪರು

ಮುಕ್ತಿಯಂತೆ ಹೋಹರು ನೋಡಯ್ಯ

ಉರಿಲಿಂಗದೇವಾ ನಿಮ್ಮ ಶರಣರು

ಉಪಮಾತೀತರಾಗಿ ಉಪಮಿಸಬಾರದು .

  ಇಂಥ ಉಪಮಿಸಬಾರದ ಪರಮಚೈತನ್ಯ , ಚಿತ್ಸ್ವರೂಪ , ಅಖಂಡ ತೇಜೋಮೂರ್ತಿ , ಚಿದ್ವಿಲಾಸಾನಂದಸ್ವರೂಪ , ಲಿಂಗಾನಂದಲೀಲಾಲೋಲ , ಚಿದ್ಘನಪ್ರಣವಸ್ವರೂಪಿ , ಚಿನ್ಮಯ ಮಂತ್ರಮೂರ್ತಿ , ಮಹಾಜಂಗಮ ಶ್ರೀಮದಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು . ಅಂತರಂಗದಲ್ಲಿ ಅರಿವು , ಬಹಿರಂಗದಲ್ಲಿ ಶಮೆ , ದಯೆ , ಸರ್ವಶಾಂತಿ , ನಂಬಿದ ಸಜ್ಜನ ಸದ್ಭಕ್ತರ ರಕ್ಷಕ , ಭಾವಕ್ಕೆ ಜಂಗಮವಾಗಿ , ಪ್ರಾಣಕ್ಕೆ ಲಿಂಗವಾಗಿ , ಕಾರ್ಯಕ್ಕೆ ಗುರುವಾಗಿ ಬಂದ ಪದಾರ್ಥವ ಲಿಂಗಾರ್ಪಿತವ ಮಾಡುತ್ತ , ಬಾರದ ಪದಾರ್ಥವ ಮನದಲ್ಲಿ ನೆನೆಯದೆ , ಮಾನವರ ಬೇಡದೆ , ಭಕ್ತರ ಕಾಡದೆ , ನಿರ್ಗಮನಿಯಾಗಿ ಸುಳಿವ ಆತ ಮಹಾಲಿಂಗ ಜಂಗಮನಾಗಿದ್ದಾತ . ಆತನ ನೆನಹೇ ಪ್ರಾಣಜೀವಾಳವೆನಗೆ .

ಆತನ ನಡೆ ಇಷ್ಟಲಿಂಗ , ಆತನ ಮಾರ್ನುಡಿ ಪ್ರಾಣಲಿಂಗ , ನಡೆ – ನುಡಿಗಳ ಒಂದಾಗಿಸಿ ಭಾವಲಿಂಗ ಮಾಡಿಕೊಂಡ , ಮಹಾ ಮಹಿಮರು ಶ್ರೀಮದಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು .

 ಶಿವಯೋಗಿಗಳಿಗೆ ಧ್ಯಾನವೇ ಅಂತರಂಗದ ಪ್ರಾಣಲಿಂಗ ಪೂಜೆಯಾಗಿತ್ತು ಧಾರಣವೇ ಬಹಿರಂಗದ ಇಷ್ಟಲಿಂಗ ಪೂಜೆಯಾಗಿತ್ತು ; ಸಮಾಧಿಯೇ ಭಾವಲಿಂಗದ ಸಂಧಾನಕ್ರಿಯೆಯಾಗಿತ್ತು .

 ಶಿವಯೋಗಿಗಳಿಗೆ ನಿಜಪದವಿ , ಅವರ ಆರಾಧ್ಯಮೂರ್ತಿ ಅಪ್ಪ ಬಸವಣ್ಣ ವರ್ಣಿಸಿದ “ಜಗದಗಲ , ಮುಗಿಲಗಲ , ಮಿಗೆಯಗಲ ನಿಮ್ಮಗಲ , ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ , ಅಗಮ್ಯ ಅಗೋಚರ , ಅಪ್ರತಿಮಲಿಂಗ ‘ ದಲ್ಲಿ ದೃಗ್ಗೋಚರವಾಗುತ್ತಿತ್ತು .

ನನ್ನ ಪರಮಾರಾಧ್ಯ ಮೃತ್ಯುಂಜಯ ಅಪ್ಪಗಳು ತಮ್ಮ ಆಶೀರ್ವಚನದ ಕಾಲದಲ್ಲಿ ಶ್ರೀ ಶಿವಯೋಗಿಗಳ ಜೀವಿತ ಕಾಲದಲ್ಲಿ ನಡೆದ ಒಂದಲ್ಲ ಒಂದು ಘಟನೆಯನ್ನು ಆನಂದತುಂದಿಲರಾಗಿ ಭಕ್ತ ತಿಂಥಿಣಿಗೆ ಬೋಧಿಸುತ್ತ ತನ್ಮಯರಾಗುತ್ತಿದ್ದರು . ಒಮ್ಮೆ ಶಿವಯೋಗಿಗಳು ಸದಾ ಲಿಂಗಧ್ಯಾನದಲ್ಲಿ ಲಿಂಗಪೂಜೆಯಲ್ಲಿ ರುತ್ತಿದ್ದರು ಎಂಬುದನ್ನು ಅಪ್ಪಣೆ ಕೊಡಿಸಿದರು . ಅಥಣಿ ಗಚ್ಚಿನಮಠದಲ್ಲಿ ಶಿವಯೋಗಿಗಳ ಸೇವೆಯಲ್ಲಿ ಪೂಜ್ಯ ಅಪ್ಪಗಳಿದ್ದಾರೆ . ಅವರ ಭಾಗ್ಯವೇ ಭಾಗ್ಯ , ಸುತ್ತಲೂ ಎತ್ತರದ ಪ್ರಾಕಾರ , ಬಕುಲ , ಆಕಾಶ ಮಲ್ಲಿಗೆಗಳು ಅವುಗಳ ಮಧ್ಯೆ ಶಿವಯೋಗಿಗಳ ಪೂಜಾಕೋಣೆ , ವಿಶ್ರಾಂತಿಧಾಮ . ಶಿವಯೋಗಿಗಳ ಲಿಂಗಾರ್ಚನೆಗೆ ಅಣಿಮಾಡಿ , ಲಿಂಗಾರ್ಚನೆಗೆ ದಯಮಾಡಿಸಬೇಕೆಂದು ಬಿನ್ನಹ ಮಾಡಲು ಅಪ್ಪಗಳು ಶಿವಯೋಗಿಗಳಿದ್ದಲ್ಲಿಗೆ ಬಂದಿದ್ದಾರೆ . ಆಗ ಶಿವಯೋಗಿಗಳು ಎಡಗೈ ಮುಂದೆ ಚಾಚಿ ಬಲಹಸ್ತದಿಂದ ಪತ್ರಿ ಪುಷ್ಪ ಏರಿಸುತ್ತಿದ್ದಾರೆ . ಅಪ್ಪಗಳಿಗೆ ಅಲ್ಲಿ ಲಿಂಗ ಕಾಣಿಸುತ್ತಿಲ್ಲ . ಬಲಗೈಯಲ್ಲಿ ಪತ್ರಿಪುಷ್ಟಗಳಿಲ್ಲ . ಆದರೂ ಲಿಂಗಪೂಜೆ ನಡೆದಿದೆ . ಅಪ್ಪಗಳು ‘ ಮಾತು ಅಲ್ಲಿ ಮೈಲಿಗೆ ‘ ಎಂಬುದನರಿತು ಮೌನವಾಗಿದ್ದಾರೆ . ಇದ್ದಕ್ಕಿದ್ದಂತೆ ಶಿವಯೋಗಿಗಳು ‘ ಆಹಾ ಆಹಾ … ಏನು ಬೆಳಕು ಓ ಮಹಾಬೆಳಕು …. ಎಂಬ ಉದ್ಗಾರ ತೆಗೆಯುತ್ತಾರೆ . ಆಗ ಅಪ್ಪಗಳು ಮಂತ್ರಮುಗ್ಧರಾಗಿ ಸಾಷ್ಟಾಂಗ ಹಾಕುತ್ತಾರೆ . ಈ ಕ್ರಿಯೆ ಅದೆಷ್ಟೋ ಕಾಲ ನಡೆಯುತ್ತದೆ . ಹೀಗೆ ಲಿಂಗದೊಂದಿಗೆ ಲಿಂಗವಾಗಿದ್ದರು ಶ್ರೀಮದಥಣಿ ಶಿವಯೋಗಿಗಳು .

 ಶ್ರೀ ಮುರುಘೇಂದ್ರ ಶಿವಯೋಗಿಗಳು ತಮ್ಮ ಇರುವಿಕೆಯಿಂದ , ಲಿಂಗ ನಿಷ್ಠೆಯಿಂದ ಅಥಣಿಯನ್ನು ಸುಕ್ಷೇತ್ರವನ್ನಾಗಿ ಮಾಡಿದರು . ಅಥಣಿಯ ಗಚ್ಚಿನಮಠದಲ್ಲಿ ಶ್ರೀ ಶಿವಯೋಗಿಗಳು ಸಮಗ್ರ ನಲವತ್ತು ವರ್ಷಗಳ ಕಾಲ ತಮ್ಮ ಗುರುಗಳ ಅಪ್ಪಣೆಯ ಪ್ರಕಾರ ನೆಲೆಸಿದ್ದರು . ಅಲ್ಲಿ ಹಾಗೆ ನೆಲೆಸುವ ಪೂರ್ವದಲ್ಲಿ ನಲವತ್ತೈದು ವರ್ಷಗಳ ಕಾಲ ದೇಶಸಂಚಾರಗೈದರು . ಹೀಗೆ ಎಂಬತ್ತೈದು ವರ್ಷಗಳ ತಮ್ಮ ಜೀವಿತ ಕಾಲದಲ್ಲಿ ಶ್ರೀ ಶಿವಯೋಗಿಗಳು ಅಷ್ಟಾವರಣ , ಪಂಚಾಚಾರ , ಷಟ್‌ಸ್ಥಲಗಳಿಗೆ ತಮ್ಮ ಆಚರಣೆಯಿಂದ ವ್ಯಾಖ್ಯೆ ಬರೆದರು . ವೀರಶೈವ ಶಾಸ್ತ್ರಕ್ಕೂ , ಅನುಭಾವಕ್ಕೂ , ಶಿವಯೋಗಕ್ಕೂ , ಸಂಕೇತವಾದರು . ಲಿಂಗಾಂಗ ಸಾಮರಸ್ಯವೆಂಬುದು ಅವರಿಗೆ ಸಹಜ ಕ್ರಿಯೆಯಾಗಿತ್ತು . ಮುಪ್ಪಿನ ಷಡಕ್ಷರದೇವರು ನುಡಿದಂತೆ ‘ ಎನ್ನ ಕರದೊಳಗಿರ್ದು ಎನ್ನೊಳೇತಕೆ ನುಡಿಯೆ , ಎನ್ನ ಭವಭವದಲ್ಲಿ ಬಿಡದಾಳ್ದನೇ ‘ ಎಂದು ನಿತ್ಯವೂ ಅಂಗೈಯ ಲಿಂಗಯ್ಯನನ್ನು ಕೇಳಿ ಕೇಳಿ – ಭಕ್ತಿಯಿಂದ ಒಲಿಸಿಕೊಂಡು , ಆತನೊಂದಿಗೆ ಮಾತನಾಡಿ , ಆತನನ್ನು ಅಪಾರವಾಗಿ , ಒಲಿದು ರಮಿಸಿದರು . ‘ ಎನ್ನ ಭಾಗ್ಯದ ಸುಧೆಯೇ ‘ ಎನ್ನ ಭಕ್ತಿಯ ನಿಧಿಯೇ ಎನ್ನ ಮನವೆಂಬ ವನಿತೆಯ ತಿಲಕವೇ ಎಂದು ಲಿಂಗಯ್ಯನನ್ನು ಕೊಂಡಾಡಿ ‘ ಎನ್ನನಗಲದೆ ಕೂಡಿ ಬಿಡದಾಳ್ತನೇ ಎಂದು ಓಲೈಸಿದರು .

ಶಿವಯೋಗಿಗಳು ಲಿಂಗವ ಪೂಜಿಸಿ , ಲಿಂಗವ ಒಲಿಸಿಕೊಂಡು ತಾವೇ ಲಿಂಗವಾಗಿ ಪೂಜೆಗೊಂಡರು . ಲಿಂಗ ವ್ರತದಿಂದ ಲಿಂಗ ಸ್ವರೂಪರಾದ ಶಿವಯೋಗಿಗಳು ಓಂಕಾರವೇ ಕಾಯವಾಗಿ , ಪಂಚಾಕ್ಷರಗಳೇ ಪಂಚೇಂದ್ರಿಯಗಳಾಗಿ , ಅಂಗವೆಲ್ಲ ಮಂತ್ರ ಪಿಂಡವೆನಿಸಿ , ಮಂತ್ರ ಮೂರುತಿಗಳಾದರು . ಇದರಿಂದಾಗಿ ಅವರು ಸತ್ ಚಿತ್ ಆನಂದಸ್ವರೂಪೆನ್ನಿಸಿಕೊಂಡರು . ಹೊಳೆ ಹೊಳೆವ ಚಿಚ್ಚೈತನ್ಯ  ಕಳಾಕೀರ್ತಿ ಶಿವಯೋಗಿಗಳ ಪದತಲದಲ್ಲಿ ಬಂದು ನೆಲೆಸಿತು .

 ಅಥಣಿಯ ಸುಕ್ಷೇತ್ರಕ್ಕೆ ಸಮೀಪದ ನಯನ ಮನೋಹರವಾದ ಕೃಷ್ಣಾ ನದಿಯ ದಂಡೆಯ ಮೇಲೆ ಸ್ಥಿತಗೊಂಡಿರುವ ಇಂಗಳಗಾವಿ , ಅಲ್ಲಿಯ ಮಠದೊಡೆಯ ವೇ . ಮೂ . ರಾಚಯ್ಯನವರು . ಅವರಿಗೆ ಮಹಾಸಾದ್ವಿಶಿರೋಮಣಿ ನಿಜಸತಿ ನೀಲಾಂಬಿಕಾದೇವಿ . ಇಬ್ಬರೂ ಮಹಾಜಂಗಮ ಪ್ರೇಮಿಗಳು , ಅವರ ಪುತ್ರ ಗುರುಲಿಂಗಯ್ಯ , ದಿವ್ಯಲಿಂಗದ ಘನತೇಜೋಮೂರ್ತಿ ತಾನೇ ಆಗಬೇಕೆಂದು ಅಥಣಿಯ ಗಚ್ಚಿನ ಮಠಕ್ಕೆ ಬಂದ ಬಾಲಕ ಗುರುಲಿಂಗಯ್ಯ , ಪರಮ ತಪಸ್ವಿ ಶ್ರೀ ಗುರುಶಾಂತ ಮಹಾಸ್ವಾಮಿಗಳ ಕೃಪೆಯಿಂದ ಗುರುಲಿಂಗ ಮರಿದೇವರಾದರು . ಮಮದಾಪುರದ ಶ್ರೀ ಮುರುಘೇಂದ್ರ ಸ್ವಾಮಿಗಳಲ್ಲಿ ಶಾಸ್ತ್ರಾಭ್ಯಾಸ ಮಾಡಿದರು . ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಜಂಗಮ ಸಂಸ್ಕಾರ ಪಡೆದು ನಿರಂಜನಮೂರ್ತಿಯಾಗಿ ಶ್ರೀ ನಿ.ಪ್ರ.ಶ್ರೀ ಮುರುಘೇಂದ್ರ ಸ್ವಾಮಿಗಳಾಗಿ , ನಿರಂತರ ಅಂತರಂಗದ ಬದುಕನ್ನು ಉದ್ದೀಪನಗೊಳಿಸಿಕೊಳ್ಳುತ್ತ ಲಿಂಗನಿಷ್ಠೆ , ಲಿಂಗಾರ್ಚನೆ , ಲಿಂಗಧ್ಯಾನವೇ ವ್ರತಗಳಾಗುವಂತೆ ತಪಃ ಕೈಕೊಂಡು ಶಿವಯೋಗ ಸಿದ್ಧಿ ಸಾಧಿಸಿ , ಶ್ರೀಮದಥಣಿ ಶಿವಯೋಗಿಗಳೆಂದೇ ಕೀರ್ತಿ ಪಡೆದರು- ಈ ಎಲ್ಲ ಅವಸ್ಥೆಗಳನ್ನು ಮುಗಿಸಿ ಈಗ ಕೇವಲ – ದಿವ್ಯಲಿಂಗದ ಘನತೇಜೋಮೂರ್ತಿ .

 ಇಂಥ ಚಿನ್ಮಯ ಮೂರ್ತಿಯನ್ನು ಬಸವಣ್ಣ ನುಡಿದಂತೆ ಶಿವ , ಭಕ್ತಿ ಕಂಪಿತ ‘ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಮೃತ್ಯುಂಜಯ ಅಪ್ಪಗಳು ತಮ್ಮ ಅತುಲ ಭಕ್ತಿಯ ಶಕ್ತಿಯಿಂದ ಲಿಂಗಸ್ವರೂಪಿಯಾದ ಶಿವಯೋಗಿಯನ್ನು ಅಥಣಿಯಿಂದ ಧಾರವಾಡದ ಶ್ರೀ ಮುರುಘಾಮಠಕ್ಕೆ ಕರೆತಂದು , ನೆಲೆಗೊಳಿಸಿದರು . ಆ ಪರಮ ಶಿವಯೋಗಿಯ ಪುಣ್ಯನಾಮದಲ್ಲಿ ಜಾತ್ರೆ ಆರಂಭಿಸಿದರು . ಸಾವಿರದೊಂಬೈನೂರ ಇಪ್ಪತ್ತೊಂಬತ್ತರಲ್ಲಿ ಆರಂಭವಾದ ಈ ಜಾತ್ರೆ ವೈಭವದಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಲಿದೆ . ಅಂದು ಮೃತ್ಯುಂಜಯ ಅಪ್ಪಗಳು , ಮಹಾಂತ ಅಪ್ಪಗಳು ಇಂದು ಶಿವಯೋಗಿ ಅಪ್ಪಗಳು . ಭಕ್ತಿಯ ಸಂಕೇತವಾಗಿ ಲಿಂಗದ ಸಂಕೇತವಾಗಿ , ಜಂಗಮದ ಸಂಕೇತವಾಗಿ ಶಿವಯೋಗಿಯ ತೇರು ಸಾಗುತ್ತಲಿದೆ . ಲಿಂಗದ ನೃತ್ಯಕ್ಕೆ ಕೊನೆಯೆಲ್ಲಿ ? ಓ ! ಗುರುವೆ , ಪರಮ ಕಲ್ಪತರುವೆ ಸಾಗಲಿ ಹೀಗೆಯೇ ನಿನ್ನ ದಿವ್ಯನಾಮಸ್ಮರಣೆಯ ತೇರು ಲೋಕದಲ್ಲಿ ಶಾಂತಿ ನೆಲೆಸಲು , ಸಕಲ ಜೀವಾವಳಿಯ ಲೇಸಾಗಲು .

 ಇಂಥ ಶಿವಯೋಗಿಗಳು-

ಕಂಡುದೆಲ್ಲ ಪಾವನ , ಕೇಳಿತ್ತೆಲ್ಲ ಪರಮಬೋಧೆ

ಮುಟ್ಟಿತ್ತೆಲ್ಲವು ಪರುಷದ ಸೋಂಕು

ಒಡನೆ ಕೂಡಿದರೆಲ್ಲರು ಸದ್ಯೋನ್ಮುಕ್ತರು

ಸುಳಿದ ಸುಳುಹೆಲ್ಲ ಜಗತ್ಪಾವನ

ಮೆಟ್ಟಿದ ಧರೆಯಲ್ಲವು ಅವಿಮುಕ್ತಕ್ಷೇತ್ರ

ಸೋಂಕಿದ ಜಲವೆಲ್ಲವು ಪುಣ್ಯತೀರ್ಥಂಗಳು

 ಶರಣೆಂದು ಭಕ್ತಿಯ ಮಾಡಿದವರೆಲ್ಲರೂ ಸಾಯುಜ್ಯರು .

ಗುಹೇಶ್ವರ , ನಿಮ್ಮ ಸುಳುಹಿನ ಸೊಗಸ ಉಪಮಿಸಬಾರದು .

ಅಂತೆಯೇ ಶ್ರೀಮದಥಣಿ ಶಿವಯೋಗಿಗಳು ಉಪಮಾತೀತರು . ಶಿವಯೋಗಿಗಳ ಕೃಪೆ ಅನುಪಮವಾದುದು . ಅವರ ಕೃಪೆಯಿಂದ ಕೊರಡು ಕೊನರಿತು , ಬರಡು ಹಯನಾಯಿತು , ಅವರ ಕಾರುಣ್ಯ ದೃಷ್ಟಿಯಿಂದ ಪೆರ್ಬುಲಿಯು ಯೆರಳೆಯಾಗಿ ಶ್ರೀಚರಣಕ್ಕೆರಗಿತು , ಉರಿವಕಿಚ್ಚು ಸೀತಳವಾಯಿತು . ಸವದತ್ತಿಯ ಕಲ್ಲುಮಠದಲ್ಲಿ ನಡೆದ ಬಸವ ಪುರಾಣದ ಮಹಾಗಣಾರಾಧನೆಯ ಕಾಲದಲ್ಲಿ ಜಡಿಮಳೆ ಸುರಿದರೂ ಶಿವಯೋಗಿಗಳ ಅಪ್ಪಣೆಯಿಂದ ಶ್ರೀ ಮಠದ ಆವರಣದಲ್ಲಿ ಮಳೆ ಸುರಿಯದೇ ಹೋಯಿತು . ಭಯವಳಿದು ನಯವಾಯಿತು . ಚಕ್ಕಡಿಯ ಗಾಲಿ ಹಾಯ್ದರೂ ಶಿವಯೋಗಿಗಳ ಪಾದಸ್ಪರ್ಶವಾದ ಕೂಡಲೇ ಭಕ್ತ ಮಲಗಿದವನು ಎದ್ದಂತೆ ಎದ್ದು ಕುಳಿತ . ಹೆಚ್ಚೇನು ಆ ಮಹಾಮಹಿಮನ ಕರುಣೆಯಿಂದ ಕಲ್ಲೆಲ್ಲ ಕುಣಿದವು , ಭೂವಳಯ ಸೌಭಾಗ್ಯದ ಸೊಂಪನ್ನು ತಂಪನ್ನು ತಳೆಯಿತು . ಅಂತೇ ಶ್ರೀಮದಥಣಿ ಶಿವಯೋಗಿ – ಲೋಕದೊಳ್ ಈಶ್ವರನೆನಿಸಿ ಮೆರೆದ .

ಮೃತ್ಯುಂಜಯ ಅಪ್ಪಗಳ ದಿವ್ಯ ಸಾನ್ನಿಧ್ಯದಲ್ಲಿ ಕೈಂಕರ್ಯ ಕೈಕೊಂಡ ಮಹಾಭಾಗ್ಯ ಈ ತೊತ್ತಿನದು . ಅಂತೆಯೇ ಅಂದೇ ಹೀಗೆ ಹಾಡಿದ್ದೆ-

ನನ್ನ ಗುರುವೆ

ನಿಮ್ಮ ಗುರು ಶಿವಯೋಗಿಯ

 ಇರುವ ನಿಮ್ಮಲ್ಲಿ ಕಂಡೆನಯ್ಯಾ !

ನೀವಲ್ಲದೆ ಶಿವಯೋಗಿಗೆ

 ಬೇರೆ ಠಾವಿಲ್ಲ ಎನ್ನ ಮನದಾಳ್ದನೆ .

ಲೇಖಕರು :ಡಾ . ಬಿ . ಆರ್ . ಹಿರೇಮಠ

(ಸುಕುಮಾರ : ಅಗಸ್ಟ ೨೦೦೨)

ಕರ್ನಾಟಕದ ವೀರಶೈವ ಮಠಗಳು ನಾಡಿಗೆ ಸಲ್ಲಿಸಿದ ಸೇವೆ . ಮಾಡಿದ ಸಾಧನೆಗಳು ಅನುಪಮವಾದವುಗಳಾಗಿರುತ್ತವೆ . ಮಠ ಮತ್ತು ಸಮಾಜಗಳಲ್ಲಿ ಲಿಂಗಾಂಗ ಸಾಮರಸ್ಯ’ದಂಥ ಅನ್ಯೋನ್ಯತೆ ಇದೆ . ಇಂಥ ವೀರಶೈವ ಮಠಗಳ ಭವ್ಯ ಹಾಗೂ ಪುಣ್ಯ ಪರಂಪರೆಯ ಸಾಕಾರ ರೂಪವೇ ಧಾರವಾಡದ ಶ್ರೀಮುರುಘಾಮಠ . ಇದು ಧಾರ್ಮಿಕ ವಿಶ್ವವಿದ್ಯಾಲಯದಂತಿದೆ .

 ಧಾರವಾಡದ ಶ್ರೀಮುರುಘಾಮಠವು ‘ ‘ ಅಪ್ಪ’ಗಳ ಪರಂಪರೆಯನ್ನು ನಾಡಿಗೆ ನೀಡಿರುವುದು ಒಂದು ಪುಣ್ಯವಿಶೇಷ . ಶ್ರೀಮಠದ ಪರಂಜ್ಯೋತಿ , ಪುಣ್ಯ ಮೂರುತಿ , ಪರಮಪೂಜ್ಯ ಮೃತ್ಯುಂಜಯ ಅಪ್ಪಗಳು ತಮ್ಮ ಸಮಾಜೋ – ಧಾರ್ಮಿಕ ಕಾವ್ಯಗಳ ಮೂಲಕ ನಾಡಿನಲ್ಲಿ ನವಜಾಗೃತಿಯನ್ನು ಉಂಟು ಮಾಡಿದ್ದಾರೆ . ತಮ್ಮ ಮಹಾಚೈತನ್ಯ ಹಾಗೂ ಪವಿತ್ರ ಸಂಕಲ್ಪಗಳ ಮೂಲಕ ಮೃತ್ಯುಂಜಯ ಅಪ್ಪಗಳು ನಾಡಿನ ಜನರ ಜೀವನ ಪಾವನವಾಗುವಂತೆ , ಸಮಾಜ ಸಂವರ್ಧನಗೊಳ್ಳುವಂತೆ ಮಾಡಿದ್ದಾರೆ . ಅಪ್ಪಗಳು ಧರ್ಮದ ಮೇರುವಾಗಿ , ಸಮಾಜ ಸೂರ್ಯರಾಗಿ , ಭಕ್ತರ ಕಲ್ಪವೃಕ್ಷವಾಗಿ ಅಮೃತಮಯ ಕಾರ್ಯ ಮಾಡಿದ್ದಾರೆ . ಅವರ ನಡೆ ಪರುಷ , ನುಡಿ ಪರುಷ . ಪೂಜ್ಯರು ಪುಣ್ಯದಂತೆ ಬಂದು , ಜ್ಞಾನದಂತೆ ಇದ್ದು , ಮುಕ್ತಿಯಂತೆ ಹೋದರು . ಮೃತ್ಯುಂಜಯ ಅಪ್ಪಗಳು ವೀರಶೈವ ಧರ್ಮಕ್ಕೆ ಧರ್ಮವಾಗಿ , ದರ್ಶನಕ್ಕೆ ದರ್ಶನವಾಗಿ , ತತ್ವಕ್ಕೆ ತತ್ವವಾಗಿದ್ದರು . ಅವರದು ‘ ಲಿಂಗಲೀಲೆ ‘ . ಪ್ರಸಾದಕಾಯರಾಗಿದ್ದ ಅವರದು ಲಿಂಗ ನುಡಿ , ಲಿಂಗ ನಡೆ . ಅವರು ಮನದೆರೆದು ಮಾತನಾಡಿದರೆ ಲಿಂಗದರುಶನ ಆಗುತ್ತಿದ್ದಿತು . ಇಂಥ ಮಹಾಬೆಳಗು ಅವರಾಗಿದ್ದರು . ಈ ಮಹಾಬೆಳಗಿನಲ್ಲಿ ಲೋಕದ ಜನರ ಜೀವನ ಪಾವನವಾಯಿತು .

ಪೂಜ್ಯಅಪ್ಪಗಳು , ವೀರಶೈವ ಮಠಗಳು ಸಮಾಜಪರ , ಜನಪರವಾಗುವಂತೆಯೂ ಮಠಾಧೀಶರು ಆತ್ಮಕಲ್ಯಾಣದಲ್ಲಿ ಮಾತ್ರ ನಿರತರಾಗಿರದೆ ಲೋಕಕಲ್ಯಾಣ ಕಾವ್ಯದಲ್ಲಿ ತೊಡಗಿಕೊಳ್ಳುವಂತೆಯೂ ಪ್ರೇರೇಪಿಸಿದರು . ಅವರ ಅಂದಿನ ಆ ಪ್ರೇರಣೆಯ ಪುಣ್ಯದ ಫಲವೇ ಇಂದಿನ ವೀರಶೈವ ಮಠಗಳು .

 ಪರಮಪೂಜ್ಯ ಮೃತ್ಯುಂಜಯ ಅಪ್ಪಗಳು ಶ್ರೀಮುರುಘಾಮಠದ ಕಾರುಣ್ಯ ಮೂರುತಿಗಳಾಗಿದ್ದರು . ಪೂಜ್ಯರು ಶ್ರೀಮಠದ ಅಧಿಪತಿಗಳಾಗಿ , ವೈರಾಗ್ಯನಿಧಿಯಾಗಿ , ಮಾನವತೆಯ ಆರಾಧಕರಾಗಿ , ಸಮಾಜೋದ್ದಾರಕರಾಗಿ , ಮಾನವ ಧರ್ಮದ ಪ್ರತಿ ಪಾದಕರಾಗಿ , ಸಾಹಿತ್ಯ – ಸಂಸ್ಕೃತಿಗಳ ಸಂರಕ್ಷಕರಾಗಿ , ಮಾನವೀಯ ಮೌಲ್ಯಗಳ ಪ್ರಸಾರಕರಾಗಿ ಮಾಡಿದ ಕಾರ್ಯ ಅನನ್ಯ ಹಾಗೂ ಅನುಪಮವಾದುದಾಗಿದೆ .

 ಪೂಜ್ಯರದು ಸ್ವಭಾವ ವೈರಾಗ್ಯ , ಸಹಜ ವೈರಾಗ್ಯ . ಇಂಥ ಸ್ವಭಾವ ವೈರಾಗ್ಯದ ಮಠಾಧೀಶರನ್ನು ಪಡೆಯುವುದು ಸಮಾಜದ ಸೌಭಾಗ್ಯ . ಇದು ನಾಡಿನ ಜನರ ಅನಂತ ಕಾಲದ ಪುಣ್ಯದ ಫಲ . ಸಹಜ ವೈರಾಗ್ಯ ಅಷ್ಟು ಸರಳವಾದುದಲ್ಲ . ಅದು ದಿವ್ಯ ತಪಸ್ಸು , ಜೀವನವ್ರತ , ಶ್ರೀಗಳ ಗುರುಸೇವೆ , ಲಿಂಗ ಪೂಜೆ , ಜಂಗಮ ದಾಸೋಹಗಳು ಆದಿ ಸ್ಮರಣೀಯವಾದವುಗಳಾಗಿರುತ್ತವೆ . ಮೃತ್ಯುಂಜಯ ಅಪ್ಪಗಳು ಸಕಲರಿಗೂ ಸಕಲಕ್ಕೂ ಒಳ್ಳೆಯದನ್ನೇ ಮಾಡಿದವರು . ಒಳ್ಳೆಯದನ್ನೇ ಬಯಸಿದವರು . ಯಾರಿಗೂ ಯಾವುದಕ್ಕೂ ಎಂದೂ ಕೆಟ್ಟದ್ದನ್ನು ಬಯಸಿದವರಲ್ಲ , ಕೆಟ್ಟದ್ದನ್ನು ಮಾಡಿದವರಲ್ಲ . ಪ್ರತಿಯೊಂದು ವಸ್ತು – ವ್ಯಕ್ತಿಯಲ್ಲಿಯೂ ` ಶಿವಸ್ವರೂಪ’ವನ್ನು ಕಂಡವರು . ಅಂಗಕ್ರಿಯೆಗಳನ್ನು ಲಿಂಗಕ್ರಿಯೆಗಳನ್ನಾಗಿಸಿಕೊಂಡಿದ್ದ ಅವರಿಗೆ ಬಡವ ಶ್ರೀಮಂತ , ಅಧಿಕಾರಿ -ಸೇವಕ , ದೊಡ್ಡವ – ಸಣ್ಣವ ಎಂಬ ವರ್ಗಭೇದವಾಗಲೀ , ಮೇಲುವರ್ಗ – ಕೆಳವರ್ಗ , ಶ್ರೇಷ್ಠ ಕನಿಷ್ಠ ಎಂಬ ವರ್ಣಭೇದವಾಗಲೀ , ಪುರುಷರು ಸ್ತ್ರೀಯರು , ಹಿರಿಯರು – ಕಿರಿಯರು ಲಿಂಗಭೇದವಾಗಲೀ ಇರಲಿಲ್ಲ . ಮಠಾಧೀಶರಿಗೆ ಇಂಥ ಸಾಮಾಜಿಕ ಸೂತಕಗಳಿರಬಾರದೆಂದು ಹೇಳುತ್ತಿದ್ದರು . ವ್ಯಕ್ತಿ ನಿರ್ಮಾಣ , ಸಮಾಜ ನಿರ್ಮಾಣಗಳು ಶ್ರೀಮಠಗಳ ಪರಮ ಕರ್ತವ್ಯವಾಗಿರಬೇಕೆಂದು ಬಲವಾಗಿ ಪ್ರತಿಪಾದಿಸುತ್ತಿದ್ದರು .

 ಕೇವಲ ಅಧಿಕಾರ- ಅಂತಸ್ತುಗಳು ದೊಡ್ಡವಿದ್ದರೆ ಸಾಲದು , ಭಾವ ಮನಸ್ಸುಗಳೂ ದೊಡ್ಡವಾಗಿರಬೇಕು . ಶ್ರೀಮಂತಿಕೆ , ಅಧಿಕಾರ , ಅಂತಸ್ತು , ಹುದ್ದೆ , ವೃತ್ತಿಗಳಲ್ಲಿ ಯಾವಾಗಲೂ ‘ ಶುಚಿತ್ವ ‘ ವಿರಬೇಕು . ಪ್ರೀತಿ , ವಾತ್ಸಲ್ಯ , ಅನುಕಂಪ , ಅಂತಃಕರಣ ಮೊದಲಾದ ಮಾನವೀಯ ಗುಣಗಳನ್ನು ಆರಾಧಿಸಬೇಕು . ಮನುಷ್ಯ ಪ್ರೀತಿ , ಸಮಾಜ ಪ್ರೀತಿಗಳನ್ನು ಬೆಳೆಸಿಕೊಳ್ಳಬೇಕು . ವ್ಯಕ್ತಿ ದ್ವೀಪವಾಗಿ ಬಾಳಬಾರದು , ದೀಪವಾಗಿ ಬೆಳಗಬೇಕೆಂದು ಪೂಜ್ಯ ಅಪ್ಪಗಳು ಗಟ್ಟಿಯಾಗಿ ಹೇಳುತ್ತಿದ್ದರು . ಅವರ ಅಂದಿನ ಈ ಅಮೃತನುಡಿಗಳು ಇಂದಿನ ಸಮಾಜಕ್ಕೆ ಸಂಜೀವಿನಿಯಂತಿವೆ . ಅಪ್ಪಗಳ ಈ ನುಡಿಗಳು ಇಂದು ಹೆಚ್ಚು ಪ್ರಸ್ತುತವಾಗಿದ್ದು , ವ್ಯಕ್ತಿಯ ಶುದ್ಧೀಕರಣ ಹಾಗೂ ಎಂದೂ ಸಮಾಜದ ಶುದ್ಧೀಕರಣ ಕ್ಕೆ ಅವಶ್ಯಕವಾದವುಗಳಾಗಿರುತ್ತವೆ .

ಬೇಕೆಂಬುದು ಕಾಯಗುಣ , ಬೇಡೆಂಬುದು ವೈರಾಗ್ಯ , ಆಶೆ ಇಲ್ಲದುದೆ ವೈರಾಗ್ಯ , ತನ್ನ ಅರಿದವಂಗೆ ಇದಿರೆಂಬುದಿಲ್ಲ , ದಯವೇ ಧರ್ಮದ ಮೂಲ . ನಾನು ಮಾಡಿದೆನು ಎನ್ನದಿರು – ಈ ಮೊದಲಾದ ವಚನೋಕ್ತಿಗಳಿಗೆ ಪೂಜ್ಯರು ಉಜ್ವಲ ದೃಷ್ಟಾಂತ ಎನಿಸಿದ್ದರು .

ಅವರು ತಮಗಾಗಿಯಾಗಲೀ , ಶ್ರೀಮಠಕ್ಕಾಗಿಯಾಗಲೀ ಜನರಿಂದ ಕಾಡಿಸಿ ಪೀಡಿಸಿ ಪಡೆದವರಲ್ಲ . ಯಾವುದೇ ಸ್ವಾರ್ಥಕ್ಕಾಗಿಯಾಗಲೀ , ಆಶೆ – ಆಮಿಷಗಳಿಂದಾಗಲೀ ಯಾವ ವಸ್ತುವನ್ನೂ ಅವರು ತೆಗೆದುಕೊಂಡವರಲ್ಲ . ಅಗ್ಗದ ಪ್ರಚಾರ , ಕೀರ್ತಿ ಪ್ರಕೀರ್ತನೆ , ಪ್ರಸಿದ್ಧಿ -ಪ್ರಲೋಭನೆ – ಪ್ರಶಸ್ತಿಗಳಿಗಾಗಿ ಅವರು ಹಾತೊರೆದವರಲ್ಲ . ಅವೆಲ್ಲವುಗಳನ್ನು ಮೀರಿನಿಂತ ವೀರ ವಿರಾಗಿಗಳು ಅವರಾಗಿದ್ದರು .

ಪೂಜ್ಯರು ಆಚಾರದ , ಅರಿವಿನ ಅನರ್ಘ್ಯರತ್ನವೆನಿಸಿದ್ದರು . ತಮ್ಮ ಆಚಾರಶೀಲತೆಯಿಂದ ಶ್ರೀಮಠದ ವಿದ್ಯಾರ್ಥಿಗಳನ್ನು , ಶ್ರೀಮಠದ ಪರಮ ಭಕ್ತರನ್ನು “ ಆಚಾರವಂತರನ್ನಾಗಿ ರೂಪಗೊಳಿಸಿದ ಶ್ರೇಯಸ್ಸಿಗೆ ಪಾತ್ರರಾದರು . ಜನರು ಕೇವಲ ವಿಚಾರವಂತರಾದರೆ ಸಾಲದು , ಅವರು ಆಚಾರವಂತರೂ ಆಗಿರಬೇಕೆಂದು ಪೂಜ್ಯರು ಮೇಲಿಂದ ಮೇಲೆ ಹೇಳುತ್ತಿದ್ದರು . ಅವರು ಆಚಾರವಂತ ಜನರನ್ನು , ಆಚಾರವಂತ ಮಠಾಧಿಪತಿಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು ಗೌರವಿಸುತ್ತಿದ್ದರು . ಸದಾಚಾರವಿಲ್ಲದ ವಿರಕ್ತರು , ಮಠಾಧೀಶರು ಸಮಾಜವನ್ನು ಎಂದೂ ತಿದ್ದಲಾರರು . ಇಂಥವರಿಂದ ಮಠಗಳು ಬೆಳೆಯುವುದಿಲ್ಲ ; ಲೋಕ ಕಲ್ಯಾಣ , ವ್ಯಕ್ತಿ ಕಲ್ಯಾಣ ಕಾರ್ಯಗಳು ನೆರವೇರಲಾರವೆಂದು ಅಪ್ಪಗಳು ಪದೇಪದೇ ನುಡಿಯುತ್ತಿದ್ದರು . ಅವರ ಈ ದಾರ್ಶನಿಕ ನುಡಿಗಳನ್ನು ಇಂದಿನ ಸಮಾಜ ಮತ್ತು ಮಠಾಧೀಶರು ಗಮನಿಸುವುದು ಅವಶ್ಯವಿದೆ . ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳದು ಆಚಾರ – ವಿಚಾರಗಳ ಸಂಗಮ ವ್ಯಕ್ತಿತ್ವ : ಜ್ಞಾನ – ಕ್ರಿಯೆಗಳ ಸಾಮರಸ್ಯದ ಮಹಾಚೈತನ್ಯ .

ಹೀಗೆ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಸಮಾಜಪ್ರೀತಿ , ಮನುಷ್ಯ ಪ್ರೀತಿ , ಸದಾಚಾರ , ಸಹಜತೆ , ಸರಳತೆ , ಧರ್ಮನಿಷ್ಠೆ , ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ದಿವ್ಯಮೂರುತಿಯೆನಿಸಿದ್ದರು . ಪೂಜ್ಯ ಅಪ್ಪಗಳು ವೈರಾಗ್ಯಕ್ಕೆ , ವಿರಕ್ತತ್ವಕ್ಕೆ , ಮಠಾಧೀಶ ಪದಕ್ಕೆ ವಿಶೇಷ ಅರ್ಥ ತುಂಬಿದರು . ಪೂಜ್ಯರು ತಮ್ಮ ವ್ಯಕ್ತಿತ್ವದ ಮೂಲಕ ವಿರಾಗಿಗಳಿಗೆ , ವಿರಕ್ತರಿಗೆ , ಮಠಾಧೀಶರಿಗೆ , ವೀರಶೈವ ಮಠಗಳಿಗೆ ಹೆಚ್ಚಿನ ಬೆಲೆ ತಂದು ಕೊಟ್ಟಿದ್ದಾರೆ .

ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಟಾಪಿಸಿದುದು ಮಹತ್ತರ ಪುಣ್ಯಮಯ ಕಾರ್ಯವೆನಿಸಿದೆ . ಪರಮ ಪೂಜ್ಯ ಮಹಾಂತ ಅಪ್ಪಗಳನ್ನು ರೂಪಿಸಿ , ಶ್ರೀಮಠಕ್ಕೆ ಧಾರೆಯೆರೆದುದು ಇನ್ನೊಂದು ಅವಿಸ್ಮರಣೀಯ ಸಾಧನೆಯೆನಿಸಿದೆ , ಈ ಉಭಯ ಶ್ರೀಗಳ ಭವ್ಯ ಪರಂಪರೆಯಲ್ಲಿ ಶ್ರೀಮ.ನಿ.ಪ್ರ . ಶಿವಯೋಗೀಶ್ವರ ಮಹಾಸ್ವಾಮಿಗಳು ಮುನ್ನಡೆದಿದ್ದಾರೆ . ಮಹಾಚೈತನ್ಯ ಸ್ವರೂಪಿಗಳೂ ಸಾಹಿತ್ಯ – ಸಮಾಜ – ಸಂಸ್ಕೃತಿಯ ಪರಮ ಆರಾಧಕರೂ ಆಗಿದ್ದ ಪರಮಪೂಜ್ಯ ಮೃತ್ಯುಂಜಯ ಅಪ್ಪಗಳನ್ನು ನೆನೆವುದೇ ಹರುಷ , ಪರುಷ , ಗತಿ , ಮತಿ , ತಪ , ಜಪ , ಸತ್ಯ , ನಿತ್ಯ ,