ಅದ್ವೈತದಿಂದ ಭಕ್ತಿಗೆ: ಶಂಕರಾಚಾರ್ಯರ ಸ್ತೋತ್ರಗಳಲ್ಲಿ ತತ್ತ್ವ ಮತ್ತು ಅನುಭವದ ಏಕತೆ

——————————

ಸಾಕಾರ ಭಕ್ತಿಯಿಂದ ನಿರಾಕಾರ ಬ್ರಹ್ಮನಿಗೆ ಸಾಗುವ ಸಾಧಕನ ಅಂತರ್ಯಾತ್ರೆ

————————————–

ಲೇಖಕ: ಶ್ರೀಕಂಠ. ಚೌಕೀಮಠ.

———————————-

ಇತ್ತೀಚೆಗೆ ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಪವಿತ್ರ ಶಾರದಾಪೀಠದ ದರ್ಶನಾರ್ಥವಾಗಿ ತೆರಳಿದ ಸಂದರ್ಭದಲ್ಲಿ, ಅದೊಂದು ಆಶೀರ್ವಾದದಂತೆ ನನ್ನ ಕೈ ಸೇರಿತು — ಶ್ರೀ ಶಂಕರಾಚಾರ್ಯರ ಸಮಗ್ರ ಸ್ತೋತ್ರ ಮಂಜರಿ ಎಂಬ ಅಪರೂಪದ ಗ್ರಂಥ. ನಾಲ್ಕುನೂರು ಹತ್ತು ಪುಟಗಳ ಈ ವಿಶಾಲ ಕೃತಿಯ ಪರಿವಿಡಿಯನ್ನು ವೀಕ್ಷಿಸಿದಾಗ, ಶಂಕರಭಗವತ್ಪಾದರು ರಚಿಸಿದ ಒಟ್ಟು ಎಪ್ಪತ್ತೇಳು ಸ್ತೋತ್ರಗಳು ಹಾಗೂ ಅವುಗಳ ಕನ್ನಡಾನುವಾದಗಳು ಕ್ರಮಬದ್ಧವಾಗಿ ಅಚ್ಚಾಗಿರುವುದು ನನ್ನ ಗಮನ ಸೆಳೆಯಿತು. ಆ ಸ್ತೋತ್ರಗಳನ್ನು ನಾಲ್ಕು ಪ್ರಮುಖ ವಿಭಾಗಗಳಲ್ಲಿ ಸುವ್ಯವಸ್ಥಿತವಾಗಿ ವಿಂಗಡಿಸಲಾಗಿದೆ:

  • ಶ್ರೀ ಗಣೇಶ ಸ್ತೋತ್ರಗಳು
  • ಶಿವ ಸ್ತೋತ್ರಗಳು
  • ಶ್ರೀ ವಿಷ್ಣು ಭಕ್ತಿ ಸ್ತೋತ್ರಗಳು
  • ಶ್ರೀ ದೇವಿ ಸ್ತೋತ್ರಗಳು

ಈ ವಿಭಾಗಗಳಲ್ಲಿ ನನ್ನ ಮನಸ್ಸಿಗೆ ಅತ್ಯಂತ ಆಪ್ತವಾಗಿ ಸ್ಪಂದಿಸಿದದ್ದು ಶ್ರೀ ಗಣೇಶ ಪಂಚಕ. ಬಾಲ್ಯದಿಂದಲೂ ನನ್ನ ತಂದೆಯ ನಿತ್ಯಪೂಜೆಯ ಆರಂಭದಲ್ಲಿ ಮೃದುಸ್ವರವಾಗಿ ಪ್ರತಿಧ್ವನಿಸುತ್ತಿದ್ದ ಆ ಶ್ಲೋಕಗಳು, ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿವೆ. ವಿಶೇಷವೆಂದರೆ, ತಮ್ಮ ಜೀವನದ ಅಂತಿಮ ದಿನದ ಬೆಳಗಿನ ಪೂಜೆಯಲ್ಲಿಯೂ ಅಪ್ಪ ಅದೇ ಶ್ರೀ ಗಣೇಶ ಪಂಚಕವನ್ನು ಅಚಲ ಭಕ್ತಿಭಾವದಿಂದ ಪಠಿಸಿದ್ದರು. ಆ ಪಂಚಕದ ಪ್ರಾರಂಭ ಶ್ಲೋಕ ಹೀಗಿದೆ:

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್
ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್

ಎಪ್ಪತ್ತೇಳು ಸ್ತೋತ್ರಗಳ ಪರಿವಿಡಿಯನ್ನು ವೀಕ್ಷಿಸುತ್ತ ಕುಳಿತಾಗಲೇ, ನನ್ನ ಮನಸ್ಸಿನಲ್ಲಿ ನಿಧಾನವಾಗಿ ಒಂದು ಗಂಭೀರ ಸಂದೇಹ ಮೂಡಿಬಂತು. ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಏಕೋನತತ್ತ್ವದ ಪರಮಾರ್ಥವನ್ನು ಜಗತ್ತಿಗೆ ಬೋಧಿಸಿದ ಶಂಕರಾಚಾರ್ಯರು — ಹೇಗೆ ಅನೇಕ ದೇವತೆಗಳನ್ನು ಸ್ತುತಿಸುವ ಸ್ತೋತ್ರಗಳನ್ನು ರಚಿಸಿದರು? ಒಂದೆಡೆ ಅದ್ವೈತದ ಏಕತ್ವದ ಘೋಷಣೆ, ಮತ್ತೊಂದೆಡೆ ದ್ವೈತಭಾವದಲ್ಲಿ ಅರಳುವ ಭಕ್ತಿಯ ಅಭಿವ್ಯಕ್ತಿ — ಈ ಎರಡೂ ಭಿನ್ನ ಪ್ರಪಂಚಗಳು ಒಂದೇ ಮನಸ್ಸಿನಲ್ಲಿ ಒಟ್ಟಾಗಿ ಚಲಿಸಲಾರಂಭಿಸಿದವು. ಆ ಕ್ಷಣದಿಂದಲೇ ನನ್ನ ಚಿಂತನೆ, ಶಂಕರಾಚಾರ್ಯರ ತತ್ತ್ವದ ಆಳವನ್ನು ಅರಸುವ ದಿಕ್ಕಿನಲ್ಲಿ ನಿಧಾನವಾಗಿ ಸಾಗತೊಡಗಿತು.

ಈ ಜಿಜ್ಞಾಸೆಗಳೊಡನೆ, ನಾನು ಪೂಜ್ಯ ಗುರುಗಳಾದ ಶ್ರೀ ಶಿವಾತ್ಮಾನಂದ ಪುರಿಯವರಿಗೆ (ಗುರುಕಂದ) ಒಂದು ಸಂದೇಶವನ್ನು ವಿನಯಪೂರ್ವಕವಾಗಿ ಕಳುಹಿಸಿದೆ. ಆ ಸಂದೇಶದಲ್ಲಿ ನನ್ನ ಮನಸ್ಸಿನ ಅಶಾಂತಿ ಮತ್ತು ಅರಿವಿನ ಹಂಬಲ ಎರಡನ್ನೂ ನೇರವಾಗಿ ನಿವೇದಿಸಿಕೊಂಡು ಹೀಗೆ ಪ್ರಾರ್ಥಿಸಿದೆ:

“ಪೂಜ್ಯರೆ,
ಇಂದು ಶೃಂಗೇರಿಯಿಂದ ತಂದ ಒಂದು ಗ್ರಂಥವನ್ನು ಹಾಗೂ ಅದರ ಸಮಗ್ರ ಸಾಹಿತ್ಯವಿವರಣೆಗಳನ್ನು ಓದುತ್ತಿರುವ ಸಂದರ್ಭದಲ್ಲಿ, ನನ್ನ ಮನಸ್ಸಿನಲ್ಲಿ ಕೆಲವು ಜಿಜ್ಞಾಸೆಗಳು ಸಹಜವಾಗಿ ಉದಯಿಸಿದವು. ಈ ಪ್ರಶ್ನೆಗಳು ಅಯೋಗ್ಯವಾಗಿಯೂ ಅಥವಾ ತಪ್ಪಾಗಿ ಕೇಳಲ್ಪಡುವಂತೆಯೂ ಕಂಡರೆ ದಯವಿಟ್ಟು ಕ್ಷಮಿಸಬೇಕು. ನನ್ನ ಉದ್ದೇಶ ಯಾವತ್ತೂ ವಿರೋಧವಲ್ಲ; ಸಾಧನೆಗೆ ಸರಿಯಾದ ದಿಕ್ಕು, ತತ್ತ್ವಕ್ಕೆ ಸ್ಪಷ್ಟತೆ ಮತ್ತು ಆತ್ಮೋನ್ನತಿಯ ಮಾರ್ಗವನ್ನು ಅರಿಯುವುದು ಮಾತ್ರ.

ನನಗೆ ಸ್ಪಷ್ಟತೆ ಬೇಕಿರುವ  ವಿಷಯ:
ಅದ್ವೈತ ತತ್ತ್ವ ಮತ್ತು ದೇವತಾ ಉಪಾಸನೆಯ ಸಂಬಂಧ —
ಶಂಕರಾಚಾರ್ಯರು ‘ಅಹಂ ಬ್ರಹ್ಮಾಸ್ಮಿ’ ಎಂದು ಅದ್ವೈತ ತತ್ತ್ವವನ್ನು ಬೋಧಿಸಿದಾಗ, ಏಕೆ ಅವರು ಅನೇಕ ದೇವತೆಗಳ ಆರಾಧನೆಯನ್ನು ಪ್ರೋತ್ಸಾಹಿಸಿದರು? ಇದು ಪರಸ್ಪರ ವಿರೋಧವೆಂದು ಕಾಣಿಸುವುದಿಲ್ಲವೇ?

ಪೂಜ್ಯರೆ,
ಈ ಪ್ರಶ್ನೆಗಳನ್ನು ನಾನು ತರ್ಕಕ್ಕಾಗಲೀ ವಿರೋಧಕ್ಕಾಗಲೀ ಕೇಳುವುದಿಲ್ಲ; ಕೇವಲ ತಿಳಿವಳಿಕೆಗಾಗಿ, ಆತ್ಮಶೋಧನೆಗಾಗಿ ಕೇಳುತ್ತಿದ್ದೇನೆ.”

ನನ್ನ ಈ  ಮನವಿಗೆ ಪೂಜ್ಯ ಶ್ರೀ ಶಿವಾತ್ಮಾನಂದ ಪುರಿಯವರು   ಸ್ಪಂದಿಸಿ, ಸ್ವಾಮಿ ಹರ್ಷಾನಂದ ಜಿ. ಮಹಾರಾಜರ “ಪ್ರವಚನಮಾಲೆ – ಅಂತರಂಗದ ಅವಲೋಕನ: ಶಂಕರಾಚಾರ್ಯರ ಜೀವನಚರಿತ್ರೆ” (ಭಾಗ ೧ ರಿಂದ ೩) ಅನ್ನು ನನಗೆ ಕಳುಹಿಸಿ ಮಾರ್ಗದರ್ಶನ ನೀಡಿದರು. ಅದು ನನ್ನ ಜಿಜ್ಞಾಸೆಗೆ ಉತ್ತರದ ಮೊದಲ ಕಿರಣವಾಯಿತು.

ಆ ಪ್ರವಚನಮಾಲೆಯ ಪ್ರಾಸ್ತಾವಿಕ ಭಾಗದಲ್ಲಿಯೇ ಸ್ವಾಮಿ ಹರ್ಷಾನಂದ ಜಿ. ಮಹಾರಾಜರು ತಮ್ಮ ಮಾತನ್ನು ಮಹಾಭಾರತದ ಪ್ರಸಿದ್ಧ “ಯಕ್ಷಪ್ರಶ್ನೆ”ಯೊಂದಿಗೆ ಆರಂಭಿಸುತ್ತಾರೆ. ಯಕ್ಷನು ಧರ್ಮರಾಜನಿಗೆ ಕೇಳುವ ಪ್ರಶ್ನೆ — “ದಾರಿ ಯಾವುದು?” — ಮುಕ್ತಿಯ ದಾರಿ ಯಾವುದು ಎಂಬ ಆ ಒಂದು ಪ್ರಶ್ನೆಯೇ ನನ್ನ ಸಂದೇಹಕ್ಕೆ ಉತ್ತರದ ಮೊದಲ ಹೆಜ್ಜೆಯಂತೆ ನನಗೆ ಭಾಸವಾಯಿತು.

ನನ್ನ ಚಿಂತನೆ ಮತ್ತೊಮ್ಮೆ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಅಗಾಧ ಸಮುದ್ರದ ಕಡೆಗೆ ಹರಿಯತೊಡಗಿತು. ಅದರ ಅರ್ಥವ್ಯಾಪ್ತಿ, ತತ್ತ್ವದ ಆಳ, ವ್ಯಾಖ್ಯಾನದ ಸೂಕ್ಷ್ಮತೆ ಮತ್ತು ಅದರ ಗುಹ್ಯಾರ್ಥವನ್ನು ಅರಸಬೇಕೆಂಬ ಆಂತರಿಕ ಪ್ರೇರಣೆ ಮತ್ತಷ್ಟು ಗಾಢವಾಯಿತು.

ಶಂಕರಾಚಾರ್ಯರು ಪ್ರತಿಪಾದಿಸಿದ ದಾರ್ಶನಿಕ ಚಿಂತನೆಯ ಹೃದಯಸಾರವೇ — “ಬ್ರಹ್ಮ ಸತ್ಯಂ, ಜಗತ್ ಮಿಥ್ಯ; ಜೀವೋ ಬ್ರಹ್ಮೈವ ನಾಪರ” ಎಂಬ ಮಹಾವಾಕ್ಯ. ಈ ಏಕವಾಕ್ಯವೇ ಅವರ ತತ್ತ್ವನಿರೂಪಣೆಯ ಪರಿಪೂರ್ಣ ಸಮಾಪ್ತಿ. ವೈಯಕ್ತಿಕ ಆತ್ಮವಾದ ಜೀವ, ಅವನು ಅನುಭವಿಸುವ ಜಗತ್ತು ಎಂಬ ಜಗತ್ ಮತ್ತು ಪರಮಸತ್ಯಸ್ವರೂಪವಾದ ಬ್ರಹ್ಮನ್ — ಇವುಗಳ ವಾಸ್ತವಿಕತೆಯನ್ನು ಒಂದೇ ಅದ್ವೈತ ದೃಷ್ಟಿಕೋನದಲ್ಲಿ ಏಕೀಕರಿಸುವ ಶಕ್ತಿ ಈ ತತ್ತ್ವದಲ್ಲಿದೆ. ಜೀವ ಮತ್ತು ಬ್ರಹ್ಮನ ನಡುವಿನ ಸಂಬಂಧವು ಸ್ವತಂತ್ರ ಸತ್ಯದ ಸಂಬಂಧವಲ್ಲ; ಅದು ಪರಮಸತ್ಯದ ಮೇಲೆ ನಿಂತ ಸಾಪೇಕ್ಷ ವಾಸ್ತವದ ಅನುಭವ, ಅಂದರೆ ಸತ್ಯ–ಮಿಥ್ಯಗಳ ನಡುವಿನ ಸಂಬಂಧ.

ಈ ತತ್ತ್ವವನ್ನು ಇನ್ನಷ್ಟು ಸ್ಪಷ್ಟಗೊಳಿಸುವಂತೆ, “ಜೀವೋ ಬ್ರಹ್ಮೈವ ನಾಪರ” ಎಂಬ ವಾಕ್ಯವು ವ್ಯಕ್ತಿಯೇ ಬ್ರಹ್ಮನಾಗಿದ್ದಾನೆ, ಅವನು ಬೇರೆ ಯಾರೂ ಅಲ್ಲ ಎಂಬ ಸತ್ಯವನ್ನು ಘೋಷಿಸುತ್ತದೆ. ಮೊದಲ ವಾಕ್ಯ ಬ್ರಹ್ಮನನ್ನೇ ಪರಮಸತ್ಯವೆಂದು ಸ್ಥಾಪಿಸಿದರೆ, ಎರಡನೆಯದು — “ಆ ಸತ್ಯವೇ ನೀನು” ಎಂಬ ಆತ್ಮಗುರುತನ್ನು ನೀಡುತ್ತದೆ. ಹೀಗೆ, ಪರಮಸತ್ಯವಾದ ಬ್ರಹ್ಮ, ಅನುಭವಿಸುವ ಜೀವ ಮತ್ತು ಅನುಭವದ ಕ್ಷೇತ್ರವಾದ ಜಗತ್ತು — ಈ ಮೂರೂ ತತ್ತ್ವದೃಷ್ಟಿಯಲ್ಲಿ ವಿಭಿನ್ನವಲ್ಲ; ಭೇದವು ಅಜ್ಞಾನದಿಂದ ಮಾತ್ರ ಕಾಣಿಸುತ್ತದೆ. ಜ್ಞಾನೋದಯವಾದಾಗ ಇವೆಲ್ಲವೂ ಒಂದೇ ಪರಮಸತ್ಯದಲ್ಲಿ ಲೀನವಾಗಿರುವುದೇ ಅದ್ವೈತದ ಸಾರ.

ಇಲ್ಲಿ ಉಲ್ಲೇಖಿಸಲ್ಪಡುವ ಮಿಥ್ಯ ಎಂಬ ತತ್ತ್ವವು, ಸಂಪೂರ್ಣ ಪರಮ ವಾಸ್ತವವಾದ ಬ್ರಹ್ಮನ ಹೊರತಾಗಿ, ಎರಡು ವಿಧದ ಸಾಪೇಕ್ಷ ವಾಸ್ತವಿಕತೆಗಳನ್ನು ಒಳಗೊಂಡಿದೆ: ವ್ಯವಹಾರಿಕ ಸತ್ಯ (Practical/Empirical Reality) ಮತ್ತು ಪ್ರತಿಭಾಸಿಕ ಸತ್ಯ(Illusory/Imagined Reality).  ವ್ಯವಹಾರಿಕ ಸತ್ಯವೆಂದರೆ, ಎಲ್ಲರಿಗೂ ಸಾಮಾನ್ಯವಾಗಿ ಅನುಭವವಾಗುವ ಜಗತ್ತು — ದೈನಂದಿನ ಕಾರ್ಯವ್ಯವಹಾರಗಳ ಮಟ್ಟಿನಲ್ಲಿ ನಿಜವೆಂದು ಕಾಣಿಸುವ ವಸ್ತುನಿಷ್ಠ ವಾಸ್ತವ. ಅದರ ವಿರುದ್ಧವಾಗಿ, ಪ್ರತಿಭಾಸಿಕ ಸತ್ಯವೆಂದರೆ, ಒಬ್ಬ ವ್ಯಕ್ತಿಯ ಮನಸ್ಸಿನ ತಪ್ಪು ಗ್ರಹಿಕೆಯಿಂದ ಮಾತ್ರ ಹುಟ್ಟುವ, ಇತರರಿಗೆ ಅಸ್ತಿತ್ವವಿಲ್ಲದ ವ್ಯಕ್ತಿನಿಷ್ಠ ಭಾಸ. ಉದಾಹರಣೆಗೆ, ನಾವು ಕಾಣುವ ಈ ಪ್ರಪಂಚ ವ್ಯವಹಾರಿಕ ಸತ್ಯವಾದರೆ, ಹಗ್ಗವನ್ನು ಹಾವು ಎಂದು ತಪ್ಪಾಗಿ ಕಾಣುವುದು ಪ್ರತಿಭಾಸಿಕ ಸತ್ಯ. ಈ ಎರಡೂ ಸ್ವತಂತ್ರ ಪರಮಸತ್ಯವಲ್ಲ; ಅವು ಅವಲಂಬಿತ ವಾಸ್ತವಗಳು, ಸಂಪೂರ್ಣ ಸತ್ಯದ ಆಶ್ರಯದಿಂದ ಮಾತ್ರ ಅಸ್ತಿತ್ವ ಹೊಂದುವ ಮಿಥ್ಯ.

ಸತ್ಯ ಮತ್ತು ಮಿಥ್ಯಗಳ ನಡುವಿನ ಸಂಬಂಧವನ್ನು ಸಮುದ್ರ ಮತ್ತು ಅಲೆಯ ಉಪಮಾನದ ಮೂಲಕ ಸುಲಭವಾಗಿ ಗ್ರಹಿಸಬಹುದು. ಅಲೆ ಎಂದರೆ ಸಮುದ್ರಕ್ಕೆ ನೀಡಿದ ಒಂದು ಹೆಸರು ಮತ್ತು ರೂಪ; ಅದರ ಅಸ್ತಿತ್ವವು ನೀರಿಗೆ ಅವಲಂಬಿತ, ಆದರೆ ನೀರಿನ ಅಸ್ತಿತ್ವಕ್ಕೆ ಅಲೆಯ ಅವಲಂಬನೆ ಇಲ್ಲ. ಅಲೆ ಮಿಥ್ಯ; ನೀರು ಸತ್ಯ. ಇದೇ ರೀತಿಯಾಗಿ, ಜಗತ್ತು ಬ್ರಹ್ಮನ ಮೇಲೆಯೇ ನಿಂತಿರುವ ಅವಲಂಬಿತ ವಾಸ್ತವ; ಬ್ರಹ್ಮನು ಮಾತ್ರ ಪರಿಪೂರ್ಣ ಸತ್ಯ. ಹಗ್ಗವಿಲ್ಲದೆ ಹಾವು ಕಾಣಿಸಿಕೊಳ್ಳದಂತೆ, ಬ್ರಹ್ಮನಿಲ್ಲದೆ ಜಗತ್ತಿನ ಅನುಭವವೂ ಸಾಧ್ಯವಿಲ್ಲ. ಏಕೆಂದರೆ ಮಿಥ್ಯವು ತನ್ನ ತಲಾಧಾರವಾಗಿರುವ ಪರಮಸತ್ಯವಿಲ್ಲದೆ ಸ್ವತಃ ಪ್ರತ್ಯಕ್ಷಗೊಳ್ಳುವ ಶಕ್ತಿಯನ್ನೇ ಹೊಂದಿಲ್ಲ.

ಅದ್ವೈತ ತತ್ತ್ವವನ್ನು ಆಳವಾಗಿ ಗ್ರಹಿಸಲು ಯತ್ನಿಸಿದಾಗ, ಅದೇ ತತ್ತ್ವವನ್ನು ಪ್ರತಿಪಾದಿಸಿದ ಶಂಕರಾಚಾರ್ಯರೇ ತಮ್ಮಿಂದಲೇ ರಚಿಸಿದ ಎಪ್ಪತ್ತೇಳು ಸ್ತೋತ್ರಗಳನ್ನು ಹೇಗೆ ಒಂದೇ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕು ಎಂಬ ಪ್ರಶ್ನೆ ನನ್ನೊಳಗೆ ಸಹಜವಾಗಿ ಉದಯಿಸಿತು. ನಿರಾಕಾರವಾದ ಅದ್ವೈತದ ತತ್ತ್ವ ಮತ್ತು ಸ್ತೋತ್ರಗಳಲ್ಲಿ ಪ್ರಕಾಶಿಸುವ ಸಾಕಾರ ಭಕ್ತಿಭಾವ — ಈ ಎರಡನ್ನೂ ಒಂದೇ ತಳಹದಿಯಲ್ಲಿ ಪ್ರತಿಷ್ಠಾಪಿಸಲು ನನ್ನ ಪ್ರಯತ್ನ ಆರಂಭದಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಈ ಗ್ರಂಥದ ಕನ್ನಡ ಅನುವಾದಕರಾದ ಡಾ. ಬಿ.ಜೆ. ರಂಗನಾಥ ಅವರ ವಿವರಣೆ ನನ್ನ ಮನಸ್ಸಿಗೆ ಒಂದು ದೀಪದಂತೆ ಬೆಳಕು ತಂದಿತು.

ಅವರ ಅಭಿಪ್ರಾಯದಂತೆ, ಪರಮಾತ್ಮನು ನಾಮರೂಪಗಳಿಂದ ಅತೀತನಾಗಿದ್ದು, ದೇಹರಹಿತನಾಗಿ, ಎಲ್ಲ ಬಾಹ್ಯ–ಆಂತರ ಭೇದಗಳನ್ನು ಮೀರಿ ಅಪರೋಕ್ಷ ಬ್ರಹ್ಮಸ್ವರೂಪನಾಗಿ ಅಸ್ತಿತ್ವದಲ್ಲಿದ್ದಾನೆ. ಅವನು ನಿತ್ಯಜ್ಞಾನಮಯನಾಗಿರುವ ವಿಜ್ಞಾನಘನ; ಆಕಾಶದಂತೆ ಪರಿಪೂರ್ಣ, ಅಶೇಷ ಮತ್ತು ಅವ್ಯಕ್ತ ಪರಮವಸ್ತು. ಈ ಬ್ರಹ್ಮನು ಸ್ಥೂಲವೂ ಅಲ್ಲ, ಸೂಕ್ಷ್ಮವೂ ಅಲ್ಲ; ಆದರೆ “ಸತ್ಯಂ–ಜ್ಞಾನಂ–ಅನಂತಂ ಬ್ರಹ್ಮ” ಎಂಬ ಘೋಷಣೆಯ ಮೇಲೆ ನಿಂತಿರುವ ಪರಮಸತ್ಯ. ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಯಮಾತ್ಮಾ ಬ್ರಹ್ಮ ಎಂಬ ಮಹಾವಾಕ್ಯಗಳು, ಆತ್ಮ ಮತ್ತು ಬ್ರಹ್ಮನ ಏಕತೆಯನ್ನು ಒಳಗೂ ಹೊರಗೂ, ವ್ಯಕ್ತಿಯಲ್ಲಿಯೂ ವಿಶ್ವದಲ್ಲಿಯೂ ಒಂದೇ ರೀತಿಯಲ್ಲಿ ಘೋಷಿಸುತ್ತವೆ. ಆತ್ಮವೇ ಪರಮಾತ್ಮ, ಜೀವನೇ ಬ್ರಹ್ಮ — ಇದೇ ಅದ್ವೈತದ ಮೂಲಸಂಧಾನ.

ಆದರೆ, ಈ ನಿರಾಕಾರ ಬ್ರಹ್ಮತತ್ತ್ವವನ್ನು ಅನುಭವದ ಮಟ್ಟಕ್ಕೆ ತಲುಪಿಸಲು, ಜಿಜ್ಞಾಸುವಿನ ಮನಸ್ಸಿಗೆ ರೂಪದ ಆಧಾರವೂ ಅಗತ್ಯವೆಂದು ಶಂಕರರು ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಸಾಧನೆಯ ಕ್ರಮ ಹೀಗಿದೆ:
ಕರ್ಮದಿಂದ ಭಕ್ತಿ, ಭಕ್ತಿಯಿಂದ ಜ್ಞಾನ, ಜ್ಞಾನದಿಂದ ಮುಕ್ತಿ.
ಇವೇ ಸಂಸಾರಬಂಧನದಿಂದ ವಿಮುಕ್ತಿಗೆ ಕರೆದೊಯ್ಯುವ ಕ್ರಮಬದ್ಧ ಹಾದಿ.

ಜ್ಞಾನಸೋಪಾನವನ್ನು ಏರಲು ಸಾಧಕನು ಕರ್ಮದಿಂದ ಪ್ರಾರಂಭಿಸಿ, ಭಕ್ತಿಯ ಮೂಲಕ ಜ್ಞಾನಕ್ಕೆ, ಜ್ಞಾನದಿಂದ ಮೋಕ್ಷಕ್ಕೆ ಸಾಗಬೇಕು. ವೇದೋಕ್ತ ಕರ್ಮವನ್ನು ನಿಷ್ಠೆಯಿಂದ ಆಚರಿಸದೆ ಭಕ್ತಿ ಶುದ್ಧವಾಗುವುದಿಲ್ಲ; ಭಕ್ತಿ ಶುದ್ಧವಾಗದೆ ಜ್ಞಾನೋದಯ ಸಂಭವಿಸುವುದಿಲ್ಲ; ಮತ್ತು ಜ್ಞಾನೋದಯವಿಲ್ಲದೆ ಮುಕ್ತಿಯ ಅನುಭವ ಸಾಧ್ಯವಲ್ಲ. ಭಕ್ತಿಯ ಹಂತಗಳಲ್ಲಿ ಪರಮಾತ್ಮನು ಭಕ್ತನಿಗೆ ಸಾಕಾರರೂಪದಲ್ಲಿ ಗೋಚರಿಸುತ್ತಾನೆ — ಗಣಪತಿಯಾಗಿ, ಶಿವನಾಗಿ, ವಿಷ್ಣುವಾಗಿ ಅಥವಾ ದೇವಿಯಾಗಿ. ಈ ರೂಪಾನುಭವಕ್ಕೆ, ದೇವರನ್ನು ವಿವಿಧ ಹಂತಗಳಲ್ಲಿ ದೃಷ್ಟಿಸಲು, ದೇವತಾ ಸ್ತೋತ್ರಗಳೇ ಸಾಧಕನಿಗೆ ಸೇತುವೆಯೂ ದಾರಿದೀಪವೂ ಆಗುತ್ತವೆ.

ಅದರಲ್ಲೇ ಶಂಕರಭಗವತ್ಪಾದರು, ಅದ್ವೈತ ತತ್ತ್ವವನ್ನು ಬೋಧಿಸಿದರೂ, ಭಕ್ತನ ಸಾಧನೆಗೆ ಅನುಕೂಲವಾಗುವಂತೆ ಅನೇಕ ಸ್ತೋತ್ರಗಳನ್ನು ರಚಿಸಿದರು. ಮನಸ್ಸನ್ನು ರೂಪದಿಂದ ನಿರಾಕಾರದತ್ತ ನಿಧಾನವಾಗಿ ಕೊಂಡೊಯ್ಯುವ, ಮಗು ತಾಯಿಯ ಕೈ ಹಿಡಿದು ನಡೆಯುವಂತೆ ಹಿಡಿದು ನಡೆಸುವ ಕರುಣಾಮಯ ಸಾಧನವೇ ಈ ಸ್ತೋತ್ರಗಳು. ಇಲ್ಲಿ ಅದ್ವೈತ ಮತ್ತು ಸ್ತೋತ್ರಗಳ ನಡುವೆ ಯಾವುದೇ ವಿರೋಧವಿಲ್ಲ; ಅದು ಸಾಧನೆಯ ಪಥದಲ್ಲಿ ಕ್ರಮಬದ್ಧವಾದ ಪ್ರಗತಿ — ರೂಪದಲ್ಲಿ ಆರಂಭಿಸಿ, ನಿರಾಕಾರದಲ್ಲಿ ಲಯವಾಗುವ ಆಂತರ್ಯಾತ್ರೆ.

ವೈದಿಕ ಧರ್ಮದ ಪುನರುತ್ಥಾನಕ್ಕಾಗಿ ಶಂಕರಾಚಾರ್ಯರು ಇಡೀ ಭಾರತಖಂಡವನ್ನು ಎರಡು ಬಾರಿ ವಿಜಯಯಾತ್ರೆಗೆ ಒಳಪಡಿಸಿದರು. ಈ ಮಹಾಯಾತ್ರೆಗಳ ಸಂದರ್ಭದಲ್ಲಿ ಅವರು ಅನೇಕ ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿ ಪ್ರತಿಷ್ಠಿತ ದೇವತೆಗಳನ್ನು ಸ್ತುತಿಸಿ ಸ್ತೋತ್ರಗಳನ್ನು ರಚಿಸಿದರು. ಈ ಸ್ತೋತ್ರಗಳಲ್ಲಿ ಕೇವಲ ಅಲಂಕಾರವಲ್ಲ; ಅವು ಭಕ್ತನ ಮನಸ್ಸಿನಲ್ಲಿ ಭಾವೋದ್ಧೀಪನ ಮೂಡಿಸುವ ಶಕ್ತಿಸಾಧನಗಳು. ಶಂಕರರ ಸ್ತೋತ್ರಗಳಲ್ಲಿ ಸುಲಲಿತ ಸಾಹಿತ್ಯಶೈಲಿ, ಕವಿತ್ವದ ನಿಪುಣತೆ, ಸಂಸ್ಕೃತಭಾಷೆಯ ಚಾತುರ್ಯ, ಪ್ರಕೃತಿಯ ದಿವ್ಯ ಸೌಂದರ್ಯ, ತಾಯಿಯ ಸೌಮ್ಯ ಮಮತೆ ಹಾಗೂ ಕವಿಯ ಸೂಕ್ಷ್ಮ ಪ್ರಯೋಗಗಳು ದಿವ್ಯಾನುರಣನದಂತೆ ಆಪ್ತವಾಗಿ ಪ್ರತಿಧ್ವನಿಸುತ್ತವೆ. ಅವುಗಳನ್ನು ಭಕ್ತಿಯಿಂದ ಪಠಿಸಿದಾಗ, ಭಕ್ತನಿಗೆ ತಾನೇ ಆ ದೇವತೆಯ ಸಾನ್ನಿಧ್ಯದಲ್ಲಿರುವಂತೆ, ದೇವರ ಸಾನ್ನಿಧ್ಯವನ್ನು ನೇರವಾಗಿ ಅನುಭವಿಸುವಂತೆ, ಮನಸ್ಸೇ ದೇಗುಲವಾಗಿ ಪರಿವರ್ತಿತವಾಗುತ್ತದೆ.

ಶಂಕರಭಗವತ್ಪಾದರು ರಚಿಸಿದ ಸ್ತೋತ್ರಗಳಲ್ಲಿ ಭಕ್ತಿ ಪ್ರಧಾನ ಸ್ವರವಾಗಿದ್ದರೂ, ಅವುಗಳ ಆಂತರಾಳದಲ್ಲಿ ಅದ್ವೈತದ ತತ್ತ್ವಸೂತ್ರಗಳು ಅತಿ ಸೂಕ್ಷ್ಮವಾಗಿ ಜೋಡಿಸಿಕೊಂಡಿವೆ. ಸ್ತೋತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ, ಕವಿತ್ವದ ಮಧ್ಯೆ ತತ್ತ್ವಜ್ಯೋತಿ ಹೇಗೆ ಮಿನುಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಭಕ್ತಿ ರೂಪದ ನದಿಯಲ್ಲಿ ಹರಿಯುವ ಜ್ಞಾನಸ್ವರೂಪದ ಪ್ರವಾಹ ಸ್ತೋತ್ರಗಳಲ್ಲೇ ಅದೃಶ್ಯವಾಗಿ ಹರಡಿಕೊಂಡಿದೆ. ಆದ್ದರಿಂದ, ಶಂಕರರ ತತ್ತ್ವವನ್ನು ಗ್ರಹಿಸಲು ಅವರ ಸ್ತೋತ್ರಗಳು ಕೇವಲ ಭಕ್ತಿಪಥದ ಅಭ್ಯಾಸವಲ್ಲ; ಅವು ನಿರಾಕಾರ ತತ್ತ್ವದತ್ತ ಕೊಂಡೊಯ್ಯುವ ದಾರಿದೀಪವೂ ಆಗಿವೆ.

ಹೀಗೆ, ಶಂಕರಭಗವತ್ಪಾದರು ಪ್ರತಿಪಾದಿಸಿದ ಅದ್ವೈತ ತತ್ತ್ವ ಮತ್ತು ಅವರು ರಚಿಸಿದ ಸ್ತೋತ್ರಗಳಲ್ಲಿ ಕಾಣುವ ಸಾಕಾರ ಭಕ್ತಿ — ಎರಡೂ ಪರಸ್ಪರ ವಿರೋಧಿಗಳು ಅಲ್ಲ. ಅವು ಸಾಧನೆಯ ಪಥದಲ್ಲಿ ಎರಡು ಹಂತಗಳು, ಎರಡು ಶಿಖರಗಳು. ಭಕ್ತಿ ರೂಪದ ಮೆಟ್ಟಿಲು ಜ್ಞಾನಕ್ಕೆ ದಾರಿ ಮಾಡಿಕೊಡುತ್ತದೆ; ಜ್ಞಾನವು ಮುಕ್ತಿಗೆ ಕರೆದೊಯ್ಯುತ್ತದೆ; ಮುಕ್ತಿ ಪರಬ್ರಹ್ಮದ ಏಕತ್ವದಲ್ಲಿ ಲಯಗೊಳ್ಳುತ್ತದೆ. ನಿರಾಕಾರ ತತ್ತ್ವದತ್ತ ಸಾಗಲು ರೂಪಸಾಧನೆಯ ಅವಶ್ಯಕತೆ ಮನೋದೈಹಿಕವಾಗಿಯೂ ದಾರ್ಶನಿಕವಾಗಿಯೂ ಸಹಜ. ಅದಕ್ಕಾಗಿ ಶಂಕರರು ದೇವರ ರೂಪಗಳನ್ನೂ, ಸ್ತೋತ್ರಗಳನ್ನೂ ನಿರ್ಲಕ್ಷಿಸದೆ, ಅವುಗಳನ್ನು ಸಾಧನೆಯ ಅವಿಭಾಜ್ಯ ಅಂಗಗಳಾಗಿ ಪ್ರತಿಷ್ಠಾಪಿಸಿದರು.

ಭಕ್ತಿ ಮತ್ತು ಜ್ಞಾನ, ರೂಪ ಮತ್ತು ನಿರಾಕಾರ, ಸಾಧಕ ಮತ್ತು ಸಾಧ್ಯ — ಇವೆಲ್ಲವೂ ಅಂತಿಮವಾಗಿ ಒಂದೇ ಪರಬ್ರಹ್ಮತತ್ತ್ವದಲ್ಲಿ ಶಾಂತಿಯಾಗುತ್ತವೆ. ಸ್ತೋತ್ರ ಮತ್ತು ಅದ್ವೈತ ಎರಡೂ ವಿಭಿನ್ನ ಮಾರ್ಗಗಳಲ್ಲ; ಅವು ಒಂದೇ ಗಮ್ಯವನ್ನು ತಲುಪಿಸುವ ವಿಭಿನ್ನ ಸೇತುವೆಗಳು.

ದೇವರ ಸ್ತೋತ್ರಗಳಲ್ಲಿ ಭಕ್ತನ ಹೃದಯ ಹೊಮ್ಮುತ್ತದೆ; ಅದ್ವೈತದಲ್ಲಿ ಆತ್ಮಜಾಗೃತಿ ಬೆಳಗುತ್ತದೆ.

*******

 

 

 

ಶ್ರೀಕಂಠ ಚೌಕೀಮಠ

——————-

ಕಲಬುರಗಿಯ ಸಂಜಯ ಮಕಾಲೆ  ( ಮೊಬೈಲ ಸಂಖ್ಯೆ: 98455 02640) ಎಂಬವರು ಪರಳಿ ವೈಜನಾಥ ದೇವಾಲಯದಲ್ಲಿ ಹಾನಗಲ್ ಕುಮಾರಸ್ವಾಮಿಗಳಿಗೆ ಪ್ರವೇಶ ನಿರಾಕರಣೆ ನಡೆದ ಕಾರಣದಿಂದ  ವಿವಾದವಾಯಿತು ಎಂದು ಸುಳ್ಳು ವದಂತಿಯನ್ನು ಶ್ರೀ ಎಮ್.ಪಿ.ಎಮ್.ನಟರಾಜಯ್ಯ ಅವರ ಫೇಸಬುಕ್‌ ಅಕೌಂಟಗೆ ಹಾಕಿರುವ ವಿಷಯವನ್ನು ನನಗೆ ತಿಳಿಸಲಾಗಿದೆ. ಆದರೆ ಈ ಮಾತುಗಳಲ್ಲಿ ಸತ್ಯಾಂಶವಿಲ್ಲ; ಉಲ್ಲೇಖಿಸಲಾದ ಘಟನೆ ಸತ್ಯಕ್ಕೆ ದೂರವಾದುದು. ಪರಳಿ ವೈದ್ಯನಾಥೇಶ್ವರ ದೇವಾಲಯದಲ್ಲಿ ಪೂಜ್ಯ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳಿಗೆ ಪ್ರವೇಶ ನಿರಾಕರಣೆ ಎನ್ನುವ ಅಂಶವೇ ಇಲ್ಲ.

ನಿಜವಾದ ಹಿನ್ನೆಲೆಯೆಂದರೆ, ಅನೇಕ ಭಕ್ತರ ವಿನಂತಿಯನ್ನು ಅಂಗೀಕರಿಸಿ, ಕ್ರಿ.ಶ. ೧೯೨೪ರ ಜೂನ್ ತಿಂಗಳಲ್ಲಿ ವರಂಗಲ್ ಜಿಲ್ಲೆಯ ಗಣಪುರಂ ಸ್ಟೇಷನ್ ಹತ್ತಿರದ ಲಿಂಗಂಪಲ್ಲಿಯ ಶಿವಕೋಟಿ ವೀರಭದ್ರಸ್ವಾಮಿಗಳು ವೈದ್ಯನಾಥೇಶ್ವರನಿಗೆ ವೇದೋಕ್ತ ಮಹಾರುದ್ರಾಭಿಷೇಕ ಮಹೋತ್ಸವ ನಡೆಸಬೇಕೆಂಬ ಆಶಯ ವ್ಯಕ್ತಪಡಿಸಿದರು. ಭಕ್ತರು ಅದಕ್ಕೆ ವ್ಯಾಪಕ ಬೆಂಬಲ ನೀಡಿದರು; ಮುಕ್ತಹಸ್ತದಿಂದ ನೆರವು ದೊರೆತು ಸುಮಾರು ಹತ್ತೆಂಟು ಸಾವಿರ ರೂಪಾಯಿಗಳಷ್ಟು ಧನ ಶೇಖರವಾಯಿತು.

 

ಈ ಮಹೋತ್ಸವದ ವೈಭವ, ಧರ್ಮಸೇವೆ ಮತ್ತು ಧನಸಂಗ್ರಹವನ್ನು ಕಂಡು ಅಲ್ಲಿ ಇರುವ ಕೆಲವು ಬ್ರಾಹ್ಮಣರಲ್ಲಿ ಆಸಕ್ತಿ ಹುಟ್ಟಿತು; ಅವರು ಈ ಉತ್ಸವದಲ್ಲಿ ತಮಗೂ ಸ್ಥಾನ ದೊರಕಬೇಕೆಂದು ಬಯಸಿದರು. ಆದರೆ ರುದ್ರಾಭಿಷೇಕದ ಸಂದರ್ಭದಲ್ಲಿ ವೀರಶೈವ ವೈದಿಕ ಮಂಡಲಿಯೊಡನೆ ಸೇರುವುದರ ಹೊರತು, ಅವರಿಗೆ ಬೇರೆ ರೀತಿಯ ಭಾಗವಹಿಸುವ ಅವಕಾಶ ಇರಲಿಲ್ಲ. ಈ ಕಾರಣಕ್ಕೆ, ಶ್ರೀರುದ್ರ ಪಠಣ ಹಾಗೂ ಹೋಮದಲ್ಲಿ ಋತ್ವಿಜರಾಗಿ ಸೇರಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು.

 

ವೀರಶೈವರು ಇದಕ್ಕೆ ಸಹಮತಿಯಾಗಲಿಲ್ಲ. ಅನೇಕ ಶತಮಾನಗಳಿಂದ ಸ್ವತಂತ್ರ ಧರ್ಮಪರಂಪರೆಯನ್ನು ಆಶ್ರಯಿಸಿರುವ ವೀರಶೈವ ಸಂಪ್ರದಾಯಕ್ಕೆ ಇದು ಸರಿಹೊಂದುವುದಿಲ್ಲವೆಂದೂ, ತಮ್ಮ ಪದ್ಧತಿಯ ಶುದ್ಧತೆಯನ್ನು ರಕ್ಷಿಸುವ ಸಂಕಲ್ಪವನ್ನು ಅವರು ಘಂಟಾಘೋಷವಾಗಿ ಘೋಷಿಸಿದರು. ಇದರಿಂದ ಕೋಪಗೊಂಡ ಕೆಲ ಬ್ರಾಹ್ಮಣರು “ವೀರಶೈವರಿಗೆ ವೇದಾಧಿಕಾರವಿಲ್ಲ; ಅವರಿಗೆ ವೇದೋಕ್ತ ರುದ್ರಾಭಿಷೇಕ ನಡೆಸುವ ಹಕ್ಕಿಲ್ಲ” ಎಂದು ಆರೋಪಿಸಲು ಪ್ರಾರಂಭಿಸಿದರು. ತಮ್ಮ ವಿರೋಧವನ್ನು ದೃಢಪಡಿಸಲು ಅವರು ನಿಜಾಂ ಸರಕಾರದ ಮುಂದೆ ದೂರು ಅರ್ಜಿಗಳನ್ನು ಸಲ್ಲಿಸಿದರು.

ಈ ವಿಷಯವು ಪ್ರಕಟವಾದ ಕ್ಷಣದಿಂದಲೇ ಪರಸ್ಪರ ವಿರೋಧಿ ಮನೋಭಾವ ಹೊಂದಿದ್ದ ಎರಡು ಪಂಗಡಗಳ ಮಧ್ಯೆ ಈರ್ಷೆ–ದ್ವೇಷಗಳ ಜ್ವಾಲೆ ಹೊತ್ತಿಕೊಂಡಿತು. ಒಬ್ಬರನ್ನೊಬ್ಬರು ಹೀಯಾಳಿಸುವುದು, ನಿಂದಿಸುವುದು, ಪರಸ್ಪರ ದ್ವೇಷದ ಮಾತುಗಳನ್ನು ಬಳಕೆ ಮಾಡುವಂತ ವಾತಾವರಣ ನಿರ್ಮಾಣವಾಯಿತು. ಈ ಉದ್ವಿಗ್ನತೆಯ ಪರಿಣಾಮದಿಂದ ಬ್ರಾಹ್ಮಣ ಅಧಿಕಾರಿಗಳಲ್ಲಿಯೂ ಪ್ರತಿಕ್ರಿಯೆ ಹುಟ್ಟದೆ ಇರಲಿಲ್ಲ. ಸ್ವಜಾತಿಯ ಗರ್ವ ಮತ್ತು ಅಭಿಮಾನದಿಂದ ಅವರು “ವೀರಶೈವರು ರುದ್ರಾಭಿಷೇಕ ಮಾಡಬಾರದು” ಎಂಬ ಕಟ್ಟಪ್ಪಣೆ ಹೊರಡಿಸಿದರು.

ಈ ರೀತಿಯ ಸ್ಥಳೀಯ ಅಧಿಕಾರಿಗಳ ಪಕ್ಷಪಾತದ ಸೂಚನೆಗಳಿಂದ ವೀರಶೈವರು ಮತ್ತು ಇತರ ಬ್ರಾಹ್ಮಣೇತರ ವರ್ಗದವರು ಆಕ್ರೋಶಗೊಂಡರು. ವಿವಾದಕ್ಕೆ ನ್ಯಾಯಸಮ್ಮತ ಬಗೆಹರಿವು ದೊರಕಬೇಕೆಂಬ ಆಶಯದಿಂದ ಅವರು ಸಂಸ್ಥಾನಾಧಿಪತಿಗಳಾದ ನಿಜಾಂರವರಲ್ಲಿ ಬಿನ್ನಹ ಸಲ್ಲಿಸಿದರು. ಬ್ರಾಹ್ಮಣರಾದವರು ಮರುವಿಷಯವಾಗಿ “ಅನಧಿಕಾರಿಗಳಾದ ಲಿಂಗಾಯತರು ರುದ್ರಾಭಿಷೇಕ ಮಾಡುವುದು ಧರ್ಮವಿರುದ್ಧ; ಆದ್ದರಿಂದ ಅದಕ್ಕೆ ಅವಕಾಶ ನೀಡಬಾರದು” ಎಂದು ನಿಜಾಂರಿಗೆ ಲಿಖಿತವಾಗಿ ತಿಳಿಸಿದರು. ಇದರ ಪರಿಣಾಮವಾಗಿ ನಿಜಾಂ ಸರ್ಕಾರವು ಅವರ ಮನವಿಯನ್ನು ಪರಿಗಣಿಸಿ ತಕ್ಕ ಆದೇಶಗಳನ್ನು ಹೊರಡಿಸಬೇಕಾಯಿತು.

ಈ ವಿಚಾರವಾಗಿ ಮೈಸೂರ ಸ್ಟಾರ್ ಪತ್ರಿಕೆಯಲ್ಲಿ ಪ್ರಕಟವಾದ ಅಗ್ರಲೇಖನದ ಮಾತುಗಳು ಉಲ್ಲೇಖಾರ್ಹ. ಸ್ಥಳಾಧಿಕಾರಿಗಳ ಪಕ್ಷಪಾತದಿಂದ ವೀರಶೈವರು ಹಾಗೂ ಇತರ ಬ್ರಾಹ್ಮಣೇತರ ಸಮುದಾಯಗಳು ಕುಬ್ಬರಾಗಿ ನಿಜಾಂರನ್ನು ಸಂಪರ್ಕಿಸಿದರೆ, ಮತ್ತೊಂದೆಡೆ ಬ್ರಾಹ್ಮಣರು “ಅನಧಿಕಾರಿಗಳಾದ ಲಿಂಗಾಯತರಿಗೆ ರುದ್ರಾಭಿಷೇಕ ಮಾಡಲು ಅವಕಾಶ ಕೊಡಬಾರದು” ಎಂದು ತಮ್ಮ ಮನವಿಯನ್ನು ಗಟ್ಟಿಯಾಗಿ ದಾಖಲಿಸಿದರು.

ನಿಜಾಂ ಸರ್ಕಾರಕ್ಕೆ ಈ ವಿವಾದವು ಗಂಭೀರವಾಗಿ ತೋರಿ, “ರುದ್ರಾಭಿಷೇಕ ಮಾಡಿ ಜ್ಯೋತಿರ್ಲಿಂಗವನ್ನು ಪೂಜಿಸುವ ಹಕ್ಕಿಗೆ ವೀರಶೈವರು ಅರ್ಹರಾಗುವುದನ್ನು ಭರ್ವಶಾಸ್ತ್ರಾಧಾರದಿಂದ ಸಾಬೀತುಪಡಿಸಬೇಕು” ಎಂದು ತಿಳಿದುಬಂದ ಆದೇಶ ಹೊರಡಿಸಲಾಯಿತು. ಇದಕ್ಕಾಗಿ ವಾದ-ಪ್ರತಿವಾದ ಮಾಡಲು ಇಂದೂರು ಸಂಸ್ಥಾನದ ಸಂಸ್ಕೃತ ಮಹಾಪಾಠ ಶಾಲೆಯ ವೇದಾಭಾಷ್ಯ ಪ್ರೊಫೆಸರ್ ಪಂಡಿತ ಸ್ವಾಮಿ ವಿರೂಪಾಕ್ಷ ಒಡೆಯರನ್ನು ವೀರಶೈವರ ಪರವಾಗಿ ಆಹ್ವಾನಿಸಲಾಯಿತು. ಬ್ರಾಹ್ಮಣರ ಪರವಾಗಿ ಸಂಕೇಶ್ವರ ಮಠದ ಶ್ರೀ ಶಂಕರಾಚಾರ್ಯರನ್ನು ಆಯ್ಕೆಮಾಡಿ ಅವರಿಗೂ ಮಹಾಮಹೋಪಾಧ್ಯಾಯ ವಾಸುದೇವ ಶಾಸ್ತ್ರಿ ಅಭ್ಯಂ ಹಾಗೂ ವಿಷ್ಣು ಶಾಸ್ತ್ರಿ ಭಾಸಟ್ ಮೊದಲಾದ ಪಂಡಿತರನ್ನು ಸಹಾಯಕರನ್ನಾಗಿ ನೇಮಿಸಲಾಯಿತು. (ಮೈಸೂರ ಸ್ಟಾರ್ – 8-1-1925)

ನಿಜಾಂಸರಕಾರದ ಅಪ್ಪಣೆಯಂತೆ ಶಾಸ್ತ್ರಾರ್ಥವು ೧೯-೩-೧೯೨೫ರಂದು ಪರಳಿಯಲ್ಲಿ ಪ್ರಾರಂಭವಾಗುವುದೆಂದು ನಿಶ್ಚಯವಾಯಿತು. ಬ್ರಾಹ್ಮಣರು ತಮ್ಮ ಪರದ ಪಂಡಿತರ ಅಧ್ವಾನಕ್ಕೆ ಸಮಗ್ರ ಪ್ರಾಂತದ ಬ್ರಾಹ್ಮಣರಿಂದ ಧನವಂತಿಕೆ ಹಾಗೂ ಬೆಂಬಲವನ್ನು ಜಾಹೀರಾತುಗಳ ಮುಖಾಂತರ ಜಮೆ ಮಾಡಲು ಪ್ರಾರಂಭಿಸಿದರು. ಪರಳಿ, ಬಾರ್ಶಿ, ಲಾಟ್ ಮೊದಲಾದ ಪ್ರದೇಶಗಳ ವೀರಶೈವರು ಕೂಡ ತಾವು ಸಹ ಸಂಘಟಿತವಾಗುತ್ತಾ, ಅದೇ ಸಂದರ್ಭದಲ್ಲಿ ಮಹಾರಾಷ್ಟ್ರೀಯ ಅಖಿಲ ವೀರಶೈವ ಪ್ರಥಮ ಮಹಾಸಭೆಯನ್ನು ಕರೆಯುವ ನಿರ್ಧಾರ ಮಾಡಿಕೊಂಡರು. ಸಭಾಧ್ಯಕ್ಷರಾಗಿ ಶ್ರೀ ಜಗದಾಚಾರ್ಯ ಸ್ವಾಮಿ ವಿರೂಪಾಕ್ಷ ಒಡೆಯರನ್ನೇ ಆರಿಸಿ ಸಭೆ ನಡೆಸಲು ನಿಜಾಂ ಸರ್ಕಾರದ ಅನುಮತಿಯನ್ನೂ ಕೋರಿ ಮುಂದಾದರು. (ಮೈಸೂರ ಸ್ಟಾರ್ – 31-1-1925)

ಈ ವ್ಯಾಜ್ಯ ಮತ್ತು ನ್ಯಾಯಪ್ರಕ್ರಿಯೆಯಲ್ಲಿ ಜಯ ಸಾಧಿಸುವ ಸಂದರ್ಭದಲ್ಲಿ ಪೂಜ್ಯ ಹಾನಗಲ್ ಶ್ರೀ ಕುಮಾರಸ್ವಾಮಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು.
(ಮೈಸೂರ ಸ್ಟಾರ್ – 7 ನವೆಂಬರ್ 1925)

ವೀರಶೈವ ಮತಸುಧಾರಣೆಯ ಕ್ಷೇತ್ರದಲ್ಲಿ ಕೇಂದ್ರಭೂಮಿಯಾಗಿರುವ ಶಿವಯೋಗಮಂದಿರ ಸಂಸ್ಥೆ ಮತ್ತು ವೀರಶೈವ ಮಹಾಸಭೆ ಮುಂತಾದ ಸಂಘಟನೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಪೂಜ್ಯ ಹಾನಗಲ್ಲ ಶ್ರೀ ನಿ.ಪ್ರ. ಕುಮಾರಸ್ವಾಮಿಗಳು. ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರಿಂದ ವಿಶೇಷ ಆಹ್ವಾನ ಸ್ವೀಕರಿಸಿ, ಐದು–ಆರು ಮಂದಿ ಶಿವಯೋಗಿಗಳು, ಸದ್ಭಕ್ತರು ಹಾಗೂ ಪ್ರಾಜ್ಞ ಪಂಡಿತರಾದ ಪಂ| ನಾಲ್ಕಾರ ಜಗದೀಶಶಾಸ್ತ್ರಿಗಳು, ಮಣೂರ ಮಲ್ಲಿಕಾರ್ಜುನ ಶಾಸ್ತ್ರಿಗಳು ಮೊದಲಾದ ವಿದ್ವಾಂಸರೊಂದಿಗೆ ಹೈದರಾಬಾದ್‌ಗೆ ತೆರಳಿದರು. ಅಲ್ಲಿ ಬ್ರಾಹ್ಮಣರಿಂದ ಮುಂದಿಟ್ಟಿದ್ದ ೩೬ ಪ್ರಶ್ನೆಗಳಿಗೆ ಅನೇಕ ಗ್ರಂಥಪ್ರಮಾಣ ಹಾಗೂ ಶಾಸ್ತ್ರನಿರೂಪಣೆಯ ಆಧಾರದ ಮೇಲೆ ಖಂಡನಾತ್ಮಕ ಉತ್ತರಗಳನ್ನು ರಚಿಸಿ ಧರ್ಮಕೋರ್ಟಿಗೆ ಕಳುಹಿಸಿ ಧರ್ಮರಕ್ಷಣೆಗೆ ಸಹಾಯ ಮಾಡಿದರು.

ವೀರಶೈವ ಪಂಡಿತರಲ್ಲೂ ಕೆಲವೊಮ್ಮೆ ಅಭಿಪ್ರಾಯ ಭೇದಗಳು ಮೂಡಿದ ಸಂದರ್ಭಗಳು ಕಂಡುಬಂದವು. ಆಗ ಶ್ರೀಯವರು ಶಾಂತ ಮತ್ತು ಉದಾತ್ತ ಸಂಕಲ್ಪದಿಂದ ಮಾತನಾಡುತ್ತಾ –
“ಸಮಯವನ್ನು ಗಮನಿಸಿ. ನಮ್ಮೆಲ್ಲರಿಗೂ ಮಾನವೇ ಮೂಲಧನ. ಸಮಾಜಕಾರ್ಯವೇ ಮುಖ್ಯ; ಜನಮೆಚ್ಚುಗೆಗೆ ಸೊಪ್ಪು ಹಾಕಬೇಡಿ. ಶಿವನ ಮೆಚ್ಚುಗೆಯೇ ಮೂಲಗುರಿಯಾಗಲಿ,”
ಎಂದು ಸಾರಿದುದು ಅವರ ಉದಾತ್ತ ಚರಿತ್ರೆಗೆ ದೃಢಸಾಕ್ಷಿಯಾಗಿದೆ.

ಪೂಜ್ಯ ಹಾನಗಲ್ ಶ್ರೀ ಕುಮಾರಸ್ವಾಮಿಗಳು ಜವಾಬ್ದಾರಿಯುತ ಪಂಡಿತರ ಹಾಗೂ ವಕೀಲರ ತಂಡವನ್ನು ರಚಿಸಿ, ಲಿಂಗಾಯತ ಸಮುದಾಯದ ಮಾನ-ಮರ್ಯಾದೆ ಮತ್ತು ಸ್ವಾಭಿಮಾನಕ್ಕಾಗಿ ಹಗಲುರುಳು ತಾರತಮ್ಯವಿಲ್ಲದೆ ಹೋರಾಡಿದರು.

ಪರಳಿ ವೈದ್ಯನಾಥೇಶ್ವರ ರುದ್ರಾಭಿಷೇಕ ವ್ಯವಹಾರದಲ್ಲಿ ಭಾಗವಹಿಸಿದ ವೀರಶೈವ ಪಂಡಿತರು

ವೀರಶೈವರ ಧಾರ್ಮಿಕ ಹಕ್ಕು, ವೇದಾಧಿಕಾರ ಮತ್ತು ರುದ್ರಾಭಿಷೇಕ ಅರ್ಹತೆಯನ್ನು ಸಾಬೀತುಪಡಿಸಲು ಅನೇಕ ಪಂಡಿತರು ತಮ್ಮ ಜ್ಞಾನ, ಸಾಧನೆ ಮತ್ತು ತತ್ವಪರ ಚಿಂತನೆಯೊಂದಿಗೆ ಮುಂದೆ ಬಂದರು. ಅವರ ಸೂಕ್ಷ್ಮಚಿಂತನೆ, ಶಾಸ್ತ್ರಾಧಾರಿತ ವಾದ-ಪ್ರತಿವಾದ ಮತ್ತು ಪತ್ರಿಕ್ರಮಗಳು ಈ ವಿಚಾರಕ್ಕೆ ಬಲವಾದ ಆಧಾರವಾಗಿದವು. ಆ ಪೈಕಿ ಪ್ರಮುಖರಾದ ಪಂಡಿತರ ಪಟ್ಟಿ ಹೀಗಿದೆ:

  1. ಜಗದಾಚಾರ್ಯ ವಿದ್ಯಾನಿಧಿ ವೇದತೀರ್ಥ ಸ್ವಾಮಿತಾ ವಿರೂಪಾಕ್ಷ ಒಡೆಯರು, ವೇದಭಾಷ್ಯ ಪ್ರೋಫೆಸರ್, ಇಂದೂರು
  2. ವೇ.ಬ್ರ. ಶ್ರೀ ವ್ಯಾಕರಣತೀರ್ಥ ಸದಾಶಿವಶಾಸ್ತ್ರಿಗಳು, ಹೋಳ್ಳ ಸಂಸ್ಕೃತ ಕಾಲೇಜು (ಮುಂದೆ ರಂಭಾಪುರಿ ಪೀಠಾಧ್ಯಕ್ಷರು), ಕಾಶಿ
  3. ಆಸ್ಥಾನ ಮಹಾವಿದ್ವಾನ್ ಕರ್ನಾಟಕ ಭಾಷಾರತ್ನ ಪಿ.ಆರ್. ಕರಿಬಸವಶಾಸ್ತ್ರಿಗಳು, ಮೈಸೂರು
  4. ಆಸ್ಥಾನ ಮಹಾವಿದ್ವಾನ್ ಪಂಡಿತರತ್ನ ಸಿರಸಿ ಗುರುಶಾಂತಶಾಸ್ತ್ರಿಗಳು, ಮೈಸೂರು
  5. ಪಂ| ಗುರುಬಸವಶಿವಾಚಾರ್ಯರು, ಕ್ಯಾಸನೂರು ಸಂಸ್ಥಾನಮಠ
  6. ಪಂ. ಕಲಿಗಣನಾಥ ಶಾಸ್ತ್ರಿಗಳು
  7. ಪಂ| ಅಜ್ಜಯ್ಯ ಶಾಸ್ತ್ರಿಗಳು, ತರ್ಕತೀರ್ಥ, ತರ್ಕವಾಗೀಶ, ಪಗಡದಿನ್ನಿ; ಕಾರಭಾರಿಗಳು, ಚೌಡದಾನಪುರ ಸಂಸ್ಥಾನಮಠ
  8. ಪಂ|| ಚಂದ್ರಶೇಖರ ಶಾಸ್ತ್ರಿಗಳು, ಪಗಡದಿನ್ನಿ
  9. ಪಂ. ಸೋಮನಾಥ ಶಾಸ್ತ್ರಿಗಳು, ಧರ್ಮತತ್ವವಿಶಾರದ, ಗೊಗ್ಗಿಹಳ್ಳಿ (ಸಾಗರ ತಾ||)
  10. ಪಂ. ಬಸವರಾಜ ಶಾಸ್ತ್ರಿಗಳು, ವ್ಯಾಕರಣರತ್ನ, ಪಗಡದಿನ್ನಿ
  11. ಪಂ|| ಮಣೂರ ಮಲ್ಲಿಕಾರ್ಜುನ ಶಾಸ್ತ್ರಿಗಳು, ಸೊಲ್ಲಾಪುರ
  12. ವ್ಯಾಕರಣತೀರ್ಥ ವಿದ್ಯಾಲಂಕಾರ ಚಂದ್ರಶೇಖರ ಶಾಸ್ತ್ರಿಗಳು, ಪ್ರಿನ್ಸಿಪಾಲ್, ಶಂಕರ ಸಂಸ್ಕೃತ ಕಾಲೇಜು, ಯಾದಗಿರಿ
  13. ಧರ್ಮತತ್ತ್ವಚಿಂತಾಮಣಿ ಚಂದ್ರಶೇಖರ ಶಾಸ್ತ್ರಿಗಳು, ಕಂಪಲಿ
  14. ಆಸ್ಥಾನವಿದ್ವಾನ್ ಚಂದ್ರಶೇಖರ ಶಾಸ್ತ್ರಿಗಳು, ತೆಲಗಿ ಮಠ, ದಾವಣಗೆರೆ
  15. ಹಂಪಿ ತೋಪಿನ ಸಾವಿರದೇವರ ಮಹಾಂತ ಸ್ವಾಮಿಗಳು, ಕಂಪಲಿ
  16. ಸರ್ವದರ್ಶನತೀರ್ಥ ವೈ. ನಾಗೇಶ ಶಾಸ್ತ್ರಿಗಳು, ಬಳ್ಳಾರಿ
  17. ಶಿವಕೋಟಿ ವೀರಭದ್ರ ಸ್ವಾಮಿಗಳು, ಲಿಂಗಂಪಳ್ಳಿ
  18. ಶ್ರೀ ಸದಾಶಿವಮೂರ್ತಿಯವರು, ಸಖರಾಯಪಟ್ಟಣದ ಷ.ಬ್ರ. ಶ್ರೀ ಸದಾಶಿವಾಚಾರ್ಯರು

ವೀರಶೈವರ ಪರವಾಗಿ ಹೋರಾಡಿದ ಪ್ರಮುಖ ವಕೀಲರು

ಈ ಪ್ರಕರಣ ಕಾನೂನು, ಸಂಪ್ರದಾಯ ಮತ್ತು ಧಾರ್ಮಿಕ ಹಕ್ಕುಗಳ ಮಟ್ಟಿಗೆ ತಲುಪಿದಾಗ, ವೀರಶೈವ ಪರವಾಗಿ ಕಾರ್ಯನಿರ್ವಹಿಸಲು ಅನೇಕ ವಕೀಲರು ನ್ಯಾಯಾಂಗ ವೇದಿಕೆಯಲ್ಲಿ ನಿಂತರು:

  1. ನಿರ್ಮಲ ದೇಶಮುಖ್, ಹೈಕೋರ್ಟ್ ವಕೀಲರು, ಹೈದರಾಬಾದ್
  2. ರಾಯ ವಿಶ್ವೇಶ್ವರನಾಥ್, ಹೈಕೋರ್ಟ್ ವಕೀಲರು, ಹೈದರಾಬಾದ್
  3. ರಾವಬಹದ್ದೂರ್ ಶಾಂತವೀರ ಒಡೆಯರ್, ಎಲ್.ಎ.ಜಿ., ಚೌಡದಾನಪುರ
  4. ಬಾಪೂರಾವ್, ವಕೀಲರು, ಹೈದರಾಬಾದ್
  5. ಹೇಮಚಂದ್ರರಾವ್, ವಕೀಲರು, ಹೈದರಾಬಾದ್
  6. ಸೋಮೇಶ್ವರರಾವ್, ವಕೀಲರು, ಹೈದರಾಬಾದ್
  7. ಶರಣಯ್ಯ, ವಕೀಲರು, ಹೈದರಾಬಾದ್
  8. ನಾಗನಾಥಯ್ಯ, ವಕೀಲರು, ಹೈದರಾಬಾದ್
  9. ಬಾಲಕಿ ದೇಶಮುಖ್, ವಕೀಲರು, ಉದ್ಗೀರ
  10. ಚನ್ನಬಸವಯ್ಯ, ವಕೀಲರು, ಉದ್ಗೀರ
  11. ಚಂದ್ರಪ್ಪ, ವಕೀಲರು, ಉದ್ಗೀರ
  12. ಸಂಗ್ರಾಮಪ್ಪ, ವಕೀಲರು, ಉದ್ಗೀರ
  13. ಮಹದೇವಯ್ಯ, ವಕೀಲರು, ಉದ್ಗೀರ
  14. ನಾಗನಾಥರಾವ್, ವಕೀಲರು, ಭಾಲ್ಕಿ

ಉಪಸಂಹಾರ:

ಸತ್ಯಾಂಶಗಳ ಸರಿಯಾದ ಅಧ್ಯಯನವಿಲ್ಲದೆ ಕೇಳಿಬರುವ ಮಾತನ್ನು ಕೇಳಿದ ತಕ್ಷಣ ನಂಬುವುದು, ಪರಿಶೀಲಿಸದೆ ಪ್ರಸಾರ ಮಾಡುವುದು, ತಾನು ತಿಳಿದಂತೆ ತೋರಿಸಿಕೊಳ್ಳುವುದೇ ಆತ್ಮವಂಚನೆಗೆ ಸಮಾನವಾದುದು. ಇತಿಹಾಸ, ಸಂಪ್ರದಾಯ, ಸಮಾಜ ಮತ್ತು ಧರ್ಮಗಳಿಗೆ ಸಂಬಂಧಿಸಿದ ವಿಚಾರಗಳು ಲಘುವಾಗಿರುವುದಿಲ್ಲ; ಅವು ಭಾವನೆಯ ಆಧಾರದಲ್ಲಲ್ಲ, ದೃಢಪರಿಶೀಲನೆಯ ಆಧಾರದಲ್ಲಿ ನಿಂತಿರಬೇಕು. ತಪ್ಪುಮಾಹಿತಿಯನ್ನು ಸರಿ ಎಂದೆತ್ತುವುದು, ಸುಳ್ಳುಮಾತನ್ನು ಧರ್ಮವೆಂಬ ಹೆಸರಿನಲ್ಲಿ ಹೊಗಳುವುದು, ನಿಜದ ಮೇಲೆ ನೆರಳು ಬೀರುವುದಷ್ಟೇ ಅಲ್ಲ, ಪೀಳಿಗೆಯ ಮನಸ್ಸಿನ ಮೇಲೆ ಗಾಯ ಮಾಡುವಂತಾಗಿದೆ.

ಈ ಕಾರಣಕ್ಕೆ, ಸಂಜಯ ಮಕಾಲೆಯವರು ಕೂಡ ಸುಲಭವಾಗಿ ಸಿಗುವ ಸುಳ್ಳುಮಾಹಿತಿಗಳನ್ನೇ ನಂಬಿ ಹಂಚಿಕೊಳ್ಳುವುದಕ್ಕೆ ಮುಂದಾಗಬಾರದು. ಪೂರ್ವಾಗ್ರಹ, ದ್ವೇಷಭಾವ, ವೈಮನಸ್ಯದ ಮನಸ್ಥಿತಿಯಿಂದ ಬರೆಯುವುದು ಸತ್ಯಶೋಧನೆಯ ಮಾರ್ಗವಲ್ಲ; ಅದು ಸ್ವತಃ ತನ್ನನ್ನೇ ವಂಚಿಸುವ ಮೊದಲ ಹೆಜ್ಜೆಯಾಗಿದೆ. ವಿಚಾರದ ಅರಿವಿಲ್ಲದೆ ತೀರ್ಪು ನೀಡುವುದಕ್ಕಿಂತ, ವಿಚಾರದ ಅರಿವನ್ನು ಪಡೆದು ಮೌನವಿರುವುದು ಶ್ರೇಷ್ಠ. ಹೀಗಾಗಿ, ದ್ವೇಷದ ಮಸಿ ಬಳಸಿ ಬರೆಯುವ ಬದಲು, ತತ್ವದ ಬೆಳಕಿನಲ್ಲಿ ಸತ್ಯವನ್ನು ಗ್ರಹಿಸಲು ಪ್ರಯತ್ನಿಸಬೇಕು.

 

ಸತ್ಯ ಯಾವಾಗಲೂ ಶಾಂತವಾಗಿಯೇ ಗೆಲ್ಲುತ್ತದೆ;
ಸುಳ್ಳು ಜೋರಾಗಿ ಕೂಗಿದರೂ, ಅದರಲ್ಲಿ ಜ್ಯೋತಿ ಇರುವುದಿಲ್ಲ.

ಗ್ರಂಥ ಉಲ್ಲೇಖಗಳು

ಈ ಇತಿಹಾಸಿಕ ಮಾಹಿತಿಗೆ ಆಧಾರವಾಗಿರುವ ಪ್ರಮುಖ ಗ್ರಂಥಗಳು:

  1. ವೀರಶೈವ ವೇದಾಧಿಕಾರ ವಿಜಯ — ಸಂಗ್ರಹ: ಶ್ರೀ ಎಂ.ಜಿ. ನಂಜುಂಡರಾಧ್ಯರು, ಮೈಸೂರು
  2. ವಾರದ ಮಲ್ಲಪ್ಪನವರು — ಮರಾಠಿ ಮೂಲ: ಶ್ರೀ.ನಾ.ರಾ. ಬಾಮಣಗಾಂವಕರ, ಕನ್ನಡಾನುವಾದ: ಶ್ರೀ ಬಿ.ಎಸ್. ಗವಿಮಠ
  3. ಮಹಾಜಂಗಮ ಪಿ.ಎಚ್.ಡಿ ಅಧ್ಯಯನಗ್ರಂಥ — ಲೇಖಕ: ಡಾ. ಜಿ.ಕೆ. ಹಿರೇಮಠ, ಕವಿ.ವಿ.ವಿ., ಧಾರವಾಡ

 

 ಶ್ರೀಕಂಠ ಚೌಕೀಮಠ

 

 

ಲೇಖಕ: ಶ್ರೀಕಂಠ.ಚೌಕೀಮಠ

ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು

(136ನೇ ಜಯಂತ್ಯುತ್ಸವ – 2025)

ಲಿಂ. ಭಾಲ್ಕಿ ಶ್ರೀ ಘ. ಚ. ಚನ್ನಬಸವಸ್ವಾಮಿ ಪಟ್ಟದ್ದೇವರು ಹಿರೇಮಠದ ಅಧ್ಯಕ್ಷರಾಗಿದ್ದ ಮಹಾನ್ ತಪಸ್ವಿ, ಕಮಾಲನಗರ (ಜಿಲ್ಲೆ ಬೀದರ)ದಲ್ಲಿ ಕ್ರಿ.ಶ. 1889ರಲ್ಲಿ ಜನಿಸಿದರು. ಬಾಲ್ಯದಿಂದಲೇ ವಿದ್ಯೆ ಮತ್ತು ಸಂಸ್ಕಾರಗಳತ್ತ ಒಲವುಳ್ಳವರಾಗಿದ್ದ ಅವರು, ಪ್ರಾಥಮಿಕವಾಗಿ ಅವರಾದಿ ಪಾಠಶಾಲೆಯಲ್ಲಿ ಕನ್ನಡ ಕಾವ್ಯಗಳ ಅಭ್ಯಾಸವನ್ನು ಮಾಡಿ, ಶಬ್ದ–ಭಾವಗಳ ಸೌಂದರ್ಯವನ್ನು ಅಳವಡಿಸಿಕೊಂಡರು. ಆ ಅಧ್ಯಯನವೇ ಅವರ ಅಂತರಂಗದಲ್ಲಿ ಆತ್ಮಜ್ಞಾನದ ದೀಪವನ್ನು ಹಚ್ಚಿ, ಆಧ್ಯಾತ್ಮಿಕ ಪಥದತ್ತ ಹೆಜ್ಜೆ ಇಡಲು ಪ್ರೇರಣೆಯಾಯಿತು.

ಆತ್ಮೋನ್ನತಿಯ ಆಕಾಂಕ್ಷೆಯಿಂದ ಅವರು 1920ರಲ್ಲಿ ಶಿವಯೋಗಮಂದಿರದಲ್ಲಿ ಪ್ರವೇಶ ಪಡೆಯಲು ಮುಂದಾದರು. ಆಗ ಅವರ ವಯಸ್ಸು ಮೂವತ್ತು ವರ್ಷಗಳು. ವಯಸ್ಸಿನ ಕಾರಣವನ್ನು ಮುಂದಿಟ್ಟುಕೊಂಡು ಶಿವಯೋಗಮಂದಿರದ ವ್ಯವಸ್ಥಾಪಕರು ಪ್ರವೇಶವನ್ನು ನಿರಾಕರಿಸಿದರು.

ಭಾಲ್ಕಿಗೆ ಮರಳಬೇಕೆಂಬ ಮನೋವ್ಯಥೆಯ ಕ್ಷಣದಲ್ಲಿ, ಅವರ ಜೊತೆಯಲ್ಲಿದ್ದ ಶ್ರೀ ಶಿವಲಿಂಗಪ್ಪ ಖಂಡ್ರೆ (ಶ್ರೀ ಭೀಮಣ್ಣ ಖಂಡ್ರೆಯವರ ತಂದೆ) ಅವರು, ಚನ್ನಬಸವಸ್ವಾಮಿಯವರನ್ನು ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ದರ್ಶನಕ್ಕೆ ಕರೆತಂದರು. ಅದೊಂದು ಕ್ಷಣ; ಆದರೆ ಆ ಕ್ಷಣವೇ ಇತಿಹಾಸವನ್ನು ರೂಪಿಸಿದ ಮಹತ್ವದ ಸಂಧಿಯಾಯಿತು.

ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ವಾತ್ಸಲ್ಯಪೂರ್ಣ ಕೃಪಾದೃಷ್ಟಿ ಚನ್ನಬಸವಸ್ವಾಮಿಯವರ ಜೀವನಕ್ಕೆ ದೈವಿಕ ದಿಕ್ಕನ್ನು ನೀಡಿತು. ಆ ಒಂದೇ ನೋಟ, ಅವರ ಶಿಷ್ಯ ಬಳಗದಲ್ಲಿ ಚನ್ನಬಸವಸ್ವಾಮಿಯವರಿಗೆ ಸ್ಥಾನವನ್ನು ಕಲ್ಪಿಸಿತು. ಈ ಮೂಲಕ ಅವರು ಪೂಜ್ಯ ಹಾನಗಲ್ಲ ಶ್ರೀಗಳ ಸೇವೆ ಮಾಡುವ ಅಪೂರ್ವ ಭಾಗ್ಯವನ್ನು ಪಡೆದರು.

ಗುರುಸಾನ್ನಿಧ್ಯದಲ್ಲಿ ಅವರ ವ್ಯಕ್ತಿತ್ವವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿ ಉನ್ನತಗೊಂಡಿತು. ಪಂ. ಸೋಮಶೇಖರ ಶಾಸ್ತ್ರಿಗಳಿಂದ ಪಂಚಕಾವ್ಯಗಳ ವಿಶೇಷ ಅಧ್ಯಯನವನ್ನು ಮಾಡಿಸಿದ ಹಾನಗಲ್ಲ ಶ್ರೀಗಳು, ಶಿವಾನುಭವಶಾಸ್ತ್ರ ಮತ್ತು ಯೋಗದ ಷಟ್ಕರ್ಮಗಳನ್ನು ಸ್ವತಃ ತಾವೇ ಬೋಧಿಸಿ, ಅವರನ್ನು ಪರಿಪೂರ್ಣ ಸಾಧಕರಾಗಿ ರೂಪಿಸಿದರು.

ಜಾತಿ ಮತ್ತು ಜಂಗಮ ಪ್ರೇಮ ಎಂಬ ವ್ಯಾಧಿಯಿಂದ ಬಳಲುತ್ತಿರುವ  ಇಂದಿನ ಸಮಾಜದ ಕಾಮಾಲೆ ಕಣ್ಣುಗಳು, ಈ ಪವಿತ್ರ ಗುರು–ಶಿಷ್ಯ ಅವಿನಾಭಾವ ಸಂಬಂಧವನ್ನು ಪೀತವರ್ಣದಲ್ಲೇ ಕಾಣುತ್ತಿರುವುದು  ಸಮಾಜದ ದುರಂತವಾಗಿದೆ.

ಆದರೆ  ಸಮುದಾಯ ಹಾಗೂ ವಯಸ್ಸಿನ ಗಡಿಗಳನ್ನು ಮೀರಿ ಬೆಳೆದ ಈ ಗುರು–ಶಿಷ್ಯ ಪರಂಪರೆ, ಸಮಾಜಕ್ಕೆ ಅಪೂರ್ವ ಸೇವೆಯನ್ನು ಸಲ್ಲಿಸಿದ್ದು, ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಮಹತ್ವವನ್ನು ಹೊಂದಿದೆ.

ಕ್ರಿ.ಶ. 1924ರಲ್ಲಿ ಚನ್ನಬಸವಸ್ವಾಮಿಗಳು ಕಾಶೀ ಸಿಂಹಾಸನಾನ್ವಯಾನುಸಾರ ಚರಪಟ್ಟಾಧಿಕಾರದ ಮೂಲಕ ಭಾಲ್ಕಿ ಹಿರೇಮಠದ ಪೀಠಾಧಿಪತಿಗಳಾದರು.

ಪೀಠಾರೋಹಣದ ನಂತರ ಅವರು ಮಠದ ಜೀರ್ಣೋದ್ಧಾರವನ್ನು ಕೈಗೊಂಡು, ಪರಕೀಯರ ಕೈಸೇರಿದ್ದ ಮಠದ ಆಸ್ತಿಗಳನ್ನು ಪುನಃ ಸಂಪಾದಿಸಿ, ಮಠದ ಗೌರವ ಮತ್ತು ವೈಭವವನ್ನು ಪುನರ್ ಸ್ಥಾಪಿಸಿದರು. ಆಡಳಿತದಲ್ಲಿ ದೃಢತೆ, ಸೇವೆಯಲ್ಲಿ ವಿನಯ ಮತ್ತು ತತ್ವದಲ್ಲಿ ನಿಷ್ಠೆ – ಇವರ ಕಾರ್ಯಶೈಲಿಯ ಗುರುತಾಗಿತ್ತು.

ಶತಮಾನಗಳಿಂದ ಬೀದರ ಜಿಲ್ಲೆಯಲ್ಲಿ ಅವನತಿ ಕಂಡಿದ್ದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಪುನರ್ಜನ್ಮ ನೀಡುವ ಸಂಕಲ್ಪದಿಂದ, ಶ್ರೀ ಪಟ್ಟದ್ದೇವರು ‘ಕನ್ನಡ ಶಾಂತಿವರ್ಧಕ ಶಿಕ್ಷಣ ಸಂಸ್ಥೆ’ಯನ್ನು ಸ್ಥಾಪಿಸಿದರು. ಅದರ ಮೂಲಕ ಅನೇಕ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ, ಕನ್ನಡ ನುಡಿಯ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿದರು. ಕಮಾಲನಗರದಲ್ಲಿ ನಡೆಸಿಕೊಂಡು ಬಂದ ಕನ್ನಡ ಶಾಲೆಯನ್ನು ‘ಶಾಂತಿವರ್ಧಕ ಹೈಸ್ಕೂಲ್’ ಮಟ್ಟಕ್ಕೆ ಎತ್ತಿ, ಅದರ ಸಂಚಾಲಕರಾಗಿ ಪ್ರೀ–ಬೋರ್ಡಿಂಗ್ ವ್ಯವಸ್ಥೆಯನ್ನು ಸ್ಥಾಪಿಸಿ, ವಿದ್ಯಾರ್ಥಿಗಳ ಸಮಗ್ರ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಿದರು.

ಮೋರಗಿ, ಕೂಡಲಸಂಗಮ, ಬೀದರ, ಲಾತೂರು, ಹಣೆಗಾವ, ಭಾಲ್ಕಿ ಮೊದಲಾದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸಮಾಜಸೇವೆಯನ್ನು ಕೈಗೊಂಡ ಭಾಲ್ಕಿ ಶ್ರೀ ಪಟ್ಟಾಧ್ಯಕ್ಷರು, ಹೈದರಾಬಾದ್‌ನ ಗಡಿನಾಡಿನಲ್ಲಿ ಕನ್ನಡ ನುಡಿಯ ಗೌರವವನ್ನು ಉಳಿಸಿದ ಶ್ರೇಯಸ್ಸಿಗೆ ಪಾತ್ರರಾದರು.

ತಮ್ಮ ಗುರುವಿನ ಸ್ಮರಣಾರ್ಥವಾಗಿ ಭಾಲ್ಕಿಯಲ್ಲಿ ಹಾನಗಲ್ಲ ಶ್ರೀ ಗುರುಕುಮಾರೇಶ್ವರ ಉಚಿತ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದು, ಅದು ಅವರ ಅಚಲ ಗುರುಭಕ್ತಿಗೆ ಮತ್ತು ಕೃತಜ್ಞತೆಗೆ ಶಾಶ್ವತ ಸಾಕ್ಷಿಯಾಗಿ ನಿಂತಿದೆ.

ಇಂತಹ ಮಹಾನ್ ವಿಭೂತಿ ಪುರುಷರಾದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವದ ಈ ಪುಣ್ಯ ಸಂದರ್ಭದಲ್ಲಿ, ಅವರ ತಪೋಮಯ ಜೀವನ, ಸಮಾಜಮುಖಿ ಸೇವೆ ಮತ್ತು ಕನ್ನಡ ನಾಡಿನ ಮೇಲಿನ ಅಪಾರ ಪ್ರೀತಿಯನ್ನು ಸ್ಮರಿಸುತ್ತಾ, ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಶ್ರೀಕಂಠ, ಚೌಕೀಮಠ

 

ಲೇಖಕ:-ಶ್ರೀಕಂಠ ಚೌಕೀಮಠ

೨೪ ಅಕ್ಟೋಬರ್ ೨೦೨೫ರಂದು, ಧರ್ಮಸ್ಥಳದ ಧರ್ಮಾಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆ ಅವರ ಆಶ್ರಯದಲ್ಲಿ, ಡಾ. ಎಸ್.ಆರ್. ವಿಘ್ನರಾಜ ಮತ್ತು ಡಾ. ಪವನ್ ಅವರ ಸಂಪಾದಕತ್ವದಲ್ಲಿ ಪ್ರಕಟಿತವಾದ, ಶ್ರೀ ಕಂಚಿ ಶಂಕರಾರಾಧ್ಯರ ಶ್ರೀ ವೃಷಭೇಶ್ವರ ಪುರಾಣಂ — ಅಂದರೆ ಬಸವ ಪುರಾಣ — ಎಂಬ ಸಹಸ್ರಪುಟಗಳ ಬೃಹತ್ ಗ್ರಂಥವನ್ನು ನಾನು  ಓದುತ್ತಿದ್ದೇನೆ. ಈ ಮಹಾಗ್ರಂಥದಲ್ಲಿ ಶ್ರೀ ಗುರುಪಾದ ದೇವರ ಕನ್ನಡ ಟೀಕೆಯು ಸಹ ಮುದ್ರಣಗೊಂಡಿರುವುದು ವಿಶೇಷ; ಅದು ಈ ಕೃತಿಗೆ ಹೊಸ ಉಜ್ವಲತೆ ನೀಡಿದೆ.

ಈ ಗ್ರಂಥದೊಡನೆ ನನ್ನ ಹೃದಯಕ್ಕೆ ಆಳವಾದ ಭಾವನಾತ್ಮಕ ನಂಟಿದೆ. ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಸಂಗ್ರಹಿತವಾಗಿರುವ ಈ ಹಸ್ತಪ್ರತಿ, ನಿಜಕ್ಕೂ ಸಾಹಿತ್ಯ ಲೋಕದ ಅಮೂಲ್ಯ ಸಂಪತ್ತುಎಂದರೆ ತಪ್ಪಾಗದು.

ಈ ಹಸ್ತಪ್ರತಿಯು ಅಂದಿನ ಪ್ರತಿಷ್ಠಾನದ ನಿರ್ದೇಶಕರಾಗಿದ್ದ ದಿವಂಗತ ಗೌ. ಮ. ಉಮಾಪತಿ ಶಾಸ್ತ್ರಿಯವರ ಅಮೂಲ್ಯ ಸಂಗ್ರಹದಿಂದ ದೊರೆತದ್ದು. ಅವರ ಅಚ್ಚುಕಟ್ಟಾದ ಶ್ರದ್ಧೆ ಮತ್ತು ಸಂಶೋಧನಾ ಮನೋಭಾವದಿಂದ ತಾಡೋಲೆ ಹಸ್ತಪ್ರತಿಗಳ ೪೮೬ ಮತ್ತು ಕಾಗದ ಹಸ್ತಪ್ರತಿಗಳ ೪೦೦ — ಒಟ್ಟು ೮೮೬ ಹಸ್ತಪ್ರತಿಗಳನ್ನು ಅವರು ಪ್ರತಿಷ್ಠಾನಕ್ಕೆ ದಾನವಾಗಿ ನೀಡಿದ್ದರು. ಅವುಗಳಲ್ಲಿ ಈ ವೃಷಭೇಶ್ವರ ಪುರಾಣ ಒಂದು ಅಮೃತಮಣಿಯಂತಿದೆ.

 

ದಿ. ಗೌ. ಮ. ಉಮಾಪತಿ ಶಾಸ್ತ್ರಿಯವರು ಪೂಜ್ಯ ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶ್ರೀ ಶಿವಯೋಗಮಂದಿರದ ಸಾಧಕ ವಟುಗಳಾಗಿ ತಮ್ಮ ಜೀವನವನ್ನೇ ಸಾಹಿತ್ಯ ಸಂಶೋಧನೆಗೆ ಸಮರ್ಪಿಸಿದ ಮಹನೀಯರು.ಅವರು ಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸಂಗ್ರಹಿಸಿದ  ಸಾವಿರಾರು ತಾಡೋಲೆ ಕಟ್ಟುಗಳು ಹಾಗೂ ಕಾಗದ ಹಸ್ತಪ್ರತಿಗಳಿಂದ ಕೂಡಿದ ಅಪರೂಪದ ಗ್ರಂಥಾಲಯದ ಉಸ್ತುವಾರಿಯಾಗಿ ನೇಮಿಸಲ್ಪಟ್ಟು, ಅದನ್ನು ಜೀವಂತ ಪಾರಂಪರ್ಯದಂತೆ ಕಾಯ್ದುಕೊಂಡು ದೀರ್ಘಕಾಲ ಸೇವೆ ಸಲ್ಲಿಸಿದರು. ಅವರ ಈ ನಿರಂತರ ತಪಸ್ಸೇ ಇಂದು ನಾವು ಓದುತ್ತಿರುವ ಈ ವೃಷಭೇಶ್ವರ ಪುರಾಣದ ಜೀವಂತ ಮೂಲವಾಗಿದೆ.

ಗ್ರಂಥ ಬಿಡುಗಡೆಗಿಂತ ಮುನ್ನ, ನನ್ನ ಹಿರಿಯ ಮಿತ್ರರಾದ ತುಮಕೂರಿನ ಡಾ. ಬಿ. ನಂಜುಂಡಸ್ವಾಮಿ ಅವರು ನನಗೆ ಸಂದೇಶ ಕಳುಹಿಸಿದ್ದರು. ಆ ಸಂದೇಶದಲ್ಲಿ ಅವರು ಹೀಗೆ ಬರೆದಿದ್ದರು —

“ಲಿಂಗಾಯತರು ಮಾಡದ ಬಸವ ಸೇವೆಯನ್ನು ಧರ್ಮಸ್ಥಳದ ಡಾ. ಹೆಗ್ಗಡೆ ಮಾಡಿದ್ದಾರೆ.”

೧೨ನೇ ಶತಮಾನದಲ್ಲಿ ಸಮಾಜೋದ್ದಾರಕ ಕ್ರಾಂತಿಯನ್ನು ಎಳೆದುಕೊಂಡ ಬಸವಣ್ಣನವರ ಘನ ವ್ಯಕ್ತಿತ್ವ ಕುರಿತು ಮೊಟ್ಟಮೊದಲು ಆಂಧ್ರಪ್ರದೇಶದ ಪಾಲ್ಕುರಿಕೆ ಸೋಮನಾಥ ಕವಿ ತೆಲುಗು ಬಸವಪುರಾಣ ರಚಿಸಿದರು. ಅದನ್ನು ಭೀಮಕವಿ ಕನ್ನಡಕ್ಕೆ ಅನುವಾದಿಸಿದರು. ಹರಿಹರ, ಷಡಕ್ಷರಿ ಮುಂತಾದ ಕವಿಗಳು ಬಸವಣ್ಣನವರ ಕುರಿತು ಮಹಾಕಾವ್ಯಗಳನ್ನು ರಚಿಸಿದರು. ಬಸವಣ್ಣನವರ ಪ್ರಭಾವದಿಂದ ತಪ್ಪಿಸಿಕೊಂಡ ಕವಿಯೇ ಇಲ್ಲ ಎನ್ನಬಹುದು. ಹೀಗಾಗಿ, ಕಂಚಿಯ ಪ್ರಾಚೀನ ಶೈವ ಕ್ಷೇತ್ರದಲ್ಲಿ ವಾಸಿಸಿದ ಶೈವಮಹಾಕವಿ ಕಂಚಿ ಶಂಕರಾರಾಧ್ಯರು ಸಂಸ್ಕೃತ ಭಾಷೆಯಲ್ಲಿ ಬಸವ ಪುರಾಣ ರಚನೆ ಮಾಡಿದುದು ಅಪರೂಪದ ಮತ್ತು ಮಹತ್ವದ ಸಾಧನೆ. ಈ ಪುರಾಣದ ಮಹತ್ವವನ್ನು ಮೊಟ್ಟಮೊದಲು ಗುರುತಿಸಿದವರು ಡಾ. ಶಿ.ಚೆ. ನಂದೀಮಠ. ಅವರು ಇದರ ಕುರಿತು ಪ್ರಥಮವಾಗಿ ಲೇಖನ ಬರೆದಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾ. ಪರಡ್ಡಿ ಮಲ್ಲಿಕಾರ್ಜುನ ಅವರ ಸಂಪಾದಕತ್ವದಲ್ಲಿ ಈ ಕೃತಿಯು ದೇವನಾಗರಿ ಲಿಪಿಯಲ್ಲಿ, ಕನ್ನಡ ಅನುವಾದದೊಂದಿಗೆ ಪ್ರಕಟಿತವಾಯಿತು. ಸಹಸ್ರಪುಟಗಳ ಈ ಬೃಹತ್ ಗ್ರಂಥವನ್ನು ಪ್ರಕಟಿಸುವ ಕಾರ್ಯವನ್ನು ಲಿಂಗಾಯತ ಮಠಗಳು ಅಥವಾ ಸಂಘ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕಾಗಿತ್ತು. “

ಯಾರೂ ಕೈಹಾಕದ ಈ ಮಹಾಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ಕೈಗೊಂಡಿರುವುದು ಸಮಸ್ತ ಲಿಂಗಾಯತ ಸಮಾಜಕ್ಕೆ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ.

ಆದರೆ, ಗ್ರಂಥಕ್ಕೆ ಕಳಶಪ್ರಾಯವಾಗಬೇಕಿದ್ದ ಮುನ್ನುಡಿಯ ಕೆಲವು ಸಾಲುಗಳು ಈ ಮಹಾಗ್ರಂಥದ ಗಾಂಭೀರ್ಯಕ್ಕೆ ನೆರಳಿಟ್ಟಿದೆ.

ಶಾಸ್ತ್ರೀಯ ಸಂಪಾದನೆಯ ನಿರೀಕ್ಷಿತ ನಿಷ್ಪಕ್ಷಪಾತತೆಯನ್ನು ಕದಡುವಂತಹ ಈ ಉಲ್ಲೇಖಗಳು ಪಠ್ಯದ ಮೌಲ್ಯಮಟ್ಟವನ್ನು ಕ್ಷೀಣಗೊಳಿಸಿದಂತಿವೆ.

ಇಂತಹ ಸಂದರ್ಭಗಳಲ್ಲಿ ಪವಿತ್ರ ಗ್ರಂಥದ ಪಾರಂಪರಿಕ ಸೌಂದರ್ಯ ಉಳಿಯಲು ಮುನ್ನುಡಿಕಾರರಿಂದ ಇನ್ನಷ್ಟು ನಿಷ್ಪಕ್ಷಪಾತ ನಿಲುವು ಅಪೇಕ್ಷಿತವಾಗಿತ್ತು.

ಶುಭ್ರವಾದ ಶ್ವೇತವಸ್ತ್ರದ ಮೇಲೊಂದು ಕಪ್ಪು ಚುಕ್ಕೆ ಬಿದ್ದಂತೆ — ಪವಿತ್ರ ಗ್ರಂಥದ ಶುದ್ಧತೆಯಲ್ಲಿ ಅಪ್ರಯೋಜಕ ಕಲ್ಮಷದ ಛಾಪು ಮೂಡಿದೆ.

ಅಚ್ಯುತವಾದ ಪವಿತ್ರ್ಯ ಹೂವಿನ ಮೇಲೆ ಅನಿರೀಕ್ಷಿತ ಮತಾಂಧತೆಯ ಸ್ಪರ್ಶ.

ಅಧ್ಯಯನದ ಪಾವಿತ್ರ್ಯದಲ್ಲಿ ಸಂಶಯದ ಕಣ ಬಿದ್ದಾಗ, ಗ್ರಂಥದ ತಾತ್ವಿಕ ಚಿಂತನೆಗಳು ಮೌನವಾಗುವುದು ಸಹಜ.

ಮುನ್ನುಡಿ ಎಂಬುದು ಗ್ರಂಥದ ಓದುಗರಿಗೆ ಕೃತಿಯ ಹಿನ್ನೆಲೆ, ಪ್ರಾಮುಖ್ಯತೆ ಮತ್ತು ಸಂಪಾದಕನ ಕಾರ್ಯವಿಧಾನವನ್ನು ಪರಿಚಯಿಸುವ ಪೂರ್ವಕಥನಾತ್ಮಕ ವಿವರಣೆ. ಅದು ಕೇವಲ ಆರಂಭವಾಕ್ಯವಲ್ಲ — ಗ್ರಂಥದ ಶಾಸ್ತ್ರೀಯ ಮೌಲ್ಯ, ಪಠ್ಯವಿಮರ್ಶೆಯ ಕ್ರಮ, ಹಾಗೂ ಆಧ್ಯಾತ್ಮಿಕ–ಸಾಂಸ್ಕೃತಿಕ ಹಿನ್ನೆಲೆಯನ್ನು ವಿಶದಗೊಳಿಸುವ ಪ್ರಸ್ತಾವನೆಯಾಗಿದೆ.

ಅಂತಹ ಗೌರವಪೂರ್ಣ ಅವಕಾಶವನ್ನು ಪಡೆದಿರುವ ಮುನ್ನುಡಿಕಾರರಾದ ಡಾ. ವೀರಣ್ಣ ರಾಜೂರ ಅವರು ಸಾಹಿತ್ಯ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಶ್ರೇಷ್ಠ ಪಂಡಿತರಲ್ಲಿ ಒಬ್ಬರು. ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಂಶೋಧಕರಾಗಿ ಪ್ರಾರಂಭಿಸಿ, ಉಪನ್ಯಾಸಕ, ಪ್ರಾಧ್ಯಾಪಕ, ವಿಭಾಗಾಧ್ಯಕ್ಷ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ದೀರ್ಘಾವಧಿಯ ಸೇವೆ ಸಲ್ಲಿಸಿದವರು. ಅನೇಕ ವಿಚಾರಸಂಕಿರಣಗಳು, ಉಪನ್ಯಾಸಗಳು ಮತ್ತು ಸಂಶೋಧನಾ ಯೋಜನೆಗಳಲ್ಲಿ ಅವರ ಹಾಜರಾತಿ ಸದಾ ಚೇತನಮಯವಾಗಿತ್ತು. ಸರಳತೆ, ಸೌಜನ್ಯತೆ ಮತ್ತು ಪಾಂಡಿತ್ಯದ ಪ್ರತಿರೂಪರಾದ ರಾಜೂರ ಅವರು ಮಹಾನ್ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಆಪ್ತ ಶಿಷ್ಯರಾಗಿದ್ದರು. ನಡುಗನ್ನಡ ಸಾಹಿತ್ಯದಲ್ಲಿ, ವಿಶೇಷವಾಗಿ ವಚನಸಾಹಿತ್ಯ ಹಾಗೂ ಬಸವೋತ್ತರಯುಗದ ವಚನಕಾರರ ಕುರಿತು ಅವರ ಅಧ್ಯಯನ ವಿಶ್ಲೇಷಣೆಯು ಆಳವಾದ ಒಳನೋಟ ನೀಡುತ್ತದೆ.

ಆದರೆ, ಇಂತಹ ಪಾಂಡಿತ್ಯಪೂರ್ಣ ವ್ಯಕ್ತಿಯೇ “ಶ್ರೀ ವೃಷಭೇಶ್ವರ ಪುರಾಣಂ” ಎಂಬ ೧೪ನೆಯ ಶತಮಾನದ ಪುರಾಣಕೃತಿಗೆ ನೇರ ಸಂಬಂಧವಿಲ್ಲದ, ಇತ್ತೀಚಿನ (ಕ್ರಿ.ಶ. ೨೦೧೭ರ) ವೀರಶೈವ–ಲಿಂಗಾಯತ ಧರ್ಮಭೇದದ ವಿವಾದವನ್ನು ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವುದು ವಿಷಾದನೀಯ ಸಂಗತಿ.

ಅವರು ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ

  • “ಒಂದು ಕಾಲಕ್ಕೆ ಪರ್ಯಾಯ ಪದಗಳಂತೆ ಬಳಸುತ್ತ ಬಂದ ‘ವೀರಶೈವ’ ಮತ್ತು ‘ಲಿಂಗಾಯತ’ ಪದಗಳು ಇಂದು ತಾತ್ವಿಕವಾಗಿ ಭಿನ್ನವೆಂದು ಗಣಿಸಲಾಗಿದೆ.
  • ‘ಲಿಂಗ’ ಪದದ ಇತಿಹಾಸ ಪ್ರಾಚೀನವಾಗಿದ್ದರೂ, ದೇಹದ ಮೇಲೆ ಧರಿಸುವ ‘ಇಷ್ಟಲಿಂಗ’ ಪರಿಕಲ್ಪನೆ ಬಸವಣ್ಣನವರ ಕಾಲದಿಂದ — ಅಂದರೆ ೧೨ನೆಯ ಶತಮಾನದಿಂದ — ಜಾರಿಗೊಂಡುದಾಗಿದೆ.
  • “ಶಿವಶರಣರುಒಪ್ಪಿಕೊಂಡದ್ದುವೀರಶೈವ ಧರ್ಮವನ್ನಲ್ಲ;‘ಲಿಂಗಾಯತಧರ್ಮ’ವನ್ನೇ.
  • ಬಸವಣ್ಣನವರು ವೀರಶೈವಧರ್ಮವನ್ನು ಅಂಗೀಕರಿಸಲಿಲ್ಲ, ಊರ್ಜಿತಗೊಳಿಸಲಿಲ್ಲ; ಅವರು ಇಷ್ಟಲಿಂಗಾಧಾರಿತ ‘ಲಿಂಗಾಯತ’ ಎಂಬ ಹೊಸ ಸ್ವತಂತ್ರ ಧರ್ಮವನ್ನೇ ಸ್ಥಾಪಿಸಿದರು.”

ಈ ಹೇಳಿಕೆಗಳು ೧೪ನೆಯ ಶತಮಾನದ ಶ್ರೀ ವೃಷಭೇಶ್ವರ ಪುರಾಣಂ ಎಂಬ ಕೃತಿಯ ಮೂಲತತ್ತ್ವಕ್ಕೆ ನೇರವಾಗಿ ಹೊಂದುವಂತಿಲ್ಲ. ಈ ಪುರಾಣವು ಸ್ಪಷ್ಟವಾಗಿ ವೀರಶೈವ ಪರಂಪರೆಯ ತತ್ತ್ವಶ್ರೇಣಿಯಲ್ಲಿ ಬರೆಯಲ್ಪಟ್ಟ ಪೌರಾಣಿಕ ಗ್ರಂಥ. ಆದ್ದರಿಂದ ಇಂತಹ ಇತ್ತೀಚಿನ ಮತವೈಚಾರಿಕ ವಿವಾದಗಳನ್ನು ಮುನ್ನುಡಿಯಲ್ಲಿ ಒಳಪಡಿಸುವುದು ಕೃತಿಯ ತಾತ್ವಿಕ ಸೌಂದರ್ಯಕ್ಕೂ, ಪಠ್ಯಮೌಲ್ಯಕ್ಕೂ ಅಸಂಬಂಧಿತ.

ಇದು ಗ್ರಂಥಸಂಪಾದನೆಯ ನಿಷ್ಪಕ್ಷಪಾತ ಉದ್ದೇಶವನ್ನೇ ಬದಲಾಗಿಸುವಂತಾಗಿದೆ. ಮುನ್ನುಡಿಕಾರನ ಕರ್ತವ್ಯವೆಂದರೆ ಗ್ರಂಥದ ಪಠ್ಯಪರಿಷ್ಕರಣೆ, ಶೈಲಿಶೋಧನೆ, ಮತ್ತು ತತ್ತ್ವಸಂದರ್ಭಗಳ ವಿಶ್ಲೇಷಣೆ — ಪರಂಪರೆಯ ವಿವಾದಾತ್ಮಕ ವ್ಯಾಖ್ಯಾನವಲ್ಲ.

ಪರಮಾಶ್ಚರ್ಯವೆಂದರೆ ಸ್ವತಃ ಡಾ. ವೀರಣ್ಣ ರಾಜೂರ ಅವರೇ ತಮ್ಮ ಸಂಪಾದಿತ ಗ್ರಂಥ “ವೀರಶೈವದರ್ಶನ : ತೌಲನಿಕ ವಿವೇಚನೆ” (ಪ್ರಕಟನೆ: ಕ್ರಿ.ಶ. ೨೦೦೦) ಯ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ

  • ಪ್ರಸ್ತುತ ಕೃತಿ ‘ವೀರಶೈವದರ್ಶನ : ತೌಲನಿಕ ವಿವೇಚನೆ’ ಬಸವಜಯಂತಿಯ ೧೧ನೆಯ ಉಪನ್ಯಾಸ ಮಾಲಿಕೆಯಡಿಯಲ್ಲಿ, ದಿನಾಂಕ ೨೦೨೧ ಮಾರ್ಚ್ ೧೯೯೫ ರಂದು ನಡೆದ ವಿಚಾರಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನವಾಗಿದೆ.
  • ವೀರಶೈವದ ಹಾಗೂ ವೀರಶೈವ ನಿರ್ಣಯ ಪರಮಾವತಾರನೆನಿಸಿದ ಬಸವಣ್ಣನವರ ಲೋಕೋತ್ತರ ವಿಚಾರಗಳಿಗೆ ಲೋಕವಿಸ್ತಾರವಾದ ಕ್ಷಿತಿಜವನ್ನು ಕಲ್ಪಿಸುವುದು ಅಂದರೆ ಬಸವತತ್ತ್ವಗಳನ್ನು ಕರ್ನಾಟಕದಿಂದ ಭಾರತಕ್ಕೆ, ಭಾರತದಿಂದ ವಿಶ್ವಕ್ಕೆ ವಿಸ್ತರಿಸುವ ಉನ್ನತ ಧ್ಯೇಯದರ್ಶನವನ್ನು ಶ್ರೀ ಬಸವೇಶ್ವರಪೀಠ ಹೊಂದಿದೆ. ಈ ಉದ್ದೇಶ ಸಾಧನೆಗಾಗಿ ಸಂಶೋಧನೆ, ಸಂಪಾದನೆ, ಸೃಜನ, ವಿಮರ್ಶೆ, ಅನುವಾದ ಇತ್ಯಾದಿ ರೂಪದ ಅಧ್ಯಯನಗಳನ್ನು ದೇಶವಿದೇಶದ ಭಾಷೆಗಳ ಮೂಲಕ ಈ ವೇದಿಕೆ ನಡೆಸುತ್ತ ಬಂದಿದೆ.
  • ವೀರಶೈವವನ್ನು ಉಳಿದ ಧರ್ಮತತ್ತ್ವದರ್ಶನಗಳೊಂದಿಗೆ ತೌಲನಿಕವಾಗಿ ವಿವೇಚಿಸುವ ಮೂಲಕ ಅದರ ಸರಿಯಾದ ಮೌಲ್ಯಮಾಪನ ಮಾಡಿ ಅದರ ವಿಶಿಷ್ಟತೆಯನ್ನು ಎತ್ತಿ ತೋರಿಸುವ ಕಾರ್ಯ ಇಲ್ಲಿ ಸಮರ್ಥವಾಗಿ ನಡೆದಿದೆ. ವಿಚಾರಸಂಕಿರಣದಲ್ಲಿ ಪ್ರೀತಿಯಿಂದ ಭಾಗವಹಿಸಿ ಪ್ರಬಂಧ ಮಂಡಿಸಿದುದಲ್ಲದೆ, ಪರಿಶ್ರಮವಹಿಸಿ ಲೇಖನ ರೂಪದಲ್ಲಿ ಬರೆದು ಕೊಟ್ಟು ಗ್ರಂಥಪ್ರಕಟನೆಯನ್ನು ಸಾಧ್ಯಮಾಡಿದ ಎಲ್ಲ ವಿದ್ವಾಂಸರಿಗೆ ಅನಂತ ಕೃತಜ್ಞತೆಗಳು.”

ಈ ಉಲ್ಲೇಖಗಳಲ್ಲೇ ಅವರ ಸಂಶೋಧನಾ ನಿಲುವಿನ ಆಳ ಮತ್ತು ವಿಶಾಲತೆ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ವೀರಶೈವಧರ್ಮವನ್ನು ಉಳಿದ ಧರ್ಮತತ್ತ್ವ–ದರ್ಶನಗಳ ಜೊತೆ ತೌಲನಿಕವಾಗಿ ವಿಮರ್ಶಿಸುವ ದೃಷ್ಟಿ ಇದ್ದು, ಅದು ತತ್ತ್ವಸಾಮರಸ್ಯ ಮತ್ತು ವಿಶ್ವಮಾನವೀಯ ದೃಷ್ಟಿಕೋನವನ್ನು ಪ್ರತಿಪಾದಿಸುತ್ತದೆ.

ಆದರೆ, ಈ ಹಿನ್ನಲೆಯಲ್ಲಿ ಅವರ ಇತ್ತೀಚಿನ ಅಭಿಪ್ರಾಯವು ತಾವು ಸ್ವತಃ ಹಿಂದಿನ ಸಂಶೋಧನೆಯಲ್ಲಿ ಪ್ರತಿಪಾದಿಸಿದ ತತ್ತ್ವಸಾಮರಸ್ಯದಿಂದ ವಿಭಿನ್ನವಾಗಿ ಕಾಣುತ್ತದೆ — ಇದು ಪಂಡಿತನಾಗಿ ಅವರ ನಿಷ್ಪಕ್ಷಪಾತ ಸಂಶೋಧನಾ ನಿಲುವಿನ ವಿರುದ್ಧದ ವ್ಯತಿರೇಕದಂತಾಗಿದೆ.

ಸಂಶೋಧಕ ಅಥವಾ ಸಾಹಿತಿ ಎಂದರೆ ತತ್ವನಿಷ್ಠೆಯ ಮಾರ್ಗದಲ್ಲಿ ನಡೆಯುವ ಯಾತ್ರಿ.ಅವನ ಮಾತು, ಗ್ರಂಥ ಮತ್ತು ನಿಲುವುಗಳು ಕಾಲದ ಸತ್ಯದ ಸಾಕ್ಷಿಯಾಗಿರಬೇಕು.

ಆದರೆ ತಾನು ನಿಂತ ಬಣ್ಣವನ್ನು ಬದಲಿಸಿ ಮತ್ತೊಂದು ಬಣ್ಣ ಧರಿಸುವ ಧಿರಿಸಿನಂತೆ ನಿಲುವು ಬದಲಿಸಿದರೆ — ಅದು ಸಂಶೋಧಕನ ಪ್ರಾಮಾಣಿಕತೆಯ ಮೇಲಿನ ನೆರಳಾಗಿ ಬೀಳುತ್ತದೆ.

ಊಸುರವಳ್ಳಿಯಂತೆ ತಾತ್ವಿಕ ನಿಲುವು ಬದಲಿಸುವ ಪಂಡಿತನು ಕ್ಷಣಿಕ ಮೆಚ್ಚುಗೆಯನ್ನು ಗಳಿಸಬಹುದು, ಆದರೆ ಶಾಶ್ವತ ಗೌರವ ಕಳೆದುಕೊಳ್ಳುತ್ತಾನೆ.

ಸಾಹಿತ್ಯದ ಮೌಲ್ಯ ಶಾಶ್ವತವಾಗಿರುತ್ತದೆ — ಅದನ್ನು ರಕ್ಷಿಸುವವರು ಬದಲಾಗಬಾರದು..

“ವೀರಶೈವ” ಮತ್ತು “ಲಿಂಗಾಯತ” ಎಂಬ ಪದಗಳು ಭಾರತೀಯ ಶೈವಧರ್ಮದ ಇತಿಹಾಸದಲ್ಲಿ ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ಅರ್ಥಸಂದರ್ಭಗಳಲ್ಲಿ ಉಪಯೋಗಿಸಲ್ಪಟ್ಟಿವೆ. ಇವುಗಳ ಉತ್ಪತ್ತಿ, ಮತ್ತು ಸಾಮಾಜಿಕ ವಿಕಾಸದ ಕುರಿತು ಪಂಡಿತರ ಮಧ್ಯೆ ಅಭಿಪ್ರಾಯಭೇದಗಳಿದ್ದರೂ, ಬಹುತೇಕ ಸಂಶೋಧನಾ ಗ್ರಂಥಗಳು ಇವೆರಡನ್ನೂ ಪರಸ್ಪರ ವಿರೋಧಿ ಧರ್ಮಗಳೆಂದು ಪರಿಗಣಿಸುವುದಿಲ್ಲ.

ಅಷ್ಟೇ ಅಲ್ಲ, ಈ ಮಹಾಗ್ರಂಥದೊಂದಿಗೆ ಪ್ರಕಟಿತವಾದ ಡಾ. ವೀರೇಂದ್ರ ಹೆಗ್ಗಡೆ ಅವರ ಶುಭನುಡಿಯಲ್ಲಾಗಲಿ, ಡಾ. ಎಸ್.ಆರ್. ವಿಘ್ನರಾಜ ಅವರ ದೀರ್ಘ ಪ್ರಸ್ತಾವನೆಯಲ್ಲಾಗಲಿ ಇಂತಹ ವಿಭೇದದ ಯಾವುದೇ ಉಲ್ಲೇಖವಿಲ್ಲ. ಕೃತಿಕಾರರಾದ ಕಂಚಿ ಶಂಕರಾರಾಧ್ಯರು ೧೪ನೆಯ ಶತಮಾನದ ಕವಿಗಳು — ಇತ್ತೀಚಿನ ರಾಜಕೀಯ ವಿವಾದಗಳ ಶಬ್ದವೂ ಅವರ ಕಾಲದ ಅವಕಾಶವಾದಿ ಆಕಾಶವನ್ನು ಮುಟ್ಟಿರಲಿಲ್ಲ; ಅವರು ಅವುಗಳಿಂದ ಬಹುದೂರದವರಾಗಿದ್ದರು.

ಡಾ. ಎಸ್.ಆರ್. ವಿಘ್ನರಾಜ ಅವರ ದೀರ್ಘ ಪ್ರಸ್ತಾವನೆಯಲ್ಲಿ ಆರಂಭವಾಗುವ ಸಾಲುಗಳು ಹೀಗಿವೆ

“”ಭಗವದನುಭಾವವನ್ನು ಜನಸಾಮಾನ್ಯರಿಗೆ ಸರಳವಾದ ಮಾತುಗಳಲ್ಲಿ ನೀಡಿದ ಶಿವಶರಣರು ಒಪ್ಪಿಕೊಂಡ ಧರ್ಮ ‘ವೀರಶೈವ ಧರ್ಮ’. ಈ ಧರ್ಮವನ್ನು ಒಪ್ಪಿಕೊಂಡವರನ್ನು, ಅದನ್ನು ಆಚರಣೆಗೆ ತಂದವರನ್ನು ವೀರಶೈವರು, ಲಿಂಗವಂತರು, ಲಿಂಗಾಯತರು ಎಂಬ ಹೆಸರುಗಳಿಂದ ಕರೆದಿದ್ದಾರೆ. ವೀರಶೈವ ಧರ್ಮದಲ್ಲಿ ವಿಶಿಷ್ಟವಾಗಿರುವ ಎರಡು ಪ್ರಮುಖ ಅಂಶಗಳೆಂದರೆ ಷಟ್‌ ಸ್ಥಲ ಮತ್ತು ಲಿಂಗಧಾರಣೆ. ಶಿವನನ್ನು ಲಿಂಗದಲ್ಲಿ ಪೂಜಿಸುವುದು ಎಷ್ಟು ಪ್ರಾಚೀನವೊ, ಲಿಂಗವನ್ನು ದೇಹದ ಮೇಲೆ ಧರಿಸುತ್ತಿದ್ದುದೂ ಬಹುಶಃ ಅಷ್ಟೇ ಪ್ರಾಚೀನವೆನ್ನಬಹುದು. ಒಟ್ಟಿನಲ್ಲಿ ಲಿಂಗವನ್ನು ಅಂಗದ ಮೇಲೆ ಧರಿಸುವ ಪದ್ಧತಿ ಯಾರೊಬ್ಬರಿಂದಲೂ ಪ್ರವರ್ತಿತವಾದುದಲ್ಲ. ಶೈವಧರ್ಮದ ವಿಕಾಸದಲ್ಲಿ ಅಳವಟ್ಟ ಸಹಜಕ್ರಿಯೆ. ರೇಣುಕಾಚಾರ್ಯರು, ಏಕೋರಾಮಾರಾಧ್ಯರು, ಪಂಡಿತಾರಾಧ್ಯರು, ಮರುಳಾರಾಧ್ಯರು, ವಿಶ್ವಾರಾಧ್ಯರು ಎಂಬ ರೇಣುಕಾದಿ ಪಂಚಾಚಾರ್ಯರು ಅದರ ಬೆಳವಣಿಗೆಗೆ ಕಾರಣರಾಗಿರಬಹುದು. ಇತರ ಆಚಾರ್ಯರು ಪ್ರಭೋದಕರಾಗಿರಬಹುದು. ಪಾಶುಪತ ಶೈವ, ಕಾಶ್ಮೀರ ಶೈವ, ತಮಿಳು ಶೈವ, ಈ ವಿವಿಧ ಶಾಖೆಗಳಲ್ಲಿನ ಉದಾತ್ತ ಅಂಶಗಳನ್ನು ಅಳವಡಿಸಿಕೊಳ್ಳುವ ಮಾರ್ಗದಲ್ಲಿ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರಗಳು ರೂಪುಗೊಂಡಿರಬೇಕು. ಬಸವಣ್ಣನವರು ಬರುವ ಹೊತ್ತಿಗೆ ಕರ್ನಾಟಕದಲ್ಲಿದ್ದ ಲಾಕುಲರು, ಕಾಳಾಮುಖರು ಮೊದಲಾದ ವಿವಿಧ ಶೈವ ಶಾಖೆಗಳಲ್ಲಿ ಕೆಲವಕ್ಕಾದರೂ ದೀಕ್ಷೆ ಮೊದಲಾದ ವೀರಶೈವ ಸಂಸ್ಕಾರಗಳು ಒದಗಿದ್ದಿರಬೇಕು. ಏಕಾಂತ ರಾಮಯ್ಯ, ದೇವರದಾಸಿಮಯ್ಯ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ಈ ಧರ್ಮದಲ್ಲಿ ಸುಪ್ತವಾಗಿದ್ದ ಸರ್ವಸಮಾನತೆಯ ಅಂಶಗಳನ್ನು ಗ್ರಹಿಸಿದ ಬಸವಣ್ಣನವರು ಈ ಮತವನ್ನು ಅಂಗೀಕರಿಸಿ, ಅದರ ಉದಾತ್ತ ತತ್ವಗಳ ಬೆಂಬಲದಿಂದ ಜನತೆಯ ಸಾಮೂಹಿಕ ಉದ್ಧಾರಕ್ಕೆ ನಿರ್ಧರಿಸಿದರು. ಇದರಿಂದ ವೀರಶೈವಧರ್ಮ ಹೊಸದಾಗಿ ಸ್ಥಾಪಿತವಾದಷ್ಟೇ, ಪ್ರಸಿದ್ಧಿಯನ್ನೂ, ಹೊಸಕ್ರಾಂತಿಯನ್ನೂ, ಹೊಸ ಸ್ವರೂಪವನ್ನೂ ಪಡೆಯಿತು. ತತ್ಪರಿಣಾಮವಾಗಿ ಬಸವಣ್ಣನವರು ಸ್ಥಾಪಕರೂ ಆಗಿ ಪರಿಣಮಿಸಿದರು.

ಬಸವಣ್ಣನವರ ವ್ಯಕ್ತಿತ್ವದಿಂದ ಆಕರ್ಷಿತವಾಗಿ ನಾಡಿನ ನಾನಾಭಾಗಗಳಿಂದ ಸಾಧಕರು ಬಂದು ಕಲ್ಯಾಣದಲ್ಲಿ ಸೇರಿದರು. ಅಲ್ಲಮ ಪ್ರಭುವಿನಂತಹ ಮೇರು ಸದೃಶವ್ಯಕ್ತಿಯೂ ಕಲ್ಯಾಣಕ್ಕೆ ಬಂದನೆಂದರೆ ಬಸವಣ್ಣನವರ ಕಾರ್ಯಕ್ಷೇತ್ರದ ಹಿರಿಮೆಯನ್ನು ಊಹಿಸಿಕೊಳ್ಳಬಹುದು. ಅನುಭವ ಮಂಟಪದ ಮಥನದಿಂದ ವೀರಶೈವ ಧರ್ಮದ ತಾತ್ವಿಕ ವಿವೇಚನೆ ಆಳವಾಗಿ ಬೇರುಬಿಟ್ಟಿತು. ಆಚಾರಮಾರ್ಗಗಳಾದ ಅಷ್ಟಾವರಣಾದಿಗಳು ಇನ್ನೂ ಎತ್ತರಕ್ಕೆ ಬೆಳೆದವು. ಹೀಗೆ ಪ್ರಾಚೀನ ವೀರಶೈವ ಧರ್ಮ ತನ್ನ ಸನಾತನ ತತ್ವಗಳನ್ನು ನಿತ್ಯನೂತನವಾದ ಮಾನವೀಯ ಮಟ್ಟಕ್ಕೇರಿಸಿ ವಿಶ್ವಧರ್ಮವಾಗಿ ಬೆಳಗಿತು.

ಅದೊಂದು ಅಸದೃಶ ಅದ್ಭುತ ಪ್ರವಾಹ ಬಿದ್ದವರನ್ನು ಮುಳುಗಿಸಿ ತೇಲಿಸುವ ಹುಚ್ಚು. ನದಿಯ ಭೌತಿಕ ಪ್ರವಾಹವಲ್ಲ. ಎಚ್ಚರಿಸುವ ಮೌಡ್ಯರಹಿತ ಭಕ್ತಿ ಪ್ರವಾಹ. ಅಲ್ಲಿ ಮೀನು, ಚಿಪ್ಪು, ಗೊರಟೆಗಳಿಲ್ಲ, ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಸಮಾನತ್ವದ ಮುತ್ತು ರತ್ನಗಳಿವೆ. ಎಂಟು ಶತಮಾನಗಳೇ ಕಳೆದರೂ ಅದು ಬತ್ತುವ, ಚಿತ್ತ ಕದಲಿಸುವ, ಉನ್ಮತ್ತದ, ಉದ್ವೇಗದ ಝರಿಯಲ್ಲ. ಸಕಲ ಜೀವಿಗಳಿಗೆ ಲೇಸನ್ನೇ ಬಯಸಿ, ಅವುಗಳ ಹೃದಯಾಂತರಂಗಕ್ಕೆ ಶಾಶ್ವತ ಆನಂದಕೊಟ್ಟು, ಪಾವನ ಮಾಡುವ ಪ್ರಶಾಂತ ಸಾಗರ…….””

ಈ ಹಿನ್ನೆಲೆಯಲ್ಲಿ, ಇಂತಹ ಇತ್ತೀಚಿನ ಮತಾಂಧ ವಿವಾದಗಳನ್ನು ಈ ಪುರಾಣದ ಮುನ್ನುಡಿಯಲ್ಲಿ ಸೇರಿಸುವುದು ಶಾಸ್ತ್ರೀಯ ಗ್ರಂಥಸಂಪಾದನೆಯ ಪ್ರಾಮಾಣಿಕತೆಗೂ ಶೈಕ್ಷಣಿಕ ನಿಷ್ಪಕ್ಷಪಾತತೆಗೂ ವಿರುದ್ಧವಾಗಿದೆ. ಇದು ಪುರಾತನ ಗ್ರಂಥದ ಪವಿತ್ರತೆಗೆ ಕಲುಷಿತ ಮಸುಕನ್ನು ತರುವಂತಾಗಿದೆ — ಪರಂಪರೆಯ ಅರ್ಥಸಂಪನ್ನತೆ ಕಾವ್ಯಸೌಂದರ್ಯದಿಂದ ಪಠ್ಯ ವಿವಾದಕ್ಕೆ ಕುಸಿಯುವ ಅಪಾಯ ಇಲ್ಲಿಯೇ ಪ್ರಾರಂಭವಾಗುತ್ತದೆ.

ದ್ವೇಷ ವ್ಯಕ್ತಪಡಿಸಲು ಅನೇಕ ವೇದಿಕೆಗಳಿವೆ — ಸಾಮಾಜಿಕ ಜಾಲತಾಣಗಳಿವೆ, ಪತ್ರಿಕೆಗಳಿವೆ, ದೃಶ್ಯಮಾಧ್ಯಮಗಳಿವೆ. ಆದರೆ ಇಂಥ ಪವಿತ್ರ ಗ್ರಂಥಪ್ರಕಟನೆಯ ಅಂಗಳ, ಅಂತಹ ಘೋಷಣೆಗಳಿಗಾಗಿ ಸೂಕ್ತ ಸ್ಥಳವಲ್ಲ.

ಒಬ್ಬ ಅಧ್ಯಯನಾರ್ಥಿ ಕಂಚಿ ಶಂಕರಾರಾಧ್ಯರ ಹೆಸರು ನೋಡಿ ಸಾವಿರ ಪುಟಗಳ ಈ ಬೃಹತ್ ಗ್ರಂಥ ಖರೀದಿಸಿ, ಅದರಲ್ಲಿರುವ ಕೇವಲ ಆರು ಸಾಲುಗಳಲ್ಲಿ “ವೀರಶೈವ ಬೇರೆ, ಲಿಂಗಾಯತ ಬೇರೆ” ಎಂಬ ವಾಕ್ಯಗಳನ್ನು ಓದಿದಾಗ ಅವನ ಮನಸ್ಸಿನಲ್ಲಿ ಗೊಂದಲ ಉಂಟಾಗುವುದು ಸಹಜ.

ಹಾಲಿನ ಕೊಡಾಯಿಗೆ ಒಂದು ತೊಟ್ಟು ಹುಳಿಹಾಲು ಬಿದ್ದಂತೆ — ಆ ಆರು ಸಾಲುಗಳು, ಅವುಗಳಿಗೆ ಸಂಬಂಧವಿಲ್ಲದ ಪ್ರಾಚೀನ ಬಸವ ಪುರಾಣದ ಪಾವಿತ್ರ್ಯವನ್ನೇ ಕಲುಷಿತಗೊಳಿಸುತ್ತವೆ.

ಶುದ್ಧ ಹಾಲಿನ ಕೊಡಾಯಿಗೆ ಬಿದ್ದ ಹುಳಿಹಾಲು, ಅಸಮಾನತೆಯ ವಿಷಬೀಜದಂತಾಗಿದೆ. ಸಮಾಜವೆಂಬ ಕೊಡಾಯಿಯು ಮನುಷ್ಯರ ಸೌಹಾರ್ದ, ಸಹಭಾವ ಮತ್ತು ಪರಸ್ಪರ ಗೌರವದಿಂದ ತುಂಬಿರಬೇಕು. ಆದರೆ ಅದರೊಳಗೆ ಬಿದ್ದ ಧರ್ಮ, ವರ್ಣ, ಜಾತಿ ಅಥವಾ ಆರ್ಥಿಕ ಅಹಂಕಾರದ ಒಂದು ತೊಟ್ಟು ಹುಳಿ, ಆ ಪವಿತ್ರ ಮಿಶ್ರಣವನ್ನು ಹುಳಿ ಹಾಲಾಗಿಸುತ್ತದೆ. ಸಮಾನತೆಯ ಹಾಲು ಹುಳಿ ಹೋದಾಗ ಅದರ ಸುವಾಸನೆ ನಶಿಸಿಹೋಗುತ್ತದೆ; ಉಳಿಯುವುದೆಂದರೆ ಕಟುವಾದ ವಾಸನೆ, ವಿಭಜನೆಯ ಕಹಿ.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ನೋಡಬಾರದದ್ದನ್ನು ನೋಡಿ, ಕೇಳಬಾರದದ್ದನ್ನು ಕೇಳಿ, ಸಮಾಜದ ಅನ್ಯಾಯ ಮತ್ತು ಅಸಮಾನತೆಯ ನೇರ ಅನುಭವದಿಂದ ಈ ವಚನವನ್ನು ಬರೆದಿರಬಹುದು:

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ,

ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ,

ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.

 

ಆ ವಚನವು ಆ ಕಾಲದ ಅನಾಚಾರಕ್ಕೆ ವಿರೋಧವಾಗಿ ತಾತ್ಸಾರದ ಧ್ವನಿಯಾಗಿ ಮೊಳಗಿತ್ತು.

ಆದರೆ ಇಂದಿನ ಶತಮಾನದಲ್ಲಿ, ಕುರುಡತನ, ಕಿವುಡತನ ಅಥವಾ ಹೆಳವುತನದ ಹತಾಶೆಗಾಗಿ ಕಾಲವಿಲ್ಲ. ಇದು ಮನಸ್ಸು ಮುಚ್ಚಿಕೊಳ್ಳುವ ಯುಗವಲ್ಲ ಮನಸ್ಸು ತೆರೆಯುವ ಯುಗ.

ನಾವು ನೋಡಬೇಕು, ಕೇಳಬೇಕು, ಹೇಳಬೇಕು — ಆದರೆ ಸತ್ಯವನ್ನು, ಸಾಮರಸ್ಯವನ್ನು ಮತ್ತು ನ್ಯಾಯವನ್ನು.

ಇದು ನಿಂದನೆಗೆ, ವಿಭಜನೆಗೆ ಅಥವಾ ಮತಾಂಧತೆಗೆ ಕಾಲವಲ್ಲ;

ಇದು ವಿಚಾರಕ್ಕೆ, ವಿವೇಕಕ್ಕೆ ಮತ್ತು ಸಹಬಾಳ್ವೆಯ ಸಂವಾದಕ್ಕೆ ಕಾಲ.

ಆದುದರಿಂದ ಹಿರಿಯರಾದ ಡಾ. ವೀರಣ್ಣ ರಾಜೂರ ಅವರಿಗೆ ವಿನಮ್ರ ಮನವಿ —

“ವೀರಶೈವ ಬೇರೆ, ಲಿಂಗಾಯತ ಬೇರೆ” ಎಂಬ ಮತಾಂಧತೆಯ ಘೋಷವಾಕ್ಯಗಳನ್ನು ದಯವಿಟ್ಟು ಎಲ್ಲಂದರಲ್ಲಿ ,ಅಲ್ಲಿ ಬಳಸಬೇಡಿ.ಅದಕ್ಕಾಗಿ ವೇದಿಕೆಗಳಿವೆ, ಅಭಿಯಾನಗಳಿವೆ , ಸಭಾಮಂಟಪಗಳಿವೆ, ಮತ್ತು ಮತಪ್ರಚಾರದ ಕ್ಷೇತ್ರಗಳಿವೆ —

ಆ ಪಾವನ ಗ್ರಂಥಗಳ ಪುಟಗಳು ಅಂತಹ ಘೋಷಣೆಗಳಿಗಾಗಿ ಅಲ್ಲ; ಅವುಗಳು ಜ್ಞಾನ, ಭಕ್ತಿ ಮತ್ತು ಸಾಮರಸ್ಯದ ಶಬ್ದಗಳನ್ನು ಮಾತ್ರ ಸಹಿಸುತ್ತವೆ.

ಬಸವಣ್ಣನವರು ಪಾಲಿಸಿದ  ಧರ್ಮಶಾಸ್ತ್ರವೇ ಸಾಮರಸ್ಯದ ಧರ್ಮ — ವಿಭಜನೆಯಲ್ಲ, ವಿನಾಶದ ದಾರಿ ಅಲ್ಲ, ಸಂಗಮದ ಮಾರ್ಗ.

“ಶ್ರೀ ವೃಷಭೇಶ್ವರ ಪುರಾಣಂ” ಎಂಬ ೧೪ನೆಯ ಶತಮಾನದ ಈ ಕೃತಿ ಕೂಡ ಅದೇ ಸಂಗಮದ ತತ್ವವನ್ನು ಪ್ರತಿಪಾದಿಸುತ್ತದೆ.

ಅದು ದೇವ–ಭಕ್ತಿ, ಶರಣರ ನಿಷ್ಠೆ ಮತ್ತು ತತ್ತ್ವಪರಂಪರೆಯ ಶುದ್ಧ ನಿರೂಪಣೆ.

ಈ ಪವಿತ್ರ ಗ್ರಂಥದ ಪಠ್ಯಶುದ್ಧಿ ಮತ್ತು ಪ್ರಕಟಣೆಗೆ ಶ್ರಮಿಸಿದ ಸಂಪಾದಕರು, ಪ್ರಕಾಶಕರು, ಸಹಾಯಕರ ಎಲ್ಲರ ಸೇವೆ ಪ್ರಶಂಸನೀಯ.

ಆದರೆ ಇಂತಹ ದಿವ್ಯ ಗ್ರಂಥಗಳಿಗೆ ನಾವು ನೀಡಬೇಕಾದ ನಿಜವಾದ ಗೌರವವೆಂದರೆ —

ಅದರ ಪುಟಗಳಲ್ಲಿ ವಿವಾದವಲ್ಲ, ವಿವೇಕದ ಬೆಳಕು ತುಂಬುವುದು.

ಬಸವಣ್ಣನವರು ಬರೆದ ದಾರಿ ನಿಂದನೆಯಲ್ಲ, ವಿನಯದ ದಾರಿ;

ಅವರ ಧರ್ಮ ತ್ಯಾಗದ ಧರ್ಮ — ವಿಭೇದದ ಧರ್ಮವಲ್ಲ.

ಆದ್ದರಿಂದ ನಾವು ಅವರ ಸಂದೇಶವನ್ನು ಓದುವಾಗ,

ಅವರ ನಿಶ್ಶಬ್ದ ಪ್ರಾರ್ಥನೆಯನ್ನೂ ಕೇಳಬೇಕು —” ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವನೆಂದೆನಿಸಯ್ಯಾ”

ಈ ಯುಗದಲ್ಲಿ ಅಗತ್ಯವಿರುವುದು ಹೊಸ ಘೋಷಣೆಗಳಲ್ಲ,

ಹೊಸ ಮನಸ್ಸುಗಳೇ.

ಅವು ನೋಡಲಿ, ಕೇಳಲಿ, ಹೇಳಲಿ —

ಸತ್ಯಕ್ಕಾಗಿ, ಸಾಮರಸ್ಯಕ್ಕಾಗಿ, ಶರಣರ ಹಾದಿಯ ಶುದ್ಧತೆಯಿಗಾಗಿ.

 

*******ಶ್ರೀಕಂಠ.ಚೌಕೀಮಠ

 

ಪರಮಾಶ್ಚರ್ಯ!

ಕೊಡಗು ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ  (೨೨-೦೯-೨೦೨೫ ) ಸಭಾ ಸಜ್ಜಿಕೆಯ ಪರದೆಯಲ್ಲಿ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಪ್ರತ್ಯಕ್ಷವಾದುದು !

ಅಭಿಯಾನದ ಹಲವು ಜಿಲ್ಲೆಗಳ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಶ್ರೀಗಳು ತಮ್ಮ ಗುರುಗಳ ಬಗ್ಗೆ ಮಾತನಾಡಿದರು ಮತ್ತು ಅವರ ಪುಣ್ಯ ತಿಥಿಯ ಪ್ರಚಾರ ಮಾಡಿದರು.

ಮಾತೆ ಮಹಾದೇವಿಯವರ ಶಿ಼ಷ್ಯ ಬಳಗ ತಮ್ಮ ಗುರುಗಳ ಬಗ್ಗೆ ಉಲ್ಲೇಖಿಸಿ ಮಾತನಾಡಿದರು.ಎಲ್ಲ ಅಭಿಯಾನ ಕಾರ್ಯಕ್ರಮಗಳಲ್ಲಿ ಮಾತನಾಡಿದರು.

ಆದರೆ ಎಲ್ಲಿಯೂ, ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಹೆಸರು ಪ್ರಸ್ಥಾಪವಾಗದಂತೆ ಎಚ್ಚರಿಕೆ ವಹಿಸಿತು ಲಿಂಗಾಯತ ಮಠಾಧಿಶರ ಒಕ್ಕೂಟ,

ವಚನಕಟ್ಟುಗಳನ್ನು ಸಂಗ್ರಹಿಸಿದ, ವಚನ ಪಿತಾಮಹ ಹಳಕಟ್ಟಿಯವರಿಗೆ ಸಹಾಯ ಸಹಕಾರ ಸಲ್ಲಿಸಿದ, ಶರಣರ ವಚನಗಳನ್ನು ಸಂಗೀತದ ಮೂಲಕ ಪಂಚಾಕ್ಷರಿ ಗವಾಯಿಗಳ ಮೂಲಕ ಜಗತ್ತಿಗೆ ಪರಿಚಯಿಸಿದ ಮತ್ತು ಶಿವಯೋಗಮಂದಿರದ ವಟು ಸಾಧಕರಿಗೆ ವಚನಗಳನ್ನು ಅರ್ಚನ,ಅರ್ಪಣ,ಅನುಭಾವಗಳಲ್ಲಿ ರೂಢಿಗೆ ತಂದ ಕಾರುಣಿಕ ಯುಗಪುರುಷ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಸ್ಮರಿಸುವುದು   ಒತ್ತಟ್ಟಿಗಿರಲಿ,

ಅವರನ್ನು ಖಳನಾಯಕನಂತೆ ಬಿಂಬಿಸಿ  ,ಬಸವ ಭಾರತ ಪತ್ರಿಕೆಯಲ್ಲಿ  ಪೂರ್ವನಿಯೋಜಿತವಾಗಿ ಮುದ್ರಿಸಿದ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರು,ಆ ಪತ್ರಿಕೆ ಆ ಪುಟಗಳನ್ನು ಮುದ್ರಿಸಿ ಅಭಿಯಾನದಲ್ಲಿ ಉಚಿತವಾಗಿ ಹಂಚಿದ ಜಾಗತಿಕ ಲಿಂಗಾಯತ ಮಹಾಸಭೆಯ ಅತೃಪ್ತ ಸದಸ್ಯರ ಮಧ್ಯದಲ್ಲಿ ,ಅಭಿಯಾನ ಆರಂಭವಾಗಿ ಬರೊಬ್ಬರಿ ೨೧ ದಿವಸಗಳ ನಂತರ ಘಟಸ್ಥಾಪನೆಯ ದಿನದಂದು  “ಮಠದಿಂದ ಘಟವಲ್ಲ-ಘಟದಿಂದ ಮಠ “ ವೆಂದ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಮೌನವಾಗಿ ಕೊಡಗಿನ ವೀರರ ನಾಡಿನಲ್ಲಿ ಉದ್ಭವಾಗಿರುವುದು ಆಶ್ಚರ್ಯವೆನಿಸಿತು.

ಅದರ ಜೊತೆ ಪೂಜ್ಯರು ಸ್ಥಾಪಿಸಿದ  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡುಗು  ಜಿಲ್ಲಾ ಘಟಕದ ಹೆಸರು ರಾರಾಜಿಸುತ್ತಿತ್ತು.

ಸಂತೋಷವೆನಿಸಲಿಲ್ಲ!

ಒಂದು ಕ್ಷಣ ವಿಷಾದವೆನಿಸಿತು. ನೋವೆನಿಸಿತು ಅಕ್ರೋಶದ ಕಟ್ಟೆಯೊಡಿಯಿತು .ಹಲವು ಕ್ರೂರ ಮುಖಗಳು ಕಣ್ಣು ಮುಂದೆ ಬಂದವು.

“ವೀರಶೈವರು” ನಿಮ್ಮ ಲಿಂಗಾಯತ ಧರ್ಮಕ್ಕೆ ಬಂದರೆ ಸೇರಿಸಿಕೊಳ್ಳುವಿರಾ ಎಂದು ಮಾಧ್ಯಮದವರು ಕೇಳಿದಾಗ “ವೀರಶೈವರಷ್ಟೇ ಅಲ್ಲ ವೇಶ್ಯೇಯರೂ ಬಂದರೆ ಲಿಂಗಾಯತ ಧರ್ಮಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ವ್ಯಂಗವಾಗಿ ,ತುಚ್ಛವಾಗಿ ವೀರಶೈವ ಎಂದು ಒಪ್ಪಿಕೊಂಡವರನ್ನು ವೇಶ್ಯೆಯರಿಕ್ಕಿಂತಲೂ ಕೀಳು ಮಟ್ಟದಲ್ಲಿ ಕಂಡ ನಿಜಗುಣಾನಂದ ಸ್ವಾಮಿಗಳು,

ಅಖಿಲ ಭಾರತ ವೀರಶೈವ ಮಹಾಸಭೆಗೆ ವೀರಶೈವ ಎಂದು ಹೆಸರು ಬರಲು  ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳೇ ಕಾರಣ ವೆಂದು  ಸುಳ್ಳುಗಳ ಪುಸ್ತಕವನ್ನು ಬರೆದ ಡಾ. ಎಸ್.ಎಂ. ಜಾಮದಾರ್‌ ಅವರು,

ಪಂಚಾಚಾರ ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ ಮಾಡಿದರೆ ಪಾಪ ಕೆಲವರಿಗೆ ನೋವಾಗುತ್ತದೆ,ಅದನ್ನು ಜೆ.ಎಲ್‌ .ಎಮ್‌ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ಕ್ಲಿಯರ್‌ ಮಾಡಲಿ ಎಂದು ಭಯೋತ್ಪಾಕ ಭಾಷೆಯಲ್ಲಿ ಮಾತನಾಡಿದ ಮತ್ತು ಈ ಕಾರ್ಯಕ್ರಮದ ಲೈವ ಚೀತ್ರಿಕರಣ ಮಾಡುವ ವಚನ ಟಿವಿ ಮುಖ್ಯಸ್ಥ  ಸಿದ್ದು ಯಾಪಲಪರ್ವಿಯವರು,

ಅಭಿಯಾನ ಆರಂಭಗೊಳ್ಳುವ ಎರಡು ದಿನ ಮೊದಲು ಬಸವ ಭಾರತ ಎಂಬ ಮಾಸಪತ್ರಿಕೆ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರ ನೇತೃತ್ವದಲ್ಲಿ  ಶಶಿಕಾಂತ ಪಟ್ಟಣ ಎಂಬುವವರಿಂದ ಶ್ರೀ ಕುಮಾರ ಶಿವಯೋಗಿಗಳ ಮೇಲೆ ಅವಹೇಳನದ ಲೇಖನ ಬರೆಯಿಸಿ,ಮುದ್ರಿಸಿದಾಗ ಎದ್ದ ಪ್ರತಿಭಟನೆಗೆ ಶಶಿಕಾಂತ ಪಟ್ಟಣ ಅವರು ಕ್ಷಮೆ ಯಾಚಿಸಿದರು.ಅವರ ಕ್ಷಮೆ ಯಾಚಿಸಿದ್ದಕ್ಕೆ ಆಕ್ಷೇಪಣೆ ಮಾಡಿ ಬಸವ ಸಂಸ್ಕೃತಿ ಅಭಿಯಾನ ಮುಗಿಯುವವರೆಗೆ  ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಅವಹೇಳನದ ಲೇಖನ ಜೀವಂತವಾಗಿರ ಬೇಕೆಂಬ ಫರ್ಮಾನು ಹೊರಡಿಸಿದ ಅನಾಮಧೇಯ ಹಲವರು,

ಜಾಗತಿಕ ಲಿಂಗಾಯತ ಮಹಾಸಭಾದ ಕೃಪಾ ಪೋಷಿತ ೨೪x ೭  ಸಾಮಾಜಿಕ ಜಾಲತಾಣಗಳ ಸಕ್ರೀಯ ಕಾರ್ಯಕರ್ತರಾದ, ಅಶ್ಲೀಲ ಸಾಹಿತ್ಯದ  ನಿಜಗುಣ ಮೂರ್ತಿ ಮತ್ತು ಸಿ.ಜಿ.ಸಿದ್ದಲಿಂಗಸ್ವಾಮಿಗಳು,

ಈ ಎಲ್ಲ ಮಹಾತ್ಮರು ಮತ್ತು ಮಹಾನುಭಾವರು  ಅದು ಹೇಗೆ   ಕೊಡಗಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರದ ಬಳಕೆ ಯನ್ನು  ಗಮನಿಸಲಿಲ್ಲ ?.

ಬಹುಷಃ ಕೊಡಗಿನ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಅಲ್ಲಿನ ಅಖಿಲ ಭಾರತ ವೀರಶೈವ ಮಹಾಸಭೆ ವಹಿಸಿಕೊಂಡಿರಬಹುದಾದರೂ ,ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಘಟಕಗಳು ಕೈ ಜೋಡಿಸಿದ್ದರೂ ಎಲ್ಲಿಯೂ ಚಿತ್ರ ಬಿಡಿ ಹೆಸರನ್ನೂ ಎತ್ತದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದ ಅಭಿಯಾನದ ಸೂತ್ರದಾರರು ಕೊಡಗು ಜಿಲ್ಲೆಯಲ್ಲಿ ಮರೆತು ಬಿಟ್ಟಿದ್ದು ಸಖೇದಾಶ್ಚರ್ಯ!.

೨೦ನೆಯ ಶತಮಾನದ ಆರಂಬದಲ್ಲಿ ನೂರಾರು ಒಳಪಂಗಡಗಳನ್ನು ಒಟ್ಟುಗೂಡಿಸಿ ಅಖಂಡ ವೀರಶೈವ ಮಹಾಸಭಾವನ್ನು ಸ್ಥಾಪಿಸಿದ ಮಹಾಪುರುಷನ ಚಿತ್ರದ ಎದುರು ವೀರಶೈವ ಬೇರೆ ,ಲಿಂಗಾಯತ ಬೇರೆ ಎಂದು ಹೇಳುವುದೇ ಬಸವ ಸಂಸ್ಕೃತಿ ಎಂದು ಬಿಂಭಿಸಿದ ರೀತಿ , ಒಬ್ಬ ರಾಜಕಾರಣಿಯ ಅಧಿಕಾರದ ದಾಹಕ್ಕೆ ಬಲಿ ಕೊಟ್ಟಂತೆಯಿತ್ತು.

ಒಂದು  ತೋರಣದ ಎಲೆ ಬಸವಣ್ಣನವರ ಭಾವ ಚಿತ್ರ ಸರಕಾರಿ ಕಛೇರಿಯಲ್ಲಿ ತೂಗು ಹಾಕಿದ್ದು,

ಎರಡನೆಯ ತೋರಣದ ಎಲೆ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಿದ್ದು,

ಮೂರನೆಯ ತೋರಣದ ಎಲೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ತುರಾತುರಿಯಲ್ಲಿ ಕೇಂದ್ರಕ್ಕೆ ಕಳುಹಿಸಿದ್ದು

ನಾಲ್ಕನೆಯ ತೋರಣ ವಿಜಯಪುರದ ವಿ.ವಿ.ಗೆ ಅಕ್ಕ ಮಹಾದೇವಿಯವರ ಹೆಸರು ಇಟ್ಟಿದ್ದು..

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು;

ಕೊಂದಹರೆಂಬುದನರಿಯದೆ

ಬೆಂದೊಡಲ ಹೊರೆಯ ಹೋಯಿತ್ತಲ್ಲದೆ!

ಅದಂದೇ ಹುಟ್ಟಿತ್ತು,

ಅದಂದೇ ಹೊಂದಿತ್ತು;

ಕೊಂದವರುಳಿದರೇ ,ಕೂಡಲಸಂಗಮದೇವಾ??”. 

ಈ ತೋರಣಗಳು ಹೊರಗೆ ಕಂಡರೆ,

 ಒಳಗೆ ವೀರಶೈವ ಲಿಂಗಾಯತರ, ರಾಜಕಾರಣಿಗಳ ಮತ್ತು ಅಧಿಕಾರಿಗಳ ಎಳೆಹೂಟೆ ಕಾರ್ಯ ಅವ್ಯಾಹತ.

ಮುಂದೊಂದು ದಿನ ಕೊಂದವರು ಉಳಿಯದಿರಬಹುದು ಆದರೆ ಇಂದು ಅಖಂಡ ವೀರಶೈವ ಲಿಂಗಾಯತವನ್ನು ಛಿದ್ರ ಛಿದ್ರ ಮಾಡಿ ಅವರವರಲ್ಲಿ ವಿಷವನ್ನು ತುಂಬಿ  ಭೇಧವನ್ನು ಅನುಷ್ಠಾನಗೊಳಿಸುವಲ್ಲಿ   ಸಿದ್ದರಾಮಯ್ಯ ಯಶಸ್ವಿಯಾಗಿರುವರು.

ತೋರಣಗಳನ್ನು ಮೇಯ್ದ ಕುರಿಗಳು ,

ಸರಕಾರದ ಪ್ರಶಸ್ತಿ ಅನುದಾನ ಪಡೆದ ನರಿಗಳು

ಇಂದು ವ್ಯಾಘ್ರಗಳು.

ಈ   ಫಲಾನುಭವಿ ಗೋಮುಖ  ವ್ಯಾಘ್ರಗಳ ಆರ್ಭಟಗಳಲ್ಲಿ  “ವೀರಶೈವ ಲಿಂಗಾಯತ “ ದುರ್ಬಲಗೊಂಡಿದೆ .

ಆದರೆ ಆಗಿರುವ ದುರಂತ  , ಮತ್ತು ಆಗುವ  ನಷ್ಠ- ಊಹೆಗೂ ನಿಲಕಲಾರದ್ದು.

ಮುಂದೊಂದು ದಿನ ಮೈ ಕೊಡವಿ ,ಧೂಳುಗಳ ಮಧ್ಯದಲ್ಲಿ ಫಿನಿಕ್ಸ ಪಕ್ಷಿಯಂತೆ ಮರು ಜನ್ಮ ಪಡೆದುಕೊಳ್ಳುವುದು ಶತ ಸಿದ್ಧ.

ಫಿನಿಕ್ಸ್ (Phoenix) ಎಂಬುದು ಗ್ರೀಕ್ ಪುರಾಣಗಳಲ್ಲಿ ಪ್ರಸಿದ್ಧವಾದ ಅದ್ಭುತ ಪಕ್ಷಿ.
ಇದು ಒಂದು ಅಮರ ಪಕ್ಷಿ, ತನ್ನ ದೇಹವೇ ಅಗ್ನಿಯಾಗಿ ಭಸ್ಮವಾದ ಬಳಿಕ, ಆ ಭಸ್ಮದಿಂದಲೇ ಮತ್ತೆ ಪುನರ್ಜನ್ಮ ಪಡೆಯುತ್ತದೆ ಎಂದು ನಂಬಿಕೆ.

 

-ಶ್ರೀಕಂಠ.ಚೌಕೀಮಠ

 

ಇಂದು ೧೩-೦೯-೨೦೨೫ ಮುಂಜಾನೆ  ದಿನಪತ್ರಿಕೆ ತೆರೆದಾಗ ನನಗೊಂದು ಆಘಾತಕಾರಿ ಸುದ್ದಿ ಅತ್ಯಂತ ನೋವನ್ನುಂಟು ಮಾಡಿತು. “ಹಾನಗಲ್ಲ ಶ್ರೀ ಕುಮಾರೇಶ್ವರ ಮಠ ಕ್ಕೆ ಹುಸಿ ಬಾಂಬ್ ಕರೆ ” ಎಂಬ ತಲೆಬರಹದಡಿ ಪ್ರಕಟವಾದ ಸುದ್ದಿ.

೧೯೦೦ ರ ಅವಧಿಯಲ್ಲಿ ಹಾನಗಲ್ಲ ಸುತ್ತಮುತ್ತಲ ಗುರುಳೇ ರೋಗ ಮತ್ತು ಬರಗಾಲ ಅಪ್ಪಳಿಸಿದಾಗ ಇಡೀ ಹಾನಗಲ್ಲ ಮಠ ಆಶ್ರಯ ತಾಣವಾಗಿಸಿ , ಆಸ್ಪತ್ರೆಯಾಗಿ  ,ಶಿಕ್ಷಣ ಕೇಂದ್ರವಾಗಿ  ಜೀವನಾಡಿಯಾದ ಶ್ರೀ ಮಠದ ಪವಿತ್ರ ನೆಲಕ್ಕೆ  , ಛಿದ್ರ ಛಿದ್ರ ವಾಗಿ ಹೋಗಿದ್ದ ಸಮಾಜವನ್ನು ಒಂದು ಗೂಡಿಸಿ, ಸಮಾಜದ ಶ್ರೇಯೋಭಿವೃದ್ಧಿಗೆ ತಮ್ಮ ಇಡೀ ಜೀವಮಾನವನ್ನೇ ತ್ಯಾಗ ಮಾಡಿದ ಮಹಾ ಪುರುಷ ಹಾನಗಲ್ಲ ಶ್ರೀಕುಮಾರೇಶ್ವರರ ಮಠಕ್ಕೇ ಬಾಂಬ್‌ ಇಟ್ಟಿದ್ದೇನೆ ಎಂದು ಬೆಂಗಳೂರಿನಿಂದ ಹಾನಗಲ್ಲಿಗೆ ಬಂದು ಪೋಲಿಸ ಗಸ್ತು ವಾಹನದ ೧೧೨ ಕ್ಕೆ ದೂರವಾಣಿ ಕರೆ ಮಾಡಿದ ಆರೋಪಿ ಹರೀಶ ಚವ್ವಾಣನ ಹೇಳಿಕೆ ,ಹಲವು ಸಂಶಯಗಳಿಗೆ ಕಾರಣವಾಯಿತು.

ಸುದ್ದಿ ಮಾಡಿದವ ಮಾನಸಿಕ ಅಸ್ವಸ್ಥ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು. ಒಬ್ಬ ಮಾನಸಿಕ ಅಸ್ವಸ್ಥ ಹಾನಗಲ್ಲಿನಲ್ಲಿ ಶ್ರೀ ಕುಮಾರೇಶ್ವರ ಮಠವನ್ನೇ ಏಕೆ ಆಯ್ದುಕೊಂಡ ?.

ಆಶ್ಚರ್ಯವೆನಿಸುತ್ತದೆ.!

ಒಂದು ಕ್ಷಣ ಪ್ರಸ್ತುತ ಕರ್ನಾಟಕದಲ್ಲಿ ಜರಗುತ್ತಿರುವ  ವೀರಶೈವ ಲಿಂಗಾಯತ ಒಳ ಜಗಳಗಳು ,ತಾರಕಕ್ಕೇರುತ್ತಿರುವ ಪರ ವಿರೋಧದ ಭಾಷಣಗಳು ,ಅದರಲ್ಲೂ ವೀರಶೈವ ಎಂಬ ಶಬ್ಧಕ್ಕೆ ಉಗ್ರವಾಗಿ ವಿರೋಧಿಸುತ್ತಲೇ ಹುಟ್ಟಿಕೊಂಡ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಹಾನಗಲ್ಲಿನ ಜಿಲ್ಲೆ ಮತ್ತು ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಜನ್ಮ ಸ್ಥಳ ಜೋಯಿಸರಹರಳಹಳ್ಳಿಯ ಜಿಲ್ಲೆ  ಹಾವೇರಿಯನ್ನು ಪ್ರವೇಶ ಮಾಡುತ್ತಿರುವದು ನಾಳೆ ೧೪-೦೯-೨೦೨೫ ಕಾಕತಾಳಿಯ !.

ಹಲವು ಸುಂದರ  ಸ್ವಸ್ಥ ಮುಖಗಳು ಮತ್ತು ಅವರು ಉದುರಿಸಿದ ಸುಂದರ ಮುತ್ತುಗಳು ಕಣ್ಣೆದರು ಬಂದವು.

ಅವುಗಳಲ್ಲಿ…..

ಅಖಿಲ ಭಾರತ ವೀರಶೈವ ಮಹಾಸಭೆಗೆ ಲಿಂಗಾಯತ ಮಹಾಸಭೆ ಎಂದು ಹೆಸರಿಡದೇ ವೀರಶೈವ ಮಹಾಸಭೆ ಎಂದು ಹೆಸರಿಟ್ಟವರು ಹಾನಗಲ್ಲ ಕುಮಾರಸ್ವಾಮಿಗಳು ಎಂದು ಹಲವು ಅವಹೇಳನಕರ ವಿಷಯಗಳ ಪುಸ್ತಕವನ್ನು ಬರೆದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸೂತ್ರದಾರಿಗಳಾದ ,ಚಾಣಾಕ್ಷರೂ,ಚಾಣುಕ್ಯರೂ ಮತ್ತು ಮಹಾ ಮೇಧಾವಿಗಳಾದ ಡಾ.ಎಸ್.ಎಮ್.ಜಾಮದಾರ ಅವರು,

೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕದ ಕುರಿತಾದ ಕಾರ್ಯಕ್ರಮದಲ್ಲಿ ಗದುಗಿನ ಕೆ.ವಿ.ಎಸ್.ಆರ್‌ ಪದವಿ ಪೂರ್ವ ಕಾಲೇಜಿನ ನಿವೃತ್‌ ಇಂಗ್ಲಿಷ್‌ ಭಾಷೆಯ ಪ್ರಾದ್ಯಾಪಕ ಮತ್ತು ವಚನ ಟಿ,ವಿಯ ಮುಖ್ಯಸ್ಥ ಸಿದ್ದು .ಬ. ಯಾಪಲಪರ್ವಿ ಎನ್ನುವವರು, ಕಾರ್ಯಕ್ರಮ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕಕ್ಕೆ ಸೀಮಿತವಾಗಿದ್ದರೂ ಅನಾವಶ್ಯಕವಾಗಿ ಪುಸ್ತಕಕ್ಕೂ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ  ಪರಮಪೂಜ್ಯರ ಹೆಸರನ್ನು ಪ್ರಸ್ಥಾಪಿಸಿ : “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಪ್ರವಾಚಿಸಿದ್ದರಲ್ಲಿ  “ಅಟ್ಯಾಕ” ಅನ್ನುವ ಭಯೋತ್ಪಾದಕ ಶಬ್ಧ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಆರಂಭಗೊಳ್ಳುವ ಒಂದು ವಾರದ ಹಿಂದೆ “ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಲೇಖನದಲ್ಲಿ ಉದ್ದೇಶಪೂರ್ವಕವಾಗಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನ.

ಲೇಖನಕ್ಕೆ ತೀವೃ ವಿರೋಧವುಂಟಾದಾಗ ಕ್ಷಮೆ ಯಾಚಿಸಿದ ಡಾ,ಶಶಿಕಾಂತ ಪಟ್ಟಣ ಅವರ 29-08-2025ರಂದು ನಡೆದ ಕಾನ್ಫರೆನ್ಸ್ ಕರೆಯಲ್ಲಿ ವ್ಯಕ್ತವಾದ ಮಾತುಗಳು ಸಂಶಯದ ದಿಕ್ಕನ್ನು ಬದಲಾಯಿಸುವಂತಹದ್ದು- ವಚನ ಟಿ.ವಿಯಲ್ಲಿ ಸಂದರ್ಶನ ಕೊಡುವ.,ಜಾಗತಿಕ ಲಿಂಗಾಯತ ಮಹಾಸಭಾದ ಹಿರಿಯ ಸದಸ್ಯರಾದ ಶ್ರೀ ಅಶೋಕ ಬರಗುಂಡಿ (ನಿವೃತ್ತ ಎಂಜಿನಿಯರ್) ಬಸವತತ್ವ ಪ್ರತಿಪಾದಕರು ಅವರು ಲಿಂಗಾಯತ ಮಠಾಧೀಶರ ಬಸವತತ್ವ ಅಭಿಯಾನ ಆರಂಭವಾಗುತ್ತಿರುವದರಿಂದ- ಪ್ರಕಟಗೊಂಡ ಪೂಜ್ಯ ಹಾನಗಲ್ಲ ಶ್ರೀಗಳ ಕುರಿತು ಅವಹೇಳನ ದ ಲೇಖನಕ್ಕೆ ಕ್ಷಮೆ ಕೇಳಿದ ಡಾ,ಶಶಿಕಾಂತ ಪಟ್ಟಣ  ಅವರಿಗೆ ತಾಕೀತು ಮಾಡಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ.

ಜೊತೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರುಗಳಾದ ಶ್ರೀ ನಿಜಗುಣಮೂರ್ತಿ ಮತ್ತು ಶ್ರೀ ಸಿದ್ದಲಿಂಗಸ್ವಾಮಿ.ಸಿ.ಜಿ. ಅವರ ಮುಂದುವರೆದ ಜಾಲತಾಣಗಳಲ್ಲಿನ  ನಿರಂತರ ಅವಹೇಳನಗಳು ಡಾ,ಶಶಿಕಾಂತ ಪಟ್ಟಣ ಅವರ ಲೇಖನದ ಪ್ರಕಟಣೆ ಉದ್ದೇಶ ಪೂರ್ವಕ ಹಿನ್ನಲೆಯನ್ನು ಸಾಬೀತು ಪಡಿಸುತ್ತದೆ.

ಕೆಲವು ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಪೂಜ್ಯ ಶ್ರೀ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅವಹೇಳನದ ಲೇಖನದ ಪುಟಗಳನ್ನಷ್ಟೇ ಸಾವಿರಾರು ಪ್ರತಿ ಮುದ್ರಿಸಿ  ಇಲ್ಲವೇ ಝರಾಕ್ಸ ಪ್ರತಿ ಮಾಡಿಸಿ ಲಿಂಗಾಯತ ಮಠಾಧೀಶರ ಒಕ್ಕೂಟ ಆರಂಭಿಸಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ಹಂಚಲು ಮತ್ತು ಅದಕ್ಕೆ ಉಂಟಾಗುವ ಖರ್ಚು ವೆಚ್ಚಗಳನ್ನು ಭರಿಸುವದಾಗಿಯೂ ಹೇಳಿದ ಸಂಗತಿಗಳು ಬಸವ ಭಾರತ ಪತ್ರಿಕೆಯ ಸಂಪಾದಕ ಶಿವರುದ್ರ  ಮತ್ತು ಲೇಖಕ ಡಾ. ಶಶಿಕಾಂತ ಪಟ್ಟಣ  ಕಾನಫರೆನ್ಸ ಕಾಲ್‌ ನಲ್ಲಿ  ವಿಚಾರ ವಿನಿಮಯದಲ್ಲಿ ವ್ಯಕ್ತ ವಾದುದನ್ನು ನಾನು ಇಲ್ಲಿ ಸ್ಮರಿಸುತ್ತೇನೆ.

ಎಲ್ಲದರ ಜೊತೆಗೆ ನಾನು ಅತ್ಯಂತ ಗೌರವ ಮತ್ತು ಅಭಿಮಾನದಿಂದ ಕಾಣುವ ಇಬ್ಬರ  ಶ್ರೀಗಳ “ಮೌನ” ನನಗೆ ಅತ್ಯಂತ ನೋವನ್ನುಂಟುಮಾಡಿದೆ.

“ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನದ ಸಂಚಿಕೆಯ ಗೌರವ ಸಂಪಾದಕರಾದ  ಇಲಕಲ್ಲಿನ ಪೂಜ್ಯ ಗುರು ಮಹಾಂತಸ್ವಾಮಿಗಳು ಮತ್ತು ಸಹಿಯಿಲ್ಲದ ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ “ ಬಸವ ಭಾರತ “ ಪತ್ರಿಕೆಯ ಸಂಪಾದಕರ ಪತ್ರದಲ್ಲಿ  ಹಠಾತ್ತಾಗಿ ಕಾಣಿಸಿಕೊಂಡ ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟಾಧ್ಯಕ್ಷರ ಹೆಸರು , ಅವರಿಬ್ಬರ ಗಮನಕ್ಕೆ ತಂದರೂ  ಅವರು  ಲಿಖಿತ ಸ್ಪಷ್ಠೀಕರಣ ಕೊಡದೇ ಇರುವುದು.

ಸುಂದರವಾಗಿದ್ದ ಬಂಧುರವಾಗಿದ್ದ ವೀರಶೈವ ಲಿಂಗಾಯತ ಸಮುದಾಯ ೨೦೧೭ ರಿಂದ ಇಲ್ಲಿಯವರೆಗೆ ರಾಜಕೀಯ ಬಲಿಪಶುವಾಗಿದ್ದು. ಎಡಗೈ ತನ್ನ ಬಲಗೈಯನ್ನೇ ಸಂಶಯದಿಂದ ನೋಡುವ ಸ್ಥಿತಿಯನ್ನು ತಲುಪಿದ್ದು ಶೋಚನೀಯ.

ಮೇಲ್ನೋಟಕ್ಕೆ ಬಸವಣ್ಣನವರ ಭಾವಚಿತ್ರ ಸರಕಾರಿ ಕಛೇರಿಯಲ್ಲಿ ಹಾಕಿಸಿ ,ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಳನೋಟದಲ್ಲಿ ಕರಳುಬಳ್ಳಿಗಳಿಗೆ ಕೊಳ್ಳಿಯನಿಕ್ಕಿದವರು ಒಳ ಒಳಗೆ  ನಗುತ್ತಿರುವ  ಮುಸಿ ಮುಸಿ ನಗು ಹೊರ ಹೊರಗೆ ಕರಳುಬಳ್ಳಿಗಳು ಕತ್ತಿ ಮಸಿಯುತ್ತಿರುವುದು ವೀರಶೈವ ಲಿಂಗಾಯತರ ದುರಂತ ಮತ್ತು ಅವರು  ಹಗಲು ಕಂಡ ಬಾವಿಗೆ ರಾತ್ರಿ ಹಾರಿಕೊಳ್ಳುತ್ತಿರುವುದು ಶೋಚನೀಯ.

ಲಿಂಗಾಯತ ಎಂದು ವಾದಿಸುವವರು ಲಿಂಗಾಯತ ರಾಗಿ ಬದುಕಲಿ

ವೀರಶೈವರು ಎಂದು ವಾದಿಸುವವರು ವೀರಶೈವರಾಗಿ ಬದುಕಲಿ

ವೀರಶೈವ ಲಿಂಗಾಯತರು ಎಂದು ಸಮರಸದ ಬದುಕನ್ನು ಕಾಣಲಿಚ್ಚುಸುವವರು ವೀರಶೈವ ಲಿಂಗಾಯತರಾಗಿ ಬದುಕಲಿ.

ಆದರೆ ನಾ ಹೆಚ್ಚು ನೀ ಹೆಚ್ಚು ಎನ್ನುವ ಹಗ್ಗ ಜಗ್ಗಾಟದ ಪ್ರತಿ ಹಂತದಲ್ಲೂ  ಸಮಾಜದ ಉನ್ನತಿಗೆ ಹಗಲಿರಳು ಶ್ರಮಪಟ್ಟ ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು  ಅನಾವಶ್ಯಕವಾಗಿ ಎಳೆದುತರುವ ಪಾಪದ ಕೆಲಸ ಅಕ್ಷಮ್ಯ ಅಪರಾಧ.

ಈ ವಿಷಯದ ಸೂಕ್ಷ್ಮತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ತೀವೃವಾಗಿ ಮನಗಾಣಬೇಕು.

ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಕುರಿತು ಅವಹೇಳಕಾರಿ ಪುಸ್ತಕ ಪ್ರಕಟಿಸುವುದು ,ಸಾರ್ವಜನಿಕ ಸಭೆಯಲ್ಲಿ ಪೂಜ್ಯರ ಮೇಲೆ “ಅಟ್ಯಾಕ” ಎಂಬ ಭಯೋತ್ಪಾದಕ ಶಬ್ಧವನ್ನು ಕೇಳಿಯೂ ಕೇಳದಂತೆ ಕುಳಿತುಕೊಳ್ಳುವುದು ,ಜಾಣ ಮೌನವನ್ನು ವಹಿಸುವುದು  ಇಂದು ಸಂಬಂಧಪಟ್ಟವರ ಆತ್ಮಗಳಿಗೆ ಸಂತೋಷವನ್ನು ನೀಡುತ್ತಿರಬಹುದು.

ನ್ಯಾಯಾಂಗ, ರಾಜ್ಯಾಂಗ ಮತ್ತು ಕಾರ್ಯಾಂಗಗಳು  ಸಂಬಂಧಪಟ್ಟವರ ಆತ್ಮಗಳಿಗೆ ಪೂರಕ ಸಹಕಾರ ನೀಡುತ್ತಿರಬಹುದು,ಆದರೆ  ಮುಂದೊಂದು ದಿನ ನಿಸರ್ಗ ಈ ಎಲ್ಲ ನೀಚ ಕಾರ್ಯಗಳಿಗೆ  ತಕ್ಕ ಉತ್ತರ ನೀಡುತ್ತದೆ ಎಂಬ ಅಚಲ ನಂಬಿಕೆ ನನ್ನದು.

-ಶ್ರೀಕಂಠ.ಚೌಕೀಮಠ

 

 

 

 

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

(ರಾಗ – ಭೈರವಿ)

ಶಿವಮೂರ್ತಿಯೆ | ತವೆ ಪೂಜಿಸುವೆ || ಪ ||

ತರು ವಿಸ್ತಾರವನಿರದೈಕ್ಯಗೊಂಡ |

ನೆರೆ ಬೀಜದ ಪರಿ |

ಶರೀರಾದಿ ಜಗವ ಮೀರಿ ತೋರ್ಪ || 1 ||

ತವೆ ಇಷ್ಠಾರ್ಥವ ಭುವಿಯೊಳು ಕೊಡುವ |

ಭವದೋಷದರತಿ |

ಜವದೊಳ್ ನಾಶಿಪ ದೇವದೇವಾ || 2 ||

ಲಿಂಗರೂಪದ ಜಂಗಮಾರ್ಯಗೆ |

ಮಂಗಲ ಗುರುವರ |

ಕಂಗಳಾಲಯ ಶಿವಯೋಗದೇವಾ || 3 |

ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

ಆದಿ ಶ್ರೋತ್ರಂದ್ರಿಯ ನಿ |ರ್ಭೇದ ಶಬ್ದವ ಕೇಳ್ವ

ಮೋದವದು ಸುಪ್ರ- ಸಾದ ಲಿಂಗವು ಎಂದು

ಬೋಧಿಸಿದ ಗುರುದೆ ಕೃಷಿಯಾಗ   ||೧೬೩||

ಐದನೆಯ ಜ್ಞಾನೇಂದ್ರಿಯ ಶ್ರೋತ್ರ, ಅರ್ಥಾತ್ ಕಿವಿ, ಆಕಾಶ ತತ್ವ ಪ್ರಧಾನವಾದುದು ಈ ಶ್ರೋತ್ರೇಂದ್ರಿಯ, ಆಕಾಶವು ಶಬ್ದ ಗುಣಕವಾಗಿರುವದರಿಂದ ಶ್ರೋತ್ರಕ್ಕೂ ಶಬ್ದದ ಅನುಭವವಾಗುತ್ತದೆ. “ಆತ್ಮನಃ ಆಕಾಶ ಸಂಭೂತಃʼʼ ಆತ್ಮನಿಂದ ಆಕಾಶವು ಮೊಟ್ಟಮೊದಲು ಹುಟ್ಟಿದ್ದರಿಂದ ಶಿವಕವಿಯು “ಆದಿ ಶ್ರೋತ್ರೇಂದಿ” ಎಂದು ಪ್ರಯೋಗಿಸಿದ್ದಾರೆ. ಶ್ರೋತ್ರೇಂದಿಯಕ್ಕೆ ಆದಿಪಟ್ಟ  ಬಂದಿದೆ. ಮತ್ತು ಶಿವನು ನಾದ – ಬಿಂದು ಕಲಾಸ್ವರೂಪನು. ಅವರ ಮೊದಲನೇ  ತತ್ವ ”ನಾದ”ವು ಕಿವಿಗೆ ತಾನೇ ವೇದ್ಯವಾಗುವದಿಲ್ಲವೆ !

“ನಿರ್ಭೇದ’ ಶಬ್ದದ ಅರ್ಥ ವಿಧವಿಧವಾಗಿದೆ, (೧) ಎರಡುಮಾಡು ೨) ಒಡೆ ೩) ಬೈಲಿಗೆ ಹಾಕು ೪) ಸ್ಪಷ್ಟಭಾಷಣ ) ೫)ನಾಷ ೬) ಪ್ರಲಯ ಮುಂತಾದವುಗಳು ನಿರ್ಭೇದ ಪದದ ಪರ್ಯಾಯನಾಮಗಳು. ಪ್ರಸ್ತುತ ತ್ರಿಪದಿಯಲ್ಲಿ ನಿರ್ಭೇದಕ್ಕೆ ಸ್ಪಷ್ಟವಾದ ಶಬ್ದವೆಂದೇ ಹೇಳಬೇಕು. ಯಾಕಂದರೆ ಶಬ್ದಗಳು – ಭಿನ್ನ ಭಿನ್ನವಾಗಿರುವದರಿಂದ ಕೇಳುವಿಕೆಯಲ್ಲಿ ಸ್ಪಷ್ಟತೆಯಿರಬೇಕಾಗುವದು. ಮುಖ್ಯವಾಗಿ ಶಬ್ದವನ್ನು ಐದು ತೆರನಾಗಿ ವಿಭಾಗಿಸಬಹುದು. ೧) ತಾಳವಾದ್ಯ ಕಂಸಾಳಾದಿಗಳಿಂದ ಜನ್ಯಶಬ್ದ ೨) ತಂತೀವಾದ್ಯದಿಂದ ಹೊರಡುವ ಶಬ್ದ.೩) ಕುಡುಹು (ಚರ್ಮವಾದ್ಯ) ವಿಡಿದು ಬರುವ ಶಬ್ದ ೪) ಕೊಳಲು, ವಾಸುಗಿ, ನಾಗಸರ, ಶಂಖ ಮೊದಲಾದವುಗಳಿಂದ ಹುಟ್ಟುವ ಶಬ್ದ. ೫) ವಚನ, ಗೀತರೂಪವಾದ ಶಬ್ದ. ಈ ಶಬ್ದಗಳನ್ನು ಪ್ರತ್ಯೇಕವಾಗಿ ಗ್ರಹಿಸುವ ಆನಂದವೇನಿದೆಯೋ ಅದು ಪ್ರಸಾದಲಿಂಗಕ್ಕೆ ಸಲ್ಲುವದೆಂದು ಗುರು ಬೋಧಿಸುತ್ತಾನೆ.

ಸಾಮಾನ್ಯ ಶಬ್ದವು ಪ್ರಸಾದಲಿಂಗಕ್ಕೆ ಸಲ್ಲುತ್ತಿದ್ದರೆ, ವಿಭಾಗಿಸಲ್ಪಡುವ ವಿವಿಧ ಶಬ್ದಗಳು ಪ್ರಸಾದಲಿಂಗದೊಳಗಿನ ಷದ್ವಿಧ ಲಿಂಗಗಳಿಗೆ ಸಮರ್ಪಣವಾಗುವಂತಾಗಬೇಕು. ಅರ್ಥಾತ್ ಸುಜ್ಞಾನದಿಂದ ವಿಭಿನ್ನ ಶಬ್ದಗಳನ್ನು ಗುರುತಿಸಿ ಆಯಾಲಿಂಗಕ್ಕೆ ಶಬ್ದ ಪ್ರಸಾದವನ್ನಾಗಿ ಸಮರ್ಪಿಸುವದು ಶರಣನ ಮಣಿಹವಾಗಿದೆ. ಪ್ರಸಾದಲಿಂಗವು ಶರಣನಿಂದ ಪೂಜೆಗೊಂಬುವಂಥಹದು. ಶರಣಸ್ಥಲಕ್ಕೆ ಏರಿ ನಿಂತವನು ನಿರ್ಭೇದ ಶಬ್ದವನ್ನು ಅರಿಯುತ್ತಾನೆ. ಅಂದರೆ ದೇಹಾವಸಾನದ, ಅರ್ಥಾತ್ ಅಂತಿಮಾವವಸ್ಥೆಯ ಸಾಗರಘೋಷದಂತಹ ಶಬ್ದವನ್ನು ಸಹ ತಿಳಿಯಲು ಸಮರ್ಥನಾಗುತ್ತಾನೆಂದು ಹೇಳಬಹುದು. ಈ ಶರಣನು ತನ್ನ ಶರೀರಾವಸಾನದ ಸೂಚನೆಯನ್ನು ತಿಳಿದು ಕೊಳ್ಳುವನು. ಅಂತೆಯೇ ‘ಶರಣನ ಗುಣ ಮರಣದಲ್ಲಿ ಕಾಣು” ಎಂದು ಅನುಭವಿಗಳು ನುಡಿದುದುಂಟು.

ಚನ್ನ ಬಸವಣ್ಣನವರ ಪ್ರಸಾದಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣ ಕೆಳಗಿನಂತಿದೆ. ”ತಾಳ-ಕಂಸಾಳವಿಡಿದು ಹುಟ್ಟಿದ ಶಬ್ದವನರಿವುದು ಆಚಾರಲಿಂಗದಲ್ಲಿ ,ತಂತಿವಿಡಿದು ಹುಟ್ಟಿದ ಶಬ್ದವನರಿವುದು ಗುರುಲಿಂಗದಲ್ಲಿ; ಕುಡುಹುವಿಡಿದು ಹುಟ್ಟಿದ ಶಬ್ದವನರಿವುದು ಶಿವಲಿಂಗದಲ್ಲಿ; ಕೊಳಲು, ವಾಸುಗಿ, ನಾಗಸರ; ಶಂಖದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಜಂಗಮಲಿಂಗದಲ್ಲಿ: ವಚನಗೀತದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಪ್ರಸಾದಲಿಂಗದಲ್ಲಿ ; ಇಂತಿವೆಲ್ಲದರಲ್ಲಿಯ ಹುಟ್ಟಿದ ಶಬ್ದವನರಿವುದು ಮಹಾಲಿಂಗದಲ್ಲಿ”

ಈ ರೀತಿಯಾಗಿ ಹುಟ್ಟಿದ ಶಬ್ದಗಳನ್ನು ಪ್ರಸಾದಲಿಂಗದೊಳಗಿನ ಆಚಾರಾದಿ ಲಿಂಗದಲ್ಲಿ ಮನನಮಾಡಿಕೊಳ್ಳಬೇಕು. ಶಬ್ದ ಪ್ರಸಾದವನ್ನು ಆಯಾಲಿಂಗಗಳಿಗೆ ಸಮರ್ಪಿಸುವ ಸಾವಧಾನತೆಯನ್ನರಿಯಬೇಕು. ಶಬ್ದವು ನಿಃಶಬ್ದವಾಗಿ ಮಂತ್ರವಾಗ ಬೇಕು. ಆಗ ಸದಾಕಾಲವೂ ಕಿವಿಯಲ್ಲಿ ಪ್ರಸಾದಲಿಂಗದ ಸಾಕ್ಷಾತ್ಕಾರವಾಗುವದು. ಗುರುವೆ ! ಎನ್ನ ಶ್ರೋತ್ರವನ್ನು ಪ್ರಸಾದಲಿಂಗವನ್ನಾಗಿಸುವಂತೆ ಕರುಣಿಸು.

*ಹೃದಯೇಂದ್ರಿಯದಿ ಪಂಚ | ವಿಧ ವಿಷಯ ಸುಖ ಮಿಶ್ರ

ಮುದದಿ ಭೋಗಿಪುದು-ಸದಮಲ ಮಹಲಿಂಗವೆಂ

ಬುದ ಪೇಳ್ದ ಗುರುವೆ ಕೃಪೆಯಾಗು  ||೧೬೪||

ಐದು ಜ್ಞಾನೇಂದ್ರಿಯಗಳ ವಿಷಯಗಳ ತೃಪ್ತಿಯನ್ನು ಪಡೆಯುವದು ಹೃದಯೇಂದ್ರಿಯವು. ಇದು ಆತ್ಮತತ್ವದಿಂದ ಬಂದುದು. ಈ ಹೃದಯದಲ್ಲಿ ಮಹಾಲಿಂಗನ ವಾಸವಿರುವದು. ಘ್ರಾಣದೊಳಗಿನ ಆಚಾರಲಿಂಗಕ್ಕೆ ಗಂಧವು, ಜಿಹ್ವೆಯೊಳಗಿನ ಗುರುಲಿಂಗಕ್ಕೆ ರಸವು, ನೇತ್ರದೊಳಗಿನ ಶಿವಲಿಂಗಕ್ಕೆ ರೂಪವು ,ತ್ವಕ್ಕಿನೊಳಗಿನ ಜಂಗಮಲಿಂಗಕ್ಕೆ ಸ್ಪರ್ಶನವು, ಶ್ರೋತ್ರದೊಳಗಿನ ಪ್ರಸಾದಲಿಂಗಕ್ಕೆ ಶಬ್ದವು ಸಮರ್ಪಿಸಲ್ಪಡುತ್ತಿದ್ದರೆ ಈ ಪಂಚಜ್ಞಾನೇಂದ್ರಿಯಗಳೊಳಗಿನ ಪಂಚಲಿಂಗಗಳಿಗೆ ಸಲ್ಲುವ ಪಂಚಪ್ರಸಾದದ ಮಿಶ್ರತೃಪ್ತಿಯು ಹೃದಯದೊಳಗಣ ಮಹಾಲಿಂಗಕ್ಕೇನೆ ಆನಂದಗೊಳಿಸುವದು. ಇಂದ್ರಿಯಗಳು ಲಿಂಗಮುಖವಾಗಿ ವಿಷಯಗಳನ್ನು ಪ್ರಸಿದ ಗೊಳಿಸಿ ಭೋಗಿಸುವದರಿಂದ ಆತ್ಮನು ಆನಂದಗೊಳ್ಳುವನು. ಇಂಥ ಸುಜ್ಞಾನಿಯಾದ ಶಿವಭಕ್ತನು ಸದಾಕಾಲವೂ ಆನಂದತುಂದಿಲನಾಗಿರುವನು. ಅವನ ಪ್ರಾಣಲಿಂಗಕ್ಕೆ ಸಂತೃಪ್ತಿಯಾಗುವದು. ಪಂಚಜ್ಞಾನೇಂದ್ರಿಯಗಳಲ್ಲಿ ಪಂಚಲಿಂಗಗಳನ್ನು ಸ್ಮರಿಸಿ ಸುಜ್ಞಾನದಿಂದ ಪಂಚ ವಿಷಯಗಳನ್ನು ಪಂಚಪ್ರಸಾದಗಳನ್ನಾಗಿಸಿ ಸ್ವೀಕರಿಸುವದರಿಂದ ಯಾವಾಗಲೂ ಪವಿತ್ರವಾದ ಮಹಾಲಿಂಗವು ಆನಂದ ಹೊಂದುವದು. ಈ ತೆರನಾಗಿ ಭೋಗಿಸುವ ಕಲೆಯನ್ನು ಕರಗತಮಾಡಿಕೊಂಡರೆ ವಿಷಯಗಳ ಪೂರ್ವಾಶ್ರಯವು ಅಳಿಯುವದು. ಅಲ್ಲದೆ ಜ್ಞಾನೇಂದ್ರಿಯಗಳ ಪ್ರಾಕೃತಿಕ ಧರ್ಮವೂ ಬಯಲಾಗಿ ಲಿಂಗಸಂಬಂಧವನ್ನು ಪಡೆಯಬಲ್ಲವು. ಆಗ ಲಿಂಗಭಕ್ತನು ಪ್ರಸಾದಕಾಯನಾಗಿ ಪ್ರಸನ್ನಚಿತ್ತನಾಗುವದರಲ್ಲಿ ಸಂಶಯವಿಲ್ಲವೆಂದು ಗುರುನಾಥನು ಉಪದೇಶಿಸುತ್ತಾನೆ.

ಮಿಶ್ರಾರ್ಪಣದಲ್ಲಿ ಮಹಾಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣವನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗಂಧದ ತೃಪ್ತಿಯನರಿಯುವದು ಆಚಾರಲಿಂಗದಲ್ಲಿ, ರಸದತೃಪ್ತಿಯನರಿವುದು ಗುರುಲಿಂಗದಲ್ಲಿ; ರೂಪಿನ ತೃಪ್ತಿಯನರಿವುದು ಶಿವಲಿಂಗದಲ್ಲಿ; ಸ್ಪರ್ಶನತೃಪ್ತಿಯನರಿವುದು ಜಂಗಮಲಿಂಗದಲ್ಲಿ, ಶಬ್ದದ ತೃಪ್ತಿಯನರಿವುದು ಪ್ರಸಾದಲಿಂಗದಲ್ಲಿ, ಇವು ಎಲ್ಲರಲ್ಲಿಯ ತೃಪ್ತಿಯನರಿವುದು ಮಹಾಲಿಂಗದಲ್ಲಿ’ ಮಹಾಲಿಂಗದೊಳಗಿನ ಆಚಾರ ಲಿಂಗವು ಗಂಧಪ್ರಸಾದದ ತೃಪ್ತಿಯನ್ನು, ಗುರುಲಿಂಗವು ರಸಪ್ರಸಾದದ ತೃಪ್ತಿಯನ್ನು, ಶಿವಲಿಂಗವು ರೂಪುಪ್ರಸಾದ ತೃಪ್ತಿಯನ್ನು, ಜಂಗಮಲಿಂಗವು ಸ್ಪರ್ಶಪ್ರಸಾದ ತೃಪ್ತಿಯನ್ನು, ಪ್ರಸಾದಲಿಂಗವು ಶಬ್ದಪ್ರಸಾದ ತೃಪ್ತಿಯನ್ನು ಅನುಭವಿಸುತ್ತವೆ. ಇವೆಲ್ಲವುಗಳ ಸಂತೃಪ್ತಿಯು ಮಹಾಲಿಂಗದೊಳಗಿನ ಮಹಾಲಿಂಗಕ್ಕೆ ಸಲ್ಲುವದು. ಓ ಗುರುವೆ ಇಂಥ ಮಹದಾನಂದವನ್ನು ಹೊಂದುವ ಸೌಭಾಗ್ಯವನ್ನು ಸಮನಿಸುವಂತೆ ಹರಸು

ಜ.ಚ.ನಿ

 

ಶಿಲ್ಪಿಗಳಲ್ಲಿ ಶಿಲಾಶಿಲ್ಪಿಯೆ ಪ್ರಸಿದ್ದ. ಈತನು ಜಾತಿಯ ಶಿಲೆಯನ್ನು ತೆಗೆದುಕೊಂಡು ತನ್ನ ಅಂತಸ್ಥವಾದ ಕಲೆಯನ್ನು ಅದರಲ್ಲಿರಿಸಿ ಅದನ್ನು ಕಲಾಮೂರ್ತಿಯನ್ನಾಗಿ ಮಾಡಬಲ್ಲನು, ಮಾಡುತ್ತಾನೆ.

ಕ್ರಿಯಾಶಿಲ್ಪಿಯಾದ ಕುಮಾರಯೋಗಿಯು ಅನೇಕ ಶಿಲಾವರ್ಗದ ಮನುಷ್ಯರನ್ನು ಶಿಷ್ಯರನ್ನಾಗಿ ಪರಿಗ್ರಹಿಸಿದ ಕಡೆದು ಕಡೆದು ಮೂರ್ತಿಗಳನ್ನಾಗಿ ಮಾಡಿದನು. ಶಿಲಾಶಿಲ್ಪಿಗಿಂತಲು ಕ್ರಿಯಾಶಿಲ್ಪಿಯ ಕೌಶಲ್ಯ ಹೆಚ್ಚಿನದು; ಕಷ್ಟ ಹೆಚ್ಚಿನದು, ಶಿಲಾಶಿಲ್ಪಿಗೆ ಶಿಲೆಯು ವಶಂಗತವಾಗಿರುತ್ತದೆ. ಅದರಂತೆ ಕ್ರಿಯಾಶಿಲ್ಪಿಗೆ ಶಿಲಾವರ್ಗದ ಮನುಷ್ಯರ ಮನಸ್ಸು ವಶವರ್ತಿಯಾಗುವುದು ತೀರ ಕಷ್ಟದ ಮಾತು. ಕ್ರಿಯಾಶಿಲ್ಪಿಯು ತಾನೊಂದು ನೆನೆದರೆ ಶಿಷ್ಯನು ಮತ್ತೊಂದನ್ನು ನೆನೆಯುತ್ತಿರುತ್ತಾನೆ. ಅಂಥವರ ಮನಸ್ಸನ್ನು ಪರಿಪಾಲಿಸುವುದೆ ಪರಮ ಸಾಹಸದ ಕೆಲಸ, ಶಿಲಾಶಿಲ್ಪಿಯ ಉಳಿಯ ಹೊಡೆತ ಶಿಲೆಯಲ್ಲಿ ನೇರವಾಗಿ ಮೂಡುತ್ತದೆ. ಕ್ರಿಯಾಶಿಲ್ಪಿಯ ಹಿತನುಡಿಯ ಪರಿಣಾಮ ಶಿಷ್ಯನ ಮನಸ್ಸಿನ ಮೇಲೆ ಒಮ್ಮಿಗೆ ಮೂಡಲರಿಯದು.

ಶಿಲಾವರ್ಗದ ಮನುಷ್ಯರನ್ನು ಮಾನವತ್ವದ ಮಟ್ಟಕ್ಕೆ ತಂದು  ಮೂರ್ತಿವಂತರನ್ನಾಗಿ ಮಾಡುವುದು ಇದೂ ಒಂದು ಶಿಲ್ಪಕಲೆ. ದುಸ್ವಭಾವಗಳನ್ನು ದೂರೀಕರಿಸಿ ಸುಸ್ವಭಾವ-ಸ್ವಾನುಭಾವಗಳನ್ನು ಬೋಧಿಸಿ ಶಾಂತಿ-ಸೌಹಾರ್ದ್ರ ಕಳೆಗಳನ್ನು ತುಂಬಿ ತೋರುವಂತೆ ಎಸಗುವುದು ಒಂದು ಸಜೀವ ಸೋಜ್ವಲ ಶಿಲ್ಪಕಲೆ; ಪ್ರವಾಹಿ ಕಲೆ. ಇದರಲ್ಲಿ ಹಸ್ತ ನೈಪುಣ್ಯಕ್ಕಿಂತ ಭಾವ ನೈಪುಣ್ಯ ಪ್ರಧಾನವಾದುದು; ಪ್ರಯುಕ್ತವಾದುದು.

ಶಿಲಾಶಿಲ್ಪಿಯು ಬಹಿರಂಗಗಳನ್ನು ನಿರ್ಮಿಸಬಲ್ಲನು. ಮಾನವೋನ್ನತಿ ಗೈಯುವ ಶಿಷ್ಟ ಶಿಲ್ಪಿಯು ಅಂತರಂಗವನ್ನು ಅಲಂಕರಿಸಬಲ್ಲನು ; ತಿದ್ದಿ ಶುದ್ಧಗೊಳಿಸಬಲ್ಲನು. ಎರಡನೆಯದಾಗಿ ವಸನಾಭರಣಗಳನ್ನು ಉಡಿಸಿ ತೊಡಿಸುವುದರಲ್ಲಿ ಶಿಲಾಶಿಲ್ಪಿಯ ನೈಪುಣ್ಯವಿದ್ದರೆ, ಗುಣಾಭರಣಗಳನ್ನು ತೊಡಿಸುವುದರಲ್ಲಿ ಶಿಷ್ಟಶಿಲ್ಪಿಯ ಪುಣ್ಯಪ್ರಭೆ ಕಾರಣವಾಗಿರುತ್ತದೆ. ಉಡಿಗೆಯಿಲ್ಲದೆ ಬರೀತೊಡಿಗೆಗಳಿಂದ ಅಲಂಕರಿಸಿದ ಶಿಲ್ಪಕಲೆಗಳಿಗೇನು ಕೊರತೆಯಿಲ್ಲ. ಬೇಲೂರು, ಹಳೆಬೀಡುಗಳನ್ನು ನೋಡಿದವರಿಗೆ ಬೇರೆ ನಿದರ್ಶನಬೇಕಿಲ್ಲ. ಈ ಸಂವಿಧಾನವು ಶಿಷ್ಟಶಿಲ್ಪಿಯ ಕಲೆಗೆ ಸಾದೃಶ್ಯವಾಗಿದೆ;  ಸಂಗ್ರಾಹ್ಯವಾಗಿದೆ. ಏಕೆಂದರೆ ಅಂತರಂಗದ ಆತ್ಮನಿಗೆ ಗುಣಾಭರಣದ ವಿನಹ ವಸನಾಭರಣದ ಹಂಗೆಲ್ಲಿ, ಏತಕ್ಕೆ ?

ಶಿಲಾಶಿಲ್ಪಿಯದು ಜಡವಾದ ಕಲೆ, ಕ್ರಿಯಾಶಿಲ್ಪಿಯದು ಅಜಡವಾದ ಕಲೆ. ಶಿಲಾಶಿಲ್ಪಿಯು ಶಿಲೆಯಲ್ಲಿ ಬರೀ ಲಾವಣ್ಯವನ್ನು ಕುದುರಿಸುತ್ತಾನೆ. ಶಿಷ್ಟಶಿಲ್ಪಿಯು ಮಾನವನಲ್ಲಿ ಪುಣ್ಯಲಾವಣ್ಯವನ್ನು ಕೆತ್ತುತ್ತಾನೆ. ಶಿಲಾಶಿಲ್ಪಿಯ ಕಲೆ ಕಾಲಕ್ಕೊಳಗಾಗುತ್ತದೆ. ಕ್ರಿಯಾಶಿಲ್ಪಿಯ ಕಲೆ ಕಾಲಾತೀತವಾಗಿರುತ್ತದೆ.

ಕುಮಾರೇಶನ ಕ್ರಿಯಾಶಕ್ತಿನಿಶಿತವಾದುದು; ನಿತಾಂತವಾದುದು ಅದುದರಿಂದಲೆ ಯಾರಿಂದಲು ಸುಧಾರಿಸಲು ಶಕ್ಯವಿಲ್ಲದ ಅನೇಕರು ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕು ಮುದ್ದಾದ ಮೂರ್ತಿವಂತರಾದರು; ಕೊನೆಯಿಲ್ಲದ ಕೀರ್ತಿವಂತರಾದರು.

ಸರಿಯಾಗಿ ಓದು ಬಾರದವರು ಅವರ ಕೈಯಲ್ಲಿ ಶ್ರೇಷ್ಟ ಶಿವಾನುಭವಿಗಳಾದರು. ಬರೆಯಬಾರದವರು ಪ್ರಸಿದ್ಧ ಲೇಖಕರಾದರು. ಚನ್ನಾಗಿ ಮಾತನಾಡಲು ಬಾರದವರು ವಾಗ್ಮಿಗಳಾದರು; ವ್ಯಾಖ್ಯಾತೃಗಳಾದರು; ಕೀರ್ತನ ಕಲಾವಿದರಾದರು. ಸಂಗೀತದ ಗಂಧವನರಿಯದವರು ‘ಸಂಗೀತ ಸಾಗರ’ವಾದರು. ಸಂಸಾರಿಗಳಾಗಬೇಕಾದವರು ಸನ್ಯಾಸಿಗಳಾದರು. ಪಶುಗಾಯಿಗಳಾಗಬೇಕಾದವರು ಪಾಠಶಾಲಾಧ್ಯಾಪಕರಾದರು. ರಾಗಿಗಳು ವಿರಾಗಿಗಳಾದರು. ಕೃಪಣರು ತ್ಯಾಗಿಗಳಾದರು.  ರೋಗಿಗಳು ನಿರೋಗಿಗಳಾದರು. ಭವಿಗಳು ಭಕ್ತರಾದರು. ಗುಣಹೀನರು ಗುಣಿಗಳಾದರು.

ಸುಳಿವು ಸರಿಯಾಗಿಲ್ಲದ ಶಿಲೆಗಳು ಶಿಲ್ಪಿಯ ಕೈಗೆ ಸೇರಿದರು ಮೂರ್ತಿಗಳಾಗುವ ಭಾಗ್ಯವಿಲ್ಲದೆ ಒಡೆದು ಹೋಗುವಂತೆ, ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕಿದ ಕೆಲವರು ಕರ್ಮಬಲದಿಂದ ಕಲಾಹೀನರಾದರು. ಕನಿಷ್ಠ ಬಾಳು ಬಾಳಿದರು. ಯಾವುದನ್ನು ಪುಣ್ಯ ಬೇಕು; ಭಾಗ್ಯ ಬೇಕು.

ಅಂಥವರ ವಿಷಯದಲ್ಲಿ ಸ್ವಾಮಿಗಳವರು ಒಮ್ಮೊಮ್ಮೆ ನೆನೆದು ಮನಸಾರೆ ಮರುಗುತ್ತಿದ್ದರು. ಮತ್ತೊಮ್ಮೆ “ಸಗಣಿಯ ಬೆನಕಂಗೆ ಸಂಪಿಗೆಯ ಅರಳಲ್ಲಿ ಪೂಜಿಸಿದರೆ ರಂಜನೆ ಅಹುದಲ್ಲದೆ ಅದರ ಗಂಜಳ ಬಿಡದಣ್ಣ… ಎಂಬ ಬಸವೇಶ್ವರನ ವಚನವನ್ನು ನೆನೆದು ಸುಮ್ಮನಾಗುತ್ತಿದ್ದರು; ನೆಮ್ಮದಿಗೊಳ್ಳುತ್ತಿದ್ದರು.