“ಲಿಂಗಾಯತ ಧರ್ಮ ಈಗ ವೀರಶೈವ”?
(ಡಾ. ವೀರಣ್ಣ ರಾಜೂರ ಅವರ ಸಾಕ್ಷ್ಯವಿಲ್ಲದ ಆರೋಪಗಳ ವಿರುದ್ಧ ಒಂದು ಪ್ರತಿಕ್ರಿಯೆ)
——————————-
ಶ್ರೀಕಂಠ ಚೌಕೀಮಠ
ಅಧ್ಯಕ್ಷ
ಅಖಿಲಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ ನವದೆಹಲಿ
————————–

ಪ್ರಧಾನ ದಿನಪತ್ರಿಕೆಯೊಂದರಲ್ಲಿ ದಿನಾಂಕ 16–12–2025 ರಂದು ಪ್ರಕಟವಾದ ವರದಿಯೊಂದು ಓದುಗರ ಗಮನವನ್ನು ಅನಿವಾರ್ಯವಾಗಿ ಸೆಳೆದಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವಿದ್ವಾಂಸರೆಂದು ಗುರುತಿಸಲ್ಪಟ್ಟಿರುವ ಡಾ. ವೀರಣ್ಣ ರಾಜೂರ ಅವರ *“ಲಿಂಗಾಯತ ಧರ್ಮ ಈಗ ವೀರಶೈವ”* ಎಂಬ ಹೇಳಿಕೆಯನ್ನು ಶೀರ್ಷಿಕೆಯಾಗಿ ಪ್ರಕಟಿಸಿರುವುದು ಕೇವಲ ಆಶ್ಚರ್ಯವನ್ನಷ್ಟೇ ಅಲ್ಲ, ಗಂಭೀರವಾದ ವಿಷಾದವನ್ನೂ ಉಂಟುಮಾಡುತ್ತದೆ. ಕಾರಣ, ಈ ಹೇಳಿಕೆ ಒಂದು ವೈಯಕ್ತಿಕ ಅಭಿಪ್ರಾಯದ ಮಟ್ಟಕ್ಕೆ ಸೀಮಿತವಾಗದೆ, ವೀರಶೈವ–ಲಿಂಗಾಯತ ಪರಂಪರೆಯ ಕುರಿತು ಈಗಾಗಲೇ ಸುದೀರ್ಘ ಕಾಲದಿಂದ ನಡೆದಿರುವ ತಾತ್ವಿಕ ಚರ್ಚೆಯನ್ನು ಮತ್ತೊಮ್ಮೆ ಅನಗತ್ಯ ಗೊಂದಲದ ದಿಕ್ಕಿಗೆ ತಳ್ಳುವ ಪ್ರಯತ್ನವಾಗಿದೆ.
ವೃತ್ತಿಜೀವನದ ಅವಧಿಯಲ್ಲಿ ವೀರಶೈವ ಪರಂಪರೆಯನ್ನು ವೈಭವೀಕರಿಸಿ, ನಿವೃತ್ತಿಯ ನಂತರ ಅದೇ ಪರಂಪರೆಯನ್ನು ಸಂಶಯದ ಗೂಡಿನಲ್ಲಿ ನಿಲ್ಲಿಸುವ ಧೋರಣೆ ಕೇವಲ ವ್ಯಕ್ತಿಗತ ವೈರುಧ್ಯವಲ್ಲ; ಅದು ಸಮಾಜದ ಸಮಗ್ರ ಬೌದ್ಧಿಕ ವಾತಾವರಣದ ಮೇಲೆಯೇ ಪರಿಣಾಮ ಬೀರುವ ಗಂಭೀರ ವಿಚಾರವಾಗಿದೆ.
ವೀರಶೈವವನ್ನು ವ್ಯಂಗ್ಯಗೊಳಿಸುವುದು ಅಥವಾ ಅನುಮಾನಾಸ್ಪದವಾಗಿ ನಿರೂಪಿಸುವುದು ಬೌದ್ಧಿಕ ಕ್ರೀಡೆಯಾಗಬಾರದು; ಅದಕ್ಕೆ ದೃಢವಾದ ಸಾಕ್ಷ್ಯಾಧಾರ, ವಿಧಾನಬದ್ಧತೆ ಮತ್ತು ಸಂಶೋಧನಾ ಪ್ರಾಮಾಣಿಕತೆ ಅನಿವಾರ್ಯ. ಇಂತಹ ಹೇಳಿಕೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು ಇಂದಿನ ದಿನಮಾನಗಳಲ್ಲಿ ಮತ್ತಷ್ಟು ಅಗತ್ಯವಾಗಿದೆ, ಏಕೆಂದರೆ ನಾವು ನಿರಂತರವಾಗಿ ಮನಸ್ಸುಗಳನ್ನು ವಿಭಜಿಸುವ ತಂತ್ರಗಾರಿಕೆಗಳಿಗೆ ಬಲಿಯಾಗುತ್ತಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಂಥ ಕೃತ್ಯಗಳನ್ನು ಕಡೆಗಣಿಸುವುದೂ, ಉದಾಸೀನಗೊಳ್ಳುವುದೂ ಬೌದ್ಧಿಕ ಜವಾಬ್ದಾರಿಯ ತ್ಯಾಗವಾಗುತ್ತದೆ.
ಈ ಲೇಖನದಲ್ಲಿ ಡಾ. ವೀರಣ್ಣ ರಾಜೂರ ಅವರ ಹೇಳಿಕೆಗಳಲ್ಲಿ ವರದಿಯಲ್ಲಿ ಉಲ್ಲೇಖಗೊಂಡಿರುವ ಮೂರು ಪ್ರಮುಖ ಅಂಶಗಳನ್ನು ಕ್ರಮಬದ್ಧವಾಗಿ ಅವಲೋಕಿಸಿರುವೆ.
- ಲಿಂಗಾಯತ ಧರ್ಮದ ಪರಿಕಲ್ಪನೆ ವೀರಶೈವವಾಗಿ ರೂಪುಗೊಂಡಿರುವ ಪ್ರಶ್ನೆ;
- ಬಸವಾದಿ ಶರಣರ ಪುರಾಣೀಕರಣದ ವಿಚಾರ; ಹಾಗೂ
- ವಚನಗಳು ತಾತ್ವಿಕ ಬಂಧನಕ್ಕೆ ಒಳಪಟ್ಟಿವೆ ಎಂಬ ವಾದ
ಈ ಮೂರೂ ಅಂಶಗಳನ್ನು ತಾತ್ವಿಕ, ಐತಿಹಾಸಿಕ ಮತ್ತು ಸಂಶೋಧನಾ ದೃಷ್ಟಿಕೋನದಿಂದ ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ.
- ಲಿಂಗಾಯತ–ವೀರಶೈವ ಪರಿಕಲ್ಪನೆಯ ತಾತ್ವಿಕ ನೆಲೆ
“ಬಸವಾದಿ ಶರಣರು ರೂಪಿಸಿದ ಲಿಂಗಾಯತ ಧರ್ಮದ ಪರಿಕಲ್ಪನೆ ಈಗ ವೀರಶೈವವಾಗಿ ರೂಪುಗೊಂಡಿದೆ” ಎಂಬ ಹೇಳಿಕೆ ಹೊಸದಲ್ಲ. ಲಿಂಗಾಯತ ಪರಂಪರೆಯ ತಾತ್ವಿಕ ನೆಲೆ ವೀರಶೈವ ದರ್ಶನದೊಳಗೆಯೇ ರೂಪುಗೊಂಡಿದೆ ಎಂಬ ವಾದವು ಕೇವಲ ಸಂಪ್ರದಾಯವಾದಿಗಳ ಅಭಿಪ್ರಾಯವಲ್ಲ.
ಸ್ವತಃ ಡಾ. ವೀರಣ್ಣ ರಾಜೂರ ಅವರೇ ತಮ್ಮ ಸಂಪಾದಿತ ಗ್ರಂಥ ವೀರಶೈವದರ್ಶನ : ತೌಲನಿಕ ವಿವೇಚನೆ (ಕ್ರಿ.ಶ. 2000) ಯ ಮುನ್ನುಡಿಯಲ್ಲಿ ಬಸವಣ್ಣನವರನ್ನು “ವೀರಶೈವ ನಿರ್ಣಯ ಪರಮಾವತಾರ” ಎಂದು ಗುರುತಿಸಿರುವುದು ಗಮನಾರ್ಹ. ಅಲ್ಲದೆ, ಬಸವತತ್ತ್ವಗಳನ್ನು ಕರ್ನಾಟಕದಿಂದ ಭಾರತಕ್ಕೆ ಹಾಗೂ ವಿಶ್ವಮಟ್ಟಕ್ಕೆ ವಿಸ್ತರಿಸುವ ಉನ್ನತ ಧ್ಯೇಯದರ್ಶನವನ್ನು ಬಸವೇಶ್ವರ ಪರಂಪರೆ ಹೊಂದಿದೆ ಎಂದು ಅವರು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.
ಇದಕ್ಕಿಂತಲೂ ಹೆಚ್ಚಾಗಿ, 2008ರಲ್ಲಿ ಕ.ವಿ.ವಿ. ಧಾರವಾಡದಲ್ಲಿ ನಡೆದ “ವೀರಶೈವ ಆಕರಗಳು”ಎಂಬ ರಾಷ್ಟ್ರಮಟ್ಟದ ವಿಚಾರ ಸಂಕೀರಣದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದ ಡಾ. ವೀರಣ್ಣ ರಾಜೂರ ಅವರು “ತಾರಾವಳಿ, ಶೂನ್ಯ ಸಂಪಾದನೆಗಳಲ್ಲಿ ವೀರಶೈವ” ಎಂಬ ವಿಷಯದ ಕುರಿತು ಬರೆಯುತ್ತ, “ಒಟ್ಟು ತಾರಾವಳಿಗಳಲ್ಲಿ ಬರುವ ವೀರಶೈವ ಉಲ್ಲೇಖಗಳನ್ನು ಗಮನಿಸಿದಾಗ ಕಂಡುಬರುವ ಸಂಗತಿ ಏನೆಂದರೆ, ಆಗಮೋಕ್ತ ವೀರಶೈವ ತತ್ವ ಮತ್ತು ವಚನೋಕ್ತ ಶರಣ ತತ್ವಗಳೆರಡೂ ಇಲ್ಲಿ ಸಮ್ಮಿಳಿತಗೊಂಡಿವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅದೇ ಸಂದರ್ಭದಲ್ಲಿ ಅವರು, “ವೀರಶೈವವು ಶೈವ ಧರ್ಮದ ಒಂದು ಪ್ರಭೇದವಾಗಿ ಆಗಮಗಳ ಕಾಲದಿಂದಲೂ ಪ್ರಚಲಿತವಾದ ಭಾರತದ ಪ್ರಮುಖ ಧರ್ಮಗಳಲ್ಲಿ ಒಂದು. ಅದು ಕಾಲದಿಂದ ಕಾಲಕ್ಕೆ ಅನೇಕ ಸ್ಥಿತ್ಯಂತರಗಳನ್ನು ತಾಳುತ್ತ, ಹಲವಾರು ನೂತನ ಅವಿಷ್ಕಾರಗಳಿಗೆ ಒಳಗಾಗುತ್ತ ಬಂದಿದೆ. ಇದಕ್ಕೆ ತನ್ನದೇ ಆದ ಸಿದ್ಧಾಂತ ಮತ್ತು ವಿಶಿಷ್ಟ ತತ್ವ ಪರಿಭಾಷೆಗಳು ರೂಪಿತವಾಗಿವೆ” ಎಂದು ಹೇಳಿರುವುದೂ ವಿಶೇಷ ಗಮನಾರ್ಹವಾಗಿದೆ.
ಇಂತಹ ಪ್ರಾಮಾಣಿಕ ಹಾಗೂ ಸ್ಪಷ್ಟ ಹೇಳಿಕೆಗಳು ಸ್ವತಃ ಅವರ ಬರಹಗಳು ಮತ್ತು ಸಂಶೋಧನಾ ಪ್ರಬಂಧಗಳಲ್ಲಿ ಲಭ್ಯವಿರುವ ಸಂದರ್ಭದಲ್ಲಿ, ಅದೇ ವಿದ್ವಾಂಸರು ನಿವೃತ್ತಿಯ ನಂತರ ವಿರುದ್ಧಾರ್ಥದ ಹೇಳಿಕೆಗಳನ್ನು ನೀಡುವುದು ಕೇವಲ ತಾತ್ವಿಕ ಗೊಂದಲವನ್ನೇ ಅಲ್ಲ, ಸಂಶೋಧನಾ ಪ್ರಾಮಾಣಿಕತೆಯ ಪ್ರಶ್ನೆಯನ್ನೂ ಎತ್ತುತ್ತದೆ.
ಸಂಶೋಧನೆಯಲ್ಲಿ ನಿಲುವು ಬದಲಾಗುವುದು ಅಸಾಧ್ಯವಲ್ಲ; ಆದರೆ ಆ ಬದಲಾವಣೆ ಹೊಸ ಸಾಕ್ಷ್ಯಗಳು, ಪಠ್ಯವಿಮರ್ಶಾತ್ಮಕ ಅಧ್ಯಯನ ಮತ್ತು ವಿಧಾನಾತ್ಮಕ ವಿಶ್ಲೇಷಣೆಯ ಆಧಾರದ ಮೇಲೆ ಆಗಬೇಕೇ ಹೊರತು ವ್ಯಂಗ್ಯಮಯ ಅಥವಾ ಸಂಶಯಾಸ್ಪದ ಘೋಷಣೆಗಳ ಮೂಲಕ ಅಲ್ಲ.
- ಬಸವಾದಿ ಶರಣರ ಪುರಾಣೀಕರಣ: ಐತಿಹಾಸಿಕ ಅನಿವಾರ್ಯತೆ ಮತ್ತು ಮಿತಿಗಳು
“ಬಸವಾದಿ ಶರಣರನ್ನು ಪುರಾಣ ಪುರುಷರನ್ನಾಗಿಸಲಾಗಿದೆ” ಎಂಬ ಡಾ. ವೀರಣ್ಣ ರಾಜೂರ ಅವರ ವಾದವನ್ನು ಐತಿಹಾಸಿಕ ಸಂದರ್ಭದಲ್ಲಿಟ್ಟು ಅವಲೋಕಿಸುವ ಅಗತ್ಯವಿದೆ. ಬಸವಣ್ಣನವರ ಸಮಕಾಲಿಕರಲ್ಲಿ ಯಾರೂ ಅವರ ಜೀವನಚರಿತ್ರೆಯನ್ನು ಬರೆದಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ. ಅವರು ಕಾಲವಾದ ಅನೇಕ ವರ್ಷಗಳ ನಂತರ ವೀರಶೈವ ಕವಿಗಳು ಬಸವಣ್ಣನವರ ಚರಿತ್ರೆಯನ್ನು ಪುರಾಣರೂಪದಲ್ಲಿ ದಾಖಲಿಸಿದರು. ಇದನ್ನು ಇತಿಹಾಸದ ವಿಕೃತಿಯೆಂದು ಕರೆಯಲು ಸಾಧ್ಯವಿಲ್ಲ; ಪೂರ್ವಕಾಲೀನ ಸಮಾಜಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರಕ್ರಿಯೆಯೇ ಇದಾಗಿದೆ.
ಪುರಾಣಗಳಲ್ಲಿ ನಿಜವಾದ ಘಟನೆಗಳು ಮತ್ತು ಕಲ್ಪಿತ ಅಂಶಗಳು ಬೆರೆತು ಹೋಗಿರುವುದು ಸಹಜ. ಕವಿಗಳು ಕಥಾನಾಯಕನ ಮಹತ್ವವನ್ನು ಉಜ್ಜಲಗೊಳಿಸುವ ಉದ್ದೇಶದಿಂದ ಪವಾಡಾತ್ಮಕ ಅಂಶಗಳನ್ನು ಸೇರಿಸಿಕೊಂಡಿರಬಹುದು. ಈ ಕಾರಣದಿಂದ ಪುರಾಣಗಳನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ; ಹಾಗೆಯೇ ಅವುಗಳನ್ನು ಅಕ್ಷರಶಃ ಇತಿಹಾಸವೆಂದು ಸ್ವೀಕರಿಸುವುದೂ ಶಿಕ್ಷಣ, ಸಂಶೋಧನೆ ಮತ್ತು ಬೌದ್ಧಿಕ ಚರ್ಚೆಗಳ ದೃಷ್ಟಿಯಿಂದ ಯುಕ್ತವಲ್ಲ. ಆದ್ದರಿಂದ ಪುರಾಣಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಓದಿ, ಇತರ ಮೂಲಗಳೊಂದಿಗೆ ಸಮನ್ವಯಗೊಳಿಸುವುದು ಅವಶ್ಯಕವಾಗುತ್ತದೆ.
ಇಂದಿನ ಅಧ್ಯಯನದಲ್ಲಿ ಬಸವಣ್ಣನವರ ಚರಿತ್ರೆಯನ್ನು ನಿರ್ಮಿಸಿಕೊಳ್ಳಲು ಮುಖ್ಯವಾಗಿ ಮೂರು ವಿಧದ ಮೂಲಗಳು ಲಭ್ಯವಿವೆ.
- ಬಸವಣ್ಣನವರ ಹಾಗೂ ಅವರ ಸಮಕಾಲಿಕ ಶರಣರ ವಚನಗಳು;
- ವೀರಶೈವ ಕಾವ್ಯ–ಪುರಾಣಗಳು; ಮತ್ತು
- ಬಸವಣ್ಣನವರ ಚರಿತ್ರೆ ಹಾಗೂ ವ್ಯಕ್ತಿತ್ವದ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಳಕು ಚೆಲ್ಲುವ ಶಾಸನಗಳು.
ಈ ದೃಷ್ಟಿಯಿಂದ ನೋಡಿದಾಗ, ಸಂಶೋಧಕರಿಂದ ಮಾನ್ಯತೆ ಪಡೆದ ಹದಿಮೂರು ಶಾಸನಗಳು ಬೆಳಕಿಗೆ ಬಂದಿರುವುದು ಮಹತ್ವದ ಸಂಗತಿಯಾಗಿದೆ. ಈ ಶಾಸನಗಳು ಬಸವಣ್ಣನವರ ವ್ಯಕ್ತಿತ್ವ, ಸಾಮಾಜಿಕ ಸ್ಥಾನಮಾನ ಮತ್ತು ಐತಿಹಾಸಿಕ ಅಸ್ತಿತ್ವವನ್ನು ದೃಢಪಡಿಸುವಲ್ಲಿ ಸಹಾಯಕವಾಗಿವೆ.
ಬಸವಣ್ಣನ ಹೆಸರನ್ನು ಅಥವಾ ಅವರ ಪರ್ಯಾಯ ನಾಮಗಳನ್ನು ಉಲ್ಲೇಖಿಸುವ ಶಾಸನಗಳು ಐತಿಹಾಸಿಕ ದೃಷ್ಟಿಯಿಂದ ಅತ್ಯಂತ ಮಹತ್ವವನ್ನು ಹೊಂದಿವೆ. ಸಂಶೋಧಕರಿಂದ ಮಾನ್ಯತೆ ಪಡೆದ, ಸರ್ವಸಮ್ಮತವಾದ ಇಂತಹ ಹನ್ನೊಂದು ಶಾಸನಗಳು ಲಭ್ಯವಿದ್ದು, ಅವುಗಳಲ್ಲಿ ಉಲ್ಲೇಖಿತ ವ್ಯಕ್ತಿಯ ಹೆಸರುಗಳು ಬಸವಣ್ಣನವರದ್ದೇ ಎಂಬುದರಲ್ಲಿ ವಿದ್ವಾಂಸರಲ್ಲಿ ಮೂಲಭೂತ ಭಿನ್ನಾಭಿಪ್ರಾಯವಿಲ್ಲ.
- ಕ್ರಿ.ಶ. 1259ರ ಹಿರಿಯೂರ ಶಾಸನದಲ್ಲಿ *ಬಸವಯ್ಯ* ಎಂಬ ಹೆಸರು ಕಾಣಿಸಿಕೊಳ್ಳುತ್ತದೆ.
- ಕ್ರಿ.ಶ. 1260ರ ಅರ್ಜುನವಾಡ ಶಾಸನದಲ್ಲಿ *ಬಸವರಾಜ* ಹಾಗೂ *ಸಂಗನಬಸವ* ಎಂಬ ಪರ್ಯಾಯ ನಾಮಗಳು ಉಲ್ಲೇಖಗೊಂಡಿವೆ.
- ಕ್ರಿ.ಶ. 1263ರ ಚೌಡದಾನಪುರದ ಎರಡು ಶಾಸನಗಳಲ್ಲಿ *ಸಂಗಮೇಶನ ಪುತ್ರ ಬಸವಯ್ಯ* ಹಾಗೂ *ಸಂಗನಬಸವ* ಎಂಬ ಹೆಸರುಗಳು ಕಾಣುತ್ತವೆ.
- ಕ್ರಿ.ಶ. 1279ರ ಕಲ್ಲೆದೇವರಪುರ ಶಾಸನದಲ್ಲಿ *ಬಸವರಾಜ* ಎಂಬ ಹೆಸರು ದೊರಕುತ್ತದೆ.
- ಕ್ರಿ.ಶ. 1280ರ ಮರಡಿಪುದ ಶಾಸನದಲ್ಲಿ *ಸಂಗನ ಬಸವಯ್ಯ* ಎಂಬ ಉಲ್ಲೇಖವಿದೆ.
- 14ನೇ ಶತಮಾನದ ಗುಡಿಹಾಳ ಶಾಸನದಲ್ಲಿ *ಬಸವರಾಜದೇವರು* ಎಂಬ ಹೆಸರು ಬರುತ್ತದೆ.
- ಕ್ರಿ.ಶ. 1660ರ ಆನಂದಪುರ ಮಠದ ತಾಮ್ರಶಾಸನದಲ್ಲಿ *ಬಸವೇಶ್ವರ* ಎಂಬ ಉಲ್ಲೇಖ ಕಂಡುಬರುತ್ತದೆ.
- ಕ್ರಿ.ಶ. 1686ರ ಜೋಡೀದಾಸೇನಹಳ್ಳಿ ಶಾಸನದಲ್ಲಿ *ಬಸವರಾಜೇಂದ್ರ* ಎಂಬ ಹೆಸರು ಉಲ್ಲೇಖಿತವಾಗಿದೆ.
- ಕ್ರಿ.ಶ. 1700ರ ಕಾನಕಾನಹಳ್ಳಿಯ ಎರಡು ತಾಮ್ರಶಾಸನಗಳಲ್ಲಿ *ಬಸವೇಶ್ವರಸಾಮುಲು* ಹಾಗೂ *ಕಲ್ಯಾಣದ ಬಸವಪ್ಪನವರು* ಎಂಬ ಹೆಸರುಗಳು ಕಾಣಿಸಿಕೊಳ್ಳುತ್ತವೆ.

ಈ ಎಲ್ಲಾ ಶಾಸನಗಳಲ್ಲಿ ಉಲ್ಲೇಖಿತ ವ್ಯಕ್ತಿ ಬಸವಣ್ಣನವರೇ ಎಂಬುದನ್ನು ಐತಿಹಾಸಿಕವಾಗಿ ನಿರ್ಧರಿಸಲು ನೆರವಾಗುವ ಅಂಶವೆಂದರೆ, ಇವುಗಳಲ್ಲಿ ಕೆಲವು ಶಾಸನಗಳು ವೀರಶೈವ ಕಾವ್ಯ–ಪುರಾಣಗಳ ರಚನೆಗಿಂತ ಪೂರ್ವದಲ್ಲಿ ಹಾಕಿಸಲ್ಪಟ್ಟಿರುವುದು. ವಿಶೇಷವಾಗಿ ಕ್ರಿ.ಶ. 1260ರ ಅರ್ಜುನವಾಡ ಶಾಸನ, ಕ್ರಿ.ಶ. 1259ರ ಹಿರಿಯೂರ ಶಾಸನ ಮತ್ತು ಕ್ರಿ.ಶ. 1263ರ ಚೌಡದಾನಪುರ ಶಾಸನಗಳು ಹರಿಹರ ಹಾಗೂ ಪಾಲ್ಕುರಿಕೆ ಸೋಮನಾಥರ ಕಾವ್ಯಗಳಿಗಿಂತ ಮುಂಚಿನವುಗಳಾಗಿವೆ. ಈ ಕಾರಣದಿಂದ, ಬಸವಣ್ಣನವರ ಇತಿವೃತ್ತ, ಶಿವಪಾರಮ್ಯದ ವಿವರ ಹಾಗೂ ಅವರ ಐತಿಹಾಸಿಕ ಅಸ್ತಿತ್ವವನ್ನು ಗುರುತಿಸುವಲ್ಲಿ ಈ ಶಾಸನಗಳು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುತ್ತವೆ.
ಹರಿಹರನು *ಬಸವರಾಜದೇವರ ರಗಳೆ* ಕೃತಿ ರೂಪದಲ್ಲಿ ಬಸವಣ್ಣನವರ ಚರಿತ್ರೆಯನ್ನು ನಿರೂಪಿಸುವುದಕ್ಕಿಂತಲೂ ಮುಂಚೆಯೇ, ಬಸವಣ್ಣನವರ ವೈಯಕ್ತಿಕ ಚರಿತ್ರೆ, ಜನ್ಮಸ್ಥಳ ಮತ್ತು ಕುಟುಂಬಪರ ಹಿನ್ನೆಲೆಯ ಕುರಿತು ಬೆಳಕು ಚೆಲ್ಲುವಲ್ಲಿ ಕ್ರಿ.ಶ. 1260ರ ಅರ್ಜುನವಾಡ ಶಾಸನವು ಮಹತ್ತರ ಪಾತ್ರವನ್ನು ವಹಿಸಿದೆ. ವಿಶೇಷವಾಗಿ, ಬಸವರಾಜದೇವರ ರಗಳೆಯಲ್ಲಿ ಕಾಣುವ ಬಸವಣ್ಣನವರ ತಂದೆಯ ಊರುಗಳ ಕುರಿತ ಸಂದೇಹವನ್ನು ನಿವಾರಿಸುವಲ್ಲಿ ಈ ಶಾಸನ ನಿರ್ಣಾಯಕ ಮಹತ್ವವನ್ನು ಹೊಂದಿದೆ. ಈ ಶಾಸನದಲ್ಲಿ ನಿರೂಪಿತವಾಗಿರುವ ಬಸವಣ್ಣನವರಿಗೆ ಸಂಬಂಧಿಸಿದ ಸಂಗತಿಗಳು ಕಾವ್ಯಾತ್ಮಕ ಮೂಲಗಳಿಗಿಂತ ಹೆಚ್ಚು ಪ್ರಾಚೀನವಾಗಿದ್ದು, ಐತಿಹಾಸಿಕವಾಗಿ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಹೊಂದಿವೆ.
(ಸೌಜನ್ಯ: “ಬಸವಣ್ಣನವರನ್ನು ಕುರಿತ ಅರ್ಜುನವಾಡ ಮತ್ತು ಇತರ ಶಾಸನಗಳು” – ಡಾ. ಸಿ. ನಾಗಭೂಷಣ).
ಈ ಎಲ್ಲ ಶಾಸನಗಳು ಬಸವಣ್ಣನವರ ಹೆಸರಿನ ಕುರಿತು ಹಾಗೂ ಅವರ ಮನೆತನಗಳ ಕುರಿತು ಕೆಲವೇ ಕೆಲವು ಸಾಲುಗಳ ಮಟ್ಟಿಗೆ ಐತಿಹಾಸಿಕ ಬೆಳಕು ಚೆಲ್ಲುತ್ತವೆಯೇ ಹೊರತು, ಬಸವಣ್ಣನವರ ಸಮಗ್ರ ಚರಿತ್ರೆಯನ್ನು ನಿರೂಪಿಸುವುದಿಲ್ಲ. ಶಾಸನಗಳು ಐತಿಹಾಸಿಕ ಅಸ್ತಿತ್ವವನ್ನು ದೃಢಪಡಿಸುವಲ್ಲಿ ಸಹಾಯಕವಾಗಿದ್ದರೂ, ಅವುಗಳಿಂದ ಪೂರ್ಣ ಜೀವನಚಿತ್ರಣವನ್ನು ನಿರೀಕ್ಷಿಸುವುದು ಯುಕ್ತಿಯುಕ್ತವಲ್ಲ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕಾಗುತ್ತದೆ.
ಆದರೆ ಕಳೆದ ಒಂಬೈನೂರು ವರ್ಷಗಳ ಅವಧಿಯಲ್ಲಿ ಕನ್ನಡದ ಸಾಂಸ್ಕೃತಿಕ ಲೋಕವು ಬಸವ, ಬಸವಣ್ಣ, ಬಸವರಾಜ, ಬಸವೇಶ್ವರ ಎಂಬ ನಾನಾ ರೂಪಗಳಲ್ಲಿ ಬಸವ ಪರಂಪರೆಯನ್ನು ನಿರಂತರವಾಗಿ ಎದುರುಗೊಳ್ಳುತ್ತಾ ಅದನ್ನು ಜೀವಂತವಾಗಿಟ್ಟುಕೊಂಡಿದೆ. ಹರಿಹರನ ರಗಳೆಗಳು, ವಚನಗಳ ಪುನರ್‌ದಾಖಲೀಕರಣ, ಶೂನ್ಯ ಸಂಪಾದನೆಗಳು, *ಬಸವಪುರಾಣ*, ಮಂಟೆಸ್ವಾಮಿ ಕಾವ್ಯ, ವಚನಗಳ ಸಂಗ್ರಹ–ಸಂಪಾದನೆ, ಕಂಪೆನಿ ನಾಟಕಗಳು, ಸಮಗ್ರ ವಚನ ಸಂಪುಟಗಳು, ವಚನಗಳ ವಿಶ್ಲೇಷಣೆ ಮತ್ತು ಜಿಜ್ಞಾಸೆಗಳು, ಹಾಗೆಯೇ ಇಂದಿನ ದಿನಮಾನಗಳಲ್ಲಿ ನಡೆಯುತ್ತಿರುವ ವೀರಶೈವ–ಲಿಂಗಾಯತ ಚರ್ಚೆಗಳು—ಈ ಎಲ್ಲವೂ ಬಸವಣ್ಣನವರನ್ನೂ ಅವರ ಸಮಕಾಲೀನ ಶರಣರನ್ನೂ ನಾವು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಸಾಂಸ್ಕೃತಿಕ ಪರಂಪರೆಯ ಜೀವಂತ ಸಾಕ್ಷಿಗಳಾಗಿವೆ. ಈ ದೀರ್ಘ ಮತ್ತು ಸಂಕೀರ್ಣ ಪರಂಪರೆಯ ಪಾತ್ರವನ್ನು ಡಾ. ವೀರಣ್ಣ ರಾಜೂರ ಅವರು ಮರೆಯಬಾರದು.
ವಚನಗಳು ಸ್ವಭಾವತಃ ಹೆಚ್ಚು ವಿಶ್ವಾಸಾರ್ಹವಾದ ಮೂಲಗಳಾಗಿದ್ದರೂ, ಅವು ಬಿಡಿಬಿಡಿಯಾಗಿ ಬಂದಿರುವುದರಿಂದ ಬಸವಣ್ಣನವರ ಸಂಪೂರ್ಣ ಜೀವನಚರಿತ್ರೆಯನ್ನು ನಿರೂಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಮತ್ತೊಂದೆಡೆ, ಪುರಾಣಗಳು ಸಂಪೂರ್ಣ ವಿಶ್ವಾಸಾರ್ಹವಲ್ಲವಾದರೂ, ಅವುಗಳನ್ನು ಸಂಪೂರ್ಣವಾಗಿ ನಿರಾಕರಿಸಿದರೆ ಐತಿಹಾಸಿಕ ಸಾಕ್ಷ್ಯಗಳಲ್ಲೇ ದೊಡ್ಡ ಕೊರತೆ ಉಂಟಾಗುತ್ತದೆ.
ಆದ್ದರಿಂದ ವಚನಗಳನ್ನೂ ಪುರಾಣಗಳನ್ನೂ ಪರಸ್ಪರ ಸಮನ್ವಯಗೊಳಿಸಿಕೊಂಡು ಬಳಸುವ ವಿಧಾನವೇ ಐತಿಹಾಸಿಕವಾಗಿ ಹೆಚ್ಚು ಸಮರ್ಥವಾದ ಮಾರ್ಗವಾಗಿದೆ. ಈ ದೃಷ್ಟಿಯಿಂದ ಹರಿಹರನ *ಬಸವರಾಜದೇವರ ರಗಳೆ* ,ಪಾಲ್ಕುರಿಕೆ ಸೋಮನಾಥನ,ಭೀಮಕವಿಯ, *ಬಸವಪುರಾಣ* ಮತ್ತು ಕಂಚಿ ಶಂಕರಾಧ್ಯರ ವೃಷಭೇಶ್ವರ ಪುರಾಣಂ (ಬಸವ ಚರಿತೆ) ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ.

ಹೀಗಿರುವಾಗ, ಬಸವಾದಿ ಶರಣರನ್ನು ಒಳಗೊಂಡಂತೆ ಚಾರಿತ್ರಿಕ ವ್ಯಕ್ತಿಗಳನ್ನು ಕಂಡಕಂಡಲ್ಲಿ “ಬಸವಾದಿ ಶರಣರ ಪುರಾಣೀಕರಣ” ಎಂದು ಸುಲಭವಾಗಿ ಟೀಕಿಸುವುದು ಅರ್ಥಹೀನವಾಗುತ್ತದೆ. ಬಸವಣ್ಣನವರ ಸಮಗ್ರ ಚರಿತ್ರೆಯೇ ಬಹುಪಾಲು *ಬಸವಪುರಾಣ*ದಲ್ಲಿ ದಾಖಲಾದ ವಿವಿಧ ಘಟನಾವಳಿಗಳ ಆಧಾರದಲ್ಲೇ ರೂಪುಗೊಂಡಿರುವುದರಿಂದ, ಪುರಾಣಗಳನ್ನು ಅತೀ ತಾತ್ಸಾರ ಭಾವದಿಂದ ನೋಡುವ ಡಾ. ವೀರಣ್ಣ ರಾಜೂರ ಅವರ ನಿಲುವನ್ನು ಗಟ್ಟಿಯಾಗಿ ಪ್ರಶ್ನಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ವೀರಶೈವವನ್ನು ನಿಂದಿಸುವ ಉತ್ಸಾಹದಲ್ಲಿ, ಬಸವಣ್ಣನವರ ಚರಿತ್ರೆಗೆ ಜೀವಗಂಗೆಯಂತಿರುವ ವೀರಶೈವ ಪುರಾಣಗಳನ್ನು ತುಚ್ಛವಾಗಿ ಕಾಣುವುದು ತಾತ್ವಿಕವಾಗಿಯೂ ಐತಿಹಾಸಿಕವಾಗಿಯೂ ಅಸಂಗತವಾಗಿದೆ.
ಇಲ್ಲಿ ಕಂಡುಬರುವ ವಿಪರ್ಯಾಸವೆಂದರೆ, ಸ್ವತಃ ಡಾ. ವೀರಣ್ಣ ರಾಜೂರ ಅವರನ್ನು ಒಳಗೊಂಡಂತೆ ಲಿಂಗಾಯತ ಪ್ರತ್ಯೇಕ ಧರ್ಮದ ಪರಿಕಲ್ಪನೆಯನ್ನು ಬೆಂಬಲಿಸುವ ಬಹುತೇಕ ಸಾಹಿತಿಗಳೇ ಬಸವಪುರಾಣದ ಚರಿತ್ರಾನಾಯಕ ಬಸವಣ್ಣನವರನ್ನು ಶೇಕಡಾ ತೊಂಬತ್ತೈದುರಷ್ಟು ಮಟ್ಟಿಗೆ ಅಂಗೀಕರಿಸಿ, ಶಾಸನಗಳಲ್ಲಿ ಉಲ್ಲೇಖಿತ ಬಸವಣ್ಣನವರನ್ನು ಬಹುತೇಕ ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ. ಕಾರಣವೂ ಸ್ಪಷ್ಟವಾಗಿದೆ—ಈ ಶಾಸನಗಳಲ್ಲಿ ಬಸವಣ್ಣನವರ ತಾತ್ವಿಕ ಸಾಧನೆಗಳ ಕುರಿತು ಒಂದೇ ಒಂದು ಶಬ್ದವೂ ಇಲ್ಲ.
ಈ ಸಂಬಂಧ ಸಂಶೋಧಕ ಎಚ್. ದೇವೀರಪ್ಪ ಅವರು ತಮ್ಮ “ಅರ್ಜುನವಾಡದ ಶಿಲಾಲೇಖ”ಎಂಬ ಲೇಖನದಲ್ಲಿ ಅತ್ಯಂತ ತೀಕ್ಷ್ಣವಾದ ವಿಮರ್ಶೆಯನ್ನು ಮುಂದಿಟ್ಟಿದ್ದಾರೆ. ಅವರು, “ಸಂಗನ ಬಸವನ ಅಣ್ಣ ದೇವರಾಜ. ಈಗ ಲಿಂಗೈಕ್ಯನಾಗಿರುವ ಆ ದೇವರಾಜ ಮುನಿಪನ ಔರಸಪುತ್ರನೂ, ಜಂಗಮ ಪರುಷಪ್ರಾಯನಾದ ಬಸವರಸ (ಬಸವಣ್ಣ)ನ ಕರಕಮಲ ಸಂಜಾತನೂ ಆಗಿರುವ ಕಲಿದೇವರಸನು, ‘ಉಳ್ಳವರು ಶಿವಾಲಯವ…’ ಎಂಬ ವಚನದ ಮೂಲಕ ಲಿಂಗವಂತ ಧರ್ಮದ ತಿರುಳನ್ನೇ ನವೀನವಾಗಿ ಪ್ರತಿಪಾದಿಸಿ ಸ್ಥಾವರ ಲಿಂಗಪೂಜೆಯನ್ನು ಸಮರ್ಥವಾಗಿ ಖಂಡಿಸಿರುವ ಬಸವಣ್ಣನವರ ಅಣ್ಣನ ಮಗನೋ, ಮೊಮ್ಮಗನೋ, ಮರಿಮಗನೋ ಆಗಿ, ಒಂದು ಸಾಮಾನ್ಯ ಶಿವಮಂದಿರದ ‘ಪೂಜಾರಿ’ ಯಾಗಿದ್ದನೆಂದು ನಂಬುವುದು, ಅದನ್ನು ಪ್ರಚಾರ ಮಾಡುವುದು ಬಸವಣ್ಣನವರನ್ನೂ ಅವರ ವಿಶ್ವಮಾನ್ಯ ತತ್ವಗಳನ್ನೂ ಕೊಲೆ ಮಾಡಿದಂತೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಆಧಾರದ ಮೇಲೆ ಅವರು ಆ ಶಾಸನವೊಂದನ್ನು ‘ಕೂಟಶಾಸನ’ ಎಂದು ಖಂಡಿಸಿ, ಅದರ ಔಚಿತ್ಯವನ್ನೇ ಪ್ರಶ್ನಿಸಿದ್ದಾರೆ (ಪುಟ 484, *ಸಂಶೋಧನ ಸಂಪುಟ*, ಲೇಖಕ: ಎಚ್. ದೇವೀರಪ್ಪ; ಪ್ರಕಾಶಕರು: ಎನ್.ಆರ್. ವಿಶುಕುಮಾರ್; ನಿರ್ದೇಶಕರು: ಕನ್ನಡ ಸಂಸ್ಕೃತಿ ಇಲಾಖೆ).
ಇಂತಹ ಹಿನ್ನೆಲೆಯಲ್ಲೇ ಡಾ. ವೀರಣ್ಣ ರಾಜೂರ ಅವರಿಗೆ ಒಂದು ಸ್ಪಷ್ಟ, ಮನವಿಪೂರ್ವಕವಾದ ಆಗ್ರಹವನ್ನು ಮಾಡಬೇಕಾಗುತ್ತದೆ. ಪದೇಪದೇ ವೀರಶೈವ ಪದಕ್ಕೆ ಸಂಬಂಧಿಸಿದ ಸಂಶಯಗ್ರಸ್ಥ ಹೇಳಿಕೆಗಳ ಮೂಲಕ ಸಮಾಜದ ಶಾಂತ ವಾತಾವರಣವನ್ನು ಕಲುಷಿತಗೊಳಿಸುವುದಕ್ಕಿಂತ, ತಮ್ಮ ಬಳಿ ಇರುವ ಸ್ವತಂತ್ರ ಹಾಗೂ ಪರಿಶೀಲನೀಯ ಸಾಕ್ಷ್ಯಗಳ ಆಧಾರದ ಮೇಲೆ ಬಸವಾದಿ ಶರಣರನ್ನು ಚಾರಿತ್ರಿಕ ವ್ಯಕ್ತಿಗಳಾಗಿಯೇ ನಿರೂಪಿಸುವ ಜವಾಬ್ದಾರಿಯನ್ನು ಅವರು ಹೊತ್ತುಕೊಳ್ಳಬೇಕಾಗಿದೆ. ಸಾರ್ವಜನಿಕ ಚರ್ಚೆಗೆ ತೊಡಗುವಾಗ, ಇಂತಹ ಜವಾಬ್ದಾರಿಯುತ ನಿಲುವು ವಿದ್ವಾಂಸರಿಂದ ನಿರೀಕ್ಷಿತವಾಗಿರುತ್ತದೆ.
ಆದರೆ ಈ ಕಾರ್ಯದಲ್ಲಿ ಅಪ್ಪಿತಪ್ಪಿಯೂ 13–14ನೇ ಶತಮಾನದ ವೀರಶೈವ ಪುರಾಣಗಳು, ವೀರಶೈವ ರಗಳೆಗಳು ಅಥವಾ ತಾವು ಪದೇಪದೇ ಉಲ್ಲೇಖಿಸುವಂತೆ ಹದಿನಾಲ್ಕನೆಯ ಶತಮಾನದಲ್ಲಿ ತಾವೇ ವಚನ ಪ್ರಕ್ಷಿಪ್ತತೆಯನ್ನು ಖುದ್ದು ಕಂಡವರಂತೆ ಹೇಳುವ ನೂರೊಂದು ವಿರಕ್ತರ ವಚನ ಸಂಪಾದನೆಗಳನ್ನು ಸಾಕ್ಷಿಯಾಗಿ ಬಳಸದೆ, ಸ್ವತಂತ್ರ ಸಾಕ್ಷ್ಯಗಳ ಸಮೇತ ಶರಣರ ಚರಿತ್ರೆಯನ್ನು ಮೊದಲು ರೂಪಿಸಿ ತೋರಿಸುವುದು ಅಗತ್ಯವಾಗುತ್ತದೆ.
ಅಂತಹ ಕಾರ್ಯವು ತಮ್ಮಿಂದ ಸಾಧ್ಯವಿದ್ದರೆ ಮಾತ್ರ ವೀರಶೈವ ಮತ್ತು ಅದರ ಸಾಹಿತ್ಯದ ಕುರಿತು ಸಾರ್ವಜನಿಕವಾಗಿ ಲಘುವಾಗಿ ಮಾತನಾಡುವ ನೈತಿಕ ಅರ್ಹತೆ ಅವರಿಗೆ ದೊರೆಯುತ್ತದೆ.
- ವಚನಗಳು ಮತ್ತು “ತಾತ್ವಿಕ ಬಂಧನ” ಎಂಬ ಪ್ರಶ್ನೆ
“ಸಾಮಾಜಿಕ, ಸಾಹಿತ್ಯಕ ಅಂಶಗಳನ್ನು ಒಳಗೊಂಡಿರುವ ವಚನಗಳು ತಾತ್ವಿಕ ಬಂಧನಕ್ಕೆ ಒಳಪಟ್ಟಿವೆ”* ಎಂಬ ಹೇಳಿಕೆ ಮೂಲತಃ ಅಸ್ಪಷ್ಟವೂ ಸಮಸ್ಯಾತ್ಮಕವೂ ಆಗಿದೆ. ಇಲ್ಲಿ *ತಾತ್ವಿಕ ಬಂಧನ (Philosophical Bondage)* ಎಂಬ ಪರಿಕಲ್ಪನೆಯನ್ನು ಯಾರು ವಿಧಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ—ಸಮಾಜವೋ, ಸಂಪ್ರದಾಯವೋ, ಅಥವಾ ವಿದ್ವಾಂಸರ ವ್ಯಾಖ್ಯಾನವೋ? ಈ ಕುರಿತು ಸ್ಪಷ್ಟತೆ ಇಲ್ಲದೆ ಇಂತಹ ಸಾಮಾನ್ಯೀಕೃತ ಹೇಳಿಕೆಗಳನ್ನು ನೀಡುವುದು ತಾತ್ವಿಕ ಗೊಂದಲವನ್ನೇ ಉಂಟುಮಾಡುತ್ತದೆ.
ಸಾಮಾಜಿಕ ಹಾಗೂ ಸಾಹಿತ್ಯಕ ಅಂಶಗಳು ತಾತ್ವಿಕ ಚಿಂತನೆಯಿಂದ ಸಂಪೂರ್ಣವಾಗಿ ಬೇರ್ಪಟ್ಟಿವೆ ಎಂಬ ಊಹೆಯೇ ಮೂಲತಃ ದೋಷಪೂರ್ಣವಾಗಿದೆ. ವಚನಗಳು ಸಾಮಾಜಿಕವಾಗಿಯೂ ಸಾಹಿತ್ಯಕವಾಗಿಯೂ ಇರುವುದೇ ಅವುಗಳ ತಾತ್ವಿಕ ಶಕ್ತಿಯ ಮೂಲವಾಗಿದೆ. ವಚನಗಳಲ್ಲಿ ವೀರಶೈವ ಪದವನ್ನು 14ನೇ ಶತಮಾನದ ನೂರೊಂದು ವಿರಕ್ತರು ಸೇರಿಸಿದ್ದಾರೆ ಎಂಬ ವಾದವನ್ನು ಮುಂದಿಡುವ ಮೊದಲು, 12ನೇ ಮತ್ತು 14ನೇ ಶತಮಾನದ ತಾಳೆಯೋಲೆಗಳನ್ನು ಸಮಾನಾಂತರವಾಗಿ ಇಟ್ಟು ಪಠ್ಯವಿಮರ್ಶಾತ್ಮಕ ಹಾಗೂ ಶಾಸ್ತ್ರೀಯ ಸಾಕ್ಷ್ಯಗಳನ್ನು ಒದಗಿಸಬೇಕಾಗುತ್ತದೆ. ಕೇವಲ ಊಹೆಗಳು, ಗುರುಪರಂಪರೆಯ (ಡಾ. ಕಲ್ಬುರ್ಗಿ) ಅಭಿಪ್ರಾಯಗಳು ಅಥವಾ ದ್ವೇಷದಿಂದ ಹುಟ್ಟಿದ ಕಲ್ಪನೆಗಳನ್ನು ಅಂತಿಮ ಸತ್ಯವೆಂದು ಸ್ಥಾಪಿಸುವುದು ಸಂಶೋಧನಾ ಶಿಸ್ತಿನ ಲಕ್ಷಣವಲ್ಲ.
ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೊಯಿಲಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ, ಪೂಜ್ಯ ಶ್ರೀ ದಿಂಗಾಲೇಶ್ವರ ಶ್ರೀಗಳೊಂದಿಗೆ ನಡೆದ ಬಹಿರಂಗ ಚರ್ಚೆಯಲ್ಲಿ ಡಾ. ವೀರಣ್ಣ ರಾಜೂರ ಅವರು “ಈಚೆಗೆ ದೊರೆತ ಆಧಾರಗಳನ್ನು ಲಿಂಗಾಯತಕ್ಕೆ ಪರಿಗಣಿಸಬೇಕಾಗುತ್ತದೆ” ಎಂದು ಹೇಳಿರುವುದು ಗಮನಾರ್ಹ. ಹಾಗಾದರೆ, *ಈಚಿನದು ಮಾತ್ರವೇ ತತ್ತ್ವವಾಗುತ್ತದೆಯೇ?* ಎಂಬ ಪ್ರಶ್ನೆ ಅನಿವಾರ್ಯವಾಗಿ ಎದುರಾಗುತ್ತದೆ. ಈ ಕುರಿತು ಡಾ. ವೀರಣ್ಣ ರಾಜೂರ ಅವರು ಪ್ರಾಮಾಣಿಕವಾಗಿ ಉತ್ತರಿಸಬೇಕಾಗಿದೆ.
ಬಸವಾದಿ ಶಿವಶರಣರು ಪೂರ್ವಾಗ್ರಹಪೀಡಿತರಲ್ಲ. ಅವರು ಸಂಪೂರ್ಣ ವಿಶಾಲ ಮನಸ್ಸಿನಿಂದ ಲೌಕಿಕ ಮತ್ತು ಅಲೌಕಿಕ ಜಗತ್ತನ್ನು ಆಳವಾಗಿ ಪರಿಶೀಲಿಸಿದ್ದಾರೆ. ಆಚಾರ, ಅಧ್ಯಾತ್ಮ ಮತ್ತು ಲೌಕಿಕ ವಿಚಾರಗಳನ್ನು ತಾತ್ವಿಕವಾಗಿ ಪೋಣಿಸಿ ವಚನಸಾಹಿತ್ಯವನ್ನು ರಚಿಸಿರುವುದು ಅವರ ಚಿಂತನೆಯ ವ್ಯಾಪ್ತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಡಾ. ವೀರಣ್ಣ ರಾಜೂರ ಅವರಿಗೆ ವಚನಗಳು ತಾತ್ವಿಕ ಬಂಧನದಿಂದ ಮುಕ್ತವಾಗಿವೆ ಎಂದು ಕಾಣಬೇಕಾದರೆ, ಆ ಮುಕ್ತಿ- ಘೋಷಣೆಯಿಂದ ದೊರಕುವುದಿಲ್ಲ. *ತಾತ್ವಿಕ ಮುಕ್ತಿ (Philosophical Liberation)* ವಿಮರ್ಶಾತ್ಮಕ ಚಿಂತನೆ, ಬಹುದೃಷ್ಟಿಕೋನ ಮತ್ತು ತತ್ವಗಳನ್ನು ಸಾಧನವಾಗಿ ಬಳಸುವ ವಿವೇಕಪೂರ್ಣ ಮನೋಭಾವದಿಂದ ಮಾತ್ರ ಸಾಧ್ಯ.
ವೀರಶೈವ–ಲಿಂಗಾಯತ ಪರಂಪರೆಯ ಕುರಿತು ನಡೆಯುವ ಚರ್ಚೆಗಳು ಸಂಶೋಧನೆಯ ಹೆಸರಿನಲ್ಲಿ ಗೊಂದಲ ಬಿತ್ತುವ ಘೋಷಣೆಗಳಾಗಬಾರದು.
ಬಸವಣ್ಣನವರನ್ನು ರಾಜಕೀಯ ಅಥವಾ ವೈಯಕ್ತಿಕ ನಿಲುವುಗಳ ಸೇವೆಗೆ ಬಳಸಿ, ಅವರ ತಾತ್ವಿಕ ಮಹತ್ವವನ್ನು ಮರುಬರೆಯುವ ಪ್ರಯತ್ನಗಳು ಬೌದ್ಧಿಕ ಪ್ರಾಮಾಣಿಕತೆಯ ಪರೀಕ್ಷೆಯಲ್ಲಿ ವಿಫಲವಾಗುತ್ತವೆ.
ವೀರಶೈವವನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಪ್ರಶ್ನೆ ಮಾಡುವುದಕ್ಕೂ ಒಂದು ಮಿತಿಯಿದೆ—ಅದು ಐತಿಹಾಸಿಕ ಸಾಕ್ಷ್ಯವನ್ನು ನಿರ್ಲಕ್ಷಿಸದ, ತಾತ್ವಿಕ ಸತತತೆಯನ್ನು ತುಂಡರಿಸದ ಮತ್ತು ಸಂಶೋಧನೆಯ ಹೆಸರಿನಲ್ಲಿ ವೈಯಕ್ತಿಕ ಅಭಿರುಚಿಗಳನ್ನು ಹೇರುವ ಪ್ರಯತ್ನವಾಗಿರಬಾರದು.
ಆ ಮಿತಿಯನ್ನು ದಾಟಿದ ಕ್ಷಣದಿಂದ ಪ್ರಶ್ನೆ ವಿಮರ್ಶೆಯಾಗುವುದನ್ನು ನಿಲ್ಲಿಸಿ, ಪರಂಪರೆಯನ್ನು ಅಸ್ಥಿರಗೊಳಿಸುವ ಸಾಧನವಾಗುತ್ತದೆ. ನಿಜವಾದ ವಿಮರ್ಶೆ ಪರಂಪರೆಯನ್ನು ಕುಸಿತಗೊಳಿಸುವುದಿಲ್ಲ; ಅದು ಸಾಕ್ಷ್ಯ, ಶಿಸ್ತು ಮತ್ತು ಜವಾಬ್ದಾರಿಯ ನೆಲೆಯಲ್ಲಿ ನಿಂತು ಅದನ್ನು ಇನ್ನಷ್ಟು ಬಲಪಡಿಸುತ್ತದೆ.
-ಶ್ರೀಕಂಠ.ಚೌಕೀಮಠ
























Total views : 23327