ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಈ ತಿಂಗಳು ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಎರಡು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಶ್ರೀ ಕುಮಾರೇಶ್ವರರ ಭಜನ್‌

“ಗುರುದೇವ  ದೇವ  ಗುರುಕುಮಾರ”

ರಚನೆ:ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಸಿದ್ಧೇಶ್ವರಮಠ. ಹಂದಿಗುಂದ.

ಪರಿಕಲ್ಪನೆ :   ಶ್ರೀಕಂಠ ಚೌಕೀಮಠ ನವದೆಹಲಿ

ಗಾಯಕರು :ಶ್ರೀ ರಾಮಚಂದ್ರ ಹಡಪದ

ಕನ್ನಡ ಚಲನಚಿತ್ರ ರಂಗದ ಹಿನ್ನಲೆ ಗಾಯಕರು

 ನವೀನ ಸಂಗೀತ ಸಂಯೋಜನೆಯ ಅಲ್ಬಂ  ಲೋಕಾರ್ಪಣೆ ಮತ್ತು ಕವಿರತ್ನ ದ್ಯಾಂಪುರ ಚನ್ನಕವಿಗಳ  ಸಮಾಧಿ ಮಂಟಪ ಜೀರ್ಣೋದ್ಧಾರ ಮತ್ತು ಅಮೃತಶಿಲಾ ಮೂರ್ತಿಯ ಲೋಕಾರ್ಪಣೆಯನ್ನು ಅವರ ಪುಣ್ಯಸ್ಮರಣೆ -ಮಹಾಶಿವರಾತ್ರಿಯಂದು ನೆರವೇರಿಸವ ಹರ್ಷವನ್ನು ತಮ್ಮ ಜೊತೆ ಹಂಚಿಕೊಳ್ಳಲು ಸಂತಸವೆನಿಸುತ್ತದೆ.

ಈ ತಿಂಗಳು ಪೂಜ್ಯ ಶ್ರೀ ಕುಮಾರಶಿವಯೋಗಿಗಳ  ಪುಣ್ಯಾರಾಧನೆ ಒಂದು ವಿಶೇಷ ಲೇಖನ ವನ್ನು ಸುಕುಮಾರ ಪ್ರಕಟಿಸುತ್ತಿದೆ, “ಹಾನಗಲ್ಲ ಶ್ರೀಗಳವರ ವ್ಯಕ್ತಿತ್ವ”  ಲೇಖಕರು :ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ.

ಈ ಲೇಖನದ ಮೊದಲ ಸಾಲುಗಳು ..

 “ ಈ ಜಗತ್ತೆಂಬ ರಂಗಭೂಮಿಗೆ ಬಂದವರು, ತಾವು ಹೋಗುವಾಗ ತಮ್ಮದೊಂದು ಚರಿತ್ರೆಯನ್ನು ಅನ್ಯರಿಗಾಗಿ ಬಿಟ್ಟುಹೋಗಬೇಕಾಗುತ್ತದೆ. ಬಾಳಿದವರ ಸಚ್ಚರಿತ್ರೆ ಮುಂದೆ ಬಾಳುವವರಿಗೆ ಆದರ್ಶಮಯವಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಬದುಕಿ ಸತ್ತವರಿಗಿಂತಲೂ ಸತ್ತು ಬದುಕಿದವರು ಮೇಲು, ಇಂತಹ ಆದರ್ಶವ್ಯಕ್ತಿಗಳ ಮಾಲಿಕೆಯಲ್ಲಿ ಮಧ್ಯಸ್ಥಾನವು ಹಾನಗಲ್ಲ ಶ್ರೀಗಳವರಿಗೆ ದೊರೆಯುವುದೆಂಬ ಹೇಳಿಕೆ ನಿಸ್ಸಂದೇಹವಾದುದು.

ಹನ್ನೆರಡನೆಯ ಶತಮಾನದ ಶ್ರೀ ಬಸವ ಮಹಾನುಭಾವರಂತೆ ಸಮಾಜದ ಧಾರ್ಮಿಕ, ನೈತಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳವರು ಹೊಸದೊಂದು ವಾತಾವರಣವನ್ನೇ ನಿರ್ಮಿಸಿ, ಇಪ್ಪತ್ತನೆಯ ಶತಮಾನದ ಬಸವನೆನಿಸಿಕೊಂಡರು. ಇವರು ಕೇವಲ ಮುಖಕ್ಕೆ ಹಾಕಿದ ಮುಸುಕಿನ ಮರೆಯಲ್ಲಿ ಮಣಿಗಳನ್ನೆಣಿಸುತ್ತ ದೇವರನ್ನು ಹುಡುಕಲಿಲ್ಲ; ಅದರ ಜೊತೆಗೆ, ಜಗವ ತುಂಬಿದ ಶಿವತತ್ವವನ್ನು ಕಂಡು ನಲಿದು-ಸೇವಿಸುವ ಮಹಾಸ್ವಾಮಿಗಳಾಗಿದ್ದರು”

ಈ ಸಾಲುಗಳು ಸಾಮಾನ್ಯ ಸಾಲುಗಳಲ್ಲ ! ಅಸಮಾನ್ಯವ್ಯಕ್ತಿತ್ವ ವನ್ನು ವರ್ಣಿಸುವ ಅನರ್ಘ್ಯ ಸಾಲುಗಳು !!

ಫೆಬ್ರುವರಿ ೨೦೨೩  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “  ಪಾಹಿ ಶಿವ ನೀ ಪಾಹಿ ಶಿವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-21 : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಸಂಸ್ಕತಿ-ನಾಗರಿಕತೆ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  4. ಹಾನಗಲ್ಲ ಶ್ರೀಗಳವರ ವ್ಯಕ್ತಿತ್ವ -ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ
  5. ಮೈಲಾರ ಬಸವಲಿಂಗ ಶರಣರು-ಡಾ. ಎಸ್. ವಿ. ಅಯ್ಯನಗೌಡರ.
  6. – ಶ್ರೀ ನಿರಂಜನ ಪ್ರಭು ಡಾ.ಚೆನ್ನಮಲ್ಲ ಮಹಾಸ್ವಾಮಿಗಳು ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ
  • ಇಷ್ಟಲಿಂಗ : ಪರಿಕಲ್ಪನೆ- ಡಾ. ಎಂ. ಶಿವಕುಮಾರಸ್ವಾಮಿ.
  • ಗುರುವೆ ಸುಜನಕುಲ ಕಲ್ಪತರುವೆ -ಶ್ರೀ ವೇ.ಮೂ.ಲಿಂ.ಪಂಡಿತ ಚೆನ್ನಬಸವ ಶಾಸ್ತ್ರಿಗಳು ಸೋ.ಹಿರೇಮಠ
  • ಹಾನಗಲ್ಲ ಸ್ವಾಮಿ ನಿಮಗೆ ವಂದಿಸುವೆ-ಪೂಜ್ಯ ಕೇದಾರನಾಥ ದೇವರು ಯಾಳವಾರ
  1. ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

  1. ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿಅರ್ಪಿಸುವ“ ನೀನೇಕೆ ಮರೆಯಾದೆ ಗುರು ಸದಾಶಿವ”

ರಚನೆ: ಪೂಜ್ಯ ಶ್ರೀ ಕುಮಾರದೇವರು ಅಂತೂರುಬೆಂತೂರು

ಗಾಯನ: ಶ್ರೀಮತಿ ಉಷಾ ಪ್ರಭು ಹುನಗುಂದ್ ಕ್ಯಾಲಿಫೋರ್ನಿಯ.ಅಮೇರಿಕಾ

  1. ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿಅರ್ಪಿಸುವ“ಜಯ..ಜಯ.. ಶ್ರೀಕುಮಾರೇಶ”

ಸಂಗೀತ -ಗಾಯನ : ಶ್ರೀ ಸಿದ್ಧೇಂದ್ರಕುಮಾರ ಹಿರೇಮಠ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ವೀರಶೈವಾಚಾರ ಪರಾ |

ಘೋರ ಬಸವ ಧೀರಾ |            || ಪ ||

ಆದಿ, ನಾದ, ಬಿಂದು ಕಲಾ |

ಹೃದಯಾಲಯ ನಾಶಮಲ |

ಮೋದ ಘನಾನಂದವನ |

ಬೋಧಾಮೃತ ಸದನ            || 1 ||

ಕಾಮ ಕಲಿಯ ವೈರಿ ಸದಾ |

ಮಮತಾ ಮತಿವಾರಿಸಿದ ||

ಸೋಮಧರಾಪಾರಸುಖ |

ಪ್ರೇಮಾಬ್ಧಿ ಶಿವಸಖ                             || 2 ||

ತ್ರಾಹಿ ಶಿವಯೋಗ ನಿದ್ರ |

ವಹಿಸಿ ಪರಮ ಶಾಂತಿಮುದ್ರ ||

ಸಾಹಸದಿಂ ಕೂಡಿಸುತ ಸೋಹಂ ಭಾವಯುತ         || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಆಧಾರಚಕ್ರ – ಮೂರ್ತಿಬ್ರಹ್ಮ (ಆಚಾರಲಿಂಗ)

ತೋರ್ತಿರ್ಪಾಧಾರದಾ | ವರ್ತಿ ಗುದ ಮಂದಿರದ

ಮೂರ್ತಿ ಬ್ರಹ್ಮವನು-ಅರ್ಥಿಯಿಂ ಕರಕಿತ್ತ

ಕೀರ್ತಿಮಯ ಗುರುವೆ ಕೃಪೆಯಾಗು  ||೯೧)

ಇದು ಒಂಭತ್ತನೆಯ ಆಧಾರಚಕ್ರ ಇದರ ವಿವರ ಇಂತಿದೆ-

ಗುದಸ್ಥಾನದಲ್ಲಿ ಆಧಾರಚಕ್ರ ಪೃಥ್ವಿಯೆಂಬ ಮಹಾಭೂತ

ಆ ಭೂತ ಪೀತವರ್ಣ ಚತುಷ್ಕೋಣ ಚೌದಳಪದ್ಮ

ಸುವರ್ಣವರ್ಣ ಆ ದಳದಲ್ಲಿ ವ, ಶ, ಷ, ಸ, ಎಂಬ ನಾಲ್ಕಕ್ಷರ

ಆ ಕರ್ಣಿಕಾಮಧ್ಯದಲ್ಲಿ ನಕಾರವೆಂಬ ಬೀಜಾಕ್ಷರ

ಆ ನಕಾರ ಪೀತವರ್ಣ ಅದು ಪೆಣ್ದುಂಬಿಯನಾದ

ರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ

ಅಲ್ಲಿ ಆಚಾರಲಿಂಗ, ಅದಕ್ಕೆ ಪೀತವರ್ಣವನುಳ್ಳ ಸದ್ಯೋಜಾತಮುಖ

ನಿವೃತ್ತಿ ಕಲಾಪರ್ಯಾಯ ನಾಮವನುಳ್ಳ ಕ್ರಿಯಾಶಕ್ತಿ

ಆ ಶಕ್ತಿ ಪೀತವರ್ಣ, ಅಲ್ಲಿ ಕರ್ಮಸಾದಾಖ್ಯ

ಪರ ಎಂಬ ಸಂಜ್ಞೆ, ಪೂರ್ವದಿಕ್ಕು

ಅಲ್ಲಿ ಋಗ್ವದವನುಚ್ಚರಿಸುತ್ತ ಸುಚಿತ್ತವೆಂಬ ಹಸ್ತದಿಂದ

ಸುಗಂಧ ದ್ರವ್ಯವನು ಘ್ರಾಣವೆಂಬ ಮುಖಕ್ಕೆ

ಶ್ರದ್ಧಾಭಕ್ತಿಯಿಂದ ಅರ್ಪಿಸುವಳಾ ಶಕ್ತಿ

ಬ್ರಹ್ಮಪೂಜಾರಿ ಶಕ್ತಿ ಡಾಕಿನಿ ಬ್ರಹ್ಮ (ಭವ) ನಧಿದೇವತೆ

 ಇಂತಿವೆಲ್ಲನ್ನು ಮಾತೃಸ್ಥಾನವಾಗಿಹುದು ನಕಾರವೆಂಬ ಬೀಜಾಕ್ಷರ

ಅದು ಪ್ರಣವದ ತಾರಕಾಕೃತಿಯಲ್ಲಿಹುದು

ಓಂ ಓಂ ಓಂ ನಾಂ ನಾಂ ನಾಂ ಎಂಬ ಬ್ರಹ್ಮನಾದ

ಮಂತ್ರ ಮೂರ್ತಿ ಪ್ರಣವಕ್ಕೆ ನಮಸ್ಕಾರವು ಇದು ಭಕ್ತಸ್ಥಲವು.

ಆಧಾರ ಚಕ್ರವು ಗುದೇಂದ್ರಿಯದ ಸ್ಥಾನದಲ್ಲಿದ್ದು ನಾಲ್ಕುದಳದ ಪದ್ಮವಾಗಿದೆ. ಇಲ್ಲಿರುವ ಬ್ರಹ್ಮನು ಮೂರ್ತಿಬ್ರಹ್ಮನು ಸದ್ಗುರುವು ಈ ಮೂರ್ತಿ ಬ್ರಹ್ಮವನ್ನು ತನ್ನ ಶಿಷ್ಯನ ಕರದಿಷ್ಟ ಲಿಂಗದಲ್ಲಿ ಆಚಾರಲಿಂಗವನ್ನಾಗಿಸಿ ಪ್ರೀತಿಯಿಂದ ಕರುಣಿಸುತ್ತಾನೆ. ನವಬ್ರಹ್ಮರನ್ನೂ ಕರದಿಷ್ಟಲಿಂಗದಲ್ಲಿ ಅಳವಡಿಸಿದ ಮಹಾಶ್ರೇಯಸ್ಸು ಗುರುವಿನದು. ಅದುಕಾರಣವೇ ಶ್ರೀಗುರುವು ಕೀರ್ತಿಮಯನಾಗಿದ್ದಾನೆ.

ಘ್ರಾಣೇಂದ್ರಿಯವು ಪೃಥ್ವಿತತ್ತ್ವದಿಂದಾದಂತೆ ಗುದಸ್ಥಾನವು ಪಂಚೀಕೃತ ಪೃಥ್ವಿಯ ಅರ್ಧಸ್ವರೂಪವುಳ್ಳುದಾಗಿದೆ. ಅಂದರೆ ಗುದೇಂದ್ರಿಯದಲ್ಲಿ ಪೃಥ್ವಿಯ ತತ್ತ್ವವು ಅತ್ಯಧಿಕವಾಗಿ ಕಾಣುವದು. ಈ ಇಂದ್ರಿಯದಲ್ಲಿಯೂ ಗಂಧ ಪದಾರ್ಥವು ವಿಶೇಷವಾಗಿದೆ. ಅನಾಚಾರದಿಂದ ಗುದವು ದುರ್ಗಂಧವನ್ನು ವ್ಯಕ್ತಗೊಳಿಸುವದು. ಗುದಸ್ಥಾನದ ಕಾರ್ಯವು ಮಲವಿಸರ್ಜನ. ಇಲ್ಲಿ ಅಪಾನವಾಯು ಮತ್ತು ಧನಂಜಯ ವಾಯುಗಳು ವಾಸಿಸುತ್ತವೆ. ಮಲವಿಸರ್ಜನ ಕಾರ್ಯವು ಯಥೋಚಿತವಾಗಿ ನಡೆದರೆ ದೇಹಿಗೆ ಆನಂದವೆನಿಸುವದು. ಅದು ಆರೋಗ್ಯಕ್ಕೆ ಮೂಲವಾದ ಕ್ರಿಯೆ. ದೇಹದ ಇರುವಿಕೆಗೆ ಆಧಾರವಾದುದು. ಗುದೇಂದ್ರಿಯ. ಇಲ್ಲಿರುವದು ಆಧಾರಚಕ್ರ. ಇವುಗಳು ತಾತ್ವಿಕವಾಗಿ ಒಂದಕ್ಕೊಂದು ಸಂಬಂಧ ಹೊಂದಿವೆ. ಕಾರಣ ಶಿವಕವಿಯು ಗುದೇಂದ್ರಿಯವು ಆಧಾರದ ತೊತ್ತು ಎಂದು ಬಣ್ಣಿಸಿ ಆಧಾರ ಚಕ್ರಕ್ಕೆ ಗುದವೇ ಮಂದಿರವೆಂತಲೂ ಹೇಳಿದ್ದಾನೆ. ಇಂಥ ಗುದಮಂದಿರದ ಆಧಾರಚಕ್ರದಲ್ಲಿಯ ಮೂರ್ತಿಬ್ರಹ್ಮವನ್ನು ಇಷ್ಟಲಿಂಗದಲ್ಲಿ ಆಚಾರಲಿಂಗವನ್ನಾಗಿ ಪರಿಭಾವಿಸಬೇಕು. ಸುಗಂಧಪ್ರಸಾದವನ್ನು ಆಚಾರಲಿಂಗಕ್ಕೆ ಅರ್ಪಿಸಬೇಕು. ಆ ಲಿಂಗವನ್ನು ಸಾವಧಾನ ದಿಂದ ಅರಾಧಿಸಿ ಆನಂದಿಸಬೇಕು.

ನವಚಕ್ರ ಹಾಗೂ ನವಬ್ರಹ್ಮರ ; ಉಪಸಂಹಾರ

ನವ ಚಕ್ರದೊಳಗಿರ್ದ| ನವ ಬ್ರಹ್ಮವನು ತೆಗೆದು

ಶಿವಲಿಂಗ ವಿಗ್ರ-ಹವ ಮಾಡಿ ಕರುಣಿಸಿದ

ಸುವಿವೇಕಿ ಗುರುವೆ ಕೃಪೆಯಾಗು   ||೯೨||

 ಶಿವಕವಿಯು ಪ್ರವೃತ್ತಿ ಕ್ರಮದಿಂದ ನವಚಕ್ರಗಳಲ್ಲಿ ನವಬ್ರಹ್ಮರನ್ನು ನಿರೂಪಿಸಿ, ಇಲ್ಲಿ ಉಪಸಂಹಾರ ಮಾಡುತ್ತಾನೆ. ಶ್ರೀಗುರು

೧ ಪಶ್ಚಿಮಚಕ್ರ ೨. ಶಿಖಾಚಕ್ರ ೧. ಬ್ರಹ್ಮರಂದ್ರ (ಸಹಸ್ರದಳ) ೪. ಆಜ್ಞಾಚಕ್ರ ೫. ವಿಶುದ್ಧಿಚಕ್ರ ೬. ಅನಾಹತ ಚಕ್ರ * ಮಣಿಪೂರಕ ಚಕ್ರ ೮. ಸ್ವಾಧಿಷ್ಠಾನಚಕ್ರ ೯. ಆಧಾರಚಕ್ರವೆಂಬ ಈ ನವಚಕ್ರಗಳಲ್ಲಿ ಕ್ರಮವಾಗಿ ೧. ನಿರಂಜನ (ಸರ್ವಶೂನ್ಯ) ಬ್ರಹ್ಮ

 ೨. ನಿಃಶೂನ್ಯ ಬ್ರಹ್ಮ  ೩. ನಿಷ್ಕಳ ಬ್ರಹ್ಮ ೪. ನಿಸ್ಸಿಮಬ್ರಹ್ಮ ೫. ವಿಜ್ಞಾನಬ್ರಹ್ಮ೬. ಆನಂದಬ್ರಹ್ಮ ೭. ಸತ್ಕಲೆಯ ಬ್ರಹ್ಮ

 ೮. ಪಿಂಡಬ್ರಹ್ಮ ೯. ಮೂರ್ತಿಬ್ರಹ್ಮರೆಂಬ ನವಬ್ರಹ್ಮರನ್ನು ತನ್ನ ಸುವಿವೇಕದಿಂದ ಶಿಷ್ಯನ ವರರತ್ನವೆನಿಸಿದ ಕರಕಮಲದಲ್ಲಿ ಶೋಭಿಸುವ ಇಷ್ಟಲಿಂಗದಲ್ಲಿ ೧. ಭಾವಲಿಂಗ ೨. ಪ್ರಾಣಲಿಂಗ ೩. ಇಷ್ಟಲಿಂಗ ೪. ಮಹಾಲಿಂಗ ೫. ಪ್ರಸಾದ ಲಿಂಗ ೬. ಜಂಗಮಲಿಂಗ ೬. ಶಿವಲಿಂಗ ೮. ಗುರುಲಿಂಗ ೯. ಆಚಾರಲಿಂಗಗಳೆಂಬ ನವಶಿವಲಿಂಗ ಮೂರ್ತಿಗಳನ್ನು ಮೂರ್ತಗೊಳಿಸುತ್ತಾನೆ. ಮಹಾಜ್ಞಾನಿಯಾದ ಸದ್ಗುರುವು ಸಾಮಾನ್ಯನಲ್ಲ. ಇವನು ಪರಮಗುರುವು. ಗುರುವಿನ ಗುರು ನಿರಾಭಾರಿಗಳು. ಆತನ ಕೃಪೆಯಿಂದಲೆ ಅಂತರಂಗದ ನವಚಕ್ರಗಳಲ್ಲಿಯ ನವಬ್ರಹ್ಮರು ಕರಕಮಲದಲ್ಲಿ ಕಾಣಿಸಿಕೊಂಡರು. ಇಷ್ಟಲಿಂಗ ಚಿಕ್ಕದಾದರೂ ಅದರ ಕೀರ್ತಿ ಬಹುದೊಡ್ಡದು. ಈ ಲಿಂಗ ಹೊರಗಿನಂತೆ ಕೇವಲ ಸ್ಥೂಲವಲ್ಲ. ಮಸ್ತಕದಲ್ಲಿಯ ಚಿಚ್ಛೈ ತನ್ಯವು ಈ ಇಷ್ಟಲಿಂಗದಲ್ಲಿ ಚುಳುಕಾಗಿದೆ. ಬೆಳಕಾಗಿದೆ ; ಆಂತರಂಗದ ಅಮೂರ್ತರಾದ ನವಬ್ರಹ್ಮರು ಇಷ್ಟಲಿಂಗದಲ್ಲಿ ಮೂರ್ತ ಗೊಂಡು ಇಷ್ಟಾರ್ಥಫಲವನ್ನೀಯುವ ಕಾಮಧೇನು ಕಲ್ಪವೃಕ್ಷಗಳಂತೆ ಮೆರೆದಿದ್ದಾರೆ.

 ಈ ನವಚಕ್ರಗಳ ವಿಷಯವನ್ನು ನಿಜಗುಣಾರ್ಯರು ಸಂಗ್ರಹರೂಪದಲ್ಲಿ ತಮ್ಮ “ವಿವೇಕಚಿಂತಾಮಣಿ’ಯ ದ್ವಿತೀಯ ಪರಿಚ್ಛೇದ (ಪುಟ ೧೩೪)ದಲ್ಲಿ ಪ್ರತಿಪಾದಿಸಿದ್ದಾರೆ. ಇಲ್ಲಿ ನಿವೃತ್ತಿಕ್ರಮ ನೆಲೆನಿಂತಿದೆ.

“ಮತ್ತಮಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ ಆಗ್ನೇಯವೆಂಬ ಷಟ್ಚಕ್ರಂಗಳುಂ ಕ್ರಮದಿಂದವಕೆ ದೇಹಮಧ್ಯ (ಗುದ) ಲಿಂಗ, (ಗುಹ್ಯ) ನಾಭಿ, ಹೃದಯ, ಕಂಠ, ಭೂಮಧ್ಯವೆಂಬಾರು ಸ್ಥಾನಂಗಳುಂ ಚತುರಸ್ರ, ಅರ್ಧಚಂದ್ರಾಕಾರ, ತ್ರಿಕೋಣ, ಷಟ್ಕೋಣ, ವೃತ್ತ, ವಿಚಿತ್ರ ಮಾದಾರಾಕಾರಂಗಳುಂ ಪೃಥಿವ್ಯಾದಿ ಮಾನಸಾಂತಮಾದಾರು ಭೂತಂಗಳುಂ, ಪೀತ, ಶ್ವೇತ, ರಕ್ತ, ನೀಲ, ಸ್ಫಟಿಕ, ಮಾಣಿಕ್ಯವೆಂಬಾರು ವರ್ಣಂಗಳಂ, ಚತುರ್ದಳ, ಷಡ್ದಳ, ದಶದಳ, ಪೋಡಶದಳ, ದ್ವಿದಳಂಗಳುಳ್ಳಾರು ಕಮಲಂಗಳುಂ, ವಾದಿಸಾಂತ, ಬಾದಿಲಾಂತ, ಡಾದಿಫಾಂತ,ಕಾದಿಠಾಂತ, ಆದಿವಿಸರ್ಗಾಂತ, ಹಕಾರ ಕ್ಷಕಾರಂಗಳೆಂಬಾರು ವರ್ಗದಳಾಕ್ಷರಂಗಳುಂ ನಕಾರಾದಿ ಪ್ರಣವಾಂತಮಾದಾರು ಕರ್ಣಿಕಾಕ್ಷರಂಗಳುಂ, ಬ್ರಹ್ಮಾದಿ ಜೀವಾತ್ಮಾಂತಮಾದಾರು ಅಧಿದೇವತೆಗಳುಂ, ಮತ್ತೆ ಬ್ರಹ್ಮಚಕ್ರ, ಶಿಖಾಚಕ್ರ, ಪಶ್ಚಿಮಚಕ್ರವೆಂಬ ಚಕ್ರತ್ರಯಂಗಳುಂ ಕ್ರಮದಿಂದವಕ್ಕೆ ಮಸ್ತಕ ಶಿಖಿ,   ಶಿಖಾಂತವೆಂಬ ಸ್ಥಾನತ್ರಯಂಗಳುಂ ಸಹಸ್ರದಳ ತ್ರಿದಳ, ಏಕದಳ ಪದ್ಮತ್ರಯಂಗಳುಂ   ಜ್ಯೋತಿರ್ವರ್ಣ, ಮಹಾಜ್ಯೋತಿರ್ವರ್ಣ, ಅಪ್ರದರ್ಶವರ್ಣ, ಎಂಬ ವರ್ಣ ತ್ರಯಂಗಳುಂ, ಅಕ್ಷರಾತ್ಮಕನಾದ ಅನಕ್ಷರಾತ್ಮಕನಾದ, ನಿಃಶಬ್ದಮೆಂಬ ನಾದ ತ್ರಯಂಗಳುಂ   ಅಂತರಾತ್ಮ ಪರಮಾತ್ಮ, ಪರಬ್ರಹ್ಮವೆಂದು ಅಧಿದೇವತಾ ತ್ರಯಂಗಳುಂʼʼ

ಎಂದು ನವಚಕ್ರಗಳನ್ನು ಅವುಗಳ ವಿವರವನ್ನು ಸಂಗ್ರಹರೂಪವಾಗಿ ಬೋಧಿಸಿದ್ದಾರೆ. ಇಲ್ಲಿಯವರೆಗೆ ಹಿಂದಿನ ತ್ರಿಪದಿಗಳಲ್ಲಿ ಪ್ರತ್ಯೇಕವಾಗಿ ತಿಳಿದುಕೊಂಡ ಪ್ರವೃತ್ತಿ ಕ್ರಮದ ನವಚಕ್ರಗಳನ್ನು ನಿವೃತ್ತಿ ಕ್ರಮದಲ್ಲಿ ಅರಿಯಲು ಅನುಕೂಲವಾಗಿದೆ.

 ಶಿವಪೂಜಾ ಸಮಯದಲ್ಲಿ ಸ್ತೋತ್ರ (ಧ್ಯಾನ) ರೂಪವಾಗಿ ಷಟ್‌ಚಕ್ರಗಳನ್ನು ತಿಳಿದುಕೊಳ್ಳಲು ಕೆಳಗಿನ ಶ್ಲೋಕವು ಅತ್ಯಂತ ಸುಂದರವಾಗಿದೆ.

ಆಧಾರ ಲಿಂಗನಾಭೌ ಹೃದಯ-ಸರಸಿಜೇ ತಾಲು ಮೂಲೇ ಲಲಾಟೇ

 ದ್ವೇ ಪತ್ರೇ ಷೋಡಶಾರೇ ದ್ವಾದಶ-ದಳದಳೇ ದ್ವಾದಶಾರ್ಧೇ– ಚತುಷ್ಕೇ

ವಾಸಾಂತೇ ಬಾದಿಲಾಂತೇ ಡಫ ಕಠಸಹಿತೇ ಕಂಠ ಮೂಲೇ ಸ್ವರಾಢ್ಯೇ

 ಹಂ ಕ್ಷಂ ತತ್ತ್ವಾರ್ಥಯುಕ್ತಂ ಸಕಲದಳಗತಂ ವರ್ಣರೂಪಂ ನಮಾಮಿ

ಇದರಿಂದ ಚಕ್ರಗಳನ್ನು ಅವುಗಳ ಸ್ಥಾನ-ದಳ ಹಾಗೂ ಅಕ್ಷರ ರೂಪಾದ ಪರಶಿವನನ್ನು ಸ್ತುತಿಸಲು ಮತ್ತು ಸ್ಮರಣೆಯಲ್ಲಿಡಲು ಸಹಾಯವಾಗುವದು.

ಇಂಥ ಅಗಮ್ಯ, ಅಗೋಚರ, ಅನುಪಮವಾದ ನವಚಕ್ರಗಳ ನವಲಿಂಗಗಳನ್ನು ತಿಳುಹಿ ಕರಕಮಲದಲ್ಲಿ ತಂದಿರಿಸುವ ಸುವಿವೇಕಿಯಾದ ಸದ್ಗುರುವೆ ! ಎನ್ನ ಮೇಲೆ ಅನವರತ ಕರುಣಾಮೃತವನ್ನು ಸಿಂಚಿಸಿ ನವಲಿಂಗಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಶಕ್ತಿಯನ್ನಿತ್ತು ಕಾಪಾಡು.

ಅಷ್ಟಾಂಗಯೋಗ ನಿರಸನ

೧. ಯಮ ನಿರಸನ

ಯಮಯೋಗ ಪಾಪದಾ | ಕ್ರಮವೆಂದು ತೊಲಗಿಸುತ

ಸುಮನ ಸತ್ಕ್ರಿಯಾಕ್ರಮದ ಲಿಂಗವನಿತ್ತ

ವಿಮಲ ಶ್ರೀಗುರುವೆ ಕೃಪೆಯಾಗು   ||೯೩||

ಬ್ರಹ್ಮಾಂಡಗತನಾದ  ಪರಶಿವನು ಪಿಂಡಾಂಡದಲ್ಲಿಯೂ ವ್ಯಾಪಿಸಿಕೊಂಡಿದ್ದಾನೆ. ಆ ಪಿಂಡಾಂಡರೂಪ ಶರೀರದ ಅಂತರಂಗದ ಪರವಸ್ತುವನ್ನು ಸದ್ಗುರುವು ತನ್ನ ಶಿವಯೋಗ ಶಕ್ತಿಯಿಂದ ಶಿಷ್ಯನ ಕರಕಮಲಕ್ಕೆ ಇಷ್ಟಲಿಂಗವನ್ನಾಗಿ ಕರುಣಿಸುತ್ತಾನೆ.  ಶಿಷ್ಯನು ಶ್ರೀಗುರುವಿನಿಂದ ಆಯತ (ಬರಮಾಡಿ) ಮಾಡಿಕೊಂಡ ಇಷ್ಟಲಿಂಗವನ್ನು ಸ್ವಾಯತ (ಸ್ವಸ್ವರೂಪವನ್ನಾಗಿ) ಗೊಳಿಸಿಕೊಂಡು ಸನ್ನಿಹಿತ (ಸಮರಸ) ಮಾಡಿಕೊಳ್ಳುವದು ಅವಶ್ಯ. ಈ ಸಮರಸ ಅಥವಾ ಮಿಲನ (ಯೋಗ)ಕ್ಕೆ ಶಿವಯೋಗವೆಂದು ಕರೆಯುವರು. ಅಂಗ-ಲಿಂಗಗಳ ಯೋಗವು ಶಿವಯೋಗದಿಂದ ಸಾಧ್ಯವಾಗುವದು.

ಅಧ್ಯಾತ್ಮ ಪಥದಲ್ಲಿ ಮುನ್ನಡೆಯಲಿಚ್ಛಿಸುವ ಜೀವನು ಶಿವನೊಡನೆ ಬೆರೆಯುವದೇ ಅವನ ಧ್ಯೇಯವಾಗಿರುವದು. ಅದಕ್ಕಾಗಿ ದರ್ಶನ ಶಾಸ್ತ್ರಗಳು ಜೀವ-ಶಿವರ ಜೀವಾತ್ಮ-ಪರಮಾತ್ಮರ ಅಥವಾ ಜೀವಬ್ರಹ್ಮರ ಸಂಗಮವಾಗುವ ಪರಿಗೇನೆ ಯೋಗ ವೆ೦ದೂ ಯೋಗಮಾರ್ಗವೆಂತಲೂ ಕರೆದಿವೆ. ಯೋಗ ಮಾರ್ಗಗಳು ವಿಭಿನ್ನವಾಗಿವೆ. ಇಂಥ ಯೋಗಗಳು ಸುಲಭಸಾಧ್ಯವಲ್ಲವೆಂದರಿತ ಶಿವಕವಿಯು ಕೇವಲ ಯೋಗ ಕಡುಕಷ್ಟಕರವಾದುದೆಂದು ಕ್ರಮವಾಗಿ ಖಂಡಿಸುತ್ತಾನೆ. ಶಿವಯೋಗವನ್ನು ಸಾಧಿಸುವ ಸುಲಭತೆಯನ್ನು ಸಿದ್ಧಿಸಿ ತೋರಿಸುತ್ತಾನೆ.

ಯೋಗ ವಿಚಾರವು ಬಹುಪುರಾತನಕಾಲದಿಂದಲೂ ಬೆಳೆದು ಬಂದಿದೆ. ಜೀವಾತ್ಮಾ-ಪರಮಾತ್ಮಾ ಇವರು ಬೆರೆಯುವ ಸಾಧನಕ್ಕೆ ಯೋಗವೆಂದು ಹೆಸರು. ಪರಮಾತ್ಮನ ದರ್ಶನವನ್ನು ಮಾಡಹೊರಟ ಅನೇಕ ಶಾಸ್ತ್ರಗಳು ವಾದ-ವಿವಾದಗಳ ತೊಳಲಾಟದಲ್ಲಿ ಮುಮುಕ್ಷುವನ್ನು ಕಂಗೆಡಿಸಿದವು. ಆದರೆ ಈ ಯೋಗ ದರ್ಶನವು ಮೋಕ್ಷೋಪಾಯಕ್ಕೆ ಸರ್ವೋತ್ತಮ ಸಾಧನಾಯಿತು. ಅಂತೆಯೇ ಯೋಗದ ವಿಚಾರವು ನಾಸ್ತಿಕವಾದಿಗಳೆನಿಸಿದ ಬೌದ್ಧ, ಜೈನ ಮತಗ್ರಂಥಗಳಲ್ಲಿಯೂ ಕಂಡು ಬರುವದು. ಇನ್ನುಳಿದ ದರ್ಶನಗಳಲ್ಲಿಯಂತೂ ಯೋಗದ ವಿಚಾರ ಧಾರಾಳವಾಗಿ ತಿಳಿದು ಬರುತ್ತದೆ. ಕೆಲವರು ಯೋಗದರ್ಶನವನ್ನು ಪತಂಜಲಿ ಮಹರ್ಷಿಯು ಸೃಜಿಸಿದನೆಂದು ಪ್ರತಿಪಾದಿಸುತ್ತಾರೆ. ಪಂಡಿತರ ವಿಚಾರದಂತೆ ಈ ಮುನಿಯು ಯೋಗ ಶಾಸ್ತ್ರದ ಪ್ರವರ್ತಕನಾಗದೇ ಪ್ರಚಾರಕ ಅಥವಾ ಸಂಶೋಧಕನಾಗಿದ್ದಾನೆ. ಅವನು ಯೋಗದ ಅನುಶಾಸನಗೊಳಿಸಿದನು. ಅರ್ಥಾತ್ ಕ್ರಮಬದ್ಧವಾಗಿ ಉಪದೇಶಿಸಿದನು. ಪತಂಜಲಿ ಮಹರ್ಷಿಯು ತನ್ನ ಯೋಗದರ್ಶನದಲ್ಲಿ ೧೯೫ ಸೂತ್ರಗಳನ್ನು ರಚಿಸಿ ಅವುಗಳಲ್ಲಿ

ಸಮಾಧಿಪಾದ, ಸಾಧನಪಾದ, ವಿಭೂತಿಪಾದ, ಕೈವಲ್ಯಪಾದವೆಂದು ನಾಲ್ಕು ಭಾಗಗಳನ್ನು ಮಾಡಿದನು.

 ಯೋಗವು ಸಮಾಧಿರೂಪವಾದ ‘ಯುಜ್ ಸಮಾಧೌ” ಎಂಬ ಧಾತುವಿನಿಂದ ಉತ್ಪನ್ನವಾಗಿದ್ದು ಸಮಾಧಿಗೆ ಮೂಲವಾದ ಚಿತ್ತವನ್ನು (ಚಿತ್ತ-ವೃತ್ತಿಗಳನ್ನು) ನಿಗ್ರಹಿಸುವದೇ ಯೋಗವೆಂದು ಪತಂಜಲಿಮುನಿಯು ವ್ಯಾಖ್ಯಾನ ಮಾಡಿದನು

 “ಯೋಗಶ್ಚಿತ್ತ ವೃತ್ತಿನಿರೋಧಃ’ | ೧-೨ |

ಅಂತಃಕರಣ ವೃತ್ತಿಗಳನ್ನು ಸಂಪೂರ್ಣವಾಗಿ ನಿಗ್ರಹಿಸುವದೇ ಯೋಗವೆನಿಸುವದು. ಮನಸ್ಸೇ ಬಂಧ ಮತ್ತು ಮೋಕ್ಷಕ್ಕೆ ಕಾರಣವಾಗಿದ್ದರಿಂದ ಮನೋನಿಗ್ರಹವು ಮೋಕ್ಷಕ್ಕೆ ಮೂಲಸಾಧನವಾಗಿದೆ. ಅದಕ್ಕಾಗಿ ಮುನಿಯು ಮೊದಲನೆಯ ಸಮಾಧಿ ಪಾದದಲ್ಲಿ ಚಿತ್ತವೃತ್ತಿಗಳ ವರ್ಣನೆ ಮಾಡಿ ಎರಡನೆಯ ಸಾಧನಪಾದದಲ್ಲಿ ಕ್ರಿಯಾ ಯೋಗವನ್ನು ಸಾಧನೆಗಳ ಮುಂಖಾತರ ಹೇಳುತ್ತಾನೆ .ಅಷ್ಟಾಂಗಗಳಲ್ಲಿ ಪಂಚಾಂಗಗಳ ವಿವರ ಈ ಕ್ರಿಯಾಪಾದದಲ್ಲಿ ಬರುತ್ತದೆ. ಮೂರನೆಯ ವಿಭೂತಿಪಾದದಲ್ಲಿ ಧಾರಣ ಧ್ಯಾನ ಸಮಾಧಿಗಳ ಸ್ವರೂಪವನ್ನು ಮತ್ತು ಸಾಧನೆಯ ನಂತರ ಜೀವನು ಪಡೆಯುವ ವಿಭೂತಿತ್ವ (ಫಲ)ವನ್ನು ತಿಳಿಸಿದ್ದಾನೆ. ಮೋಕ್ಷರೂಪ ಸಮಾಧಿಯ ಸ್ವರೂಪವನ್ನು ಕೊನೆಯ ಪಾದವಾದ ಕೈವಲ್ಯ ಪಾದದಲ್ಲಿ ನಿರೂಪಿಸಿದ್ದಾನೆ. ಮೋಕ್ಷರೂಪ ಸಮಾಧಿಯು ಇಬ್ಬಗೆಯಾಗಿದೆ. ಮೊದಲು ಧ್ಯಾತಾ-ಧ್ಯಾನ ಮಾಡುವ ವ್ಯಕ್ತಿ, ದ್ಯೇಯ = ಧ್ಯಾನ ಗಮ್ಯವಾದ ಪರವಸ್ತು, ಧ್ಯಾನ-ಧ್ಯಾನಮಾಡುವ ಕ್ರಿಯೆಗಳೆಲ್ಲ ಅಡಗಿ ಕೇವಲ ಧ್ಯೇಯದ ಅರಿವು ಸಂಪ್ರಜ್ಞಾತ ಸಮಾಧಿಯಲ್ಲಿ ವ್ಯಕ್ತವಾಗುವದು. ಅಸಂಪ್ರಜ್ಞಾತ

ಸಮಾಧಿಯಲ್ಲಿ ಧ್ಯೇಯವೇ ತಾನಾಗುವನು. ಯಾವುದರ ಅರಿವೂ ಇಲ್ಲಿ ನಿಲ್ಲುವದಿಲ್ಲ. ಇದುವೆ ಯೋಗದ ಸಾಧ್ಯ ಅಥವಾ ಯೋಗ ಸಾಧನೆಯ ಫಲವಾಗಿದೆ.

 ಎರಡನೆಯ ಪಾದದಲ್ಲಿ ಬರುವ ಅಷ್ಟಾಂಗಗಳ ವಿವರವನ್ನೇ ಇಲ್ಲಿ ಶಿವಕವಿಯು ಒಂದೊಂದಾಗಿ ವಿವೇಚಿಸುತ್ತಾನೆ.

ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-

ಧಾರಣ-ಧ್ಯಾನ-ಸಮಾಧಯೋಽಷ್ಟಾವಂಗಾನಿ” ||೨-೨೯ ||

೧. ಯಮ ೨. ನಿಯಮ ೩. ಆಸನ ೪. ಪ್ರಾಣಾಯಾಮ ೫, ಪ್ರತ್ಯಾಹಾರ ೬. ಧಾರಣ ೭ ಧ್ಯಾನ ೮. ಸಮಾಧಿಗಳೆಂದು ಯೋಗಸಾಧನೆಯ ಎಂಟು ಅಂಗಗಳನ್ನು ಯೋಗ ಸೂತ್ರದಲ್ಲಿ ಪ್ರತಿಪಾದಿಸಿದ್ದಾರೆ. ಇವು ಶರೀರ ಮನಸ್ಸು ಹಾಗೂ ಇಂದ್ರಿಯಗಳ

ಶುದ್ಧಿಗಾಗಿ ಹೇಳಿದ ಸಾಧನೆಗಳು. ಇವುಗಳು ಸುಲಭ-ಸಾಧ್ಯವಾದವುಗಳಲ್ಲ. ಅತ್ಯಂತ ಕಠಿಣತರವಾಗಿವೆ. ಅದಕ್ಕಾಗಿ ಶಿವಾದ್ವೈತಿ (ವೀರಶೈವರು)ಗಳು ಕಷ್ಟಸಾಧ್ಯವಾದ ಅಷ್ಟಾಂಗಗಳನ್ನು ಶಿವಯೋಗದಲ್ಲಿಯೇ ಸುಲಭವಾಗಿ ಅಳವಡಿಸಿಕೊಂಡಿದ್ದಾರೆ. ಇದೇ ವಿಚಾರವು ಈ ಪ್ರಕರಣದಲ್ಲಿ ಪ್ರತಿಪಾದಿತವಾಗಿದೆ. ಪ್ರಸ್ತುತ ತ್ರಿಪದಿಯಲ್ಲಿಯಮಾಂಗದ ವಿವರ ಬಂದಿದೆ.

ಅಷ್ಟಾಂಗಗಳಲ್ಲಿ ಮೊದಲನೆಯ ಅಂಗ ‘ಯಮ’, ಯಮವೆಂದರೆ ನಿಯಂತ್ರಿಸುವದು, ನಿಗ್ರಹಿಸುವದು, ಹತ್ತಿಕ್ಕುವದು, ಈ ಅರ್ಥ ಕೊಡುವ ‘ಯಮ್’ ೧ನೇ ಗಣ ಧಾತುವಿನಿಂದ ಯಮಶಬ್ದವು ಸಿದ್ಧವಾಗಿದೆ. ‘ಯಮ’ ಶಬ್ದಕ್ಕೆ ನಾನಾರ್ಥಗಳಿವೆ. ‘ಯಮ’ ವೆಂದಾಕ್ಷಣ ಭಯಂಕರನಾದ ಯಮಧರ್ಮನ ಅರ್ಥವೂ ಗೋಚರಿಸುತ್ತದೆ. ಮುಖ್ಯವಾಗಿ ಇಲ್ಲಿ ಯಮವೆಂದರೆ ಆತ್ಮ ಸಂಯಮನ ಅಥವಾ ಬಹಿರಿಂದ್ರಿಯಗಳನ್ನು ನಿಗ್ರಹಿಸುವದು. ಈ ಯಮವು

ಅಹಿಂಸಾ-ಸತ್ಯಾಸ್ತೇಯ-ಬ್ರಹ್ಮಚರ್ಯಾುಪರಿಗ್ರಹಾ ಯಮಾಃ ||

ಅಹಿಂಸಾವೃತ, ಸತ್ಯ ಪರಿಪಾಲನೆ, ಅಸ್ತೇಯ ಸಾಧನೆ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳೆಂದು ಐದು ತೆರನಾಗುತ್ತದೆ. ತನು-ಮನ-ವಚನದಿಂದ ಪರರನ್ನು ನೋಯಿಸದೇ ವಿನಯದಿಂದಿರುವದು ಅಹಿಂಸೆಯು. ಮನ-ವಚನಗಳು ಯಥಾರ್ಥ ವಾಗಿರುವದೇ ಸತ್ಯವೆನಿಸುವದು. ತ್ರಿಕರಣಗಳಿಂದಲೂ ಪರದ್ರವ್ಯವನ್ನು ಕದಿಯದಿರುವದು ಅಥವಾ ಆಶಿಸದಿರುವದು ಆಸ್ತೇಯವೆನಿಸುವದು. ವೀರ್ಯವನ್ನು ರಕ್ಷಿಸುವದು ಬ್ರಹ್ಮಚರ್ಯ (ಗುಪ್ತೋಂದ್ರಿಯ ಸಂಯಮನ) ಅಥವಾ ವನಿತೆಯರ ವಿಲಾಸವನ್ನು ಕಂಡು, ಕೇಳಿದಲ್ಲಿ ಆ ಸ್ತ್ರೀಯಳನ್ನು ಮನೋವಾಕ್ಕಾಯಗಳಿಂದ ತಾಯಿಯೆಂದು ಅನುಭವಿಸುವದೇ ಬ್ರಹ್ಮಚರ್ಯವು. ತನ್ನ ಅವಶ್ಯಕತೆಗಿಂತ ಹೆಚ್ಚಾಗಿ ಧನ-ಧಾನ್ಯಾದಿ ವಿಷಯಗಳನ್ನು ಸಂಗ್ರಹಿಸದಿರುವದು ಹಾಗೂ ರಕ್ಷಿಸಿ ಇಡದಿರುವದು ಅಪರಿಗ್ರಹ ವೆನಿಸುವದು. ಈ ಎಲ್ಲ ಯಮಾಂಗಗಳನ್ನು ಆಚರಿಸುವಲ್ಲಿ ಭಯಾನಕತೆ, ಭಯಂಕರತೆಯೆನಿಸದಿರದು.

ಈ ಯಮದ ವಿಚಾರವನ್ನು ”ಶಿವಯೋಗಪ್ರದೀಪಿಕೆ’ ಯಲ್ಲಿ

ಆಹಾರ ನಿದ್ರೇಂದ್ರಿಯ ದೇಹ ಸರ್ವ

ವ್ಯಾಪಾರ ಶೀತಾತಪಸಂಜ್ಞಕಾನಾಂ |

ಜಯಶ್ಚ ಶಾಂತಿಶ್ಚ ಭವೇದ್ಯಮಾಂಗಃ

ಶನೈಃಶನೈಃ ಸಾಧಯಿತುಂ ಸಯೋಗ್ಯಃ   | ೪/೪ |

ಭಕ್ಷ್ಯ-ಭೋಜ್ಯಾದಿ ಷಡ್ಚಿಧಾಹಾರ, ತಮೋಗುಣಾತ್ಮಕ ನಿದ್ರೆ, ಶ್ರೋತ್ರಾದಿ  ಜ್ಞಾನೇಂದ್ರಿಯಗಳು, ದೇಹದ ಕರ್ಮರೂಪ ವಾಗಾದಿ ಕರ್ಮೇಂದ್ರಿಯಗಳ ಸಮಸ್ತ ವ್ಯಾಪಾರದಿಂದಾಗುವ ಶೀತ-ಉಷ್ಣ ಅಂದರೆ ಸುಖ-ದುಃಖಗಳನ್ನು ಗೆಲ್ಲುವ ಯೋಗ್ಯತೆ ಮತ್ತು ಅದರಿಂದ ಶಾಂತಿ ದೊರೆಯುವದೇ ಯಮವೆನಿಸುವದು. ಇದನ್ನು ಸಾವಕಾಶವಾಗಿ ಸಾಧಿಸಬೇಕೆಂದು ತಿಳಿಸಿದ್ದಾರೆ.

ಈ ಯಮಸಾಧನೆಯಿಂದ ತನು-ಮನ-ಮಾತುಗಳಿಂದ ಇತರರನ್ನು ನೋಯಿಸದಂತಿರುವ ದಯಾಗುಣ ಬೆಳೆಯುವದು. ಹಿಂಸಾಭಾವ ದೂರವಾಗುವದು. ಮನ ಮಾತುಗಳ ಯಥಾರ್ಥವಾಗುವದರಿಂದ ವಾಕ್ (ವಾಣಿ) ಪರಿಶುದ್ಧವಾಗುವದಲ್ಲದೆ ವಾಕ್‌ಸಿದ್ಧಿಯೂ ಸಾಧ್ಯವಾಗುವದು. ಅಸ್ತೇಯ ಸಾಧನೆಯಿಂದ ಸ್ವಾರ್ಥಪರತೆ ದೂರಾಗುವದು. ತನ್ನಂತೆ ಇತರರನ್ನು ಕಾಣುವ ಮನೋಭಾವ ಬೆಳೆಯುವದು. ಬ್ರಹ್ಮಚರ್ಯ ಪಾಲನೆಯಿಂದ “ಮಾತೃವತ್ ಪರದಾರೇಷು” ಇತರ ಸ್ತ್ರೀಯರಲ್ಲಿ ತನ್ನ ತಾಯಿಯೆಂಬ ಭಾವ ಬಲಗೊಳ್ಳುವದು. ಶಕ್ತಿಯುತನೂ, ಆತ್ಮಶಕ್ತಿ ಸಂಪನ್ನನೂ ಆಗುವನು. ಅಪರಿಗ್ರಹದಿಂದ ಆಶೆಯು ದೂರವಾಗಿ ವೈರಾಗ್ಯವು ವ್ಯಕ್ತವಾಗುವದು. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ರೂಪಾದ ಯಮ ಸಾಧನೆಯು ಸರ್ವರಿಗೂ ಅತ್ಯುತ್ತಮವಾದುದು. ಆದರೆ ಅದರ ಅನುಷ್ಠಾನವು ಅತ್ಯಂತ ಶ್ರಮದಾಯಕವೂ, ಕಷ್ಟಸಾಧ್ಯವೂ ಆಗಿದೆ. ಪ್ರತ್ಯಕ್ಷ ವಿಷಯಗಳನ್ನು ಗ್ರಹಿಸುವ ಬಹಿರಿಂದ್ರಿಯಗಳನ್ನು ನಿಗ್ರಹಿಸುವದು ಸುಲಭವಲ್ಲ.

೪೪ನೆಯ, ಕಾಮನ ವಿಷಯಕವಾದ ತ್ರಿಪದಿಯಲ್ಲಿ ವಿವರಿಸಿದಂತೆ ಬಹಿರ್ಮುಖಗಳಾದ ಇಂದ್ರಿಯಗಳನ್ನು ಸ್ಥಿಮಿತದಲ್ಲಿರಿಸುವಲ್ಲಿ ಸುಕೃತವೇ ಬೇಕು. ಗುರುಕೃಪೆ ಅವಶ್ಯಬೇಕು. ಮನೋವಿಜ್ಞಾನಿಗಳಾಗಲ್ಲಿ, ಶರಣರಾಗಲಿ ಇಂದ್ರಿಯ ನಿಗ್ರಹವನ್ನು ಮನ್ನಿಸುವದಿಲ್ಲ. ಇಂದ್ರಿಯ ನಿಗ್ರಹವ ಮಾಡಿದರೆ ದೋಷಂಗಳೇ ಉಂಟಾಗುವದಲ್ಲದೆ ಶಾಂತಿ ಸಿಗುವದಿಲ್ಲ. ಯಮದ ಅರ್ಥ ಭಯಂಕರತೆಯನ್ನು ಸೂಚಿಸುತ್ತದೆಂದಮೇಲೆ ಅವುಗಳನ್ನೇ ಪರಿಪಾಲಿಸುವದು ಕಷ್ಟ ಸಾಧ್ಯವೇ ಸರಿ. ಅದನ್ನರಿತ ಶರಣರು ಯಮಯೋಗದ ಕ್ರಮವನ್ನು ಬದಿಗಿರಿಸಿ ಇಂದ್ರಿಯಗಳನ್ನು ಪರಿವರ್ತಿಸುವ ಪರಿಪಕ್ವಗೊಳಿಸುವ ಅರ್ಥಾತ್ ಉದಾತ್ತೀಕರಿಸುವ ವಿನೂತನ ತತ್ತ್ವವನ್ನು ಮನನ ಮಾಡಿಕೊಂಡರು. ಭಕ್ತಿ-ಜ್ಞಾನ ಕ್ರಿಯೆಗಳಿಂದ ಮನವನ್ನು ಸುಮನವನ್ನಾಗಿಸುವ ಗುರು ಕರುಣಿಸಿದ ಇಷ್ಟಲಿಂಗಾರಾಧನೆಯಲ್ಲಿ ತೊಡಗಿಸಿದರು. ಲೀನಗೊಳಿಸಲು ಹಚ್ಚಿದರು. ಬಹಿರಿಂದ್ರಿಯಗಳನ್ನು ಲಿಂಗಪೂಜೆಯ ಸಾಧನ ಸಾಮಗ್ರಿಗಳಲ್ಲಿ ವಿನಿಯೋಗಿಸಿದರು.

ಯಾವುದಕ್ಕಾದರೂ ಬಂಧನ ಮಾಡಿದರೆ ಅದು ವಿಮೋಚನೆಗಾಗಿ ಆತುರ ಪಡುವದು ಸ್ವಾಭಾವಿಕ. ಇದು ಪ್ರಕೃತಿ ನಿಯಮ. ಸಹಜದಲ್ಲಿ ಸುಜ್ಞಾನ ಯುಕ್ತ ಕ್ರಿಯೆಗಳಿಂದ ಅಗಾಧವಾದ ಪರಿಣಾಮ ತೋರಿಬರುವುದು. ಇಂದ್ರಿಯಗಳಿಗೆ ಗೋಚರಿಸುವ ವಿಷಯಗಳು ಶಿವನಸೊತ್ತು. ತನಗೆ ಬಂದುದರಲ್ಲಿ ತಾನು ತೃಪ್ತನಾಗಿರಬೇಕೆಂಬ ಮನೋಭಾವ, ಶಿವಮಯಾತ್ಮಕವಾದ ಪ್ರಪಂಚದಲ್ಲಿ ಯಾವುದೇ ಜೀವಿಗೆ ನೋವು ಮಾಡಿದರೆ ಶಿವನಿಗೇನೇ ಆಗುವದೆಂಬ ವಿಚಾರ ಸರಣಿ: ಮತ್ತು ಮಾಡುವ-ನುಡಿಯುವ ಕ್ರಿಯೆಗಳು ಲಿಂಗಮೆಚ್ಚಬೇಕೆಂಬುವ ಅನುಭವಿಗಳ ಉಕ್ತಿ; ಲಿಂಗಪೂಜೆಯನ್ನು ಮಾಡಲು ಬೇಕಾದ ಜಲ ಹೂವು ಪತ್ರಿಗಳನ್ನು ತರುವಾಗಲು ಅವುಗಳನ್ನು ವಿನಂತಿಸಿ ಅನುಮತಿ ಕೋರಿಕೊಳ್ಳುವ ವಿಧಾನ, ಲಿಂಗದ ಪ್ರಾಣನಾದ ಜಂಗಮತೃಪ್ತಿಗೆ ಬೇಕಾದ ಪ್ರಸಾದವನ್ನು ಸ್ವತಃ (ದುಡಿದು) ಕಾಯಕ ಮಾಡಿ ದಾಸೋಹ ಮಾಡಬೇಕೆಂಬುವ ವಿಶಾಲ ತಳಹದಿಯುಳ್ಳ ಶಿವಭಕ್ತನಿಗೆ ಯಮದ ಅವಶ್ಯಕತೆಯಿಲ್ಲ. ಅವನು ಆಚರಿಸುವ ಪ್ರತಿಯೊಂದು ಕ್ರಿಯೆಗಳು ಸತ್‌ಕ್ರಿಯೆಗಳು; ಲಿಂಗ ಕ್ರಿಯೆಗಳು. ಆದ್ದರಿಂದ ಮನಸ್ಸು ಸುಮನವಾಗುತ್ತದೆ. ಭಾವ ಪರಿಶುದ್ಧವಾಗುವದು. ಯಮಾಚರಣೆಯು ಸಹಜವಾಗುವದು. ಮತ್ತು ಯಮಾಂಗಗಳನ್ನು ಪಾಲಿಸದಿದ್ದರೆ ಪಾಪವೆಂಬ ಭೀತಿ ಬಯಲಾಗುವದು. ಓ ಮಲರಹಿತನೆನಿಸಿದ ಪರಮ ಗುರುವೆ ! ನನ್ನ ತ್ರಿಮಲಗಳನ್ನು ನಾಶ ಮಾಡಿದವನೆ ! ಎನ್ನ ಕ್ರಿಯೆಗಳೆಲ್ಲ ಸತಕ್ರಿಯೆಗಳಾಗುವಂತೆ ಕರುಣಿಸು.    

ನಿಯಮಾಂಗ ನಿರಸನ

ನಿಯಮಯೋಗವೆ ಭವದಾ | ಲಯವೆಂದು ತೊಲಗಿಸುತ

ಸ್ವಯಲಿಂಗ ಪೂಜೆಯ….ನಿಯಮವನು ಕರುಣಿಸಿದ

ಭಯಹರ್ತ ಗುರುವೆ ಕೃಪೆಯಾಗು   ||೯೪ ||

ಅಷ್ಟಾಂಗ ಯೋಗದ ಎರಡನೆ ಅಂಗ ನಿಯಮ. ಈ ನಿಯಮವೂ ಐದು ತೆರನಾಗಿದೆ. ಯೋಗ ದರ್ಶನದಲ್ಲಿ

ಶೌಚ-ಸಂತೋಷ-ತಪಃ-ಸ್ವಾಧ್ಯಾಯೇಶ್ವರ-

ಪ್ರಣಿಧಾನಾನಿ ನಿಯಮಾಃ”   ||೨-೩೨ ||

ನಿಯಮಗಳಲ್ಲಿ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನಗಳೆಂಬ ಐದು ಭಾಗಗಳು. ಯಮವು ಬಹಿರಿಂದ್ರಿಯ ನಿಗ್ರಹ ಸಾಧನವಾದರೆ ನಿಯಮವು ಅಂತರಿಂದ್ರಿಯ ನಿಗ್ರಹವಾಗಿದೆ. ಅಂತರಂಗಶುದ್ಧಿಗಾಗಿ ಹೇಳಿದ ವಿಧಾನಂಗಳೇ ನಿಯಮಂಗಳು. ಮಣ್ಣು ನೀರಿನಿಂದಾಗುವ ಶುದ್ಧತೆಯೆ ಬಾಹ್ಯ ಶೌಚವು. ಭಾವಶುದ್ಧಿಯಿಂದಾಗುವದು ಅಂತಃಶೌಚವು. ಮನೆಯನ್ನು ಒಳಹೊರಗೂ ಸ್ವಚ್ಛವಾಗಿರಿಸುವಂತೆ ಶಿವನ ವಾಸಸ್ಥಾನವಾದ ದೇಹ ದೇವಾಲಯಗಳನ್ನು ಒಳಹೊರಗೂ ಪವಿತ್ರಗೊಳಿಸುವ ಸಾಧನೆಯೇ ಶೌಚ ವೆನಿಸುವದು. ತನ್ನ ಉದ್ಯೋಗ (ಕಾಯಕ) ದಿಂದ ಬಂದುದರಲ್ಲಿ ತೃಪ್ತನಾಗಿರುವದೇ ಸಂತೋಷವು, ದೊರೆತುದಕ್ಕಿಂತ ಹೆಚ್ಚಿನ ಆಸೆ ಮಾಡದಿರುವದೂ ಸಂತೋಷವೇ. ತಪಸ್ಸೆಂದರೆ ಚಾಂದ್ರಾಯಣಾದಿ ಕಠಿಣ ವ್ರತಗಳಿಂದ ತನ್ನ ಶರೀರೇಂದ್ರಿಯಗಳನ್ನು ನಿಗ್ರಹಿಸುವದು; ಶೀತೋಷ್ಣ, ಸುಖ- ದುಃಖ, ಹಸಿವು-ನೀರಡಿಕೆ ಮೊದಲಾದ ದ್ವಂದ್ವಗಳನ್ನು ತಡೆಯುವದೂ ತಪವು. ಆರಾಧ್ಯದೇವತೆಯ ಮಂತ್ರವನ್ನು ಜಪಿಸುವದು; ಮೋಕ್ಷದಾಯಕ ಶಾಸ್ತ್ರಗಳ ಅಭ್ಯಾಸ ಮಾಡುವದು ಸ್ವಾಧ್ಯಾಯವೆನಿಸುವದು. ಗುರುಗಳಲ್ಲಿ, ದೇವರಲ್ಲಿ ಸರ್ವ ಕರ್ಮಗಳನ್ನು ಅರ್ಪಣಮಾಡುವ ಬುದ್ಧಿ ಅರ್ಥಾತ್ ಸಮರ್ಪಣ ಭಾವವೇ ಈಶ್ವರ ಪ್ರಣಿಧಾನವೆನಿಸುವದು. ಹೀಗೆ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನಗಳಿಂದ ಕೂಡಿದುದೇ ನಿಯಮವು, ನಿಜಗುಣ ಶಿವಯೋಗಿಗಳು ತಮ್ಮ “ಪಾರಮಾರ್ಥ ಪ್ರಕಾಶಿಕೆ’ ಯಲ್ಲಿ

ಶ್ರೀ ಗುರುವಿನಲ್ಲಿ ಭಕ್ತಿಯು, ಷಡಧ್ವಾತೀತವಾಗಿ ಸ್ವಪರ

ಪ್ರಕಾಶದಿಂ ನಿಜಮುಕ್ತಿ ಸ್ಥಾನಮಾನದ ಪರಮಪದದಲ್ಲಿ ಪ್ರೀತಿಯು

ಜನಸಂಗಕ್ಕೆ ದೂರವಾಗಿಹ ತನುವು. (ಇದು ಶೌಚವು)

ಅಪ್ರಯತ್ನವಾಗಿ ಅನಿಚ್ಛಾಪ್ರಾರಬ್ಧದಿಂ ಬಂದ ಯಥಾಲಾಭ

ಸಂತೋಷವು ಬಾಧಾರಹಿತವಾಗಿ ಮನೋರಮ್ಯವಾದೇಕಾಂ

ತಾಶ್ರಯದಲ್ಲಿಯ ತಾತ್ಪರ್ಯವು, ಮನಮಂ ಬಹಿರ್ಮುಖ

ವಾಗಲೀಯದಿಹುದು, ವಿಚಿತ್ರ ವಿಷಯಂಗಳಲ್ಲಿಯ ವಿರತಿಯು

ಎಂಬಿವೆಲ್ಲುಂ ನಿಯಮವೆಂಬಂಗಮಕ್ಕುಂ

ಎಂದು ನಿಯಮದ ವಾಖ್ಯೆಯನ್ನು ಮಾಡಿರುವರು. ಇದಕ್ಕೂ ಸರಳವಾಗಿ ದ್ವಿತೀಯ ಪರಿಚ್ಛೇದದಲ್ಲಿ ನಿಯಮವನ್ನು ಹತ್ತು ತೆರನಾಗಿ ವಿಂಗಡಿಸಿರುವರು

ಬಳಿಕ ಭೋಗ್ಯ ವಸ್ತುಗಳ ಲಬ್ದಿ-ನಾಶಂಗಳಲ್ಲಿ ಸಮಾನ

ಬುದ್ದಿಯೆನಿಪ ಸಂತೋಷವು. ಶಿವಾಗಮೋಕ್ತಂಗಳಾದ ವಿಧಿನಿಷೇಧಂ

ಗಳಿಂ ಪುಣ್ಯಪಾಪಂಗಳಪ್ಪವೆಂಬ ವಿಶ್ವಾಸವು, ತನಗಾಚಾರ್ಯೋ

ಪದೇಶದಿಂದಾದ ಸತ್ಕೃತ್ಯದೇಕತೆಯು, ಯೋಗಾರ್ಥಮಾಗಿ

ದೇಹಶೋಷಣರೂಪ ತಪವು. ಮೇಣು ನಾನಾರು ಮೋಕ್ಷವೆಂ

ತಪ್ಪುದೆಂಬಿವು ಮೊದಲಾದಲೋಚನರೂಪ (ಸ್ವಾಧ್ಯಾಯ ತಪವು)

ಭಸ್ಮನಿಷ್ಠತ್ವಾದಿ ವ್ರತವು. ಧ್ಯಾನಸ್ತೋತ್ರಾಭಿಷೇಕತ್ವಾದಿಗಳಿಂ

ದೀಶ್ವರಾರ್ಚನವು ಮಾನಸೋಪಾಂಶು ವಾಚಕಂಗಳಿಂ ಪ್ರಣವ

ಪಂಚಾಕ್ಷರಾದಿ ಮಂತ್ರಜಪವು. ಲೋಕವಿರು ಶಾಸ್ತ್ರವಿರುದ್ಧ

ಮಾದ ಮಾರ್ಗಂಗಳಲ್ಲಿ ಮನವೆರಗದಿಹುದು. ಯೋಗಶಾಸ್ತ್ರಂ

ಗಳಂ ಕೇಳುವುದು ಸತ್ಪ್ರಾತ್ರದಾನವು ಎಂಬ ಹತ್ತು ನಿಯಮಂ

ಗಳಕ್ಕುಂ (೨೯ನೇ ಪುಟ)

ಮೊದಲಿನ ಐದರ ಭಾವವು ಈ ಹತ್ತು ನಿಯಮಗಳಲ್ಲಿ ಬಂದಿದೆ. ಆದರೆ ಇವುಗಳಲ್ಲಿ ಕೆಲವು ಶಿವಾದೈತ ಸಿದ್ಧಾಂತಕ್ಕೂ ಸಮನ್ವಯಗೊಂಡಿವೆ. ಯೋಗ ದರ್ಶನಕಾರರು ಹೇಳುವ ನಿಯಮಗಳು ಕಠಿಣತರವಾಗಿವೆ. ಪುಣ್ಯ ಸಂಗ್ರಹಕ್ಕಾಗಿ ಮಾಡುವ ಶೌಚ-ತಪಾದಿಗಳು ಪುನರ್ಜನ್ಮಕ್ಕೆ ಕಾರಣವಾಗಿವೆ. ಚಾಂದ್ರಾಯಣ ವೃತದಲ್ಲಿ ಪ್ರತಿಪದೆಯಿಂದ ಒಂದೊಂದು ತುತ್ತು ಪ್ರಸಾದವನ್ನು ಹೆಚ್ಚಿಸಿ ಸ್ವೀಕರಿಸುತ್ತ ಹೋಗಿ, ಪುನಃ ಹುಣ್ಣಿಮೆಯಿಂದ ಚಂದ್ರ ಕುಂದಿದಂತೆ ಒಂದೊಂದು ತುತ್ತನ್ನು ಕಡಿಮೆ ಮಾಡುವರು. ಹೀಗೆ ಕಾಯವನ್ನು ಶೋಷಿಸಿದರೆ ಶಿವಕೊಟ್ಟ ಪ್ರಸಾದ ಭೋಗ ತಪ್ಪಿಹೋಗಿವದು. ಅಲ್ಲದೆ ಕೂಡಲ ಸಂಗನನ್ನು ಒಲಿಸಲು ಬಂದ ಪ್ರಸಾದಕಾಯ ಕಂದಿ ಹೋಗುವದೆಂದು ಶರಣರು ಸಾರಿದ್ದಾರೆ.

ಧರ್ಮ ಸಾಧನೆಗೆ ಮೂಲವಾದ ಶರೀರವು ಕೃಶವಾಗಿ ಪೂರ್ಣಜ್ಞಾನವನ್ನು ಸಂಪಾದಿಸದೇ ಭವಕ್ಕೆ ಪುನಃ ಪುನಃ ಬರಬೇಕಾಗುವದು.

ಅದು ಕಾರಣ ಶರಣನಿಗೆ (ಶಿಷ್ಯನಿಗೆ) ಗುರುವು ಶರೀರೇಂದ್ರಿಯಗಳನ್ನು ಶೋಷಿಸುವ ನಿಯಮವನ್ನು ಕಡೆಗಣಿಸಿ ಸ್ವಯಲಿಂಗ ಪೂಜಾ ನಿಯಮಗಳನ್ನು ನಿರೂಪಿಸುತ್ತಾನೆ. ಆಯತ ಮಾಡಿಕೊಂಡ ಲಿಂಗವು ಸ್ವಯವಾಗುವ (ಸ್ವಾಯತ) ಸಾಧನವೇ ಲಿಂಗಾರ್ಚನೆ. ಆದರೆ ದೇಹೇಂದ್ರಿಯಾದಿಗಳನ್ನು ಶೋಷಿಸುವ ನಿಯಮ ಪಾಲಕನಿಗೆ ಪರಿಪೂರ್ಣ ಸಂತೋಷಸಿಕ್ಕದು. ವಿಷಯಾದಿಗಳನ್ನು ನೋಡಿದ ಮನದಲ್ಲಿ ಕಾಮನೆ ಬರುವುದು ಸಹಜ. ಇದನ್ನು ಲಿಂಗಪೂಜಕನು ಲಿಂಗೋಪಭೋಗಿ (ಲಿಂಗಭೋಗೋಪಭೋಗಿ) ಯಾಗಿ ಉದಾತ್ತೀಕರಿಸಿಕೊಂಡು ಸದಾ   ಸಂತೋಷಿಯಾಗುವನು.

ಗುರುಮುಖದಿಂದ ಬಾರದ, ಸ್ವಾನುಭಾವದಲ್ಲಿ ಅಳವಡದ ಜಪಾದಿಗಳು, ವಾದ-ವಿವಾದದಿಂದ ಕೂಡಿದ ಮೋಕ್ಷ (ಅದ್ವೈತ) ಗ್ರಂಥಗಳ ಸ್ವಾಧ್ಯಾಯವು ಶಿವಾನುಭವದಂತೆ ತೃಪ್ತಿಯನ್ನು ಕೊಡಲಾರದು. ಗುರು-ದೇವರಲ್ಲಿ ಅರ್ಪಿಸುವ ಈಶ್ವರಪ್ರಣಿಧಾನಕ್ಕಿಂತ ಗುರು-ಲಿಂಗ-ಜಂಗಮಕ್ಕರ್ಪಿಸುವ ತ್ರಿವಿಧ ದಾಸೋಹವು ಮಿಗಿಲಾಗಿದೆ. ತನು-ಮನ-ಧನಗಳ ಸಮರ್ಪಣೆಯಾಗಿ ಭೃತ್ಯಾಚಾರವು ಅಳವಡುತ್ತದೆ. ಭೃತ್ಯಾಚಾರವನ್ನು ಕಲಿಸಿ ಸ್ವಯಲಿಂಗ ಪೂಜೆಯ ನಿಯಮವನ್ನು ಕರುಣಿಸುವ ಗುರುವು ಭವ-ಭಯವನ್ನು ಹರಣ ಮಾಡುವನು. ಗುರು, ಲಿಂಗ, ಜಂಗಮ ಭಕ್ತನಾದವನಿಗೆ ಭವ-ಭಯವಿಲ್ಲ. ಮರಣವೇ ಮಹಾನವಮಿಯಾದ ಮೇಲೆ ಭಯವೆಂಬುದೇ ಇರುವದಿಲ್ಲ. ನಿಷ್ಕಾಮಕರ್ಮವೆನಿಸಿದ ಲಿಂಗಾರ್ಚನೆಯು ಭವ (ಪುನರ್ಜನ್ಮ) ವನ್ನು ನೀಗುತ್ತದೆ.

ಇಲ್ಲಿ ಶಿವಕವಿಯು ಪ್ರಯೋಗಿಸಿದ ”ಸ್ವಯಲಿಂಗಪೂಜೆ” ಪದವು ಅತ್ಯಂತ ಅರ್ಥಪೂರ್ಣವೂ ತಾತ್ವಿಕವೂ ಆಗಿದೆ. ಇಷ್ಟಲಿಂಗವು ಸ್ವಯಲಿಂಗವೆನಿಸಿದೆ. ಇದು ಅಂಗನಿಗೆ ಭಿನ್ನವಾದುದಲ್ಲ, ಅಂಗನ ಸ್ವಸ್ವರೂಪವೇ ಇಷ್ಟಲಿಂಗವಾಗಿರುತ್ತದೆ. ತನ್ನ ಚಿತ್ಕಳೆಯೇ ಲಿಂಗವಾಗಿ ಬಂದಿದೆ. ತನಗಿಂದ ಅನ್ಯವಾದುದಲ್ಲ. ತಾನೇ ಲಿಂಗ, ಅದುವೇ ತಾನು. ಮತ್ತು

*”ಮುನ್ನನಾದಿಯ ಪರಾತ್ಪರ ನಿರಂಜನ ಶರಣ

ತನ್ನ ಹೃತ್ಕಮಲದ ಪರಂಜ್ಯೋತಿ ಲಿಂಗವನು

ಭಿನ್ನವಿಲ್ಲದೆ ವಾಮಕರಕಂಜದೊಳ್ ಪಿಡಿದು ತನ್ನ ತಾನರ್ಚಿಸುತಿಹ” ||

ನೆಂದು- ಸ್ವಯಲಿಂಗಪೂಜೆಯ ಅರ್ಥವನ್ನು ಸ್ಪಷ್ಟವಾಗಿ ಈ ಕವಿಯು ಬೇರೆಡೆ ತಿಳಿಸಿದ್ದಾನೆ. ಹಿಂದೆ ಪ್ರತಿಪಾದಿಸಿದ ಗುರುಕರುಣೆಯ ವಿವರದಿಂದಲೂ ಈ ಮಾತು ಯಥಾರ್ಥವಾಗಿ ವೇದ್ಯವಾಗದೇ ಇರದು.

ಇಷ್ಟಲಿಂಗ ಪೂಜೆಯಲ್ಲಿ ಪೂಜ್ಯಪೂಜಕ ಭಾವವಿರುವದಿಲ್ಲ.ʼʼ ರುದ್ರೋ ಭೂತ್ವಾ ರುದ್ರಂ ಯಜೇತ್ʼʼ ಶಿವನಾಗಿ ಶಿವನನ್ನು ಪೂಜಿಸಬೇಕೆಂದೇ ಶ್ರುತಿ ಸಾರುತ್ತಿದೆ. ಲಿಂಗಭಕ್ತನು ಸ್ವಸ್ವರೂಪದ ಅನುಸಂಧಾನ ಮಾಡುತ್ತಾನೆ. ಆದರೆ ಸ್ಥಾವರಲಿಂಗ ಪೂಜಕನ ಪರಿ ಬೇರೆ. ಲಿಂಗ ಬೇರೆ-ತಾನು ಬೇರೆಂದು ಆರಾಧಿಸುತ್ತಾನೆ. ಇಲ್ಲಿ ಸ್ಥಾವರ ಲಿಂಗವು ಉಪಾಸ್ಯವಾದರೆ ತಾನು ಉಪಾಸಕನೆನಿಸುವನು. ಇದು ಇದಿರಿಟ್ಟು ಮಾಡುವ ಪೂಜೆಯಾಗುವದು. ಈ ದೇವರು ದೇವಾಲಯದಲ್ಲಿಯೇ ಲಭ್ಯವಾಗುತ್ತಿದ್ದರೆ ಇಷ್ಟಲಿಂಗವು ಸದಾ ಶರೀರವನ್ನು ಹೊಂದಿಕೊಂಡಿರುತ್ತದೆ. ಸ್ಥಾವರ ಲಿಂಗವನ್ನು ಸ್ವತಃ ಅರ್ಚಿಸುವ ಅವಕಾಶ ಕಡಿಮೆ. ಪೂಜಾರಿಯು ಮಧ್ಯಸ್ಥನಾಗುವನು. ಅಲ್ಲಿ ಮನದಣಿಯುವಂತೆ ಪೂಜೆಗೈಯುವ ಪರಿಸರವಿಲ್ಲ. ಇಷ್ಟಲಿಂಗವನ್ನು ತನಗಾನಂದನಾಗುವ ವರೆಗೂ ತನ್ನಾಲಯದಲ್ಲಿ ಪೂಜಿಸಬಹುದು. ಗುರೂಪದಿಷ್ಟ ಷಡಕ್ಷರ ಮಂತ್ರಾನುಷ್ಠಾನವು ಲಿಂಗಭಕ್ತನನ್ನು ಲಿಂಗವನ್ನಾಗಿಸುತ್ತದೆ. ಲಿಂಗ ಪೂಜಿಸುವಲ್ಲಿ ಸ್ವಾನುಭಾವವು ಓತಪ್ರೋತವಾಗಿರುತ್ತದೆ. ಗುರುವಿಗೆ ತನುವಿನ ಸೇವೆಯನ್ನು ಲಿಂಗದಲ್ಲಿ ಮನವನ್ನು ಜಂಗಮನಿಗೆ ಧನವನ್ನು ಅರ್ಪಿಸುವ ಭಕ್ತನಲ್ಲಿ ವಿಷಯವಾಸನೆಯು ಅಳಿಯುತ್ತ ಹೋಗುತ್ತದೆ. ಅಂದ ಮೇಲೆ ನಿಯಮ ಯೋಗವನ್ನು ಸಾಧಿಸಿ ಪುನಃ ಪುನಃ ಹುಟ್ಟಿ ಬರುವದಕ್ಕಿಂತ ನಿತ್ಯಮುಕ್ತನನ್ನಾಗಿಸುವ ಸ್ವಯಲಿಂಗ ಪೂಜೆಯ ನಿಯಮ ಅಸದೃಶವಾದುದು. ಅಮೋಘವಾದುದು. ಓ ಸದ್ಗುರುವೆ ! ಭವಭಯಹರನೆ ! ಸ್ವಯಲಿಂಗ ಪೂಜೆಯ ನಿಯಮವು ಚೆನ್ನಾಗಿ ಎನ್ನಲ್ಲಿ ಅಳವಡು ವಂತೆ ಕರುಣಿಸಿ ಕಾಪಾಡು.

೩. ಆಸನದ ಆಯಾಸ

ಆಸನದ ಯೋಗದ | ಭ್ಯಾಸವಾಯಸವೆಂದು

ಓಸರಿಸಿ ಕರಕಂ – ಜಾಸನ ಲಿಂಗವಿತ್ತು

ಲ್ಲಾಸ ಶ್ರೀ ಗುರುವೆ ಕೃಪೆಯಾಗು ೯೫ ||

ಯೋಗದ ಮೂರನೆಯ ಅಂಗ ಆಸನವು. “ಸ್ಥಿರ-ಸುಖಮಾಸನಮ್” ಸ್ಥಿರವಾಗಿ ಹಾಗೂ ಸುಖವಾಗಿ ಮಂಡಿಸುವ ಶಕ್ತಿಯನ್ನು ಪಡೆಯುವದಕ್ಕೇನೆ ಆಸನವೆಂದು ಯೋಗಶಾಸ್ತ್ರ ಪ್ರತಿಪಾದಿಸಿದೆ. ಹಠಯೋಗ ಸಾಧನೆಯಲ್ಲಿ ಆಸನದ ಸ್ಥಾನವು ಬಹುಮುಖ್ಯವಾಗಿದೆ. ದೈಹಿಕ ಆರೋಗ್ಯ ಹಾಗೂ ಮಾನಸಿಕ ಶಾಂತಿಗಾಗಿ ಈ ಆಸನಗಳು ಅವಶ್ಯ. ಆಯಾಸ ಮಾಡಬಲ್ಲ ಆಸನಗಳಿಂದ ಲಾಭವಾಗುವದಿಲ್ಲ. ದೈಹಿಕ ಶ್ರಮ ಜೀವಿಗಳಿಗೆ ಆಸನಗಳ ಅಗತ್ಯವಿರದಿದ್ದರೂ ಬುದ್ದಿ ಜೀವಿಗಳಿಗೆ ಆಸನಗಳು

ಬೇಕು. ಟಿ. ಕೃಷ್ಣಮಾಚಾರ್ಯರು-ತಮ್ಮʼʼ ಯೋಗಾಸನಗ್ರಂಥದಲ್ಲಿ ಆಸನವು ಶರೀರ ಮಾಂಸ, ಮನಸ್ಸು ಇವುಗಳನ್ನು ಆಯಾ ವಯಸ್ಸಿಗೆ ತಕ್ಕಂತೆ ಸಮತೂಕ ಕ್ರಿಯಾಶಕ್ತಿಗಳೊಂದಿಗೆ ವೃದ್ಧಿಪಡಿಸಿ ಆಯುರ್ವೃದಿ, ರೋಗನಿವಾರಣೆ ಮತ್ತು ಮನಸ್ಸಿನ ಸ್ಥೈರ್ಯ, ಸೂಕ್ಷ್ಮವಸ್ತುತ್ತ್ಚ ಗ್ರಾಹಕ ಶಕ್ತಿಗಳೊಂದಿಗೆ ಆತ್ಮಾನಾತ್ಮ ವಿವೇಕವನ್ನು ಕೊಡುವ ಕಲ್ಪವೃಕ್ಷದಂತಿರುತ್ತೆ’ ಎಂದು ಆಸನದ ಮಹತ್ವವನ್ನು ಬಿತ್ತರಿಸಿದ್ದಾರೆ.

ಶಾರೀರಿಕ ತಾಲೀಮು ಮಾಡುವವನ ಶರೀರವು ಘಟ್ಟಿಯಾಗಿ ಜಟ್ಟಿಯೆನಿಸ ಬಹುದು, ಆದರೆ ಅವನ ಬುದ್ದಿ ಬೆಳವಣಿಗೆಯು ಆಗುವದಿಲ್ಲ. ಆಸನದಿಂದ ಶರೀರಕ್ಕೆ ಬೇಕಾದಷ್ಟೇ ಕೊಬ್ಬು ಉಳಿದು ಹೆಚ್ಚಿನ ಬೊಜ್ಜು ಬೆಳೆಯಲು ಅವಕಾಶ ಬರುವದಿಲ್ಲ. ಅದರಿಂದ ದೈಹಿಕ ಉತ್ಸಾಹವೂ ಬುದ್ದಿಯ ತೀಕ್ಷತೆಯೂ ಬೆಳೆಯುವದು. ಶ್ವಾಸೋಚ್ಛ್ವಾಸದಗತಿ ಸಮನಾಗುವದು. ಸರಳವಾದ ವ್ಯಾಯಾಮವು ಶರೀರಕ್ಕೆ ಬೇಕೇಬೇಕು. ʼʼ ದಿನಾಲು ತಪ್ಪದೆ ನಿಯಮಿತ ವ್ಯಾಯಾಮವನ್ನು ತಕ್ಕೊಂಡರೆ ತನುಮನಗಳೆರಡೂ ಸುದೃಢವೂ ಸುಂದರವೂ, ಶಾಂತವೂ, ಪ್ರಸನ್ನವೂ ಮತ್ತು ರೋಗ ರಹಿತವೂ ಆಗುವವು. ಮತ್ತು ನಿದ್ದೆಯಾದರೂ ಚೆನ್ನಾಗಿ ಹತ್ತುವದು‘ ಎಂದು ಸ್ವಾಮಿ ಶಿವಾನಂದರು ತಮ್ಮʼʼ ಬ್ರಹ್ಮಚರ್ಯವೇ ಜೀವನ, ವೀರನಾಶವೇ ಮೃತ್ಯುʼ’ ಎಂಬ ಗ್ರಂಥದಲ್ಲಿ ಸರಳ ವ್ಯಾಯಾಮ ಹಾಗೂ ಆಸನದಿಂದಾಗುವ ಸ್ವಾನುಭಾವದ ಸುಧೆಯನ್ನು ಸುರಿಸಿದ್ದಾರೆ. ಕಾಮಾತುರವಾದ ಮನವೂ ವ್ಯಾಯಾಮ ಅಥವಾ ಆಸನಗಳಿಂದ ಹಿಡಿತದಲ್ಲಿ ಉಳಿಯುವದೆಂದೂ ತಿಳಿಸಿದ್ದಾರೆ.

ಆಸನಗಳ ಸಾಧನೆಯಿಂದ ಆಂತರಿಕ ರೋಗಗಳೂ ಸಹ ಹೇಳ ಹೆಸರಿಲ್ಲದಂತಾಗುತ್ತವೆ. ಪ್ರತಿನಿತ್ಯ ಕೆಲವು ಮುಖ್ಯವಾದ ಹಾಗೂ ಸುಲಭವಾದ ಶೀರ್ಷಾಸನ, ಮಯೂರಾಸನ, ಪಶ್ಚಿಮತಾನಾಸನ, ಸಿದ್ಧಾಸನ, ಪದ್ಮಾಸನ ಮೊದಲಾದವು ಗಳನ್ನಾದರೂ ತಪ್ಪದೇ ಹಾಕುವದರಿಂದ ಶರೀರಕ್ಕೆ ಬಹಳಷ್ಟು ಲಾಭವಾಗುವದು. ಶೀರ್ಷಾನದಿಂದ ತಲೆನೋವು ದೂರಾಗುವದಲ್ಲದೆ ಕಣ್ಣಿನ ಶಕ್ತಿ ಬೆಳೆಯುವದು. ಸರ್ವಾಂಗಾಸನದಿಂದ ಹೊಟ್ಟೆಯಲ್ಲಿ ಆಹಾರ ವ್ಯತ್ಯಾಸದಿಂದಾಗುವ ಸಾಮಾನ್ಯ ನೋವು ಬರುವದಿಲ್ಲ. ಮಲಬದ್ಧತೆ ಹೋಗುವದಲ್ಲದೆ ಹೊಟ್ಟೆ ತೆಳ್ಳಗಾಗುವದು. ಬೆನ್ನಿನ ಹುರಿ ಗಟ್ಟಿಗೊಳ್ಳುವದು. ಮಯೂರಾಸನದಿಂದ ಯಕೃತ್ ಸಶಕ್ತವಾಗುವದು. ಕೈಗಳಲ್ಲಿ ಬಲಬರುವದು. ಬೆನ್ನು ಹುರಿಯ ಜಡತೆ ದೂರವಾಗುವದು. ಪಶ್ಚಿಮತಾನಾಸನ ದಿಂದ ಹೊಟ್ಟೆಯ ಎಲ್ಲಾ ಬಗೆಯ ರೋಗಗಳು ಮಾಯವಾಗುವವು. ಹಠಯೋಗ ಸಾಧನೆಯಲ್ಲಿ ಅನೇಕ ಆಸನಗಳನ್ನು ಹೇಳಿದ್ದಾರೆ. ಅವುಗಳಲ್ಲಿ ೮೪ ಆಸನಗಳನ್ನು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಆಯ್ಕೆ ಮಾಡಿದ್ದರು. ಇವುಗಳಲ್ಲಿ ಮೇಲಿನವು ಪ್ರಮುಖವಾದವುಗಳು. ಇನ್ನು ಕೆಲವು ಆಸನಗಳು ಬಹು ಕಠಿಣವಾಗಿವೆ. ಅವುಗಳನ್ನು ಹಾಕುವದರಿಂದ ಶರೀರಕ್ಕೆ ಆಯಾಸವೂ ಆಗುವದು. ಇವುಗಳನ್ನು ಗುರುಮುಖದಿಂದ ಅರಿತು ಆಚರಿಸಬೇಕು. ಅಂದರೆ ಶರೀರದ ಎಲ್ಲಾ ಅವಯವಗಳಿಗೆ ವ್ಯಾಯಾಮವೆನಿಸುವದು

ಶಿವಯೋಗ ಮಂದಿರದಲ್ಲಿ ಇಂದಿಗೂ ಸಾಧಕರು ಯೋಗಾಸನಗಳನ್ನು ತಪ್ಪದೆ ಹಾಕುತ್ತಾರೆ. ಇಲ್ಲಿ ಆಸನಗಳ ಜೊತೆಗೆ ಮುದ್ರೆಗಳನ್ನು ದೃಷ್ಟಿಗಳನ್ನು ಸಹ ಅನುಸರಿಸುತ್ತಾರೆ. ಈ ಪರಂಪರೆ ಬೇರೆಡೆ ಕಾಣ ಬರುವದಿಲ್ಲ. ದೃಷ್ಟಿ ಹಾಗೂ ಮುದ್ರೆಗಳು ಅತ್ಯಂತ ಉಪಯುಕ್ತವಾಗಿವೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟು ಲಿಂ, ಸಖರಾಯ ಪಟ್ಟಣದ (ಗಿರಿಯಾಪೂರ) ಸದಾಶಿವಾಚಾರ್ಯರು ‘ಯೋಗಾ ಸನಗಳು’ ಎಂಬ ಗ್ರಂಥದಲ್ಲಿ ವಿವೇಚಿಸಿದ್ದಾರೆ. ಪ್ರಾಮಾಣಿಕವಾಗಿ ಸಂಗ್ರಹಿಸಿದ್ದಾರೆ.

ಸಾಮಾನ್ಯವಾದ ಆಸನಗಳನ್ನು ಸ್ತ್ರೀಪುರುಷರಿಬ್ಬರೂ ಅಭ್ಯಾಸಮಾಡಿ ಆರೋಗ್ಯ ಪಡೆಯಬಹುದು.

ಯೋಗಾಸನಗಳು ಶರೀರಕ್ಕೆ ಉಪಯುಕ್ತವಾದ ಮೇಲೆ ಅವುಗಳ ನಿರಾಕರಣೆ ಏಕೆಂಬ ವಿಚಾರ ಬರುತ್ತದೆ. ಶಿವಕವಿಯು ಪ್ರಸ್ತುತ ತ್ರಿಪದಿಯಲ್ಲಿ ಆಸನದ ಅಭ್ಯಾಸ ಆಯಾಸಕರವೆಂದು ಏಕೈಕ ದೃಷ್ಟಿಯಿಂದ ಮಾತ್ರ ವಿವರಿಸಿದ್ದಾನೆ. ಶರೀರದ ಬಲವರ್ಧನೆಗಾಗಿಯೇ ಆಸನಾಭ್ಯಾಸವಾದರೆ ಪ್ರಯೋಜನವಿಲ್ಲವೆಂಬುದು ಆತನ ಅಭಿಪ್ರಾಯ. ಕಾಯಬಲಿತರೆ ಮಾಯೆ ಬಲಿವುದೆಂಬ ಭಯವೂ ಇದೆ. ಕಠಿಣವಾದ ಆಸನಗಳಿಂದ ಶರೀರವನ್ನು ದಣಿಸುವದು ಬೇಡ. ಶಿವಪೂಜೆಯಲ್ಲಿಯೇ ಆಸನ

ಯೋಗವು ಸಹಜವಾಗಿ ಘಟಿಸುತ್ತದೆಂದ ಮೇಲೆ ಪ್ರತ್ಯೇಕವಾದ ಆಸನದ ಅಭ್ಯಾಸ ಅವಶ್ಯವಿಲ್ಲ. ಆಸನಗಳಲ್ಲಿ ಬರುವ ಷಟ್ಕರ್ಮಗಳನ್ನು ಬಹು ಆಯಾಸದಿಂದಲೇ ಸಾಧಿಸಬೇಕಾಗುತ್ತದೆ.

ಶಿವಪೂಜೆಗೆ ಕುಳಿತುಕೊಳ್ಳಲು ಸುಖಾಸನ, ಸಿದ್ಧಾಸನ, ಪದ್ಮಾಸನ, ಸ್ವಸ್ತಿ ಕಾಸನಗಳಾದರೆ ಸಾಕು. ಇವುಗಳಲ್ಲಿ ಒಂದನ್ನು ಹಾಕಿ ಲಿಂಗ ನಿರೀಕ್ಷಣೆ (ದೃಷ್ಟಿ)ಯೇ ಮುಖ್ಯ ಸಾಧನವಾಗಿರುವದರಿಂದಲೂ ಶಿವಮಂತ್ರ ಧ್ಯಾನದಿಂದಲೂ ಅದೆಷ್ಟೋ ಸಮಯ ಸುಖವಾಗಿ ಕುಳಿತುಕೊಳ್ಳಬಹುದು. ಲಿಂಗಯೋಗವು ಆಸನದಿಂದಾಗುವ ಆಯಾಸಕ್ಕೆ ಕಾರಣವಾಗುವದಿಲ್ಲ. ಸಿದ್ಧಾಸನ ಹಾಕಿ ಕುಳಿತುಕೊಂಡರೆ ಪೂಜಿಸುವವನಿಗೆ ಮೂಲವ್ಯಾಧಿಯು ಬರುವದಿಲ್ಲವೆಂಬುದು ಅನುಭವದ ಮಾತು. ಕಾರಣ ಆಯಾಸವಾಗುವ ಆಸನಗಳನ್ನು ಬದಿಗಿರಿಸಿ ಲಿಂಗಾರ್ಚನೆಗೆ ಅವಶ್ಯವಾದ ಆಸನವನ್ನು ಹಾಕಿ ಗುರುಕರುಣಿಸಿದ ಇಷ್ಟ, ಪ್ರಾಣ, ಭಾವಲಿಂಗಗಳನ್ನು ಪೂಜಿಸಬೇಕು.

ಉಪಯುಕ್ತವಾದ ಆಸನಗಳನ್ನು ಸಿದ್ಧಿಸಿ ನಿತ್ಯೋಲ್ಲಾಸಿಯಾದ, ಸತತೋತ್ಸಾಹಿ ಯಾದ ಗುರುವು ಶಿಷ್ಯನ ಕರಕಮಲವನ್ನೇ ಲಿಂಗತಂದೆಗೆ ಆಸನವನ್ನಾಗಿ ಪವಿತ್ರ ಗೊಳಿಸಿರುತ್ತಾನೆ. ಲಿಂಗಪೂಜಕನು ಆಸನವುಳ್ಳವನಾದರೆ ಅವನ ಹಸ್ತವೇ ಲಿಂಗ ದೇವನಿಗೆ ಆಸನವಾಗುತ್ತದೆ. ಲಿಂಗಪೂಜಾ ಸಮಯದಲ್ಲಾಚರಿಸುವ ಆಸನವು ಶರೀರಕ್ಕೆ ಕಂಪನ, ಭಯ ಮೊದಲಾದ ಆಯಾಸವನ್ನು ಹುಟ್ಟಿಸುವದಿಲ್ಲ. ದೇಹಕ್ಕೆ ಯಾವ ಬಾಧೆಯೂ ಆಗುವದಿಲ್ಲ. ಇಲ್ಲಿ ಗುರುವು ಸ್ವತಃ ತಾನು ಈ ಲಿಂಗ ಯೋಗದ

ಆಸನದ ಅನುಭವವನ್ನು ಅನುಭವಿಸಿ ಹೇಳುತ್ತಿರುವದರಿಂದಲೇ ಅವನು ಉಲ್ಲಸಿತ ನಾಗಿರುತ್ತಾನೆಂಬುದನ್ನು ಶಿವಕವಿಯು ಸ್ಪಷ್ಟಿಕರಿಸಿದ್ದಾನೆ.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ಸಂಸ್ಕೃತಿ ಮತ್ತು ನಾಗರಿಕತೆ ಇವುಗಳ ಮುಖ್ಯ ಉದ್ದೇಶ ಮನುಷ್ಯನಿಗೆ ಸುಖ ಸಂತೋಷವನ್ನುಂಟು ಮಾಡುವುದು. ಮೇಲ್ನೋಟಕ್ಕೆ ಇವು ಒಂದೇ ಎಂಬಂತೆ ಕಂಡು ಬಂದರೂ ಸೂಕ್ಷ್ಮದೃಷ್ಟಿಯಿಂದ ಅವಲೋಕಿಸಿದಾಗ ಇವೆರಡರ ವ್ಯತ್ಯಾಸ ಕಂಡು ಬರುತ್ತದೆ. ಆದರೆ ಒಂದು ಇನ್ನೊಂದಕ್ಕೆ ಪೂರಕ ಎಂಬುದನ್ನು ಮಾತ್ರ ಮರೆಯಲಾಗದು. ಸಂಸ್ಕಾರ ಸಂಪನ್ನ ಜೀವನಕ್ಕೆ ನಾವು ಸಂಸ್ಕೃತಿ ಎಂದು ಕರೆಯುತ್ತೇವೆ. ಒಳ್ಳೆಯದನ್ನು ಬಯಸುವುದು, ಒಳ್ಳೆಯದನ್ನು ಪ್ರೀತಿಸುವುದು, ನುಡಿದಂತೆ ನಡೆಯುವುದು, ಶೀಲ ಚಾರಿತ್ರ್ಯಗಳನ್ನು ಹೊಂದುವುದು ಇವೇ ಮುಂತಾದ ಸಂಸ್ಕಾರಗಳು ಸಂಸ್ಕೃತಿಯ ಹೆಗ್ಗುರುತುಗಳು. ಇವು ವ್ಯಕ್ತಿಯ ಲೌಕಿಕ ಹಾಗು ಪಾರಲೌಕಿಕ ಉನ್ನತಿಗೆ ಸಹಕಾರಿಯಾಗಿವೆ. ತನ್ಮೂಲಕ ಸಮಾಜದ ಸರ್ವಾಂಗೀಣ ವಿಕಾಸಕ್ಕೆ ಕಾರಣವಾಗುತ್ತವೆ.

ಸಂಸ್ಕೃತಿ ಯಾವುದೇ ಜನಾಂಗ ಅಥವಾ ದೇಶದ ಆತ್ಮ, ಜನರ ಊಟ- ಉಪಚಾರ, ಉಡುಗೆ-ತೊಡುಗೆ, ಆಟ-ಪಾಠ, ನಡೆ-ನುಡಿ, ಧರ್ಮ-ಆತ್ಮಜ್ಞಾನ ಇವು ಅವರ ಬದುಕಿನ ಸಾರಸರ್ವಸ್ವ. ಅನೇಕ ಶತಮಾನಗಳಿಂದ ಆ ಜನಜೀವನ ನಡೆದು ಬಂದುದರ ಫಲಶೃತಿ ಇದು. ಇದನ್ನೇ ನಾವು ಸಂಸ್ಕೃತಿ ಎನ್ನುತ್ತೇವೆ. ಇದು ವ್ಯಕ್ತಿಗೆ ಸಂಸ್ಕಾರವನ್ನು ಕೊಡುವ ಶಕ್ತಿ. ಸಂಸ್ಕಾರ ಸಂಪನ್ನ ವ್ಯಕ್ತಿಗಳ ವಿಚಾರ, ಮಾತು ಮತ್ತು ಕೃತಿಗಳಲ್ಲಿ ಇದು ಅಭಿವ್ಯಕ್ತಗೊಳ್ಳುತ್ತದೆ. ವ್ಯಕ್ತಿಯ ಅಂತರಂಗದ ಜೀವರಸವಾಗಿರುವ ಸಂಸ್ಕೃತಿಯು ಅವನ ಧರ್ಮ, ದರ್ಶನ, ಸಾಹಿತ್ಯ, ಸಂಗೀತ, ಕಲೆ, ಶಿಲ್ಪ, ನೃತ್ಯ ಮುಂತಾದವುಗಳಲ್ಲಿ ನಿರಂತರ ಪ್ರವಹಿಸುತ್ತಿರುತ್ತದೆ.

 ನಾಗರಿಕತೆ ವ್ಯಕ್ತಿಯ ಬಹಿರಂಗ ಜೀವನಕ್ಕೆ ಸಂಬಂಧಿಸಿದೆ. ವಿಜ್ಞಾನ-ತಂತ್ರಜ್ಞಾನಗಳ ಪರಿಣಾಮವಾಗಿ ವ್ಯಕ್ತಿಯ ಜೀವನ ಇಂದು ಎಚ್ಚು ಸುಖಮಯವಾಗಿದೆ. ಲೌಕಿಕ ಸುಖ ಸೌಲಭ್ಯಗಳನ್ನು ಪಡೆಯುವ ಸಾಧನೆಗಳೆಲ್ಲವೂ ನಾಗರಿಕತೆಯ ಅಂಗ ಪ್ರತ್ಯಂಗಗಳು. ನಾಗರಿಕತೆ ಮುಖ್ಯತಃ ಪ್ರಯೋಜನಾತ್ಮಕವಾದುದು. ಅದು ವ್ಯಕ್ತಿಯ ಬಾಹ್ಯ ಹಾಗೂ ಭೌತಿಕ ವಿಕಾಸಕ್ಕೆ ಸಹಕಾರಿಯಾದುದು. ಆದರೆ ಸಂಸ್ಕೃತಿ ವ್ಯಕ್ತಿಯ ಆಂತರಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಾರಣವಾಗಿದೆ. ಅಂತೆಯೇ ಅದು ಆನಂದಾತ್ಮಕವಾದುದು.

 ಸಂಸ್ಕೃತಿ ಮತ್ತು ನಾಗರಿಕತೆಗಳೆರಡಕ್ಕೂ ವಿಶೇಷ ಸಂಬಂಧವಿದೆ. ಅದು ತುಪ್ಪದಲ್ಲಿರುವ ಕಂಪು, ಹೂವಿನಲ್ಲಿರುವ ಸುವಾಸನೆಯಂತಹ ಸಂಬಂಧ, ಸಂಸ್ಕೃತಿ ಆತ್ಮವೆನಿಸಿದರೆ ನಾಗರಿಕತೆ ದೇಹದಂತಿದೆ. ಇವೆರಡೂ ಒಂದಕ್ಕೊಂದು ಪೂರಕವಾಗಿದ್ದು, ಪರಸ್ಪರ ಪ್ರಭಾವ ಬೀರುತ್ತ ಮುನ್ನಡೆಯುತ್ತವೆ. ನಾಗರಿಕತೆಗೆ ಬೆಲೆ ಬರುವುದು ಸಂಸ್ಕೃತಿಯ ಸ್ಪರ್ಶದಿಂದ, ಯಾವುದೇ ಜನಾಂಗ ಅಥವಾ ದೇಶ ಸಂಸ್ಕೃತಿಯ ಸ್ಪರ್ಶವಿಲ್ಲದೇ ನಾಗರಿಕತೆಯ ಬಗ್ಗೆ ಹೆಮ್ಮೆ ಪಡಲಾರದು. ಅಂಥ ಸಂಸ್ಕೃತಿಯನ್ನು ಅರಿತು ಆಚರಿಸುವ, ಸಮೃದ್ಧವಾಗಿ ಬೆಳೆಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಸಂಸ್ಕೃತಿಯ ವಿವಿಧ ಮುಖಗಳನ್ನು ಪರಿಚಯಿಸುವ ಗ್ರಂಥಾಲಯ, ವಸ್ತುಸಂಗ್ರಹಾಲಯ, ಆರ್ಟ್‌ಗ್ಯಾಲರಿ ಮುಂತಾದವುಗಳನ್ನು ನಿರ್ಮಿಸಬೇಕು. ಸಂಸ್ಕೃತಿಯ ಸೊಬಗನ್ನು ಜನಗಳಿಗೆ ತಿಳಿಸುವ ನಿರಂತರ ಪ್ರಯತ್ನವೇ ಆಯಾ ಜನಾಂಗದ ಅಭಿವೃದ್ಧಿಯ ಹಾಗು ಚಲನಶೀಲತೆಯ ಪ್ರತೀಕ.

ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ

ಈ ಜಗತ್ತೆಂಬ ರಂಗಭೂಮಿಗೆ ಬಂದವರು, ತಾವು ಹೋಗುವಾಗ ತಮ್ಮದೊಂದು ಚರಿತ್ರೆಯನ್ನು ಅನ್ಯರಿಗಾಗಿ ಬಿಟ್ಟುಹೋಗಬೇಕಾಗುತ್ತದೆ. ಬಾಳಿದವರ ಸಚ್ಚರಿತ್ರೆ ಮುಂದೆ ಬಾಳುವವರಿಗೆ ಆದರ್ಶಮಯವಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಬದುಕಿ ಸತ್ತವರಿಗಿಂತಲೂ ಸತ್ತು ಬದುಕಿದವರು ಮೇಲು, ಇಂತಹ ಆದರ್ಶವ್ಯಕ್ತಿಗಳ ಮಾಲಿಕೆಯಲ್ಲಿ ಮಧ್ಯಸ್ಥಾನವು ಹಾನಗಲ್ಲ ಶ್ರೀಗಳವರಿಗೆ ದೊರೆಯುವುದೆಂಬ ಹೇಳಿಕೆ ನಿಸ್ಸಂದೇಹವಾದುದು.

ಹನ್ನೆರಡನೆಯ ಶತಮಾನದ ಶ್ರೀ ಬಸವ ಮಹಾನುಭಾವರಂತೆ ಸಮಾಜದ ಧಾರ್ಮಿಕ, ನೈತಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳವರು ಹೊಸದೊಂದು ವಾತಾವರಣವನ್ನೇ ನಿರ್ಮಿಸಿ, ಇಪ್ಪತ್ತನೆಯ ಶತಮಾನದ ಬಸವನೆನಿಸಿಕೊಂಡರು. ಇವರು ಕೇವಲ ಮುಖಕ್ಕೆ ಹಾಕಿದ ಮುಸುಕಿನ ಮರೆಯಲ್ಲಿ ಮಣಿಗಳನ್ನೆಣಿಸುತ್ತ ದೇವರನ್ನು ಹುಡುಕಲಿಲ್ಲ; ಅದರ ಜೊತೆಗೆ, ಜಗವ ತುಂಬಿದ ಶಿವತತ್ವವನ್ನು ಕಂಡು ನಲಿದು-ಸೇವಿಸುವ ಮಹಾಸ್ವಾಮಿಗಳಾಗಿದ್ದರು. ಹಿಂದೊಮ್ಮೆ ಸರ್ವಾಂಗ ಸುಂದರವಾಗಿ ಮೆರೆದ ಲಿಂಗಾಯತ ಸಮಾಜವು ಇಂದು, ಧಾರ್ಮಿಕ, ನೈತಿಕ ಅಧಃಪತನದಿಂದ ರುದ್ರರೂಪವನ್ನು ಧರಿಸಿ ಹುಚ್ಚೆದ್ದು ಕುಣಿಯುವುದನ್ನು ಕಂಡು ಮಮ್ಮಲ ಮರುಗಿ ಕರಗಿದರು. ಅದರ ಉಳಿಮೆಗಾಗಿ, ಉನ್ನತಿಗಾಗಿ ತಮ್ಮ ತನು ಮನಧನವನ್ನೇ ಅರ್ಪಿಸಿದರು; ಅದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಇದೇ ನಿಜವಾದ ಸ್ವಾಮಿಯ ಕುರುಹು ಅಲ್ಲವೆ? ಇಂತಹ ಸ್ವಾಮಿಗಳಿಂದಲೇ ಜಗದೋದ್ಧಾರ ಕಾರ್ಯವು ನೆರವೇರಬೇಕಾದುದು ಸಹಜ. ಆದರೆ ಭಕ್ತರ ಪ್ರಸಾದದಿಂದ  ಪುಷ್ಟಗೊಂಡು ಬೆಳೆಯುತ್ತರಲಿರುವ ಸ್ವಾಮಿಗಳು ಶ್ರೀಗಳವರಿಂದ ಪಾಠ ಕಲಿಯುವುದು ಅವಶ್ಯವಲ್ಲವೆ? ಸ್ವಾಮಿಗಳಾದವರು ಸಮಾಜಕ್ಕೆ ಹೆತ್ತ ತಾಯಿಯಂತೆ ಇರಬೇಕು. ಅವರು ಸನ್ಮಾರ್ಗದ ಶಿಕ್ಷಣವನ್ನು ಪಡೆದು, ಸಮಾಜ ಬಂಧುಗಳಿಗೆ ಆಸರದ ಕೈಯನ್ನು ನೀಡಬೇಕಾದುದು ಅತ್ಯಾವಶ್ಯಕ.

ಹಾನಗಲ್ಲ ಶ್ರೀಗಳವರ ಜೀವಿತ ಕಾಲದಲ್ಲಿ ಒದಗಿದ ಸಮಾಜ ಸನ್ನಿವೇಶಗಳು ಅವರ ಎದೆಯೊಳಗಿನ ಬತ್ತಿಯನ್ನು ಹೊತ್ತಿಸದೇ ಇರಲಿಲ್ಲ. ಬಂದ ಪರಿಸ್ಥಿತಿಯನ್ನು ಸಮಾಜದ ನಡತೆಯಲ್ಲಿ ಮೈಗೂಡಿಸುವ ಜಾಣ್ಮೆಯು ಶ್ರೀಗಳವರಲ್ಲಿ ಸ್ವಾಭಾವಿಕವಾಗಿತ್ತು. ಎಂತೆಂತಹ ಭೀಷ್ಮಸನ್ನಿವೇಶಗಳು ಒದಗಿದರೂ ‘ಸಾಕು ಮಾಡೋ ದೇವಾ’ ಎಂದು ಕೂಗದೆ, ಹಣೆಗೆ ಕೈಹಚ್ಚಿಕೊಂಡು ಕೂಡ್ರದೆ,

ಶಾಸ್ತ್ರೀಯವಾದ, ಸರ್ವಸಮ್ಮತವಾದ, ವ್ಯವಹಾರಿಕ ಉಪಾಯವನ್ನು ಹುಡುಕಿ ತೆಗೆಯುತ್ತಿದ್ದರು. ಅವರ ನಿರ್ಮಲವಾದ ಅಂತಃಕರಣವ್ಯಾಪ್ತಿಯು ನೇಸರನ ಬೆಳಗಿನಂತೆ ಧನಿಕ-ದರಿದ್ರ, ಜಾಣ ಮೂಢ, ಉಚ್ಚ-ನೀಚ, ಸ್ತ್ರೀ-ಪುರುಷ ಎಂಬ ಭೇದಭಾವನೆಯಿಲ್ಲದೆ ಸರ್ವರಿಗೂ ಜ್ಞಾನಾಮೃತವನ್ನು ನೀಡಬಯಸುತ್ತಿತ್ತು. ಅವರು ಸುಖವನ್ನು ಕಾಣುತ್ತಿದ್ದುದು ಸ್ವಾರ್ಥಮಯ ಕ್ರಿಮಿಜೀವನದಲ್ಲಲ್ಲ, ನಿಸ್ವಾರ್ಥಮಯವಾದ ಘನಜೀವನದಲ್ಲಿ. ಇಂತಹ ಘನಜೀವಿಗೆ ಮಠಮಾನ್ಯಗಳು ಹಕ್ಕಿಯ ಗೂಡಿನಂತೆ ಸಣ್ಣವಾಗಿ ಕಂಡದ್ದೂ ಆಶ್ಚರ್ಯವೇನಲ್ಲ. ಶ್ರೀಗಳವರು ಲಿಂಗಾಯತ ಸಮಾಜದ ಒಳಬೇನೆಯನ್ನರಿತು, ಅದರ ನಿವಾರಣೆಗೆ ಗುರು

ಜಂಗಮರ ಸುಧಾರಣೆಯ ಜೀವನವೇ ಮುಖ್ಯವಾದದ್ದೆಂದು ಗ್ರಹಿಸಿದರು. ಕೇವಲ ಪುರುಷರಲ್ಲಿ ಧರ್ಮಜಾಗ್ರತೆಯಾದರೆ ಸಾಲದು; ಸ್ತ್ರೀ ವರ್ಗದಲ್ಲಿಯೂ ಕರ್ತವ್ಯಜ್ಞಾನದ ಉದಯವಾಗಲೆಂದು ಹಾರೈಸಿದರು. ಇಷ್ಟಲ್ಲದೆ, ಆಗಿನ ಕಾಲಕ್ಕೆ ಅಗತ್ಯವೆನಿಸಿಕೊಂಡ ಅಸ್ಪೃಶ್ಯರ ಶಿಕ್ಷಣದ ಕಡೆಗೂ ಅವರ ಲಕ್ಷ್ಯ ಹರಿದಿತ್ತು. ಚಲವಾದಿಗಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸಿ, ಸರಿಯಾದ ಶಿಕ್ಷಣ ಕೊಟ್ಟರು; ಅವರಿಂದಲೂ ಸಮಾಜ ಸುಧಾರಣೆಯಾಗಲಿದೆಯೆಂದು ಮೇಲಿಂದ ಮೇಲೆ ಹೇಳುತ್ತಿದ್ದರು. ಪ್ರಯತ್ನವೇ ಅವರಿಗೆ ಸಹಜಗುಣವಾಗಿತ್ತು.

ಅಡಿಯ ಮುಂದಿಡೆ ಸ್ವರ್ಗ | ಅಡಿಯ ಹಿಂದಿಡೆ ನರಕ

ಅಡಿಗಶ್ವಮೇಧಫಲವಕ್ಕು ಸ್ವಾಮಿ ಕಾರ್ಯಕೆ

ದುಡಿಯಲೆ ಬೇಕು ಸರ್ವಜ್ಞ

ಈ ಪದ್ಯದ ಭಾವ ಅವರ ಜೀವನದ ಉಸಿರಾಗಿತ್ತು. ಪ್ರಯತ್ನದಲ್ಲಿ ಸೋತರೂ ಅವರಿಗೊಂದು ಹೆಮ್ಮೆ! ಮಹತ್ಕಾರ್ಯಕ್ಕಾಗಿ, ಲೋಕಸೇವೆಗಾಗಿ ಸಮಸ್ತ ಜೀವಮಾನವನ್ನೇ ತೇದು, ತುದಿಯಲ್ಲಿ ಸಿರಿಸೊಬಗಿಲ್ಲದೆ ಒಣಗಿಹೋಗುವುದರಲ್ಲಿಯೂ ಒಂದು ಆನಂದವನ್ನು ಶ್ರೀಗಳವರು ಅನುಭಾವಿಸುತ್ತಿದ್ದರು. ಈ ರೀತಿಯಿಂದ ಬಹುಮುಖ ಪ್ರಯತ್ನ ಮಾಡಿ, ಲಿಂಗಾಯತ ಸಮಾಜದ ಏಳ್ಗೆಗಾಗಿ ದುಡಿದರು; ಸಮಾಜ ಬಂಧುಗಳಲ್ಲಿ ನವಜಾಗೃತಿಯನ್ನುಂಟು ಮಾಡಿದರು.

ಶ್ರೀಗಳವರು ಹಮ್ಮಿಕೊಂಡ ಕಾರ್ಯಕ್ರಮವು ವಿಶಾಲವೂ ಬಹುಮುಖವುಳ್ಳುದೂ ಆಗಿದೆ. ಅವುಗಳಲ್ಲಿ ಶಿವಯೋಗಮಂದಿರ ಮತ್ತು ವೀರಶೈವ ಮಹಾಸಭೆಗಳು ಬಹುಮುಖ್ಯವಾದವು. ಇವೆರಡೂ ಅವಳಿಜವಳಿ ಸಂಸ್ಥೆಗಳು. ಒಂದರಲ್ಲಿ ಲೌಕಿಕ ಮುಖ್ಯವಾದರೆ ಇನ್ನೊಂದರಲ್ಲಿ ಪಾರಮಾರ್ಥ ಗಣ್ಯವಾಗಿದೆ. ಇವೆರಡೂ ನಾಣ್ಯದ ಎರಡು ಮಗ್ಗುಲದಂತೆ ಇವೆ. ಇವೆರಡಕ್ಕೂ ಮೂಲಕಾರಣರು ಶ್ರೀ ಶಿವಯೋಗಿಗಳು. ಸಮಾಜದ ಹಿತಕ್ಕಾಗಿ ನಿರ್ಮಿಸಲ್ಪಟ್ಟ ಈ ಎರಡೂ ಶ್ರೀಗಳವರ ಬುದ್ದಿ, ಸಾಹಸ, ತಪಸ್ಸು ಮನೆ ಮಾಡಿಕೊಂಡಿವೆ. ಅವರ ಪ್ರಬುದ್ಧಾವಸ್ಥೆಯ ಘಟನೆಗಳನ್ನು ಕಣ್ಣಿಟ್ಟು ಅವಲೋಕಿಸಿದರೆ ಅವರು ಅತಿಮಾನವರೆಂಬ ಮಾತು ದಿಟಪುಟವಾಗಿ ನಿಲ್ಲುವುದು. ಲಿಂಗಾಯತ ಸಂಸ್ಕೃತಿಯ ಸಂಸ್ಥೆಗಳಲ್ಲಿ ಪುನರುದ್ಧಾರಕ್ಕಾಗಿ, ಸಾಮಾನ್ಯ ಜನತೆಯ ಉದ್ಧಾರಕ್ಕಾಗಿ ಇವೆರಡೂ ಸಂಸ್ಥೆಗಳನ್ನು ಕಟ್ಟಿ, ಅವು ಸರಿಯಾಗಿ ನಡೆಯಲೆಂದು ತಮ್ಮ ಶರೀರವನ್ನು ಚಂದನದಂತೆ ಸವೆಸಿ ದುಡಿದರು. ತಮ್ಮ ಜೀವನವನ್ನು ದೀವಿಗೆಯಂತೆ ಉರಿಸಿ, ಸಮಾಜದ ಕತ್ತಲೆಯನ್ನು ಹೋಗಲಾಡಿಸಲು ಯತ್ನಿಸಿದರು. ಬತ್ತಿ ತಾನು ಸುಟ್ಟುಕೊಂಡಾಗಲ್ಲವೆ ಇನ್ನೊಬ್ಬರಿಗೆ ಬೆಳಕಿನ ಸಹಾಯ ಸಿಗುವುದು? ಮಠಾಧಿಪತಿಗಳು ಲೋಕ ಸೇವೆಯನ್ನು ಕೈಕೊಂಡು, ತಮ್ಮ ಉದ್ದಾರದೊಡನೆ ಜಗತ್ತನ್ನು ಸಹ ಉದ್ಧಾರ ಮಾಡಬಲ್ಲವರೆಂಬುದನ್ನು ಶ್ರೀಗಳು ತಮ್ಮ ಕರ್ತವ್ಯದಕ್ಷತೆಯಿಂದ ಸಿದ್ಧ ಮಾಡಿ ತೋರಿಸಿದರು. ಅರ್ಧ ಶತಮಾನದ ಹಿಂದೆ ಲಿಂಗಾಯತರು, ತಾವು ಲಿಂಗಾಯತರೆಂದು ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಿಂದೂ ಧರ್ಮದಲ್ಲಿ ತಮ್ಮ ಸ್ಥಾನವಾವುದು? ತಮ್ಮ ತತ್ವ ಸಂಸ್ಕೃತಿಗಳ ನೆಲೆಬೆಲೆಯೇನು? ತಮ್ಮ ಸಮಾಜ

ಎತ್ತ ಸಾಗಿದೆ? ತಮ್ಮ ಭವ್ಯಭವಿಷ್ಯವೇನು?- ಎಂಬ ಕಲ್ಪನೆಯಿಲ್ಲದೆ ಸಮಾಜಬಂಧುಗಳು ಅರೆನಿದ್ರೆಯಲ್ಲಿದ್ದಾಗ, ಬಡಿದೆಬ್ಬಿಸಿ ಕಣ್ಣು ತೆರೆಯಿಸಿದವರು ಪೂಜ್ಯ ಹಾನಗಲ್ಲ ಶ್ರೀಗಳವರು. ಸಮಾಜದ ಯಾವ ಭಾಗದಲ್ಲಿಯೇ ಆಗಲಿ, ಕೊರತೆಯಾದುದನ್ನು ಕಂಡರೆ, ಅದು ತಮ್ಮ ಶರೀರದಲ್ಲಿಯ ನೋವೆಂದು ಅವರು ಬಗೆಯುತ್ತಿದ್ದರು. ತಮ್ಮ ಶರೀರದ ಪಂಚಪ್ರಾಣಗಳ ಪ್ರಯೋಜನವು ಸಮಾಜದ ಸ್ವಾಸ್ಥ್ಯಕ್ಕೆ ಆಗಲೆಂದು ಬಗೆದು, ತಮ್ಮ ಆತ್ಮಬಲವನ್ನು ತಪೋನಿಗ್ರಹದಿಂದ ಬೆಳೆಯಿಸಿಕೊಂಡರು. ಪಾವನತಮವಾದ ಶಂಭುಲಿಂಗನ ಬೆಟ್ಟದಲ್ಲಿ ಬಹುಕಾಲ ಅನುಷ್ಠಾನ ಮಾಡಿದರು. ಮುಂದೆ ಮಧುಕರ ವೃತ್ತಿಯನ್ನು ತಳೆದು, ಮಹಾತ್ಮರಿದ್ದೆಡೆಗೆ ಹೋಗಿ, ಅವರಿಂದ ಅನುಭಾವ ಸಂಪತ್ತನ್ನು ಪಡೆದರು. ತಪೋಭೂಮಿಯಾದ ಶ್ರೀ ಎಡೆಯೂರು ಕ್ಷೇತ್ರಕ್ಕೆ ಹೋಗಿ ಪ್ರಸಾದ ಸಿದ್ಧಿಯನ್ನು ಪಡೆದುಕೊಂಡರು.

ಇಷ್ಟಕ್ಕೆ ತೃಪ್ತರಾಗಲಿಲ್ಲ ಶ್ರೀ ಹಾನಗಲ್ಲ ಶ್ರೀಗಳು; ಲೋಕಸೇವೆ ಒಬ್ಬ ವ್ಯಕ್ತಿಯಿಂದ ಪರಿಪೂರ್ಣವಾಗಿ ನಡೆಯಲಾರದೆಂದು ಬಗೆದು, ಚರ ತಿಂಥಿಣಿಯೊಂದನ್ನು ತಮ್ಮ ವಲಯವನ್ನಾಗಿರಿಸಿಕೊಂಡು, ಸಮಾಜದ ಅಭ್ಯುದಯ ಕಾರ್ಯಕ್ಕೆ ಕೈಹಾಕಿದರು. ಧರ್ಮಾಚರಣೆಯಲ್ಲಿಯೇ ಸತ್ಯ ಸೌಂದರ್ಯಗಳ ಸ್ವಾರಸ್ಯವಿದೆಯೆಂದು ಬೋಧೆ ಮಾಡುತ್ತ ಜನಾಂಗದಲ್ಲಿ ಆಸ್ತಿಕ್ಯ, ಔತ್ಸುಕ್ಯಗಳನ್ನು ಹುಟ್ಟಿಸಿದವರು. ಶ್ರೀಗಳವರ ಪ್ರಯತ್ನದಿಂದ ಲಿಂಗಾಯತರು ಲಿಂಗಧಾರಣದ ಮಹತಿಯನ್ನು ತಿಳಿದರು; ಉಪಟಳದಿಂದ ಪಾರಾದರು. ವೀರಶೈವ ಮಹಾಸಭೆಯನ್ನು ಶ್ರೀಗಳವರು ಕೂಡಿಸಿ ಧರ್ಮಪ್ರಸಾರ ಮಾಡಿದರು. ಶಿವಯೋಗ ವಿದ್ಯೆಯ ಪ್ರಸಾರಕ್ಕಾಗಿ ಶಿವಯೋಗಮಂದಿರವನ್ನು ಭದ್ರಗೊಳಿಸಿದರು. ಅವರ ಧಾರ್ಮಿಕ ಆಂದೋಲನವು ಸಾರ್ವಜನಿಕ ಪ್ರೇಮ ಮತ್ತು ಹಿರಿಯರ ಬುದ್ಧಿವಂತಿಕೆಯಿಂದ ಸಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಅವರ ಪರಿಶ್ರಮದ ಫಲವಾಗಿ, ಅಲ್ಪದಿನಗಳಲ್ಲಿಯೇ ಅಲ್ಲಲ್ಲಿ, ಕೀರ್ತನಕರಿಗಳು, ಧರ್ಮಬೋಧಕರು, ಸಂಗೀತ ಕಲಾವಿದರು ನಿಸ್ವಾರ್ಥ ಬುದ್ಧಿಯಿಂದ ಸಮಜ ಸೇವೆ ಮಾಡುತ್ತಿರುವುದು ಗೋಚರವಾಯಿತು. ಶಾಸ್ತ್ರೋಕ್ತ  ರೀತಿಯಲ್ಲಿ ನಿರ್ಮಿತವಾದ ಲಿಂಗಭಸ್ಮಗಳು ಶಿವಯೋಗಮಂದಿರದ ಮುಖಾಂತರ ಸದ್ಭಕ್ತರ ನಿಜಾಚರಣೆಗೆ ದೊರೆಯತೊಡಗಿದವು. ಈ ಮಂದಿರದಲ್ಲಿ ನುರಿತ ಯೋಗಸಾಧಕರು ಶಿವಯೋಗದಲ್ಲಿ ಮಹಾಸಿದ್ಧಿಯನ್ನು ಪಡೆದರು. ಇಲ್ಲಿ ಸಾಧನೆ ಮಾಡಿದ ಹರಗುರು ಚರಮೂರ್ತಿಗಳು ನಾಡಿನಲ್ಲಿ ಹಬ್ಬಿ, ಬೀಳು ಬಿದ್ದಿರುವ ಮಠಗಳನ್ನಾಶ್ರಯಿಸಿ ಧರ್ಮಬೋಧೆಗೆ ಸಿದ್ಧರಾದರು. ನಾಡು ಚೇತರಿಸಿಕೊಂಡಿತು; ನುಡಿ ಮೈಮುರಿಯ ತೊಡಗಿತು. ಶಿವಯೋಗಮಂದಿರದ ದೀಪಗಳು ಎಲ್ಲೆಡೆಯಲ್ಲಿ ಪಸರಿಸಿ ನಾಡು ಬೆಳಗುವಂತಾಯಿತು. ಶ್ರೀಗಳವರ ಉನ್ನತ ದೃಷ್ಟಿ, ಉನ್ನತ ಧ್ಯೇಯಗಳ ಸಮನ್ವಯದಿಂದ ಅವರ ಜೀವನದ ದಾರಿ ಹೆದ್ದಾರಿಯಾಯಿತು. ಆನೆ ನಡೆದುದೇ ದಾರಿಯಲ್ಲವೆ?

ಹೀಗೆ, ಬಹುಮುಖದ ವ್ಯಕ್ತಿತ್ವವನ್ನು ಪಡೆದ ಶ್ರೀಗಳವರು ಲಿಂಗಾಯತ ಸಮಾಜವನ್ನು ಆದರ್ಶಪ್ರಾಯವಾಗಿ ಮೂಡಿಸುವ ಕಾರ್ಯದಲ್ಲಿದ್ದಾಗಲೇ ಸಂಜೆಯಾಯಿತು. ಕರ್ಮಸಾಕ್ಷಿಯಾದ ಆತ್ಮರವಿಯು ಕಣ್ಮರೆಯಾದನು. ಗುರುವು ಅಗೋಚರನಾದನು. ಅವನು ಇನ್ನೆಲ್ಲಿ ದರ್ಶನ ನೀಡುವನು? ಅವನ ಪ್ರಯತ್ನರೂಪೀ ಸಂಧ್ಯಾಕಿರಣಗಳು ನಮಗೆ ಮಾರ್ಗದರ್ಶನ ಮಾಡಿಸುತ್ತಲಿವೆ. ಅಂತಹ ಕಾರಣಪುರುಷನು ಇನ್ನೊಮ್ಮೆ ಮೂಡಿ ಬಾರದೆ ಇರನೆಂದು ನಮ್ಮ ನಂಬಿಗೆ

(ಆಕರ : ನುಡಿಲಿಂಗ-ಲೇ: ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು, ನವಲಗುಂದ)

ಡಾ. ಎಸ್. ವಿ. ಅಯ್ಯನಗೌಡರ.

ಪೀಠಿಕೆ

ಕನ್ನಡ ಸಾಹಿತ್ಯದಲ್ಲಿ ವಿನೂತನ ಹಾಗೂ ಪ್ರಯೋಗ ಯುಗ ನಿರ್ಮಿಸಿದ ನಿರ್ಮಾತೃಗಳಲ್ಲಿ ಶಿವಶರಣರ ಹಿರಿಮೆ-ಅವರಿಂದ ರಚಿತವಾದ ಸಾಹಿತ್ಯದ ಹಿರಿಮೆ- ಮಹೋನ್ನತವಾದುದು. ಮನುಕುಲವು ಹೊಂದಬಹುದಾದ ಅತ್ಯುನ್ನತ ನಿಲುವನ್ನು ಹೊಂದಿದ ಶರಣರು ಮತ, ಕುಲ, ವರ್ಣ, ಜಾತಿ, ವಯಸ್ಸು ಅಂತಸ್ತುಗಳಲ್ಲಿ ಮೇಲು ಕೀಳೆನ್ನದೆ ಸರ್ವರೂ ಸಮಾನರು ಎಂಬ ಧೋರಣೆಯಿಂದ ಬದುಕಿ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವವನ್ನು ಎತ್ತಿ ಹಿಡಿದು, ಅದರಂತೆ ಮುಂದಿನವರು ಬದುಕಲೆಂಬಮಾರ್ಗ ನಿರ್ಮಿಸಿದವರು; ಅವರ ಮಾರ್ಗವೇ ಶರಣ ಮಾರ್ಗ- ಅನುಭಾವಮಾರ್ಗ- ಶಿವಮಾರ್ಗ-ಪ್ರಸಾದಮಾರ್ಗ. ಬಸವಾದಿ ಪ್ರಮಥರಿಂದ ಉದ್ದಂಡವಾಗಿ ಮುನ್ನಡೆಯುತ್ತಿರುವ ಈ ಪರಂಪರೆ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯ ಪ್ರಶಿಷ್ಯರಲ್ಲಿ, ಷಣ್ಮುಖ ಶಿವಯೋಗಿ, ಸರ್ಪಭೂಷಣ ಶಿವಯೋಗಿ, ನಿಜಗುಣ ಶಿವಯೋಗಿ ಮೊದಲಾದ ಕೈವಲ್ಯಕಾರರಲ್ಲಿ ಸಾಗಿ ಮೈಲಾರ ಶಿವಯೋಗಿ-ಮುಂತಾದವರ ಭಾವನೆಗಳಲ್ಲಿ ಪಸರಿಸಿ, ಇಂದಿನವರೆಗೂ ಹೆಜ್ಜೆಹಾಕುತ್ತಲಿದೆ. ಇಂಥ ಶರಣ-ಅನುಭಾವಿಗಳಿಂದ ರಚಿತವಾದ ಸಾಹಿತ್ಯ ಮೂರು ವಿಧದಲ್ಲಿ ಲಭ್ಯವಾಗುವುದು.

( ೧. ವಚನ ೨. ಸ್ವರವಚನ ೩. ಇತರ ಸಾಹಿತ್ಯ

೧. ವಚನ:

‘ವಚ’ (To speak) ಎಂಬ ಶಬ್ದದಿಂದ ನಿಷ್ಪನ್ನಗೊಂಡ ಈ ಪದ ಅನೇಕ ಸಂದರ್ಭಜನ್ಯವಾದ ಅರ್ಥವ್ಯಾಪ್ತಿ ಪಡೆದ ರಚನೆಯಾಗಿದೆ. ಭಾಷೆ-ರೂಪ- ಅನುಭಾವ-ನಡೆನುಡಿ, ಅಭಿವ್ಯಕ್ತಿ-ಆಣೆ (Oath), ಸೂಳ್ನುಡಿ ಮುಂತಾದ ಅರ್ಥವ್ಯಾಪ್ತಿಯಲ್ಲಿ ಬಳಕೆಗೊಂಡಿದೆ. ಚನ್ನಬಸವಣ್ಣನವರು ತಮ್ಮ ವಚನವೊಂದರಲ್ಲಿ ವಚನ-ರಚನೆ-ಅನುಭಾವ ಕುರಿತು ವ್ಯಾಖ್ಯೆ ನೀಡಿದ್ದಾರೆ. ವಚನ ಎಂದರೆ ʼʼಆತ್ಮತೃಪ್ತಿಯ ನರಿಯ ಬಲ್ಲಡೆ ವಚನʼʼ ಎಂದು ಅರ್ಥೈಸಿದ್ದುಂಟು. ಕೆಲ ವಿದ್ವಾಂಸರು ಗುರುತಿಸಿದಂತೆ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಒಂದು ವಿಶಿಷ್ಟ ರೂಪ (Form) ಎಂದು ಹೇಳಿದ್ದಾರೆ. ಇನ್ನು ಕೆಲವೆಡೆ “ಶುದ್ಧ ನಡತೆಯವನ ನೇರ ನುಡಿʼʼ – ವಚನ ಎಂದು ಗುರುತಿಸಿರುವರು. ವಚನವನ್ನು ತ್ರಿಪದಿ, ಗೀತೆಗಳಿಗೂ ಅನ್ವಯಿಸಿ ʼʼಸರ್ವಜ್ಞನ ವಚನ (ತ್ರಿಪದಿ), ಷಡಕ್ಷರಿಯ ವಚನ, ಕೋಡೆಕಲ್ಲು ಬಸವಣ್ಣನ ವಚನ, ಗುರುಕರುಣ ತ್ರಿಪದಿ ವಚನ ಪ್ರಾರಂಭʼʼ ಎಂಬ ಪ್ರಯೋಗಗಳು ನಡೆ-ನುಡಿಯನ್ನೇ ಅತಿಕರಿಸಿಕೊಂಡವರ ಬದುಕು ಮತ್ತು ಅದರಿಂದ  ಅಭಿವ್ಯಕ್ತಗೊಂಡ ಸಾಹಿತ್ಯ ಎಂಬರ್ಥದಲ್ಲಿ ಬಳಸಿದುದು ಲಭ್ಯವಾಗುತ್ತದೆ. ‘ವಚನʼ ಎಂಬುದು ಗದ್ಯ ಪದ್ಯ ಮಾದರಿಗೆ, ನಡೆ-ನುಡಿಗೆ ಅಭಿವ್ಯಕ್ತಿಗೆ, ಸಾಹಿತ್ಯದ ಭಾಷೆ-ರೂಪಗಳಿಗೆ, ಚಳುವಳಿಗೆ ಅನ್ವಯವಾಗುವುದು. ವಿವಿಧ ಶಿವಶರಣ-ಶರಣೆಯರು ಬಿಡಿಬಿಡಿಯಾದ ಮುಕ್ತಕಗಳನ್ನು ತಮ್ಮ ತಮ್ಮ ಆರಾಧ್ಯ ದೈವದ ಅಂಕಿತದೊಂದಿಗೆ ಮುಕ್ತ ಛಂದಸ್ಸಿನಲ್ಲಿ ರಚಿಸಿದ ಕೃತಿಗಳೇ ಈ ವಚನಗಳು. ಅವರ ಆತ್ಮ ಮಥನದಿಂದ ಅನುಭಾವದಿಂದ ಹೊರಹೊಮ್ಮಿದ ಸಾಹಿತ್ಯವಿದು. ಆರಂಭದ ಜೇಡರ ದಾಸಿಮಯ್ಯನ ವಚನಗಳು ಕಿರಿದಾಗಿದ್ದು ತ್ರಿಪದಿಯಂತಿರುವುದನ್ನು ವಿದ್ವಾಂಸರು ಗುರುತಿಸಿದುದು ಇಲ್ಲಿ ಗಮನಾರ್ಹ. ಒಟ್ಟಿನಲ್ಲಿ ವಚನಗಳು ಸರಳ-ಬೆಡಗು ಶಾಸ್ತ್ರವಚನಗಳನ್ನು ಪ್ರತಿನಿಧಿಸುವ ವಿವಿಧ ಪ್ರಕಾರಗಳಾಗಿ ಗುರುತಿಸಲ್ಪಡುತ್ತವೆ.

೨. ಸ್ವರವಚನ

ಕನ್ನಡ ಸಾಹಿತ್ಯವು ಅನೇಕ ಹೊಸ ಪರಿಭಾಷೆಗಳನ್ನು ಹೊತ್ತು ಬಂದಿದೆ, ಬರುತ್ತಲಿದೆ. ಅಂಥವುಗಳಲ್ಲಿ ‘ಸ್ವರವಚನ ಪರಿಭಾಷೆ ಒಂದಾಗಿದೆ. ಕನ್ನಡ ಸಾಹಿತ್ಯದ ಅಪ್ರಕಟಿತ-ಪ್ರಕಟಿತ ಸಾಹಿತ್ಯದ ಹುಲುಸಾದ ಜನಪದ ಸಾಹಿತ್ಯಪ್ರಕಾರ ಸ್ವರವಚನ ಸಾಹಿತ್ಯ. ಇದು ‘ಗೀತ’ ‘ಹಾಡು’ ‘ಪದ’ ಎಂಬ ಪದಗಳಿಗೆ ಪರ್ಯಾಯವಾಚಿಯಾಗಿ ಬಳಕೆಗೊಳ್ಳುತ್ತ ಆಯಾ ಕಾಲಘಟ್ಟದ ಸಂದರ್ಭಗಳಲ್ಲಿ ನಾಮ ನಿರ್ದೇಶನದಿಂದ ಬಳಕೆಗೊಂಡಿದೆ. ‘ಸ್ವರವಚನ’ ‘ಸ್ವರಪದ’ ‘ಪದ ವಚನ’ ‘ವಚನದ ಪದಂಗಳು ʼಬೆಡಗಿನ ಸ್ವರ ಪದಂಗಳು’, ‘ಸ್ಥಲ ನಿರ್ದೇಶನ ಪದ’- ಎಂಬಂಥ ಸಂದರ್ಭ ಜನ್ಯ ಪದಗಳು ವಿವಿಧ ಸಂದರ್ಭಗಳಲ್ಲಿ, ವಿವಿಧ ಸ್ವರವಚನಕಾರರಿಂದ ಅಭಿವ್ಯಕ್ತಗೊಂಡು ಜನಪ್ರಿಯ ಸಾಹಿತ್ಯಪ್ರಕಾರವಾಗಿ ಬೆಳೆದು ನಿಂತಿದೆ. ಭಾಷೆ ಮತ್ತು ಗೇಯ ಮಾಧ್ಯಮಗಳೇ ಪ್ರಮುಖ ಗುರಿಯಾದ ಇವನ್ನು ಶರಣರು -ದಾಸರು (ಕೀರ್ತನೆ) ಕೈವಲ್ಯಕಾರರು-ಅನುಭಾವಿಗಳು-ಮುಂತಾದ ವಾಗ್ಮೇಯಕಾರರು ಇವುಗಳ ವಾಹಕರಾಗಿ ನಿಂತಿದ್ದಾರೆ. ಮುಂದೆ ಬಂದ ಸಂಕಲನ ಸಂಪಾದನಾಕಾರರು ವಿವಿಧ ಸ್ವರವಚನಕಾರರ ಪದಗಳನ್ನು ಬಳಸಿಕೊಂಡಿದ್ದಾರೆ; ಟೀಕೆ ಬರೆದು ಅರ್ಥೈಸಿದ್ದಾರೆ. ತತ್ವಪದಕಾರರು- ಕೈವಲ್ಯಕಾರರು- ವಾಗ್ಮೇಯಕಾರರು -ಸ್ವರವಚನಕಾರರು-ಕೀರ್ತನಕಾರರು ಅವರನ್ನು ಗುರುತಿಸಿ, ಶತಮಾನಗಳಡಿಯಲ್ಲಿ ವಿಭಜಿಸಿ ಅಧ್ಯಯನ ನಡೆಸಿದ್ದು ನಡೆಸುತ್ತಿರುವುದು ಗಮನಾರ್ಹ ಸಂಗತಿಗಳಾಗಿವೆ. ಇಂಥ ಸ್ವರವಚನ ಸಾಹಿತ್ಯದ ಲಕ್ಷಣ-ಸ್ವರೂಪ- ಉದ್ದೇಶ-ಆಶಯಗಳನ್ನು ಹೀಗೆ ಗುರುತಿಸಬಹುದು:

  1. ʼಸ್ವರವಚನ’ ಎಂದರೆ ನಾಲ್ಕಡಿಗಳಿಂದ ಒಪ್ಪಲ್ಪಟ್ಟ ವಚನಂಗಳು ಎಂದು ನೂರೊಂದು ಸ್ಥಲ ಟೀಕೆಯಲ್ಲಿ ಟೀಕಾರ್ಥ ಬರೆಯುತ್ತಾನೆ- ಶ್ರೀ ಗಿರೀಂದ್ರ. ಪ್ರತಿಯೊಂದು ಪದಗಳ ತಲೆಬರಹದಡಿಯಲ್ಲಿ ರಾಗ-ತಾಳಗಳ ನಿರ್ದೇಶನಗಳಿವೆ (ಕೆಲವು ಹಾಡುಗಳಿಗೆ ವಿರಳವಾಗಿ ತಾಳ ನಿರ್ದೇಶನ ಉಂಟು) ಪ್ರಾದೇಶಿಕ ವಿಭಿನ್ನತೆಯಲ್ಲಿ ವಿವಿಧ ತಾಳ ನಿರ್ದೇಶನಗಳು ಒಂದೇ ಹಾಡಿಗೆ ಲಭ್ಯ . ಉದಾಹರಣೆಗೆ ತಾಳ-ರೂಪಕ-ಎಂದಿದ್ದ ಒಂದೇ ಹಾಡಿಗೆ ಪರಾಯವಾಗಿ ಝಂಪೆ, ಅಟ್ಟಹಾಸ ಎಂದು ಸೂಚಿಸಿದ ಉದಾಹರಣೆಗಳಿವೆ.
  2. ಸ್ವರವಚನಗಳು ಪಲ್ಲವಿ ಅನುಪಲ್ಲವಿಯಿಂದ ಕೂಡಿವೆ. ಶ್ರೀ ಗಿರೀಂದ್ರ ‘ಪಲ್ಲವಿ’ ಎಂಬ ಪದಕ್ಕೆ ʼʼಮುಂದೆ ಬಹ ಪದಗಳ ಅರ್ಥಾಭಿಪ್ರಾಯಂಗಳನ್ನು ಪದಾಂತ್ಯ ಪರಿಯಂತರ ಸೂಚನಾರ್ಥವಾಗಿ ವೊಳಕೊಂಡೊಪ್ಪುವದೀಗ ಪಲ್ಲವ’ ಎಂದು ಅರ್ಥೈಸಿದ್ದುಂಟು. ಈ ‘ಪಲ್ಲವಿ’ ಗಳಿಗೆ ಒಂದು ಸಾಲಿನಿಂದ ನಾಲೈದು ಸಾಲುಗಳವರೆಗೆ ವ್ಯಾಪ್ತಿ ಇದೆ. ಎರಡು ಚರಣಗಳ ಪಲ್ಲವಿ ಬೆಳೆವ ವೃಕ್ಷವನ್ನು ಗರ್ಭಿಕರಿಸಿಕೊಂಡಿರುವಂತೆ ಸಮಗ್ರ ಪದ್ಯದ ಭಾವವನ್ನು ಹುದುಗಿಸಿಕೊಂಡಿದೆ.
  • ಹಾಡಿನ ಕೊನೆಯಲ್ಲಿ ಅಂಕಿತ ರೂಪದ ಮುದ್ರಿಕೆ ಇರುವುದು ಉದಾ: ಸೋಮನಾಥ, ಗುಹೇಶ್ವರ, ಚನ್ನಮಲ್ಲಿಕಾರ್ಜುನ-ಚೆನ್ನವೀರ ಇತ್ಯಾದಿ ೫ ಕನಿಷ್ಟ ಮೂರು ನುಡಿಯಿಂದ ೩೦-೩೫ ನುಡಿಗಳವರೆಗೆ (ಕೆಲವೆಡೆ ಮಿಕ್ಕಿ) ಒಂದೊಂದು ಪದ್ಯದ ವ್ಯಾಪ್ತಿ ಇದೆ.
  • ಪ್ರಾಚೀನ ಸ್ವರವಚನವಾದ (ಲಭ್ಯ) ಸಕಳೇಶ ಮಾದರಸನ ಸ್ವರ ವಚನ ರಾಗ-ಶಂಕರಾಭರಣದಿಂದ ಕೂಡಿದ್ದು ಅದರಲ್ಲಿ ʼʼಕೈವಲ್ಯಕ್ಕೆ ದೃಷ್ಟವಾದ ಹೆಮ್ಮರನೇ..ʼ’ ಎಂಬ ಪದ ಪ್ರಯೋಗಗೊಂಡಿದ್ದು ಕೈವಲ್ಯ ಸಾಹಿತ್ಯದ ಮೂಲಕ್ಕೆ ಇದು ಪ್ರಚೋದನೆ ನೀಡಿದಂತಿದೆ.
  • ಷಟ್ಪದಿಯಲ್ಲಿ ರಚನೆಗೊಂಡ ಸ್ವರವಚನಗಳ ಆರಂಭದಲ್ಲಿ ಪಲ್ಲವಿಯ ಬದಲಾಗಿ ʼʼಸೂಚನೆʼʼ ಎಂಬ ಪ್ರಯೋಗ ಬಳಕೆಗೊಂಡಿದೆ.
  • .ಶಿವದಾಸರ ಗೀತೆಗಳು-ಹರಿದಾಸರ ಕೀರ್ತನೆಗಳು-ಕೈವಲ್ಯಕಾರರ ಪದಗಳು ಸ್ವರವಚನದ ಬೆಳವಣಿಗೆಯ ಘಟ್ಟದ ವಿವಿಧ ಮುಖಗಳಾಗಿವೆ.
  • ಶರಣರ ಪದಗಳು ಕನ್ನಡದ ಮೊದಲ ಕೀರ್ತನೆಗಳು,
  • ಸ್ವರವಚನಗಳಲ್ಲಿ ಅನುಕರಣೆ ಕಂಡುಬರುವುದು.
  • .ಮಾತ್ರಾ ಛಂದಸ್ಸು ಅಂಶಛಂದಸ್ಸುಗಳ ಮಿಶ್ರಣದಿಂದ ಕೂಡಿದ ಇವು ದೇಸಿ ಸಾಹಿತ್ಯದ ಛಂದೋರೂಪಗಳಾದ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಸಾಂಗತ್ಯ, ಕಿರುಸೀಸ-ಬಳಸಿಕೊಂಡಿವೆ. ಉತ್ಸಾಹ-ಮಂದಾನಿಲ-ಲಲಿತ ಲಯಗಳನ್ನು ದುಡಿಸಿಕೊಂಡುದುಂಟು.
  • ವೃತ್ತಶ್ಲೋಕ-ಕಂದ ಮಾದರಿಗಳು ಚೌಪದಿಯಲ್ಲಿದ್ದು ಗಣಪರಿವೃತ್ತಿ ಅವುಗಳಲ್ಲಿ ಕಾಣುವುದು.
  •  ಬೆಡಗಿನ ಸ್ವರಪದಗಳು, ಕಾಲಜ್ಞಾನ, ಕಾರಣಿಕ, ಕಣಿ ಸ್ವರೂಪಗಳಲ್ಲಿಯೂ ಲಭ್ಯ,
  •  ಕೆಲವು ಸ್ವರವಚನ ಕೃತಿಗಳು ವಿವಿಧ ಸ್ಥಲಗಳಡಿಯಲ್ಲಿ ವಿಭಜನೆಗೊಂಡಿವೆ.
  •  ಸಾಹಿತ್ಯ- ಸಂಗೀತ-ತತ್ತ್ವಗಳ ಮುಪ್ಪರಿಯಿಂದ ಕೂಡಿಕೊಂಡಿವೆ.
  • ಅನೇಕ ಜಾನಪದ ಸಾಹಿತ್ಯ ಪ್ರಕಾರಗಳು, ಸ್ವರವಚನಗಳ ಮೂಲಕ ಸಾಹಿತ್ಯ ವೇದಿಕೆಯನ್ನೇರಿವೆ. ಉದಾ:- ಪರಾಕು, ಲಾಲಿಕಣಿ ಚಂದಮಾಮ, ಕೋಲುಪದ, ಹೋಳಿಪದ, ದುಂದುಮೆ, ಬುಡಬುಡಕ್ಯಾ ಮುಂತಾದವು.
  •  ಸ್ವರವಚನಗಳನ್ನು ಸ್ತುತಿ-ಪೂಜೆ-ಗೋಷ್ಠಿ ಸಂದರ್ಭಗಳಲ್ಲಿ ಹಾಡುತ್ತಲಿದ್ದ ಉಲ್ಲೇಖವಿದೆ.
  • ಭಜನೆ-ಸಭೆ-ಸಮಾರಂಭಗಳಲ್ಲಿ-ಮಠಮಾನ್ಯಗಳಲ್ಲಿ ಇವು ಜನಸಮೂಹದಲ್ಲಿ ಹೆಚ್ಚು ಪ್ರಚುರತೆ ಪಡೆದಿವೆ.
  •  ಪ್ರಾಸ, ಅನುಪ್ರಾಸಗಳ ಜೋಡಣೆ ಇವುಗಳಲ್ಲಿದೆ.
  • .ಕೀರ್ತನೆ, ಸ್ವರಪದ, ಸ್ವರವಚನಗಳು ಕರ್ನಾಟಕ ಸಂಗೀತದ ಪ್ರತಿನಿಧಿಗಳಾಗಿವೆ; ಗಮಕ ಮತ್ತು ಪ್ರವಚನಕ್ಕೆ ಸಹಕಾರಿಗಳು.
  1.  ನೀತಿಬೋಧೆ-ತತ್ವನಿರೂಪಣೆ ಇವುಗಳ ಪ್ರಮುಖ ಗುರಿ.
  2.  ಹಾಡುಗಬ್ಬಗಳೆಂದು ಪ್ರಸಿದ್ಧಿಪಡೆದ ಇವು ಜಾತಿ-ಭೇದವಿಲ್ಲದೆ ಜನಸಾಮಾನ್ಯರನ್ನೂ ವ್ಯಾಪಿಸಿದ ಸಾಹಿತ್ಯ ಪ್ರಕಾರಗಳಾಗಿವೆ.
  3. ಗಾಯಕ- ಶ್ರಾವಕರ ಚಿತ್ಛಲಕದಲ್ಲಿ ವಸ್ತು ತತ್ವ್ತಾರ್ಥ ಚಿರಸ್ಥಾಯಿಗೊಳ್ಳುವವು.

ಇತರ ಸಾಹಿತ್ಯ:

ವಚನ- ಸ್ವರವಚನಗಳಲ್ಲದೆ ಮಂತ್ರಗೋಪ್ಯ, ದಂಡಕ, ಬೊಲ್ಲಿ ಅಷ್ಟಕ, ತಾರಾವಳಿ, ಮಿಶ್ರಾರ್ಪಣ, ಕರಣಹಸಿಗೆ, ಉಯ್ಯಾಲೆ, ಶತಕ, ತ್ರಿಪದಿ, ಪೀಠಿಕೆ, ನಾಂದ್ಯ- ಮೊದಲಾದ ಪರಿಭಾಷೆಗಳು ಶರಣರ ಕೃತಿಗಳಲ್ಲಿ ಬಳಕೆಗೊಂಡು ಶರಣ ಸಾಹಿತ್ಯದ

ವೈಶಾಲ್ಯತೆಗೆ ವೈವಿಧ್ಯತೆಗೆ ಕಾರಣಗಳಾಗಿವೆ.

ಹೀಗೆ ವಚನ- ಸ್ವರವಚನ- ಇತರ ಸಾಹಿತ್ಯ ಪ್ರಕಾರದಲ್ಲಿ ಮೈದೋರಿದ ಶರಣ ಸಾಹಿತ್ಯ ಅನುಭಾವ ಗೋಷ್ಠಿಗಳ ಮೂಲಕ ಹೊರಹೊಮ್ಮಿದೆ. ಭಾವೈಕ್ಯತೆಗೆ ಸಹಕಾರಿಯಾಗಿ ನಿಂತ ಈ ಸಾಹಿತ್ಯದ ಹರವು ಹಲವಾರು ಮಹಾಪ್ರಬಂಧಗಳ ಅಧ್ಯಯನಕ್ಕೆ ಸ್ವರವಚನ ಪರಿಭಾಷಾ ಕೋಶಗಳ ಸಿದ್ಧತೆಗೆ ವಸ್ತುವಾಗಬಲ್ಲ ಸಾಮರ್ಥ್ಯ ಹೊಂದಿದೆ. ಸ್ವರವಚನ ಸಾಹಿತ್ಯವು ಬಿಡಿಬಿಡಿ ಸ್ವರವಚನಗಳಲ್ಲಿ ಸ್ವತಂತ್ರ ಕೃತಿಗಳಲ್ಲಿ ಸಂಪಾದನಾ- ಸಂಕಲನ ಕೃತಿಗಳಲ್ಲಿ ಲಭ್ಯವಾಗುತ್ತವೆ.

೧೨ನೆಯ ಶತಮಾನದಲ್ಲಿ ಸಕಲೇಶ ಮಾದರಸ, ಸೊಡ್ಡಳ ಬಾಚರಸ, ಬಸವ, ಅಲ್ಲಮ, ಚನ್ನಬಸವ, ನಿಜಗುಣ, ನಿಜಲಿಂಗ ಚಿಕ್ಕಯ್ಯ, ಆದಯ್ಯ, ಅಕ್ಕಮಹಾದೇವಿ, ನೀಲಮ್ಮ ಮೊದಲಾದವರ ಸ್ವರವಚನ ಲಭ್ಯವಾದರೆ, ಹರಿಹರ-ರಾಘವಾಂಕರಲ್ಲಿ ಅವುಗಳನ್ನು ಹಾಡುತ್ತಿದ್ದ ಸಂದರ್ಭಜನ್ಯವಾಗಿ ಬಳಸುತ್ತಿದ್ದ ಕ್ರಮವನ್ನು ಸೂಚಿಸಿರುವುದುಂಟು. ೧೫ನೆಯ ಶತಮಾನದಿಂದ ಮುಂದೆ ಕರಸ್ಥಲದ ನಾಗಿದೇವ-ಗುರುಬಸವ ಗುರುಪುರದ ಮಲ್ಲಯ್ಯ-ನಿಜಗುಣ ಶಿವಯೋಗಿ ಕೆಸ್ತೂರದೇವ ಮುಪ್ಪಿನ ಷಡಕ್ಷರಿ- ಸರ್ಪಭೂಷಣ ಶಿವಯೋಗಿ- ಬಾಲಲೀಲಾ ಮಹಂತ ಶಿವಯೋಗಿ- ಘನಮಠಾರ್ಯ- ರಥೋದ್ಧರಣೆಯ ಸಂಗನ ಬಸವೇಶ್ವರ- ಮೈಲಾರ ಬಸವಲಿಂಗ ಶರಣ- ಮುಂತಾದವರಲ್ಲಿ ಸ್ಥಲ ನಿರ್ದೆಶನ, ಸ್ಥಲ ನಿರ್ದೇಶನವಿಲ್ಲದೆ ಒಂದೊಂದು ಕೃತಿಯಲ್ಲಿ ಲಭ್ಯವಾಗಿ ಸ್ವರವಚನ ಸಾಹಿತ್ಯದ ಸುಗ್ಗಿಯ ಹಿಗ್ಗನ್ನೇ ಒದಗಿಸಿ, ಅದರ ಹುಲುಸಿಗೆ ಸಾಕ್ಷಿಗಳಾಗುತ್ತವೆ. ಮುಂದೆ ಬಂದ ಕೂಡಲೂರು ಬಸವಲಿಂಗ ಶರಣ, ಕಡಕೋಳ ಮಡಿವಾಳಪ್ಪ ಶಿವಯೋಗಿ, ಕರಿವೃಷಭೇಂದ್ರರು, ಶಿಶುನಾಳ ಶರೀಫ ಶಿವಯೋಗಿ, ಮುಂತಾದ ಅನುಭಾವಿಗಳಲ್ಲಿ ಸ್ಪಂದಿಸಿ ಹೊರಹೊಮ್ಮಿದೆ. ಜೊತೆ ಜೊತೆಯಲ್ಲಿ ಹರಿದಾಸರ ಕೀರ್ತನೆಗಳಿಗೆ ಪ್ರಚೋದನೆ ನೀಡಿದೆ. ಸ್ವರ ಏಕೋತ್ತರ ಶತಸ್ಥಲ, ಶೂನ್ಯಸಂಪಾದನೆ ಗ್ರಂಥದ ಸಂಕಲನಕಾರರಿಗೆ ಆಕರ ಸಾಮಗ್ರಿಯಾಗಿ ನಿಂತಿದೆ. ವಚನ ಸ್ವರವಚನ-ಇತರ ಸಾಹಿತ್ಯ ರಚನೆಯ ಮೈಲಾರ ಬಸವಲಿಂಗ ಶರಣರಿಗೆ ವೀರಶೈವ ತತ್ವ್ತಾಚರಣೆಯನ್ನು ಪರಿಶುದ್ಧವಾಗಿ ನಿರೂಪಿಸುವ ಅವರ ಜೀವನ ಕೃತಿಗಳ ಅವಲೋಕನವನ್ನು ಲಭ್ಯ ಸಾಹಿತ್ಯದ ಆಧಾರದಲ್ಲಿ ಹಿಂದೆ ಸೂಚಿಸಿದ ವಚನ- ಸ್ವರವಚನ- ಇವರ ಸಾಹಿತ್ಯ ಪ್ರಕಾರಗಳ ಹಿನ್ನೆಲೆಯಲ್ಲಿ ಅವಲೋಕಿಸುತ್ತ ಅವರ ಕೊಡುಗೆ ಏನೆಂಬುದನ್ನು ಬೆಲೆಕಟ್ಟಬಹುದು.

ಮೈಲಾರ ಬಸವಲಿಂಗ ಶರಣರು ಎಂದ ಕೂಡಲೇ ನಮ್ಮೆದುರು ಬಂದು ನಿಲ್ಲುವುದು. ಅವರು ಶರಣರಾಗಲು ಅವರಿಗಿದ್ದ ಪರಿಸರ ಎಂಥದು? ಯಾವ ಶಿವಾನುಭವ ಗರಡಿಯಲ್ಲಿ ಗುರುಗಳಲ್ಲಿ ತಯಾರಾದವರು ಎಂಬುದು. ಆ ಗರಡಿಯೇ (ಕೇಂದ್ರವೇ) ಬಳ್ಳಾರಿ ಜಿಲ್ಲೆಯ ಲಿಂಗನಾಯಕನಹಳ್ಳಿಯ ಪರಿಸರದಲ್ಲಿ ಮೈವೆತ್ತು ನಿಂತ. ಹಾಲವರ್ತಿ ಚೆನ್ನವೀರರ ಗುರುಕುಲದ ಶಿವಾನುಭವ ಕೇಂದ್ರದ ದೃಶ್ಯ. ಈ ಕೇಂದ್ರದ ಚಾಲಕರಾದ ಗುರು ಚೆನ್ನವೀರರು ʼʼಪರತತ್ತ್ವಮೂರ್ತಿ ನಿಜದಿರವೆ ರೂಪಾಗಿ ಧರೆಯೊಳಗೆ ಚರಿಸಿ, ಮೆಟ್ಟಿದ ಧರೆ ಸುಕ್ಷೇತ್ರವೆನಿಸಿ,  ಜಲವ ಪಾವನ ತೀರ್ಥವಾಗಿಸಿ, ಜೀವಚರಗಳೊಳಗೆ ಆವನಾದೊಡೆ ಅವನ ಕೈವಿಡಿದು ಪಾವನಾತ್ಮಕವಾಗಿಸುವ ಉದ್ದೇಶ ಹೊತ್ತು ಬಂದವರು. ಲಿಂಗನಾಯಕನಹಳ್ಳಿಯ ಶಿವಾನುಭವ ಕೇಂದ್ರದ ರೂವಾರಿಗಳಾಗಿದ್ದ ಚೆನ್ನವೀರರು ಸೋಮಶೇಖರ ದೊರೆ ಅವನರಸಿ ಬಸವಮ್ಮಾಜಿಯರನ್ನು, ಹರವಿ ಪುಂಗ ಪುರಾಣ ಮಠದಯ್ಯನಂಥವರನ್ನು, ಹರಚರ ಗುರು ಮೂರ್ತಿಗಳನ್ನು ಮೂರ್ತಗೊಳಿಸಿದ ಚಿತ್ರ. ಹಾಗೆಯೇ ಅವರಿಂದ ದೀಕ್ಷಿತರಾಗಿ ಲಿಂಗಮೂರ್ತಿಗಳಾಗಿ ಹೊರಬಂದ- ಬಾಲಲೀಲಾ ಮಹಾಂತ ಶಿವಯೋಗಿಗಳು, ಹೊಳಲು ಲಿಂಗಪ್ಪ ಶರಣರು, ಬನ್ನಿಮಟ್ಟಿ ಚೆನ್ನಪ್ಪನವರು, ಶಾಂತವೀರರು, ರಾಚೋಟಿ ಸ್ವಾಮಿಗಳು-ಇನ್ನೂ ಅನೇಕರು ಇವರ ಪರುಷ ಸದೃಶ   ವ್ಯಕ್ತಿತ್ವಕ್ಕೆ ಮಾರುಹೋಗಿ ಅವರ ಕೃಪಾವಲಯದಲ್ಲಿ ಬೆಳೆದು ನಾಡಿನುದ್ದಗಲಕ್ಕೂ ಅವರ ಪ್ರಭಾವ ಬೀರಿದವರು. ಇವರಲ್ಲಿ ಮೈಲಾರ ಬಸವಲಿಂಗ ಶರಣರೂ ಒಬ್ಬರೆಂಬುದನ್ನು ಮರೆಯುವಂತಿಲ್ಲ.  

ಬಸವಲಿಂಗ ಶರಣರು -ಬದುಕು:

ಕನ್ನಡ ನಾಡಿಗೆ ಮಬ್ಬುಕವಿದು ಕತ್ತಲಾವರಿಸಿದ ೧೮-೧೯ನೆಯ ಶತಮಾನಗಳ ಅಂತ್ಯ ಹಾಗೂ ಆದಿ ಭಾಗಗಳಲ್ಲಿ ಉದಯಿಸಿ ದಿವ್ಯ ಕಿರಣದಿಂದ ಪ್ರಕಾಶಿಸಿದ ಮಹಾತ್ಮರಲ್ಲಿ ಒಬ್ಬರು ಮೈಲಾರ ಶರಣರು. ಕ್ರಿಯಾ-ಜ್ಞಾನ ಸಮಾಯುಕ್ತ ಸಮತೋಲನದ ವೀರಶೈವವೇ ಅವರ ಬದುಕು ಬರಹಗಳು. ಬಸವ ಜ್ಯೋತಿಯ ದಿವ್ಯ ಕಿರಣ ಜ್ಯೋತಿಯಾದ ಮೈಲಾರ ಬಸವಲಿಂಗ ಶರಣರು ಏತಿಹಾಸಿಕ ಪ್ರಸಿದ್ಧಿ ಪಡೆದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಶೆಟ್ರ ಮನೆತನದ ಬಸವಪ್ಪನೆಂಬಭಿದಾನದಿಂದ ಜನ್ಮ ತಳೆದವರು. ಮನೆಕೊಂಡು ಬದುಕಿದವರು. ಅವರ ಮನೆ ಚಿಕ್ಕದಾದರೂ ಘನಮನದಿಂದ ಬೆಳೆವ ಪ್ರವೃತ್ತಿಯವರೆಂಬುದು, ಅವರ ಜೀವನ ಸಾಧನೆಗಳ ಬೆಳವಣಿಗೆಯಿಂದ ತಿಳಿದು ಬರುವುದು. ಶರಣತ್ವ ಸಿದ್ಧಿ ಪಡೆದ ಬಸವಪ್ಪನವರು ತಮ್ಮ ಬಾಲ್ಯದ ಬಗೆಗಾಗಲಿ ತಂದೆ ತಾಯಿಗಳ ಬಗೆಗಾಗಲಿ, ಹೇಳಿಕೊಳ್ಳದಿರುವುದು, ಗುರುವನ್ನು ಗುರು ಪರಂಪರೆಯನ್ನು ಹೇಳಿಕೊಂಡುದು ವೀರಶೈವ ತತ್ತ್ವಕ್ಕನುಗುಣವಾಗಿಯೇ ಇರುವುದು. ಹೀಗಾಗಿ ಗುರುದರ್ಶನದ ನಂತರದ ಬದುಕಿನ ಜೀವನ ಸಾಧನೆಯನ್ನು ಅವರ ಕೃತಿಗಳ ಮೂಲಕ ಗುರುತಿಸಿದಂತೆ ಬಾಲ್ಯದ ಬದುಕಿನ ಚಿತ್ರಣ ಮಸುಕು-ಮಸುಕು. ಆದರೂ ಜನತೆಯಲ್ಲಿ ಬಾಯಿಂದ ಬಾಯಿಗೆ ಕೊಡುತ್ತ ಜನ ಮನದಲ್ಲಿ ಅಚ್ಚಳಿಯದೆ ನಿಂತುಕೊಂಡು ಬಂದ ಅವರ ಬಾಲ್ಯ ಜೀವನವೂ ಮೈಲಾರದಲ್ಲಿಯೇ ಕಳೆದುದು ವಿದಿತವಾಗುತ್ತದೆ. ಅಯ್ಯನವರ ಪಾಠಶಾಲೆಯಲ್ಲಿ ಓದಿದ ಓದು ಅವರ ಜ್ಞಾನದಾಹ ತೀರಿಸದಾದಾಗ ನೆರೆಹೊರೆಯ ಊರುಗಳಲ್ಲಿಯ ಕೀರ್ತನೆ ಪ್ರವಚನಗಳಲ್ಲಿ ಭಾಗಿಗಳಾಗಿ ಕೇಳುವುದು, ಅದರಿಂದ ಪ್ರಚೋದನೆಗೊಂಡು ಶರಣರ ಜೀವನ ತತ್ತ್ವಗಳ ಬಗೆಗೆ ಅವರ ಕೃತಿಗಳತ್ತ ಗಮನಹರಿಸಿ ಸ್ವಾಧ್ಯಾಯ ಸಿದ್ಧರಾಗಿ ಓದಿಕೊಂಡು ದಿನನಿತ್ಯದ ವ್ಯಾಪಾರದ ಕಾಯಕದಲ್ಲಿ ತೊಡಗುವುದು ಅವರ ದಿನನಿತ್ಯದ ಬದುಕಾಗಿದ್ದಿತು.

ವಿವೇಕದಿಂದೆಚ್ಚತ್ತು ಸಂಸಾರ ಜಂಜಡವನ್ನು ಬಿಡಿಸುವ ಅನುಭಾವವನ್ನು ಬೋಧಿಸುವ ಗುರು ತಂದೆಯನ್ನು ನೆನೆಯುತ್ತ ‘ನಗುರೋರಧಿಕಂ ನಗುರೋರುಧಿಕಂ’’ ಪಥವನರಿವೊಡೆ ಗುರು ಪಥವೇದ ಮೊದಲು’’ ಎಂಬ ವಾಕ್ಯಗಳನ್ನು ಮೆಲುಕು ಹಾಕುತ್ತ ಶಿವಾನುಭವದ ನಿಲವನ್ನರಿಯಬೇಕೆಂಬ ಹೃದಯದ ಭೂಮಿಯನ್ನು ಹದಗೊಳಿಸಿಕೊಂಡು ಗುರುದರ್ಶನದ ಕಾತರದ ಕಳವಳದಲ್ಲಿ ಮಗ್ನರಾದವರು. ಹೀಗಿರುವಾಗಲೇ ವ್ಯಾಪಾರ ಕಾಯಕದಲ್ಲಿ ಜಾಣ್ಮೆಯನ್ನು ಮೆರೆದ ಬಸವಪ್ಪನವರು ಸಮೀಪದ ಅನೇಕ ಕುಹಕಿಗಳಿಂದ ಪರೀಕ್ಷೆಗೊಳಪಡುವರು. ಮೈಲಾರಕ್ಕೆ ಬಂದ ಅಧಿಕಾರಿಗಳಿಗೆ ‘ವಿಷ್ಣು ನಿಂದಕʼನೆಂಬ ಆಪಾದನೆ ಹೊರಿಸಿ ಅವರಿಂದ ಪ್ರಶ್ನೆಗಳಿಗೊಳಪಟ್ಟು ಪರೀಕ್ಷಿಸಿ ವಿಷ್ಣುನಿಂದಕನಲ್ಲನೆಂಬ ತಮ್ಮ ಅಭಿಪ್ರಾಯವನ್ನು ಪದಮೂಲಕ ಸ್ಪಷ್ಟಪಡಿಸಿದರು.

 ಹರಿಯ ಬ್ರಹ್ಮಾಂಡ ಪಿಂಡಾಂಡ ದಶದಿಗ್‌ಭರಿತ

 ಮರಿಯೆ ತ್ರೈಭುವನಮಟ್ಟುಂಬ ಸಕಲಕ್ಕಾದಿ

ಹರಿಯ ಬಿಟ್ಟರಗಳಿಗೆ ಜೀವಿಸುವರಾರಿಲ್ಲ. ಲೋಕದೊಳಗದು ಕಾರಣಂ

 ಹರಿಭಕ್ತನಹುದು ಹರಭಕ್ತನಲ್ಲ ನಾನೂಂ

ನರಸಿಂಹ ಮಧುಸೂದನಂ ಮತ್ತಮಾ

 ಸಿರಿಯರಸ ವಾಸುದೇವ ಯದುಪತಿಯಾದಿ ಪ್ರಣವ ಸ್ಮರಣೆಯೊಳಗಿರ್ಪೆಂಸದಾ||

ಈ ಪದ್ಯದಲ್ಲಿ ಬರುವ ‘ಹರಿ’ ಪದವನ್ನು ‘ವಾಯು’ ಎಂಬರ್ಥದ ಶ್ಲೇಷೆಯಿಂದ ಬಳಸಿ ಕುಹಕಿಗಳ ಮುಖಭಂಗ ಮಾಡಿದವರು. ಮತ್ತೊಂದು ಸನ್ನಿವೇಶದ ಸಂದರ್ಭಕ್ಕಾಗಿ ಕಾಯ್ದು ಬಸವಪ್ಪನವರನ್ನು ಪರೀಕ್ಷೆಗೊಳಪಡಿಸಿದಾಗ

ಗೋವಿಂದನಾದಿ ಗೋವಿಂದ ನಮ್ಮ

ಗೋವಿಂದಲಾವ ಪಾವನ ಪಾಂಡುರಂಗ ||ಪಲ್ಲ||

ಶ್ರೀ ವಿಭೂತಿಯ ಪಂಚ ಗೋವಿಂದ | ವೀರ

ಶೈವಾಗಮೋಕ್ತವು ಗೋವಿಂದ

ಪೀವ ಪಂಚಾಮೃತ ಗೋವಿಂದ| ಜಗ

ಜ್ಜೀವ ಸಂತೃಪ್ತಿಯು ಗೋವಿಂದ….

ವಿಭೂತಿಯಿಂದಾಗುವ ವಿಭೂತಿಯ ಮಹತಿಯನ್ನು ಎತ್ತಿ ಹೇಳಿ ಗೋವಿಂದ ‘ಪಡೆದ ಶ್ಲೇಷೆಯ ಮೂಲಕ ಅವರ ಮನವನ್ನು ಸಂತೃಪ್ತಪಡಿಸಿದವರು; ಅಗ್ನಿ ದಿವ್ಯ ಗೆದ್ದು ತಮ್ಮ ಸಾಹಿತ್ಯ ನಿರ್ಮಾಣದ ಮೊದಲ ಹಾದಿ ತುಳಿದವರು; ಗುರು ನಿರೀಕ್ಷೆಗಾಗಿ

ಕಾಯ್ದು ಕುಳಿತವರು.

ಮೊದಲೇ ಸೂಚಿಸಿದಂತೆ ಲಿಂಗನಾಯಕನಹಳ್ಳಿಯಲ್ಲಿ ಶಿವಾನುಭವ ಕೇಂದ್ರದ, ರೂವಾರಿಗಳಾದ ಗುರು ಚೆನ್ನವೀರರ ತಪಃಪ್ರಭಾವದ ಸುದ್ದಿ ಪವನ ವೇಗದಿಂದ ಹರಡಿ ತಿಳಿದು ಸರ್ವರನ್ನೂ ಆಕರ್ಷಿಸಿದಂತೆ ಬಸವಪ್ಪನವರನ್ನೂ ಆಕರ್ಷಿಸಿ ಶಿವಯೋಗ ಸಂಪದದ ಹಬ್ಬದೂಟದ ವಾರ್ತೆ ಮಾತಾಯಿತು. ಅರಸುವ ಬಳ್ಳಿ ಕಾಲ್ ತೊಡಕಿದಂತಾಗಿ ಮುಂದೆ ಗುರು ಚೆನ್ನವೀರರನ್ನು ಬಸವಪ್ಪನವರು-

 ಪರಮ ಪಾವನ ಪರಬ್ರಹ್ಮ ಸ್ವರೂಪನೆ, ಚೆನ್ನವೀರ

ನಿರುಪಮ, ನಿರಘ ನಿರ್ದ್ವಂದ್ವ ನಿರ್‌ಲೇಪನೆ| ಚೆನ್ನವೀರ ||ಪಲ್ಲ||

ಶರಣ ಮಂದಿರಧಿಕಾರನೆ ಚನ್ನವೀರ…

ವಿನಮಿತ ಜನರ ಭವದ ಬೇರ ಕೀಳ್ವೆನೆ |

ಎಂದು ಭಾವ ತುಂಬಿ ಹಾಡುತ್ತ ʼʼಈತನುನ್ನತವ ತನ್ನ ಪೊಗಳುವಡಾರು ಬಲ್ಲ ಚತುರಾಸ್ಯ ಬ್ರಹ್ಮಗಳವಲ್ಲʼʼ ಎಂದು ತಮ್ಮ ವಿನಯ ಮೆರೆದವರು. ಗುರು ದರ್ಶನ ಪಡೆದು ʼʼಎಲ್ಲ ದೈವಕೆ ನಿಮ್ಮ ಮೆಲ್ಲಡಿಯೆ ಘನವೆಂದು.. ಭಾವಿಸಿದ ಅವರು ಮಾಯೆಯ ಬಲೆಯಿಂದ, ಆಶೆ-ರೋಷಗಳ, ಹಮ್ಮು ಬಿಮ್ಮುಗಳ ಕಾಟದಿಂದ, ಮರ್ಕಟ ಮನದಿಂದ, ಮೂರರ ಮಲಗಳಿಂದ, ಅರಿಷಡ್ವರ್ಗಗಳ ಉಪಟಳದಿಂದ, ಕಾಯಕರ್ಮಗಳೆಂಬ ಮಾಯಾ ಸಂಸಾರದಿಂದ ಹೇಯವ ಮಾಡಿ ಪ್ರಿಯದಿಂದ ಪಾಲಿಸು ತಂದೆಯೆಂದು

ಬಿನ್ನವಿಸಿದವರು.

ಶಿಷ್ಯನ ಮೊರೆ ಕೇಳಿದ ಚನ್ನವೀರನು, ನೀನು ನರನಲ್ಲ ಪರವಸ್ತುವೆಂದು, ಲಿಂಗ ಸಜ್ಜೀವಿಯೆಂದು, ಚತುರ್ವಿಧ ಸಾರಾಯನೆಂದು ಬೋಧಿಸಿ

ಭವಿತನವ ಕಳೆದು ಭಕ್ತನ ಮಾಡಿ ತನುತ್ರಯಕೆ

ತ್ರಿವಿಧ ದೀಕ್ಷೆಯನ್ನಿತ್ತು ತ್ರಿವಿಧ ಗುಣಗಳ ಕಳೆದು

ತ್ರಿವಿಧ ತನುವಿಗೆ ತ್ರಿವಿಧ ಲಿಂಗಮಂ ನೆಲೆಗೊಳಿಸಿ ತ್ರಿವಿಧಿವಾಚಾರವರುಹಿ

ತ್ರಿವಿಧ ಪೂಜೆಯ ಪೇಳಿ ತ್ರಿವಿಧಾರ್ಪಣವ ತಿಳುಹಿ

ತ್ರಿವಿಧ ಶೇಷವೆಂಬ ತ್ರಿವಿಧಸುಖ ಸಮರತಿಯ

ನವಿರತಂ ದೆಯೆಗೆಯ್ದು… ಗುರುವಿಗೆ ಶರಣೆಂದು….

ಪೊರೆಮಡುವರು. ಹಾಗೆಯೇ ಲಿಂಗ ದೀಕ್ಷಿತರಾದ ಗುರುಕರೋದ್ಭವರಾದ ವಿವರವನ್ನು

ಪಾವನಾತ್ಮಕ ಸುಪುತ್ರನ ಮಸ್ತಕದೊಳು ಗುರು

ದೇವ ಕರವಾಂತು ಸಾಸಿರದಳದ ಚಿತ್ಕಳೆಯ

ಭ್ರಾವದಿಂ ಮನ ಮನದಿನೇತ್ರ ನೇತ್ರಗಳಿಂ ತೆಗೆದಿಷ್ಟರೂಪುಗೊಳಿಸಿ

ತೀವಿ ತಚ್ಚಿಷ್ಯನಂಗದ ಮೇಲೆ ಧರಿಸಿ ಸಂ

ಜೀವಷಣ್ ಮಂತ್ರಲಿಂಗವಿದೆಂದು ತಿಳುಹೆ…..”

ಎಂದು ಹೇಳಿಕೊಂಡಿರುವರು.

ಗುರುಸೇವೆ- ಲಿಂಗಪೂಜೆ- ಜಂಗಮ ದಾಸೋಹ-ಜಲತೀರ್ಥ ಸೇವನೆ- ಪ್ರಸಾದ ಭೋಗದಿಂದ ಅಖಂಡ ಭಕ್ತಿಯುಳ್ಳ ಭಕ್ತಕಾಯನಾಗೆಂದು ಷಟ್‌ಸ್ಥಲ – ಪಂಚಾಚಾರಗಳ ಬೋಧೆ ನೀಡಿ ಅಷ್ಟಾವರಣಾಂಗಿಯಾಗಿ ಪರಿಪೂರ್ಣ ಮಂತ್ರಶರೀರಿಯಾಗೆಂದು ನಡೆಸಿದವರು.

 ಹರಣ ಹೋಗದ ಮುನ್ನ ಶರಣನಾಗಬೇಕೆಂಬ, ವೀರಶೈವವೆನಿಸುವ ಚರ್ತುರ್ವಿಧ ಸಾರಾಯ ಸಂಪತ್ತಿನ ಪರಿಪೂರ್ಣ (ಅಖಂಡ) ಭಕ್ತನೆನಿಸಬೇಕೆಂಬ ಹಂಬಲದಿಂದ ಗುರು ಬೋಧಿಸಿದ ಮಾರ್ಗದಲ್ಲಿ ನಡೆದು ಅಹಂಮಮತೆ-ಅಹಂಕಾರ ತ್ಯಜಿಸಿ, ಪರವಸ್ತುವಾಗಿ “ಶರಣಸತಿ – ಲಿಂಗಪತಿ”ಯಾಗಿ ನರಸುಮನಾಗದೆ ಗುರುಸುತನಾಗಿ, ಭವಿಯಾಗದೆ-ಭಕ್ತನಾಗಿ, ಅವಶೈವನಾಗದೆ-ಜಪದರ್ಥವೆನಿಸಿಪ ಶಿವನಾಗಿ ಬದುಕಲು ಸಾಧನೆಗೈದವರು.

 “ಭಕ್ತಿಯೇ ಮುಕ್ತಿಯ ಜನನಿ” ಎಂದರಿತ ಬಸವಪ್ಪನವರು ಷಟ್‌ಸ್ಥಲ ಮೂಲಕ ಭಕ್ತಿಶಕ್ತಿಯಿಂದೊಡಗೂಡಿ ಅಂಗ-ಲಿಂಗ-ಶಕ್ತಿ-ಭಕ್ತಿ, ಕರ-ಮುಖ, ಪದಾರ್ಥ-ಪ್ರಸಾದಗಳ ಸಕೀಲವಿಡಿದು, ಅರ್ಚಿನ -ಅರ್ಪಣ ಅನುಭವದಿಂದ ಅಷ್ಟಾಂಗ ಯೋಗ ತ್ಯಜಿಸಿ  ಶಿವಯೋಗದಲ್ಲಿ ಧ್ಯಾನದಿಂದ ಮನದ ಲಿಂಗವಾಗಿಸಿ ತನುವನು ಲಿಂಗವಾಗಿಸಿ ಧಾರಣ ಮಾಡಿ ಅನಿಮಿಷದೆ ಸಮಾಧಿಯಲ್ಲಿ ಲಿಂಗಲೋಲುಪರಾದವರು.

ನಯನವ ನಂದಾದೀವಿಗೆ, ಭಯಭಕ್ತಿ ಭೃತ್ಯ ಕಿಂಕರ

ಚೌಮಣಿ ಮಂಚವಾಗಿಸಿ, ತನ್ನ ತಾನೆನಿಪಲಿಂಗಮಂ

ಭಿನ್ನವಿಲ್ಲದೆ ಪೂಜಿಸಿ ಷಣ್ಮಂತ್ರ ಮೂರ್ತಿಸ್ವರೂಪರಾಗಿ

ಸಾರಾಯದಿಂದ ಪ್ರಸಾದಕಾಯರಾದವರು ಭಕ್ತರಾದವರು.

ಗುರುವೇ ಪರಬ್ರಹ್ಮವಾಗಿ, ಗುರುವಿನ ವಿಗ್ರಹವೇ ಲಿಂಗವಾಗಿ, ಹರಣ ಜಂಗಮವಾಗಿ, ಆನಂದ ಪದಜಲವಾಗಿ, ಪ್ರಸನ್ನತೆ ಪ್ರಸಾದವಾಗಿ, ಶಾಂತಿ ಭಸಿತವಾಗಿ, ಚಿದ್ಘನ ರುದ್ರಾಕ್ಷಿಯಾಗಿ, ಅಭಿದಾನವೇ ಮಂತ್ರವಾಗಿ, ಭಕ್ತಿಯ ಸ್ಪರ್ಶದಿಂದ ಬಾಹ್ಯದೈವಂಗಳಿಗೆರಗದೆ ಏಕಲಿಂಗ ನಿಷ್ಠಾಪರರಾಗಿ ʼʼಅನುಭಾವವೆಂಬುದೈವಾಚಾರದಿರವು’ ಎಂದರಿತು ಆತ್ಮ ಸಾಕ್ಷಾತ್ಕಾರ ಪಡೆದವರು, ನಡೆ- ನುಡಿಯನೇಕೀಕರಿಸಿಕೊಂಡವರು.

ಬಸವಪ್ಪ ಬಸವಲಿಂಗ ಶರಣರಾದುದು:

ಗುರು ಚೆನ್ನವೀರರಡಿಯಲ್ಲಿದ್ದ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಮಠದ ಉತ್ತರಾಧಿಕಾರಿಯನ್ನು ನಿಯಮಿಸುವ ಸಂದರ್ಭದಲ್ಲಿ ಅಂಗಹೀನ ವಟುವನ್ನು ಉತ್ತರಾಧಿಕಾರಿಯಾಗಿ ಮಾಡಬಾರದೆಂಬ ಶರಣರ ಆಕ್ಷೇಪಣೆಯಿಂದಾಗಿ ಗುರುವಿನ

ಅವಕೃಪೆಗೆ ತುತ್ತಾಗಿ ‘ಮುಸವಪ್ಪ’ ನಾದರು. “ಹರ ಮುನಿದರೆ ಗುರು ಕಾಯ್ವ ಗುರು ಮುನಿದರೆ ಹರ ಕಾಯ’ನೆಂಬುದಕ್ಕೆ ಸಾಕ್ಷಿಯಾಯಿತು. ಈ ಘಟನೆ ಈ ಘಟನೆಯಿಂದ ನೊಂದು ಬೆಂದು ಬಸವಪ್ಪನವರು ಸಹಪಾಠಿಗಳಲ್ಲೊಬ್ಬರಾದ ಬಾಲಲೀಲಾ ಮಹಾಂತ ಶಿವಯೋಗಿಗಳ ಸಲಹೆಯಂತೆ ಗುರುಸ್ತುತಿಸಿ “ಗುರು ಕರುಣ ತ್ರಿವಿಧಿ” ರಚಿಸಿ ಗುರು ಕೃಪಾ ಪೋಷಕರಾಗಿ ಬಸವಲಿಂಗರಾದರು. ಅದನ್ನೇ ಅವರು

 ಬಸವ ಬಾರೆಂದನೆಗೆ ಅಸಮಲಿಂಗವೇ ನೀನೆಂ

ದುಸುರಿದ ಬಳಿಕ ಬಸವಲಿಂಗನೆಂದು

ಪೆಸರಿಟ್ಟ ಗುರುವೆ ಕೃಪೆಯಾಗುʼʼ ಎಂದು ಹಾಡಿಕೊಂಡಿದ್ದಾರೆ.

ಪರೀಕ್ಷೆಗಾಗಿ ಬೋಧಕರಾಗಿ:

ಲಿಂಗನಾಯಕನ ಹಳ್ಳಿಯ ಶಿವಾನುಭವ ಕೇಂದ್ರದಲ್ಲಿ ಗುರು ಮತದಂತೆ ಪರೀಕ್ಷಕರಾಗಿ, ಬೋಧಕರಾಗಿ ಹುಸಿಲಾಂಛನ ಖಂಡಿಸಿದ ಶರಣರುʼʼ ಛೀ ಹೆಡ್ಡ ನೀವೆಂಥ ಶಿವಭಕ್ತರು, ಶಿವಯೋಗಿಗಳುʼʼ ಎಂದು ಅವರ ಕಪಟ ವೇಷಗಳನ್ನು ತೆಗೆಸಿ, ವೀರಶೈವ ತತ್ತ್ವಾಚರಣೆಗಳನ್ನು ನಿರೂಪಿಸಿ, “ತೂಗಿರೇ ಶರಣ ಸತಿಯರು ಶಿವಯೋಗ ಸಂಪದದೊಳು” ಎಂದು ಬೋಧಿಸಿದವರು ಪುನಃ ಅವರನ್ನು ಪರೀಕ್ಷೆಗೊಳಪಡಿಸಿ, ಪರೀಕ್ಷಿಸಿ, ಈಗ ನೀವು ಮಠಾಧಿಕಾರಿಗಳಾಗಲಿ, ಬೋಧಕರಾಗಲು ಸಿದ್ಧರಾದಿರಿ, ಹೋಗಿ ಬನ್ನಿʼ’ ಎಂದು ನಮಸ್ಕರಿಸಿ ಕಳಿಸಿಕೊಡುವಲ್ಲಿ ಅವರಿಗೆ ತತ್ವಬೋಧಕರನ್ನು ಸಿದ್ಧಪಡಿಸುವ, ಅವರ ಮೂಲಕ ಸಮಾಜವನ್ನು ತಿದ್ದಬೇಕೆಂಬ ಹಂಬಲದ ಕಳಕಳಿಯನ್ನು ಹೊಂದಿದವರಾಗಿದ್ದರು.

 ಹಲವು ವರ್ಷಗಳವರೆಗೆ ಕಾರ್ಯತತ್ಪರರಾದ ಬಸವಲಿಂಗ ಶರಣರು ಒಂದು ಕಡೆಗೆ ಸಾಧಕರನ್ನು ಸಾಧನೆಗೊಳಪಡಿಸುವುದು, ಇನ್ನೊಂದೆಡೆಗೆ ದಿನ ನಿತ್ಯ ೫ ಆಣೆ ದುಡ್ಡನ್ನು ಸಂಪಾದಿಸುವ ವ್ಯಾಪಾರ ಕಾಯಕದೊಂದಿಗೆ ದಾಸೋಹಂಭಾವ ಎಂದು ವಸ್ತು ತೂಗುವದರ ಜೊತೆ ತತ್ತ್ವ ತೂಗಿ ಕೊಡುವುದು ಇವರ ಇನ್ನೊಂದು ಮುಖದ ಸಾಧನವಾಗಿ ಬೆಳೆದವರು; ಶರಣ ತತ್ತ್ವವನ್ನು ಕೃತಿಗಳ ಮೂಲಕ ಉಳಿಸಿದವರು.

 ಇವರು ರಚಿಸಿದ ಕೃತಿಗಳ ‘ವಸ್ತು’ ವೀರಶೈವ ತತ್ತ್ವಾಚರಣೆ ಒಂದೇ ಆದರೂ ಜನತೆಗೆ ಮುಟ್ಟಬೇಕೆಂಬ ಅವರ ಕಳಕಳಿ ಹಲವಾರು ಕೃತಿ ರಚನೆಗೆ ಪ್ರಚೋದನೆ ನೀಡಿರುವುದು. ೧) ಗುರುಕರುಣ ತ್ರಿವಿಧಿ ೨). ಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ ೩). ಷಟ್‌ಸ್ಥಲ ಜ್ಞಾನಾನುಭವ ೪). ಶಿವಾನುಭವ ದರ್ಪಣ ೫). ಲಿಂಗಪೂಜಾ ವಿಧಾನ ೬). ಭಕ್ತಿ ಬಿನ್ನಹ ದಂಡಕ- ಹೀಗೆ ಆರು ಕೃತಿಗಳ ಮೂಲಕ ತತ್ತ್ವಾಚರಣೆಯ ಸೌಗಂಧವನ್ನು ಸೂಸಿ ಸಾಹಿತ್ಯಕ್ಕೆ ತಮ್ಮ ಭಕ್ತಿಮಣಿ ಸಲ್ಲಿಸಿದವರು.

 ಒಟ್ಟಿನಲ್ಲಿ ಸಂಸಾರಿಗಳಾಗಿ ಸಂಸಾರ ಬಂಧನದಿಂದ ಬಿಡುಗಡೆ ಹೊಂದಿ ಭಕ್ತರಾಗಿ-ಕಾಯಕ ಯೋಗಿಗಳಾಗಿ, ಶಿವಾನುಭವ ಬೋಧಕರಾಗಿ ಮಾಹೇಶ ನಿಷ್ಠೆಯುಳ್ಳವರಾಗಿ ಕೃತಿ ರಚನಕಾರರಾಗಿ ಅನುಭಾವಿಗಳಾಗಿ ಹೀಗೆ ಹಲವಾರು ಸಾಧನೆಯ ಹಂತಗಳಿಂದ ವ್ಯಕ್ತಿತ್ವವನ್ನರಳಿಸಿಕೊಂಡವರು. ಮೈಲಾರ ಶರಣರು. ಗುರು ಚೆನ್ನವೀರರ ವಿಯೋಗದ ನಂತರ ಮೈಲಾರದಲ್ಲಿಯೇ ಲಿಂಗದೊಳಗಾದರೆಂದು ತಿಳಿದುಬರುವುದು.

 ಇನ್ನು ಅವರಿಂದ ರಚಿತವಾದ ಕೃತಿಗಳನ್ನು ಅವು ಒಳಗೊಳ್ಳುವ ವಿಷಯವನ್ನು ನೋಡಬಹುದು. ಸ್ವರವಚನ ಸಂಪುಟ ಕೃತಿ ʼʼಶಿವಾನುಭವದರ್ಪಣವನ್ನುʼʼ ದೀರ್ಘವಾಗಿ ಅವಲೋಕಿಸುತ್ತ ಸ್ವರವಚನ ಸಂಪುಟಗಳಲ್ಲಿ ಕೈವಲ್ಯಕಾರರಲ್ಲಿ ಅದಕ್ಕಿರುವ ಮಹತಿಯನ್ನು ನೋಡಬಹುದು.

೧. ಗುರುಕರುಣ ತ್ರಿವಿಧಿ:

ಕನ್ನಡ ಸಾಹಿತ್ಯದಲ್ಲಿ ತ್ರಿಪದಿ ಸಾಹಿತ್ಯಕ್ಕೆ ತನ್ನದೇ ಆದ ಹಾಸುಬೀಸು ಇದೆ. ಆಕಾರದಲ್ಲಿ ವಾಮನನಂತಿದ್ದ ತ್ರಿಪದಿ ಅರ್ಥದಲ್ಲಿ ತ್ರಿವಿಕ್ರಮನಂತಿದೆ. ಜನಪದರ ಪ್ರಾಣವಾದ ಈ ಪ್ರಕಾರ ಅನುಭಾವಿಗಳ ಕೈಯಲ್ಲಿ ದುಡಿದು ಇನ್ನೂ ವ್ಯಾಪಕ ನಿಲುವು ಪಡೆದಿದೆ.

ಪಂಡಿತರ ಪಾಮರರ ಬದುಕನ್ನು ಎತ್ತಿಕಟ್ಟಲು ಉಪಯುಕ್ತಗೊಂಡ ಈ ತ್ರಿಪದಿ ಮಾಧ್ಯಮ ೧೨ನೆಯ ಶತಮಾನದ ಶರಣ-ಶರಣೆಯರಲ್ಲಿ ತ್ರಿವಿಧಿಯಾಗಿ ಬಳಕೆಗೊಂಡಂತೆ ಮೈಲಾರ ಬಸವಲಿಂಗ ಶರಣರಲ್ಲಿ “ಗುರುಕರುಣ ತ್ರಿವಿಧಿ” ಹೆಸರು ಪಡೆದು ಮುಂದಿನ ಪೀಳಿಗೆಯ ಶರಣರಿಗೆ ಪಾರಾಯಣ ಗ್ರಂಥವಾಗಿದೆ. “ವಚನ” ಪದ ಪ್ರಯೋಗಾರ್ಥದಲ್ಲಿ ʼʼಗುರುಕರುಣ ತ್ರಿವಿಧಿ ವಚನ ಬರೆಯುವುದಕ್ಕೆ ಪ್ರಾರಂಭ” ಎಂಬ ವಾಕ್ಯ ಕೃತಿ ಆರಂಭದಲ್ಲಿ ಬಳಕೆಗೊಂಡು ಮೈಲಾರ ಶರಣರ ನಡೆ -ನುಡಿಯನ್ನೇಕೀಕರಿಸಿ ಕೊಂಡ ಬದುಕು-ಅವರು ಗುರುವಿನಿಂದ ಪಡೆದ ಅನುಭವ ತ್ರಿಪದಿರೂಪದ ವಚನ ತೊಟ್ಟು ಹೊರಹೊಮ್ಮಿದೆ ಸಾರ್ಥಕತೆ ಪಡೆದಿದೆ. ೩೩೩ ತ್ರಿಪದಿಯಿಂದ ಕೂಡಿದ ಇದು ಗುರು ಸ್ತೋತ್ರ ರೂಪದಲ್ಲಿ ಗುರು ಮಹತ್ವಪೂರ್ಣ ಮಹಿಮೆ ಪಡೆದಿದೆ. ತೋರಿಸಿದ ವೀರಶೈವ ಸಿದ್ಧಾಂತದ ಸರ್ವ ಮಗ್ಗಲುಗಳನ್ನು ಪರಿಚಯಿಸಿಕೊಡುವ

ಎಲ್ಲ ಕೈವದೈ ನಿಮ್ಮ ಮೆಲ್ಲಡಿಯ ಘನವೆಂದು

ಸೊಲ್ಲಿಗೊಮ್ಮೊಮ್ಮೆ ನುತಿಪೆ ನಾಂ ಗುರುರಾಯ

ಸಲ್ಲೀಲೆಯಿಂದೆನಗೆ ಕೃಪೆಯಾಗುʼʼ

ಎಂಬ ಶರಣ ಶಿಷ್ಯರ ಮೇಲೆ ಗುರುಕರುಣೆಯಿಂದ ಅರಳಿ ವೀರಶೈವ ಸಿದ್ಧಾಂತದ ಅನುಭವದ ವಿವಿಧ ಮುಖಗಳನ್ನು ಹೊತ್ತು ಸರಳವಾಗಿ ಶಾಸ್ತ್ರ ವಿಷಯವನ್ನು ಪರಿಚಯಿಸಿಕೊಡುವಲ್ಲಿ ಅದಕ್ಕೆ ವಿಶೇಷತೆಯಿದೆ; ಮನ್ನಣೆಯಿದೆ.

‘ತ್ರಿವಿಧ’ವೆಂದರೆ ಮೂರುವಿಧವೆಂದರ್ಥ. ಸೃಷ್ಟಿಯಲ್ಲಿ ಮೂಲೋಕ, ಸೃಷ್ಟಿ ತತ್ತ್ವ ಮೂರು ಬಗೆ, ತನು ತ್ರಿವಿಧ, ಚೇತನ ತತ್ತ್ವ- ತ್ರಿವಿಧ, ಅಂಗಮೂರು, ಲಿಂಗಮೂರು, ಜಂಗಮ ಮೂರು, ಗುರು ಮೂರು, ಭಕ್ತಿ ಮೂರು, ಶಕ್ತಿಮೂರು, ಪಾದೋದಕ-ಪ್ರಸಾದ ಮೂರು ಹಾಗೆಯೇ ವಿಭೂತಿ ರುದ್ರಾಕ್ಷಿ-ಮಂತ್ರ-ಮೂರು, ಮೂರು. ಕೃತಿ ಎತ್ತಿಕೊಂಡ ತತ್ತ್ವಗಳಾದರೂ ಅಷ್ಟಾವರಣ-ಪಂಚಾಚಾರ- ಷಟ್‌ಸ್ಥಲ ಮೂರೇ ಮೂರು. ಹೀಗೆ ಸಮಗ್ರ ಕೃತಿ ತನ್ನ ಸಕಲ ಅವಯುವ, ಸಕಲಾರ್ಥಂಗಳಲ್ಲಿ ತ್ರಿವಿಧಕ್ಕೆ ಸಂದು, ತ್ರಿವಿಧವನ್ನು ಧರಿಸಿ, ತ್ರಿವಿಧಕ್ಕೆ ಕೈಚಾಚಿದ್ದು ಮೂರು ಮೂರು ಚರಣಗಳ ೩೩೩ ನುಡಿಗಳನ್ನೊಳಗೊಂಡಿರುವುದರಿಂದ ಈ ಕೃತಿಗೆ ʼʼಗುರು ಕರುಣ ತ್ರಿವಿಧಿʼ’ಯೆಂದು ಕರೆದುದು ಅರ್ಥಪೂರ್ಣವಾಗಿದೆ. ಮಾತ್ರಾಗಣ-ಅಂಶಗಣಗಳ ಸಮ್ಮಿಶ್ರದಿಂದ ಪರಿಣಾಮ ತೀವ್ರತೆ ತಂದ ಕೃತಿಯಾಗಿದೆ.

 “ಸರ್ವಜ್ಞನ ವಚನಗಳು” ಎಂದಂತೆ ಈ ಕೃತಿಯ ಆರಂಭದಲ್ಲಿ “ಶ್ರೀಗುರು ಪ್ರಸನ್ನ! ಗುರುಕರುಣ ತ್ರಿವಿಧಿ ವಚನ ಪ್ರಾರಂಭ’ ಎಂಬ ತ್ರಿಪದಿ ರೂಪದ ಇದನ್ನು “ವಚನ” ಎಂಬರ್ಥದಲ್ಲಿ ಗ್ರಹಿಸಿ ನಡೆನುಡಿಯ ನೇಕೀಕರಿಸಿಕೊಂಡ ಬದುಕು, ಅವರಿಂದ ಅಭಿವ್ಯಕ್ತವಾದ ಸಾಹಿತ್ಯ ಎಂಬರ್ಥ ಇಲ್ಲಿ ಪ್ರಮುಖವಾಗುತ್ತದೆಂಬುದನ್ನು ಮರೆಯುವಂತಿಲ್ಲ.

೨. ಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ:  

ವೀರಶೈವವು ಶೈವದ ಪರಿಪಕ್ವ ಫಲ. “ಲಿಂಗವಂತ, ವೀರಶೈವ, ನಿರಾಭಾರ ವೀರಶೈವ -ಅಜಾತ ಶೈವ’ ಎಂಬ ಪ್ರಯೋಗಗಳು ವಚನಕಾರರಲ್ಲಿ ಬಳಕೆಗೊಂಡಿದೆ.

೧ ಚತುರ್ವರ್ಣತಿತನೆ ವೀರಶೈವ ನೋಡಾ’ʼ, ಕುಲದಲ್ಲಿ ಶೂದ್ರನಾದಡೇನು ? ಮನದಲ್ಲಿ ಮಹದೇವ ನೆಲೆಗೊಂಡವನೇ ವೀರಶೈವ ನೋಡಾʼʼ ʼʼತಿಳಿದನುಭಾವಿಯೇ, ಸಂಸ್ಕಾರಿಯೇ ಪರಮ ವೀರಶೈವ ನೋಡಾ”, ತನ್ನ ತಾ ತಿಳಿದವ ವೀರಶೈವ

“ಶಿವಯೋಗದಲ್ಲಿರುವಾತ ಲಿಂಗವಂತನೆಂಬೆನಯ್ಯಾ? ಎಂಬಂಥ ಪ್ರಯೋಗಗಳು ವಚನಕಾರರಲ್ಲಿ ಸ್ಪಷ್ಟತೆ ಪಡೆದಿವೆ. ಅಕ್ಕಮಹಾದೇವಿಯು “ಬಸವ ಮೊದಲಾದ ಸಮಸ್ತ ಪ್ರಮಥ ಗಣಂಗಳೆಲ್ಲ ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದವರು ನೋಡಾʼʼ, ಅಜಾತಿ ಶೈವರು ಗುರುಲಿಂಗ ಜಂಗಮಕ್ಕೆ ತನುಮನಧನವ ನಿವೇದಿಸಿ

 ಸರ್ವಸೂತಕರಹಿತರಾಗಿಹರಯ್ಯಾ”-ಎಂಬಂಥ ಪದಗಳ ಒಟ್ಟು ಧೋರಣೆಗಳು ಮಥನವನ್ನೇ ಮಥಿಸಿ ಮೈಲಾರ ಬಸವಲಿಂಗ ಶರಣರು ʼʼಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತʼʼವನ್ನು ರಚಿಸಿದ್ದಾರೆ. ವೀರಶೈವಾಚರಣೆಯ ಒಟ್ಟು ನೋಟವನ್ನು ಅಷ್ಟಾವರಣ ಪಂಚಾಚಾರ ಧರ್ಮಾಚಾರ ಎಂಬ ೩ ಪ್ರಕರಣಗಳಲ್ಲಿ ೧೨೧ ವಾರ್ಧಕ ಷಟ್ಪದಿಯಲ್ಲಿ ರಚಿಸಿರುವರು.

ಮೈಲಾರ ಶರಣರು ಸ್ವರವಚನದಲ್ಲಿ ಬರುವ ‘ಪಲ್ಲವಿ’ಯಂತೆ ಒಂದೊಂದು ಪ್ರಕರಣದ ಆದಿಯ ‘ಸೂಚನಾ’ ಪದ್ಯದಲ್ಲಿ ಸಂಕ್ಷೇಪಿಸಿ ವಿವರಿಸಿದುದು ಅವರ ‘ಗಣಾಚಾರ’ ನಿಷ್ಠೆಗೆ ಸಾಕ್ಷಿಯಾಗಿದೆ. ಆದಯ್ಯ, ಬಸವ, ಚೆನ್ನಬಸವ, ಅಲ್ಲಮ ಮುಂತಾದವರ ಸಿದ್ಧರಾಮ ಅಕ್ಕಮಹಾದೇವಿ ಸಾಹಿತ್ಯದಿಂದ ಮಥಿಸಿ ಬಂದ ವೀರಶೈವ ಹೂರಣ ಈ ಕೃತಿ. ಮೂರೂ ಪ್ರಕರಣಗಳನ್ನು ಷಟ್‌ಸ್ಥಲಾತ್ಮಕವಾಗಿ ಎತ್ತಿ ಕಟ್ಟಿದುದು “ಧರ್ಮಾಚಾರ” ಎಂಬ ಪುಟ್ಟ ಪ್ರಕರಣದ ಮೂಲಕ ನಿಜ ವೀರಶೈವ ಸಿದ್ಧಾಂತದ ನಿಲುಮೆಯನ್ನು ಸಂಗ್ರಹಿಸಿ-ಸಂಕ್ಷೇಪಿಸಿದುದು ಈ ಕೃತಿಗಿರುವ ಮಹತಿಯಾಗಿದೆ.

ಆಷ್ಟಾವರಣ ಪಂಚಾಚಾರ ಪ್ರಕರಣಗಳು ಷಟ್‌ಸ್ಥಲಾತ್ಮಕ ಧೋರಣೆಯ ಶಿವಯೋಗದ ಹಿನ್ನೆಲೆಯಲ್ಲಿ ನಿರೂಪಿತಗೊಂಡ ಕೃತಿಗಳು. ಪಂಚಾಚಾರಗಳನ್ನು ಷಟ್‌ಸ್ಥಲಾತ್ಮಕವಾಗಿ ಸಮನ್ವಯೀಕರಿಸಿರುವ ವಿಶೇಷತೆ ಮೈಲಾರ ಶರಣರದು. ‘ಧರ್ಮಾಚಾರ’ ಪ್ರಕರಣದಲ್ಲಿ ಭಕ್ತನ ಧರ್ಮಾಚಾರ, ಮಾಹೇಶನ ಧರ್ಮಾಚಾರ, ಪ್ರಸಾದಿಯ ಧರ್ಮಾಚಾರ, ಪ್ರಾಣಲಿಂಗಿಯ ಧರ್ಮಾಚಾರ, ಶರಣನ ಧರ್ಮಾಚಾರ, ಐಕ್ಯನ ಧರ್ಮಾಚಾರ.

 ಧರೆ ಕೈಲಾಸ, ಭಕ್ತಿಯ ಮಹತಿ, ಭವಿ-ಭಕ್ತ, ಅಧಃಸೃಷ್ಟಿ-ಊರ್ಧೃ ಸೃಷ್ಟಿ ಅಷ್ಟಾಂಗಯೋಗ-ಶಿವಯೋಗಗಳ ನಿಲುವನ್ನು ಚರ್ಚಿಸಿ ವೀರಶೈವದ ಕೇಂದ್ರ ತತ್ತ್ವಾಚರಣೆಗಳನ್ನೇ ಬಿತ್ತರಿಸಿದ ಕೃತಿ.

ಯೋಗವೆಂಬುದು ಶಿವಶಕ್ತಿ ಸಂಪುಟ. ಶಿವಯೋಗವು ಅಷ್ಟಾಂಗಯೋಗಗಳಲ್ಲಿ ಧಾರಣ-ಧ್ಯಾನ ಸಮಾಧಿಗಳನ್ನು ಮಾತ್ರ ಸ್ವೀಕರಿಸಿರುವುದನ್ನು ಖಚಿತಪಡಿಸಿ ವಿವರ ನೀಡಿ “ಅಷ್ಟಾಂಗ ಯೋಗ ಶರಣನಿಗೆ ಸಲ್ಲ’ ಎನ್ನುವರು. ಷಟ್‌ಸ್ಥಲಯೋಗ ಲಿಂಗಾಂಗಯೋಗ, ಪರಮಾನಂದಯೋಗ, ಅಳಿಯದೆ ಕೂಡುವ ಯೋಗ, ಹಠಯೋಗ, ಆನಂದಯೋಗ, ನಿಷ್ಕಲಯೋಗ, ಶಾಂಭವೀಯೋಗ, ಪರಿಣಾಮಯೋಗ, ಮಹಾಯೋಗ, ದಿವ್ಯಯೋಗ, ಶಿವಶಕ್ತಿ ಸಂಪುಟ ಯೋಗ, ಪರಮಾತ್ಮ ಯೋಗ, ಅನಿಮಿಷ ಯೋಗ-ಮುಂತಾದ ಪರಿಭಾಷೆಗಳಲ್ಲಿ ಬಳಕೆಗೊಂಡುದು ಶಿವಯೋಗ. ಶಿವಯೋಗ ಸಾಧನೆಯೇ ಷಟ್‌ಸ್ಥಲ ನಿರಾಭಾರ ಸಿದ್ಧಾಂತದ ನಿಲುವೆಂಬುದನ್ನು ಶೈವ ವೀರಶೈವಗಳಿಗಿರುವ ಭಿನ್ನತೆಯನ್ನು ಎತ್ತಿ ತೋರಿಸಿದ ಮಹತ್ವಪೂರ್ಣ ಕೃತಿಯಿದು.

 ೩. ಷಟ್‌ಸ್ಥಲ ಜ್ಞಾನಾಮೃತ:

“ಸದ್ಧರ್ಮ ದೀಪಿಕೆʼʼ ಸಂಪಾದಕರಾದ ಚೆನ್ನಮಲ್ಲಿಕಾರ್ಜುನವರಿಂದ “ಶಿವಾನುಭಾವ ದೀಪಿಕೆ “ಯೆಂಬ ಭಿನ್ನ ಹೆಸರಿನಲ್ಲಿ ತಲೆಬರಹದಲ್ಲಿ ಪ್ರಕಟಗೊಂಡ ಈ ಕೃತಿ ಅನ್ಯ ಕೃತವಾದುದಲ್ಲ. ಈ ಕೃತಿಯ ತಲೆಬರಹ ‘ಶಿವಾನುಭವ ದೀಪಿಕೆ’ ಎಂದಿರದೆ “ಷಟ್‌ಸ್ಥಲ ಜ್ಞಾನಾನುಭವ” ಅಥವಾ “ಷಟ್‌ಸ್ಥಲ ಜ್ಞಾನಾಮೃತ” ಎಂದಿದ್ದು ೩೦೩ ಕಂದ ಪದ್ಯಗಳು ಇಲ್ಲಿವೆ. ಪ್ರತಿಯೊಂದು ಕಂದ ಪದ್ಯಗಳು, ಬಸವಲಿಂಗ ಪ್ರಭುವೆ ಎಂದು ಮುಕ್ತಾಯಗೊಳ್ಳುವವು. ಕೊನೆಗೆ ಎಲ್ಲ ಕೃತಿಗಳಿರುವಂತೆ ʼʼಗುರು ಚನ್ನವೀರಾʼʼ ಎಂಬ ಅಂಕಿತ ಇದಕ್ಕಿದೆ. ಕೃತಿಯ ಆರಂಭದಲ್ಲಿ ಮೈಲಾರ ಬಸವಪ್ಪನವರು ವಿರಚಿಸದ ʼಷಟ್‌ಸ್ಥಲ ಜ್ಞಾನಾನುಭಾವ’ ಎಂಬ ವಾಕ್ಯ ಕರ್ತೃ-ಕೃತಿನಾಮಗಳ ಸ್ಪಷ್ಟತೆ ಕೊಡುವುದು.

 ಶಿವನಾರು !ಜೀವಿಯಾರು! ವೀರಶೈವವೆಂದರೇನು! ಕರಣಹಸಿಗೆಗಳ ವೈವಿಧ್ಯಗಳೇನು ? ಕೃತಿ ತತ್ತ್ವಗಳಾವವು! ಪಂಚಾಕ್ಷರದ ಸಂಚುಗಳ ನಿಲುವೇನು ?  ಮಿಶ್ರಾರ್ಪಣವೆಂದರೇನು! ಮುಂತಾದ ಮೂಲಭೂತ ತತ್ತ್ವಗಳನ್ನು ಕೊಂಡುಗುಳಿ  ಕೇಶಿರಾಜ ಬಳಸಿದ ಕಂದ ಛಂದೋಲಯದಲ್ಲಿ ಸರಳವಾಗಿ ಬಿಗಿಯಾದ ಶಾಸ್ತ್ರರೂಪದ ತತ್ತ್ವಗಳನ್ನು ಸರ್ವಜನತೆಗೆ ತಿಳಿಸಿಕೊಡುವ ಈ ಕೃತಿಗೆ ವೀರಶೈವ ಸಾಹಿತ್ಯ ಧರ್ಮ ತತ್ತ್ವಗಳ ಅಧ್ಯಯನದಲ್ಲಿ ಮಹತ್ತರವಾದ ಸ್ಥಾನವಿದೆ.

ವೀರಶೈವ ತತ್ತ್ವಗಳನ್ನರಿವ ಕೈಪಿಡಿಯಂತಿರುವ ಈ ಕೃತಿ

ಶೈವ ಸುಮಾರ್ಗದೊಳೆಲ್ಲಂ

ಶ್ರೀ ವೀರಶೈವ ಷಟ್‌ಸ್ಥಲ ಮಾರ್ಗವಿದಧಿಕಂ

ಈ ವೀರಶೈವವೊಂದನೆ ನೀವರುಹಿ ಪಾಲಿಸೆನ್ನಂ ಬಸವ ಪ್ರಭುವೆʼʼ

 ಎಂದು ಹೇಳುವಲ್ಲಿ ಸ್ಪಷ್ಟವಾಗುತ್ತ ಶಿವ ಶಕ್ತಿ, ಶಿವನೇ ಬಸವ ಬಸವನೇ ಶಿವ, ಮಾಯಾ ಸಂಸಾರ ನಿರಸನ, ಪಂಚವಿಷಯ, ಅಷ್ಟಮದ, ಅರಿಷಡ್ವರ್ಗ ನಿರಸನ, ನವಪ್ರಣವ, ಜಗತ್ ಸೃಷ್ಟಿಕ್ರಮ, ಪಂಚಭೂತಗಳ ಪಂಚೀಕರಣ, ಮಿಶ್ರಪಂಚೀಕರಣ, ಪಂಚವಿಂಶತಿ ತತ್ತ್ವ, ಪಂಚಾಕ್ಷರದ ಸ್ವರೂಪ, ಭಕ್ತನ ಅಂಗ ಲಿಂಗಮಯ, ಮಿಶ್ರಅಂಗ-ಲಿಂಗ ಸಂಗ, ಎಂಟಹ ಸಕೀಲ ಆರಕ್ಷರದ ರೂಪ, ಷಣ್ಮಂತ್ರದ ೪೮ ವಿಧ, ಎಂಟಹ ಆವರಣವೇ ಷಣ್ಮಂತ್ರ, -ಇದಕ್ಕಿರುವ ಅಧಿಕಾರ, ಅನಧಿಕಾರ, ಶಿವಸರ್ವಗತ-ನಿರಸನ ಷಟ್‌ಸ್ಥಲದಿರವೇ ಮಹಾದೇವ, ಜೀವನದ ಸದುಪಯೋಗ-ತತ್ತ್ವಮಸಿ ಪದಕ್ರಮ, ಲಿಂಗಾಂಗ ಕೂಟ, ನಾದಬಿಂದು ಕಲೆ ಹೀಗೆ ಅನೇಕ ವಿಷಯಗಳನ್ನು ಈ ಕೃತಿ ನಿರೂಪಿಸುವುದು.

 ೩೦೩ ಕಂದ ಪದ್ಯಗಳ ಈ ಕೃತಿಯ ವಿವರಣೆಯಲ್ಲಿ ಒಂದು ಕ್ರಮಬದ್ಧತೆ ಇದೆ. ವೀರಶೈವರಿಗೆ ಬೇಕಾಗುವ ಅನುಭವದ ಜ್ಞಾನಾಮೃತವನ್ನು ಒದಗಿಸುವ ಕೃತಿ “ಷಟ್‌ಸ್ಥಲ ಜ್ಞಾನಾನುಭವ” ಎಂಬ ತಲೆಬರೆಹ ಸಾರ್ಥಕತೆಗೆ ಸಮರ್ಥತೆ ಒದಗಿಸುವುದು, ಬಸವ ಅಲ್ಲಮ ಚೆನ್ನಬಸವಣ್ಣನವರ ಕೃತಿಗಳ ಆಳವಾದ ಜ್ಞಾನ ಇವರಿಗಿತ್ತೆಂಬುದಕ್ಕೆ ನಿದರ್ಶನ ಈ ಕೃತಿ.

 , ಲಿಂಗಪೂಜಾ ವಿಧಾನ :

೫೭. ಕಂದ ಪದ್ಯಗಳ ಚಿಕ್ಕ ಕೃತಿಯಿದು, ಮಾನವನ ಜೀವನವು ಕೇವಲ ಇಂದ್ರಿಯ ಲಾಲಸೆಗಳ ಪೂರೈಕೆಯ ಯತ್ನವಲ್ಲ., ಜನನ ಮರಣಗಳ ಮಧ್ಯದ ಅನುಭವವೂ ಅಲ್ಲ. ಈ ಹುಟ್ಟು ಸಾವುಗಳ ಎಲ್ಲೆ ಮೀರಿ ಮಾನವನು ಅಮೃತತ್ತ್ವ ಪಡೆಯಬಹುದು. ಪ್ರಪಂಚದ ವಿಶಿಷ್ಟ ಆಗು ಹೋಗುಗಳಲ್ಲಿ ಮಾನವನಿಗೆ ಮೀರಿದ ಇನ್ನೊಂದು ಶಕ್ತಿ ಇದೆ. ಅದು ಎಲ್ಲವನ್ನೂ ನಡೆಸುತ್ತದೆ. ಅದೇ ಪರಮ ಸತ್ಯ. ಅದನ್ನೇ ನಾವು ದೇವರೆಂದು ‘ಪರವಸ್ತುʼ ಎಂದು, ಪರಮಾತ್ಮವೆಂದು, ಪರಬ್ರಹ್ಮವೆಂದು ಕರೆಯುತ್ತೇವೆ. ಅಂಥ ಪರವಸ್ತುವನ್ನು ವೀರಶೈವರು ತಮ್ಮ ಪರಿಭಾಷೆಯಲ್ಲಿ ‘ಲಿಂಗ’ ವೆಂದು ಕರೆದರು. ‘ಲಿಂಗ’ ಪದಕ್ಕೆ ಸ್ಥಲ, ದೇವರು, ಪರಶಿವ, ಪರಬ್ರಹ್ಮ ಶೂನ್ಯ, ಪರವಸ್ತು, ಅನು, ಘನ, ಮುಂತಾದ ಪರ್ಯಾಯ ಪದಗಳನ್ನುಪಯೋಗಿಸಿರುವರು. ಜಗದುತ್ಪತ್ತಿ-ಸ್ಥಿತಿ- ಲಯಗಳಿಗೆ ಕಾರಣೀಭೂತವಾದುದು ಯಾವುದೋ ಅದೇ ಲಿಂಗ, “ಲಿಂಗ ಮಧ್ಯೆ ಜಗತ್ ಸರ್ವಂʼ’ ಇಂಥ ವ್ಯಾಪಕವಾದ ಲಿಂಗದ ಆರಾಧನೆ, ಅರ್ಚನೆ, ಅರ್ಪಣ, ಅನುಭವಗಳಿಂದ ಪ್ರಕಟಿಸಬೇಕು. ಅದಕ್ಕಾಗಿ ಲಿಂಗಪೂಜೆ ಅಗತ್ಯ ಸಾಧನ. “ಪಶುಭಾವದ ನಿಮ್ಮ ಸ್ಥಿತಿಯಿಂದ ದೇವಭಾವದ ಸರ್ವೋತ್ಕೃಷ್ಟ ಸ್ಥಿತಿಗೇರಿ ನಿಂತುಕೊಳ್ಳಲು ಬಯಸುವರು ಅನುಸರಿಸಬೇಕಾದ ಸಾಧನಗಳಲ್ಲಿ ಲಿಂಗಪೂಜೆ ಮಹತ್ವದ್ದು.

ಮುನ್ನನಾದಿಯ ಪರಾತ್ಪರ ನಿರಂಜನ ಶರಣ

ತನ್ನ ಹೃತ್ಕಮಲದ ಪರಜ್ಯೋತಿ ಲಿಂಗವನ್ನು

ಭಿನ್ನವಿಲ್ಲದೆ ವಾಮ ಕರಕಂಜದೊಳು ಪಿಡಿದು

ತನ್ನ ತಾನರ್ಚಿಸುತಿಹ…ʼʼ

ಇದರ ಆರಾಧಕನು ಅಷ್ಟವಿಧಾರ್ಚನೆ-ಷೋಡಷೋಪಚಾರಗಳ ಮೂಲಕ ಆರಾಧಿಸಿ ಲಿಂಗಾಂಗಿಯಾಗುವ ನಿಲುವನ್ನು ೫೭ ಕಂದ ಪದ್ಯಗಳಲ್ಲಿ ಸುಲಭವಾಗಿ ನಿರೂಪಿಸಿದ ಕೃತಿ “ಲಿಂಗಪೂಜಾ ವಿಧಾನ”. ಆಹ್ವಾನ-ಆಸನ-ಧ್ಯಾನ-ಅರ್ಘ್ಯ-ಪಾದ್ಯ, ಅಚಮನ,

ಮಿಶ್ರಪಂಚಾಮೃತ, ಸಾಲಭಿಷೇಕ, ವಸ್ತ್ರ-ಪುಷ್ಪ-ಪತ್ರಿ -ನೈವೇದ್ಯ, ಘಂಟಾನಾದ, ಪ್ರದಕ್ಷಿಣೆ, ನಿರಾಜನ ಮುಂತಾದ ಆಚರಣೆಗಳಲ್ಲಿ ಈ ಕೃತಿ ವೀರಶೈವ ಪರಿಭಾಷೆಯ ಅರ್ಥದಲ್ಲಿ ಅದ್ದಿ ತೆಗೆದ ವೀರಶೈವಾಚರಣೆಯ ನಿಲುವನ್ನೇ ಪ್ರತಿಪಾದಿಸುವ ಶಕ್ತಿ ಪಡೆದಿದೆ.

೫. ಭಕ್ತಿ ಬಿನ್ನಹ ದಂಡಕ:

“ದಂಡಕ” ವಿಶಿಷ್ಟ ಸಾಹಿತ್ಯ ಪ್ರಕಾರ. “ಭಕ್ತ ಬಿನ್ನಹ ದಂಡಕʼʼವು ಮೈಲಾರ ಶರಣರಿಂದ ಅಗಲಿ ನಿಂತ ಕುಸುಮ. ೫-೫ ಮಾತ್ರೆಗಳಂತೆ ಮುನ್ನಡೆವ ಈ ದಂಡಕವ ಪಾದವಿಭಾಗವಿಲ್ಲದೆ ನಿಯತವಾದ ಗಣಗಳಿಂದ ಕೂಡಿ ದಂಡಕವು ಸ್ವರೂಪದಲ್ಲಿ ಬೆಳೆದು ನಿಂತ ಕೃತಿ. ಶರಣರು ಗುರು ಚೆನ್ನವೀರರಲ್ಲಿ ಭಕ್ತಿ ಬಿನ್ನಹದ ವಿಜ್ಞಾಪನೆಗೈದು ಅವರ ಕೃಪಾನುಗ್ರಹಕ್ಕೆ ಸಿಲುಕಿ ದೀಕ್ಷೆಪಡೆದು ಶುದ್ಧಾಂತಃಕರಣರಾಗಿ, ಲಿಂಗ ಭಕ್ತರಾಗಿ ನಿಂತ ನಿಲವೇ ಇಲ್ಲಿಯ ವಸ್ತು. ಶಿಷ್ಯನ ನಿರ್ಮಲಾಂತಃಕರಣದ ಭಕ್ತಿಯ

ಹೊನಲೇ  ಮೂಲ ಪ್ರೇರಕಶಕ್ತಿಯಾಗಿ ಕೃತಿರೂಪ ತಾಳಿದೆ. ಜನತೆಯಲ್ಲಿ ಪ್ರಮುಖಜ್ಞಾನವನ್ನರಳಿಸುವುದೇ ಬಸವಲಿಂಗ ಶರಣರ ಕೃತಿಗಳ ಗುರಿ ಆಗಿರುವುದರಿಂದ ಚಿಕ್ಕದಾದ ಈ ಕೃತಿ ಅಂಥ ಕ್ರಿಯಾಚರಣೆಯಲ್ಲಿ ಮಗ್ನರಾಗಬೇಕೆಂದು ಪ್ರೇರೇಪಿಸುವ ದಂಡಕ ಕೃತಿ, ದಂಡಕ ಸಾಹಿತ್ಯಕ್ಕೆ ಒಂದು ಕೊಡುಗೆ, ನಿದರ್ಶನ ಗದ್ಯದ ಮಾದರಿಗೆ ನಿದರ್ಶನ ಕೃತಿ.

೬. ಶಿವಾನುಭವ ದರ್ಪಣ:

ವೈವಿಧ್ಯಮಯವಾದ ವ್ಯಾಪಕವಾದ ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ವೃತ್ತಗಳಲ್ಲಿ ರಚನೆಗೊಂಡು ಪ್ರೌಢಭಾಷೆಯಿಂದೊಡಗೂಡಿದುದನ್ನು ʼಓದುಗಬ್ಬ’ ಎಂದೂ ಸುಲಭವಾದ ಸರಳಗನ್ನಡದ ದೇಸಿ ಮಟ್ಟುಗಳಲ್ಲಿ ರಾಗ-ತಾಳ-ನಿರ್ದೆಶನದೊಂದಿಗೆ ಹಾಡಲು ಬರುವಂಥವುಗಳನ್ನು ಹಾಡುಗಬ್ಬ’ – ಸ್ವರವಚನಗಳೆಂದು ವಿಭಜಿಸಬಹುದು. ಇದರಲ್ಲಿ ೨ನೆಯದಾದ ಸ್ವರವಚನಗಳು, ಶಿವಶರಣರಲ್ಲಿ ಹರಿದಾಸರಲ್ಲಿ, ಕೈವಲ್ಯಕಾರರಲ್ಲಿ, ಅನುಭಾವಿ ಕವಿಗಳಲ್ಲಿ ಕಾಲಕಾಲಕ್ಕೆ ರಚನೆಗೊಂಡು ಒಂದೊಂದು ಪರಪರೆಯನ್ನೇ ನಿರ್ಮಿಸಿದೆ. ಶಿವದಾಸ-ಹರಿದಾಸರಿಂದ ಹೊರಹೊಮ್ಮಿದ ಇದು ಮುಂದೆ ಕೈವಲ್ಯಕಾರರಲ್ಲಿ ಸಂಗೀತದ ಸ್ಪರ್ಶದಿಂದ ವ್ಯಾಪ್ತಿಗೊಂಡಿದೆ. “ಕೈವಲ್ಯ ಪದ್ಧತಿ” ಯೆಂಬ ಹೆಸರನಲ್ಲಿಯೂ ರಚನೆಗೊಂಡಿದೆ.

 ಸ್ವರವಚನ-ಕೀರ್ತನ-ಕೈವಲ್ಯ ಸಾಹಿತ್ಯವಾಹಿನಿಯಲ್ಲಿ ಮಿಂದು ತಮ್ಮದೇ ಆದ ಸ್ವತಂತ್ರ ಪ್ರತಿಭೆಯಲ್ಲಿ ಮೆರೆದ ಮೈಲಾರ ಬಸವಲಿಂಗ ಶರಣರ ಆತ್ಮಾನುಭವದಿಂದ ಹೃದಯ ತುಂಬಿ ಹೊರಹೊಮ್ಮಿದ ಹಾಡುಗಳನ್ನು ಸಂಗ್ರಹಿಸಿ-ಸಂಕಲಿಸಿ “ಶಿವಾನುಭವದರ್ಪಣ” ವೆಂಬ ಅಭಿದಾನದಿಂದ ಸಂಪಾದಿಸಿದ ಗೀತೆಗಳ ಪುಂಜವೇ ಈ ಕೃತಿ. ಸಾಹಿತ್ಯ-ತತ್ತ್ವ ಸಂಗೀತಗಳಿಂದ ಮುಪ್ಪುರಿಗೊಂಡ ಈ ಕೃತಿಯಲ್ಲಿಯ ಹಾಡುಗಳ ರಾಗ ವೈವಿಧ್ಯ ವಿಷಯ ವೈವಿಧ್ಯಗಳ ಮಜಲುಗಳು ಮೈಲಾರ ಶರಣರ ವೈದುಷ್ಯ ಮತ್ತು ಅನುಭಾವಗಳಿಗೆ ಸಾಕ್ಷಿಗಳಾಗಿವೆ.

 ಭಕ್ತಿ-ಜ್ಞಾನ-ಕ್ರಿಯೆಗಳ ತ್ರಿವೇಣಿ ಸಂಗಮವೇ ಶಿವಾನುಭವದ ಕೇಂದ್ರ. ಇವುಗಳ ನಿಜವಾದ ಅನುಭವವೇ ಶಿವಾನುಭವ. ಈ ಶಿವಾನುಭವ ಸಂಪಾದನೆಯೇ ಶೂನ್ಯಸಂಪಾದನೆ. ಇದನ್ನು ಸಾಧಿಸುವುದೇ ವೀರಶೈವರ ಪರಮ ಗುರಿ. ಇದರ ಸಾಧನೆಗೆ ಅಷ್ಟಾವರಣ-ಪಂಚಾಚಾರ-ಷಟ್‌ಸ್ಥಲಗಳೇ ಮೂಲ ತಳಹದಿ. ಸಾಧಕನು ಇವುಗಳನ್ನು ನಿಜಾಚರಣೆಗೆ ತಂದಾಗ ಅನುಭವಿಯೆನಿಸುವನು; ಈ ಅನುಭವ ಉಳ್ಳವನೇ ಶಿವಾನುಭವಿ. ಶಿವಾನುಭವಿಯಾಗಬೇಕಾದ ತತ್ತ್ವಾಚರಣೆಗಳನ್ನು ಪರಿಚಯಿಸಿಕೊಡುವ ಗ್ರಂಥ “ಶಿವಾನುಭವದರ್ಪಣ”.

ಶಿವಾನುಭವ ದರ್ಪಣವು ಮಹದರಿವಿನ ಕುರುಹು. ಶಿವಾನುಭವ ಪಡೆಯಲು ಅರಿವು ಸತ್ಯಸಾಧನ. ದರ್ಪಣವಿಲ್ಲದೆ ತನ್ನ ನಿಲುವನ್ನು ಕಾಣಲು ಹೇಗೆ ಅಸಾಧ್ಯವೋ ಹಾಗೆ ಶಿವಾನುಭವದ ಮಹದರಿವಿಲ್ಲದೆ ಸ್ವಸ್ವರೂಪದ ಪರಿಪೂರ್ಣತೆ ಅಳವಡುವಂತಿಲ್ಲ. ಪರಿಪೂರ್ಣತೆ ಅಳವಡಲು ‘ಶಿವಾನುಭವ ದರ್ಪಣ ʼಕೃತಿ ಮಾರ್ಗದರ್ಶಕ.

ಡಾ.ಫ.ಗು.ಹಳಕಟ್ಟಿ, ಪ್ರೊ.ಶಿ.ಶಿ.ಬಸವನಾಳ ಅವರಿಂದ ಸಂಪಾದಿತ ಈ ಕೃತಿ ಈಗ ನನ್ನಿಂದ “ಮೈಲಾರ ಬಸವಲಿಂಗ ಶರಣರ ಸಮಗ್ರ ಸಾಹಿತ್ಯ’ ಎಂಬ ಗ್ರಂಥದಡಿಯಲ್ಲಿ ಹೆಚ್ಚು ಪದ್ಯಗಳು ಸೇರಿ ೭೫ ಪದ್ಯಗಳ ಸಂಕಲನ ಸಂಗ್ರಹದಲ್ಲಿ ಪ್ರಕಟಗೊಂಡಿದೆ.

ಫ.ಗು.ಹಳಕಟ್ಟಿ, ಶಿ.ಶಿ. ಬಸವನಾಳ ಅವರಲ್ಲಿ ವಿಭಜನೆಗೊಳಪಡಿಸದೆ ಸಂಪಾದಿಸಿದರೆ, ನಾನು ಸಂಪಾದಿಸಿದ ಕೃತಿಯಲ್ಲಿ ೮ ವಿಭಜನೆಗಳನ್ನು ಸಂಕಲಿಸಿ ಪ್ರಕಯಿಸಿದೆ. ಅವು- 

೧. ಅಷ್ಟಾವರಣ-| ೨. ಅಷ್ಟಾವಣ – ೩. ಪಂಚಾಚಾರ ೪. ಷಟ್‌ಸ್ಥಲ ೫, ನರಸುತ – ಗುರುಸುತ, ಭವಿ-ಭಕ್ತ ಇತ್ಯಾದಿ ೬. ಬೆಡಗಿನ ಪದಗಳು ೭. ಚರಿತ್ರೆ ೮. ಮಂಗಳಾರತಿ.

ಅಷ್ಟಾವರಣ ಭಾಗ -೧ ರಲ್ಲಿ ಗುರು-ಲಿಂಗ- ಜಂಗಮ- ಪಾದೋದಕ-ಪ್ರಸಾದ- ವಿಭೂತಿ-ರುದ್ರಾಕ್ಷಿ-ಮಂತ್ರಗಳನ್ನು ಕುರಿತಂತೆ ೮ ವಿಧಗಳಿಗೆ ಅನ್ವಯಿಸಿ ಪದ್ಯಗಳನ್ನು ಮೀಸಲಾಗಿರಿಸಿ ಪದ್ಯ ೧ರಿಂದ ೩೮ರವರೆಗೆ ವಿವಿಧ ರಾಗ-ತಾಳ-ನಿರ್ದೇಶನದಡಿಯಲ್ಲಿ

“ಗುರು ಚೆನ್ನವೀರ” ಅಂಕಿತದಿಂದ ಪಲ್ಲವಿ-ಅನುಪಲ್ಲವಿಗಳ ಮೂಲಕ ೩ ನುಡಿಯಿಂದ ೧೫-೨೦ ನುಡಿಗಳವರೆಗೆ ಒಂದೊಂದು ತತ್ತ್ವದ ವಿವರಣೆ ನೀಡಿದ್ದಾರೆ, ಮೈಲಾರ ಬಸವಲಿಂಗ ಶರಣರು.

ಮೈಲಾರ ಬಸವಲಿಂಗ ಶರಣರು ಅಷ್ಟಾವರಣ ಭಾಗ-೨ರಲ್ಲಿ ಪದ್ಯ ೩೯ರಿಂದ ಪದ್ಯ ೪೮ರವರೆಗೆ ಒಂದೊಂದು ಪದ್ಯಾಂತರ್ಗತದಲ್ಲಿ ಒಂದೊಂದು ನುಡಿಯಲ್ಲಿ ಒಂದೊಂದು ಅಷ್ಟಾವರಣ ಪರಿಕಲ್ಪನೆಗಳ ವಿವರ ನೀಡಿದ್ದಾರೆ. ಪದ್ಯ ೨೬, ಮಲ್ಲಿಕಾಮಾಲಾವೃತ್ತ ಪದ್ಯ ೪೪ ಚಿತ್ರಪದವೃತ್ತ, ಪದ ೪೫ ವಜ್ರನಾಮವೃತ್ತ ಪದ್ಯ ೪೬ ಸುಲಭ ನಾಮವೃತ್ತ (೨ ಸಾಲು), ಪದ್ಯ ೪೭ ವಿದ್ಯುನ್ಮಾಲಾವೃತ್ತ (೪ ಸಾಲು)ಗಳಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ತಿರುಗಿಸಿ ಪರಿವರ್ತಿಸಿದ ಕ್ರಿಯೆ ಇಲ್ಲಿದೆ. ಕೆಲವೊಂದು ಪದ್ಯಗಳಲ್ಲಿ ತತ್ತ್ವ ಮತ್ತು ಛಂದೋರೂಪಗಳ ಸಮನ್ವಯದೊಂದಿಗೆ ಪದ್ಯ ಕಟ್ಟಿ ರಚಿಸಿದುದು ಅವರ ವಿಶೇಷತೆಯನ್ನು ಸೂಚಿಸುವುದು. ಉದಾ:- (ಪದ) ಅಷ್ಟಾವರಣ ವಾರ್ಧಕ (ಪರತತ್ತ್ವಮೂರ್ತಿಯಷ್ಟಾವರಣ) (ಪಲ್ಲವಿ) ಇಂಥ ವಾರ್ಧಕ ಷಟ್ಪದಿಯ ಆರಂಭದ ಪದ್ಯಗಳು ‘ಸೂಚನೆ’ ಎಂಬ ಸ್ವರೂಪದ ಪಲ್ಲವಿಯನ್ನು ಹೊಂದಿ ಷಟ್ಪದಿಗಿರುವ ಮಾತ್ರಾ ಅಂಥ ಛಂದಗಳೆರಡರ ಮಿಶ್ರಣವನ್ನು ಕಾಣುತ್ತೇವೆ. ಕೆಲವೆಡೆ ಶೈವನಿರಸನ ಸ್ಥಲ, ಗುರುಕರುಣ ಸ್ಥಲ, ವಿಭೂತಿ ಸ್ಥಲ(ಪದ್ಯ೩೩), ರುದ್ರಾಕ್ಷಿ ಸ್ಥಲ (ಪದ್ಯ -೩೭) ಪಂಚಾಕ್ಷರಿ ಸ್ಥಲ (ಪದ್ಯ ೩೮) ಎಂಬ ತಲೆಬರಹದಡಿಯಲ್ಲಿ ಅಷ್ಟಾವರಣ ವಿವರಣೆ ನೀಡಿದ್ದಾರೆ.

“ಅಷ್ಟಾವರಣವೆ ಅಂಗ, ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮ’ ಎಂಬುದು ವೀರಶೈವಾನುಭವಿಗಳ ನುಡಿ.ಅಂಗಸ್ವರೂಪವಾದ ಅಷ್ಟಾವರಣಗಳಿಗೆ ಪ್ರಾಣಸ್ವರೂಪವಾದ ಪಂಚಾಚಾರಗಳು ಮುಖ್ಯ. ಅವುಗಳಿಗಿರುವ ಅವಿನಾಭಾವ ಸಂಬಂಧವನ್ನರಿತ ಮೈಲಾರ ಬಸವಲಿಂಗ ಶರಣರು ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರಗಳ ನಿಲುವನ್ನು ೨ ಪದ್ಯಗಳಲ್ಲಿ ಹುದುಗಿಸಿದ್ದಾರೆ. ಆದರೆ ಒಂದು ಪದ್ಯದಲ್ಲಿ ಪಂಚಾಚಾರಗಳ ಜೊತೆ “ಧರ್ಮಾಚಾರ ಸೇರಿಸಿ ವೀರಶೈವಾಚರಣೆಯ ಕೇಂದ್ರಬಿಂದುವನ್ನು ಧರ್ಮಾಚಾರ ಎಂಬ ಆಚಾರದಲ್ಲಿ ವಿವರ ನೀಡಿದುದು ಅವರಿಗಿರುವ ವಿಶೇಷತೆಯೂ ಆಗಿದೆ. ಅದು   ಹೀಗಿದೆ:

ಗುರುಭಕ್ತಿ ಲಿಂಗಪೂಜೆಯು ಜಂಗಮ ದಾಸೋಹ

ತೀರ್ಥ ಸೇವನೆ ಪ್ರಸಾದ ಭೋಗ

ನಿರುಪಮಖಂಡ ಭಕ್ತಿಯನುಳ್ಳ ಭಕ್ತಿಗೆ

ಹರಣ ಕಿರಣವಾಗೊಪ್ಪುವುದೆ ಧರ್ಮಾಚಾರʼʼ

“ಪಂಚಾಚಾರ ಸುಮಾರ್ಗದೊಳು” ಎಂಬ ಪದ್ಯದಲ್ಲಿ ೫ ಆಚಾರ ಲಿಂಗಸಂಬಂಧಗಳೊಂದಿಗೆ ವಿವರಿಸಿ ಪರಿಶುದ್ಧ ಆಚರಣೆಯಿಂದಾಗುವ ಶರಣ ಬದುಕನ್ನು ಕಾಯಕ ದಾಸೋಹ, ನಿರಹಂಕಾರ, ಕಿಂಕರತ್ವ, ವ್ಯಷ್ಟಿ- ಸಮುಷ್ಟಿಗಳ ನಿಲುವನ್ನು

ಪ್ರದರ್ಶಿಸಿ ಮಾರ್ಗ ತೋರಿಸಿದ್ದಾರೆ.

೪. ಷಟ್ ಸ್ಥಲಗಳು: ಧರ್ಮ-ನೀತಿ-ತತ್ತ್ವಗಳ ಪ್ರತಿನಿಧಿಗಳಾದ ಅಂಗ, ಪ್ರಾಣ, ಆತ್ಮ ಸ್ವರೂಪಗಳಾದ ಅಷ್ಟಾವರಣ-ಪಂಚಾಚಾರ-ಷಟ್‌ಸ್ಥಲಗಳು ವೀರಶೈವ ಸಿದ್ಧಾಂತದ ಕೇಂದ್ರಬಿಂದುಗಳು. ಇವುಗಳಲ್ಲಿ ಷಟ್‌ಸ್ಥಲಗಳ ಭಾಗ ಒಂದು. ವೀರಶೈವ ಸಿದ್ಧಾಂತವಾದ “ಷಟ್‌ಸ್ಥಲ ಸಿದ್ಧಾಂತ” ವನ್ನು ಶಿವಯೋಗದ ಮೂಲಕ ಹೇಗೆ ಸಾಧನಾಕ್ರಮ ಕೈಗೊಳ್ಳಬೇಕೆಂದು ಪ್ರತಿಪಾದಿಸಿದ್ದಾರೆ. ಸಾಧಕ ಅಷ್ಟಾವರಣವನ್ನು ಅಂಗವಾಗಿಸಿ, ಪಂಚಾಚಾರವನ್ನೇ ಪ್ರಾಣವಾಗಿಸಿ, ಷಟ್‌ಸ್ಥಲವನ್ನೇ ಆತ್ಮವಾಗಿಸಿ ನಡೆವುದು ಮುಖ್ಯ. ಚಕ್ರದಳ-ಮುಖಲಿಂಗ-ಪ್ರಸಾದ-ಜಪಾಂತರ್ಗತ ಷಟ್‌ಸ್ಥಲವನ್ನು ತತ್ತ್ವ ಹಾಗೂ ಛಂದಸ್ಸಿನ ಅವಿನಾಭಾವದಿಂದ ಪರಿವರ್ಧಿನಿ ಷಟ್ಪದಿಯಲ್ಲಿ ರಚನೆಗೊಂಡ “ಸಾಲು ಚಕ್ರದಳ ಕುಳದ ಸುಹಂಸನ” ಎಂಬುದು “ಷಟ್‌ಚಕ್ರ ಪರಾಗ ಪರಿವರ್ಧಿನಿ” ಅಥವಾ ‘ಷಟ್ ಸ್ಥಲ ನಿರ್ಣಯ ಪದ” ಎಂಬ ಅಭಿದಾನದಿಂದ ಸೂಚಿಸಿದುದು ಶರಣರ ಆಧ್ಯಾತ್ಮವಿದ್ಯೆಯ

ಚಮತ್ಕಾರಕ್ಕೆ ನಿದರ್ಶನ.

ವೀರಶೈವ ಸಿದ್ಧಾಂತವನ್ನು ಶಿವಶರಣರು ʼಷಟ್‌ಸ್ಥಲ ನಿರಾಭಾರಿ ವೀರಶೈವʼʼ ಎಂದು ಕರೆದಂತೆ ಇವರುʼʼ ಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತʼʼದ ಮೂಲಭೂತ ತತ್ತ್ವಗಳನ್ನು ಚಿಕ್ಕ ಚಿಕ್ಕ ಪದ್ಯಗಳಲ್ಲಿ ರಚಿಸಿದ್ದಾರೆ. ಎರಡು ಕೃತಿಗಳನ್ನೂ ಮೀಸಲಾಗಿರಿಸಿ ವೀರಶೈವ ವೆಂದರೇನು ? ಶಿವನಾರು ಜೀವನಾರು ? ಅವನ ಕೊನೆಯ ನಿಲುವೇನು ? ಎಂಬಂಥ ಮೂಲಭೂತ – ಪ್ರಶ್ನೆಗಳನ್ನೊಡ್ಡಿ ಅರ್ಥೈಸುತ್ತ ಹೋದುದು “ವೀರಶೈವ ದ ಸ್ಪಷ್ಟ ಹೆಜ್ಜೆಗಳನ್ನು ನಿಚ್ಚಳವಾಗಿ ಶೈವ ಮಿಶ್ರಮಾಡದೆ ನಿರೂಪಿಸುತ್ತಾರೆ. ʼʼಖಚಿತತೆ ಸಂಕ್ಷಿಪ್ತತೆ-ಸ್ಪಷ್ಟತೆʼʼ ಇವರ ಕೃತಿಗಳ ಒಟ್ಟು ಸಾರವಾಗಿದೆ. ವಿಜ್ಞಾನ ಧೋರಣೆಯ ಬುದ್ಧಿ ಇವರಿಗಿರುವುದು ಇವರ ಕೃತಿಗಳ ಅವಲೋಕನದಿಂದ ಸಾಧ್ಯವಾಗುತ್ತದೆ.

ವೀರಶೈವದಲ್ಲಿ ತುಂಬಾ ಪ್ರಚುರತೆ ಪಡೆದ ಮೈಲಾರ ಬಸವಲಿಂಗ ಶರಣರ ಕೃತಿಗಳು ಶಿವಾನುಭವ ಬೋಧಕ ಪಠ್ಯಗಳಂತೆ, ಕೀರ್ತನೆಕಾರರಿಗೆ ಮಂಗಲಪದ್ಯಗಳಂತೆ ಪಾರಾಯಣ, ಮಾಡುವವರಿಗೆ ಕೈಪಿಡಿಗಳಂತೆ ಉಪಯುಕ್ತವಾಗಿದೆ. ಮಠಗಳಲ್ಲಿ ಪ್ರಾರ್ಥನಾಗೀತೆಗಳಾಗಿ, ಭಜನೆಪದಗಳಾಗಿ, ವೀರಶೈವದ ಖಚಿತ ವಿವರ ನೀಡುವ ವಿದ್ವಾಂಸರಿಗೆ ಉಲ್ಲೇಖನೀಯ ಪದ್ಯಗಳಾಗಿ ನಿಂತಿರುವುದು ಅವರ ಕೃತಿಗಳಿಗಿರುವ ನೆಲೆ-ಬೆಲೆಯನ್ನು ಅವರಿಗಿರುವ ಸ್ಥಾನವನ್ನು ಸೂಚಿಸುವಂತಿವೆ. ಒಟ್ಟು ಶರಣ ಸಾಹಿತ್ಯ

ಮುಂದೆ ರಚಿತವಾದ ಸರ್ವಮತಧರ್ಮದವರ ಮೇಲೆ, ಸಾಹಿತ್ಯದ ಮೇಲೆಪ್ರಭಾವ ಬೀರಿದ್ದನ್ನು ಮರೆಯುವಂತಿಲ್ಲ.

.- ಶ್ರೀ ನಿರಂಜನ ಪ್ರಭು ಡಾ.ಚೆನ್ನಮಲ್ಲ ಮಹಾಸ್ವಾಮಿಗಳು ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ

ಭಾರತ ಅನ್ನುವುದು ಕೇವಲ ಒಂದು ಹೆಸರಲ್ಲ, ಅದು ಕೇವಲ ಒಂದು ದೇಶ ಮಾತ್ರವಲ್ಲ, ಅದೊಂದು ಸಂಸ್ಕೃತಿ, ಸತ್ಯದ ಪ್ರತೀಕವಾಗಿ, ತ್ಯಾಗಕ್ಕೆ ಪೂರಕವಾಗಿ, ಅಹಿಂಸೆಯ ಮುಖವಾಗಿ, ಆಧ್ಯಾತ್ಮದ ನೆಲೆಯಾಗಿ ಸನಾತನ ಸತ್ಯದ ಮೌಲ್ಯಗಳನ್ನು ಒಳಗೊಂಡು, ಜೀವನ ಸಿದ್ಧಾಂತವನ್ನು ತಿಳಿಸುವುದೇ ಭಾರತ.

ಭಾರತವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಭಾರತದ ಅಂತರಾತ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿನ ಆಧ್ಯಾತ್ಮವನ್ನು, ಭಾರತದಲ್ಲಿನ ಸಂಸ್ಕೃತಿಯನ್ನು, ಭಾರತದ ಜೀವನ ಮೌಲ್ಯಗಳನ್ನು ಹಾಗೂ ಭಾರತದ ಆದರ್ಶ ಇತಿಹಾಸವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಭಾರತದ ಪರಿಚಯ ನಮಗಾಗುತ್ತದೆ. ಭಾರತವೆಂದರೆ ಕೇವಲ ಭವ್ಯವಾದ ದೇವಾಲಯಗಳು, ಹಿಮಾಲಯ, ಗೌರಿಶಂಕರ ಶಿಖರ, ತಾಜ್ ಮಹಲ್, ಕೆಂಪುಕೋಟೆ, ಕಾಶಿ, ರಾಮೇಶ್ವರ, ಶ್ರೀಶೈಲ, ಗಂಗಾ ನದಿ ಇವು ನಿಜವಾದ ಭಾರತವಲ್ಲ. ನಿಜವಾಗಿಯು ಭಾರತ ಅರ್ಥವಾಗುವುದು ಇಲ್ಲಿರುವ ಸನಾತನವಾಗಿ ಉಳಿದು, ನಡೆದುಕೊಂಡು ಬಂದಿರುವ “ವಸುಧೈವ ಕುಟುಂಬಕಂʼʼ ಎಂಬ ಉದಾತ್ತವಾದ, ವಿಶಾಲವಾದ ಸಿದ್ಧಾಂತದಿಂದಾಗಿ ಎಂದರೆ ತಪ್ಪಾಗಲಾರದು. ʼʼತಿರಕೊಂಡ ತಂದು ಕರಕೊಂಡು ಉಣಬೇಕು” ಎಂಬ ಸಂಸ್ಕೃತಿಯಿಂದಾಗಿ ನಮ್ಮ ಭಾರತವನ್ನು ಪೂಜಿಸಲಾಗುತ್ತಿದೆ. ಇಲ್ಲಿರುವ ಮಾನವೀಯ

ಮೌಲ್ಯಗಳ ಪಾಲನೆಯಿಂದಾಗಿ ಹಾಗೂ ತಾನು ಯಾರು? ಎಂಬುದನ್ನು ತಿಳಿದುಕೊಳ್ಳುವ ಕಲೆಯನ್ನು ತಿಳಿಸಿಕೊಡುವುದೆ ಭಾರತ.

ಧರ್ಮ-ಆಧ್ಯಾತ್ಮದ ತಾಯೊಡಲು

 ಯೋಗ-ಶಿವಯೋಗದ ಮೇಲೊಡಲು

 ತತ್ತ್ವ-ಸಿದ್ಧಾಂತಗಳ ಹಾಲ್ಗಡಲು

ಸಂತ-ಶರಣರ ಸಿರಿಗಡಲು

 ಜಗಕೆ ಜಗದ್ಗುರುವಾದ ಪುಣ್ಯಭೂಮಿ

ಚೆನ್ನನ ಅಭಿಮಾನ, ಸ್ವಾಭಿಮಾನದ ಭರತಭೂಮಿ

ಭಾರತ ಆಧ್ಯಾತ್ಮದ ನೆಲೆವೀಡು. ಇಲ್ಲಿ ಅನೇಕ ಧರ್ಮಗಳು ಸಹಬಾಳ್ವೆಯಿಂದ ಇವೆ. ‘ಅನೇಕತೆಯಲ್ಲಿ ಏಕತೆ’ ಎಂಬುದು ಭಾರತದ ಹೆಮ್ಮೆಯಾಗಿದೆ. ಧರ್ಮ ಮತ್ತು ಆಧ್ಯಾತ್ಮ ಭಾರತದ ನಿಜವಾದ ಮೂಲ ಸತ್ವವಾಗಿದೆ. ಭಾರತದಲ್ಲಿ ಹುಟ್ಟಿರುವ ಸಂತರು, ಮಹಾಂತರು, ಮಹಾಪುರುಷರು, ಋಷಿಗಳು ಈ ಭೂಮಂಡಲದ ಬೇರೆ ಯಾವ ಪ್ರದೇಶದಲ್ಲ ಅವತರಿಸಿರುವುದಿಲ್ಲ. ಇಲ್ಲಿ ಕೃಷ್ಣ-ರಾಮ, ಬುದ್ಧ-ಬಸವ, ನಾನಕ-ಮಹಾವೀರ- ವಿವೇಕಾನಂದರಂತಹ ಅನೇಕ ವಿಭೂತಿ ಪುರುಷರು ಅವತರಿಸಿದ್ದಾರೆ. ಅದಕ್ಕಾಗಿಯೇ  ಇದನ್ನು ಎಲ್ಲರೂ ‘ಭಾರತ ಮಾತೆ’ ಎಂದು ಗೌರವಿಸುತ್ತಾರೆ. ವಿವೇಕಾನಂದರು ವಿದೇಶ ಪ್ರವಾಸವನ್ನು ಮುಗಿಸಿ ಭಾರತದ ನೆಲದಲ್ಲಿ ಕಾಲಿಡುವ ಮೊದಲು ಈ ತಾಯ್ ನೆಲವನ್ನು ಹಣೆ ಹಚ್ಚಿ ನಮಸ್ಕರಿಸುತ್ತಾರೆ. ಇದೊಂದು ಘಟನೆ ಸಾಕು ಭಾರತ ಪವಿತ್ರ ಭೂಮಿ ಎಂದು ತಿಳಿಯಲು. ಈ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಭಾರತವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು.

• ಡಾ. ಎಂ. ಶಿವಕುಮಾರಸ್ವಾಮಿ

ವೀರಶೈವರ ಧಾರ್ಮಿಕ ಪರಿವೇಶದಲ್ಲಿ ಇಷ್ಟಲಿಂಗಕ್ಕೆ ಇರುವ ಸ್ಥಾನ ಬೇರೆ ಯಾವುದಕ್ಕೂ ಇಲ್ಲ. ಅವರಿಗೆ ಇಷ್ಟತಮವಾದುದು ಇಷ್ಟಲಿಂಗ. ‘ಇಷ್ಟ’ ಎಂದರೆ ಪ್ರಿಯ, ಮನೋಹರ, ಹೃದಯಂಗಮ- (ನೋಡಿ-ʼʼಇಷ್ಟಾರ್ಥ ವ್ಯವಚ್ಛಿನ್ನಾ ಪದಾವಲೀ” -ದಂಡಿ, ಇಷ್ಟಾರ್ಥವೆಂದರೆ ರಮಣೀಯವಾದ ಅರ್ಥ). ವೀರಶೈವರಿಗೆ ಅತ್ಯಂತ ಪ್ರಿಯವಾದುದು, ರಮಣೀಯವಾದುದು ಇಷ್ಟಲಿಂಗ, ಅವರ ದೃಷ್ಟಿಯಲ್ಲಿ ಅದಕ್ಕೆ ಇರುವ ಅನಂತ ಶಕ್ತಿಗಳಲ್ಲಿ ಎರಡು ಶಕ್ತಿಗಳು ಮುಖ್ಯ : ಒಂದು, ಇಷ್ಟಾವಾಪ್ತಿಕರತ್ವ ಮತ್ತು ಎರಡು,

ಅನಿಷ್ಟಪರಿಹಾರಕತ್ವ; ಇಷ್ಟವಾದುದನ್ನು ಪಡೆಯುವಂತೆ ಮಾಡುವುದು ಮತ್ತು ಇಷ್ಟವಲ್ಲದುದನ್ನು ಪರಿಹರಿಸುವುದು. ಇಷ್ಟವಾದುದು ಎಂದರೆ ಯಾವುದು ? ಯಾವುದಾದರೂ ಆಗಿರಬಹುದು.  ಆದರೆ ಯಾವುದೇ ಆದರೂ ಅದು ಸುಖವನ್ನು ಕೊಡುವುದಾಗಿರಬೇಕು ಎಂಬುದು ಸಾಮಾನ್ಯ ಇಚ್ಛೆ, ಸುಖ ಎರಡು ವಿಧ-ಲೌಕಿಕ ಸುಖ ಮತ್ತು ಅಲೌಕಿಕ ಅಥವಾ ಪಾರಮಾರ್ಥಿಕ ಸುಖ ಎಂದು.

ಪ್ರೇಯಸ್ ಮತ್ತು ಶ್ರೇಯಸ್ :

ಇವುಗಳನ್ನು ಕಠೋಪನಿಷತ್ತು ಪ್ರೇಯಸ್’ ಮತ್ತು ‘ಶ್ರೇಯಸ್’ ಎಂದು ಕರೆಯುತ್ತದೆ. ‘ಪ್ರೇಯಸ್’ ಎಂದರೆ ಸಾಮಾನ್ಯವಾಗಿ ಪ್ರಿಯವಾದುದು. ಅದು ಶುದ್ಧ ಅಥವಾ ಕೇವಲ ಸುಖವಲ್ಲ, ದುಃಖ ಅಥವಾ ಅಪ್ರಿಯವಾದುದರೊಂದಿಗೆ ಕೂಡಿಕೊಂಡ ಸುಖ, ತಾತ್ಕಾಲಿಕ ಸುಖ. ಅದೇ ಲೌಕಿಕ ಸುಖ. ಇನ್ನು ‘ಶ್ರೇಯಸ್’ ಎಂಬುದು ಶ್ರೇಯಸ್ಕರ, ಅಂದರೆ ಕೇವಲ ಸುಖಪರ್ಯವಸಾಯಿ, ಪರಮಾನಂದ, ಶಿವಾನಂದ. ಅದೇ ಅಲೌಕಿಕ ಅಥವಾ ಪಾರಮಾರ್ಥಿಕ ಸುಖ. ಇವರೆಡರಲ್ಲಿ ಯಾರು ಯಾವುದನ್ನೂ ಆಯ್ದುಕೊಳ್ಳಬಹುದು ? ಜ್ಞಾನಿಯು ಪ್ರೇಯಸ್ಸನ್ನು ಬಿಟ್ಟು ಶ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ. ಅಜ್ಞಾನಿಯು ಯೋಗ ಕ್ಷೇಮದ

ದೃಷ್ಟಿಯಿಂದ ಪ್ರೇಯಸ್ಸನ್ನು ಆರಿಸಿಕೊಳ್ಳುತ್ತಾನೆ. ಈ ಪ್ರಶ್ನೆಗೆ ಕಠೋಪನಿಷತ್ತು ನೀಡುವ ಉತ್ತರ, ನೋಡಿ

ಅನ್ಯಚ್ಛ್ರೆಯೋ ನ್ಯದುತೈವ ಪ್ರೇಯಃ, ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ|

ತಯೋಃ ಶ್ರೇಯ ಆದದಾನಾಯ ಸಾಧು ಭವತಿ, ಹಿಯತೇಽರ್ಥಾದ ಉ ಪ್ರೇಯೋ ವೃಣೀತೇ ||

ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಃ, ತೌ ಸಂಪರೀತ್ಯ ವಿವಿನಕ್ತಿ ಧೀರಃ |

ಶ್ರೇಯೋ ಹಿ ಧೀರೋಽಭಿ ಪ್ರೇಯಸೋ ವೃಣೀತೇ, ಪ್ರೇಯೋ ಹಿ ಮಂದೋ

ಯೋಗಕ್ಷೇಮಾದ್ ವೃಣೀತೇ || (ಕಠ., ೨.೧-೨)

ʼʼಒಂದು ಶ್ರೇಯಸ್ಸು ಮತ್ತೊಂದು ಪ್ರೇಯಸ್ಸು, ಅವೆರಡೂ ಮನುಷ್ಯನನ್ನು ಬೇರೆ ಬೇರೆ ಉದ್ದೇಶಗಳೊಂದಿಗೆ ಜೋಡಿಸುತ್ತವೆ. ಅವೆರಡರಲ್ಲಿ ಶ್ರೇಯಸ್ಸನ್ನು ಆಯ್ದುಕೊಳ್ಳುವವನಿಗೆ ಒಳ್ಳೆಯದಾಗುತ್ತದೆ. ಯಾರು ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೋ ಅವನು ನಿಜವಾದ ಗುರಿಯಿಂದ ವಂಚಿತನಾಗುತ್ತಾನೆ. ಶ್ರೇಯಸ್ ಮತ್ತು ಪ್ರೇಯಸ್ ಎರಡೂ ಮನುಷ್ಯನೆಡೆಗೆ ಹೋಗುತ್ತವೆ. ಅವೆರಡನ್ನು ಪರೀಕ್ಷಿಸಿ ಜ್ಞಾನಿಯು (ಧೀರನು) ಪ್ರೇಯಸ್ಸಿಗೆ ಬದಲಾಗಿ ಶ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ. ಮಂದಬುದ್ಧಿಯವನು ಯೋಗಕ್ಷೇಮದ ದೃಷ್ಟಿಯಿಂದ ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ.

ಇಷ್ಟ’ ವೆಂದರೆ ಶ್ರೇಯಸ್ :

ಈ ಹಿನ್ನೆಲೆಯಲ್ಲಿ ವಿಚಾರ ಮಾಡುವುದಾದರೆ ಇಲ್ಲಿ ‘ಇಷ್ಟ’ ವೆಂದರೆ ಶ್ರೇಯಸ್ ಎಂದೇ ತಿಳಿದುಕೊಳ್ಳಬೇಕು. ಶ್ರೇಯಸ್ಸೆಂದರೆ ಪಾರಮಾರ್ಥಿಕ ಆನಂದವನ್ನು ಹೊಂದುವುದು. ಅಂತಹ ಇಷ್ಟವನ್ನು ತಂದುಕೊಡುವುದರಿಂದ ಅದು ಇಷ್ಟಲಿಂಗ, ಅನಿಷ್ಟವಾದುದು ಎಂದರೆ ಯಾವುದು ನಮ್ಮ ನಿಜವಾದ ಹಿತಕ್ಕೆ ಧಕ್ಕೆ ತರುವುದೋ ಅದು. ಪರಮಾರ್ಥಕ್ಕೆ ಯಾವುದು ಪ್ರತಿಬಂಧಕವೋ ಅದನ್ನು ನಿವಾರಿಸುತ್ತದೆ ಎಂದು ಅದು ಇಷ್ಟಲಿಂಗ. ಇದು ಹೆಸರಿನ ದೃಷ್ಟಿಯಿಂದ ಇಷ್ಟಲಿಂಗ ಪರಿಕಲ್ಪನೆಯಲ್ಲಿ ಅಡಗಿದ ಅರ್ಥಗಾಂಭೀರ್ಯ. ಅದನ್ನು ಗರ್ಭೀಕರಿಸಿ ಮೊಗ್ಗೆಯ ಮಾಯಿದೇವರು ಹೀಗೆ ಹೇಳಿದ್ದಾರೆ:

ಇಷ್ಟಾವಾಪ್ತಿಕರು ಸಾಕ್ಷಾದನಿಷ್ಟಪರಿಹಾರಕಮ್ |

ಷ್ಟಿಃ ಪೂಜಾ ತಯಾ ನಿತ್ಯಮಿಷ್ಟಂ ಪೂಜಿತಮಾದರಾತ್ ||

ಇಪ್ಪಲಿಂಗಮಿತಿ ಪ್ರೋಕ್ತಮಾಚಾರ್ಯೈರ್ಲಿಂಗಪೂಜಕೈಃ |

ಇಷ್ಟಮರ್ಥ೦ ಸ್ವಭಕ್ತಾನಾಮನುಯಚ್ಛತಿ ಸರ್ವದಾ |

(ಅನು.ಸೂ., ೩.೯-೧೦)

ʼʼಅನಿಷ್ಟಗಳನ್ನು ನಿವಾರಿಸಿ ಇಷ್ಟಫಲವನ್ನು ನೀಡುವ ‘ಇಷ್ಟಿಃ ಪೂಜಾ’ ಎಂಬ ಅರ್ಥದಂತೆ ನಿತ್ಯವೂ ಆದರದಿಂದ ಪೂಜಿಸಲ್ಪಡುವ, ಭಕ್ತರ ಅಭೀಷ್ಟಗಳನ್ನು ಸದಾ ನೆರವೇರಿಸುವ ಪೂಜ್ಯವಸ್ತುವನ್ನು ಲಿಂಗಪೂಜಾನಿಷ್ಠ ಆಚಾರ್ಯರು ಇಷ್ಟಲಿಂಗವೆಂದು ಕರೆಯುತ್ತಾರೆ”.

ಇಷ್ಟಲಿಂಗ-ಸಂಕೇತವೋ ? ಸ್ವರೂಪವೋ ?

ಇಷ್ಟಲಿಂಗ ಪರಿಕಲ್ಪನೆಯಲ್ಲಿ ಅದು ಶಿವನ ಸಂಕೇತವೋ ? ಸ್ವರೂಪವೋ ? ಎಂಬುದು ಬಹುಮುಖ್ಯವಾದ ಪ್ರಶ್ನೆ. ಸಾಮಾನ್ಯ ಕಲ್ಪನೆಯೆಂದರೆ ಇಷ್ಟಲಿಂಗವು ಶಿವನ ಸಂಕೇತ; ಬಾಹ್ಯ ಅರ್ಚನೆಗೆ ಬೇಕಾದ ಒಂದು ಸಾಕಾರ ವಸ್ತು. ಅದನ್ನು ‘ಸಕಲ’ ಎಂದು ಕರೆದಿರುವುದು ಈ ಕಲ್ಪನೆಗೆ ಪೂರಕವಾಗಿರಬಹುದು. ಅದು ‘ದೃಕ್ಕಲಾಗ್ರಾಹ್ಯ’ (ಕಣ್ಣುಗಳ ಕಿರಣಾಂಶಗಳಿಂದ ಕಾಣಬಹುದಾದುದು) ಎಂಬ ಕಾರಣದಿಂದ ಸಾಕಾರವೆಂದು ಹೇಳಲ್ಪಟ್ಟಿರಬಹುದು. “ಸಕಲಂ ದೃಕ್ಕಲಾಗ್ರಾಹ್ಯಮಿಷ್ಟಲಿಂಗಸ್ಥಲಂ ಮಹತ್” (ಅನು.ಸೂ ೩.೬)ಎಂದು ಹೇಳುವ ಮೂಲಕ ಮಾಯಿದೇವರು ಇದನ್ನು ಸೂಚಿಸಿದ್ದಾರೆ ಎಂದುಕೊಳ್ಳಬಹುದು. ಆದರೆ ಇದು ಕೇವಲ ಭ್ರಮಾತ್ಮಕ ಕಲ್ಪನೆ ಮತ್ತು ಅವು ಅದನ್ನು ಸಮರ್ಥಿಸಲು ಭಾವಿಸಿಕೊಂಡ ಕೆಲವು ಯುಕ್ತಿಗಳು, ಏಕೆಂದರೆ ಇಷ್ಟಲಿಂಗವು ಪರಮಾತ್ಮನ ಸಂಕೇತ ಅಥವಾ ಚಿಹ್ನೆಯಲ್ಲ ಎಂಬುದನ್ನು ಮಾಯಿದೇವರ ಈ ಮಾತು ಸ್ಪಷ್ಟವಾಗಿ ತಿಳಿಸುತ್ತದೆ :

ಶಿವ ಏವ ಸ್ವಯಂ ಲಿಂಗಮಿತಿ ಲಿಂಗಸ್ಯ ವೈಭವಮ್ |

ನಾನ್ಯಚಿಹ್ನಾದಿಕಂ ಲಿಂಗಂ ತತ್ಸರ್ವಂ ಕೃತಕಂ ಚ ಯತ್ II (ಅನು. ಸೂ. ೩.೧)

“ಸ್ವಯಂ ಪರಮಾತ್ಮನೇ ಲಿಂಗ, ಹಾಗೆಂದೇ ಲಿಂಗಕ್ಕೆ ಮಹತ್ವ, ಬೇರೆ ಯಾವುದೇ ಚಿಹ್ನೆ ಮುಂತಾದುದು ಲಿಂಗವಲ್ಲ. ಅದೆಲ್ಲಾ ಕೃತಕ’ ಇಷ್ಟಲಿಂಗವು ಸಾಕಾರವೇ ನಿರಾಕಾರವೇ ಎಂಬುದನ್ನು ಪರೀಕ್ಷಿಸಲು ದೃಷ್ಟಿಯೋಗಕ್ಕೆ ಮೊರೆಹೋಗಬೇಕು. ಇಷ್ಟಲಿಂಗದಲ್ಲಿ ದೃಷ್ಟಿಯೋಗವನ್ನು ಸಾಧಿಸಿ ಅಂತರ್ಮುಖನಾದಾಗ ಯಾವ ಆಕಾರವೂ ಇರದು.

ಹೀಗೆ ಲಿಂಗವು ಅ೦ದರೆ ಇಷ್ಟಲಿಂಗವು ಶಿವನೇ. ಅದು ಅವನ ಸ್ವರೂಪವೇ ಹೊರತು ಬೇರಲ್ಲ ಈ ಪರಿಕಲ್ಪನೆಯ ಮೂಲ ಸ್ಫೂರ್ತಿಯು ಇಲ್ಲಿದೆ :

ಅಪರಿಚ್ಛಿನ್ನಮವ್ಯಕ್ತಂ ಲಿಂಗಂ ಬ್ರಹ್ಮ ಸನಾತನಮ್ |

ಉಪಾಸನಾರ್ಥಮಂತಃಸ್ಥಂ ಪರಿಚ್ಛಿನ್ನಂ ಸ್ವಮಾಯಯಾ || (ಸಿ.ಶಿ., ೬.೨೬)

ʼʼಅಖಂಡವೂ ಅವ್ಯಕ್ತವೂ ಆದ ಸನಾತನ ಬ್ರಹ್ಮವೇ ಆದ ಒಳಗಿನ ಲಿಂಗವು ಭಕ್ತರ ಉಪಾಸನೆಗಾಗಿ ತನ್ನ ಮಾಯೆಯಿಂದ ತಾನೇ ಬೇರೆ ಬೇರೆಯಾಯಿತುʼʼ, ಬೇರೆ ಬೇರೆಯಾಯಿತು ಎಂದರೆ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗವೆಂದು ಮೂರು ರೂಪಗಳನ್ನು ಧರಿಸಿತು ಎಂದರ್ಥ. ವೀರಶೈವ ಪರಿಭಾಷೆಯಲ್ಲಿ ಲಿಂಗ ಶಬ್ದದ ನಿಷ್ಪತ್ತಿ ಮತ್ತು ಲಿಂಗತ್ರಯ ಧಾರಣ ಪರ್ಯವಸಾಯಿ ದೀಕ್ಷಾತ್ರಯ ಇಲ್ಲಿ ಪ್ರಸ್ತುತ.

ಲಿಂಗ ಶಬ್ದ ನಿಷ್ಪತ್ತಿ:

ʼಲೀಯತೇ ಗಮ್ಯತೇ ಜಗದ್ ಯತ್ರ ಯಸ್ಮಾತ್ ತತ್ ಲಿಂಗಮ್’- ಯಾವುದರಲ್ಲಿ ಪ್ರಪಂಚವು ಮೊದಲು ಅಡಗಿತ್ತೋ, ಯಾವುದರಿಂದ ಹೊರ ಹೊಮ್ಮುವುದೋ ಅದು ಲಿಂಗ, ಎಂಬ ನಿಷ್ಪತ್ತಿಯಂತೆ ಲಿಂಗವು ಪರಬ್ರಹ್ಮ ಪರಶಿವ

ರೇ ಲೀಯತೇ ಸರ್ವಂ ಜಗತ್ ಸ್ಥಾವರಜಂಗಮಮ್ |

ಪುನರುತ್ಪದ್ಯತೇ ಯಸ್ಮಾತ್ ತದ್ ಬ್ರಹ್ಮಲಿಂಗಸಂಜ್ಞಕಮ್ ||  (ಚಂ. ಆ., ಕ್ರಿ.ಪಾ. ೩.೮)  

“ಯಾವುದರ ಉದರದಲ್ಲಿ ಚರಾಚರಾತ್ಮಕ ಜಗತ್ತು ಅಡಗಿರುವುದೋ ಎಲ್ಲಿಂದ ಮತ್ತೆ ಅದು ಉತ್ಪನ್ನವಾಗುವುದೋ ಅದು ಲಿಂಗಸಂಜ್ಞೆಯುಳ್ಳ ಬ್ರಹ್ಮʼʼ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲೂ ಇದರ ಪ್ರತಿಧ್ವನಿಯಿದೆ :

ಲಯಂ ಗಚ್ಛತಿ ಯತ್ರೈವ ಜಗದೇತಚ್ಚರಾಚರಮ್ |

ಪುನಃ ಪುನಃ ಸಮುತ್ಪತ್ತಿಂ ತಲ್ಲಿಂಗಂ ಬ್ರಹ್ಮ ಶಾಶ್ವತಮ್ |

(ಸಿ.ಶಿ., ೬.೩೭)

ಉಪನಿಷತ್ತುಗಳು ಅದನ್ನೇ ಬ್ರಹ್ಮವೆಂದು ಕರೆಯುತ್ತಾರೆ :ʼʼಸರ್ವಂ ಖಲ್ವಿದಂ ಬ್ರಹ್ಮತಜ್ಜಲಾನ್ ಇತಿ ಶಾಂತ ಉಪಾಸೀತ’ (ಛಾಂ. ಉ., ೩.೧೪.೧)-ಇದೆಲ್ಲವೂ ಬ್ರಹ್ಮವಲ್ಲದೆ ಬೇರಲ್ಲ; ಎಲ್ಲವೂ ಅದರಿಂದ ಹುಟ್ಟುತ್ತದೆ (ತಜ್ಜಃ), ಎಲ್ಲವೂ ಅದರಲ್ಲಿ ಲೀನವಾಗುತ್ತದೆ (ತಲ್ಲಃ) ಮತ್ತು ಅದರಿಂದ ಉಸಿರಾಡುತ್ತದೆ. (ತದನ್) ಎಂದು ಶಾಂತವಾಗಿ ಇರುತ್ತಾನೆ. (ತೈ.ಉ., ೨.೧ ನ್ನೂ ನೋಡಿರಿ), ತ್ರಿವಿಧ ದೀಕ್ಷೆಗಳ ಮೂಲಕ  ಗುರುವು ಶಿಷ್ಯನಿಗೆ ಲಿಂಗತ್ರಯವನ್ನು ಅನುಗ್ರಹಿಸುತ್ತಾನೆ.

ತ್ರಿವಿಧ ದೀಕ್ಷೆ-ಲಿಂಗತ್ರಯ ಪ್ರಧಾನ :

ವೇಧಾದೀಕ್ಷಾ, ಮಾಂತ್ರಿದೀಕ್ಷಾ (ಮನುದೀಕ್ಷಾ) ಮತ್ತು ಕ್ರಿಯಾದೀಕ್ಷಾ ಎಂದು ದೀಕ್ಷೆ ಮೂರು ವಿಧ. ಇವುಗಳಲ್ಲಿ ಶಿಷ್ಯನ ಮಸ್ತಕದ ಮೇಲೆ ಇರಿಸಿದ ಶ್ರೀ ಗುರುವಿನ ಹಸ್ತದಿಂದ ಮತ್ತು ಏಕಾಗ್ರ ದೃಷ್ಟಿಯಿಂದ ಶಿಷ್ಯನಲ್ಲಿ ಆಗುವ ಶಿವಭಾವದ ವಿನಿವೇಶವು ವೇಧಾದೀಕ್ಷೆ, ಶ್ರೀಗುರುವಿನಿಂದ ಶಿವಪಂಚಾಕ್ಷರಿ ಮಂತ್ರೋಪದೇಶವು ಮಾಂತ್ತೀ ದೀಕ್ಷೆ  ಕೂಡಿದುದು, ಕ್ರಿಯಾ ಪ್ರಾಧಾನ್ಯವುಳ್ಳದ್ದು ಮಂಡಲ ರಚನೆ, ಕುಂಡ ಸ್ಥಾಪನೆ ಮುಂತಾದ ಕ್ರಿಯೆಗಳೊಂದಿಗೆ ಕ್ರಿಯಾದೀಕ್ಷೆ,  

ಗುರೋರಾಲೋಕಮಾತ್ರೇಣ ಹಸ್ತ ಮಸ್ತಕಯೋಗತಃ |

ಯಃ ಶಿವತ್ವಸಮಾವೇಶೋ ವೇಧಾದೀಕ್ಷೇತಿ ಸಾ ಮತಾ||

ಮಾಂತ್ರೀದೀಕ್ಷೇತಿ ಸಾ ಪ್ರೋಕ್ತಾ ಮಂತ್ರಮಾತ್ರೋಪದೇಶಿನೀ |

ಕುಂಡಮಂಡಲಿಕೋಪೇತಾ ಕ್ರಿಯಾದೀಕ್ಷಾ ಕ್ರಿಯೋತ್ತರಾ ||

(ಸಿ.ಶಿ., ೬.೧೩-೧೪) (ಕಾ.., ಕ್ರಿ.ಪಾ., ೧.೧೩-೧೪ನ್ನೂ ನೋಡಿ)

ಈ ಮೂರು ದೀಕ್ಷೆಗಳ ಮೂಲಕ ಶ್ರೀಗುರುವು ಕ್ರಮವಾಗಿ ಕಾರಣ, ಸೂಕ್ಷ್ಮ ಮತ್ತು ಸ್ಥೂಲ ಶರೀರಗಳಲ್ಲಿನ ಆಣವ, ಮಾಯೀಯ ಮತ್ತು ಕಾರ್ಮಿಕವೆಂಬ ಮೂರು ಮಲಗಳನ್ನು ನಾಶಮಾಡಿ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗಗಳನ್ನು ಅನುಗ್ರಹಿಸುತ್ತಾನೆ. ಇದು ಈ ಮೂರು ದೀಕ್ಷೆಗಳ ಉದ್ದೇಶ ಮತ್ತು ಫಲ :

ತನುತ್ರಯಗತಾನಾದಿಮಲತ್ರಯಮಸೌ ಗುರುಃ |

ದೀಕ್ಷಾತ್ರಯೇಣ ಸಂದಹ್ಯ ಲಿಂಗತ್ರಯಮುಪಾದಿಶೇತ್ ||

(ಕಾ.ಆ., ಕ್ರಿ.ಪಾ. ೧.೧೦)

ಇಡೀ ದೀಕ್ಷಾ ಸಂಸ್ಕಾರದ ಉದ್ದೇಶವೆಂದರೆ ಕಾರಣ ಶರೀರದಲ್ಲಿ ಭಾವಲಿಂಗವನ್ನೂ, ಸೂಕ್ಷ್ಮ ಶರೀರದಲ್ಲಿ ಪ್ರಾಣಲಿಂಗವನ್ನೂ, ಸ್ಥೂಲ ಶರೀರದಲ್ಲಿ ಇಷ್ಟಲಿಂಗವನ್ನೂ ಅನುಗ್ರಹಿಸಿ, ಅವುಗಳ ಅನುಸಂಧಾನವನ್ನು (ಸೂಕ್ಷ್ಮವಾದ ಸಂಬಂಧವನ್ನು) ಏರ್ಪಡಿಸುವುದು.ʼʼಇಷ್ಟಪ್ರಾಣಭಾವೇಷು ಲಿಂಗಧಾರಣಂ ವದಂತಿʼ’ (ಲಿಂ.ಉ., ಅಪ್ರಕಟಿತ ಉಪನಿಷತ್ತುಗಳು, ಪು. ೩೧೧), ”ಸರ್ವದೇಹೇಷು ಲಿಂಗಧಾರಣಂ ಭವತಿ” (ಅದೇ), ಎಂಬ ಶ್ರುತಿ-ಸೂಕ್ತಿಗಳು.

ಇಷ್ಟಂ ಸ್ಥೂಲತನೋ ಪ್ರೋಕ್ತಂ ಪ್ರಾಣಂ ಸೂಕ್ಷ್ಮತನೋಃ ಸ್ಮೃತಮ್ |

ಭಾವಾಖ್ಯಂ ಕಾರಣಸ್ಯೈವಂ ತನುತ್ರಯಗತಂ ತ್ರಯಮ್ ||

(ಚಂ.ಆ., ಕ್ರಿ.ಪಾ., ೩.೪೫)

ಹಾಗೆಯೇ ʼʼಭಾವಪ್ರಾಣೇಷ್ಟ ಲಿಂಗಾನಿ ಪೂಜಯೇದೇಕ ಭಾವತಃ’ʼ (ಸೂ.ಆ., ಕ್ರಿ.ಪಾ., ೬.೪೪) ಮುಂತಾದ ಆಗಮವಾಕ್ಯಗಳ ಆಶಯದಂತೆ, ಲಿಂಗವೆಂದರೆ ಇಷ್ಟಲಿಂಗವಷ್ಟೇ ಅಲ್ಲ, ಇಷ್ಟ- ಪ್ರಾಣ- ಭಾವಲಿಂಗ-ಸಮನ್ವಯ. (Synthesis of Ista-Prana-Bhavalingas) ಹೀಗೆ ಒಂದೇ ಮೂರಾಯಿತು. ಮೂರೂ ಪೂಜೆಯ ಏಕಭಾವದಲ್ಲಿ ಒಂದಾಯಿತು. ಅಂತಹ ಶ್ರೀಗುರು ಕೊಟ್ಟ ಪರವಸ್ತುವು ಪರಶಿವ ಸ್ವರೂಪವೇ ಹೊರತು ಸಂಕೇತವಲ್ಲ.

ಇಷ್ಟಲಿಂಗ-ಚಿತ್ಕಲಾಸಮಾವೇಶ :

ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ ಅದು ಸಾಧಕನ ಚಿತ್ಕಲಾ ಸ್ವರೂಪವೇ ಆಗಿದೆ. ಹೇಗೆಂದರೆ, ಶ್ರೀಗುರುವು ಇಷ್ಟಲಿಂಗ ಸಂಸ್ಕಾರವನ್ನು ಮಾಡಿ ಹಸ್ತದಲ್ಲಿ ಅದನ್ನು ಸ್ಥಾಪಿಸಿ, ಶಿಷ್ಯನ ಮಸ್ತಕದಲ್ಲಿನ ಚಿತ್ಕಲೆಯನ್ನು (ಚಿತ್=ಜ್ಞಾನ, ಅರಿವು; ಅದರ ಕಲೆಯೆಂದರೆ, ಅಂಶ; ಅವನ ಅರಿವಿನ ಅಂಶವನ್ನು) ತನ್ನ ದೃಷ್ಟಿಯಿಂದ ಆಕರ್ಷಿಸಿ ಆ ಲಿಂಗದಲ್ಲಿ ಸಮಾವೇಶಗೊಳಿಸುತ್ತಾನೆ. ಆಮೇಲೆ ಅದನ್ನು ಶಿಷ್ಯನ ಹಸ್ತದಲ್ಲಿ ಇರಿಸುತ್ತಾನೆ. ಆ ಚಿತ್ಕಲೆಗೆ ಶಿವಕಲೆಯೆಂದೂ ಹೆಸರು

 ಜಲಕುಂಭಾಗ್ರಸದ್ ವ್ಯಾಪ್ತತೈಲಬಿಂದುರ್ಯಥಾ ತಥಾ |

ದೇಹ ಪ್ರಾಣಾತ್ಮಸುವ್ಯಾಪ್ತ ಸಂಸ್ಥಿತಾ ಶಾಂಭವೀ ಕಲಾ

ಜ್ವಲತ್ ಕಾಲಾನಲಾಭಾಸಾ ತಟಿತ್‌ ಕೋಟಿಸಮಪ್ರಭಾ |

ಸ್ಯೋರ್ಧ್ವೇ ತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಲಾ

ಯಾ ಕಲಾ ಪರಮಾ ಸೂಕ್ಷ್ಮಾತತ್ವಾನಾಂ ಬೋಧೀನೀ ಪರಾ |

ತಾಮಾಕೃಷ್ಯ ಯಥಾನ್ಯಾಯಂ ಲಿಂಗೇ ಸಮುಪವೇಶಯೇತ್ ||

(ಕಾ.., ಕ್ರಿ.ಪಾ., ೧. ೧೨೨-೧೨೪)

“ನೀರಿನ ಕುಂಭದ ಮೇಲಿನ ಭಾಗವನ್ನು ಎಣ್ಣೆಯ ಹನಿಗಳು ವ್ಯಾಪಿಸಿದಂತೆ ದೇಹ ಪ್ರಾಣ ಆತ್ಮಗಳನ್ನು ವ್ಯಾಪಿಸಿ ನಿಂತಿದೆ ಶಿವಕಲೆ. ಅದು ಉರಿಯುವ ಕಾಲಾಗ್ನಿಯ ಹೊಳಪುಳ್ಳದ್ದು, ಕೋಟಿ ಮಿಂಚಿನ ಪ್ರಕಾಶವುಳ್ಳದ್ದು. ಅದರ ಮೇಲಿನ ಭಾಗದಲ್ಲಿ ಸೂಕ್ಷ್ಮಶಿಖೆ, ಚಿತ್‌ ಸ್ವರೂಪದ ಶ್ರೇಷ್ಠ ಕಲೆಯಿದೆ. ಆ ಶ್ರೇಷ್ಠ ಸೂಕ್ಷ್ಮ ಕಲೆಯು ತತ್ತ್ವಗಳ ಜ್ಞಾನದಾಯಿನಿ. ಅದನ್ನು ಸರಿಯಾದ ರೀತಿಯಲ್ಲಿ ಆಕರ್ಷಿಸಿ ಲಿಂಗದಲ್ಲಿ ಲಯಗೊಳಿಸಬೇಕು”. ಹಿಂದೆ ಹೇಳಿದ ಕ್ರಮವನ್ನು ಅದೇ ಶೈವಾಗಮವು ಮೊದಲೇ ಸ್ಪಷ್ಟಪಡಿಸಿದೆ :

ಶೈವೀಂ ಕಲಾಂ ಸ್ವಮನಸಾ ವಿಭಾವ್ಯ ಚ ತತಃಪರಮ್ |

ದೃಷ್ಟಾವಾನೀಯ ಚ ತಯಾ ಶಿಷ್ಯವಾಮಕರಸ್ಥಿತೇ |

ಲಿಂಗೇ ನಿವೇಶಯೇತ್ ಕ್ಷಿಪ್ರಂ ಮೂಲಮಂತ್ರಮನುಸ್ಮರನ್ ||

(ಕಾ.ಅ., ಕ್ರಿ.ಪಾ. ೧.೧೨೦)

“ಆ ಶಿವಕಲೆಯನ್ನು (ಶ್ರೀಗುರುವು) ತನ್ನ ಮನಸ್ಸಿನಲ್ಲಿ ಮೂಡಿಸಿಕೊಂಡು ಆನಂತರ ತನ್ನ ದೃಷ್ಟಿಯಲ್ಲಿ ಸೆಳೆದುಕೊಂಡು ಅದರಿಂದ (ದೃಷ್ಟಿಯ ಮೂಲಕ) ಶಿಷ್ಯನ ಎಡಗೈಯಲ್ಲಿರಿಸಿದ ಲಿಂಗದಲ್ಲಿ ಅದನ್ನು ಶಿವಕಲೆಯನ್ನು, ಚಿತ್ಕಲೆಯನ್ನು ಕ್ಷಿಪ್ರವಾಗಿ ಮೂಲಮಂತ್ರವನ್ನು (ಶಿವಪಂಚಾಕ್ಷರಿಯನ್ನು) ಸ್ಮರಿಸುತ್ತಾ ಸಮಾವೇಶಗೊಳಿಸಬೇಕುʼ’. ಅಂತಹ ಲಿಂಗವನ್ನು ಪ್ರಾಣಲಿಂಗವೆಂದು ಭಾವಿಸಿ ಪ್ರಾಣಕ್ಕಿಂತಲೂ ಹೆಚ್ಚು ಎಂಬಂತೆ ರಕ್ಷಿಸಿಕೊಂಡು ಪೂಜಿಸಬೇಕು. ತನ್ನ ಚಿತ್ಕಲಾಯುಕ್ತಲಿಂಗವನ್ನು ಶಿಷ್ಯನು ಸರ್ವದಾ ತನ್ನ ದೇಹದ ಮೇಲೆ ಧರಿಸಿಕೊಳ್ಳಬೇಕು ಎಂಬುದು ಶ್ರೀಗುರುವಿನ ಕಟ್ಟಳೆ. (ನೋಡಿ-ಸಿ.ಶಿ., ೬.೨೬), ಹಾಗೆ ಚಿತ್ಕಲಾಯುಕ್ತ ಶಿವಕಲಾಯುಕ್ತ ತನ್ನ ಇಷ್ಟಲಿಂಗವನ್ನು ಸಾಧಕನು ಶಿವನ ಸ್ವರೂಪವೇ ಎಂದು ತಿಳಿಯದೆ, ಕೇವಲ ಸಂಕೇತವೆಂದು ತಿಳಿಯುವುದು ಹೇಗೆ ಸಾಧ್ಯ ?

ಚಿತ್ಕಲೆ-ಶಿವಕಲೆ :

ಶಿಷ್ಯನ ಮಸ್ತಕಸ್ಥಿತ ಚಿತ್ಕಲೆಯನ್ನು ಶಿವಕಲೆಯೆಂದು ಕರೆಯುವುದರ ಹಿನ್ನೆಲೆಯನ್ನು ತಿಳಿದರೆ ಇಷ್ಟಲಿಂಗ ಪರಿಕಲ್ಪನೆಯ ಮೂಲಭೂತ ವಿಚಾರವನ್ನು ತಿಳಿದಂತಾಗುತ್ತದೆ. ಇಲ್ಲಿ ಮತ್ತೆ ಸ್ಮರಿಸಿಕೊಳ್ಳೋಣ. ಪರಮಾತ್ಮನ ಅಂಶ ಜೀವಾತ್ಮವೆಂದು ಹಿಂದೆ ಹೇಳಿದ್ದನ್ನು ಈ ವಿಚಾರದ ಸುಂದರ ನಿರೂಪಣೆಯನ್ನು ಇಲ್ಲಿ ಕಾಣಬಹುದು :

ಚಂದ್ರಕಾಂತೇ ಯಥಾ ತೋಯಂ ಸೂರ್ಯಕಾಂತೇ ಯಥಾ Sನಲಃ |

ಬೀಜೇ ಯಥಾಂಕರಃ ಸಿದ್ಧಸ್ತಥಾತ್ಮನಿ ಶಿವಃ ಸ್ಥಿತಃ ||

(ಸಿ.ಶಿ., ೫.೩೬)

“ಚಂದ್ರಕಾಂತ ಶಿಲೆಯಲ್ಲಿ ನೀರು, ಸೂರ್ಯಕಾಂತ ಶಿಲೆಯಲ್ಲಿ ಬೆಂಕಿ, ಬೀಜದಲ್ಲಿ ಮೊಳಕೆ ಇದ್ದಂತೆ, ಆತ್ಮದಲ್ಲಿ ಶಿವನು ಇದ್ದಾನೆ”. ಶಿವನು ಇದ್ದಾನೆ ಶಿವನ ಅಂಶವಿದೆ. ಆತ್ಮವೇ ಶಿವನ ಅಂಶ. ಅದೇ ಶಿವಕಲೆ. ಅದನ್ನು ಆವಾಹಿಸಿ ಇಷ್ಟಲಿಂಗದಲ್ಲಿ ನೆಲೆಗೊಳಿಸಿದಾಗ ಅದು ಕಲ್ಲಿನ ಲಿಂಗವಾಗಿ ಉಳಿಯದೆ  ಚಿಲ್ಲಿಂಗವಾಗುತ್ತದೆ. ಅದನ್ನು (ಲಿಂಗತ್ರಯ ಸಮನ್ವಯವನ್ನು) ಪೂಜಿಸುತ್ತಾ ಭಕ್ತಿಯ ವಿಕಾಸವನ್ನು ಸಾಧಿಸಿಕೊಂಡರೆ ಸಾಧಕ ತನ್ನಾತ್ಮವನ್ನೇ ಲಿಂಗವೆಂದು ಅರಿತು ಬೆರೆತು ಬೇರಾಗದಂತಿರುತ್ತಾನೆ. ತನ್ನಾತ್ಮವನ್ನು ಬಿಟ್ಟು ಹೊರಗೆಲ್ಲಿದ್ದಾನೆ ಶಿವ, ಹೊರಗೆಲ್ಲಿದೆ ಲಿಂಗ ? ಕಠೋಪನಿಷತ್ತು ಹೇಳುವಂತೆ (ಯಥಾದರ್ಶೇ ತಥಾತ್ಮನಿ’) ಆತ್ಮನಲ್ಲಿ ಪರಮಾತ್ಮನ ದರ್ಶನ ಎಂದರೆ ಆತ್ಮನೇ ಪರಮಾತ್ಮನೆಂಬ ಸಾಕ್ಷಾತ್ಕಾರ, ಕನ್ನಡಿಯಲ್ಲಿ ಹೇಗೋ ಹಾಗೆ ಸ್ಪಷ್ಟ. ಆದ್ದರಿಂದ ಈ ದೇಹ ಬಿದ್ದು ಹೋಗುವ ಮೊದಲೇ ಆತ್ಮದರ್ಶನ ಮಾಡಿಕೊಳ್ಳಿ. “ಹೊತ್ತು ಹೋದ ಬಳಿಕ ನಿಮ್ಮನ್ನಾರು ಬಲ್ಲರು ??”

ಸಂಕೇತ ಸೂಚಿ

ಅನು. ಸೂ……. ಅನುಭವಸೂತ್ರ

ಕಠ….. ಕಠೋಪನಿಷತ್

ಕಾ.ಆ……. ಕಾರಣಾಗಮ

 ಕ್ರಿ.ಪಾ……. ಕ್ರಿಯಾಪಾದ

ಚಂ.ಅ……… ಚ೦ದ್ರಜ್ಞಾನಾಗಮ

ಛಾಂ.ಉ……. ಛಾಂದೋಗ್ಯೋಪನಿಷತ್

ತೈ. ಉ……. ತೈತ್ತಿರೀಯೋಪನಿಷತ್

ಲಿಂ. ಉ…… ಲಿಂಗೋಪನಿಷತ್

ಸಿ.ಶಿ…. ಶ್ರೀ ಸಿದ್ಧಾಂತ ಶಿಖಾಮಣಿ

ಸೂ.ಆ….. ಸೂಕ್ಷ್ಮಾ ಗಮ

ಶ್ರೀ ವೇ.ಮೂ.ಲಿಂ.ಪಂಡಿತ ಚೆನ್ನಬಸವ ಶಾಸ್ತ್ರಿಗಳು ಸೋ.ಹಿರೇಮಠ

ರಾಗ: ಕಾಫಿ      ತಾಳ: ತ್ರಿತಾಳ

ಚಾಲ: ಮಗುವೆ ವಿಮಲ ಕುಲಬಾಲ ರವಿಯೇ ಪೋಗು ಪರಾಕ್ರಮಿಯೆ ಎಂಬಂತೆ

 

 

ಗುರುವೇ ಸುಜನಕುಲ ಕಲ್ಪತರುವೆ      ||ಪ||

ಪಾಡುವೆ ಮಂಗಲವ ಗುರುವರಾ

ಯತಿಕುಲ ರಾಜಾ ನುತಸುರ ಭೂಜ      ||೧||

ಜಿತದಿನ ಕರತೇ ಜಾ   ||

ಧೃತರಕ್ತಾಂಬರ| ವರ ಪುಣ್ಯಾಂಕುರ

ಪರತರ ಅವತಾರ | ಭಾಸುರಾ||

ಕುಮತ ಕುಠಾರಾ ಸ್ವಮತೋದ್ಧಾರಾ    ||೨||

ಕರುಣಾವನ ವಿಹರಾ

ಪ್ರಣವಾಕಾರ ಸದ್ಗುಣ ನಿಕರ|

ತ್ರಿಣಯನ ಸಮಸಾರಾ ಸುಧೀರ

ಘೋರತರ ದುಸ್ತಾರ ಭವಾಭ್ದಿಯಿಂ   ||೩||

ಪಾರು ಗೊಳಿಸು ಪಿತನೆ

ಪರತರ ಮುಕ್ತನೆ ಪರಮ ವಿರಕ್ತನೆ

ಚರನುತ ಗುರುವರನೇ sss ಕುಮಾರನೆ

ಪೂಜ್ಯ ಕೇದಾರನಾಥ ದೇವರು ಯಾಳವಾರ

ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ ||ಪ||

ತ್ಯಾಗಯೋಗ ಶಿವಯೋಗದ ಯೋಗಿಗೆ

ಯೋಗದ ನೆಲೆ ತೋರಿದ ಮಹಾಮಹಿಮಗೆ ಶಿವಯೋಗಿಗೆ

ವಂದಿಸುವೆ ,ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ, ವಂದಿಸುವೆ ॥೧॥

ನೊಂದಬೆಂದ ಜೀವಕೆ ನೀ ತಂದೆಯಾದವ

ಕುಂದುವಡೆದ ಮನಸನು ಒಂದು ಗೈದವ, ಆಪದ್ಭಾಂದವ

ವಂದಿಸುವೆ, ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ ವಂದಿಸುವೆ ||೨||

ಗಾನಜ್ಞಾನ ಅಭಿಯಾನದ ಯೋಗಿಗೆ

ಅನುಪಮ ನಿರಂಜನ ಶಿವಯೋಗಿಗೆ, ಮಹಾತ್ಯಾಗಿಗೆ

ವಂದಿಸುವೆ, ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ, ವಂದಿಸುವೆ ॥೩॥

ಜಯ ವಿಜಯ ಅಜಯಾಜಯ ಧೀರಗೆ

ಜಯ ಜಯ ಜಯ ಜಯ ಕುಮಾರಗೆ, ಸುಕುಮಾರಗೆ,

ವಂದಿಸುವೆ, ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೆ,

ಕಲಿಯುಗದ ಕಾಮಧೇನು ವಂದಿಸುವೆ, ವಂದಿಸುವೆ ||೪||