ಏಳು ಬಾಲಕಿಯರಿಂದ ಬೆಳಗಿದ ವಿದ್ಯಾದೀಪ

ಹಿರೇಕೆರೂರಿನ ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆಯ ಇತಿಹಾಸ

—————————————————————————–

ಹಿರೇಕೆರೂರಿನಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಆರಂಭಿಸಿದ ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆ (೧೯೦೮)

——————————————————————————————————–
ಲೇಖಕ: ಶ್ರೀಕಂಠ ಚೌಕೀಮಠ

ಅಂಧಕಾರದ ಕಾಲಘಟ್ಟ

ಇಪ್ಪತ್ತನೇ ಶತಮಾನದ ಆರಂಭದ ಉತ್ತರ ಕರ್ನಾಟಕವನ್ನು ಇಂದು ನೆನೆಸಿಕೊಂಡರೆ, ಅದು ಕೇವಲ ಒಂದು ಭೌಗೋಳಿಕ ಪ್ರದೇಶದ ಸ್ಮರಣೆಯಲ್ಲ; ಸಂಪ್ರದಾಯಗಳ ಕಬ್ಬಿಣದ ಗೋಡೆಯೊಳಗೆ ಸಿಕ್ಕಿಹಾಕಿಕೊಂಡಿದ್ದ ಸಮಾಜದ ಮೌನ ಚಿತ್ರಣ.
ಆ ಕಾಲದಲ್ಲಿ ಹೆಣ್ಣುಮಕ್ಕಳ ಬದುಕು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು. “ಹೆಣ್ಣು ಓದಿದರೆ ಮನೆ ಹಾಳಾಗುತ್ತದೆ”, “ಅಕ್ಷರ ಕಲಿತ ಹೆಣ್ಣು ಗಂಡನಿಗೆ ಎದುರು ಮಾತನಾಡುತ್ತಾಳೆ” ಎಂಬ ಮೂಢನಂಬಿಕೆಗಳು ಜನಮನದಲ್ಲಿ ಗಟ್ಟಿಯಾಗಿ ಬೇರುಬಿಟ್ಟಿದ್ದವು. ಬಡತನ, ಅಜ್ಞಾನ, ಜಾತಿ-ಲಿಂಗ ಅಸಮಾನತೆ ಮತ್ತು ಸಾಮಾಜಿಕ ಕಟ್ಟಳೆಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅತಿದೊಡ್ಡ ಅಡೆತಡೆಗಳಾಗಿದ್ದವು.

ಅಂತಹ ಅಂಧಕಾರಮಯ ಕಾಲಘಟ್ಟದಲ್ಲಿ, ಸಮಾಜದ ವಿರೋಧವನ್ನೂ ಸಂಪ್ರದಾಯದ ಕಟ್ಟಳೆಗಳನ್ನೂ ಲೆಕ್ಕಿಸದೆ, ಹೆಣ್ಣುಮಕ್ಕಳ ಶಿಕ್ಷಣವೇ ಸಮಾಜಮುಕ್ತಿಯ ದಾರಿ ಎಂದು ಘೋಷಿಸಿ ಕಾರ್ಯಪ್ರವೃತ್ತರಾದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು.

ಸೊಲ್ಲಾಪುರ ಅಧಿವೇಶನ ಮತ್ತು ಸ್ತ್ರೀಶಿಕ್ಷಣದ ಸಂಕಲ್ಪ

೧೯೦೭ರ ಡಿಸೆಂಬರ್‌ನಲ್ಲಿ ಸೊಲ್ಲಾಪುರದಲ್ಲಿ ನಡೆದ ಅಖಿಲಭಾರತ ವೀರಶೈವ ಮಹಾಸಭೆಯ ಮೂರನೇ ಅಧಿವೇಶನದಲ್ಲಿ ಸ್ತ್ರೀಶಿಕ್ಷಣವನ್ನು ಪ್ರತ್ಯೇಕ ಗೊತ್ತುವಳಿಯಾಗಿ ಅಂಗೀಕರಿಸುವಂತೆ ಮಾಡಿದ್ದ ಹಾನಗಲ್ಲ ಶ್ರೀಗಳು, ಅದರ ಮುಂದಿನ ವರ್ಷವೇ ಹಿರೇಕೆರೂರಿನಲ್ಲಿ ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆಯನ್ನು ಆರಂಭಿಸಿದರು.

ಅದು ಕೇವಲ ಒಂದು ಶಾಲೆಯ ಸ್ಥಾಪನೆಯಲ್ಲ; ಮಹಿಳಾ ಶಿಕ್ಷಣದ ಮೂಲಕ ಸಮಾಜದ ಭವಿಷ್ಯವನ್ನು ಮರುರಚಿಸಲು ಹಚ್ಚಿದ ಜಾಗೃತಿಯ ದೀಪವಾಗಿತ್ತು.

ಆ ಕಾಲದಲ್ಲಿ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶಾಲೆಯನ್ನು ಆರಂಭಿಸುವ ಕಲ್ಪನೆಯೇ ಒಂದು ಸಾಹಸವಾಗಿತ್ತು. ಸಂಪ್ರದಾಯಪರ ಸಮಾಜ ಅದನ್ನು ಅನುಮಾನ ಮತ್ತು ಆತಂಕದಿಂದ ನೋಡುತ್ತಿತ್ತು. ಆದರೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಅವರ ದೃಷ್ಟಿಯಲ್ಲಿ ಶಿಕ್ಷಣವು ಪುರುಷರ ಏಕಸ್ವಾಮ್ಯವಲ್ಲ; ಅದು ಪ್ರತಿಯೊಬ್ಬ ಮಾನವನ ಮೂಲಭೂತ ಹಕ್ಕು. “ಸ್ತ್ರೀಶಿಕ್ಷಣವಿಲ್ಲದ ಸಮಾಜ ಎಂದಿಗೂ ಪ್ರಗತಿಪರವಾಗಲಾರದು” ಎಂಬ ನಂಬಿಕೆಯೇ ಅವರ ಸಮಾಜದರ್ಶನದ ಅಡಿಪಾಯವಾಗಿತ್ತು.

ದೇವರ ಗುಡಿಯ ಮಹಡಿಯಲ್ಲೊಂದು ಕ್ರಾಂತಿ

ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆ ಆರಂಭವಾದ ಸ್ಥಳವೂ ಅಷ್ಟೇ ಅರ್ಥಪೂರ್ಣವಾಗಿತ್ತು — ಹಿರೇಕೆರೂರಿನ ಶ್ರೀ ಬಸವಣ್ಣ ದೇವರ ಗುಡಿಯ ಮಹಡಿ. ಅದು ಕೇವಲ ಸೌಲಭ್ಯಕ್ಕಾಗಿ ಆಯ್ದ ಸ್ಥಳವಲ್ಲ; ಬಸವಣ್ಣನ ಸಮಾನತೆಯ ತತ್ವಕ್ಕೆ ಸಲ್ಲಿಸಿದ ಕಾರ್ಯರೂಪದ ನಮನ. ಬಸವಣ್ಣನು “ಜಾತಿ-ಲಿಂಗ ಭೇದವಿಲ್ಲದ ಅನುಭವ ಮಂಟಪ”ವನ್ನು ಕನಸುಗಂಡಿದ್ದರೆ, ಹಾನಗಲ್ಲ ಶ್ರೀಗಳು ಅದೇ ಚಿಂತನೆಗೆ ಶಿಕ್ಷಣದ ರೂಪ ನೀಡಿದರು.

ಶಾಲೆಗೆ “ಅಕ್ಕಮಹಾದೇವಿ” ಎಂಬ ಹೆಸರು ಇಟ್ಟಿರುವುದೂ ಯಾದೃಚ್ಛಿಕವಲ್ಲ. ಕನ್ನಡದ ಭಕ್ತಿಪರಂಪರೆಯಲ್ಲಿ ಅಕ್ಕಮಹಾದೇವಿ ಕೇವಲ ಶರಣೆಯಲ್ಲ; ಆತ್ಮಸ್ವಾತಂತ್ರ್ಯದ ಪ್ರತೀಕ. ಮಹಿಳೆಯೂ ಜ್ಞಾನದಲ್ಲಿ, ಆಧ್ಯಾತ್ಮಿಕತೆಯಲ್ಲಿ ಮತ್ತು ಚಿಂತನೆಗಳಲ್ಲಿ ಸಮಾನಳು ಎಂಬ ಸಂದೇಶದ ಜೀವಂತ ರೂಪ. ಆ ಹೆಸರಿನ ಮೂಲಕ ಶ್ರೀಗಳು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಅಕ್ಷರ ಕಲಿಸುವ ಕಾರ್ಯವಲ್ಲ, ಆತ್ಮಗೌರವವನ್ನು ಜಾಗೃತಗೊಳಿಸುವ ಚಳವಳಿ ಎಂಬುದನ್ನು ಘೋಷಿಸಿದಂತಾಯಿತು.

ಆದರೆ ಸಮಾಜದ ವಾಸ್ತವಿಕೆ ಅಷ್ಟು ಸುಲಭವಾಗಿರಲಿಲ್ಲ. ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು. “ಹೆಣ್ಣುಮಕ್ಕಳಿಗೆ ಶಾಲೆ ಯಾಕೆ?” ಎಂಬ ಪ್ರಶ್ನೆಯೇ ಅನೇಕ ಮನೆಗಳಲ್ಲಿ ದೊಡ್ಡ ವಿರೋಧದ ಧ್ವನಿಯಾಗಿತ್ತು. ಆದರೂ ಶ್ರೀಗಳು ಹಿಂದೆ ಸರಿಯಲಿಲ್ಲ. ಗ್ರಾಮದಿಂದ ಗ್ರಾಮಕ್ಕೆ ತೆರಳಿ, ಓಣಿ-ಓಣಿಗಳಲ್ಲಿ ಪ್ರವಚನ ಮಾಡಿ, ಶಿಕ್ಷಣ ಪಡೆದ ತಾಯಿ ಒಂದು ಕುಟುಂಬವನ್ನೇ ಬೆಳಗಿಸುತ್ತಾಳೆ ಎಂಬ ಸತ್ಯವನ್ನು ಜನರ ಮನಸ್ಸಿಗೆ ತಟ್ಟಿಸಿದರು.

ಬಡ ಕುಟುಂಬಗಳ ಮಕ್ಕಳಿಗೂ ಶಿಕ್ಷಣ ದೊರಕಬೇಕು ಎಂಬ ಕಾರಣಕ್ಕೆ ಅವರು ವಿದ್ಯೆಯನ್ನು ದಾನಧರ್ಮದ ಭಾಗವಾಗಿ ಕಂಡರು. ಅವರ ದೃಷ್ಟಿಯಲ್ಲಿ ವಿದ್ಯೆ ವ್ಯಾಪಾರವಲ್ಲ — ಸಮಾಜಪುನರುತ್ಥಾನದ ಸಾಧನ. ಇದೇ ಕಾರಣಕ್ಕೆ ನಂತರ ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳ ಬೀಜ ಬಿತ್ತಲಾಯಿತು.

ಇಂದು ಮಹಿಳೆಯರು ವೈದ್ಯಕೀಯ, ಶಿಕ್ಷಣ, ನ್ಯಾಯಾಂಗ, ವಿಜ್ಞಾನ, ಆಡಳಿತ, ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವಾಗ, ಅದರ ಬೇರುಗಳಲ್ಲಿ ಹಾನಗಲ್ಲ ಶ್ರೀಗಳಂತಹ ಮಹನೀಯರ ದೂರದೃಷ್ಟಿಯ ಶ್ರಮ ಅಡಗಿದೆ. ೧೯೦೮ರಲ್ಲಿ ಹಿರೇಕೆರೂರಿನ ಒಂದು ದೇವಾಲಯದ ಮಹಡಿಯಲ್ಲಿ ಆರಂಭವಾದ ಆ ಚಿಕ್ಕ ಶಾಲೆ, ವಾಸ್ತವದಲ್ಲಿ ಮಹಿಳಾ ಜಾಗೃತಿಯ ಮಹಾ ದೀಪವಾಗಿತ್ತು.

ಆ ಕಾಲದಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಹಿರೇಕೆರೂರಿನ ಓಣಿ-ಓಣಿಗಳಲ್ಲಿ ಸುತ್ತಾಡುತ್ತಾ, ಮನೆ ಮನೆಗೆ ತೆರಳಿ, ಶರಣರ ಸಮಾನತೆಯ ತತ್ವವನ್ನು ಜನರಿಗೆ ಮನವರಿಕೆ ಮಾಡುತ್ತಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಅವರು ಕೇವಲ ಉಪದೇಶಕರಾಗಿರಲಿಲ್ಲ; ತಮ್ಮ ಮಾತನ್ನು ಕಾಯಕವನ್ನಾಗಿಸಿದ ಕಾರ್ಯಯೋಗಿಗಳಾಗಿದ್ದರು.

ಹಿರೇಕೆರೂರಿನ ಶ್ರೀ ಬಸವಣ್ಣ ದೇವರ ಗುಡಿಯ ಮಹಡಿಯಲ್ಲಿ “ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆ”ಯನ್ನು ಆರಂಭಿಸಿದ ಶ್ರೀಗಳಿಗೆ, ಶಾಲೆ ತೆರೆಯುವುದಕ್ಕಿಂತ ದೊಡ್ಡ ಸವಾಲು — ಮಕ್ಕಳನ್ನು ಶಾಲೆಗೆ ತರಿಸುವುದಾಗಿತ್ತು. ಅವರು ಸ್ವತಃ ಮನೆ ಮನೆಗೆ ತೆರಳಿ ಪೋಷಕರನ್ನು ಮನವೊಲಿಸುತ್ತಿದ್ದರು. “ಮಗಳು ಓದಿದರೆ ಕುಟುಂಬ ಬೆಳಗುತ್ತದೆ” ಎಂದು ತಿಳಿಸುತ್ತಿದ್ದರು. ಆದರೆ ಸಮಾಜದ ಪ್ರತಿಕ್ರಿಯೆ ಕಠಿಣವಾಗಿತ್ತು.

“ಗಡಿಗಿ ತೊಳೆಯೊ ಮೂಳಿ, ನಿನಗ್ಯಾಕಬೇಕು ಸಾಲಿ?”

ಎಂಬ ವ್ಯಂಗ್ಯಮಾತುಗಳು ಆ ಕಾಲದ ಸಾಮಾಜಿಕ ಮನೋಭಾವವನ್ನು ಸ್ಪಷ್ಟವಾಗಿ ಬಿಚ್ಚಿಡುತ್ತವೆ. ಹೆಣ್ಣುಮಕ್ಕಳ ಜೀವನವನ್ನು ಕೇವಲ ಮನೆಯ ಕೆಲಸಕ್ಕೆ ಸೀಮಿತಗೊಳಿಸಿದ್ದ ಸಮಾಜದಲ್ಲಿ, ಶಿಕ್ಷಣದ ಅಗತ್ಯವನ್ನೇ ಪ್ರಶ್ನಿಸಲಾಗುತ್ತಿತ್ತು. ಹುಡುಗರೇ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹೋಗದ ಕಾಲ ಅದು. “ನೌಕರಿ ಅಂದರೆ ಗುಲಾಮಿ” ಎಂಬ ಮನೋಭಾವದಿಂದ ಅಕ್ಷರಾಭ್ಯಾಸವನ್ನೇ ಅನೇಕರು ತಿರಸ್ಕರಿಸುತ್ತಿದ್ದರು. ಅಂಥ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡುವುದು ಕಾಲಕ್ಕಿಂತ ಹಲವು ದಶಕಗಳ ಮುಂದೆ ನಿಂತ ಚಿಂತನೆಯಾಗಿತ್ತು.

ಆದರೂ ಶ್ರೀಗಳು ಹಿಂದೆ ಸರಿಯಲಿಲ್ಲ. ಅವರ ನಿರಂತರ ಪ್ರವಚನ, ಮನವೊಲಿಕೆ ಮತ್ತು ಸಾಮಾಜಿಕ ಜಾಗೃತಿಯ ಫಲವಾಗಿ ಶಾಲೆಗೆ ಮೊದಲಿಗೆ ಬಂದವರು ಕೇವಲ ಏಳು ಹುಡುಗಿಯರು. ಆದರೆ ಆ ಏಳು ಬಾಲಕಿಯರೊಂದಿಗೆ ಆರಂಭವಾದ ಪಯಣ ಕೇವಲ ಒಂದು ಶಾಲೆಯ ಆರಂಭವಾಗಿರಲಿಲ್ಲ; ಅದು ಮಹಿಳಾ ಶಿಕ್ಷಣದ ಮೂಲಕ ಸಮಾಜಪರಿವರ್ತನೆಯ ಕ್ರಾಂತಿಬೀಜವಾಗಿತ್ತು.

ಏಳು ಬಾಲಕಿಯರಿಂದ ಆರಂಭ

ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಗೆ ಸಮಾನ ಸ್ಥಾನ ನೀಡಿದ ಬಸವ ಚಿಂತನೆ, ಶತಮಾನಗಳ ನಂತರ ಹಿರೇಕೆರೂರಿನಲ್ಲಿ ಹೆಣ್ಣುಮಕ್ಕಳ ಶಾಲೆಯ ರೂಪದಲ್ಲಿ ಮರುಜೀವ ಪಡೆದಂತಾಯಿತು

ಇದು ಪೂರ್ವಯೋಜನೆ ಇಲ್ಲದೆ ದಿಢೀರನೆ ನಡೆಯುವ ಘಟನೆವಲ್ಲವೆನ್ನಿಸುತ್ತದೆ — ಶಿವಯೋಗ ಮಂದಿರವೂ ಆರಂಭದಲ್ಲಿ ಏಳು ಸಾಧಕರಿಂದಲೇ ಆರಂಭವಾಗಿತ್ತು. ಅದೇ ರೀತಿ ಮಹಿಳಾ ಶಿಕ್ಷಣದ ಈ ಜಾಗೃತಿ ಚಳವಳಿಯೂ ಏಳು ಬಾಲಕಿಯರಿಂದ ತನ್ನ ಬೆಳಕಿನ ಪಯಣ ಆರಂಭಿಸಿತು.

ಆದರೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಕೇವಲ ಶಿಕ್ಷಣದ ಅಗತ್ಯವನ್ನಷ್ಟೇ ಪ್ರತಿಪಾದಿಸಲಿಲ್ಲ; ಅವರು ಮಹಿಳಾ ಸ್ವಾತಂತ್ರ್ಯದ ಪ್ರಶ್ನೆಯನ್ನು ಸಮಾಜದ ಮುಂದೆ ಇಟ್ಟರು. “ಸ್ತ್ರೀಶೋಷಣೆ ನಿಲ್ಲಬೇಕು; ಸ್ತ್ರೀಯರು ವಿದ್ಯಾವಂತರಾಗಬೇಕು” ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಈ ವಿಚಾರವನ್ನು ಅವರು ಬಸವಣ್ಣನ ಸಮಾನತೆಯ ತತ್ವದೊಂದಿಗೆ ಜೋಡಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಬಸವ ಸಂದೇಶವು ಕೇವಲ ವಚನಗಳಲ್ಲಿ ಉಳಿಯಬೇಕಾದ ತತ್ವವಲ್ಲ; ಅದು ಸಮಾಜದ ಬದುಕಿನಲ್ಲಿ ಕಾರ್ಯರೂಪ ಪಡೆಯಬೇಕಾದ ಮೌಲ್ಯವಾಗಿತ್ತು.

ಆ ಕಾಲದಲ್ಲಿ ಈ ಭಾಗದಲ್ಲಿ “ತೆರವು” ಅಥವಾ “ತೆತ್ತುಕನ್ಯಾ” ಪದ್ಧತಿಯೂ ವ್ಯಾಪಕವಾಗಿತ್ತು. ಮಗಳನ್ನು ವಿವಾಹಕ್ಕೆ ಕೊಡುವಾಗ ಹಣ, ಆಸ್ತಿ ಮತ್ತು ವ್ಯವಹಾರದ ಮನೋಭಾವದಿಂದ ಸಂಬಂಧಗಳನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಶಿಕ್ಷಣದ ಪರಿಣಾಮವಾಗಿ ಸಮಾಜದ ಮನೋಭಾವ ನಿಧಾನವಾಗಿ ಬದಲಾಗತೊಡಗಿತು. “ನನ್ನ ಮಗಳು ಕಲಿತವಳು; ತೆರವು ಕಡಿಮೆ ಕೊಟ್ಟರೂ ಬೀಗತನ ಕೊಡುತ್ತೇವೆ” ಎಂದು ಜನರು ಹೇಳತೊಡಗಿದುದು ಆ ಬದಲಾವಣೆಯ ಸಂಕೇತವಾಗಿತ್ತು.

ಈ ಅನಿಷ್ಟ ಪದ್ಧತಿಯನ್ನು ವಿರೋಧಿಸಿ ಶ್ರೀಗಳು ರಾಣೆಬೆನ್ನೂರು ಮತ್ತು ಹಿರೇಕೆರೂರಿನ ಹಿರಿಯರನ್ನು ಕೂಡಿಸಿ ಮಾತನಾಡಿದರು. ಪ್ರವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಕ್ರಮೇಣ “ತೆರವು” ಪದ್ಧತಿಯನ್ನು ತ್ಯಜಿಸುವ ದಿಕ್ಕಿನಲ್ಲಿ ಸಮಾಜವನ್ನು ಕೊಂಡೊಯ್ಯುವ ಕಾರ್ಯಕ್ಕೂ ಅವರು ಕಾರಣರಾದರು. ಮಹಿಳಾ ಶಿಕ್ಷಣವು ಕೇವಲ ಅಕ್ಷರಜ್ಞಾನವನ್ನಷ್ಟೇ ನೀಡಲಿಲ್ಲ; ಅದು ಸಮಾಜದ ಮೌಲ್ಯವ್ಯವಸ್ಥೆಯನ್ನೇ ಮರುಪರಿಶೀಲಿಸುವ ಶಕ್ತಿಯಾಗಿ ಪರಿಣಮಿಸಿತು.

ಮೊದಲಿಗೆ ಕೇವಲ ಏಳು ಬಾಲಕಿಯರೊಂದಿಗೆ ಆರಂಭವಾದ ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆ, ಎರಡು ವರ್ಷಗಳೊಳಗೆ ಎಪ್ಪತ್ತು ವಿದ್ಯಾರ್ಥಿನಿಯರನ್ನು ಹೊಂದಿತು. ಅದು ಕೇವಲ ಒಂದು ಶಾಲೆಯ ಬೆಳವಣಿಗೆಯಲ್ಲ; ಒಂದು ಸಮಾಜ ನಿಧಾನವಾಗಿ ಕಣ್ಣುತೆರೆಯುತ್ತಿದ್ದ ಐತಿಹಾಸಿಕ ಕ್ಷಣವಾಗಿತ್ತು.

ಶತಾಯುಷಿ ಪರಗಿ ಬಸಮ್ಮ ತಾಯಿಯವರು

(೧೯೦೮ರ ಅಕ್ಕಮಹಾದೇವಿ ಹೆಣ್ಣುಮಕ್ಕಳ ಶಾಲೆಯ ವಿದ್ಯಾರ್ಥಿನಿ)

ಶತಾಯುಷಿ ಪರಗಿ ಬಸಮ್ಮ ತಾಯಿಯವರು ನೆನಪಿಸಿಕೊಂಡಂತೆ, ಹಾನಗಲ್ಲ ಅಪ್ಪಾವರು ಜನರಿಗೆ ಸದಾ ಹೇಳುತ್ತಿದ್ದ ಮಾತು:

“ಎಲ್ಲರೂ ಕಲಿತು ಜಾಣರಾಗಿ ಬಾಳಿರಿ.
ವಿದ್ಯೆ ಕಲಿಯುವುದು ಆತ್ಮಪ್ರಸನ್ನತೆಗಾಗಿ.
ಎಲ್ಲರೊಂದಿಗೆ ಕೂಡಿ ಬಾಳುವುದಕ್ಕಾಗಿ.
ಹಿಂದಿನವರ ಚರಿತ್ರೆ-ಇತಿಹಾಸ ತಿಳಿಯಲು ಓದಿರಿ.”

ಈ ಮಾತುಗಳಲ್ಲಿ ಹಾನಗಲ್ಲ ಶ್ರೀಗಳ ಶಿಕ್ಷಣತತ್ವದ ಸಂಪೂರ್ಣ ಸಾರ ಅಡಗಿದೆ. ಅವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ ಕೇವಲ ಉದ್ಯೋಗದ ಸಾಧನವಲ್ಲ; ಅದು ಆತ್ಮಜಾಗೃತಿ, ಸಾಮಾಜಿಕ ಸಮಾನತೆ ಮತ್ತು ಮಾನವೀಯತೆಯ ದಾರಿ. ವಿದ್ಯೆ ಮನುಷ್ಯನನ್ನು ಕೇವಲ ಬುದ್ಧಿವಂತನನ್ನಾಗಿಸುವುದಿಲ್ಲ; ಅವನನ್ನು ಸಂಸ್ಕೃತಿಯುತ, ಸಹಬಾಳ್ವೆಯುತ ಮತ್ತು ಇತಿಹಾಸಜ್ಞನನ್ನಾಗಿಸುತ್ತದೆ ಎಂಬ ಅರಿವು ಅವರ ಚಿಂತನೆಯ ಕೇಂದ್ರವಾಗಿತ್ತು.

ಇಂದು ಮಹಿಳಾ ಶಿಕ್ಷಣವನ್ನು ನಾವು ಸಾಮಾನ್ಯ ಹಕ್ಕಾಗಿ ಕಾಣುತ್ತಿರುವಾಗ, ಅದರ ಹಿಂದೆ ಹಿರೇಕೆರೂರಿನ ಓಣಿ-ಓಣಿಗಳಲ್ಲಿ ನಡೆದು, ಮನೆ ಮನೆಗೆ ತೆರಳಿ, ಸಮಾಜದ ನಿಂದನೆ ಮತ್ತು ಹಾಸ್ಯವನ್ನು ಸಹಿಸಿಕೊಂಡು ಹೆಣ್ಣುಮಕ್ಕಳ ಕೈಗೆ ಅಕ್ಷರದ ಬೆಳಕು ಕೊಟ್ಟ ಮಹನೀಯರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ.

ಇತಿಹಾಸವನ್ನು ಕೇವಲ ರಾಜರು ಮತ್ತು ಯುದ್ಧಗಳು ನಿರ್ಮಿಸುವುದಿಲ್ಲ; ಸಮಾಜದ ಮೌನ ಅಂಧಕಾರದಲ್ಲಿ ಒಂದು ದೀಪ ಹಚ್ಚುವ ಮಹಾತ್ಮರು ನಿರ್ಮಿಸುತ್ತಾರೆ. ಹಿರೇಕೆರೂರಿನ ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆ ಅಂಥ ದೀಪಗಳಲ್ಲಿ ಒಂದು. ಆ ದೀಪ ಹಚ್ಚಿದ ಕೈ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಅವರದು ಎಂಬುದು ಉತ್ತರ ಕರ್ನಾಟಕದ ಸಾಮಾಜಿಕ ಇತಿಹಾಸದಲ್ಲಿ ಚಿರಸ್ಮರಣೀಯ ಸತ್ಯ.

ಆ ಏಳು ಬಾಲಕಿಯರ ಹೆಜ್ಜೆಗುರುತುಗಳು ಇಂದು ಸಾವಿರಾರು ಮಹಿಳೆಯರ ಶಿಕ್ಷಣಯಾತ್ರೆಯ ಮೂಲಸ್ಪಂದನವಾಗಿ ಉಳಿದಿವೆ.

ಅಕ್ಷರದಾಸೋಹಿಗಳು ಮತ್ತು ಮೊದಲ ವಿದ್ಯಾರ್ಥಿನಿಯರ ಸ್ಮೃತಿಗಳು

(ಮೊದಲ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಶ್ರೀ ವೇ. ಪಂಡಿತ ವೀರಭದ್ರಶಾಸ್ತ್ರಿಗಳು.)

ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆಯ ಮೊದಲ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಶ್ರೀ ವೇ. ಪಂಡಿತ ವೀರಭದ್ರಶಾಸ್ತ್ರಿಗಳು. ಕಾಲವೆ ಹಳ್ಳಿಯವರಾದ ಅವರು ಆಚಾರನಿಷ್ಠರು, ವಚನಪ್ರವೀಣರು ಮತ್ತು ತ್ರಿಕಾಲ ಲಿಂಗಪೂಜಾನಿಷ್ಠರಾಗಿದ್ದರು. ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಅವರ ಪರಮಶಿಷ್ಯರಾಗಿದ್ದ ವೀರಭದ್ರಶಾಸ್ತ್ರಿಗಳು, ಶಿಕ್ಷಣವನ್ನು ಕೇವಲ ಉದ್ಯೋಗವಲ್ಲ — ಅಕ್ಷರದಾಸೋಹವೆಂದು ಕಂಡವರು. ಶಾಲೆಯ ಆರಂಭಿಕ ದಿನಗಳಲ್ಲಿ ಶಿಕ್ಷಕರಾಗಿ ಅವರು ಅಪಾರ ಶ್ರಮವಹಿಸಿದ್ದರು. ಅವರ ಕುಟುಂಬದವರು ಇಂದಿಗೂ ರಾಣೆಬೆನ್ನೂರಿನಲ್ಲಿ ನೆಲೆಸಿದ್ದು, ಅವರ ಮೊಮ್ಮಕ್ಕಳಾದ ಶ್ರೀ ಎಂ. ಎಸ್. ಹಿರೇಮಠ ಅವರು ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ ಎಂಬುದು ಈ ಇತಿಹಾಸದ ಜೀವಂತ ಕೊಂಡಿಯಂತಿದೆ.

ಹಾಲಮ್ಮ ತಾಯಿಯವರ ಸ್ಮೃತಿಗಳು

(ಶರಣೆ ಹಾಲಮ್ಮ ಕರದಳ್ಳಿ ಪ್ರಥಮ ವಿಧ್ಯಾರ್ಥಿನಿ)

ಈ ಶಾಲೆಯಲ್ಲಿ ಶಿಕ್ಷಣ ಪಡೆದವರಲ್ಲಿ ಹಿರೇಕೆರೂರಿನ ಕರದಳ್ಳಿ ಗುರುಪಾದಪ್ಪನವರ ಪತ್ನಿ ಹಾಲಮ್ಮ ತಾಯಿಯವರ ಸ್ಮರಣೆ ವಿಶೇಷ ಮಹತ್ವದ್ದು. ಶಿಕಾರಿಪುರದಲ್ಲಿ ಜನಿಸಿದ ಅವರು, ಹಳೆಪಟ್ಟಣಶೆಟ್ಟರ ಹಾಲಪ್ಪನವರ ಪುತ್ರಿ. ಬಾಲ್ಯವನ್ನು ಹಿರೇಕೆರೂರಿನಲ್ಲೇ ಕಳೆದ ಅವರು, “ನಾನು ಪ್ರಾಥಮಿಕ ಶಿಕ್ಷಣವನ್ನು ಹಿರೇಕೆರೂರಿನ ಅಕ್ಕಮಹಾದೇವಿ ಪಾಠಶಾಲೆಯಲ್ಲಿಯೇ ಓದಿದ್ದೇನೆ” ಎಂದು ಅಪಾರ ಅಭಿಮಾನದಿಂದ ಹೇಳುತ್ತಿದ್ದರು.

ಶಿಕ್ಷಣವು ಅವರ ಬದುಕಿನಲ್ಲಿ ಕೇವಲ ಅಕ್ಷರಜ್ಞಾನವಾಗಿಯೇ ಉಳಿಯಲಿಲ್ಲ. ನಂತರ ಅವರು ಮಠಗಳಲ್ಲಿ ಧಾರ್ಮಿಕ ಪ್ರವಚನ ಮಾಡುತ್ತಾ, ಕಪನಳ್ಳಿ ಮಂದಿರ ಮತ್ತು ಹಾವೇರಿ ಶ್ರೀ ಹುಕ್ಕೇರಿ ಮಠದ ಶಿವಾನುಭವ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಆ ಕಾಲಘಟ್ಟದಲ್ಲಿ ಒಬ್ಬ ಮಹಿಳೆ ಸಾರ್ವಜನಿಕ ಧಾರ್ಮಿಕ ವೇದಿಕೆಗಳಲ್ಲಿ ಪ್ರವಚನಕಾರಳಾಗಿ ಕಾಣಿಸಿಕೊಳ್ಳುವುದು, ಹಾನಗಲ್ಲ ಶ್ರೀಗಳು ಬಿತ್ತಿದ ಮಹಿಳಾ ಶಿಕ್ಷಣದ ಬೀಜ ಎಷ್ಟು ಆಳವಾಗಿ ಬೆಳೆದಿತೆಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.

ಹಾಲಮ್ಮ ತಾಯಿಯವರು ಶಾಲೆಯಲ್ಲಿ ಕಲಿತಿದ್ದಾಗಿ ನೆನಪಿಸಿಕೊಳ್ಳುತ್ತಿದ್ದ ಪದ್ಯವೂ ಆ ಕಾಲದ ಶಿಕ್ಷಣದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ:

ಹೊಸ್ತಿಲೊಣೆಕೊರಳುಗಳ ಮೇಲೆ ಕೂಡ್ರುವನ |
ಮಸ್ತಕವನೆರಡು ಕೈಗಳಿಂದ ತುರಸಿಕೊಂಬವನ |
ವಿಸ್ತರದ ಜೂಜಿಗೆಳಸುವವನ |
ಸಾಧಿಸಿ ಪರರ ವಸ್ತುಗಳ ಕಳಹುವವನ |
ಉದಯಾಸ್ತ ಕಾಲದೊಳು ನಿದ್ರೆಗೈಯ್ಯುವವನ |
ನಿಂತು ನಿರ್ಗುಡಿವವನ |
ಬಹುಭಕ್ಷಕನ ಲಕ್ಷ್ಮೀ ತೊಲಗದೆ ಮಾಣ್ಬಳೆ ?

ಈ ಪದ್ಯ ಕೇವಲ ಪಾಠಶಾಲೆಯ ಪಾಠವಲ್ಲ; ಶಿಸ್ತು, ಸಂಯಮ ಮತ್ತು ನೈತಿಕ ಬದುಕಿನ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಶಿಕ್ಷಣಪದ್ಧತಿಯ ಪ್ರತೀಕವಾಗಿದೆ.

“ಮರಿ ಕಲ್ಯಾಣವಾಗಿದೆ”

ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆಯ ಪ್ರಗತಿಯನ್ನು ಕಂಡು ಅನೇಕ ಮಹನೀಯರು ಸಂತೋಷ ವ್ಯಕ್ತಪಡಿಸಿದ್ದರು. ಧಾರವಾಡದ ಶ್ರೀಮುರಘಾಮಠದ ಪೂಜ್ಯ ತ್ರಿವಿಧದಾಸೋಹಮೂರ್ತಿ ಶ್ರೀ ಮ.ನಿ.ಪ್ರ. ಮೃತ್ಯುಂಜಯ ಅಪ್ಪಗಳು ಶಾಲೆಗೆ ಆಗಮಿಸಿದ್ದ ಸಂದರ್ಭದಲ್ಲಿ, ಎಪ್ಪತ್ತು ಬಾಲಕಿಯರು ಒಟ್ಟಾಗಿ ವಚನಗಾನ ಮಾಡುತ್ತಿದ್ದ ದೃಶ್ಯವನ್ನು ನೋಡಿ ಆನಂದಭರಿತರಾಗಿ,

“ಹಿರೇಕೆರೂರ ಶ್ರೀ ಕುಮಾರೇಶನ ದಯದಿಂದ ಮರಿ ಕಲ್ಯಾಣವಾಗಿದೆ”

ಎಂದು ಉದ್ಗರಿಸಿದ್ದನ್ನು ಹಾಲಮ್ಮ ತಾಯಿಯವರು ಸ್ಮರಿಸಿಕೊಳ್ಳುತ್ತಿದ್ದರು.

ಈ ಒಂದು ಮಾತಿನಲ್ಲೇ ಆ ಕಾಲದ ಸಾಮಾಜಿಕ ಪರಿವರ್ತನೆಯ ಆಶ್ಚರ್ಯ ಮತ್ತು ಸಂತೋಷ ಅಡಗಿದೆ. ಹೆಣ್ಣುಮಕ್ಕಳು ಸಾರ್ವಜನಿಕವಾಗಿ ವಚನ ಹಾಡಿ, ಶಿಕ್ಷಣ ಪಡೆದು, ಧಾರ್ಮಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ದೃಶ್ಯ ಆ ಕಾಲಕ್ಕೆ ನಿಜಕ್ಕೂ ಹೊಸ ಯುಗದ ಆರಂಭವಾಗಿತ್ತು.

ಅಕ್ಕಮಹಾದೇವಿ ಹೆಣ್ಣುಮಕ್ಕಳ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂದರ್ಶನ ಮಾಡುತ್ತಿರುವ ಶ್ರೀ ಶಿವಲಿಂಗ ಶಾಸ್ತ್ರಿಗಳು ಹಿರೇಮಠ ಗುಡೂರು .

ಶ್ರೀ ಶಿವಲಿಂಗ ಶಾಸ್ತ್ರಿಗಳು ಹಿರೇಮಠ ಗುಡೂರು ಅವರು ಹಿರೆಕೆರೂರಿನ ಶಾಲೆಯ ಬಗ್ಗೆ ತಮ್ಮ “ಪರಾಪತೆ ಪರಂಪರೆಗೆ ಹೊಸ ಮುನ್ನುಡಿ” ಎಂಬ ಪುಸ್ತಕದಲ್ಲಿ ಬರೆದಿರುವರು.

ದಾಖಲೆ : ಮೊದಲ ವಿದ್ಯಾರ್ಥಿನಿಯರು

ಇಂದು ಲಭ್ಯವಾಗಿರುವ ಮೌಖಿಕ ಸ್ಮರಣೆಗಳು ಮತ್ತು ಸ್ಥಳೀಯ ಸಂಗ್ರಹಗಳ ಆಧಾರದ ಮೇಲೆ, ಹಿರೇಕೆರೂರಿನ ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆಯಲ್ಲಿ ಶಿಕ್ಷಣ ಪಡೆದ ಕೆಲವು ವಿದ್ಯಾರ್ಥಿನಿಯರ ಹೆಸರುಗಳು ಹೀಗಿವೆ:

೧. ಶೆಟ್ಟರ ಗಂಗಮ್ಮ
೨. ಶೆಟ್ಟರ ಗುರುಶಾಂತಮ್ಮ
೩. ಗೌರಮ್ಮ ಗುರುಪಾದಪ್ಪ ಹಾದರಳ್ಳಿ
೪. ಗಂಗಮ್ಮ
೫. ಚನ್ನಬಸಮ್ಮಾ (ಶಿಕಾರಿಪುರ)
೬. ಗಿರಿಜಮ್ಮಾ ಕೆರೂಡಿ (ಹಂಸಭಾವಿ)
೭. ಹಳಕಟ್ಟಿ ಬಸವಣೆಮ್ಮಾ
೮. ಕಲಬುರ್ಗಿ ತಿಪ್ಪಮ್ಮಾ
೯. ನೀಲಮ್ಮಾವಾಲಿ
೧೦. ಉಂಕಿ ಗಂಗಮ್ಮ (ಗಂಡ: ಶೇಕಪ್ಪ)
೧೧. ಶೆಟ್ಟರ ಪುಟ್ಟಮ್ಮಾ
೧೨. ಶಿವಮ್ಮಾ ಶೆಟ್ಟರು
೧೩. ಕಲಬುರ್ಗಿ ಮಾದೇವಕ್ಕಾ
೧೪. ಕಲಬುರ್ಗಿ ಸರೂಜಮ್ಮಾ
೧೫. ಕಲ್ಯಾಣಮ್ಮಾ ಕಲಬುರ್ಗಿ
೧೬. ಗುರುಬಸಮ್ಮಾ ಕಲಬುರ್ಗಿ

(ಈ ಹೆಸರುಗಳನ್ನು ಹಿರೇಕೆರೂರು, ಹಂಸಭಾವಿ ಮತ್ತು ಶಿಕಾರಿಪುರ ಪ್ರದೇಶಗಳಲ್ಲಿ ಸಂಗ್ರಹಿಸಲಾಗಿದೆ.)

ಈ ಹೆಸರುಗಳು ಕೇವಲ ವಿದ್ಯಾರ್ಥಿನಿಯರ ಪಟ್ಟಿಯಲ್ಲ; ಉತ್ತರ ಕರ್ನಾಟಕದಲ್ಲಿ ಮಹಿಳಾ ಶಿಕ್ಷಣದ ಮೊದಲ ಹೆಜ್ಜೆಗಳನ್ನು ಇಟ್ಟ ಪೀಳಿಗೆಯ ಐತಿಹಾಸಿಕ ಗುರುತುಗಳು. ಸಮಾಜದ ವಿರೋಧ, ಬಡತನ ಮತ್ತು ಸಂಪ್ರದಾಯದ ಕಟ್ಟಳೆಗಳ ನಡುವೆಯೂ ಅಕ್ಷರದ ಬೆಳಕಿನತ್ತ ನಡೆದ ಆ ಹೆಜ್ಜೆಗಳ ಪ್ರತಿಧ್ವನಿ ಇಂದು ಕೂಡ ಕೇಳಿಸುತ್ತಲೇ ಇದೆ.

ಉಪಸಂಹಾರ

ಹಿರೇಕೆರೂರಿನ ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆಯ ಇತಿಹಾಸವು ಕೇವಲ ಒಂದು ಶಾಲೆಯ ಇತಿಹಾಸವಲ್ಲ; ಅದು ಉತ್ತರ ಕರ್ನಾಟಕದ ಸಾಮಾಜಿಕ ಜಾಗೃತಿಯ ಇತಿಹಾಸ. ಸಮಾಜದ ವಿರೋಧ, ಮೂಢನಂಬಿಕೆ, ಬಡತನ ಮತ್ತು ಸಂಪ್ರದಾಯದ ಕಠಿಣ ಗೋಡೆಗಳ ನಡುವೆ, ಹೆಣ್ಣುಮಕ್ಕಳ ಕೈಗೆ ಅಕ್ಷರದ ಬೆಳಕನ್ನು ಕೊಡುವ ಧೈರ್ಯ ಮಾಡಿದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಅವರ ಕಾರ್ಯ ನಿಜಕ್ಕೂ ಯುಗಪ್ರವರ್ತಕವಾಗಿತ್ತು.

ಇಂದು ಮಹಿಳಾ ಶಿಕ್ಷಣ, ಮಹಿಳಾ ಹಕ್ಕು, ಸ್ತ್ರೀಸ್ವಾತಂತ್ರ್ಯ ಎಂಬ ಪದಗಳು ಸಾಮಾನ್ಯ ಚರ್ಚೆಗಳಾಗಿರಬಹುದು; ಆದರೆ ೧೯೦೮ರಲ್ಲಿ ಹಿರೇಕೆರೂರಿನ ಓಣಿ-ಓಣಿಗಳಲ್ಲಿ ನಡೆದು, ಮನೆ ಮನೆಗೆ ತೆರಳಿ, “ಮಗಳು ಓದಿದರೆ ಸಮಾಜ ಬೆಳಗುತ್ತದೆ” ಎಂದು ಜನರನ್ನು ಮನವೊಲಿಸುವುದು ಅಸಾಧಾರಣ ಸಾಹಸವಾಗಿತ್ತು. “ಗಡಿಗಿ ತೊಳೆಯೊ ಮೂಳಿ, ನಿನಗ್ಯಾಕಬೇಕು ಸಾಲಿ?” ಎಂದು ಸಮಾಜ ಹಾಸ್ಯ ಮಾಡಿದ ಕಾಲದಲ್ಲಿ, ಕೇವಲ ಏಳು ಬಾಲಕಿಯರೊಂದಿಗೆ ಆರಂಭವಾದ ಆ ಶಾಲೆ, ಎರಡು ವರ್ಷಗಳಲ್ಲಿ ಎಪ್ಪತ್ತು ವಿದ್ಯಾರ್ಥಿನಿಯರನ್ನು ಹೊಂದಿದ್ದು ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಷ್ಟೇ ಅಲ್ಲ — ಅದು ಸಮಾಜದ ಮನಸ್ಸು ನಿಧಾನವಾಗಿ ಬದಲಾಗುತ್ತಿದ್ದ ಮಹತ್ವದ ಸಂಕೇತ.

ಈ ಶಾಲೆ ಹೆಣ್ಣುಮಕ್ಕಳಿಗೆ ಅಕ್ಷರಜ್ಞಾನವನ್ನಷ್ಟೇ ನೀಡಲಿಲ್ಲ; ಆತ್ಮಗೌರವ, ಚಿಂತನೆ ಮತ್ತು ಸಾರ್ವಜನಿಕ ಬದುಕಿನಲ್ಲಿ ಭಾಗವಹಿಸುವ ಧೈರ್ಯವನ್ನೂ ನೀಡಿತು. ಹಾಲಮ್ಮ ತಾಯಿಯವರಂತಹ ಮಹಿಳೆಯರು ನಂತರ ಧಾರ್ಮಿಕ ಪ್ರವಚನಕಾರರಾಗಿ ಹೊರಹೊಮ್ಮಿರುವುದು, ಹಾನಗಲ್ಲ ಶ್ರೀಗಳು ಬಿತ್ತಿದ ಬೀಜ ಹೇಗೆ ಸಮಾಜದೊಳಗೆ ಫಲವತ್ತಾಗಿ ಬೆಳೆದಿತೆಂಬುದಕ್ಕೆ ಜೀವಂತ ಸಾಕ್ಷಿ.

ಇತಿಹಾಸವು ಕೆಲವೊಮ್ಮೆ ದೊಡ್ಡ ಅರಮನೆಗಳಲ್ಲಿ ಬರೆಯಲ್ಪಡುವುದಿಲ್ಲ; ದೇವಾಲಯದ ಮಹಡಿಯಲ್ಲಿ, ಮಣ್ಣಿನ ಓಣಿಗಳಲ್ಲಿ, ಅಕ್ಷರ ಕಲಿಯಲು ಬಂದ ಏಳು ಬಾಲಕಿಯರ ಹೆಜ್ಜೆಗುರುತುಗಳಲ್ಲಿ ಬರೆಯಲ್ಪಡುತ್ತದೆ. ಹಿರೇಕೆರೂರಿನ ಅಕ್ಕಮಹಾದೇವಿ ಹೆಣ್ಣುಮಕ್ಕಳ ಪಾಠಶಾಲೆ ಅಂಥ ಇತಿಹಾಸದ ಒಂದು ಅಮೂಲ್ಯ ಅಧ್ಯಾಯ.

ಇಂದು ಉತ್ತರ ಕರ್ನಾಟಕದ ಸಾವಿರಾರು ಮಹಿಳೆಯರ ಶಿಕ್ಷಣಯಾತ್ರೆಯ ಹಿಂದೆ, ಸಮಾಜದ ನಿಂದನೆಗಳನ್ನು ಲೆಕ್ಕಿಸದೆ ಹೆಣ್ಣುಮಕ್ಕಳ ಕೈಗೆ ಮೊದಲ ಬಾರಿಗೆ ಪುಸ್ತಕ ಕೊಟ್ಟ ಆ ಮಹನೀಯ ಸಂನ್ಯಾಸಿಯ ಕರುಣೆಯ ಸ್ಪರ್ಶ ಅಡಗಿದೆ. ಆ ಕಾರಣಕ್ಕೇ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಹೆಸರು ಕೇವಲ ಒಂದು ಮಠದ ಇತಿಹಾಸದಲ್ಲಲ್ಲ, ಮಹಿಳಾ ಶಿಕ್ಷಣದ ಸಾಮಾಜಿಕ ಪುನರುಜ್ಜೀವನದ ಇತಿಹಾಸದಲ್ಲಿಯೂ ಶಾಶ್ವತವಾಗಿ ಬೆಳಗುತ್ತದೆ.

“ಹಿರೇಕೆರೂರಿನ ಆ ದೇವರ ಗುಡಿಯ ಮಹಡಿಯಲ್ಲಿ ಆರಂಭವಾದ ಆ ಮೌನ ಪಾಠಶಾಲೆಯ ಪ್ರತಿಧ್ವನಿ, ಇಂದು ಉತ್ತರ ಕರ್ನಾಟಕದ ಸಾವಿರಾರು ಮಹಿಳೆಯರ ಶಿಕ್ಷಣಯಾತ್ರೆಯಲ್ಲಿ ಇನ್ನೂ ಕೇಳಿಸುತ್ತಲೇ ಇದೆ.”

ಗ್ರಂಥಋಣ

ಈ ಲೇಖನ ರಚನೆಗೆ ನೆರವಾದ ಮಾಹಿತಿ, ಮೌಖಿಕ ಸ್ಮರಣೆಗಳು ಮತ್ತು ಐತಿಹಾಸಿಕ ಉಲ್ಲೇಖಗಳಿಗಾಗಿ ಕೆಳಗಿನ ಮಹನೀಯರಿಗೆ ಕೃತಜ್ಞತೆಗಳು:

  • “ಬೆಳಗು” ಸ್ಮರಣ ಸಂಚಿಕೆ
  • “ಪರಾಪತೆ ಪರಂಪರೆಗೆ ಹೊಸ ಮುನ್ನುಡಿ”
    ಲೇಖಕರು: ಶ್ರೀ ಶಿವಲಿಂಗ ಶಾಸ್ತ್ರಿ ಹಿರೇಮಠ
    ಪ್ರಕಾಶಕರು: ಶ್ರೀ ಅನ್ನದಾನೀಶ್ವರಸ್ವಾಮಿ ಹಿರೇಮಠ, ಗುಡೂರು

ಇದಲ್ಲದೆ, ಹಿರೇಕೆರೂರು, ಹಂಸಭಾವಿ ಮತ್ತು ಶಿಕಾರಿಪುರ ಪ್ರದೇಶಗಳಲ್ಲಿ ಸಂಗ್ರಹಿಸಲಾದ ಮೌಖಿಕ ಸ್ಮರಣೆಗಳು, ವಿಶೇಷವಾಗಿ ಶತಾಯುಷಿ ಪರಗಿ ಬಸಮ್ಮ ತಾಯಿಯವರು ಹಾಗೂ ಹಾಲಮ್ಮ ತಾಯಿಯವರು ಹಂಚಿಕೊಂಡ ನೆನಪುಗಳು ಈ ಲೇಖನಕ್ಕೆ ಜೀವಂತ ಆಧಾರವಾಗಿವೆ.

**********

ಮಹನೀಯರ ಸ್ಮೃತಿಗಳಲ್ಲಿ ಹಾನಗಲ್ಲ ಶ್ರೀಗಳ ಜೀವಂತ ರೂಪ

ಪರಮಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳನ್ನು ನಾನು ಕಂಡಿಲ್ಲ. ಅವರ ಧ್ವನಿಯನ್ನು ಕೇಳಿಲ್ಲ. ಅವರ ನಡೆ, ಅವರ ಕರುಣೆಯ ದೃಷ್ಟಿ, ಅವರ ಸಾನ್ನಿಧ್ಯದ ಸ್ಪರ್ಶ — ಯಾವುದೂ ನನ್ನ ಅನುಭವದ ಭಾಗವಾಗಿಲ್ಲ. ಅವರು ಭೌತಿಕವಾಗಿ ಅಗಲಿದ ಸುಮಾರು ಮೂವತ್ತೊಂಬತ್ತು ವರ್ಷಗಳ ನಂತರ ಈ ಭೂಮಿಯಲ್ಲಿ ಜನಿಸಿದ ನಾನು, ಅವರನ್ನು ನೋಡುವ ಆಸೆಯನ್ನು ಇತಿಹಾಸದ ಪುಟಗಳ ನಡುವೆ ಹುಡುಕಿಕೊಳ್ಳಬೇಕಾಯಿತು. ಹಿರಿಯರ ಸ್ಮರಣಗಳಲ್ಲಿ, ಭಕ್ತರ ಭಾವನೆಯಲ್ಲಿ, ಸಾಹಿತ್ಯದ ಸಾಲುಗಳಲ್ಲಿ ಮತ್ತು ಕಾಲದ ಮಡಿಲಲ್ಲಿ ಉಳಿದಿರುವ ಅವರ ಹೆಜ್ಜೆ ಗುರುತುಗಳಲ್ಲಿ ಅವರನ್ನು ಕಾಣಲು ಪ್ರಯತ್ನಿಸುತ್ತಿದ್ದೇನೆ.

ಇತ್ತೀಚೆಗೆ ಕೀರ್ತನಕೇಸರಿ, ಕವಿರತ್ನ ಬಿ. ಶಿವಮೂರ್ತಿ ಶಾಸ್ತ್ರಿಗಳು ಹುಲ್ಕಂಟೆಮಠ ತುಮಕೂರು ಅವರು ಶ್ರೀ ಫ.ಗು. ಹಳಕಟ್ಟಿಯವರ ಶಿವಾನುಭವ ಪತ್ರಿಕೆಯಲ್ಲಿ ಬರೆದಿದ್ದ “ಶ್ರೀ ಹಾನಗಲ್ಲ ಶಿವಯೋಗಿಗಳೂ ಲಿಂಗವಂತ ಸಂಸ್ಕೃತಿಯೂ” ಎಂಬ ಅಪೂರ್ವ ಲೇಖನವನ್ನು ಓದುವ ಅವಕಾಶ ದೊರೆಯಿತು. ಆ ಲೇಖನದ ಕೆಲವು ಸಾಲುಗಳು ನನ್ನ ಅಂತರಂಗವನ್ನು ಆಳವಾಗಿ ಸ್ಪರ್ಶಿಸಿದವು. ಸಾಮಾನ್ಯವಾಗಿ ನಾವು ಮಹನೀಯರನ್ನು ಅವರ ಸ್ಥಾಪನೆಗಳು, ಸಂಸ್ಥೆಗಳು ಅಥವಾ ಹೊರಗಿನ ಸಾಧನೆಗಳಿಂದ ಗುರುತಿಸುತ್ತೇವೆ. ಆದರೆ ಶಾಸ್ತ್ರಿಗಳು ಚಿತ್ರಿಸಿರುವ ಹಾನಗಲ್ಲ ಶ್ರೀಗಳವರು ಅದಕ್ಕಿಂತ ಬಹಳ ಎತ್ತರದವರು. ಅವರು ಕೇವಲ ವೀರಶೈವ ಮಹಾಸಭೆಯ ಸಂಸ್ಥಾಪಕರಲ್ಲ; ಕೇವಲ ಶಿವಯೋಗ ಮಂದಿರಗಳ ನಿರ್ಮಾಪಕರಲ್ಲ; ಅವರು ಒಂದು ಸಂಸ್ಕೃತಿಯ ಜೀವಂತ ರೂಪಕ.

“ಲಿಂಗವಂತ ಸಂಸ್ಕೃತಿಯ ಪುತ್ಥಳಿ” ಎಂಬ ಶಾಸ್ತ್ರಿಗಳ ಒಂದು ಮಾತೇ ಹಾನಗಲ್ಲ ಶ್ರೀಗಳ ಮಹತ್ವವನ್ನು ಸಾರಿಬಿಡುತ್ತದೆ. ಸಮಾಜದ ಸುಖ–ದುಃಖಗಳನ್ನು ತಮ್ಮವೆಂದು ಭಾವಿಸಿದ, ಸಮಾಜದ ಅವಮಾನದಲ್ಲಿ ತಾವೇ ನೋವಾದ, ಸಮಾಜದ ಗೌರವದಲ್ಲಿ ತಾವೇ ಅರಳಿದ ಆ ವ್ಯಕ್ತಿತ್ವದ ಅಗಾಧತೆಯನ್ನು ಕಲ್ಪಿಸಿಕೊಳ್ಳುವಷ್ಟರಲ್ಲೇ ಮನಸ್ಸು ನತವಾಗುತ್ತದೆ. ತಮ್ಮ ಹೆಸರಿಗೆ ಮಠದ ಪೀಠವಿದ್ದರೂ, ಅವರ ಹೃದಯದಲ್ಲಿ ನೆಲೆಸಿದ್ದದ್ದು ಸಮಗ್ರ ವೀರಶೈವ ಸಮಾಜದ ಚಿಂತನೆ. ಲಿಂಗವಂತ ಸಮಾಜ ಮಂಗಳಕರವಾಗಿ ಬೆಳಗಬೇಕು, ವೀರಶೈವ ಸಿದ್ಧಾಂತವು ವಿಶ್ವಮಾನ್ಯವಾಗಬೇಕು, ನಮ್ಮ ಕವಿಗಳು–ಪಂಡಿತರು–ಕಲಾವಿದರು ಜಗತ್ತಿನ ನಡುವೆ ತಲೆ ಎತ್ತಿ ನಿಲ್ಲಬೇಕು ಎಂಬ ದಿವ್ಯ ಹಂಬಲವೇ ಅವರ ಉಸಿರಾಗಿತ್ತು.

ಅಂತಹ ಸಾಲುಗಳನ್ನು ಓದುತ್ತಿದ್ದಾಗ, ನನ್ನೊಳಗೆ ಒಂದು ವಿಚಿತ್ರ ಅನುಭವ ಮೂಡಿತು. ನಾನು ಓದುತ್ತಿದ್ದದ್ದು ಕೇವಲ ಒಂದು ಲೇಖನವಲ್ಲ; ಅದು ಒಬ್ಬ ಮಹಾಯೋಗಿಯ ಆತ್ಮದರ್ಶನದ ಕಿಟಕಿಯಂತಿತ್ತು. ಪದಗಳ ನಡುವೆ ಚರಿತ್ರೆ ಜೀವಂತವಾಗುತ್ತಿತ್ತು. ಇತಿಹಾಸದ ಮಂಜಿನಾಚೆಯಿಂದ ಒಂದು ಕರುಣಾಮಯ, ಜಾಗೃತ, ತಪೋಮಯ ಮುಖ ನನ್ನತ್ತ ನೋಡುವಂತಾಯಿತು. ಆ ಕ್ಷಣದಲ್ಲಿ ನನಗೆ ಅರಿವಾಯಿತು — ಕೆಲವರು ದೇಹದಿಂದ ಅಗಲುತ್ತಾರೆ, ಆದರೆ ಸಂಸ್ಕೃತಿಯೊಳಗೆ ಶಾಶ್ವತವಾಗಿ ಉಳಿದುಬಿಡುತ್ತಾರೆ. ಹಾನಗಲ್ಲ ಶ್ರೀಗಳು ಅಂತಹ ಅಮರ ಚೈತನ್ಯಗಳಲ್ಲಿ ಒಬ್ಬರು.

ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಚರಿತ್ರೆ ಎಷ್ಟು ಮಹತ್ತಾದುದೋ, ಅಷ್ಟೇ ವಿಚಿತ್ರವೂ ಹೌದು. ಸಾಮಾನ್ಯ ಜೀವನದ ಮಣ್ಣಿನಿಂದ ಎದ್ದು, ಅಸಾಮಾನ್ಯವಾಗಿ ರೂಪುಗೊಂಡ ಮಹಾಪುರುಷರ ಜೀವನದಲ್ಲಿ ಕಾಣುವ ಅದ್ಭುತ ಪರಿವರ್ತನೆ ಅವರಲ್ಲೂ ಕಾಣಿಸುತ್ತದೆ. ಒಮ್ಮೆ ಶಾಲಾ ಮಾಸ್ತರರಾಗಿದ್ದವರು ಮುಂದೆ ಶಿವಯೋಗಿಗಳಾದರು. ಅವರು ಪರಂಪರೆಯ ಅರ್ಥದಲ್ಲಿ ಮಹಾಪಂಡಿತರಲ್ಲ; ಆದರೆ ಪಂಡಿತರ ಪೀಳಿಗೆಯನ್ನೇ ರೂಪಿಸಿದ ಮಹಾಗುರುಗಳಾದರು. ಅವರು ಕವಿಗಳಲ್ಲ; ಆದರೆ ಅನೇಕ ಮಹಾಕವಿಗಳ ಕಲಮಿಗೆ ಪ್ರೇರಣೆಯಾದರು. ಸಂಸ್ಕೃತ ಪಾಠಶಾಲೆಗಳ ಉತ್ಪನ್ನರಲ್ಲ; ಆದರೆ ದೇಶದ ಮಧ್ಯೆ ಸಂಸ್ಕೃತ ಭಾಷೆಯ ಪುನರುಜ್ಜೀವನಕ್ಕೆ ಹೋರಾಡಿದ ಮಹೋನ್ನತ ಚೇತನರಾದರು.

ಅವರ ಬದುಕಿನ  ಅತ್ಯಂತ ಅಪೂರ್ವ ಅಂಶವೆಂದರೆ — ಅವರು ಕೀರ್ತಿಯನ್ನು ಬೆನ್ನಟ್ಟಲಿಲ್ಲ. ಕೀರ್ತಿಯನ್ನೇ ತಿರಸ್ಕರಿಸಿದರು. ಆದರೆ ಕೀರ್ತಿಯೇ ಅವರನ್ನು ಹುಡುಕಿಕೊಂಡು ಬಂತು. ಅವರಿಗೆ ವೈಯಕ್ತಿಕ ಸ್ವಾರ್ಥವೇ ಇರಲಿಲ್ಲ; ಆದರೆ “ನನ್ನ ಸಮಾಜ ಎದ್ದು ನಿಲ್ಲಬೇಕು” ಎಂಬ ದಿವ್ಯ ಸ್ವಾರ್ಥ ಮಾತ್ರ ಅವರ ಉಸಿರಿನೊಳಗೆ ಕರಗಿಹೋಗಿತ್ತು. ಅವರು ವೈಭವದ ಪಲ್ಲಕ್ಕಿಗಳನ್ನು ಏರಿದವರಲ್ಲ; ಆದರೆ ಪಲ್ಲಕ್ಕಿಗಳಲ್ಲಿ ಸಾಗುತ್ತಿದ್ದ ಅಧಿಕಾರ ಮತ್ತು ಐಶ್ವರ್ಯವೇ ಅವರ ಸನ್ನಿಧಿಯಲ್ಲಿ ತಲೆಬಾಗದೆ ಇರಲಿಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಜೀವನವಲ್ಲ; ಒಂದು ಚಳವಳಿಯ ಜೀವಂತ ರೂಪಕ.

ಶಿವಮೂರ್ತಿ ಶಾಸ್ತ್ರಿಗಳು ಹಾನಗಲ್ಲ ಶ್ರೀಗಳ ಸಾಧನೆಯನ್ನು ವರ್ಣಿಸುವಾಗ, ವೀರಶೈವ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಮಹನೀಯರನ್ನು ಸ್ಮರಿಸುತ್ತಾರೆ — ಗ್ರಂಥಪ್ರಚಾರ ಮಾಡಿದವರು, ವಿದ್ಯಾಪ್ರಚಾರ ಮಾಡಿದವರು, ತತ್ವೋಪದೇಶ ಮಾಡಿದವರು, ಪಾಠಶಾಲೆಗಳನ್ನು ಕಟ್ಟಿದವರು, ಯೋಗವಿದ್ಯೆ ಬೋಧಿಸಿದವರು, ವಾದವಿವಾದಗಳಲ್ಲಿ ಸಮಾಜದ ಪರವಾಗಿ ನಿಂತವರು, ಸದಾಚಾರದ ಮಾರ್ಗ ತೋರಿದವರು, ಸಮಾಜ ಸಂಘಟನೆಯ ಕನಸು ಕಂಡವರು… ಆದರೆ ಈ ಎಲ್ಲ ಕ್ಷೇತ್ರಗಳನ್ನೂ ಒಗ್ಗೂಡಿಸಿಕೊಂಡ ಮಹಾತ್ಮರೆಂದರೆ ಶ್ರೀ ಕುಮಾರ ಶಿವಯೋಗಿಗಳು ಎಂದು ಅವರು ಉಲ್ಲೇಖಿಸುವಾಗ, ಓದುಗರ ಮನಸ್ಸು ನಿಶ್ಚಲವಾಗುತ್ತದೆ.

ಆ ಸಾಲುಗಳನ್ನು ನಾನು ಉಸಿರು ಬಿಗಿಹಿಡಿದು ಓದುತ್ತಿದ್ದೆ. ಪದಗಳ ಹಿಂದೆ ಒಂದು ಯುಗದ ಚಲನೆ ಕೇಳಿಸುತ್ತಿತ್ತು. ಶಾಸ್ತ್ರಿಗಳು ತಮ್ಮ ಕಾಲದಲ್ಲಿ ದಾಖಲಿಸಿದ ಸಾಧನೆಗಳಾಚೆಗೂ, ನನ್ನ ಕಣ್ಣೆದುರಿಗೆ ಇನ್ನಷ್ಟು ದೃಶ್ಯಗಳು ಜೀವಂತವಾದವು — ಗೋಶಾಲೆಗಳ ನಿರ್ಮಾಣ, ಸಂಗೀತ ಶಾಲೆಗಳ ಸ್ಥಾಪನೆ, ವಿಭೂತಿ ಕೇಂದ್ರಗಳು, ಆಯುರ್ವೇದ ಚಿಕಿತ್ಸಾ ಕೇಂದ್ರಗಳು, ಕೈಗಾರಿಕಾ ಪ್ರಯತ್ನಗಳು, ವ್ಯಾಪಾರ ಚಟುವಟಿಕೆಗಳು, ಆಧುನಿಕ ಕೃಷಿಯ ಪ್ರಯೋಗಗಳು… ಸಮಾಜದ ಬದುಕು ಯಾವ ಯಾವ ದಿಕ್ಕಿನಲ್ಲಿ ಚಲಿಸುತ್ತದೆಯೋ, ಆ ಎಲ್ಲ ದಿಕ್ಕುಗಳಲ್ಲಿಯೂ ಹಾನಗಲ್ಲ ಶ್ರೀಗಳ ಚಿಂತನೆ ತನ್ನ ಗುರುತು ಬಿಟ್ಟಿರುವಂತೆ ಭಾಸವಾಯಿತು.

ನಿಜವಾಗಿ ನೋಡಿದರೆ, ರಾಜಕೀಯ ಕ್ಷೇತ್ರವೊಂದನ್ನು ಹೊರತುಪಡಿಸಿ ಸಮಾಜಮುಖಿಯಾದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಅಳಿಸಲಾಗದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಶಿಕ್ಷಣದಿಂದ ಸಂಸ್ಕೃತಿ ತನಕ, ಧರ್ಮದಿಂದ ಆರೋಗ್ಯ ತನಕ, ಸಂಘಟನೆಯಿಂದ ಆತ್ಮೋನ್ನತಿ ತನಕ — ಅವರ ದೃಷ್ಟಿ ಹರಡದ ಕ್ಷೇತ್ರವೇ ಇಲ್ಲವೆನ್ನಿಸುತ್ತದೆ. ಅದಕ್ಕಾಗಿಯೇ ಅವರು ಕೇವಲ ಮಠಾಧೀಶರಾಗಿ ಉಳಿಯಲಿಲ್ಲ; ಒಂದು ಸಮುದಾಯದ ಜಾಗೃತ ಚೇತನವಾಗಿ, ಕಾಲವನ್ನು ಮೀರಿದ ಸ್ಮೃತಿಯಾಗಿ, ಇಂದಿಗೂ ಬದುಕಿರುವ ಮಹಾಪುರುಷರಾಗಿ ಉಳಿದುಬಿಟ್ಟಿದ್ದಾರೆ.

ಒಂದು ಕ್ಷಣ ನಾನು ಸ್ಥಬ್ಧನಾದೆ.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಈ ಭೌತಿಕ ಲೋಕದಿಂದ ಅಗಲಿ ತೊಂಬತ್ತೇಳು ವರ್ಷಗಳು ಕಳೆದಿವೆ. ಕಾಲದ ಗಾಳಿ ಎಷ್ಟೋ ನೆನಪುಗಳನ್ನು ಮಸುಕುಗೊಳಿಸಿದೆ. ಎಷ್ಟೋ ವ್ಯಕ್ತಿಗಳನ್ನು ಇತಿಹಾಸದ ಧೂಳಿನೊಳಗೆ ಮರೆಮಾಡಿದೆ. ಆದರೆ ಹಾನಗಲ್ಲ ಶ್ರೀಗಳ ವಿಷಯದಲ್ಲಿ ಅದೆಲ್ಲವೂ ವಿಫಲವಾದಂತಿದೆ. ಅವರ ಕೊಡುಗೆಗಳ ಪರಿಮಳ ಮಾತ್ರ ಇನ್ನೂ ನಿರಂತರವಾಗಿ ಹರಡುತ್ತಲೇ ಇದೆ. ಒಂದು ಯುಗ ಕಳೆದುಹೋದರೂ, ಅವರ ಇರುವಿಕೆಯ ಅನುಭವ ಇನ್ನೂ ಸಮಾಜದ ಮನಸ್ಸಿನೊಳಗೆ ಜೀವಂತವಾಗಿದೆ.

“ಹೇಗಿದ್ದಿರಬಹುದು ಪೂಜ್ಯರು?” — ಈ ಒಂದು ಪ್ರಶ್ನೆ ನನ್ನೊಳಗೆ ಅರ್ವಚನೀಯ ಕೌತುಕವಾಗಿ ಮೂಡಿತು.

ಕಾಣದ ವ್ಯಕ್ತಿಯನ್ನು ಕಾಣಬೇಕೆಂಬ ಹಂಬಲ, ಭೇಟಿಯಾಗದ ಮಹಾತ್ಮನ ಸಾನ್ನಿಧ್ಯವನ್ನು ಅನುಭವಿಸಬೇಕೆಂಬ ಒಳಚಿಲುಮೆ… ಅದು ಕೇವಲ ಕುತೂಹಲವಲ್ಲ; ಅದು ಮನಸ್ಸಿನ ಆಳದಲ್ಲಿ ನಿಧಾನವಾಗಿ ಹೊತ್ತಿ ಉರಿಯುವ ಒಂದು ತಪಸ್ಸಿನಂತೆ ಭಾಸವಾಗತೊಡಗಿತು.

ಆ ಕ್ಷಣದಲ್ಲಿ ಕನ್ನಡದ ಖ್ಯಾತ ಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರ ಅಮರ ಭಾವಗೀತೆಯ ಸಾಲುಗಳು ನೆನಪಾದವು — ಕಾಣದ ಕಡಲಿಗೆ ಹಂಬಲಿಸಿದೆ ಮನ…”

ಆ ಕವಿತೆ ಕೇವಲ ಒಂದು ಗೀತೆ ಅಲ್ಲ; ಅದು ಮಾನವನ ಆತ್ಮದೊಳಗಿನ ಶಾಶ್ವತ ಹುಡುಕಾಟದ ಪ್ರತಿಧ್ವನಿ. ಕಣ್ಣಿಗೆ ಕಾಣದ, ಕೈಗೆ ಸಿಗದ, ಆದರೆ ಮನಸ್ಸನ್ನು ನಿರಂತರವಾಗಿ ಕರೆಯುತ್ತಲೇ ಇರುವ ಒಂದು ಅಂತಿಮ ಸತ್ಯದ ಹುಡುಕಾಟ. ಆ “ಕಾಣದ ಕಡಲು” ಎಂದರೆ ಕೇವಲ ಸಮುದ್ರವಲ್ಲ; ಅದು ದೈವತ್ವ, ಶಾಂತಿ, ಆತ್ಮಸಾಕ್ಷಾತ್ಕಾರ, ಜೀವನದ ಅಂತಿಮ ಅರ್ಥ. ಅದರ ಮೊರೆತ ನಮ್ಮ ಕಿವಿಗೆ ಕೇಳಿಸದೇ ಇರಬಹುದು; ಆದರೆ ಅದರ ಸೆಳೆತ ನಮ್ಮ ಅಂತರಂಗವನ್ನು ಬಿಡುವುದಿಲ್ಲ.

ಹಾನಗಲ್ಲ ಶ್ರೀಗಳ ಬಗ್ಗೆ ನನ್ನೊಳಗೆ ಮೂಡಿದ ಆಕರ್ಷಣೆಯೂ ಅದೆ ರೀತಿಯದೇ.
ಅವರನ್ನು ನಾನು ಕಂಡಿಲ್ಲ. ಅವರ ಮಾತುಗಳನ್ನು ನೇರವಾಗಿ ಕೇಳಿಲ್ಲ. ಅವರ ನಡೆ, ಅವರ ನಗು, ಅವರ ಕರುಣೆಯ ಕಣ್ಣು — ಯಾವುದನ್ನೂ ಅನುಭವಿಸಿಲ್ಲ. ಆದರೂ, ಅವರನ್ನು ಕುರಿತು ಓದುತ್ತಾ ಹೋದಂತೆ, ಎಲ್ಲೋ ನನ್ನ ಅಂತರಂಗವನ್ನು ಮುಟ್ಟುತ್ತಿರುವ ಅನುಭವವಾಗುತ್ತದೆ. ಅದು ಒಂದು ದಿನದ ಕನಸಲ್ಲ; ಕ್ಷಣಿಕ ಭಾವೋದ್ರೇಕವೂ ಅಲ್ಲ. ನಮ್ಮ ನೆರಳಿನಂತೆ ಹಿಂಬಾಲಿಸುವ, ಜೋಗುಳದಂತೆ ಮನಸ್ಸನ್ನು ತೂಗುವ ಒಂದು ಆಂತರಿಕ ಹಂಬಲ.

ಹೀಗೆ ಓದುತ್ತಾ ಹೋದಂತೆ, ಮನಸ್ಸು ತನ್ನದೇ ಕಲ್ಪನೆಯೊಳಗೆ ಅವರ ರೂಪವನ್ನು ಕಟ್ಟಿಕೊಳ್ಳತೊಡಗುತ್ತದೆ.

ಒಮ್ಮೆ ತಪಸ್ವಿಯಂತೆ ಕಾಣುತ್ತಾರೆ.
ಮತ್ತೊಮ್ಮೆ ಕರುಣಾಮಯ ಗುರುವಾಗಿ ಮೂಡುತ್ತಾರೆ.
ಕೆಲವೊಮ್ಮೆ ಯುಗಚೇತನನಾಗಿ ಎದ್ದು ನಿಲ್ಲುತ್ತಾರೆ.
ಮತ್ತೊಮ್ಮೆ ಸಮಾಜದ ನೋವಿಗಾಗಿ ಕರಗಿದ ಮಾನವತಾವಾದಿಯಾಗಿ ಕಾಣಿಸುತ್ತಾರೆ.

ಈ ಕಲ್ಪನೆಗಳ ಜೊತೆಗೂ ಆತಂಕವೂ ಬೆಳೆಯುತ್ತದೆ —
“ನಾನು ಕಟ್ಟಿಕೊಳ್ಳುತ್ತಿರುವ ಈ ರೂಪ ಸತ್ಯಕ್ಕೆ ಎಷ್ಟು ಹತ್ತಿರ?”
“ಅವರನ್ನು ನಿಜವಾಗಿ ಅರಿಯಬಲ್ಲೆನೇ?”
“ಪದಗಳ ನಡುವೆ ಉಳಿದಿರುವ ಆ  ಬೆಳಕನ್ನು ಸ್ಪರ್ಶಿಸಬಲ್ಲೆನೇ?”

ಕೆಲವೊಮ್ಮೆ ಈ ಹಂಬಲ ತಿರುಕನ ಕನಸಿನಂತೆ ಅಸಾಧ್ಯವಾಗಿದ್ದರೂ ಬಿಡದ ಮೋಹವಾಗಿ ಕಾಡುತ್ತದೆ. ಅಸಾಧ್ಯವೆಂದು ಗೊತ್ತಿದ್ದರೂ ಮನಸ್ಸು ಅದನ್ನೇ ಹಿಂಬಾಲಿಸುತ್ತದೆ. ಏಕೆಂದರೆ ಕೆಲವರು  ಇತಿಹಾಸದ ಪುಟಗಳಲ್ಲಿ ಸೀಮಿತವಾಗುವುದಿಲ್ಲ; ಅವು ಒಂದು ಜೀವಂತ ಅನುಭವವಾಗಿ ಮುಂದಿನ ಪೀಳಿಗೆಗಳ ಮನಸ್ಸಿನೊಳಗೆ ಪ್ರವೇಶಿಸುತ್ತವೆ.

ಅವರನ್ನು ಕಾಣದ ನಾನು, ಅವರನ್ನು ಕಂಡ ಮಹನೀಯರ ಬರಹಗಳ ಮೂಲಕ ಅವರನ್ನು ಕಾಣಲು ಬಯಸುತ್ತೇನೆ.

ಅವರ ಕುರಿತು ಬರೆದಿರುವ ಸಾಲುಗಳ ನಡುವೆ ಅವರ ಧ್ವನಿಯನ್ನು ಕೇಳಲು ಯತ್ನಿಸುತ್ತೇನೆ.
ಅವರನ್ನು ಸ್ಮರಿಸಿದ ಭಕ್ತರ ಭಾವನೆಗಳೊಳಗೆ ಅವರ ಸ್ಪರ್ಶವನ್ನು ಹುಡುಕುತ್ತೇನೆ.

ಇತಿಹಾಸದ ದಾಖಲೆಗಳ ಮೂಲಕವಲ್ಲ, ಮನಸ್ಸಿನ ಭಕ್ತಿಯ ಮೂಲಕ ಅವರನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

ಬಹುಶಃ ಮಹಾತ್ಮರನ್ನು “ನೋಡುವುದು” ಎಂದರೆ ಇದೇ ಇರಬಹುದು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳನ್ನು ಅರಿಯಲು ನಾನು ಇತಿಹಾಸದ ಒಣ ದಾಖಲೆಗಳಿಗಿಂತ, ಅವರನ್ನು ಕಣ್ಣಾರೆ ಕಂಡ ಮಹನೀಯರ ಮನಸ್ಸಿನಲ್ಲಿ ಉಳಿದ ಜೀವಂತ ಸ್ಮೃತಿಗಳತ್ತ ಹೆಚ್ಚು ಆಕರ್ಷಿತನಾದೆ. ಏಕೆಂದರೆ ಮಹಾತ್ಮರ ಜೀವನವನ್ನು ಕೇವಲ ಘಟನೆಗಳು ವಿವರಿಸಲಾರವು; ಅವರನ್ನು ನಿಜವಾಗಿ ಪರಿಚಯಿಸುವುದು  ಪ್ರತ್ಯಕ್ಷ್ಯದರ್ಶಿಗಳ  ಅಂತರಂಗದ ಸಾಕ್ಷ್ಯಗಳು.

ಹಾನಗಲ್ಲ ಶ್ರೀಗಳನ್ನು ಹತ್ತಿರದಿಂದ ಕಂಡ ಲಿಂ. ಕಜ್ಜರಿ ಗುರುಮೂರ್ತಿ ಶಾಸ್ತ್ರಿಗಳು, ದ್ಯಾಂಪುರದ ಚನ್ನಕವಿಗಳು ಮತ್ತು ಆ ಯುಗದ ಅನೇಕ ಭಕ್ತ–ಪಂಡಿತರು ಬರೆದ ಸಾಹಿತ್ಯ, ಚರಿತ್ರೆ, ಪುರಾಣ ಮತ್ತು ನಾಮಾವಳಿಗಳ ನಡುವೆ ಸಂಚರಿಸುತ್ತಿದ್ದಾಗ, ಅದು ಕೇವಲ ಓದಿನ ಅನುಭವವಾಗಿರಲಿಲ್ಲ. ಒಂದು ದಿವ್ಯತೆಯ ಸುತ್ತಲೂ ನಿರ್ಮಾಣವಾದ ಭಕ್ತಿಯ ವಲಯದೊಳಗೆ ಪ್ರವೇಶಿಸಿದ ಅನುಭವವಾಗಿತ್ತು. ಆ ಸಾಲುಗಳಲ್ಲಿ ಕೆಲವೆಡೆ ಭಕ್ತಿ ಉಕ್ಕುತ್ತದೆ; ಕೆಲವೆಡೆ ಆಶ್ಚರ್ಯ; ಮತ್ತೊಂದೆಡೆ ಸಮಾಜದ ಪುನರುಜ್ಜೀವನಕ್ಕಾಗಿ ಹೊತ್ತಿದ್ದ ಅಗ್ನಿಯ ಕಿರಣಗಳು ಕಾಣಿಸುತ್ತವೆ.

ಪೂಜ್ಯ ಲಿಂ. ಜ. ಚ. ನಿ. ಯವರು ಮತ್ತು ಕೀರ್ತನಕೇಸರಿ ಲಿಂ. ಬಿ. ಶಿವಮೂರ್ತಿ ಶಾಸ್ತ್ರಿಗಳು ಬರೆದ ಸಾಲುಗಳನ್ನು ಓದುತ್ತಿದ್ದಾಗ, ಅವರು ಕೇವಲ ಒಬ್ಬ ಮಠಾಧೀಶರನ್ನು ವರ್ಣಿಸುತ್ತಿಲ್ಲ; ಒಂದು ಯುಗದ ಚೈತನ್ಯವನ್ನೇ ಪದಗಳಲ್ಲಿ ಹಿಡಿಯಲು ಯತ್ನಿಸುತ್ತಿದ್ದಾರೆ ಎಂಬ ಭಾವನೆ ಮೂಡಿತು. ಅವರ ಬರಹಗಳಲ್ಲಿ ಹಾನಗಲ್ಲ ಶ್ರೀಗಳು ಕೆಲವೊಮ್ಮೆ ತಪಸ್ವಿಯಾಗಿ ಕಾಣಿಸುತ್ತಾರೆ; ಕೆಲವೊಮ್ಮೆ ಸಮಾಜ ಸಂಚಾಲಕರಾಗಿ; ಕೆಲವೊಮ್ಮೆ ಕರುಣಾಮೂರ್ತಿಯಾಗಿ; ಮತ್ತೊಮ್ಮೆ ಅಸಾಧಾರಣ ಸಂಘಟನಾ ಶಕ್ತಿಯ ಮಹಾಪುರುಷರಾಗಿ.

ಆ ಮಹನೀಯರ ಲೇಖನಗಳ ಸಾಲುಗಳಿಂದ, ಸ್ಮೃತಿಗಳ ಚಿತ್ತಾರಗಳಿಂದ, ಭಕ್ತಿಯ ಬೆಳಕುಗಳಿಂದ ನಾನು ಸಂಗ್ರಹಿಸಿಕೊಂಡ ಹಾನಗಲ್ಲ ಶ್ರೀಗಳ ರೂಪ ಹೀಗಿದೆ…

ಲಿಂ. ಜ. ಚ. ನಿ. ಯವರ ಕಾರಣಿಕ ಕುಮಾರಯೋಗಿ ಕೃತಿಯನ್ನು ಓದುತ್ತಿದ್ದಾಗ, ಅದು ಕೇವಲ ಒಂದು ವ್ಯಕ್ತಿಚಿತ್ರಣವೆಂದು ನನಗೆ ಅನಿಸಲಿಲ್ಲ. ಆ ಸಾಲುಗಳು ಒಬ್ಬ ಮಹಾಯೋಗಿಯ ದರ್ಶನವನ್ನು ಪದಗಳಲ್ಲಿ ಹಿಡಿದಿಡಲು ಮಾಡಿದ ತಪಸ್ಸಿನಂತಿದ್ದವು. ಓದುತ್ತಾ ಹೋದಂತೆ, ಇತಿಹಾಸದ ಮಸುಕಾದ ತೆರೆ ನಿಧಾನವಾಗಿ ಸರಿಯತೊಡಗಿತು; ಅದರ ಹಿಂದೆ ಒಂದು ದಿವ್ಯ ವ್ಯಕ್ತಿತ್ವದ ಆಕಾರ ಬೆಳಕಿನಂತೆ ಮೂಡಿಬಂದಿತು.

“ನೀಳವಾದ ದೇಹ; ಅಜಾನುಬಾಹು… ಎವೆಯಿಕ್ಕದ ಕಣ್ಣು; ಬಾಗದ ಬೆನ್ನು…” — ಈ ಕೆಲವೇ ಪದಗಳಲ್ಲಿ ಲೇಖಕರು ಕಟ್ಟಿಕೊಡುವ ರೂಪ ಸಾಮಾನ್ಯ ಮನುಷ್ಯನದ್ದಲ್ಲ. ಅದು ಒಂದು ತಪಸ್ಸಿನಿಂದ ಗಟ್ಟಿಯಾದ ದೇಹ, ನಿರಂತರ ಚಿಂತನೆಯಿಂದ ಹೊಳೆಯುವ ಮುಖ, ಸಮಾಜದ ನೋವನ್ನೆಲ್ಲ ತನ್ನೊಳಗೆ ಹೊತ್ತ ಮನಸ್ಸಿನ ಚಿತ್ರಣ. “ವಿಶಾಲವಾದ ಹಣೆ; ಪ್ರಶಾಂತವಾದ ಮೊಗ” ಎಂಬ ಸಾಲುಗಳನ್ನು ಓದುವಾಗ, ನನ್ನ ಮನಸ್ಸಿನೊಳಗೂ ಒಂದು ಶಾಂತ ಮೂರ್ತಿ ನಿಧಾನವಾಗಿ ರೂಪುಗೊಳ್ಳತೊಡಗಿತು. “ಕಂಡೆನ್ನ ಕಣ್ಮನದ ಕಾಳಿಕೆಯು ಹಿಂಗಿ ಹೋಯಿತು” ಎಂಬ ಅವರ ನುಡಿ ಕೇವಲ ಕಾವ್ಯವಲ್ಲ; ಅದು ದರ್ಶನದಿಂದ ಉಂಟಾದ ಆಂತರಿಕ ಕಂಪನ.

೧೯೨೪ರ ಆ ಮುಂಜಾವು… ನವಿಲುಗುಂದ ತಾಲೂಕಿನ ಅಣ್ಣಿಗೆರೆಯ ತೋಂಟದಾರ್ಯರ ಶಾಖಾಮಠ… ಅಲ್ಲಿ ಸುಖಾಸನದಲ್ಲಿ ಆಸೀನರಾಗಿದ್ದ ಹಾನಗಲ್ಲ ಶ್ರೀಗಳ ಚಿತ್ರಣವನ್ನು ಜ. ಚ. ನಿ. ಯವರು ವರ್ಣಿಸುವ ರೀತಿ ಅಸಾಮಾನ್ಯ. “ನಿರಂಜನ ಮೂರ್ತಿ ನಿರಾಡಂಬರ ವೇಷದಲ್ಲಿ ಮೂರ್ತಮಾಡಿತ್ತು” ಎಂಬ ಸಾಲು ಓದಿದಾಗ, ವೈಭವವಿಲ್ಲದ ಮಹಿಮೆ ಎಂದರೇನು ಎಂಬುದು ಅರಿವಾಗುತ್ತದೆ. ಅವರ ಕುಳಿತುಕೊಳ್ಳುವ ಠೀವಿಯನ್ನೇ ಲೇಖಕರು ಯೋಗದ ಆಂತರಿಕ ಶಕ್ತಿಯ ಅಭಿವ್ಯಕ್ತಿ ಎಂದು ಕಾಣುತ್ತಾರೆ. ಆ ಸಾಲುಗಳಲ್ಲಿ ಹಾನಗಲ್ಲ ಶ್ರೀಗಳ ಮೌನಸಾನ್ನಿಧ್ಯದ ಪ್ರಭಾವ ಸ್ಪಷ್ಟವಾಗುತ್ತದೆ.

ಅವರ ಕಣ್ಣುಗಳ ಕುರಿತು ಬರೆದಿರುವ “ಎವೆಯಿಕ್ಕದ ಕಣ್ಣು ಜಗತ್ತನ್ನೇ ಜರಿದಿದ್ದರು” ಎಂಬ ವರ್ಣನೆ ನನ್ನನ್ನು ಆಳವಾಗಿ ಕಾಡಿತು. ಅದು ಹೊರಗಿನ ದೃಷ್ಟಿಯಲ್ಲ; ಸಮಾಜದ ಒಳನೋವನ್ನು, ಅದರ ಭವಿಷ್ಯವನ್ನು, ಅದರ ದುರ್ಬಲತೆ ಮತ್ತು ಸಾಧ್ಯತೆಗಳನ್ನು ಒಂದೇ ಸಮಯದಲ್ಲಿ ನೋಡಬಲ್ಲ ದೃಷ್ಟಿ. ಸಮಾಜದ ಪ್ರಗತಿಯ ಚಿಂತನೆ ಅವರ ಮುಖದ ಭಾವರೇಖೆಗಳಲ್ಲೇ ಆಳವಾಗಿ ಮೂಡಿತ್ತು ಎನ್ನುವ ಸಾಲುಗಳು, ಹಾನಗಲ್ಲ ಶ್ರೀಗಳ ಬದುಕು ವೈಯಕ್ತಿಕ ಮೋಕ್ಷದ ತಪಸ್ಸಲ್ಲ; ಸಮುದಾಯದ ಉದ್ಧಾರದ ತಪಸ್ಸು ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಜ. ಚ. ನಿ. ಯವರು ಹಾನಗಲ್ಲ ಶ್ರೀಗಳ  ವಿರೋಧಾಭಾಸಗಳಲ್ಲೇ ಅವರ ಮಹತ್ವವನ್ನು ಹಿಡಿದಿಡುತ್ತಾರೆ. “ಸ್ವತಃ ಸಾಹಿತಿಗಳಾಗದಿದ್ದರೂ ಸಾಹಿತ್ಯ ಸಂಗ್ರಹದ ಆಸಕ್ತಿ… ವಿದ್ಯೆಯನ್ನು ವಿಶೇಷ ಕಲಿಯದಿದ್ದರೂ ವಿದ್ವಾಂಸರನ್ನು ನಿಬ್ಬೆರಗುಗೊಳಿಸುವ ವಿಚಾರಪ್ರೌಢಿಮೆ… ಸಂನ್ಯಾಸಿಗಳಾಗಿದ್ದರೂ ಸ್ತ್ರೀಯರ ಸತ್ಕರ್ಮ ಉಳಿವಿಗೆ ಕಾಳಜಿ… ನಿಷ್ಕಾಮಿಗಳಾಗಿದ್ದರೂ ಲೋಕಕಲ್ಯಾಣದ ಕ್ರಿಯಾಪ್ರೇಮ…” — ಇವು ಸಾಮಾನ್ಯ ಗುಣಗಳ ಪಟ್ಟಿ ಅಲ್ಲ; ಒಂದು ಅಪರೂಪದ ಸಮಗ್ರತೆಯ ಒಳನೋಟಗಳು.

ವಿಶೇಷವಾಗಿ “ದೀನ ದರಿದ್ರರಲ್ಲಿದ್ದ ದಯಾಂತಃಕರಣ ದಿವ್ಯವಾಗಿತ್ತು” ಎಂಬ ಸಾಲು ಓದಿದಾಗ, ಹಾನಗಲ್ಲ ಶ್ರೀಗಳ ಚಿಂತನೆಯ ಕೇಂದ್ರಬಿಂದು ಯಾವುದು ಎಂಬುದು ಸ್ಪಷ್ಟವಾಗುತ್ತದೆ — ಅದು ಕರುಣೆ. ಆ ಕರುಣೆಯೇ ಅವರನ್ನು ಶಿಕ್ಷಣ, ಸಮಾಜಸಂಘಟನೆ, ವೈದ್ಯಶೋಧ, ಸಾಹಿತ್ಯ ಮತ್ತು ಜನಸೇವೆಯ ಕಡೆಗೆ ಕೊಂಡೊಯ್ದಿತು.

“ಅಂತಹ ಅನುಪಮ ಜಗಜ್ಯೋತಿಯೊಂದನ್ನು ಕಂಡೆ” ಎಂದು ಜ. ಚ. ನಿ. ಯವರು ಕೊನೆಯಲ್ಲಿ ಬರೆದಾಗ, ಅದು ಕೇವಲ ಭಕ್ತನ ಭಾವೋದ್ರೇಕವಲ್ಲ; ಒಂದು ಯುಗದ ಸಾಕ್ಷಿಯ ಅಂತಿಮ ನಮನ. “ಅಂದು ಆ ಬಿಂಬವ ಕಂಡೆ, ಕಂಡೆನ್ನ ಕಂಗಳು ಧನ್ಯವಾದವು; ಜನ್ಮ ಸಾರ್ಥಕವಾಯಿತು” ಎಂಬ ಸಾಲುಗಳು ಓದುಗರ ಮನಸ್ಸಿನೊಳಗೂ ವಿಚಿತ್ರ ನಿಶ್ಶಬ್ದತೆಯನ್ನು ಉಂಟುಮಾಡುತ್ತವೆ.

ಕೀರ್ತನಕೇಸರಿ ಬಿ. ಶಿವಮೂರ್ತಿ ಶಾಸ್ತ್ರಿಗಳು ಹುಲ್ಕಂಟೆಮಠ ತುಮಕೂರು ಅವರು ಶ್ರೀ ಫ. ಗು. ಹಳಕಟ್ಟಿಯವರ ಶಿವಾನುಭವ ಪತ್ರಿಕೆಯಲ್ಲಿ ಬರೆದ ಶ್ರೀ ಹಾನಗಲ್ಲ ಶಿವಯೋಗಿಗಳೂ ಲಿಂಗವಂತ ಸಂಸ್ಕೃತಿಯೂ ಎಂಬ ಲೇಖನವನ್ನು ಓದುತ್ತಿದ್ದಾಗ, ಅದು ಕೇವಲ ಒಂದು ಲೇಖನವೆಂದು ನನಗೆ ಅನಿಸಲಿಲ್ಲ. ಅದು ಒಂದು ಯುಗದ ಜೀವಂತ ದೃಶ್ಯಾವಳಿಯಂತೆ ನನ್ನ ಕಣ್ಣೆದುರಿಗೆ ತೆರೆದುಕೊಳ್ಳತೊಡಗಿತು.

ತಾ. ೨೫-೧೧-೧೯೨೫. ಹುಬ್ಬಳ್ಳಿ.

ಶ್ರೀ ಮೂರುಸಾವಿರ ಮಠದ ಶೂನ್ಯಪೀಠಾರೋಹಣದ ಮಹೋತ್ಸವ. ನಲವತ್ತು–ಐವತ್ತು ಸಾವಿರ ಜನರ ಸಂಭ್ರಮ. ತಪಸ್ವಿಗಳು, ಕವಿಗಳು, ಪಂಡಿತರು, ಗಾಯಕರು, ಕಲಾವಿದರು — ಧರ್ಮ, ಸಂಸ್ಕೃತಿ ಮತ್ತು ಭಕ್ತಿಯ ಮಹಾಸಂಗಮದಂತಿದ್ದ ಆ ವಾತಾವರಣ. ಜಯಘೋಷಗಳು ಮೇಘಗಳನ್ನು ಭೇದಿಸುತ್ತಿದ್ದವು.

ಆ ಅಪಾರ ಜನಸ್ತೋಮದ ನಡುವೆ ಒಬ್ಬ ಮಹಾತ್ಮರು  ಎಲ್ಲರ ಗಮನವನ್ನೂ ತನ್ನತ್ತ ಸೆಳೆಯುತ್ತಿದ್ದರು. ಶಾಸ್ತ್ರಿಗಳು ಅವರನ್ನು ವರ್ಣಿಸುವ ರೀತಿ ಓದುಗರ ಮನಸ್ಸಿನಲ್ಲಿ ಒಂದು ದಿವ್ಯ ಚಿತ್ರವನ್ನು ಬಿಡಿಸುತ್ತದೆ — ಕಾವಿಕಾಷಾಯಾಂಬರಧಾರಿ, ಆಜಾನುಬಾಹು, ವಿಭೂತಿ–ರುದ್ರಾಕ್ಷಿಗಳಿಂದ ಅಲಂಕರಿತ ತಪೋಮೂರ್ತಿ. “ಮೇಘಮೂಲೆಯ ಮಧ್ಯದ ಮಿಂಚಿನಂತೆ ಥಳಥಳಿಸುವ ಕಣ್ಣುಗಳು” — ಈ ಒಂದು ಉಪಮೆಯೇ ಸಾಕು, ಹಾನಗಲ್ಲ ಶ್ರೀಗಳ ಸಾನ್ನಿಧ್ಯ ಎಷ್ಟು ತೀವ್ರವಾಗಿತ್ತೆಂದು ಊಹಿಸಲು ಸಭಾಂಗಣದಲ್ಲಿ ಕುಳಿತಿದ್ದ ಶಿವಮೂರ್ತಿ ಶಾಸ್ತ್ರಿಗಳ ಕಿವಿಗೆ ಜನರ ಮಾತುಗಳು ಬೀಳುತ್ತವೆ —

“ಇವರು ಸಮಾಜಪ್ರೇಮಿಗಳು…”
“ವಿದ್ಯಾಭಿಮಾನಿಗಳು…”
“ಖಾದೀಪ್ರೇಮಿಗಳು…”
“ಹಾನಗಲ್ಲ ಶಿವಯೋಗಿಗಳ ಮೆಚ್ಚಿಗೆಗೆ ಪಾತ್ರರಾಗುವುದು ಸಾಮಾನ್ಯವೇ?”

ಆ ಮಾತುಗಳನ್ನು ಕೇಳಿದ ಮೇಲೆ, ಅವರಿಗೆ ಒಂದು ಆತುರ ಹುಟ್ಟುತ್ತದೆ — ಪಟ್ಟವಾಗುವ ಸ್ವಾಮಿಗಳನ್ನು ನೋಡುವುದಕ್ಕಿಂತ ಮೊದಲು, ಪಟ್ಟವನ್ನು ಮಾಡುವ ಮಹಾತ್ಮರನ್ನು ನೋಡಬೇಕು!”

ಅವರು ಮೆಲ್ಲಗೆ ಆ ಸನ್ನಿಧಿಯ ಕಡೆಗೆ ಸಾಗುತ್ತಾರೆ.
ಅಲ್ಲಿದ್ದ ಶ್ರೀಗಳ ಮುಖಮುದ್ರೆ ಮತ್ತು ಜನರ ಮಾತುಗಳಿಂದ — ಇವರೇ ಪೂಜ್ಯ ಹಾನಗಲ್ಲ ಶ್ರೀಗಳು ಎಂದು ಅರಿಯುತ್ತಾರೆ.
ಭಕ್ತಿಯಿಂದ ಪಾದಾರವಿಂದಗಳ ಮೇಲೆ ಮಸ್ತಕವಿಡುತ್ತಾರೆ.

ಆಮೇಲೆ ನಡೆದ ಸಂಭಾಷಣೆ ಎಷ್ಟು ಸರಳವೋ, ಅಷ್ಟೇ ಗಂಭೀರವೂ ಹೌದು —

ಶ್ರೀಗಳು: “ಏಳಿ… ನೀವಾರು?”

ಶಾಸ್ತ್ರಿಗಳು: “(ತಮ್ಮ ಪರಿಚಯ ಹೇಳುತ್ತಾರೆ.)”

ಶ್ರೀಗಳು: “ಇಂದು ನಿಮ್ಮ ಕೀರ್ತನವಿದೆಯಲ್ಲವೇ?”

ಶಾಸ್ತ್ರಿಗಳು: “ಇದೆ ಬುದ್ಧಿ.”

ಶ್ರೀಗಳು: “ನಿಮ್ಮ ವಿದ್ಯಾಭ್ಯಾಸವೇನು?”

ಶಾಸ್ತ್ರಿಗಳು: “(ತಮ್ಮ ವಿದ್ಯಾಭ್ಯಾಸವನ್ನು ವಿನಯದಿಂದ ವಿವರಿಸುತ್ತಾರೆ.)”

ಶ್ರೀಗಳು: “ಇನ್ನೂ ನಿಮ್ಮ ವಿದ್ಯಾಭ್ಯಾಸ ಬಹಳವಾಗಿ ನಡೆಯಬೇಕು.”

ಶಾಸ್ತ್ರಿಗಳು: “ಹೌದು ಸ್ವಾಮಿ… ನನಗೂ ಆಶೆ ಬಹಳವಾಗಿದೆ. ಆದರೆ ಅಡಚಣೆಗಳೂ ಅಪಾರವಾಗಿವೆ. ಕಲಿತಿರುವುದಕ್ಕಿಂತ ಕಲಿಯಬೇಕಾದದ್ದು ಬಹಳ.”

ಶ್ರೀಗಳು: “ಇದ್ದುದರಲ್ಲಿಯೇ ಸಾಹಸ ಮಾಡಿರಿ. ಅಡಚಣಿಗೆ ಅಂಜುವುದು ಕಾರ್ಯವಲ್ಲ.”

ಈ ಒಂದು ಮಾತಿನಲ್ಲೇ ಹಾನಗಲ್ಲ ಶ್ರೀಗಳ ಜೀವನದ ಸಂಪೂರ್ಣ ತತ್ವವೇ ಅಡಗಿದಂತಿದೆ.
ಅಡಚಣೆಗಳನ್ನು ನೋಡಿ ನಿಲ್ಲುವುದು ಅಲ್ಲ — ಇದ್ದುದರಲ್ಲೇ ದಾರಿ ತೆರೆದು ನಡೆಯುವುದು.

ಶಾಸ್ತ್ರಿಗಳು: “ತಮ್ಮ ಅನುಗ್ರಹದಿಂದ ಎಲ್ಲವೂ ಸಾಧ್ಯವಾಗಬೇಕಾಗಿದೆ. ಎಲ್ಲವೂ ಪಾದಾನುಗ್ರಹ.”

ಶ್ರೀಗಳು: “ಮತಗ್ರಂಥಗಳನ್ನು ಓದಿರುವಿರೋ?”

ಶಾಸ್ತ್ರಿಗಳು: “ಎಲ್ಲೋ ಕೆಲವು ಮಾತ್ರ ಬುದ್ಧಿ.”

ಶ್ರೀಗಳು: “ಮೊದಲು ಮತಧರ್ಮವನ್ನು ತಿಳಿಯಿರಿ. ಸದಾಚಾರಶೀಲರಾಗಿರಿ. ಜಗತ್ತಿಗೆ ಬೋಧಿಸಿರಿ. ಆಗ ನಿಮ್ಮ ಬೋಧೆ ಫಲಪ್ರದವಾಗುತ್ತದೆ. ನಿಮ್ಮ ಕಾರ್ಯ ಉತ್ತಮವಾದುದು. ಇದರಿಂದ ಸಮಾಜಕ್ಕೂ ದೇಶಕ್ಕೂ ಬಹಳ ಉಪಕಾರವಾಗುತ್ತದೆ.”

ಇಲ್ಲಿ ಹಾನಗಲ್ಲ ಶ್ರೀಗಳು ಕೇವಲ ಒಬ್ಬ ಕೀರ್ತನಕಾರನನ್ನು ಪ್ರೋತ್ಸಾಹಿಸುತ್ತಿಲ್ಲ; ಒಂದು ಸಮಾಜದ ಭವಿಷ್ಯವನ್ನು ರೂಪಿಸುವ ಸಂಸ್ಕೃತಿಸೇವಕರನ್ನು ನಿರ್ಮಿಸುತ್ತಿದ್ದಾರೆ.

ಅವರು ಮುಂದುವರಿಸುತ್ತಾರೆ —

ಸಮರ್ಥ, ನಿಷ್ಪಕ್ಷಪಾತಿಗಳಾದ ಕೀರ್ತನಕಾರರು ನಮ್ಮ ಸಮಾಜಕ್ಕೆ ಬಹಳ ಬೇಕಾಗಿದ್ದಾರೆ. ಒಮ್ಮೆ ಶಿವಯೋಗ ಮಂದಿರಕ್ಕೆ ಬನ್ನಿರಿ.”

ಶಾಸ್ತ್ರಿಗಳು: “ಅಪ್ಪಣೆ ಬುದ್ಧಿ… ನನಗೂ ಬಹಳ ಆಸೆಯಿದೆ.”

ಶ್ರೀಗಳು: “ಆಗಲಿ… ನಮಗೆ ಕಾರ್ಯಗಳು ಬಹಳವಾಗಿವೆ…”

ಹೀಗೆ ಹೇಳಿ ಆಶೀರ್ವದಿಸಿ ಮಠದೊಳಗೆ ನಡೆಯುತ್ತಾರೆ.

ಈ ಸಂಭಾಷಣೆ ಕೇವಲ ಎರಡು ವ್ಯಕ್ತಿಗಳ ಮಾತುಕತೆ ಅಲ್ಲ; ಒಂದು ಯುಗ ಮತ್ತೊಂದು ಯುಗಕ್ಕೆ ನೀಡಿದ ದೀಕ್ಷೆಯಂತೆ ಭಾಸವಾಗುತ್ತದೆ.

ಶಿವಮೂರ್ತಿ ಶಾಸ್ತ್ರಿಗಳು ಕೊನೆಯಲ್ಲಿ ಬರೆಯುತ್ತಾರೆ —
ನನ್ನ ಜೀವನದಲ್ಲಿ ಶ್ರೀಗಳ ದರ್ಶನಭಾಗ್ಯಕ್ಕೆ ಅಂದೇ ಮೊದಲು; ಅಂದೇ ಕಡೆ.”

ಆ ಒಂದು ಭೇಟಿಯೇ ಅವರಿಗೆ ಜೀವಮಾನವಿಡೀ ಬೆಳಕಾಗಿರಬೇಕು.
ಕೆಲ ಮಹಾತ್ಮರನ್ನು ಪದೇಪದೇ ನೋಡಬೇಕಾಗಿಲ್ಲ.
ಒಮ್ಮೆ ಕಂಡರೂ ಸಾಕು — ಅವರು  ಮನಸ್ಸಿನೊಳಗೆ ಶಾಶ್ವತವಾಗಿ ನೆಲೆಸಿಬಿಡುತ್ತಾರೆ.

ಈ ಸಂಪೂರ್ಣ ಲೇಖನವನ್ನು ಓದಿ ಮುಗಿಸಿದ ಮೇಲೆ, ನನ್ನ ಮನಸ್ಸಿನಲ್ಲಿ ಉಳಿದದ್ದು ಹಾನಗಲ್ಲ ಶ್ರೀಗಳ ದಿವ್ಯ  ವರ್ಣನೆಯಷ್ಟೇ ಅಲ್ಲ; ಅವರ ಕೆಲವು ಸರಳ ನುಡಿಗಳ ಅಂತರಂಗದ ಅಗ್ನಿ.

“ಮೊದಲು ಮತಧರ್ಮವನ್ನು ತಿಳಿಯಿರಿ. ಸದಾಚಾರ ಶೀಲರಾಗಿರಿ. ಜಗತ್ತಿಗೆ ಬೋಧಿಸಿರಿ. ಅಂದು ನಿಮ್ಮ ಬೋಧೆ ಫಲಪ್ರದವಾಗುತ್ತದೆ. ನಿಮ್ಮ ಕಾರ್ಯ ಉತ್ತಮವಾದುದು. ಇದರಿಂದ ಸಮಾಜಕ್ಕೂ ದೇಶಕ್ಕೂ ಉಪಕಾರ ಬಹಳವಾಗುತ್ತದೆ.”

ಈ ಕೆಲವು ಸಾಲುಗಳಲ್ಲಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಸಂಪೂರ್ಣ ಜೀವನದರ್ಶನವೇ ಅಡಗಿದೆ ಎನ್ನಿಸುತ್ತದೆ. ಅವರು ಕೇವಲ ಮಠಗಳನ್ನು ಕಟ್ಟಲಿಲ್ಲ; ವ್ಯಕ್ತಿಗಳನ್ನು ಕಟ್ಟಲು ಬಯಸಿದರು. ಕೇವಲ ಧರ್ಮೋಪದೇಶ ಮಾಡಲಿಲ್ಲ; ಸದಾಚಾರವನ್ನು ಬದುಕಿನ ಕೇಂದ್ರವಾಗಿಸಿದರು. ಕೇವಲ ಸಮಾಜದ ಉದ್ಧಾರವನ್ನು ಕನಸುಗಂಡಿಲ್ಲ; ಆ ಉದ್ಧಾರದ ಮೂಲಶಕ್ತಿಯಾಗಿ ವಿದ್ಯೆ, ಸಂಸ್ಕೃತಿ, ನೈತಿಕತೆ ಮತ್ತು ಜಾಗೃತಿಯನ್ನು ಕಂಡರು.

“ಮೊದಲು ಮತಧರ್ಮವನ್ನು ತಿಳಿಯಿರಿ” — ಈ ಮಾತಿನಲ್ಲಿ ಜ್ಞಾನವಿದೆ.
“ಸದಾಚಾರ ಶೀಲರಾಗಿರಿ” — ಈ ಮಾತಿನಲ್ಲಿ ಆತ್ಮಶಾಸನವಿದೆ
“ಜಗತ್ತಿಗೆ ಬೋಧಿಸಿರಿ” — ಈ ಮಾತಿನಲ್ಲಿ ಸಮಾಜದ ಹೊಣೆಗಾರಿಕೆಯಿದೆ.
“ಸಮಾಜಕ್ಕೂ ದೇಶಕ್ಕೂ ಉಪಕಾರವಾಗುತ್ತದೆ” — ಈ ಮಾತಿನಲ್ಲಿ ಅವರ ಚಿಂತನೆಯ ವಿಶಾಲತೆ ಇದೆ.

ಅವರ ದೃಷ್ಟಿ ಕೇವಲ ತಮ್ಮ ಮಠಕ್ಕೆ ಸೀಮಿತವಾಗಿರಲಿಲ್ಲ; ಕೇವಲ ತಮ್ಮ ಸಮಾಜಕ್ಕೂ ಸೀಮಿತವಾಗಿರಲಿಲ್ಲ. ಸಮಾಜದ ಉದ್ಧಾರವೇ ದೇಶದ ಉದ್ಧಾರ ಎಂಬ ಅರಿವು ಅವರ ಪ್ರತಿಯೊಂದು ಮಾತಿನೊಳಗೂ ಹರಿದಾಡುತ್ತಿತ್ತು. ಅದಕ್ಕಾಗಿಯೇ ಅವರು ಕೇವಲ ವಿರಕ್ತ ಯೋಗಿಯಾಗಿ ಉಳಿಯಲಿಲ್ಲ; ಸಮಾಜಚೇತನದ ಜ್ಯೋತಿಯಾಗಿ ರೂಪುಗೊಂಡರು.

ಇಂದು ಅವರ ಭೌತಿಕ ಅಸ್ತಿತ್ವವಿಲ್ಲ. ಅವರ ಕಾಲದ ಜನರೂ ಇಲ್ಲ. ಆದರೆ ಅವರು ಉಚ್ಚರಿಸಿದ ಈ ಮಾತುಗಳು ಇನ್ನೂ ಜೀವಂತವಾಗಿವೆ. ಏಕೆಂದರೆ ಮಹಾತ್ಮರ ನಿಜವಾದ ಅಸ್ತಿತ್ವ ಅವರ ದೇಹದಲ್ಲಿರುವುದಿಲ್ಲ; ಅವರ ಚಿಂತನೆಗಳಲ್ಲಿ ಇರುತ್ತದೆ. ಕಾಲ ಕಳೆಯಬಹುದು, ಯುಗಗಳು ಬದಲಾಗಬಹುದು, ಆದರೆ ಸತ್ಯದಿಂದ ಹುಟ್ಟಿದ ನುಡಿಗಳು ಎಂದಿಗೂ ಮಡಿಯುವುದಿಲ್ಲ.

ಆದರೆ ಅವರನ್ನು ಕಂಡವರ ಕಣ್ಣುಗಳ ಮೂಲಕ ಅವರನ್ನು ನೋಡಲು ಪ್ರಯತ್ನಿಸಿದೆ.
ಅವರ ಬಗ್ಗೆ ಬರೆದ ಸಾಲುಗಳ ನಡುವೆ ಅವರ ಹೆಜ್ಜೆಯ ನಾದವನ್ನು ಕೇಳಲು ಪ್ರಯತ್ನಿಸಿದೆ.
ಕೆಲ ಕ್ಷಣಗಳಿಗಾದರೂ, ಆ ಮಹಾಯೋಗಿಯ ಸಾನ್ನಿಧ್ಯದ ನೆರಳು ನನ್ನ ಮನಸ್ಸಿನ ಮೇಲೂ ಹರಿದಂತಾಯಿತು.

ಬಹುಶಃ ಇದೇ ಮಹಾತ್ಮರ ಅಮರತ್ವ.
ಅವರು ಕಾಲದಿಂದ ಮರೆಯಾಗುವುದಿಲ್ಲ;
ಒಂದು ಸಂಸ್ಕೃತಿಯ ಉಸಿರಾಗಿ ಮುಂದುವರೆಯುತ್ತಾರೆ…

 

-ಶ್ರೀಕಂಠ.ಚೌಕೀಮಠ

 

==================

“ತಲೆಬಾಗಿದ ಪರಂಪರೆ, ತಲೆಎತ್ತಿದ ಅವಿವೇಕ”

========================

ಶ್ರೀಕಂಠ ಚೌಕೀಮಠ

=============================

(ವಿಶೇಷ ಸೂಚನೆ : ಈ ಲೇಖನವನ್ನು ಓದುವ ಮುನ್ನ ೦೨-೦೯-೨೦೨೫ರಂದು ಕಲಬುರಗಿಯಲ್ಲಿ ನಡೆದ “ಬಸವ ಸಂಸ್ಕೃತಿ ಅಭಿಯಾನ”ದ ವಿದ್ಯಾರ್ಥಿಗಳ ಸಂವಾದದ ವಿಡಿಯೋ, ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು, ಪೂಜ್ಯ ಸಾಣೇಹಳ್ಳಿ ಶ್ರೀಗಳ ಪಾದಪೂಜೆ ಹಾಗೂ ಒಂದು ಕುಟುಂಬದ ಶವಸಂಸ್ಕಾರ ಮಾಡುತ್ತಿರುವ ಚಿತ್ರಗಳು, ಜೊತೆಗೆ ಪರಮಪೂಜ್ಯ ಲಿಂ. ಶರಣಬಸವಪ್ಪ ಅಪ್ಪ ಅವರು ತಮ್ಮ ಇಳಿ ವಯಸ್ಸಿನಲ್ಲಿ, ವಯಸ್ಸಿನಲ್ಲಿ ಅತ್ಯಂತ ಕಿರಿಯವರಾದ ಕಲಕೇರಿಯ ಶಿವಾಚಾರ್ಯರ ಪಾದಪೂಜೆ ಮಾಡಿ ಪಾದೋದಕ ಸ್ವೀಕರಿಸುತ್ತಿರುವ ವಿಡಿಯೋಗಳನ್ನು ಓದುಗರು ಸೂಕ್ಷ್ಮವಾಗಿ ಅವಲೋಕಿಸಲು ಪ್ರಾರ್ಥನೆ ಲೇಖಕ)

ಇದೊಂದು ವಿಡಿಯೋ ಮಾತ್ರವಲ್ಲ.ಇದು ಒಂದು ಪರಂಪರೆಯ ಆತ್ಮ. ಒಂದು ಗುರು–ಶಿಷ್ಯ ಸಂಬಂಧದ ಗಂಭೀರತೆ.
ಒಂದು ಮಠಸಂಸ್ಕೃತಿಯ ವಿನಯಭಾವ.ಮತ್ತು ಇಂದಿನ ಗದ್ದಲಮಯ ಧಾರ್ಮಿಕ ವೇದಿಕೆಗಳ ನಡುವೆ ನಿಧಾನವಾಗಿ ಕಳೆದುಹೋಗುತ್ತಿರುವ “ಆತ್ಮಸಂಸ್ಕಾರ” ಎಂಬ ಮೌಲ್ಯದ ಜೀವಂತ ಸಾಕ್ಷಿ.

ಪರಮಪೂಜ್ಯ ಲಿಂ. ಶರಣಬಸವಪ್ಪ ಅಪ್ಪ ಅವರು ತಮ್ಮ ಇಳಿ ವಯಸ್ಸಿನಲ್ಲಿ, ವಯಸ್ಸಿನಲ್ಲಿ ಅತ್ಯಂತ ಕಿರಿಯವರಾದ ಕಲಕೇರಿಯ ಶಿವಾಚಾರ್ಯರ ಪಾದಪೂಜೆ ಮಾಡಿ ಪಾದೋದಕ ಸ್ವೀಕರಿಸುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಹದ್ದು.(ಕಲಕೇರಿಯ ಶಿವಾಚಾರ್ಯರು ಪೂಜ್ಯ ಶರಣಬಸವೇಶ್ವರರ ಗುರುಗಳಾದ ಕಲಕೇರಿಯ ಶ್ರೀ ಮರುಳಸಿದ್ದ ಶಿವಾಚಾರ್ಯರ ಮಠದ ಪೀಠಸ್ಥರು.)

ಅದು ವ್ಯಕ್ತಿಯೊಬ್ಬನಿಗೆ ಸಲ್ಲಿಸಿದ ಶರಣಾಗತಿ ಅಲ್ಲ.ಅದು ಗುರುಪೀಠಕ್ಕೆ ಸಲ್ಲಿಸಿದ ಗೌರವ.
ಅದು ದೇಹಕ್ಕೆ ಸಲ್ಲಿಸಿದ ನಮಸ್ಕಾರವಲ್ಲ — ಪರಂಪರೆಯ ಚೈತನ್ಯಕ್ಕೆ ತಲೆಬಾಗಿದ ವಿನಯ.

ಪರಮಪೂಜ್ಯ ಲಿಂ. ಶರಣಬಸವಪ್ಪ ಅಪ್ಪ ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ ದಿನಗಳಲ್ಲಿ ನನ್ನ ತಂದೆಯವರ ಸಹಪಾಠಿಗಳೂ, ಅತ್ಯಂತ ಆತ್ಮೀಯ ಸ್ನೇಹಿತರೂ ಆಗಿದ್ದರು. ಆದರೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಅವರು ಎಂದಿಗೂ ನನ್ನ ತಂದೆಯವರಿಂದ ಪಾದನಮಸ್ಕಾರ ಮಾಡಿಸಿಕೊಂಡವರಲ್ಲ.

ಅಂಥ ಅಪರೂಪದ ವಿನಯಶೀಲ ವ್ಯಕ್ತಿತ್ವದ ಮಹನೀಯರು, ತಮ್ಮ ಗುರುಪರಂಪರೆಯ ಪೀಠದ ಎದುರು ಭಕ್ತಿಪೂರ್ವಕವಾಗಿ  ಪಾದಪೂಜೆ ಮಾಡುತ್ತಿರುವ ದೃಶ್ಯವನ್ನು ನೋಡಿದ ಕ್ಷಣ, ೨೦೨೫ರ ಸೆಪ್ಟೆಂಬರ್‌ನಲ್ಲಿ ಕಲಬುರಗಿಯಲ್ಲಿ ನಡೆದ “ಬಸವ ಸಂಸ್ಕೃತಿ ಅಭಿಯಾನ”ದ ಒಂದು ಘಟನೆ ಮನಸ್ಸಿನಲ್ಲಿ ಮಿಂಚಿನಂತೆ ಮರುಕಳಿಸಿತು.

ಅಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಯುತ್ತಿತ್ತು. ಹಲವಾರು ವಿದ್ಯಾರ್ಥಿಗಳು ಬಸವಣ್ಣನವರ ಕುರಿತು ತಮ್ಮ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಷ್ಟರಲ್ಲಿ ಒಬ್ಬ ಎತ್ತರದ, ಕಪ್ಪನೆಯ, ಬೋಳುತಲೆಯ ವ್ಯಕ್ತಿ ಏಕಾಏಕಿ ಒಬ್ಬ ವಿದ್ಯಾರ್ಥಿನಿಯಿಂದ ಮೈಕ್ ಕಸಿದುಕೊಂಡು, “ಕಲಬುರಗಿ ಕೆ.ಸಿ.ಡಿ.ಟಿ. ಪ್ರೌಢಶಾಲೆಯ ಸ್ನೇಹಾ” ಎಂದು ತಾನೇ ಪರಿಚಯಿಸಿಕೊಂಡ ವಿದ್ಯಾರ್ಥಿನಿಗೆ ಮೈಕ್ ನೀಡಿದರು. ಅದಕ್ಕೂ ಮೊದಲು ಆ ಬಾಲಕಿಗೆ ತಾನು ಬರೆದುಕೊಂಡು ಬಂದ ಪ್ರಶ್ನೆಯ ಚೀಟಿಯನ್ನು ನೀಡಿ ಕೆಲವು ಸೂಚನೆಗಳನ್ನು ನೀಡುತ್ತಿರುವ ದೃಶ್ಯ ಲೈವ್ ವಿಡಿಯೋದಲ್ಲೇ ಸ್ಪಷ್ಟವಾಗಿ ಸೆರೆಯಾಗಿತ್ತು.

ನಂತರ ಸ್ನೇಹಾ ಎಂಬ ವಿದ್ಯಾರ್ಥಿನಿ ಆ ಪ್ರಶ್ನೆಯನ್ನು ಓದಿದಳು. ಆದರೆ ಆಕೆಯ ಕನ್ನಡ ಭಾಷೆಯ ಮೇಲಿನ ಹಿಡಿತ, ತಡವರಿಸುತ್ತಿದ್ದ ಉಚ್ಚಾರಣೆ, ಮತ್ತು ಪ್ರಶ್ನೆ ಓದುವಾಗ ಕಂಡ ಸಂಕೋಚ — ಇವೆಲ್ಲವೂ ಆ ಪ್ರಶ್ನೆ ಆಕೆಯ ಮನಸ್ಸಿನಿಂದ ಹುಟ್ಟಿದದ್ದಲ್ಲ ಎಂಬುದನ್ನು ಕ್ಷಣಾರ್ಧದಲ್ಲೇ ಬಹಿರಂಗಪಡಿಸಿತು.

ಆಕೆಗೆ ಬರೆದು ಕೊಟ್ಟ ಪ್ರಶ್ನೆ ಹೀಗಿತ್ತು:

“ಕರ್ನಾಟಕದಲ್ಲಿ ವಿಶ್ವಗುರು ಬಸವಣ್ಣನವರಗಿಂತ ದೊಡ್ಡವರಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಶ್ರೀ ಶರಣ ಬಸವೇಶ್ವರರಿಗಿಂತ ಯಾರು ದೊಡ್ಡವರಿಲ್ಲ. ಇಂತಹ ಸಂಸ್ಥಾನದಲ್ಲಿ, ಇಂಥವರು ಲಿಂಗೈಕ್ಯರಾದಾಗ ಅವರ ತಲೆಯ ಮೇಲೆ ಪಾದವಿಡುವುದು ಸರಿಯೇ?”

ಈ ಪ್ರಶ್ನೆ “ಬಸವ ಸಂಸ್ಕೃತಿ ಅಭಿಯಾನ”ದಂತಹ ಕಾರ್ಯಕ್ರಮದಲ್ಲಿ ಉದ್ಭವಿಸಬೇಕಾದ ಸಹಜ ಜಿಜ್ಞಾಸೆಯ ಪ್ರಶ್ನೆಯಾಗಿರಲಿಲ್ಲ. ಅದು ಪೂರ್ವಸಿದ್ಧತೆಯೊಂದಿಗೆ ರೂಪಿಸಲಾದ ಪ್ರಚೋದನಾತ್ಮಕ ಪ್ರಶ್ನೆ ಎಂಬುದು ಸ್ಪಷ್ಟವಾಗುತ್ತಿತ್ತು. ಏನೂ ಅರಿಯದ ಒಂದು ಬಾಲಕಿಯ ಬಾಯಲ್ಲಿ ಇಂತಹ ಪ್ರಶ್ನೆಯನ್ನು ಹಾಕಿಸಿ, ತಮ್ಮ ಪೂರ್ವಗ್ರಹಗಳನ್ನು “ಸಂವಾದ”ದ ರೂಪದಲ್ಲಿ ವೇದಿಕೆಗೆ ತರುವ ಮೂಲಕ ಅಲ್ಲಿನ ಸಂಘಟಕರು ತಮ್ಮ “ಸಂಸ್ಕೃತಿ”ಯ ನಿಜಸ್ವರೂಪವನ್ನು ಅನಾವರಣಗೊಳಿಸಿದರು.

ಈ ಪ್ರಶ್ನೆಗೆ ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಭಾಲ್ಕಿ ಶ್ರೀಗಳು ಅತ್ಯಂತ ಸಮತೋಲನದಿಂದ ಉತ್ತರಿಸುತ್ತಿದ್ದರು:

ಶರಣ ಸಿದ್ಧಾಂತದಲ್ಲಿ ಸ್ಥಾವರಜಂಗಮ ಸಿದ್ಧಾಂತಗಳಿದ್ದು, ಚೈತನ್ಯಕ್ಕೆ ಬೆಲೆ ಇದೆ; ಜಡತ್ವಕ್ಕಲ್ಲ. ವ್ಯಕ್ತಿ ಲಿಂಗೈಕ್ಯರಾದ ಮೇಲೆ ಅದು ಜಡವಾಗುತ್ತದೆ. ಅದು ಸ್ಥಾವರ ಸ್ಥಿತಿ. ಅದನ್ನು ಜಂಗಮ ತತ್ವದಂತೆ ಪಾದೋದಕ ಸಿಂಪಡಿಸಿ ಜಡತ್ವದಲ್ಲಿ ಚೈತನ್ಯವನ್ನು ತುಂಬುವ ಕ್ರಿಯೆ ಜರುಗುತ್ತದೆ…”

ಅವರು ಶರಣ ತತ್ವದ ಆಧ್ಯಾತ್ಮಿಕ ಅರ್ಥವನ್ನು ಶಾಂತವಾಗಿ ವಿವರಿಸುತ್ತಿರುವಾಗಲೇ, ಏಕಾಏಕಿ ಅವರ ಕೈಯಿಂದ ಮೈಕ್ ಕಸಿದುಕೊಂಡ ಪೂಜ್ಯ ಸಾಣೇಹಳ್ಳಿ ಶ್ರೀಗಳು ಮಾತು ಆರಂಭಿಸಿದರು.

“ಸ್ವಾಮೀಜಿಯವರು ಬಹಳ ಸೂಕ್ತ ಉತ್ತರವನ್ನು ಕೊಟ್ಟಿದ್ದಾರೆ. ಸ್ಥಾವರಜಂಗಮ ಅಂತ. ಬಹುತೇಕ ಕಡೆಗಳಲ್ಲಿ ಈ ಜಂಗಮ ಸ್ವಾಮಿಗಳಿದ್ದಾರಲ್ಲ ಅವರಿಗೆ ವಿವೇಕ ಕಡಿಮೆ ಇದೆ. ವಿವೇಕ ಕಡಿಮೆ ಇರುವದರಿಂದ ಅವರು ಯಾರೇ ಸತ್ತರೂ ಅವರ ತಲೆಯ ಮೇಲೆ ಪಾದವಿಟ್ಟು ಆಶೀರ್ವಾದ ಮಾಡುತ್ತಾರೆ. ಇದು ಅವಿವೇಕದ ಪರಮಾವಧಿ. ಇದನ್ನು ಯಾರೇ ಮಾಡಿದರೂ ಕೂಡಾ ವಿರೋಧ ಮಾಡಬೇಕು. ಪಾದೋದಕ ಹಾಕುವದರಲ್ಲಿ ಅರ್ಥವಿದೆ. ಪಾದವಿಡುವದರಲ್ಲಿ ಖಂಡಿತ ಅರ್ಥವಿಲ್ಲ ಎಂದು ನಾವು ಈ ವೇದಿಕೆ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.”

ಈ ಮಾತುಗಳು ಕೇವಲ ಒಂದು ವೈಯಕ್ತಿಕ ಅಭಿಪ್ರಾಯವಾಗಿರಲಿಲ್ಲ.
ಅವು ಒಂದು ಸಮುದಾಯದ ಶತಮಾನಗಳ ಧಾರ್ಮಿಕ ಆಚರಣೆಗಳ ಮೇಲೆ ಸಾರ್ವಜನಿಕವಾಗಿ ಎಸೆಯಲಾದ ಅವಹೇಳನದ ಕಲ್ಲಾಗಿತ್ತು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠ — ಕರ್ನಾಟಕದ ಅತ್ಯಂತ ಪ್ರಸಿದ್ಧ, ಪ್ರಭಾವಶಾಲಿ ಮತ್ತು ಶ್ರೀಮಂತ ಮಹಾಸಂಸ್ಥಾನಗಳಲ್ಲಿ ಒಂದು. ಅದರ ಆಡಳಿತ ಮತ್ತು ಧಾರ್ಮಿಕ ವಿಧಿವಿಧಾನಗಳು ಪೂಜ್ಯ ಶರಣಬಸವೇಶ್ವರ ಅಪ್ಪ ಅವರ ಧರ್ಮಪತ್ನಿಯವರ ನೇತೃತ್ವದಲ್ಲಿ ನಡೆಯುತ್ತವೆ.

ಇಂತಹ ಮಹಾಸಂಸ್ಥಾನದ ಆಂತರಿಕ ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುವುದೇ ಸೂಕ್ಷ್ಮ ವಿಷಯವಾಗಿರುವಾಗ, ಅದನ್ನೇ “ಅವಿವೇಕದ ಪರಮಾವಧಿ” ಎಂದು ಘೋಷಿಸುವುದು ಯಾವ ಸಂಸ್ಕೃತಿಯ ಭಾಷೆ? ಯಾವ ಆಧ್ಯಾತ್ಮಿಕ ವಿವೇಕ?

ಪೂಜ್ಯ ಶರಣಬಸವೇಶ್ವರ ಅಪ್ಪ ಅವರು ಲಿಂಗೈಕ್ಯರಾದದ್ದು ಆಗಸ್ಟ್ ೧೪, ೨೦೨೫.
“ಬಸವ ಸಂಸ್ಕೃತಿ ಅಭಿಯಾನ” ಕಲಬುರಗಿಯಲ್ಲಿ ನಡೆದದ್ದು ಸೆಪ್ಟೆಂಬರ್ ೨, ೨೦೨೫.
ಅಂದರೆ ಕೇವಲ ಹದಿನೇಳು ದಿನಗಳ ಅಂತರ.

ತಮ್ಮ ಮಹಾಸಂಸ್ಥಾನದ ಹಿರಿಯರನ್ನು ಕಳೆದುಕೊಂಡ ಆ ಮಹಾಮನೆ ಇನ್ನೂ ಶೋಕದ ನಿಶ್ಶಬ್ದತೆಯಿಂದ ಹೊರಬಂದಿರಲಿಲ್ಲ. ಅಂಗಳದಲ್ಲಿ ನೆನಪುಗಳ ಭಾರ ಇತ್ತು. ಭಕ್ತರ ಕಣ್ಣಲ್ಲಿ ಕಣ್ಣೀರು ಇನ್ನೂ ಒಣಗಿರಲಿಲ್ಲ. ಪೂಜ್ಯ ಅಪ್ಪರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲಾರದೆ ಸಾವಿರಾರು ಮನಸ್ಸುಗಳು ಒಳಗೆ ಒಳಗೆ ಕುಸಿದುಕೊಳ್ಳುತ್ತಿದ್ದವು.

ಆದರೂ ಆ ಮಹಾಮನೆ ತನ್ನ ವೈಯಕ್ತಿಕ ದುಃಖವನ್ನು ಬದಿಗಿಟ್ಟು, ಕಲಬುರಗಿಗೆ ಆಗಮಿಸಿದ ಎಲ್ಲ ಮಹಾಸ್ವಾಮಿಗಳಿಗೆ ಪೂಜೆ–ಪ್ರಸಾದದ ಆತಿಥ್ಯ ನೀಡಿತು. ಅದು ಕೇವಲ ಸಂಪ್ರದಾಯದ ಕರ್ತವ್ಯವಾಗಿರಲಿಲ್ಲ; ಶರಣ ಸಂಸ್ಕೃತಿಯ ಹೃದಯವಂತಿಕೆ.

ಆದರೆ ಆ ಆತಿಥ್ಯಕ್ಕೆ ಪ್ರತಿಯಾಗಿ ದೊರೆತದ್ದು ಏನು?

“ಜಂಗಮ ಸ್ವಾಮಿಗಳಿಗೆ ವಿವೇಕ ಕಡಿಮೆ” ಎಂಬ ಸಾರ್ವಜನಿಕ ಘೋಷಣೆ.
“ಇದು ಅವಿವೇಕದ ಪರಮಾವಧಿ” ಎಂಬ ವೇದಿಕೆಯ ತೀರ್ಪು.

ಒಂದು ಶೋಕಸಂತಪ್ತ ಮಹಾಮನೆಯ ಧಾರ್ಮಿಕ ಆಚರಣೆಯನ್ನು, ಅದರ ಭಕ್ತಿಯ ಆಂತರ್ಯವನ್ನು, ಅದರ ಶತಮಾನಗಳ ಗುರುಪರಂಪರೆಯನ್ನು — ಅದೇ ಮನೆಯ ಅಂಗಳದಲ್ಲಿ ನಿಂತು ಸಾರ್ವಜನಿಕವಾಗಿ ಅವಹೇಳನ ಮಾಡಿದ ಕ್ಷಣದಲ್ಲಿ, ಅಲ್ಲಿ ನೋವಾದದ್ದು ಕೇವಲ ಒಂದು ಮಠವಲ್ಲ; ಸಾವಿರಾರು ಭಕ್ತರ ಹೃದಯ.

ಮರುದಿನ ಕರ್ನಾಟಕದ ಪ್ರಮುಖ ದಿನಪತ್ರಿಕೆಗಳು ಮತ್ತು ದೃಶ್ಯಮಾಧ್ಯಮಗಳು ಸಾಣೇಹಳ್ಳಿ ಶ್ರೀಗಳು ಜಂಗಮ ಸ್ವಾಮಿಗಳ ಕುರಿತು ಮಾಡಿದ ಈ ಹೇಳಿಕೆಯನ್ನು ರಾಷ್ಟ್ರೀಯ ಸುದ್ದಿಯಂತೆ ಪ್ರಸಾರ ಮಾಡಿದ್ದವು. ಆದರೆ ಆ ಸುದ್ದಿಗಳ ಹಿಂದೆ ಮೌನವಾಗಿ ರಕ್ತಸ್ರಾವವಾಗುತ್ತಿದ್ದ ಭಕ್ತಮನಸ್ಸಿನ ನೋವನ್ನು ಯಾರೂ ನೋಡಲಿಲ್ಲ.

 

ಒಂದು ವಿಷಯವನ್ನು ಇಲ್ಲಿ ಪೂಜ್ಯ ಸಾಣೇಹಳ್ಳಿ ಶ್ರೀಗಳಿಗೇ ಸ್ಪಷ್ಟವಾಗಿ ನೆನಪಿಸಬೇಕಾಗಿದೆ.
ಯಾವ ಜಂಗಮರಾಗಲಿ, ಜಂಗಮ ಸ್ವಾಮಿಗಳಾಗಲಿ — ಯಾರ ಮನೆಯ ಅಂಗಳಕ್ಕೂ, ಯಾವ ಕಾರ್ಯಕ್ರಮಕ್ಕೂ ಆಮಂತ್ರಣವಿಲ್ಲದೆ ಹೋಗುವುದಿಲ್ಲ. ವಿಶೇಷವಾಗಿ ಶರಣಪರಂಪರೆಯ ಮಹಾಸಂಸ್ಥಾನಗಳ ಧಾರ್ಮಿಕ ವಿಧಿವಿಧಾನಗಳಲ್ಲಿ ಅವರು “ಆಮಂತ್ರಿತ ಅತಿಥಿಗಳು”; ಅನಧಿಕೃತ ಪ್ರವೇಶಿಗಳು ಅಲ್ಲ.

ಮೂಲತಃ ಜೀವರ್ಗಿ ತಾಲೂಕಿನ ಅರಳಗುಂಡಿಯವರಾದ ಶರಣಬಸವೇಶ್ವರರು (೧೭೪೬–೧೮೨೨), ವೀರಶೈವ ಲಿಂಗಾಯತ ಧರ್ಮದ ಸಂದೇಶಗಳನ್ನು ಸಾರುತ್ತ ಗುಲಬರ್ಗಾಕ್ಕೆ ಬಂದು ನೆಲೆನಿಂತು, ಅದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತ್ರಿವಿಧ ದಾಸೋಹ ಮೆರೆದದ್ದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.

ಶರಣಬಸವೇಶ್ವರರಿಗೆ ಕಲಬುರಗಿಯಲ್ಲಿ ನೆಚ್ಚಿನ ಶಿಷ್ಯರಾಗಿ ನಿಂತವರು ದೊಡ್ಡಪ್ಪ ಶರಣರು. ಗುರು–ಶಿಷ್ಯರ ಈ ಆತ್ಮಸಂಬಂಧವೇ ನಂತರ ಒಂದು ಮಹಾಪರಂಪರೆಯಾಗಿ ಬೆಳೆದದ್ದು. ಅದಕ್ಕಾಗಿಯೇ ಇಂದು ಶರಣಬಸವೇಶ್ವರರ ಸಮಾಧಿ ಇರುವ ಗರ್ಭಗೃಹದಲ್ಲಿ, ಅವರ ಗುರುಗಳಾದ ಕಲಕೇರಿಯ ಶ್ರೀ ಮರುಳಸಿದ್ದ ಶಿವಾಚಾರ್ಯರು ಮತ್ತು ಶರಣಬಸವೇಶ್ವರರ ಜೋಡಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅದು ಕೇವಲ ಮೂರ್ತಿಪ್ರತಿಷ್ಠಾಪನೆ ಅಲ್ಲ; ಗುರು–ಶಿಷ್ಯರ ಅವಿನಾಭಾವ ಬಾಂಧವ್ಯಕ್ಕೆ ನೀಡಿದ ಶಾಶ್ವತ ಆಧ್ಯಾತ್ಮಿಕ ರೂಪ.

ಇಂದು ಅದೇ ಭಕ್ತರ ಆರಾಧನಾ ಬಿಂದುವಾಗಿದೆ.
ಅದೇ ಪರಂಪರೆಯನ್ನು, ಅದೇ ಗುರುಸ್ಮರಣೆಯ ವಿನಯವನ್ನು, ಅದೇ ಆಧ್ಯಾತ್ಮಿಕ ಸಂಬಂಧದ ಗೌರವವನ್ನು ಪೂಜ್ಯ ಶರಣಬಸವಪ್ಪ ಅಪ್ಪ ಅವರು ತಮ್ಮ ಬದುಕಿನ ಕೊನೆಯ ಉಸಿರಿನವರೆಗೂ ಅತ್ಯಂತ ಭಕ್ತಿಯಿಂದ ಮುಂದುವರೆಸಿಕೊಂಡು ಬಂದಿದ್ದರು.

ಅವರು ಜೀವಮಾನವಿಡೀ ಗೌರವಿಸಿಕೊಂಡು, ಭಕ್ತಿಯಿಂದ ಪೂಜಿಸಿಕೊಂಡು ಬಂದ ಆ ಪವಿತ್ರ ಗುರುಸಂಬಂಧವನ್ನು, ಗುರುಪೀಠದ ಮೇಲಿನ ಅವಿನಾಭಾವ ಬಾಂಧವ್ಯವನ್ನು, ಮತ್ತು ಮಹಾಸಂಸ್ಥಾನದ ಧಾರ್ಮಿಕ ಆಚರಣೆಗಳನ್ನು “ಅವಿವೇಕತನ” ಹಾಗೂ “ಅವಿವೇಕತನದ ಪರಮಾವಧಿ” ಎಂದು ಸಾರ್ವಜನಿಕ ವೇದಿಕೆಯಲ್ಲಿ ಘೋಷಿಸುವುದು — ಅದೂ ಪೂಜ್ಯ ಶರಣಬಸವಪ್ಪ ಅಪ್ಪ ಅವರು ಲಿಂಗದೊಳಗಾಗಿ ಕೇವಲ ಹದಿನೇಳು ದಿನಗಳೊಳಗೆ ಅದೇ ಕ್ಷೇತ್ರಕ್ಕೆ ತೆರಳಿ ಹೇಳುವುದು — ಪೂಜ್ಯ ಸಾಣೇಹಳ್ಳಿ ಶ್ರೀಗಳ ಹಿರಿತನಕ್ಕೂ ಯೋಗ್ಯವಲ್ಲ; ಅವರ ಆಧ್ಯಾತ್ಮಿಕ ವ್ಯಕ್ತಿತ್ವಕ್ಕೂ ಭೂಷಣವಲ್ಲ.

ಇದರಲ್ಲಿನ ವಿಪರ್ಯಾಸ ಇನ್ನೂ ಗಾಢವಾಗಿದೆ.

ಸ್ವತಃ ಪೂಜ್ಯ ಸಾಣೇಹಳ್ಳಿ ಶ್ರೀಗಳು ದಾವಣಗೇರಿಯ ಶ್ಯಾಮನೂರು ಕುಟುಂಬದಲ್ಲಿ ಪಾದಪೂಜೆ ಮಾಡಿಸಿಕೊಳ್ಳುತ್ತಿರುವ ಚಿತ್ರಗಳು ಸಾರ್ವಜನಿಕ ವಲಯದಲ್ಲಿವೆ. ಹಾಗೆಯೇ ಒಂದು ಶವಸಂಸ್ಕಾರದ ಸಂದರ್ಭದಲ್ಲಿ, ಒಂದು ಮೊರದ ಮೇಲೆ ಮತ್ತೊಂದು ಮೊರವನ್ನು ಮುಚ್ಚಿ ಪ್ರದಕ್ಷಿಣೆ ಮಾಡುವ ವಿಧಿವಿಧಾನದ ಚಿತ್ರಗಳೂ ಹರಿದಾಡುತ್ತಿವೆ. ಈ ಆಚರಣೆಗಳ ಕುರಿತು ಇದುವರೆಗೆ ಲಭ್ಯವಾಗಿರುವ ಇಪ್ಪತ್ತ್ನಾಲ್ಕು ಸಾವಿರಕ್ಕೂ ಹೆಚ್ಚು ಶರಣರ ವಚನಗಳಲ್ಲಿ ಯಾವುದೇ ನೇರ ಉಲ್ಲೇಖವಿದೆಯೇ ಎಂಬ ಪ್ರಶ್ನೆಯನ್ನು ನಾನು ಇಲ್ಲಿ ಎತ್ತುವುದಿಲ್ಲ. ಅದರ ಹಿನ್ನಲೆಗಳನ್ನು ಅಗೆಯಲು ಹೋಗುವುದಿಲ್ಲ. ಅವರವರ ಸಂಪ್ರದಾಯಗಳನ್ನು ಪ್ರಶ್ನಿಸುವ ಉದ್ದೇಶವೂ ನನ್ನದಲ್ಲ.

 

ಆದರೆ ಪ್ರಶ್ನೆ ಒಂದೇ.

ಸಾರ್ವಜನಿಕ ವೇದಿಕೆಯಲ್ಲಿ ಜಾತಿ ಜಂಗಮರನ್ನು “ಅವಿವೇಕಿಗಳು” ಎಂದು ಕರೆಯುವ ನೈತಿಕ ಹಕ್ಕು ಯಾರಿಗಿದೆ?
ನಾನು ಇಲ್ಲಿ ಕೋಪದಿಂದ ಕೇಳುತ್ತಿಲ್ಲ.
ಅಪಮಾನ ಮಾಡುವ ಉದ್ದೇಶದಿಂದಲೂ ಕೇಳುತ್ತಿಲ್ಲ.
ಒಂದು ನೋವಿನ ಮನಸ್ಸಿನಿಂದ, ವಿನಮ್ರವಾಗಿ ಕೇಳುತ್ತಿರುವೆ —
ಇತರರ ಆಚರಣೆಗಳನ್ನು “ಅವಿವೇಕ” ಎಂದು ಘೋಷಿಸುವ ಮುನ್ನ, ತಮ್ಮದೇ ಆಚರಣೆಗಳತ್ತ ಆತ್ಮಾವಲೋಕನದಿಂದ ನೋಡುವುದು ನಿಜವಾದ ವಿವೇಕವಲ್ಲವೇ?

ಸ್ವತಃ ಪೂಜ್ಯ ಭಾಲ್ಕಿ ಶ್ರೀಗಳು “ಸ್ಥಾವರ–ಜಂಗಮ” ತತ್ವದ ಆಧ್ಯಾತ್ಮಿಕ ಅರ್ಥವನ್ನು ಸಮತೋಲನದಿಂದ ವಿವರಿಸುತ್ತಿರುವ ಸಂದರ್ಭದಲ್ಲಿ, ಅವರ ಉತ್ತರವನ್ನು ಅರ್ಧದಲ್ಲೇ ನಿಲ್ಲಿಸಿ ಉದ್ದೇಶಪೂರ್ವಕವಾಗಿ ಮಧ್ಯಪ್ರವೇಶಿಸಿ ಜಂಗಮರ ಕುರಿತು ಅವಹೇಳನಾತ್ಮಕವಾಗಿ ಮಾತನಾಡಬೇಕಾದ ಅಗತ್ಯವೇನಿತ್ತು? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಪೂಜ್ಯ ಸಾಣೇಹಳ್ಳಿ ಶ್ರೀಗಳಿಗೆ ಜಾತಿ ಜಂಗಮರ ಮೇಲೆ ಅಥವಾ ಜಂಗಮ ಸ್ವಾಮಿಗಳ ಮೇಲೆ ಅಸಮಾಧಾನ, ಆಕ್ರೋಶ ಅಥವಾ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೆ, ಅದನ್ನು ಚರ್ಚಿಸಲು ಬೇರೆ ವೇದಿಕೆಗಳ ಕೊರತೆಯಿರಲಿಲ್ಲ. ಆದರೆ “ಬಸವ ಸಂಸ್ಕೃತಿ ಅಭಿಯಾನ”ವೆಂಬ ಹೆಸರಿನ ವೇದಿಕೆಯನ್ನು ಬಳಸಿಕೊಂಡು, ಒಂದು ಸಮುದಾಯದ ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕವಾಗಿ “ಅವಿವೇಕ” ಎಂದು ಘೋಷಿಸುವ ಅಗತ್ಯವೇನಿತ್ತು? ಬಸವ ಸಂಸ್ಕೃತಿಯ ಅರ್ಥವೇ ಸಾಮರಸ್ಯವಾಗಿರುವಾಗ, ಅದೇ ವೇದಿಕೆಯನ್ನು ವಿಭಜನೆಯ ಭಾಷೆಗೆ ಬಳಸಿಕೊಂಡದ್ದು ನಿಜಕ್ಕೂ ವಿಷಾದನೀಯ.

ಯಾಕೆಂದರೆ ವೀರಶೈವ–ಲಿಂಗಾಯತ ಪರಂಪರೆ ಕೇವಲ ತತ್ವಗಳ ಸಂಗ್ರಹವಲ್ಲ; ಅದು ಸಂಬಂಧಗಳ ಸಂಸ್ಕೃತಿ.
ಅಲ್ಲಿ ಗುರು ಎಂದರೆ ಅಧಿಕಾರವಲ್ಲ — ಆತ್ಮಸಂಬಂಧ.
ಜಂಗಮ ಎಂದರೆ ಜಾತಿಯಲ್ಲ — ಚೈತನ್ಯದ ಪ್ರತೀಕ.
ಪಾದಪೂಜೆ ಎಂದರೆ ದೇಹಾರಾಧನೆ ಅಲ್ಲ — ಪರಂಪರೆಯ ಎದುರು ಅಹಂಕಾರ ಕರಗುವ ಆಧ್ಯಾತ್ಮಿಕ ಕ್ಷಣ.

ಇಂದು ಸಮಸ್ಯೆ ಆಚರಣೆಗಳಲ್ಲಿ ಇಲ್ಲ;

ಅವುಗಳ ಒಳಾರ್ಥವನ್ನು ಅರಿಯದೆ, ವೇದಿಕೆಗಳ ಮೇಲೆ ನಿಂತು ತೀರ್ಪು ಕೊಡುವ ಮನೋಭಾವದಲ್ಲಿದೆ. ಸಾವಿರಾರು ಭಕ್ತರ ನಂಬಿಕೆ, ಶತಮಾನಗಳ ಗುರು–ಶಿಷ್ಯ ಪರಂಪರೆ, ಒಂದು ಮಹಾಮನೆಯ ಭಾವನಾತ್ಮಕ ಸಂಸ್ಕೃತಿ — ಇವೆಲ್ಲವನ್ನೂ ಕೆಲವೇ ನಿಮಿಷಗಳ ಚಪ್ಪಾಳೆಗಾಗಿ “ಅವಿವೇಕ” ಎಂದು ಘೋಷಿಸುವುದು ಜ್ಞಾನವಲ್ಲ; ಅದು ಆತ್ಮಸಂಸ್ಕೃತಿಯ ಬಡತನ.

ಶರಣಬಸವಪ್ಪ ಅಪ್ಪ ಅವರ ಆ ಮೌನ ಪಾದಪೂಜೆಯ ವಿಡಿಯೋ, ಬಹುಶಃ ಸಾವಿರ ಭಾಷಣಗಳಿಗಿಂತ ದೊಡ್ಡ ಪಾಠವನ್ನು ಹೇಳುತ್ತದೆ —
ನಿಜವಾದ ಹಿರಿತನ ಎತ್ತರದ ಆಸನಗಳಲ್ಲಿ ಕಾಣಿಸುವುದಿಲ್ಲ; ತಲೆಬಾಗುವ ವಿನಯದಲ್ಲಿ ಕಾಣಿಸುತ್ತದೆ.

ಆದ್ದರಿಂದಲೇ ಇತಿಹಾಸದಲ್ಲಿ ಉಳಿಯುವವರು ವೇದಿಕೆಗಳ ಮೇಲೆ ಗಟ್ಟಿಯಾಗಿ ಕೂಗಿದವರು ಅಲ್ಲ; ಪರಂಪರೆಯ ಮುಂದೆ ಮೌನವಾಗಿ ತಲೆಬಾಗಿದವರು.

ಆದರೆ ಕೆಲವೊಮ್ಮೆ ರಂಗ ವೇದಿಕೆಯ ಮಧ್ಯಭಾಗದಲ್ಲಿ ಕುಳ್ಳಿರಿಸುವ ಗೌರವ, ಮುಖದ ಮೇಲೆ ಬೀಳುವ ರಂಗದ  ಬೆಳಕು, ಜಯಘೋಷಗಳು ಮತ್ತು ಚಪ್ಪಾಳೆಗಳು — ಎಂಥ ರಂಗಜಂಗಮ ವಯೋವೃದ್ಧರನ್ನೂ ಆತ್ಮಾವಲೋಕನದ ದಾರಿಯಿಂದ ತಪ್ಪಿಸುತ್ತವೆ ಎಂಬುದಕ್ಕೆ ಈ ಘಟನೆ ಒಂದು ನೋವಿನ ಸಾಕ್ಷಿಯಾಗಿ ಉಳಿಯುತ್ತದೆ.

*ಶ್ರೀಕಂಠ.ಚೌಕೀಮಠ

 

ಮಾನ್ಯ ಶ್ರೀ ರವಿಂದ್ರ ಕೋಳಕುರ

ಅದ್ಯಕ್ಷರು

ರಾಷ್ಟ್ರೀಯ ಬಸವದಳ ಬಸವಕಲ್ಯಾಣ

ತಮಗೆ ಗೌರವಪೂರ್ವಕ ವಂದನೆಗಳು.

ಇತ್ತೀಚೆಗೆ ತಮ್ಮ ಫೇಸಬುಕ್‌ ಖಾತೆಯಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕುರಿತು ತಾವು ಪ್ರಕಟಿಸಿರುವ ಬರಹವನ್ನು ಗಮನದಿಂದ ಓದಿದೆ. ಆ ಬರಹದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ವೈಚಾರಿಕ ಚರ್ಚೆಯ ಮಿತಿಯನ್ನು ಮೀರಿ, ಇತಿಹಾಸದ ಅಪೂರ್ಣ ಅರಿವು, ಪೂರ್ವಾಗ್ರಹ ಮತ್ತು ಸಂಶಯಾಸ್ಪದ ನಿರೂಪಣೆಯ ಮಿಶ್ರಣವಾಗಿ ಕಾಣುತ್ತವೆ ಎಂಬ ವಿಷಾದವನ್ನು ಆರಂಭದಲ್ಲೇ ದಾಖಲಿಸಬೇಕಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಕೆಲವು ಚಿತ್ರಗಳು ಮತ್ತು ಪೋಸ್ಟರ್‌ಗಳು, ವೀರಶೈವ–ಲಿಂಗಾಯತ ಸಮುದಾಯಗಳ ಮಧ್ಯೆ ಅನಗತ್ಯ ಕಲಹ ಸೃಷ್ಟಿಸಿ ದೂರದಿಂದ ಸಂಭ್ರಮಿಸುವ ಅತೃಪ್ತ ಮನೋಭಾವಗಳ ಉತ್ಪನ್ನವಾಗಿರುವುದು ಹೊಸ ವಿಷಯವೇನಲ್ಲ. ಆದರೆ ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು, ಚಿತ್ರಕ್ಕೂ ನಿಮ್ಮ ಬರಹಕ್ಕೂ ನೇರ ಸಂಬಂಧವೇ ಇಲ್ಲದಿದ್ದರೂ, ಅದನ್ನು ನೆಪವನ್ನಾಗಿ ಮಾಡಿಕೊಂಡು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಂತಹ ಮಹನೀಯರ ಕುರಿತು ಅವಹೇಳನಾತ್ಮಕ ಮತ್ತು ಇತಿಹಾಸವಿರೋಧಿ ಹೇಳಿಕೆಗಳನ್ನು ಮಾಡಿರುವುದು ಆಶ್ಚರ್ಯಕ್ಕಿಂತ ಹೆಚ್ಚು ನೋವನ್ನುಂಟುಮಾಡುತ್ತದೆ.

“ಇತಿಹಾಸದ ಅರಿವಿಲ್ಲದವರು ಹಾನಗಲ್ಲ ಕುಮಾರ ಶಿವಯೋಗಿಗಳು ವಚನಗಳನ್ನು ಸಂರಕ್ಷಿಸಿದರು ಎಂದು ನಂಬಿರಬಹುದು” ಎಂದು ತಾವು ಬರೆದಿದ್ದೀರಿ. ಆದರೆ ಅದೇ ವಾಕ್ಯ ತಮಗೇ ಪ್ರಶ್ನೆಯಾಗಿ ಮರಳಿ ಬರುತ್ತದೆ — ಇತಿಹಾಸವನ್ನು ಸಂಪೂರ್ಣವಾಗಿ ಓದಿರುವವರು ನಿಜವಾಗಿಯೂ ಇಂತಹ ನಿರ್ಣಯಕ್ಕೆ ಬರಬಹುದೇ?

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು “ಶರಣರ ಸಮಾನತೆಯ ತತ್ವಕ್ಕೆ ವಿರುದ್ಧವಾದ ವೀರಶೈವ ಮತವನ್ನು ಗಟ್ಟಿಗೊಳಿಸಲು ಶ್ರಮಿಸಿದರು” ಎಂಬ ನಿಮ್ಮ ಆರೋಪವು ಇತಿಹಾಸದ ದಾಖಲೆಗಳ ಎದುರು ನಿಲ್ಲಲಾರದು.  ಪೂಜ್ಯಾ ಕುಮಾರೇಶ್ವರರು, ಅಖಿಲ ಭಾರತ ವೀರಶೈವ ಮಹಾಸಭೆ, ಶರಣ ಸಾಹಿತ್ಯ, ಶಿವಯೋಗಮಂದಿರ, ಫ.ಗು. ಹಳಕಟ್ಟಿಯವರ ಸಂಬಂಧ — ಇವುಗಳ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಯಾರೂ ಇಂತಹ ಸರಳೀಕೃತ ಮತ್ತು ಪೂರ್ವಾಗ್ರಹಪೂರಿತ ಅಭಿಪ್ರಾಯ ವ್ಯಕ್ತಪಡಿಸುವ ಸಾಧ್ಯತೆಯೇ ಇಲ್ಲ.

ತಾವು ಬರೆದಿರುವ ಸಾಲುಗಳಲ್ಲಿ “ಅಜ್ಞಾನದಿಂದ ಸಾಹಿತ್ಯಕ್ಕೆ ಕಂಟಕ” ಎಂಬ ಮಾತಿದೆ. ಆದರೆ ಸಾಮಾಜಿಕ ಜಾಲತಾಣ ಒಂದು ಪೋಸ್ಟರ್‌ ಆಯ್ದುಕೊಂಡು, ಉಳಿದ ದಾಖಲೆಗಳನ್ನು ಮೌನವಾಗಿ ಕಡೆಗಣಿಸಿ ಸಮಾಜದ ಮುಂದೆ ಅರ್ಧಸತ್ಯವನ್ನು ಇಡುವುದೇ ಸಾಹಿತ್ಯ ಮತ್ತು ಇತಿಹಾಸಕ್ಕೆ ದೊಡ್ಡ ಕಂಟಕ ಎಂಬುದನ್ನು ತಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ದಯವಿಟ್ಟು ತಾವೇ ಒಮ್ಮೆ ಪ್ರಶ್ನಿಸಿಕೊಳ್ಳಿ —
ತಾವು ಪ್ರಕಟಿಸಿದ ಚಿತ್ರಕ್ಕೂ, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ, ವಚನ ಪಿತಾಮಹ ಶ್ರೀ ಫ.ಗು. ಹಳಕಟ್ಟಿಯವರಿಗೂ ಇರುವ ನಿಜವಾದ ಸಂಬಂಧವೇನು?

ಯಾವ ಕಾರಣಕ್ಕೆ ತಾವು ಅನಗತ್ಯವಾಗಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕುರಿತು ಹಾಗೂ ಅವರು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ಕುರಿತು ಸಮಾಜದಲ್ಲಿ ತಪ್ಪು ಕಲ್ಪನೆ ಮೂಡುವ ರೀತಿಯಲ್ಲಿ ಬರೆಯುತ್ತಿದ್ದೀರಿ ಎಂಬುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ವಚನ ಪಿತಾಮಹ ಶ್ರೀ ಫ.ಗು. ಹಳಕಟ್ಟಿಯವರಿಗೂ ಇದ್ದ ಆತ್ಮೀಯ ಮತ್ತು ಆಧ್ಯಾತ್ಮಿಕ ಸಂಬಂಧದ ಕುರಿತು, ಸ್ವತಃ ಫ.ಗು. ಹಳಕಟ್ಟಿಯವರೇ ತಮ್ಮ “ಶಿವಾನುಭವ” ಪತ್ರಿಕೆಯಲ್ಲಿ ಅಪಾರ ಗೌರವದಿಂದ ಬರೆದಿರುವ ಲೇಖನಗಳನ್ನು ದಯವಿಟ್ಟು ಒಮ್ಮೆ ಮನಸ್ಸು ತೆರೆದು ಓದಿ. ಇತಿಹಾಸವನ್ನು ಘೋಷಣೆಗಳಿಂದಲ್ಲ, ದಾಖಲೆಗಳಿಂದ ಅರಿಯಬೇಕು.

ಲೇಖನಗಳಿಗಾಗಿ :

  1. https://journal.shrikumar.com/archives/936
  2. https://journal.shrikumar.com/archives/4352
  3. https://journal.shrikumar.com/archives/2021

ಆ ಇಬ್ಬರು ಮಹಾತ್ಮರ ನಡುವೆ, ಇಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುವಂತಹ ಸಣ್ಣತನ, ದ್ವೇಷ ಅಥವಾ ಗೌರವದ ಕೊಳುಕುತನ ಇರಲಿಲ್ಲ. ಅವರ ಸಂಬಂಧವು ವೈಚಾರಿಕ ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ಶರಣ ಸಾಹಿತ್ಯದ ಮೇಲಿನ ಸಮಾನ ತಪಸ್ಸಿನ ಮೇಲೆ ನಿಂತಿತ್ತು.

ಅದಕ್ಕೇ ವಚನ ಪಿತಾಮಹ ಫ.ಗು. ಹಳಕಟ್ಟಿಯವರು ತಮ್ಮ ಮೊದಲ ಮುದ್ರಿತ “ವಚನಶಾಸ್ತ್ರ ಸಾರ” ಕೃತಿಯನ್ನು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಅರ್ಪಿಸಿದರು. ಅದು ಕೇವಲ ಅರ್ಪಣೆಯಲ್ಲ; ಇಬ್ಬರು ಮಹಾತ್ಮರ ನಡುವಿನ ದೈವಿಕ ಬಾಂಧವ್ಯದ ಇತಿಹಾಸದ ದಾಖಲೆ.

ಆ ಸಂಬಂಧಕ್ಕೆ ಇಂದು ಯಾರೊಬ್ಬರ ಪ್ರಮಾಣಪತ್ರವೂ ಸಮಾಜಕ್ಕೆ ಬೇಕಾಗಿಲ್ಲ.

ಮುಂದುವರಿದು ತಾವು —
“ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಿ, ಬಸವಣ್ಣನವರ ವೈಚಾರಿಕ ಕ್ರಾಂತಿಯನ್ನು ಪುನಃ ವೈದಿಕೀಕರಣದ ಚೌಕಟ್ಟಿನೊಳಗೆ ತರುವ ಪ್ರಯತ್ನ ಇವರಿಂದ ನಡೆಯಿತು” ಎಂದು ಬರೆದಿದ್ದೀರಿ.

ಆದರೆ ಇತಿಹಾಸದ ಪುಟಗಳನ್ನು ಸಂಪೂರ್ಣವಾಗಿ ಓದಿದ್ದರೆ, ಇಂತಹ ಆರೋಪ ಮಾಡುವ ಮೊದಲು ಕನಿಷ್ಠ ಒಂದು ಕ್ಷಣ ತಡೆದು ಯೋಚಿಸುತ್ತಿದ್ದಿರಿ.

ವಚನ ಪಿತಾಮಹ ಶ್ರೀ ಫ.ಗು. ಹಳಕಟ್ಟಿಯವರೇ 1933ರಲ್ಲಿ ಧಾರವಾಡದಲ್ಲಿ ನಡೆದ 11ನೇ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸಂಗತಿ ಬಹುಶಃ ತಮಗೆ ತಿಳಿದಿರಲಿಕ್ಕಿಲ್ಲ.

ಅದೂ ಹೋಗಲಿ — ತಾವು ಅಧ್ಯಕ್ಷರಾಗಿರುವ ರಾಷ್ಟ್ರೀಯ ಬಸವದಳದ ಸಂಸ್ಥಾಪಕರಾದ  ಶ್ರೀ ಮಾತೆ ಮಹಾದೇವಿಯವರೇ 1983ರಿಂದ 1992ರವರೆಗೆ ಅಖಿಲ ಭಾರತ ವೀರಶೈವ ಮಹಾಸಭೆಯ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದ ಸಂಗತಿಯೂ ತಮ್ಮ ಸ್ಮರಣೆಗೆ ಬಾರದಿರುವುದು ನಿಜಕ್ಕೂ ದುರಂತಕರ.

ಹಾಗಾದರೆ ಪ್ರಶ್ನೆ ಉದ್ಭವಿಸುತ್ತದೆ —
ಫ.ಗು. ಹಳಕಟ್ಟಿಯವರೂ ತಪ್ಪೇ?
ಮಾತೆ ಮಹಾದೇವಿಯವರೂ ತಪ್ಪೇ?
ಅಥವಾ ಇತಿಹಾಸವನ್ನು ಇಂದಿನ ರಾಜಕೀಯ ಮತ್ತು ಪೂರ್ವಾಗ್ರಹದ ಕಣ್ಣಿನಿಂದ ಮರುಬರೆಯುವ ಪ್ರಯತ್ನವೇ ನಡೆಯುತ್ತಿದೆಯೇ?

“ಶರಣರ ಸಮಾನತೆಯ ತತ್ವಕ್ಕೆ ವಿರುದ್ಧವಾದ ‘ವೀರಶೈವ’ ಮತ” ಎಂದು ಅತ್ಯಂತ ಸುಲಭವಾಗಿ ತೀರ್ಪು ನೀಡುವ ತಾವು, ತಾವು ಅಧ್ಯಕ್ಷರಾಗಿರುವ ರಾಷ್ಟ್ರೀಯ ಬಸವದಳದ ಸಂಸ್ಥಾಪಕರಾದ  ಶ್ರೀ ಮಾತೆ ಮಹಾದೇವಿಯವರ ಜೀವನ, ಬರಹಗಳು ಮತ್ತು ಸಾರ್ವಜನಿಕ ಪ್ರತಿಜ್ಞೆಗಳನ್ನಾದರೂ ಸಂಪೂರ್ಣವಾಗಿ ಅಧ್ಯಯನ ಮಾಡಿದ್ದೀರೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

1966ರ ಏಪ್ರಿಲ್‌ 5ರಂದು ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳಿಂದ ಜಂಗಮ ದೀಕ್ಷೆ ಸ್ವೀಕರಿಸಿದ ಸಂದರ್ಭದಲ್ಲಿ, ಶ್ರೀ ಮಾತೆ ಮಹಾದೇವಿಯವರೇ ಹೀಗೆ ಪ್ರತಿಜ್ಞೆ ಮಾಡಿರುವ ದಾಖಲೆಗಳು ಲಭ್ಯವಿವೆ:

“ಆದರ್ಶ ಸಾಧನೆಗೆ ವೀರಶೈವ ಧರ್ಮಪ್ರಚಾರಕ್ಕೆ ಸದಾ ಹೋರಾಡುತ್ತೇನೆ. ಶರಣ ಧರ್ಮ ಪ್ರಚಾರ ಮಾಡಲು ಪರದೇಶಕ್ಕೆ ಹೋಗುವೆ. ನಾನು ಇನ್ನೂ ಹೆಚ್ಚಿನ ಶಕ್ತಿಯನ್ನು ಗಳಿಸುವೆ. ನಂತರ ವೀರಶೈವ ಮಿಷನರಿಯಾಗಿ ಹೋಗುವೆ.”

(ಉಲ್ಲೇಖ : ಲಿಂಗಾಯತ ವೀರಶೈವ: ಒಂದೆಯೂ ಹೌದು, ಹಿಂದೂವೂ ಹೌದು, ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀಮದ್ ವಿಭೂತಿಪುರ, ವೀರ ಸಿಂಹಾಸನ ಮಠ, ಬೆಂಗಳೂರು; ‘ರೇಣುಕ ಸೌಭಾಗ್ಯ ಸಿರಿ’ ಗ್ರಂಥ, ಪುಟ 141,  ಮತ್ತು  ೬-೦೪-೧೯೬೬ ರ ಕನ್ನಡಮ್ಮ ಪತ್ರಿಕಾ ವರದಿ )

ಇದನ್ನು ಇತಿಹಾಸ ಎನ್ನಬೇಕೋ?
ಅಥವಾ ಇಂದಿನ ಕೆಲವು ಆಯ್ಕೆಮಾಡಿದ ವೈಚಾರಿಕ ವ್ಯಾಖ್ಯಾನಗಳಂತೆ “ಅನುಕೂಲಕರ ಸತ್ಯ” ಎನ್ನಬೇಕೋ?

ಇಷ್ಟೇ ಅಲ್ಲ — ಶ್ರೀ ಮಾತೆ ಮಹಾದೇವಿಯವರೇ ರಚಿಸಿರುವ “ಮಾತೃವಾಣಿ” ಕೃತಿಯಲ್ಲಿ ಅವರು ಹೀಗೆ ಬರೆದಿದ್ದಾರೆ:

“ದಾವಣಗೆರೆ ವಿಶ್ವಕಲ್ಯಾಣ ಮಂಟಪ ಸ್ಥಾಪಕ, ಧೀರ ಗುರುವರ್ಯ, ವೈರಾಗ್ಯಪರ, ವೀರಶೈವ ಧರ್ಮದೀಪ್ತಿ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಯವರ ಪಾದಾಂಬುಜದಲ್ಲಿ… ಅರ್ಪಿಸುವೆನಾಂ ಮಹಾದೇವೀ ಪ್ರಿಯ ಸಚ್ಚಿದಾನಂದ ಸತಿಯಾಗಿ.”

(ಮಾತೃವಾಣಿ, ದಾವಣಗೆರೆ, 1965)

ಇದು ಕೇವಲ ಗೌರವದ ಭಾಷೆಯಲ್ಲ; ಅದು “ವೀರಶೈವ” ಎಂಬ ಪದವನ್ನು ತಾವು ಇಂದು ಚಿತ್ರಿಸುವ ರೀತಿಯಲ್ಲೇ ಆ ಕಾಲದ ಮಹನೀಯರು ಕಂಡಿರಲಿಲ್ಲ ಎಂಬ ಸ್ಪಷ್ಟ ಇತಿಹಾಸದ ಸಾಕ್ಷಿ.

ಅದೇ “ಮಾತೃವಾಣಿ” ಕೃತಿಯಲ್ಲಿರುವ “ವೀರಶೈವರ ಲಾಂಛನ” ಎಂಬ ಲೇಖನದಲ್ಲಿ ಮಾತೆ ಮಹಾದೇವಿಯವರು ಇನ್ನೂ ಸ್ಪಷ್ಟವಾಗಿ ಬರೆಯುತ್ತಾರೆ:

“ವಿಭೂತಿ ರುದ್ರಾಕ್ಷಿ ಧಾರಣೆಯ ಕಂಡು ಹೀನೈಸಿ ನಗುವರ|
ನೋಡೆನ್ನ ಮನದೊಳು ಸಿಗ್ಗದು ಸಂಚರಿಸಿವೆ|
ತ್ರಿಪುಂಡ್ರವದು ವೀರಶೈವರ ವಿಷಯ ಭಸ್ಮದಾ ಲಾಂಛನ|
ರುದ್ರಾಕ್ಷಿಯದು ಲಿಂಗಪತಿಯಕ್ಷಿಯಿಂ ಹೊಮ್ಮಿ ಕಟ್ಟಲ್ಪಟ್ಟ ಮಂಗಲಸೂತ್ರ|
ಇಂಥಪ್ಪ ವಿಭೂತಿ ರುದ್ರಾಕ್ಷಿ ಧರಿಸಿದ ಸದ್ಭಕ್ತರಂ ಕಂಡು|
ಹೀಯಾಳಿಪರ ಅಡೆತಡೆಯಿಲ್ಲದ ಜ್ಞಾನಕ್ಕೆ ಮನನೊಂದು ನಕ್ಕೆನೊ? ಸಚ್ಚಿದಾನಂದ”

(ಮಾತೃವಾಣಿ, ಪುಟ 42)

ಈ ಕೃತಿಗೆ ಹಿರಿಯ ವಿದ್ವಾಂಸ ಡಾ. ಎಚ್. ತಿಪ್ಪೇರುದ್ರಸ್ವಾಮಿಯವರು “ಮೆಚ್ಚುನುಡಿ” ಬರೆದಿರುವುದೂ ಗಮನಾರ್ಹ ಸಂಗತಿ.

ಇದು ನಿಜವಾದ ಇತಿಹಾಸ.
ಇವು ದಾಖಲೆಗಳು.
ಇವು ಪುಸ್ತಕಗಳಲ್ಲಿ ಉಳಿದಿರುವ ಮಹನೀಯರ ಸ್ವಂತ ಮಾತುಗಳು.

ಹೀಗಿರುವಾಗ, “ಅಜ್ಞಾನದಿಂದ ಸಾಹಿತ್ಯಕ್ಕೆ ಕಂಟಕ” ಎಂಬ ಮಾತನ್ನು ತಾವು ಇತರರ ಕಡೆ ತೋರಿಸುವ ಮೊದಲು, ಇತಿಹಾಸವನ್ನು ಸಂಪೂರ್ಣವಾಗಿ ಓದದೆ, ಸತ್ಯವನ್ನು ತಿರುಚಿ ಸಮಾಜದ ಮುಂದೆ ಅರ್ಧಸತ್ಯಗಳನ್ನು ಇಡುವವರಿಂದಲೇ ಇಂದಿನ ಸಾಹಿತ್ಯ ಲೋಕಕ್ಕೆ ದೊಡ್ಡ ಕಂಟಕ ಎದುರಾಗಿದೆ ಎಂಬ ಕಟುಸತ್ಯವನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ವಾಸ್ತವವಾಗಿ ತಮ್ಮ ಲೇಖನದ ಪ್ರತಿಯೊಂದು ಆರೋಪವೂ, ತಮಗೇ ಹಿಡಿದ ಕನ್ನಡಿಯಾಗಿದೆ.

1909ರಲ್ಲಿ ಆರಂಭವಾದ ಶ್ರೀ ಶಿವಯೋಗಮಂದಿರದಲ್ಲಿ ಇಂದಿಗೂ ಪ್ರತಿದಿನ ಮೂರು ಹೊತ್ತು ಶರಣರ ವಚನಗಳ ವಾಚನ ನಡೆಯುತ್ತಿರುವ ಸಂಗತಿ ಬಹುಶಃ ತಮಗೆ ತಿಳಿದಿಲ್ಲವೆನಿಸುತ್ತದೆ. ಅಲ್ಲಿ ಬದುಕಿದ ವಟು–ಸಾಧಕರ ಜೀವನದಲ್ಲಿ “ಅರ್ಪಣ, ಅರ್ಚನೆ ಮತ್ತು ಅನುಭಾವ”ಗಳು ಕೇವಲ ಪದಗಳಲ್ಲ; ಅವು ಬದುಕಿನ ಕ್ರಮವಾಗಿದ್ದವು. ಆ ಜೀವನಕ್ರಮವನ್ನು ರೂಪಿಸಿ, ಶರಣ ಸಂಸ್ಕೃತಿಯನ್ನು ಮಂದಿರದ ನಿತ್ಯಸಾಧನೆಯ ಭಾಗವನ್ನಾಗಿಸಿದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳೇ.

ವಚನಗಳು ಕೇವಲ ಪುಸ್ತಕಗಳಲ್ಲಿ ಉಳಿಯಬಾರದು; ಅವು ಜನರ ಉಸಿರಿನಲ್ಲಿ ಬದುಕಬೇಕು ಎಂಬ ದೃಷ್ಟಿಯಿಂದಲೇ ಶಿವಯೋಗಮಂದಿರದಲ್ಲಿ ಕಲಿತ ಕೀರ್ತನಕಾರರು, ಪುರಾಣಿಕರು, ಶಾಸ್ತ್ರಿಗಳು ಮತ್ತು ಉಪನ್ಯಾಸಕರಿಗೆ — “ಯಾವ ಊರಿಗೆ ಹೋದರೂ ಕಾರ್ಯಕ್ರಮವನ್ನು ಶರಣರ ವಚನಗಳ ಗಾಯನ ಮತ್ತು ಅವುಗಳ ಅರ್ಥವಿವರಣೆಯಿಂದಲೇ ಆರಂಭಿಸಬೇಕು” ಎಂದು ಕಟ್ಟುನಿಟ್ಟಾಗಿ ಹೇಳಿಕೊಟ್ಟವರು ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು.

ಇದು ವಚನ ವಿರೋಧಿಯ ಕೆಲಸವೇ?
ಅಥವಾ ವಚನಗಳನ್ನು ಸಮಾಜದ ನಿತ್ಯಚೇತನವನ್ನಾಗಿಸಿದ ಮಹಾಯೋಗಿಯ ಕಾರ್ಯವೇ?

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳಿಂದ ರೂಪುಗೊಂಡ ಸಂಸ್ಕೃತಿ ಮತ್ತು ಸಂಸ್ಕಾರಗಳಲ್ಲಿ ಬೆಳೆದ ಶಿಷ್ಯ ಪರಂಪರೆಯ ಶ್ರೇಷ್ಠ ಉದಾಹರಣೆ ಪಂಡಿತ ಪಂಚಾಕ್ಷರಿ ಗವಾಯಿಗಳು.

ಮುಂಬಯಿಯ ಎಚ್.ಎಂ.ವಿ. ಕಂಪನಿಯವರು ಖ್ಯಾತ ಕಲಾವಿದರ ಗಾನಮುದ್ರಿಕೆಗಳನ್ನು ಹೊರತರುವ ಸಲುವಾಗಿ ಅನೇಕ ಕಲಾವಿದರನ್ನು ಆಹ್ವಾನಿಸಿದ್ದ ಸಂದರ್ಭದಲ್ಲಿ, ಪಂಚಾಕ್ಷರಿ ಗವಾಯಿಗಳು “ನಾನು ಶರಣರ ವಚನಗಳನ್ನೇ ಹಾಡುತ್ತೇನೆ” ಎಂದು ಹಠ ಹಿಡಿದಿದ್ದರು. ಕಂಪನಿಯವರು ಬೇರೆ ರೀತಿಯ ಗಾಯನಕ್ಕೆ ಒತ್ತಾಯಿಸಿದಾಗ, ಕಾರ್ಯಕ್ರಮವನ್ನೇ ಬಹಿಷ್ಕರಿಸಿ ಹೊರನಡೆದ ಗವಾಯಿಗಳ ಧೈರ್ಯ, ವಚನಗಳ ಮೇಲಿನ ನಿಷ್ಠೆ ಮತ್ತು ಶರಣ ಸಾಹಿತ್ಯದ ಮೇಲಿನ ಭಕ್ತಿಗೆ ಮೂಲವಾದ ಸಂಸ್ಕಾರ ಎಲ್ಲಿಂದ ಬಂದಿತೆಂಬುದನ್ನು ಇತಿಹಾಸ ಮರೆತಿಲ್ಲ.

ಕೊನೆಯಲ್ಲಿ ಎಚ್.ಎಂ.ವಿ. ಕಂಪನಿಯವರೇ ಗವಾಯಿಗಳ ಆಗ್ರಹಕ್ಕೆ ಮಣಿಯಬೇಕಾಯಿತು. ಅದು ಕೇವಲ ಒಬ್ಬ ಕಲಾವಿದನ ಜಯವಲ್ಲ; ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳ ಶಿಷ್ಯ ಪರಂಪರೆಯ ವೈಚಾರಿಕ ವಿಜಯ.

ಬಹುಶಃ 1940ರ ದಶಕದಲ್ಲಿ ತಾವು ಹುಟ್ಟಿರಲಿಲ್ಲವೋ ಏನೋ; ಆದರೆ ಶರಣರ ವಚನಗಳನ್ನು ಸಂಗೀತದ ಮೂಲಕ ಜನಮಾನಸಕ್ಕೆ ತಲುಪಿಸಿ, ಮನೆಮನೆಗೆ ಹರಡಿಸಿದ ಮಹಾನ್ ಕಾರ್ಯವನ್ನು ಮಾಡಿದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳ ಶಿಷ್ಯರಾದ ಪೂಜ್ಯ ಪಂಡಿತ ಪಂಚಾಕ್ಷರಿ ಗವಾಯಿಗಳೇ ಎಂಬುದನ್ನು ಇತಿಹಾಸ ಸ್ಪಷ್ಟವಾಗಿ ದಾಖಲಿಸಿದೆ.

ಹೀಗಿರುವಾಗ, ವಚನಗಳ ಜೀವನಾಡಿಯಾಗಿದ್ದ ಮಹಾತ್ಮರನ್ನು ವಚನ ವಿರೋಧಿಗಳಂತೆ ಚಿತ್ರಿಸುವ ಪ್ರಯತ್ನ ಎಷ್ಟು ಅಸಂಬದ್ಧ ಮತ್ತು ಪೂರ್ವಾಗ್ರಹಪೂರಿತ ಎಂಬುದು ಸಮಾಜವೇ ನಿರ್ಧರಿಸಲಿದೆ.

ತಮಗೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳ ಕುರಿತು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಇತಿಹಾಸದ ಕುರಿತು ನಿಜವಾದ ಅಧ್ಯಯನದ ಆಸಕ್ತಿ ಇದ್ದರೆ, ಶ್ರೀ ಹರ್ಡೇಕರ ಮಂಜಪ್ಪನವರ ಲೇಖನವನ್ನು ಒಮ್ಮೆ ಮನಃಪೂರ್ವಕವಾಗಿ ಓದಿ.

https://journal.shrikumar.com/archives/938

ಬಹುಶಃ ಅದು ಇತಿಹಾಸದ ಬಗ್ಗೆ ತಮಗೆ ಮೂಡಿಸಿರುವ ಅನೇಕ ತಪ್ಪುಕಲ್ಪನೆಗಳಿಗೆ ಉತ್ತರ ನೀಡಬಹುದು.

ಈ ಎಲ್ಲ ಮಹಾತ್ಮರು  ನನ್ನಂತೆ ಮತ್ತು ತಮ್ಮಂತೆ ಹೆಸರಿಗಾಗಿ ಬದುಕಿದವರಲ್ಲ. ಪ್ರಚಾರಕ್ಕಾಗಿ ಹೋರಾಡಿದವರಲ್ಲ. ಹುದ್ದೆಗಳಿಗಾಗಿ ಸಮಾಜಸೇವೆ ಮಾಡಿದವರಂತೂ ಅಲ್ಲವೇ ಅಲ್ಲ. ಅವರು ಮಾಡಿದ ಸಾಧನೆ, ತ್ಯಾಗ ಮತ್ತು ತಪಸ್ಸು ಇಂದಿಗೂ ಸಮಾಜದ ಸ್ಮೃತಿಯಲ್ಲಿ ಜೀವಂತವಾಗಿರುವುದೇ ಅದರ ಸಾಕ್ಷಿ.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು, ವಚನ ಪಿತಾಮಹ ಫ.ಗು. ಹಳಕಟ್ಟಿಯವರು, ಪೂಜ್ಯ ಪಂಚಾಕ್ಷರಿ ಗವಾಯಿಗಳು — ಇವರು ಸಮಾಜದೊಳಗೆ ವಿಭಜನೆ ಸೃಷ್ಟಿಸಲು ಬದುಕಿದವರಲ್ಲ; ಸಮಾಜದೊಳಗೆ ಜ್ಞಾನ, ಸಂಸ್ಕಾರ ಮತ್ತು ಶರಣ ಚಿಂತನೆಯ ಬೆಳಕು ಹಚ್ಚಲು ಬದುಕಿದ ಮಹಾತ್ಮರು.

ಇಂದು ಲಿಂಗಾಯತ ಧರ್ಮವು ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ, ಯಾರೋ ಕುಹಕ ಮನೋಭಾವದವರು ಸೃಷ್ಟಿಸಿದ ಪೋಸ್ಟರ್‌ಗಳು ತಾವು ಊಹಿಸುವ ಮಟ್ಟಿಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸಬಲ್ಲವು ಎನ್ನುವುದು ತರ್ಕಹೀನವಾದ ವಾದ.

ನಿಮ್ಮದೇ ಸರಕಾರವಿದೆ.
ನಿಮ್ಮದೇ ಅನುಕೂಲಕರ ಮುಖ್ಯಮಂತ್ರಿಗಳಿದ್ದಾರೆ.
ನಿಮ್ಮದೇ ಅಧಿಸೂಚನೆಗಳಿವೆ.
ರಾಜ್ಯ ಸರ್ಕಾರದ ನಿರ್ಣಯಗಳಿವೆ.

ಕೇಂದ್ರ ಸರ್ಕಾರ ಮಾನ್ಯತೆ ನೀಡಿಲ್ಲವೆಂದರೆ, ಪ್ರಜಾಸತ್ತಾತ್ಮಕ ಹೋರಾಟದ ಮಾರ್ಗವಿದೆ. ನ್ಯಾಯಾಂಗ ವ್ಯವಸ್ಥೆಯಿದೆ. ಸಂವಿಧಾನಾತ್ಮಕ ಹಕ್ಕುಗಳಿವೆ. ಅವುಗಳ ಮೂಲಕ ಹೋರಾಟ ನಡೆಸುವುದು ಪ್ರಜ್ಞಾವಂತರ ಮಾರ್ಗ.

ಆದರೆ ಅದನ್ನೆಲ್ಲ ಬಿಟ್ಟು, ಬಳಗದವರೇ ಆದ ಕೆಲವು ಕುಹಕಿಗಳು ಹರಿಬಿಟ್ಟಿರುವ ಒಂದು ಪೋಸ್ಟರ್‌ಗೆ ಸಂಬಂಧವಿಲ್ಲದ ತರ್ಕಗಳನ್ನು ಜೋಡಿಸಿ, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳಂತಹ ಮಹನೀಯರ ಕುರಿತು ಬೇಕಾಬಿಟ್ಟಿಯಾಗಿ ಬರೆಯುವುದು ಕೇವಲ ವೈಚಾರಿಕ ದೌರ್ಬಲ್ಯವಲ್ಲ; ಅದು ಅಕ್ಷಮ್ಯ ಅಪರಾಧ.

ವೈಚಾರಿಕತೆ ಎಂದರೆ ದಾಖಲೆಗಳ ಆಧಾರದ ಮೇಲೆ ಮಾತನಾಡುವುದು.
ಇತಿಹಾಸ ಎಂದರೆ ಪೂರ್ವಾಗ್ರಹವಲ್ಲ — ಪ್ರಾಮಾಣಿಕ ಅಧ್ಯಯನ.
ಮಹಾತ್ಮರ ಕುರಿತು ಮಾತನಾಡುವಾಗ ಭಾಷೆಗೆ ಮಿತಿ, ಮನಸ್ಸಿಗೆ ವಿನಯ ಮತ್ತು ಸತ್ಯಕ್ಕೆ ಬದ್ಧತೆ ಅಗತ್ಯ.

ಆ ಪ್ರಜ್ಞೆಯನ್ನೇ ವಿನಯಪೂರ್ವಕವಾಗಿ ತಮಗೆ ಈ ಮೂಲಕ ಸ್ಮರಿಸಬೇಕಾಗಿದೆ.

ಶರಣು ಶರಣಾರ್ಥಿಗಳು.

ಶ್ರೀಕಂಠ ಚೌಕೀಮಠ
ಅಧ್ಯಕ್ಷರು
ಅಖಿಲ ಭಾರತ ವೀರಶೈವ ಮಹಾಸಭಾ.ದೆಹಲಿ ರಾಜ್ಯ ಘಟಕ
ನವದೆಹಲಿ

 

ಅಮೃತವಾಣಿಯಿಂದ ಅಸಭ್ಯತೆಯವರೆಗೆಒಂದು ಪರಂಪರೆಯ ಆತಂಕಕಾರಿ ತಿರುವು

===================

ಶ್ರೀಕಂಠ ಚೌಕೀಮಠ

=======================

ಒಮ್ಮೆ ನೆನಪಿನ ದಾರಿಯಲ್ಲಿ ಹಿಂತಿರುಗಿದರೆ—ಗುರುಗಳ ಸನ್ನಿಧಿಯ ದಿನಗಳು ಇಂದಿಗೂ ಮನಸ್ಸಿಗೆ ಶಾಂತಿಯನ್ನೇ ತುಂಬುತ್ತವೆ. ನಾನು ಬಾಲಕನಾಗಿದ್ದಾಗ ಸ್ವಾಮಿಗಳ ಸೇವೆಯಲ್ಲಿ ಕಳೆದ ಕ್ಷಣಗಳು ಕೇವಲ ಭಕ್ತಿಯ ಅನುಭವಗಳಲ್ಲ; ಅವು ಬದುಕಿನ ಮೂಲ ಸತ್ಯಗಳನ್ನು ಕಲಿಸಿದ ಪಾಠಶಾಲೆಯಾಗಿದ್ದವು. ಆ ದಿನಗಳಲ್ಲಿ ನಡೆದ ಒಂದು ಸಣ್ಣ ಘಟನೆ, ನನ್ನ ಮನಸ್ಸಿನಲ್ಲಿ ಇಂದಿಗೂ ಆಳವಾಗಿ ಅಚ್ಚಳಿಯದೆ ಉಳಿದಿದೆ.

ಒಂದು ದಿನ ಪ್ರಸಾದ ತಯಾರಿಸುವ ಸಂದರ್ಭದಲ್ಲಿ, ಅಜಾಗರೂಕತೆಯಿಂದ ಪೂಜ್ಯರಿಗೆ ಅಲರ್ಜಿ ಉಂಟುಮಾಡುವ ಪದಾರ್ಥವೊಂದನ್ನು ಸೇರಿಸಿದ್ದೆ. ಅವರು ಅದನ್ನು ಅರಿತಿದ್ದರೂ, ತಮ್ಮ ಪಾಲಿಗೆ ಬಂದ ನೈವೇದ್ಯವನ್ನು ಅತ್ಯಂತ ಭಕ್ತಿಯಿಂದ ಸ್ವೀಕರಿಸಿದರು. ಅದರ ಪರಿಣಾಮವಾಗಿ ಎರಡು ದಿನಗಳ ಕಾಲ ಅವರು ಆರೋಗ್ಯದ ತೊಂದರೆಯನ್ನು ಅನುಭವಿಸಿದರು. ನಾನು ಆಘಾತದಿಂದ, ಭಯದಿಂದ ನಡುಗುತ್ತಿದ್ದೆ. ನನ್ನ ತಪ್ಪಿಗೆ ತಕ್ಕ ಶಿಕ್ಷೆ ಎದುರಾಗುವುದೆಂದು ಕಳವಳಗೊಂಡಿದ್ದೆ. ಆದರೆ ಅವರ ಪ್ರತಿಕ್ರಿಯೆ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು.

ಅವರು ಕೋಪಗೊಳ್ಳಲಿಲ್ಲ. ಗದ್ದಲ ಮಾಡಲಿಲ್ಲ. ಬೈಯಲಿಲ್ಲ. ಕೇವಲ ನನ್ನ ಹೆಸರನ್ನು ಕರೆಯುವಾಗ ಅವರ ಧ್ವನಿಯಲ್ಲಿ ಕಂಡ ಸ್ವಲ್ಪ ಏರಿಳಿತ—ಅದೇ ನನಗೆ ಶಿಕ್ಷೆಯೂ, ಪಾಠವೂ ಆಯಿತು. ಆ ಕ್ಷಣದಲ್ಲಿ ನನಗೆ ಸ್ಪಷ್ಟವಾಯಿತು—ಗುರುವಿನ ಮಹಿಮೆ ಅವರ ತತ್ವಗಳಲ್ಲಿ ಮಾತ್ರವಲ್ಲ; ಅವರ ಮಾತಿನ ಮಿತಿಯಲ್ಲಿ, ಭಾಷೆಯ ಶುದ್ಧತೆಯಲ್ಲಿ, ಸಂಯಮದಲ್ಲಿ ಇದೆ. ಶೀಘ್ರ ಕೋಪಿಷ್ಠರೆಂದು ಹೆಸರು ಪಡೆದಿದ್ದರೂ, ಅವರ ಬಾಯಿಂದ ಅಸಭ್ಯ ಪದಗಳು ಹೊರಬರಲಿಲ್ಲ. ಅದು ಅವರ ಆತ್ಮಶಾಸನದ ಶಕ್ತಿ.

ಈ ನೆನಪುಗಳು ಇಂದು ನನಗೆ ಕೇವಲ ಭಾವನಾತ್ಮಕ ನೆನಪುಗಳಲ್ಲ; ಅವು ಇಂದಿನ ಪರಿಸ್ಥಿತಿಯನ್ನು ಅಳೆಯುವ ಮಾನದಂಡಗಳಾಗಿವೆ. ಆ ಬೆಳಕಿನಲ್ಲಿ ನೋಡಿದಾಗ, ಇಂದಿನ ಸಮಾಜದಲ್ಲಿ—ವಿಶೇಷವಾಗಿ ವೀರಶೈವ-ಲಿಂಗಾಯತ ಪರಂಪರೆಯೊಳಗೆ—ಭಾಷಾ ಸಂಸ್ಕೃತಿಯಲ್ಲಿ ಕಂಡುಬರುತ್ತಿರುವ ಬದಲಾವಣೆ ಮನಸ್ಸನ್ನು ಕಳವಳಗೊಳಿಸುತ್ತದೆ.

ಒಮ್ಮೆ ಕಾಲದಲ್ಲಿ, ಸ್ವಾಮಿಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಪರಸ್ಪರ ಗೌರವದ ಗಡಿ ಎಂದಿಗೂ ಮೀರುವುದಿಲ್ಲವೆಂಬ ಒಂದು ಮೌನ ಸಂಹಿತೆ ಇತ್ತು. ಮಾತುಗಳಲ್ಲಿ ಮಿತಿ ಇತ್ತು. ಭಾವಗಳಲ್ಲಿ ಶಿಸ್ತು ಇತ್ತು. ಚರ್ಚೆಗಳಲ್ಲಿ ಸಂಸ್ಕಾರ ಇತ್ತು. ಯಾರೂ ಯಾರನ್ನೂ ಬಹಿರಂಗವಾಗಿ ನಿಂದಿಸುವುದಿಲ್ಲ. ವಿರೋಧ ಇದ್ದರೂ, ಅದು ವ್ಯಕ್ತಿಯ ಮೇಲೆ ಅಲ್ಲ—ವಿಚಾರದ ಮೇಲೆ. ಇದು ಆ ಪರಂಪರೆಯ ಒಳಗಿನಿಂದ ಹರಿಯುತ್ತಿದ್ದ ಆತ್ಮಸಂಸ್ಕೃತಿ.

ಆದರೆ ಇತ್ತೀಚಿನ ವರ್ಷಗಳಲ್ಲಿ—ವಿಶೇಷವಾಗಿ 2018ರ ನಂತರ—ಈ ಸಂಸ್ಕೃತಿಯಲ್ಲೇ ಗೋಚರಿಸುವ ಬಿರುಕು ಮೂಡಿರುವುದು ಸ್ಪಷ್ಟವಾಗಿದೆ. ಸಾಮಾಜಿಕ ಜಾಲತಾಣಗಳು, ಸಾರ್ವಜನಿಕ ವೇದಿಕೆಗಳು, ಕೆಲವೊಮ್ಮೆ ಮಠಗಳ ಸನ್ನಿಧಿಯಲ್ಲಿಯೇ, ಶಬ್ದಗಳ ಮಿತಿಯನ್ನು ಮೀರುವ ಉದಾಹರಣೆಗಳು ಹೆಚ್ಚಾಗುತ್ತಿವೆ. ಒಮ್ಮೆ ಅಮೃತವಾಣಿಯಾಗಿ ಹರಿಯುತ್ತಿದ್ದ ಮಾತುಗಳು, ಇಂದೆಡೆ ಕೆಲವೊಮ್ಮೆ ಕಟುವಾದ, ಅಸಂಯಮದ, ಅಶ್ಲೀಲತೆಯ ಅಂಚಿಗೆ ತಾಕುವ ಶಬ್ದಗಳಾಗಿ ಹೊರಬರುತ್ತಿರುವುದು ನೋವಿನ ಸಂಗತಿ.

ಇದು ಕೇವಲ ವ್ಯಕ್ತಿಗಳ ವೈಫಲ್ಯವಲ್ಲ; ಇದು ಒಂದು ದೊಡ್ಡ ಸಾಮಾಜಿಕ ಪರಿವರ್ತನೆಯ ಸೂಚನೆ. ಈ ಪರಿವರ್ತನೆಯ ಹಿಂದೆ ಇರುವ ಕಾರಣಗಳನ್ನು ಹುಡುಕಿದಾಗ, ಸಮಾಜ ಮತ್ತು ರಾಜಕೀಯದ ಮಧ್ಯೆ ಇರುವ ಸೂಕ್ಷ್ಮ ಸಂಬಂಧವನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಇಂದಿನ ರಾಜಕೀಯದಲ್ಲಿ ಗುರುತಿನ ರಾಜಕಾರಣ ಒಂದು ಪ್ರಮುಖ ಸಾಧನವಾಗಿದೆ. ಸಮುದಾಯಗಳೊಳಗಿನ ಸೂಕ್ಷ್ಮ ಭಿನ್ನತೆಗಳನ್ನು ಉದ್ದೇಶಪೂರ್ವಕವಾಗಿ ದೊಡ್ಡದಾಗಿ ತೋರಿಸುವುದು, ಒಂದನ್ನು ಎತ್ತಿ ಕಟ್ಟುತ್ತ ಮತ್ತೊಂದನ್ನು ಹಿಮ್ಮೆಟ್ಟಿಸುವುದು—ಈ “ಒಡೆದು ಆಳುವ” ಧೋರಣೆ ನಿಧಾನವಾಗಿ ಸಮಾಜದ ಮನೋಭಾವವನ್ನೇ ಬದಲಾಯಿಸುತ್ತಿದೆ. ಇದು ನೇರವಾಗಿ ಕಾಣಿಸಿಕೊಳ್ಳುವುದಿಲ್ಲ; ಅದು ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಗುಂಪನ್ನು ಮೆಚ್ಚುವುದು, ಮತ್ತೊಂದು ಗುಂಪಿನ ವಿರುದ್ಧ ಮೌನವಾಗುವುದು. ಒಂದು ಕಡೆ ತಕ್ಷಣದ ರಕ್ಷಣೆ, ಇನ್ನೊಂದು ಕಡೆ ನಿರ್ಲಕ್ಷ್ಯ. ಈ ವೈರುಧ್ಯವೇ ಒಂದು ಅಪಾಯಕಾರಿ ಸಂದೇಶವನ್ನು ಹರಡುತ್ತದೆ—“ನೀವು ಏನು ಮಾತನಾಡಿದರೂ ಪರವಾಗಿಲ್ಲ; ನಾವು ನಿಮ್ಮ ಬೆನ್ನಿಗೆ ಇದ್ದೇವೆ.”

ಈ ಅಪ್ರತ್ಯಕ್ಷ ಪ್ರೋತ್ಸಾಹವೇ ಭಾಷೆಯ ಮಿತಿಯನ್ನು ಮುರಿಯುವ ಮೊದಲ ಹೆಜ್ಜೆ. ಅದರ ಪರಿಣಾಮವಾಗಿ, ಒಮ್ಮೆ ಚರ್ಚೆಯಾಗುತ್ತಿದ್ದ ಭಿನ್ನಾಭಿಪ್ರಾಯಗಳು ಇಂದು ಸಂಘರ್ಷಗಳಾಗಿ ರೂಪಾಂತರಗೊಳ್ಳುತ್ತಿವೆ; ಒಮ್ಮೆ ವಾದವಾಗಿದ್ದ ಮಾತುಗಳು ಇಂದು ನಿಂದನೆಯಾಗಿ ಬದಲಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, ಸಾರ್ವಜನಿಕ ವೇದಿಕೆಗಳಲ್ಲಿಯೂ ಸಹ, ಕೆಲವೊಮ್ಮೆ ಸ್ವಾಮಿಗಳ ಬಾಯಿಂದಲೇ ಅಸಭ್ಯತೆಗೆ ತಟ್ಟುವ ಪದಗಳು ಹೊರಬರುವುದು—ಇದು ಯಾದೃಚ್ಛಿಕವಲ್ಲ; ಅದು ನಿರ್ಮಾಣಗೊಂಡಿರುವ ವಾತಾವರಣದ ಪ್ರತಿಫಲ.

ಇಲ್ಲಿ ನಾವು ನಮ್ಮನ್ನು ನಾವು ಪ್ರಶ್ನಿಸಬೇಕಾದ ಅಗತ್ಯ ಬಂದಿದೆ: ಇದು ಬಸವಣ್ಣನ ನಾಡಿನ ಭಾಷೆಯೇ? ಬಸವಣ್ಣನ ವಚನಗಳಲ್ಲಿ ಕಾಣುವ ಮೃದುತೆ, ಸಮಾನತೆ, ತಾತ್ವಿಕತೆ—ಅವು ಕೇವಲ ಪಠ್ಯದಲ್ಲಿರುವ ಪದಗಳಲ್ಲ; ಅವು ಬದುಕಿನ ಮಾರ್ಗದರ್ಶಕ ಮೌಲ್ಯಗಳು. ಆ ಮೌಲ್ಯಗಳನ್ನು ಹೊತ್ತ ಪರಂಪರೆಯಲ್ಲಿಯೇ, ಇಂದು ವಿಭಜನೆ ಹುಟ್ಟಿಸುವ ಕಟುವಾದ ಭಾಷೆ ಕೇಳಿಬಂದರೆ, ಅದು ಕೇವಲ ವ್ಯಕ್ತಿಯ ತಪ್ಪಲ್ಲ—ವ್ಯವಸ್ಥೆಯಲ್ಲೇ ಉಂಟಾದ ವ್ಯತ್ಯಾಸ.

ಇದರ ಜೊತೆಗೆ ಇನ್ನೊಂದು ಗಂಭೀರ ಸಂಗತಿ—ಒಂದೇ ರೀತಿಯ ನಿಂದನೆಗೆ ವಿಭಿನ್ನ ಪ್ರತಿಕ್ರಿಯೆಗಳು. ಒಂದು ಸಮುದಾಯದ ವಿರುದ್ಧ ಮಾತು ಬಂದರೆ ತಕ್ಷಣ ಕ್ರಮ; ಮತ್ತೊಂದು ಸಮುದಾಯದ ವಿರುದ್ಧ ಬಂದರೆ ಮೌನ. ಈ ವೈರುಧ್ಯವೇ ಅನುಮಾನಕ್ಕೆ ಕಾರಣವಾಗುತ್ತದೆ; ಈ ಮೌನವೇ ಸಂಘರ್ಷಕ್ಕೆ ಇಂಧನವಾಗುತ್ತದೆ.

ಕೆಲವು ವಲಯಗಳಲ್ಲಿ ಇಂದು ಒಂದು ಅಪಾಯಕಾರಿ ಭಾವನೆ ಬೆಳೆದುಬರುತ್ತಿದೆ—“ಸರಕಾರ ನಮ್ಮ ಬೆನ್ನಿಗೆ ಇದೆ” ಎಂಬ ಭ್ರಮೆ. ಈ ಭ್ರಮೆಯೇ ಭಾಷೆಯನ್ನು ಬದಲಾಯಿಸುತ್ತದೆ. ಗೌರವ ಕಡಿಮೆಯಾಗುತ್ತದೆ. ಅಧಿಕಾರದ ಧ್ವನಿ ಹೆಚ್ಚಾಗುತ್ತದೆ. ಆದರೆ ಇತಿಹಾಸದ ಪಾಠ ಸ್ಪಷ್ಟ—ಅಧಿಕಾರ ಕ್ಷಣಿಕ; ಸಂಸ್ಕೃತಿ ಶಾಶ್ವತ.

ಸಿಂದಗಿಯಂತಹ ವೇದಿಕೆಗಳಲ್ಲಿ ಕೇಳಿಬಂದ ಕೆಲವು ಮಾತುಗಳು ಕೇವಲ ಕ್ಷಣಿಕ ಕೋಪದ ಹೊರಹೊಮ್ಮಿಕೆಗಳಲ್ಲ. ಅವು ಸಮುದಾಯಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಕೆದಕುವ ಶಕ್ತಿಯನ್ನು ಹೊಂದಿವೆ. ಗುರುಗಳ ಬಾಯಿಂದ ಹೊರಬರುವ ಪ್ರತಿಯೊಂದು ಪದವೂ ಭಕ್ತರ ಮನಸ್ಸಿನಲ್ಲಿ ಮೌಲ್ಯವಾಗಿ ನೆಲೆಗೊಳ್ಳುತ್ತದೆ. ಆದ್ದರಿಂದ ಗುರುವಿನ ಭಾಷೆ ಕೇವಲ ಮಾತಲ್ಲ; ಅದು ಸಮಾಜದ ದಿಕ್ಕು ತೋರಿಸುವ ದೀಪವಾಗಬೇಕು.

ಬಸವಜಯಂತಿಯ ಪವಿತ್ರ ದಿನದಂದೇ ಕೆಲ ಯುವ ಯತಿಗಳ ಬಾಯಲ್ಲಿ ಕೇಳಿಬಂದ ಮಾತುಗಳು—ಬಸವಾದಿ ಶರಣರ ತತ್ವಗಳನ್ನು ಒಪ್ಪದವರ ಬಗ್ಗೆ ಅಶ್ಲೀಲ ಅವಹೇಳನ, ಹಿಂಸೆ ಮತ್ತು ಕೊಲೆಗಳ ನೆನಪನ್ನು ಜಾಗೃತಗೊಳಿಸುವಂತಿವೆ. ವರ್ಷಗಟ್ಟಲೇ ಬಸವಾದಿ ಶರಣರ ವಚನಗಳು ತತ್ವಸಿದ್ಧಾಂತಗಳನ್ನು ಬೋಧಿಸುತ್ತಲೇ ಇರುವಾಗ, ಇಂತಹ ಅಸಂವಿಧಾನಕ ಪದಬಳಕೆಯ ಹಿನ್ನಲೆ ಏನು ಎಂಬ ಪ್ರಶ್ನೆ ತಲೆದೋರುತ್ತದೆ. ಇತ್ತೀಚಿನ  ಅಹಿತಕರ ಘಟನೆ  ಮತ್ತು ಅದರ ಕಾನೂನು ಕ್ರಮಗಳ ಪರಿಣಾಮ ಗೊತ್ತಿದ್ದರೂ ಮತ್ತೆ ಅದೇ ದಾರಿಗೆ ಹೆಜ್ಜೆ ಇಡುವುದು ಹಲವು ಸಂಶಯಗಳಿಗೆ ಕಾರಣವಾಗುತ್ತದೆ.

ಇದರ ನಡುವೆ, ಇಂಥ ಮಾತುಗಳನ್ನು ರಕ್ಷಿಸುವ ಹಾಗೂ ವೇಗವಾಗಿ ಪ್ರಸಾರ ಮಾಡುವ ಫೇಸಬುಕ್ ವೀರರು—ಬೀದರ, ಶಹಪುರ, ಕಲಬುರಗಿ, ಕನಕಪುರ, ಮೈಸೂರು ಮುಂತಾದ ಕಡೆಗಳಲ್ಲಿ ಕುಳಿತು ದಿನದ ಇಪ್ಪತ್ತ್ನಾಲ್ಕು ಗಂಟೆಯೂ ಸಕ್ರಿಯರಾಗಿರುವುದು—ನಿಗಿ ನಿಗಿ ಕೆಂಡಕ್ಕೆ ತುಪ್ಪ ಸುರಿದಂತಾಗಿದೆ.

ಸಾಂಸ್ಕೃತಿಕ ನಾಯಕ ಬಸವಣ್ಣನ ನಾಡು ಎಂದು ಹೆಮ್ಮೆಪಡುವ ಕರ್ನಾಟಕದಲ್ಲಿ, ಗುರುಗಳ ಭಾಷೆ ಸಂಸ್ಕೃತಿಯ ಪ್ರತಿಬಿಂಬವಾಗಿರಬೇಕು—ಸಂಘರ್ಷದ ಸಾಧನವಾಗಬಾರದು. ಇಂದು ಕಂಡುಬರುವ ಭಾಷಾ ಕುಸಿತಕ್ಕೆ ಸಮಾಜದೊಳಗಿನ ವೈಮನಸ್ಯ ಮಾತ್ರ ಕಾರಣವಲ್ಲ; ಪ್ರಸ್ತುತ ರಾಜಕೀಯದ ಪರೋಕ್ಷ ಕೆದಕಾಟವೂ ಪ್ರಮುಖ ಕಾರಣವಾಗಿದೆ ಎಂಬುದನ್ನು ಒಪ್ಪಲೇಬೇಕು.

ಒಡೆದು ಆಳುವ ರಾಜಕೀಯ ಕ್ಷಣಿಕ ಲಾಭ ಕೊಡಬಹುದು; ಆದರೆ ಅದು ಸಮಾಜವನ್ನು ಕಳೆದುಕೊಳ್ಳುತ್ತದೆ. ಭಾಷೆ ಕುಸಿದರೆ ಭಾವನೆ ಕುಸಿಯುತ್ತದೆ. ಭಾವನೆ ಕುಸಿದರೆ ಸಮಾಜವೇ ಕುಸಿಯುತ್ತದೆ.

ಆದ್ದರಿಂದ ಈ ಕ್ಷಣದಲ್ಲಿ ಅತ್ಯಂತ ಅಗತ್ಯವಾದುದು—ಮಾತಿನ ಸಂಯಮವನ್ನು ಮರುಸ್ಥಾಪಿಸುವುದು. ಗುರುಗಳೂ, ಸಮಾಜದ ನಾಯಕತ್ವವೂ, ತಮ್ಮ ಮಾತಿನ ಮೂಲಕ ಮತ್ತೆ ಸಂಸ್ಕೃತಿಯ ದೀಪವನ್ನು ಬೆಳಗಿಸಬೇಕು. ಬಸವಣ್ಣನ ನಾಡಿನಲ್ಲಿ ಮತ್ತೆ ಅಮೃತವಾಣಿ ಹರಿಯಬೇಕು—ಅದೇ ಈ ಕಾಲದ ಅತ್ಯಂತ ಅಗತ್ಯ.

───
ಶ್ರೀಕಂಠ ಚೌಕೀಮಠ
───