ಲೇಖಕರು: ಲಿಂ. ಡಾ , ಫ . ಗು . ಹಳಕಟ್ಟಿ : ಬಿ.ಎ.ಎಲ್.ಎಲ್.ಬಿ ; ಡಿ.ಲಿಟ್ . ಸೌಜನ್ಯ :ಬೆಳಗು
ಶ್ರೀ ಶಿವಯೋಗಮಂದಿರದ ಸಂಸ್ಥಾಪಕರಾದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ನೆರವೇರಿಸಿದ ಕಾರ್ಯಗಳು ಬಹುಮುಖವಾಗಿವೆ . ಅವುಗಳನ್ನು ಸವಿಸ್ತಾರವಾಗಿ ವಿವೇಚಿಸುವದೆಂದರೆ ಒಂದು ಸ್ವತಂತ್ರ ದೊಡ್ಡ ಗ್ರಂಥವನ್ನೆ ಬರೆದಂತೆ . ಆದುದರಿಂದ , ಶ್ರೀಗಳವರ ಬಗೆಗೆ ನನ್ನ ಲಕ್ಷ್ಯದಲ್ಲಿ ಈಗ ಉಳಿದ ಕೆಲವು ವಿಷಯಗಳನ್ನು ಕುರಿತು ನಾನು ಇಲ್ಲಿ ನಿರ್ದೇಶಿಸುತ್ತೇನೆ.
ನನಗೆ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರ ಮೊದಲು ಪರಿಚಯವಾದುದು ಧಾರವಾಡದಲ್ಲಿಯ ೧ ನೆಯ ವೀರಶೈವ ಮಹಾಸಭೆಯ ಅಧಿವೇಶನದ ಕಾಲದಲ್ಲಿ , ಅದರ ಹಿಂದಿನ ವರುಷ , ಅಂದರೆ ೧೯೦೩ ಇಸ್ವಿಯಲ್ಲಿ ಧಾರವಾಡದಲ್ಲಿ ಒಂದು ರಾಜಕೀಯ ಪ್ರಾಂತಿಕ ಪರಿಷತ್ತು ಶ್ರೀಯುತ ಖರೆ ಇವರ ಅಧ್ಯಕ್ಷತೆಯಲ್ಲಿ ಸೇರಿತ್ತು ಈ ಸಭೆಗೆ ಕೈ . ವಾ . ಬಾಲಗಂಗಾಧರ ಟಿಳಕ , ನಾ . ಗೋಖಲೆ ಮೊದಲಾದ ಅನೇಕ ರಾಜಕೀಯ ಪಟುಗಳು ಆಗಮಿಸಿದ್ದರು . ಈ ಕಾಲದಲ್ಲಿ ಧಾರವಾಡ ಜಿಲ್ಲೆಯಲ್ಲಿ ಮುಖ್ಯ ಗ್ರಾಮಗಳಲ್ಲಿಯ ನೂರಾರು ಜನ ವೀರಶೈವ ವ್ಯಾಪಾರಸ್ಥರೂ ವಿದ್ಯಾವಂತರೂ ಸೇರಿದ್ದರು . ಅವರೆಲ್ಲರೂ ಇರಲಿಕ್ಕೆ ಒಂದು ವಿಶಾಲವಾದ ಮಂದಿರವನ್ನು ಸತ್ಕಾರಕ ಸಂಘದವರು ಧಾರವಾಡದಲ್ಲಿಯೇ ಏರ್ಪಡಿಸಿದ್ದರು . ಆಗ ನಾಡಿನ ಹಿತಾಹಿತಗಳ ಸಂಬಂಧವಾಗಿ ಚರ್ಚೆಗಳು ಕೂಡಿದ ವೀರಶೈವರಲ್ಲಿ ಉದ್ಭವಿಸುತ್ತಿದ್ದವು . ಇವುಗಳಲ್ಲಿ ಮುಖ್ಯ ಭಾಗವನ್ನು ವಹಿಸಿದವರು ಶ್ರೀಯುತ ಗದಿಗೆಯ್ಯ ಹೊನ್ನಾಪುರಮಠ ಧಾರವಾಡ , ಬನಹಟ್ಟಿಯ ತಮ್ಮಣ್ಣಪ್ಪ ಸತ್ಯಪ್ಪ ಚಿಕ್ಕೋಡಿ , ಧಾರವಾಡದ ಮೂಗಪ್ಪ ಸವದತ್ತಿ ಈ ಮೊದಲಾದವರು ಇರುತ್ತಿದ್ದರು . ಈ ಚರ್ಚೆಗಳ ಪರಿಣಾಮವಾಗಿ , ಹೇಗೆ ರಾಜಕೀಯ ಪ್ರಾಂತಿಕ ಪರಿಷತ್ತು ಸೇರಿದೆಯೋ ಹಾಗೆಯೇ ವೀರಶೈವರ ಹಿತಾಹಿತಗಳನ್ನು ವಿಚಾರಿಸಲು ಒಂದು ವೀರಶೈವ ಪರಿಷತ್ತನ್ನು ಸೇರಿಸುವದು ಅಗತ್ಯವೆಂದು ತೋರಿ ಬಂದಿತು . ಆ ಮೇಲೆ ಒಂದು ವಾರದಲ್ಲಿಯೇ ಪಟ್ಟಣದಲ್ಲಿಯ ೨೦-೩೦ ಪ್ರಮುಖರ ಒಂದು ಚಿಕ್ಕ ಸಭೆಯನ್ನು ಧಾರವಾಡದಲ್ಲಿ ಸೇರಿಸಲಾಗಿ , ಅವರು ವೀರಶೈವ ಮಹಾಸಭೆಯನ್ನು ಕೂಡಿಸಲೇಬೇಕೆಂದು ನಿರ್ಧರಿಸಿದರು . ಇದರಲ್ಲಿ ವಿಶೇಷ ಪ್ರೋತ್ಸಾಹವನ್ನು ಕೊಟ್ಟವರು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ; ಅವರಿಗೆ ಬೆಂಬಲವಾಗಿ ಕೈ . ವಾ , ರೇವಣಸಿದ್ದಪ್ಪ ಕಿತ್ತೂರು , ಕೈ , ವಾ , ಕೊಂಗವಾಡ ಮೊದಲಾದವರೂ ಇದ್ದರು .
ಮುಂದೆ ಕೆಲವು ದಿವಸಗಳಾದ ಮೇಲೆ ಆ ಸಮಾಜದವರು ಒಂದು ಗುರುಕುಲವನ್ನು ನಾಡಿನಲ್ಲಿ ಸ್ಥಾಪಿಸಿ ಅದಕ್ಕೋಸ್ಕರ ಅದ್ಭುತವಾಗಿ ಪ್ರಯತ್ನ ಮಾಡುತ್ತಿರುವ ವಾರ್ತೆಗಳು ವೃತ್ತ ಪತ್ರಿಕೆಗಳಲ್ಲಿ ಪ್ರಸಿದ್ಧವಾಗ ಹತ್ತಿದವು . ೧೯೦೭ ನೇ ಇಸ್ವಿಯಲ್ಲಿ ಸೊಲ್ಲಾಪುರದಲ್ಲಿ ೩ ನೇ ಮಹಾಸಭೆಯು ಜರುಗಿತು . ಈ ಸಭೆಗೆ ಹಾನಗಲ್ಲ ಮಹಾಸ್ವಾಮಿಗಳವರು ಕಾಲು ಮಾರ್ಗದಿಂದ ಸೊಲ್ಲಾಪುರ ಪಟ್ಟಣಕ್ಕೆ ಆಗಮಿಸಿದರು . ಮಹಾತ್ಮಾ ಗಾಂಧಿಯವರು ಜನತೆಯಲ್ಲಿ ಒಂದು ಮಹತ್ವದ ಸಂದೇಶವನ್ನು ಬೀರಲು ಪಾದಚಾರಿಗಳಾಗಿ ಹೇಗೆ ಮಾರ್ಗ ಕ್ರಮಣ ಮಾಡುತ್ತಿದ್ದರೋ ಅದೇ ಮೇರೆಗೆ ಹಾನಗಲ್ಲ ಕುಮಾರ ಸ್ವಾಮಿಗಳವರು ತಾವು ಇಳಿದ ಗ್ರಾಮದಲ್ಲೆಲ್ಲ ವೀರಶೈವರಿಗೋಸ್ಕರ ಒಂದು ಗುರುಕುಲವನ್ನು ಒಂದು ಕಡೆಗೆ ಸ್ಥಾಪಿಸಬೇಕೆಂಬ ವಿಚಾರಗಳನ್ನು ವಿಶದಪಡಿಸುತ್ತಲೇ ಬಂದರು .
ಮುಂದೆ ೧೯೦೮ ರಲ್ಲಿ ಬಾಗಲಕೋಟೆಯಲ್ಲಿ ವೀರಶೈವಮಹಾಸಭೆಯು ಶ್ರೀಮಂತ ರಾಜಾ ಲಖಮಗೌಡ ಸರದೇಸಾಯಿ ವಂಟಮುರಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು . ಈ ಸಭೆಯಲ್ಲಿ ಆದ ನಿರ್ಣಯಗಳಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸಬೇಕೆಂಬ ನಿರ್ಣಯವು ಮಹತ್ವವಾದದ್ದು , ಈ ನಿರ್ಣಯವಾದ ಬಳಿಕ ಮರುವರ್ಷವೇ ಈಗಿನ ಬದಾಮಿಯ ನೆರೆಯಲ್ಲಿ ಮಹಾಕೂಟ ಪುಣ್ಯಕ್ಷೇತ್ರದ ಸಮೀಪವಾಗಿ . ಮಲಾಪಹಾರಿ ನದೀ ತೀರದಲ್ಲಿ ಶಿವಯೋಗ ಮಂದಿರವು ಸ್ಥಾಪಿತವಾಯಿತು . ಅಂದಿನಿಂದ ಈ ವರೆಗೆ ಈ ಸಂಸ್ಥೆಯ ಮೂಲಕ ವೀರಶೈವ ಅನೇಕ ಮಠಾಧಿಪತಿಗಳೂ ಯೋಗ್ಯ ಶಿಕ್ಷಣವನ್ನು ಹೊಂದಿ ವೀರಶೈವ ಧರ್ಮದ ಮಹತ್ವವನ್ನು ಎಲ್ಲ ಕಡೆಗೂ ಈ ವರೆಗೆಯೂ ಬೀರುತ್ತ ಬಂದಿದ್ದಾರೆ .
ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರು ಹೇಗೆ ಧನ ಸಂಚಯ ಮಾಡುತ್ತ ಬಂದರೋ ಹಾಗೆಯೇ ಅವರು ಗ್ರಂಥ ಸಂಚಯವನ್ನು ಸಹ ಮಾಡುತ್ತ ಬಂದರು . ಅವರ ಈ ಕಾರ್ಯವು ಅತ್ಯಂತ ಮಹತ್ತರವಾದುದು . ಶ್ರೀ ಸ್ವಾಮಿಗಳವರ ದರ್ಶನ ಹೊಂದಲು ಎಲ್ಲ ಕಡೆಯಿಂದಲೂ ಪ್ರಮುಖ ವ್ಯಕ್ತಿಗಳು ಈ ಮಂದಿರಕ್ಕೆ ಬರುವದು ರೂಢಿಯಾಗಿತ್ತು . ಅವರನ್ನು ಶ್ರೀ ಸ್ವಾಮಿಗಳು ಕಂಡು ಅವರ ಗ್ರಾಮದಲ್ಲಿ ತಾಡವೋಲೆಯ ಗ್ರಂಥಗಳು ಇವೆಯೋ ಹೇಗೆ ಎಂಬುದನ್ನು ಪ್ರಶ್ನೆ ಮಾಡದೇ ಬಿಡುತ್ತಿದ್ದಿಲ್ಲ . ಯಾರಾದರೂ ತಮ್ಮಲ್ಲಿ ಇಂಥ ಗ್ರಂಥಗಳು ಇವೆ ಎಂದು ಉತ್ತರ ಕೊಟ್ಟಲ್ಲಿ ಅವುಗಳನ್ನು ಮಂದಿರಕ್ಕೆ ಕಳಿಸಬೇಕೆಂದು ಶ್ರೀಸ್ವಾಮಿಗಳು ತಪ್ಪದೆ ಹೇಳುವರು ಅವರನ್ನು ಕಾಣ ಬಂದವರಲ್ಲಿ ಯಾರೂ ತಾವು ಕಳಿಸುವದಿಲ್ಲ ಎಂದು ಅನ್ನುತ್ತಿದ್ದಿಲ್ಲ . ಎಲ್ಲರೂ ಭಕ್ತಿಯಿಂದ ತಮ್ಮಲ್ಲಿಯ ಗ್ರಂಥಗಳನ್ನು ಅವರ ಕಡೆಗೆ ಸಮರ್ಪಿಸುತ್ತಿದ್ದರು . ಈ ಪ್ರಕಾರ ಮಂದಿರದಲ್ಲಿ ವೀರಶೈವ ಗ್ರಂಥಗಳ ಒಂದು ದೊಡ್ಡ ಸಂಗ್ರಹವು ಸ್ವಲ್ಪ ದಿವಸಗಳಲ್ಲಿ ಉಂಟಾಯಿತು .
ಶ್ರೀ ಸ್ವಾಮಿಗಳವರು ಮಂದಿರದ ಒಂದು ದೊಡ್ಡ ನಿಧಿಯನ್ನು ಕೂಡಿಸಿದ್ದೂ , ಅಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೂ ಮಹತ್ವದ ಕಾರ್ಯಗಳೆಂಬುದು ನಿಃಸಂದೇಹವಾದದ್ದು , ಆದರೆ ಹಣಕ್ಕಿಂತಲೂ ಮಹತ್ವವೆನಿಸಿಕೊಳ್ಳುವ ಗ್ರಂಥಗಳ ಸಂಗ್ರಹ ಮಾಡುವದು ಅಷ್ಟೇ ಶ್ರೇಯಸ್ಕರವಾದದ್ದು ಇರುತ್ತದೆ . ಇಂಥ ಗ್ರಂಥಗಳು ಸಮಾಜದಲ್ಲಿ ಇರದಿದ್ದರೆ ಸಂಸ್ಕೃತಿಯು ಬಾಳುವ ಸಂಭವವೇ ಇಲ್ಲ .
ಇದೇ ಕಾಲದಲ್ಲಿ ನಾನು ವಚನಶಾಸ್ತ್ರದ ಉಕ್ತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದೆನು . ಈ ಸಂಗತಿಯನ್ನು ನಾನು ಸ್ವಾಮಿಗಳವರ ನಿದರ್ಶನಕ್ಕೆ ಆಗಿಂದಾಗ್ಗೆ ತರುತ್ತಿದ್ದೆನು . ಅವರು ಇದನ್ನು ನೋಡಿ ಬಹಳ ಸಂತೋಷಿಸುತ್ತಿದ್ದರು ಮತ್ತು ನನಗೆ ಅದರಲ್ಲಿ ಪ್ರೋತ್ಸಾಹವನ್ನೂ ಕೊಡುತ್ತಿದ್ದರು .
ಮುಂದೆ ನಾನು ‘ ವಚನಶಾಸ್ತ್ರಸಾರ ‘ ಎಂಬ ಗ್ರಂಥವನ್ನು ನಿರ್ಮಾಣ ಮಾಡಿ ಅದರಲ್ಲಿ ನಾಲ್ಕು ಭಾಗಗಳನ್ನು ತಯಾರಿಸಿದ್ದೆನು . ಮೊದಲನೆಯ ಭಾಗವು ಪೂರ್ಣವಾದುದನ್ನು ಬಾಗಲಕೋಟೆಯ ಕೆಲ ಮಹನೀಯರು ಸ್ವಾಮಿಯವರಿಗೆ ಹೇಳಲು ಅವರು ಖುದ್ದಾಗಿ ನಾನಿದ್ದ ಮನೆಯ ಸಮೀಪದಲ್ಲಿ ಸೊನ್ನದ ಶ್ರೀಮಂತ ಗಂಗಪ್ಪ ದೇಸಾಯಿಯವರ ಕಟ್ಟಡವು ಪ್ರಾರಂಭವಾಗಿದ್ದು ಅದೇ ಮನೆಯಲ್ಲಿ ಅವರು ಇಳಿದರು . ಆಗ ನಾನು ವಿಷಮಜ್ವರ ಪೀಡಿತನಾಗಿದ್ದೆ ; ಚನ್ನಾಗಿ ಕುಳ್ಳಿರಲಿಕ್ಕೆ ಬರುತ್ತಿದ್ದಿಲ್ಲ , ಆದರೂ ಶ್ರೀ ಸ್ವಾಮಿಗಳು ನನ್ನ ಅನುಕೂಲತೆಗಾಗಿ ಈ ಗೃಹದಲ್ಲಿ ಇಳಿದು ಕೆಲವು ದಿವಸಗಳವರೆಗೆ ನಾನು ಸಂಗ್ರಹಿಸಿದ ಉಕ್ತಿಗಳನ್ನು ನನ್ನ ಕಡೆಯಿಂದ ಓದಿಸಿಕೊಳ್ಳುತ್ತಿದ್ದರು . ಅವುಗಳಲ್ಲಿರುವ ವಚನಗಳಲ್ಲಿಯ ಉಚ್ಛ ವಿಚಾರ ಮತ್ತು ಸುಂದರ ನುಡಿಗಳನ್ನು ಕೇಳಿ ಅವರು ಹರ್ಷಿಸುತ್ತಿದ್ದರು ಮತ್ತು ನನಗೆ ಈ ಗ್ರಂಥವನ್ನು ಅಚ್ಚು ಹಾಕಲಿಕ್ಕೆ ಪ್ರೋತ್ಸಾಹಿಸಿದರು . ಈ ಅಚ್ಚು ಹಾಕುವ ಕಾವ್ಯದಲ್ಲಿ ನನಗೆ ಶ್ರೀಮಂತ ಗಂಗಪ್ಪ ದೇಸಾಯಿಯವರು ಧನ ಸಹಾಯವನ್ನು ಮಾಡಲು ಒಪ್ಪಿದರು . ಶ್ರೀ ಸ್ವಾಮಿಗಳು ಅದನ್ನು ಕೇಳಿ ಸಂತೋಷ ಪ್ರದರ್ಶನವನ್ನು ಮಾಡಿದರು . ಗ್ರಂಥದ ಮುದ್ರಣವನ್ನು ಬೆಳಗಾವಿಯಲ್ಲಿ ಮುಗಿದ ಬಳಿಕ ನಾನು ಅದನ್ನು ಅವರಿಗೆ ಅರ್ಪಿಸಿದೆನು .
ಸ್ವಾಮಿಗಳವರ ಹಸ್ತದಲ್ಲಿ ಈ ಗ್ರಂಥವು ಬಂದ ಬಳಿಕ ಅವರು ತಮ್ಮ ಭೋಜನೋತ್ತರ ಕಾಲದಲ್ಲಿ ಅದರಲ್ಲಿಯ ಶ್ರೇಷ್ಠ ಉಕ್ತಿಗಳನ್ನು ತಮ್ಮನ್ನು ಕಾಣಲಿಕ್ಕೆ ಬಂದ ಜನರಿಗೆ ತಿಳಿಸಿ ಹೇಳುವರು . ಈ ಕಾರ್ಯವನ್ನು ಅವರು ಬಹುದಿನ ಮಾಡುತ್ತ ಬಂದರು . ಹೀಗೆ ತಾವಷ್ಟೇ ಅಲ್ಲ , ಮಂದಿರಕ್ಕೆ ಬಂದ ಮಠಾಧಿಕಾರಿಗಳಿಗೂ ಶಾಸ್ತ್ರಿಗಳಿಗೂ ‘ ಶಿವಶರಣರು ಎಂಥ ಮಹತ್ವದ ಕಾರ್ಯವನ್ನು ಮಾಡಿದ್ದಾರೆ . ನೋಡಿರಿ ‘ ಎಂದು ತಿಳಿಸಿ ಹೇಳುವರು .
ಮುಂದೆ ಶ್ರೀಯುತ ರಂಗರಾವ ದಿವಾಕರ , ಶ್ರೀಯುತ ಬಿ . ಎಂ . ಶ್ರೀಕಂಠಯ್ಯ , ಶ್ರೀಯುತ ಎಮ್ . ಆರ್ , ಶ್ರೀ ನಿವಾಸಮೂರಿ ಮೊದಲಾದ ಮಹನೀಯರು ಶಿವಶರಣರ ಬಗ್ಗೆ ಬಹಳ ಉಚ್ಚತರದ ಲೇಖ – ಗ್ರಂಥಗಳನ್ನು ಬರೆದು ಪ್ರಕಟಿಸಿದರು . ಹೀಗೆ ಶಿವಶರಣರ ವಚನಗಳನ್ನು ಮೊದಲು ಪ್ರಸಾರ ಮಾಡಿದವರು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳೇ ಆಗಿದ್ದಾರೆ . ಅವರು ಹೋದಲ್ಲೆಲ್ಲ ಶಿವಶರಣರ ವಿಚಾರಗಳನ್ನು ತಮ್ಮ ಅಧಿಕಾರ ವಾಣಿಯಿಂದ ಜನರ ಮುಂದೆ ಪ್ರಸ್ತಾಪಿಸಿ ಅವುಗಳನ್ನು ಮುಂದಕ್ಕೆ ತಂದರು .
ಶ್ರೀ ಸ್ವಾಮಿಗಳು ನಿಜಗುಣರ ಶಾಸ್ತ್ರವನ್ನು ಚನ್ನಾಗಿ ಪರಿಶೀಲಿಸಿದ್ದರು . ಈ ಗ್ರಂಥಗಳಲ್ಲಿ ಯೋಗಾಭ್ಯಾಸದ ತತ್ವಗಳು ವಿಸ್ತಾರವಾಗಿ ಬಂದಿರುತ್ತವೆ . ಶಿವಶರಣರ ಗ್ರಂಥಗಳಲ್ಲಿ ಬರುವ ಕ್ಲಿಷ್ಟ ಆಂತರಂಗಿಕ ವಿಚಾರಗಳನ್ನು ಶ್ರೀ ಸ್ವಾಮಿಗಳವರು ಬಹಳ ಹಗುರಾಗಿ ಜನರಿಗೆ ತಿಳಿಸಿ ಹೇಳುವರು . ಇದರಿಂದ ವಚನ ವಾಜ್ಯದ ಮಹತ್ವವು ಅವರಿಗೆ ಚನ್ನಾಗಿ ಬಿಂಬಿಸುತ್ತಿತ್ತು ಮುಂದೆ ಇದರ ಪ್ರಭಾವವು ಬೆಳೆಯುತ್ತಲೇ ಬಂದಿತು . ಈ ಪ್ರಭಾವವು ಬೆಳೆಯುತ್ತ ಇನ್ನೂ ವಿಶಾಲ ಸ್ಥಿತಿಯನ್ನು ಹೊಂದುವದರಲ್ಲಿ ಇದೆ . ಇದು ಪೂರತೆಗೆ ಬರಲಿಕ್ಕೆ ಇನ್ನೂ ಕೆಲಕಾಲವು ಬೇಕಾಗಬಹುದು . ಈ ಮಹತ್ವದ ಕಾರ್ಯವು ಶ್ರೀ ಶಿವಯೋಗ ಮಂದಿರದ ಸ್ಥಾನದಲ್ಲಿಯೇ ಸ್ವಲ್ಪ ಕಾಲದಲ್ಲಿ ಪೂರತೆಗೆ ಬರಬಹುದೆಂದು ನಿರೀಕ್ಷಿಸಲ್ಪಟ್ಟಿದೆ .
ಶಿವಶರಣರ ವಾಙ್ಮಯದಲ್ಲಿ ಸಂಕುಚಿತ ಭಾವನೆಗಳು ಎಷ್ಟು ಮಾತ್ರವೂ ಇರುವದಿಲ್ಲ . ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳಲ್ಲಿ ಯಾವಾಗಲೂ ಶಿವಶರಣರ ಉದಾರ ಭಾವವು ಹೊರ ಹೊಮ್ಮುತ್ತಿತ್ತು . ಅವರನ್ನು ಕಾಣಬಂದವರು ಯಾವ ಜಾತಿಯವರಿದ್ದರೂ ಅವರನ್ನು ಅವರು ಆದರಿಸದೆ ಇರುತ್ತಿದ್ದಿಲ್ಲ .
ಸ್ವಾಮಿಗಳವರು ಒಕ್ಕಲುತನ , ಪಶುಸಂಗೋಪನ , ಈ ಮೊದಲಾದ ಕಾರ್ಯಗಳಿಗೆ ಉತ್ತೇಜನ ಕೊಡುತ್ತಿದ್ದರು . ಇಂಥ ಕಾರ್ಯಗಳಲ್ಲಿ ಅವರು ಸ್ವತಃ ಲಕ್ಷ್ಯ ಹಾಕುತ್ತಿದ್ದರು . ಮಂದಿರದಲ್ಲಿ ಅನೇಕ ಜನ ವಟುಗಳು ಇರುತ್ತಿದ್ದರು . ಅವರೆಲ್ಲರಿಗೆ ಧಾರಿಕ ಶಿಕ್ಷಣ ಕೊಡಲಿಕ್ಕೆ ಅವರು ತಕ್ಕ ಏರ್ಪಾಡುಗಳನ್ನು ಮಾಡಿದ್ದ ರು . ಹೀಗೆ ಶಿಕ್ಷಣ ಹೊಂದಿದವರಲ್ಲಿ ಅನೇಕರು ನಾಡಿನಲ್ಲಿ ಇದ್ದು ಅವರು ಈಗ ಉಚ್ಚಪೀಠಗಳಿಗೆ ಅಧಿಕಾರಿ ಗಳಾಗಿದ್ದಾರೆ . ಇವರು ಯಾವಾಗಲೂ ಸಮಾಜ ಸೇವೆಯಲ್ಲಿರುವಂತೆ ಕಂಡು ಬರುತ್ತದೆ .
ಸ್ವಾಮಿಗಳವರು ಇಂಗ್ಲೀಷ ಭಾಷೆಯು ಪರಕೀಯ ಭಾಷೆಯೆಂದು ತಿಳಿದು ಎಂದೂ ಅದನ್ನು ತಿರಸ್ಕರಿಸಲಿಲ್ಲ . ಮಂದಿರದಲ್ಲಿ ಇಂಗ್ಲೀಷಿನ ಶಿಕ್ಷಣಕ್ಕೋಸ್ಕರವೂ ಅವರು ಕೆಲವು ಕಾಲ ಒಂದು ಶಾಲೆಯನ್ನು ಸ್ಥಾಪಿಸಿದ್ದರು . ಅವರು ಸಾಕಷ್ಟು ನಿಧಿ ಕೂಡಿದ ಕೂಡಲೇ ಬಾಗಲಕೋಟೆಯಲ್ಲಿ ಒಂದು ಕಾರ್ಯಾಲಯವನ್ನು ಅಥವಾ ಗಿರಣಿಯನ್ನು ಸ್ಥಾಪಿಸಿದರು . ಅವರು ಮಂದಿರದ ಸುತ್ತಲೂ ಕೃಷಿಯನ್ನು ಹೆಚ್ಚಿಸಿದರು ; ಧಾರ್ಮಿಕ ವಿಧಿ ವಿಧಾನಗಳು ಸರಿಯಾಗಿ ನಡೆಯಬೇಕೆಂದು ಯೋಗ್ಯ ವ್ಯವಸ್ಥೆ ಮಾಡಿದರು . ಅವರ ಈ ಎಲ್ಲ ಯೋಜನೆಗಳು ಈಗಲೂ ಉತ್ತಮ ಸ್ಥಿತಿಯಲ್ಲಿ ಇರುತ್ತವೆ .
ಲೇಖಕರು: ಲಿಂ. ಡಾ , ಫ . ಗು . ಹಳಕಟ್ಟಿ : ಬಿ.ಎ.ಎಲ್.ಎಲ್.ಬಿ ; ಡಿ.ಲಿಟ್ . ಸೌಜನ್ಯ :ಬೆಳಗು