ವೀರಶೈವ ಮಹಾಸಭೆಯ ಜನ್ಮದಾತ : ಲೇಖಕರು ಲಿಂ. ಹರ್ಡೇಕರ್‌ ಮಂಜಪ್ಪ ನವರು

ಲೇಖಕರು. ಲಿಂ. ಶ್ರೀಹರ್ಡೆಕರ ಮಂಜಪ್ಪನವರು ಸೌಜನ್ಯ: ಬೆಳಗು

ವೀರಶೈವ ಸಮಾಜದಲ್ಲಿ ಈಗ ತೋರುತ್ತಿರುವ ಶೈಕ್ಷಣಿಕ , ಧಾರ್ಮಿಕ ಮೊದಲಾದ ಎಲ್ಲ ಚಟುವಟಿಕೆಗಳಿಗೆ ವೀರಶೈವ ಮಹಾಸಭೆಯು ಬಹುಮಟ್ಟಿಗೆ ಕಾರಣವಾಗಿದೆಯೆಂದು ಧಾರಾಳವಾಗಿ ಹೇಳಬಹುದು . ಈ ಸಭೆಯು ಕಳೆದ ೨೫ ವರ್ಷಗಳಿಂದ ಅವಿಚ್ಛಿನ್ನವಾಗಿ , ಸಕ್ರಮವಾಗಿ ಜರುಗುತ್ತ ಬಂದಿದ್ದರೆ , ವೀರಶೈವ ಸಮಾಜವು ಇನ್ನೂ ಎಷ್ಟೋ ಮಟ್ಟಿಗೆ ಊರ್ಜಿತ ಸ್ಥಿತಿಯನ್ನು ಹೊಂದಿ ಇದೊಂದು ಆದರ್ಶಪ್ರಾಯವಾದ ಜನಾಂಗವೆ ಆಗುತ್ತಿದ್ದಿತು .

 ಇಂತಹ ಸಮರ್ಥ ಮಹಾಸಭೆಯನ್ನು ಪಾಶ್ಚಾತ್ಯ ಶಿಕ್ಷಣ ವಿಶಾರದರು , ಅಥವಾ ಆಧುನಿಕ ರಾಜಕಾರಣ ದಲ್ಲಿ ನುರಿತವರು ಸ್ಥಾಪಿಸಿದರೆ ಅದೇನೂ ಕೌತುಕಾಸ್ಪದವೆನಿಸುತ್ತಿರಲಿಲ್ಲ ಈಗಿನಂತೆ ಜನಜಾಗೃತಿಯುಂಟಾದ ಕಾಲದಲ್ಲಿ ಅದನ್ನು ಯಾರಾದರೂ ಏರ್ಪಡಿಸಿದ್ದರೆ ಅದೇನೂ ಆಶ್ಚರ್ಯಕರವಾಗಿ ತೋರುತ್ತಿರಲಿಲ್ಲ . 

ಆದರೆ , ಪಾಶ್ಚಾತ್ಯ ಶಿಕ್ಷಣದ ಗಾಳಿಯನ್ನು ಕೂಡ ಸೋಂಕಿಸಿಕೊಂಡಿರದ ಮತ್ತು ಆಧುನಿಕ ರಾಜಕಾರಣದ ಸಂಬಂಧವಿಲ್ಲದ ಪರಮಪೂಜ್ಯ ಹಾನಗಲ್ಲ ಮಹಾಸ್ವಾಮಿಗಳವರು ಕರ್ನಾಟಕದಲ್ಲಿಯೆ ಯಾವ ಸಮಾಜದವರ ಯಾವ ವಿಧವಾದ ಸಾರ್ವಜನಿಕ ಸಮ್ಮೇಲನಗಳು ಜರುಗದಿದ್ದ ಕಾಲದಲ್ಲಿ , ೨೫ ವರ್ಷಗಳ ಹಿಂದೆ (೧೯೦೪) ಜನಾಂಗವು ನಿದ್ದೆ ಹೋಗಿದ್ದ ಕಾಲದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದುದು ನಿಜವಾಗಿಯೂ ಕೌತುಕಾಸ್ಪದವಾದುದು ; ಆ ಮಹಾಸ್ವಾಮಿಗಳವರಲ್ಲಿದ್ದ ಅದ್ವಿತೀಯವಾದ ಮುಂದಾಲೋಚನೆಯ ದ್ಯೋತಕವಾದುದು .

 ಕ್ರಿ.ಶ. ೧೯೦೪ ರಲ್ಲಿ ಮಹಾಸಭೆಯನ್ನು ಧಾರವಾಡದಲ್ಲಿ ಸ್ಥಾಪಿಸುವ ಮುಂಚೆಯೇ ೧೯೦೩ ರಲ್ಲಿ ಒಂದು ಆಲೋಚನಾ ಸಭೆಯನ್ನು ಕೂಡಿಸಿ ಸಮಾಜದ ಪ್ರಮುಖರ ಸಲಹೆ ಸೂಚನೆಗಳನ್ನು ತಿಳಿದುಕೊಂಡುದು ಸ್ವಾಮಿಗಳವರಲ್ಲಿದ್ದ ಅಸಾಧಾರಣವಾದ ಕಾರ್ಯ – ಚಾತುರ್ಯವನ್ನು ವ್ಯಕ್ತಗೊಳಿಸುತ್ತದೆ . ಈ ಮಹಾಸ್ವಾಮಿ ಗಳವರ ನೇತೃತ್ವದಲ್ಲಿಯೇ ಮೊದಲಿನ ಆರೇಳು ಮಹಾಸಭೆಗಳು ಜರುಗಿದವು . ಆ ಕಾಲದಲ್ಲಿಯೇ ವೀರಶೈವರಲ್ಲಿ ಮಹಾಸಭೆಯಿಂದ ಅತ್ಯಂತ ಪರಿಣಾಮಕಾರಿಯಾದ ಜಾಗ್ರತಿಯುಂಟಾಯಿತು . 

ಧಾರವಾಡದ ಮೊದಲನೆಯ ಸಭೆಯ ಕಾಲದಲ್ಲಿಯೇ ವಿದ್ಯಾಭಿವೃದ್ಧಿ ನಿಧಿಯ ಯೋಜನೆಯುಂಟಾಗಿ “ ಲಿಂಗಾಯತ ವಿದ್ಯಾವರ್ಧಕ ಫಂಡು ‘ ಏರ್ಪಟ್ಟು ವೀರಶೈವರಲ್ಲಿ ಇಂಗ್ಲೀಷ ವಿದ್ಯಾಪ್ರಸಾರಕ್ಕೆ ಬಹು ಸಹಾಯವಾಯಿತು . ಅದರಂತೆಯೆ ಎರಡನೆಯ ಮಹಾಸಭೆಯು ಬೆಂಗಳೂರಲ್ಲಿ ಕೂಡಿದಾಗ ಮೈಸೂರು ಪ್ರಾಂತದ ವೀರಶೈವರ ವಿದ್ಯಾಭಿವೃದ್ಧಿಗಾಗಿ ಒಂದು ಧನ ನಿಧಿ ಏರ್ಪಟ್ಟಿತು . 

ಬಾಗಲಕೋಟೆಯಲ್ಲಿ ಕೂಡಿದ ನಾಲ್ಕನೆಯ ವೀರಶೈವ ಮಹಾಸಭೆಯ ಕಾಲದಲ್ಲಿಯೇ ಶಿವಯೋಗ ಮಂದಿರದ ಯೋಜನೆಯುಂಟಾಗಿ ಆರ್ಯ ಸಮಾಜದವರ ಗುರುಕುಲ ಪದ್ಧತಿಯ ಮೇರೆಗೆ ವೀರಶೈವ ಸಂಸ್ಕೃತಿಯ ಸಂವರ್ಧನೆಗೆ ಏರ್ಪಟ್ಟ ಈ ಶಿವಯೋಗ ಮಂದಿರವು ವೀರಶೈವರಲ್ಲಿಯೇ ಅಲ್ಲ ಕರ್ನಾಟಕದಲ್ಲಿಯೇ ಹೊಸ ಸಂಸ್ಥೆಯೆಂದು ನಿಃಸಂಶಯವಾಗಿ ಹೇಳಬಹುದು . ಈ ಶಿವಯೋಗ ಮಂದಿರವು ಶ್ರೀ ಹಾನಗಲ್ಲ ಮಹಾಸ್ವಾಮಿಗಳ ಪ್ರಾಣಸ್ವರೂಪವಾದುದು . ಬಾಗಲಕೋಟೆಯ ಮಹಾಸಭೆಯಲ್ಲಿ ಗೊತ್ತಾದ ಮೇರೆಗೆ ಸ್ವಾಮಿಗಳೇನೋ ಶಿವಯೋಗ ಮಂದಿರದ ಕಾರ್ಯವನ್ನು ನೆರವೇರಿಸಿಯೇ ಬಿಟ್ಟರು.

 ಅದೇ ಪ್ರಕಾರ ಆ ಮಹಾಸಭೆಯಲ್ಲಿ ವೀರಶೈವರ ಬಟ್ಟೆಯ ಗಿರಣಿಯನ್ನು ಸ್ಥಾಪಿಸಬೇಕೆಂದು ತೀರ್ಮಾನ ವಾದಂತೆ ಆ ಕಾಲದ ಪ್ರಮುಖ ವರ್ತಕರು ಪ್ರಯತ್ನಿಸಿ ಶ್ರೀಗಳವರಂತೆಯೆ ತಾವೂ ಆ ಕಾರ್ಯವನ್ನು ಮಾಡಿದ್ದರೆ ವೀರಶೈವರಿಗೂ ಆ ಮೂಲಕ ಕರ್ನಾಟಕಕ್ಕೂ ಆರ್ಥಿಕ ದೃಷ್ಟಿಯಿಂದ ಎಷ್ಟೋ ಪ್ರಯೋಜನವಾಗುತ್ತಿದ್ದಿತು . ಮಹಾಸ್ವಾಮಿಗಳಂತೆ ಕೈಕೊಂಡ ಕಾರ್ಯವನ್ನು ಏಕ ನಿಷ್ಠೆಯಿಂದ ಈ ಪರಿಶ್ರಮಪಟ್ಟು ಮಾಡುವ ಮಹನೀಯರು ವಿರಳ.

ವೀರಶೈವ ಮಹಾಸಭೆಯಿಂದ ೩-೪ ವರ್ಷಗಳಲ್ಲಿಯೇ ಆದ ಮಹಾಪ್ರಯೋಜನಗಳನ್ನು ಸ್ವಾಮಿಗಳವರು ನೋಡಿ ಮಹಾಸಭೆಯ ವಿಷಯದಲ್ಲಿ ವಿಶೇಷವಾದ ಪ್ರೇಮಾದರಗಳುಳ್ಳವರಾಗಿದ್ದರು .ಈ ಮಹಾಸಭೆಯನ್ನು ಸಮಾಜಕ್ಕೆ ಅತ್ಯಂತ ಹಿತಕಾರಿಯಾದುದೆಂದು ದೃಢವಾಗಿ ನಂಬಿದ್ದರು . ಅಂತೆಯೇ ಅದಕ್ಕೆ ಲೋಪವುಂಟಾಗುವದು ಅವರಿಗೆ ಮಹಾವಿಷಾದಕರವಾದುದಾಗಿ ಪರಿಣಮಿಸುತ್ತಿದ್ದಿತು . ಬಳ್ಳಾರಿಯ ಮಹಾಸಭೆಯ ಕಾಲಕ್ಕೆ ( ಕ್ರಿ.ಶ .೧೯೦೯ ರಲ್ಲಿ ಅದಕ್ಕುಂಟಾದ ವಿಘ್ನದಿಂದ ಮಹಾಸ್ವಾಮಿಗಳು ಪೂಜಾದಿ ನಿತ್ಯಕ್ರಿಯೆಗಳನ್ನು ಬಿಟ್ಟು ವಿಷಾದ ಪಡುತ್ತಿದ್ದ ದೃಶ್ಯವು ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ . 

ಮಹಾಸ್ವಾಮಿಗಳ ಕೆಲವು ಧಾರ್ಮಿಕ ವಿಚಾರಗಳು ಭಿನ್ನಾಭಿಪ್ರಾಯಕ್ಕೆ ಆಸ್ಪದವಾಗಿದ್ದರೂ ವೀರಶೈವ ಸಮಾಜವು ಸಕಲ ಸಂಗತಿಗಳಲ್ಲಿಯೂ ಅಭಿವೃದ್ಧಿ ಹೊಂದಬೇಕೆಂಬ ವಿಷಯದಲ್ಲಿ ಅವರಲ್ಲಿದ್ದ ಅಭಿಮಾನ ಆಕಾಂಕ್ಷೆ ಪರಿಶ್ರಮಗಳು ಆಸಾಧಾರಣವಾದವುಗಳೆಂಬುದು ನಿರ್ವಿವಾದದ ಸಂಗತಿ . ಅಂತೆಯೆ ಬಳ್ಳಾರಿ ಮಹಾಸಭೆಯನ್ನು ಮಹಾಸ್ವಾಮಿಗಳವರು ಕೊನೆಗೆ ಸಮಾಧಾನಕರವಾಗಿ ಜರುಗಿಸಲು ಸಮರ್ಥರಾದರು . 

ಮುಂದೆ ಮಹಾಸಭೆಯ ಕಾರ್ಯಕಲಾಪಗಳ ರೀತಿ ನೀತಿಗಳು ಮಹಾಸ್ವಾಮಿಗಳಿಗೆ ತೃಪ್ತಿಕರವಾಗಿ ತೋರದಿದ್ದುದರಿಂದ ವೀರಶೈವ ಧರ್ಮೊತ್ತೇಜಕ ಸಭೆ’ಯನ್ನು ಸ್ಥಾಪಿಸಿ ಆ ಮೂಲಕ ಧಾರ್ಮಿಕ ಜಾಗೃತಿಯನ್ನು ಮಾಡಲುಪಕ್ರಮಿಸಿದರು . ತಾವು ಧಾರ್ಮಿಕ ಚಟುವಟಿಕೆಗೆ ಅದೊಂದು ಬೇರೆ ಸಂಸ್ಥೆಯನ್ನು ಮಾಡಿಕೊಂಡರೆ ವಿನಹ , ಲೌಕಿಕ ಸುಧಾರಣೆಗಳಿಗೆ ಮಹಾಸಭೆಯು ಅಗತ್ಯವೆಂದೆ ಅವರು ತಿಳಿದಿದ್ದರು .

 ಮಹಾಸಭೆಯಿಂದಾದ ಸಕಲ ಶ್ರೇಯಸ್ಸುಗಳಿಗೂ ಶ್ರೀಮನ್ನಿರಂಜನ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೆ ಕಾರಣರು . ರಾಜಕೀಯ ವಿಷಯವೊಂದನ್ನು ಬಿಟ್ಟು ಇನ್ನಿತರ ಧಾರ್ಮಿಕ , ಸಾಮಾಜಿಕ , ಶೈಕ್ಷಣಿಕ , ಸಾಲಪತ್ರಿಕ ಮತ್ತು ಸಾಹಿತ್ಯ ಸಂಬಂಧವಾದ ವೀರಶೈವರ ಅನೇಕ ಉನ್ನತಿಯ ಪ್ರಯತ್ನಗಳಿಗೆ ವೀರಶೈವ ಮಹಾಸಭೆಯು ಈಗಲೂ ಅತ್ಯಗತ್ಯವಾಗಿದೆ . ಆ ಮಹಾಸಭೆಯ ಕಡೆಗೆ ಸಮಾಜದ ಪ್ರಮುಖರು ಈಗಲಾದರೂ ಲಕ್ಷಿಸಿ ಅದರಿಂದ ಸಮಾಜೋನ್ನತಿಯ ಕಾರ್ಯಗಳನ್ನು ಮಾಡಿಕೊಳ್ಳುವದೆ ಹಾನಗಲ್ಲ ಮಹಾಸ್ವಾಮಿಗಳಲ್ಲಿರತಕ್ಕ ಭಕ್ತಿವಿಶ್ವಾಸ ಗಳನ್ನು ಪ್ರದರ್ಶಿಸುವ ಶ್ರೇಷ್ಠವಾದ ಮಾರ್ಗವು . ಆ ಮಹಾಸ್ವಾಮಿಗಳು ಸ್ಥಾಪಿಸಿದ ಈ ದಿವ್ಯ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಿ ಆ ಮೂಲಕ ಸಮಾಜ ಹಿತವನ್ನು ಮಾಡುವದೆ ಶ್ರೀ ಹಾನಗಲ್ಲ ಮಹಾಸ್ವಾಮಿಗಳ ಸಜೀವ ಸ್ಮಾರಕವು . ಆ ಪರಮಪೂಜ್ಯರ ಸ್ಮರಣೆಯ ಈ ಪುಣ್ಯ ಕಾಲದಲ್ಲಿಯಾದರೂ ಅವರು ಸ್ಥಾಪಿಸಿದ ವೀರಶೈವ ಮಹಾಸಭೆಯ ಕಡೆಗೆ ಸಮಾಜದ ಲಕ್ಷವು ಹೋಗಿ ಅದು ಫಲಕಾರಿಯಾಗಲಿ . 

ಲೇಖಕರು. ಲಿಂ. ಶ್ರೀಹರ್ಡೆಕರಮಂಜಪ್ಪನವರುಸೌಜನ್ಯ: ಬೆಳಗು

Related Posts