ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ .ಭಾಗ-೪೩ :

ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

ಆದಿ ಶ್ರೋತ್ರಂದ್ರಿಯ ನಿ |ರ್ಭೇದ ಶಬ್ದವ ಕೇಳ್ವ

ಮೋದವದು ಸುಪ್ರ- ಸಾದ ಲಿಂಗವು ಎಂದು

ಬೋಧಿಸಿದ ಗುರುದೆ ಕೃಷಿಯಾಗ   ||೧೬೩||

ಐದನೆಯ ಜ್ಞಾನೇಂದ್ರಿಯ ಶ್ರೋತ್ರ, ಅರ್ಥಾತ್ ಕಿವಿ, ಆಕಾಶ ತತ್ವ ಪ್ರಧಾನವಾದುದು ಈ ಶ್ರೋತ್ರೇಂದ್ರಿಯ, ಆಕಾಶವು ಶಬ್ದ ಗುಣಕವಾಗಿರುವದರಿಂದ ಶ್ರೋತ್ರಕ್ಕೂ ಶಬ್ದದ ಅನುಭವವಾಗುತ್ತದೆ. “ಆತ್ಮನಃ ಆಕಾಶ ಸಂಭೂತಃʼʼ ಆತ್ಮನಿಂದ ಆಕಾಶವು ಮೊಟ್ಟಮೊದಲು ಹುಟ್ಟಿದ್ದರಿಂದ ಶಿವಕವಿಯು “ಆದಿ ಶ್ರೋತ್ರೇಂದಿ” ಎಂದು ಪ್ರಯೋಗಿಸಿದ್ದಾರೆ. ಶ್ರೋತ್ರೇಂದಿಯಕ್ಕೆ ಆದಿಪಟ್ಟ  ಬಂದಿದೆ. ಮತ್ತು ಶಿವನು ನಾದ – ಬಿಂದು ಕಲಾಸ್ವರೂಪನು. ಅವರ ಮೊದಲನೇ  ತತ್ವ ”ನಾದ”ವು ಕಿವಿಗೆ ತಾನೇ ವೇದ್ಯವಾಗುವದಿಲ್ಲವೆ !

“ನಿರ್ಭೇದ’ ಶಬ್ದದ ಅರ್ಥ ವಿಧವಿಧವಾಗಿದೆ, (೧) ಎರಡುಮಾಡು ೨) ಒಡೆ ೩) ಬೈಲಿಗೆ ಹಾಕು ೪) ಸ್ಪಷ್ಟಭಾಷಣ ) ೫)ನಾಷ ೬) ಪ್ರಲಯ ಮುಂತಾದವುಗಳು ನಿರ್ಭೇದ ಪದದ ಪರ್ಯಾಯನಾಮಗಳು. ಪ್ರಸ್ತುತ ತ್ರಿಪದಿಯಲ್ಲಿ ನಿರ್ಭೇದಕ್ಕೆ ಸ್ಪಷ್ಟವಾದ ಶಬ್ದವೆಂದೇ ಹೇಳಬೇಕು. ಯಾಕಂದರೆ ಶಬ್ದಗಳು – ಭಿನ್ನ ಭಿನ್ನವಾಗಿರುವದರಿಂದ ಕೇಳುವಿಕೆಯಲ್ಲಿ ಸ್ಪಷ್ಟತೆಯಿರಬೇಕಾಗುವದು. ಮುಖ್ಯವಾಗಿ ಶಬ್ದವನ್ನು ಐದು ತೆರನಾಗಿ ವಿಭಾಗಿಸಬಹುದು. ೧) ತಾಳವಾದ್ಯ ಕಂಸಾಳಾದಿಗಳಿಂದ ಜನ್ಯಶಬ್ದ ೨) ತಂತೀವಾದ್ಯದಿಂದ ಹೊರಡುವ ಶಬ್ದ.೩) ಕುಡುಹು (ಚರ್ಮವಾದ್ಯ) ವಿಡಿದು ಬರುವ ಶಬ್ದ ೪) ಕೊಳಲು, ವಾಸುಗಿ, ನಾಗಸರ, ಶಂಖ ಮೊದಲಾದವುಗಳಿಂದ ಹುಟ್ಟುವ ಶಬ್ದ. ೫) ವಚನ, ಗೀತರೂಪವಾದ ಶಬ್ದ. ಈ ಶಬ್ದಗಳನ್ನು ಪ್ರತ್ಯೇಕವಾಗಿ ಗ್ರಹಿಸುವ ಆನಂದವೇನಿದೆಯೋ ಅದು ಪ್ರಸಾದಲಿಂಗಕ್ಕೆ ಸಲ್ಲುವದೆಂದು ಗುರು ಬೋಧಿಸುತ್ತಾನೆ.

ಸಾಮಾನ್ಯ ಶಬ್ದವು ಪ್ರಸಾದಲಿಂಗಕ್ಕೆ ಸಲ್ಲುತ್ತಿದ್ದರೆ, ವಿಭಾಗಿಸಲ್ಪಡುವ ವಿವಿಧ ಶಬ್ದಗಳು ಪ್ರಸಾದಲಿಂಗದೊಳಗಿನ ಷದ್ವಿಧ ಲಿಂಗಗಳಿಗೆ ಸಮರ್ಪಣವಾಗುವಂತಾಗಬೇಕು. ಅರ್ಥಾತ್ ಸುಜ್ಞಾನದಿಂದ ವಿಭಿನ್ನ ಶಬ್ದಗಳನ್ನು ಗುರುತಿಸಿ ಆಯಾಲಿಂಗಕ್ಕೆ ಶಬ್ದ ಪ್ರಸಾದವನ್ನಾಗಿ ಸಮರ್ಪಿಸುವದು ಶರಣನ ಮಣಿಹವಾಗಿದೆ. ಪ್ರಸಾದಲಿಂಗವು ಶರಣನಿಂದ ಪೂಜೆಗೊಂಬುವಂಥಹದು. ಶರಣಸ್ಥಲಕ್ಕೆ ಏರಿ ನಿಂತವನು ನಿರ್ಭೇದ ಶಬ್ದವನ್ನು ಅರಿಯುತ್ತಾನೆ. ಅಂದರೆ ದೇಹಾವಸಾನದ, ಅರ್ಥಾತ್ ಅಂತಿಮಾವವಸ್ಥೆಯ ಸಾಗರಘೋಷದಂತಹ ಶಬ್ದವನ್ನು ಸಹ ತಿಳಿಯಲು ಸಮರ್ಥನಾಗುತ್ತಾನೆಂದು ಹೇಳಬಹುದು. ಈ ಶರಣನು ತನ್ನ ಶರೀರಾವಸಾನದ ಸೂಚನೆಯನ್ನು ತಿಳಿದು ಕೊಳ್ಳುವನು. ಅಂತೆಯೇ ‘ಶರಣನ ಗುಣ ಮರಣದಲ್ಲಿ ಕಾಣು” ಎಂದು ಅನುಭವಿಗಳು ನುಡಿದುದುಂಟು.

ಚನ್ನ ಬಸವಣ್ಣನವರ ಪ್ರಸಾದಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣ ಕೆಳಗಿನಂತಿದೆ. ”ತಾಳ-ಕಂಸಾಳವಿಡಿದು ಹುಟ್ಟಿದ ಶಬ್ದವನರಿವುದು ಆಚಾರಲಿಂಗದಲ್ಲಿ ,ತಂತಿವಿಡಿದು ಹುಟ್ಟಿದ ಶಬ್ದವನರಿವುದು ಗುರುಲಿಂಗದಲ್ಲಿ; ಕುಡುಹುವಿಡಿದು ಹುಟ್ಟಿದ ಶಬ್ದವನರಿವುದು ಶಿವಲಿಂಗದಲ್ಲಿ; ಕೊಳಲು, ವಾಸುಗಿ, ನಾಗಸರ; ಶಂಖದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಜಂಗಮಲಿಂಗದಲ್ಲಿ: ವಚನಗೀತದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಪ್ರಸಾದಲಿಂಗದಲ್ಲಿ ; ಇಂತಿವೆಲ್ಲದರಲ್ಲಿಯ ಹುಟ್ಟಿದ ಶಬ್ದವನರಿವುದು ಮಹಾಲಿಂಗದಲ್ಲಿ”

ಈ ರೀತಿಯಾಗಿ ಹುಟ್ಟಿದ ಶಬ್ದಗಳನ್ನು ಪ್ರಸಾದಲಿಂಗದೊಳಗಿನ ಆಚಾರಾದಿ ಲಿಂಗದಲ್ಲಿ ಮನನಮಾಡಿಕೊಳ್ಳಬೇಕು. ಶಬ್ದ ಪ್ರಸಾದವನ್ನು ಆಯಾಲಿಂಗಗಳಿಗೆ ಸಮರ್ಪಿಸುವ ಸಾವಧಾನತೆಯನ್ನರಿಯಬೇಕು. ಶಬ್ದವು ನಿಃಶಬ್ದವಾಗಿ ಮಂತ್ರವಾಗ ಬೇಕು. ಆಗ ಸದಾಕಾಲವೂ ಕಿವಿಯಲ್ಲಿ ಪ್ರಸಾದಲಿಂಗದ ಸಾಕ್ಷಾತ್ಕಾರವಾಗುವದು. ಗುರುವೆ ! ಎನ್ನ ಶ್ರೋತ್ರವನ್ನು ಪ್ರಸಾದಲಿಂಗವನ್ನಾಗಿಸುವಂತೆ ಕರುಣಿಸು.

*ಹೃದಯೇಂದ್ರಿಯದಿ ಪಂಚ | ವಿಧ ವಿಷಯ ಸುಖ ಮಿಶ್ರ

ಮುದದಿ ಭೋಗಿಪುದು-ಸದಮಲ ಮಹಲಿಂಗವೆಂ

ಬುದ ಪೇಳ್ದ ಗುರುವೆ ಕೃಪೆಯಾಗು  ||೧೬೪||

ಐದು ಜ್ಞಾನೇಂದ್ರಿಯಗಳ ವಿಷಯಗಳ ತೃಪ್ತಿಯನ್ನು ಪಡೆಯುವದು ಹೃದಯೇಂದ್ರಿಯವು. ಇದು ಆತ್ಮತತ್ವದಿಂದ ಬಂದುದು. ಈ ಹೃದಯದಲ್ಲಿ ಮಹಾಲಿಂಗನ ವಾಸವಿರುವದು. ಘ್ರಾಣದೊಳಗಿನ ಆಚಾರಲಿಂಗಕ್ಕೆ ಗಂಧವು, ಜಿಹ್ವೆಯೊಳಗಿನ ಗುರುಲಿಂಗಕ್ಕೆ ರಸವು, ನೇತ್ರದೊಳಗಿನ ಶಿವಲಿಂಗಕ್ಕೆ ರೂಪವು ,ತ್ವಕ್ಕಿನೊಳಗಿನ ಜಂಗಮಲಿಂಗಕ್ಕೆ ಸ್ಪರ್ಶನವು, ಶ್ರೋತ್ರದೊಳಗಿನ ಪ್ರಸಾದಲಿಂಗಕ್ಕೆ ಶಬ್ದವು ಸಮರ್ಪಿಸಲ್ಪಡುತ್ತಿದ್ದರೆ ಈ ಪಂಚಜ್ಞಾನೇಂದ್ರಿಯಗಳೊಳಗಿನ ಪಂಚಲಿಂಗಗಳಿಗೆ ಸಲ್ಲುವ ಪಂಚಪ್ರಸಾದದ ಮಿಶ್ರತೃಪ್ತಿಯು ಹೃದಯದೊಳಗಣ ಮಹಾಲಿಂಗಕ್ಕೇನೆ ಆನಂದಗೊಳಿಸುವದು. ಇಂದ್ರಿಯಗಳು ಲಿಂಗಮುಖವಾಗಿ ವಿಷಯಗಳನ್ನು ಪ್ರಸಿದ ಗೊಳಿಸಿ ಭೋಗಿಸುವದರಿಂದ ಆತ್ಮನು ಆನಂದಗೊಳ್ಳುವನು. ಇಂಥ ಸುಜ್ಞಾನಿಯಾದ ಶಿವಭಕ್ತನು ಸದಾಕಾಲವೂ ಆನಂದತುಂದಿಲನಾಗಿರುವನು. ಅವನ ಪ್ರಾಣಲಿಂಗಕ್ಕೆ ಸಂತೃಪ್ತಿಯಾಗುವದು. ಪಂಚಜ್ಞಾನೇಂದ್ರಿಯಗಳಲ್ಲಿ ಪಂಚಲಿಂಗಗಳನ್ನು ಸ್ಮರಿಸಿ ಸುಜ್ಞಾನದಿಂದ ಪಂಚ ವಿಷಯಗಳನ್ನು ಪಂಚಪ್ರಸಾದಗಳನ್ನಾಗಿಸಿ ಸ್ವೀಕರಿಸುವದರಿಂದ ಯಾವಾಗಲೂ ಪವಿತ್ರವಾದ ಮಹಾಲಿಂಗವು ಆನಂದ ಹೊಂದುವದು. ಈ ತೆರನಾಗಿ ಭೋಗಿಸುವ ಕಲೆಯನ್ನು ಕರಗತಮಾಡಿಕೊಂಡರೆ ವಿಷಯಗಳ ಪೂರ್ವಾಶ್ರಯವು ಅಳಿಯುವದು. ಅಲ್ಲದೆ ಜ್ಞಾನೇಂದ್ರಿಯಗಳ ಪ್ರಾಕೃತಿಕ ಧರ್ಮವೂ ಬಯಲಾಗಿ ಲಿಂಗಸಂಬಂಧವನ್ನು ಪಡೆಯಬಲ್ಲವು. ಆಗ ಲಿಂಗಭಕ್ತನು ಪ್ರಸಾದಕಾಯನಾಗಿ ಪ್ರಸನ್ನಚಿತ್ತನಾಗುವದರಲ್ಲಿ ಸಂಶಯವಿಲ್ಲವೆಂದು ಗುರುನಾಥನು ಉಪದೇಶಿಸುತ್ತಾನೆ.

ಮಿಶ್ರಾರ್ಪಣದಲ್ಲಿ ಮಹಾಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣವನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗಂಧದ ತೃಪ್ತಿಯನರಿಯುವದು ಆಚಾರಲಿಂಗದಲ್ಲಿ, ರಸದತೃಪ್ತಿಯನರಿವುದು ಗುರುಲಿಂಗದಲ್ಲಿ; ರೂಪಿನ ತೃಪ್ತಿಯನರಿವುದು ಶಿವಲಿಂಗದಲ್ಲಿ; ಸ್ಪರ್ಶನತೃಪ್ತಿಯನರಿವುದು ಜಂಗಮಲಿಂಗದಲ್ಲಿ, ಶಬ್ದದ ತೃಪ್ತಿಯನರಿವುದು ಪ್ರಸಾದಲಿಂಗದಲ್ಲಿ, ಇವು ಎಲ್ಲರಲ್ಲಿಯ ತೃಪ್ತಿಯನರಿವುದು ಮಹಾಲಿಂಗದಲ್ಲಿ’ ಮಹಾಲಿಂಗದೊಳಗಿನ ಆಚಾರ ಲಿಂಗವು ಗಂಧಪ್ರಸಾದದ ತೃಪ್ತಿಯನ್ನು, ಗುರುಲಿಂಗವು ರಸಪ್ರಸಾದದ ತೃಪ್ತಿಯನ್ನು, ಶಿವಲಿಂಗವು ರೂಪುಪ್ರಸಾದ ತೃಪ್ತಿಯನ್ನು, ಜಂಗಮಲಿಂಗವು ಸ್ಪರ್ಶಪ್ರಸಾದ ತೃಪ್ತಿಯನ್ನು, ಪ್ರಸಾದಲಿಂಗವು ಶಬ್ದಪ್ರಸಾದ ತೃಪ್ತಿಯನ್ನು ಅನುಭವಿಸುತ್ತವೆ. ಇವೆಲ್ಲವುಗಳ ಸಂತೃಪ್ತಿಯು ಮಹಾಲಿಂಗದೊಳಗಿನ ಮಹಾಲಿಂಗಕ್ಕೆ ಸಲ್ಲುವದು. ಓ ಗುರುವೆ ಇಂಥ ಮಹದಾನಂದವನ್ನು ಹೊಂದುವ ಸೌಭಾಗ್ಯವನ್ನು ಸಮನಿಸುವಂತೆ ಹರಸು

Related Posts