ಶ್ರೀಕಂಠ ಚೌಕೀಮಠ
——————-
ಕಲಬುರಗಿಯ ಸಂಜಯ ಮಕಾಲೆ ( ಮೊಬೈಲ ಸಂಖ್ಯೆ: 98455 02640) ಎಂಬವರು ಪರಳಿ ವೈಜನಾಥ ದೇವಾಲಯದಲ್ಲಿ ಹಾನಗಲ್ ಕುಮಾರಸ್ವಾಮಿಗಳಿಗೆ ಪ್ರವೇಶ ನಿರಾಕರಣೆ ನಡೆದ ಕಾರಣದಿಂದ ವಿವಾದವಾಯಿತು ಎಂದು ಸುಳ್ಳು ವದಂತಿಯನ್ನು ಶ್ರೀ ಎಮ್.ಪಿ.ಎಮ್.ನಟರಾಜಯ್ಯ ಅವರ ಫೇಸಬುಕ್ ಅಕೌಂಟಗೆ ಹಾಕಿರುವ ವಿಷಯವನ್ನು ನನಗೆ ತಿಳಿಸಲಾಗಿದೆ. ಆದರೆ ಈ ಮಾತುಗಳಲ್ಲಿ ಸತ್ಯಾಂಶವಿಲ್ಲ; ಉಲ್ಲೇಖಿಸಲಾದ ಘಟನೆ ಸತ್ಯಕ್ಕೆ ದೂರವಾದುದು. ಪರಳಿ ವೈದ್ಯನಾಥೇಶ್ವರ ದೇವಾಲಯದಲ್ಲಿ ಪೂಜ್ಯ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳಿಗೆ ಪ್ರವೇಶ ನಿರಾಕರಣೆ ಎನ್ನುವ ಅಂಶವೇ ಇಲ್ಲ.
ನಿಜವಾದ ಹಿನ್ನೆಲೆಯೆಂದರೆ, ಅನೇಕ ಭಕ್ತರ ವಿನಂತಿಯನ್ನು ಅಂಗೀಕರಿಸಿ, ಕ್ರಿ.ಶ. ೧೯೨೪ರ ಜೂನ್ ತಿಂಗಳಲ್ಲಿ ವರಂಗಲ್ ಜಿಲ್ಲೆಯ ಗಣಪುರಂ ಸ್ಟೇಷನ್ ಹತ್ತಿರದ ಲಿಂಗಂಪಲ್ಲಿಯ ಶಿವಕೋಟಿ ವೀರಭದ್ರಸ್ವಾಮಿಗಳು ವೈದ್ಯನಾಥೇಶ್ವರನಿಗೆ ವೇದೋಕ್ತ ಮಹಾರುದ್ರಾಭಿಷೇಕ ಮಹೋತ್ಸವ ನಡೆಸಬೇಕೆಂಬ ಆಶಯ ವ್ಯಕ್ತಪಡಿಸಿದರು. ಭಕ್ತರು ಅದಕ್ಕೆ ವ್ಯಾಪಕ ಬೆಂಬಲ ನೀಡಿದರು; ಮುಕ್ತಹಸ್ತದಿಂದ ನೆರವು ದೊರೆತು ಸುಮಾರು ಹತ್ತೆಂಟು ಸಾವಿರ ರೂಪಾಯಿಗಳಷ್ಟು ಧನ ಶೇಖರವಾಯಿತು.
ಈ ಮಹೋತ್ಸವದ ವೈಭವ, ಧರ್ಮಸೇವೆ ಮತ್ತು ಧನಸಂಗ್ರಹವನ್ನು ಕಂಡು ಅಲ್ಲಿ ಇರುವ ಕೆಲವು ಬ್ರಾಹ್ಮಣರಲ್ಲಿ ಆಸಕ್ತಿ ಹುಟ್ಟಿತು; ಅವರು ಈ ಉತ್ಸವದಲ್ಲಿ ತಮಗೂ ಸ್ಥಾನ ದೊರಕಬೇಕೆಂದು ಬಯಸಿದರು. ಆದರೆ ರುದ್ರಾಭಿಷೇಕದ ಸಂದರ್ಭದಲ್ಲಿ ವೀರಶೈವ ವೈದಿಕ ಮಂಡಲಿಯೊಡನೆ ಸೇರುವುದರ ಹೊರತು, ಅವರಿಗೆ ಬೇರೆ ರೀತಿಯ ಭಾಗವಹಿಸುವ ಅವಕಾಶ ಇರಲಿಲ್ಲ. ಈ ಕಾರಣಕ್ಕೆ, ಶ್ರೀರುದ್ರ ಪಠಣ ಹಾಗೂ ಹೋಮದಲ್ಲಿ ಋತ್ವಿಜರಾಗಿ ಸೇರಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು.
ವೀರಶೈವರು ಇದಕ್ಕೆ ಸಹಮತಿಯಾಗಲಿಲ್ಲ. ಅನೇಕ ಶತಮಾನಗಳಿಂದ ಸ್ವತಂತ್ರ ಧರ್ಮಪರಂಪರೆಯನ್ನು ಆಶ್ರಯಿಸಿರುವ ವೀರಶೈವ ಸಂಪ್ರದಾಯಕ್ಕೆ ಇದು ಸರಿಹೊಂದುವುದಿಲ್ಲವೆಂದೂ, ತಮ್ಮ ಪದ್ಧತಿಯ ಶುದ್ಧತೆಯನ್ನು ರಕ್ಷಿಸುವ ಸಂಕಲ್ಪವನ್ನು ಅವರು ಘಂಟಾಘೋಷವಾಗಿ ಘೋಷಿಸಿದರು. ಇದರಿಂದ ಕೋಪಗೊಂಡ ಕೆಲ ಬ್ರಾಹ್ಮಣರು “ವೀರಶೈವರಿಗೆ ವೇದಾಧಿಕಾರವಿಲ್ಲ; ಅವರಿಗೆ ವೇದೋಕ್ತ ರುದ್ರಾಭಿಷೇಕ ನಡೆಸುವ ಹಕ್ಕಿಲ್ಲ” ಎಂದು ಆರೋಪಿಸಲು ಪ್ರಾರಂಭಿಸಿದರು. ತಮ್ಮ ವಿರೋಧವನ್ನು ದೃಢಪಡಿಸಲು ಅವರು ನಿಜಾಂ ಸರಕಾರದ ಮುಂದೆ ದೂರು ಅರ್ಜಿಗಳನ್ನು ಸಲ್ಲಿಸಿದರು.
ಈ ವಿಷಯವು ಪ್ರಕಟವಾದ ಕ್ಷಣದಿಂದಲೇ ಪರಸ್ಪರ ವಿರೋಧಿ ಮನೋಭಾವ ಹೊಂದಿದ್ದ ಎರಡು ಪಂಗಡಗಳ ಮಧ್ಯೆ ಈರ್ಷೆ–ದ್ವೇಷಗಳ ಜ್ವಾಲೆ ಹೊತ್ತಿಕೊಂಡಿತು. ಒಬ್ಬರನ್ನೊಬ್ಬರು ಹೀಯಾಳಿಸುವುದು, ನಿಂದಿಸುವುದು, ಪರಸ್ಪರ ದ್ವೇಷದ ಮಾತುಗಳನ್ನು ಬಳಕೆ ಮಾಡುವಂತ ವಾತಾವರಣ ನಿರ್ಮಾಣವಾಯಿತು. ಈ ಉದ್ವಿಗ್ನತೆಯ ಪರಿಣಾಮದಿಂದ ಬ್ರಾಹ್ಮಣ ಅಧಿಕಾರಿಗಳಲ್ಲಿಯೂ ಪ್ರತಿಕ್ರಿಯೆ ಹುಟ್ಟದೆ ಇರಲಿಲ್ಲ. ಸ್ವಜಾತಿಯ ಗರ್ವ ಮತ್ತು ಅಭಿಮಾನದಿಂದ ಅವರು “ವೀರಶೈವರು ರುದ್ರಾಭಿಷೇಕ ಮಾಡಬಾರದು” ಎಂಬ ಕಟ್ಟಪ್ಪಣೆ ಹೊರಡಿಸಿದರು.
ಈ ರೀತಿಯ ಸ್ಥಳೀಯ ಅಧಿಕಾರಿಗಳ ಪಕ್ಷಪಾತದ ಸೂಚನೆಗಳಿಂದ ವೀರಶೈವರು ಮತ್ತು ಇತರ ಬ್ರಾಹ್ಮಣೇತರ ವರ್ಗದವರು ಆಕ್ರೋಶಗೊಂಡರು. ವಿವಾದಕ್ಕೆ ನ್ಯಾಯಸಮ್ಮತ ಬಗೆಹರಿವು ದೊರಕಬೇಕೆಂಬ ಆಶಯದಿಂದ ಅವರು ಸಂಸ್ಥಾನಾಧಿಪತಿಗಳಾದ ನಿಜಾಂರವರಲ್ಲಿ ಬಿನ್ನಹ ಸಲ್ಲಿಸಿದರು. ಬ್ರಾಹ್ಮಣರಾದವರು ಮರುವಿಷಯವಾಗಿ “ಅನಧಿಕಾರಿಗಳಾದ ಲಿಂಗಾಯತರು ರುದ್ರಾಭಿಷೇಕ ಮಾಡುವುದು ಧರ್ಮವಿರುದ್ಧ; ಆದ್ದರಿಂದ ಅದಕ್ಕೆ ಅವಕಾಶ ನೀಡಬಾರದು” ಎಂದು ನಿಜಾಂರಿಗೆ ಲಿಖಿತವಾಗಿ ತಿಳಿಸಿದರು. ಇದರ ಪರಿಣಾಮವಾಗಿ ನಿಜಾಂ ಸರ್ಕಾರವು ಅವರ ಮನವಿಯನ್ನು ಪರಿಗಣಿಸಿ ತಕ್ಕ ಆದೇಶಗಳನ್ನು ಹೊರಡಿಸಬೇಕಾಯಿತು.
ಈ ವಿಚಾರವಾಗಿ ಮೈಸೂರ ಸ್ಟಾರ್ ಪತ್ರಿಕೆಯಲ್ಲಿ ಪ್ರಕಟವಾದ ಅಗ್ರಲೇಖನದ ಮಾತುಗಳು ಉಲ್ಲೇಖಾರ್ಹ. ಸ್ಥಳಾಧಿಕಾರಿಗಳ ಪಕ್ಷಪಾತದಿಂದ ವೀರಶೈವರು ಹಾಗೂ ಇತರ ಬ್ರಾಹ್ಮಣೇತರ ಸಮುದಾಯಗಳು ಕುಬ್ಬರಾಗಿ ನಿಜಾಂರನ್ನು ಸಂಪರ್ಕಿಸಿದರೆ, ಮತ್ತೊಂದೆಡೆ ಬ್ರಾಹ್ಮಣರು “ಅನಧಿಕಾರಿಗಳಾದ ಲಿಂಗಾಯತರಿಗೆ ರುದ್ರಾಭಿಷೇಕ ಮಾಡಲು ಅವಕಾಶ ಕೊಡಬಾರದು” ಎಂದು ತಮ್ಮ ಮನವಿಯನ್ನು ಗಟ್ಟಿಯಾಗಿ ದಾಖಲಿಸಿದರು.
ನಿಜಾಂ ಸರ್ಕಾರಕ್ಕೆ ಈ ವಿವಾದವು ಗಂಭೀರವಾಗಿ ತೋರಿ, “ರುದ್ರಾಭಿಷೇಕ ಮಾಡಿ ಜ್ಯೋತಿರ್ಲಿಂಗವನ್ನು ಪೂಜಿಸುವ ಹಕ್ಕಿಗೆ ವೀರಶೈವರು ಅರ್ಹರಾಗುವುದನ್ನು ಭರ್ವಶಾಸ್ತ್ರಾಧಾರದಿಂದ ಸಾಬೀತುಪಡಿಸಬೇಕು” ಎಂದು ತಿಳಿದುಬಂದ ಆದೇಶ ಹೊರಡಿಸಲಾಯಿತು. ಇದಕ್ಕಾಗಿ ವಾದ-ಪ್ರತಿವಾದ ಮಾಡಲು ಇಂದೂರು ಸಂಸ್ಥಾನದ ಸಂಸ್ಕೃತ ಮಹಾಪಾಠ ಶಾಲೆಯ ವೇದಾಭಾಷ್ಯ ಪ್ರೊಫೆಸರ್ ಪಂಡಿತ ಸ್ವಾಮಿ ವಿರೂಪಾಕ್ಷ ಒಡೆಯರನ್ನು ವೀರಶೈವರ ಪರವಾಗಿ ಆಹ್ವಾನಿಸಲಾಯಿತು. ಬ್ರಾಹ್ಮಣರ ಪರವಾಗಿ ಸಂಕೇಶ್ವರ ಮಠದ ಶ್ರೀ ಶಂಕರಾಚಾರ್ಯರನ್ನು ಆಯ್ಕೆಮಾಡಿ ಅವರಿಗೂ ಮಹಾಮಹೋಪಾಧ್ಯಾಯ ವಾಸುದೇವ ಶಾಸ್ತ್ರಿ ಅಭ್ಯಂ ಹಾಗೂ ವಿಷ್ಣು ಶಾಸ್ತ್ರಿ ಭಾಸಟ್ ಮೊದಲಾದ ಪಂಡಿತರನ್ನು ಸಹಾಯಕರನ್ನಾಗಿ ನೇಮಿಸಲಾಯಿತು. (ಮೈಸೂರ ಸ್ಟಾರ್ – 8-1-1925)
ನಿಜಾಂಸರಕಾರದ ಅಪ್ಪಣೆಯಂತೆ ಶಾಸ್ತ್ರಾರ್ಥವು ೧೯-೩-೧೯೨೫ರಂದು ಪರಳಿಯಲ್ಲಿ ಪ್ರಾರಂಭವಾಗುವುದೆಂದು ನಿಶ್ಚಯವಾಯಿತು. ಬ್ರಾಹ್ಮಣರು ತಮ್ಮ ಪರದ ಪಂಡಿತರ ಅಧ್ವಾನಕ್ಕೆ ಸಮಗ್ರ ಪ್ರಾಂತದ ಬ್ರಾಹ್ಮಣರಿಂದ ಧನವಂತಿಕೆ ಹಾಗೂ ಬೆಂಬಲವನ್ನು ಜಾಹೀರಾತುಗಳ ಮುಖಾಂತರ ಜಮೆ ಮಾಡಲು ಪ್ರಾರಂಭಿಸಿದರು. ಪರಳಿ, ಬಾರ್ಶಿ, ಲಾಟ್ ಮೊದಲಾದ ಪ್ರದೇಶಗಳ ವೀರಶೈವರು ಕೂಡ ತಾವು ಸಹ ಸಂಘಟಿತವಾಗುತ್ತಾ, ಅದೇ ಸಂದರ್ಭದಲ್ಲಿ ಮಹಾರಾಷ್ಟ್ರೀಯ ಅಖಿಲ ವೀರಶೈವ ಪ್ರಥಮ ಮಹಾಸಭೆಯನ್ನು ಕರೆಯುವ ನಿರ್ಧಾರ ಮಾಡಿಕೊಂಡರು. ಸಭಾಧ್ಯಕ್ಷರಾಗಿ ಶ್ರೀ ಜಗದಾಚಾರ್ಯ ಸ್ವಾಮಿ ವಿರೂಪಾಕ್ಷ ಒಡೆಯರನ್ನೇ ಆರಿಸಿ ಸಭೆ ನಡೆಸಲು ನಿಜಾಂ ಸರ್ಕಾರದ ಅನುಮತಿಯನ್ನೂ ಕೋರಿ ಮುಂದಾದರು. (ಮೈಸೂರ ಸ್ಟಾರ್ – 31-1-1925)
ಈ ವ್ಯಾಜ್ಯ ಮತ್ತು ನ್ಯಾಯಪ್ರಕ್ರಿಯೆಯಲ್ಲಿ ಜಯ ಸಾಧಿಸುವ ಸಂದರ್ಭದಲ್ಲಿ ಪೂಜ್ಯ ಹಾನಗಲ್ ಶ್ರೀ ಕುಮಾರಸ್ವಾಮಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು.
(ಮೈಸೂರ ಸ್ಟಾರ್ – 7 ನವೆಂಬರ್ 1925)
ವೀರಶೈವ ಮತಸುಧಾರಣೆಯ ಕ್ಷೇತ್ರದಲ್ಲಿ ಕೇಂದ್ರಭೂಮಿಯಾಗಿರುವ ಶಿವಯೋಗಮಂದಿರ ಸಂಸ್ಥೆ ಮತ್ತು ವೀರಶೈವ ಮಹಾಸಭೆ ಮುಂತಾದ ಸಂಘಟನೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಪೂಜ್ಯ ಹಾನಗಲ್ಲ ಶ್ರೀ ನಿ.ಪ್ರ. ಕುಮಾರಸ್ವಾಮಿಗಳು. ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರಿಂದ ವಿಶೇಷ ಆಹ್ವಾನ ಸ್ವೀಕರಿಸಿ, ಐದು–ಆರು ಮಂದಿ ಶಿವಯೋಗಿಗಳು, ಸದ್ಭಕ್ತರು ಹಾಗೂ ಪ್ರಾಜ್ಞ ಪಂಡಿತರಾದ ಪಂ| ನಾಲ್ಕಾರ ಜಗದೀಶಶಾಸ್ತ್ರಿಗಳು, ಮಣೂರ ಮಲ್ಲಿಕಾರ್ಜುನ ಶಾಸ್ತ್ರಿಗಳು ಮೊದಲಾದ ವಿದ್ವಾಂಸರೊಂದಿಗೆ ಹೈದರಾಬಾದ್‌ಗೆ ತೆರಳಿದರು. ಅಲ್ಲಿ ಬ್ರಾಹ್ಮಣರಿಂದ ಮುಂದಿಟ್ಟಿದ್ದ ೩೬ ಪ್ರಶ್ನೆಗಳಿಗೆ ಅನೇಕ ಗ್ರಂಥಪ್ರಮಾಣ ಹಾಗೂ ಶಾಸ್ತ್ರನಿರೂಪಣೆಯ ಆಧಾರದ ಮೇಲೆ ಖಂಡನಾತ್ಮಕ ಉತ್ತರಗಳನ್ನು ರಚಿಸಿ ಧರ್ಮಕೋರ್ಟಿಗೆ ಕಳುಹಿಸಿ ಧರ್ಮರಕ್ಷಣೆಗೆ ಸಹಾಯ ಮಾಡಿದರು.
ವೀರಶೈವ ಪಂಡಿತರಲ್ಲೂ ಕೆಲವೊಮ್ಮೆ ಅಭಿಪ್ರಾಯ ಭೇದಗಳು ಮೂಡಿದ ಸಂದರ್ಭಗಳು ಕಂಡುಬಂದವು. ಆಗ ಶ್ರೀಯವರು ಶಾಂತ ಮತ್ತು ಉದಾತ್ತ ಸಂಕಲ್ಪದಿಂದ ಮಾತನಾಡುತ್ತಾ –
“ಸಮಯವನ್ನು ಗಮನಿಸಿ. ನಮ್ಮೆಲ್ಲರಿಗೂ ಮಾನವೇ ಮೂಲಧನ. ಸಮಾಜಕಾರ್ಯವೇ ಮುಖ್ಯ; ಜನಮೆಚ್ಚುಗೆಗೆ ಸೊಪ್ಪು ಹಾಕಬೇಡಿ. ಶಿವನ ಮೆಚ್ಚುಗೆಯೇ ಮೂಲಗುರಿಯಾಗಲಿ,”
ಎಂದು ಸಾರಿದುದು ಅವರ ಉದಾತ್ತ ಚರಿತ್ರೆಗೆ ದೃಢಸಾಕ್ಷಿಯಾಗಿದೆ.
ಪೂಜ್ಯ ಹಾನಗಲ್ ಶ್ರೀ ಕುಮಾರಸ್ವಾಮಿಗಳು ಜವಾಬ್ದಾರಿಯುತ ಪಂಡಿತರ ಹಾಗೂ ವಕೀಲರ ತಂಡವನ್ನು ರಚಿಸಿ, ಲಿಂಗಾಯತ ಸಮುದಾಯದ ಮಾನ-ಮರ್ಯಾದೆ ಮತ್ತು ಸ್ವಾಭಿಮಾನಕ್ಕಾಗಿ ಹಗಲುರುಳು ತಾರತಮ್ಯವಿಲ್ಲದೆ ಹೋರಾಡಿದರು.
ಪರಳಿ ವೈದ್ಯನಾಥೇಶ್ವರ ರುದ್ರಾಭಿಷೇಕ ವ್ಯವಹಾರದಲ್ಲಿ ಭಾಗವಹಿಸಿದ ವೀರಶೈವ ಪಂಡಿತರು
ವೀರಶೈವರ ಧಾರ್ಮಿಕ ಹಕ್ಕು, ವೇದಾಧಿಕಾರ ಮತ್ತು ರುದ್ರಾಭಿಷೇಕ ಅರ್ಹತೆಯನ್ನು ಸಾಬೀತುಪಡಿಸಲು ಅನೇಕ ಪಂಡಿತರು ತಮ್ಮ ಜ್ಞಾನ, ಸಾಧನೆ ಮತ್ತು ತತ್ವಪರ ಚಿಂತನೆಯೊಂದಿಗೆ ಮುಂದೆ ಬಂದರು. ಅವರ ಸೂಕ್ಷ್ಮಚಿಂತನೆ, ಶಾಸ್ತ್ರಾಧಾರಿತ ವಾದ-ಪ್ರತಿವಾದ ಮತ್ತು ಪತ್ರಿಕ್ರಮಗಳು ಈ ವಿಚಾರಕ್ಕೆ ಬಲವಾದ ಆಧಾರವಾಗಿದವು. ಆ ಪೈಕಿ ಪ್ರಮುಖರಾದ ಪಂಡಿತರ ಪಟ್ಟಿ ಹೀಗಿದೆ:
- ಜಗದಾಚಾರ್ಯ ವಿದ್ಯಾನಿಧಿ ವೇದತೀರ್ಥ ಸ್ವಾಮಿತಾ ವಿರೂಪಾಕ್ಷ ಒಡೆಯರು, ವೇದಭಾಷ್ಯ ಪ್ರೋಫೆಸರ್, ಇಂದೂರು
- ವೇ.ಬ್ರ. ಶ್ರೀ ವ್ಯಾಕರಣತೀರ್ಥ ಸದಾಶಿವಶಾಸ್ತ್ರಿಗಳು, ಹೋಳ್ಳ ಸಂಸ್ಕೃತ ಕಾಲೇಜು (ಮುಂದೆ ರಂಭಾಪುರಿ ಪೀಠಾಧ್ಯಕ್ಷರು), ಕಾಶಿ
- ಆಸ್ಥಾನ ಮಹಾವಿದ್ವಾನ್ ಕರ್ನಾಟಕ ಭಾಷಾರತ್ನ ಪಿ.ಆರ್. ಕರಿಬಸವಶಾಸ್ತ್ರಿಗಳು, ಮೈಸೂರು
- ಆಸ್ಥಾನ ಮಹಾವಿದ್ವಾನ್ ಪಂಡಿತರತ್ನ ಸಿರಸಿ ಗುರುಶಾಂತಶಾಸ್ತ್ರಿಗಳು, ಮೈಸೂರು
- ಪಂ| ಗುರುಬಸವಶಿವಾಚಾರ್ಯರು, ಕ್ಯಾಸನೂರು ಸಂಸ್ಥಾನಮಠ
- ಪಂ. ಕಲಿಗಣನಾಥ ಶಾಸ್ತ್ರಿಗಳು
- ಪಂ| ಅಜ್ಜಯ್ಯ ಶಾಸ್ತ್ರಿಗಳು, ತರ್ಕತೀರ್ಥ, ತರ್ಕವಾಗೀಶ, ಪಗಡದಿನ್ನಿ; ಕಾರಭಾರಿಗಳು, ಚೌಡದಾನಪುರ ಸಂಸ್ಥಾನಮಠ
- ಪಂ|| ಚಂದ್ರಶೇಖರ ಶಾಸ್ತ್ರಿಗಳು, ಪಗಡದಿನ್ನಿ
- ಪಂ. ಸೋಮನಾಥ ಶಾಸ್ತ್ರಿಗಳು, ಧರ್ಮತತ್ವವಿಶಾರದ, ಗೊಗ್ಗಿಹಳ್ಳಿ (ಸಾಗರ ತಾ||)
- ಪಂ. ಬಸವರಾಜ ಶಾಸ್ತ್ರಿಗಳು, ವ್ಯಾಕರಣರತ್ನ, ಪಗಡದಿನ್ನಿ
- ಪಂ|| ಮಣೂರ ಮಲ್ಲಿಕಾರ್ಜುನ ಶಾಸ್ತ್ರಿಗಳು, ಸೊಲ್ಲಾಪುರ
- ವ್ಯಾಕರಣತೀರ್ಥ ವಿದ್ಯಾಲಂಕಾರ ಚಂದ್ರಶೇಖರ ಶಾಸ್ತ್ರಿಗಳು, ಪ್ರಿನ್ಸಿಪಾಲ್, ಶಂಕರ ಸಂಸ್ಕೃತ ಕಾಲೇಜು, ಯಾದಗಿರಿ
- ಧರ್ಮತತ್ತ್ವಚಿಂತಾಮಣಿ ಚಂದ್ರಶೇಖರ ಶಾಸ್ತ್ರಿಗಳು, ಕಂಪಲಿ
- ಆಸ್ಥಾನವಿದ್ವಾನ್ ಚಂದ್ರಶೇಖರ ಶಾಸ್ತ್ರಿಗಳು, ತೆಲಗಿ ಮಠ, ದಾವಣಗೆರೆ
- ಹಂಪಿ ತೋಪಿನ ಸಾವಿರದೇವರ ಮಹಾಂತ ಸ್ವಾಮಿಗಳು, ಕಂಪಲಿ
- ಸರ್ವದರ್ಶನತೀರ್ಥ ವೈ. ನಾಗೇಶ ಶಾಸ್ತ್ರಿಗಳು, ಬಳ್ಳಾರಿ
- ಶಿವಕೋಟಿ ವೀರಭದ್ರ ಸ್ವಾಮಿಗಳು, ಲಿಂಗಂಪಳ್ಳಿ
- ಶ್ರೀ ಸದಾಶಿವಮೂರ್ತಿಯವರು, ಸಖರಾಯಪಟ್ಟಣದ ಷ.ಬ್ರ. ಶ್ರೀ ಸದಾಶಿವಾಚಾರ್ಯರು
ವೀರಶೈವರ ಪರವಾಗಿ ಹೋರಾಡಿದ ಪ್ರಮುಖ ವಕೀಲರು
ಈ ಪ್ರಕರಣ ಕಾನೂನು, ಸಂಪ್ರದಾಯ ಮತ್ತು ಧಾರ್ಮಿಕ ಹಕ್ಕುಗಳ ಮಟ್ಟಿಗೆ ತಲುಪಿದಾಗ, ವೀರಶೈವ ಪರವಾಗಿ ಕಾರ್ಯನಿರ್ವಹಿಸಲು ಅನೇಕ ವಕೀಲರು ನ್ಯಾಯಾಂಗ ವೇದಿಕೆಯಲ್ಲಿ ನಿಂತರು:
- ನಿರ್ಮಲ ದೇಶಮುಖ್, ಹೈಕೋರ್ಟ್ ವಕೀಲರು, ಹೈದರಾಬಾದ್
- ರಾಯ ವಿಶ್ವೇಶ್ವರನಾಥ್, ಹೈಕೋರ್ಟ್ ವಕೀಲರು, ಹೈದರಾಬಾದ್
- ರಾವಬಹದ್ದೂರ್ ಶಾಂತವೀರ ಒಡೆಯರ್, ಎಲ್.ಎ.ಜಿ., ಚೌಡದಾನಪುರ
- ಬಾಪೂರಾವ್, ವಕೀಲರು, ಹೈದರಾಬಾದ್
- ಹೇಮಚಂದ್ರರಾವ್, ವಕೀಲರು, ಹೈದರಾಬಾದ್
- ಸೋಮೇಶ್ವರರಾವ್, ವಕೀಲರು, ಹೈದರಾಬಾದ್
- ಶರಣಯ್ಯ, ವಕೀಲರು, ಹೈದರಾಬಾದ್
- ನಾಗನಾಥಯ್ಯ, ವಕೀಲರು, ಹೈದರಾಬಾದ್
- ಬಾಲಕಿ ದೇಶಮುಖ್, ವಕೀಲರು, ಉದ್ಗೀರ
- ಚನ್ನಬಸವಯ್ಯ, ವಕೀಲರು, ಉದ್ಗೀರ
- ಚಂದ್ರಪ್ಪ, ವಕೀಲರು, ಉದ್ಗೀರ
- ಸಂಗ್ರಾಮಪ್ಪ, ವಕೀಲರು, ಉದ್ಗೀರ
- ಮಹದೇವಯ್ಯ, ವಕೀಲರು, ಉದ್ಗೀರ
- ನಾಗನಾಥರಾವ್, ವಕೀಲರು, ಭಾಲ್ಕಿ
ಉಪಸಂಹಾರ:
ಸತ್ಯಾಂಶಗಳ ಸರಿಯಾದ ಅಧ್ಯಯನವಿಲ್ಲದೆ ಕೇಳಿಬರುವ ಮಾತನ್ನು ಕೇಳಿದ ತಕ್ಷಣ ನಂಬುವುದು, ಪರಿಶೀಲಿಸದೆ ಪ್ರಸಾರ ಮಾಡುವುದು, ತಾನು ತಿಳಿದಂತೆ ತೋರಿಸಿಕೊಳ್ಳುವುದೇ ಆತ್ಮವಂಚನೆಗೆ ಸಮಾನವಾದುದು. ಇತಿಹಾಸ, ಸಂಪ್ರದಾಯ, ಸಮಾಜ ಮತ್ತು ಧರ್ಮಗಳಿಗೆ ಸಂಬಂಧಿಸಿದ ವಿಚಾರಗಳು ಲಘುವಾಗಿರುವುದಿಲ್ಲ; ಅವು ಭಾವನೆಯ ಆಧಾರದಲ್ಲಲ್ಲ, ದೃಢಪರಿಶೀಲನೆಯ ಆಧಾರದಲ್ಲಿ ನಿಂತಿರಬೇಕು. ತಪ್ಪುಮಾಹಿತಿಯನ್ನು ಸರಿ ಎಂದೆತ್ತುವುದು, ಸುಳ್ಳುಮಾತನ್ನು ಧರ್ಮವೆಂಬ ಹೆಸರಿನಲ್ಲಿ ಹೊಗಳುವುದು, ನಿಜದ ಮೇಲೆ ನೆರಳು ಬೀರುವುದಷ್ಟೇ ಅಲ್ಲ, ಪೀಳಿಗೆಯ ಮನಸ್ಸಿನ ಮೇಲೆ ಗಾಯ ಮಾಡುವಂತಾಗಿದೆ.
ಈ ಕಾರಣಕ್ಕೆ, ಸಂಜಯ ಮಕಾಲೆಯವರು ಕೂಡ ಸುಲಭವಾಗಿ ಸಿಗುವ ಸುಳ್ಳುಮಾಹಿತಿಗಳನ್ನೇ ನಂಬಿ ಹಂಚಿಕೊಳ್ಳುವುದಕ್ಕೆ ಮುಂದಾಗಬಾರದು. ಪೂರ್ವಾಗ್ರಹ, ದ್ವೇಷಭಾವ, ವೈಮನಸ್ಯದ ಮನಸ್ಥಿತಿಯಿಂದ ಬರೆಯುವುದು ಸತ್ಯಶೋಧನೆಯ ಮಾರ್ಗವಲ್ಲ; ಅದು ಸ್ವತಃ ತನ್ನನ್ನೇ ವಂಚಿಸುವ ಮೊದಲ ಹೆಜ್ಜೆಯಾಗಿದೆ. ವಿಚಾರದ ಅರಿವಿಲ್ಲದೆ ತೀರ್ಪು ನೀಡುವುದಕ್ಕಿಂತ, ವಿಚಾರದ ಅರಿವನ್ನು ಪಡೆದು ಮೌನವಿರುವುದು ಶ್ರೇಷ್ಠ. ಹೀಗಾಗಿ, ದ್ವೇಷದ ಮಸಿ ಬಳಸಿ ಬರೆಯುವ ಬದಲು, ತತ್ವದ ಬೆಳಕಿನಲ್ಲಿ ಸತ್ಯವನ್ನು ಗ್ರಹಿಸಲು ಪ್ರಯತ್ನಿಸಬೇಕು.
ಸತ್ಯ ಯಾವಾಗಲೂ ಶಾಂತವಾಗಿಯೇ ಗೆಲ್ಲುತ್ತದೆ;
ಸುಳ್ಳು ಜೋರಾಗಿ ಕೂಗಿದರೂ, ಅದರಲ್ಲಿ ಜ್ಯೋತಿ ಇರುವುದಿಲ್ಲ.
ಗ್ರಂಥ ಉಲ್ಲೇಖಗಳು
ಈ ಇತಿಹಾಸಿಕ ಮಾಹಿತಿಗೆ ಆಧಾರವಾಗಿರುವ ಪ್ರಮುಖ ಗ್ರಂಥಗಳು:
- ವೀರಶೈವ ವೇದಾಧಿಕಾರ ವಿಜಯ — ಸಂಗ್ರಹ: ಶ್ರೀ ಎಂ.ಜಿ. ನಂಜುಂಡರಾಧ್ಯರು, ಮೈಸೂರು
- ವಾರದ ಮಲ್ಲಪ್ಪನವರು — ಮರಾಠಿ ಮೂಲ: ಶ್ರೀ.ನಾ.ರಾ. ಬಾಮಣಗಾಂವಕರ, ಕನ್ನಡಾನುವಾದ: ಶ್ರೀ ಬಿ.ಎಸ್. ಗವಿಮಠ
- ಮಹಾಜಂಗಮ ಪಿ.ಎಚ್.ಡಿ ಅಧ್ಯಯನಗ್ರಂಥ — ಲೇಖಕ: ಡಾ. ಜಿ.ಕೆ. ಹಿರೇಮಠ, ಕವಿ.ವಿ.ವಿ., ಧಾರವಾಡ
ಶ್ರೀಕಂಠ ಚೌಕೀಮಠ

























Total views : 23313