ಲೇಖಕ:-ಶ್ರೀಕಂಠ ಚೌಕೀಮಠ

೨೪ ಅಕ್ಟೋಬರ್ ೨೦೨೫ರಂದು, ಧರ್ಮಸ್ಥಳದ ಧರ್ಮಾಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆ ಅವರ ಆಶ್ರಯದಲ್ಲಿ, ಡಾ. ಎಸ್.ಆರ್. ವಿಘ್ನರಾಜ ಮತ್ತು ಡಾ. ಪವನ್ ಅವರ ಸಂಪಾದಕತ್ವದಲ್ಲಿ ಪ್ರಕಟಿತವಾದ, ಶ್ರೀ ಕಂಚಿ ಶಂಕರಾರಾಧ್ಯರ ಶ್ರೀ ವೃಷಭೇಶ್ವರ ಪುರಾಣಂ — ಅಂದರೆ ಬಸವ ಪುರಾಣ — ಎಂಬ ಸಹಸ್ರಪುಟಗಳ ಬೃಹತ್ ಗ್ರಂಥವನ್ನು ನಾನು  ಓದುತ್ತಿದ್ದೇನೆ. ಈ ಮಹಾಗ್ರಂಥದಲ್ಲಿ ಶ್ರೀ ಗುರುಪಾದ ದೇವರ ಕನ್ನಡ ಟೀಕೆಯು ಸಹ ಮುದ್ರಣಗೊಂಡಿರುವುದು ವಿಶೇಷ; ಅದು ಈ ಕೃತಿಗೆ ಹೊಸ ಉಜ್ವಲತೆ ನೀಡಿದೆ.

ಈ ಗ್ರಂಥದೊಡನೆ ನನ್ನ ಹೃದಯಕ್ಕೆ ಆಳವಾದ ಭಾವನಾತ್ಮಕ ನಂಟಿದೆ. ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಸಂಗ್ರಹಿತವಾಗಿರುವ ಈ ಹಸ್ತಪ್ರತಿ, ನಿಜಕ್ಕೂ ಸಾಹಿತ್ಯ ಲೋಕದ ಅಮೂಲ್ಯ ಸಂಪತ್ತುಎಂದರೆ ತಪ್ಪಾಗದು.

ಈ ಹಸ್ತಪ್ರತಿಯು ಅಂದಿನ ಪ್ರತಿಷ್ಠಾನದ ನಿರ್ದೇಶಕರಾಗಿದ್ದ ದಿವಂಗತ ಗೌ. ಮ. ಉಮಾಪತಿ ಶಾಸ್ತ್ರಿಯವರ ಅಮೂಲ್ಯ ಸಂಗ್ರಹದಿಂದ ದೊರೆತದ್ದು. ಅವರ ಅಚ್ಚುಕಟ್ಟಾದ ಶ್ರದ್ಧೆ ಮತ್ತು ಸಂಶೋಧನಾ ಮನೋಭಾವದಿಂದ ತಾಡೋಲೆ ಹಸ್ತಪ್ರತಿಗಳ ೪೮೬ ಮತ್ತು ಕಾಗದ ಹಸ್ತಪ್ರತಿಗಳ ೪೦೦ — ಒಟ್ಟು ೮೮೬ ಹಸ್ತಪ್ರತಿಗಳನ್ನು ಅವರು ಪ್ರತಿಷ್ಠಾನಕ್ಕೆ ದಾನವಾಗಿ ನೀಡಿದ್ದರು. ಅವುಗಳಲ್ಲಿ ಈ ವೃಷಭೇಶ್ವರ ಪುರಾಣ ಒಂದು ಅಮೃತಮಣಿಯಂತಿದೆ.

 

ದಿ. ಗೌ. ಮ. ಉಮಾಪತಿ ಶಾಸ್ತ್ರಿಯವರು ಪೂಜ್ಯ ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶ್ರೀ ಶಿವಯೋಗಮಂದಿರದ ಸಾಧಕ ವಟುಗಳಾಗಿ ತಮ್ಮ ಜೀವನವನ್ನೇ ಸಾಹಿತ್ಯ ಸಂಶೋಧನೆಗೆ ಸಮರ್ಪಿಸಿದ ಮಹನೀಯರು.ಅವರು ಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸಂಗ್ರಹಿಸಿದ  ಸಾವಿರಾರು ತಾಡೋಲೆ ಕಟ್ಟುಗಳು ಹಾಗೂ ಕಾಗದ ಹಸ್ತಪ್ರತಿಗಳಿಂದ ಕೂಡಿದ ಅಪರೂಪದ ಗ್ರಂಥಾಲಯದ ಉಸ್ತುವಾರಿಯಾಗಿ ನೇಮಿಸಲ್ಪಟ್ಟು, ಅದನ್ನು ಜೀವಂತ ಪಾರಂಪರ್ಯದಂತೆ ಕಾಯ್ದುಕೊಂಡು ದೀರ್ಘಕಾಲ ಸೇವೆ ಸಲ್ಲಿಸಿದರು. ಅವರ ಈ ನಿರಂತರ ತಪಸ್ಸೇ ಇಂದು ನಾವು ಓದುತ್ತಿರುವ ಈ ವೃಷಭೇಶ್ವರ ಪುರಾಣದ ಜೀವಂತ ಮೂಲವಾಗಿದೆ.

ಗ್ರಂಥ ಬಿಡುಗಡೆಗಿಂತ ಮುನ್ನ, ನನ್ನ ಹಿರಿಯ ಮಿತ್ರರಾದ ತುಮಕೂರಿನ ಡಾ. ಬಿ. ನಂಜುಂಡಸ್ವಾಮಿ ಅವರು ನನಗೆ ಸಂದೇಶ ಕಳುಹಿಸಿದ್ದರು. ಆ ಸಂದೇಶದಲ್ಲಿ ಅವರು ಹೀಗೆ ಬರೆದಿದ್ದರು —

“ಲಿಂಗಾಯತರು ಮಾಡದ ಬಸವ ಸೇವೆಯನ್ನು ಧರ್ಮಸ್ಥಳದ ಡಾ. ಹೆಗ್ಗಡೆ ಮಾಡಿದ್ದಾರೆ.”

೧೨ನೇ ಶತಮಾನದಲ್ಲಿ ಸಮಾಜೋದ್ದಾರಕ ಕ್ರಾಂತಿಯನ್ನು ಎಳೆದುಕೊಂಡ ಬಸವಣ್ಣನವರ ಘನ ವ್ಯಕ್ತಿತ್ವ ಕುರಿತು ಮೊಟ್ಟಮೊದಲು ಆಂಧ್ರಪ್ರದೇಶದ ಪಾಲ್ಕುರಿಕೆ ಸೋಮನಾಥ ಕವಿ ತೆಲುಗು ಬಸವಪುರಾಣ ರಚಿಸಿದರು. ಅದನ್ನು ಭೀಮಕವಿ ಕನ್ನಡಕ್ಕೆ ಅನುವಾದಿಸಿದರು. ಹರಿಹರ, ಷಡಕ್ಷರಿ ಮುಂತಾದ ಕವಿಗಳು ಬಸವಣ್ಣನವರ ಕುರಿತು ಮಹಾಕಾವ್ಯಗಳನ್ನು ರಚಿಸಿದರು. ಬಸವಣ್ಣನವರ ಪ್ರಭಾವದಿಂದ ತಪ್ಪಿಸಿಕೊಂಡ ಕವಿಯೇ ಇಲ್ಲ ಎನ್ನಬಹುದು. ಹೀಗಾಗಿ, ಕಂಚಿಯ ಪ್ರಾಚೀನ ಶೈವ ಕ್ಷೇತ್ರದಲ್ಲಿ ವಾಸಿಸಿದ ಶೈವಮಹಾಕವಿ ಕಂಚಿ ಶಂಕರಾರಾಧ್ಯರು ಸಂಸ್ಕೃತ ಭಾಷೆಯಲ್ಲಿ ಬಸವ ಪುರಾಣ ರಚನೆ ಮಾಡಿದುದು ಅಪರೂಪದ ಮತ್ತು ಮಹತ್ವದ ಸಾಧನೆ. ಈ ಪುರಾಣದ ಮಹತ್ವವನ್ನು ಮೊಟ್ಟಮೊದಲು ಗುರುತಿಸಿದವರು ಡಾ. ಶಿ.ಚೆ. ನಂದೀಮಠ. ಅವರು ಇದರ ಕುರಿತು ಪ್ರಥಮವಾಗಿ ಲೇಖನ ಬರೆದಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾ. ಪರಡ್ಡಿ ಮಲ್ಲಿಕಾರ್ಜುನ ಅವರ ಸಂಪಾದಕತ್ವದಲ್ಲಿ ಈ ಕೃತಿಯು ದೇವನಾಗರಿ ಲಿಪಿಯಲ್ಲಿ, ಕನ್ನಡ ಅನುವಾದದೊಂದಿಗೆ ಪ್ರಕಟಿತವಾಯಿತು. ಸಹಸ್ರಪುಟಗಳ ಈ ಬೃಹತ್ ಗ್ರಂಥವನ್ನು ಪ್ರಕಟಿಸುವ ಕಾರ್ಯವನ್ನು ಲಿಂಗಾಯತ ಮಠಗಳು ಅಥವಾ ಸಂಘ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕಾಗಿತ್ತು. “

ಯಾರೂ ಕೈಹಾಕದ ಈ ಮಹಾಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ಕೈಗೊಂಡಿರುವುದು ಸಮಸ್ತ ಲಿಂಗಾಯತ ಸಮಾಜಕ್ಕೆ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ.

ಆದರೆ, ಗ್ರಂಥಕ್ಕೆ ಕಳಶಪ್ರಾಯವಾಗಬೇಕಿದ್ದ ಮುನ್ನುಡಿಯ ಕೆಲವು ಸಾಲುಗಳು ಈ ಮಹಾಗ್ರಂಥದ ಗಾಂಭೀರ್ಯಕ್ಕೆ ನೆರಳಿಟ್ಟಿದೆ.

ಶಾಸ್ತ್ರೀಯ ಸಂಪಾದನೆಯ ನಿರೀಕ್ಷಿತ ನಿಷ್ಪಕ್ಷಪಾತತೆಯನ್ನು ಕದಡುವಂತಹ ಈ ಉಲ್ಲೇಖಗಳು ಪಠ್ಯದ ಮೌಲ್ಯಮಟ್ಟವನ್ನು ಕ್ಷೀಣಗೊಳಿಸಿದಂತಿವೆ.

ಇಂತಹ ಸಂದರ್ಭಗಳಲ್ಲಿ ಪವಿತ್ರ ಗ್ರಂಥದ ಪಾರಂಪರಿಕ ಸೌಂದರ್ಯ ಉಳಿಯಲು ಮುನ್ನುಡಿಕಾರರಿಂದ ಇನ್ನಷ್ಟು ನಿಷ್ಪಕ್ಷಪಾತ ನಿಲುವು ಅಪೇಕ್ಷಿತವಾಗಿತ್ತು.

ಶುಭ್ರವಾದ ಶ್ವೇತವಸ್ತ್ರದ ಮೇಲೊಂದು ಕಪ್ಪು ಚುಕ್ಕೆ ಬಿದ್ದಂತೆ — ಪವಿತ್ರ ಗ್ರಂಥದ ಶುದ್ಧತೆಯಲ್ಲಿ ಅಪ್ರಯೋಜಕ ಕಲ್ಮಷದ ಛಾಪು ಮೂಡಿದೆ.

ಅಚ್ಯುತವಾದ ಪವಿತ್ರ್ಯ ಹೂವಿನ ಮೇಲೆ ಅನಿರೀಕ್ಷಿತ ಮತಾಂಧತೆಯ ಸ್ಪರ್ಶ.

ಅಧ್ಯಯನದ ಪಾವಿತ್ರ್ಯದಲ್ಲಿ ಸಂಶಯದ ಕಣ ಬಿದ್ದಾಗ, ಗ್ರಂಥದ ತಾತ್ವಿಕ ಚಿಂತನೆಗಳು ಮೌನವಾಗುವುದು ಸಹಜ.

ಮುನ್ನುಡಿ ಎಂಬುದು ಗ್ರಂಥದ ಓದುಗರಿಗೆ ಕೃತಿಯ ಹಿನ್ನೆಲೆ, ಪ್ರಾಮುಖ್ಯತೆ ಮತ್ತು ಸಂಪಾದಕನ ಕಾರ್ಯವಿಧಾನವನ್ನು ಪರಿಚಯಿಸುವ ಪೂರ್ವಕಥನಾತ್ಮಕ ವಿವರಣೆ. ಅದು ಕೇವಲ ಆರಂಭವಾಕ್ಯವಲ್ಲ — ಗ್ರಂಥದ ಶಾಸ್ತ್ರೀಯ ಮೌಲ್ಯ, ಪಠ್ಯವಿಮರ್ಶೆಯ ಕ್ರಮ, ಹಾಗೂ ಆಧ್ಯಾತ್ಮಿಕ–ಸಾಂಸ್ಕೃತಿಕ ಹಿನ್ನೆಲೆಯನ್ನು ವಿಶದಗೊಳಿಸುವ ಪ್ರಸ್ತಾವನೆಯಾಗಿದೆ.

ಅಂತಹ ಗೌರವಪೂರ್ಣ ಅವಕಾಶವನ್ನು ಪಡೆದಿರುವ ಮುನ್ನುಡಿಕಾರರಾದ ಡಾ. ವೀರಣ್ಣ ರಾಜೂರ ಅವರು ಸಾಹಿತ್ಯ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಶ್ರೇಷ್ಠ ಪಂಡಿತರಲ್ಲಿ ಒಬ್ಬರು. ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಂಶೋಧಕರಾಗಿ ಪ್ರಾರಂಭಿಸಿ, ಉಪನ್ಯಾಸಕ, ಪ್ರಾಧ್ಯಾಪಕ, ವಿಭಾಗಾಧ್ಯಕ್ಷ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ದೀರ್ಘಾವಧಿಯ ಸೇವೆ ಸಲ್ಲಿಸಿದವರು. ಅನೇಕ ವಿಚಾರಸಂಕಿರಣಗಳು, ಉಪನ್ಯಾಸಗಳು ಮತ್ತು ಸಂಶೋಧನಾ ಯೋಜನೆಗಳಲ್ಲಿ ಅವರ ಹಾಜರಾತಿ ಸದಾ ಚೇತನಮಯವಾಗಿತ್ತು. ಸರಳತೆ, ಸೌಜನ್ಯತೆ ಮತ್ತು ಪಾಂಡಿತ್ಯದ ಪ್ರತಿರೂಪರಾದ ರಾಜೂರ ಅವರು ಮಹಾನ್ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಆಪ್ತ ಶಿಷ್ಯರಾಗಿದ್ದರು. ನಡುಗನ್ನಡ ಸಾಹಿತ್ಯದಲ್ಲಿ, ವಿಶೇಷವಾಗಿ ವಚನಸಾಹಿತ್ಯ ಹಾಗೂ ಬಸವೋತ್ತರಯುಗದ ವಚನಕಾರರ ಕುರಿತು ಅವರ ಅಧ್ಯಯನ ವಿಶ್ಲೇಷಣೆಯು ಆಳವಾದ ಒಳನೋಟ ನೀಡುತ್ತದೆ.

ಆದರೆ, ಇಂತಹ ಪಾಂಡಿತ್ಯಪೂರ್ಣ ವ್ಯಕ್ತಿಯೇ “ಶ್ರೀ ವೃಷಭೇಶ್ವರ ಪುರಾಣಂ” ಎಂಬ ೧೪ನೆಯ ಶತಮಾನದ ಪುರಾಣಕೃತಿಗೆ ನೇರ ಸಂಬಂಧವಿಲ್ಲದ, ಇತ್ತೀಚಿನ (ಕ್ರಿ.ಶ. ೨೦೧೭ರ) ವೀರಶೈವ–ಲಿಂಗಾಯತ ಧರ್ಮಭೇದದ ವಿವಾದವನ್ನು ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವುದು ವಿಷಾದನೀಯ ಸಂಗತಿ.

ಅವರು ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ

  • “ಒಂದು ಕಾಲಕ್ಕೆ ಪರ್ಯಾಯ ಪದಗಳಂತೆ ಬಳಸುತ್ತ ಬಂದ ‘ವೀರಶೈವ’ ಮತ್ತು ‘ಲಿಂಗಾಯತ’ ಪದಗಳು ಇಂದು ತಾತ್ವಿಕವಾಗಿ ಭಿನ್ನವೆಂದು ಗಣಿಸಲಾಗಿದೆ.
  • ‘ಲಿಂಗ’ ಪದದ ಇತಿಹಾಸ ಪ್ರಾಚೀನವಾಗಿದ್ದರೂ, ದೇಹದ ಮೇಲೆ ಧರಿಸುವ ‘ಇಷ್ಟಲಿಂಗ’ ಪರಿಕಲ್ಪನೆ ಬಸವಣ್ಣನವರ ಕಾಲದಿಂದ — ಅಂದರೆ ೧೨ನೆಯ ಶತಮಾನದಿಂದ — ಜಾರಿಗೊಂಡುದಾಗಿದೆ.
  • “ಶಿವಶರಣರುಒಪ್ಪಿಕೊಂಡದ್ದುವೀರಶೈವ ಧರ್ಮವನ್ನಲ್ಲ;‘ಲಿಂಗಾಯತಧರ್ಮ’ವನ್ನೇ.
  • ಬಸವಣ್ಣನವರು ವೀರಶೈವಧರ್ಮವನ್ನು ಅಂಗೀಕರಿಸಲಿಲ್ಲ, ಊರ್ಜಿತಗೊಳಿಸಲಿಲ್ಲ; ಅವರು ಇಷ್ಟಲಿಂಗಾಧಾರಿತ ‘ಲಿಂಗಾಯತ’ ಎಂಬ ಹೊಸ ಸ್ವತಂತ್ರ ಧರ್ಮವನ್ನೇ ಸ್ಥಾಪಿಸಿದರು.”

ಈ ಹೇಳಿಕೆಗಳು ೧೪ನೆಯ ಶತಮಾನದ ಶ್ರೀ ವೃಷಭೇಶ್ವರ ಪುರಾಣಂ ಎಂಬ ಕೃತಿಯ ಮೂಲತತ್ತ್ವಕ್ಕೆ ನೇರವಾಗಿ ಹೊಂದುವಂತಿಲ್ಲ. ಈ ಪುರಾಣವು ಸ್ಪಷ್ಟವಾಗಿ ವೀರಶೈವ ಪರಂಪರೆಯ ತತ್ತ್ವಶ್ರೇಣಿಯಲ್ಲಿ ಬರೆಯಲ್ಪಟ್ಟ ಪೌರಾಣಿಕ ಗ್ರಂಥ. ಆದ್ದರಿಂದ ಇಂತಹ ಇತ್ತೀಚಿನ ಮತವೈಚಾರಿಕ ವಿವಾದಗಳನ್ನು ಮುನ್ನುಡಿಯಲ್ಲಿ ಒಳಪಡಿಸುವುದು ಕೃತಿಯ ತಾತ್ವಿಕ ಸೌಂದರ್ಯಕ್ಕೂ, ಪಠ್ಯಮೌಲ್ಯಕ್ಕೂ ಅಸಂಬಂಧಿತ.

ಇದು ಗ್ರಂಥಸಂಪಾದನೆಯ ನಿಷ್ಪಕ್ಷಪಾತ ಉದ್ದೇಶವನ್ನೇ ಬದಲಾಗಿಸುವಂತಾಗಿದೆ. ಮುನ್ನುಡಿಕಾರನ ಕರ್ತವ್ಯವೆಂದರೆ ಗ್ರಂಥದ ಪಠ್ಯಪರಿಷ್ಕರಣೆ, ಶೈಲಿಶೋಧನೆ, ಮತ್ತು ತತ್ತ್ವಸಂದರ್ಭಗಳ ವಿಶ್ಲೇಷಣೆ — ಪರಂಪರೆಯ ವಿವಾದಾತ್ಮಕ ವ್ಯಾಖ್ಯಾನವಲ್ಲ.

ಪರಮಾಶ್ಚರ್ಯವೆಂದರೆ ಸ್ವತಃ ಡಾ. ವೀರಣ್ಣ ರಾಜೂರ ಅವರೇ ತಮ್ಮ ಸಂಪಾದಿತ ಗ್ರಂಥ “ವೀರಶೈವದರ್ಶನ : ತೌಲನಿಕ ವಿವೇಚನೆ” (ಪ್ರಕಟನೆ: ಕ್ರಿ.ಶ. ೨೦೦೦) ಯ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ

  • ಪ್ರಸ್ತುತ ಕೃತಿ ‘ವೀರಶೈವದರ್ಶನ : ತೌಲನಿಕ ವಿವೇಚನೆ’ ಬಸವಜಯಂತಿಯ ೧೧ನೆಯ ಉಪನ್ಯಾಸ ಮಾಲಿಕೆಯಡಿಯಲ್ಲಿ, ದಿನಾಂಕ ೨೦೨೧ ಮಾರ್ಚ್ ೧೯೯೫ ರಂದು ನಡೆದ ವಿಚಾರಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನವಾಗಿದೆ.
  • ವೀರಶೈವದ ಹಾಗೂ ವೀರಶೈವ ನಿರ್ಣಯ ಪರಮಾವತಾರನೆನಿಸಿದ ಬಸವಣ್ಣನವರ ಲೋಕೋತ್ತರ ವಿಚಾರಗಳಿಗೆ ಲೋಕವಿಸ್ತಾರವಾದ ಕ್ಷಿತಿಜವನ್ನು ಕಲ್ಪಿಸುವುದು ಅಂದರೆ ಬಸವತತ್ತ್ವಗಳನ್ನು ಕರ್ನಾಟಕದಿಂದ ಭಾರತಕ್ಕೆ, ಭಾರತದಿಂದ ವಿಶ್ವಕ್ಕೆ ವಿಸ್ತರಿಸುವ ಉನ್ನತ ಧ್ಯೇಯದರ್ಶನವನ್ನು ಶ್ರೀ ಬಸವೇಶ್ವರಪೀಠ ಹೊಂದಿದೆ. ಈ ಉದ್ದೇಶ ಸಾಧನೆಗಾಗಿ ಸಂಶೋಧನೆ, ಸಂಪಾದನೆ, ಸೃಜನ, ವಿಮರ್ಶೆ, ಅನುವಾದ ಇತ್ಯಾದಿ ರೂಪದ ಅಧ್ಯಯನಗಳನ್ನು ದೇಶವಿದೇಶದ ಭಾಷೆಗಳ ಮೂಲಕ ಈ ವೇದಿಕೆ ನಡೆಸುತ್ತ ಬಂದಿದೆ.
  • ವೀರಶೈವವನ್ನು ಉಳಿದ ಧರ್ಮತತ್ತ್ವದರ್ಶನಗಳೊಂದಿಗೆ ತೌಲನಿಕವಾಗಿ ವಿವೇಚಿಸುವ ಮೂಲಕ ಅದರ ಸರಿಯಾದ ಮೌಲ್ಯಮಾಪನ ಮಾಡಿ ಅದರ ವಿಶಿಷ್ಟತೆಯನ್ನು ಎತ್ತಿ ತೋರಿಸುವ ಕಾರ್ಯ ಇಲ್ಲಿ ಸಮರ್ಥವಾಗಿ ನಡೆದಿದೆ. ವಿಚಾರಸಂಕಿರಣದಲ್ಲಿ ಪ್ರೀತಿಯಿಂದ ಭಾಗವಹಿಸಿ ಪ್ರಬಂಧ ಮಂಡಿಸಿದುದಲ್ಲದೆ, ಪರಿಶ್ರಮವಹಿಸಿ ಲೇಖನ ರೂಪದಲ್ಲಿ ಬರೆದು ಕೊಟ್ಟು ಗ್ರಂಥಪ್ರಕಟನೆಯನ್ನು ಸಾಧ್ಯಮಾಡಿದ ಎಲ್ಲ ವಿದ್ವಾಂಸರಿಗೆ ಅನಂತ ಕೃತಜ್ಞತೆಗಳು.”

ಈ ಉಲ್ಲೇಖಗಳಲ್ಲೇ ಅವರ ಸಂಶೋಧನಾ ನಿಲುವಿನ ಆಳ ಮತ್ತು ವಿಶಾಲತೆ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ವೀರಶೈವಧರ್ಮವನ್ನು ಉಳಿದ ಧರ್ಮತತ್ತ್ವ–ದರ್ಶನಗಳ ಜೊತೆ ತೌಲನಿಕವಾಗಿ ವಿಮರ್ಶಿಸುವ ದೃಷ್ಟಿ ಇದ್ದು, ಅದು ತತ್ತ್ವಸಾಮರಸ್ಯ ಮತ್ತು ವಿಶ್ವಮಾನವೀಯ ದೃಷ್ಟಿಕೋನವನ್ನು ಪ್ರತಿಪಾದಿಸುತ್ತದೆ.

ಆದರೆ, ಈ ಹಿನ್ನಲೆಯಲ್ಲಿ ಅವರ ಇತ್ತೀಚಿನ ಅಭಿಪ್ರಾಯವು ತಾವು ಸ್ವತಃ ಹಿಂದಿನ ಸಂಶೋಧನೆಯಲ್ಲಿ ಪ್ರತಿಪಾದಿಸಿದ ತತ್ತ್ವಸಾಮರಸ್ಯದಿಂದ ವಿಭಿನ್ನವಾಗಿ ಕಾಣುತ್ತದೆ — ಇದು ಪಂಡಿತನಾಗಿ ಅವರ ನಿಷ್ಪಕ್ಷಪಾತ ಸಂಶೋಧನಾ ನಿಲುವಿನ ವಿರುದ್ಧದ ವ್ಯತಿರೇಕದಂತಾಗಿದೆ.

ಸಂಶೋಧಕ ಅಥವಾ ಸಾಹಿತಿ ಎಂದರೆ ತತ್ವನಿಷ್ಠೆಯ ಮಾರ್ಗದಲ್ಲಿ ನಡೆಯುವ ಯಾತ್ರಿ.ಅವನ ಮಾತು, ಗ್ರಂಥ ಮತ್ತು ನಿಲುವುಗಳು ಕಾಲದ ಸತ್ಯದ ಸಾಕ್ಷಿಯಾಗಿರಬೇಕು.

ಆದರೆ ತಾನು ನಿಂತ ಬಣ್ಣವನ್ನು ಬದಲಿಸಿ ಮತ್ತೊಂದು ಬಣ್ಣ ಧರಿಸುವ ಧಿರಿಸಿನಂತೆ ನಿಲುವು ಬದಲಿಸಿದರೆ — ಅದು ಸಂಶೋಧಕನ ಪ್ರಾಮಾಣಿಕತೆಯ ಮೇಲಿನ ನೆರಳಾಗಿ ಬೀಳುತ್ತದೆ.

ಊಸುರವಳ್ಳಿಯಂತೆ ತಾತ್ವಿಕ ನಿಲುವು ಬದಲಿಸುವ ಪಂಡಿತನು ಕ್ಷಣಿಕ ಮೆಚ್ಚುಗೆಯನ್ನು ಗಳಿಸಬಹುದು, ಆದರೆ ಶಾಶ್ವತ ಗೌರವ ಕಳೆದುಕೊಳ್ಳುತ್ತಾನೆ.

ಸಾಹಿತ್ಯದ ಮೌಲ್ಯ ಶಾಶ್ವತವಾಗಿರುತ್ತದೆ — ಅದನ್ನು ರಕ್ಷಿಸುವವರು ಬದಲಾಗಬಾರದು..

“ವೀರಶೈವ” ಮತ್ತು “ಲಿಂಗಾಯತ” ಎಂಬ ಪದಗಳು ಭಾರತೀಯ ಶೈವಧರ್ಮದ ಇತಿಹಾಸದಲ್ಲಿ ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ಅರ್ಥಸಂದರ್ಭಗಳಲ್ಲಿ ಉಪಯೋಗಿಸಲ್ಪಟ್ಟಿವೆ. ಇವುಗಳ ಉತ್ಪತ್ತಿ, ಮತ್ತು ಸಾಮಾಜಿಕ ವಿಕಾಸದ ಕುರಿತು ಪಂಡಿತರ ಮಧ್ಯೆ ಅಭಿಪ್ರಾಯಭೇದಗಳಿದ್ದರೂ, ಬಹುತೇಕ ಸಂಶೋಧನಾ ಗ್ರಂಥಗಳು ಇವೆರಡನ್ನೂ ಪರಸ್ಪರ ವಿರೋಧಿ ಧರ್ಮಗಳೆಂದು ಪರಿಗಣಿಸುವುದಿಲ್ಲ.

ಅಷ್ಟೇ ಅಲ್ಲ, ಈ ಮಹಾಗ್ರಂಥದೊಂದಿಗೆ ಪ್ರಕಟಿತವಾದ ಡಾ. ವೀರೇಂದ್ರ ಹೆಗ್ಗಡೆ ಅವರ ಶುಭನುಡಿಯಲ್ಲಾಗಲಿ, ಡಾ. ಎಸ್.ಆರ್. ವಿಘ್ನರಾಜ ಅವರ ದೀರ್ಘ ಪ್ರಸ್ತಾವನೆಯಲ್ಲಾಗಲಿ ಇಂತಹ ವಿಭೇದದ ಯಾವುದೇ ಉಲ್ಲೇಖವಿಲ್ಲ. ಕೃತಿಕಾರರಾದ ಕಂಚಿ ಶಂಕರಾರಾಧ್ಯರು ೧೪ನೆಯ ಶತಮಾನದ ಕವಿಗಳು — ಇತ್ತೀಚಿನ ರಾಜಕೀಯ ವಿವಾದಗಳ ಶಬ್ದವೂ ಅವರ ಕಾಲದ ಅವಕಾಶವಾದಿ ಆಕಾಶವನ್ನು ಮುಟ್ಟಿರಲಿಲ್ಲ; ಅವರು ಅವುಗಳಿಂದ ಬಹುದೂರದವರಾಗಿದ್ದರು.

ಡಾ. ಎಸ್.ಆರ್. ವಿಘ್ನರಾಜ ಅವರ ದೀರ್ಘ ಪ್ರಸ್ತಾವನೆಯಲ್ಲಿ ಆರಂಭವಾಗುವ ಸಾಲುಗಳು ಹೀಗಿವೆ

“”ಭಗವದನುಭಾವವನ್ನು ಜನಸಾಮಾನ್ಯರಿಗೆ ಸರಳವಾದ ಮಾತುಗಳಲ್ಲಿ ನೀಡಿದ ಶಿವಶರಣರು ಒಪ್ಪಿಕೊಂಡ ಧರ್ಮ ‘ವೀರಶೈವ ಧರ್ಮ’. ಈ ಧರ್ಮವನ್ನು ಒಪ್ಪಿಕೊಂಡವರನ್ನು, ಅದನ್ನು ಆಚರಣೆಗೆ ತಂದವರನ್ನು ವೀರಶೈವರು, ಲಿಂಗವಂತರು, ಲಿಂಗಾಯತರು ಎಂಬ ಹೆಸರುಗಳಿಂದ ಕರೆದಿದ್ದಾರೆ. ವೀರಶೈವ ಧರ್ಮದಲ್ಲಿ ವಿಶಿಷ್ಟವಾಗಿರುವ ಎರಡು ಪ್ರಮುಖ ಅಂಶಗಳೆಂದರೆ ಷಟ್‌ ಸ್ಥಲ ಮತ್ತು ಲಿಂಗಧಾರಣೆ. ಶಿವನನ್ನು ಲಿಂಗದಲ್ಲಿ ಪೂಜಿಸುವುದು ಎಷ್ಟು ಪ್ರಾಚೀನವೊ, ಲಿಂಗವನ್ನು ದೇಹದ ಮೇಲೆ ಧರಿಸುತ್ತಿದ್ದುದೂ ಬಹುಶಃ ಅಷ್ಟೇ ಪ್ರಾಚೀನವೆನ್ನಬಹುದು. ಒಟ್ಟಿನಲ್ಲಿ ಲಿಂಗವನ್ನು ಅಂಗದ ಮೇಲೆ ಧರಿಸುವ ಪದ್ಧತಿ ಯಾರೊಬ್ಬರಿಂದಲೂ ಪ್ರವರ್ತಿತವಾದುದಲ್ಲ. ಶೈವಧರ್ಮದ ವಿಕಾಸದಲ್ಲಿ ಅಳವಟ್ಟ ಸಹಜಕ್ರಿಯೆ. ರೇಣುಕಾಚಾರ್ಯರು, ಏಕೋರಾಮಾರಾಧ್ಯರು, ಪಂಡಿತಾರಾಧ್ಯರು, ಮರುಳಾರಾಧ್ಯರು, ವಿಶ್ವಾರಾಧ್ಯರು ಎಂಬ ರೇಣುಕಾದಿ ಪಂಚಾಚಾರ್ಯರು ಅದರ ಬೆಳವಣಿಗೆಗೆ ಕಾರಣರಾಗಿರಬಹುದು. ಇತರ ಆಚಾರ್ಯರು ಪ್ರಭೋದಕರಾಗಿರಬಹುದು. ಪಾಶುಪತ ಶೈವ, ಕಾಶ್ಮೀರ ಶೈವ, ತಮಿಳು ಶೈವ, ಈ ವಿವಿಧ ಶಾಖೆಗಳಲ್ಲಿನ ಉದಾತ್ತ ಅಂಶಗಳನ್ನು ಅಳವಡಿಸಿಕೊಳ್ಳುವ ಮಾರ್ಗದಲ್ಲಿ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರಗಳು ರೂಪುಗೊಂಡಿರಬೇಕು. ಬಸವಣ್ಣನವರು ಬರುವ ಹೊತ್ತಿಗೆ ಕರ್ನಾಟಕದಲ್ಲಿದ್ದ ಲಾಕುಲರು, ಕಾಳಾಮುಖರು ಮೊದಲಾದ ವಿವಿಧ ಶೈವ ಶಾಖೆಗಳಲ್ಲಿ ಕೆಲವಕ್ಕಾದರೂ ದೀಕ್ಷೆ ಮೊದಲಾದ ವೀರಶೈವ ಸಂಸ್ಕಾರಗಳು ಒದಗಿದ್ದಿರಬೇಕು. ಏಕಾಂತ ರಾಮಯ್ಯ, ದೇವರದಾಸಿಮಯ್ಯ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ಈ ಧರ್ಮದಲ್ಲಿ ಸುಪ್ತವಾಗಿದ್ದ ಸರ್ವಸಮಾನತೆಯ ಅಂಶಗಳನ್ನು ಗ್ರಹಿಸಿದ ಬಸವಣ್ಣನವರು ಈ ಮತವನ್ನು ಅಂಗೀಕರಿಸಿ, ಅದರ ಉದಾತ್ತ ತತ್ವಗಳ ಬೆಂಬಲದಿಂದ ಜನತೆಯ ಸಾಮೂಹಿಕ ಉದ್ಧಾರಕ್ಕೆ ನಿರ್ಧರಿಸಿದರು. ಇದರಿಂದ ವೀರಶೈವಧರ್ಮ ಹೊಸದಾಗಿ ಸ್ಥಾಪಿತವಾದಷ್ಟೇ, ಪ್ರಸಿದ್ಧಿಯನ್ನೂ, ಹೊಸಕ್ರಾಂತಿಯನ್ನೂ, ಹೊಸ ಸ್ವರೂಪವನ್ನೂ ಪಡೆಯಿತು. ತತ್ಪರಿಣಾಮವಾಗಿ ಬಸವಣ್ಣನವರು ಸ್ಥಾಪಕರೂ ಆಗಿ ಪರಿಣಮಿಸಿದರು.

ಬಸವಣ್ಣನವರ ವ್ಯಕ್ತಿತ್ವದಿಂದ ಆಕರ್ಷಿತವಾಗಿ ನಾಡಿನ ನಾನಾಭಾಗಗಳಿಂದ ಸಾಧಕರು ಬಂದು ಕಲ್ಯಾಣದಲ್ಲಿ ಸೇರಿದರು. ಅಲ್ಲಮ ಪ್ರಭುವಿನಂತಹ ಮೇರು ಸದೃಶವ್ಯಕ್ತಿಯೂ ಕಲ್ಯಾಣಕ್ಕೆ ಬಂದನೆಂದರೆ ಬಸವಣ್ಣನವರ ಕಾರ್ಯಕ್ಷೇತ್ರದ ಹಿರಿಮೆಯನ್ನು ಊಹಿಸಿಕೊಳ್ಳಬಹುದು. ಅನುಭವ ಮಂಟಪದ ಮಥನದಿಂದ ವೀರಶೈವ ಧರ್ಮದ ತಾತ್ವಿಕ ವಿವೇಚನೆ ಆಳವಾಗಿ ಬೇರುಬಿಟ್ಟಿತು. ಆಚಾರಮಾರ್ಗಗಳಾದ ಅಷ್ಟಾವರಣಾದಿಗಳು ಇನ್ನೂ ಎತ್ತರಕ್ಕೆ ಬೆಳೆದವು. ಹೀಗೆ ಪ್ರಾಚೀನ ವೀರಶೈವ ಧರ್ಮ ತನ್ನ ಸನಾತನ ತತ್ವಗಳನ್ನು ನಿತ್ಯನೂತನವಾದ ಮಾನವೀಯ ಮಟ್ಟಕ್ಕೇರಿಸಿ ವಿಶ್ವಧರ್ಮವಾಗಿ ಬೆಳಗಿತು.

ಅದೊಂದು ಅಸದೃಶ ಅದ್ಭುತ ಪ್ರವಾಹ ಬಿದ್ದವರನ್ನು ಮುಳುಗಿಸಿ ತೇಲಿಸುವ ಹುಚ್ಚು. ನದಿಯ ಭೌತಿಕ ಪ್ರವಾಹವಲ್ಲ. ಎಚ್ಚರಿಸುವ ಮೌಡ್ಯರಹಿತ ಭಕ್ತಿ ಪ್ರವಾಹ. ಅಲ್ಲಿ ಮೀನು, ಚಿಪ್ಪು, ಗೊರಟೆಗಳಿಲ್ಲ, ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಸಮಾನತ್ವದ ಮುತ್ತು ರತ್ನಗಳಿವೆ. ಎಂಟು ಶತಮಾನಗಳೇ ಕಳೆದರೂ ಅದು ಬತ್ತುವ, ಚಿತ್ತ ಕದಲಿಸುವ, ಉನ್ಮತ್ತದ, ಉದ್ವೇಗದ ಝರಿಯಲ್ಲ. ಸಕಲ ಜೀವಿಗಳಿಗೆ ಲೇಸನ್ನೇ ಬಯಸಿ, ಅವುಗಳ ಹೃದಯಾಂತರಂಗಕ್ಕೆ ಶಾಶ್ವತ ಆನಂದಕೊಟ್ಟು, ಪಾವನ ಮಾಡುವ ಪ್ರಶಾಂತ ಸಾಗರ…….””

ಈ ಹಿನ್ನೆಲೆಯಲ್ಲಿ, ಇಂತಹ ಇತ್ತೀಚಿನ ಮತಾಂಧ ವಿವಾದಗಳನ್ನು ಈ ಪುರಾಣದ ಮುನ್ನುಡಿಯಲ್ಲಿ ಸೇರಿಸುವುದು ಶಾಸ್ತ್ರೀಯ ಗ್ರಂಥಸಂಪಾದನೆಯ ಪ್ರಾಮಾಣಿಕತೆಗೂ ಶೈಕ್ಷಣಿಕ ನಿಷ್ಪಕ್ಷಪಾತತೆಗೂ ವಿರುದ್ಧವಾಗಿದೆ. ಇದು ಪುರಾತನ ಗ್ರಂಥದ ಪವಿತ್ರತೆಗೆ ಕಲುಷಿತ ಮಸುಕನ್ನು ತರುವಂತಾಗಿದೆ — ಪರಂಪರೆಯ ಅರ್ಥಸಂಪನ್ನತೆ ಕಾವ್ಯಸೌಂದರ್ಯದಿಂದ ಪಠ್ಯ ವಿವಾದಕ್ಕೆ ಕುಸಿಯುವ ಅಪಾಯ ಇಲ್ಲಿಯೇ ಪ್ರಾರಂಭವಾಗುತ್ತದೆ.

ದ್ವೇಷ ವ್ಯಕ್ತಪಡಿಸಲು ಅನೇಕ ವೇದಿಕೆಗಳಿವೆ — ಸಾಮಾಜಿಕ ಜಾಲತಾಣಗಳಿವೆ, ಪತ್ರಿಕೆಗಳಿವೆ, ದೃಶ್ಯಮಾಧ್ಯಮಗಳಿವೆ. ಆದರೆ ಇಂಥ ಪವಿತ್ರ ಗ್ರಂಥಪ್ರಕಟನೆಯ ಅಂಗಳ, ಅಂತಹ ಘೋಷಣೆಗಳಿಗಾಗಿ ಸೂಕ್ತ ಸ್ಥಳವಲ್ಲ.

ಒಬ್ಬ ಅಧ್ಯಯನಾರ್ಥಿ ಕಂಚಿ ಶಂಕರಾರಾಧ್ಯರ ಹೆಸರು ನೋಡಿ ಸಾವಿರ ಪುಟಗಳ ಈ ಬೃಹತ್ ಗ್ರಂಥ ಖರೀದಿಸಿ, ಅದರಲ್ಲಿರುವ ಕೇವಲ ಆರು ಸಾಲುಗಳಲ್ಲಿ “ವೀರಶೈವ ಬೇರೆ, ಲಿಂಗಾಯತ ಬೇರೆ” ಎಂಬ ವಾಕ್ಯಗಳನ್ನು ಓದಿದಾಗ ಅವನ ಮನಸ್ಸಿನಲ್ಲಿ ಗೊಂದಲ ಉಂಟಾಗುವುದು ಸಹಜ.

ಹಾಲಿನ ಕೊಡಾಯಿಗೆ ಒಂದು ತೊಟ್ಟು ಹುಳಿಹಾಲು ಬಿದ್ದಂತೆ — ಆ ಆರು ಸಾಲುಗಳು, ಅವುಗಳಿಗೆ ಸಂಬಂಧವಿಲ್ಲದ ಪ್ರಾಚೀನ ಬಸವ ಪುರಾಣದ ಪಾವಿತ್ರ್ಯವನ್ನೇ ಕಲುಷಿತಗೊಳಿಸುತ್ತವೆ.

ಶುದ್ಧ ಹಾಲಿನ ಕೊಡಾಯಿಗೆ ಬಿದ್ದ ಹುಳಿಹಾಲು, ಅಸಮಾನತೆಯ ವಿಷಬೀಜದಂತಾಗಿದೆ. ಸಮಾಜವೆಂಬ ಕೊಡಾಯಿಯು ಮನುಷ್ಯರ ಸೌಹಾರ್ದ, ಸಹಭಾವ ಮತ್ತು ಪರಸ್ಪರ ಗೌರವದಿಂದ ತುಂಬಿರಬೇಕು. ಆದರೆ ಅದರೊಳಗೆ ಬಿದ್ದ ಧರ್ಮ, ವರ್ಣ, ಜಾತಿ ಅಥವಾ ಆರ್ಥಿಕ ಅಹಂಕಾರದ ಒಂದು ತೊಟ್ಟು ಹುಳಿ, ಆ ಪವಿತ್ರ ಮಿಶ್ರಣವನ್ನು ಹುಳಿ ಹಾಲಾಗಿಸುತ್ತದೆ. ಸಮಾನತೆಯ ಹಾಲು ಹುಳಿ ಹೋದಾಗ ಅದರ ಸುವಾಸನೆ ನಶಿಸಿಹೋಗುತ್ತದೆ; ಉಳಿಯುವುದೆಂದರೆ ಕಟುವಾದ ವಾಸನೆ, ವಿಭಜನೆಯ ಕಹಿ.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ನೋಡಬಾರದದ್ದನ್ನು ನೋಡಿ, ಕೇಳಬಾರದದ್ದನ್ನು ಕೇಳಿ, ಸಮಾಜದ ಅನ್ಯಾಯ ಮತ್ತು ಅಸಮಾನತೆಯ ನೇರ ಅನುಭವದಿಂದ ಈ ವಚನವನ್ನು ಬರೆದಿರಬಹುದು:

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ,

ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ,

ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.

 

ಆ ವಚನವು ಆ ಕಾಲದ ಅನಾಚಾರಕ್ಕೆ ವಿರೋಧವಾಗಿ ತಾತ್ಸಾರದ ಧ್ವನಿಯಾಗಿ ಮೊಳಗಿತ್ತು.

ಆದರೆ ಇಂದಿನ ಶತಮಾನದಲ್ಲಿ, ಕುರುಡತನ, ಕಿವುಡತನ ಅಥವಾ ಹೆಳವುತನದ ಹತಾಶೆಗಾಗಿ ಕಾಲವಿಲ್ಲ. ಇದು ಮನಸ್ಸು ಮುಚ್ಚಿಕೊಳ್ಳುವ ಯುಗವಲ್ಲ ಮನಸ್ಸು ತೆರೆಯುವ ಯುಗ.

ನಾವು ನೋಡಬೇಕು, ಕೇಳಬೇಕು, ಹೇಳಬೇಕು — ಆದರೆ ಸತ್ಯವನ್ನು, ಸಾಮರಸ್ಯವನ್ನು ಮತ್ತು ನ್ಯಾಯವನ್ನು.

ಇದು ನಿಂದನೆಗೆ, ವಿಭಜನೆಗೆ ಅಥವಾ ಮತಾಂಧತೆಗೆ ಕಾಲವಲ್ಲ;

ಇದು ವಿಚಾರಕ್ಕೆ, ವಿವೇಕಕ್ಕೆ ಮತ್ತು ಸಹಬಾಳ್ವೆಯ ಸಂವಾದಕ್ಕೆ ಕಾಲ.

ಆದುದರಿಂದ ಹಿರಿಯರಾದ ಡಾ. ವೀರಣ್ಣ ರಾಜೂರ ಅವರಿಗೆ ವಿನಮ್ರ ಮನವಿ —

“ವೀರಶೈವ ಬೇರೆ, ಲಿಂಗಾಯತ ಬೇರೆ” ಎಂಬ ಮತಾಂಧತೆಯ ಘೋಷವಾಕ್ಯಗಳನ್ನು ದಯವಿಟ್ಟು ಎಲ್ಲಂದರಲ್ಲಿ ,ಅಲ್ಲಿ ಬಳಸಬೇಡಿ.ಅದಕ್ಕಾಗಿ ವೇದಿಕೆಗಳಿವೆ, ಅಭಿಯಾನಗಳಿವೆ , ಸಭಾಮಂಟಪಗಳಿವೆ, ಮತ್ತು ಮತಪ್ರಚಾರದ ಕ್ಷೇತ್ರಗಳಿವೆ —

ಆ ಪಾವನ ಗ್ರಂಥಗಳ ಪುಟಗಳು ಅಂತಹ ಘೋಷಣೆಗಳಿಗಾಗಿ ಅಲ್ಲ; ಅವುಗಳು ಜ್ಞಾನ, ಭಕ್ತಿ ಮತ್ತು ಸಾಮರಸ್ಯದ ಶಬ್ದಗಳನ್ನು ಮಾತ್ರ ಸಹಿಸುತ್ತವೆ.

ಬಸವಣ್ಣನವರು ಪಾಲಿಸಿದ  ಧರ್ಮಶಾಸ್ತ್ರವೇ ಸಾಮರಸ್ಯದ ಧರ್ಮ — ವಿಭಜನೆಯಲ್ಲ, ವಿನಾಶದ ದಾರಿ ಅಲ್ಲ, ಸಂಗಮದ ಮಾರ್ಗ.

“ಶ್ರೀ ವೃಷಭೇಶ್ವರ ಪುರಾಣಂ” ಎಂಬ ೧೪ನೆಯ ಶತಮಾನದ ಈ ಕೃತಿ ಕೂಡ ಅದೇ ಸಂಗಮದ ತತ್ವವನ್ನು ಪ್ರತಿಪಾದಿಸುತ್ತದೆ.

ಅದು ದೇವ–ಭಕ್ತಿ, ಶರಣರ ನಿಷ್ಠೆ ಮತ್ತು ತತ್ತ್ವಪರಂಪರೆಯ ಶುದ್ಧ ನಿರೂಪಣೆ.

ಈ ಪವಿತ್ರ ಗ್ರಂಥದ ಪಠ್ಯಶುದ್ಧಿ ಮತ್ತು ಪ್ರಕಟಣೆಗೆ ಶ್ರಮಿಸಿದ ಸಂಪಾದಕರು, ಪ್ರಕಾಶಕರು, ಸಹಾಯಕರ ಎಲ್ಲರ ಸೇವೆ ಪ್ರಶಂಸನೀಯ.

ಆದರೆ ಇಂತಹ ದಿವ್ಯ ಗ್ರಂಥಗಳಿಗೆ ನಾವು ನೀಡಬೇಕಾದ ನಿಜವಾದ ಗೌರವವೆಂದರೆ —

ಅದರ ಪುಟಗಳಲ್ಲಿ ವಿವಾದವಲ್ಲ, ವಿವೇಕದ ಬೆಳಕು ತುಂಬುವುದು.

ಬಸವಣ್ಣನವರು ಬರೆದ ದಾರಿ ನಿಂದನೆಯಲ್ಲ, ವಿನಯದ ದಾರಿ;

ಅವರ ಧರ್ಮ ತ್ಯಾಗದ ಧರ್ಮ — ವಿಭೇದದ ಧರ್ಮವಲ್ಲ.

ಆದ್ದರಿಂದ ನಾವು ಅವರ ಸಂದೇಶವನ್ನು ಓದುವಾಗ,

ಅವರ ನಿಶ್ಶಬ್ದ ಪ್ರಾರ್ಥನೆಯನ್ನೂ ಕೇಳಬೇಕು —” ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವನೆಂದೆನಿಸಯ್ಯಾ”

ಈ ಯುಗದಲ್ಲಿ ಅಗತ್ಯವಿರುವುದು ಹೊಸ ಘೋಷಣೆಗಳಲ್ಲ,

ಹೊಸ ಮನಸ್ಸುಗಳೇ.

ಅವು ನೋಡಲಿ, ಕೇಳಲಿ, ಹೇಳಲಿ —

ಸತ್ಯಕ್ಕಾಗಿ, ಸಾಮರಸ್ಯಕ್ಕಾಗಿ, ಶರಣರ ಹಾದಿಯ ಶುದ್ಧತೆಯಿಗಾಗಿ.

 

*******ಶ್ರೀಕಂಠ.ಚೌಕೀಮಠ