ಪರಮಾಶ್ಚರ್ಯ!
ಕೊಡಗು ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ (೨೨-೦೯-೨೦೨೫ ) ಸಭಾ ಸಜ್ಜಿಕೆಯ ಪರದೆಯಲ್ಲಿ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಪ್ರತ್ಯಕ್ಷವಾದುದು !
ಅಭಿಯಾನದ ಹಲವು ಜಿಲ್ಲೆಗಳ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಶ್ರೀಗಳು ತಮ್ಮ ಗುರುಗಳ ಬಗ್ಗೆ ಮಾತನಾಡಿದರು ಮತ್ತು ಅವರ ಪುಣ್ಯ ತಿಥಿಯ ಪ್ರಚಾರ ಮಾಡಿದರು.
ಮಾತೆ ಮಹಾದೇವಿಯವರ ಶಿ಼ಷ್ಯ ಬಳಗ ತಮ್ಮ ಗುರುಗಳ ಬಗ್ಗೆ ಉಲ್ಲೇಖಿಸಿ ಮಾತನಾಡಿದರು.ಎಲ್ಲ ಅಭಿಯಾನ ಕಾರ್ಯಕ್ರಮಗಳಲ್ಲಿ ಮಾತನಾಡಿದರು.
ಆದರೆ ಎಲ್ಲಿಯೂ, ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಹೆಸರು ಪ್ರಸ್ಥಾಪವಾಗದಂತೆ ಎಚ್ಚರಿಕೆ ವಹಿಸಿತು ಲಿಂಗಾಯತ ಮಠಾಧಿಶರ ಒಕ್ಕೂಟ,
ವಚನಕಟ್ಟುಗಳನ್ನು ಸಂಗ್ರಹಿಸಿದ, ವಚನ ಪಿತಾಮಹ ಹಳಕಟ್ಟಿಯವರಿಗೆ ಸಹಾಯ ಸಹಕಾರ ಸಲ್ಲಿಸಿದ, ಶರಣರ ವಚನಗಳನ್ನು ಸಂಗೀತದ ಮೂಲಕ ಪಂಚಾಕ್ಷರಿ ಗವಾಯಿಗಳ ಮೂಲಕ ಜಗತ್ತಿಗೆ ಪರಿಚಯಿಸಿದ ಮತ್ತು ಶಿವಯೋಗಮಂದಿರದ ವಟು ಸಾಧಕರಿಗೆ ವಚನಗಳನ್ನು ಅರ್ಚನ,ಅರ್ಪಣ,ಅನುಭಾವಗಳಲ್ಲಿ ರೂಢಿಗೆ ತಂದ ಕಾರುಣಿಕ ಯುಗಪುರುಷ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಸ್ಮರಿಸುವುದು ಒತ್ತಟ್ಟಿಗಿರಲಿ,
ಅವರನ್ನು ಖಳನಾಯಕನಂತೆ ಬಿಂಬಿಸಿ ,ಬಸವ ಭಾರತ ಪತ್ರಿಕೆಯಲ್ಲಿ ಪೂರ್ವನಿಯೋಜಿತವಾಗಿ ಮುದ್ರಿಸಿದ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರು,ಆ ಪತ್ರಿಕೆ ಆ ಪುಟಗಳನ್ನು ಮುದ್ರಿಸಿ ಅಭಿಯಾನದಲ್ಲಿ ಉಚಿತವಾಗಿ ಹಂಚಿದ ಜಾಗತಿಕ ಲಿಂಗಾಯತ ಮಹಾಸಭೆಯ ಅತೃಪ್ತ ಸದಸ್ಯರ ಮಧ್ಯದಲ್ಲಿ ,ಅಭಿಯಾನ ಆರಂಭವಾಗಿ ಬರೊಬ್ಬರಿ ೨೧ ದಿವಸಗಳ ನಂತರ ಘಟಸ್ಥಾಪನೆಯ ದಿನದಂದು “ಮಠದಿಂದ ಘಟವಲ್ಲ-ಘಟದಿಂದ ಮಠ “ ವೆಂದ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಮೌನವಾಗಿ ಕೊಡಗಿನ ವೀರರ ನಾಡಿನಲ್ಲಿ ಉದ್ಭವಾಗಿರುವುದು ಆಶ್ಚರ್ಯವೆನಿಸಿತು.
ಅದರ ಜೊತೆ ಪೂಜ್ಯರು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡುಗು ಜಿಲ್ಲಾ ಘಟಕದ ಹೆಸರು ರಾರಾಜಿಸುತ್ತಿತ್ತು.
ಸಂತೋಷವೆನಿಸಲಿಲ್ಲ!
ಒಂದು ಕ್ಷಣ ವಿಷಾದವೆನಿಸಿತು. ನೋವೆನಿಸಿತು ಅಕ್ರೋಶದ ಕಟ್ಟೆಯೊಡಿಯಿತು .ಹಲವು ಕ್ರೂರ ಮುಖಗಳು ಕಣ್ಣು ಮುಂದೆ ಬಂದವು.
“ವೀರಶೈವರು” ನಿಮ್ಮ ಲಿಂಗಾಯತ ಧರ್ಮಕ್ಕೆ ಬಂದರೆ ಸೇರಿಸಿಕೊಳ್ಳುವಿರಾ ಎಂದು ಮಾಧ್ಯಮದವರು ಕೇಳಿದಾಗ “ವೀರಶೈವರಷ್ಟೇ ಅಲ್ಲ ವೇಶ್ಯೇಯರೂ ಬಂದರೆ ಲಿಂಗಾಯತ ಧರ್ಮಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ವ್ಯಂಗವಾಗಿ ,ತುಚ್ಛವಾಗಿ ವೀರಶೈವ ಎಂದು ಒಪ್ಪಿಕೊಂಡವರನ್ನು ವೇಶ್ಯೆಯರಿಕ್ಕಿಂತಲೂ ಕೀಳು ಮಟ್ಟದಲ್ಲಿ ಕಂಡ ನಿಜಗುಣಾನಂದ ಸ್ವಾಮಿಗಳು,
ಅಖಿಲ ಭಾರತ ವೀರಶೈವ ಮಹಾಸಭೆಗೆ ವೀರಶೈವ ಎಂದು ಹೆಸರು ಬರಲು ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳೇ ಕಾರಣ ವೆಂದು ಸುಳ್ಳುಗಳ ಪುಸ್ತಕವನ್ನು ಬರೆದ ಡಾ. ಎಸ್.ಎಂ. ಜಾಮದಾರ್ ಅವರು,
ಪಂಚಾಚಾರ ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ ಮಾಡಿದರೆ ಪಾಪ ಕೆಲವರಿಗೆ ನೋವಾಗುತ್ತದೆ,ಅದನ್ನು ಜೆ.ಎಲ್ .ಎಮ್ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ ಎಂದು ಭಯೋತ್ಪಾಕ ಭಾಷೆಯಲ್ಲಿ ಮಾತನಾಡಿದ ಮತ್ತು ಈ ಕಾರ್ಯಕ್ರಮದ ಲೈವ ಚೀತ್ರಿಕರಣ ಮಾಡುವ ವಚನ ಟಿವಿ ಮುಖ್ಯಸ್ಥ ಸಿದ್ದು ಯಾಪಲಪರ್ವಿಯವರು,
ಅಭಿಯಾನ ಆರಂಭಗೊಳ್ಳುವ ಎರಡು ದಿನ ಮೊದಲು ಬಸವ ಭಾರತ ಎಂಬ ಮಾಸಪತ್ರಿಕೆ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರ ನೇತೃತ್ವದಲ್ಲಿ ಶಶಿಕಾಂತ ಪಟ್ಟಣ ಎಂಬುವವರಿಂದ ಶ್ರೀ ಕುಮಾರ ಶಿವಯೋಗಿಗಳ ಮೇಲೆ ಅವಹೇಳನದ ಲೇಖನ ಬರೆಯಿಸಿ,ಮುದ್ರಿಸಿದಾಗ ಎದ್ದ ಪ್ರತಿಭಟನೆಗೆ ಶಶಿಕಾಂತ ಪಟ್ಟಣ ಅವರು ಕ್ಷಮೆ ಯಾಚಿಸಿದರು.ಅವರ ಕ್ಷಮೆ ಯಾಚಿಸಿದ್ದಕ್ಕೆ ಆಕ್ಷೇಪಣೆ ಮಾಡಿ ಬಸವ ಸಂಸ್ಕೃತಿ ಅಭಿಯಾನ ಮುಗಿಯುವವರೆಗೆ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಅವಹೇಳನದ ಲೇಖನ ಜೀವಂತವಾಗಿರ ಬೇಕೆಂಬ ಫರ್ಮಾನು ಹೊರಡಿಸಿದ ಅನಾಮಧೇಯ ಹಲವರು,
ಜಾಗತಿಕ ಲಿಂಗಾಯತ ಮಹಾಸಭಾದ ಕೃಪಾ ಪೋಷಿತ ೨೪x ೭ ಸಾಮಾಜಿಕ ಜಾಲತಾಣಗಳ ಸಕ್ರೀಯ ಕಾರ್ಯಕರ್ತರಾದ, ಅಶ್ಲೀಲ ಸಾಹಿತ್ಯದ ನಿಜಗುಣ ಮೂರ್ತಿ ಮತ್ತು ಸಿ.ಜಿ.ಸಿದ್ದಲಿಂಗಸ್ವಾಮಿಗಳು,
ಈ ಎಲ್ಲ ಮಹಾತ್ಮರು ಮತ್ತು ಮಹಾನುಭಾವರು ಅದು ಹೇಗೆ ಕೊಡಗಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರದ ಬಳಕೆ ಯನ್ನು ಗಮನಿಸಲಿಲ್ಲ ?.
ಬಹುಷಃ ಕೊಡಗಿನ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಅಲ್ಲಿನ ಅಖಿಲ ಭಾರತ ವೀರಶೈವ ಮಹಾಸಭೆ ವಹಿಸಿಕೊಂಡಿರಬಹುದಾದರೂ ,ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಘಟಕಗಳು ಕೈ ಜೋಡಿಸಿದ್ದರೂ ಎಲ್ಲಿಯೂ ಚಿತ್ರ ಬಿಡಿ ಹೆಸರನ್ನೂ ಎತ್ತದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದ ಅಭಿಯಾನದ ಸೂತ್ರದಾರರು ಕೊಡಗು ಜಿಲ್ಲೆಯಲ್ಲಿ ಮರೆತು ಬಿಟ್ಟಿದ್ದು ಸಖೇದಾಶ್ಚರ್ಯ!.
೨೦ನೆಯ ಶತಮಾನದ ಆರಂಬದಲ್ಲಿ ನೂರಾರು ಒಳಪಂಗಡಗಳನ್ನು ಒಟ್ಟುಗೂಡಿಸಿ ಅಖಂಡ ವೀರಶೈವ ಮಹಾಸಭಾವನ್ನು ಸ್ಥಾಪಿಸಿದ ಮಹಾಪುರುಷನ ಚಿತ್ರದ ಎದುರು ವೀರಶೈವ ಬೇರೆ ,ಲಿಂಗಾಯತ ಬೇರೆ ಎಂದು ಹೇಳುವುದೇ ಬಸವ ಸಂಸ್ಕೃತಿ ಎಂದು ಬಿಂಭಿಸಿದ ರೀತಿ , ಒಬ್ಬ ರಾಜಕಾರಣಿಯ ಅಧಿಕಾರದ ದಾಹಕ್ಕೆ ಬಲಿ ಕೊಟ್ಟಂತೆಯಿತ್ತು.
ಒಂದು ತೋರಣದ ಎಲೆ ಬಸವಣ್ಣನವರ ಭಾವ ಚಿತ್ರ ಸರಕಾರಿ ಕಛೇರಿಯಲ್ಲಿ ತೂಗು ಹಾಕಿದ್ದು,
ಎರಡನೆಯ ತೋರಣದ ಎಲೆ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಿದ್ದು,
ಮೂರನೆಯ ತೋರಣದ ಎಲೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ತುರಾತುರಿಯಲ್ಲಿ ಕೇಂದ್ರಕ್ಕೆ ಕಳುಹಿಸಿದ್ದು
ನಾಲ್ಕನೆಯ ತೋರಣ ವಿಜಯಪುರದ ವಿ.ವಿ.ಗೆ ಅಕ್ಕ ಮಹಾದೇವಿಯವರ ಹೆಸರು ಇಟ್ಟಿದ್ದು..
“ ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು;
ಕೊಂದಹರೆಂಬುದನರಿಯದೆ
ಬೆಂದೊಡಲ ಹೊರೆಯ ಹೋಯಿತ್ತಲ್ಲದೆ!
ಅದಂದೇ ಹುಟ್ಟಿತ್ತು,
ಅದಂದೇ ಹೊಂದಿತ್ತು;
ಕೊಂದವರುಳಿದರೇ ,ಕೂಡಲಸಂಗಮದೇವಾ??”.
ಈ ತೋರಣಗಳು ಹೊರಗೆ ಕಂಡರೆ,
ಒಳಗೆ ವೀರಶೈವ ಲಿಂಗಾಯತರ, ರಾಜಕಾರಣಿಗಳ ಮತ್ತು ಅಧಿಕಾರಿಗಳ ಎಳೆಹೂಟೆ ಕಾರ್ಯ ಅವ್ಯಾಹತ.
ಮುಂದೊಂದು ದಿನ ಕೊಂದವರು ಉಳಿಯದಿರಬಹುದು ಆದರೆ ಇಂದು ಅಖಂಡ ವೀರಶೈವ ಲಿಂಗಾಯತವನ್ನು ಛಿದ್ರ ಛಿದ್ರ ಮಾಡಿ ಅವರವರಲ್ಲಿ ವಿಷವನ್ನು ತುಂಬಿ ಭೇಧವನ್ನು ಅನುಷ್ಠಾನಗೊಳಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿರುವರು.
ತೋರಣಗಳನ್ನು ಮೇಯ್ದ ಕುರಿಗಳು ,
ಸರಕಾರದ ಪ್ರಶಸ್ತಿ ಅನುದಾನ ಪಡೆದ ನರಿಗಳು
ಇಂದು ವ್ಯಾಘ್ರಗಳು.
ಈ ಫಲಾನುಭವಿ ಗೋಮುಖ ವ್ಯಾಘ್ರಗಳ ಆರ್ಭಟಗಳಲ್ಲಿ “ವೀರಶೈವ ಲಿಂಗಾಯತ “ ದುರ್ಬಲಗೊಂಡಿದೆ .
ಆದರೆ ಆಗಿರುವ ದುರಂತ , ಮತ್ತು ಆಗುವ ನಷ್ಠ- ಊಹೆಗೂ ನಿಲಕಲಾರದ್ದು.
ಮುಂದೊಂದು ದಿನ ಮೈ ಕೊಡವಿ ,ಧೂಳುಗಳ ಮಧ್ಯದಲ್ಲಿ ಫಿನಿಕ್ಸ ಪಕ್ಷಿಯಂತೆ ಮರು ಜನ್ಮ ಪಡೆದುಕೊಳ್ಳುವುದು ಶತ ಸಿದ್ಧ.
ಫಿನಿಕ್ಸ್ (Phoenix) ಎಂಬುದು ಗ್ರೀಕ್ ಪುರಾಣಗಳಲ್ಲಿ ಪ್ರಸಿದ್ಧವಾದ ಅದ್ಭುತ ಪಕ್ಷಿ.
ಇದು ಒಂದು ಅಮರ ಪಕ್ಷಿ, ತನ್ನ ದೇಹವೇ ಅಗ್ನಿಯಾಗಿ ಭಸ್ಮವಾದ ಬಳಿಕ, ಆ ಭಸ್ಮದಿಂದಲೇ ಮತ್ತೆ ಪುನರ್ಜನ್ಮ ಪಡೆಯುತ್ತದೆ ಎಂದು ನಂಬಿಕೆ.
-ಶ್ರೀಕಂಠ.ಚೌಕೀಮಠ