: ಸೌಜನ್ಯ “ಬೆಳಗು”
ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಯಾವ ಲೌಕಿಕ ಭೋಗಭಾಗ್ಯವನ್ನು ಬಯಸಿ ಪಡೆದವರಲ್ಲ ; ಆದರೆ ಅವರ ಅಧ್ಯಾತ್ಮ ಪರಿವಾರದಲ್ಲಿಯ ಅವರ ಶಿಷ್ಯ ಸಂಪತ್ತು ಅಪರಿಮಿತವಾದುದು, ಲೋಕೋತ್ತರವಾದುದು. ಅವರು ತಮ್ಮ ಸಮಾಜಸೇವೆಯ ಕನಸನ್ನು ಲೋಕಹಿತಸಾಧನೆಯ ಆದರ್ಶವನ್ನೂ ಪೂರ್ಣ ಮಾಡುವ ಹಿರಿಯ ಹೊಣೆಗಾರಿಕೆಯನ್ನು ಮಂದಿರದ ಸಾಧಕರ ಮೇಲೆ ಕಾರ್ಯಕರ್ತರ ಮೇಲೆ ಬಿಟ್ಟು ಬಯಲಾದರು. ಅವರ ಸೇವಾಭಾವದ ಕಮ್ಮಟವಾದ ಮಂದಿರದಲ್ಲಿ ದೀಕ್ಷಿತರಾದ ಶ್ರೀಗಳವರು, ಸಂಗೀತಗಾರರು, ಕಲಾವಂತರು, ಅನುಭವಿಗಳು, ಸಂಶೋಧಕರು, ಶಾಸ್ತ್ರಿಗಳು ಶಿಕ್ಷಕರು ಮುಂತಾಗಿ ದಕ್ಷರಾದ ಕಾರ್ಯಕರ್ತರು ಈ ಲೋಕಸೇವೆಯ ಭಾರವನ್ನು ಹೊತ್ತು ಅನೇಕ ಮುಖವಾಗಿ ನಿರ್ವಹಿಸಿದ್ದಾರೆ, ನಿರ್ವಹಿಸುತ್ತಿದ್ದಾರೆ. ಇವರ ರೂಪದಲ್ಲಿ ಶ್ರೀಗಳವರ ಕಾರ್ಯಶಕ್ತಿ ಪ್ರಭೆಯ ಕಿರಣಗಳು ಅಲ್ಲಲ್ಲಿ ಮೂಡಿ ನಾಡಬಾನನ್ನು ಬೆಳಗಿದ್ದಾವೆ. ಮಂದಿರದ ಫಲಿತಾಂಶಗಳ ಪ್ರತ್ಯಕ್ಷ ದಿಗ್ದರ್ಶನವನ್ನು ನಾಡಿನ ಸರ್ವತೋಮುಖವಾದ ಏಳ್ಗೆಗೆ ವಿನಿಯೋಗವಾಗುತ್ತಿರುವ ಶ್ರೀಗಳವರ ಈ ಶಿಷ್ಯ ಸಂಪತ್ತಿನಲ್ಲಿ ಕಾಣಬಹುದಾಗಿದೆ.
(ಕ್ರಿ. ಶ. ೧೯೦೯)
.
೧).ಸವದತ್ತಿಯ ಶ್ರೀ ನಿ. ಪ್ರ. ಅಪ್ಪಯ್ಯ (ಶಿವಲಿಂಗ) ಸ್ವಾಮಿಗಳು: ಸವದತ್ತಿಯ ಶ್ರೀ .ನಿ ಪ್ರ.ಅಪ್ಪಯ್ಯ ಸ್ವಾಮಿಗಳು ಹಾನಗಲ್ಲ ಶ್ರೀಗಳವರ ಶಿಷ್ಯ ಸಂಪತ್ತಿಯ ಭಾಂಡಾರದಲ್ಲಿ ಮುಕುಟಮಣಿಯಾಗಿ ರಾರಾಜಿಸಿದರು. ಅವರು ಮುಧೋಳ ಸ್ವತಂತ್ರಿ ಮಠದಲ್ಲಿ ಬಿದರಿ ಕುಮಾರ ಶಿವಯೋಗಿಗಳ ಕರುಣೆಯ ಕಂದರಾಗಿ ಶಾ. ಶ. ೧೮೧೬ನೆಯ ಕಾರ್ತಿಕ ಶು. ೧ನೇ ಶುಭದಿನ ಜನಿಸಿದರು. ವಟು ಮಹಾಲಿಂಗಾರ್ಯ ಗುರುಪುತ್ರನಾಗಿಯೆ ಬೆಳೆದನು . ಬಾಲ್ಯದಲ್ಲಿಯೆ ಬಿದರಿ ಶ್ರೀಗಳವರು ಮಹಾಲಿಂಗಾರ್ಯನನ್ನು ತಮಗೆ ಬೇಕೆಂದು ಕರೆತಂದರು. ‘ಅಪ್ಪಯ್ಯ’ನೆಂದು ಪ್ರೀತಿಯಿಂದ ಕಂಡರು. ಅಪ್ಪಯ್ಯ ದೇವರ ಶಿಕ್ಷಣದ ಭಾರ ಹಾನಗಲ್ಲ ಶ್ರೀಗಳವರದಾಯಿತು. ಅಪ್ಪಯ್ಯ ದೇವರು ಕೆಲವು ವರ್ಷ ಹಾವೇರಿಯ ಹುಕ್ಕೇರಿಮಠದ ಪಾಠಶಾಲೆಯಲ್ಲಿ ಸಂಸ್ಕೃತಾಭ್ಯಾಸ ಮಾಡಿದರು. ೧೯೦೯ ರಲ್ಲಿ ಶಿವಯೋಗ ಸಾಧಕರಾದರು. ೧೫ ವರ್ಷ ಶಿವಯೋಗ ಮತ್ತು ಶಿವಾನುಭವ ಶಿಕ್ಷಣ ಪಡೆದರು. ಹಾವೇರಿ ಶ್ರೀಗಳವರಿಂದ ಅನುಗ್ರಹ ಹೊಂದಿ ಕಾಲು ನಡಿಗೆಯಿಂದ ಎಡೆಯೂರ ಶ್ರೀ ಕ್ಷೇತ್ರದ ಯಾತ್ರೆಯನ್ನು ಮಾಡಿ ಶ್ರೀ ಸಿದ್ಧಲಿಂಗ ಶಿವಯೋಗಿಯ ದರ್ಶನ ಪಡೆದರು. ಅಂದಿನಿಂದ ಶಿವಯೋಗದಲ್ಲಿ ಸಿದ್ದಿ ಪಡೆಯುವ ಹಂಬಲ ಬಲವಾಯಿತು. ಸವದತ್ತಿಯ ಕಲ್ಮಠಕ್ಕೆ ಅಧಿಕಾರಿಗಳಾದ ಮೇಲೆ ಬಿದರಿ ಗುರುವರ್ಯರು ತಪಗೈದು ಸಿದ್ಧಿಪಡೆದ ನವಿಲುತೀರ್ಥ’ದಲ್ಲಿ ಅನುಷ್ಠಾನ ಮಾಡಿದರು. ಅವರ ಶಿವಯೋಗ ಸಿದ್ಧಿಯನ್ನು ಕಂಡು ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರಿಗೆ ಅಮಿತಾನಂದವಾಯಿತು. ಅಪ್ಪಯ್ಯ ಸ್ವಾಮಿಗಳು ಗುರುಪುತ್ರರಾಗಿದ್ದರಿಂದ ಅವರ ಮೇಲೆ ಉಭಯ ಶ್ರೀಗಳವರದೂ ಅಪಾರವಾದ ಪ್ರೇಮ. ಹಾವೇರಿ ಶ್ರೀಗಳವರು ಅವರ ನೆನಹಿಗಾಗಿಯೇ ‘ಶಿವಲಿಂಗ ವಿಜಯ’ ಮುದ್ರಣ ಮಂದಿರವನ್ನು ಸ್ಥಾಪಿಸಿದ್ದರಂತೆ ಎಳೆಯ ವಯಸ್ಸಿನಲ್ಲಿಯೆ ಶ್ರೀ ಅಪ್ಪಯ್ಯ ಸ್ವಾಮಿಗಳ ಜೀವನ ಫಲ ಶಿವಯೋಗ ನಿಷ್ಪತ್ತಿ ಪಡೆದು ಪರಿಪಕ್ವವಾಗಿತ್ತು, ಅದನ್ನು ಶಕೆ ೧೮೪೬ ಮಾರ್ಗಶಿರ ಶು. ೭(ಕ್ರಿ.ಶ.೧೯೨೪) ರಂದು ಶಿವ ತನಗೆ ಬೇಕೆಂದು ಎತ್ತಿಕೊಂಡ.
೨). ಗುಳೇದಗುಡ್ಡದ ಶ್ರೀ ನಿ. ಪ್ರ. ಒಪ್ಪತ್ತಿನ ಸ್ವಾಮಿಗಳು :ಗುಳೇದಗುಡ್ಡದ ಶ್ರೀ ನಿ.ಪ್ರ. ಒಪ್ಪತ್ತಿನ ಸ್ವಾಮಿಗಳು ಮಂದಿರದಲ್ಲಿ ಶಿಕ್ಷಣ ಪಡೆದು ಒಪ್ಪತ್ತೇಶ್ವರ ಮಠಕ್ಕೆ ಅಧಿಕಾರಿಗಳಾಗಿ ಹೋದ ಮೇಲೆಯೂ ಸಂಸ್ಥೆಯ ಸೇವೆಯನ್ನು ತ್ರಿಕರಣಪೂರ್ವಕವಾಗಿ ಮಾಡುತ್ತಿದ್ದರು. ಅವರು ಪ್ರತಿವರ್ಷ ಭಿಕ್ಷೆ ಮಾಡಿ ಮಂದಿರದ ದಾಸೋಹ ಕಾರ್ಯಕ್ಕೆ ನೆರವಾಗಿದ್ದರು. ಶಿವರಾತ್ರಿಯ ಉತ್ಸವದಲ್ಲಿ ಅವರ ನೇತೃತ್ವದಲ್ಲಿ ದಾಸೋಹದಲ್ಲಿ ಶಿವಪೂಜೆ ಮತ್ತು ಅನ್ನಸಂತರ್ಪಣೆಯ ಕಾರ್ಯ ಸಾಂಗವಾಗಿ ನಡೆಯುತ್ತಿದ್ದಿತು. ಅವರು ಖಿಲವಾದ ತಮ್ಮ ಮಠವನ್ನು ಬಹಳ ಅಭಿವೃದ್ಧಿಗೆ ತಂದಿದ್ದರು.
೩) ಬಾಗಲಕೋಟೆಯ ಶ್ರೀ ನಿ. ಪ್ರ. ಶಿವಮೂರ್ತಿ ಸ್ವಾಮಿಗಳು:ಬಾಗಲಕೋಟೆಯ ಶ್ರೀ ನಿ.ಪ್ರ .ಶಿವಮೂರ್ತಿ ಸ್ವಾಮಿಗಳು ಚರಂತಿಮಠದ ಅಧಿಕಾರಿಗಳಾಗಿ ಮಂದಿರದಲ್ಲಿ ೨೦ ವರ್ಷ ಶಿಕ್ಷಣ ಪಡೆದವರು, ಹಾನಗಲ್ಲ ಶ್ರೀಗಳವರ ಅಪ್ಪಣೆಯಂತೆ ಅವರು ಅನಂತಪುರ-ಕೆಳದಿ ಪ್ರಾಂತದಲ್ಲಿ ಕೀರ್ತನ- ಪ್ರವಚನಗಳನ್ನು ಮಾಡಿಸಿ ಶಿವಾನುಭವ ಪ್ರಸಾರವನ್ನು ಕೈಕೊಂಡರು. ಕಪನಳ್ಳಿಯಲ್ಲಿ ಅನುಷ್ಠಾನವನ್ನು ಮಾಡಿ ಶಿವಯೋಗ ಸಿದ್ಧಿಯನ್ನು ಪಡೆದಿದ್ದರು. ಅನಂತಪುರದ ಶ್ರೀ ಲಿಂಗಸ್ವಾಮಿಗಳು ಲಿಂಗೈಕ್ಯರಾದ ಮೇಲೆ ಆ ಸಂಸ್ಥಾನಮಠದ ವ್ಯವಸ್ಥೆಯನ್ನು ಕೆಲವು ವರ್ಷ ನೋಡಿಕೊಂಡಿದ್ದರು; ಅದರ ಅಭಿವೃದ್ಧಿಯನ್ನು ಮಾಡಿದರು. ಬಾಗಲಕೋಟೆಯಲ್ಲಿರುವ ‘ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ’ ಕ್ಕೆ ೮-೧೦ ಸಾವಿರ ರೂಪಾಯಿ ಬೆಲೆ ಬಾಳುವ ತಮ್ಮ ಮಠದ ಜಮೀನನ್ನು ದಾನವಾಗಿ ದಯಪಾಲಿಸಿ ವಿದ್ಯಾದಾನದ ಕಾರ್ಯಕ್ಕೆ ಪ್ರೋತ್ಸಾಹವಿತ್ತರು. ಶ್ರೀಗಳವರು ಯಾವಾಗಲೂ ಶಿವಯೋಗಮಂದಿರದ ಅಭಿವೃದ್ಧಿಯ ಕಾರ್ಯಗಳಲ್ಲಿ ಅಭಿಮಾನದಿಂದ ಸಹಕರಿಸುತ್ತಿದ್ದರು. ಶ್ರೀಗಳವರೆ ಬಾಗಲಕೋಟೆಯ ಕರವೀರಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಎರಡು ಮಠಗಳ ಪ್ರಗತಿಯ ಬಗ್ಗೆ ಉಪಾಯಗಳನ್ನು ಕೈಕೊಂಡಿದ್ದರು. ಅನಿರೀಕ್ಷಿತವಾಗಿ ಕ್ರಿ.ಶ. ೧೯೪೭ರಲ್ಲಿ ಲಿಂಗೈಕ್ಯರಾದರು.
೪)ಕಂಚುಕಲ್ಲ-ಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು: ಕಂಚುಕಲ್ಲ -ಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ದೊಡ್ಡಮಠದ ಅಧಿಕಾರಿಗಳಾಗಿದ್ದರು. ಜಿ. ಚಿಕ್ಕಮಗಳೂರ ಕಡೂರ ತಾಲೂಕಿನ ಕೆ. ಬಿದರೆಯ ದೊಡ್ಡಮಠ ಹೆಸರಾದ ಗುರುಪೀಠ. ಈ ಮಠದ ಅನೇಕ ತಪಸ್ವಿಗಳ ಪ್ರಾಚೀನ ಪರಂಪರೆಯಲ್ಲಿ ಲಿಂ. ಶ್ರೀ ದೊಡ್ಡಜ್ಜಯ್ಯನವರು ಬಹಳ ಕೀರ್ತಿ ಪಡೆದ ಮಹಿಮರು. ಅವರ ಉತ್ತರಾಧಿಕಾರಿಗಳೆ ಮರುಳಸಿದ್ದ ದೇವರು. ಅವರು ಹಾನಗಲ್ಲ ಶ್ರೀಗಳವರ ನೇತೃತ್ವದಲ್ಲಿ ಯೋಗವಿದ್ಯೆಯ ಶಿಕ್ಷಣ ಪಡೆದರು. ಷಟ್ಕರ್ಮಗಳಲ್ಲಿ ನಿಪುಣರಾಗಿ ಪ್ರಾಣಾಯಾಮವನ್ನು ಪೂರ್ಣವಾಗಿ ಸಾಧಿಸಿದ್ದರು. ಕ್ರಿ. ಶ. ೧೯೨೧ ರಲ್ಲಿ ನಾಶಿಕದಲ್ಲಿ ಕೂಡಿದ ಕುಂಭಮೇಳದಲ್ಲಿ ಉತ್ತರ ಹಿಂದುಸ್ತಾನದ ಯೋಗಿಗಳೆಲ್ಲ ಸೇರಿದ್ದರು. ಹಾನಗಲ್ಲ ಶ್ರೀಗಳವರು ಬಿದರೆಯ ಪ್ರಭುಕುಮಾರ ಪಟ್ಟಾಧ್ಯಕ್ಷರು ಮತ್ತು ಕೆಲವು ಸಾಧಕರನ್ನು ಕೂಡಿಕೊಂಡು ಕುಂಭಮೇಳಕ್ಕೆ ದಯಮಾಡಿಸಿದ್ದರು. ಅಲ್ಲಿಯ ಸಿದ್ಧಯೋಗಿಗಳೆಲ್ಲ ಬಿದರೆ ಶ್ರೀ ಪಟ್ಟಾಧ್ಯಕ್ಷರ ಯೋಗಸಾಧನೆಯನ್ನು ಕಂಡು ಅಪ್ರತಿಭರಾದರು; ಶ್ರೀ ಪಟ್ಟದ್ದೇವರಿಂದ ಯೋಗದ ವಿಶೇಷ ಸಾಧನೆಗಳನ್ನು ಕಲಿತುಕೊಂಡರು; ‘ಯೋಗರಾಜ’ರೆಂದು ಬಿರುದುಕೊಟ್ಟು ಮನ್ನಿಸಿದರು. ಮಂದಿರದ ಸಾಧಕರು ಯೋಗಸಿದ್ಧರಾಗಬೇಕೆಂಬ ಶ್ರೀಗಳವರ ಧೈಯವನ್ನು ಪೂರ್ಣವಾಗಿ ಸಾಧಿಸಿದ ಶ್ರೇಯ ಬಿದರಿ ಪಟ್ಟಾಧ್ಯಕ್ಷರಿಗೆ ಸಲ್ಲಬೇಕು. ಅವರು ಕೊನೆಯವರೆಗೂ ಮಂದಿರದಲ್ಲಿಯೇ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಪ್ರಾಣಾಯಾಮ ಸಿದ್ಧಿಯನ್ನು ಕಂಡು ಪರದೇಶದ ಡಾಕ್ಟರರೂ ಕೂಡ ಆಶ್ಚರ್ಯಪಡುತ್ತಿದ್ದರು.
ಅವರು ಶಿವಯೋಗದಲ್ಲಿಯೂ ಸಿದ್ಧಿಪಡೆದವರು. ಸಾವಿರಾರು ಜನ ಶಿಷ್ಯರಿಗೆ ಶಿವದೀಕ್ಷೆಯನ್ನು ದಯುಪಾಲಿಸಿದರು. ಎಡಹಳ್ಳಿಯ ಶ್ರೀ ಮಲ್ಲಪ್ಪ ದೇಸಾಯರಿಗೆ ದೀಕ್ಷಾಗುರುಗಳಾಗಿದ್ದರು. ಶ್ರೀ ಪಟ್ಟದ್ದೇವರು ಮಂದಿರದ ಸೇವೆಯನ್ನು ಮಾಡುತ್ತಲೆ ದಿನಾಂಕ ೨೭-೬-೧೯೩೧ ರಲ್ಲಿ ಗಿರಿಯಾಪುರ (ಜಿ. ಚಿಕ್ಕಮಗಳೂರು) ದಲ್ಲಿ ಲಿಂಗೈಕ್ಯರಾದರು.
೫)ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು:ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು ಕುಷ್ಟಗಿ ತಾಲೂಕಿನ ವ್ಯಾಕರಣನಾಳ ಮತ್ತು ಮುದಗಲ್ಲ ಹಿರೇಮಠಗಳ ಅಧಿಕಾರಿಗಳಾಗಿದ್ದರು. ಅವರು ಮಂದಿರದಲ್ಲಿಯೆ ಸಂಸ್ಕೃತ ಪ್ರೌಢಶಿಕ್ಷಣ ಪಡೆದು ಸಾಧಕರಿಗೆ ಪಾಠಗಳನ್ನು ಹೇಳಿಕೊಡುತ್ತಿದ್ದರು. ಮಂದಿರದ ಸಾಧಕರ ಮತ್ತು ವಟುಗಳ ಪಾಲಕರಾಗಿ ಒಳ್ಳೆ ಶಿಸ್ತಿನಿಂದ ವ್ಯವಸ್ಥೆಯನ್ನು ನೋಡಿಕೊಂಡಿದ್ದರು. ಅವರು ಆಶುಕವಿಗಳಾಗಿದ್ದರು. ಸಂಸ್ಕೃತದಲ್ಲಿ ಅನೇಕ ಸ್ತೋತ್ರಪರ ಅಷ್ಟಕಗಳನ್ನು ರಚಿಸಿದ್ದಾರೆ. ಅವರು ಯೋಗಸಾಧನೆಯಲ್ಲಿಯೂ ಉತ್ತಮ ಪ್ರಗತಿಯನ್ನು ಪಡೆದಿದ್ದರು. ಮಂದಿರಕ್ಕೆ ಯೋಗಶಿಕ್ಷಣಾರ್ಥಿಗಳಾಗಿ ಬಂದ ಸ್ವಪರಮತೀಯ ಮುಮುಕ್ಷುಗಳಿಗೂ ಯೋಗಸಾಧನೆ ಮತ್ತು ಧರ್ಮಗಳ ವಿಷಯವಾಗಿ ಬೋಧಿಸುವಷ್ಟು ದಕ್ಷರಾಗಿದ್ದರು. ಪುರಾಣ-ಪ್ರವಚನ ಪಟುಗಳಾಗಿದ್ದರು. ಹಾನಗಲ್ಲ ಶ್ರೀಗಳವರು ವ್ಯಾಕರಣಾಳ ಪಟ್ಟಾಧ್ಯಕ್ಷರ ಮೇಲೆಯೆ ಮಂದಿರದ ವ್ಯವಸ್ಥೆಯನ್ನು ವಹಿಸಿ ನಿಶ್ಚಿಂತರಾಗಿ ಭಿಕ್ಷೆಯಲ್ಲಿರುತ್ತಿದ್ದರು. ಸಂಸ್ಥೆಯ ಹಿತವೇ ತಮ್ಮ ಹಿತವೆಂದು ಭಾವಿಸಿ ನಿಸ್ಪೃಹವಾಗಿ ಸಂಸ್ಥೆಗೆ ಶ್ರಮಿಸುತ್ತಿದ್ದ ಶ್ರೀ ಪಟ್ಟಾಧ್ಯಕ್ಷರು ೧೯೧೯ ರಲ್ಲಿ ಇನ್‌ಫ್ಲ್ಯಎಂಜಾದಿಂದ ಲಿಂಗೈಕ್ಯರಾದರು. ಅವರ ಗದ್ದುಗೆ ಮಂದಿರದಲ್ಲಿಯೇ ಇದೆ.
೬) ನವಿಲುಗುಂದದ ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು: ನವಿಲುಗುಂದದ ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು ಗವಿಮಠದ ಅಧಿಪತಿಗಳು. ಅವರು ನವಿಲುಗುಂದ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಜನ್ಮತಾಳಿ ನವಿಲುಗುಂದ ಗವಿಮಠಾಧೀಶರಾದ ಲಿಂ. ಸಿದ್ದಲಿಂಗ ಸ್ವಾಮಿಗಳ ಕೃಪಾಬಲದಿಂದ ಶಿವಯೋಗ ಮಾರ್ಗದಲ್ಲಿ ದೀಕ್ಷೆ ಪಡೆದರು.
ನವಿಲುಗುಂದ ಗವಿಮಠದ ಮೂಲಕರ್ತೃಗಳು ಶ್ರೀ ಜಡೆಸ್ವಾಮಿಗಳು; ಚಿತ್ರದುರ್ಗ ಪೀಠದ ಪರಂಪರೆಯವರು. ಮುನ್ನೂರು ವರ್ಷಗಳ ಹಿಂದೆ ಇಲ್ಲಿಯೇ ಒಂದು ಗುಡಿಸಲಲ್ಲಿ ತಪೋನುಷ್ಠಾನ ಮಾಡಿ ಭಾವಿಯಲ್ಲಿ ನೀರು ಬರಿಸಿದ ಪವಾಡ ತೋರಿದರು. ಅವರ ಸ್ಮಾರಕವಾಗಿ ಜೈನಮತದ ಗೌಡರು ಚಿಕ್ಕ ಮಠವೊಂದನ್ನು ಕಟ್ಟಿಸಿ ಭೂಮಿಯನ್ನು ದಾನವಾಗಿ ಕೊಟ್ಟು ಅನುಷ್ಠಾನಕ್ಕೆ ಅನುಕೂಲ ಮಾಡಿದರು.
ಹಾನಗಲ್ಲ ಶ್ರೀಗಳವರ ಮಾರ್ಗದರ್ಶನದಲ್ಲಿ ಶ್ರೀ ಬಸವಲಿಂಗ ದೇಶಿಕರು ಮಂದಿರದಲ್ಲಿ ಪಂ. ಸೋಮನಾಥ ಶಾಸ್ತ್ರಿಗಳು, ಉಮಚಗಿಯ ಪಂ. ಶಂಕರಶಾಸ್ತ್ರಿಗಳು, ಕೊಂಗವಾಡದ ಪಂ. ವೀರಭದ್ರ ಶಾಸ್ತ್ರಿಗಳವರಲ್ಲಿ ವೇದಾಂತ, ತರ್ಕ ಮತ್ತು ಸಾಹಿತ್ಯ ವಿಷಯಗಳ ಅಧ್ಯಯನ ಮಾಡಿದರು. ಯೋಗದಲ್ಲಿಯೂ ಸಾಧನೆ ಮಾಡಿದರು. ೧೯೨೧ರಲ್ಲಿ ಶ್ರೀ ಗವಿಮಠಕ್ಕೆ ಬಂದ ಬಳಿಕ ಶಿವಯೋಗ ಮಂದಿರಕ್ಕೆ ಕಾಣಿಕೆಯೆಂದು ಸುಮಾರು ಎಂಟು ಸಾವಿರ ರೂಪಾಯಿಗಳನ್ನು ಐದುವರೆ ಕೂರಿಗೆ ಭೂಮಿಯನ್ನು ನವಿಲುಗುಂದ ಭಕ್ತರಿಂದ ಪಡೆದು ಅರ್ಪಿಸಿದರು. ಪಂ. ಪಂಚಾಕ್ಷರ ಗವಾಯಿಗಳಿಗೆ ಮಿರ್ಜಿಯ ನೀಲಕಂಠ ಬುವಾ ಅವರಿಂದ ಸಂಗೀತ ಪಾಠವನ್ನು ಮಠದ ವತಿಯಿಂದ ಹೇಳಿಸಿದರು. ಕೆಲವು ಕಾಲ ಗವಾಯಿಗಳ ಸಂಗೀತ ಪಾಠಸಾಲೆಗೆ ಮಠದಲ್ಲಿಯೇ ಆಶ್ರಯ ನೀಡಿದರು. ಶಿವಯೋಗ ಮಂದಿರಕ್ಕೆ ಆರ್ಥಿಕ ಬಿಕ್ಕಟ್ಟು ಬಂದಾಗಲೆಲ್ಲ ಭಿಕ್ಷೆಯ ರೂಪದಿಂದ ಸಹಾಯ ನೀಡಿ ಸಂಸ್ಥೆಯ ಯೋಗಕ್ಷೇಮದಲ್ಲಿ ಭಾಗಿಗಳಾಗಿದ್ದಾರೆ.
ಶ್ರೀಗಳವರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಸ್ಥಾನಮಾನಗಳನ್ನು ಸಂಪಾದಿಸಿದ್ದಾರೆ. ಬೆಂಗಳೂರಿನʼ ಕನ್ನಡ ಸಾಹಿತ್ಯ ಪರಿಷತ್ತಿʼನ ಕಾರ್ಯಕಾರಿ ಮಂಡಲದ ಸದಸ್ಯರಾಗಿ ‘ಉತ್ತರ ಕರ್ನಾಟಕ ಪ್ರಾಂತೀಯ ಸಾಹಿತ್ಯ ಸಮಿತಿ’ಯ ಅಧ್ಯಕ್ಷರಾಗಿ, ʼಕರ್ನಾಟಕ ವಿದ್ಯಾವರ್ಧಕ ಸಂಘ’ ದ ಉಪಾಧ್ಯಕ್ಷರಾಗಿ ಮತ್ತು ೧೯೨೨ ರಿಂದ ಇದುವರೆಗೆ ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷರಾಗಿಯೂ, ಕೆಲವು ವರ್ಷ ಮ್ಯಾನೇಜಿಂಗ ಟ್ರಸ್ಟಿಗಳಾಗಿಯೂ ಕಾರ್ಯ ಮಾಡಿ ಅನೇಕ ಸಂಘ ಸಂಸ್ಥೆಗಳ ಪ್ರಗತಿಗೆ ಕಾರಣರಾಗಿದ್ದಾರೆ. ಬಾಗಲಕೋಟೆ ಬಸವೇಶ್ವರ ಕಾಲೇಜು ಪ್ರಾರಂಭವಾದಂದಿನಿಂದ ಇದುವರೆಗೂ ಬಾಗಲಕೋಟೆಯ ‘ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವರು. ೧೯೨೪ ರಲ್ಲಿ ‘ಲಿಂಗ’ ಮತ್ತು ೧೯೨೮ ರಲ್ಲಿ ‘ಗುರು’ ವಿಷಯಗಳನ್ನು ಕುರಿತು ಪುಸ್ತಕಗಳನ್ನು ಬರೆದರು. ೧೯೩೩ ರಿಂದ ೧೯೩೭ರ ವರೆಗೆ ಶಿವಯೋಗ ಮಂದಿರದ ಪರವಾಗಿ ಪುಣೆ, ಬೆಂಗಳೂರು, ಮೈಸೂರು, ವಿಜಾಪುರ ಮೊದಲಾದ ಕಡೆ ಪ್ರಯಾಣ ಮಾಡಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಪ್ರಚಾರ ಕಾರ್ಯವನ್ನು ಮಾಡಿದರು. ೧೯೪೧ ರಲ್ಲಿ ಶ್ರೀಮಠದಲ್ಲಿ ʼಉತ್ತರ ಕರ್ನಾಟಕ ಪ್ರಾಂತೀ ಸಾಹಿತ್ಯ ಸಮ್ಮೇಲನ’ವನ್ನು ಜರುಗಿಸಿದರು. ಶಿವಯೋಗ ಮಂದಿರದಲ್ಲಿ ಶ್ರೀ ರೇವಣಸಿದ್ದೇಶ್ವರ ವಾಚನಾಲಯವನ್ನು ಸ್ಥಾಪಿಸಿ, ದಾನಿಗಳಿಂದ ಗ್ರಂಥಗಳನ್ನು ಶೇಖರಿಸಿದರು. ‘ಸುಕುಮಾರ’ ಕೈಬರಹ ಮಾಸಿಕವನ್ನು ಹೊರಡಿಸಿದರು. ʼಆರ್ಯಧರ್ಮ ಪ್ರದೀಪಿಕೆ’ಯಲ್ಲಿ ವೀರಶೈವ ಧರ್ಮದ ಬಗೆಗೆ ವಿವೇಚನಾತ್ಮಕ ಲೇಖನ ಬರೆದರು.
೧೯೪೨ರ ಜೂನ ೧೫ನೆಯ ದಿನಾಂಕದಲ್ಲಿ ಧಾರವಾಡದ ಪೂಜ್ಯ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳವರಲ್ಲಿ ಹೋಗಿ ಶಿವಾನುಭವ ಸಂಘದ ಸ್ಥಾಪನೆಯ ಬಗ್ಗೆ ವಿಚಾರ ಮಾಡಿ ಅಲ್ಲಿಯೇ ‘ಶಿವಾನುಭವ ಸಂಸ್ಥೆ’ಯನ್ನು ಪ್ರಾರಂಭಿಸಿದರು. ೧೯೪೩ನೆಯ ನವಂಬರ ದಿನಾಂಕ ೧೪ ರಂದು ಬಸವೇಶ್ವರ ಕಾಲೇಜನ್ನು ತೆರೆಯುವ ಬಗ್ಗೆ ಆಲೋಚನಾ ಕಮೀಟಿಯನ್ನು ಕರೆದು, ನಿರ್ಧರಿಸಿ ಬಾಗಲಕೋಟೆ ಮತ್ತು ಇತರ ಪಟ್ಟಣಗಳ ಗ್ರಾಮಗಳ ಮಹಾಜನರ ಸಹಕಾರ-ಸಹಾಯದಿಂದ ಬಾಗಲಕೋಟೆಯಲ್ಲಿಯೆ ಬಸವೆ ಕಾಲೇಜನ್ನು ಸ್ಥಾಪಿಸಿದರು.
ಶ್ರೀಗಳವರು ೧೯೪೫ರ ಫೆಬ್ರುವರಿ ದಿನಾಂಕ ೮-೯ ರಿಂದ ‘ಸರ್ವಧರ್ಮ ಸಮ್ಮೇಲನ’ವನ್ನು ಗವಿಮಠದಲ್ಲಿ ಸೇರಿಸಿ ಇದುವರೆಗೂ ಅದನ್ನು ಪ್ರತಿವರ್ಷ ನಡೆಯಿಸಿಕೊಂಡು ಬಂದಿರುವರು. ಧರ್ಮದ ವ್ಯಾಪಕ ಭಾವನೆಯನ್ನು ಜನತೆಯಲ್ಲಿ ಮೂಡಿಸಿರುವರು. ಶ್ರೀ ಮಠದಲ್ಲಿ ಒಂದು ಫ್ರೀ ಬೋರ್ಡಿಂಗನ್ನು ಮತ್ತು ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ ನಡೆಯಿಸುತ್ತಿರುವರು. ಪ್ರತಿವರ್ಷ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯನ್ನು ಏರ್ಪಡಿಸಿ ಅದರ ಅಂಗವಾಗಿ ಶಿವಾನುಭವ ಸಮ್ಮೇಲನ, ಒಕ್ಕಲುತನ ಪರಿಷತ್ತು ಸಹಕಾರಿ ಪರಿಷತ್ತು ಮಹಿಳಾ ಗೋಷ್ಠಿಗಳನ್ನು ಜರುಗಿಸಿ ನಾಡಿನ ಜನತೆಯಲ್ಲಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ಜನಜಾಗ್ರತಿಯನ್ನುಂಟು ಮಾಡುತ್ತಲಿರುವರು.೭)ಕುರವತ್ತಿ ಶ್ರೀ ನಿ. ಪ್ರ. ತೋಂಟದಾರ್ಯ (ಮಹಾದೇವ) ಸ್ವಾಮಿಗಳು :ಕುರವತ್ತಿ ಶ್ರೀ ನಿ. ಪ್ರ. ತೋಂಟದಾರ್ಯ (ಮಹಾದೇವ) ಸ್ವಾಮಿಗಳು ವಿರಕ್ತಮಠದ ಅಧಿಕಾರಿಗಳು, ಅವರು ಮೊದಲು ಬಾಗಲಕೋಟೆಯ ಕರವೀರಮಠದ ವತಿಯಿಂದ ಮಂದಿರದಲ್ಲಿ ಶಿಕ್ಷಣ ಪಡೆದರು. ಅವರು ಹಾನಗಲ್ಲ ಶ್ರೀಗಳವರ ಸೇವೆಯನ್ನು ಮಾಡಿದ್ದಲ್ಲದೆ ಕಪನಳ್ಳಿ ಮೊದಲಾದ ಶಾಖಾಮಂದಿರಗಳಲ್ಲಿ ಅನುಷ್ಠಾನವನ್ನು ಮಾಡಿದರು. ಅವರು ೧೯೩೩ ನೆಯ ಇಸ್ವಿಯವರೆಗೂ ಶಿವಯೋಗ ಮಂದಿರದಲ್ಲಿಯೇ ಇದ್ದು ಮಂದಿರದ ಒಕ್ಕಲುತನ-ಗೋಶಾಲೆಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಶ್ರೀ ಮಹಾದೇವ ದೇಶಿಕರ ಹಿರಿಯತನದಲ್ಲಿ ಮಂದಿರದ ಒಕ್ಕಲುತನವು ಬಹಳ ಪ್ರಗತಿಯನ್ನು ಪಡೆದಿತ್ತು ಅವರು ಕೆಲವು ವರ್ಷ ಕೆಳದಿಯ ಹಿರೇಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಈಗ ಕುರವತ್ತಿಯಲ್ಲಿ ತೋಂಟದಾರ್ಯ ಮಠದ ಜೀರ್ಣೋದ್ಧಾರವನ್ನು ಮಾಡಿ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಹಾನಗಲ್ಲ ವಿರಕ್ತಮಠದ ಜೀರ್ಣೋದ್ಧಾರವನ್ನು ಮಾಡಿ ಸೇವೆ ಸಲ್ಲಿಸಿದವರು