ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೧೭

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಇಕ್ಕೇರಿ ಚೌಬೀದಿಯೊ | ಳಿಕ್ಕಿದ ಫಲ ಸರಕು

ತಕ್ಕೊಂಡು ಮಾರಿ ಮಿಕ್ಕಲಾಭವದೆನಗೆ

ಸಿಕ್ಕದ್ದೆ ಗುರುವೆ ಕೃಪೆಯಾಗು  ||೭೧ ||

ಪಂಚಜ್ಞಾನೇಂದ್ರಿಯಂಗಳ ಪಂಚವಿಷಯಗಳನ್ನು ವಿವರಿಸಿದ ಮೇಲೆ ಅಂತಕರಣ ಚತುಷ್ಟಯವನ್ನು ಸೂಚಿಸಿದ್ದಾನೆ. ಪಂಚಜ್ಞಾನೇಂದ್ರಿಯಗಳಿಗೆ ಮತ್ತು ಅಂತಃಕರಣ ಚತುಷ್ಟಯಕ್ಕೆ ಸಮೀಪ ಸಂಬಂಧವಿದೆ. ಇಲ್ಲಿ ಶಿವಕವಿಯ ಐತಿಹಾಸಿಕ ಪ್ರಜ್ಞೆಯೂ ವ್ಯಕ್ತವಾಗಿದೆ.

ವಿಜಯನಗರ ಸಾಮ್ರಾಜ್ಯವು ಅಸ್ತಂಗತವಾಗುವ ಸಮಯಕ್ಕೆ ಕೀರ್ತಿವೆತ್ತ ಕನ್ನಡಿಗರ ಹೆಮ್ಮೆಯ ರಾಜ್ಯ ಕೆಳದಿ ಅರಸರದು. ಸುಮಾರು ಕ್ರಿ. ಶ. ೧೫೦೦ ರಿಂದ ೧೭೬೩ರ ವರೆಗೆ ಸಮೃದ್ಧಿಯಿಂದ, ಧೀರತನದಿಂದ, ಉದಾರತನದಿಂದ ಹಾಗೂ ಧರ್ಮದಿಂದ ಆಳಿದ, ಬಾಳಿದ ಶ್ರೇಯಸ್ಸು ಈ ರಾಜರದು. ಕೆಳದಿ, ಇಕ್ಕೇರಿ ಮತ್ತು ಬಿದನೂರು ಎಂದು ಮೂರು ರಾಜಧಾನಿಗಳಲ್ಲಿ ರಾಜ್ಯವಾಳಿದರು. ಇಕ್ಕೇರಿಯು ಶಿವಮೊಗ್ಗಾ ಜಿಲ್ಲೆಯ ಸಾಗರಕ್ಕೆ ಮೂರು ಮೈಲು ದೂರದಲ್ಲಿದೆ. ಇಲ್ಲಿ ಅಘೋರೇಶ್ವರ ದೇವಾಲಯವು ದರ್ಶನೀಯವಾಗಿದೆ. ದೇವಸ್ಥಾನದ ಮುಂದಿನ ನಂದಿಯ ವಿಗ್ರಹವು ಭವ್ಯವೂ ಬೃಹತ್ತೂ ಆಗಿದೆ. ಕೆಳದಿ ಅರಸರಲ್ಲಿ ಶಿವಪ್ಪನಾಯಕನು ಅತ್ಯಂತ ಶೂರನೂ, ಧಾರ್ಮಿಕನೂ, ಶಿಸ್ತಿನವನೂ, ಹಾಗೂ ಪ್ರಜಾವತ್ಸಲನೂ ಆಗಿದ್ದನು. ಇವನ ಕಾಲದಲ್ಲಿ ಭೂಕಂದಾಯದಲ್ಲಿ ಸುಧಾರಣೆಯಾದುದಲ್ಲದೆ ಕೆಲವು ಬೆಲೆಯುಳ್ಳ ವಸ್ತುಗಳಿಗೆ ಕರಹಾಕುವ ಪದ್ಧತಿ ಪ್ರಾರಂಭವಾಯಿತು.

 ಇಕ್ಕೇರಿಯು ಆರನೆಯ ಅರಸನಾದ ಹಿರಿಯ ವೆಂಕಟಪ್ಪನಾಯಕನ ಕಾಲದಲ್ಲಿ ಅತ್ಯಂತ ಅಭಿವೃದ್ಧಿ ಪಡೆದ ನಗರವಾಗಿತ್ತು. ಆದ್ದರಿಂದ ಅಲ್ಲಿ ಸುಂದರವಾದ ಚೌಬೀದಿ ( ಚತುಷ್ಪಥ)ಗಳಿದ್ದವು “ಇಕ್ಕೇರಿ ವರಹ” (ಸುವರ್ಣನಾಣ್ಯ)ಗಳೆಂದು ಆ ಪಟ್ಟಣದ ಪತನದ ನಂತರವೂ ಕರೆಯಲ್ಪಡುತ್ತಿದ್ದುದು ಇಕ್ಕೇರಿಯ ಪ್ರಸಿದ್ಧಿಗೆ ನಿದರ್ಶನವಾಗಿದೆ. ಇಲ್ಲಿ ಅಡಿಕೆ, ಮೆಣಸು, ಯಾಲಕ್ಕಿ, ಭತ್ತ, ಕಬ್ಬು ಮೊದಲಾದ ಬೆಲೆಬಾಳುವ ಫಲ ಸರಕು ಬರುತ್ತಿತ್ತು. ವ್ಯಾಪಾರವು ಭರದಿಂದ ಸಾಗುತ್ತಿತ್ತು. ಪರಪ್ರಾಂತಗಳಿಗೂ ಅಲ್ಲಿಂದ ರವಾನೆಯಾಗುತ್ತಿತ್ತು. ಅಲ್ಲಿಯ ಮಾಲನ್ನು ಅಲ್ಲೇ ಖರೀದಿ ಮಾಡಿ ವ್ಯಾಪಾರ (ಮಾರಾಟ) ಮಾಡಿದರೂ ಹೆಚ್ಚಿನ ಲಾಭ ದೊರೆಯುತ್ತಿತ್ತು. ಆದರೆ ಅದು ಕರಕೊಡುವದಕ್ಕೆ ಸರಿಹೋಗುತ್ತಿತ್ತು. ಇದರಿಂದ ಕೊನೆಗೆ ಹೆಚ್ಚಿನ ಲಾಭ ಉಳಿಯುತ್ತಿರಲಿಲ್ಲ. ಆ ಅರಸರು ಅತಿ ಲಾಭ ಬಡಕರಿಗೆ ಅವಕಾಶವಿತ್ತಿರಲಿಲ್ಲವೆಂಬುದೂ ಧ್ವನಿತವಾಗುತ್ತದೆ.

ಕೆಳದಿ ಅರಸರ ಇಕ್ಕೇರಿ ಶಿವಕವಿಗೊಂದು ಮಾಧ್ಯಮ ಮಾತ್ರ. ಇಲ್ಲಿಯ ಇಕ್ಕೇರಿ ಯೆಂದರೆ ಶರೀರ, ಈ ಇಕ್ಕೇರಿಯು ಶೂರತನ, ಉದಾರತನ, ಶಿಸ್ತು, ಧಾರ್ಮಿಕತನಗಳಿಗೂ ಆಶ್ರಯದಾಗಿದೆ. ಇಲ್ಲಿಯೂ ಚೌಬೀದಿ ಅಥವಾ ಚತುಷ್ಪಥವಿದೆ. ಅಂದರೆ ನಾಲ್ಕು ದಾರಿಗಳಿಂದ ಕೂಡಿದೆ. ಎರಡು ಹಲ್ಲಿನಸಾಲು ಮತ್ತು ಎರಡು ತುಟಿಗಳಿಂದ ಕೂಡಿದ ಬಾಯಿಯೇ ಚೌಬೀದಿ. ಇನ್ನೊಂದು ತೆರನಾಗಿ ಅರ್ಥೈಸಿದರೆ ಇನ್ನೂ ಸುಂದರವಾದ ಭಾವ ಬರುತ್ತದೆ. ಶರೀರದಲ್ಲಿ ಕಾಣುವ ಪಂಚಜ್ಞಾನೇಂದ್ರಿಯ ಗಳಿದ್ದರೆ ಕಾಣದ ಆದರೆ ಅತಿ ಮಹತ್ವದ ನಾಲ್ಕು ಅಂತಃಕರಣಗಳಿವೆ. ಅವುಗಳನ್ನು ಮನ, ಬುದ್ಧಿ, ಚಿತ್ತ, ಅಹಂಕಾರಗಳೆಂದು ಕರೆಯುತ್ತಾರೆ. ಇವುಗಳೇ ಕರ್ಮೇಂದ್ರಿಯ ಹಾಗೂ ಜ್ಞಾನೇಂದ್ರಿಯಗಳ ಕಾರ್ಯವನ್ನು ಪ್ರೇರೇಪಿಸುತ್ತವೆ.

ಮನಸ್ಸು ವಾಯುಮಯವಾಗಿದ್ದು ಸಂಕಲ್ಪ ವಿಕಲ್ಪದಿಂದ ಕೂಡಿದೆ. ಬುದ್ಧಿಯು ಜಲದಿಂದ ಹುಟ್ಟಿರುತ್ತದೆ. ಇದಕ್ಕೆ ನಿಶ್ಚಯಿಸುವ ಗುಣವಿದೆ. ಚಿತ್ತವು ಪೃಥ್ವಿತತ್ತ್ವದಿಂದಾಗಿದ್ದು ಸ್ಥಿರದಿಂದ ಅವಧರಿಸಿ ಆನಂದಿಸುತ್ತದೆ. ಅಹಂಕಾರವು ಅಗ್ನಿ ತತ್ತ್ವದಿಂದ ಹುಟ್ಟಿದ್ದು ಅಹಂಭಾವದಿಂದ ಅಹಂಕರಿಸುತ್ತದೆ.ʼʼ ವೇದಾಂತ ಸಾರʼʼ ಗ್ರಂಥದಲ್ಲಿ –

ಬುದ್ಧಿರ್ನಾಮ ನಿಶ್ಚಯಾತ್ಮಿಕಾಂತಃಕರಣವೃತ್ತಿಃ |

ಮನೋನಾಮ ಸಂಕಲ್ಪ ವಿಕಲ್ಪಾತ್ಮಿಕಾಂತಃಕರಣ ವೃತ್ತಿಃ |

ಅನಯೋರೇವ ಚಿತ್ತಾಹಂಕಾರಯೋರಂತರ್ಭಾವಃ ||ʼʼ

“ಬುದ್ಧಿಯೆಂಬುದು ನಿಶ್ಚಯ ಸ್ವಭಾವದ ಆಂತಃಕರಣ ವೃತ್ತಿಯು ಮನಸ್ಸೆಂಬುದು ಸಂಕಲ್ಪ ವಿಕಲ್ಪಗಳ ಸ್ವಭಾವದ ಅಂತಃಕರಣ ವೃತ್ತಿಯು. ಈ ಮನೋ ಬುದ್ಧಿಗಳಲ್ಲೇ ಚಿತ್ತ ಮತ್ತು ಅಹಂಕಾರಗಳು ಅಂತರ್ಭೂತವಾಗುತ್ತವೆಂದು ತಿಳಿಸಿದೆ. ಸಾಮಾನ್ಯವಾಗಿ ಯಾವುದೇ ವಿಷಯಕ್ಕೆ ವಿಚಾರ ಬಂದರೆ ಮೊದಲು ಮನಸ್ಸು ಸಂಕಲ್ಪ ವಿಕಲ್ಪ ಮಾಡುತ್ತದೆ- “ಹೌದೋ ಅಲ್ಲೋ ಎಂದುದಾಗಿ.” ಆಗ ಅಹಂಕಾರವು ಗರ್ವಿಸುತ್ತದೆ.-ʼ ಇದು ನನಗೆ ಮೊದಲೇ ತಿಳಿದಿತ್ತು’ ಎಂದು. ನಂತರ ಬುದ್ಧಿಯ ಸಾರಾಸಾರ  ವಿಚಾರದಿಂದ, ನಿಶ್ಚಯಿಸಿದರೆ ಚಿತ್ತವು ಅದರ ಆನಂದವನ್ನು ಅನುಭವಿಸುತ್ತದೆ. ಹೀಗೆ ಅಂತಃಕರಣಗಳ ವೃತ್ತಿಯು ವ್ಯಕ್ತವಾಗುತ್ತದೆ. ʼʼಅಂತಃಕರಣ  ಪರಿಶುದ್ಧಗೊಳಿಸುವದಕ್ಕಾಗಿಯೇ ಶಾಶ್ವತ ಪ್ರಾದುರ್ಭಾವವಾಗಿದೆ”  ಯೆಂದು ಅನುಭವಿಗಳು ನಿರೂಪಿಸುತ್ತಾರೆ. ಶಿವಕವಿಗಳು ಇಲ್ಲಿ ಪ್ರಸ್ತುತ ಅಂತಃಕರಣ ಚತುಷ್ಟಯವನ್ನು ಪರಿಶುದ್ಧಗೊಳಿಸುವ ಪರಿಯನ್ನು ಅವುಗಳ ಸಾರ್ಥಕತೆಯನ್ನು ಪ್ರತಿಪಾದಿಸಿದ್ದಾರೆ.

ಮನ, ಬುದ್ಧಿ, ಅಹಂಕಾರಗಳ ಸಮ್ಮಿಲಿತವಾದ ಸತ್ಕಾರ್ಯವು ಚಿತ್ತಕ್ಕೆ ಆನಂದವನ್ನು ಕೊಡಬಲ್ಲುದು. ಕೇವಲ ವೈಷಯಿಕವಾಗಿ ಜೀವಭಾವದಿಂದ ಜೀವನ ಮುಂದುವರೆದರೆ ಎಂದಿಗೂ ಪಾವನವಾಗದು. ಗುರಿಯನ್ನು ಸಾಧಿಸಲು ಶಕ್ಯವಿಲ್ಲ. ಮನಸ್ಸಿನ ಚಂಚಲತೆ ಮಾನವನನ್ನು ಕೀಳುಗೊಳಿಸುತ್ತದೆ. ಅಹಂಕಾರವು ಗುರಿಯನ್ನು ನಿರ್ಮೂಲಗೊಳಿಸುತ್ತದೆ. ದುರ್ಬುದ್ಧಿಯು ದುಃಖಿಯನ್ನಾಗಿಸಿದ ಮೇಲೆ ಚಿತ್ತಕ್ಕೆಲ್ಲಿಯ ಆನಂದ ? ಅಂತೆಯೇ ನಿಜಗುಣರ ”ಕೈವಲ್ಯ ಪದ್ಧತಿ”ಯಲ್ಲಿ

ತಡೆವುದಾಗದು ತನಗಗಣಿತ ವಿಷಯದೊ |

ಳೆಡೆಯಾಡುವತಿ ಚಪಲತೆಯ ಚಿತ್ತವನು ||’

”ಮನ-ಬುದ್ಧಿ-ಅಹಂಕಾರಗಳ ತಾಕಲಾಟದಲ್ಲಿ, ಅಗಣಿತ ವಿಷಯಂಗಳಲ್ಲಿ ಎಡೆಯಾಡುವ ಚಿತ್ತದ ಚಪಲತೆಯನ್ನು ತಡೆಯುವದಕ್ಕಾಗುವದಿಲ್ಲ’ʼ ವೆಂಬ ಮಾತುಗಳು ಮಾರ್ಮಿಕವಾಗಿವೆ. ಮನನೀಯವಾಗಿವೆ. ಮನ ಮುಮ್ಮೊದಲು ಆಶಿಸುತ್ತದೆ. ಅಲ್ಪಬುದ್ಧಿಯು ಆಶೆಗೆ ಪ್ರಚೋದನವನ್ನೀಯುತ್ತದೆ. ಅಹಂಕಾರವು ಧೃತಿಗೆಡಿಸಿ ಚಿತ್ತವನ್ನು ಅಸ್ಥಿರಗೊಳಿಸುವದು. ಅದುಕಾರಣ ಈ ಚತುಷ್ಪಥವೆನಿಸಿದ ಅಂತಃಕರಣ ಚತುಷ್ಟಯವನ್ನು ಪಳಗಿಸಬೇಕು. ಮನಬಯಸಿದುದಕ್ಕೆ ಅವಕಾಶ ವೀಯದೇ  ಸನ್ಮನದಿಂದ ಅಥವಾ ಸುಮನದಿಂದ ಶಿವನು ಕರುಣಿಸಿದ ಪದಾರ್ಥಗಳನ್ನು ಗುರು-ಲಿಂಗ-ಜಂಗಮಕ್ಕೆ ಸಲ್ಲಿಸಿ  ಶೇಷಪ್ರಸಾದವನ್ನು ಸವಿಯಬೇಕು. ಇದನ್ನರಿಯದೆ ದೇಹವೆಂಬ ಇಕ್ಕೇರಿಯ ಚೌಬೀದಿಯೆನಿಸಿದ ಬಾಯಲ್ಲಿ ಅಂತಃಕರಣಗಳ ಬಯಕೆಯಂತೆ ಸಿಕ್ಕ ಸಿಕ್ಕ ಪದಾರ್ಥಗಳನ್ನು ಪರಿಶುದ್ಧಗೊಳಿಸದೆ, ಸಂಸ್ಕರಿಸದೆ, ಜೀವಭಾದದಿಂದ ತುಂಬಿದರೆ ಅದೆಲ್ಲವೂ ಹಾನಿಯಾಗುವದು ಖಂಡಿತ. ತನ್ನ ಜೀವಕ್ಕಾಗಿ ಉಪಯೋಗಿಸಿದ ಪದಾರ್ಥಗಳೆಲ್ಲ ಮರುದಿನ ಮಣ್ಣಾಗುವದು ನಿಶ್ಚಿತವಿದೆ. ಶಿವನಿತ್ತ ಪದಾರ್ಥಗಳನ್ನು ಶಿವನಿಗರ್ಪಿಸದೆ ಭುಂಜಿಸಿದರೆ ಜೀವಾತ್ಮನ ಮಲಿನವೃತ್ತಿಯೇ ಬೆಳೆಯುವದು. ಶಾಂತಿ ಸಮಾಧಾನಗಳು ಸಿಕ್ಕವು. ಮನದ ಮುಂದಣ ಆಶೆಯು ಮಾಯೆಯಾಗಿ ಬಂಧಿಸುವದು. ಆ ಕರಣಗಳ ಅಧೀನದಲ್ಲಿ ನಡೆದರೆ ಅವುಗಳ ಉಪಟಳವು ಅಡಗುವದಿಲ್ಲ. ಅದಕ್ಕಾಗಿ ಬಾಲಲೀಲಾ ಮಹಾಂತರಂಥವರೂ ತಮ್ಮ “ಕೈವಲ್ಯ ದರ್ಪಣ’ ದಲ್ಲಿ –

ʼ’ಕರಣಗುಣಗಳುರುವಣಿಗೆಯನು ತಾಳೆ,

ಪೊರೆಯೋ ಬೇಗನೆʼʼ

 ಎಂದು ಶಿವನಲ್ಲಿ ಮೊರೆಯಿಟ್ಟಿದ್ದಾರೆ. ಇಂಥ ಮಹಾನುಭಾವರೇ ಕರಣಂಗಳ ಉರುವಣಿಗೆಯನ್ನು ತಾಳದಾದ ಮೇಲೆ ಪಾಮರರ ಪಾಡೇನು ? ಕೆಳಗಿನ ವಚನದಲ್ಲಿ ಅಣ್ಣ ಬಸವಣ್ಣನವರು ಅಂತಃಕರಣ ವೃತ್ತಿಗಳನ್ನು ಪರಿಶುದ್ಧಗೊಳಿಸುವ ರೀತಿಯನ್ನು ವಿಶದಪಡಿಸಿದ್ದಾರೆ.

ಮೌನದಲುಂಬುದು ಆಚಾರವಲ್ಲ.

ಲಿಂಗಾರ್ಪಿತವ ಮಾಡಿದ ಬಳಿಕ

ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು.

ಕರಣವೃತ್ತಿಗಳಡಗುವವು

ಕೂಡಲಸಂಗನ ನೆನೆವುತ್ತಲುಂಡರೆ.

ಶಿವನಿತ್ತ ಪದಾರ್ಥಗಳನ್ನು ಶಿವರೂಪಿ ಗುರು-ಲಿಂಗ-ಜಂಗಮಕ್ಕೆ ಸಲ್ಲಿಸದೆ ಭೋಗಿಸಬಾರದು. ತ್ರಿವಿಧಕ್ಕರ್ಪಿಸಿ ಪ್ರಸಾದವನ್ನಾಗಿಸಿ ಶಿವಲಿಂಗವನ್ನು ಧ್ಯಾನಿಸುತ್ತ ಸ್ವೀಕರಿಸಿದರೆ ಕರಣವೃತ್ತಿಗಳು ಪರಿಪಾಕಗೊಳ್ಳುವವು. ಮಿಕ್ಕಪ್ರಸಾದದ ಲಾಭ ಸಿಕ್ಕದೇ ಹೋಗುವದಿಲ್ಲ. ಅವಶ್ಯವಾಗಿ ಆ ಪ್ರಸಾದ ಪ್ರಾಪ್ತಿಯ ಫಲ ಪ್ರಸನ್ನತೆಯನ್ನು ನೀಡುವದು. ಚಿರಶಾಂತಿಯು ಸಿಕ್ಕುವದು. ಪರಮ ನಿರಂಜನ ಗುರುವೆ ! ಅಂತಃಕರಣಗಳನ್ನು ಸಂತೃಪ್ತಗೊಳಿಸುವ ಪ್ರಸಾದ ಪರಿಯನ್ನು ತಿಳುಹಿ ಕಾಪಾಡು.

ʼʼಇಕ್ಕೇರಿ ಚೌಬೀದಿ’ಗೆ ಯೋಗರೂಢವಾದ ಇನ್ನೊಂದು ಅರ್ಥವನ್ನು ಗ್ರಹಿಸಬಹುದು. ಈಡಾ-ಪಿಂಗಳಾ ನಾಡಿಗಳ ದ್ವಾರವೇ ಇಕ್ಕೇರಿ. ನಾಭಿಮಂಡಲದಿಂದ ಹೊರಹೊರಟ ಇಕ್ಕೇರಿಯು ಭ್ರೂಮಧ್ಯದ ‘ಅಜ್ಞಾ ಚಕ್ರಕ್ಕೆ ಬಂದು ಸೇರುವದು. ಈಡಾ-ಪಿಂಗಳಾ (ಚಂದ್ರ-ಸೂರ್ಯ) ನಾಡಿರೂಪದ ಕಣ್ಣುಗಳೆರಡು ಕಿವಿಗಳೆರಡು ಭ್ರೂಮಧ್ಯದಲ್ಲಿ ಸೇರುತ್ತಿರಲು ಚೌಬೀದಿಯೆನಿಸುವದು. ಅಥವಾ ಎರಡೂ ನೇತ್ರಗಳು ಭ್ರೂಮಧ್ಯದಲ್ಲಿ ಸುಷುಮ್ಮೆಯಲ್ಲಿ ಬೆರೆದು ಬ್ರಹ್ಮರಂದ್ರಕ್ಕೇರುವ ತ್ರಿಕೂಟವೆಂತಲೂ ಕರೆಯುವರು. ಈ ವಿಚಾರದಲ್ಲಿ ಸರ್ಪಭೂಷಣ ಶಿವಯೋಗಿಗಳ ಯೋಗಪ್ರತಿ ಪಾದನಸ್ಥಲದ ಈ ಭಾವಗೀತೆ ಅರ್ಥಪೂರ್ಣವಾಗಿದೆ.

ಭೂಧಿಸೆನ್ನನು ಗುರುವೆ ! ನಿನ್ನಯ  ದಿವ್ಯ.

ಪಾದವನಂಬಿರುವೆ

ವೇದಾಂತದೊಳು ಗೋಪ್ಯವಾದ ತತ್ತ್ವವನೆ ಸಂ |

ಪಾದಿಸಿ ಮನದಿ ವಿ | ನೋದಿಸಿ ಸುಖಿಸೆಂದು        ||ಪ||

ತಲೆವಾಗಿ ಬೆಳೆದಿರುವ | ಪಂಕೇಜದ

ದಳದೆ ತಿರುಗುತಿರುವ

ಕಳಹಂಸ ಶಿಶುವಿನ | ಸುಳುಹನು ತಡೆದು ತ

ನಳಿನದ ಕರ್ಣಿಕೆ | ಯೊಳು ನಿಂತು ನಲಿಯೆಂದು       ||೧||

 ಆದಿಯಂತ್ಯವ ಭೇದಿಸಿ | ನಿರ್ಗುಣವಾದ

ನಾದಿಬ್ರಹ್ಮವ ಸಾಧಿಸಿ

ಹಾದಿನಾಲ್ಕರ ನಡು | ವೇದಿಕೆಯೊಳು ಕುಳಿತು

ಮೋದದಿ ದಶವಿಧ | ನಾದವ ಕೇಳೆಂದು                 ||೨||

ಮೂಲಕುಂಡಲಿಯನೆತ್ತಿ | ಅಗ್ನಿಯದ

ಮೇಲಣ ನೆಲೆಗೆ ಹತ್ತಿ

ಸಾಲಿಟ್ಟು ಸುರಿತಿರ್ಪ | ಹಾಲನೆ ಸವಿದುಂಡು

ನೀಲಜ್ಯೋತಿಯ ದಿವ್ಯ | ಜ್ವಾಲೆಯೊಳ್ ಬೆಳಗೆಂದು || ೩ ||

ಸರ್ಪಭೂಷಣರು ತಾವು ಅನುಭವಿಸಿ ಕಂಡುಂಡ ಸವಿಯನ್ನು ಶ್ರೀ ಗುರುವಿಗೆ ಬೋಧಿಸೆಂದು ಬೇಡಿಕೊಂಡಿದ್ದಾರೆ. ಯೋಗವಿಚಾರ ಬಹುಗೋಪ್ಯವಾದುದು. ರಹಸ್ಯವನ್ನು ಭೇದಿಸುವ ಅಪಾರವಾದ ಧೀಶಕ್ತಿಬೇಕು. ಮುಂದೆ ಪ್ರತಿಪಾದಿಸಲ್ಪಡುವ (೮೮ನೇಯ ತ್ರಿಪದಿಯಲ್ಲಿ) ಹೃದಯ ಮಧ್ಯದ ಅನಾಹತಚಕ್ರದಲ್ಲಿ ದ್ವಾದಶದಳದ ಕಮಲವುಂಟು. ಆದರೆ ಅಷ್ಟದಳ ಕಮಲವು ಸ್ಪಷ್ಟವಾಗಿದ್ದು ನಾಲ್ಕು ದಳಗಳು ಗೋಪ್ಯವಾಗಿವೆ. ಅಂತೆಯೇ ಹೃದಯದಲ್ಲಿ ಅಷ್ಟದಳದ ಕಮಲವೆಂಬುದಾಗಿಯೇ ವೇದಾಂತಗಳು ಪ್ರತಿಪಾದಿಸಿದ್ದುಂಟು. ಅಷ್ಟದಳ ಕಮಲವು ಹೃದಯದಲ್ಲಿ ಬಾಳೆಯ ಹೂವಿನಂತೆ ತಲೆಕೆಳಗೆ ಮಾಡಿಕೊಂಡು ಬೆಳೆದಿದೆ. ಈ ಅಷ್ಟದಳಗತ ಜೀವಹಂಸನು ಆಜ್ಞಾನಿಯಾಗಿ ದಳಕ್ರಮಾನುಸಾರವಾದ ಭಿನ್ನ ಭಿನ್ನಸ್ಥಿತಿಯನ್ನು ಹೊಂದಿ ತಿರುಗುತ್ತಿರುವನು. ಆ ತಿರುಗಾಟವನ್ನು ತಡೆದು ಆ ಕಮಲಮಧ್ಯದ ನಾಲ್ಕು ದಳಗಳಲ್ಲಿ ನಿಶ್ಚಲವಾಗಿರುವ ಪರಮಾತ್ಮನನ್ನು ಅರಿತು ಸುಖಿಸಬೇಕು. ಇದಕ್ಕೆ ಸಾಧನವಾದ ಷಟ್‌ಚಕ್ರಗಳನ್ನು ಅರಿಯಬೇಕು. ಆಧಾರದಿಂದ ಅಗ್ನಿಯದವರೆಗೂ ಭೇದಿಸಿ ನಡೆದು ನಿರ್ಗುಣವೂ ಅನಾದಿಯೂ ಆದ ಬ್ರಹ್ಮತತ್ತ್ವವನ್ನು ಸಾಧಿಸಿ ಹದಿನಾಲ್ಕರ ನಡುವಿನ ಅಗ್ನಿಯ ಚಕ್ರದ ಚತುಃಪೀಠದಲ್ಲಿ ಕುಳಿತು ಸಂಮೋದದಿಂದ ದಶವಿಧನಾದವ ಕೇಳಬೇಕು. ಮತ್ತು ನಾಭೀಸ್ಥಾನದಲ್ಲಿರುವ ಮೂಲಕುಂಡಲಿನೀ ಶಕ್ತಿಯನ್ನು ಸ್ಪುಟಗೊಳಿಸಿ ಅಗ್ನಿಯ ಚಕ್ರದಮೇಲಿರುವ ತ್ರಿಕೋಣಸ್ಥಾನದವರೆಗೂ ಹೋಗಿ, ಸುಷುಮ್ಮನಾಡಿಯೊಳಗಿಂದ ಹೊರಬರುವ ಚಿದಮೃತವನ್ನು ಪಾನಮಾಡಿ  ನೀಲಜ್ಯೋತಿಯ ದಿವ್ಯಪ್ರಕಾಶದಲ್ಲಿ ಮಹಾಬೆಳಕನ್ನು ಸಂಪಾದಿಸಬೇಕು. ಆದರೆ ಈ ಚತುಷ್ಪಥದಲ್ಲಿ ಸಿಕ್ಕುವ ದಿವ್ಯ ಪ್ರಕಾಶದ ಲಾಭ ಎಲ್ಲ ಯೋಗಿಗಳಿಗೆ ಲಭ್ಯವಾಗುವದಿಲ್ಲ. ಅಂತೆಯೇ ಶಿವಕವಿಗಳು “ಮಿಕ್ಕಲಾಭವದೆನಗೆ ಸಿಕ್ಕದೆ ಗುರುವೆ” ಎಂದು ಶ್ರೀ ಗುರುವಿನಲ್ಲಿ ಪ್ರಾರ್ಥಿಸಿದ್ದಾರೆ. ಕೇವಲ ಚೌಬೀದಿಗೆ ಮುಟ್ಟಿದರೂ ಆಗದು.  ಅಲ್ಲಿಂದ ಬ್ರಹ್ಮರಂದ್ರಕ್ಕೇರಬೇಕು ಪುನಃ ಬ್ರಹ್ಮರಂದ್ರದಿಂದ ಇಳಿಯುವದು ಕಠಿಣ.ಅದಕ್ಕಾಗಿ ಇಂಥ ಲಾಭದಾಯಕವಲ್ಲದ ಕೃತಿಗಿಂತ ಶ್ರೀ ಗುರು ಕೃಪೆ ಪಡೆದು ಬ್ರಹ್ಮರಂಧ್ರದ ಮಹಾಚೈತನ್ಯವೆನಿಸಿದ ಇಷ್ಟಲಿಂಗವನ್ನು ಪಡೆದು ದೃಷ್ಟಿಯೋಗದಿಂದ ನಿರಂತರವಾದ ದಿವ್ಯಪ್ರಕಾಶವನ್ನು ಹಾಗೂ ತನ್ಮೂಲಕ ನಿತ್ಯಾನಂದವನ್ನು ಪಡೆಯಬೇಕು.

ಮಣ್ಣ ಮಟ್ಟಿಯ ಮೇಲೆ | ಕಣ್ಣ ಕುಪ್ಪೆಯ ದುರ್ಗ

ಬಣ್ಣ ಬಹಿರೂಪು – ಸಣ್ಣ ಬಾಗಿಲಿಗೆ ಮೂ

ವಣ್ಣವೈ ಗುರುವೆ ಕೃಪೆಯಾಗು    ||೨||

ಈ ತ್ರಿಪದಿಯಲ್ಲಿ ಗುಣತ್ರಯದ ಪ್ರತಿಪಾದನೆ ಬಂದಿದೆ. ಪಂಚಮಹಾ ಭೂತಗಳ ಪರಿಚಯ ಮಾಡಿಕೊಡುತ್ತ, ಅವುಗಳ ಪಂಚೀಕರಣವನ್ನು ನಿರೂಪಿಸಲಾಯಿತು. ಅದರ ಪರಿಪಾಕತೆಯಿಂದಲೇ ತನು ಜನಿಸಿ ಅನೇಕ ವಿಕಾರಗಳಿಗೆ ಬಲಿಯಾಗುವ ಬಗೆಯನ್ನು ಬಿತ್ತರಿಸಲಾಯಿತು. ದೇಹವಿಕಾರಗೊಳ್ಳಲು ಕಾರಣಗಳಾದ ಪಂಚೇಂದ್ರಿಯಗಳಿಗೆ ಗೋಚರಿಸುವ ಪಂಚ ವಿಷಯಗಳನ್ನು ಪ್ರಸ್ತಾಪಿಸಿ ನಂತರ ಅಂತಃಕರಣ ಚತುಷ್ಟಯವನ್ನು ಎತ್ತಿ ತೋರಿಸಲಾಯಿತು. ಈ ದೇಹ ಇವುಗಳಲ್ಲದೆ ಗುಣತ್ರಯ ವಿಭಾಗದಿಂದಲೂ ವಿಭಿನ್ನವಿಕಾರಗಳನ್ನು ಹೊಂದುತ್ತದೆಂಬುದನ್ನು ಶಿವಕವಿಯು ರಚನಾತ್ಮಕವಾಗಿ ಬಣ್ಣಿಸಿದ್ದಾನೆ.

‘ಕಣ್ಣ ಕುಪ್ಪೆ’ ಯೆಂಬುದೊಂದು ಮಲೆನಾಡಿನ ಊರು. ಆ ಮಲೆನಾಡಿನಲ್ಲಿ ಮಣ್ಣಿನ ಪರ್ವತಗಳೇ ಬಹಳ. ಈ ಕಣ್ಣಕುಪ್ಪೆಯ ದಿಬ್ಬ (ಪರ್ವತ)ದ ಮೇಲೆ ಕೋಟೆಯೊಂದಿದೆ. ಇದಕ್ಕೆ ಸಣ್ಣ ಸಣ್ಣ ಎರಡು ಬಾಗಿಲುಗಳಿವೆ. ಅವುಗಳ ಹೊರ ನೋಟ ಬಹು ಬಣ್ಣಗಳಿಂದ ರಂಜಿತವಾಗಿದೆ. ಆದರೆ ಬಾಗಿಲುಗಳಿಗೆ ಬಳೆದಿರುವ ಬಣ್ಣಗಳು ಮೂರೇ ಮೂರು. ಈ ದುರ್ಗ ಮಲೆನಾಡಿನಲ್ಲಿ  ನೆಲೆಸಿರುವದರಿಂದ ಸೃಷ್ಟಿಯ ಸೌಂದರ್ಯಕ್ಕೆ ಆಶ್ರಯವಾಗಿದೆ. ಸುತ್ತಮುತ್ತಲು ಮರಗಳಿರುವದರಿಂದ ಎಲೆಗಳ ಹಸಿರುಬಣ್ಣ ಅಲ್ಲದೆ ಹೂವುಗಳ ವಿವಿಧ ಬಣ್ಣಗಳು ಕಾಣುವದು ಸ್ವಾಭಾವಿಕ. ಬಾಗಿಲುಗಳ ಸಮೀಪಕ್ಕೆ ಹೋಗಿ ನೋಡಿದರೆ ಮೂರು ಬಣ್ಣಗಳು ಎದ್ದು ಕಾಣುತ್ತವೆ. ಇಲ್ಲಿ ಇದೊಂದು ಕೇವಲ ರೂಪಕ. ವಾಚ್ಯಾರ್ಥದ ಪರಿಚಾಯಕ.

ಈ ದೇಹವು ಪೃಥ್ವಿತತ್ತ್ವಪ್ರಧಾನವಾಗಿರುವದರಿಂದ ಮಣ್ಣುಮಯವಾಗಿದೆ ಕಾರಣ ಅದೇ ಮಣ್ಣು ಮಟ್ಟೆ. ಈ ಹಿಂದೆ ವಿವರಿಸಿದಂತೆ ಶರೀರದಲ್ಲಿ ಮೂಗು ಪೃಥ್ವಿ ತತ್ತ್ವಾಧಿಕ್ಯತೆಯಿಂದ ಉತ್ಪನ್ನವಾದುದು. ಈ ಮಣ್ಣು ಮಟ್ಟೆಯಾದ ಮೂಗು, ಅಲ್ಲದೆ ದಿಡದ ಮೇಲ್ಬಾಗದಲ್ಲಿರುವ ತಲೆಬುರುಡೆಯೇ ಭದ್ರಕೋಟೆಯಾಗಿದೆ. ಈ ಕೋಟೆಯಲ್ಲಿ ಸಣ್ಣ ಸಣ್ಣ ಬಾಗಿಲುಗಳೆಂದರೆ ಎರಡು ಕಣ್ಣು ಗುಡ್ಡಿಗಳು. ಇವುಗಳಲ್ಲಿ ಅನೇಕ ಬಣ್ಣ ಗೋಚರಿಸಿದಂತಾದರೂ ಸೂಕ್ಷ್ಮವಾಗಿ ಪರಿಶೀಲಿಸಿದರೆ ನಿಜವಾಗಿ ತೋರುವ ಬಣ್ಣಗಳು ಮೂರಾಗಿವೆ. ೧) ಬಿಳುಪು ೨) ಕೆಂಪು ೩) ಕಪ್ಪು . ಈ ಮೂರು ಬಣ್ಣಗಳು ಪ್ರಕೃತಿ ತತ್ತ್ವದ ತ್ರಿಗುಣಗಳಿಂದಲೇ ಬಂದಿವೆ. ಸತ್ತ್ವ ರಜ, ತಮಗಳೇ   ತ್ರಿಗುಣಗಳು, ಭಗವದ್ಗೀತೆಯಲ್ಲಿ –

ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿ ಸಂಭವಾಃ |

ಸತ್ಚ, ರಜ, ತಮೋಗುಣಗಳು ಪ್ರಕೃತಿಯಿಂದ ಸಂಜನಿಸದವುಗಳೆಂದು ಪ್ರತಿಪಾದಿತ ವಾಗಿವೆ. ಸಾಂಖ್ಯತತ್ತ್ವಾನುಯಾಯಿಗಳೂ ತ್ರಿಗುಣಾತ್ಮಕ ಪ್ರಕೃತಿಯಿಂದಲೇ ಜಗದುತ್ಪತ್ತಿ ಯನ್ನು ಮನ್ನಿಸಿದ್ದಾರೆ.

ಈ ತ್ರಿಗುಣಾತ್ಮಕ ತತ್ತ್ವವು ಪ್ರತಿಯೊಂದು ಶರೀರದಲ್ಲಿ ವ್ಯಕ್ತವಾಗಿ ತೋರುತ್ತಿದೆ. ತ್ರಿಗುಣಗಳ ಪ್ರತ್ಯಕ್ಷ ಪರಿಚಯವು ಕಣ್ಣಿನಲ್ಲಿ ಗೋಚರಿಸುತ್ತದೆ. ಸಾತ್ವಿಕ ವ್ಯಕ್ತಿಯ ಕಣ್ಣುಗಳು ತೇಜಃಪುಂಜವಾಗಿ ಹೆಚ್ಚು (ಬಿಳುಪು) ಶುಭ್ರವಾಗಿರುತ್ತವೆ. ರಾಜಸಿಯ ನೇತ್ರಗಳು ಕೆಂಪಾಗಿರುತ್ತವೆ. ತಾಮಸಿಯ ಕಂಗಳು ಕಪ್ಪಾಗಿರುತ್ತವೆ. ಕಣ್ಣುಗಳ ರೂಪವೇ ತ್ರಿಗುಣಗಳ ಪ್ರತ್ಯಕ್ಷ ಸ್ವರೂಪ. ಈ ತ್ರಿಗುಣಗಳ ಗುಣ ಧರ್ಮವು ಬಹಳ ಭಿನ್ನ ಭಿನ್ನವಾಗಿದೆ. ಇದನ್ನು ಚನ್ನಬಸವಣ್ಣನವರು ‘ಕರಣ ಹಸಿಗೆ’ಯಲ್ಲಿ ಕೆಳಗಿನಂತೆ ವಿವರಿಸಿದ್ದಾರೆ

ಸತ್ಯಂ ಜ್ಞಾನಂ ತಪೋ ಮೌನಂ

ತೋಷಶ್ಯಾಂತಿರ್ವಿವೇಕಿತಾ |

ಉತ್ಸಾಹೋ ನಿಶ್ಚಯೋ ಧೈರ್ಯಂ

ಸಾತ್ವಿಕಸ್ಯ ಚ ಲಕ್ಷಣಮ್ ||ʼʼ

ಸತ್ಯ, ಜ್ಞಾನ, ತಪ, ಮೌನ, ಹರುಷ, ಶಮೆ, ವಿವೇಕ, ಸಾಹಸ, ನಿಶ್ಚಯ, ಧೈರ್ಯ, ಈ ಹತ್ತು ಗುಣಗಳುಳ್ಳವನೇ ಸಾತ್ವಿಕ ವ್ಯಕ್ತಿಯೆನಿಸುವನು.

ಗರ್ವಃ ಕ್ರೋಧೋಽತ್ಯಹಂಕಾರಃ

ಸತಿಸಂಗಃ ಪ್ರಲಾಪನಂ |

ಅಪ್ರಿಯಂ ದಂಭಮಾತ್ಸರ್ಯೌ

ರಾಜಸಸ್ಯ ಚ ಲಕ್ಷಣಮ್ ||”

“ಗರ್ವ, ಕ್ರೋಧ, ಅತಿಯಾದ ಅಹಂಕಾರ, ವಿಷಯಸಂಗ, ವಾದ, ಅಪ್ರಿಯ ವಚನ, ದಂಭ, ಮತ್ಸರ ಈ ಎಂಟು ಗುಣಗಳು ವ್ಯಕ್ತವಾಗಿ ತೋರುವ ವ್ಯಕ್ತಿಯೇ ರಾಜಸಿಯೆನಿಸುವನು.

ಅಜ್ಞಾನ ಮೋಹ ನಿದ್ರಾಶ್ಚ

ಚಾಪಲ್ಯಂ ಬುದ್ಧಿಹೀನತಾ |

ಪಾಪಿತ್ವಂ ಪರಬಾಧಿತ್ವಂ

ತಾಮಸಸ್ಯಚ ಲಕ್ಷಣಮ್ ||ʼʼ

.

ಅಜ್ಞಾನ, ಮೋಹ, ನಿದ್ರೆ, ಚಾಪಲ್ಯ, ಹೀನವೃತ್ತಿ  ಪಾಪಿಷ್ಠತನ, ಪರನಿಂದೆ, ಪರಹಿಂಸೆ ಈ ಎಂಟು ತಾಮಸ ವ್ಯಕ್ತಿಯ ಗುಣಗಳು. ಈ ಗುಣಗಳಿಂದ ತಾಮಸಿತನವು ಪ್ರತ್ಯಕ್ಷವಾಗುತ್ತದೆ  

ಮನೋಮಂದಿರದಲ್ಲಿ ಮುಹೂರ್ತಗೊಂಡ ಅಹಂಕಾರ ವ್ಯಕ್ತಿಯು ಈ ಮೂರು ಗುಣಗಳನ್ನಾಶ್ರಯಿಸಿ ತನ್ನ ಇರುವಿಕೆಯನ್ನು ತೋರಿಸುತ್ತದೆ. ಸಾತ್ವಿಕನಿಗೆ ಸಾತ್ವಿಕಾಹಂಕಾರ ಮೈದೋರಿದರೆ ರಾಜಸನಿಗೆ ರಾಜಸಮಯವಾಗುತ್ತದೆ, ತಾಮಸಿಗೆ ಅಂಧಃಕಾರಮಯವಾಗಿರುತ್ತದೆ. ಸಾಧು ಸಜ್ಜನರು ಸಾತ್ವಿಕತೆಯ ಸಂಕೇತವಾದರೆ. ರಾಜಸನು ರಜೋಗುಣದ ದ್ಯೋತಕವಾಗಿದ್ದಾನೆ. ಅಜ್ಞನಾದ ಕೂಡ ಮಾನವನು  ತಾಮಸ ಗುಣದ  ಪ್ರತೀಕನೆನಿಸುತ್ತಾನೆ

ಸಂತಜ್ಞಾನೇಶ್ವರರು ಭಗವದ್ಗೀತೆಯ ೧೪ನೆಯ ಗುಣತ್ರಯ ವಿಭಾಗ ಯೋಗಾಧ್ಯಾಯದ ವ್ಯಾಖ್ಯಾನದಲ್ಲಿ ತ್ರಿಗುಣಗಳ ಯಥಾರ್ಥ ಸ್ವರೂಪವನ್ನು ಸುಂದರವಾಗಿ ವರ್ಣಿಸಿದ್ದಾರೆ – “ಅರಣ್ಯದಲ್ಲಿ ಬೇಡನು ಬಲೆಹಾಕಿ ಬೇಟೆಯ ಪ್ರಾಣಿಯನ್ನು ಹಿಡಿಯುವಂತೆಯೂ ಈ ಸತ್ವಗುಣವು ಜೀವನವನ್ನು ಸುಖ ಹಾಗೂ ಜ್ಞಾನ ಇವುಗಳ ಆಶೆಹಚ್ಚಿ ಹಿಡಿದೆಳೆದು ಬಂಧಿಸುವದು. ಬಳಿಕ ಜ್ಞಾನದ ಹೆಮ್ಮೆ ಪಡುವ ಜೀವನ ‘ನನ್ನಂಥ ಜ್ಞಾನಿಯು ಯಾವನೂ ಇಲ್ಲ ಎಂಬ ಪ್ರತಿಷ್ಠೆ ಮೆರೆಯಿಸುತ್ತ ಇರುವಾಗಲೇ ತನ್ನ ವಶದಲ್ಲಿದ್ದ ಆತ್ಮ ಸುಖವನ್ನು ಕಳೆದುಕೊಳ್ಳುವನು……. ಮತ್ತು ಆ ಸತ್ತ್ವ ಜೀವನುʼʼ ನನ್ನಂಥ ಭಾಗ್ಯವಾನರಿಲ್ಲ. ನನ್ನ ಹಾಗೆ ಸುಖಿಗಳಿಲ್ಲ.” ಮುಂತಾದ ವಿಕಾರಗಳ ಅಭಿಮಾನದಿಂದ ಹಿರಿಹಿರಿ ಹಿಗ್ಗುವನು. ಇಷ್ಟೇ ಅಲ್ಲ ನನ್ನಂಥ ವಿದ್ವಾಂಸನಾವನೂ ಇಲ್ಲೆಂದು ಹೇಳುವ ಅಭಿಮಾನವೆಂಬ ಭೂತವು ಅವನ ಮೈಯಲ್ಲಿ ಸೇರುವದು. ನಾನು ಸ್ವಯಂಜ್ಞಾನ  ಸ್ವರೂಪನಿರುವೆನೆಂಬುದನ್ನು ಮರೆತುದಕ್ಕೆ ಆ ಸತ್ವಜೀವನಿಗೆ ಏನೊಂದು ವಿಷಾದವೆನಿಸುವದಿಲ್ಲ. ಆದರೆ ಅನ್ಯ ವಿಷಯ ಜ್ಞಾನದಿಂದ ಮುಗಿಲೆತ್ತರವಾಗಿ ಉಬ್ಬುವನು.”

“ಈ ಗುಣವು ಜೀವನನ್ನು ಯಾವಾಗಲೂ ರಂಜನೆಗೊಳಿಸುತ್ತಿರುವದರಿಂದಲೇ ಇದಕ್ಕೆ ರಜೋಗುಣವೆಂಬ ಹೆಸರು ಬಂದಿದೆ. ಇದು ಕಾಮಾದಿ ವಿಕಾರಗಳ ಮೂರ್ತಿಯಾಗಿರುವದು. ಜೀವನದಲ್ಲಿ ಈ ಗುಣಾಂಶ ಸೇರಿತೆಂದರೆ ಕಾಮಾದಿಗಳು ತಮಗೆ ತಾನೇ ಬಂದು ಕೂಡಿಕೊಳ್ಳುವವು. ಆದುದರಿಂದ ಆಗ ರಜೋಗುಣಿಯ ಅನಿಯಂತ್ರಿತ ಮನೋರಾಜ್ಯ ಸುರುವಾಗುವುದು…. ರಜೋಗುಣಿಯ ಹವಣಿಕೆ ಹೆಚ್ಚಾಗಿ, ದುಃಖದಾಯಕ ಸಂಗತಿಗಳೂ ಕೂಡ ಅದಕ್ಕೆ ರುಚಿಯೆನ್ನಿಸುವವು. ಈ ರಜೋಗುಣ ಜೀವನಿಗೆ ಮೇರುಗಿರಿಯಷ್ಟು ಲಾಭವಾದರೂ ಇನ್ನೂ ಹೆಚ್ಚು ಲಾಭದ ಆಸೆ ಪಡುತ್ತಿರುವದು. ಹಾಗೂ ಆ ಜೀವವು ಕವಡೀ ಕಿಮ್ಮತ್ತಿನ ಲಾಭಕ್ಕಾಗಿ ಹಂಗು ದೊರೆದು  ಹೋರಾಡುವದು……. ಮತ್ತು ದೇಹಧಾರಿಯ ಶರೀರವನ್ನು ರಜೋಗುಣವೆಂಬ ದಾರುಣವಾದ ಬಂಧನದಿಂದ ಬಿಗಿಯುವದುʼʼ.

ʼʼಈ ಗುಣದ ಪರದೆಯಿಂದ ದೃಷ್ಟಿಯು ಮಂದವಾಗುವದು. ಈ ಗುಣವು ಮೋಹರಜನೀರೂಪ ಕರಿಯ ಮೋಡದಂತೆ ಇರುವದು. ಈ ಗುಣಕ್ಕೆ ಅಜ್ಞಾನವು ಎಲ್ಲ ಬಗೆಯಿಂದ ಸಹಾಯಕಾರಿಯಾಗಿರುವದು. ಅದರಿಂದಲೇ ಜಗತ್ತು ಮೋಹಗೊಂಡು ಕುಣಿಯ ಹತ್ತುವದು. ಈ ತಮೋಗುಣವು ಅವಿಚಾರದ ಮಹಾಮಂತ್ರವೂ, ಮೂಢತೆಯೆಂಬ ಮದಿರಾಪಾತ್ರೆಯೂ, ಇಲ್ಲವೆ ಜೀವನವನ್ನು ತುಂಡರಿಸುವ ಮೂರ್ತಿವಂತ ಮೋಹನಾಸ್ತ್ರವೂ ಆಗಿರುವದು. ಅರ್ಜುನಾ ! ಇದೇ ತಮೋಗುಣದ ಲಕ್ಷಣವುʼʼ.

ಈ ಮಾತುಗಳಿಂದ ತ್ರಿಗುಣಗಳ ಸ್ವರೂಪ ಸ್ಪಷ್ಟವಾಗದೇ ಇರದು. ತ್ರಿಗುಣಗಳ ಸ್ವರೂಪವನ್ನು ಪ್ರತ್ಯೇಕವಾಗಿ ವಿವಾದಿಸಿದ್ದಾರೆ. ಆಯಾ ಗುಣಗಳ ಪರಿಸರದಲ್ಲಿ ಅದೇ ಗುಣದ ಪ್ರಭಾವ ಪ್ರತ್ಯಕ್ಷವಾಗಿ ಕಂಡುಬರುತ್ತದೆ. ಹಿಂದಿನ ಋಷಿಗಳ ಆಶ್ರಮದಲ್ಲಿ ಸಾತ್ವಿಕಗುಣದ ಪ್ರಭಾವದಿಂದ ಸ್ವಭಾವತಃ ವೈರವುಳ್ಳ ಪ್ರಾಣಿಗಳೂ ಸಹ ಪರಸ್ಪರ ಮಿತ್ರರಾಗಿ ಬಾಳಿದ್ದು ಎದ್ದು ಕಾಣುತ್ತದೆ. ಇದಕ್ಕೆ ವಶಿಷ್ಠರ, ಕಣ್ವ ಮುನಿಗಳ, ಕಾದಂಬರಿಯ ಜಾಬಾಲಿ ಮುನಿಪುಂಗವರ ಆಶ್ರಮದ ಉದಾಹರಣೆಗಳು ಕಾವ್ಯಗಳಲ್ಲಿ ಜೀವಂತವಾಗಿ ಉಳಿದಿವೆ. ಹಿಂದಿನ ಮಾತೇಕೆ ? ಪೂಜ್ಯರಾದ ಈ ಕೃತಿಕರ್ತರ ಗುರುವರರೆನಿಸಿದ ಲಿಂಗನಾಯಕನ ಹಳ್ಳಿ ಚನ್ನವೀರ ಮಹಾಶಿವಯೋಗಿಗಳ, ಅಥಣಿ, ಬದರಿ, ಹಾಗೂ ಮುಂಡರಗಿ ಮಹಾಸ್ವಾಮಿಗಳವರ ದಿವ್ಯ ಚರಿತ್ರೆಯಲ್ಲಿಯೂ ಕ್ರೂರ ಪ್ರಾಣಿಗಳು ಸೇವೆ ಸಲ್ಲಿಸಿದ ದೃಷ್ಟಾಂತಗಳು ದೃಗ್ಗೋಚರವಾಗುತ್ತವೆ.

ಇನ್ನು ಶೃಂಗಾರಿಕ ವ್ಯಕ್ತಿಗಳ ಪರಿಸರದಲ್ಲಿ ಕಾಮವಿಕಾರದ ದೃಷ್ಟಾಂತಕ್ಕೆ ಕೊರತೆಯಿಲ್ಲ. ನಿತ್ಯ ಜೀವನದಲ್ಲಿ ಬೇಕಾದಷ್ಟು ಪ್ರಸಂಗಗಳು ಕಾಣಬರುತ್ತವೆ. ತಾಮಸಗುಣದ ಪರಿಸರವಂತೂ ಅಂಧಕಾರದಲ್ಲೇ ಮುಳುಗಿಸುತ್ತದೆ. ಮಹಾಕವಿ ಚಾಮರಸನು ʼ’ಪ್ರಭುಲಿಂಗ ಲೀಲೆ”ಯಲ್ಲಿ ಮಾಯಾದೇವಿಯು ಪ್ರಾದುರ್ಭಾವ ವಾಗುತ್ತಲೇ ಮುನಿಶ್ರೇಷ್ಠರ ಧೀರಮನವೂ ಚಂಚಲವಾಯಿತೆಂಬ ವಿಚಾರ  ತಾಮಸಗುಣದ ಪರಾಕಾಷ್ಠತೆಯನ್ನು ತೋರಿಸುತ್ತದೆ. ಸಾತ್ವಿಕರಿಗೂ ಒಮ್ಮೊಮ್ಮೆ ಸಾತ್ವಿಕಾಹಂಕಾರದ ಪ್ರಸಂಗಗಳು ತೋರಿಬರುತ್ತವೆ. ಅನೇಕ ಮಹಾನುಭಾವರ ಜೀವನದಲ್ಲಿ ಇವನ್ನು ನೋಡಬಹುದು. ಜಗದಣ್ಣ, ಜಗಜ್ಯೋತಿ, ಭಕ್ತಿಕಿಂಕರರೆನಿಸಿದ ಬಸವಣ್ಣನವರಿಗೂ ಅನೇಕ ಸಲ ಸಾತ್ವಿಕಾಹಂಕಾರದ ಸುಳುಹು ಹೊರಸೂಸಿದೆ.

ತ್ರಿಗುಣಗಳ ಬಣ್ಣ ಅವರವರ ಮುಖಮಂಡಲದಿಂದಲೇ ಪ್ರಕಾಶಗೊಳ್ಳುತ್ತದೆ. ಸಾತ್ವಿಕನ ನೇತ್ರಗಳು ಶುಭ್ರವೂ ತೇಜಃಪುಂಜವಾಗಿದ್ದರೆ, ರಜೋಗುಣಿಯ ಕಣ್ಣಿನಲ್ಲಿ ಕೆಂಡದಂತೆ ಕೆಂಪು ಛಾಯೆ ಸುಳಿಯುತ್ತಿರುತ್ತದೆ. ತಾಮಸಿಯ ಕಂಗಳಂತೂ  ಕರಿ ಮೋಡದಂತೆ ಮುಸುಗಿರುತ್ತವೆ. ಅವನು ನೋಡಲೂ ಭಯಾನಕವಾಗಿಯೇ ಕಾಣುವನು. ಈ ರೀತಿಯಾಗಿ ಲೌಕಿಕರ ಬಾಳಿನಲ್ಲಿ ತ್ರಿಗುಣಗಳ ಏರಿಳಿತ ವ್ಯಕ್ತವಾಗುತ್ತದೆ. ಇಂಥ ಮೂವಣ್ಣಗಳೆನಿಸಿದ ಸತ್ತ್ವ, ರಜ-ತಮೋಗುಣಗಳ ಬಾಧೆಯನ್ನು ಸದ್ಗುರುವಿನ ಕೃಪೆಯಿಂದ ಸದ್ಬೊಧೆಯಿಂದ ಹಾಗೂ ಸದಾಚಾರದಿಂದ ನಿವಾರಿಸಿಕೊಳ್ಳಬಹುದು. ಈ ಎಲ್ಲ ತನುಬಾಧೆಗಳನ್ನು, ಇಂದ್ರಿಯ ಬಾಧೆಗಳನ್ನು ಸಹಿಸಲಾರದ ಜೀವನು ತತ್ತರಿಸಿ ಹೋಗುವನು. ಸಂಸಾರದ ಬೇಗೆಯಲ್ಲಿ ಬಳಲಿ ಬೆಂದು ನೊಂದು ಸದ್ಗುರುವನ್ನು ಶರಣಾಗತನಾಗಬೇಕೆಂಬುವ ಉಪಾಯ ಹೊಳೆಯದೆ ಇರದು.

ಶಿಲೆಯ ತೆಪ್ಪವನೇರಿ | ಜಲವ ದಾಂಟುವೆನೆಂಬ

ಬಲು ಮೂಢತನವ – ತೊಲಗಿಸುತ ನೀನೆನ್ನ

ಸಲಹು ಶ್ರೀ ಗುರುವೆ ಕೃಪೆಯಾಗು.       ||೭೩ ||

ವೀರಶೈವ ಷಟ್‌ಸ್ಥಲ (ಶಿವಾದ್ವೈತ) ಸಿದ್ಧಾಂತದಲ್ಲಿ ನೂರೊಂದು ಸ್ಥಲಗಳನ್ನು ಪ್ರತಿಪಾದಿಸಿದ್ದಾರೆ. ಇದಕ್ಕೆ ‘ಏಕೋತ್ತರ ಶತಸ್ಥಲ” ಎಂಬುದಾಗಿಯೂ ಹೆಸರಿದೆ. ಕಲ್ಲುಮಠದ ಪ್ರಭುದೇವರು ವಿರಚಿತ ‘ಲಿಂಗಲೀಲಾ ವಿಲಾಸ ಚಾರಿತ್ರ”ದಲ್ಲಿ ಒಟ್ಟಿಗೆ ಹದಿನಾರು ಸ್ಥಲಗಳನ್ನು ವಿವರಿಸಿ ಅವುಗಳಲ್ಲೇ ನೂರೊಂದು ಸ್ಥಲದ ವಿಷಯವನ್ನು ಕ್ರೋಢೀಕರಿಸಿರುವಂತೆ ಬಸವಲಿಂಗ ಶರಣರು ಈ ಗುರುಕರುಣ ತ್ರಿವಿಧಿಯ ಸ್ತೋತ್ರ ತ್ರಿಪದಿಯಲ್ಲಿಯೇ ಅಷ್ಟಾವರಣವನ್ನು ಪ್ರಧಾನ ವಿಷಯವನ್ನಾಗಿಟ್ಟುಕೊಂಡು ಇದರಲ್ಲಿಯೇ ಸಕಲ ತತ್ತ್ವದ ತಿರುಳನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ.

ಪ್ರಾರಂಭದಲ್ಲಿ ಶ್ರೀ ಗುರುವಿನಲ್ಲಿ ಪ್ರಾರ್ಥನಾ ರೂಪವಾದ ಆದಿಮಂಗಲ ಗೈಯುತ್ತ ʼʼನ ಗುರೋರಧಿಕಂ, ನ ಗುರೋರಧಿಕಂ ಶೃತಿ ಶಾಸನತಃ ʼʼಎಂಬ ಕೃತಿ ವಚನವನ್ನು “ನಗುರೋರಧಿಕವೆಂದು‘ ಎಂಬ ತ್ರಿಪದಿಯಲ್ಲಿ ಪ್ರತ್ಯಕ್ಷ ಶಿವನಾದ ಗುರುವಿಗಿಂತ ಅಧಿಕವಿಲ್ಲ. ಶ್ರೀ ಗುರುವೆನಿಸಿದ ಪರಮ ನಿರಂಜನ ಗುರುವರನೇ ಪ್ರಧಾನ ಪುರುಷನೆಂದುʼʼ ಪಿಂಡಸ್ಥಲ’ʼದ ನಿರೂಪಣೆ ಮಾಡಿದ್ದಾನೆ. ಮುಂದೆ

ನರಜೀವಿಗಳಿಗೋರ್ವ | ಹರನೆ ಕಾರಣಕರ್ತ

ಶರಣ ಸಂತತಿಗೆ – ಗುರುವೆ ನೀ ಕರ್ತನೆಂದು”

 ಶರಣ ಸಂತತಿಯ ಕಾರಣದ ನಿರೂಪಣೆಯ ಮೂಲಕ ʼʼಪಿಂಡಜ್ಞಾ ʼʼನವನ್ನು ತೋರಿಸಿ ಕೊಡುತ್ತಾನೆ. ಮತ್ತು ಗುರುಕರುಣೆಯ ಅವಶ್ಯಕತೆ ಹಾಗೂ ಗುರುಕರ್ತವ್ಯದ ಮರ್ಮವನ್ನು ತಿಳಿಸಿದ್ದಾನೆ. ಸಿದ್ಧಾಂತ ಶಿಖಾಮಣಿಯ

ಜಾತಸ್ಯಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯಚ ʼʼ  ॥ ೫.೫೯

“ಹುಟ್ಟಿದ ಜೀವಿಗೆ ಮರಣ ನಿಶ್ಚಿತವಾಗಿದೆ. ಅದರಂತೆ ಸತ್ತವನಿಗೆ ಹುಟ್ಟು ನಿಶ್ಚಯವಾಗಿದೆ” ಯೆಂಬುಕ್ತಿಯಂತೆ ಜನನ-ಮರಣಗಳ ಚಕ್ರದಲ್ಲಿ ಸುಳಿದು ಘಾಸಿಯಾಗುವ ಜೀವನಿಗೆ ಕಾಮ-ಕಾಲ-ಮಾಯೆಗಳ ಮಿತಿಮೀರಿದ ಉಪಟಳದಿಂದ ಸಂಸಾರ ಹೇಯದ ಅರಿವು ದೃಢವಾಗಲೆಂದು, ಪಂಚಮಹಾಭೂತಗಳಿಂದ ಹುಟ್ಟಿದ ದೇಹಕ್ಕೆ ಅಂಟಿದ ಅನೇಕ ವಿಕಾರಗಳನ್ನು ಮತ್ತು ಪಂಚೇಂದ್ರಿಯಗಳು ಪಂಚವಿಷಯ ಗಳಿಗಾಗಿ ಹಾತೊರೆಯುವ ಪರಿಯನ್ನು, ಅಂತಃಕರಣ ಚತುಷ್ಟಯದ ಬಂಧನವನ್ನು, ತ್ರಿಗುಣಗಳ ತಾಕಲಾಟವನ್ನು ತಿಳಿಯಪಡಿಸಿದ್ದಾನೆ. ಇದೆಲ್ಲವನ್ನು ಅವಗಾಹನೆಗೆ ತಂದುಕೊಳ್ಳುವ ಎಂಥ ಪಾಮರ ಮಾನವನಿಗೂ ಸಂಸಾರಹೇಯಬರುವದು ಸ್ವಾಭಾವಿಕವಾಗಿದೆ. ವೈರಾಗ್ಯಭಾವ ಬಲಿದ ಮೇಲೆ ಈ ಘೋರತರ ಸಂಸಾರ ಸಾಗರವನ್ನು ದಾಟುವದು ಹೇಗೆಂಬ ವಿಚಾರವೂ ಸುಳಿದು ಗುರು ಕಾರುಣ್ಯದ ಹಂಬಲಹುಟ್ಟಿ ಸದ್ಗುರು ಸನ್ನಿಧಿಗೆ ಆಗಮಿಸಿ ಪರಿಪರಿಯಾಗಿ ಪ್ರಾರ್ಥಿಸುತ್ತಾನೆ.

ನದಿಯನ್ನು ದಾಟಲಿಚ್ಛಿಸುವ ನರನು ಈಸುಗುಂಬಳವನ್ನೋ, ಬೆಸೆದ ಡಬ್ಬಿಯನ್ನೋ, ತೆಪ್ಪವನ್ನೋ  ಸಾಧನವನ್ನಾಗಿಟ್ಟುಕೊಳ್ಳುತ್ತಾನೆ. ಅಜ್ಞಾನಿಯು ನದಿ ದಾಟಲು ಈ ಸಾಧನಗಳನ್ನು ಬದಿಗಿರಿಸಿ ಕಲ್ಲು ಕಟ್ಟಿಕೊಂಡು ನೀರಿಗೆ ಧುಮುಕಿದರೆ ಮುಳುಗುವದು ಖಂಡಿತ. ಬಾಲಕನೂ ಸಹ ಇದನ್ನು ನೋಡಿ ನಗದಿರಲಾರ. ಕಲ್ಲು ಕಟ್ಟಿಕೊಂಡು ನೀರಿನಲ್ಲಿ ಮುಳುಗಿದ ಮೂರ್ಖನು ಮೇಲಕ್ಕೆ ಬರುವದೂ ಇಲ್ಲ. ಆದರೆ ರಾಮಾಯಣವನ್ನು ಓದಿದವರಿಗೆ ಅಥವಾ ಕೇಳಿದವರಿಗೆ ಈ ಮಾತು ಆಶ್ಚರ್ಯವನ್ನುಂಟು ಮಾಡಬಹುದು. ಸೀತೆಯನ್ನು ಕರೆತರುವದಕ್ಕಾಗಿ ರಾಮನು ಲಂಕಾ ನಗರಿಗೆ ಹೋಗಬೇಕಾಯಿತು. ಆ ಊರು ಸೇರಲು ಸಮುದ್ರ ಆತಂಕವೊಡ್ಡಿದೆ. ದಾಟುವ ಬಗೆ ಹೇಗೆಂದು ಚಿಂತಿಸುತ್ತಿರುವಾಗ ಬ್ರಹ್ಮಚಾರಿಯೂ ಆತ್ಮಜ್ಞಾನಿಯೂ ಅನನ್ಯ ಭಕ್ತಿವಂತನೂ, ಪರಾಕ್ರಮಿಯೂ ಆದ ಹನುಮಂತನು ಕಲ್ಲಿನ ಮೇಲೆ ದೇವನಾದ ರಾಮನ ಹೆಸರನ್ನು ಬರೆದು ಸಮುದ್ರದಲ್ಲಿ ಬಿಡುತ್ತಿರಲು ಅವೆಲ್ಲ ತೇಲಿ ಸೇತುವೆಗೆ ಸಾಧನವಾದವು. ರಾಮಚಂದ್ರನಿಗೆ ಆಶ್ಚರ್ಯವೆನಿಸಿ ಸ್ವತಃ ತಾನೇ ಕಲ್ಲು ಬಿಟ್ಟನು. ಅದು ಮುಳಗಿ ಹೋಯಿತು. ಭಗವಂತನನ್ನು ನಂಬಿ ಮಾಡಿದ ಕೆಲಸವು ಯಶಸ್ವಿಯಾಗುವದು. ನಾನೇ ದೊಡ್ಡವನು, ಸಮರ್ಥನು, ದೇವನೆಂಬ ಅಹಂಭಾವ ದಿಂದ ಮಾಡುವ ಕಾರ್ಯವು ಜಡವಾಗುವದು. ಜಡವಾಗಿ ತೇಲದೆ ಮುಳುಗಿ ಹೋಗುವದು. ಆ ಕಾರ್ಯ ಯಶಸ್ವಿಯಾಗದು. ಈ ಜಡತನವೇ ಸಂಸಾರದ ಪರಿಯಾಯವೆನಿಸಿದೆ.  –

ದೇಹದ ಉತ್ಪತ್ತಿಯ ಕಾಲಕ್ಕೇನೆ ಜಡತನದ ಸಂಘರ್ಷ ಪ್ರಾರಂಭವಾಗಿ ಜೀವನಾಂತ್ಯದವರೆಗೂ ತಪ್ಪದು. ಅದಿಲ್ಲದೆ ಜೀವನವಾಗದು. ‘ಪರಮಾರ್ಥಗೀತೆ’ ಯಲ್ಲಿ ನಿಜಗುಣಗರು

 “ಅಗಳೆ ಕೇಳಾ ರತಿಮಥನದೊಳು |

ಯೋಗವಹುದು ರೇತಂ ರಕ್ತದೊಳು ||

ಮತ್ತಾಯೋಗವಿಧಂ ತನುವಿಂಗೆ !

ಬಿತ್ತದರಿಂ ಸಂಸ್ಕೃತಿ ಜೀವಂಗೆ || ೪ | ೪ ||

“ತಂದೆ-ತಾಯಿಯ ರೇತೋ ರಕ್ತಗಳ ಸಂಯೋಗದಿಂದ ಶರೀರ ರಚನೆಯಾಗಿ, ಜೀವನು ‘ಈ ದೇಹವೇ ನನ್ನ’ದೆಂಬ ಬುದ್ಧಿಯಿಂದ ಪುಣ್ಯ-ಪಾಪಗಳನ್ನು ಮಾಡುತ್ತ  ದುಃಖಿತನಾಗಿ ಪುನಃ ಪುನಃ ಜನನ ಮರಣ ರೂಪ ಸಂಸಾರವನ್ನು ಹೊಂದುವನೆಂದು ಸಂಸಾರದ ರೀತಿಯನ್ನು ತಿಳಿಸಿದ್ದಾರೆ

ತನುವಿಕಾರ ಮನವಿಕಾರ ಜನನ-ಮರಣಸ್ಥಿತಿ ಕಾರಣ

ಹೊನ್ನತೋರಿದೆ ಜಗದ ಕಣ್ಣ ಮೊದಲಿಗೆ,

ಹೆಣ್ಣ ಸುಳಿಸಿದೆ ಜಗದ ಕಣ್ಣ ಮೊದಲಿಗೆ,

ಮಣ್ಣ ಹರವಿದೆ ಜಗದ ಕಣ್ಣ ಮೊದಲಿಗೆ,

ತನ್ನುವ ತಪ್ಪಿಸಿ ಜಗವ ಸಂಸಾರಕ್ಕೊಪ್ಪಿಸಿ

ನುಣ್ಣನೆ ಹೋದನುಪಾಯದಿ ಸೊಡ್ಡಳಾ !

ಕೆಲಸಕ್ಕೆ ಹೋಗುವ ತಂದೆ ತಾಯಿಗಳು ಮಕ್ಕಳಿಗೆ ಬಗೆಬಗೆಯ ಆಟಿಕೆಗಳನ್ನಿತ್ತು ತಾವು ಅವರಿಂದ ಬಿಡುಗಡೆಯಾಗುತ್ತಾರೆ. ಇದರಂತೆ ಪರಶಿವನು ತನ್ನಂಶೀಭೂತರಾದ ಜೀವಾತ್ಮರಿಗೆ ಹೊನ್ನು, ಹೆಣ್ಣು, ಮಣ್ಣುಗಳೆಂಬ ಸಾಂಸಾರಿಕ ವಿಷಯ ಸುಖಕ್ಕೆ ಮೆಚ್ಚಿಸಿ, ಮರುಳಗೊಳಿಸಿ ಕೊನೆಗೆ ಜನನ-ಮರಣಗಳನ್ನಾವರಿಸಿ ತಾನು ಮಾತ್ರ ಭವವಿರಹಿತನಾಗಿ ನಿರ್ಲಿಪ್ತನಾಗಿಯೇ ಸೊಡ್ಡಳ ಬಾಚರಸನ ಮಹಾದೇವನು ಮೆರೆಯುತ್ತಾನೆಂದು ಸೊಡ್ಡಳ ಬಾಚರಸರು ಸಂಸಾರದ ವಿಚಿತ್ರತೆಯನ್ನು ಚಿತ್ರಿಸಿದ್ದಾರೆ. ಶಿವನು ಲೀಲಾಮಯ ನಾಗಿದ್ದರೂ ಉಪಾಯದಿಂದ ನುಣ್ಣನೆ ನುಣುಚಿಗೊಂಡಿರುತ್ತಾನೆ.

ಇಂಥ ವಿಷಯ ಸಂಸಾರ ಸಾಗರ ಅಪಾರವಾಗಿದೆ. ಇದನ್ನು ಈಸಿ ಜಯಿಸುವದು ಬಲು ದುಸ್ತರವಾದುದು. ಅದರಲ್ಲಿಯೂ ಶಿವಕವಿ ನಿರೂಪಿಸಿರುವಂತೆ ಶಿಲೆಯ ತೆಪ್ಪವನೇರಿ ಜಲವದಾ೦ಟಲು ಪ್ರಯತ್ನಿಸುವದು ಅಸಾಧ್ಯಕಾರ್ಯವೇ ಸರಿ. ಶಿಲೆಯ ತೆಪ್ಪವೆಂದರೆ ಅಜ್ಞಾನದಿಂದ ಆವರಿಸಿದ ನನ್ನದೆಂಬ ಅಹಂಭಾವವುಳ್ಳ ಜಡದೇಹ. ಇಂಥ ಭಾರವಾದ ಶರೀರವನ್ನು ಕಟ್ಟಿಕೊಂಡು ವಿಷಮವಾದ ಸಂಸಾರ ಸಾಗರವನ್ನು ದಾಟುತ್ತೇನೆಂಬುದು ಮೂಢತನವಲ್ಲದೆ ಮತ್ತೇನು ? ಆದರೆ ಈ ತನುವಿಲ್ಲದೆ ಮುಕ್ತಿಯ ಮಾರ್ಗವೂ ಇಲ್ಲ. ಈ ವಿಷಯವನ್ನು ೫೫ನೆಯ ತ್ರಿಪದಿಯಲ್ಲಿ ಮನನ ಮಾಡಿಕೊಂಡಿದ್ದೇವೆ. ಮಾನವತನವು ಪರಮ ಪವಿತ್ರವಾದುದು. ಅಜ್ಞಾನದಿಂದ ಅದಕ್ಕೆ ಜಡತ್ವ ಜೋಡಾಗುತ್ತದೆ. ಇಂಥ ಜಡತ್ವವನ್ನು ಸದ್ಗುರು ಕರುಣೆಯಿಲ್ಲದೆ ನೀಗಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಅದುಕಾರಣ ಗುರುಸನ್ನಿಧಿಯನ್ನು ಆಶ್ರಯಿಸಿ ಸದ್ಬೋಧೆಯಿಂದ ಅಜ್ಞಾನವನ್ನು ನೀಗಿಸಿಕೊಂಡು ತನುವಿನ ಜಡತ್ವವನ್ನು ಕಳೆದು ಕೊಳ್ಳಬೇಕು. ಸುಜ್ಞಾನಿಯಾಗಿ ಶಿವಲಿಂಗವನ್ನು ಪಡೆಯಬೇಕು. ಈ ಇಷ್ಟಲಿಂಗವೆಂಬ ತೆಪ್ಪವನ್ನು ಆಶ್ರಯಿಸಿದರೆ ಸಂಸಾರಸಾಗರ ಸಸಾರವಾದೀತು. ಸ್ವತಂತ್ರಸಿದ್ಧಲಿಂಗ ಯತಿಗಳು –

ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ

ಅಂಧಕಾರ ಗುಹೆಯೊಳಗಿದ್ದವರಂತೆ ಇದ್ದರಯ್ಯಾ ಜೀವರೆಲ್ಲಾ

ಹೊಲಬುದಪ್ಪಿ ತಿಳಿವಿಲ್ಲದೆ ಕಳವಳಗೊಳುತ್ತಿದ್ದರಯ್ಯಾ

ಅಡವಿಯ ಹೊಕ್ಕ ಶಿಶುವಿನಂತೆ.

ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ,

ನಿಮ್ಮ ಕರುಣವಾಗದನ್ನಕ್ಕೆ ಬಳಲುತ್ತಿದ್ದರಯ್ಯಾ ಹೊಲಬನರಿಯದೆ”.

“ಅಜ್ಞಾನವೆಂಬ ಕತ್ತಲೆಯಲ್ಲಿ ದಾರಿಗಾಣದೆ; ಹೊಲಬನರಿಯದೆ ಜೀವಿಯು ಬಳಲುತ್ತಾನೆ. ಕಳವಳಗೊಳ್ಳುತ್ತಾನೆ. ಅರಣ್ಯವನ್ನು ಹೊಕ್ಕು ಶಿಶು ಕಿಂಕರ್ತವ್ಯ ಮೂಢವಾಗುವಂತೆ ಜೀವನು ಅಜ್ಞಾನದಿಂದ ಭ್ರಾಂತನಾಗುತ್ತಾನೆ. ಗುರುವಿನ ಕರುಣೆಯಾಗದೆ ಗುರಿಯನ್ನು ಗುರುತಿಸಲಾಗದು. ಅದುಕಾರಣ ಪರಶಿವ ಸ್ವರೂಪಿಯಾದ ಸದ್ಗುರುವಿನ ಕೃಪೆ ಅತ್ಯವಶ್ಯವಾಗಿ ಬೇಕೆಂಬುದನ್ನು ಮನನ ಮಾಡಿಕೊಟ್ಟಿದ್ದಾರೆ.

ಗುರುಕರುಣೆಯನ್ನು ಪಡೆಯಲಿಚ್ಛಿಸುವ ಜೀವಾತ್ಮನು ಶ್ರೀಗುರುಸನ್ನಿಧಿಗೆ ಬರಿಗೈಯಿಂದ ಹೋಗಬಾರದು. ಮುಮುಕ್ಷವಾದವನು-

ಸ ಗುರುಮೇವಾಭಿಗಚ್ಛೇತ್ ಸಮಿತ್‌ಪಾಣಿಃ

ಶ್ರೋತ್ರಿಯಂ ಬ್ರಹ್ಮನಿಷ್ಠಮ್ ।।”

ಮುಂಡಕೋಪನಿಷತ್ || ೧-೨–೧೨ ||

ದರ್ಭೆಯನ್ನು ಕೈಯಲ್ಲಿ ಹಿಡಿದುಕೊಂಡು (ಆತ್ಮನನ್ನು ಅರಿಯಲು) ಶಾಸ್ತ್ರನಿಷ್ಠನೂ ಬ್ರಹ್ಮವಿಜ್ಞಾನಿಯೂ ಆದ ಗುರುವನ್ನು ಹೊಂದಬೇಕೆಂಬ ಶ್ರುತಿಪ್ರಮಾಣದಂತೆ ಶಿವ ಕವಿಯು ತನ್ನ ಅಮಂಗಲ (ಅಜ್ಞಾನಯುತ) ಬುದ್ಧಿಯನ್ನು  ಕಳೆದುಕೊಳ್ಳುವದಕ್ಕಾಗಿಯೂ, ಪ್ರತ್ಯುತ್ತರ ನೀಡಿದ ಕಾರಣ ಗುರುಕೋಪವನ್ನು ಪರಿಹರಿಸಿಕೊಳ್ಳುವದಕ್ಕಾಗಿಯೂ ಭಕ್ತಿಯನ್ನೇ ಮುಂದಿಟ್ಟುಕೊಂಡು ಮಹಾಜ್ಞಾನ ನಿಧಿಯಾದ, ನಡೆನುಡಿಯೊಂದಾದ ನಿರಾಭಾರಿ ನಿರಂಜನಗುರು ಚನ್ನವೀರೇಶ್ವರನ ಸನ್ನಿಧಿಗೆ ಬಂದಿದ್ದಾನೆ. ಮೂಢತನವನ್ನು ತೊಲಗಿಸಲು ಪ್ರಾರ್ಥಿಸಿದ್ದಾನೆ. ಸದ್ಗುರುವನ್ನಲ್ಲದೆ, ಮತ್ತಿನ್ನಾರನ್ನು ಬೇಡಬೇಕು ! ಕಳೆದುಕೊಂಡಲ್ಲಿ ಹುಡುಕಿದರೆ ತನ್ನ ವಸ್ತು ದೊರೆಯುವಂತೆ ಆತ್ಮ ಜ್ಞಾನಿಯಲ್ಲಿಯೇ ಆತ್ಮಜ್ಞಾನವನ್ನು ಬೇಡಬೇಕು. ಸದ್ಗತಿಯನ್ನು ಸಾಧಿಸಬೇಕು. ಶಿವಕವಿಯ ಪ್ರಾರ್ಥನೆ ವ್ಯಕ್ತಿಗತವಾದುದಲ್ಲ. ಸಮಸ್ತ ಶಿಷ್ಯರಿಗೂ ಸಮನ್ವಯವಾಗುವಂಥಹದು. ಸಕಲರೂ ಇದನ್ನು ಅನುಸರಿಸಬೇಕು. ಆದರ್ಶವನ್ನಾಗಿ ಮಾಡಿಕೊಳ್ಳಬೇಕು.

ಕಾಯ ಕರ್ಮಗಳೆಂಬ | ಮಾಯ ಸಂಸಾರವನು

ಹೇಯವನೆ ಮಾಡಿ- *ಪ್ರಿಯದಿಂ ಪಾಲಿಸುವ

**ಐಯ್ಯ ಶ್ರೀಗುರುವೆ ಕೃಪೆಯಾಗು        ||೭೪ ||

ಪ್ರಿಯದಿಂದ ಪಾಲಿಸಯ್ಯ’ʼ ಎಂಬ ಪಾಠಾಂತರವೂ ಇದೆ. ‘ಪಾಲಿಸಯ್ಯ’ ಎಂಬ ಪದವು ಶಿಷ್ಯನ ಬೇಡಿಕೆಯನ್ನು ವ್ಯಕ್ತಗೊಳಿಸುತ್ತದೆ. ಹಿಂದಿನ ತ್ರಿಪದಿಯಲ್ಲಿʼʼ ಬಲು ಮೂಢತನವ- ತೊಲಗಿಸುತ ನೀನೆನ್ನ ಸಲಹು” ಎಂದು ಬಿನ್ನಹಮಾಡಿ ಕೊಂಡಮೇಲೆ ಶ್ರೀಗುರುವು ಅವಶ್ಯವಾಗಿ ಕರುಣೆದೋರುವನೆಂಬ ವಿಶ್ವಾಸ ಇಲ್ಲಿ ವ್ಯಕ್ತವಾಗುತ್ತದೆ. ಅದಕ್ಕಾಗಿ ಈ ಮಾಯಾಸಂಸಾರವನ್ನು ಹೇಯಮಾಡಿ ನನ್ನನ್ನು ಪ್ರಿಯದಿಂ ಪಾಲಿಸುವ ಐಯ್ಯ ಶ್ರೀಗುರುವೆಂಬ ಪದಪ್ರಯೋಗವು ಸಮಂಜಸವೇ ಆಗಿದೆ. ಒಡೆಯನಾದ ಶ್ರೀಗುರು ಕೃಪೆಮಾಡುವನೆಂಬ ವಿಶ್ವಾಸ ಶಿಷ್ಯನಲ್ಲಿ ಅವಶ್ಯ ಬೇಕು. ನಂಬಿದವನಿಗೆ ಇಂಬು ದೊರೆಯುವದು.

ಕಾಯವು ತಂದೆ ತಾಯಿಗಳ ಸಂಯೋಗ ಕರ್ಮದಲ್ಲಿಯೇ ಜನಿಸುತ್ತದೆ. ಅದಕ್ಕಾಗಿ ಕಾಯದ ಉತ್ಪತ್ತಿಯಲ್ಲಿಯೇ ಕರ್ಮ ಬೆನ್ನುಹತ್ತಿದೆ. ಕಾಯದ ಕ್ರಿಯೆಗೆ ಅನೇಕ ಆಕಾರಗಳು ಅನುಸರಿಸುತ್ತವೆ. ಒಂಬತ್ತು ತಿಂಗಳು ಒಂಬತ್ತು ದಿನಕಳೆದ ಮೇಲೆ ಕಾಯವು ಕರ್ಮ ಭೂಮಿಯಲ್ಲಿ ಕಾಲಿಕ್ಕುತ್ತದೆ. ಶರೀರವು ಸಿದ್ಧವಾಗುವ ಪರಿಯನ್ನು ನಿಜಗುಣರು ತಮ್ಮ ಪರಮಾರ್ಥಗೀತೆಯ ನಾಲ್ಕನೆಯ ಗತಿಯಲ್ಲಿ ವಿವರಿಸಿದ್ದಾರೆ.

ಮಲವೆರಡವು ಬೆರದೊಂದು ದಿನಕ್ಕೆ |

ಕಲಲಂ ಬುದ್ಬುವೈದು ದಿನಕ್ಕೆ II

ಪತ್ತು ದಿನಕೆ ಕಂದಾಕೃತಿಯದಕೆ |

ಮತ್ತೆಯು ದಿನದಶ-ಪಂಚಕ ಬಲಿಕೆ ||

ತಲೆ ತೋಳ್ತೊಡೆ ಸರ್ವಾಂಗ ತತಿಗಳು |

ಬೆಳೆವವು ಚೌಮಾಸಾಂತ ಗತಿಯೊಳು ||

ನವಿರ ಕುಳಿಗಳೆಲುಗಳು ಚಲನೆಗಳು

ಸವನಿಪವೈದಾರೇಳ್ಮಾಸದೊಳು ||

ಪೂರ್ವಸ್ಮರಣಂ ಜನಿಪಾಯಾಸ |

 ಸಾರ್ವಮದೆಂಟು ನವಕ್ರಮ ಮಾಸ |

ಸೂತಿಮರುತನಿಂದಿದು ಜನಿಯಕ್ಕು

ಈ ತೆರದಿಂ ಪಿಂಡೋದಯವಕ್ಕು || ೫ ||

ತಂದೆ ತಾಯಿಗಳ ಮಲರೂಪಿ ರೇತೋರಕ್ತಗಳು ಕೂಡಿಕೊಂಡು ಮೊದಲನೆ ದಿನದಲ್ಲಿ ಕಲಲವಾಗುವದು. ಅಂದರೆ ಬಿಳಿ ಮತ್ತು ಕೆಂಪು ಬಣ್ಣದ ಮಿಶ್ರಣ ದಂತಾಗುವದು. ಐದನೇ ದಿನದಲ್ಲಿ ಗುಳ್ಳೆಗಳಾಕಾರವಾಗುವದು. ನಂತರ ಹತ್ತು  ದಿವಸಗಳಲ್ಲಿ ಅದು ಒಂದು ದುಂಡಗಡ್ಡೆ ಅಥವಾ ಅನ್ನದ ಉಂಡೆಯಂತಾಗುವದು. ಹದಿನೈದನೇ ದಿನಕ್ಕೆ ಸ್ವಲ್ಪು ಬೆಳೆದು ಉದ್ದಾಗುವದು. ಆ ಮೇಲೆ ಸುಮಾರು ನಾಲ್ಕು ತಿಂಗಳು ಮುಗಿಯುತ್ತಿರಲು ತಲೆ, ತೋಳು, ಕೈ, ಕಾಲುಗಳು, ಹೊಟ್ಟೆ ಮೊದಲಾದ ಅವಯವಗಳು ಹುಟ್ಟುವವು. ಮುಂದೆ ಐದು ಆರು ಏಳು ತಿಂಗಳುಗಳಲ್ಲಿ ಕೂದಲುಗಳು, ಹುಟ್ಟಿ (ಶರೀರಕ್ಕೆ ತೂತುಗಳು, ಎಲುವುಗಳು ಉಂಟಾಗುವವಲ್ಲದೆ ಚೇತನ ಪ್ರಾರಂಭವಾಗುವದು. ಮುಂದಿನ ಎಂಟನೇ ತಿಂಗಳಲ್ಲಿ ಜ್ಞಾನೋದಯವಾಗಿ ಹಿಂದಿನ ಜನ್ಮಂಗಳ ಸ್ಮರಣೆ ಹುಟ್ಟುವದು. ಗರ್ಭಾಶಯದ ಕಷ್ಟ ಪ್ರಾಪ್ತವಾಗುವದು. ೨೮ನೆಯ ತ್ರಿಪದಿಯ ವಿವರಣೆಯಲ್ಲಿ ವಿವರಿಸಿದಂತೆ ಜೀವನು ಶಿವನಲ್ಲಿ ಮೊರೆಯಿಡುವನು. ಅಂತೆಯೇ ಏಂಟನೆ ತಿಂಗಳಲ್ಲಿ ವೀರಶೈವರು ಗರ್ಭಸ್ಥಶಿಶುವಿಗೆ ಲಿಂಗ ಸಂಸ್ಕಾರ ಮಾಡಿಸುವರು) ನವಮಾಸಗಳು ತುಂಬುತ್ತಲೇ ಪ್ರಸೂತಿ ವಾಯುವಿನಿಂದ ಶರೀರವು ಭೂಮಿಯಲ್ಲಿ ಅವಿರ್ಭವಿಸುವದು. ಗರ್ಭವತಿಯಾದ ತಾಯಿಯು ಅತ್ಯಂತ ಜಾಗರೂಕಳಾಗಿ ಗರ್ಭದ ಶಿಶುವಿನ ರಕ್ಷಣೆ ಮಾಡಬೇಕಾಗುವದು. ಹೊಟ್ಟೆಯೊಳಗಿನ ಗರ್ಭವು ತಾಯಿಯ ಮನೋ ಮೂಲಕ ಅನೇಕ ವಿಷಯಗಳನ್ನು ಇಚ್ಛಿಸುತ್ತದೆ. ಇಂಥ ತಾಯಿಯ ಬಯಕೆಯನ್ನು ಪೂರೈಸಬೇಕಾಗುವದು. ಆ ಬಯಕೆಗಳನ್ನು ಪೂರ್ಣ ಮಾಡದಿದ್ದರೆ ಗರ್ಭವು ಅವಯವಗಳಿಂದ ಹೀನವಾಗಿಯೂ ಅಶಕ್ತವಾಗಿಯೂ  ಬುದ್ಧಿಮಾಂದ್ಯವುಳ್ಳದ್ದಾಗಿಯೂ ಬಹುಕಷ್ಟದಿಂದ ಹುಟ್ಟುತ್ತದೆಂದು ಅನುಭವಿಗಳು ಹೇಳುತ್ತಾರೆ. ಆದ್ದರಿಂದ ಗರ್ಭಿಣಿಯರಿಗೆ ಅನುಕೂಲ ಮಾಡಿಕೊಡಬೇಕು. ತಾಯಿಯು ಉತ್ತಮ ಭಾವನೆಗಳಿಂದ ಗರ್ಭವನ್ನು ಬೆಳೆಯಿಸಿ ಶ್ರೇಷ್ಠನಾದ ಪುತ್ರನನ್ನು ಪಡೆಯ ಬಹುದೆಂಬುದು ಅನೇಕ ಉದಾಹರಣೆಗಳಿಂದ ತಿಳಿದುಬರುತ್ತದೆ. ಧರ್ಮಾಭಿಮಾನವುಳ್ಳ ತಾಯಿಯು ಧರ್ಮಾತ್ಮನನ್ನು ಹಡೆಯುವಳು. ರಾಷ್ಟ್ರಾಭಿಮಾನವುಳ್ಳ ಮಾತೆಯು ರಾಷ್ಟ್ರೊದ್ಧಾರಕನನ್ನೇ ಹೆರುವಳು.

ಶಿವನಲ್ಲಿ ಪ್ರಾರ್ಥಿಸಿ ಹಿಂದಿನ ಕರ್ಮವನ್ನೆಲ್ಲ ಸ್ಮರಿಸಿ ಈ ಭವ ಸಾಕೆಂದು ಬೇಸತ್ತು ಶಿಶುವು ಸುಮ್ಮನೆ ಗರ್ಭಾಸನದಲ್ಲಿ ಕುಳಿತುಕೊಂಡಿರುತ್ತಿರಲು ಕೋಟಿಸಿಡ್ಲು ಹೊಡೆದಂತೆ ಪ್ರಸೂತಿಗಾಳಿಯ ಅಘಾತಕ್ಕೆ ಸಿಕ್ಕು ಕೆಳಮುಖಮಾಡಿ ಬಹು ಕಷ್ಟದಿಂದ ಜರಾಯು ಚೀಲವನ್ನು ಹರಿದು ಯೋನಿಯ ಮುಖಾಂತರ ಹೊರಬರುವದು. ಆ ವಾಯುವಿನ ಹೊಡೆತಕ್ಕೆ ಒಳಗಾಗಿ ಜ್ಞಾನವೆಲ್ಲ ಮರೆತುಹೋಗಿ ಅಜ್ಞಾನದಿಂದ ಬಾಧೆಗಳು  ಪ್ರಾರಂಭವಾಗುವವು. ಕಾಯ ಬೆಳೆದಂತೆ ಕರ್ಮಗಳನ್ನು ಮಾಡಬೇಕಾಗುವದು.  ಅದರಿ೦ದ ಸುಖ-ದುಃಖಗಳು ಲಭ್ಯವಾಗುವವು. ಈ ವಿಚಾರವನ್ನು ನಿಜಗುಣರು ಇದೇ”ಪರಮಾರ್ಥಗೀತೆ”ಯ ಆರನೆಯ ಗತಿಯಲ್ಲಿ –

ಕರ್ಮ ವ್ಯವಹಾರವೇ ಮುನ್ನವನು |

ಕರ್ಮವ ಮಾಡಿದನದರಿಂದವನು ||

ಜನನಾಂತರವನು ಬಿಡದೈದುವನು |

ಜನಿಸಿದ ಕರ್ಮ ಫಲವನುಣುತಿಹನು ||

ಅಂತಾ ಕರ್ಮವೆ ಕಾರಣಮಾಗಿ|

ಮುಂತಿಹ ಸೃಷ್ಟಿಯೆ ಕಾರ್ಯಮದಾಗಿ ||

ಆ ಕಾರ್ಯವು ಕಾರಣ ವಶವಾಗಿ |

ಲೋಕಂ ಕೆಡುವುದು ದುಃಖಿತಮಾಗಿ || ೬-೨ |

ಶರೀರಕ್ಕೆ ಕರ್ಮವೇ ಮುಖ್ಯ. ಈ ಕರ್ಮದಿಂದಲೇ ಜನನ ಮರಣ, ಸುಖ ದುಃಖಗಳೆಂಬ ವಿಚಾರವನ್ನು ಸರಳವಾಗಿ ಪ್ರತಿಪಾದಿಸಿರುವರು.

ದೇಹವನ್ನು ಧರಿಸಿದ ದೇಹಿಗೆ ಕರ್ಮಬಲದಿಂದ ದುಃಖತ್ರಯಗಳು ಉಂಟಾಗುವವು. ಈ ವಿಚಾರವನ್ನು ಸಿದ್ಧಾಂತ ಶಿಖಾಮಣಿ’ಯಲ್ಲಿ ಶಿವಯೋಗಿ ಶಿವಾಚಾರ್ಯರು-

ಕರ್ಮ ಮೂಲೇನ ದುಃಖೇನ ಪೀಡ್ಯಮಾನಸ್ಯದೇಹಿನಃ

ಆಧ್ಯಾತ್ಮಿಕಾದಿನಾ ನಿತ್ಯಂ ಕುತ್ರ ವಿಶ್ರಾಂತಿರವಾಪ್ಯತೇ || ೫೬೨ ॥

ಆಧ್ಯಾತ್ಮಿಕಂ ತು ಪ್ರಥಮಂ ದ್ವಿತೀಯಂ ಚಾಧಿಭೌತಿಕಮ್ |

ಆದಿದೈವಿಕಮನ್ಯಚ್ಚ ದುಖಃತ್ರಯಮಿದಂ ಸ್ಮೃತಮ್ || ೫೬೩ ||

ಎಂದು ಪ್ರತಿಪಾದಿಸಿದ್ದಾರೆ. ಜೀವನ ದುಃಖಕ್ಕೆ ಮೂಲವಾದದು ಕರ್ಮ. ಅದರಿಂದ ಪೀಡಿತನಾದ ದೇಹಿಗೆ ವಿಶ್ರಾಂತಿಯಿಲ್ಲ ; ಸುಖವಿಲ್ಲ. ಈ ಕರ್ಮಗಳು ಆಧ್ಯಾತ್ಮಿಕ, ಆಧಿಭೌತಿಕ ಹಾಗೂ ಆದಿದೈವಿಕವೆಂದು ಮೂಬಗೆಯಾಗಿವೆ. ಆಧ್ಯಾತ್ಮಿಕ ದುಃಖವು ಬಾಹ್ಯ-ಅಭ್ಯಂತರವೆಂದು ಇಬ್ಬಗೆ, ವಾತ-ಪಿತ್ತ ಶ್ಲೇಷ್ಮಾ (ಕಫ)ದಿಗಳಿಂದ ಉತ್ಪನ್ನ ವಾಗುವ ದುಃಖವೇ ಬಾಹ್ಯಾಧ್ಯಾತ್ಮಿಕ ದುಃಖವೆನಿಸಿಕೊಳ್ಳುವದು. ರಾಗ-ದ್ವೇಷ- ಕಾಮಕ್ರೋಧಾದಿಗಳಿಂದ ಉತ್ಪನ್ನವಾದ ದುಃಖವು ಅಭ್ಯಂತರ ಆಧ್ಯಾತ್ಮಿಕ ದುಃಖವೆನಿಸುವದು. ರಾಜ-ಮಾನವ- ಪಶು -ಮೃಗ -ಸರ್ಪ ಮೊದಲಾದ ಭೌತಿಕ ವಸ್ತುಗಳಿಂದಾಗುವ ದುಃಖಕ್ಕೆ ಆಧಿಭೌತಿಕವೆಂದು ಹೆಸರು. ಯಕ್ಷ, ರಾಕ್ಷಸ, ಭೂತ ಪಿಶಾಚಿ ನವಗ್ರಹ ಇತ್ಯಾದಿಗಳಿಂದಾಗುವ ದುಃಖವು ಅಧಿದೈವಿಕ ದುಃಖವೆಂದು ನಾಮ ಎಂದಿದೆ. ಸಾಂಖ್ಯರು ಸಹ ದುಃಖತ್ರಯವನ್ನು ಮನ್ನಿಸಿ ಇವುಗಳನ್ನು ಹೋಗಲಾಡಿಸುವದಕ್ಕಾಗಿಯೇ ಶಾಸ್ತ್ರದ ಪ್ರವೃತ್ತಿಯಾಗಿರುವದಾಗಿ ಹೇಳುತ್ತಾರೆ. ಸಾಂಖ್ಯತತ್ತ್ವಕೌಮುದಿ”ಯಲ್ಲಿ ಆಧ್ಯಾತ್ಮಿಕ ದುಃಖದ್ವಂದ್ವಕ್ಕೆ ಶಾರೀರಿಕ ಮಾನಸೆಕವೆಂದು ಕರೆದಿದ್ದಾರೆ. ಶರೀರವು ಬಾಹ್ಯವಸ್ತು, ಮನವು ಆಂತರಿಕವೇ ಆಗಿದೆ.

ಈ ತೆರನಾಗಿ ಮಾನವನಿಗೆ ತನ್ನ ಕಾಯ, ಕಾಯದಿಂದಾಗುವ ಕರ್ಮ ಮತ್ತು ಮಾಯಪಾಶ ಇವು ಬಂಧನಕಾರಿಯಾಗುವವು. ಅವನು ಅಲ್ಪಸುಖಕ್ಕಾಗಿ  ಅನಂತದುಃಖಗಳನ್ನು ಎದುರಿಸುತ್ತಾನೆ. ಎಂಥ ದುಃಖದಾಯಕ ಸಮಯದಲ್ಲಿಯೂ ಅತ್ಯಲ್ಪ ಸುಖಕ್ಕೆ ʼʼಹಾವಿನಬಾಯ ಕಪ್ಪೆ ಹಾರುವ ನೊಣಕ್ಕೆ ಆಶೆಮಾಡುವಂತೆ,ʼʼ ಹಂಬಲಿಸುವನು. *ಶೂಲವನೇರುವ ಕಳ್ಳ ಸಾಯುವನೆಂಬ ಪರಿವೆಯಿಲ್ಲದೆ ಹಾಲೋಗರಕ್ಕೆ ಆಶಿಸುವಂತೆ” ಜೀವಾತ್ಮನು ಅಧೋಮುಖ ಇಂದ್ರಿಯಗಳ ಚಾಪಲ್ಯದಿಂದ ವಿಷಯಗಳನ್ನೇ ಬಯಸಿ ಬಂಧಿತನಾಗುತ್ತಾನೆ. ವಿಷಯ ಸಾಮೀಪ್ಯದಲ್ಲಿ ಎಂಥ ದುಃಖವನ್ನಾದರೂ ತಾತ್ಕಾಲಿಕವಾಗಿ ಮರೆಯುವನು. ಈ ವಿಚಾರದಲ್ಲಿ ಶರಣ ಚಂದಿಮರಸನ ವಚನ ಅತ್ಯಂತ ಸುಂದರವಾದ ಉದಾಹರಣೆಯಾಗಬಲ್ಲುದು. ವಿಷಯ ಸುಖದ ಚಮತ್ಕಾರಿಕೆಯನ್ನು ಅವಲೋಕಿಸಬಹುದು.

ಬಟ್ಟೆಗೊಂಡು ವೋಗುತ್ತಿಪ್ಪ ಮನುಜನೊಬ್ಬ

ಹುಲಿ, ಕಾಡಗಿಚ್ಚು, ರಕ್ಕಸಿ ಕಾಡಾನೆಗಳು

 ನಾಲ್ಕು ದೆಸೆಯಟ್ಟುತ್ತ ಬರೆ ಕಂಡು,

 ಭರದಿಂದ ಹೋಗದೆಸೆಯಿಲ್ಲದೆ, ಭಾವಿಯ ಕಂಡು,

 ತಲೆಯನೂರಿ ಬೀಳುವಲ್ಲಿ, ಹಾವಕಂಡು,

 ಇಲಿಕಡಿದ ಬಳ್ಳಿಯ ಹಿಡಿದು ನಿಲೆ,

 ಜೇನ ಹುಳುಗಳು ಮೈಯನೂರುವಾಗ

ಮೂಗಿನ ತುದಿಯಲ್ಲಿ ಒಂದು ಹನಿ ಮಧು ಬಿಂದು ಬೀಳೆ;

ಆ ಮಧುವ ಕಂಡು ಹಿರಿದಪ್ಪ ದುಃಖವನ್ನೆಲ್ಲಾ ಸೈರಿಸಿ

ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ

ಈ ಸಂಸಾರ ಸುಖ, ವಿಚಾರಿಸಿ ನೋಡಿದಡೆ ದುಃಖದಾಗರ,

ಇದನರಿದು ಸಕಲವಿಷಯಗಳಲ್ಲಿ ಸುಖವಿಂತುಂಟೆಂದು

ನಿರ್ವಿಷಯನಾಗಿ ನಿಂದ ನಿಲುವು ಚಿಮ್ಮಲಿಗೆಯ ಚನ್ನರಾಮ

ಕಾಡಾರಣ್ಯದಲ್ಲಿ ಹೋಗುವ ಮನುಷ್ಯನಿಗೆ ಹುಲಿ, ಕಾಡಗಿಚ್ಚು, ರಾಕ್ಷಸಿ, ಕಾಡಾನೆ ನಾಲ್ಕು ದಿಕ್ಕಿನಲ್ಲಿಯೂ ಬೆನ್ನಟ್ಟಿ ಬರುತ್ತಿರಲಾಗಿ ಬೇರೆಲ್ಲಿಯೂ ಹೋಗದವನಾಗಿ ಹಾಳುಭಾವಿಯನ್ನು ನೋಡುತ್ತಾನೆ. ಇದುವೆ ತನಗೆ ರಕ್ಷಣೆ ನೀಡುವದೆಂದರಿದು ಬೀಳಲಿಚ್ಚಿಸಿದರೆ ಕೆಳಗೆ ಭಾವಿಯಲ್ಲಿ ಘಟಸರ್ಪ ಬುಸ್ಸೆಂದು ಆಡಹತ್ತಿದೆ. ತಕ್ಷಣವೇ ಬಳ್ಳಿಗೆ ಜೋತುಬೀಳುತ್ತಾನೆ. ಆದರೆ ಅದು ಇಲಿ ಕಡಿದು ಜರ್ಜರಿತವಾಗಿದೆ. ಇಂಥ  ಬಳ್ಳಿಗೇನೇ ಜೋತು ಬೀಳುವಾಗ ಮೈಗೆ ತಾಗಿದ ಜೇನುಹುಳಗಳ ಕಡಿತ, ಅದರಲ್ಲಿಯ ಜೇನು ಹುಟ್ಟಿನಿಂದ ಸುರಿದ ಒಂದು ತೊಟ್ಟು ಜೇನು ಮೂಗಿನ ತುದಿಗೆ ತಗಲಿಕೊಂಡಿತಂತೆ. ಅಂಥ ಭಯಾನಕ ದುಃಖಮಯ ಸಮಯದಲ್ಲಿ ಜೀವನ ಸುತ್ತೆಲ್ಲ ಆವರಿಸಿದ ದುಃಖತತಿಯನ್ನು ಮರೆತು ಆ ಜೇನ ಹನಿಯನ್ನು ಸವಿಯಲು ಅಶಿಸುತ್ತಾನೆ. ಇದುವೆ ಸಂಸಾರದ ವಿಚಿತ್ರವಾದ ಚಿತ್ರ. ಎಂಥ ಅದ್ಭುತ ದುಃಖ ಸಮೂಹ. ಇದು ನಿಜವಾಗಿಯೂ ದುಃಖದ ಸಾಗರವೇ ಸರಿ. ಸಾಸಿವೆಯೆಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡೆಂದು ಶರಣ ಸಾಹಿತ್ಯ ವಿವರಿಸಿದೆ. ಈ ಭವದುಃಖವನ್ನು ವಿಚಾರಿಸಿದರೆ ಈ ಸಂಸಾರ ಹೇಯವೆನಿಸುವದು ಸಹಜ.

ಇಂತಿರುವ ಸಂಸಾರದಹೇಯವನ್ನು ಮನಗ೦ಡು ವಿಚಾರವಂತನಾಗಿ ಚಿರಸುಖದ ತವರಾದ ಧರ್ಮಮಾರ್ಗದಲ್ಲಿ ಮುನ್ನಡೆಯುತ್ತ ವೈರಾಗ್ಯಶೀಲನಾದರೆ ಅವಶ್ಯವಾಗಿ ಅಂಥವನು ಮುಕ್ತನಾಗುವನು. ಆ ನಿಲವನ್ನು ಜನತೆಗೆಲ್ಲ ಮಾರ್ಗದರ್ಶನ ಮಾಡಬಲ್ಲವನೇ ಮಹಾನುಭಾವಿಯೆನಿಸುವನು. ಪರಮಗುರುವೆ ! ನಾನು ಈ ಕಾಯ-ಕರ್ಮ-ಮಾಯೆಯ ಹೇಯವನ್ನು ತಿಳಿದು ಜಿಗುಪ್ಸೆಗೊಂಡಿದ್ದೇನೆ. ನಿನ್ನ ಜ್ಞಾನ ಜ್ಯೋತಿಯಿಂದ ಎನ್ನ ಕರ್ಮವನ್ನು ಸುಟ್ಟು ಹಾಕಿ ಮಾಯಾ ಪಾಶದಿಂದ ಮುಕ್ತನನ್ನಾಗಿ ಮಾಡು. ಕಾಯದ ಕೊಳೆಯನ್ನು ಕಳೆದು ಕರಣಾಮೃತ ಸಿಂಚನೆಯಿಂದ ಶಿವಬಾಳನ್ನು ಚಿಗುರಿಸು. ನಿನ್ನದು ಅಪಾರಪ್ರೇಮ. ಆರ್ತಹೃದಯಿಗಳಿಗೆ ಬಲವಾದ ಆಸರ ನೀನು. ಶರಣಾಗತನಾದವನನ್ನು ಪ್ರೀತಿಯಿಂದ ಸಲಹುವ ಸದ್ಗುರು ನೀನು. ಎನ್ನನ್ನು ಹರಸು. ನಿನ್ನವನನ್ನಾಗಿರಿಸಿಕೋ. ಇದು ನಿನ್ನ ಧರ್ಮವಲ್ಲವೇ ?

 ಇಂತಪ್ಪ ಸಂಸಾರ | ಭ್ರಾಂತಿಯೊಳಿರ್ದವನನೇ-

ಕಾಂತದೊಳ್ಕರೆದು-ಮುಂತೆ ನೀ ಪರವಸ್ತು

ವಿಂತೆಂದ ಗುರುವೆ ಕೃಪೆಯಾಗು      ೭೫ ||

ಶಿವಕವಿಯು ಹಿಂದಿನ ತ್ರಿಪದಿಗಳಲ್ಲಿ ಸಾಂಸಾರಿಕ ಭ್ರಾಂತಿಯನ್ನು ವಿವರಿಸಿ ಜೀವನು ಈ ಭ್ರಾಂತಿಯ ಬಂಧನದಲ್ಲಿ ಬಂಧಿತನಾಗುವ ರೀತಿಯನ್ನು ತಿಳಿಸಿದನು. ಪೂರ್ವಪುಣ್ಯ ವಿಶೇಷದಿಂದ ತನ್ನ ಅಜ್ಞಾನವನ್ನು ಅರಿತು ಅದನ್ನು ಕಳೆದುಕೊಳ್ಳಲು ಈ ಸಂಸಾರ ಹೇಯವೆಂದು ಮನಗಂಡು, ಸಾಂಸಾರಿಕ ಭ್ರಾಂತಿಯನ್ನು ನಿರಸನ ಮಾಡಿಕೊಳ್ಳಲು ಸದ್ಗುರು ಸನ್ನಿಧಿಯನ್ನು ಬಯಸಿಬರುವನು. ಶುದ್ಧಾಂತಃಕರಣ ನಾಗಲು ಸದ್ಗುರುವಿನಲ್ಲಿ ಜೀವಾತ್ಮನು ಪ್ರಾರ್ಥಿಸುವನು;- ಗುರುವೆ ! ಇಲ್ಲಿಯ ವರೆಗೆ ವೈಷಯಿಕ ವ್ಯಾಮೋಹವು ಬಹಳ ದಿನಗಳಿಂದಲೂ ನನ್ನಲ್ಲಿ ಮನೆಮಾಡಿಕೊಂಡಿತ್ತು. ಅದಕ್ಕಾಗಿ ನಿನ್ನ ಸಾನ್ನಿಧ್ಯ ದೂರವಾಗಿತ್ತು, ಈ ಸಂಸಾರ ಭ್ರಾಂತಿಯು ಸ್ಥಿರವಾದುದಲ್ಲ. ಅದು ನಿನ್ನ ಕೃಪಾದೃಷ್ಟಿ ಬೀಳುತ್ತಲೆ ಕಳಚಿ ಹೋಗುವದು. ಸತ್ಪುರುಷರ ಸಹವಾಸದಿಂದ ಯಥಾರ್ಥ ವಸ್ತುವಿನ ತಿಳುವಳಿಕೆಯಾದರೆ ಅದು ಹಾರಿಹೋಗುವದು. ನಿನ್ನ ಬೋಧಾಮೃತ ಸಿಂಚನೆಯಿಂದ ಎನ್ನ ಜೀವನದಲ್ಲಿ ನವಚೈತನ್ಯ ತುಂಬುವದು. ಅಜ್ಞಾನವು ಸಂಪೂರ್ಣವಾಗಿ ನಾಶವಾಗುವದು. ಪೂಜ್ಯಪಾದರಾದ ಶಂಕರಾಚಾರ್ಯರು ಸಹ ಭಗವದ್ಗೀತಾ ಭಾಷ್ಯ’ ದಲ್ಲಿ –

ಭ್ರಾಂತಿಪ್ರತ್ಯಯ ನಿಮಿತ್ತ ಏವಾಯಂ ಸಂಸಾರಭ್ರಮಃ |

ನ ತು ಪರಮಾರ್ಥಃ ಇತಿ ಸಮ್ಯಗ್ ದರ್ಶನಾತ್ |

ಅತ್ಯಂತಮೇವ ಉಪರಮಃ | || ೧೮ – ೬೬ ||

“ಸಂಸಾರ ಭ್ರಮೆಯು ಭ್ರಾಂತಿ ಪ್ರತ್ಯಯದ (ದೇಹಾದಿಗಳಲ್ಲಿ ಕರ್ತೃತ್ವ, ಭೋಕೃತ್ವದ ತಪ್ಪು ತಿಳುವಳಿಕೆ) ನಿಮಿತ್ತದಿಂದಲೇ ಉಂಟಾಗಿರುತ್ತದೆಯೇ ಹೊರತು ಪರಮಾರ್ಥವಲ್ಲ. ಅಂದರೆ ಸತ್ಯವಾದುದಲ್ಲ. ಆದ್ದರಿಂದ ಇದು ಸರಿಯಾದ ತಿಳುವಳಿಕೆಯಿಂದ ಅತ್ಯಂತವಾಗಿ ನಾಶಹೊಂದುತ್ತದೆ.’ ಎಂದು ಪ್ರತಿಪಾದಿಸಿದ್ದಾರೆ. ಅದರಂತೆ ಸಂಸಾರವು ಹೇಯವೆಂಬುದನ್ನರಿತು ಪರಮ ಗುರುನಾಥನೇ ! ನಿನ್ನ ಪಾದಪದ್ಮಂಗಳಲ್ಲಿ ಶರಣಾಗತ ನಾಗಿದ್ದೇನೆ. ಕೃಪೆಮಾಡಿ ರಕ್ಷಿಸು.

ಶರಣಾಗತನಾದ ಶಿಷ್ಯನನ್ನು ಸದ್ಗುರು ದಯಾದೃಷ್ಟಿಯಿಂದ ಅವಲೋಕಿಸಿ ಕರುಣೆ ಬೀರುತ್ತಾನೆ.ʼʼ ಮಗು ! ನೀನು ಸಂಸಾರಭ್ರಾಂತಿಯೊಳಗಿದ್ದು ದುಃಖ ಪಟ್ಟಿರುವೆ. ಬಳಲಿರುವೆ. ಬೆಂದಿರುವೆ. ಬಾ ಒಳಗೆ” ಎಂದು ಸಮೀಪಕ್ಕೆ ಕರೆದು ಮೈದಡವಿ ಸಂತೈಸುತ್ತಾನೆ. ಆತ್ಮೀಯತೆಯಿಂದ ಕಲ್ಯಾಣ ಕೇಳುತ್ತಾನೆ. ಜನ ಗದ್ದಲದಿಂದ ಬೇರ್ಪಡಿಸಿ ಏಕಾಂತದಲ್ಲಿ ಕರೆದೊಯ್ಯುತ್ತಾನೆ. ಧೈರ್ಯವನ್ನು ದಯಪಾಲಿಸುತ್ತಾನೆ.

 ಬಳಲಿದವನನ್ನು ಸಂತೈಸಲು ಏಕಾಂತವಾಸ ಬಹಳ ಮುಖ್ಯ. ಇದು ಲೌಕಿಕಾನು ಭವವೂ ಹೌದು. ಶಾಸ್ತ್ರಶ್ರವಣಕ್ಕಾದರೂ ಏಕಾಂತವಾಸವು ಅತ್ಯವಶ್ಯಬೇಕು. ಯಾಕಂದರೆ ಸಂತೆಯಲ್ಲಿ ಶಾಸ್ತ್ರವನ್ನು ಹೇಳಬಾರದೆಂಬ ಲೋಕೋಕ್ತಿಯೂ ಉಂಟು. ಅದಕ್ಕಾಗಿ ಅನುಭವ ಗೋಷ್ಠಿಯನ್ನು ಪ್ರಶಾಂತ ವಾತಾವರಣದಲ್ಲಿ ನೆರವೇರಿಸಬೇಕು. ಗಹನವಾದ ವಿಷಯವನ್ನು ಕೇಳುವ ಶಿಷ್ಯನ ಮನಸ್ಸು ಚಂಚಲವಾದರೆ ಗುರುವಿನ ಶ್ರಮ ವ್ಯರ್ಥವಾಗುವದು. ಪ್ರಫುಲ್ಲಮನದಿಂದ ಗುರುವಚನವನ್ನು ಅರಿಯಲು ಏಕಾಂತವಾಸ, ಪರಿಪೂರ್ಣವಾದ ಏಕಾಗ್ರತೆಗಳೇ ಸಾಧನವಾಗುವವು. ಅದಕ್ಕಾಗಿ ಪ್ರಶಾಂತವಾದ ಏಕಾಂತದಲ್ಲಿ ನನಗೆ ನೀನು ʼʼಪ್ರಥಮತಃ ಪರಾತ್ಪರ ಪರಶಿವನೇ ಆಗಿದ್ದಿ. ಸಾಂಸಾರಿಕ ಭ್ರಾಂತಿಯಿಂದ ಅದನ್ನು ಮರೆತಿದ್ದಿ, ಅದಕ್ಕಾಗಿ ಪಡಬಾರದ ಕಷ್ಟಗಳನ್ನು ಅನುಭವಿಸಿರುವಿ” ಎಂದು ಕರುಣದಿಂದ ಬೋಧೆಗೈದೆ. ಓ ಕರುಣಾಕರನೆ ! ನಿನ್ನಂಥ ಪರಮ ಗುರುವನ್ನು ಪಡೆದ ನಾನು ಧನ್ಯನು. ಕೃತಾರ್ಥನು.

ಶ್ರದ್ಧಾವಾನ್ ಲಭತೇ ಜ್ಞಾನಮ್ ।”

ಗುರು ಶುಶ್ರೂಷಯಾ ವಿದ್ಯಾ |

ಶ್ರದ್ಧೆ (ವಿಶ್ವಾಸ) ಯುಳ್ಳವನು ಆತ್ಮಜ್ಞಾನವನ್ನು ಹೊಂದುವನು. ಮತ್ತು ಗುರು ಸೇವಾ ಫಲದಿಂದಲೂ ವಿದ್ಯಾರ್ಜನೆಯನ್ನು  ಮಾಡಿಕೊಳ್ಳಬಹುದೆಂಬ ಗೀತೋಕ್ತಿಗಳು ಅತ್ಯಂತ ಯಥಾರ್ಥವಾಗಿವೆ. ಸದ್ಗುರುವಿನ ಸೇವೆಯನ್ನು ಶ್ರದ್ಧಾಪೂರ್ವಕ ಮಾಡಬೇಕು. ಶ್ರೀಗುರುವಿನಲ್ಲಿ ಆಪ್ತ-ಅಂಗ-ಸ್ಥಾನ-ಸದ್ಭಾವಗಳೆಂಬ ಚತುರ್ವಿಧ ಸೇವೆಗಳನ್ನು ಸಮರ್ಪಿಸಬೇಕು. ಸಂತೃಪ್ತಿಗೊಳಿಸಬೇಕು. ಮಾತಿನಿಂದ ಗುರು ದೊರೆಯುವದಿಲ್ಲ.  ಗುಲಾಮತನ ಅವಶ್ಯಬೇಕು. ಕಿಂಕರನಾಗಬೇಕು. ಗೋವು ಕೀಳಿಂಗಲ್ಲದೆ ಹೈನ ಕರೆಯದು. ಗೋಸೇವೆ ಮಾಡಿ ಕಿಂಕರನಾಗಿ ಅದರ ಪಾದದಡಿ ಕುಳಿತರೇನೆ ಹಾಲು ಸಿಕ್ಕುವದು. ಅದರಂತೆ ಸದ್ಗುರುನಾಥನು ಸೇವೆಗೆ ಒಲಿದು ಕರುಣಾಮೃತವನ್ನು ಪಾನಮಾಡಿಸುವನು. ಆಗ ಸಂಸಾರ ಭ್ರಾಂತಿಯು ದಿಕ್ಕೆಟ್ಟು ಓಡಿಹೋಗುವದು. ಭ್ರಮೆಯಳಿದು ಭಕ್ತಿಭಾವ ಅಳವಡುವದು. ಧನ-ಕನಕ-ಕಾಮಿನಿಯರಲ್ಲಿಯ ವ್ಯಾಮೋಹವೇ  ಗುರುಸನ್ನಿಧಿಯಲ್ಲಿ ಪರಿಪಾಕಗೊಂಡು ಭಕ್ತಿಯಾಗುವದು.

 ಇಂಥ ಭಕ್ತಿಯಿಂದ ಮಾತ್ರ ಮುಕ್ತಿ, ಸಾಮರಸ್ಯ ಸಮನಿಸುವದು. “ಕ್ತೇ ಸಾಧ್ಯಂ ನ ಹಿ ಕಿಂಚಿದಸ್ತಿʼʼ ಭಕ್ತಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಶಿವಭಕ್ತಿಯು ಬೇಡನನ್ನು ಸಹ ಭಕ್ತ ಶ್ರೇಷ್ಠನನ್ನಾಗಿ ಮಾಡಲಿಲ್ಲವೆ ? ಭಕ್ತಿಯಿಂದಲೇ ಗುರುಸಾನಿಧ್ಯ ಲಭ್ಯವಾಗಿ ಸಂಸಾರಭ್ರಾಂತಿಯು ನಿರಸನವಾಗುವದು. ಗುರುಸಾನಿಧ್ಯದ ಮಹತ್ವ ಅಪಾರವಾದುದು. ಅಂಥ ಸಾನ್ನಿಧ್ಯವನ್ನು ಸಂಪಾದಿಸಿದ ಮನುಷ್ಯನೇ ಧನ್ಯನು, ಪುಣ್ಯನು.

*

Related Posts