ಯಡೆಯೂರು ಸಿದ್ಧಲಿಂಗ ಶಿವಯೋಗಿಗಳು

ಹೀ.ಚಿ.ಶಾಂತವೀರಯ್ಯ

 

 

 

 ( ಚಿತ್ರಕಲೆ ಕೃಪೆ : ಶ್ರೀ ಬುಳ್ಳಾ ಅವರ ಮನೆ ಗದಗ)

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯದ ಮಹಾಪೂರ ಉಕ್ಕಿ ಹರಿದುದು ಹನ್ನೆರಡನೆಯ ಶತಮಾನದಲ್ಲಿ. ಒಂದೇ ಹೊತ್ತಿಗೆ ತಲೆದೋರಿದ ನಕ್ಷತ್ರ ಪುಂಜದಂತೆ, ವಚನಕಾರರು ಉದಯವಾದರು. ಈ ಯುಗದಲ್ಲಿ ವಚನಕಾರರಿಂದ ಸ್ಫೂರ್ತಿ ಪಡೆದು ವೀರಶೈವ ಪುನರುಜೀವನವನ್ನು ಮಾಡಿದ ಶರಣರೂ ಸಾಧಕರೂ ಆಗಿ ಹೋದರು. ಆನಂತರ ನಾಲೈದು ಶತಮಾನಗಳ ಕಾಲದ ವಿಸ್ತಾರದ ಅವಧಿಯಲ್ಲಿ ಐದಾರು ಜನ ವಚನಕಾರರು ಮಾತ್ರ ಆಗಿಹೋಗಿದ್ದಾರೆ. ಅವರಲ್ಲಿಯೂ ಹಿಂದಿನ ವಚನಕಾರರ ಅನುಕರಣವಿದೆ. ಸ್ವತಂತ್ರ ತೇಜಸ್ಸು ಕಂಡುಬರುವುದು ಹದಿನೈದನೇ ಶತಮಾನದ (೧೪೭೦) ಷಟ್‌ಸ್ಥಲಜ್ಞಾನಿ, ನಿರಂಜನ ಮೂರ್ತಿ ಜ್ಞಾನಯೋಗಿ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರು ಈ ಶತಮಾನದ ಹಿರಿಯ ಅನುಭಾವಿ, ವಚನಕಾರ, ಜಗದ್ದುರು

. ಶ್ರೀ ಸಿದ್ಧಲಿಂಗೇಶ್ವರರು ಕ್ರಿಸ್ತಶಕ ೧೪೧೯  ರಿಂದ ೧೪೭೮ ರವರೆಗೆ ಆಳಿದ ವಿಜಯನಗರದ ಅರಸರಾದ ಪ್ರೌಢದೇವರಾಯ ಮತ್ತು ವಿರೂಪಾಕ್ಷರಾಯನ ಕಾಲದಲ್ಲಿ ರಾಜಮನ್ನಣೆ ಪಡೆದಂತೆ ತಿಳಿದು ಬರುತ್ತದೆ. ಈತನ ವಿಚಾರವನ್ನು ವಿರೂಪಾಕ್ಷ ಪಂಡಿತನು  ತನ್ನ ಚನ್ನಬಸವ ಪುರಾಣದಲ್ಲಿ

 “ಪರಮಗೋಸಲ ಚನ್ನಬಸವೇಶ್ವರನ ಹಸ್ತ | ಸರಸಿರುವ ನಿರಂಜನ ಗಣೇಶ್ವರಂ | ಹರುಷದಿಂದೊಗೆದು ಸಿದ್ದೇಶನಾಮವನಾಂತು ಕಗ್ಗೆರೆಯ ತೋಂಟಕೈದಿ ! ಇರದೆ ನಂಬ್ಯಣ್ಣನೆಂಬಾತನತಿ ಭಕ್ತಿಯಿಂ | ಶರಣೆಂದು ಬಿನ್ನವಿಸಿಕೊಂಡೀಗ | ತಿರುಗಿ ಬಂದಾನೆ ಕರಕೋಂಡು  ಪೋದಪೆನೆಂದು ಕಗ್ಗೆರೆಗೆ ಪೋಗಲಾಗ | ಜಗಳದಿಂದೂರೊಡೆದು  ಪೋಗಿ ದಿವಸಕ್ಕೆ | ಮಗುಳೆ ಬರ್ಪನ್ನೆಗಂ ತೋಂಟ  ದೊಳಗೇನುಮಂ। ಬಗೆಯದೆ ಶಿವಧ್ಯಾನದಿಂದೆ ಪರವಶವನೈದಿರೆ ಗೆದಲೆ ಹುತ್ತವಿಕ್ಕೆ ! ಜಗವೆಲ್ಲಮತಿ ಚೋದ್ಯದಿಂ ನೋಡಿ  ಹುತ್ತಮಂ | ಬಗಿದು ಕಂಡಾಗ ತೋಂಟದ ಸಿದ್ಧಲಿಂಗ  ಗಣಿತ ಮಹಾಪುರುಷನೆಂದು ಪೂಜಿಸುವರು ಅಲ್ಲಲ್ಲಿ ಗಣನಾಥರುದಿಸಿ ಚರರೂಪಿನಿಂದ ಅಲ್ಲಲ್ಲಿ ಪೂಜೆಗೊಳುತೈದಿ | ತೋಂಟದ ಯತಿಯ ಸಾರಲು ಪ್ರೀತಿಯಿಂದ ತೋಂಟದಾರ್ಯರಾ ವಿರತರೋಳ್ ‌ ತತ್ವಾನುಭವಂಗಳಿಂ ಸೊಲ್ಲು ಸೊಲ್ಲಿಗೆ ಪರಮ ಷಟ್‌ಸ್ಥಲವನು ಸರ್ವರಾವಿರತರಾದರು ಸಿದ್ಧಲಿಂಗೇಶ್ವರಂ” (೬೩-೪೪, ೪೫, ೪೬) ಹೀಗೆ ವರ್ಣಿಸಿದ್ದಾನೆ.

ನಿರಂಜನ ಗಣೇಶ್ವರನ ಅಪರಾವತಾರವೆಂದು ಸಿದ್ಧಲಿಂಗ ಯತಿಯನ್ನು ಕರೆದಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರಿನಲ್ಲಿ ಸಿದ್ಧಲಿಂಗನ ಗದ್ದುಗೆಗೆ ಕಟ್ಟಿದ ದೇವಾಲಯವಿದೆ. ಇದೊಂದು ಸುಕ್ಷೇತ್ರ, ಅಂದಿನ ವೀರಶೈವ ಕ್ಷೇತ್ರಗಳಲ್ಲಿ ಹಂಪೆ ಮೊದಲನೆಯದು, ಎಡೆಯೂರು ಎರಡನೆಯದು, ಇವರ ಶಿಷ್ಯ ಪರಂಪರೆ ಬಹುದೊಡ್ಡದು. ಹಾಗೆಯೇ ಗುರು ಪರಂಪರೆಯೂ ದೊಡ್ಡದು.

 ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸಮಾಧಿಸ್ಥರಾಗಿರುವ ಗೋಸಲ ಚನ್ನಬಸವೇಶ್ವರ ಮತ್ತು  ಸಿದ್ದಗಂಗೆಯಲ್ಲಿ ತಪಸ್ಸು ಮಾಡಿ ಸಿದ್ಧಗಂಗೆಯನ್ನು ಅನ್ವರ್ಥಗೊಳಿಸಿದ, ಸಿದ್ಧರ ಬೆಟ್ಟದಲ್ಲಿ ಸಮಾಧಿಸ್ಥರಾಗಿರುವ ಗೋಸಲ ಸಿದ್ದೇಶ್ವರರು ಇವರ ಗುರುಗಳು. ಇವರ ಶಿಷ್ಯ ಪರಂಪರೆಯಂತೂ ಬಹು ದೊಡ್ಡದು. ಸ್ವತಂತ್ರ ಸಿದ್ಧಲಿಂಗೇಶ್ವರ (ವಚನಕಾರ) ಗುಮ್ಮಳಾಪುರದ ಸಿದ್ಧಲಿಂಗೇಶ್ವರ (ಶೂನ್ಯ ಸಂಪಾದನೆಕಾರರು) ಇವರಲ್ಲಿ ಪ್ರಮುಖರು. ಅಲ್ಲದೆ ಎಡೆಯೂರು  ದೇವಾಲಯದಲ್ಲಿನ ಶಿಲಾ ಶಾಸನದಲ್ಲಿ ಹಲವರ ಹೆಸರುಗಳನ್ನು ಹೇಳಿದೆ.

ಮೈಸೂರು ಜಿಲ್ಲೆಯ ಹರದನಹಳ್ಳಿಯ ಈ ಹುಡುಗನ ಪೂರ್ವ ಇತಿಹಾಸ ತಿಳಿಯದು ತಂದೆ-ತಾಯಿ ಹೆಸರು ಗೊತ್ತಿಲ್ಲ. ೧೪೭೦ರಲ್ಲಿ ಜನನ, ಎಳಯಲ್ಲಿಯೇ ಯತಿಯಾಗಲು ಮನದಲ್ಲಿ ಸಮರ್ಥಗುರುವಿಗಾಗಿ ಹುಡುಕಾಡಿ ಗುಬ್ಬಿಯ ಗೋಸಲ ಚನ್ನಬಸವೇಶ್ವರರ ಹತ್ತಿರ ಬಂದರು. ಗುರುಗಳು ಕೇಳಿದರು. “ಏ ಹುಡುಗ ನೀನು ಯಾರು ? ಎಲ್ಲಿಂದ ಬಂದೆ ಎಂದು.” ಹುಡುಗ ಸಿದ್ದಲಿಂಗ ಉತ್ತರಿಸಿದ “ಅದನ್ನು ಕೇಳಲೆಂದೇ ನಾನು ತಮ್ಮಲ್ಲಿಗೆ ಬಂದೆ” ಎಂದ. ಗುರುಗಳು ಅವಾಕ್ಕಾದರೂ ಹುಡುಗನ ಬೆಡಗಿಗೆ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಇಡೀ ಜೀವ ಮಾನದುದ್ದಕ್ಕೂ ಸಿದ್ಧಲಿಂಗೇಶ್ವರರು ನಾನು ಯಾರು? ಎಲ್ಲಿಂದ ಬಂದೆ ಎಂಬುದಕ್ಕೆ ಉತ್ತರಿಸಿದ್ದಾರೆ.

`ತೋ(O)ಟ’ ಶಬ್ದಕ್ಕೆ ಅರ್ಥ ಬಂದುದೇ ಶಿವಯೋಗಿ ಸಿದ್ಧಲಿಂಗೇಶ್ವರರಿಂದ. ಕಗ್ಗೆರೆಯ ತೋಂಟದಲ್ಲಿ ಶಿವಯೋಗ ಸಮಾಧಿಯಲ್ಲಿ ಹನ್ನೆರಡು ವರ್ಷಗಳು ಇದ್ದದ್ದರಿಂದ ತೋಂಟದ – ಸಿದ್ಧಲಿಂಗ ಎಂದೂ, ಎಡೆಯೂರಿನಲ್ಲಿ ಸಮಾಧಿಸ್ಥರಾದುದರಿಂದ . ‘ಎಡೆಯೂರಪ್ಪ’ ಎಂಬ   ಹೆಸರುಗಳೂ  ಬಂದವು

ಇವರನ್ನು ಕುರಿತು ತೋಂಟದ ಸಿದ್ದೇಶ್ವರಪುರಾಣ-ಶಾಂತೇಶ ಕಾಲ೧೫೬೦ ಸಿದ್ಧೇಶ್ವರ ಪುರಾಣ-ವಿರಕ್ತ ತೋಂಟದಾರ್ಯ ಕಾಲ ೧೫೬೦, ಸಿದ್ಧಲಿಂಗ ಸಾಂಗತ್ಯ ಹೇರಂಬ ಕವಿ ಕಾಲ ೧೬೦೦ ಮತ್ತು ಸಿದ್ದೇಶ್ವರಪುರಾಣ ಸಿದ್ಧನಂಜೇಶ,  ಭಾವರತ್ನಾಭರಣ (೧೫೮೦), ತೋಂಟದ ಸಿದ್ಧೇಶ್ವರರ ರಗಳೆ ಮೊದಲಾದ ಗ್ರಂಥಗಳಲ್ಲಿ ವಿವರಿಸಲಾಗಿದೆ.

ವೀರಶೈವ ಚೆರಿತ್ರೆಯಲ್ಲಿ ಆಚಾರ್ಯ ರೇವಣಸಿದ್ಧ, ಮಹಾತ್ಮಾ ಅಲ್ಲಮಪ್ರಭು ಮತ್ತು ಭಗವಾನ್ ತೋಂಟದ ಸಿದ್ಧಲಿಂಗರು ಅತ್ಯಂತ ಪ್ರಸಿದ್ಧರು. ಇವರು ನಿರಂಜನ ಗಣೇಶ್ವರನ ಅವತಾರವೆಂದು ಕರೆದಿದ್ದಾರೆ.

ವೀರಶೈವ ಸಿದ್ಧಾಂತವನ್ನು ಜನಜೀವನದಲ್ಲಿ ಇಳಿಸಿ ವಚನ ರೂಪದಲ್ಲಿ ಹೊರಹೊಮ್ಮಿಸುವ ಹೊಸ ಅನುಭವ ಮಂಟಪವೊಂದು ತಲೆಯೆತ್ತಿತು. ನಾಲ್ಕು ಶತಮಾನ ಮೌನ  ತಳೆದಿದ್ದ ವಚನ ವಾಙ್ಮಯ ಮಹಾತ್ಮಾ ಸಿದ್ಧಲಿಂಗೇಶ್ವರರಿಂದ ಮತ್ತೆ ಚಿಗುರೊಡೆಯಿತು,

 ಅಗಾಧವಾದ ಪಾಂಡಿತ್ಯ; ಆಳವಾದ ಅನುಭವ, ಅಪರಿಮಿತ ವಾದ ಗುರುಸೇವೆಗಳಿಂದ ಉದಿಸಿ ಬಂದ ಅವರ ವಚನಾಮೃತವೇ ಈ ಮಾತಿಗೆ ಸಾಕ್ಷಿ “ಷಟ್‌ಸ್ಥಲ ಜ್ಞಾನಸಾರಾಮೃತ’.

 ಇದರಲ್ಲಿ ೭೦೧ ವಚನಗಳು, ೭ ವೃತ್ತಗಳೂ ಇವೆ. ‘ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ’ ಅಂಕಿತ. ೧೯೩೩ರಲ್ಲಿ ಹಾವೇರಿಯಲ್ಲಿ ೧೯೫೧ರಲ್ಲಿ ಮೈಸೂರಿನಲ್ಲಿ, ನಂತರ ಧಾರವಾಡ, ಮುರುಘಾಮಠದಲ್ಲಿ ಈಗ ಸಮಗ್ರ ವಚನ ಸಾಹಿತ್ಯ ಸಂಪುಟ ಬೆಂಗಳೂರಿನಲ್ಲಿ ಪ್ರಕಟವಾಗಿದೆ.

 “ಬ್ರಹ್ಮಾಂಡವೆಂಬ ತೋಟಕ್ಕೆ ಪ್ರಸಿದ್ಧ ಒಡೆಯರು ಜಗದ್ಗುರು ತೋಂಟದ ಸಿದ್ಧೇಶ್ವರರು. ಆ ಉದ್ಯಾನವನದಲ್ಲಿ ಮೂರ್ತಿ ಮಾಡಿ ತಮ್ಮ ಚಿದಂಗ ಸ್ವರೂಪವಾದ ಉತ್ತಂಡ ಮಾರ್ತಾಂಡ ಮೊದಲಾದ ಸದ್ಭಕ್ತ ಗಣಂಗಳು ಅಂದಾಚರಿಸಿ ನಿತ್ಯಾನಂದ ಶಿವ ಸುಖಿಗಳಾಗಲೆಂದು ಹಾಲುಕ್ಕಿ ಮೇಲುವುದು ತಮ್ಮ ಸ್ವಾನುಭಾವ ಸುಖದ ಪ್ರಸನ್ನ ವಾಕ್ಯಂಗಳೆಂ ಉಪದೇಶಿಸಿದ ಆರು ಸ್ಥಲಗಳ ಜ್ಞಾನದ ಸ್ವಾರಸ್ಯವೆಂಬ ಅಮೃತ” ಎಂಬ ವಿತರಣೆಯಿದೆ.

ಸಿದ್ಧಲಿಂಗೇಶ್ವರರು ಮೆರೆದ ಪವಾಡಗಳ ಮಾಲೆಯನ್ನೇ ಕವಿಗಳು ತಮ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ. ಹರದನಹಳ್ಳಿಯಲ್ಲಿ ನೀರಿನಿಂದ ದೀಪ ಉರಿಸಿದ್ದು, ಅರುಣಾದ್ರಿ ಕುಂಬಳೇಶ್ವರದಲ್ಲಿ ಅನೇಕ ಪವಾಡ ಮಾಡಿ, ತ್ರ್ಯಂಬಕೇಶ್ವರದಲ್ಲಿ  ಶಿವಲಿಂಗದೊಡನೆ ಮಾತನಾಡಿ, ವೈರಿಗಳಿಂದ ಹತನಾಗಿದ್ದ ತುರಷ್ಕರಾಜನನ್ನು ಬದುಕಿಸಿ ಮಹಾಬಲೇಶ್ವರಕ್ಕೆ ಬಂದು ಜೀವನದಿಯಾದ ಕೃಷ್ಣೆಯನ್ನು ವಂದಿಸಿ ಅದಕ್ಕೆ ಪ್ರವಾಹವನ್ನು ತಂದುಕೊಟ್ಟು ಉತ್ತುಂಗ ಯೋಗಿಯ ಗರ್ವವನ್ನ ಮುರಿದು ಅವನಿಗೆ ಉಪದೇಶ ಮಾಡಿ, ಉಳುಮೆಗೆ ಬಂದು ವೈಷ್ಣವ ಜನಾಂಗದ ಜೀಯನೊಡನೆ ವಾದ ಮಾಡಿ ಅವನನ್ನು ಸೋಲಿಸಿ ಮುಂದೆ ಜೈನರ ಕೇಂದ್ರವಾದ ಕಾರ್ಕಳಕ್ಕೆ ಬರಲು ಶ್ರವಣರನ್ನು ವಾದದಲ್ಲಿ ಗೆದ್ದು, ಚಂದ್ರದ್ರೋಣ ಪರ್ವತದಲ್ಲಿ  ಮಲ್ಲಿನಾಥನಿಂದ ಸತ್ಕಾರಪಡೆದು, ನಾಗಿಣಿ ನದೀತೀರದ ಕಗ್ಗೆರೆಗೆ ಬಂದು ಶಿವಯೋಗದಲ್ಲಿ ಸಮಾಧಿ ಸ್ಥನಾಗಿರಲು ಹುತ್ತ ಬೆಳೆದರೂ ಪರಿವೆಯಿಲ್ಲದೆ ಶಿವಯೋಗ ಚಕ್ರವರ್ತಿಯಾಗಿ ಪ್ರಸಿದ್ಧರಾಗಿ ‘ತೋಂಟದ ಸಿದ್ಧಲಿಂಗಯತಿ’ ಎಂದು ಖ್ಯಾತರಾಗಿ ತನ್ನನ್ನೇ ಕಚ್ಚಿ ಪ್ರಾಣ ಬಿಟ್ಟ ಹಾವಿಗೆ ಪುನರ್ ಜನ್ಮ ನೀಡಿ, ಭೂತಗಳ ಶಾಪವಿಮೋಚನೆ ಮಾಡಿ, ಗೌಡಿತಿಯ  ಭಕ್ತಿಯ ಹಾಲನ್ನು ಸೇವಿಸಿ, ಅಕಾಲದಲ್ಲಿ ನೇರಳೆಹಣ್ಣನ್ನು ಸೃಷ್ಟಿಸಿ, ಹೇರೂರಿನ ಲಿಂಗಣ್ಣನು ಬಡಿಸಿದ ವಿಷದ ಪಾಕವನ್ನು ಸೇವಿಸಿ, ತೆಂಗಿನ ಮರ ತಲೆ ಬಾಗಿ ನೀಡಿದ ಎಳನೀರನ್ನು ಕುಡಿದು, ಪರಶಿವನಿಂದ ಪರೀಕ್ಷಿಸಿಕೊಂಡು, ಹುಲಿಯೂರಿಗೆ ಬಂದಿದ್ದ ಉಪದ್ರವವನ್ನು ನೀಗಿ, ಜೇಡರ ಹುಳುವಾಗಿದ್ದ ಮುನಿ ಪುತ್ರನಿಗೆ ವಿಮೋಚನೆ ಮಾಡಿ ಸಹಸ್ರ ದಳದ ಬೆಟ್ಟ ತಾವರೆಯನ್ನು ಶಿವಲಿಂಗಕ್ಕೆ ಅರ್ಪಿಸಿ, ಪತಿವ್ರತೆಯ ಗಂಡನಿಗೆ ಜೀವದಾನ ಮಾಡಿ, ತಳಿಗೆಗಳ ಪವಾಡ ಮೆರೆದು, ಪಾದೋದಕವನ್ನು ಕಡೆಗಣಿಸಿದ ಭಕ್ತನೊಬ್ಬನ ಇಷ್ಟಲಿಂಗವನ್ನು ಬಯಲು ಮಾಡಿ, ಭಸ್ಮದ ಲಿಂಗವನ್ನು ಸ್ಪಟಿಕಲಿಂಗಮಾಡಿ, ತುಮಕೂರಿನಲ್ಲಿ ತುಂಬೆ ಹೂವಿನ ಮಳೆ ಕರೆದು, ಸತ್ತು ಹೋಗಿದ್ದ ಮಗು, ಎಮ್ಮೆ ಮತ್ತು ಕುದುರೆಗಳಿಗೆ ಜೀವದಾನ ಮಾಡಿ, ಕುರುಡನಿಗೆ ಕಣ್ಣು ಕೊಟ್ಟು, ಮಡಿಕೆಯ ಅನ್ನದಿಂದ ಐನೂರು ಮಂದಿಗೆ ದಾಸೋಹ ಮಾಡಿ ತೃಪ್ತಿ ಪಡಿಸಿ, ಶಿವಗಂಗೆಗೆ ಬಂದು ‘ದಕ್ಷಿಣಕಾಶಿಯೆನಿಸಿ ಶಿವಕ್ಷೇತ್ರ, ಕಗ್ಗೆರಿಗೆ ಬಂದು ಬೇಡ ಮತ್ತು ಮೊಲಗಳಿಗೆ ಜೀವದಾನ ಮಾಡಿ, ನಾಗಸಮುದ್ರದ ಶಿವಲಿಂಗದಿಂದ ದೇವಾಲಯದ ಬಾಗಿಲನ್ನು ತೆರೆದು, ಹೊಳಲಗುಂದದ ಮಾಯಿ ದೇವಿಯ ಭಕ್ತಿಯನ್ನು ಕೈಗೊಂಡು ಮಂಗಲದ ತೊರೆಯ ಪ್ರವಾಹದಲ್ಲಿ ದಾರಿ ಬಿಡಿಸಿ, ಎಡೆಯೂರಿಗೆ ಬಂದು ಸಿಡಿಲಿನ ಪೂಜೆ ಕೈಗೊಂಡು, ಪ್ರತಿವಾದಿಗಳಿಗೆ ಬುದ್ದಿ ಕಲಿಸಿ, ಕಳ್ಳತನ ಮಾಡಿದ ಹೆಂಗಸಿನ ಕೈ ಸ್ತಂಭನ ಮಾಡಿ ಆಕೆಗೆ ಉಪದೇಶವಿತ್ತು ಶಿವಶರಣೆಯಾಗುವಂತೆ ಪರಿವರ್ತಿಸಿ ಎಡೆಯೂರಿನ ಶ್ರೀಮಠದಲ್ಲಿ ಶಿವಚರಣರಲ್ಲಿ ಲೀನವಾದರು.

ಏಳುನೂರು ಚರಮೂರ್ತಿಗಳಿಗೆ ಗುರುವಾಗಿ ನೂರೊಂದು ವಿರಕ್ತರ ಗುಂಪಿಗೆ ಅಧ್ಯಕ್ಷರಾಗಿ, ಜನತೆಗೆ ಮಾರ್ಗದರ್ಶಕರಾಗಿ, ಧರ್ಮವನ್ನು ಮನೆ ಮನೆಗೆ, ಮನಮನಕ್ಕೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಈ ಮಹತ್ತರ ಕಾರ್ಯದಲ್ಲಿ ಚರಮೂರ್ತಿಗಳೂ, ವಿರಕ್ತರೂ ಸಿದ್ಧಲಿಂಗೇಶ್ವರರ ಧರ್ಮ ಪ್ರಸಾರಕ್ಕೆ ನೆರವಾದರು. ಶಿವಗಂಗೆ, ಸಿದ್ಧಗಂಗೆ, ಸಿದ್ಧರಬೆಟ್ಟ, ತುಮಕೂರು, ಗೂಳೂರು ಗುಬ್ಬಿ, ನಾಗವಲ್ಲಿ, ಹೆಬ್ಬೂರು, ಹೇರೂರು, ಹುಲಿಯೂರು, ಗೊಡೆಕೆರೆ, ನಾಗಸಮುದ್ರ, ಕಗ್ಗೆರೆ, ಎಡೆಯೂರು ಮೊದಲಾದ ಪ್ರದೇಶಗಳು ಧಾರ್ಮಿಕ ಕೇಂದ್ರಗಳಾಗಿದ್ದುವು. ಕಳೆದು ಹೋಗಿದ್ದ ಹೊಸದೊಂದು ಅನುಭವ ಮಂಟಪವೇ ತಲೆಯೆತ್ತಿ ಮೆರೆಯಿತು.

“ಕಾಮದಿಂದ ಕರಗಿದೆನಯ್ಯಾ, ಕ್ರೋಧದಿಂದ  ಕೊರಗಿದೆನಯ್ಯಾ, ಲೋಭಮೋಹಗಳಿಂದ ಅತಿನೊಂದೆನಯ್ಯ,  ಮದ ಮತ್ಸರಗಳಿಂದ ಬೆದ-ಬೆದ ಬೆಂದೆನಯ್ಯಾ, ಅಹಂಕಾರ ಮಮಕಾರದಿಂದ ಮತಿಮಂದನಾಗಿರ್ದೆನಯ್ಯ  ಇದು ಕಾರಣ ಎನ್ನ ಕಾಮಾದಿ ಅರಿಷಡ್ವರ್ಗಗಳ ಕಳೆದು ಅಹಂಕಾರ ಮಮಕಾರದ ಮಣಿಸಿ ನಿರಹಂಕಾರಿ ಎಂದೆನಿಸಯ್ಯ ಮಹಾಲಿಂಗ ಗುರು ಶಿವ  ಸಿದ್ದೇಶ್ವರ ಪ್ರಭುವೇ” ಎಂದು ಕಾಮ, ಕ್ರೋಧ, ಲೋಭ  ಮೋಹ, ಮದ, ಮತ್ಸರ, ಅಹಂಕಾರ ಮತ್ತು  ಮಮಕಾರಗಳನ್ನು  ತೊರೆದು ವೈರಾಗ್ಯನಿಧಿ, ನಿರಂಜನಮೂರ್ತಿ ಪ್ರಣವ ಸ್ವರೂಪಿಗಳಾಗಿ ಖ್ಯಾತರಾಗಿದ್ದಾರೆ.

 ಗುರು-ಶಿಷ್ಯರ ಸಂಬಂಧವನ್ನು ಕುರಿತು ಹೀಗೆ ಹೇಳಿದ್ದಾನೆ “ತಂದೆಯ ಸಾಮರ್ಥ್ಯದಿಂದ ಹುಟ್ಟಿದ ಮಗನಿಗೆ ತಂದೆಯ ಸ್ವರೂಪವಲ್ಲದೆ ಬೇರೆ ಒಂದು ಸ್ವರೂಪವೆಂದು ತಿಳಿಯಲುಂಟೆ ಅಯ್ಯ, ಶಿವ ತಾನೇ ತನ್ನ ಸಾಮರ್ಥ್ಯವೇ ಒಂದೆರಡಾಗಿ ಗುರುವೆಂದೂ ಶಿಷ್ಯನೆಂದೂ ಆಯಿತೆಂದರೆ, ಆ ಗುರುವಿಂಗೂ ಶಿಷ್ಯಂಗೂ ಬೇರೆಯಿಟ್ಟು ನುಡಿಯಲಾಗದಯ್ಯ ಗುರುವಿನ ಅಂಗ ಶಿಷ್ಯ, ಶಿಷ್ಯನ ಅಂಗ ಗುರು, ಗುರುವಿನ ಪ್ರಾಣ ಶಿಷ್ಯ ಶಿಷ್ಯನ ಪ್ರಾಣ ಗುರು. ಈ ಗುರು ಶಿಷ್ಯ ಸಂಬಂಧ ಒಂದಾದ ಬಳಿಕ ಗುರು ಶಿಷ್ಯರೆಂದು ಬೇರೆಯಿಟ್ಟು ನುಡಿವ ಭ್ರಷ್ಟರ  ಏನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ’ ಇದಕ್ಕಿಂತ ಗುರು-ಶಿಷ್ಯರ ಸಂಬಂಧವನ್ನು ಚಿತ್ರಿಸುವುದು ಕಷ್ಟ

  ಸುಧೆಯೊಳಗೆ ವಿಷವುಂಟೆ, ಮಧುರದೊಳಗೆ  ಕಹಿಯುಂಟೆ ದಿನಮಣಿಯೊಳಗೆ ಕಪ್ಪುಂಟೇ, ಬೆಳದಿಂಗಳೊಳಗೆ ಕಿಚ್ಚುಂಟೇ, ಅಮೃತಸಾಗರದೊಳಗೆ ಬೇವಿನ ಬಿಂದುವುಂಟೆ, ಮಹಾಜ್ಞಾನ ಸ್ವರೂಪರಪ್ಪ ಶರಣರೇ ಶಿವಲಿಂಗವೆಂದರಿತ ಮಹಾತ್ಮರಿಗೆ ಸಂಕಲ್ಪಭ್ರಮೆಯುಂಟೆ. ಅದೇತರ ವಿಶ್ವಾಸ ಸುಡುಸುಡು ಮಹಾಲಿಂಗಗುರು ಶಿವ ಸಿದ್ದೇಶ್ವರ ಪ್ರಭುವೆ” ಎಂದು ಲೌಕಿಕ ಜ್ಞಾನವನ್ನು ಪ್ರಕಟಿಸಿದ್ದಾರೆ.

 ಹಾಲಿನಲ್ಲಿ ತುಪ್ಪವಿದೆ ಎಂದು ಹೇಳಿದರೆ ಯಾರೂ ನಂಬರು, ಹಾಲು ಕಾಸಿ ಅದಕ್ಕೆ ಹೆಪ್ಪಿಟ್ಟು ಮೊಸರು ಮಾಡಿ ಕಡೆದು ಬೆಣ್ಣೆ ತೆಗೆದು ಕಾಸಿದರೆ ತುಪ್ಪ ಬರುವಂತೆ ದೇಹದ ಮರೆಗೊಂಡಿಪ್ಪ ಆತ್ಮನಂತೆ, ಶಕ್ತಿಯ ಮರೆಗೊಂಡಿಪ್ಪ ಶಿವನಂತೆ, ಕ್ಷೀರವ ಮರೆಗೊಂಡಿಪ್ಪ ತುಪ್ಪದಂತೆ, ವಾಚ್ಯವ ಮರೆಗೊಂಡಿಪ್ಪ ಅನಿರ್ವಾಚ್ಯದಂತೆ, ಲೋಕಾರ್ಥದೊಳಡಗಿಪ್ಪ ಪರಮಾರ್ಥದಂತೆ ಎನ್ನ ಆತ್ಮದೊಳಡಗಿಪ್ಪ ಪರಮಾರ್ಥ ತತ್ವವು, ಬೀಜದೊಳಡಗಿದ ವೃಕ್ಷದಂತೆ ಇದ್ದಿತಯ್ಯಾ ನಾನರಿಯದ ಮುನ್ನ ಸಂಬಂಧ ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ ಎಂದು ದೇಹ- ಆತ್ಮನ ಸಂಬಂಧವನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.

 ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹಂಗೆ ಹಡೆವಳಯ್ಯಾ, ಲಿಂಗಕ್ಕೆ ನಾಚಿದಾತ ಶರಣ ನೆಂತಪ್ಪನಯ್ಯಾ, ಈ ಲಜ್ಜೆ ನಾಚಿಕೆಯೆಂಬ ಪಾಶವಿದೇನಯ್ಯಾ, ಸಂಕಲ್ಪ ವಿಕಲ್ಪದಿಂದ ಸಂದೇಹಿಸುವ ಭ್ರಾಂತಿಯ ಲಜ್ಜೆಯಯ್ಯ ಅಹುದೋ ಅಲ್ಲವೋ ಏನೋ ಎಂತೋ ಎಂದು ಹಿಡಿವುತ್ತ ಬಿಡುತಿಪ್ಪ ಲಜ್ಞಾ ಭ್ರಾಂತಿ ಉಡುಗಿರಬೇಕಯ್ಯಾ ಗಂಡನ ಕುರುಹನರಿಯದಾಕೆಗೆ ಲಜ್ಜೆ ನಾಚಿಕೆ ಉಂಟಾದುದಯ್ಯ ಈ ಅರುಹು ಮರುಹೆಂಬ ಉಭಯ ಮುಸುಕ ತೆಗೆದು ನೆರೆ ಅರುಹಿನಲ್ಲಿ ಸನ್ನಿಹಿತವಿಲ್ಲದ ಜಡರುಗಳ ಕೈಯಲ್ಲಿ ಲಿಂಗಾನುಭಾವವ ಬೆಸಗೊಳ್ಳಲುಂಟೆ ಅಯ್ಯಾ ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ ಎಂದು ಲೌಕಿಕವನ್ನು ಮೆರೆದಿದ್ದಾರೆ.

ಲಿಂಗಯ್ಯನನ್ನು ಅಂಗಯ್ಯನ ಮೇಲೆ ಧರಿಸಿ ಪೂಜಿಸುವ ಲಿಂಗವಂತರಿಗೆ ಅಂದರೆ ಇಷ್ಟಲಿಂಗಧಾರಿಗಳಿಗೆ “ಲಿಂಗವಿದ್ದ ಹಸ್ತ ಲಿಂಗಕ್ಕೆ ಪೀಠಕಾಣಿರೋ ಲಿಂಗವ ಪೂಜಿಸುವ ಹಸ್ತವೇ ಶಿವಹಸ್ತ ಕಾಣಿರೋ ಲಿಂಗವಧರಿಸಿಪ್ಪಂಗವೇ ಲಿಂಗದಂಗವಾಗಿ ಲಿಂಗಕ್ಕೂ ಅಂಗಕ್ಕೂ ಭಿನ್ನವಿಲ್ಲ ಕಾಣಿರೋ  ಲಿಂಗಪ್ರಸಾದವ “ಕೊಂಬ ಪ್ರಾಣಲಿಂಗ ತಾ ಲಿಂಗಭರಿತವಾಗಿಪ್ಪ ಲಿಂಗದೇಹಿ ಪ್ರಾಣದೇಹಿಗೆ ಲಿಂಗಸಹ ಭೋಜನ ಮಾಡಬೇಕೆಂಬುದೆ ಸದಾಚಾರ ಹೀಂಗಲ್ಲದೆ ಅಂಗಕ್ಕೂ ಲಿಂಗಕ್ಕೂ ಭೇದಭಾವವ ಕಲ್ಪಿಸಿಕೊಂಡು ಲಿಂಗ ಸಹ   ಭೋಜನವ ಮಾಡಬಾರದೆಂಬ ಸಂದೇಹ ಸೂತಕ ಪ್ರಾಣಿಗಳಿಗೆ ಅಂಗದಲ್ಲಿ ಲಿಂಗವಿಲ್ಲ, ಮನದಲ್ಲಿ ಮಂತ್ರವಿಲ್ಲ ಪ್ರಾಣದಲ್ಲಿ ಪ್ರಸಾದವಿಲ್ಲ, ಪ್ರಸಾದವಿಲ್ಲದವರಿಗೆ ಮುಕ್ತಿಯೆಂಬುದೆಂದೂ ಇಲ್ಲ ನೀ ಸಾಕ್ಷಿಯಾಗಿ ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ’ ಎಂದು ಅಂಗ ಲಿಂಗವಾಗುವ ನರ-ಹರನಾಗುವ ಈ ಲೋಕವೇ ಸ್ವರ್ಗಲೋಕವಾಗುವ ತಂತ್ರವನ್ನು ತಿಳಿಸಿ ಪ್ರತಿಯೊಬ್ಬರೂ ಲಿಂಗವಂತರಾಗಿ ಲಿಂಗವಂತರಾದ ಮೇಲೆ, ‘ಲಿಂಗಾಂಗಿ’ ಆಗ ಬೇಕು, ಮಾನವ ದೇವನಾಗಬೇಕು ಎಂದು ಬಹು ಸುಲಭವಾಗಿ “ಲಿಂಗಾಂಗ’ ರಹಸ್ಯ ಬಿಡಿಸಿದ್ದಾರೆ.

 ಈ ವಚನವಂತೂ ಅನಾಚಾರಿಗಳಿಗೆ ಗುರು; ಲಿಂಗ; ಜಂಗಮ, ಪಾದೋದಕ, ಪ್ರಸಾದಗಳಲ್ಲಿ ನಿಷ್ಠೆ ಇಲ್ಲದವರಿಗೆ ಬರಸಿಡಿಲಿನಂತೆ ಎರಗಿದೆ, “ಆಚಾರವಿಲ್ಲದ ಗುರುಭೂತ, ಆಚಾರವಿಲ್ಲದ ಲಿಂಗಶಿಲೆ, ಆಚಾರವಿಲ್ಲದ ಜಂಗಮ ಮಾನವ, ಆಚಾರವಿಲ್ಲದ ಪಾದೋದಕ ನೀರು, ಆಚಾರವಿಲ್ಲದ ಪ್ರಸಾದ ಎಂಜಲು, ಭಕ್ತಾದುಃಕರ್ಮಿ ಇದು ಕಾರಣ ಅಟ್ಟವನೇರುವುದಕ್ಕೆ ನಿಚ್ಚಣಿಗೆ ಸೋಪಾನವಯ್ಯ ಹರಪದವನೆಯ್ದುವರೆ ಶ್ರೀ ಗುರು ಹೇಳಿದ ಸಾದಾಚಾರವೇ ಸೋಪಾನವಯ್ಯಾ ಗುರೂಪದೇಶ ಮೀರಿ ಮನಕ್ಕೆ ಬಂದಂತೆ ವರ್ತಿಸುವ ಪಾಪಿಗಳ ಎನಗೊಮ್ಮೆ ತೋರದಿರಯ್ಯ ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ?” ಎಂದು ಅಂತಹವರ ಮುಖ ದರ್ಶನ ಮಾಡಿಸಬೇಡ ಎಂದು ತನ್ನ ಆರಾಧ್ಯದೈವವನ್ನು ಪ್ರಾರ್ಥಿಸಿದ್ದಾರೆ.

ದೇವಸ್ಥಾನಕ್ಕೆ ಹೋಗುವಾಗ ಕೈಯಲ್ಲಿ ಒಯ್ಯುವುದು ಏನೆಂದು ಕೇಳಿದರೆ ‘ಹಣ್ಣುಕಾಯಿ’ ಎಂದು ಹೇಳುತ್ತಾರೆ. ಹಾಗೆಯೇ ಗುಡಿಯಿಂದ ಬರುವಾಗ ಏನೆಂದು ಕೇಳಿದರೆ ‘ಪ್ರಸಾದ’ ಎನ್ನುತ್ತಾರೆ. ಅಂದರೆ ‘ಹಣ್ಣು ಕಾಯಿ’ ಹೋಗಿ ಪ್ರಸಾದವಾದಂತೆ, ಆಚಾರದಿಂದ ನರ-ಹರನಾಗುತ್ತಾನೆ, ಹಾಗೆಯೇ ಪದಾರ್ಥ-ಪ್ರಸಾದವಾಗುತ್ತದೆ. ನೀರು-ಪಾದೋದಕ, ಜಡ ವಸ್ತುವಾದ ತಂತಿಯಲ್ಲಿ ವಿದ್ಯುತ್‌  ಸಂಚರಿಸಿದರೆ ಅವನೇ ಹರ, ಶಿವ, ಶರಣ ಎಂಬುದನ್ನು ಬಿಡಿಸಿ ತೋರಿಸಿದ್ದಾರೆ ಮೇಲಿನ ವಚನದಲ್ಲಿ,

 ಷಟ್‌ಸ್ಥಲಿಗಳಾಗುವವರು ಕಣ್ಣಿನಲ್ಲಿ ಕಾಮ, ಮನದಲ್ಲಿ ಕ್ರೋಧ, ಪ್ರಾಣದಲ್ಲಿ ಲೋಭ, ಬುದ್ಧಿಯಲ್ಲಿ ಮದ, ವಿವೇಕದಲ್ಲಿ ಮತ್ಸರ, ಅರುಹಿನಲ್ಲಿ ಮಾಯೆಯನ್ನು ಹೊಂದಿರಬಾರದು. ಅರಿಷಡ್ವರ್ಗಗಳನ್ನೇ ಬಿಟ್ಟ ಶರಣರೇ ನಿಜವಾದ ಷಟ್‌ಸ್ಥಲಿಗಳು ಎಂದು ನುಡಿದಿದ್ದಾರೆ.

 ಜ್ಯೋತಿಯಿದ್ದ ಮನೆಯಲ್ಲಿ ಕತ್ತಲೆಯುಂಟೆ ಹಾಗೆಯೇ ಲಿಂಗವಿದ್ದ ಮನೆಯಲ್ಲಿ ಅಜ್ಞಾನವುಂಟೆ ಎಂದು ‘ಲಿಂಗಜ್ಯೋತಿ’ ತಮಸ್ಸನ್ನು, ಅಂಧಕಾರ, ಅಜ್ಞಾನ, ಅಭಾವಗಳನ್ನು ಕಳೆಯುವ  ಮಹತ್ತರವಾದ ಶಕ್ತಿಯ ಸಾಧನ ಎಂದು ತಿಳಿಸಿದ್ದಾರೆ,

 ಅವರ ಷಟ್‌ಸ್ಥಲ ಜ್ಞಾನ ಸಾರಾಮೃತ ವಚನಗ್ರಂಥದಲ್ಲಿ “ಷಟ್‌ಸ್ಥಲಸಾರ’ವನ್ನು ತಿಳಿತಿಳಿಯಾಗಿ ವಿವರಿಸಿದ್ದಾರೆ. ಇದರಲ್ಲಿ ಸ್ತೋತ್ರ ವಚನ ೯, ಸರ್ವ ಶೂನ್ಯ ನಿರಾಲಂಬ ಸ್ಥಳ ೭, ಶೂನ್ಯಲಿಂಗಸ್ಥಲ ೫, ನಿಃಕಲ ಲಿಂಗಸ್ಥಲ ೧೧, ಮಹಾಲಿಂಗಸ್ಥಲ ೫,ಅಂಗಲಿಂಗೋದ್ಭವಗ್ಧಲ ೨೫, ಪಂಚಮೂರ್ತಿಲಿಂಗಸ್ಥಲ ೧೧, ಪಿಂಡಸ್ಥಲ ೭, ಪಿಂಡಜ್ಞಾನಸ್ಥಲ ೨೫, ಸಂಸಾರಹೇಯಸ್ಥಲ. ೫೧, ಗುರುಕರುಣಸ್ಥಲ ೧೬, ಲಿಂಗಧಾರಣ ಸ್ಥಲ ೧೨, ವಿಭೂತಿ  ಸ್ಥಲ ೯, ರುದ್ರಾಕ್ಷಿಸ್ಥಲ ೩, ಪಂಚಾಕ್ಷರೀ ಸ್ಥಲ ೧೫, ಭಕ್ತಿಸ್ಥಲ. ೫೨, ಮಹೇಶ ೩೬, ಪ್ರಸಾದಿ ೩೩, ಪ್ರಾಣಲಿಂಗಿ ೧೧೦, ಶರಣ ೧೩೪, ಐಕ್ಯ ೧೧೦, ನಿರವಯಸ್ಥಲ ೧೫, ಅಂತುಸ್ಥಲ ೨೧ಕ್ಕಂ. ವಚನ ೭೦೧ಕ್ಕಂ ಮಂಗಳಂ” ಎಂದಿದ್ದಾರೆ.

ಮಹಾಗುರು ಶಿವಯೋಗಿ ಸಿದ್ಧಲಿಂಗೇಶ್ವರರ ವಚನಗಳು ಜನಸಾಮಾನ್ಯರಿಗೆ ಉಪದೇಶ ನೀಡುವ, ದೀಕ್ಷೆ ಕೊಡುವ, ಭಕ್ತರನ್ನು ಕೈಹಿಡಿದು ನಡೆಸುವ ಗುರುಗಳಿಗೆ, ಜಂಗಮರಿಗೆ, ದಾರ್ಶನಿಕರಿಗೆ ಹೆಚ್ಚಾಗಿ ಅನ್ವಯವಾಗುತ್ತವೆ.

“ಕರಣದ ಕತ್ತಲೆಯ ಸದಮಲದ ಬೆಳಗನುಟ್ಟು ಪರಿಹರಿಸಬೇಕು ನೋಡಿರೊ ಜವ್ವನದ ಹೊರಕುಂಚ ಕಣ್ಣಿಗೆ ತೋರುವ ಕಾಮಜಾಲಂಗಳ ಶಿವಜ್ಞಾನಾಗ್ನಿಯಲ್ಲಿ ಸಿಕ್ಕಿ ಸುಟ್ಟುರು ಭಸ್ಮವ ಧರಿಸಬಲ್ಲರೆ ಶರಣೆಂಬೆ ಉಳಿದವರೆಲ್ಲ ಪುಸಿಯೆಂಬೆ  ಕಾಣಾʼʼಎನ್ನುವ ವಚನ ಅಕ್ಕಮಹಾದೇವಿಯರ ‘ಕರಣದ ಕತ್ತಲೆಯ ಬೆಳಗನುಟ್ಟುಗೆಲಿದೆ’ ಎಂಬ ವಚನವನ್ನು ಅನುವಾದಿಸಿ ದಂತಿದೆ,  ‘ನಾದಪ್ರಿಯಂ ನಾದಮಯಂ ನಾದಲಿಂಗ ಮಹೇಶ್ವರಂ ಆದಿಮಧ್ಯಾಂತರಹಿತ ವೇದೊವೇದವಿದಂ ಪದಂ ಮಂತ್ರಮೂರ್ತಿ ಮಹಾರುದ್ರಂ ಓಮಿತಿ ಜ್ಯೋತಿರೂಪಕಂ ಹರಹರಾ ಶಿವಶಿವಾ ಜಯಜಯ ಜಯತು ಶರಣ ಕರುಣಾಕರ ತ್ರಾಹಿ ಮಾಂ  ಭಕ್ತವತ್ಸಲ ಮತ್ಪ್ರಾಣನಾಥ” ಎಂಬ ವಚನ ಬಸವಣ್ಣನವರ “ನಾದಪ್ರಿಯ ಶಿವನೆಂಬರು” ಎಂಬ ವಚನವನ್ನು ನೆನಪಿಗೆ ತರುತ್ತದೆ.

  ಲಿಂಗವಂತರು ಲಿಂಗಪೂಜೆಯನ್ನು ಏಕಾಂತವಾಗಿ ಮಾಡುತ್ತಾರೆ. ಆದರೆ ಅದರ ಫಲಮಾತ್ರ ಇಡೀ ನಾಡಿಗೆ. ಅಂದರೆ ಪೂಜೆ ಏಕಾಂತ ಅದರ ಫಲ ಮಾತ್ರ ಲೋಕಾಂತವಾಗಬೇಕು ಅನ್ನುತ್ತಾರೆ ಹಿರಿಯರು. ಆದರೆ ಇದು ನಾಗರಿಕತೆಯ    ಹೆಚ್ಚಳದಿಂದ ಪೂಜೆ ಲೋಕಾಂತ ಆದರೆ ಫಲ ಮಾತ್ರ ಏಕಾಂತ ಅಂದರೆ ಕೆಲವರಿಗೆ ಮಾತ್ರ ಸಿಗುತ್ತಿರುವುದನ್ನು ಇಂದು ಕಾಣಬಹುದು.

 ವೀರಶೈವ ಧರ್ಮದ ಪುನರುಜ್ಜೀವನದ ಮಹಾಚೇತನ ವೆಂದರೆ ಸಿದ್ಧಲಿಂಗ ಗುರು. ಅವರ ಶಿಷ್ಯ ಪರಂಪರೆ  ಧರ್ಮದ ಏಳಿಗೆ, ಸಮಾಜ ಮತ್ತು ಸಂಸ್ಕೃತಿಯ ಸುಧಾರಣೆಗಳು ನಿಜಕ್ಕೂ ಮನನೀಯವಾದವುಗಳು. ಅವರ ವಚನಗಳು ಭಾವಗೀತೆಯಂತೆ ಸೊಗಸಾಗಿವೆ, ಕಾವ್ಯಮಯವೂ, ಉಪ ದೇಶಾತ್ಮಕವೂ, ಧರ್ಮಪ್ರದವೂ ಆಗಿವೆ. ಅವರ ವಚನಗಳು ಅಂದಿನ ಜನಜೀವನದ ಪ್ರತಿಬಿಂಬವೂ ಆಗಿವೆ

. ತೋಂಟದ ಸಿದ್ಧಲಿಂಗೇಶ್ವರರು ಹಲವಾರು ಬೆಡಗಿನ ವಚನಗಳನ್ನೂ ಬರೆದಿದ್ದಾರೆ. “ಏಳು ಕಮಲದ ಮೇಲೆ ಎಲೆಯಿಲ್ಲದ ವೃಕ್ಷದಲ್ಲಿ ಫಲವಿಲ್ಲದೆ ಹಣ್ಣಿನ ರುಚಿಯ ಬಾಯಾಗುಣಬಲ್ಲರ ನೆಲಬೆಂದಿತ್ತು ತಲೆ ಸತ್ತಿತ್ತು ಇದರ ಹೊಲಬ ಬಲ್ಲಾತನೇ ಪರಶಿವಯೋಗಿ ಕಾಣಾ ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ’.

“ಒಂದೆರಡಾಯಿತ್ತೆಂಬುವದು ಭ್ರಮೆ, ಎರಡು ಮೂರಾ ಯಿತ್ತೆಂಬುವದು ತಾ ಭ್ರಮೆ, ಮೂರು ಆರಾಯಿತ್ತೆಂಬುವದು ಮುನ್ನವೆ ಭ್ರಮೆ, ಎನಗೆ ಆರೂ ಇಲ್ಲ  ಮೂರೂ ಇಲ್ಲ ಉಭಯವು ಇಲ್ಲ, ಉಭಯವಳಿದು ಒಂದಾದೆನೆಂಬುವದು ಮುನ್ನವೇ ಅಲ್ಲ ಮುನ್ನ ಮುನ್ನವೆ ಪರವಸ್ತು ತಾನಾದ ಕಾರಣ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ’ ಎಂಬ ವಚನಗಳನ್ನು ಉದಾಹರಿಸಬಹುದು.

 ಎಡೆಯೂರು ತೋಂಟದ ಶ್ರೀ ಗುರು ಶಿವಯೋಗಿ ಸಿದ್ಧಲಿಂಗೇಶ್ವರರನ್ನು ಸ್ಮರಿಸಿದರೆ “ಅಳುರದು ಕಿಚ್ಚು ಮುಟ್ಟದು ವಿಪಾಹಿ ಮಹಾಗುರುವಿರ್ದ ನಾಡು ಬೆಳೆವುದು ಬೇಡಿದಂತೆ ಮಳೆಕೊಳ್ವುದು ಎನಿಪ್ಪ ಜಸಕ್ಕೆ ನೋಂತ ಶ್ರೀ ಗುರು ಶಿವಯೋಗಿ ಸಿದ್ಧಲಿಂಗೇಶ್ವರರಂ ಪೆಸರ್ಗೊಳ್ದುದು ಪುಣ್ಯಕಾರಕಂ” ಎಂದು ಶ್ರೀಗುರುವಿನ ಅಡಿ ಸೇರಿ ಧನ್ಯರಾಗೋಣ.

Related Posts