ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಭೂಮಿ ಬೀಜವ ಬಿತ್ತಿ | ಭೂಮಿಯನ್ನು ಬೆಳೆದೊಕ್ಕಿ
ಭೂಮಿಯನು ತೂರಲ್ಕೆ-ಭೂಮಿ ತಾ ಜೊಳ್ಳಾದು
ದೈ ಮಹಾಗುರುವೆ ಕೃಪೆಯಾಗು II೫ ೬ I
ಮಹಾಚೈತನ್ಯನೂ, ಸರ್ವಜ್ಞನೂ, ಸ್ವಯಂಜ್ಯೋತಿ ಸ್ವರೂಪನೂ ಆದ ಮಹಾದೇವನ ಅಂಶ ಸ್ವರೂಪನಾದ ಜೀವಾತ್ಮನು ಸದ್ಗತಿಯನ್ನು ಕಾಣಲು ಪಡೆದ ತನುವು ಪಂಚಭೂತಮಯವಾದುದು. ಅದರ ಯಥಾರ್ಥತೆಯನ್ನರಿತರೆ ಅದ್ಭುತ ಸ್ವರೂಪದ ಅರಿವಾಗುವದೆಂಬುದನ್ನು ಮನದಂದು ಒಂದೊಂದು ಮಹಾಭೂತದ ಸ್ವರೂಪ ವಿಸ್ತಾರ ಮಾಡುತ್ತಾನೆ ಶಿವಕವಿಯು . ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇದೈದು ಮಹಾಭೂತಗಳು. ನೆಲತತ್ತ್ವದಲ್ಲಿ ಜಲ, ಅನಲ, ಅನಿಲ, ಆಕಾಶಗಳು ಒಳಗೊಂಡಿರುತ್ತದೆ. ಅರ್ಥಾತ್ ಪೃಥ್ವಿಯು ಉಳಿದ ನಾಲ್ಕನ್ನು ಅಳವಡಿಸಿಕೊಂಡಿರುವದು. ಭೂಮಿಯ ಭಾಗ ಅರ್ಧವಿದ್ದರೆ ಉಳಿದ ನಾಲ್ಕು ಭೂತಗಳು ಎರಡೆರಡಾಣೆಯಂತ ಅರ್ಧ ಪ್ರಮಾಣದಲ್ಲಿ ಸಮಾವೇಶವಾಗುತ್ತವೆ. ನೆಲತತ್ತ್ವ ಪ್ರಧಾನವಾಗಿರುವದರಿಂದಲೇ ಎಲ್ಲ ವಸ್ತುಗಳು ಪೃಥ್ವಿಮಯನಾದ ಮಾನವನಿಗೆ ಹೆಚ್ಚು ಉಪಯೋಗವಾಗುತ್ತವೆ. ಈ ಭೂಮಿಯಲ್ಲಿಯೇ ಸಕಲ ಪದಾರ್ಥಗಳನ್ನು ಉತ್ಪನ್ನಗೊಳಿಸಲಾಗುವದು.
ಭೂಮಿಯಲ್ಲಿ ಹುಟ್ಟಿ ಬೆಳದ ಬೀಜಗಳನ್ನು ಪುನಃ ಪುನಃ ಹದಮಾಡಿದ ಮಣ್ಣಿನಲ್ಲಿ ಬೆಳೆಯುತ್ತ ಹೋದಂತೆ ಆ ಭೂಮಿಯ ಶಕ್ತಿಯು ಕಡಿಮೆಯಾಗುವದಿಲ್ಲವೆ ? ಮೊದಲು ಒಂದು ವರುಷದಲ್ಲಿ ಒಂದೇ ಬೆಳೆಯನ್ನು ಬೆಳೆಯಲಾಗುತ್ತಿತ್ತು. ಪೂರ್ವಕಾಲದಲ್ಲಿ ಬೆಳೆಯುತ್ತಿದ್ದ ಧಾನ್ಯಗಳಲ್ಲಿಯ ಗಂಧ ತತ್ತ್ವವನ್ನು ಇಂದಿನ ಅಧಿಕ ಇಳುವರಿಕೊಡುವ ಹೈಬ್ರಿಡ ತಳಿಗಳಲ್ಲಿ ಅಷ್ಟನ್ನು ಕಾಣುತ್ತಿಲ್ಲ. ಗಂಧವು ಬಹಳ ಕಡಿಮೆಯಾಗಿದೆ. ನಿಸ್ಸತ್ವಹುಲ್ಲನ್ನು ತಿನ್ನುವ ದನಗಳ ಹೈನದಲ್ಲಿಯೂ ಸಹ ಸುಗಂಧ ಸೋರಿಹೋಗಿದೆ. ಅದಲ್ಲದೆ ಮೇಲಿಂದಮೇಲೆ ಬೆಳೆ ತೆಗೆಯುವದರಿಂದ ಭೂಮಿಯ ಶಕ್ತಿಯು ಕುಂದಿಹೋಗಿದೆ. ಯಾಕಂದರೆ ಗಂಧವುಳ್ಳುವಿಕೆಯೇ ಭೂಮಿಯ ಲಕ್ಷಣವಾಗಿದೆ. ಇದರ ಅಭಾವವನ್ನು ಇಂದು ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ.
ಪೃಥ್ವಿ ತತ್ತ್ವಪ್ರಧಾನವಾದುದು ಈ ಭೌತಿಕ ದೇಹವು. ಸ್ಥೂಲದೇಹಪುಷ್ಟಿಗೆ ಮೂಲಭೂತವಾದ ಅನ್ನದಿಂದ ಉತ್ಪನ್ನವಾದ ಪುರುಷನ ವೀರ್ಯಬೀಜವನ್ನು ಸ್ತ್ರೀಯಳ ದೇಹಭೂಮಿಯಲ್ಲಿ ಬಿತ್ತಲು ಮತ್ತೊಂದು (ಭೂಮಿ) ದೇಹವು ಹುಟ್ಟುವದು. ಹೀಗೆ ದೇಹಗಳ ಉತ್ಪತ್ತಿ ಮಾಡಿದ ಸ್ತ್ರೀ ಪುರುಷರ ದೇಹಭೂಮಿಗಳು ಶಕ್ತಿಹೀನವಾಗುವವು. ಶಿಥಿಲಗೊಳ್ಳುವವು. ಕಾರಣ ದೈಹಿಕಗುಣಗಳನ್ನು ಹೊಂದಿದ ಮಾನವನು ದೈಹಿಕಗುಣಗಳನ್ನೇ ಬಿತ್ತಿ ಬೆಳೆದರೆ ದೈವಿಕಗುಣಗಳು ಬೆಳೆಯುವದಿಲ್ಲ. ಅದು ಕಾರಣ ಈ ಶರೀರದ ಅನಿತ್ಯತೆಯನ್ನು ಅರಿತು ನಿತ್ಯತ್ವದ ದೈವೀಗುಣಗಳನ್ನು ಅಳವಡಿಸಿಕೊಳ್ಳಬೇಕಾದುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.
“…..ಕೂಡಲ ಸಂಗಮದೇವರನೊಲಿಸಲು ಬಂದ
ಪ್ರಸಾದ ಕಾಯವನು ಕೆಡಿಸಲಾಗದು’
ಎಂದು ಅಣ್ಣನವರೂ ಬೋಧಿಸಿದ್ದಾರೆ. ಅನುಭವಿಗಳೂ
‘ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಃ |
ನಿತ್ಯಂ ಸನ್ನಿಹಿತೋ ಮೃತ್ಯುಃ ಕರ್ತವ್ಯ ಧರ್ಮಸಂಗ್ರಹಃ ||
ನಾಶಗುಣವುಳ್ಳ ಶರೀರವು ಅನಿತ್ಯ; ಸಂಪಾದಿಸಲ್ಪಡುವ ಧನ-ಕನಕಾದಿ ಸಂಪತ್ತು ಅಶಾಶ್ವತವಾಗಿದೆ. ಆದರೆ ನಿಶ್ಚಯವಾಗಿ ಬರುವಂಥಹದು ಮೃತ್ಯುವೆನಿಸಿದೆ. ಇದು ಯಾರನ್ನೂ ಬಿಡುವದಿಲ್ಲ.
‘ಜಾತಸ್ಯ ಮರಣಂ ಧೃವಂ’
ಹುಟ್ಟಿದವನಿಗೆ ಸಾವು ನಿಶ್ಚಯವಾಗಿ ಬರುವದು. ಆದ್ದರಿಂದ ಅನಿತ್ಯವಾದ ದೇಹದಿಂದ ನಿತ್ಯವಾದ ಧರ್ಮಾಚರಣೆಯನ್ನು ಮಾಡಿ ಅಶಾಶ್ವತವಾದ ಸಂಪತ್ತಿನಿಂದ ಸತ್ಯವೆನಿಸಿದ ಧರ್ಮಕಾರ್ಯಗಳನ್ನು ಪೂರೈಸಿದರೆ ಅಮರತ್ವವನ್ನು ಆಶ್ರಯಿಸಬಹುದು. ನಿತ್ಯತ್ವವನ್ನು ಪಡೆಯಬಹುದು. ಶಾರೀರಿಕ ಸುಖಕ್ಕಾಗಿ ಹಾತೊರೆಯುವದರಿಂದ ಪುಣ್ಯಮಯವಾದ ಮಾನವಶರೀರವು ನಾಶವಾಗಿ ಹೋಗುವದು. ಸತ್ಪುರುಷರ ಶರಣರ ಆದರ್ಶವಿಡಿದು ಸನ್ಮಾರ್ಗದಲ್ಲಿ ನಡೆದರೆ ಜೊಳ್ಳಾಗುವ ಶರೀರದಿಂದ ಶಾಶ್ವತವಾದ ಕೀರ್ತಿಯನ್ನು ಪಡೆಯಬಹುದು. ಅನೇಕ ಮಹಾನುಭಾವಿಗಳ ಸ್ಥೂಲಕಾಯವು ಕಣ್ಣಿಗೆ ಕಾಣದಿದ್ದರೂ ಅವರ ಕೀರ್ತಿಶರೀರವು ಜಗತ್ತಿನಲ್ಲಿ ಸ್ಥಿರತ್ವವನ್ನು ಪಡೆದಿದೆ.
ಪರಮಗುರುವೆ ! ಶಾರೀರಿಕಗುಣಗಳನ್ನು ಕಡಿಮೆ ಮಾಡಿ ಲಿಂಗಗುಣಗಳನ್ನು ಅಳವಡಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸು ಇದು ನಿಮ್ಮ ಧರ್ಮ
ನೀರು ಏರಿಯನೇರಿ | ನೀರಡಿಸಿ ಬಾಯಾರಿ
ನೀರು ನಿರ್ಗುಡಿದು –ನೀರಡಿಸಿ ಸತ್ತಿತೈ
ನೀರ ಶ್ರೀ ಗುರುವೆ ಕೃಪೆಯಾಗು ||೫೭ ||
ಇಲ್ಲಿ ಜಲಭೂತದ ವಿಷಯ ವಿಸ್ತಾರಗೊಂಡಿದೆ. ನೀರು ದ್ರವಪದಾರ್ಥವು. ಹರಿದಾಡುವದು ಇದರ ಸ್ವಭಾವವು. ಹರಿದು ಹೋಗುವ ನೀರಿಗೆ ಏರಿ (ವಡ್ಡು)ಯನ್ನು ಹಾಕಿ ಕೆರೆಯನ್ನು ನಿರ್ಮಾಣಮಾಡುವರು. ಹರಿದು ಬಂದ ನೀರು ಏರಿಯಲ್ಲಿ ಇಂಗಿ ಬಿಸಿಲಿನಿಂದ ಒಣಗಿ ಹೋಗುವದು. ಸ್ಥಿರವಾಗಿ ಉಳಿಯುವದಿಲ್ಲ.
ತಾತ್ವಿಕದೃಷ್ಟಿಯಿಂದ ಜಲತತ್ತ್ವವೇ ಬುದ್ಧಿಯೆನಿಸಬಹುದು. ಆದರೆ ಸಾದೃಶ್ಯ ದಿಂದ ನೀರಿನಂತೆ ಚಂಚಲವಾದುದು ಮನಸ್ಸು. ಈ ಸಂದರ್ಭದಲ್ಲಿ ಬುದ್ಧಿ ಮನಗಳೆರಡಕ್ಕೂ ಅರ್ಥವನ್ನು ಅನ್ವಯಿಸಬಹುದು ನೀರಿನಂತಿರುವ ಮನಸ್ಸು. ಏರಿಯಂದರೆ ದೇಹ. ಈ ದೇಹದಲ್ಲಿ ವ್ಯಾಪಿಸಿ ವಿಷಯ ಬಯಕೆಯೆಂಬ ನೀರನ್ನು ಕುಡಿದರೂ ಪುನಃ ಪುನಃ ಅದಕ್ಕಾಗಿಯೇ ಹಂಬಲಿಸಿ ನಿಜ-ಸುಖಸಂತೃಪ್ತಿಯನ್ನು ಕಾಣದೆ, ಬಾಯಾರಿಕೆ ತೀರದೆ ಶರೀರವು ನಾಶವಾದಾಗ ಮನವು ನಾಶವಾಗುವದಿಲ್ಲವೆ ? ಪಾತ್ರೆಯಲ್ಲಿ ಹಾಕಿದ ಎಣ್ಣೆಯನ್ನು ತೆಗೆದರೂ ಅದರ ವಾಸನೆಯು ಉಳಿಯುವಂತೆ, ಬುದ್ಧಿಗತವಾದ ವಾಸನೆಯು ಉಳಿದುಕೊಳ್ಳುವದು. ಆ ವಿಷಯ ವಾಸನೆಯನ್ನು ತೀರಿಸಿಕೊಳ್ಳಲು ಮತ್ತೆ ಮತ್ತೆ ಭವಕ್ಕೆ ಬರಬೇಕಾಗುವದು. ಈ ವಿಷಯ ವಾಸನೆಯು ಭೋಗದಿಂದ ತೃಪ್ತಿಯಾಗುವದೂ ಇಲ್ಲ. ಈ ವಿಚಾರವನ್ನು ೪೪ನೆಯ ತ್ರಿಪದಿಯ ವಿವರಣೆಯಲ್ಲಿ ವಿವೇಚಿಸಲಾಗಿದೆ.
ಚಂಚಲವಾದ ಮನವನ್ನು ಸ್ಥಿರಗೊಳಿಸಿದರೆ ಪರಮನ ಇರುವನ್ನು ಅರಿಯಲು ಸಾಧ್ಯವಾಗುವದಲ್ಲದೆ, ಸ್ಥಿರಮನಸ್ಸಿನಿಂದ ಪರಶಿವನೇ ತಾನಾಗಬಲ್ಲನು. ಜ್ಞಾನಿಗಳು
ರಸಶ್ಚ ಮನಸಶ್ಚೈ ಚಂಚಲತ್ವಂ ಸ್ವಭಾವತಃ |
ರಸೋ ಬದ್ದೋ ಮನೋ ಬದ್ದೋ ಕಿಂ ನ ಸಿದ್ಧ್ಯತಿ ಭೂತಲೇ ||
ರಸವೆಂದರೆ ನೀರು ಮತ್ತು ಪಾದರಸ. ಇಂದಿನಮಾನವನು ಹರಿಯುವ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿ ಭೂಮಿಯನ್ನು ‘ಸುಜಲಾಂ ಸುಫಲಾಂ’ ಎಂದು ಬಣ್ಣಿಸುವಂತೆ ಸಾರ್ಥಕ ಮಾಡಹತ್ತಿದ್ದಾನೆ. ಜನತೆಯ ಹಸಿವನ್ನು ದೂರಮಾಡಲು ಹಸಿರು ಕ್ರಾಂತಿಗೆ ಕೈಯಿಕ್ಕಿದ್ದಾನೆ. ಅದರಂತೆ ಸ್ವಭಾವತಃ ಚಂಚಲವಾದವುಗಳು ಪಾದರಸ ಮತ್ತು ಮನಸ್ಸು . ಪಾದರಸವನ್ನು ಘಟ್ಟಿಗೊಳಿಸಿದರೆ ಚಿನ್ನವನ್ನಾಗಿ ಪರಿವರ್ತಿಸಬಹುದು. ಮನವನ್ನು ಸ್ಥಿರಗೊಳಿಸಿದರೆ ಮಹಾದೇವನನ್ನು ಕೂಡಬಹುದೆಂದು ತಿಳಿಸಿದ್ದಾರೆ. ಸ್ಥಿರಮನಸ್ಸಿನಿಂದ ಸಾಧ್ಯವಾಗ ಸಿದ್ಧಿಯಿಲ್ಲವೆಂಬುದು ಅವರ ಅಭಿಪ್ರಾಯ. ವಿಷಯ ವಾಸನೆಯಲ್ಲಿ ಬದ್ಧವಾದ ಬುದ್ಧಿಯು ಪುನಃ ಪುನಃ ಭವಕ್ಕೆ ನೂಕುತ್ತದೆ. ಅದುಕಾರಣ ವಿಷಯ ನೀರಸನಾದ ಶ್ರೀಗುರುವಿನಲ್ಲಿ ಶರಣಾಗತನಾಗಬೇಕು. ಗುರುವು ಶಿಷ್ಯನ ತನು-ಮನ-ಬುದ್ಧಿ-ಭಾವಗಳನ್ನು ಪರಿಶುದ್ಧಗೊಳಿಸುತ್ತಾನೆ. ಸತ್ಕ್ರಿಯೆಗಳಿಂದ ತನುಶುದ್ಧವಾಗುವದು. ಶಿವಮಂತ್ರ ಜಪದಿಂದ ಮನ ಪಾವನಗೊಳ್ಳುವದು. ಸುಜ್ಞಾನ ದಿಂದ ಸುಬುದ್ಧಿಯಾಗುವದು. ಸದ್ವಿವೇಕದಿಂದ ಭಾವವು ಸದ್ಭಾವವಾಗುವದು. ವೈರಾಗ್ಯನಿಧಿ ಅಕ್ಕನು –
……….ಎನಗುಳ್ಳುದೊಂದು ಮನ,
ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ,
ಚನ್ನಮಲ್ಲಿಕಾರ್ಜುನದೇವ ! ಇನ್ನು ಭವವುಂಟೆ ?’
ಎಲ್ಲ ಇಂದ್ರಿಯಗಳಿಗೆ ಪ್ರಮುಖವಾದ ಹಾಗೂ ನೀರಿನಂತಿರುವ ಮನವೇ ಮುಖ್ಯವಾದುದು. ಅದು ನಿಮ್ಮಲ್ಲಿ ಬೆರೆದ ಬಳಿಕ ಭವವೆಂಬುದೇ ಇಲ್ಲವೆಂದು ಪ್ರತಿಪಾದಿಸಿದ್ದಾಳೆ. ಗುರುವೆ ! ಮನದ ಚಾಂಚಲ್ಯವನ್ನು ಕಳೆದು ವಿಷಯವಾಸನೆಯನ್ನು ಪರಿಹರಿಸಿ ಮನವು ಮಹಾಲಿಂಗದಲ್ಲಿ ಬೆರೆಯುವಂತೆ ಹರಸು.
ಇಲ್ಲಿ ಬಳಸಿದ ನೀರ” ಪದವು ಶ್ರೀಗುರುವಿಗೆ ಸಂಬೋಧನೆಯಾಗಿದೆ. ನೀರು ಮತ್ತು ನೀರ ಪದಗಳಲ್ಲಿ ಅದೆಷ್ಟು ಅಂತರ ! ನೀರು ವಿಷಯರಸವೆಂದು ಅಖಂಡೇಶ್ವರ ವಚನಗಳ ಭಕ್ತಸ್ಥಲದಲ್ಲಿ ನಿರೂಪಿತವಾಗಿದೆ. *ಇನ್ನು ನೀರವೆಂದರೆ ವಿಷಯಗಳನ್ನು ನಿರಸನಮಾಡಿದವನು ಅಥವಾ ನೀರಸ ಮಾಡಿದವನು. ಅಲ್ಲದೆ ”ನೀರ’ ಪದವು ವ್ಯಕ್ತಿತ್ವವನ್ನೂ ಸೂಚಿಸುತ್ತದೆ. ಅಂಥವನು ಶ್ರೀಗುರುವಲ್ಲದೆ ಬೇರಲ್ಲ. ಶಿವಕವಿಯ ಈ ಪದಪ್ರಯೋಗವು ಅನುಭವಪೂರ್ಣವಾಗಿಯೂ, ಮಾರ್ಮಿಕವಾಗಿಯೂ ಬಳಕೆ ಗೊಂಡಿದೆ. ಶಬ್ದಸಂಪತ್ತಿಯನ್ನು ಸಮೃದ್ಧಗೊಳಿಸಿದೆ.
ಬೆಂಕಿ ಬೆಂಕಿಯ ಕೂಡಿ | ಲಂಕೆಯನು ಸುಟ್ಟು ಪಡಿ (ಪೊಡೆ)
ಲಂಕೆಗಂ ಹತ್ತಿ-ಅಂಕೆಯನು ಮೀರಿತೈ
ಬೆಂಕಿ ಶ್ರೀ ಗುರುವೆ ಕೃಪೆಯಾಗು ||೫೮||
ದೇವಾನುದೇವತೆಗಳನ್ನು ಜಯಿಸಿದ್ದೇನೆಂಬ ರಾವಣನ ಅಹಂಕಾರವೆಂಬ ಬೆಂಕಿಯು, ರಾಮದೂತನಾಗಿ ಬಂದ ಹನುಮಂತನ ಕೋಪಯುಕ್ತವಾದ ಬಾಲಕ್ಕೆ ಹತ್ತಿದ ಬೆಂಕಿಯು, ಇಡೀ ಲಂಕೆಯನ್ನು ಒಳ-ಹೊರಗೂ ಸುಟ್ಟು ಹಾಕಿತು. ರಾವಣನು ತನ್ನ ಅಹಂಕಾರ ಮತ್ತು ಸಿಟ್ಟುಗಳಿಂದ ತಾನು ಸತ್ತನಲ್ಲದೆ ಲಂಕಾ ನಗರಿಯನ್ನೂ ಸುಡಿಸಿದ. ತನ್ನ ಜೀವನ ಗುರಿಯೂ ಸಿಕ್ಕಲಿಲ್ಲ.
ಒಳಹೊಕ್ಕು ನೋಡಲು ಬೆಂಕಿಯೆಂದರೆ ಅಗ್ನಿತತ್ತ್ವದ ಅಹಂಕಾರವು, ಅದರೊಡ ಗೂಡಿದ ಜೀವಾತ್ಮನು ನಾನೇ ದೊಡ್ಡವನೆಂಬ ಭಾವವುಳ್ಳವನಾಗಿ; ಬೆಂಕಿಯ ಕೂಡಿ=ಕೋಪಾಗ್ನಿಯಿಂದ ಕೂಡಿ ಜ್ಯೋತಿರೂಪವಾದ ಶಿವಜ್ಞಾನವೆಂಬ ಲಂಕೆಯನ್ನುನಾಶಮಾಡಿಕೊಳ್ಳುವನು.ಶಿವಜ್ಞಾನವು ನಷ್ಟವಾದ ಮೇಲೆ ಶಿವಸಾಕ್ಷಾತ್ಕಾರ ಗುರಿಯು ಕೈಗೆಟಕದು.ಮತ್ತು ಜೀವಾತ್ಮನಿಗೆ ಹೊಟ್ಟೆಯ ಹಸಿವಿನ ಜಠರಾಗ್ನಿಯೂ ಕೂಡಿ ಕೋಪಾಗ್ನಿಯು ಮೇರೆ ತಪ್ಪಿಹೋಗುವದು ಅಂದರೆ ಅಹಂಕಾರಿ ಮನುಷ್ಯನಿಗೆ ಸಿಟ್ಟು ಬಂದಾಗ ಹಾಗೂ ಹಸಿವೆ ತಲೆದೋರುತ್ತಿರಲು ಅವನನ್ನು ಸಮಾಧಾನ ಪಡಿಸುವದು ಬಲುಕಷ್ಟ. ಈ ಮಾತು ಸಾಮಾನ್ಯನಿಗೂ ಅನುಭವ ಗಮ್ಯವಾದುದೇ ಆಗಿದೆ ,
. ಒಲೆಹತ್ತಿ ಉರಿದರೆ ಆರಿಸಬಹುದು. ಧರೆಹತ್ತಿ ಉರಿದರೆ ಆರಿಸಲು ಬಾರದು. ಹುಲ್ಲಿನರಾಶಿಗೆ ಹತ್ತಿದ ಬೆಂಕಿಯನ್ನು ಆರಿಸಲು ಹೇಗೆ ಸಾಧ್ಯವಾಗುವದಿಲ್ಲವೋ ಹಾಗೆ ಅಹಂಕಾರಾಗ್ನಿಯು ಸ್ಥೂಲತನುವನ್ನು; ಕ್ರೋಧಾಗ್ನಿಯು ಸೂಕ್ಷ್ಮಶರೀರ (ಮನ) ವನ್ನು ಕ್ಷುಧಾಗ್ನಿಯು ತಾನಾರೆಂಬ ವಿವೇಕ ರೂಪ ಕಾರಣಶರೀರವನ್ನು ವ್ಯಾಪಿಸಿದರೆ; ಶಮನಮಾಡುವದು ಸಾಧ್ಯವಾಗುವದಿಲ್ಲ.
ಅಗ್ನಿಯ ಮುಖದಲ್ಲಿ ಸಿಕ್ಕವಸ್ತುವೆಲ್ಲ ಸುಟ್ಟು ಭಸ್ಮವಾಗುವಂತೆ ಈ ಮೂರರ ಆಹುತಿಗೆ ಸಿಕ್ಕ ಮಾನವನು ನಾಶವಾಗುವದರಲ್ಲಿ ಯಾವ ಸಂದೇಹವಿಲ್ಲ.
“ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವರನರಿಯದೆ
ನರಕಕ್ಕೆ ಭಾಜನರಾದಿರಲ್ಲಾ”
ಎಂದು ಅಣ್ಣನವರು ಅಹಂಕಾರಿಗಳನ್ನು ಕಂಡು ಮರುಗಿರುವರು. ನೀತಿಕಾರರು- ಕ್ರೋಧವನ್ನು ಕುರಿತು ಕೆಳಗಿನಂತೆ ಚೆನ್ನಾಗಿ ಬಿತ್ತರಿಸಿದ್ದಾರೆ.
ಕ್ರೋಧೋ ಮೂಲಮನರ್ಥಾನಾಂ
ಕ್ರೋಧಃ ಸಂಸಾರಬಂಧನಮ್ |
ಧರ್ಮಕ್ಷಯಕರಃ ಕ್ರೋಧಃ
ತಸ್ಮಾತ್ ಕ್ರೋಧಂ ವಿವರ್ಜಯೇತ್ ||
ಅನರ್ಥ ಪರಂಪರೆಗೆ, ಸಂಸಾರಬಂಧನಕ್ಕೆ ಕ್ರೋಧವೇ ಮೂಲವಾಗಿದೆ. ಇದು ಧರ್ಮವನ್ನೂ ನಾಶಮಾಡುವದರಿಂದ ಅದನ್ನು ತ್ಯಜಿಸಬೇಕು. ಕ್ರೋಧವೇ ನರಕದ ದ್ವಾರವೆಂದು ಕೃಷ್ಣನು ಗೀತೆಯಲ್ಲಿ ಅರ್ಜುನನಿಗೆ ತಿಳಿಸಿದ್ದಾನೆ. ಮಹಾಕವಿ ಭಾರವಿ ವಿರಚಿತ ‘ಕಿರಾತಾರ್ಜುನೀಯ” ಕಾವ್ಯದಲ್ಲಿ ಧರ್ಮರಾಯನು ಸಿಟ್ಟಿಗೆದ್ದ ತನ್ನ ತಮ್ಮನಾದ ಭೀಮಸೇನನಿಗೆ –
“ಅಪನೇಯಮುದೇತುಮಿಚ್ಛತಾ
ತಿಮಿರಂ ದೋಷಮಯಂ ಧಿಯಾ ಪುರಃ ।
ಅವಿಭಿದ್ಯ ನಿಶಾಕೃತಂ ತಮಃ
ಪ್ರಭಯಾ ನಾಂಶುಮತಾ ಪ್ಯುದೀಯತೇ || ೨ – ೩೬ ||
ಸೂರ್ಯನು ರಾತ್ರಿಯಲ್ಲಿದ್ದ ಕತ್ತಲೆಯನ್ನು ತನ್ನ ತೇಜಸ್ಸಿನಿಂದ ಕಳೆದಲ್ಲದೆ ಹುಟ್ಟುವದಿಲ್ಲ ಅರ್ಥಾತ್ ಉದಯವಾಗುವದಿಲ್ಲ. ಅದರಂತೆ ಅಭ್ಯುದಯವನ್ನು ಹೊಂದಲು ಬಯಕೆಯುಳ್ಳ ಪುರುಷನು ಕ್ರೋಧಮಯವಾದ ಕತ್ತಲೆಯ (ಅಜ್ಞಾನ)ನ್ನು ಜ್ಞಾನಬಲದಿಂದ ಮೊದಲು ತೆಗೆದು ಹಾಕಬೇಕೆಂದು ನೀತಿಯನ್ನು ತಿಳಿಸುತ್ತಾನೆ. ಇವೆಲ್ಲ ಮಾತುಗಳಿಗಿಂತಲೂ ಸುಂದರ ಶೈಲಿಯಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಅಣ್ಣ ಬಸವಣ್ಣನವರು –
“ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ !
ತನಗಾದ ಆಗೇನು ? ಅವರಿಗಾದಚೇಗೇನು ?
ತನುವಿನ ಕೋಪ ತನ್ನ ಹಿರಿತನದ ಕೇಡು.
ಮನದ ಕೋಪ ತನ್ನ ಅರುವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ “
ಎಂದು ತಿಳಿಸಿದ್ದಾರೆ. ತನ್ನ ತನುವಿನ ಕೋಪ ತನ್ನನ್ನೇ ನಾಶಮಾಡುವದಲ್ಲದೆ ತನ್ನ ಗೌರವವನ್ನು ಗಾಳಿಗೋಪುರ ಗೊಳಿಸುವದು. ಮನಸ್ಸಿನಲ್ಲಿ ಉತ್ಪನ್ನವಾದ ಕ್ರೋಧವು ಅಂತರಂಗದ ಆತ್ಮಜ್ಞಾನವನ್ನು ನಾಶಗೊಳಿಸುವದು. ತನ್ನ ಮನೆಗೆ ಹತ್ತಿದ ಬೆಂಕಿಯು ಪ್ರಥಮತಃ ತನ್ನ ಮನೆಯನ್ನು ಭಸ್ಮಗೊಳಿಸದೆ ಅನ್ಯರ ಗೃಹವನ್ನು ಮುಟ್ಟುವದಿಲ್ಲ. ಅದುಕಾರಣವೇ ಅನುಭವಿಗಳು, ಕೋಪವು ಚಾಂಡಾಲ ಸದೃಶವಾಗಿದೆಯೆಂದು ಬಣ್ಣಿಸಿದ್ದಾರೆ. ಅಕ್ರೋಧವು ಧರ್ಮದ ಚರಮ (ಹತ್ತನೆಯ) ಲಕ್ಷಣವೆಂದು ಮನುವು ಪ್ರತಿಪಾದಿಸಿದ್ದಾನೆ.
“ಕೋಪವೆಂಬುದು ಕೇಳು | ಪಾಪದಾ ನೆಲೆಗಟ್ಟು
ಕೂಪದೊಳು ನೇಣು ಹರಿದಂತೆ ನರಕದೊಳು
ಕೋಪಿ ತಾನಿಳಿವ ಸರ್ವಜ್ಞ (೫೨೯-ಉ. ಚನ್ನಪ್ಪ)
ಕನ್ನಡ ಜಾನಪದ ಕವಿಯ ವಿಚಾರ ಮನನೀಯವಾಗಿದೆ. ಹಗ್ಗಹರಿದು ಕೊಡವು ಭಾವಿಯಲ್ಲಿ ಬೀಳುವಂತೆ ಕೋಪಿಯು ನರಕದಲ್ಲಿ ಬೀಳುತ್ತಾನೆ. ಅದುಕಾರಣ ಅಹಂಕಾರ ಹಾಗೂ ಕ್ರೋಧಗಳನ್ನು ಕಳೆದಲ್ಲದೆ ಜ್ಞಾನೋದಯವಾಗುವದಿಲ್ಲ. ಧರ್ಮದ ಮರ್ಮ ತಿಳಿಯುವದೂ ಇಲ್ಲ. ಪರಮಜ್ಞಾನಿಯಾದ ಸದ್ಗುರು ಕರುಣೆಯಿಂದ ಇವುಗಳನ್ನು ಕಳೆದು ಕೊಂಡು ಜ್ಞಾನವನ್ನು ಪಡೆಯಬಹುದು.
ಅಂತೆಯೇ ಶಿವಕವಿಯು ಬೆಂಕಿಸ್ವರೂಪನಾದ ಶ್ರೀಗುರುವೆ ! ಎನ್ನ ತನುವಿನ ಅಹಂಕಾರವನ್ನು, ತನ್ನನ್ನೇ ನಾಶಮಾಡುವ ಸಿಟ್ಟನ್ನು, ಒಡಲನ್ನೇ ಆಶ್ರಯಿಸಿಕೊಂಡು ವಿವೇಕವನ್ನು ನಾಶಮಾಡುವ ಕ್ಷುಧಾಗ್ನಿಯನ್ನು ನಾಶಮಾಡೆಂದು ಪ್ರಾರ್ಥಿಸಿದ್ದಾನೆ. ಮತ್ತು ಇವೆಲ್ಲವುಗಳನ್ನು ನಾಶಮಾಡುವಲ್ಲಿ ಸಮರ್ಥನೆಂಬರ್ಥವನ್ನು ವ್ಯಕ್ತಗೊಳಿಸಲು ಶ್ರೀ ಗುರುವನ್ನು ಬೆಂಕಿ ಶ್ರೀಗುರುವೆ” ಎಂದು ಸಂಭೋದಿಸಿದ್ದು ಅತ್ಯಂತ ಸಮೀಚೀನವಾಗಿದೆ.
ಗುರುಸೇವೆಯಿಂದ ತನುವಿನ ಅಹಂಕಾರವಳಿದು ಕಿಂಕರತೆ ಬಪ್ಪುದು. ಮನವನ್ನು ಲಿಂಗದಲ್ಲಿ ಲೀನಗೊಳಿಸುವದರಿಂದ ಕ್ರೋಧಾಗ್ನಿಯು ಶಾಂತವಾಗಿ ಸಮತೆ ಬಪ್ಪುದು. ತನ್ನ ಧನವನ್ನೆಲ್ಲ ದಾಸೋಹಗೈದು ಕ್ಷುಧಾಗ್ನಿಯನ್ನು ಶಮನಗೊಳಿಸಲು ಶೇಷ ಪ್ರಸಾದವನ್ನು ಪಡೆದರೆ ಸಂತೃಪ್ತಿ ಒಪ್ಪುದು.