ಪ್ರೊ. ಜೆ.ಎಸ್.ಸಿದ್ದಲಿಂಗಯ್ಯ
ಸರ್ಪಭೂಷಣ ಶಿವಯೋಗಿಗಳ ಹೆಸರು ನೆನಪಾಗುತ್ತಿದ್ದಂತೆ ಬೆಂಗಳೂರಿನ ೬೩ ಮಠಗಳಲ್ಲಿ ಧಾರ್ಮಿಕವಾಗಿಯೂ, ಸಾಹಿತ್ಯಕವಾಗಿಯೂ, ಮುಖ್ಯವಾದ ಎರಡು ಮಠಗಳು ನಮ್ಮ ಗಮನವನ್ನು ಸೆಳೆಯ ತೊಡಗುತ್ತವೆ. ಅವೆಂದರೆ ತಿಪ್ಪಶೆಟ್ಟಿಮಠ ಮತ್ತು ಸರ್ಪಭೂಷಣ ಮಠಗಳು. ಯಾವುದೇ ಒಂದು ಮಠದ ಅಥವಾ ಸಂಸ್ಥೆಯ ಹೆಸರು ಉಜ್ವಲವಾಗುವುದು ಆ ಮಠ ಕಾರಣವಾದ ಸಾಂಸ್ಕೃತಿಕ ಕ್ರಿಯೆಯಿಂದ . ಬೆಂಗಳೂರಿನಲ್ಲಿದ್ದ ೬೩ ಮಠಗಳಲ್ಲು ಧಾರ್ಮಿಕವಾದ ಹಾಗೂ ಶೈಕ್ಷಣಿಕವಾದ ಕಾರ್ಯಗಳು ನಡೆಯುತ್ತಲೇ ಇದ್ದವು. ಏಕೆಂದರೆ ಬೆಂಗಳೂರಿನ ಆ ಮಠಗಳು ಮಾಮೂಲುಪೇಟೆ, ಚಿಕ್ಕಪೇಟೆ, ಅರಳೇಪೇಟೆ, ಅಕ್ಕಿಪೇಟೆ, ದೊಡ್ಡಪೇಟೆ – ವಲಯಗಳಲ್ಲಿ ಸ್ಥಾಪಿತವಾಗಿದ್ದು ಅವುಗಳು ಹುಟ್ಟಿಕೊಂಡಿದ್ದ ಅಂದಿನ ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾರ್ಗದರ್ಶನಕ್ಕಾಗಿ. ಆದರೆ ತಿಪ್ಪಶೆಟ್ಟಿಮಠ ಮತ್ತು ಸರ್ಪಭೂಷಣ ಮಠಗಳು ಈ ಎಲ್ಲ ಮಠಗಳಿಗಿಂತಲೂ ಅಧಿಕವಾದ ಸಾಹಿತ್ಯ ಸೇವೆಯನ್ನು ಮಾಡಿದವು.
ಒಂದರ್ಥದಲ್ಲಿ ತಿಪ್ಪಶಟ್ಟಿಮಠ ಮತ್ತು ಸರ್ಪಭೂಷಣ ಮಠಗಳಿಗೆ ಗುರು-ಶಿಷ್ಯ ಬಾಂಧವ್ಯವನ್ನು ಹೇಳಬಹುದು. ಏಕೆಂದರೆ ತಿಪ್ಪಶೆಟ್ಟಿ ಮಠಕ್ಕೆ ಗುರುಗಳಾಗಿ ಬಂದ ಶ್ರೀ ಗುರುಸಿದ್ಧ ಸ್ವಾಮಿಗಳು ಸರ್ಪಭೂಷಣರನ್ನು ರೂಪಿಸಿದ ಮಹಾಶಿಲ್ಪಿಗಳು. ಆದ್ದರಿಂದ ಈ ಎರಡು ಮಠಗಳು ಒಂದು ರೀತಿಯಲ್ಲಿ ಗುರುಶಿಷ್ಯರಂತಿದ್ದು ಗುರುಸಿದ್ಧಸ್ವಾಮಿಗಳ ವ್ಯಕ್ತಿತ್ವದಂತೆಯೇ ಸರ್ಪಭೂಷಣರ ವ್ಯಕ್ತಿತ್ವವೂ ಕೂಡ ಸಾಹಿತ್ಯ ಲೋಕದಲ್ಲಿಯೂ, ಪ್ರಮುಖವಾಗಿದೆ. ಗುರುಸಿದ್ಧರ ಶಿಷ್ಯರಾದರೂ ಸಪ್ಪಣ್ಣನವರು ಸೃಜನ ಪ್ರತಿಭೆಯಲ್ಲಿ ಗುರುಗಳನ್ನು ಮೀರಿಸಿದವರು. ಆದ್ದರಿಂದ ಸರ್ಪಭೂಷಣ ಶಿವಯೋಗಿಗಳನ್ನು ಕುರಿತು ಯೋಚಿಸುವಾಗ ಅವರು ಮಠದ ಅಧ್ಯಕ್ಷರಾದ ಧರ್ಮಗುರುಗಳಾಗಿ ಹೇಗೊ ಹಾಗೆಯೇ ಅಥವಾ ಅದಕ್ಕಿಂತಲೂ ಮಿಗಿಲಾಗಿ ಸಾಹಿತ್ಯ ಸೇವೆಯನ್ನು ಮಾಡಿದ ಶಿವಯೋಗಿಗಳಾಗಿ ನಮ್ಮ ಗಮನವನ್ನು ಸೆಳೆಯುತ್ತಾರೆ. ಎಡೆಯೂರ ಸಿದ್ಧಲಿಂಗ ಯತಿಗಳಂತೆ ಷಡಕ್ಷರ ದೇವನಂತೆ ಮಠಾಧಿಪತಿಗಳಾಗಿಯೂ ಸಾಹಿತ್ಯ ಸೇವೆಯಲ್ಲಿ ಮುಂದಾದವರು.
ಸಪ್ಪಣ್ಣನವರು ಹುಟ್ಟಿದ್ದು ೧೭೯೫ರಲ್ಲಿ. ಲಿಂಗೈಕ್ಯರಾದದ್ದು ೧೮೩೯ರಲ್ಲಿ. ಕೇವಲ ೪೫ ವರ್ಷಗಳಷ್ಟು ಕಾಲ ಬದುಕಿದ್ದ ಸಪ್ಪಣ್ಣನವರು ಬಾಣಾವರದಿಂದ ಬಂದು ಬೆಂಗಳೂರಿನಲ್ಲಿ ನೆಲಸಿದ್ಧ ಮಲ್ಲಿಕಾರ್ಜುನಪ್ಪನವರ ಆರು ಮಕ್ಕಳಲ್ಲಿ ಒಬ್ಬರು. ಇವರ ತಾಯಿ ಚೆನ್ನಮ್ಮ, ಸಪ್ಪಣ್ಣನವರನ್ನು ಸಪ್ಪಣ್ಣನವರು, ಸಪ್ಪಣ್ಣಪ್ಪನವರು, ಸಪ್ಪಣ್ಣಸ್ವಾಮಿಗಳು, ಸಪ್ಪಣ್ಣಾರ್ಯರು, ಸಪ್ಪಯ್ಯನವರು, ಸರ್ಪಭೂಷಣರು, ಸರ್ಪಭೂಷಣ ಶಿವಯೋಗಿಗಳು ಎಂದೆಲ್ಲ ವ್ಯವಹರಿಸುವುದುಂಟು.
ಇಷ್ಟು ನಮಗೆ ಸಪ್ಪಣ್ಣನವರು ಹತ್ತಿರದವರಾದರು ಅವರ ಬಾಲ್ಯ, ವಿದ್ಯಾಭ್ಯಾಸಗಳ ಬಗೆಗೆ ಕೆಲವು ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ. ಒಂದನೆಯದಾಗಿ ಸಪ್ಪಣ್ಣನವರು ಬಾಲ್ಯದಲ್ಲಿ ಅತ್ಯಂತ ಬುದ್ಧಿವಂತರೂ ತುಂಟರೂ ಆಗಿದ್ದರು ಎಂದು ಈ ವಿಷಯದಲ್ಲಿ ಶಿವಮೂರ್ತಿ ಶಾಸ್ತ್ರಿಗಳು ಸಪ್ಪಣ್ಣನವರು ಐದು ವರ್ಷದವರಾಗಿದ್ದಾಗ ಅವರ ತಂದೆ-ತಾಯಿಗಳು ಶ್ರೀಗುರುಸಿದ್ದ ಸ್ವಾಮಿಗಳನ್ನು ತಮ್ಮ ಮಗನಿಗೆ ಬುದ್ಧಿ ಹೇಳಬೇಕೆಂದು ಪ್ರಾರ್ಥಿಸಿಕೊಂಡರೆಂದೂ ಗುರುಸಿದ್ಧಸ್ವಾಮಿಗಳು ಹಾಗೆ ಸಪ್ಪಣ್ಣನವರನ್ನು ಅಕ್ಕರೆಯಿಂದ ಮಾತಾಡಿಸಿದಾಗ ಅವರೇ ಪಾಠ ಹೇಳುವುದಾದರೆ ಆಗಲಿ ಎಂದರೆಂದೂ ಹೇಳುತ್ತಾರೆ ಅದರಂತೆ ಸಪ್ಪಣ್ಣ ಗುರುಸಿದ್ಧ ಸ್ವಾಮಿಗಳ ಮಠದಲ್ಲಿ ಉಳಿದು ೨೨ ವರ್ಷಗಳವರೆಗೆ ಶಿಕ್ಷಣ ಪಡೆದು ವೇದ, ಆಗಮ, ತರ್ಕ, ವ್ಯಾಕರಣ, ಛಂದಸ್ಸು, ಸಂಗೀತ ಹಾಗೂ ಕನ್ನಡ ಸಂಸ್ಕೃತ ಸಾಹಿತ್ಯಗಳ ಸಾರವನ್ನೆಲ್ಲ ಹೀರಿ ಗುರುಗಳ ಮೆಚ್ಚಿಗೆಗೆ ಪಾತ್ರರಾದರೆನ್ನುತ್ತಾರೆ. ಆದರೆ ಶ್ರೀ ಮಲ್ಲಾಬಾದಿ ವೀರಭದ್ರಪ್ಪನವರು ಈ ಘಟನೆಗೆ ಕಾರಣವಾದ ಸಪ್ಪಣ್ಣನ ಶಿಕ್ಷಣದ ಬಗ್ಗೆ ಮಾತಾಪಿತೃಗಳು ೬-೭ ವರ್ಷದವರೆಗಿದ್ದಾಗ ಗುರುಗಳಲ್ಲಿ ಪ್ರಸ್ಥಾಪಿಸಿದರೆಂದು ಹೇಳುತ್ತಾರೆ. ಅಷ್ಟೇ ಅಲ್ಲ, ಅವರು ಸಪ್ಪಣ್ಣನವರು ಮನೆಯಲ್ಲಿದ್ದೇ ಮಠಕ್ಕೆ ಹೋಗಿ ಕಲಿಯುತ್ತಿದ್ದರೆಂದೂ ಬರುಬರುತ್ತ ಮಠದಲ್ಲಿಯೇ ಹೆಚ್ಚು ಕಾಲ ಕಳೆಯಲಾರಂಭಿಸಿದರೆಂದೂ ಸೂಚಿಸುತ್ತಾರೆ.
ಮುಂದೆ ಸಪ್ಪಣ್ಣನವರು ವಿರಕ್ತಿಯನ್ನು ಸ್ವೀಕರಿಸಿದ ಬಗೆಗೂ ಈ ಇಬ್ಬರ ಹೇಳಿಕೆಗಳಲ್ಲೂ ಸ್ವಲ್ಪ ಭೇದವಿದೆ. ಶಾಸ್ತ್ರಿಗಳ ಪ್ರಕಾರ ಸಪ್ಪಣ್ಣನವರಿಗೆ ಯೌವನೋದಯ ವಾಗುತ್ತಿದ್ದಂತೆ ಅವರ ಮಾತಾ ಪಿತೃಗಳೇ ಅಲ್ಲದೆ ಬಂಧುಗಳು ಕೂಡ ಮದುವೆ ಮಾಡಿ ಗೃಹಸ್ಥಾಶ್ರಮಕ್ಕೆ ಸೇರಿಸಲು ವಿಶೇಷ ಪ್ರಯತ್ನ ಮಾಡಿದರೆಂದೂ ಸಪ್ಪಣ್ಣನವರ ಮನಸ್ಸಿನ ಆಶಯಂತೆ ಅವರ ಗುರುಗಳಾದ ಗುರುಸಿದ್ಧಸ್ವಾಮಿಗಳ ಮಧ್ಯೆ ಪ್ರವೇಶಿಸಿದ ಮೇಲೆ ಈ ಪ್ರಯತ್ನ ನಿಂತು ಹೋಯಿತೆಂದು ಹೇಳಲಾಗುತ್ತದೆ, ಮಲ್ಲಾಬಾದಿಯವರು ತಮ್ಮ ಮಠದಲ್ಲಿ ತಮ್ಮಿಂದ ವಿದ್ಯೆ ಕಲಿಯಲು ಬರುತ್ತಿದ್ದ ಸಪ್ಪಣ್ಣನವರ ವ್ಯಕ್ತಿತ್ವ, ಪ್ರತಿಭೆ ಹಾಗೂ ವಿರಕ್ತಾಶ್ರಮದಲ್ಲಿದ್ದ ಒಲವನ್ನು ಕಂಡು ತಾವೇ ಸಪ್ಪಣ್ಣನವರ ತಂದೆಯನ್ನು ನಿಮ್ಮ ಮಗನನ್ನು ನಮ್ಮ ಮಠಕ್ಕೆ ಮರಿಯಾಗಿ ನೀಡಿರೆಂದು ಕೇಳಿಕೊಂಡರೆಂದೂ, ಗುರುಗಳಿಂದಾಗಿಯೇ ಇಂದು ಘನತೆಯ ಸ್ಥಾನಕ್ಕೇರಿರುವ ತಮ್ಮ ಮಗನನ್ನು ಅವರು ಗುರುಗಳ ಇಚ್ಛೆಯಂತೆಯೇ ಮಠಕ್ಕೆ ಮರಿಯಾಗಿ ನೀಡಿದರೆಂದೂ ಮತ್ತೆ ಅವರ ಮಡದಿಯ ಒಪ್ಪಿಗೆಯನ್ನು ಇದಕ್ಕೆ ಪಡೆದಿದ್ದರೆಂದು ತಿಳಿಸುತ್ತಾರೆ.
ವ್ಯಾಪಾರಿಯೊಬ್ಬರ ಮಗನಾದ ಸಪ್ಪಣ್ಣ ಸರ್ಪಭೂಷಣ ಶಿವಯೋಗಿಯಾದದ್ದು ಹೀಗೆ, ಸಪ್ಪಣ್ಣನವರು ಕೇವಲ ಅಧ್ಯಯನ ತಪಸ್ಸು, ಆಚರಣೆ, ಇಷ್ಟರಿಂದಲೇ ಬೆಳೆದವರಲ್ಲ. ಇವುಗಳ ಜೊತೆಗೆ ಗುರುಗಳ ಅನುಮತಿಯನ್ನು ಪಡೆದು ೧೨ ವರುಷಗಳಷ್ಟು ದೀರ್ಘ ಕಾಲ ಕಾಶಿಯನ್ನೊಳಗೊಂಡು ಕರ್ನಾಟಕದ ತೀರ್ಥ ಕ್ಷೇತ್ರಗಳೆಲ್ಲವನ್ನು ಸಂದರ್ಶಿಸಿ ಮಠಗಳಲ್ಲಿ ನಡೆದ ಶಿವಾನುಭವ ಗೋಷ್ಠಿಗಳಲ್ಲಿ ಪಾಲ್ಗೊಂಡು ಲೋಕಾನುಭವವನ್ನು ಪಡೆದು ಮಾಗಿದ ವ್ಯಕ್ತಿತ್ವವನ್ನು ಪಡೆದವರಾದರು. ಇಷ್ಟೆಲ್ಲ ತೀರ್ಥ ಯಾತ್ರೆಯನ್ನು ಅವರು ಹಿಂಡನಗಲಿದ ಗಜದಂತೆ ಏಕಾಂಗಿ ಮಾಡಿದರು. ಆದ್ದರಿಂದಲೇ ಈ ಯಾತ್ರಾವಧಿ ಅವರ ಧ್ಯಾನ, ಇಷ್ಟಲಿಂಗಾನುಸಂಧಾನ ಹಾಗು ಅನುಭಾವಗಳು ಮಾಗಿ ಆಚರಣೆಗೆ ವಿಶೇಷವಾದ ಶಕ್ತಿಯನ್ನು ತುಂಬಿದಂತೆ ತೋರುತ್ತದೆ.
ಯಾತ್ರಾವಧಿಯಲ್ಲಿ ನಡೆದ ಅನೇಕ ಘಟನೆಗಳು ರೂಪುಗೊಳ್ಳುತ್ತಿದ್ದ ಅವರ ಮಹಾನ್ ವ್ಯಕ್ತಿತ್ವದ ಹಲವಾರು ಮುಖಗಳನ್ನು ವ್ಯಂಜಿಸುವಂತೆ ತೋರುತ್ತವೆ.
ಉದಾಹರಣೆಗೆ ಕೆಲವು ಸಂಗತಿಗಳನ್ನು ಗಮನಿಸಬಹುದು. ಸಪ್ಪಣ್ಣನವರು ಚಿತ್ರದುರ್ಗದ ಮಠದಲ್ಲಿ ಶಿವಾನುಭವ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾಗ ಪರ ಮತೀಯನೊಬ್ಬನು ವಾದದಲ್ಲಿ ಇನ್ನೇನು ಜಯಗಳಿಸುತ್ತಿರುವ ನೆಂದಾಗ ತಾವೇ ವಾದಕ್ಕಿಳಿದು ಪ್ರತಿವಾದಿಯನ್ನು ಗೆದ್ದುದು ಅವರ ಶಾಸ್ತ್ರಜ್ಞಾನ ಖಚಿತತೆ ಹಾಗು ತರ್ಕ ಪರಿಣತಿಗೆ ದ್ಯೋತಕವಾಗಿದೆ. ಹುಬ್ಬಳ್ಳಿಯ ಮಠ ಹಾಗೂ ಅಲ್ಲಮ ಪ್ರಭು ಸಂಪ್ರದಾಯದ ಉರುವ ಕೊಂಡದ ಗವಿ ಮಠಗಳಲ್ಲಿ ನಡೆದ ಶಿವಾನುಭವ ಗೋಷ್ಠಿಗಳಲ್ಲೂ ಸಪ್ಪಣ್ಣನವರು ವಿದ್ವತ್ತು ಆಚರಣೆ, ಸಂಗೀತ ಮತ್ತು ಸೃಜನಶೀಲ ಪ್ರತಿಭೆ ಇವುಗಳೆಲ್ಲದರಿಂದ ಎಲ್ಲರ ಮೆಚ್ಚುಗೆಗೂ ಗೌರವಕ್ಕೂ ಕಾರಣರಾದದ್ದು ಅವರಲ್ಲಿದ್ದ ವಿನಯದಿಂದ ಎಂಬುದನ್ನು ಮರೆಯಲಾಗದು; ಸಪ್ಪಣ್ಣನವರು ಕ್ರಾಂತಿಕಾರಿಗಳು, ಸುರಪುರ ರಾಜ್ಯದ ಮಂತ್ರಿ ಲಿಂಗಣ್ಣ ತಮ್ಮನ್ನು ಶಿವಪೂಜೆಗೆಂದು ಆಹ್ವಾನಿಸಿದಾಗ ಅದಕ್ಕೆ ಒಪ್ಪಿದ ಸಪ್ಪಣ್ಣನವರು ಸುರಪುರದ ಹಾದಿಯಲ್ಲಿದ್ದಾಗ ಶಿವಪೂಜಾ ಸಮಯವಾಗಲು ಹತ್ತಿರದಲ್ಲಿದ್ದ ಬಾವಿಯಲ್ಲಿ ಮಿಂದು ಇಷ್ಟ ಲಿಂಗಾನುಸಂಧಾನಕ್ಕೆ ಕುಳಿತ ಶಿವಯೋಗಿ ಇವರು, ಇವರಿಗಾಗಿ. ಕಾದಿದ್ದ ಮಂತ್ರಿ ಇವರು ಊರ ಹೊರಗಿನ ಬಾವಿಯ ಬಳಿಯೇ ಪೂಜಾನಿಷ್ಟರಾಗಿ ಕುಳಿತಿರುವುದನ್ನು ಸುದ್ದಿಗಾರರಿಂದ ತಿಳಿದು ಓಡೋಡಿ ಬಂದು “ಬುದ್ದಿ ಇದು ಹೊಲೆಯರ ಬಾವಿ, ಇಲ್ಲಿಯೇ ನೀವು ಪೂಜೆಗೆ ಕುಳಿತುಕೊಳ್ಳುವಂತೆ ಮಾಡಿದ ಪಾಪಿ ನಾನು, ನನ್ನನ್ನು ಕ್ಷಮಿಸಿ” ಎಂದಾಗ, ಸಪ್ಪಣ್ಣ ದಾಸಿಮಯ್ಯನ ವಚನವನ್ನುದ್ಧರಿಸಿ ಹೊಲೆ ಎಂಬುದು ಹುಟ್ಟಿನಿಂದ ಬರುವ ಜಾತಿಯಲ್ಲ ಎಂದು ವಿಶದಪಡಿಸಿದ ಸಂಪ್ರದಾಯದವರು. ಅಷ್ಟೇ ಅಲ್ಲ ಅವರೊಮ್ಮೆ ಶಿವಪೂಜೆಗೆ ಹೋಗುವಾಗ ಹೊಸ್ತಿಲಿನ ಹೊರಗೆ ತಮ್ಮ ಪೂರ್ವಾಶ್ರಮದ ಅತ್ತಿಗೆ ರಜಸ್ವಲೆ ಎಂದು ಹಾಗೆ ಕುಳಿತಿರುವುದಾಗಿ ತಿಳಿದಾಗ ಆಕೆಯನ್ನು ಒಳಕ್ಕೆ ಬರಹೇಳು ಪ್ರಕೃತಿ ಸಹಜವಾದುದು ಸೂತಕವಲ್ಲ; ಅಲ್ಲದೆ ನಮ್ಮ ಶರಣರದು ಸೂತಕವಿಲ್ಲದ ಸಮಾಜ; ಎಂದ ನಿಚ್ಚಳವಾದ ಅರಿವಿನ ಮಹಾನುಭಾವರು ಅವರು. ಅಷ್ಟೆ ಅಲ್ಲ ಇವರ ಇಷ್ಟಲಿಂಗಾನುಸಂಧಾನದ ದಿವ್ಯಾನುಭವವನ್ನು ಕಂಡ ೭೦೦ ಜನದಷ್ಟು ಅನ್ಯಧರ್ಮಿಯರು. ನಮಗೂ ಇಷ್ಟಲಿಂಗ ದೀಕ್ಷೆಯನ್ನು ನೀಡಿ ಎಂದು ಕೇಳಿದಾಗ ಅವರು ನಿಜವಾಗಿಯೂ ದೀಕ್ಷೆಗರ್ಹರಾಗಿರುವುದನ್ನು ಗಮನಿಸಿ ತಮ್ಮ ಸಮಾಜದ ಅನೇಕರು ಪ್ರತಿಭಟಿಸುತ್ತಿದ್ದರೂ ಅದನ್ನು ಲಕ್ಷಕ್ಕೆ ತಂದುಕೊಳ್ಳದೇ ಅವರಿಗೆಲ್ಲರಿಗೂ ಲಿಂಗದೀಕ್ಷೆ ದೊರಕಲು ಕಾರಣರಾದವರು. ಅವರ ಬದುಕಿನಲ್ಲಿ ಇಂಥ ಅನೇಕ ಮಹತ್ತರ ಘಟನೆಗಳು ನಡೆದದ್ದರಿಂದ ತೋಪಿನ ಮಠದ ಷಡಕ್ಷರ ಶಿವಯೋಗಿಗಳು ಆಚರಣೆ ಎಂದರೆ ಸಪ್ಪಣ್ಣವರ ಆಚರಣೆ ಅಥಣಿಯಪ್ಪಗಳ ಆಚರಣೆ ಎಂದು ಉದ್ಧರಿಸುವ ಮಟ್ಟದ ವ್ಯಕ್ತಿತ್ವ ಸಪ್ಪಣ್ಣನವರದು. ಈ ಕಾರಣದಿಂದಾಗಿಯೇ ಸಪ್ಪಣ್ಣನವರ ಬದುಕನ್ನು ಕುರಿತು ಹಲವಾರು ಪವಾಡಗಳು ಹುಟ್ಟಿಕೊಂಡಿವೆ.
ಸಪ್ಪಣ್ಣನವರು ತೀರ್ಥಯಾತ್ರೆಯನ್ನು ಮುಗಿಸಿ ಬಂದಾಗ ಅವರ ಗುರುಗಳಾದ ಗುರುಸಿದ್ಧ ಸ್ವಾಮಿಗಳಿಗಾದ ಆನಂದ ಅಷ್ಟಿಷ್ಟಲ್ಲ. ಬೆಂಗಳೂರಿಗೆ ಬಂದ ಸ್ವಲ್ಪ ಅವಧಿಯಲ್ಲಿಯೇ ಗುರುಸಿದ್ಧಸ್ವಾಮಿಗಳು ಲಿಂಗೈಕ್ಯರಾಗಲು ಮಠದ ಚರಮೂರ್ತಿಗಳು ಹಾಗೂ ಮಠಕ್ಕೆ ಸಂಬಂಧಿಸಿದ ಅಭಿಮಾನಿ ಭಕ್ತರು ಸಪ್ಪಣ್ಣನವರೇ ಈ ಮಠಕ್ಕೆ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡಬೇಕೆಂದು ಒತ್ತಾಯ ಮಾಡಿದಾಗ ಅದಕ್ಕೊಪ್ಪದೆ ಮಠದಲ್ಲಿದ್ದ ಚಿಕ್ಕ ಗುರುಸಿದ್ಧಸ್ವಾಮಿಗಳನ್ನೇ ಮಠಾಧ್ಯಕ್ಷರಾಗುವಂತೆ ಮಾಡಿ, ತಾವು ತಮ್ಮ ಎಲ್ಲ ಸಮಯವನ್ನು ಅಧ್ಯಯನ, ಪ್ರವಚನ ಹಾಗೂ ಕಾವ್ಯ ಸೃಷ್ಟಿಯಲ್ಲಿ ತೊಡಗಿಸಿಕೊಂಡ ವೀರ ಶಿವಯೋಗಿಗಳು,
ಸಪ್ಪಣ್ಣನವರು ತಾವು ಪಡೆದಿದ್ದ ಜ್ಞಾನವನ್ನು ಲೋಕ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕೆಂದು ಸಂಕಲ್ಪ ಮಾಡಿದವರು. ಹೀಗಾಗಿ ಅವರ ಅಪಾರವಾದ ಅಧ್ಯಯನದಿಂದ ಪ್ರಾಪ್ತವಾದ ವಿದ್ವತ್ತು, ಕನ್ನಡ ಸಂಸ್ಕೃತ ಸಾಹಿತ್ಯಗಳ ಸಾರ, ಸಂಗೀತ ಪ್ರೌಢಿಮೆ, ಸಹಜವಾಗಿ ಉಕ್ಕ ತೊಡಗಿದ್ದ ಸೃಜನಶೀಲ ಪ್ರತಿಭೆ ಇವುಗಳಿಂದಾಗಿ ಸಪ್ಪಣ್ಣನವರ ಪ್ರವಚನಗಳಿಗೆ ಹಾಗು ವಾಗ್ಮಿತೆಗೆ ಒಂದು ಹೊಸ ಆಯಾಮ ಪ್ರಾಪ್ತವಾಗಿತ್ತು. ಕೇಳುವವರನ್ನು ಮಂತ್ರ ಮುಗ್ಧರನ್ನಾಗಿ ಮಾಡುವ ಶಕ್ತಿ ಅವರ ಮಾತಿಗಿತ್ತು. ಲೋಕದ ಜನರನ್ನು ಕುರಿತಾದ ಅಂತಃಕರಣದಿಂದಾಗಿ ಅವರ ನುಡಿಗಳಲ್ಲಿ ಆತ್ಮೀಯತೆ ತುಂಬಿ ತುಳುಕುತ್ತಿತ್ತು. ವಿದ್ವಾಂಸರಾದರೂ ಅವರ ಸರಳತೆ ಹಾಗೂ ವಿನಯಶೀಲತೆ ಅವರ ವ್ಯಕ್ತಿತ್ವಕ್ಕೆ ಅಯಸ್ಕಾಂತ ಶಕ್ತಿಯನ್ನು ನೀಡಿತ್ತು. ಇದರಿಂದಾಗಿ ತಮ್ಮ ಗುರುಗಳು ಆಶೆಪಟ್ಟಿದ್ದಂತೆ ತಿಪ್ಪಶಟ್ಟಿಮಠಕ್ಕೆ ಇವರು ಅಧ್ಯಕ್ಷ ರಾಗದಿದ್ದರೂ ಗುರುಗಳ ಸಂಕಲ್ಪ ಮಾತ್ರ ಹುಸಿಯಾಗಲಿಲ್ಲ. ತಿಪ್ಪಶೆಟ್ಟಿ ಮಠದ ನೆರವು, ತಮ್ಮ ಪ್ರವಚನಕ್ಕೆ ಹಾಗೂ ಮಾರ್ಗದರ್ಶನಕ್ಕೆ ಬಂದು ತಮ್ಮ ಅಭಿಮಾನಿಗಳೆನಿಸಿದ್ದ ಭಕ್ತರು ನೀಡಿದ ಕಾಣಿಕೆಗಳು ಮತ್ತೆ ಮೈಸೂರರಸರಲ್ಲಿ ಉನ್ನತಾಧಿಕಾರದಲ್ಲಿದ್ದ ನಾಯಕರು ಪುಕ್ಕಟೆಯಾಗಿ ಸರ್ಕಾರದಿಂದ ಕೊಡಿಸಿದ ನಿವೇಶನ ಇವುಗಳ ನೆರವಿನಿಂದ ಸಪ್ಪಣ್ಣನವರು ಸರ್ಪಭೂಷಣ ಮಠವನ್ನು ಕಟ್ಟಲು ಒಪ್ಪಬೇಕಾಯಿತು. ಮತ್ತೆ ಆ ಮಠ ರೂಪಗೊಂಡದ್ದು ಅವರ ಶಿಷ್ಯರೂ ಹಾಗೂ ಅವರ ಉತ್ತರಾಧಿಕಾರಿಗಳೂ ಆದ ಫಾಲಲೋಚನ ಸ್ವಾಮಿಗಳಿಂದ, ಫಾಲಲೋಚನ ಸ್ವಾಮಿಗಳಂತು ಮಳೆ, ಗಾಳಿ, ಬಿಸಿಲು ಎನ್ನದೆ ಮಠದ ಮತ್ತು ಮಠದ ಆವರಣದಲ್ಲಿರುವ ಓಂಕಾರೇಶ್ವರ ದೇವಾಲಯದ ಗೋಪುರಗಳ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಿಟ್ಟರು. ಒಂದು ಮಧ್ಯಾಹ್ನ ಸಪ್ಪಣ್ಣನವರು ಇಲ್ಲೇನು ನಡೆಯುತ್ತಿದೆ ಎಂದು ನೋಡಿದರೆ, ಉರಿಬಿಸಿಲಿನಲ್ಲಿ ಫಾಲಲೋಚನ ಸ್ವಾಮಿಗಳು ಇನ್ನೇನು ಮುಗಿಯಲಿದ್ದ ಓಂಕಾರೇಶ್ವರ ದೇವಾಲಯದ ಗೋಪುರದ ಉಸ್ತುವಾರಿ ನೋಡುತ್ತಿದ್ದಾರೆ, ಇನ್ನೊಂದು ವಾರದಲ್ಲಿ ಮಠದ ಕಳಸವೇ ಕಳಚಿ ಬೀಳಲಿರುವಾಗ ಈ ಗೋಪುರಕ್ಕೇಕೆ ? ಇಷ್ಟು ಕಷ್ಟ ಪಡುತ್ತಿದ್ದೀರಿ ? ಎಂದು ತಮಗರಿಯದೆ ನುಡಿದುಬಿಟ್ಟರು. ಸಪ್ಪಣ್ಣನವರು ತಮ್ಮ ಸಾವನ್ನು ಮುಂಗಂಡ ಶಿವಯೋಗಿಗಳೇ ಇರಬೇಕು. ಇದಾದ ಒಂದು ವಾರದಲ್ಲಿ ಶಿವಪೂಜೆಗೆ ಕುಳಿತ ಸಪ್ಪಣ್ಣನವರು ಇಷ್ಟಲಿಂಗಾನುಸಂಧಾನಕ್ಕೆ ಕುಳಿತು ಶಿವಯೋಗ ವನ್ನು ಸಾಧಿಸಿದರು. ಮತ್ತೆ ಮೇಲೇಳಲೇ ಇಲ್ಲ. ಅಂಥ ಘನ ಮಹಿಮರು ಸಪ್ಪಣ್ಣನವರು.
ಸಪ್ಪಣ್ಣನವರು ಬೇರಾವ ಸಾಹಿತ್ಯ ಕೃತಿಗಳನ್ನು ರಚಿಸದಿದ್ದರೂ ಅವರ ವ್ಯಕ್ತಿತ್ವದ ಮಹಿಮೆಯಿಂದಾಗಿಯೂ ನಡೆಸಿದ ಪ್ರವಚನಗಳು ಹಾಗೂ ಜನಕ್ಕೆ ನೀಡಿದ ಮಾರ್ಗದರ್ಶನಗಳಿಂದಾಗಿಯೂ ಜನರ ಹೃದಯದಲ್ಲಿ ನೆಲಸಿದ ಶಿವಯೋಗಿಗಳಾಗಿದ್ದರು. ಅವರು ಕನ್ನಡ-ಸಂಸ್ಕೃತ ಎರಡರಲ್ಲಿಯೂ ಪ್ರತಿಭಾ ಸಂಪನ್ನರೂ, ಕಾವ್ಯ ರಚನಾ ಸಮರ್ಥರೂ ಆಗಿದ್ದರು. ಎರಡು ಸಂಸ್ಕೃತ ಕೃತಿಗಳನ್ನು, ಒಂದು ಕನ್ನಡ ಕೃತಿಯನ್ನು ನೀಡಿದ್ದಾರೆ.
“ಭುಜಂಗಮಾಲಾ ಶಿವಸಂಕೀರ್ತನಂ” ಎಂಬುದು ಅವರ ಮೊದಲನೆಯ ಸಂಸ್ಕೃತ ಕಾವ್ಯಕೃತಿ. ೩೧ ವೃತ್ತಗಳನ್ನು ಒಳಗೊಂಡ ಈ ಕೃತಿಯನ್ನು ಇವರು ಪಂಚ ಚಾಮರ ವೃತ್ತದಲ್ಲಿ ರಚಿಸಿದ್ದಾರೆ. ಪಂಚ ಚಾಮರ ವೃತ್ತ ಸಂಸ್ಕೃತದಲ್ಲಿ ಅದರ ನಾದಲೋಲತೆಗಾಗಿ ತುಂಬ ಖ್ಯಾತವಾಗಿರುವ ವೃತ್ತ, ರಾವಣ ನಿಂದ ರಚಿತವಾಯಿತೆನ್ನಲಾದ ಶಿವತಾಂಡವ ಸ್ತೋತ್ರವು ಇದೇ ಛಂದಸ್ಸಿನದೇ. ‘ಭುಜಂಗಮಾಲಾ ಶಿವಸಂಕೀರ್ತನಂʼಕೃತಿಯನ್ನು ಸಪ್ಪಣ್ಣನವರು, ಇಷ್ಟಲಿಂಗಾನುಸಂಧಾನ ಸಮಯದಲ್ಲಿ ಹಾಡಿರಬೇಕು. ಅಲ್ಲದೆ ಇದು ಅವರ ಚೊಚ್ಚಲು ಕೃತಿಯೂ ಆಗಿರಬೇಕು. ಏಕೆಂದರೆ ಈ ಕೃತಿಯಲ್ಲೆಲ್ಲೂ ತಮ್ಮ ಗುರುಗಳಾದ ಗುರುಸಿದ್ಧ ಸ್ವಾಮಿಗಳ ಸ್ಮರಣೆ ಇಲ್ಲ. ಗ್ರಂಥಾರಂಭದಲ್ಲಿ ಬರುವ ಶ್ರೀ ಗುರುಚರಣಂ ನಮಾಮಿ ಎಂಬಲ್ಲಿ ತಮ್ಮ ಗುರುಗಳನ್ನು ಕವಿ ಸೂಚ್ಯವಾಗಿ ಸ್ಮರಿಸಿರುವಂತೆ ತೋರುತ್ತದೆ. ಈ ಕೃತಿ ದೊರೆತದ್ದು ಒಂದು ಆಕಸ್ಮಿಕವೇ. ಬಹುಶಃ ಶಿವಪೂಜಾ ಸಮಯದಲ್ಲಿ ತಮಗೆ ತಾವೇ ಹಾಡಿಕೊಳ್ಳುತ್ತಿದ್ದ ಈ ಸಂಕೀರ್ತನೆಯ ಹಾಡುಗಳನ್ನು ಕೇಳಿ ಅವರ ಸಮೀಪದ ಭಕ್ತರೊಬ್ಬರಾದ ಲಿಂ|| ಕಂಬಿ ಸಿದ್ದರಾಮಣ್ಣನವರು ಕಾಗದದ ಪ್ರತಿಯೊಂದರಲ್ಲಿ ಈ ಪದ್ಯಗಳನ್ನು ನೆನಪಿನಿಂದ ಬರೆದಿಟ್ಟುಕೊಂಡಿದ್ದರು. ಅದನ್ನು ಅವರು ವಿದ್ವಾನ್ ಬಸವರಾಜಯ್ಯನವರಿಗೆ ಪ್ರಕಟಣೆಗೆಂದು ನೀಡಿ ಬೇರಾವ ಪ್ರತಿಗಳು ಸಿಕ್ಕದ ಅದೊಂದೇ ಪ್ರತಿಯ ನೆರವಿನಿಂದ ೪೬ ವರ್ಷಗಳಾದ ಮೇಲೆ ಅಂದರೆ ೧೯೮೭ರಲ್ಲಿ ಇದನ್ನು ಪ್ರಕಟಿಸಲಾಯಿತು. ಈ ಕಾರಣದಿಂದ ಈ ಕೃತಿಯಲ್ಲಿ ಹಲವಾರು ಭಾಷಾದೋಷಗಳು ಉಳಿದಿವೆ. ಭುಜಂಗಮಾಲಾ ಶಿವಸಂಕೀರ್ತನವು ಶಿವಯೋಗಿಗಳ ಶಿವಸ್ತೋತ್ರವಾಗಿದ್ದು ನಾದಲೋಲತೆಯಿಂದ ಕೂಡಿ ಭಕ್ತಿಯಿಂದ ಹಾಡಿಕೊಳ್ಳಲು ಅನುಕೂಲಕರವಾಗಿದೆ. ಈ ಕೃತಿಯಲ್ಲಿ ನಾದಲೋಲತೆ ಮತ್ತು ಭಕ್ತಿ ಇದ್ದಂತೆ ಕಾವ್ಯದ ಗುಣ ಕಡಿಮೆಯಾಗಿದೆ.
ಅವರ ಎರಡನೆಯ ಕೃತಿ ‘ಜ್ಞಾನಶತಕಂ’ ಇದು ಸಂಸ್ಕೃತ ಕೃತಿ, ಶಿವಯೋಗಿಗಳೇ ಸೂಚಿಸುವಂತೆ ಪ್ರಸ್ಥಾನತ್ರಯಗಳ ಸಮಗ್ರ ಸಾರವನ್ನು ಒಳಗೊಂಡಿದೆ. ಈ ಕೃತಿಯ ಮೊದಲನೆಯ ವೃತ್ತ ತಮ್ಮ ಗುರುಗಳಾದ ಗುರುಸಿದ್ಧರ ಧ್ಯಾನದಲ್ಲಿದೆ.
ಗುರು ಸಿದ್ಧ ಗುರುಮಿದಾನೀಂ
ಕಲಯೇ ನಮದುದಯ ವಿಂಧ್ಯ ಘಟಯೋನಿಮ್
ವೃತಕೃತಕರಣಗ್ಲಾನಿಂ
ಚುಳುಕಿತ ವೇದಾಂತ ನಿಮ್ಮಘ್ನಾನಿಮ್
ಈ ವೃತ್ತದಲ್ಲಿ ತಮ್ಮ ಗುರುಗಳನ್ನು ಧ್ಯಾನಿಸಿರುವುದಷ್ಟೇ ; ಅವರ ವೇದಾಂತ ಜ್ಞಾನಮೇರುತ್ವವನ್ನೂ ಧ್ವನಿಸಿದ್ದಾರೆ. ಎರಡು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ಗ್ರಂಥದಾಶಯವನ್ನು ಅವರೇ ಸೂಚಿಸಿರುವುದು ಹೀಗೆ :
ಪ್ರಸ್ಥಾನತ್ರಯಕಾಂತಾರ ಪ್ರವೇಶಾನುಷ್ಣಚೇತಸಃ
ಮುಮುಕ್ಷೋಸುಖಮುಕ್ತ್ಯರ್ಥಮಿದಂ ಶತಕಮುಚ್ಯತೇ.
(ಪ್ರಸ್ಥಾನತ್ರಯ ಅರಣ್ಯದಲ್ಲಿ ಹೋಗಲು ಮಂದ ಬುದ್ದಿ ಯುಳ್ಳ ಮೋಕ್ಷಗಾಮಿಗೆ ಸಂಸಾರದಿಂದ ಸುಲಭವಾಗಿ ಬಿಡುಗಡೆ ದೊರೆಯುವುದಕ್ಕಾಗಿ ಈ ಜ್ಞಾನ ಶತಕವು ಹೇಳಲ್ಪಟ್ಟಿದೆ.)
ಈ ಗ್ರಂಥ ರಚನೆಯ ಉದ್ದೇಶ ಮುಮುಕ್ಷುಸುಖಾರ್ಥವಾಗಿ ಪ್ರಸ್ಥಾನತ್ರಯ ಸಾರವನ್ನು ನಿರೂಪಿಸುವುದಾದರೂ ಸಪ್ಪಣ್ಣನವರು ಕವಿಗಳೂ ಆದ್ದರಿಂದ ಅಲ್ಲಲ್ಲಿ ಕವಿತೆಯ ಮಿಂಚೂ ಆಡುತ್ತದೆ.
ಅವರ ಪ್ರಧಾನವಾದ ಸಾಹಿತ್ಯ ಕೃತಿಯೆಂದರೆ ಕೈವಲ್ಯ ಕಲ್ಪವಲ್ಲರಿಯೇ.
ಸಪ್ಪಣ್ಣನವರೇ ತಮ್ಮ ಈ ಕೃತಿಯನ್ನು ನಿಜಗುಣ ಕೈವಲ್ಯ ಪದ್ಧತಿ ಕೃತಿಗೆ ಹಬ್ಬಿಸಿದ ಕಲ್ಪವಲ್ಲರಿ ಎಂದು ಕರೆದುಕೊಂಡರೆಂದು ಹೇಳಲಾಗಿದೆ. ನಿಜವಾಗಿಯೂ ಇದು ಕಲ್ಪವೃಕ್ಷದ ಬಳ್ಳಿಯೇ. ಇದನ್ನವರು ಬರೆದದ್ದು, ಜನರಿಗೆ ತಿಳಿಯಲೆಂದು ಕನ್ನಡದಲ್ಲಿ. ಇಲ್ಲಿಯ ಹಾಡುಗಳು ಮಠಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಭಾಗಗಳ ಜನರ ನಾಲಗೆಯಲ್ಲಿ ನರ್ತಿಸುತ್ತಿರುವುದಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಅನೇಕ ಕಡೆ ಇವುಗಳ ಹಸ್ತಪ್ರತಿಗಳು ದೊರೆಯುವುದು ಇದರ ಜನಪ್ರಿಯತೆಗೆ ದ್ಯೋತವಾಗಿದೆ. ಈ ಹಾಡುಗಳ ಅಂಕಿತ ಗುರುಸಿದ್ದ’ ಎಂಬುದಾಗಿದೆ.
ಕೈವಲ್ಯಕಲ್ಪವಲ್ಲರಿ’ಯು ನಿಜಗುಣರ ಕೈವಲ್ಯ ಪದ್ಧತಿ ಯಂತೆಯೇ ಶಿವಕಾರುಣ್ಯ, ಪ್ರಾರ್ಥನಾ ಸ್ಥಲ, ಜೀವ ಸಂಶೋಧನ ಸ್ಥಲ, ನೀತಿಕ್ರಿಯಾಚರ್ಯ ಪ್ರತಿಪಾದನಸ್ಥಲ ಹಾಗೂ ಜ್ಞಾನ ಪ್ರತಿಪಾದನಗಳೆಂಬ ಐದು ಸ್ಥಲಗಳನ್ನೊಳಗೊಂಡಿದೆ. ಪ್ರತಿಯೊಂದು ಸ್ಥಲದಲ್ಲಿ ಕ್ರಮವಾಗಿ ೨೬, ೨೧, ೨೫, ೨೯ ಮತ್ತು ೭೬ ಹಾಡುಗಳನ್ನೊಳಗೊಂಡಿದೆ. ಸಪ್ಪಣ್ಣನವರ ವಚನಗಳು, ಸ್ವರ ವಚನಗಳು, ಅನುಭವಸಾರ, ಅಧ್ಯಾತ್ಮಿಕ ಸುಖಪ್ರಬೋಧ ಪ್ರಕರಣ ಎಂದೆಲ್ಲ ಕರೆಯುವ ಈ ಹಾಡುಗಳ ಕೃತಿ ಈಗ ಕೈವಲ್ಯ ಕಲ್ಪವಲ್ಲರಿಯೆಂದೇ ಪ್ರಸಿದ್ಧವಾಗಿದೆ. ಪ್ರತಿಯೊಂದು ಹಾಡಿಗೂ ರಾಗ ಸಂಯೋಜನೆಯನ್ನೂ ಶಿವಯೋಗಿಗಳು ಯೋಚಿಸಿ ಸಾಹಿತ್ಯ ಸಂಗೀತ ಕ್ಷೇತ್ರಗಳೆರಡಕ್ಕೂ ಅಪೂರ್ವಸೇವೆ ಸಲ್ಲಿಸಿದ್ದಾರೆ, ಹಾಡುಗಳ ಜನಪ್ರಿಯತೆ ಎಷ್ಟು ಪ್ರಖರವೆಂದರೆ “ಅನುಭವದಡಿಗೆಯ ಮಾಡಿ’ ಎಂಬ ಹಾಡು ಅಂಕಿತ ಬದಲಾವಣೆ ಮಾತ್ರದಿಂದ ಪುರಂದರರ ಹಾಡುಗಳಲ್ಲಿ ಸೇರಿಹೋಗಿದೆ.
ಜನಪದ ಗೀತೆಗಳ ಒಗಟು, ವಚನಗಳ ಬೆಡಗು, ತತ್ವ ಪದಗಳ ಅನುಭಾವ ಇವುಗಳು ಮೇಲೈಸಿರುವ ಸಪ್ಪಣ್ಣನವರ ಪ್ರತಿಭೆ ಇಲ್ಲಿ ಉಪಮೆ, ರೂಪಕ ದೃಷ್ಟಾಂತ ಸಂಕೇತಗಳನ್ನು ಬಳಸಿಕೊಂಡಿದೆ. ವಚನ ಹಾಗೂ ಪದಗಳಿಂದಲೂ ಪ್ರಭಾವಿತವಾಗಿದೆ. ಕಾಮಾಗ್ನಿ, ಅಶ್ರುಸೃಷ್ಟಿ ಪರಿಭವಾಂಭೋನಿಯಂಥ ರೂಪಕಗಳು; ನೆರೆದ ಸಂತೆಯ ಪರಿಯು, ನೀರ-ಗುರುಳೆಯ ತೆರೆದಿ, ಎಣ್ಣೆಯಿರುವನಕ ದೀವಿಗೆಯುರಿಯುವವೋಲು, ವ್ರಣಕೆ ಮುಸುರುವ ನೊಣಗಳಂತೆ ಪಸಿಯ ಕಾಯ್ ಲವಣವುಂಬಂತೆ, ಕೆಸರಿನೊಳಗಾಡುತಿಹ ಕುಂಬಾರ ಹುಳುವಿನಂತೆ, ಒಂದು ಮರದಖಿಳಪಕ್ಷಿಗಳು ಸಂಜೆಯೊಳಗೊಂದಿ ಬೆಳಗಿನೊಳಗಲಿ ಹೋಗುವಂತೆ, ಎಳೆಯ ಶಿಶುವಿನ ತಲೆಯ ಮೇಲೆ ಮಂದರಗಿರಿಯನಿಳುಹಿದಂತೆ, ನಾನಾಗೊವುಗಳ ಹಾಲೊಂದೆ ರೂಪಾದಂತೆ, ಕುರಿಯ ಹೊತ್ತದನು ಮರೆದು ಸುತ್ತಲರಸುವ ಕುರುಬನಂದದೂಳು, ಕುರುಡರಾನೆಯ ಮುಟ್ಟಿ ಮನಕೆ ಬಂದಂದದಿಂದರಿವಂತೆ, ಎಳೆಗರುವನಗಲ್ದು ಮೇಯಲು ಪೋದ ಹಸುವು ತನ್ನೊಳಗದನೆ ನೆನೆದು ಮೇವನೆ ಮರವಂತ- ಇಂಥ ಉಪಮೆಗಳಿವೆ. ದೃಷ್ಟಾಂತಗಳಂತೂ ವಿಪುಲ. ಕಾಯಕಾಂತಾರವ ಹೊಕ್ಕು ಬೇಂಟೆಯನಾಡಿ, ಅನುಭವದಡಿಗೆಯ ಮಾಡಿ, ಮನವೆಂಬ ಮರ್ಕಟ ಇಂಥ ಹಾಡುಗಳು ಶಕ್ತಿಯುತ ವಾಗುವುದೇ ಕಣ್ಣಿಗೆ ಕಟ್ಟುವಂತೆ ಮಾಡುವ ಆ ಚಿತ್ರಗಳಿಂದ. ತೇರು ಸಾಗಿತು ಹಾಡಂತು ನಮ್ಮ ಕಣ್ಣ ಮುಂದೆಯೇ ದೇಹವೆಂಬ ತೇರು ಹರಿದಾಡುವ ವಿಸ್ಮಯಾನುಭವವನ್ನು ಮೂಡಿಸುತ್ತದೆ. ಸಪ್ಪಣ್ಣನವರದನ್ನು ಆರಂಭಿಸಿದ ರೀತಿ ಅತ್ಯಂತ ಆಕರ್ಷಕವಾದದ್ದು;ಮುಕ್ತಿ ಕನ್ಯೆಯರನ್ನೇ ತೇರು ಸಾಗಿತು ನೋಡಬನ್ನಿರೇ’ ಎಂದು ಕರೆಯುವ ಆತ್ಮೀಯತೆಯ ದನಿ ಇಲ್ಲಿಯ ಅನುಭಾವವನ್ನು ಹೃದಯದಾಳಕ್ಕೆ ಇಳಿಸಿಬಿಡುತ್ತದೆ.
ತತ್ವ ವಿಚಾರಕ್ಕೆ ಬರುತ್ತಿದ್ದಂತೆ ಸಪ್ಪಣ್ಣನವರ ವಾಣಿಗೆ ಉತ್ಸಾಹವೇರುತ್ತದೆ. ಜೀವನಾನುಭವ ಹಾಗೂ ಯೌಗಿಕಾನು ಭವಗಳು ಮೇಲೈಸಿ ಕಾವ್ಯ ಗೇಯತೆಗಳು ಒಂದರೊಳಗೊಂದು ಜೋಡಿಸಿ ನಡೆಯುತ್ತವೆ,
ತತ್ವ ನಿರೂಪಣೆ ಮಾಡುವಾಗ ಸಪ್ಪಣ್ಣನವರು ಬಳಸಿಕೊಳ್ಳುವ ತಂತ್ರ ಸರಳವೂ ನೇರವೂ ಚಿತ್ರಮಯವೂ ಆದದ್ದು. ಇಲ್ಲಿ ಕಾಯವೇ ಕಾಂತಾರವಾಗುತ್ತದೆ. ಅಲ್ಲಿ ತುಡುಗು ಮಾಡುವ ಕೋಣ ಹುಲಿ ಕರಡಿ ಆನೆಗಳು ಮತ್ತೇನೂ ಅಲ್ಲ, ಮನಸ್ಸನ್ನು ಕಾಡುವ ದುರ್ಗುಣಗಳು. ಒಂದೊಂದು ದುರ್ಗುಣಕ್ಕೊಂದು ಪ್ರಾಣಿರೂಪವನ್ನಿತ್ತು ಜ್ಞಾನದ ಬಾಣವನ್ನು ಸದ್ಭಕ್ತಿಯೆಂಬ ಬಿಲ್ಲಿಗೆ ಹೂಡಿ ಗೆಲ್ಲಬೇಕೆಂದು ನಿರೂಪಿಸುತ್ತದೆ. ಒಂದರ್ಥದಲ್ಲಿ ಅರೂಪವೆನ್ನಬಹುದಾದ ತತ್ತ್ವವನ್ನು ಕಣ್ಣುಮುಂದೆ ಚಿತ್ರಮಯವಾಗುವಂತೆ ಮಾಡುವ ಈ ರೀತಿಯ ಈ ಹಾಡುಗಳನ್ನು ಹೃದ್ಯವಾಗುವಂತೆ ಯೂ ಜನಪ್ರಿಯವಾಗುವಂತೆಯೂ ಮಾಡಿರುವದು .ಪರತತ್ತ್ವ ಸಾಧನೆಯನ್ನಿವರು ರೂಪಿಸುವ ರೀತಿ ಅನ್ಯಾದೃಶವಾದ್ದು. ಹೃದಯವೆಂಬ ಹೊಲದಲ್ಲಿ ಪರತತ್ತ್ವದ ಬೆಳೆ ಬೆಳೆಯಬೇಕೆನ್ನುತ್ತಾರೆ, ಇಲ್ಲಿಯ ಹೂಲವನ್ನುಳುವ ಎತ್ತುಗಳು ಶಮೆದಮೆಗಳು, ಸಮತೆಯೆಂಬ ಭಾವವೇ ಗುರುವಿನುಪದೇಶವೆಂಬ ಬೀಜ ಬೆಳೆಯಲು ಹಾಕುವ ಗೊಬ್ಬರ. ಇಷ್ಟಾದರೆ ಸಾಲದು ಮಳೆಯ ನೆರವು ಬೇಕೆಂದು ನೆನಪಿಸಿ ದೈವ ಕೃಪೆಯ ಅಗತ್ಯದತ್ತ ನಮ್ಮ ಗಮನ ಸಳೆದು ದುರಿತ ದುರ್ಗುಣಗಳ ಕಳೆಯನ್ನು ಕಿತ್ತರೆ ಪ್ರಾಪ್ತವಾಗುವ ಬೆಳೆಯೇ ಸ್ಥಿರವಾದ ಮುಕ್ತಿ ಎನ್ನುವ ಧಾನ್ಯವೆಂದು ಹೇಳಿ ಈ ಹಾಡಿಗೆ ಒಂದು ತಿರುವನ್ನು ಕೊನೆಗೆ ನೀಡುತ್ತಾರೆ. ಈ ಧಾನ್ಯವನ್ನುಂಡು ಪ್ರಾಪ್ತವಾದ ಪರಮಾನಂದದಿಂದ ಸಂಸಾರಬಂಧನವೆಂಬ ಬರಗಾಲವನ್ನು ದೂರ ಅಟ್ಟಿ ಎಂದು ನಾಟಕೀಯಗೊಳಿಸುತ್ತಾರೆ.
ಡಾ. ರಂ. ಶ್ರೀ ಮುಗಳಿಯವರು ನಿಜಗುಣರ ಬಗ್ಗೆ ಬರೆಯುತ್ತ ಸಪ್ಪಣ್ಣನವರನ್ನು ನೆನಪು ಮಾಡಿಕೊಂಡು ‘ಸರ್ಪಭೂಷಣ ಇಲ್ಲವೆ ಸಪ್ಪಣ್ಣನು ಅದೇ ಬಗೆಯ ಉದಾತ್ತ ಮನೋಧರ್ಮ ಮತ್ತು ಅನುಭಾವವುಳ್ಳ ಹಾಡುಗಾರನು’ ಎನ್ನುತ್ತಾರೆ. ‘ಕೈವಲ್ಯ ಕಲ್ಪವಲ್ಲರಿ ಕನ್ನಡಿಗರು ಸರ್ಪಭೂಷಣರಿಂದ ಪಡೆದ ಅನುಭವದ ಅಕ್ಷಯ ಭಂಡಾರ’ ಎಂದಿದ್ದಾರೆ. ಡಾ. ಸಿದ್ಧಯ್ಯ ಪುರಾಣಿಕರು, ಶ್ರೀ ನಿಜಗುಣ ಶಿವಯೋಗಿಗಳೂ ಸರ್ಪಭೂಷಣ ಶಿವಯೋಗಿಗಳೂ ಧ್ವನಿ ಪ್ರತಿಧ್ವನಿಗಳಂತಿದ್ದು ಸಮಾನಸ್ಕಂದರಾಗಿರುವರು’ ಎಂಬ ಬಸವರಾಜಯ್ಯನವರ ಅಭಿಪ್ರಾಯ ವಿರೋಧಾಭಾಸದಿಂದ ಕೂಡಿದೆ, ಸಮಾನ ಸ್ಕಂದರಂದು ಕೊನೆಯಲ್ಲಿ ಹೇಳಿದ್ದರೂ ಅವರು ‘ಧ್ವನಿ ಪ್ರತಿಧ್ವನಿ ಗಳತಿಂದ್ದು ಎಂದಿರುವುದು. ಸಪ್ಪಣ್ಣನವರದು ಪ್ರತಿಧ್ವನಿಯೆಂಬರ್ಥ ಮೂಡಿಸಿಬಿಡುತ್ತದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ….. “ಸಪ್ಪಣ್ಣಾರ್ಯರು ಪ್ರತಿಭಾವಂತರಾದ ಕವಿಗಳಾದುದರಿಂದ ಅವರ ಕೈವಲ್ಯಕಲ್ಪವಲ್ಲರಿ ಕೈವಲ್ಯ ಪದ್ಧತಿಯ ಬರಿಯ ಅನುಕರಣ ಅಥವಾ ಶುಷ್ಕಾನುವಾದವೆಂದೆನಿಸುವುದಿಲ್ಲ” ಎಂದು ಬಸವನಾಳರು
ಸರಿಯಾಗಿ ಗುರುತಿಸಿದ್ದಾರೆ. ಈ ಗ್ರಂಥದಲ್ಲಿ ನಾಲ್ವತ್ತರ ಮೇಲ್ಪಟ್ಟು ಭಿನ್ನರಾಗಗಳನ್ನೂ ಅವುಗಳ ಅವಾಂತರ ಪ್ರಕಾರಗಳನ್ನೂ ಬಳಸಿದ್ದಾರೆ’ ಎಂದು ಹೇಳಿ ಒಟ್ಟಿನಲ್ಲಿ ಕೈವಲ್ಯ ಕಲ್ಪವಲ್ಲರಿ ಸಂಗೀತಕ್ಕಾಗಿ ರಚಿಸಿದ ಸಾಹಿತ್ಯವಾದರೂ ಇದರಲ್ಲಿ ಉಚ್ಚ ಸಾಹಿತ್ಯದ ಯಾವ ಮುಖ್ಯ ಲಕ್ಷಣಕ್ಕೂ ಚ್ಯುತಿ ಬಂದಿಲ್ಲವೆಂದೇ ಹೇಳಬಹುದು’ ಎಂದಿದ್ದಾರೆ. ಇಂದಿಗೂ ಕಲ್ಪವಲ್ಲರಿಯ ಸಂಗೀತ ಮೌಲ್ಯದ ಬಗ್ಗೆ ಆಳವಾದ ಅಧ್ಯಯನ ನಡೆಯದಿರುವುದು ದುರ್ದೆವದ ಸಂಗತಿಯಾಗಿದೆ. ಈ ವಿಷಯ ಇರಲಿ, ಸಪ್ಪಣ್ಣನ ವರು ಮತ್ತು ನಿಜಗುಣರ ಪ್ರತಿಭೆ ಸಂಬಂಧದ ಬಗ್ಗೆ ಹುಟ್ಟಿಕೊಂಡ ನಂಬಿಕೆಯನ್ನು ಶ್ರೀ ಮಲ್ಲಾಬಾದಿ ವೀರಭದ್ರಪ್ಪನವರು ಹೀಗೆ ಉಲ್ಲೇಖಿಸಿದ್ದಾರೆ. “ಆರು ಶಾಸ್ತ್ರ ಬರೆದಿಟ್ಟು ಹೋದರೂ ಇನ್ನೂ ಕೂಡ ಜ್ಞಾನ ಅದರಲ್ಲಿ ಪೂರ್ಣವಾಗಿಲ್ಲವೆಂದು ಆ ನಿಜಗುಣಪ್ಪನವರೇ ಮತ್ತೆ ಸಪ್ಪಣ್ಣನವರಾಗಿ ಅವತರಿಸಿದ್ದಾರೆ.”
ಹನ್ನೆರಡು ವರ್ಷಗಳ ಅವರ ತೀರ್ಥಯಾತ್ರೆ ಹಾಗೂ ಮಠಗಳ ಯಾತ್ರೆಯಲ್ಲಿ ಅವರು ಕಲಿತದ್ದು ತಮ್ಮ ಗುರುಗಳಾದ ಗುರುಸಿದ್ಧರಲ್ಲಿ ಕಲಿತುದಕ್ಕಿಂತಲೂ ಹೆಚ್ಚೆಂದು ಹೇಳಬೇಕು. ಮಠಗಳಲ್ಲಿ ನಡೆಯುತ್ತಿದ್ದ ಶಿವಾನುಭಾವಗೋಷ್ಠಿಗಳಲ್ಲಿ ಸಪ್ಪಣ್ಣನವರು ಅತ್ಯಂತ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಏಕಂದರೆ ಜ್ಞಾನವೆಂಬುದು ಎಲ್ಲ ದಿಕ್ಕಿನಿಂದಲೂ ಹರಿದು ಬರುತ್ತದೆಂಬುದನ್ನು ಅವರು ಚೆನ್ನಾಗಿ ಮನಗಂಡಿದ್ದರು. ಆದರೆ ಇವರ ಕಲಿಯುವ ಉತ್ಸುಕತೆ ಜೊತೆಗೆ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗುತ್ತಿತ್ತು. ಅಂಥ ಸಂದರ್ಭಗಳು ಸಪ್ಪಣ್ಣ ನವರಿಗೆ ಮುಜಗರವುಂಟುಮಾಡಿದರೂ ಅವರ ಪ್ರತಿಭೆ ಹಾಗೂ ವ್ಯಕ್ತಿತ್ವ ಪ್ರಕಟವಾಗಲು ಕಾರಣವಾದದ್ದು ಮಾತ್ರ ಯೋಗಾಯೋಗ, ವ್ಯಾಕರಣ, ತರ್ಕ, ಛಂದಸ್ಸು, ವೇದೋಪ ನಿಷತ್ತುಗಳು, ಪುರಾಣ ಹಾಗೂ ಕಾವ್ಯಗಳ ಅಪಾರವಾದ ಜ್ಞಾನ ಅವರಲ್ಲಿ ಮೂಡಿಸಿದ್ದ ವಿನಯದಿಂದಾಗಿ ಎಂಥವರ ಮನಸ್ಸನ್ನಾದರೂ ಆಕರ್ಷಿಸುತ್ತಿತ್ತು. ಜೊತೆಗೆ ಅವರಲ್ಲಿದ್ದ ಸೃಜನಶೀಲ ಪ್ರತಿಭೆಗೆ ಸಂಗೀತ ಜ್ಞಾನವೂ ನೇರವಾಗಿ ಅವರ ವಾಗ್ಮಿತೆಗೆ ಮಂತ್ರಗಾರಿಕೆ ಪ್ರಾಪ್ತವಾಗಿತ್ತು ಇವೆಲ್ಲಕ್ಕಿಂತಲೂ ಪ್ರಧಾನವಾದುದು ಇಷ್ಟಲಿಂಗಾನು ಸಂಧಾನದಿಂದ ಪ್ರಾಪ್ತವಾಗಿದ್ದ ಶಿವಯೋಗ ಸಿದ್ಧಿ, ಪ್ರವಾಸ ಕಾಲದಲ್ಲಿ ಕನಿಷ್ಠ ಮೂರು ಮಠಗಳ ಅಧ್ಯಕ್ಷತೆ ವಹಿಸಿಕೊಳ್ಳುವ ಅಹ್ವಾನ ಬಂದರೂ ಅವುಗಳತ್ತ ಲಕ್ಷವನ್ನೇ ನೀಡದ ವೀರವೀರಕ್ತಿ, ಅಷ್ಟೇ ಏನು, ಸ್ವತಃ ಗುರುಸಿದ್ಧರ ಅನಂತರ ಆ ಪೀಠಕ್ಕೆ ಅಧ್ಯಕ್ಷರಾಗಬೇಕೆಂದು ಹರಗುರು ಚರಮೂರ್ತಿಗಳು ಹಾಗೂ ಭಕ್ತಾದಿಗಳು ತೀವ್ರವಾದ ಒತ್ತಾಯ ಮಾಡಿದರೂ ಅದನ್ನೊಲ್ಲದ ತಮ್ಮ ಸಹಪಾಠಿಗಳಾಗಿದ್ದ ಚಿಕ್ಕಗುರುಸಿದ್ಧಸ್ವಾಮಿಗಳನ್ನೇ ಅಧ್ಯಕ್ಷರನ್ನಾಗಿಸಿದ ಇವರ ವಿರತಿ ಸಿದ್ದಿ ಅದ್ಭುತ, ಮಂತ್ರಮುಗ್ಧರನ್ನಾಗಿ ಮಾಡಬಲ್ಲ ಪ್ರವಚನ ಶಕ್ತಿ ಅದ್ಭುತವಾದ ಸಂಗೀತ ಶಕ್ತಿ, ವಿನಯ ವಿದ್ವತ್ತುಗಳು ಶಿವಯೋಗ-ಇವುಗಳು ಅವರ ವ್ಯಕ್ತಿತ್ವಕ್ಕೊಂದು ಪ್ರಭಾವಲಯವನ್ನು ನಿರ್ಮಿಸಿದ್ದವು. ಅದರಿಂದಾಗಿ ಬೆಂಗಳೂರಿನಲ್ಲಿ ಅವರಿದ್ದ ಜಾಗಕ್ಕೆ ಕರ್ನಾಟಕದ ಮೂಲೆಮೂಲೆಗಳಿಂದ ಭಕ್ತಾದಿಗಳೂ ಹರಗುರು ಚರಮೂರ್ತಿಗಳು ಬರತೊಡಗಿದರು. ಧಾರವಾಡ,ಬಿಜಾಪುರ, ಮತ್ತು ಬಳ್ಳಾರಿ ಜಿಲ್ಲೆಗಳು ಹಾಗೂ ರಾಯಚೂರ ಆದವಾನಿಗಳ ಕಡೆಯಿಂದ ಭಕ್ತಾದಿಗಳೂ ಚಿತ್ರದುರ್ಗ, ಶಿವಮೊಗ್ಗ, ಮೈಸುರು,ಜಿಲ್ಲೆಗಳಿಂದ ಹರಗುರುಚರಮೂರ್ತಿಗಳೂ ಪಟ್ಟ ಚರಾಧಿಕಾರಿಗಳೂ ದರ್ಶನಾಶೀರ್ವಾದಗಳಿಗಾಗಿ ಬರತೊಡಗಿದರು ಸಪ್ಪಣ್ಣನವರಿದ್ದ ತಿಪ್ಪಶೆಟ್ಟಿ ಮಠವೀಗ ಇವರಿಂದಾಗಿ ಒಂದು ಮಹತ್ವದ ಧರ್ಮ ಮತ್ತು ಸಂಸ್ಕೃತಿಗಳ ಕೇಂದ್ರವಾಗಿ ಅಲ್ಲಿನ ಮಠಾದಿಪತಿಗಳಾಗಿದ್ದ ಚಿಕ್ಕ ಗುರುಸಿದ್ದಸ್ವಾಮಿಗಳಿಗೆ ಮುಜುಗರವಾಗಬಹುದೆಂದು ಭಕ್ತಾದಿಗಳ ಒತ್ತಾಯದಿಂದ ಬೇರೆ ಮಠವನ್ನೆ ಕಲ್ಪಿಸಬೇಕೆಂದೆ ವಿಚಾರ ಬಂದಷ್ಟೇ ಅಲ್ಲ ಅಂದಿನ ಸರ್ಕಾರದಿಂದ ಪುಕ್ಕಟೆಯಾಗಿ ಜವೀನನ್ನು ಪಡೆಯುವದು ಕಷ್ಟವಾಗಲಿಲ್ಲ.ಈ ವಿಷಯದಲ್ಲಿ ಅಂದು ಉನ್ನತಾಧಿಕಾರಿಗಳಾಗಿದ್ದ ತೋಪಖಾನೆ ಕೃಷ್ಣರಾಯ(ದಿವಾನ್ ಕೃಷ್ಣಪ್ಪನಾಯಕ)ರು ವಹಿಸಿದ ಪಾತ್ರ ಸಾಮಾನ್ಯವಲ್ಲ.ಭಕ್ತಾದಿಗಳು ಚಕ್ಕ ಗುರುಸಿದ್ದಸ್ವಾಮಿಗಳು ನೀಡಿದ ಆರ್ಥಿಕ ನೆರವು ಕೂಡಿ ಬಂದರೂ ಮಠದ ನಿರ್ಮಾಣದ ಜವಾಬ್ದಾರಿ ಮತ್ತೆ ಇವರ ಅಭಿಮಾನದ ಶಿಷ್ಯ ಫಾಲಲೋಚನರ ಮೇಲೆಯೇ ಬಿದ್ದಿತು.ಅಂಥ ಸರ್ಪಭೂಷಣ ಶಿವಯೋಗಿಗಳ ಶಿಷ್ಯರು ಎಷ್ಟು ಎನ್ನುವ ವಿವರವಾದ ದಾಖಲೆಯಿಲ್ಲದಿದ್ದರು ಫಾಲಲೋಚನರು ಅವರ ಅಭಿಮಾನದ ಶಿಷ್ಯರೂ ಹಾಗೂ ಅನತಂರದ ಪೀಠಾಧಿಕಾರಿಗಳೂ ಆದರು, ಮಠಾಧೀಶರಾದ ಪ್ರಭುಸ್ವಾಮಿಗಳಂತೂ ಸಹಪಾಠಿಗಳಾದರೂ ಸಪ್ಪಣ್ಣನವರ ವ್ಯಕ್ತಿತ್ವದ ಮಹಿಮೆಗೆ ಮಾರು ಹೋದವರೇ .ಆದ್ದರಿಂದಲೇ ಕಾಶಿಯ ಯಾತ್ರೆಯನ್ನು ಸಪ್ಪಣ್ಣನವರ ಇಂಗಿತದಂತೆ ನಿಲ್ಲಿಸಿ ಸಪ್ಪಣ್ಣನವರು ಲಿಂಗೈಕ್ಯರಾಗುವವರಿಗೂ ಜೊತೆಗಿದ್ದ ರೆಂಬುದನ್ನು ಮರೆಯಲಾಗದು.ಜೊತೆಗೆ ವೃಷಭಲಿಂಗ ಶಿವಯೋಗಿಗಳು ತಮ್ಮನ್ನು ಶ್ರೀ ಸರ್ಪಭೂಷಣ ಗುರುವರೇಣ್ಯ ಚರಣಾರವಿಂದ ಮತ್ತು ಮಧುಕರ ಸ್ವರೂಪವೆಂದು ಹೆಮ್ಮೆಯಿಂದ ಕರೆದುಕೊಂಡಿದ್ದಾರೆ.ನರಗಲ್ಲು ಸೋಮಣ್ಣನವರು ಷಡಕ್ಷರದೇವನ ಶಬರಶಂಕರ ವಿಳಾಸಕ್ಕೆ ಅರ್ಥಬರೆದವರು ಸಪ್ಪಣ್ಣಸ್ವಾಮಿಗಳ ಶಿಷ್ಯರೆಂದು ತಿಳಿದು ಬರುತ್ತದೆ.ಇನ್ನೂ ಇಂಥ ಎಷ್ಟು ಜನಕ್ಕೆ ಗುರುಗಳೋ ಬಲ್ಲವರಾರು.
ವಿರಕ್ತರಾಗಿ ಘನತೆವೆತ್ತ ವ್ಯಕ್ತಿತ್ವ; ಅಪಾರ ವಿದ್ವತ್ಸಂಪನನ್ನತೆ; ಯೋಗ ಸಿದ್ದ ತೇಜಸ್ವಿ ಮುಖ; ಸಂಗಿತ ಜ್ಞಾನ ಸಮೃದ್ದವಾಗಿರುವ ಹದವಾದ ಶಾರೀರ ;ನಮ್ರತೆ; ಸರಳತೆಗಳಿಂದ ಕೂಡಿದ ವಾಗ್ಮಿತೆ ಇವುಗಳೆಲ್ಲದರಿಂದ ಶ್ರೀಮಂತವಾದ ಅವರು ಮಠಾಧಿಶರೂ ಆಗಿರಲು ಅಂಥವರ ಗುರುತ್ವ ಯಾರಿಗೆ ಬೇಡ?