ಲೇಖಕರು : ಪೂಜ್ಯ ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ
ಶ್ರೀಗಳು ಸ್ವಾವಲಂಬಿಗಳಾಗಿದ್ದರು. “ತನ್ನ ನಿತ್ಯ ನೇಮವೆಲ್ಲವ ತಾ ಮಾಡ ಬೇಕಲ್ಲದೆ, ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?” ಎನ್ನುತ್ತಿದ್ದರು. ಅಥಣಿ ಅಪ್ಪಂಗಳವರಂತೆ ಅವರು ತಮ್ಮ ಪೂಜೆಗೆ ಕೈ ಜೋಳಿಗೆಯಲ್ಲಿ ಪತ್ರೆ ಪುಷ್ಪಗಳನ್ನು ತಾವೇ ಎತ್ತಿ ತರುತ್ತಿದ್ದರು. ಅವರು ಬಹಿರ್ದೇಸಿಗೆ ಮೂಲಿಮಠದ ತೋಟದಾಚೆಗೆ ಹೋಗುತ್ತಿದ್ದರು, ತೋಟದ ಬಾವಿಯಲ್ಲಿ ಕೈ ಕಾಲು ತೊಳೆದು ಕೊಂಡು, ತಮ್ಮ ಕೌಪೀನಾದಿಗಳನ್ನು ತಾವೇ ತೊಳೆದು ಒಂದೆಡೆ ಹಾಕುತ್ತಿದ್ದರು. ಹೂ ಪತ್ರೆ ಎತ್ತಿಕೊಂಡ ಮೇಲೆ ಸ್ವಲ್ಪ ವೇಳೆ ವಿಶ್ರಮಿಸುತ್ತಿದ್ದರು.
ಶ್ರೀಗಳು ಪಾದದಲ್ಲಿ ಬಹಳ ತ್ರಾಣವುಳ್ಳವರಾಗಿದ್ದರು. ಅವರಿಗೆ ಕಂತೆ ಕಂಬಳಿ ಕೊಪ್ಪಿ ಬೇಕೇಬೇಕಾಗುತ್ತಿದ್ದಿತ್ತು. ಸವದತ್ತಿಯಿಂದ ಪಾದಚಾರಿಗಳಾಗಿ ಮುಂಜಾನೆ ಹೋರಟ ಸಂಜೆಯೊಳಗೆ ಬಿದಿರೆಗೆ ತಲುಪುವರು; ಮತ್ತೆ ಮರುದಿನ ನಡೆಯುತ್ತಲೇ ಹೊತ್ತು ಮುಳುಗುವಷ್ಟರಲ್ಲಿ ಸವದತ್ತಿಗೆ ಮರಳುವರು. ಅಷ್ಟು ಅವಸರವಾಗಿದ್ದಿತ್ತು .ಅವಿಶ್ರಾಂತವಾಗಿದ್ದಿತ್ತು ಅವರ ನಡಿಗೆ ಅವರ ಪ್ರೇರಣಾ ಬಲದಿಂದ ಬಿದರಿ ತುಪ್ಪದ ಸಿದ್ಧ ಗಿರಿಯಪ್ಪನೂ ಕಾಲಲ್ಲಿ ಬಲುಸತ್ವವುಳ್ಳವನಾಗಿದ್ದನು. ಒಂದು ಸಲ, ಆತ ಗುರುಗಳ ಆದೇಶದಂತೆ, ಬಿದರಿಯಿಂದ ಮುಂಜಾವ ನಸುಕಿನಲ್ಲಿ ಹೊರಟವನು ಸೂರ್ಯಾಸ್ತದೊಳಗೆ ಮಿರಜಿಗೆ ಹೋಗಿ ಬಂದಿದ್ದನು.
ಆಥಣಿಯಪ್ಪ, ಬಿಳ್ಳೂರಪ್ಪ, ಬಿದರಿಯಪ್ಪಂಗಳವರು ದೇಹದಿಂದ ಮೂವರಾಗಿದ್ದರೂ, ಆತ್ಮದಿಂದ ಒಂದೇ ಎಂಬಂತಿದ್ದರು. ತಂತಮ್ಮ ಭಾಗದಲ್ಲಿ ಎಲ್ಲಿಯಾದರು ಏನಾದರೂ ವಿಶಿಷ್ಟ ಮಂಗಲಕಾರ್ಯವಿದ್ದಲ್ಲಿ ಮೂವರೂ ಅನ್ನೋನ್ಯ ವಾಗಿ ಕೂಡಿರಬೇಕು; ಲಿಂಗಲೀಲಾ ವಿಲಾಸದಲಲ್ಲಿ ಪರಸ್ಪರರು ಜೋಡಿರಬೇಕು. ಅವರು ಶಿವಯೋಗಿ ತ್ರಿಮೂರ್ತಿಗಳಾಗಿದ್ದರು; ಶಿವಯೋಗದಲ್ಲಿ ಹಣ್ಣಾಗಿದ್ದರು. ಆ ಭಾಗದ ಕಣ್ಣಾಗಿದ್ದರು.
ಬಿದರಿಯಪ್ಪಂಬಿಗಳವರು ತಮ್ಮಲ್ಲಿಗೆ ಜಂಗಮರಾರಾದರೂ ಬರುವಂತಿದ್ದರೆ, ಅದನ್ನು ಮೊದಲೇ ಸೂಚಿಸುತ್ತಿದ್ದರು; ಅವರಿಗಾಗಿ ಪೂಜಾ – ಪ್ರಸಾದದ ವ್ಯವಸ್ಥೆಯನ್ನು ಮಾಡಿಸಿಡುತ್ತಿದ್ದರು. ಶರಣೆ ಸಾಹುಕಾರ ತಾಯವ್ವ ಶ್ರೀಗಳಿಗೆ ಅರಿಯದಂತೆ ಮಠಕ್ಕೆ ಬಂದಿದ್ದ ಗಣಂಗಳಿಗೆ ಬೇಕಾದುದೆಲ್ಲವನ್ನೂ ತಂದಿಟ್ಟು ಹೋಗುತ್ತಿದ್ದಳು. ಜಂಗಮರಿಗೆ ಎಷ್ಟು ಉಣಿಸಿ ತಣಿಸಿದರೂ ಶ್ರೀಗಳಿಗೆ ಬೇಸರವಿದ್ದಿಲ್ಲ. ತಾವು ಜಂಗಮ ಜ್ಯೋತಿ ಯಾಗಿದ್ದರೂ, ಅವರಿಗೆ ಜಂಗಮರೆಂದರೆ ಪಂಚಪ್ರಾಣ, ಒಮ್ಮೊಮ್ಮೆ ಹಿರೇಹೊಳೆಗೆ ದಯಮಾಡಿಸಿದ್ದಾಗ, ಅವರು ಜಂಗಮರ ಮಂಡೆಯ ಮೇಲೆ ಚವಲಿಪಾವಲಿಗಳನ್ನು ಸುರಿದುದುಂಟು; ಬಹಳಷ್ಟು ಉಣ್ಣುತ್ತಿದ್ದ ಗಣಂಗಳಿಗೆ ಬಹಳಷ್ಟು ದಕ್ಷಣೆ ನೀಡಿದು ದುಂಟು. ಅವರು ಮೇಲಿಂದ ಮೇಲೆ ಗಣಾರಾಧನೆಗಳನ್ನು ಇಡಿಸಿದುದುಂಟು.
ಶ್ರೀಗಳಲ್ಲಿ ತಮ್ಮ ಮಠದ ಆಸ್ತಿ ಬೆಳಸಬೇಕೆಂಬ ಹವ್ಯಾಸ ಎಳ್ಳಷ್ಟು ಇದ್ದಿಲ್ಲ. ಎಷ್ಟೋ ಸಾರೆ, ತ್ಯಾಗವೀರ ಶಿರಸಂಗಿ ಲಿಂಗರಾಜರು ಸವದತ್ತಿಯಲ್ಲಿ ಶ್ರೀಗಳ ಪಾದದರ್ಶನ ತೆಗೆದುಕೊಂಡ ಮೇಲೆ ತಾವು ಮಠಕ್ಕೆ ಕೆಲವೊಂದು ಭೂಮಿಯನ್ನು ದತ್ತಿ ಹಾಕಿ ಕೊಡಬೇಕೆಂದು ಮಾಡಿದ್ದರು. ಶ್ರೀಗಳಾದರೋ ಅದಕ್ಕೆ ಸರ್ವಥಾ ಒಪ್ಪಲಿಲ್ಲ. ಆ ದೊರೆಗಳ ಭಕ್ತಿಯ ಸೆಳತಕ್ಕೆ ಸಿಲುಕಿ, ಅವರು ಸೊಡ ಬಲಿಯ ಮಸಣ ಚೌಕಿಗೆ ಸ್ವಲ್ಪ ಜಾಗೆ ಕೊಡಬಹುದೆಂದರು.
ಶ್ರೀಗಳು ಬಿಳ್ಳೂರಪ್ಪಗಳಂತೆ ಜಟ್ಟಿಗಳೆಂದರೆ, ಯೋಗಾಸನ ಪಟುಗಳೆಂದರೆ ಬಲು ಪ್ರೀತಿ : ಒಳ್ಳೆಯ ರೀತಿಯಲ್ಲಿ ಯಾವುದೊಂದು ಶಕ್ತಿ ಪ್ರದರ್ಶನ ಮಾಡಿ ತೋರಿಸಿದವರಿಗೆ ಅವರು ವೆಗ್ಗಳವಾಗಿ ಬಹುಮಾನವಿತ್ತು ಕಳಿಸುತ್ತಿದ್ದರು; ಹುಡುಗರನ್ನು ಕರೆದು ಒಬ್ಬರಿಗೊಬ್ಬರು ಕುಸ್ತಿ ಹಿಡಿಯುವಂತೆ ಹುರಿದುಂಬಿಸುತ್ತಿದ್ದರು; ಗೆದ್ದವರಿಗೂ – ಬಿದ್ದವರಿಗೂ ಕೂಡಿಯೇ ಹುರಿಡಗಲೆ, ಚುರಮರಿ ಕೊಟ್ಟು ‘ಲೇಸಾಗಲಿ!’ ಎಂದು ಆಶೀರ್ವದಿಸುತ್ತಿದ್ದರು. ಹೀಗೆ ಶ್ರೀಗಳ ಆಚಾರ-ವಿಚಾರಗಳ ವಿಕಾಸವಾಗಿದ್ದಿತು; ಅವರು ವ್ಯಕ್ತಿತ್ವ-ಬಹುಮುಖವಾಗಿ ಬೆಳೆದು ಬಂದಿತ್ತು.
ಶ್ರೀಗಳು ಲೋಕಸಂಗ್ರಹದ ಅನೇಕ ಕಾರ್ಯಗಳನ್ನು ಪೂರೈಸಿದರು ಅವುಗಳಲ್ಲಿ ಕೆಲವನ್ನು ಉದಾಹರಿಸಬೇಕೆಂದರೆ –
1. ಶರಣ -ಬಂದರದ ರುದ್ರಪ್ಪನವರೊಂದಿಗೆ ಅನೇಕ ಸದ್ಭಕ್ತರನ್ನು ಕರೆದುಕೊಂಡು ಉತ್ತೂರು ಮಹಾಲಿಂಗ ಶರಣರ ದರ್ಶನಕ್ಕೆ ದಯಮಾಡಿಸಿ, ಅಲ್ಲಿ ಶಿವಾನುಭವ ಗೋಷ್ಠಿ ಸಾಗುವಂತೆ ಪ್ರೇರೇಪಿಸಿದರು; ಬಸವಾದಿ ಪ್ರಮಥರ ತತ್ವಗಳನ್ನು ಪ್ರಸಾರಪಡಿಸಿದರು. ತಮ್ಮ ಕರುಣೆಯ ಕಂದ-ಅಪ್ಪಯ್ಯ ದೇವರನ್ನು ತಮ್ಮ ಉತ್ತರಾಧಿಕಾರಿಯೆಂದು ನೇಮಿಸಿಕೊಂಡು ಹಾನಗಲ್ಲ ಕುಮಾರ ಮಹಾಸ್ವಾಮಿಗಳಿಗೆ ಒಪ್ಪಿಸಿ ಶಿವಯೋಗಮಂದಿರದಲ್ಲಿ ಇಡಿಸಿದರು.
೨. ಸವದತ್ತಿ ಕಲ್ಮಠದಲ್ಲಿ ಒಮ್ಮೆ ಚೋರಬಸವ ಪುರಾಣವನ್ನೂ, ಕ್ರಿ.ಶ. ೧೯೦೨ರಲ್ಲಿ ಭೀಮಕವಿಯ ಬಸವಪುರಾಣವನ್ನು ಹಚ್ಚಿಸಿ, ಜನತೆಯಲ್ಲಿ ದಾಸೋಹಂ ಭಾವದ ಬೀಜವನ್ನು ಬಿತ್ತಿದರು. ಸವದತ್ತಿ ಪುರಾಣಮಂಗಲೋತ್ಸವ ನಿಜಕ್ಕೂ ಸಮಾಜದಲ್ಲಿ ನವ ಮನ್ವಂತರ ಮೂಡಿಬರುವಲ್ಲಿ ಶುಭನಾಂದಿ ಹಾಕಿತೆನ್ನಬಹುದು.
೩. ಕಲ್ಯಾಣದಪ್ಪ – ಬಸವಣ್ಣವರಂತೆ, ಬಿದಿರಿ ಶಿವಯೋಗಿಗಳು ಗುಣ ಸಂತೃಪ್ತಿಯ ನೇಮವನ್ನು ಕೈಗೊಂಡು, ತಾವಿರುವ ಪರ್ಯಂತರ – ಕೈಯಲ್ಲಿ ಕಾಸಿಲ್ಲದಾಗಲೂ ಇಚ್ಛಾ ಭೋಜನ ಮಾಡಿಸುತ್ತ ಪ್ರಸಾದ ಮಹಿಮೆಯನ್ನು ಬಸವ ಭಕ್ತಿಯನ್ನು ಎತ್ತಿ ತೋರಿಸಿದರು.
೪, ಒಮ್ಮೆ ಶಿವಯೋಗಿಗಳು ಬಿದರಿ, ಚಿಚಡಿ, ಗೊರವನ ಕೊಳ್ಳಗಳ ಭಕ್ತರನ್ನೊಡಗೊಂಡು – ಐವತ್ತು ಬಂಡಿಗಳನ್ನು ಕೂಡಿಸಿಕೊಂಡು, ಹಳೆಗಾಲದ ಶರಣ ‘ಹರಳಯ್ಯನ, ಗುಂಡ’ ಎಂಬ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಅಲ್ಲಿ ಬಬಲೇಶ್ವರ ಬೃಹನ್ಮಠಾಧ್ಯಕ್ಷ – ಶ್ರೀ ಷ. ಬ್ರ. ಶಾಂತವೀರ ಶಿವಾಚಾರ್ಯರ ಶಿವ ಯೋಗಾಶ್ರಮಕ್ಕೆ ಸಮದರ್ಶನ ನೀಡಿದರು; ಶರಣ ಹರಳಯ್ಯನ ಆದರ್ಶ ಜೀವನವನ್ನು ಮಾರ್ಮಿಕವಾಗಿ ಬೋಧಿಸಿದರು.
೫. ಮತ್ತೊಮ್ಮೆ ಶಿವಯೋಗಿಗಳು ಭಕ್ತರೊಂದಿಗೆ ಮಾಘ ಮಾಸದಲ್ಲಿ ಕೃಷ್ಣ (ಹಿರೇಹೊಳೆಗೆ) ಗೆ ಬಿಜಯಂಗೈದು, ಅಲ್ಲಿ ಅಸಂಖ್ಯ ಗಣಂಗಳನ್ನು ಧಾರಾಳವಾಗಿ ಪ್ರಸಾದ- ದಕ್ಷಿಣೆಗಳಿಂದ ತಣಿಸಿ ಗುರು-ಲಿಂಗ ಜಂಗಮ ಭಕ್ತಿಯನ್ನು ವ್ಯಕ್ತಪಡಿಸಿದರು.
೬. ಅಥಣಿ ನೇಸರಗಿಗಳಲ್ಲಿ ಚರ್ಚಿಸಿದ ಬಸವ ಪುರಾಣ ಮಂಗಲೋತ್ಸವಗಳಲ್ಲಿ ಶಿವಯೋಗಿಗಳು ತಮ್ಮ ಇನ್ನಿಬ್ಬರು ಆತ್ಮೀಯರೊಂದಿಗೆ ಉಪಸ್ಥಿತರಾಗಿದ್ದರು. ಅವರು ಅಥಣಿಯಿಂದ ತಿರುಗಿ ಬರುತ್ತಿದ್ದಾಗ ದಾರಿಯಲ್ಲಿ ಪತ್ರೆಯ ಮಹಿಮೆಯನ್ನು ಲೋಕಕ್ಕೆ ಮನಗಾಣಿಸಿಕೊಟ್ಟರು.
೭. ಶಿವಯೋಗಿಗಳು ಬಬಲೇಶ್ವರ ಶ್ರೀ ಫ. ಚ. ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಯ ಶ್ರೀ ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದ ಗಂಗಾಧರ ರಾಜ ಯೋಗೀಂದ್ರ ಮಹಾಸ್ವಾಮಿಗಳು, ಲಿಂಗೈಕ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರು ಲಿಂಗೈಕ್ಯ ಶ್ರೀ ಹಾವೇರಿ ಶಿವಬಸವ ಮಹಾಸ್ವಾಮಿಗಳು- ಇವರೇ ಮೊದಲಾದ ಗುರು – ವಿರಕ್ತರಿಗೆ ಅನುಗ್ರಹವಿತ್ತು ಅವರವರಿಂದ ಲೋಕಕಲ್ಯಾಣ ಕೃತಿಗಳಾಗುವಂತೆ ಪ್ರೇರೇಪಿಸಿದರು.
ಲಿಂಗೈಕ್ಯ ಲೀಲೆ
ಸಂವತ್ಸರ ತಿರುಗಿತ್ತು ಶರಣರಿಗೆ – ಶಿವಯೋಗಿಗಳಿಗೆ ಮರಣವೇ ಮಹಾ ನವಮಿ’, ಬಿದರಿ ಕುಮಾರ ಶಿವಯೋಗಿಗಳಿಗೆ ಒಮ್ಮಿಂದೊಮ್ಮೆ ತಮ್ಮ ಲಿಂಗೈಕೈ ಮಿತಿ ಭಾವದಲ್ಲಿ ಸ್ಪುರಿಸಿದ್ದಿರಬೇಕು; ಅವರು ಯಳಂದೂರು ಬಸವಲಿಂಗ ಶಿವಯೋಗಿಶ್ವರರ ಲಿಂಗೈಕ್ಯ ಮಿತಿಯನ್ನು ಮನದಲ್ಲಿ ಇರಿಸಿದ್ದಿರಬೇಕು; ಅಂತೆಯೇ, ಅವರು ಒಂದೆರಡು ದಿನ ಮುಂಚೆ ಬಿಳೂರು, ಹಾನಗಲ್ಲು ಹಾವೇರಿ ಚರಮೂರ್ತಿಗಳನ್ನು; ಮಂಟೂರು, ಬಬಲೇಶ್ವರ, ಕೋಹಳ್ಳಿ ಗುರುಮೂರ್ತಿಗಳನ್ನು ಸವದತ್ತಿಗೆ ಕರೆಸಿದ್ದಿರಬೇಕು. ತಮ್ಮ ಅಪ್ಪಯ್ಯ ದೇಶಿಕರ ಮುಖಾಂತರ ಅಥಣಿ ಶಿವಯೋಗಿಗಳ ಪಾದಕ್ಕೆ ೨೫ ರೂ, ಕಾಣಿಕೆ ಮುಟ್ಟಿಸುವ ಏರ್ಪಾಡು ಮಾಡಿದುದಾಯಿತು; ಮೇಲುಕಟ್ಟಿ ಸಂಗಪ್ಪ, ಅಥಣಿ ಮಾಕೊಂಡಪ್ಪ, ಎಡಹಳ್ಳಿ ದೇಸಾಯಿ ಮಲ್ಲಪ್ಪ, ದೇವಿ ಹೊಸೂರು ಶೆಟ್ಟಿ ಚೆನ್ನಬಸವಪ್ಪ – ಇವೆಲ್ಲರ ಸಮಕ್ಷಮ ಹಾನಗಲ್ಲ – ಹಾವೇರಿ ಶ್ರೀಗಳವರಿಗೆ ಏನೇನು ಅಪ್ಪಣೆ ಮಾಡಬೇಕೋ ಮಾಡಿದುದಾಯಿತು ಕಲ್ಮಠದ ಮುಂದಿನ ಹರವಾದ ಹಂದರದಲ್ಲಿ ಒಂದು ದಿನ ಶಿವಭಜನೆ, ಶಿವ ಕೀರ್ತನೆಗಳೂ – ಮತ್ತೊಂದು ದಿನ ಶಿವಗಣಾರಾಧನೆ, ಶಿವಾನುಭವ ಬೋಧನೆಗಳೂ ಎಡೆಬಿಡದೆ ಸಾಗಿದ್ದವು. ಶಾಲಿವಾಹನ ಶಕ ೧೮೩೩. (ಕ್ರಿ.ಶ. ೧೯೧೧, ಡಿಸೆಂಬರ್ ಕಡೇವಾರ) ಪುಷ್ಯ ಶುದ್ಧ ಪಂಚಮಿ ಸೋಮವಾರ ಬೆಳಗಿನ ಲಿಂಗಪೂಜೆಗೆ ಶಿವಯೋಗಿಗಳು ಎದ್ದರು, ಅವರ ಸ್ನಾನವಾಯಿತು. ಆದರೆ ಅವರೊಬ್ಬರಿಗೇ ಪೂಜಾ ಮಂದಿರಕ್ಕೆ ಹೋಗಲು ಆಗಲಿಲ್ಲವೇನೋ ಮಡಿಯಲ್ಲಿದ್ದ ಸದ್ಭಕ್ತರೊಬ್ಬಿಬ್ಬರು ಅವರನ್ನು ಅತ್ತ ಕರೆದೊಯ್ಯುತ್ತಿದ್ದಾಗಲೇ, ಶಿವಯೋಗಿಗಳಿಗೆ ನಿಂತು ನಿಂತಲ್ಲೇ ಬಾಹ್ಯ ಸ್ಮೃತಿ ಹಾರಿತು; ನಿಂತು ನಿಂತಲ್ಲೇ ಅವರ ಕಿವಿಯಲ್ಲಿ ಮಹಾಮಂತ್ರ ಪಠಿಸಿದುದಾಯಿತು ಅವರ ಬಾಯಲ್ಲಿ ಜಂಗಮ ಪಾದೋದಕ ಹಾಕಿದುದಾಯಿತು. ಪ್ರಾಣ ಪಕ್ಷಿ ಹಾರಿಹೋಗುತ್ತಿದ್ದಾಗಲೆ, ಅವರ ಲಿಂಗ ದೇಹ ತಾನೆ ಕುಸಿಯಿತು. ಹೀಗೆ ಶಿವಯೋಗಿಗಳು ಎದ್ದು ನಿಂತಿದ್ದಾಗಲೇ ಲಿಂಗದಲ್ಲಿ ಬೆರೆದರೆಂದು ದಟ್ಟವದಂತಿ ಹಾನಗಲ್ಲ ಶಿವಯೋಗಿಗಳು ಪೂಜೆಗೆ ಕುಳಿತ್ತಿದ್ದಾಗಲೇ ಲಿಂಗ ನಿರೀಕ್ಷಣೆಯಲ್ಲಿದ್ದಾಗಲೆ ಕೊನೆಯುಸಿರೆಳೆದು ಲಿಂಗೈಕ್ಯರಾದರೆಂತಲೂ ಐತಿಹ್ಯವುಂಟು. ಅವರು ಲಿಂಗದೊಳಗಾದಾಗ ಪ್ರಾತಃಕಾಲ ಸರಿಯಾಗಿ ಎಂಟು ಗಂಟೆಯಾಗಿದ್ದಿತು. ಅಲ್ಲಿಯ ಶಿಲಾಮಠದಲ್ಲಿ ಶಿವಯೋಗಿಗಳ ಕ್ರಿಯಾ ಸಮಾಧಿಯಾಯಿತು, ಆ ಭಾಗದಲ್ಲಿ ಅದೊಂದು ಜಾಗ್ರತ ಸಮಾಧಿಯಾಗಿದೆ.
ಸಂಸ್ಮರಣೀಯ ಸಂಗತಿಗಳು
- ಪರಮ ತಪಸ್ವಿ ಶ್ರೀ ಘ.ಚ. ಬಬಲೇಶ್ವರದ ಶಾಂತವೀರ ಮಹಾಸ್ವಾಮಿಗಳು ತಾವಿರುವ ಶ್ರೀ ಹರಳಯ್ಯನ ಗುಂಡ ಕ್ಷೇತ್ರದಲ್ಲಿಯ ಗುಂಡಕ್ಕೆ ಶ್ರೀ ಬಿದರಿ ಕುಮಾರೇಶ್ವರ ತೀರ್ಥ’ವೆಂದು ಹೆಸರಿಟ್ಟಿರುವರು; ಪ್ರತಿವರ್ಷ ಪುಷ್ಯ ಶುದ್ಧ ಪಂಚಮಿಯಂದು ಬಿದರಿ ಅಪ್ಪಂಗಳವರ ಪುಣ್ಯ ತಿಥಿಯನ್ನು ಆಚರಿಸುತ್ತಿರುವರು.
- ಅಪ್ಪಂಗಳವರು ನವಿಲು ತೀರ್ಥದಲ್ಲಿ ಅನುಷ್ಠಾನಕ್ಕೆ ಕುಳಿತಿದ್ದಾಗಿನ ರೂಪಚಿತ್ರ ವೊಂದು ಅವರ ಸಾಮಾನ್ಯ ರೂಪ ಚಿತ್ರದೊಂದಿಗೆ ಪ್ರಚಾರದಲ್ಲಿರುತ್ತದೆ.
- ಚಿಕ್ಕಲಿಗೆಯ ಊರ ಹೊರಗಿರುವ ಪತ್ರೆ ಮರಕ್ಕೆ ಅಪ್ಪಂಗಳವರ ವಾಕ್ಪುರುಷ ಬಲದಿಂದ ತ್ರಿದಳಗಳು ಪಂಚದಳವಾಗಿ ಪರಿವರ್ತನೆಗೊಂಡುದರ ಕುರುಹಿಗಾಗಿ ಆ ಮಠಕ್ಕೆ ಶ್ರೀ ಬಿದರಿ ಕುಮಾರೇಶ್ವರ ಪತ್ರಿಮರ’ವೆಂದು ಕರೆಯಲಾಯಿತು. ಭಕ್ತರು ಪ್ರತಿ ಶ್ರಾವಣದಲ್ಲಿ ಆ ಗಿಡವನ್ನು ಪೂಜಿಸುವರು. ಗಣರಾಧನೆ ಮಾಡುವರು.
- ಪ್ರಿಯ ಭಕ್ತರಲ್ಲೊಬ್ಬರಾಗಿದ್ದ ಲಿಂಗೈಕ್ಯ ಶ್ರೀ ಎಡಹಳ್ಳಿ ಮಲ್ಲಪ್ಪ ದೇಸಾಯಿಯವರಿಗೆ ಅಪ್ಪಂಗಳವರು ಒಮ್ಮೆ ಐದು ಬಿಲ್ವ ಸಸಿಗಳನ್ನು ದಯಪಾಲಿಸಿದ್ದರು. ಅವು ಬೆಳೆ ಬೆಳೆದಂತೆ ದೇಸಾಯಿಯವರ ಮನೆತನ ಇನ್ನಷ್ಟು ಬೆಳೆಯಿತೆಂದೂ, ಅವುಗಳಲ್ಲಿ ಈಗ ಮೂರು ಮಾತ್ರ ಉಳಿದಿವೆಯೆಂದೂ ಕಂಡು ಬಂದಿದೆ.
- ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಂದು ಅಪ್ಪನವರು ಅನುಷ್ಠಾನಿಸಿದ ನವಿಲು ತೀರ್ಥದಲಿ ತೆಪ್ಪೋತ್ಸವ ನಡೆಯುತ್ತಿದೆ.
- ಅಪ್ಪಂಗಳವರ ಮೇಲೆ ಪದ- ಪದ್ಯಗಳನ್ನು ಕಟ್ಟಿ ಆ ಕಡೆ ಭಜನಾದಿಗಳಲ್ಲಿ ಭಕ್ತರು ಹಾಡಿ ನಲಿಯುತ್ತಿರುವರು. ಅವರ ಮೇಲೊಂದು ‘ನಾಮಾವಳಿ’ಯೂ ಇದೆ. ಮೂರು ಧ್ವನಿ ಮುದ್ರಣಗಳಿವೆ.
- ನಾಡಿನಲ್ಲಿ ಕೆಲವೆಡೆ ಅಪ್ಪಂಗಳವರ ಪುರಾಣ ಪ್ರವಚನಗಳು ಸಾಗುತ್ತಿದ್ದು ಅಲ್ಲಲ್ಲಿ ಅವರ ಪುಣ್ಯ ದಿನಾಚರಣೆ ರೂಢಿಗತವಾಗಿದೆ. ಹೆಚ್ಚು ಹೆಚ್ಚು ಪುರಾಣಗಳನ್ನು ನೆರವೇರಿಸಿದ ಶ್ರೇಯಸ್ಸು ಜಗದ್ಗುರು ಸಂಗನಬಸವ ಮಹಾಸ್ವಾಮಿಗಳು, ಹಂಪಿ-ಹಾಲಕೆರೆ ಅವರಿಗೆ ಸಲ್ಲುವುದು.
- ಚಚಡಿ ಊರ ಹೊರಗಿರುವ ಬಾವಿಯ ಮೇಲ್ಗಡೆ ಬಂಡೆಯ ಮೇಲೆ ಒಂದು ಸಾರೆ ಮೂರು ದಿನ ಅಚ್ಚಳಿಯದೆ ಮೂಡಿ ಮಿನುಗಿದ್ದ ಅಪ್ಪಂಗಳವರ ನಸುಕಾವಿ ಬಣ್ಣದ ಹಸಿ ಹೆಜ್ಜೆಯ ನೆನೆಪೆಂದು ಆ ಬಂಡೆಗಲ್ಲನ್ನು ಇಂದಿಗೂ ತೋರಿಸುತ್ತಿದ್ದಾರೆ.
- ಅಪ್ಪಂಗಳವರ ಸಾನ್ನಿಧ್ಯದಿಂದ ಮತ್ತಷ್ಟು ಶೋಭಿಗೊಂಡಿದ್ದ ಅಥಣಿ ಶೆಟ್ಟರ ಮಠಕ್ಕೆ ‘ಕುಮಾರ ಮಠ’ವೆಂತಲೂ ಕರೆಯುವುದಂಟು.
- ಬಿದರಿ ಮಠದಲ್ಲಿ ೧೯೮೩ರಲ್ಲಿ ಹುಲಿ ಹೆಜ್ಜೆ ಮೂಡಿದುದಾಗಿ ತಿಳಿದು ಗಣಾರಾಧನೆಯನ್ನು ಮಾಡಲಾಯಿತು.ಜನರು ಜಾತ್ರೆಯಂತೆ ನೆರೆದು ಶ್ರೀ ಕುಮಾರೇಶ್ವರರು ಹುಲಿಏರಿ ಶ್ರೀಮಠದಲ್ಲಿ ತಿರುಗುತ್ತಾರೆ ಎಂಬುದು ನಂಬಿಕೆ.
- ಮುಪ್ಪಿನ ಕಾಲದಲ್ಲಿ ದೇಸಾಯಿಯವರು ಮಾಡಿಸಿಕೊಟ್ಟ ‘ಮೇನೆ’ ಬಿದರಿ ಮಠದಲ್ಲಿ ಇನ್ನೂ ಕಾಯ್ದಿರಿಸಲಾಗಿದೆ.
ಪವಾಡದ ಪಥದಲ್ಲಿ
1. ಹುಲಸಿನ ಹುಗ್ಗಿ : ಸವದತ್ತಿಮಠದ ಹಿತ್ತಲಲ್ಲಿಯ ಕುಂಬಳ ಕಾಯಿಗಳನ್ನು ಹರಿಸಿಟ್ಟಿದ್ದರು. ಬಸವ ಪುರಾಣ ಮಂಗಲೋತ್ಸವದ ಮರುದಿನ ಶಿವಯೋಗಿಗಳು ಪ್ರತ್ಯೇಕವಾಗಿ ಜಂಗಮಾರಾಧನೆಯಿಟ್ಟು ಕೊಂಡಿದ್ದರು. ಬೆಲ್ಲ, ಶುಂಠಿ, ಯಾಲಕ್ಕಿ, ಪತ್ರೆ, ಲವಂಗ, ಜಾಜಿಕಾಯಿ ಹಾಕಿ; ಕುಂಬಳ ಪಾಯಸವನ್ನು ಸಿದ್ಧಪಡಿಸಲಾಗಿದ್ದಿತು; ಅದಕ್ಕೆ ಶಿವಯೋಗಿಗಳ ಹಸ್ತ ಸ್ಪರ್ಶವಾಗಿದ್ದಿತು. ಆ ಹುಗ್ಗಿ ನೂರಾರು ಗಣಂಗಳಿಗೆ ಸಾಕಾಗಿ, ಊರ ಬಡಬಗ್ಗರು ಉಂಡರೂ ಉಳಿಯಿತು. ಅದು ಅಷ್ಟು ಹುಲುಸಾಗಿದ್ದಿತು.
2. ಸಾಯುವವ ಬದುಕಿದ : ಸವದತ್ತಿಯಲ್ಲಿ ಗಡೇಕಾರ ನಾಗಪ್ಪನಿಗೆ ದೊಡ್ಡ ಬೇನೆ ಅಂಟಿಕೊಂಡು, ಆತ ಈಗ ಆಗ ಸಾಯುವ ಸ್ಥಿತಿಯಲ್ಲಿದ್ದನು, ನೆಲಪಟ್ಟಾಗಿ ಬಿದ್ದಿದ್ದನು. ಆತನಾದರೋ ಶ್ರೀಗಳ ಪ್ರೀತಿಯ ಶಿಷ್ಯ. ಶ್ರೀಗಳೇ ಆತನ ಮನೆತನಕ ದಯಮಾಡಿಸಿ, ಆತನ ಮೈಮೇಲೆ, ತಲೆಯ ಮೇಲೆ ಕೈಯಾಡಿಸಿ, “ನಾಗಣ್ಣಾ ಅಪ್ಪ-ಬಸವ ನಿನ್ನ ಕಂಟಕ-ಕಳೆಯುವನು!” ಎಂದು ನುಡಿದರು. ಆತ ವಾರೆಂದು ಕಳೆಯುವುದರೊಳಗೆ ಪೂರಾ ಗುಣಮುಖವಾದವು. ಆತ ತಾನು ಎಂದೆ ಸಂಕಲ್ಪಿಸಿದ್ದಂತೆ, ಮಠದಲ್ಲಿ ನಗಾರಿಖಾನೆ’ ಯನ್ನು ಕಟ್ಟಿಸಿ ಕೊಟ್ಟನು. ಹರಕೆ ಹನ್ನೆರಡು ವರುಷ
3. ಬಾವು ಇಳಿಯಿತು : ಚಚಡಿ ಅಣ್ಣಾ ಸಾಹೇಬ ದೇಸಾಯಿಯವರ ಆಮಂತ್ರಣದಂತೆ, ಶಿವಯೋಗಿಗಳು ಅಲ್ಲಿಗೆ ಬಿಜಯಂಗೈಸಿ, ಅರಮನೆಯಲ್ಲಿ ಪೂಜಾ ಪ್ರಸಾದ ತೀರಿಸಿಕೊಂಡು, ತಿರುಗಿ ಸವದತ್ತಿಗೆ ಬಂಡಿಯಲ್ಲಿ ಬರುತ್ತಿದ್ದರು. ಅಕಸ್ಮಾತ್ತಾಗಿ, ಒಂದು ಎತ್ತಿನ ಹೊಟ್ಟೆಗೆ ಬುರುಬುರು ಬಾವು ಬಂದಿತು. ಶಿವಯೋಗಿಗಳು ಚಕ್ಕಡಿಯಿಂದಿಳಿದು, ಆ ಎತ್ತಿನ ಬೆನ್ನ ಮೇಲೆ ‘ಬಸವಾ ಬಸವಾ!” ಎಂದು ಕೈಯಾಡಿಸಿದೊಡನೆ, ಆ ಬಾವು ಜರ್ರನೆ ಇಳಿಯಿತು.
4. ಕಂಬಳಿ ನಡುಗಿತು : ಶ್ರೀಗಳು ಒಮ್ಮೆ ಸವದತ್ತಿ ಮಠದಲ್ಲಿ ಉರಿಚಲ್ಲಿ ಬಂದು ಪವಡಿಸಿದ್ದರು; ಬಿಳಿ ಕಂಬಳಿ ಹೊತ್ತಿದ್ದರು. ಸಲುಗೆಯ ಭಕ್ತನೊಬ್ಬನು ‘ಬುದ್ದಿ ತಮ್ಮಂತಹವರಿಗೂ ಇಂತಹ ಬೇನೆಯೇ ?” ಎಂದು ಸಹಜವಾಗಿ ಕೇಳಿಕೊಂಡನು. ಶ್ರೀಗಳಾದರೋ “ಯಾಕೆ ಬರಬಾರದು ? “ಘಟ ಹೊತ್ತಿರುವವರೆಲ್ಲರಿಗೂ ಸುಖ-ದುಃಖಗಳು ಬಿಟ್ಟುವಲ್ಲ!” ಎನ್ನುತ್ತಾ ತಾವು ಹೊತ್ತಿದ್ದ ಕಂಬಳಿಯನ್ನು ತೆಗೆದು ಆತನ ಮುಂದಿರಿಸಿದರು. ಆ ಕಂಬಳಿ ಗದಗದನೆ ನಡುಗಿ ಮೇಲಕ್ಕೆ ಹಾರಹತ್ತಿತು! “ಸಾಕು ಬುದ್ಧಿ, ನನ್ನದು ತಪ್ಪಾಯಿತು” ಎಂದು ಆತ ಬಿದ್ದು ಬೇಡಿಕೊಂಡನು. ಅವನ ಒಡಲೂ ನಡುಗಿತು’ ಮುಂಚಿನಂತೆ ಶ್ರೀಗಳ ದೇಹವೂ ಕಂಪಿಸಿತು. ಸಮತೆಗಿದು ಸಾಕ್ಷ್ಯವಲ್ಲವೆ ?
5. ಇಬ್ಬರಿಗೂ ತೃಪ್ತಿ : ಚಚಡಿ ದೇಶಮುಖರು ಒಂದು ಸಲ ತಮ್ಮೂರ ನರಸಿಂಗಪ್ಪ ಎಂಬ ವಿಜಾತೀಯ ಸದ್ಗೃಹಸ್ಥನೊಂದಿಗೆ ಶ್ರೀಗಳ ಪಾದದರ್ಶನಕ್ಕಾಗಿ ಸವದತ್ತಿಗೆ ಹೋಗಿದ್ದರು. ಮಠದಲ್ಲಿ ಆಗಲೇ ಮಹಾಲಿಂಗ ತೃಪ್ತಿಯಾಗಿತ್ತು. ಮಿಕ್ಕ ಪ್ರಸಾದವಿದ್ದಿಲ್ಲ. ಶ್ರೀಗಳಾದರೋ ಅವರಿಬ್ಬರನ್ನು ಊಟಕ್ಕೆ ಎಬ್ಬಿಸಿದರು. ಮಠದಲ್ಲಿದ್ದವರು ಅವರಿಗೆ ಸ್ನಾನ ಪೂಜೆಗೊಸ್ಕರ ತಕ್ಕ ವ್ಯವಸ್ಥೆ ಮಾಡಿದರು. ಮಠದ ಭಕ್ತನೊಬ್ಬನು ಅನಿರೀಕ್ಷಿತವಾಗಿ ಅದೇ ಸಮಯಕ್ಕೆ ಪಕ್ಷಾನ್ನ ತುಂಬಿದ ಬುಟ್ಟಿಯನ್ನು ಹೊತ್ತು ತಂದನು. ಅದರಲ್ಲಿ ಫಲಾಹಾರವೂ ಇತ್ತು. ಇಬ್ಬರೂ ಆಯಾ ಪದಾರ್ಥದಿಂದ ಸಂತೃಪ್ತರಾಗಿ, ಶ್ರೀಗಳವರನ್ನು ಹಾಡಿ ಹರಿಸಿದರು.
6. .ನಾಲ್ಕು ಉತ್ತತ್ತಿ; ನಾಲ್ವರು ಮಕ್ಕಳು : ಶ್ರೀಗಳು ಒಂದು ವರ್ಷ ಶ್ರೀಗಳು ಸೋಮೇಶ್ವರ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಪಾದಸೇವಕ ಮಠಪತಿ ಮಹಾರುದ್ರಯ್ಯ ಅವರ ಪರಿವಾರದಲ್ಲಿದ್ದನು. ಅಲ್ಲಿ ಶ್ರೀಗಳದೇ ಗಣಾರಾಧನೆ ನಡೆಯಿತು. ಆ ಕಾಲಕ್ಕೆ ಶ್ರೀಗಳ ಮುಂದೆ ಮಹಾರುದ್ರಯ್ಯ ತನಗೆ ಬಹುದಿನದಿಂದ ಮಕ್ಕಳಾಗದಿದ್ದುದನ್ನು ಬಾಯಿಬಿಚ್ಚಿ ಹೇಳಿಕೊಂಡನು. ಶ್ರೀಗಳು ಆತನಿಗೆ ನಾಲ್ಕು ಉತ್ತತ್ತಿಗಳನ್ನು ಆಶೀರ್ವದಿಸುತ್ತ “ಕಲ್ಯಾಣ ಬಸವ ನಿನಗೆ ಕಲ್ಯಾಣ ಮಾಡುವನು” ಎಂದಿಷ್ಟೆ ಆಡಿದರು. ಅದರಂತೆ, ಆತನಿಗೆ ಮುಂದೆ ನಾಲ್ವರು ಮಕ್ಕಳಾದರು.
7. ಮೂರು ದಳ ಐದು ದಳಗಳಾದವು : ಅಥಣಿ ಬಸವಪುರಾಣ ಮಂಗಲೋತ್ಸವ ತೀರಿಸಿಕೊಂಡು, ಶಿವಯೋಗಿಗಳು ತಿರುಗಿ ಬಿದರಿಗೆ ಪಯಣ ಬೆಳೆಸಿದ್ದಾಗ; ಹಾದಿಯಲ್ಲಿ ಚಿಕ್ಕಲಿಗೆಯ ಬಂದರದವರ ತೋಟದಲ್ಲಿ ಶಿವಾರ್ಚನೆಗೋಸ್ಕರ ಇಳಿದುಕೊಂಡರು. ಸೇವಕನು ಪದ್ಧತಿಯಂತೆ ತ್ರಿದಳದ ಪತ್ರೆಯನ್ನು ತಂದನು. ಶ್ರೀಗಳು ಆತನಿಗೆ ಪಂಚದಳದ ಪತ್ರೆಯನ್ನು ತರಲಿಕ್ಕೆ ಪುನಃ ಅಪ್ಪಣೆ ಗೈದರು. ಅಲ್ಲಿ ಒಂದೇ ಒಂದು ಪತ್ರೆಯ ಗಿಡವಿದ್ದಿತು. ಅದರಲ್ಲಿ ಮೂರು ದಳದ ಪತ್ರೆಯಿದ್ದವು. ಇದು ಊರಿಗೇ ಗೊತ್ತಿದ್ದಿತು. “ಅದೇ ಮರದಲ್ಲಿ ಐದು ದಳದವೇ ಇರುತ್ತವೆ, ಹೋಗಿ ನೋಡು” ಎಂದು ಶ್ರೀಗಳು ನುಡಿದಿದ್ದರು. ಆ ಸೇವಕ ಮರಳಿ ಹೋಗಿ ನೋಡುತ್ತಾನೆ ಆ ಮರದ ತುಂಬ ಐದು ದಳದ ಪತ್ರೆಗಳೇ ಕಾಣುತ್ತಿದ್ದವು. ಆತ ಅವನನ್ನು ಎತ್ತಿ ತಂದುಕೊಟ್ಟನು. ಶ್ರೀಗಳ ಪೂಜೆ ಎಂದಿಗಿಂತ ಹೆಚ್ಚು ಆನಂದದಿಂದ ಪೂರ್ತಿಗೊಂಡಿತು.
8.. ಹುಡಿಯಲ್ಲ, ಭಸ್ಮದ ಪುಡಿ : : ಬಿದರಿಯಲ್ಲಿ ಅಕ್ಕಸಾಲಿಗ ಮನೆತನದ ಹದಿನೈದು ವಯಸ್ಸಿನ ಗೋವಿಂದನಿಗೆ ಬಂದ ವಿಷಮ ಜ್ವರ ಆರಿದ್ದಿಲ್ಲ. ಆತ ಸಾವಳಿಗಿಗೆ ತೋರಿಸಲಿಕ್ಕೆ ಹೋದವನು ತನ್ನ ಸೋದರಮಾವನ ಮನೆಯಲ್ಲೇ ಇದ್ದನು. ಆತನ ಜಡ್ಡು ವೈದ್ಯರಿಗೂ ಮಿಕ್ಕಿತು. ತಾಯಿಗೆ ಆತನೊಬ್ಬನೇ ಮಗ ‘ ಗೋವಿಂದ ಉಳಿಯುವುದಿಲ್ಲ ಎಂಬ ಸುದ್ದಿ ಬಿದರಿಯಲ್ಲಿದ್ದ ಆತನ ಅಕ್ಕನಿಗೆ ಮುಟ್ಟಿತು. ಆಕೆ ತಮ್ಮೂರಿಗೆ ತಮ್ಮನನ್ನು ಕರೆಸಿಕೊಂಡಳು. ಬಂದರದ ಚನ್ನಪ್ಪನವರ ಸಂಗಡ ಶ್ರೀಗಳ ಸನ್ನಿಧಿಗೆ ಬಂದಳು; ಇದ್ದುದನ್ನೆಲ್ಲಾ ಶ್ರೀಗಳಿಗೆ ಅರಿಕೆ ಮಾಡಿಕೊಂಡಳು. ಶ್ರೀಗಳಿಗೆ ಕರುಣೆ ಹುಟ್ಟಿತು. ಆಕೆಗೆ ಒಂದಿಷ್ಟು ಭಸ್ಮದ ಪುಡಿಯನ್ನು ಕರುಣಿಸಿದರು. ಅಕ್ಕ ತಮ್ಮನ ಮೈಗೆ ಅದನ್ನಷ್ಟು ಸವರಿದಳು. ಒಂದಿಷ್ಟನ್ನು ಆತನ ಬಾಯಲ್ಲಿ ಉದುರಿಸಿದಳು. ಮೂರೇ ದಿವಸಗಳಲ್ಲಿ ಗೋವಿಂದನ ಜಡ್ಡು ಹೇಳಹೆಸರಿಲ್ಲದಾಯಿತು.
9. ಪ್ರಸಾದ ಮಹಿಮೆ : ಒಂದು ವರ್ಷ ಹರಶರಣ ಹರಳಯ್ಯನ ಗುಂಡದಲ್ಲಿ ಗಣಪ್ರಸ್ಥಕ್ಕೆ ಆಯತ ವೇಳೆಯಲ್ಲಿ ಪ್ರಸಾದ ಬೆಳೆದುಬಿಟ್ಟಿತು. ಇನ್ನೂ ಬಹಳ ಗಣಂಗಳು ಉಣ್ಣುವವರಿದ್ದರು. ““ಬಸವ ಬಡವನಲ್ಲ ಪಂಕ್ತಿ ಸಾಗಲಿ” ಎಂದು ಶ್ರೀಗಳ ಅಪ್ಪಣೆಯಾಯಿತು. ಬಬಲೇಶ್ವರ ಪಟ್ಟದದೇವರಿಂದ ಒಂದು ಉದ್ದನ್ನ ಪಾವಡ ತರಿಸಿಕೊಂಡು, ಶ್ರೀಗಳು ಮಾಡಿಟ್ಟ ಅಡಿಗೆಯ ಮೇಲೆ ಅದನ್ನು ಹಾಸಿ, ತಾವೇ ತಮ್ಮ ಹಸ್ತದಿಂದ ಪ್ರಸಾದ ತೆಗೆದು ಕೊಡಹತ್ತಿದರು. ಅನ್ನಕ್ಕೆ ಕೊರತೆಯಲ್ಲದೆ, ಪ್ರಸಾದಕ್ಕೆ ಕೊರತೆಯೆಂಬುದುಂಟೆ ? ತುಪ್ಪವೂ ಬೆಳೆದಿದ್ದಿತೇನೋ ಶ್ರೀಗಳು ‘ಗುಂಡ’ ದಲ್ಲಿಯ ತೀರ್ಥವನ್ನೇ ತರಿಸಿ, ತುಪ್ಪದಂತೆ ನೀಡಿದರು; ಹಿಂದಿನಿಂದ ಬಂದ ಕೊಡ ತುಪ್ಪವನ್ನು ಗುಂಡದಲ್ಲಿ ಸುರಿಸಿ, ಗಂಗಮ್ಮನ ಕಡ ತೀರಿಸಿದರು.
10. ಮೂವರ ಮಾತೂ ನಿಜವಾಯಿತು : ಬಿದರಿ ಅಪ್ಪಂಗಳವರು ಒಮ್ಮೆ ಬಿಳಿಜೋಳದ ಬೆಳೆಸಿಯ ಸೇವನೆಗಾಗಿ ಅಥಣಿ ಅಪ್ಪಂಗಳವರನ್ನೂ, ಬಿಳೂರು ಅಪ್ಪಂಗಳವರನ್ನೂ ನವಿಲುತೀರ್ಥಕ್ಕೆ ಕರೆಯಿಸಿಕೊಂಡಿದ್ದರು. ಬೆಳಸಿಯ ಕಾರ್ಯಕ್ರಮ ಮುಗಿದ ಮೇಲೆ, ಸದ್ಭಕ್ತನೊಬ್ಬನ ಮನೆಯಲ್ಲಿ ಆಕಳು ಬೇನೆ ತಿನ್ನುತ್ತಿದ್ದ ವಾರ್ತೆ ಆಗ ತಾನೆ ಊರಿಂದ ಬಂದಿತು. ಆ ಸಲುಗೆಯ ಭಕ್ತ ಸಹಜವಾಗಿ ಬಿದರಿ ಅಪ್ಪನವರಲ್ಲಿ “ಬುದ್ಧಿ, ಆಕಳು ಏನು ಈಯುತ್ತದೆ ?” ಎಂದು ಕೇಳಿಕೊಂಡನು. “ಹೆಣ್ಣು ಕರ ಈಯುತ್ತದಪ್ಪಾ” ಎಂದರು ಬಿದರಿ ಶ್ರೀಗಳು ಆತ ಅಷ್ಟಕ್ಕೆ ಸುಮ್ಮನಾಗದೆ, ಅಥಣಿಯಪ್ಪಂಗಳವರಿಗೂ ಅದೇ ಪ್ರಶ್ನದಿಂದ ಅರಿಕೆ ಮಾಡಿಕೊಂಡನು. ‘ಹೋರಿಕರ ಈಯುತ್ತದೆ’ ಎಂದರು ಅಥಣಿ ಶ್ರೀಗಳು ಆತ ಅಷ್ಟಕ್ಕೂ ಬಿಡದೆ, ಕೊನೆಯದಾಗಿ ಬಿಳೂರು ಅಪ್ಪಂಗಳವರನ್ನೂ ಅದೇ ತೆರನಾದ ಪ್ರಶ್ನೆಯಿಂದ ವಿಜ್ಞಾಪಿಸಿಕೊಂಡನು. “ಏನು ಕೇಳುವಿಯಪ್ಪಾ, ನಮ್ಮವರಿಬ್ಬರೂ ಹೇಳಿದುದು ಸಾಲುದೇ ? ಅದರಂತೆಯೇ ಈಯುತ್ತದೆ!” ಎಂದರು ಬೀಳೂರು ಶ್ರೀಗಳು.
ಅದೇ ಪ್ರಕಾರ, ಆಕಳು ಮೊದಲು ಹೆಣ್ಣು ಕುರುವನ್ನೂ, ಆಮೇಲೆ ಮತ್ತೊಂದು ಹೋರಿ ಕರುವನ್ನೂ ಈಯ್ದಿತು. ಮೂವರ ಮಾತೂ ನಿಜವಾಯಿತು,