General

ಪೀಠಿಕೆ.

                                                                                                                                                              ಸಂ.ಶ್ರೀಕಂಠ.ಚೌಕೀಮಠ

 ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ರಚಿಸಿದ ಸುಂದರ ಪದ್ಯಗಳನ್ನು ಓದುವ ಸೌಭಾಗ್ಯವೂ, ಸಮಾಜಹಿತಚಿಂತನೆಯಿಂದ ತುಂಬಿದ ಅವರ ಪತ್ರಗಳನ್ನು ಅವಲೋಕಿಸುವ ಅವಕಾಶವೂ ನನಗೆ ಹಿಂದೆಯೇ ಲಭಿಸಿತ್ತು.

ಆದರೆ ಇಂದು, ಪೂಜ್ಯರು ಮಗ್ಗೆಯ ಮಾಯಿದೇವ ವಿರಚಿತ ಶತಕತ್ರಯದೊಳಗಿನ ಮೂರು ವೃತ್ತಗಳಿಗೆ ಬರೆದಿರುವ ಅನುಭವಾಧಿಷ್ಠಿತ ವ್ಯಾಖ್ಯಾನವನ್ನು ಓದುವ ಸೌಭಾಗ್ಯ ಒದಗಿಬಂದಿರುವುದು ವಿಶೇಷವಾದ ಆನಂದವನ್ನುಂಟುಮಾಡಿದೆ. ಈ ವ್ಯಾಖ್ಯಾನವು ಕೇವಲ ಪದ್ಯಾರ್ಥ ವಿವರಣೆ ಮಾತ್ರವಲ್ಲದೆ, ಅನುಭವಸಿದ್ಧ ತತ್ತ್ವದ ಆಳವನ್ನು ಅನಾವರಣಗೊಳಿಸುವ ಮಹತ್ವದ ದರ್ಶನವಾಗಿಯೇ ಭಾಸವಾಗುತ್ತದೆ.

ಶೈವತತ್ತ್ವ ಸಾಹಿತ್ಯ ಪರಂಪರೆಯಲ್ಲಿ ಮಗ್ಗೆಯ ಮಾಯಿದೇವ ವಿರಚಿತ ಶತಕತ್ರಯವು ವಿಶಿಷ್ಟ ಹಾಗೂ ಅಗ್ರಗಣ್ಯ ಸ್ಥಾನವನ್ನು ಹೊಂದಿದೆ. ಕುಮಾರವ್ಯಾಸ ಯುಗದ ಶತಕಕಾರರಲ್ಲಿ ಅಗ್ರಗಣ್ಯರಾಗಿರುವ ಮಗ್ಗೆಯ ಮಾಯಿದೇವರು (ಕ್ರಿ.ಶ. ೧೪೩೦) ಜ್ಞಾನ–ಭಕ್ತಿ–ವೈರಾಗ್ಯಗಳ ಕ್ರಮಬದ್ಧ ಸಾಧನಾಮಾರ್ಗವನ್ನು ಶತಕಕಾವ್ಯ ರೂಪದಲ್ಲಿ ಸಮರ್ಥವಾಗಿ ನಿರೂಪಿಸಿದ ಅಪರೂಪದ ತತ್ತ್ವಕವಿ. ಮಲಪ್ರಹಾರೀ ನದೀತೀರದ ಐಪುರಕ್ಷೇತ್ರದಲ್ಲಿ ಜನಿಸಿದ ಇವರಿಗೆ ಸಂಗಮೇಶ್ವರರು ಪಿತೃಗಳು; ಸೋಮೇಶ್ವರ ಆರಾಧ್ಯದೈವ. ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ ಮಾಯಿದೇವರು ಅನುಭವಸೂತ್ರ, ಶಿವಸೂತ್ರ ಎಂಬ ಸಂಸ್ಕೃತ ಗ್ರಂಥಗಳನ್ನೂ, ಪ್ರಭುನೀತಿ, ಏಕೋತ್ತರಶತಸ್ಥಲ ಷಟದಿ, ಷಟ್‌ಸ್ಥಲಗದ್ಯತ್ರಯ, ಮಗ್ಗೆಯ ಮಾಯಿದೇವ ವಚನಗಳಂತಹ ಮಹತ್ವದ ಕನ್ನಡ ಕೃತಿಗಳನ್ನೂ ರಚಿಸಿ ಶೈವತತ್ತ್ವ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಮಾಯಿದೇವರ ಶತಕತ್ರಯವು ಅದರ ಅಂಕಿತಪದ್ಧತಿ, ತತ್ತ್ವವ್ಯವಸ್ಥೆ ಹಾಗೂ ಅನುಭವಾಧಿಷ್ಠಿತ ನಿರೂಪಣೆಯಿಂದ ವಿಶಿಷ್ಟವಾಗಿದೆ. ಶಿವಾಧವ ಶತಕದ ಪ್ರತಿಯೊಂದು ವೃತ್ತವೂ “ಶಿವಾಧವಾ” ಎಂಬ ಅಂಕಿತದಲ್ಲಿ ಅಂತ್ಯಗೊಳ್ಳುತ್ತದೆ; ಶಿವಾವಲ್ಲಭ ಶತಕದ ೧೦೩ ವೃತ್ತಗಳೆಲ್ಲ “ಶಿವಾವಲ್ಲಭ” ಎಂಬ ಪದದಲ್ಲಿ ಮುಕ್ತಾಯಗೊಳ್ಳುತ್ತವೆ; ಐಪುರೀಶ್ವರ ಶತಕದ ೧೧೩ ವೃತ್ತಗಳೂ “ಮಹದೈಪುರೀಶ್ವರಾ” ಎಂಬ ಅಂಕಿತದಿಂದ ಪೂರ್ಣಗೊಳ್ಳುತ್ತವೆ. ಈ ಮೂರು ಶತಕಗಳು ಕ್ರಮವಾಗಿ ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳ ತತ್ತ್ವಗಳನ್ನು ಪರಸ್ಪರಾನುಬಂಧಿತವಾಗಿ ಪ್ರತಿಪಾದಿಸುತ್ತವೆ ಎಂಬುದು ಶೈವತತ್ತ್ವ ಅಧ್ಯಯನದ ದೃಷ್ಟಿಯಿಂದ ಅತ್ಯಂತ ಗಮನಾರ್ಹವಾಗಿದೆ.

ಮಾಯಿದೇವರ ಕಾವ್ಯಶೈಲಿಯ ಪ್ರಮುಖ ಲಕ್ಷಣವೆಂದರೆ ಗಹನವಾದ ವೇದಾಂತ ತತ್ತ್ವಗಳನ್ನು ದೃಷ್ಟಾಂತ ಮತ್ತು ಉಪಮಾನಗಳ ಮೂಲಕ ಸರಳವಾಗಿ ಹೃದ್ಗೋಚರವಾಗಿಸುವ ಕೌಶಲ್ಯ. “ಕನ್ನಡಿಯಲ್ಲಿ ನೋಡಿಕೊಳ್ಳುವ ಮುನ್ನ ಕನ್ನಡಿಯ ಭಾವವಿರುತ್ತದೆ; ಪ್ರತಿಬಿಂಬವನ್ನು ಕಂಡ ನಂತರ ಕನ್ನಡಿಗೆ ಜ್ಞಾನವಿರುತ್ತದೆಯೇ?” ಎಂಬ ದೃಷ್ಟಾಂತದ ಮೂಲಕ, “ತತ್ತ್ವವನ್ನು ನೋಡದ ಮುನ್ನ ಮಾಯೆ; ಬಳಕೆಯಲ್ಲಿಯ ಮಾಯೆ ಬಿಡಾ, ಶಿವಾಧವಾ” ಎಂಬ ವಚನದಲ್ಲಿ ಜ್ಞಾನಿಯ ನಿರ್ಭಯತೆ, ಉದಾಸೀನತೆ ಹಾಗೂ ಮಾಯಾತೀತ ಸ್ಥಿತಿಯನ್ನು ಸೂಕ್ಷ್ಮವಾಗಿ ಪ್ರತಿಪಾದಿಸುತ್ತಾರೆ. ಇಲ್ಲಿ ಬಳಕೆಯಾದ ‘ಬಿಡಾ’ ಎಂಬ ಶಬ್ದವು ತತ್ತ್ವಾರ್ಥದ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಂಕೇತವನ್ನು ಹೊತ್ತು ನಿಲ್ಲುತ್ತದೆ.

ಇಂತಹ ತಾತ್ತ್ವಿಕವಾಗಿ ಸಮೃದ್ಧವಾದ ಶತಕತ್ರಯಕ್ಕೆ ಆಳವಾಗಿ ಆಕರ್ಷಿತರಾದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು, ಅವುಗಳಿಗೆ ಅನುಭವಾಧಿಷ್ಠಿತವಾದ ವಿಶದ ವ್ಯಾಖ್ಯಾನವನ್ನು ರಚಿಸುವ ಸಂಕಲ್ಪವನ್ನು ಹೊಂದಿದ್ದರು. ಪ್ರಾರಂಭಿಕ ಹಂತದಲ್ಲಿ ಅವರು ಕೇವಲ ಏಳು–ಎಂಟು ಶ್ಲೋಕಗಳಿಗೆ ಮಾತ್ರ ಭಾಷ್ಯವನ್ನು ಬರೆದಿರಿಸಿದ್ದು, ಆ ಅಮೂಲ್ಯ ವ್ಯಾಖ್ಯಾನವನ್ನು ಪೂಜ್ಯರೂ ಭಾಷ್ಯಾಚಾರ್ಯರೂ ಆದ ಶ್ರೀ ಸದಾಶಿವ ಶಿವಾಚಾರ್ಯರು ಸಂಗ್ರಹಿಸಿ, ನಂತರ ಶ್ರೀ ಜ.ಚ.ನಿ.ಯವರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಗ್ರಹದ ಸೌಜನ್ಯ ವಿಭೂತಿ ಲೇಖನಗಳ ಸಂಗ್ರಹದ ಸಂಪಾದಕರಾದ ಶ್ರೀ ಗೊ.ರು. ಚನ್ನಬಸಪ್ಪ ಅವರಿಗೆ ಸಲ್ಲುತ್ತದೆ (ಪುಟ ೬೮೦); ಅಲ್ಲದೆ ಮಾಯಿದೇವ ಪ್ರಭು (ಜ.ಚ.ನಿ., ಪುಟ ೬೯೫) ಕೃತಿಯಲ್ಲಿಯೂ ಇದರ ಉಲ್ಲೇಖ ಲಭ್ಯವಿದೆ.

ಪೂಜ್ಯ ಹಾನಗಲ್ಲ ಶ್ರೀಗಳವರ ಅನುಭವಾನುಭೂತಿಯ ಪ್ರವಾಹ ಅಖಂಡವಾಗಿ ಹರಿದು ಬಂದಿರುವ ಈ ವ್ಯಾಖ್ಯಾನಗಳಲ್ಲಿ, ಮೊದಲಿನ ಮೂರು ಶ್ಲೋಕಗಳ ಭಾಷ್ಯವನ್ನು ಆಯ್ದು ಈ ಗ್ರಂಥದಲ್ಲಿ ಪ್ರಕಟಿಸಲಾಗಿದೆ. ಶೈವತತ್ತ್ವಾಭ್ಯಾಸಿಗಳಿಗೆ, ಶತಕತ್ರಯ ಅಧ್ಯಯನಕಾರರಿಗೆ ಹಾಗೂ ವಿದ್ವತ್‌ಸಮಾಜಕ್ಕೆ ಇದು ಅತ್ಯಂತ ಪ್ರಯೋಜನಕಾರಿಯಾಗಿದ್ದು, ನವಪ್ರಭಾವಕಾರಿಯಾಗಿ, ಪೂಜ್ಯ ಶ್ರೀಗಳವರ ಅನುಭವದ ಅಗಾಧ ನಿಲವನ್ನು ಅನಾವರಣಗೊಳಿಸುವ ಮಹತ್ವದ ತಾತ್ತ್ವಿಕ ದಾಖಲೆಗಳಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.

 

 

ಶತಕತ್ರಯದ ಶ್ಲೋಕತ್ರಯ

 ಪೂಜ್ಯ ಲಿಂ, ಹಾನಗಲ್ ಶ್ರೀಕುಮಾರ ಶಿವಯೋಗಿಗಳ ವರ ವ್ಯಾಖ್ಯಾನ

 

 

ಶ್ರೀ ಗುರುವೇ ಮಹಾಗುರುವೇ ಶಾಂತಿಕಲಾ ಗುರುವೇ ಶ್ರೀವಾತ್ಮ

ವಿದ್ಯಾ ಗುರುವೇ ಪುರಾಗುರುವೆ ವಿಶ್ವ ಜಗದ್ಗುರುವೇ ವಿಶುದ್ಧ ಜೇಷ್ಠಾ||

ಗುರುವೇ ಸುಧೀಗುರುವೆ ಭಕ್ತಿಯಶೋಗುರುವೇ

ಪ್ರಸಾದತೇಜೋಗುರುವೇ ಕೃಪಾಗುರುವೇ ಮದ್ಗುರುವೇ

 ಗುರುವೇ ಶಿವಾಧವಾ || ೧||

 

ಶ್ರೀಗುರುವೇ= ಶ್ರೀ ಸಂಪತ್ತಿನಿಂದ ಕೂಡಿದ (ವಿಚಾರ) ಸಂಪತ್ತಿನಲ್ಲಿ ಲೌಕಿಕವೆಂದೂ ಪಾರಮಾರ್ಥಿಕವೆಂದೂ ಎರಡು ವಿಧಗಳುಂಟು.

(೧) ಸತಿಪುತ್ರಧನಧಾನ್ಯ ಕರಿತುರಗಾದಿಗಳು ಲೌಕಿಕ ಸಂಪತ್ತಿಯೆನಿಸುವವು.

(೨) ಭಕ್ತಿಜ್ಞಾನ ವೈರಗ್ಯಾದಿಗಳು ಪಾರಮಾರ್ಥಿಕ ಸಂಪತ್ತಿಯೆನಿಸುವವು. (ಈ ಪಾರಮಾರ್ಥಿಕ ಸಂಪತ್ತಿಯೇ ಗುರುಸಂಪತ್ತಿಯೆಂಬ ಭಾವವು.), ಗುರುವೇ ಅಜ್ಞಾನ ನಾಶಕನೇ – (ಗು=ಅಜ್ಞಾನವನ್ನು – ರು=ನಾಶಮಾಡಿದಂಥ ಪ್ರಮಾಣ ಶ್ಲೋ ॥ ಗುಕಾರಸ್ತ್ರಂಧ ಕಾರಶ್ಚರುಕಾರಸ್ತದ್ವಿನಾಶಕೃತ್ | ಅಂಧಕಾರವಿನಾಶಿತ್ವಾದ್ಗು ರುರಿತ್ಯಭಿಧೀಯತೇ ॥

ಮಹಾಗುರುವೇ  =ಶ್ರೇಷ್ಠನಾದ ಗುರುವೇ (ವಿಚಾರ) ಸೃಷ್ಟಿ-ಸ್ಥಿತಿ- ಲಯಗಳಿಗೆ ಕಾರಣರಾದ ಬ್ರಹ್ಮಾದಿಗಳು ಜಗತ್ತಿನಲ್ಲಿ ಶ್ರೇಷ್ಠರಾಗಿ ಜೀವಿಗಳನ್ನು ಭವಮಾಲೆಯಲ್ಲಿ ತಿರುಗಿಸಿ, ದುಃಖದಲ್ಲಿ ಕೆಡುಹುತ್ತಿರುವರು. ಶ್ರೀಗುರುವು ತನ್ನನ್ನು ಮರೆಹೊಕ್ಕವರ ಅಜ್ಞಾನ ನಾಶಮಾಡಿ ಆ ಭವವನ್ನು ಕಳೆದು ಸಕಲದುಃಖ ನಿವೃತ್ತಿ ನಿತ್ಯಾನಂದಪದ ಪ್ರಾಪ್ತಿರೂಪ ಮುಕ್ತಿಯನ್ನು ಕೊಡುವನಾದ ಕಾರಣ ತ್ರಿಮೂರ್ತಿಗಳಿಗಿಂತಲೂ ಗುರುವು ಅಧಿಕನು. ಈ ಗುರುತತ್ವಕ್ಕೆ ಮೇಲಾದದ್ದು ಮತ್ತೊಂದಿಲ್ಲ. ಇದಕ್ಕಾಗಿಯೇ ‘ನಗುರೋರಧಿಕಂ’ ಎಂದು ಶ್ರುತಿಯು ಕೂಗುತ್ತಿರುವದು. ಶಾಂತಿಕಲಾಗುರುವೇ = ಶಾಂತ ವೃತ್ತಿಯಿಂದ ಕೂಡಿದ ಗುರುವೇ (ವಿಚಾರ) “ಸತ್ವಗುಣದಿಂ ವೈರಾಗ್ಯಮಯವಾದ ಶಾಂತವೃತ್ತಿ” ಎಂಬ ಪುರಾತನೋಕ್ತಿಯಂತೆ ವಿರತಿಯಿಂದೊಡಗೂಡಿದ ಶಾಂತಮಯವಾದ ವರ್ತನವುಳ್ಳ ಗುರುವೇ ಎಂಬ ತಾತ್ಪರ್ಯವು. ಶಿವಾತ್ಮವಿದ್ಯಾಗುರುವೇ = ಲಿಂಗಾಂಗ ಸಾಮರಸ್ಯ

ಜ್ಞಾನರೂಪನಾದ ಗುರುವೇ (ಶಿವ=ಲಿಂಗ, ಆತ್ಮಲಿಂಗವಿದ್ಯಾ = ಜ್ಞಾನ ಲಿಂಗಾಂಗೈಕ್ಯಜ್ಞಾನಾಕಾರನೆಂಬ ಭಾವವು).

ಪುರಾಗುರುವೇ = ಆದಿಯಿಂದತ್ತತ್ತಲಾದ ಗುರುವೇ (ಜಗತ್ ಸೃಷ್ಟಿಗಿಂತಲೂ ಪೂರ್ವದಲ್ಲಿದ್ದವನೆಂಬಭಿಪ್ರಾಯವು) ವಿಶೇಷ ವಿಚಾರ (ಶಂಕಾ) ನೂರು ವರ್ಷದೊಳಗಿನ ಆಯುಷ್ಯವುಳ್ಳ ಮನುಷ್ಯರೂಪಿಯಾದ ಗುರುವು ಪೂರ್ವಿಕನೆಂಬುವುದು ಹೇಗೆ? (ಸಮಾಧಾನ) ಗುರುವ್ಯಕ್ತಿ, ಗುರುತತ್ವ ಈ ಎರಡು ಕೂಡಿಕೊಂಡು ಗುರುವೆನಿಸಿಕೊಳ್ಳುವನು. ಇವುಗಳಲ್ಲಿ ವ್ಯಕ್ತಿಗಿಂತಲೂ ತತ್ವವು ಮುಖ್ಯವಾದದ್ದು.

ವ್ಯಕ್ತಿಯು ನೂರು ವರ್ಷದೊಳಗಿನ ಆಯುಷ್ಯವುಳ್ಳದ್ದು, ಗುರುತತ್ವವು ಸೃಷ್ಟಿಗಿಂತಲೂ ಪೂರ್ವದಲ್ಲಿದ್ದದ್ದು. ಇಲ್ಲಿ ತತ್ತ್ವವನ್ನುದ್ದೇಶಿಸಿ ಪುರಾಗುರುವೆಂದು ಹೇಳಿದ್ದು ಸಂಶಯಕ್ಕೆ ಆಸ್ಪದವಾಗಲಾರದು. ಉದಾಹರಣಾರ್ಥವಾಗಿ, ಪೂರ್ವದ ರಾಜನ ರಾಯವನ್ನು (ಹುಕುಮನ್ನು) ತನ್ನ ಅಪ್ಪಣೆಯೆಂದು ತತ್ಕಾಲದ ರಾಜನುರಾಜ ತತ್ವವನ್ನು ಲಕ್ಷಿಸಿ ಒಪ್ಪಿಕೊಳ್ಳುವಂತೆ ಗುರುತತ್ವದ ವಿಚಾರವಿರುವದು. ವಿಶ್ವ ಜಗದ್ಗುರುವೇ = ಎಲ್ಲ ಜಗತ್ತಿಗೂ ಗುರುವೇ – (ವಿಶೇಷ ವಿಚಾರ) ಶಂಕಾ : ಜಗತ್ತಿನಲ್ಲಿ ಅನೇಕ ಮತಗಳಿರುವವು. ಒಂದು ಮತದ ಗುರುಗಳು ಎಲ್ಲ ಮತಗಳಿಗೆ ಗುರುಗಳಾಗುವದು ಅಸಂಭವವಾದ್ದರಿಂದ ಈ ಮತದ ಗುರುಗಳಿಗೆ ಜಗದ್ಗುರುತ್ವವು ಹೇಗೆ ಸಲ್ಲುವದು? ಅಂದರೆ (ಸಮಾಧಾನ) ಸ್ಥೂಲ ಸೂಕ್ಷ್ಮ ಕಾರಣಗಳೆಂಬ ಮೂರು ರೂಪಿನಿಂದ ಜಗತ್ತು ಕಾಣಿಸುವದು. ಈ ಮೂರು ರೂಪಗಳು ಕ್ರಮದಿಂದ ಜಾಗರಣ ಸ್ವಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳಿಗೆ ಸಂಬಂಧಪಟ್ಟಿರುವದರಿಂದ “ಅವಸ್ಥಾತ್ರಯಮಂ ಗೆದ್ದಾತನೇ ಜಗದ್ಗುರುವಪ್ಪಂ” ಎಂಬ ಪುರಾತನೋಕ್ತಿಯುಂಟು. ಅವಸ್ಥಾತ್ರಯಗಳು ಪಿಂಡಾಂಡರೂಪೀ ಜೀವನಿಗೆ ಸಂಬಂಧಿಸಿದವುಗಳಾದ್ದರಿಂದ ಜೀವನ ನಿವೃತ್ತಿರೂಪ ಪ್ರಯತ್ನದಿಂದ ಗೆದಿಯಲಿಕ್ಕೆ ಅಭ್ಯಂತರವಿಲ್ಲ. ಜೀವನು “ಸರ್ವಾರ್ಥಸಾಧಕನಪ್ಪುದರಿಂ ಸರ್ವಸಂಬಂಧಿತ್ವವೇ ಪೂರ್ಣರೂಪು” ಎಂದು ಪೂರ್ವಿಕರ ವಚನವುಂಟು.

ಜಾಗರಣಾದಿ ಮೂರು ಅವಸ್ಥೆಗಳ ಸಂಬಂಧವಾದ ಸ್ಫೂಲ, ಸೂಕ್ಷ್ಮ, ಕಾರಣವೆಂಬ ಮೂರು ತನುಗಳಲ್ಲಿ ಇಷ್ಟ ಪ್ರಾಣ ಭಾವವೆಂಬ ಮೂರು ಲಿಂಗಗಳನ್ನು ಸದ್ಗುರುವಿನಿಂದ ವಿಧಾನೋಕ್ತವಾಗಿ ಪಡೆದು, ತ್ರಿವಿಧಾರ್ಚನೆಯ ಬಲದಿಂದ ಶಿವಯೋಗಸಂಪನ್ನನೆನಿಸಿ ತ್ರಿತತ್ವಾತ್ಮಕ ಜಗತ್ತನ್ನು ಜೈಸುವನು. ಈ ಕ್ರಮವು ಅಸಾಧಾರಣವಾದದ್ದು. ಇದರಿಂದುಂಟಾದ ಜಗದ್ಗುರುತ್ವವು ಶ್ರೇಷ್ಠವೆನಿಸುವದು.

ಪಿಂಡಾಂಡಕ್ಕೂ ಬ್ರಹ್ಮಾಂಡಕ್ಕೂ ನಿಕಟ ಸಂಬಂಧವಿರುವದರಿಂದ ಅವಸ್ಥಾತ್ರಯರೂಪ ಪಿಂಡಾಂಡವನ್ನು ಗೆದ್ದ ಆತ್ಮನಿಗೆ ಬ್ರಹ್ಮಾಂಡರೂಪ ಜಗತ್ರಯವು ಸಹಜವಾಗಿ ಗೆಲ್ಲಲ್ಪಡುವದು. ಈ ಜಯವನ್ನು ಹೊಂದಿದ ಮಹಾಗುರುವಿಗೆ ಜಗದ್ಗುರುತ್ವವು ಸಿದ್ಧಿಸುವಲ್ಲಿ ಸಂಶಯವಿಲ್ಲವು. ಬ್ರಹ್ಮಾಂಡಸ್ಥಲ ಪಿಂಡಾಂಡವು ಸೂಕ್ಷ್ಮ ಸ್ಥೂಲವು ಕಾರ್ಯವೆನಿಸುವದು. ಸೂಕ್ಷ್ಮವು ಕಾರಣವೆನಿಸುವದು. ಸೂಕ್ಷ್ಮವನ್ನು ಜೈಸಿದರೆ ಸ್ಥೂಲವು ತಾನೇ ಸಾಧ್ಯವಾಗುವದು.

ಉದಾಹರಣೆ :

ಸೂಕ್ಷ್ಮವಾದ ಮನಸ್ಸನ್ನು ಜೈಸಿದರೆ ಸ್ಥೂಲವಾದ ಶರೀರವೂ ಸಮಸ್ತ ಇಂದ್ರಿಯಗಳೂ ಸಹಜವಾಗಿ ಸ್ವಾಧೀನಕ್ಕೆ ಬರುವವು ಮತ್ತು ಉಗಿಯ ಯಂತ್ರದ ಇಂಜನ್ ಒಂದನ್ನು ಸಾಗಿಸಿದರೆ, ಅದಕ್ಕೆ ಸಂಬಂಧಪಟ್ಟ ಅನೇಕ ಯಂತ್ರಗಳು ಸಹಜವಾಗಿ ಸಾಗುವಂತೆ ಪಿಂಡಾಂಡವನ್ನು ಜೈಸಿದರೆ, ಬ್ರಹ್ಮಾಂಡವು ತಾನೇ ಸಾಧ್ಯವಾಗುವದು. (ಶಂಕಾ) ಅವಸ್ಥಾತ್ರಯಗಳನ್ನು ಜೈಸಬೇಕೆಂಬುವಲ್ಲಿ ಇವನ ಇಚ್ಛಾಯತ್ನಾದಿಗಳಿಗೆ ಜಾಗೃದವಸ್ಥೆಯಲ್ಲಿ ಅನುಕೂಲವಿರುವದರಿಂದ ಶಿವನನ್ನು ಮರೆಹೊಕ್ಕು ಜಾಗೃದವಸ್ಥೆಯನ್ನು ಗೆದಿಯಬಹುದು. ಸ್ವಪ್ನ ಮತ್ತು ಸುಷುಪ್ತಾವಸ್ಥೆಯಲ್ಲಿ ಇವನ ಅಧಿಕಾರಕ್ಕೆ ಅನುಕೂಲವಿಲ್ಲದ್ದರಿಂದ ಅಲ್ಲಿ ಪ್ರಯತ್ನ ಮಾಡಿ ಗೆದಿಯುವದು ಹೇಗೆ? ಇದು ಅಸಂಭವವು. ಅಂದರೆ (ಸಮಾಧಾನ) ಜಾಗೃದವಸ್ಥೆಯೊಂದನ್ನು ಗೆದ್ದರೆ, ಸ್ವಪ್ನ-ಸುಷುಪ್ತಿಗಳನ್ನು ಗೆದ್ದಂತಾಯಿತು. ಹೇಗೆಂದರೆ ಸುಪ್ತಾವಸ್ಥೆಗೆ ಕಾರಣವಾದದ್ದು ಮಾಯಾಕರಣ (ಭಾವ), ಸ್ವಪ್ನಾವಸ್ಥೆಗೆ ಕಾರಣವಾದದ್ದು ಅಂತಃಕರಣ (ಮನಸ್ಸು) ಜಾಗೃದವಸ್ಥೆಗೆ ಕಾರಣವಾದದ್ದು ನೇತ್ರಾದಿ – ಇಂದ್ರಿಯವರ್ಗವು (ಸ್ಥೂಲ ಶರೀರ). ಈ ಮೂರು ಕರಣಗಳು ಜಾಗೃದವಸ್ಥೆಯಲ್ಲಿರುವದರಿಂದ ಈ ಅವಸ್ಥೆಯಲ್ಲಿಯೇ ಜೈಸುವುದಕ್ಕೆ ಬರುತ್ತದೆ. ಅದು ಹೇಗಂದರೆ (ಸಾಧನಗಳು) ಅಥವಾ ಅನುಸಂಧಾನಗಳು.

(೧) ನೇತ್ರಕರಣಾದಿ ಬಾಹೇಂದ್ರಿಯಗಳಿಂದ ಇಷ್ಟಲಿಂಗವನ್ನು ನಿರೀಕ್ಷಣಾರ್ಚನಾದಿಗಳಿಂದ ಪೂಜಿಸುವದೇ ಜಾಗರಣದೊಳಗಿನ ಜಾಗೃದವಸ್ಥೆಯನ್ನು ಗೆದಿಯುವ ಸಾಧನವು.

(೨) ಅಂತರಂಗದ ಶಿವಕಲಾ ಸ್ವರೂಪನಾದ ಬಿಂದುಕಲಾತ್ಮಕವಾದ ಪ್ರಾಣಲಿಂಗವೇ ಇಷ್ಟಲಿಂಗವೆಂದು ಮನಸ್ಸಿನಿಂದ ಧ್ಯಾನಿಸುವದೇ ಜಾಗರಣದೊಳಗಿನ ಸ್ವಪ್ನಾವಸ್ಥೆಯನ್ನು ಗೆದಿಯುವ ಸಾಧನವು.

(೩) ಮೂರು ತನುಗಳಲ್ಲಿ ವ್ಯಾಪಿಸಿಕೊಂಡಿರುವ ಶಿವತೇಜಸೇ ಅಂದರೆ ಭಾವಲಿಂಗವೇ ಇಷ್ಟಲಿಂಗವೆಂದು ಭಾವಿಸುವದು. ಜಾಗರದೊಳಗಿನ ಸುಪ್ತಾವಸ್ಥೆಯನ್ನು ಗೆದಿಯುವ ಸಾಧನವು. ಇದೊಂದು ಪ್ರಕಾರದ್ದು.

ಎರಡನೆಯ ಪ್ರಕಾರದ ಸಾಧನವೆಂದರೆ,

(೧) ಶ್ರವಣ, ಮನನ, ನಿದಿಧ್ಯಾಸನ ಎಂದು ಮೂರು ವಿಧವಾಗಿರುವದರಲ್ಲಿ ಲಿಂಗಾಂಗ ಸಾಮರಸ್ಯ ರೂಪ ಮಹಾವಾಕ್ಯವನ್ನು ಭಕ್ತಿಪೂರ್ವಕ ಕೇಳುವದೇ ಶ್ರವಣವು.

(೨) ಆ ಲಿಂಗಮೂರ್ತಿಯನ್ನು ವಿಚಾರಪೂರ್ವಕವಾಗಿ ಸ್ಮರಣಕ್ಕೆ ತರುವದೇ ಮನನವು.

(೩) ಆ ಲಿಂಗಸ್ವರೂಪವನ್ನು ಎಡೆಬಿಡದೆ ಭಾವಿಸುವದೇ ನಿದಿಧ್ಯಾಸವು. ಇದೊಂದು ಪ್ರಕಾರದ್ದು.

ಮೂರನೆಯ ಪ್ರಕಾರದ ಸಾಧನವೆಂದರೆ,

(೧) ದೃಶ್ಯಾನುವಿದ್ದರೂಪವಾದ ಇಷ್ಟಲಿಂಗಾನುಸಂಧಾನವು.

(೨) ಶಬ್ದಾನುವಿದ್ದರೂಪವಾದ ಪ್ರಾಣಲಿಂಗಾನು ಸಂಧಾನವು.

(೩) ನಿರ್ವಿಕಲ್ಪ ಕರೂಪ ಭಾವಲಿಂಗಾನುಸಂಧಾನವು, ಇದೊಂದು ಪ್ರಕಾರದ್ದು.

ನಾಲ್ಕನೆಯ ಪ್ರಕಾರದ ಸಾಧನವೆಂದರೆ, ಶಿವನನ್ನುದ್ದೇಶಿಸಿ (ಶಿವನಿಗೋಸ್ಕರ) ಈ ಕಾರ್ಯವನ್ನು ಮಾಡುವೆನೆಂದು ಸಂಕಲ್ಪಿಸಿ ಕೃಷಿ ವಾಣಿಜ್ಯ ಸೇವಾ ಯಾಚನಾದಿ ಕಾರ್ಯಗಳನ್ನು ಮಾಡಿ ಅದರಿಂದ ಬಂದ ಪದಾರ್ಥಗಳನ್ನು ಗುರುಲಿಂಗ ಜಂಗಮ ಸೇವೆಗಾಗಿ ಅರ್ಪಿಸಿ, ಆ ಗುರು ಲಿಂಗ ಜಂಗಮದ ಕೃಪಾರೂಪ ಪ್ರಸಾದವನ್ನು ಉಪಭೋಗಿಸುವುದು. ಇದೊಂದು ಪ್ರಕಾರದ್ದು.

ಈ ನಾಲ್ಕು ಪ್ರಕಾರದ ಸಾಧನಗಳಲ್ಲದೆ ತನು ಮನ ಭಾವಗಳಿಂದ ಮಾಡತಕ್ಕ ಶಿವಸಂಬಂಧಿ ಕಾರ್ಯಗಳೆಲ್ಲವೂ ಅವಸ್ಥಾತ್ರಯವನ್ನು ಗೆದಿಯುವ ಸಾಧನವೆಂದು ತಿಳಿಯುವದು. ಇದೇ ಶಿವಯೋಗವೆನಿಸುವದು. ಈ ಪ್ರಕಾರ, ಸಾಧನಗಳಿಂದುಂಟಾದದ್ದು ವೃತ್ತಿರೂಪ ಜಗದ್ಗುರುತ್ವವು. ಇದರೊಡನೆ ಆಶ್ರಮೋಚಿತ ಸಂಸ್ಕಾರರೂಪ ಜಗದ್ಗುರುತ್ವವು ಸಂಬಂಧವಾದಲ್ಲಿ ಬಂಗಾರಕ್ಕೆ ಕುಂದಣವನ್ನು ಹಾಕಿದಂತೆ ಅತ್ಯಂತ ಶ್ರೇಷ್ಠವೆನಿಸಿ ಸಹಜ ಜಗದ್ಗುರುತ್ವವೆನಿಸುವದು.

ಗುರುತ್ವದಲ್ಲಿ ಅಂಕುರಿತರೂಪ ಜಗದ್ಗುರುತ್ವ, ಫಲಾಯಿತರೂಪ ಜಗದ್ಗುರುತ್ವ, ಫಲಿತರೂಪ ಜಗದ್ಗುರುತ್ವವೆಂದು ಮೂರು ವಿಧವು. ಅಂಕುರಿತರೂಪ, ಫಲಾಯಿತ ರೂಪ ಜಗದ್ಗುರುತ್ವಗಳು ಸಂಬಂಧ ಅಥವಾ ಸಾಧಕ ಜಗದ್ಗುರುತ್ವವೆನ್ನಲ್ಪಡುವವು. ಫಲಿತರೂಪ ಜಗದ್ಗುರುತ್ವವು ಸಹಜ ಅಥವಾ ಸಿದ್ಧ ಜಗದ್ಗುರುತ್ವವೆನಿಸುವದೆಂಬ ಭಾವವು.

ವಿಶುದ್ಧ ಜೇಷ್ಟಾಗುರುವೇ – ಅತಿ ನಿರ್ಮಲವಾದ ಚರಿತ್ರವುಳ್ಳ ಗುರುವೇ (ವಿಚಾರ) ಪದಾರ್ಥಗಳಲ್ಲಿ ಸ್ಥೂಲವೆಂದೂ ಸೂಕ್ಷ್ಮವೆಂದೂ ಎರಡು ಭೇದಗಳುಂಟು. ಲಿಂಗಾರ್ಪಿತಕ್ಕೆ ಅಯೋಗ್ಯವಾದ ಪದಾರ್ಥಗಳು ಸ್ಥೂಲವೆನಿಸುವವು. ಲಿಂಗಾರ್ಪಿತಕ್ಕೆ ಯೋಗ್ಯವಾದವುಗಳು ಸೂಕ್ಷ್ಮವೆನಿಸುವವು ಸೂಕ್ಷ್ಮದಲ್ಲಿ ಶುದ್ಧವೆಂದೂ ವಿಶುದ್ಧವೆಂದೂ ಎರಡು ಪ್ರಕಾರಗಳುಂಟು. ಹೇಗೆಂದರೆ

(೧) ಅಷ್ಟಾವರಣಗಳಲ್ಲಿ ಮೊದಲನೆಯದಾದ ಭಸ್ಮವು ಪಂಚಗೋವುಗಳ ಗೋಮಯದಿಂದುಂಟಾದದ್ದು ಶುದ್ಧವು. ಪಾದೋದಕ ಮಂತ್ರ ಭಾವನಾದಿಗಳಿಂದ  ಸಂಸ್ಕರಿಸಿದ್ದು ವಿಶುದ್ಧ ಭಸ್ಮವೆನಿಸುವದು.

(೨) ಎರಡನೆಯ ರುದ್ರಾಕ್ಷಿಯು ಶುದ್ಧಸ್ಥಲದಲ್ಲಿ ಬೆಳೆದು ರುದ್ರಾಕ್ಷಿಯ ಮರದಿಂದ ಶಾತ್ರೊಕ್ತವಾಗಿ ತಂದ ದೋಷರಹಿತವಾದವುಗಳು ಶುದ್ಧವು. ಪಾದೋದಕ ಮಂತ್ರಾದಿಗಳಿಂದ ಸಂಸ್ಕರಿಸಲ್ಪಟ್ಟ ರುದ್ರಾಕ್ಷಿಗಳು ವಿಶುದ್ಧವೆನಿಸುವವು.

(೩) ಮೂರನೆಯದಾದ ಮಂತ್ರವು ವೇದಾದಿಗಳಲ್ಲಿ ಸಪ್ತಕೋಟಿ ಮಂತ್ರಗಳಿಗಿಂತಲೂ ಶ್ರೇಷ್ಠವೆಂದು ಹೇಳಲ್ಪಟ್ಟು ತನ್ನಂತರಂಗದಲ್ಲಿ ಸಂಬಂಧವಾಗಿ ತೋರುವ ಮಹಾಮಂತ್ರವು ಶುದ್ಧವು. ವರ್ಣಾಶ್ರಮಕ್ಕೆ ತಕ್ಕ ಜ್ಞಾನಾಚಾರಗಳುಳ್ಳ ಗುರುವಿನಿಂದ ವಿಧಿವತ್ತಾಗಿ ಅನುಗ್ರಹಿಸಲ್ಪಟ್ಟಿದ್ದು ವಿಶುದ್ಧವೆನಿಸುವದು. (ಇಲ್ಲಿ ವಿಚಾರ) ಸಾಧಕ ಗುರುವಿನಿಂದ ಬಂದ ಮಂತ್ರವು, ಗುರು-ಶಿಷ್ಯರ ಅಧಿಕಾರಕ್ಕನುಗುಣವಾಗಿ ಕಾಲಾಂತರದಲ್ಲಿ ಫಲಿಸುವದು. ಸಿದ್ಧಗುರುವಿನಿಂದ ಬಂದ ಮಂತ್ರವು ಕಾಲವಿಲಂಬವಿಲ್ಲದೇ ಫಲಕಾರಿಯಾಗುವದು. ಸಿದ್ಧನಾದ ಶಿಷ್ಯನಿಂದ ಸಾಧಕನಾದ ಗುರುವು ಕೂಡಾ ಸಿದ್ಧಸ್ಥಿತಿಯನ್ನು ಹೊಂದಬಹುದು. ಈ ಮಾತಿಗೆ ಉರುಲಿಂಗಪೆದ್ದಿ ದೇವರ ಚರಿತ್ರೆಯೂ ದಾಶಾರ್ಹ ರಾಜನ ಚರಿತ್ರವೂ ಉದಾಹರಣೆಗಳಾಗಿವೆ.

ದೃಷ್ಟಾಂತ : ಗಂಡನು ಬಲವಂತನಾದರೆ ಹೆಂಡತಿಯನ್ನೂ ಹೆಂಡತಿಯು ಬಲವಂತೆಯಾದರೆ ಗಂಡನನ್ನೂ ಸಂರಕ್ಷಿಸಿ ಸಂಸಾರಸಾಗರವನ್ನು ದಾಟಿ ಹೋಗುವ ಸತಿಪತಿ ನ್ಯಾಯದಂತೆ, ಗುರುವು ಬಲವಂತನಾದರೆ ಶಿಷ್ಯನನ್ನೂ, ಶಿಷ್ಯನು ಬಲವಂತನಾದರೆ ಗುರುವನ್ನೂ ಉದ್ಧರಿಸಲಿಕ್ಕೆ ಸಮರ್ಥರಾಗುವರು. ಶಕ್ತಿಹೀನನಾದ ಪುರುಷನು ಸ್ತ್ರೀಯ ಹಾವಭಾವ ವಿಲಾಸವನ್ನು ನೋಡಿ ಸಶಕ್ತನಾಗುವಂತೆ!

೪ನೆಯದು ಗುರು : ಶುದ್ಧವಂಶಜ ಗುರುಕುಲೋತ್ಪನ್ನರಾದ ವಟುಗಳು ಶುದ್ಧರು. ವಿಶೇಷ ದೀಕ್ಷಾಯುಕ್ತವಾದ ಒಡೆತನದ (ಆರ್ಯಾಚಾರ ಅಥವಾ ಅಯ್ಯ ತನದ) ಸಂಸ್ಕಾರ ಮೊದಲುಗೊಂಡು ಗುರುಪಟ್ಟಾಭಿಷೇಕ ಕಡೆಯಾದ ಸಂಸ್ಕಾರ ವಿಶಿಷ್ಟವಾದಲ್ಲಿ ವಿಶುದ್ಧ ಗುರುಮೂರ್ತಿಯೆನಿಸುವನು.

೫ನೆಯದು ಲಿಂಗ : ಶ್ರೀಗಿರಿ ಮೊದಲಾದ ಕ್ಷೇತ್ರಗಳಲ್ಲಿಯೂ ಲಿಂಗೋದ್ಭವಾದಿ ಪುಣ್ಯನದಿಗಳಲ್ಲಿಯೂ ದೊರೆತ ಶಿಲೆಗಳಿಂದ ರಚಿಸಿದ ಲಿಂಗವು ಶುದ್ಧ; ಜಲಾಧಿವಾಸ ಧಾನ್ಯಾಧಿವಾಸ ಮುಂತಾದ ಸಂಸ್ಕಾರವುಳ್ಳದ್ದನ್ನು ವೇಧಾಮಯ ಕ್ರಿಯಾದೀಕ್ಷೆಗಳಿಂದ ಶಿಷ್ಯನಿಗೆ ಶ್ರೀಗುರುವು ಕೊಟ್ಟ ಶಿವಲಿಂಗವು ವಿಶುದ್ಧವು.

೬ನೆಯದು ಜಂಗಮವು : ಗುರುಸಂಸ್ಕಾರವನ್ನು ಹೊಂದಿದ ವಟುವು ಜಂಗಮವಾಗಲಿಕ್ಕೆ ಶುದ್ಧ; ಈ ವಟುವಿಗೆ ನಿರಾಭಾರಿ ಪಟ್ಟಾಭಿಷೇಕ ಸಂಸ್ಕಾರ ಮಾಡಿದಲ್ಲಿ ವಿಶುದ್ಧ ಜಂಗಮಮೂರ್ತಿಯೆನಿಸುವನು.

೭ನೆಯದು ಪಾದೋದಕ : ನಿರ್ಮಲ ಪ್ರದೇಶದಲ್ಲಿರ್ದ ಜಲವು ಶುದ್ಧ; ಪೂಜ್ಯ ಪೂಜಕರ ಭಾವನಾ ಮತ್ತು ಮಂತ್ರ ತಂತ್ರಗಳ ವಿಶೇಷ ಸಂಸ್ಕಾರದಿಂದಾದ ಪಾದೋದಕವು ವಿಶುದ್ಧವು.

೮ನೆಯದು ಪ್ರಸಾದ : ಸತ್ಕಾಯಕದಿಂದ ತಂದ ಪದಾರ್ಥವನ್ನು ಪಾಕಮಾಡಿದ ಅನ್ನವು ಶುದ್ಧ; ಹಸ್ತಸ್ಪರ್ಶ ಮಹಾಮಂತ್ರೋಚ್ಚಾರ ಶಿವಭಾವನಾದಿಗಳಿಂದ ಸಂಸ್ಕರಿಸಿ ಗುರು ಲಿಂಗ ಜಂಗಮಕ್ಕೆ ಅರ್ಪಿಸಿದ್ದು ಲಿಂಗಭೋಗವು. ಆ ಗುರುಲಿಂಗ ಜಂಗಮ ಮುಖದಿಂದ ಕ್ರಮವಾಗಿ ಬಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವನ್ನು ಭಕ್ತನು ಅನುಭವಿಸುವದೇ ಉಪಭೋಗವು. ಇದೇ ವಿಶುದ್ಧವೆನಿಸುವದು ಈ ಅಷ್ಟಾವರಣಗಳಲ್ಲಿ ಭಸ್ಮ, ರುದ್ರಾಕ್ಷಿ, ಮಂತ್ರ – ಈ ಮೂರು ಸಾಧನಗಳು. ಗುರು, ಲಿಂಗ, ಜಂಗಮ – ಈ ಮೂರು ಅಧಿದೇವತೆಗಳು. ಪಾದೋದಕ, ಪ್ರಸಾದ – ಈ ಎರಡು ಫಲಗಳು.

ಈ ಪ್ರಕಾರ, ವಿಶುದ್ಧ ರೂಪವಾದ ಅಷ್ಟಾವರಣದಲ್ಲಿ ಭಕ್ತರೂಪದಿಂದ ಗುರುವು ವಿನೋದಿಸುವನಾದ್ದರಿಂದ ವಿಶುದ್ಧ ಜೇಷ್ಠಾಗುರುವೆಂದು ಹೇಳಲ್ಪಟ್ಟಿರುವದೆಂಬ ಭಾವವು. ಸುಧೀಗುರುವೇ ಉತ್ತಮ ಬುದ್ಧಿಯುಳ್ಳ ಗುರುವೇ (ವಿಚಾರ) ಆವುದಾದರೊಂದು ಪದಾರ್ಥವನ್ನು ವಿವೇಕದೃಷ್ಟಿಯಿಂದ ನಿಶ್ಚಯಿಸುವುದು ಬುದ್ಧಿಯು. ಅನಿಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ಒದಗಿಸಿಕೊಡುವದಕ್ಕೆ ಆಷ್ಟಾವರಣವೇ ಮುಖ್ಯವೆಂದು ವಿಚಾರಮುಖದಿಂದ ನಿಶ್ಚಯಿಸಿಕೊಂಡಿರುವದನ್ನೇ ಶಿಷ್ಯರಿಗೆ ಬೋಧಿಸುವತನವು ಗುರುವಿನಲ್ಲಿರುವದರಿಂದ ಸುಧೀಗುರುವೆಂದು ಹೇಳಲ್ಪಟ್ಟಿರುವದೆಂಬಭಿಪ್ರಾಯವು.

ಭಕ್ತಿಯಶೋಗುರುವೇ = ಭಕ್ತಿಯ ಕೀರ್ತಿಯುಳ್ಳ ಗುರುವೇ. (ವಿಚಾರ) ಶರೀರ ಇಂದ್ರಿಯ ಮನಸ್ಸು ಜೀವಾತ್ಮ ಇವುಗಳ ಸಮಷ್ಟಿರೂಪವಾದ ತನ್ನಲ್ಲಿ ಯಾವ ಪ್ರಕಾರ ಪ್ರೀತಿ ಇರುವದೋ, ಹಾಗೆಯೇ ಪೂಜ್ಯವಸ್ತುಗಳಾದ ಗುರುಲಿಂಗ ಜಂಗಮಾದಿ ಅಷ್ಟಾವರ್ಣದಲ್ಲಿ ಇಡಲ್ಪಟ್ಟ ಪ್ರೀತಿಯೇ ಭಕ್ತಿಯು. ಇಂಥ ಸಿದ್ಧಭಕ್ತಿಯ ಕೀರ್ತಿಯುಳ್ಳ ಗುರುವೇ ಅಂದರೆ ಗುರುತ್ವಾಭಿಮಾನರಹಿತನಾಗಿ ಶಿಷ್ಯಾದಿಗಳಿಗೆ ಪೂಜ್ಯನಾಗಿಯೂ ಅಷ್ಟಾವರಣದಲ್ಲಿ ಪೂಜಕನಾಗಿಯೂ ಇರುವನೆಂಬ ತಾತ್ಪರ್ಯವು. ಪ್ರಸಾದತೇಜೋಗುರುವೇ – ಅನುಗ್ರಹರೂಪವರ್ಚಸ್ಸುಳ್ಳ ಗುರುವೇ. (ವಿಚಾರ) ಅನುಗ್ರಹವು ಶುದ್ಧಸಿದ್ಧಪ್ರಸಿದ್ಧವೆಂದು ಮೂರು ಪ್ರಕಾರವಿರುವದವುಗಳಲ್ಲಿ :

ಗುರುವಿನ ದೃಷ್ಟಿ (ಅಪೂರ್ವ ತೇಜೋಮಯವಾದ ಕೃಪಾದೃಷ್ಟಿ)ಯು ಶಿಷ್ಯ ನನ್ನು ಆಚ್ಛಾದಿಸಲು ಆ ಶಿಷ್ಯನು ಪವಿತ್ರವೆನಿಸುವನು. ಈ ಪ್ರಥಮ ಸ್ಪರ್ಶರೂಪ ಅನುಗ್ರಹವು ಶುದ್ಧ ಪ್ರಸಾದವೆಂದೆನಿಸುವದು. ಶಿಷ್ಯನಲ್ಲಿರುವ ದುರ್ಗಣ ದುರಾಚಾರಾದಿಗಳನ್ನು ನಿಶೇಷವಾಗಿ ಕಳೆದುಕೊಳ್ಳುವದಕ್ಕೆ ಉಪಾಯಗಳನ್ನು ತೋರಿಸುವದೇ ಸಿದ್ಧಪ್ರಸಾದವೆನಿಸುವದು. ನಾಮರೂಪಾತ್ಮಕವಾದ ಜಡಮಾಯಾಂಶವನ್ನು ದೂರೀಕರಿಸಿ, ಸಚ್ಚಿದಾನಂದರೂಪ ಶಿವಲಿಂಗವನ್ನು ಬೋಧಿಸುವದೇ ಪ್ರಸಿದ್ಧವೆನಿಸುವದು. ಅಥವಾ ದೀಕ್ಷಾಗುರುವು ದೀಕ್ಷಾತ್ರಯದಿಂದ ಪೂರ್ವಾಂಶವನ್ನು (ಮಲತ್ರಯಗಳನ್ನು) ನಾಶಗೊಳಿಸಿ, ಅಂಗತ್ರಯದಲ್ಲಿ ಲಿಂಗತ್ರಯವನ್ನು ಸ್ಥಾಪಿಸಿ, ಲಿಂಗಾಣತಿವಿಡಿದು ವರ್ತಿಸೆಂದು ಬೋಧಿಸುವದೇ ಶುದ್ಧಾನುಗ್ರಹವು. ಪುನಃ ಶಿಕ್ಷಾಗುರುರೂಪದಿಂದ ಶಿವಯೋಗಾಂಗಗಳನ್ನು ಬೋಧಿಸುವದೇ ಸಿದ್ಧಾನುಗ್ರಹವು.

ಬಳಿಕ ಮೋಕ್ಷಾಗುರುರೂಪದಿಂದ ಲಿಂಗಾಂಗ ಸಾಮರಸ್ಯಜ್ಞಾನ ಸಾಧನಗಳನ್ನು ಬೋಧಿಸುವದೇ ಪ್ರಸಿದ್ಧಾನುಗ್ರಹವೆನಿಸುವದು. ಇಂಥಾ ಕೀರ್ತಿಯಿಂದ ಜಗತ್ಪಸಿದ್ಧನೆಂಬ ಭಾವವು.

ಕೃಪಾಗುರುವೇ = ದಯಾಳುವಾದ ಗುರುವೇ. (ವಿಚಾರ) ಭವಮಾಲೆಯ ಸ೦ಬ೦ಧದ ತಾಪತ್ರಯಾಗ್ನಿಯಿಂ ಬೆ೦ದ ಜೀವಿಯನ್ನು ಕೃಪಾದೃಷ್ಟಿಯಿಂದುದ್ಧರಿಸುವದರಿಂದ ಕರುಣಾನಿಧಿಯೆನಿಸುವನು. ದುಃಖಿಗಳನ್ನು ಕಂಡು ಉದಾಸೀನದಿಂದಿರುವವನು ಗುರುವಲ್ಲವು.

ಈ ದಯಾಶೀಲರಾದ ಗುರುಗಳಲ್ಲಿ ದೃಢಸಿದ್ಧರು ಅದೃಢಸಿದ್ದರು ಎಂದು ಎರಡು ವಿಧಗಳುಂಟು. ಅದೃಢಸಿದ್ಧರು ತಮ್ಮ ಸ್ಥಿತಿಯನ್ನು ದೃಢೀಕರಿಸುವದಕ್ಕಾಗಿಯೂ ಲೋಕಾನುಗ್ರಹಾರ್ಥವಾಗಿಯೂ ಸಮ್ಯಜ್ಞಾನ ಸತ್ಕ್ರಿಯೆಗಳನ್ನು ಆಚರಿಸುತ್ತಿರುವರು. ದೃಢಸಿದ್ಧರು ಆ ಸಮ್ಯಜ್ಞಾನ ಸತ್ಕ್ರಿಯೆಗಳನ್ನು ಲೋಕಾನುಗ್ರಹಾರ್ಥವಾಗಿ ಆಚರಿಸುತ್ತಿರುವರು. ದೃಢಾದೃಢವುಳ್ಳ ಉಭಯರು ಸದ್ಗುರುಗಳೆನಿಸಿ ಜಗತ್ತಿನ ಮುಮುಕ್ಷುಗಳಿಗೆ ಮೋಕ್ಷಮಾರ್ಗವನ್ನು ಬೋಧಿಸುತ್ತಿರುವರು. ದೃಢಸಿದ್ಧರು ತಮ್ಮ ಶಿವಯೋಗ ಪ್ರಭಾವವನ್ನು ಜಗತ್ತಿನ ಮಾನವರಲ್ಲಿ ಅನಿರ್ವಾಹ ಸಂಬಂಧವೊದಗಿಬಂದರೆ ಶಿವಾಜ್ಞೆಯೆಂದು ತಿಳಿದು ವ್ರತನೇಮಗಳ ಕಟ್ಟು ಮೀರಿ ವರ್ತಿಸಿದರೂ ಅಮಾನುಷಕೃತ್ಯವನ್ನು (ಈಶ್ವರ ಸೃಷ್ಟಿಯನ್ನೆ ಬದಲುಮಾಡಿ ತೋರಿಸುವ ಸ್ಥಿತಿಯನ್ನು ಉಂಟುಮಾಡಿ ವೀರಶೈವ ಮತೇತರರೂ ಕೂಡಾ ಆಶ್ಚರ್ಯಚಕಿತರಾಗಿ ಅಸಾಧಾರಣ ಭಕ್ತಿಯನ್ನು ತೋರಿಸುವಂತೆ ಮಾಡುತ್ತಿರುವರು. ಉದಾಹರಣಾರ್ಥವಾಗಿ –

ಸಿರಹಟ್ಟಿ ಮಹಾಸ್ವಾಮಿಗಳೂ ಗವೀಸಿದ್ದಪ್ಪನವರೂ ಆಚರಿಸಿದ ಚರಿತ್ರೆಗಳೂ ಇನ್ನೂ ಅನಂತಮಹಿಮರ ಚರಿತ್ರಗಳೂ ಉಂಟು.

ದೃಢಸಿದ್ಧರಾದ ಗುರುಗಳು ದೊರೆಯದೇ ಗುರುಸಾಂಪ್ರದಾಯವು ಚ್ಯುತಿಯಾಗುವ ಸಂದರ್ಭ ಕಂಡುಬಂದಲ್ಲಿ ಅಂಥ ಪರಿಪಕ್ವಾಂತಃಕರಣವುಳ್ಳ ಶಿಷ್ಯನ ಶಕ್ತಿಪಾತ ಚಿನ್ಹವನ್ನರಿತು ಅನಿರ್ವಾಹಪಕ್ಷದಲ್ಲಿ ಇದು ಲಿಂಗಾಣತಿಯೆಂದು ಭಾವಿಸಿ, ಅದೃಢಸಿದ್ಧರು ಗುರುತ್ವವನ್ನು ವಹಿಸತಕ್ಕದ್ದು.  ಶಿಷ್ಯನಾದರೂ ಈ ಮರ್ಮವನ್ನರಿತು ಗುರುಗಳನ್ನು ಮಾಡಿಕೊಳ್ಳತಕ್ಕದ್ದು. ಉದಾಹರಣೆ-

ಶಾಲೆಯಲ್ಲಿ ಕಲಿಯುತ್ತ ಕಲಿಸುವರು, ಕಲಿತು ಕಲಿಸುವರು ಈ ಉಭಯರೂ ಆಧ್ಯಾಪಕರೇ ಇರುವಂತೆ, ಗುರುಗಳ ವಿಚಾರವಾದರೂ ಉಂಟು. ಮದ್ಗುರುವೇ ನನ್ನ ಗುರುವೇ. (ವಿಚಾರ) ನನ್ನ ಪುಣ್ಯೋದಯದಿಂದ ನನ್ನನ್ನು ಉದ್ಧರಿಸುವದಕ್ಕಾಗಿ ತನ್ನ ನಿರ್ಗುಣ ಲೀಲೆಯನ್ನುಳಿದು ನನ್ನಂತೇ ಸಗುಣಾಕಾರವನ್ನು ಧರಿಸಿ ಅವತರಿಸಿರುವದರಿಂದ ಆ ಸದ್ಗುರುವಿನ ಉಪಕಾರ ನಿವಾರಣಾರ್ಥ ಆಪ್ತಾದಿ ಗುರುಸೇವಾನಿರತನಾಗಿ ಮುಮುಕ್ಷುವಾದ ಶಿಷ್ಯನು ಇರಬೇಕೆಂಬಭಿಪ್ರಾಯವು.

ಶಿವಾಧವ ಗುರುವೇ =  ಚಿಚ್ಛಕ್ತಿ ವಲ್ಲಭನಾದ ಗುರುವೇ. (ವಿಚಾರ) ಶಕ್ತಿವಿಶಿಷ್ಟಾದ್ವೈತ ಶಿವಸ್ವರೂಪಿಯಾದ ಗುರು ಎಂಬ ಭಾವವುಳ್ಳ ಕವಿಯ ಮುದ್ರಿಕೆಯು.

 

 ಜಯಬಸವೇಶ ಭಕ್ತಜನಭಾಗ್ಯ ಶುಭೋದಯ ವೀರಶೈವನಿ|

 ರ್ಣಯ ಪರಮಾವತಾರ ಶರಣಾಗತ ರಕ್ಷಕ ಚಿದ್ಘನಪ್ರಭಾ|

ಮಯ ಜಗದಾದಿದೇಶಿಕ ಪುರಾತನ ಪುಂಗವ ಶಾಂಭವೈ ಪುರಾ |

ಶ್ರಯ ಜಯ ಸೋಮನಾಥ ಜಯದೇವ ಜಯಾವಿರತಂ ಶಿವಾಧವಾ ||೨||

ಜಯಬಸವೇಶ = ಚಿನ್ನಾದ ಚಿದ್ಬಿಂದು ಚಿತ್ಕಲಾಸ್ವರೂಪನಾದ ಬಸವೇಶ್ವರನೇ ಸರ್ವೋತ್ಕೃಷ್ಟನಾಗು (ಶಂಕಾ) ಶಿವನ ಪರಾವತಾರಿಯಾದ ದ್ವಿತೀಯ ಶಂಭುವೆಂದೆನಿಸಿ ಜಗದ್ಧಿತಾರ್ಥವಾದ ದಿವ್ಯಚೇಷ್ಟೆಯುಳ್ಳ ಮಹಾಮಹಿಮನೆನಿಸುವ ಬಸವೇಶ್ವರನಿಗೆ ಆಶೀರ್ವಾದರೂಪ ಮಂಗಲ ಮಾಡಿರುವದು. ಅಸಂಭವವೆಂದರೆ (ಸಮಾಧಾನ) ಜೀವಿಗಳ ಕರ್ಮಾನುಸಾರವಾಗಿ ಸುಖದುಃಖರೂಪ ಸೃಷ್ಟಾದಿ ಕಾರ್ಯಗಳನ್ನು ಮಾಡಿ ಅಜ್ಞರ ದೃಷ್ಟಿಗೆ ಶ್ರೇಷ್ಠ ತವರೆಂದು ಕಾಣಿಸಿಕೊಳ್ಳುವ ಬ್ರಹ್ಮಾದಿದೇವತೆಗಳಿಗಿಂತಲೂ ಮೇಲಾದ ಎಲೈ ಬಸವೇಶ್ವರನೇ, ನನ್ನ ಕರ್ಮಾನುಗುಣ್ಯವಾಗಿ ನನಗುಂಟಾಗಿರುವ ಭವಮಾಲೆಯ ದುಃಖವನ್ನು ನನ್ನಲ್ಲರ್ಧ ಘನವಾದ ಸಾಮರ್ಥ್ಯದಿಂದ ನಿವೃತ್ತಿಗೊಳಿಸಿ, ತ್ರೈಮೂರ್ತಿಗಳಿಗೂ ಅಸಾಧ್ಯವಾದ ನಿನ್ನ ಸರ್ವೋತ್ಕರ್ಷವನ್ನು ನನ್ನಲ್ಲಿ ತೋರಿಸು ಎಂಬ ಅಭಿಪ್ರಾಯ ಉಳ್ಳದ್ದಾದುದರಿಂದ ಆಶೀರ್ವಾದರೂಪ ಮಂಗಲವು ಪೂಜ್ಯ ಪೂಜಕ ಭಾವಗಳಿಗೆ ಕೊರತೆಯನ್ನುಂಟುಮಾಡುವ ಅಸಂಬದ್ಧಾಲಾಪವೆಂದು ವಿವೇಕಿಗಳ ದೃಷ್ಟಿಗೆ ತೋರದೆಂಬ ಭಾವವು.

ಉದಾಹರಣೆ – ದರಿದ್ರನು ತನ್ನ ದೀನತೆಯನ್ನು ದೂರಮಾಡಿಕೊಳ್ಳುವದಕ್ಕೆ ಧನಿಕನ (ಸಾವುಕಾರನ) ಬಳಿಗೆ ಹೋಗಿ ನನಗೆ ನೀವು ಸಾವುಕಾರರಾಗಿರಿ ಎಂದು ಬೇಡಿಕೊಳ್ಳುವಂತೆ!

ಭಕ್ತಜನಭಾಗ್ಯ= ಸದ್ಭಕ್ತಿಶೀಲರ ಐಶ್ವರ್ಯಸ್ವರೂಪನೇ, (ವಿಚಾರ) ಸಚ್ಚಿದಾನಂದ ಸ್ವರೂಪಿಯಾದ ಬಸವೇಶ್ವರನಲ್ಲಿ ಯಾರ ಭಕ್ತಿಯು (ಅಸಾಧಾರಣ ಪ್ರೀತಿಯು) ನೆಲಸಿರುವದೋ ಅಂಥವರಿಗೆ ಅನಿಷ್ಟ ನಿವೃತ್ತಿ ಇಷ್ಟಾರ್ಥ ಪ್ರಾಪ್ತಿಯನ್ನುಂಟುಮಾಡುವ ಸಂಪತ್ತಿಯನ್ನೂ, ಜನಸಂಪತ್ತಿ, ಧನಸಂಪತ್ತಿ, ಭೂಸಂಪತ್ನಿ, ರಾಜಸಂಪತ್ತಿ, ಯಜ್ಞಾದಿ ಸಕಾಮಕರ್ಮ ಫಲರೂಪ ಸಂಪತ್ತಿ ಮುಂತಾದ ಇಹಪರ ಲೌಕಿಕ ಸಂಪತ್ತಿಗಳನ್ನೂ ಸಕಲ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿರೂಪಮಾದ ಪಾರಮಾರ್ಥಿಕ ಸಂಪತ್ತಿಯನ್ನೂ ಸಹಜವಾಗಿ ಕೊಡುವಲ್ಲಿ ಸಮರ್ಥನಾದ ಮೂರ್ತಿಯೆಂಬ ಅಭಿಪ್ರಾಯವು.

ಶುಭೋದಯ = ಮಂಗಲೋತ್ಪತ್ತಿಗೆ ಕಾರಣನೇ, (ವಿಚಾರ) ಬಸವೇಶ್ವರನ ಉದಯವೇ ಮಂಗಲರೂಪಸಂಪತ್ತಿನ ಉದಯವು. ಅಂದರೆ ಮನಸ್ಸಿನಲ್ಲಿ ಬಸವೇಶ್ವರನ ಮೂರ್ತಿಧ್ಯಾನ. ಮಾತಿನಲ್ಲಿ ಬಸವೇಶ್ವರನ ನಾಮೋಚ್ಚರಣ ತನುವಿನಲ್ಲಿ ಬಸವರೂಪ ಗುರುಲಿಂಗ ಜಂಗಮದ ಆರ್ಚನವೆಂಬ ತ್ರಿವಿಧರೂಪ. ಬಸವನ ಉದಯವು, ಸರ್ವ ಅಮಂಗಲಗಳನ್ನು ನಷ್ಟಮಾಡಿ ಸುಮಂಗಲಗಳನ್ನುಂಟುಮಾಡಿ ಕೊಡುವದು. ಉಕ್ತಿಯ ಸಂಪತ್ತಿನ ಸಾಧನವನ್ನು ಬೋಧಿಸುವದೆಂಬ ಭಾವವು, ಉದಾಹರಣೆ ಸೂರ್ಯೋದಯವೇ ಪ್ರಕಾಶದ ಉದಯವೆನಿಸಿದ೦ತೆ ತನ್ನಲ್ಲಿ ಬಸವೇಶ್ವರ ನ ಉದಯವೇ ಮಂಗಲೋದಯವೆನಿಸುವದು.

ವೀರಶೈವ ನಿರ್ಣಯ ಪರಮಾವತಾರ = ವೀರಶೈವ ಮತ ಸಿದ್ಧಾಂತಸ್ವರೂಪನೇ, (ವಿಚಾರ) ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವೆಂತಲೂ ಷಟ್‌ ಸ್ಥಲ ಸಿದ್ಧಾಂತವೆಂತಲೂ ಉಕ್ತವಾಗಿರುವದರಿಂದ ಸತ್ಕೃಯಾ ಸತ್ಯಜ್ಞಾನಸಹಿತ ಷಟ್‌ಸ್ಥಲಾತ್ಮಕ ಸಿದ್ಧಾಂತ ಸ್ವರೂಪನೇ ಬಸವೇಶ್ವರನೆಂಬಭಿಪ್ರಾಯವು. ಪರಮಾವತಾರ ಉತ್ಕೃಷ್ಟವಾದ ಅವತಾರ ಉಳ್ಳಾತನೇ, (ವಿಚಾರ) ದ್ವಿತೀಯಶಂಭುವೆನಿಸಿದ ನಂದೀಶ್ವರನು ಜಗತ್ತನ್ನು ಉದ್ಧರಿಸುವದಕ್ಕೋಸುಗ ಮನುಷ್ಯಾಕಾರವನ್ನು ಧರಿಸಿ ಮಲಮಾಯಾ ಕರ್ಮಗಳ ತೊಡಕಿಲ್ಲದೆ ಬಸವೇಶ್ವರನೆಂಬ ನಾಮವನ್ನಾಂತು ಭೂಮಿಗಿಳಿದನೆಂಬ ಭಾವವು.

ಶರಣಾಗತರರಕ್ಷಕ = ಮರೆ ಹೊಕ್ಕವರನ್ನು ಕಾಪಾಡುವವನೇ, (ವಿಚಾರ) ಶುದ್ಧಾಂತಃ ಕರಣರಾಗಿ ಸದ್ಭಕ್ತಿಯಿಂದ ಮರೆಹೊಕ್ಕವರೆಲ್ಲರನ್ನೂ ಬಿಡದೇ ರಕ್ಷಿಸುವವನು. ಮನುಷ್ಯರಿಗೆ ತಮ್ಮನ್ನು ಮರೆ ಹೊಕ್ಕವರ ರಕ್ಷಿಸುವಲ್ಲಿ ಅಳತೆಯುಂಟು ಮತ್ತು ಉದಾಸೀನಾದಿ ದುರ್ಭಾವಗಳೂ ಬರುವದುಂಟು. ಹಾಗೆ ಬಸವೇಶ್ವರನಿಗೆ ಉದಾಸೀನವೂ ಇಷ್ಟೇ ಜನರನ್ನು ಕಾಪಾಡುವೆನೆಂಬ ನಿರ್ಬಂಧವೂ ಇಲ್ಲವೆಂಬ ಭಾವವು.

ಚಿದ್ಘನ ಪ್ರಭಾಮಯ= ಜ್ಞಾನದ ಆಧಿಕವಾದ ಪ್ರಕಾಶದಿಂದ ವ್ಯಾಪಕನಾದಾತನೇ, (ವಿಚಾರ) ಪರಮಾತ್ಮನು  ಸಾಧಕರಲ್ಲಿ ಅಣುರೂಪನಾಗಿಯೂ ಸಿದ್ಧರಲ್ಲಿ ಘನರೂಪನಾಗಿಯೂ ವಾಸಿಸುವನು. ಆದ್ದರಿಂದ ಸಿದ್ಧನಾದ ಬಸವೇಶ್ವರದೇವರ ಹೃದಯದಲ್ಲಿ ವ್ಯಾಪಕ (ಘನ) ರೂಪದಿಂದ ವಾಸಿಸುವನೆಂಬಭಿಪ್ರಾಯವು.

ಜಗದಾದಿದೇಶಿಕ = ಜಗತ್ತಿಗೆ ಮೊದಲಿಗನಾದ ಗುರುವೇ, (ವಿಚಾರ) “ಶಂಭುಲಿಂಗವಾದಿಯಾಗಿ ನಿರಾಭಾರಿ ದೇಶಿಕೋತ್ತುಮಪರ್ಯತ ಮಹಾಗುರು ಪರಂಪರೆಗೆ” ಎಂಬ ಶ್ರೀ ನಿಜಗುಣ ಶಿವಯೋಗಿಗಳ ಉಕ್ತಿಯಂತೆ’ ಶಂಭುಲಿಂಗ ಸ್ವರೂಪಿಯಾದ ಬಸವೇಶ್ವರನೇ ಆದಿಗುರುವೆಂಬ ತಾತ್ಪರ್ಯವು.

ಪುರಾತನ ಪುಂಗವ = ಪ್ರಮಥರಲ್ಲಿ ಶ್ರೇಷ್ಠನೇ, ಅಂದರೆ ಪ್ರಮಥಾಗ್ರಗಣ್ಯನಾದ ನಂದೀಶ್ವರರೂಪನೆಂಬುದರ್ಥವು. ಶಾಂಭವೈಪುರಾಶ್ರಯ = ಶಂಭುಸಂಬಂಧವಾದ ಜ್ಞಾನಾಕಾಶವೆಂಬ ಪಟ್ಟಣವೇ ಆಶ್ರಯವಾಗಿಯುಳ್ಳಾತನೇ, (ಶಂಕಾ) :

ಅಂತರಂಗದ ಚಿದಾಕಾಶದಲ್ಲಿ ಆಶ್ರಯಿಸುವಾತನೆಂದು ಹೇಳಿದರೆ ಬಸವೇಶ್ವರನು ಮಂತ್ರಿಯ ಪದತ್ವವನ್ನೂ ಗುರುಲಿಂಗ ಜಂಗಮದಾಸೋಹವನ್ನೂ ಮಾಡುತ್ತ ಮನುಷ್ಯರಂತೆ ವರ್ತಿಸುತ್ತಿದ್ದನು. ಆದ್ದರಿಂದ ಸದಾ ಚಿದಾಕಾಶದಲ್ಲಿ ವಾಸಮಾಡುವನೆಂಬ ಮಾತು ಹೇಗೆ ಸಂಬಂಧಿಸುವದು ಅಂದರೆ….

ಅಷ್ಟಾವರಣವು ಚಿದಾಕಾರ ಸ್ವರೂಪವೇ ಮತ್ತು ಅಷ್ಟಾವರಣವನ್ನು ಕುರಿತು ಭಕ್ತನು ಆಚರಿಸುವ ಸತ್ಕ್ರಿಯ ಸಮ್ಯಜ್ಞಾನವೂ ಗುರುಲಿಂಗ ಜಂಗಮದ ದೆಸೆಯಿಂದ ಮಾಡತಕ್ಕ ಕೃಷಿ ವಾಣಿಜ್ಯ ಸೇವಾದಿ ಸತ್ಕಾಯಕಗಳೆಲ್ಲವೂ ಚಿದಾಕಾಶ (ಬಿಂದ್ವಾಕಾಶ) ಸ್ವರೂಪವೇ. ಅಂದರೆ ಶಿವಸ್ವರೂಪವೇ ಆಗಿರುವದರಿಂದ ಬಸವೇಶ್ವರದೇವರು ಚಿದಾಕಾಶದಲ್ಲಿ ವಾಸಿಸುವರೆಂದು ಬೋಧಿಸಿರುವದು ಸಮಂಜಸವಿರುವದೆಂಬ ಭಾವವು. ಉದಾಹರಣೆ – ಒಬ್ಬ ಸೇವಕನು ಧನಿಯ ಇಚ್ಛಾನುಸಾರ ಕೆಲಸವನ್ನು ಮಾಡುತ್ತ ತನ್ನ ಮನೆಯಲ್ಲಿದ್ದಾಗ್ಯೂ ನಾನು ಆ ಧನಿಕನ ಮನೆಯಲ್ಲಿರುವೆನೆಂದು ಹೇಳುವಂತೆ.

ಬಸವೇಶ್ವರನು ಸ್ವಾರ್ಥಿಯೆನಿಸದೇ ಶಿವಾಜ್ಞೆಗನುಸಾರವಾಗಿ ಮಂತ್ರಿಯ ಕಾರ್ಯವನ್ನು ಮಾಡಿದರೂ ಚಿದಾಕಾಶಗತ ಶಿವಸಂಬಂಧಿ ಸೇವೆಯಲ್ಲಿ ನಿರತನಾಗಿದ್ದನೆಂದು ತಿಳಿಯತಕ್ಕದ್ದು. ಮತ್ತು ಸತ್ಯವನ್ನುದ್ದೇಶಿಸಿ ಹೊಲೆಯನಿಗಾಳಾದ ಹರಿಶ್ಚಂದ್ರನು ಆ ಹೊಲೆಯನಾಳೆನಿಸದೇ ಸತ್ಯಶೀಲನೆನಿಸಿದಂತೆ (ಸತ್ಯತೆಯ ಆಳೆನಿಸಿದಂತೆ) ಬಸವೇಶ್ವರನು ಮಂತ್ರಿಯಾಗಿದ್ದರೂ ಜ್ಞಾನಾಕಾಶದಲ್ಲಿ  ವಾಸಮಾಡಿದ್ದನೆಂದು ತಿಳಿಯುವದು. ಜಯ ಸೋಮನಾಥ ಬಿಂದುಶಕ್ತಿಗೆ (ವಿಮರ್ಶಶಕ್ತಿಗೆ ಅಥವಾ ಕುಂಡಲಿಗೆ) ಪ್ರಭುವೇ ಸರ್ವೋತ್ಕೃಷ್ಟನಾಗು. ಜಯದೇವ : ಎಲೈ ಒಡೆಯನೇ ಸರ್ವೋತ್ತಮನಾಗು, ಅವಿರತಂ ಜಯ = ನನ್ನನ್ನು ಉದ್ಧರಿಸಿ ಯಾವಾಗಲೂ ಜಯಶೀಲನಾಗು. (ವಿಚಾರ) ನನ್ನನ್ನು ಕಾಡುತ್ತಿರುವ ಕಾಮ ಕಾಲ ಮಾಯೆಗಳನ್ನು ಸೋಲಿಸಿ, ಸರ್ವೋತ್ಕೃಷ್ಟನಾಗೆಂಬ ಭಾವವು.

ಬಸವಕುಮಾರಭಾಕ್ತಿಕ ಪುರಸ್ಸರ ಷಟ್‌ಸ್ಥಲಧೀರ ಚಿತ್ಸುಧಾ |

ರಸಭರಿತಾಂತರಂಗ ಸಕಲಾಕ್ಷ ಸಮರ್ಪಿತ ಲಿಂಗತತ್ರಸಾದ |

 ಸುಖವಿಶೇಷತೃಪ್ತ ಶಿವಯೋಗಪದೈಕಸಮಾಪ್ತ ನೀನೆ ರ |

 ಕ್ಷಿಸುಗಡ ಜೀಯ ಚನ್ನಬಸವಯ್ಯ ಕೃಪಾನಿಧಿಯೇ ಶಿವಾಧವಾ ॥೩॥

 

ಬಸವಕುಮಾರ=ಬಸವೇಶ್ವರನ ಪುತ್ರನೇ, ಅಂದರೆ ಚಿದಾಕಾಶಾತ್ಮಕ ಚಿನ್ನಾದ ಬಿಂದು ಚಿತ್ಕಲಾಸ್ವರೂಪ ಪ್ರಸಾದದಿಂದುದ್ಭವಿಸಿದಾತನೇ, (ವಿಚಾರ) ಈ ಬಸವ ಕುಮಾರತ್ವವು ಜನ್ಮರೂಪ ಸಂಸ್ಕಾರರೂಪ ಕ್ರಿಯಾರೂಪ ಯೋಗರೂಪ ಅವತಾರ ರೂಪ ವೃತ್ತಿರೂಪವೆಂದು ಆರು ಪ್ರಕಾರವೆಂದು ನಿಶ್ಚಯಿಸಲ್ಪಟ್ಟಿರುವದವುಗಳಲ್ಲಿ

(೧)  ಬಸವಕುಮಾರ-ತ್ರಿವಿಧಚಿದ್ರೂಪ ಪ್ರಣವಗಳಿಂದುಂಟಾದ ಕಕ್ಕಯ್ಯಗಳ ಮಿಕ್ಕ ಪ್ರಸಾದವನ್ನು ಅವತಾರ ಸ್ವರೂಪನಾದ ಬಸವೇಶ್ವರನು ಅವಧಾನದಿಂದ (ಎಚ್ಚರಿಕೆಯಿಂದ) ತಂದುಕೊಡಲು ಅದರಿಂದ ಜನಿಸಿದವನು. ಈ ಕುಮಾರತ್ವವು ಜನ್ಮರೂಪ ವಾದದ್ದು.

(೨) ಬಸವಕುಮಾರ = ಪರಶಿವನ ಅಪರಾವತಾರಿಯಾದ ಬಸವೇಶ್ವರನ್ನು ಆದಿಗುರು ತತ್ವದೀಕ್ಷೆಯನ್ನೆಸಗಲು ಪುನರ್ಜಾತನಾದನು. ಈ ಕುಮಾರತ್ವವು ಸಂಸ್ಕಾರರೂಪವಾದದ್ದು (ಸದ್ಯೋನಿರ್ವಾಣ ಅಸದ್ಯೋನಿರ್ವಾಣ ದೀಕ್ಷೆಗಳ ವಿವೇಚನೆ ಮಾಡತಕ್ಕದ್ದು).

(೩) ಬಸವಕುಮಾರ ಚಿನ್ನಾದ ಚಿದ್ಬಿಂದು ಚಿತ್ಕಲಾತ್ಮಕ ಗುರುತ್ರಯ ಲಿಂಗತ್ರಯ ಜಂಗಮಶ್ರಯಗಳ ಪ್ರಸಾದದಿಂದ ಕುಮಾರ. ಕುಕಾಮ ಕಾಲ ಮಾಯಾಮಯವಾದ ದುರ್ಮಾರ್ಗಗಳನ್ನು ಮಾರ = ಹೊಡೆದೋಡಿಸಿದವನು. ಇದು ಕ್ರಿಯಾರೂಪವಾದ ಕುಮಾರತ್ವವು

(೪) ಬಸವಕುಮಾರ = ಚಿನ್ನಾದ ದ್ಬಿಂದು ಚಿತ್ಕಲಾತ್ಮಕಾರಕ ಬ್ರಹ್ಮವನ್ನು ಚಿದ್ರೂಪಕಾರ ಕತ್ರಯಾ (ಲಕ್ಷತ್ರಯನುಸಂಧಾನ ರೂಪಸಾಧನದಿಂದ ಸಾಕ್ಷಾತ್ಕಾರಮಾಡಿಕೊಂಡು ಕುತ್ಸಿವಾದ ಭವಮಾಲೆಯನ್ನು ಧಿಕ್ಕರಿಸಿದವನು. (ಕು ಕುತ್ಸಿತವಾದದ್ದನ್ನು, ಮಾರ= ಹೊಡೆದವನು) ಇದು ಯೋಗರೂಪ ಕುಮಾರತ್ವ

(೫) ಬಸವಕುಮಾರ-ಶಿವನ ಚಿದ್ಧರ್ಮರೂಪು. ಈ ಚಿದ್ಧರ್ಮರೂಪನಾದ ಪರಶಿವನ ಕುಮಾರ. ಪುತ್ರನಾದ ಸ್ಕಂದನು ಪಂಚವರ್ಣಸೂತ್ರಾಧಿಪತಿಗಳಾದ ವಿಶ್ವಾರಾಧ್ಯರ ಗೋತ್ರಾಧಿಪತಿಯು. ಈತನ ಅಪರಾವತಾರನೇ ಚನ್ನಬಸವೇಶ್ವರನು. (ಇದು ಅವತಾರರೂಪ ಕುಮಾರತ್ವ)

(೬) ಬಸವಕುಮಾರ -ಅವಾಗ್ಜಪಸ್ವರೂಪ  ಮೂಲಪ್ರಣವವು ಕುಮಾರ-ಷಣ್ಮುಖ ಸ್ವಾಮಿಯು ಅರ್ಥಾತ್‌ ಬಸವಕುಮಾರ ಅಂದರೆ ಅವಾಗ್ಜಪ್ರಣವದಿಂದುಂಟಾದ ಷಣ್ಮುಖಸ್ವಾಮಿಯ ಅವತಾರಸ್ವರೂಪನಾದ ಚನ್ನಬಸವನೆಂಬಭಿಪ್ರುವು. (ವಿಶೇಷ ವಿಚಾರ) ಕಾರಣರೂಪವಾದ ಅವಾಗ್ಜಪ್ರಣವದುಂಟಾದ ಚಿನ್ನಾದ ಚಿದ್ಬಿಂದುಚಿತ್ಕಲಾಸ್ವರೂಪ ಸೂಕ್ಷ್ಮ ಪ್ರಣವತ್ರಯಗಳು. ಇವುಗಳಿಂದುಂಟಾದ ಸ್ಥೂಲ ಅಂಗ ಷಟ್ಪ್ರಣವ ಲಿಂಗಪಟ್ಟಣವಗಳು. ಈ ಪ್ರಣವಷಟ್ಕದಿಂದ ಭಗವದಾತ್ಮಕ (ಪರಶಿವಾತ್ಮಕ) ಷಣ್ಮುಖರೂಪ ಹಸ್ತಸ್ಪರ್ಶದಿಂದ ಭೂತಾಂಶವಳಿದು ಪೂತಾಂಶದಿಂದ ಜನಿಸಿದ ಪ್ರಸಾದರೂಪವೆ ಚನ್ನಬಸವನೆಂದು ತಾತ್ಪರ್ಯ.

ಕಾರಣರೂಪ ಅವಾಗ್ಜಪ್ರಣವದಲ್ಲಿ ಷಡಕ್ಷರೀ ಸಮಷ್ಟಿರೂಪ ಮೂಲಪ್ರಣವವೂ ಸೂಕ್ಷ್ಮರೂಪ ಚಿನ್ನಾದ ಚಿದ್ಬಿಂದು ಚಿತ್ಕಲಾ ಪ್ರಣವಗಳಲ್ಲಿ ನಾದ ಬಿಂದು ಕಲಾ ಪ್ರಣವತ್ರಯಗಳೂ ಸಂಭವಪ್ರಮಾಣದಿಂದ ಮಹಾ ಪ್ರಕಾಶದಲ್ಲಿ ಗೌಣ (ಅಲ್ಪ) ಪ್ರಕಾಶವು ಸಂಬಂಧವೆನಿಸಿದ್ದಂತೆ ಸಂಬಂಧಿಸಿರುವವು.

ಶರಣರ ಹಸ್ತವೇ ಷಟ್‌ಸ್ಥಲಸ್ವರೂಪ ಪ್ರಣವಗಳ ಸಂಬಂಧದಿಂದ ಶಿವಹಸ್ತ ವೆಂದರೆ ಷಣ್ಮುಖಸ್ವರೂಪವೆನಿಸುವದು. ಆ ಷಣ್ಮುಖಸ್ವರೂಪ ಹಸ್ತಸ್ಪರ್ಶದಿಂದ ಪದಾರ್ಥದ ಭೂತಾಂಶವಳಿದು ಪೂತಾಂಶದಿಂದುಂಟಾದ ಪ್ರಸಾದವೇ ಚನ್ನಬಸವೇಶ್ವರ ನೆಂದು ತಿಳಿಯತಕ್ಕದ್ದು. ಇದು ಷಟ್‌ಸ್ಥಲರೂಪ ಷಡಕ್ಷರಿಯಿಂದುಂಟಾದ ಕುಮಾರತ್ವವು. ಈ ಕುಮಾರತ್ವವು ವೃತ್ತಿರೂಪವಾದದ್ದು.

ಭಾಕ್ತಿಕಪುರಸ್ಸರ ಷಟ್‌ಸ್ಥಲಧೀರ = ಭಕ್ತಿಸ್ಥಲವೇ ಮೊದಲ್ಗೊಂಡು ಆರು ಸ್ಥಲಗಳ ಆಚರಣೆಯಲ್ಲಿ ವೀರನೆನಿಸಿದನು. (ಇಲ್ಲಿ ವಿಚಾರ)

ಚನ್ನಬಸವೇಶ್ವರ ದೇವರೊಬ್ಬರೇ ಷಟ್‌ಸ್ಥಲ ಪರಶಿವ ಸ್ವರೂಪ ಧೀರರೆನಿಸುವರೋ? ಅಂದರೆ ಷಟ್‌ ಸ್ಥಲಾಚರಣೆಯನ್ನು ತಪ್ಪದೇ ನಡೆಸುವವರೆಲ್ಲರೂ ಧೀರರೇ (ವೀರಶೈವರೇ). ಅವರೆಲ್ಲರೂ ಚನ್ನಬಸವೇಶ್ವರ ದೇವರ ಸ್ವರೂಪಿಗಳೆನಿಸುವರು. “ಶಿವನೊಳಗೆ ವಿಶ್ವಾಸ, ಶಿವನೊಳಗೆ ನಂಬುಗೆಯು, ಶಿವನೊಳಗೆ ಮೋಹವಿರೆ ತಾನೆ ಶಿವನು” ಎಂಬ ಪುರಾತನೋಕ್ತಿಯಂತೆ, ಶಿವನಲ್ಲಿ

ವಿಶ್ವಾಸಾದಿಗಳನ್ನಿಟ್ಟವರೆಲ್ಲರೂ ಶಿವಸ್ವರೂಪಿಗಳಾದ್ದರಿಂದ ಚನ್ನಬಸವೇಶ್ವರದೇವರೂ ಇನ್ನುಳಿದ ಪ್ರಮಥರೂ ಶಿವಸ್ವರೂಪಿಗಳೇ ಎಂದು ತಾತ್ಪರ್ಯವು. (ಧೀರರೆನ್ನುವಲ್ಲಿ ವಿಚಾರ) ಷಟ್‌ ಸ್ಥಲಗಳಲ್ಲಿ ಒಂದಾದ ಭಕ್ತಿಸ್ಥಲದ ಆಚಾರವೆಂದರೆ, ಭಕ್ತನು ತಾನು ಪಡೆದ ದ್ರವ್ಯವನ್ನು ಶಿವನಲ್ಲಿ ಭಕ್ತಿಯುಳ್ಳವರಿಗೆ ನಿರ್ವಂಚನೆಯಿಂದ ಕೊಡುವದೂ, ಅವರಲ್ಲಿ ನಿರಹಂಕಾರದಿಂದ ವರ್ತಿಸುವದೂ ಭಕ್ತಿಸ್ಥಲವೆಂದು ಹೇಳಲ್ಪಡುವದು. ಇದು ಹೇಡಿಯ ಕೆಲಸವಲ್ಲ. “ಕೊಡುವದೂ, ಕಡಿಯುವದೂ, ವೀರನ ಕೆಲಸ” ಎಂದು ನಾಣ್ಣುಡಿಯುಂಟು.

ಆಶೆಯೊಂದನ್ನೇ ಬಿಟ್ಟವನಿಗೆ ವೀರನೆಂಬುವದು ಲೋಕಾನುಭವಪ್ರಸಿದ್ಧವು. ಆಶೆಯನ್ನು ಬಿಡುವದು ಸಾಮಾನ್ಯದ ಕೆಲಸವಲ್ಲ. ವೀರನ ಕೆಲಸವು. ಇದರಂತೆ ಅಹಂಕಾರವನ್ನು ಬಿಡುವದಕ್ಕೆ ಅತ್ಯಂತ ಶೂರತನವು ಬೇಕಾಗುತ್ತದೆ. ಭಕ್ತಿಸ್ಥಲದಲ್ಲಿ ಆಶಾ ಮತ್ತು ಅಹಂಕಾರ ಇವೆರಡನ್ನೂ ನಾಶಗೊಳಿಸುವದು ಕರ್ತವ್ಯವಾದ್ದರಿಂದ ಚನ್ನಬಸವೇಶ್ವರದೇವರಿಗೆ ಧೀರರೆಂದು ಹೇಳಿದ್ದು ಅತಿಶಯೋಕ್ತಿಯೆನಿಸದು. ಇದರಂತೆ ಮುಂದಿನ ಮಾಹೇಶ್ವರ ಸ್ಥಲವನ್ನು ವಿಚಾರಮಾಡಿದರೆ, ಪರದ್ರವ್ಯಾಪೇಕ್ಷೆ ಪರಹಿಂಸೆ ಮೊದಲಾದ ದುರ್ಗುಣಗಳನ್ನು ದೂರದಲ್ಲಿಯೇ ಬಿಟ್ಟು ಏಕಲಿಂಗನಿಷ್ಠಾ (ಒಬ್ಬ ಶಿವನಲ್ಲಿಯೇ ನಿಷ್ಪಾ)ಪರನಾಗಿರಬೇಕೆಂದು ಹೇಳುವದು. “ಒಲ್ಲದಿಪ್ಪುದೇ ಶೀಲ; ಕೊಲ್ಲದಿಪ್ಪುದೇ ಧರ್ಮ’ವೆಂದು ಪುರಾತನ ಪ್ರವಚನ ಉಂಟು. ಮುಂದಿನ ಸ್ಥಲಗಳಲ್ಲಿ ಉತ್ತರೋತ್ತರ ಅಧಿಕವಾದ ವೀರತನವೇ ಕಂಡುಬರುವದರಿಂದ ಷಟ್‌ ಸ್ಥಲಧೀರನೆಂದು ಕರೆದಿರುವದು ಸಂಯುಕ್ತಿಕವೆನಿಸುವದು. “ತಿಳಿಯಲಹುದೊಲಿದು ಬಿಡಲಹುದು ಮೋಹಿಸದೆ ಭೂತಳದೊಳಾನೆಂದಹಂಕರಿಸದಿಹುದರಿದು ” ಎಂದು “ಶತೇಷುಜಾಯತೇ ವೀರಃ ಸಹಸ್ರೇಷು ಚ ಪಂಡಿತಃ | ವಕ್ತಾದಶಸಹಸ್ರೇಷು ದಾತಾಭವತಿ ಮಾನವಾ ॥

ಎಂದೂ ಪುರಾತನೋಕ್ತಿಗಳುಂಟು. ಚಿತ್ಸುಧಾರಸಭರಿತಾಂತರಂಗ= ಚಿದಾಕಾಶ ದಿಂದುಂಟಾದ ಅಮೃತರಸದಿಂದ ತುಂಬಿದ ಮನಸ್ಸುಳ್ಳಂಥ. (ವಿಚಾರ) ಈ ಚಿದ್ರೂಪಾಮೃತರಸವು ಬಹಿರಂಗದಲ್ಲಿ ತುಂಬಿರುವದಿಲ್ಲವೇನು? ಅಂದರೆ ಬಹಿರಂಗವೂ ಚಿದ್ರೂಪಮಯವಾದದ್ದು. “ಮನ ಏವ ಮನುಷ್ಯಾಣಾಂ ಕಾರಣಂ” ಎಂಬಂತೆ ವೃಕ್ಷದ ಬೊಡ್ಡೆಗೆ ಹಾಕಿದ ನೀರು ಶಾಖೋಪಶಾಖೆಗಳಲ್ಲಿ ವ್ಯಾಪಿಸಿ ಪಲ್ಲವಿಸಿ ಫಲವೀಯುವಂತೆ, ಶಿವಾಕಾರವಾದ ಮನಸ್ಸಿನ ಆನಂದಾಮೃತವು ಬಹಿರಂಗದ ಇಂದ್ರಿಯಾದಿಗಳಲ್ಲಿ ವ್ಯಾಪಕವಾಗಿರುವದೆಂಬ ಭಾವವು. ಸಕಲಾಕ್ಷ ಸಮರ್ಪಿತ ಲಿಂಗ = ಸರ್ವೆಂದ್ರಿಯಂಗಳನ್ನು ಅರ್ಪಿಸಲ್ಪಟ್ಟ ಇಷ್ಟಲಿಂಗವುಳ್ಳಂಥ, (ವಿಚಾರ) ಎಲ್ಲ ಇಂದ್ರಿಯಂಗಳನ್ನು ಇಷ್ಟಲಿಂಗದ ಸೇವೆಯಲ್ಲಿ ತತ್ಪರತೆಯುಳ್ಳವುಗಳನ್ನಾಗಿ ಮಾಡಿದವನು. ಅರ್ಥಾತ್ ಚನ್ನಬಸವೇಶ್ವರದೇವರು ಅಥವಾ ಷಟ್‌ಸ್ಥಲ ಜ್ಞಾನಿಗಳು ಷಡಿಂದ್ರಿಯಗಳನ್ನು ಲಿಂಗದಲ್ಲಿ ಸಂಬಂಧಿಸಿ, ಆ ಲಿಂಗಮೂರ್ತಿಯನ್ನು ಆರು ಇಂದ್ರಿಯಂಗಳಲ್ಲಿ ಸಂಬಂಧ ಮಾಡಿದವರು. ಘಟದ ಬಹಿರ್ಭಾಗದಲ್ಲಿ ಸಂಬಂಧಿಸಿದ ಅಗ್ನಿಯಿಂದ ಘಟದೊಳಗಿರುವ ನೀರು ಕೂಡಿದ ಅಕ್ಕಿಯು ಪರಿಪಕ್ವ ಅನ್ನವಾದಂತೆ ಇಷ್ಟಲಿಂಗದಲ್ಲಿ ಸಂಬಂಧಿಸಿದ ಇಂದ್ರಿಯಂಗಳ ಸತ್ಕ್ರಿಯಾ ಪರಿಣಾಮವು ಅಂತರಂಗಕ್ಕೆ ವ್ಯಾಪಿಸುವದೆಂಬ ಭಾವವು. ಶಿವಶರಣರು ಭೂತಾಂಶವನ್ನು ಪೂತಾಂಶವನ್ನಾಗಿ ಮಾಡುವರೆಂಬ ಭಾಷಾಪ್ರಬಂಧದ (ವಚನಶಾಸ್ತ್ರ) ಅಭಿಪ್ರಾಯ. ತತ್ಪ್ರಸಾದಸುಖ ವಿಶೇಷತೃಪ್ತ = ಆ ಲಿಂಗಪ್ರಸಾದ ಸುಖದಿಂದ ಹೆಚ್ಚಿನ  ತೃಪ್ತಿಯನ್ನು ಹೊಂದಿದಂಥ, (ವಿಚಾರ)

ಶಿವಶರಣನು ಲಿಂಗಭೋಗೋಪಭೋಗಿಯಾಗಿರುವನು. ಹೇಗೆಂದರೆ, ಸತ್ಕಾಯಕದಿಂದ ಸಂಪಾದಿಸಿ ತಯಾರಿಸಲ್ಪಟ್ಟ ಶುದ್ಧ ಪದಾರ್ಥವನ್ನು ವಿಶುದ್ಧಗೊಳಿಸಿ, ಇಷ್ಟ ಪ್ರಾಣ ಭಾವ ಈ ಮೂರು ಲಿಂಗಗಳಿಗೆ ರೂಪು ರುಚಿ ತೃಪ್ತಿಗಳನ್ನು ಕ್ರಮವಾಗಿ ಅರ್ಪಿಸಿ, ಆ ಅರ್ಪಿತ ಶಿವಸುಖಮಯವಾದ ಶುದ್ಧ ಸಿದ್ಧ  ಪ್ರಸಿದ್ಧವೆಂಬ ಪ್ರಸಾದವನ್ನು ತಾನು ಅನುಭವಿಸುವದೇ ವಿಶೇಷ ತೃಪ್ತಿಯೆನಿಸುವದು. ವಿಶೇಷ ತೃಪ್ತನೆನ್ನುವಲ್ಲಿ ಲಿಂಗರೂಪಿಯಾದ ಶಿವನಿಗೆ ಪದಾರ್ಥಗಳಿಂದ ತೃಪ್ತಿಯಾಗುವದು ಶರಣನಿಗೆ ಶಿವಾನುಗ್ರಹರೂಪ ನಿತ್ಯಾನಂದಮಯವಾದ ಪ್ರಸಾದ  ಸೇವನೆಯಿಂದ ವಿಶೇಷ ತೃಪ್ತಿಯಾಗುವದು.

ನರರು ಮಾಯಾಮಯವಾದ ಪ್ರಾಕೃತ ಪದಾರ್ಥಗಳನ್ನು ಭುಂಜಿಸಿ ಕ್ಷಣಿಕಾ ನಂದವನ್ನು ಹೊಂದಿದ ತೃಪ್ತಿಗಿಂತಲೂ ಅತ್ಯಧಿಕವಾದ ಶಿವಪ್ರಸಾದ ತೃಪ್ತಿಯನ್ನು ಶರಣನು ಹೊಂದುವದರಿಂದ ವಿಶೇಷ ತೃಪ್ತನೆಂಬುದರ್ಥ. ಉದಾಹರಣೆ –

ಆನೆಯು ಅಕ್ಕಿಯನ್ನು ತಿಂದು ತೃಪ್ತಿಯನ್ನು ಹೊಂದುವದಕ್ಕಿಂತಲೂ, ಅದೇ ಅಕ್ಕಿಯನ್ನೇ ಮನುಷ್ಯನು ಅಗ್ನಿ ಸಂಸ್ಕಾರದಿಂದ ಪಾಕಮಾಡಿಕೊಂಡು ಭುಂಜಿಸುವದು ವಿಶೇಷ ತೃಪ್ತಿಯೆನಿಸಿದಂತೆ, ಅಥವಾ ಆನೆಯಾಗಿ ಕಬ್ಬು ಮೇಯುವದಕ್ಕಿಂತ ಇರುವೆಯಾಗಿ ಸಕ್ಕರೆ ಮೇಯುವದು ಲೇಸೆಂಬ ಗಾದೆಯಂತೆ ಶರಣನ ವಿಶೇಷ ತೃಪ್ತಿ ಇರುವದು. ಶಿವಯೋಗಪದೈಕ ಸಮಾಪ್ತ= ಶಿವಯೋಗ ಪದವನ್ನು ಮುಖ್ಯವಾಗಿ ಪೂರ್ಣಮಾಡಿದಂಥ. (ವಿಚಾರ) =

ಅರಿವು, ಅನುಸಂಧಾನ, ವ್ರತ, ಆರ್ಚನೆಗಳೆಂಬ ಐದು ಅಂಗಗಳಿಂದ ಕೂಡಿದುದೇ ಶಿವಯೋಗವು, ಅಥವಾ ಮಂತ್ರಾದಿ ಪಂಚಯೋಗಗಳಿಂದ ಕೂಡಿದ್ದು ಶಿವಯೋಗವು ಎಂಬದಾಗಿ ವೇದಾಗಮಗಳಲ್ಲಿ ಹೇಳಲ್ಪಟ್ಟಿರುವದರಿಂದ, ಷಟ್‌ಸ್ಥಲ ಜ್ಞಾನಿಗಳಾದ ಶಿವಭಕ್ತರು ಅಥವಾ ಚನ್ನಬಸವೇಶ್ವರ ದೇವರು ಇಂಥ ಶಿವಯೋಗಾಂಗಗಳನ್ನೆಲ್ಲ ಸಾಂಗವಾಗಿ ಅರಿದು ಅರಿದಂತಾಚರಿಸಿ ಪೂರ್ಣಸಿದ್ಧತೆಯನ್ನು ಹೊಂದಿದವರೆಂಬ ಸಾರಾಂಶವು, ಕೃಪಾನಿಧಿಯೇ= ದಯಾಸಮುದ್ರನೇ, ಅಂದರೆ ಜಗತ್ತನ್ನು ಉದ್ಧರಿಸುವಲ್ಲಿ ಅಪಾರವಾದ (ಅಳತೆಮೀರಿದ) ಕೃಪೆಯುಳ್ಳವನೆಂಬುದರ್ಥ. ಜೀಯಾ=ಒಡೆಯನೇ ಅಂದರೆ ಮೇಲೆ ಹೇಳಿದ ಅಪಾರವಾದ ಕೃಪೆಯೇ ಮೊದಲಾದ ಚಿತ್ಪ್ರಕಾಶ’ಸ್ಥಿತಿಯೇ ಪೂರ್ಣಾಂಗಗೊಂಡ ಮಹಿಮನೇ ನಿಜವಾದ ಒಡೆಯನು. ಆತನೇ ಪೂಜ್ಯನೆಂಬ ಭಾವವು. ಚನ್ನಬಸವಯ್ಯ= ಚನ್ನಬಸವಯ್ಯನೆಂಬ ಹೆಸರುಳ್ಳ ಅಂದರೆ = ಚಿದ್ರೂಪದಿಂದುಂಟಾದ ಚಲ್ವಿಕೆಯುಳ್ಳಂಥ ಚಿನ್ನಾದ ಚಿದ್ಬಿಂದು ಚಿತ್ಕಲಾಧೀಶ್ವರನೆಂಬ ತಾತ್ಪರ್ಯವು. ನೀನೆ ರಕ್ಷಿಸುಗಡ=ನೀನೆ ಕಾಪಾಡು ಕಂಡೆಯಾ. (ಶಂಕಾ) ಇಲ್ಲಿ ಬಸವೇಶ್ವರ ಪ್ರಭುದೇವ ರೇಣುಕ ದಾರುಕ ಮುಂತಾದ ಪ್ರಮಥವರರ ತಿರಸ್ಕಾರವು ಕಂಡುಬರುವದೆಂದರೆ (ಸಮಾಧಾನ) ನೀನೆ ಎಂದು ಹೇಳುವಲ್ಲಿ ಶಿವಸ್ವರೂಪಿ ಚನ್ನಬಸವೇಶ್ವರದೇವರೆಂದು ಅರ್ಥಗರ್ಭಿತವಾಗಿರುವದು. ಅದು ಕಾರಣ ಎಲ್ಲ ಪ್ರಮಥರೂ ಶಿವಸ್ವರೂಪಿಗಳಾಗಿರುವದರಿಂದ ಪ್ರಮಥತಿರಸ್ಕಾರವಾಗದೆಂಬ ತಾತ್ಪರ್ಯವು. ಉದಾಹರಣೆ – ಚಿನ್ನವು ಆಭರಣತೆಯಿಂದ ಭೇದಾಭೇದವಾಗಿ ತೋರಿದಂತೆ ಚನ್ನಬಸವೇಶ್ವರನಿಗೂ ಮಿಕ್ಕ ಪ್ರಮಥರಿಗೂ ಅವತಾರರೂಪ ವ್ಯಕ್ತಿಮಾತ್ರದಿಂದ ಭೇದವೂ ಶಿವಸ್ವರೂಪ ನಿಜಸ್ಥಿತಿಯಿಂದ ಅಭೇದವೂ ಉಂಟೆಂಬಭಿಪ್ರಾಯವು.

 

೨೫–೦೧–೨೦೨೬ರ ಪವಿತ್ರ ರಥಸಪ್ತಮಿ ದಿನದಂದು, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಸಂಸ್ಥಾಪಿಸಿದ ಶ್ರೀ ಶಿವಯೋಗಮಂದಿರವು ತನ್ನ ೧೧೭ನೇ ಸಂಸ್ಥಾಪನಾ ದಿನವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಿತು. ಈ ಐತಿಹಾಸಿಕ ಸಂದರ್ಭದಲ್ಲಿ, ಶಿವಯೋಗ ಪರಂಪರೆಯ ಬೆಳವಣಿಗೆಯಲ್ಲಿ ಅನನ್ಯ ಪಾತ್ರವಹಿಸಿದ ಮಹಾನ್ ವಿದ್ವಾಂಸರ ಸ್ಮರಣೆ ಸ್ವಾಭಾವಿಕವಾಗಿ ಮನಸ್ಸನ್ನು ಆವರಿಸುತ್ತದೆ.

೧೯೦೯ರಲ್ಲಿ ಪರಮಪೂಜ್ಯ ಚಿತ್ತರಗಿಯ ಇಲಕಲ್ಲ ಶ್ರೀ ವಿಜಯ ಮಹಾಂತ ಶಿವಯೋಗಿಗಳು ಗುರುತಿಸಿದ ಪವಿತ್ರ ಸ್ಥಳದಲ್ಲೇ, ಶ್ರೀ ಶಿವಯೋಗಮಂದಿರದ ಶಿಲಾವಿನ್ಯಾಸ ಸಮಾರಂಭ ನಡೆಯಿತು.

ಈ ಮಹತ್ವದ ಧಾರ್ಮಿಕ ವಿಧಿವಿಧಾನವನ್ನು, ಬಳ್ಳಾರಿಯ ಶ್ರೀ ಸಕ್ಕರೆ ಕರಡೆಪ್ಪನವರ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ”ಯ  ಪೂಜ್ಯರ ಸಹಪಾಠಿಯಾಗಿದ್ದ ಕಂದಗಲ್ಲಿನ ಪಂಡಿತ ಪರ್ವತ ಶಾಸ್ತ್ರಿಗಳು, ಪೂಜ್ಯರ ಅಪ್ಪಣೆಯಂತೆ ಮಾಘಮಾಸದ ರಥಸಪ್ತಮಿ ತಿಥಿಯಲ್ಲಿ ಪೌರೋಹಿತ್ಯ ವಹಿಸಿ ನೆರವೇರಿಸಿದರು. ಈ ಘಟನೆ, ಶಿವಯೋಗ ಪರಂಪರೆಯೊಂದಿಗೆ ಅವರ ಆಳವಾದ ಬಾಂಧವ್ಯವನ್ನು ,ಅವರ ಪ್ರಾಮಾಣಿಕ ನಿಷ್ಠೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಮಹಾಮೇಧಾವಿಗಳಾಗಿದ್ದ ಕಂದಗಲ್ಲಿನ ಪಂಡಿತ ಪರ್ವತ ಶಾಸ್ತ್ರಿಗಳು ನಿಜಾರ್ಥದಲ್ಲಿ ‘ವಿದ್ಯಾ ಪರ್ವತ’ವೇ ಆಗಿದ್ದರು. ಸಂಸ್ಕೃತ ಭಾಷೆಯಲ್ಲಿ ಅಪಾರ ಪ್ರಭುತ್ವ ಸಾಧಿಸಿದ್ದ ಅವರು, ಅನೇಕ ಸಂಸ್ಕೃತ ಕೃತಿಗಳನ್ನು ರಚಿಸುವ ಮೂಲಕ ತಮ್ಮ ಆಳವಾದ ಪಾಂಡಿತ್ಯ, ತಾತ್ವಿಕ ದೃಷ್ಟಿ ಮತ್ತು ಶಾಸ್ತ್ರೀಯ ಶಿಸ್ತುಗಳನ್ನು ಪ್ರಕಟಿಸಿದ್ದಾರೆ. ಅವರ ಬರಹಗಳಲ್ಲಿ ಭಾಷೆಯ ಸೌಂದರ್ಯ ಮಾತ್ರವಲ್ಲದೆ, ಯೋಗ, ಶೈವಸಿದ್ಧಾಂತ ಮತ್ತು ಆತ್ಮಾನುಭವದ ಸುಗಂಧವೂ ಸ್ಪಷ್ಟವಾಗಿ ಅನುಭವವಾಗುತ್ತದೆ.

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳಿಗೆ ಲಭಿಸಿದ “ವಿದ್ಯಾ ಪರ್ವತ” ಎಂಬ ಉಪನಾಮವು ಕೇವಲ ಗೌರವ ಸೂಚಕ ಪದವಿಯಲ್ಲ; ಅದು ಅವರ ಜೀವನ, ಸಾಧನೆ ಮತ್ತು ತಾತ್ವಿಕ ಸ್ಥಿತಿಯನ್ನು ಸಾರುವ ಆಳವಾದ ರೂಪಕವಾಗಿದೆ. ಪರ್ವತ ಎಂಬುದು ಭಾರತೀಯ ಚಿಂತನಾ ಪರಂಪರೆಯಲ್ಲಿ ಸ್ಥೈರ್ಯ, ಗಂಭೀರತೆ, ಸ್ಥಿರತೆ ಮತ್ತು ಶಾಶ್ವತತೆಯ ಸಂಕೇತ. ಅದಕ್ಕೆ ವಿದ್ಯೆ ಎಂಬ ಶಬ್ದವು ಸೇರಿದಾಗ, ಈ ಉಪನಾಮವು ತಾತ್ವಿಕವಾಗಿ ಇನ್ನಷ್ಟು ವಿಶಾಲಾರ್ಥವನ್ನು ಪಡೆಯುತ್ತದೆ.

“ವಿದ್ಯಾ ಪರ್ವತ” ಎಂಬ ಪದವು ಮತ್ತೊಂದು ಅರ್ಥವನ್ನೂ ಹೊರುತ್ತದೆ. ಪರ್ವತವು ನದಿಗಳಿಗೆ ಮೂಲವಾಗುವಂತೆ, ಪರ್ವತ ಶಾಸ್ತ್ರಿಗಳ ವಿದ್ಯೆ ಅನೇಕ ಶಿಷ್ಯರು, ಜಿಜ್ಞಾಸುಗಳು ಮತ್ತು ಸಮಾಜದ ಗಣ್ಯರಿಗೆ ಜ್ಞಾನಧಾರೆಯಾಗಿ ಹರಿಯಿತು. ಅವರ ಉಪನ್ಯಾಸಗಳು, ಜ್ಞಾನಸತ್ರಗಳು ಮತ್ತು ತಾತ್ವಿಕ ಚರ್ಚೆಗಳು ಅನೇಕರ ಮನಸ್ಸಿನ ಸಂಶಯಗಳನ್ನು ನಿವಾರಿಸಿ, ಬೌದ್ಧಿಕ ಸ್ಪಷ್ಟತೆಯನ್ನು ನೀಡಿದವು. ಅಂದರೆ ಅವರು ವಿದ್ಯೆಯ ಸಂಗ್ರಹ ಮಾತ್ರವಲ್ಲ; ವಿದ್ಯೆಯ ಪ್ರಸರಣದ ಕೇಂದ್ರವಾಗಿದ್ದರು.

ಇನ್ನೊಂದು ತಾತ್ವಿಕ ಆಯಾಮದಲ್ಲಿ ನೋಡಿದರೆ, ಪರ್ವತ ಎಂದರೆ ಆಶ್ರಯ. ದಾರಿ ತಪ್ಪಿದವರಿಗೆ ದಿಕ್ಕು ತೋರಿಸುವ ಸಂಕೇತ. ಪರ್ವತ ಶಾಸ್ತ್ರಿಗಳು ತಮ್ಮ ಕಾಲದಲ್ಲಿ ಧಾರ್ಮಿಕ ಗೊಂದಲಗಳು, ಸಾಮಾಜಿಕ ವಿವಾದಗಳು ಮತ್ತು ತಾತ್ವಿಕ ಸಂಶಯಗಳ ಮಧ್ಯೆ ನಿಂತು, ಶಾಸ್ತ್ರಾಧಾರಿತ ಸ್ಪಷ್ಟತೆಯನ್ನು ನೀಡಿದರು. ಪರಳಿ ಪ್ರಕರಣದಂತಹ ಸಂದರ್ಭಗಳಲ್ಲಿ ಅವರು ಸಮಾಜಕ್ಕೆ ಆಧಾರವಾಗಿ ನಿಂತರು. ಈ ಅರ್ಥದಲ್ಲಿಯೂ ಅವರು “ವಿದ್ಯಾ ಪರ್ವತ” — ಆಶ್ರಯದ ವಿದ್ಯೆ.

ಹೀಗಾಗಿ “ವಿದ್ಯಾ ಪರ್ವತ” ಎಂಬ ಉಪನಾಮವು ಪರ್ವತ ಶಾಸ್ತ್ರಿಗಳ ವ್ಯಕ್ತಿತ್ವದ ಮೂರು ಮೂಲ ಆಯಾಮಗಳನ್ನು ಸೂಚಿಸುತ್ತದೆ:
ಸ್ಥಿರವಾದ ಜ್ಞಾನ, ಪ್ರಸರಣಶೀಲವಾದ ಬೋಧನೆ ಮತ್ತು ಅನುಭವದಲ್ಲಿ ಲೀನವಾದ ತತ್ತ್ವಸಾಧನೆ. ಈ ಮೂರೂ ಒಂದಾಗಿ ಸೇರಿ, ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳನ್ನು ವೀರಶೈವ ತತ್ತ್ವಪರಂಪರೆಯ ಅಳಿಯದ ಶಿಖರವಾಗಿ ಸ್ಥಾಪಿಸುತ್ತವೆ.

ಪಂಡಿತ ಪರ್ವತ ಶಾಸ್ತ್ರಿಗಳ ಜನ್ಮಸ್ಥಳ ಕಂದಗಲ್ಲು. ಈ ಗ್ರಾಮ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿದೆ. ಅವರು ಅಲ್ಲಿನ ಶೀಲವಂತ ಮಠದ ಪರಂಪರೆಗೆ ಸೇರಿದವರು. ಪರ್ವತ ಶಾಸ್ತ್ರಿಗಳ ತಾಯಿ ನೀಲಮ್ಮಾ, ತಂದೆ ಶಿವಬಸವ ಶಾಸ್ತ್ರಿಗಳು. ಶ್ರೀಮನೃಪಶಾಲಿವಾಹನ ಶಕೆ ೧೭೭೬ರಲ್ಲಿ (ಕ್ರಿ.ಶ. ೧೮೫೪) ಅವರು ಜನಿಸಿದರೆಂದು ತಿಳಿದುಬರುತ್ತದೆ. ಅವರ ಧರ್ಮಪತ್ನಿ ಬಸವಮ್ಮಾ. ಈ ದಂಪತಿಗಳಿಗೆ ಚನ್ನವೀರ ಶಾಸ್ತ್ರಿ ಮತ್ತು ನೀಲಮ್ಮಾ ಎಂಬ ಇಬ್ಬರು ಮಕ್ಕಳು.

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಂದಗಲ್ಲಿನಲ್ಲಿಯೇ ಪೂರ್ಣಗೊಳಿಸಿ, ಪ್ರೌಢಶಿಕ್ಷಣಕ್ಕಾಗಿ ಬಳ್ಳಾರಿಯಲ್ಲಿ ಸಕ್ಕರಿ ಕರಡೆಪ್ಪನವರಿಂದ ಸ್ಥಾಪಿತವಾಗಿದ್ದ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ”ಯಲ್ಲಿ ಪ್ರವೇಶ ಪಡೆದರು. ಈ ಪಾಠಶಾಲೆಯೇ ಅವರ ಜೀವನದ ಬೌದ್ಧಿಕ ರೂಪುಗೊಳಿಕೆಗೆ ಗಟ್ಟಿಯಾದ ನೆಲೆಯಾಗಿ ಪರಿಣಮಿಸಿತು.

ಮೂಲತಃ ಹತ್ತಿ ವ್ಯಾಪಾರಿಯಾಗಿದ್ದರೂ, ವೀರಶೈವ ಲಿಂಗಾಯತ ಸಮುದಾಯದ ಶ್ರೇಷ್ಠ ಸಮಾಜಸೇವಕರಾಗಿದ್ದ ಕರಡೆಪ್ಪನವರು ಬ್ರಿಟಿಷ್ ಸರ್ಕಾರದಿಂದ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗಳು ಹಾಗೂ ಟೆಲಿಗ್ರಾಫ್ ಕಂಬಗಳ ಜೋಡಣೆ ಮುಂತಾದ ಗುತ್ತಿಗೆಗಳನ್ನು ಪಡೆದಿದ್ದರು. ೧೮೬೬ರಲ್ಲಿ ಬಳ್ಳಾರಿ ಪ್ರದೇಶದಲ್ಲಿ ಭೀಕರ ಬರಗಾಲ ಉಂಟಾದ ಸಂದರ್ಭದಲ್ಲಿ, ತಮ್ಮ ಸ್ವಂತ ಹಣದಿಂದ ಹಲವು ತಿಂಗಳುಗಳ ಕಾಲ ಸಾವಿರಾರು ಜನರಿಗೆ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿ ಮಾನವೀಯತೆಯ ದೀಪವಾಗಿ ನಿಂತರು. ಸಮಾಜಸೇವಕ, ದಾನಿ ಹಾಗೂ ಶಿಕ್ಷಣಪ್ರೇಮಿಯಾಗಿದ್ದ ಕರಡೆಪ್ಪನವರ ಸೇವೆಯನ್ನು ಗೌರವಿಸಿ ಬ್ರಿಟನ್ ರಾಣಿಯವರು ಅವರಿಗೆ “ರಾವ್ ಬಹಾದೂರ್” ಎಂಬ ಗೌರವ ಪ್ರಶಸ್ತಿಯನ್ನು ನೀಡಿದ್ದರು.

ಕರಡೆಪ್ಪನವರ ಮಹತ್ವದ ಕೊಡುಗೆಗಳಲ್ಲಿ ಪ್ರಮುಖವಾದುದು—ಕನ್ನಡ ನಾಡಿನ ಮೊದಲ ಸಂಸ್ಕೃತ ಪಾಠಶಾಲೆಯೊಂದನ್ನು ಸ್ಥಾಪಿಸಿ, ಬ್ರಾಹ್ಮಣೇತರರಿಗೂ ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ ಧೈರ್ಯಶಾಲಿ ಸಾಮಾಜಿಕ ಕ್ರಮ. ಅವರು ವಿಭೂತಿ ಕಣಜವನ್ನು ನಿರ್ಮಿಸಿ, ಅದರ ಮೂಲಕ ಶಾಶ್ವತ ನಿಧಿಯನ್ನೂ ಸಂಗ್ರಹಿಸಿದ್ದರು. ಕರಡೆಪ್ಪನವರ ಮೂಲ ಹೆಸರು ಸಕ್ಕರಿ ಬಸಪ್ಪ. ಬಾಲ್ಯದಲ್ಲಿಯೇ ಅವರಲ್ಲಿದ್ದ ಅಪಾರ ಸೇವಾಭಾವವನ್ನು ಗುರು ಮರಿಸ್ವಾಮಿಗಳು ಗಮನಿಸಿ, “ಈತ ತನ್ನ ಮತವನ್ನು, ಗುರು–ಲಿಂಗ–ಜಂಗಮವನ್ನು ಕರಡಿಯಂತೆ ತಬ್ಬಿಕೊಳ್ಳುವನು” ಎಂದು ಆಶೀರ್ವದಿಸಿ ‘ಕರಡಿ’ ಎಂದು ಕರೆಯಲಾರಂಭಿಸಿದರು. ಮುಂದೆ ಅದೇ ಹೆಸರು ಅವರ ಗುರುತಾಗಿಬಿಟ್ಟಿತು.

ಇಂತಹ ಮಹಾನುಭಾವಿ ಶರಣ ಕರಡೆಪ್ಪನವರು ಸ್ಥಾಪಿಸಿದ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ” ಸಂಸ್ಕೃತ ಮತ್ತು ಕನ್ನಡ ವಾಙ್ಮಯದ ಸಮೃದ್ಧ ಸಿರಿಯನ್ನು ವಿದ್ಯಾರ್ಥಿ ವೃಂದಕ್ಕೆ ಹಂಚುವ ಮಹತ್ವದ ಕೇಂದ್ರವಾಗಿತ್ತು. ಸದಾಚಾರ, ಶಿಸ್ತು ಮತ್ತು ವಿದ್ಯಾಸಂಪತ್ತಿಯನ್ನು ಸಂಪಾದಿಸಲು ನಮ್ಮ ನಾಡಿನ ನಾನಾಭಾಗಗಳಿಂದ ಅನೇಕ ಚರವರ್ಯರು, ಪಂಡಿತರು ಮತ್ತು ಶಾಸ್ತ್ರಿಗಳು ತಂಡೋಪತಂಡವಾಗಿ ಈ ಪಾಠಶಾಲೆಗೆ ಆಗಮಿಸುತ್ತಿದ್ದರು.

ಉಜ್ಜಯಿನಿಯ ಜಗದ್ಗುರು ಚನ್ನ ಬಸವದೇಶಿಕೇಂದ್ರ ಸ್ವಾಮಿಗಳು, ಚಿತ್ರರಗಿ–ಇಳಕಲ್ಲದ ವಿಜಯ ಮಹಾಂತಸ್ವಾಮಿಗಳು, ಬಳ್ಳಾರಿಯ ಜಗದ್ಗುರು ಕೊಟ್ಟೂರ ಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಶಿವಬಸವ ಸ್ವಾಮಿಗಳು ಮೊದಲಾದವರು ಪಂಡಿತ ಪರ್ವತ ಶಾಸ್ತ್ರಿಗಳ ಸಹಪಾಠಿಗಳಾಗಿದ್ದರು. ಈ ವಿದ್ಯಾವಂತ ಸಮೂಹದ ಮಧ್ಯೆಯೂ ಪಂಡಿತ ಪರ್ವತ ಶಾಸ್ತ್ರಿಗಳು ಅತ್ಯಂತ ಮೇಧಾವಿಗಳೆಂದೂ, ಕವಿ ಪ್ರತಿಭಾಸಂಪನ್ನರೆಂದೂ ವಿಶೇಷ ಗೌರವ ಪಡೆದಿದ್ದರು. ಇದೇ ಪಾಠಶಾಲೆಯಲ್ಲಿ ಅವರು ಕನ್ನಡ, ಸಂಸ್ಕೃತ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಪ್ರತಿಮ ಪರಿಣತಿಯನ್ನು ಗಳಿಸಿ, ಮುಂದಿನ ತಾತ್ವಿಕ–ಸಾಹಿತ್ಯಿಕ ಸಾಧನೆಗೆ ದೃಢವಾದ ಅಡಿಪಾಯವನ್ನು ಹಾಕಿಕೊಂಡರು.

ಬಳ್ಳಾರಿಯ ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಪೂರ್ಣಗೊಳಿಸಿದ ಬಳಿಕ, ಪಂಡಿತ ಪರ್ವತ ಶಾಸ್ತ್ರಿಗಳು ಸ್ವಗ್ರಾಮವಾದ ಕಂದಗಲ್ಲಿಗೆ ಮರಳಿ ಕೆಲಕಾಲ ಅಲ್ಲಿಯೇ ವಾಸಿಸಿದರು. ನಂತರ ಜೀವನದ ಮುಂದಿನ ಹಂತದಲ್ಲಿ ಅವರು ರಾಯಚೂರು ಜಿಲ್ಲೆಯ ಗೆಜ್ಜಲಗಟ್ಟಿಯನ್ನು ತಮ್ಮ ವಾಸಸ್ಥಾನವಾಗಿ ಆರಿಸಿಕೊಂಡರು. ಆದರೆ ಜೀವನದ ಅಂತಿಮ ಕ್ಷಣಗಳಲ್ಲಿ ಪುನಃ ತಮ್ಮ ಜನ್ಮಭೂಮಿಯನ್ನೇ ಸ್ಮರಿಸಿ, ಕಂದಗಲ್ಲ ಗ್ರಾಮಕ್ಕೆ ಮರಳಿ ಅಲ್ಲಿಯೇ ಶಿವೈಕ್ಯರಾದರು. ಇಂದಿಗೂ ಅವರ ಸಮಾಧಿ ಕಂದಗಲ್ಲ ಗ್ರಾಮದಲ್ಲಿಯೇ ಇರುವುದರಿಂದ, ಆ ಸ್ಥಳವು ಅವರ ಜೀವನ–ಸಾಧನೆಯ ಶಾಶ್ವತ ಸ್ಮಾರಕವಾಗಿ ಉಳಿದಿದೆ.

ಪರಮ ಮಹಿಮಶಾಲಿಗಳೂ, ತಪಸ್ವಿಗಳೂ ಆಗಿದ್ದ ಚಿತ್ತರಗಿ–ಇಳಕಲ್ಲ ಮಠದ ವಿಜಯ ಮಹಾಂತರು, ಪರ್ವತ ಶಾಸ್ತ್ರಿಗಳ ಸಹಪಾಠಿಗಳಾಗಿದ್ದರು. ಪರ್ವತ ಶಾಸ್ತ್ರಿಗಳ ಅಪಾರ ಪಾಂಡಿತ್ಯ, ತಾತ್ವಿಕ ಆಳ ಮತ್ತು ವಿದ್ಯಾ ಪ್ರಭಾಪುಂಜದಿಂದ ಆಳವಾಗಿ ಪ್ರಭಾವಿತರಾದ ವಿಜಯ ಮಹಾಂತರು, ಹುನಗುಂದ ಮಠದಲ್ಲಿ ಸ್ಥಾಪಿತವಾಗಿದ್ದ ಸಂಸ್ಕೃತ ಪಾಠಶಾಲೆಗೆ ಪಂಡಿತ ಪರ್ವತ ಶಾಸ್ತ್ರಿಗಳನ್ನು ಪ್ರಧಾನ ಅಧ್ಯಾಪಕರಾಗಿ ನೇಮಿಸಿಕೊಂಡರು. ಈ ನೇಮಕವು ಕೇವಲ ಆಡಳಿತಾತ್ಮಕ ತೀರ್ಮಾನವಲ್ಲದೆ, ವಿದ್ಯೆಗೆ ನೀಡಿದ ಗೌರವದ ಸ್ಪಷ್ಟ ಪ್ರತಿಬಿಂಬವಾಗಿತ್ತು.

ಪಂಡಿತರು ಸುಗಮವಾಗಿ ವಿದ್ಯಾದಾನದಲ್ಲಿ ತೊಡಗಿಸಿಕೊಳ್ಳುವಂತೆ ಅಗತ್ಯವಿದ್ದ ಎಲ್ಲ ಸೌಲಭ್ಯಗಳನ್ನು ವಿಜಯ ಮಹಾಂತರು ಒದಗಿಸಿದರು. ಅದಲ್ಲದೆ, ಸಂಭಾವನಾರೂಪವಾಗಿ ಪ್ರತಿವರ್ಷ ಐದು ನೂರು ರೂಪಾಯಿಗಳ ಗೌರವ ವೇತನವನ್ನು ದಯಪಾಲಿಸುತ್ತಿದ್ದರು. ಪಂಡಿತರು ಸೇವೆಯಿಂದ ನಿವೃತ್ತಿಹೊಂದಿದ ನಂತರವೂ, ಆ ಗೌರವ ವೇತನವನ್ನು ಆಜೀವಪರ್ಯಂತ ತಪ್ಪದೆ ನೀಡಿದ್ದು, ಗುರು–ಶಿಷ್ಯ ಪರಂಪರೆಯ ಅಪರೂಪದ ಉದಾಹರಣೆಯಾಗಿದೆ. ಪರ್ವತ ಶಾಸ್ತ್ರಿಗಳು ಈ ಅನುಗ್ರಹವನ್ನು ಭಕ್ತಿ ಮತ್ತು ಕೃತಜ್ಞತೆಯೊಂದಿಗೆ ಗುರುಕೃಪೆಯೆಂದು ಸ್ವೀಕರಿಸಿ, ತಮ್ಮ ವಿದ್ಯಾಸಾಧನೆಯನ್ನು ಇನ್ನೂ ಶ್ರದ್ಧೆಯಿಂದ ಮುಂದುವರಿಸಿದ್ದರು.

ಪೂಜ್ಯ ಇಳಕಲ್ಲ ವಿಜಯ ಮಹಂತರರು, ಗುಡದೂರ ದೊಡ್ಡಯ್ಯನವರು, ಸಂತೆಕೊಲ್ಲರ ಘನಮಠಾರ್ಯರು, ಸೊಲ್ಲಾಪುರದ ವೀರೇಶ್ವರ ಶರಣರು ಹಾಗೂ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಂತಹ ಮಹಾತ್ಮರ ಸನ್ನಿಧಿ ಮತ್ತು ಸಾನ್ನಿಧ್ಯದಿಂದ ಪಂಡಿತ ಪರ್ವತ ಶಾಸ್ತ್ರಿಗಳು ಶಿವಾನುಭವ ಶಾಸ್ತ್ರದ ಪರಮ ರಹಸ್ಯವನ್ನು ಆಳವಾಗಿ ಮನನ ಮಾಡಿಕೊಂಡಿದ್ದರು. ಈ ಮಹಾಪುರುಷರ ಸಂಪರ್ಕವು ಅವರ ತತ್ತ್ವಚಿಂತನೆಗೆ ದಿಕ್ಕು ನೀಡಿದ್ದು, ಅನುಭವ–ಅನುಸಂಧಾನದ ಮೂಲಕ ಶಿವತತ್ತ್ವವನ್ನು ಗ್ರಹಿಸುವ ದೃಷ್ಟಿಯನ್ನು ಮತ್ತಷ್ಟು ಪಕ್ವಗೊಳಿಸಿತು.

ಪರ್ವತ ಶಾಸ್ತ್ರಿಗಳ ಪಾಂಡಿತ್ಯ ಕೇವಲ ಗ್ರಂಥಪಾಠಕ್ಕೆ ಸೀಮಿತವಾಗಿರದೆ, ಸಮಾಜದ ವಿವಿಧ ವರ್ಗಗಳೊಂದಿಗೆ ನಡೆದ ತತ್ವಾರ್ಥ ಚರ್ಚೆಗಳ ಮೂಲಕ ಇನ್ನಷ್ಟು ವಿಸ್ತಾರಗೊಂಡಿತು. ಸರ್ವಶ್ರೀ ಕಂದಗಲ್ಲ ನಾಡಗೌಡರು, ಗೆಜ್ಜಲಗಟ್ಟಿ ಸಂಸ್ಥಾನದ ಜಹಗೀರದಾರ ವೆಂಕಟರಾಯರು, ತಾಳೀಕೋಟಿಯ ಶ್ರೀಮಂತರು, ವಿಶ್ವಕರ್ಮ ಸಮಾಜದ ದೇವಗಿರಿ ಲಕ್ಷ್ಮಯ್ಯನವರು, ಸಜ್ಜಲಗುಡ್ಡದ ಶರಣಮ್ಮನವರು, ಸೊಲ್ಲಾಪುರದ ವಾರದ ಮಲ್ಲಪ್ಪನವರು ಸೇರಿದಂತೆ ಸಮಾಜದ ಅನೇಕ ಗಣ್ಯರು ಪರ್ವತ ಶಾಸ್ತ್ರಿಗಳೊಂದಿಗೆ ತಾತ್ವಿಕ ಸಂವಾದಗಳಲ್ಲಿ ಭಾಗವಹಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು. ಈ ಚರ್ಚೆಗಳಲ್ಲಿ ಪರ್ವತ ಶಾಸ್ತ್ರಿಗಳ ಪ್ರಕಾಂಡ ಪಾಂಡಿತ್ಯ, ವಿಷಯವನ್ನು ಸರಳವಾಗಿ ನಿರೂಪಿಸುವ ಶೈಲಿ ಹಾಗೂ ವಾಗೈಖರಿಯ ಸೌಂದರ್ಯವನ್ನು ಮೆಚ್ಚಿ ಆನಂದಭರಿತರಾಗುತ್ತಿದ್ದರು.

ಪಂಡಿತ ಪರ್ವತ ಶಾಸ್ತ್ರಿಗಳು ಜ್ಞಾನವನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸದೇ, ಹೊಸಪೇಟೆ, ಹಂಪಿ, ಕೊಡಗಲಿ, ಲಿಂಗಸೂಗುರು, ಇಳಕಲ್ಲು ಮುಂತಾದ ಗ್ರಾಮಗಳಲ್ಲಿ ಜ್ಞಾನಸತ್ರಗಳನ್ನು ಏರ್ಪಡಿಸುತ್ತಾ, ಬಸವಪುರಾಣ ಪ್ರವಚನಗಳನ್ನು ಮಾಡುತ್ತಾ, ಜಿಜ್ಞಾಸುಗಳಿಗೆ ತತ್ತ್ವಬೋಧೆ ನೀಡುತ್ತಾ ನಮ್ಮ ನಾಡಿನ ನಾನಾ ಭಾಗಗಳಲ್ಲಿ ಪ್ರವಾಸ ಕೈಗೊಂಡರು. ಈ ಪ್ರವಚನಗಳು ಕೇವಲ ಧಾರ್ಮಿಕ ಉಪನ್ಯಾಸಗಳಾಗಿರದೆ, ಜನಸಾಮಾನ್ಯರ ಜೀವನಕ್ಕೆ ತಾತ್ವಿಕ ಸ್ಪಷ್ಟತೆ ನೀಡುವ ಅನುಭವಪಾಠಗಳಾಗಿದ್ದವು.

ಪರಳಿ ಪ್ರಕರಣದಲ್ಲಿ ಪಂಡಿತ ಪರ್ವತ ಶಾಸ್ತ್ರಿಗಳ ಪಾತ್ರ

ಪರಳಿ ಎಂಬುದು ಹೈದ್ರಾಬಾದ್ ಸಂಸ್ಥಾನದ ಮರಾಠಿ ಪ್ರದೇಶದಲ್ಲಿರುವ, ಇಂದಿನ ಪರಭಣಿ ಜಿಲ್ಲೆಯ ಸಣ್ಣ ಗ್ರಾಮ. ಇಲ್ಲಿ ಸ್ಥಿತವಾಗಿರುವ ವೈಜನಾಥ (ವೈದ್ಯನಾಥ) ದೇವಾಲಯವು ಅಪಾರ ಖ್ಯಾತಿಯನ್ನು ಹೊಂದಿದ್ದು, ಭಾರತದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ನೈಜನಾಥೇಶ್ವರ ಲಿಂಗವು ಅಲ್ಲಿ ಪ್ರತಿಷ್ಠಿತವಾಗಿದೆ. ಪ್ರಾಚೀನ ಕಾಲದಿಂದಲೂ ಈ ವೈಜನಾಥ ಲಿಂಗದ ಪೂಜಾದಿ ವ್ಯವಸ್ಥೆ ವೀರಶೈವ ಜನಾಂಗದ ಅಧೀನದಲ್ಲಿಯೇ ನಡೆದುಕೊಂಡು ಬಂದಿತ್ತು.

ಆದರೆ ಕಾಲಕ್ರಮೇಣ ಕೆಲ ಪರವಾದಿಗಳು, ವೀರಶೈವ ಸಮಾಜಕ್ಕೆ ವೈಜನಾಥ ಲಿಂಗಕ್ಕೆ ಅರ್ಚನೆ ಮಾಡುವ ಹಕ್ಕಿಲ್ಲವೆಂಬ ಅನುಮಾನವನ್ನು ಸೃಷ್ಟಿಸಿ, ಈ ವಿಷಯವನ್ನು ವಿವಾದದ ರೂಪಕ್ಕೆ ತಳ್ಳಿದರು. ಈ ಗಂಭೀರ ವಿವಾದವು ಕೊನೆಗೆ ಹೈದ್ರಾಬಾದ್ ಸಂಸ್ಥಾನದ ಉಚ್ಚನ್ಯಾಯಾಲಯವಾದ ‘ಉಮರ ಮಜಹಬಿ’ ನ್ಯಾಯಾಲಯದ ಮೆಟ್ಟಿಲೇರಿತು. ಇದು ಕೇವಲ ಧಾರ್ಮಿಕ ಹಕ್ಕಿನ ಪ್ರಶ್ನೆಯಷ್ಟೇ ಅಲ್ಲ; ವೀರಶೈವ ಸಮಾಜದ ಗೌರವ, ಪರಂಪರೆ ಮತ್ತು ಅಸ್ತಿತ್ವದ ಪ್ರಶ್ನೆಯಾಗಿ ರೂಪುಗೊಂಡಿತು.

ಈ ಪ್ರಕರಣದಲ್ಲಿ ವೀರಶೈವ ಸಮಾಜದ ಪರವಾಗಿ ಅಪಾರ ಆರ್ಥಿಕ ಸಹಾಯದ ಜೊತೆಗೆ, ವೀರಶೈವರಿಗೆ ವೈಜನಾಥ ಲಿಂಗವನ್ನು ಪೂಜಿಸುವ ಹಕ್ಕು ಶಾಸ್ತ್ರಸಮ್ಮತವಾಗಿಯೇ ಇದೆ ಎಂಬುದನ್ನು ಸಂಸ್ಕೃತ ಶಾಸ್ತ್ರಾಧಾರಗಳಿಂದ ಸಾಬೀತುಪಡಿಸುವ ಅಗತ್ಯವಿತ್ತು. ಇದಕ್ಕಾಗಿ ಉನ್ನತ ಮಟ್ಟದ ಸಂಸ್ಕೃತ ಪಾಂಡಿತ್ಯ, ಶಾಸ್ತ್ರೀಯ ಉದಾಹರಣೆಗಳು ಹಾಗೂ ಪ್ರಾಮಾಣಿಕ ವಿದ್ವಾಂಸರ ಸಹಕಾರ ಅತ್ಯಾವಶ್ಯಕವಾಗಿತ್ತು. ವೀರಶೈವ ಸಮಾಜದ ಮಾನರಕ್ಷಣೆಯ ಘಟ್ಟ ಇದಾಗಿತ್ತು.

ಈ ಸನ್ನಿವೇಶದಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ನೇತೃತ್ವವಹಿಸಿ, ಯಾವುದೇ ಬೆಲೆಯನ್ನಾದರೂ ತೀರಿಸಿ ಈ ಹೋರಾಟವನ್ನು ಜಯಿಸಲೇಬೇಕೆಂಬ ದೃಢನಿಶ್ಚಯದೊಂದಿಗೆ ಕಾರ್ಯೋನ್ಮುಖರಾದರು. ಪರವಾದಿಗಳು ಪುಣೆ ಮೊದಲಾದ ನಗರಗಳಿಂದ ಪ್ರಸಿದ್ಧ ಸಂಸ್ಕೃತ ಪಂಡಿತರನ್ನು ಕರೆಸಿಕೊಂಡಿದ್ದರೆ, ಹಾನಗಲ್ಲ ಶ್ರೀಗಳು ವೀರಶೈವ ಪಂಡಿತ ಮಂಡಳಿಯನ್ನೇ ಸಂಘಟಿಸಿಕೊಂಡು ಹೈದ್ರಾಬಾದಿಗೆ ತೆರಳಿದರು.

ಈ ಪಂಡಿತ ಮಂಡಳಿಯಲ್ಲಿ ಚೌಡದಾನಪುರ ಸಂಸ್ಥಾನಮಠದ ಸರ್ವಶ್ರೀ ವಿರೂಪಾಕ್ಷ ವಡೆಯರು, ಪಂಡಿತ ರೇವಣಸಿದ್ದ ಶಾಸ್ತ್ರಿಗಳು, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು, ಆಸ್ಥಾನವಿದ್ವಾನ್ ಪಿ.ಆರ್. ಕರಿಬಸವ ಶಾಸ್ತ್ರಿಗಳು, ಶಿರ್ಸಿ ಗುರುಶಾಂತ ಶಾಸ್ತ್ರಿಗಳು, ಪಂಡಿತ ಸೋಮನಾಥ ಶಾಸ್ತ್ರಿಗಳು ಮತ್ತು ಕಂದಗಲ್ಲಿನ ಪಂಡಿತ ಪರ್ವತ ಶಾಸ್ತ್ರಿಗಳು ಪ್ರಮುಖರಾಗಿದ್ದರು. ವೀರಶೈವ ಸಮಾಜದ ಪರವಾಗಿ ರಾಯ ಹೇಮಚಂದ್ರ ವಕೀಲರು, ರಾಯ ವಿಶ್ವೇಶ್ವರನಾಥರು, ಶ್ರೀ ಸೋಮೇಶ್ವರರಾವ ವಕೀಲರು, ಶರಣಯ್ಯ ಸ್ವಾಮಿ ವಕೀಲರು, ಶ್ರೀ ಸಂಗ್ರಾಮಪ್ಪ ವಕೀಲರು ಮೊದಲಾದವರು ವಕಾಲತ್ತು ವಹಿಸಿದ್ದರು.

ಈ ವಿದ್ವಾಂಸರು ಮತ್ತು ವಕೀಲರು ಸೇರಿ ಶಾಸ್ತ್ರೋಕ್ತ ಪ್ರಮಾಣಗಳು, ಪುರಾಣೋಕ್ತ ಉಲ್ಲೇಖಗಳು ಹಾಗೂ ಸಶಕ್ತ ಶಾಸ್ತ್ರೀಯ ಉದಾಹರಣೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿ, ದೃಢವಾದ ವಾದವನ್ನು ಮುಂದಿಟ್ಟರು. ಈ ಸಮಗ್ರ, ಸಂಘಟಿತ ಮತ್ತು ತಾತ್ವಿಕ ಹೋರಾಟದ ಫಲವಾಗಿ ವೀರಶೈವ ಸಮಾಜಕ್ಕೆ ನ್ಯಾಯ ದೊರಕಿತು; ಪ್ರಕರಣದಲ್ಲಿ ವೀರಶೈವ ಪಕ್ಷವು ವಿಜಯ ಸಾಧಿಸಿತು.

ಈ ಐತಿಹಾಸಿಕ ಹೋರಾಟದಲ್ಲಿ ಪಂಡಿತ ಕಂದಗಲ್ಲ ಪರ್ವತ ಶಾಸ್ತ್ರಿಗಳು ಅವಿಶ್ರಾಂತ ಶ್ರಮವಹಿಸಿ, ಶಾಸ್ತ್ರಾಧಾರಿತ ಪ್ರಮಾಣಗಳನ್ನು ಸಂಗ್ರಹಿಸಿ ಒದಗಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸಿದರು. ಅವರ ಪಾಂಡಿತ್ಯ, ಸ್ಮರಣಶಕ್ತಿ ಮತ್ತು ಶಾಸ್ತ್ರಸಿದ್ಧತೆಯೇ ಈ ವಾದಕ್ಕೆ ಬಲ ನೀಡಿದ ಮೂಲಾಧಾರಗಳಾಗಿದ್ದವು.

ಈ ಪ್ರಕರಣದ ನಿಮಿತ್ತ ಹೈದ್ರಾಬಾದಿನಲ್ಲಿ ವಾಸ್ತವ್ಯ ಮಾಡಿದ ಸಮಯದಲ್ಲಿ, ಅಂದಿನ ಹೈದ್ರಾಬಾದ್ ನವಾಬರಾದ ಅಲಾ ಹಜರತ್ ಸಾಹೇಬರು ಪಂಡಿತ ಪರ್ವತ ಶಾಸ್ತ್ರಿಗಳ ಖ್ಯಾತಿಯನ್ನು ಕೇಳಿ, ಅವರನ್ನು ತಮ್ಮ ಸದರ ದರ್ಬಾರಕ್ಕೆ ಆಹ್ವಾನಿಸಿ, ಅವರ ಅಪಾರ ಪಾಂಡಿತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸಿದರೆಂದು ತಿಳಿದುಬರುತ್ತದೆ. ಇದು ಪಂಡಿತ ಪರ್ವತ ಶಾಸ್ತ್ರಿಗಳ ವಿದ್ಯಾ ಗೌರವವು ಧರ್ಮ–ಜಾತಿ–ರಾಜಕೀಯ ಸೀಮೆಗಳನ್ನು ಮೀರಿ ಬೆಳಗಿದ್ದುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಅತ್ಯಂತ ಮೇಧಾವಿಗಳೂ, ಪ್ರಕಾಂಡ ಪಂಡಿತರೂ, ಕವಿ ಪ್ರತಿಭಾಸಂಪನ್ನರೂ ಆಗಿದ್ದ ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ಸುಮಾರು ಎಪ್ಪತ್ತೆರಡು ವರ್ಷಗಳ ಕಾಲ ಸಮೃದ್ಧ, ಸಾರ್ಥಕ ಮತ್ತು ತಪೋಮಯ ಜೀವನವನ್ನು ನಡೆಸಿ, ಶಕ ೧೮೪೮ರಲ್ಲಿ (ಕ್ರಿ.ಶ. ೧೯೨೬) ತಮ್ಮ ಜನ್ಮಭೂಮಿಯಾದ ಕಂದಗಲ್ಲ ಗ್ರಾಮದಲ್ಲಿಯೇ ಶಿವೈಕ್ಯರಾದರು.

ತಮ್ಮ ಅಂತಿಮ ಕ್ಷಣಗಳಲ್ಲಿ, ತಾವು ಸ್ವತಃ ರಚಿಸಿದ್ದ ಮಹಾಮಹಿಮರಾದ ಚಿತ್ತರಗಿ ವಿಜಯ ಮಹಾಂತೇಶ್ವರರ ಅಷ್ಟಕವನ್ನು, ಇಳಕಲ್ಲ ಹಿರೇಮಠದ ಗುರು ಬಸವ ಶಾಸ್ತ್ರಿಗಳಿಗೆ ತಾರಸ್ವರದಲ್ಲಿ ಹಾಡುವಂತೆ ವಿನಂತಿಸಿ, ತಮ್ಮ ಮನಸ್ಸನ್ನು ಮಹಾಲಿಂಗದಲ್ಲಿ ಲೀನಗೊಳಿಸಿದರು. ಪರಶಿವ ಧ್ಯಾನದಲ್ಲಿ ಮಗ್ನರಾದ ಅವರು, ಇಹಲೋಕದ ಎಲ್ಲ ಬಂಧನಗಳನ್ನು ಮೀರಿ ಪರಂಧಾಮವನ್ನು ಸೇರುವ ಅಪೂರ್ವ ಕ್ಷಣವನ್ನು ಸಾಧಿಸಿದರು. ಮಹಾಕವಿಯ ದೇಹ ನಶ್ವರವಾದರೂ, ಅವರ ಅಶರೀರವಾಣಿ ಸ್ವರಚಿತ ಗ್ರಂಥರಾಶಿಗಳಲ್ಲಿ ಅನುರಣಿತವಾಗಿ ಅಮರವಾದುದು.

ಪಂಡಿತ ಪರ್ವತ ಶಾಸ್ತ್ರಿಗಳು ತಮ್ಮ ಜೀವನದ ಕೊನೆಯ ಗಳಿಗೆಯಲ್ಲಿ ಪಠಿಸಿದ ಮಹಾಂತಸ್ತುತಿ, ಅವರ ತಾತ್ವಿಕ ಸಾಧನೆಯ ಶಿಖರದಂತೆ ಕಾಣುತ್ತದೆ:

ಅಧಾರಾದಿಂ ಪಶ್ಚಿಮಾಂತವಿಲಸತ್ ಚಕ್ರಾಬ್ಜ ಪತ್ರೋಜ್ವಲತ್
ಪ್ರಾಣೋಪಸ್ಕೃತ-ಲಿಂಗಜಿತ್ಸುಖ-ಸುಧಾಸ್ವಾದಾತಿ ಮೋದಾಬುಂಧಿಮ್ ।
ಪಿಂಡಾದಿಸ್ಥಲಬೋಧ-ಸಾಧನಕಲಾ ಭೂಷಾಚ್ಛಭಾಷಾನಿಧಿಂ
ನಿಶ್ಚಿಂತಂ ನಿರುಪಪ್ಲವಂ ನಿರುಪಮಂ ನಿತ್ಯಂ ವಿನುತ್ಯಂ ಮುದಾ ।
ವಂದೇ ತಂ ಸತತಂ ಕೃಪಾರಸಲಸತ್ ಸ್ವಂತಂ ಮಹಾಂತಂ ಪ್ರಭುಮ್ ॥

ಈ ಶ್ಲೋಕದಲ್ಲಿ ಕವಿ ಪರಮಾತ್ಮಸ್ವರೂಪಿಯಾದ ಮಹಾಂತ ಪ್ರಭುವನ್ನು ಭಕ್ತಿಪೂರ್ವಕವಾಗಿ ವಂದಿಸುತ್ತಾನೆ. ಮೂಲಾಧಾರದಿಂದ ಸಹಸ್ರಾರವರೆಗೆ—ಅಂದರೆ ಆಧಾರದಿಂದ ಪಶ್ಚಿಮಾಂತವರೆಗೆ—ಪ್ರಕಾಶಿಸುವ ಚಕ್ರಕಮಲಗಳ ದೀಪ್ತಿಯಿಂದ ಉಜ್ವಲರಾಗಿರುವ ಪ್ರಭುವಿನ ಸ್ವರೂಪವನ್ನು ಇಲ್ಲಿ ಕವಿ ಚಿತ್ರಿಸುತ್ತಾನೆ. ಪ್ರಾಣಶಕ್ತಿಯಿಂದ ಪೋಷಿತವಾದ ಲಿಂಗತತ್ತ್ವವನ್ನು ಜಯಿಸಿ, ಅಮೃತಸದೃಶ ಪರಮಾನಂದವನ್ನು ಅನುಭವಿಸಿ, ಅದರಲ್ಲಿ ಮುಳುಗಿ ಮೋದದಿಂದ ತುಂಬಿರುವ ಆನಂದಸ್ವರೂಪಿಯೇ ಆ ಮಹಾಂತ.

ಪಿಂಡ–ಸ್ಥಳ–ತತ್ತ್ವಗಳ ಬೋಧನೆಗೆ ಸಾಧನವಾಗುವ ಸೂಕ್ಷ್ಮ ಕಲೆಯಿಂದ ಅಲಂಕರಿತರಾಗಿ, ಶುದ್ಧ ಮತ್ತು ಸ್ಪಷ್ಟವಾದ ಭಾಷಾರಸನಿಧಿಯಾಗಿರುವವರು ಅವರು. ಯಾವುದೇ ಚಿಂತೆ ಇಲ್ಲದವರು, ಯಾವುದೇ ಉಪಾಧಿ ಅಥವಾ ಮಿತಿಗಳಿಂದ ಬಂಧಿತರಾಗದವರು, ಅಪೂರ್ವರು, ಅಪ್ರತಿಮರು, ನಿತ್ಯವೂ ಸ್ತುತಿಸಲ್ಪಡುವವರು, ಆನಂದದಿಂದ ಸದಾ ವಂದನೀಯರು. ಅಂತಹವರು ಕೃಪಾರಸದಿಂದ ತುಂಬಿ ಉಕ್ಕುವ, ನಮ್ಮ ಆತ್ಮದ ಅಂತರಾಳದಲ್ಲಿಯೇ ವಾಸಿಸುವ ಮಹಾತ್ಮನಾದ ಮಹಾಂತ ಪ್ರಭು. ಆ ಪ್ರಭುವನ್ನು ನಾನು ಸದಾ ಭಕ್ತಿಯಿಂದ ವಂದಿಸುತ್ತೇನೆ ಎಂಬುದು ಈ ಶ್ಲೋಕದ ಪರಮಾರ್ಥ.

ಈ ಮಹಾಂತಸ್ತುತಿ ಕೇವಲ ಒಂದು ಕಾವ್ಯವಲ್ಲ; ಅದು ಪಂಡಿತ ಪರ್ವತ ಶಾಸ್ತ್ರಿಗಳ ಜೀವನಾನುಭವದ ಸಾರ, ಶಿವಾನುಭವ ಶಾಸ್ತ್ರದ ಸಿದ್ಧಾಂತ ಮತ್ತು ಆತ್ಮಸಾಧನೆಯ ಅಂತಿಮ ಘೋಷಣೆಯಾಗಿದೆ. ಹೀಗೆ, ವಿದ್ಯೆ ಮತ್ತು ಅನುಭವವನ್ನು ಒಂದಾಗಿ ಬೆಸೆಯುವ ಮೂಲಕ, ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ವೀರಶೈವ ತತ್ತ್ವಪರಂಪರೆಯಲ್ಲಿ ಅಳಿಯದ ಬೆಳಕಾಗಿ ಉಳಿದಿದ್ದಾರೆ.

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳ ಸಂಸ್ಕೃತ ಸಾಹಿತ್ಯ ರಚನೆಗಳು

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ಕೇವಲ ಮಹಾನ್ ತಾತ್ವಿಕರು ಮಾತ್ರವಲ್ಲ; ಸಂಸ್ಕೃತ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮಾನ ಪ್ರಭುತ್ವ ಸಾಧಿಸಿದ ಅಪೂರ್ವ ವಿದ್ವಾಂಸರಾಗಿದ್ದರು. ಚಂಪೂ ಪ್ರಬಂಧಗಳಿಂದ ಹಿಡಿದು ಅಷ್ಟಕ, ಗೀತೆ, ಸುಭಾಷಿತ ಹಾಗೂ ಸ್ತೋತ್ರ ರಚನೆಗಳವರೆಗೆ ಅವರ ಕೃತಿಗಳು ವ್ಯಾಪಕವಾಗಿದ್ದು, ಶಿವಾನುಭವ–ಶೈವಸಿದ್ಧಾಂತ–ಶರಣ ಪರಂಪರೆಯ ಸುಗಂಧವನ್ನು ಹೊತ್ತಿವೆ.

. ಬೃಹದ್ಗ್ರಂಥಗಳು (ಚಂಪೂ ಪ್ರಬಂಧಗಳು)

ಪಂಡಿತ ಪರ್ವತ ಶಾಸ್ತ್ರಿಗಳ ಬೃಹದಾಕಾರದ ಕೃತಿಗಳು ಅವರ ಕಾವ್ಯಪ್ರತಿಭೆ, ಕಥನಶೈಲಿ ಹಾಗೂ ಶಾಸ್ತ್ರೀಯ ಪಾಂಡಿತ್ಯವನ್ನು ಸಮಗ್ರವಾಗಿ ಪ್ರತಿಬಿಂಬಿಸುತ್ತವೆ.

  • ಕರಡೀಶ ಚರಿತಾಮೃತ ಚಂಪೂ ಪ್ರಬಂಧಃ
  • ಚಿತ್ರಗಿಶ್ರೀಮನ್ಮಹಾಂತೇಶ ಚರಿತ ಚಂಪೂ ಪ್ರಬಂಧಃ

ಈ ಎರಡು ಚಂಪೂ ಕೃತಿಗಳು ಗದ್ಯ–ಪದ್ಯಗಳ ಸುಂದರ ಸಂಯೋಜನೆಯೊಂದಿಗೆ ಶರಣ ಮಹಾತ್ಮರ ಜೀವನ, ತಪಸ್ಸು ಮತ್ತು ತತ್ತ್ವವನ್ನು ಕಾವ್ಯಮಯವಾಗಿ ಚಿತ್ರಿಸುತ್ತವೆ.

. ಸುಭಾಷಿತ ಸಾಹಿತ್ಯ

  • ಸುಭಾಷಿತ ಸುಧಾ ಝರೀ

ನೀತಿ, ವೈರಾಗ್ಯ, ಜೀವನಾನುಭವ ಮತ್ತು ತಾತ್ವಿಕ ಚಿಂತನೆಗಳನ್ನು ಸಂಕ್ಷಿಪ್ತ, ಸುಂದರ ಮತ್ತು ಸ್ಮರಣೀಯ ಶ್ಲೋಕಗಳ ಮೂಲಕ ಹೇಳುವ ಈ ಕೃತಿ, ಪಂಡಿತ ಪರ್ವತ ಶಾಸ್ತ್ರಿಗಳ ಸೂಕ್ಷ್ಮಾವಲೋಕನ ಶಕ್ತಿಗೆ ಸಾಕ್ಷಿಯಾಗಿದೆ.

. ಅಷ್ಟಕ ಕೃತಿಗಳು

ಅಷ್ಟಕ ಸಾಹಿತ್ಯದಲ್ಲಿ ಪಂಡಿತ ಪರ್ವತ ಶಾಸ್ತ್ರಿಗಳು ವಿಶೇಷ ಸಾಧನೆ ಮಾಡಿದ್ದು, ಶರಣರು, ಯತಿಗಳು, ದೇವತೆಗಳು ಮತ್ತು ಶಿವಾನುಭವ ತತ್ತ್ವಗಳನ್ನು ಭಕ್ತಿಭಾವಪೂರ್ಣವಾಗಿ ವರ್ಣಿಸಿದ್ದಾರೆ. ಅವರ ಪ್ರಮುಖ ಅಷ್ಟಕಗಳು ಇಂತಿವೆ:

  • ಅಂಬಾಷ್ಟಕಮ್
  • ಗಿರಿ ಶ್ರೀ ಮಲ್ಲಿಕಾರ್ಜುನ ಮಹಾಷ್ಟಕಮ್
  • ನಾಗಭೂಷಣ ಘನಮಠವರಭವಾಷ್ಟಕಮ್
  • ಶರಣ ಬಸವ ರಾಜಾಷ್ಟಕಮ್
  • ಶರಣ ಬಸವ ಸದಷ್ಟಕಮ್
  • ಶ್ರೀ ಕೃಷ್ಣಾಮಲಹಾರಿಣೀ, ಶ್ರೀ ಸಂಗಮೇಶ್ವರ ಮಹಾಷ್ಟಕಮ್
  • ಶ್ರೀ ಕೋಲೂರ ಸೂರಿ ನಿವಾಸ ವೃಷೇಂದ್ರಾಷ್ಟಕಮ್
  • ಶ್ರೀ ಗಿರಿಪುರ (ಗುಡದೂರು) ದೊಡ್ಡ ಪಾರ್ಯ ಪಂಚರತ್ನ ಸ್ತವಃ
  • ಶ್ರೀ ದಕ್ಷಿಣಾಮೂರ್ತಿ ಘನಾಷ್ಟಕಮ್
  • ಶ್ರೀ ಭವಾಲದಿ ಮಹಾಂತಸ್ವಾಮಿ ಪ್ರಭಾವ ರುಚಿರಾಷ್ಟಕಮ್
  • ಶ್ರೀ ಮಚ್ಚಿತ್ರಗಿ: ಶ್ರೀ ಮಹಾಂತ ಯತಿರಾಜವರಾಷ್ಟಕಮ್
  • ಶ್ರೀ ಮಲ್ಲಿಕಾರ್ಜುನ ವರಾಷ್ಟಕಮ್
  • ಶ್ರೀ ಸಿದ್ಧರಾಮ ಶಿವಯೋಗಿ ವರಾಷ್ಟಕಮ್
  • ಶ್ರೀ ಸಿದ್ಧವರ್ಯಾಷ್ಟಕಮ್

ಈ ಅಷ್ಟಕಗಳಲ್ಲಿ ಭಕ್ತಿ, ಶಾಸ್ತ್ರ, ಅನುಭವ ಮತ್ತು ಕಾವ್ಯ—all ಒಂದಾಗಿ ಬೆಸೆದಿರುವುದು ಪಂಡಿತ ಪರ್ವತ ಶಾಸ್ತ್ರಿಗಳ ವಿಶೇಷತೆ.

. ಗೀತೆಗಳು

ಸಂಗೀತಾತ್ಮಕ ಲಯ, ಭಕ್ತಿರಸ ಮತ್ತು ಸುಲಭ ಪಠ್ಯಶೈಲಿಯೊಂದಿಗೆ ರಚಿತವಾದ ಪರ್ವತ ಶಾಸ್ತ್ರಿಗಳ ಗೀತೆಗಳು ದೇವಾಲಯ ಹಾಗೂ ಸತ್ಸಂಗಗಳಲ್ಲಿ ಹಾಡಲು ಯೋಗ್ಯವಾಗಿವೆ.

  • ಅಂಬೇ ಗಜೇಂದ್ರ ಬಾಲೇ ಪಾಲಯ
  • ಅಂಬೇ ಪಾಹಿ
  • ಜಯ ಜಯ ಗಿರಿಜಾವರ
  • ಜಯ ಹೈಮವತೀ ಹೃದೇ
  • ತುಂಗ ಮಹಿಮಾಂಕ ಘನಮಂಗಲಮ್
  • ಮಂಗಲಂ ಭವತು ಮಹೇಶ
  • ಮಂಗಲಂ ಭವಾನಿ
  • ಮಂಗಲಂ ಸಂಗಮೇಶ್ವರ

. ದೊರೆಯದೇ ಉಳಿದ ಕೃತಿಗಳು

ಇತಿಹಾಸದ ಪ್ರವಾಹದಲ್ಲಿ ಪಂಡಿತ ಪರ್ವತ ಶಾಸ್ತ್ರಿಗಳ ಕೆಲವು ಕೃತಿಗಳು ಲಭ್ಯವಾಗದೆ ಉಳಿದಿರುವುದು ವಿಷಾದಕರ ಸಂಗತಿ. ಆದರೆ ಗ್ರಂಥಸೂಚಿಗಳಲ್ಲಿ ಉಲ್ಲೇಖವಾಗಿರುವ, ಇಂದಿಗೂ ಅನ್ವೇಷಣೆಗೆ ಕಾಯುತ್ತಿರುವ ಕೃತಿಗಳು ಇಂತಿವೆ:

  • ಅಮರೇಶ್ವರಾಷ್ಟಕಮ್
  • ಪರಶಿವ ಜಂಗಮ ಸಂದರ್ಶನ ಸ್ತೋತ್ರಮ್
  • ಪಂಚಮ ಜಾರ್ಜ ಸಮುದ್ರ ಬಂಧನಮ್

ಉಪಸಂಹಾರ

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳ ಜೀವನ ಮತ್ತು ಸಾಧನೆಗಳನ್ನು ಅವಲೋಕಿಸಿದಾಗ, ಅವರು ಕೇವಲ ಒಬ್ಬ ಸಂಸ್ಕೃತ ಪಂಡಿತರಾಗಿರಲಿಲ್ಲ; ತಮ್ಮ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ತಾತ್ವಿಕ ಚಿಂತನೆಗಳಿಗೆ ದಿಕ್ಕು ನೀಡಿದ ಮಹಾನ್ ಚೇತನರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ವಿದ್ಯೆ, ತಪಸ್ಸು, ಅನುಭವ ಮತ್ತು ಸಮಾಜಜವಾಬ್ದಾರಿ—ಈ ನಾಲ್ಕೂ ಗುಣಗಳು ಅವರಲ್ಲಿ ಸಹಜವಾಗಿ ಒಟ್ಟಾಗಿ ಲೀನವಾಗಿದ್ದವು.

ಕಂದಗಲ್ಲ ಎಂಬ ಸಣ್ಣ ಗ್ರಾಮದಿಂದ ಹೊರಟು, ಬಳ್ಳಾರಿಯ ಗುರುನಿವಾಸ ಸಂಸ್ಕೃತ ಪಾಠಶಾಲೆ, ಹುನಗುಂದ ಮಠದ ಶೈಕ್ಷಣಿಕ ಸೇವೆ, ನಾಡಿನ ನಾನಾಭಾಗಗಳಲ್ಲಿ ನಡೆದ ಜ್ಞಾನಸತ್ರಗಳು ಮತ್ತು ಬಸವಪುರಾಣ ಪ್ರವಚನಗಳವರೆಗೆ ಅವರ ಪಯಣ ನಿರಂತರವಾದ ಜ್ಞಾನಯಾತ್ರೆಯಾಗಿತ್ತು. ಪರ್ವತ ಶಾಸ್ತ್ರಿಗಳ ಪಾಂಡಿತ್ಯವು ಗ್ರಂಥಪಾಠಕ್ಕೆ ಸೀಮಿತವಾಗಿರದೆ, ಜೀವಂತ ಅನುಭವವಾಗಿ ಸಮಾಜದೊಳಗೆ ಹರಿದಿತು.

ಪರಳಿ ಪ್ರಕರಣದಂತಹ ಐತಿಹಾಸಿಕ ಹೋರಾಟದಲ್ಲಿ ಅವರು ವೀರಶೈವ ಸಮಾಜದ ಮಾನರಕ್ಷಣೆಗೆ ಶಾಸ್ತ್ರಾಧಾರಿತ ಶಕ್ತಿಯನ್ನು ಒದಗಿಸಿ, ಧರ್ಮ ಮತ್ತು ನ್ಯಾಯ ಒಂದೇ ತ್ರಾಸಿನ ಮೇಲೆ ನಿಲ್ಲಬಹುದೆಂಬುದನ್ನು ಸಾಬೀತುಪಡಿಸಿದರು. ಈ ಸಂದರ್ಭದಲ್ಲಿ ಅವರ ಶ್ರಮ, ತಾತ್ವಿಕ ಧೈರ್ಯ ಮತ್ತು ಸ್ಮರಣಶಕ್ತಿ ವೀರಶೈವ ಪರಂಪರೆಯ ಅಸ್ತಿತ್ವಕ್ಕೆ ಬಲವಾದ ಆಧಾರವಾಯಿತು.

ಚಂಪೂ ಪ್ರಬಂಧಗಳು, ಅಷ್ಟಕಗಳು, ಗೀತೆಗಳು ಮತ್ತು ಸುಭಾಷಿತಗಳ ಮೂಲಕ ಪಂಡಿತ ಪರ್ವತ ಶಾಸ್ತ್ರಿಗಳು ಸಂಸ್ಕೃತ ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದರು. ಅವರ ಕೃತಿಗಳಲ್ಲಿ ಕಾವ್ಯಸೌಂದರ್ಯ ಮಾತ್ರವಲ್ಲದೆ, ಶಿವಾನುಭವ ತತ್ತ್ವದ ಆಳವಾದ ಸ್ಪಂದನವೂ ಮೇಳೈಸಿದೆ. ವಿಶೇಷವಾಗಿ ಅವರ ಅಂತಿಮ ಕ್ಷಣಗಳಲ್ಲಿ ಪಠಿಸಿದ ಮಹಾಂತಸ್ತುತಿ, ಅವರ ಜೀವನಸಾಧನೆಯ ಪರಮಾರ್ಥವನ್ನು ಸಾರುವ ಆತ್ಮಘೋಷಣೆಯಂತಿದೆ.

ಶಿವಾನುಭವ ಶಾಸ್ತ್ರವನ್ನು ಕೇವಲ ತಾತ್ವಿಕ ವಾದವಾಗಿ ಅಲ್ಲದೆ, ಬದುಕಿನ ಅನುಭವವಾಗಿ ಜೀವಿಸಿದ ಪಂಡಿತ ಪರ್ವತ ಶಾಸ್ತ್ರಿಗಳು, ಗುರು–ಲಿಂಗ–ಜಂಗಮ ಪರಂಪರೆಯ ಜೀವಂತ ಪ್ರತಿನಿಧಿಗಳಾಗಿದ್ದರು. ಅವರ ದೇಹ ನಶ್ವರವಾದರೂ, ಅವರ ವಾಣಿ, ಕೃತಿ ಮತ್ತು ತತ್ತ್ವಚಿಂತನೆಗಳು ಇಂದಿಗೂ ವೀರಶೈವ ಸಾಹಿತ್ಯ ಮತ್ತು ಸಂಸ್ಕೃತ ವಾಙ್ಮಯದಲ್ಲಿ ಅಳಿಯದ ಬೆಳಕಾಗಿ ಪ್ರಕಾಶಿಸುತ್ತಿವೆ.

ಇಂದು ಅವರ ಸ್ಮರಣೆ ಕೇವಲ ಭೂತಕಾಲದ ಗೌರವವಲ್ಲ; ಅದು ವರ್ತಮಾನ ಮತ್ತು ಭವಿಷ್ಯಕ್ಕೆ ದಿಕ್ಕು ತೋರಿಸುವ ಜ್ಞಾನಸ್ಮರಣೆ. ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳ ಜೀವನವು, ವಿದ್ಯೆ ಸಮಾಜಸೇವೆಗೆ, ಭಕ್ತಿ ಮಾನವೀಯತೆಗೆ ಮತ್ತು ಅನುಭವ ಆತ್ಮೋದ್ಧಾರಕ್ಕೆ ದಾರಿಯಾಗಬೇಕು ಎಂಬ ಶಾಶ್ವತ ಸಂದೇಶವನ್ನು ನಮಗೆ ನೀಡುತ್ತದೆ.

ಗ್ರಂಥ ಋಣ

  1. ಸುಭಾಷಿತ ಸುಧಾ ಝರೀ – ಸಂಪಾದಕರು: ಶ್ರೀ ಎ. ಎಲ್. ಹಿರೇಮಠ
  2. ಬೆಳಗು ಪ್ರಕಾಶನ, ಶ್ರೀ ಶಿವಯೋಗಮಂದಿರ
  3. ವೀರಶೈವ ವೇದಾಧಿಕಾರ ವಿಜಯಲೇಖ – ಶ್ರೀ ನಂಜುಡಾರಾಧ್ಯ

 

ಲೇಖಕ: ಶ್ರೀಕಂಠ ಚೌಕೀಮಠ

ಧಾರವಾಡದ ಮುರುಘಾಮಠ ನನ್ನ ಬಾಲ್ಯದ ಅಚ್ಚುಮೆಚ್ಚಿನ ತಾಣ. ರವಿವಾರಗಳೆಂದರೆ ವಿಶೇಷ ಉಲ್ಲಾಸ. ಹೊಸಯಲ್ಲಾಪುರದ ನಮ್ಮ ಮನೆಯಿಂದ ನಡೆದುಕೊಂಡೇ ಮುರುಘಾಮಠದತ್ತ ಹೊರಡುವುದು ಒಂದು ಸಂಭ್ರಮವೇ ಆಗಿತ್ತು. ಮಠದ ಬಯಲು ಜಾಗೆಯಲ್ಲಿ, ಆಗ ಮಠದ ಉತ್ತರಾಧಿಕಾರಿಗಳಾಗಿದ್ದ ಪೂಜ್ಯ ಶ್ರೀ ಶಿವಯೋಗಿ ದೇವರೊಂದಿಗೆ ಆಟವಾಡುತ್ತಿದ್ದ ಕ್ಷಣಗಳು ಇನ್ನೂ ಮನಸ್ಸಿನಲ್ಲಿ ಹಸಿರಾಗಿವೆ. ಅವರು ಪ್ರೀತಿಯಿಂದ ಕೊಟ್ಟ ಉತ್ತತ್ತಿ ಕಲ್ಲುಸಕ್ಕರೆಯ ಸವಿಯು ಇಂದು ಕೂಡ ನನ್ನಲ್ಲಿ ಉಳಿದಂತಿದೆ.

ಅಂತಹ ಅನೇಕ ಸವಿ ನೆನಪುಗಳನ್ನು ಹೊತ್ತುಕೊಂಡು, ಇಂದು ದಿನಾಂಕ 10-01-2026 ರಂದು ಮುರುಘಾಮಠದ ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳ ಕ್ರಿಯಾಸಮಾಧಿಯ ಮುಂದೆ ಕುಳಿತುಕೊಂಡಿದ್ದೆ. ಸುತ್ತಮುತ್ತ ಆವರಿಸಿದ್ದ ಪ್ರಶಾಂತ ವಾತಾವರಣ ಮನಸ್ಸಿಗೆ ಅಪಾರ ಶಾಂತಿಯನ್ನು ನೀಡುತ್ತಿತ್ತು.

ಅದೇ ವೇಳೆಯಲ್ಲಿ ಒಂದು ಕುಟುಂಬ ಅಲ್ಲಿ ಆಗಮಿಸಿತು. ಗದ್ದುಗೆಯ ಬಾಗಿಲಲ್ಲಿ ಕುಳಿತಿದ್ದ ಬಾಲಕ ಶಾಸ್ತ್ರಿಗಳಿಗೆ ಮಂಗಳಾರತಿ ಮಾಡಲು ವಿನಂತಿಸಿಕೊಂಡರು. ನಾನು ಮತ್ತು ನನ್ನ ಪತ್ನಿ ಕೂಡ ಎದ್ದು ನಿಂತು, ಅಲ್ಲಿ ಆರಂಭವಾದ ಮಂಗಳಾರತಿಗೆ ಭಕ್ತಿಭಾವದಿಂದ ಧ್ವನಿ ಗೂಡಿಸಿದೆವು.

ಜ್ಞಾನ ಪೂರ್ಣಂ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ

ಅನುದಿನ ಗುರುವಿನ ಅನುರಾಗದ ಭಕ್ತಿಯಲಿ
ಜನನ ಮರಣ ರಹಿತ ಜಂಗಮಕೆ ಬೆಳಗಿರೆ

ಬಾಲಕ ಶಾಸ್ತ್ರಿಗಳು ಸಂಸ್ಕೃತ ಭಾಷೆಯ ಪುಷ್ಪಾಂಜಲಿ ಮಂತ್ರವನ್ನು ಶ್ರದ್ಧೆಯಿಂದ ಉಚ್ಚರಿಸಿದರು. ಶಿವ–ಪಾರ್ವತಿಯರ ಉದ್ಘೋಷಗಳು ಆ ವಾತಾವರಣವನ್ನು ಇನ್ನಷ್ಟು ಪಾವನಗೊಳಿಸಿದವು. ಅದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು. ಪ್ರತಿಯೊಂದು ಪೂಜೆಯ ನಂತರ ಮನದೊಳಗೆ ಮೂಡುವ ಆಂತರಿಕ ಆನಂದ ಇಲ್ಲಿ ಸಹಜವಾಗಿ ಹರಿದುಬಂತು.

ಆದರೆ ನಮ್ಮೆದುರು ನಿಂತಿದ್ದ ವ್ಯಕ್ತಿಯ ಆಂಗಿಕ ಭಾಷೆಯೇ ಬೇರೆ ರೀತಿಯಲ್ಲಿತ್ತು. ಅವರ ಮುಖಭಾವ, ಧ್ವನಿತನ ಎಲ್ಲವೂ ಅಸಹನೆಯಿಂದ ತುಂಬಿತ್ತು. ಏಕಾಏಕಿ ಅವರು ಬಾಲಕ ಶಾಸ್ತ್ರಿಗಳನ್ನು ಜೋರಾದ ಧ್ವನಿಯಲ್ಲಿ ಹಿಯಾಳಿಸಿದರು.

“ಪೂಜೆಯಲ್ಲಿಯೇಕೆ ಸಂಸ್ಕೃತ ಮಂತ್ರಗಳು? ಮಂಗಳಾರತಿ ಏಕೆ ಹಾಡುವಿರಿ?” ಎಂದು ಪ್ರಶ್ನಿಸಿದರು.
ಮತ್ತೆ, “ಪೂಜ್ಯ ಮೃತ್ಯುಂಜಯ ಸ್ವಾಮಿಗಳು ಬಸವ ಜಯಂತಿಯನ್ನು ಕಂಡು ಹಿಡಿದವರು. ಅವರ ಗದ್ದುಗೆಯ ಮುಂದೆ ಸಂಸ್ಕೃತ ಮಂತ್ರಗಳೇಕೆ?” ಎಂದು ಕೂಗಿ, “ಇಲ್ಲಿ ವಚನಗಳನ್ನು ಮಾತ್ರ ಹೇಳಬೇಕು” ಎಂದು ಆಜ್ಞಾಪಿಸುವ ಧೋರಣೆಯಲ್ಲಿ ಮಾತನಾಡಿದರು. ನಂತರ ಬಸವಣ್ಣನವರ ಕಳ ಬೇಡ, ಕೊಲ ಬೇಡ…’ ಎಂಬ ವಚನವನ್ನು ಜೋರಾಗಿ ಉಚ್ಚರಿಸಿದರು.

ಈ ಆಕಸ್ಮಿಕ ಘಟನೆಯಿಂದ ವಿಚಲಿತಳಾದ ನನ್ನ ಪತ್ನಿ, ಬಾಲಕ ಶಾಸ್ತ್ರಿಗಳನ್ನು ಬಯ್ಯಬೇಡಿ ಎಂದು ಶಾಂತವಾಗಿ ಮನವಿ ಮಾಡಿದಳು. ಆದರೆ ಆ ವ್ಯಕ್ತಿ ಧ್ವನಿ ಏರಿಸಿ ಕೂಗಾಡಿದರು. ಕ್ಷಣಮಾತ್ರದಲ್ಲೇ ಇಡೀ ಮಂದಿರದ ವಾತಾವರಣ ಕರ್ಕಶವಾಗಿ, ಪೂಜೆಯ ಪಾವಿತ್ರ್ಯಕ್ಕೆ ಧಕ್ಕೆ ಬಂದಂತಾಯಿತು.

ಬೆದರಿದ ಬಾಲಕ ಶಾಸ್ತ್ರಿಗಳನ್ನು ಸಾಂತ್ವನಪಡಿಸಿ, ಕೂಗಾಡುತ್ತಿದ್ದ ವ್ಯಕ್ತಿಯೊಂದಿಗೆ ವಾದಕ್ಕಿಳಿಯುವುದು ಆ ಸಂದರ್ಭಕ್ಕೆ ಔಚಿತ್ಯವಲ್ಲವೆಂದು ಭಾವಿಸಿದೆ. ಭಾರವಾದ ಮನಸ್ಸನ್ನು ಹೊತ್ತುಕೊಂಡೇ, ಆ ಪವಿತ್ರ ಸ್ಥಳದಿಂದ ನಿಧಾನವಾಗಿ ಹೊರಬಂದೆ.

ಈ ಸನ್ನಿವೇಶವು ವರ್ತಮಾನ ಮತ್ತು ಭವಿಷ್ಯಕಾಲದ ವೀರಶೈವ–ಲಿಂಗಾಯತದ ಇಬ್ಭಾಗದ ಫಲಶೃತಿಯ ಪ್ರಾತ್ಯಕ್ಷತೆಯೇನೋ ಎಂಬ ಪ್ರಶ್ನೆ ಮನಸ್ಸನ್ನು ಕಾಡಿತು. ಮರಳುವ ದಾರಿಯುದ್ದಕ್ಕೂ ನಡೆದ ಘಟನೆಯನ್ನು ಮರುಮರು ಮೆಲಕು ಹಾಕಿದಾಗ, ಅನೇಕ ಅಸಮಾಧಾನಕರ ಪ್ರಶ್ನೆಗಳು ನನ್ನೊಳಗೆ ಮೂಡಿದವು.

“ಕಳಬೇಡ, ಕೊಲಬೇಡ…” ಎಂದು ಬಸವಣ್ಣನವರು ಸಮಾಜದ ಜನತೆಗೆ ಉಪದೇಶಿಸಿದ ವಚನವನ್ನು ಪಾಲಿಸುವ ಜವಾಬ್ದಾರಿ ನಿಸ್ಸಂದೇಹವಾಗಿ ನಮ್ಮೆಲ್ಲರ ಮೇಲಿದೆ. ಆದರೆ ಆ ವಚನವನ್ನು ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳ ಗದ್ದುಗೆಯ ಮುಂದೆ, ಆ ಸಂದರ್ಭದಲ್ಲೇ ಜೋರಾಗಿ ಉಚ್ಚರಿಸುವ ಔಚಿತ್ಯವೇನು ಎಂಬ ಪ್ರಶ್ನೆ ನನ್ನ ಮನಸ್ಸನ್ನು ಕಾಡಿತು. ಅದು ನನಗೆ ವಿಚಿತ್ರವಾಗಿ ಅನಿಸಿತು.

ಬಸವಣ್ಣನವರ ಮೇಲಿನ ಅಭಿಮಾನ, ಪುರೋಹಿತಶಾಹಿ ವಿರೋಧವನ್ನು ತೋರಿಸುವ ಭರದಲ್ಲಿ ಬಳಸುವ ವಚನಗಳು ಶುದ್ಧ ಕನ್ನಡದಲ್ಲಿದ್ದರೂ, ಅವುಗಳನ್ನು ಬಳಸುವ ರೀತಿ, ಸಂದರ್ಭ ಮತ್ತು ಉದ್ದೇಶವನ್ನು ನೋಡಿದಾಗ ಒಂದು ರೀತಿಯ ವಿಚಿತ್ರತೆಗೂ ವಿಷಾದಕ್ಕೂ ಕಾರಣವಾಗುತ್ತದೆ. ಭಕ್ತಿಯ ಹೆಸರಿನಲ್ಲಿ ವ್ಯಕ್ತವಾಗಬೇಕಾದ ವಚನಗಳು, ಸಂಘರ್ಷದ ಉಪಕರಣಗಳಾಗಿ ಮಾರ್ಪಡುವುದು ನೋವಿನ ಸಂಗತಿ.

ಇದೇ ರೀತಿಯ ಕಸಿವಿಸಿ ನನಗೆ ಕನ್ನಡದ ಖ್ಯಾತ ಪತ್ರಕರ್ತ ಶ್ರೀ ಪಾಟೀಲ ಪುಟ್ಟಪ್ಪನವರ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಉಂಟಾಗಿತ್ತು. ಅಂತ್ಯಕ್ರಿಯೆಯ ಪೌರೋಹಿತ್ಯವನ್ನು ವಹಿಸಿಕೊಂಡಿದ್ದ ಶ್ರೀ ನಿಜಗುಣಾನಂದ ಸ್ವಾಮಿಗಳು ಶರಣರ ವಚನಗಳನ್ನು ಪಠಿಸಿದರು. ಪಾಟೀಲ ಪುಟ್ಟಪ್ಪನವರ ಪಾರ್ಥಿವ ಶರೀರಕ್ಕೆ ಮಾಲೆ ಹಾಕುವ ಮುನ್ನ ಅವರು ಉಚ್ಚರಿಸಿದ ವಚನ —

“ತಂದೆ ನೀನು, ತಾಯಿ ನೀನು,
ಬಂಧು ನೀನು, ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು ನೀರಲದ್ದು.”

— ಆ ಕ್ಷಣದಲ್ಲಿ ಮತ್ತೆ ಅದೇ ಪ್ರಶ್ನೆಯನ್ನು ನನ್ನೊಳಗೆ ಎಬ್ಬಿಸಿತು. ವಚನಗಳ ಮಹತ್ವ ಅವುಗಳ ಭಾಷೆಯಲ್ಲಿ ಮಾತ್ರವಲ್ಲ, ಅವುಗಳನ್ನು ಬಳಸುವ ಸಂದರ್ಭ, ಭಾವ ಮತ್ತು ಸಂಯಮದಲ್ಲೂ ಅಡಗಿದೆ ಎಂಬ ಸತ್ಯ ಇನ್ನಷ್ಟು ಸ್ಪಷ್ಟವಾಗಿ ಅರಿವಾಯಿತು.

ಸಮಗ್ರ ವಚನ ಸಾಹಿತ್ಯವು ಕನ್ನಡದ ಸಾಹಿತ್ಯ ಪರಂಪರೆಯಲ್ಲಿನ ಪ್ರಮುಖ ಹಾಗೂ ವಿಶಿಷ್ಟ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಹನ್ನೊಂದನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ, ಹನ್ನೆರಡನೇ ಶತಮಾನದ ಅಂತ್ಯದವರೆಗೆ ಬಸವಣ್ಣನವರ ನೇತೃತ್ವದ ಜನಸಾಮಾನ್ಯರ ಆಂದೋಲನದ ಅವಿಭಾಜ್ಯ ಅಂಗವಾಗಿ ಇದು ಬೆಳೆಯಿತು. ಸಾಹಿತ್ಯ ಪರಿಭಾಷೆಯಲ್ಲಿ ಇದು ಒಂದು ಅಪರೂಪದ ಕಾವ್ಯ ಪ್ರಕಾರ—ಹಾಡಿದರೆ ಹಾಡಾಗುವದು, ಓದಿದರೆ ಗದ್ಯವಾಗುವದು. ಕನ್ನಡ ಭಾಷೆಯ ಈ ವೈಶಿಷ್ಟ್ಯಮಯ ಕಾವ್ಯ ಪ್ರಕಾರ ತನ್ನ ಕಾಲಘಟ್ಟದ ಜನರ ಮನೋಭಾವಗಳ ಅಭಿವ್ಯಕ್ತಿಗೆ ನೇರ ಸಂಗಾತಿಯಾಗಿ ನಿಂತಿತು. ‘ವಚನ’ವೆಂದರೆ ‘ಪ್ರಮಾಣ’, ‘ಕೊಟ್ಟ ಮಾತು’ ಎಂಬ ಅರ್ಥವನ್ನು ಹೊತ್ತುಕೊಂಡಿರುವ ಪದ.

ವಚನಗಳು ಶರಣರ ಜೀವನಕ್ಕೆ ಹಿಡಿದ ಕೈಗನ್ನಡಿಯಂತಿವೆ. ಅವು ಶರಣರ ಅನುಭಾವಗಳ ಅಕ್ಷರರೂಪ. ಶರಣಪಥದಲ್ಲಿ ಸಾಗಲು ಬಯಸುವ ಪ್ರತಿಯೊಬ್ಬ ಪಥಿಕನಿಗೂ ದಾರಿದೀಪಗಳಂತೆ ದಾರಿತೋರುವ ಜ್ಞಾನಪ್ರಕಾಶಗಳು. ಮೌಢ್ಯದ ಕೊಳೆಯನ್ನು ತೊಳೆಯುವ, ಅಂಧಕಾರದ ಮನಸ್ಸಿಗೆ ಅಂಟಿದ ಕಿಲುಬನ್ನು ತೆಗೆದುಹಾಕಿ ಸ್ವಚ್ಚಗೊಳಿಸುವ, ಫಳಫಳ ಹೊಳೆಯುವಂತೆ ಮಾಡಬಲ್ಲ ವಿಚಾರತರಂಗಿಣಿಗಳೇ ವಚನಗಳು. ಅಂತಹ ವಚನಗಳನ್ನು ಓದಿ, ಸರಿಯಾಗಿ ಯಥಾವತ್ತಾಗಿ ಅರ್ಥಮಾಡಿಕೊಂಡು, ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಬಸವಪಥಿಕನ ಆದ್ಯ ಕರ್ತವ್ಯ.

ವಚನಗಳನ್ನು ಓದುವಾಗ ಅತ್ಯಂತ ಎಚ್ಚರಿಕೆಯಿಂದ, ಆ ವಚನದ ರಚನೆಯ ಹಿಂದಿರುವ ಸನ್ನಿವೇಶವನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಆಗ ಮಾತ್ರ ನಿರ್ದಿಷ್ಟ ವಚನದ ನಿಖರವಾದ ಅರ್ಥ ನಮಗೆ ಸ್ಪಷ್ಟವಾಗುತ್ತದೆ. ಯಾವುದೋ ಒಂದು ವಚನವನ್ನು ಅದರ ಹಿನ್ನೆಲೆಯನ್ನು ಪರಿಗಣಿಸದೆ, ಸಂದರ್ಭವನ್ನೇ ಅರಿಯದೆ ಅರ್ಥೈಸಲು ಹೊರಟರೆ, ಅಲ್ಲಿ ಅರ್ಥಕ್ಕಿಂತ ಅನರ್ಥವೇ ಹೆಚ್ಚಾಗುವ ಸಂಭವವಿದೆ ಎಂಬ ಸತ್ಯವನ್ನು ಮರೆಯಬಾರದು.

ಸಂಸ್ಕೃತ ಮಂತ್ರ ವಿರೋಧಿ ಆ ವ್ಯಕ್ತಿ ಹೇಳಿದ ಇನ್ನೊಂದು ಮಾತು ಇನ್ನಷ್ಟು ಆಶ್ಚರ್ಯವನ್ನು ಹುಟ್ಟಿಸಿತು.
“ಪೂಜ್ಯ ಮೃತ್ಯುಂಜಯ ಸ್ವಾಮಿಗಳು ಬಸವ ಜಯಂತಿಯನ್ನು ಕಂಡು ಹಿಡಿದವರು. ಹಾಗಿದ್ದರೆ ಅವರ ಗದ್ದುಗೆಯ ಮುಂದೆ ಸಂಸ್ಕೃತ ಮಂತ್ರಗಳೇಕೆ?” ಎಂದು ಅವರು ಪ್ರಶ್ನಿಸಿದರು.

ಆದರೆ ಇಲ್ಲಿ ಇರುವ ವಿಪರ್ಯಾಸವೇನೆಂದರೆ, ಪೂಜ್ಯ ಲಿಂ. ಮೃತ್ಯುಂಜಯ ಸ್ವಾಮಿಗಳು ಎಂದಿಗೂ ಸಂಸ್ಕೃತ ವಿರೋಧಿಗಳಾಗಿರಲಿಲ್ಲ. ಅವರೂ ಮತ್ತು ಲಿಂ. ಹರ್ಡೇಕರ ಮಂಜಪ್ಪ ಅವರು 1913ರಲ್ಲಿ ಬಸವ ಜಯಂತಿಯ ದಿನಾಂಕವನ್ನು ಗುರುತಿಸಿದ್ದು ಸಂಸ್ಕೃತ ವೀರಶೈವ ಪುರಾಣಗಳ ಆಧಾರದಲ್ಲಿಯೇ. ಬಸವ ಜಯಂತಿಯ ದಿನವನ್ನು ಅವರು ನಿರ್ಧರಿಸಿದ್ದು ಭಾರತೀಯ ಪುರಾತನ ಜ್ಯೋತಿಷ್ಯ ಶಾಸ್ತ್ರದ ಕ್ರಮದ ಮೂಲಕ ಎಂಬುದು ಇತಿಹಾಸಾತ್ಮಕ ಸತ್ಯ.

ಮೈಸೂರಿನ ಪ್ರಸಿದ್ಧ ವಿದ್ವಾಂಸರಾದ ಎನ್.ಆರ್. ಕರಿಬಸವ ಶಾಸ್ತ್ರಿಗಳು ಅವರು ಪೂಜ್ಯ ಲಿಂ. ಮೃತ್ಯುಂಜಯ ಸ್ವಾಮಿಗಳಿಗೆ ಬರೆದ ಪತ್ರದಲ್ಲಿ, ‘ಸಂಸ್ಕೃತ ಬಸವಪುರಾಣ’ದಲ್ಲಿ ಉಕ್ತವಾಗಿರುವ ಬಸವಣ್ಣನವರ ಜನನಕಾಲದ ಗ್ರಹಗತಿಗಳನ್ನು ಸೂಚಿಸುವ ಈ ಶ್ಲೋಕವನ್ನು ಉಲ್ಲೇಖಿಸಿ, ಅದರ ಅರ್ಥವನ್ನೂ ವಿವರಿಸಿ ಕಳುಹಿಸಿದ್ದರಂತೆ:

ಮೀನಸ್ಥಿತೇ ಭೃಗೋಃ ಪುತ್ರೇ ಮೇಷಸ್ತೇ ಚ ದಿವಾಕರೇ।
ತುಲಾಸ್ಥಿತೇ ತತ್ಪುತ್ರೇ। ಕರ್ಕಾಟಸ್ಥೇ ಬೃಹಸ್ಪತೌ
ಶಶಾಂಕೇ ರೋಹಿಣೀ ಸಂಸ್ಥೇ| ಮಕರಸ್ಥೇ ಭೂಸುತೇ।
ಶಿಶೋರರ್ಧೋದಯೇ ಜಾತೇ/ ಲಗ್ನ ಕರ್ಕಟ ಸಂಜ್ಞೀಕೇ

ಈ ಶ್ಲೋಕದ ಆಧಾರದಲ್ಲಿ ಕುಂಡಲಿ ಹಾಕಿ ಬಸವಣ್ಣನವರ ಜನನಕಾಲವನ್ನು ನಿರ್ಧರಿಸಬೇಕೆಂದು, ಆಗಿನ ಖ್ಯಾತ ಜ್ಯೋತಿಷಿಗಳಾದ ಹರಪನಹಳ್ಳಿ ಆರ್. ಶಾಂತಪ್ಪಾಜಿಯವರಲ್ಲಿ ಮನವಿ ಮಾಡಲಾಯಿತು. ಅವರು ಈ ಶ್ಲೋಕಾಧಾರವನ್ನು ಅನುಸರಿಸಿ ಕುಂಡಲಿ ಹಾಕಿ, ಶಾಲಿವಾಹನ ಶಕೆ 1037ನೆಯ ಮನ್ಮಥನಾಮ ಸಂವತ್ಸರ, ವೈಶಾಖ ಶುದ್ಧ 4, ಶನಿವಾರ, ಸೂರ್ಯೋದಯನಂತರ ಘಟಿಕಾ 14–24ಕ್ಕೆ, ಕರ್ಕಟ ಲಗ್ನದಲ್ಲಿ, ರೋಹಿಣೀ ನಕ್ಷತ್ರದ ನಾಲ್ಕನೇ ಚರಣದಲ್ಲಿ ಬಸವಣ್ಣ ಜನಿಸಿದ್ದರೆಂದು ನಿರ್ಣಯಿಸಿದರು.

ಇದರಿಂದ ಬಸವಣ್ಣನವರ ಜನನ ಕ್ರಿ.ಶ. 1115ನೆ ಇಸವಿಯೆಂದು ಸಿದ್ಧವಾಗುತ್ತದೆ. ಆದರೆ ಇತ್ತೀಚಿನ ಕೆಲ ವಿದ್ವಾಂಸರು ಕ್ರಿ.ಶ. 1132 ಎಂದು ನಿರ್ಣಯಕ್ಕೆ ಬಂದಿರುವುದರಿಂದ, ಈ 17 ವರ್ಷಗಳ ಅಂತರದ ಕಾರಣವನ್ನು ಇತಿಹಾಸಜ್ಞರು ಇನ್ನೂ ವಿಶ್ಲೇಷಿಸಬೇಕಾಗಿದೆ. ವರ್ಷದ ವ್ಯತ್ಯಾಸ ಏನೇ ಇರಲಿ, ವೈಶಾಖ ಶುದ್ಧದಲ್ಲಿ ಬರುವ ರೋಹಿಣೀ ನಕ್ಷತ್ರದ ದಿನವನ್ನು ಬಸವ ಜಯಂತಿಯಾಗಿ ಆಚರಿಸಬೇಕೆಂದು ಮಂಜಪ್ಪನವರು ತೀರ್ಮಾನಿಸಿದರು. ಈ ನಿರ್ಧಾರಕ್ಕೆ ಶ್ರೀ ಮೃತ್ಯುಂಜಯ ಸ್ವಾಮಿಗಳೂ ದಾವಣಗೆರೆಯ ಪ್ರಮುಖರೂ ಒಪ್ಪಿಗೆ ನೀಡಿದರು.

“ಶುಭಸ್ಯ ಶೀಘ್ರಂ” ಎಂಬಂತೆ, ಅದೇ ವರ್ಷವಾದ 1913ರಲ್ಲಿಯೇ ದಾವಣಗೆರೆಯಲ್ಲಿ ಬಸವ ಜಯಂತಿಯ ಉತ್ಸವವನ್ನು ವಿಧ್ಯುಕ್ತವಾಗಿ ಆಚರಿಸಲಾಯಿತು.

(ಆಧಾರ: ಬಸವಜಯಂತಿ ಆಚರಣೆಯು ಬಂದ ಇತಿಹಾಸ – ಲೇಖಕರು: ಪಂಡಿತ ಚನ್ನಪ್ಪ ಎರೇಸೀಮೆ; ಬಸವಪಥ ನಿಯತಕಾಲಿಕದ “ಬೆಳ್ಳಿ ಬೆಳಗು” ಸಂಪುಟ–2, ವಿಶೇಷ ಸಂಚಿಕೆ–1, ಏಪ್ರಿಲ್ 1977; ಹಾಗೂ ದೇಗುಲ ಪ್ರಭೆ ನಿಯತಕಾಲಿಕದ “ಇತಿಹಾಸ ಪ್ರಭೆ” ವಿಶೇಷ ಅಂಕಣ, ಮಾರ್ಚ್–ಏಪ್ರಿಲ್ 2025 ಸಂಚಿಕೆ; ಸಂಗ್ರಹ: ಶ್ರೀ ವಿ.ಪಿ. ಆರಾಧ್ಯ.)

ಮುರುಘಾಮಠದ ಪೂಜ್ಯ ಲಿಂ. ಮೃತ್ಯುಂಜಯ ಮಹಾಸ್ವಾಮಿಗಳು ಅವರ ಕ್ರಿಯಾಸಮಾಧಿಯ ಮುಂದೆ, ತನ್ನನ್ನು ಬಸವವಾದಿ ಎಂದು ಹೇಳಿಕೊಂಡ ಆ ವ್ಯಕ್ತಿಯೊಂದಿಗೆ ನಾನು ವಾದಕ್ಕಿಳಿಯಲಿಲ್ಲ. ಪವಿತ್ರ ಸ್ಥಳದಲ್ಲಿ ವಾದಕ್ಕಿಂತ ಸಂಯಮವೇ ಶ್ರೇಷ್ಠವೆಂಬ ಭಾವನೆ ನನ್ನನ್ನು ತಡೆಹಿಡಿದಿತ್ತು. ಆದರೆ ಅಲ್ಲಿ ಉಪಸ್ಥಿತರಿದ್ದ ಒಬ್ಬ ವೃದ್ಧರು ಆ ವ್ಯಕ್ತಿಗೆ ಹೇಳಿದ ಮಾತು ಮಾತ್ರ ಅತ್ಯಂತ ಅರ್ಥಗರ್ಭಿತವಾಗಿತ್ತು—

ವಚನಗಳನ್ನು ಶರಣರು ಹೇಳೋದಕ್ಕ ಬರೀಲಿಲ್ಲ
ನಾವೂ ನೀವೂ ಪಾಲಿಸೋದಕ್ಕ ಬರದಾರ.”

ಆ ಮಾತುಗಳು ಆ ವ್ಯಕ್ತಿಗೆ ಅರ್ಥವಾಯಿತೋ ಇಲ್ಲವೋ ನನಗೆ ತಿಳಿಯಲಿಲ್ಲ. ಆದರೆ ಆ ಕ್ಷಣದಲ್ಲಿ ನನಗೆ ಒಂದು ವಿಷಯ ಮಾತ್ರ ಸ್ಪಷ್ಟವಾಯಿತು—ವಚನಗಳು ವಾದಕ್ಕೆ ಅಲ್ಲ, ಬದುಕಿಗೆ.

ಆದರೆ ಆ ಮುಗ್ಧ ಭಕ್ತ ಕುಟುಂಬದ ಜೊತೆ ನಾವು ಸೇರಿ ಮಂಗಳಾರತಿ ಮಾಡುತ್ತಾ ಹಾಡಿದ ಗೀತೆಯ ಸಾಲುಗಳು ಮಾತ್ರ ಅತ್ಯಂತ ಆಳವಾದ ಅರ್ಥವನ್ನು ಹೊತ್ತುಕೊಂಡಿದ್ದವು. ಅವುಗಳು ಕ್ಷಣಿಕ ಉದ್ವಿಗ್ನತೆಯನ್ನು ಮೀರಿ, ಆತ್ಮದೊಳಗೆ ಬೆಳಕು ಹಚ್ಚಿದವು.

ಜ್ಞಾನಪೂರ್ಣಂ ಜಗನ್ಜ್ಯೋತಿ
— ಜ್ಞಾನದಿಂದ ಸಂಪೂರ್ಣವಾದ ವಿಶ್ವದ ಬೆಳಕು.

ನಿರ್ಮಲವಾದ ಮನವೇ ಕರ್ಪೂರದಾರತಿ
— ಪರಿಶುದ್ಧವಾದ ಮನಸ್ಸೇ ಕರ್ಪೂರದ ಆರತಿ (ದೀಪ).

ಅನುದಿನ ಗುರುವಿನ ಅನುರಾಗ ಭಕ್ತಿಯಲಿ
— ಪ್ರತಿದಿನ ಗುರುವಿನ ಮೇಲಿನ ಪ್ರೀತಿ ಮತ್ತು ಭಕ್ತಿಯಿಂದ.

ಜನನಮರಣ ರಹಿತ ಜಂಗಮಗೆ ಬೆಳಗಿರಿ
— ಹುಟ್ಟು–ಸಾವುಗಳಿಲ್ಲದ ಆತ್ಮಕ್ಕೆ ಬೆಳಕನ್ನು ನೀಡಿರಿ.

ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
— ಅನೇಕ ಜನ್ಮಗಳ ಕತ್ತಲೆಯನ್ನು ಬೇಗ ಕಳೆದುಕೊಂಡು.

ಮಾನವ ಜನ್ಮದ ಬೆಳಕಿಲಿ ಸ್ವಾನುಭಾವದ ಸುಖ ತಾನೇ ಕೈ ಸೇರುವುದು
— ಮಾನವ ಜನ್ಮದ ಬೆಳಕಿನಲ್ಲಿ ಸ್ವಾನುಭವದ ಸುಖವು ಸಹಜವಾಗಿ ದೊರಕುತ್ತದೆ.

ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರಿ
— ಅನುಭವಿಸಿ, ಲಿಂಗಕ್ಕೆ (ದೈವಕ್ಕೆ) ಮನಸ್ಸನ್ನು ಒಪ್ಪಿಸಿ ಪ್ರಕಾಶಿಸಿ.

ನಾನೀನೆಂಬುದು ಬಿಡಿರಿ ನರಕವೇ ಪ್ರಾಪ್ತಿ
— ‘ನಾನು–ನೀನು’ ಎಂಬ ಭೇದಭಾವ ಬಿಡದಿದ್ದರೆ ನರಕವೇ ಪ್ರಾಪ್ತವಾಗುತ್ತದೆ.

ಅಷ್ಟವರ್ಣದ ಸ್ಥೂಲವು ಮಾನವ ಜನ್ಮ ಹುಟ್ಟಿ ಬರುವುದು ದುರ್ಲಭವು
— ಈ ಎಂಟು ವರ್ಣಗಳ ಭೌತಿಕ ದೇಹದ ಮಾನವ ಜನ್ಮ ದುರ್ಲಭ.

ಕೊಟ್ಟಾನು ಗುರು ಎಮಗೆ ಮಾಡಿದ ಫಲದಿಂದೆ
— ಗುರುಗಳು ಈ ಜನ್ಮವನ್ನು ನಮಗೆ ನಮ್ಮ ಕರ್ಮಫಲದ ಮೂಲಕ ನೀಡಿದ್ದಾರೆ.

ಹುಟ್ಟಿದ ಮಗನೆಸರು ಶಿವನೆಂದು ಕರೆಯಿರಿ
— ಹುಟ್ಟಿದ ಪ್ರತಿಯೊಬ್ಬ ಮಗುವನ್ನೂ ಶಿವನೆಂದು ಕಾಣಿರಿ.

ಆ ದಿನ ನನಗೆ ಮತ್ತೊಮ್ಮೆ ಅರಿವಾಯಿತು—ಮಂತ್ರವಾಗಲಿ, ವಚನವಾಗಲಿ, ಭಾಷೆಯಾಗಲಿ—ಅವುಗಳ ಗುರಿ ಒಬ್ಬರನ್ನೊಬ್ಬರು ಸೋಲಿಸುವುದಲ್ಲ; ಮನಸ್ಸನ್ನು ಮೃದುವಾಗಿಸಿ, ಬದುಕನ್ನು ಶುದ್ಧಗೊಳಿಸುವುದೇ.

ಮುರುಘಾಮಠದ ಮೌನಸನ್ನಿಧಿಯಲ್ಲಿ ನಡೆದ ಆ ಸಣ್ಣ ಘಟನೆಯು ಒಂದು ಅಸಹಜ ಸತ್ಯವನ್ನು ಬಯಲಿಗೆಳೆದಿತು. ಸಮಸ್ಯೆ ವಚನದಲ್ಲಿಲ್ಲ, ಮಂತ್ರದಲ್ಲಿಲ್ಲ; ಸಮಸ್ಯೆ ಅವುಗಳನ್ನು ಹಿಡಿದುಕೊಂಡಿರುವ ಮನಸ್ಸಿನ ಅಸಹನೆಯಲ್ಲಿ ಇದೆ. ವೀರಶೈವ ಮತ್ತು ಲಿಂಗಾಯತ ಎಂಬ ಹೆಸರುಗಳನ್ನು ವಿಭಜನೆಗೆ ಬಳಸುವ ಪ್ರಯತ್ನಗಳು, ಬಸವಪಥದ ಆತ್ಮವನ್ನೇ ತಪ್ಪಾಗಿ ಅರ್ಥಮಾಡಿಕೊಂಡ ಫಲ. ಅವು ಎರಡು ಧರ್ಮಗಳಲ್ಲ, ಎರಡು ಪಾಳಯಗಳಲ್ಲ; ಒಂದೇ ಚಿಂತನೆಯ, ಒಂದೇ ಅನುಭವದ, ಒಂದೇ ಸಾಮಾಜಿಕ ಕ್ರಾಂತಿಯ ಎರಡು ಉಸಿರಾಟಗಳು.

ಬಸವಪಥವು ಎಂದಿಗೂ ವಿರೋಧದ ರಾಜಕೀಯದ ಮೇಲೆ ನಿಂತಿಲ್ಲ; ಅದು ಏಕತೆಯ ನೈತಿಕತೆಯ ಮೇಲೆ ನಿಂತಿದೆ. ವಚನಗಳು ಘೋಷಣೆಗಳಿಗೆಲ್ಲ ಹುಟ್ಟಿಲ್ಲ, ಜೀವನಕ್ಕೆ ಹುಟ್ಟಿವೆ. ಶರಣರು ವಚನಗಳನ್ನು ರಚಿಸಿದ್ದು ಭಾಷಾ ಶುದ್ಧತೆಯ ವಾದಕ್ಕಾಗಿ ಅಲ್ಲ, ಮನಃಶುದ್ಧಿಯ ಪರಿವರ್ತನೆಗಾಗಿ. ಸಂಸ್ಕೃತ–ಕನ್ನಡ, ಪುರಾಣ–ವಚನ, ವಿಧಿ–ಅನುಭಾವ ಎಂಬ ಬೇಧಗಳನ್ನು ಕಟ್ಟುವಲ್ಲಿ ಆಸಕ್ತಿ ತೋರಿದ ಕ್ಷಣದಲ್ಲೇ ನಾವು ಶರಣರ ಸಮಾಜದಿಂದ ಹೊರಬಿದ್ದಿರುತ್ತೇವೆ.

ವಚನಗಳನ್ನು ಕೈಯಲ್ಲಿ ಹಿಡಿದು ಹೊಡೆಯುವವರು ಅವುಗಳನ್ನು ಶಸ್ತ್ರವಾಗಿಸುತ್ತಾರೆ;

 ವಚನಗಳನ್ನು ಹೃದಯದಲ್ಲಿ ಇಟ್ಟು ಬದುಕುವವರು ಅವನ್ನೇ ದೀಪವಾಗಿಸುತ್ತಾರೆ.

ಈ ದಿನ ಕೇಳಿಬಂದದ್ದು ವಿಭಜನೆಯ ಕೂಗು; ಆದರೆ ಕೇಳಿಸಿಕೊಳ್ಳಬೇಕಾದದ್ದು ಶರಣರ ಮೌನದ ಎಚ್ಚರಿಕೆ. ವೀರಶೈವವೂ ಲಿಂಗಾಯತವೂ ಒಂದೇ — ಇದೊಂದು ನಂಬಿಕೆ ಅಲ್ಲ, ಇತಿಹಾಸ; ಇದೊಂದು ಘೋಷಣೆ ಅಲ್ಲ, ಅನುಭವ.

ಬಸವಣ್ಣನವರು ಈ ಸತ್ಯವನ್ನು ಎಷ್ಟು ಸರಳವಾಗಿ, ಎಷ್ಟು ತೀಕ್ಷ್ಣವಾಗಿ ಹೇಳಿಹೋಗಿದ್ದಾರೆ —

ವಚನದಲ್ಲಿ ನಾಮಾಮೃತ ತುಂಬಿ,
ನಯನದಲ್ಲಿ ಮೂರ್ತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ,
ಕಿವಿಯಲ್ಲಿ ನಿಮ್ಮ ಕೀರ್ತಿ ತುಂಬಿ;
ಕೂಡಲಸಂಗಮದೇವಾ,
ನಿಮ್ಮ ಚರಣಕಮಲದಲಾನು ತುಂಬಿ

***********

“ಲಿಂಗಾಯತ ಧರ್ಮ ಈಗ ವೀರಶೈವ”?

(ಡಾ. ವೀರಣ್ಣ ರಾಜೂರ ಅವರ ಸಾಕ್ಷ್ಯವಿಲ್ಲದ ಆರೋಪಗಳ ವಿರುದ್ಧ ಒಂದು  ಪ್ರತಿಕ್ರಿಯೆ)

——————————-

ಶ್ರೀಕಂಠ ಚೌಕೀಮಠ

ಅಧ್ಯಕ್ಷ

ಅಖಿಲಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ ನವದೆಹಲಿ

————————–

ಪ್ರಧಾನ ದಿನಪತ್ರಿಕೆಯೊಂದರಲ್ಲಿ ದಿನಾಂಕ 16–12–2025 ರಂದು ಪ್ರಕಟವಾದ ವರದಿಯೊಂದು ಓದುಗರ ಗಮನವನ್ನು ಅನಿವಾರ್ಯವಾಗಿ ಸೆಳೆದಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವಿದ್ವಾಂಸರೆಂದು ಗುರುತಿಸಲ್ಪಟ್ಟಿರುವ ಡಾ. ವೀರಣ್ಣ ರಾಜೂರ ಅವರ *“ಲಿಂಗಾಯತ ಧರ್ಮ ಈಗ ವೀರಶೈವ”* ಎಂಬ ಹೇಳಿಕೆಯನ್ನು ಶೀರ್ಷಿಕೆಯಾಗಿ ಪ್ರಕಟಿಸಿರುವುದು ಕೇವಲ ಆಶ್ಚರ್ಯವನ್ನಷ್ಟೇ ಅಲ್ಲ, ಗಂಭೀರವಾದ ವಿಷಾದವನ್ನೂ ಉಂಟುಮಾಡುತ್ತದೆ. ಕಾರಣ, ಈ ಹೇಳಿಕೆ ಒಂದು ವೈಯಕ್ತಿಕ ಅಭಿಪ್ರಾಯದ ಮಟ್ಟಕ್ಕೆ ಸೀಮಿತವಾಗದೆ, ವೀರಶೈವ–ಲಿಂಗಾಯತ ಪರಂಪರೆಯ ಕುರಿತು ಈಗಾಗಲೇ ಸುದೀರ್ಘ ಕಾಲದಿಂದ ನಡೆದಿರುವ ತಾತ್ವಿಕ ಚರ್ಚೆಯನ್ನು ಮತ್ತೊಮ್ಮೆ ಅನಗತ್ಯ ಗೊಂದಲದ ದಿಕ್ಕಿಗೆ ತಳ್ಳುವ ಪ್ರಯತ್ನವಾಗಿದೆ.

ವೃತ್ತಿಜೀವನದ ಅವಧಿಯಲ್ಲಿ ವೀರಶೈವ ಪರಂಪರೆಯನ್ನು ವೈಭವೀಕರಿಸಿ, ನಿವೃತ್ತಿಯ ನಂತರ ಅದೇ ಪರಂಪರೆಯನ್ನು ಸಂಶಯದ ಗೂಡಿನಲ್ಲಿ ನಿಲ್ಲಿಸುವ ಧೋರಣೆ ಕೇವಲ ವ್ಯಕ್ತಿಗತ ವೈರುಧ್ಯವಲ್ಲ; ಅದು ಸಮಾಜದ ಸಮಗ್ರ ಬೌದ್ಧಿಕ ವಾತಾವರಣದ ಮೇಲೆಯೇ ಪರಿಣಾಮ ಬೀರುವ ಗಂಭೀರ ವಿಚಾರವಾಗಿದೆ.

ವೀರಶೈವವನ್ನು ವ್ಯಂಗ್ಯಗೊಳಿಸುವುದು ಅಥವಾ ಅನುಮಾನಾಸ್ಪದವಾಗಿ ನಿರೂಪಿಸುವುದು ಬೌದ್ಧಿಕ ಕ್ರೀಡೆಯಾಗಬಾರದು; ಅದಕ್ಕೆ ದೃಢವಾದ ಸಾಕ್ಷ್ಯಾಧಾರ, ವಿಧಾನಬದ್ಧತೆ ಮತ್ತು ಸಂಶೋಧನಾ ಪ್ರಾಮಾಣಿಕತೆ ಅನಿವಾರ್ಯ. ಇಂತಹ ಹೇಳಿಕೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು ಇಂದಿನ ದಿನಮಾನಗಳಲ್ಲಿ ಮತ್ತಷ್ಟು ಅಗತ್ಯವಾಗಿದೆ, ಏಕೆಂದರೆ ನಾವು ನಿರಂತರವಾಗಿ ಮನಸ್ಸುಗಳನ್ನು ವಿಭಜಿಸುವ ತಂತ್ರಗಾರಿಕೆಗಳಿಗೆ ಬಲಿಯಾಗುತ್ತಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಂಥ ಕೃತ್ಯಗಳನ್ನು ಕಡೆಗಣಿಸುವುದೂ, ಉದಾಸೀನಗೊಳ್ಳುವುದೂ ಬೌದ್ಧಿಕ ಜವಾಬ್ದಾರಿಯ ತ್ಯಾಗವಾಗುತ್ತದೆ.

ಈ ಲೇಖನದಲ್ಲಿ ಡಾ. ವೀರಣ್ಣ ರಾಜೂರ ಅವರ ಹೇಳಿಕೆಗಳಲ್ಲಿ ವರದಿಯಲ್ಲಿ ಉಲ್ಲೇಖಗೊಂಡಿರುವ ಮೂರು ಪ್ರಮುಖ ಅಂಶಗಳನ್ನು ಕ್ರಮಬದ್ಧವಾಗಿ  ಅವಲೋಕಿಸಿರುವೆ.

  1. ಲಿಂಗಾಯತ ಧರ್ಮದ ಪರಿಕಲ್ಪನೆ ವೀರಶೈವವಾಗಿ ರೂಪುಗೊಂಡಿರುವ ಪ್ರಶ್ನೆ;
  2. ಬಸವಾದಿ ಶರಣರ ಪುರಾಣೀಕರಣದ ವಿಚಾರ; ಹಾಗೂ
  3. ವಚನಗಳು ತಾತ್ವಿಕ ಬಂಧನಕ್ಕೆ ಒಳಪಟ್ಟಿವೆ ಎಂಬ ವಾದ

ಈ ಮೂರೂ ಅಂಶಗಳನ್ನು ತಾತ್ವಿಕ, ಐತಿಹಾಸಿಕ ಮತ್ತು ಸಂಶೋಧನಾ ದೃಷ್ಟಿಕೋನದಿಂದ ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ.

  1. ಲಿಂಗಾಯತ–ವೀರಶೈವ ಪರಿಕಲ್ಪನೆಯ ತಾತ್ವಿಕ ನೆಲೆ

“ಬಸವಾದಿ ಶರಣರು ರೂಪಿಸಿದ ಲಿಂಗಾಯತ ಧರ್ಮದ ಪರಿಕಲ್ಪನೆ ಈಗ ವೀರಶೈವವಾಗಿ ರೂಪುಗೊಂಡಿದೆ” ಎಂಬ ಹೇಳಿಕೆ ಹೊಸದಲ್ಲ. ಲಿಂಗಾಯತ ಪರಂಪರೆಯ ತಾತ್ವಿಕ ನೆಲೆ ವೀರಶೈವ ದರ್ಶನದೊಳಗೆಯೇ ರೂಪುಗೊಂಡಿದೆ ಎಂಬ ವಾದವು ಕೇವಲ ಸಂಪ್ರದಾಯವಾದಿಗಳ ಅಭಿಪ್ರಾಯವಲ್ಲ.

ಸ್ವತಃ ಡಾ. ವೀರಣ್ಣ ರಾಜೂರ ಅವರೇ ತಮ್ಮ ಸಂಪಾದಿತ ಗ್ರಂಥ ವೀರಶೈವದರ್ಶನ : ತೌಲನಿಕ ವಿವೇಚನೆ (ಕ್ರಿ.ಶ. 2000) ಯ ಮುನ್ನುಡಿಯಲ್ಲಿ ಬಸವಣ್ಣನವರನ್ನು “ವೀರಶೈವ ನಿರ್ಣಯ ಪರಮಾವತಾರ” ಎಂದು ಗುರುತಿಸಿರುವುದು ಗಮನಾರ್ಹ. ಅಲ್ಲದೆ, ಬಸವತತ್ತ್ವಗಳನ್ನು ಕರ್ನಾಟಕದಿಂದ ಭಾರತಕ್ಕೆ ಹಾಗೂ ವಿಶ್ವಮಟ್ಟಕ್ಕೆ ವಿಸ್ತರಿಸುವ ಉನ್ನತ ಧ್ಯೇಯದರ್ಶನವನ್ನು ಬಸವೇಶ್ವರ ಪರಂಪರೆ ಹೊಂದಿದೆ ಎಂದು ಅವರು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.

ಇದಕ್ಕಿಂತಲೂ ಹೆಚ್ಚಾಗಿ, 2008ರಲ್ಲಿ ಕ.ವಿ.ವಿ. ಧಾರವಾಡದಲ್ಲಿ ನಡೆದ “ವೀರಶೈವ ಆಕರಗಳು”ಎಂಬ ರಾಷ್ಟ್ರಮಟ್ಟದ ವಿಚಾರ ಸಂಕೀರಣದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದ ಡಾ. ವೀರಣ್ಣ ರಾಜೂರ ಅವರು “ತಾರಾವಳಿ, ಶೂನ್ಯ ಸಂಪಾದನೆಗಳಲ್ಲಿ ವೀರಶೈವ” ಎಂಬ ವಿಷಯದ ಕುರಿತು ಬರೆಯುತ್ತ, “ಒಟ್ಟು ತಾರಾವಳಿಗಳಲ್ಲಿ ಬರುವ ವೀರಶೈವ ಉಲ್ಲೇಖಗಳನ್ನು ಗಮನಿಸಿದಾಗ ಕಂಡುಬರುವ ಸಂಗತಿ ಏನೆಂದರೆ, ಆಗಮೋಕ್ತ ವೀರಶೈವ ತತ್ವ ಮತ್ತು ವಚನೋಕ್ತ ಶರಣ ತತ್ವಗಳೆರಡೂ ಇಲ್ಲಿ ಸಮ್ಮಿಳಿತಗೊಂಡಿವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅದೇ ಸಂದರ್ಭದಲ್ಲಿ ಅವರು, “ವೀರಶೈವವು ಶೈವ ಧರ್ಮದ ಒಂದು ಪ್ರಭೇದವಾಗಿ ಆಗಮಗಳ ಕಾಲದಿಂದಲೂ ಪ್ರಚಲಿತವಾದ ಭಾರತದ ಪ್ರಮುಖ ಧರ್ಮಗಳಲ್ಲಿ ಒಂದು. ಅದು ಕಾಲದಿಂದ ಕಾಲಕ್ಕೆ ಅನೇಕ ಸ್ಥಿತ್ಯಂತರಗಳನ್ನು ತಾಳುತ್ತ, ಹಲವಾರು ನೂತನ ಅವಿಷ್ಕಾರಗಳಿಗೆ ಒಳಗಾಗುತ್ತ ಬಂದಿದೆ. ಇದಕ್ಕೆ ತನ್ನದೇ ಆದ ಸಿದ್ಧಾಂತ ಮತ್ತು ವಿಶಿಷ್ಟ ತತ್ವ ಪರಿಭಾಷೆಗಳು ರೂಪಿತವಾಗಿವೆ” ಎಂದು ಹೇಳಿರುವುದೂ ವಿಶೇಷ ಗಮನಾರ್ಹವಾಗಿದೆ.

ಇಂತಹ ಪ್ರಾಮಾಣಿಕ ಹಾಗೂ ಸ್ಪಷ್ಟ ಹೇಳಿಕೆಗಳು ಸ್ವತಃ ಅವರ ಬರಹಗಳು ಮತ್ತು ಸಂಶೋಧನಾ ಪ್ರಬಂಧಗಳಲ್ಲಿ ಲಭ್ಯವಿರುವ ಸಂದರ್ಭದಲ್ಲಿ, ಅದೇ ವಿದ್ವಾಂಸರು ನಿವೃತ್ತಿಯ ನಂತರ ವಿರುದ್ಧಾರ್ಥದ ಹೇಳಿಕೆಗಳನ್ನು ನೀಡುವುದು ಕೇವಲ ತಾತ್ವಿಕ ಗೊಂದಲವನ್ನೇ ಅಲ್ಲ, ಸಂಶೋಧನಾ ಪ್ರಾಮಾಣಿಕತೆಯ ಪ್ರಶ್ನೆಯನ್ನೂ ಎತ್ತುತ್ತದೆ.

ಸಂಶೋಧನೆಯಲ್ಲಿ ನಿಲುವು ಬದಲಾಗುವುದು ಅಸಾಧ್ಯವಲ್ಲ; ಆದರೆ ಆ ಬದಲಾವಣೆ ಹೊಸ ಸಾಕ್ಷ್ಯಗಳು, ಪಠ್ಯವಿಮರ್ಶಾತ್ಮಕ ಅಧ್ಯಯನ ಮತ್ತು ವಿಧಾನಾತ್ಮಕ ವಿಶ್ಲೇಷಣೆಯ ಆಧಾರದ ಮೇಲೆ ಆಗಬೇಕೇ ಹೊರತು ವ್ಯಂಗ್ಯಮಯ ಅಥವಾ ಸಂಶಯಾಸ್ಪದ ಘೋಷಣೆಗಳ ಮೂಲಕ ಅಲ್ಲ.

  1. ಬಸವಾದಿ ಶರಣರ ಪುರಾಣೀಕರಣ: ಐತಿಹಾಸಿಕ ಅನಿವಾರ್ಯತೆ ಮತ್ತು ಮಿತಿಗಳು

ಬಸವಾದಿ ಶರಣರನ್ನು ಪುರಾಣ ಪುರುಷರನ್ನಾಗಿಸಲಾಗಿದೆ” ಎಂಬ ಡಾ. ವೀರಣ್ಣ ರಾಜೂರ ಅವರ ವಾದವನ್ನು ಐತಿಹಾಸಿಕ ಸಂದರ್ಭದಲ್ಲಿಟ್ಟು ಅವಲೋಕಿಸುವ ಅಗತ್ಯವಿದೆ. ಬಸವಣ್ಣನವರ ಸಮಕಾಲಿಕರಲ್ಲಿ ಯಾರೂ ಅವರ ಜೀವನಚರಿತ್ರೆಯನ್ನು ಬರೆದಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ. ಅವರು ಕಾಲವಾದ ಅನೇಕ ವರ್ಷಗಳ ನಂತರ ವೀರಶೈವ ಕವಿಗಳು ಬಸವಣ್ಣನವರ ಚರಿತ್ರೆಯನ್ನು ಪುರಾಣರೂಪದಲ್ಲಿ ದಾಖಲಿಸಿದರು. ಇದನ್ನು ಇತಿಹಾಸದ ವಿಕೃತಿಯೆಂದು ಕರೆಯಲು ಸಾಧ್ಯವಿಲ್ಲ; ಪೂರ್ವಕಾಲೀನ ಸಮಾಜಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರಕ್ರಿಯೆಯೇ ಇದಾಗಿದೆ.

ಪುರಾಣಗಳಲ್ಲಿ ನಿಜವಾದ ಘಟನೆಗಳು ಮತ್ತು ಕಲ್ಪಿತ ಅಂಶಗಳು ಬೆರೆತು ಹೋಗಿರುವುದು ಸಹಜ. ಕವಿಗಳು ಕಥಾನಾಯಕನ ಮಹತ್ವವನ್ನು ಉಜ್ಜಲಗೊಳಿಸುವ ಉದ್ದೇಶದಿಂದ ಪವಾಡಾತ್ಮಕ ಅಂಶಗಳನ್ನು ಸೇರಿಸಿಕೊಂಡಿರಬಹುದು. ಈ ಕಾರಣದಿಂದ ಪುರಾಣಗಳನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ; ಹಾಗೆಯೇ ಅವುಗಳನ್ನು ಅಕ್ಷರಶಃ ಇತಿಹಾಸವೆಂದು ಸ್ವೀಕರಿಸುವುದೂ ಶಿಕ್ಷಣ, ಸಂಶೋಧನೆ ಮತ್ತು ಬೌದ್ಧಿಕ ಚರ್ಚೆಗಳ ದೃಷ್ಟಿಯಿಂದ ಯುಕ್ತವಲ್ಲ. ಆದ್ದರಿಂದ ಪುರಾಣಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಓದಿ, ಇತರ ಮೂಲಗಳೊಂದಿಗೆ ಸಮನ್ವಯಗೊಳಿಸುವುದು ಅವಶ್ಯಕವಾಗುತ್ತದೆ.

ಇಂದಿನ ಅಧ್ಯಯನದಲ್ಲಿ ಬಸವಣ್ಣನವರ ಚರಿತ್ರೆಯನ್ನು ನಿರ್ಮಿಸಿಕೊಳ್ಳಲು ಮುಖ್ಯವಾಗಿ ಮೂರು ವಿಧದ ಮೂಲಗಳು ಲಭ್ಯವಿವೆ.

  1. ಬಸವಣ್ಣನವರ ಹಾಗೂ ಅವರ ಸಮಕಾಲಿಕ ಶರಣರ ವಚನಗಳು;
  2. ವೀರಶೈವ ಕಾವ್ಯ–ಪುರಾಣಗಳು; ಮತ್ತು
  3. ಬಸವಣ್ಣನವರ ಚರಿತ್ರೆ ಹಾಗೂ ವ್ಯಕ್ತಿತ್ವದ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಳಕು ಚೆಲ್ಲುವ ಶಾಸನಗಳು.

ಈ ದೃಷ್ಟಿಯಿಂದ ನೋಡಿದಾಗ, ಸಂಶೋಧಕರಿಂದ ಮಾನ್ಯತೆ ಪಡೆದ ಹದಿಮೂರು ಶಾಸನಗಳು ಬೆಳಕಿಗೆ ಬಂದಿರುವುದು ಮಹತ್ವದ ಸಂಗತಿಯಾಗಿದೆ. ಈ ಶಾಸನಗಳು ಬಸವಣ್ಣನವರ ವ್ಯಕ್ತಿತ್ವ, ಸಾಮಾಜಿಕ ಸ್ಥಾನಮಾನ ಮತ್ತು ಐತಿಹಾಸಿಕ ಅಸ್ತಿತ್ವವನ್ನು ದೃಢಪಡಿಸುವಲ್ಲಿ ಸಹಾಯಕವಾಗಿವೆ.

ಬಸವಣ್ಣನ ಹೆಸರನ್ನು ಅಥವಾ ಅವರ ಪರ್ಯಾಯ ನಾಮಗಳನ್ನು ಉಲ್ಲೇಖಿಸುವ ಶಾಸನಗಳು ಐತಿಹಾಸಿಕ ದೃಷ್ಟಿಯಿಂದ ಅತ್ಯಂತ ಮಹತ್ವವನ್ನು ಹೊಂದಿವೆ. ಸಂಶೋಧಕರಿಂದ ಮಾನ್ಯತೆ ಪಡೆದ, ಸರ್ವಸಮ್ಮತವಾದ ಇಂತಹ ಹನ್ನೊಂದು ಶಾಸನಗಳು ಲಭ್ಯವಿದ್ದು, ಅವುಗಳಲ್ಲಿ ಉಲ್ಲೇಖಿತ ವ್ಯಕ್ತಿಯ ಹೆಸರುಗಳು ಬಸವಣ್ಣನವರದ್ದೇ ಎಂಬುದರಲ್ಲಿ ವಿದ್ವಾಂಸರಲ್ಲಿ ಮೂಲಭೂತ ಭಿನ್ನಾಭಿಪ್ರಾಯವಿಲ್ಲ.

  1. ಕ್ರಿ.ಶ. 1259ರ ಹಿರಿಯೂರ ಶಾಸನದಲ್ಲಿ *ಬಸವಯ್ಯ* ಎಂಬ ಹೆಸರು ಕಾಣಿಸಿಕೊಳ್ಳುತ್ತದೆ.
  2. ಕ್ರಿ.ಶ. 1260ರ ಅರ್ಜುನವಾಡ ಶಾಸನದಲ್ಲಿ *ಬಸವರಾಜ* ಹಾಗೂ *ಸಂಗನಬಸವ* ಎಂಬ ಪರ್ಯಾಯ ನಾಮಗಳು ಉಲ್ಲೇಖಗೊಂಡಿವೆ.
  3. ಕ್ರಿ.ಶ. 1263ರ ಚೌಡದಾನಪುರದ ಎರಡು ಶಾಸನಗಳಲ್ಲಿ *ಸಂಗಮೇಶನ ಪುತ್ರ ಬಸವಯ್ಯ* ಹಾಗೂ *ಸಂಗನಬಸವ* ಎಂಬ ಹೆಸರುಗಳು ಕಾಣುತ್ತವೆ.
  4. ಕ್ರಿ.ಶ. 1279ರ ಕಲ್ಲೆದೇವರಪುರ ಶಾಸನದಲ್ಲಿ *ಬಸವರಾಜ* ಎಂಬ ಹೆಸರು ದೊರಕುತ್ತದೆ.
  5. ಕ್ರಿ.ಶ. 1280ರ ಮರಡಿಪುದ ಶಾಸನದಲ್ಲಿ *ಸಂಗನ ಬಸವಯ್ಯ* ಎಂಬ ಉಲ್ಲೇಖವಿದೆ.
  6. 14ನೇ ಶತಮಾನದ ಗುಡಿಹಾಳ ಶಾಸನದಲ್ಲಿ *ಬಸವರಾಜದೇವರು* ಎಂಬ ಹೆಸರು ಬರುತ್ತದೆ.
  7. ಕ್ರಿ.ಶ. 1660ರ ಆನಂದಪುರ ಮಠದ ತಾಮ್ರಶಾಸನದಲ್ಲಿ *ಬಸವೇಶ್ವರ* ಎಂಬ ಉಲ್ಲೇಖ ಕಂಡುಬರುತ್ತದೆ.
  8. ಕ್ರಿ.ಶ. 1686ರ ಜೋಡೀದಾಸೇನಹಳ್ಳಿ ಶಾಸನದಲ್ಲಿ *ಬಸವರಾಜೇಂದ್ರ* ಎಂಬ ಹೆಸರು ಉಲ್ಲೇಖಿತವಾಗಿದೆ.
  9. ಕ್ರಿ.ಶ. 1700ರ ಕಾನಕಾನಹಳ್ಳಿಯ ಎರಡು ತಾಮ್ರಶಾಸನಗಳಲ್ಲಿ *ಬಸವೇಶ್ವರಸಾಮುಲು* ಹಾಗೂ *ಕಲ್ಯಾಣದ ಬಸವಪ್ಪನವರು* ಎಂಬ ಹೆಸರುಗಳು ಕಾಣಿಸಿಕೊಳ್ಳುತ್ತವೆ.

ಈ ಎಲ್ಲಾ ಶಾಸನಗಳಲ್ಲಿ ಉಲ್ಲೇಖಿತ ವ್ಯಕ್ತಿ ಬಸವಣ್ಣನವರೇ ಎಂಬುದನ್ನು ಐತಿಹಾಸಿಕವಾಗಿ ನಿರ್ಧರಿಸಲು ನೆರವಾಗುವ ಅಂಶವೆಂದರೆ, ಇವುಗಳಲ್ಲಿ ಕೆಲವು ಶಾಸನಗಳು ವೀರಶೈವ ಕಾವ್ಯ–ಪುರಾಣಗಳ ರಚನೆಗಿಂತ ಪೂರ್ವದಲ್ಲಿ ಹಾಕಿಸಲ್ಪಟ್ಟಿರುವುದು. ವಿಶೇಷವಾಗಿ ಕ್ರಿ.ಶ. 1260ರ ಅರ್ಜುನವಾಡ ಶಾಸನ, ಕ್ರಿ.ಶ. 1259ರ ಹಿರಿಯೂರ ಶಾಸನ ಮತ್ತು ಕ್ರಿ.ಶ. 1263ರ ಚೌಡದಾನಪುರ ಶಾಸನಗಳು ಹರಿಹರ ಹಾಗೂ ಪಾಲ್ಕುರಿಕೆ ಸೋಮನಾಥರ ಕಾವ್ಯಗಳಿಗಿಂತ ಮುಂಚಿನವುಗಳಾಗಿವೆ. ಈ ಕಾರಣದಿಂದ, ಬಸವಣ್ಣನವರ ಇತಿವೃತ್ತ, ಶಿವಪಾರಮ್ಯದ ವಿವರ ಹಾಗೂ ಅವರ ಐತಿಹಾಸಿಕ ಅಸ್ತಿತ್ವವನ್ನು ಗುರುತಿಸುವಲ್ಲಿ ಈ ಶಾಸನಗಳು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುತ್ತವೆ.

ಹರಿಹರನು *ಬಸವರಾಜದೇವರ ರಗಳೆ* ಕೃತಿ ರೂಪದಲ್ಲಿ ಬಸವಣ್ಣನವರ ಚರಿತ್ರೆಯನ್ನು ನಿರೂಪಿಸುವುದಕ್ಕಿಂತಲೂ ಮುಂಚೆಯೇ, ಬಸವಣ್ಣನವರ ವೈಯಕ್ತಿಕ ಚರಿತ್ರೆ, ಜನ್ಮಸ್ಥಳ ಮತ್ತು ಕುಟುಂಬಪರ ಹಿನ್ನೆಲೆಯ ಕುರಿತು ಬೆಳಕು ಚೆಲ್ಲುವಲ್ಲಿ ಕ್ರಿ.ಶ. 1260ರ ಅರ್ಜುನವಾಡ ಶಾಸನವು ಮಹತ್ತರ ಪಾತ್ರವನ್ನು ವಹಿಸಿದೆ. ವಿಶೇಷವಾಗಿ, ಬಸವರಾಜದೇವರ ರಗಳೆಯಲ್ಲಿ ಕಾಣುವ ಬಸವಣ್ಣನವರ ತಂದೆಯ ಊರುಗಳ ಕುರಿತ ಸಂದೇಹವನ್ನು ನಿವಾರಿಸುವಲ್ಲಿ ಈ ಶಾಸನ ನಿರ್ಣಾಯಕ ಮಹತ್ವವನ್ನು ಹೊಂದಿದೆ. ಈ ಶಾಸನದಲ್ಲಿ ನಿರೂಪಿತವಾಗಿರುವ ಬಸವಣ್ಣನವರಿಗೆ ಸಂಬಂಧಿಸಿದ ಸಂಗತಿಗಳು ಕಾವ್ಯಾತ್ಮಕ ಮೂಲಗಳಿಗಿಂತ ಹೆಚ್ಚು ಪ್ರಾಚೀನವಾಗಿದ್ದು, ಐತಿಹಾಸಿಕವಾಗಿ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಹೊಂದಿವೆ.

(ಸೌಜನ್ಯ: “ಬಸವಣ್ಣನವರನ್ನು ಕುರಿತ ಅರ್ಜುನವಾಡ ಮತ್ತು ಇತರ ಶಾಸನಗಳು” – ಡಾ. ಸಿ. ನಾಗಭೂಷಣ).

ಈ ಎಲ್ಲ ಶಾಸನಗಳು ಬಸವಣ್ಣನವರ ಹೆಸರಿನ ಕುರಿತು ಹಾಗೂ ಅವರ ಮನೆತನಗಳ ಕುರಿತು ಕೆಲವೇ ಕೆಲವು ಸಾಲುಗಳ ಮಟ್ಟಿಗೆ ಐತಿಹಾಸಿಕ ಬೆಳಕು ಚೆಲ್ಲುತ್ತವೆಯೇ ಹೊರತು, ಬಸವಣ್ಣನವರ ಸಮಗ್ರ ಚರಿತ್ರೆಯನ್ನು ನಿರೂಪಿಸುವುದಿಲ್ಲ. ಶಾಸನಗಳು ಐತಿಹಾಸಿಕ ಅಸ್ತಿತ್ವವನ್ನು ದೃಢಪಡಿಸುವಲ್ಲಿ ಸಹಾಯಕವಾಗಿದ್ದರೂ, ಅವುಗಳಿಂದ ಪೂರ್ಣ ಜೀವನಚಿತ್ರಣವನ್ನು ನಿರೀಕ್ಷಿಸುವುದು ಯುಕ್ತಿಯುಕ್ತವಲ್ಲ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕಾಗುತ್ತದೆ.

ಆದರೆ ಕಳೆದ ಒಂಬೈನೂರು ವರ್ಷಗಳ ಅವಧಿಯಲ್ಲಿ ಕನ್ನಡದ ಸಾಂಸ್ಕೃತಿಕ ಲೋಕವು ಬಸವ, ಬಸವಣ್ಣ, ಬಸವರಾಜ, ಬಸವೇಶ್ವರ ಎಂಬ ನಾನಾ ರೂಪಗಳಲ್ಲಿ ಬಸವ ಪರಂಪರೆಯನ್ನು ನಿರಂತರವಾಗಿ ಎದುರುಗೊಳ್ಳುತ್ತಾ ಅದನ್ನು ಜೀವಂತವಾಗಿಟ್ಟುಕೊಂಡಿದೆ. ಹರಿಹರನ ರಗಳೆಗಳು, ವಚನಗಳ ಪುನರ್‌ದಾಖಲೀಕರಣ, ಶೂನ್ಯ ಸಂಪಾದನೆಗಳು, *ಬಸವಪುರಾಣ*, ಮಂಟೆಸ್ವಾಮಿ ಕಾವ್ಯ, ವಚನಗಳ ಸಂಗ್ರಹ–ಸಂಪಾದನೆ, ಕಂಪೆನಿ ನಾಟಕಗಳು, ಸಮಗ್ರ ವಚನ ಸಂಪುಟಗಳು, ವಚನಗಳ ವಿಶ್ಲೇಷಣೆ ಮತ್ತು ಜಿಜ್ಞಾಸೆಗಳು, ಹಾಗೆಯೇ ಇಂದಿನ ದಿನಮಾನಗಳಲ್ಲಿ ನಡೆಯುತ್ತಿರುವ ವೀರಶೈವ–ಲಿಂಗಾಯತ ಚರ್ಚೆಗಳು—ಈ ಎಲ್ಲವೂ ಬಸವಣ್ಣನವರನ್ನೂ ಅವರ ಸಮಕಾಲೀನ ಶರಣರನ್ನೂ ನಾವು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಸಾಂಸ್ಕೃತಿಕ ಪರಂಪರೆಯ ಜೀವಂತ ಸಾಕ್ಷಿಗಳಾಗಿವೆ. ಈ ದೀರ್ಘ ಮತ್ತು ಸಂಕೀರ್ಣ ಪರಂಪರೆಯ ಪಾತ್ರವನ್ನು ಡಾ. ವೀರಣ್ಣ ರಾಜೂರ ಅವರು ಮರೆಯಬಾರದು.

ವಚನಗಳು ಸ್ವಭಾವತಃ ಹೆಚ್ಚು ವಿಶ್ವಾಸಾರ್ಹವಾದ ಮೂಲಗಳಾಗಿದ್ದರೂ, ಅವು ಬಿಡಿಬಿಡಿಯಾಗಿ ಬಂದಿರುವುದರಿಂದ ಬಸವಣ್ಣನವರ ಸಂಪೂರ್ಣ ಜೀವನಚರಿತ್ರೆಯನ್ನು ನಿರೂಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಮತ್ತೊಂದೆಡೆ, ಪುರಾಣಗಳು ಸಂಪೂರ್ಣ ವಿಶ್ವಾಸಾರ್ಹವಲ್ಲವಾದರೂ, ಅವುಗಳನ್ನು ಸಂಪೂರ್ಣವಾಗಿ ನಿರಾಕರಿಸಿದರೆ ಐತಿಹಾಸಿಕ ಸಾಕ್ಷ್ಯಗಳಲ್ಲೇ ದೊಡ್ಡ ಕೊರತೆ ಉಂಟಾಗುತ್ತದೆ.

ಆದ್ದರಿಂದ ವಚನಗಳನ್ನೂ ಪುರಾಣಗಳನ್ನೂ ಪರಸ್ಪರ ಸಮನ್ವಯಗೊಳಿಸಿಕೊಂಡು ಬಳಸುವ ವಿಧಾನವೇ ಐತಿಹಾಸಿಕವಾಗಿ ಹೆಚ್ಚು ಸಮರ್ಥವಾದ ಮಾರ್ಗವಾಗಿದೆ. ಈ ದೃಷ್ಟಿಯಿಂದ ಹರಿಹರನ *ಬಸವರಾಜದೇವರ ರಗಳೆ* ,ಪಾಲ್ಕುರಿಕೆ ಸೋಮನಾಥನ,ಭೀಮಕವಿಯ, *ಬಸವಪುರಾಣ* ಮತ್ತು ಕಂಚಿ ಶಂಕರಾಧ್ಯರ ವೃಷಭೇಶ್ವರ ಪುರಾಣಂ (ಬಸವ ಚರಿತೆ) ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ.

ಹೀಗಿರುವಾಗ, ಬಸವಾದಿ ಶರಣರನ್ನು ಒಳಗೊಂಡಂತೆ ಚಾರಿತ್ರಿಕ ವ್ಯಕ್ತಿಗಳನ್ನು ಕಂಡಕಂಡಲ್ಲಿ “ಬಸವಾದಿ ಶರಣರ ಪುರಾಣೀಕರಣ” ಎಂದು ಸುಲಭವಾಗಿ ಟೀಕಿಸುವುದು ಅರ್ಥಹೀನವಾಗುತ್ತದೆ. ಬಸವಣ್ಣನವರ ಸಮಗ್ರ ಚರಿತ್ರೆಯೇ ಬಹುಪಾಲು *ಬಸವಪುರಾಣ*ದಲ್ಲಿ ದಾಖಲಾದ ವಿವಿಧ ಘಟನಾವಳಿಗಳ ಆಧಾರದಲ್ಲೇ ರೂಪುಗೊಂಡಿರುವುದರಿಂದ, ಪುರಾಣಗಳನ್ನು ಅತೀ ತಾತ್ಸಾರ ಭಾವದಿಂದ ನೋಡುವ ಡಾ. ವೀರಣ್ಣ ರಾಜೂರ ಅವರ ನಿಲುವನ್ನು ಗಟ್ಟಿಯಾಗಿ ಪ್ರಶ್ನಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ವೀರಶೈವವನ್ನು ನಿಂದಿಸುವ ಉತ್ಸಾಹದಲ್ಲಿ, ಬಸವಣ್ಣನವರ ಚರಿತ್ರೆಗೆ ಜೀವಗಂಗೆಯಂತಿರುವ ವೀರಶೈವ ಪುರಾಣಗಳನ್ನು ತುಚ್ಛವಾಗಿ ಕಾಣುವುದು ತಾತ್ವಿಕವಾಗಿಯೂ ಐತಿಹಾಸಿಕವಾಗಿಯೂ ಅಸಂಗತವಾಗಿದೆ.

ಇಲ್ಲಿ ಕಂಡುಬರುವ ವಿಪರ್ಯಾಸವೆಂದರೆ, ಸ್ವತಃ ಡಾ. ವೀರಣ್ಣ ರಾಜೂರ ಅವರನ್ನು ಒಳಗೊಂಡಂತೆ ಲಿಂಗಾಯತ ಪ್ರತ್ಯೇಕ ಧರ್ಮದ ಪರಿಕಲ್ಪನೆಯನ್ನು ಬೆಂಬಲಿಸುವ ಬಹುತೇಕ ಸಾಹಿತಿಗಳೇ ಬಸವಪುರಾಣದ ಚರಿತ್ರಾನಾಯಕ ಬಸವಣ್ಣನವರನ್ನು ಶೇಕಡಾ ತೊಂಬತ್ತೈದುರಷ್ಟು ಮಟ್ಟಿಗೆ ಅಂಗೀಕರಿಸಿ, ಶಾಸನಗಳಲ್ಲಿ ಉಲ್ಲೇಖಿತ ಬಸವಣ್ಣನವರನ್ನು ಬಹುತೇಕ ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ. ಕಾರಣವೂ ಸ್ಪಷ್ಟವಾಗಿದೆ—ಈ ಶಾಸನಗಳಲ್ಲಿ ಬಸವಣ್ಣನವರ ತಾತ್ವಿಕ ಸಾಧನೆಗಳ ಕುರಿತು ಒಂದೇ ಒಂದು ಶಬ್ದವೂ ಇಲ್ಲ.

ಈ ಸಂಬಂಧ ಸಂಶೋಧಕ ಎಚ್. ದೇವೀರಪ್ಪ ಅವರು ತಮ್ಮ ಅರ್ಜುನವಾಡದ  ಶಿಲಾಲೇಖ”ಎಂಬ ಲೇಖನದಲ್ಲಿ ಅತ್ಯಂತ ತೀಕ್ಷ್ಣವಾದ ವಿಮರ್ಶೆಯನ್ನು ಮುಂದಿಟ್ಟಿದ್ದಾರೆ. ಅವರು, “ಸಂಗನ ಬಸವನ ಅಣ್ಣ ದೇವರಾಜ. ಈಗ ಲಿಂಗೈಕ್ಯನಾಗಿರುವ ಆ ದೇವರಾಜ ಮುನಿಪನ ಔರಸಪುತ್ರನೂ, ಜಂಗಮ ಪರುಷಪ್ರಾಯನಾದ ಬಸವರಸ (ಬಸವಣ್ಣ)ನ ಕರಕಮಲ ಸಂಜಾತನೂ ಆಗಿರುವ ಕಲಿದೇವರಸನು, ‘ಉಳ್ಳವರು ಶಿವಾಲಯವ…’ ಎಂಬ ವಚನದ ಮೂಲಕ ಲಿಂಗವಂತ ಧರ್ಮದ ತಿರುಳನ್ನೇ ನವೀನವಾಗಿ ಪ್ರತಿಪಾದಿಸಿ ಸ್ಥಾವರ ಲಿಂಗಪೂಜೆಯನ್ನು ಸಮರ್ಥವಾಗಿ ಖಂಡಿಸಿರುವ ಬಸವಣ್ಣನವರ ಅಣ್ಣನ ಮಗನೋ, ಮೊಮ್ಮಗನೋ, ಮರಿಮಗನೋ ಆಗಿ, ಒಂದು ಸಾಮಾನ್ಯ ಶಿವಮಂದಿರದ ‘ಪೂಜಾರಿ’ ಯಾಗಿದ್ದನೆಂದು ನಂಬುವುದು, ಅದನ್ನು ಪ್ರಚಾರ ಮಾಡುವುದು ಬಸವಣ್ಣನವರನ್ನೂ ಅವರ ವಿಶ್ವಮಾನ್ಯ ತತ್ವಗಳನ್ನೂ ಕೊಲೆ ಮಾಡಿದಂತೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಆಧಾರದ ಮೇಲೆ ಅವರು ಆ ಶಾಸನವೊಂದನ್ನು ‘ಕೂಟಶಾಸನ’ ಎಂದು ಖಂಡಿಸಿ, ಅದರ ಔಚಿತ್ಯವನ್ನೇ ಪ್ರಶ್ನಿಸಿದ್ದಾರೆ (ಪುಟ 484, *ಸಂಶೋಧನ ಸಂಪುಟ*, ಲೇಖಕ: ಎಚ್. ದೇವೀರಪ್ಪ; ಪ್ರಕಾಶಕರು: ಎನ್.ಆರ್. ವಿಶುಕುಮಾರ್; ನಿರ್ದೇಶಕರು: ಕನ್ನಡ ಸಂಸ್ಕೃತಿ ಇಲಾಖೆ).

ಇಂತಹ ಹಿನ್ನೆಲೆಯಲ್ಲೇ ಡಾ. ವೀರಣ್ಣ ರಾಜೂರ ಅವರಿಗೆ ಒಂದು ಸ್ಪಷ್ಟ, ಮನವಿಪೂರ್ವಕವಾದ ಆಗ್ರಹವನ್ನು ಮಾಡಬೇಕಾಗುತ್ತದೆ. ಪದೇಪದೇ ವೀರಶೈವ ಪದಕ್ಕೆ ಸಂಬಂಧಿಸಿದ ಸಂಶಯಗ್ರಸ್ಥ ಹೇಳಿಕೆಗಳ ಮೂಲಕ ಸಮಾಜದ ಶಾಂತ ವಾತಾವರಣವನ್ನು ಕಲುಷಿತಗೊಳಿಸುವುದಕ್ಕಿಂತ, ತಮ್ಮ ಬಳಿ ಇರುವ ಸ್ವತಂತ್ರ ಹಾಗೂ ಪರಿಶೀಲನೀಯ ಸಾಕ್ಷ್ಯಗಳ ಆಧಾರದ ಮೇಲೆ ಬಸವಾದಿ ಶರಣರನ್ನು ಚಾರಿತ್ರಿಕ ವ್ಯಕ್ತಿಗಳಾಗಿಯೇ ನಿರೂಪಿಸುವ ಜವಾಬ್ದಾರಿಯನ್ನು ಅವರು ಹೊತ್ತುಕೊಳ್ಳಬೇಕಾಗಿದೆ. ಸಾರ್ವಜನಿಕ ಚರ್ಚೆಗೆ ತೊಡಗುವಾಗ, ಇಂತಹ ಜವಾಬ್ದಾರಿಯುತ ನಿಲುವು ವಿದ್ವಾಂಸರಿಂದ ನಿರೀಕ್ಷಿತವಾಗಿರುತ್ತದೆ.

ಆದರೆ ಈ ಕಾರ್ಯದಲ್ಲಿ ಅಪ್ಪಿತಪ್ಪಿಯೂ 13–14ನೇ ಶತಮಾನದ ವೀರಶೈವ ಪುರಾಣಗಳು, ವೀರಶೈವ ರಗಳೆಗಳು ಅಥವಾ ತಾವು ಪದೇಪದೇ ಉಲ್ಲೇಖಿಸುವಂತೆ ಹದಿನಾಲ್ಕನೆಯ ಶತಮಾನದಲ್ಲಿ ತಾವೇ  ವಚನ ಪ್ರಕ್ಷಿಪ್ತತೆಯನ್ನು ಖುದ್ದು ಕಂಡವರಂತೆ ಹೇಳುವ ನೂರೊಂದು ವಿರಕ್ತರ ವಚನ ಸಂಪಾದನೆಗಳನ್ನು ಸಾಕ್ಷಿಯಾಗಿ ಬಳಸದೆ, ಸ್ವತಂತ್ರ ಸಾಕ್ಷ್ಯಗಳ ಸಮೇತ ಶರಣರ ಚರಿತ್ರೆಯನ್ನು ಮೊದಲು ರೂಪಿಸಿ ತೋರಿಸುವುದು ಅಗತ್ಯವಾಗುತ್ತದೆ.

ಅಂತಹ ಕಾರ್ಯವು ತಮ್ಮಿಂದ ಸಾಧ್ಯವಿದ್ದರೆ ಮಾತ್ರ ವೀರಶೈವ ಮತ್ತು ಅದರ ಸಾಹಿತ್ಯದ ಕುರಿತು ಸಾರ್ವಜನಿಕವಾಗಿ ಲಘುವಾಗಿ ಮಾತನಾಡುವ ನೈತಿಕ ಅರ್ಹತೆ ಅವರಿಗೆ ದೊರೆಯುತ್ತದೆ.

  1. ವಚನಗಳು ಮತ್ತು “ತಾತ್ವಿಕ ಬಂಧನ” ಎಂಬ ಪ್ರಶ್ನೆ

“ಸಾಮಾಜಿಕ, ಸಾಹಿತ್ಯಕ ಅಂಶಗಳನ್ನು ಒಳಗೊಂಡಿರುವ ವಚನಗಳು ತಾತ್ವಿಕ ಬಂಧನಕ್ಕೆ ಒಳಪಟ್ಟಿವೆ”* ಎಂಬ ಹೇಳಿಕೆ ಮೂಲತಃ ಅಸ್ಪಷ್ಟವೂ ಸಮಸ್ಯಾತ್ಮಕವೂ ಆಗಿದೆ. ಇಲ್ಲಿ *ತಾತ್ವಿಕ ಬಂಧನ (Philosophical Bondage)* ಎಂಬ ಪರಿಕಲ್ಪನೆಯನ್ನು ಯಾರು ವಿಧಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ—ಸಮಾಜವೋ, ಸಂಪ್ರದಾಯವೋ, ಅಥವಾ ವಿದ್ವಾಂಸರ ವ್ಯಾಖ್ಯಾನವೋ? ಈ ಕುರಿತು ಸ್ಪಷ್ಟತೆ ಇಲ್ಲದೆ ಇಂತಹ ಸಾಮಾನ್ಯೀಕೃತ ಹೇಳಿಕೆಗಳನ್ನು ನೀಡುವುದು ತಾತ್ವಿಕ ಗೊಂದಲವನ್ನೇ ಉಂಟುಮಾಡುತ್ತದೆ.

ಸಾಮಾಜಿಕ ಹಾಗೂ ಸಾಹಿತ್ಯಕ ಅಂಶಗಳು ತಾತ್ವಿಕ ಚಿಂತನೆಯಿಂದ ಸಂಪೂರ್ಣವಾಗಿ ಬೇರ್ಪಟ್ಟಿವೆ ಎಂಬ ಊಹೆಯೇ ಮೂಲತಃ ದೋಷಪೂರ್ಣವಾಗಿದೆ. ವಚನಗಳು ಸಾಮಾಜಿಕವಾಗಿಯೂ ಸಾಹಿತ್ಯಕವಾಗಿಯೂ ಇರುವುದೇ ಅವುಗಳ ತಾತ್ವಿಕ ಶಕ್ತಿಯ ಮೂಲವಾಗಿದೆ. ವಚನಗಳಲ್ಲಿ ವೀರಶೈವ ಪದವನ್ನು 14ನೇ ಶತಮಾನದ ನೂರೊಂದು ವಿರಕ್ತರು ಸೇರಿಸಿದ್ದಾರೆ ಎಂಬ ವಾದವನ್ನು ಮುಂದಿಡುವ ಮೊದಲು, 12ನೇ ಮತ್ತು 14ನೇ ಶತಮಾನದ ತಾಳೆಯೋಲೆಗಳನ್ನು ಸಮಾನಾಂತರವಾಗಿ ಇಟ್ಟು ಪಠ್ಯವಿಮರ್ಶಾತ್ಮಕ ಹಾಗೂ ಶಾಸ್ತ್ರೀಯ ಸಾಕ್ಷ್ಯಗಳನ್ನು ಒದಗಿಸಬೇಕಾಗುತ್ತದೆ. ಕೇವಲ ಊಹೆಗಳು, ಗುರುಪರಂಪರೆಯ (ಡಾ. ಕಲ್ಬುರ್ಗಿ) ಅಭಿಪ್ರಾಯಗಳು ಅಥವಾ ದ್ವೇಷದಿಂದ ಹುಟ್ಟಿದ ಕಲ್ಪನೆಗಳನ್ನು ಅಂತಿಮ ಸತ್ಯವೆಂದು ಸ್ಥಾಪಿಸುವುದು ಸಂಶೋಧನಾ ಶಿಸ್ತಿನ ಲಕ್ಷಣವಲ್ಲ.

ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೊಯಿಲಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ, ಪೂಜ್ಯ ಶ್ರೀ ದಿಂಗಾಲೇಶ್ವರ ಶ್ರೀಗಳೊಂದಿಗೆ ನಡೆದ ಬಹಿರಂಗ ಚರ್ಚೆಯಲ್ಲಿ ಡಾ. ವೀರಣ್ಣ ರಾಜೂರ ಅವರು “ಈಚೆಗೆ ದೊರೆತ ಆಧಾರಗಳನ್ನು ಲಿಂಗಾಯತಕ್ಕೆ ಪರಿಗಣಿಸಬೇಕಾಗುತ್ತದೆ” ಎಂದು ಹೇಳಿರುವುದು ಗಮನಾರ್ಹ. ಹಾಗಾದರೆ, *ಈಚಿನದು ಮಾತ್ರವೇ ತತ್ತ್ವವಾಗುತ್ತದೆಯೇ?* ಎಂಬ ಪ್ರಶ್ನೆ ಅನಿವಾರ್ಯವಾಗಿ ಎದುರಾಗುತ್ತದೆ. ಈ ಕುರಿತು ಡಾ. ವೀರಣ್ಣ ರಾಜೂರ ಅವರು ಪ್ರಾಮಾಣಿಕವಾಗಿ ಉತ್ತರಿಸಬೇಕಾಗಿದೆ.

ಬಸವಾದಿ ಶಿವಶರಣರು ಪೂರ್ವಾಗ್ರಹಪೀಡಿತರಲ್ಲ. ಅವರು ಸಂಪೂರ್ಣ ವಿಶಾಲ ಮನಸ್ಸಿನಿಂದ ಲೌಕಿಕ ಮತ್ತು ಅಲೌಕಿಕ ಜಗತ್ತನ್ನು ಆಳವಾಗಿ ಪರಿಶೀಲಿಸಿದ್ದಾರೆ. ಆಚಾರ, ಅಧ್ಯಾತ್ಮ ಮತ್ತು ಲೌಕಿಕ ವಿಚಾರಗಳನ್ನು ತಾತ್ವಿಕವಾಗಿ ಪೋಣಿಸಿ ವಚನಸಾಹಿತ್ಯವನ್ನು ರಚಿಸಿರುವುದು ಅವರ ಚಿಂತನೆಯ ವ್ಯಾಪ್ತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಡಾ. ವೀರಣ್ಣ ರಾಜೂರ ಅವರಿಗೆ ವಚನಗಳು ತಾತ್ವಿಕ ಬಂಧನದಿಂದ ಮುಕ್ತವಾಗಿವೆ ಎಂದು ಕಾಣಬೇಕಾದರೆ, ಆ ಮುಕ್ತಿ- ಘೋಷಣೆಯಿಂದ ದೊರಕುವುದಿಲ್ಲ. *ತಾತ್ವಿಕ ಮುಕ್ತಿ (Philosophical Liberation)* ವಿಮರ್ಶಾತ್ಮಕ ಚಿಂತನೆ, ಬಹುದೃಷ್ಟಿಕೋನ ಮತ್ತು ತತ್ವಗಳನ್ನು ಸಾಧನವಾಗಿ ಬಳಸುವ ವಿವೇಕಪೂರ್ಣ ಮನೋಭಾವದಿಂದ ಮಾತ್ರ ಸಾಧ್ಯ.

ವೀರಶೈವ–ಲಿಂಗಾಯತ ಪರಂಪರೆಯ ಕುರಿತು ನಡೆಯುವ ಚರ್ಚೆಗಳು ಸಂಶೋಧನೆಯ ಹೆಸರಿನಲ್ಲಿ ಗೊಂದಲ ಬಿತ್ತುವ ಘೋಷಣೆಗಳಾಗಬಾರದು.

ಬಸವಣ್ಣನವರನ್ನು ರಾಜಕೀಯ ಅಥವಾ ವೈಯಕ್ತಿಕ ನಿಲುವುಗಳ ಸೇವೆಗೆ ಬಳಸಿ, ಅವರ ತಾತ್ವಿಕ ಮಹತ್ವವನ್ನು ಮರುಬರೆಯುವ ಪ್ರಯತ್ನಗಳು ಬೌದ್ಧಿಕ ಪ್ರಾಮಾಣಿಕತೆಯ ಪರೀಕ್ಷೆಯಲ್ಲಿ ವಿಫಲವಾಗುತ್ತವೆ.

ವೀರಶೈವವನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಪ್ರಶ್ನೆ ಮಾಡುವುದಕ್ಕೂ ಒಂದು ಮಿತಿಯಿದೆ—ಅದು ಐತಿಹಾಸಿಕ ಸಾಕ್ಷ್ಯವನ್ನು ನಿರ್ಲಕ್ಷಿಸದ, ತಾತ್ವಿಕ ಸತತತೆಯನ್ನು ತುಂಡರಿಸದ ಮತ್ತು ಸಂಶೋಧನೆಯ ಹೆಸರಿನಲ್ಲಿ ವೈಯಕ್ತಿಕ ಅಭಿರುಚಿಗಳನ್ನು ಹೇರುವ ಪ್ರಯತ್ನವಾಗಿರಬಾರದು.

ಆ ಮಿತಿಯನ್ನು ದಾಟಿದ ಕ್ಷಣದಿಂದ ಪ್ರಶ್ನೆ ವಿಮರ್ಶೆಯಾಗುವುದನ್ನು ನಿಲ್ಲಿಸಿ, ಪರಂಪರೆಯನ್ನು ಅಸ್ಥಿರಗೊಳಿಸುವ ಸಾಧನವಾಗುತ್ತದೆ. ನಿಜವಾದ ವಿಮರ್ಶೆ ಪರಂಪರೆಯನ್ನು ಕುಸಿತಗೊಳಿಸುವುದಿಲ್ಲ; ಅದು ಸಾಕ್ಷ್ಯ, ಶಿಸ್ತು ಮತ್ತು ಜವಾಬ್ದಾರಿಯ ನೆಲೆಯಲ್ಲಿ ನಿಂತು ಅದನ್ನು ಇನ್ನಷ್ಟು ಬಲಪಡಿಸುತ್ತದೆ.

-ಶ್ರೀಕಂಠ.ಚೌಕೀಮಠ

 

ಅದ್ವೈತದಿಂದ ಭಕ್ತಿಗೆ: ಶಂಕರಾಚಾರ್ಯರ ಸ್ತೋತ್ರಗಳಲ್ಲಿ ತತ್ತ್ವ ಮತ್ತು ಅನುಭವದ ಏಕತೆ

——————————

ಸಾಕಾರ ಭಕ್ತಿಯಿಂದ ನಿರಾಕಾರ ಬ್ರಹ್ಮನಿಗೆ ಸಾಗುವ ಸಾಧಕನ ಅಂತರ್ಯಾತ್ರೆ

————————————–

ಲೇಖಕ: ಶ್ರೀಕಂಠ. ಚೌಕೀಮಠ.

———————————-

ಇತ್ತೀಚೆಗೆ ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಪವಿತ್ರ ಶಾರದಾಪೀಠದ ದರ್ಶನಾರ್ಥವಾಗಿ ತೆರಳಿದ ಸಂದರ್ಭದಲ್ಲಿ, ಅದೊಂದು ಆಶೀರ್ವಾದದಂತೆ ನನ್ನ ಕೈ ಸೇರಿತು — ಶ್ರೀ ಶಂಕರಾಚಾರ್ಯರ ಸಮಗ್ರ ಸ್ತೋತ್ರ ಮಂಜರಿ ಎಂಬ ಅಪರೂಪದ ಗ್ರಂಥ. ನಾಲ್ಕುನೂರು ಹತ್ತು ಪುಟಗಳ ಈ ವಿಶಾಲ ಕೃತಿಯ ಪರಿವಿಡಿಯನ್ನು ವೀಕ್ಷಿಸಿದಾಗ, ಶಂಕರಭಗವತ್ಪಾದರು ರಚಿಸಿದ ಒಟ್ಟು ಎಪ್ಪತ್ತೇಳು ಸ್ತೋತ್ರಗಳು ಹಾಗೂ ಅವುಗಳ ಕನ್ನಡಾನುವಾದಗಳು ಕ್ರಮಬದ್ಧವಾಗಿ ಅಚ್ಚಾಗಿರುವುದು ನನ್ನ ಗಮನ ಸೆಳೆಯಿತು. ಆ ಸ್ತೋತ್ರಗಳನ್ನು ನಾಲ್ಕು ಪ್ರಮುಖ ವಿಭಾಗಗಳಲ್ಲಿ ಸುವ್ಯವಸ್ಥಿತವಾಗಿ ವಿಂಗಡಿಸಲಾಗಿದೆ:

  • ಶ್ರೀ ಗಣೇಶ ಸ್ತೋತ್ರಗಳು
  • ಶಿವ ಸ್ತೋತ್ರಗಳು
  • ಶ್ರೀ ವಿಷ್ಣು ಭಕ್ತಿ ಸ್ತೋತ್ರಗಳು
  • ಶ್ರೀ ದೇವಿ ಸ್ತೋತ್ರಗಳು

ಈ ವಿಭಾಗಗಳಲ್ಲಿ ನನ್ನ ಮನಸ್ಸಿಗೆ ಅತ್ಯಂತ ಆಪ್ತವಾಗಿ ಸ್ಪಂದಿಸಿದದ್ದು ಶ್ರೀ ಗಣೇಶ ಪಂಚಕ. ಬಾಲ್ಯದಿಂದಲೂ ನನ್ನ ತಂದೆಯ ನಿತ್ಯಪೂಜೆಯ ಆರಂಭದಲ್ಲಿ ಮೃದುಸ್ವರವಾಗಿ ಪ್ರತಿಧ್ವನಿಸುತ್ತಿದ್ದ ಆ ಶ್ಲೋಕಗಳು, ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿವೆ. ವಿಶೇಷವೆಂದರೆ, ತಮ್ಮ ಜೀವನದ ಅಂತಿಮ ದಿನದ ಬೆಳಗಿನ ಪೂಜೆಯಲ್ಲಿಯೂ ಅಪ್ಪ ಅದೇ ಶ್ರೀ ಗಣೇಶ ಪಂಚಕವನ್ನು ಅಚಲ ಭಕ್ತಿಭಾವದಿಂದ ಪಠಿಸಿದ್ದರು. ಆ ಪಂಚಕದ ಪ್ರಾರಂಭ ಶ್ಲೋಕ ಹೀಗಿದೆ:

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್
ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್

ಎಪ್ಪತ್ತೇಳು ಸ್ತೋತ್ರಗಳ ಪರಿವಿಡಿಯನ್ನು ವೀಕ್ಷಿಸುತ್ತ ಕುಳಿತಾಗಲೇ, ನನ್ನ ಮನಸ್ಸಿನಲ್ಲಿ ನಿಧಾನವಾಗಿ ಒಂದು ಗಂಭೀರ ಸಂದೇಹ ಮೂಡಿಬಂತು. ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಏಕೋನತತ್ತ್ವದ ಪರಮಾರ್ಥವನ್ನು ಜಗತ್ತಿಗೆ ಬೋಧಿಸಿದ ಶಂಕರಾಚಾರ್ಯರು — ಹೇಗೆ ಅನೇಕ ದೇವತೆಗಳನ್ನು ಸ್ತುತಿಸುವ ಸ್ತೋತ್ರಗಳನ್ನು ರಚಿಸಿದರು? ಒಂದೆಡೆ ಅದ್ವೈತದ ಏಕತ್ವದ ಘೋಷಣೆ, ಮತ್ತೊಂದೆಡೆ ದ್ವೈತಭಾವದಲ್ಲಿ ಅರಳುವ ಭಕ್ತಿಯ ಅಭಿವ್ಯಕ್ತಿ — ಈ ಎರಡೂ ಭಿನ್ನ ಪ್ರಪಂಚಗಳು ಒಂದೇ ಮನಸ್ಸಿನಲ್ಲಿ ಒಟ್ಟಾಗಿ ಚಲಿಸಲಾರಂಭಿಸಿದವು. ಆ ಕ್ಷಣದಿಂದಲೇ ನನ್ನ ಚಿಂತನೆ, ಶಂಕರಾಚಾರ್ಯರ ತತ್ತ್ವದ ಆಳವನ್ನು ಅರಸುವ ದಿಕ್ಕಿನಲ್ಲಿ ನಿಧಾನವಾಗಿ ಸಾಗತೊಡಗಿತು.

ಈ ಜಿಜ್ಞಾಸೆಗಳೊಡನೆ, ನಾನು ಪೂಜ್ಯ ಗುರುಗಳಾದ ಶ್ರೀ ಶಿವಾತ್ಮಾನಂದ ಪುರಿಯವರಿಗೆ (ಗುರುಕಂದ) ಒಂದು ಸಂದೇಶವನ್ನು ವಿನಯಪೂರ್ವಕವಾಗಿ ಕಳುಹಿಸಿದೆ. ಆ ಸಂದೇಶದಲ್ಲಿ ನನ್ನ ಮನಸ್ಸಿನ ಅಶಾಂತಿ ಮತ್ತು ಅರಿವಿನ ಹಂಬಲ ಎರಡನ್ನೂ ನೇರವಾಗಿ ನಿವೇದಿಸಿಕೊಂಡು ಹೀಗೆ ಪ್ರಾರ್ಥಿಸಿದೆ:

“ಪೂಜ್ಯರೆ,
ಇಂದು ಶೃಂಗೇರಿಯಿಂದ ತಂದ ಒಂದು ಗ್ರಂಥವನ್ನು ಹಾಗೂ ಅದರ ಸಮಗ್ರ ಸಾಹಿತ್ಯವಿವರಣೆಗಳನ್ನು ಓದುತ್ತಿರುವ ಸಂದರ್ಭದಲ್ಲಿ, ನನ್ನ ಮನಸ್ಸಿನಲ್ಲಿ ಕೆಲವು ಜಿಜ್ಞಾಸೆಗಳು ಸಹಜವಾಗಿ ಉದಯಿಸಿದವು. ಈ ಪ್ರಶ್ನೆಗಳು ಅಯೋಗ್ಯವಾಗಿಯೂ ಅಥವಾ ತಪ್ಪಾಗಿ ಕೇಳಲ್ಪಡುವಂತೆಯೂ ಕಂಡರೆ ದಯವಿಟ್ಟು ಕ್ಷಮಿಸಬೇಕು. ನನ್ನ ಉದ್ದೇಶ ಯಾವತ್ತೂ ವಿರೋಧವಲ್ಲ; ಸಾಧನೆಗೆ ಸರಿಯಾದ ದಿಕ್ಕು, ತತ್ತ್ವಕ್ಕೆ ಸ್ಪಷ್ಟತೆ ಮತ್ತು ಆತ್ಮೋನ್ನತಿಯ ಮಾರ್ಗವನ್ನು ಅರಿಯುವುದು ಮಾತ್ರ.

ನನಗೆ ಸ್ಪಷ್ಟತೆ ಬೇಕಿರುವ  ವಿಷಯ:
ಅದ್ವೈತ ತತ್ತ್ವ ಮತ್ತು ದೇವತಾ ಉಪಾಸನೆಯ ಸಂಬಂಧ —
ಶಂಕರಾಚಾರ್ಯರು ‘ಅಹಂ ಬ್ರಹ್ಮಾಸ್ಮಿ’ ಎಂದು ಅದ್ವೈತ ತತ್ತ್ವವನ್ನು ಬೋಧಿಸಿದಾಗ, ಏಕೆ ಅವರು ಅನೇಕ ದೇವತೆಗಳ ಆರಾಧನೆಯನ್ನು ಪ್ರೋತ್ಸಾಹಿಸಿದರು? ಇದು ಪರಸ್ಪರ ವಿರೋಧವೆಂದು ಕಾಣಿಸುವುದಿಲ್ಲವೇ?

ಪೂಜ್ಯರೆ,
ಈ ಪ್ರಶ್ನೆಗಳನ್ನು ನಾನು ತರ್ಕಕ್ಕಾಗಲೀ ವಿರೋಧಕ್ಕಾಗಲೀ ಕೇಳುವುದಿಲ್ಲ; ಕೇವಲ ತಿಳಿವಳಿಕೆಗಾಗಿ, ಆತ್ಮಶೋಧನೆಗಾಗಿ ಕೇಳುತ್ತಿದ್ದೇನೆ.”

ನನ್ನ ಈ  ಮನವಿಗೆ ಪೂಜ್ಯ ಶ್ರೀ ಶಿವಾತ್ಮಾನಂದ ಪುರಿಯವರು   ಸ್ಪಂದಿಸಿ, ಸ್ವಾಮಿ ಹರ್ಷಾನಂದ ಜಿ. ಮಹಾರಾಜರ “ಪ್ರವಚನಮಾಲೆ – ಅಂತರಂಗದ ಅವಲೋಕನ: ಶಂಕರಾಚಾರ್ಯರ ಜೀವನಚರಿತ್ರೆ” (ಭಾಗ ೧ ರಿಂದ ೩) ಅನ್ನು ನನಗೆ ಕಳುಹಿಸಿ ಮಾರ್ಗದರ್ಶನ ನೀಡಿದರು. ಅದು ನನ್ನ ಜಿಜ್ಞಾಸೆಗೆ ಉತ್ತರದ ಮೊದಲ ಕಿರಣವಾಯಿತು.

ಆ ಪ್ರವಚನಮಾಲೆಯ ಪ್ರಾಸ್ತಾವಿಕ ಭಾಗದಲ್ಲಿಯೇ ಸ್ವಾಮಿ ಹರ್ಷಾನಂದ ಜಿ. ಮಹಾರಾಜರು ತಮ್ಮ ಮಾತನ್ನು ಮಹಾಭಾರತದ ಪ್ರಸಿದ್ಧ “ಯಕ್ಷಪ್ರಶ್ನೆ”ಯೊಂದಿಗೆ ಆರಂಭಿಸುತ್ತಾರೆ. ಯಕ್ಷನು ಧರ್ಮರಾಜನಿಗೆ ಕೇಳುವ ಪ್ರಶ್ನೆ — “ದಾರಿ ಯಾವುದು?” — ಮುಕ್ತಿಯ ದಾರಿ ಯಾವುದು ಎಂಬ ಆ ಒಂದು ಪ್ರಶ್ನೆಯೇ ನನ್ನ ಸಂದೇಹಕ್ಕೆ ಉತ್ತರದ ಮೊದಲ ಹೆಜ್ಜೆಯಂತೆ ನನಗೆ ಭಾಸವಾಯಿತು.

ನನ್ನ ಚಿಂತನೆ ಮತ್ತೊಮ್ಮೆ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಅಗಾಧ ಸಮುದ್ರದ ಕಡೆಗೆ ಹರಿಯತೊಡಗಿತು. ಅದರ ಅರ್ಥವ್ಯಾಪ್ತಿ, ತತ್ತ್ವದ ಆಳ, ವ್ಯಾಖ್ಯಾನದ ಸೂಕ್ಷ್ಮತೆ ಮತ್ತು ಅದರ ಗುಹ್ಯಾರ್ಥವನ್ನು ಅರಸಬೇಕೆಂಬ ಆಂತರಿಕ ಪ್ರೇರಣೆ ಮತ್ತಷ್ಟು ಗಾಢವಾಯಿತು.

ಶಂಕರಾಚಾರ್ಯರು ಪ್ರತಿಪಾದಿಸಿದ ದಾರ್ಶನಿಕ ಚಿಂತನೆಯ ಹೃದಯಸಾರವೇ — “ಬ್ರಹ್ಮ ಸತ್ಯಂ, ಜಗತ್ ಮಿಥ್ಯ; ಜೀವೋ ಬ್ರಹ್ಮೈವ ನಾಪರ” ಎಂಬ ಮಹಾವಾಕ್ಯ. ಈ ಏಕವಾಕ್ಯವೇ ಅವರ ತತ್ತ್ವನಿರೂಪಣೆಯ ಪರಿಪೂರ್ಣ ಸಮಾಪ್ತಿ. ವೈಯಕ್ತಿಕ ಆತ್ಮವಾದ ಜೀವ, ಅವನು ಅನುಭವಿಸುವ ಜಗತ್ತು ಎಂಬ ಜಗತ್ ಮತ್ತು ಪರಮಸತ್ಯಸ್ವರೂಪವಾದ ಬ್ರಹ್ಮನ್ — ಇವುಗಳ ವಾಸ್ತವಿಕತೆಯನ್ನು ಒಂದೇ ಅದ್ವೈತ ದೃಷ್ಟಿಕೋನದಲ್ಲಿ ಏಕೀಕರಿಸುವ ಶಕ್ತಿ ಈ ತತ್ತ್ವದಲ್ಲಿದೆ. ಜೀವ ಮತ್ತು ಬ್ರಹ್ಮನ ನಡುವಿನ ಸಂಬಂಧವು ಸ್ವತಂತ್ರ ಸತ್ಯದ ಸಂಬಂಧವಲ್ಲ; ಅದು ಪರಮಸತ್ಯದ ಮೇಲೆ ನಿಂತ ಸಾಪೇಕ್ಷ ವಾಸ್ತವದ ಅನುಭವ, ಅಂದರೆ ಸತ್ಯ–ಮಿಥ್ಯಗಳ ನಡುವಿನ ಸಂಬಂಧ.

ಈ ತತ್ತ್ವವನ್ನು ಇನ್ನಷ್ಟು ಸ್ಪಷ್ಟಗೊಳಿಸುವಂತೆ, “ಜೀವೋ ಬ್ರಹ್ಮೈವ ನಾಪರ” ಎಂಬ ವಾಕ್ಯವು ವ್ಯಕ್ತಿಯೇ ಬ್ರಹ್ಮನಾಗಿದ್ದಾನೆ, ಅವನು ಬೇರೆ ಯಾರೂ ಅಲ್ಲ ಎಂಬ ಸತ್ಯವನ್ನು ಘೋಷಿಸುತ್ತದೆ. ಮೊದಲ ವಾಕ್ಯ ಬ್ರಹ್ಮನನ್ನೇ ಪರಮಸತ್ಯವೆಂದು ಸ್ಥಾಪಿಸಿದರೆ, ಎರಡನೆಯದು — “ಆ ಸತ್ಯವೇ ನೀನು” ಎಂಬ ಆತ್ಮಗುರುತನ್ನು ನೀಡುತ್ತದೆ. ಹೀಗೆ, ಪರಮಸತ್ಯವಾದ ಬ್ರಹ್ಮ, ಅನುಭವಿಸುವ ಜೀವ ಮತ್ತು ಅನುಭವದ ಕ್ಷೇತ್ರವಾದ ಜಗತ್ತು — ಈ ಮೂರೂ ತತ್ತ್ವದೃಷ್ಟಿಯಲ್ಲಿ ವಿಭಿನ್ನವಲ್ಲ; ಭೇದವು ಅಜ್ಞಾನದಿಂದ ಮಾತ್ರ ಕಾಣಿಸುತ್ತದೆ. ಜ್ಞಾನೋದಯವಾದಾಗ ಇವೆಲ್ಲವೂ ಒಂದೇ ಪರಮಸತ್ಯದಲ್ಲಿ ಲೀನವಾಗಿರುವುದೇ ಅದ್ವೈತದ ಸಾರ.

ಇಲ್ಲಿ ಉಲ್ಲೇಖಿಸಲ್ಪಡುವ ಮಿಥ್ಯ ಎಂಬ ತತ್ತ್ವವು, ಸಂಪೂರ್ಣ ಪರಮ ವಾಸ್ತವವಾದ ಬ್ರಹ್ಮನ ಹೊರತಾಗಿ, ಎರಡು ವಿಧದ ಸಾಪೇಕ್ಷ ವಾಸ್ತವಿಕತೆಗಳನ್ನು ಒಳಗೊಂಡಿದೆ: ವ್ಯವಹಾರಿಕ ಸತ್ಯ (Practical/Empirical Reality) ಮತ್ತು ಪ್ರತಿಭಾಸಿಕ ಸತ್ಯ(Illusory/Imagined Reality).  ವ್ಯವಹಾರಿಕ ಸತ್ಯವೆಂದರೆ, ಎಲ್ಲರಿಗೂ ಸಾಮಾನ್ಯವಾಗಿ ಅನುಭವವಾಗುವ ಜಗತ್ತು — ದೈನಂದಿನ ಕಾರ್ಯವ್ಯವಹಾರಗಳ ಮಟ್ಟಿನಲ್ಲಿ ನಿಜವೆಂದು ಕಾಣಿಸುವ ವಸ್ತುನಿಷ್ಠ ವಾಸ್ತವ. ಅದರ ವಿರುದ್ಧವಾಗಿ, ಪ್ರತಿಭಾಸಿಕ ಸತ್ಯವೆಂದರೆ, ಒಬ್ಬ ವ್ಯಕ್ತಿಯ ಮನಸ್ಸಿನ ತಪ್ಪು ಗ್ರಹಿಕೆಯಿಂದ ಮಾತ್ರ ಹುಟ್ಟುವ, ಇತರರಿಗೆ ಅಸ್ತಿತ್ವವಿಲ್ಲದ ವ್ಯಕ್ತಿನಿಷ್ಠ ಭಾಸ. ಉದಾಹರಣೆಗೆ, ನಾವು ಕಾಣುವ ಈ ಪ್ರಪಂಚ ವ್ಯವಹಾರಿಕ ಸತ್ಯವಾದರೆ, ಹಗ್ಗವನ್ನು ಹಾವು ಎಂದು ತಪ್ಪಾಗಿ ಕಾಣುವುದು ಪ್ರತಿಭಾಸಿಕ ಸತ್ಯ. ಈ ಎರಡೂ ಸ್ವತಂತ್ರ ಪರಮಸತ್ಯವಲ್ಲ; ಅವು ಅವಲಂಬಿತ ವಾಸ್ತವಗಳು, ಸಂಪೂರ್ಣ ಸತ್ಯದ ಆಶ್ರಯದಿಂದ ಮಾತ್ರ ಅಸ್ತಿತ್ವ ಹೊಂದುವ ಮಿಥ್ಯ.

ಸತ್ಯ ಮತ್ತು ಮಿಥ್ಯಗಳ ನಡುವಿನ ಸಂಬಂಧವನ್ನು ಸಮುದ್ರ ಮತ್ತು ಅಲೆಯ ಉಪಮಾನದ ಮೂಲಕ ಸುಲಭವಾಗಿ ಗ್ರಹಿಸಬಹುದು. ಅಲೆ ಎಂದರೆ ಸಮುದ್ರಕ್ಕೆ ನೀಡಿದ ಒಂದು ಹೆಸರು ಮತ್ತು ರೂಪ; ಅದರ ಅಸ್ತಿತ್ವವು ನೀರಿಗೆ ಅವಲಂಬಿತ, ಆದರೆ ನೀರಿನ ಅಸ್ತಿತ್ವಕ್ಕೆ ಅಲೆಯ ಅವಲಂಬನೆ ಇಲ್ಲ. ಅಲೆ ಮಿಥ್ಯ; ನೀರು ಸತ್ಯ. ಇದೇ ರೀತಿಯಾಗಿ, ಜಗತ್ತು ಬ್ರಹ್ಮನ ಮೇಲೆಯೇ ನಿಂತಿರುವ ಅವಲಂಬಿತ ವಾಸ್ತವ; ಬ್ರಹ್ಮನು ಮಾತ್ರ ಪರಿಪೂರ್ಣ ಸತ್ಯ. ಹಗ್ಗವಿಲ್ಲದೆ ಹಾವು ಕಾಣಿಸಿಕೊಳ್ಳದಂತೆ, ಬ್ರಹ್ಮನಿಲ್ಲದೆ ಜಗತ್ತಿನ ಅನುಭವವೂ ಸಾಧ್ಯವಿಲ್ಲ. ಏಕೆಂದರೆ ಮಿಥ್ಯವು ತನ್ನ ತಲಾಧಾರವಾಗಿರುವ ಪರಮಸತ್ಯವಿಲ್ಲದೆ ಸ್ವತಃ ಪ್ರತ್ಯಕ್ಷಗೊಳ್ಳುವ ಶಕ್ತಿಯನ್ನೇ ಹೊಂದಿಲ್ಲ.

ಅದ್ವೈತ ತತ್ತ್ವವನ್ನು ಆಳವಾಗಿ ಗ್ರಹಿಸಲು ಯತ್ನಿಸಿದಾಗ, ಅದೇ ತತ್ತ್ವವನ್ನು ಪ್ರತಿಪಾದಿಸಿದ ಶಂಕರಾಚಾರ್ಯರೇ ತಮ್ಮಿಂದಲೇ ರಚಿಸಿದ ಎಪ್ಪತ್ತೇಳು ಸ್ತೋತ್ರಗಳನ್ನು ಹೇಗೆ ಒಂದೇ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕು ಎಂಬ ಪ್ರಶ್ನೆ ನನ್ನೊಳಗೆ ಸಹಜವಾಗಿ ಉದಯಿಸಿತು. ನಿರಾಕಾರವಾದ ಅದ್ವೈತದ ತತ್ತ್ವ ಮತ್ತು ಸ್ತೋತ್ರಗಳಲ್ಲಿ ಪ್ರಕಾಶಿಸುವ ಸಾಕಾರ ಭಕ್ತಿಭಾವ — ಈ ಎರಡನ್ನೂ ಒಂದೇ ತಳಹದಿಯಲ್ಲಿ ಪ್ರತಿಷ್ಠಾಪಿಸಲು ನನ್ನ ಪ್ರಯತ್ನ ಆರಂಭದಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಈ ಗ್ರಂಥದ ಕನ್ನಡ ಅನುವಾದಕರಾದ ಡಾ. ಬಿ.ಜೆ. ರಂಗನಾಥ ಅವರ ವಿವರಣೆ ನನ್ನ ಮನಸ್ಸಿಗೆ ಒಂದು ದೀಪದಂತೆ ಬೆಳಕು ತಂದಿತು.

ಅವರ ಅಭಿಪ್ರಾಯದಂತೆ, ಪರಮಾತ್ಮನು ನಾಮರೂಪಗಳಿಂದ ಅತೀತನಾಗಿದ್ದು, ದೇಹರಹಿತನಾಗಿ, ಎಲ್ಲ ಬಾಹ್ಯ–ಆಂತರ ಭೇದಗಳನ್ನು ಮೀರಿ ಅಪರೋಕ್ಷ ಬ್ರಹ್ಮಸ್ವರೂಪನಾಗಿ ಅಸ್ತಿತ್ವದಲ್ಲಿದ್ದಾನೆ. ಅವನು ನಿತ್ಯಜ್ಞಾನಮಯನಾಗಿರುವ ವಿಜ್ಞಾನಘನ; ಆಕಾಶದಂತೆ ಪರಿಪೂರ್ಣ, ಅಶೇಷ ಮತ್ತು ಅವ್ಯಕ್ತ ಪರಮವಸ್ತು. ಈ ಬ್ರಹ್ಮನು ಸ್ಥೂಲವೂ ಅಲ್ಲ, ಸೂಕ್ಷ್ಮವೂ ಅಲ್ಲ; ಆದರೆ “ಸತ್ಯಂ–ಜ್ಞಾನಂ–ಅನಂತಂ ಬ್ರಹ್ಮ” ಎಂಬ ಘೋಷಣೆಯ ಮೇಲೆ ನಿಂತಿರುವ ಪರಮಸತ್ಯ. ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಯಮಾತ್ಮಾ ಬ್ರಹ್ಮ ಎಂಬ ಮಹಾವಾಕ್ಯಗಳು, ಆತ್ಮ ಮತ್ತು ಬ್ರಹ್ಮನ ಏಕತೆಯನ್ನು ಒಳಗೂ ಹೊರಗೂ, ವ್ಯಕ್ತಿಯಲ್ಲಿಯೂ ವಿಶ್ವದಲ್ಲಿಯೂ ಒಂದೇ ರೀತಿಯಲ್ಲಿ ಘೋಷಿಸುತ್ತವೆ. ಆತ್ಮವೇ ಪರಮಾತ್ಮ, ಜೀವನೇ ಬ್ರಹ್ಮ — ಇದೇ ಅದ್ವೈತದ ಮೂಲಸಂಧಾನ.

ಆದರೆ, ಈ ನಿರಾಕಾರ ಬ್ರಹ್ಮತತ್ತ್ವವನ್ನು ಅನುಭವದ ಮಟ್ಟಕ್ಕೆ ತಲುಪಿಸಲು, ಜಿಜ್ಞಾಸುವಿನ ಮನಸ್ಸಿಗೆ ರೂಪದ ಆಧಾರವೂ ಅಗತ್ಯವೆಂದು ಶಂಕರರು ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಸಾಧನೆಯ ಕ್ರಮ ಹೀಗಿದೆ:
ಕರ್ಮದಿಂದ ಭಕ್ತಿ, ಭಕ್ತಿಯಿಂದ ಜ್ಞಾನ, ಜ್ಞಾನದಿಂದ ಮುಕ್ತಿ.
ಇವೇ ಸಂಸಾರಬಂಧನದಿಂದ ವಿಮುಕ್ತಿಗೆ ಕರೆದೊಯ್ಯುವ ಕ್ರಮಬದ್ಧ ಹಾದಿ.

ಜ್ಞಾನಸೋಪಾನವನ್ನು ಏರಲು ಸಾಧಕನು ಕರ್ಮದಿಂದ ಪ್ರಾರಂಭಿಸಿ, ಭಕ್ತಿಯ ಮೂಲಕ ಜ್ಞಾನಕ್ಕೆ, ಜ್ಞಾನದಿಂದ ಮೋಕ್ಷಕ್ಕೆ ಸಾಗಬೇಕು. ವೇದೋಕ್ತ ಕರ್ಮವನ್ನು ನಿಷ್ಠೆಯಿಂದ ಆಚರಿಸದೆ ಭಕ್ತಿ ಶುದ್ಧವಾಗುವುದಿಲ್ಲ; ಭಕ್ತಿ ಶುದ್ಧವಾಗದೆ ಜ್ಞಾನೋದಯ ಸಂಭವಿಸುವುದಿಲ್ಲ; ಮತ್ತು ಜ್ಞಾನೋದಯವಿಲ್ಲದೆ ಮುಕ್ತಿಯ ಅನುಭವ ಸಾಧ್ಯವಲ್ಲ. ಭಕ್ತಿಯ ಹಂತಗಳಲ್ಲಿ ಪರಮಾತ್ಮನು ಭಕ್ತನಿಗೆ ಸಾಕಾರರೂಪದಲ್ಲಿ ಗೋಚರಿಸುತ್ತಾನೆ — ಗಣಪತಿಯಾಗಿ, ಶಿವನಾಗಿ, ವಿಷ್ಣುವಾಗಿ ಅಥವಾ ದೇವಿಯಾಗಿ. ಈ ರೂಪಾನುಭವಕ್ಕೆ, ದೇವರನ್ನು ವಿವಿಧ ಹಂತಗಳಲ್ಲಿ ದೃಷ್ಟಿಸಲು, ದೇವತಾ ಸ್ತೋತ್ರಗಳೇ ಸಾಧಕನಿಗೆ ಸೇತುವೆಯೂ ದಾರಿದೀಪವೂ ಆಗುತ್ತವೆ.

ಅದರಲ್ಲೇ ಶಂಕರಭಗವತ್ಪಾದರು, ಅದ್ವೈತ ತತ್ತ್ವವನ್ನು ಬೋಧಿಸಿದರೂ, ಭಕ್ತನ ಸಾಧನೆಗೆ ಅನುಕೂಲವಾಗುವಂತೆ ಅನೇಕ ಸ್ತೋತ್ರಗಳನ್ನು ರಚಿಸಿದರು. ಮನಸ್ಸನ್ನು ರೂಪದಿಂದ ನಿರಾಕಾರದತ್ತ ನಿಧಾನವಾಗಿ ಕೊಂಡೊಯ್ಯುವ, ಮಗು ತಾಯಿಯ ಕೈ ಹಿಡಿದು ನಡೆಯುವಂತೆ ಹಿಡಿದು ನಡೆಸುವ ಕರುಣಾಮಯ ಸಾಧನವೇ ಈ ಸ್ತೋತ್ರಗಳು. ಇಲ್ಲಿ ಅದ್ವೈತ ಮತ್ತು ಸ್ತೋತ್ರಗಳ ನಡುವೆ ಯಾವುದೇ ವಿರೋಧವಿಲ್ಲ; ಅದು ಸಾಧನೆಯ ಪಥದಲ್ಲಿ ಕ್ರಮಬದ್ಧವಾದ ಪ್ರಗತಿ — ರೂಪದಲ್ಲಿ ಆರಂಭಿಸಿ, ನಿರಾಕಾರದಲ್ಲಿ ಲಯವಾಗುವ ಆಂತರ್ಯಾತ್ರೆ.

ವೈದಿಕ ಧರ್ಮದ ಪುನರುತ್ಥಾನಕ್ಕಾಗಿ ಶಂಕರಾಚಾರ್ಯರು ಇಡೀ ಭಾರತಖಂಡವನ್ನು ಎರಡು ಬಾರಿ ವಿಜಯಯಾತ್ರೆಗೆ ಒಳಪಡಿಸಿದರು. ಈ ಮಹಾಯಾತ್ರೆಗಳ ಸಂದರ್ಭದಲ್ಲಿ ಅವರು ಅನೇಕ ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿ ಪ್ರತಿಷ್ಠಿತ ದೇವತೆಗಳನ್ನು ಸ್ತುತಿಸಿ ಸ್ತೋತ್ರಗಳನ್ನು ರಚಿಸಿದರು. ಈ ಸ್ತೋತ್ರಗಳಲ್ಲಿ ಕೇವಲ ಅಲಂಕಾರವಲ್ಲ; ಅವು ಭಕ್ತನ ಮನಸ್ಸಿನಲ್ಲಿ ಭಾವೋದ್ಧೀಪನ ಮೂಡಿಸುವ ಶಕ್ತಿಸಾಧನಗಳು. ಶಂಕರರ ಸ್ತೋತ್ರಗಳಲ್ಲಿ ಸುಲಲಿತ ಸಾಹಿತ್ಯಶೈಲಿ, ಕವಿತ್ವದ ನಿಪುಣತೆ, ಸಂಸ್ಕೃತಭಾಷೆಯ ಚಾತುರ್ಯ, ಪ್ರಕೃತಿಯ ದಿವ್ಯ ಸೌಂದರ್ಯ, ತಾಯಿಯ ಸೌಮ್ಯ ಮಮತೆ ಹಾಗೂ ಕವಿಯ ಸೂಕ್ಷ್ಮ ಪ್ರಯೋಗಗಳು ದಿವ್ಯಾನುರಣನದಂತೆ ಆಪ್ತವಾಗಿ ಪ್ರತಿಧ್ವನಿಸುತ್ತವೆ. ಅವುಗಳನ್ನು ಭಕ್ತಿಯಿಂದ ಪಠಿಸಿದಾಗ, ಭಕ್ತನಿಗೆ ತಾನೇ ಆ ದೇವತೆಯ ಸಾನ್ನಿಧ್ಯದಲ್ಲಿರುವಂತೆ, ದೇವರ ಸಾನ್ನಿಧ್ಯವನ್ನು ನೇರವಾಗಿ ಅನುಭವಿಸುವಂತೆ, ಮನಸ್ಸೇ ದೇಗುಲವಾಗಿ ಪರಿವರ್ತಿತವಾಗುತ್ತದೆ.

ಶಂಕರಭಗವತ್ಪಾದರು ರಚಿಸಿದ ಸ್ತೋತ್ರಗಳಲ್ಲಿ ಭಕ್ತಿ ಪ್ರಧಾನ ಸ್ವರವಾಗಿದ್ದರೂ, ಅವುಗಳ ಆಂತರಾಳದಲ್ಲಿ ಅದ್ವೈತದ ತತ್ತ್ವಸೂತ್ರಗಳು ಅತಿ ಸೂಕ್ಷ್ಮವಾಗಿ ಜೋಡಿಸಿಕೊಂಡಿವೆ. ಸ್ತೋತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ, ಕವಿತ್ವದ ಮಧ್ಯೆ ತತ್ತ್ವಜ್ಯೋತಿ ಹೇಗೆ ಮಿನುಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಭಕ್ತಿ ರೂಪದ ನದಿಯಲ್ಲಿ ಹರಿಯುವ ಜ್ಞಾನಸ್ವರೂಪದ ಪ್ರವಾಹ ಸ್ತೋತ್ರಗಳಲ್ಲೇ ಅದೃಶ್ಯವಾಗಿ ಹರಡಿಕೊಂಡಿದೆ. ಆದ್ದರಿಂದ, ಶಂಕರರ ತತ್ತ್ವವನ್ನು ಗ್ರಹಿಸಲು ಅವರ ಸ್ತೋತ್ರಗಳು ಕೇವಲ ಭಕ್ತಿಪಥದ ಅಭ್ಯಾಸವಲ್ಲ; ಅವು ನಿರಾಕಾರ ತತ್ತ್ವದತ್ತ ಕೊಂಡೊಯ್ಯುವ ದಾರಿದೀಪವೂ ಆಗಿವೆ.

ಹೀಗೆ, ಶಂಕರಭಗವತ್ಪಾದರು ಪ್ರತಿಪಾದಿಸಿದ ಅದ್ವೈತ ತತ್ತ್ವ ಮತ್ತು ಅವರು ರಚಿಸಿದ ಸ್ತೋತ್ರಗಳಲ್ಲಿ ಕಾಣುವ ಸಾಕಾರ ಭಕ್ತಿ — ಎರಡೂ ಪರಸ್ಪರ ವಿರೋಧಿಗಳು ಅಲ್ಲ. ಅವು ಸಾಧನೆಯ ಪಥದಲ್ಲಿ ಎರಡು ಹಂತಗಳು, ಎರಡು ಶಿಖರಗಳು. ಭಕ್ತಿ ರೂಪದ ಮೆಟ್ಟಿಲು ಜ್ಞಾನಕ್ಕೆ ದಾರಿ ಮಾಡಿಕೊಡುತ್ತದೆ; ಜ್ಞಾನವು ಮುಕ್ತಿಗೆ ಕರೆದೊಯ್ಯುತ್ತದೆ; ಮುಕ್ತಿ ಪರಬ್ರಹ್ಮದ ಏಕತ್ವದಲ್ಲಿ ಲಯಗೊಳ್ಳುತ್ತದೆ. ನಿರಾಕಾರ ತತ್ತ್ವದತ್ತ ಸಾಗಲು ರೂಪಸಾಧನೆಯ ಅವಶ್ಯಕತೆ ಮನೋದೈಹಿಕವಾಗಿಯೂ ದಾರ್ಶನಿಕವಾಗಿಯೂ ಸಹಜ. ಅದಕ್ಕಾಗಿ ಶಂಕರರು ದೇವರ ರೂಪಗಳನ್ನೂ, ಸ್ತೋತ್ರಗಳನ್ನೂ ನಿರ್ಲಕ್ಷಿಸದೆ, ಅವುಗಳನ್ನು ಸಾಧನೆಯ ಅವಿಭಾಜ್ಯ ಅಂಗಗಳಾಗಿ ಪ್ರತಿಷ್ಠಾಪಿಸಿದರು.

ಭಕ್ತಿ ಮತ್ತು ಜ್ಞಾನ, ರೂಪ ಮತ್ತು ನಿರಾಕಾರ, ಸಾಧಕ ಮತ್ತು ಸಾಧ್ಯ — ಇವೆಲ್ಲವೂ ಅಂತಿಮವಾಗಿ ಒಂದೇ ಪರಬ್ರಹ್ಮತತ್ತ್ವದಲ್ಲಿ ಶಾಂತಿಯಾಗುತ್ತವೆ. ಸ್ತೋತ್ರ ಮತ್ತು ಅದ್ವೈತ ಎರಡೂ ವಿಭಿನ್ನ ಮಾರ್ಗಗಳಲ್ಲ; ಅವು ಒಂದೇ ಗಮ್ಯವನ್ನು ತಲುಪಿಸುವ ವಿಭಿನ್ನ ಸೇತುವೆಗಳು.

ದೇವರ ಸ್ತೋತ್ರಗಳಲ್ಲಿ ಭಕ್ತನ ಹೃದಯ ಹೊಮ್ಮುತ್ತದೆ; ಅದ್ವೈತದಲ್ಲಿ ಆತ್ಮಜಾಗೃತಿ ಬೆಳಗುತ್ತದೆ.

*******

 

 

 

ಶ್ರೀಕಂಠ ಚೌಕೀಮಠ

——————-

ಕಲಬುರಗಿಯ ಸಂಜಯ ಮಕಾಲೆ  ( ಮೊಬೈಲ ಸಂಖ್ಯೆ: 98455 02640) ಎಂಬವರು ಪರಳಿ ವೈಜನಾಥ ದೇವಾಲಯದಲ್ಲಿ ಹಾನಗಲ್ ಕುಮಾರಸ್ವಾಮಿಗಳಿಗೆ ಪ್ರವೇಶ ನಿರಾಕರಣೆ ನಡೆದ ಕಾರಣದಿಂದ  ವಿವಾದವಾಯಿತು ಎಂದು ಸುಳ್ಳು ವದಂತಿಯನ್ನು ಶ್ರೀ ಎಮ್.ಪಿ.ಎಮ್.ನಟರಾಜಯ್ಯ ಅವರ ಫೇಸಬುಕ್‌ ಅಕೌಂಟಗೆ ಹಾಕಿರುವ ವಿಷಯವನ್ನು ನನಗೆ ತಿಳಿಸಲಾಗಿದೆ. ಆದರೆ ಈ ಮಾತುಗಳಲ್ಲಿ ಸತ್ಯಾಂಶವಿಲ್ಲ; ಉಲ್ಲೇಖಿಸಲಾದ ಘಟನೆ ಸತ್ಯಕ್ಕೆ ದೂರವಾದುದು. ಪರಳಿ ವೈದ್ಯನಾಥೇಶ್ವರ ದೇವಾಲಯದಲ್ಲಿ ಪೂಜ್ಯ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳಿಗೆ ಪ್ರವೇಶ ನಿರಾಕರಣೆ ಎನ್ನುವ ಅಂಶವೇ ಇಲ್ಲ.

ನಿಜವಾದ ಹಿನ್ನೆಲೆಯೆಂದರೆ, ಅನೇಕ ಭಕ್ತರ ವಿನಂತಿಯನ್ನು ಅಂಗೀಕರಿಸಿ, ಕ್ರಿ.ಶ. ೧೯೨೪ರ ಜೂನ್ ತಿಂಗಳಲ್ಲಿ ವರಂಗಲ್ ಜಿಲ್ಲೆಯ ಗಣಪುರಂ ಸ್ಟೇಷನ್ ಹತ್ತಿರದ ಲಿಂಗಂಪಲ್ಲಿಯ ಶಿವಕೋಟಿ ವೀರಭದ್ರಸ್ವಾಮಿಗಳು ವೈದ್ಯನಾಥೇಶ್ವರನಿಗೆ ವೇದೋಕ್ತ ಮಹಾರುದ್ರಾಭಿಷೇಕ ಮಹೋತ್ಸವ ನಡೆಸಬೇಕೆಂಬ ಆಶಯ ವ್ಯಕ್ತಪಡಿಸಿದರು. ಭಕ್ತರು ಅದಕ್ಕೆ ವ್ಯಾಪಕ ಬೆಂಬಲ ನೀಡಿದರು; ಮುಕ್ತಹಸ್ತದಿಂದ ನೆರವು ದೊರೆತು ಸುಮಾರು ಹತ್ತೆಂಟು ಸಾವಿರ ರೂಪಾಯಿಗಳಷ್ಟು ಧನ ಶೇಖರವಾಯಿತು.

 

ಈ ಮಹೋತ್ಸವದ ವೈಭವ, ಧರ್ಮಸೇವೆ ಮತ್ತು ಧನಸಂಗ್ರಹವನ್ನು ಕಂಡು ಅಲ್ಲಿ ಇರುವ ಕೆಲವು ಬ್ರಾಹ್ಮಣರಲ್ಲಿ ಆಸಕ್ತಿ ಹುಟ್ಟಿತು; ಅವರು ಈ ಉತ್ಸವದಲ್ಲಿ ತಮಗೂ ಸ್ಥಾನ ದೊರಕಬೇಕೆಂದು ಬಯಸಿದರು. ಆದರೆ ರುದ್ರಾಭಿಷೇಕದ ಸಂದರ್ಭದಲ್ಲಿ ವೀರಶೈವ ವೈದಿಕ ಮಂಡಲಿಯೊಡನೆ ಸೇರುವುದರ ಹೊರತು, ಅವರಿಗೆ ಬೇರೆ ರೀತಿಯ ಭಾಗವಹಿಸುವ ಅವಕಾಶ ಇರಲಿಲ್ಲ. ಈ ಕಾರಣಕ್ಕೆ, ಶ್ರೀರುದ್ರ ಪಠಣ ಹಾಗೂ ಹೋಮದಲ್ಲಿ ಋತ್ವಿಜರಾಗಿ ಸೇರಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು.

 

ವೀರಶೈವರು ಇದಕ್ಕೆ ಸಹಮತಿಯಾಗಲಿಲ್ಲ. ಅನೇಕ ಶತಮಾನಗಳಿಂದ ಸ್ವತಂತ್ರ ಧರ್ಮಪರಂಪರೆಯನ್ನು ಆಶ್ರಯಿಸಿರುವ ವೀರಶೈವ ಸಂಪ್ರದಾಯಕ್ಕೆ ಇದು ಸರಿಹೊಂದುವುದಿಲ್ಲವೆಂದೂ, ತಮ್ಮ ಪದ್ಧತಿಯ ಶುದ್ಧತೆಯನ್ನು ರಕ್ಷಿಸುವ ಸಂಕಲ್ಪವನ್ನು ಅವರು ಘಂಟಾಘೋಷವಾಗಿ ಘೋಷಿಸಿದರು. ಇದರಿಂದ ಕೋಪಗೊಂಡ ಕೆಲ ಬ್ರಾಹ್ಮಣರು “ವೀರಶೈವರಿಗೆ ವೇದಾಧಿಕಾರವಿಲ್ಲ; ಅವರಿಗೆ ವೇದೋಕ್ತ ರುದ್ರಾಭಿಷೇಕ ನಡೆಸುವ ಹಕ್ಕಿಲ್ಲ” ಎಂದು ಆರೋಪಿಸಲು ಪ್ರಾರಂಭಿಸಿದರು. ತಮ್ಮ ವಿರೋಧವನ್ನು ದೃಢಪಡಿಸಲು ಅವರು ನಿಜಾಂ ಸರಕಾರದ ಮುಂದೆ ದೂರು ಅರ್ಜಿಗಳನ್ನು ಸಲ್ಲಿಸಿದರು.

ಈ ವಿಷಯವು ಪ್ರಕಟವಾದ ಕ್ಷಣದಿಂದಲೇ ಪರಸ್ಪರ ವಿರೋಧಿ ಮನೋಭಾವ ಹೊಂದಿದ್ದ ಎರಡು ಪಂಗಡಗಳ ಮಧ್ಯೆ ಈರ್ಷೆ–ದ್ವೇಷಗಳ ಜ್ವಾಲೆ ಹೊತ್ತಿಕೊಂಡಿತು. ಒಬ್ಬರನ್ನೊಬ್ಬರು ಹೀಯಾಳಿಸುವುದು, ನಿಂದಿಸುವುದು, ಪರಸ್ಪರ ದ್ವೇಷದ ಮಾತುಗಳನ್ನು ಬಳಕೆ ಮಾಡುವಂತ ವಾತಾವರಣ ನಿರ್ಮಾಣವಾಯಿತು. ಈ ಉದ್ವಿಗ್ನತೆಯ ಪರಿಣಾಮದಿಂದ ಬ್ರಾಹ್ಮಣ ಅಧಿಕಾರಿಗಳಲ್ಲಿಯೂ ಪ್ರತಿಕ್ರಿಯೆ ಹುಟ್ಟದೆ ಇರಲಿಲ್ಲ. ಸ್ವಜಾತಿಯ ಗರ್ವ ಮತ್ತು ಅಭಿಮಾನದಿಂದ ಅವರು “ವೀರಶೈವರು ರುದ್ರಾಭಿಷೇಕ ಮಾಡಬಾರದು” ಎಂಬ ಕಟ್ಟಪ್ಪಣೆ ಹೊರಡಿಸಿದರು.

ಈ ರೀತಿಯ ಸ್ಥಳೀಯ ಅಧಿಕಾರಿಗಳ ಪಕ್ಷಪಾತದ ಸೂಚನೆಗಳಿಂದ ವೀರಶೈವರು ಮತ್ತು ಇತರ ಬ್ರಾಹ್ಮಣೇತರ ವರ್ಗದವರು ಆಕ್ರೋಶಗೊಂಡರು. ವಿವಾದಕ್ಕೆ ನ್ಯಾಯಸಮ್ಮತ ಬಗೆಹರಿವು ದೊರಕಬೇಕೆಂಬ ಆಶಯದಿಂದ ಅವರು ಸಂಸ್ಥಾನಾಧಿಪತಿಗಳಾದ ನಿಜಾಂರವರಲ್ಲಿ ಬಿನ್ನಹ ಸಲ್ಲಿಸಿದರು. ಬ್ರಾಹ್ಮಣರಾದವರು ಮರುವಿಷಯವಾಗಿ “ಅನಧಿಕಾರಿಗಳಾದ ಲಿಂಗಾಯತರು ರುದ್ರಾಭಿಷೇಕ ಮಾಡುವುದು ಧರ್ಮವಿರುದ್ಧ; ಆದ್ದರಿಂದ ಅದಕ್ಕೆ ಅವಕಾಶ ನೀಡಬಾರದು” ಎಂದು ನಿಜಾಂರಿಗೆ ಲಿಖಿತವಾಗಿ ತಿಳಿಸಿದರು. ಇದರ ಪರಿಣಾಮವಾಗಿ ನಿಜಾಂ ಸರ್ಕಾರವು ಅವರ ಮನವಿಯನ್ನು ಪರಿಗಣಿಸಿ ತಕ್ಕ ಆದೇಶಗಳನ್ನು ಹೊರಡಿಸಬೇಕಾಯಿತು.

ಈ ವಿಚಾರವಾಗಿ ಮೈಸೂರ ಸ್ಟಾರ್ ಪತ್ರಿಕೆಯಲ್ಲಿ ಪ್ರಕಟವಾದ ಅಗ್ರಲೇಖನದ ಮಾತುಗಳು ಉಲ್ಲೇಖಾರ್ಹ. ಸ್ಥಳಾಧಿಕಾರಿಗಳ ಪಕ್ಷಪಾತದಿಂದ ವೀರಶೈವರು ಹಾಗೂ ಇತರ ಬ್ರಾಹ್ಮಣೇತರ ಸಮುದಾಯಗಳು ಕುಬ್ಬರಾಗಿ ನಿಜಾಂರನ್ನು ಸಂಪರ್ಕಿಸಿದರೆ, ಮತ್ತೊಂದೆಡೆ ಬ್ರಾಹ್ಮಣರು “ಅನಧಿಕಾರಿಗಳಾದ ಲಿಂಗಾಯತರಿಗೆ ರುದ್ರಾಭಿಷೇಕ ಮಾಡಲು ಅವಕಾಶ ಕೊಡಬಾರದು” ಎಂದು ತಮ್ಮ ಮನವಿಯನ್ನು ಗಟ್ಟಿಯಾಗಿ ದಾಖಲಿಸಿದರು.

ನಿಜಾಂ ಸರ್ಕಾರಕ್ಕೆ ಈ ವಿವಾದವು ಗಂಭೀರವಾಗಿ ತೋರಿ, “ರುದ್ರಾಭಿಷೇಕ ಮಾಡಿ ಜ್ಯೋತಿರ್ಲಿಂಗವನ್ನು ಪೂಜಿಸುವ ಹಕ್ಕಿಗೆ ವೀರಶೈವರು ಅರ್ಹರಾಗುವುದನ್ನು ಭರ್ವಶಾಸ್ತ್ರಾಧಾರದಿಂದ ಸಾಬೀತುಪಡಿಸಬೇಕು” ಎಂದು ತಿಳಿದುಬಂದ ಆದೇಶ ಹೊರಡಿಸಲಾಯಿತು. ಇದಕ್ಕಾಗಿ ವಾದ-ಪ್ರತಿವಾದ ಮಾಡಲು ಇಂದೂರು ಸಂಸ್ಥಾನದ ಸಂಸ್ಕೃತ ಮಹಾಪಾಠ ಶಾಲೆಯ ವೇದಾಭಾಷ್ಯ ಪ್ರೊಫೆಸರ್ ಪಂಡಿತ ಸ್ವಾಮಿ ವಿರೂಪಾಕ್ಷ ಒಡೆಯರನ್ನು ವೀರಶೈವರ ಪರವಾಗಿ ಆಹ್ವಾನಿಸಲಾಯಿತು. ಬ್ರಾಹ್ಮಣರ ಪರವಾಗಿ ಸಂಕೇಶ್ವರ ಮಠದ ಶ್ರೀ ಶಂಕರಾಚಾರ್ಯರನ್ನು ಆಯ್ಕೆಮಾಡಿ ಅವರಿಗೂ ಮಹಾಮಹೋಪಾಧ್ಯಾಯ ವಾಸುದೇವ ಶಾಸ್ತ್ರಿ ಅಭ್ಯಂ ಹಾಗೂ ವಿಷ್ಣು ಶಾಸ್ತ್ರಿ ಭಾಸಟ್ ಮೊದಲಾದ ಪಂಡಿತರನ್ನು ಸಹಾಯಕರನ್ನಾಗಿ ನೇಮಿಸಲಾಯಿತು. (ಮೈಸೂರ ಸ್ಟಾರ್ – 8-1-1925)

ನಿಜಾಂಸರಕಾರದ ಅಪ್ಪಣೆಯಂತೆ ಶಾಸ್ತ್ರಾರ್ಥವು ೧೯-೩-೧೯೨೫ರಂದು ಪರಳಿಯಲ್ಲಿ ಪ್ರಾರಂಭವಾಗುವುದೆಂದು ನಿಶ್ಚಯವಾಯಿತು. ಬ್ರಾಹ್ಮಣರು ತಮ್ಮ ಪರದ ಪಂಡಿತರ ಅಧ್ವಾನಕ್ಕೆ ಸಮಗ್ರ ಪ್ರಾಂತದ ಬ್ರಾಹ್ಮಣರಿಂದ ಧನವಂತಿಕೆ ಹಾಗೂ ಬೆಂಬಲವನ್ನು ಜಾಹೀರಾತುಗಳ ಮುಖಾಂತರ ಜಮೆ ಮಾಡಲು ಪ್ರಾರಂಭಿಸಿದರು. ಪರಳಿ, ಬಾರ್ಶಿ, ಲಾಟ್ ಮೊದಲಾದ ಪ್ರದೇಶಗಳ ವೀರಶೈವರು ಕೂಡ ತಾವು ಸಹ ಸಂಘಟಿತವಾಗುತ್ತಾ, ಅದೇ ಸಂದರ್ಭದಲ್ಲಿ ಮಹಾರಾಷ್ಟ್ರೀಯ ಅಖಿಲ ವೀರಶೈವ ಪ್ರಥಮ ಮಹಾಸಭೆಯನ್ನು ಕರೆಯುವ ನಿರ್ಧಾರ ಮಾಡಿಕೊಂಡರು. ಸಭಾಧ್ಯಕ್ಷರಾಗಿ ಶ್ರೀ ಜಗದಾಚಾರ್ಯ ಸ್ವಾಮಿ ವಿರೂಪಾಕ್ಷ ಒಡೆಯರನ್ನೇ ಆರಿಸಿ ಸಭೆ ನಡೆಸಲು ನಿಜಾಂ ಸರ್ಕಾರದ ಅನುಮತಿಯನ್ನೂ ಕೋರಿ ಮುಂದಾದರು. (ಮೈಸೂರ ಸ್ಟಾರ್ – 31-1-1925)

ಈ ವ್ಯಾಜ್ಯ ಮತ್ತು ನ್ಯಾಯಪ್ರಕ್ರಿಯೆಯಲ್ಲಿ ಜಯ ಸಾಧಿಸುವ ಸಂದರ್ಭದಲ್ಲಿ ಪೂಜ್ಯ ಹಾನಗಲ್ ಶ್ರೀ ಕುಮಾರಸ್ವಾಮಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು.
(ಮೈಸೂರ ಸ್ಟಾರ್ – 7 ನವೆಂಬರ್ 1925)

ವೀರಶೈವ ಮತಸುಧಾರಣೆಯ ಕ್ಷೇತ್ರದಲ್ಲಿ ಕೇಂದ್ರಭೂಮಿಯಾಗಿರುವ ಶಿವಯೋಗಮಂದಿರ ಸಂಸ್ಥೆ ಮತ್ತು ವೀರಶೈವ ಮಹಾಸಭೆ ಮುಂತಾದ ಸಂಘಟನೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಪೂಜ್ಯ ಹಾನಗಲ್ಲ ಶ್ರೀ ನಿ.ಪ್ರ. ಕುಮಾರಸ್ವಾಮಿಗಳು. ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರಿಂದ ವಿಶೇಷ ಆಹ್ವಾನ ಸ್ವೀಕರಿಸಿ, ಐದು–ಆರು ಮಂದಿ ಶಿವಯೋಗಿಗಳು, ಸದ್ಭಕ್ತರು ಹಾಗೂ ಪ್ರಾಜ್ಞ ಪಂಡಿತರಾದ ಪಂ| ನಾಲ್ಕಾರ ಜಗದೀಶಶಾಸ್ತ್ರಿಗಳು, ಮಣೂರ ಮಲ್ಲಿಕಾರ್ಜುನ ಶಾಸ್ತ್ರಿಗಳು ಮೊದಲಾದ ವಿದ್ವಾಂಸರೊಂದಿಗೆ ಹೈದರಾಬಾದ್‌ಗೆ ತೆರಳಿದರು. ಅಲ್ಲಿ ಬ್ರಾಹ್ಮಣರಿಂದ ಮುಂದಿಟ್ಟಿದ್ದ ೩೬ ಪ್ರಶ್ನೆಗಳಿಗೆ ಅನೇಕ ಗ್ರಂಥಪ್ರಮಾಣ ಹಾಗೂ ಶಾಸ್ತ್ರನಿರೂಪಣೆಯ ಆಧಾರದ ಮೇಲೆ ಖಂಡನಾತ್ಮಕ ಉತ್ತರಗಳನ್ನು ರಚಿಸಿ ಧರ್ಮಕೋರ್ಟಿಗೆ ಕಳುಹಿಸಿ ಧರ್ಮರಕ್ಷಣೆಗೆ ಸಹಾಯ ಮಾಡಿದರು.

ವೀರಶೈವ ಪಂಡಿತರಲ್ಲೂ ಕೆಲವೊಮ್ಮೆ ಅಭಿಪ್ರಾಯ ಭೇದಗಳು ಮೂಡಿದ ಸಂದರ್ಭಗಳು ಕಂಡುಬಂದವು. ಆಗ ಶ್ರೀಯವರು ಶಾಂತ ಮತ್ತು ಉದಾತ್ತ ಸಂಕಲ್ಪದಿಂದ ಮಾತನಾಡುತ್ತಾ –
“ಸಮಯವನ್ನು ಗಮನಿಸಿ. ನಮ್ಮೆಲ್ಲರಿಗೂ ಮಾನವೇ ಮೂಲಧನ. ಸಮಾಜಕಾರ್ಯವೇ ಮುಖ್ಯ; ಜನಮೆಚ್ಚುಗೆಗೆ ಸೊಪ್ಪು ಹಾಕಬೇಡಿ. ಶಿವನ ಮೆಚ್ಚುಗೆಯೇ ಮೂಲಗುರಿಯಾಗಲಿ,”
ಎಂದು ಸಾರಿದುದು ಅವರ ಉದಾತ್ತ ಚರಿತ್ರೆಗೆ ದೃಢಸಾಕ್ಷಿಯಾಗಿದೆ.

ಪೂಜ್ಯ ಹಾನಗಲ್ ಶ್ರೀ ಕುಮಾರಸ್ವಾಮಿಗಳು ಜವಾಬ್ದಾರಿಯುತ ಪಂಡಿತರ ಹಾಗೂ ವಕೀಲರ ತಂಡವನ್ನು ರಚಿಸಿ, ಲಿಂಗಾಯತ ಸಮುದಾಯದ ಮಾನ-ಮರ್ಯಾದೆ ಮತ್ತು ಸ್ವಾಭಿಮಾನಕ್ಕಾಗಿ ಹಗಲುರುಳು ತಾರತಮ್ಯವಿಲ್ಲದೆ ಹೋರಾಡಿದರು.

ಪರಳಿ ವೈದ್ಯನಾಥೇಶ್ವರ ರುದ್ರಾಭಿಷೇಕ ವ್ಯವಹಾರದಲ್ಲಿ ಭಾಗವಹಿಸಿದ ವೀರಶೈವ ಪಂಡಿತರು

ವೀರಶೈವರ ಧಾರ್ಮಿಕ ಹಕ್ಕು, ವೇದಾಧಿಕಾರ ಮತ್ತು ರುದ್ರಾಭಿಷೇಕ ಅರ್ಹತೆಯನ್ನು ಸಾಬೀತುಪಡಿಸಲು ಅನೇಕ ಪಂಡಿತರು ತಮ್ಮ ಜ್ಞಾನ, ಸಾಧನೆ ಮತ್ತು ತತ್ವಪರ ಚಿಂತನೆಯೊಂದಿಗೆ ಮುಂದೆ ಬಂದರು. ಅವರ ಸೂಕ್ಷ್ಮಚಿಂತನೆ, ಶಾಸ್ತ್ರಾಧಾರಿತ ವಾದ-ಪ್ರತಿವಾದ ಮತ್ತು ಪತ್ರಿಕ್ರಮಗಳು ಈ ವಿಚಾರಕ್ಕೆ ಬಲವಾದ ಆಧಾರವಾಗಿದವು. ಆ ಪೈಕಿ ಪ್ರಮುಖರಾದ ಪಂಡಿತರ ಪಟ್ಟಿ ಹೀಗಿದೆ:

  1. ಜಗದಾಚಾರ್ಯ ವಿದ್ಯಾನಿಧಿ ವೇದತೀರ್ಥ ಸ್ವಾಮಿತಾ ವಿರೂಪಾಕ್ಷ ಒಡೆಯರು, ವೇದಭಾಷ್ಯ ಪ್ರೋಫೆಸರ್, ಇಂದೂರು
  2. ವೇ.ಬ್ರ. ಶ್ರೀ ವ್ಯಾಕರಣತೀರ್ಥ ಸದಾಶಿವಶಾಸ್ತ್ರಿಗಳು, ಹೋಳ್ಳ ಸಂಸ್ಕೃತ ಕಾಲೇಜು (ಮುಂದೆ ರಂಭಾಪುರಿ ಪೀಠಾಧ್ಯಕ್ಷರು), ಕಾಶಿ
  3. ಆಸ್ಥಾನ ಮಹಾವಿದ್ವಾನ್ ಕರ್ನಾಟಕ ಭಾಷಾರತ್ನ ಪಿ.ಆರ್. ಕರಿಬಸವಶಾಸ್ತ್ರಿಗಳು, ಮೈಸೂರು
  4. ಆಸ್ಥಾನ ಮಹಾವಿದ್ವಾನ್ ಪಂಡಿತರತ್ನ ಸಿರಸಿ ಗುರುಶಾಂತಶಾಸ್ತ್ರಿಗಳು, ಮೈಸೂರು
  5. ಪಂ| ಗುರುಬಸವಶಿವಾಚಾರ್ಯರು, ಕ್ಯಾಸನೂರು ಸಂಸ್ಥಾನಮಠ
  6. ಪಂ. ಕಲಿಗಣನಾಥ ಶಾಸ್ತ್ರಿಗಳು
  7. ಪಂ| ಅಜ್ಜಯ್ಯ ಶಾಸ್ತ್ರಿಗಳು, ತರ್ಕತೀರ್ಥ, ತರ್ಕವಾಗೀಶ, ಪಗಡದಿನ್ನಿ; ಕಾರಭಾರಿಗಳು, ಚೌಡದಾನಪುರ ಸಂಸ್ಥಾನಮಠ
  8. ಪಂ|| ಚಂದ್ರಶೇಖರ ಶಾಸ್ತ್ರಿಗಳು, ಪಗಡದಿನ್ನಿ
  9. ಪಂ. ಸೋಮನಾಥ ಶಾಸ್ತ್ರಿಗಳು, ಧರ್ಮತತ್ವವಿಶಾರದ, ಗೊಗ್ಗಿಹಳ್ಳಿ (ಸಾಗರ ತಾ||)
  10. ಪಂ. ಬಸವರಾಜ ಶಾಸ್ತ್ರಿಗಳು, ವ್ಯಾಕರಣರತ್ನ, ಪಗಡದಿನ್ನಿ
  11. ಪಂ|| ಮಣೂರ ಮಲ್ಲಿಕಾರ್ಜುನ ಶಾಸ್ತ್ರಿಗಳು, ಸೊಲ್ಲಾಪುರ
  12. ವ್ಯಾಕರಣತೀರ್ಥ ವಿದ್ಯಾಲಂಕಾರ ಚಂದ್ರಶೇಖರ ಶಾಸ್ತ್ರಿಗಳು, ಪ್ರಿನ್ಸಿಪಾಲ್, ಶಂಕರ ಸಂಸ್ಕೃತ ಕಾಲೇಜು, ಯಾದಗಿರಿ
  13. ಧರ್ಮತತ್ತ್ವಚಿಂತಾಮಣಿ ಚಂದ್ರಶೇಖರ ಶಾಸ್ತ್ರಿಗಳು, ಕಂಪಲಿ
  14. ಆಸ್ಥಾನವಿದ್ವಾನ್ ಚಂದ್ರಶೇಖರ ಶಾಸ್ತ್ರಿಗಳು, ತೆಲಗಿ ಮಠ, ದಾವಣಗೆರೆ
  15. ಹಂಪಿ ತೋಪಿನ ಸಾವಿರದೇವರ ಮಹಾಂತ ಸ್ವಾಮಿಗಳು, ಕಂಪಲಿ
  16. ಸರ್ವದರ್ಶನತೀರ್ಥ ವೈ. ನಾಗೇಶ ಶಾಸ್ತ್ರಿಗಳು, ಬಳ್ಳಾರಿ
  17. ಶಿವಕೋಟಿ ವೀರಭದ್ರ ಸ್ವಾಮಿಗಳು, ಲಿಂಗಂಪಳ್ಳಿ
  18. ಶ್ರೀ ಸದಾಶಿವಮೂರ್ತಿಯವರು, ಸಖರಾಯಪಟ್ಟಣದ ಷ.ಬ್ರ. ಶ್ರೀ ಸದಾಶಿವಾಚಾರ್ಯರು

ವೀರಶೈವರ ಪರವಾಗಿ ಹೋರಾಡಿದ ಪ್ರಮುಖ ವಕೀಲರು

ಈ ಪ್ರಕರಣ ಕಾನೂನು, ಸಂಪ್ರದಾಯ ಮತ್ತು ಧಾರ್ಮಿಕ ಹಕ್ಕುಗಳ ಮಟ್ಟಿಗೆ ತಲುಪಿದಾಗ, ವೀರಶೈವ ಪರವಾಗಿ ಕಾರ್ಯನಿರ್ವಹಿಸಲು ಅನೇಕ ವಕೀಲರು ನ್ಯಾಯಾಂಗ ವೇದಿಕೆಯಲ್ಲಿ ನಿಂತರು:

  1. ನಿರ್ಮಲ ದೇಶಮುಖ್, ಹೈಕೋರ್ಟ್ ವಕೀಲರು, ಹೈದರಾಬಾದ್
  2. ರಾಯ ವಿಶ್ವೇಶ್ವರನಾಥ್, ಹೈಕೋರ್ಟ್ ವಕೀಲರು, ಹೈದರಾಬಾದ್
  3. ರಾವಬಹದ್ದೂರ್ ಶಾಂತವೀರ ಒಡೆಯರ್, ಎಲ್.ಎ.ಜಿ., ಚೌಡದಾನಪುರ
  4. ಬಾಪೂರಾವ್, ವಕೀಲರು, ಹೈದರಾಬಾದ್
  5. ಹೇಮಚಂದ್ರರಾವ್, ವಕೀಲರು, ಹೈದರಾಬಾದ್
  6. ಸೋಮೇಶ್ವರರಾವ್, ವಕೀಲರು, ಹೈದರಾಬಾದ್
  7. ಶರಣಯ್ಯ, ವಕೀಲರು, ಹೈದರಾಬಾದ್
  8. ನಾಗನಾಥಯ್ಯ, ವಕೀಲರು, ಹೈದರಾಬಾದ್
  9. ಬಾಲಕಿ ದೇಶಮುಖ್, ವಕೀಲರು, ಉದ್ಗೀರ
  10. ಚನ್ನಬಸವಯ್ಯ, ವಕೀಲರು, ಉದ್ಗೀರ
  11. ಚಂದ್ರಪ್ಪ, ವಕೀಲರು, ಉದ್ಗೀರ
  12. ಸಂಗ್ರಾಮಪ್ಪ, ವಕೀಲರು, ಉದ್ಗೀರ
  13. ಮಹದೇವಯ್ಯ, ವಕೀಲರು, ಉದ್ಗೀರ
  14. ನಾಗನಾಥರಾವ್, ವಕೀಲರು, ಭಾಲ್ಕಿ

ಉಪಸಂಹಾರ:

ಸತ್ಯಾಂಶಗಳ ಸರಿಯಾದ ಅಧ್ಯಯನವಿಲ್ಲದೆ ಕೇಳಿಬರುವ ಮಾತನ್ನು ಕೇಳಿದ ತಕ್ಷಣ ನಂಬುವುದು, ಪರಿಶೀಲಿಸದೆ ಪ್ರಸಾರ ಮಾಡುವುದು, ತಾನು ತಿಳಿದಂತೆ ತೋರಿಸಿಕೊಳ್ಳುವುದೇ ಆತ್ಮವಂಚನೆಗೆ ಸಮಾನವಾದುದು. ಇತಿಹಾಸ, ಸಂಪ್ರದಾಯ, ಸಮಾಜ ಮತ್ತು ಧರ್ಮಗಳಿಗೆ ಸಂಬಂಧಿಸಿದ ವಿಚಾರಗಳು ಲಘುವಾಗಿರುವುದಿಲ್ಲ; ಅವು ಭಾವನೆಯ ಆಧಾರದಲ್ಲಲ್ಲ, ದೃಢಪರಿಶೀಲನೆಯ ಆಧಾರದಲ್ಲಿ ನಿಂತಿರಬೇಕು. ತಪ್ಪುಮಾಹಿತಿಯನ್ನು ಸರಿ ಎಂದೆತ್ತುವುದು, ಸುಳ್ಳುಮಾತನ್ನು ಧರ್ಮವೆಂಬ ಹೆಸರಿನಲ್ಲಿ ಹೊಗಳುವುದು, ನಿಜದ ಮೇಲೆ ನೆರಳು ಬೀರುವುದಷ್ಟೇ ಅಲ್ಲ, ಪೀಳಿಗೆಯ ಮನಸ್ಸಿನ ಮೇಲೆ ಗಾಯ ಮಾಡುವಂತಾಗಿದೆ.

ಈ ಕಾರಣಕ್ಕೆ, ಸಂಜಯ ಮಕಾಲೆಯವರು ಕೂಡ ಸುಲಭವಾಗಿ ಸಿಗುವ ಸುಳ್ಳುಮಾಹಿತಿಗಳನ್ನೇ ನಂಬಿ ಹಂಚಿಕೊಳ್ಳುವುದಕ್ಕೆ ಮುಂದಾಗಬಾರದು. ಪೂರ್ವಾಗ್ರಹ, ದ್ವೇಷಭಾವ, ವೈಮನಸ್ಯದ ಮನಸ್ಥಿತಿಯಿಂದ ಬರೆಯುವುದು ಸತ್ಯಶೋಧನೆಯ ಮಾರ್ಗವಲ್ಲ; ಅದು ಸ್ವತಃ ತನ್ನನ್ನೇ ವಂಚಿಸುವ ಮೊದಲ ಹೆಜ್ಜೆಯಾಗಿದೆ. ವಿಚಾರದ ಅರಿವಿಲ್ಲದೆ ತೀರ್ಪು ನೀಡುವುದಕ್ಕಿಂತ, ವಿಚಾರದ ಅರಿವನ್ನು ಪಡೆದು ಮೌನವಿರುವುದು ಶ್ರೇಷ್ಠ. ಹೀಗಾಗಿ, ದ್ವೇಷದ ಮಸಿ ಬಳಸಿ ಬರೆಯುವ ಬದಲು, ತತ್ವದ ಬೆಳಕಿನಲ್ಲಿ ಸತ್ಯವನ್ನು ಗ್ರಹಿಸಲು ಪ್ರಯತ್ನಿಸಬೇಕು.

 

ಸತ್ಯ ಯಾವಾಗಲೂ ಶಾಂತವಾಗಿಯೇ ಗೆಲ್ಲುತ್ತದೆ;
ಸುಳ್ಳು ಜೋರಾಗಿ ಕೂಗಿದರೂ, ಅದರಲ್ಲಿ ಜ್ಯೋತಿ ಇರುವುದಿಲ್ಲ.

ಗ್ರಂಥ ಉಲ್ಲೇಖಗಳು

ಈ ಇತಿಹಾಸಿಕ ಮಾಹಿತಿಗೆ ಆಧಾರವಾಗಿರುವ ಪ್ರಮುಖ ಗ್ರಂಥಗಳು:

  1. ವೀರಶೈವ ವೇದಾಧಿಕಾರ ವಿಜಯ — ಸಂಗ್ರಹ: ಶ್ರೀ ಎಂ.ಜಿ. ನಂಜುಂಡರಾಧ್ಯರು, ಮೈಸೂರು
  2. ವಾರದ ಮಲ್ಲಪ್ಪನವರು — ಮರಾಠಿ ಮೂಲ: ಶ್ರೀ.ನಾ.ರಾ. ಬಾಮಣಗಾಂವಕರ, ಕನ್ನಡಾನುವಾದ: ಶ್ರೀ ಬಿ.ಎಸ್. ಗವಿಮಠ
  3. ಮಹಾಜಂಗಮ ಪಿ.ಎಚ್.ಡಿ ಅಧ್ಯಯನಗ್ರಂಥ — ಲೇಖಕ: ಡಾ. ಜಿ.ಕೆ. ಹಿರೇಮಠ, ಕವಿ.ವಿ.ವಿ., ಧಾರವಾಡ

 

 ಶ್ರೀಕಂಠ ಚೌಕೀಮಠ

 

 

ಲೇಖಕ: ಶ್ರೀಕಂಠ.ಚೌಕೀಮಠ

ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು

(136ನೇ ಜಯಂತ್ಯುತ್ಸವ – 2025)

ಲಿಂ. ಭಾಲ್ಕಿ ಶ್ರೀ ಘ. ಚ. ಚನ್ನಬಸವಸ್ವಾಮಿ ಪಟ್ಟದ್ದೇವರು ಹಿರೇಮಠದ ಅಧ್ಯಕ್ಷರಾಗಿದ್ದ ಮಹಾನ್ ತಪಸ್ವಿ, ಕಮಾಲನಗರ (ಜಿಲ್ಲೆ ಬೀದರ)ದಲ್ಲಿ ಕ್ರಿ.ಶ. 1889ರಲ್ಲಿ ಜನಿಸಿದರು. ಬಾಲ್ಯದಿಂದಲೇ ವಿದ್ಯೆ ಮತ್ತು ಸಂಸ್ಕಾರಗಳತ್ತ ಒಲವುಳ್ಳವರಾಗಿದ್ದ ಅವರು, ಪ್ರಾಥಮಿಕವಾಗಿ ಅವರಾದಿ ಪಾಠಶಾಲೆಯಲ್ಲಿ ಕನ್ನಡ ಕಾವ್ಯಗಳ ಅಭ್ಯಾಸವನ್ನು ಮಾಡಿ, ಶಬ್ದ–ಭಾವಗಳ ಸೌಂದರ್ಯವನ್ನು ಅಳವಡಿಸಿಕೊಂಡರು. ಆ ಅಧ್ಯಯನವೇ ಅವರ ಅಂತರಂಗದಲ್ಲಿ ಆತ್ಮಜ್ಞಾನದ ದೀಪವನ್ನು ಹಚ್ಚಿ, ಆಧ್ಯಾತ್ಮಿಕ ಪಥದತ್ತ ಹೆಜ್ಜೆ ಇಡಲು ಪ್ರೇರಣೆಯಾಯಿತು.

ಆತ್ಮೋನ್ನತಿಯ ಆಕಾಂಕ್ಷೆಯಿಂದ ಅವರು 1920ರಲ್ಲಿ ಶಿವಯೋಗಮಂದಿರದಲ್ಲಿ ಪ್ರವೇಶ ಪಡೆಯಲು ಮುಂದಾದರು. ಆಗ ಅವರ ವಯಸ್ಸು ಮೂವತ್ತು ವರ್ಷಗಳು. ವಯಸ್ಸಿನ ಕಾರಣವನ್ನು ಮುಂದಿಟ್ಟುಕೊಂಡು ಶಿವಯೋಗಮಂದಿರದ ವ್ಯವಸ್ಥಾಪಕರು ಪ್ರವೇಶವನ್ನು ನಿರಾಕರಿಸಿದರು.

ಭಾಲ್ಕಿಗೆ ಮರಳಬೇಕೆಂಬ ಮನೋವ್ಯಥೆಯ ಕ್ಷಣದಲ್ಲಿ, ಅವರ ಜೊತೆಯಲ್ಲಿದ್ದ ಶ್ರೀ ಶಿವಲಿಂಗಪ್ಪ ಖಂಡ್ರೆ (ಶ್ರೀ ಭೀಮಣ್ಣ ಖಂಡ್ರೆಯವರ ತಂದೆ) ಅವರು, ಚನ್ನಬಸವಸ್ವಾಮಿಯವರನ್ನು ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ದರ್ಶನಕ್ಕೆ ಕರೆತಂದರು. ಅದೊಂದು ಕ್ಷಣ; ಆದರೆ ಆ ಕ್ಷಣವೇ ಇತಿಹಾಸವನ್ನು ರೂಪಿಸಿದ ಮಹತ್ವದ ಸಂಧಿಯಾಯಿತು.

ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ವಾತ್ಸಲ್ಯಪೂರ್ಣ ಕೃಪಾದೃಷ್ಟಿ ಚನ್ನಬಸವಸ್ವಾಮಿಯವರ ಜೀವನಕ್ಕೆ ದೈವಿಕ ದಿಕ್ಕನ್ನು ನೀಡಿತು. ಆ ಒಂದೇ ನೋಟ, ಅವರ ಶಿಷ್ಯ ಬಳಗದಲ್ಲಿ ಚನ್ನಬಸವಸ್ವಾಮಿಯವರಿಗೆ ಸ್ಥಾನವನ್ನು ಕಲ್ಪಿಸಿತು. ಈ ಮೂಲಕ ಅವರು ಪೂಜ್ಯ ಹಾನಗಲ್ಲ ಶ್ರೀಗಳ ಸೇವೆ ಮಾಡುವ ಅಪೂರ್ವ ಭಾಗ್ಯವನ್ನು ಪಡೆದರು.

ಗುರುಸಾನ್ನಿಧ್ಯದಲ್ಲಿ ಅವರ ವ್ಯಕ್ತಿತ್ವವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿ ಉನ್ನತಗೊಂಡಿತು. ಪಂ. ಸೋಮಶೇಖರ ಶಾಸ್ತ್ರಿಗಳಿಂದ ಪಂಚಕಾವ್ಯಗಳ ವಿಶೇಷ ಅಧ್ಯಯನವನ್ನು ಮಾಡಿಸಿದ ಹಾನಗಲ್ಲ ಶ್ರೀಗಳು, ಶಿವಾನುಭವಶಾಸ್ತ್ರ ಮತ್ತು ಯೋಗದ ಷಟ್ಕರ್ಮಗಳನ್ನು ಸ್ವತಃ ತಾವೇ ಬೋಧಿಸಿ, ಅವರನ್ನು ಪರಿಪೂರ್ಣ ಸಾಧಕರಾಗಿ ರೂಪಿಸಿದರು.

ಜಾತಿ ಮತ್ತು ಜಂಗಮ ಪ್ರೇಮ ಎಂಬ ವ್ಯಾಧಿಯಿಂದ ಬಳಲುತ್ತಿರುವ  ಇಂದಿನ ಸಮಾಜದ ಕಾಮಾಲೆ ಕಣ್ಣುಗಳು, ಈ ಪವಿತ್ರ ಗುರು–ಶಿಷ್ಯ ಅವಿನಾಭಾವ ಸಂಬಂಧವನ್ನು ಪೀತವರ್ಣದಲ್ಲೇ ಕಾಣುತ್ತಿರುವುದು  ಸಮಾಜದ ದುರಂತವಾಗಿದೆ.

ಆದರೆ  ಸಮುದಾಯ ಹಾಗೂ ವಯಸ್ಸಿನ ಗಡಿಗಳನ್ನು ಮೀರಿ ಬೆಳೆದ ಈ ಗುರು–ಶಿಷ್ಯ ಪರಂಪರೆ, ಸಮಾಜಕ್ಕೆ ಅಪೂರ್ವ ಸೇವೆಯನ್ನು ಸಲ್ಲಿಸಿದ್ದು, ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಮಹತ್ವವನ್ನು ಹೊಂದಿದೆ.

ಕ್ರಿ.ಶ. 1924ರಲ್ಲಿ ಚನ್ನಬಸವಸ್ವಾಮಿಗಳು ಕಾಶೀ ಸಿಂಹಾಸನಾನ್ವಯಾನುಸಾರ ಚರಪಟ್ಟಾಧಿಕಾರದ ಮೂಲಕ ಭಾಲ್ಕಿ ಹಿರೇಮಠದ ಪೀಠಾಧಿಪತಿಗಳಾದರು.

ಪೀಠಾರೋಹಣದ ನಂತರ ಅವರು ಮಠದ ಜೀರ್ಣೋದ್ಧಾರವನ್ನು ಕೈಗೊಂಡು, ಪರಕೀಯರ ಕೈಸೇರಿದ್ದ ಮಠದ ಆಸ್ತಿಗಳನ್ನು ಪುನಃ ಸಂಪಾದಿಸಿ, ಮಠದ ಗೌರವ ಮತ್ತು ವೈಭವವನ್ನು ಪುನರ್ ಸ್ಥಾಪಿಸಿದರು. ಆಡಳಿತದಲ್ಲಿ ದೃಢತೆ, ಸೇವೆಯಲ್ಲಿ ವಿನಯ ಮತ್ತು ತತ್ವದಲ್ಲಿ ನಿಷ್ಠೆ – ಇವರ ಕಾರ್ಯಶೈಲಿಯ ಗುರುತಾಗಿತ್ತು.

ಶತಮಾನಗಳಿಂದ ಬೀದರ ಜಿಲ್ಲೆಯಲ್ಲಿ ಅವನತಿ ಕಂಡಿದ್ದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಪುನರ್ಜನ್ಮ ನೀಡುವ ಸಂಕಲ್ಪದಿಂದ, ಶ್ರೀ ಪಟ್ಟದ್ದೇವರು ‘ಕನ್ನಡ ಶಾಂತಿವರ್ಧಕ ಶಿಕ್ಷಣ ಸಂಸ್ಥೆ’ಯನ್ನು ಸ್ಥಾಪಿಸಿದರು. ಅದರ ಮೂಲಕ ಅನೇಕ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ, ಕನ್ನಡ ನುಡಿಯ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿದರು. ಕಮಾಲನಗರದಲ್ಲಿ ನಡೆಸಿಕೊಂಡು ಬಂದ ಕನ್ನಡ ಶಾಲೆಯನ್ನು ‘ಶಾಂತಿವರ್ಧಕ ಹೈಸ್ಕೂಲ್’ ಮಟ್ಟಕ್ಕೆ ಎತ್ತಿ, ಅದರ ಸಂಚಾಲಕರಾಗಿ ಪ್ರೀ–ಬೋರ್ಡಿಂಗ್ ವ್ಯವಸ್ಥೆಯನ್ನು ಸ್ಥಾಪಿಸಿ, ವಿದ್ಯಾರ್ಥಿಗಳ ಸಮಗ್ರ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಿದರು.

ಮೋರಗಿ, ಕೂಡಲಸಂಗಮ, ಬೀದರ, ಲಾತೂರು, ಹಣೆಗಾವ, ಭಾಲ್ಕಿ ಮೊದಲಾದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸಮಾಜಸೇವೆಯನ್ನು ಕೈಗೊಂಡ ಭಾಲ್ಕಿ ಶ್ರೀ ಪಟ್ಟಾಧ್ಯಕ್ಷರು, ಹೈದರಾಬಾದ್‌ನ ಗಡಿನಾಡಿನಲ್ಲಿ ಕನ್ನಡ ನುಡಿಯ ಗೌರವವನ್ನು ಉಳಿಸಿದ ಶ್ರೇಯಸ್ಸಿಗೆ ಪಾತ್ರರಾದರು.

ತಮ್ಮ ಗುರುವಿನ ಸ್ಮರಣಾರ್ಥವಾಗಿ ಭಾಲ್ಕಿಯಲ್ಲಿ ಹಾನಗಲ್ಲ ಶ್ರೀ ಗುರುಕುಮಾರೇಶ್ವರ ಉಚಿತ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದು, ಅದು ಅವರ ಅಚಲ ಗುರುಭಕ್ತಿಗೆ ಮತ್ತು ಕೃತಜ್ಞತೆಗೆ ಶಾಶ್ವತ ಸಾಕ್ಷಿಯಾಗಿ ನಿಂತಿದೆ.

ಇಂತಹ ಮಹಾನ್ ವಿಭೂತಿ ಪುರುಷರಾದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವದ ಈ ಪುಣ್ಯ ಸಂದರ್ಭದಲ್ಲಿ, ಅವರ ತಪೋಮಯ ಜೀವನ, ಸಮಾಜಮುಖಿ ಸೇವೆ ಮತ್ತು ಕನ್ನಡ ನಾಡಿನ ಮೇಲಿನ ಅಪಾರ ಪ್ರೀತಿಯನ್ನು ಸ್ಮರಿಸುತ್ತಾ, ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಶ್ರೀಕಂಠ, ಚೌಕೀಮಠ

 

ಲೇಖಕ:-ಶ್ರೀಕಂಠ ಚೌಕೀಮಠ

೨೪ ಅಕ್ಟೋಬರ್ ೨೦೨೫ರಂದು, ಧರ್ಮಸ್ಥಳದ ಧರ್ಮಾಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆ ಅವರ ಆಶ್ರಯದಲ್ಲಿ, ಡಾ. ಎಸ್.ಆರ್. ವಿಘ್ನರಾಜ ಮತ್ತು ಡಾ. ಪವನ್ ಅವರ ಸಂಪಾದಕತ್ವದಲ್ಲಿ ಪ್ರಕಟಿತವಾದ, ಶ್ರೀ ಕಂಚಿ ಶಂಕರಾರಾಧ್ಯರ ಶ್ರೀ ವೃಷಭೇಶ್ವರ ಪುರಾಣಂ — ಅಂದರೆ ಬಸವ ಪುರಾಣ — ಎಂಬ ಸಹಸ್ರಪುಟಗಳ ಬೃಹತ್ ಗ್ರಂಥವನ್ನು ನಾನು  ಓದುತ್ತಿದ್ದೇನೆ. ಈ ಮಹಾಗ್ರಂಥದಲ್ಲಿ ಶ್ರೀ ಗುರುಪಾದ ದೇವರ ಕನ್ನಡ ಟೀಕೆಯು ಸಹ ಮುದ್ರಣಗೊಂಡಿರುವುದು ವಿಶೇಷ; ಅದು ಈ ಕೃತಿಗೆ ಹೊಸ ಉಜ್ವಲತೆ ನೀಡಿದೆ.

ಈ ಗ್ರಂಥದೊಡನೆ ನನ್ನ ಹೃದಯಕ್ಕೆ ಆಳವಾದ ಭಾವನಾತ್ಮಕ ನಂಟಿದೆ. ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಸಂಗ್ರಹಿತವಾಗಿರುವ ಈ ಹಸ್ತಪ್ರತಿ, ನಿಜಕ್ಕೂ ಸಾಹಿತ್ಯ ಲೋಕದ ಅಮೂಲ್ಯ ಸಂಪತ್ತುಎಂದರೆ ತಪ್ಪಾಗದು.

ಈ ಹಸ್ತಪ್ರತಿಯು ಅಂದಿನ ಪ್ರತಿಷ್ಠಾನದ ನಿರ್ದೇಶಕರಾಗಿದ್ದ ದಿವಂಗತ ಗೌ. ಮ. ಉಮಾಪತಿ ಶಾಸ್ತ್ರಿಯವರ ಅಮೂಲ್ಯ ಸಂಗ್ರಹದಿಂದ ದೊರೆತದ್ದು. ಅವರ ಅಚ್ಚುಕಟ್ಟಾದ ಶ್ರದ್ಧೆ ಮತ್ತು ಸಂಶೋಧನಾ ಮನೋಭಾವದಿಂದ ತಾಡೋಲೆ ಹಸ್ತಪ್ರತಿಗಳ ೪೮೬ ಮತ್ತು ಕಾಗದ ಹಸ್ತಪ್ರತಿಗಳ ೪೦೦ — ಒಟ್ಟು ೮೮೬ ಹಸ್ತಪ್ರತಿಗಳನ್ನು ಅವರು ಪ್ರತಿಷ್ಠಾನಕ್ಕೆ ದಾನವಾಗಿ ನೀಡಿದ್ದರು. ಅವುಗಳಲ್ಲಿ ಈ ವೃಷಭೇಶ್ವರ ಪುರಾಣ ಒಂದು ಅಮೃತಮಣಿಯಂತಿದೆ.

 

ದಿ. ಗೌ. ಮ. ಉಮಾಪತಿ ಶಾಸ್ತ್ರಿಯವರು ಪೂಜ್ಯ ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶ್ರೀ ಶಿವಯೋಗಮಂದಿರದ ಸಾಧಕ ವಟುಗಳಾಗಿ ತಮ್ಮ ಜೀವನವನ್ನೇ ಸಾಹಿತ್ಯ ಸಂಶೋಧನೆಗೆ ಸಮರ್ಪಿಸಿದ ಮಹನೀಯರು.ಅವರು ಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸಂಗ್ರಹಿಸಿದ  ಸಾವಿರಾರು ತಾಡೋಲೆ ಕಟ್ಟುಗಳು ಹಾಗೂ ಕಾಗದ ಹಸ್ತಪ್ರತಿಗಳಿಂದ ಕೂಡಿದ ಅಪರೂಪದ ಗ್ರಂಥಾಲಯದ ಉಸ್ತುವಾರಿಯಾಗಿ ನೇಮಿಸಲ್ಪಟ್ಟು, ಅದನ್ನು ಜೀವಂತ ಪಾರಂಪರ್ಯದಂತೆ ಕಾಯ್ದುಕೊಂಡು ದೀರ್ಘಕಾಲ ಸೇವೆ ಸಲ್ಲಿಸಿದರು. ಅವರ ಈ ನಿರಂತರ ತಪಸ್ಸೇ ಇಂದು ನಾವು ಓದುತ್ತಿರುವ ಈ ವೃಷಭೇಶ್ವರ ಪುರಾಣದ ಜೀವಂತ ಮೂಲವಾಗಿದೆ.

ಗ್ರಂಥ ಬಿಡುಗಡೆಗಿಂತ ಮುನ್ನ, ನನ್ನ ಹಿರಿಯ ಮಿತ್ರರಾದ ತುಮಕೂರಿನ ಡಾ. ಬಿ. ನಂಜುಂಡಸ್ವಾಮಿ ಅವರು ನನಗೆ ಸಂದೇಶ ಕಳುಹಿಸಿದ್ದರು. ಆ ಸಂದೇಶದಲ್ಲಿ ಅವರು ಹೀಗೆ ಬರೆದಿದ್ದರು —

“ಲಿಂಗಾಯತರು ಮಾಡದ ಬಸವ ಸೇವೆಯನ್ನು ಧರ್ಮಸ್ಥಳದ ಡಾ. ಹೆಗ್ಗಡೆ ಮಾಡಿದ್ದಾರೆ.”

೧೨ನೇ ಶತಮಾನದಲ್ಲಿ ಸಮಾಜೋದ್ದಾರಕ ಕ್ರಾಂತಿಯನ್ನು ಎಳೆದುಕೊಂಡ ಬಸವಣ್ಣನವರ ಘನ ವ್ಯಕ್ತಿತ್ವ ಕುರಿತು ಮೊಟ್ಟಮೊದಲು ಆಂಧ್ರಪ್ರದೇಶದ ಪಾಲ್ಕುರಿಕೆ ಸೋಮನಾಥ ಕವಿ ತೆಲುಗು ಬಸವಪುರಾಣ ರಚಿಸಿದರು. ಅದನ್ನು ಭೀಮಕವಿ ಕನ್ನಡಕ್ಕೆ ಅನುವಾದಿಸಿದರು. ಹರಿಹರ, ಷಡಕ್ಷರಿ ಮುಂತಾದ ಕವಿಗಳು ಬಸವಣ್ಣನವರ ಕುರಿತು ಮಹಾಕಾವ್ಯಗಳನ್ನು ರಚಿಸಿದರು. ಬಸವಣ್ಣನವರ ಪ್ರಭಾವದಿಂದ ತಪ್ಪಿಸಿಕೊಂಡ ಕವಿಯೇ ಇಲ್ಲ ಎನ್ನಬಹುದು. ಹೀಗಾಗಿ, ಕಂಚಿಯ ಪ್ರಾಚೀನ ಶೈವ ಕ್ಷೇತ್ರದಲ್ಲಿ ವಾಸಿಸಿದ ಶೈವಮಹಾಕವಿ ಕಂಚಿ ಶಂಕರಾರಾಧ್ಯರು ಸಂಸ್ಕೃತ ಭಾಷೆಯಲ್ಲಿ ಬಸವ ಪುರಾಣ ರಚನೆ ಮಾಡಿದುದು ಅಪರೂಪದ ಮತ್ತು ಮಹತ್ವದ ಸಾಧನೆ. ಈ ಪುರಾಣದ ಮಹತ್ವವನ್ನು ಮೊಟ್ಟಮೊದಲು ಗುರುತಿಸಿದವರು ಡಾ. ಶಿ.ಚೆ. ನಂದೀಮಠ. ಅವರು ಇದರ ಕುರಿತು ಪ್ರಥಮವಾಗಿ ಲೇಖನ ಬರೆದಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾ. ಪರಡ್ಡಿ ಮಲ್ಲಿಕಾರ್ಜುನ ಅವರ ಸಂಪಾದಕತ್ವದಲ್ಲಿ ಈ ಕೃತಿಯು ದೇವನಾಗರಿ ಲಿಪಿಯಲ್ಲಿ, ಕನ್ನಡ ಅನುವಾದದೊಂದಿಗೆ ಪ್ರಕಟಿತವಾಯಿತು. ಸಹಸ್ರಪುಟಗಳ ಈ ಬೃಹತ್ ಗ್ರಂಥವನ್ನು ಪ್ರಕಟಿಸುವ ಕಾರ್ಯವನ್ನು ಲಿಂಗಾಯತ ಮಠಗಳು ಅಥವಾ ಸಂಘ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕಾಗಿತ್ತು. “

ಯಾರೂ ಕೈಹಾಕದ ಈ ಮಹಾಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ಕೈಗೊಂಡಿರುವುದು ಸಮಸ್ತ ಲಿಂಗಾಯತ ಸಮಾಜಕ್ಕೆ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ.

ಆದರೆ, ಗ್ರಂಥಕ್ಕೆ ಕಳಶಪ್ರಾಯವಾಗಬೇಕಿದ್ದ ಮುನ್ನುಡಿಯ ಕೆಲವು ಸಾಲುಗಳು ಈ ಮಹಾಗ್ರಂಥದ ಗಾಂಭೀರ್ಯಕ್ಕೆ ನೆರಳಿಟ್ಟಿದೆ.

ಶಾಸ್ತ್ರೀಯ ಸಂಪಾದನೆಯ ನಿರೀಕ್ಷಿತ ನಿಷ್ಪಕ್ಷಪಾತತೆಯನ್ನು ಕದಡುವಂತಹ ಈ ಉಲ್ಲೇಖಗಳು ಪಠ್ಯದ ಮೌಲ್ಯಮಟ್ಟವನ್ನು ಕ್ಷೀಣಗೊಳಿಸಿದಂತಿವೆ.

ಇಂತಹ ಸಂದರ್ಭಗಳಲ್ಲಿ ಪವಿತ್ರ ಗ್ರಂಥದ ಪಾರಂಪರಿಕ ಸೌಂದರ್ಯ ಉಳಿಯಲು ಮುನ್ನುಡಿಕಾರರಿಂದ ಇನ್ನಷ್ಟು ನಿಷ್ಪಕ್ಷಪಾತ ನಿಲುವು ಅಪೇಕ್ಷಿತವಾಗಿತ್ತು.

ಶುಭ್ರವಾದ ಶ್ವೇತವಸ್ತ್ರದ ಮೇಲೊಂದು ಕಪ್ಪು ಚುಕ್ಕೆ ಬಿದ್ದಂತೆ — ಪವಿತ್ರ ಗ್ರಂಥದ ಶುದ್ಧತೆಯಲ್ಲಿ ಅಪ್ರಯೋಜಕ ಕಲ್ಮಷದ ಛಾಪು ಮೂಡಿದೆ.

ಅಚ್ಯುತವಾದ ಪವಿತ್ರ್ಯ ಹೂವಿನ ಮೇಲೆ ಅನಿರೀಕ್ಷಿತ ಮತಾಂಧತೆಯ ಸ್ಪರ್ಶ.

ಅಧ್ಯಯನದ ಪಾವಿತ್ರ್ಯದಲ್ಲಿ ಸಂಶಯದ ಕಣ ಬಿದ್ದಾಗ, ಗ್ರಂಥದ ತಾತ್ವಿಕ ಚಿಂತನೆಗಳು ಮೌನವಾಗುವುದು ಸಹಜ.

ಮುನ್ನುಡಿ ಎಂಬುದು ಗ್ರಂಥದ ಓದುಗರಿಗೆ ಕೃತಿಯ ಹಿನ್ನೆಲೆ, ಪ್ರಾಮುಖ್ಯತೆ ಮತ್ತು ಸಂಪಾದಕನ ಕಾರ್ಯವಿಧಾನವನ್ನು ಪರಿಚಯಿಸುವ ಪೂರ್ವಕಥನಾತ್ಮಕ ವಿವರಣೆ. ಅದು ಕೇವಲ ಆರಂಭವಾಕ್ಯವಲ್ಲ — ಗ್ರಂಥದ ಶಾಸ್ತ್ರೀಯ ಮೌಲ್ಯ, ಪಠ್ಯವಿಮರ್ಶೆಯ ಕ್ರಮ, ಹಾಗೂ ಆಧ್ಯಾತ್ಮಿಕ–ಸಾಂಸ್ಕೃತಿಕ ಹಿನ್ನೆಲೆಯನ್ನು ವಿಶದಗೊಳಿಸುವ ಪ್ರಸ್ತಾವನೆಯಾಗಿದೆ.

ಅಂತಹ ಗೌರವಪೂರ್ಣ ಅವಕಾಶವನ್ನು ಪಡೆದಿರುವ ಮುನ್ನುಡಿಕಾರರಾದ ಡಾ. ವೀರಣ್ಣ ರಾಜೂರ ಅವರು ಸಾಹಿತ್ಯ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಶ್ರೇಷ್ಠ ಪಂಡಿತರಲ್ಲಿ ಒಬ್ಬರು. ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಂಶೋಧಕರಾಗಿ ಪ್ರಾರಂಭಿಸಿ, ಉಪನ್ಯಾಸಕ, ಪ್ರಾಧ್ಯಾಪಕ, ವಿಭಾಗಾಧ್ಯಕ್ಷ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ದೀರ್ಘಾವಧಿಯ ಸೇವೆ ಸಲ್ಲಿಸಿದವರು. ಅನೇಕ ವಿಚಾರಸಂಕಿರಣಗಳು, ಉಪನ್ಯಾಸಗಳು ಮತ್ತು ಸಂಶೋಧನಾ ಯೋಜನೆಗಳಲ್ಲಿ ಅವರ ಹಾಜರಾತಿ ಸದಾ ಚೇತನಮಯವಾಗಿತ್ತು. ಸರಳತೆ, ಸೌಜನ್ಯತೆ ಮತ್ತು ಪಾಂಡಿತ್ಯದ ಪ್ರತಿರೂಪರಾದ ರಾಜೂರ ಅವರು ಮಹಾನ್ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಆಪ್ತ ಶಿಷ್ಯರಾಗಿದ್ದರು. ನಡುಗನ್ನಡ ಸಾಹಿತ್ಯದಲ್ಲಿ, ವಿಶೇಷವಾಗಿ ವಚನಸಾಹಿತ್ಯ ಹಾಗೂ ಬಸವೋತ್ತರಯುಗದ ವಚನಕಾರರ ಕುರಿತು ಅವರ ಅಧ್ಯಯನ ವಿಶ್ಲೇಷಣೆಯು ಆಳವಾದ ಒಳನೋಟ ನೀಡುತ್ತದೆ.

ಆದರೆ, ಇಂತಹ ಪಾಂಡಿತ್ಯಪೂರ್ಣ ವ್ಯಕ್ತಿಯೇ “ಶ್ರೀ ವೃಷಭೇಶ್ವರ ಪುರಾಣಂ” ಎಂಬ ೧೪ನೆಯ ಶತಮಾನದ ಪುರಾಣಕೃತಿಗೆ ನೇರ ಸಂಬಂಧವಿಲ್ಲದ, ಇತ್ತೀಚಿನ (ಕ್ರಿ.ಶ. ೨೦೧೭ರ) ವೀರಶೈವ–ಲಿಂಗಾಯತ ಧರ್ಮಭೇದದ ವಿವಾದವನ್ನು ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವುದು ವಿಷಾದನೀಯ ಸಂಗತಿ.

ಅವರು ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ

  • “ಒಂದು ಕಾಲಕ್ಕೆ ಪರ್ಯಾಯ ಪದಗಳಂತೆ ಬಳಸುತ್ತ ಬಂದ ‘ವೀರಶೈವ’ ಮತ್ತು ‘ಲಿಂಗಾಯತ’ ಪದಗಳು ಇಂದು ತಾತ್ವಿಕವಾಗಿ ಭಿನ್ನವೆಂದು ಗಣಿಸಲಾಗಿದೆ.
  • ‘ಲಿಂಗ’ ಪದದ ಇತಿಹಾಸ ಪ್ರಾಚೀನವಾಗಿದ್ದರೂ, ದೇಹದ ಮೇಲೆ ಧರಿಸುವ ‘ಇಷ್ಟಲಿಂಗ’ ಪರಿಕಲ್ಪನೆ ಬಸವಣ್ಣನವರ ಕಾಲದಿಂದ — ಅಂದರೆ ೧೨ನೆಯ ಶತಮಾನದಿಂದ — ಜಾರಿಗೊಂಡುದಾಗಿದೆ.
  • “ಶಿವಶರಣರುಒಪ್ಪಿಕೊಂಡದ್ದುವೀರಶೈವ ಧರ್ಮವನ್ನಲ್ಲ;‘ಲಿಂಗಾಯತಧರ್ಮ’ವನ್ನೇ.
  • ಬಸವಣ್ಣನವರು ವೀರಶೈವಧರ್ಮವನ್ನು ಅಂಗೀಕರಿಸಲಿಲ್ಲ, ಊರ್ಜಿತಗೊಳಿಸಲಿಲ್ಲ; ಅವರು ಇಷ್ಟಲಿಂಗಾಧಾರಿತ ‘ಲಿಂಗಾಯತ’ ಎಂಬ ಹೊಸ ಸ್ವತಂತ್ರ ಧರ್ಮವನ್ನೇ ಸ್ಥಾಪಿಸಿದರು.”

ಈ ಹೇಳಿಕೆಗಳು ೧೪ನೆಯ ಶತಮಾನದ ಶ್ರೀ ವೃಷಭೇಶ್ವರ ಪುರಾಣಂ ಎಂಬ ಕೃತಿಯ ಮೂಲತತ್ತ್ವಕ್ಕೆ ನೇರವಾಗಿ ಹೊಂದುವಂತಿಲ್ಲ. ಈ ಪುರಾಣವು ಸ್ಪಷ್ಟವಾಗಿ ವೀರಶೈವ ಪರಂಪರೆಯ ತತ್ತ್ವಶ್ರೇಣಿಯಲ್ಲಿ ಬರೆಯಲ್ಪಟ್ಟ ಪೌರಾಣಿಕ ಗ್ರಂಥ. ಆದ್ದರಿಂದ ಇಂತಹ ಇತ್ತೀಚಿನ ಮತವೈಚಾರಿಕ ವಿವಾದಗಳನ್ನು ಮುನ್ನುಡಿಯಲ್ಲಿ ಒಳಪಡಿಸುವುದು ಕೃತಿಯ ತಾತ್ವಿಕ ಸೌಂದರ್ಯಕ್ಕೂ, ಪಠ್ಯಮೌಲ್ಯಕ್ಕೂ ಅಸಂಬಂಧಿತ.

ಇದು ಗ್ರಂಥಸಂಪಾದನೆಯ ನಿಷ್ಪಕ್ಷಪಾತ ಉದ್ದೇಶವನ್ನೇ ಬದಲಾಗಿಸುವಂತಾಗಿದೆ. ಮುನ್ನುಡಿಕಾರನ ಕರ್ತವ್ಯವೆಂದರೆ ಗ್ರಂಥದ ಪಠ್ಯಪರಿಷ್ಕರಣೆ, ಶೈಲಿಶೋಧನೆ, ಮತ್ತು ತತ್ತ್ವಸಂದರ್ಭಗಳ ವಿಶ್ಲೇಷಣೆ — ಪರಂಪರೆಯ ವಿವಾದಾತ್ಮಕ ವ್ಯಾಖ್ಯಾನವಲ್ಲ.

ಪರಮಾಶ್ಚರ್ಯವೆಂದರೆ ಸ್ವತಃ ಡಾ. ವೀರಣ್ಣ ರಾಜೂರ ಅವರೇ ತಮ್ಮ ಸಂಪಾದಿತ ಗ್ರಂಥ “ವೀರಶೈವದರ್ಶನ : ತೌಲನಿಕ ವಿವೇಚನೆ” (ಪ್ರಕಟನೆ: ಕ್ರಿ.ಶ. ೨೦೦೦) ಯ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ

  • ಪ್ರಸ್ತುತ ಕೃತಿ ‘ವೀರಶೈವದರ್ಶನ : ತೌಲನಿಕ ವಿವೇಚನೆ’ ಬಸವಜಯಂತಿಯ ೧೧ನೆಯ ಉಪನ್ಯಾಸ ಮಾಲಿಕೆಯಡಿಯಲ್ಲಿ, ದಿನಾಂಕ ೨೦೨೧ ಮಾರ್ಚ್ ೧೯೯೫ ರಂದು ನಡೆದ ವಿಚಾರಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನವಾಗಿದೆ.
  • ವೀರಶೈವದ ಹಾಗೂ ವೀರಶೈವ ನಿರ್ಣಯ ಪರಮಾವತಾರನೆನಿಸಿದ ಬಸವಣ್ಣನವರ ಲೋಕೋತ್ತರ ವಿಚಾರಗಳಿಗೆ ಲೋಕವಿಸ್ತಾರವಾದ ಕ್ಷಿತಿಜವನ್ನು ಕಲ್ಪಿಸುವುದು ಅಂದರೆ ಬಸವತತ್ತ್ವಗಳನ್ನು ಕರ್ನಾಟಕದಿಂದ ಭಾರತಕ್ಕೆ, ಭಾರತದಿಂದ ವಿಶ್ವಕ್ಕೆ ವಿಸ್ತರಿಸುವ ಉನ್ನತ ಧ್ಯೇಯದರ್ಶನವನ್ನು ಶ್ರೀ ಬಸವೇಶ್ವರಪೀಠ ಹೊಂದಿದೆ. ಈ ಉದ್ದೇಶ ಸಾಧನೆಗಾಗಿ ಸಂಶೋಧನೆ, ಸಂಪಾದನೆ, ಸೃಜನ, ವಿಮರ್ಶೆ, ಅನುವಾದ ಇತ್ಯಾದಿ ರೂಪದ ಅಧ್ಯಯನಗಳನ್ನು ದೇಶವಿದೇಶದ ಭಾಷೆಗಳ ಮೂಲಕ ಈ ವೇದಿಕೆ ನಡೆಸುತ್ತ ಬಂದಿದೆ.
  • ವೀರಶೈವವನ್ನು ಉಳಿದ ಧರ್ಮತತ್ತ್ವದರ್ಶನಗಳೊಂದಿಗೆ ತೌಲನಿಕವಾಗಿ ವಿವೇಚಿಸುವ ಮೂಲಕ ಅದರ ಸರಿಯಾದ ಮೌಲ್ಯಮಾಪನ ಮಾಡಿ ಅದರ ವಿಶಿಷ್ಟತೆಯನ್ನು ಎತ್ತಿ ತೋರಿಸುವ ಕಾರ್ಯ ಇಲ್ಲಿ ಸಮರ್ಥವಾಗಿ ನಡೆದಿದೆ. ವಿಚಾರಸಂಕಿರಣದಲ್ಲಿ ಪ್ರೀತಿಯಿಂದ ಭಾಗವಹಿಸಿ ಪ್ರಬಂಧ ಮಂಡಿಸಿದುದಲ್ಲದೆ, ಪರಿಶ್ರಮವಹಿಸಿ ಲೇಖನ ರೂಪದಲ್ಲಿ ಬರೆದು ಕೊಟ್ಟು ಗ್ರಂಥಪ್ರಕಟನೆಯನ್ನು ಸಾಧ್ಯಮಾಡಿದ ಎಲ್ಲ ವಿದ್ವಾಂಸರಿಗೆ ಅನಂತ ಕೃತಜ್ಞತೆಗಳು.”

ಈ ಉಲ್ಲೇಖಗಳಲ್ಲೇ ಅವರ ಸಂಶೋಧನಾ ನಿಲುವಿನ ಆಳ ಮತ್ತು ವಿಶಾಲತೆ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ವೀರಶೈವಧರ್ಮವನ್ನು ಉಳಿದ ಧರ್ಮತತ್ತ್ವ–ದರ್ಶನಗಳ ಜೊತೆ ತೌಲನಿಕವಾಗಿ ವಿಮರ್ಶಿಸುವ ದೃಷ್ಟಿ ಇದ್ದು, ಅದು ತತ್ತ್ವಸಾಮರಸ್ಯ ಮತ್ತು ವಿಶ್ವಮಾನವೀಯ ದೃಷ್ಟಿಕೋನವನ್ನು ಪ್ರತಿಪಾದಿಸುತ್ತದೆ.

ಆದರೆ, ಈ ಹಿನ್ನಲೆಯಲ್ಲಿ ಅವರ ಇತ್ತೀಚಿನ ಅಭಿಪ್ರಾಯವು ತಾವು ಸ್ವತಃ ಹಿಂದಿನ ಸಂಶೋಧನೆಯಲ್ಲಿ ಪ್ರತಿಪಾದಿಸಿದ ತತ್ತ್ವಸಾಮರಸ್ಯದಿಂದ ವಿಭಿನ್ನವಾಗಿ ಕಾಣುತ್ತದೆ — ಇದು ಪಂಡಿತನಾಗಿ ಅವರ ನಿಷ್ಪಕ್ಷಪಾತ ಸಂಶೋಧನಾ ನಿಲುವಿನ ವಿರುದ್ಧದ ವ್ಯತಿರೇಕದಂತಾಗಿದೆ.

ಸಂಶೋಧಕ ಅಥವಾ ಸಾಹಿತಿ ಎಂದರೆ ತತ್ವನಿಷ್ಠೆಯ ಮಾರ್ಗದಲ್ಲಿ ನಡೆಯುವ ಯಾತ್ರಿ.ಅವನ ಮಾತು, ಗ್ರಂಥ ಮತ್ತು ನಿಲುವುಗಳು ಕಾಲದ ಸತ್ಯದ ಸಾಕ್ಷಿಯಾಗಿರಬೇಕು.

ಆದರೆ ತಾನು ನಿಂತ ಬಣ್ಣವನ್ನು ಬದಲಿಸಿ ಮತ್ತೊಂದು ಬಣ್ಣ ಧರಿಸುವ ಧಿರಿಸಿನಂತೆ ನಿಲುವು ಬದಲಿಸಿದರೆ — ಅದು ಸಂಶೋಧಕನ ಪ್ರಾಮಾಣಿಕತೆಯ ಮೇಲಿನ ನೆರಳಾಗಿ ಬೀಳುತ್ತದೆ.

ಊಸುರವಳ್ಳಿಯಂತೆ ತಾತ್ವಿಕ ನಿಲುವು ಬದಲಿಸುವ ಪಂಡಿತನು ಕ್ಷಣಿಕ ಮೆಚ್ಚುಗೆಯನ್ನು ಗಳಿಸಬಹುದು, ಆದರೆ ಶಾಶ್ವತ ಗೌರವ ಕಳೆದುಕೊಳ್ಳುತ್ತಾನೆ.

ಸಾಹಿತ್ಯದ ಮೌಲ್ಯ ಶಾಶ್ವತವಾಗಿರುತ್ತದೆ — ಅದನ್ನು ರಕ್ಷಿಸುವವರು ಬದಲಾಗಬಾರದು..

“ವೀರಶೈವ” ಮತ್ತು “ಲಿಂಗಾಯತ” ಎಂಬ ಪದಗಳು ಭಾರತೀಯ ಶೈವಧರ್ಮದ ಇತಿಹಾಸದಲ್ಲಿ ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ಅರ್ಥಸಂದರ್ಭಗಳಲ್ಲಿ ಉಪಯೋಗಿಸಲ್ಪಟ್ಟಿವೆ. ಇವುಗಳ ಉತ್ಪತ್ತಿ, ಮತ್ತು ಸಾಮಾಜಿಕ ವಿಕಾಸದ ಕುರಿತು ಪಂಡಿತರ ಮಧ್ಯೆ ಅಭಿಪ್ರಾಯಭೇದಗಳಿದ್ದರೂ, ಬಹುತೇಕ ಸಂಶೋಧನಾ ಗ್ರಂಥಗಳು ಇವೆರಡನ್ನೂ ಪರಸ್ಪರ ವಿರೋಧಿ ಧರ್ಮಗಳೆಂದು ಪರಿಗಣಿಸುವುದಿಲ್ಲ.

ಅಷ್ಟೇ ಅಲ್ಲ, ಈ ಮಹಾಗ್ರಂಥದೊಂದಿಗೆ ಪ್ರಕಟಿತವಾದ ಡಾ. ವೀರೇಂದ್ರ ಹೆಗ್ಗಡೆ ಅವರ ಶುಭನುಡಿಯಲ್ಲಾಗಲಿ, ಡಾ. ಎಸ್.ಆರ್. ವಿಘ್ನರಾಜ ಅವರ ದೀರ್ಘ ಪ್ರಸ್ತಾವನೆಯಲ್ಲಾಗಲಿ ಇಂತಹ ವಿಭೇದದ ಯಾವುದೇ ಉಲ್ಲೇಖವಿಲ್ಲ. ಕೃತಿಕಾರರಾದ ಕಂಚಿ ಶಂಕರಾರಾಧ್ಯರು ೧೪ನೆಯ ಶತಮಾನದ ಕವಿಗಳು — ಇತ್ತೀಚಿನ ರಾಜಕೀಯ ವಿವಾದಗಳ ಶಬ್ದವೂ ಅವರ ಕಾಲದ ಅವಕಾಶವಾದಿ ಆಕಾಶವನ್ನು ಮುಟ್ಟಿರಲಿಲ್ಲ; ಅವರು ಅವುಗಳಿಂದ ಬಹುದೂರದವರಾಗಿದ್ದರು.

ಡಾ. ಎಸ್.ಆರ್. ವಿಘ್ನರಾಜ ಅವರ ದೀರ್ಘ ಪ್ರಸ್ತಾವನೆಯಲ್ಲಿ ಆರಂಭವಾಗುವ ಸಾಲುಗಳು ಹೀಗಿವೆ

“”ಭಗವದನುಭಾವವನ್ನು ಜನಸಾಮಾನ್ಯರಿಗೆ ಸರಳವಾದ ಮಾತುಗಳಲ್ಲಿ ನೀಡಿದ ಶಿವಶರಣರು ಒಪ್ಪಿಕೊಂಡ ಧರ್ಮ ‘ವೀರಶೈವ ಧರ್ಮ’. ಈ ಧರ್ಮವನ್ನು ಒಪ್ಪಿಕೊಂಡವರನ್ನು, ಅದನ್ನು ಆಚರಣೆಗೆ ತಂದವರನ್ನು ವೀರಶೈವರು, ಲಿಂಗವಂತರು, ಲಿಂಗಾಯತರು ಎಂಬ ಹೆಸರುಗಳಿಂದ ಕರೆದಿದ್ದಾರೆ. ವೀರಶೈವ ಧರ್ಮದಲ್ಲಿ ವಿಶಿಷ್ಟವಾಗಿರುವ ಎರಡು ಪ್ರಮುಖ ಅಂಶಗಳೆಂದರೆ ಷಟ್‌ ಸ್ಥಲ ಮತ್ತು ಲಿಂಗಧಾರಣೆ. ಶಿವನನ್ನು ಲಿಂಗದಲ್ಲಿ ಪೂಜಿಸುವುದು ಎಷ್ಟು ಪ್ರಾಚೀನವೊ, ಲಿಂಗವನ್ನು ದೇಹದ ಮೇಲೆ ಧರಿಸುತ್ತಿದ್ದುದೂ ಬಹುಶಃ ಅಷ್ಟೇ ಪ್ರಾಚೀನವೆನ್ನಬಹುದು. ಒಟ್ಟಿನಲ್ಲಿ ಲಿಂಗವನ್ನು ಅಂಗದ ಮೇಲೆ ಧರಿಸುವ ಪದ್ಧತಿ ಯಾರೊಬ್ಬರಿಂದಲೂ ಪ್ರವರ್ತಿತವಾದುದಲ್ಲ. ಶೈವಧರ್ಮದ ವಿಕಾಸದಲ್ಲಿ ಅಳವಟ್ಟ ಸಹಜಕ್ರಿಯೆ. ರೇಣುಕಾಚಾರ್ಯರು, ಏಕೋರಾಮಾರಾಧ್ಯರು, ಪಂಡಿತಾರಾಧ್ಯರು, ಮರುಳಾರಾಧ್ಯರು, ವಿಶ್ವಾರಾಧ್ಯರು ಎಂಬ ರೇಣುಕಾದಿ ಪಂಚಾಚಾರ್ಯರು ಅದರ ಬೆಳವಣಿಗೆಗೆ ಕಾರಣರಾಗಿರಬಹುದು. ಇತರ ಆಚಾರ್ಯರು ಪ್ರಭೋದಕರಾಗಿರಬಹುದು. ಪಾಶುಪತ ಶೈವ, ಕಾಶ್ಮೀರ ಶೈವ, ತಮಿಳು ಶೈವ, ಈ ವಿವಿಧ ಶಾಖೆಗಳಲ್ಲಿನ ಉದಾತ್ತ ಅಂಶಗಳನ್ನು ಅಳವಡಿಸಿಕೊಳ್ಳುವ ಮಾರ್ಗದಲ್ಲಿ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರಗಳು ರೂಪುಗೊಂಡಿರಬೇಕು. ಬಸವಣ್ಣನವರು ಬರುವ ಹೊತ್ತಿಗೆ ಕರ್ನಾಟಕದಲ್ಲಿದ್ದ ಲಾಕುಲರು, ಕಾಳಾಮುಖರು ಮೊದಲಾದ ವಿವಿಧ ಶೈವ ಶಾಖೆಗಳಲ್ಲಿ ಕೆಲವಕ್ಕಾದರೂ ದೀಕ್ಷೆ ಮೊದಲಾದ ವೀರಶೈವ ಸಂಸ್ಕಾರಗಳು ಒದಗಿದ್ದಿರಬೇಕು. ಏಕಾಂತ ರಾಮಯ್ಯ, ದೇವರದಾಸಿಮಯ್ಯ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ಈ ಧರ್ಮದಲ್ಲಿ ಸುಪ್ತವಾಗಿದ್ದ ಸರ್ವಸಮಾನತೆಯ ಅಂಶಗಳನ್ನು ಗ್ರಹಿಸಿದ ಬಸವಣ್ಣನವರು ಈ ಮತವನ್ನು ಅಂಗೀಕರಿಸಿ, ಅದರ ಉದಾತ್ತ ತತ್ವಗಳ ಬೆಂಬಲದಿಂದ ಜನತೆಯ ಸಾಮೂಹಿಕ ಉದ್ಧಾರಕ್ಕೆ ನಿರ್ಧರಿಸಿದರು. ಇದರಿಂದ ವೀರಶೈವಧರ್ಮ ಹೊಸದಾಗಿ ಸ್ಥಾಪಿತವಾದಷ್ಟೇ, ಪ್ರಸಿದ್ಧಿಯನ್ನೂ, ಹೊಸಕ್ರಾಂತಿಯನ್ನೂ, ಹೊಸ ಸ್ವರೂಪವನ್ನೂ ಪಡೆಯಿತು. ತತ್ಪರಿಣಾಮವಾಗಿ ಬಸವಣ್ಣನವರು ಸ್ಥಾಪಕರೂ ಆಗಿ ಪರಿಣಮಿಸಿದರು.

ಬಸವಣ್ಣನವರ ವ್ಯಕ್ತಿತ್ವದಿಂದ ಆಕರ್ಷಿತವಾಗಿ ನಾಡಿನ ನಾನಾಭಾಗಗಳಿಂದ ಸಾಧಕರು ಬಂದು ಕಲ್ಯಾಣದಲ್ಲಿ ಸೇರಿದರು. ಅಲ್ಲಮ ಪ್ರಭುವಿನಂತಹ ಮೇರು ಸದೃಶವ್ಯಕ್ತಿಯೂ ಕಲ್ಯಾಣಕ್ಕೆ ಬಂದನೆಂದರೆ ಬಸವಣ್ಣನವರ ಕಾರ್ಯಕ್ಷೇತ್ರದ ಹಿರಿಮೆಯನ್ನು ಊಹಿಸಿಕೊಳ್ಳಬಹುದು. ಅನುಭವ ಮಂಟಪದ ಮಥನದಿಂದ ವೀರಶೈವ ಧರ್ಮದ ತಾತ್ವಿಕ ವಿವೇಚನೆ ಆಳವಾಗಿ ಬೇರುಬಿಟ್ಟಿತು. ಆಚಾರಮಾರ್ಗಗಳಾದ ಅಷ್ಟಾವರಣಾದಿಗಳು ಇನ್ನೂ ಎತ್ತರಕ್ಕೆ ಬೆಳೆದವು. ಹೀಗೆ ಪ್ರಾಚೀನ ವೀರಶೈವ ಧರ್ಮ ತನ್ನ ಸನಾತನ ತತ್ವಗಳನ್ನು ನಿತ್ಯನೂತನವಾದ ಮಾನವೀಯ ಮಟ್ಟಕ್ಕೇರಿಸಿ ವಿಶ್ವಧರ್ಮವಾಗಿ ಬೆಳಗಿತು.

ಅದೊಂದು ಅಸದೃಶ ಅದ್ಭುತ ಪ್ರವಾಹ ಬಿದ್ದವರನ್ನು ಮುಳುಗಿಸಿ ತೇಲಿಸುವ ಹುಚ್ಚು. ನದಿಯ ಭೌತಿಕ ಪ್ರವಾಹವಲ್ಲ. ಎಚ್ಚರಿಸುವ ಮೌಡ್ಯರಹಿತ ಭಕ್ತಿ ಪ್ರವಾಹ. ಅಲ್ಲಿ ಮೀನು, ಚಿಪ್ಪು, ಗೊರಟೆಗಳಿಲ್ಲ, ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಸಮಾನತ್ವದ ಮುತ್ತು ರತ್ನಗಳಿವೆ. ಎಂಟು ಶತಮಾನಗಳೇ ಕಳೆದರೂ ಅದು ಬತ್ತುವ, ಚಿತ್ತ ಕದಲಿಸುವ, ಉನ್ಮತ್ತದ, ಉದ್ವೇಗದ ಝರಿಯಲ್ಲ. ಸಕಲ ಜೀವಿಗಳಿಗೆ ಲೇಸನ್ನೇ ಬಯಸಿ, ಅವುಗಳ ಹೃದಯಾಂತರಂಗಕ್ಕೆ ಶಾಶ್ವತ ಆನಂದಕೊಟ್ಟು, ಪಾವನ ಮಾಡುವ ಪ್ರಶಾಂತ ಸಾಗರ…….””

ಈ ಹಿನ್ನೆಲೆಯಲ್ಲಿ, ಇಂತಹ ಇತ್ತೀಚಿನ ಮತಾಂಧ ವಿವಾದಗಳನ್ನು ಈ ಪುರಾಣದ ಮುನ್ನುಡಿಯಲ್ಲಿ ಸೇರಿಸುವುದು ಶಾಸ್ತ್ರೀಯ ಗ್ರಂಥಸಂಪಾದನೆಯ ಪ್ರಾಮಾಣಿಕತೆಗೂ ಶೈಕ್ಷಣಿಕ ನಿಷ್ಪಕ್ಷಪಾತತೆಗೂ ವಿರುದ್ಧವಾಗಿದೆ. ಇದು ಪುರಾತನ ಗ್ರಂಥದ ಪವಿತ್ರತೆಗೆ ಕಲುಷಿತ ಮಸುಕನ್ನು ತರುವಂತಾಗಿದೆ — ಪರಂಪರೆಯ ಅರ್ಥಸಂಪನ್ನತೆ ಕಾವ್ಯಸೌಂದರ್ಯದಿಂದ ಪಠ್ಯ ವಿವಾದಕ್ಕೆ ಕುಸಿಯುವ ಅಪಾಯ ಇಲ್ಲಿಯೇ ಪ್ರಾರಂಭವಾಗುತ್ತದೆ.

ದ್ವೇಷ ವ್ಯಕ್ತಪಡಿಸಲು ಅನೇಕ ವೇದಿಕೆಗಳಿವೆ — ಸಾಮಾಜಿಕ ಜಾಲತಾಣಗಳಿವೆ, ಪತ್ರಿಕೆಗಳಿವೆ, ದೃಶ್ಯಮಾಧ್ಯಮಗಳಿವೆ. ಆದರೆ ಇಂಥ ಪವಿತ್ರ ಗ್ರಂಥಪ್ರಕಟನೆಯ ಅಂಗಳ, ಅಂತಹ ಘೋಷಣೆಗಳಿಗಾಗಿ ಸೂಕ್ತ ಸ್ಥಳವಲ್ಲ.

ಒಬ್ಬ ಅಧ್ಯಯನಾರ್ಥಿ ಕಂಚಿ ಶಂಕರಾರಾಧ್ಯರ ಹೆಸರು ನೋಡಿ ಸಾವಿರ ಪುಟಗಳ ಈ ಬೃಹತ್ ಗ್ರಂಥ ಖರೀದಿಸಿ, ಅದರಲ್ಲಿರುವ ಕೇವಲ ಆರು ಸಾಲುಗಳಲ್ಲಿ “ವೀರಶೈವ ಬೇರೆ, ಲಿಂಗಾಯತ ಬೇರೆ” ಎಂಬ ವಾಕ್ಯಗಳನ್ನು ಓದಿದಾಗ ಅವನ ಮನಸ್ಸಿನಲ್ಲಿ ಗೊಂದಲ ಉಂಟಾಗುವುದು ಸಹಜ.

ಹಾಲಿನ ಕೊಡಾಯಿಗೆ ಒಂದು ತೊಟ್ಟು ಹುಳಿಹಾಲು ಬಿದ್ದಂತೆ — ಆ ಆರು ಸಾಲುಗಳು, ಅವುಗಳಿಗೆ ಸಂಬಂಧವಿಲ್ಲದ ಪ್ರಾಚೀನ ಬಸವ ಪುರಾಣದ ಪಾವಿತ್ರ್ಯವನ್ನೇ ಕಲುಷಿತಗೊಳಿಸುತ್ತವೆ.

ಶುದ್ಧ ಹಾಲಿನ ಕೊಡಾಯಿಗೆ ಬಿದ್ದ ಹುಳಿಹಾಲು, ಅಸಮಾನತೆಯ ವಿಷಬೀಜದಂತಾಗಿದೆ. ಸಮಾಜವೆಂಬ ಕೊಡಾಯಿಯು ಮನುಷ್ಯರ ಸೌಹಾರ್ದ, ಸಹಭಾವ ಮತ್ತು ಪರಸ್ಪರ ಗೌರವದಿಂದ ತುಂಬಿರಬೇಕು. ಆದರೆ ಅದರೊಳಗೆ ಬಿದ್ದ ಧರ್ಮ, ವರ್ಣ, ಜಾತಿ ಅಥವಾ ಆರ್ಥಿಕ ಅಹಂಕಾರದ ಒಂದು ತೊಟ್ಟು ಹುಳಿ, ಆ ಪವಿತ್ರ ಮಿಶ್ರಣವನ್ನು ಹುಳಿ ಹಾಲಾಗಿಸುತ್ತದೆ. ಸಮಾನತೆಯ ಹಾಲು ಹುಳಿ ಹೋದಾಗ ಅದರ ಸುವಾಸನೆ ನಶಿಸಿಹೋಗುತ್ತದೆ; ಉಳಿಯುವುದೆಂದರೆ ಕಟುವಾದ ವಾಸನೆ, ವಿಭಜನೆಯ ಕಹಿ.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ನೋಡಬಾರದದ್ದನ್ನು ನೋಡಿ, ಕೇಳಬಾರದದ್ದನ್ನು ಕೇಳಿ, ಸಮಾಜದ ಅನ್ಯಾಯ ಮತ್ತು ಅಸಮಾನತೆಯ ನೇರ ಅನುಭವದಿಂದ ಈ ವಚನವನ್ನು ಬರೆದಿರಬಹುದು:

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ,

ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ,

ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.

 

ಆ ವಚನವು ಆ ಕಾಲದ ಅನಾಚಾರಕ್ಕೆ ವಿರೋಧವಾಗಿ ತಾತ್ಸಾರದ ಧ್ವನಿಯಾಗಿ ಮೊಳಗಿತ್ತು.

ಆದರೆ ಇಂದಿನ ಶತಮಾನದಲ್ಲಿ, ಕುರುಡತನ, ಕಿವುಡತನ ಅಥವಾ ಹೆಳವುತನದ ಹತಾಶೆಗಾಗಿ ಕಾಲವಿಲ್ಲ. ಇದು ಮನಸ್ಸು ಮುಚ್ಚಿಕೊಳ್ಳುವ ಯುಗವಲ್ಲ ಮನಸ್ಸು ತೆರೆಯುವ ಯುಗ.

ನಾವು ನೋಡಬೇಕು, ಕೇಳಬೇಕು, ಹೇಳಬೇಕು — ಆದರೆ ಸತ್ಯವನ್ನು, ಸಾಮರಸ್ಯವನ್ನು ಮತ್ತು ನ್ಯಾಯವನ್ನು.

ಇದು ನಿಂದನೆಗೆ, ವಿಭಜನೆಗೆ ಅಥವಾ ಮತಾಂಧತೆಗೆ ಕಾಲವಲ್ಲ;

ಇದು ವಿಚಾರಕ್ಕೆ, ವಿವೇಕಕ್ಕೆ ಮತ್ತು ಸಹಬಾಳ್ವೆಯ ಸಂವಾದಕ್ಕೆ ಕಾಲ.

ಆದುದರಿಂದ ಹಿರಿಯರಾದ ಡಾ. ವೀರಣ್ಣ ರಾಜೂರ ಅವರಿಗೆ ವಿನಮ್ರ ಮನವಿ —

“ವೀರಶೈವ ಬೇರೆ, ಲಿಂಗಾಯತ ಬೇರೆ” ಎಂಬ ಮತಾಂಧತೆಯ ಘೋಷವಾಕ್ಯಗಳನ್ನು ದಯವಿಟ್ಟು ಎಲ್ಲಂದರಲ್ಲಿ ,ಅಲ್ಲಿ ಬಳಸಬೇಡಿ.ಅದಕ್ಕಾಗಿ ವೇದಿಕೆಗಳಿವೆ, ಅಭಿಯಾನಗಳಿವೆ , ಸಭಾಮಂಟಪಗಳಿವೆ, ಮತ್ತು ಮತಪ್ರಚಾರದ ಕ್ಷೇತ್ರಗಳಿವೆ —

ಆ ಪಾವನ ಗ್ರಂಥಗಳ ಪುಟಗಳು ಅಂತಹ ಘೋಷಣೆಗಳಿಗಾಗಿ ಅಲ್ಲ; ಅವುಗಳು ಜ್ಞಾನ, ಭಕ್ತಿ ಮತ್ತು ಸಾಮರಸ್ಯದ ಶಬ್ದಗಳನ್ನು ಮಾತ್ರ ಸಹಿಸುತ್ತವೆ.

ಬಸವಣ್ಣನವರು ಪಾಲಿಸಿದ  ಧರ್ಮಶಾಸ್ತ್ರವೇ ಸಾಮರಸ್ಯದ ಧರ್ಮ — ವಿಭಜನೆಯಲ್ಲ, ವಿನಾಶದ ದಾರಿ ಅಲ್ಲ, ಸಂಗಮದ ಮಾರ್ಗ.

“ಶ್ರೀ ವೃಷಭೇಶ್ವರ ಪುರಾಣಂ” ಎಂಬ ೧೪ನೆಯ ಶತಮಾನದ ಈ ಕೃತಿ ಕೂಡ ಅದೇ ಸಂಗಮದ ತತ್ವವನ್ನು ಪ್ರತಿಪಾದಿಸುತ್ತದೆ.

ಅದು ದೇವ–ಭಕ್ತಿ, ಶರಣರ ನಿಷ್ಠೆ ಮತ್ತು ತತ್ತ್ವಪರಂಪರೆಯ ಶುದ್ಧ ನಿರೂಪಣೆ.

ಈ ಪವಿತ್ರ ಗ್ರಂಥದ ಪಠ್ಯಶುದ್ಧಿ ಮತ್ತು ಪ್ರಕಟಣೆಗೆ ಶ್ರಮಿಸಿದ ಸಂಪಾದಕರು, ಪ್ರಕಾಶಕರು, ಸಹಾಯಕರ ಎಲ್ಲರ ಸೇವೆ ಪ್ರಶಂಸನೀಯ.

ಆದರೆ ಇಂತಹ ದಿವ್ಯ ಗ್ರಂಥಗಳಿಗೆ ನಾವು ನೀಡಬೇಕಾದ ನಿಜವಾದ ಗೌರವವೆಂದರೆ —

ಅದರ ಪುಟಗಳಲ್ಲಿ ವಿವಾದವಲ್ಲ, ವಿವೇಕದ ಬೆಳಕು ತುಂಬುವುದು.

ಬಸವಣ್ಣನವರು ಬರೆದ ದಾರಿ ನಿಂದನೆಯಲ್ಲ, ವಿನಯದ ದಾರಿ;

ಅವರ ಧರ್ಮ ತ್ಯಾಗದ ಧರ್ಮ — ವಿಭೇದದ ಧರ್ಮವಲ್ಲ.

ಆದ್ದರಿಂದ ನಾವು ಅವರ ಸಂದೇಶವನ್ನು ಓದುವಾಗ,

ಅವರ ನಿಶ್ಶಬ್ದ ಪ್ರಾರ್ಥನೆಯನ್ನೂ ಕೇಳಬೇಕು —” ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವನೆಂದೆನಿಸಯ್ಯಾ”

ಈ ಯುಗದಲ್ಲಿ ಅಗತ್ಯವಿರುವುದು ಹೊಸ ಘೋಷಣೆಗಳಲ್ಲ,

ಹೊಸ ಮನಸ್ಸುಗಳೇ.

ಅವು ನೋಡಲಿ, ಕೇಳಲಿ, ಹೇಳಲಿ —

ಸತ್ಯಕ್ಕಾಗಿ, ಸಾಮರಸ್ಯಕ್ಕಾಗಿ, ಶರಣರ ಹಾದಿಯ ಶುದ್ಧತೆಯಿಗಾಗಿ.

 

*******ಶ್ರೀಕಂಠ.ಚೌಕೀಮಠ

 

ಪರಮಾಶ್ಚರ್ಯ!

ಕೊಡಗು ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ  (೨೨-೦೯-೨೦೨೫ ) ಸಭಾ ಸಜ್ಜಿಕೆಯ ಪರದೆಯಲ್ಲಿ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಪ್ರತ್ಯಕ್ಷವಾದುದು !

ಅಭಿಯಾನದ ಹಲವು ಜಿಲ್ಲೆಗಳ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಶ್ರೀಗಳು ತಮ್ಮ ಗುರುಗಳ ಬಗ್ಗೆ ಮಾತನಾಡಿದರು ಮತ್ತು ಅವರ ಪುಣ್ಯ ತಿಥಿಯ ಪ್ರಚಾರ ಮಾಡಿದರು.

ಮಾತೆ ಮಹಾದೇವಿಯವರ ಶಿ಼ಷ್ಯ ಬಳಗ ತಮ್ಮ ಗುರುಗಳ ಬಗ್ಗೆ ಉಲ್ಲೇಖಿಸಿ ಮಾತನಾಡಿದರು.ಎಲ್ಲ ಅಭಿಯಾನ ಕಾರ್ಯಕ್ರಮಗಳಲ್ಲಿ ಮಾತನಾಡಿದರು.

ಆದರೆ ಎಲ್ಲಿಯೂ, ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಹೆಸರು ಪ್ರಸ್ಥಾಪವಾಗದಂತೆ ಎಚ್ಚರಿಕೆ ವಹಿಸಿತು ಲಿಂಗಾಯತ ಮಠಾಧಿಶರ ಒಕ್ಕೂಟ,

ವಚನಕಟ್ಟುಗಳನ್ನು ಸಂಗ್ರಹಿಸಿದ, ವಚನ ಪಿತಾಮಹ ಹಳಕಟ್ಟಿಯವರಿಗೆ ಸಹಾಯ ಸಹಕಾರ ಸಲ್ಲಿಸಿದ, ಶರಣರ ವಚನಗಳನ್ನು ಸಂಗೀತದ ಮೂಲಕ ಪಂಚಾಕ್ಷರಿ ಗವಾಯಿಗಳ ಮೂಲಕ ಜಗತ್ತಿಗೆ ಪರಿಚಯಿಸಿದ ಮತ್ತು ಶಿವಯೋಗಮಂದಿರದ ವಟು ಸಾಧಕರಿಗೆ ವಚನಗಳನ್ನು ಅರ್ಚನ,ಅರ್ಪಣ,ಅನುಭಾವಗಳಲ್ಲಿ ರೂಢಿಗೆ ತಂದ ಕಾರುಣಿಕ ಯುಗಪುರುಷ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಸ್ಮರಿಸುವುದು   ಒತ್ತಟ್ಟಿಗಿರಲಿ,

ಅವರನ್ನು ಖಳನಾಯಕನಂತೆ ಬಿಂಬಿಸಿ  ,ಬಸವ ಭಾರತ ಪತ್ರಿಕೆಯಲ್ಲಿ  ಪೂರ್ವನಿಯೋಜಿತವಾಗಿ ಮುದ್ರಿಸಿದ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರು,ಆ ಪತ್ರಿಕೆ ಆ ಪುಟಗಳನ್ನು ಮುದ್ರಿಸಿ ಅಭಿಯಾನದಲ್ಲಿ ಉಚಿತವಾಗಿ ಹಂಚಿದ ಜಾಗತಿಕ ಲಿಂಗಾಯತ ಮಹಾಸಭೆಯ ಅತೃಪ್ತ ಸದಸ್ಯರ ಮಧ್ಯದಲ್ಲಿ ,ಅಭಿಯಾನ ಆರಂಭವಾಗಿ ಬರೊಬ್ಬರಿ ೨೧ ದಿವಸಗಳ ನಂತರ ಘಟಸ್ಥಾಪನೆಯ ದಿನದಂದು  “ಮಠದಿಂದ ಘಟವಲ್ಲ-ಘಟದಿಂದ ಮಠ “ ವೆಂದ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಮೌನವಾಗಿ ಕೊಡಗಿನ ವೀರರ ನಾಡಿನಲ್ಲಿ ಉದ್ಭವಾಗಿರುವುದು ಆಶ್ಚರ್ಯವೆನಿಸಿತು.

ಅದರ ಜೊತೆ ಪೂಜ್ಯರು ಸ್ಥಾಪಿಸಿದ  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡುಗು  ಜಿಲ್ಲಾ ಘಟಕದ ಹೆಸರು ರಾರಾಜಿಸುತ್ತಿತ್ತು.

ಸಂತೋಷವೆನಿಸಲಿಲ್ಲ!

ಒಂದು ಕ್ಷಣ ವಿಷಾದವೆನಿಸಿತು. ನೋವೆನಿಸಿತು ಅಕ್ರೋಶದ ಕಟ್ಟೆಯೊಡಿಯಿತು .ಹಲವು ಕ್ರೂರ ಮುಖಗಳು ಕಣ್ಣು ಮುಂದೆ ಬಂದವು.

“ವೀರಶೈವರು” ನಿಮ್ಮ ಲಿಂಗಾಯತ ಧರ್ಮಕ್ಕೆ ಬಂದರೆ ಸೇರಿಸಿಕೊಳ್ಳುವಿರಾ ಎಂದು ಮಾಧ್ಯಮದವರು ಕೇಳಿದಾಗ “ವೀರಶೈವರಷ್ಟೇ ಅಲ್ಲ ವೇಶ್ಯೇಯರೂ ಬಂದರೆ ಲಿಂಗಾಯತ ಧರ್ಮಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ವ್ಯಂಗವಾಗಿ ,ತುಚ್ಛವಾಗಿ ವೀರಶೈವ ಎಂದು ಒಪ್ಪಿಕೊಂಡವರನ್ನು ವೇಶ್ಯೆಯರಿಕ್ಕಿಂತಲೂ ಕೀಳು ಮಟ್ಟದಲ್ಲಿ ಕಂಡ ನಿಜಗುಣಾನಂದ ಸ್ವಾಮಿಗಳು,

ಅಖಿಲ ಭಾರತ ವೀರಶೈವ ಮಹಾಸಭೆಗೆ ವೀರಶೈವ ಎಂದು ಹೆಸರು ಬರಲು  ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳೇ ಕಾರಣ ವೆಂದು  ಸುಳ್ಳುಗಳ ಪುಸ್ತಕವನ್ನು ಬರೆದ ಡಾ. ಎಸ್.ಎಂ. ಜಾಮದಾರ್‌ ಅವರು,

ಪಂಚಾಚಾರ ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ ಮಾಡಿದರೆ ಪಾಪ ಕೆಲವರಿಗೆ ನೋವಾಗುತ್ತದೆ,ಅದನ್ನು ಜೆ.ಎಲ್‌ .ಎಮ್‌ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ಕ್ಲಿಯರ್‌ ಮಾಡಲಿ ಎಂದು ಭಯೋತ್ಪಾಕ ಭಾಷೆಯಲ್ಲಿ ಮಾತನಾಡಿದ ಮತ್ತು ಈ ಕಾರ್ಯಕ್ರಮದ ಲೈವ ಚೀತ್ರಿಕರಣ ಮಾಡುವ ವಚನ ಟಿವಿ ಮುಖ್ಯಸ್ಥ  ಸಿದ್ದು ಯಾಪಲಪರ್ವಿಯವರು,

ಅಭಿಯಾನ ಆರಂಭಗೊಳ್ಳುವ ಎರಡು ದಿನ ಮೊದಲು ಬಸವ ಭಾರತ ಎಂಬ ಮಾಸಪತ್ರಿಕೆ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರ ನೇತೃತ್ವದಲ್ಲಿ  ಶಶಿಕಾಂತ ಪಟ್ಟಣ ಎಂಬುವವರಿಂದ ಶ್ರೀ ಕುಮಾರ ಶಿವಯೋಗಿಗಳ ಮೇಲೆ ಅವಹೇಳನದ ಲೇಖನ ಬರೆಯಿಸಿ,ಮುದ್ರಿಸಿದಾಗ ಎದ್ದ ಪ್ರತಿಭಟನೆಗೆ ಶಶಿಕಾಂತ ಪಟ್ಟಣ ಅವರು ಕ್ಷಮೆ ಯಾಚಿಸಿದರು.ಅವರ ಕ್ಷಮೆ ಯಾಚಿಸಿದ್ದಕ್ಕೆ ಆಕ್ಷೇಪಣೆ ಮಾಡಿ ಬಸವ ಸಂಸ್ಕೃತಿ ಅಭಿಯಾನ ಮುಗಿಯುವವರೆಗೆ  ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಅವಹೇಳನದ ಲೇಖನ ಜೀವಂತವಾಗಿರ ಬೇಕೆಂಬ ಫರ್ಮಾನು ಹೊರಡಿಸಿದ ಅನಾಮಧೇಯ ಹಲವರು,

ಜಾಗತಿಕ ಲಿಂಗಾಯತ ಮಹಾಸಭಾದ ಕೃಪಾ ಪೋಷಿತ ೨೪x ೭  ಸಾಮಾಜಿಕ ಜಾಲತಾಣಗಳ ಸಕ್ರೀಯ ಕಾರ್ಯಕರ್ತರಾದ, ಅಶ್ಲೀಲ ಸಾಹಿತ್ಯದ  ನಿಜಗುಣ ಮೂರ್ತಿ ಮತ್ತು ಸಿ.ಜಿ.ಸಿದ್ದಲಿಂಗಸ್ವಾಮಿಗಳು,

ಈ ಎಲ್ಲ ಮಹಾತ್ಮರು ಮತ್ತು ಮಹಾನುಭಾವರು  ಅದು ಹೇಗೆ   ಕೊಡಗಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರದ ಬಳಕೆ ಯನ್ನು  ಗಮನಿಸಲಿಲ್ಲ ?.

ಬಹುಷಃ ಕೊಡಗಿನ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಅಲ್ಲಿನ ಅಖಿಲ ಭಾರತ ವೀರಶೈವ ಮಹಾಸಭೆ ವಹಿಸಿಕೊಂಡಿರಬಹುದಾದರೂ ,ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಘಟಕಗಳು ಕೈ ಜೋಡಿಸಿದ್ದರೂ ಎಲ್ಲಿಯೂ ಚಿತ್ರ ಬಿಡಿ ಹೆಸರನ್ನೂ ಎತ್ತದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದ ಅಭಿಯಾನದ ಸೂತ್ರದಾರರು ಕೊಡಗು ಜಿಲ್ಲೆಯಲ್ಲಿ ಮರೆತು ಬಿಟ್ಟಿದ್ದು ಸಖೇದಾಶ್ಚರ್ಯ!.

೨೦ನೆಯ ಶತಮಾನದ ಆರಂಬದಲ್ಲಿ ನೂರಾರು ಒಳಪಂಗಡಗಳನ್ನು ಒಟ್ಟುಗೂಡಿಸಿ ಅಖಂಡ ವೀರಶೈವ ಮಹಾಸಭಾವನ್ನು ಸ್ಥಾಪಿಸಿದ ಮಹಾಪುರುಷನ ಚಿತ್ರದ ಎದುರು ವೀರಶೈವ ಬೇರೆ ,ಲಿಂಗಾಯತ ಬೇರೆ ಎಂದು ಹೇಳುವುದೇ ಬಸವ ಸಂಸ್ಕೃತಿ ಎಂದು ಬಿಂಭಿಸಿದ ರೀತಿ , ಒಬ್ಬ ರಾಜಕಾರಣಿಯ ಅಧಿಕಾರದ ದಾಹಕ್ಕೆ ಬಲಿ ಕೊಟ್ಟಂತೆಯಿತ್ತು.

ಒಂದು  ತೋರಣದ ಎಲೆ ಬಸವಣ್ಣನವರ ಭಾವ ಚಿತ್ರ ಸರಕಾರಿ ಕಛೇರಿಯಲ್ಲಿ ತೂಗು ಹಾಕಿದ್ದು,

ಎರಡನೆಯ ತೋರಣದ ಎಲೆ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಿದ್ದು,

ಮೂರನೆಯ ತೋರಣದ ಎಲೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ತುರಾತುರಿಯಲ್ಲಿ ಕೇಂದ್ರಕ್ಕೆ ಕಳುಹಿಸಿದ್ದು

ನಾಲ್ಕನೆಯ ತೋರಣ ವಿಜಯಪುರದ ವಿ.ವಿ.ಗೆ ಅಕ್ಕ ಮಹಾದೇವಿಯವರ ಹೆಸರು ಇಟ್ಟಿದ್ದು..

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು;

ಕೊಂದಹರೆಂಬುದನರಿಯದೆ

ಬೆಂದೊಡಲ ಹೊರೆಯ ಹೋಯಿತ್ತಲ್ಲದೆ!

ಅದಂದೇ ಹುಟ್ಟಿತ್ತು,

ಅದಂದೇ ಹೊಂದಿತ್ತು;

ಕೊಂದವರುಳಿದರೇ ,ಕೂಡಲಸಂಗಮದೇವಾ??”. 

ಈ ತೋರಣಗಳು ಹೊರಗೆ ಕಂಡರೆ,

 ಒಳಗೆ ವೀರಶೈವ ಲಿಂಗಾಯತರ, ರಾಜಕಾರಣಿಗಳ ಮತ್ತು ಅಧಿಕಾರಿಗಳ ಎಳೆಹೂಟೆ ಕಾರ್ಯ ಅವ್ಯಾಹತ.

ಮುಂದೊಂದು ದಿನ ಕೊಂದವರು ಉಳಿಯದಿರಬಹುದು ಆದರೆ ಇಂದು ಅಖಂಡ ವೀರಶೈವ ಲಿಂಗಾಯತವನ್ನು ಛಿದ್ರ ಛಿದ್ರ ಮಾಡಿ ಅವರವರಲ್ಲಿ ವಿಷವನ್ನು ತುಂಬಿ  ಭೇಧವನ್ನು ಅನುಷ್ಠಾನಗೊಳಿಸುವಲ್ಲಿ   ಸಿದ್ದರಾಮಯ್ಯ ಯಶಸ್ವಿಯಾಗಿರುವರು.

ತೋರಣಗಳನ್ನು ಮೇಯ್ದ ಕುರಿಗಳು ,

ಸರಕಾರದ ಪ್ರಶಸ್ತಿ ಅನುದಾನ ಪಡೆದ ನರಿಗಳು

ಇಂದು ವ್ಯಾಘ್ರಗಳು.

ಈ   ಫಲಾನುಭವಿ ಗೋಮುಖ  ವ್ಯಾಘ್ರಗಳ ಆರ್ಭಟಗಳಲ್ಲಿ  “ವೀರಶೈವ ಲಿಂಗಾಯತ “ ದುರ್ಬಲಗೊಂಡಿದೆ .

ಆದರೆ ಆಗಿರುವ ದುರಂತ  , ಮತ್ತು ಆಗುವ  ನಷ್ಠ- ಊಹೆಗೂ ನಿಲಕಲಾರದ್ದು.

ಮುಂದೊಂದು ದಿನ ಮೈ ಕೊಡವಿ ,ಧೂಳುಗಳ ಮಧ್ಯದಲ್ಲಿ ಫಿನಿಕ್ಸ ಪಕ್ಷಿಯಂತೆ ಮರು ಜನ್ಮ ಪಡೆದುಕೊಳ್ಳುವುದು ಶತ ಸಿದ್ಧ.

ಫಿನಿಕ್ಸ್ (Phoenix) ಎಂಬುದು ಗ್ರೀಕ್ ಪುರಾಣಗಳಲ್ಲಿ ಪ್ರಸಿದ್ಧವಾದ ಅದ್ಭುತ ಪಕ್ಷಿ.
ಇದು ಒಂದು ಅಮರ ಪಕ್ಷಿ, ತನ್ನ ದೇಹವೇ ಅಗ್ನಿಯಾಗಿ ಭಸ್ಮವಾದ ಬಳಿಕ, ಆ ಭಸ್ಮದಿಂದಲೇ ಮತ್ತೆ ಪುನರ್ಜನ್ಮ ಪಡೆಯುತ್ತದೆ ಎಂದು ನಂಬಿಕೆ.

 

-ಶ್ರೀಕಂಠ.ಚೌಕೀಮಠ

 

ಇಂದು ೧೩-೦೯-೨೦೨೫ ಮುಂಜಾನೆ  ದಿನಪತ್ರಿಕೆ ತೆರೆದಾಗ ನನಗೊಂದು ಆಘಾತಕಾರಿ ಸುದ್ದಿ ಅತ್ಯಂತ ನೋವನ್ನುಂಟು ಮಾಡಿತು. “ಹಾನಗಲ್ಲ ಶ್ರೀ ಕುಮಾರೇಶ್ವರ ಮಠ ಕ್ಕೆ ಹುಸಿ ಬಾಂಬ್ ಕರೆ ” ಎಂಬ ತಲೆಬರಹದಡಿ ಪ್ರಕಟವಾದ ಸುದ್ದಿ.

೧೯೦೦ ರ ಅವಧಿಯಲ್ಲಿ ಹಾನಗಲ್ಲ ಸುತ್ತಮುತ್ತಲ ಗುರುಳೇ ರೋಗ ಮತ್ತು ಬರಗಾಲ ಅಪ್ಪಳಿಸಿದಾಗ ಇಡೀ ಹಾನಗಲ್ಲ ಮಠ ಆಶ್ರಯ ತಾಣವಾಗಿಸಿ , ಆಸ್ಪತ್ರೆಯಾಗಿ  ,ಶಿಕ್ಷಣ ಕೇಂದ್ರವಾಗಿ  ಜೀವನಾಡಿಯಾದ ಶ್ರೀ ಮಠದ ಪವಿತ್ರ ನೆಲಕ್ಕೆ  , ಛಿದ್ರ ಛಿದ್ರ ವಾಗಿ ಹೋಗಿದ್ದ ಸಮಾಜವನ್ನು ಒಂದು ಗೂಡಿಸಿ, ಸಮಾಜದ ಶ್ರೇಯೋಭಿವೃದ್ಧಿಗೆ ತಮ್ಮ ಇಡೀ ಜೀವಮಾನವನ್ನೇ ತ್ಯಾಗ ಮಾಡಿದ ಮಹಾ ಪುರುಷ ಹಾನಗಲ್ಲ ಶ್ರೀಕುಮಾರೇಶ್ವರರ ಮಠಕ್ಕೇ ಬಾಂಬ್‌ ಇಟ್ಟಿದ್ದೇನೆ ಎಂದು ಬೆಂಗಳೂರಿನಿಂದ ಹಾನಗಲ್ಲಿಗೆ ಬಂದು ಪೋಲಿಸ ಗಸ್ತು ವಾಹನದ ೧೧೨ ಕ್ಕೆ ದೂರವಾಣಿ ಕರೆ ಮಾಡಿದ ಆರೋಪಿ ಹರೀಶ ಚವ್ವಾಣನ ಹೇಳಿಕೆ ,ಹಲವು ಸಂಶಯಗಳಿಗೆ ಕಾರಣವಾಯಿತು.

ಸುದ್ದಿ ಮಾಡಿದವ ಮಾನಸಿಕ ಅಸ್ವಸ್ಥ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು. ಒಬ್ಬ ಮಾನಸಿಕ ಅಸ್ವಸ್ಥ ಹಾನಗಲ್ಲಿನಲ್ಲಿ ಶ್ರೀ ಕುಮಾರೇಶ್ವರ ಮಠವನ್ನೇ ಏಕೆ ಆಯ್ದುಕೊಂಡ ?.

ಆಶ್ಚರ್ಯವೆನಿಸುತ್ತದೆ.!

ಒಂದು ಕ್ಷಣ ಪ್ರಸ್ತುತ ಕರ್ನಾಟಕದಲ್ಲಿ ಜರಗುತ್ತಿರುವ  ವೀರಶೈವ ಲಿಂಗಾಯತ ಒಳ ಜಗಳಗಳು ,ತಾರಕಕ್ಕೇರುತ್ತಿರುವ ಪರ ವಿರೋಧದ ಭಾಷಣಗಳು ,ಅದರಲ್ಲೂ ವೀರಶೈವ ಎಂಬ ಶಬ್ಧಕ್ಕೆ ಉಗ್ರವಾಗಿ ವಿರೋಧಿಸುತ್ತಲೇ ಹುಟ್ಟಿಕೊಂಡ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಹಾನಗಲ್ಲಿನ ಜಿಲ್ಲೆ ಮತ್ತು ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಜನ್ಮ ಸ್ಥಳ ಜೋಯಿಸರಹರಳಹಳ್ಳಿಯ ಜಿಲ್ಲೆ  ಹಾವೇರಿಯನ್ನು ಪ್ರವೇಶ ಮಾಡುತ್ತಿರುವದು ನಾಳೆ ೧೪-೦೯-೨೦೨೫ ಕಾಕತಾಳಿಯ !.

ಹಲವು ಸುಂದರ  ಸ್ವಸ್ಥ ಮುಖಗಳು ಮತ್ತು ಅವರು ಉದುರಿಸಿದ ಸುಂದರ ಮುತ್ತುಗಳು ಕಣ್ಣೆದರು ಬಂದವು.

ಅವುಗಳಲ್ಲಿ…..

ಅಖಿಲ ಭಾರತ ವೀರಶೈವ ಮಹಾಸಭೆಗೆ ಲಿಂಗಾಯತ ಮಹಾಸಭೆ ಎಂದು ಹೆಸರಿಡದೇ ವೀರಶೈವ ಮಹಾಸಭೆ ಎಂದು ಹೆಸರಿಟ್ಟವರು ಹಾನಗಲ್ಲ ಕುಮಾರಸ್ವಾಮಿಗಳು ಎಂದು ಹಲವು ಅವಹೇಳನಕರ ವಿಷಯಗಳ ಪುಸ್ತಕವನ್ನು ಬರೆದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸೂತ್ರದಾರಿಗಳಾದ ,ಚಾಣಾಕ್ಷರೂ,ಚಾಣುಕ್ಯರೂ ಮತ್ತು ಮಹಾ ಮೇಧಾವಿಗಳಾದ ಡಾ.ಎಸ್.ಎಮ್.ಜಾಮದಾರ ಅವರು,

೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕದ ಕುರಿತಾದ ಕಾರ್ಯಕ್ರಮದಲ್ಲಿ ಗದುಗಿನ ಕೆ.ವಿ.ಎಸ್.ಆರ್‌ ಪದವಿ ಪೂರ್ವ ಕಾಲೇಜಿನ ನಿವೃತ್‌ ಇಂಗ್ಲಿಷ್‌ ಭಾಷೆಯ ಪ್ರಾದ್ಯಾಪಕ ಮತ್ತು ವಚನ ಟಿ,ವಿಯ ಮುಖ್ಯಸ್ಥ ಸಿದ್ದು .ಬ. ಯಾಪಲಪರ್ವಿ ಎನ್ನುವವರು, ಕಾರ್ಯಕ್ರಮ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕಕ್ಕೆ ಸೀಮಿತವಾಗಿದ್ದರೂ ಅನಾವಶ್ಯಕವಾಗಿ ಪುಸ್ತಕಕ್ಕೂ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ  ಪರಮಪೂಜ್ಯರ ಹೆಸರನ್ನು ಪ್ರಸ್ಥಾಪಿಸಿ : “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಪ್ರವಾಚಿಸಿದ್ದರಲ್ಲಿ  “ಅಟ್ಯಾಕ” ಅನ್ನುವ ಭಯೋತ್ಪಾದಕ ಶಬ್ಧ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಆರಂಭಗೊಳ್ಳುವ ಒಂದು ವಾರದ ಹಿಂದೆ “ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಲೇಖನದಲ್ಲಿ ಉದ್ದೇಶಪೂರ್ವಕವಾಗಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನ.

ಲೇಖನಕ್ಕೆ ತೀವೃ ವಿರೋಧವುಂಟಾದಾಗ ಕ್ಷಮೆ ಯಾಚಿಸಿದ ಡಾ,ಶಶಿಕಾಂತ ಪಟ್ಟಣ ಅವರ 29-08-2025ರಂದು ನಡೆದ ಕಾನ್ಫರೆನ್ಸ್ ಕರೆಯಲ್ಲಿ ವ್ಯಕ್ತವಾದ ಮಾತುಗಳು ಸಂಶಯದ ದಿಕ್ಕನ್ನು ಬದಲಾಯಿಸುವಂತಹದ್ದು- ವಚನ ಟಿ.ವಿಯಲ್ಲಿ ಸಂದರ್ಶನ ಕೊಡುವ.,ಜಾಗತಿಕ ಲಿಂಗಾಯತ ಮಹಾಸಭಾದ ಹಿರಿಯ ಸದಸ್ಯರಾದ ಶ್ರೀ ಅಶೋಕ ಬರಗುಂಡಿ (ನಿವೃತ್ತ ಎಂಜಿನಿಯರ್) ಬಸವತತ್ವ ಪ್ರತಿಪಾದಕರು ಅವರು ಲಿಂಗಾಯತ ಮಠಾಧೀಶರ ಬಸವತತ್ವ ಅಭಿಯಾನ ಆರಂಭವಾಗುತ್ತಿರುವದರಿಂದ- ಪ್ರಕಟಗೊಂಡ ಪೂಜ್ಯ ಹಾನಗಲ್ಲ ಶ್ರೀಗಳ ಕುರಿತು ಅವಹೇಳನ ದ ಲೇಖನಕ್ಕೆ ಕ್ಷಮೆ ಕೇಳಿದ ಡಾ,ಶಶಿಕಾಂತ ಪಟ್ಟಣ  ಅವರಿಗೆ ತಾಕೀತು ಮಾಡಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ.

ಜೊತೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರುಗಳಾದ ಶ್ರೀ ನಿಜಗುಣಮೂರ್ತಿ ಮತ್ತು ಶ್ರೀ ಸಿದ್ದಲಿಂಗಸ್ವಾಮಿ.ಸಿ.ಜಿ. ಅವರ ಮುಂದುವರೆದ ಜಾಲತಾಣಗಳಲ್ಲಿನ  ನಿರಂತರ ಅವಹೇಳನಗಳು ಡಾ,ಶಶಿಕಾಂತ ಪಟ್ಟಣ ಅವರ ಲೇಖನದ ಪ್ರಕಟಣೆ ಉದ್ದೇಶ ಪೂರ್ವಕ ಹಿನ್ನಲೆಯನ್ನು ಸಾಬೀತು ಪಡಿಸುತ್ತದೆ.

ಕೆಲವು ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಪೂಜ್ಯ ಶ್ರೀ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅವಹೇಳನದ ಲೇಖನದ ಪುಟಗಳನ್ನಷ್ಟೇ ಸಾವಿರಾರು ಪ್ರತಿ ಮುದ್ರಿಸಿ  ಇಲ್ಲವೇ ಝರಾಕ್ಸ ಪ್ರತಿ ಮಾಡಿಸಿ ಲಿಂಗಾಯತ ಮಠಾಧೀಶರ ಒಕ್ಕೂಟ ಆರಂಭಿಸಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ಹಂಚಲು ಮತ್ತು ಅದಕ್ಕೆ ಉಂಟಾಗುವ ಖರ್ಚು ವೆಚ್ಚಗಳನ್ನು ಭರಿಸುವದಾಗಿಯೂ ಹೇಳಿದ ಸಂಗತಿಗಳು ಬಸವ ಭಾರತ ಪತ್ರಿಕೆಯ ಸಂಪಾದಕ ಶಿವರುದ್ರ  ಮತ್ತು ಲೇಖಕ ಡಾ. ಶಶಿಕಾಂತ ಪಟ್ಟಣ  ಕಾನಫರೆನ್ಸ ಕಾಲ್‌ ನಲ್ಲಿ  ವಿಚಾರ ವಿನಿಮಯದಲ್ಲಿ ವ್ಯಕ್ತ ವಾದುದನ್ನು ನಾನು ಇಲ್ಲಿ ಸ್ಮರಿಸುತ್ತೇನೆ.

ಎಲ್ಲದರ ಜೊತೆಗೆ ನಾನು ಅತ್ಯಂತ ಗೌರವ ಮತ್ತು ಅಭಿಮಾನದಿಂದ ಕಾಣುವ ಇಬ್ಬರ  ಶ್ರೀಗಳ “ಮೌನ” ನನಗೆ ಅತ್ಯಂತ ನೋವನ್ನುಂಟುಮಾಡಿದೆ.

“ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನದ ಸಂಚಿಕೆಯ ಗೌರವ ಸಂಪಾದಕರಾದ  ಇಲಕಲ್ಲಿನ ಪೂಜ್ಯ ಗುರು ಮಹಾಂತಸ್ವಾಮಿಗಳು ಮತ್ತು ಸಹಿಯಿಲ್ಲದ ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ “ ಬಸವ ಭಾರತ “ ಪತ್ರಿಕೆಯ ಸಂಪಾದಕರ ಪತ್ರದಲ್ಲಿ  ಹಠಾತ್ತಾಗಿ ಕಾಣಿಸಿಕೊಂಡ ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟಾಧ್ಯಕ್ಷರ ಹೆಸರು , ಅವರಿಬ್ಬರ ಗಮನಕ್ಕೆ ತಂದರೂ  ಅವರು  ಲಿಖಿತ ಸ್ಪಷ್ಠೀಕರಣ ಕೊಡದೇ ಇರುವುದು.

ಸುಂದರವಾಗಿದ್ದ ಬಂಧುರವಾಗಿದ್ದ ವೀರಶೈವ ಲಿಂಗಾಯತ ಸಮುದಾಯ ೨೦೧೭ ರಿಂದ ಇಲ್ಲಿಯವರೆಗೆ ರಾಜಕೀಯ ಬಲಿಪಶುವಾಗಿದ್ದು. ಎಡಗೈ ತನ್ನ ಬಲಗೈಯನ್ನೇ ಸಂಶಯದಿಂದ ನೋಡುವ ಸ್ಥಿತಿಯನ್ನು ತಲುಪಿದ್ದು ಶೋಚನೀಯ.

ಮೇಲ್ನೋಟಕ್ಕೆ ಬಸವಣ್ಣನವರ ಭಾವಚಿತ್ರ ಸರಕಾರಿ ಕಛೇರಿಯಲ್ಲಿ ಹಾಕಿಸಿ ,ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಳನೋಟದಲ್ಲಿ ಕರಳುಬಳ್ಳಿಗಳಿಗೆ ಕೊಳ್ಳಿಯನಿಕ್ಕಿದವರು ಒಳ ಒಳಗೆ  ನಗುತ್ತಿರುವ  ಮುಸಿ ಮುಸಿ ನಗು ಹೊರ ಹೊರಗೆ ಕರಳುಬಳ್ಳಿಗಳು ಕತ್ತಿ ಮಸಿಯುತ್ತಿರುವುದು ವೀರಶೈವ ಲಿಂಗಾಯತರ ದುರಂತ ಮತ್ತು ಅವರು  ಹಗಲು ಕಂಡ ಬಾವಿಗೆ ರಾತ್ರಿ ಹಾರಿಕೊಳ್ಳುತ್ತಿರುವುದು ಶೋಚನೀಯ.

ಲಿಂಗಾಯತ ಎಂದು ವಾದಿಸುವವರು ಲಿಂಗಾಯತ ರಾಗಿ ಬದುಕಲಿ

ವೀರಶೈವರು ಎಂದು ವಾದಿಸುವವರು ವೀರಶೈವರಾಗಿ ಬದುಕಲಿ

ವೀರಶೈವ ಲಿಂಗಾಯತರು ಎಂದು ಸಮರಸದ ಬದುಕನ್ನು ಕಾಣಲಿಚ್ಚುಸುವವರು ವೀರಶೈವ ಲಿಂಗಾಯತರಾಗಿ ಬದುಕಲಿ.

ಆದರೆ ನಾ ಹೆಚ್ಚು ನೀ ಹೆಚ್ಚು ಎನ್ನುವ ಹಗ್ಗ ಜಗ್ಗಾಟದ ಪ್ರತಿ ಹಂತದಲ್ಲೂ  ಸಮಾಜದ ಉನ್ನತಿಗೆ ಹಗಲಿರಳು ಶ್ರಮಪಟ್ಟ ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು  ಅನಾವಶ್ಯಕವಾಗಿ ಎಳೆದುತರುವ ಪಾಪದ ಕೆಲಸ ಅಕ್ಷಮ್ಯ ಅಪರಾಧ.

ಈ ವಿಷಯದ ಸೂಕ್ಷ್ಮತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ತೀವೃವಾಗಿ ಮನಗಾಣಬೇಕು.

ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಕುರಿತು ಅವಹೇಳಕಾರಿ ಪುಸ್ತಕ ಪ್ರಕಟಿಸುವುದು ,ಸಾರ್ವಜನಿಕ ಸಭೆಯಲ್ಲಿ ಪೂಜ್ಯರ ಮೇಲೆ “ಅಟ್ಯಾಕ” ಎಂಬ ಭಯೋತ್ಪಾದಕ ಶಬ್ಧವನ್ನು ಕೇಳಿಯೂ ಕೇಳದಂತೆ ಕುಳಿತುಕೊಳ್ಳುವುದು ,ಜಾಣ ಮೌನವನ್ನು ವಹಿಸುವುದು  ಇಂದು ಸಂಬಂಧಪಟ್ಟವರ ಆತ್ಮಗಳಿಗೆ ಸಂತೋಷವನ್ನು ನೀಡುತ್ತಿರಬಹುದು.

ನ್ಯಾಯಾಂಗ, ರಾಜ್ಯಾಂಗ ಮತ್ತು ಕಾರ್ಯಾಂಗಗಳು  ಸಂಬಂಧಪಟ್ಟವರ ಆತ್ಮಗಳಿಗೆ ಪೂರಕ ಸಹಕಾರ ನೀಡುತ್ತಿರಬಹುದು,ಆದರೆ  ಮುಂದೊಂದು ದಿನ ನಿಸರ್ಗ ಈ ಎಲ್ಲ ನೀಚ ಕಾರ್ಯಗಳಿಗೆ  ತಕ್ಕ ಉತ್ತರ ನೀಡುತ್ತದೆ ಎಂಬ ಅಚಲ ನಂಬಿಕೆ ನನ್ನದು.

-ಶ್ರೀಕಂಠ.ಚೌಕೀಮಠ