General

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

ಕರ್ಮೇಂದ್ರಿಯಗಳಲ್ಲಿ ಕ್ರಿಯಾಲಿಂಗ

(ಇಷ್ಟಲಿಂಗದ ಸಂಬಂಧ)

ಕಂದ ಕೇಳೀ ಲಿಂಗ | ಮುಂದೆ ಕರ್ಮೇಂದ್ರಿಯದಿ

ನಿಂದ ನಿಲುಕಡೆಯ-ನೊಂದೊಂದ ಪೇಳ್ವೆ ನಿನ-

ಗೆಂದ ಶ್ರೀಗುರುವೆ ಕೃಪೆಯಾಗು   || ೧೫೦  ||

 

ಈ ದಾರ್ಶನಿಕ ಕವಿಯು ಶಿವಾದ್ವೈತ ಸಿದ್ಧಾಂತದ ಮೂಲ ಚಿನ್ಹವೆನಿಸಿದ ಲಿಂಗವನ್ನು ಬಹಿರಂಗ ಹಾಗೂ ಅಂತರಂಗದಲ್ಲಿ ಧರಿಸುವ ಪರಿಯನ್ನು ಬಿತ್ತರಿಸಿದನು. ಒಳಹೊರಗೂ ಲಿಂಗಧಾರಣೆಯ ಚಾರಿತ್ರವನ್ನು ನಿರೂಪಿಸಿದನು. ಲಿಂಗವನ್ನು ಕೇವಲ ಧರಿಸಿಕೊಂಡರಾಗದು. ಅದನ್ನು ನೈಜಾಚರಣೆಯಲ್ಲಿ ಅಳವಡಿಸಿಕೊಳ್ಳಬೇಕಾಗುವದು. ಕಾರಣ ಇನ್ನು ಮುಂದೆ ಇಷ್ಟಲಿಂಗ, ಪ್ರಾಣಲಿಂಗ ಭಾವಲಿಂಗಗಳನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳುವ ವಿಧಾನವನ್ನು ಪ್ರತಿಪಾದಿಸುತ್ತಾನೆ.

ಯಾವ ಶಿಷ್ಯನಲ್ಲಿ ಜಿಜ್ಞಾಸೆ, ಜ್ಞಾನಪಿಪಾಸೆ ಹಾಗೂ ಜ್ಞಾನಗ್ರಹಣ ಶಕ್ತಿಗಳು ಅಧಿಕವಾಗಿರುತ್ತವೆಯೋ, ಸದ್ಭಕ್ತಿ ಸದ್ಭಾವನೆಗಳೇ ಜೀವನವಾಗಿರುವದೋ ಅಂಥ ಶಿಷ್ಯನಿಗೆ ಸದ್ಗುರುವು ಪುನಃ ಪುನಃ ಹೊಸವಿಷಯಗಳನ್ನು ತಿಳಿಸಲು ಆತುರನಾಗುವನು. ಈ ತ್ರಿಪದಿಯಲ್ಲಿ ಗುರು ಶಿಷ್ಯರ ಮಧುರ ಬಾಂಧವ್ಯ ವ್ಯಕ್ತವಾಗುತ್ತದೆ. ಇಲ್ಲಿ ಪೂಜ್ಯ ಲಿಂಗನಾಯಕನಹಳ್ಳಿ ಪರಮ ನಿರಂಜನ ಪುಂಗವರ ಜ್ಞಾನದ ಪ್ರಖರತೆ ಹಾಗೂ ಶಿಷ್ಯ ಬಸವಲಿಂಗ ಶರಣರ ಜ್ಞಾನಪಿಪಾಸೆಯ ಮಟ್ಟ ವ್ಯಕ್ತವಾಗದೇ ಇರದು.

ಕಂದ ! ಕೇಳು, ನಿನ್ನ ಕೈಯಲ್ಲಿ ಕಾಣಿಸಿಕೊಂಡ ಈ ಇಷ್ಟಲಿಂಗವು ಕ್ರಿಯಾ ಲಿಂಗವಾಗಿದೆ. ಯಾಕೆಂದರೆ ಸತ್ಕ್ರಿಯೆಗಳಿಂದಲೇ ಈ ಲಿಂಗದ ಸಾಕ್ಷಾತ್ಕಾರವಾಗುವದು. ಇದನ್ನು ನಿನ್ನ ಕರ್ಮೇಂದ್ರಿಯಗಳಾದ ಗುದ, ಗುಹ್ಯ ಪಾದ ಪಾಣಿ ಮತ್ತು ವಾಣಿಗಳೆಂಬ ಐದಿಂದ್ರಿಯಗಳಲ್ಲಿ ಪ್ರಕಟಗೊಳಿಸಿಕೊಳ್ಳಬೇಕು. ಅಂದರೆ ಈ ಲಿಂಗವು ಆಯಾ ಇಂದ್ರಿಯಗಳಲ್ಲಿ ನಿಂದ ನಿಲುವನ್ನು ಒಂದೊಂದನ್ನಾಗಿ ಮುಂದೆ ನಿರೂಪಿಸುತ್ತೇನೆ. ಚನ್ನಾಗಿ ಲಕ್ಷವಿಟ್ಟು ಕೇಳು. ಎಂದು ಹೇಳುವ ಗುರು ಶ್ರೀಗುರುವಲ್ಲದೆ ! ಪರಮಗುರುವಲ್ಲವೆ |

ಮೊದಲೆ ದುರ್ಮದ () ಗಳೆವ | ಗುದಿಗಾನಂದವ ತಳೆವ

ಗುದದೊಳಾಚಾರ- ವಿದಿತ ಲಿಂಗವನು ಪೇ-

ಳ್ದಧಿಕಾರಿ ಗುರುವೆ ಕೃಪೆಯಾಗು    ||೧೫೧||

ಕರ್ಮೇಂದ್ರಿಯಗಳಲ್ಲಿ ಮೊದಲನೆಯದು ಗುದ. ಗುದೇಂದ್ರಿಯವು ಪೃಥ್ವಿ ತತ್ವಪ್ರಧಾನವಾದುದು. ಶರೀರವೂ ಪೃಥ್ವಿತತ್ವಾಧಿಕ್ಯತೆಯಿಂದ ಕೂಡಿದೆ. ಪೃಥ್ವಿಯು ಗಂಧಗುಣವುಳ್ಳುದು. ೫೬ನೆಯ ತ್ರಿಪದಿಯಲ್ಲಿ ಭೂಮಿತತ್ವದ ವಿಚಾರವನ್ನು ಅವಲೋಕಿಸಬಹುದು.  ಗುದೇಂದ್ರಿಯ ಶುದ್ಧತೆಯೇ ಶರೀರ ವೃದ್ಧಿಗೆ ಕಾರಣ, ಅದು ಚೆನ್ನಾಗಿ ತನ್ನ ಕಾರ್ಯವನ್ನು ನಿರ್ವಹಿಸದಿದ್ದರೆ ಅಲ್ಲಿನ ಅಧಿದೈವನಾದ ಯಮನ ಸದನವನ್ನು ಸೇರಬೇಕಾಗುವದು. ಕಾರಣ ಗುದೇಂದ್ರಿಯವು ದರ್ಮಲವನ್ನು ಪ್ರತಿನಿತ್ಯ ದೂರಗೊಳಿಸುವದು, ಮಲವಿಸರ್ಜನೆಯಾದರೆ ದೈಹಿಕ ಆನಂದ ಸಿಕ್ಕುವದು. ಶರೀರವು ಉತ್ಸಾಹಗೊಳ್ಳುವರು. ‘ದುರ್ಮಲ ಶಬ್ದದ ಹೊರತಾಗಿ ‘ದುರ್ಮದ ಪದವೂ ಕಾಲಾಂತರದಲ್ಲಿ ಸಿಕ್ಕುತ್ತದೆ. ದುರ್ಮದ ಪದ ಪ್ರಯೋಗದಿಂದಲೂ ಅರ್ಥ ವಿಸ್ತಾರಗೊಳ್ಳುತ್ತದೆ. ಮಲ ಶಬ್ದದಿಂದ ಭೌತಿಕ ಮಲ ಹಾಗೂ ಆಧ್ಯಾತ್ಮಿಕ ಮಲಗಳೆಂದೂ ಗ್ರಹಿಸಬಹುದು. ಈ ಮಲಗಳನ್ನು ಶರೀರದಿಂದ ದೂರಗೊಳಿಸುವಂತೆ ಮದವನ್ನು ದೂರೀಕರಿಸಬೇಕು. ಮದವು ಜೀವನಿಗೆ ಅನಿಮಿತ್ತ ವೈರಿಯೆನಿಸಿದೆ. ಪ್ರತಿಯೊಬ್ಬ ಮಾನವನು ತನ್ನಲ್ಲಿರುವ ದುರಹಂಕಾರವನ್ನು ದೂರಗೊಳಿಸಿದಲ್ಲದೆ ಆನಂದ ಸಿಕ್ಕಲಾರದು. ಮದ ತಮಸಿಗುಣ. ಈ ಮದದ ವಿಚಾರ ೬೩ನೆಯ ತ್ರಿಪದಿಯಲ್ಲಿ ಅವಲೋಕಿಸಬಹುದು.

ಮದೋನ್ಮತ್ತ ತಾಮಸಿಗೆ ಆನಂದ ಎಂದಿಗೂ ಸಿಕ್ಕದು. ಕಾರಣ ದುರ್ಮಲವನ್ನು ಹಾಗೂ ದುರ್ಮದವನ್ನು ದೂರೀಕರಿಸಿದರೇನೆ ಅಲ್ಲಿ ಆಚಾರಲಿಂಗದ ಪ್ರತಿಷ್ಠೆಯಾಗುವದು. ಈ ಲಿಂಗವು ಅನ್ವರ್ಥಕನಾಮವನ್ನು ಹೊಂದಿದೆ. ಸದಾಚಾರಗಳಿಂದ ಆಚಾರಲಿಂಗವು ಪ್ರಕಟಗೊಳ್ಳುವದು.  ಆಚಾರಲಿಂಗದ ಅರಿವನ್ನು ಮಾಡಿಕೊಡುವ ಗುರು ಅಧಿಕಾರಿಯಾಗಬೇಕಂತೆ | ಅಂದರೆ ತಾನು ಸ್ವತಃ ಸದಾಚರಣೆಯಿಂದ ಏಕರೂಪವಾಗಬೇಕು.  ತನ್ನ ನಡೆ ನುಡಿಗಳು ಒಂದಾಗಿರಬೇಕು. ಇಂಥ ಗುರುನಾಥನು ತೋರಿದ ಮಾರ್ಗವು ಮುಕ್ತಿದಾಯಕವಾಗಬಲ್ಲುದು.

ಜ.ಚ.ನಿ

 

ಅರಿಯದರಂ ಸತ್ಪಥದೊಳ್

ನಿರಿಸಲ್ ತುತಿಪಳಿಗಳೊಳವು ಬುಧರ್ಗವು ಬೇಡಂ |

ಕಿರುವೆಂಚೆಗೆ ಕಟ್ಟುಂಟಾ-

ತೆರದಿಂ ವಾರಿಧಿಗೆ ಕಟ್ಟನಾರೆಸಗುವರೋ”

ನೀತಿ ಮಂಜರಿ

 

ಸಮಾಜದ ಭಕ್ತರಲ್ಲಿ ಒಳಪಂಗಡಗಳು, ವಿರಕ್ತರಲ್ಲಿ ಸಮಯ ಭೇದಗಳು ಸಾಲದೆ ಸಮಾಜ ಪುರುಷನಿಗೆ ಎರಡು ಕಣ್ಣುಗಳಂತಿರುವ ಗುರು ವಿರಕ್ತರು ನಾವು ಹೆಚ್ಚು ತಾವು ಹೆಚ್ಚೆಂದು ವಾದಿಸಿ ವಿದ್ವೇಷಕ್ಕೊಳಗಾದುದು ಸರ್ವರಿಗು ತಿಳಿದ ಸಂಗತಿ. ಈ ವೈರ ವಿಷವು ಸಮಾಜವನ್ನೇ ನಿರ್ವೀರವಾಗಿ ಮಾಡಿತ್ತು. ಈ ದಳ್ಳುರಿಯಿಂದ ದಗ್ಧವಾದ ಸಮಾಜದೇಳ್ಗೆ ಆಗಬೇಕಾದಷ್ಟಾಗದೆ ಮೊಟಗಾಗುತ್ತ ನಡೆದಿತ್ತು. ಜನಾಂಗದಲ್ಲಿ ಶಾಂತಿಯಿರಲಿಲ್ಲ. ಸ್ನೇಹವಿರಲಿಲ್ಲ. ಪರಸ್ಪರ ದೂಷಣೆ-ದೋಷಾರೋಪಣೆಯ ಸುರಿಮಳೆ ಸುರಿಯುತ್ತಿತ್ತು. ಮನೆ ಮನೆಯಲ್ಲಿ ಮತ್ಸರ ಪಕ್ಷಪಂಗಡ ಭಾಗ ವಿಭಾಗಗಳೇರ್ಪಟ್ಟವು. ತಂದೆ ಮಕ್ಕಳಿಗೆ ವ್ಯಾಜ್ಯ, ಅಣ್ಣ ತಮ್ಮಂದಿರಿಗೆ ವ್ಯಾಜ್ಯ ಬಂಧುಬಳಗದವರಿಗೆ ವ್ಯಾಜ್ಯ. ಕೊಡಕೊಳ್ಳುವುದಕ್ಕೆ ವ್ಯಾಜ್ಯ. ಹೀಗಾಗಿ ಪರಸಮಾಜಗಳಲ್ಲಿ ಪರಿಹಾಸಕ್ಕಿಟ್ಟಿತ್ತು. ಪರಸ್ಪರ ಸ್ನೇಹ ವಾತ್ಸಲ್ಯಗಳಿಲ್ಲದಾಗಿತ್ತು. ಇದನ್ನು ಕಂಡು ಕುಮಾರಯೋಗಿಗಳು ಕಡುನೊಂದರು. ಹೇಗಾದರು ಮಾಡಿ ಎಂತಾದರು ಮಾಡಿ ಗುರು-ವಿರಕ್ತರಲ್ಲಿ ಪರಸ್ಪರ ಸಹಕಾರ ಮೂಡಿಬರುವಂತೆ ಮಾಡಬೇಕೆಂದು ಮನಸ್ಸು ಮಾಡಿದ್ದಲ್ಲದೆ ಮಿತಿಮೀರಿ ಪ್ರಯತ್ನಪಟ್ಟರು. ಆದರೆ ಅದು ಫಲಿಸಲಿಲ್ಲ. ಪ್ರವಾಹದ ಸೆಳೆತ ಸಣ್ಣದಾಗಿರಲಿಲ್ಲ. ಆದರು ಸ್ವಾಮಿಗಳವರು ಹಿಂಜರಿಯಲಿಲ್ಲ. ಕೆಚ್ಚೆದೆಯಿಂದ ಮುಂದುವರಿದರು. ಬೇಕಾದಷ್ಟು ಶ್ರಮಿಸಿದರು. ವೆಚ್ಚಮಾಡಿದರು. ಕೊನೆಗು ಅದು ಸಹಕಾರಕ್ಕೆ ಬಾರದೆ ಹೋಯಿತು. ಅಲ್ಲದೆ ಸ್ವಾಮಿಗಳವರ ಮೇಲೆ ಎರಡು ಕಡೆಗಳಿಂದಲು ಆಕ್ಷೇಪಣೆಯ ಬಿರುಸು ಬಾಣಗಳು ಬಂದು ಬೀಳತೊಡಗಿದವು. ಸತ್ಯ ಮಾರ್ಗಾನುಯಾಯಿಗಳಾದ ಸ್ವಾಮಿಗಳವರು ಆ ಬಾಣಗಳಿಗೆ ಭಯಬೀಳಲಿಲ್ಲ. ಅವರು ಬರೀ ಕೀರ್ತಿಗಾಗಿ ಮಾಡತಕ್ಕವರಲ್ಲ. ಮನಮೆಚ್ಚಿ ಸಮಾಜ ಶಾಂತಿಗಾಗಿ ಮಾಡಹೊರಟಿದ್ದರು. ಅದರಿಂದಾಗಿ ತಮ್ಮ ಸಮತಾಭಾವವನ್ನು ತಾವು ಅದೆಂದಿಗೂ  ಬಿಡಲಿಲ್ಲ.

ಸಮಾಜ ವೃಕ್ಷಕ್ಕೆ ಶ್ರೀಗುರುಗಳು ತಾಯ್ವೇರು. ಅವರನ್ನು ಹೀಗಳೆಯುವುದು ತರವಲ್ಲ. ಜಗದ್ಗುರು ಪಂಚಾಚಾರ್ಯರಂತಹ ಪೂಜ್ಯ ಪುರುಷರಿಂದ ಸಮಾಜ ಪರಿಪಾಲಿತವಾಗಿದೆ-ಆಗಬೇಕು ಎಂದು ಭಾವಿಸಿದ್ದರು.   ಸ್ವತಃ ತಾವೇ ಜಗದ್ಗುರು ಪಂಚಾಚಾರ್ಯರ ಮೇಲೆ ಪ್ರಾರ್ಥನೆಯ ಪದ್ಯಗಳನ್ನು ರಚಿಸಿದರು. ಹಾಗೆಯೆ ಬೋಧಿಸುತ್ತಿದ್ದರು. ಶಿವಯೋಗ ಮಂದಿರದ ವಟುಗಳಿಗು ಸಾಧಕರಿಗು ಕಲಿಸಿದರು. ನಿತ್ಯ ಭಜನೆಯಲ್ಲಿ ಹೇಳಿಸುತ್ತಿದ್ದರು.

ಗುರುಲಿಂಗ ಜಂಗಮರಲ್ಲಿ ಯಾವ ಹೆಚ್ಚು ಕಡಿಮೆಯಿಲ್ಲ. ಮೂರು ಒಂದೇ. ವ್ಯಕ್ತಿತ್ವ ಬೇರೆಯಾದರು ತತ್ವ ಒಂದೇ. ಜಂಗಮನಾದರು ಲಿಂಗ ಪೂಜಿಸುತ್ತಾನೆ. ಗುರುಧ್ಯಾನ ಮಾಡುತ್ತಾನೆ. ಹೊರಗೆ ಮಾತ್ರ ಗುರುವನ್ನು ಏಕೆ ಹೀಗಳೆಯಬೇಕು? ಲಿಂಗ ಆಚಾರಲಿಂಗ, ಗುರುಜಂಗಮರಿಬ್ಬರು ಚರಲಿಂಗಗಳು. ಪರಸ್ಪರ ಸಮಾನರು. ಗುರುವಾದರು ಲಿಂಗಪೂಜಿಸುತ್ತಾನೆ. ಜಂಗಮವನ್ನೇಕೆ ಜರಿಯಬೇಕು? ಗುರು ಜಂಗಮರಲ್ಲಿ ಕ್ರಿಯಾಚರಣೆ ದೃಷ್ಟಿಯಿಂದ ತರತಮ ಭಾವವಿದ್ದರೂ ತತ್ವತಃ ಯಾವ ಭೇದವಿಲ್ಲ. ಪರಸ್ಪರ ಪೂರಕಗಳಾಗಿವೆ. ಗುರುವಿರಕ್ತರಲ್ಲಿ ಪರಸ್ಪರ ಈ ಸಮಭಾವ ಸಮರತಿ ಸಮಕ್ರಿಯೆ ಬಾರದ ವಿನಹ ಸಮಾಜದ ಏಳ್ಗೆಯಿಲ್ಲ. ಸಾಮಾಜಿಕ ಶಾಂತಿ ಅದೊಂದು ಭ್ರಾಂತಿ; ಎಂಬುದು ಸ್ವಾಮಿಗಳವರ ದೃಢನಿಶ್ಚಯ; ದೃಢಪ್ರತ್ಯಯ

ಸ್ವಾಮಿಗಳವರ ಈ ಸಹಕಾರ ಈ ಸಮತೆ ಕೆಲವರಿಗೆ ಸರಿಬೀಳಲಿಲ್ಲ. ಶ್ರೀಗಳವರೆ ಕಾಶೀನಾಥ ಶಾಸ್ತ್ರಿಗಳವರನ್ನು ಎತ್ತಿಕಟ್ಟಿರುವರೆಂದು ಇಲ್ಲದ ಸಲ್ಲದ ಆರೋಪಣೆ ಮಾಡುತ್ತಿದ್ದರು. ಇದರಲ್ಲಿ ಎಷ್ಟು ಮಾತ್ರಕ್ಕು ಸತ್ಯಾಂಶವಿಲ್ಲ. ಸಮಾಜ ಅನೈಕ್ಯತೆಗೆ ಕಾರಣರಾದವರನ್ನು ಕಂಡರೆ ಸ್ವಾಮಿಗಳವರು ಎಷ್ಟೂ ಸಹಿಸುತ್ತಿರಲಿಲ್ಲ. ಅವರ ಪ್ರಚಾರವನ್ನು ಪ್ರತಿಭಟಿಸುತ್ತಿದ್ದರು. ಅವರಿಂದಾದ ಅನೈಕ್ಯತೆಗಾಗಿ ತುಂಬಾ ವ್ಯಥೆಗೊಳ್ಳುತ್ತಿದ್ದರು. ಐಕ್ಯತೆಗಾಗಿ ಕಂಡ ಕಷ್ಟಗಳಿಗೆ ಗುರಿಯಾಗುತ್ತಿದ್ದರು. ಕಡೆಯಿಲ್ಲದ ನಷ್ಟಕ್ಕೆ ಎರವಲಾಗುತ್ತಿದ್ದರು.

ಸಾಲದ್ದಕ್ಕೆ ವಿರಕ್ತ ವಿರಕ್ತರಲ್ಲಿಯೆ ಸಹಕಾರವಿರಲಿಲ್ಲ; ಸೌಹಾರ್ದತೆ ಇರಲಿಲ್ಲ. ನಾಲ್ವರು ನಾಲ್ಕು ದಿಕ್ಕಾಗಿದ್ದರು. ಇವರುಗಳ ಐಕ್ಯತೆಯನ್ನಾದರು ಮಾಡಬೇಕೆಂದು ಸೀಮೆಯಿಲ್ಲದ ಸಾಹಸಪಟ್ಟರು. ಒಮ್ಮೆ ವಿರಕ್ತ ಸಮ್ಮೇಲನವನ್ನು ಶಿವಯೋಗ ಮಂದಿರದಲ್ಲಿಯೆ ಕರೆದರು. ಆಗ ಅನೇಕರು ಆಗಮಿಸಿದರು. ಅವರಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರಘಾಮಠದ ಶ್ರೀಗಳು, ಹುಬ್ಬಳ್ಳಿ ಶ್ರೀ ಜಗದ್ಗುರು ಮೂರುಸಾವಿರಮಠದ ಶ್ರೀಗಳು ಪ್ರಮುಖರು. ಇವರಿಬ್ಬರನ್ನು ಒಂದೆಡೆಗೆ ಸೇರಿಸಲು ಹಾನಗಲ್ಲ ಶ್ರೀಗಳವರು ಹಗಲಿರುಳೆಲ್ಲ ಶ್ರಮಿಸಿದರು. ಭಗೀರಥ ಪ್ರಯತ್ನದಿಂದ ಕೊನೆಗೆ ಒಂದೆಡೆಯಲ್ಲಿ ಕೂಡಿಸಿಯೇ ಬಿಟ್ಟರು. ಆದರೆ ಅದು ಕೊನೆಯವರೆಗು ಬಾಳಲಿಲ್ಲ. ಹಿಸುಕಿ ಹಣ್ಣು ಮಾಡಿದಲ್ಲಿ ಕಾಯಿ ಹಣ್ಣಾಗುವುದೆ ? ಯಾವುದಕ್ಕೂ ಮನಸ್ಸು ಬೇಕು. ಆತ್ಮೀಯತೆ ಬೇಕು. ಅಂತು ಬೀಜಾವಾಪ ಮಾಡಿದರು. ಬಿತ್ತಿದ ಬೀಜ ಬಿತ್ತಿದ ದಿನವೆ ಮೊಳಕೆ ಹಾಕದು. ಅದಕ್ಕು ಒಂದು ಅವಕಾಶ ಬೇಕು. ತಕ್ಕ ವಾತಾವರಣ ಬೇಕು. ಅಂದು ಸ್ವಾಮಿಗಳವರು ಬಿತ್ತಿದ ಬೀಜ ಇದೀಗ ನೆನೆದು ಮೊಳಕೆ ಹಾಕಿದೆ. ಇತ್ತೀಚೆಗೆ ಬೇರೆಬೇರೆ ಸಮಯದವರು ಸೇರತೊಡಗಿದ್ದಾರೆ. ಕೂಡಿ ಶಿವಪೂಜೆ ಮಾಡತೊಡಗಿದ್ದಾರೆ. ಇನ್ನೂ ಸಾಲದು. ಸುಳಿದೆಗೆದು ಬೆಳೆಯಬೇಕು. ಸುಮ ಅರಳಿ ಸುವಾಸಿಸಬೇಕು.

ಇದೀಗ ಗುರು-ವಿರಕ್ತರ ದ್ವೇಷ ದಳ್ಳುರಿಯು ಹೊರಗೆ ಉರಿಯದಿದ್ದರು ಒಳಗೆ ಹೊಗೆಯಾಡುತ್ತಿದೆ. ಬಸವಣ್ಣನವರ ಕಿರಿಯ ಭಾವದ ಶರಣುಮಾರ್ಗದ ತಣ್ಣೀರು ಒಳಗೆ ಬೀಳದ ಹೊರತು ಬಳಕೆಗೆ ಬಾರದ ಹೊರತು ಅದು ನಂದುವಂತಿಲ್ಲ. ನ೦ದಿಸುವಂತಿಲ್ಲ.

ಹಿರಿಯರಿಗಿಂತಲು ಕಿರಿಯರಲ್ಲಿ ನಾವೇ ಹೆಚ್ಚಿನವರೆಂಬ ಹೆಮ್ಮೆ ಹೆಚ್ಚಿಹೋಗಿದೆ. ಅದರಲ್ಲಿಯು ಸ್ವಾಮಿಗಳಂತಹ ಸಮತಾಭಾವಿಗಳ ಶಿಷ್ಯ ಸಮುದಾಯದಲ್ಲಿ ಆ ಭಾವ ಹೆಮ್ಮೆ ಹೆಚ್ಚುತ್ತಿರುವುದು ವಿಷಾದಾಸ್ಪದವಾದುದು, ವಿಚಾರಾಸ್ಪದವಾದುದು. ಭಕ್ತರ ಒಳಪಂಗಡಗಳ ವಿಷಯದಲ್ಲಿಯು ಶ್ರೀಗಳವರಿಗೆ ತುಂಬಾ ಅಸಮಾಧಾನವಿತ್ತು. ಅವನ್ನೆಲ್ಲ ಅಳಿಯಲು ಅವಿಶ್ರಾಂತ ಶ್ರಮಿಸಿದರು. ಸಾಮ್ಯವಾದವು ಸಾಗಿಬರುವ ಈ ಕಾಲದಲ್ಲಿಯಾದರು ವಿವೇಚನೆಯಿಂದ ಆ ತರತಮ ಭಾವವನ್ನು ಸಂಕುಚಿತ ಸ್ವಭಾವವನ್ನು ತೆಗೆದುಹಾಕುವದಾದರೆ ಸಮಾಜಕ್ಕೆ ಲೇಸಾದೀತು. ಶ್ರೀಗಳವರ ಶ್ರಮ ಸಾರ್ಥಕವಾದೀತು. ಅವರ ದಿವ್ಯ ಆತ್ಮಕ್ಕೆ ಆನಂದವೆನಿಸಿತು.

 

ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಯೇಷಾಂ ನ ವಿದ್ಯಾ ನ ತಮೋ ನ ದಾನಂ।

ನ ಜ್ಞಾನಂ ಚ ಶೀಲಂ ನ ಗುಣೋ ನ ಧರ್ಮಃ||

ತೇ ಮೃತ್ಯುಲೋಕೇ ಭುವಿಭಾರಭೂತಾ।

ಮನುಷ್ಯರೂಪೇಣ ಮೃಗಾಶ್ಚರಂತಿ  ||

ವಿದ್ಯಾವಿನಯ ಸಂಪನ್ನನಾಗಿ ತಪೋನಿಷ್ಠನಾಗಿ, ದಾನಶೀಲನಾಗಿ, ಜ್ಞಾನಿಯಾಗಿ, ಸಚ್ಚಾರಿತ್ರ್ಯವುಳ್ಳವನಾಗಿ, ಧರ್ಮವಂತನಾಗಿ, ಗುಣವಂತನಾಗಿ ಬದುಕುವುದೇ ಮನುಷ್ಯನ ನಿಜವಾದ ಬದುಕು. ಇದಕ್ಕೆ ವ್ಯತಿರಿಕ್ತವಾಗಿ ಬದುಕುವವರು ಮನುಷ್ಯರಲ್ಲ. ಅವರು

ಭೂಮಿಗೆ ಭಾರವಾದ ಮನುಷ್ಯರೂಪದ ಪಶುಗಳು ಎಂದು ಸುಭಾಷಿತವೊಂದು ಹೇಳುತ್ತದೆ. ಮೂಲತಃ ಮನುಷ್ಯ ಅನೇಕ ಗುಣಗಳ ಸಂಗಮವಾಗಿದ್ದಾನೆ. ಅವನಲ್ಲಿರುವ ಗುಣಗಳ ವಿಶ್ಲೇಷಣೆಯಿಂದ ಇವನು ಒಳ್ಳೆಯವ, ಇವನು ಕೆಟ್ಟವ ಎಂದು ನಿರ್ಧರಿಸುತ್ತೇವೆ. ಸದ್ಗುಣಗಳನ್ನು ಹೊಂದಿದವನನ್ನು ದೇವಮಾನವ, ಮಹಾತ್ಮ ಎಂದೂ, ದುರ್ಗುಣಗಳುಳ್ಳವನನ್ನು ದುಷ್ಟ, ರಾಕ್ಷಸ ಎಂದೂ ಕರೆಯುತ್ತೇವೆ. ಆದ್ದರಿಂದ ಒಳ್ಳೆಯ ವ್ಯಕ್ತಿತ್ವವನ್ನು ಬಯಸುವವರು ಒಳ್ಳೆಯ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದುದು ಅತ್ಯವಶ್ಯ.

ಸದ್ಗುಣ ಸಂಪನ್ನರಾದವರು ಲೌಕಿಕ ಧನಸಂಪತ್ತಿಗಿಂತಲೂ ಸದ್ಗುಣಗಳನ್ನೇ ತಮ್ಮ ನಿಜವಾದ ಸಂಪತ್ತು ಎಂದು ಭಾವಿಸುತ್ತಾರೆ. ಅಂತಃಕರಣವನ್ನು ಪರಿಶುದ್ಧಗೊಳಿಸಿಕೊಂಡ ಅವರು ಸದಾ ಸತ್ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಕಾಯಾ ವಾಚಾ ಮನಸಾ ಯಾರಿಗೂ ಹಿಂಸೆಯನ್ನು ಮಾಡದಿರುವುದು, ಪ್ರಿಯವಾದ ಸತ್ಯವನ್ನು ಮಾತನಾಡುವುದು, ಧೈರ್ಯಶಾಲಿಗಳಾಗಿರುವುದು, ಕ್ಷಮಾಶೀಲರಾಗಿರುವುದು ಅವರ ಸಹಜ ಸ್ವಭಾವವಾಗಿರುತ್ತದೆ. ಅವರೆಂದೂ ಅನ್ಯರನ್ನು ನಿಂದಿಸುವುದಿಲ್ಲ. ಯಾರನ್ನೂ ದ್ವೇಷಿಸುವುದಿಲ್ಲ. ಸದಾ ಭಗವಂತನ ನಾಮಸ್ಮರಣೆಯಲ್ಲಿ ಕಾಲ ಕಳೆಯುವ ಅವರು, ತಮ್ಮ ಮೃದು ಮಧುರ ಮಾತುಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಸರ್ವೇಂದ್ರಿಯಗಳನ್ನು ವಿಷಯಗಳಿಂದ ವಿಮುಖಗೊಳಿಸಿ, ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಮೆಟ್ಟಿ ದೈವೀಪುರುಷರಾಗಿ ಕಂಗೊಳಿಸುತ್ತಾರೆ. ಇಂಥ ಸದ್ಗುಣ ಸಂಪನ್ನ ದೈವೀಪುರುಷರು ವಿಶ್ವವನ್ನೇ ಮನೆಯಾಗಿಸಿಕೊಂಡ ವಿಶ್ವಕುಟುಂಬಿಗಳು. ಅಂತೆಯೇ “ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್’ ಎಂಬ ಮಾತು ಅತ್ಯಂತ ಪ್ರಚಲಿತವಾಗಿರುತ್ತದೆ.

ದುರ್ಗುಣಿಗಳ ಜೀವನಶೈಲಿ ಸದ್ಗುಣಿಗಳ ಜೀವನಶೈಲಿಗೆ ತೀರ ಭಿನ್ನವಾದುದು. ಕಾಮಕ್ರೋಧಾದಿಗಳಿಗೆ ದಾಸರಾಗಿ ವಿಷಯಭೋಗಗಳಲ್ಲಿ ಕಾಲಕಳೆಯುವ ದುರ್ಗುಣಿಗಳು ಲೋಕಕಂಟಕರಾಗಿ ಜೀವನ ನಡೆಸುತ್ತಾರೆ. ಸದಾ ಅಹಂಕಾರ ಮಮಕಾರಗಳಿಂದ ಬೀಗುವ ಅಜ್ಞಾನಿಗಳಿವರು. ಅನ್ಯಾಯ, ಅನೀತಿ, ಅನಾಚಾರಗಳಲ್ಲಿ ನಿರತರಾದ ಇವರು ದ್ವೇಷಾಸೂಯೆಗಳಲ್ಲಿ, ಭ್ರಷ್ಟ ವ್ಯವಹಾರಗಳಲ್ಲಿ ತೊಡಗಿರುತ್ತಾರೆ. ಇಂಥ ವ್ಯಕ್ತಿಗಳನ್ನು ಕುರಿತು

“ಅನೇಕ ಚಿತ್ತ ವಿಭ್ರಾಂತಾ ಮೋಹಜಾಲ ಸಮಾವೃತಾಃ |

ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇಶುಚೌ॥

ಅಂದರೆ, ಅಜ್ಞಾನದಿಂದ ಭ್ರಮಿತ ಚಿತ್ತ(ಹುಚ್ಚ)ರಾದ ದುರ್ಗುಣಿಗಳು ಮೋಹಜಾಲದಲ್ಲಿ ಸಿಕ್ಕು ವಿಷಯಲಂಪಟರಾಗಿ ಘೋರ ನರಕಕ್ಕೆ ಭಾಜನರಾಗುತ್ತಾರೆ. ಎಂದು ಗೀತೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಇಹಪರಗಳಲ್ಲಿ ಸುಖಾಪೇಕ್ಷಿಗಳಾದ ಮನುಷ್ಯರು ಶ್ವೇಚ್ಛಾಚಾರಿಗಳಾಗದೆ ತಮ್ಮಲ್ಲಿರುವ ದುರಿತ ದುರ್ಗುಣಗಳನ್ನು ಬಿಟ್ಟು ಸದ್ಗುಣ ಸಂಪನ್ನರಾಗಬೇಕು. ತ್ಯಾಗಜೀವಿಗಳಾದ ಸದ್ಗುಣಿಗಳೇ ಪರಮಶಾಂತಿಯನ್ನು ಪಡೆಯುವರು. ದೇವಮಾನವರೆಂಬ ಖ್ಯಾತಿಗೆ ಅರ್ಹರಾಗುವರು.

ಫ. ಗು. ಹಳಕಟ್ಟಿ, ವಿಜಾಪೂರ

 ಶರಣರ ನಡೆ ನುಡಿ ಆಚಾರ ವಿಚಾರಗಳಂತೆ ವರ್ತಿಸುವದೇ ತಮ್ಮ ಜೀವಿತದ ಕರ್ತವ್ಯವೆಂದು ತಿಳಿದು ಹಾಗೆ ನಡೆಯುವ ಜನರು ಕೆಲವು ವರ್ಷಗಳ ಹಿಂದೆ ಬಹು ಜನರು ದೊರಕುತ್ತಿದ್ದರು. ಇವರು ವಚನ ಶಾಸ್ತ್ರ ಗ್ರಂಥವನ್ನು ಯಾವಾಗಲೂ ಅತಿ ಭಕ್ತಿಯಿಂದ ಓದುತ್ತಿದ್ದರು ಮತ್ತು ಶಕ್ತ್ಯಾನುಸಾರ ಹಾಗೆ ನಡೆಯುತ್ತಲೂ ಇದ್ದರು. ಆದರೆ ಇಂಥ ಜನರು ವೀರಶೈವ ಸಮಾಜದಲ್ಲಿ ಈಗ ಬಹು ವಿರಳರಾಗುತ್ತಲಿದ್ದಾರೆ. ಇಷ್ಟೇ ಅಲ್ಲ, ವಚನ ಶಾಸ್ತ್ರವೆಂದರೆ ವೀರಶೈವರ ಒಂದು ಮಹತ್ವದ ಧಾರ್ಮಿಕ ವಾಙ್ಮಯವೆಂಬ ತಿಳುವಳಿಕೆಯು ಸಹ ಜನರಲ್ಲಿ ಹಾರಿ ಹೋಗಿರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ವರ್ತಿಸಿದವರೆಂದರೆ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೇ ಇದ್ದಾರೆ. ಈ ಮಹಾನುಭಾವರು ಶಿವಶರಣರ ನಡೆ ನುಡಿಗಳಲ್ಲಿ ಬಹು ಶ್ರದ್ಧೆಯನ್ನು ವಹಿಸಿದವರಾಗಿದ್ದರು ಮತ್ತು ಅವರು ವಚನ ಶಾಸ್ತ್ರ ತತ್ವಗಳನ್ನು ಬಲ್ಲವರು ಎಲ್ಲಾದರೂ ಇದ್ದಾರೆಂದು ತಿಳಿದ ಕೂಡಲೆ ಅವರಲ್ಲಿಗೆ ಹೋಗಿ ಅವುಗಳ ತತ್ವಗಳ ಬಗ್ಗೆ ವಿಚಾರ ಮಾಡಲು ಮುಂದುವರೆಯುತ್ತಿದ್ದರು. ಈ ದೃಷ್ಟಿಯಿಂದ ಶ್ರೀ ಸ್ವಾಮಿಗಳವರ ಮೇಲು ಪಂಕ್ತಿಯನ್ನು ಪ್ರತಿ ಒಬ್ಬ ವೀರಶೈವನು ಈ ಕಾಲಕ್ಕೆ ಅನುಸರಿತಕ್ಕದ್ದಾಗಿದೆ.

 

ಷಟಸ್ಥಲ ಸಿದ್ಧಾಂತದ ತತ್ವಗಳನ್ನು ಅರಿಯಲು ವಚನ ಗ್ರಂಥಗಳೇ ಬಹು ಸಹಾಯ ಕಾರಿಗಳು. ಆದರೆ ಸಮಾಜದ ದುರ್ದೈವದಿಂದ ಇದರ ತತ್ವಗಳು ಹಿಂದುಸ್ಥಾನದಲ್ಲಿ ಇನ್ನೂ ಅಪರಿಚಿತವಾಗಿ ಉಳಿದಿವೆ. ಅವುಗಳನ್ನು ಹೊರಗೆಡುಹುವ ಪ್ರಯತ್ನಗಳು ಇನ್ನೂ ಆಗಿರುವದಿಲ್ಲ. ಪಟಸ್ಥಲ ಶಾಸ್ತ್ರವು ವೀರಶೈವ ಧರ್ಮದ ಒಂದು ಮುಖ್ಯ ವೈಶಿಷ್ಟ್ಯವೆಂದು ಹೇಳಬಹುದು. ಈ ಸಮಾಜದಲ್ಲಿ ಆಗಿ ಹೋದ ಅನೇಕ ಧರ್ಮ ಪ್ರಚಾರಕ್ಕೂ ತತ್ವವೇತ್ತಿಗಳೂ, ಸಾಧು ಸತ್ಪುರುಷರೂ ಇದರ ತತ್ವಗಳನ್ನೇ ಸಾರಿರುವರು. ಷಟಸ್ಥಲದ ಉದ್ದೇಶವು ಮನುಷ್ಯನ ಶಕ್ತಿಗಳನ್ನೂ ಅವನ ಗುಣ ಧರ್ಮಗಳನ್ನೂ ಸರಿಯಾದ ರೀತಿಯಿಂದ ವಿಕಾಸಗೊಳಿಸುವದೇ ಇರುತ್ತದೆ. ಈ ರೀತಿಯನ್ನು ಅವರು ಗೊತ್ತುಪಡಿಸಿ ಅವನ್ನು ಈ ಶಾಸ್ತ್ರದ ಮೂಲಕ ಪ್ರಚುರ ಪಡಿಸಿರುತ್ತಾರೆ. ಆಗಮ ಧರ್ಮಗಳು ಅನೇಕವಿದ್ದು ಅವುಗಳಲ್ಲಿ ಷಟಸ್ಥಲವನ್ನು ವಿಸ್ತಾರವಾಗಿ ಬೋಧಿಸುವ ಧರ್ಮವೆಂದರೆ, ವೀರಶೈವವೇ ಇರುತ್ತದೆ. ವೀರಶೈವರಲ್ಲಿ ಈ ಧರ್ಮದ ಮರ್ಮಗಳನ್ನು ಅರುಹತಕ್ಕ ಗ್ರಂಥಗಳು ಕನ್ನಡ, ಸಂಸ್ಕೃತ, ತಮಿಳು, ತೆಲಗು, ಭಾಷೆಗಳಲ್ಲಿ ಅನೇಕವಿವೆ. ಆದರೆ ಅವುಗಳಲ್ಲಿ ಷಟಸ್ಥಲದ ತತ್ವಗಳನ್ನು ಬಹು ವಿಶದವಾಗಿ ಅರಹುವ ಗ್ರಂಥಗಳೆಂದರೆ ವಚನಗಳೇ ಇವೆ. ಈ ದೃಷ್ಟಿಯಿಂದ ಇವುಗಳ ಮಹತ್ವವು ಬಹಳ ಇರುತದೆ.

ಈ ಪ್ರಕಾರ ವಚನ ಶಾಸ್ತ್ರವು ಷಟಸ್ಥಲಗಳ ಅಭ್ಯಾಸ ದೃಷ್ಟಿಯಿಂದ ಅಷ್ಟೇ ಅಲ್ಲ. ಇದು ಒಂದು ಕಾಲಕ್ಕೆ ಕರ್ನಾಟಕದಲ್ಲಿ ರಾಜಕೀಯ ಸಾಮಾಜಿಕ ಮತ್ತು ವಾಙ್ಮಯಾತ್ಮಕ ಸ್ಥಿತಿಯಲ್ಲಿ ಬಹು ಮಹತ್ವದ ಬದಲಾವಣೆಗಳನ್ನು ಮಾಡಿರುತ್ತದೆ. ಈ ದೃಷ್ಟಿಯಿಂದಲೂ ಈ ಶಾಸ್ತ್ರ ಗ್ರಂಥಗಳು ಪಠನೀಯವಾಗಿರುತ್ತವೆ.

ವೀರಶೈವ ಧರ್ಮವು ೧೧-೧೨ನೇ ಶತಮಾನಗಳಲ್ಲಿ ಕರ್ನಾಟಕದಲ್ಲಿ ಪ್ರಸಾರ ಹೊಂದಲಿಕ್ಕೆ ಈ ವಚನಗ್ರಂಥಗಳೇ ಮುಖ್ಯ ಕಾರಣವಾದವೆಂದು ಹೇಳಬಹುದು. ಅವುಗಳ ಮೂಲಕವಾಗಿಯೇ ಆಗಿನ ವೀರಶೈವ ಧರ್ಮ ಪ್ರವರ್ತಕರು ಧರ್ಮ ತತ್ವಗಳನ್ನು ದೇಶಮಧ್ಯದಲ್ಲಿ ಪ್ರಸಾರಗೊಳಿಸಿದರು. ಆ ಕಾಲಕ್ಕೆ ಬಸವಾದಿ ಶಿವಶರಣರು ಕಲ್ಯಾಣ ಪಟ್ಟಣದಲ್ಲಿ ಶಿವಾನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಶಿವಾನುಭವದ ತತ್ವಗಳನ್ನು ಚರ್ಚಿಸಿ ಅವುಗಳನ್ನು ಈ ವಚನಗಳ ಮೂಲಕವಾಗಿಯೇ ಸಾಮಾನ್ಯ ಜನರಿಗೆ ಸಹ ತಿಳಿಯುವಂತೆ ಬೋಧಿಸಿದರು. ಈ ಪ್ರಕಾರ ಆ ಕಾಲಕ್ಕೆ ಹಲಕೆಲವು ಶಿವಶರಣರಷ್ಟೇ ಅಲ್ಲ, ಅಸಂಖ್ಯಾತ ಶಿವಶರಣರು ಬೇರೆ ಬೇರೆ ಭಾಗಗಳಲ್ಲಿ ಉದ್ಭವಿಸಿ ತಮ್ಮ ತಮ್ಮ ವಿಚಾರಸರಣೆಗೆ ಅನುಸಾರವಾಗಿ ನಾನಾವಿಧವಾಗಿ ಇವುಗಳ ಮೂಲಕ ಧರ್ಮತತ್ವಗಳನ್ನು ಬೋಧಿಸಿದ್ದಾರೆ. ಹೀಗೆ ಈ ಗ್ರಂಥಗಳು ಅಸಂಖ್ಯವಾಗಿ ಹೊರಟು ಒಂದು ವಾಙ್ಮಯ ಸ್ವರೂಪವನ್ನೇ ಹೊಂದಿವೆ. ಹಾಗೆ ಈ ವಾಙ್ಮಯವು ಕೃತ್ರಿಮ ರೀತಿಯಿಂದ ಹೊರಟಿರುವದಿಲ್ಲ. ಅದು ಒಂದು ಧರ್ಮಕ್ರಾಂತಿಯ ಕಾಲಕ್ಕೆ ಹೊರಟಿರುತ್ತದೆ. ಆದುದರಿಂದ ಇದು ಒಂದು ನಿಸ್ಸಾರವಾದ ವಾಙ್ಮಯ ವಾಗಿರುವದಿಲ್ಲ. ಅದರಲ್ಲಿ ಒಂದುಬಗೆಯ ಚೈತನ್ಯವು ಇರುತ್ತದೆ. ಅದರಲ್ಲಿ ಓಜಸ್ಸು ಇದೆ, ಬಲವು ಇದೆ, ಇಂಥ ವಾಙ್ಮಯವು ವೀರಶೈವರಲ್ಲಿ ಹುಟ್ಟಿದುದಕ್ಕಾಗಿ ಅವರು ಅಭಿಮಾನಪಡತಕ್ಕದ್ದಾಗಿದೆ.

ವಚನ ಗ್ರಂಥಗಳಲ್ಲಿ ಈ ಬಗೆಯ ಓಜಸ್ಸು ಮತ್ತು ಬಲವು ಉಂಟಾಗಲಿಕ್ಕೆ ಕಾರಣಗಳಾವವು ? ಅವುಗಳ ರಚನೆಯಲ್ಲಿ ಅಂಥದೇನು ಇದೆ ? ಎಂಬುದನ್ನು ನಾವು ವಿಚಾರ ಮಾಡುವದು ಬಹಳ ಮಹತ್ವದ್ದಿರುತ್ತದೆ. ಈ ಬಗ್ಗೆ ನಾವು ಕೆಲವು ಮುಖ್ಯವಾದ ಕಾರಣಗಳನ್ನು ಕೆಳಗೆ ವಿವರಿಸುತ್ತೇವೆ.

ವಚನ ಗ್ರಂಥಗಳಲ್ಲಿ ನಿರ್ದಾಕ್ಷಿಣ್ಯವಾಗಿ ನುಡಿದ ಸತ್ಯ ಮಾತುಗಳಿವೆ. ಈ ಸಂಗತಿಯೇ  ಅವುಗಳ ಓಜಸ್ಸಿಗೆ ಕಾರಣವಾಗಿರುತ್ತದೆ. ಸತ್ಯ ಮಾತುಗಳಲ್ಲಿ ಯಾವಾಗಲೂ ಒಂದು ಬಲವು ಇರುತ್ತದೆ. ತತ್ವವೇತಿಗಳು ತಮ್ಮ ಸಿದ್ದಾಂತವನ್ನು ಸ್ಥಾಪಿಸಲು ನಾನಾ ಬಗೆಯ ಯುಕ್ತಿಪ್ರಯುಕ್ತಿಗಳನ್ನು ಯೋಜಿಸುವದುಂಟು. ಇಂಥವರ ಗ್ರಂಥಗಳಲ್ಲಿ ಸೂಕ್ಷ್ಮ ಜಾಣ್ಮಯು ಬೇಕಾದಷ್ಟು ಇರಬಹುದು. ಆದರೆ ಅವುಗಳಲ್ಲಿ ಜೀವಕಳಿ ಮಾತ್ರ ಸ್ಫುರಿಸಲಾರದು. ಆದರೆ ಸತ್ಯಭಾಷೆಯ ವಿಧವು ಬೇರೆ. ಅದು ತಟ್ಟನೆ ಮನಸ್ಸಿಗೆ ಹೊಳೆಯುತ್ತದೆ. ಅದರಲ್ಲಿ ಸರಳತೆಯುಂಟು, ಓಜಸ್ಸುಂಟು. ವಚನಗ್ರಂಥಗಳಲ್ಲಿ ಹೀಗೆಯೇ ಇವೆ. ಅವುಗಳನ್ನು ಓದಿದೊಡನೆಯೇ ಅವುಗಳಲ್ಲಿಯ ತತ್ತ್ವಗಳ ನಿಜತ್ವವು ಮನಸ್ಸಿನಲ್ಲಿ ಕೂಡಲೇ ಪ್ರಕಾಶಿಸಹತ್ತುತ್ತದೆ. ಅವುಗಳ ಕೂಡ ವಾದವಿವಾದ ಮಾಡಲು ಮನಸ್ಸು ಮುಂದಾಗುವದಿಲ್ಲ. ಒಂದುದಿನ ಸ್ವಾಮಿ ವಿವೇಕಾನಂದರವರು ಸತ್ಯವನ್ನು ತಿಳಿಯಲುದ್ದೇಶಿಸಿ ಶ್ರೀ ರಾಮಕೃಷ್ಣ ಪರಮಹಂಸರಿದ್ದೆಡೆಗೆ ಹೋದರು. ಅವರೊಡನೆ ವಾದವಿವಾದ ಮಾಡುವ ಉದ್ದೇಶದಿಂದಲೇ ಹೋದರು. ಆದರೆ ರಾಮಕೃಷ್ಣರವರ ನುಡಿಗಳನ್ನು ಕೇಳಿದೊಡನೆಯೇ ಅವರೊಡನೆ ಮಾದವಿವಾದ ಮಾಡುವ ಅವರ ಮನಸ್ಸು ಹಾರಿಹೋಯಿತು. ಪ್ರತಿ ಒಬ್ಬ ಮಹಾಪುರುಷನ ನುಡಿಯ ರೀತಿಯು ಹೀಗೆಯೇ ಇರುತ್ತದೆ. ಅವನ ಮಾತುಗಳಲ್ಲಿ ಸತ್ಯತೆಯ ಪ್ರಭಾವವು ಸ್ವತಃ ಸಿದ್ಧವಾಗಿಯೇ ಹರಿಯುತ್ತಿರುತ್ತದೆ. ಅದು ಕೂಡಲೇ ಮನಸ್ಸಿನಲ್ಲಿ ನಡಸುತ್ತದೆ. ವಚನಗಳ ರೀತಿಯಾದರೂ ಹಾಗೆಯೇ ಇದ್ದು ಅವುಗಳಲ್ಲಿರುವ ಶಕ್ತಿಗೆ ಇದೇ ಮುಖ್ಯ ಕಾರಣವೆಂದು ಹೇಳಬಹುದು.

ವಚನಗಳಲ್ಲಿ ಮೋಹಕತನವು ಇದೆ. ಯಾಕಂದರೆ ಅವುಗಳಲ್ಲಿ ಕಾಪಟ್ಯ ಕುಹಕತನ ಕುತಂತ್ರದ ವಿಚಾರಗಳಿಲ್ಲ. ಅಂದರೆ ವಚನಕಾರನು ತನ್ನ ಮನಸ್ಸಿನಲ್ಲಿ ಇದ್ದದ್ದನ್ನು ಇದ್ದಕ್ಕಿದ್ದ ಹಾಗೆಯೇ ನುಡಿಯುವನು. ಚಿಕ್ಕ ಮಗುವಿನ ನುಡಿಯಲ್ಲಿ ಮೋಹಕತನವು ಏಕೆ ಇರುತ್ತದೆಂಬುದನ್ನು ನಾವು ವಿಚಾರಿಸಿದರೆ ಅದು ತನ್ನ ಮನಸ್ಸಿನಲ್ಲಿ ಹೊಳೆದದ್ದನ್ನು ಇದ್ದಕ್ಕಿದ್ದ ಹಾಗೆಯೇ ನಿರ್ವ್ಯಾಜವಾಗಿ ನುಡಿಯುವದು. ಇದೇ ಮಗುವಿನ ಮಾತಿನ ಮೋಹಕತನಕ್ಕೆ ಕಾರಣವು. ವಚನ ಗ್ರಂಥಗಳು ಹಾಗೆಯೇ ಇರುತ್ತವೆ. ಒಬ್ಬ ಮನುಷ್ಯನು ಅತ್ಯಂತ ವಕ್ತೃತ್ವ ಶಕ್ತಿಯುಳ್ಳವನಾಗಿರಬಹುದು. ಇಂಥವರು ಸಮಾಜದಲ್ಲಿ ಹೇರಳವಾಗಿ ದೊರೆಯುವದುಂಟು. ಆದರೆ ಅವರು ಇಷ್ಟರಿಂದಲೆ ಸಮಾಜದ ಚಾಲಕರಾದದ್ದು ತೋರಿಬರುವದಿಲ್ಲ. ಇದಕ್ಕೆ ಕಾರಣವೆಂದರೆ ಇವರು ನಡೆದಂತೆ ನುಡಿಯುವದಿಲ್ಲ, ನುಡಿದಂತೆ ನಡೆಯುವುದಿಲ್ಲ. ಆದ್ದರಿಂದ ಇವರ ಮಾತಿನಲ್ಲಿ ಬಲವಿರುವದಿಲ್ಲ.  ಮ. ಗಾಂಧಿಯವರ ವಿಚಾರಗಳು ಸಮ್ಮತವಾಗದೆ ಇದ್ದಂತವರು ನಮ್ಮ ದೇಶದಲ್ಲಿ ಅನೇಕರಿರಬಹುದು. ಆದರೆ ಅವರ ಮಾತಿನಲ್ಲಿ ಕಪಟಭಾವವಿರುವದಿಲ್ಲಾದ್ದರಿಂದ ಅವುಗಳಲ್ಲಿ ಒಂದು ಬಲವುಂಟಾಗಿರುತ್ತದೆ. ಇದೇ ಮೇರೆಗೆ ವಚನಗಳ ಸ್ಥಿತಿಯು ಇರುತ್ತದೆ. ಆದ್ದರಿಂದ ಅವುಗಳಲ್ಲಿ ಒಂದು ಅತರ್ಕ್ಯವಾದ ಶಕ್ತಿಯ ಉತ್ಪನ್ನವಾಗಿರುತ್ತದೆ.

ವಚನಗಳಲ್ಲಿಯ ಮತ್ತೊಂದು ವೈಶಿಷ್ಟ್ಯವೆಂದರೆ ಅವುಗಳಲ್ಲಿ ಒಂದು ಅಸಾಧಾರಣವಾದ ಧೈರ್ಯಭಾಗವು ತುಂಬಿ ತುಳುಕುತ್ತದೆ. ಅಂದರೆ ಅವುಗಳಲ್ಲಿ ಅಂಜಿ ನುಡಿದ ಮಾತುಗಳಲ್ಲ. ಹೀಗೆ ವರ್ತಿಸಬೇಕಾದರೆ ಅತ್ಯಂತ ಮನೋಧೈರ್ಯವು ಬೇಕು. ಸತ್ಯವನ್ನು ಹೇಳಲು ಜನರು ಯಾವಾಗಲೂ ಹಿಂಜರಿಯುವದುಂಟು. ಹೆರವರ ಇಚ್ಚೆಯಂತೆ ನುಡಿಯುವವರೇ ಬಹಳ. ಆದರೆ ವಚನಕಾರರಲ್ಲಿ ಈ ಬಗೆಯ ಸ್ಥಿತಿಯು ಇರುವದಿಲ್ಲ. ಅವರು ಸಮಾಜದ ದೋಷಗಳನ್ನೂ ಮನುಷ್ಯನ ಕುಂದುಗಳನ್ನೂ ಹೊರಗೆಡವಲು ಎಂದೂ ಹಿಂಜರಿದಿಲ್ಲ. ಇದರಿಂದ ವಚನಕಾರರು ನಿಜವಾದ ಸಮಾಜ ಸುಧಾರಕರಾಗಿರುವರು. ಅವರು ಜಂಗಮರು ಮತ್ತು ಮಠಾಧಿಪತಿಗಳ ದುರ್ವೃತ್ತಿಗಳನ್ನೂ ದುಷ್ಟರ ದುರ್ನಡತೆಗಳನ್ನೂ ಎಷ್ಟು ಕಠೋರವಾಗಿ ನಿಂದಿಸಿದರೋ ಅಷ್ಟು ಈಗಿನ ಸಮಾಜ ಸುಧಾರಕರಾರೂ ನಿಂದಿಸಿರಲಿಕ್ಕಿಲ್ಲ. ಸಮಾಜವನ್ನು ಸುಧಾರಿಸಲಪೇಕ್ಷಿಸುವವರು ಸಮಾಜದ ದೋಷಗಳನ್ನು ಹೊರಗೆಡವಲು ಹಿಂಜರಿದರೆ ಅವರ ಉದ್ಧಿಶ್ಯ ಕಾರ್ಯಗಳು ಹೇಗೆ ನೆರವೇರಬಹುದು? ಇಂಥವರು ಸಮಾಜದ ರೋಷವನ್ನು ಸಹಿಸಲು ಸಿದ್ಧರಾಗಿರತಕ್ಕದ್ದು. ವಚನಕಾರರ ಚರಿತ್ರೆಗಳನ್ನು ನಾವು ನೋಡಿದರೆ ಅವರು ಹೀಗೆಯೇ ವರ್ತಿಸಿದಂತೆ ತೋರಿಬರುವದು. ಅವರು ತಮ್ಮ ಇಷ್ಟ ಕಾರ್ಯದಲ್ಲಿ ಧನ ಸಂಪತ್ತನ್ನು ಸೂರೆಮಾಡಿರುವರು, ರಾಜ್ಯವೈಭವವನ್ನು ತ್ಯಜಿಸಿರುವರು, ತಮ್ಮ ಪ್ರಾಣವನ್ನು ಕೂಡ ನೀಗಿರುವರು. ಇಂಥವರು ನುಡಿದ ಮಾತುಗಳಲ್ಲಿ ಭೀರುತನವು ಇರುವ ಬಗೆ ಹೇಗೆ ? ಇದರ ಸತ್ಯತೆಯನ್ನು ವಾಚಕರು ನೋಡಬೇಕಾದರೆ ಬಸವಣ್ಣನವರ ಮಾಹೇಶ್ವರ ಸ್ಥಲಕ್ಕೆ ಸಂಬಂಧಿಸಿದ ವಚನಗಳನ್ನಾಗಲಿ ಇಲ್ಲವೆ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನವರ ವಚನಗಳನ್ನಾಗಲಿ ನೋಡಬೇಕು. ಅಂದರೆ ವಚನಕಾರರಲ್ಲಿ ಎಂಥ ಅಸದೃಶ್ಯವಾದ ಮನೋಧೈರ್ಯ ವಿದೆಂಬುದು ತಿಳಿದುಬರುತ್ತದೆ. ಇದರಿಂದಲೇ ವಚನ ವಾಙ್ಮಯಗಳಲ್ಲಿ ಒಂದು ವಿಲಕ್ಷಣ ಜೀವಕಳೆಯು ಉತ್ಪನ್ನವಾಗಿರುತ್ತದೆ.

ವಚನ ಗ್ರಂಥಗಳಲ್ಲಿ ಪಕ್ಷಪಾತದ ಮಾತುಗಳಿಲ್ಲ. ಇದು ಅವುಗಳಲ್ಲಿಯ ಮತ್ತೊಂದು ವಿಶಿಷ್ಟತ್ವವು. ವಚನಕಾರರು ಇವರು ನನ್ನವರು, ಇವರು ನನ್ನ ಬಂಧುಗಳು, ಇವರು ನನ್ನ ಜಾತಿಯವರು, ನನ್ನ ವರ್ಗದವರೆಂದು ತಿಳಿದು, ಯಾರನ್ನೂ ಎತ್ತಿ ನುಡಿದಿಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಸದ್ಗುಣಗಳು ಎಲ್ಲಿದ್ದರೂ ಅವಕ್ಕೆ ಮನ್ನಣೆ ಕೊಡುವಂಥವರು ಮತ್ತು ದುರ್ಗುಣಗಳು ಇದ್ದಲ್ಲಿ ಸಮೀಪದ ಬಂಧುಗಳಾಗಿದ್ದರೂ ಕೂಡ ಅವರನ್ನು ನಿಂದಿಸುವಂಥವರು ಇರುತ್ತಾರೆ. ಈ ಪ್ರಕಾರ ಅವರು ಎಲ್ಲರೊಡನೆ ಸಮಭಾವದಿಂದ ವರ್ತಿಸಿರುತ್ತಾರೆ. ಒಬ್ಬ ಹೊಲೆಯನಿರಲಿ, ಬ್ರಾಹ್ಮಣನಿರಲಿ, ಶ್ರೀಮಂತನಿರಲಿ, ಬಡವನಿರಲಿ, ಅವನ ಶೀಲಗಳನ್ನು ನೋಡಿ ಅವು ಸರಿಯಾಗಿದ್ದರೆ ಅವನನ್ನು ಕೇವಲ ಸಹೋದರನಂತೆ ಅವರು ಕಾಣುವವರಾಗಿರುವರು. ಈ ಅಭಿಪ್ರಾಯದ ಉಕ್ತಿಗಳು ವಚನಗ್ರಂಥಗಳಲ್ಲಿ ತುಂಬಿ ಹೋಗಿವೆ. ಹೀಗೆ ಬರೇ ನುಡಿಯಲ್ಲಷ್ಟೇ ಅಲ್ಲ, ಹಾಗೆ ನಡೆದೂ ತೋರಿಸಿದರು. ಅಸ್ಪೃಶ್ಯರೊಡನೆ ಅವರು ಸಹಭೋಜನ ಮಾಡಿರುವರು. ಲಗ್ನಾದಿ ವ್ಯವಹಾರಗಳನ್ನು ನಡೆಸಿರುವರು. ಇದರಲ್ಲಿ ಅವರು ಸಮಾಜದ ರೋಷವನ್ನು ಲೆಕ್ಕಿಸಲಿಲ್ಲ. ಈ ಪ್ರಕಾರ ವಚನಗಳೆಂದರೆ, ಅವು ನಡೆದು ತೋರಿಸಿ ನುಡಿದ ಮಾತುಗಳಾಗಿವೆ. ಆದ್ದರಿಂದ ವಚನವಾಙ್ಮಯವು ವೀರಶೈವರಲ್ಲಿ ಬಹು ಮಹತ್ವದ ಸ್ಥಾನವನ್ನು ಹೊಂದಿರುವದು.

ವಚನಗಳನ್ನು ಹೇಳುವ ರೀತಿಯಾದರೂ ಅವುಗಳ ಬಲವನ್ನು ಹೆಚ್ಚಿಸಿರುತ್ತದೆ. ಅತ್ಮನಿರೀಕ್ಷಣೆಯಿಂದ ತಮ್ಮ ದೋಷಗಳನ್ನು ತಾವು ತಿಳಿದುಕೊಂಡು ಅವುಗಳನ್ನು ದೂರಮಾಡಿಕೊಳ್ಳುವ ಉದ್ದಿಶ್ಯವಾಗಿ ತಮಗೆ ತಾವೇ ಹೇಳಿಕೊಳ್ಳುವ ಶಬ್ದಗಳ ಇವಾಗಿರುತ್ತವೆ. ವಚನಕಾರರ ಉದ್ದೇಶವು ಪ್ರಥಮದಲ್ಲಿ ತಮ್ಮ ಸುಧಾರಣೆ ಅಂದರೆ ತಮ್ಮ ಉಚ್ಚ ಧೈಯದಂತೆ ತಾವು ಮೊದಲು ನಡೆದು ತೋರಿಸುವುದು ಇರುತ್ತದೆ. ಹೀಗೆ ನಡೆದು ತೋರಿಸಿ ಆ ಮೇಲೆ ತಮಗೆ ಉಂಟಾದ ಅನುಭವವನ್ನು ಜನರಿಗೆ ಹೇಳುವದು ಇರುತ್ತದೆ. ಇದೇ ಅವರ ಪದ್ಧತಿಯಾಗಿದೆ. ವಚನಕಾರರು ಎರಡನೆಯವರಿಗೆ ಬರೇ ಉಪದೇಶ ಮಾಡುವ ಕಾರ್ಯವನ್ನು ಕೈಕೊಂಡಿಲ್ಲ. ಮೊದಲು ತಾವು ನಡೆದು ಆಮೇಲೆ ಹೇಳುವವರಾಗಿರುವರು. ನಿಜವಾಗಿ ಇದೇ ಶಿವಾನುಭವವೆನಿಸಿಕೊಳ್ಳುತ್ತದೆ. ಇಂಥವರ ಮಾತುಗಳಲ್ಲಿ ಸಾರವಿರುತ್ತದೆ. ಚೈತನ್ಯವಿರುತ್ತದೆ. ವಚನಶಾಸ್ತ್ರವು ಈ ರೀತಿಯದಾಗಿರುತ್ತದೆ.

ಈಗಿನ ಕಾಲಕ್ಕೆ ಅನೇಕರು ಸಮಾಜ ಚಾಲಕರಾಗಲು ಬಗೆಯುತ್ತಾರೆ. ಸಮಾಜವನ್ನು ಸುಧಾರಿಸಲು ಅಪೇಕ್ಷಿಸುತ್ತಾರೆ. ಆದರೆ ಇವರು ವಚನಕಾರರ ಮಾರ್ಗವನ್ನು ಹಿಡಿದಿದ್ದಾದರೆ ಅವರು ಈ ಸ್ಥಿತಿಯನ್ನು ನಿಸ್ಸಂದೇಹವಾಗಿ ಹೊಂದಬಹುದು. ಅಂದರೆ ವಚನಕಾರರಂತೆ ಅವರು ಸತ್ಯಬಾಷಿಗಳಾಗಿರಬೇಕು. ಅವರಲ್ಲಿ ಯಾವ ಬಗೆಯ ಕಾಪಟ್ಯ ಭಾವವಿರಬಾರದು, ತಾವು ಹಿಡಿದ ಕಾರ್ಯದಲ್ಲಿ ಅತ್ಯಂತ ಧೈರ್ಯಶಾಲಿಗಳಾಗಿರಬೇಕು, ಪಕ್ಷಪಾತವಿರಕೂಡದು ಮತ್ತು ಆತ್ಮ ಸುಧಾರಣೆಯಲ್ಲಿ ತೊಡಗಿರಬೇಕು. ಹೀಗೆ ಇವರು ಆಚರಿಸಿದ್ದಾದರೆ ಅವರು ಮೇಲ್ತರದ ಸ್ಥಿತಿಯನ್ನು ಅವಶ್ಯವಾಗಿ ಹೊಂದುವರು. ವಚನ ಕಾರರಲ್ಲಿ ಈ ಬಗೆಯ ಭಾವವು ತುಂಬಿತುಳುಕುತ್ತದೆ. ಆದ್ದರಿಂದಲೇ ಅವರು ವೀರಶೈವ ಸಮಾಜದಲ್ಲಿ ಒಂದು ಮಹತ್ವದ ಕ್ರಾಂತಿಯನ್ನುಂಟುಮಾಡಲು ಶಕ್ತರಾದರು.

ನಾವು ಯಾವ ವಾಙ್ಮಯವನ್ನು ತೆಗೆದುಕೊಂಡರೂ ಅದು ಎರಡು ವರ್ಗದ ಜನರಿಂದ ಬೆಳೆದದ್ದು ತೋರಿಬರುತ್ತದೆ. ಇವರಲ್ಲಿ ಒಂದು ವರ್ಗದವರಿಗೆ ನಾವು ತತ್ವವೇತಿಗಳೆಂದು ಹೇಳಬಹುದು. ಇವರು ನಾನಾಬಗೆಯ ಬುದ್ದಿ ಕುಶಲತೆಗಳನ್ನು ಉಪಯೋಗಿಸಿ ತಮ್ಮ ಮತವನ್ನು ಸಿದ್ಧಪಡಿಸಿರುತ್ತಾರೆ. ಇಂಥ ವರ್ಗದವರಲ್ಲಿ ಶಂಕರಾಚಾರ್ಯ ರಾಮಾನುಜಾಚಾರ್ಯ ಇಂಥ ತತ್ವಜ್ಞರು ಬರುತ್ತಾರೆ. ಈ ವರ್ಗವಲ್ಲದೆ ಇನ್ನೊಂದು ವರ್ಗವಿದ್ದು ಇವರಿಗೆ ನಾವು ಧರ್ಮಸುಧಾರಕರೆಂದು ಹೇಳಬಹುದು. ಇವರಿಂದಲೂ ಮಹತ್ವದ ವಾಙ್ಮಯವುಂಟಾಗುತ್ತದೆ. ಇಂಥವರಲ್ಲಿ ಗೌತುಮ ಬುದ್ಧ, ಕ್ರೈಸ್ತ ಕನಪ್ಯೂಶಿಯಸ್, ಉಪನಿಷತ್ಕಾರರು, ಬಸವೇಶ್ವರ ಮೊದಲಾದ ಧರ್ಮ ಸ್ಥಾಪಕರೂ ಧರ್ಮ ಪ್ರವರ್ತಕರೂ ಸಾಧು ಸತ್ಪುರುಷರೂ ಬರುತ್ತಾರೆ ಇವರು ತಮ್ಮ ಉಕ್ತಿಗಳಿಂದ ಜನಾಂಗದ ಹೃದಯವನ್ನು ತಲ್ಲಣಿಸಿ ಅದನ್ನು ಉಚ್ಚಸ್ಥಿತಿಗೆ ತಂದಿರುತ್ತಾರೆ. ಇವರು ಮೊದಲನೆಯ ವರ್ಗದವರಂತೆ ಕೇವಲ ಬೌದ್ಧಿಕ  ತತ್ವವಿಚಾರಗಳನ್ನು ಹೇಳುತ್ತ ಕೂಡದೆ, ತಾವು ನುಡಿದಂತೆ ಆಚರಿಸಿ ಜಗತ್ತಿನಲ್ಲಿ ಪ್ರಸಿದ್ಧರಾಗಿರುವರು. ಇವರಿಂದ ಉಂಟಾದ ವಾಙ್ಮಯವು ಸಾಮಾನ್ಯವಾದುದಲ್ಲ. ಈ ವಾಙ್ಮಯವು ಇತರ ತತ್ವವೇತ್ತಿಗಳ ಬೌದ್ಧಿಕ ವಾಙ್ಮಯಕ್ಕೆ ಕಾರಣವಾಗಿರುವದು. ಉದಾ: ಉಪನಿಷದ್ಗ್ರಂಥಗಳ ನುಡಿಗಳ ಮೇಲೆ ಹಿಂದುಗಡೆ ಪ್ರಸಿದ್ಧರಾಗಿರುವ ತತ್ವವೇತ್ತಿಗಳು ತಮ್ಮ ಸಿದ್ಧಾಂತಗಳನ್ನು ಕಲ್ಪಿಸಿರುವರು. ಇದರಂತೆಯೇ ಕ್ರೈಸ್ತರ ಬಾಯಬಲ್, ಮಹ್ಮದೀಯರ ಕುರಾನ, ಬೌದ್ಧರ ಧಮ್ಮಪದ ಇವುಗಳು ಇರುತ್ತವೆ. ಈ ಗ್ರಂಥಗಳ ಮೂಲಕ ಹಿಂದುಗಡೆ ಅನೇಕಾನೇಕ ತತ್ವಗ್ರಂಥಗಳು ಆಯಾಯ ಮತಗಳಲ್ಲಿ ಉತ್ಪನ್ನವಾಗಿರುತ್ತವೆ. ವಚನ ವಾಙ್ಮಯವು ಇದೇ ಬಗೆಯ ವಾಙ್ಮಯದಲ್ಲಿ ಬರುತ್ತದೆ. ಅದರಲ್ಲಿಯ ವಿಚಾರಗಳು ಹಿಂದುಗಡೆ ವೀರಶೈವ ತತ್ವ ಗ್ರಂಥಗಳನ್ನು ಹೆಚ್ಚಿಸಲು ಕಾರಣವಾಗಿವೆ. ವಚನಕಾರರ ಪ್ರತಿ ಒಂದು ವಚನದ ಮೇಲೆ ದೊಡ್ಡ ದೊಡ್ಡ ಗ್ರಂಥಗಳನ್ನು ಸಹ ಬರೆಯಬಹುದಾಗಿದೆ. ಇಷ್ಟು ಅವು ಪ್ರಫುಲ್ಲಿತ ವಿಚಾರಗಳಿಂದ ತುಂಬಿ ಹೋಗಿವೆ. ಇದೇ ಸಜೀವ ವಾಙ್ಮಯದ ಕುರುಹು.

ಆದರೆ ವೀರಶೈವ ಸಮಾಜದ ಅದೃಷ್ಟದಿಂದ ಇಂಥ ಮಹತ್ತರವಾದ ವಾಙ್ಮಯವನ್ನು ದೂಷಿಸುವ ಕೆಲ ಮಹಾನುಭಾವರು ಇದರಲ್ಲಿ ಉತ್ಪನ್ನರಾಗಿದ್ದಾರೆ. ಇನ್ನೂ ಕೆಲವರು ಸಂಸ್ಕೃತದ ಮೋಹಕ್ಕೆ ಒಳಗಾಗಿ ಈ ಸಜೀವ ಕನ್ನಡ ವಾಙ್ಮಯವನ್ನು ನಿರಾಕರಿಸುವದುಂಟು. ಈ ಸ್ಥಿತಿಯನ್ನು ತೀವ್ರವಾಗಿ ಹೋಗಲಾಡಿಸುವದು ವೀರಶೈವ ಸಮಾಜದ ಅದ್ಯ ಕರ್ತವ್ಯವಾಗಿದೆ. ಆದ್ದರಿಂದ ಅವರು ತಾವು ಸ್ಥಾಪಿಸಿದ ಶಾಲೆಗಳಲ್ಲಿಯೂ ಧರ್ಮ ಪಾಠಶಾಲೆಗಳಲ್ಲಿಯೂ ಈ ಗ್ರಂಥಗಳನ್ನು ಅಭ್ಯಾಸಿಸುವ ಯೋಜನೆ ಮಾಡುವದು ಅವಶ್ಯವಿದೆ. ಇಷ್ಟೇ ಅಲ್ಲ, ಪ್ರತಿ ಒಬ್ಬರು ತಮ್ಮ ಮನೆಯಲ್ಲಿ ಮತ್ತು ಸಭಾ ಸ್ಥಳಗಳಲ್ಲಿ ವಚನಗಳ ತತ್ವಗಳನ್ನು ಪ್ರಸಂಗಿಸಿ ಅವುಗಳನ್ನು ಬಹು ಜನರ ಸಮಾಜಕ್ಕೆ ತಿಳಿಯಪಡಿಸಲು ಯತ್ನಿಸುವದು ಅವಶ್ಯವಿದೆ. ಈ ಪ್ರಕಾರ ಅವರು ವರ್ತಿಸಲೆಂದು ನಾನು ನಮ್ರ ಪೂರ್ವಕವಾಗಿ ಸೂಚಿಸಿ ಈ ನನ್ನ ಲೇಖನವನ್ನು ಮುಗಿಸುತ್ತೇನೆ.

 ಹರ್ಡೆಕರ ಮಂಜಪ್ಪನವರು

 

ಈ ಪ್ರಪಂಚದಲ್ಲಿ ಮನುಷ್ಯನು ಸುಖ ಶಾಂತಿಗಳಿಂದ ಜೀವಿಸಬೇಕೆಂದು ಅನೇಕ ಮಹಾತ್ಮರು ಪ್ರತಿಯೊಂದು ಕಾಲದಲ್ಲಿಯೂ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆ ಎಲ್ಲ ಪ್ರಯತ್ನಗಳೂ ಮನುಷ್ಯ ಜಾತಿಯ ಸುಖಸಮಾಧಾನಗಳನ್ನು ಹೆಚ್ಚಿಸಲು ಕಾರಣವಾಗಿಯೂ ಪರಿಣಮಿಸಿದವು. ಆದರೆ ಆ ಸುಖಶಾಂತಿಗಳು ಮಾತ್ರ ಸ್ಥಿರಗೊಳ್ಳಲಿಲ್ಲ ಮತ್ತು ಸ್ಥಿರಗೊಳ್ಳುವುದೂ ಇಲ್ಲ. ಏಕೆಂದರೆ, ಮನುಷ್ಯ ಪ್ರಾಣಿಯು ಬೇರೆ ಪ್ರಾಣಿಗಳಂತೆ ಕ್ಲೃಪ್ತವಾದ ಇಚ್ಛಾಸ್ಥಿತಿ ಪರಿಮಿತಿಗಳಿಂದ ಕೂಡಿರುವುದಿಲ್ಲ. ಆದುದರಿಂದ ಸುಖ ಶಾಂತಿಗಳನ್ನು ಪ್ರಸ್ಥಾಪಿಸಲು ಯಾವಾಗಲೂ ಸಾಧನೋಪಾಯಗಳನ್ನು ವ್ಯತ್ಯಸ್ತಗೊಳಿಸುತ್ತಿರಬೇಕಾಗುತ್ತದೆ. ಒಂದು ಕಾಲದಲ್ಲಿ ಅವಶ್ಯಕವೆಂದು ಏರ್ಪಟ್ಟ ಸಾಧನೋಪಾಯಗಳು ಇನ್ನೊಂದು ಕಾಲದಲ್ಲಿ ಅನಾವಶ್ಯಕವಾಗಿ ಪರಿಣಮಿಸುತ್ತವೆ. ಒಂದು ಪ್ರಸಂಗದಲ್ಲಿ ಸುಖ ಶಾಂತಿಗಳನ್ನುಂಟು ಮಾಡಿದ ನಿಯಮಾಚಾರಗಳು ಇನ್ನೊಂದು ಪ್ರಸಂಗದಲ್ಲಿ ದುಃಖ ಅಶಾಂತತೆಗಳನ್ನೇ ಉಂಟು ಮಾಡುತ್ತವೆ. ಆದುದರಿಂದ ಒಂದು ಸಮಯದಲ್ಲಿ ಯಾವ ಆಚಾರ ವಿಚಾರಗಳನ್ನು ಜನಾಂಗದಲ್ಲುಂಟುಮಾಡುವುದು ಮಹತ್ಕಾರ್ಯವಾಗಿ ಪರಿಣಮಿಸುತ್ತದೆಯೋ ಅವೇ ಆಚಾರ ವಿಚಾರಗಳನ್ನು ಇನ್ನೊಂದು ಸಮಯದಲ್ಲಿ ನಿವಾರಣೆ ಮಾಡುವುದು ಮಹತ್ಕಾರ್ಯವಾಗಿ ಪರಿಣಮಿಸುವುದು. ಈ ಪ್ರಕಾರ ಮನುಷ್ಯಜಾತಿಯ ಸುಖಶಾಂತಿಗಳಿಗಾಗಿ ಕಾಲ ಭಿನ್ನತ್ವದಂತೆ ಕಾರ್ಯ ಭಿನ್ನತ್ವವೂ ಅವಶ್ಯಕವಾಗಿ ಸಂಭವಿಸುವುದು.

ಬಾಲ್ಯದಲ್ಲಿ ಉಪಯೋಗಿಸಿದ ಉಡಿಗೆ ತೊಡಿಗೆಗಳನ್ನೇ ಯೌವನದಲ್ಲಿಯೂ ಉಪಯೋಗಿಸಲಿಕ್ಕೆ ಬರುತ್ತದೆಯೇ?   ಶೀತಕಾಲದಲ್ಲಿ ಉಪಯೋಗಿಸುತ್ತಿದ್ದ ಬಟ್ಟೆಗಳನ್ನು ಬೇಸಿಗೆಯ ಕಾಲದಲ್ಲಿಯೂ ಉಪಯೋಗಿಸಬಹುದೇ? ಕಾಲ ಸ್ಥಿತಿಗಳಂತೆ ಇವುಗಳನ್ನು ಬೇರೆ ಮಾಡುವುದೇ ಹೇಗೆ ಕ್ಷೇಮಕರವಾಗಿದೆಯೋ ಹಾಗೆಯೇ ಕಾಲಸ್ಥಿತಿಗಳಿಗನುಗುಣವಾಗಿ ಸಾಧನೋಪಾಯಗಳನ್ನು ಭಿನ್ನಗೊಳಿಸುವುದೇ ಜನಾಂಗದ ಸುಖಶಾಂತಿಗಳಿಗೆ ಕಾರಣವಾಗಿದೆ. ಮನುಷ್ಯನು ಕಾಲಸ್ಥಿತಿಗಳಿಗನುಸರಿಸಿ ತನ್ನ ಉಡುಪಿನಲ್ಲಿ ಎಷ್ಟೇ ವ್ಯತ್ಯಸ್ತ ಮಾಡಿಕೊಂಡರೂ ಬಟ್ಟೆಯು ಮಾತ್ರ ಹೇಗೆ ಬೇಕೇ ಬೇಕಾಗಿದೆಯೋ ಹಾಗೆಯೇ ಜನಾಂಗದ ಸುಖಶಾಂತಿಗಳಿಗಾಗಿ ಎಷ್ಟೋ ಭಿನ್ನ ಪ್ರಯತ್ನಗಳು ನಡೆದರೂ ಅವುಗಳಿಗೆಲ್ಲ ಮೂಲ ಭೂತವಾದ ನೈತಿಕ ಬಲವು ಮಾತ್ರ ಬೇಕೇ ಬೇಕಾಗುತ್ತದೆ.

ಭಗವಾನ್ ಬುದ್ಧದೇವರು ಎರಡು ಸಾವಿರ ವರ್ಷಗಳ ಪೂರ್ವದಲ್ಲಿ ಮಾಡಿದ ಧರ್ಮ ಪ್ರಸಾರವಾಗಲಿ, ಹನ್ನೆರಡನೆಯ ಶತಮಾನದಲ್ಲಿ ಮಹಾನುಭಾವರಾದ ಬಸವಣ್ಣನವರು ಮಾಡಿದ ಸಮಾಜ ಸುಧಾರಣೆಯಾಗಲಿ, ಈ ಇಪ್ಪತ್ತನೆಯ ಶತಮಾನದಲ್ಲಿ ಮಹಾತ್ಮಾ ಗಾಂಧಿಯವರು ಮಾಡುತ್ತಿರುವ ರಾಜಕೀಯ ಕ್ರಾಂತಿಯಾಗಲಿ ಎಷ್ಟೇ ಭಿನ್ನ ಸ್ವರೂಪದವುಗಳಾಗಿ ತೋರಿದರೂ ಅವುಗಳ ಸಾಧನೋಪಾಯಗಳು ಎಷ್ಟೇ ವ್ಯತ್ಯಸ್ತವಾಗಿದ್ದರೂ ಅವುಗಳಲ್ಲೆಲ್ಲಾ ಮನುಷ್ಯ ಜಾತಿಯ ಸುಖಶಾಂತಿಗಳಿಗೆ ಮೂಲಾಧಾರವಾದ ಸಮಾನತ್ವ ಮತ್ತು ಸ್ವಾತಂತ್ರ್ಯ ತತ್ವಗಳು ಮಾತ್ರ ಸಂಪೂರ್ಣವಾಗಿ ಇದ್ದೇ ಇವೆ. ಈ ಉಭಯ ತತ್ವಗಳು ಧಾರ್ಮಿಕ ವಿಷಯದಲ್ಲಾಗಲಿ ಅಥವಾ ಸಾಮಾಜಿಕ ವಿಷಯದಲ್ಲಾಗಲಿ, ಇಲ್ಲವೆ ರಾಜಕೀಯ ಸಂಗತಿಗಳಲ್ಲಾಗಲಿ ಯಾವ ಪ್ರಮಾಣದಂತೆ ಕಡಿಮೆಯಾಗುತ್ತವೆಯೋ ಆ ಪ್ರಮಾಣ ದಂತೆ ಜನಾಂಗದಲ್ಲಿ ಸುಖಶಾಂತಿಗಳೂ ಕಡಿಮೆಯಾಗುತ್ತವೆ. ಆಗ ಈ ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನು ಜನಾಂಗದಲ್ಲಿ ಪುನಃ ಪ್ರಸ್ತಾಪಿಸಲು ಮಹಾಮಹಾ ವಿಭೂತಿಗಳು ಆಗಿನ ಸ್ಥಿತಿಗನುಗುಣವಾದ ಭಿನ್ನ ಭಿನ್ನ ಬಾಹ್ಯ ಸಾಧನೋಪಾಯಗಳಿಂದ ಪ್ರಯತ್ನಿಸುತ್ತಾರೆ. ಏಕೆಂದರೆ, ಸಮಾನತ್ವ ಮತ್ತು ಸ್ವಾತಂತ್ರ್ಯ ಗಳಲ್ಲಿಯೇ ಸುಖ ಮತ್ತು ಶಾಂತಿಗಳಿವೆಯೆಂಬುದು ಮನುಷ್ಯ ಜಾತಿಯ ಬಹುಕಾಲದ ಅನುಭವದಿಂದ ಸಿದ್ಧವಾದ ಸಂಗತಿಯಾಗಿದೆ.

ಈ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ವ್ಯಕ್ತಿಗೆ ಹೇಗೆ ಪ್ರಾಪ್ತವಾಗುತ್ತವೆ? ಇವುಗಳನ್ನು ಜನಾಂಗದಲ್ಲಿ ಹೇಗೆ ಪ್ರಸ್ತಾಪಿಸುತ್ತಾರೆ? ಎಂಬ ಪ್ರಶ್ನೆಗಳಿಗೆ ನಮ್ಮ ಶಿವಶರಣರ ಸಂದೇಶವೇ ಉತ್ತರವಾಗಿದೆ. ದೇಶ, ಜಾತಿ, ಉದ್ಯೋಗ, ಸಂಪತ್ತು ಮೊದಲಾದ ಕೃತ್ರಿಮ ಸಾಧನ ಸೌಲಭ್ಯಗಳಿಂದ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ವ್ಯಕ್ತಿಗೆ ಪ್ರಾಪ್ತವಾಗಬಾರದು. ಒಂದು ದೇಶದವರೆಂದಾಗಲಿ ಅಥವಾ ಒಂದು ಜಾತಿಯವರೆಂದಾಗಲಿ ಇಲ್ಲವೆ ಉದ್ಯೋಗ ಸಂಪತ್ತುಗಳ ಬಲದಿಂದಾಗಲಿ ಶ್ರೇಷ್ಠ ಕನಿಷ್ಠರೆಂದು ಎಣಿಸಬಾರದು. ಮನುಷ್ಯನಿಗೆ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ಆತನಲ್ಲಿರುವ ನೈತಿಕ ಬಲದಿಂದಲೇ ಪ್ರಾಪ್ತವಾಗಬೇಕು. ಈ ನೈತಿಕ ಬಲವನ್ನು ಪ್ರಪಂಚದಲ್ಲಿ ಪ್ರಸ್ತಾಪಿಸುವವರೇ ಮನುಷ್ಯ ಜಾತಿಯ ಸುಖಶಾಂತಿಗಳನ್ನು ಹೆಚ್ಚಿಸುತ್ತಾರೆ. ಒಂದು ವ್ಯಕ್ತಿಯಲ್ಲಾಗಲಿ ಅಥವಾ ಒಂದು ಜನಾಂಗದಲ್ಲಾಗಲಿ ನೈತಿಕ ಬಲವಿಲ್ಲದಿದ್ದರೆ ಆ ವ್ಯಕ್ತಿಯು ಅಥವಾ ಜನಾಂಗವು ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನನುಭವಿಸಲು ಅಧಿಕಾರಿಯಲ್ಲ. ಈ ಸಮಾನತ್ವ ಮತ್ತು ಸ್ವಾತಂತ್ರ್ಯ ಗಳಿಲ್ಲದಿದ್ದ ಮೇಲೆ ಸುಖ ಮತ್ತು ಶಾಂತಿಗಳು ದೊರೆಯುವುದೆಂತು? ಆದಕಾರಣ ಯಾವ ವ್ಯಕ್ತಿಯು ಅಥವಾ ಜನಾಂಗವು ಸುಖ ಮತ್ತು  ಶಾಂತಿಗಳನ್ನಪೇಕ್ಷಿಸುತ್ತದೆಯೋ ಸುಖಶಾಂತಿಗಳು ಐಹಿಕವಾದವುಗಳೇ ಇರಲಿ ಅಥವಾ ಪಾರಲೌಕಿಕವಾದವುಗಳೇ ಇರಲಿ, ಮೊದಲು ನೈತಿಕ ಬಲವನ್ನು ಸಂಪಾದಿಸಬೇಕು. ಆ ನೈತಿಕ ಬಲದ ನ್ಯೂನಾಧಿಕಗಳ ಮೇಲಿಂದಲೇ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ಪ್ರಾಪ್ತವಾಗ ಬೇಕು. ಈ ನೈತಿಕ ಬಲದ ವಿನಾ ಮನುಷ್ಯನಿಗೆ ಇಹಲೋಕದ ಸುಖಶಾಂತಿಗಳೇ ದೊರೆಯದಿದ್ದ ಮೇಲೆ ಪರಲೋಕದ ಮಾತೇಕೆ ? ನೈತಿಕ ಬಲವಿಲ್ಲದವರಿಗೆ ಸುಖಶಾಂತಿಗಳಿಲ್ಲವೆಂಬುದೇ ನಮ್ಮ ಶಿವಶರಣರ ಸಂದೇಶವು, ನೈತಿಕ ಬಲವಿಲ್ಲದವರಿಗೆ ಮನುಷ್ಯರೇ ಮೆಚ್ಚದಿರುವಾಗ ಶಿವನು ಮೆಚ್ಚುವನೇ? ಶಿವನನ್ನು ಒಲಿಸಿಕೊಳ್ಳ ಬೇಕೆಂಬುವವರು ಮೊದಲು ನೈತಿಕ ಬಲಶಾಲಿಗಳಾಗಬೇಕು. ಆದುದರಿಂದ ಮಹಾನುಭಾವರಾದ ಬಸವಣ್ಣನವರು ಈ ಪ್ರಕಾರ ಮನುಷ್ಯಜಾತಿಗೆ ತಮ್ಮ ಸಂದೇಶವನ್ನು ಸೂಚಿಸಿದ್ದಾರೆ.

ಕಳಬೇಡ ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯವ ನುಡಿಯಲು ಬೇಡ. ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವ ನೊಲಿಸುವ ಪರಿ.

ಸತ್ಯ, ಅಹಿಂಸೆ, ಅಸ್ತೇಯ ಮೊದಲಾದ ನೈತಿಕ ಆಚರಣೆಗಳೇ ಸದಾಚಾರಗಳು. ಇವುಗಳಿಂದಲೇ ಮನುಷ್ಯನು ಪವಿತ್ರನೂ, ಪ್ರತಾಪಿಯೂ ಆಗುತ್ತಾನೆ. ಇವುಗಳ ವಿನಾ ಯಾವ ಸುಖಶಾಂತಿಗಳೂ ದೊರೆಯುವುದಿಲ್ಲ. ಕಳ್ಳತನ, ಸುಳ್ಳು, ಮೋಸ, ವ್ಯಭಿಚಾರಾದಿ ದುರಾಚಾರಗಳಲ್ಲಿರುವವರು ಎಷ್ಟೇ ಪೂಜೆ, ಜಪ, ತಪಗಳನ್ನು ಮಾಡಿದರೂ ವ್ಯರ್ಥವೇ ಸರಿ. ಅವರು ಯಾವ ಜಾತಿಯಲ್ಲಿ ಹುಟ್ಟಿದರೂ ಎಂಥ ಉದ್ಯೋಗ ಮಾಡುತ್ತಿದ್ದರೂ, ಎಷ್ಟು ಧನಿಕರಾಗಿದ್ದರೂ ಮನುಷ್ಯವರ್ಗದಲ್ಲಿ ಅತ್ಯಂತ ಕೀಳು ಸ್ಥಿತಿಯಲ್ಲಿರತಕ್ಕವರೇ ಸರಿ. ಇಂತಹ ನೈತಿಕ ಬಲವಿಲ್ಲದ ಅನಾಚಾರಿಗಳಿಗೆ ಶಿವನು ಒಲಿಯುವುದಿಲ್ಲವೆಂಬುದೇ ಶಿವಶರಣರ ಸಂದೇಶವು. ಆದುದರಿಂದ ಮಹಾಶಿವ ಶರಣರಾದ ಸಕಳೇಶ ಮಾದರಸರು ಈ ಪ್ರಕಾರ ಹೇಳಿದ್ದಾರೆ.

ಜನಮೆಚ್ಚಿ ಶುದ್ಧನಲ್ಲದೆ, ಮನಮೆಚ್ಚಿ ಶುದ್ಧನಲ್ಲವಯ್ಯ, ನುಡಿಯಲ್ಲಿ ಜಾಣನಲ್ಲದೆ ನಡೆಯಲ್ಲಿ ಜಾಣನಲ್ಲವಯ್ಯ, ವೇಷದಲ್ಲಿ ಅಧಿಕನಲ್ಲದೆ ಭಾಷೆಯಲ್ಲಿ ಅಧಿಕನಲ್ಲವಯ್ಯ. ಧನ ದೊರಕದೆ ನಿಸ್ಪೃಹನಲ್ಲದೆ ಧನದೊರಕಿ ನಿಸ್ಪೃಹನಲ್ಲವಯ್ಯ. ಏಕಾಂತದ್ರೋಹಿ. ಗುಪ್ತಪಾತಕಿ. ಯುಕ್ತಿ ಶೂನ್ಯಂಗೆ ಸಕಳೇಶ್ವರ ದೇವರು ಒಲಿ ಒಲಿ ಎಂದರೆ ಎಂತೊಲಿವನಯ್ಯ?

ಇದರ ಮೇಲಿಂದ ನೈತಿಕ ಬಲವಿಲ್ಲದವರ ಧರ್ಮಾಚಾರಗಳು ಡಂಭಾಚಾರಗಳಾಗಿಯೇ ಪರಿಣಮಿಸುತ್ತವೆಂದು ಶಿವಶರಣರು ಸ್ಪಷ್ಟವಾಗಿ ಹೇಳಿರುತ್ತಾರೆಂದು ಗೊತ್ತಾಗುವುದಿಲ್ಲವೇ ಧಾರ್ಮಿಕ ಶಕ್ತಿಯನ್ನೂ ಸುಖಾನಂದಗಳನ್ನು ಹೊಂದಲಪೇಕ್ಷಿಸುವ ಪ್ರತಿಯೊಂದು ವ್ಯಕ್ತಿಯೂ ಮೊದಲು ನೈತಿಕಚಾರನಿಷ್ಟನಾಗಲೇ ಬೇಕೆಂಬುದು ಸ್ಪಷ್ಟವಾಗುವುದಿಲ್ಲವೇ? ನಾವು ನಾನಾ ಅನೀತಿಗಳಿಂದ ಆಚರಿಸುತ್ತ ಧಾರ್ಮಿಕ  ವೇಷಭಾಷೆಗಳಿಂದ ಶೋಭಾಯಮಾನರಾದರೆ ಫಲವೇನು? ಶಿವನು ಮೆಚ್ಚುವನೇ? ಜನರನ್ನು ಮೋಸಗೊಳಿಸಿ ಧಾರ್ಮಿಕರೆಂದು ಹೇಳಿಸಿಕೊಳ್ಳುವುದೇ ಕಷ್ಟವಾಗಿರುವಾಗ ಶಿವನನ್ನು ಮೋಸಗೊಳಿಸುವ ಹವ್ಯಾಸವೇಕೆ? ಮಹಾನುಭಾವರಾದ ಬಸವಣ್ಣನವರು ಹೇಳಿರುವುದೇನಂದರೆ

ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ. ಪಾಪಿ ಹೂವನೇರಿಸಿದರೆ ಮಸೆದಾಯುಧದ ಗಾಯ. ಕೂಪರನಾರನೂ ಕಾಣೆ, ಮಾದರ ಚೆನ್ನಯ್ಯನಲ್ಲಿದೆ. ಕೂಪರನಾರನೂ ಕಾಣೆ ಡೋಹರ ಕಕ್ಕಯ್ಯನಲ್ಲದೆ. ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ ನಿಮ್ಮ ಪತ್ತಿಗರಿವರಯ್ಯ ಕೂಡಲಸಂಗಮದೇವ.

ಹೆಚ್ಚಿನ ಕುಲದವರೆಂದಾಗಲಿ ಹೆಚ್ಚು ಶಿವಪೂಜೆಯನ್ನು ಮಾಡುತ್ತಾರೆಂದಾಗಲಿ ಶಿವನು ಪ್ರೀತಿಸುವುದಿಲ್ಲ. ಮಾದಾರ ಚೆನ್ನಯ್ಯನವರೇ ಮೊದಲಾದ ಮಹಾಶಿವ ಶರಣರು ನೈತಿಕ ಬಲಶಾಲಿಗಳಾಗಿ ಶಿವನನ್ನು ಪೂಜಿಸಿದ್ದರಿಂದಲೇ ಆತನ ಪ್ರೀತಿಗೆ ಪಾತ್ರರಾದರು. ಕೋಪ ಪಾಪಗಳಿಂದ ಕೂಡಿದವರು ಯಾವ ಕುಲದವರಾಗಲಿ, ಅವರು ಎಂತಹ ವೈಭವದಿಂದ ಪೂಜೆಗಳನ್ನು ಮಾಡಲಿ., ಶಿವನಿಗೆ ಶಸ್ತ್ರದಿಂದ ಗಾಯಮಾಡಿದಂತೆಯೂ ಆತನ ಮೇಲೆ ರಕ್ತದ ಅಭಿಷೇಕವನ್ನು ಮಾಡಿದಂತೆಯೂ ಆಗುತ್ತದೆಂದು ಮಹಾನುಭಾವರಾದ ಬಸವಣ್ಣನವರು ಹೇಳಿರುವುದನ್ನು ನೋಡಿದರೆ ನಾವು ಮೊದಲು ನೈತಿಕ ಬಲಶಾಲಿಗಳಾಗಲು ಪ್ರಯತ್ನಿಸಬೇಕೆಂಬುದು ಗೊತ್ತಾಗುವುದಿಲ್ಲವೇ? ಪ್ರತಿನಿತ್ಯ ಎಷ್ಟು ಮಡಿಯಿಂದ ಲಿಂಗಪೂಜೆ ಮಾಡುತ್ತಿದ್ದರೂ ಅದರ ಫಲ ಪದಗಳು ಮಾತ್ರ ದೊರೆಯದಿರುವುದಕ್ಕೆ ಕಾರಣವೇನು ? ಪೂಜೆ ಮಾಡುವ ಕೈಗಳು ಪರಧನ ಪರದಾರಾದಿಗಳನ್ನು ಮುಟ್ಟಿ ಮಲಿನವಾಗಿರುವುದರಿಂದಲ್ಲವೆ ? ಮಂತ್ರವನ್ನುಚ್ಚರಿಸುವ ನಾಲಿಗೆಯು ಅಸತ್ಯ ದುರ್ಭಾಷಣಾದಿಗಳಿಂದ ಮೈಲಿಗೆಯಾಗಿರುವುದರಿಂದಲ್ಲವೇ ? ಆದಕಾರಣ ಮೊದಲು ನೈತಿಕ ಬಲಶಾಲಿಗಳಾಗಿರೆಂದೇ ಶಿವಶರಣರು ಸಾರಿಸಾರಿ ಹೇಳುತ್ತಿದ್ದಾರೆ.

ಮೊಟ್ಟೆ ಮೊಟ್ಟೆ ಪುಷ್ಪ ಪತ್ರೆಯ ತಂದು ಒಟ್ಟಿ ಒಟ್ಟಿ ಲಿಂಗವ ಪೂಜಿಸಿದಡೇನು? ತನುಮನಧನವ ಕೊಟ್ಟು ಹಿಂಗದನ್ನಕ್ಕರ? ಹುಸಿ, ಕಳವು, ಪರದಾರ, ವ್ಯಾಪಾರದಲ್ಲಿ ಹರಿದಾಡುವ ಮರುಳಬುದ್ಧಿಯ ದುರಾಚಾರಿಗಳಿಗೆ ದೂರವಾಗಿಪ್ಪನು ನೋಡಾ ನಮ್ಮ ಅಖಂಡೇಶ್ವರ.

ಪತ್ರೆ ಪುಷ್ಪಗಳನ್ನು ಕೂಡಿಸುವುದು ಸುಲಭ ಆದರೆ ಸತ್ಯ, ಶಮೆ, ದಮೆಗಳಿಂದ ಕೂಡಿದವರಾಗುವುದು ಕಠಿಣ. ಈ ಕಠಿಣ ಕಾರ್ಯವನ್ನು ಮಾಡದೆ ಸುಖಶಾಂತಿ ಗಳೆಂಬ ಹೆಚ್ಚಿನ ಫಲಗಳನ್ನು ಹೊಂದುವುದು ಶಕ್ಯವೇ? ಯಥೇಚ್ಛವಾಗಿ ಪತ್ರೆ ಪುಷ್ಪ ಗಳಿಂದ ಲಿಂಗಪೂಜೆಯನ್ನು ಮಾಡಿದ ಮಾತ್ರದಲ್ಲಿ ಶಿವನು ಮೆಚ್ಚುತ್ತಿದ್ದರೆ ಸತ್ಯಾದಿ ನೈತಿಕ ಆಚರಣೆಗಳನ್ನು ಆಚರಿಸಲು ಯಾರು ತಾನೇ ಪ್ರಯತ್ನಿಸುತ್ತಿದ್ದರು? ಶಿವಶರಣರಾದರೂ ಇಷ್ಟು ಒತ್ತಾಯದಿಂದ ನೈತಿಕ ಆಚರಣೆಗಳ ಕಡೆಗೆ ಲಕ್ಷಿಸಲು ಏಕೆ ಹೇಳುತ್ತಿದ್ದರು. ಮನುಷ್ಯನು ನೈಹಿಕ ಸಾಮರ್ಥ್ಯವನ್ನು ಹೊಂದಲು ಪ್ರಯತ್ನಿಸದೆ ಬಾಹ್ಯ ಡಂಭಾಚಾರಗಳಿಗೇನೇ ಮೋಸಹೋಗಿ ತನ್ನ ಜನ್ಮವನ್ನು ವ್ಯರ್ಥ ಮಾಡಿ ಕೊಳ್ಳಬಾರದೆಂಬ ಉದ್ದೇಶದಿಂದಲೇ ಶಿವಶರಣರು ಈ ಪ್ರಕಾರ ತೀಕ್ಷ್ಣವಾಣಿಯಿಂದ ಜನಾಂಗವನ್ನು ಎಚ್ಚರಗೊಳಿಸಿದ್ದಾರಲ್ಲವೇ? ಈಗ ನಾವು ಶಿವಶರಣರ ಸಂದೇಶವನ್ನು ಲಕ್ಷಿಸದ ಬಾಹ್ಯಾಡಂಬಾಚಾರಗಳಿಗೆ ಮರುಳರಾಗಿ ಅಧೋಗತಿ ಗೀಡಾಗುತ್ತಲಿದ್ದೇವೆ. ನಮ್ಮಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಮೊದಲಾದ ಯಾವ ಸಂಗತಿಗಳೂ ಫಲಕಾರಿಯಾಗದಿರುವುದಕ್ಕೆ ನಮ್ಮ ನೈತಿಕ ನಿರ್ಬಲತೇಯೇ ಮುಖ್ಯ ಕಾರಣವಾಗಿದೆ.

ಬಹು ಜನರು ಬಾಹ್ಯಾಡಂಬರದ ಅಚರಣೆಗಳಲ್ಲಿಯೇ ಮಗ್ನರಾಗಿದ್ದಾರೆಯೇ ವಿನಾಹ ತಮ್ಮ ನೈತಿಕ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾ ಇಲ್ಲ. ಪೂಜೆ, ಜಪ, ತಪ, ಅನುಷ್ಠಾನಗಳೆಂಬ ಬಾಹ್ಯ ವೇಷಭಾಷೆಗಳಿಗೆ ಮರುಳಾಗುವವರೇ ಸಮಾಜದಲ್ಲಿ ಹೆಚ್ಚಿರುವುದರಿಂದ ಧಾರ್ಮಿಕ ನಿಜಶಕ್ತಿಯನ್ನು ಹೊಂದುವ ಉತ್ಕಟೇಚ್ಛೆಯೇ ಉಂಟಾಗುತ್ತಾ ಇಲ್ಲ. ಜನಾಂಗದಲ್ಲಿ ವ್ಯಾಪಿಸಿರುವ ಈ ಮಲಿನಾಚಾರ ವಿಚಾರಗಳು ನಿವಾರಣೆಯಾಗಬೇಕಾದರೆ ಶಿವಶರಣರ ಸಂದೇಶವನ್ನು ನಾವು ಕೇಳಿ ಆಚರಿಸಬೇಕು.

ಉದಯದಲೆದ್ದು ಗಡಗಡನೆ ನಡುಗುತ ಹೋಗಿ, ಹೂಗಿಡವ ಪತ್ರೆಯ ಕಡಿವ ದೃಢಗೇಡಿಗಳಿರಾ ನೀವು ಕೇಳಿರಿ. ಅದು ಕಡುಪಾಪವಲ್ಲವೆ? ನಿಮಗೆ ನಡುಗಿರೋ. ಪರಧನ ಪರಸ್ತ್ರೀಯರಿಗೆ ನಡುಗಿರೊ. ಕೊಲೆ, ಹುಸಿ, ಕಳವು, ಪರದಾರ ಕಾಂಕ್ಷೆಗೆ ನಡುಗಿರೋ. ಹರನಿಂದೆ ಗುರುನಿಂದೆ, ಶಿವನಿಂದೆ ಕೇಳಲಾರವೆಂದು ನಡುಗಿರೊ. ಶಿವಾಚಾರಕ್ಕೆ ನಡುಗದೆ ಮಹಾಚಳಿಗೆ ನಡುಗಿ ಹೂವಿನ ಗಿಡವ ತರಿವ ಕಡುಪಾಪಿಗಳಿರಾ, ನಿಮಗೆ ಮೃಡನ ಪೂಜೆ ಎಲ್ಲಿಯದೂ ಇಲ್ಲ. ನಿಮಗೆ ಅಖಂಡ ಪರಿಪೂರ್ಣ ಘನಲಿಂಗ ಗುರುಚೆನ್ನಬಸವೇಶ್ವರ ಸಾಕ್ಷಿಯಾಗಿ.

ಸತ್ಯ ಪ್ರಿಯರಿಗೆ ಅಮೃತಪ್ರಾಯರಾಗಿಯೂ ಡಾಂಭಿಕರಿಗೆ ಶೂಲದಂತೆಯೂ ಇರುವ ಈ ದಿವ್ಯ ಸಂದೇಶವು ನೈತಿಕ ಬಲವನ್ನು ಹೆಚ್ಚಿಸಿಕೊಳ್ಳುವ ನಮ್ಮನ್ನು ಜಾಗೃತಗೊಳಿಸುವುದಿಲ್ಲವೆ? ಶಿವಶರಣರು ಶಿವಪೂಜಕರಿಗೇನೇ ಈ ಪ್ರಕಾರ ನೈತಿಕ ಸಾಮರ್ಥ್ಯವನ್ನು ಸಂಪಾದಿಸಲು ಸೂಚಿಸಿದ್ದಾರೆಂದು ತಿಳಿಯಬಾರದು. ಜಪ, ತಪ, ಭಕ್ತಿ ಕರ್ಮ, ಜ್ಞಾನ, ಯೋಗ ಮೊದಲಾದ ಧಾರ್ಮಿಕ ಭಿನ್ನ ಭಿನ್ನ ಆಚರಣೆಗಳನ್ನು ಆಚರಿಸುವವರಿಗೂ ಕೂಡ ಇದೇ ಪ್ರಕಾರ ಮೊದಲು ನೀತಿಯಿಂದ ನಡೆಯುವುದನ್ನು ಕಲಿಯಿರೆಂತಲೂ ನೀತಿಯ ಬಲವಿಲ್ಲದೆ ಧಾರ್ಮಿಕ ಆಚರಣೆಗಳನ್ನು ಆಚರಿಸುವುದರಿಂದ ನಿಜವಾದ ಫಲಪ್ರಯೋಜನಗಳು ಪ್ರಾಪ್ತವಾಗುವುದಿಲ್ಲವೆಂತಲೂ ಬಹಳವಾಗಿ ಹೇಳಿದ್ದಾರೆ.

ಶಿವನೇ ದೈವ. ಕೊಲ್ಲದಿರ್ಪುದೆ ಧರ್ಮ, ಅಧರ್ಮದಿಂದ ಬಂದುದನ್ನೊಲ್ಲದಿಪ್ಪುದೆ ನೇಮ. ಆಶೆಯಿಲ್ಲದಿಪ್ಪುದೆ ತಪ. ರೋಷವಿಲ್ಲದಿಪ್ಪುದೆ ಜಪ.  ವಂಚನೆ ಇಲ್ಲದಿಪ್ಪುದೆ ಭಕ್ತಿ. ಹೆಚ್ಚು ಕುಂದಿಲ್ಲದಿಪ್ಪುದೆ ಸಮಯಾಚಾರ. ಇದು ಸತ್ಯ. ಶಿವಬಲ್ಲ. ಶಿವನಾಣೆ ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ.

ತಪವೆತ್ತ ಹೆರರ ಕೇಡಿಂಗೆ ಬಗೆಯುವುದೆತ್ತ. ಜಪವೆತ್ತ ಶರಣರ ಮೇಲೆ ಅನೃತವ ನುಡಿವುದೆತ್ತ? ಪಂಚಾಚಾರವೆತ್ತ ಪಾತಕಕ್ಕೆ ಮನ ಬಗೆವುದೆತ್ತ.? ಇಂತೀ ಹೊರಬಳಿಕೆಯ ಲೋಕರಂಜನೆಯಲ್ಲಿಪ್ಪವರಿಗೆ ನಾನಂಜುವೆ. ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ ನೀನು ಅಂಜಿದೂರದಲ್ಲಿ ಓಡುವೆ.

ಮನುಷ್ಯನು ಪಾರಲೌಕಿಕ ಸುಖಶಾಂತಿಗಳನ್ನು ಹೊಂದಲು ಆತನು ಯಾವ ಧರ್ಮ ಮತ ಪಂಥವನ್ನನುಸರಿಸಿ ಪೂಜೆ ಕರ್ಮಂಗಳನ್ನು ಮಾಡಬೇಕಾದರೂ ಮೊದಲು ನೈತಿಕ ಬಲಶಾಲಿಯಾಗುವುದು ಅತ್ಯಾವಶ್ಯಕವಾಗಿದೆಯೆಂದೇ ಶಿವರಣರಣರು ಸಾರಿ ಸಾರಿ ಹೇಳಿದ್ದಾರೆಂಬುದು ಈ ವರೆಗಿನ ವಿವೇಚನೆಯಿಂದ ಸ್ಪಷ್ಟವಾಗುವುದಿಲ್ಲವೆ? ಇದೇ ಶಿವಶರಣರ ದಿವ್ಯ ಸಂದೇಶವು. ಈ ನೈತಿಕ ಬಲವು ಕೇವಲ ಪಾರಮಾರ್ಥಿಕ ಸುಖಶಾಂತಿಗಳಿಗೇನೇ ಬೇಕೆಂದಲ್ಲ. ಐಹಿಕ ಸುಖಶಾಂತಿಗಳಿಗೂ ಈ ನೈತಿಕ ಬಲವೇ ಮುಖ್ಯವಾಗಿದೆ.

ಭಗವಾನ್ ಬುದ್ಧ ದೇವರು ಧಾರ್ಮಿಕ ಕ್ರಾಂತಿಯನ್ನು ಮಾಡಿದಾಗ ಸತ್ಯ ಅಹಿಂಸಾದಿ ನೈತಿಕ ತತ್ವಗಳನ್ನೇ ಮುಖ್ಯವಾಗಿಟ್ಟುಕೊಂಡಿದ್ದರು. ಈಗ ಮಹಾತ್ಮಾ ಗಾಂಧಿಯವರು ರಾಜಕೀಯ ಕ್ರಾಂತಿಯನ್ನು ಮಾಡುತ್ತಿರುವಾಗಲೂ ಕೂಡ ಸತ್ಯ ಅಹಿಂಸಾದಿ ನೈತಿಕ ಆಚರಣೆಗಳನ್ನೇ ಮುಖ್ಯವಾಗಿಟ್ಟಿಲ್ಲವೇ? ಮಹಾನುಭಾವರಾದ ಬಸವಾದಿ ಶಿವಶರಣರು ಕೂಡಾ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಯನ್ನುಂಟು ಮಾಡಲು ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯಾದಿ ನೈತಿಕ ಮಹಾತತ್ವಗಳನ್ನೇ ಜನಾಂಗಕ್ಕೆ ಬೋಧಿಸಿ ಅವುಗಳಿಂದಲೇ ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನು ಪ್ರಸ್ತಾಪಿಸಿ ಸುಖಶಾಂತಿಗಳನ್ನುಂಟು ಮಾಡಿದರು.

ಶಿವಶರಣರ ಈ ದಿವ್ಯ ಸಂದೇಶದ ಸತ್ಯತೆಯು ಮಹಾತ್ಮಾಗಾಂಧಿಯವರು ಈಗಿನ ಪ್ರಯತ್ನದಿಂದ ಸಕಲರಿಗೂ ಸ್ಪಷ್ಟವಾಗುವಂತಿದೆ. ಯಾರು ನೈತಿಕ ಬಲಶಾಲಿಗಳೋ ಅವರೇ ಧರ್ಮಾತ್ಮರು. ಅವರೇ ಲೋಕಸೇವೆಗೆ ಅರ್ಹರು. ಅವರೇ ಲೋಕಪೂಜ್ಯರು. ಅವರನ್ನೇ ಪ್ರಪಂಚವು ಹಿಂಬಾಲಿಸುತ್ತದೆ. ಅವರ ವಾಣಿಯೇ ದೇವವಾಣಿಯು, ಆದುದರಿಂದ ನಮ್ಮ ಶರಣರು ಈ ಪ್ರಕಾರ ಹೇಳಿದ್ದಾರೆ.

ಶಮೆ, ದಮೆ, ವಿವೇಕ, ವೈರಾಗ್ಯ, ಪರಿಪೂರ್ಣ, ಭಾವ ಶಾಂತಿ, ಕಾರುಣ್ಯ ಶ್ರದ್ದೆ ಸತ್ಯ, ಸದ್ಭಕ್ತಿ ಶಿವಜ್ಞಾನ, ಶಿವಾನಂದ, ಉದಯವಾದ ಮಹಾಭಕ್ತನ ಹೃದಯದಲ್ಲಿ ಶಿವನಿಪ್ಪ. ಆತನ ದರ್ಶನ, ಸ್ಪರ್ಶನ, ಸಂಭಾಷಣೆಯಿಂದ ಕೇವಲ ಮುಕ್ತಿಯಪ್ಪುದು ತಪ್ಪದಯ್ಯ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ.

ಆದಕಾರಣ ನೈತಿಕ ತತ್ವಗಳನ್ನು ಆಚರಣೆಯಲ್ಲಿ ತಂದ ಮಹಾತ್ಮರು ಧರ್ಮಾಚಾರಗಳನ್ನು ಆಚರಿಸಿದಾಗಲೇ ಅವುಗಳ ದಿವ್ಯ ತೇಜವು ಪ್ರಕಟವಾಗುತ್ತದೆ. ಲಿಂಗಪೂಜೆ, ಜಪ, ತಪಾದಿಗಳ ಮಹತ್ವವು ಆಗಲೇ ವ್ಯಕ್ತವಾಗುತ್ತದೆ. ಈ ಪ್ರಕಾರ ನೈತಿಕ ಮತ್ತು ಧಾರ್ಮಿಕ ಬಲಗಳುಳ್ಳವರೇ ಜಗತ್ತಿನಲ್ಲಿ ಅವತಾರಿ ಪುರುಷರೆಂದು ಎಣಿಸಲ್ಪಡುತ್ತಿದ್ದಾರೆ. ಯಾವ ಮಹನೀಯರಲ್ಲಿ ಯಾವ ಪ್ರಮಾಣದಿಂದ ಉಭಯಶಕ್ತಿಗಳು ಇರುತ್ತವೆಯೋ ಆ ಪ್ರಮಾಣದಿಂದ ಅವರು ಲೋಕವಂದ್ಯರೂ ಲೋಕೋದ್ಧಾರಕರೂ ಆಗುತ್ತಾರೆ. ಲಿಂಗೈಕ್ಯರಾದ ಪರಮ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳವರು ಶಿವಶರಣರ ಸಂದೇಶದಂತೆ ನೈತಿಕ ಮತ್ತು ಧಾರ್ಮಿಕ ಬಲಗಳನ್ನು ಹೊಂದಿದ ಮಹಾವಿಭೂತಿಗಳಾಗಿದ್ದುದರಿಂದಲೇ ಸಮಾಜೋದ್ಧಾರದ ಅನೇಕ ಮಹತ್ಕಾರ್ಯಗಳು ಜರುಗಿ ಸಮಾಜಕ್ಕೆ ಆ ಮಹಾಪೂಜ್ಯಪಾದರು ಅತ್ಯಂತ ವಂದ್ಯರಾದರು ಶಿವಶರಣರ ಈ ದಿವ್ಯ ಸಂದೇಶವನ್ನು ತೇಜೋಮಯವಾದ ಈ ಸತ್ಯ ಸಂದೇಶವನ್ನು, ನಿರ್ದಾಕ್ಷಿಣ್ಯದ ಈ ಸ್ಪಷ್ಟ ಸಂದೇಶವನ್ನು, ಕೇಳಿ ಜಾಗೃತರಾಗಿ ತಮ್ಮಲ್ಲಿ ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬುದೇ ಇಂತಹ ಮಹಾವಿಭೂತಿಗಳ ಸ್ಮಾರಕದ ಉದ್ದೇಶವಾಗಿದೆ. ಈ ಉದ್ದೇಶವು ನೆರವೇರುವಂತೆ ನಮ್ಮಲ್ಲಿ ನೈತಿಕ ಬಲವು ಹೆಚ್ಚಿ ಆ ಮೂಲಕ ಸಮಾಜದಲ್ಲಿ ಸಮಾನತ್ವ ಮತ್ತು ಸ್ವಾತಂತ್ರ್ಯಗಳುಂಟಾಗಿ ಸುಖಶಾಂತಿಗಳು ನೆಲೆಸುವ ಸುಸಮಯವು ಜಾಗ್ರತೆ ಪ್ರಾಪ್ತವಾಗಲಿ.

ಸಮಾಪ್ತಿ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

ಅಣುಗ ಹಿಂದಣದಗ್ರ | ದಣುಚಕ್ರದೊಳು ಭಕ್ತಿ

ಮಣಿಹವಿಡಿದಿಪ್ಪ-ಅಣು ಮಹಾಲಿಂಗ ನೆಲೆ

ತೃಣು ಎಂದ ಗುರುವೆ ಕೃಪೆಯಾಗು   ||೧೪೮||

 

ನವಚಕ್ರಗಳನ್ನು ಮೀರಿನಿಂದುದು ದಶಮಚಕ್ರ. ಹತ್ತನೆಯ ಪದ್ಮವು ಬಹು ಸೂಕ್ಷ್ಮವಾಗಿರುವದರಿಂದಲೇ ಅದು ಅಣು ಚಕ್ರವೆನಿಸಿದೆ. ಇಂಥ ಅಣುಚಕ್ರವನ್ನು ಅರಿಯುವದು ಸಾಮಾನ್ಯಸಾಧಕನ ಶಕ್ತಿಯಲ್ಲ. ಅಂತೆಯೇ ಶಿಷ್ಯನಿಗೆ ಶ್ರೀಗುರು ಅಣುಗನೆಂದು ಸಂಬೋಧಿಸಿದ್ದು ಗಮನಾರ್ಹವಾಗಿದೆ.

 

ಶರೀರವಿಜ್ಞಾನಿಗಳು ತಲೆಬುರುಡೆಯಲ್ಲಿ ದೊಡ್ಡ ಮೆದುಳು ಸಣ್ಣ ಮೆದುಳು ಎಂದೆರಡುಭಾಗ ತೋರಿಸುವರು. ಆದರೆ ಅಧ್ಯಾತ್ಮಿಕ ವಿಜ್ಞಾನಿಗಳು ಬ್ರಹ್ಮರಂಧ್ರ, ಶಿಖಾಚಕ್ರ, ಪಶ್ಚಿಮಶಿಖಾಚಕ್ರ ಹಾಗೂ ಅಣುಚಕ್ರಗಳೆಂದು ನಾಲ್ಕು ಭಾಗ ಮಾಡಿರುವರು. ಈ ನಾಲ್ಕು ಜ್ಞಾನಗಮ್ಯವಾದವುಗಳೇ, ಪಶ್ಚಿಮ ಶಿಖಾಚಕ್ರದ ಕೆಳಭಾಗದಲ್ಲಿ ತೋರುವ ಈ ಮಹಾಲಿಂಗವು- ಅರ್ಣೋರಣೀಯಾನ್ ಮಹತೋ ಮಹೀಯಾನ್” ಎಂಬ ಶೃತಿಮಾತಿನಂತೆ ಅಣುವಿಗೆ ಅಣುವಾಗಿ ಮಹತ್ತಿಂಗೆ ಮಹತ್ತಾಗಿ ತೋರುವದು. ಇದು ಕೇವಲ ಭಕ್ತಿಯಿಂದ ಮಾತ್ರ ಲಭ್ಯವಾಗುವದು. ಭಕ್ತಿಪಥವೇ ಮುಖ್ಯಗುರಿಯಾಗಿ ನಡೆಯುವ ಮಹಾನುಭಾವಿಗಳು ಈ ಲಿಂಗದ ದರ್ಶನ ಪಡೆಯಬಲ್ಲರು ಎಂದು ಬೋಧಿಸಿದ ಗುರುವೆ ಕೃಪೆಯಾಗು. ನಿನ್ನ ಕೃಪೆಯಿದ್ದರೇನೆ ಈ ಅಣು ಮಹಾಲಿಂಗನ ದರ್ಶನ ಮಾಡಿಕೊಳ್ಳಬಹುದು.

 

ಇಂದಿನ ಯುಗದಲ್ಲಿ ಅಣು ವಿಜ್ಞಾನವನ್ನು ಕಂಡುಹಿಡಿದಿರುವರು. ಆದರೆ ಈ ವಿಜ್ಞಾನ ಕೇವಲ ಭೌತಿಕವಾಗಿದೆ. ಭೌತಿಕ ಪ್ರಗತಿ ಸೀಮಿತವಾದುದು. ಭೌತಿಕವಿಜ್ಞಾನವು ಮಾನವನನ್ನು ಆಲಸಿಯನ್ನಾಗಿಸಿದೆ. ಅಸಂತೃಪ್ತಿಯನ್ನೊಡ್ಡಿದೆ. ಜೀವನ ಸಮಸ್ಯೆಗಳು ಈ ವಿಜ್ಞಾನದಿಂದ ಪರಿಹಾರವಾಗುವದಿಲ್ಲ. ಆದರೆ ನಮ್ಮ ಪೂರ್ವಜರು ಮಹಾನುಭಾವಿಗಳಾಗಿ ಅಧ್ಯಾತ್ಮಶಕ್ತಿಯಿಂದ ಅಣುವಿಜ್ಞಾನವನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು. ತಮ್ಮ ಅತ್ಮೋದ್ಧಾರದ ಜೊತೆಗೆ ಜಗತ್ತಿನ ಕಲ್ಯಾಣಕ್ಕಾಗಿ ಬಳಸುತ್ತಿದ್ದರು. ರಾಮಾಯಣ ಮಹಾಕಾವ್ಯದಲ್ಲಿ ಹನುಮಂತನು ಅಣುವಾಗಿಯೂ, ಮಹತ್ತಾಗಿಯೂ ವರ್ತಿಸಿದ ಘಟನೆ ಸ್ಮರಣೀಯವಾಗಿದೆ. ಆತನು ಮಹಾ ಆತ್ಮಜ್ಞಾನಿಯಾಗಿದ್ದನು. ಅಂತೆಯೇ ತನ್ನ ಯೋಗಶಕ್ತಿಯಿಂದ ಸಮುದ್ರ ಲಂಘನ ಮಾಡಲು ಸಾಧ್ಯವಾಯಿತು.

 

ಅಧ್ಯಾತ್ಮವಿಜ್ಞಾನವನ್ನು ಸೂಕ್ಷ್ಮವಾಗಿ ತೋರಬಲ್ಲವರು ಇಂದು ಅತ್ಯಂತ ವಿರಳವೆಂದೇ ಹೇಳಬೇಕಾಗಿದೆ. ಮಹಾಜ್ಞಾನಿ ಚನ್ನಬಸವಣ್ಣನವರು ನಿರೂಪಿಸಿದ ಘಟ ಚಕ್ರ, ಕರಣಹಸಿಗೆ, ಮಂತ್ರಗೋಪ್ಯ ಮುಂತಾದ ಅನುಭಾವ ಸಾಹಿತ್ಯದಲ್ಲಿಯೂ ವ್ಯಕ್ತವಾಗದ ಶಿವಕವಿಯು ವ್ಯಕ್ತಗೊಳಿಸಿದ್ದು ಅಣುಚಕ್ರದ ವಿಷಯವನ್ನು    ಗಮನೀಯವಾಗಿದೆ. ಇದು ಅವರ ಪರಮಗುರು ಚನ್ನವೀರೇಶ್ವರರಲ್ಲಿದ್ದ ವ್ಯಕ್ತಿತ್ವದ ಪ್ರತೀಕವೆಂತಲೂ ಅವರ ಪ್ರತಿಭೆಯ ದ್ಯೋತಕವೆಂತಲೂ ಗ್ರಹಿಸಬಹುದು.

 

ಮತ್ತೆ ಮತ್ಕರದಿಷ್ಟ | ನಿತ್ಯ ನಿಜಲಿಂಗವನು

ಹತ್ತು ಚಕ್ರದೊಳು-ಗೊತ್ತು ತೋರಿಸಿಕೊಟ್ಟ

ಸತ್ಯ ಸದ್ಗುರುವೆ ಕೃಪೆಯಾಗು  ೧೪೯ ||

 

ಶಿವಕವಿಯು ಹತ್ತು ಚಕ್ರಗಳಲ್ಲಿ ಇಷ್ಟಲಿಂಗದ ವ್ಯಾಪ್ತಿಯನ್ನು ಪ್ರತಿಪಾದಿಸಿ ಇಲ್ಲಿ ಉಪಸಂಹಾರಗೊಳಿಸುತ್ತಾನೆ ಮತ್ತು ಗುರುಕೃಪೆಗೆ ಉಪಕೃತಿಯನ್ನು ಸೂಚಿಸುತ್ತಾನೆ. ಜಗತ್ತಿನಲ್ಲಿ ಮರೆಯದ ವಸ್ತು ಉಪಕಾರಸ್ಮರಣೆ ಉಪಕೃತಿಯನ್ನು ಮರೆಯುವವನು ಮಾನವನೇ ಆಗಲಾರನು. ಪಶು-ಪಕ್ಷಿಗಳಲ್ಲಿಯೂ ಸಹ ಉಪಕಾರಸ್ಮರಣೆ ವ್ಯಕ್ತವಾಗುತ್ತದೆ. ಆದರೆ ಮುಂದುವರೆದಿದ್ದೇವೆಂಬ ಇಂದಿನ ಮಾನವರಲ್ಲಿ ಉಪಕೃತಿ ಸ್ಮರಣೆ ಕಡಿಮೆಯಾಗಹತ್ತಿದೆ. ಕೃತಜ್ಞನಾಗುವ ಬದಲು ಕೃತಘ್ನನಾಗುವ ಭಾವ ಅವರಲ್ಲಿ ಬೆಳೆಯಹತ್ತಿದೆ. ಇಳೆ-ಬೆಳೆ-ಮಳೆಯನ್ನಿತ್ತ ಮಾನವ ಜನ್ಮವನ್ನಿತ, ಮಹಾದೇವನನ್ನು ಸ್ಮರಿಸಬೇಕು. ಇದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಕ್ರಿಶ್ಚಿಯನ್ನರಲ್ಲಿ ಈ ಬಗೆಯ ಉಪಕೃತಿ ಸ್ಮರಣೆಗೆ ಪ್ರಾಧಾನ್ಯತೆಯಿದೆ. ಅವರು ಪ್ರತಿನಿತ್ಯವೂ ತಾವುಣ್ಣುವಾಗ ಆ ಭಗವಂತನನ್ನು ಪ್ರಾರ್ಥಿಸಿಯೇ ತೀರುತ್ತಾರೆ. ಇದು ಒಳ್ಳೆಯ ಸಂಸ್ಕಾರವು. ಆದ್ದರಿಂದ ಇಂಥ ಉಪಕಾರ ಸ್ಮರಣೆಯು ಬೆಳೆದು ಬರಲೆಂದೇ ಮಕ್ಕಳಿಗೆ ಒಳ್ಳೆ ಸಂಸ್ಕೃತಿಯನ್ನು ಕಲಿಸಿಕೊಡಬೇಕು. ತನಗೆ ಏನಾದರೂ ಸಹಾಯಮಾಡಿದ ವ್ಯಕ್ತಿಗೆ ಧನ್ಯವಾದವನ್ನು ತೋರುವ ಸುಜ್ಞಾನವನ್ನು ಕರುಣಿಸಿದ ಗುರುವನ್ನು ಎಂದೂ ಮರೆಯಬಾರದು.

 

ಗುರುವೆ ! ನೀನು ನಿತ್ಯನೂ ಸತ್ಯನೂ ಆದ ಶಿವನಲ್ಲವೆ ! ಎನ್ನ ಮೇಲೆ ಕೃಪೆಮಾಡಿ ಸಂಸಾರ ಬಂಧನದಿಂದ ಮುಕ್ತನನ್ನಾಗಿಸಿದೆ. ಇಷ್ಟಲಿಂಗವನ್ನು ಕರುಣಿಸಿದೆ. ಲಿಂಗ ಸ್ವರೂಪವನ್ನೂ, ಮಹತ್ವವನ್ನು ತಿಳಿಸಿದೆ. ಲಿಂಗಧಾರಣೆಯ ಘನತೆಯನ್ನು ಬೀರಿದೆ. ಬಾಹ್ಯಧಾರಣೆಯಂತೆ ಆಂತರಿಕ ದಶಕಚಕ್ರಗಳಲ್ಲಿ ಲಿಂಗದ ಗೊತ್ತು ಗುರಿಯನ್ನು ತೋರಿಸಿಕೊಟ್ಟೆ. ಈ ಲಿಂಗವು ನಿತ್ಯವೂ ಸತ್ಯವೂ ಆದುದು. ಎನ್ನ ವಾಮಕರದಲ್ಲಿ ಕಾಣಿಸಿಕೊಂಡು ಎನ್ನ ಅಂಗಾಂಗಗಳೆಲ್ಲವನ್ನು ಲಿಂಗವನ್ನಾಗಿಸುವ ಮಹಾ  ಶಕ್ತಿಯುಳ್ಳುದು. ಇದೆಲ್ಲವೂ ನನಗೆ ಪ್ರಾಪ್ತವಾದುದು ನಿನ್ನ ಕೃಪೆಯಿಂದಲ್ಲದೆ ಬೇರೇನಿದೆ !

 

ಮಾತೃಋಣ, ಪಿತೃಋಣ, ಗುರುಋಣ ಈ ತ್ರಿವಿಧ ಋಣಗಳಲ್ಲಿ ಗುರು ಋಣವೇ ದೊಡ್ಡದು. ಗುರುಋಣವನ್ನು ತೀರಿಸಲು ಶಿಷ್ಯನು ಅತ್ಯಂತ ಪ್ರಯತ್ನ ಶೀಲನಾಗಬೇಕಾಗುವದು. ಗುರೂಪದೇಶವನ್ನು ಚೆನ್ನಾಗಿ ಅರಿತು ಆಚರಿಸಿ ಅನುಭವಿಯಾಗುವದರಿಂದಲೇ ಗುರುಋಣದಭಾರ ಕಡಿಮೆಯಾಗಬಲ್ಲುದು.

ಜ.ಚ.ನಿ

 

ಕುಮಾರ ಯೋಗಿಗಳು ಕನ್ನಡ ನಾಡಿನ ಬಹುಭಾಗವನ್ನು ಸುತ್ತಿಸುಳಿದರು. ಹೋದಹೋದಲ್ಲಿ ಸಭೆಗಳನ್ನು ಸೇರಿಸುತ್ತಿದ್ದರು. ಪ್ರತಿದಿನ ಸಾಯಂಕಾಲ ತಪ್ಪದೆ

ಹಿತಬೋಧೆಯನ್ನು ಮಾಡುತ್ತಿದ್ದರು. ತಾಪತ್ರಯದಿಂದ ತೊಳಲಿ ಬಂದ ಅನೇಕರು ಅವರ ಬೋಧೆಯ ಪರಿಣಾಮದಿಂದ ತಿಳಿಮನಸ್ಸಿನವರಾಗಿ ಹಿಂದಿರುಗುತ್ತಿದ್ದರು. ಅತಿಯಾಶೆಯ ಪಿಶಾಚಿ ಹೊಡೆದವರು ಅದರಿಂದ ಮುಕ್ತರಾಗುತ್ತಿದ್ದರು. ವಿಷಯಾಸಕ್ತರು ವಿಹ್ವಲರಹಿತವಾಗಿ ಹೋಗುತ್ತಿದ್ದರು. ಕೃಪಣರು ಉದಾರಿಗಳಾಗಿ ಮಾರ್ಪಡುತ್ತಿದ್ದರು. ಅನೇಕ ನೀತಿ ಮಾರ್ಗಗಳನ್ನು ಬೋಧಿಸಿ ನಿದ್ರಿತ ಜನಾಂಗವನ್ನು ನಿಜಜೀವನದತ್ತ ಸಾಗುವಂತೆ ಮಾಡಿದರು. ಮದಾಂಧರ ಮದವನ್ನು ತಗ್ಗಿಸಿದರು. ಮತ್ಸರವುಳ್ಳವರಲ್ಲಿ ಮೈತ್ರಿ ಭಾವ ಮೂಡಿಸಿದರು. ರೋಷಾವೇಶವುಳ್ಳವರನ್ನು ಶಾಂತರನ್ನಾಗಿ ಸಮಾಧಾನಿಗಳನ್ನಾಗಿ

ಕುದುರಿಸಿದರು.

 

ಇದರ ಫಲವಾಗಿ ಜನಾಂಗದ ಮನಸ್ಸು ಕುಮಾರ ಯೋಗಿಗಳ ಕಡೆಗೆ ಹೊರಳಿತು. ಧನಿಕರು ದರಿದ್ರರು ಶಿಷ್ಯರಾದರು. ಮಾಸ್ತರರು, ಶಾಸ್ತ್ರಿಗಳು, ಭಕ್ತಿಯಿಟ್ಟರು. ರಾಜಾಧಿಕಾರಿಗಳು, ರೈತರು ಅತ್ಯಂತ ಅನುರಾಗಿಗಳಾದರು. ಆಜ್ಞೆಯನ್ನು ಮೀರದವರಾದರು.

 

ಕುಮಾರ ಯೋಗಿಗಳ ಬೋಧೆ, ಕಾರ್ಯತತ್ಪರತೆ, ಸಾಮಾಜಿಕ ಕಳಕಳಿ, ಸಾಹಿತ್ಯ, ಸಂಸ್ಕೃತಿ ಪ್ರೇಮ ಎಲ್ಲರನ್ನು ಆಕರ್ಷಿಸಿತು. ಅನೇಕ ಬ್ರಾಹ್ಮಣರು ಸಹ ಸ್ವಾಮಿಗಳವರ ಕಾರ್ಯಕ್ಷೇತ್ರದಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದರು. ಹೀಗೆ ಸ್ವಾಮಿಗಳವರ ಶಿಷ್ಯವೃಂದವು ಅಪಾರವಾಗಿ ಬೆಳೆಯಿತು.

 

ಇದರಿಂದಾಗಿ ಅವರ ನಾಡ ಸಂಚಾರ-ಧರ್ಮ ಪ್ರಚಾರ ಯಾವ ತಡೆಯಿಲ್ಲದೆ ಭರದಿಂದ ಸಾಗಿತು. ಜನರಲ್ಲಿ ಜಾಗ್ರತಿ ವಿದ್ಯುದ್ವೇಗದಿಂದ ಹರಿಯಿತು; ಹರಡಿತು. ಮೂಢತನ ಮೂಲೆಗೆ ಬಿದ್ದಿತು. ತಮ್ಮ ಜೀವನದ ಗುರಿಯನ್ನು ಸಮಾಜದ ಹೊಣೆಯನ್ನು ಬಹುಜನರು ತಿಳಿದುಕೊಂಡರು; ತೀರಿಸಿದರು. ಸಾಹಿತ್ಯಕ್ಕೆ ಸಂಸ್ಕೃತಿಗೆ ವಿದ್ಯೆಗೆ ವಿಶೇಷ ಸಹಾಯ ನೀಡಿದರು. ಸ್ವಾಮಿಗಳವರ ನಾಡ ಸಂಚಾರದಿಂದ ಧಾರ್ಮಿಕ ಪ್ರಚಾರವು ಸಾಕಷ್ಟು ಜರುಗಿತು. ಮುಚ್ಚಿಹೋಗಿದ್ದ ಧರ್ಮದ ಕಣ್ಣು ಮರಳಿ ತೆರೆಯಿತು.

ಲೇಖಕರು :- ಶ್ರೀ ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ

ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಹಾನಗಲ್ಲ ವಿರಕ್ತಮಠ ಕರ್ನಾಟಕದಲ್ಲಿಯ ಪ್ರಸಿದ್ದಿಯನ್ನು ಪಡೆದ ಧರ್ಮಪೀಠ, ಅದರ ಪರಂಪರೆ ಘನವಾದುದು. ಹಿಂದಿನ ಮಹಾಸ್ವಾಮಿಗಳವರೆಲ್ಲರು ಪರಮ ತಪಸ್ವಿಗಳು, ಪಂಡಿತರು, ಕಾವ್ಯ ಪರಿಣತರ ಆಗಿದ್ದರು. ಸುಮಾರು ಒಂದು ನೂರ ಹದಿನೈದು ವರ್ಷಗಳ ಕುಮಾರಾರ್ಯರೆಂಬವರು ಈ ಪೀಠವನ್ನಲಂಕರಿಸಿದ್ದರು. ಅವರು ತಪೋನಿಷ್ಠರಾಗಿದ್ದಂತೆ ಪ್ರತಿಭಾವಂತ ಕವಿಗಳೂ ಆಗಿದ್ದರು. ಅವರು ‘ಕುಮಾರೇಶ್ವರ ಪುರಾಣ’ವೆಂಬ ಕಾವ್ಯವನ್ನು ವಾರ್ಧಿಕಷಟ್ಪದಿಯಲ್ಲಿ ಬರೆದಿದ್ದಾರೆ. ಅದು ರಸಾತ್ಮಕವಾದ ಪ್ರೌಢ ಕಾವ್ಯವಾಗಿದೆ. ‘ಭಿಕ್ಷಾಟನ ಲೀಲೆ’ ಯನ್ನು ಕುರಿತು ಬರೆದ ಅವರ ಇನ್ನೊಂದು ಕಿರುಗಾವ್ಯ ದೊರೆತಿಲ್ಲ.

ಇವರ ತರುವಾಯದ ಪರಂಪರೆಯಲ್ಲಿ ಶ್ರೀ ಫಕೀರ ಮಹಾಸ್ವಾಮಿಗಳು ಶಿವಪೂಜಾನಿಷ್ಠರು, ಶಿವಾನುಭವಿಗಳು. ಇಂತಹ ಉಜ್ವಲ ಪರಂಪರೆಯುಳ್ಳ ಮಹಾಪೀಠವನ್ನು ಅಲಂಕರಿಸಿದರೂ, ಮೇಣೆ ಪಲ್ಲಕ್ಕಿಗಳಲ್ಲಿ ಕುಳಿತು ಮೆರೆದಾಡುವ ಆ ಮಠದ ವೈಭವವು ಶ್ರೀಗಳವರನ್ನು ಸ್ವಾಗತಿಸಿ ಬಂದರೂ ಅದಕ್ಕವರು ಮಾರುವೋಗಲಿಲ್ಲ. ಈ ವೀರ ವಿರಾಗಿಗಳ ವೈರಾಗ್ಯದ ರನ್ನದೀವಿಗೆಯು ವೈಭವಾಡಂಬರಗಳ ಬಿರುಗಾಳಿಗೆ ಹೊಯ್ದಾಡದೆ ಅಚಲವಾಗಿತ್ತು. ಶ್ರೀಗಳವರು ತಮ್ಮ ಪೀಠದ ಘನವಾದ ಪರಂಪರೆಯನ್ನು ಉಳಿಸಿಕೊಂಡು ಬಂದುದಲ್ಲದೆ ಅದು ಮತ್ತಿಷ್ಟು ಉಜ್ಜಲವಾಗಿ ಬೆಳಗುವಂತೆ ಕಾರ್ಯವೆಸಗಿದರು. ಶ್ರೀಗಳವರು ಮಾಡಿದ ತ್ಯಾಗಮಯ ಕೃತಿಗಳಿಂದಾಗಿ ಹಾನಗಲ್ಲ ವಿರಕ್ತಮಠದ ಹೆಸರು ಅಜರಾಮರವಾಗಿ ಉಳಿಯುವಂತಾಯಿತು.

೧. ಸಮಾಜ ಸುಧಾರಣೆಯಾಗಬೇಕಾದರೆ ಸಮಾಜದ ಭಕ್ತೋದ್ಧಾರ ಕಾರ್ಯವಾಗಬೇಕಾದರೆ ಮಠಾಧಿಕಾರಿಗಳ ಸುಧಾರಣೆಯಾಗುವದು ಅತ್ಯಗತ್ಯವೆಂದು ವಿಚಾರಿಸಿ ಸಮಾಜದ ಮುಖ್ಯ ಗುರು- ವಿರಕ್ತ ಪೀಠಗಳಿಗೆ ವಿದ್ಯಾವಂತರಾದವರನ್ನೇ ಚುನಾಯಿಸಿ ಕಳಿಸಿದರು. ಹುಬ್ಬಳ್ಳಿಯ ಜಗದ್ಗುರು ಪೀಠಕ್ಕೆ ಲಿಂಗೈಕ್ಯ ಶ್ರೀ ಗಂಗಾಧರ ಮಹಾ ಸ್ವಾಮಿಗಳನ್ನು, ನಂತರ ಲಿಂ. ಶ್ರೀ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಮತ್ತು ಚಿತ್ರದುರ್ಗದ ಜಗದ್ಗುರು ಪೀಠಕ್ಕೆ ಲಿಂ. ಶ್ರೀ ಜಯದೇವ ಮಹಾಸ್ವಾಮಿಗಳವರನ್ನು ಚುನಾಯಿಸಿದವರು ಶ್ರೀಗಳವರೆ, ಈ ಮೂವರು ಜಗದ್ಗುರುಗಳವರಿಂದ ಸಮಾಜಕ್ಕೆ ಅನೇಕ ಮುಖವಾಗಿ ಸಹಾಯ ಸಂದಿದೆ.

೨. ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಶ್ರೀಗಳವರು ಈ ಐದು ಮಹತ್ವದ ಉದ್ದೇಶಗಳ ಪೂರ್ತಿಗಾಗಿ ಸಂಸ್ಥಾಪಿಸಿದರು :

(ಕ) ವೀರಶೈವರಲ್ಲಿ ಸಾರ್ವತ್ರಿಕ ಸಂಘಟನೆಯಾಗಿ, ಅದರ ಮುಖಾಂತರ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಔದ್ಯೋಗಿಕ ಪ್ರಗತಿಯಾಗಬೇಕು ;

(ಚ) ಗುರು ಮತ್ತು ವಿರಕ್ತ ಪೀಠಗಳಲ್ಲಿ ಐಕ್ಯತೆಯುಂಟಾಗಬೇಕು. ಮಹಾಸಭೆಯ ಕಾರ್ಯಕಲಾಪಗಳೆಲ್ಲ ಅವರಿಬ್ಬರ ಪರಸ್ಪರ ಸಹಕಾರದಿಂದ ನಡೆಯಬೇಕು;

(ಟ) ಪೀಠಾಧಿಪತಿಗಳು ಜಾಗ್ರತರಾಗಿ ಸಮಾಜದ ಪ್ರಗತಿಯ ಕಾರ್ಯದಲ್ಲಿ ವಿಧಾಯಕವಾಗಿ ಭಾಗವಹಿಸಬೇಕು; ಭಕ್ತರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ;

(ತ) ದೊಡ್ಡ ದೊಡ್ಡ ನಗರಗಳಲ್ಲಿ ಮಹಾಸಭೆಯ ಅಧಿವೇಶನಗಳು ನೆರೆದು ಜನತೆಯಲ್ಲಿ ಒಕ್ಕಟ್ಟು ಕಾರ್ಯೋತ್ಸಾಹ ಮೂಡಿ ಬರುವಂತಾಗಬೇಕು ; ಧಾರವಾಡ, ಬೆಂಗಳೂರು, ಸೊಲ್ಲಾಪುರ, ಬಾಗಲಕೋಟೆ, ಬಳ್ಳಾರಿ, ಬೆಳಗಾಂವಿ, ನಿಪ್ಪಾಣಿ ಈ ಏಳು ನಗರಗಳಲ್ಲಿ ನಡೆದ ಮಹಾಸಭೆಯ ಅಧಿವೇಶನಗಳಿಗೆ ಬೇಕಾಗುವ ಧನಸಂಚಯವು ಹಾನಗಲ್ಲ ಶ್ರೀಗಳವರಿಂದಲೇ ಆಯಿತು. ನಾಡಿನ ಮೂಲೆ ಮೂಲೆಯಲ್ಲಿಯೂ ಈ ಅಧಿವೇಶನಗಳು ನಡೆದು ಜನರಲ್ಲಿ ನವಚೈತನ್ಯ ಬರುವಂತಾಗಬೇಕೆಂದು ಶ್ರೀಗಳವರು ಬಯಸಿದ್ದರು. ಹರಿದು ಹಂಚಿ ಹೋದ ನಾಡಲ್ಲಿ ಐಕ್ಯತೆ ಬರುವಂತೆ ಯೋಜನೆ ಮಾಡಿದ್ದರು. ಮೊದಲಿನ ಈ ಅಧಿವೇಶನಗಳೆಲ್ಲ ಶ್ರೀಗಳವರ ಕೃಪೆಯಿಂದಲೇ ಯಶಸ್ವಿಯಾಗಿ ನೆರವೇರಿದವು.

(ಪ) ‘ಅಖಿಲ ಭಾರತೀಯ ವೀರಶೈವ ವಿದ್ಯಾವರ್ಧಕ ನಿಧಿ’ಯನ್ನು ಶೇಖರಿಸಲು ಶ್ರೀಗಳವರೇ ಪ್ರೇರಣೆಯನ್ನಿತ್ತರು ; ಧಾರವಾಡದ ಮೊದಲನೆಯ ಅಧಿವೇಶನದ ಕಾಲಕ್ಕೆ ಅದಕ್ಕಾಗಿ ನಿಧಿಯನ್ನು ಸಂಗ್ರಹಿಸಿ ಅದನ್ನು ಧಾರವಾಡದ ‘ಲಿಂಗಾಯತ ಎಜ್ಯುಕೇಶನ್ ಫಂಡ’ ಸಂಸ್ಥೆಯಲ್ಲಿ ಜಮೆ ಮಾಡಿಸಿದರು.

೩ ವೀರಶೈವ ಮಹಾಸಭೆಯಲ್ಲಿ ಕೇವಲ ಧಾರ್ಮಿಕ ವಿಚಾರಗಳಿಗೆ ಅವಕಾಶವಿಲ್ಲದಿರುವಾಗ ಶ್ರೀಗಳವರು ‘ಧರ್ಮೋತ್ತೇಜಕ ಸಭೆ’ಯನ್ನು ಸ್ಥಾಪಿಸಿ ಅದರ ಮುಖಾಂತರ ವೀರಶೈವ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯವನ್ನು ಕೈಕೊಂಡರು. ಧಾರವಾಡದಿಂದ ‘ಧರ್ಮತರಂಗಿಣಿ’ ಮಾಸಪತ್ರಿಕೆಯು ಈ ಸಭೆಯ ಮುಖಾಂತರವಾಗಿ ಶ್ರೀಗಳವರ ಕೃಪೆಯಿಂದಲೇ ಪ್ರಕಟವಾಯಿತು. ಈ ಪತ್ರಿಕೆಯ ಸಂಚಿಕೆಗಳಲ್ಲಿ ಶಿವಯೋಗ ಮಂದಿರದ ಚಟುವಟಿಕೆಗಳ ಸವಿಸ್ತಾರ ಇತಿಹಾಸವನ್ನು ಕಾಣಬಹುದಾಗಿದೆ. ಅಲ್ಲದೆ, ಕೆಲವು ದೈನಿಕ ಮತ್ತು ವಾರಪತ್ರಿಕೆಗಳಿಗೂ ಶ್ರೀಗಳವರು ಆರ್ಥಿಕವಾಗಿ ಉತ್ತೇಜನವಿತ್ತರು. ನಾಡಿನಲ್ಲಿ ಮೂಲೆ ಮೂಲೆಯಲ್ಲಿಯ ಹಳ್ಳಿಗಳಿಗೂ ಬರಹಗಳ ಮೂಲಕ ಧಾರ್ಮಿಕ ವಿಚಾರಗಳು ಹೋಗಿ ಮುಟ್ಟಿ, ಜನಸಾಮಾನ್ಯರಲ್ಲಿಯೂ ವಿಚಾರ ಕ್ರಾಂತಿಯಾಗಬೇಕು, ಧರ್ಮಬುದ್ಧಿ ಜಾಗ್ರತವಾಗಬೇಕು ಎಂಬ ಮಹೋದ್ದೇಶ ಶ್ರೀಗಳವರದಾಗಿತ್ತು.

೪. ಕನ್ನಡ-ಸಂಸ್ಕೃತ ಭಾಷೆಗಳಲ್ಲಿರುವ ಪ್ರಾಚೀನ ವೀರಶೈವ ವಾಙ್ಮಯವನ್ನು ಶೋಧಿಸಿ ಪ್ರಕಟಿಸುವದಕ್ಕಾಗಿ ಮೊಟ್ಟ ಮೊದಲು ಓಲೆಗರಿ ಗ್ರಂಥಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದವರು ಶ್ರೀಗಳವರೆ ಈ ಸಂಶೋಧನೆಯ ಮಹಾ ಕಾರ್ಯಕ್ಕೆ ಒಂದು ವಿದ್ವನ್ಮಂಡಲಿಯನ್ನು ನಿಯಮಿಸಿ ತನ್ಮೂಲಕ ಅನೇಕ ಮಹತ್ವದ ಪರಿಷ್ಕೃತ ಗ್ರಂಥಗಳು ಪ್ರಕಟವಾಗಿ ಜಿಜ್ಞಾಸುಗಳ ಕೈಗೆ ಸುಲಭವಾಗಿ ದೊರೆಯುವಂತೆ ಮಾಡಿದರು.

೫. ಆಯುರ್ವೇದದ ಔಷಧೋಪಚಾರಗಳಿಂದಲೆ ರೋಗ ನಿವಾರಣೆಯನ್ನು ಮಾಡುವ ಧೈಯವನ್ನು ಇಟ್ಟುಕೊಂಡು ತಜ್ಞ ವೈದ್ಯರ ಸಮ್ಮೇಲನವನ್ನು ಕರೆದು ಅವರಿಗೆ ತಕ್ಕ ಅನುಕೂಲತೆಗಳನ್ನು ಶ್ರೀಗಳು ಮಾಡಿ ಕೊಟ್ಟರು. ಎಷ್ಟೋ ವನಸ್ಪತಿಗಳಿಂದ ವಿವಿಧ ರೋಗಗಳ ನಿವಾರಣೆಗೆ ಸ್ವತಂತ್ರ ಸುಲಭವಾದ ಮತ್ತು ಉತ್ಕೃಷ್ಟವಾದ ಔಷಧಗಳನ್ನು ಮಾಡಿಸುತ್ತಿದ್ದರು. ಎಷ್ಟೋ ಹೊಸ ಅಮೂಲ್ಯ ಔಷಧಗಳನ್ನು ಸಂಶೋಧಿಸಿ ತಯಾರಿಸಿ ಜನರ ಅಸಾಧ್ಯ ರೋಗಗಳನ್ನು ಕಳೆದರು. ಶಿವಯೋಗಮಂದಿರದಲ್ಲಿ ಒಂದು ವೈದ್ಯಾಲಯವನ್ನು ತೆಗೆದು ಅಲ್ಲಿ ಚಾಣಾಕ್ಷ ಸಾಧಕರಿಗೆ ವೈದ್ಯಕೀಯ ಶಿಕ್ಷಣವನ್ನು ಕೊಡುತ್ತಿದ್ದರು, ಕೊಡಿಸುತ್ತಿದ್ದರು.

೬ ಕೈ. ವಾ. ‘ತ್ಯಾಗರಾಜ’ ಶಿರಸಂಗಿ ಲಿಂಗರಾಜರು ಶ್ರೀಗಳವರ ಪ್ರೇರಣೆಯಿಂದ ತಮ್ಮ ಇಡಿ ಸಂಸ್ಥಾನವನ್ನೇ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸಕ್ಕೆಂದು ದಾನವಾಗಿ ಬರೆದುಕೊಟ್ಟರು. ಅದರ ಬಗ್ಗೆ ನಡೆದ ಸುಪ್ರೀಮ್‌ ಕೋರ್ಟಿನ ವ್ಯಾಜ್ಯದಲ್ಲಿ ಶ್ರೀಗಳವರೆ ಆರ್ಥಿಕ ನೆರವು ನೀಡಿದರು ; ಕೊನೆಯವರೆಗೂ ಹೋರಾಡಿ ಅದರಲ್ಲಿ ವಿಜಯ ಗಳಿಸಿದರು. ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಪಾರವಾದ ಸಂಪತ್ತಿಯನ್ನು ಉಳಿಸಿ ಕೊಟ್ಟರು.

ಶ್ರೀಗಳವರು ಸಮಾಜ ಪುರುಷನ ಸರ್ವತೋಮುಖ ಉನ್ನತಿಗೆ ತಮ್ಮ ಜೀವಿತವನ್ನೇ ಮುಡುಪಾಗಿಟ್ಟ ಮಹಾತ್ಯಾಗಿಗಳು ; ಮೇಲಾದ ಹಠಯೋಗಿಗಳಾಗಿ, ಆದರ್ಶ ಕರ್ಮಯೋಗಿಗಳಾಗಿ, ಮಹಾ ಶಿವಯೋಗಿಗಳಾಗಿ ರಾರಾಜಿಸಿದರು. ಸಮಾಜ ಭೂಮಿಯಲ್ಲಿ ಅವರು ಬಿತ್ತಿದ ಜಾಗೃತಿ ಬೀಜವ ಹೆಮ್ಮರವಾಗಿ ನಾಡಿಗೆ ಸಿಹಿಹಣ್ಣುಗಳನ್ನು ಕೊಡಲೆಂದು ಅವರಡಿಗೆ ಮಣಿಯೋಣ ; ಅವರು ತೋರಿಸಿದೆ. ದಾರಿಯಲ್ಲಿ ನಡೆಯೋಣ. ಸರ್ವರೂ ಸುಖಶಾಂತಿಗಳನ್ನು ಪಡೆಯೋಣ.

 

ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಭಾರತೀಯ ತತ್ವಶಾಸ್ತ್ರದಲ್ಲಿ ಪರಮಾತ್ಮನ ಸ್ವರೂಪವನ್ನು ಕುರಿತು ವ್ಯಾಪಕವಾಗಿ ಚಿಂತನೆ ನಡೆಸಲಾಗಿದೆ. ಸತ್ ಚಿತ್ ಆನಂದ ಸ್ವರೂಪನೂ, ನಿತ್ಯಪರಿಪೂರ್ಣನೂ ಆಗಿರುವ ಪರಮಾತ್ಮ ಸಗುಣನೋ, ನಿರ್ಗುಣನೋ, ಸಾಕಾರನೋ, ನಿರಾಕಾರನೋ ಎಂಬ ಜಿಜ್ಞಾಸೆ ನಮ್ಮನ್ನು ಸದಾ ಕಾಡುತ್ತದೆ. ಜಗತ್ತಿನ ಅನೇಕ ಶ್ರೇಷ್ಠತತ್ವಜ್ಞಾನಿಗಳು, ಅನುಭಾವಿಗಳು ಮರಮಾತ್ಮನ ಸ್ವರೂಪವನ್ನು ಕುರಿತು ಹೇಳುವಾಗ ಕೆಲವರು ಪರಮಾತ್ಮನು ನಿರಾಹಾರ, ನಿರ್ಗುಣನೆಂದೂ ಇನ್ನು ಕೆಲವರು ಪರಮಾತ್ಮನು ಸಗುಣ, ಸಾಕಾರನೆಂದು ಹೇಳುವ ಮೂಲಕ ನಮ್ಮ ಜಿಜ್ಞಾಸೆಯನ್ನು ಇನ್ನೂ ಹೆಚ್ಚಿಸುತ್ತಾರೆ.

 

ಸತ್ ಚಿತ್ ಆನಂದ ಸ್ವರೂಪನಾದ ಪರಮಾತ್ಮನಿಗೆ ಯಾವುದೇ ಆಕಾರವಿಲ್ಲವಾದ್ದರಿಂದ ಅವನು ನಿರಾಕಾರ, ಯಾವುದೇ ಗುಣಗಳು ಇಲ್ಲದುದರಿಂದ ಅವನು ನಿರ್ಗುಣ ಕಣ್ಣಿಗೆ ಕಾಣಲಾರ, ಮನಸ್ಸಿಗೆ ನಿಲುಕಲಾರ. ಆದ್ದರಿಂದ ಅವನು ಆಗೋಚರ, ಅವ್ಯಕ್ತ, ಹೀಗೆ ಅವ್ಯಕ್ತನಾಗಿರುವ ಪರಮಾತ್ಮನು ವಿಶ್ವವನ್ನು ವ್ಯಾಪಿಸಿಕೊಂಡಿದ್ದರೂ ವಿಶ್ವಾತೀತನಾಗಿದ್ದಾನೆ. ವಿಶ್ವವನ್ನು ಸೃಷ್ಟಿಸುವ, ರಕ್ಷಿಸುವ ಮತ್ತು ಸಂಹರಿಸುವ ಶಕ್ತಿ ಪರಮಾತ್ಮನಿಗಿದೆ.

 

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ।

ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ

 

ಎಂಬ ಗೀತೋಕ್ತಿಯಂತೆ ಜನರನ್ನು ಅವರವರ ಕರ್ಮಾನುಸಾರ ಶಿಕ್ಷಿಸುವ ಮತ್ತು ರಕ್ಷಿಸುವ ಶಕ್ತಿಯೂ ಪರಮಾತ್ಮನಿಗಿದೆ. ಹೀಗೆ ಅವನಲ್ಲಿ ಶಕ್ತಿ ಎಂಬ ವಿಶೇಷ ಗುಣವಿರುವುದರಿಂದ ಅವನು ಸಗುಣ ಎಂದು ಹೇಳಲಾಗಿದೆ.

 

‘ಲೀಲೆಯಾದೊಡೆ ಉಮಾಪತಿ, ಲೀಲೆ ನಿಂದೊಡೆ ಸ್ವಯಂಭು’ ಎಂಬುದು ಅನುಭಾವಿ ಅಲ್ಲಮನ ಸ್ಪಷ್ಟ ಅಭಿಪ್ರಾಯ. ನಮ್ಮ ಕಣ್ಣಿಗೆ ಕಾಣುವ ವಿಶ್ವವು ಪರಮಾತ್ಮನಲ್ಲಿ ಮೊದಲು ಅವ್ಯಕ್ತವಾಗಿ ಇತ್ತು. ಅವನ ಸಂಕಲ್ಪ ಹಾಗು ಇಚ್ಛೆಯ ಕಾರಣದಿಂದಾಗಿ ಚರಾಚರ ಪ್ರಪಂಚವು ನಮಗೆ ಕಾಣುತ್ತಿದೆ. ವಿಶ್ವದ ಈ ಅಭಿವ್ಯಕ್ತಿಯೇ ಪರಮಾತ್ಮನ ಲೀಲೆಯಾಗಿರುವುದರಿಂದ ಅವನು ‘ಉಮಾಪತಿ’ ವ್ಯಕ್ತವಾದ ಸಮಸ್ತವೂ ಅವನಲ್ಲಿ ಅಡಗಿಹೋದಾಗ ಲೀಲೆ ನಿಂತು ಅವನು ‘ಸ್ವಯಂಭು’ ಎನಿಸುತ್ತಾನೆ. ಹೀಗೆ ವಿಶ್ವವೆಲ್ಲ ಪರಮಾತ್ಮನ ಲೀಲೆಗೆ ಒಳಗಾಗಿದ್ದರೂ ಅವನು ಮಾತ್ರ ನಿರಾಳ, ವಿಶ್ವದ ಎಲ್ಲ ಇತಿ ಮಿತಿಗಳಿಂದ ಆಕಾರಗಳಿಂದ, ಜೀವಿಗಳ ಹುಟ್ಟು-ಸಾವು, ಸುಖ-ದುಃಖಾದಿಗಳಿಂದ ಅವನು ನಿರ್ಮುಕ್ತ, ಅಪರಿಣಾಮಿಯಾದ ಚೈತನ್ಯ ‘ಪದ್ಮಪತ್ರ ಜಲದಂತೆ ಹೊದ್ದಿಯೂ ಹೊದ್ದದಂತಿಹನು’ ಎಂದು ಅನುಭಾವಿಯೊಬ್ಬರು ಉದ್ಗರಿಸುತ್ತಾರೆ. ನೀರ

ತಾವರೆಯಂತಿರುವ ಪರಮಾತ್ಮನು ಶೂನ್ಯಸ್ಥಿತಿಯಲ್ಲಿರುವಾಗ ನಿರಾಕಾರ, ನಿರ್ಗುಣ; ಶೂನ್ಯಸ್ಥಿತಿಯನ್ನು ತೊರೆದು ತಾನೇ ಜಗತ್ತಾಗಿ ಪರಿಣಮಿಸಿದಾಗ ಸಾಕಾರ, ಸಗುಣ. ಆದರೆ ಜಗತ್ತೆ ಅವನ ನಿತ್ಯ ಆಕಾರವಲ್ಲ. ಹೀಗೆ ಪರಮಾತ್ಮನು ಜಗವಾಗಲೂ ಬಲ್ಲ ಜಗವಾಗದಿರಲೂ ಬಲ್ಲ. ಆದ್ದರಿಂದಲೇ ಬಸವಣ್ಣನವರು- ‘ಸಾಕಾರ ನಿರಾಕಾರ ಏಕೋದೇವ ನಮ್ಮ ಕೂಡಲಸಂಗಮದೇವ’ ಎಂದು ಹೇಳಿರುವುದು.

 

ಪರಮಾತ್ಮ ‘ನಿರ್ಗುಣ’ ಎಂದು ಹೇಳುವವರು ನಿರ್ಗುಣಪಂಥಿಗಳು. ಅವರು ಮೂರ್ತಿಪೂಜೆಯನ್ನಾಗಲಿ, ಆವೇಶಯುಕ್ತವಾದ ಭಕ್ತಿಯನ್ನಾಗಲಿ ಒಪ್ಪುವುದಿಲ್ಲ. ದೈವತ್ವವು ಮೂರ್ತಿಗಳನ್ನು ಮೀರಿನಿಂತಿರುವುದರಿಂದ ಅಂತರ್ಮುಖಿಯಾಗಿ ಅದನ್ನು ಅನುಭವಿಸಬೇಕು ಎನ್ನುತ್ತಾರೆ. ಆದರೆ ಪರಮಾತ್ಮ ‘ಸಗುಣ’ ಎಂದು ಹೇಳುವವರು ದೈವತ್ವವನ್ನು ಸಾಕಾರಗೊಳಿಸಿ ಅದರೊಡನೆ ವಿವಿಧ ಮಾನವೀಯ ಸಂಬಂಧಗಳನ್ನು ಕಲ್ಪಿಸಿ ಪ್ರೇಮಿಸುತ್ತಾರೆ. ಆ ಭಕ್ತಿಯ ಆನಂದವನ್ನು ತಾವು ಬೇರೆಯಾಗಿಯೇ ನಿಂತು ಸವಿಯುತ್ತಾರೆ. ಯಾರು ಯಾವ ರೂಪದಿಂದ ದೈವತ್ವವನ್ನು ಆರಾಧಿಸುವರೋ ಅದೇ ಸಗುಣ ಸಾಕಾರರೂಪದಲ್ಲಿ ದೈವತ್ವವು ಮೈದೋರುತ್ತದೆ. ಒಟ್ಟಾರೆ ಪರಮಾತ್ಮನು ಸಗುಣ-ನಿರ್ಗುಣನೂ, ಸಾಕಾರ ನಿರಾಕಾರನೂ ಆಗಿದ್ದಾನೆಂಬುದು ಅನುಭಾವಿಗಳ ವಿವಿಧ ದೃಷ್ಟಿಕೋನಗಳಿಂದ ನಮಗೆ ಸ್ಪಷ್ಟವಾಗುತ್ತದೆ.

ಲೇಖಕರು :- ಪೂಜ್ಯ ಶ್ರೀ ಸಿದ್ದೇಶ್ವರ ದೇಶಿಕರು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ ಬೂದಗುಂಪ.

– ಕರುನಾಡಿಗೊಬ್ಬ ಕುಮಾರನೊಡಯ್ಯ ಆತನ ನಡೆ ಹಿರಿಕಿರಿಯರಿಗೆ ಪಾವನ, ಆತನ ನುಡಿ ಸರ್ವರಿಗೂ ಅಮೃತದ ಧಾರೆ,ಆತನು ನೆನಪಿದೆ ಹೃದಯ ಗೀತೆ ಸಕಲ ಸಂಜೀವಿನಿ ನೋಡಯ್ಯ.

ಆತನಿರುವು ಸಮಾಜಕ್ಕೊಂದು ಪಾವನ, ಆತನ ಸುಳಿವು ಕನ್ನಡಕ್ಕೊಂದು ಜೀವನ, ಇಂದಿನ  ಕರುನಾಡಿಗೆ ದ್ವಿತೀಯ ಬಸವನಂತಿದ್ದನಯ್ಯ- ಶಬ್ದ ಬ್ರಹ್ಮ ಡಾ. ಜ. ಚ.ನಿ.

– ಅಂದು  12 ನೇ ಶತಮಾನದಲ್ಲಿ  ಸಾಮಾಜಿಕ ಕ್ರಾಂತಿಯ ಮೂಲಕ ಭಕ್ತಿಯ ಪಥವ ತೋರ ಬಂದವರು ಬಸವಣ್ಣ,

ಇಂದು 20 ನೇ ಶತಮಾನದಲ್ಲಿ ತ್ಯಾಗ ಮತ್ತು ನಿಸ್ವಾರ್ಥದ  ಸೇವೆಯ ಮೂಲಕ ಶಕ್ತಿಯ ಪಥವ ತೋರ ಬಂದವರು ಶ್ರೀ ಕುಮಾರ ಶಿವಯೋಗಿಗಳು.

**ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಕರುನಾಡಿನ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಸಮೃದ್ಧ ಸಮಾಜದ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಅಂಧ -ಅನಾಥರ ಭಾಗ್ಯದ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಸಮಸ್ತ  ಮಾನವಕಲ್ಯಾಣದ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು  ಕನ್ನಡ ನಾಡಿನ ಪುಣ್ಯದ ಉದಯ ,ಭಾಗ್ಯೋದಯ.

** ಪೂಜ್ಯರಲ್ಲಿ ಅದೆಂತಃ ವಿಚಾರಧಾರೆಗಳು ತುಂಬಿಕೊಂಡಿದ್ದವು ಅಂದರೆ ಅವರ ಉದಾತ್ತ ಮತ್ತು ದೂರದೃಷ್ಟಿಯ ಚಿಂತನೆಗಳನ್ನ ನೋಡುವುದಾದರೆ,

ಪೂಜ್ಯರ ವ್ಯಕ್ತಿತ್ವ ಅದು ಅತ್ಯಂತ ವೈವಿಧ್ಯಪೂರ್ಣವಾದದ್ದು. ಅವರಲ್ಲಿನ “ಮನನೀಯವಾದ ವಿಚಾರ ಸ್ವಾತಂತ್ರ್ಯ, ಘನ ವಿರಕ್ತಿ, ಆರ್ತದ ಬಗೆಗಿನ ಅಪಾರವಾದ ಅನುಕಂಪ, ಅಜ್ಞ  ಸಮಾಜದ ಏಳಿಗೆಗೆ ಪೂಜ್ಯರು ತೋರಿದ ಕಳಕಳಿ, ಸಾಹಿತ್ಯ ಸಂಸ್ಕೃತಿಗಳ ಅಭಿಮಾನ, ಧರ್ಮ ಸಹಿಷ್ಣುತೆ, ಸಂಘ ಸಂಸ್ಥೆಗಳ ಬಗೆಗಿರುವ ನವೀನ ದೃಷ್ಟಿ, ಕೈ ಹಿಡಿದಿದ್ದನ್ನು ಕೈಗೂಡಿಸಿ ತೀರುವ ದೃಢಸಂಕಲ್ಪ, ಸಂಗೀತ ಕಲೆ ಮೊದಲಾದ ಲಲಿತ ಕಲೆಗಳ ಬಗೆಗಿನ ಅಪಾರ ಪ್ರೀತಿ, ಎಲ್ಲದಕ್ಕೂ ಮಿಗಿಲಾಗಿ ಮನುಕುಲದ ಉದ್ದಾರ, ಮಾನವ ಕಲ್ಯಾಣದ ಚಿಂತನೆ”ಇಂತಹ ಅದೆಷ್ಟೋ ಅದ್ಭುತ  ಸದ್ಗುಣಗಳ ಸಂಗಮವಾಗಿ , ಕಾರುಣ್ಯದ ಕಣ್ಣಾಗಿ,ಸಮಾಜದ ಹೊಂಬಣ್ಣಾಗಿ ಬಾಳಿ ಬೆಳಗಿದ ಸಾಕಾರದ  ಪ್ರತಿರೂಪ ಪೂಜ್ಯ ಗುರುಗಳು.

– ಇಂತಹ ಗುಣಗಳನ್ನ ಪ್ರತಿಯೊಬ್ಬರಿಗೂ ಉಣಗಲಿಸಿದವರು,ಉಡಗಲಿಸಿದವರು, ನಡೆನುಡಿ ಗಲಿಸಿದವರು,

ಕಲಿತು ಕೇವಲ ಸಮಾಜದ ವ್ಯಕ್ತಿಗಳಾಗಬೇಡಿ, ಸಮಾಜದ ಅದ್ಭುತ ಶಕ್ತಿಯಾಗಿ ಎನ್ನುವ ಉದಾತ್ತ ವಿಚಾರಗಳನ್ನ ನಾಡಿಗೆ ಬಿತ್ತರಿಸಿದ ಮಹಾಂತರು.

*- ಒಂದು ಕಾಲದಲ್ಲಿ ಸಮಾಜ ಹೀಗಿತ್ತು

“( ಜಟಿಲೋ ಮುಂಡಿ ಲುಂಚಿತ ಕೇಶಃ…………) ”

ಹೀಗೆ ದಿಕ್ಕೆಟ್ಟು ಹೋಗಿರುವ ಸಮಾಜಕ್ಕೆ “ಮಹಾಸಭೆ ಮತ್ತು  ಶಿವಯೋಗ ಮಂದಿರದ”ಮೂಲಕ ದಿಕ್ಸೂಚಿಯಾಗಿ ಬಂದವರು ಕುಮಾರ ಶಿವಯೋಗಿಗಳು.

**ಇದನ್ನೆಲ್ಲಾ ಕಣ್ತುಂಬಿ ಕೊಂಡ ಕರ್ನಾಟಕದ ಗಾಂಧಿ ಹರಡೇಕರ್ ಮಂಜಪ್ಪನವರು ಪೂಜ್ಯರ ಕುರಿತು ಹೀಗೆ ಹೃದಯತುಂಬಿ ಹೇಳಿದ್ದಾರೆ

” ಯಾವ ಕಾಲದಲ್ಲಿ ಅನಕ್ಷರತೆ ತುಂಬಿ ತುಳುಕುತ್ತಿತ್ತು, ಯಾವ ಕಾಲದಲ್ಲಿ ಧರ್ಮಾಂಧತೆಯಲ್ಲಿ ಸಮಾಜ ಬಿದ್ದು ಹೊರಳಾಡುತ್ತಿತ್ತು,

ಆಧುನಿಕ ಸಮಾಜದ ಗಂಧ ಗಾಳಿಯೂ ಬೀಸದ,ಯಾವ ರಾಜಕೀಯ ಸೋಂಕೂ ತಗುಲದ, ಒಬ್ಬ ವೀರ ವಿರಕ್ತ ಸನ್ಯಾಸಿಯ ಮಹಾಸಭೆ ಹಾಗೂ  ಶಿವಯೋಗ ಮಂದಿರ ಅನ್ನುವ ಪರಿಕಲ್ಪನೆ ಇಡಿ ಭಾರತ ದೇಶಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿತಿಲ್ಲ ಅದು ಅಭೂತಪೂರ್ವ, ಅದೊಂದು ಪವಾಡವೇ ಸರಿ.

ಮಹಾಸಭೆ ಮತ್ತು ಶಿವಯೋಗ ಮಂದಿರ ಇಡೀ ಭಾರತ ದೇಶದ ವೀರಶೈವ ಲಿಂಗಾಯತರನ್ನ ಒಗ್ಗೂಡಿಸಲು ಕೈಗೊಂಡಂತಹ ಶ್ರೇಷ್ಠ ಸಂಕಲ್ಪದ ನೇತೃತ್ವ ಹಾನಗಲ್ಲ ಕುಮಾರ ಶಿವಯೋಗಿಗಳದ್ದು . ಅದಕ್ಕಾಗಿಯೇ “ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗ ಮಂದಿರ” ಅಂದರು. ಬರಿ “ಅಖಿಲ ಕರ್ನಾಟಕ” ಅನ್ನಲಿಲ್ಲ ಇಡೀ ಭಾರತದ ವೀರಶೈವ ಲಿಂಗಾಯತರು ಒಂದಾಗಿಸೇರಿಕೊಂಡು  ಧರ್ಮ ಜಾಗೃತಿ ಮಾಡಬೇಕು ಅನ್ನುವ ದೃಷ್ಟಿಯಿಂದ.

*ಯಾಕೆ ಈ ವಿಚಾರ ಕುಮಾರ ಶಿವಯೋಗಿಗಳಿಗೆ ಬಂತು, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದ ನಮ್ಮ ಸಮಾಜದಲ್ಲಿ ನಿರಕ್ಷರತೆ ,ಹಾಗೂ ಬಡತನ ತಾಂಡವಾಡುತ್ತಿತ್ತು, ಮೂಡನಂಬಿಕೆ ಮನದಾಳದಲ್ಲಿ ಬೇರು ಬಿಟ್ಟಿತ್ತು ಅದರ ಪರಿಣಾಮವಾಗಿ ಕಂದಾಚಾರಗಳಲ್ಲಿ ಸಮಾಜ ಮುಳುಗಿತ್ತು, ವ್ಯಾಪಾರ ವ್ಯವಹಾರಗಳಲ್ಲಿ ಹಿಂದುಳಿದಿದ್ದರು,ಮೂಲ ಉದ್ಯೋಗ ವಾದ ಕೃಷಿ ಕನಿಷ್ಠ ಮಟ್ಟಕ್ಕೆ ಇಳಿದಿತ್ತು, ಹೀಗೆ ಇಡೀ ಸಮಾಜ ಆರ್ಥಿಕವಾಗಿ ಅಧೋಗತಿಗಿಳಿದಿತ್ತು.ಒಗ್ಗಟ್ಟು ಮಾಯವಾಗಿ ಸಮಾಜ ಒಡೆದ ಕನ್ನಡಿಯಂತಾಗಿತ್ತು , ಇಂಥ ಸಮಾಜವನ್ನು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಔದ್ಯೋಗಿಕವಾಗಿ ಉನ್ನತ ಸ್ಥಿತಿಗೆ ತರುವುದರ ಜೊತೆಗೆ, ಧರ್ಮದ ಸಾಹಿತ್ಯ, ಸಂಸ್ಕೃತಿ,ತತ್ವಗಳ ಆಳವಾದ ಅಭ್ಯಾಸ ಮಾಡಿ ನಶಿಸುತ್ತಿದ್ದ ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಏಳಿಗೆ ಮಾಡಬಲ್ಲ ವಟು – ಸಾಧಕರಿಗೆ ಶಿಕ್ಷಣ ಮತ್ತು ತರಬೇತಿ ಕೊಡಿಸಿ ತನ್ಮೂಲಕ ಸಮಾಜದ ಅಜ್ಞಾನವನ್ನು ಅಳಿಸಿಹಾಕಿ ಅವರನ್ನು ಸಮಾಜ ಸೇವೆಗಾಗಿ ಸಿದ್ಧಗೊಳಿಸುವುದೇ ಇದರ ಸ್ಥಾಪನೆಯ ಮೂಲ ಉದ್ದೇಶವಾಗಿತ್ತು ಹಾಗೂ ಹಿನ್ನೆಲೆಯಾಗಿತ್ತು.

* ಇಲ್ಲಿ ಪೂಜ್ಯರು ಎಂಥ ಸಂಪತ್ತನ್ನ ಸಂಪಾದಿಸಿದರು ಕರಗಿಹೋಗುವ, ಸೊರಗಿ ಹೋಗುವ,ಕಳೆದುಹೋಗುವ ಭೌತಿಕ ಸಂಪತ್ತನ್ನ ಸಂಪಾದಿಸಲಿಲ್ಲ, ಸವೆಯದ, ಸಾಕೆನಿಸದ, ಕಳೆಗುಂದದ, ಮತ್ತೊಂದು ಬೇಕೆನಿಸದ  ಅಧ್ಯಾತ್ಮಿಕ ಜ್ಞಾನ ಸಂಪತ್ತು, ಅರಿವು-ಆಚಾರ, ಯೋಗ – ಶಿವಯೋಗ, ವ್ಯಕ್ತಿ ಹಿತಕ್ಕಿಂತ – ಸಮಷ್ಟಿ ಹಿತ ಮುಖ್ಯ, ಸ್ಥಾನಮಾನಕ್ಕಿಂತ-ಸಮಾಜ ಸೇವೆ ಮುಖ್ಯ, ಜನನಾಯಕನಿಗಿಂತ- ಜನಸೇವಕ ಮುಖ್ಯ, ಇಂತಹ ಸಂಪತ್ತನ್ನಗಳಿಸಿ ಈ ನಾಡಿಗೆ-ನುಡಿಗೆ-ಸಂಸ್ಕೃತಿಗೆ ಕೊಟ್ಟವರು ಕುಮಾರ ಶಿವಯೋಗಿಗಳು.

* ಮಂದಿರವನ್ನು ಸ್ಥಾಪಿಸಿ ಇಲ್ಲಿಗೆ ನನ್ನ ಕಾರ್ಯ ಮುಗಿಯಿತು ಅಂತ ಕೈಕಟ್ಟಿ ಕುಳಿತುಕೊಳ್ಳಲಿಲ್ಲ ಅಲ್ಲಿ ಬರುವ ಸಾಧಕರಿಗೆ ಅನ್ನ ಆಶ್ರಯದ ವ್ಯವಸ್ಥೆ,ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ, ಗೋಶಾಲೆ,ವಿಭೂತಿ ನಿರ್ಮಾಣ,ಪ್ರತಿಯೊಬ್ಬರಿಗೂ ಧರ್ಮದ ತಿಳುವಳಿಕೆಗಾಗಿ ಎಲ್ಲಾ ಗ್ರಂಥಗಳನ್ನೊಳಗೊಂಡ ಗ್ರಂಥಾಲಯ ಹೀಗೆ ಎಲ್ಲ ವ್ಯವಸ್ಥೆಯ ಕುರಿತು 19 ದ್ದೆಯೋದ್ದೇಶಗಳನ್ನ ರಚನೆ ಮಾಡಿದರು.

ಅವುಗಳನ್ನು ಸಂಕ್ಷಿಪ್ತ ರೀತಿಯಲ್ಲಿ,ಮೇಲ್ನೋಟದಲ್ಲಿ ವಿಚಾರಿಸುದಾದರೆ

* ಮೊಟ್ಟ ಮೊದಲು ವಟು -ಸಾಧಕರ ವ್ಯವಸ್ತೆ ಹಾಗೂ ವೇಷ ಭೂಷಣ, ಜೊತೆಗೆ ಅವರಿಗೆ ಕಲಿಸುವ ಅಧ್ಯಾಪಕರು ಹೇಗಿರಬೇಕು ಸದ್ಗುಣ ಸುಶೀಲರಾಗಿರಬೇಕು, ಗುರು-ಲಿಂಗ- ಜಂಗಮ  ಪ್ರೇಮಿಗಳ ಆಗಿರಬೇಕು, ಆಚಾರ-ವಿಚಾರವಂತರಾಗಿರಬೇಕು ಅವರು ಸಾಧಕರಿಗೆ ಎಲ್ಲ ತರಹದ ವಿದ್ಯೆಗಳನ್ನ ಹೇಳಿಕೊಟ್ಟು ಸರ್ವ ವಿದ್ಯಾ ಪಾರಂಗತರನ್ನಾಗಿ ಮಾಡಿಕೊಡಬೇಕು.

*ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಗ್ರಂಥಗಳನ್ನ ಒಳಗೊಂಡ ಒಳ್ಳೆಯ ಸುಸಜ್ಜಿತ ಗ್ರಂಥಾಲಯ ನಿರ್ಮಾಣ.

* ಮತ ಸುಧಾರಣೆಗೆ ಸದ್ವಿವಿಷಯಗಳನ್ನ ಒಳಗೊಂಡ ಕೀರ್ತನೆ, ಸಾಹಿತ್ಯ,ಪದ್ಯಗಳನ್ನ ರಚಿಸಬೇಕು ಅವುಗಳನ್ನ ಕೇಳುಗರಿಗೆ ಪ್ರಿಯವಾಗುವ ರೀತಿಯಲ್ಲಿ ಹೇಳುಗರನ್ನ ಸೃಷ್ಟಿಸಬೇಕು ಅರ್ಥಾತ್ ಪ್ರವಚನಕಾರರನ್ನ.

* ಮತಶಾಸ್ತ್ರದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ನುರಿತವರನ್ನ ಅಲ್ಲಲ್ಲಿ ಕಳುಹಿಸಿ ಅವರಿಂದ ಧರ್ಮೋಪದೇಶ ಮಾಡಿಸಿ ಜನ ಜಾಗೃತಿ ಮಾಡಿಸಬೇಕು ಜೊತೆಗೆ ಧರ್ಮದ ತತ್ವತ್ರಯಗಳನ್ನ ಜನಮಾನಸದಲ್ಲಿ ಬಿತ್ತಬೇಕು.

* ಮನೆಯಲ್ಲೇ ಕುಳಿತವರಿಗೆ ಧರ್ಮದ ಕುರಿತು ತಿಳಿದುಕೊಳ್ಳಲು ಧರ್ಮ ಪ್ರಸಾರ,ಸಾಹಿತ್ಯ ಪ್ರಸಾರವಾಗಬೇಕೆಂದು 1911 ರಲ್ಲಿ “ಧರ್ಮ ತರಂಗಿಣಿ” ಪತ್ರಿಕೆ ಹೊರಡಿಸಿದರು ಬಸವಾದಿಪ್ರಮಥರ ವಿಚಾರಧಾರೆಗಳು ಮನೆಮನಗಳಿಗೆ ತಲುಪಬೇಕೆಂದು ವಚನ ಸಾಹಿತ್ಯಕ್ಕೆ ಹೊಸ ರೂಪತರಲು ಫ.ಗು.ಹಳಕಟ್ಟಿ ಅವರಿಗೆ ಪ್ರೇರಣೆ ನೀಡಿದರು, ಹುಳುಹತ್ತಿಹಾಳಿಡುವ ತಾಳೆಗರಿಗಳನ್ನು ಸುತ್ತಿ ಸಂಗ್ರಹಿಸುವುದರ ಜೊತೆಗೆ ವಚನಗಳು ಜನರ ಕೈಗೆ ತಲುಪುವಂತೆ ವ್ಯವಸ್ಥೆ ಮಾಡುವುದು. ಹಳಕಟ್ಟಿಯವರು ಕೂಡ “ಶಿವಾನುಭವ” ಪತ್ರಿಕೆಯನ್ನು ಹೊರಡಿಸಿದರು.ನಂತರ ಪೂಜ್ಯರ ಇಷ್ಟೆಲ್ಲ ಕಾರ್ಯಕ್ಕೆ ಪ್ರಭಾವಿತರಾದ ಚೆನ್ನಮಲ್ಲಿಕಾರ್ಜುನಪ್ಪ ನವರು ತಮ್ಮ ಶಿಕ್ಷಕ ವೃತ್ತಿಗೆ ರಾಜಿನಾಮೆ ನೀಡಿ ಸಾಹಿತ್ಯ ಕ್ಷೇತ್ರದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕೆಂದು ಹಾವೇರಿಯ ಶ್ರೀ ಶಿವಲಿಂಗ ವಿಜಯ ಮುದ್ರಣಾಲಯದಿಂದ “ಸದ್ಧರ್ಮದೀಪಿಕೆ”ಪತ್ರಿಕೆ ಹೊರಡಿಸಿದರು.

ಆನಂತರ 1930ರಲ್ಲಿ ಶಿವಯೋಗಿ ಸಾಧಕರು ಸೇರಿಕೊಂಡು “ಸುಕುಮಾರ” ಪತ್ರಿಕೆ ಹೊರಡಿಸಿದರು. ನಂತರ ಸ್ಥಗಿತಗೊಂಡ ಪತ್ರಿಕೆಯವಿಷಯ 2021 ರಲ್ಲಿ ದೆಹಲಿಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿ  ಸೇವಾ ಸಮಿತಿಯಿಂದ “ಶ್ರೀ ಕುಮಾರ ತರಂಗಿಣಿ ಪತ್ರಿಕೆ” ಅಂತರ್ಜಾಲದ ಮೂಲಕ  ಪ್ರಾರಂಭಗೊಂಡಿತು,2023 ರಲ್ಲಿ ಮತ್ತೆ ಶ್ರೀ ಶಿವಯೋಗ ಮಂದಿರದಿಂದ “ಸುಕುಮಾರ ಪತ್ರಿಕೆ” ಮುದ್ರಣ ರೂಪದಲ್ಲಿ ಪ್ರಕಾಶಗೊಳ್ಳುತ್ತಿದೆ.

ಇದೆಲ್ಲ ಕುಮಾರ ಶಿವಯೋಗಿಗಳು ವಿಚಾರಿಸಿ  ಸಮಾಜವನ್ನು ಈ ರೀತಿ ಕಟ್ಟಬೇಕು ಅನ್ನುವ ದೂರ ದೃಷ್ಟಿ.

* ಜೊತೆಗೆ ಅಂದಿನ ಬ್ರಿಟಿಷಸರ್ಕಾರದ ಜೊತೆ ಸಂಪರ್ಕ ಸಾಧಿಸಲು ಹಾಗೂ ಪತ್ರವ್ಯವಹಾರ ಮಾಡಲಿಕ್ಕೆ ಸಾಧಕರನ್ನ ಭಾಷಾ ಪರಿಣಿತರನ್ನಾಗಿಸಲು  ಗಡಹಿಂಗ್ಲಜದ ವೀರಬಸಪ್ಪ ಶ್ರೇಷ್ಟಿಯವರಿಂದ ಸಾಧಕರಿಗೆ ಆಗ್ಲಭಾಷಾ ಜ್ಞಾನವನ್ನ ಕೊಡಿಸುತ್ತಾರೆ.

* ಇಲ್ಲಿ ಎಂತವರಿಗೆ ಅವಕಾಶ ಮಾಡಿಕೊಟ್ಟರು ಅಂದ್ರೆ ಸಾಧಕರಿಗೆ ಅಷ್ಟೇ ಅಲ್ಲ,ಸಂಸಾರದಲ್ಲಿ ಇದ್ದವರಿಗೆ ಸಾಧ್ಯವಾದ ಮಟ್ಟಿಗೆ ಶಿವಮತ ತತ್ವಗಳನ್ನ ಅಭ್ಯಾಸ ಮಾಡಲಿಕ್ಕೆ ಅನುಕೂಲ ಮಾಡಿಕೊಟ್ಟು, ಅವರಿಗೆ ಪರೀಕ್ಷೆ ಇಟ್ಟು ಅದರಲ್ಲಿ ಉತ್ತೀರ್ಣರಾದವರಿಂದ ಹಳ್ಳಿಹಳ್ಳಿಗೆ ಕಳುಹಿಸಿ ಲಿಂಗಧಾರಣೆ-ರುದ್ರಾಕ್ಷಿ ಧಾರಣೆ- ವಿಭೂತಿ ಧಾರಣೆಯ  ಪರಿಕಲ್ಪನೆ ಹೀಗೆ ಧರ್ಮ ಬೋಧನೆ ಕಾರ್ಯ ಮಾಡಿಸುತ್ತಿದ್ದರು (ಸಾಕ್ಷರತಾ ಅಭಿಯಾನ).

* ಜೊತೆಗೆ ಪೂಜ್ಯರು ಸಕಲ ಪ್ರಾಣಿಗಳಿಗೂ ಲೇಸ ಬಯಸುವಂಥವರು, ಅದಕ್ಕಾಗಿ ಶಿವಯೋಗ ಮಂದಿರದಲ್ಲಿ ಗೋಶಾಲೆ ನಿರ್ಮಾಣ ಮಾಡಿದರು (ಎಷ್ಟು ಪ್ರೀತಿಯೆಂದರೆ ಗೋವುಗಳ ಮೇಲೆ ಬರಗಾಲದಲ್ಲಿ ಕರುಗಳಿಗೆ ಹಾಲು ಉಣಲಿಕ್ಕೆ ಬಿಡಿ ಅಂದ ಘಟನೆ)”ಮಳೆಯಿಲ್ಲದೊಂದು ವರ್ಷಮ್ ಗುಡ್ಡದೊಳು ಹುಲ್ಲು ಬೆಳೆಯದುದರಿಂದಾವುಗಳ ಹಾಲು ತಮ್ಮ ಕರುಗಳಿಗಾಗದೀರ್ಪುದಂ ತಿಳಿದೀ ಮಹಾತ್ಮನಾವತ್ಸಗಳ ಬಾಯಬಡಿದು ಎಳಸಿ ನಾವ್ಕರೆದುಂಬುದೇ ಮಹಾ ಪಾಪ ವೆಂದಳುಕಿ ನಾವೆಲ್ಲರುo ಪಾಲುಣ್ಣದೆಬಿಟ್ಟು ಕರುಗಳನೆ ಕರುಣದಿಂ ಪೋಷಿಪಂತೆಸಗಿದಂ ದನಗಾವ ಜನಕೆ.( ಪುರಾಣ 13 ನೇ ಸಂಧಿ) ” ಹೀಗೆ  ಗೋವುಗಳ ರಕ್ಷಣೆ ಗೋವುಗಳಿಂದ ಬಂದಿರುವ ಗೋಮಯದಿಂದ ಶಾಸ್ತ್ರೋಕ್ತವಾಗಿ ವಿಭೂತಿ ನಿರ್ಮಾಣ ಮಾಡಿಸಿದರು (ನೊಸಲಿಗೆ ವಿಭೂತಿಯೇ ಶೃಂಗಾರ ಶರಣರ ವಾಣಿಯನ್ನ ಚಾಲನೆಗೆ ತಂದವರು), ಪಂಚಸೂತ್ರ ಲಿಂಗಗಳನ್ನ ತಾಯಾರಿಸುವುದು, ಶಿವದಾರವನ್ನ ತಯಾರಿಸುವುದು,ಹೀಗೆ ಎಲ್ಲವುಗಳ ತಯಾರಿಕೆ ಕೇಂದ್ರ ಮಂದಿರವಾಗಬೇಕೆಂದರು.

*ಇದೆಲ್ಲದಕ್ಕೂ ಮಿಗಿಲಾಗಿ ಪೂಜ್ಯರು  ಮಾಡಿದ ಮಹತ್ ಸಂಕಲ್ಪ ಅಂದ್ರೆ ಪ್ರತಿಯೊಂದು ಕ್ಷೇತ್ರದಲ್ಲಿ ಶಿವಯೋಗಿ ಸಾಧಕರಿರಬೇಕೆಂದು ಒಬ್ಬೊಬ್ಬರನ್ನ ಬೆಳೆಸಿದರು.

“ಸಾಹಿತ್ಯದಲ್ಲಿ ಶಬ್ದಬ್ರಹ್ಮ ಡಾ. ಜ . ಚ.ನಿ.ಯವರನ್ನ,ಆಯುರ್ವೇದದಲ್ಲಿ ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮಿಗಳನ್ನ,ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿ  ಕನ್ನಡ ಕೋಟೆ ಕಟ್ಟಲು ಬಾಲ್ಕಿಯ ಚೆನ್ನಬಸವ ಪಟ್ಟಾಧ್ಯಕ್ಷರನ್ನ, ಶಿವಯೋಗದಲ್ಲಿ ಸಕ್ಕರಾಯ ಪಟ್ಟಣದ ಸದಾಶಿವ ಶಿವಾಚಾರ್ಯರನ್ನ, ಕೃಷಿ ಕಾಯಕ ಕ್ಷೇತ್ರದಲ್ಲಿ ಕಪನಳ್ಳಿಯ ರುದ್ರಮುನಿ ಸ್ವಾಮಿಗಳನ್ನ, ಪ್ರವಚನದಲ್ಲಿ ನವಲಗುಂದದ ಬಸವಲಿಂಗ ಸ್ವಾಮಿಗಳನ್ನ, ಯೋಗದಲ್ಲಿ ಯೋಗಿರಾಜ ಕಂಚುಕಲ್ಲಬಿದರಿ ಪ್ರಭು ಕುಮಾರ ಪಟ್ಟಾಧ್ಯಕ್ಷರನ್ನ, ಸಂಗೀತದಲ್ಲಿ ಪಂಚಾಕ್ಷರಿ – ಪುಟ್ಟರಾಜ ಗವಾಯಿಗಳನ್ನ, ಹೀಗೆ ಪ್ರತಿಯೊಂದು ರಂಗದಲ್ಲಿ ಶಿವಯೋಗ ಮಂದಿರ ಇರಬೇಕೆಂದು ಕನಸು ಕಂಡವರು ಸಾಕಾರ ಮಾಡಿದವರು .

* ಪ್ರತಿವರ್ಷ ಶಿವರಾತ್ರಿಯಲ್ಲಿ ಕೀರ್ತನೆ,ಪುರಾಣ, ಸಂಗೀತ ಹೀಗೆ ಎಲ್ಲ ರೀತಿಯ ಧರ್ಮ ಬೋಧನೆ ಕಾರ್ಯ ಆಗಬೇಕು.

*ಅಲ್ಲಲ್ಲಿ ಶಿವ ಯೋಗ ಮಂದಿರ ಶಾಖೆಗಳು ನೆಲೆಸಬೇಕು ಅಲ್ಲಿಯೂ ಸರ್ವರಿಗೂ ಶಿವಾನುಭವ ದೊರೆಯಬೇಕು ಇಂತಹ ದೂರದೃಷ್ಟಿ ಹಾಗೂ ಮಹದ್ದೋದ್ದೇಶ ಇಟ್ಟುಕೊಂಡು ಸ್ಥಾಪಿಸಿದ್ದಕ್ಕಾಗಿ ಇಂದಿಗೆ  115 ವಸಂತಗಳನ್ನ ನಿರ್ವಿಘ್ನವಾಗಿ ದಾಟಿ ಬಂದಿದೆ.ಕುಮಾರ ಶಿವಯೋಗಿಗಳ ಇಂತಹ ಇಚ್ಛಾಶಕ್ತಿ, ಸಂಕಲ್ಪ ಶಕ್ತಿ, ಕ್ರಿಯಾಶಕ್ತಿಯ ಸಂಗಮವೆ ಶ್ರೀ ಶಿವಯೋಗ ಮಂದಿರ.ಶರಣು ಶರಣಾರ್ಥಿಗಳು.????