ಸಮಾಜದ ಕಣ್ಣುಗಳು

ಸಮಾಜದ ಕಣ್ಣುಗಳು

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಮತ್ತು ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಮಹಾಸ್ವಾಮಿಗಳು

ಲೇಖಕ: ಶ್ರೀಕಂಠ.ಚೌಕೀಮಠ.

 

ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಕನ್ನಡ ನಾಡು ಕಂಡ ಅಪ್ರತಿಮ, ಮತ್ತು ಸಾಮಾಜಿಕ ಕಳಕಳಿ ಹೊಂದಿದ್ದ ಇಬ್ಬರು ಮಹಾನುಭಾವರನ್ನು ಸ್ಮರಿಸುವ ಸುಯೋಗ ನನ್ನದು. ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳದ್ದು ೧೫೭ನೆಯ ಜಯಂತಿ ಮತ್ತು ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳದ್ದು ೧೫೦ನೆಯ ಜಯಂತಿ ಮಹೋತ್ಸವಗಳ ಸಂಭ್ರಮಾಚರಣೆಯ ಶುಭಗಳಿಗೆಗೆ ನನ್ನ ತೊದಲ್ನುಡಿಗಳ ನುಡಿ ನಮನ !

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಜನ್ಮ ತಾಳಿದ್ದು ೧೧-೦೯-೧೮೬೭.ರಲ್ಲಿ

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಜನ್ಮ ತಾಳಿದ್ದು ೨೭-೮-೧೮೭೪ ರಲ್ಲಿ.

ವಯಸ್ಸಿನಲ್ಲಿ ಏಳು ವರ್ಷ ಹಿರಿಯರಾದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಮತ್ತು ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳ ಮದ್ಯದಲ್ಲಿದ್ದುದು ಅಂತಃಕರುಣೆ,ವಾತ್ಸಲ್ಯ ಮತ್ತು ಸಮಾಜೋಭಿವೃದ್ದಿಯ ಚಿಂತನೆಗಳ ಅವಿನಾಭಾವ ಸಂಬಂಧಗಳು.

ಅವರೀರ್ವರೂ ಚಿಂತಿಸಿದ್ದು ಮತ್ತು ಅವಿಶ್ರಾಂತವಾಗಿ ಅಹೋರಾತ್ರಿ  ದುಡಿದಿದ್ದು ಸಮಾಜಕ್ಕಾಗಿಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ.ಅವರೀರ್ವರ ಮಧ್ಯ ಒಂದು ಅವಿನಾಭಾವ ಸಂಬಂಧವಿತ್ತು.ಪರಸ್ಪರ ಸಹಾಯ ಸಹಕಾರವಿತ್ತು.ಪರಸ್ಪರ ಆರ್ಥಿಕ ಬೆಂಬಲವಿತ್ತು.

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುವ ಸಂಧರ್ಭದಲ್ಲಿ (೧೯೦೦-೧೯೦೩)ಹಿರಿಯ ಸಹೋದರನ ಸ್ಥಾನದಲ್ಲಿ ನಿಂತು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಸಹಾಯ ಸಲ್ಲಿಸಿದರು.

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳ ಪಟ್ಟಾಧಿಕಾರ ಸಂಧರ್ಭದಲ್ಲಿ ಮೈಸೂರು ಒಡೆಯರ ಅವರು ನಾಮಕರಣ ಮಾಡಿದ ಆಭ್ಯರ್ಥಿಯ ತೀವೃ ಸ್ಪರ್ದೆಯಲ್ಲೂ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳ ಜೊತೆಗಿದ್ದು ಅವರ ಪಟ್ಟಾಧಿಕಾರವನ್ನು (೧೯೦೩) ಸುಗಮಗೊಳಿಸಿದವರು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು.

(ಉಲ್ಲೇಖ: ೧೯೩೧ ರಲ್ಲಿ ಹುಬ್ಬಳ್ಳಿ ಲೋಕಮತದ ಸಂಪಾದಕರಾದ ವ್ಹಿ. ಬಿ. ಪುರಾಣಿಕರು ಸಂಪಾದಿಸಿದ ‘ಸ್ಮಾರಕ ಚಂದ್ರಿಕೆ’ಯಲ್ಲಿ ಚಿತ್ರ ದುರ್ಗದ ಪೂಜ್ಯ  ಶ್ರೀ ಜಯದೇವ ಜಗದ್ಗುರುಗಳ ಲೇಖನ)

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಸಂಸ್ಥಾಪಿಸಿದ ಶ್ರೀಮದ್ವೀರಶೈವ ಶಿವಯೋಗಮಂದಿರದ ವತಿಯಿಂದ ಸುತ್ತಮುತ್ತಲಿನ ನಿರುದ್ಯೋಗಿ ಯುವಕರಿಗೆ ಮತ್ತು ಹತ್ತಿ ಬೆಳೆಯುವ ರೈತರಿಗೆ ಸಹಾಯವಾಗಲೆಂದು ಆರಂಭಿಸಿದ ಬಾಗಲಕೋಟೆಯ ಶ್ರೀ ಶಿವಾನಂದ ಜಿನ್ನಿಂಗ ಫ್ಯಾಕ್ಟರಿಗೆ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ೫೦೦೦ ರೂಗಳನ್ನು ಶೇರ ರೂಪ ದಲ್ಲಿ ಕೊಟ್ಟು ಪ್ರೋತ್ಸಾಹಿಸಿದರು

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಸಂಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆ ಹಣಕಾಸು ತೊಂದರೆ ಅನುಭವಿಸಿದಾಗ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ೧೯೧೭ ರಲ್ಲಿ ೬೩ ಸಾವಿರ ರೂಗಳನ್ನು ಭಕ್ತರಿಂದ ಸಂಗ್ರಹಿಸಿ ಮಹಾಸಭೆಗೆ ಚಿರಸ್ಥಾಯಿ ನಿಧಿ ಸ್ಥಾಪನೆ ಮಾಡಿಕೊಟ್ಟರು.

ಅವರೀರ್ವರ ಕಾಲಘಟ್ಟದಲ್ಲಿ  ಸಮಯ ಬೇಧಾಚರಣೆಯ ವಿಷಮ ವಾತವರಣವಿದ್ದ ಪರಿಸ್ಥಿತಿಯಲ್ಲಿ ಕುಮಾರ ಸಮಯ ಪರಂಪರೆಯ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಮತ್ತು ಮುರುಘಾ ಸಮಯ ಪರಂಪರೆಯ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಎಂದಿಗೂ ಸಮಯ ಬೇಧವನ್ನು ತಮ್ಮಗಳ ಮಧ್ಯ ತಂದುಕೊಡಲಿಲ್ಲ .

ಶ್ರೀ ಕುಮಾರ ಶ್ರೀಗಳು ಶಿವಯೋಗಮಂದಿರದ ವಾತಾವರಣದಲ್ಲಿ ಬೆಳೆಯುವ ಪ್ರತಿಯೊಬ್ಬ ಸಾಧಕರಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳ ವೈರಾಗ್ಯ ಮತ್ತು ಶಿವಯೋಗ ಸಾಧನೆ ಯನ್ನು ಕಾಣಲು ಅಪೇಕ್ಷೆಪಟ್ಟವರು ಮತ್ತು ಆ ಅಪೇಕ್ಷೆಯನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದೂ ಉಂಟು.

ಪೂಜ್ಯ ಅಥಣಿ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾದ (೧೯೨೧)ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಕುಮಾರ ಶ್ರೀಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಹಾಡಿದ ಮಂಗಳಾರತಿ ಹಾಡು  “ಕಂಗಳಾಲಯ ಸಂಗಗೆ “ ಹೃದಯದ ಹಾಡಾಗಿ ಪ್ರಸಿದ್ಧಿಯಾಗಿದೆ

ಆ ಪವಿತ್ರ ಮತ್ತು ಪರಸ್ಪರ ಗೌರವ ಸಂಬಂಧಕ್ಕೆ ಈ ಕೆಳಗಿನ ಘಟನೆಗಳು ಸಾಕ್ಷಿಯಾಗುತ್ತವೆ.

  1. ಚಿತ್ರದುರ್ಗ ಜಗದ್ಗುರು ಪೀಠದ ಪೀಠಾಧಿಕಾರತ್ವ
  2. ಧಾರವಾಡದ ಮುರುಘಾಮಠ ದಲ್ಲಿರುವ ಪರಮಪೂಜ್ಯ ಅಥಣಿ ಮುರುಘೇಂದ್ರ ಮಹಾಸ್ವಾಮಿಗಳ ಅಮೃತಶಿಲಾ ಮೂರ್ತಿಯ ಅನವಾರಣವನ್ನು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಅಮೃತಹಸ್ತದಿಂದ ನೆರವೇರಿಸಿದ್ದು .ಮತ್ತು
  3. ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಅಂತಿಮ ದರ್ಶನದ ಸಂಧರ್ಭ ಉಭಯ ಮಹನೀಯರ ಭೇಟಿ ಮತ್ತು ಮಾತುಕತೆಗಳು                                                                                                                                 ಚಿತ್ರದುರ್ಗ ಜಗದ್ಗುರು ಪೀಠದ ಪೀಠಾಧಿಕಾರತ್ವ.

ವೀರಶೈವ ಧರ್ಮ ಸಾಮ್ರಾಜ್ಯ ಪ್ರಸಿದ್ಧ ಮಠವಾದ ಚಿತ್ರದುರ್ಗ ಜಗದ್ಗುರು ಪೀಠ ಅತ್ಯಂತ ಪ್ರತೀಷ್ಠೆಯ ಪೀಠ. ಪೀಠದ ಉತ್ತರಾಧಿಕಾರತ್ವಕ್ಕೆ ಹಲವು ರೀತಿಯ ಸ್ಪರ್ಧೆಗಳು ಜೊತೆ ಮೈಸೂರು ಒಡೆಯರ ಹಸ್ತಕ್ಷೇಪಗಳು ೧೯೦೩ ರ ನವ್ಹಂಬರ ತಿಂಗಳಲ್ಲಿ  ಬ್ರಿಟಿಷರ ಹದ್ದಿನ ಕಣ್ಗಾವಲಿನಲ್ಲಿ ಜರಗಿದವು.

ಆ ಸಂಧರ್ಬದಲ್ಲಿ ಜಯದೇವ ಪಂಡಿತರು ಬ್ಯಾಡಗಿಯ ಅಂಕಲಕೋಟೆಯವರ ಮನೆಯಲ್ಲಿದ್ದರು ಅವರ ಜೊತೆಗೆ ಕಡಕೋಳದ ಬಸವಪ್ಪನವರೂ ಇದ್ದರು..ಚಿತ್ರದುರ್ಗ ಜಗದ್ಗುರು ಪೀಠದ ಉತ್ತರಾಧಿಕಾರಿಗಳು ಯಾರು ಎಂದು ೧೯೦೩ ಮೇ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಿ ಜರುಗಿದ ಬಸವಪುರಾಣ ಸಂಧರ್ಭದಲ್ಲಿ ಪೂಜ್ಯ ಅಥಣಿ ಮುರುಘೇಂದ್ರ ಶಿವಯೋಗಿಗಳು ಜಯದೇವ ಪಂಡಿತರೆಂದು  ಘೋಷಣೆಯನ್ನು ಮಾಡಿದ್ದರು. ಆ ಘೋಷಣೆಯ ಆಧಾರದ ಮೇಲೆ ಸೊಲ್ಲಾಪುರದ ವಾರದ ಮಲ್ಲಪ್ಪನವರು ಜಯದೇವ ಪಂಡಿತರಿಗೆ ಚಿತ್ರದುರ್ಗಕ್ಕೆ ಆಗಮಿಸಲು ತಂತಿ ಸಂದೇಶವನ್ನು ಕಳುಹಿಸಿದರು.ಬ್ಯಾಡಗಿಯಿಂದ ಹೊಳಲ್ಕೆರೆಗೆ ಉಗಿ ಬಂಡಿಯಲ್ಲಿ ಬಂದ ಜಯದೇವ ಪಂಡಿತರನ್ನು ಅಲ್ಲಿಂದ ಅವರಿಗಾಗಿ ಕಾದಿದ್ದ ಕುದುರೆಗಾಡಿಯಲ್ಲಿ ಚಿತ್ರದುರ್ಗದ ಬೃಹನ್ಮಠಕ್ಕೆ ಕರೆ ತರಲಾಯಿತು. ಬಹುಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಅವರನ್ನು ಹೃತ್ತೂರ್ವಕ ಬರಮಾಡಿಕೊಂಡು, ಅನಾದಿ ಕರ್ತೃ ಶ್ರೀ ಮುರುಘರಾಜೇಂದ್ರರ ಗದ್ದುಗೆಯ ದರ್ಶನ ಮಾಡಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಜಯದೇವಪಂಡಿತರನ್ನು ಕಂಡು, ತಮ್ಮ ಸಂತೋಷ ವ್ಯಕ್ತಪಡಿಸುತ್ತ “ಶ್ರೀ ಮುರುಘೇಶನ ಸಂಪೂರ್ಣ ಕೃಪೆ ತಮ್ಮ ಮೇಲಿದೆ. ಅದನ್ನು ಹುಸಿಯಾಗಿಸಲು ಯಾರಿಂದಲೂ  ಸಾಧ್ಯವಿಲ್ಲ. ತಾವು ಈ ಶೂನ್ಯ ಪೀಠವನ್ನು ಅಲಂಕರಿಸುತ್ತಿರುವುದು ನಮಗಂತೂ ಎಲ್ಲಿಲ್ಲದ ಸಂತೋಷ ತಂದಿದೆ. ತಮ್ಮಂತಹ ದೂರದೃಷ್ಟಿಯುಳ್ಳವರು ಪೀಠದ ಒಡೆತನ ವಹಿಸಿಕೊಳ್ಳುವುದ ರಿಂದ ಬ್ರಹನ್ಮಠದ ಕೀರ್ತಿ ದಿಗ್‌ದಿಗಂತದಲ್ಲಿ ಹಬ್ಬುವುದಲ್ಲದೆ, ಪೀಠವನ್ನು ಮುನ್ನೆಡೆಸಿಕೊಂಡು ಹೋಗುವಲ್ಲಿ ತಾವು ಯಶಸ್ವಿಯಾಗುತ್ತೀರೆಂಬ ಸಂಪೂರ್ಣ ವಿಶ್ವಾಸ ನಮ್ಮದು.” ಎಂದು ಅಭಿನಂದಿಸಿದರು.

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಈ ಮಾತುಗಳಿಗೆ ಉತ್ತರವಾಗಿ ಜಯದೇವ ಪಂಡಿತರು “ತಾವು ಬಹುದೊಡ್ಡ ಮಾತುಗಳನ್ನಾಡಿದ್ದೀರಿ. ತಮ್ಮ ಈ ಮಾತುಗಳನ್ನು ಸತ್ಯವಾಗಿಸುವದೇ ನಮ್ಮ ಮುಂದಿನ ಗುರಿಯಾಗಿದೆ. ತಾವಾದರೂ ವಿರಕ್ತಾಶ್ರಮ ಸ್ವೀಕರಿಸಿ ಬಹು ದಿನಗಳಾಗಿರುತ್ತವೆ. ತಾವು ಅನುಭವಿಗಳಿದ್ದೀರಿ. ಈಗಾಗಲೇ ತಮ್ಮ ವ್ಯಕ್ತಿತ್ವದ ಮುದ್ರೆ ಸಮಾಜದ ಮೇಲೆ ಅಚ್ಚೊತ್ತಿ ಮೂಡಿದೆ. ಈಗ ತಾನೆ ಈ ಪೀಠಕ್ಕೆ ಆಯ್ಕೆಯಾದ ನಮಗೆ ಎಲ್ಲ ವಿಧವಾದ ಸಹಕಾರ ನೀಡುತ್ತಿ ರೆಂದು ಭಾವಿಸಿದ್ದೇವೆ. ನಾವು ಈ ಪೀಠದ ಮೂಲಕ, ತಾವು ತಮ್ಮ ಮಠದ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ. ಇಂದು ಸಮಾಜದ ಪರಿಸ್ಥಿತಿ ಗಂಭೀರವಾಗಿದೆ. ಅನಕ್ಷರತೆ, ಅಜ್ಞಾನ, ಎಲ್ಲೆಲ್ಲ ತಾಂಡವವಾಡುತ್ತಿದೆ. ಎಷ್ಟೋ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿದೆ, ಪ್ರೋತ್ಸಾಹವಿಲ್ಲ. ಅವರ ಪ್ರತಿಭೆ ಕಾಡುಮಲ್ಲಿಗೆಯಂತೆ ಬಾಡಿಹೋಗುತ್ತಿದೆ. ಅಂಥವರ ಪ್ರಗತಿಗೆ ನಾವು ಪ್ರಯತ್ನಿಸಬೇಕಾಗಿದೆ. ಆ ದಿಶೆಯಲ್ಲಿ ನಾವು ನಮ್ಮನ್ನು ಸಮಾಜಸೇವೆಗೆ ತೊಡಗಿಸಿಕೊಳ್ಳೋಣ.” ಜಯದೇವ ಪಂಡಿತರ ಅಂತಃಕರಣದಿಂದ ಹೊರಬಂದ ಈ ಮುತ್ತಿನಂತಹ ಮಾತುಗಳು ಅವರೀರ್ವರ ಪವಿತ್ರ ಸಂಬಂಧಗಳಿಗೆ ಸಾಕ್ಷೀಕರಿಸುತ್ತವೆ.

(ಉಲ್ಲೇಖ: ಜಯದೇವ ಜಗದ್ಗುರುಗಳು  ಲೇಖಕರು ಶ್ರೀ .ಮ.ನಿ.ಪ್ರ. ಶಿವಮೂರ್ತಿ ಮಹಾಸ್ವಾಮಿಗಳು  ಹೊಸಮಠ.ಹಾವೇರಿ .ಪ್ರಕಾಶನ ವೀರಶೈವ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಗದಗ)

ಅದನ್ನು ಸ್ವತಃ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಸ್ಮಾರಕ ಚಂದ್ರಿಕೆ ಸ್ಮರಣಗ್ರಂಥದಲ್ಲಿ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳನ್ನು  ನೆನೆಯುತ್ತ “ನಮ್ಮನ್ನು ಶ್ರೀ ೧೦೮ ಶ್ರೀ ಜಗದ್ಗುರು ಪೀಠಾಧಿಕಾರಕ್ಕೆ ಬರಮಾಡಿದವರು ಇವರೇ ಆಗಿದ್ದರು” ಎಂದು ಬರೆದು ಸ್ಮರಿಸಿಕೊಂಡಿರುವರು..

ಪಂ. ವೈ ನಾಗೇಶಶಾಸ್ತ್ರಿಗಳು ರಚಿಸಿದ ‘ಶ್ರೀ ಜಯದೇವ ಲೀಲೆ’ಯ ೯ ನೆಯ ಸಂಧಿಯಲ್ಲಿ-ಸೊಲ್ಲಾಪುರದ ವಾರದ ಮಲ್ಲಪ್ಪನವರು ಹುಬ್ಬಳ್ಳಿಯಲ್ಲಿ ವೀರಶೈವ ಮಹಾಸಭೆಯ ಸ್ಥಾಪನೆಗಾಗಿ ಕಾರ್ಯತತ್ಪರರಾಗಿದ್ದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳನ್ನು ಕಂಡು ಚಿತ್ರದುರ್ಗಮಠದ ಅಧಿಕಾರ ಬಗೆಗೆ ಕೇಳಿದಾಕ್ಷಣ ಪೂಜ್ಯರು ‘ಶ್ರೀಜಯದೇವ ಪಂಡಿತರನ್ನೇ ಚಿತ್ರದುರ್ಗ ಪೀಠಕ್ಕೆ ಆರಿಸುವದು ಉಚಿತವು. ಅವರಿಂದಲೇ ಸಮಾಜೋದ್ಧಾರ ಹಾಗೂ ಸಮಾಜೋನ್ನತಿಯ ಸತ್ಕಾರ್ಯವಾಗುವುದು ಸಾಧ್ಯವಿದೆ.” (ಶ್ರೀ ಜಯದೇವ ಲೀಲೆಯ ಕಥಾಸಾರ ಪುಟ ೩೨) ಎಂದು ಅಪ್ಪಣೆ ಮಾಡಿದ್ದನ್ನೇ ಬರೆದಿದ್ದಾರೆ.

ವಸ್ತುಸ್ತಿತಿ ಹೀಗಿದ್ದರೂ ಸಂಕುಚಿತಭಾವದ ಕಲ್ಮಷ ಹೃದಯದ ಲೇಖಕರು ಮತ್ತು ಕೆಲವರು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳನ್ನು ಕುರಿತು ಬರೆದ ಮತ್ತು ಹಬ್ಬಿಸಿದ ವಿಷಯಗಳು ಖಂಡನೀಯವಾದುದು.

೧೯೫೬ ರಲ್ಲಿ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಲಿಂಗೈಕ್ಯರಾದ ಮೇಲೆ ಪ್ರಕಟವಾದ “ಶ್ರೀ ಜಗದ್ಗುರು ಜಯದೇವ ದಿಗ್ವಿಜಯ” ಪುಟ ೧೭ ರಲ್ಲಿ- “ಚಿತ್ರ ದುರ್ಗದಲ್ಲಿ ಉತ್ತರಾಧಿಕಾರ ಸಮಾರಂಭಕ್ಕೆ ಬಹು ಭರದಿಂದ ಏರ್ಪಾಟು ನಡೆದಿತ್ತು. ಅನೇಕ ಪಟ್ಟ ಚರ ಮೂರ್ತಿಗಳೂ, ಬ್ರಹ್ಮಚಾರಿಗಳೂ ಅಭ್ಯರ್ಥಿಗಳಾಗಿ ಬಂದಿದ್ದರು. ಬರುತ್ತಲಿದ್ದರು. ಇವರಲ್ಲಿ ಶ್ರೀಮನ್ ಪ್ರಣವ ಸ್ವರೂಪಿ ಹಾನಗಲ್ಲ ಕುಮಾರ ಸ್ವಾಮಿಗಳೂ ಒಬ್ಬರು ಎಂದು ಬರೆಯುತ್ತ ಮುಂದೆ ಅನೇಕ ಅಸಂಬದ್ಧ ವಿಚಾರಗಳನ್ನು ಪ್ರಸ್ತಾಪಿಸಿ ೨೫ ನೆಯ ಪುಟದಲ್ಲಿ-೧೯೦೩ ನೆಯ ನವಂಬರ ತಿಂಗಳು ಒಂದನೆಯ ತಾರೀಖು ಬೆಳಿಗ್ಗೆ ಒಂಬತ್ತು ಘಂಟೆಗೆ ಚುನಾವಣೆ ನಡೆದು ಹಾನಗಲ್ಲ ಸ್ವಾಮಿಗಳು ಅಪಯಶಸ್ವಿಗಳಾದರೆಂದು ಬರೆಯಲಾಗಿದೆ.

ಆಶ್ಚರ್ಯವೇನೆಂದರೆ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳಿದ್ದ ಸಂಧರ್ಭದಲ್ಲಿ ಸನ್ ೧೯೪೦ ರಲ್ಲಿ ಎನ್. ಎಚ್. ಹೊಸೂರವರು ಬರೆದ “ಶ್ರೀಜಗದ್ಗುರು ಜಯದೇವ ಮುರಘಾರಾಜೇಂದ್ರ ವಿಜಯ” ದಲ್ಲಿಯೂ ಈ ವಿಚಾರ ಉಲ್ಲೇಖಿಸಲ್ಪಟ್ಟಿಲ್ಲ.

೧೯೫೬ ರಲ್ಲಿ ಶ್ರೀ ಜಗದ್ಗುರುಗಳು ಲಿಂಗೈಕ್ಯರಾದ ತರುವಾಯ ೧೯೬೬ರಲ್ಲಿ ಪ್ರಕಟವಾದ ಶ್ರೀ ಜಗದ್ಗುರು ಜಯದೇವ ದಿಗ್ವಿಜಯ”ದ ಅಸಂಬದ್ಧ ಹಾಗೂ ಅಸಮಂಜಸ ವಿಷಯಗಳಿಗಾಗಿ ವಿಷಾದ ಪಡಬೇಕಾಗಿದೆ.

(ಉಲ್ಲೇಖ :ಕಾರುಣಿಕ ಯುಗಪುರುಷ: ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ)

ಇಂಥ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿರುವವರಿಗೆ ಒಂದು ಸ್ಪಷ್ಠವಾದ ಸ್ಪಷ್ಠೀಕರಣವನ್ನು ಕೊಡಲು ಬಯಸುತ್ತಿದ್ದೇನೆ.

೧೮೯೫ ರಲ್ಲಿ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ತಮ್ಮ ಗುರುಗಳಾದ ಯಳಂದೂರು ಪೂಜ್ಯ ಶ್ರೀಬಸವಲಿಂಗ ಶಿವಯೋಗಿಗಳು ಲಿಂಗೈಕ್ಯರಾದ (ಅಣ್ಣಿಗೇರಿ) ಮೇಲೆ ಸೊರಬ ತಾಲೂಕಿನ ಕ್ಯಾಸನೂರು  ಶ್ರೀ ಗುರುಬಸವ ಮಹಾಸ್ವಾಮಿಗಳವರ ಕ್ರಿಯಾ ಸಮಾಧಿ ಸ್ಥಳದಲ್ಲಿ ಅನುಷ್ಠಾನವನ್ನು ಆಚರಿಸುತ್ತಿದ್ದರು. ಆ ಸಂಧರ್ಭದಲ್ಲಿ ಹಾನಗಲ್ಲಿನ ವಿರಕ್ತಮಠದ ಪೂಜ್ಯ ಶ್ರೀ ಫಕೀರಸ್ವಾಮಿಗಳು ತಮ್ಮ ಶಿಷ್ಯರಾದ ಕೆಂಡಪ್ಪಗೌಡರನ್ನು ಕಳುಹಿಸಿ ಪೂಜ್ಯ ಕುಮಾರ ಶ್ರೀಗಳನ್ನು ಹಾನಗಲ್ಲ ಶ್ರೀ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳಲು ಆವ್ಹಾನವನ್ನು ಕೊಟ್ಟಾಗ ಮೊದಲು ಅಧಿಕಾರವನ್ನು ತಿರಸ್ಕರಿಸಿದವರು ಶ್ರೀ ಕುಮಾರ ಶ್ರೀಗಳು ( ನಂತರ ಬಿದರಿ ಕುಮಾರ ಸ್ವಾಮಿಗಳು ಶ್ರೀಗಳ ಮನವಲಿಸಲು ಮಧ್ಯಸ್ಥಿಕೆಯನ್ನು ವಹಿಸಬೇಕಾಯಿತು).೧೮೯೬ ರಲ್ಲಿ ಪೂಜ್ಯ ಶ್ರೀ ಕುಮಾರ ಶ್ರೀಗಳು ಹಾನಗಲ್ಲ ಶ್ರೀ ವಿರಕ್ತಮಠದ ಪೀಠಾಧ್ಯಕ್ಷರಾದರು

ಒಂದು ವೇಳೆ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳಿಗೆ ಅಧಿಕಾರದ ವ್ಯಾಮೋಹ ಇದ್ದಿದ್ದೇ ಆಗಿದ್ದರೆ…….

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳೇ ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭಾ , ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಮತ್ತು ತಮ್ಮ ಶಿಷ್ಯ ಪಂ.ಪಂಚಾಕ್ಷರ ಗವಾಯಿಗಳ ಮೂಲಕ ಸ್ಥಾಪಿಸಿದ ವೀರೇಶ್ವರ ಪುಣ್ಯಾಶ್ರಮ ಗದುಗಿನ ಅಧ್ಯಕ್ಷ ಸ್ಥಾನಗಳನ್ನು ವಹಿಸಿಕೊಳ್ಳ ಬಹುದಿತ್ತು.

ಅವರೆಂದೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ.

ಸನ್ ೧೯೦೩ ರ ಮೇ ತಿಂಗಳಲ್ಲಿ ಸವದತ್ತಿಯ ಕಲ್ಮಠದಲ್ಲಿ ಶ್ರೀಬಿದರಿ ಕುಮಾರ ಮಹಾಸ್ವಾಮಿಗಳ ಸದಿಚ್ಛೆಯಂತೆ ನಡೆದ ಬಸವ ಪುರಾಣದ’ ಮಂಗಲೋತ್ಸವಕ್ಕೆ ಅಥಣಿ, ಹುಬ್ಬಳ್ಳಿ, ಹಾನಗಲ್ಲು, ಹಾವೇರಿ ಮೊದಲಾದ ಮಹಾಸ್ವಾಮಿಗಳು ದಯಮಾಡಿಸಿದ್ದರಲ್ಲದೆ, ಜಯದೇವ ಪಂಡಿತರೂ ಆಗಮಿಸಿದ್ದರು. ಆ ಮಹಾಸಭೆಯಲ್ಲಿಯೇ ‘ವೀರಶೈವ ಮಹಾಸಭೆ’ ಜರುಗಿಸಲು ಬೀಜಾರೋಪಣವಾಯಿತು. ಪ್ರಪ್ರಥಮತಃ ಹಾನಗಲ್ಲ ಶ್ರೀಗಳವರೇ ೧೦೧ರೂ. ಗಳನ್ನು ವೀರಶೈವ ಮತ ಪ್ರಚಾರಕ ಸಭೆಯವರಿಗೆ ಆಶೀರ್ವದಿಸಿದರಲ್ಲದೆ ತಾವೇ ಮುಂದಾಗಿ ೧೯೦೩ ರ ಡಿಶಂಬರ ತಿಂಗಳಲ್ಲಿ ಮೊದಲನೆಯ .ಮಹಾಸಭೆಯನ್ನು ಕೂಡಿಸುವ ಪ್ರಯತ್ನದಲ್ಲಿ ತೊಡಗಿದರು. ಧನಸಂಚಯಕ್ಕಾಗಿ ಹುಬ್ಬಳ್ಳಿ ಧಾರವಾಡ, ಸಂಶಿ, ಬ್ಯಾಡಗಿ, ಮಹಾರಾಜಪೇಟೆ, ಗರಗ, ಮಮ್ಮಿಗಟ್ಟಿ ಮೊದಲಾದ ಗ್ರಾಮಗಳಲ್ಲಿ ಭಿಕ್ಷೆಗೈದರೆಂದು ಅಖಿಲ ಭಾರತ ವೀರಶೈವ ಮಹಾಸಭೆಯ ೧ ನೆಯ ರಿಪೋರ್ಟಿನಲ್ಲಿ ಉಕ್ತವಾಗಿದೆ.

ಜೂನ ೨೨ ನೇ ತಾರೀಖಿನಿಂದಲೇ ಸಮಾಜ ಕಾರ್ಯದಲ್ಲಿ ಎಡಬಿಡದೆ ಸೇವೆಗೈಯ್ಯುವ ಹಾಗೂ ಹಾನಗಲ್ಲ ಮಠಕ್ಕೇನೆ ಅಧಿಕಾರ ಬಯಸದ ಶ್ರೀಗಳು ಚಿತ್ರದುರ್ಗ ಮಠದ ಅಧಿಕಾರಕ್ಕಾಗಿ ಆಶಿಸಿದರೆಂಬ ಮಾತು ಹಾಸ್ಯಾಸ್ಪದವಲ್ಲದೆ ಮತ್ತೇನು ? ಮತ್ತು ಜಯದೇವ ಪಂಡಿತರಿಗೆ ಕಲಿಯಲು ಸಹಾಯ ಸಲ್ಲಿಸಿದವರೇ ಅವರ ವಿರುದ್ದವಾಗಿ ಚುನಾವಣೆಗೆ ನಿಂತರೆಂಬ ಸಂಗತಿ ಸತ್ಯಕ್ಕೆ ದೂರವಾದ ಮಾತೇ ಸರಿ. ಒಂದುಪಕ್ಷ ಭಕ್ತರ ಅಭಿಪ್ರಾಯವಿದ್ದರೂ ಒಪ್ಪದವರು       ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು. ಯಾಕಂದರೆ ವಾರದ ಮಲ್ಲಪ್ಪನವರು ಕೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಶ್ರೀ ಜಯದೇವ ಪಂಡಿತರ ಹೆಸರನ್ನೇ ಸೂಚಿಸಿದ್ದು ಗಣನೀಯವಾಗಿದೆ. ದೊಡ್ಡವರ ಚರಿತ್ರ ದೊಡ್ಡದಾಗಿಯೇ ಇರುತ್ತದೆ. ಮಹಾತ್ಮರ ನೈಜ ವ್ಯಕ್ತಿತ್ವವನ್ನು ಯಥಾರ್ಥವಾಗಿ ಅವಲೋಕಿಸುವದು ಸಮಾಜ ಬಾಂಧವರ ಹಾಗೂ ಸಾಹಿತಿಗಳ ಪರಮ ಕರ್ತವ್ಯವಾಗಿದೆ.

ಘನವೈರಾಗ್ಯ ಶೀಲರೂ, ಸಮಾಜದ ಹಿತ ಚಿಂತಕರೂ ಆದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು  ಹುಬ್ಬಳ್ಳಿ ಶ್ರೀ ಜಗದ್ಗುರು ಮೂರುಸಾವಿರಮಠದ ಶ್ರೀ ಜಗದ್ಗುರು ಗಂಗಾಧರಸ್ವಾಮಿಗಳ ಹಾಗೂ ಗುರುಸಿದ್ಧ ಮಹಾಸ್ವಾಮಿಗಳ ಅಧಿಕಾರದಲ್ಲೂ ದುಡಿದದ್ದು ಕಂಡು ಬರುತ್ತದೆ. ಒಂದಲ್ಲ, ಎರಡಲ್ಲ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕಾಯವನ್ನು ಗಂಧದಂತೆ ಸವೆಸಿದರೂ ಸಂತೃಪ್ತಿಪಡುವ ಸ್ವಭಾವ ಅವರದಾಗಿರಲಿಲ್ಲ. ಸ್ವಾರ್ಥದ ಲವಲೇಶವಂತೂ ಅವರಲ್ಲಿರಲಿಲ್ಲ.

(ಉಲ್ಲೇಖ :ಕಾರುಣಿಕ ಯುಗಪುರುಷ: ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ)

 2. ಧಾರವಾಡದ ಮುರುಘಾಮಠ ದಲ್ಲಿರುವ ಪರಮಪೂಜ್ಯ ಅಥಣಿ ಮುರುಘೇಂದ್ರ ಮಹಾಸ್ವಾಮಿಗಳ ಅಮೃತಶಿಲಾ ಮೂರ್ತಿಯ ಅನವಾರಣ:

೧೯೨೮  ರಲ್ಲಿ ಧಾರವಾಡ ಮುರುಘಾಮಠ ದ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಸಮಯ-ಸಮನ್ವಯದ ಸಂಕೇತವಾಗಿ ಶಿವಯೋಗಮಂದಿರದಿಂದ  ಶ್ರೀ ಕುಮಾರ ಶಿವಯೋಗಿಗಳನ್ನು ಆಮಂತ್ರಿಸಿ ಶ್ರೀ ಕುಮಾರ ಶ್ರೀಗಳ ಹಸ್ತದಿಂದ ಪೂಜ್ಯ ಅಥಣಿ ಶಿವಯೋಗಿಗಳ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿದ್ದು ಒಂದು ಐತಿಹಾಸಿಕ ಘಟನೆ.

  1. ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಅಂತಿಮ ದರ್ಶನದ ಸಂಧರ್ಭ ಉಭಯ ಮಹನೀಯರ ಭೇಟಿ ಮತ್ತು ಮಾತುಕತೆಗಳು.

ಪೂಜ್ಯರಿಬ್ಬರನ್ನೂ ಕಣ್ಣಾರೆ ಕಂಡಿದ್ದ ಕವಿರತ್ನ ದ್ಯಾಂಪೂರ ಚನ್ನ ಕವಿಗಳು ತಮ್ಮ ಹಾನಗಲ್ಲ ಶ್ರೀಕುಮಾರೇಶ್ವರ ಪುರಾಣ ದಲ್ಲಿ ಪೂಜ್ಯರಿಬ್ಬರ ಅಂತಿಮ ಭೇಟಿಯನ್ನು ಅತ್ಯಂತ ಹೃದಯ ಸ್ಪರ್ಷಿಯಾಗಿ ವರ್ಣಿಸಿರುವರು

 ಅನಿತರೊಳು ಚಿತ್ರದುರ್ಗದ ಜಗದ್ಗುರುವರೇ-

ಣ್ಯನು ತವಕದಿಂದ ದಯೆಮಾಡಿಸಿದನೋ ಪ್ರಭುವೆ-

ಮನಮೊಪ್ಪಿ ಹಿಂದೆ ಮಾತಾಡಿದಂತೀ ಸಮಾಜೋದ್ಧಾರಮಂ ಮಾಡಿರಿ

ಎನುತೀ ಕುಮಾರೇಶನಾಗ ಬಿನ್ನಯಿಸಲಾ

ಘನಮಹಿಮನೈ ನಿಮ್ಮ ಪ್ರಕೃತಿಯೆಂತಿಹುದೊರೆವು-

ದೆನಲಿದೇನೆಮ್ಮಿ ಸಮಾಜವೆಂತಿಹುದೆಂದು ಕೇಳಲಿಲ್ಲೇಕೆ ತಾವು

ಭಾವಾರ್ಥ : ಅಷ್ಟರಲ್ಲಿ ಚಿತ್ರದುರ್ಗದ ಜಯದೇವ ಜಗದ್ಗುರುಗಳು ದಯಮಾಡಿಸುತ್ತಾರೆ. ಅವರಿಗೆ ಕುಮಾರೇಶ ನಮಸ್ಕರಿಸಿ ಕೂಡಲೇ ಕೇಳಿಕೊಂಡದ್ದು, “ಪೂಜ್ಯರೇ ಮನವೊಪ್ಪಿ ಹಿಂದೆ ಮಾತನಾಡಿದಂತೆ ಈ ಸಮಾಜದ ಉದ್ಧಾರವನ್ನು ಮಾಡಿರಿ” ಎಂದು. ಆಗ ಜಗದ್ಗುರುಗಳು “ಈಗ ನಿಮ್ಮ ಪ್ರಕೃತಿ ಹೇಗಿದೆ?” ಎಂದು ಕುಮಾರೇಶನನ್ನು ಕೇಳಲು ಅವರು, “ಬುದ್ಧಿ ತಾವು ಸಮಾಜ ಹೇಗಿದೆ ಎಂದು ಕೇಳಲಿಲ್ಲವೇಕೆ?”

ಎನ್ನಲು,

ಎಂದೀ ಸದಾಶಿವಂ ಪಡಿನುಡಿಗೊರಲ್ದೇಳ್ದು

ಮುಂದುವರಿವಳಲಿಂದ ಕಂಬನಿಗಳುದುರಲಕ-

ಟೆಂದೀತನಂದು ನಿಮ್ಮಂ ಪೋಲ್ವ ಮತಸುಧಾರಕಭೂತಿಗಳಾರು ಧಾರಿಣಿಯೊಳು

ಮುಂದೀ ತೆರದ ಮಹಾಶಿವಯೋಗಿಯವತರಿಸಿ

ಬಂದೊಡೆಮ್ಮಿ ಸಮಾಜದ ಪುಣ್ಯವೆಂದು ಮನ

ದಂದಾಡಿದಂ ಜಗದ್ಗುರುವರಂ ಪಲುಬಿದಂ ಪೆರ್ಚಿದನುತಾಪದಿಂದ

ಭಾವಾರ್ಥ : ಜಗದ್ಗುರುಗಳಿಗೆ ಕುಮಾರಸ್ವಾಮಿಗಳಲ್ಲಿರುವ ಅಪರಿಮಿತ ಸಮಾಜೋದ್ಧಾರದ, ಹಂಬಲವ, ತಿಳಿದು, ಜಗದ್ಗುರುಗಳ ಕಣ್ಣುಗಳು ಹನಿಗೂಡಿದವು. ಗದ್ಗದಿತರಾಗಿ “ನಿಮಗೆ ಸರಿ ಸಮಾನರಾದ ಸಮಾಜ ಚಿಂತಕರು, ಇಂದಿನ ದಿನಮಾನಗಳಲ್ಲಿ ಯಾರೂ ಇಲ್ಲ. ಮುಂದೆ ಈ ತೆರದ ಮಹಾಶಿವಯೋಗಿ ಅವತರಿಸಿ ಬಂದರೆ, ಅದು ನಮ್ಮ ಸಮಾಜದ ಪುಣ್ಯ” ಎಂದು ಉದ್ಗರಿಸಿದರು, ದುಃಖತಪ್ತರಾದರು.

(ಸೌಜನ್ಯ: ಕವಿರತ್ನ ದ್ಯಾಂಪೂರ ಚನ್ನ ಕವಿಗಳು “ಹಾನಗಲ್ಲ ಶ್ರೀಕುಮಾರೇಶ್ವರ ಪುರಾಣ” ವ್ಯಾಖ್ಯಾನ ಪೂಜ್ಯ ಅಭಿನವ ಸಿದ್ದಾರೂಢ ಸ್ವಾಮಿಗಳು )

೧೯-೦೨-೧೯೩೦ ರಂದು ಲಿಂಗೈಕ್ಯರಾದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಕ್ರಿಯಾ ಸಮಾಧಿಯ ಕಾರ್ಯಕ್ರಮಕ್ಕೆ ದಯಮಾಡಿಸಿ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ಅಂತಿಮ ಗೌರವ ಸಲ್ಲಿಸಿದ್ದು ಚರಿತ್ರಾರ್ಹವಾಗಿದೆ ,

೧೯೩೧ ರಲ್ಲಿ ಹುಬ್ಬಳ್ಳಿ ಲೋಕಮತದ ಸಂಪಾದಕರಾದ ವ್ಹಿ. ಬಿ. ಪುರಾಣಿಕರು ಸಂಪಾದಿಸಿದ ‘ಸ್ಮಾರಕ ಚಂದ್ರಿಕೆ’ಯಲ್ಲಿ ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳ ಲೇಖನದ ಪೂರ್ಣಪಾಠ.ಸಂಕುಚಿತ ಮನೋಭಾವದ ಮಹಾನುಭಾವರಿಗೆ ಸ್ಪಷ್ಠ ಉತ್ತರ  ನೀಡುತ್ತದೆ.

ಶ್ರೀ ಮನ್ನಹಾರಾಜ ನಿರಂಜನ ಜಗದ್ಗುರು ಜಯದೇವ

ಶ್ರೀ ಮುರುಘರಾಜೇಂದ್ರ ಮಹಾಸ್ಟಾಮಿಗಳು,

ಮುರಘಾಮಠ, ಚಿತ್ರದುರ್ಗ

ಸಂದೇಶ ಕೃಪೆ: ಸ್ಮಾರಕ ಚಂದ್ರಿಕೆ ಪ್ರಕಟಣೆ ೧೯೩೧.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರ ಪರಿಚಯವು ನಾವು ಕಾಶಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಕಾಲದಿಂದಲೂ ಉಂಟು. ಇವರು ದೂರದರ್ಶಿಗಳು,ಶಿವಾನುಭವಿಗಳು, ಆಧ್ಯಾತ್ಮಿಕ ವಿಚಾರದಲ್ಲಿ ಸುಜ್ಜರು ಮತ್ತು ಸಮಾಜದ ಹಿತಕ್ಕೋಸ್ಕರ ಅವಿಶ್ರಾಂತ ಶ್ರಮವನ್ನು ವಹಿಸಿ ಕಾರ್ಯನಿರ್ವಹಿಸುವದರಲ್ಲಿ ಮೊದಲನೆಯವರು ಎಂದು ಶ್ಲಾಘಿಸಿಕೊಳ್ಳಲು ಅರ್ಹರಾಗಿದ್ದರು. ಲೌಕಿಕ ಮತ್ತು ಪಾರಮಾರ್ಥಿಕ ವಿದ್ಯಾಭ್ಯಾಸಗಳನ್ನು ಮಾಡುತ್ತಿದ್ದ ನಮ್ಮ ಜನಾಂಗದವರಿಗೆ ಕೈಲಾದ ಮಟ್ಟಿಗೆ ಮೊದಲಿನಿಂದಲೂ ಸಹಾಯ ಮಾಡುತ್ತಿದ್ದರೆಂಬುದಕ್ಕೆ ಕಾಶಿಯಲ್ಲಿ ಅಭ್ಯಾಸ ಮಾಡುವಾಗ ನಮಗೂ, ಇನ್ನಿತರರಿಗೂ ಸಹಾಯ ಮಾಡಿದುದೇ ನಿದರ್ಶನವಾಗಿದೆ.

ನಮ್ಮನ್ನು ಶ್ರೀ ೧೦೮ ಶ್ರೀ ಜಗದ್ಗುರು ಪೀಠಾಧಿಕಾರಕ್ಕೆ ಬರಮಾಡಿದವರು ಇವರೇ ಆಗಿದ್ದರು. ಬಿದರಿ ಮತ್ತು ಸವದತ್ತಿ ವಿರಕ್ತಮಠಗಳ ಶ್ರೀ ಕುಮಾರ ಸ್ವಾಮಿಗಳು ವಿರಕ್ತಾಶ್ರಮಿಗಳಲ್ಲಿ ಶ್ರೇಷ್ಠತರ ಯೋಗ್ಯತಾ ಸಂಪನ್ನ ಯತಿಪುಂಗವರಾಗಿದ್ದರು. ಇವರು ಸವದತ್ತಿಯ ಪುರಾಣ ಸಮಾಪ್ತಿ ಮಹೋತ್ಸವಕ್ಕೆ ಅಥಣಿ ಶ್ರೀ ತಪಸ್ವಿ ಮುರಘೇಂದ್ರ ಸ್ವಾಮಿಗಳೇ ಮೊದಲಾದ ವಿರಕ್ತ ಶ್ರೇಷ್ಠರನ್ನು ಮತ್ತು ಶ್ರೀ ಕಿತ್ತೂರು ರೇವಣಸಿದ್ಧಪ್ಪನವರೇ ಮೊದಲಾದ ದೊಡ್ಡ ಮನುಷ್ಯರನ್ನು ಬರಮಾಡಿಕೊಂಡಿದ್ದರು.

ಆ ಕಾಲದಲ್ಲಿ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳೇ ವೀರಶೈವ ಮಹಾಸಭೆಯನ್ನು ಕೂಡಿಸಬೇಕೆಂದು ಸಂಕಲ್ಪಿಸಿ ನಮ್ಮ ಅಧ್ಯಕ್ಷತೆಯಲ್ಲಿ ಒಂದು ಸಭೆಯನ್ನು ಏರ್ಪಡಿಸಿ ಸುಸಂಕಲ್ಪದಂತೆ ಮಹಾಸಭೆಯನ್ನು ಮಾಡಬೇಕೆಂದು ನಿರ್ಣಯ ಮಾಡಿಸಿದವರಾದುದರಿಂದ ಇವರೇ ವೀರಶೈವ ಮಹಾಸಭಾ ಸ್ಥಾಪಕರಾಗಿರುತ್ತಾರೆ.

ಇವರು ಮಹಾ ತಪೋನಿಷ್ಠರು, ಅಸಾಧಾರಣ ಕಾರ್ಯನಿರ್ವಾಹಕರು, ಅಸಮರ್ಥರನ್ನು ಸಮರ್ಥರನ್ನಾಗಿ ಮಾಡುವುದರಲ್ಲಿ ಒಳ್ಳೆ ದಕ್ಷರು ಆಗಿದ್ದರು, ಆದುದರಿಂದಲೇ ಮನೋನಿಗ್ರಹದ ಮೂಲಕ ಚಿತ್ತಶುದ್ಧಿಯಾಗುವುದಕ್ಕೆ ಸಾಧನವಾದ ಶಿವಯೋಗ ಮಂದಿರವೆಂಬ ಒಂದು ಮಹತ್ವದ ಸಂಸ್ಥೆಯನ್ನು ಸ್ಥಾಪಿಸಿದರು.

ನಮಗೂ ಮತ್ತು ಇವರಿಗೂ ಕೆಲವು ವಿಷಯಗಳಲ್ಲಿ ಮತಭೇದಗಳಿದ್ದರೂ ಉದ್ದೇಶದಲ್ಲಿ ಭೇದವಿರಲಿಲ್ಲ ಇವರು ಈ ಸಮಯದಲ್ಲಿ ಶಿವೈಕ್ಯರಾದುದರಿಂದ ಸಮಾಜದಲ್ಲಿ ಕೆಲವು ದುರಹಂಕಾರಿಗಳು ಉಂಟುಮಾಡಿರುವ ಅಶಾಂತತೆಯನ್ನು ನಿವಾರಣೆ ಮಾಡಲು ಬಹುಪ್ರಯಾಸವಾಗಿದೆ.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳಿಂದ ಸ್ಥಾಪಿತವಾದ ಕಾರ್ಯಗಳು ಅಭಿವೃದ್ಧಿಯನ್ನು ಹೊಂದಿ ಸಮಾಜಕ್ಕೆ ಓತಸಾಧಕಗಳಾಗುವದೇ ಅವರ ನಿಜವಾದ ಸ್ಮಾರಕವು. ಆದುದರಿಂದ… ಅಂತಹ ಸ್ಥಿತಿಯು ಪ್ರಾಪ್ತ ವಾಗಲೆಂದು ಹಾರೈಸೋಣವಾಗಿದೆ.

ಇಂದಿಗೂ ಧಾರವಾಡದ ಶ್ರೀ ಮುರುಘಾಮಠ ದಲ್ಲಿ ಪೂಜ್ಯ ಅಥಣಿ ಶಿವಯೋಗಿಗಳು ಜಪ ಮಾಡಲು ಬಳಸಿದ ರುದ್ರಾಕ್ಷಿ ಸರದ ಜೊತೆಗೆ ,ಚಿತ್ರದುರ್ಗದ ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಧರಿಸಿದ ವಿಭೂತಿ ಮತ್ತು ಶ್ರೀ ಕುಮಾರ ಶ್ರೀಗಳು ಧರಿಸಿದ ವಿಭೂತಿಯನ್ನು ಸಂಗ್ರಹಿಸಿ ಜತನದಿಂದ ಕಾಪಾಡಿಕೊಂಡು ಬಂದಿರುವದು ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳೆಂದೇ ಎಂದು ಭಾವಿಸುತ್ತೇನೆ.

ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ವಿುಕ ಯುಗಪಲ್ಲಟಕ್ಕೆ ಪ್ರಮುಖವಾಗಿ ಕಾರಣರಾದವರಲ್ಲಿ, ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಮತ್ತು ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ಎಂದೆಂದೂ ಪ್ರಾತಃಸ್ಮರಣೀಯರು.

ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ಮಧ್ಯಕರ್ನಾಟಕದ ಸಾಮಾಜಿಕ ಮತ್ತು ಧಾರ್ವಿುಕ ವಿಕಾಸಕ್ಕೆ ಕಾರಣರಾದದ್ದು ಚಾರಿತ್ರಿಕ ಸತ್ಯ.

ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ವಿದ್ಯಾರ್ಥಿಗಳಿಗಾಗಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಜೀವಂತ ದೇವರಾಗಿದ್ದರು

ಶ್ರೀಗಳು ಹೋದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. ಯಾವುದೆ ಊರಿಗೆ ಹೋದರು ಭಕ್ತರು ನೀಡಿದ ಕಾಣಿಕೆಯಲ್ಲಿ ಅದೆ ಊರಿನಲ್ಲಿ ವಿದ್ಯಾರ್ಥಿ ನಿಲಯಗಳನ್ನು ತೆರದಿರುವುದು ಇಂದಿಗೂ ಕಾಣಬಹುದು. ಭಕ್ತರ ಹಣವನ್ನು ತಮ್ಮ ಮಠಕ್ಕೆ ತರುತ್ತಿರಲಿಲ್ಲ. ಸಮಾಜ ಸೇವೆ ಅವರ ಮುಖ್ಯ ಗುರಿಯಾಗಿತ್ತು.

ಸಮಾಜದಲ್ಲಿರುವ ಅಜ್ಞಾನ, ಅಂಧಕಾರ ಹೋಗಲಾಡಿಸಲು ವಿದ್ಯೆ ದಿವೌಷಧ. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇದೇ ಮೂಲಾಧಾರವೆಂದು ನಂಬಿದ್ದ ಶ್ರೀಗಳ ಸಂಕಲ್ಪ ಶಕ್ತಿ ಮತ್ತು ದೂರದರ್ಶಿತ್ವದಿಂದಾಗಿ ಚಿತ್ರದುರ್ಗ, ಬೆಂಗಳೂರು, ತಿಪಟೂರು, ದಾವಣಗೆರೆ, ಧಾರವಾಡ, ನರಗುಂದ, ಕೊಲ್ಲಾಪುರ, ಹಾವೇರಿ, ಅಥಣಿ, ಅರಸೀಕೆರೆ, ನಿಪ್ಪಾಣಿ, ಜಯದೇವ ವಾಡಿ(ಕಾಶಿ) ಹೀಗೆ ಪ್ರಮುಖ ನಗರ,ಪಟ್ಟಣಗಳಲ್ಲಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಅಸಂಖ್ಯ ವಿದ್ಯಾರ್ಥಿಗಳ ಬಾಳಿಗೆ

ಬೆಳಕಾಗಿದೆ.

ಸಮಾಜದ ಅಂತರಂಗದ ಶುದ್ಧಿಗೆ ಶ್ರೀಮಧ್ವೀರಶೈವ ಶಿವಯೋಗಮಂದಿರ ,ಬಹಿರಂಗದ ಅಭಿವೃದ್ಧಿಗೆ ಅಖಿಲ ಭಾರತ ವೀರಶೈವ ಮಹಾಸಭೆ ಗಳನ್ನು ಸ್ಥಾಪಿಸಿ ಸತ್ತು ಹೋದ ಸಮಾಜಕ್ಕೆ ಜೀವ ತುಂಬಿದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಸಮಾಜ ಸಂಜೀವಿನಿ ಮತ್ತು ಕಾರಣಿಕ ಯುಗ ಪುರುಷರು.

ಪೂಜ್ಯರೀರ್ವರ ಸ್ಮರಣೆ ನಮ್ಮ ಬದುಕಿಗೆ ಬೆಳಕಾಗಲಿ . *************

ಶ್ರೀಕಂಠ.ಚೌಕೀಮಠ

ಅಧ್ಯಕ್ಷ ಅಖಿಲ ಭಾರತ ವೀರಶೈವ ಮಹಾ ಸಭಾ ದೆಹಲಿ ರಾಜ್ಯ ಘಟಕ ನವದೆಹಲಿ

ಅಧ್ಯಕ್ಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ ಮತ್ತು ಕರ್ನಾಟಕ -೯೯೧೦೧೫೯೨೪೫

Related Posts