ಕವಿ : ..ಡಾ. ಕಿರಣ ಪೇಟಕರ
Plastic Surgeon.MBBS, MS, MCh, and DNB Bengaluru.
ಪಂಪನ ನಂದನ ದೇಶದೊಳು
ಸೊಂಪಿನ ಕಬ್ಬಿಗ ವೇಶದೊಳು
ಬನವಾಸಿಯ ಬನಸಿರಿ ಗಾನ
ಇಂಪಲಿ ಹಾಡುವ ಕೋಗಿಲೆಯು
ಕೇಳಿದೆ ಹಾರುವ ದುಂಬಿಗೆ
“ತುಂಬಿತೆ ಜೇನಿನ ಬಿಂದಿಗೆ?”
ದುಂಬಿಯು ಗುಂಯ್ಗುಡುತೆಂದಿತು
“ವಿರಕ್ತಮಠದ ಬನದಲಿ,
ಅಜ್ಜನ ದರುಶನವಾಯಿತು;
ಅಮೃತ ಪಾಶನವಾದಡೆ,
ಜೇನಿನ ಗೊಡವೆಯದೇತಕೆ?”
ತೆಂಕಣ ಗಾಳಿಯು ಸುಯ್ಯನೆ ಸುಳಿದು
ತೇಲಿಸಿ ತಂದಿದೆ ಪರಿಮಳವ
ಮೊಲ್ಲೆ ಸಂಪಿಗೆ ಜಾಜಿ ಸೇವಂತಿಗೆ
ಗಂಧವು ಸೂಸಿದೆ ಸುಮಘಮವ
ನಿಲ್ಲಿಸಿ ಕೇಳಿದೆನೆಲ್ಲಿಗೆ ಪಯಣ?
ನಿಲದೇ ಓಡಿವೆ ಸಡಗರದಿ
“ಮಠವನು ಬೇಗ ತಲುಪುವ ಬಾರಾ
ಕುಮಾರಸ್ವಾಮಿಗಳ ಪೂಜೆಯ ಸಮಯದಿ”
ಆನಿಕೆರೆಯಾಚೆ ಮೂಡಿ ಮೇಲೇರಿದ
ದಟ್ಟಕಪ್ಪನೆ ಮೋಡಗಳು
ಊರ ಗಡಿಯೊಳಗೆ ನಿಧಾऽ..ನಕೆ
ತೊನೆದಾಡುತ ತೆವಳುತಿವೆ ನೋಡು
ಪುಣ್ಯಭೂಮಿ ಹಾನಗಲ್ಲಿನ ಮಣ್ಣಲಿ
ಮಳೆಯಾಗಿ ಸುರಿದು; ಜುಳುಜುಳನೆ ಹರಿದು
ಶಿವಶರಣರ ಪಾದ ತೊಳೆವ
ಪುಳಕದೊಳಿವೆ ನೋಡು
ಕಾಣದ ದೇವರ ಕಾಯಕದಿ ತೋರಿ
ಕರ್ಮಸಿದ್ಧಾಂತವ ಲೋಕಕೆ ಸಾರಿ
ಜನಮಾನಸದಲಿ ನೆಲೆನಿಂತ
ಗುರುವಿಗೆ ಶರಣು ಕೋಟಿ ಶರಣು
ಶರಣು ಶರಣು ಶರಣು ಶರಣು ಶರಣು
..ಡಾ. ಕಿರಣ ಪೇಟಕರ