ಶ್ರೀಕಂಠ.ಚೌಕೀಮಠ.
ಸಂಪಾದಕರು.”ಶ್ರೀಕುಮಾರ ತರಂಗಿಣಿ “ ಮಾಸಿಕ ಬ್ಲಾಗ್
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ
ಸಹೃದಯ ಓದುಗರಿಗೆ ,
ಈ ತಿಂಗಳ ಬ್ಲಾಗನಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಅತ್ಯಂತ ಹತ್ತಿರದಿಂದ ಕಂಡ ಇಬ್ಬರು ಮಹಾನುಭಾವರ ಉತ್ಕೃಷ್ಟ ಲೇಖನಗಳನ್ನು ಪ್ರಕಟಿಸಲು ಅತೀವ ಸಂತಸವಾಗುತ್ತಿದೆ.ಆ ಲೇಖನಗಳ ಆಯ್ದ ಭಾಗದ ಪ್ರಾಮಾಣಿಕ ಅನಿಸಿಕೆಗಳು ಇಂತಿವೆ
ವಚನ ವಾಙ್ಮಯದ ಮಹತ್ವ: ಲೇಖಕರು-ಲಿಂ. ಫ. ಗು. ಹಳಕಟ್ಟಿ, ವಿಜಾಪೂರ
ಶರಣರ ನಡೆ ನುಡಿ ಆಚಾರ ವಿಚಾರಗಳಂತೆ ವರ್ತಿಸುವದೇ ತಮ್ಮ ಜೀವಿತದ ಕರ್ತವ್ಯವೆಂದು ತಿಳಿದು ಹಾಗೆ ನಡೆಯುವ ಜನರು ಕೆಲವು ವರ್ಷಗಳ ಹಿಂದೆ ಬಹು ಜನರು ದೊರಕುತ್ತಿದ್ದರು. ಇವರು ವಚನ ಶಾಸ್ತ್ರ ಗ್ರಂಥವನ್ನು ಯಾವಾಗಲೂ ಅತಿ ಭಕ್ತಿಯಿಂದ ಓದುತ್ತಿದ್ದರು ಮತ್ತು ಶಕ್ತ್ಯಾನುಸಾರ ಹಾಗೆ ನಡೆಯುತ್ತಲೂ ಇದ್ದರು. ಆದರೆ ಇಂಥ ಜನರು ವೀರಶೈವ ಸಮಾಜದಲ್ಲಿ ಈಗ ಬಹು ವಿರಳರಾಗುತ್ತಲಿದ್ದಾರೆ. ಇಷ್ಟೇ ಅಲ್ಲ, ವಚನ ಶಾಸ್ತ್ರವೆಂದರೆ ವೀರಶೈವರ ಒಂದು ಮಹತ್ವದ ಧಾರ್ಮಿಕ ವಾಙ್ಮಯವೆಂಬ ತಿಳುವಳಿಕೆಯು ಸಹ ಜನರಲ್ಲಿ ಹಾರಿ ಹೋಗಿರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ವರ್ತಿಸಿದವರೆಂದರೆ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೇ ಇದ್ದಾರೆ. ಈ ಮಹಾನುಭಾವರು ಶಿವಶರಣರ ನಡೆ ನುಡಿಗಳಲ್ಲಿ ಬಹು ಶ್ರದ್ಧೆಯನ್ನು ವಹಿಸಿದವರಾಗಿದ್ದರು ಮತ್ತು ಅವರು ವಚನ ಶಾಸ್ತ್ರ ತತ್ವಗಳನ್ನು ಬಲ್ಲವರು ಎಲ್ಲಾದರೂ ಇದ್ದಾರೆಂದು ತಿಳಿದ ಕೂಡಲೆ ಅವರಲ್ಲಿಗೆ ಹೋಗಿ ಅವುಗಳ ತತ್ವಗಳ ಬಗ್ಗೆ ವಿಚಾರ ಮಾಡಲು ಮುಂದುವರೆಯುತ್ತಿದ್ದರು. ಈ ದೃಷ್ಟಿಯಿಂದ ಶ್ರೀ ಸ್ವಾಮಿಗಳವರ ಮೇಲು ಪಂಕ್ತಿಯನ್ನು ಪ್ರತಿ ಒಬ್ಬ ವೀರಶೈವನು ಈ ಕಾಲಕ್ಕೆ ಅನುಸರಿತಕ್ಕದ್ದಾಗಿದೆ
ಶಿವಶರಣರ ಸಂದೇಶ; ಹರ್ಡೆಕರ ಮಂಜಪ್ಪನವರು
ಆದಕಾರಣ ನೈತಿಕ ತತ್ವಗಳನ್ನು ಆಚರಣೆಯಲ್ಲಿ ತಂದ ಮಹಾತ್ಮರು ಧರ್ಮಾಚಾರಗಳನ್ನು ಆಚರಿಸಿದಾಗಲೇ ಅವುಗಳ ದಿವ್ಯ ತೇಜವು ಪ್ರಕಟವಾಗುತ್ತದೆ. ಲಿಂಗಪೂಜೆ, ಜಪ, ತಪಾದಿಗಳ ಮಹತ್ವವು ಆಗಲೇ ವ್ಯಕ್ತವಾಗುತ್ತದೆ. ಈ ಪ್ರಕಾರ ನೈತಿಕ ಮತ್ತು ಧಾರ್ಮಿಕ ಬಲಗಳುಳ್ಳವರೇ ಜಗತ್ತಿನಲ್ಲಿ ಅವತಾರಿ ಪುರುಷರೆಂದು ಎಣಿಸಲ್ಪಡುತ್ತಿದ್ದಾರೆ. ಯಾವ ಮಹನೀಯರಲ್ಲಿ ಯಾವ ಪ್ರಮಾಣದಿಂದ ಉಭಯಶಕ್ತಿಗಳು ಇರುತ್ತವೆಯೋ ಆ ಪ್ರಮಾಣದಿಂದ ಅವರು ಲೋಕವಂದ್ಯರೂ ಲೋಕೋದ್ಧಾರಕರೂ ಆಗುತ್ತಾರೆ. ಲಿಂಗೈಕ್ಯರಾದ ಪರಮ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳವರು ಶಿವಶರಣರ ಸಂದೇಶದಂತೆ ನೈತಿಕ ಮತ್ತು ಧಾರ್ಮಿಕ ಬಲಗಳನ್ನು ಹೊಂದಿದ ಮಹಾವಿಭೂತಿಗಳಾಗಿದ್ದುದರಿಂದಲೇ ಸಮಾಜೋದ್ಧಾರದ ಅನೇಕ ಮಹತ್ಕಾರ್ಯಗಳು ಜರುಗಿ ಸಮಾಜಕ್ಕೆ ಆ ಮಹಾಪೂಜ್ಯಪಾದರು ಅತ್ಯಂತ ವಂದ್ಯರಾದರು ಶಿವಶರಣರ ಈ ದಿವ್ಯ ಸಂದೇಶವನ್ನು ತೇಜೋಮಯವಾದ ಈ ಸತ್ಯ ಸಂದೇಶವನ್ನು, ನಿರ್ದಾಕ್ಷಿಣ್ಯದ ಈ ಸ್ಪಷ್ಟ ಸಂದೇಶವನ್ನು, ಕೇಳಿ ಜಾಗೃತರಾಗಿ ತಮ್ಮಲ್ಲಿ ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬುದೇ ಇಂತಹ ಮಹಾವಿಭೂತಿಗಳ ಸ್ಮಾರಕದ ಉದ್ದೇಶವಾಗಿದೆ. ಈ ಉದ್ದೇಶವು ನೆರವೇರುವಂತೆ ನಮ್ಮಲ್ಲಿ ನೈತಿಕ ಬಲವು ಹೆಚ್ಚಿ ಆ ಮೂಲಕ ಸಮಾಜದಲ್ಲಿ ಸಮಾನತ್ವ ಮತ್ತು ಸ್ವಾತಂತ್ರ್ಯಗಳುಂಟಾಗಿ ಸುಖಶಾಂತಿಗಳು ನೆಲೆಸುವ ಸುಸಮಯವು ಜಾಗ್ರತೆ ಪ್ರಾಪ್ತವಾಗಲಿ.
ಶ್ರೀಕುಮಾರ ತರಂಗಿಣಿ ಅಗಸ್ಟ ೨೦೨೪ ಸಂಚಿಕೆಯ ಲೇಖನಗಳ ವಿವರ
- ಕಾವ್ಯ : “ಶಿವಮೂರ್ತಿಯೆ ತವೆ ಪೂಜಿಸುವೆ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೭ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ಕಾರುಣಿಕ ಕುಮಾರಯೋಗಿ ಧಾರವಾಹಿ: ಗುರು-ವಿರಕ್ತ ಸಹಕಾರ ಲೇಖಕರು-ಜ.ಚ.ನಿ
- ಸದ್ಗುಣ ದುರ್ಗುಣ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು
ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
- ವಚನ ವಾಙ್ಮಯದ ಮಹತ್ವ: ಲೇಖಕರು-ಲಿಂ. ಫ. ಗು. ಹಳಕಟ್ಟಿ, ವಿಜಾಪೂರ
- ಶಿವಶರಣರ ಸಂದೇಶ; ಹರ್ಡೆಕರ ಮಂಜಪ್ಪನವರು
-ಶ್ರೀಕಂಠ.ಚೌಕೀಮಠ.
ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ