ಲೇಖಕರು : ಶ್ರೀ ವಿಜಯಪ್ರಭು ದೇವರು ಬೂದಗುಂಪಾ.
(ಸುಕುಮಾರ ಬ್ಲಾಗ ನ ಮಾರ್ಗದರ್ಶಿಗಳು ,ಪ್ರೋತ್ಸಾಹಕರೂ ಆಗಿದ್ದ ಪರಮ ಪೂಜ್ಯ ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರಿಗೆ ಸುಕುಮಾರ ಬ್ಲಾಗನ ನುಡಿನಮನ )
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ
ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೇ
ಭವಬಂಧನವ ಬಿಡಿಸಿ ಪರಮಸುಖವ ತೊರಿದ ಗುರುವೇ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೇ ನಮೋ ನಮೋ
ಶರಣ ಬಂಧುಗಳೇ ಈ ನಾಡಿನಲ್ಲಿ ಹಲವಾರು ಸಾಧಕರು ತಮ್ಮ ಸಾಧನೆಯ ಮೂಲಕ ಸಿದ್ಧಿಯ ಶಿಖರವನ್ನು ತಲುಪಿದ್ದಾರೆ.ಆ ಸಿದ್ದಿಯ ಶಿಖರ ತಲುಪಲು ಮುಕ್ಯವಾಗಿ ಬೇಕಾಗಿರುವುದು ಗುರುವಿನ ಮಾರ್ಗ ದರ್ಶನ,ಈ ಬಾಳೆಂಬ ನೌಕೆಯನ್ನ ನಡೆಸುವ ಅಂಬಿಗನವನು,ನರಜನ್ಮ ದಿಂದ ಹರಜನ್ಮನೀಡಿ,ಭವಿತನದಿಂದ ಭಕ್ತನನ್ನ ಮಾಡಿ,ಭವಬಂಧನದಿಂದ ಪರಮಸುಖನೀಡಿ ,ಹೀಗೆ ಎಲ್ಲದರಿಂದಲು ಪಾರುಮಾಡುತ್ತಾ ಮುಕ್ತಿಯನ್ನ ನೀಡುವವನು ಗುರು.ಅದಕ್ಕಾಗಿಯೇ “ನ ಗುರೂರಧಿಕಂ” ಎನ್ನುವರು. ಬಂಧುಗಳೇ ಈ ಎಲ್ಲ ಮಾತುಗಳ ಹಿಂದೆ ಒಂದು ಅಮೋಘವಾದ ಶಕ್ತಿ ಇದೆ.
ಬಳಲಿ ಬೆಂಡಾಗಿ ಬರಡಾದ ಬದುಕಿಗೆ ಚೈತನ್ಯದ ಚಿತೂಹಾರಿಯಂತೆ, ಕಷ್ಟ-ಕಾರ್ಪಣ್ಯ ದಲ್ಲಿರುವ ಭಕ್ತರ ಬಾಳಿಗೆ ಬೆಳಕಾಗಿ, ನೆಲೆಯಾಗಿ, ಸ್ಪೂರ್ತಿಯಾಗಿ, ಕುಮಾರ ಶಿವಯೋಗಿಗಳ ತತ್ವ ನಿಷ್ಠರಾಗಿ ಸಮಾಜದ ಸೇವೆಯಲ್ಲಿ ತಮ್ಮನ್ನೆ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು, ಎನ್ನಂತ ಹಲವಾರು ಸಾಧಕರ ಬಾಳ ಬೆಳಗುವ ನಂದಾದೀಪವಾಗಿ ಬೆಳಗುತ್ತಿರುವ ಪೂಜ್ಯ ಗುರುಗಳೇ ಜಗದ್ಗುರು ಸಂಗನಬಸವ ಮಹಾಶಿವಯೋಗಿಗಳು.
ಪೂಜ್ಯಗುರುಗಳು ಶಿವಯೋಗಮಂದಿರದ ಕುಮಾರೇಶ್ವರರ ಸನ್ನಿಧಾನದಲ್ಲಿ ಐದು ವರ್ಷಗಳವರೆಗೆ ಅಧ್ಯಯನ ನಡೆಸಿ ಅಧ್ಯಾತ್ಮ, ಶಿವಯೋಗ, ಲಿಂಗ ನಿಷ್ಠೆ, ಅನುಷ್ಠಾನ, ಯೋಗ, ಸಂಸ್ಕೃತ, ಹೀಗೆ ಎಲ್ಲದರ ಅಪಾರ ಅನುಭವವನ್ನು ಪಡೆದುಕೊಂಡು, ಮಂದಿರದ ಆಚಾರ-ವಿಚಾರಗಳನ್ನು ತಪ್ಪದೇ ಪಾಲಿಸುತ್ತಾ ತ್ರಿಕಾಲ ಲಿಂಗಪೂಜಕರಾಗಿ 85 ನೇ ವಯೋಮಾನದಲ್ಲಿಯೂ ಸಹಿತ ಸ್ನಾನ ಪೂಜಾದಿಗಳ ನಂತರವೇ ಪ್ರಸಾದ ಸ್ವೀಕರಿ ಕುಮಾರೇಶ್ವರರನ್ನ ಸಂಪೂರ್ಣ ನಂಬಿ ಬದುಕುತ್ತಿರುವ ಪೂಜ್ಯ ಗುರುಗಳು. ಹೊಸಪೇಟೆ- ಬಳ್ಳಾರಿ, ಹಾಲಕೆರೆಯ ಸಂಸ್ಥಾನಮಠದ ಹಾಗೂ ಶಿವಯೋಗ ಮಂದಿರದ ಸಂಸ್ಥೆಯ ಅಧ್ಯಕ್ಷರಾಗಿ ಸಮಾಜಸೇವೆಗೆ ಕಟಿಬದ್ಧರಾಗಿ ನಿಂತವರು.
2009 ಫೆಬ್ರುವರಿ ರಥಸಪ್ತಮಿಯಂದು ನಾನು ಶಿವಯೋಗ ಮಂದಿರದ ಕುಮಾರ ಶಿವಯೋಗಿಗಳ ಸನ್ನಿಧಾನಕ್ಕೆ ಅಧ್ಯಯನಕ್ಕೆಂದು ಹೋದೆ ಕುಮಾರ ಶಿವಯೋಗಿಗಳ ಗದ್ದುಗೆ ದರ್ಶನ ನಂತರ, ಪೂಜ್ಯ ಗುರು ಜಗದ್ಗುರು ಸನ್ನಿಧಿಯವರ ದರ್ಶನವನ್ನ ಪಡೆದುಕೊಂಡೆ ಅಳುತ್ತಿರುವ ಬಾಲಕನಿಗೆ ಕಲ್ಲುಸಕ್ಕರೆಯನ್ನನೀಡಿ ಆಶೀರ್ವದಿಸಿ ಇನ್ನ ಮುಂದೆ ನಿನ್ನ ಜೀವನದ ತಂದೆ- ತಾಯಿಯೆಂದರೆ ಕುಮಾರ ಶಿವಯೋಗಿಗಳೇ ಎಂದು ತಿಳುಹೇಳಿ ಮುದ ನೀಡಿದ ಮೊದಲ ಗುರುಗಳು.
ಸಮಾಜ ಸೇವೆಯೇ ಕುಮಾರ ಸೇವೆ
ಹೇಗೆ ಪೂಜ್ಯ ಕುಮಾರ ಶಿವಯೋಗಿಗಳು ಸಮಾಜದಲ್ಲಿ ಲಿಂಗವನ್ನ ಕಂಡು ಸಮಾಜಸೇವೆಯೇ ಲಿಂಗಪೂಜೆ ಎಂದು ಹೇಗೆ ಪೂಜಿಸಿದರು, ಹಾಗೆ ಪೂಜ್ಯ ಗುರುಗಳು ಅವರ ಸತ್ಪಥದಲ್ಲಿ ನಡೆದು ಸಮಾಜಸೇವೆಯೆ ಭಗವಂತನ ಸೇವೆ ಎಂದು ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪೂಜ್ಯ ಗುರುಗಳು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ,ದೀನ-ದಲಿತ ಮಕ್ಕಳಿಗೆ, ಬಡಮಕ್ಕಳಿಗೆ, ನಿರಾಶ್ರಿತರಿಗೆ, ಅಷ್ಟೇ ಅಲ್ಲದೆ ಹಲವಾರು ಪ್ರತಿಭಾವಂತ ಮಕ್ಕಳಿಗಾಗಿ, ಹಲವಾರು ಶಿಕ್ಷಣ ಸಂಸ್ಥೆಗಳನ್ನ ಸ್ಥಾಪಿಸಿ, ಉಚಿತ ಪ್ರಸಾದ ನಿಲಯಗಳನ್ನ ತೆರೆದು ಅನ್ನ ಅಕ್ಷರ ಅರಿವು ನೀಡುತ್ತಿರುವ ಮಾತೃ ಹೃದಯದ ಮಮತಾ ಮೂರ್ತಿಗಳು.
ಸರಳತೆಯ ಸೂತ್ರದಲಿ ಸುಖವ ಕಂಡವರು
ಪ್ರತಿಯೊಬ್ಬ ಸಾಧಕರ, ಸಂತರ, ಮಹಾತ್ಮರ ಜೀವನವನ್ನ ಅವರ ನಡತೆಯಿಂದ ಅಳೆಯಲಾಗುತ್ತದೆ. ಸಾಧನೆಯ ಸಿದ್ಧಿಯ ಶಿಖರ ತಲುಪಿದ ಮೇಲೆ ಅವರ ನಡತೆಯಲಿರುವ ವಿನಮ್ರತೆಯನ್ನ, ಮಾತಿನಲ್ಲಿರುವ ಮಧುರತೆಯನ್ನ, ಕಾರ್ಯದಲ್ಲಿರುವ ದಕ್ಷತೆಯನ್ನ, ನಿತ್ಯ ಜೀವನದಲ್ಲಿ ಸರಳತೆಯನ್ನ ಅಳವಡಿಸಿಕೊಂಡ ಸಾಧಕರನ್ನ ಪರಿಪೂರ್ಣ ಸಾಧಕರೆಂದು ಗುರುತಿಸುತ್ತಾರೆ. ಅಂತಹ ಮಹಾತ್ಮರ ಸಾಧಕರ ಸಾಲಿನಲ್ಲಿ ನಮ್ಮ ಗುರುಗಳು ಒಬ್ಬರೆಂದು ಹೇಳಲು ಅಭಿಮಾನ ನೂರ್ಮಡಿಯಾಗುತ್ತದೆ.
ಪೂಜ್ಯ ಗುರುಗಳು 50 ವಸಂತಗಳಿಂದ ಮಠಗಳನ್ನ ಆಳುತ್ತಿದ್ದಾರೆ ಆದರೆ ತಮಗಾಗಿ ಎಂದೂ ಒಂದು ವಸತಿಯಕೊಠಡಿಯನ್ನ ಕಟ್ಟಿಸಿ ಕೊಂಡಿಲ್ಲ, ಬಳಲಿ ಬಂದ ಭಕ್ತರಿಗೆ ಕುಳಿತು ಆಶೀರ್ವಾದ ನೀಡುವ ಮುಂಭಾಗದ ಪಲ್ಲಂಗದ ಮೇಲೆ ಸುಖವಾದ ನಿದ್ರೆ, ತಮಗಿಂತಲೂ ವಯಸ್ಸಿನಲ್ಲಿ ಚಿಕ್ಕವರು, ಸ್ಥಾನದಲ್ಲಿ ಚಿಕ್ಕವರಾದವರು ನಮಸ್ಕರಿಸಿದರೆ ಮರಳಿ ಕೈಮುಗಿದು ಶರಣಾರ್ತಿಯನ್ನುವ ಧನ್ಯತೆಯ ಭಾವದ ಮಹಾಶಿವಯೋಗಿ. ವ್ಯಕ್ತಿ ತಪ್ಪುಮಾಡಿದಾಗ ಬೈದು,ತಿದ್ದಿ,ತಿಳಿಪಡಿಸಿ ನಂತರ ಆ ವ್ಯಕ್ತಿಯನ್ನ ಬೈದಿದ್ದಕ್ಕೆ ಮಮ್ಮಲನೆ ಮರಗಿ, ಮರಳಿ ಕರೆಯಿಸಿ ಪ್ರಸಾದ ತೆಗೆದುಕೋ ಎಂದು ಅಪ್ಪಣೆ ಪಡಿಸುವ ಪೂಜ್ಯರು. ಕ್ಷಣಕ್ಷಣಕ್ಕೂ ನಮ್ಮೆಲ್ಲ ತಪ್ಪುಗಳನ್ನು ತಿದ್ದುತ್ತ, ತಿಳಿಹೇಳಿ ಸತ್ಪಥದಲ್ಲಿ ನಡೆಸುತ್ತಿರುವವರು. ಅಂತಹ ಪೂಜ್ಯಗುರುಗಳ ಶಿಷ್ಯರಾಗಿದ್ದು ಏಳು ಜನ್ಮಗಳ ಪುಣ್ಯದ ಫಲವೇ ಆಗಿದೆ.
ಕ್ಷಣ ಕ್ಷಣಕ್ಕೂ ಕುಮಾರ ಯೋಗಿಯ ಧ್ಯಾನ
ಪೂಜ್ಯ ಗುರುಗಳು L L B ಓದಿ ವಕೀಲನಾಗುವ ಕನಸು ಕಂಡಿದ್ದರು,ಆದರೆ ಕುಮಾರ ಶಿವಯೋಗಿಗಳ ಧ್ಯಿವ್ಯ ಪುರಾಣ,ಶ್ರೀಗಳ ಪವಿತ್ರಜೀವನವನ್ನ ಒಳಗೂಂಡ ಕೃತಿಗಳನ್ನ ಓದಿ, ಯತಿಪುಂಗವರ ಅಪ್ಪಟ ಅಭಿಮಾನಿಗಳಾಗಿ, ಸ್ವಾಮಿತ್ವದ ದೀಕ್ಷೆಯತೂಟ್ಟು ಅವರ ತತ್ವಾದರ್ಶಗಳನ್ನ ಅಳವಡಿಸಿಕೊಂಡು ಪ್ರತಿದಿನ ಕುಮಾರೇಶನ ನೆನೆದು ಪ್ರಸಾದತೆಗೆದುಕುಂಡು ಜೀವಿಸುತ್ತಿರುವ ಶ್ರೀಗಳು. 2014ರಲ್ಲಿ ಪೂಜ್ಯ ಗುರುಗಳ ಹೃದಯಕ್ಕೆ (ಸ್ಟಂಟ್ )ನ್ನ ಅಳವಡಿಸಿದರು, ಮಧ್ಯರಾತ್ರಿ ವಿಪರೀತ ಎದೆನೂವು ಕಾಣಿಸಿ ಗುರುಗಳು ತಮ್ಮ ಆಪ್ತ ಶಿಷ್ಯನನ್ನ ಕರೆದು ಇಂದೆ ಭಗವಂತನೆಡೆಗೆ ನಮ್ಮಯಾತ್ರೆ ಎಂದು ಹೇಳಿ,ಮುಖಮಾರ್ಜನೆ ಮಾಡಿಕೂಂಡು ಕುಮಾರೇಶ್ವರ ಪುರಾಣ ಕೈಗೆತ್ತಿಕೊಂಡು ಒಂದೆರೆಡು ಸಂಧಿಯನ್ನ ಓದುವುದರೊಳಗೆ ಎಲ್ಲ ನೋವು ಮಾಯವಾಗಿ 5-6 ವರ್ಷಗಳವರೆಗೆ ಯಾವುದೇ ನೋವಿಲ್ಲದೆ ಜೀವನ ನೆಡೆಸಿದರು. ಇಂದಿಗೂ ಪೂಜ್ಯ ಗುರುಗಳು ಪ್ರತಿನಿತ್ಯ ಕುಮಾರ ಶಿವಯೋಗಿಗಳ ಪುರಾಣವನ್ನ ಪಾರಾಯಣ ಮಾಡುತ್ತಾರೆ. ವ್ಯಕ್ತಿ ಒಂದು ಸಮಾಜದ ಶಕ್ತಿಯನ್ನ ನಂಬಿ ಆ ಶಕ್ತಿಯನ್ನ ಪೂಜಿಸುವ, ಆರಾಧಿಸುವ ಫಲವನ್ನು ಪೂಜ್ಯ ಗುರುಗಳ ಈ ಒಂದು ಪವಾಡದ ಮೂಲಕ ನಾವೆಲ್ಲರೂ ತಿಳಿದುಕೊಳ್ಳಬೇಕಾಗುತ್ತದೆ. ಹಾಗೆ ಪೂಜ್ಯ ಗುರುಗಳು ಸಹಿತ ನಮ್ಮೆಲ್ಲರಿಗೂ ಉಪದೇಶಿಸುವುದು ಏನೆಂದರೆ ಪ್ರತಿನಿತ್ಯ ಲಿಂಗಪೂಜೆಯನ್ನು ಮಾಡಿ, ಶಿವಯೋಗ ಮಂದಿರದ ಆಚಾರ-ವಿಚಾರಗಳನ್ನು ತಪ್ಪದೇ ಪಾಲಿಸಿ, ಕುಮಾರೇಶ್ವರರ ಧ್ಯಾನವನ್ನ ಎಂದೂ ಮರೆಯಬೇಡಿ, ಇತ್ತೀಚಿಗಷ್ಟೇ ಪೂಜ್ಯ ಗುರುಗಳ ಆರೋಗ್ಯ ಅಶ್ವಸ್ಥವಾದಾಗ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ದರ್ಶನಕ್ಕೆ ಹೋದಾಗ
ನಮಗೆಲ್ಲರಿಗೂ ಆಶೀರ್ವದಿಸಿ ಹೇಳಿದ ಮಾತು ” ಪ್ರತಿನಿತ್ಯ ಪೂಜೆಯನ್ನ ಮಾಡಿ ಅದರಿಂದ ನಿಮಗೂ ನಮಗೂ ಒಳ್ಳೆದಾಗುತ್ತೆ”ಎಂಬ ಮಾತು ಅಕ್ಷರಶಹ ಸತ್ಯವಾದ ಮಾತು. ಹೀಗೆ ಪೂಜ್ಯ ಗುರುಗಳು ಕುಮಾರೇಶ್ವರರನ್ನ ಅಪಾರವಾಗಿ ನಂಬಿ, ಸೊಂಡೂರು ತಾಲೂಕಿನ ಯಶವಂತನಗರದ ಶ್ರೀಮಠದ ತೋಟದಲ್ಲಿ ಹಾಗೂ ಶಾಖಾ ಮಠವಾದ ಶ್ರೀಧರಗಡ್ಡೆ ಮಠದಲ್ಲಿ ಕುಮಾರೇಶ್ವರ ಶೀಲಾ ಮೂರ್ತಿಯನ್ನ ಪ್ರತಿಷ್ಠಾಪಿಸಿದರು. ಅಷ್ಟೇ ಅಲ್ಲದೆ 2010ನೇ ರಲ್ಲಿ ಶಿವಯೋಗಮಂದಿರ ಶತಮಾನೋತ್ಸವ ಸಂದರ್ಭದಲ್ಲಿ ಕುಮಾರೇಶ್ವರರ ಸನ್ನಿಧಾನಕ್ಕೆ 1.50ಕೊಟಿ ವೆಚ್ಚದಲ್ಲಿ ಬೃಹತ್ ರಥವನ್ನ ಗುರುಕಾಣಿಯಾಗಿ ನೀಡಿದರು. ಇಂದಿನ ಪರಿಸ್ಥಿತಿ ಅವಲೋಕಿಸಿದಾಗ ಜನ್ಮಕೂಟ್ಟತಂದೆ – ತಾಯಿಯನ್ನ, ಅಕ್ಷರ- ಅರಿವುಕೂಟ್ಟಗುರುವನ್ನ, ಕೊನೆಗೆ ಬಾಳುಕೊಟ್ಟ ಭಗವಂತನನ್ನೆ ಮರೆಯುವ ಇಂತಹ ಸಂದಿಗ್ದ ಸಮಯದಲ್ಲಿ ,
ಪೂಜ್ಯರು ಮಹಾಗುರುಗಳನ್ನ ನಂಬಿ ಅಪಾರ ಸೇವೆ ಸಲ್ಲಿಸಿ ಕುಮಾರೇಶ್ವರರ ಜೀವನ ಸಿದ್ಧಾಂತವನ್ನ ನಿತ್ಯ ಜೀವನದಲ್ಲಿ ಅನುಷ್ಠಾನಕ್ಕೆ ತಂದವರು .
ಪ್ರಸಾದದಲ್ಲಿ ಪ್ರಸನ್ನತೆ
ಬಂಧುಗಳೇ ಶರಣವಾಣಿಯಾದ “ಸೋಹಂ ಎಂದೆನಿಸದೆ ದಾಸೋಹಂ ಎಂದೇನಿಸಯ್ಯ”ಎಂಬ ವಾಣಿಗೆ ವ್ಯಾಖ್ಯಾನವಾದವರು ಪೂಜ್ಯ ಗುರುಗಳು.ಗುರುಗಳ ಯಾವುದೇ ಮಠವನ್ನ ಅವಲೋಕಿಸಿ ಎಲ್ಲ ಮಠದಲ್ಲಿ ಪ್ರಸಾದದ ವ್ಯವಸ್ಥೆಇದೆ,ದಾಸೋಹ ಭವನನಿರ್ಮಿಸಿದ್ದಾರೆ. ಮನುಷ್ಯ ತನ್ನ ಜೀವನದಲ್ಲಿ ಎಲ್ಲಕ್ಕೂ ಬೇಕು ಬೇಕು ಎಂದು ಹಪಹಪಿಸುತ್ತಾನೆ, ಹಾತೊರೆಯುತ್ತಾನೆ, ಆದರೆ ಸಾಕೆನ್ನುವದು ಪ್ರಸಾದಕ್ಕೆ (ಊಟಕ್ಕೆ)ಮಾತ್ರ.ಅಲ್ಲಿ ತೃಪ್ತಿಯ ಭಾವ ಇದೆ,ಅದಕ್ಕಾಗಿ ಪೂಜ್ಯರು ಮಠಕ್ಕೆ ಯಾವ ಜನಾಂಗದವರೆಬರಲಿ,ಬೇರೆ ಧರ್ಮದವರೆಯಾಗಲಿ,ಬೇರೆ ಸಮಾಜದವರೇ ಯಾಗಲಿ ಹೀಗೆ ಯಾರೆ ಬರಲಿ, ಯಾರೂ ಹಾಗೆ ಹೂಗಬಾರದು ಎಲ್ಲರು ಮಠದಲ್ಲಿ ಪ್ರಸಾದ ತೆಗೆದುಕೊಂಡು ಪ್ರಸನ್ನರಾದಾಗ ಸಂತೋಷ ಪಡುವ ಹಿರಿಯಜೀವಿ ಪೂಜ್ಯ ಜಗದ್ಗುರು ಸಂಗನಬಸವ ಶಿವಯೋಗಿಗಳು. ಶ್ರೀಗಳು ಯಾದುದೇ ಮಠಕ್ಕೆ ಭೇಟಿ ನೀಡಿದರೂ ಸಹಿತ ಮೋದಲು ಕೇಳುವ ಮಾತು ದಾಸೋಹ ವ್ಯವಸ್ಥೆ ಇದೆಯೋ ಇಲ್ಲವೋ ಅಂತ ಕೇಳುವರು ಅಂದರೆ ಅಷ್ಟು ಭಕ್ತ ಪ್ರೇಮ,ಭಕ್ತ ವತ್ಸಲ,ಮಠಕ್ಕೆ ಬಂದ ಭಕ್ತರು ಯಾರೂ ಉಪವಾಸ ಹೋಗಬಾರದು ಎಂಬ ದೂರದೃಷ್ಟಿ ಹೊಂದಿದ ಭಕ್ತಾನುರಾಗಿ ಪೂಜ್ಯರು.
ಆದರ್ಶ ಕೃಷಿ ಕಾಯಕ ಯೋಗಿ
ಭಾರತ ದೇಶ ಕೃಷಿ ಪ್ರಧಾನವಾದ ದೇಶ. “ದುಡಿವ ರಟ್ಟೆಗೆ ಶರಣು, ಕೊಡುವ ಕೈ ಗಳಿಗೆ ಶರಣು” ದುಡಿಮೆ ಬೇಸರವೆಂದು ರೈತ ಮಲಗಿದರೆ ಇಡೀ ವಿಶ್ವವೇ ಉಪವಾಸವಿರಬೇಕಾಗುತ್ತದೆ.ಯಾರು ಭೂತಾಯಿಗೆ ಬೆವರನ್ನ ಸುರಿಸುತ್ತಾರೆ ಅಂಥವರನ್ನ ಭೂತಾಯಿ ಎಂದೂ ಮರೆಯುವುದಿಲ್ಲ.ಪೂಜ್ಯ ಗುರುಗಳೂ ಸಹಿತ ಅಷ್ಟು ಕೃಷಿಗೆ ಮಹತ್ವವನ್ನು ಕೊಟ್ಟರು. ಪೂಜ್ಯರು ಮಠಕ್ಕೆ ಆದನಂತರ ಮಠಗಳ ಎಲ್ಲ ಹೊಲವನ್ನ ಅವಲೋಕಿಸಿ ತಮ್ಮ ಶಿಷ್ಯರೊಂದಿಗೆ ತಾವೇ ಕೃಷಿ ಕಾಯಕವನ್ನ ಮಾಡುತ್ತಿದ್ದರು. ಭೂಮಿಯ ಜೈವಿಕ ಸತ್ವವನ್ನ ಉಳಿಸಲು ಪ್ರೇರಣೆ ನೀಡುತ್ತಾ ಹಾಗೂ ನಶಿಸಿ ಹೋಗುತ್ತಿರುವ ಸಾವಯವ ಕೃಷಿ ಪದ್ಧತಿಯನ್ನ ಜಾರಿಗೊಳಿಸಿದರು. 29ಅಗಷ್ಟ್1986ರಲ್ಲಿ ಬಳ್ಳಾರಿ ಜಿಲ್ಲೆ ಸೊಂಡೂರು ತಾಲೂಕಿನ ಯಶವಂತ ನಗರದ ಮುಸ್ಲಿಮ್ ಬಾಂಧವರಾದ ಪಂಡಿತ್ ಹುಸೇನ್ ಸಾಬ್ ರಿಂದ 17 ಏಕರೆ 40 ಗುಂಟೆ ಜಮೀನನ್ನ 17000 ರೂ ಗಳಿಗೆ ಪಡೆದು ಕಲ್ಲು ಕಂಠಿಗಳ ಗುಡ್ಡವಾದ, ಕಾಡು ಪ್ರಾಣಿಗಳ ತಾಣವಾದ ಈ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು, ಹಗಲು-ರಾತ್ರಿಯೆನ್ನದೆ ಮುಂದೆ ನಿಂತು ಹೊಲವನ್ನ ಸಮಾನ ಮಾಡಿಸಿ, ಮಾವು, ತೆಂಗು, ಬೆಟ್ಟದ ನೆಲ್ಲಿಕಾಯಿ, ಚಿಕ್ಕು,ಹೀಗೆ ಹಲವಾರು ರೀತಿಯ ಮರಗಳನ್ನು ನೆಟ್ಟು ಅವುಗಳ ಬೆಳವಣಿಗೆಗೆ ಯಾವುದೇ ರಾಸಾಯನಿಕ ಗೊಬ್ಬರ ಉಪಯೋಗಿಸದೆ, ಸಾವಯವ ಕೃಷಿಯ ಗೊಬ್ಬರವಾದ ಜೀವಾಮೃತವನ್ನ,ಬೇವಿನ ಎಣ್ಣೆ ಹಾಗೂ ಗೋ ಶಾಲೆಯನ್ನು ತೆರೆದು ಗೋ ಸಗಣಿಯ ಗೊಬ್ಬರವನ್ನ ಹೀಗೆ ಔಷಧಗಳನ್ನು ಉಪಯೋಗಿಸಿ ಬೆಳೆಸುತ್ತಾ ಬಂದಿದ್ದಾರೆ.ಇತ್ತೀಚೆಗೆ ಗೋಡಂಬಿ,ದಾಲ್ಚಿನ್ನಿ,ಮಹಾಘನಿ ಎಂತಹ ಬೆಲೆಬಾಳುವ ಸಸಿಗಳನ್ನು ನೆಟ್ಟು ಅವುಗಳಿಗೂ ಸಹಿತ ಇದೆ ಗೊಬ್ಬರವನ್ನ ಹಾಕಿ ಬೆಳೆಸಲಾಗುತ್ತದೆ. ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ ಪೂಜ್ಯ ಗುರುಗಳ ಸೇವೆ ಅವಿಸ್ಮರಣೀಯ, ಅನುಪಮಾ. ಸ್ವಾಮಿ ಯಾಗುವವನಿಗೆ ಎಲ್ಲದರ ಅನುಭವ ವಿರಬೇಕೆಂದು ಪ್ರವಚನ, ಕೃಷಿ, ಅಧ್ಯಾತ್ಮ , ಶಿವಯೋಗ ಹೀಗೆ ಎಲ್ಲದರ ಅನುಭವವನ್ನು ನೀಡುತ್ತಾ ಸ್ವಾಮಿತ್ವದ ಪಟ್ಟಕ್ಕೆ ಸಮರ್ಥರನ್ನಾಗಿ ಮಾಡುತ್ತಿರುವ ಪೂಜ್ಯ ಗುರುಗಳಿಗೆ ಸಾವಿರದ ಒಂದನೇ.ಹೀಗೆ ಗುರುಗಳನ್ನ ಕುರಿತು ಬರೆಯುತ್ತಾ ಹೋದರೆ ಶಬ್ದಗಳು ಸಾಲದು, ಸಾವಿರ ಪುಟಗಳನ್ನೊಳಗೊಂಡ ಸುದೀರ್ಘ ಲೇಖನವೇ ಆಗುವದು.
ಇಂತಹ ಗುರುಗಳ ಕುರಿತು ಬರೆಯುವಷ್ಟು ಜ್ಞಾನಿ ನಾನಲ್ಲ, ಗುರುಗಳ ಶಿಷ್ಯನಾಗಿ ನಾ ಕಂಡಗುರುಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತ ರೀತಿಯಲ್ಲಿ ಬರೆದು ಓದುಗರಿಗೆ ನೀಡಬೇಕೆನ್ನುವ ಪುಟ್ಟ ಪ್ರಯತ್ನ ಈ ಲೇಖನವನ್ನ ಪೂಜ್ಯ ಗುರುಗಳ ಪಾದಕ್ಕೆ ಅರ್ಪಿಸುತ್ತೇನೆ.
ಶ್ರೀಮನ್ ನಿರಂಜನ ಪ್ರಣವಸ್ವರೂಪಿ ಹೇಮಕೂಟ ಸಿಂಹಾಸನಾಧೀಶ್ವರ, ತ್ರಿವಿಧ ದಾಸೋಹಿ ಜಗದ್ಗುರು ಡಾ. ಅಭಿನವ ಸಂಗನಬಸವ ಮಹಾಸ್ವಾಮಿಗಳು ಹಂಪಿ, ಹೊಸಪೇಟೆ, ಬಳ್ಳಾರಿ, ಹಾಲಕೆರೆ, ಶಿವಯೋಗ ಮಂದಿರದ ಪರಮಪೂಜ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ.