ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-7

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ನವ್ಹಂಬರ  ೨೦೨೧ ರ ಸಂಚಿಕೆ

ಕಂದ ಬಾಯೆಂದು ದಯ | ದಿಂದ ನೀನೊಲಿದು ಕರೆ

 ತಂದೆ ಬಸವಾದಿ ಪ್ರಮಥರ ಪಥಕೆನ್ನ

 ತಂದೆ ಶ್ರೀಗುರುವೆ ಕೃಪೆಯಾಗು  || ೨೯||

ತಾಯಿಯು ಮಗುವನ್ನು ಹೆತ್ತು ಹೊತ್ತು ಬೆಳಸಿ ದೊಡ್ಡವನನ್ನಾಗಿ ಮಾಡುವಳು . ಬೆಳೆಯುತ್ತಿರುವ ಕಂದನನ್ನು ತಂದೆಯು ಪ್ರೀತಿಯಿಂದ ತನ್ನತ್ತ ಬಾ ಎಂದು ಕರೆದು ತೊಡೆಯಮೇಲೆ ಕೂಡ್ರಿಸಿಕೊಂಡು ಶಿಕ್ಷಣ ಕೊಡಲು ಪ್ರಾರಂಭಿಸುವನು . ಬೆಳೆದು ಯೋಗ್ಯವಯಸ್ಸಿಗೆ ಬಂದ ಕಂದನನ್ನು ವಿದ್ಯಾ ಗುರುಗಳ ಬಳಿಗೊಯ್ದು ವಿದ್ಯೆಯನ್ನು ಕೊಡಿಸುವನು . ಸ್ವತಃ ತಾನು ಬುದ್ಧಿಯನ್ನು ಕಲಿಸಿ ಉತ್ತಮರ ನಡೆಯನ್ನು ತೋರಿಸು ವನು . ಇದು ಲೌಕಿಕ ತಂದೆಯ ಕರ್ತವ್ಯ . ಪಾರಮಾರ್ಥಿಕ ತಾಯಿಯು ಶಿಷ್ಯನನ್ನು ಗುರುಕರಜಾತನನ್ನಾಗಿ ಮಾಡಿದರೆ ಸಾಲದು . ತಂದೆಯ ಕರ್ತವ್ಯವನ್ನು ಪೂರೈಸೆಂದು ಗುರುವಿನಲ್ಲಿ ಕವಿ ಸೂಚಿಸಿದಂತಿದೆ . ಓ ಗುರುತಂದೆಯೇ ! ನಿನ್ನ ಕರಸಂಜಾತನಾದ ನನ್ನನ್ನು ಅಂತಃಕರಣದಿಂದ ನನ್ನ ಬಳಿ ಬಾ ‘ ‘ ಎಂದು ಕರೆದು ಧೈರ್ಯ , ವಿಶ್ವಾಸಗಳನ್ನು ತುಂಬಿ ಬಸವಾದಿಪ್ರಮಥರ ನಡೆನುಡಿಯನ್ನು ಚನ್ನಾಗಿ ಬೋಧಿಸಿ ಸತ್ಪಥವನ್ನು ತೋರಿಸು . ಶರಣರ ಮಾರ್ಗವೇ ನಿಜವಾದ ಜೀವನದ ಬಟ್ಟೆ , ಸಾವಿಲ್ಲದಿಹ ಮಾರ್ಗ , ಮುಕ್ತಿಯನ್ನು ತೋರಿಸುವ ದಾರಿಯಲ್ಲವೆ ? ಮೊಗ್ಗೆಯ ಮಾಯಿದೇವರೂ ಸಹ –

 “ ಬಸವಪುರಾತನರ್ಚರಿಸಿತೋರಿದ ಷಟ್‌ಸ್ಥಲ ಮಾರ್ಗದೊಳ್ ಪ್ರವರ್ತಿಸು ”

ಎಂದು ಶ್ರೀ ಗುರುವಿನಲ್ಲಿ ಬೇಡಿಕೊಂಡಿದ್ದಾರೆ . ಶರಣರ ಈ ಷಟ್‌ಸ್ಥಲ ಮಾರ್ಗವನ್ನು ತೋರಿ ಶರಣನಾಗಲು ಅನುವುಮಾಡಿಕೊಡು . ಇದು ಗುರು ತಂದೆಯ ಕರ್ತವ್ಯವೂ ಸರಿ .

 ಜನಿಸಿದಾಕ್ಷಣವೆನಗೆ | ಕೆನೆವಾಲು  ಸವಿಸಕ್ರೆ

ಎನೆತೀರ್ಥಶೇಷ ವನು ಊಡಿ ಪೊರೆದ ಮ

ಜ್ಜನನಿ ಶ್ರೀಗುರುವೆ ಕೃಪೆಯಾಗು  || ೩೦ ||

ತಾಯಿತನದ ಸ್ನೇಹವನ್ನು ವ್ಯಕ್ತಗೊಳಿಸಿದ್ದಾನೆ . ಮಗನು ಜನಿಸಿದಾಗ ಜನನಿಯು ಶಿಶುವಿಗೆ ಮೊದಲು ಜೇನುತುಪ್ಪ ಮತ್ತು ಕೆನೆಯನ್ನು ನೆಕ್ಕಿಸುವಳು . ನಂತರವೇ ತನ್ನ ಮೊಲೆಯುಣಿಸುವಳು . ಕ್ರಮಕ್ರಮವಾಗಿ ಪ್ರಸಾದವನ್ನು ಸ್ವೀಕರಿಸುವಂತೆ ಪ್ರಯತ್ನಿಸು ವಳು . ಮಗನ ವಯೋಮಾನದಂತೆ ತಿಂಡಿ ತಿನಿಸುಗಳನಿತ್ತು ಸವಿಮಾತಿನಿಂದ ತಿನಿಸಿ ಬೆಳೆಸಿ ; ರಕ್ಷಿಸುವಳು .

ಶಿವದೀಕ್ಷೆಯಿಂದ ನನ್ನನ್ನು ನಿನ್ನ ಕರಗರ್ಭದಲ್ಲಿ ಪುನರ್ಜಾತನನ್ನಾಗಿ ಮಾಡಿದ ಮಜ್ಜನನಿಯೇ ! ಗುರುತಾಯಿಯೇ ! ನಾನು ನಿನ್ನ ಗುರುಪುತ್ರನಾಗುತ್ತಿರಲು ನೀನು ದಯೆಯಿಂದ ಎನಗೆ ಕೆನೆವಾಲೆಂಬ ಪಾದೋದಕವನ್ನು ಕರುಣಿಸುತ್ತಿ , ಪರಮಾರ್ಥ ರೂಪಸಕ್ಕರೆಯೆಂಬ ಶೇಷಪ್ರಸಾದವನ್ನು ಒದಗಿಸಿ ಉಣಿಸಿರುವಿ , ಪೋಷಿಸಿ ಉದ್ಧರಿಸಿ ರುವಿ . ಆದುಕಾರಣ ನೀನು ಮಜ್ಜನನಿ , ಎನ್ನ ಹೆತ್ತವ್ವೆ . ತಾಯಿಯ ಋಣ ಎಂದೂ ತೀರದು . “ ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ‘ ‘ ಜನನಿ ಮತ್ತು ಜನ್ಮಭೂಮಿ ಗಳು ಸ್ವರ್ಗಕ್ಕಿಂತಲೂ ಮಿಗಿಲಾದವುಗಳೆಂದು ಮಹಾನುಭಾವಿಗಳು ಹಾಡಿಲ್ಲವೆ ?

ತಥ್ಯ – ಮಿಥ್ಯವನಳಿದ | ಸತ್ಯ ಶರಣರಿಗೆ ನೀ

ಭೃತ್ಯನಾಗೆಂದು- ಮರ್ತ್ಯಲೋಕದೊಳೆನ್ನ

ಪೆತ್ತಯ್ಯ ಗುರುವೆ ಕೃಪೆಯಾಗು  || ೩೧ ||

ತಥ್ಯ ನಿಜ , ಮಿಥ್ಯ – ಸುಳ್ಳು ಬ್ರಹ್ಮಸತ್ಯಂ ಜಗನ್ಮಿಥ್ಯ ” ಬ್ರಹ್ಮವು ಸತ್ಯವಾದದ್ದು , ಜಗತ್ತು ಮಿಥ್ಯವಾದದ್ದು ಎಂಬ ಅಭಿಪ್ರಾಯವುಳ್ಳವರು ವೇದಾಂತಿಗಳು . ತಥ್ಯ ಮಿಥ್ಯವನಳಿದವರು ಶರಣರು . ತಥ್ಯ ಮತ್ತು ಮಿಥ್ಯಗಳೆಂಬ ದ್ವಂದ್ವವನ್ನು ಅಲ್ಲಗಳೆದು ಶರಣನಾಗುತ್ತಾನೆ . ಶರಣರು ಶಿವನನ್ನು ಮತ್ತು ಶಿವಮಯವಾದ ಜಗವನ್ನು ಸತ್ಯ ವೆಂದು ಭಾವಿಸುತ್ತಾರೆ . ಶಿವಶರಣರು ಮನೆಯಿಂದ ಬಡವರಾಗಿದ್ದರೂ ಮನದಿಂದ ಘನಮನ ಸಂಪನ್ನರಾಗಿ ಶೋಭಿಸುತ್ತಾರೆ . ಕಾಲಕರ್ಮರಹಿತರೂ , ಭವರಹಿತರೂ ಆದ ಶರಣರಿಗಿಂತ ಹಿರಿಯರಾರಿಲ್ಲವೆಂದು ಅಣ್ಣನವರು ಗೌರವಿಸಿದ್ದಾರೆ . ಶಿವಪುರಾಣ ದಲ್ಲಿ ಶಿವನೂ ಸಹಿತ

 “ ಮಮ ಭಕ್ತೋ ಮಮಾಧಿಕಃ ”

ನನ್ನ ಭಕ್ತನು ನನಗಿಂತಲೂ ಮಿಗಿಲಾಗಿದ್ದಾನೆಂದು ಪಾರ್ವತಿಗೆ ಬೋಧಿಸಿದ್ದಾನೆ . ಇಂಥ ಶರಣರಿಗೆ ಭೃತ್ಯರಾಗುವದು ಸಾಮಾನ್ಯ ಕೆಲಸವಲ್ಲ . ಅದು ಎಲ್ಲರಿಗೆ ಸಾಧ್ಯವೂ ಇಲ್ಲ . ಗುರುವೆ ! ನೀನು ಈ ಮರ್ತ್ಯಲೋಕದಲ್ಲಿ ಪುನಃ ಈ ಶಿಷ್ಯನನ್ನು ಕರಗರ್ಭದಲ್ಲಿ ಪೆತ್ತರೆ ಮಾತ್ರ ಶರಣಸೇವೆ ದೊರೆಯಲು ಸಾಧ್ಯವಾಗುವದು . ಶಿವಭಕ್ತರಾದವರನ್ನೇ ಶರಣರು ತಮ್ಮೊಡನೆ ಕೂಡಿಸಿಕೊಳ್ಳುವರು  ಗುರುವು ಶಿವಪಥವನ್ನು ತೋರಿದರೆ ಅಂಥ ಶರಣರ ಸೇವಕನಾಗುವದು ಶಿವಶರಣರು ಶಿವನನ್ನು ತೋರಿಸುವರು . ಗುರುಪುತ್ರನಿಗೆ ಸಾರ್ಥಕವಾಗಿದೆ . ಬಸವಣ್ಣನವರು –

 ಅರಸರ ಮನೆಯಲ್ಲಿ ಅರಸಿಯಾಗಿಪ್ಪುದಕ್ಕಿಂತ

 ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರಲೇಸಯ್ಯಾ ‘

ಮತ್ತು

 “ ಲಿಂಗಜಂಗಮಕ್ಕೆ ಮಾಡಿ ನೀಡುವ ಅಚ್ಚಶರಣರ

  ಮನೆಯಲು ಭೃತೃನಾಗಿಪ್ಪೆನಯ್ಯಾ ‘ ( ೩೬೩ )

ಎಂದು ಮುಂತಾಗಿ ಭಕ್ತರ ಮನೆಯಲ್ಲಿ ಭೃತ್ಯನಾಗಿರಲು ಬೇಡಿಕೊಂಡಿದ್ದಾರೆ . “ ಎನಗಿಂತ ಕಿರಿಯರಿಲ್ಲವೆಂದು ತಮ್ಮ ಕಿಂಕರತನವನ್ನು ವ್ಯಕ್ತಗೊಳಿಸುವದಲ್ಲದೆ ಅದರಂತೆ ಕಿಂಕರತನವನ್ನು ವ್ಯಕ್ತಗೊಳಿಸುದಲ್ಲದೆ ಅದರಂತೆ  ನಡೆದುಕೊಂಡರು.ಕಿಂಕರರಾಗಿ ಶಂಕರರೂಪಾದರು . ಹಾನಗಲ್ಲ ಕುಮಾರ ನಡೆದುಕೊಂಡರು . ಶಿವಯೋಗಿಗಳು.

“ಶಂಕರ ಕಾಯೋ ಸದಾ ಕಿಂಕರರನು ʼ

 ಎಂದು ಹಾಡಿ ಕಿಂಕರತನದ ಮೇಲೆಯನ್ನು ವಿವರಿಸಿರುವರು .

 ಓ ಎನ್ನ ಪೆತ್ತಯ್ಯ ಗುರುರಾಯ ! ನನ್ನನ್ನು ಶರಣರ ಭೃತ್ಯನನ್ನಾಗಿಸುವಂತೆ ಕರುಣಿಸು .

Related Posts