ಚಿತ್ತರಗಿ-ಇಲಕಲ್
ಲೇಖಕರು: ಪ್ರೋ.ಶ್ರೀಮತಿಸುಲೋಚನ.ಶಿ.ಹಿರೇಮಠ.
ಕನ್ನಡ ತಾಯಿಯ ಪುಣ್ಯ ಗರ್ಭವು ಕಾಲ ಕಾಲಕ್ಕೆ ಮಹಾತ್ಮರನ್ನು, ಸಾಧು ಸಂತರನ್ನು, ಶಿವಯೋಗಿಗಳನ್ನು ನೀಡುತ್ತಾ ಬಂದಿದೆ. ಈ ಪುಣ್ಯ ನಾಡಿನಲ್ಲಿ ಚಾಮರಸ ಕವಿ ಹೇಳುವಂತೆ “ನೋಡಿ ಕೆಲರಂ, ಮಾತನಾಡಿ ಕೆಲರಂ, ಮುಟ್ಟಿ ಕೆಲರಂ, ಉದ್ಧರಿಸುವ ಮಹಾನುಭಾವರು ಉದಿಸಿ ಬಂದಿದ್ದಾರೆ.”
ಅಂಥವರ ಸಾಲಿನಲ್ಲಿ ಶ್ರೀ ಮ.ನೀ.ಪ್ರ ವಿಜಯ ಮಹಾಂತ ಶಿವಯೋಗಿಗಳು, ಚಿತ್ತರಗಿ ಇಳಕಲ್ ಸಂಸ್ಥಾನ ಮಠ, ಒಬ್ಬರು. ಕನ್ನಡ ನಾಡಿನಲ್ಲಿ ಚಿತ್ತರಗಿಯ ಹಿರಿಯ ಚೇತನ ಜಂಗಮ ಪುಂಗವರು. ನಾಡಿಗರ ಹೃನ್ಮನಗಳಲ್ಲಿ ನೆಲೆಸಿದವರು, ಜಂಗಮ ಮಹಾಂತರು.
ಬಸವಣ್ಣನವರು ಹೇಳುವಂತೆ,
“ವೀರನಾದೊಡೆ ವೈರಿ ಮೆಚ್ಚಬೇಕು,
ವ್ರತಿಯಾದೊಡೆ ಅಂಗನೆಯರು ಮೆಚ್ಚಬೇಕು,
ಭಕ್ತನಾದರೆ ಜಂಗಮ ಮೆಚ್ಚಬೇಕು,
ಹಾಗೆ ಜಂಗಮನಾದರೆ ಭಕ್ತ ಮೆಚ್ಚಬೇಕು”
ಹಾಗೆಯೇ ಭಕ್ತರು ಮೆಚ್ಚಿ, ಜಂಗಮರಾದವರು ಚಿತ್ತರಗಿಯ ಪೀಠಾಧಿಪತಿಗಳಾಧ ಶ್ರೀ ವಿಜಯ ಮಹಾಂತ ಶಿವಯೋಗಿಗಳು. ಸಹಜ ಯೋಗಿಗಳು, ತ್ಯಾಗಿಗಳು, ವೀರ ವೀರಾಗಿಗಳು, ಕರುಣಾ ಹೃದಯಿಗಳು, ನಿಜ ಶಿವಯೋಗಿಗಳು.
ಶ್ರೀ ವಿಜಯ ಮಹಾಂತ ಶಿವಯೋಗಿಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಒಂದು ಮಂಗಳ ಪದ್ಯದಲ್ಲಿ ವಿವರಿಸುವುದರಿಂದ ಪ್ರಾರಂಭಿಸಿ ಒಂದು ಪುರಾಣದವರೆಗೂ ವಿಸ್ತರಿಸಲು ಸಾಧ್ಯ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚಿಸಬಹುದಾಗಿದೆ. ಅದು ಈಗಾಗಲೇ ಸಾಧ್ಯವೂ ಆಗಿದೆ. ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಾದ ವಾರ್ಧಕ ಷಟ್ಪದಿಯಲ್ಲಿ ಪುರಾಣ, ಭಾಮಿನಿ ಷಟ್ಪದಿಯಲ್ಲಿ ಪ್ರಬಂಧ, ಚರಿತ್ರೆ, ಲೀಲೆ, ಗಾನಸುಮನವಾಗಿ , ಕಥೆಯಾಗಿ ಹೊರಹೊಮ್ಮಿದೆ. ಅವುಗಳನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ .
೧) ದ್ಯಾಂಪುರ ಚನ್ನಕವಿ ಕೃತ ಶ್ರೀ ವಿಜಯ ಮಹಾಂತೇಶ್ವರ ಪುರಾಣ
೨) ಶ್ರೀ ವಿಜಯ ಮಹಾಂತೇಶ ಲೀಲಾಮೃತ. ಲೇಖಕ: ರಾಮರಾವ ಕುಲಕರ್ಣಿ
೩) ಶ್ರೀ ವಿಜಯ ಮಹಾಂತೇಶ್ವರ ಲೀಲೆ, ಕವಿಗಳು: ಕಲ್ಯಾಣಪ್ಪ ಬ್ಯಾಳಿ
೪) ಚಿತ್ತರಗಿ ಚಿಜ್ಯೋತಿ, ಮತ್ತು ಮಹಾತಪಸ್ವಿ ಮಹಾಂತ ಶಿವಯೋಗಿಗಳು, ಜಿ.ಎಚ್, ಹನ್ನೆರಡುಮಠ
೫) ಚಿತ್ತರಗಿಯ ಚಿನ್ಮಯಿ ವಿಜಯ ಮಹಾಂತ ಶಿವಯೋಗಿಗಳು, ಬಸವರಾಜ ಗವಿಮಠ
ಮಠಗಳು ವೈಭವದ ಅರಮನೆಗಳಾಗದೇ ಸಮಾಜದ ಧರ್ಮ ಸುಧಾರಣೆಯ ಕೇಂದ್ರಗಳಾಗಲು ಪೀಠದ ಅಧಿಪತಿಗಳಿಂದ ಮಾತ್ರ ಸಾಧ್ಯ ಎನ್ನುವುದನ್ನು ೧೯ ನೇ ಶತಮಾನದಲ್ಲಿ ಕನ್ನಡ ನಾಡಿನ ಅನೇಕ ಮಠಗಳ ಇತಿಹಾಸದಿಂದ ತಿಳಿಯುತ್ತದೆ. ಮಠಾಧಿಪತಿಗಳ ಸತತ ಸಮಾಜ ಮುಖಿ ಸುಧಾರಣೆಗಳನ್ನು ಒಪ್ಪಿ ತಮ್ಮ ಆಚರಣೆಯಲ್ಲಿ ಕಾರ್ಯ ರೂಪಕ್ಕೆ ತಂದಿದ್ದಾರೆ. ತಮ್ಮ ಅರಿವು- ಆಚರಣೆ, ಅನುಭೂತಿಗಳಿಂದ ಸಮಾಜದ ಉನ್ನತಿಯನ್ನು ಹಾಗೂ ಶರಣ ಧರ್ಮ ಪರಂಪರೆಯನ್ನು ಉದ್ಧರಿಸಿದ್ದಾರೆ.
ಧರ್ಮ ಹಾಗೂ ಸಂಸ್ಕೃತಿ ದೃಷ್ಟಿನಿಂದ ಕನ್ನಡ ನಾಡು, ಭಾರತದಲ್ಲಿಯೇ ತನ್ನ ವೈಶಿಷ್ಟ್ಯವನ್ನು ಮೆರೆಯಿಸುತ್ತಾ ಬಂದಿದೆ. ೧೨ ನೇ ಶತಮಾನದ ಮಹಾತ್ಮಾ ಬಸವಣ್ಣನವರು ಶಾಂತವಾದ ಕ್ರಾಂತಿಯನ್ನು ಮಾಡಿ ವೀರಶೈವ ಧರ್ಮವನ್ನು ವಿಶ್ವಮಾನ್ಯವಾಗುವಂತೆ ಶ್ರಮಿಸಿ ಶರಣ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಈ ಸತ್ ಸಂಪ್ರದಾಯ ಜ್ಯೋತಿಯನ್ನು ಇಂದಿಗೂ ನಮ್ಮ ನಾಡಿನ ಅನೇಕ ಮಠಗಳು (ಅರಭಾವಿಯ ದುರುದುಂಡೇಶ್ವರ ಮಠ, ಮಹಾಲಿಂಗಪುರದ ಮಹಾಲಿಂಗೇಶ್ವರ ಮಠ, ಗರಗದ ಮಡಿವಾಳೇಶ್ವರ ಮಠ, ಅಥಣಿಯ ಮುರುಘರಾಜೇಂದ್ರ ಮಠ, ಬಿದಿರಿ ಕುಮಾರೇಶ್ವರ ಮಠ, ಇಳಕಲ್ಲಿನ ವಿಜಯಮಹಾಂತೇಶ್ವರ ಮಠ, ಹಾಳಕೇರೆಯ ಅನ್ನದಾನೇಶ್ವರ ಮಠ, ಹಾನಗಲ್ಲಿನ ಕುಮಾರೇಶ್ವರ ಮಠ, ಹಾವೇರಿಯ ಶಿವಬಸವೇಶ್ವರ ಮಠ, ಧಾರವಾಡದ ಮೃತ್ಯುಂಜಯ ಅಪ್ಪುಗಳು, ಇನ್ನೂ ಅನೇಕ ಶಿವಯೋಗಿಗಳು ತಮ್ಮ ಪಾದ ಸ್ಪರ್ಶದಿಂದ ಕನ್ನಡ ನಾಡನ್ನು ಪವಿತ್ರಗೊಳಿಸಿದ್ದಾರೆ ) ಬೆಳಗಿಸುತ್ತ ಬಂದಿವೆ.
ಇಂತಹ ನಾಡಿನ ಮಠಗಳಲ್ಲಿ ಒಂದಾದ ಚಿತ್ತರಗಿ ಇಳಕಲ್ ಸಂಸ್ಥಾನ ಮಠವು ಒಂದು. ಈ ಮಠವು ಅನೇಕ ಪೀಠಾಧಿಪತಿಗಳನ್ನು ಹೊಂದಿದ ಪರಂಪರೆ ಇದೆ. ಅವರಲ್ಲಿ ೧೬ ನೇ ಪೀಠಾಧಿಪತಿಗಳಾಗಿ ಶ್ರೀ ವಿಜಯಮಹಾಂತ ಎಂಬ ಅಭಿದಾನದಿಂದ ನಿಯುಕ್ತಗೊಳ್ಳುತ್ತಾರೆ. ಇದು ಸಂಸ್ಥಾನ ಮಠವಾದ್ದರಿಂದ ಛತ್ರ, ಚಾಮರ, ಸಿಂಹಾಸನ, ಬೆಳ್ಳಿ ಪಲ್ಲಕ್ಕಿ, ಬೆಳ್ಳಿ ಬೆತ್ತ, ಜಾಗಟೆ, ಕುದುರೆ, ವಂದಿಮಾಗದರುಗಳನ್ನು ಹೊಂದಿರುತ್ತದೆ. ಈ ಪೀಠಕ್ಕೆ ಐವತ್ತಾರು ಶಾಖಾ ಮಠಗಳಿವೆ. ರಾಯಚೂರು, ಸುರುಪುರ, ಬೀದರ, ಯಲಬುರ್ಗಾ, ಲಿಂಗಸೂರು, ಸೊಲ್ಲಾಪುರ, ಕೂಡಲಸಂಗಮ, ಚಿತ್ತರಗಿ, ಕೊಪ್ಪ, ಇದ್ದಲಗಿ, ಬೆಳಗಲ್, ಹುನುಗುಂದ, ಕರಡಿ, ನಂದವಾಡಗಿ ಹಾಗೂ ಮುಂತಾದದ ಕಡೆಗಳಲ್ಲಿ ಶಾಖಾ ಮಠಗಳ ವ್ಯಾಪ್ತಿಯಿದೆ.
ನಿಜಾಮರ ಕಾಲಕ್ಕೆ ಕೊಡಮಾಡಿದ ಅನೇಕ ದತ್ತಿಗಳಿವೆ. ಇಂತಹ ವಿಶಾಲ ಪ್ರದೇಶದ ಜನತೆಯ ಕಣ್ಮಣಿಗಳಾಗಿ ವೀರಶೈವ ಧರ್ಮದ ಜಾಗೃತಿಯ ನೇತಾರರಾಗಿ ಈ ಪೀಠದ ಕಾರ್ಯಭಾರವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಕೆಲ ಕಾಲ ಯೋಗ್ಯ ಪೀಠಾಧಿಕಾರಿ ದೊರೆಯದಿದ್ದಾಗ ಪೀಠವು ಶೂನ್ಯತೆಯನ್ನು ಪಡೆಯುತ್ತದೆ. ಅಂತಹ ಸಂದರ್ಭದಲ್ಲಿ ಪಟ್ಟವಿಲ್ಲದೆ ಮಠವನ್ನು ಸುಸ್ಥಿತಿಯಲ್ಲಿ ಮುನ್ನಡೆಸಿಕೊಂಡು ಹೋದ ವಟು ದೇವರುಗಳ ಉದಾಹರಣೆಯು ಇದೆ.
೧೮೫೦ ರಿಂದ ೧೯೫೦ರ ಕಾಲವು ಭಾರತೀಯ ಇತಿಹಾಸದಲ್ಲಿ ಬದಲಾವಣೆಯ ಕಾಲಘಟ್ಟವಾಗಿದೆ. ಬದಲಾವಣೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಐತಿಹಾಸಿಕ ರಂಗಗಳಲ್ಲಿ ಕಂಡುಬರುತ್ತದೆ. ಸ್ವತಂತ್ರ ಆಂದೋಲನಗಳು ಹೋರಾಟ ರೂಪ ತಾಳಿದವು. ಹೋರಾಟಕ್ಕೆ ಸಂಘಟನೆಗಳು, ನೇತಾರರು, ಅವರ ವೈಚಾರಿಕ ನಡತೆಗಳು ಯಶಸ್ಸಿಗೆ ಕಾರಣವಾದವು. ಇಂತಹ ಕಾಲದಲ್ಲಿಯೇ ಮಠಾಧಿಪತಿಗಳು ಸ್ವತಂತ್ರದಕ್ಕಿಸಿಕೊಳ್ಳಲು ಸಮರ್ಥರಾದರು. ಧರ್ಮ ರಕ್ಷಣೆಗಾಗಿ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಕ್ಕಾಗಿ , ಶರಣ ಧರ್ಮದ ಸಂಸ್ಕೃತಿಯ ಏಳ್ಗೆಗಾಗಿ, ವೀರಶೈವ ಧರ್ಮದ ಉಳಿವಿಗಾಗಿ, ಹೊಸ ವೈಚಾರಿಕ ಸಮಾಜ ನಿರ್ಮಾಣ ಮಾಡಿದರು. ಸಮಾಜ ಉದ್ಧಾರ ಮಾಡಿದರು. ಅದಕ್ಕಾಗಿ ತಮ್ಮನ್ನು ತ್ಯಾಗ, ವೈರಾಗ್ಯಕ್ಕೆ ಅರ್ಪಿಸಿಕೊಂಡು ಕಾಯಕ ನೀತಿಯ ತಳಹದಿ ಮೇಲೆ ಸಮಾಜವನ್ನು ಕಟ್ಟಿದರು. ಇಷ್ಟಲಿಂಗಾರ್ಚನೆಯ ನಿಷ್ಠಾಭಕ್ತಿಯಿಂದ ಜ್ಞಾನ ದಾಸೋಹ, ಅನ್ನ ದಾಸೋಹ, ಅಕ್ಷರ ದಾಸೋಹದಿಂದ ಸಮಾಜವನ್ನು ಜಾಗೃತಗೊಳಿಸಿದರು. ಇದರಿಂದ ನಾಡಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು, ಮಠದ ಪರಿಶ್ರಮದಿಂದ ತಲೆಯೆತ್ತಿವೆ. ಶಿಶುವಿಹಾರದಿಂದ ಹಿಡಿದು ವಿಶ್ವವಿದ್ಯಾಲಗಳವರೆಗೂ ಬೆಳೆದು ಹೆಮ್ಮರಗಳಾಗಿವೆ.
ಜ್ಞಾನ ದಾಸೋಹಕ್ಕೆ ಬೇಕಾದ ಅನ್ನದಾಸೋಹ, ಆಶ್ರಯ ದಾಸೋಹಕ್ಕೆ ತಮ್ಮ ತನು ಮನ ಅರ್ಪಿಸಿ ಸಮಾಜಕ್ಕೆ ವೈಚಾರಿಕ ಹೊಸ ದಿಸೆಯನ್ನೇ ತೋರಿಸಿದ್ದಾರೆ. ವೈರಾಗ್ಯ, ತ್ಯಾಗ, ಆಚಾರ ವಿಚಾರ, ನೀತಿ ಶ್ರದ್ಧೆಗಳನ್ನು ಅನುಸರಿಸುವ ನವ ಸಮಾಜ ನಿರ್ಮಾಣವಾಯಿತು. ವೀರಶೈವ ಧರ್ಮ ಪರಂಪರೆಯ ಮಹಾಮಾನವತಾವಾದದ ಕೀರ್ತಿ ಪತಾಕೆಯನ್ನು ಹಾರಿಸುತ್ತ ಮುನ್ನಡೆದಿದೆ. ಇತಿಹಾಸದಲ್ಲಿ ನಾಡಿನ ಉದ್ದಗಲಕ್ಕೂ ಇಂತಹ ಅನೇಕ ಮಹಾತ್ಮರ ಹೆಸರುಗಳು ದೊರಕುತ್ತವೆ. ಅದರಲ್ಲಿ ಸಾಂದರ್ಭಿಕವಾಗಿ ಚಿತ್ತರಗಿ ಇಳಕಲ್ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನೀ.ಪ್ರ. ಸ್ವರೂಪಿ ವಿಜಯ ಮಹಾಂತ ಶಿವಯೋಗಿಗಳು ಅಗ್ರ ಗಣ್ಯರು.
ಶ್ರೀ ಹಾನಗಲ್ಲಕುಮಾರ ಶಿವಯೋಗಿಗಳು ಒಂದು ಅಧ್ಯಾತ್ಮಿಕ ಶಾಲೆಯ ಸ್ಥಾಪನೆಯ ಸಂಕಲ್ಪ ಮಾಡಿದರು. ಆ ಅಧ್ಯಾತ್ಮಿಕ ಶಾಲೆ ಶಿವಯೋಗ ಮಂದಿರವಾಗಿ, ಎಲ್ಲಿ, ಹೇಗೆ ರೂಪಗೊಳ್ಳಬೇಕೆಂದು ನಿರ್ಣಯಗೊಳಿಸಲು ವಿಜಯ ಮಹಾಂತರಲ್ಲಿಗೆ ವಿನಂತಿಸಿದಾಗ, ಶ್ರೀ ವಿಜಯ ಮಹಾಂತೇಶ್ವರರ ನೇತೃತ್ವದಲ್ಲಿ ಶಿವಯೋಗ ಮಂದಿರ ಸ್ಥಾನವನ್ನು ಅರಸುತ್ತಾ ಬರುವ ಸನ್ನಿವೇಶ ರೋಮಾಂಚನಕಾರಿಯಾಗಿದೆ. ಒಂದು ವ್ಯಕ್ತಿ ಶಕ್ತಿಯಾಗಿ ಹೇಗೆ ಕಾರ್ಯ ನಿರ್ವಹಿಸುತ್ತಾನೆ ಎಂಬುದಕ್ಕೆ ಅವರ ಶ್ರದ್ದಾಪೂರ್ವಕ ಪ್ರಯತ್ನಗಳೇ ಸಾಕ್ಷಿಯಾಗಿವೆ.
ಜನನ- ಬಾಲ್ಯ
ಮೈಸೂರು ಪ್ರಾಂತದ ಹಾಸನ ಜಿಲ್ಲೆಯಲ್ಲಿ “ಸಸಿವಾಲ” ಎಂಬ ಪುಟ್ಟ ಗ್ರಾಮ. ಅಲ್ಲಿ ಜನರೆಲ್ಲರೂ ದೈವಭಕ್ತರು. ಸತ್ಯ, ಶುದ್ಧ,ಕಾಯಕದಿಂದ ಬಾಳುತ್ತಿದ್ದರು. ಅಲ್ಲಿ ಅನೇಕ ಜಂಗಮ ಕುಟುಂಬಗಳು ನೆಲೆಸಿದ್ದವು. ಆ ಗ್ರಾಮದಲ್ಲಿ ಕೊಳಗಲ್ಮಠದ ವೀರಯ್ಯ, ಗೌರಮ್ಮ ಎಂಬ ದಂಪತಿಗಳು ಇದ್ದರು. ಇವರ ಮನೆಗೆ ಆಗಾಗ ಹತ್ತಿರದಲ್ಲೇ ಇರುವ ಕಲ್ಲಬೆಟ್ಟದ ಶಿವಯೋಗಿಗಳು ದಯಮಾಡಿಸುತ್ತಿದ್ದರು. ಇವರ ಮಠ ದಾನ, ಧರ್ಮ, ಪೂಜೆ, ಜಂಗಮರಾಧನೆಗೆ ಹೆಸರಾಗಿತ್ತು. ಇವರ ಮಠದಲ್ಲಿ ಆಗಾಗ ಜಂಗಮ ಪಾದ ಪೂಜೆಗಳು ಜರಗುತ್ತಿದ್ದವು.
ಒಮ್ಮೆ ಕೊಳಗಲ್ಮಠಕ್ಕೆ, ನಿಡುವಳ್ಳಿಯ ಮರುಳಸಿದ್ಧ ಶಿವಯೋಗಿಗಳು ಆಗಮಿಸುತ್ತಾರೆ. ಅವರ ಚಿಕ್ಕ ಮನೆಯಲ್ಲಿಯೇ ದಂಪತಿಗಳು ಶ್ರದ್ಧಾ ಭಕ್ತಿಯಿಂದ ಅವರ ಪಾದ ಪೂಜೆಯನ್ನು, ಸಂಭ್ರಮದಿಂದ ಪೂರೈಸುತ್ತಾರೆ. ಪೂಜೆಯ ನಂತರ ಸಂತೃಪ್ತಗೊಂಡ ಶ್ರೀಗಳು ಸಂತಸದಿಂದ “ಇದು ಶಿವನು ಆರಿಸಿಕೊಂಡ ಮನೆ. ಮುಂದೆ ಅವನು ಇಲ್ಲಿಯೇ ಬರುವನು” ಎಂದು ತುಂಬು ಹೃದಯದಿಂದ ಹರಿಸಿ ನಡೆದರು. ಮುಂದೆ ಕೆಲವು ದಿನಗಳ ನಂತರ ಗೌರಮ್ಮ ಗರ್ಭಿಣಿಯಾದರು. ಮರುಳಸಿದ್ಧ ಶಿವಯೋಗಿಗಳ ಹರಕೆ ಕೈಗೂಡುವುದೆನ್ನುವಂತೆ ಎಂಟು ತಿಂಗಳಲ್ಲಿಯೇ ಗರ್ಭಕ್ಕೆ ಲಿಂಗಧಾರಣೆಯಾಯಿತು. ಮುಂದೆ ಶಿವನೇ ಶಿಶುರೂಪವಾಗಿ ಗಂಡು ಮಗು ಗೌರಮ್ಮನ ಮಡಿಲು ತುಂಬಿತು. ( ಶಾಲೆ ವಾಹನ ಶಖೆ ೧೭೭೨, ಸಾಧಾರಣ ನಾಮ ಸಂವತ್ಸರ ಭಾನುವಾರ. ಕ್ರಿಸ್ತ ಶಕ ೧೮೫೦ರಲ್ಲಿ).
ಮಗು ಜನಿಸಿದ ಹನ್ನೆರಡನೇ ದಿನಕ್ಕೆ, ಸುಮಂಗಲೆಯರು ಮಗುವಿಗೆ “ಮಳೆಯಪ್ಪಯ್ಯ” ಎಂದು ನಾಮಕರಣ ಮಾಡಿದರು. ಶಿಶು ಮಳೆಯಪ್ಪಯ್ಯನ ಬೆಳುವಣಿಗೆಯನ್ನು ಕಂಡಾಗಲೆಲ್ಲ ವೀರಯ್ಯ ಗೌರಮ್ಮ ದಂಪತಿಗಳಿಗೆ, ಮರುಳುಸಿದ್ಧಯ್ಯ ಶಿವಯೋಗಿಗಳ ಹರಕೆ ಕೈಗೂಡಿದಂತೆ ಭಾಸವಾಗುತ್ತಿತ್ತು.
ಮಗು ಬಾಲಕನಾಗಿ ಬೆಳೆಯುತ್ತಲೇ ತಂದೆಯ ನಿಷ್ಠಾಭಕ್ತಿ, ಆಚಾರ ವಿಚಾರ, ತಾಯಿಯ ವಾತ್ಸಲ್ಯ ಕರುಣೆ ಭಕ್ತಿಯನ್ನು ಒಡಗೂಡಿಸಿಕೊಂಡು ಎಂಟು ವರುಷದವನಾದಾಗ ಮರುಳುಸಿದ್ಧ ಶಿವಯೋಗಿಗಳ ಮಠದಲ್ಲಿ ದೀಕ್ಷಾ ಕಾರ್ಯ ನೆರವೇರಿ ಸ್ಥಾನಿಕ ವಿದ್ಯಾಭ್ಯಾಸ ಪ್ರಾರಂಭವಾಯಿತು. ಈತನಲ್ಲಿದ್ದ ವಿಶೇಷ ಗುಣಗಳನ್ನು ಗಮನಿಸಿದ ಶಿವಯೋಗಿಗಳು ಅವನನ್ನು ಸಂಸ್ಕೃತ ವೇದ ಪಾಠಶಾಲೆಗೆ ಕಳುಹಿಸಲು ಸೂಚಿಸಿದರು. ಬಾಲಕನಾದ ಮಳೆಯಪ್ಪಯ್ಯನಲ್ಲಿ ಬರು ಬರುತ್ತಾ ಅನೇಕ ಬದಲಾವಣೆಗಳಾಗತೊಡಗಿದವು. ಏಕಾಂತವಾಗಿರುವುದು, ಜಂಗಮ ಪಾದ ಪೂಜೆ ಪೂರೈಸುವುದು, ಲಿಂಗಧ್ಯಾನದಲ್ಲಿ ಮೈಮರೆಯುವುದು. ಮಿತಭಾಷೆಯಾಗಿರುವುದು,
ಮೌನವನ್ನೇ ಹೆಚ್ಚು ಪ್ರೀತಿಸುವುದು ಮುಂತಾದ ಗುಣಗಳು ಕಂಡುಬಂದವು. ಬಾಲಕನಿಗೆ ತಾಯಿ ಹೇಳಿದ ಶಿವಶರಣರ ಕಥೆಗಳಲ್ಲಿ ಬರುವ ಆಚಾರ ವಿಚಾರ ,ಜಪ ತಪ, ಲಿಂಗನಿಷ್ಠೆ, ಲಿಂಗನಿರೀಕ್ಷೆ ಕುರಿತು ಶ್ರದ್ದೆ ಮೂಡತೊಡಗಿತು. ತಾನು ಹಾಗೆ ಯಾಕೆ ಲಿಂಗಪೂಜಾನಿಷ್ಠನಾಗಿ ಜಪತಪಗಳಿಂದ ಶಿವನನ್ನು ಮೆಚ್ಚಿಸಬೇಕೆಂದು ಹಂಬಲಿಸುತ್ತಿದ್ದನು. ಆ ಸಂದರ್ಭದಲ್ಲಿ ತಾಯಿಯ ಸಲಹೆಯನ್ನು ಕೇಳಿ ಕಲ್ಲಬೆಟ್ಟಕ್ಕೆ ಹೋಗಿ ತಪಸ್ಸು ಮಾಡಿ ಯೋಗಿಯಾಗುವೆ ಎಂದು ಹಂಬಲಿಸುತ್ತಿದ್ದರು. ತಾಯಿ ಅದು ಬಹಳ ದುರ್ಗಮ ಸ್ಥಾನ ಎಂದು ನಿರ್ದೇಶಿಸಿದರೂ, ಹಲವು ಕ್ರೂರ ಪ್ರಾಣಿಗಳ ವಾಸತಾಣವೆಂದು, ಮನುಷ್ಯರು ಅಲ್ಲಿ ಹೋಗಬಾರದೆಂದರೂ, ತಾಯಿ ಪರಿ ಪರಿಯಾಗಿ ಹೇಳಿದರೂ, ಗಮನಿಸದೆ ಮಗು ಒಂದು ಸಲ ಸಸಿವಾಲಕ್ಕೆ ಬಂದ ಒಬ್ಬ ಶಿವಯೋಗಿಯ ಜೊತೆಗೆ ಕಲ್ಲಬೆಟ್ಟಕ್ಕೆ ನಡದೇಬಿಟ್ಟರು. ಅಲ್ಲಿಯೇ ಕೆಲ ಕಾಲ ಬಾಲಕ ತಪೋನಿರತನಾದನು.
ಬಡಕಲ ಶರೀರ, ಜಟಾಧಾರಿ, ಬಿಳಿಯ ಗಡ್ಡ, ಗುಳಿ ಬಿದ್ದ ಕಣ್ಣುಗಳು, ಬೆನ್ನಿಗೆ ಹತ್ತಿದ ಹೊಟ್ಟೆಯ ಅನೇಕ ಕಲ್ಲಬೆಟ್ಟ ಶಿವಯೋಗಿಗಳು ಮಳೆಯಪ್ಪಯ್ಯನನ್ನು ಆಕರ್ಷಿಸಿದರು. ಕಲ್ಲಬೆಟ್ಟ ವಾಸಿಯಾದ ಮಗುವನ್ನು ಕರೆತರಲು ತಂದೆತಾಯಿಗಳು ಎಷ್ಟೇ ಪ್ರಯತ್ನಿಸಿದರೂ ಕಣ್ಣೀರು ಕರೆದರೂ ಮಗ ಅಲ್ಲಿಯೇ ನೆಲೆ ನಿಂತನು. ದುಃಖತಪ್ತರಾದ ತಂದೆ ತಾಯಿಗಳಿಗೆ ಬಸವಲಿಂಗ ಸ್ವಾಮಿಗಳು ಸಾಂತ್ವನ ಹೇಳುತ್ತಾ ನಿಮ್ಮ ಮಗ ಯೋಗಿಯಾಗಲಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಶರಣನಾಗಲಿ ಎಂದು ಮಳೆಯಪ್ಪನನ್ನು ಹರಸಿ ತಂದೆ ತಾಯಿಗಳನ್ನು ಸಮಾಧಾನಪಡಿಸಿದರು. ಈ ಹರಕೆಯು ಮುಂದೆ ಸತ್ಯವಾಗಿ ಪರಿಣಮಿಸಿತು.
ಕಲ್ಲಬೆಟ್ಟದಲ್ಲಿ ಬಸವಲಿಂಗ ಸ್ವಾಮಿಗಳು ಮಳಿಯಪ್ಪಯ್ಯನನ್ನು ಕಂಡು ಕ್ಷೇಮ ಸಮಾಚಾರವನ್ನು ವಿಚಾರಿಸಿದಾಗ, ಸಂಸ್ಕೃತ ಅಧ್ಯಯನಕ್ಕಾಗಿ ತಾನು ಬೇರೆ ಕಡೆ ಹೋಗಲು ಸಾಧ್ಯವೇ ಎಂದು ಕೇಳಿದನು.
ಆತನ ಅಭ್ಯಾಸದ ಆಸಕ್ತಿಯನ್ನು ಕಂಡು ನೀನು ಬಳ್ಳಾರಿಯಲ್ಲಿರುವ ಸಕ್ರಿ ಕರಡೆಪ್ಪನವರ ವೇದ ಪಾಠ ಶಾಲೆಗೆ ಹೋಗುವುದು ಸೂಕ್ತ, ಅದು ಸಂಸ್ಕೃತ ಅಧ್ಯಯನಕ್ಕೆ ಯೋಗ್ಯವಾದುದು ಎಂದು ಸೂಚಿಸಿದರು.
ಬಳ್ಳಾರಿಯ ಸಕ್ರಿ ಕರಡೆಪ್ಪನವರು ಆಗರ್ಭ ಶ್ರೀಮಂತರು. ಗುರು ಲಿಂಗ ಜಂಗಮ ದಾಸೋಹಿಗಳು ಎಂದು ಪ್ರಸಿದ್ದರಾಗಿದ್ದರು. ಅವರು ಸಂಸ್ಕೃತ ವೇದ ಪಾಠ ಶಾಲೆಯನ್ನು ನಡೆಸುತ್ತಿದ್ದರು. ಆ ಭಾಗದಲ್ಲಿ ಸಂಸ್ಕೃತ ಅಧ್ಯಯನದ ಅವಶ್ಯಕತೆಗಳನ್ನು ಅರಿತು ಒಂದು ಸಂಸ್ಕೃತ ಪಾಠಶಾಲೆ ತೆರೆದು ವಿದ್ಯಾರ್ಥಿಗಳಿಗೆ ಅನ್ನ, ವಸತಿ, ಗ್ರಂಥಗಳನ್ನು ಒದಗಿಸುತ್ತಿದ್ದರಲ್ಲದೆ ಸಂಸ್ಕೃತ ಪಾಠಶಾಲೆಗೆ ಸೂಕ್ತ ಗುರುಗಳನ್ನು ನಿಯಮಿಸಿದ್ದರು. ಹೀಗಾಗಿ ಸಕ್ರಿ ಕರಡೆಪ್ಪನವರ ವೇದ ಪಾಠಶಾಲೆ, ಶ್ರೇಷ್ಠ ಪಾಠಶಾಲೆ ಎಂದು ಪ್ರಸಿದ್ದಿಯನ್ನು ಪಡೆದಿತ್ತು. ಇಲ್ಲದಿದ್ದರೆ ಅಂದಿನ ಕಾಲಕ್ಕೆ ಸಂಸ್ಕೃತ ಅಧ್ಯಯನಕ್ಕಾಗಿ ಕಾಶಿಗೆ ಹೋಗಬೇಕಾಗುತ್ತಿತ್ತು. ಇದು ಸಾಮಾನ್ಯರಿಗೆ ಅಸಾಧ್ಯವಾಗುತ್ತಿತ್ತು. ಗುರುಗಳ ಸಲಹೆಯಂತೆ ಮಳಿಯಪ್ಪನವರು ಸಂತೆ ಸಾರಿಗೆಯವರ ಜೊತೆಗೂಡಿ ಬರಿಗಾಲಲ್ಲಿ ನಡೆದು ಬಳ್ಳಾರಿಗೆ ಬಂದರು.
ಆಗ ಅವರು ೧೪-೧೫ರ ವರುಷದ ಬಾಲಕರಾಗಿದ್ದರು. ಬಳ್ಳಾರಿಗೆ ಬಂದು ನೇರವಾಗಿ ವೇದಶಾಲೆಯಲ್ಲಿ ಪ್ರವೇಶ ಪಡೆದು ಊರ ಹೊರಗಿನ ಒಂದು ತೋಟದಲ್ಲಿ ನೀರಿನ ಸೌಕರ್ಯವಿರುವ ಪರ್ಣಶಾಲೆಯನ್ನು ಕಟ್ಟಿಕೊಂಡು ವಾಸಿಸಿದರು. ಪ್ರಸಾದಕ್ಕಾಗಿ ಕಂತಿಭಿಕ್ಷೆಯನ್ನು ಅವಲಂಬಿಸಿದರು. ಆ ಶಾಲೆಯಲ್ಲಿ ಅನೇಕ ಪಂಡಿತರು ಗುರುಗಳಾಗಿದ್ದರು. ಅಲ್ಲಿ ವೇದಾಂತ, ವ್ಯಾಕರಣ, ತರ್ಕಶಾಸ್ತ್ರ, ಪುರಾತನರ ವಚನಗಳು, ಶಿವಶರಣ ವಚನ ಸಾಹಿತ್ಯ, ದ್ವೈತ, ಅದ್ವೈತ, ವೀರಶೈವ ಮುಂತಾದ ವಿಷಯಗಳ ಅಧ್ಯಯನ ಸಾಗುತ್ತಿತ್ತು. ಕೇವಲ ಸಾತ್ವಿಕ ವೃತ್ತಿಯಿಂದ ಪ್ರಪಂಚವನ್ನು ಮಾಡುತ್ತ ಗುರು ಲಿಂಗ ಜಂಗಮ ಆರಾಧನೆಯಲ್ಲಿ ತಮ್ಮ ಕಾಲವನ್ನು ಸವೆಸುತ್ತ ಸಕ್ರಿ ಕರಡೆಪ್ಪನವರು ದಾಸೋಹ ತೃಪ್ತರಾಗಿದ್ದರು. ಉದಾರ ವಿದ್ಯಾದಾನದಿಂದ ಶರಣ ಜೀವನವನ್ನು ಸಾಗಿಸುತ್ತಿದ್ದರು.
ಬಳ್ಳಾರಿಗೆ ಬಂದ ಮಳಿಯಪ್ಪಯ್ಯನವರು ಊರ ಹೊರಗಿನ ತೋಟದಲ್ಲಿ ವಾಸವಾಗಿದ್ದ ಸಂಗತಿ ಕರಡೆಪ್ಪನವರ ಗಮನಕ್ಕೆ ಬಂದಿತು. ಸ್ವತಃ ಅವರೇ ಮಳಿಯಪ್ಪಯ್ಯನವರ ಗುಡಿಸಲಕ್ಕೆ ಬಂದು ಏಕೆ ತಾವು ಅನ್ನ ಛತ್ರದಲ್ಲಿ, ವಸತಿ ಛತ್ರದಲ್ಲಿ ಇರಬಾರದು ಎಂದು ವಿಚಾರಿಸಿದಾಗ ಅಲ್ಲಿ ನನ್ನ ಲಿಂಗ ಪೂಜೆಗೆ ತೊಂದರೆಯಾಗಬಹುದು ಅದಕ್ಕಾಗಿ ನಾನು ಏಕಾಂತವನ್ನು ಬಯಸುತ್ತೇನೆ ಅಧ್ಯಯನಕ್ಕೂ ಇದು ಯೋಗ್ಯವಾದ ಸ್ಥಳವಾಗಿದೆ. ನನಗೆ ಗದ್ದಲ ಹಿಡಿಸುವುದಿಲ್ಲ. ಏಕಾಂತವನ್ನು ಬಯಸುತ್ತೇನೆ ಎಂದು ಸ್ಪಷ್ಟ ಪಡಿಸಿದಾಗ ನಾನು ನಮ್ಮ ಮನೆಯಲ್ಲಿಯೇ ತಮ್ಮ ಏಕಾಂತಕ್ಕೆ ವ್ಯವಸ್ಥೆ ಅಣಿಗೊಳಿಸುತ್ತೇನೆ. ಲಿಂಗ ಪೂಜೆ ನಿರಾಳವಾಗಿ ಸಾಗುತ್ತದೆ. ನಮ್ಮ ಮನೆಯಲ್ಲಿ ನಾನು ಪೂರೈಸಿಕೊಡುತ್ತೇನೆ ಎಂದು ವಿನಮ್ರವಾಗಿ ಭಿನ್ನಯಿಸಿದಾಗ ಅವರ ಮನೆಯ ವಾಸಕ್ಕೆ ಮಳಿಯಪ್ಪಯ್ಯನವರು ಒಪ್ಪಿಕೊಂಡು ಮನೆಗೆ ಬರುತ್ತಾರೆ. ತಮ್ಮ ಪಾದದ ಧೂಳಿನಿಂದ ಸತ್ಸಂಗದಿಂದ ನನ್ನ ಮನೆಯನ್ನು ಹಾಗೂ ನನ್ನನ್ನು ಪಾವನ ಮಾಡಬೇಕೆಂದು ಮಳಿಯಪ್ಪಯ್ಯನವರನ್ನು ಒಪ್ಪಿಸಿಕೊಂಡು ಮನೆಗೆ ಕರೆ ತಂದರು. ತ್ರಿಕಾಲ ಲಿಂಗಾರ್ಚನೆ, ಒಂದೇ ಸಲ ಪ್ರಸಾದ ಸ್ವೀಕರಿಸುತ್ತ ವೇದ ವೇದಾಂತ ಷಡ್ ದರ್ಶನ, ವ್ಯಾಕರಣ, ಅಲಂಕಾರ, ಸಂಸ್ಕೃತ ಕಾವ್ಯ, ಅದ್ವೈತ ಶಾಸ್ತ್ರ, ವಚನ ಸಾಹಿತ್ಯ ಎಲ್ಲ ವಿಷಯವನ್ನು ಗಾಢವಾಗಿ ಅಭ್ಯಸಿಸಿದರು. ಪಂಡಿತ ಮಾನ್ಯ ಜ್ಞಾನಿಗಳಾಗಿ ರೂಪಗೊಳ್ಳತೊಡಗಿದರು. ಅಪಾರ ಜ್ಞಾನಿಗಳು, ತ್ರಿಕಾಲ ಲಿಂಗ ಪೂಜೆ ನಿಷ್ಠರು, ಅಧ್ಯಾತ್ಮದ ಕಳೆ ಹೊತ್ತ ತರುಣ, ಯೋಗಿಯ ಕಳೆ, ತೇಜಸ್ಸಿನಿಂದ ಕಂಗೊಳಿಸುತ್ತಿದ್ದರು.

ಚಿತ್ರ ಸಂಖ್ಯೆ ೧ ಶ್ರೀ ಸಕ್ಕರೆ ಕರಡೆಪ್ಪನವರು ಮತ್ತು ಅವರ ಸಂಸ್ಕೃತ ಪಾಠ ಶಾಲೆ ಬಳ್ಳಾರಿ.
ಒಮ್ಮೆ ಸಕ್ರಿ ಕರಡೆಪ್ಪನವರ ಮನೆಗೆ, ಅಮರಾವತಿಯ ರಾಮಪ್ಪ ದೇಸಾಯಿಯವರು ಭೇಟಿ ನೀಡಿದ್ದರು. ಅವರ ಮನೆಯ ಆದರ ಆತಿಥ್ಯವನ್ನು ಸ್ವೀಕರಿಸಿ ಕುಳಿತ್ತಿದ್ದಾಗ, ಮನೆಯಲ್ಲಿ ತಂಗಿದ್ದ ಯೋಗಿ ಕಳೆಯನ್ನು ಹೊತ್ತ ಮಳಿಯಪ್ಪಯ್ಯನವರನ್ನು ನೋಡಿ ಆಕರ್ಷಿತರಾಗುತ್ತಾರೆ. ಆಗ ಕರಡೆಪ್ಪನವರಿಗೆ ಚಿತ್ತರಗಿಯ ಪೀಠದ ಗುರುಗಳಾದ ಗುರುಮಹಾಂತ ಸ್ವಾಮಿಗಳು ಲಿಂಗೈಕ್ಕ್ಯರಾದರೆಂದು, ಪೀಠದ ಅಧಿಕಾರಕ್ಕೆ ಯೋಗ್ಯ ಪೀಠಾಧಿಕಾರಿಯನ್ನು ಅರಸುತ್ತಿದ್ದೇವೆ ತಾವು ತಮ್ಮ ಪಾಠಶಾಲೆಯ ವಟುದೇವರನ್ನು ಸೂಚಿಸಿದರೆ ಒಳ್ಳೆಯದು ಎಂದು ಕರಡೆಪ್ಪನವರಲ್ಲಿ ವಿನಂತಿಸಿಕೊಂಡರು. ಅದೇ ಹೊತ್ತಿಗೆ ಲಿಂಗ ಪೂಜೆ ಪೂರೈಸಿ ದೇಸಾಯಿಯರೊಡನೆ ಮಾತನಾಡುತ್ತಿದ್ದ ಸಕ್ರಿ ಕರಡೆಪ್ಪನವರು, ಮಳಿಯಪ್ಪಯ್ಯ ದೇವರೇ ಚಿತ್ತರಗಿ ಪೀಠದ ಅಧಿಕಾರಿಯಾಗಬಹುದಲ್ಲವೆ ಎಂದು ಕೇಳಿದಾಗ ದೇಸಾಯಿಯವರು ಆನಂದದಿಂದ ನೀವು ಸೂಚಿಸದವರನ್ನೇ ಪೀಠಾಧಿಕಾರಿಯಾಗಿ ಮಾಡಲು ಸಿದ್ಧ ಎಂದರು. ಆಗ ಕರಡೆಪ್ಪನವರು ಮಳಿಯಪ್ಪಯ್ಯ ದೇವರನ್ನು ಕರೆದು ಚಿತ್ತರಗಿ ಇಳಕಲ್ ಸಂಸ್ಥಾನ ಪೀಠದ ಅಧಿಕಾರವನ್ನು ನೀವು ಏಕೆ ವಹಿಸಿಕೊಳ್ಳಬಾರದು, ನಿಮ್ಮನ್ನು ಅರಸಿ ದೇಸಾಯಿಯವರು ಬಂದಿದ್ದಾರೆ. ಆ ಪೀಠವು ೫೬ ಶಾಖಾ ಮಠಗಳನ್ನು ಹೊಂದಿದ್ದು, ಅಸಂಖ್ಯಾತ ಭಕ್ತರನ್ನು ಹೊಂದಿದೆ.
ಒಳ್ಳೆಯ ಸಂಪತ್ತನ್ನು ಹೊಂದಿದ ಮಠವಾಗಿದೆ. ಆ ಮಠದ ಅಧಿಕಾರವನ್ನು ತಾವು ವಹಿಸಿಕೊಂಡರೆ ಒಳ್ಳೆಯದು ಎಂದು ಬಿನ್ನವಿಸಿದಾಗ ಮಳಿಯಪ್ಪಯ್ಯ ದೇವರು ನನಗೆ ಯಾವ ಪೀಠಾಧಿಕಾರವು ಬೇಡ, ಸಂಪತ್ವೈಭವೂ ಬೇಡ, ಪ್ರಚಾರ ಪ್ರಸಿದ್ಧಿಯು ಬೇಡ ಎಂದು ಸಾರಸಗಟವಾಗಿ ನಿರಾಕರಿಸಿದರು. ದೇಸಾಯಿಯರು ನಿರಾಶದಿಂದ ಮರಳಿದರು.
ಕಾಲಗತಿಸಿದಂತೆ ಆ ಸಿಂಹಾಸನಕ್ಕೆ ಬೇಗನೆ ಒಬ್ಬ ಯೋಗ್ಯ ಪಟ್ಟಾಧಿಕಾರಿಯನ್ನು ತರಬೇಕೆಂದು ದೇಸಾಯಿಯವರಿಗೂ, ಭಕ್ತರಿಗೂ ಆತುರ ಹೆಚ್ಚಾಯಿತು. ಆದ್ದರಿಂದ ರಾಮಪ್ಪ ದೇಸಾಯಿಯವರು ಅನೇಕ ಮಠ ಮಾನ್ಯಗಳಿಗೆ ಸಂದೇಶವನ್ನು ರವಾನಿಸಿದರು. ಚಿತ್ತರಗಿ ಪೀಠಕ್ಕೆ ವಟುವನ್ನು ಹುಡುಕಲು ಅನೇಕ ಮಠ ಆಶ್ರಮಗಳಿಗೆ ಭೇಟಿ ಕೊಟ್ಟು ಅರಸಿದರೂ ಪ್ರಯತ್ನ ಫಲಕಾರಿಯಾಗಲಿಲ್ಲ. ಹೀಗಿರಲಾಗಿ ಕೆಲದಿನಗಳ ನಂತರ ಸಕ್ರಿ ಕರಡೆಪ್ಪನವರು ಶಿವಾಧೀನರಾದರು.
ಅದಾದ ನಂತರ ಪಾಠಶಾಲೆಯು ನಿಂತಿತು. ಪಾಠಶಾಲೆಯಲ್ಲಿ ಇದ್ದಂತ ವಟುಗುಳು ಬೇರೆ ಬೇರೆಕಡೆ ಚದುರಿದರು. ಅಲ್ಲಿ ಇರುವಂತಹ ಶಿಕ್ಷಕರು ತಮ್ಮ ತಮ್ಮ ನೆಲೆ ಅರೆಸಿಕೊಂಡು ಹೋದರು. ಆಗ ಮಳಿಯಪ್ಪಯ್ಯನವರೂ ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತ ಕರಡೆಪ್ಪನವರಿಗೂ ತಮಗೂ ಪೀಠದ ಅಧಿಕಾರದ ಬಗ್ಗೆ ಚರ್ಚಿಸುವಾಗ ಅಧಿಕಾರದ ಬಗ್ಗೆ ನೀರಾಕರಿಸಿದ್ದು ನೆನಪಿಗೆ ಬಂತು. ಕರಡೆಪ್ಪನವರ ಮಾತಿಗೆ ತಾವು ನನಗೆ ಲೋಕದ ಸಂಸಾರ ಬೇಡ, ಯಾವ ಅಧಿಕಾರವು ಬೇಡ, ಮೋಹವು ಬೇಡ, ಯಾವ ಪಟ್ಟಾಧಿಕಾರವು ಬೇಡ ಎಂದು ಖಡಾಖಂಡಿತವಾಗಿ ಕರಡೆಪ್ಪನವರಿಗೆ ಹೇಳಿದಾಗ “ನೀವು ಸನ್ಯಾಸಿಗಳಾದರು ಲೋಕದ ಸಂಸಾರಿಗಳು. ಲೋಕದ ಸೇವೆ ಮಾಡಲೇಬೇಕು” ಎಂದು ಅರುಹಿದ ಮಾತುಗಳು ಮರುಕಳಿಸಿದವು. ಅದೇ ಮಾತನ್ನು ಮೆಲಕು ಹಾಕುತ್ತ ವೇದ ಪಾಠಶಾಲೆ ಚದುರಿದಾಗ ಮುಂದೇನು ಎಂಬ ಶೂನ್ಯ ಮಳಿಯಪ್ಪಯ್ಯನವರಿಗೆ ಕಾಡಹತ್ತಿತು. ಅವರಿದ್ದರೆ ಬೇರೆ ಮಾತಾಗುತ್ತಿತ್ತು. ಅವರ ನಿಧನದ ನಂತರ ಲೋಕಸಂಚಾರಿಗಳಾಗಿ ತಮ್ಮ ತ್ರಿಕಾಲ ಪೂಜೆಯಲ್ಲಿ ನಿರತರಾಗಿ ಭವಿಷ್ಯದ ಶೂನ್ಯತೆಯಲ್ಲಿ ಸಾಗಿದರು. ಆಗ ವೇದ ಪಾಠಶಾಲೆಯಲ್ಲಿ ಗುರುವನ್ನರಸಿ ನರೇಗಲ್ಲಿಗೇ ಬರುತ್ತಾರೆ. ಊರ ಹೊರಗಿನ ತೋಟದಲ್ಲಿ ಪರ್ಣಶಾಲೆಯನ್ನು ನಿರ್ಮಿಸಿಕೊಂಡು ಕಂತಿಭಿಕ್ಷೆಯಿಂದ ತಮ್ಮ ತ್ರಿಕಾಲ ಲಿಂಗಪೂಜೆ ನೆರವೇರಿಸಿಕೊಂಡು ಸಾಗುತ್ತಿರವಾಗಲೇ ಒಂದು ವಿಚಿತ್ರ ಜರುಗಿತು. ಅವರಿಗೆ ವಿಪರೀತ ಭೇದಿಯು ಶುರುವಾಯಿತು. ಪ್ರತಿಸಲ ಭೇದಿಗೆ ತೆರಳಿದಾಗ ಬಾವಿ ನೀರನ್ನು ಸೇದಿ ಸ್ನಾನ ಮಾಡುವುದು ಮತ್ತೆ ಭೇದಿಗೆ ಸಾಗುವುದು. ದಿನಕ್ಕೆ ನಲವತ್ತು-ಐವತ್ತು ಸಲ ಭೇದಿಯಾಗಿ, ದೇಹದ ಶಕ್ತಿಯಲ್ಲಾ ಉಡುಗಿ ತಮಗೆ ಸ್ನಾನ ಪೂಜೆ ಮಾಡಲು ಆಗದಂತೆ ಮೈಯಲ್ಲೆಲ್ಲಾ ಉರಿ ಹೊಕ್ಕಂತಾಗಿ ನಿತ್ರಾಣರಾದರು. ಯಾವ ಔಷದಿಯೂ ನಾಟಲಿಲ್ಲ. ಕೊನಗೆ ನಿತ್ರಾಣರಾಗಿ ಪೂಜೆ ಜಪ ತಪ ತಗ್ಗಿ ಕೈ ಕಾಲುಗಳೆಲ್ಲ ಶಕ್ತಿ ಉಡಗಿ ಮೂರ್ಚಿತರಾಗಿ ಬಾವಿಯ ದಡದಲ್ಲಿ ಕುಸಿದರು. ಆ ಸಂದರ್ಭದಲ್ಲಿಯೇ ಸಕ್ರಿ ಕರಡೆಪ್ಪನವರು ಬಂದು ಚಿತ್ತರಗಿ ಪೀಠಕ್ಕೆ ಸಿದ್ಧರಾಗಿರಿ ಎಂದಂತೆ ಭಾಸವಾಗಿತ್ತು. ಇದೆ ಪ್ರಕಾರ ಅಂದೇ ಅಮರಪ್ಪ ದೇಸಾಯಿಯವರ ಸ್ವಪ್ನದಲ್ಲಿ ಕರಡೆಪ್ಪನವರು ಬಂದು ಮಳಿಯಪ್ಪಯ್ಯನವರನ್ನು ಕರೆತರಲು ನರೇಗಲ್ಲಿಗೆ ಹೋಗಿರಿ ಎಂದು ಹೇಳಿದಂತಾಯಿತು. ಮರುದಿನವೇ ರಾಮಪ್ಪ ದೇಸಾಯಿಯವರು ನರೇಗಲ್ಲಿಗೆ ಬಂದು ಮಳಿಯಪ್ಪಯ್ಯನವರ ಸ್ಥಿತಿಯನ್ನು ಕಂಡು ಚಿಂತಾಕ್ರಾಂತರಾಗಿ ವೈದ್ಯರನ್ನು ಕರೆಯಿಸಿ ಔಷದ ಉಪಚಾರದಿಂದ ಉಪಚರಿಸಿದಾಗ ಕಣ್ಣು ಬಿಟ್ಟ ಮಳಿಯಪ್ಪಯ್ಯನವರು ದೇಸಾಯಿಯವರನ್ನು ಕಂಡು ಕರಡೆಪ್ಪನವರ ಅಪ್ಪಣೆ ಮೇಲೆ ಬಂದಿದ್ದಿರೋ ಎಂದು ಕೇಳಿ ಹೌದು ಎಂದಾಗ ನಾನು ಅವರ ಮಾತನ್ನು ಒಪ್ಪಿಕೊಂಡೆ ಹಾಗಾದರೆ ಚಿತ್ತರಗಿಯ ಕಡೆ ತಾವು ಚಿತ್ತಯಸಬೇಕೆಂದು, ಚಿತ್ತರಗಿಯ ಸಂಸ್ಥಾನದ ಪೀಠಾಧಿಕಾರಿಯಾಗಲು ಅನುನಯಸಿ ಒಪ್ಪಿಸಿದರು. ಅದರಂತೆ ದೇಸಾಯಿಯರು ಪಟ್ಟಾಧಿಕಾರದ ಮುಹೂರ್ತ ಹಾಗೂ ಸಮಾರಂಭದ ದಿನಾಂಕವನ್ನು ಭಕ್ತರೊಂದಿಗೆ ಸಮಾಲೋಚಿಸಿ ಪಟ್ಟಾಧಿಕಾರದ ತಯಾರಿಯನ್ನು ನಡೆಸಿದರು. ಅದರಂತೆ ಶಾಲಿವಾಹನ ಶಕೆ ೧೮೦೯ ಪ್ರಮೋಧಿನಾಮ ಸಂವತ್ಸರ, ವೈಶಾಖ ಶುಕ್ಲದ ಚತುರ್ದಶಿ ಸೋಮವಾರ ಪಟ್ಟಾಧಿಕಾರ ನಡೆಯಬೇಕೆಂದು ನಿಗದಿಯಾಯಿತು. ಅದು ಕ್ರಿಸ್ತ ಶತಕ ೧೮೭೯ ಆಗಿತ್ತು. ಅಂದು ಭಕ್ತರೆಲ್ಲ ಕೂಡಿಕೊಂಡು ಒಳ್ಳೆ ವಿಜೃಂಭಣೆಯಿಂದ ಪಟ್ಟಾಧಿಕಾರ ಸಮಾರಂಭ ಜರುಗಿಸಿ ಶ್ರೀ.ಮ.ನೀ.ಪ್ರ ವಿಜಯಮಹಾಂತ ಶಿವಯೋಗಿಗಳೆಂದು ಅಭಿದಾನ ಹೊಂದಿ ಚಿತ್ತರಗಿಯ ಇಳಕಲ್ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿ ಮುಂದಿನ ಮೂವತ್ತೊಂದು ವರುಷದವರೆಗೆ ಪೀಠಾಧಿಕಾರದ ಹೊಣೆಯನ್ನು ಹೊತ್ತು, ಸಮಾಜೋದ್ಧಾರಕ ಕಾಯಕವನ್ನು ಹೊತ್ತು ತಮ್ಮ ತ್ರಿಕಾಲ ಪೂಜೆ ನಿಷ್ಠೆಯಿಂದ ಭಕ್ತರ ಹೃದಯ ಮಂದಿರದಲ್ಲಿ ನಡೆದಾಡುವ ದೇವರೆಂದೇ ಪರಿಗಣಿತರಾದರು. ಪಟ್ಟವಾದ ನಂತರ ಹನ್ನೆರಡು ವರುಷಗಳ ಕಾಲ ಮೌನಾನುಷ್ಠಾನ ಕೈಗೊಳ್ಳುತ್ತಾರೆ.

ಚಿತ್ರ ಸಂಖೈ೨ : ಚಿತ್ತರಗಿಯ ಮೂಲ ಮಠ
ಶ್ರೀ ವಿಜಯಮಹಾಂತೇಶರನ್ನು ಪಟ್ಟಕ್ಕೆ ಕುಳ್ಳಿರಿಸಿದ ನಾರದ ಗದ್ದೆಯ ತಾತನವರು ಗುರುವಾಗಿ ಎಲ್ಲ ಜನರು ಕೇಳುವಂತೆ ಮಂತ್ರೋಪದೇಶವನ್ನು ಮಾಡಿದರು. ತಾವು ಸಧ್ಭಕ್ತಿ, ಸದ್ವಿವೇಕ, ಸುವಿರಕ್ತಿಯಿಂದ ನಡೆದುದಾರರೇ ತಮಗೆ ಲೋಕದಲ್ಲಿ ಯಾವ ಭಯವು ಬಾರದು. ಶರಣ ಕರಡೀಶ್ವರನ ಪರತರದ ಗರಡಿಯಲ್ಲಿ ಪಳಗಿದ ತಮ್ಮಂಥ ಅಮೂಲ್ಯ ರತ್ನವನ್ನು ರಾಮಪ್ಪ ದೇಸಾಯಿಯವರು ದೊರಕಿಸಿ ತಂದಿರುವುದು ಇಳಕಲ್ ನಾಡಿನ ಮಹಾ ಪುಣ್ಯವೆಂದು ಭಾವಿಸಬೇಕಾಗಿದೆ. ಗುರುಮಹಾಂತೇಶನ ಅನುಕರಣೆ ಮಾಡುತ್ತಾ ಜೀವನವನ್ನು ಪವಿತ್ರವಾಗಿ ಮಾರ್ಪಡಿಸಿಕೊಳ್ಳಿರಿ ಎಂದು ಹೇಳಿ ವಿಜಯಮಹಾಂತೇಶನಿಗೆ “ಕರಣಹಸಿಗೆ, ಮಂತ್ರಗೌಪ್ಯ, ಶೂನ್ಯಸಂಪಾದನೆ, ಬಸವೇಶ್ವರನ ವಚನ ಹೊತ್ತಿಗೆ, ಶತಕ ತ್ರಯ” ಮೊದಲಾದ ಪವಿತ್ರ ಗ್ರಂಥಗಳನ್ನು, ಭಕ್ತಿ, ಕ್ರಿಯಾ, ಜ್ಞಾನಗಳನ್ನು ವಿಕಾಸ ಮಾಡಿಕೊಳ್ಳಲು ಆಶೀರ್ವದಿಸಿದರು. ವಿಜಯಮಹಾಂತೇಶರು ಆ ಗ್ರಂಥಗಳನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಗುರುಗಳ ಶ್ರೀಪಾದಕ್ಕೆ ಅಭಿವಂದಿಸಿದರು. ಮುಂದೆ ಹನ್ನೆರಡು ವರುಷ ಮೌನಾನುಷ್ಠಾನದಲ್ಲಿ ಇದ್ದಾಗ ಈ ಎಲ್ಲ ಗ್ರಂಥಗಳ ಅಧ್ಯಯನಕ್ಕೆ ತೊಡಗಲು ಅದರ ಜ್ಞಾನದಿಂದ ಅವರ ಆತ್ಮೋದ್ಧಾರ, ಸಮಾಜೋದ್ಧಾರ ಎರಡನ್ನು ನಿಭಾಯಿಸಲು ಸಾಧ್ಯವಾಯಿತು.
ಶ್ರೀ ವಿಜಯಮಹಾಂತೇಶರು ಮೃಷ್ಟಾನ್ನವನ್ನು ಬಯಸದವರು. ಪಲ್ಲಕ್ಕಿಯಲ್ಲಿ ಮೆರೆಯದವರು. ಅವರಿಗೆ ಗಾದಿ ತೆಕ್ಕೆ ತೂಗು ಮಂಚವು ಬೇಡವೇ ಬೇಡ. ಅವರು ದಿನಾಲೂ ಅನ್ನ, ಮುದ್ದೆ, ಬೇಳೆಸಾರು, ಪಲ್ಯ, ಆಕಳ ಹಾಲು ಇಷ್ಟೇ ಪ್ರಸಾದ ರೂಪದಿಂದ ಸೇವಿಸುತ್ತಿದ್ದರು.
ಚಿತ್ತರಗಿ ಇಳಕಲ್ ಮಠವು ಮೂಲ ಸಂಸ್ಥಾನ ಪೀಠವು ಅದಕ್ಕೆ ಛತ್ರ ಚಾಮರ ಪಲ್ಲಕ್ಕಿ ಕುದುರೆ ಸವಾರರು ವಂದಿಮಾಗಧರು ಮೊದಲಾದ ಸರಂಜಾಮು ಇದ್ದರೂ ಅವುಗಳನ್ನು ಉಪಯೋಗಿಸಿಕೊಳ್ಳುತ್ತಿರಲಿಲ್ಲ. ಪೀಠದ ೫೬ ಶಾಖಾ ಮಠಗಳ ವ್ಯವಸ್ಥೆಯನ್ನು ನೋಡಲಿಕ್ಕೆ ಬೇರೆ ಊರುಗಳಿಗೆ ಹೋಗಬೇಕಾದಾಗ ಒಂದು ಬಿಳಿ ಕುದುರೆಯನ್ನು ಮಾತ್ರ ಏರಿ ಹೋಗುತ್ತಿದ್ದರು. ಅವರೇ ಪ್ರೀತಿಯಿಂದ ಸಾಕಿದ ಒಂದು ಗೋವಿಗೆ ಮಹಾಂತಮ್ಮನೆಂದು ಹೆಸರಿಟ್ಟಿದ್ದರು. ಆ ಮಹಾಗೋವಿಗೆ ಶ್ರೀಗಳು ತನ್ನ ಹೊಟ್ಟೆಯ ಮಗುವೊ ಎಂದು ವಾತ್ಸಲ್ಯವನ್ನು ತೋರಿಸುತ್ತಿದ್ದರು.
ಶಿವಯೋಗಮಂದಿರದ ನಿರ್ದೇಶನ
ಕ್ರಿಸ್ತ ಶಕೆ ೧೯೦೮ರಲ್ಲಿ ಬಾಗಲಕೋಟೆಯಲ್ಲಿ ನಾಲ್ಕನೆಯ ವೀರಶೈವ ಮಹಾಸಭೆ ಜರುಗಿತು. ಶ್ರೀಮಂತ ಒಂಟಮುರಿ ದೇಸಾಯಿಯವರ ಅಧ್ಯಕ್ಷತೆಯಲ್ಲಿ ತೆಂಗಿನಮಠದಲ್ಲಿ ನೆರೆವೇರಿತು. ಆ ಅಧಿವೇಶನದಲ್ಲಿ ಗುರು ವಿರಕ್ತಮಠದ ವಟುಗಳನ್ನು ತರಬೇತಿಗೊಳಿಸುವ ಒಂದು ಶಿವಯೋಗಾಶ್ರಮವನ್ನು ಸ್ಥಾಪಿಸಬೇಕೆಂಬ ಠರಾವು ಸರ್ವಾನುಮತದಿಂದ ಸ್ವೀಕೃತವಾಯಿತು. ಆ ಪ್ರಕಾರ ಅಧಿವೇಶನದ ಮರುದಿನವೇ ಸೊಲ್ಲಾಪುರದ ಶ್ರೀ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಅಂತಹ ಪವಿತ್ರ ಸ್ಥಳವನ್ನು ಪರಮಪೂಜ್ಯರಾದ ಶ್ರೀ ಚಿತ್ತರಗಿ ವಿಜಯಮಹಾಂತ ಸ್ವಾಮಿಗಳು ಹುಡುಕಿ ಕೊಡಬೇಕೆಂದು ಅದಕ್ಕಾಗಿ ಪೂಜ್ಯಪಾದರಿಗೆ ಬಿನ್ನವಿಸಿಕೊಳ್ಳಲು ಶ್ರೀ ಹಾನಗಲ್ ಕುಮಾರ ಶಿವಯೋಗಿಗಳನ್ನು ಅಣಿಗೊಳ್ಳಬೇಕೆಂದು ನಿರ್ಧರಿಸಿದರು.

ಚಿತ್ರ ಸಂಖ್ಯೆ ೩ : ಶ್ರೀ ಹಾನಗಲ್ ಕುಮಾರ ಶಿವಯೋಗಿಗಳವರು ಚಿತ್ತರಗಿ ಶ್ರೀ ವಿಜಯಮಹಾಂತ ಸ್ವಾಮಿಗಳಲ್ಲಿ ಶಿವಯೋಗಮಂದಿರ ಸ್ಥಳ ಸೂಚನೆಗೆ ಅರಿಕೆ
ಆ ಪ್ರಕಾರ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳವರು, ಚಿತ್ತರಗಿ ಶ್ರೀ ವಿಜಯಮಹಾಂತ ಸ್ವಾಮಿಗಳ ಬಳಿಗೆ ಬಂದು ನಮಸ್ಕರಿಸಿ ಪರಸ್ಪರ ಯೋಗಕ್ಷೇಮದ ಬಗ್ಗೆ ಮಾತಕತೆ ಆದ ಬಳಿಕ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳು “ಪೂಜ್ಯರೇ, ಈಗ ವೀರಶೈವರು ಧರ್ಮಾಚಾರಣೆಯನ್ನು ಬಿಟ್ಟು ಅಜ್ಞಾನದ ಅಂಧಕಾರದಲ್ಲಿ ತೊಳಲಾಡುತ್ತಿರುವರು. ಮಠದ ಪೀಠಾಧಿಕಾರಿಗಳು ಸ್ವತಃ ಷಟಸ್ಥಲ ಜ್ಞಾನವಿಲ್ಲದೆ ಮನಬಂದಂತೆ ಏನೋ ಸಂಪ್ರದಾಯದ ವಶದಿಂದ ಸ್ವಾಮಿಗಳಾಗಿ ನಿಜವಾದ ಯೋಗ್ಯತೆ ಇಲ್ಲದೇ ದರ್ಪದಿಂದ ನಡೆದು ಭಕ್ತರನ್ನು ಅಂಧಾನುಯಾಯಿಗಳಾಗಿ ಶೋಷಿಸುತ್ತಿದ್ದಾರೆ. ಮಠದ ಪೀಠಾಧಿಪತೆಗಳೇ ಅನಾಢ್ಯರಾಗಿರುವಾಗ ಶಿಷ್ಯಕೋಟಿಯು ಸುಧಾರಣೆಯಾಗುವುದು ಹೇಗೆ ಎಂದು ವಿಚಾರಿಸುತ್ತಿರುವಾಗ ಈಗಿನ ಮಠಾಧಿಪತಿಗಳಲ್ಲಿ ನಿಜವಾದ ಲಿಂಗ ನಿಷ್ಠೆ ಕಡಿಮೆ. ಶಾಸ್ತ್ರೋಕ್ತ ಪೂಜಾವಿಧಾನಗಳನ್ನರಿಯರು, ಯೋಗಾಭ್ಯಾಸ ವರ್ಜಿತರು. ಆದುದರಿಂದ ಅಂತಹವರಿಗೆ ತರಬೇತಿ ಕೊಟ್ಟು ಅರ್ಹರನ್ನಾಗಿ ಮಾಡುವ ಶಿವಯೋಗ ಆಶ್ರಮದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು. ಆದರಿಂದ ಆ ಪೀಠಗಳಿಗೆ ಶಿವಕಳೆ ಕುಂದಿಹೋಗಿದೆ. ಕಾರಣ ತಾವು ಯಾವ ಸ್ಥಳವನ್ನು ಹುಡುಕಿ ನಮಗೆ ತೋರಿಸುವಿರೋ ಅಲ್ಲಿಯೇ ಶಿವಯೋಗಾಶ್ರಮವನ್ನು ರಚಿಸಬೇಕೆಂದು ನಿರ್ಣಯಸಿದ್ದೇವೆ” ಎಂದು ಹಾನಗಲ್ ಕುಮಾರ ಶಿವಯೋಗಿಗಳು ನುಡಿಯಲು ಶ್ರೀ ವಿಜಯಮಹಾಂತೇಶರು
“ಕುಮಾರ ಯೋಗಿಯೇ, ನೀನು ಬೇರಲ್ಲ, ಶಿವನು ಬೇರಲ್ಲ ನಮ್ಮ ಜನರು ಮಂದಭಾಗ್ಯರು, ಅಜ್ಞಾನ ಅಂಧಕಾರದಲ್ಲಿ ಮುಳುಗಿ ತೊಳಲುತ್ತಿರುವರು ತಮ್ಮಿಂದ ಜ್ಞಾನ ಜ್ಯೋತಿಯು ಬೆಳಗಬೇಕಾಗಿದೆ ನಿನ್ನಿಚ್ಛೆಯೇ ಶಿವನೇಚ್ಛೆಯೂ” ಅದಕ್ಕಾಗಿ ನೀವು ಒಳ್ಳೆಯ ಯೋಜನೆಯನ್ನೇ ಕೈಗೊಂಡಿರುವಿರಿ. ತಮ್ಮ ಕಾರ್ಯಕ್ಕೆ ಶೀಘ್ರವೇ ಯಶಸ್ಸು ದೊರಕುತ್ತದೆ. ನಾನು ಆ ಕಾರ್ಯಕ್ಕೆ ಸದಾ ಸಿದ್ದ. ಸದ್ಯ ಹೊರಡುವೆನು ನಡೆಯಿರಿ ಎಂದು ಹೇಳಿ ತಮ್ಮ ಕುದರೆಯನ್ನೇರಿ ಯೋಗ್ಯ ಸ್ಥಳ ಹುಡುಕಲು ಹೊರಟರು. ಹಾನಗಲ್ ಕುಮಾರ ಶಿವಯೋಗಿಗಳಿಗೆ ತಮ್ಮ ರಥದಲ್ಲಿ ಜೊತೆಗೆ ಬರಲು ತಿಳಿಸಿದರು. ಈ ಸುದ್ದಿ ಕೇಳಿ ದಾರಿಯುದ್ದಕ್ಕೂ ಹಲವಾರು ಜನ ಭಕ್ತರು, ಸ್ವಾಮಿಗಳು ಹಿಂಬಾಲಿಸಿ ಹೊರಟರು.
ಶ್ರೀಗಳಿಗೆ ದಾರಿಯುದ್ದಕ್ಕೂ ಜನರು ತಳಿರು ತೋರಣಗಳಿಂದ ಮಂಗಳ ವಾದ್ಯಗಳಿಂದ ಪ್ರಭುವಿಗೆ ದೀಪಾರುತಿಯನ್ನು ಬೆಳಗಿ ಭಜನಾ ಮೇಳಗಳು ಜನರ ಜೈಘೋಷದೊಡನೆ ಪ್ರತಿದ್ವನಿಯಾಯಿತು. ಮಲಪಹಾರಿಯ ಗುಂಟ ಹೋರಟ ಶ್ರೀಗಳು ಮೊದಲು ಐಹೊಳೆಗೆ ದಯಮಾಡಿಸಿದರು ಅಲ್ಲಿಯ ಅನೇಕ ಗವಿಗಳು ಸುಂದರ ಶಿಲಾ ಮೂರ್ತಿಗಳು ಮನೋಹರವಾದ ಸೃಷ್ಟಿ ಸೌಂದರ್ಯಕ್ಕೆ ಆಕರ್ಷಣೆಯಾಗಿ ಕೆಲವರು ಆ ಸ್ಥಳವು ಯೋಗ್ಯವೆಂದು ಪೂಜ್ಯರಿಗೆ ಅರಿಕೆ ಮಾಡಿಕೊಂಡರು ಅದಕ್ಕೆ ಶ್ರೀಗಳು ಇಲ್ಲಿ ರಾಮಲಿಂಗೇಶ್ವರ ಗುಡಿಯೂ ಇದೆ. ಪ್ರತಿ ನಿತ್ಯ ಇಲ್ಲಿ ಅನೇಕ ಪ್ರವಾಸಿಗಳು ಬಂದು ಹೋಗುವದರಿಂದ ಏಕಾಂತಕ್ಕೆ ಶಾಂತತೆಗೆ ಆಸ್ಪದ ಇಲ್ಲವಾದುದರಿಂದ ಈ ಸ್ಥಳ ನಿರಾಕರಿಸಿ ಮುಂದೆ ಪಟ್ಟದಕಲ್ಲಿಗೆ ಬರುತ್ತಾರೆ. ಅದು ಹಿಂದೆ ಚಾಲುಕ್ಯ ರಾಜರು ಪಟ್ಟಕ್ಕೆ ಕೂಡ್ರುವ ಸ್ಥಳವಾಗಿದ್ದಿತು. ಅಲ್ಲಿ ರಾಜಮನೆತನದ ಕುರುಹುಗಳು, ದೇವಾಲಯಗಳು ಇದ್ದುದನ್ನು ನೋಡಿ ಕೆಲವರು ಆ ಸ್ಥಾನವು ಏಕಾಂತಕ್ಕೆ ಹಾಗೂ ಶಾಂತತೆಗೆ ಯೋಗ್ಯ ಎಂದು ವಿಜ್ಞಾಪಿಸಿದಾಗ ಆಗ ಶ್ರೀಗಳು ಅತ್ತಿತ್ತ ನೋಡುವಷ್ಟರಲ್ಲಿ ಘಟಸರ್ಪವೊಂದು ಹೆಡೆಯೆತ್ತಿ ಆಡುವುದನ್ನು ಕಂಡು ಜನರಿಗೆ ಅತ್ತ ನೋಡಿರಿ ನಾಗೇಂದ್ರನು ಈ ಸ್ಥಳವು ಬೇಡೆಂದು ಹೆಡೆಯನ್ನು ಅಲ್ಲಾಡಿಸಿ ಹೇಳುತ್ತಿರುವಂತೆ ಭಾಸವಾಯಿತು. ತ್ಯಾಗಿಗಳಾದ ವಿರಕ್ತರಿಗೆ ಈ ಭೋಗದ ರಾಜ್ಯದ ತಾಣವೇ ಬೇಡೆಂದು ಹೇಳಿ ಮುಂದೆ ಸಾಗಿದರು. ಪಟ್ಟದಕಲ್ಲಿನಿಂದ ಕುಮಾರಶಿವಯೋಗಿಗಳ ನೇತೃತ್ವದಲ್ಲಿ ಒಂದು ತಂಡ ಮಹಾಕೂಟದ ಕಡೆಗೆ ಸಾಗುವಂತೆ ಶ್ರೀಗಳು ನಿರ್ದೇಶಿಸಿದರು. ನಾವು ಬಂದು ನಿಮ್ಮನ್ನು ಸೇರುತ್ತೇವೆ ಎಂದು ವಿಜಯಮಹಾಂತ ಶಿವಯೋಗಿಗಳು ಮಲಪಹಾರಿ ಬಲದಂಡೆ ನದಿಯಗುಂಟ ಶಿವಯೋಗ ಮಂದಿರದ ಸ್ಥಳ ಅರಸುತ್ತ ಹೊರಟರು ಜೊತೆಯಲ್ಲಿ ಅನೇಕ ಭಕ್ತರು ಗೋಮಾತೆ ಮಹಾಂತಮ್ಮಳು ಸಾಗಿದಳು.
ವಿಪರೀತವಾದ ಬಿಸಿಲು, ದಟ್ಟವಾದ ಮುಳ್ಳು ಕಂಟಿಗಳಿಂದ ಕೂಡಿದ ಕಾಡು ಪ್ರದೇಶವನ್ನು ದಾಟಿಕೊಂಡು ಬರುವಾಗ ʼನೆಲುವಿಗೆʼ ಎಂಬ ಗ್ರಾಮಕ್ಕೆ ಬಂದಾಗ ಕೃಷಿ ಕೆಲಸದಲ್ಲಿ ತೊಡಗಿದ ಒಬ್ಬ ವ್ಯಕ್ತಿಯನ್ನು ಇಲ್ಲಿ ಎಲ್ಲಿಯಾದರೂ ಪತ್ರಿವನವಿದೆಯೇ? ಎಂದು ಕೇಳಿದಾಗ , ಆ ವ್ಯಕ್ತಿಯು ಈ ಕುರುಚಲು ಕಾಡಿನ ದುರ್ಗಮ ದಾರಿಯಲ್ಲಿ ಇನ್ನು ಕ್ರಮಿಸಿದರೆ ಅಲ್ಲಿ ಪತ್ರಿ ಗಿಡಗಳ ವನವೇ ಇದೆ ಆದರೆ ದಾರಿಯಲ್ಲೆಲ್ಲ ವಿಪರೀತ ಡಬ್ಗಳ್ಳಿ ಕಂಟಿಗಳು ಇರುವುದರಿಂದ ಸುಲಭವಾಗಿ ಸಾಗುವುದು ಸುಲಭವಲ್ಲ ಎಂದಾಗ, ಅದೇನೇ ಆಗಲಿ, ಆ ಪತ್ರಿ ವನವನ್ನು ತೋರು ಬಾ ಎಂದು ಕರೆದಾಗ ಒಳ್ಳೆ ಹುಮ್ಮಸ್ಸಿನಿಂದ ದಾರಿಯಲ್ಲಿ ಇರುವ ಮುಳ್ಳು ಕಂಟಿಗಳನ್ನು ಸವರುತ್ತ ಸವರುತ್ತ ಮುಂದೆ ಸಾಗಿದಾಗ ದಟ್ಟವಾದ ಗಿಡಗಳ ಸಮೃದ್ಧಿಯಿಂದ ಕೂಡಿದ ಪ್ರದೇಶವು ಗೋಚರವಾಯಿತು. ಅದಕ್ಕೆ ಕೆಲವರು ಇಂತಹ ದುರ್ಗಮ ಪ್ರದೇಶದಲ್ಲಿ ಹಾಡು ಹಗಲೇ ಕೊಳ್ಳೆಹೊಡೆಯುವ ಕಳ್ಳರಿದ್ದಾರೆ ಇಲ್ಲೇಕೆ ಸ್ವಾಮಿ ಎನ್ನುವಂತಹ ಸಂಶಯವು ಕೆಲವರಲ್ಲಿ ಉದ್ಭವವಾಯಿತು. ಅಂತಹ ದುರ್ಗಮ ಪ್ರದೇಶವನ್ನು ದಾಟಿಕೊಂಡು, ಗುಂಪು ಗುಂಪಾಗಿ ಬೆಳೆದ ಪತ್ರಿ ವನವನ್ನು ಕಂಡರು. ಅಲ್ಲಿಯೇ ಪುಟ್ಟದಾದ ಪುರಾತನವಾದ ಕೊಟ್ಟೂರು ಬಸವೇಶ್ವರನ ದೇವಸ್ಥಾನ ಇದೆ ಎಂದು ಹೇಳಿ ನೆಲವಿಗೆಯ ಆ ವ್ಯಕ್ತಿಯು ನಾವು ಶ್ರಾವಣ ಮಾಸದಲ್ಲಿ ಇಲ್ಲೇ ಬಂದು ಹಣ್ಣು ಕಾಯಿ ಮಾಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಚಿತ್ರ ೪ : ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿ ಗಳಿಂದ ಶಿವಯೋಗಮಂದಿರದ ಸ್ಥಳ ಗುರುತು
ಅಲ್ಲಿಗೆ ಬಂದು ನಿಂತಾಗ ಪುರಾತನ ನಂದಿ ವಿಗ್ರಹವನ್ನು ಕಂಡು ಶ್ರೀಗಳು ನೀ ಕೊಟ್ಟರೂ ಬಸವೇಶ, ಕೊಡದಿದ್ದರೂ ಬಸವೇಶ, ನೀ ಕೊಟ್ಟೂರು ಬಸವೇಶ ಎಂದು ಸಂಭೋದಿಸಿ ಅಲ್ಲೇ ಮುಂದೆ ಇದ್ದ ಕಲ್ಲು ಬಂಡೆಯ ಮೇಲೆ ಕುಳಿತುಕೊಳ್ಳುತ್ತ ಮಹಾಂತಮ್ಮನನ್ನು ಮಂದಿರಕ್ಕೆ ಸರಿಯಾದ ಸ್ಥಳವೇನಮ್ಮಾ ಎಂದಾಗ ಒಳ್ಳೆಯದು ಎಂದು ಮೌನವಾಗಿ ಗೋಣು ಆಡಿಸಿತು. ಅದೇ ಮಹಾಂತಮ್ಮನ ಸಮ್ಮತಿಯೆಂದು, ಅದೇ ಸ್ಥಳ ಶಿವಯೋಗ ಮಂದಿರಕ್ಕೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಮಹಾಕೂಟದಲ್ಲಿ ಇದ್ದ ಹಾನಗಲ್ ಕುಮಾರಶಿವಯೋಗಿಗಳನ್ನು ಕರೆಯಿಸಿದಾಗ ಮಹಾಂತಪ್ಪಗಳು ಒಂದು ಕಲ್ಲು ಬಂಡೆಯ ಮೇಲೆ ಪ್ರಸನ್ನಚಿತ್ತರಾಗಿ ಕುಳಿತಿದ್ದನ್ನು ಕಂಡ ಕುಮಾರಶಿವಯೋಗಿಗಳು ಆನಂದಭರಿತರಾಗಿ ತಾವು ಯೋಗ್ಯವಾದ ಸ್ಥಳವನ್ನೇ ಆಯ್ಕೆ ಮಾಡಿರುವಿರಿ ಎಂದು ಆನಂದದಿಂದ ಕೊಂಡಾಡಿ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಇಲ್ಲಿಯೇ ಮಂದಿರ ನಿರ್ಮಾಣಕ್ಕೆ ಪ್ರಶಸ್ತವಾದ ಸ್ಥಳ ಎಂದು ಒಪ್ಪಿಕೊಂಡರು. ಆಗ ಬಾಗಲಕೋಟೆಯ ಕೆಲ ಭಕ್ತರು ಇಂತಹ ಗಾಢವಾದ ಅರಣ್ಯದಲ್ಲಿ ಅನೇಕ ಕ್ರೂರ ಪ್ರಾಣಿಗಳಿರುತ್ತವೆ. ಮಂದಿರಕ್ಕೆ ಇದು ಸರಿಯಾದ ಸ್ಥಳವಲ್ಲ ಎಂದು ನಿರಾಕರಿಸಿದರೂ ಕುಮಾರ ಶಿವಯೋಗಿಗಳು ಇದೆ ಮಂದಿರ ಕಟ್ಟಲು ಪ್ರಶಸ್ತ ಮತ್ತು ಪ್ರಶಾಂತ ಸ್ಥಳವೆಂದು ಲಿಂಗ ಮುದ್ರೆಯನ್ನು ಹಾಕಿದರು. ಮುಂದೆ ಅಷ್ಟೇ ಸ್ಥಳ ಸಾಕಾಗದೆಂದು ನೆರೆಯ ಪ್ರದೇಶದ ಒಡೆಯರನ್ನು ಕರೆಯಿಸಿ ಯೋಗ್ಯ ಬೆಲೆಗೆ ಆ ಸ್ಥಳವನ್ನು ಕೊಂಡುಕೊಳ್ಳಲು ವಿಚಾರಾಸಿದಾಗ ೫೦೦ ರೂಪಾಯಿಗಳಿಗೆ ಕೊಡುತ್ತೇನೆ ಎಂದು ಹೇಳಿದಾಗ ೩೦೦ ರೂಪಾಯಿಗಳಿಗೆ ಕೊಡು ಎಂದು ಹೇಳಿದರು. ಆಗ ಆತನು ನಾನು ಹೊಲವನ್ನು ಮಾರುವುದೇ ಇಲ್ಲ ಎಂದನು ಆಗ ವಿಜಯಮಂಹಾಂತೇಶ ಶ್ರೀಗಳು ಆ ಹೊಲವನ್ನು ಆತನು ಕೊಡದಿದ್ದರೆ ಬಿಡಲಿ, ಲೀಲಾವಿನಲ್ಲಿ ಅದು ನಮಗೆ ಸಿಕ್ಕೇ ಸಿಗುತ್ತದೆ ಎಂದು ಭವಿಷ್ಯ ನುಡಿದರು ಆ ಪ್ರಕಾರ ಆ ಬ್ರಾಹ್ಮಣನು ತಾನು ಮಾಡಿದ ಸಾಲಕ್ಕಾಗಿ, ಆ ಹೊಲವನ್ನು ಸರಕಾರದವರು ಲೀಲಾವಿಗೆ ಹಚ್ಚಲಾಗಿ ೨೦೦ ರುಪಾಯಿಗೆ ಆ ಹೊಲ ಮಂದಿರಕ್ಕೆ ಸೇರ್ಪಡೆಯಾಯಿತು. ಇದಲ್ಲದೆ ಶ್ರೀ ಹಾನಗಲ್ ಸ್ವಾಮಿಗಳು ನೆರೆಯ ಮತ್ತೆರಡು ಹೊಲಗಳನ್ನು ಖರೀದಿಗೆ ತೆಗೆದುಕೊಂಡು ಅಲ್ಲಿ ಶಿವಯೋಗ ಮಂದಿರವನ್ನು ಸ್ಥಾಪನೆ ಮಾಡಿದರು. ಮುಂದೆ ಅನೇಕ ಮಠಪೀಠಗಳನ್ನು ಬೆಳಗುವ ಚಿಜ್ಯೋತಿಗಳು ಈ ಶಿವಯೋಗ ಮಂದಿರದಿಂದ ಹೊರಹೊಮ್ಮಿದವು.
ಶ್ರೀ ವಿಜಯಮಹಾಂತ ಶಿವಯೋಗಿಗಳು ಹಾನಗಲ್ ಕುಮಾರ ಶಿವಯೋಗಿಗಳಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದರು. ಹೀಗೆ ೧೯೦೯ರಲ್ಲಿ ಆರಂಭಗೊಂಡ ಶಿವಯೋಗ ಮಂದಿರದ ಕಾರ್ಯ ನಾಲ್ಕೈದು ವರುಷಗಳ ಕಾಲ ಜರುಗಿತು.
ಶ್ರೀ ವಿಜಯಮಹಾಂತ ಶಿವಯೋಗಿಗಳು ಶಕೆ ೧೮೩೩ ವಿರೋಧಿಕೃತ ನಾಮ ಸಂವತ್ಸರದ ಕಾರ್ತೀಕ ಶುದ್ಧ ಪಂಚಮಿಯಲ್ಲಿ ಲಿಂಗೈಕ್ಯರಾದರು ಅದು ಕ್ರೈಸ್ತ ಶಕ ೧೯೧೧ರ ಶುಕ್ರವಾರ ಆಗಿತ್ತು. ಅವರ ಸ್ಥೂಲ ದೇಹವು ನಶ್ವರವಾದರೂ ಅವರ ಚೈತನ್ಯವು ಗದ್ದುಗೆಯ ರೂಪದಿಂದ ಭಕ್ತರನ್ನು ಸದಾ ಕಾಯುತ್ತಲಿದೆ.
ಚಿತ್ರ ಸಂಖ್ಯೆ ೫ : ಶ್ರೀ ವಿಜಯಮಹಾಂತ ಶಿವಯೋಗಿಗಳ ಗದ್ದುಗೆ ಇಲಕಲ್ಲ

ಚಿತ್ರ ಸಂಖ್ಯೆ ೬ : ಶ್ರೀ ಹಾನಗಲ್ ಕುಮಾರ ಶಿವಯೋಗಿಗಳು ಕಟ್ಟಿಸಿದ ವಿಜಯಮಹಾಂತ ಶಿವಯೋಗಿಗಳ ಗದ್ದುಗೆ ಇಲಕಲ್ಲ
