ಶ್ರದ್ಧೆ

ಮೂಲ ಹಿಂದಿ : ಸಂತ ವಿನೋಭಾ

ಕನ್ನಡ ಭಾಷಾಂತರ : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,

ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಶ್ರದ್ಧೆ ಭಕ್ತಿ ಮತ್ತು ಶ್ರದ್ಧೆಗಳಲ್ಲಿ ವ್ಯತ್ಯಾಸವಿದೆ . ದೇವಸ್ಥಾನದ ಮೂರ್ತಿಯಲ್ಲಿರುವ ಆಸಕ್ತಿಯು ಭಕ್ತಿಯಲ್ಲ , ಅದು ಶ್ರದ್ಧೆ ಎನಿಸುತ್ತದೆ . ಶ್ರದ್ಧೆಯು ಭಕ್ತಿಯಲ್ಲ . ಅದು ನಿಶ್ಚಿತವಾಗಿಯೂ ಭಕ್ತಿಯಮಾರ್ಗ , ಶ್ರದ್ಧೆ ಇರುವುದೇನೂ ಮಹತ್ವದ ಸಂಗತಿಯಲ್ಲ ಆದರೆ ಶ್ರದ್ಧೆ ಇಲ್ಲದೇ ಇರುವುದು ತುಂಬಾ ಮಹತ್ವದ ಸಂಗತಿ ಎನಿಸುತ್ತದೆ . ಉದಾಹರಣೆಗೆ ನಮಗೆ ಅಕ್ಷರಜ್ಞಾನವಿದ್ದರೆ ಅದರಲ್ಲಿ ವಿಶೇಷವೇನೂ ಅನಿಸುವುದಿಲ್ಲ . ಆದರೆ ಅಕ್ಷರಜ್ಞಾನವೇ ಇಲ್ಲದಿದ್ದರೆ ಹೆಚ್ಚಿನ ಜ್ಞಾನವನ್ನು ಪಡೆಯುವುದು ಅಸಂಭವವೇ ಸರಿ . ಈ ದೃಷ್ಟಿಯಿಂದ ನಮ್ಮಲ್ಲಿ ಶ್ರದ್ಧೆಯೇ ಇಲ್ಲದಿದ್ದರೆ ಭಕ್ತಿಯು ಬರಲು ಸಾಧ್ಯವೇ ಇಲ್ಲ . ನಾನು – ನನ್ನದು ಎಂಬ ಅಹಂಕಾರ ಮಮಕಾರಗಳಿಂದ ಮುಕ್ತವಾಗುವುದೇ ನಿಜಾರ್ಥದಲ್ಲಿ ಭಕ್ತಿ ಎನಿಸುವದು . ಭಾರತದೇಶದೆಲ್ಲೆಡೆ ಭಕ್ತಿಭಾವವು ಓತಪ್ರೋತವಾಗಿದೆ . ಆದರೆ ಅದು ಸಾಮಾನ್ಯವಾದ ಶ್ರದ್ಧೆಯಾಗಿದೆ . ಶ್ರದ್ಧೆಯು ಬಾಲಭಾವ ( ಮಕ್ಕಳ ಭಾವ ) ಎನಿಸುತ್ತದೆ . ಇತ್ತ ಜ್ಞಾನವೂ ಇಲ್ಲ , ಅತ್ತ ಶ್ರದ್ಧೆಯೂ ಇಲ್ಲದ ಸಂದೇಹವುಳ್ಳ ಜನರಿಂದ ಏನೂ ಸಾಧಿತವಾಗುವುದಿಲ್ಲ . ಅಂಥವರಿಗೆ ಯಾವ ವಸ್ತುವೂ ದಕ್ಕುವುದು ಸಾಧ್ಯವಿಲ್ಲ . ಅಕಸ್ಮಾತ್ ಏನಾದರೂ ದಕ್ಕಿದರೆ ಅದರ ವಿಷಯದಲ್ಲಿಯೂ ಅವರಿಗೆ ಸಂಶಯ ಹುಟ್ಟುವುದು . ಜ್ಞಾನವೂ ಇಲ್ಲ , ಜ್ಞಾನದ ಸಾಧನವಾದ ಶ್ರದ್ಧೆಯೂ ಇಲ್ಲವಾದರೆ ಉಳಿಯುವುದೊಂದೇ ಸಂಶಯಮಾತ್ರ ಇಂಥ ಸಂಶಯಿ ಸಂಪೂರ್ಣವಾಗಿ ನಾಶವಾಗುತ್ತಾನೆ . ( ಸಂಶಯಾತ್ಮಾ ವಿನಶ್ಯತಿ ) ಆದರೆ ಸಾಮಾನ್ಯವಾಗಿ ಜನರಲ್ಲಿ ಜ್ಞಾನವಿಲ್ಲದಿದ್ದರೂ ಶ್ರದ್ಧೆಯಂತೂ ಇದ್ದೇ ಇರುತ್ತದೆ . ಇಂತಹ ಪ್ರಾಮಾಣಿಕ ಮತ್ತು ಮೂಲಭೂತವಾದ ಶ್ರದ್ಧೆ ಇಲ್ಲದಿದ್ದರೆ ಜೀವನ ನಡೆಯುವುದೇ ಕಷ್ಟವಾಗುತ್ತದೆ . ಸಾಮಾನ್ಯ ಜನರು ‘ ರಾಮ – ಕೃಷ್ಣ – ಹರಿ ಎನ್ನುತ್ತಾರೆ . ಹಾಗೆಯೇ ಚೈತನ್ಯ ಮಹಾಪ್ರಭುಗಳೂ ಕೂಡ ‘ ರಾಮ – ಕೃಷ್ಣ – ಹರಿ ‘ ಎನ್ನುತ್ತಿದ್ದರು . ಇವೆರಡರಲ್ಲಿಯೂ ಇರುವ ವ್ಯತ್ಯಾಸವೇನು ? ಸಾಮಾನ್ಯ ಜನರು ಹಾಗೆ ಅನ್ನುವಲ್ಲಿ ಶ್ರದ್ಧೆ ಇದೆ . ಹರಿನಾಮ ಸ್ಮರಣೆ ಏನೋ ನಡಿಯುತ್ತದೆ . ಆದರೆ ಅದಕ್ಕೆ ತಕ್ಕ ಆಚರಣೆ ಇಲ್ಲವಾದರೆ ಅದು ಡಂಭಾಚಾರವಲ್ಲವೆ ? ಖಂಡಿತವಾಗಿಯೂ ಅದು ಡಂಭಾಚಾರವಲ್ಲ . ಒಂದಿಬ್ಬರು ಡಂಭಾಚಾರಿಗಳಿದ್ದರೂ ಇರಬಹುದು . ಆದರೆ ಲಕ್ಷ – ಕೋಟಿ ಸಂಖ್ಯೆಯ ಜನ ಹರಿನಾಮ ಸ್ಮರಣೆ ಮಾಡುತ್ತಾರೆ . ಅದು ಡೋಂಗಿ ಅಲ್ಲ , ಶ್ರದ್ಧೆಯಾಗಿದೆ . ಆದರೆ ಶ್ರದ್ಧೆ ಮತ್ತು ಭಕ್ತಿಗಳಲ್ಲಿರುವ ವ್ಯತ್ಯಾಸವನ್ನು ನಾವು ಅರಿಯದಿದ್ದರೆ ಅದು ಭಕ್ತಿಯ ಅನುಕರಣ ಮಾತ್ರ ಎನಿಸುವುದು . ಹರಿನಾಮ ಸ್ಮರಣೆ ಮಾಡುವ ಸಂದರ್ಭದಲ್ಲಿ ಚೈತನ್ಯ ಮಹಾಪ್ರಭುಗಳು ಕುಣಿಯುತ್ತಿದ್ದರು . ಅವರಂತೆ ಯಾರಾದರೂ ನಾಮಸ್ಮರಣೆ ಮಾಡುವಾಗ ಕುಣಿದರೆ ಅವರಿಗೆ ಚೈತನ್ಯ ಮಹಾಪ್ರಭುಗಳಿಗಾದ ಅನುಭೂತಿ ಉಂಟಾಗಬಹುದೆ ? ಶ್ರದ್ಧೆಯೊಡನೆ ನಿಷ್ಠೆಯೂ ಮೇಳೈಸಿದಾಗ ಭಕ್ತಿಯ ರೂಪ ಪ್ರಕಟಗೊಳ್ಳುವುದು . ಉಪಾಸನೆಯಲ್ಲಿ ಜ್ಞಾನವು ಅಪೇಕ್ಷಿತವಲ್ಲ . ಆದರೆ ಶ್ರದ್ಧೆಯು ಅಪೇಕ್ಷಿತವಾಗಿದೆ . ಶ್ರದ್ಧೆಯು ಉಪಾಸನೆಯ ಪ್ರಾಣತತ್ವವಾಗಿದೆ . ಶ್ರದ್ಧೆ ಇಲ್ಲದ ಸಾಧನೆಯು ವ್ಯರ್ಥವಾದುದು . ಮನುಷ್ಯನಲ್ಲಿ ಪ್ರಾಣವಿರುವಷ್ಟು ಶ್ರದ್ಧೆಯೂ ಇರುತ್ತದೆ . ಪ್ರಾಣಶಕ್ತಿಯಷ್ಟೇ ಶ್ರದ್ಧಾಶಕ್ತಿಯೂ ಜಾಗೃತವಾಗುತ್ತದೆ . ಪ್ರತಿಯೊಬ್ಬ ಮನುಷ್ಯನಲ್ಲಿ ಸ್ವಲ್ಪಾದರು ಬುದ್ಧಿಶಕ್ತಿ ಇರುವಂತೆ ಶ್ರದ್ಧೆಯೂ ಇರುತ್ತದೆ . ಬುದ್ಧಿಯು ಜ್ಞಾನದ ಬಗ್ಗೆ ತಿಳಿಸಿದರೆ ಶ್ರದ್ಧೆಯು ಆ ಜ್ಞಾನದಲ್ಲಿ ಮನುಷ್ಯನನ್ನು ಸ್ಥಿರಗೊಳಿಸುವುದು . ಶ್ರದ್ಧೆ ಇಲ್ಲದೆ ಮನುಷ್ಯನು ತಾನು ತಿಳಿದ ತತ್ವ ಸಿದ್ಧಾಂತಗಳಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಸಾಧ್ಯವಾಗುವುದಿಲ್ಲ . ಶ್ರದ್ಧೆಯಲ್ಲಿ ಸಾತ್ವಿಕ , ರಾಜಸ ಮತ್ತು ತಾಮಸವೆಂದು ಮೂರು ಪ್ರಕಾರಗಳು , ಜ್ಞಾನರಹಿತ ಮತ್ತು ಅಶಾಸ್ತ್ರೀಯವಾದ ಶ್ರದ್ಧೆಯು ಪ್ರಗತಿಪಥದತ್ತ ಮುನ್ನಡೆಸದು . ಕೇವಲ ಸಾತ್ವಿಕ ಮತ್ತು ಶಾಸ್ತ್ರೀಯವಾದ ಶ್ರದ್ಧೆ ಮಾತ್ರ ನಮ್ಮನ್ನು ಪಾರುಗೊಳಿಸುತ್ತದೆ . ಜ್ಞಾನವು ಮೂಲಭೂತವಾಗಿ ಸಾತ್ವಿಕವಾಗಿದ್ದರೂ ಸತ್ವ ರಜ – ತಮ ಎಂಬ ಮೂರು ಪ್ರಕಾರವಾಗಿರುವಂತೆ , ಕರ್ಮವು ಮೂಲದಲ್ಲಿ ರಾಜಸವಾಗಿದ್ದರೂ ಸತ್ವ – ರಜ – ತಮ ಎಂದು ಮೂರು ಪ್ರಕಾರವಾಗಿರುವಂತೆ , ಶ್ರದ್ಧೆಯೂ ಕೂಡ ಮೂಲತಃ ಸಾತ್ವಿಕವಾಗಿದ್ದರೂ ಸತ್ವ – ರಜ – ತಮ ಎಂಬ ಮೂರು ಪ್ರಕಾರಗಳಿಂದ ಕೂಡಿದೆ . ಶ್ರದ್ಧೆಯು ಸಾತ್ವಿಕವಾಗಿದ್ದರೆ ಅದರ ಸಹಾಯದಿಂದ ನಡೆಯುವ ವ್ಯಕ್ತಿಗೆ ಯಾವುದೇ ರೀತಿಯ ಅಪಾಯಗಳಿಲ್ಲ . ಆದರೆ ಶ್ರದ್ಧೆಯು ಸಾತ್ವಿಕವಾಗಿದೆ , ರಾಜಸ ಅಥವಾ ತಾಮಸವಾಗಿದೆ ಎಂದು ತಿಳಿಯುವುದು ಹೇಗೆ ? ಸಾತ್ವಿಕ ಮನುಷ್ಯರು ದೇವತೆಗಳ , ರಾಜಸ ವ್ಯಕ್ತಿಗಳು ಯಕ್ಷ ಮತ್ತು ರಾಕ್ಷಸರ , ಹಾಗೆಯೇ ತಾಮಸದಿಂದ ಕೂಡಿದವರು ಪ್ರೇತ – ಭೂತ ಪಿಶಾಚಿಗಳ ಉಪಾಸನೆ ಮಾಡುತ್ತಾರೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ . ಪ್ರೇತೋಪಾಸನೆಯು ಸಂಹಾರಶಕ್ತಿಯನ್ನು ಪಡೆಯಲು ಮತ್ತು ಭೂತ ಪಿಶಾಚಿಗಳ ಉಪಾಸನೆಯು ವಶೀಕರಣ ಶಕ್ತಿಗಾಗಿ ಮಾಡಲ್ಪಡುತ್ತದೆ . ಆದರೆ ಶ್ರದ್ಧೆಯು ಸಾತ್ವಿಕವೇ ಆಗಿರಲಿ , ರಾಜಸ ಅಥವಾ ತಾಮಸವೇ ಆಗಿರಲಿ ಇದರ ನಿರ್ಣಯ ಮಾತ್ರ ಶಾಸ್ತ್ರಗಳಿಂದಲೇ ಮಾಡಲಾಗುತ್ತದೆ . ಶಾಸ್ತ್ರ ಮತ್ತು ಶ್ರದ್ಧೆಗಳು ಕೂಡಿದರೆ ಅಲ್ಲಿ ಯಾವುದೇ ರೀತಿಯ ಅಪಾಯವಿಲ್ಲ . ಶ್ರದ್ಧೆಯು ಜೀವನದ ಮೂಲಾಧಾರವಾಗಿದ್ದರೂ ಅದು ಶಾಸ್ತ್ರೀಯ ಮತ್ತು ಸಾತ್ವಿಕವಾಗಿರಬೇಕಾದುದು ಅತ್ಯವಶ್ಯ . ಶ್ರದ್ಧೆಯು ಕರ್ಮಶಕ್ತಿಯಾಗಿದೆ . ಶ್ರದ್ಧೆಯನ್ನು ಹಾಳುಮಾಡಿದರೆ ಕರ್ಮಶಕ್ತಿಯೂ ಕ್ಷೀಣಿಸುತ್ತದೆ ಮತ್ತು ಅಪೂರ್ಣ ಶ್ರದ್ಧೆಯಿಂದ ಕಾರ್ಯಗಳೂ ಅಪೂರ್ಣವಾಗುತ್ತವೆ . ಆದ್ದರಿಂದ ಶ್ರದ್ಧೆಯು ಇರಲೇಬೇಕು . ಹಾಗೆಯೇ ಅದು ಸಾತ್ವಿಕವಾದುದಾಗಿರಲೇಬೇಕು .

ಶ್ರದ್ಧೆ ಇಲ್ಲದೆ ಯಾವ ಕಾರ್ಯವೂ ಸಾಧಿತವಾಗಲಾರದು . ಶ್ರದ್ಧೆಯಿಂದಲೇ ಕೃತಿಗೆ ಮೊದಲಾಗುತ್ತದೆ . ನಂತರ ಅದು ನಿಷ್ಠೆಯಲ್ಲಿ ಪರ್ಯವಸಾನಗೊಳ್ಳುತ್ತದೆ . ನಿಷ್ಠೆಯನ್ನು ಹೊಂದುವ ಮೊದಲು ಮನುಷ್ಯನು ಶ್ರದ್ಧೆಯಿಂದ ಕಾರ್ಯವನ್ನು ಮಾಡಬಲ್ಲ . ನಿಷ್ಠೆಯು ಅನುಭವಜನ್ಯವಾದುದು . ಅಂತೆಯೇ ಅದರ ಸ್ಥಾನ ನಂತರದ್ದು , ಆದರೆ ಶ್ರದ್ಧೆ ಮಾತ್ರ ಆರಂಭದಿಂದಲೇ ಇರಬೇಕಾಗುತ್ತದೆ . ಶ್ರದ್ಧೆಯು ಗೋಡೆಯಂತೆ ಗಟ್ಟಿಯಾಗಿ ನಿಲ್ಲುತ್ತದೆ ಹೊರತು ಪರದೆಯಂತೆ ಜೋತಾಡುವುದಿಲ್ಲ . ಅದು ಗಟ್ಟಿಯಾಗಿ ನಿಲ್ಲುತ್ತದೆ ಅಥವಾ ಬಿದ್ದು ಹೋಗುತ್ತದೆ . ಅದು ಎಂಟಾಣೆ , ನಾಲ್ಕಾಣೆ ಪ್ರಮಾಣದಲ್ಲಿ ಆಂಶಿಕವಾಗಿ ನಿಲ್ಲುವುದಿಲ್ಲ . ಇದ್ದರೆ ಪೂರ್ಣ ಪ್ರಮಾಣದಲ್ಲಿರುತ್ತದೆ , ಇಲ್ಲದಿದ್ದರೆ ಇಲ್ಲವೇ ಇಲ್ಲ . ಎಲ್ಲಿಯವರೆಗೆ ಶ್ರದ್ಧೆಯು ನಿಷ್ಠೆಯ ರೂಪವನ್ನು ಪಡೆಯುವುದಿಲ್ಲವೋ ಮತ್ತು ಜೀವನದ ಧೈಯ ನಿರ್ಧಾರಿತವಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಜೀವನವು ತತ್ವಾನುಸಾರ ನಡೆಯುವುದಿಲ್ಲ . ಯಾವಾಗ ನಮ್ಮಂತರಂಗದಲ್ಲಿ ನಿಷ್ಠೆಯು ಹುಟ್ಟಿ ಕೊಳ್ಳುವುದೋ ಆಗಲೇ ಭಕ್ತಿಯು ಆರಂಭವಾಯಿತೆಂದರಿಯಬೇಕು . ನಿರಂತರತೆಯೇ ನಿಷ್ಠೆಯ ಲಕ್ಷಣ . ನಿಷ್ಠೆಯುಳ್ಳ ಮನುಷ್ಯನು ನಿರಂತರ ಒಂದೇ ಮಾರ್ಗವನ್ನು ಅನುಸರಿಸುತ್ತಾನೆ . ಅವನಿಗೆ ಹಾಗೆ ಮಾಡುವುದರಿಂದ ದಣಿವು ಉಂಟಾಗುವುದಿಲ್ಲ ಮತ್ತು ಭಾರವೂ ಅನಿಸುವುದಿಲ್ಲ . ಅದು ಅವನಿಗೆ ಅತ್ಯಂತ ಸಹಜವಾದ , ಸ್ವಾಭಾವಿಕವಾದ ಕ್ರಿಯೆ ಎನಿಸುತ್ತದೆ . ನಾವು ಶ್ರದ್ಧೆಯಿಂದ ಕಾರ್ಯಾರಂಭವೇನೋ ಮಾಡುತ್ತೇವೆ , ಮಾಡುತ್ತ ಮಾಡುತ್ತ ಅದು ಸೇವೆಯಾಗುತ್ತದೆ . ನಂತರ ಅನುಭವ ಉಂಟಾಗುತ್ತದೆ . ಅದರಿಂದ ಮತ್ತೆ ನಿಷ್ಠೆಯು ಹುಟ್ಟಿಕೊಳ್ಳುತ್ತದೆ ಮತ್ತು ಆ ನಿಷ್ಠೆಯಿಂದಲೇ ನಮಗೆ ಆಂತರಿಕ ಸಮಾಧಾನವೂ ಪ್ರಾಪ್ತವಾಗುತ್ತದೆ . ಅಂತಃಸಮಾಧಾನ ಇರುವಲ್ಲಿ ಆನಂದವು ಇದ್ದೇ ಇರುತ್ತದೆ . ಆದ್ದರಿಂದ ಮೊದಲು ಶ್ರದ್ಧೆಯುಳ್ಳವರಾಗಬೇಕು . ಆಮೇಲೆ ಅನುಭವವೂ , ಅನುಭವದ ನಂತರ ಅದರ ನಿಷ್ಠೆಯು ಗಟ್ಟಿಗೊಳ್ಳುವುದು . ಶ್ರದ್ಧೆಯು ಆರಂಭದ ಸ್ಥಿತಿಯಾದರೆ , ನಿಷ್ಠೆಯು ಅಂತಿಮವಾದುದಾಗಿರುತ್ತದೆ . ಪ್ರತ್ಯಕ್ಷಾನುಭೂತಿ ಉಂಟಾಗುವವರೆಗೆ ಶ್ರದ್ಧೆಯನ್ನೇ ನಾವು ನಂಬಿಕೊಳ್ಳಬೇಕು . ಶ್ರದ್ಧೆಯು ಪ್ರಾಥಮಿಕ ಅವಸ್ಥೆಯಾಗಿದೆ . ಅದು ಪರಿಪಕ್ವವಾದಾಗ ನಿಷ್ಠೆ ಎನಿಸುತ್ತದೆ . ನಿಷ್ಠೆ ಅರ್ಥಾತ್ Conviction , ಶ್ರದ್ಧೆ ಅರ್ಥಾತ್ Faith , ನಿಷ್ಠೆ ಅರ್ಥಾತ್ ಪರಮೇಶ್ವರನಲ್ಲಿ ಅಚಲವಾದ ನಂಬಿಗೆ , ಅದಿಲ್ಲದೇ ಭಕ್ತಿ ಸಾಧ್ಯವಿಲ್ಲ . ನಮ್ಮ ಬದುಕು – ಸಾವು ಎಲ್ಲವೂ ಪರಮಾತ್ಮನಿಗಾಗಿಯೇ ಮೀಸಲು , ಭಗವಂತನಲ್ಲಿ ಸಂಪೂರ್ಣ ಶರಣಾಗತಿಯೇ ನಿಷ್ಠೆ ಎಂಬ ಮಾತಿದೆ . ಕುರಾನನಲ್ಲಿಯೂ ‘ ನಾನು ನಾಳೆ ಇದನ್ನು ಮಾಡುವೆ ‘ ಎಂದು ಅನ್ನಬಾರದು , ‘ ಈಶ್ವರೇಚ್ಛೆ ಇದ್ದರೆ ನಾಳೆ ಇದು ಆಗಬಹುದು ‘ ಎಂದು ಅನ್ನಬೇಕೆಂದು ಹೇಳಲಾಗಿದೆ ಇನ್ಯಾ ಅಲ್ಲಾಹ

ಜಗತ್ತಿನಲ್ಲಿ ಬಹಳ ಕಡಿಮೆ ಜನರಿಗೆ ಆತ್ಮಜ್ಞಾನ ಉಂಟಾಗುತ್ತದೆ . ಜ್ಞಾನವಾಗ ದಿದ್ದರೂ ನಡೆದೀತು . ಆದರೆ ಶ್ರದ್ಧೆಯಾದರೋ ಅವಶ್ಯವಾಗಿ ಇರಲೇಬೇಕು ಶ್ರದ್ಧಾವಾನ್ ಲಭತೇ ಜ್ಞಾನಮ್ , ಶ್ರದ್ಧೆ ಇಲ್ಲದಿದ್ದರೆ ನಡೆಯದು . ಶ್ರದ್ಧೆಯ ವಿಷಯದಲ್ಲಿ ಅನೇಕ ತಪ್ಪುಕಲ್ಪನೆಗಳೂ ಇವೆ . ಶ್ರದ್ದೆ ಕುರುಡಾಗಿರುತ್ತದೆ . ಬುದ್ಧಿ ಮತ್ತು ಶ್ರದ್ಧೆಗಳು ವ್ಯತ್ಯಾಸವೇನೋ ಇದೆ . ಆದರೆ ಅವುಗಳಲ್ಲಿ ಯಾವುದೇ ವಿರೋಧವಿಲ್ಲ . ಅವೆರಡರ ಪರಸ್ಪರ ವಿರೋಧಿಯಾಗಿವೆ ಎಂದು ಜನರು ಹೇಳುತ್ತಿರುತ್ತಾರೆ . ಶ್ರದ್ಧೆ ಮತ್ತು ಬುದ್ಧಿಯಲ್ಲಿ ಜನನದ ಸ್ಥಾನ ಬೇರೆ ಬೇರೆಯಾಗಿದೆ . ವಿಚಾರಶಕ್ತಿಯಿಂದ ಬುದ್ಧಿಯ ಉಗಮವಾದರೆ ಪ್ರಾಣಶಕ್ತಿಯಿಂದ ಶ್ರದ್ಧೆಯ ಉಗಮವಾಗುತ್ತದೆ . ಶ್ರದ್ಧೆಯೊಂದನ್ನೇ ನನ್ನಲ್ಲಿಡು ಅದರ ಮುಂದೆ ಜ್ಞಾನ ಯಾವ ಲೆಕ್ಕದ್ದು ‘ ಎಂದು ಭಗವಂತನೇ ಹೇಳಿದ್ದಾನೆ . ಅಸ್ತೀವೋಪಲಬ್ಧವ್ಯ : ಅಂದರೆ ‘ ಅವನಿದ್ದಾನೆ ‘ ಎಂಬ ಗಟ್ಟಿ ವಿಶ್ವಾಸವಿರಲಿ , ಜ್ಞಾನ ತಾನಾಗಿಯೇ ಲಭ್ಯವಾಗುತ್ತದೆ ಎಂದು ಉಪನಿಷತ್ತು ಕೂಡ ಹೇಳುತ್ತದೆ . ಈ ಧ್ವನಿ ಹೃದಯದಿಂದ ಹೊರ ಹೊಮ್ಮಬೇಕು , ಅನ್ಯತಾ ವಿನಾಶವೇ ಗತಿಯಾಗುವುದು . ‘ ಸಂಶಯಾತ್ಮಾ ವಿನಶ್ಯತಿ ‘ ಎಂದು ಭಗವದ್ಗೀತೆಯಲ್ಲಿಯೂ ಇದನ್ನೇ ಹೇಳಲಾಗಿದೆ . ಬುದ್ಧಿಯ ಕೆಲಸ ನಡೆಯುವ ವರೆಗೆ ಅದನ್ನು ಉಪಯೋಗಿಸಿಕೊಳ್ಳಬೇಕು . ಯಾವಾಗ ಬುದ್ಧಿಯ ಕಾರ್ಯ ಸ್ಥಗಿತವಾಗುವುದೋ ಆಗ ಶ್ರದ್ಧೆಯಿಂದ ಆ ಕಾರ್ಯವನ್ನು ಮುಂದುವರಿಸಬೇಕು . ಆದರೆ ಅದು ಬುದ್ಧಿಯ ನಿರ್ದೇಶನದಂತೆಯೇ ಮುಂದುವರಿಯಬೇಕು . ಬುದ್ಧಿಯು ಅಲ್ಲಗಳೆಯುವುದನ್ನು ಸ್ವೀಕರಿಸಬೇಕೆಂದು ದೇವರು ಹೇಳುವುದಿಲ್ಲ . ಆದರೆ ಯಾವುದನ್ನು ಬುದ್ಧಿಯು ಖಂಡಿಸುವುದಿಲ್ಲವೋ , ಎಲ್ಲಿ ಬುದ್ಧಿ ತಲುಪಲು ಸಾಧ್ಯವಾಗುವುದಿಲ್ಲವೋ ಅಂಥ ಸಂದರ್ಭದಲ್ಲಿ ಶ್ರದ್ಧೆಯ ಮೂಲಕ ಕಾರ್ಯ ನಿರ್ವಹಿಸಬೇಕು . ಆತ್ಮಜ್ಞಾನವಾಗಿಯೇ ತೀರುತ್ತದೆ ಎಂಬ ನಿಷ್ಕರ್ಷಕ್ಕೆ ಬುದ್ಧಿಯು ಬಂದಿದ್ದರೂ ಶ್ರದ್ಧೆಯಿಂದಲೇ ಮುಂದುವರಿಯಬೇಕು . ಯಾವನೋ ಶ್ರದ್ಧಾವಂತನಿರುತ್ತಾನೆ , ಇನ್ನಾವನೋ ಬುದ್ಧಿವಂತನಿರುತ್ತಾನೆ . ಅಂದರೆ ಒಬ್ಬ ಶ್ರದ್ಧಾವಾದಿಯಾಗಿದ್ದರೆ ಮತ್ತೊಬ್ಬ ಬುದ್ಧಿವಾದಿಯಾಗಿರುತ್ತಾನೆ ಹೀಗಿರುವಾಗ ಇವರಿಬ್ಬರಲ್ಲಿ ಭೇದವೆಣಿಸುವುದು ಬಹಳ ತಪ್ಪಾಗುತ್ತದೆ ಎಂದು ಕೆಲವರು ಹೇಳುತ್ತಾರೆ . ವಾಸ್ತವವಾಗಿ ಶ್ರದ್ಧೆ ಮತ್ತು ಬುದ್ಧಿ ಪರಿಪೂರ್ಣವಾಗಿ ಒಂದೇ ಸ್ಥಾನದಲ್ಲಿ ಇರಬಹುದಾಗಿದೆ . ಬುದ್ಧಿ ಮತ್ತು ಶ್ರದ್ಧೆ ಇವುಗಳಲ್ಲಿ ಯಾವುದೇ ವಿರೋಧವಿಲ್ಲ . ಬುದ್ಧಿಗೇಡಿಯೊಬ್ಬ ಶ್ರದ್ಧೆ ಇಲ್ಲದವನಾಗಿರಬಹುದು . ಹಾಗೆಯೇ ಅತ್ಯಂತ ಬುದ್ಧಿವಂತ ವ್ಯಕ್ತಿಯು ಶ್ರದ್ಧೆಯುಳ್ಳವನೂ ಆಗಿರಬಹುದು . ಬುದ್ಧಿ ಮತ್ತು ಶ್ರದ್ಧೆ ಇವೆರಡರಲ್ಲಿ ವಿರೋಧವನ್ನು ಕಲ್ಪಿಸುವುದು ತೀರ ತಪ್ಪಾಗುತ್ತದೆ . ಏಕೆಂದರೆ ಅವೆರಡರ ವಿಷಯಗಳೂ ಕಿವಿ ಮತ್ತು ಕಣ್ಣುಗಳ ವಿಷಯ ಬೇರೆ ಬೇರೆಯಾಗಿರುವಂತೆ , ವಿಭಿನ್ನವಾಗಿವೆ . ಸುಶ್ರಾವ್ಯವಾದ ಸಂಗೀತ ಕೇಳುತ್ತಿದ್ದರೆ ಕಿವಿ ಅದರ ವಿಷಯದಲ್ಲಿ ತನ್ನ ನಿರ್ಣಯವನ್ನು ಬೇಗನೆ ವ್ಯಕ್ತಮಾಡುತ್ತದೆ . ಆದರೆ ಕಣ್ಣು ಸುಮ್ಮನಿರುತ್ತದೆ . ಏಕೆಂದರೆ ಸಂಗೀತದ ವಿಷಯದಲ್ಲಿ  ಪರ ಮತ್ತು ವಿರೋಧಾಭಿಪ್ರಾಯ ವ್ಯಕ್ತಪಡಿಸುವುದು ಕಣ್ಣಿನ ಕೆಲಸ ಅಲ್ಲ . ಅಂದ ಮಾತ್ರಕ್ಕೆ ಕಿವಿ ಮತ್ತು ಕಣ್ಣುಗಳಲ್ಲಿ ಯಾವುದೋ ವಿರೋಧವಿದೆ ಎಂದು ಭಾವಿಸಬೇಕಿಲ್ಲ ; ಅದೇ ರೀತಿ ಶ್ರದ್ಧೆ ಮತ್ತು ಬುದ್ಧಿಯ ಕ್ಷೇತ್ರಗಳೂ ಬೇರೆ ಬೇರೆಯಾಗಿವೆ . ಶ್ರದ್ಧೆಯಿಂದ ಕರ್ಮಶಕ್ತಿಯೂ , ಬುದ್ಧಿಯಿಂದ ಜ್ಞಾನಶಕ್ತಿಯೂ ಪ್ರಾದುರ್ಭವಿಸುತ್ತದೆ . ಮೋಟಾರು ವಾಹನದಲ್ಲಿ ಒಂದು ಮಾರ್ಗ ಸೂಚಿಸುವ , ಮತ್ತೊಂದು ವೇಗವನ್ನು ವರ್ಧಿಸುವ ಇಂಜಿನ್ನುಗಳಿದ್ದರೂ ಅವೆರಡರಲ್ಲಿ ಯಾವುದೇ ವಿರೋಧವಿಲ್ಲ . ಅವೆರಡು ಕೂಡಿಯೇ ವಾಹನವನ್ನು ಮುನ್ನಡೆಸುತ್ತವೆ . ಮಾರ್ಗಸೂಚಿಸುವ ( ದಿಶಾಸೂಚಕ ) ಯಂತ್ರವಿಲ್ಲದಿದ್ದರೆ ವಾಹನವು ಎಲ್ಲಿಯಾದರೂ ಡಿಕ್ಕಿ ಹೊಡೆಯಬಹುದು . ಹಾಗೆಯೇ ವೇಗವರ್ಧಕ ಯಂತ್ರವಿಲ್ಲದಿದ್ದರೆ ವಾಹನವು ಚಲಿಸುವುದೇ ಇಲ್ಲ . ಅದೇ ರೀತಿ ಶ್ರದ್ಧೆ ಇಲ್ಲದಿದ್ದರೆ ಕರ್ಮ ( ಕ್ರಿಯಾಶಕ್ತಿ ಬರದು , ಬುದ್ಧಿ ಇಲ್ಲದಿದ್ದರೆ ಯಾವ ವಸ್ತುವಿನ ಕಡೆಗೆ ಲಕ್ಷ್ಯವಹಿಸಬೇಕೆಂಬುದೇ ತಿಳಿಯುವುದಿಲ್ಲ . ಬುದ್ಧಿಯು ಮಾರ್ಗ ತೋರಿಸುತ್ತದೆ . ಶ್ರದ್ಧೆಯು ಅದನ್ನು ಕಾರ್ಯರೂಪಕ್ಕೆ ತರುತ್ತದೆ . ಕಾರ್ಯರೂಪಕ್ಕೆ ತರುವ ಅಧಿಕಾರ ಶ್ರದ್ಧೆಯದಾದರೆ ವಿಚಾರಗಳ ಒಡೆಯ ಬುದ್ಧಿಯಾಗಿರುತ್ತದೆ . ಇವೆರಡರ ಸಹಾಯ ಸಹಕಾರಗಳಿಂದಲೇ ಜೀವನವು ಪರಿಪೂರ್ಣವಾಗುತ್ತದೆ . ಶ್ರದ್ಧೆ ಶಕ್ತಿಶಾಲಿಯಾಗಿರುವಷ್ಟು ಬುದ್ಧಿಯು ಶಕ್ತಿಶಾಲಿಯಲ್ಲ . ಹಾಗೆಯೇ ಶ್ರದ್ಧೆಯು ದುರ್ಬಲವಾಗುವಷ್ಟು ಬುದ್ಧಿಯು ದುರ್ಬಲವಾಗುವುದಿಲ್ಲ . ಶ್ರದ್ಧೆಯು ಒಂದು ನಿರ್ದಿಷ್ಟ ಹಂತವನ್ನು ಮೀರಿ ದೂರಕ್ಕೆ ಸಾಗಲಾರದು . ಬುದ್ಧಿಯು ದೂರವನ್ನು ಕ್ರಮಿಸುತ್ತದೆ . ಅಂತೆಯೇ ಅದು ಬಲಶಾಲಿಯಾಗಿದೆ . ಇದಕ್ಕೆ ಭಿನ್ನವಾಗಿ ಶ್ರದ್ಧೆಯು ಆರಂಭದಲ್ಲಿ ಬುದ್ಧಿಗಿಂತಲೂ ಬಲಶಾಲಿಯಾಗಿರುತ್ತದೆ . ಕೊನೆಯಲ್ಲಿ ಬುದ್ಧಿಯು ಬಲಶಾಲಿ ಯಾಗಿರುತ್ತದೆಯೇ ವಿನಾ ಶ್ರದ್ಧೆಯಲ್ಲ . ನನ್ನ ದೃಷ್ಟಿಯಲ್ಲಿ ತತ್ವಶಾಸ್ತ್ರದ ಸಂಬಂಧವು ತರ್ಕ ಅಥವಾ ಬುದ್ಧಿಯ ಜೊತೆಗೆ ಇರದೇ ಭಾವನೆ , ಹೃದಯ ಮತ್ತು ಶ್ರದ್ಧೆಯ ಜೊತೆಗಿದೆ . ‘ ನಾಯಮಾತ್ಮಾ ಪ್ರವಚನೇನ ಲಭ್ಯ : | ನ ಮೇಧಯಾ ನ ಬಹುನಾ ಶ್ರುತೇನ- ‘ ಈ ಆತ್ಮವು ಪ್ರವಚನ , ಬುದ್ಧಿ ಮತ್ತು ಬಹುಶ್ರುತವಾಗುವಿಕೆಯಿಂದ ಲಭ್ಯವಾಗುವುದಿಲ್ಲ ‘ ಎಂದು ಉಪನಿಷತ್ಕಾರನು ಈ ವಾಕ್ಯದಲ್ಲಿ ಸ್ಪಷ್ಟಪಡಿಸಿದ್ದಾನೆ . ಏಸುಕ್ರಿಸ್ತನ ಅನುಯಾಯಿಗಳಲ್ಲಿ ಸೌಭಾಗ್ಯದಿಂದ ವಿದ್ವಾಂಸರ ಒಂದು ವರ್ಗವೇ ಇತ್ತು . ಅವರಲ್ಲಿ ಬೆಸ್ತ , ಚಮ್ಮಾರ ಮತ್ತು ಬಡಿಗರೂ ಇದ್ದರು . ನರಸಿಂಹ ಮೆಹತಾನನ್ನು ವಿದ್ವತ್ ಗೋಷ್ಠಿಯಲ್ಲಿ ಕರೆದುಕೊಂಡು ಹೋದರೆ ಅಲ್ಲಿ ಅವನು ನಿರುಪಯುಕ್ತನೆನಿಸುವನು . ತತ್ವಶಾಸ್ತ್ರದ ಚರ್ಚೆಯನ್ನು ವಿದ್ವದ್ವರ್ಗ ಮಾಡುತ್ತದೆ . ಆದರೆ ಅದರ ಆಚರಣೆಯನ್ನು ಅವಿದ್ಯಾವಂತರಾಗಿದ್ದೂ ಭಾವಜೀವಿ , ಶ್ರದ್ಧಾಳುಗಳಾದ ನರಸಿಂಹ ಮೆಹತಾ ಮತ್ತು ಮೀರಾಬಾಯಿ ಮಾತ್ರ ಮಾಡಬಲ್ಲರು .

ಬುದ್ದಿಯ ಜೊತೆಗೆ ತತ್ವಶಾಸ್ತ್ರದ ಸಂಬಂಧವಿಲ್ಲ ಹಾಗೆಂದ ಮಾತ್ರಕ್ಕೆ ಬುದ್ಧಿಯ ಅವಶ್ಯಕತೆಯೇ ಇಲ್ಲ ಅಥವಾ ಅದರ ಉಪಯೋಗವೇ ಇಲ್ಲ ಎಂದು ಇದರರ್ಥವಲ್ಲ . ಬುದ್ಧಿಯ ಉಪಯೋಗವೇ ಸಾಕಷ್ಟಿರುವಾಗ ತತ್ವಶಾಸ್ತ್ರದ ಬಗೆಗಂತೂ ಕೇಳುವುದೇ ಬೇಡ , ಸಾಮಾನ್ಯ ಕೂಲಿ ಕೆಲಸದಲ್ಲಿಯೂ ಬುದ್ಧಿಯ ಅವಶ್ಯಕತೆ ಇರುತ್ತದೆ ಮತ್ತು ಅದನ್ನು ಉಪಯೋಗಿಸಲೇ ಬೇಕಾಗುತ್ತದೆ . ಯಾವುದೋ ಒಂದು ಮನೆಯ ಸಾಧನ ಸಾಮಗ್ರಿಗಳ ಬಗ್ಗೆ ಹೇಳುವಾಗ ನಾವು ಆ ಸಾಮಗ್ರಿಗಳಲ್ಲಿ ಆಕಾಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ . ಏಕೆಂದರೆ ಆಕಾಶವು ಸರ್ವಸಾಮಾನ್ಯವಾದ ವಸ್ತುವಾಗಿದೆ . ಹಾಗೆಯೇ ಬುದ್ಧಿಯೂ ಕೂಡ ಸರ್ವಸಾಮಾನ್ಯವಾದುದು . ತತ್ತ್ವಶಾಸ್ತ್ರದ ಜೊತೆಗೆ ಬುದ್ಧಿಯ ಸಂಬಂಧವು ಸಾಮಾನ್ಯವಾಗಿದ್ದರೆ ಶ್ರದ್ಧೆಯು ತತ್ತ್ವಶಾಸ್ತ್ರದ ವಿಶಿಷ್ಟ ತತ್ವವೆನಿಸುತ್ತದೆ . ತರ್ಕ ಮತ್ತು ತತ್ತ್ವಶಾಸ್ತ್ರಗಳಿಗಿಂತಲೂ ಶ್ರದ್ಧೆ ಮತ್ತು ತತ್ವವಿಷಯ ಅತ್ಯಂತ ಅಧ್ಯಯನಯೋಗ್ಯವೆಂದು ತಿಳಿಯಲ್ಪಡುತ್ತದೆ . ಹೃತೂರ್ವಕವಾಗಿ ತತ್ತ್ವಶಾಸ್ತ್ರವನ್ನು ಗ್ರಹಿಸಬೇಕು . ಹೃತ್ಪೂರ್ವಕವಾದಾಗಲೇ ಅದರ ಗ್ರಹಣ ಸಾಧ್ಯ . ಆದ್ದರಿಂದ ಶ್ರದ್ಧಾವಾನ್ ಲಭತೇ ಜ್ಞಾನಮ್ – ಶ್ರದ್ಧಾವಂತನೇ ಜ್ಞಾನವನ್ನು ಪಡೆಯುತ್ತಾನೆ ಎಂದು ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೇಳುತ್ತ ಶ್ರದ್ಧೆಯ ಜೊತೆಗೆ ಜ್ಞಾನದ ಪ್ರತ್ಯಕ್ಷ ಸಂಬಂಧವಿರುವುದನ್ನು ಸ್ಪಷ್ಟ ಪಡಿಸಿದ್ದಾನೆ . ಶ್ರದ್ಧೆ , ಸಂಯಮ ಮತ್ತು ಸಾವಧಾನಗಳು ಜ್ಞಾನಪ್ರಾಪ್ತಿಯ ಅಂತರಂಗದ ಸಾಧನಗಳಾಗಿವೆ .

ಶ್ರದ್ಧಾವಂತನಿಗೆ ಮಾತ್ರ ಪುರುಷಾರ್ಥ ಸಿದ್ಧಿಸುವುದು , ಇತರರಿಗಲ್ಲ ಎಂದು ಶಂಕರಾಚಾರ್ಯರು ಹೇಳುತ್ತಾರೆ . ಪಾರಮಾರ್ಥಿಕ ತತ್ವವು ಬಹಳ ಸೂಕ್ಷ್ಮವಾಗಿದೆ . ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ಕಥೆ ಇದೆ . ಶ್ವೇತಕೇತುವನ್ನು ಅವನ ತಂದೆಯು ಕರೆದು- ` ಮಗನೆ , ಎದುರಿಗಿರುವ ಅರಳಿವೃಕ್ಷದ ಹಣ್ಣು ತೆಗೆದುಕೊಂಡು ಬಾ ‘ ಎಂದು ಹೇಳುತ್ತಾನೆ . ಮಗನು ಹಣ್ಣು ತಂದ ಮೇಲೆ ಅದನ್ನು ತುಂಡಾಗಿಸಲು ತಂದೆ ಹೇಳುತ್ತಾನೆ . ಶ್ವೇತಕೇತು ಅದನ್ನು ತುಂಡು ತುಂಡು ಮಾಡಿದ ಮೇಲೆ ಇದರೊಳಗೆ ನಿನಗೇನು ಕಾಣುತ್ತದೆ ಎಂದು ತಂದೆ ಪ್ರಶ್ನಿಸುತ್ತಾನೆ . ಬೀಜ ಕಾಣುತ್ತದೆ ಎಂದು ಶ್ವೇತಕೇತು ಉತ್ತರಿಸಿದಾಗ ತಂದೆಯು ಅದನ್ನೂ ತುಂಡಾಗಿಸಲು ಹೇಳುತ್ತಾನೆ . ಮಗನು ಬೀಜವನ್ನು ತುಂಡರಿಸಿದಾಗ , ತಂದೆಯು ಈಗ ಅದರಲ್ಲಿ ಏನು ಕಾಣುತ್ತಿದೆ ಎಂದು ಕೇಳುತ್ತಾನೆ . ಆಗ ಶ್ವೇತಕೇತುವು ಏನೂ ಕಾಣುವುದಿಲ್ಲ ಎನ್ನುತ್ತಾನೆ . ಆಗ ಈ ಎನೂ ಇಲ್ಲ ಎನ್ನುವುದು ಇದೆಯಲ್ಲ ಅದರೊಳಗಿಂದಲೇ ಈ ವಿಶಾಲವಾದ ಅರಳಿವೃಕ್ಷ ಹುಟ್ಟಿದೆ ತಂದೆಯು ಹೇಳುತ್ತ ಆತ್ಮತತ್ವವೂ ಅತ್ಯಂತ ಸೂಕ್ಷ್ಮವಾಗಿದೆ . ಅದರಿಂದಲೇ ಈ ವಿಶ್ವದ ಸೃಷ್ಟಿಯಾಗಿದೆ – ಆದ್ದರಿಂದ ಮಗನೆ ! ಶ್ರದ್ಧೆಯನ್ನಿಡು ! ಶ್ರದ್ಧತ್ವ !

ಶ್ರುತ್ವಾ ಅನೇಭ್ಯಃ ಉಪಾಸತೇ ! -ಇನ್ನೊಬ್ಬರಿಂದ ಕೇಳಿ ಉಪಾಸನೆ ಮಾಡುವವನಿಗೆ ಶ್ರುತಿಪರಾಯಣನೆಂದು ಗೀತೆ ಹೇಳುತ್ತದೆ . ಶ್ರುತಿಪರಾಯಣ ಎಂದರೆ ಶ್ರದ್ಧಾಪರಾಯಣ ಗುರುವಿನಿಂದ ಶ್ರವಣ ಮಾಡಿದವನು . ಅದರಲ್ಲಿ ಶ್ರದ್ಧೆ ಇಡುವುದು ಮತ್ತು ಯಾವ ರೀತಿಯಲ್ಲೂ ವಿಚಲಿತನಾಗದೆ ಅದರಂತೆಯೇ ವರ್ತಿಸುವುದು . ಆ ಪ್ರಯತ್ನದಲ್ಲಿ ತಪ್ಪು ತಡೆ ಉಂಟಾಗಬಹುದು ಆದರೆ ಪ್ರಯತ್ನ ಬಿಡುವಂತಿಲ್ಲ . ಪ್ರಯತ್ನವೇ ಶ್ರದ್ಧೆಗೆ ಇರುವ ಪ್ರಮಾಣ . ಆಚರಣೆಯು ಪೂರ್ಣಗೊಂಡರೆ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ . ಋಗ್ವೇದದಲ್ಲಿ ಶ್ರದ್ಧಾಸೂಕ್ತವೊಂದಿದೆ . ಅದರಲ್ಲಿ ಋಷಿಯು ಶ್ರದ್ಧಾಂ ಭಗಸ್ಯ ಮೂರ್ಧನಿ- ನಾವು ಶ್ರದ್ಧೆಯನ್ನು ಭಗವಂತನ ತಲೆಯ ಮೇಲಿಡುತ್ತೇವೆ . ಮತ್ತೆ ಮುಂದೆ ಹೇಳುವುದೇನಂದರೆ

ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯಂದಿನಂ ಪರಿ |

ಶ್ರದ್ಧಾ ಸೂರ್ಯಸ್ಯ ನಿಮ್ರುಚಿ ಶ್ರದ್ಧೆ ಶ್ರದ್ಧಾಪಯೇಹ ನಃ ||

ನಾವು ಪ್ರಾತಃಕಾಲದಲ್ಲಿ ಶ್ರದ್ಧೆಯ ಆವಾಹನ ಮಾಡುತ್ತೇವೆ ಮತ್ತು ಮಧ್ಯಾಹ್ನ ಶ್ರದ್ಧೆಯ ಆವಾಹನ ಮಾಡುತ್ತೇವೆ . ಸೂರ್ಯಾಸ್ತದ ಸಮಯದಲ್ಲಿಯೂ ನಾವು ಅದೇ ಶ್ರದ್ಧೆಯ ಆವಾಹನ ಮಾಡುತ್ತೇವೆ . ಹೇ ಶ್ರದ್ಧೆಯೇ ! ಶ್ರದ್ಧಾದೇವಿ ! ನಮ್ಮ ಶ್ರದ್ಧೆಯನ್ನು ಬಲಗೊಳಿಸು

Related Posts