ಲೇಖಕರು : – ಶ್ರೀ ಗಂಗಾಧರ ಶಾಸ್ತ್ರಿಗಳು, ಚಿತ್ತರಗಿ
ಶ್ರೀ ಹಾನಗಲ್ಲ ಕುಮಾರ ಶ್ರೀಗಳವರ ಬಾಹ್ಯ ಪ್ರಕೃತಿಯನ್ನು ಕಂಡು ಅವರಿಗೆ ಎರಡು ಕಣ್ಣುಗಳೆಂದು ಯಾರಾದರೂ ಹೇಳುವಂತೆ ಅವರ ಆತ್ಮವನ್ನು ಕಂಡವರು ಮೂರು ಕಣ್ಣುಳ್ಳವರೆಂದು ಹೇಳುತ್ತಿದ್ದರು. ಅವರ ದೃಷ್ಟಿ ವೈಶಾಲ್ಯ, ಕಾರ್ಯಬಾಹುಳ್ಯ, ಪ್ರಚಾರ ಪ್ರಾಚುರ್ಯಗಳನ್ನು ಕಂಡು ‘ಸಹಸ್ರಾಕ್ಷಃ ಸಹಸ್ರಪಾತ್’ ಎಂದು ಪುರುಷ ಸೂಕ್ತದಲ್ಲಿ ವರ್ಣಿತವಾಗಿರುವ ‘ವಿರಾಟ್’ ರೂಪವನ್ನು ನೆನೆದವರುಂಟು. ಅಂತೆಯೆ ಅವರನ್ನು “ವಿರಾಟ್‌ಪುರವರ ನಿವಾಸ’ ಎಂದು ಕವಿಗಳು ಅನ್ವರ್ಥಕವಾಗಿ ನುತಿಸಿದಂತಿದೆ. ಒಳಗಿನ ಒಂದು ಕಣ್ಣಿನಿಂದ ಗ್ರಹಿಸಿ, ಸಹಸ್ರ ದೃಷ್ಟಿಯಿಂದ ಸಮಾಲೋಚಿಸಿ ಕಾರ್ಯವನ್ನು ಕಾಯಕವನ್ನಾಗಿ ಮಾರ್ಪಡಿಸುವ ದಿವ್ಯ ಕರ್ತೃತ್ವ ಶಕ್ತಿ ಶ್ರೀಗಳವರು ಜೀವನ ವ್ಯವಹಾರಕ್ಕೆ ಬೇಕಾಗುವ ಕಣ್ಣುಗಳೆರಡು ಪ್ರಕೃತಿದತ್ತವಾಗಿ ಸಿಕ್ಕರೂ ಜೀವನೋದ್ದಾರಕ್ಕೆ ಬೇಕಾದ ಒಳಗಣ್ಣು ಎಲ್ಲರಿಗೂ ಇಲ್ಲದಿರುವದನ್ನು ಅರಿತೇ ಹಾನಗಲ್ಲ ಶ್ರೀಗಳವರು ವೈರಾಗ್ಯ ಮಲ್ಹಣಾರ್ಯರ ಸಂಕೇತವನ್ನು ಮನ್ನಿಸಿ ವೀರಶೈವ ಮಹಾಸಭೆಯನ್ನು ಕರೆದರು ; ಮತ್ತು ಶಿವಯೋಗಿ ಚಿತ್ತರಗಿ ಮಹಂತರ ಸೂಚನೆಯಂತೆ ಶಿವಯೋಗಮಂದಿರವನ್ನು ಬಹು ಎದೆಗಾರಿಕೆಯಿಂದ ಕಟ್ಟಿದರು. ಅದರಿಂದ ನಾಡಿನ ಬಹು ಭಾಗದ ಗುರು ಜಂಗಮರು ಶ್ರೀಗಳವರ ಗರಡಿಯ ಶಿಷ್ಯರಾಗಿ ಆತ್ಮಜ್ಞಾನ, ಅಂತಃಶುದ್ಧಿ, ಯೋಗಸಿದ್ಧಿ, ವಿಶಾಲಬುದ್ದಿ, ಬ್ರಹ್ಮತೇಜೋವೃದ್ಧಿ ಮುಂತಾದ ಬಗೆ ಬಗೆಯ ನೈಪುಣ್ಯವನ್ನು ಕೌಶಲ್ಯವನ್ನು ಸಾಧಿಸಿ ಜಗಜಟ್ಟಿಗಳಾಗಿ ಲೋಕವನ್ನು ಗೆದ್ದು, ಮೃತ್ಯುವನ್ನು ಒಡೆದು ಮೃತ್ಯುಂಜಯನ ಕರುಣೆಯ ಕಂದರಾಗಿ ಕಂಗೊಳಿಸುತ್ತಿದ್ದರು. ಸಮಾಜದ ಗುರುಗಳನ್ನು ತಯಾರಿಸಿದರೆ ಸಮಾಜವೇ ಮುಂದುವರಿಯುವದೆಂಬ ಶ್ರೀಗಳವರ ವಿಚಾರ ಕರಗತವಾಯಿತು.
ಇದು ಒಂದು ದೃಷ್ಟಿ. ಇನ್ನು ವಿಶಾಲದೃಷ್ಟಿ ಇದ್ದವರಿಗೆ ವಿಶಾಲಕ್ಷೇತ್ರ ಬೇಕು. ವಿಶ್ವವೇ ಪಾವನವಾಗಲೆಂಬ ಪರಮಾದರ್ಶದ ಅರುವಿದ್ದ ವಿಶ್ವಕುಟುಂಬಿ ಶ್ರೀಗಳವರಿಗೆ ಇಷ್ಟರಿಂದಲೇ ತೃಪ್ತಿಯಾಗಿರಲಿಲ್ಲ. ಗುರುಗಳ ಉಪದೇಶ ಬೀಜ ಸಾಮಾನ್ಯರ ಮನದಲ್ಲಿ ನಾಟಬೇಕಾದರೆ ರಸಾತ್ಮಕ ಸಾಹಿತ್ಯದ ಸಹಕಾರ ಬೇಕು ‘ಕಾಂತಾ ಸಮ್ಮಿತತಯಾ’ ಉಪದೇಶ ಸಾಹಿತ್ಯದ ಉದ್ದೇಶಗಳಲ್ಲಿ ಒಂದು. ಅದು ಫಲಕಾರಿಯಾಗಲು ಸಾಹಿತ್ಯ ಸಂಗೀತ ಸಮ್ಮಿಳಿತವಾಗಿರಬೇಕು. ಇದನ್ನರಿತ ಶ್ರೀಗಳವರು ಸಾಧಕರ ಯೋಗ ಶಿಕ್ಷಣದೊಂದಿಗೆ ಸಾಹಿತ್ಯ ಸಂಗೀತಗಳ ಪಾಠಕ್ರಮವನ್ನು ಯೋಜಿಸಿದರು.
ಶ್ರೀಗಳವರು ವೀರ ವಿರಕ್ತರಾಗಿಯೂ ಸಂಗೀತರಸದ ಮಧುರವನ್ನು ಸವಿದಿದ್ದರು. ನಿಜಗುಣರ ಪದಗಳನ್ನಷ್ಟೆ ಅಲ್ಲ, ಪ್ರಮಥರ ವಚನಗಳನ್ನು ಸಂಗೀತದಲ್ಲಿ ಸರಿಗೊಳಿಸಿ ನುಡಿಯಬೇಕೆಂಬುದು ಶ್ರೀಗಳವರ ಬಯಕೆಯಾಗಿದ್ದಿತು. ‘ಕೀರ್ತನಾಚಾರ್ಯ’ ಲಿಂ. ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳವರು ಶ್ರೀಗಳವರ ಪ್ರೇರಣೆಯಂತೆ ಈ ದಿಶೆಯಲ್ಲಿ ಅಪಾರ ಸೇವೆ ಸಲ್ಲಿಸಿದರು.
ಹೊರಗಣ್ಣಿಲ್ಲದ, ಆದರೆ ಕಂಚುಕಂಠದ ಮಿಂಚುಮೊಗದ ಕಾಡಶೆಟ್ಟಿಹಳ್ಳಿಯ ಗದಿಗೆಯ್ಯನವರಿಗೆ ಒಳಗಣ್ಣನಿತ್ತು ಅಪಾರ ಧನರಾಶಿ ಸುರಿದು ಸಂಗೀತ ಶಿಕ್ಷಣ ಕೊಡಿಸಿದವರು ಶ್ರೀಗಳವರ ಗದಿಗೆಯ್ಯನವರು ದಕ್ಷಿಣಾದಿ-ಉತ್ತರಾದಿ ಉಭಯ ಸಂಗೀತದಲ್ಲಿ ನೈಪುಣ್ಯ ಪಡೆದಿದ್ದರು ; ಬಾಗಿಲಕೋಟೆಯಲ್ಲಿ ಕೂಡಿದ ವೀರಶೈವ ಮಹಾಸಭೆಯಲ್ಲಿ ತತ್ತ್ವವನ್ನು ಸಂಗೀತಕ್ಕೆ ಮೇಳಯಿಸಿ ಹಾಡಿದಾಗ ಗದಿಗೆಯ್ಯನವರ ಪಾಂಡಿತ್ಯಕ್ಕೆ ಎಲ್ಲರೂ ತಲೆದೂಗಿದರು ; ಅಂದಿನಿಂದ ಅವರನ್ನು ‘ಪಂಚಾಕ್ಷರ ಗವಾಯಿ’ಗಳೆಂದು ಕರೆದು ಸಂತೋಷದಿಂದ ಸನ್ಮಾನಿಸಿದರು.
ನಾದ ಲಯಮುಖವಾಗಿ ಅಂತರಂಗವೆ ಬಹಿರಂಗವಾಗಿ ಪರಿಣಮಿಸುತ್ತದೆ, ವಿಕಾಸಗೊಳ್ಳುತ್ತದೆ.ಕಲೆ-ಸಾಹಿತ್ಯ-ಸಂಸ್ಕೃತಿಗಳ ಸಾರವೆ ಸಂಗೀತ. ಅದು ಹೃದಯಲ್ಲಿ ಜನಿಸಿ, ಕಂಠದಲ್ಲಿ ರೂಪುಗೊಂಡು ಮುಖದಿಂದ ಹೊರಸೂಸಿ ಬರುತ್ತದೆ. ಅದುವೆ ಸತ್ಯ-ಶಿವ ಸುಂದರಮಯ ಸಂಗೀತವನ್ನು ವಿಲಾಸಸಾಧನವೆಂದು ಬಗೆಯದೆ ಬರಿಯ ಮನರಂಜನೆಗೆ ಬಳಸದೆ ಮನಸ್ಸಿನ ಶುದ್ದಿಗಾಗಿ ಚಿತ್ತವೃತ್ತಿನಿರೋಧಕ್ಕಾಗಿ ಉಪಯೋಗಿಸಿಕೊಳ್ಳಬೇಕೆಂದು ಶ್ರೀಗಳವರು ಪಂಚಾಕ್ಷರ ಗವಾಯಿಗಳಿಗೆ ಉಪದೇಶಿಸುತ್ತಿದ್ದರು. ಅಂತೆಯೆ ಗವಾಯಿಗಳು ಪ್ರಪಂಚದ ವ್ಯಾಮೋಹಕ್ಕೆ ಬಲಿಬೀಳದೆ ಆಜನ್ಮ ನೈಷ್ಠಿಕ ಬ್ರಹ್ಮಚರವನ್ನು ಪರಿಪಾಲಿಸಲು ಸಮರ್ಥರಾದರು. ಅವರ ಜೀವನ ಸಂಗೀತಶಾಸ್ತ್ರದ ಉದಾತ್ತತೆಯನ್ನು ಪಾವಿತ್ರ್ಯವನ್ನು ಅಳಿಯದಂತೆ ಉಳಿಸಿ ಬೆಳೆಸಲು ಮೀಸಲಾಗಿದ್ದಿತು.ಧರ್ಮೋಪದೇಶಕ್ಕೆ ಸಾಧನಪ್ರಾಯಗಳಾದ ಕೀರ್ತನ-ಪುರಾಣ-ಪ್ರವಚನಗಳೆಲ್ಲ ಸಂಗೀತಮಯವಾಗಿರ ಬೇಕೆಂದು ಹೇಳಿ ಶ್ರೀಗಳವರು ಸಾಧಕರಿಗೆ ಅಂತಹ ಶಿಕ್ಷಣವನ್ನೇ ರೂಪಿಸಿದ್ದರು. ಶಿವಯೋಗಮಂದಿರದಲ್ಲಿಇಂದಿಗೂಅದು ನಡೆದು ಬಂದಿದೆ.
ಸಾಹಿತ್ಯವು ತತ್ರ್ಯಮಯವಾಗಿರಬೇಕು, ಸಂಗೀತವು ಭಕ್ತಿ ರಸಪೂರಿತವಾಗಿರಬೇಕು. ಶಿವಯೋಗಕ್ಕೆಶಿವಸಾಕ್ಷಾತ್ಕಾರಕ್ಕೆ ಸಾಹಿತ್ಯ ಸಂಗೀತಗಳೆರಡೂ ಸಾಧನವಾಗಬೇಕೆಂಬುದು ಶ್ರೀಗಳವರ ಮನೀಷೆಯಾಗಿದ್ದಿತು.ರಾಗದ ಸಂಕಣ್ಣ, ನಿಜಗುಣ ಶಿವಯೋಗಿ, ಬಾಲಲೀಲಾ ಮಹಾಂತ ಶಿವಯೋಗಿ, ಸರ್ಪಭೂಷಣಯೋಗಿ,ಪುರಂದರದಾಸ ಮತ್ತು ಮೀರಾಬಾಯಿ ಮೊದಲಾದ ಸಂತರು ಸಾಹಿತ್ಯವನ್ನು ಸಂಗೀತಕ್ಕೆ ಇಳಿಸಿ ಭಕ್ತಿರಸವನ್ನಾಗಿ ಹರಿಸಿ ಮುಕ್ತಿಗೆ ಮಾರ್ಗ ಮಾಡಿಕೊಟ್ಟರು. ಅಂತೆಯೆ ಶ್ರೀಗಳವರು ಭಾಕಿಕ ಗೀತಗಳನ್ನುರಚಿಸಿ ಗವಾಯಿಗಳಿಂದ ಹಾಡಿಸಿದರು. ಅವುಗಳಿಗೆ ‘ಶಿವಯೋಗ’ದ ಅಚ್ಚಳಿಯದ ಮುದ್ರಿಕೆಯನ್ನೊತ್ತಿದರು.ಅವರೊಬ್ಬ ‘ರಸಋಷಿ’ ಎಂದು ಹೇಳಿದರೆ ಅತಿಶಯೋಕ್ತಿ ಎನಿಸದು.
“ಯೋಗಿ ನಿಜಾನಂದದೋಳು ನುಡಿಸುವ ವೀಣೆ ರಾಗರಸದ ತರಂಗಿಣಿ’ ಎಂದು ನಿಜಗುಣರು ಹಾಡಿದಂತೆ ನಾದಯೋಗಿಗಳಾದ ಹಾನಗಲ್ಲ ಶ್ರೀಗಳವರು ನಾಟ್ಯ-ಸಂಗೀತಕ್ಕೆ ಮಹತ್ವ ಕೊಟ್ಟು ಅದನ್ನುಬೆಳೆಸಿ ಉಳಿಸಿದರು. ಶ್ರೀಗಳವರು ಒಮ್ಮೆ ತಮ್ಮ ಮೆಚ್ಚುಗೆಯ ಶಿಷ್ಯರಾದ ನವಿಲುಗುಂದ ಶ್ರೀಗಳವರನ್ನು ನಾಟಕವನ್ನು ಕಲಿಸಲು ಹೋಗುವೆಯಾ?’ ಎಂದು ಕೇಳಿದ್ದರಂತೆ ; ಕಾವ್ಯಗಳಲ್ಲಿ ನಾಟಕವು ರಮಣೀಯವಾದುದು ; ನಾಟಕವೊಂದೆ ಭಿನ್ನಭಿನ್ನರುಚಿವುಳ್ಳ ರಸಿಕ ಜನರಿಗೆ ನಾನಾ ಬಗೆಯ ರಸದೂಟವನ್ನು ಬಡಿಸುವ ಸಾಧನವೆಂದು ಹೇಳಿದ ಮಹಾಕವಿ ಕಾಳಿದಾಸನ ಉಕ್ತಿಗಳನ್ನು ನೆನಪಿಗೆ ತಂದು ಕೊಡುತ್ತಿದ್ದರಂತೆ.ಸಾಮಾನ್ಯರು ನಾಟಕ ರಂಗವನ್ನು ಜೀವನೋಪಾಯವೆಂದು ಬಗೆದಿದ್ದಾರೆ. ಅದು ಜ್ಞಾನದಾಸೋಹವಾಗಿ ಸಾಗಿದರೆ ಸಮಾಜ ಹೊಸ ಬೆಳಗು ಕಂಡು ಪರಿಶುದ್ಧವಾಗುವದೆಂಬ ಶ್ರೀಗಳವರ ವಿಚಾರಸರಣಿ ತಾತ್ವಿಕ ಮತ್ತು ತಾರಕವಾಗಿದ್ದಿತು. ಅದಕಾಗಿಯೆ ಶ್ರೀಗಳವರು ಹಿತಮಿತವಾದ ಸಾಹಿತ್ಯರೂಪಕಗಳಲ್ಲಿ ಶರಣರ ಜೀವನ ಸಂದೇಶವನ್ನು ಜಗತ್ತಿನಲ್ಲಿ ಬೀರಬೇಕೆಂದು ಕವಿಗಳಿಗೆ ಪ್ರೇರಣೆಯನ್ನಿತ್ತರು.
ಎಲ್ಲರನ್ನೂ ಆಕರ್ಷಿಸಬಲ್ಲ ನಾಟಕ ರಂಗಭೂಮಿಯು ಶಿವಾನುಭವ ಮಂಟಪವಾದರೆ ಆಯುಷ್ಯದಲ್ಲಿಸಾಧಿಸುವ ಸಿದ್ಧಿಯನ್ನು ಆರು ತಿಂಗಳಲ್ಲಿ ಸಾಧಿಸಬಹುದೆಂದು ಶ್ರೀಗಳವರು ಬರೆದಿದ್ದರು. ಜಾತಿ-ವಯೋಮಾನಗಳನ್ನು ಮೇಲು-ಕೀಳುಗಳನ್ನು ಎಣಿಸದೆ ಎಲ್ಲರ ಮನವನ್ನು ಸೆಳೆದು ಜ್ಞಾನವನ್ನು ಸರಳವಾಗಿ ದಾನಮಾಡುವ ನಾಟಕ ಮಂಡಳಿಯೆ ಸಂಚಾರಿ ಪಾಠಶಾಲೆಯಾಗಬಹುದೆಂದು ತಿಳಿದು ಶ್ರೀಗಳು ಅದನ್ನುಕಾರ್ಯರೂಪಕ್ಕೆ ತರಲು ಅನೇಕ ಪ್ರಯತ್ನಗಳನ್ನು ನಡೆಸಿದರು. ಆದರೆ ಹಳೆಯ ಮನ್ವಂತರದ ಪೀಳಿಗೆಗೆ ಅದು ಸರಿ ಕಾಣದಾಗಿತ್ತು. ನಾಟಕ ನೋಡುವದೇ ಪಾಪ, ಗೌರವಕ್ಕೆ ಕುಂದೆಂದು ಭಾವಿಸಿದ್ದ ಅಂದಿನ ಜಗತ್ತಿನಲ್ಲಿ ಶ್ರೀಗಳ ಬಯಕೆ ಬೇಗ ಫಲಿಸಲಿಲ್ಲವಾದರೂ ಅದು ಬರಡಾಗಲ್ಲ. ಮುಂದೆ ಕೆಲವು ವರುಷಗಳಲ್ಲಿಯೆ ಶ್ರೀ ಗವಾಯಿಗಳ ಸಂಗೀತ ಶಾಲೆಯು ಗದುಗಿನಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಸ್ಥೆಯಾಗಿ ಕವಲೊಡೆಯಿತು. ಅದರ ಫಲವಾಗಿ ಸಿದ್ದರಾಮೇಶ, ನಂಬಿಯಕ್ಕ ಶಿವಶರಣಿ ಮಲ್ಲಮ್ಮ, ಧನೇಶ ಚರಿತ್ರೆ, ಘಷ್ಯಾ ಮಂತ್ರಮಹ ರಾಜಶೇಖರ ಮೊದಲಾದ ತಾತ್ವಿಕ ಸಂಗೀತ ರೂಪಕಗಳನ್ನು ಶ್ರೀ ಗವಾಯಿಗಳ ಪಟ್ಟ ಶಿಷ್ಯರಾದ ಕನ್ನಡ-ಸಂಸ್ಕೃತ-ಹಿಂದಿ ಭಾಷೆಗಳಲ್ಲಿ ಪಂಡಿತರೂ ಉಭಯಗಾನವಿಶಾರದರೂ ಆದ ಶ್ರೀ ಪುಟ್ಟರಾಜ ಗವಾಯಿಗಳವರು ರಚಿಸಿ ಪ್ರಚುರಪಡಿಸಿದರು ;ಶ್ರೀಗಳವರ ಆಶೆಯನ್ನು ಫಲಿಸುವಂತೆ ಮಾಡಿದರು. ಅದರ ಪ್ರತಿಬಿಂಬವಾಗಿಯೆ ‘ಶ್ರೀ ಕುಮಾರ ವಿಜಯ ನಾಟ್ಯ ಸಂಘ’ ವು ಹೊರಬಿದ್ದು ನಾಡಿನ ನಾಲ್ಕು ದಿಕ್ಕಿನಲ್ಲಿ ಸಂಚರಿಸಿ ಶ್ರೀಗಳ ಸಂದೇಶವನ್ನೇ ಬೀರುತ್ತಿದೆ. ಈ ನಾಟ್ಯ ಸಂಸ್ಥೆಯು ಬಗೆ ಬಗೆಯ ರೂಪಕಗಳಿಂದ ನೀತಿ-ಭಕ್ತಿ-ಧರ್ಮಜ್ಞಾನದ ತಿಳಿರಸವನ್ನೆ ಪ್ರೇಕ್ಷಕರಿಗೆ ಉಣಿಸಿ ಹದಿನಾಲ್ಕು ವರುಷಗಳಿಂದ ಅಖಂಡ ಕೀರ್ತಿಯನ್ನು ಸಂಪಾದಿಸಿದೆ, ರಂಗಭೂಮಿಯಲ್ಲಿ ಅಪೂರ್ವವಿಕ್ರಮವನ್ನು ಗಳಿಸಿದೆ. ಇದೆಲ್ಲಕ್ಕೆ ಪೂಜ್ಯ ಹಾನಗಲ್ಲ ಶ್ರೀಗಳವರ ಪ್ರೇರಣೆಯ ಕಾರಣ. ಶ್ರೀಗಳವರು ಸಕಲ ಕಲೆಗಳನ್ನು ಕರಗತ ಮಾಡಿಕೊಂಡ ಕಾರಣಿಕ ಶಿವಯೋಗಿಗಳಾಗಿದ್ದರು. ಅಂದು ಶ್ರೀಗಳವರ ಚಿತ್ತಭಿತ್ತಿಯಲ್ಲಿಮೂಡಿದ ಕಲೆಯು ಇಂದು ಬಹಿರಂಗವಾಗಿ ರಂಗಭೂಮಿಗಿಳಿದು ಜನಮನವನ್ನು ಪರಿಶುದ್ಧಗೊಳಿಸುತ್ತಿದೆ.