ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶ್ರೀಗಳವರ ಸಂಗೀತ ಸಂಪ್ರೀತಿ

ಲೇಖಕರು :ಲಿಂ. – ಪಂ. ಪುಟ್ಟರಾಜ ಗವಾಯಿಗಳು

ಸಂಗೀತವು ಲಲಿತ ಕಲೆಗಳಲ್ಲಿ ಒಂದಾಗಿದೆ. ವಾಸ್ತುಶಿಲ್ಪ, ಮೂರ್ತಕಲೆ, ಚಿತ್ರಕಲೆ, ಸಂಗೀತ ಇವೆಲ್ಲ ಲಲಿತಕಲೆಗಳು. ಇವೆಲ್ಲವುಗಳಲ್ಲಿ ಸೌಂದರ್ಯ (ಲಾಲಿತ್ಯ)ವಿದೆ, ಆನಂದವನ್ನುಂಟುಮಾಡುವದೆ ಸೌಂದರ್ಯ.ಸುಂದರ ವಸ್ತುವು ನಮ್ಮ ಕಣ್ಮನಗಳನ್ನು ಆಕರ್ಷಿಸುತ್ತದೆ. ಸೌಂದರ್ಯ ಇಂದ್ರಿಯಗತ್ಯ. ವಾಸ್ತು-ಮೂರ್ತಿಚಿತ್ರಗಳಲ್ಲಿಯ ಸೌಂದರ್ಯದ ಅನುಭವಕ್ಕೆ ನೇತ್ರೇಂದ್ರಿಯ  ಕಾರಣ, ಅವುಗಳಲ್ಲಿ ಆಕಾರ, ಭಾವಭಂಗಿ,ವರ್ಣ ರೇಖಾವಿನ್ಯಾಸವಿರುತ್ತವೆ. ಅವನ್ನು ಕಂಡು ಆನಂದಪಡಲು ಕಣ್ಣು ಬೇಕು. ಕಣ್ಣಿಲ್ಲದವರಿಗೆ ವಾಸ್ತು ಮೂರ್ತಿ ಚಿತ್ರಕಲೆಗಳ ಸೌಂದರ್ಯ ಶೂನ್ಯ. ಆದರೆ ಸಂಗೀತ ಕಲೆಯು ಶಬ್ದಮಯವಾದುದು. ಶಬ್ದ ಶ್ರುತಿಗಮ್ಯ, ಸಂಗೀತದಲ್ಲಿ ನಾದಮಾಧುರ್ಯವಿರುತ್ತದೆ. ಅದನ್ನು ಕೇಳಿಯೇ ಸವಿಯಬೇಕು. ಸಮ್ಯಕ್ ಗೀತ ಕೇಳುವ ರಸಿಕರಿಗೆ ಇಂಪಾಗುವಂತೆ ಹಾಡಲ್ಪಟ್ಟುದೆ ಸಂಗೀತವು. ಅಂತೆಯೆ, ಗೀತವು ರಸಪ್ರಧಾನವಾದ ಉತ್ತಮ ಕಲೆಯೆಂದು ಪ್ರಶಸ್ತಿಯನ್ನು ರಸಿಕರಿಂದ ಪಡೆದಿದೆ.

‘ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತ ಮುಚ್ಯತೆ’

ಎಂಬಂತೆ ಗೀತ, ವಾದ್ಯ, ನೃತ್ಯಗಳ ಸಮ್ಮೇಳವೆ ಸಂಗೀತವೆನಿಸುತ್ತದೆ. ಇಲ್ಲಿ ಗೀತಕ್ಕೆ ಮೊದಲನೆಯ ಸ್ಥಾನವಿದೆ. ಸಂಗೀತಕ್ಕೆ ರಸಾತ್ಮಕವಾದ ಕಾವ್ಯವೂ ಸಹಕಾರಿಯಾಗಿದೆ. ಗೀತವು ಶ್ರವ್ಯ ಕಾವ್ಯದ ಒಂದು ಪ್ರಕಾರ ಸ್ವರಯುಕ್ತವಾಗಿ ಹಾಡಿದ ಗೀತವು ಸುಶ್ರಾವ್ಯವಾಗಿ ಕೇಳುವವರಿಗೆ ಆನಂದವನ್ನುಂಟು ಮಾಡುತ್ತದೆ. ಸಂಗೀತದ ಸಹಾಯದಿಂದ ಕಾವ್ಯದ ಸ್ವಾರಸ್ಯ ಹೆಚ್ಚುತ್ತದೆ. ಕಾವ್ಯದಲ್ಲಿಯ ಛಂದಸ್ಸು ಸಂಗೀತದ ತಾಲ-ಲಯಗಳನ್ನೇ ಸೂಚಿಸುತ್ತದೆ. ಉಳಿದ ಕಾವ್ಯ ಪ್ರಕಾರಕ್ಕೆ ಸಂಗೀತವಿದ್ದೇ ತೀರಬೇಕೆಂಬ ನಿಯಮವಿಲ್ಲವಾದರೂ ಗಮಕಿಯು ಸಂಗೀತಜ್ಞನು ಹಾಡಿದ ಕಾವ್ಯ ರಸಮಯವಾಗಿರುತ್ತದೆ. ಸಂಗೀತದ ನೆರವಿನಿಂದ ಕಾವ್ಯದ ರಸಾತ್ಮಕತೆ ಸಹಜವಾಗಿ ಪ್ರಕಟವಾಗುತ್ತದೆ. ಗೀತಕ್ಕೆ ಸಂಗೀತವೆ ಪ್ರಾಣ. ಸಂಗೀತದಲ್ಲಿ ಗೀತಕ್ಕೆ ಗೌರವದ ಸ್ಥಾನವಿದೆ. ‘ಸಂಗೀತ ರತ್ನಾಕರ’ದಲ್ಲಿ

ನೃತ್ಯಂ ವಾದ್ಯಾನುಗಂ ಪ್ರೋಕ್ತಂ ವಾದ್ಯಂ ಗೀತಾನುವೃತಿ ಚ |

ಆತೋ ಗೀತಂ ಪ್ರಧಾನಂ ತತ್ ತದಾದಾವಭಿಧೀಯತೆ ||

ನೃತ್ಯವು ವಾದ್ಯವನ್ನು ಅನುಸರಿಸುತ್ತದೆ. ವಾದ್ಯವು ಗೀತವನ್ನು ಆದುದರಿಂದ ಗೀತವೆ ಪ್ರಧಾನವು.ಅಂತೆಯೆ ಸ್ವರಶಾಸ್ತ್ರಕ್ಕೆ ಸಂಗೀತವೆಂಬ ಹೆಸರು ಮೊದಲಿನಿಂದಲೂ ಸಾರ್ಥಕವಾಗಿ ಬಂದಿದೆ. ಗೀತವಿಲ್ಲದ ಸಂಗೀತ ನಿರ್ಗೀತವಾಗಿ ನೀರಸವಾಗುವದು.

ಗೀತ-ವಾದ್ಯ-ನೃತ್ಯಗಳ ಸಮ್ಮಿಳನದಿಂದ ಸಂಗೀತವು ಸರ್ವಾಂಗ ಸುಂದರ ಕಲೆಯಾಗಿ ವಿಕಾಸಗೊಂಡಿದೆ.ಬಾಳುವೆಯಲ್ಲಿ ತಾಳ್ಮೆಯಿಲ್ಲದವರಿಗೂ ತನ್ಮಯತೆಯನ್ನು ತಂದು ಕೊಡುವ ತಾತ್ವಿಕ ಸತ್ಯವಿದೆ.ಸಂಗೀತದಲ್ಲಿ. ಶಿಶುವು, ಪಶುವೂ ಸಂಗೀತದ ನಾದ ಮಾಧುರ್ಯಕ್ಕೆ ಮನಸೋಲುತ್ತವೆ. ಅಳುವ ಕೂಸು ತಾಯ ಜೋಗುಳ ಕೇಳಿ ಸುಮ್ಮನಾಗುತ್ತದೆ. ಪುಂಗಿಯ ಇಂಪಾದ ನಾದಕ್ಕೆ ನಾಗರ ಹೆಡೆ ಎತ್ತಿ ತಲೆದೂಗುತ್ತದೆ.ಚಿಗರೆ ಹುಲ್ಲು ಮೆಲ್ಲುವದನ್ನು ಬಿಟ್ಟು ಮಂಜುಳ ನಾದಕ್ಕೆ ಕಿವಿಗೊಡುತ್ತದೆ. ಪ್ರಕೃತಿಯನ್ನೇ ಕರಗಿಸಿ ನೀರು ಮಾಡುವ ಮಹೋನ್ನತ ಶಕ್ತಿ ಸಂಗೀತದಲ್ಲಿದೆ. ಗಾಯಕನ ನಾದಲೀಲೆಯಲ್ಲಿ ರಾಗಮಾಲಿಕೆಯಲ್ಲಿ ಮೋಡದಿಂದ ಮಳೆ ತರಿಸುವ ಶಕ್ತಿಯಿದೆ, ನಂದಿದ ದೀಪವನ್ನು ಹೊತ್ತಿಸುವ ಸತ್ತ್ವವಿದೆ.

ಇಂತಹ ಅಗಾಧವಾದ ಸಂಗೀತ ಕಲೆಯ ಸದುಪಯೋಗ ಮಾಡಿಕೊಳ್ಳುವಲ್ಲಿ ಮಾನವನ ಯೋಗ್ಯತೆ ಕಂಡು ಬರುತ್ತದೆ. ಗಾನವಿದ್ಯೆಯು ಒಂದು ಸುಕರ್ಮವೆ. ಅದರಲ್ಲಿ ಅದ್ಭುತ ಕೌಶಲ್ಯವಿದೆ, ಸ್ವರ ಸಾಧನೆಯ ತಪಸ್ಸು ಇದೆ. ಅಂತೆಯೆ, ಅದೂ ಒಂದು ಉತ್ತಮ ಯೋಗವೆ. ಈ ಯೋಗವೂ ಚಿತ್ತವೃತ್ತಿಗಳ ನಿರೋಧವನ್ನು ಮಾಡಿ ಸಾಧಕನಿಗೆ ಮನಶ್ಯಾಂತಿಯನ್ನು ಕೊಡುತ್ತದೆ. ಹಠಯೋಗದಂತೆ ಇದು ಕಠಿಣವಲ್ಲ, ನೀರಸವಲ್ಲ.ಮಾನವನು ಸಂಗೀತ ವಿದ್ಯೆಯಿಂದ ಲೌಕಿಕ ಪಾರಮಾರ್ಥವೆರಡನ್ನೂ ಸಾಧಿಸಬಹುದು. ಭಕ್ತಿಯಿಂದ ಒಲಿದು ಹಾಡಿದ ಗೀತದಲ್ಲಿ ಬಾಹ್ಯ ವೃತ್ತಿಯನ್ನು ಬದಲಿಸಿ ಮಾನವನನ್ನು ಸದ್ಭಾವದತ್ತ ಒಯ್ಯುವ ಬಲವಿದೆ.

ಭಾರತೀಯ ಸಂಗೀತದ ಕ್ಷೇತ್ರವು ಬಹು ವಿಶಾಲವಾಗಿದೆ. ಭಾರತೀಯ ಜನ ಜೀವನದಲ್ಲಿ ಸಂಗೀತವು ಒಂದು ಅಸಾಧಾರಣವಾದ ಆನಂದದಾಯಕ ಸಾಧನೆಯಾಗಿದೆ, ವಿನೋದ-ಮನರಂಜನೆಗಳ ಪರಮೋಪಾಯ ವಾಗಿದೆ. ಸಂಗೀತವು ನಿತ್ಯದ ಜನಜೀವನದಲ್ಲಿ ನವಚೈತನ್ಯವನ್ನು ತರುವ ಒಂದು ಉತ್ತಮ ಬಗೆಯಾಗಿದೆ.ಸಾಮವೇದವು ಸಂಗೀತಮಯವಾಗಿದೆ. ಉಪನಿಷತ್ತು ನಾದವನ್ನು ಬ್ರಹ್ಮವೆಂದು ಸಂಬೋಧಿಸಿದೆ.ನಾದದಲ್ಲಿ ಆನಂದವಿದೆ. ಆನಂದವು ಬ್ರಹ್ಮನ ಐದು ಲಕ್ಷಣಗಳಲ್ಲಿ ಒಂದು. ನಾದಾನುಸಂಧಾನದಿಂದ ಮಾನವನು ಅಕ್ಷರನನ್ನು ಕಾಣಬಹುದಾಗಿದೆ, ಅಮೃತತ್ವವನ್ನು ಪಡೆಯ ಬಹುದಾಗಿದೆ.

ಭಾರತೀಯರ ಭವ್ಯ ದೃಷ್ಟಿಯಲ್ಲಿ ಸಂಗೀತವು ಬರಿಯ ಕಲೆಯಲ್ಲ, ಮನರಂಜನೆಯನ್ನು ಮಾಡುವ ಸಾಧನ ಮಾತ್ರವಲ್ಲ. ಅದು ಮುಕ್ತಿಯ ಪರಮೋತ್ಕೃಷ್ಠ ಸಾಧನವೂ ಅಹುದು. ಅಂತೆಯೆ, ಅದಕ್ಕೆ ಕಲೆಗಳಲ್ಲಿ ಅತ್ಯುನ್ನತ ಸ್ಥಾನವಿದೆ. ಅದು ದಾನ-ಯಜ್ಞ ಜಪಾದಿಗಳನ್ನೂ ಮೀರಿ ನಿಂತಿದೆ.

ತ್ರಿವರ್ಗಫಲದ್ಯಾ: ಸರ್ವೆ ಜ್ಞಾನಯಜ್ಞಜಪಾದಯಃ |

ಏಕಂ ಸಂಗೀತ ವಿಜ್ಞಾನಂ ಚತುರ್ವಗ್ರಫಲಪ್ರದಂ ||

ಸಂಗೀತ ಮೋಕ್ಷವನ್ನೊಳಗೊಂಡ ನಾಲ್ಕು ಪುರುಷಾರ್ಥಗಳಿಗೂ ಸಾಧನವಾಗಿದೆ. ಆದುದರಿಂದ,ಅದನ್ನು ನಾವು ಪುರುಷಾರ್ಥ ಸಾಧನಗಳಲ್ಲಿ ಪರಮೋತ್ತಮವಾದುದೆಂದು ಗ್ರಹಿಸಬಹುದಾಗಿದೆ.ಭಕ್ತಿಗೂ ಗೀತೆಗೂ ನಿಕಟವಾದ ಸಂಬಂಧವಿದೆ. ಕನ್ನಡ ಸಾಹಿತ್ಯದಲ್ಲಿ ಗೀತಗಳ ಪರಂಪರೆಗೆ ವೀರಶೈವ ಕವಿಗಳೇ ಮೂಲ ಕರ್ತೃಗಳು, ವೀರಶೈವ ಸಾಹಿತ್ಯದಲ್ಲಿ ಅವುಗಳಿಗೆ ‘ಸ್ವರವಚನ’ವೆಂಬ ಅನ್ವರ್ಥಕ ಅಭಿಧಾನ ಒಪ್ಪುತ್ತದೆ. ಶಿವಶರಣರು ವಚನ ಸಾಹಿತ್ಯವನ್ನಲ್ಲದೆ ಈ ಅನುಭವ ಗೀತೆಗಳನ್ನು ಹಾಡಿ ಶಿವನೊಲುಮೆಯನ್ನು ಪಡೆದಿದ್ದಾರೆ. ಈ ಪರಂಪರೆಯನ್ನು ತಮ್ಮ ಅನುಭಾವ ಮತ್ತು ಸಂಗೀತ ಪ್ರತಿಭೆಯಿಂದ ಅಚ್ಚಳಿಯದೆ ಉಳಿಸಿ ಬೆಳೆಸಿದ ಶ್ರೇಯಸ್ಸು  ಶ್ರೀ ನಿಜಗುಣ ಶಿವಯೋಗಿಗಳವರದು. ಹರಿದಾಸರ ಕೀರ್ತನಗಳಿಗೂ ಕನ್ನಡ ಗೀತ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವಿದೆ.ಅನನ್ಯ ಭಾವದಿಂದ ದೇವನ ನಾಮವನ್ನು ಹಾಡುವದೂ ಭಕ್ತಿಯ ಒಂದು ಪ್ರಕಾರವಾಗಿದೆ. ‘ವಚನದಲ್ಲಿ ನಾಮಾಮೃತ ತುಂಬಿ’ ಎಂಬ ಬಸವಣ್ಣನವರ ವಚನ ಭಕ್ತಿಗೀತಗಳ ಮಹತಿಯನ್ನು ಒತ್ತಿ ಹೇಳುವಂತಿದೆ. ಕರ್ನಾಟಕವು ಕಲೆಗಳಿಗೆ ತವರು ಮನೆಯಾಗಿದೆ. ಸಂಗೀತಕಲೆಗೂ ಕರ್ನಾಟಕವೆ ಜನ್ಮಭೂಮಿ. ಎಲ್ಲ ಗಾಯಕರೂ ಮೊದಲು ವಾತಾಪಿ (ಬದಾಮಿ)ಯ ಗಣಪತಿಯನ್ನೇ ಪ್ರಾರ್ಥಿಸುವ ಸಂಪ್ರದಾಯ ಸನಾತನವಾಗಿ ನಡೆದು ಬಂದಿದೆ. ಶ್ರೀ ನಿಜಗುಣ, ತ್ಯಾಗರಾಜ ಮತ್ತು ಕನಕದಾಸ ಮೊದಲಾದ ಯೋಗಿಗಳ ಮತ್ತು ಸಂತರ ಭಕ್ತಿ ರಸಪೂರ್ಣವಾದ ಪದಗಳು ಪ್ರತಿಯೊಬ್ಬ ಗಾಯಕನ ಕಂಠದಿಂದ ಇಂದಿಗೂ ಕೇಳಿ ಬರುತ್ತಿವೆ.

ಭಾರತೀಯ ಸಂಗೀತದಲ್ಲಿ ಔತ್ತರೇಯ (ಹಿಂದುಸ್ತಾನಿ) ಮತ್ತು ದಕ್ಷಿಣಾದಿ (ಕರ್ನಾಟಕ) ಎಂದು ಎರಡು ಪದ್ಧತಿಗಳಿವೆ. ಈ ಸಂಪ್ರದಾಯಗಳಲ್ಲಿ ಶಾಸ್ತ್ರೀಯವಾಗಿ ವ್ಯತ್ಯಾಸಗಳಿವೆಯಾದರೂ ಕಲಾತ್ಮಕವಾಗಿ ಭೇದವಿಲ್ಲ. ಉಭಯ ಗಾನದಿಂದ ರಸಿಕನು ಸಮಾನವಾದ ರಸಾನುಭವವನ್ನು ಪಡೆಯಬಹುದು.ಕಲ್ಲುಸಕ್ಕರೆಯ ಯಾವ ಭಾಗವನ್ನು ಆಸ್ವಾದಿಸಿದರೂ ಅದು ಸವಿಯಾಗಿಯೇ ಸುಮಧುರವಾಗಿಯೆ ಇರುವಂತೆ ಭಾರತೀಯ ಗಾನದ ಯಾವ ಪದ್ಧತಿಯನ್ನೂ ಆಲಿಸಿದರೂ ಆನಂದದಾಯಕವೆ. ಯಾವುದೇ ಪದ್ಧತಿಯನ್ನು ಅನುಸರಿಸಲಿ, ಗಾಯಕನಿಗೆ ಮಧುರಕಂಠ ಅನಿವಾರ್ಯ. ಕಂಠ ಮಾಧುರ್ಯ ಗಾಯಕನ ದೈವದತ್ತವಾದ ದೇಣಿಗೆ, ಜೊತೆಗೆ ವಿದ್ವತ್ ಪ್ರತಿಭೆಯೂ ಬೇಕು. ಹಿಂದುಸ್ತಾನಿ ಸಂಗೀತಜ್ಞರು ಧ್ವನಿಯ ಮಾಧುರ್ಯಕ್ಕೆ ವಿಶೇಷ ಗಮನಕೊಡುತ್ತಾರೆ. ಕರ್ನಾಟಕೀಯ ಗಾಯಕರು ವಿದ್ವತ್ತಿಗೆ ಹೆಚ್ಚಿನ ಮನ್ನಣೆಯನ್ನು ಕೊಡುತ್ತಾರೆ. ಅಂದರೆ, ದಾಕ್ಷಿಣಾತ್ಯರಿಗೆ ಮಧುರವಾದ ಕಂಠ ಹಾಗೂ ಔತ್ತರೇಯರಿಗೆ ವಿದ್ವತ್ತು ಇಲ್ಲವೆಂಬ ಭಾವವಲ್ಲ. ಎಷ್ಟೋ ಕರ್ನಾಟಕೀಯ ಸಂಗೀತಜ್ಞರು ತಮ್ಮಲ್ಲಿ ಅಷ್ಟೊಂದು ಕಂಠ ಮಾಧುರ್ಯವಿರದಿದ್ದರೂ ವಿದ್ವತ್ ಪ್ರತಿಭೆಯಿಂದಾಗಿ ವಿದ್ವಾಂಸರ ಮನ್ನಣೆಗೆ ಪಾತ್ರರಾಗುತ್ತಾರೆ, ರೀಜಿಸಿಕೊಳ್ಳುತ್ತಾರೆ. ಅದೇ ಪ್ರಕಾರ, ಹಿಂದುಸ್ತಾನಿ ಸಂಗೀತದ ಗವಾಯಿಯು ಶಾಸ್ತ್ರೀಯವಾಗಿ ಪಳಗಿರದಿದ್ದರೂ ಮಧುರವಾದ ಧ್ವನಿಯಿಂದ ಪರಿಪೂರ್ಣನಾಗಿ, ಆ ಶ್ರುತಿಯಲ್ಲಿಯೇ ತನ್ಮಯತೆಯನ್ನು ತಾಳಿ ನಿಂದು ನಾದಾನುಸಂಧಾನಿಯಾಗಿ ಶೋತೃಗಳೆಲ್ಲರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಾನೆ. ಯಾವುದೇ ಗಾಯಕನಾಗಲಿ ಅವನು ಸಂಗೀತ ಪ್ರಪಂಚದಲ್ಲಿ ಗಣ್ಯತೆ ಪಡೆಯಲು ಸಾಧನೆಯನ್ನು ಮಾಡಿ ಪ್ರತಿಭೆಯನ್ನು ಶಕ್ತಿಯನ್ನು ಗಳಿಸಲೇಬೇಕು.

ಅದೊಂದು ಸಮಯ. ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಧಾರ್ಮಿಕ ಕ್ರಾಂತಿಯ ಪತಾಕೆಯು ನಾಡಿನ ತುಂಬೆಲ್ಲ ತನ್ನದೆ ಆದ ಆತ್ಮಶಕ್ತಿಯ ಪ್ರಭಾವದಿಂದ ಹಾರಾಡುತ್ತಲಿತ್ತು.ಶ್ರೀಗಳು ಖಿಲವಾಗಿದ್ದ ಸಮಾಜದ ಪರಿಪೂರ್ಣ ಪ್ರಗತಿಯತ್ತ ತಮ್ಮ ಕೃಪಾದೃಷ್ಟಿಯನ್ನಿಟ್ಟಿದ್ದರು. ಅವರ ಆ ದೃಷ್ಟಿಯಲ್ಲಿ ವೈಶಿಷ್ಟ್ಯವಿತ್ತು. ವೈಶಾಲ್ಯವಿತ್ತು; ಜನತೆಯ ಬರಿದಾದ ಬಾಳಿಗೆ ಬೆಳಗನ್ನು ಕೊಡುತ್ತಲಿತ್ತು.ಅವರ ಉದಾತ್ತ ಉಪದೇಶಗಳ ಸಾಮರ್ಥ್ಯದಿಂದ ಜನಾಂಗವೇ ಚೇತರಿಸಿಕೊಂಡು ಏಳುವಂತಾಯಿತು.

ಶ್ರೀಗಳವರಿಗೆ ಸಂಗೀತ ಬಾರದೇ ಇದ್ದರೂ ಬಹುವಾಗಿ ಬಲ್ಲವರಾಗಿದ್ದರು. ಸರಾಗವಾಗಿ ಹಾಡುವ ಹಂಬಲವಿಲ್ಲದಿದ್ದರೂ ; ಸುಖವಾಗಿ ಸರಸವಾಗಿ ಹಾಡುವ ಗಾಯಕರಿಂದ ಕೇಳುವ ಅಭಿರುಚಿ ಇತ್ತು. ಹೊಸ ಹೊಸ ರಾಗಗಳಲ್ಲಿ ಭಾವ ಗೀತೆಗಳನ್ನು ರಚಿಸಿರುವುದು ಅವರ ನಾದಾನುಸಂಧಾನವನ್ನು ಸಂಗೀತ ಪ್ರೇಮವನ್ನುಸೂಚಿಸುತ್ತದೆ. ಅವರ ಪ್ರಾರ್ಥನೆಯ ಪ್ರತಿಯೊಂದು ಪದ್ಯವೂ ಭಾವಗರ್ಭಿತವಾಗಿದೆ, ನೀತಿಯುಕ್ತವಾಗಿದೆ, ಸಂಗೀತಮಯವಾಗಿದೆ. ಅವರ ಗೀತಗಳು ಇಂದಿನ ಜನಾಂಗಕ್ಕೆ ದಾರಿದೀಪಗಳಾಗಿವೆ, ಧ್ವನಿಮುದ್ರಿಕೆಗಳಾಗಿವೆ.ವಿರಾಗಿ ಶ್ರೀಗಳವರಿಗೆ ಸಂಗೀತದಲ್ಲಿ ಸಂಪೂರ್ಣ ಅನುರಾಗವಿದ್ದಿತು. ಸಂಗೀತ ಕಲಾಭಿವೃದ್ಧಿಗೆ ಅವರು ಮಾಡಿದ ಸಹಾಯ ಸಂಪತ್ತಿಸಣ್ಣದಲ್ಲ. ಭಾರತೀಯ ಕಲೆಗಳ ಪುನರುದ್ಧಾರವಾಗಬೇಕು, ಪ್ರಚಾರವಾಗಬೇಕೆಂದು ಶ್ರೀಗಳು ಅಹೋರಾತ್ರಿ ಕಾರ್ಯಮಾಡಿದ ಕಲಾಭಿಮಾನಿಗಳು.

ಶ್ರೀ ಕುಮಾರ ಮಹಾಸ್ವಾಮಿಗಳವರು ಹಾನಗಲ್ಲ ತಾಲೂಕಿನಲ್ಲಿ ಭಿಕ್ಷೆಗೆಂದು ದಯಮಾಡಿಸಿದ್ದರು.ಕಾಡಶೆಟ್ಟಿಹಳ್ಳಿಯ ಹಿರಿಯಮಠದ ಅಯ್ಯಪ್ಪನವರು ಇಬ್ಬರು ಹುಟ್ಟು ಕುರುಡ ಮಕ್ಕಳನ್ನು ಕರೆದುಕೊಂಡು ಶ್ರೀಗಳವರ ಸನ್ನಿಧಾನಕ್ಕೆ ಬಂದರು; ದೀರ್ಘದಂಡ ನಮಸ್ಕಾರ ಮಾಡಿ “ಬುದ್ದಿ, ಈ ಕುರುಡ ಮಕ್ಕಳನ್ನು ಸಲುಹುವ ಶಕ್ತಿ ನನಗೆ ಸಾಲದು. ನಾನೊಬ್ಬ ಬಡಪಾಯಿ ಜಂಗಮ, ತಾವು ಈ ನಿರ್ಭಾಗ್ಯ ಮಕ್ಕಳ ಮೇಲೆ ದಯೆತೋರಿ ರಕ್ಷಿಸಬೇಕು’ ಎಂದು ದೈನ್ಯದಿಂದ ಬೇಡಿಕೊಂಡರು. ದೀನರ ದುಃಖವನ್ನು ಕಂಡು ದಯಾಳು ಶ್ರೀಗಳವರ ಮನಸ್ಸು ಬಿಸಿಗೆ ತಾಕಿದ ಬೆಣ್ಣೆಯಂತೆ ಕರಗಿ ಹೋಗುತ್ತಿತ್ತು, ಸಮಯೋಚಿತವನ್ನರಿತು ಸಹಾಯ ಸಹಕಾರಗಳನ್ನು ನೀಡುತ್ತಲಿತ್ತು. ಇದು ಸ್ವಾಮಿತ್ವದ ಲಕ್ಷಣ. ಶ್ರೀಗಳವರು ಆ ಜನ್ಮಾಂಧ ಕಂದರನ್ನು ಮುಂದಕ್ಕೆ ಕರೆದು ವಾತ್ಸಲ್ಯದಿಂದ ಮೈದಡವಿ ಹಾಡಿಸಿ ನೋಡಿದರು; ಅವರ ಇಂಪಾದ ಹಾಡನ್ನು ಕೇಳಿ ಹರುಷಿತರಾದರು. ಇಬ್ಬರೂ ಚೆನ್ನಾಗಿ ಹಾಡುತ್ತಾರೆ. ಇವರಿಗೆ ಒಳ್ಳೆಯ ಭವಿಷ್ಯವಿದೆ. ಇವರು ಭಾಗ್ಯವಂತರು.ಇವರನ್ನು ನಮಗೆ ಒಪ್ಪಿಸಿಬಿಡು. ಚಿಂತಿಸುವದು ಬೇಡ.” ಎಂದು ಅಭಯವಿತ್ತರು. ಆ ಬಡ ಜಂಗಮಯ್ಯ ಮಕ್ಕಳನ್ನು ನಿರ್ಭಾಗ್ಯರೆಂದು ಬಗೆದಿದ್ದರು; ಆದರೆ ಕೃಪಾಳು ಶ್ರೀಗಳವರದೃಷ್ಟಿಯಿಂದ ಅವರು ಪುಣ್ಯವಂತ ರಾಗಿರುವದನ್ನು ಕಂಡು ಅಚ್ಚರಿಪಡುವಂತಾಯಿತು.

ಹಣ್ಣಿನ ಗುಣವನ್ನು ಹೀಚಿನಲ್ಲಿಯೆ ಗುರುತಿಸುವಂತೆ ಶ್ರೀಗಳವರು ಆ ಅನಾಥ ಕುಮಾರರ ಭಾವಿ ಜೀವನದ ರೂಪುರೇಷೆಯನ್ನು ತಮ್ಮ ದಿವ್ಯದೃಷ್ಟಿಯಲ್ಲಿ ಕಂಡುಕೊಂಡರು. ಕಣ್ಣಿಲ್ಲದಿದ್ದರೂ ಆ ಬಾಲಕರಿಗೆ ಮಂಜುಳವಾದ ಕಂಠವಿತ್ತು. ಅವರನ್ನು ತಮ್ಮ ಖಾಸಾ ಪರಿವಾರಕ್ಕೆ ಸೇರಿಸಿಕೊಂಡರು; ಅವರ ಸಂಗೀತವಿದ್ಯಾಭ್ಯಾಸಕ್ಕೆ ಪ್ರಾರಂಭಿಸಿದರು. ಅವರಿಬ್ಬರ ಸಂಗೀತಾಭಿರುಚಿಯನ್ನು ಎಳೆಯ ವಯಸ್ಸಿನಲ್ಲಿಯೇ ಕಂಡು ಶ್ರೀಗಳವರೆಗೆ ತುಂಬಾ ಸಂತೋಷವೆನಿಸಿತು. ಅವರ ಹೆಚ್ಚಿನ ಸಂಗೀತ ವಿದ್ಯೆಯ ವ್ಯಾಸಂಗಕ್ಕೆ ಉದಾರ ಸಹಾಯ ನೀಡಿ ಕರ್ನಾಟಕ ಸಂಗೀತವನ್ನು ಹೇಳಲು ನುರಿತ ಶಿಕ್ಷಕರೊಬ್ಬರನ್ನು ನೇಮಿಸಿದರು. ಅವರಿಬ್ಬರು ಲವಕುಶರಂತೆ ಜೊತೆಯಾಗಿ ಶ್ರೀಗಳವರ ಕೃಪಾಛತ್ರದಲ್ಲಿ ನಕ್ಕು ನಲಿದು ಸಂಗೀತ ಪಾಠವನ್ನು ಕಲಿಯುತ್ತಿದ್ದರು.ದುರ್ದೈವದಿಂದ ಹಿರಿಯ ಬಾಲಕನು ತೀರಿಕೊಂಡನು. ಶ್ರೀಗಳವರು ಕುಮಾರನ ಅಕಾಲ ಮೃತ್ಯುವನ್ನು ನೆನೆದು ಬಹಳ ದುಃಖಿಸಿದರು. ಉಳಿದ ಕುಮಾರನಿಗೆ ಸರಿಯಾದ ಶಿಕ್ಷಣದ ವ್ಯವಸ್ಥೆಯನ್ನು ಮಾಡಿಸಿದರು. ಅವನು ಭಾರತಕ್ಕೆ ಹೆಸರಾಂತ ಗಾಯನ ವಿಶಾರದನಾಗಬೇಕು. ಅವನಿಂದ ನಾಡಿನಲ್ಲಿ ಸಂಗೀತ ವಿದ್ಯೆಯ ಉದ್ಧಾರ ವಾಗಬೇಕು, ಪ್ರಸಾರವಾಗಬೇಕೆಂಬ ಕನಸನ್ನು ಕಟ್ಟಿದ್ದರು. ಅದಕ್ಕಾಗಿ ಪಂಚಾಕ್ಷರಯ್ಯನವರಿಗೆ ಮಿರ್ಜಿಯ ನೀಲಕಂಠ ಬುವಾ ಅವರಲ್ಲಿಯೂ ಹಿಂದುಸ್ತಾನಿ ಸಂಗೀತದ ಕ್ರಮವರಿತ ಶಿಕ್ಷಣವನ್ನು ಕೊಡಿಸಿದರು. ಅದಕ್ಕೂಪೂರ್ವದಲ್ಲಿ ಶಿರಿಯಾಳಕೊಪ್ಪದ ಪಂ. ಗದ್ದಿಗೆಯ್ಯ ಗವಾಯಿಗಳವರಲ್ಲಿ ಕರ್ನಾಟಕ ಸಂಗೀತದ ಶಿಕ್ಷಣಕ್ಕೆ ಏರ್ಪಾಡು ಮಾಡಿದ್ದರು. ಹೀಗೆ ಶ್ರೀಗಳವರ ಕೃಪೆಯಿಂದ ಪಂಚಾಕ್ಷರಯ್ಯನವರು ಉಭಯ ಸಂಗೀತವಿಶಾರದರಾದರು. ಶ್ರೀಗಳವರು ಅವರ ಶಿಕ್ಷಣಕ್ಕಾಗಿ ೧೫ ಸಾವಿರ ರೂಪಾಯಿಗಳನ್ನು ಅಂದಿನ ಕಾಲದಲ್ಲಿ ವಿನಿಯೋಗಿಸಿದ್ದು ಸಣ್ಣ ಸಾಹಸವಲ್ಲ, ಸಾಮಾನ್ಯರ ಶಕ್ತಿಯಲ್ಲ.

ಶ್ರೀಗಳವರ ಅಪ್ಪಣೆಯಂತೆ ಶ್ರೀ ಪಂಚಾಕ್ಷರ ಗವಾಯಿಗಳು ಆಜನ್ಮ ಬ್ರಹ್ಮಚಾರಿಗಳಾಗಿ ಪೂಜಾನಿಷ್ಠರಾಗಿ ಉಳಿದರು. ಪೂಜ್ಯರ ಮಾರ್ಗದರ್ಶನದಂತೆ ಸಂಗೀತದ ಪ್ರಸಾರ ಕಾರ್ಯವನ್ನು ಕೈಕೊಂಡು ಶ್ರೀ ಗವಾಯಿಗಳು ಇಡಿಯ ನಾಡಿನ ಮೂಲೆ ಮೂಲೆಯಲ್ಲಿ ಸಂಚರಿಸಿದರು. ಶಿವಯೋಗಮಂದಿರದಲ್ಲಿ ಸಂಗೀತ ಮಹಾವಿದ್ಯಾಲಯ’ ಅವರಿಂದಲೇ ಸ್ಥಾಪಿತವಾಗಿತ್ತು. ಸಂಚಾರಿ ಪಾಠಶಾಲೆ ಬೇರೆ. ಅವರೊಂದಿಗೆ ಯಾವಾಗಲೂ ೨೫-೩೦ ಕುರುಡ ವಿದ್ಯಾರ್ಥಿಗಳು ಸಂಗೀತ ಪಾಠವನ್ನು ಕಲಿಯಲು ಇರುತ್ತಿದ್ದರು. ಸಂಗೀತ ವಿದ್ಯೆಯನ್ನು ಜಾತಿ-ಮತ-ಪಂಥಗಳ ಭೇದಭಾವನೆಯಿಲ್ಲದೆ ಎಲ್ಲರಿಗೂ ಉಚಿತವಾಗಿ ಕೊಟ್ಟು ನಾಡ ನುಡಿಯ ಸೇವೆಮಾಡಬೇಕೆಂದು ಶ್ರೀಗಳವರ ಕಟ್ಟಪ್ಪಣೆಯಾಗಿತ್ತು. ಅದನ್ನು ಶ್ರೀ ಗವಾಯಿಗಳು ಕೊನೆಯ ವರೆಗೂ ಪಾಲಿಸಿದರು. ಅದೇ ಆದರ್ಶವನ್ನು ಇಟ್ಟುಕೊಂಡು ಅವರೇ ಗದಗಿನಲ್ಲಿ ಸ್ಥಾಪಿಸಿದ ‘ಸಂಗೀತ ವಿದ್ಯಾಲಯ’ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದಿಗೂ ಸರಾಗವಾಗಿ ನಡೆಯುತ್ತಿರುವುದಕ್ಕೆ ಶ್ರೀಗಳವರ ಅನುಗ್ರಹವೇ ಕಾರಣ.

ಶ್ರೀ ಪಂಚಾಕ್ಷರ ಗವಾಯಿಗಳವರ ಪ್ರತಿಭೆ ನಾಡಿನ ತುಂಬೆಲ್ಲ ಬೆಳಗಿತು. ಭಾರತದಲ್ಲೆಲ್ಲ ಅವರ ಜಯಭೇರಿಯನ್ನು ಅವರ ನೂರಾರು ಜನ ಶಿಷ್ಯರು ಮೊಳಗಿಸಿದರು. ಶ್ರೀ ಗವಾಯಿಗಳು ‘ಉಭಯಗಾನಾಚಾರ್ಯ’ರೆಂದು ನಾಡಿನ ಎಲ್ಲ ವಿದ್ವಾಂಸರಿಂದ ಕಲಾ ಪ್ರೇಮಿಗಳಿಂದ ಪ್ರಶಸ್ತಿ ಮನ್ನಣೆಗಳನ್ನು ಪಡೆದು ಪರಮಪೂಜ್ಯ ಶ್ರೀಗಳವರ ಕೀರ್ತಿಯನ್ನು ದಿಗಂತವಾಗಿ ಒಯ್ದರು ; ಶ್ರೀಗಳವರ ಕನಸನ್ನು ನನಸಾಗಿಸಿದರು. ಈಗ ಕನ್ನಡ ನಾಡಿನಲ್ಲಿ ಹಿಂದುಸ್ತಾನಿ ಸಂಗೀತದ ಪ್ರಸಾರವಾಗಿರುವದಕ್ಕೆ ಅವರೇ ಕಾರಣರು. ಅವರ ಕೈಯಲ್ಲಿ ಪಳಗಿದ ಹಲವಾರು ಪ್ರತಿಭಾವಂತ ಕಲೆಗಾರರು ಸಂಗೀತವಿದ್ಯೆಯ ಬಗೆಗೆ ಜನತೆಯಲ್ಲಿ ಗೌರವವನ್ನು ಅಭಿರುಚಿಯನ್ನು ಹುಟ್ಟಿಸಿದ್ದಾರೆ; ಸಂಗೀತ ಕಲೆಯ ಪಾವಿತ್ರ್ಯವನ್ನು ಉಳಿಸಿಕೊಂಡು ಬಂದಿದ್ದಾರೆ. ಇದಕ್ಕೆಲ್ಲ ಪರಮಪೂಜ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಸಂಗೀತ ಸಂಪ್ರೀತಿಯೆ ಕಾರಣವಾಯಿತು.

Related Posts