“ನಾದ”

ಲೇಖಕರು : ಶ್ರೀ ರಾಮೇಶ್ವರ ಬಿಜ್ಜರಗಿ ಸೊಲ್ಲಾಪುರ

( ಈ ಲೇಖನ ಮುಖ್ಯ ಉದ್ದೇಶವೇನೆಂದರೆ  ಸಂಗೀತದಲ್ಲಿ ಬರುವ ಪದಗಳ ಅರ್ಥ ತಿಳಿದುಕೊಳ್ಳುವದಾಗಿದೆ. ಚಿಕ್ಕ ಮಕ್ಕಳ ಸಂಗೀತ ಸ್ಪರ್ಧೆಯನ್ನು ದೂರ ದರ್ಶನದಲ್ಲಿ ವೀಕ್ಷಿಸುವಾಗ ಪರೀಕ್ಷಕರು ಏನಾದರೊಂದು ತಿದ್ದುಪಡೆ ಸೂಚಿಸುತ್ತಾರೆ. ಆಗ ನಮಗೆ ಸಂಗೀತದಲ್ಲಿ ಉಪಯೋಗಿಸಲಾಗುವ ಪದಗಳ ಅರ್ಥ ತಿಳಿಯುವದಿಲ್ಲ  “ಸ್ವಲ್ಪಮಟ್ಟಿಗದರೂ ಇದನ್ನು ತಿಳಿದುಕೊಳ್ಳಬೇಕೆಂಬ” ನಿರ್ಧಾರದಿಂದ ಸ್ವಲ್ಪಮಟ್ಟಿಗೆ  ಲೇಖಕರು ಸಂಗ್ರಹಿಸಿರುವರು . ಧ್ಯಾತ್ಮದಲ್ಲಿಯೂ ಈ ನಾದದ ಮಹತ್ವವಿರುವುದನ್ನು ತಿಳಿದುಕೊಂಡೆ. ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಬಯಕೆಯೂ ಲೇಖಕರಿಗಿದೆ)

ಅಸಂಖ್ಯ ಗ್ರಹಗಳು ಮತ್ತು ಅಗಣಿತ ತಾರೆಗಳನ್ನೊಳಗೊಂಡ ಈ ಜಗತ್ತಿಗೆ ನಾದವೇ ಮೂಲ ಕಾರಣ. ಅಚೇತನನಾದ ಶಿವನಿಗೆ ಜಗ ನಿರ್ಮಾಣಮಾಡಬೇಕೆಂಬ  ಕಲ್ಪನೆ ತಲೆದೋರಿದಾಗ ಸೂಕ್ಷ್ಮ ಕಂಪನ ಉತ್ಪನ್ನವಾಯಿತು. ಆ ಕಂಪನದಿಂದ ಓಂಕಾರ ನಾದ ಹುಟ್ಟಿತು. ಆ ಓಂಕಾರ ನಾದವೆ ಜಗ ನಿರ್ಮಾಣಕ್ಕೆ ಕಾರಣವಾಯಿತು. ಈ ಓಂಕಾರ ನಾದವು ಅ ಉ ಮ ಅಕ್ಷರಗಳನ್ನೊಳಗೊಂಡಿದೆ. “ಅ” ವು ಶಿವನ ಪ್ರತಿಕವಾದರೆ  “ಮ”  ಶಕ್ತಿಯ ಪ್ರತೀಕವಾಗಿದ್ದು  “ಉ” ಈ ಶಿವ ಶಕ್ತಿಯರ ಸಂಪುಟ ವಾಗಿದೆ. ಈ ಶಿವ ಶಕ್ತಿಯರ ಸಂಪುಟದಿಂದ ಉತ್ಪನ್ನವಾದುದೆ ಓಂಕಾರ ನಾದ. ಇದರಿಂದ ಜಗವೆಲ್ಲ ನಾದಾತ್ಮಕ ವಾಗಿದೆ. ಅದು ಪರಂಜ್ಯೋತಿಯಾಗಿದ್ದು ಪರಬ್ರಹ್ಮಸ್ವರೂಪವಾಗಿದೆ.

ನಾದವೆಂದರೆ ಇಂಪಾದ ಧ್ವನಿ. ಧ್ವನಿಯಲ್ಲಿ  ಸಂಗೀತಮಯ ಧ್ವನಿ(Musical sound) ಮತ್ತು ಅಸಂಗೀತಮಯ ಧ್ವನಿ (Non musical sound) ಎಂಬ ಎರಡು ಪ್ರಕಾರಗಳು. ಅಸಂಗೀತಮಯ ಧ್ವನಿ ಕರ್ಕಶವಾಗಿದ್ದು ಇದನ್ನು ಯಾರೂ ಪ್ರೀತಿಸುವದಿಲ್ಲ. ಸಾಮಾನ್ಯವಾಗಿ ಸಂಗೀತಮಯ ಧ್ವನಿಯೇ ನಾದವೆನಿಸುತ್ತದೆ.   ನಾದವಿಲ್ಲದೆ ಗೀತೆ, ಸ್ವರ, ರಾಗ ಇತ್ಯಾದಿ ಯಾವುದೂ ಸಾಧ್ಯವಿಲ್ಲ.

ನಾದದಲ್ಲಿ ಎರಡು ವಿಧಗಳಿವೆ.

ಆಹಾತ.

ಅನಾಹತ.

ಆಹತ ನಾದ ಸಂಗೀತಕ್ಕೆ ಉಪಯುಕ್ತವಾಗಿದ್ದು ಅನಾಹತನಾದ ಸಂಗೀತಕ್ಕೆ ಉಪಯುಕ್ತವಾಗಿಲ್ಲ.

ಅನಾಹತ ನಾದ:

ಇದು ನಾಭಿ ಕಮಲದಲ್ಲಿ ಸ್ಥಿತವಾಗಿದ್ದು ಆಘಾತ ವಿಲ್ಲದೆ ಉತ್ಪನ್ನವಾಗುತ್ತದೆ. ಈ ನಾದವು ಜನ ಸಾಮಾನ್ಯರಿಗೆ ಕೇಳಿಸುವದಿಲ್ಲ.” ನಾದ ಬಿಂದು” ಉಪನಿಷತ್ತಿನಲ್ಲಿ ನಾದಾನುಸಂಧಾನವೆಂಬ ಕಠಿಣ ಸಾಧನೆಯ ವಿವರ ವಿದೆ.. ಈ ಸಾಧನೆ ಮಾಡಿದ ಸಿದ್ಧ ಪುರುಷರು ಮಾತ್ರ ಅನಾಹತ  ನಾದವನ್ನು ಕೇಳಬಹುದು. ಈ ಬಗ್ಗೆ ಪರಮ ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಒಂದು ತ್ರಿವಿಧಿ ಹೀಗಿದೆ.

ಕೇಳು ಕೇಳೆಲೆ ಮನವೆ l ನಾಲಿಗಿಲ್ಲದ ಗಂಟೆl

ಓಲೈಸಿ, ನಾದ- ಮಾಡುವದು, ಧರ್ಮದಿಂ-l

ದಾಲಿಸೈ, ಎನಿಸು, ಜಡೆಯೊಡೆಯ! l

ಎಲೆ ಮನವೆ ನಾಲಿಗೆ ಇಲ್ಲದ ಗಂಟೆ ಅಂದರೆ ಆಘಾತವಿಲ್ಲದೆ ಬಾರಿಸುವ ಗಂಟೆಯ  ನಾದವನ್ನು  ನಾನು ಕೇಳುವಂತೆ ಮಾಡು ಎಂದು  ಪ್ರಾರ್ಥಿಸಿದ್ದಾರೆ. ಇಲ್ಲಿ ಇನ್ನೂ ಒಂದು ಸಂಗತಿ ಅಂದರೆ ಧರ್ಮದಿಂದಾಲೈಸು ಅನ್ನುತ್ತಾರೆ ಅಂದರೆ ಲಕ್ಷ್ಯಕೊಟ್ಟು ಕೇಳು ಎಂದಾಗುತ್ತದೆ.

 ನಾಲಿಗೆ ಇಲ್ಲದ ಗಂಟೆ ನಾದ ಮಾಡಲು ಸಾಧ್ಯವೇ ಇಲ್ಲ. ಆದರೆ ಪೂಜ್ಯರು ಇಲ್ಲಿ ಹೇಳಿದ ನಾದಕ್ಕೆ ಗಂಟೆಯೇ ಬೇಕಾಗಿಲ್ಲ.! ಈ ಸಾಧನೆಯಲ್ಲಿ ಸಾಧಕನು ಪ್ರಶಾಂತವಾದ ಸ್ಥಳದಲ್ಲಿ ಸ್ಥಿರವಾಗಿ ಕುಳಿತು ತನ್ನ ಕಣ್ಣು, ಬಾಯಿ, ಕಿವಿ, ಮನಸ್ಸು ಅಂತರ್ಮುಖವಾಗಿಸಿ ಒಳಗಿನ ಧ್ವನಿ ಅಂದರೆ ಅಂತರ್ನಾದ ಕೇಳಲು ಪ್ರಯತ್ನಿಸಬೇಕು. ಸಾಧಕನ ಸಾಧನೆ ಮುಂದುವರೆದಂತೆ ಹಂತಹಂತವಾಗಿ ದಶವಿಧ ಅಂದರೆ ಹತ್ತು ಪ್ರಕಾರದ ನಾದಗಳು ಕೇಳಿಸುತ್ತವೆ. ಪ್ರಥಮದಲ್ಲಿ ಭ್ರಮರಿ ನಾದ ಅದಾದ ಮೇಲೆ, ವೀಣೆಯ ನಾದ, ಅದಾದಮೇಲೆ ಕ್ರಮೇಣ ಘಂಟಾ ನಾದ, ಭೇರಿ ನಾದ,ಮೇಘ ನಾದ , ಪ್ರಣವ ನಾದ, ದಿವ್ಯನಾದ, ಸಿಂಹನಾದ, ಶರಭ (ಒಂದು ಭಯನಕವಾದ ಪ್ರಾಣಿ)ನಾದ,ಮಹಾ ನಾದ. ಈ ದಶವಿಧ ನಾದಗಳನ್ನು ಕೇಳಿ ಸಾಧಕನು ಧನ್ಯನಾಗುತ್ತಾನೆ. ಈ ನಾದಗಳು ಧ್ಯಾನದ ಏಕಾಗ್ರತೆಯಲ್ಲಿ ಸಾಧಕನಿಗೊಬ್ಬನಿಗೇ ಕೇಳಿಸುತ್ತವೆ. ಅಕ್ಕಪಕ್ಕದವರಿಗೆ ಕೇಳಿಸುವದಿಲ್ಲ. ನಾದಸಾಧನೆಯಿಂದ ಅನೇಕ ಸಿದ್ಧಿಗಳು ಪ್ರಾಪ್ತವಾಗುತ್ತವೆ.

ಆಹತ ನಾದ.:

ಇದನ್ನು ಜನಸಾಮಾನ್ಯರು ಕೇಳಬಹುದಾಗಿದೆ.

ಇದೇ ಸಂಗೀತಮಯ ಧ್ವನಿ. ಇದರಲ್ಲಿ ಸ್ವರ ಉತ್ಪನ್ನವಾಗುತ್ತದೆ.

ಸ್ವರ:

ಯಾವುದನ್ನು ಕೇಳಿದಾಗ ಮನಸ್ಸು ಪ್ರಫುಲ್ಲಿತವಾಗುತ್ತದೋ ಅದು ಸ್ವರ ಅನಿಸುತ್ತದೆ.

ಸಂಗೀತದಲ್ಲಿ ಯಾವ ಶಬ್ದಕ್ಕೆ ನಿಶ್ಚಿತವಾದ ರೂಪವಿದೆ ಮತ್ತು ಅದರ ಕೋಮಲತೆ, ಅಥವಾ ತೀವ್ರತೆ ಅಥವಾ ಏರಿಳಿತಗಳನ್ನು ಕೇಳಿ ಸಹಜವಾದ ಅನುಭೂತಿಯಾಗುತ್ತದೆ ಅದು ಸ್ವರವೆನಿಸುತ್ತದೆ.

ಈ ಸ್ವರಗಳ ಕೋಮಲತೆ, ತೀವ್ರತೆ, ಮತ್ತು ಏರಿಳಿತಗಳ ಅನುಸಾರವಾಗಿ ಭಾರತೀಯ ಸಂಗೀತದಲ್ಲಿ ಏಳು ಸ್ವರಗಳನ್ನು ಗುರುತಿಸಲಾಗಿದೆ. ಅವುಗಳಾವವೆಂದರೆ,

ಷಡ್ಜ,ಋಷಭ,ಗಾಂಧಾರ,ಮಧ್ಯಮಾ,ಪಂಚಮ,

ಧೈವತ ಮತ್ತು ನಿಷಾದ.

ಸಾ, ರೇ, ಗ, ಮ, ಪ, ಧ, ನಿ.

ಸಂಗೀತ ಶಾಸ್ತ್ರದಲ್ಲಿ ಈ ಸ್ವರಗಳನ್ನು ಅವುಗಳ ಕಂಪನ ಸಂಖ್ಯೆಯ(ಕಂಪನ ಪಟ್ಟಿ) ಮೇರೆಗೆ ಅಳೆಯಲಾಗುತ್ತದೆ.

256 ಕಂಪನಗಳಾದರೆ ಷಡ್ಜ,

298 ಕಂಪನಗಳಾದರೆ ಋಷಭ,

320 ಕಂಪನಗಳಾದರೆ ಗಾಂಧಾರ,— ಹೀಗೆ

ಹೆಚ್ಚುತ್ತ ಹೋಗಿ ಕೊನೆಗೆ

480 ಕಂಪನಗಳಾದರೆ ನಿಷಾದ.

ಹೀಗೆ ಕಂಪನ ಹೆಚ್ಚಿಗೆ ಆದಂತೆ ಸ್ವರ ಏರುತ್ತ ಹೋಗುತಗದೆ. ಈ ಸ್ವರಗಳ ಸಂಖ್ಯೆ ಏಳು ಆಗಿರುವದರಿಂದ  ಆ ಸಮೂಹಕ್ಕೆ ” ಸಪ್ತಕ” ಎಂತಲೂ ಹೇಳುತ್ತಾರೆ.

ಈ ಸ್ವರಗಳು ಕಂಠದಿಂದ ಹೊರ ಬಂದರೂ ಬೇರೆ ಬೇರೆ ಸ್ಥಾನಗಳಲ್ಲಿ ಹುಟ್ಟುತ್ತವೆ.

ಮೊದಲನೆಯ ಸ್ವರ ಮೂಗು, ಕಂಠ, ಉರ (ಎದೆ), ಅಂಗಳ, ನಾಲಿಗೆ, ಮತ್ತು ಹಲ್ಲು ಈ ಆರು ಸ್ಥಳಗಳಲ್ಲಿ ಹುಟ್ಟುವಾದರಿಂದ ಅದಕ್ಕೆ ಷಡ್ಜ ಅನ್ನುತ್ತಾರೆ.ಎರಡನೆಯ ಸ್ವರ  ನಾಭಿಯಿಂದ ನೆತ್ತಿಯವರೆಗೆ ತಲ್ಪುವದರಿಂದ ಋಷಭ ಅನ್ನುತ್ತಾರೆ.

ಇದಲ್ಲದೆ ಪ್ರಾಚೀನ ಋಷಿಗಳಪ್ರಕಾರ ಈ ಸಪ್ತ ಮೂಲ ಸ್ವರಗಳಲ್ಲಿ ಒಂದೊಂದು ಬಣ್ಣ ಮತ್ತು ಹಕ್ಕಿ ಅಥವಾ ಪ್ರಾಣಿಗಳ ಕೂಗಿದೆ.

ಸಾ- ಹಸಿರು ಬಣ್ಣ ನವಿಲಿನ ಕೂಗು

ರೇ- ಕೆಂಪುಬಣ್ಣ,ಬಾನಾಡಿ (ಆಕಾಶದಲ್ಲಿ     ಹಾರಾಡುವ ಪಕ್ಷಿ)ಗಳ ಕೂಗು

ಗ- ಚಿನ್ನದ ಬಣ್ಣ,ಹಂಸ ಪಕ್ಷಿಯ ಕೂಗು.

ಮ- ಹಳದಿ ಮಿಶ್ರಿತ ಬಿಳಿ ಬಣ್ಣ ಮತ್ತು ಕ್ರೌoಚ ಪಕ್ಷಿಯ ಕೂಗು.

ಪ – ಕಪ್ಪು ಬಣ್ಣ ಮತ್ತು ಬುಲ್ ಬುಲ್ ಪಕ್ಷಿಯ ಕೂಗು.

ಧ- ಹಳದಿ ಬಣ್ಣ ಮತ್ತು ಕುದುರೆಯ ಕೂಗು.

ನಿ- ಎಲ್ಲ ಬಣ್ಣಗಳ ಸಮ್ಮೇಳ ಮತ್ತು ಆನೆ ಕೂಗು.

ಸಂಗೀತ

 ” ಔಚಿತ್ಯಪೂರ್ಣ ನಿರಂತರ ಗಾಯನವೇ ಸಂಗೀತ”ವೆನಿಸುತ್ತದೆ.

ಇನ್ನೂ ಒಂದು ಕಡೆಗೆ ” ಆಸಕ್ತಿ ಉತ್ಪನ್ನ ಮಾಡುವ ಸುವ್ಯವಸ್ಥಿತ ಧ್ವನಿಯೇ ಸಂಗೀತ’ ವೆನಿಸುತ್ತದೆ.ಎಂದು ಹೇಳಲಾಗಿದೆ.

ಗಾಯನ, ವಾದನ ಮತ್ತು ನೃತ್ಯ ಸೇರಿ ಸಂಗೀತವಾಗುತ್ತದೆಂದೂ ಹೇಳಲಾಗಿದೆ.

ಗಾಯನ ಮಾನವನಿಗೆ ಸ್ವಾಭಾವಿಕವಾಗಿ ಬರುತ್ತದೆ. ಬಹುಶಃ ಈ ಭೂಮಿಯಮೇಲೆ ಗಾಯನ ಮಾಡಲಾರದ ವ್ಯಕ್ತಿ ( ಮೂಕನನ್ನು ಬಿಟ್ಟು) ಸಿಗಲಾರನೆನ್ನಬಹುದು.

ಸಾಮ ವೇದದಲ್ಲಿ ಸಂಗೀತ ಶಾಸ್ತ್ರವನ್ನು ಕುರಿತು ವಿಶ್ವದಲ್ಲಿಯೇ ಅತೀ ಪ್ರಾಚೀನವಾದ ಬರವಣಿಗೆ ಕಂಡು ಬರುತ್ತದೆ. ” ಬ್ರಹ್ಮ, ವಿಷ್ಣು, ಮಹೇಶ ಈ ತ್ರಿಮೂರ್ತಿಗಳು ಮೊದಲ ಸಂಗೀತಕಾರರು. ಶಿವನು ನಟರಾಜನ ರೂಪದಲ್ಲಿ ತಾಂಡವ ನೃತ್ಯ ಮಾಡುತ್ತ ಲಯಕ್ಕೆ ಕಾರಣನಾದ. ಬ್ರಹ್ಮ ತಾಳ ಬಡಿಯುತ್ತಿದ್ದರೆ ವಿಷ್ಣು ಮೃದಂಗ ನುಡಿಸುತ್ತಿದ್ದನಂತೆ. ಶಿವನ ಲಯಕ್ಕನುಗುಣವಾಗಿ ಅವರಿಬ್ಬರ ಸಂಗೀತ ಇರುತ್ತಿತ್ತು. ಸರಸ್ವತಿ ದೇವಿಯ ಕೈಯಲ್ಲಿರುವ ವೀಣೆ ಎಲ್ಲ ತಂತು ವಾದ್ಯಗಳಿಗೆ ಮಾತೃ ಎನಿಸಿದೆ. ವಿಷ್ಣು ಕೃಷ್ಣಾವತಾರದಲ್ಲಿ ಕೊಳಲಿನಿಂದ ಮಾಯೆಯ ಭ್ರಾoತಿಯಿಂದ ಅಲೆಯುತ್ತಿರುವ ಮಾನವರ ಆತ್ಮಗಳನ್ನು ತಮ್ಮ ವಾಸ್ತವ ನೆಲೆಗೆ ಹಿಂತಿರುವಂತೆ ಪರವಶ ಗೊಳಿಸುವ ಗಾನವನ್ನು ನುಡಿಸುತ್ತಾನೆ.

ರಾಗ:

ರಾಗವೆಂದರೆ ಸ್ವರಗಳನ್ನು ಒಂದು ವಿಶಿಷ್ಟ ಧ್ವನಿ ಸಮೂಹದಲ್ಲಿ ಹೊಂದಿಸುವದು. ಇದರಿಂದ ಕೇಳುವವನ ಮನ ಆನೊಂದುಲ್ಲಾಸ ಭರಿತ ವಾಗುತ್ತದೆ.

ಭಾರತೀಯ ಸಂಗೀತದಲ್ಲಿ ಮೂಲತಃ ಆರು ರಾಗಗಳಿವೆ. ಪ್ರತಿಯೊಂದು ರಾಗಕ್ಕೂ ಆರಾರು ರಾಗಿಣಿಯರು ಅಂದರೆ ಒಟ್ಟು ಮೂವತ್ತಾರು ರಾಗಿಣಿಯರು ಮತ್ತು ಆರಾರು ರಾಜಪುತ್ರರು ಇರುತ್ತಾರೆ.

ಈ ರಾಗಗಳನ್ನು ದಿನದ, ವರ್ಷದ ಅಥವಾ ಋತುವಿನ ವಿಶಿಷ್ಟ ಸಮಯದಲ್ಲಿ ನುಡಿಸಬೇಕು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಅವುಗಳಿಗೆ ಸಾಮರ್ಥ್ಯ ಕೊಡುವ ದೇವತೆಗಳು ಹೊಂದಿಕೊಳ್ಳುತ್ತಾರೆ.

1. ಹಿಂದೊಳ ರಾಗ:

ವಿಶ್ವಪ್ರೇಮ  ಭಾವ  ಉದ್ಬೋಧ ಗೊಳಿಸಲು ವಸಂತ ಋತುವಿನ ಆದಿಯಲ್ಲಿ ನುಡಿಸುತ್ತಾರೆ.

2. ದೀಪಕ ರಾಗ :

ದಯೆಯನ್ನು ಉದ್ದೀಪನ ಗೊಳಿಸಲು ಬೇಸಿಗೆಯಲ್ಲಿ ಸಂಜೆಯ ವೇಳೆಗೆ ನುಡಿಸಲ್ಪಡುತ್ತದೆ.

3. ಮೇಘ ರಾಗ:

ಧೈರ್ಯವನ್ನು ಆಹ್ವಾನಿಸಲು ಮಳೆಗಾಲದಲ್ಲಿ ನಡು ಹಗಳಲ್ಲಿ ಹಾಡುವ ರಾಗ.

4.ಭೈರವಿ ರಾಗ:

ಶಾಂತಿ ಸ್ಥಾಪಿಸಲು ಆಗಸ್ಟ್ , ಸಪ್ಟೆಂಬರ್, ಮತ್ತು ಅಕ್ಟೋಬರ್ ತಿಂಗಳಲ್ಲಿ ಪ್ರಾಥ:ಕಾಲ ಹಾಡುವ ರಾಗ.

5. ಶ್ರೀ ರಾಗ :

ಶುದ್ಧ ಪ್ರೇಮವನ್ನು ಪಡೆಯಲು ಶರತ್ ಋತುವಿನಲ್ಲಿ ಬೆಳಗಿನ ಸಮಯ ಹಾಡುವ ರಾಗ.

6. ಮಾಲ ಕಂಸ ರಾಗ:

ವೀರ್ಯಕ್ಕಾಗಿ ಚಳಿಗಾಲದ ನಡುರಾತ್ರಿ ಹಾಡುವ ರಾಗ.

 ತಾಲ:

ಸಂಗೀತವನ್ನು ವಿಶಿಷ್ಟ ಸಮಯದಲ್ಲಿ (time ) ಬಂಧಿಸುವದು. ಇದು ಸoಗೀತದಲ್ಲಿ ವ್ಯತಿತವಾಗುವ ಸಮಯವನ್ನು ಅಳೆಯುವ ಮಾಧ್ಯಮ ವಾಗಿದೆ.

ಲಯ:

ಎರಡು ಸ್ವರಗಳ ಮಧ್ಯದ ಅಂತರ. ಮತ್ತು ಹಾಡುವ ಗತಿ ಮತ್ತು ಏರಿಳಿತಗಳನ್ನು ನಿರ್ದೇಶಿಸುತ್ತದೆ.

ಗ್ರಂಥ ಋಣ

೧)ನಿಜಗುಣ ಶಿವಯೋಗಿಯ ಕೈವಲ್ಯ ಪದ್ಧತಿ

೨) ಜಡೆಯೊಡೆಯ ತ್ರಿವಿಧಿ

೩)ಅಂತರ್ಜಾಲ

೪) ಯೋಗ ಪ್ರತಿಪಾದನ ಸ್ಥಲ.ಗದ್ಯಾನುವಾದ ಡಾ. ಎಲ್.ಬಸವರಾಜು

Related Posts