ಡಾ. ಸಿ.ವಿ.ಪ್ರಭುಸ್ವಾಮಿಮಠ
ಅಲ್ಲಮಪ್ರಭು ಕನ್ನಡನಾಡಿನ ವಚನ ಚಳುವಳಿಯ ಫಲವಾಗಿ ಮೂಡಿಬಂದ ಧೀಮಂತ ಅನುಭಾವಿ ಮತ್ತು ಉನ್ನತ ತತ್ವಜ್ಞಾನಿ. ೧೨ನೇ ಶತಮಾನದಲ್ಲಿ ಬಾಳಿದ ಅಲ್ಲಮ ಪ್ರಭುವಿನ ಅಧಿಕೃತ ಚರಿತ್ರೆಯನ್ನು ತಿಳಿಸುವ ಒಂದೇ ಗ್ರಂಥ ಎಂಬುದಿಲ್ಲ. ಮುಖ್ಯವಾಗಿ ಅಲ್ಲಮನ ಚರಿತ್ರೆಯನ್ನು ಆತನನ್ನು ಕುರಿತು ರಚಿತವಾದ ಕಾವ್ಯಗಳಿಂದ, ಸ್ವತಃ ಅಲ್ಲಮನ ವಚನಗಳಿಂದ ಶೂನ್ಯಸಂಪಾದನೆಗಳಿಂದ ಜಾನಪದ ಕಾವ್ಯಗಳಿಂದ ತಿಳಿಯಬಹುದಾಗಿದೆ. ಕಾವ್ಯಗಳಲ್ಲಿ ಹರಿಹರನ ಸಂಪ್ರದಾಯ, ಚಾಮರಸನ ಸಂಪ್ರದಾಯ ಎಂದು ಪ್ರತ್ಯೇಕಿಸಿ ಗುರುತಿಸಲಾಗುತ್ತದೆ ಹರಿಹರನ ‘ಪ್ರಭುದೇವರ ರಗಳೆ’ ವಚನ ಚಳುವಳಿಗೆ ತುಂಬ ಸಮೀಪದಲ್ಲಿ ರಚಿತವಾದ ಕೃತಿಯಾದ್ದರಿಂದ ಅದು ಚರಿತ್ರೆಗೆ ಹೆಚ್ಚು ಸಮೀಪವಾದ ಕೃತಿಯೆಂದು ಗುರುತಿಸಲಾಗುತ್ತದೆ. ಚಾಮರಸನ ‘ಪ್ರಭುಲಿಂಗ ಲೀಲೆ’ ಅಲ್ಲಮನನ್ನು ಕುರಿತು ರಚಿತವಾದ ಸಾಂಕೇತಿಕ ತಾತ್ವಿಕ ಕಾವ್ಯ. ಇದೇ ಸಂದರ್ಭದಲ್ಲಿ ಪುರಾಣದೃಷ್ಟಿಗೆ ಎಳಂದೂರು ಹರೀಶ್ವರನ ‘ಪ್ರಭುದೇವ ಪುರಾಣ’ವನ್ನು ಹೆಸರಿಸಬಹುದಾಗಿದೆ.
ಇನ್ನು ‘ಶೂನ್ಯ ಸಂಪಾದನೆ’ ಸಂಪುಟಗಳು ವೀರಶೈವ ಧರ್ಮ ಒಂದು ಸಾಂಸ್ಥಿಕ ರೂಪವನ್ನು ಪಡೆಯುತ್ತಿರುವ ಸಂದರ್ಭದಲ್ಲಿ, ಅಲ್ಲಮನನ್ನು ಕೇಂದ್ರವ್ಯಕ್ತಿಯನ್ನಾಗಿಟ್ಟುಕೊಂಡು ಶೂನ್ಯತತ್ವವೊಂದನ್ನು ವಿಕಾಸಗೊಳಿಸಿದ ವಚನ ಸಂಪಾದನ ಕೃತಿಗಳು. ಇವುಗಳಲ್ಲದೆ ‘ಮಂಟೆಸ್ವಾಮಿಯ ಕಾವ್ಯ’ ಹಳ್ಳಿಗರ ಹಾಡುವಿನಂಥ ಜಾನಪದ ಕೃತಿಗಳು ಮತ್ತು ಇನ್ನೂ ಅನೇಕ ಕಾವ್ಯಭಾಗಗಳು, ಪುರಾಣಗಳು ಅಲ್ಲಮನ ವ್ಯಕ್ತಿತ್ವವನ್ನು ರೂಪಿಸಲು ಪ್ರಯತ್ನಿಸಿವೆ. ಸ್ವತಃ ಅಲ್ಲಮನ ವಚನಗಳು ಆತನ ಆಂತರಂಗಿಕ ವ್ಯಕ್ತಿತ್ವವು ವಿಕಾಸಗೊಂಡ ಬಗೆಯನ್ನು ಸೂಚಿಸುತ್ತವೆ.
ಮೇಲಿನ ಕೃತಿಗಳ ನೆರವಿನಿಂದ ಅಲ್ಲಮನ ಜೀವನ ಚರಿತ್ರೆಯ ಒಂದು ಸ್ಥೂಲವಾದ ಚಿತ್ರವನ್ನು ರೂಪಿಸಿಕೊಳ್ಳಬಹುದಾಗಿದೆ. ಅಲ್ಲಮನ ಜನ್ಮ ಬನವಾಸಿ ಪ್ರಾಂತಕ್ಕೆ ಸೇರಿದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಲ್ಲಿ. ಅದು ಕಾಳಾಮುಖ ಶೈವರ ದೊಡ್ಡ ಅಧ್ಯಾತ್ಮಿಕ ಕೇಂದ್ರವಾಗಿತ್ತು. ಹರಿಹರ ಅಲ್ಲಮನ ತಂದೆ ನಾಗವಾಸಾಧಿಪತಿಯಾಗಿದ್ದನೆಂದು ಹೇಳಿದರೆ ಚಾಮರಸ ಆತನ ತಂದೆ ತಾಯಿಗಳ ಹೆಸರುಗಳನ್ನು ಗುಣವಾಚಕವಾಗಿ ನಿರಹಂಕಾರ ಸುಜ್ಞಾನಿಯೆಂದು ಹೇಳುತ್ತಾನೆ ಆಧುನಿಕ ಸಂಶೋಧನೆ ಅಲ್ಲಮನು ನಟ್ಟುವರ ಜಾತಿಗೆ ಸೇರಿದವನೆಂದು ಗುರುತಿಸಿದೆ.
ಅಲ್ಲಮನು ತಾರುಣ್ಯಕ್ಕೆ ಬಂದಾಗ ಕಾಮಲತೆ ಎಂಬುವಳನ್ನು ಮೋಹಿಸಿ ಅವಳ ಅಕಾಲ ಮರಣದಿಂದ ವೈರಾಗ್ಯದತ್ತ ತಿರುಗಿದನೆಂದು ಹರಿಹರ ಹೇಳಿದರೆ ಚಾಮರಸನು ಮೋಹಿಸಿ ಬಂದ ಮಾಯಾದೇವಿಯನ್ನು ತಿರಸ್ಕರಿಸಿ ಮಾಯಾ- ಕೋಲಾಹಲನಾದನೆಂದು ಹೇಳುತ್ತಾನೆ. ಇನ್ನು ಆತನ ಗುರುವಾದ ಅನಿಮಿಷಯೋಗಿ ಗುಹೆಯಲ್ಲಿ ಜ್ಯೋರ್ತಿಲಿಂಗವನ್ನು ನೀಡಿದ ಬಗ್ಗೆ ಹರಿಹರ, ಚಾಮರಸ, ಸ್ವತಃ ಅಲ್ಲಮನ ವಚನಗಳಲ್ಲಿ ಉಲ್ಲೇಖ ದೊರೆಯುವುದಲ್ಲದೆ ಅನಂತರ ಅಲ್ಲಮನು ತನ್ನ ಕಠಿಣತಮ ಅಧ್ಯಾತ್ಮಿಕ ಸಾಧನೆಯಿಂದ ಉನ್ನತ ನೆಲೆಗೇರಿದ ಬಗೆಯು ತಿಳಿಯುತ್ತದೆ.
ಅಲ್ಲಮನು ಕೇವಲ ವೈಯಕ್ತಿಕವಾದ ಅಧ್ಯಾತ್ಮಿಕ, ಆನುಭವಿಕ ಸಾಧನೆಯಲ್ಲೇ ಮುಳುಗದೆ, ಲೋಕೋದ್ಧಾರದ ಕಾರ್ಯದಲ್ಲಿ ಮುಂದುವರಿದ ಬಗ್ಗೆ ಅವನ ವ್ಯಕ್ತಿತ್ವಕ್ಕೆ ಸಾಮಾಜಿಕ ಮುಖವೊಂದು ಇದ್ದ ಬಗ್ಗೆ ಅವನ ಸಂಪರ್ಕದಲ್ಲಿ ಬಂದು ತಮ್ಮ ವ್ಯಕ್ತಿತ್ವವನ್ನು ಉದ್ಧರಿಸಿಕೊಂಡ ವ್ಯಕ್ತಿಗಳ ಸಂದರ್ಭಗಳು ಸೂಚನೆಯನ್ನು ನೀಡುತ್ತವೆ. ಉದಾಹರಣೆಗೆ ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕ್ಷ, ಮಹಾದೇವಿಯಕ್ಕ, ಬಸವಣ್ಣನವರನ್ನು ಹೆಸರಿಸಬಹುದಾಗಿದೆ. ಲೋಕಕಲ್ಯಾಣವೇ ಮುಖ್ಯಗುರಿಯಾಗಿದ್ದ ಅಲ್ಲಮನು, ಬಳ್ಳಿಗಾವಿ. ಬನವಾಸಿ, ಸೊನ್ನಲಿಗೆ, ಕಲ್ಯಾಣ, ಕಾಶಿ, ಕೇದಾರ ಕ್ಷೇತ್ರಗಳನ್ನು ಸುತ್ತಿ ಕೊನೆಯಲ್ಲಿ ಶ್ರೀಶೈಲದ ಕದಳಿವನದಲ್ಲಿ ಕಣ್ಮರೆಯಾದಂತೆ ತಿಳಿಯುತ್ತದೆ.
ಅಲ್ಲಮಪ್ರಭುವಿನ ಲೋಕಕಲ್ಯಾಣದ ಕಾರ್ಯಕ್ರಮದಲ್ಲಿ ಅವನು ಕಲ್ಯಾಣದ ಅನುಭಾವಮಂಟಪದಲ್ಲಿ ನಿಂತು ಶರಣರೊಡನೆ ನಡೆಸಿದ ಅನುಭಾವಗೋಷ್ಠಿ ಮುಖ್ಯವಾದದ್ದು. ಅವರ ಅನೇಕ ವಚನಗಳ ಚಿಂತನೆಯ ಹಿನ್ನಲೆಯಲ್ಲಿ ಈ ಶಿವಾನುಭವಗೋಷ್ಠಿಯು ಕೆಲಸಮಾಡಿರುವುದನ್ನು ಗಮನಿಸಬಹುದಾಗಿದೆ. ಅಲ್ಲಮನ ವಚನಗಳ ಈ ಮುಖವನ್ನು ಪರಿಶೀಲಿಸುವ ಮೊದಲು ಸ್ಥೂಲವಾಗಿಯಾದರೂ ಅನುಭಾವವೆಂದರೇನು? ಭಾರತೀಯ ಅನುಭಾವ ಪರಂಪರೆಯು ಸಾಗಿಬಂದ ಅನುಭವಿಕ ಘಟ್ಟಗಳನ್ನು ಕುರಿತು ಸಂಕ್ಷೇಪದಲ್ಲಿ ಪ್ರಸ್ತಾಪಿಸುವುದು ಉಚಿತವೆಂದು ಕಾಣುತ್ತದೆ. ವಚನಗಳ ಸಂದರ್ಭದಲ್ಲಿ ಅನುಭಾವವೆಂದರೆ ಅದು ಆತ್ಮವಿದ್ಯೆ, ಇರುವಿನೊಳಗಿನ ಅರಿವು ಅದು ಇಂದ್ರಿಯಾತೀತವಾದ ಅನುಭವ’ ಎಂದು ಮುಂತಾಗಿ ಹೇಳಲಾಗುತ್ತದೆ. ಅನುಭಾವ ಪರಂಪರೆಗಳನ್ನು ೧) ಹಿಂದೂ ೨) ಕ್ರಿಶ್ಚಿಯನ್ ೩) ಸೂಫಿ ,೪) ಬೌದ್ಧ ಎಂದು ಗುರುತಿಸಲಾಗುತ್ತದೆ. ಈ ಅನುಭಾವ ಪರಂಪರೆಗಳು ಕೊನೆಯಲ್ಲಿ ಒಂದೇ ಕೇಂದ್ರದಲ್ಲಿ ಕೊನೆಗೊಳ್ಳುತ್ತವೆ ಎಂದೂ, ..ಇಲ್ಲ ಅವು ತಮ್ಮ ತಮ್ಮ ವಿಶಿಷ್ಟತೆಯೊಂದಿಗೆ ಬೇರೆ ಬೇರೆಯಾಗಿಯೇ ಉಳಿಯುತ್ತವೆ ಎಂದೂ ಕೆಳಗಿನಂತೆ ಗುರುತಿಸಲಾಗುತ್ತದೆ. ಅಭಿಪ್ರಾಯಗಳಿವೆ. ಭಾರತೀಯರಲ್ಲಿ ಅನುಭಾವ ಪರಂಪರೆಗಳ ಘಟ್ಟಗಳನ್ನು ಈ
೧) ವೇದಗಳ ಯಜ್ಞಗಳಿಂದ ರಹಸ್ಯ ತಿಳಿಯುವ ಪ್ರಯತ್ನ
೨) ಉಪನಿಷತ್ತುಗಳ ಕಾಲಕ್ಕೆ ಯಜ್ಞಗಳಿಂದ ದೊರೆಯುವ ಫಲ ಕ್ಷಣ ಭಂಗುರವೆಂದು ಶಾಶ್ವತ ಸುಖಸಾಧನೆಗೆ ಜ್ಞಾನಯಜ್ಞದ ಪ್ರತಿಪಾದನೆ
೩) ಭಗವದ್ಗೀತೆಯಲ್ಲಿ ಆತ್ಮನಿಂದ ಆತ್ಮನಲ್ಲಿಯೇ ಸಂತುಷ್ಟನಾಗುವ ಸ್ಥಿತಿ
ಇವಲ್ಲದೆ ಒಟ್ಟು ಭಾರತೀಯ ಶೈವ ಅನುಭಾವ ಪರಂಪರೆಯ ತಾತ್ವಿಕ ಚಿಂತನೆಗೆ ಪ್ರತಿಭಟನೆಯಾಗಿ ಅಲ್ಲಮನಲ್ಲಿ ಶರಣರ ಅನುಭಾವ ಪರಂಪರೆ ಪ್ರಾತಿನಿಧಿಕವಾಗಿ ರೂಪುಗೊಂಡಿರುವುದನ್ನು ಇತ್ತೀಚೆಗೆ ದಿವಂಗತ ಡಾ . ಡಿ.ಆರ್.ನಾಗರಾಜ ಅವರು ತಮ್ಮ “ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ” ಎಂಬ ಗ್ರಂಥದಲ್ಲಿ ಗುರುತಿಸಿದ್ದಾರೆ. ಇನ್ನು ಅಲ್ಲಮಪ್ರಭುವಿನ ವಚನಗಳ ಅಭಿವ್ಯಕ್ತಿ ಕ್ರಮವನ್ನು ಕುರಿತು ವಿವೇಚಿಸಿ, ಅನಂತರ ಪ್ರಾತಿನಿಧಿಕವಾಗಿ ಆತನ ಕೆಲವು ವಚನಗಳನ್ನು ವಿಶ್ಲೇಷಿಸಬಹುದಾಗಿದೆ. ಅಲ್ಲಮ ಪ್ರಭುವಿನ ವಚನಗಳು ಸಾಮಾನ್ಯವಾಗಿ ಅಂದು ಎಲ್ಲ ಶರಣರ ವಚನಗಳಂತೆ ಸ್ಥೂಲವಾಗಿ ಮೇಲುನೋಟಕ್ಕೆ ಕಂಡರೂ ಆತನ ವ್ಯಕ್ತಿ ವಿಶಿಷ್ಟವಾದ ಅಭಿವ್ಯಕ್ತಿ ಕ್ರಮವು ಆತನ ವಚನಗಳಲ್ಲಿರುವುದು ಕಂಡುಬರುತ್ತದೆ. ಅದನ್ನು ವಚನ ಪರಿಭಾಷೆಯಲ್ಲಿ “ಬೆಡಗು” ಎಂದು ಗುರುತಿಸಲಾಗುತ್ತದೆ. ಬೆಡಗು ಎಂದರೆ ಸೌಂದರ್ಯ, ಬೆರಗು, ಆಶ್ಚರ್ಯ, ವೈರುಧ್ಯಾತ್ಮಕ ಅಭಿವ್ಯಕ್ತಿ ಕ್ರಮ ಎಂದು ಗುರುತಿಸಲಾಗುತ್ತದೆ. ಈ ಬೆಡಗು ಕನ್ನಡ ವಚನ ಅಭಿವ್ಯಕ್ತಿಗೆ ವಿಶಿಷ್ಟವಾಗಿದ್ದರೂ, ಇದನ್ನು ಹೋಲುವ ಅಥವ ಇದಕ್ಕೆ ಪ್ರೇರಣೆಯನ್ನು ನೀಡಿರಬಹುದಾದ ಅಭಿವ್ಯಕ್ತಿ ರೀತಿ, ಸಂಸ್ಕೃತ, ಪ್ರಾಕೃತ, ಪಾಲಿ, ಹಿಂದಿ ಭಾಷೆಗಳಲ್ಲಿರುವುದು ಕಂಡು ಬರುತ್ತದೆ. ಸಂಸ್ಕೃತದಲ್ಲಿ ಅದನ್ನು ‘ಸಂಧಾಭಾಷಾ’ ಅಥವ ‘ಸಂಧ್ಯಾಭಾಷಾ’ ಅಂದರೆ ಸಂಜೆ ಮಂಪರಿನಂಥ ಅಸ್ಪಷ್ಟ ಅಭಿವ್ಯಕ್ತಿ ಕ್ರಮ ಎಂದು ಕರೆಯಲಾಗುತ್ತದೆ. ಅಸ್ಪಷ್ಟತೆ, ಗೂಢ, ರಹಸ್ಯಾತ್ಮಕತೆಯೇ ಇದರ ವೈಶಿಷ್ಟವಾಗಿದೆ. ಇದನ್ನೇ ಹಿಂದಿಯಲ್ಲಿ ‘ಉಲಟ್ ಭಾಷಾ’ ಎಂದು ಕರೆಯಲಾಗುತ್ತದೆ.
ಅಲ್ಲಮಪ್ರಭುವಿನ ಕೆಲವು ಸರಳ ವಚನಗಳ ಪ್ರಸ್ತಾಪದೊಂದಿಗೆ ಅವನ ಬೆಡಗಿನ ವಚನಗಳ ವಿಶೇಷತೆಯನ್ನು ಗುರುತಿಸಬಹುದಾಗಿದೆ. ಶರಣರ ಆಂದೋಲನ ಪ್ರಧಾನವಾಗಿ ಸಮಾಜೋ-ಧಾರ್ಮಿಕ ಕ್ರಾಂತಿಯ ಮೂಲಕ ರೂಪುಗೊಂಡಿದ್ದರಿಂದ ಸಾಮಾನ್ಯವಾಗಿ ಎಲ್ಲರ ವಚನಗಳಲ್ಲೂ ಈ ಸಾಮಾಜಿಕ ಮುಖವು ಕಾಣದಿರಲು ಸಾಧ್ಯವಿಲ್ಲ. ಅದಕ್ಕೆ ಅಲ್ಲಮಪ್ರಭು ಹೊರತಾಗುವುದಿಲ್ಲ.
“ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ
ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆʼʼ
ಈ ವಚನದಲ್ಲಿ ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ ಎಂದರೆ ದೇವರಿಗಾಗಿ ಸತ್ತವರಿಲ್ಲ ಎಂಬ ಸರಳ ಅರ್ಥದಂತೆಯೇ “ನಿಮಗಾಗಿ’ ದೇವನಿಗೆ ಆಗಿ ಸಂದು ಅಂದರೆ ಸಲ್ಲಿದವರು ಶಾಶ್ವತರು ಅವರಿಗೆ ಸಾವಿಲ್ಲ ಎಂಬ ಸ್ವಾರಸ್ಯಕರ ಅಂಶವನ್ನು ವ್ಯಕ್ತಪಡಿಸುತ್ತದೆ.
“ಕಲ್ಲಮನೆಯ ಮಾಡಿ ಕಲ್ಲದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೆ?
ಲಿಂಗ ಪ್ರತಿಷ್ಠೆಯ ಮಾಡಿದವರಿಗೆ ನಾಯಕ ನರಕ ಗುಹೇಶ್ವರಾ?
ಬಸವಣ್ಣನವರ ಹಾಗೆಯೇ ಅಲ್ಲಮನೂ ಸ್ಥಾವರ ದೇವಾಲಯ ನಿರ್ಮಾಣವನ್ನು ಸ್ಥಾವರ ಲಿಂಗ ಪ್ರತಿಷ್ಠಾಪನೆಯನ್ನು ವಿಡಂಬಿಸಿರುವುದು ಇಲ್ಲಿನ ವಿಶೇಷತೆಯಾಗಿದೆ.
“ಸಂಸಾರವೆಂಬ ಹೆಣಬಿದ್ದಿದ್ದಡೆ, ತಿನಬಂದ ನಾಯ ಜಗಳವನೋಡಿರೆ
ನಾಯ ಜಗಳವ ನೋಡಿ ಹೆಣನೆದ್ದು ನಗುತ್ತಿದೆ
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆʼʼ
ಸಂಸಾರವನ್ನು ಹೆಣಕ್ಕೆ ಹೋಲಿಸಿರುವುದು, ವಿಷಯ ಸುಖ ಬೆನ್ನು ಹತ್ತಿದ ಜೀವಿಗಳನ್ನು ಜಗಳ ಮಾಡುವ ನಾಯಿಗಳಿಗೆ ಹೋಲಿಸಿ, ಅವುಗಳ ಜಗಳ ಕಂಡು ಸಂಸಾರವೆಂಬ ಹೆಣ ನಗುತ್ತಿದೆ ಎಂದು ವೈರುಧ್ಯದಲ್ಲಿ ಹಿಡಿದು ಅರ್ಥ ಸ್ವಾರಸ್ಯ ಹೆಚ್ಚಿಸಿರುವುದು ಇಲ್ಲಿನ ವಿಶೇಷತೆಯಾಗಿದೆ.
ಢಾಂಬಿಕ ಭಕ್ತಿಯನ್ನು ವಿಡಂಬಿಸಿರುವುದಕ್ಕೆ-
“ಹಾಲನೇಮ ಹಿಡಿದಾತ ಬೆಕ್ಕಾಗಿ ಹುಟ್ಟುವ
ಕಡಲೆ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ”
ಇವು ನಿಜವಾದ ಭಕ್ತಿಯಿಲ್ಲದವರ ಪರಿ ಎಂದು ಅಲ್ಲಮ ವ್ಯಂಗ್ಯವಾಡುತ್ತಾನೆ.
ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವವರು
ವೀರರೂ ಅಲ್ಲ ಧೀರರೂ ಅಲ್ಲ…”
ದತ್ತ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಗುರಿಸಾಧಿಸದ ವ್ಯರ್ಥ ಸಾಹಸಿಗರನ್ನು ಕುರಿತ ವಿಮರ್ಶೆ ಇಲ್ಲಿ ವ್ಯಕ್ತವಾಗಿದೆ.
“ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯಾ” ಎಂಬ ವಚನದಲ್ಲಿ ಅವ್ಯಕ್ತವಾದ ಜೀವ- ದೇವ ಸಂಬಂಧವನ್ನು ಅರ್ಥಪೂರ್ಣವಾಗಿ ವ್ಯಕ್ತಪಡಿಸಲಾಗಿದೆ.
“ವೇದವೆಂಬುದು ಓದಿನ ಮಾತು
ಶಾಸ್ತ್ರವೆಂಬುದು ಸಂತೆಯ ಸುದ್ದಿ…”
ದೈವೀ ಅನುಭವವನ್ನು ಅನುಭವಕ್ಕೆ ತಂದುಕೊಳ್ಳಲಾಗದ ಸಾಂಪ್ರದಾಯಕ ಆರಾಧನೆಯ ಯಾಂತ್ರಿಕ ಸಾಹಸವನ್ನು ಅಲ್ಲಮನು ವಚನದಲ್ಲಿ ವಿಮರ್ಶೆಗೆ ಒಳಪಡಿಸಿದ್ದಾನೆ… ಗುಹೇಶ್ವರನೆಂಬುದು ಮೀರಿದ ಘನವು” ಎಂಬ ಮಾತಿನಲ್ಲೇ ಅದರ ಅಗಮ್ಯತೆ ವ್ಯಕ್ತವಾಗಿದೆ.
ಇನ್ನು ಬೆಡಗಿನ ವಚನಗಳನ್ನು ಕುರಿತು ಮಧ್ಯ ಕನ್ನಡ ಕಾಲದಲ್ಲಿ ನಡೆದ ಟೀಕು, ಭಾಷ್ಯವನ್ನು ಕುರಿತು ಒಂದೆರೆಡು ಮಾತುಗಳನ್ನು ಹೇಳಬೇಕು. ಟೀಕು, ಭಾಷ್ಯಗಳಲ್ಲಿ, ವಚನಗಳಿಗೆ ಸಿದ್ಧವಾದ ಅರ್ಥವನ್ನು ಧಾರ್ಮಿಕ ತಾಂತ್ರಿಕ ದೃಷ್ಟಿಯಿಂದ ಹೇಳುವ ಪ್ರಯತ್ನ ವಿಶೇಷವಾಗಿ ನಡೆಯಿತು. ಅವು ತಮ್ಮ ಉದ್ದೇಶದಲ್ಲಿ ಒಂದು ಮಟ್ಟದ ವಿಮರ್ಶೆಯಾಗಿ ಸಫಲವಾದವು ಆದರೆ ಕಾಲಕ್ರಮದಲ್ಲಿ ಆ ಪದಗಳಿಗೆ ಅದೇ ಅರ್ಥ ಎಂದು ಕಟ್ಟುಹಾಕಿ ವ್ಯಾಖ್ಯಾನ ಮಾಡುವ ಪರಂಪರೆ ಮುಂದುವರೆದಂತೆ ವಚನಗಳನ್ನು ಕುರಿತು ಬೇರೆ ಮುಕ್ತವ್ಯಾಖ್ಯಾನ ಸಾಧ್ಯವಾಗದೆ ಅವಕ್ಕೆ ಒಂದು ಅರ್ಥದ ಮಿತಿಯೇ ಉಂಟಾದಂತೆ ಕಂಡು ಬರುತ್ತದೆ ಆದರೆ ಆಧುನಿಕ ಕಾಲದಲ್ಲಿ ನಡೆದ ವಚನ ವಿಶ್ಲೇಷಣೆಯು ಭಿನ್ನ ವ್ಯಾಖ್ಯಾನ ಸಾಧ್ಯತೆಯನ್ನು ರೂಪಿಸುವುದರ ಮೂಲಕ ವಚನಗಳಿಗೆ ಹೊಸ, ಹೊಸ ವ್ಯಾಖ್ಯಾನಗಳು ಮೂಡಿ ಬರಲು ಕಾರಣವಾಯಿತು. ಉದಾಹರಣೆಗೆ ಅಲ್ಲಮನ ವಚನದ ಒಂದು ವ್ಯಾಖ್ಯಾನವನ್ನು ಗಮನಿಸಬಹುದಾಗಿದೆ.
ಗಂಗಾದೇವಿ ಮುಂಡೆಯಾದಳು,
ಗೌರಿದೇವಿ ಓಲೆಯ ಕಳೆದಳು,
ಚಂದ್ರ ಸೂರ್ಯರಿಬ್ಬರೂ ನೀರಿಳಿದರಲ್ಲಾ!
ವಾಯುದೇವ ವಿಮಾನವ ಹೊತ್ತ,
ವಾಸುದೇವ ತಲೆಗೊಳ್ಳಿಯ ನಿರಿದ
ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ”
ಈ ವಚನದಲ್ಲಿ ಅಲ್ಲಮನು ಈಶ್ವರನ ನಿರಾಕಾರ ಸ್ವರೂಪವನ್ನು ಕುರಿತು ಹೇಳುತ್ತಾನೆ. ಅಂದರೆ ಕಲ್ಪನೆಯಾಚೆ ಶಬ್ದಕ್ಕೆ ಸಿಗದೆ ಉಳಿಯುವ ನಿರಾಕಾರ ಸ್ವರೂಪವನ್ನು ಶಬ್ದದಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಾನೆ. ಶಿವನು (ಗುಹೇಶ್ವರ) ಸಾಯುತ್ತಾನೆ. ಗಂಡ ಸತ್ತಮೇಲೆ ಹೆಂಡಂದಿರಿಗೆ ವೈಧವ್ಯ ಪ್ರಾಪ್ತವಾಗುತ್ತದೆ. ಗಂಗೆ ಮುಂಡೆಯಾಗುತ್ತಾಳೆ. ಗೌರಿ ಮಾಂಗಲ್ಯದ ಸಂಕೇತವಾದ ಓಲೆಯನ್ನು ಕಳಚುತ್ತಾಳೆ. ಅಂತ್ಯ ಸಂಸ್ಕಾರದ ಸಿದ್ಧತೆ ನಡೆಯುತ್ತದೆ. ಚಂದ್ರಸೂರ್ಯರಿಬ್ಬರೂ ನೀರಿಳಿದು ಸ್ನಾನ ಮಾಡಿಸುತ್ತಾರೆ. ವಾಯುದೇವ ವಿಮಾನವ ಹೊತ್ತು ಸಾಗುತ್ತಾನೆ. ಶರೀರವೆಲ್ಲ ಸುಟ್ಟು ಸಂಸ್ಕಾರ ಮುಗಿದು ಅನಂತರ ಗುಹೇಶ್ವರ ಸತ್ತನೆಂಬ ಸುದ್ದಿ ಮಾತ್ರ ಉಳಿಯುತ್ತದೆ.
ವಿಶ್ವದೇಹಿಯಾದ ಶಿವನಿಗೆ ಸಂಸ್ಕಾರ ಮಾಡುವುದಕ್ಕೆ ಅವನ ಕಳ್ಳು ಬಳ್ಳಿಗೆ ಸೇರಿದ ಚಂದ್ರಸೂರ್ಯ ವಾಯುದೇವ ವಾಸುದೇವ ಭಾಗವಹಿಸುವರೆಂದು ಹೇಳುವ ಅಲ್ಲಮನ ಕಲ್ಪಕತೆಯನ್ನು ಗಮನಿಸಬೇಕು. ಹೀಗಾಗಿ ಅನಂತತೆಯ ಮಧ್ಯದಲ್ಲಿ ನಡೆಯುವ ಈ ಬಯಲಿನ ಸಂಸ್ಕಾರವೂ ಕೂಡ ಇಲ್ಲಿ ಅರ್ಥಪೂರ್ಣವಾಗುತ್ತದೆ. ಲೌಕಿಕದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರೆಂದು ಬಡಿದಾಡುವ ನಮ್ಮ ಈ ಕೆಳಕೆಳಗಿನ ಬಡಿದಾಟಗಳೆಲ್ಲ ಇಲ್ಲಿಂದಿತ್ತಲೇ ಉಳಿದು ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ ಮಾತ್ರ ಉಳಿಯುತ್ತದೆ. ಗುಹೇಶ್ವರ ಸತ್ತನೆಂಬುದು ಕೇವಲ ಸುದ್ಧಿ, ಸೃಷ್ಟಿ, ಸ್ಥಿತಿ ಲಯ ಕ್ರಿಯೆಗಳಾಚೆ ತಾನೇ ತಾನಾಗಿ ಉಳಿಯುವ ಆತನಿಗೆ ಸಾವೆಂದರೇನು? ಎಂದೂ ಸಾಯದ ಆತನನ್ನು ಕುರಿತು ಸತ್ತನೆಂದು ಸುದ್ಧಿ ಉಂಟಾದುದು, ಅವನ ಸಾವಿನ ಪರಿಣಾಮವಾಗಿ ಆತನ ಇಬ್ಬರೂ ಹೆಂಡಂದಿರು (ಗಂಗೆ-ಗೌರಿ) ವಿಧವೆಯರಾಗುವರೆಂದು ಹೇಳುವ ಅಲ್ಲಮನ ಕಲ್ಪಕತೆಯನ್ನು ಗಮನಿಸಬೇಕು. ಇಲ್ಲಿ ಆತನ ಶೂನ್ಯದ ದರ್ಶನ ಹೇಗೆ ವ್ಯಕ್ತವಾಗಿದೆ ಗಮನಿಸಬೇಕು.
ಶರಣರ ದೃಷ್ಟಿಯಲ್ಲಿ ಸಾವು ಎಂದೂ ನಾಶದ ಸಂಕೇತವಲ್ಲ. ಸಾವು ಎಂಬುದು ಸತ್ಯತತ್ವದ ಸಾಕ್ಷಾತ್ಕಾರ ಎಂಬ ಅರ್ಥದಲ್ಲಿ ಅಲ್ಲಮನು-
“ನಾ ಸತ್ತೆನೆಂದು ಹೆಣ ಕೂಗಿದುದುಂಟೆ?” ಎಂದು ಕೇಳುತ್ತಾನೆ. “ಮುಂಡೆಯಾಗುವಿಕೆ” “ಓಲೆ ಕಳೆಯುವಿಕೆ” “ನೀರಿಳಿಯುವುದು” “ವಿಮಾನ ಹೊರುವುದು” “ತಲೆಗೊಳ್ಳಿಯ ನಿರಿಯುವುದು” ಇವು ಜಡತ್ವದ ಅಳಿವಿನ ಸಂಕೇತಗಳಾದರೆ, ಗುಹೇಶ್ವರನ ಸಾವಿನ ಸುದ್ದಿ ಚಿರಂತನತ್ವದ ಪ್ರತೀಕವಾಗುತ್ತದೆ. ಒಟ್ಟು ಪರಿಣಾಮದಲ್ಲಿ ಅಂತ್ಯಸಂಸ್ಕಾರ ಈ ಅಖಂಡ ಪ್ರತಿಮೆ ಅಲ್ಲಮನ ಅನುಭಾವದೃಷ್ಟಿಗೆ ನಿರ್ಲಿಪ್ತ ಅಭಿವ್ಯಕ್ತಿಗೆ ಉತ್ತಮವಾದ ವಾಹಕವಾಗುತ್ತದೆ.
ಚಿಂತನೆಯ ದೃಷ್ಟಿಯಿಂದಲ್ಲದೆ ಕಾವ್ಯಾಭಿವ್ಯಕ್ತಿಯ ದೃಷ್ಟಿಯಿಂದಲೂ ಅಲ್ಲಮನು ಶಿಷ್ಟ ಕಾವ್ಯ ಸಂಪ್ರದಾಯದಿಂದ ಭಿನ್ನವಾಗಿ ನಿಲ್ಲುತ್ತಾನೆ. “ವಸ್ತುಕ-ವರ್ಣಕ ತ್ರಿಸ್ಥಾನದ ಮೇಲೆ ನುಡಿವ ನುಡಿಗಳು ಇತ್ತಿತ್ತಲ್ಲದೆ ಅತ್ತತ್ತಲಾರು ಬಲ್ಲರು? ಇವರೆತ್ತಲೆಂದರಿಯರು, ಗಾಳಿವಿಂಡುಗಡೆವರು ನಿಮ್ಮನ್ನೆತ್ತ ಬಲ್ಲರು ಗುಹೇಶ್ವರಾ?”
ರಾಜರ ದ್ವಾರದಲ್ಲಿ ನಿಂತು ತಮ್ಮ ಭೌತಿಕ ಅಪೇಕ್ಷೆಗಾಗಿ ಕಾವ್ಯ ರಚಿಸುವ ಕವಿಗಳ ಮಾತುಗಳು ಕೇವಲ ಈ ಲೋಕದ ಮಿತಿಯಲ್ಲಿ ರಚಿತವಾದವು ಅವರಿಗೆ ಅತ್ತತ್ತಲೇನು ಎಂಬುದು ತಿಳಿಯಲಾರದು ಹೀಗಾಗಿ ನಿಮ್ಮನ್ನೆತ್ತ ಬಲ್ಲರು ಗುಹೇಶ್ವರಾ? ಎಂದು ಪ್ರಶ್ನಿಸುವುದರ ಮೂಲಕ ಅಲ್ಲಮನು ಆ ಕಾವ್ಯ ಮಾರ್ಗದ ಮಿತಿಯನ್ನು ಶರಣರ ಕಾವ್ಯ ಮಾರ್ಗದ ಉನ್ನತಿಯನ್ನು ಸೂಚಿಸಿದ್ದಾನೆ.