ಡಾ.ಸರಜೂ ಕಾಟಕರ
ಮಹಾರಾಷ್ಟ್ರದ ಸಂತ ಪರಂಪರೆಯಲ್ಲಿ ಪ್ರಖ್ಯಾತರಾಗಿರುವ ಜ್ಞಾನೇಶ್ವರ, ಚಕ್ರಧರ, ಸಂತ ತುಕಾರಾಂ ಅವರುಗಳು ಬಸವಣ್ಣನವರ ಕಾಲದ ನಂತರ ಭಾರತದ ಅಧ್ಯಾತ್ಮದ ಕ್ಷೇತ್ರದಲ್ಲಿ ಕಾಣಿಸಿಕೊಂಡ ಮಹಾದಾರ್ಶನಿಕರು. ಸಂತ ಜ್ಞಾನೇಶ್ವರ ೧೨೭೫ ರಲ್ಲಿ ಹುಟ್ಟಿದರೆ ಸಂತ ತುಕಾರಾಮ ೧೫೩೦ ರಲ್ಲಿ ಹುಟ್ಟಿದ. ಈ ಇಬ್ಬರೂ ಮಹಾಪುರುಷರ ಚಿಂತನಶೈಲಿಯ ಮೇಲೆ ೧೨ನೇ ಶತಮಾನದ ವಚನ ಚಳುವಳಿಯ ಪ್ರಭಾವವಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.
ತುಕಾರಾಂ ಮಹಾರಾಷ್ಟ್ರದ ದೇಹುವಿನಲ್ಲಿ ಹುಟ್ಟಿದ. ಆತನ ತಂದೆ ಬೋಲೋಬಾ ಮತ್ತು ತಾಯಿ ಕನಕಾಯಿ, ತುಕಾರಾಂ ಜಾತಿಯಿಂದ ಕುಣಬಿಯಾಗಿದ್ದ ಮತ್ತು ವೃತ್ತಿಯಿಂದ ವಾಣಿ(ವ್ಯಾಪಾರಿ)ಯಾಗಿದ್ದ. ಆತನೇ ತನ್ನ ಜಾತಿ ಬಗ್ಗೆ ‘ಶೂದ್ರಾವಂಸಿ ಜನ್ಮಲೋ’ ಎಂದು ಹೇಳಿದ್ದಾನೆ. ‘ನಾನು ಶೂದ್ರನಾಗಿ ಹುಟ್ಟಿದ್ದರಿಂದಲೇ ನನಗೆ ಭಗವತ್ ದರ್ಶನವಾಯಿತು’ ಎಂದು ತುಕಾರಾಂ ತನ್ನ ಅಭಂಗವೊಂದರಲ್ಲಿ ಹೇಳಿದ್ದಾನೆ.
ಮನೆತನದಿಂದ ವ್ಯಾಪಾರಿಯಾಗಿದ್ದರಿಂದ ತುಕಾರಾಂ ತನ್ನ ತಂದೆಗೆ ಸಹಾಯ ಮಾಡುತ್ತ ಅಂಗಡಿ ನಡೆಸಲಾರಂಭಿಸಿದ. ಆತನ ತಂದೆಯ ಬಡ್ಡಿವ್ಯವಹಾರವೂ ಇತ್ತು. ಇದನ್ನೂ ತುಕಾರಾಂ ನಡೆಸಿದ. ಆತನ ಅನೇಕ ಅಭಂಗಗಳಲ್ಲಿ ಬಡ್ಡಿ ವ್ಯವಹಾರದ ಶಬ್ದಗಳು, ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟ ವ್ಯವಹಾರಗಳು ಪ್ರತಿಮೆಗಳಾಗಿ ಬರುತ್ತವೆ. ಆದರೆ ಆತ ಸತ್ಯವ್ಯಾಪಾರಿಯಾಗಿದ್ದ ವ್ಯಾಪಾರದಲ್ಲಿಯ ತಟವಟಗಳು ಅವನಿಗೆ ಸೇರುತ್ತಿರಲಿಲ್ಲ.
ಆತ ೧೭ನೇ ವರ್ಷದವನಾಗಿದ್ದಾಗ ತಂದೆಯನ್ನು ಕಳೆದುಕೊಂಡ ಮನೆತನದ ಜವಾಬ್ದಾರಿಗಳೆಲ್ಲ ತುಕಾರಾಂ ಮೇಲೆಯೇ ಹೊರಿಸಲ್ಪಟ್ಟವು. ಈ ವೇಳೆಗಾಗಲೇ ಆತ ಎರಡು ಬಾರಿ ಮದುವೆಯಾಗಿದ್ದ. ಆತನ ಮೊದಲನೆಯ ಹೆಂಡತಿಯ ಅನಾರೋಗ್ಯದಿಂದಾಗಿ ಆತ ಇನ್ನೊಂದು ಮದುವೆಯಾಗಬೇಕಾಯಿತು. ೧೬೨೯ರಲ್ಲಿ ಮಹಾರಾಷ್ಟ್ರದಲ್ಲಿ ಬಿದ್ದ ಭೀಕರ ಬರಗಾಲ ಅನೇಕ ಸಾವಿರ ಜನರನ್ನು ಬಲಿ ತೆಗೆದುಕೊಂಡಿತು. ಆತನ ಮೊದಲ ಹೆಂಡತಿ ಹಸಿವೆಯಿಂದ ಸತ್ತಳು; ಆತನ ಹಿರಿಯ ಮಗನೂ ತೀರಿಕೊಂಡ. ಇದೇ ಕಾಲಕ್ಕೆ ಜನರೂ ಸಾಯುತ್ತಿರುವುದನ್ನು ಆತ ನೋಡಿದ. ಈ ಘಟನೆಗಳು ಆತನ ಮನಸ್ಸಿನ ಮೇಲೆ ಅಪಾರವಾದ ಪರಿಣಾಮವನ್ನು ಬೀರಿದವು: ಇದರ ಪರಿಣಾಮವಾಗಿ ಆತ ವಿಠಲನಿಗೆ ಶರಣು ಹೋದ. “ಬೈಲಾ ಮೇಲಿ ಮುಕ್ತ ರಾಲಿ, ದೇವೆ ಮಾಯಾ ಸೋಡವಿಲಿ: ಪೋರಾ ಮೇಲೆ ಬರೆ ಝಾಲೆ, ದೇವೆ ಮಾಯಾ ವಿರಹಿತ ಕೇಲೆ’ ಎಂದು ತನಗೆ ಕಷ್ಟ ನೀಡಿದ ವಿಠಲನನ್ನು ಕೊಂಡಾಡಿದ.
ಆತನ ತಂದೆ ವಿಠಲನ ಭಕ್ತನಾಗಿದ್ದ. ತಂದೆ ಕಟ್ಟಿಸಿದ ವಿಠಲನ ಗುಡಿಯನ್ನು ರಿಪೇರಿ ಮಾಡಿದ ತುಕಾರಾಂ ಕೀರ್ತನೆಗಳಲ್ಲಿ ತಲ್ಲೀನನಾದ. ಉಪವಾಸ (ಏಕಾದಶಿ) ಗಳನ್ನು ಆರಂಭಿಸಿದ. ತನ್ನಲ್ಲಿರುವ ‘ಅಹಂ’ನ್ನು ಕಳೆಯುವುದಕ್ಕೋಸ್ಕರ ಸಂತರ ಪಾದೋದಕವನ್ನು ಸೇವಿಸಿದ. ೧೬೪೦ ರ ಜನವರಿ ೨೩ ರಂದು ಆತನ ಗುರುಗಳಾದ ಬಾಬಾಜಿ ಚೈತನ್ಯ ಕನಸಿನಲ್ಲಿ ಕಾಣಿಸಿಕೊಂಡು ‘ರಾಮಕೃಷ್ಣ ಹರಿ’ ಎಂಬ ಮಂತ್ರವನ್ನು ನೀಡಿದರೆಂದು ಪ್ರತೀತಿ ಇದೆ. ಸಾವಿರಾರು ಅಭಂಗಗಳನ್ನು ಬರೆದ ತುಕಾರಾಂ ಭಕ್ತಿಪಂಥದ ಅಗ್ರಗಣ್ಯ ಸಂತನಾದ.
ಬಸವಣ್ಣನವರು ಚಿಕ್ಕಂದಿನಿಂದಲೇ ಸನಾತನ ಧರ್ಮದ ಆಚರಣೆಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವುದನ್ನು ನೋಡುತ್ತೇವೆ; ಉಪನಯನವನ್ನು ಧಿಕ್ಕರಿಸಿದ ಬಸವಣ್ಣನವರು ಒಂದು ಪರ್ಯಾಯ ಧರ್ಮದ ಉಗಮಕ್ಕೆ ಕಾರಣರಾಗುತ್ತಾರೆ. ಆದರೆ ತುಕಾರಾಂನ ಜೀವನದಲ್ಲಿ ಇಂತಹ ಯಾವ ಘಟನೆಗಳೂ ಜರುಗುವುದಿಲ್ಲ. ಅತ್ಯಂತ ಸುಖದಿಂದಿದ್ದ ತುಕಾರಾಂ ಬರಗಾಲದ ಬವಣೆಗೆ ಸಿಕ್ಕು ಅಧ್ಯಾತ್ಮದ ಕಡೆಗೆ ತಿರುಗುತ್ತಾನೆ. ಆದರೆ ನಂತರದ ಘಟನೆಗಳು ನಾಟಕೀಯವಾಗುತ್ತ ಒಂದು ಹೊಸ ಸಮಾಜ ರಚನೆಗೆ ಕಾರಣವಾಗುತ್ತವೆ.
ತುಕಾರಾಂನ ಆರಾಧ್ಯ ದೈವ ವಿಠಲ. ಆತ ವಿಷ್ಣು ಭಕ್ತ. ಬಸವಣ್ಣನವರ ಆರಾಧ್ಯ ದೈವ ಕೂಡಲಸಂಗಮ: ಬಸವಣ್ಣನವರು ಶೈವಭಕ್ತರು. ಆದರೆ ಇಬ್ಬರೂ ಭಕ್ತಿಯ ಮಾಧ್ಯಮದಿಂದ ಸಾಮಾನ್ಯ ಜನರನ್ನು ಸಂಘಟಿಸಿದರು. ಬಸವಣ್ಣನವರು ಕಾಯಕವೇ ಕೈಲಾಸವೆಂದು ಹೇಳಿದರು. ತುಕಾರಾಂನ ಮೂಲ ಉದ್ದೇಶ ನಿವೃತ್ತಿಯ ಕಡೆಗಿರುವುದನ್ನು ಕಾಣಬಹುದು.
ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಬಹುದೊಡ್ಡ ಹುದ್ದೆಯಲ್ಲಿದ್ದರು. ಆದರೆ ತುಕಾರಾಂ ತನಗೆ ಛತ್ರಪತಿ ಶಿವಾಜಿ ಮಹಾರಾಜರು ಕಳಿಸಿದ ಕಾಣಿಕೆಗಳನ್ನು ತಿರಸ್ಕರಿಸಿದ. ‘ಈ ವಸ್ತುಗಳು ನನ್ನ ಉಪಯೋಗಕ್ಕೆ ಬರುವಂಥವಲ್ಲ’ ಎಂದು ಹೇಳಿ “ಪ್ರಜೆಗಳು ಸುಖದಿಂದ ಇರುವಂತೆ ರಾಜ್ಯವನ್ನಾಳು’ ಎಂದು ಶಿವಾಜಿಗೆ ಸಂದೇಶ ಕಳಿಸಿದ.
ಬಸವಣ್ಣನವರು ‘ಅನುಭವ ಮಂಟಪ’ ಕಟ್ಟಿದರು. ತುಕಾರಾಂ ‘ದಿಂಡಿ’ ಆರಂಭಿಸಿದ. ಈ ದಿಂಡಿಯಲ್ಲಿ ಎಲ್ಲ ಜಾತಿಯ ಜನರಿಗೆ ಮುಕ್ತ ಪ್ರವೇಶವಿತ್ತು. ಸಾಮೂಹಿಕವಾಗಿ ಈ ಜನ ದೇವರನ್ನು ಸ್ಮರಿಸುತ್ತಿದ್ದರು. ಬಸವ ಅನುಯಾಯಿಗಳು ‘ಶರಣ’ರಾದರೆ ತುಕಾರಾಂನ ಅನುಯಾಯಿಗಳು ‘ವಾರಕರಿ’ಗಳಾದರು. ತುಕಾರಾಂನ ಈ ದಿಂಡಿ ಒಂದು ಚಳವಳಿಯಾಗಿ ಹಬ್ಬಿತು. ದಿಂಡಿಯಲ್ಲಿ ಭಾಗವಹಿಸುವ ವಾರಕರಿಗಳಿಗೆ ಕೆಲವು ಕಟ್ಟುಪಾಡುಗಳಿದ್ದವು.ಅವರೆಲ್ಲರು ಸಚ್ಚಾರಿತ್ರ್ಯವಂತರಾಗಿರಬೇಕು : ಸುಳ್ಳು ಹೇಳುವಂತಿಲ್ಲ, ಕಳುವು, ಕೊಲೆ, ವ್ಯಭಿಚಾರ ಮಾಡುವಂತಿರಲಿಲ್ಲ. ಬಸವಣ್ಣನವರ ಶರಣರೂ ಇದೇ ತತ್ವಗಳನ್ನು ಪಾಲಿಸುತ್ತಿದ್ದುದನ್ನು ಕಾಣಬಹುದಾಗಿದೆ.
ತುಕಾರಾಂನನ್ನು ಆಗಿನ ಕಾಲದ ವೈದಿಕರು ಅಪರಿಮಿತವಾಗಿ ಕಾಡಿದರು.ಒಬ್ಬ ಶೂದ್ರ, ಧರ್ಮವನ್ನು ಉಪದೇಶಿಸುತ್ತಿರುವುದು ಅವರನ್ನು ಕೆರಳಿಸಿತು. ನಾನಾ ರೀತಿಯ ಹಿಂಸೆಗಳನ್ನು ತುಕಾರಾಂಗೆ ನೀಡಲಾಯಿತು. ಆತ ಬರೆದ ಅಭಂಗಗಳನ್ನು ಇಂದ್ರಾಯಣಿ ನದಿಯಲ್ಲಿ ಒಗೆದರು. ಆದರೆ ತುಕಾರಾಂ ಇದ್ಯಾವುದನ್ನೂ ಲೆಕ್ಕಿಸಲಿಲ್ಲ; ತನ್ನ ಧ್ಯೇಯದಿಂದ ತುಸುವೂ ಹಿಂದೆ ಸರಿಯಲಿಲ್ಲ.
ಬಸವಣ್ಣನವರ ಜೀವನದಲ್ಲಿಯೂ ಇದೇ ತೆರನಾದ ಘಟನೆಗಳು ನಡೆದವು. ವೈದಿಕರಾಗಿ ಹುಟ್ಟಿದ್ದರೂ ವೈದಿಕ ಆಚರಣೆಗಳನ್ನು ವಿರೋಧಿಸಿದ್ದಕ್ಕಾಗಿ, ವೈದಿಕರೆಲ್ಲರೂ ಬಸವಣ್ಣನವರ ವಿರೋಧಿಗಳಾದರು. ದೊರೆಯತನಕ ದೂರು ಹೋಯಿತು. ಬಸವಣ್ಣನವರು ಇದ್ಯಾವುದನ್ನೂ ಲೆಕ್ಕಿಸಲಿಲ್ಲ; ತಮ್ಮ ಧ್ಯೇಯದಿಂದ ಅವರೂ ಹಿಂದೆ ಸರಿಯಲಿಲ್ಲ.
ತುಕಾರಾಂ ಹೇಳಿದ ಅಭಂಗಗಳು ವಚನಗಳ ಸಾರಸರ್ವಸ್ವವನ್ನೇ ಒಳಗೊಂಡಿವೆ. ‘ಬೋಲೆ ಕೈಸಾ ಚಾಲೆ ತ್ಯಾಚಿ ವಂದೀನ ಪಾವಲೆ’ ಎಂದು ತುಕಾರಾಂ ಹೇಳಿದರೆ ಬಸವಣ್ಣನವರು
“ನಡೆದಂತೆ ನುಡಿದರೆ ಇದೇ ಜನ್ಮ ಕಡೆ’ ಎಂದು ಹೇಳಿದ್ದಾರೆ. ಜನರ ಬಾಳು ಸುಗಮಗೊಳಿಸಲು, ಜನರನ್ನು ಸರಿಯಾದ ದಾರಿಗೆ ಹಚ್ಚಲು ಬಸವಣ್ಣ ಮತ್ತು ತುಕಾರಾಂ ಶ್ರಮಿಸಿದ್ದಾರೆ. ಇಬ್ಬರೂ ಏಕದೇವೋಪಾಸನೆಗೆ ಮಹತ್ವ ನೀಡಿದ್ದಾರೆ. ಆಲಸಿಗಳ ಬಗ್ಗೆ ತುಕಾರಾಂ ಕಿಡಿ ಕಾರಿದ್ದಾನೆ. ಬಸವಣ್ಣನವರು ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಬಹುದೇವರ ಕಲ್ಪನೆಯನ್ನು ಇಬ್ಬರೂ ಖಂಡಿಸಿದ್ದಾರೆ. ದೇವರು ಮತ್ತು ಭಕ್ತರ ನಡುವಿನ ಪ್ರೀತಿ ‘ಸತಿ ಪತಿ ಭಕ್ತಿ’ಯಂತಿರಬೇಕೆಂದು ವಚನಗಳು ಹೇಳಿದರೆ, ತುಕಾರಾಂ ‘ಸತಿ ಪತಿ ಭಾವ’ ಎಂಬ ರೀತಿಯಲ್ಲಿರಬೇಕೆಂದು ಹೇಳುತ್ತಾನೆ. ಜಾತಿಗಿಂತ ಭಕ್ತಿಯೇ ಶ್ರೇಷ್ಠವೆಂದು ತನ್ನ ಅನೇಕ ಅಭಂಗಗಳಲ್ಲಿ ತುಕಾರಾಂ ಒತ್ತಿ ಹೇಳುತ್ತಾನೆ. ಇದೇ ರೀತಿಯ ಆಶಯವನ್ನು ಬಸವಣ್ಣನವರ ಅನೇಕ ವಚನಗಳಲ್ಲಿಯೂ ಕಾಣಬಹುದಾಗಿದೆ.
“ನೀರಿನಲ್ಲಿ ಮಿಂದರೆ ಅದರಿಂದ ದೇವರು ಪ್ರತ್ಯಕ್ಷನಾಗುತ್ತಾನೆಂಬ ನಂಬುಗೆಯನ್ನು ಇಬ್ಬರೂ ಟೀಕಿಸಿದ್ದಾರೆ. ಪರಸ್ತ್ರೀಯರನ್ನು ಸಹೋದರಿಯೆಂಬಂತೆ. ನೋಡಬೇಕೆಂದು ತುಕಾರಾಂ ಹೇಳಿದರೆ ಬಸವಣ್ಣನವರು ಪರಸ್ತ್ರೀಯರನ್ನು ಮಹಾದೇವಿ ರೂಪದಲ್ಲಿ ನೋಡಿದ್ದಾರೆ
ʼ ತುಕಾ ಮಣೆ’ ಎನ್ನುವುದು ತುಕಾರಾಂನ ಅಂಕಿತ ನಾಮ. ಬಸವಣ್ಣನವರು ʼʼಕೂಡಲಸಂಗಮ ದೇವಾ’ʼ ಎಂದು ಅಂಕಿತನಾಮವನ್ನು ಬಳಸಿದ್ದಾರೆ. ಇಬ್ಬರೂ ಮನುಷ್ಯತ್ವಕ್ಕೆ ಬೆಲೆ ನೀಡಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ, ಯಾರದೆ ಸಹಾಯವಿಲ್ಲದೆಯೇ ದೇವರನ್ನು ಹೇಗೆ ಮುಟ್ಟಬಹುದೆಂಬುದನ್ನು ಬಸವಣ್ಣ ಮತ್ತು ತುಕಾರಾಂ ಇಬ್ಬರೂ ದಾರಿ ತೋರಿಸಿದ್ದಾರೆ. ಆಡಂಬರದ ಪೂಜೆ ಪುನಸ್ಕಾರಗಳು. ಇಬ್ಬರಿಗೂ ಸಮ್ಮತವಿಲ್ಲ: ದೇವಸ್ಥಾನಕ್ಕೆ ಹೋಗದಯೇ ಭಕ್ತಿಯಿಂದ ದೇವರನ್ನು ಪಡೆಯಬಹುದೆಂದು ತುಕಾರಾಂ ಹೇಳಿದರೆ ಬಸವಣ್ಣನವರು ‘ಎನ್ನ ಕಾಲೇ ಕಂಬ’ ಎಂದು ಹೇಳಿ ಪ್ರತಿಯೊಬ್ಬನ ದೇಹವೇ ದೇವಸ್ಥಾನವೆಂಬ ಅದ್ಭುತ ಕಲ್ಪನೆಯನ್ನು ನೀಡಿದ್ದಾರೆ.
“ಪತಿವ್ರತೆಗೆ ಗಂಡನೊಬ್ಬನೇ. ಅದೇ ರೀತಿ ಭಕ್ತನಿಗೆ ದೇವನೊಬ್ಬನೇ’ ಎಂದು ತುಕಾರಾಂ ಹೇಳಿದರೆ, ಬಸವಣ್ಣನವರು
ನಂಬಬಲ್ಲ ಹೆಂಡತಿಗೆ ಗಂಡನೊಬ್ಬ ಕಾಣಿರೋ!
ನಂಬಬಲ್ಲ ಭಕ್ತರಿಗೆ ದೇವನೊಬ್ಬ ಕಾಣಿರೋ! ಎಂದು ಹೇಳಿದ್ದಾರೆ.
‘ದೇವನೊಬ್ಬ ನಾಮ ಹಲವು’ ಎಂಬ ಅವರ ವಚನ ಸುಪ್ರಸಿದ್ಧವಾದುದು.