ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು
ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
ವಿದ್ಯೆ-ಅವಿದ್ಯೆಗಳೆರಡೂ ಭಾರತೀಯ ತತ್ವಶಾಸ್ತ್ರದ ಅಮೂಲ್ಯ ಪಾರಿಭಾಷಿಕ ಪದಗಳು. ನಮ್ಮ ಪ್ರಾಚೀನ ಋಷಿಮುನಿಗಳ ದೃಷ್ಟಿಯಲ್ಲಿ ಇವು ಬ್ರಹ್ಮದ ಶಕ್ತಿಗಳು. ಈಗ ನಾವು ದಿನನಿತ್ಯ ‘ವಿದ್ಯೆ’ ಎಂದು ಕರೆಯುವುದೆಲ್ಲ ವಾಸ್ತವದಲ್ಲಿ ಅವಿದ್ಯೆ. ಅವಿದ್ಯೆ ಎಂದಾಕ್ಷಣ ತಿರಸ್ಕರಣೀಯವಾದುದು ಎಂದಲ್ಲ. ಲೌಕಿಕ ಜೀವನಕ್ಕೆ ತೀರ ಅಗತ್ಯವಾದುದು. ನಮ್ಮ ಐಹಿಕ ಸುಖ ಹಾಗು ಅಭ್ಯುದಯಕ್ಕೆ ಕಾರಣವಾದುದು ಈ ಅವಿದ್ಯೆಯೇ. ದಾರ್ಶನಿಕರು ಅವಿದ್ಯೆಗೆ ಕರ್ಮವೆಂದೂ ಕರೆದುದುಂಟು. ಕರ್ಮರಹಿತವಾಗಿ ಮನುಷ್ಯ ಬದುಕಲಾರ. ಆದರೆ ಅವನು ಮಾಡುವ ಕರ್ಮದಲ್ಲಿ ಅಂದರೆ ಭಗವತ್ಸೇವೆಯಲ್ಲಿ ನಾನೆಂಬ ಅಭಿಮಾನವಿರಬಾರದು. ಅಹಂಕಾರ ಮಮಕಾರಗಳಿಗೆ ಅಲ್ಲಿ ಅವಕಾಶವಿಲ್ಲ. ರಾಗದ್ವೇಷಗಳಿರಬಾರದು. ಪ್ರತಿಫಲಾಪೇಕ್ಷೆ ಇಲ್ಲದೆ ಶ್ರದ್ಧೆಯಿಂದ ಸೇವೆ ಮಾಡುವುದು ಸತ್ಯಕರ್ಮವೆನಿಸುವುದು. ಇದು ಮೃತ್ಯುವನ್ನು ಗೆಲ್ಲಲು ಅತ್ಯಂತ ಸಹಕಾರಿಯಾದುದು.
ಅವಿದ್ಯೆ ಮೌಲಿಕವಾಗುವುದು ವಿದ್ಯೆಯ ಸ್ಪರ್ಶದಿಂದ. ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಅಂದರೆ ಯಾವುದು ನಮ್ಮನ್ನು ಮುಕ್ತಿಯ ಕಡೆಗೆ ಒಯ್ಯುವುದೋ ಅದು ನಿಜವಾದ ವಿದ್ಯೆ. ಇದು ಮನುಷ್ಯನನ್ನು ದೈವತ್ವಕ್ಕೇರಿಸುವುದು. ದಾರ್ಶನಿಕರ ದೃಷ್ಟಿಯಲ್ಲಿ ಈ ವಿದ್ಯೆಯೇ ಜ್ಞಾನ. ಮನುಷ್ಯನ ಅಧ್ಯಾತ್ಮ ಸಾಧನೆಗೆ ಅತ್ಯವಶ್ಯವಾದುದು. ಇಂತಹ ವಿದ್ಯೆಯನ್ನು ಕರಗತ ಮಾಡಿಕೊಂಡವನು ನಿತ್ಯಾನಿತ್ಯವನ್ನು ವಿವೇಕವುಳ್ಳವನಾಗುತ್ತಾನೆ. ಐಹಿಕ ಸುಖ ಭೋಗಗಳನ್ನು ಕ್ಷಣಿಕವೆಂದು ಪರಿಭಾವಿಸಿ ಅವುಗಳಲ್ಲಿ ಪೂರ್ಣ ವಿರಕ್ತಿಯನ್ನು ಹೊಂದುತ್ತಾನೆ. ಸಂಯಮದಿಂದ ಕೂಡಿದ ಪವಿತ್ರ ಜೀವನವನ್ನು ನಡೆಸುತ್ತ ಸದಾ ಪರಮಾರ್ಥ ಚಿಂತನೆಯಲ್ಲಿ ಕಾಲ ಕಳೆಯುತ್ತಾನೆ. ಕೊನೆಗೆ ಬ್ರಹ್ಮನನ್ನು ಅರಿತು ಬ್ರಹ್ಮಸ್ವರೂಪಿಯೇ ಆಗುತ್ತಾನೆಂಬುದು ನಮ್ಮ ದಾರ್ಶನಿಕರ ಅಭಿಮತ.
ಮಾನವರ ಬದುಕಿನಲ್ಲಿ ವಿದ್ಯೆ-ಅವಿದ್ಯೆಗಳೆರಡೂ ಪ್ರಮುಖ ಸ್ಥಾನ ಪಡೆದಿವೆ. ಇವುಗಳ ಸಂಯೋಗದಿಂದ ಅಮೃತತ್ವವನ್ನು ಹೊಂದಲು, ಆತ್ಮತತ್ವ ತಿಳಿಯಲು ಸಾಧ್ಯವಾಗುತ್ತದೆ.
‘ವಿದ್ಯಾಂ ಚಾ ವಿದ್ಯಾಂ ಚ ಯಸ್ತದ್ವೇದೋ ಭಯಗ್ಂ ಸಹ
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ
ಅಂದರೆ ವಿದ್ಯೆ ಮತ್ತು ಅವಿದ್ಯೆಗಳೆರಡನ್ನೂ ಅರಿತವರು ಲೌಕಿಕ ರೂಪವಾದ ಅವಿದ್ಯೆಯ ಮೂಲಕ ಮೃತ್ಯುವನ್ನು ದಾಟಿ ಅಧ್ಯಾತ್ಮ ಸಾಧಕವಾದ ವಿದ್ಯೆಯ ಮೂಲಕ ಅಮೃತತ್ವವನ್ನು ಪಡೆಯುತ್ತಾರೆ ಎಂದರ್ಥ.
ಸಾಮಾನ್ಯ ಜನರು ತಮ್ಮ ಜೀವನವನ್ನು ಅವಿದ್ಯೆಗೆ ಸೀಮಿತಗೊಳಿಸಿ, ಪ್ರಪಂಚದಲ್ಲಿ ಸುಖ ಮತ್ತು ತೃಪ್ತಿಯನ್ನು ಹೊಂದಲು ಪ್ರಯತ್ನಿಸುತ್ತಾರೆ. ಆದರೆ ಜ್ಞಾನಿಗಳು ಅಮೃತತ್ವದ ಕಡೆಗೆ ಶಾಶ್ವತ ಸುಖದ ಕಡೆಗೆ ಸಾಗುತ್ತಾರೆ. ಒಟ್ಟಾರೆ ಮನುಷ್ಯ ಜೀವನದ ಗುರಿ ಅವಿದ್ಯೆಯನ್ನು ವಿದ್ಯೆಯಲ್ಲಿ ರೂಪಾಂತರಗೊಳಿಸುವುದು. ಅಂದರೆ ಅವಿದ್ಯೆಯ ದುರ್ಗಮ ಮಾರ್ಗದಲ್ಲಿ ಮುನ್ನಡೆದು ವಿದ್ಯೆಯ ಬೆಳಕಿನಲ್ಲಿ ಜೀವನವನ್ನು ಅರಳಿಸುವುದೇ ಆಗಿದೆ. ಹೀಗೆ ಆನಂದಮಯವಾದ ವಿದ್ಯಾಭೂಮಿಕೆಯಲ್ಲಿ ಜೀವನವನ್ನು ಅರಳಿಸಿದಾಗ ದಿವ್ಯತೃಪ್ತಿ ಹಾಗು ಅಮೃತತ್ವವನ್ನು ಪಡೆಯಲು ಸಾದ್ಯವಾಗುವದು.