ಡಾ:ಸ್ನೇಹಾ ಭೂಸನೂರ
ಮನುಷ್ಯ ಸಮಾಜ ಜೀವಿ. ಈ ಕಾರಣಕ್ಕಾಗಿ ಪರಸ್ಪರ ಸೌಹಾರ್ದ ಸಂಬಂಧ ಅನಿವಾರ್ಯ. ಎಲ್ಲ ಧರ್ಮೀಯರಿಗೂ ಅವರವರ ಪರಂಪರೆಯಿಂದ ಬಂದ ಧರ್ಮ ಗ್ರಂಥಗಳವೆ. ಅವುಗಳಲ್ಲಿಯ ನೀತಿ, ನಿಯಮಗಳು ಆಯಾ ಧರ್ಮೀಯರಿಗೆ ಸಾಮಾಜಿಕ ಆಚಾರ ಸಂಹಿತೆಗಳಾಗಿವೆ. ಜೀವನದ ನಡೆ-ನುಡಿಯಲ್ಲಿ ಮಾತ್ರವಲ್ಲದೆ ಆಹಾರ ವಿಹಾರದಲ್ಲೂ ಈ ನಿಯಮಗಳು ಸ್ಪಷ್ಟವಾಗಿವೆ .ಹಾಗೆ ವಿವಿಧ ಧರ್ಮಗಳಿಗೆ ಅವುಗಳದೇ ಆದ ಆಚಾರಗಳು. ಯಾವ ಕಾರ್ಯ ಮನುಷ್ಯನ ಅಂತರಂಗ – ಬಹಿರಂಗದ ಅಭ್ಯುದಯಕ್ಕೆ ಕಾರಣವಾಗುವುದೋ ಅದನ್ನೇ ಧರ್ಮ ಎನ್ನಬಹುದು. ʼಧರ್ಮʼ ಶಬ್ದಕ್ಕೆ ದಾರ್ಶನಿಕರು ವಿಫುಲವಾದ ಅರ್ಥ ಕೊಟ್ಟಿದ್ದಾರೆ. ಅವೆಲ್ಲವುಗಳ ಸಾರ ಮಾನವ ಜೀವನದ ಉದ್ಧಾರವೇ ಆಗಿದೆ. ಅಂತರಂಗದ ಅಗೋಚರ ಶಕ್ತಿಯ ಸಾಕ್ಷಾತ್ಕಾರಕ್ಕಾಗಿ, ಮನುಷ್ಯನು ಕಂಡಕೊಂಡ ಸಾಧನಾ ಮಾರ್ಗಗಳು ಹಲವಾರು. ಭಕ್ತಿಯೋಗ, ಜ್ಞಾನಯೋಗ ಕರ್ಮಯೋಗ, ಧ್ಯಾನಯೋಗ ಇತ್ಯಾದಿಗಳು ಸಾಧನಾಯುಕ್ತ ಆಚರಣೆಯ ಮಾರ್ಗಗಳಾದವು. ಜಗತ್ತು- ಜೀವಾತ್ಮ-ಪರಮಾತ್ಮ ಸಂಬಂಧಗಳ ರಹಸ್ಯಗಳನ್ನು ಬಹಿರಂಗಗೊಳಿಸಲು ಪ್ರಯತ್ನಿಸಿದ ಮಾನವನು ಈ ಮಾರ್ಗಗಳನ್ನು ಅವಲಂಬಿಸೆದ. ಇವೆಲ್ಲಾ ಕಾರ್ಯಗಳಿಗೆ ಜೀವವೇ ಆಧಾರ. ದೇಹವೇ ಸಾಧನ ಸಂಪತ್ತಾಯಿತು. ಕೊನೆಗೆ ಜೀವಾತ್ಮ ಪರಮಾತ್ಮರ ಸಾಮರಸ್ಯವೇ ಜೀವನದ ಗುರಿಯೆಂಬುದು ಆತನ ಅಂತಿಮ ನಿರ್ಧಾರವಾಯಿತು. ಅದರ ಸಾಧನೆ, ಸಿದ್ಧಿಯಲ್ಲಿ ವೈವಿಧ್ಯತೆ ಬೆಳೆಸಿಕೊಂಡು, ಬಳಸಿಕೊಂಡು ಸಂತೋಷ ಪಟ್ಟ. ಈ ಸಾಧನೆಯ ಮಾರ್ಗಗಳೇ ಆಚಾರಗಳು. ಅದನ್ನು ಸರಳವಾಗಿ ಹೇಳುವುದಾದರೆ ನಡೆಯೇ ಆಚಾರ, ನುಡಿಯೇ ವಿಚಾರ . ಜಗತ್ತಿನ ಎಲ್ಲ ಧಾರ್ಮಿಕ , ದಾರ್ಶನಿಕ, ಸಾಂಸ್ಕೃತಿಕ, ಸಾಮಾಜಿಕ ನಡೆ ನುಡಿಗಳೇ ಆಧಾರವೆಂಬುದನ್ನು ಧರ್ಮ ಗ್ರಂಥಗಳು ಒತ್ತುಕೊಟ್ಟು ಹೇಳಿವೆ.
ಆಚಾರ:
ಆಚಾರವೆಂದರೆ ಅನುಸಂಧಾನಕ್ಕೆ ಪೂರಕವಾದ ಕ್ರಿಯೆಗಳು ಎನ್ನುಬಹುದು . ಈ ಕ್ರಿಯೆಗಳು ಸಾಧಕನು ಸಿದ್ದಿ ಪಡೆಯಲು ಅನುಸರಿಸಬೇಕಾದ ನಿಯಮಗಳಾಗಿವೆ ಇದನ್ನು ʼನೀತಿ ಪಾಲನೆʼ ಎಂದು ಇನ್ನೊಂದು ಹೆಸರಿನಿಂದಲೂ ಕರೆಯಬಹುದು.ನೀತಿ ಸಾರ್ವಜನಿಕವಾದ ಆಚರಣೆಯಾಗಿದೆ, ಸಮಾಜ ಜೀವಿಯಾದವನು ಪರಸ್ಪರ ಸೌಹಾರ್ದಯುತ ಜೀವನ ಸಾಧನೆಗೆ ಅನುಸರಿಸುವ ಸಾಮಾಜಿಕ ಬಾಹ್ಯಾ ನಿಯಮಗಳನ್ನು ನೀತಿ ಎನ್ನಬಹದು. ಹಿಂದೂ ಸಂಸ್ಕೃತಿಯಲ್ಲಿ ಆಚಾರ – ನೀತಿ -ಧರ್ಮ ಒಂದೇ ಆಗಿವೆ. ನಮ್ಮ ಋುಷಿ ಮುನಿಗಳು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜೀವನದ ಗುರಿ ಸಾಧನೆಗೆ ಅನೇಕ ನಿಯಮಗಳನ್ನು ಸೂಚಿಸಿ ಅಪಾರ ಸಾಹಿತ್ಯವನ್ನು ಸೃಷ್ಟಿಸಿದರು. ಅವು ಶ್ರುತಿ, ಸ್ಮೃತಿ ಮತ್ತು ಸೂತ್ರ ಸಾಹಿತ್ಯವೆಂದು ಪ್ರಸಿದ್ಧಿ ಪಡೆದಿವೆ.
ಪಾಶ್ಚಾತ್ಯರ ಚಿಂತನೆ :
ಪಾಶ್ಚಾತ್ಯರು ಆಚಾರಗಳನ್ನು ‘ಎಥಿಕ್ಸ್’ (Ethics) ಎಂದೂ ‘ಮಾರಲ್’ (Moral) ಎಂದೂ ಕರೆದಿದ್ದಾರೆ. ‘ಎಥಿಕ್ಸ್’ ಪದವು ‘ಆಯಾ ಸಮಾಜದ ಸಂಸ್ಕಾರಗಳು’, ‘ಆಚಾರ ಪದ್ಧತಿಗಳು’ ಎಂಬ ಅರ್ಥವನ್ನು ಒಳಗೊಂಡರೆ, ‘ಮಾರಲ್’ ಎಂಬುದು, ತನ್ನ ಸಮಾಜದೊಡನೆ ವ್ಯವಹರಿಸುವಾಗ ಅನುಸರಿಸಬೇಕಾದ ನಿಯಮಗಳು’ ಎಂದಿದೆ. ಪಾಶ್ಚಾತ್ಯ ದಾರ್ಶನಿಕ ಸಾಕ್ರೆಟಿಸ್‌ನು ‘ಜೀವನದ ನೀತಿ ನಿಯಮಗಳ ಶ್ರೇಷ್ಠತೆಯನ್ನು ದಾರ್ಶನಿಕರ ಅನುಭವಗಳ ಆಧಾರದ ಮೇಲೆ ನಿರ್ಧರಿಸಬೇಕು’ ಎನ್ನುತ್ತಾನೆ. ಸ್ಪೇನ್ ದೇಶದ ತತ್ವಜ್ಞಾನಿ ಸ್ಪೀನೋಜಾ ತನ್ನ ‘ಎಥಿಕ್ಸ್’ ಗ್ರಂಥದಲ್ಲಿ, ‘ಜಗತ್ತಿನ ಆಗು ಹೋಗುಗಳೆಲ್ಲಾ ದೇವರ ಇಚ್ಛೆಯಂತೆಯೇ ನಡೆಯುತ್ತವೆ. ಅದನ್ನು ಬದಲಾಯಿಸುವುದು ಯಾರಿಗೂ ಸಾಧ್ಯವಿಲ್ಲ. ಶ್ರೇಷ್ಟ ಜನರು ಅದನ್ನೇ ಅನುಸರಿಸಿ ನಡೆಯುತ್ತಾರೆ. ಅದೇ ನೀತಿ ಮಾರ್ಗ” ಎನ್ನುತ್ತಾನೆ. ಜರ್ಮನಿಯ ದಾರ್ಶನಿಕ ಇಮ್ಯಾನುಯಲ್ ಕಾಂಟ್‌ನು ವೈಜ್ಞಾನಿಕ ಅರಿವಿನ ಹಿನ್ನೆಲೆಯಲ್ಲಿ ದರ್ಶನವನ್ನು ಚಿಂತಿಸಿದವನು. ನೀತಿಶಾಸ್ತ್ರಕ್ಕೆ ಸಂಬಂಧಪಟ್ಟಂತೆ ತನ್ನ “The Critics of Practice Reason” ಗ್ರಂಥದಲ್ಲಿ ಮಾನವ ಸ್ವತಂತ್ರ ಮತ್ತು ಶಾಶ್ವತ. ದೇವರಿದ್ದಾನೆ ಎಂಬ ನಂಬಿಗೆಗೆ ನಮ್ಮಲ್ಲಿರುವ ನೀತಿ ನಿಯಮಗಳೇ ಆಧಾರ. ನೀತಿಯು ಧರ್ಮದ ನೆಲೆಗಟ್ಟಿನ ಮೇಲೆ ನಿಂತಿದೆ’ ಎನ್ನುತ್ತಾನೆ. ಹದಿನೆಂಟನೆಯ ಶತಮಾನದ ಜಾನ್ ಸ್ಟುವರ್ಟ್‌ಮಿಲ್ ಹಾಗೂ ಜೆರೆಮೆ ಬೆಂಥ್ಯಾಮ್ ಚಿಂತಕರು, ಬಹುಜನರಿಗೆ ಸುಖವಾಗುವ ನಡುವಳಿಕೆಗಳನ್ನು ನೀತಿ’ ಎನ್ನುತ್ತಾರೆ. ಹೀಗೆ ಪಾಶ್ಚಾತ್ಯ ದಾರ್ಶನಿಕರ ಪ್ರಕಾರ ಸಹ, ನೀತಿ ಎಂಬುದು ಧರ್ಮದ ಪ್ರಮುಖ ಅಂಶವಾಗಿದೆ. ಆದ್ದರಿಂದ ಧರ್ಮಕ್ಕೆ ಮಹತ್ವ ಬರುವುದು ನೀತಿಯ ಆಚರಣೆಯಿಂದ ಎಂಬುದು ಸುವ್ಯಕ್ತವಾಗುತ್ತದೆ.
ಭಾರತೀಯರ ದೃಷ್ಟಿಯಲ್ಲಿ ಧಾರ್ಮಿಕ ಆಚರಣೆಗಳು ನೀತಿಯ ಆಚರಣೆಗಳೇ ಆಗಿವೆ. ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ವಿಶಿಷ್ಟ ಆಚರಣೆಗಳಿವೆ. ಬಾಹ್ಯದಲ್ಲಿ ಭಿನ್ನತೆಯಿದ್ದರೂ ಆಯಾ ಆಚರಣೆಗಳ ಗುರಿಯೆಲ್ಲಾ ಒಂದೇ ಆಗಿರುತ್ತದೆ. ಮಾನವ ಜೀವನಕ್ಕೆ ಒಂದು ಗುರಿಯಿದೆ. ಆ ಗುರಿ ಯಾವುದೆಂದು ತೋರಿಸಿ ಕೊಡುವುದೇ ದರ್ಶನ. ನಮ್ಮಲ್ಲಿರುವ ಆಂತರಿಕ ಚೈತನ್ಯಕ್ಕೆ ಆತ್ಮ-ಜೀವಾತ್ಮಎಂದು ಕರೆಯುತ್ತೇವೆ. ಅದು ಪರಮಾತ್ಮನ ಅಂಶವೇ ಆಗಿದೆ. ಜೀವಾತ್ಮ ಪರಮಾತ್ಮ ಅಭಿನ್ನ ಎಂದು ನಿರ್ಧರಿಸಿದ ದರ್ಶನಗಳು ಕೆಲವು. ಜೀವಾತ್ಮನು ಪರಮಾತ್ಮನ ಕೇವಲ ಅಂಶ ಮಾತ್ರ ಎಂದು ನಂಬಿದ ದರ್ಶನಗಳು ಕೆಲವು. ಜೀವಾತ್ಮ
ಪರಮಾತ್ಮರ ಸಾಮರಸ್ಯವೇ ಜೀವನದ ಗುರಿ, ಅದೇ ಮುಕ್ತಿ. ಜೀವಾತ್ಮ ಕರ್ಮ ವಿಶೇಷದಿಂದ ದೇಹಾತ್ಮವಾಗಿ ಒಂದು ರೀತಿಯ ಬಂಧನವನ್ನು ಅನುಭವಿಸುತ್ತದೆ. ಅದು ಬಿಡುಗಡೆ ಹೊಂದಿ ಪರಮಾತ್ಮನಲ್ಲಿ ಬೆರೆಯಬೇಕು. ಅದೇ ಜೀವನದ ಗುರಿ’, ಎಂದು ಮತ್ತೆ ಕೆಲವು ದರ್ಶನಗಳು ಪ್ರತಿಪಾದಿಸಿವೆ. ವೀರಶೈವ ದರ್ಶನಗಳಲ್ಲಿ ಜೀವಾತ್ಮ ಪರಮಾತ್ಮನ ಬೆರೆಯುವಿಕೆಯನ್ನು ಲಿಂಗಾಂಗ
ಸಾಮರಸ್ಯ ಎಂದೂ ಶಿವಜೀವೈಕ್ಯವೆಂದೂ ಕರೆಯಲಾಗಿದೆ. ಹೀಗೆ ಗುರಿಯನ್ನು ವಿವಿಧ ದರ್ಶನಗಳಲ್ಲಿ ವಿವಿಧ ರೀತಿಯಲ್ಲಿ ವಿಶ್ಲೇಷಿಸಿವೆ. ಈ ಪ್ರಯತ್ನಕ್ಕಾಗಿ ಬಳಸುವ ಕ್ರಿಯೆಯೇ ಆಚಾರಗಳು ಆಚಾರಗಳೆಂದರೆ ಗುರಿಯನ್ನು ಸೇರಲು, ಬದುಕಿನಲ್ಲಿ ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ಕ್ರಿಯೆಗಳು. ಗುರಿ ಪರಮ ಪವಿತ್ರವಾದುದರಿಂದ ಆಚರಣೆಗಳೂ ಪರಿಶುದ್ಧ ವಾಗಿರಬೇಕು ಪರಮ ಪವಿತ್ರವಾಗಿರಬೇಕು. ಬಾಹ್ಯ ಆಚಾರಗಳು ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತವೆ. ಆಂತರಿಕ ಆಚಾರಗಳು ನಿರ್ದಿಷ್ಟವಾಗಿ ದೈವನಿಯಮದಂತೆ ನಡೆಯುತ್ತವೆ. ಎಲ್ಲ ಧರ್ಮಗಳೂ ಬಾಹ್ಯ ಮತ್ತು ಆಂತರಿಕ ಆಚಾರಗಳನ್ನು ಸಮನ್ವಯಗೊಳಿಸಿ ಅವುಗಳಿಗೆ ಸೈದ್ಧಾಂತಿಕ ಸ್ವರೂಪವನ್ನು ಕೊಟ್ಟಿವೆ.
ಶೈವಾಗಮಗಳಲ್ಲಿ ಪಂಚಾಚಾರ :
ವೀರಶೈವ ಸಿದ್ಧಾಂತಕ್ಕೆ ಶಿವಾಗಮಗಳೇ ಪ್ರೇರಕಗಳಾಗಿವೆ. ಶಿವಾಗಮಗಳು ಸಂಖ್ಯೆ ೨೮.
ಇವುಗಳಲ್ಲಿ ಕಾರ್ಮಿಕದಿಂದ ಸುಪ್ರಭೇದದವರೆಗಿನ ಹತ್ತು ಆಗಮಗಳು ಶಿವಭೇದವೆಂದೂ ವಿಜಯದಿಂದ ವಾತುಲದವರೆಗಿನ ಹದಿನೆಂಟು ಆಗಮಗಳು ರುದ್ರಭೇದವೆಂದೂ ವಿಂಗಡಿಸಲಾಗಿದೆ. ಆಗಮಗಳ ಉತ್ತರಾರ್ಧವು ವೀರಶೈವ ದರ್ಶನದ ಪ್ರತಿಪಾದಿಕವೆಂದಿದೆ. ವೀರಶೈವನಿಗೆ ಸಾಧನಾ ಪ್ರಯೋಗದ ಪರಿಕರಗಳು, ಪಂಚಾಚಾರ ಅನುಸಂಧಾನದ ಅಡಿಗಲ್ಲು ಎನ್ನಬಹುದು. ಇವೆರಡೂ, ಗುರುವಿನುಪದೇಶ ಮತ್ತು ಮಾರ್ಗದರ್ಶನದಿಂದ ಅಳವಡಿಸಿಕೊಳ್ಳಬೇಕಾದವುಗಳು.
ಕಾರಣಾಮಗದಲ್ಲಿ ಶಿಷ್ಯನು ಅಷ್ಟಾವರಣಗಳಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು, ಪಂಚಾಚಾರಕ್ಕನುಗುಣವಾಗಿ ಜೀವನವನ್ನು ನಡೆಸಬೇಕು ಎಂದಿದೆ. ಚಂದ್ರಜ್ಞಾನಾಗಮದಲ್ಲಿ ಪಂಚಾಚಾರಗಳ ಕುರಿತು ವಿವರವಾಗಿ ನಿರೂಪಿಸಲ್ಪಟ್ಟಿದೆ. ಅವೆಂದರೆ, ‘ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಇವು ಪಂಚಾಚಾರಗಳು. ಗುರುವಿನಿಂದ ಕೊಡಲ್ಪಟ್ಟ ಲಿಂಗದ ಹೊರತು ಬೇರೆ ದೈವ ಭುವಿಯಲ್ಲಿ ಇಲ್ಲ ಎಂಬ ಭಾವನೆಯನ್ನು ಲಿಂಗದಲ್ಲಿಡುವುದೇ ಲಿಂಗಾಚಾರ’ ಎಂದಿದೆ.
ಸದಾಚಾರ ಕುರಿತು ಚಂದ್ರಜ್ಞಾನಾಗಮದಲ್ಲಿ ಹೀಗೆ ಹೇಳಿದೆ-ಸದಾಚಾರ ಸಂಪನ್ನರು ಎಂಟು ವಿಧವಾದ ಶೀಲಗಳನ್ನು ಅನುಸರಿಸಬೇಕು. ೧. ಈ ದೇಹವು ಅಶಾಶ್ವತ ಎಂಬ ಭಾವನೆಯನ್ನು ಬೆಳೆಸಿಕೊಂಡು ಜೀವನ ನಡೆಸುವುದಕ್ಕೆ ಅಂಕುರ ಶೀಲವೆಂದಿದೆ. ೨. ತಾವು ವಾಸಿಸುವ ಕುಟುಂಬದವರೆಲ್ಲಾ ಶಿವದೀಕ್ಷೆಯನ್ನು ಪಡೆದಿರಬೇಕೆಂಬುದು ಉತ್ಪನ್ನ ಶೀಲ ೩. ಅಷ್ಟಾವರಣದ ಭಸ್ಮ, ರುದ್ರಾಕ್ಷಧಾರಣೆ ಮಾಡಿರುವುದು ದ್ವಿದಲ ಶೀಲ ೪, ಶಿವತತ್ವಗಳಲ್ಲಿ ಅಚಲ ಶ್ರದ್ಧೆ ಇಟ್ಟಿರುವುದು ಪ್ರವೃದ್ಧ ಶೀಲ ೫ ಶಿವಲಿಂಗಾರ್ಚನೆ ಮಾಡದೆ ಯಾವುದೇ ಪ್ರಸಾದವನ್ನು ಸ್ವೀಕರಿಸದಿರುವುದು ಸಪ್ರಕಾಂಡ ಶೀಲ. ೬ ತಾನು ಸ್ವೀಕರಿಸುವ ಪ್ರಸಾದವನ್ನು ಇಷ್ಟಲಿಂಗಕ್ಕೆ ಅರ್ಪಿಸುವುದೇ ಸಶಾಖಶೀಲ ೮. ಎಲ್ಲ ವ್ಯವಹಾರಗಳನ್ನು ಶಿವಾರ್ಪಿತ ಭಾವನೆಯಿಂದ ಮಾಡುವುದು ಸುಷ್ಪಶೀಲ ೭. ಗುರುಲಿಂಗ ಜಂಗಮದಲ್ಲಿ ಒಂದೇ ತೆರನಾದ ಭಾವನೆಯಿಂದ ಕೂಡಿರುವುದು ಸಫಲ ಶೀಲ. ಹೀಗೆ ಎಂಟು ವಿಧದ ಶೀಲಗಳನ್ನು ವೀರಶೈವರು ಅನುಸಂಧಾನ ಮಾಡವುದೇ ಸದಾಚಾರವೆಂದು ಹೇಳಿದೆ.
ಶಿವಾಚಾರ ಕುರಿತು ಚ೦ದ್ರಜ್ಞಾನಾಗಮದಲ್ಲಿ ಶಾಸ್ತ್ರ ವಿಧಿಯಂತೆ ಹದಿನಾರು ವಸ್ತುಗಳನ್ನು ಶಾಸ್ತ್ರೋಕ್ತ ರೀತಿಯಲ್ಲಿ ಶುದ್ಧಗೊಳಿಸಬೇಕೆಂದು ಹೇಳಿದೆ. ಅವು ಯಾವುವೆಂದರೆ, ೧ ಭೋಗಿಸುವ ಆಹಾರ ಪದಾರ್ಥಗಳನ್ನೆಲ್ಲ ಭಸ್ಮದಿಂದ ಶುದ್ಧಿಗೊಳಿಸುವುದು ದ್ರವ್ಯಶುದ್ಧಿ ೨. ತನ್ನ ಭೂಮಿಯನ್ನು ನಂದಿಯ ಮುದ್ರೆಯಿಂದ ಆವೃತಗೊಳಿಸಿದ ಮರ, ಲೋಹ ಶಿಲೆಯನ್ನು ಬಳಸುವುದು ಕ್ಷೇತ್ರ ಶುದ್ಧಿ. ೩ ಲಿಂಗ ಮುದ್ರೆಯಿಂದ ಶೋಭಿಸುವುದು ಗೃಹಶುದ್ಧಿ, ೪, ಅದೇ ರೀತಿ ಪಾತ್ರಗಳಿರುವುದು ಭಂಡಶುದ್ಧಿ. ೫. ತೃಣ ಸಂಸ್ಕರಿಸುವುದು ತೃಣಶುದ್ಧಿ, ೬, ಬಳಸುವ ಸೌದೆ ಮರಮುಟ್ಟುಗಳ ಸಂಸ್ಕಾರಕ್ಕೆ ಕಾಷ್ಟಶುದ್ಧಿ. ೭ ತಾಂಬೂಲಕ್ಕೆ ಬಳಸುವ ವಸ್ತುಗಳಿಗೂ ಅದೇ ರೀತಿ ಸಂಸ್ಕಾರ ಕೊಟ್ಟರೆ ತಾಂಬೂಲಶುದ್ಧಿ, ೮. ಆಹಾರವನ್ನು ತಯಾರಿಸುವವರು ಶಿವದೀಕ್ಷೆಯನ್ನು ಪಡೆದಿರಬೇಕು. ಭವಿಯ ದೃಷ್ಟಿ ಬೀಳದಂತಿದ್ದರೆ ಪಾಕಶುದ್ಧಿ. ೯. ಶುದ್ಧ ಆಹಾರವನ್ನು ಸೇವಿಸುವ ಗೋವಿನ ಹಾಲು, ಮೊಸರು, ಬೆಣ್ಣೆಗಳನ್ನು ಸಂಸ್ಕರಿಸಿ ಉಪಯೋಗಿಸುವುದು ರಸಶುದ್ಧಿ, ೧೦, ಪುನರ್ಜನ್ಮಕ್ಕೆ ಒಳಗಾಗುವಂತಹ ಪಾಪ ಕರ್ಮಗಳನ್ನು ಮಾಡದಿರುವುದು ಭವಶುದ್ಧಿ ೧೧. ಪಂಚಭೂತಾತ್ಮಕವಾದ ಸೃಷ್ಟಿಯ ಪ್ರಾಣಿಗಳು ವಸ್ತುಗಳಿಗಾಗಲಿ ಅಪಕಾರ ಮಾಡದೆ ಎಲ್ಲದರ ಕ್ಷೇಮವನ್ನೇ ಬಯಸುವುದು ಭೂತಶುದ್ಧಿ, ೧೨. ಎಲ್ಲದರಲ್ಲಿಯೂ ಶಿವಭಾವವನ್ನು ತಳೆದಿರುವುದು ಭಾವಶುದ್ದಿ, ೧೩ ನಡೆಯುವ ಮಾರ್ಗದಲ್ಲಿ ಕಂಡ ಕ್ರಿಮಿಕೀಟಗಳಿಗೆ ನೋವಾಗದಂತೆ ಎಚ್ಚರವಹಿಸಿ ನಡೆಯುವುದು ಮಾರ್ಗಶುದ್ಧಿ, ೧೪. ಸೂರ್ಯನ ಉದಯಕ್ಕೆ ಮುನ್ನ ಬೆಳಗಿನ ಜಾವದಲ್ಲಿ ಶಿವಲಿಂಗಾರ್ಚನೆ ಮಾಡುವುದು ಕಾಲಶುದ್ಧಿ. ೧೫. ತನ್ನ ಮಾತಿನಲ್ಲಿ ಮತ್ತೊಬ್ಬರಿಗೆ ನೋವಾಗದಂತೆ ಕೇಳುಗರಿಗೆ ಹರ್ಷ ತರುವಂತೆ ಮಾತನಾಡುವುದು ವಾಕ್ಕುದ್ಧಿ ೧೬. ಸರ್ವ ಕಾಲದಲ್ಲಿಯೂ ಶರಣರ ಸದ್ಭಕ್ತರ ಸಹವಾಸದಲ್ಲಿರುವುದು ಜನಶುದ್ಧಿ, ಈ ರೀತಿ ಹದಿನಾರು ವಿಧವಾದ ನಿಯಮಗಳನ್ನು ಅನುಸರಿಸುವುದೇ ಶಿವಾಚಾರ.
ಗಣಾಚಾರ ಕುರಿತಂತೆ ಚಂದ್ರಜ್ಞಾನಾಗಮದ ಕ್ರಿಯಾಪಾದದಲ್ಲಿ ಉಲ್ಲೇಖಿಸಿದಂತೆ, ಭಕ್ತನು ಅನುಸರಿಸುವ ಅರವತ್ನಾಲ್ಕು ಶೀಲಗಳು ಈ ಕೆಳಗಿನಂತಿವೆ. ೧. ಸತ್ಯವನ್ನು ನುಡಿಯುವುದು. ೨. ಪ್ರಿಯವಾದ ನುಡಿಗಳನ್ನಾಡುವುದು. ೩. ಸಂತತಿಗಳ ಅಧ್ಯಯನ, ೪, ಗುರು, ಲಿಂಗ, ಜಂಗಮ, ಹಿರಿಯರ ಸ್ತುತಿ ೫. ಮಾನವರ ಸ್ತುತಿ ಮಾಡದಿರುವುದು. ೬ ಆತ್ಮಪ್ರಶಂಸೆ ಮಾಡಿಕೊಳ್ಳದಿರುವುದು. ೭ ಅನ್ಯರನ್ನು ಹೀಯಾಳಿಸದಿರುವುದು, ಇವು ಏಳು ವಾಕ್ ಶೀಲಗಳು, ೮. ಗುರು, ಲಿಂಗ, ಜಂಗಮನನ್ನು ಗೌರವದಿಂದ ಕಾಣಬೇಕು. ೯. ಪೂಜೆಗೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸುವುದು. ೧೦. ರುದ್ರಾಕ್ಷಿಮಾಲೆಯನ್ನು ಹಿಡಿದು ಶಿವಮಂತ್ರವನ್ನು ಜಪಿಸುವುದು. ೧೧ ಗುರು, ಲಿಂಗ, ಜಂಗಮರನ್ನು ಆರಾಧಿಸುವುದು. ೧೨. ಶಿವಧರ್ಮದ ಅಭ್ಯುದಯಕ್ಕಾಗಿ ದಾನ ಧರ್ಮಗಳನ್ನು ಆಚರಿಸುವುದು. ೧೩. ಗುರು, ಲಿಂಗ, ಜಂಗಮ ಸೇವೆ. ೧೪, ಗುರು, ಲಿಂಗ, ಜಂಗಮ ಪ್ರದಕ್ಷಿಣೆ. ೧೫. ಸತ್ಕಾರ್ಯಕ್ಕಾಗಿ ಸಂಚಾರ. ೧೬ ಲಿಂಗಾರ್ಚನೆಗಾಗಿ ಸ್ಥಿರಾಸನ. ೧೭ ಇಷ್ಟಲಿಂಗವನ್ನು ಸದಾ ಧರಿಸಿರುವುದು. ೧೮. ಇಷ್ಟಲಿಂಗ ದರ್ಶನದಿಂದ ಪ್ರಸನ್ನತೆ ಪಡೆಯುವುದು-ಇವು ಪಾದಗತಶೀಲಗಳು. ೧೯. ಇಷ್ಟಲಿಂಗ ನಿರೀಕ್ಷಣೆ. ೨೦. ಅದರಿಂದ ಆನಂದಬಾಷ್ಪ ಸುರಿಸುವುದು-ಇವು ಚಕ್ಷುಗತ ಶೀಲಗಳು. ೨೧. ಗುರು, ಲಿಂಗ, ಜಂಗಮಕ್ಕೆ ಅರ್ಪಿತವಾದ ಪ್ರಸಾದವನ್ನು ಸ್ವೀಕರಿಸುವುದು- ಇದು ಜಿಹ್ವಾಗತ ಶೀಲ, ೨೨. ಗುರು, ಲಿಂಗ, ಜಂಗಮಕ್ಕರ್ಪಿಸಿದ ಕುಸುಮಗಳ ಪರಿಮಳವನ್ನು ಘ್ರಾಣಿಸುವುದು ಘ್ರಾಣಗತ ಶೀಲ. ೨೩ ಗುರು, ಲಿಂಗ, ಜಂಗಮರ ಸ್ತೋತ್ರವನ್ನು ಕೇಳುವುದು. ೨೪. ಗುರು, ಲಿಂಗ, ಜಂಗಮ ನಿಂದೆಯನ್ನು ಕೇಳದಿರುವುದು -ಶ್ರೋತಗತ ಶೀಲ.
ಕಾಯಗತ ಶೀಲಗಳು ೨೭ ಮೈಲಿಗೆಯಾದಾಗ ಸ್ನಾನ ಮಾಡುವುದು ೨೮. ಭವಿಸ್ಪರ್ಶ ಮಾಡದಿರುವುದು. ೨೯. ಭಸ್ಮ, ರುದ್ರಾಕ್ಷಧಾರಣೆ ಮಾಡಿಕೊಂಡಿರುವುದು. ಮನೋಗತ ಶೀಲಗಳು -೩೦. ಬ್ರಹ್ಮಚರ್ಯೆ ೩೧ ಭಕ್ತಿರತಿ ೩೨. ಅಧರ್ಮದ ಬಗ್ಗೆ ಕ್ರೋಧ. ೩೩ ಶಿವಾರಾಧಾನೆಯ ಬಗೆಗೆ ಲೋಭ ೩೪. ಭಕ್ತರಲ್ಲಿ ಮೋಹ, ೩೫. ಇಂದ್ರಿಯಗಳ ಬಗೆಗೆ ಮಾತ್ಸರ್ಯ ೩೬. ಮಾಯಾವಿಗಳ ಬಗೆಗೆ ಮದ. ೩೭ ಗುರು, ಲಿಂಗ, ಜಂಗಮದಲ್ಲಿ ದೋಷಾರೋಪಣೆ ಮಾಡದಿರುವುದು. ೩೮. ಅಹಿಂಸೆ, ೩೯, ದಯೆ, ೪೦. ನಿರ್ವಂಚನೆ. ೪೧ ಶತ್ರುತ್ವವಿಲ್ಲದಿರುವುದು. ೪೨. ಗುರು, ಲಿಂಗ, ಜಂಗಮದಲ್ಲಿ ನಂಬಿಕೆ. ೪೩ ಆಪತ್ತಿನಲ್ಲೂ ಧರ್ಮನಿರತನಾಗಿರುವುದು. ೪೪. ವೈರಿಗಳನ್ನು ನಿಂದಿಸದಿರುವುದು. ೪೫. ಭವದ ಭೋಗದಲ್ಲಿ ನಿರಾಸಕ್ತಿಯಿರುವುದು. ೪೬. ಅಪ್ರಮಾದ ೪೭ ಅಯೋಗ್ಯವಾದುದರಲ್ಲಿ ಆಸಕ್ತಿಯಿಲ್ಲದಿರುವುದು. ೪೮ ಪರರ ವಸ್ತುಗಳ ಅಪಹರಣ ಮಾಡದಿರುವುದು. ೪೮. ಅಲಭ್ಯವಾದುದಕ್ಕೆ ಚಿಂತಿಸದಿರುವುದು. ೫೦. ಶಿವನ ರೂಪ ನಾಮಸ್ಮರಣೆ ೫೧. ಶಿವತತ್ವ ಚಿಂತನೆ. ೫೨. ಗುರು ಹಿರಿಯರ ಪಾದಸೇವೆ ೫೩. ಮಾನಸ ಪೂಜೆ ೫೪. ಗುರು ಹಿರಿಯರ ಸ್ಮರಣೆ, ೫೫. ಸೇವಾಭಾವನೆ. ೫೬. ಶಿವನಲ್ಲಿ ಸಖ್ಯ ಭಾವನೆ. ೫೭. ಶರಣಾಗತಿ ೫೮. ಮೂಲಮಂತ್ರ ಜಪ. ೫೯. ಶಿವನ ರೂಪದ ಅನುಸಂಧಾನ. ೬೦. ನಿರಂತರ ಶಿವಸ್ಮರಣೆ. ೬೧. ಶಿವಸ್ಮರಣೆಯಲ್ಲಿ ನಿಷ್ಠೆ . ೬೨. ಶಿವೋಹಂಭಾವದ ಅನುಸಂಧಾನ. ೬೩ ಶೀಲಗಳ ಅನುಸಂಧಾನದಲ್ಲಿ ಛಲದಿಂದಿರುವುದು. ೬೪. ಶಿವನ ಅನಂತ ರೂಪಗಳನ್ನು ತನ್ನ ರೂಪವೆಂದೇ ಭಾವಿಸಿ ಆನಂದಪರವಶನಾಗಿರುವುದು.
ಭೃತ್ಯಾಚಾರವೆಂದರೆ ಕಿಂಕರತ್ವದಿಂದ ಗುರು, ಲಿಂಗ, ಜಂಗಮ ಸೇವೆ ಮಾಡುವುದು. ತಾನು ಅವರಿಗಿಂತ ಹಿರಿಯನಲ್ಲವೆಂಬ ಅಹಂಕಾರ ನಿರಸನದಿಂದ ಶಿವ ಸಾಕ್ಷಾತ್ಕಾರಕ್ಕಾಗಿ ಸಲ್ಲಿಸುವ ಸೇವೆ ಭೃತ್ಯಾಚಾರವೆನಿಸುವುದು.
ಹೀಗೆ ಪಂಚಾಚಾರಗಳ ವಿವರಣೆಯನ್ನು ಚಂದ್ರಜ್ಞಾನಾಗಮದಲ್ಲಿ ಸಮಗ್ರವಾಗಿ ಕಾಣಬಹುದು. ಆದರೆ ವೀರಶೈವ ದರ್ಶನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ವಾತುಲಾಗಮ, ಸೂಕ್ಷ್ಮಾ ಗಮ, ದೇವೀಕಾಲೋತ್ತರ, ಪಾರಮೇಶ್ವರ, ವಿರಾಗಮಗಳಲ್ಲಿ ವಿವರಿಸಲ್ಪಟ್ಟಿವೆ. ಶರಣ ಸಂಸ್ಕೃತಿಯಲ್ಲಿ ಉಲ್ಲೇಖಿತವಾದ ವೀರಶೈವ ಸೈದ್ಧಾಂತಿಕ ಸಂಗತಿಗಳಿಗೆಲ್ಲಾ ಆಗಮದಲ್ಲಿರುವ ವಿವರಣೆಗಳೇ ಆಧಾರವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆಗಮದ ಶ್ಲೋಕಗಳನ್ನು ಶರಣರು ತಮ್ಮ ವಚನಗಳಲ್ಲಿ ಧಾರಾಳವಾಗಿ ಬಳಸಿರುವುದು ಈ ಅಭಿಪ್ರಾಯಕ್ಕೆ ಪ್ರೇರಕವಾಗಿದೆ.
ವೀರಶೈವವು ಜಗತ್ತಿನ ಅನ್ಯ ದರ್ಶನಗಳಂತೆ ಸ್ವತಂತ್ರವಾಗಿ ಚಿಂತನೆಗೈದ ದರ್ಶನ. ಇಲ್ಲಿ ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮ ಎಂದು ನಿಶ್ಚಯಗೊಂಡಿದೆ. ಅಷ್ಟಾವರಣಗಳು ಸಾಧಕನ ಪ್ರೇರಕಶಕ್ತಿಗಳು, ರಕ್ಷಾಕವಚಗಳು. ಇದನ್ನು ಅಳವಡಿಸಿಕೊಂಡ ಸಾಧಕನು ಪಂಚಾಚಾರಗಳಿಂದಲೇ ತನ್ನ ಯಾತ್ರೆಯನ್ನು ಆರಂಭಿಸಬೇಕು. ಈ ಸಾಧನೆಗೆ ಹತ್ತು ಇಂದ್ರಿಯಗಳು ಹೇಗೆ ಪ್ರಧಾನವೆಂಬುದನ್ನು ಚೆನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೀಗೆ ನಿರೂಪಿಸಿದ್ದಾರೆ.
“ಭವಿತನಕ್ಕೆ ಹೇಸಿ ಭಕ್ತನಾದೆಹೆನೆಂದಡೆ
ಆ ಭವಿಯ ಪೂರ್ವಾಶ್ರಮವ ಕಳೆದು
ಭಕ್ತನ ಮಾಡುವ ಪರಿಯೆಂತಯ್ಯ ?
ತನ ಕಾಯವ ಶುದ್ಧವ ಮಾಡುವುದು
ಜೀವವ ಶುದ್ಧವ ಮಾಡುವುದು
ಆತ್ಮವ ಶುದ್ಧವ ಮಾಡುವುದು
ಮಂತ್ರ ಶುದ್ಧವ ಮಾಡುವುದು
ವಾಕ್ಕು, ಪಾಣಿ, ಪಾದ, ವಾಯು, ಗುಹ್ಯವೆಂಬ
ಕರ್ಮೇಂದ್ರಿಯ ಶುದ್ಧವ ಮಾಡುವುದು
ಶ್ತ್ರೋತ್ರ, ನೇತ್ರ, ಜಿಹ್ವ., ತಕ್ಕು, ಘ್ರಾಣವೆಂಬ
ಬುಧೀಂದ್ರಿಯಗಳ ಶುದ್ಧವ ಮಾಡುವುದು
ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿ
ಜೀವನೇ ಶಿವನೆಂಬ ಪರಿಯಾಯವ ಕೆಡಿಸಿ
ಶಿವನೇ ಜೀವನೆಂಬ ಪರಿಯಾಯವ ತೋರಿ ಪಂಚವಕ್ತ್ರಂಗಳ ನೆಲೆಗೊಳಿಸಿ
ಶ್ವೇತ ಪೀತ ಹರಿತ ಕಪೋತ ಮಾಂಜಿಷ್ಟ ಗೌರವರ್ಣಂಗಳ ತೋರಿ
ಪಂಚಭೂತ ಶುದ್ಧವ ಮಾಡುವುದು
ಜೀವಾತ್ಮ ಪರಮಾತ್ಮಾ ಚ ಎಂಬ ಶ್ರುತಿಯಿಂದ
ಆತ್ಮ ಶುದ್ಧವ ಮಾಡುವುದು
ಇಂತು ಸರ್ವಶುದ್ಧವ ಮಾಡುವುದು
ಆತನ ತಂದು ಗಣ ತಿಂತಿಣಿಯ ಮುಂದೆ ನಿಲ್ಲಿಸಿ
ಆ ಶಿಷ್ಯನ ಜಿಹ್ವೆಯಲ್ಲಿ ಶೃತಿಯನೋದಿಸಿ
“ಓಂ ಕರ್ಮಣಾ ಮನಸಾ ವಾಚಾ ಗುರುಭಕ್ತ್ಯಾಂತು ವತ್ಸಲಃ ||
ಶರೀರಮರ್ಥ೦ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ ‘||
ಎಂದು ಮನಃ ಸ್ಮರಣೆಯ ಆಡಿಸಿ
ಆ ಶಿಷ್ಯನ ಭವಚ್ಛೇದವ ಮಾಡಿ ಚೌಕ ಮಧ್ಯದಲ್ಲಿ ಕುಳ್ಳಿರಿಸಿ
ಓಂ।। ಸಮೇಕಾಮಾನ್ ಕಾಮಕಾಮಾಯಮಹ್ಯಂ
ಎಂಬ ಮಂತ್ರದಿಂದ ಅಗೋದಕವ ತಳೆದು
ಭಾಳದಲ್ಲಿ ವಿಭೂತಿಯ ಪಟ್ಟವ ಕಟ್ಟಿ
ಮಸ್ತಕ ಕಳಸದ ಮೇಲೆ ಹಸ್ತವನಿರಿಸಿ
ಸಹಸ್ರದಳ ಕಮಲದೊಳಗಿದ್ದ ವಸ್ತುವನ್ನು
ಭಾವಕ್ಕೆ ಭಾವದಿಂದ ಮನಕ್ಕೆ ಮನದಿಂದ ದೃಷ್ಟಿಗೆ ತಂದು
ಕುಮಾರ ಮೂರ್ತಿಯೊಳಗೆ ಹುದುಗಿಸಿ
ಇದೇ ಇಷ್ಟಲಿಂಗವೆಂದು ತೋರಿ
ಕರಮನಭಾವದಲ್ಲಿ ನಿರ್ಧರಿಸೆಂದು ಹೇಳಿ
ಸ್ಥಾವರಲಿಂಗ ಪೂಜೆಯ ಮಾಣಿಸಿ
ಕರಕ್ಕೆ ಕಂಕಣವ ಕಟ್ಟಿ ನಿರ್ಧಾರದ ತಾಳೆಯ ಕಂಠದಲ್ಲಿ ಕಟ್ಟಿ
ಕಲಿಯಾಗು ಎಂದು ಎನ್ನ ಕೃತಾರ್ಥವ ಮಾಡಿದ
ಕೂಡಲಚೆನ್ನಸಂಗಯ್ಯ ನಿಮ್ಮ ಶರಣ ಸಂಗನ
ಬಸವಣ್ಣನ ಪಾದಕ್ಕೆ ನಮೋ ನಮೋ ಎಂದೆನು
ಕರ್ಮೇ೦ದ್ರಿಯಗಳು ಜ್ಞಾನೇಂದ್ರಿಯಗಳ ಆಜ್ಞೆಯನ್ನು ಪಾಲಿಸಬೇಕು. ಜ್ಞಾನ ಅಂತರಂಗಕ್ಕೆ ಸಂಬಂಧಿಸಿದುದು, ಕ್ರಿಯೆ ಬಹಿರಂಗಕ್ಕೆ ಸಂಬಂಧಿಸಿದುದು. ಇವೆರಡರ ಸಮನ್ವಯವೇ ಧಾರ್ಮಿಕ ಅರ್ಥದಲ್ಲಿ ಆಚಾರವೆನಿಸುತ್ತದೆ. ಅದನ್ನೇ ಚೆನ್ನಬಸವಣ್ಣ ನವರು-
ʼʼಕ್ರಿಯೆಯೆ ಜ್ಞಾನ ಆ ಜ್ಞಾನವೆ ಕ್ರಿಯೆ
ಜ್ಞಾನವೆಂದರೆ ತಿಳಿಯುವುದು
ಕ್ರಿಯೆ ಎಂದರೆ ತಿಳಿದಂತೆ ಮಾಡುವುದು
ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ
ಅದರಂತೆ ಆಚರಿಸುವುದ ಕ್ರಿಯೆ
ಅರಿದು ಆಚರಿಸದಿದ್ದಡೆ ಅದೆ ಅಜ್ಞಾನ ನೋಡ
ಕೂಡಲ ಚೆನ್ನಸಂಗಮದೇವಾ
ಎಂದಿದ್ದಾರೆ. ಇದು ಬಾಹ್ಯಶುದ್ಧಿಗೆ ಅನುಸರಿಸುವ ನೀತಿ. ದಾರ್ಶನಿಕರ ದೃಷ್ಟಿಯಲ್ಲಿ ಆಚಾರ ಶಬ್ದವು ಮಹತ್ವದ ಅರ್ಥವನ್ನು ಪಡೆದಿದೆ. ಆಚಾರದಿಂದ ಲೌಕಿಕ ಜೀವನದ ಸುಖ ಸಮೃದ್ಧಿಗಳೂ ಲಭಿಸಬೇಕು, ಅಂತೆಯೇ ಅದು ಅಲೌಕಿಕದ ಸಾಧನವೂ ಆಗಬೇಕು
ಮಾನವ ಜೀವನ ಎಲ್ಲ ಜೀವರಾಶಿಗಳಿಗಿಂತಲೂ ಶ್ರೇಷ್ಠವೆಂದು ಎಲ್ಲ ಧರ್ಮಗಳೂ ಸಮರ್ಥಿಸಿವೆ. ಪುನರ್ಜನ್ಮವನ್ನು ಯಾವ ಧರ್ಮವೂ ಬೋಧಿಸಿಲ್ಲ. ಮನುಷ್ಯ ಮಹಾದೇವನಾಗಬೇಕೆಂಬುದೇ ಧರ್ಮದರ್ಶನಗಳ ಗುರಿಯಾಗಿದೆ. ಈ ಕುರಿತಂತೆ ಶರಣ ಹಡಪದ ಅಪ್ಪಣ್ಣನವರು ಹೀಗೆ ಹೇಳುತ್ತಾರೆ.
”ಈ ಜಗದೊಳಗಣ ಆಟವ ನೋಡಿದರೆ
ಎನಗೆ ಹಗರಣವಾಗಿ ಕಾಣಿಸುತ್ತಿದೆ.
ಅದೇನು ಕಾರಣವೆಂದರೆ, ಹಿಂದಣ ಮುಕ್ತಿಯನರಿಯರು
ಮುಂದಣ ಮುಕ್ತಿಯನರಿಯರು
ಬಂದ ಬಂದ ಭವದಲ್ಲಿ ಮುಳುಗುತ್ತಲಿದ್ದಾರೆ
ನಾನಿದರಂದವನರಿದು ದ್ವಂದ್ವವ ಹರಿದು
ಜಗದ ನಿಂದೆ ಸ್ತುತಿಯ ಸಮಗಂಡು
ಹಿಂದ ಹರಿದು ಮುಂದುವರಿದು
ಸದಮಳಾನಂದದಲ್ಲಿ ಐಕ್ಯವಾಗಿ
ಸತ್ಯ ಶರಣರ ಪಾದದಲ್ಲಿ
“ನಿರ್ಮುಕ್ತನಾದೆನಯ್ಯಾ
ಬಸವಪ್ರಿಯ ಕೂಡಲ ಚೆನ್ನಬಸವಣ್ಣ’
ಎಂದಿದ್ದಾರೆ. ಮೋಕ್ಷ ಪ್ರಾಪ್ತಿಯೇ ಜೀವನದ ಗುರಿ. ಈ ಗುರಿ ಮುಟ್ಟುವುದಕ್ಕಾಗಿಯೇ ಸಾಧನೆ ನಡೆಯಬೇಕು. ಅದೇ ರೀತಿಯನ್ನು ಅಲ್ಲಮಪ್ರಭು ಹೀಗೆ ಹೇಳುತ್ತಾರೆ-
ತನು ನಿಮ್ಮ ಪೂಜಿಸುವ ಕೃಪೆಗೆ ಸಂದುದು
ಮನ ನಿಮ್ಮ ನೆನೆವ ಧ್ಯಾನಕ್ಕೆ ಸಂದುದು
ಪ್ರಾಣ ನಿಮ್ಮ ರತಿ ಸುಖಕ್ಕೆ ಸಂದುದು
ಇಂತು ತನು, ಮನ, ಪ್ರಾಣ ನಿಮಗೆ ಸಂದಿಪ್ಪ
ನಿಸ್ಸಂಗಿಯಾದ ನಿಶ್ಚಟ ನಿಜ ಲಿಂಗೈಕ್ಯ
ಕಾಣಾ ಗುಹೇಶ್ವರಾ’
ಎಂದಿದ್ದಾರೆ. ತನು, ಮನ ಇವು ಸಾಮಾನ್ಯವಾಗಿ ಅಹಂಭಾವದ ಪ್ರತೀಕಗಳು. ಅವುಗಳಿಗೆ ಸಂಸ್ಕಾರವಿಲ್ಲದಿದ್ದರೆ ದಾರಿ ದುರ್ಗಮವಾಗುತ್ತದೆ.
ಅದರಲ್ಲೂ ಮನಸ್ಸಿನ ಪಾತ್ರ ಹಿರಿದು. ಮನಸ್ಸು ಸರಿ ಮಾರ್ಗದಲ್ಲಿ ಚಲಿಸಿದರೆ ತನು ಅದನ್ನು ಅನುಸರಿಸುತ್ತದೆ. ಪ್ರಾಣ ತಾನಾಗಿ ಅದರತ್ತ ಸಾಗುತ್ತದೆ. ಈ ಮೂರರ ನಿಯಂತ್ರಣವೇ ಆಚಾರವೆನ್ನಬಹುದು. ತನು-ಮನ-ಪ್ರಾಣಗಳ ಕ್ರಿಯೆಯನ್ನು ಶರಣರು ಆಚಾರವೆಂದು ಕರೆದಿದ್ದಾರೆ. ಆಚಾರಗಳಲ್ಲಿ ಬಹಿರಂಗದ ಆಚಾರಗಳು ಹಾಗೂ ಆಂತರಿಕ ಆಚಾರಗಳೂ ಸಮಾವೇಶಗೊಳ್ಳಬೇಕು. ಇವುಗಳನ್ನೇ ವೀರಶೈವ ದರ್ಶನಕಾರರು ಪಂಚಾಚಾರಗಳೆಂದು ಕರೆದಿದ್ದಾರೆ.
ಪಂಚಾಚಾರಗಳು :
ವೀರಶೈವ ಸಂಸ್ಕೃತಿಯಲ್ಲಿ ಪಂಚಾಚಾರಗಳಿಗೆ ಪ್ರಮುಖ ಸ್ಥಾನವಿದೆ. ಶರಣರು ತಮ್ಮ ಕಾಲದಲ್ಲಿ ಎದುರಿಸಿದ ಸವಾಲುಗಳಲ್ಲಿ ತಮ್ಮ ನಂಬಿಕೆಯನ್ನು ಅನುಸರಿಸುವವರನ್ನು ಏಕಸೂತ್ರದಲ್ಲಿ ಬಂಧಿಸಿ ಸಂಘಟಿಸುವುದಾಗಿತ್ತು. ಅದಕ್ಕಾಗಿ ಅವರು ಒಂದು ಸಾಮಾಜಿಕ ನೀತಿ ಸಂಹಿತೆಯನ್ನು ಸಾಮಾನ್ಯರೆಲ್ಲರಿಗೂ ಅನ್ವಯಿಸುವಂತೆ ಸೃಷ್ಟಿಸಿದರು. ಶರಣರಿಗಿಂತ ಹಿಂದೆಯೂ ಒಬ್ಬ ವ್ಯಕ್ತಿಯು ಮಾಡಬಾರದ್ದೆಂಬ ದೃಷ್ಟಿಯಿಂದ ಪಂಚಮಹಾಪಾತಕಗಳ ಕಲ್ಪನೆಯಿತ್ತು .ಇದು ನೀತಿಯಾದರೂ ನೇತ್ಯಾತ್ಮಕವಾದದ್ದು, ಇಂಥವುಗಳನ್ನು ಮಾಡಬೇಡ ಎಂದು ತಡೆಯುವಂಥದು. ಪ್ರಾಯಶಃ ಇದಕ್ಕೆ ವೈದೃಶ್ಯರೂಪದಲ್ಲಿ ಇತ್ಯಾತ್ಮಕವಾದ, ಆಚರಿಸಲೇಬೇಕಾದ, ಆಚರಣೆಗಳನ್ನು ಶರಣರು ಬೋಧಿಸಿದರು. ಇದು ಒಂದು ಬಗೆಯಲ್ಲಿ ಮಾಡಬಾರದ ಪಂಚಪಾತಕಗಳಿಗೆ ಪೂರಕವಾದುದು. ಶರಣರು ನಾನಾ ಬಗೆಯ ಶೀಲಗಳನ್ನು ವಿವರವಾಗಿ ಬೋಧಿಸಿದ್ದಾರೆ. ಒಂದೆಡೆ ಐವತ್ತು ಆಚಾರಗಳನ್ನು ಉಲ್ಲೇಖಿಸಿದರೆ ಇನ್ನೊಂದೆಡೆ ಶ್ರೇಷ್ಠ ಶರಣನೊಬ್ಬನು ಆಚರಿಸುವ ಐವತ್ತೆರಡು ಆಚಾರಗಳನ್ನು ಹೇಳಲಾಗಿದೆ. ಮತ್ತೊಂದೆಡೆ ಅರವತ್ನಾಲ್ಕು ಆಚಾರಗಳ ಉಲ್ಲೇಖವಿದೆ. ಐವತ್ತಾರು ನೇಮ, ಮೂವತ್ತೆರಡು ಕೃತ್ಯಗಳನ್ನು ಉಲ್ಲೇಖಿಸಿದೆ. ಶರಣರು ಇವುಗಳನ್ನೆಲ್ಲಾ ಒಂದುಗೂಡಿಸಿ ಒಟ್ಟಾರೆ ಎರಡು ಭಾಗ ಮಾಡಿ ಮೊದಲ ಭಾಗದಲ್ಲಿ ಐದು ಆಚಾರಗಳನ್ನು ಸೇರಿಸಿ ಪಂಚಾಚಾರಗಳೆಂದು ಕರೆದರು. ಎರಡನೆಯ ಗುಂಪು ಸುಪ್ತಾಚಾರಗಳೆನಿಸಿದವು. ಪಂಚಾಚಾರವು ಬಾಹ್ಯ ಆಚರಣೆಗಳಿಗೆ ಅನ್ವಯಿಸಿದರೆ ಸಪ್ತಾಚಾರಗಳು ಅಂತರಂಗದ ನಡುವಳಿಕೆಗಳನ್ನು ನಿರ್ದೇಶಿಸುತ್ತವೆ.
ಅವಿರಳ ಜ್ಞಾನಿ ಚೆನ್ನಬಸವಣ್ಣನವರು ಪಂಚಾಚಾರಗಳ ಸ್ವರೂಪವನ್ನು ವಿಸ್ತೃತವಾಗಿ ಅನೇಕ ವಚನಗಳಲ್ಲಿ ವಿವರಿಸಿದ್ದಾರೆ. ಅದರ ಗಂಭೀರ ಸ್ವರೂಪದ ಚಿತ್ರಣ ಈ ಕೆಳಗಿನ ವಚನದಲ್ಲಿ ಕಾಣಬಹುದು-
“ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ
ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ ||
ಲಿಂಗವನ್ನಲ್ಲದೆ ಅನ್ಯವನರಿಯದಿರುವುದೇ ಲಿಂಗಾಚಾರ,
ಸಜ್ಜನ ಕಾಯಕದಲ್ಲಿ ತಂದು ಗುರುಲಿಂಗಜಂಗಮಕ್ಕೆ ನೀಡಿ
ಸತ್ಯಶುದ್ಧನಾಗಿಹುದೇ’ ಸದಾಚಾರ
ಶಿವಭಕ್ತರಲ್ಲಿ ಕುಲಗೋತ್ರ ಜಾತಿ ವರ್ಣಾಶ್ರಮವನರಸದೆ
ಅವರೊಕ್ಕುದಕೊಂಬುದೇ ಶಿವಾಚಾರ,
ಶಿವಾಚಾರದ ನಿಂದೆಯ ಕೇಳದಿಹುದೇ ಗಣಾಚಾರ,
ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ
ಭಯಭಕ್ತಿಯಿಂದ ಆಚರಿಸುವುದೇ ಭೃತ್ಯಾಚಾರ
ಇಂತೀ ಪಂಚಾಚಾರವುಳ್ಳ ಭಕ್ತರ ಒಕ್ಕುದನಿಕ್ಕಿ ಸಲಹಯ್ಯ
ಪ್ರಭುವೆ ಕೂಡಲ ಚೆನ್ನಸಂಗಮದೇವಾ’
ಈ ಒಂದು ವಚನದಲ್ಲಿ ಪಂಚಾಚಾರಗಳ ಅಂತರಾರ್ಥ, ಬಹಿರಾರ್ಥವನ್ನೆಲ್ಲಾ ಸಮರಸಗೊಳಿಸಿದ್ದಾರೆ. ಇವುಗಳನ್ನು ಒಂದೊಂದಾಗಿ ವಿಶ್ಲೇಷಿಸಬಹುದು.
೧. ಲಿಂಗಾಚಾರ :
ಈ ತತ್ವದಲ್ಲಿ ಎರಡು ಪದಗಳಿವೆ. ‘ಲಿಂಗ+ಆಚಾರ’ ಅಂದರೆ ಲಿಂಗದ ಬಗ್ಗೆ ಆಚಾರವುಳ್ಳವನಾಗಿರುವುದು. ವೀರಶೈವನು ಲಿಂಗದೊಡನೆ ನಡೆದುಕೊಳ್ಳಬೇಕಾದ ರೀತಿಯನ್ನು ವಿಧಿಸುತ್ತದೆ. ದೀಕ್ಷೆ ಪಡೆದು, ಲಿಂಗ ಧರಿಸಿ, ಭವಿಯಾಗಿದ್ದವನು ಭಕ್ತನಾಗಿ ಮಾರ್ಪಟ್ಟ ಮೇಲೆ ತ್ರಿಕರಣ ಪೂರ್ವಕವಾಗಿ ಆ ಲಿಂಗವನ್ನೇ ನಂಬಿರಬೇಕು. ಅನ್ಯದೈವವನ್ನಾಗಲಿ, ಸ್ಥಾವರಲಿಂಗವನ್ನಾಗಲಿ ಪೂಜಿಸ ಬಾರದು. ಲಿಂಗವು ಬಾಹ್ಯ ಕುರುಹು ಅಷ್ಟೇ. ಅದು ಸರ್ವತ್ರವ್ಯಾಪಿಯಾದ ಚೈತನ್ಯದ ಸಂಕೇತ. ಆದ್ದರಿಂದ ಲಿಂಗವನ್ನು ಧರಿಸಿರುವವರಲ್ಲಿ ಏಕತೆಯನ್ನು ಸಾಧಿಸಬೇಕೆಂಬ ಆಶಯ.
ಚೆನ್ನಬಸವಣ್ಣನವರು ಇನ್ನೊಂದು ವಚನದಲ್ಲಿ
”ಅಯ್ಯಾ ಶ್ರೀ ಗುರು ಕರುಣಿಸಿಕೊಟ್ಟ ಲಿಂಗಜಂಗಮವಲ್ಲದೆ
ಅನ್ಯದೈವಂಗಳ ತ್ರೈವರಣದಲ್ಲಿ ಅರ್ಚಿಸ
ದಿರ್ಪುದೆ ಲಿಂಗಾಚಾರವೆಂಬೆನಯ್ಯ’
ಎಂದು ಹೇಳುವಲ್ಲಿ ‘ಲಿಂಗ’ ಶಬ್ದಕ್ಕಿರುವ ವ್ಯಾಪಕವಾದ ಅರ್ಥವನ್ನು ಗಮನಿಸಬೇಕು. ಇಷ್ಟಲಿಂಗದ ವೈಶಿಷ್ಟ್ಯವೆಂದರೆ ಅದು ಅಂಗಡಿಯಿಂದ ತಂದು ಪೂಜಿಸುವ ವಸ್ತುವಲ್ಲ ಅದು ಶ್ರೀ ಗುರು ಕರುಣಿಸಿಕೊಟ್ಟದ್ದು, ಅಂದರೆ ಗುರುವಿಗೂ ಶಿಷ್ಯನಿಗೂ ನಿಕಟ ಸಂಪರ್ಕ ಕಲ್ಪಿಸಿದ ತತ್ವ ಸಂಪತ್ತು. ಸಮರ್ಥ ಗುರುವಿನ ಸಂಪರ್ಕದಿಂದ ತನು ಮನದ ಅಶುಚಿತ್ವವೂ, ಅಜ್ಞಾನವೂ ಅಳಿಸಿ ಅಂತರಂಗದಲ್ಲಿ ಆತ್ಮ ಸಾಕ್ಷಾತ್ಕಾರ ಸಾಧನೆಗೆ ಸಂಕಲ್ಪ ಮಾಡುವಂತಾಗಬೇಕು. ಅದರಿಂದ ಅಂಗಕ್ಕೂ ಲಿಂಗಕ್ಕೂ ಸಂಸ್ಕಾರ ದೊರೆಯಬೇಕು.
ವೀರಶೈವ ಸಿದ್ಧಾಂತದಲ್ಲಿ ಪ್ರತಿಪಾದಿಸಿದಂತೆ ಗುರು, ಲಿಂಗ ಮತ್ತು ಶಿಷ್ಯ (ಭಕ್ತ) ಈ ಮೂರಕ್ಕೂ ಉತ್ತಮ ಸಂಸ್ಕಾರವಿರಬೇಕಾಗುತ್ತದೆ. ಇಷ್ಟಲಿಂಗಾರ್ಚನೆ ಸಾಧನೆಯ ಪ್ರಥಮ ಹಂತ. ಈ ಹಂತದಲ್ಲಿ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ, ಷೋಡಶೋಪಚಾರಗಳನ್ನು ನಡೆಸಬೇಕಾಗುತ್ತದೆ. ಇದಕ್ಕೆ ಕಾರಣ ಮನವನ್ನು ಲಿಂಗದಲ್ಲಿ ನಿಲ್ಲಿಸುವುದಕ್ಕಾಗಿ ಪ್ರೇರಕ ಈ ಅರ್ಚನೆ; ಆದರೆ ಅದೇ ಗುರಿಯಲ್ಲ, ನಿಜವಾದ ಅರ್ಚನೆಯೆಂದರೆ ಇಷ್ಟಲಿಂಗದಲ್ಲಿ ಯೋಗದ ಅನುಸಂಧಾನ ನಡೆಯಬೇಕಾಗುತ್ತದೆ. ಷಣ್ಮುಖ ಸ್ವಾಮಿಗಳು-
“ಎನ್ನ ಕರ ಕಮಲಮಧ್ಯದಲ್ಲಿ ಪರಮಶಿವ
ಲಿಂಗವ ತುಂಬಿ, ಆ ಲಿಂಗದ ಮಧ್ಯದಲ್ಲಿ ಕಂಗಳ
ತುಂಬಿ, ಆ ಕಂಗಳ ಮಧ್ಯದಲ್ಲಿ ಮನವ ತುಂಬಿ,
ಆ ಮನದ ಮಧ್ಯದಲ್ಲಿ ಭಾವವ ತುಂಬ ಪರಮಾಗಿರ್ದೆನಯ್ಯ
ನಿಮ್ಮೊಳಗೆ ಅಖಂಡೇಶ್ವರಾ
ಎಂದಿದ್ದಾರೆ. ಇದನ್ನು ಗಮನಿಸಿದಾಗ ‘ಇಷ್ಟಲಿಂಗ’ ಅರ್ಚನೆಗೆ ಬಳಸುವ ಸಾಧನ ಮಾತ್ರವಲ್ಲ, ಅದು ಮುಕ್ತಿಗೆ ಏಣಿ ಇದ್ದಂತೆ. ಅದಕ್ಕೆ ಬಳಸುವ ಶಿಲೆ ಅದರ ಮೇಲೆ ರೂಪಿಸುವ ಚಿದ್ರಸದಂತೆ. ಹೀಗೆ ಆಂತರಿಕ ಸಿದ್ಧಿಗೆ ಬಾಹ್ಯದಲ್ಲಿ ಇಷ್ಟಲಿಂಗ’ ವನ್ನು ಒಂದು ಸಾಧನವಾಗಿಸಿಕೊಂಡ ನಂತರ ಪ್ರಾಣಲಿಂಗ ಪೂಜೆ, ಕೊನೆಗೆ ಭಾವಲಿಂಗ ಪೂಜೆ ನಡೆಯಬೇಕು. ಸ್ಥೂಲ ತನುವಿನಲ್ಲಿ ಇಷ್ಟಲಿಂಗ ಪೂಜೆ, ಸೂಕ್ಷ್ಮತನುವಿನಲ್ಲಿ ಪ್ರಾಣಲಿಂಗ ಪೂಜೆ, ಕಾರಣತನುವಿನಲ್ಲಿ ಭಾವಲಿಂಗ ಪೂಜೆ ನಡೆಯಬೇಕು. ಇಂತಹ ಕ್ರಿಯೆಯೇ ಲಿಂಗಾಚಾರವೆಂದು ಪ್ರತಿಬೋಧಿತವಾಗಿದೆ.
೨. ಸದಾಚಾರ :
ಇದನ್ನು ಸತ್+ಆಚಾರ ಎಂದು ಬಿಡಿಸಬಹುದು. ಪಂಚಾಚಾರಗಳಲ್ಲಿ ಇದು ಎರಡನೆಯ ಆಚಾರವಾಗಿದೆ. ಶರಣ ಸಂಸ್ಕೃತಿಯ ಜೀವಾಳವೇ ಸದಾಚಾರವಾಗಿದೆ. ಸದಾಚಾರವನ್ನು ಸಮಯಾಚಾರವೆಂತಲೂ ಕರೆಯಲಾಗಿದೆ. ಇದು ಜಾತಿ ಮತ, ಲಿಂಗ, ಪಕ್ಷ, ಪಂಥ ಭೇದವಿಲ್ಲದೆ ಎಲ್ಲರೂ ಅನುಸರಿಸಿ ಆತ್ಮೋದ್ಧಾರ ಮಾಡಿಕೊಳ್ಳುವ ಸುಲಭ ಸಹಜಯೋಗ. ಸತ್ ಪದವು ‘ಸತ್ಯ’ ಎಂಬ ಅರ್ಥವನ್ನು ಕೊಡುತ್ತದೆ. ಸತ್ ಎಂಬುದು ಪರಮಾತ್ಮನ ಸ್ಮರಣೆಯ ಸಂಕೇತ. ಆಚಾರವೆಂಬುದು ಮಾನವರ ನಡೆ-ನುಡಿ, ಜೀವನ ವಿಧಾನಗಳ ಸಂಕೇತ. ಮಾನವ ಜೀವನ ದೊರೆತಿರುವುದೇ ಭಾಗ್ಯ. ಅದನ್ನು ಸದುಪಯೋಗಪಡಿಸಿಕೊಂಡು ಸಾರ್ಥಕಗೊಳಿಸಬೇಕೆಂಬುದೇ ಸರ್ವರ ಅಪೇಕ್ಷೆ. ಅದಕ್ಕಾಗಿ ಬೇಕಾದ ಪರಿಸರವನ್ನು ಸೃಷ್ಟಿಕರ್ತನು ನಿರ್ಮಿಸಿದ್ದಾನೆ. ಅದನ್ನು ಬಳಸಿಕೊಳ್ಳುವ ಕ್ರಿಯಾಶೀಲತೆ ಬೇಕು.
‘ಸದಾಚಾರವು’ ಸತ್ಯಶುದ್ಧ ಮಾರ್ಗ, ಸರ್ವರ ಹಿತಕ್ಕಾಗಿ ಮಾಡುವ ಸತ್ಕಾರ್ಯಗಳು, ಸತ್ಯಶುದ್ಧ ಉದ್ಯೋಗ ಮೊದಲಾದ ಅರ್ಥಗಳನ್ನು ಒಳಗೊಳ್ಳುತ್ತದೆ. ಇಲ್ಲಿ ಕೇವಲ ಉದರನಿಮಿತ್ತವಾಗಿ ತನ್ನ ಕುಟುಂಬದ ಕ್ಷೇಮಕ್ಕಾಗಿ ಮಾಡುವ ಕಾರ್ಯವನ್ನು ಸದಾಚಾರವೆನ್ನಲಾಗದು. ಕೇವಲ ಸ್ವಾರ್ಥ ಪರನಾಗಿರಬಾರದು. ಅಂಥವರು ಭಕ್ತನೆನಿಸಿಕೊಳ್ಳಲು ಅಯೋಗ್ಯ, ಅಂಥವರ ಬಗ್ಗೆ ಚೆನ್ನಬಸವಣ್ಣನವರು-
ʼ’ಹಸಿವಿನ ಹಂಗಿಗೆ ಭವಿತಾವಕ್ಕೆ ಇಚ್ಛೆ
ಮಾಡವವರು, ಮಥನದ ಹಂಗಿಗೆ ಭವಿಸಂಗದ
ಇಚ್ಛೆಯ ಮಾಡುವರು, ಶ್ರೋತ್ರದ, ನೇತ್ರದ
ಘ್ರಾಣದ ಸುಖವ ಭುಂಜಿಸುವನ್ನಕ್ಕ
ಭಕ್ತಿಯೆಂತೆಂಬೆ, ಲಿಂಗೈಕ್ಯನೆಂತೆಂಬೆ
ಕೂಡಲ ಚೆನ್ನಸಂಗಯ್ಯ
ಅವರು ಸದಾಚಾರಕ್ಕೆ
ಸಲ್ಲರು ದೂರ ನೋಡಯ್ಯʼʼ
ಎಂದು ತೀವ್ರವಾಗಿ ಖಂಡಿಸುತ್ತಾರೆ. ಸದಾಚಾರವು ಸಮುದಾಯದ ಸದಸ್ಯನೊಬ್ಬನು ತನ್ನ ಬಾಳನ್ನು ಇತರರೊಂದಿಗೆ ಕಳೆಯಬೇಕಾದ ರೀತಿಯನ್ನು ಹೇಳುತ್ತದೆ. ವೀರಶೈವನು ಭಿಕ್ಷೆಯೆತ್ತದೆ, ಸೋಮಾರಿಯಾಗಿ ತಿನ್ನದೆ, ತನ್ನ ಸ್ವಂತ ಸಂಪಾದನೆಯಿಂದಲೇ ಜೀವನವನ್ನು ನಡೆಸಬೇಕು. ಸದಾಚಾರಕ್ಕೆ ಮುಖ್ಯವಾದುದು ಕಾಯಕ, ಕಾಯಕದಿಂದ ಹಣ ಸಂಪಾದನೆ ಮಾಡಿ ತಾನು ಜೀವಿಸುವುದಷ್ಟೇ ಅಲ್ಲದೆ, ಅದನ್ನು ತನ್ನ ಸಮಾಜದ ಇತರರೊಂದಿಗೆ ಹಂಚಿ ಅನುಭವಿಸಬೇಕು ಎಂದು ಸದಾಚಾರವು ನಿಯಮಿಸುತ್ತದೆ.
“ಕಾಯಕವೇ ಕೈಲಾಸ’ ಎಂಬುದು ಶರಣತತ್ವದ ಜೀವಾಳ, ಕಾಯಕ ಸತ್ಯಶುದ್ಧವಾಗಿರಬೇಕು. ಮತ್ತು ಗಳಿಸಿದ್ದನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸಬೇಕು. ಅದನ್ನು ಇನ್ನೂ ಸೂಕ್ಷ್ಮವಾಗಿ ಗುರುವಿಗೆ ತನುವು ಲಿಂಗಕ್ಕೆ ಮನವು, ಜಂಗಮಕ್ಕೆ ಧನವು ಅರ್ಪಿತವಾಗಬೇಕು. ಇಲ್ಲಿ ಗುರುವಿಗೆ ತನು ಎಂದರೆ ಗುರುವಿನ ಹಸ್ತಮಸ್ತಕ ಸಂಯೋಗದಿಂದ ಪರಿಶುದ್ಧಗೊಂಡ ದೇಹದ ಕ್ರಿಯೆಗಳೆಲ್ಲಾ ಗುರುವಿನ ಕೃಪೆಗೆ ಪಾತ್ರವಾಗಬೇಕು. ಗುರೂಪದೇಶ ಮಾರ್ಗದಲ್ಲಿ ಪರಮಾತ್ಮನ ಸಂಪತ್ತಾಗಿರುವ ಈ ದೇಹವು ಬಳಕೆಯಾಗಬೇಕು ಎಂಬುದೇ ಗುರುವಿಗೆ ತನುವನ್ನರ್ಪಿಸಬೇಕೆಂಬ ಭಾವ. ಅದೇ ರೀತಿ ಲಿಂಗಕ್ಕೆ ಮನವನ್ನು ಎಂದರೆ ಮನಸ್ಸು ಶಿವಮಯವಾಗಬೇಕು. ಲಿಂಗ ವಿಶ್ವದ ಪ್ರತೀಕ. ಮನಸ್ಸು ಎಲ್ಲಾ ಇಂದ್ರಿಯಗಳ ಸೂತ್ರಧಾರ, ಅದು ಚಂಚಲವಾದರೆ, ಅನೀತಿಯ ದಾರಿ ಹಿಡಿಯುವದೇ ಹೆಚ್ಚು. ಆದ್ದರಿಂದ ಅದನ್ನು ಸ್ಥಿರಗೊಳಿಸಿ ಲಿಂಗದ ನೆನಹನ್ನು ತುಂಬಬೇಕು. ಮನ ಲಿಂಗಮಯವಾಗುವುದು ಎಂದರೆ ವಿಶ್ವಮಯವಾಗುವುದು ಎಂದರ್ಥ. ಧನ ಜಂಗಮಕ್ಕೆ ಎಂದರೆ, ತನ್ನ ದುಡಿಮೆಯ ಫಲ ಪರಹಿತಕ್ಕೆ ಬಳಕೆ ಯಾಗಬೇಕೆಂಬುದು ಶರಣರ ನಿಲುವು. ಹೀಗೆ ತನು-ಮನ-ಧನವನ್ನು ಸದುಪಯೋಗಪಡಿಸುವುದೇ ಸಹಜ ಯೋಗ, ಇದೇ ಸದಾಚಾರ ಅಥವಾ ಸಮಯಾಚಾರ, ಸದಾಚಾರದ ಬಗೆಗೆ ಬಸವಣ್ಣನವರ ನಡಿಗಳು ಗಮನಾರ್ಹ.
“ಲಕ್ಷಗಾವುದ ಹೋಗಿ
ಭಕ್ತಭಕ್ತನ ಕಾಂಬುದು ಸದಾಚಾರ
ಅಲ್ಲಿ ಕೂಡಿ ದಾಸೋಹವ ಮಾಡಿದಡೆ
ಕೂಡಿಕೊಂಬನು ನಮ್ಮ ಕೂಡಲ ಸಂಗಮದೇವಾ”
ಎಂದಿದ್ದಾರೆ. ಅಂತೆಯೇ ಅವರ ಮತ್ತೊಂದು ವಚನದಲ್ಲಿ,
“ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಸದ್ಭಕ್ತನು;
ಮಾಡಿದಡೆ ಮಾಡಲಿ ಮಾಡಿದಡೆ ತಪ್ಪೇನು ?
ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈ ದುಡುಕಿದಡೆ
ಅದು ಪ್ರಸಾದವಲ್ಲ, ಕಿಲ್ಬಷ
ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ
ಪ್ರಸಾದಕ್ಕೆ ಕೈ ತೆಗೆದಡೆ, ಅದು ಲಿಂಗಕ್ಕೆ ಬೋನ,
ಇದು ಕಾರಣ, ಕೂಡಲ ಸಂಗಮದೇವಾ
ಇಂತಪ್ಪ ಸದಾಚಾರಿಗಳನೆನಗೆ ತೋರಾ |
ಎಂದಿದ್ದಾರೆ. ಇಲ್ಲಿ ಪರಸ್ಪರ ಪ್ರೇಮ ಸೌಹಾರ್ದಗಳ ಪ್ರತಿಪಾದನೆ ಇದೆ, ಸಮಾಜದಲ್ಲಿ ಸಾಮರಸ್ಯದ ಸಾಧನೆಯ ಸೂಚನೆಯಿದೆ.
ಸದಾಚಾರದಲ್ಲಿ ಎಂಟು ವಿಧಗಳು. ೧. ಉತ್ಪನ್ನ ಶೀಲ, ೨. ಆಚಾರಶೀಲ, ೩. ಉದ್ಯೋಗಶೀಲ, ೪. ಉತ್ಕುಲ ಶೀಲ, ೫. ಸಂಬಂಧಶೀಲ, ೬. ಪ್ರಸನ್ನಶೀಲ, ೭. ಉತ್ತಮಶೀಲ. ಜ್ಞಾನಶೀಲ. ಇಲ್ಲಿ ‘ಶೀಲ ಎಂದಿರುವುದು ಆಚಾರ ಶಬ್ದದ ಪರ್ಯಾಯ ಪದ. ಸದಾಚಾರದಲ್ಲಿ ಇರಬೇಕಾದ, ಗಮನಿಸಬೇಕಾದ, ಗಳಿಸಬೇಕಾದ, ಬಳಸಬೇಕಾದ ಆಂತರಿಕ ಸಂಪತ್ತಿನ ವಿವರಣೆ ಈ ಶೀಲ ಸಂಪತ್ತಿನಲ್ಲಿ ವ್ಯಕ್ತವಾಗಿದೆ. ಸದಾಚಾರದ ಅಂತರಾರ್ಥವನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಒಟ್ಟಾರೆ ಸದಾಚಾರಿಯು
ಅಷ್ಟಾವರಣಗಳಲ್ಲಿ ಅಚಲ ನಂಬಿಕೆ, ವೀರಶೈವರನ್ನೆಲ್ಲ ಸಮಾನವೆಂದು ತಿಳಿಯುವುದು ಭವಿಗಳೊಡನೆ ಸೇರದಿರುವುದು, ಲೌಕಿಕ ಕರ್ಮಗಳಲ್ಲಿಯ ವಿಧಿ ನಿಷೇಧಗಳನ್ನು ಪಾಲಿಸುವುದು ಮುಂತಾದವುಗಳನ್ನು ಒಳಗೊಳ್ಳುತ್ತಾನೆ.
೩. ಶಿವಾಚಾರ :
ಪಂಚಾಚಾರಗಳಲ್ಲಿ ಮೂರನೆಯದು ಶಿವಾಚಾರ. ಇಲ್ಲಿಯೂ ಶಿವ+ಆಚಾರ ಎಂದು ಎರಡು ಪದಗಳಿವೆ. ಶಿವಾಚಾರದ ತತ್ವಾರ್ಥವನ್ನು ಅರಿಯಬೇಕಾದಲ್ಲಿ ಮೊದಲು ‘ಶಿವ’ ಶಬ್ದದ ಮೂಲಾರ್ಥವನ್ನು ಅರಿಯಬೇಕಾಗುತ್ತದೆ. ಅಮರಕೋಶದಲ್ಲಿ ‘ಶಿವ’ ಶಬ್ದಕ್ಕೆ ʼʼಶ್ವಃ ಶ್ರೇಯಸಂ ಶಿವಂ ಭದ್ರಂ ಕಲ್ಯಾಣಕಾರಿ, ಮಂಗಳಪ್ರದವಾದುದೇ ಶಿವ” ಎಂಬರ್ಥ. ಶರಣರು ಹಿಂದೂ ಸಂಸ್ಕೃತಿಯ
ಪೌರಾಣಿಕ ಶಿವನ ಪ್ರತಿಪಾದನೆಗನುಗುಣವಾದ ಶಿವಚಾರತತ್ವ ಪ್ರತಿಪಾದಿಸಿಲ್ಲ ಬದಲಾಗಿ ಸದಾ ಲೋಕಕಲ್ಯಾಣವನ್ನೆ ಬಯಸುವ, ಲೋಕಹಿತಕರವಾದ ಮಂಗಳ ಕಾರ್ಯವನ್ನೇ ಕೈಕೊಳ್ಳುವ ಶಿವಭಕ್ತನನ್ನು ಪ್ರತಿಪಾದಿಸುತ್ತಾರೆ.
ಶಿವಾಚಾರತತ್ವದಲ್ಲಿ ಸ್ವಾರ್ಥಭಾವವನ್ನು ತೊರೆದು ಸರ್ವವೂ ಶಿವನ ಪ್ರಸಾದವೆಂಬ ಭಾವನೆ ಬೆಳೆಯುತ್ತದೆ. ಅದರಿಂದ ಅಹಂಕಾರ, ಮಮಕಾರವಳಿಯುತ್ತದೆ. ಶಿವತ್ವವೇ ಜೀವನದಲ್ಲಿ ಬೆಳೆಯುತ್ತದೆ ಮತ್ತು ಉಳಿಯುತ್ತದೆ. “ಶಿವಭಕ್ತರಲ್ಲಿ ಕುಲಗೋತ್ರ, ಜಾತಿ, ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೇ ಶಿವಾಚಾರ” ಎಂದು ಚೆನ್ನಬಸವಣ್ಣನವರು ‘ಶಿವಾಚಾರ’ ವನ್ನು ವಿಶ್ಲೇಷಿಸಿದ್ದಾರೆ. ಶಿವಾಚಾರವು ತನ್ನ ಧರ್ಮಕ್ಕೆ ಸೇರಿದವರನ್ನು ಕಾಣಬೇಕಾದ ಬಗೆಯನ್ನು ವಿಧಿಸುತ್ತದೆ. ತನ್ನ ಧರ್ಮದ ಉತ್ತಮಿಕೆಗಾಗಿ, ಪ್ರಸಾರಕ್ಕಾಗಿ ವ್ಯಕ್ತಿಯು ತನ್ನ ನಡುವಳಿಕೆ-ಮನೋಭಾವಗಳಿಂದ ಸಲ್ಲಿಸಬೇಕಾದ ಕಾಣಿಕೆಯನ್ನು ಹೇಳುತ್ತದೆ.
ಶರಣರ ಕಾಲಕ್ಕೆ ಎಲ್ಲ ಮತಜಾತಿಗಳಿಂದ ವೀರಶೈವಕ್ಕೆ ಮತಾಂತರ ನಡೆಯಿತು. ಶರಣರು ಲಿಂಗಧಾರಿಗಳಲ್ಲಿ ಸಮಾನತೆಯನ್ನು ಬೋಧಿಸುವುದು ಆಗ ಅತ್ಯವಶ್ಯವಾಗಿತ್ತು. ವೀರಶೈವಕ್ಕೆ ಸೇರಿದ ಕೆಲವರು ತಮ್ಮ ಜಾತಿ, ಮತ, ಸಾಮಾಜಿಕ ಸ್ಥಿತಿಗತಿಗಳ ಸ್ಮರಣೆಯಿಂದ ಕೀಳೆಂದು ಪರಿಗಣಿಸುತ್ತಿದ್ದರು. ಇದು ಧರ್ಮದ ಐಕ್ಯತೆಗೆ ಮಾರಕವಾದ್ದರಿಂದ ಐಕ್ಯಮತ ಸಾಧನೆಯ ಉದ್ದೇಶದಿಂದ ಶರಣರು ಶಿವಾಚಾರವನ್ನು ನಿಯಮಿಸಿದರು. ಕೇವಲ ಊಟೋಪಚಾರಗಳಲ್ಲಿ ಮಾತ್ರವಲ್ಲದೆ, ವೈವಾಹಿಕ ಸಂಬಂಧಗಳಲ್ಲಿಯೂ ವೀರಶೈವರೆಲ್ಲ ಅಡೆತಡೆಯಿಲ್ಲದೆ ಸೇರಬೇಕೆಂದು ಬೋಧಿಸಿದರು. ಜೀವನವೇ ಶಿವಮಯವಾಗಬೇಕು. ಅದು ಶಿವಾಚಾರದ ಲಕ್ಷಣ. ಅವನು ಮಾಡುವ ಕಾರ್ಯವು ಮಂಗಳಕರವಾಗಿರಬೇಕು; ಯಾರಿಗೂ ಅಹಿತಕಾರಿಯಾಗಿರಬಾರದು.
”ಶಿವಚಿಂತೆ, ಶಿವಜ್ಞಾನ ಭ್ರಮೆ ತಿಳಿದವಂಗಲ್ಲದೆ
ಆಚಾರ ಶಿವಾಚಾರ ತಮ ತಮಗೆ ಸೂರೆಯೆ,
ಕೂಡಲಸಂಗಮದೇವನ ನೆರೆ ಪೂಜಿಸಿದವಂಗಲ್ಲದೆʼʼ
ಶಿವಾಚಾರಿಗಳು ಸದಾ ಶಿವಚಿಂತೆಯಲ್ಲಿರಬೇಕು. ಅವರ ಮನಸ್ಸಿನಲ್ಲಿ ದುಷ್ಟ ಆಲೋಚನೆಗಳು ಸುಳಿಯಬಾರದು. ಅದನ್ನು ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ –
ಅವರ ನಡೆಯೊಂದು ನುಡಿಯೊಂದಾದಡೆ
ಶಿವಾಚಾರಕ್ಕವರು ಸಲ್ಲರಯ್ಯಾ |
ಬಲ್ಲನು, ಸಾತ್ವಿಕರಲ್ಲದವರನೊಲ್ಲನು;
ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು,
ಪ್ರಪಂಚಯ ಮನವನೊಲ್ಲನು ಕೂಡಲಸಂಗಮದೇವನು’,
ಈ ವಚನದಲ್ಲಿ ಶಿವಾಚಾರದ ಒಟ್ಟು ವಿಶ್ಲೇಷಣೆ ಮೂಡಿ ಬಂದಿದೆ. ಶಿವಾಚಾರ ಸಂಪನ್ನನ ನಡೆ ನುಡಿಗಳಲ್ಲಿ ಭೇದವಿರಬಾರದು, ಸ್ವಾರ್ಥ, ರೋಷಗಳಿರಬಾರದೆಂಬುದು ಅಷ್ಟೇ ನಿಖರವಾದುದು. ತತ್ವವನ್ನು ಹೇಳುವುದು ಸುಲಭ, ಆದರೆ ಆಚರಣೆ ಕಷ್ಟದಾಯಕ. ಏಕೆಂದರೆ,
“ಶಿವಾಚಾರವೆಂಬುದೊಂದು ಬಾಳಬಾಯಧಾರೆ,
ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು,
ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು
ಬಿಚ್ಚಿ ಬೇರಾದಡೆ ಮೆಚ್ಚುವನೇ ನಮ್ಮ
ಕೂಡಲಸಂಗಮದೇವಾʼʼ
ಶಿವಾಚಾರವೆಂಬುದು ಕತ್ತಿಯ ಅಲಗಿನಷ್ಟೇ ಹರಿತವಾಗಿದೆ. ಅದನ್ನು ಅಳವಡಿಸಿಕೊಳ್ಳುವಲ್ಲಿ ತನ್ಮಯತೆ, ನಿರ್ವ೦ಚನೆ ಇರಬೇಕಾಗುತ್ತದೆ. ಇಲ್ಲಿ ಬಸವಣ್ಣನವರು ಆತ್ಮಸಾಕ್ಷಿಯಾಗಿ ಹೇಳುವುದೆಂದರೆ-
“ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯವ ಮುಟ್ಟಲೀಯದೆ
ಆಚಾರವ ಶಿವಾಚಾರವ ಮಾಡುವೆ;
ಭಯ ಭಕ್ತಿಯಿಂದ ತೋರುವೆ ಮನದಲ್ಲಿ ವಂಚನೆಯಿಲ್ಲದೆ;
ಭಾವಶುದ್ಧ ಪೂಜೆಯ ಮಾಡುವ
ಎನ್ನ ಪ್ರಾಣ ಶಕ್ತಿಯಿಂದ ಕೂಡುವೆ
ಕೂಡಲಸಂಗಮದೇವರ ʼʼ
ಇಂತಹ ಪ್ರತಿಜ್ಞೆಯಿಂದ ತಮ್ಮ ಶಿವಾಚಾರ ಸಂಪನ್ನತೆಯನ್ನು ವ್ಯಕ್ತಪಡಿಸಿದ್ದಾರೆ.
ಶಿವಾಚಾರವು ಕೇವಲ ಬಹಿರ೦ಗದ ಆಚರಣೆಯಲ್ಲ, ಅದೊಂದು ಅಂತರಂಗದ ಸಾಧನೆಯಾಗಿದೆ. ಅದರ ವಿವರಣೆ ಸುಲಭ ಸಾಧ್ಯವಲ್ಲ ಎಂಬುದನ್ನು
”ಮರುಳ ಕಂಡ ಕನಸಿನ ಪರಿಯಂತೆ ಶಿವಾಚಾರ
ಕರಿಯ ಕನ್ನಡಿಯೊಳಡಗಿದಂತಯ್ಯಾ |
ಗುಣಿ ಅವಗುಣಿಯೊಡನಾಡಿದಡೆ
ಅದೆ ಆತನ ಕರ್ಮಫಲ ನೋಡಾ |
ಕೂಡಲಸಂಗನ ಶರಣರ ಅನುಭಾವ
ಭವದುಃಖಗಳಿಗೆ ವೇದ್ಯವಾಗದು’ʼ
ಎಂದು ಗಂಭೀರವಾಗಿ ಚಿತ್ರಿಸಿದ್ದಾರೆ.
ಶಿವಶರಣರು ವಿಶ್ವಮಾನವ ಭಾವನೆಯುಳ್ಳವರು ಎಂಬುದು ನಿತ್ಯ ಸತ್ಯ. ಆದರೆ ಅವರು ಸರ್ವಸಮ ಭಾವವನ್ನು ಎಲ್ಲ ಮಾನವರಿಗೂ ಅನ್ವಯಿಸಿಲ್ಲ. ಅದು ‘ಶಿವಭಕ್ತರಲ್ಲಿ ಎಂದು ನಿರ್ದೇಶಿಸಿದ್ದಾರೆ. ಶಿವಭಕ್ತರೆಂದರೆ ಲಾಂಛನಧಾರಿಗಳೆಂದಲ್ಲ. ಹಿಂದೆ ಹೇಳಿದಂತೆ ಕಾಮಕ್ರೋಧಾದಿಗಳಿಂದ ದೂರಾದವರು. ಪಂಚೇಂದ್ರಿಯ, ಸಪ್ತಧಾತುಗಳಿಗೆ ದಾಸರಾಗದವರು. ಅಂಥವರಲ್ಲಿ ಭೇದವೆಣಿಸಬಾರದೆಂಬ ನಿರ್ದೇಶನ. ನಡೆಯೆಲ್ಲವೂ ಶಿವನಡೆ, ನುಡಿಯೆಲ್ಲವೂ ಶಿವನುಡಿಯಾದರೆ ಅದು ನಿಜವಾಗಿ ಶಿವಾಚಾರವೆನಿಸುತ್ತದೆ ಎಂಬುದನ್ನು ಶರಣರು ಪ್ರತಿಪಾದಿಸಿದ್ದಾರೆ.
೪. ಗಣಾಚಾರ :
ಪಂಚಾಚಾರಗಳಲ್ಲಿ ನಾಲ್ಕನೆಯ ಆಚಾರವೇ ಗಣಾಚಾರವಾಗಿದೆ. ಗಣ+ಆಚಾರ ಈ ಪದದಲ್ಲಿ ‘ಗಣ’ ಎಂಬುದು ಪ್ರಬಲ ಸಂಘಟನೆಯನ್ನು ಹಾಗೂ ಆತ್ಮರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧನಾಗುವ ಧೀರನನ್ನು ಸೂಚಿಸುತ್ತದೆ. ಗಣಾಚಾರವು ವೀರಶೈವನು ಇತರ ಧರ್ಮಗಳಿಂದ ತನ್ನ ಧರ್ಮವನ್ನು ರಕ್ಷಿಸಬೇಕಾದ, ಪೋಷಿಸಬೇಕಾದ ಕರ್ತವ್ಯವನ್ನು ಒಳಗೊಳ್ಳುತ್ತದೆ. ಗಣಾಚಾರಿಯು ಲಿಂಗ ದ್ರೋಹ, ಜಂಗಮ ದ್ರೋಹಗಳನ್ನು ಸಹಿಸಬಾರದು. ಅಂತಹ ವಿರೋಧಿ ಕೃತ್ಯಗಳನ್ನು ವೀರತನದಿಂದ
ಎದುರಿಸಬೇಕು. ಹಾಗೆ ಬಗ್ಗು ಬಡಿಯಲು ಸಾಧ್ಯವಾಗದಿದ್ದರೆ ತಾನೇ ಆ ಜಾಗದಿಂದ ಹೊರಡಬೇಕು. ಸ್ವಧರ್ಮದ ಪ್ರಸಾರಕ್ಕೆ ವೀರಾವೇಶವನ್ನು ಪಡೆದು ಪ್ರಾಣಾರ್ಪಣೆಯನ್ನು ಮಾಡಲೂ ಹಿಂಜರಿಯಬಾರದೆಂಬ ತತ್ವವನ್ನು ಗಣಾಚಾರವು ಬೋಧಿಸುತ್ತದೆ. ಶರಣ ಸಾಮವೇದಿ, ಶರಣ ಶಂಕರದಾಸಿಮಯ್ಯ, ಶರಣ ಆದಯ್ಯ ಮೊದಲಾದವರು ಈ ಬಗೆಯ ಜೀವನವನ್ನು ನಡೆಸಿದ ಭಕ್ತರ ಜೀವನವನ್ನೇ ವಸ್ತುವಾಗಿಟ್ಟುಕೊಂಡು ರಚಿಸಿದ ಹರಿಹರನ ಹಲವಾರು ರಗಳೆಗಳನ್ನಿಲ್ಲಿ ನೆನೆಯಬಹುದು.
ಚೆನ್ನಬಸವಣ್ಣನವರು ‘ಶಿವಾಚಾರದ ನಿಂದೆಯ ಕೇಳದಿರುವುದೇ ಗಣಾಚಾರ’ ಎಂದಿದ್ದಾರೆ. ಶರಣರ ಜೀವನ ಸಂದೇಶ ಪಾಪಿಯ ಮರ್ಧನವಲ್ಲ, ಪಾಪದ ನಿರ್ಮೂಲನೆ. ಅದನ್ನು ಅನುಸರಿಸುವ ರೀತಿ-ನೀತಿಗಳನ್ನು ಶರಣರ ನುಡಿ ಬೆಳಕಿನಲ್ಲಿ ನೋಡಬೇಕು. ಗಣಾಚಾರವೆಂಬುದು ಒಂದು ರೀತಿಯ ಜೀವನ ವ್ರತ. ಅಂತಹ ವ್ರತಿಗಳಿಗೆ ಬಸವಣ್ಣನವರು ಮಣಿಯುತ್ತಾರೆ.
“ಕರ್ತರು ನಿಮ್ಮ ಗಣಂಗಳು ಎನ್ನ ತೊತ್ತು ಮಾಡಿ
ಸಲಹಿದ ಸುಖವು, ಸಾಲೋಕ್ಯ, ಸಾಮೀಪ್ಯ,
ಸಾರೂಪ್ಯ, ಸಾಯುಜ್ಯದಂತುಟಲ್ಲ,
ಕೇಳಯ್ಯ ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲುಹಿದ ಸುಖವ
ಎಂಬಲ್ಲಿ ಗಣಾಚಾರಿಗಳ ಸಹಯೋಗವು ಮುಕ್ತಿಗಿಂತಲೂ ಮಿಗಿಲಾದುದು ಎನ್ನುತ್ತಾರೆ. ತಮ್ಮ ಮತ್ತೊಂದು ವಚನದಲ್ಲಿ-
“ಲಿಂಗಮುಖದಿಂದ ಬಂದ ಪ್ರಸಾದವನ್ನಲ್ಲದೆ
ಕೊಂಡೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ !
ಲಿಂಗಾರ್ಪಿತವಲ್ಲದೆ ಉದಕವ ಮುಕ್ಕಳಿಸಿದೆನಾಡದೆ
ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ,
ಲಿಂಗಾರ್ಪಿತವಲ್ಲದೆ, ಹುಲ್ಲುಕಡ್ಡಿಯ ಕೊಂಡೆನಾದಡೆ, ನಾ ಬಲ್ಲೆ
ಮುಂದೆ, ಭವ ಘೋರನರಕವೆಂಬುದ |
ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು, ಅಳವರಿಯದೆ
ನುಡಿದೆನು, ಕಡೆ ಮುಟ್ಟಿ ಸಲಿಸದಿದ್ದಡೆ ತಲೆದಂಡ
ಕೂಡಲ ಸಂಗಮದೇವಾʼʼ
ಎಂದು ಅರ್ಥವತ್ತಾಗಿ ಸಮರ್ಥಿಸಿದ್ದಾರೆ. ಗಣಾಚಾರವೆಂಬುದು ದೇಹ ಬಲಿದ ಪ್ರದರ್ಶನವಲ್ಲ, ಅದು ಆತ್ಮಬಲದ ಸ್ಪಂದನ. ಅಂಥವರು ಶಿವನೊಲಿದ ಶಿವಗಣಂಗಳೆನಿಸುತ್ತಾರೆ. “ದಯವೇ ಧರ್ಮ, ದಯವೇ ಬೇಕು ಸಕಲ ಪ್ರಾಣಿಗಳಲ್ಲಿ’ ಎನ್ನುವ ಶರಣ ಧರ್ಮದ ಆರಾಧಕರು ಗಣಾಚಾರಿಗಳು.
೫. ಭೃತ್ಯಾಚಾರ :
ಪಂಚಾಚಾರಗಳಲ್ಲಿ ಕೊನೆಯದು ಇದು. ಭೃತ್ಯ+ಆಚಾರ ಎರಡು ಶಬ್ದಗಳ ಸಮನ್ವಯವಿದೆ. ಭೃತ್ಯ ಎಂದರೆ ಸಾಮಾನ್ಯ ಅರ್ಥದಲ್ಲಿ ‘ಸೇವಕ’ ಎಂದು ಭಾವಿಸಲಾಗಿದೆ. ಆದರೆ ವೀರಶೈವದಲ್ಲಿ ಭೃತ್ಯಾಚಾರವು ತನ್ನ ಧರ್ಮದ ಹಿರಿಯರೊಡನೆ ನಡೆದುಕೊಳ್ಳಬೇಕಾದ ಬಗೆಯನ್ನು ವಿಧಿಸುತ್ತದೆ. “ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಭಾವನೆ ಬೆಳೆದಾಗ, ತಾನು ಹೆಚ್ಚು ನೀನು ಹೆಚ್ಚು ಎಂಬ ಘರ್ಷಣೆ ಇರುವುದಿಲ್ಲ. ಅದರೊಡನೆ ತನ್ನ ಧರ್ಮಾನುಯಾಯಿಗಳ ಬಗ್ಗೆ ಪ್ರೀತಿ ವಿಶ್ವಾಸಗಳು ಬೆಳೆಯುತ್ತವೆ.
ಸೇವಕ ಎಂಬಲ್ಲಿ ತನ್ನ ಉದರನಿಮಿತ್ತವಾಗಿ ಸೇವೆ ಮಾಡುವವರಿರಬಹುದು ಇಲ್ಲವೆ ಪ್ರಾಣಭಯದಿಂದ ಸೇವೆ ಮಾಡುವವರು ಇರಬಹುದು. ಶರಣರು ಭೃತ್ಯ ಶಬ್ದವನ್ನು ಬಳಸಿರುವುದು ಇಂತಹ ಅರ್ಥಗಳಲ್ಲಿ ಅಲ್ಲ. ದೈವದತ್ತವಾದ ತನು-ಮನ- ಧನಗಳನ್ನು ಪರಹಿತಕ್ಕಾಗಿ ವಿನಿಯೋಗಿಸುವವನು. ಅವನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆಗೈಯುವವನು ಹಾಗೂ ಅದನ್ನು ಜೀವನ ಧರ್ಮವೆಂದು ಭಾವಿಸಿದವನು. ತನ್ನ ಸೇವೆಯಿಂದ ಅನ್ಯರ ಉದ್ಧಾರ ಎಂಬ ಅಹಂಕಾರವಿಲ್ಲದೆ ಅದು ತನ್ನ ಉದ್ಧಾರ ಎಂದು ಭಾವಿಸುವವನು. ಈ ಅರ್ಥದಲ್ಲಿ ‘ಭೃತ್ಯ’ ಶಬ್ದವನ್ನು ಶರಣರು ಪ್ರಯೋಗಿಸಿದ್ದಾರೆ.
ಚೆನ್ನಬಸವಣ್ಣನವರು ”ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯ ಭಕ್ತಿಯಿಂದ ಆಚರಿಸುವುದೇ ಭೃತ್ಯಾಚಾರ” ಎಂದಿದ್ದಾರೆ. ಈ ನಿಟ್ಟಿನಲ್ಲಿ ಬಸವಣ್ಣನವರ ಹಲವು ಸಂದೇಶಗಳು ಗಮನಾರ್ಹ.
“ಸ್ವಾಮಿ ಭೃತ್ಯ ಸಂಬಂಧಕ್ಕೆ ಆವುದು ಪಥವೆಂದಡೆ,
ದಿಟವ ನುಡಿವುದು, ನುಡಿದಂತೆ ನಡೆವುದು
ನುಡಿದು ಹುಸಿವ, ನಡೆದು ತಪ್ಪುವ
ಪ್ರಪಂಚಯನೊಲ್ಲ ಕೂಡಲಸಂಗಮದೇವ’;
ಎಂಬಲ್ಲಿ ಭಕ್ತಿಯ ನೆಲೆಗಟ್ಟಿನ ಮೇಲೆ ನಿಲ್ಲಬೇಕಾದ ಭೃತ್ಯಾಚಾರದ ಚಿತ್ರ ಇದೆ. ಸೇವೆ ಯಾವತ್ತೂ ಪ್ರೇಮಮಯವಾಗಿರಬೇಕು. ಹಾಗೆಯೇ ಅನುಭವಮಯವಾಗಿರಬೇಕು. ಅದೆಂದರೆ-
”ಇತ್ತ ಬಾರಯ್ಯಾ, ಇತ್ತ ಬಾರಯ್ಯಾ, ಎಂದು
ಭಕ್ತರೆಲ್ಲರೂ ಕೂರ್ತು ಹತ್ತೆ ಕರೆವುತ್ತಿರಲು
ಮತ್ತೆ ಕೆಲಕ್ಕೆ ಹೋಗಿ ಶರಣೆಂದು ಹಸ್ತಬಾಯನೆ ಮುಚ್ಚಿ
ಕಿರಿದಾಗಿ ಭೃತ್ಯಾಚಾರವ ನುಡಿದು
ವಿನಯ ತದ್ಧ್ಯಾನವುಳ್ಳಡೆ ಎತ್ತಿಕೊಂಬನಯ್ಯಾ
ಕೂಡಲಸಂಗಮದೇವ ಪ್ರಮಥರ ಮುಂದೆ ʼʼ
ಇವೆಲ್ಲವುಗಳ ಜೊತೆಗೆ ಕಳಶಪ್ರಾಯವಾದ ಸೂತ್ರವೆಂದರೆ ಮಾಡುವವನು ತಾನಲ್ಲ, ಮಾಡಿಸಿಕೊಳ್ಳು ವವನೂ ಮಾಡುವವನೂ ದೇವನೇ ಎಂಬ ಅನುಭಾವ ಅಳವಡಬೇಕು. ನೃತ್ಯಾಚಾರದಲ್ಲಿ ತನ್ನನ್ನು ತಾನ ಮರೆತು ಪರಮಾತ್ಮನ ಸೂತ್ರದಂತೆ ತಾನು ನಡೆಯುತ್ತಿರುವ ನಿಷ್ಠೆ ಬಲಗೊಳ್ಳಬೇಕು. ತಾನು ಯಾವ ಜೀವಕ್ಕೆ ಸೇವೆ ಸಲ್ಲಿಸಿದರೂ ಅದು ಪರಮಾತ್ಮನ ಸೇವೆ ಮತ್ತು ಅದು ಅವನ ಆಜ್ಞೆಯಂತೆಯೇ ನಡೆಯುತ್ತಿದೆ ಎಂಬ ಭಾವನೆ ತನು-ಮನ-ಭಾವದಲ್ಲಿ ತುಂಬಿರಬೇಕು. ನೃತ್ಯಾಚಾರವೆಂಬುದು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವ, ಅದಕ್ಕಾಗಿ ತಾನೆಸಗುವ ಕೈಂಕರ್ಯವಾಗಬೇಕು. ಅಣುರೇಣು ತೃಣಕಾಷ್ಟಗಳೆಲ್ಲವೂ ಶಿವಸೃಷ್ಟಿಯೆಂದು ನಂಬಿ ಸೇವೆಗೈಯಬೇಕು. ಅದೇ ನೃತ್ಯಾಚಾರದ ತಿರುಳು. ಒಟ್ಟಿನಲ್ಲಿ, ಪಂಚಾಚಾರಗಳ ಕುರಿತು ಬಸವಣ್ಣನವರು ಒಂದೇ ವಚನದಲ್ಲಿ ಸೂತ್ರಬದ್ಧವಾಗಿ ಹೀಗೆ ವಿವರಿಸಿದ್ದಾರೆ
“ಲಿಂಗವೇ ಪರವೆಂದರಿದು ಅನ್ಯದೇವರ
ಭಜನೆಯಿಲ್ಲದಿಪ್ಪುದೇ ಲಿಂಗಚಾರ
ಸತ್ಕ್ರಿಯೆಯಿಂದ ಧನವ ಸಂಪಾದಿಸಿ
ಗುರು, ಲಿಂಗ, ಜಂಗಮ, ದಾಸೋಹ, ದಾನ
ಪರೋಪಕಾರ ಮಾಡುವುದು ಸದಾಚಾರ
ಅಂಗದ ಮೇಲೆ ಲಿಂಗವಿರ್ಪ ಶಿವಭಕ್ತನೇ
ಶಿವರೂಪವೆಂದರಿದು, ಅವರ ಮಂದಿರವ ಪೊಕ್ಕು
ಮಿಕ್ಕುದನುಂಬುದೇ ಶಿವಾಚಾರ
ಶಿವನಿಂದೆಯ ಕಿವಿಗೊಟ್ಟು
ಕೇಳದಿಪ್ಪುದೇ ಗಣಾಚಾರ
ಶಿವಭಕ್ತರ ಶಿಶುವು ಹೊಟ್ಟೆಯಲ್ಲಿರ್ಪುದ ಕಂಡು
ಯಜಮಾನನೆಂದರಿದು ನಮ್ರ ಭಾವದಿಂ
ನಡೆದುಕೊಳ್ಳುವುದೇ ಭೃತ್ಯಾಚಾರ
ಇಂತೀ ಪಂಚಾಚಾರಯುಕ್ತವಾಗಿ ನಡೆಯುವ
ಶಿವಭಕ್ತನೊಕ್ಕುಮಿಕ್ಕುದನಿಕ್ಕಿ ಸಲಹಯ್ಯಾ
ಕೂಡಲಸಂಗಮದೇವಾ
ಪಂಚಾಚಾರಗಳು ವೀರಶೈವ ವಿಶಿಷ್ಟವಾದವುಗಳೇ. ಆದಾಗ್ಯೂ ಪಂಚಾಚಾರಗಳಲ್ಲಿ ವೀರಶೈವ ಧರ್ಮ ವಿಶಿಷ್ಟ ಅಂಶವನ್ನು ಹಿಂದಕಿಟ್ಟು ನೋಡಿದರೆ ಆ ಆಚಾರಗಳೆಲ್ಲವೂ ಇಂದಿನ ಆಧುನಿಕ ಬದುಕಿನ ಎಲ್ಲ ಸಮಸ್ಯೆಗಳಿಗೆ ಸಮರ್ಥ ಪರಿಹಾರ ಮಾರ್ಗವನ್ನು ತೋರಿಸುವ ದಿಕ್ಸೂಚಿಗಳಾಗಿವೆ. ಇವು ಸರ್ವಕಾಲಕ್ಕೂ, ಸಮಸ್ತ ಮನುಕುಲಕ್ಕೂ ಅನ್ವಯಿಸುವ ಸಾಮಾಜಿಕ ಮತ್ತು ಧಾರ್ಮಿಕ ಪ್ರಕ್ರಿಯೆಗಳಾಗಿವೆ. ಇಂತಹ ದಿವ್ಯ ತತ್ವಗಳನ್ನು ಕೊಡಮಾಡಿದ ಶರಣರು ಎಲ್ಲ ಕಾಲಕ್ಕೂ ಜಗನ್ಮಾನ್ಯರಾಗುತ್ತಾರೆ. ಪಂಚಾಚಾರಗಳು ವಿಶ್ವಮಾನ್ಯ ಮಾನವೀಯ ಮೌಲ್ಯಗಳಾಗುತ್ತವೆ.