ಅದ್ವೈತದಿಂದ ಭಕ್ತಿಗೆ: ಶಂಕರಾಚಾರ್ಯರ ಸ್ತೋತ್ರಗಳಲ್ಲಿ ತತ್ತ್ವ ಮತ್ತು ಅನುಭವದ ಏಕತೆ:ಲೇಖಕ: ಶ್ರೀಕಂಠ. ಚೌಕೀಮಠ.

ಅದ್ವೈತದಿಂದ ಭಕ್ತಿಗೆ: ಶಂಕರಾಚಾರ್ಯರ ಸ್ತೋತ್ರಗಳಲ್ಲಿ ತತ್ತ್ವ ಮತ್ತು ಅನುಭವದ ಏಕತೆ

——————————

ಸಾಕಾರ ಭಕ್ತಿಯಿಂದ ನಿರಾಕಾರ ಬ್ರಹ್ಮನಿಗೆ ಸಾಗುವ ಸಾಧಕನ ಅಂತರ್ಯಾತ್ರೆ

————————————–

ಲೇಖಕ: ಶ್ರೀಕಂಠ. ಚೌಕೀಮಠ.

———————————-

ಇತ್ತೀಚೆಗೆ ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಪವಿತ್ರ ಶಾರದಾಪೀಠದ ದರ್ಶನಾರ್ಥವಾಗಿ ತೆರಳಿದ ಸಂದರ್ಭದಲ್ಲಿ, ಅದೊಂದು ಆಶೀರ್ವಾದದಂತೆ ನನ್ನ ಕೈ ಸೇರಿತು — ಶ್ರೀ ಶಂಕರಾಚಾರ್ಯರ ಸಮಗ್ರ ಸ್ತೋತ್ರ ಮಂಜರಿ ಎಂಬ ಅಪರೂಪದ ಗ್ರಂಥ. ನಾಲ್ಕುನೂರು ಹತ್ತು ಪುಟಗಳ ಈ ವಿಶಾಲ ಕೃತಿಯ ಪರಿವಿಡಿಯನ್ನು ವೀಕ್ಷಿಸಿದಾಗ, ಶಂಕರಭಗವತ್ಪಾದರು ರಚಿಸಿದ ಒಟ್ಟು ಎಪ್ಪತ್ತೇಳು ಸ್ತೋತ್ರಗಳು ಹಾಗೂ ಅವುಗಳ ಕನ್ನಡಾನುವಾದಗಳು ಕ್ರಮಬದ್ಧವಾಗಿ ಅಚ್ಚಾಗಿರುವುದು ನನ್ನ ಗಮನ ಸೆಳೆಯಿತು. ಆ ಸ್ತೋತ್ರಗಳನ್ನು ನಾಲ್ಕು ಪ್ರಮುಖ ವಿಭಾಗಗಳಲ್ಲಿ ಸುವ್ಯವಸ್ಥಿತವಾಗಿ ವಿಂಗಡಿಸಲಾಗಿದೆ:

  • ಶ್ರೀ ಗಣೇಶ ಸ್ತೋತ್ರಗಳು
  • ಶಿವ ಸ್ತೋತ್ರಗಳು
  • ಶ್ರೀ ವಿಷ್ಣು ಭಕ್ತಿ ಸ್ತೋತ್ರಗಳು
  • ಶ್ರೀ ದೇವಿ ಸ್ತೋತ್ರಗಳು

ಈ ವಿಭಾಗಗಳಲ್ಲಿ ನನ್ನ ಮನಸ್ಸಿಗೆ ಅತ್ಯಂತ ಆಪ್ತವಾಗಿ ಸ್ಪಂದಿಸಿದದ್ದು ಶ್ರೀ ಗಣೇಶ ಪಂಚಕ. ಬಾಲ್ಯದಿಂದಲೂ ನನ್ನ ತಂದೆಯ ನಿತ್ಯಪೂಜೆಯ ಆರಂಭದಲ್ಲಿ ಮೃದುಸ್ವರವಾಗಿ ಪ್ರತಿಧ್ವನಿಸುತ್ತಿದ್ದ ಆ ಶ್ಲೋಕಗಳು, ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿವೆ. ವಿಶೇಷವೆಂದರೆ, ತಮ್ಮ ಜೀವನದ ಅಂತಿಮ ದಿನದ ಬೆಳಗಿನ ಪೂಜೆಯಲ್ಲಿಯೂ ಅಪ್ಪ ಅದೇ ಶ್ರೀ ಗಣೇಶ ಪಂಚಕವನ್ನು ಅಚಲ ಭಕ್ತಿಭಾವದಿಂದ ಪಠಿಸಿದ್ದರು. ಆ ಪಂಚಕದ ಪ್ರಾರಂಭ ಶ್ಲೋಕ ಹೀಗಿದೆ:

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್
ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್

ಎಪ್ಪತ್ತೇಳು ಸ್ತೋತ್ರಗಳ ಪರಿವಿಡಿಯನ್ನು ವೀಕ್ಷಿಸುತ್ತ ಕುಳಿತಾಗಲೇ, ನನ್ನ ಮನಸ್ಸಿನಲ್ಲಿ ನಿಧಾನವಾಗಿ ಒಂದು ಗಂಭೀರ ಸಂದೇಹ ಮೂಡಿಬಂತು. ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಏಕೋನತತ್ತ್ವದ ಪರಮಾರ್ಥವನ್ನು ಜಗತ್ತಿಗೆ ಬೋಧಿಸಿದ ಶಂಕರಾಚಾರ್ಯರು — ಹೇಗೆ ಅನೇಕ ದೇವತೆಗಳನ್ನು ಸ್ತುತಿಸುವ ಸ್ತೋತ್ರಗಳನ್ನು ರಚಿಸಿದರು? ಒಂದೆಡೆ ಅದ್ವೈತದ ಏಕತ್ವದ ಘೋಷಣೆ, ಮತ್ತೊಂದೆಡೆ ದ್ವೈತಭಾವದಲ್ಲಿ ಅರಳುವ ಭಕ್ತಿಯ ಅಭಿವ್ಯಕ್ತಿ — ಈ ಎರಡೂ ಭಿನ್ನ ಪ್ರಪಂಚಗಳು ಒಂದೇ ಮನಸ್ಸಿನಲ್ಲಿ ಒಟ್ಟಾಗಿ ಚಲಿಸಲಾರಂಭಿಸಿದವು. ಆ ಕ್ಷಣದಿಂದಲೇ ನನ್ನ ಚಿಂತನೆ, ಶಂಕರಾಚಾರ್ಯರ ತತ್ತ್ವದ ಆಳವನ್ನು ಅರಸುವ ದಿಕ್ಕಿನಲ್ಲಿ ನಿಧಾನವಾಗಿ ಸಾಗತೊಡಗಿತು.

ಈ ಜಿಜ್ಞಾಸೆಗಳೊಡನೆ, ನಾನು ಪೂಜ್ಯ ಗುರುಗಳಾದ ಶ್ರೀ ಶಿವಾತ್ಮಾನಂದ ಪುರಿಯವರಿಗೆ (ಗುರುಕಂದ) ಒಂದು ಸಂದೇಶವನ್ನು ವಿನಯಪೂರ್ವಕವಾಗಿ ಕಳುಹಿಸಿದೆ. ಆ ಸಂದೇಶದಲ್ಲಿ ನನ್ನ ಮನಸ್ಸಿನ ಅಶಾಂತಿ ಮತ್ತು ಅರಿವಿನ ಹಂಬಲ ಎರಡನ್ನೂ ನೇರವಾಗಿ ನಿವೇದಿಸಿಕೊಂಡು ಹೀಗೆ ಪ್ರಾರ್ಥಿಸಿದೆ:

“ಪೂಜ್ಯರೆ,
ಇಂದು ಶೃಂಗೇರಿಯಿಂದ ತಂದ ಒಂದು ಗ್ರಂಥವನ್ನು ಹಾಗೂ ಅದರ ಸಮಗ್ರ ಸಾಹಿತ್ಯವಿವರಣೆಗಳನ್ನು ಓದುತ್ತಿರುವ ಸಂದರ್ಭದಲ್ಲಿ, ನನ್ನ ಮನಸ್ಸಿನಲ್ಲಿ ಕೆಲವು ಜಿಜ್ಞಾಸೆಗಳು ಸಹಜವಾಗಿ ಉದಯಿಸಿದವು. ಈ ಪ್ರಶ್ನೆಗಳು ಅಯೋಗ್ಯವಾಗಿಯೂ ಅಥವಾ ತಪ್ಪಾಗಿ ಕೇಳಲ್ಪಡುವಂತೆಯೂ ಕಂಡರೆ ದಯವಿಟ್ಟು ಕ್ಷಮಿಸಬೇಕು. ನನ್ನ ಉದ್ದೇಶ ಯಾವತ್ತೂ ವಿರೋಧವಲ್ಲ; ಸಾಧನೆಗೆ ಸರಿಯಾದ ದಿಕ್ಕು, ತತ್ತ್ವಕ್ಕೆ ಸ್ಪಷ್ಟತೆ ಮತ್ತು ಆತ್ಮೋನ್ನತಿಯ ಮಾರ್ಗವನ್ನು ಅರಿಯುವುದು ಮಾತ್ರ.

ನನಗೆ ಸ್ಪಷ್ಟತೆ ಬೇಕಿರುವ  ವಿಷಯ:
ಅದ್ವೈತ ತತ್ತ್ವ ಮತ್ತು ದೇವತಾ ಉಪಾಸನೆಯ ಸಂಬಂಧ —
ಶಂಕರಾಚಾರ್ಯರು ‘ಅಹಂ ಬ್ರಹ್ಮಾಸ್ಮಿ’ ಎಂದು ಅದ್ವೈತ ತತ್ತ್ವವನ್ನು ಬೋಧಿಸಿದಾಗ, ಏಕೆ ಅವರು ಅನೇಕ ದೇವತೆಗಳ ಆರಾಧನೆಯನ್ನು ಪ್ರೋತ್ಸಾಹಿಸಿದರು? ಇದು ಪರಸ್ಪರ ವಿರೋಧವೆಂದು ಕಾಣಿಸುವುದಿಲ್ಲವೇ?

ಪೂಜ್ಯರೆ,
ಈ ಪ್ರಶ್ನೆಗಳನ್ನು ನಾನು ತರ್ಕಕ್ಕಾಗಲೀ ವಿರೋಧಕ್ಕಾಗಲೀ ಕೇಳುವುದಿಲ್ಲ; ಕೇವಲ ತಿಳಿವಳಿಕೆಗಾಗಿ, ಆತ್ಮಶೋಧನೆಗಾಗಿ ಕೇಳುತ್ತಿದ್ದೇನೆ.”

ನನ್ನ ಈ  ಮನವಿಗೆ ಪೂಜ್ಯ ಶ್ರೀ ಶಿವಾತ್ಮಾನಂದ ಪುರಿಯವರು   ಸ್ಪಂದಿಸಿ, ಸ್ವಾಮಿ ಹರ್ಷಾನಂದ ಜಿ. ಮಹಾರಾಜರ “ಪ್ರವಚನಮಾಲೆ – ಅಂತರಂಗದ ಅವಲೋಕನ: ಶಂಕರಾಚಾರ್ಯರ ಜೀವನಚರಿತ್ರೆ” (ಭಾಗ ೧ ರಿಂದ ೩) ಅನ್ನು ನನಗೆ ಕಳುಹಿಸಿ ಮಾರ್ಗದರ್ಶನ ನೀಡಿದರು. ಅದು ನನ್ನ ಜಿಜ್ಞಾಸೆಗೆ ಉತ್ತರದ ಮೊದಲ ಕಿರಣವಾಯಿತು.

ಆ ಪ್ರವಚನಮಾಲೆಯ ಪ್ರಾಸ್ತಾವಿಕ ಭಾಗದಲ್ಲಿಯೇ ಸ್ವಾಮಿ ಹರ್ಷಾನಂದ ಜಿ. ಮಹಾರಾಜರು ತಮ್ಮ ಮಾತನ್ನು ಮಹಾಭಾರತದ ಪ್ರಸಿದ್ಧ “ಯಕ್ಷಪ್ರಶ್ನೆ”ಯೊಂದಿಗೆ ಆರಂಭಿಸುತ್ತಾರೆ. ಯಕ್ಷನು ಧರ್ಮರಾಜನಿಗೆ ಕೇಳುವ ಪ್ರಶ್ನೆ — “ದಾರಿ ಯಾವುದು?” — ಮುಕ್ತಿಯ ದಾರಿ ಯಾವುದು ಎಂಬ ಆ ಒಂದು ಪ್ರಶ್ನೆಯೇ ನನ್ನ ಸಂದೇಹಕ್ಕೆ ಉತ್ತರದ ಮೊದಲ ಹೆಜ್ಜೆಯಂತೆ ನನಗೆ ಭಾಸವಾಯಿತು.

ನನ್ನ ಚಿಂತನೆ ಮತ್ತೊಮ್ಮೆ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಅಗಾಧ ಸಮುದ್ರದ ಕಡೆಗೆ ಹರಿಯತೊಡಗಿತು. ಅದರ ಅರ್ಥವ್ಯಾಪ್ತಿ, ತತ್ತ್ವದ ಆಳ, ವ್ಯಾಖ್ಯಾನದ ಸೂಕ್ಷ್ಮತೆ ಮತ್ತು ಅದರ ಗುಹ್ಯಾರ್ಥವನ್ನು ಅರಸಬೇಕೆಂಬ ಆಂತರಿಕ ಪ್ರೇರಣೆ ಮತ್ತಷ್ಟು ಗಾಢವಾಯಿತು.

ಶಂಕರಾಚಾರ್ಯರು ಪ್ರತಿಪಾದಿಸಿದ ದಾರ್ಶನಿಕ ಚಿಂತನೆಯ ಹೃದಯಸಾರವೇ — “ಬ್ರಹ್ಮ ಸತ್ಯಂ, ಜಗತ್ ಮಿಥ್ಯ; ಜೀವೋ ಬ್ರಹ್ಮೈವ ನಾಪರ” ಎಂಬ ಮಹಾವಾಕ್ಯ. ಈ ಏಕವಾಕ್ಯವೇ ಅವರ ತತ್ತ್ವನಿರೂಪಣೆಯ ಪರಿಪೂರ್ಣ ಸಮಾಪ್ತಿ. ವೈಯಕ್ತಿಕ ಆತ್ಮವಾದ ಜೀವ, ಅವನು ಅನುಭವಿಸುವ ಜಗತ್ತು ಎಂಬ ಜಗತ್ ಮತ್ತು ಪರಮಸತ್ಯಸ್ವರೂಪವಾದ ಬ್ರಹ್ಮನ್ — ಇವುಗಳ ವಾಸ್ತವಿಕತೆಯನ್ನು ಒಂದೇ ಅದ್ವೈತ ದೃಷ್ಟಿಕೋನದಲ್ಲಿ ಏಕೀಕರಿಸುವ ಶಕ್ತಿ ಈ ತತ್ತ್ವದಲ್ಲಿದೆ. ಜೀವ ಮತ್ತು ಬ್ರಹ್ಮನ ನಡುವಿನ ಸಂಬಂಧವು ಸ್ವತಂತ್ರ ಸತ್ಯದ ಸಂಬಂಧವಲ್ಲ; ಅದು ಪರಮಸತ್ಯದ ಮೇಲೆ ನಿಂತ ಸಾಪೇಕ್ಷ ವಾಸ್ತವದ ಅನುಭವ, ಅಂದರೆ ಸತ್ಯ–ಮಿಥ್ಯಗಳ ನಡುವಿನ ಸಂಬಂಧ.

ಈ ತತ್ತ್ವವನ್ನು ಇನ್ನಷ್ಟು ಸ್ಪಷ್ಟಗೊಳಿಸುವಂತೆ, “ಜೀವೋ ಬ್ರಹ್ಮೈವ ನಾಪರ” ಎಂಬ ವಾಕ್ಯವು ವ್ಯಕ್ತಿಯೇ ಬ್ರಹ್ಮನಾಗಿದ್ದಾನೆ, ಅವನು ಬೇರೆ ಯಾರೂ ಅಲ್ಲ ಎಂಬ ಸತ್ಯವನ್ನು ಘೋಷಿಸುತ್ತದೆ. ಮೊದಲ ವಾಕ್ಯ ಬ್ರಹ್ಮನನ್ನೇ ಪರಮಸತ್ಯವೆಂದು ಸ್ಥಾಪಿಸಿದರೆ, ಎರಡನೆಯದು — “ಆ ಸತ್ಯವೇ ನೀನು” ಎಂಬ ಆತ್ಮಗುರುತನ್ನು ನೀಡುತ್ತದೆ. ಹೀಗೆ, ಪರಮಸತ್ಯವಾದ ಬ್ರಹ್ಮ, ಅನುಭವಿಸುವ ಜೀವ ಮತ್ತು ಅನುಭವದ ಕ್ಷೇತ್ರವಾದ ಜಗತ್ತು — ಈ ಮೂರೂ ತತ್ತ್ವದೃಷ್ಟಿಯಲ್ಲಿ ವಿಭಿನ್ನವಲ್ಲ; ಭೇದವು ಅಜ್ಞಾನದಿಂದ ಮಾತ್ರ ಕಾಣಿಸುತ್ತದೆ. ಜ್ಞಾನೋದಯವಾದಾಗ ಇವೆಲ್ಲವೂ ಒಂದೇ ಪರಮಸತ್ಯದಲ್ಲಿ ಲೀನವಾಗಿರುವುದೇ ಅದ್ವೈತದ ಸಾರ.

ಇಲ್ಲಿ ಉಲ್ಲೇಖಿಸಲ್ಪಡುವ ಮಿಥ್ಯ ಎಂಬ ತತ್ತ್ವವು, ಸಂಪೂರ್ಣ ಪರಮ ವಾಸ್ತವವಾದ ಬ್ರಹ್ಮನ ಹೊರತಾಗಿ, ಎರಡು ವಿಧದ ಸಾಪೇಕ್ಷ ವಾಸ್ತವಿಕತೆಗಳನ್ನು ಒಳಗೊಂಡಿದೆ: ವ್ಯವಹಾರಿಕ ಸತ್ಯ (Practical/Empirical Reality) ಮತ್ತು ಪ್ರತಿಭಾಸಿಕ ಸತ್ಯ(Illusory/Imagined Reality).  ವ್ಯವಹಾರಿಕ ಸತ್ಯವೆಂದರೆ, ಎಲ್ಲರಿಗೂ ಸಾಮಾನ್ಯವಾಗಿ ಅನುಭವವಾಗುವ ಜಗತ್ತು — ದೈನಂದಿನ ಕಾರ್ಯವ್ಯವಹಾರಗಳ ಮಟ್ಟಿನಲ್ಲಿ ನಿಜವೆಂದು ಕಾಣಿಸುವ ವಸ್ತುನಿಷ್ಠ ವಾಸ್ತವ. ಅದರ ವಿರುದ್ಧವಾಗಿ, ಪ್ರತಿಭಾಸಿಕ ಸತ್ಯವೆಂದರೆ, ಒಬ್ಬ ವ್ಯಕ್ತಿಯ ಮನಸ್ಸಿನ ತಪ್ಪು ಗ್ರಹಿಕೆಯಿಂದ ಮಾತ್ರ ಹುಟ್ಟುವ, ಇತರರಿಗೆ ಅಸ್ತಿತ್ವವಿಲ್ಲದ ವ್ಯಕ್ತಿನಿಷ್ಠ ಭಾಸ. ಉದಾಹರಣೆಗೆ, ನಾವು ಕಾಣುವ ಈ ಪ್ರಪಂಚ ವ್ಯವಹಾರಿಕ ಸತ್ಯವಾದರೆ, ಹಗ್ಗವನ್ನು ಹಾವು ಎಂದು ತಪ್ಪಾಗಿ ಕಾಣುವುದು ಪ್ರತಿಭಾಸಿಕ ಸತ್ಯ. ಈ ಎರಡೂ ಸ್ವತಂತ್ರ ಪರಮಸತ್ಯವಲ್ಲ; ಅವು ಅವಲಂಬಿತ ವಾಸ್ತವಗಳು, ಸಂಪೂರ್ಣ ಸತ್ಯದ ಆಶ್ರಯದಿಂದ ಮಾತ್ರ ಅಸ್ತಿತ್ವ ಹೊಂದುವ ಮಿಥ್ಯ.

ಸತ್ಯ ಮತ್ತು ಮಿಥ್ಯಗಳ ನಡುವಿನ ಸಂಬಂಧವನ್ನು ಸಮುದ್ರ ಮತ್ತು ಅಲೆಯ ಉಪಮಾನದ ಮೂಲಕ ಸುಲಭವಾಗಿ ಗ್ರಹಿಸಬಹುದು. ಅಲೆ ಎಂದರೆ ಸಮುದ್ರಕ್ಕೆ ನೀಡಿದ ಒಂದು ಹೆಸರು ಮತ್ತು ರೂಪ; ಅದರ ಅಸ್ತಿತ್ವವು ನೀರಿಗೆ ಅವಲಂಬಿತ, ಆದರೆ ನೀರಿನ ಅಸ್ತಿತ್ವಕ್ಕೆ ಅಲೆಯ ಅವಲಂಬನೆ ಇಲ್ಲ. ಅಲೆ ಮಿಥ್ಯ; ನೀರು ಸತ್ಯ. ಇದೇ ರೀತಿಯಾಗಿ, ಜಗತ್ತು ಬ್ರಹ್ಮನ ಮೇಲೆಯೇ ನಿಂತಿರುವ ಅವಲಂಬಿತ ವಾಸ್ತವ; ಬ್ರಹ್ಮನು ಮಾತ್ರ ಪರಿಪೂರ್ಣ ಸತ್ಯ. ಹಗ್ಗವಿಲ್ಲದೆ ಹಾವು ಕಾಣಿಸಿಕೊಳ್ಳದಂತೆ, ಬ್ರಹ್ಮನಿಲ್ಲದೆ ಜಗತ್ತಿನ ಅನುಭವವೂ ಸಾಧ್ಯವಿಲ್ಲ. ಏಕೆಂದರೆ ಮಿಥ್ಯವು ತನ್ನ ತಲಾಧಾರವಾಗಿರುವ ಪರಮಸತ್ಯವಿಲ್ಲದೆ ಸ್ವತಃ ಪ್ರತ್ಯಕ್ಷಗೊಳ್ಳುವ ಶಕ್ತಿಯನ್ನೇ ಹೊಂದಿಲ್ಲ.

ಅದ್ವೈತ ತತ್ತ್ವವನ್ನು ಆಳವಾಗಿ ಗ್ರಹಿಸಲು ಯತ್ನಿಸಿದಾಗ, ಅದೇ ತತ್ತ್ವವನ್ನು ಪ್ರತಿಪಾದಿಸಿದ ಶಂಕರಾಚಾರ್ಯರೇ ತಮ್ಮಿಂದಲೇ ರಚಿಸಿದ ಎಪ್ಪತ್ತೇಳು ಸ್ತೋತ್ರಗಳನ್ನು ಹೇಗೆ ಒಂದೇ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕು ಎಂಬ ಪ್ರಶ್ನೆ ನನ್ನೊಳಗೆ ಸಹಜವಾಗಿ ಉದಯಿಸಿತು. ನಿರಾಕಾರವಾದ ಅದ್ವೈತದ ತತ್ತ್ವ ಮತ್ತು ಸ್ತೋತ್ರಗಳಲ್ಲಿ ಪ್ರಕಾಶಿಸುವ ಸಾಕಾರ ಭಕ್ತಿಭಾವ — ಈ ಎರಡನ್ನೂ ಒಂದೇ ತಳಹದಿಯಲ್ಲಿ ಪ್ರತಿಷ್ಠಾಪಿಸಲು ನನ್ನ ಪ್ರಯತ್ನ ಆರಂಭದಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಈ ಗ್ರಂಥದ ಕನ್ನಡ ಅನುವಾದಕರಾದ ಡಾ. ಬಿ.ಜೆ. ರಂಗನಾಥ ಅವರ ವಿವರಣೆ ನನ್ನ ಮನಸ್ಸಿಗೆ ಒಂದು ದೀಪದಂತೆ ಬೆಳಕು ತಂದಿತು.

ಅವರ ಅಭಿಪ್ರಾಯದಂತೆ, ಪರಮಾತ್ಮನು ನಾಮರೂಪಗಳಿಂದ ಅತೀತನಾಗಿದ್ದು, ದೇಹರಹಿತನಾಗಿ, ಎಲ್ಲ ಬಾಹ್ಯ–ಆಂತರ ಭೇದಗಳನ್ನು ಮೀರಿ ಅಪರೋಕ್ಷ ಬ್ರಹ್ಮಸ್ವರೂಪನಾಗಿ ಅಸ್ತಿತ್ವದಲ್ಲಿದ್ದಾನೆ. ಅವನು ನಿತ್ಯಜ್ಞಾನಮಯನಾಗಿರುವ ವಿಜ್ಞಾನಘನ; ಆಕಾಶದಂತೆ ಪರಿಪೂರ್ಣ, ಅಶೇಷ ಮತ್ತು ಅವ್ಯಕ್ತ ಪರಮವಸ್ತು. ಈ ಬ್ರಹ್ಮನು ಸ್ಥೂಲವೂ ಅಲ್ಲ, ಸೂಕ್ಷ್ಮವೂ ಅಲ್ಲ; ಆದರೆ “ಸತ್ಯಂ–ಜ್ಞಾನಂ–ಅನಂತಂ ಬ್ರಹ್ಮ” ಎಂಬ ಘೋಷಣೆಯ ಮೇಲೆ ನಿಂತಿರುವ ಪರಮಸತ್ಯ. ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಯಮಾತ್ಮಾ ಬ್ರಹ್ಮ ಎಂಬ ಮಹಾವಾಕ್ಯಗಳು, ಆತ್ಮ ಮತ್ತು ಬ್ರಹ್ಮನ ಏಕತೆಯನ್ನು ಒಳಗೂ ಹೊರಗೂ, ವ್ಯಕ್ತಿಯಲ್ಲಿಯೂ ವಿಶ್ವದಲ್ಲಿಯೂ ಒಂದೇ ರೀತಿಯಲ್ಲಿ ಘೋಷಿಸುತ್ತವೆ. ಆತ್ಮವೇ ಪರಮಾತ್ಮ, ಜೀವನೇ ಬ್ರಹ್ಮ — ಇದೇ ಅದ್ವೈತದ ಮೂಲಸಂಧಾನ.

ಆದರೆ, ಈ ನಿರಾಕಾರ ಬ್ರಹ್ಮತತ್ತ್ವವನ್ನು ಅನುಭವದ ಮಟ್ಟಕ್ಕೆ ತಲುಪಿಸಲು, ಜಿಜ್ಞಾಸುವಿನ ಮನಸ್ಸಿಗೆ ರೂಪದ ಆಧಾರವೂ ಅಗತ್ಯವೆಂದು ಶಂಕರರು ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಸಾಧನೆಯ ಕ್ರಮ ಹೀಗಿದೆ:
ಕರ್ಮದಿಂದ ಭಕ್ತಿ, ಭಕ್ತಿಯಿಂದ ಜ್ಞಾನ, ಜ್ಞಾನದಿಂದ ಮುಕ್ತಿ.
ಇವೇ ಸಂಸಾರಬಂಧನದಿಂದ ವಿಮುಕ್ತಿಗೆ ಕರೆದೊಯ್ಯುವ ಕ್ರಮಬದ್ಧ ಹಾದಿ.

ಜ್ಞಾನಸೋಪಾನವನ್ನು ಏರಲು ಸಾಧಕನು ಕರ್ಮದಿಂದ ಪ್ರಾರಂಭಿಸಿ, ಭಕ್ತಿಯ ಮೂಲಕ ಜ್ಞಾನಕ್ಕೆ, ಜ್ಞಾನದಿಂದ ಮೋಕ್ಷಕ್ಕೆ ಸಾಗಬೇಕು. ವೇದೋಕ್ತ ಕರ್ಮವನ್ನು ನಿಷ್ಠೆಯಿಂದ ಆಚರಿಸದೆ ಭಕ್ತಿ ಶುದ್ಧವಾಗುವುದಿಲ್ಲ; ಭಕ್ತಿ ಶುದ್ಧವಾಗದೆ ಜ್ಞಾನೋದಯ ಸಂಭವಿಸುವುದಿಲ್ಲ; ಮತ್ತು ಜ್ಞಾನೋದಯವಿಲ್ಲದೆ ಮುಕ್ತಿಯ ಅನುಭವ ಸಾಧ್ಯವಲ್ಲ. ಭಕ್ತಿಯ ಹಂತಗಳಲ್ಲಿ ಪರಮಾತ್ಮನು ಭಕ್ತನಿಗೆ ಸಾಕಾರರೂಪದಲ್ಲಿ ಗೋಚರಿಸುತ್ತಾನೆ — ಗಣಪತಿಯಾಗಿ, ಶಿವನಾಗಿ, ವಿಷ್ಣುವಾಗಿ ಅಥವಾ ದೇವಿಯಾಗಿ. ಈ ರೂಪಾನುಭವಕ್ಕೆ, ದೇವರನ್ನು ವಿವಿಧ ಹಂತಗಳಲ್ಲಿ ದೃಷ್ಟಿಸಲು, ದೇವತಾ ಸ್ತೋತ್ರಗಳೇ ಸಾಧಕನಿಗೆ ಸೇತುವೆಯೂ ದಾರಿದೀಪವೂ ಆಗುತ್ತವೆ.

ಅದರಲ್ಲೇ ಶಂಕರಭಗವತ್ಪಾದರು, ಅದ್ವೈತ ತತ್ತ್ವವನ್ನು ಬೋಧಿಸಿದರೂ, ಭಕ್ತನ ಸಾಧನೆಗೆ ಅನುಕೂಲವಾಗುವಂತೆ ಅನೇಕ ಸ್ತೋತ್ರಗಳನ್ನು ರಚಿಸಿದರು. ಮನಸ್ಸನ್ನು ರೂಪದಿಂದ ನಿರಾಕಾರದತ್ತ ನಿಧಾನವಾಗಿ ಕೊಂಡೊಯ್ಯುವ, ಮಗು ತಾಯಿಯ ಕೈ ಹಿಡಿದು ನಡೆಯುವಂತೆ ಹಿಡಿದು ನಡೆಸುವ ಕರುಣಾಮಯ ಸಾಧನವೇ ಈ ಸ್ತೋತ್ರಗಳು. ಇಲ್ಲಿ ಅದ್ವೈತ ಮತ್ತು ಸ್ತೋತ್ರಗಳ ನಡುವೆ ಯಾವುದೇ ವಿರೋಧವಿಲ್ಲ; ಅದು ಸಾಧನೆಯ ಪಥದಲ್ಲಿ ಕ್ರಮಬದ್ಧವಾದ ಪ್ರಗತಿ — ರೂಪದಲ್ಲಿ ಆರಂಭಿಸಿ, ನಿರಾಕಾರದಲ್ಲಿ ಲಯವಾಗುವ ಆಂತರ್ಯಾತ್ರೆ.

ವೈದಿಕ ಧರ್ಮದ ಪುನರುತ್ಥಾನಕ್ಕಾಗಿ ಶಂಕರಾಚಾರ್ಯರು ಇಡೀ ಭಾರತಖಂಡವನ್ನು ಎರಡು ಬಾರಿ ವಿಜಯಯಾತ್ರೆಗೆ ಒಳಪಡಿಸಿದರು. ಈ ಮಹಾಯಾತ್ರೆಗಳ ಸಂದರ್ಭದಲ್ಲಿ ಅವರು ಅನೇಕ ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿ ಪ್ರತಿಷ್ಠಿತ ದೇವತೆಗಳನ್ನು ಸ್ತುತಿಸಿ ಸ್ತೋತ್ರಗಳನ್ನು ರಚಿಸಿದರು. ಈ ಸ್ತೋತ್ರಗಳಲ್ಲಿ ಕೇವಲ ಅಲಂಕಾರವಲ್ಲ; ಅವು ಭಕ್ತನ ಮನಸ್ಸಿನಲ್ಲಿ ಭಾವೋದ್ಧೀಪನ ಮೂಡಿಸುವ ಶಕ್ತಿಸಾಧನಗಳು. ಶಂಕರರ ಸ್ತೋತ್ರಗಳಲ್ಲಿ ಸುಲಲಿತ ಸಾಹಿತ್ಯಶೈಲಿ, ಕವಿತ್ವದ ನಿಪುಣತೆ, ಸಂಸ್ಕೃತಭಾಷೆಯ ಚಾತುರ್ಯ, ಪ್ರಕೃತಿಯ ದಿವ್ಯ ಸೌಂದರ್ಯ, ತಾಯಿಯ ಸೌಮ್ಯ ಮಮತೆ ಹಾಗೂ ಕವಿಯ ಸೂಕ್ಷ್ಮ ಪ್ರಯೋಗಗಳು ದಿವ್ಯಾನುರಣನದಂತೆ ಆಪ್ತವಾಗಿ ಪ್ರತಿಧ್ವನಿಸುತ್ತವೆ. ಅವುಗಳನ್ನು ಭಕ್ತಿಯಿಂದ ಪಠಿಸಿದಾಗ, ಭಕ್ತನಿಗೆ ತಾನೇ ಆ ದೇವತೆಯ ಸಾನ್ನಿಧ್ಯದಲ್ಲಿರುವಂತೆ, ದೇವರ ಸಾನ್ನಿಧ್ಯವನ್ನು ನೇರವಾಗಿ ಅನುಭವಿಸುವಂತೆ, ಮನಸ್ಸೇ ದೇಗುಲವಾಗಿ ಪರಿವರ್ತಿತವಾಗುತ್ತದೆ.

ಶಂಕರಭಗವತ್ಪಾದರು ರಚಿಸಿದ ಸ್ತೋತ್ರಗಳಲ್ಲಿ ಭಕ್ತಿ ಪ್ರಧಾನ ಸ್ವರವಾಗಿದ್ದರೂ, ಅವುಗಳ ಆಂತರಾಳದಲ್ಲಿ ಅದ್ವೈತದ ತತ್ತ್ವಸೂತ್ರಗಳು ಅತಿ ಸೂಕ್ಷ್ಮವಾಗಿ ಜೋಡಿಸಿಕೊಂಡಿವೆ. ಸ್ತೋತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ, ಕವಿತ್ವದ ಮಧ್ಯೆ ತತ್ತ್ವಜ್ಯೋತಿ ಹೇಗೆ ಮಿನುಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಭಕ್ತಿ ರೂಪದ ನದಿಯಲ್ಲಿ ಹರಿಯುವ ಜ್ಞಾನಸ್ವರೂಪದ ಪ್ರವಾಹ ಸ್ತೋತ್ರಗಳಲ್ಲೇ ಅದೃಶ್ಯವಾಗಿ ಹರಡಿಕೊಂಡಿದೆ. ಆದ್ದರಿಂದ, ಶಂಕರರ ತತ್ತ್ವವನ್ನು ಗ್ರಹಿಸಲು ಅವರ ಸ್ತೋತ್ರಗಳು ಕೇವಲ ಭಕ್ತಿಪಥದ ಅಭ್ಯಾಸವಲ್ಲ; ಅವು ನಿರಾಕಾರ ತತ್ತ್ವದತ್ತ ಕೊಂಡೊಯ್ಯುವ ದಾರಿದೀಪವೂ ಆಗಿವೆ.

ಹೀಗೆ, ಶಂಕರಭಗವತ್ಪಾದರು ಪ್ರತಿಪಾದಿಸಿದ ಅದ್ವೈತ ತತ್ತ್ವ ಮತ್ತು ಅವರು ರಚಿಸಿದ ಸ್ತೋತ್ರಗಳಲ್ಲಿ ಕಾಣುವ ಸಾಕಾರ ಭಕ್ತಿ — ಎರಡೂ ಪರಸ್ಪರ ವಿರೋಧಿಗಳು ಅಲ್ಲ. ಅವು ಸಾಧನೆಯ ಪಥದಲ್ಲಿ ಎರಡು ಹಂತಗಳು, ಎರಡು ಶಿಖರಗಳು. ಭಕ್ತಿ ರೂಪದ ಮೆಟ್ಟಿಲು ಜ್ಞಾನಕ್ಕೆ ದಾರಿ ಮಾಡಿಕೊಡುತ್ತದೆ; ಜ್ಞಾನವು ಮುಕ್ತಿಗೆ ಕರೆದೊಯ್ಯುತ್ತದೆ; ಮುಕ್ತಿ ಪರಬ್ರಹ್ಮದ ಏಕತ್ವದಲ್ಲಿ ಲಯಗೊಳ್ಳುತ್ತದೆ. ನಿರಾಕಾರ ತತ್ತ್ವದತ್ತ ಸಾಗಲು ರೂಪಸಾಧನೆಯ ಅವಶ್ಯಕತೆ ಮನೋದೈಹಿಕವಾಗಿಯೂ ದಾರ್ಶನಿಕವಾಗಿಯೂ ಸಹಜ. ಅದಕ್ಕಾಗಿ ಶಂಕರರು ದೇವರ ರೂಪಗಳನ್ನೂ, ಸ್ತೋತ್ರಗಳನ್ನೂ ನಿರ್ಲಕ್ಷಿಸದೆ, ಅವುಗಳನ್ನು ಸಾಧನೆಯ ಅವಿಭಾಜ್ಯ ಅಂಗಗಳಾಗಿ ಪ್ರತಿಷ್ಠಾಪಿಸಿದರು.

ಭಕ್ತಿ ಮತ್ತು ಜ್ಞಾನ, ರೂಪ ಮತ್ತು ನಿರಾಕಾರ, ಸಾಧಕ ಮತ್ತು ಸಾಧ್ಯ — ಇವೆಲ್ಲವೂ ಅಂತಿಮವಾಗಿ ಒಂದೇ ಪರಬ್ರಹ್ಮತತ್ತ್ವದಲ್ಲಿ ಶಾಂತಿಯಾಗುತ್ತವೆ. ಸ್ತೋತ್ರ ಮತ್ತು ಅದ್ವೈತ ಎರಡೂ ವಿಭಿನ್ನ ಮಾರ್ಗಗಳಲ್ಲ; ಅವು ಒಂದೇ ಗಮ್ಯವನ್ನು ತಲುಪಿಸುವ ವಿಭಿನ್ನ ಸೇತುವೆಗಳು.

ದೇವರ ಸ್ತೋತ್ರಗಳಲ್ಲಿ ಭಕ್ತನ ಹೃದಯ ಹೊಮ್ಮುತ್ತದೆ; ಅದ್ವೈತದಲ್ಲಿ ಆತ್ಮಜಾಗೃತಿ ಬೆಳಗುತ್ತದೆ.

*******

 

 

 

Related Posts