ಲೇಖಕ: ಶ್ರೀಕಂಠ ಚೌಕೀಮಠ
ಧಾರವಾಡದ ಮುರುಘಾಮಠ ನನ್ನ ಬಾಲ್ಯದ ಅಚ್ಚುಮೆಚ್ಚಿನ ತಾಣ. ರವಿವಾರಗಳೆಂದರೆ ವಿಶೇಷ ಉಲ್ಲಾಸ. ಹೊಸಯಲ್ಲಾಪುರದ ನಮ್ಮ ಮನೆಯಿಂದ ನಡೆದುಕೊಂಡೇ ಮುರುಘಾಮಠದತ್ತ ಹೊರಡುವುದು ಒಂದು ಸಂಭ್ರಮವೇ ಆಗಿತ್ತು. ಮಠದ ಬಯಲು ಜಾಗೆಯಲ್ಲಿ, ಆಗ ಮಠದ ಉತ್ತರಾಧಿಕಾರಿಗಳಾಗಿದ್ದ ಪೂಜ್ಯ ಶ್ರೀ ಶಿವಯೋಗಿ ದೇವರೊಂದಿಗೆ ಆಟವಾಡುತ್ತಿದ್ದ ಕ್ಷಣಗಳು ಇನ್ನೂ ಮನಸ್ಸಿನಲ್ಲಿ ಹಸಿರಾಗಿವೆ. ಅವರು ಪ್ರೀತಿಯಿಂದ ಕೊಟ್ಟ ಉತ್ತತ್ತಿ ಕಲ್ಲುಸಕ್ಕರೆಯ ಸವಿಯು ಇಂದು ಕೂಡ ನನ್ನಲ್ಲಿ ಉಳಿದಂತಿದೆ.
ಅಂತಹ ಅನೇಕ ಸವಿ ನೆನಪುಗಳನ್ನು ಹೊತ್ತುಕೊಂಡು, ಇಂದು ದಿನಾಂಕ 10-01-2026 ರಂದು ಮುರುಘಾಮಠದ ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳ ಕ್ರಿಯಾಸಮಾಧಿಯ ಮುಂದೆ ಕುಳಿತುಕೊಂಡಿದ್ದೆ. ಸುತ್ತಮುತ್ತ ಆವರಿಸಿದ್ದ ಪ್ರಶಾಂತ ವಾತಾವರಣ ಮನಸ್ಸಿಗೆ ಅಪಾರ ಶಾಂತಿಯನ್ನು ನೀಡುತ್ತಿತ್ತು.
ಅದೇ ವೇಳೆಯಲ್ಲಿ ಒಂದು ಕುಟುಂಬ ಅಲ್ಲಿ ಆಗಮಿಸಿತು. ಗದ್ದುಗೆಯ ಬಾಗಿಲಲ್ಲಿ ಕುಳಿತಿದ್ದ ಬಾಲಕ ಶಾಸ್ತ್ರಿಗಳಿಗೆ ಮಂಗಳಾರತಿ ಮಾಡಲು ವಿನಂತಿಸಿಕೊಂಡರು. ನಾನು ಮತ್ತು ನನ್ನ ಪತ್ನಿ ಕೂಡ ಎದ್ದು ನಿಂತು, ಅಲ್ಲಿ ಆರಂಭವಾದ ಮಂಗಳಾರತಿಗೆ ಭಕ್ತಿಭಾವದಿಂದ ಧ್ವನಿ ಗೂಡಿಸಿದೆವು.
ಜ್ಞಾನ ಪೂರ್ಣಂ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ ॥
ಅನುದಿನ ಗುರುವಿನ ಅನುರಾಗದ ಭಕ್ತಿಯಲಿ
ಜನನ ಮರಣ ರಹಿತ ಜಂಗಮಕೆ ಬೆಳಗಿರೆ ॥
ಬಾಲಕ ಶಾಸ್ತ್ರಿಗಳು ಸಂಸ್ಕೃತ ಭಾಷೆಯ ಪುಷ್ಪಾಂಜಲಿ ಮಂತ್ರವನ್ನು ಶ್ರದ್ಧೆಯಿಂದ ಉಚ್ಚರಿಸಿದರು. ಶಿವ–ಪಾರ್ವತಿಯರ ಉದ್ಘೋಷಗಳು ಆ ವಾತಾವರಣವನ್ನು ಇನ್ನಷ್ಟು ಪಾವನಗೊಳಿಸಿದವು. ಅದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು. ಪ್ರತಿಯೊಂದು ಪೂಜೆಯ ನಂತರ ಮನದೊಳಗೆ ಮೂಡುವ ಆಂತರಿಕ ಆನಂದ ಇಲ್ಲಿ ಸಹಜವಾಗಿ ಹರಿದುಬಂತು.
ಆದರೆ ನಮ್ಮೆದುರು ನಿಂತಿದ್ದ ವ್ಯಕ್ತಿಯ ಆಂಗಿಕ ಭಾಷೆಯೇ ಬೇರೆ ರೀತಿಯಲ್ಲಿತ್ತು. ಅವರ ಮುಖಭಾವ, ಧ್ವನಿತನ ಎಲ್ಲವೂ ಅಸಹನೆಯಿಂದ ತುಂಬಿತ್ತು. ಏಕಾಏಕಿ ಅವರು ಬಾಲಕ ಶಾಸ್ತ್ರಿಗಳನ್ನು ಜೋರಾದ ಧ್ವನಿಯಲ್ಲಿ ಹಿಯಾಳಿಸಿದರು.
“ಪೂಜೆಯಲ್ಲಿಯೇಕೆ ಸಂಸ್ಕೃತ ಮಂತ್ರಗಳು? ಮಂಗಳಾರತಿ ಏಕೆ ಹಾಡುವಿರಿ?” ಎಂದು ಪ್ರಶ್ನಿಸಿದರು.
ಮತ್ತೆ, “ಪೂಜ್ಯ ಮೃತ್ಯುಂಜಯ ಸ್ವಾಮಿಗಳು ಬಸವ ಜಯಂತಿಯನ್ನು ಕಂಡು ಹಿಡಿದವರು. ಅವರ ಗದ್ದುಗೆಯ ಮುಂದೆ ಸಂಸ್ಕೃತ ಮಂತ್ರಗಳೇಕೆ?” ಎಂದು ಕೂಗಿ, “ಇಲ್ಲಿ ವಚನಗಳನ್ನು ಮಾತ್ರ ಹೇಳಬೇಕು” ಎಂದು ಆಜ್ಞಾಪಿಸುವ ಧೋರಣೆಯಲ್ಲಿ ಮಾತನಾಡಿದರು. ನಂತರ ಬಸವಣ್ಣನವರ ‘ಕಳ ಬೇಡ, ಕೊಲ ಬೇಡ…’ ಎಂಬ ವಚನವನ್ನು ಜೋರಾಗಿ ಉಚ್ಚರಿಸಿದರು.
ಈ ಆಕಸ್ಮಿಕ ಘಟನೆಯಿಂದ ವಿಚಲಿತಳಾದ ನನ್ನ ಪತ್ನಿ, ಬಾಲಕ ಶಾಸ್ತ್ರಿಗಳನ್ನು ಬಯ್ಯಬೇಡಿ ಎಂದು ಶಾಂತವಾಗಿ ಮನವಿ ಮಾಡಿದಳು. ಆದರೆ ಆ ವ್ಯಕ್ತಿ ಧ್ವನಿ ಏರಿಸಿ ಕೂಗಾಡಿದರು. ಕ್ಷಣಮಾತ್ರದಲ್ಲೇ ಇಡೀ ಮಂದಿರದ ವಾತಾವರಣ ಕರ್ಕಶವಾಗಿ, ಪೂಜೆಯ ಪಾವಿತ್ರ್ಯಕ್ಕೆ ಧಕ್ಕೆ ಬಂದಂತಾಯಿತು.
ಬೆದರಿದ ಬಾಲಕ ಶಾಸ್ತ್ರಿಗಳನ್ನು ಸಾಂತ್ವನಪಡಿಸಿ, ಕೂಗಾಡುತ್ತಿದ್ದ ವ್ಯಕ್ತಿಯೊಂದಿಗೆ ವಾದಕ್ಕಿಳಿಯುವುದು ಆ ಸಂದರ್ಭಕ್ಕೆ ಔಚಿತ್ಯವಲ್ಲವೆಂದು ಭಾವಿಸಿದೆ. ಭಾರವಾದ ಮನಸ್ಸನ್ನು ಹೊತ್ತುಕೊಂಡೇ, ಆ ಪವಿತ್ರ ಸ್ಥಳದಿಂದ ನಿಧಾನವಾಗಿ ಹೊರಬಂದೆ.
ಈ ಸನ್ನಿವೇಶವು ವರ್ತಮಾನ ಮತ್ತು ಭವಿಷ್ಯಕಾಲದ ವೀರಶೈವ–ಲಿಂಗಾಯತದ ಇಬ್ಭಾಗದ ಫಲಶೃತಿಯ ಪ್ರಾತ್ಯಕ್ಷತೆಯೇನೋ ಎಂಬ ಪ್ರಶ್ನೆ ಮನಸ್ಸನ್ನು ಕಾಡಿತು. ಮರಳುವ ದಾರಿಯುದ್ದಕ್ಕೂ ನಡೆದ ಘಟನೆಯನ್ನು ಮರುಮರು ಮೆಲಕು ಹಾಕಿದಾಗ, ಅನೇಕ ಅಸಮಾಧಾನಕರ ಪ್ರಶ್ನೆಗಳು ನನ್ನೊಳಗೆ ಮೂಡಿದವು.
“ಕಳಬೇಡ, ಕೊಲಬೇಡ…” ಎಂದು ಬಸವಣ್ಣನವರು ಸಮಾಜದ ಜನತೆಗೆ ಉಪದೇಶಿಸಿದ ವಚನವನ್ನು ಪಾಲಿಸುವ ಜವಾಬ್ದಾರಿ ನಿಸ್ಸಂದೇಹವಾಗಿ ನಮ್ಮೆಲ್ಲರ ಮೇಲಿದೆ. ಆದರೆ ಆ ವಚನವನ್ನು ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳ ಗದ್ದುಗೆಯ ಮುಂದೆ, ಆ ಸಂದರ್ಭದಲ್ಲೇ ಜೋರಾಗಿ ಉಚ್ಚರಿಸುವ ಔಚಿತ್ಯವೇನು ಎಂಬ ಪ್ರಶ್ನೆ ನನ್ನ ಮನಸ್ಸನ್ನು ಕಾಡಿತು. ಅದು ನನಗೆ ವಿಚಿತ್ರವಾಗಿ ಅನಿಸಿತು.
ಬಸವಣ್ಣನವರ ಮೇಲಿನ ಅಭಿಮಾನ, ಪುರೋಹಿತಶಾಹಿ ವಿರೋಧವನ್ನು ತೋರಿಸುವ ಭರದಲ್ಲಿ ಬಳಸುವ ವಚನಗಳು ಶುದ್ಧ ಕನ್ನಡದಲ್ಲಿದ್ದರೂ, ಅವುಗಳನ್ನು ಬಳಸುವ ರೀತಿ, ಸಂದರ್ಭ ಮತ್ತು ಉದ್ದೇಶವನ್ನು ನೋಡಿದಾಗ ಒಂದು ರೀತಿಯ ವಿಚಿತ್ರತೆಗೂ ವಿಷಾದಕ್ಕೂ ಕಾರಣವಾಗುತ್ತದೆ. ಭಕ್ತಿಯ ಹೆಸರಿನಲ್ಲಿ ವ್ಯಕ್ತವಾಗಬೇಕಾದ ವಚನಗಳು, ಸಂಘರ್ಷದ ಉಪಕರಣಗಳಾಗಿ ಮಾರ್ಪಡುವುದು ನೋವಿನ ಸಂಗತಿ.
ಇದೇ ರೀತಿಯ ಕಸಿವಿಸಿ ನನಗೆ ಕನ್ನಡದ ಖ್ಯಾತ ಪತ್ರಕರ್ತ ಶ್ರೀ ಪಾಟೀಲ ಪುಟ್ಟಪ್ಪನವರ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಉಂಟಾಗಿತ್ತು. ಅಂತ್ಯಕ್ರಿಯೆಯ ಪೌರೋಹಿತ್ಯವನ್ನು ವಹಿಸಿಕೊಂಡಿದ್ದ ಶ್ರೀ ನಿಜಗುಣಾನಂದ ಸ್ವಾಮಿಗಳು ಶರಣರ ವಚನಗಳನ್ನು ಪಠಿಸಿದರು. ಪಾಟೀಲ ಪುಟ್ಟಪ್ಪನವರ ಪಾರ್ಥಿವ ಶರೀರಕ್ಕೆ ಮಾಲೆ ಹಾಕುವ ಮುನ್ನ ಅವರು ಉಚ್ಚರಿಸಿದ ವಚನ —
“ತಂದೆ ನೀನು, ತಾಯಿ ನೀನು,
ಬಂಧು ನೀನು, ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು ನೀರಲದ್ದು.”
— ಆ ಕ್ಷಣದಲ್ಲಿ ಮತ್ತೆ ಅದೇ ಪ್ರಶ್ನೆಯನ್ನು ನನ್ನೊಳಗೆ ಎಬ್ಬಿಸಿತು. ವಚನಗಳ ಮಹತ್ವ ಅವುಗಳ ಭಾಷೆಯಲ್ಲಿ ಮಾತ್ರವಲ್ಲ, ಅವುಗಳನ್ನು ಬಳಸುವ ಸಂದರ್ಭ, ಭಾವ ಮತ್ತು ಸಂಯಮದಲ್ಲೂ ಅಡಗಿದೆ ಎಂಬ ಸತ್ಯ ಇನ್ನಷ್ಟು ಸ್ಪಷ್ಟವಾಗಿ ಅರಿವಾಯಿತು.
ಸಮಗ್ರ ವಚನ ಸಾಹಿತ್ಯವು ಕನ್ನಡದ ಸಾಹಿತ್ಯ ಪರಂಪರೆಯಲ್ಲಿನ ಪ್ರಮುಖ ಹಾಗೂ ವಿಶಿಷ್ಟ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಹನ್ನೊಂದನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ, ಹನ್ನೆರಡನೇ ಶತಮಾನದ ಅಂತ್ಯದವರೆಗೆ ಬಸವಣ್ಣನವರ ನೇತೃತ್ವದ ಜನಸಾಮಾನ್ಯರ ಆಂದೋಲನದ ಅವಿಭಾಜ್ಯ ಅಂಗವಾಗಿ ಇದು ಬೆಳೆಯಿತು. ಸಾಹಿತ್ಯ ಪರಿಭಾಷೆಯಲ್ಲಿ ಇದು ಒಂದು ಅಪರೂಪದ ಕಾವ್ಯ ಪ್ರಕಾರ—ಹಾಡಿದರೆ ಹಾಡಾಗುವದು, ಓದಿದರೆ ಗದ್ಯವಾಗುವದು. ಕನ್ನಡ ಭಾಷೆಯ ಈ ವೈಶಿಷ್ಟ್ಯಮಯ ಕಾವ್ಯ ಪ್ರಕಾರ ತನ್ನ ಕಾಲಘಟ್ಟದ ಜನರ ಮನೋಭಾವಗಳ ಅಭಿವ್ಯಕ್ತಿಗೆ ನೇರ ಸಂಗಾತಿಯಾಗಿ ನಿಂತಿತು. ‘ವಚನ’ವೆಂದರೆ ‘ಪ್ರಮಾಣ’, ‘ಕೊಟ್ಟ ಮಾತು’ ಎಂಬ ಅರ್ಥವನ್ನು ಹೊತ್ತುಕೊಂಡಿರುವ ಪದ.
ವಚನಗಳು ಶರಣರ ಜೀವನಕ್ಕೆ ಹಿಡಿದ ಕೈಗನ್ನಡಿಯಂತಿವೆ. ಅವು ಶರಣರ ಅನುಭಾವಗಳ ಅಕ್ಷರರೂಪ. ಶರಣಪಥದಲ್ಲಿ ಸಾಗಲು ಬಯಸುವ ಪ್ರತಿಯೊಬ್ಬ ಪಥಿಕನಿಗೂ ದಾರಿದೀಪಗಳಂತೆ ದಾರಿತೋರುವ ಜ್ಞಾನಪ್ರಕಾಶಗಳು. ಮೌಢ್ಯದ ಕೊಳೆಯನ್ನು ತೊಳೆಯುವ, ಅಂಧಕಾರದ ಮನಸ್ಸಿಗೆ ಅಂಟಿದ ಕಿಲುಬನ್ನು ತೆಗೆದುಹಾಕಿ ಸ್ವಚ್ಚಗೊಳಿಸುವ, ಫಳಫಳ ಹೊಳೆಯುವಂತೆ ಮಾಡಬಲ್ಲ ವಿಚಾರತರಂಗಿಣಿಗಳೇ ವಚನಗಳು. ಅಂತಹ ವಚನಗಳನ್ನು ಓದಿ, ಸರಿಯಾಗಿ ಯಥಾವತ್ತಾಗಿ ಅರ್ಥಮಾಡಿಕೊಂಡು, ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಬಸವಪಥಿಕನ ಆದ್ಯ ಕರ್ತವ್ಯ.
ವಚನಗಳನ್ನು ಓದುವಾಗ ಅತ್ಯಂತ ಎಚ್ಚರಿಕೆಯಿಂದ, ಆ ವಚನದ ರಚನೆಯ ಹಿಂದಿರುವ ಸನ್ನಿವೇಶವನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಆಗ ಮಾತ್ರ ನಿರ್ದಿಷ್ಟ ವಚನದ ನಿಖರವಾದ ಅರ್ಥ ನಮಗೆ ಸ್ಪಷ್ಟವಾಗುತ್ತದೆ. ಯಾವುದೋ ಒಂದು ವಚನವನ್ನು ಅದರ ಹಿನ್ನೆಲೆಯನ್ನು ಪರಿಗಣಿಸದೆ, ಸಂದರ್ಭವನ್ನೇ ಅರಿಯದೆ ಅರ್ಥೈಸಲು ಹೊರಟರೆ, ಅಲ್ಲಿ ಅರ್ಥಕ್ಕಿಂತ ಅನರ್ಥವೇ ಹೆಚ್ಚಾಗುವ ಸಂಭವವಿದೆ ಎಂಬ ಸತ್ಯವನ್ನು ಮರೆಯಬಾರದು.
ಸಂಸ್ಕೃತ ಮಂತ್ರ ವಿರೋಧಿ ಆ ವ್ಯಕ್ತಿ ಹೇಳಿದ ಇನ್ನೊಂದು ಮಾತು ಇನ್ನಷ್ಟು ಆಶ್ಚರ್ಯವನ್ನು ಹುಟ್ಟಿಸಿತು.
“ಪೂಜ್ಯ ಮೃತ್ಯುಂಜಯ ಸ್ವಾಮಿಗಳು ಬಸವ ಜಯಂತಿಯನ್ನು ಕಂಡು ಹಿಡಿದವರು. ಹಾಗಿದ್ದರೆ ಅವರ ಗದ್ದುಗೆಯ ಮುಂದೆ ಸಂಸ್ಕೃತ ಮಂತ್ರಗಳೇಕೆ?” ಎಂದು ಅವರು ಪ್ರಶ್ನಿಸಿದರು.
ಆದರೆ ಇಲ್ಲಿ ಇರುವ ವಿಪರ್ಯಾಸವೇನೆಂದರೆ, ಪೂಜ್ಯ ಲಿಂ. ಮೃತ್ಯುಂಜಯ ಸ್ವಾಮಿಗಳು ಎಂದಿಗೂ ಸಂಸ್ಕೃತ ವಿರೋಧಿಗಳಾಗಿರಲಿಲ್ಲ. ಅವರೂ ಮತ್ತು ಲಿಂ. ಹರ್ಡೇಕರ ಮಂಜಪ್ಪ ಅವರು 1913ರಲ್ಲಿ ಬಸವ ಜಯಂತಿಯ ದಿನಾಂಕವನ್ನು ಗುರುತಿಸಿದ್ದು ಸಂಸ್ಕೃತ ವೀರಶೈವ ಪುರಾಣಗಳ ಆಧಾರದಲ್ಲಿಯೇ. ಬಸವ ಜಯಂತಿಯ ದಿನವನ್ನು ಅವರು ನಿರ್ಧರಿಸಿದ್ದು ಭಾರತೀಯ ಪುರಾತನ ಜ್ಯೋತಿಷ್ಯ ಶಾಸ್ತ್ರದ ಕ್ರಮದ ಮೂಲಕ ಎಂಬುದು ಇತಿಹಾಸಾತ್ಮಕ ಸತ್ಯ.
ಮೈಸೂರಿನ ಪ್ರಸಿದ್ಧ ವಿದ್ವಾಂಸರಾದ ಎನ್.ಆರ್. ಕರಿಬಸವ ಶಾಸ್ತ್ರಿಗಳು ಅವರು ಪೂಜ್ಯ ಲಿಂ. ಮೃತ್ಯುಂಜಯ ಸ್ವಾಮಿಗಳಿಗೆ ಬರೆದ ಪತ್ರದಲ್ಲಿ, ‘ಸಂಸ್ಕೃತ ಬಸವಪುರಾಣ’ದಲ್ಲಿ ಉಕ್ತವಾಗಿರುವ ಬಸವಣ್ಣನವರ ಜನನಕಾಲದ ಗ್ರಹಗತಿಗಳನ್ನು ಸೂಚಿಸುವ ಈ ಶ್ಲೋಕವನ್ನು ಉಲ್ಲೇಖಿಸಿ, ಅದರ ಅರ್ಥವನ್ನೂ ವಿವರಿಸಿ ಕಳುಹಿಸಿದ್ದರಂತೆ:
ಮೀನಸ್ಥಿತೇ ಭೃಗೋಃ ಪುತ್ರೇ। ಮೇಷಸ್ತೇ ಚ ದಿವಾಕರೇ।
ತುಲಾಸ್ಥಿತೇ ತತ್ಪುತ್ರೇ। ಕರ್ಕಾಟಸ್ಥೇ ಬೃಹಸ್ಪತೌ।
ಶಶಾಂಕೇ ರೋಹಿಣೀ ಸಂಸ್ಥೇ| ಮಕರಸ್ಥೇ ಭೂಸುತೇ।
ಶಿಶೋರರ್ಧೋದಯೇ ಜಾತೇ/ ಲಗ್ನ ಕರ್ಕಟ ಸಂಜ್ಞೀಕೇ॥
ಈ ಶ್ಲೋಕದ ಆಧಾರದಲ್ಲಿ ಕುಂಡಲಿ ಹಾಕಿ ಬಸವಣ್ಣನವರ ಜನನಕಾಲವನ್ನು ನಿರ್ಧರಿಸಬೇಕೆಂದು, ಆಗಿನ ಖ್ಯಾತ ಜ್ಯೋತಿಷಿಗಳಾದ ಹರಪನಹಳ್ಳಿ ಆರ್. ಶಾಂತಪ್ಪಾಜಿಯವರಲ್ಲಿ ಮನವಿ ಮಾಡಲಾಯಿತು. ಅವರು ಈ ಶ್ಲೋಕಾಧಾರವನ್ನು ಅನುಸರಿಸಿ ಕುಂಡಲಿ ಹಾಕಿ, ಶಾಲಿವಾಹನ ಶಕೆ 1037ನೆಯ ಮನ್ಮಥನಾಮ ಸಂವತ್ಸರ, ವೈಶಾಖ ಶುದ್ಧ 4, ಶನಿವಾರ, ಸೂರ್ಯೋದಯನಂತರ ಘಟಿಕಾ 14–24ಕ್ಕೆ, ಕರ್ಕಟ ಲಗ್ನದಲ್ಲಿ, ರೋಹಿಣೀ ನಕ್ಷತ್ರದ ನಾಲ್ಕನೇ ಚರಣದಲ್ಲಿ ಬಸವಣ್ಣ ಜನಿಸಿದ್ದರೆಂದು ನಿರ್ಣಯಿಸಿದರು.
ಇದರಿಂದ ಬಸವಣ್ಣನವರ ಜನನ ಕ್ರಿ.ಶ. 1115ನೆ ಇಸವಿಯೆಂದು ಸಿದ್ಧವಾಗುತ್ತದೆ. ಆದರೆ ಇತ್ತೀಚಿನ ಕೆಲ ವಿದ್ವಾಂಸರು ಕ್ರಿ.ಶ. 1132 ಎಂದು ನಿರ್ಣಯಕ್ಕೆ ಬಂದಿರುವುದರಿಂದ, ಈ 17 ವರ್ಷಗಳ ಅಂತರದ ಕಾರಣವನ್ನು ಇತಿಹಾಸಜ್ಞರು ಇನ್ನೂ ವಿಶ್ಲೇಷಿಸಬೇಕಾಗಿದೆ. ವರ್ಷದ ವ್ಯತ್ಯಾಸ ಏನೇ ಇರಲಿ, ವೈಶಾಖ ಶುದ್ಧದಲ್ಲಿ ಬರುವ ರೋಹಿಣೀ ನಕ್ಷತ್ರದ ದಿನವನ್ನು ಬಸವ ಜಯಂತಿಯಾಗಿ ಆಚರಿಸಬೇಕೆಂದು ಮಂಜಪ್ಪನವರು ತೀರ್ಮಾನಿಸಿದರು. ಈ ನಿರ್ಧಾರಕ್ಕೆ ಶ್ರೀ ಮೃತ್ಯುಂಜಯ ಸ್ವಾಮಿಗಳೂ ದಾವಣಗೆರೆಯ ಪ್ರಮುಖರೂ ಒಪ್ಪಿಗೆ ನೀಡಿದರು.
“ಶುಭಸ್ಯ ಶೀಘ್ರಂ” ಎಂಬಂತೆ, ಅದೇ ವರ್ಷವಾದ 1913ರಲ್ಲಿಯೇ ದಾವಣಗೆರೆಯಲ್ಲಿ ಬಸವ ಜಯಂತಿಯ ಉತ್ಸವವನ್ನು ವಿಧ್ಯುಕ್ತವಾಗಿ ಆಚರಿಸಲಾಯಿತು.
(ಆಧಾರ: ಬಸವಜಯಂತಿ ಆಚರಣೆಯು ಬಂದ ಇತಿಹಾಸ – ಲೇಖಕರು: ಪಂಡಿತ ಚನ್ನಪ್ಪ ಎರೇಸೀಮೆ; ಬಸವಪಥ ನಿಯತಕಾಲಿಕದ “ಬೆಳ್ಳಿ ಬೆಳಗು” ಸಂಪುಟ–2, ವಿಶೇಷ ಸಂಚಿಕೆ–1, ಏಪ್ರಿಲ್ 1977; ಹಾಗೂ ದೇಗುಲ ಪ್ರಭೆ ನಿಯತಕಾಲಿಕದ “ಇತಿಹಾಸ ಪ್ರಭೆ” ವಿಶೇಷ ಅಂಕಣ, ಮಾರ್ಚ್–ಏಪ್ರಿಲ್ 2025 ಸಂಚಿಕೆ; ಸಂಗ್ರಹ: ಶ್ರೀ ವಿ.ಪಿ. ಆರಾಧ್ಯ.)
ಮುರುಘಾಮಠದ ಪೂಜ್ಯ ಲಿಂ. ಮೃತ್ಯುಂಜಯ ಮಹಾಸ್ವಾಮಿಗಳು ಅವರ ಕ್ರಿಯಾಸಮಾಧಿಯ ಮುಂದೆ, ತನ್ನನ್ನು ಬಸವವಾದಿ ಎಂದು ಹೇಳಿಕೊಂಡ ಆ ವ್ಯಕ್ತಿಯೊಂದಿಗೆ ನಾನು ವಾದಕ್ಕಿಳಿಯಲಿಲ್ಲ. ಪವಿತ್ರ ಸ್ಥಳದಲ್ಲಿ ವಾದಕ್ಕಿಂತ ಸಂಯಮವೇ ಶ್ರೇಷ್ಠವೆಂಬ ಭಾವನೆ ನನ್ನನ್ನು ತಡೆಹಿಡಿದಿತ್ತು. ಆದರೆ ಅಲ್ಲಿ ಉಪಸ್ಥಿತರಿದ್ದ ಒಬ್ಬ ವೃದ್ಧರು ಆ ವ್ಯಕ್ತಿಗೆ ಹೇಳಿದ ಮಾತು ಮಾತ್ರ ಅತ್ಯಂತ ಅರ್ಥಗರ್ಭಿತವಾಗಿತ್ತು—
“ವಚನಗಳನ್ನು ಶರಣರು ಹೇಳೋದಕ್ಕ ಬರೀಲಿಲ್ಲ…
ನಾವೂ ನೀವೂ ಪಾಲಿಸೋದಕ್ಕ ಬರದಾರ.”
ಆ ಮಾತುಗಳು ಆ ವ್ಯಕ್ತಿಗೆ ಅರ್ಥವಾಯಿತೋ ಇಲ್ಲವೋ ನನಗೆ ತಿಳಿಯಲಿಲ್ಲ. ಆದರೆ ಆ ಕ್ಷಣದಲ್ಲಿ ನನಗೆ ಒಂದು ವಿಷಯ ಮಾತ್ರ ಸ್ಪಷ್ಟವಾಯಿತು—ವಚನಗಳು ವಾದಕ್ಕೆ ಅಲ್ಲ, ಬದುಕಿಗೆ.
ಆದರೆ ಆ ಮುಗ್ಧ ಭಕ್ತ ಕುಟುಂಬದ ಜೊತೆ ನಾವು ಸೇರಿ ಮಂಗಳಾರತಿ ಮಾಡುತ್ತಾ ಹಾಡಿದ ಗೀತೆಯ ಸಾಲುಗಳು ಮಾತ್ರ ಅತ್ಯಂತ ಆಳವಾದ ಅರ್ಥವನ್ನು ಹೊತ್ತುಕೊಂಡಿದ್ದವು. ಅವುಗಳು ಕ್ಷಣಿಕ ಉದ್ವಿಗ್ನತೆಯನ್ನು ಮೀರಿ, ಆತ್ಮದೊಳಗೆ ಬೆಳಕು ಹಚ್ಚಿದವು.
ಜ್ಞಾನಪೂರ್ಣಂ ಜಗನ್–ಜ್ಯೋತಿ
— ಜ್ಞಾನದಿಂದ ಸಂಪೂರ್ಣವಾದ ವಿಶ್ವದ ಬೆಳಕು.
ನಿರ್ಮಲವಾದ ಮನವೇ ಕರ್ಪೂರದಾರತಿ
— ಪರಿಶುದ್ಧವಾದ ಮನಸ್ಸೇ ಕರ್ಪೂರದ ಆರತಿ (ದೀಪ).
ಅನುದಿನ ಗುರುವಿನ ಅನುರಾಗ ಭಕ್ತಿಯಲಿ
— ಪ್ರತಿದಿನ ಗುರುವಿನ ಮೇಲಿನ ಪ್ರೀತಿ ಮತ್ತು ಭಕ್ತಿಯಿಂದ.
ಜನನ–ಮರಣ ರಹಿತ ಜಂಗಮಗೆ ಬೆಳಗಿರಿ
— ಹುಟ್ಟು–ಸಾವುಗಳಿಲ್ಲದ ಆತ್ಮಕ್ಕೆ ಬೆಳಕನ್ನು ನೀಡಿರಿ.
ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
— ಅನೇಕ ಜನ್ಮಗಳ ಕತ್ತಲೆಯನ್ನು ಬೇಗ ಕಳೆದುಕೊಂಡು.
ಮಾನವ ಜನ್ಮದ ಬೆಳಕಿಲಿ ಸ್ವಾನುಭಾವದ ಸುಖ ತಾನೇ ಕೈ ಸೇರುವುದು
— ಮಾನವ ಜನ್ಮದ ಬೆಳಕಿನಲ್ಲಿ ಸ್ವಾನುಭವದ ಸುಖವು ಸಹಜವಾಗಿ ದೊರಕುತ್ತದೆ.
ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರಿ
— ಅನುಭವಿಸಿ, ಲಿಂಗಕ್ಕೆ (ದೈವಕ್ಕೆ) ಮನಸ್ಸನ್ನು ಒಪ್ಪಿಸಿ ಪ್ರಕಾಶಿಸಿ.
ನಾ–ನೀನೆಂಬುದು ಬಿಡಿರಿ ನರಕವೇ ಪ್ರಾಪ್ತಿ
— ‘ನಾನು–ನೀನು’ ಎಂಬ ಭೇದಭಾವ ಬಿಡದಿದ್ದರೆ ನರಕವೇ ಪ್ರಾಪ್ತವಾಗುತ್ತದೆ.
ಅಷ್ಟವರ್ಣದ ಸ್ಥೂಲವು ಮಾನವ ಜನ್ಮ ಹುಟ್ಟಿ ಬರುವುದು ದುರ್ಲಭವು
— ಈ ಎಂಟು ವರ್ಣಗಳ ಭೌತಿಕ ದೇಹದ ಮಾನವ ಜನ್ಮ ದುರ್ಲಭ.
ಕೊಟ್ಟಾನು ಗುರು ಎಮಗೆ ಮಾಡಿದ ಫಲದಿಂದೆ
— ಗುರುಗಳು ಈ ಜನ್ಮವನ್ನು ನಮಗೆ ನಮ್ಮ ಕರ್ಮಫಲದ ಮೂಲಕ ನೀಡಿದ್ದಾರೆ.
ಹುಟ್ಟಿದ ಮಗನೆಸರು ಶಿವನೆಂದು ಕರೆಯಿರಿ
— ಹುಟ್ಟಿದ ಪ್ರತಿಯೊಬ್ಬ ಮಗುವನ್ನೂ ಶಿವನೆಂದು ಕಾಣಿರಿ.
ಆ ದಿನ ನನಗೆ ಮತ್ತೊಮ್ಮೆ ಅರಿವಾಯಿತು—ಮಂತ್ರವಾಗಲಿ, ವಚನವಾಗಲಿ, ಭಾಷೆಯಾಗಲಿ—ಅವುಗಳ ಗುರಿ ಒಬ್ಬರನ್ನೊಬ್ಬರು ಸೋಲಿಸುವುದಲ್ಲ; ಮನಸ್ಸನ್ನು ಮೃದುವಾಗಿಸಿ, ಬದುಕನ್ನು ಶುದ್ಧಗೊಳಿಸುವುದೇ.
ಮುರುಘಾಮಠದ ಮೌನಸನ್ನಿಧಿಯಲ್ಲಿ ನಡೆದ ಆ ಸಣ್ಣ ಘಟನೆಯು ಒಂದು ಅಸಹಜ ಸತ್ಯವನ್ನು ಬಯಲಿಗೆಳೆದಿತು. ಸಮಸ್ಯೆ ವಚನದಲ್ಲಿಲ್ಲ, ಮಂತ್ರದಲ್ಲಿಲ್ಲ; ಸಮಸ್ಯೆ ಅವುಗಳನ್ನು ಹಿಡಿದುಕೊಂಡಿರುವ ಮನಸ್ಸಿನ ಅಸಹನೆಯಲ್ಲಿ ಇದೆ. ವೀರಶೈವ ಮತ್ತು ಲಿಂಗಾಯತ ಎಂಬ ಹೆಸರುಗಳನ್ನು ವಿಭಜನೆಗೆ ಬಳಸುವ ಪ್ರಯತ್ನಗಳು, ಬಸವಪಥದ ಆತ್ಮವನ್ನೇ ತಪ್ಪಾಗಿ ಅರ್ಥಮಾಡಿಕೊಂಡ ಫಲ. ಅವು ಎರಡು ಧರ್ಮಗಳಲ್ಲ, ಎರಡು ಪಾಳಯಗಳಲ್ಲ; ಒಂದೇ ಚಿಂತನೆಯ, ಒಂದೇ ಅನುಭವದ, ಒಂದೇ ಸಾಮಾಜಿಕ ಕ್ರಾಂತಿಯ ಎರಡು ಉಸಿರಾಟಗಳು.
ಬಸವಪಥವು ಎಂದಿಗೂ ವಿರೋಧದ ರಾಜಕೀಯದ ಮೇಲೆ ನಿಂತಿಲ್ಲ; ಅದು ಏಕತೆಯ ನೈತಿಕತೆಯ ಮೇಲೆ ನಿಂತಿದೆ. ವಚನಗಳು ಘೋಷಣೆಗಳಿಗೆಲ್ಲ ಹುಟ್ಟಿಲ್ಲ, ಜೀವನಕ್ಕೆ ಹುಟ್ಟಿವೆ. ಶರಣರು ವಚನಗಳನ್ನು ರಚಿಸಿದ್ದು ಭಾಷಾ ಶುದ್ಧತೆಯ ವಾದಕ್ಕಾಗಿ ಅಲ್ಲ, ಮನಃಶುದ್ಧಿಯ ಪರಿವರ್ತನೆಗಾಗಿ. ಸಂಸ್ಕೃತ–ಕನ್ನಡ, ಪುರಾಣ–ವಚನ, ವಿಧಿ–ಅನುಭಾವ ಎಂಬ ಬೇಧಗಳನ್ನು ಕಟ್ಟುವಲ್ಲಿ ಆಸಕ್ತಿ ತೋರಿದ ಕ್ಷಣದಲ್ಲೇ ನಾವು ಶರಣರ ಸಮಾಜದಿಂದ ಹೊರಬಿದ್ದಿರುತ್ತೇವೆ.
ವಚನಗಳನ್ನು ಕೈಯಲ್ಲಿ ಹಿಡಿದು ಹೊಡೆಯುವವರು ಅವುಗಳನ್ನು ಶಸ್ತ್ರವಾಗಿಸುತ್ತಾರೆ;
ವಚನಗಳನ್ನು ಹೃದಯದಲ್ಲಿ ಇಟ್ಟು ಬದುಕುವವರು ಅವನ್ನೇ ದೀಪವಾಗಿಸುತ್ತಾರೆ.
ಈ ದಿನ ಕೇಳಿಬಂದದ್ದು ವಿಭಜನೆಯ ಕೂಗು; ಆದರೆ ಕೇಳಿಸಿಕೊಳ್ಳಬೇಕಾದದ್ದು ಶರಣರ ಮೌನದ ಎಚ್ಚರಿಕೆ. ವೀರಶೈವವೂ ಲಿಂಗಾಯತವೂ ಒಂದೇ — ಇದೊಂದು ನಂಬಿಕೆ ಅಲ್ಲ, ಇತಿಹಾಸ; ಇದೊಂದು ಘೋಷಣೆ ಅಲ್ಲ, ಅನುಭವ.
ಬಸವಣ್ಣನವರು ಈ ಸತ್ಯವನ್ನು ಎಷ್ಟು ಸರಳವಾಗಿ, ಎಷ್ಟು ತೀಕ್ಷ್ಣವಾಗಿ ಹೇಳಿಹೋಗಿದ್ದಾರೆ —
ವಚನದಲ್ಲಿ ನಾಮಾಮೃತ ತುಂಬಿ,
ನಯನದಲ್ಲಿ ಮೂರ್ತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ,
ಕಿವಿಯಲ್ಲಿ ನಿಮ್ಮ ಕೀರ್ತಿ ತುಂಬಿ;
ಕೂಡಲಸಂಗಮದೇವಾ,
ನಿಮ್ಮ ಚರಣಕಮಲದಲಾನು ತುಂಬಿ ॥
***********

























Total views : 23412