ಲೇಖಕರು :- ಶ್ರೀ ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ
ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
ಹಾನಗಲ್ಲ ವಿರಕ್ತಮಠ ಕರ್ನಾಟಕದಲ್ಲಿಯ ಪ್ರಸಿದ್ದಿಯನ್ನು ಪಡೆದ ಧರ್ಮಪೀಠ, ಅದರ ಪರಂಪರೆ ಘನವಾದುದು. ಹಿಂದಿನ ಮಹಾಸ್ವಾಮಿಗಳವರೆಲ್ಲರು ಪರಮ ತಪಸ್ವಿಗಳು, ಪಂಡಿತರು, ಕಾವ್ಯ ಪರಿಣತರ ಆಗಿದ್ದರು. ಸುಮಾರು ಒಂದು ನೂರ ಹದಿನೈದು ವರ್ಷಗಳ ಕುಮಾರಾರ್ಯರೆಂಬವರು ಈ ಪೀಠವನ್ನಲಂಕರಿಸಿದ್ದರು. ಅವರು ತಪೋನಿಷ್ಠರಾಗಿದ್ದಂತೆ ಪ್ರತಿಭಾವಂತ ಕವಿಗಳೂ ಆಗಿದ್ದರು. ಅವರು ‘ಕುಮಾರೇಶ್ವರ ಪುರಾಣ’ವೆಂಬ ಕಾವ್ಯವನ್ನು ವಾರ್ಧಿಕಷಟ್ಪದಿಯಲ್ಲಿ ಬರೆದಿದ್ದಾರೆ. ಅದು ರಸಾತ್ಮಕವಾದ ಪ್ರೌಢ ಕಾವ್ಯವಾಗಿದೆ. ‘ಭಿಕ್ಷಾಟನ ಲೀಲೆ’ ಯನ್ನು ಕುರಿತು ಬರೆದ ಅವರ ಇನ್ನೊಂದು ಕಿರುಗಾವ್ಯ ದೊರೆತಿಲ್ಲ.
ಇವರ ತರುವಾಯದ ಪರಂಪರೆಯಲ್ಲಿ ಶ್ರೀ ಫಕೀರ ಮಹಾಸ್ವಾಮಿಗಳು ಶಿವಪೂಜಾನಿಷ್ಠರು, ಶಿವಾನುಭವಿಗಳು. ಇಂತಹ ಉಜ್ವಲ ಪರಂಪರೆಯುಳ್ಳ ಮಹಾಪೀಠವನ್ನು ಅಲಂಕರಿಸಿದರೂ, ಮೇಣೆ ಪಲ್ಲಕ್ಕಿಗಳಲ್ಲಿ ಕುಳಿತು ಮೆರೆದಾಡುವ ಆ ಮಠದ ವೈಭವವು ಶ್ರೀಗಳವರನ್ನು ಸ್ವಾಗತಿಸಿ ಬಂದರೂ ಅದಕ್ಕವರು ಮಾರುವೋಗಲಿಲ್ಲ. ಈ ವೀರ ವಿರಾಗಿಗಳ ವೈರಾಗ್ಯದ ರನ್ನದೀವಿಗೆಯು ವೈಭವಾಡಂಬರಗಳ ಬಿರುಗಾಳಿಗೆ ಹೊಯ್ದಾಡದೆ ಅಚಲವಾಗಿತ್ತು. ಶ್ರೀಗಳವರು ತಮ್ಮ ಪೀಠದ ಘನವಾದ ಪರಂಪರೆಯನ್ನು ಉಳಿಸಿಕೊಂಡು ಬಂದುದಲ್ಲದೆ ಅದು ಮತ್ತಿಷ್ಟು ಉಜ್ಜಲವಾಗಿ ಬೆಳಗುವಂತೆ ಕಾರ್ಯವೆಸಗಿದರು. ಶ್ರೀಗಳವರು ಮಾಡಿದ ತ್ಯಾಗಮಯ ಕೃತಿಗಳಿಂದಾಗಿ ಹಾನಗಲ್ಲ ವಿರಕ್ತಮಠದ ಹೆಸರು ಅಜರಾಮರವಾಗಿ ಉಳಿಯುವಂತಾಯಿತು.
೧. ಸಮಾಜ ಸುಧಾರಣೆಯಾಗಬೇಕಾದರೆ ಸಮಾಜದ ಭಕ್ತೋದ್ಧಾರ ಕಾರ್ಯವಾಗಬೇಕಾದರೆ ಮಠಾಧಿಕಾರಿಗಳ ಸುಧಾರಣೆಯಾಗುವದು ಅತ್ಯಗತ್ಯವೆಂದು ವಿಚಾರಿಸಿ ಸಮಾಜದ ಮುಖ್ಯ ಗುರು- ವಿರಕ್ತ ಪೀಠಗಳಿಗೆ ವಿದ್ಯಾವಂತರಾದವರನ್ನೇ ಚುನಾಯಿಸಿ ಕಳಿಸಿದರು. ಹುಬ್ಬಳ್ಳಿಯ ಜಗದ್ಗುರು ಪೀಠಕ್ಕೆ ಲಿಂಗೈಕ್ಯ ಶ್ರೀ ಗಂಗಾಧರ ಮಹಾ ಸ್ವಾಮಿಗಳನ್ನು, ನಂತರ ಲಿಂ. ಶ್ರೀ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಮತ್ತು ಚಿತ್ರದುರ್ಗದ ಜಗದ್ಗುರು ಪೀಠಕ್ಕೆ ಲಿಂ. ಶ್ರೀ ಜಯದೇವ ಮಹಾಸ್ವಾಮಿಗಳವರನ್ನು ಚುನಾಯಿಸಿದವರು ಶ್ರೀಗಳವರೆ, ಈ ಮೂವರು ಜಗದ್ಗುರುಗಳವರಿಂದ ಸಮಾಜಕ್ಕೆ ಅನೇಕ ಮುಖವಾಗಿ ಸಹಾಯ ಸಂದಿದೆ.
೨. ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಶ್ರೀಗಳವರು ಈ ಐದು ಮಹತ್ವದ ಉದ್ದೇಶಗಳ ಪೂರ್ತಿಗಾಗಿ ಸಂಸ್ಥಾಪಿಸಿದರು :
(ಕ) ವೀರಶೈವರಲ್ಲಿ ಸಾರ್ವತ್ರಿಕ ಸಂಘಟನೆಯಾಗಿ, ಅದರ ಮುಖಾಂತರ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಔದ್ಯೋಗಿಕ ಪ್ರಗತಿಯಾಗಬೇಕು ;
(ಚ) ಗುರು ಮತ್ತು ವಿರಕ್ತ ಪೀಠಗಳಲ್ಲಿ ಐಕ್ಯತೆಯುಂಟಾಗಬೇಕು. ಮಹಾಸಭೆಯ ಕಾರ್ಯಕಲಾಪಗಳೆಲ್ಲ ಅವರಿಬ್ಬರ ಪರಸ್ಪರ ಸಹಕಾರದಿಂದ ನಡೆಯಬೇಕು;
(ಟ) ಪೀಠಾಧಿಪತಿಗಳು ಜಾಗ್ರತರಾಗಿ ಸಮಾಜದ ಪ್ರಗತಿಯ ಕಾರ್ಯದಲ್ಲಿ ವಿಧಾಯಕವಾಗಿ ಭಾಗವಹಿಸಬೇಕು; ಭಕ್ತರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ;
(ತ) ದೊಡ್ಡ ದೊಡ್ಡ ನಗರಗಳಲ್ಲಿ ಮಹಾಸಭೆಯ ಅಧಿವೇಶನಗಳು ನೆರೆದು ಜನತೆಯಲ್ಲಿ ಒಕ್ಕಟ್ಟು ಕಾರ್ಯೋತ್ಸಾಹ ಮೂಡಿ ಬರುವಂತಾಗಬೇಕು ; ಧಾರವಾಡ, ಬೆಂಗಳೂರು, ಸೊಲ್ಲಾಪುರ, ಬಾಗಲಕೋಟೆ, ಬಳ್ಳಾರಿ, ಬೆಳಗಾಂವಿ, ನಿಪ್ಪಾಣಿ ಈ ಏಳು ನಗರಗಳಲ್ಲಿ ನಡೆದ ಮಹಾಸಭೆಯ ಅಧಿವೇಶನಗಳಿಗೆ ಬೇಕಾಗುವ ಧನಸಂಚಯವು ಹಾನಗಲ್ಲ ಶ್ರೀಗಳವರಿಂದಲೇ ಆಯಿತು. ನಾಡಿನ ಮೂಲೆ ಮೂಲೆಯಲ್ಲಿಯೂ ಈ ಅಧಿವೇಶನಗಳು ನಡೆದು ಜನರಲ್ಲಿ ನವಚೈತನ್ಯ ಬರುವಂತಾಗಬೇಕೆಂದು ಶ್ರೀಗಳವರು ಬಯಸಿದ್ದರು. ಹರಿದು ಹಂಚಿ ಹೋದ ನಾಡಲ್ಲಿ ಐಕ್ಯತೆ ಬರುವಂತೆ ಯೋಜನೆ ಮಾಡಿದ್ದರು. ಮೊದಲಿನ ಈ ಅಧಿವೇಶನಗಳೆಲ್ಲ ಶ್ರೀಗಳವರ ಕೃಪೆಯಿಂದಲೇ ಯಶಸ್ವಿಯಾಗಿ ನೆರವೇರಿದವು.
(ಪ) ‘ಅಖಿಲ ಭಾರತೀಯ ವೀರಶೈವ ವಿದ್ಯಾವರ್ಧಕ ನಿಧಿ’ಯನ್ನು ಶೇಖರಿಸಲು ಶ್ರೀಗಳವರೇ ಪ್ರೇರಣೆಯನ್ನಿತ್ತರು ; ಧಾರವಾಡದ ಮೊದಲನೆಯ ಅಧಿವೇಶನದ ಕಾಲಕ್ಕೆ ಅದಕ್ಕಾಗಿ ನಿಧಿಯನ್ನು ಸಂಗ್ರಹಿಸಿ ಅದನ್ನು ಧಾರವಾಡದ ‘ಲಿಂಗಾಯತ ಎಜ್ಯುಕೇಶನ್ ಫಂಡ’ ಸಂಸ್ಥೆಯಲ್ಲಿ ಜಮೆ ಮಾಡಿಸಿದರು.
೩ ವೀರಶೈವ ಮಹಾಸಭೆಯಲ್ಲಿ ಕೇವಲ ಧಾರ್ಮಿಕ ವಿಚಾರಗಳಿಗೆ ಅವಕಾಶವಿಲ್ಲದಿರುವಾಗ ಶ್ರೀಗಳವರು ‘ಧರ್ಮೋತ್ತೇಜಕ ಸಭೆ’ಯನ್ನು ಸ್ಥಾಪಿಸಿ ಅದರ ಮುಖಾಂತರ ವೀರಶೈವ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯವನ್ನು ಕೈಕೊಂಡರು. ಧಾರವಾಡದಿಂದ ‘ಧರ್ಮತರಂಗಿಣಿ’ ಮಾಸಪತ್ರಿಕೆಯು ಈ ಸಭೆಯ ಮುಖಾಂತರವಾಗಿ ಶ್ರೀಗಳವರ ಕೃಪೆಯಿಂದಲೇ ಪ್ರಕಟವಾಯಿತು. ಈ ಪತ್ರಿಕೆಯ ಸಂಚಿಕೆಗಳಲ್ಲಿ ಶಿವಯೋಗ ಮಂದಿರದ ಚಟುವಟಿಕೆಗಳ ಸವಿಸ್ತಾರ ಇತಿಹಾಸವನ್ನು ಕಾಣಬಹುದಾಗಿದೆ. ಅಲ್ಲದೆ, ಕೆಲವು ದೈನಿಕ ಮತ್ತು ವಾರಪತ್ರಿಕೆಗಳಿಗೂ ಶ್ರೀಗಳವರು ಆರ್ಥಿಕವಾಗಿ ಉತ್ತೇಜನವಿತ್ತರು. ನಾಡಿನಲ್ಲಿ ಮೂಲೆ ಮೂಲೆಯಲ್ಲಿಯ ಹಳ್ಳಿಗಳಿಗೂ ಬರಹಗಳ ಮೂಲಕ ಧಾರ್ಮಿಕ ವಿಚಾರಗಳು ಹೋಗಿ ಮುಟ್ಟಿ, ಜನಸಾಮಾನ್ಯರಲ್ಲಿಯೂ ವಿಚಾರ ಕ್ರಾಂತಿಯಾಗಬೇಕು, ಧರ್ಮಬುದ್ಧಿ ಜಾಗ್ರತವಾಗಬೇಕು ಎಂಬ ಮಹೋದ್ದೇಶ ಶ್ರೀಗಳವರದಾಗಿತ್ತು.
೪. ಕನ್ನಡ-ಸಂಸ್ಕೃತ ಭಾಷೆಗಳಲ್ಲಿರುವ ಪ್ರಾಚೀನ ವೀರಶೈವ ವಾಙ್ಮಯವನ್ನು ಶೋಧಿಸಿ ಪ್ರಕಟಿಸುವದಕ್ಕಾಗಿ ಮೊಟ್ಟ ಮೊದಲು ಓಲೆಗರಿ ಗ್ರಂಥಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದವರು ಶ್ರೀಗಳವರೆ ಈ ಸಂಶೋಧನೆಯ ಮಹಾ ಕಾರ್ಯಕ್ಕೆ ಒಂದು ವಿದ್ವನ್ಮಂಡಲಿಯನ್ನು ನಿಯಮಿಸಿ ತನ್ಮೂಲಕ ಅನೇಕ ಮಹತ್ವದ ಪರಿಷ್ಕೃತ ಗ್ರಂಥಗಳು ಪ್ರಕಟವಾಗಿ ಜಿಜ್ಞಾಸುಗಳ ಕೈಗೆ ಸುಲಭವಾಗಿ ದೊರೆಯುವಂತೆ ಮಾಡಿದರು.
೫. ಆಯುರ್ವೇದದ ಔಷಧೋಪಚಾರಗಳಿಂದಲೆ ರೋಗ ನಿವಾರಣೆಯನ್ನು ಮಾಡುವ ಧೈಯವನ್ನು ಇಟ್ಟುಕೊಂಡು ತಜ್ಞ ವೈದ್ಯರ ಸಮ್ಮೇಲನವನ್ನು ಕರೆದು ಅವರಿಗೆ ತಕ್ಕ ಅನುಕೂಲತೆಗಳನ್ನು ಶ್ರೀಗಳು ಮಾಡಿ ಕೊಟ್ಟರು. ಎಷ್ಟೋ ವನಸ್ಪತಿಗಳಿಂದ ವಿವಿಧ ರೋಗಗಳ ನಿವಾರಣೆಗೆ ಸ್ವತಂತ್ರ ಸುಲಭವಾದ ಮತ್ತು ಉತ್ಕೃಷ್ಟವಾದ ಔಷಧಗಳನ್ನು ಮಾಡಿಸುತ್ತಿದ್ದರು. ಎಷ್ಟೋ ಹೊಸ ಅಮೂಲ್ಯ ಔಷಧಗಳನ್ನು ಸಂಶೋಧಿಸಿ ತಯಾರಿಸಿ ಜನರ ಅಸಾಧ್ಯ ರೋಗಗಳನ್ನು ಕಳೆದರು. ಶಿವಯೋಗಮಂದಿರದಲ್ಲಿ ಒಂದು ವೈದ್ಯಾಲಯವನ್ನು ತೆಗೆದು ಅಲ್ಲಿ ಚಾಣಾಕ್ಷ ಸಾಧಕರಿಗೆ ವೈದ್ಯಕೀಯ ಶಿಕ್ಷಣವನ್ನು ಕೊಡುತ್ತಿದ್ದರು, ಕೊಡಿಸುತ್ತಿದ್ದರು.
೬ ಕೈ. ವಾ. ‘ತ್ಯಾಗರಾಜ’ ಶಿರಸಂಗಿ ಲಿಂಗರಾಜರು ಶ್ರೀಗಳವರ ಪ್ರೇರಣೆಯಿಂದ ತಮ್ಮ ಇಡಿ ಸಂಸ್ಥಾನವನ್ನೇ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸಕ್ಕೆಂದು ದಾನವಾಗಿ ಬರೆದುಕೊಟ್ಟರು. ಅದರ ಬಗ್ಗೆ ನಡೆದ ಸುಪ್ರೀಮ್ ಕೋರ್ಟಿನ ವ್ಯಾಜ್ಯದಲ್ಲಿ ಶ್ರೀಗಳವರೆ ಆರ್ಥಿಕ ನೆರವು ನೀಡಿದರು ; ಕೊನೆಯವರೆಗೂ ಹೋರಾಡಿ ಅದರಲ್ಲಿ ವಿಜಯ ಗಳಿಸಿದರು. ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಪಾರವಾದ ಸಂಪತ್ತಿಯನ್ನು ಉಳಿಸಿ ಕೊಟ್ಟರು.
ಶ್ರೀಗಳವರು ಸಮಾಜ ಪುರುಷನ ಸರ್ವತೋಮುಖ ಉನ್ನತಿಗೆ ತಮ್ಮ ಜೀವಿತವನ್ನೇ ಮುಡುಪಾಗಿಟ್ಟ ಮಹಾತ್ಯಾಗಿಗಳು ; ಮೇಲಾದ ಹಠಯೋಗಿಗಳಾಗಿ, ಆದರ್ಶ ಕರ್ಮಯೋಗಿಗಳಾಗಿ, ಮಹಾ ಶಿವಯೋಗಿಗಳಾಗಿ ರಾರಾಜಿಸಿದರು. ಸಮಾಜ ಭೂಮಿಯಲ್ಲಿ ಅವರು ಬಿತ್ತಿದ ಜಾಗೃತಿ ಬೀಜವ ಹೆಮ್ಮರವಾಗಿ ನಾಡಿಗೆ ಸಿಹಿಹಣ್ಣುಗಳನ್ನು ಕೊಡಲೆಂದು ಅವರಡಿಗೆ ಮಣಿಯೋಣ ; ಅವರು ತೋರಿಸಿದೆ. ದಾರಿಯಲ್ಲಿ ನಡೆಯೋಣ. ಸರ್ವರೂ ಸುಖಶಾಂತಿಗಳನ್ನು ಪಡೆಯೋಣ.