ದ್ಯಾಂಪುರದಚನ್ನಕವಿಗಳ ಮಂತ್ರ ರಹಸ್ಯ-ಕೃತಿ ಕುರಿತು

ಡಾ|| ಎಸ್. ಎಂ. ಹಿರೇಮಠ

ಪೀಠಿಕೆ: 

ಶಿವಕೀರ್ತನಕಾರರಾಗಿ ಪುರಾಣ ಪ್ರವಚನ ಪ್ರವೀಣರಾಗಿ ಬದುಕಿ ತನ್ಮೂಲಕ ಜನಪದ ಬದುಕಿಗೆ ಸುಸಂಸ್ಕಾರವನ್ನು ಸಂಪ್ರಾಪ್ತಗೊಳಿಸಿದ ದ್ಯಾಂಪುರದ ಚನ್ನಕವಿಗಳು ಲೇಖಕರಾಗಿ ಶಿವಕವಿಗಳಾಗಿ ಗಾಳಿಯಲ್ಲಿ ತೇಲಿಹೋಗುತ್ತಿದ್ದ ತಮ್ಮ ವಿಚಾರಗಳನ್ನು ಹಾಳೆಯಲ್ಲಿ ಹಿಡಿದಿರಿಸಿ ಅವಕ್ಕೆಲ್ಲ ಕೃತಿಯರೂಪ ಕೊಟ್ಟವರು. ವೀರಶೈವ ದರ್ಶನ ಸಂಸ್ಕೃತಿಯ ಸಾರಸಾರಾಯದಿಂದ ಸಂಸಿದ್ಧವಾದ ಅವರ ವ್ಯಕ್ತಿತ್ವದ ಪ್ರತಿಬಿಂಬವೆಂಬಂತೆ ಅವರ ರಚನೆಯ ಹಲವು ಕೃತಿಗಳು ಮೂಡಿಬಂದಿವೆ. ಓದುಗನು ಅವುಗಳನ್ನು ಪರಿಭಾವಿಸುತ್ತ ಮುನ್ನಡೆದಂತೆ ವೀರಶೈವತ್ವದ ಸಾಂಪ್ರಾದಾಯಿಕವಾದ ಸಮಗ್ರ ದರ್ಶನವು ಅವನಿಗಾಗುತ್ತದೆ. ಇಂತಹ ಕೃತಿಗಳ ಸಾಲಿನಲ್ಲಿಯೇ ನಿಲ್ಲಬಹುದಾದ ಒಂದು ಕಿರು ಕೃತಿ ಈ ಮಂತ್ರ ರಹಸ್ಯ

.ಕೃತಿಯ ಗಾತ್ರ : ಮಂತ್ರರಹಸ್ಯವು ಒಟ್ಟು ೭೭ ಪುಟಗಳಿಂದ ಕೂಡಿದ ಚಿಕ್ಕ ಕೃತಿ ಇದರ ಆಕಾರವು ೧/೮ ಡೆಮಿ ರೂಪದಲ್ಲಿದೆ. ಮೊಟ್ಟಮೊದಲಿಗೆ ಈ ಕೃತಿಯು ಕುಕನೂರಿನ ಕಪ್ಪತ್ತಪ್ಪಾ ನಾಲವಾಡ ಅವರು ಕ್ರಿ. ಶ. ೧೯೨೪ ರಲ್ಲಿ ಪ್ರಕಾಶನ ಗೊಳಿಸಿದರು. ನಾಲ್ಕು ಆಣೆಯ ಬೆಲೆಯಲ್ಲಿ ಒಂದು ಸಾವಿರ ಪ್ರತಿಗಳನ್ನು ಪ್ರಕಟಿಸಿ ಆ ಕಾಲದಲ್ಲಿ ವಿತರಿಸಲಾಯಿತು. ಮಂಗಳೂರಿನ ಧರ್ಮಪ್ರಕಾಶ ಛಾಪಖಾನೆಯಲ್ಲಿ ಕೃತಿಯು ಪ್ರಕಟವಾದ್ದರಿಂದ ಪ್ರಕಟಣೆಯ ಪರಿಣಾಮವು ಅತಿ ಸುಂದರವಾಗಿ ಮೂಡಿ ಬರಲು ಕಾರಣವಾಯಿತು. ಕೃತಿಗೆ ಲೇಖಕರೆ ಬರೆದಿರುವ ಮೂರು ಪುಟಗಳ ಔಚಿತ್ಯಪೂರ್ಣವಾದ ಪ್ರಸ್ತಾವನೆಯಿದೆ. ನಾಲ್ಕನೆಯ ಪುಟದಲ್ಲಿ ಸಾಂಪ್ರದಾಯಿಕ ಶೈಲಿಯ ಶಿವಪಾರ್ವತಿಯರ ಕಪ್ಪುಬಿಳುಪಿನ ಚಿತ್ರವಿದೆ. ಪಾರ್ವತಿಯ ತೊಡೆಯ ಮೇಲೆ ಗಣಪತಿ ಅಸೀನನಾಗಿದ್ದಾನೆ. ಶಿವನ ಪಾದ ಸನ್ನಿಧಿಯಲ್ಲಿ ಎಡಬಲಕ್ಕೆ ವ್ಯಾಘ್ರ ನಂದಿಗಳ ಚಿತ್ರ ಬಿಡಿಸಲಾಗಿದೆ. ಋಷಿದ್ವಯರು ಎಡ ಬಲಕ್ಕೆ ನಿಂತುಕೊಂಡು ಕಹಳೆ-ಭೇರಿ ನುಡಿಸುತ್ತಲ್ಲಿದ್ದಾರೆ. ೧೯-೫-೧೯೨೪ ಪೂರ್ಣಗೊಂಡು ಪ್ರಕಟವಾದಂತೆ ಉಲ್ಲೇಖ ಮಾಡಲಾಗಿದೆ.

ಕೃತಿಯ ಪಾತ್ರ : ಮಂತ್ರ ರಹಸ್ಯದ ಗಾತ್ರವು ಕಿರಿದಾಗಿದ್ದರೂ ಇದರ ಪಾತ್ರವು ವೀರಶೈವ ತತ್ವಾಚರಣೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ವೀರಶೈವರು ಅಷ್ಟಾವರಣ ಅನುಸಂಧಾನಿಗಳು.ಅವರ ಸಾಧನೆಗೆ ಅಷ್ಟಾವರಣಗಳು  ಅಂಗಪ್ರಾಯವಾಗಿವೆ. ಗುರು ಸೇವೆ, ಇಷ್ಟ ಲಿಂಗಾರ್ಚನೆ, ಜಂಗಮ ದಾಸೋಹ ವಿಭೂತಿಯಲ್ಲಿನ ವಿಶ್ವಾಸ, ರುದ್ರಾಕ್ಷಿಯಲ್ಲಿನ ನಂಬುಗೆ, ಪಾದೋದಕದಲ್ಲಿನ ಶ್ರದ್ಧೆ  ಪ್ರಸಾದದಲ್ಲಿನ ನಿಷ್ಠೆ, ಇವುಗಳನ್ನು ಧಾರಣಮಾಡಿ ನಿಲ್ಲುವ ಸಾಧಕನಲ್ಲಿಯ ಅಂತರಂಗದ ಅಂಗ. ಮನಸ್ಸು, ಸುನಿಶ್ಚಿತ ಏಕಾಗ್ರಗೊಳಿಸುವ ಮಹಾಸಾಧನವೇ ಮಂತ್ರ ಆದುದರಿಂದಲೇ ‘’ಮನಸಾ ತ್ರಾಯತ ಇತಿ ಮಂತ್ರ’ʼ. ಎಂದು ಅದರ ನಿರ್ವಚನ ಮಾಡಲಾಗಿದೆ. ಮನದಲ್ಲಿ ಮನಪೂರ್ವಕ ಮನನಿಸುವ ಕ್ರಿಯೆಯೆ ಮಂತ್ರವಾಗಿದೆ. ಇದು ಬಹಿರ್ಮುಖವಾಗಿರುವ ಮನಸ್ಸನ್ನು ಅಂತರ್ಮುಖವಾಗಿಸುವುದಕ್ಕೆ ಮಹಾ ಸಾಧನವಾಗಿ ನಿಲ್ಲುತ್ತದೆ. ಶಿವರೂಪ ಅರ್ಥಾತ್ ಲಿಂಗರೂಪವನ್ನು ಮನನಿಸುವ ಮಂತ್ರದಾಯಕವಾದ ಮನಸ್ಸು. ಆ ಶಿವರೂಪ ಅಥವಾ ಲಿಂಗ ರೂಪವೇ ಆಗಿ ಬಿಡುತ್ತದೆ. ಈ ಅರ್ಥದಲ್ಲಿಯೇ ಶಿವಯೋಗಿ ಸಿದ್ಧರಾಮನು “ಸಂಕಲ್ಪ-ವಿಕಲ್ಪಂಗಳ ಧರಿಸಿದಲ್ಲಿ ಮನವೆಸಿತ್ತು .ಅದು ಅಳಿದ ಭಾವ ತಲೆದೋರಿ ದಲ್ಲಿ ಮಹಾದೇವನೆ ತಾನೆನಿಸಿತ್ತು’ʼ ಎಂದಿದ್ದಾನೆ. ಸಪ್ತ ಕೋಟಿ ಮಂತ್ರಗಳಿವೆ ಯೆಂಬುದು ಪ್ರಾಜ್ಞರ ಹೇಳಿಕೆ. ಅವುಗಳಲ್ಲೆಲ್ಲ ವೀರಶೈವರಿಗೆ ಪರಮವಾದ ಮಹಾ ಮಂತ್ರವೆಂದರೆ- ಪಂಚಾಕ್ಷರ ಮಂತ್ರ. ʼ’ನಮಃ ಶಿವಾಯʼ’ ಎಂಬುದೇ ಆ ಮಂತ್ರ ವಾಗಿದೆ. ಪಂಚಾಕ್ಷರ ಮಂತ್ರದ ರಹಸ್ಯ ನಿರೂಪಣೆಯ ಕೃತಿಯ ವಸ್ತುವಾಗಿದ್ದು, ಅದುವೆ ಅದರ ಪಾತ್ರವಾಗಿದೆ. ವೀರಶೈವ ಸಾಧಕನು ಪಂಚಾಕ್ಷರ ಮಂತ್ರವನ್ನು ಜಪಿಸುವ ವಿಧಿ ವಿಧಾನಗಳನ್ನು ಕುರಿತಂತೆ ಸೈದ್ಧಾಂತಿಕ ನೆಲೆಯಲ್ಲಿ ಲೇಖಕರಾದ ಚನ್ನಕವಿಗಳು ಹತ್ತು ಹಲವು ಆಕರಗಳ ಅಧ್ಯಯನದಿಂದ ನಿರ್ಧಾರ ಪೂರ್ವಕವಾಗಿ ನಿರೂಪಿಸಿದ್ದಾರೆ. ಲೇಖಕರು ತಮ್ಮ ನಿರೂಪಣೆಗೆ ಎತ್ತಿಕೊಂಡಿರುವ ಗದ್ಯಮಾರ್ಗವು ಸರಳವೂ, ಖಚಿತವೂ ಆಗಿದೆ.

ಕೃತಿರಚನೆಗೆ ಒದಗಿಬಂದ ಪ್ರೇರಣೆ  :

ಕಲಬುರ್ಗಿ ಜಿಲ್ಲೆಯ ಇಂದಿನ ತಾಲೂಕಾ ಸ್ಥಳವಾಗಿರುವ ಸೇಡಂ ಗ್ರಾಮದ ನಿವಾಸಿಯಾಗಿದ್ದ ಸಿದ್ಧರಾಮಯ್ಯನೆಂಬ ಲೇಖಕನು ಪಂಚಾಕ್ಷರ ಮಂತ್ರ ವಿಷಯ ಕುರಿತಂತೆ ರಚಿಸಿದ್ದ ಕೃತಿಗೆ ಉತ್ತರವೆಂಬಂತೆ ಈ ‘ಮಂತ್ರ ರಹಸ್ಯ’ ಕೃತಿಯು ಕಾಣಿಸಿ ಕೊಳ್ಳುವುದರಿಂದ, ಸೇಡಂನ ಸಿದ್ಧರಾಮಯ್ಯನ ಕೃತಿಯೆ ಚನ್ನಕವಿಗಳಿಗೆ ಪ್ರೇರಣೆ ಒದಗಿಸಿದೆಯೆನ್ನಬಹುವಾಗಿದೆ. ಸಿದ್ಧರಾಮಯ್ಯನವರ ‘ಪಂಚಾಕ್ಷರ ಮಂತ್ರ ಮಹತ್ವ’ ಎಂಬುದು ತೀರಾ ಚಿಕ್ಕದಾದ ಕೃತಿಯಾಗಿದೆ. ಅವರಲ್ಲಿ ಲೇಖಕರು. “ಪಂಚಾಕ್ಷರ ಮಂತ್ರವನ್ನು ಬಹಿರಂಗವಾಗಿ ಸಕಲರಿಗೂ ಹೇಳಬಹುದಾಗಿದೆ”. ಎಂಬಂತೆ ಮಾತನಾಡಿದ್ದಾರೆ. ಕೃತಿಯಲ್ಲಿನ ಒಕ್ಕಣಿಕೆಯನ್ನಿಲ್ಲಿ ಉದ್ಧರಿಸಲಾಗಿದೆ, “ಶಿವಪಂಚಾಕ್ಷರಿ ಎಂಬ ಮಂತ್ರವನ್ನು ಸರ್ವರಿಗೂ ಬಾಹ್ಯದಲ್ಲಿ ಜಪಿಸುವದಕ್ಕೆ ಪ್ರಮಾಣ ಭೂತವಾದ ಈ ಗ್ರಂಥವು ಪಂಚಾಕ್ಷರ ಮಂತ್ರವು ಬಾಹ್ಯದಲ್ಲಿ ಜಪಿಸುವುದು ಸಪ್ರಮಾಣವೆಂದು ಸರ್ವರಿಗೂ ತಿಳಿಯಲೋಸುಗ ಈ ಕೃತಿ ಪ್ರಕಟಿಸಲ್ಪಟ್ಟಿರುವುದು” ಈ ಒಕ್ಕಣಿಕೆಗೆ ಚನ್ನಕವಿಗಳ ತೀವ್ರವಾದ ವಿರೋಧವಿದೆ. ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತ ಪಂಚಾಕ್ಷರ ಮಂತ್ರವನ್ನು ಗುಪ್ತವಾಗಿ ಜಪಿಸಬೇಕೆಂದು ಹೇಳುವುದಕ್ಕಾಗಿ ಅವರು ‘ಮಂತ್ರರಹಸ್ಯ’ ಕೃತಿ ರಚನೆಗೆ ಕೈ ಹಾಕಿದ್ದಾರೆ. ತಮ್ಮ ಪ್ರಸ್ತಾವನೆಯ ಭಾಗದಲ್ಲಿ ಈ ಮಾತುಗಳನ್ನು ಸುವ್ಯಕ್ತವಾಗಿಸಿರುವುದನ್ನು ಕಾಣಬಹುದಾಗಿದೆ. ʼʼಛಲವಂತರು ಶಿವಮಂತ್ರವನ್ನು ಬೈಲಿಗೆ ನಿಂತು ದೊಡ್ಡದಾದ ಧ್ವನಿಯಿಂದ ಕೂಗುವುದನ್ನು ಬಿಡಲೆಂತಲೂ ಇವರು ಗುಪ್ತವಾಗಿ ಜಪಿಸುವ ಪರಿಪಾಠವನ್ನು ಇಡಲೆಂತಲೂ ನಾನು ಉದ್ದೇಶಿಸಿ ಈ ಗ್ರಂಥವನ್ನು ಬರೆದಿಲ್ಲ. ಈ ಬಗೆಯ ಹೇವದ ಮೂರ್ತಿಗಳನ್ನು ತಿದ್ದುವುದು ಬ್ರಹ್ಮನಿಂದಾದರೂ ಆಗದು. ಆದರೆ ಯೋಗ್ಯಾಯೋಗ್ಯ ವಿಚಾರವನ್ನು ಮಾಡಬಲ್ಲ ಸಜ್ಜನರು ಪರೀಕ್ಷಿಸಿ ಯಥಾರ್ಥವಿದ್ದರೆ ಒಪ್ಪಲೆಂದು ಪರಮೋತ್ಸಾಹದಿಂದ ಬರೆದಿರುವನು” ಈ ಮಾತು ಕೃತಿಗೆ ಒದಗಿ ಬಂದ ಪ್ರೇರಣೆಯನ್ನು ಸ್ಪಷ್ಟ ವಾಗಿಸುತ್ತದೆ.

ವಸ್ತುವಿನ ಹಿನ್ನಲೆಯಲ್ಲಿನ ವಾದ-ಸಂವಾದದ ನೆಲೆಗಳು :

ಸೇಡಂನ ಸಿದ್ಧರಾಮಯ್ಯನ ವಾದಕ್ಕೆ ಚೆನ್ನಕವಿಗಳು ತಮ್ಮ ಈ ಕೃತಿಯ ಮೂಲಕ ಸಂವಾದವೊಂದನ್ನು ಸೃಷ್ಟಿಸಿಕೊಂಡಿದ್ದಾರೆಂದು ಹೇಳಬಹುದು. ಯಾವ ಆಕರಗಳನ್ನು  ಬಳಸಿಕೊಂಡು ಲೇಖಕ ಸಿದ್ಧರಾಮಯ್ಯ ʼʼಪಂಚಾಕ್ಷರ ಮಂತ್ರವು ಬಹಿರಂಗವಾಗಿ ಜಪಿಸಬಹುದೆಂದುʼ’ ಹೇಳಿದನೋ ಅದೇ ಆಕಾರಗಳ ಮೂಲಕವಾಗಿ ಚನ್ನಕವಿಗಳು “ಪಂಚಾಕ್ಷರ ಮಂತ್ರವು ಅಂತರಂಗದಲ್ಲಿಯೇ ಜಪಿಸುವ ಅಷ್ಟಾವರಣಾನುಸಂಧಾನವಾಗಿದೆʼ’ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ  . ಸಾಧಿತ ವಿಷಯಕ್ಕೆ ಇನ್ನು ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಪೂರೈಸುವುದು ಕೃತಿಯಲ್ಲಿ ಕಂಡುಬರುತ್ತದೆ. ರಾಜಶೇಖರ ವಿಳಾಸ, ಸಾನಂದಚಾರಿತ್ರ,ವಾತುಲಾಗಮ,ಕಾಮಿಕಾಗಮ,ಬ್ರಹ್ಮತರಖಂಡ,ಪಾರಮೇಶ್ವರಾಗಮ,ಸೂಕ್ಷ್ಮಾಗಮ,ವೀರಶೈವಾಮೃತ ಮಹಾಪುರಾಣ, ಶಿವ ಮಹಾಪುರಾಣ ಇವನ್ನು ಆಧರಿಸಿ ಸಿದ್ಧರಾಮಯ್ಯನು ತನ್ನ ವಾದವನ್ನು ಮಂಡಿಸಿದ್ದಾನೆ. ಚೆನ್ನಕವಿಗಳು ಮೇಲಿನ ಆಕರಗಳೊಂದಿಗೆ ಶೈವರತ್ನಾಕರ, ಯೋಗಶಿಖೋಪನಿಷತ್ತು ಸೂತಸಂಹಿತೆ, ಮೌಕ್ತಿಕೋಪನಿಷತ್ತು,ನಿಜಗುಣ ಶಿವಯೋಗಿಗಳ ವಿವೇಕಚಿಂತಾಮಣಿ, ಪರಮಾನುಭವ ಬೋಧೆ, ಕೈವಲ್ಯ ಪದ್ಧತಿ, ಪಾರಮಾರ್ಥ ಪ್ರಕಾಶಿಕೆ, ಹೇಮಕೋಶ, ಅಮರಕೋಶ, ಮನುಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ, ಪಾತಂಜಲಿ ಯೋಗ ಸೂತ್ರ, ಸಹಸ್ರಮಹಾವಾಕ್ಯ, ರತ್ನಾವಳಿ, ರಾಮ ಪೂರ್ವತಾ ಪಿನ್ಯುಪನಿಷತ್ತು ಸುಪ್ರಭೇದಾಗಮ, ಸಿದ್ಧಾಂತ ಶಿಖಾಮಣಿ, ಶ್ವೇತಾಶ್ವತರೋಪನಿಷತ್ತು, ಸರ್ವಜ್ಞನ ವಚನಗಳು, ಶಿವಶರಣರ ಗೀತೆಗಳು, ಕವಿ ಕಲ್ಪದ್ರುಮ, ಶಬ್ದ ಕಲ್ಪ ದೃಮ, ಸ್ಕಂದ ಪುರಾಣ, ಮುದ್ದಲೋಪನಿಷತ್ತು, ಲಿಂಗ ಪುರಾಣ ಈ ಮುಂತಾದ ಆಕರಗಳನ್ನು ತಮ್ಮ ಹೇಳಿಕೆಗೆ ಪೂರಕವಾಗಿ ಇರಿಸಿಕೊಂಡಿದ್ದಾರೆ.

ಸಿದ್ಧರಾಮಯ್ಯನ ವಾದದ ಮುಖ್ಯ ಅಂಶಗಳು ಹೀಗಿವೆ :

೧) ಪಂಚಾಕ್ಷರ ಮಂತ್ರವನ್ನು ಬಹಿರಂಗವಾಗಿ ಉಚ್ಛರಿಸಬಹುದಾಗಿದೆ.

೨) ಪಂಚಾಕ್ಷರ ಮಂತ್ರವನ್ನು ಜನರಿಗೆ ಕೇಳುವಂತೆ ಗಟ್ಟಿಯಾಗಿ ಉಚ್ಚರಿಸಬಹುದಾಗಿದೆ.

೩) ಪಂಚಾಕ್ಷರ ಮಂತ್ರವನ್ನು ಯಾರು ಬೇಕಾದವರೂ ಹೇಳಬಹುದಾಗಿದೆ. ಕೇಳಬಹುದಾಗಿದೆ.

೪) ಪಂಚಾಕ್ಷರ ಮಂತ್ರದ ಪಠಣಕ್ಕೆ ನಿಶ್ಚಿತವಾದ ಅಧಿಕಾರ ಕಾಲ-ದೇಶಾದಿಗಳಾವವೂ ಇರಬೇಕಾದ ಅವಶ್ಯಕತೆಯಿಲ್ಲ.

೫) ಯಾವಾಗಲೂ ಸಾಧಕನು ಪಂಚಾಕ್ಷರ ಮಂತ್ರವನ್ನು ಜಪಿಸುತ್ತಲೇ ಇರಬೇಕು.

೬) ಪಂಚಾಕ್ಷರ ಮಂತ್ರದ ಬೋಧನೆಯಲ್ಲಿ ಮೇಲು-ಕೀಳು ಗುಣ-ಅವಗುಣಗಳನ್ನು ನೋಡಬೇಕಾದ ಅವಶ್ಯಕತೆಯಿಲ್ಲ.

೭) ಪಂಚಾಕ್ಷರ ಮಂತ್ರವು ಗುಪ್ತವಾಗಿರಿಸಿಕೊಳ್ಳಬೇಕಾದುದಿಲ್ಲ.

೮) ಪಂಚಾಕ್ಷರ ಮಂತ್ರದ ಪಠಣವನ್ನು ಯಾರು ಬೇಕಾದರೂ ಕೇಳಿದರೂ ತಪ್ಪಲ್ಲ.

೯) ಪಂಚಾಕ್ಷರ ಮಂತ್ರದ ಪಠಣಕ್ಕೆ ಯಾವುದೇ ವಿಧಿಯ ಅವಶ್ಯಕತೆಯಿಲ್ಲ.     

ಈ ಮೇಲಿನ ವಿಚಾರಗಳನ್ನು ಒಪ್ಪಿಕೊಳ್ಳದ ಚೆನ್ನಕವಿಗಳು ಆಧಾರಪೂರ್ವಕವಾಗಿ ಅವುಗಳಿಗೆ ತಮ್ಮ ವಿರೋಧವನ್ನು ವ್ಯಕ್ತಗೊಳಿಸಿದ್ದಾರೆ. ಅಷ್ಟೇ ಅಲ್ಲ ಅವು ಶಾಸ್ತ್ರ ವಿರೋಧವಾದವುಗಳೆಂದೂ ಸಾರಿದ್ದಾರೆ. ತಮ್ಮ ವಿಚಾರಗಳಿಗೆ ನಿದರ್ಶನ ಗಳನ್ನು ಕೊಡುತ್ತ ಸಂವಾದವನ್ನು ಈ ಮುಂದಿನಂತೆ ಮಂಡಿಸಿದ್ದಾರೆ.  

೧)’’ ಮಂತ್ರವನ್ನು ಗುಪ್ತವಾಗಿಯೇ ಉಚ್ಚರಿಸಬೇಕು’’ ಇದಕ್ಕೆ ಚನ್ನಕವಿಗಳು ಜಾಬಾಲೋಪನಿಷತ್ತು ಮತ್ತು ಮುಕ್ತಿಕೊಪನಿಷತ್ತು ಇವುಗಳಲ್ಲಿ ಹೇಳಿರುವ  ಮಾತನ್ನು ಉದ್ಧರಿಸುತ್ತಾರೆ. ‘ತನ್ನ ಸಿದ್ಧಿಂ ಪ್ರಯಚ್ಛಂತೆ ಮಂತ್ರಾಃ ಸಂಕೀರ್ತಿತಾ ಇವ’’ ಕೊಡಲಾರವು” ಎಂಬುದು ಆ ಉಲ್ಲೇಖವಾಗಿದೆ. ಸಾರವಾಗಿದೆ.ʼʼ ಕೂಗಿ ಉಚ್ಛರಿಸಿದ ಮಂತ್ರಗಳು ಸಿದ್ಧಿಯನ್ನು

ಕೊಡಲಾರವುʼʼಎಂಬುದು ಉಲೇಕದ ಸಾರವಾಗಿದೆ.

೨) ಮಂತ್ರವು ಜನರಿಗೆ ಕೇಳುವಂತೆ ನುಡಿದರೆ ಅದು ಸ್ತೋತ್ರವಾಗಬಹುದು. ಅಥವಾ ಭಜನ ರೂಪವಾಗಬಹುದು. ಆದರೆ ಜಪವಾಗಲಾರದು. ಇದರ ಸಮರ್ಥನೆಗೆ ಕವಿಗಳು ಮುಕ್ತಿಕೋಪನಿಷತ್ತಿನಲ್ಲಿ ಬರುವ ಪೂಜಾ ಕೋಟಿ ಸಮಂ ಸ್ತೋತ್ರಂ .. ಎನ್ನುವ ಶ್ಲೋಕವನ್ನು ಉದ್ಧರಿಸಿ ಪೂಜೆ, ಸ್ತೋತ್ರ, ಜಪ, ಧ್ಯಾನಗಳು ಬೇರೆ ಬೇರೆ  ಎಂದು ತೋರಿಸುತ್ತಾರೆ. ತನ್ಮೂಲಕ ಮನದಲ್ಲಿ ಮಂತ್ರವನ್ನು ಮನನಿಸುವುದು ಈ  ಜಪವಾಗುತ್ತದೆಂದು ಅರುಹುತ್ತಾರೆ.

 ೩) ಪಂಚಾಕ್ಷರ ಮಂತ್ರವನ್ನು ಯಾರು ಬೇಕಾದವರಿಗೆಲ್ಲ ಹೇಳಲು ಬಾರದು. ಇದಕ್ಕೆ ಲೇಖಕರು ಸೂತ ಸಂಹಿತೆಯಲ್ಲಿ ಬರುವ ವಿವರಗಳನ್ನು ಆಧಾರವಾಗಿ ಕೊಡುತ್ತಾರೆ. ‘ʼಉಚ್ಛಾರ ಜಪವಾದರೂ ನೀಚರೂ, ನಾಸ್ತಿಕರೂ ಕೇಳದಂತೆ ಅರಣ್ಯ ಮೊದಲಾದ ಏಕಾಂತ ಸ್ಥಳಗಳಲ್ಲಿ ಮಾಡಿದರೆ ತಕ್ಕ ಫಲವನ್ನು ಕೊಡುತ್ತದೆʼ’ ಎಂಬುದೇ ಅವರ ವಾದವಾಗಿದೆ. ”ಸ್ವಾಚಾರ ಪರಾಚಾರ ಗಳನ್ನು ಕೂಡಿ ನಡೆಸುವವನನ್ನೇ ಸೂತ ಸಂಹಿತೆಯು ನೀಚನೆಂದು  ಕರೆದಿದೆ.

 ೪) ಪಂಚಾಕ್ಷರ ಮಂತ್ರವು ಗುರುಮುಖದಿಂದಲೇ ಬೋಧಿತವಾಗಬೇಕು. ಗುರುವಾದವನೇ ಮಂತ್ರ ಬೋಧೆಗೆ ಅಧಿಕಾರಿಯಾಗಿರುತ್ತಾನೆ. ಶಿವಪುರಾಣದಲ್ಲಿ ಬರುವ ಉಲ್ಲೇಖವು ಇಲ್ಲಿ ಆಧಾರವಾಗಿದೆ. ʼ’ಶಿವ ಪಂಚಾಕ್ಷರಿʼ’ ಮಂತ್ರವನ್ನು ಗುರುವು ಅಂತಃಕರಣ ಪೂರ್ವಕವಾಗಿ ಏಕಾಂತದಲ್ಲಿ ಮೆಲ್ಲನೇ ಉಪದೇಶಿಸಬೇಕು. ಹೆ, ಪಾರ್ವತಿ ಗುರುವು ಈ ಮಂತ್ರವನ್ನು ಶಿಷ್ಯನಿಗೆ ಮೆಲ್ಲನೆ ಹೇಳಿ, ಅವನ ಮುಖದಿಂದ ಮೆಲ್ಲನೆ ಉಚ್ಚರಿಸುವಂತೆ ಮಾಡಬೇಕು. ಈ ಉಲ್ಲೇಖವು ಮಂತ್ರೋಪದೇಶಕ್ಕೆ ಗುರುವೇ ಅಧಿಕಾರಿಯೆಂದು ತಿಳಿಸುತ್ತದೆ. ಪಂಚಾಕ್ಷರ ಮಂತ್ರ ಜಪಕ್ಕೆ ನಿಶ್ಚಿತವಾದ ಕಾಲ, ಸ್ಥಳಗಳು ಬೇಕಾಗುತ್ತವೆ. ಎಲ್ಲೆಂದರಲ್ಲಿ ಯಾವಾಗ ಬೇಕೋ ಆವಾಗ ಜಪಿಸುವುದು ನಿಷಿದ್ಧವಾಗಿದೆ. ಈ ಹೇಳಿಕೆಯನ್ನು ಸಮರ್ಥಿಸಲು ಲೇಖಕರು ಶಿವಪುರಾಣದ ವಾಯು ಸಂಹಿತೆಯಲ್ಲಿ ಬರುವ ವಿಚಾರಗಳನ್ನು ತಿಳಿಸುತ್ತಾರೆ” ದಿನ ದಿನವೂ ನಿಶ್ಚಿತ ವೇಳೆಯಲ್ಲಿ ಮಂತ್ರವನ್ನು ಜಪಿಸಬೇಕು. ನದಿ ತೀರ, ಸಮುದ್ರ ತಡ, ಮಹಾಗಿರಿ, ಪುಣ್ಯಾಶ್ರಮ, ದೇವಾಲಯ, ಮನೋರಮ್ಯ ಸ್ಥಾನಗಳು ಮಂತ್ರಜಪಕ್ಕೆ ಯೋಗ್ಯವಾದ ಸ್ಥಾನಗಳಾಗಿವೆ. ಜಲಸನ್ನಿಧಿ, ದೇವ ಸನ್ನಿಧಿ, ಸೂರ್ಯ ಸನ್ನಿಧಿ, ಶಿವ ಸನ್ನಿಧಿಗಳೇ ಜಪವಿಧಿಗೋತ್ತರೋತ್ತರ ಸುಕೃತ ವಿಶಿಷ್ಟ ಸನ್ನಿಧಿಗಳೆಂದರಿವುದು.

 ೫) ಯಾವಾಗಲೂ ಸಾಧಕನು ಮಂತ್ರ ಜಪದಲ್ಲಿ ತೊಡಗುವುದಕ್ಕೆ ಸಾಧ್ಯವಾಗಲಾರದು. ನಿಶ್ಚಿತ ವೇಳೆಯಲ್ಲಿ ನಿರಂತರವಾಗಿ ಕೈಕೊಂಡ ಮಂತ್ರ ಜಪದಿಂದ ”ಮಂತ್ರಸಿದ್ಧ”ತ್ವವು ಪ್ರಾಪ್ತವಾಗುತ್ತದೆ. ಅಂತಹ ಮಂತ್ರಸಿದ್ಧರು ಮಾತ್ರ ಯಾವಾಗಲೂ ಮಂತ್ರ ಧ್ಯಾನದಲ್ಲಿ ಇರುವುದಕ್ಕೆ ಸಾಧ್ಯ. ಪಾರಮೇಶ್ವರಾಗಮದ  ತಿಷ್ಠನ್‌, ಶಿವನ್ ಭುಂಜನ್, ಸ್ವಪನ್, ಗಚ್ಛನ್” ಎಂಬ ಶ್ಲೋಕವು ಮಂತ್ರ ಸಿದ್ಧರ ಸಾಧನೆಗೆ ಪೂರಕವಾಗುತ್ತದೆ.

 ೬) ಸ್ನಾನ ಶಿವಾರ್ಚನೆಗಳಿಲ್ಲದ ಅನಾಚಾರಿಗಳೂ ಮಂತ್ರ ಜಪಕ್ಕೆ ಯೋಗ್ಯರಲ್ಲ ಎಂಬುದನ್ನು ಸ್ಕಂದ ಪುರಾಣ, ಲಿಂಗ ಪುರಾಣಗಳು ಬೋಧಿಸಿವೆ. ಸ್ಕಂದ ಪುರಾಣದಲ್ಲಿ ಬರುವ ದುರಾಚಾರಿಯಾದ ದಾರಾರ್ಹನೆಂಬ ರಾಜನ ಕಥೆಯನ್ನು ಚನ್ನ ಕವಿಗಳು ಈ ಸಂದರ್ಬದಲ್ಲಿ ಉದ್ದರಿಸಿದ್ದಾರೆ.(ರಾಜ ವಂಶದ ರಾಣಿ ಕಲಾವತಿ ಮಂತ್ರ ಉಪದೇಶ ಮಾಡಿದವನು ಗರ್ಗ ಮುನಿ)

೭) ಪಂಚಾಕ್ಷರವು ಮಂತ್ರ ಸಿದ್ಧರ ಅಂತರಂಗದ ದಿವ್ಯರತ್ನವಾಗಿದೆ. ಸರ್ಪವು ತನ್ನ ರತ್ನವನ್ನು ಗುಪ್ತವಾಗಿರಿಸಿಕೊಳ್ಳುವಂತೆ ಪಂಚಾಕ್ಷರ ಮಂತ್ರವೆಂಬ ಅನರ್ಥ್ಯ ರತ್ನವನ್ನು ಸಾಧಕನು ಅಂತರಂಗದಲ್ಲಿ ಜಪಿಸುತ್ತಿರಬೇಕು.

 (೮) ಪಂಚಾಕ್ಷರ ಮಂತ್ರವನ್ನು ಬೇಕಾದವರು ಕೇಳಬಹುದೆಂಬುದಕ್ಕೆ ಕವಿಗಳು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಾರೆ. ‘ಸಾನಂದ’ ಮುನಿಯ ಮಂತ್ರವನ್ನು ಕೇಳಿದ ನರಕಿಗಳು ಉದ್ಧಾರವಾಗಲಿಲ್ಲವೆ? ಉಪಮನ್ಯುವಿನ ಮಂತ್ರ ಪಠಣವನ್ನು ಕೇಳಿ ಪಿಶಾಚಿಗಳು ತಮ್ಮ ಶಾಪದ ರೂಪವನ್ನು ನೀಗಲಿಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಚನ್ನಕವಿಗಳ ವಿವರವು ಹೀಗಿದೆ: ”ಕಾರುಣ್ಯೈಕ ನಿಧಿಯಾದ ಪರಮಾತ್ಮನು ಜೀವರನ್ನು ಅನೇಕ ರೀತಿಯಿಂದ ಉದ್ಧರಿಸುವನು. ಹಂದಿ ಮೊದಲಾದ ಕನಿಷ್ಠ ಜೀವಿಗಳು ಸಹ ಪ್ರಸಾದ ಭೋಗದಿಂದ ಮುಕ್ತಿಪಡೆದ ಇತಿಹಾಸಗಳು ಪುರಾಣಗಳಲ್ಲಿ ಅನೇಕವುಂಟು. ಇಷ್ಟದಿಂದಲೇ ಗುರು-ಲಿಂಗ-ಜಂಗಮರ ಪ್ರಸಾದಕ್ಕೆ ಹಂದಿ ಮೊದಲಾದವುಗಳು ಅರ್ಹವಾದವುಗಳೆಂದು ಯಾರೂ ಹೇಳಲಾರರು. ಅದರಂತೆ ಸಾನಂದ ಮುನಿಗಳು ಶಿವಮಂತ್ರದಿಂದ ನರಕಿಗಳನ್ನುದ್ದುರಿಸಿದರೆಂಬುದು ಇದೊಂದು ಬಗೆಯ ಪರಮಾತ್ಮನ ದಿವ್ಯ ಚೇಷ್ಟೆಯಲ್ಲದೇ ಅವನ ಆರಾಧಕರಾದ ನಮ್ಮ ಸಲುವಾಗಿ ಸ್ಪಷ್ಟವಾಗಿ ಹೇಳಿದ ವಿಧಿಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ., ಇದರಂತೆ ಉಪಮನ್ಯುವಿನ ಕಥೆಯೂ ಸಹ.

೯) ಪಂಚಾಕ್ಷರ ಮಂತ್ರವನ್ನು ಪಡೆದುಕೊಳ್ಳುವುದಕ್ಕೆ ವಿಧಿಯುಂಟು. ಅದನ್ನು ಪಠಿಸುವುದಕ್ಕೂ ವಿಧಿ, ವಿಧಾನಗಳುಂಟು. ವೀರಶೈವ ಸಾಧಕನಿಗೆ ಗುರುವಾದವನು ದೀಕ್ಷೆಯನ್ನು ಅನುಗ್ರಹಿಸುವುದರ ಮೂಲಕ ಆ ವಿಧಿ, ವಿಧಾನಗಳನ್ನು ಅವನಿಗೆ ದೊರಕಿಸಿಕೊಡುತ್ತಾನೆ.

ವಾದಿಯ ಪ್ರಶ್ನೆಗಳಿಗೆ ಸಂವಾದಿಯ ಸಮರ್ಪಕ ಉತ್ತರಗಳು :

ಪರಂಪರಾಗತವಾಗಿ ಬಂದ ಪಂಚಾಕ್ಷರ ಮಂತ್ರ ಜಪದ ವಿಧಿ, ವಿಧಾನಗಳನ್ನು ಒಪ್ಪದ ವಾದಿಯು ಹಾಕುವ ಪ್ರಶ್ನೆಗಳಿಗೆ ಚನ್ನ ಕವಿಗಳು ಅತ್ಯಂತ ಸಮಂಜಸವಾದ ಉತ್ತರಗಳನ್ನು ನೀಡಿದ್ದಾರೆ

೧) ಅಷ್ಟಾವರಣಗಳಲ್ಲಿ ವಿಭೂತಿ, ರುದ್ರಾಕ್ಷಿ, ಗುರು-ಲಿಂಗ-ಜಂಗಮ ಪ್ರಸಾದ ಪಾದೋದಕಾದಿಗಳೆಲ್ಲ ಬಹಿರಂಗವಾಗಿಯೇ ಕಾಣುತ್ತಿರುವಾಗ ಮಂತ್ರ ವೊಂದೇ ಏಕೆ ಗುಪ್ತವಾಗಿರಿಸಬೇಕು? ಎಂಬುದು ಮೊದಲನೆಯ ಪ್ರಶ್ನೆ

  ಇದಕ್ಕೆ ಚೆನ್ನ ಕವಿಗಳು ನೀಡುವ ಉತ್ತರವು ಇಂತಿದೆ ;

 “ಸ್ತ್ರೀಯರ ಕುಚಗಳಾದರೂ ಅವಯವಗಳೇʼ ನೇತ್ರಗಳಾದರೂ ಅವಯವಗಳೇ, ಆದರೆ ಕುಚಗಳಂತೆ ಕಣ್ಣುಗಳನ್ನು ಮುಚ್ಚಿಕೊಳ್ಳಿರೆಂದು ಹೇಳಿದರೆ ಹುಚ್ಚತನ ವಲ್ಲವೇ?

೨) ದೇಶ-ಕಾಲಗಳ ವಿಚಾರವನ್ನು ಮೀರಿ ಪಂಚಾಕ್ಷರವನ್ನು ಏಕೆ ಜಪಿಸ ಬಾರದು? ಈ ಪ್ರಶ್ನೆಗೆ ಲೇಖಕರು ಇವಳು ನನ್ನ ಹೆಂಡತಿಯು. ನನ್ನ ಅಧೀನದಲ್ಲಿ ರುವವಳು, ಸಂಪರ್ಕ ಸುಖಕ್ಕಾಗಿ ಇವಳನ್ನು ಮದುವೆಯಾಗಿದ್ದೇನೆ ಎಂದ ಪತಿಯು, ಹಗಲು ಹೊತ್ತಿನಲ್ಲಿ ಮಂದಿಯೊಳಗೆ ಸತಿಯೊಡನೆ ಹೇಗೆ ವಿನೋದಿಸುವುದಕ್ಕೆ ಬರುವುದಿಲ್ಲವೋ, ಹಾಗೆಯೇ ಪಂಚಾಕ್ಷರ ಮಂತ್ರವು ಗುರು ಮುಖದಿಂದ ಪಡೆದರೂ ಸ್ಥಳ, ಕಾಲಗಳನ್ನು ಮೀರಿ ಜಪಿಸುಸುವದಕ್ಕೆ ಬರುವುದಿಲ್ಲ.

 ೩) ಚೊಕ್ಕ ನೈನಾರನು ಕೊಳಲಿನಲ್ಲಿ ಪಂಚಾಕ್ಷರ ಮಂತ್ರವನ್ನು ಊದುತ್ತಿ ದ್ದನು. ನಾನೇಕೆ ಅದನ್ನು ಬಾಯಿಯಿಂದ ಗಟ್ಟಿಯಾಗಿ ನುಡಿಯಬಾರದು? ಈ ಪ್ರಶ್ನೆಗೆ ಚೆನ್ನಕವಿಗಳು ಕೊಳಲಿನ ಅವ್ಯಕ್ತವಾದ ಮಧುರ ನಾದದಲ್ಲಿ ಅಕ್ಷರಗಳು ಉಚ್ಛಾರವಾಗುವದಿಲ್ಲ. ಅವನು ಭಕ್ತಿಯಿಂದ ಮನಸ್ಸಿನಲ್ಲಿ ಭಾವಿಸಿ ಮಂತ್ರವನ್ನು ಉಸಿರಿನಿಂದ ಊದುತ್ತಿದ್ದನು. ಅದರಿಂದ ಪಂಚಾಕ್ಷರಿಯನ್ನೇ ಊದುತ್ತಾನೆಂದು ಜನರಿಗೆ ತಿಳಿಯುತ್ತಿದ್ದಿಲ್ಲ”

೪) ಪಂಚಾಕ್ಷರ ಮಂತ್ರವು ವಿಧಿರಹಿತವಾಗಿ ಜಪಿಸಿದರೂ ಆಗುತ್ತದಲ್ಲ ? ಈ ಪ್ರಶ್ನೆಗೆ ಲೇಖಕರು; ಅಷ್ಟಾವರಣದ ಮಹತ್ವ ಹೇಳುವುದಕ್ಕಾಗಿ ಒಂದೊಂದು ಸಲ ವಿಧಿ ರಹಿತವಾದ ವಿಚಾರವು ಪುರಾಣಗಳು ಉಲ್ಲೇಖ ಮಾಡಿರುವುದುಂಟು. ಹಾಗೆಂದ ಮಾತ್ರಕ್ಕೆ ಅಷ್ಟಾವರಣ ಅನುಸಂಧಾನಕ್ಕೆ ವಿಧಿ-ನಿಯಮಗಳೇ ಬೇಕಿಲ್ಲ ಎಂದಲ್ಲ. ಈ ಮಾತನ್ನು ಒಂದು ಉದಾಹರಣೆಯಿಂದ ಅರಿತುಕೊಳ್ಳಬೇಕು……ʼʼಅತಿಪಾಪಿಯಾದ ಕಿರಾತನೋರ್ವನು ಅರಣ್ಯದಲ್ಲಿ ಪ್ರಾಣವಿಯೋಗ ತಾಪದಿಂದ ಬಿದ್ದಿರುವಾಗ ಸುಡುಗಾಡಿನ ಬೂದಿ ಕಾಲಿನಿಂದ ಬಂದ ಒಂದು ನಾಯಿಯು ಅವನ ಹಣೆಯನ್ನು ಮೆಟ್ಟಿತು. ನಾಯಿಯ ಕಾಲಿಗೆ ಹತ್ತಿದ ಹೆಣದ ಬೂದಿಯು ಆ ಶಬರನ ಹಣೆಗೆ ಹತ್ತಿತ್ತು ಅವನು ಮುಂದೆ ಕೆಲ ಹೊತ್ತಿನಲ್ಲಿ ಸತ್ತನು. ಇವರ ಹಣೆಯಲ್ಲಿ ವಿಭೂತಿಯನ್ನು ಧರಿಸಿದ್ದಾನೆ ಎಂದು ಶಿವನು ಆ ಶಬರನಿಗೆ ಮುಕ್ತಿಯನ್ನು ದಯಪಾಲಿಸಿದನು. ಇದು ವಿಭೂತಿಯ ಮಹಿಮೆಯನ್ನು ಸಾರುವುದಕ್ಕಾಗಿ ಹೇಳಿದ ಪುರಾಣದ ಕತೆ. ಹೀಗೆಂದ ಮಾತ್ರಕ್ಕೆ ನಾಯಿಯ ಕಾಲಿನಿಂದ ಬಂದ ಹೆಣದ ಬೂದಿಯನ್ನು ಮುಮುಕ್ಷುಗಳು ಪ್ರತಿದಿನದಲ್ಲಿ ಧರಿಸಬೇಕೆಂಬ ಅರ್ಥವಲ್ಲ. ವಿಭೂತಿಯು ಮುಕ್ತಿದಾಯಕವೆಂದು ಅದರ ಮಹಿಮೆಯನ್ನು ಹೀಗೆ ರೋಚಕವಾಗಿ ಹೇಳಲಾಗಿದೆ. ಆದರೆ ವಿಭೂತಿ ಧಾರಣಕ್ಕೆ ಯಾವುದೇ ವಿಧಿ, ನಿಯಮಗಳಿಲ್ಲವೆಂದು ಭಾವಿಸುವಂತಿಲ್ಲ, ಪಂಚಾಕ್ಷರ ಮಂತ್ರ ಜಪಕ್ಕೂ ಈ ಮಾತು ನಿಶ್ಚಯವಾಗಿ ಅನ್ವಯವಾಗುತ್ತದೆ ಎಂಬುದು ಲೇಖಕರ ಆಶಯವಾಗಿದೆ. ಹೀಗೆ ಚೆನ್ನ ಕವಿಗಳು ಸರಿಯಾದ ದೃಷ್ಟಾಂತ ನಿದರ್ಶನಾದಿಗಳಿಂದ ತಾವು ಹೇಳಬೇಕಾಗಿರುವ ವಿಷಯವನ್ನು ಓದುಗರಿಗೆ ಮನಗಾಣುವಂತೆ ಮಾಡಿದ್ದಾರೆ. ಒಟ್ಟಾರೆ ಪಾವನವಾದ ಪಂಚಾಕ್ಷರ ಮಂತ್ರವು ʼʼಮನೋಮಯಿ ಹೃದ್ಗತʼʼ ಎಂಬ ಮಾತನ್ನು ಖಚಿತಗೊಳಿಸಿರುವುದು.

 ಕೃತಿತ್ವದಲ್ಲಿ ವ್ಯಕ್ತಿತ್ವದ ಧ್ವನಿ :

ಕೃತಿಕಾರನಾದವನು ಎಷ್ಟೇ ಕೃತಿತ್ವದ ಚೌಕಟ್ಟಿನಿಂದ ದೂರ ಉಳಿಯಲು ಪ್ರಯತ್ನಿಸಿದರೂ ಅವನ ವ್ಯಕ್ತಿತ್ವದ ಹಲ ಕೆಲವು ಅಂಶಗಳು ನುಸುಳಿಕೊಂಡು ಅಲ್ಲಿ ಕಾಣದೇ ಬಿಡುವುದಿಲ್ಲ. ಈ ಮಾತು ಚನ್ನಕವಿಯ ಕೃತಿತ್ವ ವ್ಯಕ್ತಿತ್ವಕ್ಕೂ ಅನ್ವಯ ವಾಗುತ್ತದೆ. ಈ ದಿಸೆಯಲ್ಲಿ ಕಂಡು ಬರುವ ಕೆಲವು ಅಂಶಗಳನ್ನಿಲ್ಲಿ ಕಾಣಿಸಬಹುದು.

೧) ಚನ್ನಕವಿಗಳು ಅಪ್ಪಟ ವೀರಶೈವ ಧರ್ಮನಿಷ್ಠೆಯುಳ್ಳವರು.

೨) ವೀರಶೈವ ಧರ್ಮವು ಅತೀ ಪ್ರಾಚೀನವಾದುದೆಂಬ ನಿಶ್ಚಯದ ಹೇಳಿಕೆ ಅವರಲ್ಲಿದ್ದುದರಿಂದ ಪಂಚಾಕ್ಷರಮಂತ್ರದ ಬೇರುಗಳನ್ನು ಪ್ರಾಚೀನ ಆಕರಗಳಾದ ವೇದ-ಆಗಮ-ಉಪನಿಷತ್ತಾದಿಗಳಲ್ಲಿ ಗುರುತಿಸುತ್ತಾರೆ.

೩) ಕೃತಿಯನ್ನು ಓದುತ್ತನಡೆದಂತೆ, ಲೇಖಕರ ಬಹುಶೃತತ್ವದ ವ್ಯತ್ಪತ್ತಿ ಶಕ್ತಿಯು ತನ್ನ ರೂಪವನ್ನು ಕಾಣುವಂತೆ ಮಾಡುತ್ತದೆ.

೪) ಕೃತಿಯ ಬರಹದ ಶೈಲಿ ಸುಲಭವಾಗಿದ್ದರೂ ಸಾಂಪ್ರದಾಯಕವೆನಿಸುತ್ತದೆ.

೫)  ಪರಂಪರಾಗತವಾದ ವೀರಶೈವ ಧರ್ಮವನ್ನು ಯಥಾವತ್ತಾಗಿಯೇ ಅನುಸರಿಸ ಬೇಕೆಂದು ಅವರು ಒತ್ತಿ ಹೇಳುವಲ್ಲಿ ಕೆಲವು ಅನಿಷ್ಠಗಳು ಧರ್ಮದ ಹೆಸರಿನಲ್ಲಿ ಒಪ್ಪಿಕೊಂಡಂತಹ ನಿಲುವು ಅಲ್ಲಲ್ಲಿ ಕಂಡುಬರುತ್ತವೆ. ಒಂದೆರಡು ಉದಾ ಹರಣೆಗಳನ್ನು ಇಲ್ಲಿ ಎತ್ತಿ ಹೇಳಬಹುದಾಗಿದೆ.

 ಸ್ತ್ರೀಯಾದವಳಿಗೆ ಗುರುವಿನ ಸ್ಥಾನವು ಪ್ರಾಪ್ತವಾಗಲಾರದೆಂಬುದಕ್ಕೆ ಲೇಖಕರು ಕೊಡುವ ದಾರಾರ್ಹನ ಕಥೆಯು ಕವಿಗಳ ಹಳೆಯತನಕ್ಕೆ ಸಾಧಾರವಾಗುತ್ತದೆ. ಇನ್ನೊಂದು ಲಿಂಗ ಪುರಾಣದಲ್ಲಿ ಉಲ್ಲೇಖಗೊಂಡಿರುವ ಶೂದ್ರರ ಬಗೆಗಿನ ವಿಚಾರಗಳ ಬಗೆಗೆ ಕವಿಗಳು ತಾಳುವ ನಿಲುವು ಅಲ್ಲಿಬರುವ ವಿವರಣೆ ಹೀಗಿದೆ. ʼʼಕಲಿಯುಗದಲ್ಲಿ ಬ್ರಾಹ್ಮಣರು ಶೂದ್ರರೊಡನೆ ಮಂತ್ರ ಸಂಬಂಧ ಮಾಡುವರು. ಶುಭ್ರವಾದ ಹಲ್ಲುಗಳಿಂದಲೂ, ಕೃಷ್ಣಾಜಿನದಿಂದಲೂ, ರುದ್ರಾಕ್ಷಮಾಲಿಕೆಗಳಿಂದಲೂ, ಕಾವಿಯ ಕಪನಿ, ಮಸ್ತಕ ಪಾವುಡಗಳಿಂದಲೂ, ಬೋಳಿಸಿದ ಮಸ್ತಕದಿಂದಲೂ, ರಮ್ಯವಾಗಿ ಶೂದ್ರರು ಈ ಕಲಿಯುಗದಲ್ಲಿ ವೈದಿಕ ಧರ್ಮವನ್ನು ಆಚರಿಸುವರು’ʼ ಇಂಥ ಮಾತುಗಳನ್ನು ಉಲ್ಲೇಖ ಮಾಡುವುದರ ಮೂಲಕ ಕವಿಗಳು ʼʼವರ್ಣಾಶ್ರಮ ಧರ್ಮ”ವನ್ನು ಸಮ್ಮತಿಸುತ್ತಾರೆಂಬಂತೆ ಕಾಣುತ್ತದೆ. ಜಾತ್ಯಾತೀತ ಧರ್ಮ ನಿರಪೇಕ್ಷ ತತ್ತ್ವಗಳ ಪಾಲನೆಯಲ್ಲಿ ತೊಡಗಿರುವ ಇಂಥ ಸಾಮಾಜಿಕ ಸಂದರ್ಭದಲ್ಲಿ ಕವಿಗಳ ಮೇಲಿನ ವಿಚಾರಗಳು ತೀರಹಳೆಯ ಕಾಲದ ಆಲೋಚನೆಗಳಾಗಿ ತಮ್ಮ ಪ್ರಸ್ತುತತೆಯನಹ್ನು ಕಳೆದುಕೊಳ್ಳುತ್ತವೆ.

 ಧರ್ಮದ ತತ್ತ್ವವನ್ನು ಕಟ್ಟುನಿಟ್ಟಾಗಿ ಆಚರಿಸಬೇಕೆಂಬುದರ ಕಡೆಗೆ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವುದರ ಮೂಲಕ ಲೇಖಕನಿಗಿರಬೇಕಾದ ಕ್ರಾಂತ ದೃಷ್ಠಿಯನ್ನು ಕಳೆದುಕೊಂಡಿದ್ದಾರೆನ್ನಬಹುದು

 ಸಮಾರೋಪ :

 ಚೆನ್ನಕವಿಗಳಿಗೆ ಪ್ರಾಚೀನ ವಾಙ್ಮಯದೊಂದಿಗೆ ವಚನ ವಾಙ್ಮಯದ ಪರಿಚಯವಿದೆ. ಹಿಂದೆ ಹೇಳಿದ ಕೆಲವು ಮಾತುಗಳ ನೆಲೆಯಲ್ಲಿ ಅವರು ಒಂದಿಷ್ಟು ಕಟ್ಟಾ ಸಂಪ್ರದಾಯವಾದಿಗಳಂತೆ ಕಂಡರೂ, ಪ್ರಗತಿಪರವಿಚಾರಗಳನ್ನು ಪೂರ್ಣವಾಗಿ ದೂರೀಕರಿಸಿಯೇ ಬಿಟ್ಟಿದ್ದಾರೆಂದು ಹೇಳುವಂತಿಲ್ಲ. ಈ ಮಾತುಗಳು ನೋಡಬೇಕು.

 “ಸ್ತ್ರೀ-ಶೂದ್ರರು ಈ ಪಂಚಾಕ್ಷರೀ ಮಂತ್ರವನ್ನು ಜಪಿಸಬಹುದೋ ಜಪಿಸ ಬಾರದೋ ಎಂಬ ಬಗ್ಗೆ ಸಧ್ಯ; ನನ್ನ ವಾದವಿಲ್ಲ. ಆದರೆ ಯಾರು ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕೆಂದು ಬಯಸುವರೋ ಅವರು ಸದಾಚಾರಿಗಳು, ಭಗವತ್ಪೂಜಾ ಮೋಹಿಗಳು ಇದ್ದು, ವರ್ಣೋತ್ತಮನಾದ ಯೋಗ್ಯ ಗುರುವಿನಿಂದ ಉಪದೇಶ ಹೊಂದಿ, ಗೌಪ್ಯವಾಗಿ, ವಿಧಿಗನುಸರಿಸಿ ಜಪಿಸಬೇಕಲ್ಲದೆ ಬೈಲಿಗೆ ನಿಂತು ಕಂಡ ಕಂಡ ಜನರೊಡನೆ ವಿಧಿಗೆಟ್ಟು ಕೂಗುವುದು ಶಾಸ್ತ್ರಕ್ಕೆ ವಿರೋಧವೆಂಬುದನ್ನು ಸಮ ದೃಷ್ಟಿಯಿಂದ ಶೋಧಿಸಿ ಸಪ್ರಮಾಣವಾಗಿ ಸಿದ್ಧ ಪಡಿಸುವುದೇ ನನ್ನ ಮುಖ್ಯೋದ್ದೇಶವಾಗಿದೆ.” ದ್ಯಾಂಪುರ ಚೆನ್ನಕವಿಗಳು ತಾವು ಇಟ್ಟುಕೊಂಡ ಉದ್ದೇಶವನ್ನು ಸಮರ್ಪ ಕವಾಗಿ ನಿರ್ವಹಿಸಿದ್ದಾರೆಂದು ಧಾರಾಳವಾಗಿ ಹೇಳಬಹುದಾಗಿದೆ.

Related Posts