ನಿಜಗುಣಶಿವಯೋಗಿಕೃತಕೈವಲ್ಯಪದ್ಧತಿಯಲ್ಲಿಯ ‘ʼಜ್ಞಾನಪ್ರತಿಪಾದನಸ್ಥಲʼ’

ಸ. ಸ. ಮಾಳವಾಡ

ಪ್ರಸಕ್ತ ಹಾಡುಗಳಲ್ಲಿಯ ಪ್ರತಿಯೊಂದು ಪದಕ್ಕೂ ಶಬ್ದಾರ್ಥ ಅದರ ಹಿಂದಿರುವ ಸೂಕ್ಷ್ಮವಾದ ಅರ್ಥ, ವಿಶೇಷ ವಿಚಾರಗಳ ವಿವೇಚನೆಗಳನ್ನು ಇಲ್ಲಿ ಒದಗಿಸಲಾಗಿದೆ. ವಾಚ್ಯಾರ್ಥ, ಲಕ್ಷ್ಯಾರ್ಥ, ಧ್ವನ್ಯಾರ್ಥಗಳನ್ನು ಏಕಕಾಲಕ್ಕೆ ಸ್ಪಷ್ಟಪಡಿಸಲಾಗಿದೆ. ದೀರ್ಘಕಾಲದ ವ್ಯಾಸಂಗ, ಶ್ರವಣ, ಚಿಂತನಗಳ ಆಧಾರದಿಂದ ಮೂಡಿ ಬಂದ ಈ ಕೃತಿಯಲ್ಲಿಯ ವಿವೇಚನೆಯು ಓದುಗರಿಗೆ ಜಿಜ್ಞಾಸುಗಳಿಗೆ ಒಳ್ಳೆಯ ಮಾರ್ಗದರ್ಶನವನ್ನು ಒದಗಿಸುವಂತಿದೆ.

‘ಶ್ರೀ’ ಎಂಬ ಪದದ ಬಳಕೆಯು ಎಷ್ಟೊಂದು ಸರ್ವಸಾಮಾನ್ಯವಾಗಿದೆ? ಆದರೆ ಆ ಪದದ ವ್ಯಾಪಕವಾದ ಅರ್ಥವನ್ನು ಅರಿತವರು ಎಷ್ಟು ಜನ ? ವ್ಯಾಖ್ಯಾನಕಾರರು ”ಶ್ರೀ’ ಪದಕ್ಕೆ ‘ಐಶ್ವರ್ಯ, ಧರ್ಮ, ಕೀರ್ತಿ, ಬಲ, ಶಕ್ತಿ ಹಾಗೂ ತೇಜ ಎಂಬ ಆರು ಗುಣಗಳಿಂದ ಕೂಡಿದೆ” ಎಂಬ ಅರ್ಥವನ್ನು ಇಲ್ಲಿ ಒದಗಿಸಿದ್ದಾರೆ. ಪ್ರತಿಯೊಂದು ಪದವನ್ನೂ ಶೋಧಿಸಿ ಅರ್ಥ ವಿವರಿಸುವ, ವಿಷಯವನ್ನು ವಿವೇಚಿಸುವ ವಿವೇಚನೆಯನ್ನು ಆಧಾರ, ದೃಷ್ಟಾಂತ ಕಥೆ, ನ್ಯಾಯ ಸಾಮತಿಗಳ ಮೂಲಕ ಸುಗಮಗೊಳಿಸುವ ಕ್ರಮವಿಲ್ಲಿದೆ. ಕಂಠಿಯವರು ಆಯ್ದುಕೊಂಡ ಕ್ರಮದಲ್ಲಿ ಕೆಲವೊಂದು ಪುನರುಕ್ತಿ ದೀರ್ಘವಾಗಿರುವ ವಿವರಣೆಗಳು ಅನಿವಾರ್ಯವೆನಿಸಿವೆ. ಎಲ್ಲ ಪದಗಳಿಗೂ ಅರ್ಥ ಹೇಳಬೇಕೇ ? ಎಂದೂ ಕೆಲವರಿಗೆ ಅನಿಸಬಹುದು. ವಿಷಯವನ್ನು ಮನದಟ್ಟು ಮಾಡಿಕೊಡುವ ದೃಷ್ಟಿ ಸರ್ವಸಾಮಾನ್ಯರಿಗೂ ತಿಳಿಯಬೇಕೆಂಬ ಉದ್ದೇಶದಿಂದ ಹಾಗೆ ಮಾಡಲಾಗಿದೆಯೆಂದು ಭಾವಿಸಬೇಕು.  

 ಮಾನವ ಜೀವನದ ಪರಮ ಗುರಿಯೇನು ? ಇದು ಅತ್ಯಂತ ಮೂಲಭೂತ ಪ್ರಶ್ನೆ. ಇದು ಎಲ್ಲ ಬಗೆಯ ತಾತ್ವಿಕ ಜಿಜ್ಞಾಸೆಗೆ ತಳಹದಿ. ಈ ಪ್ರಶ್ನೆಗೆ ‘ಜೀವ ಪರಮರನೊ೦ದುಗೂಡಿಸುವುದು’ ಎಂಬ ಉತ್ತರವೂ ಸನಾತನವಾದುದೇ, ಹಾಗೆ  ‘ಒಂದುಗೂಡುವ’ ಬಗೆಯಲ್ಲಿಯ ವ್ಯತ್ಯಾಸಗಳು ವಿವಿಧ ತಾತ್ವಿಕ ಪಂಥಗಳಿಗೆ ಎಡೆಗೊಟ್ಟಿವೆ. ಒಂದುಗೂಡುವ ಹಾದಿಯ ಬಗೆಗೆ ವಿವಿಧ ಮತಗಳು, ವಾದಗಳು, ಜಗಳಗಳು ತಲೆದೋರಿವೆ. ಆದರೆ ಮೂಲಭೂತವಾದ ಅಂಶವೊಂದೇ ಆಗಿದೆ. ಪರಮಾತ್ಮನ ಅಸ್ತಿತ್ವವನ್ನು ಅಲ್ಲಗಳೆಯುವ ಇಲ್ಲವೆ ಆ ಬಗೆಗೆ ಮೌನವಾಗಿರುವ ಪಂಥಗಳೂ ಇವೆ, ಆದರೆ ಪರಮಾನಂದವನ್ನು ಅರಸುವ ದಿಶೆಯಲ್ಲಿ ಅವೂ ಸಾಗಿವೆ. ಪರಮಾನಂದವನ್ನು ಪಡೆಯುವುದು ಇಲ್ಲವೆ ಜೀವ-ಪರಮರು ಒಂದುಗೂಡುವುದು ಮೂಲಭೂತ ಸಂಗತಿ. ಇದನ್ನೇ ನಿಜಗುಣರು ವಿವೇಚಿಸಿದ್ದಾರೆ. ಕೈವಲ್ಯ ಪದ್ಧತಿಯ ‘ಜ್ಞಾನ ಪ್ರತಿಪಾದನ ಸ್ಥಲ’ ದ ಸಾರದಂತಿರುವ ʼʼಆರು ನೀನೆಂದು ವಿಚಾರಿಸುʼ‘ ಎಂಬ ಬೀಜಮಾತನ್ನು ನಿಜಗುಣರು ಹೇಳಿದ್ದಾರೆ. ಈ ಬೀಜಮಾತನ್ನು ವ್ಯಾಖ್ಯಾನಕಾರರು ”ತತ್ತ್ವಮಸಿ’ ಎಂಬ ಗೂಢ ಸೂತ್ರದೊಂದಿಗೆ ಸಮನ್ವಯಿಸಿ ವಿವರಿಸಿದ್ದಾರೆ. ತತ್ಪದ ಪರಮ (ಶಿವ) ವಾಚಕ; ‘ತ್ವಂ’ ಪದ ಜೀವವಾಚಕ. ಇದನ್ನು ಕುರಿತ ವ್ಯಾಖ್ಯಾನದಲ್ಲಿ ಗುರುವಾಣಿಯನ್ನು ಬಳಸಿಕೊಂಡು.

ಪರಶಿವನಿಗೆ ಮಾಯೆ ಉಪಾಧಿ;

ಜೀವನಿಗೆ ಕಪಟವಿದ್ಯೆ ಉಪಾಧಿ ;

ಉಪಾಧಿಯನ್ನು ಬಿಟ್ಟರೆ ಜೀವ-ಶಿವರಿಗೆ ಭೇದವಿಲ್ಲವು, ಎಂದು ಹೇಳಲಾಗಿದೆ. ಉಪಾಧಿಯಂದರೇನೆಂಬುದನ್ನು ವಿವರಿಸಲಾಗಿದೆ.

ಕಪಟದ ಅವಿದ್ಯೆಯಿಂದಾಗಿ ಮಾನವನು ಚಪಲ ವಿಷಯದೊಳಗೆ ಆಡುತ್ತಾನೆ; ಕೋಟಲೆಗೆ ಒಳಗಾಗುತ್ತಾನೆ. ಈ ಚವಲ ವಿಷಯದ’ ಬಂಧನದಿಂದ ಪಾರುಮಾಡಿ ಮಾನವನನ್ನು ಪರಮಾನಂದದತ್ತ ಕರೆದೊಯ್ಯುವುದೇ ನಿಜಗುಣರ ಉದ್ದೇಶವಾಗಿದೆ.

ನಾನು ಯಾರು ? ಎಂದು ವಿಚಾರಿಸುತ್ತ ಸರಿಯಾಗಿ ಸಾಗಿದಾಗ ಕೊನೆಯ ನಿಲುವು ‘ನಾನು (ಜೀವನು) ಶಿವ’ ಎಂದಾಗುತ್ತಿದೆ. ಅದೇ ನಿಜದ ನೆಲೆ, ಈ ನಿಜದ ನೆಲೆಯನ್ನೇ ನಿಜಗುಣರು ನಿರೂಪಿಸಿದ್ದಾರೆ. ಅವರು ʼʼದೇವಲಕ್ಷಣಗಳೆಲ್ಲ ಜೀವನೊಳು ಬೆಳಗುವ’ʼ

ಹಾದಿಯನ್ನು ಬೋಧಿಸಿದ್ದಾರೆ . ಆಧುನಿಕ ಕಾಲದಲ್ಲಿ ಶ್ರೀ ಅರವಿಂದರು ಇದನ್ನು ಬೋಧಿಸಿದ್ದುಂಟು..  

ನಿಜಗುಣ ಶಿವಯೋಗಿಗಳ ಬೋಧೆಯನ್ನು ತಾವು ಸರಿಯಾಗಿ ತಿಳಿದುಕೊಂಡ ವ್ಯಾಖ್ಯಾನಕಾರರು ಈ ಕೃತಿಯಲ್ಲಿ ಓದುಗರಿಗಾಗಿ ಅದನ್ನು ಸರಿಯಾಗಿ ವಿವರಿಸಿದ್ದಾರೆ.

‘ನಾನು ಶಿವ’ ಎಂಬ ಅರಿವು ನಮ್ಮಲ್ಲಿ ಜಾಗೃತವಾಗುವುದೇ ಪರಮಾನಂದವನ್ನು ಪಡೆಯುವ ಪಥವಾಗಿದೆ. ಈ ಬಗೆಯ ಅರಿವಿಗೆ ಶ್ರವಣಾದಿಗಳು ಬೀಜವಿದ್ದಂತೆ. ಆತ್ಮನ್ನು ಅಹಂಕಾರದಿಂದ ಬೇರ್ಪಟ್ಟು ಸಾಕ್ಷಿರೂಪನಾಗಿ ಸಂಸಾರದಲ್ಲಿದ್ದು ಚಿದ್ರೂಪವಾಗುವುದೇ ಈ ಅರಿವಿನ ಫಲ, ಅದು ಅಖಂಡ ಸುಖ,ʼʼ ಉತ್ತಮ ಸಹಜವೆನಿಪ ನಿಲುವು, ಶಂಭುಲಿಂಗ ತಾನಿಪ್ಪ ಇರುವು,” ಅರ್ಥಾತ್ ಜೀವ-ಪರಮರೊಂದುಗೂಡಿದ ಬಗೆ.

 ಸುಖವು ಮಾನವನ ಸಹಜ, ಆಂತರಿಕ ಸ್ವರೂಪ. ಆದರೆ ಮಾನವನು ಸುಖವನ್ನು ಹೊರಗೆ ಹುಡುಕುತ್ತ ಬಳಲುತ್ತಾನೆ, ಅಂತೆಯೇ ನಿಜಗುಣರು “ನಿನ್ನ ನಿಜವತಿಳಿ,  ಮನುಜ’ ಎಂದು ಒಡನುಡಿದಿದ್ದಾರೆ. ಇದು ಎಂದಿನಂತೆ ಇಂದೂ ಅವಶ್ಯಕವಾಗಿದೆ. ತನ್ನ ಬುದ್ಧಿ ಕಲ್ಪಿತ ಜಗತ್ತಿನಲ್ಲಿ ತೊಳಲಾಡುತ್ತಿರುವ ಆಧುನಿಕ ಮಾನವ ತನ್ನ ಪಾರಮಾರ್ಥಿಕ ಸತ್ತೆಯ ಸದ್ರೂಪವನ್ನು ಕಂಡುಕೊಳ್ಳಬೇಕಾಗಿದೆ. ‘ಸದ್ರೂಪ’ ಕ್ಕೆ ನಿಜಗುಣರು ‘ಉಳುಮೆ’ ಎಂಬ ಪದವನ್ನು ಬಳಸಿದ್ದಾರೆ. ನಾಮ ರೂಪಾದಿಗಳನ್ನು ನೇತಿಗೆಳೆದಾಗ ಉಳಿದುದೇ ‘ಉಳುಮೆ’ ಅದು ಸತ್ಯಪದ.

ನಿನ್ನೊಳಿಹುದು ಸತ್ಯಪದ

ಅದನನುಭವದಿಂ ನೋಡು, ಮನುಜ ನೀನಹೆ ಮುಕ್ತನು |

ಶಂಭುಲಿಂಗದೊಳಗೆ ಅನ್ಯವಿಲ್ಲದೆ ಮೆರೆವ

 ದ್ರೂಪು ನೀನಹುದು

ಎಂಬುದು ಇಲ್ಲಿಯ ಬೋಧೆಯ ತಿರುಳು. ಉಪಾಧಿಯಿರುವಾಗ ಸದ್ರೂಪವು ಹೊಳೆಯುವದಿಲ್ಲ. ಶುದ್ಧ ಚೈತನ್ಯ ದೃಷ್ಟಿಗೆ ಮಾತ್ರ ಅದು ಗೋಚರವಾಗುತ್ತದೆ. ಅಂತಹ ಚೈತನ್ಯ ದೃಷ್ಟಿಯನ್ನು ಪಡೆಯುವ ಕ್ರಮವು ‘ಜ್ಞಾನ ಪ್ರತಿಪಾದನ ಸ್ಥಲ’ ದಲ್ಲಿದೆ. ಆರು ತಾನೆಂದು ವಿಚಾರಿಸಿದಾಗ ”ತಾನು ದೇಹವಲ್ಲ, ಇಂದ್ರಿಯವಲ್ಲ, ಚಿತ್ತ, ಬುದ್ಧಿ, ಮನ ಅಹಂಕಾರಗಳೂ ತಾನಲ್ಲ. ಆದರೆ ತಾನು ಆತ್ಮ, ಸತ್ಯಪದ ಆನಂದೈಕರಸರೂಪದ ಅರಿವು, ಶಂಭುಲಿಂಗವೇ ಆದ ಉಳುಮೆ” ಎಂಬುದು ಸ್ಪಷ್ಟವಾಗುತ್ತಿದೆ.

 ತಾನು ತನ್ನೊಳು ತನ್ನ ನಿಜರೂಪ ನೋಡಲು ಮಾನವನು ಪರಮಾನಂದಮಯ ಚಿದಖಂಡರೂಪನಿರುವನು. ನಾನು ಯಾರು ? ಎಂಬುದರ ಅರ್ಥವಿಡಿದು ವಿಚಾರಿಸಿ ಜ್ಞಾನನಿಧಿ ಶಂಭುಲಿಂಗದ ನಿಜರೂಪ ತಾನೆಂದು ತಿಳಿದು ಅನುಭವಿಸುವ ಸುಖವೇ ಪರಮಾನಂದ. ಅದು ತುಂಬಿ ತುಳಕದ ಸಹಜಾನಂದ, ಅದನ್ನು ಶಬ್ದಗಳಲ್ಲಿ ವರ್ಣಿಸಲೂ ಸಾಧ್ಯವಿಲ್ಲ.

 ಇಂತಹ ಆನಂದದತ್ತ ನಮ್ಮ ನಿಜವಾದ ಅರಿವು ನಮ್ಮನ್ನು ಒಯ್ಯುತ್ತಿದೆ. ಈ ಆನಂದದತ್ತ ಸಾಗುವ ದಿಶೆಯಲ್ಲಿ ನಿಜಗುಣರು ಆರಂಭದಲ್ಲಿ ಸತ್, ಚಿತ್, ಆನಂದ ನಿತ್ಯ ಪರಿಪೂರ್ಣ ಇವುಗಳ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ನಂತರ ಶ್ರವಣಾದಿಗಳ ಬಗೆಗೆ ನಿರೂಪಿಸಿದ್ದಾರೆ. ಉಪಾಧಿ ನಿರಾಕರಣದ ಬಗೆಯನ್ನು ವಿವರಿಸಿದ್ದಾರೆ. ಅರಿವನ್ನು ಅನುಸಂಧಾನ ಮಾಡುವಲ್ಲಿ ಗುರುಕೃಪೆಯ, ಗುರುವಿನ ಉಪಕಾರ ಸ್ಮರಣೆಯ ಬಗೆಗೆ ಹೇಳಿದ್ದಾರೆ. ಕೊನೆಯಲ್ಲಿ ಜೀವನ್ಮುಕ್ತಿ, ಪ್ರಾರಬ್ಧ ಕರ್ಮಗಳನ್ನು ಕುರಿತು ವಿವೇಚಿಸಿ ಮಂಗಲವನ್ನು ಹಾಡಿದ್ದಾರೆ.

ಮೌಲಿಕವಿಚಾರ, ಹೃದಯಂಗಮ ನಿರೂಪಣೆಗಳು ನಿಜಗುಣರ ಕೃತಿಯಲ್ಲಿ ಕಂಡುಬರುತ್ತಿವೆ. ‘ಆತ್ಮ’ ವಿಚಾರದಲ್ಲಿ ಹೀಗೆ ಹೇಳಲಾಗಿದೆ.

 ಆತ್ಮನು ‘ಸಕಲಾರ್ಥ ಸಂಬಂಧಿ

ಸಕಲಾರ್ಥ ದೂರನು

ಸಕಲಾರ್ಥನೂ ಅಹುದು.’

ಇಲ್ಲಿ ಆತ್ಮನ ವ್ಯಾಪಕತ್ವ ನಿರ್ಲೇಪಕತ್ವ ಆತನು ಎಲ್ಲ ಪುರುಷಾರ್ಥಗಳ ಸ್ವರೂಪ ಎಂದು ಹೇಳಲಾಗಿದೆ. ಶ್ರೀ ಅರವಿಂದ ದರ್ಶನದಲ್ಲಿ ಈ ಬಗೆಯ ನಿರೂಪಣೆ ಇದೆ.

 ದೇಹ ಜಡ, ಆತ್ಮ ಅಜಡ

ದೇಹ ಬಹುರೂಪ, ಆತ ಏಕರೂಪ;

 ದೇಹ ಕೆಡುವದು, ಆತ್ಮ ನಿತ್ಯ;

ದೇಹ ಕಡೆಗೆ ಮಣ್ಣಾಗುತ್ತಿದೆ,

ಆತ್ಮ ನಿಜವಸ್ತುವಾಗುತ್ತಿದೆ.

ಇದರಂತೆ ‘ಅನುಭವಿ’ ‘ಜ್ಞಾನಿ’ ಇತ್ಯಾದಿ ವಿಷಯಗಳನ್ನು ಕುರಿತ ವಿವೇಚನೆಯು ಮೌಲಿಕವಾಗಿದೆ. ಬಳಸಿದ ದೃಷ್ಟಾಂತಗಳಿಂದಾಗಿ ಆ ವಿವೇಚನೆಯು ಸ್ಪಷ್ಟವೂ ಹೃದಯಂಗಮವೂ ಆಗಿದೆ. ವ್ಯಾಖ್ಯಾನಕಾರರ ವಿವರಣೆಯಿಂದಾಗಿ ಆ ವಿಷಯವು ಇನ್ನಷ್ಟು ಸುಗಮವಾಗಿದೆ.

 ಜ್ಞಾನ ಪ್ರತಿಪಾದನ ಸ್ಥಲʼವು ಮೂಲದಲ್ಲಿ ಸುಮಾರು ೨೮ ಪುಟಗಳಿದ್ದು, ೫೯ ಹಾಡುಗಳಿಂದ ಕೂಡಿದೆ. ಇಷ್ಟು ಸಾಮಗ್ರಿಯನ್ನು ಶಿವಕಾರುಣ್ಯ ಸ್ಥಲ’ ದಲ್ಲಿಯ ಒಂದರ್ಧ ಪುಟದ ಒಂದು ಹಾಡನ್ನು ಸೇರಿಸಿ ವ್ಯಾಖ್ಯಾನುಕಾರರು ಇಲ್ಲಿ ೨೪೨ ಪುಟಗಳ ಕೃತಿಯನ್ನು ರಚಿಸಿದ್ದಾರೆ. ಅರ್ಥಾತ್ ಮೂಲದ ಹತ್ತುಪಟ್ಟು ವಿವರಣೆ ಇಲ್ಲಿದೆ. ಇದರಿಂದ ವ್ಯಾಖ್ಯಾನುಕಾರರ ವ್ಯಾಸಂಗದ ದೀರ್ಘತೆ, ಚಿಂತನೆಯ ಆಳನಿಷ್ಠೆ, ಪರಿಶ್ರಮಗಳ ಪ್ರಮಾಣ ವ್ಯಕ್ತವಾಗುವಂತಿವೆ.

 ಮಾನವನ ನಿಜಸ್ವರೂಪ, ಅದನ್ನು ಅರಿತುಕೊಳ್ಳುವ ಬಗೆ, ಅಂತಹ ಅರಿವಿನ ಪರಿಣಾಮಗಳನ್ನು ಬೋಧಿಸಿದ ಜ್ಞಾನಪ್ರತಿಪಾದನ ಸ್ಥಲದ ಕೊನೆಯ ಮಂಗಲ ಪದ್ಯವು ನಿಜಗುಣರ ಕಾವ್ಯಪ್ರತಿಭೆ, ಅಧ್ಯಾತ್ಮ ವೈಭವಕ್ಕೆ ಸಾಕ್ಷಿಯಾಗುವಂತೆ ರಚಿತವಾಗಿದೆ. ಅದು ಕರ್ನಾಟಕ ಜನತೆಯ ಹೃದಯದಲ್ಲಿ ನೆಲೆಸಿನಿಂತ ಜ್ಯೋತಿ ಬೆಳಗುತಿದೆ, ವಿಮಲ ಪರಂಜ್ಯೋತಿ ಬೆಳಗುತಿದೆ” ಎಂಬ ಸುವಿಖ್ಯಾತ ಹಾಡಾಗಿದೆ.     

ಶಂಭುಲಿಂಗವೇ ತಾನಾದಾಗ ಹೊರಹೊಮ್ಮುವ ಪರಂಜ್ಯೋತಿಯನ್ನು ಈ ಹಾಡಿನಲ್ಲಿ ಬಣ್ಣಿಸಲಾಗಿದೆ. ದೀಪದಂತೆ ಪ್ರಕಾಶಮಾನ, ಕಮಲದಂತೆ ನಿರ್ಲಿಪ್ತವಾದ ಆತ್ಮಜ್ಯೋತಿ ಇಲ್ಲಿ ಉಪಮೇಯವಾಗಿದೆ. ಬೆಳಗಿ ಪ್ರಕಾಶ ಬೀರುತ್ತಿರುವ ದೀಪ, ವಿಕಸಿಸಿ ಸೊಬಗು ಸುವಾಸನೆಗಳನ್ನು ಹೊರಹೊಮ್ಮಿಸುತ್ತಿರುವ ಕಮಲ ಇವೆರಡೂ ಇಲ್ಲಿ ಉಪಮಾನಗಳಾಗಿವೆ. ಒಂದು ಉಪಮೇಯಕ್ಕೆ ಎರಡು ಉಪಮಾನಗಳನ್ನು ಸಮಾನವಾಗಿ ಕೊನೆಯವರೆಗೆ ಬಳಸಿ ಅವುಗಳನ್ನು ಅರ್ಥಪೂರ್ಣವಾಗಿ ಸಮನ್ವಯಗೊಳಿಸಲಾಗಿದೆ. ಈ ಹಾಡಿನಲ್ಲಿ ೧) ಆತ್ಮಜ್ಯೋತಿ ೨) ದೀಪ ೩) ಕಮಲ ಇವುಗಳ ಮತ್ತು ವಿಚಾರದ ಘನತೆ, ಪಾರಮಾರ್ಥಿಕ ಪ್ರಕಾಶ, ಕಾವ್ಯ ಸೌಂದರ್ಯಗಳ ಮುಪ್ಪುರಿಯಿದೆ. ಅಂತೆಯೇ ಇದು ಅತ್ಯಂತ ಮೆಚ್ಚುಗೆಯನ್ನು ಪಡೆದ ಕನ್ನಡ ನುಡಿಯ ಹಾಡಾಗಿದೆ.

 ಆತ್ಮ ಜ್ಯೋತಿಗೆ ಸಂಬಂಧಿಸುವಂತೆ ದೀಪ, ಕಮಲಗಳ ಸ್ವರೂಪದ ವಿವರ ಅವೆರಡರ ವ್ಯವಹಾರಗಳನ್ನು ಕುರಿತ ಕಲ್ಪನೆಯು ಸಾಮಾನ್ಯರಿಗೆ ಜಟಿಲವೆನಿಸಬಹುದು. ಅಲ್ಲದೆ ಪ್ರತಿಯೊಂದು ಪದದ ಅರ್ಥವನ್ನು ಮುಖ್ಯ ವಿಷಯದೊಂದಿಗೆ ಹೊಂದಿಸಿಕೊಳ್ಳುವದು ಸುಲಭವಾಗಲಿಕ್ಕಿಲ್ಲ. ಆದರೆ ವ್ಯಾಖ್ಯಾನುಕಾರರು ಅಂತಹ ಜಟಿಲತೆಯುಂಟಾಗದಂತೆ, ಪ್ರತಿ ಪದದ ಅರ್ಥವು ಸ್ಪಷ್ಟ, ಸುಸಂಬದ್ಧವಾಗುವಂತೆ ಮಾಡಿದ್ದಾರೆ. ಈ ಮೂಲಕ ಅವರು ಈ ಹಾಡಿನ ಹಿರಿಮೆಯನ್ನು ಎತ್ತಿ ತೋರಿಸಿದ್ದಾರೆ.

ಮಾನವನು ತಾನು ಶಿವನೆಂಬ ಅರಿವನ್ನು ಪಡೆದಾಗ ವಿಮಲ ಪರಂಜ್ಯೋತಿ ಬೆಳಗುವದು. ಅದು ಬೆಳಗುತ್ತಿರುವದು ಮಾನವನ ಹೃದಯಕಮಲದಲ್ಲಿ, ಆತ್ಮ ಜಾಗೃತಿಯಿಂದ ಇದು ನಿಜಗುಣರ ಸಂದೇಶ. ಈ ಸಂದೇಶವನ್ನು ವ್ಯಾಖ್ಯಾನುಕಾರರು ಈ ಕೃತಿಯಲ್ಲಿ ವಿವರಿಸಿ, ವಿವೇಚಿಸಿ ಮನದಟ್ಟು ಮಾಡಿಕೊಟ್ಟಿದ್ದಾರೆ. ವಾಚಕರು, ಜಿಜ್ಞಾಸುಗಳು ಇದರ ಪ್ರಯೋಜನ ಪಡೆಯಲಿ ! ನಾವೆಲ್ಲ ಅರಿವಿನತ್ತ ಪ್ರಶಾಂತ ಪರಂಜ್ಯೋತಿಯತ್ತ ಸಾಗುವಂತಾಗಲಿ !! ಇದು ನನ್ನ ಹಾರೈಕೆ.    

Related Posts