ಲೇಖಕರು : ಲಿಂ. ಬಿ.ಡಿ.ಜತ್ತಿ ಮಾಜಿ ರಾಷ್ಟ್ರಪತಿ ಗಳು ಭಾರತ ಸರಕಾರ ಅವರ ಆತ್ಮ ಕಥೆ “ನನಗೆ ನಾನೇ ಮಾದರಿ” ಪುಸ್ತಕ ದಿಂದ ಆಯ್ದ ಬರಹ
“…… ಈ ಮೊದಲು ಹೇಳಿದಂತೆ ನಾನು ನನ್ನ ತಂದೆತಾಯಿಗಳಿಗೆ ಮೊದಲನೆಯ ಮಗ , ನಾನು ನಮ್ಮ ಊರಲ್ಲಿಯೇ ಇರುವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ , ಆ ಕಾಲಕ್ಕೆ ನನ್ನ ತಂದೆ ವ್ಯಾಪಾರದ ಸಲುವಾಗಿ ಅಥಣಿಗೆ ಪದೇ ಪದೇ ಹೋಗುತ್ತಿದ್ದರು . ಅಲ್ಲಿಗೆ ಹೋದಾಗ ತಪ್ಪದೇ ಅಲ್ಲಿಯ ಗಚ್ಚಿನ ಮಠಕ್ಕೆ ಹೋಗಿ ಅಲ್ಲಿ ಇದ್ದ ಶಿವಯೋಗಿ ಶ್ರೀ ಮುರುಘೇಂದ್ರ ಸ್ವಾಮಿಗಳ ದರ್ಶನ ತೆಗೆದುಕೊಂಡು ತಮ್ಮ ಕೆಲಸಕ್ಕೆ ಹೋಗುತ್ತಿದ್ದರು . ಒಂದು ಸಲ ಶಿವಯೋಗಿಗಳು ಪೂಜಾವಿಧಿಗಳನ್ನು ಮುಗಿಸಿ ಕುಳಿತಿದ್ದರು . ಆಗ ಅವರು ನನ್ನ ತಂದೆಗೆ ಮಕ್ಕಳು ಎಷ್ಟು ? ಎಂದು ಕೇಳಿದರು . ಅದಕ್ಕೆ ನನ್ನ ತಂದೆಯವರು ಒಬ್ಬಾಕೆ ಮಗಳು , ಒಬ್ಬ ಮಗ ಎಂದು ಹೇಳಿದರು . ಆಗ ಶಿವಯೋಗಿಗಳು ಅವನ ಹೆಸರು ಏನು ? ಅವನು ಹೇಗಿದ್ದಾನೆ ? ಎಂದು ಕೇಳಿದುದ್ದಕ್ಕೆ ಅವನ ಹೆಸರು ಬಸಪ್ಪ , ಸ್ವಲ್ಪ ತುಂಟ , ಹಿಡಿಯುವುದು ಕಷ್ಟವಾಗಿದೆ ” ಎಂದು ಹೇಳಿದರು . ಅದಕ್ಕೆ ಶಿವಯೋಗಿಗಳು “ ಹಾಗೆ ಹೇಳಬೇಡಪ್ಪ , ಮುಂದೆ ಅವನು ರಾಜನಾಗುತ್ತಾನೆ ” ಎಂದು ಹೇಳಿದರು . ಇಷ್ಟು ಶಿವಯೋಗಿಗಳ ಆಶೀರ್ವಾದ ಕೇಳಿಕೊಂಡು ತಮ್ಮ ಕೆಲಸಕ್ಕೆ ತೆರಳಿದರು “
