ಸತಿ-ಪತಿ

ಪೂಜ್ಯ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಭಾರತೀಯ ಸಂಸ್ಕೃತಿಯಲ್ಲಿ ವಿವಾಹವೊಂದು ಪವಿತ್ರ ಬಂಧನ. ವಿವಾಹೇತರ ಸಂಬಂಧಗಳು ಧರ್ಮಬಾಹಿರವಾಗಿದ್ದು, ಸಮಾಜದ ಮನ್ನಣೆಗೆ ಪಾತ್ರವಾಗುವುದಿಲ್ಲ. ಇಂಥ ಸಂಬಂಧಗಳಿಗೆ ನೆಮ್ಮದಿ, ಸುಖ ಶಾಂತಿಗಳು ಗಗನಕುಸುಮವಾಗಿರುವುದರಿಂದ ನೆಮ್ಮದಿಯ ಜೀವನಕ್ಕೆ ವಿವಾಹ ಅನಿವಾರ್ಯ. ವಿವಾಹದಲ್ಲಿ ಬಂಧಿತರಾದ ಸತಿ- ಪತಿಗಳು ಸಮರಸದಿಂದ ಕೂಡಿ ಬಾಳಿದರೆ ನೆಮ್ಮದಿಯೆಂಬುದು ಅಂಗೈಫಲ. ಸರಸ ದಾಂಪತ್ಯವೆಂಬುದು ಸತಿಪತಿಗಳ ಜೀವನಕ್ಕೆ ಸೀಮಿತವಾಗಿರದೆ ಅದು ಕುಟುಂಬದ ನೆಮ್ಮದಿಗೂ ಕಾರಣವಾಗುತ್ತದೆ. ವಿರಸ ದಾಂಪತ್ಯ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಆಗ ಜೀವನ ಮೃತ್ಯುವಿಗೆ ಸಮವಾಗುತ್ತದೆ.

ಸತಿಪತಿಗಳಿಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡು ಸಂಸಾರ ರಥವನ್ನು ಮುನ್ನಡೆಸಬೇಕು. ಸುಖ-ದುಃಖ, ನೋವು-ನಲಿವು, ಸೋಲು-ಗೆಲವುಗಳನ್ನು ಸಮನಾಗಿ ಹಂಚಿಕೊಳ್ಳಬೇಕು. ಆಚಾರ-ವಿಚಾರ, ಬೇಕು-ಬೇಡ, ನೋಟ-ಮಾಟಗಳಲ್ಲಿ ಇಬ್ಬರೂ ಒಂದಾಗಿರಬೇಕು. ಆಗ ಆ ದಾಂಪತ್ಯದಲ್ಲಿ ಯೋಗದ ಕಳೆ ಬೆಳಗುತ್ತದೆ. ಅದೊಂದು ಅನುಪಮ ಆದರ್ಶದ ಬಾಳೆನಿಸುತ್ತದೆ. ಇಂಥ ಬಾಳನ್ನು ಕಂಡ ನಿಜಗುಣರು- ‘ಸತಿಪತಿಗಳಿವರ ಸಮರತಿಯ ಬಾಳುವೆಗೆ ಪ್ರತಿಯುಂಟೆ ಲೋಕದೊಳು’ ಎಂದು ಉದ್ಗರಿಸುತ್ತಾರೆ.

ಆದರ್ಶ ಕುಟುಂಬದ ಸತಿಪತಿಗಳು ತಮ್ಮಲ್ಲಿರುವ ದೌರ್ಬಲ್ಯಗಳನ್ನು ಪರಸ್ಪರ ತಿದ್ದಿಕೊಳ್ಳುವ ಮತ್ತು ಕ್ಷಮಿಸುವ ಔದಾರ್ಯ ಹೊಂದಿರುತ್ತಾರೆ. ಅವರಲ್ಲಿ ಪರಿಶುದ್ಧವಾದ ನಿಷ್ಕಾಮ ಪ್ರೀತಿಯೊಂದು ಮನೆಮಾಡಿಕೊಂಡಿರುತ್ತದೆ. ಬಡತನ-ಸಿರಿತನಗಳಿಗೆ ಅಲ್ಲಿ ಸ್ಥಾನವಿಲ್ಲ. ಬಡವಿಯಾದ ಸತಿಯೂ ನಿಷ್ಕಾಮ ಮತ್ತು ನಿರ್ವ್ಯಾಜ ಪ್ರೀತಿಯಲ್ಲಿ ಸ್ವರ್ಗವನ್ನು ಕಾಣುತ್ತಾಳೆ. ‘ನಾನು ಬಡವಿ ಆತ ಬಡವ; ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎಂಬ ಕವಿವಾಣಿಯಿಂದ

ಪ್ರೀತಿಯ ಹರವು, ಶ್ರೀಮಂತಿಕೆ ನಮ್ಮರಿವಿಗೆ ಬರುತ್ತದೆ.

ಜೇಡರದಾಸಿಮಾರ್ಯ ಒಬ್ಬ ಶರಣ. ದುಗ್ಗಳೆ ಅವನ ಆದರ್ಶ ಸತಿ. ವ್ಯಕ್ತಿಯೊಬ್ಬ ಸನ್ಯಾಸ ಶ್ರೇಷ್ಠವೋ? ಸಂಸಾರ ಶ್ರೇಷ್ಠವೋ? ಎಂದು ಪ್ರಶ್ನಿಸಿದಾಗ ದಾಸಿಮಾರ್ಯರು ಸಾಕಷ್ಟು ಬೆಳಕಿದ್ದರೂ ‘ನಾನೀಗ ಓದಬೇಕು ದೀಪ ತಗೆದುಕೊಂಡು ಬಾ’ ಎಂದು ಸತಿ ದುಗ್ಗಳೆಗೆ ಹೇಳಿದರೆ ದೀಪ ತಂದು ಮುಂದಿರಿಸುತ್ತಾಳೆ. ಊಟದ ಸಮಯದಲ್ಲಿ ಬಟ್ಟಲಿನಲ್ಲಿರುವ ಅಂಬಲಿ ಆರಿ ತಣ್ಣಗಾಗಿದ್ದರೂ ಬೀಸಣಿಕೆಯ ಗಾಳಿಯಿಂದ ಅಂಬಲಿಯನ್ನು ಆರಿಸಲು ಹೇಳುತ್ತಾರೆ. ದುಗ್ಗಳೆ ಅನ್ಯಮಾತಿಲ್ಲದೆ ಆರಿದ ಅಂಬಲಿಗೆ  ಗಾಳಿ ಬೀಸುತ್ತಾಳೆ. ಆಗ ಪ್ರಶ್ನಿಸಿದ ವ್ಯಕ್ತಿಯು ಇಂಥ ಸತಿ ಸಿಕ್ಕರೆ ಸಂಸಾರ ಶ್ರೇಷ್ಠ, ಸಿಗದಿದ್ದರೆ ಸನ್ಯಾಸ ಶ್ರೇಷ್ಠವೆಂದು ಅರಿಯುತ್ತಾನೆ. ಸಾದ್ವಿಯೂ, ಪ್ರಿಯವಾದಿನಿಯೂ ಆದ ಸತಿ ತನ್ನ ಪ್ರೀತಿ, ತ್ಯಾಗ, ಸಹನೆಗಳಿಂದ ಸದಾ ಪತಿಯ ಮನಸ್ಸನ್ನು ಗೆಲ್ಲುತ್ತಾಳೆ. ಸತಿಪತಿಗಳ ದಾಂಪತ್ಯ ಜೀವನ ಶಾರೀರಿಕ ಸಂಬಂಧವನ್ನು ಮೀರಿ ಆಧ್ಯಾತ್ಮಿಕ ಹಂತಕ್ಕೇರಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧಫಲ ಪುರುಷಾರ್ಥಗಳ ಪ್ರಾಪ್ತಿಗೆ ಕಾರಣವಾಗಬೇಕು. ಪರಸ್ಪರ ಅರಿತು ಬಾಳಬೇಕು. ಬಾಳು ಬೆಳಗಬೇಕು. ಇಂಥ ಸತಿಪತಿಗಳು ಕೂಡಿ ಮಾಡುವ ಭಕ್ತಿ, ಏಕೋಭಾವ ಶಿವನಿಗೂ ಪ್ರಿಯವಾಗುತ್ತದೆ.

Related Posts