ಸಂಪಾದಕೀಯ : ಫ.ಗು.ಹಳಕಟ್ಟಿಯವರ ಜನ್ಮದಿನದ ಗೌರವ ನಮನಗಳು

ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

 

ವಚನ ಪಿತಾಮಹ, ಹೆಸರಾಂತ ಲೇಖಕ ಶ್ರೀ ಫ.ಗು. ಹಳಕಟ್ಟಿ (ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ) ಅವರ ಜನ್ಮದಿನದ ಗೌರವ ನಮನಗಳು. ⁣

ಫ.ಗು.ಹಳಕಟ್ಟಿ  1880ರ ಜುಲೈ 2 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ದಾನಾದೇವಿ.  ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ಶಿಕ್ಷಕರಾಗಿದ್ದ ತಂದೆ ಸಾಹಿತಿಗಳಾಗಿ ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ  ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ “ವಾಗ್ಭೂಷಣ”ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು.

ಕನ್ನಡವನ್ನು ಉಸಿರಾಗಿಸಿಕೊಂಡಿದ್ದಷ್ಟೇ ವಚನ ಸಾಹಿತ್ಯಕ್ಕೆ ಮಾರುಹೋಗಿದ್ದ ಹಳಕಟ್ಟಿಯವರು ಅಂದು ವಚನಸಾಹಿತ್ಯದ ಹಸ್ತಪ್ರತಿಗಳಿಗಾಗಿ, ಓಲೆಗರಿ ಗ್ರಂಥಗಳಿಗಾಗಿ ಹುಡುಕಾಡದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ, ಅನ್ವೇಷಣೆಗೈಯದ ಆಲಯಗಳಿಲ್ಲ, ಸಂಶೋಧನೆ ನಡೆಸದ ಸ್ಥಳಗಳಿಲ್ಲವೆನ್ನಬಹುದು. ಒಂದು ರೀತಿಯಲ್ಲಿ ಇದಕ್ಕಾಗಿ ದೇಶಸುತ್ತಿದವರಿವರು. ಜಗತ್ತನ್ನೇ ಅಲೆದವರಿವರು. ಹೀಗೆ ತಿರುತಿರುಗಿ ತಾವು ತಂದು ಸಂಗ್ರಹಿಸಿದ ಹಸ್ತ ಪ್ರತಿರೂಪದ ವಚನರಾಶಿಯನ್ನು 1920ರಲ್ಲಿ ಬಿಜಾಪುರದಲ್ಲಿ ಪ್ರದರ್ಶಿಸಿ ಇದರ ಮೌಲ್ಯವನ್ನು ಇಂಚಿಂಚೂ ಬಿಡದಂತೆ ಎಲ್ಲರಿಗೂ ಇವರು ತಿಳಿಸಿದರು

ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ “ವಚನ ಸಾಹಿತ್ಯ ಸಾರ”ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಈ ಬೃಹತ್ ಗ್ರಂಥ ಹಲವು ಸಂಪುಟಗಳಲ್ಲಿ 1923 ರಿಂದ 1939ರ ಅವಧಿಯಲ್ಲಿ ಪ್ರಕಟಗೊಂಡು ವಚನಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಇವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನಸಾಹಿತ್ಯ ಕೃತಿಗಳು 175ಕ್ಕೂ ಹೆಚ್ಚೆಂದರೆ  ಹಳಕಟ್ಟಿಯವರ ವಚನ ಸಾಹಿತ್ಯದ ದೈತ್ಯಶಕ್ತಿಯನ್ನು ಯಾರು ಬೇಕಾದರೂ ಊಹಿಸಬಹುದು.   ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ….. ಮುಂತಾದವುಗಳು ಇವರ ಪ್ರಮುಖ ಕೃತಿಗಳು..

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಮತ್ತು ಶ್ರೀ ಫ.ಗು.ಹಳಕಟ್ಟಿಯವರ ಸಂಬಂಧಗಳು  ಹೇಗಿದ್ದವು ಎನ್ನುವದಕ್ಕೆ ಸಾಕ್ಷಿ ಅವರ ಲೇಖನದ ಒಂದು ಭಾಗ

ಸೌಜನ್ಯ : ಶಿವಾನುಭವ ಮಾಸಪತ್ರಿಕೆ ಸಂಪುಟ ೪ ಸಂಚಿಕೆ ೧೧ ಫೆಬ್ರುವರಿ ೧೯೩೦.      ಸಂಗ್ರಹ : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,  ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ.

“ನಮ್ಮ ಪ್ರಕಾರ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ಈಗಿನ ಕಾಲಕ್ಕೆ ಒಬ್ಬ ಶ್ರೇಷ್ಠ ಸಮಾಜ ಸುಧಾರಕರಂತೆ ವರ್ತಿಸಿ ಹೋದರು.

ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈಗಿನ ಕಾಲದಲ್ಲಿ ಷಟ್‌ಸ್ಥಲ ಶಾಸ್ತçದಲ್ಲಿ ಬಹಳ ಪ್ರಾವೀಣ್ಯತೆಯನ್ನು ಹೊಂದಿದವರಾಗಿದ್ದರು.ಅವರ ಮರ್ಮಗಳು ಅವರಿಗೆ ಗೊತ್ತಿದ್ದಷ್ಟು ಬೇರೆ ಯಾರಿಗೂ ಬಹುಶಃ ಗೊತ್ತಿರಲಿಕ್ಕಿಲ್ಲ.

ವಚನ ಶಾಸ್ತçದಲ್ಲಿ ಅವರು ಪಾರಂಗತರಾದ್ದರಿಂದಲೇ ಆಗ, ಅವರು ಈ ಸಂಗತಿಗಳು ಅವರಿಗೆ ಪೂರ್ಣ ಮನವರಿಕೆಯಾಗಿದ್ದವು.

ಅವರ ಬಗ್ಗೆ ಈ ಸಂಗತಿಯನ್ನು ನಾವು ಸ್ವತಃ ಬಲ್ಲೆನು. ನಾನು ವಚನ ಶಾಸ್ತ್ರಸಾರ ೧ ನೇ ಭಾಗವನ್ನು ರಚಿಸಿದ ಕಾಲಕ್ಕೆ ಈ ಸಂಗತಿಯನ್ನು ಅವರು ಕೇಳಿದ ಕೂಡಲೆ ಅವರು ಕೆಲವು ಶಾಸ್ತ್ರಿಗಳನ್ನು ಕರೆದುಕೊಂಡು ವಿಜಾಪುರಕ್ಕೆ ಸಮಕ್ಷಮ ಬಂದು ಆ ಗ್ರಂಥದ ಬಹು ಭಾಗವನ್ನು ನನ್ನಿಂದ ಓದಿಸಿದರು. ನಾನು ವಿಷಮಜ್ವರದಿಂದ ಅಶಕ್ತನಾಗಿದ್ದ ಕಾರಣ ತಾವೇ ವಿಜಾಪುರಕ್ಕೆ ಹೀಗೆ ಕೇಳಲಿಕ್ಕೆ ಬಂದಿದ್ದರ ಮೇಲಿಂದ ಅವರು ಈ ವಿಷಯದ ಬಗ್ಗೆ ಎಷ್ಟು ಮಹತ್ತರ ಪ್ರೀತಿಯುಳ್ಳವರಾಗಿದ್ದರೆಂಬುದು ಯಾರಾದರೂ ಊಹಿಸಬಹುದಾಗಿದೆ.

ಮತ್ತು ಅವರೇ ಈ ಗ್ರಂಥವನ್ನು ಅಚ್ಚುಹಾಕಲು ನನಗೆ ಉತ್ತೇಜನ ಕೊಟ್ಟರು. ಅವರು ಶಿವಯೋಗಮಂದಿರದಲ್ಲಿ ಅಸಂಖ್ಯ ಪುರಾತನ ತಾಡವಾಲೆ ಗ್ರಂಥಗಳನ್ನು ಸಂಗ್ರಹಿಸಿರುವರು. ಅವುಗಳಲ್ಲಿ ಅನೇಕವುಗಳು ಬಹಳ ಬೆಲೆಯುಳ್ಳ ಗ್ರಂಥಗಳಾಗಿವೆ. ನನಗೆ ಬೇಕಾಗುವ ಗ್ರಂಥಗಳ ಬಗ್ಗೆ ಶಿವಯೋಗಮಂದಿರಕ್ಕೆ ನಾನು ಬರೆದ ಕೂಡಲೇ ಅವರು ಅವುಗಳನ್ನ ನನ್ನ ಕಡೆಗೆ ತಪ್ಪದೆ ಕಳಿಸಿ ಕೊಡುವ ವ್ಯವಸ್ಥೆ ಮಾಡಿದ್ದರು. ಇದರ ಮೇಲಿಂದ ಧಾರ್ಮಿಕ ಶೋಧ ಮಾಡುವವರಿಗೆ ಅವರು ಎಷ್ಟು ಪ್ರೋತ್ಸಾಹಿಸುತ್ತಿದ್ದರೆಂಬದು ತಿಳಿದು ಬರುತ್ತದೆ.””

ಇನ್ನೊಂದು ಲೇಖನ “ಕೆಲವು ನೆನಪುಗಳು” ಎಂಬ ತಲೆ ಬರಹದಲ್ಲಿ ಶ್ರೀ ಹಳಕಟ್ಟಿಯವರು ಶ್ರೀ ಕುಮಾರ ಶಿವಯೋಗಿಗಳ ಬಗ್ಗೆ ಹೀಗೆ ಉಲ್ಲೇಖಿಸುತ್ತಾರೆ “ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರು ಹೇಗೆ ಧನ ಸಂಚಯ ಮಾಡುತ್ತ ಬಂದರೋ ಹಾಗೆಯೇ ಅವರು ಗ್ರಂಥ ಸಂಚಯವನ್ನು ಸಹ ಮಾಡುತ್ತ ಬಂದರು. ಅವರ ಈ ಕಾರ್ಯವು ಅತ್ಯಂತ ಮಹತ್ತರವಾದುದು . ಶ್ರೀ ಸ್ವಾಮಿಗಳವರ ದರ್ಶನ ಹೊಂದಲು ಎಲ್ಲ ಕಡೆಯಿಂದಲೂ ಪ್ರಮುಖ ವ್ಯಕ್ತಿಗಳು ಈ ಮಂದಿರಕ್ಕೆ ಬರುವದು ರೂಢಿಯಾಗಿತ್ತು . ಅವರನ್ನು ಶ್ರೀ ಸ್ವಾಮಿಗಳು ಕಂಡು ಅವರ ಗ್ರಾಮದಲ್ಲಿ ತಾಡವೋಲೆಯ ಗ್ರಂಥಗಳು ಇವೆಯೋ ಹೇಗೆ ಎಂಬುದನ್ನು ಪ್ರಶ್ನೆ ಮಾಡದೇ ಬಿಡುತ್ತಿದ್ದಿಲ್ಲ . ಯಾರಾದರೂ ತಮ್ಮಲ್ಲಿ ಇಂಥ ಗ್ರಂಥಗಳು ಇವೆ ಎಂದು ಉತ್ತರ ಕೊಟ್ಟಲ್ಲಿ ಅವುಗಳನ್ನು ಮಂದಿರಕ್ಕೆ ಕಳಿಸಬೇಕೆಂದು ಶ್ರೀ ಸ್ವಾಮಿಗಳು ತಪ್ಪದೆ ಹೇಳುವರು ಅವರನ್ನು ಕಾಣ ಬಂದವರಲ್ಲಿ ಯಾರೂ ತಾವು ಕಳಿಸುವದಿಲ್ಲ ಎಂದು ಅನ್ನುತ್ತಿದ್ದಿಲ್ಲ . ಎಲ್ಲರೂ ಭಕ್ತಿಯಿಂದ ತಮ್ಮಲ್ಲಿಯ ಗ್ರಂಥಗಳನ್ನು ಅವರ ಕಡೆಗೆ ಸಮರ್ಪಿಸುತ್ತಿದ್ದರು . ಈ ಪ್ರಕಾರ ಮಂದಿರದಲ್ಲಿ ವೀರಶೈವ ಗ್ರಂಥಗಳ ಒಂದು ದೊಡ್ಡ ಸಂಗ್ರಹವು ಸ್ವಲ್ಪ ದಿವಸಗಳಲ್ಲಿ ಉಂಟಾಯಿತು .

ಶ್ರೀ ಸ್ವಾಮಿಗಳವರು ಮಂದಿರದ ಒಂದು ದೊಡ್ಡ ನಿಧಿಯನ್ನು ಕೂಡಿಸಿದ್ದೂ , ಅಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೂ ಮಹತ್ವದ ಕಾರ್ಯಗಳೆಂಬುದು ನಿಃಸಂದೇಹವಾದದ್ದು, ಆದರೆ ಹಣಕ್ಕಿಂತಲೂ ಮಹತ್ವವೆನಿಸಿಕೊಳ್ಳುವ ಗ್ರಂಥಗಳ ಸಂಗ್ರಹ ಮಾಡುವದು ಅಷ್ಟೇ ಶ್ರೇಯಸ್ಕರವಾದದ್ದು ಇರುತ್ತದೆ . ಇಂಥ ಗ್ರಂಥಗಳು ಸಮಾಜದಲ್ಲಿ ಇರದಿದ್ದರೆ ಸಂಸ್ಕೃತಿಯು ಬಾಳುವ ಸಂಭವವೇ ಇಲ್ಲ .

ಇದೇ ಕಾಲದಲ್ಲಿ ನಾನು ವಚನಶಾಸ್ತ್ರದ ಉಕ್ತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದೆನು . ಈ ಸಂಗತಿಯನ್ನು ನಾನು ಸ್ವಾಮಿಗಳವರ ನಿದರ್ಶನಕ್ಕೆ ಆಗಿಂದಾಗ್ಗೆ ತರುತ್ತಿದ್ದೆನು . ಅವರು ಇದನ್ನು ನೋಡಿ ಬಹಳ ಸಂತೋಷಿಸುತ್ತಿದ್ದರು ಮತ್ತು ನನಗೆ ಅದರಲ್ಲಿ ಪ್ರೋತ್ಸಾಹವನ್ನೂ ಕೊಡುತ್ತಿದ್ದರು .

ಮುಂದೆ ನಾನು ‘ವಚನಶಾಸ್ತ್ರಸಾರ ‘ ಎಂಬ ಗ್ರಂಥವನ್ನು ನಿರ್ಮಾಣ ಮಾಡಿ ಅದರಲ್ಲಿ ನಾಲ್ಕು ಭಾಗಗಳನ್ನು ತಯಾರಿಸಿದ್ದೆನು . ಮೊದಲನೆಯ ಭಾಗವು ಪೂರ್ಣವಾದುದನ್ನು ಬಾಗಲಕೋಟೆಯ ಕೆಲ ಮಹನೀಯರು ಸ್ವಾಮಿಯವರಿಗೆ ಹೇಳಲು ಅವರು ಖುದ್ದಾಗಿ ನಾನಿದ್ದ ಮನೆಯ ಸಮೀಪದಲ್ಲಿ ಸೊನ್ನದ ಶ್ರೀಮಂತ ಗಂಗಪ್ಪ ದೇಸಾಯಿಯವರ ಕಟ್ಟಡವು ಪ್ರಾರಂಭವಾಗಿದ್ದು ಅದೇ ಮನೆಯಲ್ಲಿ ಅವರು ಇಳಿದರು. ಆಗ ನಾನು ವಿಷಮಜ್ವರ ಪೀಡಿತನಾಗಿದ್ದೆ ; ಚನ್ನಾಗಿ ಕುಳ್ಳಿರಲಿಕ್ಕೆ ಬರುತ್ತಿದ್ದಿಲ್ಲ , ಆದರೂ ಶ್ರೀ ಸ್ವಾಮಿಗಳು ನನ್ನ ಅನುಕೂಲತೆಗಾಗಿ ಈ ಗೃಹದಲ್ಲಿ ಇಳಿದು ಕೆಲವು ದಿವಸಗಳವರೆಗೆ ನಾನು ಸಂಗ್ರಹಿಸಿದ ಉಕ್ತಿಗಳನ್ನು ನನ್ನ ಕಡೆಯಿಂದ ಓದಿಸಿಕೊಳ್ಳುತ್ತಿದ್ದರು . ಅವುಗಳಲ್ಲಿರುವ ವಚನಗಳಲ್ಲಿಯ ಉಚ್ಛ ವಿಚಾರ ಮತ್ತು ಸುಂದರ ನುಡಿಗಳನ್ನು ಕೇಳಿ ಅವರು ಹರ್ಷಿಸುತ್ತಿದ್ದರು ಮತ್ತು ನನಗೆ ಈ ಗ್ರಂಥವನ್ನು ಅಚ್ಚು ಹಾಕಲಿಕ್ಕೆ ಪ್ರೋತ್ಸಾಹಿಸಿದರು . ಈ ಅಚ್ಚು ಹಾಕುವ ಕಾವ್ಯದಲ್ಲಿ ನನಗೆ ಶ್ರೀಮಂತ ಗಂಗಪ್ಪ ದೇಸಾಯಿಯವರು ಧನ ಸಹಾಯವನ್ನು ಮಾಡಲು ಒಪ್ಪಿದರು . ಶ್ರೀ ಸ್ವಾಮಿಗಳು ಅದನ್ನು ಕೇಳಿ ಸಂತೋಷ ಪ್ರದರ್ಶನವನ್ನು ಮಾಡಿದರು. ಗ್ರಂಥದ ಮುದ್ರಣವನ್ನು ಬೆಳಗಾವಿಯಲ್ಲಿ ಮುಗಿದ ಬಳಿಕ ನಾನು ಅದನ್ನು ಅವರಿಗೆ ಅರ್ಪಿಸಿದೆನು .

ಸ್ವಾಮಿಗಳವರ ಹಸ್ತದಲ್ಲಿ ಈ ಗ್ರಂಥವು ಬಂದ ಬಳಿಕ ಅವರು ತಮ್ಮ ಭೋಜನೋತ್ತರ ಕಾಲದಲ್ಲಿ ಅದರಲ್ಲಿಯ ಶ್ರೇಷ್ಠ ಉಕ್ತಿಗಳನ್ನು ತಮ್ಮನ್ನು ಕಾಣಲಿಕ್ಕೆ ಬಂದ ಜನರಿಗೆ ತಿಳಿಸಿ ಹೇಳುವರು . ಈ ಕಾರ್ಯವನ್ನು ಅವರು ಬಹುದಿನ ಮಾಡುತ್ತ ಬಂದರು . ಹೀಗೆ ತಾವಷ್ಟೇ ಅಲ್ಲ, ಮಂದಿರಕ್ಕೆ ಬಂದ ಮಠಾಧಿಕಾರಿಗಳಿಗೂ ಶಾಸ್ತಿçಗಳಿಗೂ ‘ಶಿವಶರಣರು ಎಂಥ ಮಹತ್ವದ ಕಾರ್ಯವನ್ನು ಮಾಡಿದ್ದಾರೆ, ನೋಡಿರಿ ‘ ಎಂದು ತಿಳಿಸಿ ಹೇಳುವರು .

 

ಶ್ರೀಕುಮಾರ ತರಂಗಿಣಿ  ಜುಲೈ ೨೦೨೫   ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಶಿವಮೂರ್ತಿಯೆ | ತವೆ ಪೂಜಿಸುವೆ |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೪೨ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶಿಷ್ಯ ಸಂಪತ್ತು -ಕಾರುಣಿಕ ಕುಮಾರಯೋಗಿ ಧಾರವಾಹಿ: -ಲೇಖಕರು-ಜ.ಚ.ನಿ
  4. ಕರ್ತವ್ಯಪ್ರಜ್ಞೆಯೆ ಧರ್ಮ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
  5. ಬಾಲಲೀಲಾ ಮಹಾಂತ ಶಿವಯೋಗಿಗಳವರ ಕೈವಲ್ಯ ದರ್ಪಣ ಲೇಖಕರು:ಕೆ. ವಿ. ಬಾಳಿಕಾಯಿ.

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

Related Posts