ಜಗದ್ಗುರು ಡಾ||ಸಿದ್ಧರಾಮ ಮಹಾಸ್ವಾಮಿಗಳು
ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
ವ್ಯಕ್ತಿಯ ಜೀವನದಲ್ಲಿ ಹರಕೆ-ಹಾರೈಕೆಗಳೆರಡಕ್ಕೂ ವಿಶೇಷ ಮಹತ್ವವಿದೆ. ‘ಹರಕೆ ಇದರ ಶಾಬ್ದಿಕ ಅರ್ಥ ಅಭೀಷ್ಟಸಿದ್ಧಿಗಾಗಿ ದೇವರಲ್ಲಿ ಮಾಡಿಕೊಳ್ಳುವ ಸೇವೆ, ಸಂಕಲ್ಪ ಅಥವಾ ಅಭೀಷ್ಟ ಸಿದ್ದಿಸಿದ ಮೇಲೆ ದೇವರಿಗೆ ಅರ್ಪಿಸುವ ವಸ್ತು ಎಂದಿದ್ದರೂ ದೇವರಲ್ಲಿ ಬೇಡಿಕೊಳ್ಳುವುದು (ಉದಾಹರಣೆಗೆ ಹರಕೆ ಹೊರುವುದು) ಎಂಬ ಅರ್ಥದಲ್ಲಿಯೂ ಈ ಶಬ್ದವನ್ನು ಬಳಸಿಕೊಳ್ಳುತ್ತೇವೆ. ದೇವರಲ್ಲಿ ಬೇಡಿಕೊಳ್ಳುವ, ಮೊರೆ ಇಡುವ ಕ್ರಿಯೆಗೆ ನಾವು ಪ್ರಾರ್ಥನೆ ಎನ್ನುತ್ತೇವೆ. ಆಗ ಹರಕೆಯ ಅರ್ಥ ಪ್ರಾರ್ಥನೆ ಎಂದಾಗುತ್ತದೆ. ನಾವು ಪರಮಾತ್ಮನ ಕೃಪೆಗಾಗಿ, ಮನಸ್ಸನ್ನು ನಿರ್ಮಲಗೊಳಿಸುವುದಕ್ಕಾಗಿ, ಹೃದಯಶುದ್ಧಿಗಾಗಿ ದೇವರನ್ನು ಪ್ರಾರ್ಥಿಸುತ್ತೇವೆ. ಬದುಕುವುದಕ್ಕೆ ಆಧಾರಭೂತವಾದ ಅನ್ನ, ನೀರು, ಭೂಮಿ, ಗಾಳಿ ಇತ್ಯಾದಿ ಸರ್ವಸ್ವವನ್ನು ದಯಪಾಲಿಸಿದ ಭಗವಂತನಿಗೆ ಸಲ್ಲಿಸುವ ಕೃತಜ್ಞತೆಯೂ ಪ್ರಾರ್ಥನೆ ಎನಿಸುವುದು. ಸರ್ವಶಕ್ತನಾದ ಸರ್ವವ್ಯಾಪಿಯಾದ ಭಗವಂತನಲ್ಲಿ ನಮ್ಮ ದೋಷ ದೌರ್ಬಲ್ಯಗಳನ್ನು ಸಮರ್ಪಿಸಿ, ಸದ್ಗುಣ ಸಂಪನ್ನರಾಗಿ ಬದುಕುವುದಕ್ಕೆ ಹಾಗೆಯೇ ಕ್ಷಣಿಕ ಸುಖಭೋಗಗಳನ್ನು ತ್ಯಾಗ ಮಾಡಿ ಆತ್ಮೋನ್ನತಿಯನ್ನು ಹೊಂದುವುದಕ್ಕೆ ನಾವು ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲೇಬೇಕು. ಸತ್ಸಂಕಲ್ಪದ ಸಾಧನೆಗಾಗಿ ನಾವು ಮಾಡುವ ಪ್ರಾರ್ಥನೆಯಲ್ಲಿ ಅಚಲ ಶ್ರದ್ಧೆ ಹಾಗೂ ವಿಶ್ವಾಸಗಳು ಇರಬೇಕಾದುದು ಅತ್ಯವಶ್ಯ. ಅಚಲ ಶ್ರದ್ಧೆಯುಳ್ಳ ಉಪನಿಷತ್ಕಾಲದ ಗುರುಶಿಷ್ಯರು ಭಗವಂತನನ್ನು ಪ್ರಾರ್ಥಿಸುವ ಮಾದರಿಯೊಂದು ಹೀಗಿದೆ:
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ
ಸ್ಥಿರೈರಂಗೈಸ್ತು಼ಷ್ಟುವಾಂಸಸ್ತನೂಬಿಃ
ವ್ಯಶೇಮ ದೇವಹಿತಂ ಯದಾಯುಃ (ಪ್ರಶೋಪನಿಷತ್)
‘ದೇವತೆಗಳೇ! ನಾವು ನಮ್ಮ ಕಿವಿಗಳಿಂದ ಕಲ್ಯಾಣಕಾರಕ ವಚನಗಳನ್ನೇ ಕೇಳುವಂತಾಗಲಿ, ಕಣ್ಣುಗಳಿಂದ ಮಂಗಳಕರವಾದುದನ್ನೇ ನೋಡುವಂತಾಗಲಿ. ನಮ್ಮ ಶರೀರದ ಪ್ರತಿಯೊಂದು ಅವಯವವೂ ಸದೃಢವಾಗಿರಲಿ, ಅವುಗಳ ಸಹಾಯದಿಂದ ನಮ್ಮ ಆಯುಷ್ಯದುದ್ದಕ್ಕೂ ಭಗವಂತನ ನಾಮಸ್ಮರಣೆ ಮಾಡುವಂತಾಗಲಿ’ ಇದೊಂದು ಪ್ರಾರ್ಥನೆ (ಹರಕೆ)ಯ ಅತ್ಯುತ್ತಮ ಮಾದರಿ. ಇಲ್ಲಿ ನಿಂದೆ, ಚಾಡಿ, ಬೈಗುಳ ಅಥವಾ ಪಾಪದ ಮಾತುಗಳನ್ನು ಕೇಳಬಾರದೆಂಬ, ಅಮಂಗಲಕಾರಿ ಮತ್ತು ಪತನಕ್ಕೆ ಕಾರಣವಾಗುವ ದೃಶ್ಯಗಳನ್ನು ನೋಡಬಾರದೆಂಬ ಗುರು-ಶಿಷ್ಯರ ಆಶಯವನ್ನು ಗುರುತಿಸಬೇಕು. ನಮ್ಮ ಹರಕೆ ಅಥವಾ ಪ್ರಾರ್ಥನೆಯೂ ಹೀಗಿದ್ದರೆ ಒಳ್ಳೆಯದಲ್ಲವೆ? ʼಹಾರೈಕೆ’ಯೂ ಕೋರಿಕೆ, ಬಯಕೆ ಇತ್ಯಾದಿ ಅರ್ಥಗಳನ್ನು ಹೊಂದಿದ ಸುಂದರ ಶಬ್ದ. ಒಳ್ಳೆಯದನ್ನು ಬಯಸುವುದಕ್ಕೆ, ಶುಭವನ್ನು ಕೋರುವುದಕ್ಕೆ ನಾವು ‘ಹಾರೈಕೆ’ ಎಂಬ ಪದಪ್ರಯೋಗ ಮಾಡುತ್ತೇವೆ. ನಮ್ಮ ಹಾರೈಕೆಯೂ ಪರಿಶುದ್ಧ ಅಂತಃಕರಣದಿಂದ, ಮಾನವ ಕಲ್ಯಾಣದ ಆಶಯದಿಂದ ಬಂದುದಾಗಿರಬೇಕು. ಉಪನಿಷತ್ಕಾಲದ ಋಷಿಗಳು ವ್ಯಕ್ತಗೊಳಿಸಿದ ಹಾರೈಕೆಯಲ್ಲಿ ನಾವು ಅಂತಹ ಆಶಯವನ್ನು ಕಾಣಬಹುದಾಗಿದೆ-
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ
ಏವಂ ತ್ವಯಿ ನಾನ್ಯಥೇತೋsಸ್ತಿ ನಕರ್ಮ ಲಿಪ್ಯತೇ ನರೇ ! (ಈಶೋಪನಿಷತ್)
ಈ ಜಗತ್ತಿನಲ್ಲಿ ಸರ್ವಶಕ್ತ ಪರಮಾತ್ಮನ ಧ್ಯಾನ ಮಾಡುತ್ತ ಅರ್ಥಾತ್ ಎಲ್ಲವೂ ಅವನದೇ ಎಂದು ಪರಿಭಾವಿಸಿ, ಅವನ ಸೇವೆ(ಪೂಜೆ)ಗಾಗಿ ಶಾಸ್ತ್ರನಿಯತವಾದ ಕರ್ಮ(ಕರ್ತವ್ಯ)ಗಳನ್ನು ನಿರ್ವಹಿಸುತ್ತ, ನೂರು ವರ್ಷಗಳವರೆಗೆ ಬದುಕುವ ಇಚ್ಛೆಯುಳ್ಳವನಾಗು. ಕರ್ಮಗಳನ್ನು ಮಾಡುತ್ತ ಕರ್ಮಗಳಿಗಂಟಿಕೊಳ್ಳದೆ ಭವಬಂಧನದಿಂದ ಮುಕ್ತನಾಗುವ ಮಾರ್ಗ ಇದಕ್ಕಿಂತ ಬೇರೊಂದಿಲ್ಲ. ಇಲ್ಲಿ ಶಾಸ್ತ್ರನಿಯತ ಕರ್ಮಗಳನ್ನು ಮಾಡುತ್ತ ಜೀವನ ನಿರ್ವಹಣೆ ಮಾಡುವುದು ಯಾವುದೇ ಸ್ವಾರ್ಥಕ್ಕಾಗಿ ಅಥವಾ ವಿಷಯ ಭೋಗಕ್ಕಾಗಿ ಅಲ್ಲ; ತಾಪತ್ರಯಗಳಿಂದ ಭವಬಂಧನದಿಂದ ಮುಕ್ತನಾಗುವುದಕ್ಕಾಗಿ. ಈ ಕಾರಣಕ್ಕಾಗಿಯೇ ಪೂರ್ಣ ಜೀವನವನ್ನು ಪರಮಾತ್ಮನಿಗೆ ಸಮರ್ಪಿಸಬೇಕೆನ್ನುವ ಆಶಯ ಹೊಂದಿದ ಋಷಿಗಳ ಮಾನವೀಯ ಕಳಕಳಿ ನಮಗೆ ಮುಖ್ಯವಾಗುತ್ತದೆ.